Tuesday, January 28, 2014

Address ಗೇ ಇಲ್ಲದ 'ರತಿ ಅಗ್ನಿಹೋತ್ರಿ'ಯನ್ನು ಪತ್ರ ಮಿತ್ರಳನ್ನಾಗಿ ಪಟಾಯಿಸಲಿಕ್ಕೆ ಹೋಗಿದ್ದು! (ಪತ್ರ ಮಿತ್ರರ ಪ್ರಪಂಚದಲ್ಲಿ. ಭಾಗ - ೨)

(ಭಾಗ - ೧ ಇಲ್ಲಿದೆ)

ಮುಂದಿನ ಪತ್ರ ಮಿತ್ರನ್ನ 'ಪುಟಾಣಿ' ಮಾಸಪತ್ರಿಕೆಯಲ್ಲಿ ಹುಡುಕೋದು ಅಂತ ಆತು.  ಈಗ ಪುಟಾಣಿ ಹುಡಕಬೇಕಾತು. ಸುಧಾ, ಪ್ರಜಾಮತ, ತುಷಾರ, ಕಸ್ತೂರಿ, ಚಂದಮಾಮ, ಇಂದ್ರಜಾಲ ಕಾಮಿಕ್ಸ್ ಎಲ್ಲ ಸುಮಾರು ಎಲ್ಲ ದೊಡ್ಡ ಪಾನ್ ಬೀಡಿ ದುಕಾನಗಳಲ್ಲಿ ಸಿಗತಿದ್ದವು. ಅವರ ಕಡೆ ಹೋಗಿ, ಪುಟಾಣಿ ಅದ ಏನ್ರೀ? ಅಂತ ಕೇಳಿದರ, ಏನ ಹಾಪ್ ಇದ್ದಿಯೋ, ಮಂಗ್ಯಾನಿಕೆ? ಪುಟಾಣಿ ಬೇಕಾದ್ರ ಕಿರಾಣಿ ಅಂಗಡಿಗೆ ಹೋಗಿ ಕೇಳಲೇ, ಅನ್ನೋ ಲುಕ್ ಕೊಟ್ಟು ಓಡಿಸಿಬಿಟ್ಟರು. ಅವರು ಅವರ ಜನ್ಮದಲ್ಲೂ ಪುಟಾಣಿ ಅನ್ನೋ ಮಕ್ಕಳ ಮಾಸಪತ್ರಿಕೆಯ ಹೆಸರು ಕೇಳಿದಂಗ ಇಲ್ಲ ಅಂತ ಇದರಿಂದ ಗೊತ್ತಾತು. ಧಾರವಾಡದಲ್ಲಿ ಪುಟಾಣಿ ಪತ್ರಿಕೆಯ ಹವಾ ಇಲ್ಲೇ ಇಲ್ಲ ಅಂತ ತಿಳೀತು. ಪುಟಾಣಿ ತಿಂದವರ ಹವಾ? ಅದು ಬ್ಯಾರೆನೇ ಬಿಡ್ರೀ. ಹವಾ ಹವಾ ಏ ಹವಾ, ಖುಷಬೂ ಮಿಟಾದೇ! ಬದಬೂ ಪೆಹಲಾದೇ! ಪುಟಾಣಿ ಖಿಲಾದೆ! ಶೇಂಗಾ ಮಿಲಾದೆ! ಯಾರ್ ಖಿಲಾದೆ!ದಿಲದಾರ್ ಮಿಲಾದೆ! ಹಸನ್ ಜಹಾಂಗೀರನ ಹಾಡಿನ ಮಾದರಿಯಲ್ಲಿಯ ಹವಾ, ಹವಾ!

ಮತ್ತ ಸಚಿನ್ ಕೊಟ್ಟೂರನ ಕೇಳಿದೆ.

ನೀ ಹೇಳಿದ ಪುಟಾಣಿ ಅನ್ನೋ ಮ್ಯಾಗಜಿನ್ ಎಲ್ಲೆ ಸಿಗ್ತದೋ ಮಾರಾಯಾ? ನನಗ ಸಿಗವಲ್ಲತು. ನಿನ್ನ ಕಡೆ ಇದ್ದರ ತೊಗೊಂಡು ಬಾ, ಅಂದೆ.

ಪುಟಾಣಿ ಪತ್ರಿಕೆ ದೊಡ್ಡ ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಒಳಗ ಇರೋ ಬುಕ್ ಶಾಪ್ ಒಳಗ ಸಿಗ್ತದ, ಅಂತ ಒಂದು ದಾರಿ ತೋರ್ಸಿದ ಕೊಟ್ಟೂರ. ಶಾಣ್ಯಾ! ಸ್ಟ್ರೀಟ್ ಸ್ಮಾರ್ಟ್ ಹುಡುಗ.

ದೊಡ್ಡ ಬಸ್ ಸ್ಟ್ಯಾಂಡ್ ಅಂದ್ರ ಬ್ಯಾರೆ ಊರಿಗೆ ಹೋಗೋ ಬಸ್ ಬರೋ ಬಸ್ ಸ್ಟ್ಯಾಂಡ್. ಅದು ಪ್ಯಾಟಿ ಒಳಗ ಇತ್ತು. ದೂರ. ರೈಲ್ವೆ ಸ್ಟೇಷನ್ ನಮಗ ಸಾಲಿಗೆ, ಮನಿಗೆ ಎಲ್ಲ ಹತ್ರ. ಮೊದಲು ರೈಲ್ವೆ ಸ್ಟೇಷನ್ ಬುಕ್ ಸ್ಟಾಲ್ ನೋಡೋಣ ಅಂತ ವಿಚಾರ ಮಾಡಿದೆ.

ಸುಮಾರು ಸರೆ ರೈಲ್ವೆ ಸ್ಟೇಷನ್ ಗೆ ಅಡ್ಯಾಡಿದೆ. ಯಾವಾಗ ನೋಡಿದರೂ ಆ ಬುಕ್ ಸ್ಟಾಲ್ ಮುಚ್ಚಿಕ್ಕೊಂಡೇ ಇರ್ತಿತ್ತು. ಬ್ಯಾಸರ ಬಂತು. ಒಂದು ಸರೆ ಹೋದಾಗ ಯಾರೋ ಹೇಳಿದರು, ಅದು ಯಾವದೋ ಒಂದೆರೆಡು ದೊಡ್ಡ ಟ್ರೈನ್ ಬರೊ ಟೈಮ್ ಒಳಗ ಮಾತ್ರ ಆವಾ ಬುಕ್ ಸ್ಟಾಲ್ ತೆಗಿತಾಂತ, ಅಂತ ಹೇಳಿ. ಅವೆರೆಡು ಟ್ರೈನ್ ಬರೊ ಟೈಮಿಗೆ ಹೋಗಬೇಕು ಅಂದ್ರ ಒಂದೋ ರವಿವಾರ ಸೂಟಿ ಇದ್ದ ದಿನ ಹೋಗಬೇಕು. ಇಲ್ಲಂದ್ರ ಸಾಲಿಗೆ ಚಕ್ಕರ್ ಹೊಡೆದು ಹೋಗಬೇಕು. ಚಕ್ಕರ್ ಆಗಲೇ ಸಾವಿರ ಸರೆ ಹೊಡೆದು ಬಿಟ್ಟೇನಿ. ಬ್ಯಾಡ ಅಂತ ಹೇಳಿ, ಒಂದು ರವಿವಾರ ಕರೆಕ್ಟ್ ಟೈಮಿಗೆ ರೈಲ್ವೆ ಸ್ಟೇಷನ್ ಗೆ ಭೆಟ್ಟಿ ಕೊಟ್ಟೆ. ಬುಕ್ ಸ್ಟಾಲ್ ಓಪನ್ ಇತ್ತು. ವೀಲ್ ಚೇರ್ ಮ್ಯಾಲೆ ಕೂತು ವ್ಯಾಪಾರ ಮಾಡ್ತಿದ್ದ ಮಾಲೀಕ ಇದ್ದ.

ಪುಟಾಣಿ ಅದರೀ? ಅಂತ ಕೇಳಿದೆ.

ನನ್ನ ಕೆಟ್ಟ ವಿಚಿತ್ರ ರೀತಿಯಲ್ಲಿ ನೋಡಿದ.

ಹ್ಞೂ....ಅದ. ಆದ್ರ ಹೊಸಾದು ಇಲ್ಲ. ನಾಕು ತಿಂಗಳ ಹಿಂದಿನದು ಅದ. ಬೇಕೇನು? ಅಂತ ಕೇಳಿದ.

ಏನು ಮಾಡ್ಲೀ? ಅಂತ ವಿಚಾರ ಮಾಡಿದೆ.

ಪುಟಾಣಿ ಅನ್ನೋ ಪತ್ರಿಕೆಯನ್ನ ಜೀವಮಾನದಲ್ಲಿ ಓದಿಲ್ಲ. ಹೊಸದಿರಲಿ, ಹಳೆಯದಿರಲಿ ಒಂದು ಸಲ ನೋಡಲಿಕ್ಕೆ ಏನು ಮಹಾ? ಅಂತ ಹೇಳಿ ಹಳೆಯದನ್ನೇ ತೊಗೊಂಡೆ.

ಮೂರು ರೂಪಾಯಿ, ಅಂದ ಆವಾ ಮಾಲೀಕ.

ಮೂರು ರೂಪಾಯಿ ಕೊಟ್ಟೆ. ಎರಡು ಮ್ಯಾಲೆ ಇನ್ನೊಂದು. ರುಪಾಯಿ ನೋಟುಗಳು ಅಂತ. ಮತ್ತೇನೂ ಅಲ್ಲ.

ಒಂದು ಕಸ್ತೂರಿ ಪತ್ರಿಕೆ ಸೈಜಿನ ಪುಸ್ತಕಾ ಕೊಟ್ಟು, ಆ ಬುಕ್ ಸ್ಟಾಲ್ ಮಾಲೀಕ ಅಂಗಡಿ ಶಟರ್ ಎಳಿಲಿಕ್ಕೆ ತಯಾರ ಆದ. ಟ್ರೈನ್ ಬಂದು ಹೋತಲ್ಲ? ಇನ್ನು ಆವಾ ಮತ್ತ ಅಂಗಡಿ ತೆಗೆಯೋದು ಮುಂದಿನ ದೊಡ್ಡ ಟ್ರೈನ್ ಬರೋ ಟೈಮಿಗೆ ಮಾತ್ರ.

ಮೂರು ರೂಪಾಯಿ ಇಸಕೊಂಡು, ನಾಕು ತಿಂಗಳ ಹಳೆಯದಾದ ಪುಟಾಣಿ ಕೊಟ್ಟು, ನನಗ ಮೂರು ನಾಮ ಹಾಕಿ ಹೋದ. ಅವನೌನ್! ಮಾರಾಟ ಆಗದೇ ಉಳಿದಿದ್ದ ಆ ಪುಟಾಣಿ ರದ್ದಿಗೆ ಹತ್ತಿಪ್ಪತ್ತು ಪೈಸಾಕ್ಕೂ ಹೋಗತಿದ್ದಿಲ್ಲ. ಚೌಕಾಶಿ ಮಾಡಿ ಎಂಟಾಣೆಕ್ಕೋ, ಹೆಚ್ಚಂದ್ರ ಒಂದು, ಅದಕೂ ಹೆಚ್ಚ ಅಂದ್ರ ದೀಡ ರುಪಾಯಿಗೆ ತರಬೇಕಾಗಿತ್ತು ನಾನು. ಅಷ್ಟೆಲ್ಲಾ ವ್ಯವಹಾರ ಜ್ಞಾನ ಆವತ್ತಿಗೂ ಇರಲಿಲ್ಲ. ಇವತ್ತಿಗೂ ಇದ್ದಂಗ ಇಲ್ಲ.

ಅಂತೂ ಹಳೆ ಪುಟಾಣಿ ತೊಗೊಂಡು ಮನಿಗೆ ಬಂದೆ. ಪತ್ರ ಮಿತ್ರರ ವಿಭಾಗಕ್ಕ ಹೋದೆ. ಇದ್ದರು ಒಂದು ಹತ್ತು ಮಂದಿ. ಕರ್ನಾಟಕದ ಬೇರೆ ಬೇರೆ ಕಡೆಯವರು. ನೋಡಕೋತ್ತ ಬಂದೆ. ಯಾರೋ ಬೆಂಗಳೂರಿನ ನರೇಂದ್ರ ಅನ್ನವ ಹಿಡಿಸಿಬಿಟ್ಟ. ಯಾಕ? ಕಾರಣ  ಇವತ್ತು ನೆನಪಿಲ್ಲ. ಸರದಾರ್ಜೀ ಹುಚ್ಚು ಬಿಟ್ಟು, ಸ್ವಾಮೀ ವಿವೇಕಾನಂದರ ಹುಚ್ಚು ಹತ್ತಿತ್ತೇನು? ನೆನಪಿಲ್ಲ. ಸ್ವಾಮೀ ವಿವೇಕಾನಂದರ ಹೆಸರೂ ಸಹ ನರೇನ್, ನರೇಂದ್ರ ಅಂತಿತ್ತು ನೋಡ್ರೀ.

ಬೆಂಗಳೂರಿನ ನರೇಂದ್ರನಿಗೆ ಒಂದು ಒಲವಿನ ಓಲೆ ಬರದೆ. ವಸಂತ ಬರೆದನು ಒಲವಿನ ಓಲೆ, ಚಿಗುರಿದ ಎಲೆ ಎಲೆ ಮೇಲೆ, ಅಂತ ಏನೂ ಸೆಂಟಿ ಪಿಂಟಿ ಹಚ್ಚಲಿಲ್ಲ.

ಸುಮಾರು ದಿನ, ವಾರ ಆಗಿ, ಒಂದು ತಿಂಗಳ ಮ್ಯಾಲೆ ಆಗಿ ಹೋಗಿರಬೇಕು. ನರೇಂದ್ರನಿಂದ ಉತ್ತರ ಬರಲಿಲ್ಲ. ಒಂದು ವಾರ, ಎರಡು ವಾರ ಆದ ಮ್ಯಾಲೆ ನಮಗೂ ಮರ್ತು ಹೋತು. ಮತ್ತ ಯಾರಿಗೆ ಪತ್ರ ಬರಿಲಿಕ್ಕೆ ಹೋಗಲಿಲ್ಲ. ಆ ಮಟ್ಟಿಗೆ ಪತ್ರ ಮಿತ್ರತ್ವದ ಹುಚ್ಚು ಕಮ್ಮಿ ಆತು ಅಂತ ಅನ್ನಿಸ್ತದ. ಆದ್ರ ಪುಟಾಣಿ ಹುಚ್ಚ ಹತ್ತಿಬಿಡ್ತು. ಪುಟಾಣಿ ಪತ್ರಿಕೆ ಹುಚ್ಚು.

ಆ ಪುಟಾಣಿ ಪತ್ರಿಕೆ ಒಂದು ತರಹ ಮಜಾ ಇತ್ತು. ಕೇವಲ ಚಂದಮಾಮ, ಬಾಲಮಿತ್ರ, ಇಂದ್ರಜಾಲ ಕಾಮಿಕ್ಸ್ ಓದಿದ್ದ ನಮಗೆ ಇಂಗ್ಲಿಷ್ನಲ್ಲಿ ಇರುವ Hardy Boys ತರಹದ ಮಕ್ಕಳ ಸಾಹಸಗಳ ಕಥೆಗಳಿರುತ್ತಿದ್ದ ಪುಟಾಣಿ ಸ್ವಲ್ಪ ಮಜಾನೇ ಅನ್ನಿಸುತ್ತಿತ್ತು. ಮುಂದೆ Hardy Boys, Nancy Drew ತರಹದ ಪುಸ್ತಕಗಳನ್ನ ಓದಿದಾಗ ತಿಳಿಯಿತು ಈ ಪುಟಾಣಿ ಮಂದಿ ಕಥೆಗಳ ಮೂಲವನ್ನ ಅಲ್ಲಿಂದ ಎತ್ತಿ, ಕನ್ನಡಕ್ಕೆ ಹೊಂದುವಂತೆ ರೂಪಾಂತರ ಮಾಡಿ ಬರೆದುಬಿಡ್ತಾರ ಅಂತ. ಅಲ್ಲೆಲ್ಲೋ ಅಮೇರಿಕಾದ ಕಂದರಗಳಲ್ಲಿ ನ್ಯಾನ್ಸಿ ಡ್ರೂ ಸಾಹಸ ಮಾಡಿದರೆ, ಪುಟಾಣಿಯಲ್ಲಿಯ ಹುಡುಗಿ ಚಿತ್ರದುರ್ಗದ ಕೋಟೆಯೊಳಗೆ ಯಾರನ್ನೋ ಹಿಡದು ಬಡಿತಿದ್ದಳು. ಎಲ್ಲಾ ಮುಚ್ಚಿಕೊಂಡು, ಎಲ್ಲಾ ಲಾಜಿಕ್ ಗಾಳಿಗೆ ತೂರಿ, ಓದಿದರೆ ಒಂದೆರಡು ತಾಸು ಮಜಾ. ಹೀಂಗಾಗಿ ತಿಂಗಳ ಪುಸ್ತಕದ ಸಂಗ್ರಹಕ್ಕೆ ಪುಟಾಣಿ ಸೇರಿತು. ದೊಡ್ಡ ಬಸ್ ಸ್ಟ್ಯಾಂಡಿನ ಉತ್ತರಕರ ಬುಕ್ ಸ್ಟಾಲ್ ನಲ್ಲಿ ಸುಮಾರು ರೆಗ್ಯುಲರ್ ಆಗಿ ಪುಟಾಣಿ ಸಿಗುತ್ತಿತ್ತು ಅಂತ ನೆನಪು. ಒಂದೆರಡು ವರ್ಷ ಓದಿ ಅದನ್ನೂ ಬಿಟ್ಟೆ. ಯಾಕಂದ್ರ ಆವಾಗ ಸೀದಾ ಇಂಗ್ಲೀಷ್ thriller, mystery ಕಾದಂಬರಿ ಹುಚ್ಚು ಹತ್ತಿತ್ತು.

ಸುಮಾರು ಎರಡು ತಿಂಗಳ ಮ್ಯಾಲೆ ನರೇಂದ್ರ ಅನ್ನೋ ಪತ್ರ ಮಿತ್ರ ವಾಪಸ್ ಪತ್ರ ಬರೆದ. ಬೆಂಗಳೂರಿಂದ. ಅದು ಏನಾಗಿತ್ತು ಅಂದ್ರ, ಅವರು ಮನಿ ಬದಲು ಮಾಡಿಕೊಂಡು ಬ್ಯಾರೆ ಕಡೆ ಎಲ್ಲೋ ಹೋಗಿ ಬಿಟ್ಟಿದ್ದರಂತ. ನನ್ನ ಪತ್ರ ಹಳೆ ವಿಳಾಸಕ್ಕ ಹೋಗಿ ಬಿದ್ದಿತ್ತಂತ. ಅವರ ಹಳೆ ಮನಿ ಕಡೆ ಇದ್ದವರು ಯಾರೋ ಈಗಿತ್ತಲಾಗ ನನ್ನ ಪತ್ರ ತಂದು ಕೊಟ್ಟರಂತ. ಹಾಂಗಾಗಿ ಪತ್ರ ವಾಪಸ್ ಬರಿಲಿಕ್ಕೆ ಲೇಟ್ ಆತಂತ ಬರೆದಿದ್ದ ನರೇಂದ್ರ.

ಭಾಳ ಲೇಟ್ ಆತಲ್ಲೋ ದೋಸ್ತ? ಈಗ ನನಗ ಪತ್ರ ಮಿತ್ರತ್ವದ ಮೂಡು ಹೋಗೇ ಬಿಟ್ಟದ. ನಡಿ ನಡಿ, ಅಂತ ಬರೆದು ಬಿಡಲೋ ಅಂತ ಅನ್ನಿಸಿತ್ತು. ಏ, ಹಾಂಗ ಬರದ್ರ ಚೊಲೊ ಅಲ್ಲ, ಅಂತ ತಲಿಯೊಳಗ ಬರೋ ವಿಚಾರಕ್ಕೂ ಮಾಡೋ ಕೆಲಸಗಳಿಗೂ ನಡು ಒಂದು ಫಿಲ್ಟರ್ ಹಾಕೇ ಬಿಟ್ಟೆ.

ನರೇಂದ್ರನಿಗೆ ಒಂದು ಪತ್ರ ಬರೆದು ಹಾಕಿದೆ. ಬರಿಯಲಿಕ್ಕೆ ನನಗೇ ಮಜಾ ಬರಲಿಲ್ಲ ಅಂದ ಮ್ಯಾಲೆ ಅವನಿಗೆ ಓದಲಿಕ್ಕೆ ಎಷ್ಟು ಮಜಾ ಬಂತೋ ಇಲ್ಲೋ ಗೊತ್ತಿಲ್ಲ. ನರೇಂದ್ರನ ಬಗ್ಗೆ ಏನೂ ಜಾಸ್ತಿ ನೆನಪಿಲ್ಲ. ಅವನ ಜೋಡಿ ಏನೂ ಸರ್ದಾರ್ಜೀ ಲಫಡಾ ಆಗಿರಲಿಲ್ಲ. ಅದಕ್ಕೇ ನೆನಪಿಲ್ಲ. ಒಂದು ಮೂರ್ನಾಕು ರಸಹೀನ ಪತ್ರಗಳ ಬಳಿಕ ಆ ಪತ್ರ ಮಿತ್ರತ್ವಕ್ಕೂ ಒಂದು ಗತಿ ಕಂಡು ಹೋಗಿ ಎಲ್ಲ ಮುಗೀತು. ಅಷ್ಟರಾಗ ನಮಗೂ ಪತ್ರ ಮಿತ್ರತ್ವದ ಹುಚ್ಚು ಆ ಹೊತ್ತಿನ ಮಟ್ಟಿಗೆ ಬಿಟ್ಟಿತ್ತು.

ಮುಂದ ಒಂದು ವರ್ಷ ಮತ್ತ ಪತ್ರ ಮಿತ್ರ, ಆಪ್ತ ಮಿತ್ರ ಮಾಡಿಕೊಳ್ಳೋ ಉಸಾಬರಿಗೆ ಕೈ ಹಾಕಲಿಲ್ಲ. ಪತ್ರ ಮಿತ್ರತ್ವದ ಮುಂದಿನ ಅಲೆ ಅಪ್ಪಳಿಸಿದ್ದು ಒಂಬತ್ತನೇ ಕ್ಲಾಸಿನಲ್ಲಿ ಇದ್ದಾಗ. ೧೯೮೬ ನಲ್ಲಿ.

ನಾವೆಲ್ಲಾ ಎಂಟನೇ ಕ್ಲಾಸಿನಿಂದ ಇಂಗ್ಲೀಷ್ ಮೀಡಿಯಂ. ಹಾಂಗಾಗಿ ಒಂಬತ್ತನೇ ಕ್ಲಾಸಿಗೆ ಬರೋ ತನಕಾ ಇಂಗ್ಲೀಷ್ ಒಳಗ ಸುಮಾರು ಬರಿಲಿಕ್ಕೆ ಬಂತು. ಸಿಂಪಲ್ ಇಂಗ್ಲೀಷ್.

ಮತ್ತ ಪತ್ರ ಮಿತ್ರರ ಹುಚ್ಚು ವಾಪಾಸ್ ಬಂತು. ಕನ್ನಡ ಪತ್ರ ಮಿತ್ರರು ಸಾಕು. ಇನ್ನು ಏನಿದ್ದರೂ ಇಂಗ್ಲೀಷ್ ಒಳಗ ಪತ್ರ ಬರೆಯಬಹುದಾದದಂತಹ ಜನರೇ ಬೇಕು ಅಂತ ನಿರ್ಧಾರ ಮಾಡಿ ಆತು.

ಇಂಗ್ಲೀಷ್ ಪತ್ರ ಮಿತ್ರರನ್ನ ಎಲ್ಲೆ ಹುಡಕಬೇಕು?

Junior Science Digest, Electronics For You ಅನ್ನೋ ಎರಡು ಇಂಗ್ಲೀಷ್ ಪತ್ರಿಕೆಗಳು ನಮ್ಮ ಅಣ್ಣನ ಕಾಲದಿಂದಲೂ ಬರ್ತಿದ್ದಿವು. ಆವಾ ಮನಿ ಬಿಟ್ಟು ಹೋದ ಮ್ಯಾಲೂ, ನಾನೂ ಓದಬಹುದು ಅಂತ ಹೇಳಿ ಚಂದಾ ತುಂಬಿ ಹಾಂಗೆ ಇಟ್ಟಿದ್ದರು. ಓದ್ತಿದ್ದನೋ ಇಲ್ಲೋ ಗೊತ್ತಿಲ್ಲ ಆದ್ರ ತಿರುವಿ ಅಂತೂ ಹಾಕ್ತಿದ್ದೆ. ಸುಮಾರಷ್ಟು ಹಳೇ ಸಂಚಿಕೆಗಳೂ ಇದ್ದವು. ಅವೆಲ್ಲಾ ರದ್ದಿಗೆ ಹಾಕೋವಂತಹವೇ ಅಲ್ಲ. ಮತ್ತ ಆವಾಗೆಲ್ಲಾ ಇಂಟರ್ನೆಟ್ ಇಲ್ಲದ ಕಾಲ. ಮತ್ತ ತಿರುಗಿ ರೆಫರ್ ಮಾಡಲಿಕ್ಕೆ ಬೇಕು ಅಂತ ಎಲ್ಲಾ ತುಂಬಿ ತುಂಬಿ ಇಡೋದು.

ಇಂತಹ ಯಾವದೋ ಒಂದು ಇಂಗ್ಲೀಷ ಪತ್ರಿಕೆಯಲ್ಲಿ ಸಹ ಪತ್ರ ಮಿತ್ರರ ಅಂಕಣ ಇರೋದನ್ನ ನೋಡಿದ್ದೆ. ಆ ಪತ್ರಿಕೆಗಳಲ್ಲಿ ಬಾಕಿ ಏನೂ ನೆನಪಿಲ್ಲದಿದ್ದರೂ, ಪತ್ರ ಮಿತ್ರರ ವಿಳಾಸ ಸಿಗ್ತದ ಅಂತ ಗೊತ್ತಿತ್ತು. ಮತ್ತ ತೆಗೆದು ಹರವಿಕೊಂಡು ಕೂತೆ. ಒಂಬತ್ತನೇತ್ತಾ ಅಕ್ಟೋಬರ್ ಸೂಟಿ ಟೈಮ್. ೧೯೮೬. ಮತ್ತ ಒಂದಿಷ್ಟು ಮಂದಿ potential pen friends ಲಿಸ್ಟ್ ಮಾಡಿದೆ.

ಈ ಸರೆ ಪತ್ರ ಮಿತ್ರರನ್ನ ಆರಿಸೋ criteria ಬದಲಾಗಿತ್ತು. ದೂರ ಇದ್ದಷ್ಟೂ ಚೊಲೋ. ಇಲ್ಲೆ ನಮ್ಮ ಧಾರವಾಡ ಹತ್ತಿರ ಇದ್ದರ ಏನೂ ಮಜಾ ಬರಂಗಿಲ್ಲ. ಎಲ್ಲೋ ದೂರ ದೂರ ಊರು, ಹೊರ ರಾಜ್ಯದವರು ಇದ್ದರ ಚೊಲೊ ಅಂತ ಹೇಳಿ ಅಂತವರನ್ನೇ ಹುಡಕಲಿಕ್ಕೆ ಶುರು ಮಾಡಿದೆ.

ಈ ರೀತಿಯಾಗಿ ಪತ್ರ ಮಿತ್ರರನ್ನ ಹುಡುಕೋವಾಗ 'ರತಿ ಅಗ್ನಿಹೋತ್ರಿ' ಅನ್ನಾಕಿ ಕಣ್ಣಿಗೆ ಬಿದ್ದಳು. ಹಾಂ! ಸಿನಿಮಾ ನಟಿ ರತಿ ಅಗ್ನಿಹೋತ್ರಿ Junior Science Digest ಓದ್ತಾಳ? ಅಕಿ ಆಂಧ್ರದ ಹಿಂದುಪುರ್ ಊರಾಗ ಇರ್ತಾಳ? ಅಂತ ತಲಿಯಾಗ ಬಂತು. ಏ! ಇದು ಯಾರೋ ಬ್ಯಾರೆ ರತಿ ಅಗ್ನಿಹೋತ್ರಿ ಅನ್ನೋ ಹುಡುಗಿ, ಅಂತ ತಿಳ್ಕೊಳ್ಳೋವಷ್ಟು ಬುದ್ಧಿ ಬಂದಿತ್ತು. ಅದೂ ಗೋಪಾಲ್ ಸಿಂಗನ episode ಆದ ಮ್ಯಾಲೆ ಅಂತೂ ನಾ ಹೆಸರಿನ ಮ್ಯಾಲೆ ಏನೇನರೆ ವಿಚಾರ ಮಾಡಿ, ಏನೇನೋ ಕಲ್ಪನಾ ಮಾಡಿಕೊಂಡು, ಮುಂದ ಅದರಿಂದ KLPD ಆಗೋದು ಬ್ಯಾಡ ಅಂತ ಬಿಟ್ಟಿದ್ದೆ.

ಈ ರತಿ ಅಗ್ನಿಹೋತ್ರಿ ಏನರೆ ನಮ್ಮ ಮಾಳಮಡ್ಡಿ ಅಗ್ನಿಹೋತ್ರಿ ಆಚಾರ್ರ ಪೈಕಿ ಇರಬಹುದಾ ಅಂತ ಒಂದು ಸಣ್ಣ ಸಂಶಯ ಬಂತು. ಕೇಳೋಣ ಏನು ಅಂತ ಅನ್ನಿಸಿದರೂ ಆ ಹೊತ್ತಿಗೆ ನಮ್ಮ ಮಾಳಮಡ್ಡಿ ಸಂಪರ್ಕ ಕಮ್ಮಿ ಆಗಿ ಅಗ್ನಿಹೋತ್ರಿ ಆಚಾರ್ರು ಎಲ್ಲಿದ್ದಾರೋ ಅದು ಸಹಿತ ಗೊತ್ತಿರಲಿಲ್ಲ. ಮತ್ತೆಲ್ಲರ ಅಗ್ನಿಹೋತ್ರಿ ಆಚಾರ್ರ ಪೈಕಿ ಹುಡುಗಿ ಹಿಂದೂಪುರದಾಗ ಕೂತಿದ್ದರ ಕೆಟ್ಟ ಬ್ಯಾಸರಾ, ಬೋರು. ಏನೂ ಜಾಸ್ತಿ ಎನ್ಕ್ವೈರಿ ಮಾಡಲಿಲ್ಲ.

ಸಿನೆಮಾ ನಟಿ ರತಿ ಅಗ್ನಿಹೋತ್ರಿ Junior Science Digest ಓದಿದ್ದರೆ ಅಕಿ ಎಲ್ಲೆ ಸಿನಿಮಾ ನಟಿ ಆಗತಿದ್ದಳು? ಎಲ್ಲೋ ಹೇಳಹೆಸರಿಲ್ಲದ ಎಂಜಿನೀಯರೋ, ಡಾಕ್ಟರೋ ಆಗಿ ನಾಮ ಹಾಕಿಸಿಕೊಂಡು ಅನಾಮಧೇಯ ಜಿಂದಗಿ ನೆಡಸ್ತಿದ್ದಳು. ಅಂತಾದೆಲ್ಲ ಸುಡಗಾಡು ಪುಸ್ತಕ ಓದೋದು ಬಿಟ್ಟು ಕುಣಿದಳು ನೋಡ್ರೀ ಮಸ್ತ ಹೀರೋಯಿನ್ ಆಗಿಬಿಟ್ಟಳು.

ರತಿ ಅಗ್ನಿಹೋತ್ರಿ
ಏನೇ ಇರಲಿ, ಈ Junior Science Digest ರತಿ ಅಗ್ನಿಹೋತ್ರಿ ಅನ್ನೋ ಹುಡುಗಿ ಜೋಡಿ ಪತ್ರ ಮಿತ್ರತ್ವ ಮಾಡಬೇಕು ಅನ್ನಿಸಿಬಿಡ್ತು. ಹೆಸರಂತೂ ಭಾಳ ಚಂದ ಅದ. ನೋಡಲಿಕ್ಕೆ ಹ್ಯಾಂಗ ಇದ್ದಾಳೋ ಏನೋ? ದೇವರಿಗೆ ಗೊತ್ತು. Junior Science Digest ಓದ್ತಾಳ ಅಂದ್ರ ಸುಮಾರು ತಲಿ ಇದ್ದಾಕಿನೇ ಇರಬೇಕು. ತಲಿ ಇದ್ದ ಮ್ಯಾಲೆ ಸುಮಾರು ಬುದ್ಧಿನೂ ಇರಬಹದು. ಇಲ್ಲಂದ್ರ Junior Science Digest ಯಾಕ ಓದ್ತಾಳ? ಓದೋದೊಂದೇ ಅಲ್ಲ ಪತ್ರ ಮಿತ್ರ ಬೇಕು ಅಂತ ಯಾಕ ಹಾಕ್ಕೊತ್ತಾಳ? ದೋಸ್ತಿ ಮಾಡೋಣ ಅಂತ ಹೇಳಿ ಅಕಿಗೊಂದು ಪತ್ರ ಬರದೆ. ನನ್ನ ವಯಸ್ಸಿನಾಕಿನೇ ಇದ್ದಳು ಅಂತ ನೆನಪು. Junior Science Digest ಓದುತ್ತಿದ್ದ ಜೂನಿಯರ್ ರತಿ ಅಗ್ನಿಹೋತ್ರಿ. ಸೀನಿಯರ್ ರತಿ ಅಗ್ನಿಹೋತ್ರಿ ಆ ಕಾಲದಗಾಗ ಆಕೆಯ ಸಿನಿಮಾ ವೃತ್ತಿಯ ಉತ್ತುಂಗದಲ್ಲಿ ಇದ್ದಳು. ೧೯೮೧ ರಲ್ಲಿ ಏನು ಆ ಮೆಗಾ ಹಿಟ್ 'ಏಕ್ ದುಜೆ ಕೆ ಲಿಯೇ' ಬಂದು ಪ್ರಸಿದ್ಧಿ ಆತೋ ನೋಡ್ರೀ, ರತಿ ಅಗ್ನಿಹೋತ್ರಿ ಭಾಳ ಫೇಮಸ್ ಆಗಿ ಮುಂದ ೧೯೮೭ ರಲ್ಲಿ ಮಾಧುರಿ ದೀಕ್ಷಿತ್ ಅನ್ನೋ ಡಿಕ್ಸಿ ಬೇಬ್ ಬರೋ ತನಕಾ ರತಿದೇ ಕಾರುಬಾರು. ಒಂದಾದ ಮೇಲೊಂದು ಹಿಟ್ ಮೂವಿ. ಇದೆಲ್ಲ factors ರತಿ ಅಗ್ನಿಹೋತ್ರಿ ಅನ್ನೋ ಚಿಣ್ಣ ಹುಡುಗಿಯನ್ನ ಪತ್ರ ಮಿತ್ರ ಮಾಡಿಕೊಳ್ಳಬೇಕು ಅಂತ ಪ್ರೇರೇಪಿಸಿರಬೇಕು.

ಒಬ್ಬರಿಗೆ ಮಾತ್ರ ಪತ್ರ ಬರಕೋತ್ತ ಇದ್ದರ ಅದೆಲ್ಲ ಬರೇ hit and miss ಆಗೋ ಚಾನ್ಸಸ್ ಭಾಳ ಅಂತ ಹೇಳಿ ಅದಕ್ಕೇ ಈ ಸಲ ಹಾಕ್ಕೊಂಡು ಒಂದು ಐದಾರ್ ಮಂದಿಗೆ ಒಂದೇ ಸಲ ಬರೆದು ಬಿಡಬೇಕು ಅಂತ ವಿಚಾರ ಮಾಡಿದೆ. ನಮ್ಮ ತಲಿ ತಿರುಗೋದನ್ನ ನೋಡಿದ್ರ, ಯಾವ ಪತ್ರ ಮಿತ್ರನೂ ನಮಗ ಮೂರ್ನಾಕು ತಿಂಗಳ ಮ್ಯಾಲೆ ತಾಳಿಕೆ ಬರೋ ಹಾಂಗ ಕಾಣೋದಿಲ್ಲ. ಹಾಂಗಾಗಿ ನಾವು ಬರೆದ ಎಲ್ಲ ಐದಾರ ಮಂದಿನೂ ಆಕಸ್ಮಾತ ಉತ್ತರ ಬರೆದು ಬಿಟ್ಟರೆ ಬ್ಯಾಡಾದವರನ್ನ ಡಂಪ್ ಮಾಡಿದ್ರಾತು ಅಥವಾ ಅವರೇ ನಮ್ಮನ್ನ ಡಂಪ್ ಮಾಡಬಹುದು ಅಂತ ಹೇಳಿ ಒಂದೇ ಸಲಕ್ಕ ಒಂದು ಆರು ಜನರಿಗೆ ಪತ್ರ ಬರೆದು ಬಿಟ್ಟೆ. ಎಲ್ಲಾದರಾಗ ಬರೆದಿದ್ದು ಒಂದೇ. introductory ಪತ್ರ ಬ್ಯಾರೆ ಬ್ಯಾರೆ ಏನು ಬರಿಯೋದು? ಆವಾಗ ಕಂಪ್ಯೂಟರ್, ಜೆರಾಕ್ಸ್ ಅಷ್ಟೆಲ್ಲ ಇರಲಿಲ್ಲ. ಇದ್ದಿದ್ದರ ಒಂದು ಬರೆದು, ಹೆಸರ ಚೇಂಜ್ ಮಾಡಿ, ಕಾಪಿ ಮಾಡಿ, ಪ್ರಿಂಟ್ ಔಟ್ ತೆಗೆದು, ಪೋಸ್ಟ್ ಮಾಡಿ, ಟೈಮ್ ಸೇವ್ ಮಾಡಬಹುದಿತ್ತು.

ನೆನಪಿದ್ದ ಪ್ರಕಾರ ಹಿಂದುಪುರ್, ಅಸ್ಸಾಮಿನ ಯಾವದೋ ಒಂದು ಮೂಲೆ (ಅದೂ ಚೀನಾ ಬಾರ್ಡರ್ ಹತ್ತಿರದ್ದು), ಮತ್ತ  ಉತ್ತರ ಪ್ರದೇಶದಾಗ ಒಂದೆರಡು ಕಡೆ, ಹೀಂಗ ದೂರ ದೂರ ಇರೋ ಐದಾರು ಮಂದಿಗೆ  ಪತ್ರ ಬರೆದಿದ್ದೆ. ಬಳ್ಳಾರಿ, ಬೆಂಗಳೂರು ಸಾಕಾಗಿತ್ತು.

ಬರೆದು ಮರ್ತು ಬಿಟ್ಟೆ. ಅಕ್ಟೋಬರ್ ಸೂಟಿ ಮುಗದ ಸಾಲಿ ಶುರು ಆಗಿ ಫುಲ್ ಬಿಸಿ.

ಮೊದಲು ಉತ್ತರ ಬಂದಿದ್ದು ಸಪನ್ ಕುಮಾರ್ ದಾಸ್ ಅನ್ನವನಿಂದ. ಆಸ್ಸಾಮಿನ ಮೂಲೆಯಿಂದ ಬರೆದಿದ್ದ. ಆವಾ ಆಗಲೇ ಅಲ್ಲಿನ ಕಲೆಕ್ಟರ್ ಆಫೀಸ್ ನಲ್ಲಿ ಏನೋ ಕೆಲಸ ಮಾಡ್ತಿದ್ದ. ಎಲೆಕ್ಟ್ರಾನಿಕ್ಸ್ ಅವನ ಹವ್ಯಾಸ. ಹಾಂಗಾಗೇ ಅವನ ಅಡ್ರೆಸ್ Electronics For You ಪತ್ರಿಕೆಯಲ್ಲಿ ಸಿಕ್ಕಿತ್ತು ಅಂತ ಅನ್ನಿಸ್ತದ. ಮಸ್ತ ಬರದಿದ್ದ ಪತ್ರ. ಅವನ ಒಂದೆರಡು ಹಾಬಿ ಎಲೆಕ್ಟ್ರಾನಿಕ್ಸ್ ಪ್ರಾಜೆಕ್ಟ್ ಬಗ್ಗೆ ಸಹಿತ ಬರದಿದ್ದ. ಅದು ಮುಂದ ನಮಗ ಒಂದೆರೆಡು ಎಲೆಕ್ಟ್ರಾನಿಕ್ಸ್ ಪ್ರಾಜೆಕ್ಟ್ ಬೇಸಿಗೆ ಸೂಟಿ ಒಳಗ ಮಾಡಲಿಕ್ಕೆ ಪ್ರೋತ್ಸಾಹ ಕೊಟ್ಟಿದ್ದು ಅಂತು ಹೌದು. ಅದಕ್ಕೆ ಸಪನ್ ಕುಮಾರ್ ದಾಸನಿಗೆ ಒಂದು ಥ್ಯಾಂಕ್ಸ್.

ಸಪನ್ ಕುಮಾರ್ ದಾಸ್ ಅವನ ಫೋಟೋ ಸಹಿತ ಕಳಿಸಿದ್ದ. ಸಿಂಪಲ್ ಬ್ಲಾಕ್ & ವೈಟ್ passport ಸೈಜಿನ ಫೋಟೋ. ಹುಡುಗನ ಫೋಟೋ ಆದ್ದರಿಂದ ನಾವೇನೂ ಜಾಸ್ತಿ ಗಮನ ಕೊಡಲಿಲ್ಲ. ನಮ್ಮ ಕಡೆ ಸಹಿತ ಒಂದು ಹೊಸಾ passport ಫೋಟೋ ಇತ್ತು. ಅದನ್ನ ಅವನಿಗೆ ಕಳಿಸಿ ಪತ್ರ ಮಿತ್ರತ್ವ ಸ್ವಲ್ಪ ಮುಂದುವರ್ಸಿದ್ದೆ.

ಹೀಂಗಿದ್ದಾಗ ನಮ್ಮ ಮೌಶಿ ಬಂದಿದ್ದರು. ನನ್ನ ಇತ್ತೀಚಿನ ಕಿತಾಪತಿಗಳನ್ನ ಅವರಿಗೆ ಹೇಳಲಿಲ್ಲ ಅಂದ್ರ ಹ್ಯಾಂಗ? ಹೇಳಿದೆ. ನನ್ನ ಅಸ್ಸಾಮದ ಪತ್ರ ಮಿತ್ರ ನೋಡು ಇವ, ಅಂತ ಅವರಿಗೆ ಸಪನ್ ಕುಮಾರನ ಫೋಟೋ ತೋರ್ಸಿದೆ. ನೋಡಿ ಏನು ಅನ್ನಬೇಕು ಅವರು? ಏ....ಹುಡುಗುರನ್ನ ಕದಿಯೋ 'ಮಕ್ಕಳ ಕಳ್ಳ' ಇದ್ದಂಗ ಇದ್ದಾನಲ್ಲೋ ನಿನ್ನ ಪತ್ರ ಮಿತ್ರ!!!! ಅಂತ ಅಂದು ಬಿಟ್ಟರು. ಹೋಗ್ಗೋ!!! ಮೌಶಿ ಹಾಂಗೆ. ಅವರಿಗೆ ಎಲ್ಲೆಲ್ಲೋ ಏನೇನೋ ಕಾಣ್ತಿದ್ದವು. ಯಾರ್ಯಾರೋ ಹ್ಯಾಂಗ್ಯಾಂಗೊ ಕಾಣಸ್ತಿದ್ದರು. ಮತ್ತ ಹೀಂಗ ಚ್ಯಾಸ್ಟಿ ಮಾಡಿ ಮಾತಾಡೋದು ಅವರ ಸ್ವಭಾವ. ಚುಪುರು ಗಡ್ಡ ಬಿಟ್ಟುಕೊಂಡು, ಪೋಲಿಸ್ ಸ್ಟೇಷನ್ ಒಳಗಿರುವ ಬೋರ್ಡಿನ ಮೇಲಿರುವಂತಹ  ಫೋಟೋ ಕಳಿಸಿದ್ದ ಸಪನ್ ಕುಮಾರ್ ಅವರ ಕಣ್ಣಿಗೆ ಮಕ್ಕಳ ಕಳ್ಳನ ಹಾಂಗ ಕಂಡ್ರ ಅದು ಅವರ ತಪ್ಪಲ್ಲ. ಎಲ್ಲೋ ಆ ತರಹದ ಮಕ್ಕಳ ಕಳ್ಳನ ಫೋಟೋ ಅವರು ನೋಡಿರಬೇಕು ಬಿಡ್ರೀ. ಭಾಳ ನಕ್ಕೆ. ಮೌಶಿನೂ ನಕ್ಕರು. ಅವರು spontaneous ಆಗಿ ಹಾಂಗ ಹೇಳಿದ್ದು ಬಹಳ ಮಜಾ ಅನ್ನಿಸಿತ್ತು. ನಾ ಏನ್ ಅವನ್ನ ಮಕ್ಕಳ ಕಳ್ಳ ಅಂತ ಹೇಳಿ ಬ್ರಾಂಡ್ ಮಾಡಲಿಲ್ಲ. ಜೋಕ್ ಬ್ಯಾರೆ ಪವಿತ್ರ ಪತ್ರ ಮಿತ್ರತ್ವ ಬ್ಯಾರೆ.

ಯೋಗಾಯೋಗ ಇರಲಿಲ್ಲ ಅಂತ ಅನ್ನಸ್ತದ. ಸಪನ್ ಕುಮಾರ್ ದಾಸನ ಜೋಡಿ ಸಹಿತ ಪತ್ರ ಮಿತ್ರತ್ವ ಮುಗೀತು. ಆ ಆಸ್ಸಾಮದ ಮೂಲಿಗೆ ಹೋಗಲಿಕ್ಕೆ ಪತ್ರ ಒಂದು ತಿಂಗಳ ತೊಗೋತ್ತಿತ್ತು. ಬರಲಿಕ್ಕೆ ಮತ್ತೊಂದು ತಿಂಗಳ. ನಡು ಹೆಚ್ಚಾಗಿ ನಂದೋ ಅವನದೋ ಪತ್ರ ಕಳೆದಿರಬೇಕು. ಹಾಂಗಾಗಿ ಅವನೂ ಬರೆಯದೆ ನಾನೂ ಬರೆಯದೆ ಪತ್ರ ವ್ಯವಹಾರ ನಿಂತು ಹೋತು.

ರತಿ ಅಗ್ನಿಹೋತ್ರಿ ಮರತೇ ಬಿಟ್ಟಿದ್ದೆ. ಸುಮಾರು ಒಂದುವರಿ ತಿಂಗಳ ಮ್ಯಾಲೆ ಒಂದು ಪತ್ರ ಮನಿಗೆ ಬಂತು. ಸಾಲಿಂದ ಮನಿಗೆ ಬಂದ ಕೂಡಲೇ, ತಂದೆಯವರು, ನಿನಗೊಂದು ಪತ್ರ ಬಂದದ ನೋಡು, ಅಂತ ಹೇಳಿದರು. ಯಾರದ್ದೂ ಪತ್ರ expect ಮಾಡ್ತಾ ಇರಲಿಲ್ಲ. ಆದ್ದರಿಂದ excite ಏನೂ ಆಗಲಿಲ್ಲ. ತಂದೆಯವರ ಮಾರಿ ಮ್ಯಾಲಿನ ನಗಿ ನಾ ಗ್ರಹಿಸಲಿಲ್ಲ. ಅಂತಾ ಇಂತಾ ಪತ್ರ ಅಲ್ಲೋ!ಮಸ್ತ ಮಜಾ ಪತ್ರ ಬಂದದ ನೋಡು! ಅಂತ ಅಮ್ಮ ಜುಗಲ್ ಬಂದಿ ಹಾಡಿ, ಪೆಕಾ ಪೆಕಾ ಅಂತ ನಕ್ಕಾಗ ಮಾತ್ರ ಏನೋ ಲಫಡಾ ಆಗಿರಬೇಕು ಅಂತ ಅನ್ನಿಸ್ತು. ಪತ್ರ ನೋಡಲಿಕ್ಕೆ ಹೋದೆ.

ಆಘಾತ ಆತು!

ರತಿ ಅಗ್ನಿಹೋತ್ರಿಗೆ ನಾ ಬರೆದ ಪತ್ರ ಹಾಂಗೇ ವಾಪಾಸ್ ಬಂದಿತ್ತು. Addressee Not Found. Sending back to the sender - ಅಂತ ಏನೋ ಪೋಸ್ಟ್ ಮೊಹರು ಸಹ ಇತ್ತು. ಹಾಂ! ಇದೆಂಗ ಆತು? ನಾ ಯಾವಾಗಲೂ ಅಡ್ರೆಸ್ ಡಬಲ್ ಚೆಕ್ ಮಾಡಿದ ಮ್ಯಾಲೇ ಪತ್ರ ಹಾಕ್ತಿದ್ದೆ. ಹಾಂ? ಅಕಿ ರತಿ ಅಗ್ನಿಹೋತ್ರಿ ಎಲ್ಲೋ ಮನಿ ಖಾಲಿ ಮಾಡಿಕೊಂಡು, ಝೇಂಡಾ ಎತ್ತಿಕೊಂಡು ಎಲ್ಲೋ ಹೋಗಿಬಿಟ್ಟಿರಬೇಕು. ಅದಕ್ಕೇ ಪತ್ರ ವಾಪಸ್ ಬಂದು ಬಿಟ್ಟದ. ಅಕಿ ರತಿ ಅಗ್ನಿಹೋತ್ರಿ 'ಹಿಂದು'ಪುರದಾಗ ಇದ್ದಾಕಿ ಈಗ 'ಮುಂದು'ಪುರಕ್ಕ ಬಂದು ಕೂತಾಳೋ? ಅಥವಾ 'ಹಿಂದೂ'ಪುರ ಬ್ಯಾಸರ ಆತು ಅಂತ ಹೇಳಿ 'ಮುಸ್ಲಿಂ'ಪುರಕ್ಕ ಹೋಗ್ಯಾಳೋ? ಅಂತ ನಾನೇ ಜೋಕ್ ಮಾಡಿದೆ. ಮತ್ತ ಎಲ್ಲರೂ ನಕ್ಕರು. ಏನು ಮಾಡಲಿಕ್ಕೆ ಬರ್ತದ?

ಸಿನಿಮಾ ನಟಿ ರತಿ ಅಗ್ನಿಹೋತ್ರಿಯಂತೂ ಸಿಗ್ತಿದ್ದಿಲ್ಲ. ಇದು ಯಾವದೋ ಅದೇ ಹೆಸರಿನ ಚಿಣ್ಣ ಹುಡುಗಿ ಜೋಡಿ ಪತ್ರ ಮಿತ್ರತ್ವ ಮಾಡೋಣ ಅಂದ್ರ ಅಕಿ ಅಡ್ಡ್ರೆಸ್ಸಿಗೇ ಇರಲಿಲ್ಲ. 'ಅಡ್ಡ್ರೆಸ್ಸಿಗೇ ಇಲ್ಲ' ಅನ್ನೋದು ಏನು ಅಂತ ಆವತ್ತಿಂದನೇ ಗೊತ್ತಾತು.

ಉಳಿದ ಮೂರ್ನಾಕು ಜನ ಯಾರೂ ಉತ್ತರ ಬರಿಲಿಲ್ಲ. ಯಾಕೋ ಏನೋ?

ಈ ರೀತಿಯಲ್ಲಿ ಪತ್ರ ಮಿತ್ರತ್ವದ ಎರಡನೇ phase ಮುಗಿದಿತ್ತು. ಮುಂದಿನ phase ಶುರುವಾಗಿ, ಒಂದು ಒಳ್ಳೆ ಪತ್ರ ಮಿತ್ರತ್ವ ಬರಕತ್ತಾಗಲಿಕ್ಕೆ ಮೂರು ವರ್ಷ ಅಂದರೆ ೧೯೯೦ ರ ವರೆಗೆ ಕಾಯಬೇಕಾಯಿತು. ಅದರ ಬಗ್ಗೆ ಮುಂದಿನ ಕಂತಿನಲ್ಲಿ.

(ಸಶೇಷ. ಮುಂದುವರಿಯಲಿದೆ)(ಭಾಗ - ೩ ಇಲ್ಲಿದೆ)

Sunday, January 26, 2014

ನೀ ಸರ್ದಾರ್ಜೀ ಏನಲೇ? (ಪತ್ರ ಮಿತ್ರರ ಪ್ರಪಂಚದಲ್ಲಿ. ಭಾಗ - ೧)



ಚಡ್ಡಿ ಹಾಕ್ಕೋ ಬೇಕು ಅಂತ ಅರಿವು ಮೂಡೋ ಮೊದಲೇ ಚಡ್ಡಿ ದೋಸ್ತಗಳು ಸಿಕ್ಕಿರ್ತಾರ. ಆದರೆ ಪೆನ್ ಹಿಡಿಯೋದನ್ನ ಕಲಿತ ಮೇಲೂ ಪೆನ್ ಫ್ರೆಂಡ್ಸ್ (ಪತ್ರ ಮಿತ್ರರು, Pen Friend, Pen Pal) ಸಿಗ್ತಾರ ಅಂತ ಹೇಳೋದು ಕಷ್ಟ.

The pen is mightier than the sword ಅಂತ ಒಂದು ಮಾತದ. ಪೆನ್ ಫ್ರೆಂಡ್ಸ್ ಇದ್ದು, ಅವರ ಒಡನಾಟ ಮಾಡಿದವರು Pen friends are sometimes mighty closer and dearer than nearer friends ಅಂತ ಹೇಳಿದರೆ ಅದು ದೊಡ್ಡ ಮಾತೇ ಅಲ್ಲ. Pen Friendship ಮಾಡಿ ನೋಡಿದವರಿಗೆ ಅದರ ಗಮ್ಮತ್ತು ಗೊತ್ತು.

ಅದೇನೋ ಗೊತ್ತಿಲ್ಲ. ನಮ್ಮ ಸುತ್ತ ಮುತ್ತ ಯಾರಿಗೂ ಪೆನ್ ಫ್ರೆಂಡ್ಸ್ (ಪತ್ರ ಮಿತ್ರರು) ಇರಲೇ ಇಲ್ಲ. ಹಾಗಾಗಿ ನಮಗೆ ಪತ್ರ ಮಿತ್ರರು ಅಂತ ಇರ್ತಾರ ಅಂತ ತಿಳಿದಿದ್ದು relatively ಭಾಳ ತಡವಾಗಿಯೇ.

೧೯೮೪. ಏಳನೇ ಕ್ಲಾಸ್. ಅರುಣ ಭಟ್ಟ. ಚಡ್ಡಿ ದೋಸ್ತಾ. ಅವನ ಮನೆಗೆ ಹೋಗಿದ್ದೆ. ಆವಾಗ ವಾಲ್ಟ್ ಡಿಸ್ನಿ ಕಂಪನಿಯವರು ಅದೇನೋ ಡಾಲ್ಟನ್ ಕಾಮಿಕ್ಸ್ ಅಂತ ತರ್ತಿದ್ದರು. ಚಂದಮಾಮ, ಬಾಲಮಿತ್ರ, ಇಂದ್ರಜಾಲ ಕಾಮಿಕ್ಸ್ ಇತ್ಯಾದಿಗಳಿಗೆ ಸ್ಪರ್ಧೆ ಅನ್ನುವ ಹಾಗೆ. ಅದು ಕನ್ನಡದ ಒಳಗೇ ಇದ್ದರೂ ಏನೂ ತಿಳಿತಿರಲಿಲ್ಲ. ಯಾಕೆಂದ್ರೆ ಎಲ್ಲೋ ಪಶ್ಚಿಮ ದೇಶಗಳ ಸ್ಟೋರಿ ತಂದು ಕನ್ನಡಕ್ಕೆ ಕೇವಲ ತರ್ಜುಮೆ ಮಾಡಿ ಬಿಟ್ಟರೆ ಆಯಿತೆ? ಹಾಂಗಾಗಿ ನಾನೇನೂ ಅದನ್ನ ಓದುತ್ತಿರಲಿಲ್ಲ. ಆವತ್ತು ಭಟ್ಟನ ಮನಿಗೆ ಹೋದಾಗ ಆ ಪತ್ರಿಕೆ ಕಂಡು ಬಂತು. ಸುಮಾರು ಹಳೇದು ಆಗಿತ್ತು. ಸುಮ್ಮನ ಕಣ್ಣಾಡಿಸಿದೆ.

ಅದರಲ್ಲಿ ಪತ್ರ ಮಿತ್ರರು ಅಂತ ಒಂದು ಪುಟ ಇತ್ತು. ಜನರ ಹೆಸರು, ವಿಳಾಸ, ವಯಸ್ಸು, ಹವ್ಯಾಸ ಇತ್ಯಾದಿ. ಏನೋ ತಲಿಯಲ್ಲಿ ಬಂದು ಬಿಡ್ತು. ನಾವೂ ಯಾರನ್ನಾರ ಪತ್ರ ಮಿತ್ರನ್ನ ಮಾಡಿಕೊಂಡು ಬಿಡಬೇಕು ಅಂತ. ಹಾಂಗಂತ ವಿಚಾರ ಮಾಡಿ, ದೋಸ್ತ ಭಟ್ಟನ ಹತ್ತಿರ ಒಂದು ಕಾಗದ ಇಸಕೊಂಡು, ಒಂದ ಆರು ಏಳು ಜನರ ಹೆಸರು, ವಿಳಾಸ, ವಿವರ ಬರಕೊಂಡು ಬಂದೆ. ಇನ್ನು ಇವರೊಳಗ ವಿಚಾರ ಮಾಡಿ ಒಬ್ಬರೋ ಇಬ್ಬರಿಗೆ ಪತ್ರ ಬರೆದು, ಅವರೂ ಏನರೆ ಒಪ್ಪಿದರೆ ಪತ್ರ ಮಿತ್ರರಾಗಬೇಕು ಅಂತ.

ನಿಂದು ಬಾಕಿ ಎಲ್ಲಾ ವೇಷಾ ಮುಗೀತು. ಈಗ ಇದೊಂದು ಬಾಕಿ ಇತ್ತು, ಅಂತ ತಾಯಿಯವರು as usual ಸಿಡಿಮಿಡಿ ಮಾಡಿದರು. ವಿವಿಧ ವೇಷಾ ಹಾಕಿ ಜೀವಾ ತಿನ್ನೋದು ನಮ್ಮ ಧರ್ಮ. ಸಹಿಸಿಕೊಳ್ಳೋದು ಅವರ ಕರ್ಮ.

ವಿಳಾಸ ಬರಕೊಂಡು ಬಂದವರು ಎಲ್ಲರೂ ಹುಡುಗರೇ ಇದ್ದರು. ಹುಡುಗಿಯರ ಜೊತೆ ಮಾತಾಡಿಬಿಟ್ಟರೆ ದೊಡ್ಡ ಪಾಪ ಅನ್ನುವಂತಹ ಕರ್ಮಠ ಭಟ್ಟರ ಶಾಲೆಯಲ್ಲಿ ಹನ್ನೆರಡು ವರ್ಷ ಮಣ್ಣು ಹೊತ್ತವರು ನಾವು. ಹಾಂಗಾಗಿ ಆ ಕಾಲದಲ್ಲಿ ಹುಡುಗಿಯರ ಜೊತೆ ಪತ್ರ ಮಿತ್ರತ್ವ ಅದೆಲ್ಲ ಮಾಡುವ ಕೆಲಸವಾಗಿರಲಿಲ್ಲ.

ಅದು ಏನು ಯೋಗಾಯೋಗವೋ ಗೊತ್ತಿಲ್ಲ. ಬಳ್ಳಾರಿಯ ಒಬ್ಬ ಗೋಪಾಲ ಸಿಂಗ್ ಅನ್ನುವನನ್ನು ಯಾಕೆ ಪತ್ರ ಮಿತ್ರನನ್ನಾಗಿ ಮಾಡಿಕೊಳ್ಳಬಾರದು ಅಂತ ಅನ್ನಿಸಿಬಿಡ್ತು. ಗೋಪಾಲ ಸಿಂಗ ಅನ್ನುವ ಹೆಸರು ನೋಡಿ ನಾ ಇವಾ ಎಲ್ಲೋ ಸರ್ದಾರ್ಜೀ ಸಿಂಗನೇ ಇರಬೇಕು ಅಂತ ಖುಷ್ ಆಗಿಬಿಟ್ಟೆ. ಆಗ ಮಾತ್ರ ಸ್ವಲ್ಪೇ ದಿವಸಗಳ ಹಿಂದೆ ಇಂದಿರಾ ಗಾಂಧಿಯನ್ನು ಸಿಖ್ಖರು ಹೊಡೆದು ಹಾಕಿದ್ದರು. ಮತ್ತೆ ಪಂಜಾಬ, ಖಲಿಸ್ತಾನ, ಅಲ್ಲಿಯ ಗಲಾಟೆ ಎಲ್ಲ ಜೋರಾಗಿತ್ತು. ಪಗಡಿ ಗಿಗಡಿ ಕಟ್ಟಿಕೊಂಡು, ಖಡ್ಗ ಅದು ಇದು  ಹಿಡಿದುಕೊಂಡು, ಉದ್ದ ಕೂದಲಾ ಬಿಟ್ಟುಕೊಂಡು, ಖಡಾ ಗಿಡಾ ಹಾಕಿಕೊಂಡು ಇರುವ ಸಿಖ್ಖರ ಬಗೆ ಅದೇನೋ ಕುತೂಹಲ. ಯಾರರೆ ಸಿಖ್ಖರು ಸಿಕ್ಕರೆ ಅವರನ್ನು ಹಿಡಿದು, ಮಾತಾಡಿಸಿ, ಸಿಖ್ ಧರ್ಮದ ಬಗ್ಗೆ ತಿಳಕೊಂಡು, ಯಾಕ್ರೀಪಾ ಯಾಕ ಹೀಂಗ ಹೊಡೆದಾಟ ಮಾಡ್ತೀರಿ? ಯಾಕ ಇಂದಿರಾ ಗಾಂಧಿನ್ನ ಹೊಡೆದು ಹಾಕಿಬಿಟ್ಟಿರಿ? ಅಂತ ಏನೇನೋ ಕೇಳಬೇಕು, ನಮ್ಮ ಬಗ್ಗೆ ಹೇಳಬೇಕು ಅಂತೆಲ್ಲ ಅದೇನೇನೋ ಅಸೆ sub conscious ಆಗಿ ಇತ್ತು ಅಂತ ಅನ್ನಸ್ತದ. ಹಾಂಗಾಗಿ ಗೋಪಾಲ ಸಿಂಗ್ ಅಂತ ಹೆಸರು ನೋಡಿದ ಕೂಡಲೇ ಜೈ ಅಂತ ಅವಂಗ ಪತ್ರಾ ಬರಿಲಿಕ್ಕೇ ಬೇಕು ಅಂತ ತಲಿ ಬಂದು ಬಿಡ್ತು.

ಆ ಕಾಲದಲ್ಲಿ ನನಗ ಧಾರವಾಡದಲ್ಲಿ ಗೊತ್ತಿದ್ದವರು ಇಬ್ಬರೇ ಸಿಂಗರು. ಒಬ್ಬವ ಗುಲಶನ್ ಸಿಂಗಾ, ಇನ್ನೊಬ್ಬವ ನಮ್ಮ ಅಣ್ಣನ ಕ್ಲಾಸ್ಮೇಟ್ ಸಿಂಗಾ. ಗುಲಶನ್ ಸಿಂಗ ಸರ್ದಾರ್ಜೀ ಅಲ್ಲವೇ ಅಲ್ಲ. ಅವನ ಕಡೆ ಹೋಗಿ ನಿಮ್ಮ ಮಂದಿ ಯಾಕ ಇಂದಿರಾ ಗಾಂಧಿನ್ನ ಕೊಂದ್ರಲೇ? ಅಂತ ನಾ ಕೇಳಿದ್ದೇ ಆದರೆ, ಆವಾ ಕೈಯೆತ್ತಿ, ಏ! ಮಹೇಶಾ! ನಾವು ಲಕ್ಷ್ಮಿಸಿಂಗನ ಕೆರೆ ಖ್ಯಾತಿಯ ಲಕ್ಷ್ಮಿಸಿಂಗನ ಪೈಕಿಯವರು ಮಾರಾಯಾ. ನಾವು ಸಿಖ್ಖರಲ್ಲ. ರಜಪೂತರು, ಅಂತ ಆವಾ ಹೇಳೋದು ಬೇಕೇ ಇರಲಿಲ್ಲ. ಯಾಕಂದ್ರ ಬಾಲವಾಡಿ ದೋಸ್ತ ಗುಲಶನ್ ಬಗ್ಗೆ ಎಲ್ಲ ಗೊತ್ತಿತ್ತು. ಇನ್ನು ನಮ್ಮ ಅಣ್ಣನ ಫ್ರೆಂಡ್ ಸಿಂಗ್ ಸರ್ದಾರ್ಜೀ ಆಗಿದ್ದ. ಆದ್ರ ಅವನ ಟಚ್ ಅಷ್ಟು ಇರಲಿಲ್ಲ. ಹಾಂಗಾಗಿ ಸರ್ದಾರ್ಜೀ ಬಗ್ಗೆ ತಿಳಿದುಕೊಳ್ಳಲಿಕ್ಕೆ ಈ ಬಳ್ಳಾರಿಯ ಗೋಪಾಲ್ ಸಿಂಗ್ ಅನ್ನುವನೇ ಸರಿ ಅಂತ ಅವಂಗೇ ಪತ್ರ ಬರೆದು ಬಿಡೋದು ಅಂತ ನಿಶ್ಚಯ ಮಾಡಿ ಬಿಟ್ಟೆ. ಮುಹೂರ್ತ ಇಟ್ಟೇ ಬಿಟ್ಟೆ.

ಬಳ್ಳಾರಿ ಅಂತ ಶುದ್ಧ ಕನ್ನಡದ ಊರಿನಲ್ಲಿ ಇರೋ ಸಿಂಗ್ ಖರೆ ಸರ್ದಾರ್ಜೀ ಹೌದೋ ಅಲ್ಲೋ ಅಂತ ಒಂದು ಸಣ್ಣ ಸಂಶಯ ಮನಸ್ಸಿನಲ್ಲಿ ಇತ್ತು. ಸರ್ದಾರ್ಜೀ ಮಂದಿ ಗೋಪಾಲ, ಗಣೇಶ, ಇತ್ಯಾದಿ ಸಿಂಪಲ್ ಹೆಸರು ಇಡೋದಿಲ್ಲ. ಅವರದ್ದು ಏನಿದ್ದರೂ ಭರ್ಜರಿ ಹೆಸರು ಇರ್ತಾವ. ಜೋಗಿಂದರ್, ಹರ್ಮಿಂದರ್, ಬೂಟಾ ಸಿಂಗ, ಚಪ್ಪಲ್ ಸಿಂಗ್, ಝೈಲ್ ಸಿಂಗ್, ಜರ್ನೇಲ್ ಸಿಂಗ್ ಭಿಂದ್ರನ್ವಾಲೆ, ಅವತಾರ ಸಿಂಗ್ ಬ್ರಹ್ಮಾ, ಲೊಂಗೋವಾಲ್ (ಲುಂಗಿವಾಲ್ ಅಲ್ಲ) ಇತ್ಯಾದಿ ಇತ್ಯಾದಿ. ಆವಾಗ ಈಗಿನಷ್ಟು ಬುದ್ಧಿ ಇರಲಿಲ್ಲ ಬಿಡ್ರೀ. ಹಾಂಗಾಗಿ ಈ ಬಳ್ಳಾರಿ ಗೋಪಾಲ್ ಸಿಂಗ್ ಸಹಿತ ಸಿಖ್ಖನೇ ಇರಬೇಕು ಅಂತ ಮಾಡಿಬಿಟ್ಟೆ. ಸಿಖ್ಖರು ಎಲ್ಲಾ ಕಡೆ ಇದ್ದಾರ. ಧಾರವಾಡ ಒಳಗೂ ದೊಡ್ಡ ಸೈಕಲ್ ಡೀಲರ್ ಅಂದ್ರ ಛಡ್ಡಾ & ಸನ್ಸ್. ಅವರು ಸಿಖ್ಖರೇ. ಹಾಂಗಾಗಿ ಗೋಪಾಲ್ ಸಿಂಗ್ ಸಹಿತ ಸಿಖ್ಖನೇ ಇರಬೇಕು ಅಂತ ಹೇಳಿ ಅನಾಯಾಸ ಸಿಕ್ಕ ಸಿಖ್ಖನಿಗೆ ಪತ್ರ ಬರದೇ ಬಿಟ್ಟೆ.

ಒಂದು ಇಂಗ್ಲಂಡ್ ಲೆಟರ್ (inland letter, ಅಂತರ್ದೇಶಿ) ತೊಗೊಂಡು ಬಂದು, ಚಂದಾಗಿ ಸರಳ ಕನ್ನಡ ಒಳಗ, ಮುತ್ತಿನಂತಹ (?) ಕೈ ಬರಹದಲ್ಲಿ ಒಂದು ಪತ್ರ ಬರದೆ. ಮೊದಲನೆ ಪತ್ರದಲ್ಲೇ, ಏ ಗೋಪಾಲ್ ಸಿಂಗಾ, ನೀ ಸರ್ದಾರ್ಜೀ ಏನಲೇ? ಯಾಕ ಇಂದಿರಾ ಗಾಂಧಿಗೆ ಹೆಟ್ಟಿ ಬಿಟ್ರಲೇ? ಅಂತೆಲ್ಲಾ ಏನೂ ಬರಿಲಿಲ್ಲ. ಶುದ್ಧ ಗ್ರಂಥ ಕನ್ನಡದಲ್ಲಿ, ನಾನು ಹೀಂಗ, ನೀನು ಯಾರು? ಏನು ಮಾಡ್ತೀ? ಪತ್ರ ಮಿತ್ರ ಆಗು. ಓಕೆ. ನಮಸ್ಕಾರ, ಅಂತ ಹೇಳಿ ಪತ್ರಾ ಮುಗಿಸಿದೆ. ಪೂರ್ತಿ ಜಾಗಾ ತುಂಬಲಿಲ್ಲ ಅಂತ ಹೇಳಿ ಕೊನಿ ಕೊನಿಗೆ ದೊಡ್ಡ ಸೈಜಿನ ಅಕ್ಷರ ಮಾಡಿ ಪತ್ರಾ ತುಂಬಿಸಿ, ಅಂಟು (ಎಂಜಲು ಅಲ್ಲ) ಹಚ್ಚಿ, ಪತ್ರಾ ಸೀಲ್ ಮಾಡಿ, ಬಳ್ಳಾರಿ ಅಡ್ರೆಸ್ ಬರದು, ಪಿನ್ ಕೋಡ್ ಕರೆಕ್ಟ್ ಆಗಿ ಬರದು, ಪೋಸ್ಟ್ ಡಬ್ಬಿ ಒಳಗ ಹಾಕಿ ಬಿಟ್ಟೆ. ನಾ ಮೆಚ್ಚಿದ ಸಿಂಗನಿಗೆ ಕಾಣಿಕೆ ತಂದಿರುವೆ. ಈ ಪತ್ರದಿ ಬರೆದಾ ಪದಗಳನು ಚುಂಬಿಸಿ ಕಳಿಸಿರುವೆ. ನಾ....ಚುಂಬಿಸಿ ಕಳಿಸಿರುವೆ, ಅಂತ ಮಾತ್ರ  ಹಾಡಲಿಲ್ಲ. ಅವನೌನ್! ಎಲ್ಲಿ ಚುಂಬನ? ಪತ್ರಕ್ಕ ಎಂಜಲು ಹಚ್ಚಿ ಸೀಲ್ ಮಾಡೋ ಹೇಶಿಗಳು ಎಂಜಲು ಹಚ್ಚೋದಕ್ಕ ಚುಂಬನ ಅಂತ ಹೇಳಿ ಯಾರ ಕಿವಿ ಮ್ಯಾಲೆ ಹೂವು ಇಡ್ತಾರೋ ದೇವರಿಗೆ ಗೊತ್ತು.

ಗೋಪಾಲ್ ಸಿಂಗ್ ಉತ್ತರ ಬರದೇ ಬಿಟ್ಟ. ದೇವರು ಅವಂಗ ಒಳ್ಳೇದು ಮಾಡಲಿ. ಅವನೂ ಸಿಂಪಲ್ ಕನ್ನಡ ಒಳಗ ಬರದಿದ್ದ. ಆವಾ ನನಕಿಂತ ಒಂದು ನಾಕು ವರ್ಷ ದೊಡ್ಡವ ಇದ್ದ. ಅದು ಮೊದಲೇ ಗೊತ್ತಿತ್ತು ಬಿಡ್ರೀ. ಯಾಕಂದ್ರ ಡಾಲ್ಟನ್  ಕಾಮಿಕ್ಸ್ ಒಳಗ ಅದು ಇತ್ತು. ನನಗ ನನ್ನ ವಯಸ್ಸಿನ ಹುಡುಗುರಕಿಂತ ಸ್ವಲ್ಪ ದೊಡ್ದವರೇ ಸರಿ ಆಗ್ತಿದ್ದರು. wave length ಮ್ಯಾಚ್ ಆಗ್ತಿತ್ತು. ನಮ್ಮ ವಯಸ್ಸಿನ ಹುಡಗರಿಗೆ ನಾ ಮಾತಾಡೋ ಕೆಲೊ ವಿಷಯ ತಿಳಿತಿದ್ದೂ ಇಲ್ಲ ಮತ್ತ ಅವರಿಗೆ ಅದೆಲ್ಲ ಆಸಕ್ತಿನೂ ಇರಲಿಲ್ಲ. ನನಗ ಅವೆಲ್ಲ ವಿಷಯ ಹೇಳಿ ಕೇಳಿ ಮಾಡಲಿಕ್ಕೆ ದೊಡ್ಡ ಹುಡಗರೇ ಸರಿ ಆಗ್ತಿದ್ದರು. ನಮ್ಮ ಹಿಂದಿನ ರೂಮಿನ್ಯಾಗ ಭಾಡಿಗಿ ಇದ್ದ ಯೂನಿವರ್ಸಿಟಿ ಸ್ಟೂಡೆಂಟ್ಸ್ ಅಂತಹ ಮಂದಿ. ಹಾಂಗಾಗಿ ಪತ್ರ ಮಿತ್ರ ಗೋಪಾಲ್ ಸಿಂಗ ನನಕಿಂತ ದೊಡ್ಡವ ಇದ್ದಾನ ಅಂದ್ರ ಚೊಲೋ ಆತು ಬಿಡು ಅಂತ ಅಂದುಕೊಂಡೆ.

ಗೋಪಾಲ ಸಿಂಗನೂ ಸರಳ ಬರದಿದ್ದ. ಕನ್ನಡ ಚೊಲೊ ಇತ್ತು ಅವಂದೂ. ಅಕ್ಷರ ಸಹಿತ ಚೊಲೊ ಇತ್ತು. ಭಾಳ ಚಂದ ಅಂತ ಅಲ್ಲ. ಓದಲಿಕ್ಕೆ ತೊಂದ್ರಿ ಇರಲಿಲ್ಲ. ಓದಿದೆ ಪತ್ರಾ. ಮತ್ತ ಮತ್ತ ಓದಿದೆ.

ಪತ್ರ ಬಂದದ ಅಂದ ಮ್ಯಾಲೆ ಉತ್ತರಾ ಬರಿಲಿಕ್ಕೇ ಬೇಕು. ಅದೂ ತಾಪಡ್ ತೋಪ್ ಬರಿಬೇಕು. ಮತ್ತೊಂದು ಇನ್ಲ್ಯಾಂಡ್ ಲೆಟರ್ ತೆಗದೇ ಬಿಟ್ಟೆ. ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ, ನಾ ಬರೆವೆ, ಅಂತ ಸೆಂಟಿ ಆಗಿ ಏನೂ ಬರಿಲಿಲ್ಲ. ಅದು ಇದು ಸುದ್ದಿ ಬರದೆ. ನಮ್ಮಜ್ಜಿ ಕಾಲು ಮುರಕೊಂಡು ಬಿದ್ದಿದ್ದು, ಮಣಿಪಾಲ್ ಹಾಸ್ಪಿಟಲ್ಗೆ  ಅವರನ್ನ ಹಾಕಿದ್ದು, ನಂತರ ಅವರು ನಮ್ಮ ಮನಿಗೇ ಬಂದು ನನ್ನ ರೂಮಿನ್ಯಾಗೇ ಝೇಂಡಾ ಹಾಕಿದ್ದು, ಇತ್ಯಾದಿ ಎಲ್ಲ ಬರದೆ. ನಮ್ಮಜ್ಜಿ ಜೋಡಿ ಆಗ್ತಿದ್ದ ನನ್ನ ನಿತ್ಯದ ಜಗಳದ ಬಗ್ಗೆ ಮಾತ್ರ ಬರಿಲಿಲ್ಲ. ಅದು ಬರೆದು ಬಿಟ್ಟಿದ್ದರ ಅದು ಪತ್ರ ಆಗ್ತಿದ್ದಿಲ್ಲ, ಅದು ಒಂದು ಮಹಾಯುದ್ಧದ combat report ಆಗಿಬಿಡ್ತಿತ್ತು. ಈ ಪತ್ರದಾಗೂ, ಏ ಸಿಂಗಾ! ನೀ ಸರ್ದಾರ್ಜೀ ಏನಲೇ? ಅಂತ ಕೇಳಲಿಲ್ಲ. ನನಗ patience ಅನ್ನೋದು ಆ ಕಾಲದಲ್ಲಿ ಇರಲೇ ಇಲ್ಲ. ಗೋಪಾಲ್ ಸಿಂಗನ್ನ, ನೀ ಸರ್ದಾರ್ಜೀ ಏನು? ಅಂತ ಕೇಳಿ, ಸಿಖ್ಖರ ಬಗ್ಗೆ, ಖಲಿಸ್ತಾನ ಬಗ್ಗೆ, ಇಂದಿರಾ ಗಾಂಧಿಗೆ ಗುಂಡು ಹಾಕಿದ್ದರ ಬಗ್ಗೆ, ಎಲ್ಲ ಮಾತಾಡಬೇಕು ಅಂತ ಭಾಳ ಅನ್ನಿಸಲಿಕ್ಕೆ ಹತ್ತಿತ್ತು. ಆದರೂ ಹ್ಯಾಂಗೋ ಮಾಡಿ ತಡಕೊಂಡು ಗೋಪಾಲ್ ಸಿಂಗನ ಧರ್ಮದ ಮರ್ಮ ಅರಿಯುವ ಕಿತಬಿಯಿಂದ ದೂರ ಉಳಿದೆ. ಪತ್ರಾ ಡಬ್ಯಾಗ ಒಗದೆ. ನಾ ಈ ಪರಿ ಹಾಕ್ಕೊಂಡು ಪತ್ರಾ ಬರೆಯೋದು ನೋಡಿ, ಯಾರೋ ಕಿಡಿಗೇಡಿ ಹಿರಿಯರು, ಭಾರಿ 'ಪತ್ರ'ಕರ್ತ ಆಗಿ ಬಿಟ್ಟಿಯಲ್ಲಪಾ? ಅಂತ ಜೋಕ್ ಮಾಡಿದ್ದರು ಅಂತ ನೆನಪು. ಯಾರು? ನೆನಪಿಲ್ಲ.

ಒಂದು ವಾರದ ಮ್ಯಾಲೆ ಆತು. ಗೋಪಾಲ್ ಸಿಂಗನಿಂದ ಉತ್ತರಾ ಬರಲೇ ಇಲ್ಲ. ಏನಾತಪಾ? ಅಂತ ಚಿಂತಿ ಆತು. ಹ್ಯಾಂಗಿದ್ದಾನ ನಮ್ಮ ಹೊಸಾ ಗೆಳೆಯಾ? ಜಡ್ಡು ಗಿಡ್ಡು ಬಿದ್ದಾನೇನು ಮತ್ತ? ಅಂತ ವಿಚಾರ ಸಹಿತ ಬಂತು. ಪತ್ರ ಎಲ್ಲರೆ ಪೋಸ್ಟ್ ಒಳಗ ಕಳೆದು ಹೋತೋ ಹ್ಯಾಂಗ? ಅಂತ ಸಹಿತ ವಿಚಾರ ಬಂತು. ಮತ್ತೊಂದು ಪತ್ರಾ ಬರೆದು ಹಾಕಿ ಬಿಡಲೋ ಹ್ಯಾಂಗ ಅಂತ ವಿಚಾರ ಮಾಡಿದೆ. ಇನ್ನೊಂದು ದಿವಸ  ಬಿಟ್ಟು ನೋಡೋಣ ಅಂತ ಬಿಟ್ಟೆ.

ಮರುದಿವಸ ಮಧ್ಯಾನ ಸೂಟಿಗೆ ಮನಿಗೆ ಬಂದೆ. ಸಾಧಾರಣ ಬರ್ತಿದ್ದಿಲ್ಲ. ಯಾಕಂದ್ರ ಇರೋ ನಲವತ್ತೈದು ನಿಮಿಷದ ಸೂಟಿ ಒಳಗ ನಿರ್ಮಲ ನಗರದ ಮನಿಗೆ ಸೈಕಲ್ ಹೊಡೆದು, ಊಟ ಮಾಡಿ, ವಾಪಸ್ ಬರೋದ್ರಾಗ ಟೈಮ್ ಸಾಲತಿದ್ದಿಲ್ಲ. ಅಥವಾ ಭಾಳ ಟೈಟ್ ಆಗ್ತಿತ್ತು. ಲೇಟ್ ಆದ್ರ ಮಾಸ್ತರ್ ಮಂದಿ ಕಡೆ ಬೈಸ್ಕೊ ಬೇಕು. ಬೈಸ್ಕೊಳ್ಳಿಕ್ಕೆ ಬ್ಯಾರೆ ಕಾರಣ ಬೇಕಾದಷ್ಟು ಇದ್ದಾಗ ಇದೊಂದು ಯಾಕ? ಆವತ್ತು ಮಧ್ಯಾನದ ಪೋಸ್ಟಿಗೆ ಗೋಪಾಲ್ ಸಿಂಗನ ಪತ್ರ ಬಂದಿರಬಹುದೋ ಏನೋ ಅಂತ ಕಾತುರಾ. ಆತುರಾ. ಬಂದಿರಲೇ ಇಲ್ಲ. ಬರೆ ಊಟಕ್ಕ ಹೋದಂಗ ಆತು. ಮನಿಯೊಳಗ ಊಟ ಮಾಡಿ ಬಂದಿದ್ದಕ್ಕ ಭಟ್ಟನ ಅಂಗಡಿ ಭಟ್ಟಂಗ ಆವತ್ತಿನ ನಮ್ಮ ನಾಕಾಣೆ, ಎಂಟಾಣೆ ಬಿಸಿನೆಸ್ಸ್ ಮಿಸ್ ಆತು. ಛೆ! ಆವಾಗ ದಿನಕ್ಕಎರಡು ಸರೆ ಪೋಸ್ಟ್ ಬರ್ತಿತ್ತು. ಒಂದು ಸುಮಾರು ಮಧ್ಯಾನ ಒಂದುವರಿ (1.30 pm) ಟೈಮಿಗೆ. ಇನ್ನೊಂದು ಸಂಜಿಕ್ಕ ಸುಮಾರು ನಾಕೂವರಿ (4.30 pm) ಟೈಮಿಗೆ. ಈಗ ಬಂದಿಲ್ಲ ಅಂದ್ರ ಏನಾತು? ಸೆಕೆಂಡ್ ಡೆಲಿವರಿಗೆ ಬಂದರೂ ಬರಬಹುದು ಅಂತ ಹೇಳಿ ವಾಪಸ್ ಸಾಲಿಗೆ ಬಂದೆ. ಗೋಪಾಲ್ ಸಿಂಗನ ಪತ್ರ ಬಂದಿರಲಿಲ್ಲ ಅಂತ ಹೇಳಿ, ಪಂಕಜ್ ಉದಾಸನ ಗತೆ ಉದಾಸ ಆಗಿ, ಸೈಕಲ್ ಸ್ವಲ್ಪ ನಿಧಾನ ಹೊಡದೆ. ಮೊದಲೇ ಸಾಲಿಗೆ ಹೋಗೋ ಮೂಡು ಇರ್ತಿರಲಿಲ್ಲ. ಇವತ್ತಂತೂ ಮೂಡು ಫುಲ್ ಆಫ್ ಆಗಿಬಿಟ್ಟದ. ಹಾಂಗಾಗಿ ಸಾಲಿಗೆ ಬಂದು ಮುಟ್ಟಿದಾಗ ಲೇಟ್ ಆಗಿ, ಜೋಶಿ ಟೀಚರ್ ಬೊಂಬಡಾ ಹೊಡದ್ರು. ಬೈದರು. ಅವನೆಲ್ಲಾ ಕೇರ್ ಮಾಡೋದು ಬಿಟ್ಟು ಭಾಳ ವರ್ಷ ಆಗಿತ್ತು.

ಸಾಲಿ ಮುಗಿಸಿ ಸಂಜಿಗೆ ಮನಿಗೆ ಬಂದೆ. ಮೊದಲು ಕೇಳಿದ್ದು ಅದೇ ಪ್ರಶ್ನೆ. ಏ! ನನಗ ಏನರೆ ಪತ್ರ ಬಂದದ ಏನು? ಅಂತ. ಹ್ಞೂ....ಬಂದದ ನೋಡು ಅಂತ ಉತ್ತರ ಬಂತು. ಓಡಿದೆ ಪತ್ರ ಇಡೋ ಕಡೆ. ಗೋಪಾಲ್ ಸಿಂಗ್ ವಾಪಸ್ ಪತ್ರ ಬರೆದಿದ್ದ.

ನಾ ಮತ್ತೊಂದು ಪತ್ರಾ ರಿಟರ್ನ್ ಬರದೇ ಬಿಟ್ಟ. ನಿಂದು ಇದೊಂದು ಹೊಸಾ ಮಳ್ಳು ಶುರು ಆಜು ನೋಡು. ಅದೆಂತಾ ಆ ನಮ್ನಿ ಯಾರ್ಯಾರಿಗೋ ಪತ್ರಾ ಬರಿತ್ಯನಪಾ? ಅಂತ ಅಮ್ಮ ಶುದ್ಧ ಹವ್ಯಕ ಭಾಷೆಯಲ್ಲಿ ಬೈದರು. ಅವನ್ನೆಲ್ಲಾ ಕೇರ್ ಮಾಡೋದು ಬಿಟ್ಟು ಯುಗಗಳೇ ಕಳೆದು ಹೋಗಿದ್ದವು. ಮೊದಲಿಂದಲೂ ದೇವರಿಗೆ ಬಿಟ್ಟ ಹೋರಿ ಜಾತಿ ಮಂದಿ ನಾವು. ಮಾಡಿದ್ದೇ ಕಾರಬಾರ. ನೆಡದದ್ದೇ ಹಾದಿ. ಮಾಡಿಕೊಂಡಿದ್ದೇ ದಾರಿ.

ಇದು ಮೂರನೇ ಪತ್ರ. ಈಗ ಭಾಳ ವತ್ರ ಆಗಿ, ಪ್ರೆಶರ್ ಭಾಳ ಜಾಸ್ತಿ ಆಗಿ ಬಿಡ್ತು. ಈ ಗೋಪಾಲ್ ಸಿಂಗ್ ಅನ್ನೋ ಪತ್ರ ಮಿತ್ರನನ್ನ, ಏ ಸಿಂಗಾ! ನೀ ಸರ್ದಾರ್ಜೀ ಏನಲೇ? ಅನ್ನೋ ಪ್ರಶ್ನೆ ಕೇಳದೆ ಇದ್ದರ ನಾ ಹುಚ್ಚ ಆಗಿ ಬಿಡ್ತೇನಿ ಅಂತ ಅನ್ನಿಸಿ, ಕೇಳೇ ಬಿಟ್ಟೆ. ಆದ್ರ ಭಾಳ diplomatic ಆಗಿ ಕೇಳಿದೆ. ಏನಪಾ ಗೋಪಾಲಾ? ಎಲ್ಲಾ ಆರಾಮೇನು? ಅಭ್ಯಾಸ ಎಲ್ಲ ಹ್ಯಾಂಗ ನೆಡದದ? ಬಳ್ಳಾರಿ ಕೆಟ್ಟ ಹೀಟ್ ಅಂತ. ನನ್ನ ಕ್ಲಾಸ್ಮೇಟ್ ಒಬ್ಬವ ಎಸ್. ವಿನಯ್ ಅಂತ ಇದ್ದಾನ. ಏ...ಬರೆ initial ಅದ, ಅಡ್ಡೆಸರು ಇಲ್ಲ ಅಂತ ಹೇಳಿ ಆವಾ ಮೈಸೂರ್ ಕಡೆಯೆವಾ ಅಂತ ತಿಳ್ಕೊಬ್ಯಾಡೋ. ಅವನ ಫುಲ್ ಹೆಸರು ವಿನಯ್ ಸಿಂದಗಿ ಅಂತ. ಯಾಕ ಹೇಳಿದೆ ಅಂದ್ರ ಆವಾ ಬಳ್ಳಾರಿಯವ ನೋಡು. ನಿನಗ ಅಲ್ಲೆ ನಿಮ್ಮ ಊರಾದ ಬಳ್ಳಾರಿಯೊಳಗ ಯಾರರ ಸಿಂದಗಿ ಗೊತ್ತಿದ್ದಾರೇನು? ಅದು ಇದು ಅಂತ ಒಂದು ಅರ್ಧಾ ಇನ್ಲ್ಯಾಂಡ್ ಲೆಟರ್ ಕೊರೆದು ಕೊರೆದು ತುಂಬಿಸಿಬಿಟ್ಟೆ.

ಈಗರೆ ಗೋಪಾಲ್ ಸಿಂಗನ ಧರ್ಮದ ಮರ್ಮ ಅರಿಬೇಕು ಅಂತ ಹೇಳಿ, ಮೊದಲು ಒಂದು ಫುಲ್ paragraph ಸಿಖ್ಖ್ ಧರ್ಮ ಎಷ್ಟು ಮಹಾ ಧರ್ಮ, ನನ್ನ ಕಡೆ ಅಮರಚಿತ್ರ ಕಥಾ ಒಳಗ ಬಂದಾ ಸಿಂಗ್ ಬೈರಾಗಿ ಅಮರ ಚಿತ್ರಕಥಾ ಪುಸ್ತಕನೂ ಅದ, ಅವನೂ ದೊಡ್ಡ ಸಿಖ್ಖ ಗುರು ಮತ್ತ ಯೋಧ ಇದ್ದ. ಇನ್ನೂ ಎರಡು ಮೂರು ಸಿಖ್ಖ್ ಗುರುಗಳ ಮೇಲೂ ಅಮರಚಿತ್ರ ಕಥಾ ಪುಸ್ತಕ ಅವ. ಅವನ್ನೂ ಮುಂದಿನ ಸರೆ ಭಾರತ ಬುಕ್ ಡಿಪೊ ಪುಸ್ತಕದ ಅಂಗಡಿಗೆ ಹೋದಾಗ ಮುದ್ದಾಂ ತೊಗೊತ್ತೇನಿ. ಸಿಖ್ಖ್ ಧರ್ಮ ಅಂದ್ರ ಮಸ್ತ  ನೋಡಪಾ ಗೋಪಾಲ್. ಗಂಡು ಧರ್ಮ ನೋಡೋ ಅದು. ಅವರ ಸುದ್ದಿಗೆ ಬಂದ್ರ ಹಾಕ್ಕೊಂಡು ಒದ್ದು ಕಳಿಸೋ ದಮ್ಮು ಇರೋದು ಅಂದ್ರ ಅವರಿಗೆ ಮಾತ್ರ ನೋಡು, ಅಂತ ಹೇಳಿ ಫುಲ್ ಮಸ್ಕಾ ಹೊಡದು, ನೀನೂ ಸಿಖ್ಖ್ ಏನಪಾ ಗೋಪಾಲಾ? ನೀನೂ ಪೇಟಾ ಗೀಟಾ ಕಟ್ಟಿಕೊಂಡು, ಕೃಪಾಣ ಖಡ್ಗ ಹಿಡಕೊಂಡು ಹೋಗ್ತೀ ಏನು? ಅಂತ ಕೇಳೇ ಬಿಟ್ಟೇ. ಭಾಂಗಡಾ ಡಾನ್ಸ್ ಸಹಿತ ಮಾಡ್ತೀ ಏನೋ ಗೋಪಾಲ? ಅಂತ ಕೇಳಲಿಲ್ಲ. ಯಾಕಂದ್ರ ಆವಾಗ ಬಂಗಡೆ ಅಂತ ಮೀನು ಅದ ಅಂತ ಗೊತ್ತಿತ್ತೇ ಹೊರತೂ ಭಾಂಗಡಾ ಅಂತ ಲುಂಗಿ ಉಟ್ಟುಕೊಂಡು, ಅದನ್ನ ಎತ್ತಿಕೊಂಡು ಮಾಡೋ ಡಾನ್ಸ್, ಅದೂ ಸರ್ದಾರ್ಜೀ ಮಂದಿ ಮಾಡ್ತಾರ ಅಂತ ಗೊತ್ತೇ ಇರಲಿಲ್ಲ. ಗೊತ್ತಿದ್ದರ ಕೇಳೇ ಬಿಡ್ತಿದ್ದೆ. ಮತ್ತ ಪತ್ರಾ ಡಬ್ಯಾಗ ಒಗದು ಬಿಟ್ಟೆ. ರಾತ್ರಿ ಕನಸ್ಸಿನ್ಯಾಗ ಫುಲ್ ಸರ್ದಾರ್ಜೀಗಳೇ! ಅಮೃತಸರದ ಸುವರ್ಣಮಂದಿರದ ಸುವರ್ಣ ಕನಸುಗಳೇ.

ಈ ಸರೆ ಗೋಪಾಲ್ ಸಿಂಗನ ಪತ್ರ ಬರೋದು ಮತ್ತೂ ತಡಾ ಆತು. ಎಲ್ಲರೆ ಸಿಟ್ಟಿಗೆದ್ದು ಪತ್ರ ಮಿತ್ರ 'ಛಾಳಿ ಠೂ' ಅಂತ ದೋಸ್ತಿ ಬಿಟ್ಟು ಬಿಟ್ಟನೋ ಅಂತ ಭಾಳ tension ಆತು. ಆದ್ರ ಆವಾ ಹಾಂಗಿರಲಿಕ್ಕೆ ಇಲ್ಲ ಅಂತ ಅನ್ನಿಸಿತ್ತು. ಭಾಳ ತಣ್ಣಗ ಇದ್ದ ಅಂತ ಅನ್ನಿಸಿತ್ತು. ಗೋಪಾಲ ಅಂದ್ರ ದನಾ ಕಾಯವ. ಹಾಂಗಾಗಿ ಗೋವಿನ ಹಾಂಗ ಸಾಧು ಇದ್ದ ಅಂತ ಅನ್ನಿಸಿತ್ತು. ಮತ್ತ ನಾ ಕೇಳಿದ್ದು ಏನು? ನೀ ಸರ್ದಾರ್ಜೀ ಏನಪಾ? ಅಂತ ಅಷ್ಟೇ. ನೀ ಏನು ಹೊಲೆಯಾ ಏನಲೇ? ಅಂತ ಕೇಳಿಲ್ಲ.

ಈ ಸರೆ ಸುಮಾರು ಮೂರು ವಾರದ ನಂತರ ಗೋಪಾಲ್ ಪತ್ರ ಬರೆದ. ದೋಸ್ತ ದೋಸ್ತ ನಾ ರಹಾ ಅಂತ ಹಾಡಿಕೋತ್ತ ಕೂತಿದ್ದ ನಮಗೆ ಶಬರಿಗೆ ರಾಮ ಸಿಕ್ಕಾಗ ಅಕಿ ಬೋರಿ ಹಣ್ಣು ಬುಟ್ಟಿಯನ್ನು ಭಾಡ್-ಮೇ-ಜಾ ಅಂತ ತೂರಿ ಒಗದು ರಾಮನ ಕಡೆ ಓಡಿ ಬರ್ತಾಳ ನೋಡ್ರೀ ಆ ಫೀಲಿಂಗ್ ಒಳಗ ಬಂದು ಬಿಟ್ಟೆ. ಪತ್ರ ಗಡಿಬಿಡಿ ಒಳಗ ಬಿಚ್ಚಿ ಓದಿದೆ.

ಈ ಪತ್ರದಲ್ಲಿ ಗೋಪಾಲ್ ಸಿಂಗ್ ಒಂದು ಭಾರಿ ಸೌಂಡ್ advice ಕೊಟ್ಟಿದ್ದ. ಅದು ಏನು ಅಂದ್ರ, ಪತ್ರ ಮಿತ್ರತ್ವದೊಳಗ ಆಸಕ್ತಿ ಉಳಿಬೇಕು, ಭಾಳ ವರ್ಷದ ತನಕಾ ಅದು ಮುಂದುವರಿಬೇಕು, ಗೆಳೆತನ ಬೆಳಿಬೇಕು ಅಂದ್ರ ಬರಿಯೋ ಪತ್ರದಾಗ ಸತ್ವ ಇರಬೇಕು. ಸತ್ವ ಯಾವಾಗ ಬರ್ತದ? ಸ್ವಲ್ಪ ದಿವಸ ಟೈಮ್ ಕೊಟ್ಟರ ಬರ್ತದ. ಸತ್ವ ಯಾವದರಿಂದ ಬರ್ತದ? ಹೊಸ ಹೊಸ ಅನುಭವಗಳಿಂದ ಬರ್ತದ. ಅದಕ್ಕೆಲ್ಲಾ ಟೈಮ್ ಬೇಕು. ಹಾಂಗಾಗಿ ಪತ್ರ ಮಿತ್ರತ್ವದ ಗೋಲ್ಡನ್ ರೂಲ್ ಅಂದ್ರ ಒಂದು ಪದ್ಧತಿ ಪ್ರಕಾರ, ಎರಡು ಮೂರು ತಿಂಗಳಿಗೆ ಒಂದು ಪತ್ರಾ ಬರದ್ರ ಮಜಾ ಬರ್ತದ. ಹಾಂಗಾಗೇ ನಾನು ಬೇಕಂತಲೇ ಲೇಟ್ ಮಾಡಿ ಬರದೆ. ನಿನ್ನ ಪತ್ರ ಬಂದು ಮುಟ್ಟಿದ ಕೂಡಲೇ ನಾನೂ ಬರೆದು ಬಿಟ್ಟಿದ್ದರ ಏನೂ ಸುದ್ದಿ ಇರ್ತಿದ್ದೇ ಇಲ್ಲ. ಬಳ್ಳಾರಿಯೊಳಗ ಅಲ್ಲೆ ಹೋದೆ, ಇಲ್ಲೆ ಭೇಲ್ ಪುರಿ ತಿಂದೆ, ಅಲ್ಲೆ ಪಾನಿಪುರಿ ತಿಂದೆ ಅಂತ ಬರದ್ರ ಏನು ಮಜಾ? ನೀ ಇನ್ನೂ ಸಣ್ಣವ ಇದ್ದಿ. ನಿನಗ ಯಾರೂ ಹೆಚ್ಚು ಮಂದಿ ಪತ್ರ ಮಿತ್ರರು ಇದ್ದಂಗ ಇಲ್ಲ. ಹಾಂಗಾಗಿ ನನ್ನ ಪತ್ರ ಬಂದ ಕೂಡಲೇ ಉತ್ತರಾ ಬರೆದು ಬಿಡ್ತೀ. ಬೇಕಾದ್ರ ಇನ್ನೂ ನಾಕ ಮಂದಿ ಹೊಸಾ ಪತ್ರ ಮಿತ್ರರನ್ನ ಮಾಡಿಕೊ. ತಿಂಗಳಿಗೆ ಎಲ್ಲರಿಗೂ ಒಂದೇ ಪತ್ರಾ ಬರೆದರೂ ನಾಕು ಪತ್ರಾ ಆಗಿ ಹೋತು. ಅಂದ್ರ ವಾರಕ್ಕ ಒಂದು. ಮಜಾ ಮಾಡು, ಅಂತ ಭಾಳ ಚಂದಾಗಿ ಉಪದೇಶ ಮಾಡಿದ್ದ. ಅವಂಗ ದೇಶ ವಿದೇಶದಾಗ ಸುಮಾರು ಮಂದಿ ಪತ್ರ ಮಿತ್ರರು ಇದ್ದರಂತ. ಅವರ ಬಗ್ಗೆ ಕೂಡ ಬರದಿದ್ದ. ಆವಾ ಈ ಪತ್ರ ಮಿತ್ರತ್ವ ಅನ್ನೋದನ್ನ ಸೀರಿಯಸ್ ಆಗಿ ತೊಗೊಂಡು ಒಂದು ಪದ್ಧತಿ ಪ್ರಕಾರ ಮಾಡಿಕೊಂಡು ಹೊಂಟಿದ್ದ. ನಮಗೂ ಕಲಿಸಿದ. ಅದನ್ನ ಇನ್ನೂ ಮರೆತಿಲ್ಲ.

ಅದೆಲ್ಲಾ ಹೋಗ್ಲೀ. ಈ ಗೋಪಾಲಾ ಸರ್ದಾರ್ಜೀ ಸಿಂಗನೋ ಅಲ್ಲೋ ಅಂತ ತಿಳಕೋಬೇಕಾಗಿತ್ತು. ಲಗು ಲಗು ಓದಿ ಪತ್ರದ ಕೊನಿಗೆ ಬಂದಾಗ ಎದಿ ಧಕ್ ಧಕ್ ಅಂತ ಅಂತ ಹಲಗಿ ಬಾರಿಸಲಿಕ್ಕೆ ಹತ್ತಿತ್ತು.

ನಾನು ಸಿಖ್ಖ ಅಲ್ಲಾ. ನಾನು ರಜಪೂತ, ಅಂತ ಗೋಪಾಲ್ ಸಿಂಗ್ ಬರೆದು ಬಿಟ್ಟಿದ್ದ. ಹೋಗ್ಗೋ!!! ದೊಡ್ಡ ಮಟ್ಟದ KLPD ಆಗಿ ಬಿಡ್ತು. ರಜಪೂತರ ಸಿಂಗನೇ ಬೇಕು ಅಂದ್ರ ನಮ್ಮ ಬಾಲವಾಡಿ ದೋಸ್ತ ಗುಲಶನ್ ಇದ್ದೇ ಇದ್ದ. ಅವನ ತಮ್ಮನೂ ಇದ್ದ. ಗುಲಶನ್ ಸಿಂಗಾ ಬಿ ಕ್ಲಾಸಿಗೆ ಹೋದ ಮ್ಯಾಲೆ ಅವನ ದೋಸ್ತಿ ಬಿಟ್ಟು ಹೋಗಿತ್ತು. ಬಿಟ್ಟುಕೊಂಡವ ನಾನೇ. ಎಷ್ಟ ಪ್ರೀತಿ ಮಾಡ್ತಿದ್ದ ಆವಾ? ಸಿಖ್ಖ ಸಿಂಗನ್ನ ದೋಸ್ತಿ ಮಾಡಿಕೊಳ್ಳಲಿಕ್ಕೆ ಬಳ್ಳಾರಿಗೆ ಪತ್ರಾ ಬರೆದು, (ಗೊತ್ತಿಲ್ಲದೆ) ಮಂಗ್ಯಾ ಆದೆ ಅಂತ ಒಂದು ತರಹದ ಫೀಲಿಂಗ್ ಬಂತು. ಗೋಪಾಲ್ ಸಿಂಗ್ ಭಾಳ ಚೊಲೊ ಮನುಷ್ಯಾನೇ ಇದ್ದ. ಆದ್ರ ನಮ್ಮ ತಲಿಯಾಗ ಸರ್ದಾರ್ಜೀ ದೋಸ್ತಿ ಮಾಡಿ, ಏನೇನೋ ಹೇಳಿ, ಏನೇನೋ ಕೇಳಿ ತಿಳಕೋಬೇಕು ಅಂತ ಒಂದು ದೊಡ್ಡ ಹುಳಾ ತಲಿಯೊಳಗ ಗುಂಗಿ ಹುಳದ ಗತೆ ಗುಂಯ್ ಅನ್ನಲಿಕತ್ತಿತ್ತು. ಏನು ಮಾಡೋದು? ಸರ್ದಾರ್ಜೀ ಹುಚ್ಚು ಇಷ್ಟು ಇತ್ತು ಅಂದ್ರ ಸಿಕ್ಕಿದ್ರ ಭಿಂದ್ರನವಾಲೆನ ಒಮ್ಮೆ ಭೆಟ್ಟಿ ಆಗಬೇಕು ಅಂತ ಸಹಿತ ಇತ್ತು. ಏನು ಮಾಡೋದು? ಆವಾ ಸತ್ತು ಹೋಗಿದ್ದ. ಭಿಂದ್ರನವಾಲೆ ಇಲ್ಲ ಅಂದ್ರೇನಾತು? ನಮ್ಮ ದೋಸ್ತ ಬಾಬುಸಾಬ್ ಹಾಶಿಮವಾಲೆ ಇದ್ದಾನ. ಯಾವದೋ ಒಂದು ವಾಲೇ. ಬಾಬು ಸಿಖ್ಖ ಅಲ್ಲಾ. ಆವಾ ಮುಸ್ಲಿಂ. ಆದ್ರ ಜಿಗ್ರೀ ದೋಸ್ತಾ.

ಗೋಪಾಲ್ ಸಿಂಗ್ ಭಾಳ ಚಂದ ಸಲಹೆ ಕೊಟ್ಟಿದ್ದ. ಈ ಸರೆ ನಾನೂ immediately ತಿರುಗಿ ಪತ್ರಾ ಬರಿಲಿಲ್ಲ. ಮತ್ತ ಆವಾ ಸರ್ದಾರ್ಜೀ ಅಲ್ಲ ಅಂತ ಗೊತ್ತಾದ ಮೇಲೆ ಎಲ್ಲಾ ಉತ್ಸಾಹ ಫುಲ್ ಇಳಿದು ಹೋಗಿತ್ತು. ಆದರೂ ಹ್ಯಾಂಗೋ ಮಾಡಿ motivation ತಂದುಕೊಂಡು ಒಂದು ತಿಂಗಳಾದ ಮೇಲೆ ಮತ್ತ ಒಂದು ಪತ್ರಾ ಬರೆದೆ. ಗೋಪಾಲಾ, ನೀ ಸರ್ದಾರ್ಜೀ ಅಲ್ಲ ಅಂದ್ರೂ ಓಕೆ. ನೀ ರಜಪೂತರ ಸಿಂಗ ಅಂದ್ರೂ ತೊಂದ್ರಿ ಇಲ್ಲಪಾ. ರಾಣಾ ಪ್ರತಾಪ ಸಿಂಗ ನಿಮ್ಮ ಮಂದಿನೇ ನೋಡು. ಭಾಳ ಧೀರ ರಾಜಾ ಆವಾ. ರಾಣಾ ಪ್ರತಾಪನ ಕುದುರಿ ಮಸ್ತ ಇತ್ತು ನೋಡು. ಚೇತಕ್ ಅಂತ ಅದರ ಹೆಸರು. ನೀವೂ ಕುದರಿ ಗಿದರಿ ಇಟ್ಟೀರಿ ಏನು? ನನ್ನ ಕಡೆ ರಾಣಾ ಪ್ರತಾಪನ ಅಮರ ಚಿತ್ರಕಥಾ ಪುಸ್ತಕ ಸಹಿತ ಅದ. ಅಕ್ಬರನ ಒಬ್ಬಾಕಿ ಹೆಂಡತಿ ರಜಪೂತ್ ಇದ್ದಳು. ನಿನಗ ಗೊತ್ತದ ಗೋಪಾಲ್? ಅಕಿನನೋ ಮಾನ್ ಸಿಂಗ್ ಅನ್ನೋ ಮಾನಗೇಡಿಯ ತಂಗಿ. ಆವಾ ಎಂತಾ ರಜಪೂತ ಮಾರಾಯಾ? ಹೋಗಿ ಹೋಗಿ ತನ್ನ ತಂಗಿನ್ನ ಅಕ್ಬರಂಗ ಮದ್ವಿ ಮಾಡಿ ಕೊಟ್ಟಾ? ನಿನಗ ಏನು ಅನ್ನಿಸ್ತದ? ಅಂತ ಹೇಳಿ ಅದು ಇದು ಹಾಕಿ ಬರದರೂ ಇನ್ಲ್ಯಾಂಡ್ ಲೆಟರ್ ಅರ್ಧಾ ಸಹಿತ ತುಂಬವಲ್ಲದಾಗಿತ್ತು. ದೊಡ್ಡ ದೊಡ್ಡ ಹೊನಗ್ಯಾ ಅಕ್ಷರ ಮಾಡಿದರೂ ಸಹ ಸುಮಾರು ಮುಕ್ಕಾಲು ಮಾತ್ರ ತುಂಬಿತು. ಉಳಿದ ಜಾಗಾದಾಗ ಏನೋ ಚಿತ್ರಾ ತೆಗೆದು ಬಿಟ್ಟೆ. ಅಂತೂ ಇಂತೂ ಲೆಟರ್ ತುಂಬಿಸಿ ಪೋಸ್ಟ್ ಮಾಡಿ ಬಿಟ್ಟೆ. ಆ ಚಿತ್ರಾ ನೋಡಿದ ಗೋಪಾಲ್ ಸಿಂಗಗ ಸಂಶಯ ಬಂದಿರ್ತದ. ಈ ಆಸಾಮಿ ಕೈ ಎತ್ತವ ಇದ್ದಾನ ಅಂತ. ಆವಾಗ ಆ ಉದ್ದೇಶ ಇರಲಿಲ್ಲ. ಮುಂದ ಹಾಂಗೇ ಆತು.

ಗೋಪಾಲ್ ಸಿಂಗ್ ಮಾತ್ರ ಟೈಮ್ ಟೇಬಲ್ ಹಾಕ್ಕೊಂಡಾನೋ ಅನ್ನವರಂಗ ಮತ್ತ ಉತ್ತರ ಬರೆದ. ಈ ಸರೆ ನಾನೂ ಸಹಿತ ಟೈಮ್ ತೊಗೊಂಡು, wait ಮಾಡಿ ಪತ್ರಾ ಬರೆದಿದ್ದನ್ನ ಆವಾ appreciate ಮಾಡಿದ್ದ. ಮೊದಲು ಎರಡು ಸರೆ immediate ಆಗಿ ಬರದು ಅವನ ತಲಿ ತಿಂದು ಬಿಟ್ಟಿದ್ದೆ. ಈ ಸರೆ ಟೈಮ್ ಕೊಟ್ಟಿದ್ದಕ್ಕ ಪಾಪ ಅವಂಗ ಸ್ವಲ relief ಸಿಕ್ಕಿತ್ತು ಅಂತ ಅನ್ನಸ್ತದ.

ಈ ಸರೆ ನಾನು ಸುಮಾರು ಎರಡು ತಿಂಗಳು ಬಿಟ್ಟು ಏನೋ ಒಂದು ಪತ್ರಾ ಬರದೆ. ಈ ಸರೆ ಇನ್ಲ್ಯಾಂಡ್ ಲೆಟರ್ ಅರ್ಧಾ ಅಲ್ಲ ಗಿರ್ಧಾ ತುಂಬಿಸೋದ್ರಾಗ ಸಾಕಾಗಿ ಹೋಗಿಬಿಡ್ತು. ಅಯ್ಯೋ!! ಏನು ಬರಿಲಿ? ನಾ ಚಕ್ರವರ್ತಿ ಬ್ರಾಂಡಿನ ಕ್ರಿಕೆಟ್ ಬ್ಯಾಟ್ ತೊಗೊಂಡೆ ಅಂತ ಬರೀಲಾ? ನನ್ನ ಕ್ರಿಕೆಟ್ ಕಿಟ್ ಒಳಗ 'ಸೆಂಟರ್ ಪ್ಯಾಡ್' ಒಂದು ಇರಲೇ ಇಲ್ಲ. ಅದೂ ಒಂದು ಇರಲಿ ಅಂತ ಅದನ್ನೂ ಈ ಸರೆ ಕೊಡಿಸಿಕೊಂಡು ಬಿಟ್ಟೆ. ಈಗ ನನ್ನ ಕ್ರಿಕೆಟ್ ಕಿಟ್ ಫುಲ್ ಆತು ನೋಡಪಾ. ಎರಡು ವರ್ಷ ಕೂಡಿ, ತಿಂಗಳಾ ಒಂದೊಂದೇ ಸಾಮಾನು ಕಾಡಿ ಕಾಡಿ ಕೊಡಿಸಿಕೊಂಡು ಅಂತೂ ಫುಲ್ ಕ್ರಿಕೆಟ್ ಕಿಟ್ ಮಾಡಿಕೊಂಡೆ ನೋಡೋ ಗೋಪಾಲ. ಆದ್ರ ಸೆಂಟರ್ ಪ್ಯಾಡ್ ಮೊದಲೇ ತೊಗೊಬೇಕಾಗಿತ್ತು. ಅಲ್ಲಾ? ನಾವು ಆಡೋ ಕ್ರಿಕೆಟ್ ಗ್ರೌಂಡ್ ಹಿಂದಿನ ಮನಿಯೊಳಗ ಬ್ಯಾಂಕ್ ಮ್ಯಾನೇಜರ್ ಪದ್ಮಾಕರ್ ಇದ್ದವರು ಹೇಳಿದರು. ನೀವು ಕಾರ್ಕ್ ಬಾಲ ಒಳಗ ಕ್ರಿಕೆಟ್ ಆಡವರು ಮೊದಲು ಸೆಂಟರ್ ಪ್ಯಾಡ್ ತೊಗೊಂಡು, ಅದನ್ನ ಹಾಕ್ಕೊಂಡೇ ಆಡ್ರೀ ಅಂತ. ಯಾಕಂದ್ರ ಅವರ ಬ್ಯಾಂಕ್ ಟೀಮ್ ಒಳಗ ಒಬ್ಬವಂಗ ಬಡಿ ಬಾರದ ಅದೇ ಜಾಗಕ್ಕ ಲೆದರ್ ಬಾಲ್ ಬಡಿದು, ಪಾಪ್ ಹಾಸ್ಪಿಟಲ್ ಒಳಗ ಎರಡು ಮೂರು ತಿಂಗಳು ಇದ್ದು ಬಂದ ಅಂತ. ಇವೆಲ್ಲಾ ಬರೀಲಾ? ಬರಿಬಹುದಿತ್ತು. ಬರಿಲಿಲ್ಲ. ಮೂಡು ಹೋಗಿ ಬಿಟ್ಟಿತ್ತು. ಸರ್ದಾರ್ಜೀ ಹುಚ್ಚು ನಮಗೆ. ಏನೋ ಕಾಟಾಚಾರಕ್ಕ ಒಂದು ಪತ್ರಾ ಬರೆದು ಒಗೆದುಬಿಟ್ಟೆ.

ಗೋಪಾಲ್ ಸಿಂಗ್ ಮಾತ್ರ ಮತ್ತ ಪತ್ರಾ ಬರೆದ. ಈ ಸರೆ ಅವಂದೂ ಪತ್ರ ಸಣ್ಣದಾಗಿತ್ತು. ಮಾತಾಡ್ಲಿಕ್ಕೆ ಏನೂ ಇರಲೇ ಇಲ್ಲ. ಮುಂದ ಒಂದಕ್ಕೊಂದು ಆಗಿ, ಈಗ ಬರದರೆ ಆತು, ಆ ಮ್ಯಾಲೆ ಬರಿಯೋಣ, preliminary ಎಕ್ಸಾಮ್ ಆದ ಮ್ಯಾಲೆ ನೋಡೋಣ ಅಂತ ಹೇಳಿ ನಾ ತಿರುಗಿ ಗೋಪಾಲ್ ಸಿಂಗಗ ಪತ್ರ ಬರಿಲೇ ಇಲ್ಲ. ಒಂದು ಪತ್ರ ಮಿತ್ರತ್ವ ಗೋರಿ ಸೇರಿತು. ಸರ್ದಾರ್ಜೀ ಇದ್ದರ ಸತ್ ಶ್ರೀ ಅಕಾಲ್ ಅಂತ ಹೇಳಿ ಜಿಗದ್ ಜಿಗದ್ ಪತ್ರಾ ಬರಿತಿದ್ದೆ. ಇಲ್ಲೆ ಅಕಾಲ ಟೈಮ್ ಒಳಗ ಸತ್ತು ಹೋತು ಒಂದು ಪತ್ರ ಮಿತ್ರತ್ವ. ಸತ್ತು ಶ್ರೀ ಅಕಾಲ್!!!

ಪತ್ರ ಮಿತ್ರತ್ವ reciprocal basis ಮೇಲೆ ಇರ್ತದ. ಭಾಳ ಆತ್ಮೀಯತೆ ಬಂದ ಮ್ಯಾಲೆ ಅಕಸ್ಮಾತ ನೀವು ಬರಿಲಿಲ್ಲ ಅಂದ್ರೂ ನಿಮ್ಮ ಪತ್ರ ಮಿತ್ರ ಬರಿಬಹುದು. ನೀವೂ ಸಹಿತ ಅವರು ಬರಿಲಿಲ್ಲ ಅಂದ್ರೂ ನೀವಾಗೇ ಬರಿಬಹುದು. ಆದ್ರ ಶುರು ಶುರುವಿನಲ್ಲಿ ಮಾತ್ರ pure reciprocal ಬೇಸಿಸ್. ನೀವು ಒಂದು ಬರದ್ರ ಅವರು ತಿರುಗಿ ಒಂದು ಬರಿತಾರ ಅಷ್ಟೇ. ಮತ್ತ ಗೋಪಾಲ್ ಸಿಂಗ್ ಪತ್ರ ಮಿತ್ರತ್ವ ಅನ್ನೋದನ್ನ ಸೀರಿಯಸ್ ಆಗಿ ತೊಗೊಂಡು ಭಾಳ ಮಂದಿ ಜೋಡಿ ಪತ್ರ ವ್ಯವಹಾರ ಮಾಡ್ತಿದ್ದ. ನಾನೂ ಬರಿಲಿಲ್ಲ. ಅವನೂ ವಾಪಸ್ ಬರಿಲಿಲ್ಲ. It's OK. That pen friendship was going nowhere!

ಈ ರೀತಿಯಾಗಿ ಮೊದಲನೇ ಪತ್ರ ಮಿತ್ರತ್ವ ಮುಗಿದಿತ್ತು. ನಿಜ ಜೀವನದಲ್ಲಿ ಹ್ಯಾಂಗ ಎಲ್ಲಾರ ಜೋಡಿ wavelength ಮ್ಯಾಚ್ ಆಗೋದಿಲ್ಲೋ ಹಾಂಗೆ ಆತು ಇಲ್ಲಿ ಸಹ. ಯಾವದೇ ಹಾರ್ಡ್ ಫೀಲಿಂಗ್ಸ್ ಇರಲಿಲ್ಲ. ಗೋಪಾಲ್ ಸಿಂಗಗೂ ಗೊತ್ತಾಗಿರ್ತದ. ಒಂದಿಷ್ಟು ಒಳ್ಳೆ base ಹಾಕಿಕೊಟ್ಟು ಹೋದ. ಅದಕ್ಕ ಅವಂಗ ಸದಾ ಥ್ಯಾಂಕ್ಸ್.

ಇಷ್ಟು ಹೊತ್ತಿಗೆ ನಮ್ಮ ಸರ್ದಾರ್ಜೀ ಹುಚ್ಚು ಸುಮಾರು ಬಿಟ್ಟು ಹೋಗಿತ್ತು. ಆದ್ರ ಪತ್ರ ಮಿತ್ರರ ಹುಚ್ಚು ಹಾಂಗೇ ಇತ್ತು. ಗೋಪಾಲನ ಜೋಡಿ workout ಆಗಲಿಲ್ಲ ಅಂದ್ರೇನಾತು? ಬ್ಯಾರೆ ಪತ್ರ ಮಿತ್ರರನ್ನ ಹುಡಕಿದರ ಆತು ಅಂತ ವಿಚಾರ ಮಾಡಿದೆ.

ಸಾಲಿಯೊಳಗ ಏನೋ ಮಾತಾಡಿಕೋತ್ತ ಇದ್ದಾಗ, ಲೇ! ನನಗ ಪತ್ರ ಮಿತ್ರ ಇದ್ದಾನ. ಗೊತ್ತದ  ಏನ್ರಲೇ? ಅಂತ ಕೇಳಿದರ ಸುಮಾರು ಮಂದಿ, ಈ ಹೆಗಡೆ ಏನು ಮಾತಾಡ್ತಾನೋ ಏನೋ? ಅನ್ನೋ ಲುಕ್ ಕೊಟ್ಟು, ಹೌದಾ? ಅಂತ ಬಾಯಿ ತೆಗದಿದ್ದರೆ, ಯಾರೋ ಒಬ್ಬವಾ, ನನಗೂ 'ಐತಿ' ಪತ್ರ ಮಿತ್ರ ಅಂದಿದ್ದ. ಅವಂಗ ಯಾರೋ ನಪುಂಸಕ ಲಿಂಗದ ಪತ್ರ ಮಿತ್ರ ಇರಬೇಕು. ಅದಕ್ಕೆ ಐತಿ ಅಂದುಬಿಟ್ಟಾನ. ದೇವರಾಣಿಗೂ ಅವಂಗ ಪತ್ರ ಮಿತ್ರ ಅಂದ್ರ ಏನು ಅಂತ ಗೊತ್ತಿರಲಿಲ್ಲ. ಆದ್ರ ಕೆಲೊ ಮಂದಿ ಇರ್ತಾರ ನೋಡ್ರೀ, ಕುರಾ ಆಗ್ಯದ ಅಂದ್ರ, ನನಗೂ ಆಗ್ಯದ ಅಂದು ಬಿಡ್ತಾರ. ಒಟ್ಟಿನ್ಯಾಗ ನಿಮ್ಮ ಕಡೆ ಇದ್ದಿದ್ದು ಅವರ ಕಡೆನೂ ಅದ ಅಂತ ತೋರಿಸ್ಕೋಬೇಕು. ಅರ್ಥಾ ಆಗಲಿ ಬಿಡಲಿ. ಆ ಟೈಪ್ ಮನುಷ್ಯಾ.

ಹೀಂಗ ಇದ್ದಾಗ ಸಚಿನ್ ಕೊಟ್ಟೂರ ಅನ್ನವಂಗ ಏನೋ ಫ್ಲಾಶ್ ಆತು.

ಮಹೇಶಾ! ಅಂದಾ.

ಏನಲೇ? ಅಂತ ಕೇಳಿದೆ.

ಪುಟಾಣಿ ಓದ್ತಿ ಏನು? ಅಂತ ಕೇಳಿದ.

ಏನು ಪುಟಾಣಿ ಹಚ್ಚೀಲೆ? ಹಾಂ? ಪುಟಾಣಿ ತಿಂತಾರ. ಇಲ್ಲಾ, ಪುಟಾಣೆ ಟೈಲರ್ ಇದ್ದಾನ. ಅವನ ಕಡೆ ವಸ್ತ್ರಾ ಹೊಲಸ್ತಾರ. ಹೀಂಗಿದ್ದಾಗ ಪುಟಾಣಿ ಓದೋದು ಎಲ್ಲಿಂದ ಬಂತಲೇ? ಅಂತ ಕೇಳಿದ.

ಮಹೇಶಾ, ಈ ಪುಟಾಣಿ ಅಂದ್ರ ಒಂದು monthly ಮ್ಯಾಗಜಿನ್ ಮಾರಾಯಾ. ನಮ್ಮ ವಯಸ್ಸಿನವರಿಗೆ ಮಾಡಿದ್ದು. ಒಂದು ತರಹ ಚಂದಮಾಮ ಇದ್ದಂಗ ನೋಡು, ಅಂತ ಹೇಳಿದ.

ಹಾಂಗೆನಲೇ? ಗೊತ್ತಿಲ್ಲ ಬಿಡಪಾ, ಅಂತ ಹೇಳಿದೆ.

ಪುಟಾಣಿ ಒಳಗ ಸಹಿತ ಪತ್ರ ಮಿತ್ರರು ಅಂತ ಹೇಳಿ ಒಂದಿಷ್ಟು ಮಂದಿ ಹೆಸರು, ವಿಳಾಸ, ಹವ್ಯಾಸ ಎಲ್ಲ ಹಾಕಿರ್ತಾರ ನೋಡಪಾ, ಅಂತ ಹೇಳಿದ ಸಚಿನ್ ಕೊಟ್ಟೂರ.

ಹೊಸಾ ಪತ್ರ ಮಿತ್ರನ್ನ ಯಾಕ ಪುಟಾಣಿ ಮಾಸಪತ್ರಿಕೆಯಲ್ಲಿ ಹುಡಕಬಾರದು? ಅಂತ ಒಂದು ಐಡಿಯಾ ಫ್ಲಾಶ್ ಆತು.

ಮುಂದಿನ ಪತ್ರ ಮಿತ್ರನನ್ನ ಪುಟಾಣಿ ಪತ್ರಿಕೆಯಲ್ಲಿ ಕ್ಯಾಚ್ ಹಾಕಬೇಕು ಅಂತ ವಿಚಾರ ಮಾಡಿದೆ.

(ಸಶೇಷ. ಮುಂದುವರಿಯಲಿದೆ) (ಭಾಗ - ೨ ಇಲ್ಲಿದೆ)

Saturday, January 25, 2014

'ಮಂಗೋಲಿಯನ್ ಕಿಸ್' ಕೊಟ್ಟಿದ್ದು 'ಕಿಸ್ ಗೌತಮಿ' ಮಂಗ್ಯಾನೇ?

ರೂಪಾ ಬಾಯಾರಿಗೆ ಮಂಗ್ಯಾ ಬೆಲ್ಲಾ ಕೊಟ್ಟು ಹೋತಂತ! ಅನ್ನೋ ಸುದ್ದಿ BBC ಯಲ್ಲಿ ನ್ಯೂಸ್ ಫ್ಲಾಶ್ ತರಹ ಬಿತ್ತರವಾಯಿತು.

ಇದು ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಶನ್ BBC ಅಲ್ಲ. ಇದು ನಮ್ಮ ಧಾರವಾಡದ ಮಾಳಮಡ್ಡಿಯ ಬ್ರಾಹ್ಮಣರ ಬ್ರಾಡ್ಕಾಸ್ಟಿಂಗ್ ಕಂಪನಿ. ಇದೂ ಒಂದು ತರಹದ BBC ನೇ. ಭಾಳ ಲಗೂ ಲಗೂ ಸುದ್ದಿ ಬಿತ್ತರ ಆಗ್ತಾವ. ದೊಡ್ಡ ಚಂಡಿಕಿಗಳೆಲ್ಲ ಪ್ರಸಾರ ಮಾಡುವ ಬಾನುಲಿ ಟಾವರ್ ಆಗಿ, ಸಣ್ಣ ಸಣ್ಣ ಚಂಡಿಕಿ ಜುಟ್ಟಗಳೆಲ್ಲ ಅಂತಹ ಬಾನುಲಿ ಪ್ರಸಾರಗಳನ್ನು ಹಿಡಿಯುವ ಏರಿಯಲ್ ಗಳಾಗಿ, ಮಡಿಯಮ್ಮಗಳ ಬೋಡು ತಲೆಗಳೆಲ್ಲ ರೇಡಿಯೋ ತರಂಗಗಳ reflector ಆಗಿ, ಸುದ್ದಿ ಮಾತ್ರ ಭಾಳ ಲಗೂ ಲಗೂ ಹರಡಿಬಿಡ್ತದ.

ರೂಪಾ ಬಾಯಿ ಅಂದ್ರ ನಮ್ಮ ರೂಪಾ ವೈನಿನೇ ಅಂತ ಖಾತ್ರಿ ಇತ್ತು. ಆದ್ರ ಅವರಿಗೆ ಮಂಗ್ಯಾ ಏನು ಬೆಲ್ಲಾ ಕೊಟ್ಟು ಹೋತು? ಅಂತ ತಿಳಿಲಿಲ್ಲ. ಎಲ್ಲೋ ದೂರದ ಇಂಡೋನೇಷ್ಯಾ ಒಳಗ ಗಿಡಾ ಹತ್ತಿ, ತೆಂಗಿನಕಾಯಿ ಹರಿದು, ಕೆಳಗ ಇಳಿಸಿಕೊಡೋ ಮಂಗ್ಯಾ ಇರ್ತಾವಂತೆ. ಹಾಂಗೆ ರೂಪಾ ವೈನಿ ಕಡೆ ಸಹಿತ, ತೊರಗಲ್ಲಮಠನ ಅಂಗಡಿಗೋ, ಕೊಟ್ಯಾಳನ ಅಂಗಡಿಗೋ ಹೋಗಿ ಬೆಲ್ಲಾ, ಸಕ್ಕರಿ, ಇತ್ಯಾದಿ ಕಿರಾಣಿ ತಂದು ಕೊಡುವ ಮಂಗ್ಯಾ ಇರಬಹುದಾ? ಅಂತ ವಿಚಾರ ಬಂತು. ಇದ್ದರೂ ಇರಬಹುದು. ಕೆಲಸದವರು ಕಮ್ಮಿ ಆದ ಮ್ಯಾಲೆ ಇಂತಹ ವ್ಯವಸ್ಥಾ ಮಾಡಿಕೋಬೇಕಾಗ್ತದ. ಹೇಳಿ ಕೇಳಿ ರೂಪಾವೈನಿ. ಕೊರಳಾಗ ಮಂಗಳ ಸೂತ್ರಾ. ಕೈಯ್ಯಾಗ ಮಂಗನ ಸೂತ್ರ. ಇದ್ದರೂ ಆಶ್ಚರ್ಯ ಇಲ್ಲ ತೊಗೋರೀ.

ದಿಗ್ಭ್ರಮೆ ಆಗಿದ್ದು ಇದೇ ಸುದ್ದಿಯನ್ನು BBC ಯ ಇನ್ನೊಂದು ಚಾನೆಲ್ಲಿನಲ್ಲಿ ಕೇಳಿದಾಗ. ಅದೇ ಕಿಡಿಗೇಡಿ ಹುಡುಗರ ಚಾನೆಲ್.

ಲೇ....ಗೊತ್ತದ ಏನಲೇ? ಅಕಿ ರೂಪಾ ಕಾಕುಗ ಮಂಗ್ಯಾ ಬಂದು ಕಿಸ್ ಹೊಡೆದು ಹೋತಂತಲೇ, ಅಂತ ಪಡ್ಡೆ ಹುಡುಗರು ಮಾತಾಡುತ್ತ ಸಾಲಿ ಕಾಲೇಜಿಗೆ ಹೊಂಟಿದ್ದರು. ಅದನ್ನು ಕೇಳಿದ ಮ್ಯಾಲೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕು ಅನ್ನಿಸ್ತು.

ಏ....ಇವನ.....ಪಲ್ಯಾ....ಬಾರಲೇ ಇಲ್ಲಿ, ಅಂತ ಹೇಳಿ ನಮ್ಮ ಪುರಾತನ ದೋಸ್ತ ಕೊಳಕ್ ಶೀನ್ಯಾನ ಮಗನಾದ ಪ್ರಹ್ಲಾದನನ್ನು ಕರದೆ.

ಏನ್ರೀ ಕಾಕಾ? ಅಂತ ಪಲ್ಯಾ ಬಂದ.

ಏನಲೇ ಅದು ರೂಪಾ ಕಾಕುಗ ಮಂಗ್ಯಾ ಏನೋ ಮಾಡಿ ಹೋತು ಅಂತ  ಮಾತಾಡಿಕೋತ್ತ ಹೊಂಟೀರಿ? ಹಾಂ? ಏನಂತ ಮಾತು ಅದು? ಅಂತ ಸ್ವಲ್ಪ ಜೋರಾಗೇ ಕೇಳಿದೆ.

ಹೌದ್ರೀ ಕಾಕಾ! ಹಾಂಗೆ ಆಗ್ಯದಂತ. ರೂಪಾ ಕಾಕು....ಅವರರೀ ನಿಮ್ಮ ಗೆಳ್ಯಾ ಚೀಪ್ಯಾನ ಹೆಂಡತಿ. ಅಕಿಗೆ ಮಂಗ್ಯಾ ಬಂದು ಕಿಸ್ ಕೊಟ್ಟು ಹೋಗಿ ಬಿಟ್ಟದ ಅಂತ ಊರ್ತುಂಬ ಸುದ್ದಿ, ಅಂತ ಹೇಳಿಬಿಟ್ಟ.

ಕಿಸ್ಸಾ? ಏನಲೇ ಕಿಸ್? ಇದರ ಕಿಸ್ಸಾ ಏನು ಅಂತ ಹೇಳಿ ಕಾಲೇಜಿಗೆ ಹೋಗೋ. ತಲಿಯಲ್ಲ ಮಾತಾಡಬ್ಯಾಡ, ಅಂತ ಹೇಳಿದೆ.

ಏನು tube light ಇದ್ದಾನ ಇವಾ? ಅನ್ನೋ ಲುಕ್ ಕೊಟ್ಟಾ ಪಲ್ಯಾ.

ರೀ...ಮಂಗೇಶ ಕಾಕಾ....ಕಿಸ್ ಅಂದ್ರ ಚುಮ್ಮಾ. ಚುಮ್ಮಾ ಚುಮ್ಮಾ ದೇ ದೇ ಹಾಡಿನಂಗ ಮಂಗ್ಯಾ ಬಂದು ರೂಪಾ ಕಾಕುಗ ಚುಮ್ಮಾ ಚುಮ್ಮಾ ಲೇ ಲೇ ಚುಮ್ಮಾ ಅಂತ ಹೇಳಿ ಕಿಸ್ ಕೊಟ್ಟು ಹೋಗಿಬಿಟ್ಟದ ಅಂತ ಸುದ್ದಿರಿ. ಮನುಷ್ಯಾರ ಕಡೆನೇ ಚುಮ್ಮಾ ಸಿಗೋದು ಕಷ್ಟ ಆಗ್ಯದ. ಹಂತಾದ್ರಾಗ ಮಂಗ್ಯಾನ ಕಡೆ ಸಹಿತ ಚುಮ್ಮಾ ಕೊಡಿಸಿಕೊಂಡಾರ ನೋಡ್ರೀ ಅವರು. ಪುಣ್ಯಾ ಮಾಡಿ ಬಂದಿರಬೇಕು ರೂಪಾ ಕಾಕಿ. ನಾ ಬರತೇನ್ರೀ, ಅಂತ ಹೇಳಿ ಪಲ್ಯಾ ಹೋದ.

ಕಿಸ್ಸಿಂಗ್ ಕಿಡಿಗೇಡಿ ಮಂಗ್ಯಾ

ಆವಾ ಏನೋ ಹೋದ. ಆದ್ರ ನಾವು ಮಾತ್ರ ಈ ಸುದ್ದಿ ಕೇಳಿ ಆದ ಶಾಕ್ ನಿಂದ ಹೊರಗ ಬರಲಿಲ್ಲ.

ರೂಪಾ ವೈನಿಗೆ ಮಂಗ್ಯಾ ಏನು ಮಾಡ್ತು? ಕಿಸ್ ಹೊಡೀತಾ? ಹಾಂ? ಖರೇ? ನಂಬೂ ಮಾತೆ? ಹಾಂ?

ಅಷ್ಟರಾಗ ಕರೀಮ ಸಹಿತ ಅಲ್ಲೇ ಬಂದು ಹಾಜರ್ ಆದ. ನಮ್ಮ ಹೆಡ್ ಕ್ವಾರ್ಟರ್ ಆದ ಭೀಮ್ಯಾನ ಚುಟ್ಟಾ ಅಂಗಡಿ ಮುಂದ ನಿಂತಿದ್ದಿವಿ.

ಕರೀಮಾ, ಸುದ್ದಿ ಕೇಳಿದಿ ಏನೋ? ಅಂತ ಕೇಳಿದೆ.

ಆವಾ BBC ಸ್ಟೇಷನ್ ಗೆ ರೇಡಿಯೋ ಹಚ್ಚೋದಿಲ್ಲ. ಹಚ್ಚಿದರೂ ಅವನಿಗೆ ಆ ಸುದ್ದಿ ಎಲ್ಲ ತಿಳಿಯೋದಿಲ್ಲ. ಕೇಳಿ ಉಪಯೋಗಿಲ್ಲ.

ಕ್ಯಾ ಸಾಬ್? ಅಂತ ಕೇಳಿದ ಕರೀಂ.

ಏನಿಲ್ಲ ತೊಗೋ. ನೀ ಪಾನ್ ಹಾಕು. ನನಗೂ ಒಂದು ಡ್ರೈ ಮಾವಾ ಕಟ್ಟಿಸಿಬಿಡು, ಅಂತ ಹೇಳಿ ಆ ಕಡೆ ನೋಡೋದ್ರಾಗ ಚೀಪ್ಯಾ, ರೂಪಾ ವೈನಿ ಬರೋದು ಕಾಣಿಸ್ತು. ಕನ್ಯಾರತ್ನಗಳಾದ ಕುಂತಿ, ನಿಂತಿ ಸಹಿತ ಇದ್ದರು.

ಹತ್ತಿರ ಬಂದರು. ರೂಪಾ ವೈನಿ ತುಟಿ ಕೆಳಗ ಬ್ಯಾಂಡೇಜ್ ಇತ್ತು. ಅದು ಏನೋ ಹೇಳ್ತು.

ನಮಸ್ಕಾರ ರೂಪಾ ವೈನಿ, ಚೀಪ್ಯಾ. ಏನು ಈ ಹೊತ್ತಿನ್ಯಾಗ? ಅಡಿಗಿ ಆತೇನ್ರೀ ವೈನಿ? ನಿಂದೇನು ಸೂಟಿ ಏನಲೇ ಇವತ್ತು? ಅಂತ ಕೇಳಿದೆ.

ರೂಪಾ ವೈನಿ ಹೊಟ್ಟಿ ಮ್ಯಾಲೆ ಕೈ ಆಡಿಸಿದರು.

ಏನ್ರೀ ವೈನಿ? ಹೊಟ್ಟಿ ಮ್ಯಾಲೆ ಕೈಯಾಡಿಸಲಿಕತ್ತೀರಿ? ಹಾಂ? ಊಟ ಆಗಿ ಹೋತಾ? ಹಾಂ? ಅಂತ ಕೇಳಿದೆ.

ಹುಚ್ಚಾ....ಇಂಜಕ್ಷನ್ ತೊಗೊಂಡ ನೋವಿನ್ಯಾಗ ನಾ ಹೊಟ್ಟಿ ಮ್ಯಾಲೆ ಕೈಯಾಡಿಸಿದರ ಊಟ ಆತೇನು ಅಂತ ಕೇಳ್ತಿಯಲ್ಲೋ? ಬುದ್ಧಿಗೇಡಿ, ಅಂದ್ರು ರೂಪಾ ವೈನಿ.

ಅದೇನ್ರೀ ಹೊಟ್ಟಿ ಮ್ಯಾಲೆ ಇಂಜಕ್ಷನ್? ಹಾಂ? ಕೈ ರಟ್ಟಿ ಮ್ಯಾಲೋ ಅಥವಾ ಕೈ ರಟ್ಟಿ ಮ್ಯಾಲೆ ಮಾಂಸ ಇಲ್ಲದ ನರಪೇತ ನಾರಾಯಣ ನಾರಾಯಣಿಯರಿಗೆ ಕುಂಡಿ ಮ್ಯಾಲೆ ಇಂಜಕ್ಷನ್ ಕೊಡೋದು ರೂಢಾ. ಇಂತಾದ್ರಾಗ ಹೊಟ್ಟಿ ಮ್ಯಾಲೆ ಇಂಜಕ್ಷನ್ ಕೊಟ್ಟಾರ ಅಂದ್ರ ಏನ್ರೀ? ಅಂತ ಕೇಳಿದೆ.

ಕುತ್ತಾ ಕಾಟಾ ಕ್ಯಾ ಭಾಭಿ ಜಾನ್? ಪಾಗಲ್ ಕುತ್ತಾ? ಅಂತ ಕರೀಂ ಕೇಳಿ, ಅದು ಹುಚ್ಚಿಂದು ನಾಯಿ ಕಡಿದರೆ ಹೊಟ್ಟಿನ್ಯಾಗೆ ಇಂಜಕ್ಷನ್ ಕೊಡ್ತಾರೆ ಸಾಬ್, ಅಂತ ಫುಲ್ ವಿವರಣೆ ಕೊಟ್ಟ. ಭಾರಿ GK ಮಗಂದು.

ಹಾಂ?????!!!

ಹ್ಞೂ....ಹುಚ್ಚ ನಾಯಿ ಅಲ್ಲ. ಹುಚ್ಚ ಮಂಗ್ಯಾ ಬಂದು ಕಡಿದು ಹೋತೋ....ಅಂತ ರೂಪಾ ವೈನಿ ಲಬೋ ಲಬೋ ಅಂತ ಸಣ್ಣಾಗಿ ಹೊಯ್ಕೊಂಡು ಅಳೋ ಮಾರಿ ಮಾಡಿದರು.

ಹಾಂ? ಮಂಗ್ಯಾ ಕಡೀತಾ? ಛೆ! ಛೆ! ಅದೆಂತಾ ಮಂಗ್ಯಾರೀ? ನೋಡಿ ನೋಡಿ ನಿಮ್ಮನ್ನೇ ಕಡಿದು ಹೋಗ್ಯದ ಅಂದ್ರ, ಅಂತ ಹೇಳಿದೆ.

ಈ ನಿಂತಿ ಅನ್ನೋ ಸಣ್ಣ ಹುಡುಗಿ ಮುಗಿಲ ಮೆಣಶಿನಕಾಯಿ ಗತೆ ಭಾಳ ಚುರಕ್ ಇದ್ದಾಳ. ಇಡಬಾರದ ಟೈಮ್ ಒಳಗ, ಇಡಬಾರದ ಕಡೆ ಇಟ್ಟು ಬಿಡ್ತಾಳ. ಬತ್ತಿ.

ಬರೇ ಕಡಿದು ಹೋಗಲಿಲ್ಲ. ಪಪ್ಪಿ ಕೊಟ್ಟು ಕಡಿದು ಹೋತು! ಅಂತ ಅಂದು ಬಿಟ್ಟಳು ನಿಂತಿ.

ಅಕಿ ತಲಿ ಮ್ಯಾಲೆ ರೂಪಾ ವೈನಿ ಮೊಟಕಿ, ಗಪ್ ಕೂಡ!! ಅಂತ ತಾಕೀತು ಮಾಡಿದರು. ನಿಂತಿ ಮಳ್ಳ ಮಾರಿ ಮಾಡಿ, ನಾ ಏನು ಹೇಳಬಾರದ್ದು ಹೇಳಿದೆ? ಅನ್ನೋ ಲುಕ್ ಕೊಟ್ಟಳು.

ಅಷ್ಟರಾಗ ದೊಡ್ದಾಕಿ ಕುಂತಿ ದೊಡ್ಡ ಬಾಂಬೇ ಹಾಕಿದಳು. ಅಕಿ ಕ್ವೀನ್ ಆಫ್ ಉಪದ್ವ್ಯಾಪಿತನ. ಪ್ರಿನ್ಸೆಸ್ಸ್ ಆಫ್ ಅಧಿಕಪ್ರಸಂಗಿತನ.

ಇಕಿ ಕುಂತಿ ದೊಡ್ದಾಕಿ. ಎಲ್ಲಾ terminology ಪಕ್ಕಾ ಕಲ್ತು ಬಿಟ್ಟಾಳ. ಸಿನೆಮಾ ಗಿನೆಮಾ ಹುಯ್ಯ ಅಂತ ನೋಡ್ತಾಳ. ಐದಾರ್ನೆತ್ತಾ ಕ್ವಾಣ ಆಗ್ಯಾಳ.

ಬರೆ ಪಪ್ಪಿ ಅಲ್ಲಾ. ಅವ್ವಗ ಮಂಗ್ಯಾ ಚುಮ್ಮಾನೇ ಕೊಟ್ಟು ಕಡಿದು ಹೋತು, ಅಂದು ಬಿಟ್ಟಳು. ಕಿಸ್ಸಿಂಗ್ ಕಿಡಿಗೇಡಿ ಇಕಿ ಕುಂತಿ.

ಗಪ್ ಕೂಡ ಕುಂತಿ! ಅಂತ ಹೇಳಿ ರೂಪಾ ವೈನಿ ದೊಡ್ಡ ಮಗಳ ಕುಂಡಿಗೆ ಒಂದು ಏಟಾ ಕೊಟ್ಟರು. ಅಕಿ ಜಾಬಾದ್ ಕುಂತಿ, ಮುಂದ ಜಿಗಿದು ತಪ್ಪಿಸಿಕೊಂಡಳು.

ಅಲ್ಲರೀ, ಮಂಗ್ಯಾ ಕಡಿದು ಹೋತು ಅಂದ ಮಾತ್ರಕ್ಕ ಹುಚ್ಚನಾಯಿ ಕಡದ್ರ ಕೊಡೊ ಇಂಜಕ್ಷನ್ ಕೊಟ್ಟು ಬಿಡೋದ? ಯಾವ ಡಾಕ್ಟರ್ರೀ ಅವರು? ಹಾಂ? ನಾಯಿ ಕಡದರ, ನಾಯಿ ಕಟ್ಟಿ ಹಾಕಿ ಇಟ್ಟು, ಅದನ್ನ observe ಮಾಡಿ, ನಾಯಿಗೆ ಏನರೆ ಹುಚ್ಚ ಹಿಡಿತು ಅಂತ ಖಾತ್ರಿ ಆದ್ರ ಮಾತ್ರ ಕಡಿಸಿಕೊಂಡವರಿಗೆ ಹದಿನಾಕ ಇಂಜಕ್ಷನ್ ಹೊಟ್ಟಿ ಮ್ಯಾಲೆ, ಹೊಕ್ಕಳ ಸುತ್ತಾ ಕೊಡ್ತಾರ. ಹಾಂಗಿದ್ದಾಗ ಮಂಗ್ಯಾ ಕಡೀತು ಅಂದಾಕ್ಷಣ ಹೊಟ್ಟಿ ಮ್ಯಾಲೆ ಇಂಜಕ್ಷನ್ ಶುರು ಮಾಡಿ ಬಿಡೋದ? ಹಾಂ? ಅಂತ ಕೇಳಿದೆ.

ಏ....ಹುಚ್ಚ ಮಂಗೇಶ! ಸಾಕಿದ ನಾಯಿ ಕಡದ್ರ ಹಾಂಗ ಮಾಡ್ತಾರ. ಕಿಸ್ ಕೊಟ್ಟಿದ್ದು ಅಲ್ಲಲ್ಲ ಕಡಿದು ಹೋಗಿದ್ದು ಮಂಗ್ಯಾ. ಆ ಮಂಗ್ಯಾನ್ನ ಹಿಡದು ಕಟ್ಟಿ ಹಾಕವರು ಯಾರು? ನೀನಾ? ಏನಂತ ಮಾತಾಡ್ತೀಯೋ? ಬುದ್ಧಿ ಇಲ್ಲದವನೇ? ಅಂತ ವೈನಿ ಬೊಂಬಡಾ ಹೊಡೆದರು.

ಹಾಂ! ಹೌದ ನೋಡ್ರೀ ವೈನಿ. ಮಂಗ್ಯಾ ಹೋಗಿಬಿಡ್ತು ಅಲ್ಲಾ? ಏನು ಮಾಡಲಿಕ್ಕೆ ಬರ್ತದ? ರಿಸ್ಕ್ ಯಾಕ ಅಂತ ಹೇಳಿ ಡಾಕ್ಟರ ಹುಚ್ಚ ನಾಯಿ ಇಂಜಕ್ಷನ್ ಶುರು ಮಾಡಿರಬೇಕು. ಚೊಲೋನೆ ಆತು ಬಿಡ್ರೀ. ಸುಮ್ಮನ ಯಾಕ ರಿಸ್ಕ್? ಎಲ್ಲರೆ ಆ ಮಂಗ್ಯಾಗ ಹುಚ್ಚು ಹಿಡಿದಿದ್ದರೆ ಆ ಮ್ಯಾಲೆ ನಿಮಗ ಅದು ಹಿಡಿದು, ರಾಮಾ ರಾಮಾ. ಅವೆಲ್ಲಾ ಬ್ಯಾಡೆ ಬ್ಯಾಡ. ಹದಿನಾಕು ಇಂಜೆಕ್ಷನ್ ತೊಗೊಂಡು ಮುಗಿಸಿಬಿಡ್ರೀ. ಏನೋ ಹದಿನಾಕು ದಿನದ ವೃತಾ ಮಾಡಿ ಮುಗಿಸಿದೆ ಅಂತ ತಿಳ್ಕೊಂಡು ಮಾಡಿ ಬಿಡ್ರೀ, ಅಂತ ಇಲ್ಲದ ಉದ್ರಿ ಉಪದೇಶ ಕೊಟ್ಟೆ.

ಅಲ್ಲಾ, ಮಂಗ್ಯಾ ಬಂದು ಕಿಸ್ ಕೊಟ್ಟು ಕಡಿದು ಹೋತು ಅಂದ್ರ ಏನು ಮಾಡ್ಲಿಕತ್ತಿದ್ದಿರಿ ಎಲ್ಲಾರೂ? ಅಂತ ಕೇಳಿದೆ.

ಕಿಡಿಗೇಡಿ ಕುಂತಿ ಮತ್ತ ಬಾಂಬ್ ಹಾಕೇ ಬಿಟ್ಟಳು.

ಎಲ್ಲಾರೂ ಕೂಡಿ ಸಿಗರೇಟ್ ಸೇದಲಿಕತ್ತಿದ್ದಿವಿ. ಮಂಗ್ಯಾ ಬಂದು ಅವ್ವಗ ಚುಮ್ಮಾ ಕೊಟ್ಟು, ಸಿಗರೇಟ್ ಕಸಕೊಂಡು ಹೋಗಿ ಬಿಡ್ತು!!!! ಅಂತ ಕುಂತಿಯ ಆಟಂ ಬಾಂಬ್ ಈ ಸಲ.

ಹಾಂ!!!!! ಎಲ್ಲರೂ ಸಿಗರೇಟ್ ಸೇದಲಿಕತ್ತಿದ್ದಿರಾ? ಏನಲೇ ಚೀಪ್ಯಾ ಇದು? ಹಾಂ? ಅಂತ ಕೇಳಿದೆ. ಫುಲ್ ಥಂಡಾ ಹೊಡೆದಿದ್ದೆ ನಾ. ಫುಲ್ ಫ್ಯಾಮಿಲಿ ಸಿಗರೇಟ್ ಸೇದಲಿಕತ್ತಿತಂತ. ಎಲ್ಲರೆ ನೋಡೀರಾ ಈ ಟೈಪ್ ಫ್ಯಾಮಿಲಿ?

ಏ....ಆಟಿಕಿ ಸಿಗರೇಟು ಮಾರಯಾ. ನೆನಪಿಲ್ಲೇನು ನಿನಗ? ನಾವು ಸಣ್ಣವರು ಇದ್ದಾಗ ಸೇದಿದಾಂಗ ಸ್ಟೈಲ್ ಮಾಡ್ತಿದ್ದಿವಿ. ಸೇಮ್ ಸಿಗರೇಟ್ ಇದ್ದಂಗ ಇರೋ ಟಾಫಿ ಮಾರಯಾ. ಒಳಗ ಸಿಹಿ ಇರ್ತದ. ಬಾಯಾಗ್ ಇಟಗೊಂಡು ಚೀಪೋದು. ಅಂತಾ ಸಿಗರೇಟ್ ಸೇದಲಿಕತ್ತಿದ್ದಿವಿ. ಈ ಹುಡುಗ್ಯಾರು ಆ ಸಿಗರೇಟ್ ಬೇಕು ಅಂತ ಹಟಾ ಮಾಡಿದ್ದವು. ತಂದು ಕೊಟ್ಟಿದ್ದೆ. ಎಲ್ಲರೂ ಕೂಡಿ ಕಟ್ಟಿ ಮ್ಯಾಲೆ ಆ ಟಾಫಿ ಸಿಗರೇಟ್ ಸೇದಿಕೊತ್ತ ಅಲ್ಲಲ್ಲ ಚೀಪಿಕೋತ್ತ ನಿಂತಿದ್ದಿವಿ. ಆವಾಗ ಈ ಅವಘಡ ಆತು ನೋಡಪಾ, ಅಂತ ಹೇಳಿದ ಚೀಪ್ಯಾ.

ಓ....ಆ ಆಟಿಕಿ ಸಿಗರೇಟೇನು? ಗೊತ್ತಾತು. ನೀವೇನೋ ಆಟಿಕಿ ಸಿಗರೇಟ್ ಅಂತ ಸೇದಿಕೊತ್ತ ನಿಂತ್ರೀ. ಪಾಪ ಆ ಮಂಗ್ಯಾಕ್ಕ ಏನು ಗೊತ್ತು? ಅದಕ್ಕ ಸಿಗರೇಟ್ ಬೇಕಾಗಿತ್ತು. ಅದಕ್ಕ ತಲಬು ಎದ್ದು ಬಿಟ್ಟಿತ್ತು. ತಡಕೊಳ್ಳಲಿಕ್ಕೆ ಆಗಲಿಲ್ಲ. ಬಂದಿದ್ದೆ ರೂಪಾ ವೈನಿ ನೋಡಿ, ಎಷ್ಟು ಚಂದ ಇದ್ದಾರ ಅಂತ ಹೇಳಿ, ಸಿಗರೇಟ್ ಬಾಯಿಂದ ಕಿತ್ತುಕೊಂಡು, ಸಿಗರೇಟ್ ಕೊಟ್ಟರು ಅಂತ ಖುಷಿಯೊಳಗ ಒಂದು ಚುಮ್ಮಾ ಕೊಟ್ಟು ಹೋತು ಅಂತ ಕಾಣಸ್ತದ. ಆವಾಗ ರೂಪಾ ವೈನಿ ಗುದ್ಯಾಡಿರಬೇಕು. ಅದಕ್ಕ ಕಡಿದು ಬಿಟ್ಟದ ಅಷ್ಟ. ಇಲ್ಲಂದ್ರ ಆ ಮಂಗ್ಯಾಕ್ಕ ಕಡಿಯೋ ಪ್ಲಾನ್ ಇದ್ದಂಗ ಇಲ್ಲ, ಅಂತ ವಿವರಣೆ ಕೊಟ್ಟೆ.

ಎಷ್ಟು ಚಂದ ಇದ್ದಾರ....ಅಂತ ನಾ ಹೇಳಿಬಿಟ್ಟೆ ಅಂತ ಕೇಳಿದ ರೂಪಾ ವೈನಿ ಖುಷ್ ಆಗಿಬಿಟ್ಟರು. ನಾ ಹೇಳಿದ್ದು ಮಂಗ್ಯಾಕ್ಕ ರೂಪಾ ವೈನಿ ಚಂದ ಕಂಡರು ಅಂತ. ಅವರು ಅದನ್ನ ತಿಳಿದುಕೊಳ್ಳಲೇ ಇಲ್ಲ. ಚೀಪ್ಯಾ ಅಂತು ರೂಪಾ ವೈನಿಗೆ 'ಸರ್ಕಾರಿ ಸ್ತ್ರೀಲಿಂಗ' ಅಂತ ಚ್ಯಾಸ್ಟಿ ಮಾಡ್ತಾನ. ಹಿಂದಿಂದ. ಹಂಗೆಲ್ಲಾ ಅನ್ನಬಾರದು. ಅದು ಚೊಲೊ ಅಲ್ಲ. ಏನೇ ಇರಲಿ, ಚಂದ ಇದ್ದಿ ನೋಡಪಾ, ಚಂದ ಇದ್ದಿ ನೋಡವಾ ಅಂದು ಬಿಟ್ಟರ ಎಷ್ಟು ಕೆಲಸ ಆಗ್ತಾವ ಅನ್ನೋದು ಹಾಂಗ ಅಂದು ಅಂದು ಕೆಲಸ ಮಾಡಿಸಿಕೊಂಡವರಿಗೇ ಗೊತ್ತು. ಈ ಸೀಕ್ರೆಟ್ ನಾ ನಿಮಗೂ ಹೇಳಿಬಿಟ್ಟೆ ಈಗ. ಇರ್ಲಿ.

ಪಾಪ ಆ ಮಂಗ್ಯಾಕ್ಕ ತಂಬಾಕಿನ ಚಟಾ ಹ್ಯಾಂಗ ಹತ್ತಿರಬಹುದು? ಅಂತ ಚೀಪ್ಯಾ ಕೇಳಿದ.

ಮಂದಿ ಸೇದಿ ಒಗದ ಬೀಡಿ, ಸಿಗರೇಟ್ ಎಲ್ಲಾ ಈ ಮಂಗ್ಯಾಗೋಳು ತಿಂದು, ಸೇದಿ ಚಟಾ ಹಚ್ಚಿಕೊಂಡು ಬಿಡ್ತಾವ. ಆ ಮ್ಯಾಲೆ ತಲಬು ಕಾಡ್ಲಿಕತ್ತ ಕೂಡಲೇ ಅವಗಳ ತಲಿ ಕೆಟ್ಟು ಇಂತಾ ಕೆಲಸಾ ಮಾಡ್ತಾವ. ಶೆರೆ ಕುಡಿಯೋ ಚಟದ ಆಡು, ಚಹಾ ಕುಡಿಯೋ ಚಟದ ನಾಯಿ ಎಲ್ಲ ಭಾಳ ಕಾಮನ್. ಆಗಾಗ ಪೇಪರ್ ಒಳಗ ಬರ್ತಿರ್ತದ ನೋಡು ಸುದ್ದಿ. ಹಾಂಗೇ ಈ ಮಂಗ್ಯಾ ಕೂಡ. ಹತ್ಯದ ಅದಕ್ಕ ತಂಬಾಕಿನ ಚಟಾ. ನಿಕೋಟಿನ್ ಭಾಳ ಅಡಿಕ್ಟಿವ್ ಮಾರಯಾ. ನಂದು ಕರೀಮಂದು ಎಲ್ಲಾ ಹಾಲತ್ ನೋಡು. ದವಡಿ ಮೂಲ್ಯಾಗ ಗುಟಕಾ, ಮಾವಾ ಇಲ್ಲ ಅಂದ್ರ ಹುಚ್ಚ ಹಿಡದಂಗ ಆಗಿ ಬಿಡ್ತದ, ಅಂತ ಹೇಳಿ ಮಾವಾ ಪಿಚಕಾರಿ ಉಗಳಿ ಫ್ರೆಶ್ ಮಾವಾ ಹಾಕ್ಕೊಂಡೆ.

ನೀವು ಗಂಡಸೂರು ಆ ಹುಚ್ಚ ಮಂಗ್ಯಾನ ಬಗ್ಗೆ ಹುಚ್ಚುಚ್ಚರೆ ಮಾತಾಡಿಕೋತ್ತ ನಿಂದರ್ರೀ ಬೇಕಾದ್ರ. ನನಗ ಭಾಳ ಕೆಲಸ ಅದ, ಅಂತ ಮಕ್ಕಳನ್ನು ಕರೆದುಕೊಂಡು ರೂಪಾ ವೈನಿ ಹೊಂಟು ಬಿಟ್ಟರು. ಚೀಪ್ಯಾನೂ ಹೊಂಟಿದ್ದ. ನಾವೇ ನಿಲ್ಲಿಸಿಕೊಂಡ್ವೀ.

ಲಗೂನ ಬರ್ರಿ. ತಾಸ್ ಗಟ್ಟಲೆ ಹಾಳ ಹರಟಿ ಹೊಡಕೋತ್ತ ನಿಂತು ಬಿಡಬ್ಯಾಡ್ರೀ. ಮನಿಗೆ ಬಂದು ಸ್ವಲ್ಪ ಕಟ್ಟಿಗಿ ಒಡಿರಿ. ಆ ಮಂಗೇಶಗ ಮತ್ತ ಕರೀಮಗ ಏನೂ ಕೆಲಸ ಇಲ್ಲ, ಬಗಸಿ ಇಲ್ಲ. ನಿಮಗ ಮನಿ ಮಠ ಹೆಂಡತಿ ಮಕ್ಕಳು ಇದ್ದಾರ ಅಂತ ಸ್ವಲ್ಪ ಖಬರು ಇರಲೀ, ಅಂತ ಪಾರ್ಟಿಂಗ್ ಶಾಟ್ ಕೊಟ್ಟು ರೂಪಾ ವೈನಿ ಕುಂತಿ, ನಿಂತಿ ಎಳಕೊಂಡು ಹೋಗಿ ಬಿಟ್ಟರು.

ಏನಲೇ ಚೀಪ್ಯಾ? ರೂಪಾ ವೈನಿಗೆ 'ಮಂಗೋಲಿಯನ್ ಕಿಸ್' ಸಿಕ್ಕಿತಲ್ಲಲೇ? ಹಾಂ? ನಿನಕಿಂತ ಲಕ್ಕಿ ನೋಡಲೇ ಆ ಮಂಗ್ಯಾ, ಅಂತ ಕಾಡಿಸಿದೆ. ಕರೀಮ ಸಾಥ ಕೊಟ್ಟ.

ಈಗ ಮಂಗೋಲಿಯನ್ ಕಿಸ್ ಅಂದ್ರ ಏನಪಾ? ಹಾಂ? ಫ್ರೆಂಚ್ ದೇಶದ ಮಂದಿ ಕೊಡೋದು ಫ್ರೆಂಚ್ ಕಿಸ್. ಈಗ ಮಂಗೋಲಿಯಾ ದೇಶದವರು ಕೊಡೋದು ಮಂಗೋಲಿಯನ್ ಕಿಸ್ಸಾ? ಯಾವ ಮಂಗೋಲಿಯನ್ ಬಂದು ನನ್ನ ಹೆಂಡತಿಗೆ ಕಿಸ್ ಹೊಡೆದಾ? ನಮಗ ಮಂಗೋಲಿಯಾ ದೇಶದ ಯಾವದೇ ಮಂದಿ ಗೊತ್ತಿಲ್ಲ. ಮಂಚೂರಿಯಾ ದೇಶದ ಗೋವರ್ಧನ್ ಆಚಾರ್ರು ಗೊತ್ತಿದ್ದಾರ. ಅವರು ಕಿಸ್ ಗಿಸ್ಸ್ ಕೊಡೋದಿಲ್ಲ. ಅವರು ವೇದಾಂತ ಕಲಿಲಿಕ್ಕೆ ಬಂದಾರ. ನೀನೂ ಸಹ ಅವರನ್ನ ಭೆಟ್ಟಿ ಆಗಿ. ಹಾಂಗಿದ್ದಾಗ ರೂಪಾಗ ಮಂಗೋಲಿಯನ್ ಕಿಸ್ ಅದು ಇದು ಅಂತೀ ಅಲ್ಲಾ, ನಿನಗ ನಾಚಿಗಿ ಬರೋದಿಲ್ಲಾ? ಹಾಂ? ಅಂತ ಕೇಳಿದ ಚೀಪ್ಯಾ.

ಹುಚ್ಚ ಸೂಳಿ ಮಗ. ತಲಿನೇ ಇಲ್ಲ.

ಲೇ ಹಾಪಾ! ಮಂಗೋಲಿಯನ್ ಕಿಸ್ ಅಂದ್ರ ಮಂಗ್ಯಾ ಕೊಟ್ಟ ಕಿಸ್ ಅಂತ. ಮಂಗೋಲಿಯಾದವರು ಕೊಟ್ಟಿದ್ದು ಅಂತ ಅಲ್ಲ. ಏನ ಹಾಪ್ ಇದ್ದೀಲೆ? ಫ್ರೆಂಚ್ ಕಿಸ್ ಅಂದ್ರ ಬರೆ ಫ್ರೆಂಚ್ ಮಂದಿ ಇಷ್ಟೇ ಕೊಡ್ತಾರ ಏನಲೇ? ಹಾಂಗಿದ್ರ ಆಸ್ಟ್ರೇಲಿಯನ್ ಕಿಸ್ ಬರೇ ಆಸ್ಟ್ರೇಲಿಯಾದವರು ಮಾತ್ರ ಕೊಡ್ತಾರ ಏನಲೇ? ಹಾಂ? ಏನ್ ಹಾಪ್ ಇದ್ದೀಪಾ? ಇದರ ಮ್ಯಾಲೆ ಸಂಸಾರ ಕೂಡಾ ಮಾಡ್ತೀ. ಇಷ್ಟೂ ಗೊತ್ತಿಲ್ಲ, ಅಂತ ಹೇಳಿದೆ.

ಆಸ್ಟ್ರೇಲಿಯನ್ ಕಿಸ್ ಅಂದ್ರಾ? ಅಂತ ಕೇಳಿದ ಚೀಪ್ಯಾ.

Same as french kiss but down under, ಅಂತ ಕ್ಲುಪ್ತವಾಗಿ ಹೇಳಿದೆ.

ಥೂ! ಹೊಲಸ್ ಸೂಳಿ ಮಗನ. ಏನಂತ ಹೇಳ್ತೀಲೆ? ಅಂತ ನನಗ ಬೈದಾ ಚೀಪ್ಯಾ.

ಅಯ್ಯ ಇವನ! ಆಸ್ಟ್ರೇಲಿಯನ್ ಕಿಸ್ಸಿನ ಡೆಫಿನಿಷನ್ ಕೇಳಿದವ ನೀನು. ಕೇಳಿದ್ದಕ್ಕ ಹೇಳಿದರ, ಥೂ!ಹೊಲಸ್ ಅಂತೀ ಅಲ್ಲಲೇ? ನಾ ಹೇಳಿದ್ದರ ಅರ್ಥ ಏನು? ಆಸ್ಟ್ರೇಲಿಯಾ ಎಲ್ಲದ? ಪೂರ್ತಿ ಕೆಳಗ ಅದ. down under ಅನ್ನೋದರ ಅರ್ಥ ಅಷ್ಟೇ. ಅದಕ್ಕ ಬ್ಯಾರೆ ಅರ್ಥ ಹಚ್ಚೋ ಅಗತ್ಯ ಇಲ್ಲ. ಹೀಂಗ ಭೌಗೋಳಿಕವಾಗಿ ಪೂರ್ತಿ ಕೆಳಗ ಇರೋ ಆಸ್ಟ್ರೇಲಿಯಾದ ಮಂದಿ ಫ್ರೆಂಚ್ ಕಿಸ್ ಕೊಡೋದಕ್ಕ ಆಸ್ಟ್ರೇಲಿಯನ್ ಕಿಸ್ಸಿನ ಡೆಫಿನಿಷನ್ Same as french kiss but down under ಅಂತ ಅದ. ಅಂದ್ರ Same as french kiss but down under in Australia, ಅಂತ. ನೀ ಏನೋ ತಿಳಕೊಂಡು ಥೂ! ಹೊಲಸ್! ಅಂದ್ರ ನಾ ಏನು ಮಾಡಲೀ? ನಿನಗ GK ಇಲ್ಲ. ಓದೋದಿಲ್ಲ ಬಿಡೋದಿಲ್ಲ. ಗೊತ್ತಿಲ್ಲದ್ದನ್ನ ಹೇಳಿದರ ಕೇಳೋದಿಲ್ಲ, ಅಂತ ಹೇಳಿದೆ.

down under ಅಂದ್ರ ನಾ ಏನೋ ಅಂತ ತಿಳಕೊಂಡೆ, ಅಂದಾ ಚೀಪ್ಯಾ.

ಅವರ ಅವರ ಭಾವಕ್ಕೆ, ಅವರ ಅವರ ಭಕುತಿಗೆ ಬಿಟ್ಟದ್ದು, ಅಂತ ಹೇಳಿ ಅಲ್ಲಿಗೇ ಮಾತು ನಿಲ್ಲಿಸಿದೆ.

ಅಲ್ಲಲೇ ಚೀಪ್ಯಾ, ನೀವು ನಾಕೂ ಮಂದಿ ಸಿಗರೇಟ್ ಸೇದಿಕೋತ್ತ ನಿಂತಾಗ ಮಂಗ್ಯಾ ರೂಪಾ ವೈನಿಂದನೇ ಸಿಗರೇಟ್ ಯಾಕ ಕಸಿದುಕೊಂಡು ಹೋತು? ನೀವೂ ಮೂರು ಮಂದಿ ಇದ್ದರಲ್ಲಾ? ಹಾಂ? ಅಂತ ಕೇಳಿದೆ.

ನನಗೇನು ಗೊತ್ತು? ಆ ಹುಚ್ಚ ಮಂಗ್ಯಾಗ ನನ್ನ ಹೆಂಡತಿ ಕಂಡ್ರ ಯಾಕಷ್ಟು ಪ್ರೀತಿ ಅಂತ ಮುಂದಿನ ಸರೆ ಸಿಕ್ಕಾಗ ಕೇಳ್ತೇನಿ, ಅಂದ ಚೀಪ್ಯಾ. ಇರಿಟೇಟ್ ಆತು ಅವಂಗ.

ಈಗ ಚೀಪ್ಯಾನ ಕಾಡೋ ಗುತ್ತಿಗಿ ಕರೀಮಾ ತೊಗೊಂಡ.

ಸಾಬ್, ಅದು ಯಾಕೆ ಗೊತ್ತು ಕ್ಯಾ? ಈ ಚೀಪ್ಯಾ ಇಲ್ಲಾ, ಇವನು ಹಲ್ಲು ತಿಕ್ಕೋದು ಸ್ನಾನಾಗೆ ಮಾಡೋವಾಗ. ಭಾಬಿ ಜಾನ್ ಇಲ್ಲಾ, ಅವರು ಮುಂಜಾನೆ ಮುಂಜಾನೆ ಹಲ್ಲು ತಿಕ್ಕಬಿಟ್ಟಿ, ತಲಿಗೆ ಸ್ನಾನಾಗೆ ಮಾಡಿಕೊಂಡಿ, ಮಲ್ಲಿಗಿ ಹೂವಾಗೆ ಹಾಕ್ಕೊಂಡಿ, ಅತ್ತರ್ ಪತ್ತರ್ ಹೊಡಕೊಂಡಿ, ಪೌಡರ್ ಎಲ್ಲಾ ಹಾಕ್ಕೊಂಡಿ, ಮಸ್ತ ಖುಶಬೂ ಹೊಡೀತಾ ನಿಂತಿರ್ತಾರೆ. ಈ ಚೀಪ್ಯಾ ನೋಡಿ, ಬದಬೂ ಹೊಡಿತಾನೆ. ಅದು ಆ ಬಂದರ್ ಗೆ ಕೂಡಾ ಗೊತ್ತು ಐತೆ. ಅದಕ್ಕೆ ಅದು ಈ ಚೀಪ್ಯಾನ ಬಾಯಿಂದ ಸಿಗರೇಟ್ ಕಿತ್ತುಕೊಳ್ಳಾಕೆ ಹೋಗಿ, ಬದಬೂ ಇಂದಾ ಮೂರ್ಛೆ ತಪ್ಪೀತು ಅಂತಾ ಐಡಿಯಾ ಮಾಡ್ಬಿಟ್ಟಿ, ರೂಪಾ ಭಾಭಿಯಿಂದನೇ ಸಿಗರೇಟ್ ತೊಗೊಂಡು ಹೋಗಿದೆ ಅಂತ ನಮಗೆ ಅನ್ನಸ್ತದೆ. ಕ್ಯಾ ಬೋಲ್ತಾ ಚೀಪ್ಯಾ ಭಾಯಿ? ಅಂತ ಚೀಪ್ಯಾಗ ಇರಿಟೇಟ್ ಮಾಡಿದ ಕರೀಮಾ.

ಏ....ಸಾಬಾ....ಸ್ವಲ್ಪ ಮುಚ್ಚಿಕೊಂಡು ಕೂಡಪಾ. ನಿನ್ನ ಬಾಯಿ ಒಮ್ಮೆ ತೆಗೆದು ಗಿಡದ ಮ್ಯಾಲೆ ಕೂತ ಮಂಗ್ಯಾಗೆ ತೋರಿಸಿಬಿಡು. ನೋಡಿ, ಹೆದರಿ, ಗಿಡದ ಮ್ಯಾಲಿನ ಮಂಗ್ಯಾ ಹಿಡಕೊಂಡು ಜೋತಾಡೋ ಟೊಂಗಿ ಕೈಬಿಟ್ಟು, ಕೆಳಗ ಬೀಳದಿದ್ದರ ನನ್ನಾಣಿ. ಇಪತ್ನಾಕ ತಾಸೂ ಆ ಪಾನು, ಗುಟ್ಕಾ ಜಗಿದು ಜಗಿದು, ಹಲ್ಲೆಲ್ಲ ಕೆಂಪಗ, ಖರ್ರಗ ಆಗಿ, ಬಾಯಿ ಬಿಟ್ಟರೆ ಒಳ್ಳೆ ರಕ್ತಾ ಹೀರಿದ ಡ್ರಾಕುಲಾ ಕಂಡಂಗ ಕಾಣ್ತೀ ನೋಡಲೇ, ಅಂತ ಕರೀಮಗ ರಿವರ್ಸ್ ಕೊಟ್ಟ.

ಹಲ್ಲು ಅಷ್ಟು ಖರಾಬ್ ಆಗಿ ಹೋದವೋ ಅಂತ ಕರೀಮ ಭೀಮೂನ ಪಾನ್ ಶಾಪಿನಲ್ಲಿ ಇದ್ದ ಕನ್ನಡಿಯಲ್ಲಿ ತನ್ನ ಹಲ್ಲು ಎಲ್ಲಾ ಬಿಟ್ಟು ಹೀ ಅಂತ ನೋಡಿಕೊಂಡ. ಡ್ರಾಕುಲಾ ಲುಕ್ ಏನೂ ಬಂದಿಲ್ಲ ಅಂತ ಬಾಯಿ ಮುಚ್ಚಿದ.

ಮುಂಜಾನೆ ಹಲ್ಲು ತಿಕ್ಕಿದ್ದಿಲ್ಲಾ? ಅಂತ ಕೇಳಿದೆ.

ಯಾರು? ನಾನಾ? ಅಂತ ಕೇಳಿದ ಚೀಪ್ಯಾ.

ಅಲ್ಲಾ, ಆ ಮಂಗ್ಯಾ! ಮಂಗ್ಯಾ ಮುಂಜಾನೆ ಹಲ್ಲು ತಿಕ್ಕಿಕೊಂಡು ಬಂದಿತ್ತೋ ಇಲ್ಲೋ ಅಂತ ಕೇಳಿದೆ. ಏನಲೇ ನೀನು? ಎಲ್ಲಾದಕ್ಕೂ ಯಬಡನ ಹಾಂಗ ಕೇಳ್ತೀ? ಹಾಂ? ಅಂತ ಕೇಳಿದೆ.

ನಾನು ಮುಂಜಾನೆ ಲಗೂನ ಸ್ನಾನ ಮಾಡ್ತೇನಿ ನೋಡು. ಹಾಂಗಾಗಿ ಹಲ್ಲು ತಿಕ್ಕೋದು ಸ್ನಾನದ ಮೊದಲು ಅಂತ ಅಷ್ಟೇ. ಈ ಸಾಬಾ ಏನೋ ಅಂದಾ ಅಂತ ಹೇಳಿ ನೀ ನಂಬೋದಾ? ಏನರಲೇ ನೀವೆಲ್ಲಾ? ಹಾಂ? ಅಂತ ಕೇಳಿದ ಚೀಪ್ಯಾ.

ಇದು ಈಗ ಜಟಿಲ ಆತಲ್ಲಾ? ರೂಪಾ ವೈನಿಗೇ ಯಾಕ ಮಂಗ್ಯಾ ಕಿಸ್ ಹೊಡಿತು? ಬ್ಯಾರೆ ಯಾರಿಗೆ ಯಾಕಿಲ್ಲ? ಹಾಂ?

ಚೀಪ್ಯಾ ನೀನು ಯಾವ ಟೂತ್ ಪೇಸ್ಟ್ ಹಚ್ಚಿ ಹಲ್ಲ ತಿಕ್ಕತಿ? ಅಂತ ಕೇಳಿದೆ.

ನಾನು 'ಕಾಲ್ಗೆಟ್ ಕೆಲಸಿ ಗರುಡಾ' ಹಚ್ಚಿಯೇ ಹಲ್ಲ ತಿಕ್ಕತೇನಿ ನೋಡಪಾ, ಅಂದು ಬಿಟ್ಟ ಚೀಪ್ಯಾ. ಹೋಗ್ಗೋ!!!

ಲೇ ಚೀಪ್ಯಾ...ಅದು Colgate CalciGuard ಅಂತಪಾ. ಕೆಲಸಿ ಗರುಡಾ ಅಂತೀ ಅಲ್ಲಲೇ? ಹಾಂ? ಕೆಲಸಿ ಅಂದ್ರ ಹಜಾಮ ಅಂತ. ನಮ್ಮ ಸಿರ್ಸಿ ಕಡೆ ಕೆಲಸಿ ರಾಮಾ ಅಂತಿದ್ದ. ನೀ ಕೆಲಸಿ ಗರುಡಾ ಅನ್ನೋದ ಕೇಳಿ, ನಾನು ಇವಾ ಚೀಪ್ಯಾ ಹಜಾಮನ ಕಡೆ ತಲಿ ಕೆತ್ತಿಸಿಕೊಳ್ಳೋದು ಬಿಟ್ಟು ಹಲ್ಲು ಯಾಕ ತಿಕ್ಕಿಸಿಕೊಳ್ಳತಾನ? ಅಂತ ಹೇಳಿ ವಿಚಾರ ಮಾಡೋಹಂಗ ಮಾಡಿಬಿಟ್ಟಿ ನೋಡಲೇ ಪಾಪಿ. ಕೆಲಸಿ ಗರುಡ ಅಂತ ಕೆಲಸಿ ಗರುಡ. ಹ್ಯಾಂಗ ಅಂತಾನ  ನೋಡು, ಅಂತ ಹೇಳಿದೆ. ಭಾಳ ನಗು ಬಂತು.

ಚೀಪ್ಯಾ, ರೂಪಾ ಭಾಭಿ ಜಾನ್ ಬಂದರ್ ಛಾಪ್ ಕಾಲಾ ದಂತ್ ಮಂಜನ್ ಇಸ್ತೇಮಾಲ ಮಾಡ್ತಾರೆ ಕ್ಯಾ? ಅಂತ ಕೇಳಿಬಿಟ್ಟ ಕರೀಮ.

ಹೌದಲೇ ಸಾಬಾ! ನಿನಗೆಂಗ ಗೊತ್ತು? ಅಕಿ ಮಂಕಿ ಛಾಪ್ ನೋಡು. ಅಕಿ ಏನ್ ಬಂತು? ಅವರ ಪೂರ್ತಿ ವಂಶದವರು ಮಂಕಿ ಛಾಪ್. ಹಾಂಗಾಗಿ ಅಕಿ ಹಲ್ಲು ಬಂದಾಗಿಂದ ಅದೇ ಮಂಕಿ ಬ್ರಾಂಡ್ ಹಲ್ಲು ಪುಡಿನೇ ಉಪಯೋಗ ಮಾಡೋದು. ಏನೀಗ? ಅಂತ ಕೇಳಿದ.



ಕರೀಮನ ವಿಚಾರ ಲಹರಿ ನನಗ ಗೊತ್ತಾತು.

ಲೇ ಚೀಪ್ಯಾ, ರೂಪಾ ವೈನಿ ಮಂಕಿ ಬ್ರಾಂಡ್ ಹಲ್ಲುಪುಡಿ ಉಪಯೋಗಿಸ್ತಾರ ಅಂತ ಮಂಗ್ಯಾಕ್ಕ ಗೊತ್ತಾಗಿನೇ ಅದು ಅವರಿಗೆ ಪ್ರೀತಿಂದ ಕಿಸ್ ಹೊಡೆದು ಹೊಗ್ಯದ ನೋಡಲೇ. ತನ್ನ ಬ್ರಾಂಡಿನ ಮಂಕಿ ಬ್ರಾಂಡ್ ಹಲ್ಲು ಪುಡಿ ಉಪಯೋಗ ಮಾಡವರು ಇನ್ನೂ ಇದ್ದಾರ ಅಂತ ಹೇಳಿಯೇ ಆ ಮಂಗ್ಯಾ ಮುದ್ದಾಂ ರೂಪಾ ವೈನಿಂದನೇ ಸಿಗರೇಟ್ ಕಸಕೊಂಡು, brand loyalty ಗೆ ಒಂದು ಬಹುಮಾನ ಅಂತ ಹೇಳಿ ಅವರಿಗೆ ಕಿಸ್ ಕೊಟ್ಟು ಹೋಗಿ ಬಿಡ್ತು, ಅಂತ ಹೇಳಿದೆ.

ಈ ಕಿಸ್ ಕೊಟ್ಟು ಹೋದ ಮಂಗ್ಯಾ ಎಲ್ಲರೆ ಇಮ್ರಾನ ಹಷ್ಮಿದೇನು ಮತ್ತ? ಅಂತ ಕೇಳಿದೆ.

ಯಾರಲೇ ಆವಾ ಇಮ್ರಾನ್ ಹಶ್ಮಿ? ಅವಂದೇನರ ಮಂಗ್ಯಾ ಅದು ಇರಬೇಕು, ಅಷ್ಟೇ ಮತ್ತ. ಇಬ್ಬರನ್ನೂ ಮರ್ಡರ್, ಮರ್ಡರ್ ಮಾಡಿಬಿಡ್ತೇನಿ. ನಿನ್ನ ಮಂಗ್ಯಾ ನೀ ಸರಿ ಇಟ್ಟುಗೋ ಮಗನ! ನಿನ್ನ ಹೆಂಡತಿಗೆ ಬೇಕಾದ್ರ ನೀನೇ ಕಿಸ್ ಕೊಡು ಇಲ್ಲಾ ನಿನ್ನ ಮಂಗ್ಯಾ ಕೊಡೋದನ್ನ ನೋಡಿ ಮಜಾ ಮಾಡು. ಆದ್ರ ಮಂದಿ ಹೆಂಡತಿ ಮ್ಯಾಲೆ ಯಾಕ ನಿನ್ನ ಮಂಗ್ಯಾ ಬಿಡ್ತೀಲೆ ಮಂಗ್ಯಾ ಸೂಳಿಮಗನ? ಅಂತ ಬೈದೇ ಅವನ್ನ ಮತ್ತ ಅವನ್ನ ಮಂಗ್ಯಾನ್ನ ಮರ್ಡರ್ ಮಾಡಿ ಒಗಿತೇನಿ, ಅಂತ ಚೀಪ್ಯಾ ಆಕ್ರೋಶದಿಂದ ಹೇಳಿದ.

ಇವಾ ಇಮ್ರಾನ ಪಾಕಿಸ್ತಾನದವಾ ಏನು? ಅಂತ ಕೇಳಿದ ಚೀಪ್ಯಾ.

ಲೇ...ಚೀಪ್ಯಾ, ಆವಾ ಇಮ್ರಾನ ಖಾನ್. ಕ್ರಿಕೆಟರ್. ಆವಾ ಪಾಕಿಸ್ತಾನದವ, ಅಂತ ಹೇಳಿದೆ.

ಮತ್ತ ಇವಾ? ಅಂತ ಕೇಳಿದ ಚೀಪ್ಯಾ.

ಇವಾ ಇಲ್ಲಿಯವನೇ. ನೀ ಅವನ್ನ ಮರ್ಡರ್ ಮಾಡೋದು ದೂರ ಉಳಿತು. ಆ ಹುಚ್ಚ ಸೂಳಿಮಗ ಇಮ್ರಾನ ಹಶ್ಮಿಗೆ ಮರ್ಡರ್ ಮಾಡಿ ಬಾರೋ ಅಂದ್ರ ಕಿಸ್ ಮಾಡಿ ಬಂದು ಬಿಟ್ಟ ನೋಡಪಾ, ಅಂತ ಹೇಳಿದೆ.

ಹಾಂ? ಅಂದ ಚೀಪ್ಯಾ.

ಅಂದ್ರ...ಇಮ್ರಾನ ಹಶ್ಮಿ ಅನ್ನವ ಸಿನಿಮಾ ನಟ ಮಾರಾಯಾ. ಮರ್ಡರ್ ಅನ್ನೋ ಸಿನೆಮಾದಾಗ ಕಿಸ್ಸಿಂಗ್ ಮಾಡೋ ದೃಶ್ಯಗಳಿಂದ ಕಿಸ್ಸಿಂಗ್ ಕಿಂಗ್ ಅಂತ ಫೇಮಸ್ ಆಗಿಬಿಟ್ಟ ನೋಡು. ಇಷ್ಟು ಫೇಮಸ್ ಆಗಿ ಬಿಟ್ಟಾನ ಅಂದ್ರ ಕೇಳಬ್ಯಾಡಾ, ಅಂತ ಹೇಳಿದೆ.

ಇಮ್ರಾನ ಹಶ್ಮಿ

ಹಾಂಗಾ? ಎಷ್ಟು ಫೇಮಸ್? ಅಂತ ಕೇಳಿದ ಚೀಪ್ಯಾ.

ಅವನ ಜೋಡಿ ಪಾರ್ಟ್ ಮಾಡೋ ಹೀರೋಯಿನ್ನಗಳು, ಸಾಕು ಬಿಡಲೇ, ಬಿಡು ಸಾಕಲೇ, ಅನ್ನೋ ಹಾಂಗ ಕಿಸ್ ಹೊಡಿತಾನಂತ ನೋಡಪಾ. ಅವರು ಉಸಿರುಗಟ್ಟಿ, ಬಾಯಿಂದ ಉಸಿರು ಬಿಡಲಿಕ್ಕೆ ಆಗದೆ, ಮತ್ತ ಬ್ಯಾರೆ ಬ್ಯಾರೆ ಕಡೆಯಿಂದ ಉಸಿರು ಬಿಡೋ ಪರಿಸ್ಥಿತಿ ತಂದು ಇಡ್ತಾನ ನೋಡಪಾ. ಆ ಪರಿ ಹಿಡದ ಬಿಡದ ಕಿಸ್ಸಿಂಗ್ ಮಾಡ್ತಾನ ಅಂತ ಆತು. ಆ ಪರಿ ಫೇಮಸ್ ಆಗಿ ಬಿಟ್ಟಾನ ಈ ಕಿಸ್ಸಿಂಗ್ ಕಿಡಿಗೇಡಿ ಇಮ್ರಾನ ಹಶ್ಮಿ, ಅಂತ ಇಮ್ರಾನ ಹಶ್ಮಿ ಬ್ರೀಫ್ ಹಿಸ್ಟರಿ ಹೇಳಿದೆ.

ಸಾಬ್ ಆ ಚುಮ್ಮಾ ಕೊಡೋ ಮಂಗ್ಯಾ ನಮ್ಮ ಇಮ್ರಾನ್ ಭಾಯಿಜಾನ್ ಅವರದ್ದು ಅಂತ ಹ್ಯಾಂಗೆ ಹೇಳ್ತೀರಿ ನೀವು? ನಿಮ್ಮದು ಕಡೆ ಸಬೂದ್ ಅದೇ ಕ್ಯಾ? ಅಂತ ಕೇಳಿದ ಕರೀಂ.

ಸಬೂದ್ ಗಿಬೂದ್ ಇಲ್ಲಪಾ. ಮನ್ನೆ ಕಿಸ್ ಹೊಡಿಯೋ ಒಂದು ಆನಿ ಫೋಟೋ ಬಂದಿತ್ತು. ಅದರ ಕೆಳಗ ಯಾರೋ ಇದು ಹೆಚ್ಚಾಗಿ ಇಮ್ರಾನ್ ಹಶ್ಮಿ ಆನಿನೇ ಇರಬೇಕು ಅಂತ ಹೇಳಿ ಹಾಕಿದ್ದರು. ಇಮ್ರಾನ್ ಹಶ್ಮಿ ಕಡೆ ಕಿಸ್ ಹೊಡಿಯೋ ಆನಿ ಇದ್ದಂಗ ಕಿಸ್ ಹೊಡಿಯೋ ಮಂಗ್ಯಾ ಸಹಿತ ಅವನ ಕಡೆ ಇರಬಹುದು ಅಂತ ಊಹೆ ಮಾಡಿ ಹೇಳಿದೆ. ಅಷ್ಟೇ ನೋಡಪಾ, ಅಂತ ಹೇಳಿದೆ.

ಇಮ್ರಾನ್ ಹಶ್ಮಿಯ ಕಿಸ್ಸಿಂಗ ಆನೆ

ಸಾಬ್ ನಮಗೆ ಅನ್ನಿಸ್ತದೆ, ಅಂತ ಕರೀಂ ಶುರು ಮಾಡಿದ.

ಏನು ಅನ್ನಿಸ್ತದ ನಿನಗ? ಅಂತ ಕೇಳಿದೆ.

ರೂಪಾ ಭಾಬಿ ಜಾನ್ ಗೆ ಚುಮ್ಮಾ ಕೊಟ್ಟ ಮಂಗ್ಯಾ ಹೆಚ್ಚಾಗಿ 'ಕಿಸ್ ಗೌತಮಿ'ದು ಇರಬೇಕು ಸಾಬ್. ಅಕಿ ಕಡೆ ಒಂದು ಕಿಸ್ಸಿಂಗ್ ಮಂಗ್ಯಾ ಇತ್ತು ಅಲ್ಲಾ? ಅದಕ್ಕೆ ಅಕಿಗೆ ಕಿಸ್ ಗೌತಮಿ ಅಂತ ಹೆಸರು ಬಂದಿತ್ತು ಅಲ್ಲಾ? ಅಂತ ಕೇಳಿಬಿಟ್ಟ ಕರೀಮ.

ಯಾರಲೇ ಅಕಿ ಕಿಸ್ ಗೌತಮಿ? ನಮಗ ಗೊತ್ತಿದ್ದಾಕಿ ಸಿನಿಮಾ ಹೀರೋಯಿನ್ ಗೌತಮಿ ಮಾತ್ರ. ಈಗ ಅಕಿ ಕಮಲ್ ಹಾಸನ್ ಅವರ ಜೋಡಿ ಕೂಡಾವಳಿ ಮಾಡಿಕೊಂಡು ಇದ್ದಾಳ ಅಂತ. 'ಏಳು ಸುತ್ತಿನ ಕೋಟೆ' ಅನ್ನೋ ಸಿನೆಮಾದಾಗ ಆಕ್ಟ್ ಮಾಡಿದ್ದಳು ನೋಡೋ. ನೆನಪಿಲ್ಲ? ಅಂತ ಕೇಳಿದೆ.
ಗೌತಮಿ & ಕಮಲ್ ಹಾಸನ್

ಆಕಿ ಕ್ಯಾಬರೆ ಮಾಡ್ತಿದ್ದಳು ಕ್ಯಾ? ನಮಗೆ ಕೇವಲ ಐಟಂ ನಂಬರ್ ಮಾಲು ಮಾತ್ರ ನೆನಪ ಇರ್ತಾವೆ, ಅಂದ ಕರೀಂ.

ಇಲ್ಲ. ಅಕಿ ಹೀರೋಯಿನ್ ಇದ್ದಳು. ಐಟಂ ಅಲ್ಲ ಅಕಿ, ಅಂತ ಹೇಳಿದೆ.

ಸಾಬ್, ಈ ಕಿಸ್ ಗೌತಮಿ ಕಥೆ ನಿಮಗೆ ಗೊತ್ತಿಲ್ಲ ಕ್ಯಾ? ಹಾಂ? ಅಂತ ಕೇಳಿದ ಕರೀಮ.

ಏನು ಕಥಿ? ಅಂತ ಕೇಳಿದೆ.

ನೋಡಿ ಸಾಬ್, ಬಹಳ ಹಿಂದೆ ಆದ ಕಥಿ. ಕಿಸ್ಸ ಗೌತಮಿ ಅಂತ ಇದ್ದಳಂತೆ. ಅಕಿ ಕಡೆ ಒಂದು ಬಂದರ್ ಅಂದ್ರೆ ಮಂಗ್ಯಾ ಇತ್ತಂತೆ. ಆ ಮಂಗ್ಯಾ ಚುಮ್ಮಾ ಕೊಡೋದ್ರಲ್ಲಿ ಭಾಳ ಹೋಶಿಯಾರ್ ಇತ್ತಂತೆ. ಹ್ಯಾಂಗೆ ಬೇಕು ಹಾಂಗೆ, ಯಾರಿಗೆ ಬೇಕು ಅವರಿಗೆ, ಎಲ್ಲೆ ಬೇಕು ಅಲ್ಲೆ ಚುಮ್ಮಾ ಕೊಟ್ಟು ಕೊಟ್ಟು ಭಾಳ ಫೇಮಸ್ ಆಗಿ ಬಿಟ್ಟಿತ್ತು ಅಂತೆ, ಅಂತ ಕರೀಮ ಕಥಿ ಶುರು ಮಾಡಿದ.

ಮುಂದ?

ಹೀಗಿದ್ದಾಗ ಒಂದು ದಿವಸ ಆ ಗೌತಮಿಯ ಕಿಸ್ ಮಾಡೋ ಮಂಗ್ಯಾ ಸತ್ತು ಹೋಯಿತು, ಅಂದ ಕರೀಮ.

ಛೆ! ಪಾಪ! ಹತ್ತು ಮಂದಿ ಸತ್ತು ಹೋಗಲಿ. ಆದ್ರ ಕಿಸ್ ಹೊಡಿಯೋ ಮಂಗ್ಯಾ ಸತ್ತು ಹೋತು ಅಂದ್ರ ಭಾಳ ಕೆಟ್ಟಾತು. ಮುಂದ? ಅಂತ ಕೇಳಿದೆ.

ಕಿಸ್ ಗೌತಮಿ ಏನು ಮಾಡಬೇಕು ಅಂತ ತಿಳಿಯದೆ ಅಳತಾ ಕೂತಳು. ಯಾರೋ ಅವರ ರಿಶ್ತೆದಾರ ಬಂದಬಿಟ್ಟಿ, ಅಳಬ್ಯಾಡ, ಒಬ್ಬರು ಸ್ವಾಮಿಜೀ ಇದ್ದಾರೆ. ಅವರ ಕಡೆ ನಿನ್ನ ಸತ್ತ ಮಂಗ್ಯಾ ತೊಗೊಂಡು ಹೋಗು. ಅವರು ನಿನ್ನ ಮಂಗ್ಯಾಗೆ ಜೀವಾ ಮತ್ತೆ ಬರೋ ಹಾಗೆ ಮಾಡ್ತಾರೆ, ಅಂತ ಹೇಳಿ ಆ ಸ್ವಾಮೀಜೀ ಅವರ ಪತಾ ಕೊಟ್ಟರು ಅಂತ ಆತು, ಅಂತ ಹೇಳಿದ ಕರೀಮ.

ಮುಂದ?

ಕಿಸ್ ಗೌತಮಿ ಹೋಗಿ ಸ್ವಾಮೀಜಿ ಅವರನ್ನು ಭೆಟ್ಟಿ ಮಾಡಿದಳು.

ಸ್ವಾಮೀಜೀ ಮುಂಜಾನೆ ನಾಷ್ಟಾಕ್ಕೆ ಏನು ಮಾಡಬೇಕು ಅಂತ ವಿಚಾರ ಮಾಡಿ, ರಾತ್ರಿ ಉಳಿದ ಅನ್ನಕ್ಕೆ ಒಗ್ಗರಿಣಿ ಹಾಕಿ ಬಿಟ್ಟರಾತು ಅಂತ ಒಗ್ಗರಿಣಿಗೆ ರೆಡಿ ಮಾಡಿಕೋತ್ತ ಕೂತಿದ್ದರು. ಆವಾಗ ಅವರಿಗೆ ಒಗ್ಗರಿಣಿ ಹಾಕಲಿಕ್ಕೆ ಸಾಸಿವಿ ಇಲ್ಲ ಅಂತ ಗೊತ್ತಾತು. ಅದೇ ಟೈಮ್ ಗೆ ಕಿಸ್ ಗೌತಮಿ ತನ್ನ ಸತ್ತ ಮಂಗ್ಯಾನ್ನ ತೊಗೊಂಡು ಬಂದಳು.

ಸ್ವಾಮೀಜೀ, ನನ್ನ ಮಂಗ್ಯಾ ಸತ್ತು ಹೋಗಿದೆ. ಬದುಕಿಸಿಕೊಡಿ, ಅಂತ ಕೇಳಿಕೊಂಡಳು ಕಿಸ್ ಗೌತಮಿ.

ನೋಡಮ್ಮಾ, ಹುಟ್ಟು ಸಾವು ಎಲ್ಲ ದೇವರ ಕೈಯಲ್ಲಿ ಇರ್ತದೆ. ನಾವು ಏನೂ ಮಾಡೋಕೆ ಆಗೋದಿಲ್ಲ. ನಿನ್ನ ಮಂಗ್ಯಾನ ಆಯಸ್ಸು ಮುಗಿದಿತ್ತು. ಅದಕ್ಕೇ ಅದು ದೇವರ ಪಾದ ಸೇರಿಕೊಂಡ್ತು. ಬೇರೆ ಮಂಗನಮರಿಯನ್ನು ತಂದುಕೋ ಮಗಳೇ, ಅಂತ ಹೇಳಿದರು ಸ್ವಾಮಿಗಳು.

ಇಲ್ಲಾ ಸ್ವಾಮಿಜೀ, ಇದು ಅಂತಾ ಇಂತಾ ಆರ್ಡಿನರಿ ಮಂಗ್ಯಾ ಅಲ್ಲಾ. ಇದು ಚುಮ್ಮಾ ಅಂದ್ರೆ ಕಿಸ್ ಕೊಡೊ ಮಂಗಾ. ಇದು ಇರೋದಕ್ಕೆ ನನಗೆ ಒಂದು ವಜೂದ್ ಅದೆ ಅಸ್ತಿತ್ವ ಅದೆ. ಇದು ಇಲ್ಲ ಅಂದ್ರೆ ನಾನು ಕಿಸ್ ಗೌತಮಿಯಿಂದ ಬರೆ ಗೌತಮಿ ಆಗಿ ಹೋಗ್ತೇನಿ. ಹಾಂಗಾಗಿ ಈ ಮಂಗ್ಯಾನ್ನ ನೀವು ಬದುಕಿಸಿ ಕೊಡಲೇ ಬೇಕು, ಅಂತ ಕಿಸ್ ಗೌತಮಿ ಹಟಾ ಹಿಡಿದಳು.

ಸ್ವಾಮಿಗಳಿಗೆ ಪೇಚಾಟಕ್ಕೆ ಬಂತು ಈಗ. ಏನು ಮಾಡೋದು?

ನೋಡು ಕಿಸ್ ಗೌತಮಿ, ಒಂದು ಕೆಲಸ ಮಾಡು. ಅದನ್ನ ಮಾಡಿಕೊಂಡು ಬಂದ್ರ ನಾ ನಿನ್ನ ಮಂಗ್ಯಾಗ ಮತ್ತ ಜೀವಾ ತುಂಬಿ ಕೊಡತೇನಿ, ಅಂತ ಅಂದ್ರು ಸ್ವಾಮಿಗಳು.

ಏನು ಕೆಲಸ ಮಾಡಬೇಕು? ಹೇಳ್ರೀ. ನನ್ನ ಕಿಸ್ಸಿಂಗ್ ಮಂಗ್ಯಾನ ಸಲುವಾಗಿ ಏನು ಬೇಕಾದರೂ ಮಾಡಲಿಕ್ಕೆ ನಾನು ತಯಾರ್ ಅಂತ ಹೇಳಿದಳು ಗೌತಮಿ.

ಸ್ವಾಮಿಗಳಿಗೆ ಬ್ಯಾರೆ ಲಗೂನ ಒಗ್ಗರಿಣಿ ಹಾಕಿ, ಒಗ್ಗರಿಣಿ ಅನ್ನ ತಿಂದು ನಾಷ್ಟಾ ಮುಗಿಸಬೇಕಾಗಿತ್ತು. ಸಾಸಿವಿ ಬ್ಯಾರೆ ಇಲ್ಲ. ಸಾಸಿವೆ ಇಲ್ಲದೆ ಹ್ಯಾಂಗ ಒಗ್ಗರಿಣಿ ಹಾಕೋದು? ಅದರಾಗ ಈ ಕಿಸ್ ಗೌತಮಿ ಬ್ಯಾರೆ ತಲಿ ತಿನ್ನಲಿಕ್ಕೆ ಶುರು ಮಾಡ್ಯಾಳ, ಅಂತ ಹೇಳಿ ಒಂದು ಉಪಾಯ ಮಾಡಿದರು.

ನೋಡು ಗೌತಮಿ, ಊರಿಗೆ ಹೋಗಿ ಯಾರದ್ದರ ಮನಿಯಿಂದ ಒಂದು ಮುಷ್ಟಿ ಸಾಸಿವಿ ತೊಗೊಂಡು ಬಾ. ಆದ್ರ ಒಂದು ಕಂಡೀಶನ್. ಕಿಸ್ಸಿಲ್ಲದ ಮನಿಯಿಂದ ಸಾಸಿವಿ ತೊಗೊಂಡು ಬಾ. ಆ ಮನಿಯೊಳಗ ಯಾರೂ, ಯಾರಿಗೂ, ಯಾವತ್ತೂ ಕಿಸ್ಸು ಗಿಸ್ಸು ಅಂತ ಮಾಡಿರಲೇ ಬಾರದು. ಅಂತಾ ಮನಿಂದ ತಂದರೆ ಆ ಸಾಸಿವಿ ಉಪಯೋಗಿಸ್ಕೊಂಡು ನಾನು ನಿನ್ನೆಯ ಅನ್ನಕ್ಕ ಒಗ್ಗರಿಣಿ ಹಾಕ್ಕೋತ್ತೇನಿ ಅಲ್ಲಲ್ಲ ನಿನ್ನ ಮಂಗ್ಯಾಕ್ಕ ಜೀವಾ ಕೊಡತೇನಿ, ಅಂತ ಹೇಳಿದರು.

ಸಾಸಿವೆ ತರಲಿಕ್ಕೆ ಅಂತ ಕಿಸ್ ಗೌತಮಿ ಊರಾಗ ಬಂದಳು.

ಮೊದಲನೇ ಮನಿ ಬಾಗಲಾ ಬಡಿದಳು. ಒಂದು ಮುಷ್ಟಿ ಸಾಸಿವಿ ಕೊಡ್ರೀ, ಅಂತ ಕೇಳಿದಳು. ಬಾಗಿಲಾ ತೆಗೆದಾಕಿ ಇಕಿನ್ನ ವಿಚಿತ್ರ ರೀತಿಯಲ್ಲಿ ನೋಡಿ, ಸಾಸಿವಿ ತಂದು ಕೊಡಲಿಕ್ಕೆ ಒಳಗ ಹೊಂಟಳು. ಗೌತಮಿ, ಏ ಬಾಯಾರ! ಅಂದಳು. ಏನು? ಅಂತ ಬಾಯಾರು ಕೇಳಿದರು. ನಿಮ್ಮನ್ಯಾಗ ಕಿಸ್ ಹೊಡೆಯಂಗಿಲ್ಲ ಹೌದಿಲ್ಲೋ? ಹಾಂ? ಕಿಸ್ ಹೊಡೆಯೋದಿಲ್ಲ ಅಂದ್ರ ಮಾತ್ರ ಸಾಸಿವಿ ಕೊಡ್ರೀ, ಅಂತ ಕೇಳಿದಳು. ಆ  ಮನಿಯಾಕಿ ಗೌತಮಿಯನ್ನ ಹುಚ್ಚರ ಗತೆ ನೋಡಿ ಹುಚ್ಚಿ ಅಂತ ಹೇಳಿ ಓಡಿಸಿ ಬಿಟ್ಟರು.

ಗೌತಮಿ ಸುಮಾರು ಮಂದಿ ಮನಿಗೆ ಹೋದಳು. ಕಿಸ್ ಹೊಡಿಯದವರ ಮನಿ ಒಟ್ಟೇ ಸಿಗಲಿಲ್ಲ. ಸಾಸಿವಿ ಕೂಡ ಸಿಗಲಿಲ್ಲ. ಸಂಸಾರಸ್ತರ ಮನಿಗೆ ಹೋದ್ರ ಉಪಯೋಗಿಲ್ಲ. ಕಿಸ್ ಹೊಡೆದು ಹೊಡೆದೆ ಸಂಸಾರ ನೆಡಸ್ತಿರ್ತಾರ ಅಂತ ಹೇಳಿ ಇನ್ನು ಹಾಸ್ಟೆಲ್ಲಿಗೆ ಹೋಗಿ ನೋಡೋಣ ಅಂತ ಬಾಯ್ಸ್ ಹಾಸ್ಟೆಲ್, ಗರ್ಲ್ಸ್ ಹಾಸ್ಟೆಲ್ಲಿಗೆ ಹೋಗಿ ನೋಡಿದಳು. ಕಾಲ ಕೆಟ್ಟು ಹೋಗಿತ್ತು. ಅಲ್ಲೂ ಎಲ್ಲಾ ಕಡೆ ಎಲ್ಲಾರೂ ಬಿಂದಾಸ್ ಕಿಸ್ ಹೊಡೆಯುವವರೇ. ಕಿಸ್ ಹೊಡೆಯದವರು ಎಲ್ಲೂ ಸಿಗಲೇ ಇಲ್ಲ. ಕಿಸ್ ಇಲ್ಲದ ಮನೆಯಿಂದ ಹೋಗ್ಲಿ ಹಾಸ್ಟೆಲ್ ಅಡಿಗಿ ಮನಿಂದನೂ ಸಾಸಿವೆ ತರೋದು ಸಾಧ್ಯವೇ ಆಗಲಿಲ್ಲ.

ತಪ್ಪೇ  ಮಾಡದವರು ಯಾರವರೆ? ತಪ್ಪೇ ಮಾಡದವರು ಎಲ್ಲವರೇ? ಅನ್ನೋ ಹಾಡನ್ನ ಕಿಸ್ಸೇ ಹೊಡೆಯದವರು ಯಾರವರೆ? ಕಿಸ್ಸೇ ಹೊಡೆಯದವರು ಎಲ್ಲವರೇ? ಅಂತ ಮಠ ಸಿನೆಮಾದ ಹಿಟ್ ಹಾಡನ್ನು ಸ್ವಲ್ಪ ಚೇಂಜ್ ಮಾಡಿಕೊಂಡು ಜಗ್ಗೇಶನ ಗತೆ ಡಾನ್ಸ್ ಮಾಡಿಕೋತ್ತ ವಾಪಸ್ ಬಂದಳು ಕಿಸ್ ಗೌತಮಿ.

ಬರಿಗೈಯಿಂದ ವಾಪಾಸ್ ಸ್ವಾಮಿಗಳ ಕಡೆ ಬಂದಳು ಕಿಸ್ ಗೌತಮಿ.

ಸಿಕ್ಕಿತೇನವಾ ಕಿಸ್ಸಿಲ್ಲದ ಮನೆಯಲ್ಲಿನ ಸಾಸಿವಿ? ಅಂತ ಸ್ವಾಮಿಗಳು ಕೇಳಿದರು.

ಎಲ್ಲಿದ ಹಚ್ಚೀರಿ? ಕಿಸ್ಸಿಲ್ಲದ ಮನಿ ಅಂತೂ ಇಲ್ಲೇ ಇಲ್ಲ. ಹಾಸ್ಟೆಲ್ ನೋಡಿದರ ಅಲ್ಲೂ ಎಲ್ಲಾ ಕಿಸ್ಸಿಂಗ್ ಕಿಡಿಗೇಡಿಗಳೇ ತುಂಬಿ ಬಿಟ್ಟಾರ. ಎಲ್ಲಿಂದ ಸಾಸಿವಿ ತರಲೀ? ಅಂತ ಕಿಸ್ ಗೌತಮಿ ಅಲವತ್ತುಕೊಂಡಳು.

ಕಿಸ್ಸಿಲ್ಲದ ಮನೆ ಹೇಗೆ ಇಲ್ಲವೋ ಹಾಗೆ ಸಾವು ತಾಯಿ. ಎಲ್ಲರಿಗೂ ಬಂದೇ ಬರುತ್ತದೆ. ನನಗೆ ಮೊದಲೇ ಗೊತ್ತಿತ್ತು ನೀನು ಸಾಸಿವೆ ತರಲು ಸಾಧ್ಯವೇ ಇಲ್ಲ ಅಂತ. ಕಿಸ್ಸಿಲ್ಲದ ಮನೆಯಿಂದ ಸಾಸಿವೆ ತರುವದು ಹೇಗೆ ಅಸಾಧ್ಯವೋ ಅದೇ ರೀತಿ ಸತ್ತವರನ್ನು ಬದುಕಿಸುವದೂ ಸಹ ಅಸಾಧ್ಯ ಗೌತಮೀ, ಅಂತ ಸ್ವಾಮಿಗಳು ಕುಟ್ಟಿದರು.

ಗೌತಮಿಗೆ ಈಗ ತಿಳಿಯಿತು. ಮಂಗ್ಯಾಂದು ಹೆಣಾಗೆ ದಫನ್ ಮಾಡಿ ಬಂದಳು. ಕಿಸ್ ಗೌತಮಿಯಿಂದ ಸಾದಾ ಗೌತಮಿಯಾಗಿ ಸ್ವಾಮಿಗಳ ಸೇವೆ ಮಾಡಿಕೊಂಡು ಇದ್ದಳು.

ಅಂತ ಹೇಳಿ ಕರೀಮಾ ಕಥಿ ಹೇಳಿ ಮುಗಿಸಿದ.

ಎಲ್ಲೋ ಈ ಕಥಿ ಕೇಳಿದ ನೆನಪು. ಎಲ್ಲೆ ಕೇಳಿದ್ದೆ? ಕಥಿ ಏನೋ ಸ್ವಲ್ಪ ಬ್ಯಾರೆ ಇತ್ತಲ್ಲಾ? ಅಂತ ವಿಚಾರ ಬಂತು.

ಅಲ್ಲಲೇ ಸಾಬಾ, ಸ್ವಾಮಿಗಳು ಅವರ ಒಗ್ಗರಿಣಿಗೆ ಸಾಸಿವಿ ಬೇಕು ಅಂತ ಕಿಸ್ ಗೌತಮಿಗೆ ಸಾಸಿವಿ ತೊಗೊಂಡು ಬಾ ಅಂತ ಹೇಳಿ ಕಳಿಸಿದರು. ಕಿಸ್ಸಿಲ್ಲದ ಮನಿಯಿಂದ ತೊಗೊಂಡು ಬಾ ಅಂತ ಯಾಕ ಹೇಳಿದರು? ಅವರಿಗೆ ಸಾಸಿವಿ ಅಂತೂ ಸಿಗಲಿಲ್ಲ. ಒಗ್ಗರಣಿ ಅನ್ನ ಹ್ಯಾಂಗ ಮಾಡಿಕೊಂಡರು? ಅಂತ ಕೇಳಿದೆ.

ಆವತ್ತು ಸಾಸಿವಿ ಇಲ್ಲದೇನೆ ಒಗ್ಗರಿಣಿ ಅನ್ನ ಮಾಡಿಕೊಂಡು ತಿಂದರು ಅಂತ ಕಾಣ್ತದೆ. ಅಲ್ಲಿ ಮೇನ್ ಪಾಯಿಂಟ್ ಅಂದ್ರೆ ಗೌತಮಿಗೆ ಪಾಠ ಕಲಿಸೋದು ಆಗಿತ್ತು, ಅಂತ ಕರೀಂ ಹೇಳಿದ.

ಅಲ್ಲಲೇ ಸಾಬಾ, ಇದು ಯಾವದೋ ಕಾಲದ ಕಥಿ ಅಂತಿ. ಮತ್ತ ಕಿಸ್ ಗೌತಮಿ ಕಿಸ್ಸಿಂಗ್ ಮಂಗ್ಯಾ ಸತ್ತು ಹೋತು, ಅದಕ್ಕ ಮರುಜೀವ ಬರಲಿಲ್ಲ ಅಂತೀ. ಹಂಗಿದ್ದಾಗ ರೂಪಾ ವೈನಿಗೆ ಕಿಸ್ ಕೊಟ್ಟ ಮಂಗ್ಯಾ ಅದೆಂಗ ಕಿಸ್ ಗೌತಮಿ ಮಂಗ್ಯಾ ಆಗ್ತದ? ಹಾಂ? ಏನೇನರೆ ಹೇಳಿಕೋತ್ತ. ಹುಚ್ಚನ ತಂದು, ಅಂತ ಹೇಳಿದೆ.

ಅಲ್ಲಾ ಸಾಬ್, ಇಮ್ರಾನ್ ಹಶ್ಮಿ ಭಾಯಿಜಾನ್ ಸಿಕ್ಕಾಪಟ್ಟೆ ಚುಮ್ಮಾಗೆ ಕೊಡ್ತಾರೆ ಅಂತ ಅಂದು ಬಿಟ್ಟಿ, ರೂಪಾ ಬಾಭಿಗೆ ಚುಮ್ಮಾ ಕೊಟ್ಟ ಮಂಗ್ಯಾ ಇಮ್ರಾನ್ ಅವರದ್ದು ಅಂತ ಹೇಗೆ ಅಂದ್ರೀ ನೋಡಿ, ನಾನೂ ಹಾಗೆ ಏನೋ ಒಂದು ಕಟ್ಟು ಕಹಾನಿ ಹೇಳಿದೆ. ಅಷ್ಟೇ. ಹೇ!ಹೇ! ಅಂತ ಹೇಳಿ ಕರೀಂ ಗಫಾ ಹೊಡೆದ.

ಮಂಗೇಶ!! ಅಂತ ಚೀಪ್ಯಾ ಏನೋ ಫ್ಲಾಶ್ ಆದವರ ಹಾಂಗ ಚೀರಿದ.

ಏನಾತಲೇ ಚೀಪ್ಯಾ? ಅಂತ ಕೇಳಿದೆ.

ಈ ಕರೀಮ ಹೇಳಿದ್ದು ಬುದ್ಧನ ಜಾತಕ ಕಥಿ ಇದ್ದಂಗ ಇಲ್ಲ? ಅಂತ ಒಂದು ಹುಳ ಬಿಟ್ಟ.

ಹೌದ ನೋಡಲೇ ಚೀಪ್ಯಾ! ಬರೋಬ್ಬರಿ! ಅದರಾಗ ಕಿಸಾ ಗೋತಮಿ ಅಂತ ಬರ್ತಾಳ. ಈ ಸಾಬಾ ಪಕ್ಕಾ ಹಾಪ್ ನೋಡಲೇ. ಕಥಿ ತಪ್ಪ ತಪ್ಪ ನೆನಪ ಇಟ್ಟಾನ. ಅದರಾಗ ಕಿಸಾ ಗೋತಮಿ ಮಗ ಸತ್ತು ಹೋಗ್ತಾನ. ಅಕಿ ಬುದ್ಧನ ಕಡೆ ಬಂದು ತನ್ನ ಮಗನ್ನ ಬದುಕಿಸಿ ಕೊಡು ಅಂತಾಳ. ಬುದ್ಧ ಆಗಂಗಿಲ್ಲವಾ ಅಂತಾನ. ಇಕಿ ಕಿಸಾ ಗೋತಮಿ ಒಪ್ಪಂಗಿಲ್ಲ. ಆವಾಗ ಅಕಿಗೆ ಸಾವಿಲ್ಲದ ಮನೆಯಿಂದ ಒಂದಿಷ್ಟು ಸಾಸಿವೆ ತೊಗೊಂಡು ಬಾ ಅಂತ ಬುದ್ಧ ಹೇಳ್ತಾನ. ಇಕಿ ಹೋಗಿ ಸಾವಿಲ್ಲದ ಮನಿ ಹುಡಕತಾಳ. ಒಟ್ಟೇ ಸಿಗಂಗಿಲ್ಲ. ವಾಪಸ್ ಬರ್ತಾಳ. ಆಮೇಲೆ ಬುದ್ಧನ ಶಿಷ್ಯಾ ಆಗಿ ಇರ್ತಾಳ. ಈ ಕಥಿ ಹೌದಿಲ್ಲೋ? ಈ ಸಾಬಾ ಫುಲ್ ತಪ್ಪ ಹೇಳ್ಯಾನ ನೋಡಲೇ. ಹಾ!!! ಹಾ!! ಏನ ಇದ್ದಾನಲೇ ಈ ಕರೀಮಾ? ಅಂತ ಬಿದ್ದು ಬಿದ್ದು ನಕ್ಕಿವಿ.

ಕ್ಯಾ ಸಾಬ್? ಕ್ಯಾ ಚೀಪ್ಯಾ ಭಾಯಿ? ಏನಾಯಿತು? ಯಾಕೆ ನಗ್ತಾರೆ ನೀವು? ಅಂತ ಕೇಳಿದ ಕರೀಮಾ.

ಏ....ಕರೀಮ, ಈ ಕಿಸ್ ಗೌತಮಿ ಕಥಿ ಎಲ್ಲೆ ಕೇಳಿದ್ದಿ ಅಥವಾ ಓದಿದ್ದಿ ನೀನು? ಹಾಂ? ಅಂತ ಕೇಳಿದೆ.

ಸಾಬ್ ಅದು ನಮ್ಮ ಸ್ಕೂಲ್ syllabus ನಲ್ಲಿ ಇತ್ತು ಅಲ್ಲಾ? ಕನ್ನಡ ಸಬ್ಜೆಕ್ಟ್ ನಲ್ಲಿ ಇತ್ತು ಅಲ್ಲಾ? ಅಂತ ಕೇಳಿದ.

ಸಾಬ್ರಾ....ನೀವು ಆ ಕಥಿ ತಪ್ಪ ತಪ್ಪ ನೆನಪ ಇಟ್ಟೀರಿ ನೋಡ್ರೀ. ಕಿಸಾ ಗೋತಮಿ ಅಂತ ಇದ್ದಿದ್ದನ್ನ ಕಿಸ್ ಗೌತಮಿ ಅಂತ ಓದಿಕೊಂಡೀರಿ. ಕಿಸಾ ಗೋತಮಿ ಸತ್ತ ಮಗನನ್ನು ತಂದಳು ಅನ್ನೋದನ್ನ ನೀವು ಸತ್ತ ಮಂಗನನ್ನು ತಂದಳು ಅಂತ ಓದಿಕೊಂಡುಬಿಟ್ಟೀರಿ. ಮಗ ಮತ್ತ ಮಂಗ ನಡುವೆ ಬರೆ ಒಂದು ಅಂ ಫರಕ್ ನೋಡ್ರೀ. ಜಾಸ್ತಿ ಫರಕ್ ಇಲ್ಲ. ತಪ್ಪು ನಿಮ್ಮದಲ್ಲ. ತಪ್ಪು ಕನ್ನಡ ಭಾಷಾದ್ದು. ಮಂಗ ಮತ್ತ ಮಗನ ನಡುವೆ ಬರೆ ಒಂದು ಪೂಜಿ ಫರಕ್. ಆ ಮ್ಯಾಲೆ ಮತ್ತೊಂದು ಅಂದ್ರ ಆ ಕಥಿ ಭಾಳ ಹಳೇದು. ನಿಮಗ ಮರ್ತು ಹೋಗ್ಯದ. ಮತ್ತ ಈಗ ಮಂಗ್ಯಾ, ಕಿಸ್ಸು ಅದು ಇದು ಅಂದು ನಿಮಗ full confuse ಆಗಿ ಕಿಸ್ ಗೌತಮಿ, ಅಕಿ ಕಿಸ್ಸಿಂಗ್ ಮಂಗ್ಯಾ ಅಂತ ಏನೇನೋ ಹೇಳಿ ಬಿಟ್ಟಿರಿ. ಆದರೂ ಭಾಳ ಮಜಾ ಬಂತು. ಮತ್ತ ಅಕಿ ಗೋತಮಿ ಹೋಗಿದ್ದು ಅಂತಿಂತ ಸ್ವಾಮಿಗಳ ಕಡೆ ಅಲ್ಲ. ಬುದ್ಧ.....ಬುದ್ಧ....ಗೌತಮ ಬುದ್ಧನ ಕಡೆ. ತಿಳೀತಾ? ಬೌದ್ಧರ ಮುಂದ ಮಾತ್ರ ಹೀಂಗ ಈ ಕಥಿ ಹೇಳಬ್ಯಾಡ್ರೀ. ಓಕೆ? ಅಂತ ಕರೀಮಗ ತಿಳಿಸಿ ಹೇಳಿದೆ.

ಕಿಸಾ ಗೋತಮಿ

ಕೌನ್ ಬುಡ್ಡಾ? ಯಾರು ಮುದಕಾ ಸಾಬ್? ಅಂತ ಕೇಳಿಬಿಟ್ಟ ಕರೀಂ. ಹೋಗ್ಗೋ!!!

ಬುದ್ಧಾ ಅಂದ್ರ ಬುಡ್ಡಾ ಅನ್ನೋ ಸಾಬಂಗ ಇನ್ನೆಲ್ಲಿ ಏನಂತ ಹೇಳಲಿ?

ಅಷ್ಟರಾಗ ಚೀಪ್ಯಾ ಹೋಗಬೇಕು ಅಂದಾ. ಕರೀಮ ಇನ್ನೊಂದು ಪಾನ್, ನನಗ ಡ್ರೈ ಮಾವಾ ಕಟ್ಟಿಸಲಿಕ್ಕೆ ಹೋದ.

ರೂಪಾ ವೈನಿಗೆ ಕಿಸ್ ಹೊಡೆದು, ಕಡಿದು ಹೋದ ಮಂಗ್ಯಾದ ರಹಸ್ಯ ಮಾತ್ರ ಬಗೆಹರಿಲಿಲ್ಲ. ಚಿದಂಬರ ರಹಸ್ಯ.

Friday, January 24, 2014

'ಭಾವ'ಚಿತ್ರದಿಂದಾದ ಭಾನಗಡಿ.....passport ಪುರಾಣ (ಭಾಗ - ೩)

(ಈ ಧಾರಾವಾಹಿಯ ಮೊದಲಿನ ಭಾಗ - ೧, ಭಾಗ -೨ ಇಲ್ಲಿವೆ. ಓದಿ)

(ಇಲ್ಲಿಯವರೆಗೆ......ಆಧಾರ್ ಕಾರ್ಡೂ ಇಲ್ಲದೆ, ಎಲೆಕ್ಷನ್ ಕಾರ್ಡೂ ಇಲ್ಲದೆ ಒಂದು ತರಹದಲ್ಲಿ ಐಡೆಂಟಿಟಿ ಕಳೆದುಕೊಂಡಿದ್ದ ರೂಪಾ ವೈನಿ passport ಮಾಡಿಸಿಬಿಡೋಣ ಅಂತ ಹೊಂಟರು. passport ಅರ್ಜಿಯೊಳಗೆ ತಮ್ಮದು ಬಿಟ್ಟು ಬ್ಯಾರೆ ಯಾರದ್ದೋ ಭಾವಚಿತ್ರ ಹಚ್ಚಿ ಮಸ್ಕಿರಿ ಮಾಡುತ್ತಿದ್ದಾರೆ ಅಂತ ಹೇಳಿ ಅವರನ್ನ ವಿಚಾರಿಸಿಕೊಳ್ಳಲಿಕ್ಕೆ ಧಾರವಾಡದ ಖತರ್ನಾಕ್ ಮಂಗ್ಯಾ ಎನ್ಕೌಂಟರ್ ಸ್ಪೆಷಲಿಸ್ಟ್ ಇನಸ್ಪೆಕ್ಟರ್ ಖಲಸ್ಕರ್ ಬಂದು ಬಿಟ್ಟ. ಅವನನ್ನು ನೋಡಿ, ಆವಾ ಹಾಕುವ ಧಮಕಿಗೆ ಹೆದರಿ ರೂಪಾ ವೈನಿ, ಚೀಪ್ಯಾ ಎಲ್ಲಾ ಫುಲ್ ಥಂಡಾ ಹೊಡೆದು, ನನಗ ಬಂದು ಹ್ಯಾಂಗರ ಮಾಡಿ ಪೊಲೀಸನ ಪೀಡೆಯಿಂದ ಪಾರು ಮಾಡು ಅಂತ ಕೇಳಿಕೊಂಡರು. ನೋಡೋಣ ಏನಾಗ್ಯದ ಅಂತ ಚೀಪ್ಯಾನ ಮನಿ ಕಡೆ ಹೊಂಟೆ. ಮುಂದೇನಾತು? ಓದಿ)

ಚೀಪ್ಯಾನ ಮನಿಗೆ ಬಂದು ಮುಟ್ಟಿದೆ. ಮಂಗ್ಯಾ ಎನ್ಕೌಂಟರ್ ಸ್ಪೆಷಲಿಸ್ಟ್ ಖಲಸ್ಕರ್ ನನ್ನ ನೋಡಿ, ನೀವೇ ಏನ ನಮ್ಮ SP ಸಾಹೇಬರ ಹೆಂಡತಿ ಗುರು? ಅನ್ನೋ ಹಾಂಗ ನೋಡಿದ. ಯಾಕ? ಇರಬಾರದೇನು? ಅನ್ನೋ ಲುಕ್ ಕೊಟ್ಟೆ. ಏನೂ ತೊಂದ್ರಿ ಇಲ್ಲರಿ, ಅನ್ನೋ conciliatory ಲುಕ್ ಕೊಟ್ಟು ಸುಮ್ಮನಾದ.

ರೂಪಾ ವೈನಿಯಂತೂ ನನ್ನ ನೋಡಿದ್ದೇ ನೋಡಿದ್ದು, ಬಂದೆಯಾ ಬಾಳಿನ ಬೆಳಕಾಗಿ, ನನಗಾಗಿ, ನನ್ನ passport ಲಫಡಾಕ್ಕಾಗಿ? ಅಂತ ಹಾಡಿ, ಭಗವಂತನನ್ನೇ ಕಂಡರೋ ಅನ್ನವರ ಹಾಂಗ, ಬಂದ್ಯಾ ಮಂಗೇಶಾ? ಬಂದೀ? ಬಂದೀ? ನೀನೇ ಬಂದೀ? ನಮ್ಮಪ್ಪಾ ನೀನೇ ಬಂದ್ಯಾ? ಬಾರೋ ಬಾರೋ. ಈ passport ಪೋಲಿಸ್ ಲಫಡಾದಿಂದ ಪಾರು ಮಾಡೋ. ಎಲ್ಲಾ ನಿನ್ನ ಕೈಯ್ಯಾಗ, ಅಂತ ಹೇಳಿ ವೈನಿ ನೀರಾಳ ಆಗಿಬಿಟ್ಟರು. ಚೀಪ್ಯಾ ಸಹಿತ ಅದೇ ಲುಕ್ ಕೊಟ್ಟ.

ತಡ್ರೀ ವೈನಿ. ನೋಡೋಣ ಏನು ಪ್ರಾಬ್ಲಮ್ ಅದ ಅಂತ. ಯಾಕಷ್ಟು ತಲಿ ಕೆಡಿಸ್ಕೋತ್ತೀರಿ? ಹಂಗೆಲ್ಲಾ ಬೇಕಬೇಕಾದವರನ್ನ ಜೈಲಿಗೆ ಒಗಿಲಿಕ್ಕೆ ಆಗಂಗಿಲ್ಲ. ತಿಳೀತ? ಎಲ್ಲಾದಕ್ಕೂ ಒಂದು solution ಇದ್ದೇ ಇರ್ತದ, ಅಂತ ಹೇಳಿ ಪೋಲೀಸರ ಹೆದರಿಕೆಯಿಂದ ಸಿಕ್ಕಾಪಟ್ಟೆ excite ಆಗಿದ್ದ ವೈನಿಯನ್ನು ಸಮಾಧಾನ ಮಾಡಿದೆ.

ಖಲಸ್ಕರ್ ಸಾಹೇಬ್ರ, ಏನ್ರೀ ತೊಂದ್ರೀ? ಏನಾಗ್ಯದ ನಮ್ಮ ರೂಪಾ ವೈನಿ ಕಳಿಸಿದ passport ಅರ್ಜಿ ಒಳಗ? ನಿಮ್ಮಂತ ದೊಡ್ಡ ಆಫೀಸರ್ ಖುದ್ದ ಏನು ಇಷ್ಟು ದೂರ ಬಂದು ಬಿಟ್ಟಿರಿ? ಇವೆಲ್ಲ ಸಣ್ಣ ಕೆಲಸಕ್ಕ ನಿಮ್ಮ ದಫೆದಾರನನ್ನೋ, ಪೋಲೀಸ್ ಪ್ಯಾದಿನೋ ಕಳಿಸಿದ್ದರ ಆಗಿತ್ತಲ್ಲ? ಹಾಂ? - ಅಂತ ಕೇಳಿದೆ.

ಏನು ಭಾನಗಡಿ ಮಾಡಿಕೊಂಡು ಕೂತಾರ ನೋಡ್ರೀ, ಅಂತ ಹೇಳಿ ರೂಪಾ ವೈನಿ passport ಅರ್ಜಿ ನನ್ನ ಕೈಯ್ಯಾಗ ಇಟ್ಟ ಪೋಲಿಸ್ ಸಾಹೇಬ.

ಏನು? ಅಂತ ಕೇಳಿದೆ.

ಹಚ್ಚಿದ ಫೋಟೋ ನೋಡ್ರೀ. ನೋಡ್ರೀ, ಅಂತ ಅಂದ ಖಲಸ್ಕರ್.

ಯಾರ ಫೋಟೋ ಬಂದದ? ಅನಕೋತ್ತ passport ಅರ್ಜಿ ಒಳಗ ಹಚ್ಚಿದ್ದ ಫೋಟೋ ನೋಡಿದೆ.

ಹಾಂ!!! ಅಂತ ಚೀತ್ಕಾರ ಮಾಡಿದೆ. ಮಾಡಿಕೊಂಡೇ ಇದ್ದೆ. ಖಲಸ್ಕರ್ ಬಂದು ಮಾರಿ ಮುಂದ ಕೈಯಾಡಿಸಿ, ಎಚ್ಚರ ತಪ್ಪಿ ಬಿದ್ದರೇನ್ರೀ ಸರ್ರಾ? ಅನ್ನೋ ತನಕಾ ನಾನು ಆದ ಶಾಕಿನಿಂದ ಹೊರಗ ಬಂದಿದ್ದಿಲ್ಲ.

ವೈನಿ!!!!! ಯಾರ ಫೋಟೋ ಹಚ್ಚಿ ಕಳಿಸೀರಿ? ಯಾರ ಫೋಟೋ ಇದು? - ಅಂತ ಚೀರಿ ಕೇಳಿದೆ.

ನನಗೂ ಗೊತ್ತಿಲ್ಲೋ ಇದು ಯಾರ ಫೋಟೋ ಅಂತ. ಇಲ್ಲೆ ಹ್ಯಾಂಗ ಬಂತು ಅಂತೂ ಗೊತ್ತಿಲ್ಲ, ಅಂತ ತಣ್ಣಗ ಹೇಳಿಬಿಟ್ಟರು ವೈನಿ.

ಹೋಗ್ಗೋ!!!

ಏನಂತ ಮಾತಾಡ್ಲೀಕತ್ತೀರಿ ವೈನಿ? ಏನಾಗ್ಯದ ನಿಮಗ? ನಿಮ್ಮ passport ಅರ್ಜಿ, ನೀವೇ ಫೋಟೋ ಹಚ್ಚಿದವರು, ನೀವೇ ಕಳಿಸಿದವರು, ಈಗ ಇಲ್ಲೆ ಇರುವ ಫೋಟೋ ಯಾರದ್ದು ಅಂತ ಗೊತ್ತಿಲ್ಲ ಅಂದ್ರ ಹೆಂಗ್ರೀ? ಹಾಂ? ಹಾಂ? - ಅಂತ ಜೋರ ಮಾಡಿ ಕೇಳಿದೆ.

ಏ...ಬೈಬ್ಯಾಡೋ....ನನಗ ಖರೇನ ಗೊತ್ತಿಲ್ಲ. ಇದು ಯಾರ ಫೋಟೋ ಅಂತ, ವೈನಿ ಕೊಂಯ್ ಅಂದ್ರು.

ಆದ್ರ ಒಂದು ಮಾತ್ರ ಹೇಳತೇನಿ.  ಇದು ನಮ್ಮ 'ಭಾವಚಿತ್ರ' ಅಂತೂ ಅಲ್ಲೇ ಅಲ್ಲ, ಅಂತ ಹೇಳಿದರು ವೈನಿ.

ನೋಡ! ನೋಡ! ಮಾತಾಡೋ ರೀತಿ ನೋಡ!ರೀ...ವೈನಿ....ನಮಗೂ ಗೊತ್ತದರಿ ಇದು ನಿಮ್ಮ ಭಾವಚಿತ್ರ ಅಲ್ಲ ಅಂತ. ಅದಕ್ಕ ಇಷ್ಟು ದೊಡ್ಡ ಲಫಡಾ ಆಗಿ ಕೂತಿದ್ದು. ಏನೋ ಹೇಳ್ತಾರಂದ್ರ, ಗೊತ್ತಿದ್ದಿದ್ದೆ ಹೇಳ್ತಾರ. ಆ.....ಆ.....ನಿಮ್ಮ ತಂದು! ಅಂತ ನನ್ನ frustration ತೋರ್ಸಿದೆ.

ನಿನಗ್ಯಾಂಗ ಗೊತ್ತೋ ಮಂಗೇಶ? ನೀ ಎಲ್ಲೆ ನಮ್ಮ ಭಾವನ್ನ ನೋಡೀ? ಅವರನ್ನ ನೋಡಿಲ್ಲ ಬಿಟ್ಟಿಲ್ಲ. ನಿನಗ್ಯಾಂಗ ಗೊತ್ತಾಗಬೇಕು ನಮ್ಮ ಭಾವನ ಚಿತ್ರ ಯಾವದು ಅಂತ? ಆದ್ರ ಇದು ನಮ್ಮ ಭಾವನ ಚಿತ್ರ ಮಾತ್ರ ಅಲ್ಲೇ ಅಲ್ಲ, ಅಂತ ವೈನಿ ದೊಡ್ಡ ಬಾಂಬ್ ಹಾಕಿ ಬಿಟ್ಟರು.

ವೈನಿ ಏನಂದ್ರೀ? ಯಾರ ಫೋಟೋ? ಭಾವಚಿತ್ರ ಅಂದರೇನು ನಿಮ್ಮ ಪ್ರಕಾರ? ಹಾಂ? - ಅಂತ ಕೇಳಿದೆ. ಕನಸೋ ನನಸೋ.

ಭಾವಚಿತ್ರ ಅಂದ್ರ ಭಾವನ ಚಿತ್ರ ಹೌದಿಲ್ಲೋ? ಭಾವ ಅಂದ್ರ ಅಕ್ಕನ ಗಂಡ, ತಂಗಿ ಗಂಡ. ಇಂಗ್ಲಿಷ್ ಒಳಗ ಬ್ರದರ್-ಇನ್-ಲಾ ಹೌದಿಲ್ಲೋ? ಭಾವಚಿತ್ರ ಅಂದ್ರ ಭಾವನ ಫೋಟೋ ಹೌದಿಲ್ಲೋ? ಅವತ್ತೇ ನಿನ್ನ ಕಡೆ ಕೇಳಬೇಕು ಅಂತ ಮಾಡಿದ್ದೆ. ನಮ್ಮ passport ಅರ್ಜಿ ಒಳಗ ಭಾವನ ಚಿತ್ರ ಹಚ್ಚಿರಿ ಅಂತ ಯಾಕ ಕೇಳ್ತಾರ? ಕೇಳಿದ್ರ ಅಪ್ಪನ ಚಿತ್ರ ಅಥವಾ ಗಂಡನ ಚಿತ್ರ ಕೇಳಬೇಕು. ಅದನ್ನ ಬಿಟ್ಟು ಭಾವನ ಚಿತ್ರ ಹಚ್ಚಿರಿ ಅಂದ್ರ ಹ್ಯಾಂಗ? ನನಗ ಭಾವ ಇದ್ದಾರ ಓಕೆ. ಒಬ್ಬರಲ್ಲ ನಾಕು ಮಂದಿ ಭಾವಂದಿರು ಇದ್ದಾರ. ಭಾವಚಿತ್ರ ತಂದು ಹಚ್ಚತೇನಿ. ಭಾವ ಇಲ್ಲದವರು ಯಾರ ಚಿತ್ರ ತಂದು ಹಚ್ಚಬೇಕೋ? ವಿಚಿತ್ರ ನಿಯಮ ನೋಡು ಈ ಸರ್ಕಾರದ್ದು, ಅಂತ ಅಂದು ಬಿಟ್ಟರು ವೈನಿ.

ಅಕ್ಕನ ಗಂಡ ಭಾವ ಅಂತ. ಅವನ ಚಿತ್ರ ಭಾವಚಿತ್ರ ಅಂತ! ಹಾಕ್ಕ! ಹಾಕ್ಕೊಂಡು ಹಾಕ್ಕ!

ವೈನಿ! ಅದ್ಭುತ! ಅತಿ ಅದ್ಭುತ! ಏನ ತಲೀರಿ ನಿಮ್ಮದು? ಭಾವಚಿತ್ರ ಅಂದ್ರ ಭಾವನ ಚಿತ್ರ ಅಂತ ಯಾರು ಹೇಳಿದರು ನಿಮಗ? ಹಾಂ? - ಅಂತ ಕೇಳಿದೆ.

ಯಾರು ಯಾಕ ಹೇಳಬೇಕೋ? ಭಾವ, ಚಿತ್ರ ಎರಡು ಶಬ್ದ ನನಗ ಗೊತ್ತಿಲ್ಲೇನು? ಹಾಂ? ಏನಂತ ಮಾತಾಡ್ತೀ? - ಅಂತ ನನಗ ರಿವರ್ಸ್ ಬಾರಿಸಿದರು.

ಹಾಂಗಿದ್ದರ ಭಾವಗೀತೆ ಅಂದ್ರ ಏನೋ ನಿಮ್ಮ ಪ್ರಕಾರ? - ಅಂತ ಕೇಳಿದೆ. ವ್ಯಂಗ್ಯ ಅವರಿಗೆ ತಿಳಿಲಿಲ್ಲ.

ಭಾವಗೀತೆ ಅಂದ್ರ ಏನು? ಭಾವ ಹಾಡುವ ಗೀತೆಯೇನು? ಅಥವಾ ಭಾವನಿಗಾಗಿ ಹಾಡುವ ಗೀತೆಯೋ? ಎರಡರೊಳಗ ಒಂದು. ಅಲ್ಲ? ಅಂತ ಕೇಳಿಬಿಟ್ಟರು ವೈನಿ.

ಭಾವನಿಗಾಗಿ ಹಾಡುವ ಗೀತೆಯೇ ಭಾವಗೀತೆ. ವಾಹ್! ಏನು ಮಸ್ತರೀ ವೈನಿ? ನೀವು ಯಾವದು ಹಾಡಾ ಹಾಡತಿದ್ದಿರಿ ನಿಮ್ಮ ಭಾವನ ಸಲುವಾಗಿ? ಹಾಂ? - ಅಂತ ಕೇಳಿದೆ.

ಬ್ಯಾರೆ ಬ್ಯಾರೆ ಭಾವಂದ್ರಿಗೆ ಬ್ಯಾರೆ ಬ್ಯಾರೆ ಹಾಡು. ಕೆಲೊ ಮಂದಿ ಭಾವಂದ್ರಿಗೆ ಶಾಸ್ತ್ರೀಯ ಸಂಗೀತ, ಕೆಲೊ ಮಂದಿಗೆ ಐಟಂ ಸಾಂಗ್. ಹೀಂಗ ಬ್ಯಾರೆ ಬ್ಯಾರೆ. ಭಾಳ ಹಾಡಾ 'ಭಾವ'ಗೀತೆ ಹಾಂಗ ಹಾಡಿ ಬಿಟ್ಟೇನಿ, ಅಂದು ಬಿಟ್ಟರು ವೈನಿ. ಅವರಿಗೆ ಒಟ್ಟ ತಿಳಿವಲ್ಲತು.

ವೆರಿ ಗುಡ್ ವೈನೀ ವೆರಿ ಗುಡ್! ಭಾಳ ಶಾಣ್ಯಾ ಇದ್ದೀರಿ. ನನಗ ಈಗ ಗೊತ್ತಾತು. ಈಗ ನೆನಪಾತು. ಆವತ್ತು ನಾ ನಿಮ್ಮ ಅರ್ಜಿ ತುಂಬಿ ಕೊಟ್ಟು, ಭಾವಚಿತ್ರ ಹಚ್ಚಿ ಕಳಿಸಿರಿ ಅಂದಾಗ, ನೀವು, ಭಾವಾ....ಚಿತ್ರಾ.....ಅಂತ ಎಳೆದೆಳೆದು ಕೇಳಿದ್ದು. ಅಚ್ಚಾ ಹೈ! ಬಹುತ್ ಅಚ್ಚಾ ಹೈ! ಅಂತ ಹೇಳಿ ನಾನಾ ಪಾಟೇಕರ್ ಗತೆ ತಲಿ ಸುತ್ತಾ ಹುಚ್ಚನ ಗತೆ ಕೈ ರೌಂಡ್ ರೌಂಡ್ ತಿರುಗಿಸಿದೆ.

ಮಂಗೇಶ....ಇನ್ನೊಂದು ಮಾತು, ಅಂತ ಹೇಳಿ ವೈನಿ ನಿಲ್ಲಿಸಿದರು.

ಏನ್ರೀ? ಅಂತ ಕೇಳಿದೆ.

ಮತ್ತ....ಮತ್ತ....'ಎಡಕಲ್ಲು ಗುಡ್ಡದ ಮೇಲೆ' ಸಿನೆಮಾದಾಗ ಒಂದು ಹಾಡು ಅದ. ನೆನಪ ಅದ? - ಅಂತ ವೈನಿ ಕೇಳಿದರು.

ಯಾವ ಹಾಡ್ರೀ? - ಅಂತ ಕೇಳಿದೆ.

ಅದನೋ....ವಿರಹಾ ನೂರು ನೂರು ತರಹ. ವಿರಹಾ ಪ್ರೇಮ ಕಾವ್ಯದ ಕಹಿ ಬರಹ. ವಿರಹಾ...... ಆ ಹಾಡು. ನೆನಪ ಅದ? - ಅಂತ ಕೇಳಿದರು. ಇಲ್ಲೆ ಪೊಲೀಸರು ಬಂದು ಬೆಂಡ್ ಎತ್ತಲಿಕತ್ಯಾರ. ಇಂತಾದ್ರಾಗ ಮಸ್ಕಿರಿ ನೋಡು!

ಈಗೇನು? ಹ್ಞೂ...ನೆನಪ ಅದರೀ. ಈಗ್ಯಾಕ ಅದು? ಹಾಂ? - ಅಂತ ಸ್ವಲ್ಪ ಅಸಹನೆಯಿಂದ ಕೇಳಿದೆ.

ಅದರೊಳಗ ಒಂದು ಲೈನ್ ಬರ್ತದ ನೋಡು. 'ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ, ಪ್ರೇಮಾಂತರಂಗದಲ್ಲಿ ಏನೇನೊ ಕೋಲಾಹಲ' ಅಂತ. ನಮ್ಮ ಭಾವಂಗ ಆ ಹಾಡು ಅಂದ್ರ ಭಾಳ ಪ್ರೀತಿ. ಅವರಿಗಾಗಿ ನಾ ಹಾಡುತ್ತಿದ್ದ ಭಾವಗೀತೆ ಅಂದ್ರ ಅದ ನೋಡು. 'ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ' ಅಂತ ಬಂದ ಕೂಡಲೇ ಅವರಿಗೆ ಖರೆ ಅಂದ್ರು ಅಲ್ಲೋಲ ಕಲ್ಲೋಲ ಆಗಿ, ಹೊಟ್ಟಿ ತೊಳಿಸಿ ಬಂದು, ಮಾರಿ ಕಿವಿಚಿ, ವಾಂತಿ ಬಂದವರ ಮಾರಿ ಆಗ್ತಿತ್ತು. ಆವಾಗ ತಿಳಕೊಂಡೆ ಭಾವಾಂತರಂಗ ಅಂದ್ರ ಭಾವನ ಅಂತರಂಗ ಅಂತ. ಇದೂ ಒಂದು ಕಾರಣ ನಾನು ಭಾವಚಿತ್ರ ಅಂದ್ರ ಭಾವನ ಚಿತ್ರ ಅಂತ ತಿಳಕೊಳ್ಳಲಿಕ್ಕೆ, ಅಂತ ಅಂದು ಬಿಟ್ಟರು ವೈನಿ. 

ಹೋಗ್ಗೋ! ಶಿವನೆ! ಏನು ತಲಿ ತಲಿ ಕೊಡ್ತೀಯಪ್ಪಾ. ಬಹುತ್ ಪುರಸತ್ ಮೇ ಬನಾಯಾ ಹೈ ಇಸ್ಕೊ!

ಹಾಂಗೆನರೀ? ಎಷ್ಟ ಶಾಣ್ಯಾ ಇದ್ದೀರಿ ವೈನಿ? ಹಾಂಗಿದ್ರ ಭಾವತೀರ ಅಂದ್ರ ಏನು? ಅಂತ ಕೇಳಿದೆ. 

ವೈನಿ ಮತ್ತೊಂದು ಹಾಡಾ ಹೇಳಿಬಿಟ್ಟರು. ಖಲಸ್ಕರ್ ತನ್ನ ಪೋಲಿಸ್ ಲಾಠಿಯೊಳಗ ನೆಲಾ ಕುಟ್ಟಿ ತಬಲಾ ಬಾರಿಸಿದ. 

ನಾನೊಂದು ತೀರಾ ನೀನೊಂದು ತೀರಾ. ಪ್ರೀತಿ ಹೃದಯ ಭಾರಾ, ಅಂತ ಹೇಳಿ ಅಕ್ಕಾ ಭಾವಾ ಬ್ಯಾರೆ ಬ್ಯಾರೆ ಆಗಿ, ಅಕ್ಕ ಒಂದು ತೀರ ಅಂದರ ದಂಡಿ, ಭಾವ ಇನ್ನೊಂದು ತೀರ ಆದಾಗ ಯಾವ ತೀರದ ಮ್ಯಾಲೆ ಭಾವ ಇರ್ತಾರೋ ಅದೇ ಭಾವತೀರ. ಸರಿ ಅದನ? - ಅಂತ ಕೇಳಿಬಿಟ್ಟರು. 

ಭಾವಾರ್ಥ ಅಂದ್ರ? - ಅಂತ ಕೇಳಿದೆ. 

ಅಷ್ಟೂ ಗೊತ್ತಿಲ್ಲ? ಭಾವ ಹೇಳಿದ ಮಾತಿನ ಅರ್ಥ ಭಾವಾರ್ಥ. ಭಾಳ ಮಂದಿ ಭಾವಂದಿರು ಬಾಯಿ ಬಿಟ್ಟು ಮಾತಾಡಂಗಿಲ್ಲ. ಬಾಯಿ ಬಿಡದೇನೇ ಎಲ್ಲಾ ಮಾತಾಡ್ತಾರ. ಅವರು ಗಂಟ ಮಾರಿ ಹಾಕ್ಕೊಂಡು ಕೂತಾಗ ಅವರನ್ನು ಮಾತಾಡಿಸಿ, ಸಿಟ್ಟಿಗೇಳಿಸದೆ ಅರ್ಥ ಕಂಡು ಹಿಡ್ಕೋತ್ತೇವಿ ನೋಡು ಅದೇ ಭಾವಾರ್ಥ. ಅಕ್ಕನ್ನ ಸ್ಕ್ರಾಪ್ ಮಾಡಿ, ಎಲ್ಲಾ ಪಾರ್ಟ್ಸ್ ಲ್ಯಾಪ್ಸ್ ಮಾಡಿ, ತವರು ಮನಿಗೆ ಕಳಿಸಿದ ಭಾವ ಹೆಚ್ಚಿನ ವರದಕ್ಷಿಣಿ ಕೇಳಲಿಕತ್ತಾನ ಅಂತ ಅರ್ಥ. ಅದು ಒಂದು ಉದಾಹರಣೆ ಭಾವಾರ್ಥಕ್ಕ, ಅಂತ ಹೇಳಿದರು  ವೈನಿ.  

ಹ್ಞೂ....ಅಚ್ಚಾ ಹೈ! ಬಹುತ್ ಅಚ್ಚಾ ಹೈ! ಅಂತ ಮತ್ತ ನಾನಾ ಪಾಟೇಕರ್ ಮೋಡಿಗೆ ಹೋದೆ. 

ಸರ್ರಾ! ನೀವೂ ಮರಾಠಿ ಮಾನುಸ್ ಏನ್ರೀ? ಪದೇ ಪದೇ ನಾನಾ ಪಾಟೇಕರ್ ಗತೆ ವರ್ತನೆ ಮಾಡ್ತೀರಿ? ಅಂತ ಖಲಸ್ಕರ್ ಕೇಳಿಬಿಟ್ಟ. 

ಇಲ್ಲಪಾ, ನಾವು ಶುದ್ಧ ಕಾನಡಿ ಮಂದಿ, ಅಂತ ಹೇಳಿದೆ. ಸುಮ್ಮಾದ. 

ವೈನಿ, ನೀವು ನೋಡಿದರ 'ಭಾವ' ಅನ್ನೋ ಶಬ್ದದ ಮೇಲೆ phd ಮಾಡಿ ಬಿಟ್ಟೀರಿ. ವೆರಿ ಗುಡ್. ಇನ್ನೊಂದು ಕೇಳಿಬಿಡತೇನಿ. ಸ್ವಭಾವ ಅಂದ್ರ ಏನು, ನಿಮ್ಮ ಪ್ರಕಾರ? ಅಂತ ಕೇಳಿದೆ. 

ಸ್ವಭಾವ ಅನ್ನೋದಕ್ಕ ಎರಡು ಅರ್ಥ ಅವ. ಒಂದು ಗುಣಸ್ವಭಾವ ಅಂದ್ರ ನೇಚರ್ ಅಂತ. ಇನ್ನೊಂದು ಸ್ವಭಾವ ಅಂದ್ರ ಸ್ವ ಭಾವ ಅರ್ಥಾತ ಸ್ವಂತ ಭಾವ. ತಿಳೀತ? ಹಾಂ? ಅಂತ ಕೇಳಿದರು ವೈನಿ. ಮಸ್ತ ತಲಿ ಇಟ್ಟಾರ. 

ಭಾವ ಸಹಿತ ಸ್ವಂತ ಭಾವ ಮತ್ತ ಭಾಡಿಗಿ ಭಾವ ಅಂತ ಇರ್ತಾರೇನ್ರೀ ವೈನಿ? ಹಾಂ? ಅಂತ ಕೇಳಿದೆ. 

ಯಾಕಿರಂಗಿಲ್ಲ? ಸ್ವಂತ ಅಕ್ಕ, ತಂಗಿ ಗಂಡ ಸ್ವ'ಭಾವ'. ಯಾರ್ಯಾರಿಗೋ ಭಾವ ಅಂತೀರಲ್ಲಾ ನೀವು ಹವ್ಯಕ ಮಂದಿ,  ಅವರೆಲ್ಲಾ ಸಾದಾ ಭಾವ. ಗೊತ್ತಾತ? ಅದೇನು ಕಂಡಕಂಡವರಿಗೆಲ್ಲ ಭಾವ ಭಾವ ಅಂತ ಅನ್ಕೋತ್ತ ಅಡ್ಯಾಡತೀರೋ ಏನೋ? ಅಂತ ವೈನಿ ಹೇಳಿದರು. 


ರೀ ವೈನಿ...ಅದು ನಮ್ಮ ಸಂಸ್ಕೃತಿರೀ. ಎಲ್ಲರಿಗೂ ಒಂದು ಮಾನವ ಸಂಬಂಧ ಸೇರಿಸಿ ಕರಿಯೋದು, ಅಂತ ಹೇಳಿ ನಮ್ಮ ಭಾವಮಯ ಸಂಸ್ಕೃತಿಯನ್ನ ಡಿಫೆಂಡ್ ಮಾಡಿಕೊಂಡೆ. 

ವೈನಿ ಒಂದು ಮಾತು ಹೇಳ್ರೀ. ನೀವು ಧಾರವಾಡ ಕಡೆ ಮಂದಿ ಭಾವಾ ಅನ್ನೋದೇ ಇಲ್ಲ. ಅಕ್ಕನ ಗಂಡಗ ಮಾಮಾ ಅಂತೀರಿ. ಅದು ಹ್ಯಾಂಗ? ಹಾಂ? ಅಂತ ಕೇಳಿದೆ. 

ಮಾಮಾಜಿ ಭಾವಾಜಿ ಎಲ್ಲಾ ಒಂದೇ. ಬಹಳ ಸಲಾ ಒಂದೇ ಇರ್ತಾವ ನೋಡು, ಅಂದು ಬಿಟ್ಟರು ರೂಪಾ ವೈನಿ. 

ಮಾಮಾಜಿ, ಭಾವಾಜಿ ಒಂದೇ!! ಅಕಟಕಟಾ!

ಸ್ವಾದರಮಾವನ್ನ ಲಗ್ನಾ ಮಾಡಿಕೊಳ್ಳೋದು ಭಾಳ ಕಾಮನ್ ಅಲ್ಲೇನೋ? ಹಾಂಗಾಗಿ ಮಾಮಾನೂ ಒಂದೇ, ಭಾವಾನೂ ಒಂದೇ. ಒನ್ ಇನ್ ಟೂ ಅಥವಾ ಟೂ ಇನ್ ಒನ್. ಈಗ ಭಾವಚಿತ್ರ ಹಚ್ಚೇನಿ ನೋಡು, ಆವಾ ನಮ್ಮವ್ವನ ತಮ್ಮ. ನಮ್ಮ ಮಾಮಾ. ನಮ್ಮ ಹಿರೀ ಅಕ್ಕನ್ನ ಅವನ ಲಗ್ನಾ ಮಾಡಿಕೊಂಡು ನಮಗ ಮಾಮಾಶ್ರೀ ಭಾವಾಶ್ರೀ ಎಲ್ಲಾ ಅವನೇ ನೋಡು, ಅಂದು ಬಿಟ್ಟರು ವೈನಿ. 

ಜೈ ಮಾಮಾಶ್ರೀ! ಜೈ ಭಾವಾಶ್ರೀ!

ರೀ ವೈನಿ....ನಿಮಗ ಎಲ್ಲೋ ಗಲತ್ ಫೇಮೀ ಆಗಿ ಬಿಟ್ಟದ. ಭಾವಚಿತ್ರ ಅಂದ್ರ ಭಾವನ ಚಿತ್ರನೂ ಅಲ್ಲ, ಮಾವನ ಚಿತ್ರನೂ ಅಲ್ಲ. ನಿಮ್ಮ ಚಿತ್ರ. ನಾ ಆವತ್ತು ಹೇಳಿದ್ದು ಏನು ನಿಮಗ? passport ಸೈಜಿನ ಭಾವಚಿತ್ರ ಹಚ್ಚಿ ಕಳಿಸಿರಿ ಅಂತ. ಅಂದ್ರ ನಿಮ್ಮ ಫೋಟೋ ಹಚ್ಚಿ ಕಳಿಸಿರಿ ಅಂತ. ಅದನ್ನ ಬಿಟ್ಟು, ಹೋಗಿ ಹೋಗಿ ನಿಮ್ಮ ಅಕ್ಕನ ಗಂಡ ಭಾವನ ಚಿತ್ರ ಹಚ್ಚಿ, passport ಅರ್ಜಿ ಕಳಿಸಿ, ನೋಡ್ರೀ ಏನು ಮಾಡಿಕೊಂಡು ಕೂತೀರಿ ಅಂತ? ಹಾಂ? ಏನು ತಲೀರಿ ನಿಮ್ಮದು? ಹಾಂ? ಹೈದರಾಬಾದಿನ ಸಾಲಾರ್ ಜಂಗ್ ಮ್ಯೂಸಿಯಂ ಒಳಗ ಜಂಗು ಹಿಡಿದ ತಲಿಗಳ ಮಧ್ಯೆ ಇಡಬೇಕು ನೋಡ್ರೀ ನಿಮ್ಮ ತಲಿ. ಹಾಂಗ ಅದ. ಥತ್ ನಿಮ್ಮ! ಅಂತ ಬೈದೆ. 


ಹ್ಞೂ....ಹ್ಞೂ....ಹೌದೋ. ಭಾವಚಿತ್ರ ಅಂದ್ರ ಏನು ಅಂತ ನಿನ್ನ ಕಡೆ ಕೇಳೋಣ ಅಂತ ಮಾಡಿದೆ. ಮತ್ತ ಎಲ್ಲರ ಬೈದೀ ಅಂತ ತಿಳಕೊಂಡು, ನನ್ನ ತಲಿ ಓಡಿಸಿ, ಭಾವಚಿತ್ರದ ಅರ್ಥ ಹುಡುಕಿ, ನಮ್ಮ ಭಾವನ ಚಿತ್ರ ಹಚ್ಚಿಸಲಿಕ್ಕೆ ಎಲ್ಲಾ ವ್ಯವಸ್ಥಾ ಮಾಡಿದರ ಬ್ಯಾರೆ ಯಾರದ್ದೋ ಫೋಟೋ ಬಂದು ಬಿಟ್ಟದಲ್ಲೋ? ಈ ಮನುಷ್ಯಾ ನಮ್ಮ ಭಾವ ಅಲ್ಲ. ಯಾರಿವಾ? ಯಾರೋ ದೊಡ್ಡ ಮನುಷ್ಯಾ ಅಂತ ನೋಡಪಾ. ಇವನ ಫೋಟೋ ಹ್ಯಾಂಗ ನಿಮ್ಮ passport ಅರ್ಜಿ ಒಳಗ ಬಂತು ಅಂತ ಹೇಳಿ ನನ್ನ ಜೀವಾ ತಿನ್ನಲಿಕತ್ತಾನ ಈ ಪೋಲೀಸಾ. ಇವರು ನಮ್ಮ ಭಾವ ಅಲ್ಲ ಅಂತ ಹೇಳಿ ಕಳಿಸೋ ಅವರನ್ನ, ಅಂತ ರೂಪಾ ವೈನಿ ಶಂಖಾ ಹೊಡೆದರು.

ನಮ್ಮ ಭಾವನ ಚಿತ್ರ ಹಚ್ಚಿಸಲಿಕ್ಕೆ ಎಲ್ಲಾ ವ್ಯವಸ್ಥಾ ಮಾಡಿದರ.....ಅಂತ ರೂಪಾ ವೈನಿ ಏನಂದ್ರೋ ಅದು ತಲ್ಯಾಗ ನಿಂತು ಬಿಡ್ತು. ತಮ್ಮ ಫೋಟೋ ಅಂತೂ ಹಚ್ಚಲಿಲ್ಲ. ಇನ್ನು ಭಾವನ ಫೋಟೋ ಹಚ್ಚಲಿಕ್ಕೆ ಏನು ವ್ಯವ್ಯಸ್ಥಾ ಮಾಡಿದ್ದರು ವೈನಿ? ಅದ್ರಾಗೇ ಏನಾರೆ ಲಫಡಾ ಆಗಿ ಬ್ಯಾರೆ ಯಾರದ್ದೋ ಫೋಟೋ ಬಂದು ಬಿಟ್ಟದೋ ಹ್ಯಾಂಗ? ತೆಹಕೀಕಾತ್ ಮಾಡಬೇಕು.

ಖಲಸ್ಕರ್ ಸಾಹೇಬ್ರಾ, ಇದು ಯಾವ ದೊಡ್ಡ ಮನುಷ್ಯಾರ ಫೋಟೋರೀ? ಹಾಂ? ಅಂತ ಕೇಳಿದೆ.

ಖಲಸ್ಕರ್ ಅವನ ಕಿವಿ ಅವನೇ ನಂಬಲಿಲ್ಲ.

ಇವರು ಯಾರಂತ ಖರೆನೇ ಗೊತ್ತಿಲ್ಲರೀ? ಅಥವಾ ನೀವೂ ಮಸ್ಕಿರಿ ಮಾಡಾಕತ್ತೀರೋ? ಬಾಯಾರ ಮಸ್ಕಿರಿ ಮುಗೀತು. ಈಗ ನಿಮ್ಮದೇನ್ರೀ? ಹಾಂ? ಬ್ಯಾಡ್ರೀ. ಟೈಮ್ ಆಗ್ತದ, ಅಂದು ಬಿಟ್ಟಾ ಪೋಲಿಸ್ ಆಫೀಸರ್.

ಗೊತ್ತಿಲ್ಲರೀ ಸಾಹೇಬ್ರಾ. ನಾವು ಪೇಪರ್ ಗೀಪರ್ ಓದೋದಿಲ್ಲ. ಹಾಂಗಾಗಿ ನಮಗ ಯಾವದೇ ದೊಡ್ಡ ಮಂದಿದು ಗೊತ್ತೇ ಇಲ್ಲ. ಯಾರ್ರೀ ಇವರು? ಅಂತ ಕೇಳಿದೆ.

ಸರ್ರಾ ಇವರು ಗಡಕರಿ ಸಾಹೇಬರು. ಗೊತ್ತಿಲ್ಲರೀ? ಹಾಂ? ಅಂತ ಕೇಳಿದ.

ಹಾಂ? ಗಡಕರಿನಾ? ಯಾರೋ? ಗೊತ್ತಿಲ್ಲ ಬಿಡಪಾ, ಅಂತ ಹೇಳಿದೆ.

ನಿಮಗ ಗೊತ್ತದ ಏನ್ರೀ ವೈನಿ? ಯಾರೋ ಗಡಕರಿ ಅನ್ನವರ ಫೋಟೋ ನಿಮ್ಮ passport ಅರ್ಜಿಗೆ ಹತ್ಯದ ಅಂತ ನೋಡ್ರೀ. ಗೊತ್ತದನಾ? ಅಂತ ಕೇಳಿದೆ.

ಗಡಕರಿ ಅಂದ್ರ ನಮ್ಮ ಭಾವನೇ. ಆದ್ರ ಈ ಗಡಕರಿ ಅಲ್ಲಾ. ನಮ್ಮ ಭಾವ ಗಡಕರಿ ಬ್ಯಾರೆನೇ ಇದ್ದಾರ, ಅಂತ ಹೇಳಿಬಿಟ್ಟರು ವೈನಿ.

ಹಾಂ!!! ಫುಲ್ ತಲಿ ಹಾಪ್ ಆತು.

ರೂಪಾ ವೈನಿ ಭಾವಾ ಯಾರೋ ಗಡಕರಿ ಅಂತ. ಈ ಫೋಟೋದಾಗ ಇದ್ದವನೂ ಯಾರೋ ಗಡಕರಿಯೇ ಅಂತ ಪೋಲಿಸ್ ಹೇಳ್ತಾನ. ಆದ್ರ ರೂಪಾ ವೈನಿ ಭಾವ ಗಡಕರಿ ಅಲ್ಲಂತ. ಇದೊಳ್ಳೆ ಗೋಲಮಾಲ್ ಸಿನೆಮಾ ಆದಂಗ ಆತಲ್ಲರೀ.

ಸರ್ರಾ, ಇವರು ನಿತಿನ್ ಗಡಕರಿ ಅಂತ್ರೀ. ಭಾಜಪ ಪಾರ್ಟಿ ಅದಲ್ಲಾ? ಅದರ ದೊಡ್ಡ ಲೀಡರ್. ಅವರ ಫೋಟೋ passport ಅರ್ಜಿಯೊಳಗ, ಅದೂ ಒಬ್ಬ ಹೆಂಗಸೂರ passport ಅರ್ಜಿ ಒಳಗ ಬಂದು ಬಿಟ್ಟದ ಅಂತ ದೊಡ್ಡ ಮಟ್ಟದ inquiry ಆಗ್ಲೀಕತ್ತದರೀ. ಎಲ್ಲಾರ ಮ್ಯಾಲೆ ಭಾಳ ಪ್ರೆಷರ್ ಐತ್ರೀ ಸರ್ರಾ, ಅಂದು ಬಿಟ್ಟ ಖಲಸ್ಕರ್.

ಶ್ರೀ ನಿತಿನ್ ಗಡಕರಿ

ರೀ ವೈನಿ ನಿಮ್ಮ ಭಾವಾ ಗಡಕರಿ BJP ಲೀಡರ್ ಏನ್ರೀ? ಹಾಂ? ನಿಮ್ಮ ಅಕ್ಕನ ಗಂಡ ಅಷ್ಟು ದೊಡ್ಡ ಮನುಷ್ಯಾನಾ? ಹಾಂ? -ಅಂತ ಕೇಳಿದೆ.

ಹ್ಞೂ... ನಮ್ಮ ಭಾವ ಗಡಕರಿ ಸಹಿತ BJP ನೇ. ಆದ್ರ ಅವರದ್ದು ಬ್ಯಾರೆ BJP. ರಾಮನ BJP ಅಲ್ಲ, ಅಂತ ಅಂದು ಬಿಟ್ಟರು ವೈನಿ.

ಭಾಳ complicated ಆಗ್ಲಿಕತ್ತುಬಿಟ್ಟದ ಕೇಸ್. ಖಲಸ್ಕರ ಅಂತೂ ಫುಲ್ ಹೈರಾಣ ಆಗಿಬಿಟ್ಟಿದ್ದ. ಅವಂಗ ಗಡಕರಿ ಫೋಟೋ ಹ್ಯಾಂಗ ಈ ಹುಚ್ಚ ಹೆಂಗಸಿನ passport ಅರ್ಜಿ ಒಳಗ ಬಂತು ಅಂತ ತಿಳಕೊಂಡು ಹೋಗಿ, ಅವನ ಸಾಹೇಬರಿಗೆ ರಿಪೋರ್ಟ್ ಕೊಟ್ಟು, ಅವನ ಮಂಗ್ಯಾ ಎನ್ಕೌಂಟರ್ ದಂಧಾಕ್ಕ ವಾಪಾಸ್ ಬಂದ್ರ ಸಾಕಾಗ್ಯದ. ಹಂತಾದ್ರಾಗ ಇಲ್ಲೆ ನೋಡಿದರ ರಾಡಿ ಮತ್ತೂ ಜೋರೇ ಆಗ್ಲಿಕತ್ತದ.

ರೀ ವೈನಿ! ಸೀದಾ ಸೀದಾ ಹೇಳ್ರೀ. ನಿಮ್ಮ ಭಾವಾ ಗಡಕರಿ ಸಹಿತ BJP ಅಂತೀರಿ. ಆದ್ರ ಈ BJP ಅಂದ್ರ ರಾಮನ BJP ಅಲ್ಲ ಅಂತೀರಿ? ಹಂಗಿದ್ರ ಮತ್ಯಾವ BJP? ಅಂತ ಕೇಳಿದೆ.

ನಮ್ಮ ಭಾವಾ 'ಭೋಳೆ ಜನರ ಪಾರ್ಟಿ'. ಅದು ಅವರ BJP. ಭಾಳ ಭೋಳೆ ಇದ್ದಾರ. ಅವರ ಹೆಸರು ಜತಿನ್ ಗಡಕರಿ ಅಂತ ಹೇಳಿ ವೈನಿ ಕಿಸಿ ಕಿಸಿ ನಕ್ಕರು. BJP ಅಂದ್ರ ಭೋಳೆ ಜನರ ಪಾರ್ಟಿ ಅಂತ ಹೇಳಿದೆ ಅಂತ ಅವರಿಗೇ ಭಾಳ ನಗು ಬರ್ಲಿಕತ್ತಿತ್ತು. ಹೀಂಗ ಹುಚ್ಚುಚ್ಚರೆ ಜೋಕ್ ಹೊಡಿಬಾರದ ಟೈಮ್ ಒಳಗ ಹೊಡಿಯೋದ್ರಾಗ ಏನೂ ಕಮ್ಮಿ ಇಲ್ಲ ಈ ರೂಪಾ ವೈನಿ. ಉಪದ್ವ್ಯಾಪಿ ತಂದು!

ಏನಂದ್ರೀ ನಿಮ್ಮ ಭಾವನ ಹೆಸರು? ಅಂತ ಕೇಳಿದೆ.

ಜತಿನ್ ಗಡಕರಿ. ಜತಿನ್ ಗಣಪತ್ ರಾವ್ ಗಡಕರಿ. ಮೂಲತ ಕರಾಡ್ ಅವರ ಊರು. ಪೂಣೆದಾಗ ಸೆಟಲ್ ಆಗ್ಯಾರ. ನಮ್ಮ ಹಿರೀ ಅಕ್ಕಾ....ಅಕಿನನೋ.... ಪದ್ದಕ್ಕಾ? ಗೊತ್ತಾತ? ಅಕಿ ಗಂಡ ಉರ್ಫ್ ನಮ್ಮ ಭಾವ ಇವರು. ಇನ್ನೂ ಬ್ಯಾರೆ ಬ್ಯಾರೆ ಭಾವಂದಿರು ಇದ್ದಾರ. ಎಲ್ಲರಕಿಂತ ಹಿರಿಯ ಭಾವ ಇವರೇ ಅಂತ ಹೇಳಿ ಇವರ ಚಿತ್ರ ಹಚ್ಚಿಸಲಿಕ್ಕೆ ವ್ಯವಸ್ಥಾ ಮಾಡಿದ್ದೆ. ಆದ್ರ ಅದು ಏನೋ ಲಫಡಾ ಆಗಿ ಜತಿನ್ ಗಡಕರಿ ಬದಲೀ ಯಾರೋ ನಿತಿನ್ ಗಡಕರಿ ಬಂದು ಬಿಟ್ಟಾರಲ್ಲೋ? ಹಾಂ? - ಅಂತ ವೈನಿ ಏನೋ ಹೇಳಿದರು.

ವೈನಿ ಭಾವನ ಹೆಸರು ಜತಿನ್ ಗಡಕರಿ. ಇವರ passport ಮ್ಯಾಲೆ ಬಂದ ಫೋಟೋದಾಗ ಇದ್ದವನ ಹೆಸರು ನಿತಿನ್ ಗಡಕರಿ. ಇದು ಹ್ಯಾಂಗ? detective ಕರಮಚಂದ ಆಗ ಬೇಕು ಈಗ.

ರೀ ವೈನಿ... ಭಾವಚಿತ್ರ ಅಂದ್ರ ಭಾವನ ಚಿತ್ರ ಅಂತ ನೀವು ತಿಳಕೊಂಡ ಮೇಲೆ ನೀವು ಹ್ಯಾಂಗ ನಿಮ್ಮ ಭಾವಾಜಿ ಅವರ ಫೋಟೋ ತೊಗೊಂಡು ಬಂದ್ರೀ? ನಿಮ್ಮ ಭಾವಂಗ ಪತ್ರ ಬರೆದು ಫೋಟೋ ಕಳಿಸು ಅಂತ ಹೇಳಿದಿರಿ ಏನು? ಅವರು ಕಳಿಸಿದ ಫೋಟೋ ನಿಮ್ಮ passport ಅರ್ಜಿಗೆ ಹಚ್ಚಿ ಕಳಿಸಿಬಿಟ್ಟರೇನು? ಅಂತ ಕೇಳಿದೆ.

ಇಲ್ಲಪಾ. ಭಾವಚಿತ್ರದ ಉಸಾಬರಿಯೆಲ್ಲ ನಾನು ನಮ್ಮ ತಿರುಪತಿಗೆ ಹಚ್ಚಿ ಬಿಟ್ಟಿದ್ದೆ. ಅವನೇ ನಮ್ಮ ಭಾವನ ಚಿತ್ರಾ ತೊಗೊಂಡು ಬಂದು, ಅದನ್ನ ಫೆವಿಕಾಲ್ ಹಚ್ಚಿ passport ಅರ್ಜಿಗೆ ಹಚ್ಚಿ, passport ಅರ್ಜಿ ಕವರ್ ಒಳಗ ಇಟ್ಟು, ಸೀಲ್ ಮಾಡಿ ತಂದು ಕೊಟ್ಟವ. ತಿರುಪತಿ ಏನರೆ ತಪ್ಪು ಮಾಡಿದನೋ ಹೆಂಗ? ಕೇಳೋಣ ಅಂದ್ರ ಆವಾ ಊರು ಬಿಟ್ಟು ಹೋಗಿ ಒಂದು ತಿಂಗಳು ಆಗಲಿಕ್ಕೆ ಬಂತು, ಅಂದ್ರು ವೈನಿ.

ತಿರುಪತಿ! another piece of the puzzle.

ಯಾರ್ರೀ ಆವಾ ತಿರುಪತಿ? ಅದೆಂತಾ ಹೆಸರು? ಹಾಂ? ಅಂತ ಕೇಳಿದೆ.

ಅವನ ಹೆಸರು ತಿರುಪತಿ ಅಂತನೋ. ಈಗ ನಿನ್ನ ಹೆಸರು ಮಂಗೇಶ ಹ್ಯಾಂಗೋ ಅವಂದೂ ಹಾಂಗೆ. ತಮಿಳರವ ಆವ. ಅವರು ಶ್ರೀ ಅನ್ನಲಿಕ್ಕೆ ತಿರು ಅಂತಾರ ನೋಡು. ಶ್ರೀಪತಿ ಅಂತ ಇರಬೇಕು. ಅದನ್ನ ತಿರುಪತಿ ಅಂತ ಮಾಡಿಕೊಂಡಿರಬೇಕು. ನಮ್ಮನಿ ಹಿಂದಿನ ರೂಮಿನ್ಯಾಗ ಭಾಡಿಗಿಗೆ ಇದ್ದ. ಹೋಲ್ಸಮನ್ ಅಂತ ಹೇಳಿ ಕೆಲಸ ಮಾಡ್ತಿದ್ದ ನೋಡಪಾ. ಅವಂಗೇ ಹಚ್ಚಿದ್ದೆ ಈ ಕೆಲಸ. ರೊಕ್ಕಾನೂ ಕೊಟ್ಟಿದ್ದೆ. ರೊಕ್ಕಾ ಎಲ್ಲಾ ತಿಂದು, ಕೈಗೆ ಸಿಕ್ಕ ಗಡಕರಿ ಫೋಟೋ ಹಚ್ಚಿ, ಪತ್ತೆಯಿಲ್ಲದೆ ಓಡಿ ಹೋದ ನೋಡು. ಬದ್ಮಾಷ್ ಸೂಳಿಮಗ, ಅಂದ್ರು ರೂಪಾ ವೈನಿ. ಅವರ ಮನಿಯಾಗಿದ್ದ ತಿರುಪತಿ ಅನ್ನುವವ ತಿರುಪತಿ ನಾಮ ಹಾಕಿಹೋದ ಅಂತ ಗೊತ್ತಾತು ಅವರಿಗೆ.

ಹೋಲ್ಸಮನ್ ಕೆಲಸ ಮಾಡ್ತಿದ್ದನ ತಿರುಪತಿ ಅನ್ನವಾ? ಅಂದ್ರ? ಅಂತ ಕೇಳಿದೆ.

ಹೋಲ್ಸಮನ್, ಹೋಲ್ಸಮನ್....ಗೊತ್ತಿಲ್ಲ ನಿನಗ? ಸಾಮಾನು ಮಾರವರು. ಅವರೇ ಹೋಲ್ಸಮನ್. ಗೊತ್ತಾತ? ಅಂತ ಹೇಳಿದರು ವೈನಿ.

ರೀ ವೈನಿ....ಅದು ಸೇಲ್ಸಮನ್ ಅಂತ್ರೀ. holesman ಅನ್ನಬ್ಯಾಡ್ರೀ, ಅಂತ ಹೇಳಿ ಭಾಳ ನಕ್ಕೆ.

ಹ್ಞೂ....ಅದೇ. ಏನೋ ಮನ್ನು ಒಟ್ಟಿನಲ್ಲಿ. ಆವಾ ತಿರುಪತಿ ಆಗಾಗ ಪುಣೇಕ್ಕ ಹೋಗಿ ಬಂದು ಮಾಡ್ತಿದ್ದ. ಅವಂಗ ರೊಕ್ಕಾ ಕೊಟ್ಟು, ನೋಡಪಾ ತಿರುಪತಿ, ಅಲ್ಲೆ ಪುಣೆ ಒಳಗ ನಮ್ಮ ಭಾವಾ ಜತಿನ್ ಗಡಕರಿ ಇದ್ದಾರ, ಅವರ ಮನಿಗೆ ಹೋಗಿ, ಅವರ ಫೋಟೋ ತೊಗೊಂಡು ಬಾ, ಅಂತ ಹೇಳಿ ಖರ್ಚಿಗೆ ರೊಕ್ಕಾ ಬ್ಯಾರೆ ಕೊಟ್ಟಿದ್ದೆ. ಪುಣೆದಾಗ ಅವರ ಮನಿ ಎಲ್ಲೋ ಊರ ಹೊರಗ ದೂರ ಅದ. ಆಟೋ ಅದು ಇದು ಅಂತ ಹೇಳಿ ಖರ್ಚ ಇರ್ತಾವ ನೋಡು. ಅದಕ್ಕ. ತಿರುಪತಿ ಒಪ್ಪಿಕೊಂಡು ಹೋಗಿದ್ದ. ಒಮ್ಮೆ ಪುಣೆಯಿಂದ ವಾಪಸ್ ಬಂದ. ಕೇಳಿದೆ. ಫೋಟೋ ತಂದಿಯೇನಪಾ? ಅಂತ. ಹೌದು, ಹೋಗಿದ್ದೆ. ನಿಮ್ಮ ಭಾವನ ಮನಿಗೆ. ಜತಿನ್ ಗಡಕರಿ ಅವರನ್ನ ಭೆಟ್ಟಿ ಆಗಿ, ಫೋಟೋ ತೊಗೊಂಡು ಬಂದೆ. ನಿಮ್ಮ passport ಅರ್ಜಿ ಕೊಟ್ಟು ಬಿಡ್ರೀ. ನಾನೇ ಫೋಟೋ ಅಂಟಿಸಿ ಕಳಿಸಿಬಿಡ್ತೇನಿ ಅಂತ ಹೇಳಿದ ತಿರುಪತಿ. ಈಗ ನೋಡಿದರ ಬ್ಯಾರೆ ಯಾರದ್ದೋ ಫೋಟೋ ಹಚ್ಚಿ ಓಡಿ ಹೋಗ್ಯಾನ! ಮಂಗ್ಯಾನಿಕೆ. ಸಿಕ್ಕಿದ್ದರ ಹಾಕ್ಕೊಂಡು ಬಡಿತಿದ್ದೆ ಅವನ್ನ, ಅಂದ್ರು ರೂಪಾ ವೈನಿ.

ತಿರುಮತಿ ರೂಪಾ ಬಾಯಿಯವರೇ, ನಿಮಗೆ ತಿರುಪತಿ ನಿಜವಾಗಿ ತಿರುಪತಿ ಪಂಗನಾಮ ಹಾಕಿದ್ದಾನೆ. ಸಂಶಯ ಬೇಡ, ಅಂತ ಹೇಳಿದೆ.

ಏನದು ತಿರುಮತಿ ಅಂತೀ ನನಗ? ನನ್ನ ಮತಿ ತಿರುಗ್ಯದ, ಹುಚ್ಚ ಹಿಡದದ ಅಂತ ಅರ್ಥ ಏನು? ಮತಿಗೆಟ್ಟವನ, ಅಂತ ರೂಪಾ ವೈನಿ ಬೈದ್ರು. ಮೊದಲೇ ಅವರು ಎರಡೆರಡು ಘಾತಗಳಿಂದ ಹೈರಾಣ ಆಗ್ಯಾರ. ಒಂದು passport ಲಫಡಾ. ಇನ್ನೊಂದು ತಿರುಪತಿ ಹಾಕಿದ ನಾಮ. ಅಂತಾದ್ರಾಗ ನಾ ಬ್ಯಾರೆ ಅವರಿಗೆ ತಿರುಮತಿ ಅಂದು ಜೋಕ್ ಮಾಡ್ಲಿಕತ್ತೇನಿ.

ರೀ ವೈನಿ.... ತಿರುಮತಿ ಅಂದ್ರ ಶ್ರೀಮತಿ ಅಂತ ಅರ್ಥ. ತಿರು ತಿರು....ಅಂದ್ರ ಶ್ರೀ ಅಂತ ತಮಿಳ ಒಳಗ. ನಿಮ್ಮ ಗಂಡಗ ಬೇಕಾದ್ರ ತಿರುಪಾದ ಅನ್ರೀ. ಹ್ಯಾಂಗೂ ಒಮ್ಮೊಮ್ಮೆ ಅವನ ಪಾದ ತಿರುವಿ ಒಗದಿರ್ತೀರಲ್ಲ ನೀವು ನಿಮ್ಮ ನಾಗಣ್ಣ ಕೂಡಿ? ಪಾಪ ವಾಕಡಾ ಪಾದಾ ಮಾಡಿಕೊಂಡು, ಫುಲ್ ಬಾಡಿ ಟ್ವಿಸ್ಟ್ ಮಾಡಿಕೊಂಡು ಅಡ್ಯಾತಿರ್ತಾನ ನೋವಿಂದ. ಅಲ್ಲೇನೋ ತಿರುಪ್ಯಾ ಉರ್ಫ್ ಚೀಪ್ಯಾ? ಅಂತ ಕೇಳಿದೆ. ಚೀಪ್ಯಾ ಹ್ಞೂ ಹ್ಞೂ ಅಂದ. ಮರುಕ ಬಂತು. ಚೀಪ್ಯಾ ತಿರುಪ್ಯಾ ಆಗಿ ತಿರುಪಿ ಎತ್ತವನ ಸ್ಥಿತಿಗೆ ಬಂದು ಬಿಟ್ಟಾನ ಈ ರೂಪಾ ವೈನಿ ಕಾಟದಿಂದ.

ವೈನಿ, ಖಲಸ್ಕರ್ ಸಾಹೇಬ್ರ, ಇಷ್ಟೆಲ್ಲಾ ಕಥಿ ಕೇಳಿದ ಮ್ಯಾಲೆ ನನಗ ಒಂದು ಫುಲ್ ಪಿಕ್ಚರ್ ಬಂದದ. ಏನು ಆಗಿರಬಹುದು ಅನ್ನೋದು ಸುಮಾರು ತಿಳೀತು. ರೂಪಾ ವೈನಿ ಅಂತೂ ಭಾವಚಿತ್ರ ಅಂದ್ರ ಅವರ ಭಾವನ ಫೋಟೋ ಅಂತ ತಿಳಕೊಂಡು innocent ತಪ್ಪು ಮಾಡಿಬಿಟ್ಟಾರ. ಅವರ ಭಾವ ಜತಿನ್ ಗಡಕರಿ ಇರೋದು ಪುಣೆದಾಗ. ಹ್ಯಾಂಗೂ ಹಿಂದಿನ ರೂಮಿನ ತಿರುಪತಿ ಅಲ್ಲೆ ಹೋಗ್ತಿರ್ತಾನ ಅಂತ ಹೇಳಿ ಅವಂಗ ರೊಕ್ಕಾ ಕೊಟ್ಟು, ಅವರ ಭಾವನ ಚಿತ್ರ ತೊಗೊಂಡು ಬರಲಿಕ್ಕೆ ಹೇಳಿದ್ದರು ಅಂತ ಕಾಣಿಸ್ತದ. ಆವಾ ತಿರುಪತಿ ಫುಲ್ ಚಾಲೂ ಸೂಳಿಮಗ 420 ಇರಬೇಕು. ರೂಪಾ ವೈನಿ ಕೊಟ್ಟ ರೊಕ್ಕಾ ಎಲ್ಲ ತಿಂದುಬಿಟ್ಟಾನ. ಆ ಮ್ಯಾಲೆ ಇಂಟರ್ನೆಟ್ ಮ್ಯಾಲೆ ಹೋಗಿ ಗಡಕರಿ ಅಂತ ಹುಡುಕಿರ್ಬೇಕು. ಸಿಕ್ಕದ ಫೋಟೋ ದೊಡ್ಡ ಮಂದಿ ಭಾಜಪ ಲೀಡರ್ ನಿತಿನ್ ಗಡಕರಿ ಅವರದ್ದು. ಜತಿನ್ ಗಡಕರಿನೂ ಒಂದೇ, ನಿತಿನ್ ಗಡಕರಿನೂ ಒಂದೇ ಅಂತ ಹೇಳಿ, ಇಂಟರ್ನೆಟ್ ನಿಂದ ಫೋಟೋ download ಮಾಡಿ, ಫೋಟೋ ಪ್ರಿಂಟರ್ ಒಳಗ ಪ್ರಿಂಟ್ ತೆಗೆದು, ಅದನ್ನೇ passport ಅರ್ಜಿಗೆ ಹಚ್ಚಿ, passport ಅರ್ಜಿ ಕಳಿಸೇನಿ ಅಂತ ಹೇಳಿ, ಮನಿ ಖಾಲಿ ಮಾಡಿಕೊಂಡು ಓಡಿ ಬಿಟ್ಟಾನ. ಇದೇ ಭಾವಚಿತ್ರದಿಂದಾದ ಭಾನಗಡಿ. ಇಷ್ಟು ಆಗಿದ್ದು ನೋಡ್ರೀ, ಅಂತ ಒಂದು very plausible ವಿವರಣೆ ಕೊಟ್ಟೆ.

ಹೌದು ನೋಡು....ಹೀಂಗೇ ಆಗಿರ್ತದ. ಪುಣೆಕ್ಕ ಹೋಗಿ, ನಮ್ಮ ಭಾವನ ಫೋಟೋ ತರೋ ಖರ್ಚಿಗೆ ಎಷ್ಟು ಬೇಕಪಾ ತಿರುಪತಿ ಅಂತ ಕೇಳಿದರ, ರಂಡು ರಂಡು ಅಂತ ಹೇಳಿ ಎರಡು ಸಾವಿರ ರುಪಾಯಿ ತೊಗೊಂಡು, ಅಷ್ಟೂ ತಿಂದು ಒಗೆದಾನ ನೋಡು  ರಂಡು ಸಾವಿರ ರುಪಾಯಿ ತಿಂದ ರಂಡ ಮುಂಡೆ ಗಂಡ ತಿರುಪತಿ, ಅಂತ ರೂಪಾ ವೈನಿ ಪೇಚಾಡಿಕೊಂಡರು.

ಖಲಸ್ಕರ್ ಸಾಹೇಬ್ರ, ಒಂದು closed ರಿಪೋರ್ಟ್ ಬರೆದು ಕೇಸ್ ಮುಚ್ಚಿ ಬಿಡ್ರೀ. ನಿಮಗ ಇದೆಲ್ಲಾ ಹೇಳಿ ಕೊಡಬೇಕು ಏನು? ಎಂತೆಂತಾ ಮರ್ಡರ್ ಕೇಸೇ ಮುಚ್ಚಿ ಹಾಕ್ತೀರಿ ನೀವು. ಇದೇನು ಮಹಾ? ನಾನು ನಿಮ್ಮ ಸಾಹೇಬರ ಹೆಂಡತಿಗೆ ನಿಮ್ಮ ಬಗ್ಗೆ ಭಾಳ ತಾರೀಫ್ ಮಾಡಿ ನಿಮ್ಮನ್ನ ಮಾಲಾಮಾಲ್ ಮಾಡಸ್ತೇನಿ. ಓಕೆ? ಅಂತ ಕೇಳಿದೆ.

ಖಲಸ್ಕರ್ ಖುಷಿಂದ ಓಕೆ ಅಂದ. ಅವಂಗೂ ಸಾಕಾಗಿತ್ತು ಈ ಭಾವಚಿತ್ರದ ಭಾನಗಡಿ. ಹ್ಞೂ ಅಂದು, ಒಂದು ಸಲ್ಯೂಟ್ ಹೊಡೆದು ಹೋದ.

ವೈನಿ....ಇನ್ನೊಂದು passport ಅರ್ಜಿ ತುಂಬಿರಿ. ಈ ಸರೆ ನಿಮ್ಮದೇ ಫೋಟೋ ಹಚ್ಚಿ ಕಳಿಸಿಬಿಡ್ರೀ. ಪೋಲಿಸ್ ವಿಚಾರಣೆ ಎಲ್ಲ ಆಗಿ ಹೋಗ್ಯದ. ಆವಾ ಖಲಸ್ಕರ್ ಮತ್ತ ಬರೋದಿಲ್ಲ. ಅವನ ಚಿಂತಿ ಬ್ಯಾಡ ನಿಮಗ, ಅಂತ ಹೇಳಿದೆ.

ಹ್ಞೂ ಅಂತ ಹೇಳಿ ವೈನಿ ಒಪ್ಪಿಕೊಂಡರು.

ವೈನಿ ಇನ್ನೊಂದು ಮಾತು. ಮತ್ತೊಮ್ಮೆ ಭಾವ ಅನ್ನೋ ಶಬ್ದ ಬಂದಾಗ ಭಿಡೆ ಮಾಡಿಕೊಳ್ಳದೇ ಅರ್ಥ ಕೇಳಿ ತಿಳಿದುಕೋರೀ. ಹೀಂಗ 'ಭಾವ'ಗಡಿ ಅಲ್ಲಲ್ಲ ಭಾನಗಡಿ ಮಾಡಿಕೋಬ್ಯಾಡ್ರೀ. ಸರಿನಾ? ನಾ ಬರಲೀ? ಅಂತ ಕೇಳಿದೆ.

ಊಟ ಮಾಡೇ ಹೋಗಿ ಬಿಡು, ಅಂದ್ರು ವೈನಿ. ಯಾರಿಗದ ಯಾರಿಗಿಲ್ಲ ಈ ಭಾಗ್ಯ ಅಂತ ಹೇಳಿ, ಅಂಗಿ (ಒಂದೇ) ಕಳದು ಊಟಕ್ಕ ರೆಡಿ ಆಗಿಬಿಟ್ಟೆ.

(ಮುಗಿಯಿತು)


ರೂಪಾ ವೈನಿ passport ಅರ್ಜಿಗೆ ನಿತಿನ್ ಗಡಕರಿಯ ಫೋಟೋ ಹಚ್ಚಿದ ತಿರುಪತಿ ಪುಣ್ಯಕ್ಕೆ ಮೇಲಿನ ಚಿತ್ರ ಹಚ್ಚಲಿಲ್ಲ. ಅದೇ ದೊಡ್ಡದು! :)

Wednesday, January 22, 2014

'ಭಾವ'ಚಿತ್ರದಿಂದಾದ ಭಾನಗಡಿ.....passport ಪುರಾಣ (ಭಾಗ - ೨)

(ಭಾಗ - ೧ ಇಲ್ಲಿದೆ)

(ಇಲ್ಲಿಯವರೆಗೆ.....ಎಲೆಕ್ಷನ್ ಕಾರ್ಡೂ ಇಲ್ಲ, ಆಧಾರ್ ಕಾರ್ಡೂ ಇಲ್ಲ ಅಂತ ಹೇಳಿ ರೂಪಾ ವೈನಿಗೆ identity crisis ಆಗಿಬಿಡ್ತು. ಕಳೆದು ಹೋದ identity ಯನ್ನು ಮರಳಿ ಪಡಕೋಬೇಕು ಅಂತ ಹೇಳಿ ಒಂದು passport ಮಾಡಿಸಿಬಿಡೋಣ ಅಂತ ರೂಪಾ ವೈನಿ ನಿರ್ಧಾರ ಮಾಡೇ ಬಿಟ್ಟರು. ನಾನೇ passport ಫಾರ್ಮ್ ತುಂಬಿಕೊಟ್ಟೆ. ಫೋಟೋ ಹಚ್ಚಿ, ಫೀಸ್ ಕಟ್ಟಿ, ಅರ್ಜಿ ಕಳಿಸಿರಿ ಅಂತ ಹೇಳಿ ಬಂದೆ. ರೂಪಾ ವೈನಿಗೆ passport ಬಂತಾ? ಮುಂದೇನಾತು? ಓದಿ.....)

ಒಂದು ದಿವಸ ಮನಿಯೊಳಗ ಕೂತಾಗ ಫೋನ್ ಬಂತು. 'ದಾರಿ ಕಾಣದಾಗಿದೆ ರಾಘವೇಂದ್ರನೆ' ಅನ್ನೋ ರಿಂಗ್ ಟೋನ್ ಬಂತು ಅಂದ್ರ ಅದು ಚೀಪ್ಯಾಂದೇ ಅಂತ ಗೊತ್ತಾತು. ಆವಾ ನನಗ ಫೋನ್ ಮಾಡೋದು ಅಂತಾ ಟೈಮ್ ಒಳಗ ಮಾತ್ರ. ಏನು ಮಾಡಬೇಕು ಅಂತ ತಲಿ ಓಡದಿದ್ದಾಗ ನನ್ನ ತಲಿ ಭಾಡಿಗಿಗೆ ತೊಗೋತ್ತಾನ. ಹಿಂದ ಒಮ್ಮೆ ರೂಪಾ ವೈನಿ wine-y ಆದಾಗ ಫೋನ್ ಮಾಡಿದ್ದ. ಆವತ್ತು ಈ ರಿಂಗ್ ಟೋನ್ ಹಾಕಿಟ್ಟಿದ್ದೆ. ಇವತ್ತೂ ಹಂಗೇ ಏನೋ ಭಾನಗಡಿ ಇರಬೇಕು ಅಂತ ಹೇಳಿ, ಫೋನ್ ಎತ್ತಿ, ಹಲೋ, ಅಂದೆ.

ಏ....ದೋಸ್ತಾ.....ಸ್ವಲ್ಪ ಪ್ರಾಬ್ಲಮ್ ಆಗಿ ಬಿಟ್ಟದೋ! ಅಂತ ಹೇಳಿ ಚೀಪ್ಯಾ ಹೇಳಿದ.

ಏನಾತಲೇ? ಅಂತ ಕೇಳಿದೆ.

ತಡಿ, ಇಕಿ ರೂಪಾಗ ಕೊಡತೇನಿ. ಎಲ್ಲಾ ಅಕಿದಾ ಲಫಡಾ. ಅಕಿ ಕಡನೇ ಕೇಳಿಕೋ, ಅಂತ ಹೇಳಿ ಚೀಪ್ಯಾ ರೂಪಾ ವೈನಿಗೆ ಫೋನ್ ಕೊಟ್ಟಾ. ನನ್ನ ಫೋನ್ ಕಿವಿಯಿಂದ ಸ್ವಲ್ಪ ದೂರ ಹಿಡಕೊಂಡೆ. ಇಲ್ಲಂದ್ರ ರೂಪಾ ವೈನಿ tension ಒಳಗ ಇದ್ದಾಗ ಕಿವಿ ಕಿತ್ತು ಹೋಗೋ ರೀತಿ ಒದರತಾರ. ಕಿವಿ ತಮ್ಮಟೆಯ ತಮ್ಮಟೆ ಬಾರಿಸಿಬಿಡ್ತಾರ. ತಮಟಿ ಪೂಜಾರಿ ಗತೆ. ಈಗ ತಮಟಿ ಪೂಜಾರಿ ಯಾರು ಅಂತ ಕೇಳಬ್ಯಾಡ್ರೀ. ಅದೆಲ್ಲಾ ಇನ್ನೊಮ್ಮೆ.

ಮಂಗೇಶ!! ಮನಿಗೆ ಪೊಲೀಸರು ಬಂದು ಬಿಟ್ಟಾರೋ! ನನ್ನ ಹಿಡಕೊಂಡು ಬೈಲಿಕತ್ತಾರ. ನನ್ನ ಹಿಡಕೊಂಡು ಹೋಗಿ ಜೈಲಿಗೆ ಒಗಿತೇನಿ ಅನ್ನಲಿಕತ್ತಾರ. ಆವಾ ಇನ್ಸಪೆಕ್ಟರ್ ಅಂತೂ ಮಾತೊಗೊಮ್ಮೆ ತನ್ನ ಬಂದೂಕಿನ ಮ್ಯಾಲೆ ಕೈ ಆಡಸ್ತಾನ. ಎಲ್ಲೆ ನಮ್ಮನ್ನ ಎನ್ಕೌಂಟರ್ ಮಾಡಲಿಕ್ಕೆ ಬಂದು ಬಿಟ್ಟಾನೋ ಅಂತ ಹೆದರಿಕಿ ಆಗ್ಯದ. ಏನು ಮಾಡಬೇಕು? - ಅಂತ ವೈನಿ ಭಾಳ ಘಾಬ್ರಿಂದ ಕೇಳಿದರು.

ಪೊಲೀಸರು ಯಾಕ ಬಂದಾರ್ರೀ? ಅದೂ ನಿಮ್ಮಂತ ಸಾಧು ಮಂದಿ ಮನಿಗೆ? ಯಾರು ಏನು ಕಂಪ್ಲೈಂಟ್ ಕೊಟ್ಟಾರ? ಯಾರರ ಆಜೂ ಬಾಜೂ ಮಂದಿ ಜೋಡಿ ಜಗಳಾ, ಲಫಡಾ, ಗಿಫಡಾ ಮಾಡಿಕೊಂಡೀರಿ ಏನು? ಹಾಂ? - ಅಂತ ತನಿಖೆ ಮಾಡಿದೆ.

passport ಅರ್ಜಿ ತಪಾಸ್ ಮಾಡಲಿಕ್ಕೆ ಅಂತ......... ಅಂತ ಹೇಳಿ ವೈನಿ ಮಾತು ನಿಲ್ಲಿಸಿದರು.

ಹೋಗ್ಗೋ ವೈನಿ! passport ಅರ್ಜಿ ಸಲುವಾಗಿ ತನಿಖೆಗೆ ಬರೋದು ಭಾಳ ಸಾಮಾನ್ಯರಿ. ಅದಕ್ಯಾಕ ಅಷ್ಟು ಚಿಂತಿ ನಿಮಗ? ಅವರು ಕೇಳಿದ್ದಕ್ಕ ಉತ್ತರಾ ಕೊಟ್ಟು ಕಳಿಸರಿ. ಮುಗೀತು ಅಷ್ಟೇ. ಅದರ ಬದಲೀ ಏನೇನೋ ಅಂತೀರಲ್ಲಾ? ಪೊಲೀಸರು ಅಂದ್ರ ಅಷ್ಟ್ಯಾಕ ಹೆದರಿಕೊಳ್ಳತೀರಿ? ಹಾಂ? - ಅಂತ ಕೇಳಿದೆ.

ಅದು ಏನಾಗ್ಯದ ಅಂದ್ರ, ಆ passport ಅರ್ಜಿ ತುಂಬಿದ್ದು ಏನೋ ದೊಡ್ಡ ತಪ್ಪಾಗಿ ಹೋಗ್ಯದ ಅಂತ. ಅದಕ್ಕ ಈವಾ inspector ನಮಗ ಆವಾಜ್ ಹಾಕ್ಲಿಕತ್ತಾನ. ತಪ್ಪ ತಪ್ಪ ಅರ್ಜಿ ತುಂಬಿ ಮಜಾಕ್, ಮಸ್ಕಿರಿ ಮಾಡ್ತೀರಿ ಏನು? ನಿಮ್ಮನ್ನ ಎಳಕೊಂಡು ಹೋಗ್ತೇನಿ, ಒಳಗ ಹಾಕ್ತೇನಿ, ಹೋದ್ರ ಒಂದು ಐದು ವರ್ಷ ಒಳಗೇ ಹೋಗ್ತೀರಿ, ಅಂತೆಲ್ಲಾ ಅಂದು ಹೆದರಿಸಲಿಕ್ಕೆ ಹತ್ಯಾನೋ. ಏನು ಮಾಡಲೋ? ಅಂತ ವೈನಿ ಹೊಯ್ಕೊಂಡರು.

ಹಾಂ?! ಇದೇನಾತು? ಏನು ತಪ್ಪಾತು ಅರ್ಜಿ ತುಂಬೋದ್ರಾಗ? ಅರ್ಜಿ ತುಂಬೋದ್ರಾಗ ತಪ್ಪಾದರ ಅರ್ಜಿ ರಿಜೆಕ್ಟ್ ಮಾಡಿ ಹಿಂದ ಕಳಿಸಬೇಕು. ಅದರ ಬದಲೀ ಮನಿಗೆ ಬಂದು ಮಂದಿಗೆ ಧಮಕಿ ಕೊಡ್ತಾರ ಅಂದ್ರ ಏನಿರಬಹುದು? ಅಂತ ತರಹ ತರಹದ ವಿಚಾರಗಳು ತಲಿಯೊಳಗ ಬಂದವು.

ರೀ ವೈನಿ, ಬಂದ ಪೊಲೀಸ ಸಾಹೇಬರ ಹೆಸರು ಏನ್ರೀ? ಕೇಳ್ರೀ ಅವರ ಕಡೆ, ಅಂತ ಹೇಳಿದೆ.

ವೈನಿ ಕೇಳಿ ಹೇಳಿದರು.

ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್, ಅಂತ ವೈನಿ ಹೇಳಿದಂಗ(?) ನನಗ ಕೇಳಿಸ್ತು!!!!!

ಹಾಂ! ಏನಂತ ಹೆಸರು? ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್ ಅಂತನಾ? ಯಾರ್ರೀ ಆವಾ? ಆ ದೊಡ್ಡ ಎನ್ಕೌಂಟರ್ ಸ್ಪೆಷಲಿಸ್ಟ್ ಸತ್ತು ಹೋಗಿ ಐದು ವರ್ಷದ ಮ್ಯಾಲಾತು. ಯಾರು ಇವಾ ಅವರ ಹೆಸರು ಹೇಳಿಕೊಂಡು ಬಂದಾನ? ಕೊಡ್ರೀ ಅವನ ಕೈಯ್ಯಾಗ ಫೋನ್. ನಾನೇ ಮಾತಾಡ್ತೇನಿ, ಅಂತ ಹೇಳಿದೆ. ಯಾವ ಹಾಪ್ಸೂಳಿಮಗ ಆಟಾ ಹಚ್ಯಾನ?

ಹಲೋ! ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್ ಹಿಯರ್. ನೀವು ಯಾರು? - ಅಂತ ಒಂದು ಗಡಸ ಧ್ವನಿ ಕೇಳಿ ಬಂತು.

ಯಾರು? ವಿಜಯ್ ಸಲಸ್ಕರ್ರಾ? ಇನ್ನೊಮ್ಮೆ ಹೆಸರು ಹೇಳ್ರೀ. ಸರಿ ಕೇಳಲಿಲ್ಲ, ಅಂತ ಹೇಳಿದೆ.

ವಿನಯ್ ಖಲಸ್ಕರ್. ಎನ್ಕೌಂಟರ್ ಸ್ಪೆಷಲಿಸ್ಟ್ ಖಲಸ್ಕರ್. ಸಲಸ್ಕರ್ ಅಲ್ಲಾ, ಅಂತ ಹೇಳಿದ ಆ ಕಡೆಯ ಮನುಷ್ಯ.

ಹಾಂ! ಈಗ ತಿಳೀತು ಇವಾ ಯಾರು ಅಂತ.

ವಿನಯ್ ಖಲಸ್ಕರ್. ನಮ್ಮ ಟೌನ್ ಪೋಲಿಸ್ ಸ್ಟೇಷನ್ ಒಳಗ ಇದ್ದಾನ. ಸಬ್ ಇನ್ಸಪೆಕ್ಟರ್ ಅಂತ ಹೇಳಿ. ಹೆಸರು ಅಡ್ಡೆಸರು ಎಲ್ಲಾ ದಿವಂಗತ ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್ ಅವರ ಹಾಂಗ ಇರೋದಕ್ಕ ತಾನು ಎನ್ಕೌಂಟರ್ ಸ್ಪೆಷಲಿಸ್ಟ್ ಅಂತ ತಿಳಕೊಂಡು ಏನೇನೋ ಮಂಗ್ಯಾನಾಟ ಮಾಡ್ತಿರ್ತಾನ. ಈ ಖಲಸ್ಕರ್ ಸಾಹೇಬಾ ಒಂದು ತರಹದ ಎನ್ಕೌಂಟರ್ ಸ್ಪೆಷಲಿಸ್ಟ್ ಹೌದು. ಆದ್ರ ಗೂಂಡಾ ಮಂದಿ ಎನ್ಕೌಂಟರ್ ಮಾಡೋದಿಲ್ಲ. ಮಾಡಲಿಕ್ಕೆ ಧಾರವಾಡ ಒಳಗ ಎನ್ಕೌಂಟರ್ ಮಾಡೋವಂತಹ ಖತರ್ನಾಕ ಗೂಂಡಾಗಳು ಇಲ್ಲವೇ ಇಲ್ಲ. ಅದಕ್ಕ ಈ ವಿನಯ್ ಖಲಸ್ಕರ್ ಹೋಗಿ ಹೋಗಿ ಮಂಗ್ಯಾಗಳನ್ನ ಎನ್ಕೌಂಟರ್ ಮಾಡ್ತಾನ. ಅದೂ ಥೇಟ್ ಮುಂಬೈ ಪೋಲೀಸರ ಗತೆ. ಸುಪಾರಿ ತೊಗೊಂಡೇ ಮಾಡ್ತಾನ. ಈ ಹಾಪಾ ವಿನಯ್ ಖಲಸ್ಕರ್ ಮಂಗ್ಯಾಗಳ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದೆ ಒಂದು ದೊಡ್ಡ ಕಥೆ. ಅದನ್ನ ಶಾರ್ಟಾಗಿ ಹೇಳಿ ಬಿಡ್ತೇನಿ.

ಮೊದಲೇ ಹೇಳಿದಂಗ ಇವನ ಹೆಸರು ಬ್ಯಾರೆ ವಿಜಯ್ ಸಲಸ್ಕರ್ ಅನ್ನುವ ಫೇಮಸ್ ಎನ್ಕೌಂಟರ್ ಸ್ಪೆಷಲಿಸ್ಟ್ ಹೆಸರಿಗೆ ಹೊಂದೋದ್ರಿಂದ ಇವನೂ ಅವರ ಟೈಪ್ ಪೋಸ್ ಕೊಡ್ಲಿಕತ್ತಿದ್ದ. ಮಾತಿಗೊಮ್ಮೆ ಸರ್ವಿಸ್ ರಿವಾಲ್ವರ್ ತೆಗೆದು ಕಂಡಕಂಡವರಿಗೆ ಹೆದರಿಸೋದು, ಇನ್ನೂ ಹೆಚ್ಚು ಸಿಟ್ಟು ಬಂದ್ರ ರಿವಾಲ್ವರ್ ಬಾಯಾಗ್ ಹೆಟ್ಟಿ, ಕುದರಿ ಎಳದು ಢಂ ಅನ್ನಿಸಲಿ? ಅಂತ ಹೆದರಿಸೋದು ಮಾಡ್ಲಿಕತ್ತುಬಿಟ್ಟಿದ್ದ. ಧಾರವಾಡ ಮಂದಿ ಭಾಳ ಶಾಂತ ಮಂದಿ. ಅಲ್ಲಿ ಕಳ್ಳರು, ಕಾಕರು, ಪೋಕರು ಸಹಿತ ಭಾಳ ಡೀಸೆಂಟ್. ಇವಾ ಪೋಲಿಸ್ ಖಲಸ್ಕರ್ ಮಾತಿಗೊಮ್ಮೆ ರಿವಾಲ್ವರ್ ತೆಗೆದು ಕಾನಪಟ್ಟಿ ಮ್ಯಾಲೆ ಇಡೋದು ನೋಡಿ, ಎಲ್ಲರೂ ಹೆದರಿ, ಎಲ್ಲಾ ಒದ್ದಿ ಮಾಡಿಕೊಂಡು, ತೊಳಕೊಳ್ಳಲಿಕ್ಕೆ ನೀರಿಲ್ಲ ಅಂತ ಸೀದಾ ಪೋಲೀಸ್ SP ಸಾಹೇಬರ ಆಫೀಸ್ ಗೆ ಹೋಗಿ ದಾಂಧಲೆ ಮಾಡಿಬಿಟ್ಟರು. ನಿಮ್ಮ ಇನ್ಸ್ಪೆಕ್ಟರಗ ಮಾತಿಗೊಮ್ಮೆ ಬಂದೂಕು ತೋರಿಸೋದನ್ನ ನಿಲ್ಲಿಸಲಿಕ್ಕೆ ಹೇಳ್ರೀ. ಇಲ್ಲಂದ್ರ ಬ್ಯಾರೆ ಕಡೆ ವರ್ಗಾ ಮಾಡ್ರೀ. ಇವಾ ಈ ಪರಿ ಬಂದೂಕು ತೋರ್ಸಿ, ನಾವು ದಿನಕ್ಕ ನಾಕ್ನಾಕ ಸರೆ ಎಲ್ಲಾ ಒದ್ದಿ ಮಾಡಿಕೊಂಡು, ನೀರ ಬ್ಯಾರೆ ಸಿಗದೇ, ನಿಮ್ಮ ಮನಿಗೆ ಬಂದು ನಿಮ್ಮ ಬಚ್ಚಲದಾಗ ತೊಳಕೊಳ್ಳಬೇಕೇನು? ಅಂತ ಧರಣಿ ಮಾಡಿದರು.

SP ಸಾಹೇಬರು ಇನ್ಸ್ಪೆಕ್ಟರ್ ಖಲಸ್ಕರನನ್ನ ಕರೆದು, ಯಾಕಪಾ ಕಂಡ ಕಂಡವರಿಗೆ ಬಂದೂಕ ತೋರಸ್ತೀ? ಇಲ್ಲೆ ಯಾರನ್ನೂ ಎನ್ಕೌಂಟರ್ ಮಾಡಲಿಕ್ಕೆ ಆಗೋದಿಲ್ಲ. ನೀನು ಪಿಸ್ತೂಲ್ ಬಿಟ್ಟು, ಬರೆ ಮ್ಯಾಲಿನ ಚರ್ಮದ ಹೋಲ್ಡರ್ ಹಾಕ್ಕೊಂಡು ಹೋದರೂ ಓಕೆ. ಮತ್ತ ಹೆಚ್ಚಿನ ಗುಂಡೆಲ್ಲಾ ಟಿಸಮದ್ದ ಇರ್ತಾವ. ಇದು ಮುಂಬೈ ಅಲ್ಲಪಾ. ಸಲಸ್ಕರ್ ಇದ್ದರು ಮುಂಬೈ ಒಳಗ. ನೀ ಇಲ್ಲೆ ಇದ್ದಿ. ಎನ್ಕೌಂಟರ್ ಹುಚ್ಚು ಕಮ್ಮಿ ಮಾಡಿಕೋಪಾ. ಯಾಕ ಪದೇ ಪದೇ ಗನ್ನ್ ತೋರಸ್ತೀ? ಅಂತ ಕೇಳಿದರು.

ಆವಾ ಖಲಸ್ಕರ್ ಮಾತಾಡಲಿಲ್ಲ. ಕಿಸೆದಿಂದ ಒಂದು ಕಾಗದ ತೆಗೆದು ತೋರ್ಸಿದ. ಏನೋ ಮೆಡಿಕಲ್ ಸರ್ಟಿಫಿಕೇಟ್ ಇದ್ದಂಗ ಇತ್ತು. SP ಸಾಹೇಬರು ಓದಿ ನೋಡಿದರು. ಹಾಂ! ಅಂತ ಘಾಬರಿ ಆದರು.

ಏನಪಾ ಖಲಸ್ಕರ್? ಏನೋ ವಿಚಿತ್ರ ಬ್ಯಾನಿ ಅದಲ್ಲೋ ನಿನಗ? ದಿನಕ್ಕ ಹತ್ತು ಮಂದಿಗೆ ಬಂದೂಕ ತೋರಿಸಲಿಲ್ಲ ಅಂದ್ರ ಎಚ್ಚರ ತಪ್ಪಿ ಬೀಳ್ತೀಯಂತ? ಹಾಂ? ಅದಕ್ಕೆ ಮಂದಿಗೆಲ್ಲಾ ಗನ್ ತೋರ್ಸಿಕೋತ್ತ ಅಡ್ಯಾಡತೀಯಾ? ಇದು ದೊಡ್ಡ ಪಂಚಾಯತಿ ಆತಲ್ಲಪಾ? ಒಂದು ಕೆಲಸಾ ಮಾಡು, ಅಂದ್ರು SP ಸಾಹೇಬರು.

ನೋಡು....ಧಾರವಾಡದಾಗ ಮಂಗ್ಯಾನ ಹಾವಳಿ ಬಹಳ. ದಿನಕ್ಕ ಹತ್ತರೆ ಮಂದಿ ಫೋನ್ ಮಾಡಿ, ಮಂಗ್ಯಾ ಬಂದು ತ್ರಾಸು ಕೊಡ್ಲೀಕತ್ತಾವ, ಪೋಲೀಸರನ್ನ ಕಳಸರೀ, ಅಡಗಿಮನ್ಯಾಗ ನುಗ್ಗಿ ಹಾವಳಿ ಎಬ್ಬಿಸ್ಯಾವು, ಅದು ಇದು, ಅಂತ ಹೇಳತಿರ್ತಾರ. ಎಂತಾ ಮಂದಿ ನೋಡು? ಇವರ ಕಾಂಪೌಂಡ್ ಒಳಗ ಮಂಗ್ಯಾ ಬಂದ್ರ ನಾವು ಪೊಲೀಸರು ಹೋಗಿ ಓಡಿಸಬೇಕಂತ. ಏನು ಬಂತಪಾ ಪೋಲೀಸ್ ನೌಕರಿ ಅಂದ್ರ? ಅಲ್ಲೆ ಮುಂಬೈದಾಗ ಶ್ರೀಮಂತರ ಏರಿಯ ಒಳಗ ರಾತ್ರಿ ನಾಯಿ ಒದರಿದರ, ಬಂದು ನಾಯಿ ಓಡಸರಿ ಅಂತ ಪೊಲೀಸರಿಗೆ ಫೋನ್ ಮಾಡ್ತಾರಂತ. ಇಲ್ಲೆ ಮಂಗ್ಯಾನ ಓಡಿಸಿರಿ ಅಂತ ಫೋನ್ ಮಾಡ್ತಾರ ನೋಡಪಾ. ಇನ್ನು ಮುಂದೆ ಅಂತಹ ಫೋನ್ ಬಂದಾಗ ನೀನೇ ಹೋಗೋ ಖಲಸ್ಕರ್. ಹೋಗಿ ಮಂಗ್ಯಾಗಳಿಗೆ ಗನ್ನೂ ತೋರಿಸು, ಬೇಕಾದ್ರ ಎನ್ಕೌಂಟರ್ ಸಹಿತ ಮಾಡು. ಹಾಂಗ ಮಾಡಿ ಬೇಕಾದ್ರ ನಿನ್ನ ತಲಬು ತೀರಿಸ್ಕೋ. ಆದ್ರ ಮಂದಿಗೆ ಮಾತ್ರ ಬಂದೂಕು ತೋರಿಸಿ ಅವರಾ ಚಣ್ಣಾ ಒದ್ದಿ ಮಾಡಿಸಬ್ಯಾಡಾ. ಓಕೆ?  - ಅಂತ ವಿನಯ್ ಖಲಸ್ಕರ್ ಗೆ ಹೇಳಿದ್ರು.

ಹಾಳಾಗಿ ಹೋಗ್ಲೀ. ಮನುಷ್ಯಾರನ್ನ ಎನ್ಕೌಂಟರ್ ಮಾಡಲಿಕ್ಕೆ ಆಗಲಿಲ್ಲ. ಹೋಗಿ ಮಂಗ್ಯಾಗಳನ್ನೇ ಮಾಡ್ತೇನಿ. ಅಕಟಕಟ, ಅಂತ ಹೇಳಿ ಒಪ್ಪಿಕೊಂಡ ವಿನಯ್ ಖಲಸ್ಕರ್. ಆವತ್ತಿಂದ ಆವಾ ಮಂಗ್ಯಾ ಎನ್ಕೌಂಟರ್ ಸ್ಪೆಷಲಿಸ್ಟ್ ಅಂತನೇ ಫೇಮಸ್. ಯಾರೇ ದೊಡ್ಡ ಮನುಷ್ಯಾರ ಮನಿಗೆ ಮಂಗ್ಯಾ ಬರಲಿ, ಅವರು ಕಂಟ್ರೋಲ್ ರೂಮಿಗೆ ಫೋನ್ ಮಾಡ್ತಾರ. ಕಂಟ್ರೋಲ್ ರೂಮಿಂದ ವಯರ್ಲೆಸ್ ಮೇಲೆ, ಆಪರೇಷನ್ ಮಂಗ್ಯಾ, ಆಪರೇಷನ್ ಮಂಗ್ಯಾ, ಅಂತ broadcast ಆಗ್ತದ. ಅದು ಕೇಳು ತಡಾ ಇಲ್ಲಾ, ನಮ್ಮ ಖಲಸ್ಕರ್ ಸಾಹೇಬಾ, ಎಲ್ಲೊ ದೊಡ್ಡ ಅಂಡರ್ವರ್ಲ್ಡ್ ಡಾನನೇ ಸಿಕ್ಕು ಬಿಟ್ಟನೋ ಅನ್ನವರಂಗ ಪಟಪಟಿ ಹತ್ತಿ ಓಡ್ತಾನ. ಮಂಗ್ಯಾಗಳು ಭಾಳ ಶಾಣ್ಯಾ. ಗಿಡದ ಮ್ಯಾಲೆ, ಭಾಳ ಎತ್ತರದಾಗ ಕೂತಿರ್ತಾವ. ಈ ಯಬಡ ಪೋಲೀಸಪ್ಪನ ಮಾಮೂಲಿ ರಿವಾಲ್ವರ್ ರೇಂಜ್ ಅಷ್ಟು ದೂರ ಇಲ್ಲ ಅಂತ ಅವಕ್ಕ ಗೊತ್ತ ಅದ. ಪೊಲೀಸನ ನೋಡಿ, ಹೀ! ಅಂತ ಹಲ್ಲು ಕಿರಿದು ಅಣಗಿಸ್ತಾವ. ಖಲಸ್ಕರಗ ಇನ್ನೂ ಜಾಸ್ತಿ ಸಿಟ್ಟು ಬಂದು ಗುಂಡು ಹಾರಿಸೇ ಬಿಡ್ತಾನ. ಆ ಗುಂಡೇನು ಮಂಗ್ಯಾಗಳಿಗೆ ಬಿಳೋದಿಲ್ಲ. ಮಂಗ್ಯಾಗಳು ಹೀ! ಹೀ! ಖೀ! ಖೀ! ಅಂತ ಚೀರಿಕೋತ್ತ ಮತ್ತೊಂದು ಕಾಂಪೌಂಡ್ ಗೆ ಜಿಗಿತಾವ. ಮತ್ತ ಕಂಟ್ರೋಲ್ ರೂಮಿಗೆ ಫೋನ್, ಮತ್ತ ಖಲಸ್ಕರ್ ಗೆ ಬುಲಾವಾ, ಮತ್ತ ಅದೇ ರಿಪೀಟ್. ಮಂಗ್ಯಾ ಎನ್ಕೌಂಟರ್ ಸ್ಪೆಷಲಿಸ್ಟನ ಕಥಿ ಇದು.

ನಮಸ್ಕಾರ ನಮಸ್ಕಾರ ಖಲಸ್ಕರ್ ಸಾಹೇಬರಾ! ಏನು ಎಲ್ಲಾ ಆರಾಮಾ? ಏನು ನಮ್ಮ ದೋಸ್ತ ಚೀಪ್ಯಾನ ಮನಿಗೆ ಮಂಗ್ಯಾಗೋಳು ಬಂದಾವ ಏನು? ಮಂಗ್ಯಾಗಳನ್ನ ಎನ್ಕೌಂಟರ್ ಮಾಡಲಿಕ್ಕೆ ಬಂದವರು ಅದನ್ನ ಮಾಡಿ ಹೋಗ್ರೀಪಾ. ಯಾಕ ಪಾಪ ಹೆಂಗಸೂರಿಗೆ, ಅವರಿಗೆ ಇವರಿಗೆ, ಪಾಪದ ಮಂದಿಗೆಲ್ಲಾ ನಿಮ್ಮ ಪಿಸ್ತೂಲ್ ತೋರಿಸಿ ಅಂಜಸ್ತೀರಿ? ಹಾಂ? - ಅಂತ ಫೋನಿನ್ಯಾಗ ಕುಹಕವಾಗಿ ಕೇಳಿದೆ.

ನನ್ನ ಮಾತು ಕೇಳಿ ಖಲಸ್ಕರಗ ಎಲ್ಲೋ ಖಾರಾ ತುರುಕಿ ಹೆಟ್ಟಿದಾಂಗ ಆತು.

ಸ್ಟುಪಿಡ್! ಈಡಿಯಟ್! ಯಾರ್ರೀ ನೀವು? ನಾನು ಮಂಗ್ಯಾ ಎನ್ಕೌಂಟರ್ ಮಾಡಲಿಕ್ಕೆ ಬಂದಿಲ್ಲ. ಇಲ್ಲಿ ಇರೋ ರೂಪಾಬಾಯಿ ಶ್ರೀಪಾದರಾವ್ ಡಕ್ಕನೆಕರ್ ಅನ್ನೋ ಹೆಂಗಸನ್ನ ಅರೆಸ್ಟ್ ಮಾಡಿಕೊಂಡು ಹೋಗಲಿಕ್ಕೆ ಬಂದೇನಿ. ಅರೆಸ್ಟ್ ಮಾಡಿಕೊಂಡು ಹೊಂಟಿದ್ದೆ. ಏನೋ ಒಂದು ಸರೆ ನಿಮಗ ಫೋನ್ ಮಾಡು ಅಂದ್ರು. ಮಾಡಿದರ ಏನೇನೋ ಹಚ್ಚಿರೆಲ್ಲಾ? ಯಾರ ನೀವು? ಹಾಂ? ಅಂತ ಪೋಲೀಸ್ ಭಾಷೆಯಲ್ಲಿ ಅಬ್ಬರಿಸಿದ ಖಲಸ್ಕರ.

ಹೇಳೋದು ಕೇಳಿಸಿಕೊಳ್ಳಿರಿ ಸರ್ರಾ. passport ಅರ್ಜಿ verification ಗೆ ಬಂದೀರಿ ಅಂತ ಗೊತ್ತಾತು. ಅರ್ಜಿ ಒಳಗ ತಪ್ಪು ಇದ್ದರ,  ಏನು ತಪ್ಪು ಅಂತ ಹೇಳಿ ಹೋಗ್ರೀ. ಅರ್ಜಿ ತೆಗೆದು ಮಸಡಿ ಮ್ಯಾಲೆ ಒಗೆದು ಹೋಗ್ರೀ. ಅದಕ್ಯಾಕ ಇಷ್ಟು ಗರಂ ಆಗ್ತೀರಿ? ಅರೆಸ್ಟ್ ಮಾಡಿಕೊಂಡು ಹೋಗುವಂತಾದ್ದು ಏನು ಮಾಡ್ಯಾರ ನಮ್ಮ ರೂಪಾ ವೈನಿ? ಹಾಂ? - ಅಂತ ಕೇಳಿದೆ.

ಏನು ಮಾಡ್ಯಾರ? ಏನು ಮಾಡ್ಯಾರ? ಅದನ್ನ ನನ್ನ ಕಡೆ ಏನ ಕೇಳ್ತಿಯೋ? ಅವರನ್ನೇ ಕೇಳು, ಅಂತ ಪೋಲೀಸರ ಸ್ಟ್ಯಾಂಡರ್ಡ್ ಆದ ಏಕವಚನಕ್ಕೆ ಇಳಿದ ಪೋಲೀಸಪ್ಪ ಫೋನ್ ರೂಪಾ ವೈನಿ ಕೈಯಾಗ ಕೊಟ್ಟ.

ಏನಂತ್ರೀ ವೈನಿ ಆ ಪೋಲೀಸಂದು? ಯಾಕ ನಿಮ್ಮನ್ನ ಹಿಡಕೊಂಡು ಹೋಗ್ತೇನಿ ಅಂತ ಕೂತಾನ ಆವಾ? passport ಅರ್ಜಿ ತಪಾಸಣೆಗೆ ಬಂದವನಿಗೆ ಏನರ ಅಂದು, ಬೈದು ಮಾಡಿಬಿಟ್ಟಿರೋ ಏನು? ಪೊಲೀಸರಿಗೆ ಹಾಂಗೆಲ್ಲಾ ಏನೂ ಅನ್ನಬಾರದು. ಏನರೆ ಲಫಡಾ ಮಾಡಿಕೊಂಡೀರೇನು? ಹಾಂ? - ಅಂತ ಕೇಳಿದೆ.

ನನ್ನ passport ಅರ್ಜಿ ಒಳಗ ಯಾರೋ ಬ್ಯಾರೆ ಅವರದ್ದು ಭಾವಚಿತ್ರ ಬಂದು ಬಿಟ್ಟದ!!! - ಅಂತ ವೈನಿ ಏನೋ ಬಾಂಬ್ ಹಾಕಿದರು.

ಹಾಂ! ಅಂತ ಉದ್ಗಾರ ಮಾಡಿದೆ. ಖುರ್ಚಿಂದ ಕೆಳಗ ಬಿದ್ದೆ. almost. ಇವರ passport ಅರ್ಜಿ ಒಳಗ ಬ್ಯಾರೆ ಅವರ ಫೋಟೋ. ಇದು ಹ್ಯಾಂಗ ಸಾಧ್ಯ?!

ವೈನಿ....ವೈನಿ....ಏನನ್ನಲಿಕತ್ತೀರಿ? ಭಾವಚಿತ್ರ ಬದಲೀ ಆಗಿ ಬಿಟ್ಟದಾ? ಅದು ಹ್ಯಾಂಗ್ರೀ? ಫೋಟೋಕ್ಕ ಸರೀತ್ನಾಗಿ ಅಂಟು ಹಚ್ಚಿದ್ರೊ ಇಲ್ಲೋ? ಹಾಂ? - ಅಂತ ಕೇಳಿದೆ.

ನನಗ ಗೊತ್ತಿಲ್ಲೋ! ಅಂದು ಬಿಟ್ಟರು ರೂಪಾ ವೈನಿ. ಫೋಟೋ ಹಚ್ಚಿ ಕಳಿಸಿದವರು ಇವರೇ ಹೌದೋ ಅಲ್ಲೋ ಅಂತ ಸಂಶಯ ಬಂತು. ನನಗೇನು ಗೊತ್ತಿತ್ತು ಎಲ್ಲಾ ಮರ್ಮ ಇದೇ ಪ್ರಶ್ನೆಯಲ್ಲಿ ಅದ ಅಂತ.

ಪೂರ್ತಿ passport ಫಾರ್ಮ್ ನಾನೇ ತುಂಬಿಕೊಟ್ಟೇನಿ. ಸಹಿ ಮಾಡಿಸಿ ಬಂದೇನಿ. ಫೋಟೋ ಒಂದು ಹಚ್ಚಿ, ಡೀಡಿ ಇಟ್ಟು, ಕಳಿಸರಿ ಅಂತ ಹೇಳಿ ಬಂದೇನಿ. ಏನು ಲಫಡಾ ಮಾಡಿಕೊಂಡಿರಬಹುದು ರೂಪಾ ವೈನಿ?

ವೈನಿ!!!!!!!!!!!!!!!!!!!!!! ಯಾರ ಫೋಟೋ ಬಂದದ ಅಂತ್ರೀ? - ಅಂತ ಚೀರಿದೆ.

ಮಂಗೇಶ.....ಅದು...ಅದು....ನನ್ನ passport ಅರ್ಜಿ ಒಳಗ ಯಾರೋ ದೊಡ್ಡ ಮಂದಿ ಭಾವಚಿತ್ರ ಬಂದು ಬಿಟ್ಟದ ಅಂತೋ.  ಅದಕ್ಕ ಈ ಪೋಲೀಸರ ಮ್ಯಾಲೆ ಪ್ರೆಷರ್ ಬಂದದ ಅಂತ. ಸಣ್ಣಾ ಪುಟ್ಟಾ ತಪ್ಪಿಗೆ ಯಾರೂ ಹಿಡಕೊಂಡು ಹೋಗಂಗಿಲ್ಲಂತ. ಆದ್ರ ದೊಡ್ಡ ಮಂದಿ ಫೋಟೋ ಹಚ್ಚಿದ್ದು ದೊಡ್ಡ ತಪ್ಪಂತ. ಅದಕ್ಕ ಹಿಡಕೊಂಡು ಹೋಗಿ ಜೈಲಾಗ ಒಗಿತೇನಿ ಅಂತ ಕೂತಾನ ಈ ಪೋಲೀಸಾ. ಏನು ಮಾಡಲೋ? ಬಂದು ಬಿಡಸಲಾ? ಹ್ಯಾಂಗಾರಾ ಮಾಡಿ ಬಿಡಿಸೋ. ಒಮ್ಮೆ ಜೈಲಿಗೆ ಹೋಗಿ ಬಂದೆ ಅಂದ್ರ ಮುಗೀತು ನಮ್ಮ ಮನಿತನದ ಕಥಿ. ನೀ ಹ್ಯಾಂಗೂ ವಕೀಲಿಕಿ ಅರ್ಧಾ ಮರ್ಧಾ ಮಾಡಿಕೊಂಡಿಯೆಲ್ಲಾ? ಬಂದು ಬಿಡಿಸೋ, ಅಂತ ವೈನಿ ಫೋನಿನಲ್ಲೇ ಹೊಯ್ಕೊಂಡರು.

ಶಿವನೇ ಶಂಭುಲಿಂಗ!

ಭಾವಚಿತ್ರದಿಂದ passport ನಲ್ಲಿ ಇದೆಂತ ಭಾನಗಡಿ?

ವೈನಿ....ಆ ಪೋಲೀಸಗ ಫೋನ್ ಕೊಡ್ರೀ, ಅಂತ ಹೇಳಿದೆ. ವೈನಿ ಕೊಟ್ಟರು.

ರೀ....ಖಲಸ್ಕರ್ ಸಾಹೇಬ್ರಾ, ಒಂದು ಐದು ನಿಮಿಷ ನಿಲ್ಲರೀ. ನಾ ಬಂದು ಮಾತಾಡ್ತೇನಿ. ಪ್ಲೀಸ್, ಅಂತ ಹೇಳಿದೆ.

ನೀ ಯಾವ ದೊಡ್ಡ ಮನುಷ್ಯಾ ಅಂತ ನಾ ನಿಲ್ಲಲೋ? ನೀ ಏನ ಮಿನಿಸ್ಟರ್ ಏನಾ? ಗವರ್ನರ್ ಏನಾ? ನಾ ಹೊಂಟೆ ಇಕಿ ರೂಪಾಬಾಯಿ ಅನ್ನವರನ್ನ ಅರೆಸ್ಟ್ ಮಾಡಿಕೊಂಡು, ಅಂತ ಪೊಲೀಸ ಇನ್ಸ್ಪೆಕ್ಟರ್ ಖಲಸ್ಕರ್ ರೋಪ್ ಹಾಕಿದ.

ಈ ಪೋಲೀಸಂಗ ಅವನದೇ ಭಾಷಾ ಒಳಗ ಮಾತಾಡಿದ್ರ ಮಾತ್ರ ತಿಳಿತದ ಅಂತ ಗೊತ್ತಾತು.

ರೀ ಖಲಸ್ಕರ್ ಸಾಹೇಬ್ರಾ....ನಾ ನಿಮ್ಮ SP ಸಾಹೇಬರ ಹೆಂಡತಿ ಗುರು. ತಿಳೀತಾ? ನಿಮ್ಮ SP ಸಾಹೇಬರ ಹೆಂಡತಿ ನನ್ನ ಸತ್ಸಂಗಕ್ಕ ಬರ್ತಾರ. ಇವತ್ತ ಸಂಜಿ ಮುಂದ ಅದ ಸತ್ಸಂಗ. ಸಿಕ್ಕಾಗ ಹೇಳತೇನಿ. ನಿಮ್ಮ ಬಗ್ಗೆ ಭಾಳ ತಾರೀಫ್ ಮಾಡ್ತೇನಿ. ಹೋಗೋದಾದ್ರ ಹೋಗ್ರೀ. ಇನ್ನು ಇಪ್ಪತ್ತು ನಿಮಿಷದಾಗ ನಿಮ್ಮ ಪೋಲಿಸ್ ಸ್ಟೇಷನ್ ಗೇ ಬಂದು ಹಾಜರ್ ಆಗ್ತೇನಿ. ಜೊತಿಗೆ SP ಸಾಹೇಬರು, ಅವರ ಹೆಂಡತಿ ಎಲ್ಲಾರೂ ಇರ್ತಾರ. ಏನು ಮಾಡ್ಲೀ ಹೇಳ್ರೀ? - ಅಂತ ಗಂಭೀರ ದನಿಯೊಳಗ ಹೇಳಿದೆ. ಇಟ್ಟೆ ಬತ್ತಿ.

SP ಸಾಹೇಬರ ಹೆಂಡತಿ ನನಗ ಗೊತ್ತು ಅಂತ ಖಲಸ್ಕರ ಸಾಹೇಬರಿಗೆ ಗೊತ್ತಾದ ಕೂಡಲೇ ಫುಲ್ ಚೇಂಜ್ ಆದಾ ಮಂಗ್ಯಾ ಎನ್ಕೌಂಟರ್ ಸ್ಪೆಷಲಿಸ್ಟ್. ಏಕದಂ ಟೋನ್ ಚೇಂಜ್ ಆತು ಮಂಗ್ಯಾನಿಕೆಂದು.

ಹಾಂಗ್ರೀ? ಅಮ್ಮಾವರು ಗೊತ್ತ ಏನ್ರೀ? ಬರ್ರಿ ಸರ್ರಾ. ಲಗೂನ ಬರ್ರಿ. ನೋಡ್ರೀ...ಬಂದು ನೀವೇ ನೋಡ್ರೀ..... ನಿಮ್ಮ ವೈನಿಯವರು ಏನು ಮಾಡಿಕೊಂಡು ಕೂತಾರ ಅಂತ? ನೀವೇ ಹೇಳೀರಿಯಂತ ನಾ ಏನು ಮಾಡ್ಲೀ ಅಂತ. ಬರ್ರಿ ಸರ್ರಾ. ಗಾಡಿ ಕಳಿಸಲಿ ಏನು? ಅಂತ ಕೇಳಿಬಿಟ್ಟ ಖಲಸ್ಕರ.

ಗಾಡಿ ಬೀಡಿ ಏನೂ ಬ್ಯಾಡ. ನಾ ಬಂದೇ ಬಿಡ್ತೇನಿ ಈಗ, ಅಂತ ಹೇಳಿ ಫೋನ್ ಇಟ್ಟೆ.

ಚೀಪ್ಯಾನ ಮನಿಗೆ ಹೊಂಟ್ರ ತಲಿಯೊಳಗ ಬರೇ ಇದೇ ವಿಚಾರ.ಇದು ಹೆಂಗಪಾ ರೂಪಾ ವೈನಿ passport ಅರ್ಜಿ ಒಳಗ ಬ್ಯಾರೆ ಯಾರದ್ದೋ ಫೋಟೋ ಬಂದು ಬಿಟ್ಟದ? ಯಾರ ಫೋಟೋ ಬಂದಿರಬಹುದು? ಯಾರು ಅಷ್ಟ ದೊಡ್ಡ ಮನುಷ್ಯಾರು? ಅವರ ಫೋಟೋ ಬಂದು ಬಿಟ್ಟದ ಅಂತ ಹೇಳಿ ಪೊಲೀಸರು ಮನಿ ತನಕಾ ಬಂದು ರೂಪಾ ವೈನೀನ್ನ ಹಿಡಕೊಂಡು, ಜೈಲಿಗೆ ಹಾಕಲಿಕ್ಕೆ ಹೊಂಟಾರ.

ಇಷ್ಟೆಲ್ಲಾ ವಿಚಾರ ಮಾಡಿಕೋತ್ತ ಹೋಗೋ ತನಕಾ ಚೀಪ್ಯಾನ ಮನಿ ಬಂತು. ಮಂಗ್ಯಾ ಇನ್ಸ್ಪೆಕ್ಟರ್ ವಿನಯ್ ಖಲಸ್ಕರ್ ದೂರಿಂದನೇ ಸಿವಿಲ್ ಸಲ್ಯೂಟ್ ಉರ್ಫ್ ಹಾಪ್ ನಮಸ್ಕಾರ ಹೊಡೆದ. ಸಾಹೇಬರ ಹೆಂಡತಿ ಗುರು ಅಂದಿದ್ದಕ್ಕ ಗೌರವ ನೋಡ್ರೀ!

(ಸಶೇಷ. ಮುಂದುವರಿಯಲಿದೆ) (ಮುಂದಿನ ಭಾಗ - ೩ ಇಲ್ಲಿದೆ)

ಮಂಗ್ಯಾ ಎನ್ಕೌಂಟರ್ ಸ್ಪೆಷಲಿಸ್ಟ್ ವಿನಯ್ ಖಲಸ್ಕರ್ (ಊಹೆ)

Sunday, January 19, 2014

'ಭಾವ'ಚಿತ್ರದಿಂದಾದ ಭಾನಗಡಿ.....passport ಪುರಾಣ (ಭಾಗ - ೧)

ಏ ಮಂಗೂ.... ಏ ಮಂಗೂ....ಅಂತ ರೂಪಾ ವೈನಿ ಏನೋ ಭಾಳ ಅಕ್ಕರೆಯಿಂದ ಕರೆದರು. ಅವರು ತಮ್ಮ usual ಏ....ಮಂಗ್ಯಾ! ಲೇ ಮಂಗ್ಯಾ! ಮಂಗೇಶಿ! ಅಂತ ಕರೆಯೋದು ಬಿಟ್ಟು ತಾಯಿ ಮಗೂನ್ನ ಮಗೂ ಅಂತ ಕರೆದಾಂಗ ನಮ್ಮನ್ನ ಮಂಗೂ ಅಂತ ಕರೆಯೋದು ನೋಡಿ ಏನೋ ಕೆಲಸ ಅದ ಇವರಿಗೆ, ಅದಕ್ಕೇ ಈ extra fitting ಇಡ್ಲೀಕತ್ತಾರ ಅಂತ ಸಂಶಯ ಬಂತು.

ಏನ್ರೀ ವೈನಿ? ಏನು ಇವತ್ತು ಭಾಳ ಪ್ರೀತಿಯಿಂದ ಮಂಗೂ ಅಂತ ಕರಿಲೀಕತ್ತೀರಿ? ಹಾಂ?- ಅಂತ ಕೇಳಿದೆ.

ನಂದೊಂದು passport ಆಗಬೇಕೋ, ಅಂದ್ರು ವೈನಿ.

passport ರೀ? ಭಾರಿ ಆತಲ್ಲರೀ. ಏನು ಎಲ್ಲಾ ಹೋಗಿ passport ಮಾಡಿಸಬೇಕು ಅಂತ ತಲಿಯಾಗ ಬಂದು ಬಿಟ್ಟದ? ಹಾಂ? - ಅಂತ ಕೇಳಿದೆ.

ಬೇಕಪಾ. ನಾನೇ ರೂಪಾಬಾಯಿ ಅಂತ ಖಾತ್ರಿ ಮಾಡಿಕೊಳ್ಳಲಿಕ್ಕೆ ಅಂತ ಏನರ ಬೇಕಲ್ಲೋ? ಅದೇನೋ ಆಧಾರ್ ಕಾರ್ಡೋ ಸುಡುಗಾಡೋ ಕೊಡತೇನಿ ಅಂತ ಹೇಳಿದ್ದಾ ಆವಾ ನಂದಿನಿ ನಿಲೇಕಣಿ. ಎಲ್ಲಿ ಆಧಾರೋ, ಎಲ್ಲಿ ಉಡದಾರೋ, ಏನೋ ತಾನೋ? ಒಟ್ಟಿನ್ಯಾಗ ಆಧಾರ ಕಾರ್ಡ್ ಬರಲೇ ಇಲ್ಲ. ಈಗ ನನ್ನ ಕಡೆ ನನ್ನ ಹಳೇ ಕಾಲದ ಪಿಯೂಸಿ ಕಲಿತಿದ್ದಾಗ ಇದ್ದ ಕಾಲೇಜಿನ ಐಡೆಂಟಿಟಿ ಕಾರ್ಡ್ ಬಿಟ್ಟರ ಏನೂ ಇಲ್ಲ. ಆ ಹಳೆ ಐಡೆಂಟಿಟಿ ಕಾರ್ಡ್ ಯಾತಕ್ಕೂ ಬರೋದಿಲ್ಲ. ಅದಕ್ಕ ಒಂದು passport ಮಾಡಿಸಿಬಿಡೋಣ ಅಂತ, ಅಂತ ವೈನಿ ಹೇಳಿದರು.

ಈ ನಂದಿನಿ ನಿಲೇಕಣಿ ಯಾರ್ರೀ? ಅದೂ 'ಆವಾ' ನಂದಿನಿ ನೀಲೇಕಣಿ ಅಂತೀರಿ? ಅವನೋ ಅಕಿನೋ? ಲಿಂಗ ಸರಿ ಮಾಡಿಕೊಳ್ಳಿರಿ. ಅಂದ್ರ ಪುಲ್ಲಿಂಗನೋ ಸ್ತ್ರೀಲಿಂಗನೋ ಅಂತ ನಿಕ್ಕಿ ಮಾಡಿಕೊಳ್ಳಿರಿ ವೈನಿ, ಅಂತ ಹೇಳಿದೆ.

ನಂದಿನಿ ನಿಲೇಕಣಿ ಅಂತನೇ ಅವನ ಹೆಸರು. ಮೊದಲು ನಮ್ಮ ನಾಣಿ ಮಾಮಾನ ಜೋಡಿ ಇನ್ಫೋಸಿಸ್ ಒಳಗ ಇದ್ದಾ. ರಿಟೈರ್ ಆದ ಮ್ಯಾಲೆ ಆಧಾರ ಕಾರ್ಡ್ ಮಾಡೋದನ್ನ ಶುರು ಮಾಡಿದ್ದ ಅಂತ. ಆ ಆಧಾರ್ ಕಾರ್ಡ್ ಯೋಜನಾ ಕುಲಗೆಟ್ಟು ಹೋತು. ಈಗ ಈ ನಂದಿನಿ ಎಲ್ಲೆ ಹೋದನೋ ಏನೋ? ಅಂತ ವೈನೀ ಹೇಳಿದರು.

ಈಗ ತಿಳೀತು. ಅದೂ ಇನ್ಫೋಸಿಸ್ ಅಂದ ಮ್ಯಾಲೆ.

ರೀ ವೈನಿ, ಅವರ ಹೆಸರು ನಂದನ್ ನಿಲೇಕಣಿ ಅಂತ. ನಂದಿನಿ ಅಂತೀರಲ್ಲರಿ? ಹಾಂ? - ಅಂತ ಕೇಳಿದೆ.

ನಂದನನೋ ನಂದಿನಿಯೋ? ಏನೋ ಏನೋ? ಒಟ್ಟ ಒಬ್ಬವ. ಈಗ ಇಪ್ಪತ್ತು ವರ್ಷದ ಹಿಂದ ಆ ಬೋಳ ತಲಿ ಶೇಷಣ್ಣ ಬಂದು,  ಏನೋ ಎಲೆಕ್ಷನ್ ಕಾರ್ಡ್ ಮಾಡ್ತೇನಿ ಅಂತ ಹೇಳಿ, ಖಾಲಿ ಪುಕ್ಕಟ ಟೊಪ್ಪಿಗಿ ಹಾಕಿ ಹೋಗಿದ್ದ. ನಸಕ್ ಮುಂಜಾನೆ ಎಲ್ಲೋ ಓಡಿ ಹೋಗಿ ಫೋಟೋ ತೆಗಿಸಿಕೊಂಡು, ಫಾರಂ ತುಂಬಿ ಬಂದಿದ್ದಿವಿ. ಆ ಮ್ಯಾಲೆ ಆ ಎಲೆಕ್ಷನ್ ಕಾರ್ಡ್ ಬಂದರ ಕೇಳು. ಇವರದ್ದೆಲ್ಲಾ ಹೀಂಗೆ, ಅಂತ ರೂಪಾ ವೈನಿ ಎಲ್ಲರನ್ನೂ ಸಾರಾ ಸಗಟಾಗಿ ಬೈದ್ರು.

ಅಲ್ಲರೀ ವೈನಿ, ಆವಾ ಆವಾ ಅಂತೀರಿ. ಮ್ಯಾಲಿಂದ ನಂದಿನಿ ಅಂತೀರಿ. ಅಲ್ಲಾ ನಿಮಗ ಸ್ವಲ್ಪರೆ common sense ಇಲ್ಲೇನು? ನಂದಿನಿ ಅನ್ನೋದು ಅದು ಹ್ಯಾಂಗ ಗಂಡಸೂರ ಹೆಸರು ಆಗತದ್ರೀ? ಹಾಂ? ನಂದಿನಿ ಅಂತ ನಂದಿನಿ? ಹ್ಯಾಂಗ ಅಂತಾರ ನೋಡು, ಅಂತ ಸ್ವಲ್ಪ ಆಕ್ಷೇಪಣೆ ಮಾಡಿದೆ.

ಅಯ್ಯ ಇವನs! ಈಗಿನ ಕಾಲದವರ ಹೆಸರಿನ ಮ್ಯಾಲೆ ಲಿಂಗ ನಿರ್ಧರಿಸೋ ಹಾಂಗ ಇಲ್ಲೇ ಇಲ್ಲೋ. ಪರಮೇಶ್ವರ ಅಂತ ಯಾರರ ಹೆಂಗಸಿನ ಹೆಸರು ಕೇಳಿ ಏನು? ಹಾಂ? ಕೇಳಿ ಏನು ಅಂತ ಹೇಳಲೇ ಮಂಗ್ಯಾ? ಆ ಮ್ಯಾಲೆ ನನ್ನ ತಿದ್ದೀ ಅಂತ. ಹಾಂ? ಕೇಳಿಯೇನೋ ಮಂಗ್ಯಾ? - ಅಂತ ವೈನಿ ನನಗೇ ರಿವರ್ಸ್ ಬಾರಿಸಿದರು.

ಪರಮೇಶ್ವರ ಅಂತ ಹೆಂಗಸೂರ ಹೆಸರರಿ? ಹಾಂ? ಎಲ್ಲಿದ ಹಚ್ಚೀರೀ? ಏನೇನೋ ಅನಕೋತ್ತ. ಸುಮ್ಮ ಸುಮ್ಮನ ಏನೇನೋ ಹೇಳಬ್ಯಾಡ್ರೀ, ಅಂತ ಹೇಳಿ ಇಗ್ನೋರ್ ಮಾಡೋಣ ಅಂತ ಅಂದ್ರ ಬಿಡಬೇಕಲ್ಲಾ ರೂಪಾ ವೈನಿ? ಚಾಲೆಂಜ್ ತೊಗೊಂಡ್ರು ಅವರು.

ರೀ ಶ್ರೀಪಾದ್ ರಾವ್! ರೀ ಶ್ರೀಪಾದ್ ರಾವ್, ಅಂತ 'ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ಮಗ್ನನಾಗಿದ್ದ ಅವರ ಗಂಡನ್ನ ಕರೆದರು ರೂಪಾ ವೈನಿ.

ಏನಾ? ಏನೀಗಾ? ಹಾಂ? ಅನ್ನೋ ಲುಕ್ ಚೀಪ್ಯಾ ಕೊಟ್ಟಾ.

ಆ ನಿಮ್ಮ ಸ್ಮಾರ್ತ ಫೋನ್ ತೆಗೆದು, ಆ ಗೂಗಲ್ಲೋ ಪೀಗಲ್ಲೋ ಅನ್ನೋ ಇಂಜಿನ್ ಒಳಗ ಪರಮೇಶ್ವರ ಅನ್ನೋ ಹೆಂಗಸಿನ ಮಾಹಿತಿ ತೆಗೆದು ಈ ಮಂಗೇಶನ ಮಾರಿ ಮ್ಯಾಲೆ ಒಗಿರಿ ಸ್ವಲ್ಪ. ನನಗ ಏನೂ ಗೊತ್ತಿಲ್ಲ, ನಾ ಧಡ್ಡ ಇದ್ದೇನಿ ಅಂತ ತಿಳ್ಕೊಂಡು, ನನಗ ಮಾತಿಗೊಮ್ಮೆ ಅಣಗಸ್ತಾನ. ಆಟಾ ಹಚ್ಯಾನ. ಲಗೂನ ತೋರಸ್ರೀ, ಅಂತ ಗಂಡಗ ಆಜ್ಞಾ ಮಾಡಿದರು ರೂಪಾ ವೈನಿ.

ಹಾ!!ಹಾ!! ಏನ್ರೀ ವೈನಿ ಅದು ಸ್ಮಾರ್ತ ಫೋನ್? ಬರೆ ಸ್ಮಾರ್ತ ಬ್ರಾಹ್ಮಂಡರಿಗೆ ಮಾತ್ರ ಏನು? ನೀವ್ಯಾಕ ಅದನ್ನ ಇಟಗೋಂಡೀರಿ? ಹಾಂ? ನಿಮ್ಮದು ವೈಷ್ಣವ ಫೋನ್ ಎಲ್ಲೋತು? ಹಾ!! ಹಾ!!! ಸ್ಮಾರ್ತ ಫೋನಂತ ಸ್ಮಾರ್ತ ಫೋನ್, ಅಂತ ಉಳ್ಳಾಡಿ ನಕ್ಕೆ. ವೈನಿಗೆ ಇನ್ನೂ ಉರೀತು.

ನಮ್ಮನಿಯವರ ಕಡೆ ಇರೋದು ಸ್ಮಾರ್ತ ಫೋನ್ ಅಲ್ಲಾ? ಮತ್ತೇನು? - ಅಂತ ಕೇಳಿದರು ರೂಪಾ ವೈನಿ.

ಮಾರಾಳಾ! ಮಾರಾಳಾ! ಅದು smart ಫೋನ್ ಅಂತ ರೂಪಾ. ಹೋಗಿ ಹೋಗಿ ಅದಕ್ಕ ಸ್ಮಾರ್ತ ಫೋನ್ ಅಂದು ಫೋನಿನ್ಯಾಗೂ ನಾಮದ ಫೋನು ಭಸ್ಮದ ಫೋನು ಅಂತ ತಂದು ಇಡ್ಲೀಕತ್ತಿ ನೋಡು. ಏನೀಗಾ? ಪರಮೇಶ್ವರ ಅನ್ನೋ ಗಂಡಸಿನ ಹೆಸರಿರೋ ಹೆಂಗಸಿನ ಮಾಹಿತಿ ಹುಡುಕಿ, ಅವನ ಮಾರಿ ಮ್ಯಾಲೆ ಒಗಿಬೇಕಾ? ಅಷ್ಟನಾ? ಅದೇನು ಮಹಾ? - ಅಂದ ಚೀಪ್ಯಾ, ಫೋನ್ ಎಲ್ಲೆ ಹೋತು? ಎಲ್ಲಿ ಇಟಗೊಂಡೆ? ಕಾಣ್ವಲ್ತು, ಅಂತ ಚೀಪ್ಯಾ ಅವನ smart ಫೋನ್ ಹುಡುಕಲು ಶುರು ಮಾಡಿದ.

ಫೋನ್ smart ಇದ್ದರೂ ಆ ಫೋನ್ ಉಪಯೋಗ ಮಾಡವರೂ ಸಹಾ smart ಇರಬೇಕಲೇ ಚೀಪ್ಯಾ. ನಿನ್ನಂತಾ ಧಡ್ಡ ಸೂಳಿಮಗನ ಕೈಯ್ಯಾಗ ಕೊಟ್ಟರ ಎಂತಾ smart ಫೋನ್ ಇದ್ದರೂ ಅದು dumb ಫೋನ್ ಆಗಿ ಹೋಗ್ತದ ನೋಡು. ಮೊದಲು smart ಫೋನ್ ಹುಡುಕುವಷ್ಟು smart ಆಗಲೇ. ಆ ಮ್ಯಾಲೆ ಗಂಡಾ ಹೆಂಡ್ತಿ ಕೂಡಿ ಪರಮೇಶ್ವರ ಅನ್ನೋ ಗಂಡು ಹೆಸರಿನ ಹೆಂಗಸಿನ್ನ ಹುಡುಕೀರಿ ಅಂತ, ಅಂತ ಹೇಳಿ ಅವನನ್ನೂ ಚ್ಯಾಸ್ಟಿ ಮಾಡಿದೆ.

ಎಲ್ಲಿ ಇಟ್ಟುಕೊಂಡ್ರೀ ನಿಮ್ಮ ಫೋನ್? ಅಂತ ರೂಪಾ ವೈನಿ ಸಹ ಚೀಪ್ಯಾನ ಮೇಲೆ ಚೀರಿದರು. ಆವಾ ಕೂತಲ್ಲಿಂದ ಏಳವಲ್ಲ. ಅಲ್ಲೆ ಸುತ್ತ ಮುತ್ತಾ ನೋಡ್ಲೀಕತ್ತಿದ್ದ.

ಮ್ಯಾಲೆ ಏಳ್ರೀ....ಏಳ್ರೀ ನಿಮ್ಮಾ! ಅಂತ ವೈನಿ ಝಾಡಿಸಿದ ಕೂಡಲೇ ದೊಡ್ಡ ಹೊಟ್ಟಿ ಹೊತಗೊಂಡು ಚೀಪ್ಯಾ ಎದ್ದ.

ನೋಡ್ರೀ ಅಲ್ಲೇ ಅದ. ಕುಂಡಿ ಕೆಳಗ ಫೋನ್ ಇಟಗೊಂಡು ಕೂತೀರಿ. ಅದು ಅಲ್ಲೆ ಕುಂಡಿ ಕೆಳಗ ಅದ ಅನ್ನೋದೂ ಸಹ ನಿಮಗ ಖಬರಿಲ್ಲ. ಕುಂಡ್ಯಾಗಿನ ನರಾ ಎಲ್ಲಾ ಸತ್ತು ಹೋಗ್ಯಾವೇನ್ರೀ? ಹಾಂ? ಏನು ಒಂದು ನಲವತ್ತು ಆತೋ ಇಲ್ಲೋ ಫುಲ್ ಮುದಕಪ್ಪ ಆಗಿ ಎಲ್ಲಾ ಪ್ರಜ್ಞಾ ಕಳಕೊಂಡು ಕೂತೀರಿ ನೋಡ್ರೀ. ಹೊಗಾ ನಿಮ್ಮಾ. ಮೊದಲು ಆ ಫೋನ್ ತೆಗೆದು ಲಗೂನ ಗೂಗಲ್ ಮಾಡ್ರೀ, ಅಂತ ವೈನಿ ಚೀಪ್ಯಾಗ ಹಾಕ್ಕೊಂಡು ಬೈದರು.

ಚೀಪ್ಯಾ ಫೋನ್ ಕೈಯಾಗ ತೊಗೊಂಡು ಮತ್ತ ಕೂಡಲಿಕ್ಕೆ, ಕುಂಡಿ ಊರಲಿಕ್ಕೆ ತಯಾರ ಆಗಿದ್ದ. ಅಷ್ಟರಾಗ ರೂಪಾ ವೈನಿ ಮತ್ತ ಸೈರೆನ್ ಮೊಳಗಿಸಿದರು.

ಅಯ್ಯೋ!!! ನಿಮಗ ಏನಾಗ್ಯದ ಅಂತೀನಿ? ಕುಂಡಿ ಕೆಳಗ ಫೋನ್ ಒಂದೇ ಅಲ್ಲಾ, ಆ ಟೀವಿ ರಿಮೋಟ್ ಸಹಿತ ಹಾಕ್ಕೊಂಡು ಕೂತಿದ್ದರಲ್ಲರೀ? ಹಾಂ? ಆ ರಿಮೋಟ್ ಪಕ್ಕಾ ಒಂದು ಇಟ್ಟಂಗಿ ಸೈಜಿಗೆ ಅದ.ಅದು ಸಹಿತ ನಿಮಗ ಗೊತ್ತಾಗಲಿಲ್ಲ ಅಂದ್ರ ಅವು ನಿಮ್ಮ ಕುಂಡಿ ನರಾ ಖರನೇ ಸತ್ತಾವ ನೋಡ್ರೀ. ಒಳ್ಳೆ ಹರಿದ ನರದ ನರಹರಿ ರಾವ್ ಆಗೀರಿ ನೋಡ್ರೀ. ಫೋನ್ ಮತ್ತ ರಿಮೋಟ್ ಮ್ಯಾಲೆ ಕೂತಿದ್ದು ಹೋಗಲಿ. ಎದ್ದು ಬರೆ ಫೋನ್ ಒಂದೇ ತೊಗೊಂಡು, ಮತ್ತ ಆ ರಿಮೋಟ್ ಮ್ಯಾಲೆ ನಿಮ್ಮ ಕುಂಡಿ ಸ್ಥಾಪನಾ ಮಾಡಲಿಕ್ಕೆ ಹೊಂಟೀರಲ್ಲಾ??? ಏನ್ ಬಡಕೊಳ್ಳಿ ನಾ??? ರಾಮಾ ರಾಮಾ. ಆ ರಿಮೋಟ್ ತೆಗೆದು ಇಲ್ಲೆ ಕೊಡ್ರೀ, ಅಂತ ಚೀಪ್ಯಾಗ ಹೇಳಿದರು. ಪಾಪದ ಪ್ರಾಣಿ ಚೀಪ್ಯಾ ರಿಮೋಟ್ ಕೊಟ್ಟು ಮತ್ತ ಸ್ಥಾಪಿತನಾದ.

ಚೀಪ್ಯಾ ತನ್ನ smart ಫೋನ್ ಒಳಗ ಏನೇನೋ ಒತ್ತಿದಾ. ಒತ್ತಿ ಏನೋ ಮಾಡಿ, ಫೋನ್ ಹೆಂಡ್ತೀಗೆ ಕೊಟ್ಟ.

ಹಾಂ! ಇಕಿನೇ ನೋಡ್ರೀ ಪರಮೇಶ್ವರ. ಪರಮೇಶ್ವರ ಗೋದ್ರೆಜ್. ನೋಡೋ ಹುಚ್ಚ ಮಂಗ್ಯಾನಿಕೆ. ಈ ನಿನ್ನ ವೈನಿ ಎಮ್ಮಿಕೇರಿ ಸಾಲಿಗೆ ಹೋಗ್ಯಾಳ, SSLC ಐದು ವರ್ಷ ಕೂಡಿ ಮುಗಿಸ್ಯಾಳ, ಇಕಿಗೆ ಏನೂ ಗೊತ್ತೇ ಇಲ್ಲ ಅಂತ ತಿಳ್ಕೊಂಡು ನನಗ ಅದು ಇದು ಅಂತೀ ಅಲ್ಲಾ? ನೋಡು, ನೋಡು, ಅಂತ ಹೇಳಿಕೋತ್ತ ನನ್ನ ಮಾರಿ ಎದುರಿಗೆ ತಂದು ಹಿಡದರು.

ಓ? ಇಕಿನಾ? ಗೋದ್ರೆಜ್ ಕಂಪನಿ ಮಾಲೀಕನ ಹೆಂಡ್ತೀ. ಒಪ್ಪಿದೆ ವೈನಿ ಒಪ್ಪಿದೆ. ಹೀಂಗ ಇರ್ತಾರ ಕೆಲೋ ಮಂದಿ ಗಂಡಸೂರ ಹೆಸರು ಇಟಗೊಂಡ ಹೆಂಗಸೂರು. ಆದ್ರ ಆವಾ ಮಾತ್ರ ನಂದಿನಿ ನಿಲೇಕಣಿ ಅಲ್ಲ, ಅಂತ ಹೇಳಿದೆ.

ಏ ಇಕಿ ಪರಮೇಶಿ ಒಬ್ಬಾಕಿನ ಅಂತ ತಿಳ್ಕೊಂಡೀ ಏನು? ನಿನಗ ಜನರಲ್ ನಾಲೆಜ್ ಇಲ್ಲ ನೋಡು. ಇನ್ನೂ ಇಂತವರು ಭಾಳ ಮಂದಿ ಇದ್ದಾರ. ಗಂಡಸೂರ ಹೆಸರು ಇಟಗೊಂಡ ಹೆಂಗಸೂರು, ಅಂತ ರೂಪಾ ವೈನಿ ಅವರ ನೈಟೀ ಕಾಲರ್ ಹಾರಿಸಿ ತಮ್ಮ ಜ್ಞಾನದ ಬಗ್ಗೆ ಗರ್ವ ಪಟ್ಟರು.

ಹಾಂ? ಯಾರ್ರೀ ಅವರೆಲ್ಲಾ? - ಅಂತ ಕೇಳಿದೆ.

ಕಿರಣ್ ಜುನೇಜಾ ಒಬ್ಬಾಕಿ ಹಳೆ ನಟಿ ಇದ್ದಾಳ. ಕಿರಣ್ ಖೇರ್ ಅಂತ ಅನುಪಮ್ ಖೇರನ ಹೆಂಡ್ತೀ ಇದ್ದಾಳ. ಸರೋಜ ಖಾನ ಇದ್ದಾಳ. ಇನ್ನು ಸಿಖ್ ಮಂದಿ ಅಂತೂ ಎಲ್ಲಾ ಗಂಡಸೂರ ಹೆಸರೇ. ಕೌರ್ ಹಚ್ಚಿ ಬಿಟ್ಟರ ಮುಗೀತು. ಅದು ಹೆಂಗಸೂರ ಹೆಸರು ಆಗಿ ಬಿಡ್ತದ. ಏನು ಮಂದಿಪಾ ಅಂತೇನಿ? ಅಲ್ಲೋ ಹೆಂಗಸೂರಿಗೇ ಅಂತ ಎಷ್ಟೆಷ್ಟು ಚಂದ ಚಂದ ಹೆಸರು ಅವ. ಹೋಗಿ ಹೋಗಿ ಗಂಡಸೂರ ಹೆಸರು ಇಟಗೊಂಡು ಸಾಯ್ತಾರಲ್ಲೋ ಇವರೆಲ್ಲಾ? ಏನು ಬಂದದ ಅಂತೀನಿ ಇವರಿಗೆಲ್ಲಾ? ಯಾವತ್ತಿಂದ ಗಂಡಸೂರ ಪ್ಯಾಂಟು, ಚೊಣ್ಣಾ, ಅಂಗಿ ಅದು ಇದು ಹಾಕೋದು ಕಲ್ತರು ನೋಡು, ಆವತ್ತಿಂದ ಬಂತು ಕೇಡುಗಾಲ, ಅಂತ ರೂಪಾ ವೈನಿ ಹೇಳಿದರು.

ಹೆಂಗಸೂರ ಹೆಸರು ಇಟಗೊಂಡ ಗಂಡಸೂರು ಯಾರಿಲ್ಲಾ ಏನ್ರೀ? -ಅಂತ ಕೇಳಿದೆ.

ಯಾಕಿಲ್ಲ? ಇದ್ದಾನಲ್ಲಾ ನಿಮ್ಮ ಊರಿನ ಮೊಮ್ಮಗಾ? ಅಂತ ಹೇಳಿ ಬಿಟ್ಟರು ರೂಪಾ ವೈನಿ.

ನಮ್ಮ ಊರಿನ ಮೊಮ್ಮಗನಾ? ಯಾರ್ರೀ ಆವಾ? - ಅಂತ ಕೇಳಿದೆ.

ನಿವೇದಿತಾ ಆಳ್ವಾ. ಮಾರ್ಗರೇಟ್ ಆಳ್ವಾನ ಸುಪುತ್ರ. ಅಕಿ ಅಂತೂ ಮಾತಿಗೊಮ್ಮೆ, ನಾನು ಉತ್ತರ ಕನ್ನಡ ಕಾರವಾರ ಜಿಲ್ಲೆಯ ಸೊಸೆ, ಅತ್ತೆ, ಮಗಳು, ಚಿಗವ್ವಾ, ಮೌಶಿ, ನೆಗೆಣ್ಣಿ ಅಂತ ಎಲ್ಲಾ ಕಡೆ ಹೊಯ್ಕೋತ್ತಾಳ. ಯಾಕಂದ್ರ ನಿಮ್ಮ ಜಿಲ್ಲಾದಿಂದ ಆರಿಸಿ ಹೋಗಿದ್ದಳು ನೋಡು. ಈಗ ಅಕಿ ಮಗಾ ನಿವೇದಿತಾ ನಿಲ್ಲವ ಅಂತ ಮುಂದಿನ ಎಲೆಕ್ಷನ್ ಒಳಗ, ಅಂತ ಹೇಳಿದರು.

ರೀ ವೈನಿ....ಅವನ ಹೆಸರು ನಿವೇದಿತ್ ಆಳ್ವಾ ಅಂತ. ನಿವೇದಿತಾ ಅಲ್ಲಾ. ಆದರೂ ವಿಚಿತ್ರ ಬಿಡ್ರೀ, ಅಂತ ಹೇಳಿದೆ. ನಮ್ಮ ಜನರಲ್ ನಾಲೆಜ್ ಸಿಕ್ಕಾಪಟ್ಟೆ improve ಆತು ವೈನಿ ಜೋಡಿ ಇದೆಲ್ಲ ಮಾತಾಡಿ.

ರೀ ವೈನಿ...ಅದೇನೋ passport ಅಂದ್ರೀ. ಏನು? - ಅಂತ ಕೇಳಿದೆ.

ಹೂನೋ....ನನಗ ಒಂದು passport ಮಾಡಿಸಬೇಕು, ಅಂದ್ರು ವೈನಿ.

ಯಾವ ಸ್ಕೀಮಿನ್ಯಾಗ ಬೇಕು? ತತ್ಕಾಲ, ಆಪತ್ಕಾಲ, ವಿಪತ್ಕಾಲ, ಮಳೆಗಾಲ, ಚಳಿಗಾಲ, ಆ ಕಾಲ, ಈ ಕಾಲ ಅಂತ ಹಲವಾರು ರೀತಿ passport ಕೊಡೊ ಸ್ಕೀಮ್ ಬಂದಾವ. ನಿಮಗ ಯಾವ ಕಾಲದಾಗ ಬೇಕು ಹೇಳ್ರೀ? - ಅಂತ ಕೇಳಿದೆ.

ಹಾಂ? ಏನೋ ಇದು? ಬ್ಯಾರೆ ಬ್ಯಾರೆ ಕಾಲಕ್ಕ ಬ್ಯಾರೆ ಬ್ಯಾರೆ passport ಏನು? ಯಾಕ? ಅಥವಾ ಕಾಲಿಗೇ ಬ್ಯಾರೆ passport, ಕೈಗೇ ಬ್ಯಾರೆ passport, ತಲಿಗೇ ಬ್ಯಾರೆ, ಅಂತ ಏನರೆ ಶುರು ಮಾಡ್ಯಾರ ಏನು? ಹಾಂ? - ಅಂತ ವೈನಿ ಕೇಳಿದರು. ಘಾಬರಿ ಅವರಿಗೆ.

ಹೇ!! ಹೇ!! ಹಾಂಗೇ ಅಂದೆ ಬಿಡ್ರೀ. ಒಂದು ಸಾಮಾನ್ಯ passport. ಅಂದ್ರ ರೆಗ್ಯುಲರ್ ಟೈಮ್. ಒಂದೋ ಎರಡೋ ತಿಂಗಳದಾಗ ಆರಾಮ ಬರ್ತದ. ಇನ್ನೊಂದು ತತ್ಕಾಲ ಅಂದ್ರ ಲಗೂನೆ ಬರ್ತದ. ಒಂದು ವಾರ ಹೆಚ್ಚಂದ್ರ. ಅದಕ್ಕ ರೊಕ್ಕಾ ಸ್ವಲ್ಪ ಜಾಸ್ತಿ. ನಿಮಗ ಯಾವದು ಬೇಕು? - ಅಂತ ಕೇಳಿದೆ.

ಹೀಂಗಾ? ನಮಗ ordinary ಸಾಕಪಾ. ತತ್ಕಾಲ ಅದು ಇದು ಅನ್ನಲಿಕ್ಕೆ ನಮಗೇನು ರೊಕ್ಕಾ ಜಾಸ್ತಿ ಆಗ್ಯದ ಏನು? - ಅಂತ ವೈನಿ ಹೇಳಿದರು.

ಓಕೆ....ಹಾಂಗಿದ್ರ passport ಅರ್ಜಿ ತಂದು, ತುಂಬಿ, ಅದಕ್ಕ ಬೇಕಾದ ಎಲ್ಲ ಡಾಕ್ಯುಮೆಂಟ್ ಕಾಪಿ ಇಟ್ಟು, ಒಂದು passport ಫೋಟೋ ಹಚ್ಚಿ, ಕೊಟ್ಟು ಬಂದು ಬಿಡ್ರೀ. ಫೀಸ್ ಕಟ್ಟಿ ಬಿಡ್ರೀ. ಆತು ನಿಮ್ಮ ಕೆಲಸಾ. passport ಬಂದೇ ಬಿಡ್ತದ. ಈಗ ಎಲ್ಲಾ ಭಾಳ ಸಿಂಪಲ್ ಮಾಡಿ ಬಿಟ್ಟಾರ್ರೀ ವೈನಿ. ಚಿಂತಿ ಮಾಡಬ್ಯಾಡ್ರೀ, ಅಂತ ಹೇಳಿದೆ.

ಅಲ್ಲೋ ಹುಚ್ಚಾ! passport ಬೇಕು, ಇಲ್ಲ ಅಂತ ಹೇಳಲಿಕತ್ತೇನಿ. ಅಂತಾದ್ರಾಗ passport ಅರ್ಜಿ ಜೋಡಿ passport ಫೋಟೋ ಇಡು ಅಂದ್ರ ಎಲ್ಲಿಂದ ಇಡ್ಲೀ. ನಿಮ್ಮಜ್ಜಿ passport ಫೋಟೋ ಹಚ್ಚಿ ಕಳಿಸಲಿ? ಏನಂತ ಅಂತೀಯೋ? ಹಾಪಾ, ಅಂತ ವೈನಿ ಬೈದರು.

ರೀ ವೈನಿ.....passport ಫೋಟೋ ಅಂದ್ರ passport ಫೋಟೋ ಅಲ್ಲಾ. ಅದೊಂದು ಫೋಟೋ ಸೈಜ್ ಅಷ್ಟೇ. ಆ ಸೈಜಿನ ಭಾವಚಿತ್ರ ಹಚ್ಚಿ ಕಳಿಸಿರಿ ಅಂತ. ತಿಳೀತಾ? ಹಾಂ? - ಅಂತ ಸ್ವಲ್ಪ ಬೈದಂಗ ಹೇಳಿದೆ. ವೈನಿಗೆ ಸ್ವಲ್ಪ diffidence ಬಂದಂಗ ಆಗಿ ಸ್ವಲ್ಪ ಮೆದು ಆದರು.

ಭಾವಚಿತ್ರ???? ಅಂತ ಹೇಳಿ ಒಂದು ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಮಾರಿ ಮ್ಯಾಲೆ. ಮತ್ತ ಎಲ್ಲರೆ ನಾ ಬೈದು ಗೀದು ಬಿಟ್ಟೇನಿ ಅಂತ ಸುಮ್ಮನ ನಿಂತರು.

ಹೂನ್ರೀ...passport ಸೈಜಿನ ಭಾವಚಿತ್ರ ಬೇಕೇ ಬೇಕು. ಒಂದಲ್ಲ ಮೂರೋ ನಾಕೋ ಬೇಕು, ಅಂತ ಹೇಳಿದೆ.

ವೈನಿ ಮಾರಿ ನೋಡಿದರ ಅವರಿಗೆ ಇನ್ನೂ ಭಾಳ confusion ಇತ್ತು. ಮತ್ತ ಕೇಳಿದರ ನಾ ಬೈತೇನಿ ಅಂತ ಸುಮ್ಮನಾದರು ಅಂತ ಕಾಣಸ್ತದ.

ಏ...ಮಂಗೂ....ನನ್ನ passport ಅರ್ಜಿ ಸ್ವಲ್ಪ ತುಂಬಿ ಕೊಡಲ್ಲಾ? ವೈನಿಗೆ ಅಷ್ಟೂ ಸಹಾಯ ಮಾಡಂಗಿಲ್ಲ? ಹಾಂ? - ಅಂತ ವೈನಿ ಸೆಂಟಿಮೆಂಟಲ್ ಫಿಟ್ಟಿಂಗ್ ಇಟ್ಟರು.

ರೀ ವೈನಿ...passport ಅರ್ಜಿ ತುಂಬೋದು ಭಾಳ ಸರಳರೀ. ಕನ್ನಡದಾಗ ಇರ್ತದ. ತುಂಬ್ರೀ. ಅದೇನು ಐಎಎಸ್ ಪರೀಕ್ಷಾ ಅಲ್ಲ. ತಿಳೀತಾ? ಅಂತ ಹೇಳಿದೆ.

ಇಲ್ಲಪಾ ಮಂಗಣ್ಣಾ...ಮಂಗೇಶ... ನಾನು ಪೆನ್ನು ಹಿಡದು ಬರೆದಿದ್ದು ಏನರೆ ಅಂತಿದ್ದರಾ ಅದು ಕಿರಾಣಾ ಅಂಗಡಿ ಲಿಸ್ಟ್ ಮಾತ್ರ ನೋಡಪಾ. ಬರಿಲಿಕ್ಕೆ ಬರೋದೇ ಇಲ್ಲೋ. ರೂಢಾ ತಪ್ಪಿ ಹೋಗ್ಯದ. ನಾನೇ ಅರ್ಜಿ ತುಂಬಲಿಕ್ಕೆ ಹೋಗಿ, ಏನೇನೋ ಆಗಿ, passport ಬರದೇ ಇದ್ದರ ಭಾಳ ತೊಂದ್ರೀ. ಅದಕ್ಕ ನೀನೆ ಸ್ವಲ್ಪ ತುಂಬಿ ಕೊಡಲ್ಲಾ? ಪ್ಲೀಸ್, ಅಂತ ವೈನಿ ವಿನಂತಿ ಮಾಡಿಕೊಂಡರು.

ಹ್ಯಾಂಗ ಇಲ್ಲಾ ಅನ್ನಲಿ? ಮಾತೃ ಸಮಾನ, ಅಕ್ಕನ ಸಮಾನ, ಒಳ್ಳೆ ಗೆಳತಿ ಹಾಂಗ ಇದ್ದಾರ ನಮಗ ರೂಪಾ ವೈನಿ ಅಂದ್ರ. ಅವರು ಗಂಡನಾದ ಚೀಪ್ಯಾಗ ಈ ಕೆಲಸ ಹರ್ಗೀಸ್ ಹಚ್ಚೋದಿಲ್ಲಾ.  ಆವಾ ಮಂಗ್ಯಾ ಸೂಳಿಮಗಗ ಒಂದು ರೇಶನ್ ಕಾರ್ಡ್ ಇನ್ನೂ ಮಾಡಿಸಿಕೊಳ್ಳಲಿಕ್ಕೆ ಆಗಿಲ್ಲ. ಆವಾ passport ಅರ್ಜಿ ತುಂಬಿ ಹಾರಿಬಿದ್ದಾ ಅಂತ ವೈನಿಗೆ ಗೊತ್ತೇ ಅದ. ಅದಕ್ಕ ನನಗ ತುಂಬಿ ಕೊಡು ಅಂತ ಹೇಳಲಿಕತ್ತಾರ. ಓಕೆ. ಏನು ಮಹಾ ಕೆಲಸ ಅಂತ ಒಪ್ಪಿಕೊಂಡೆ. ನಾ ಒಪ್ಪಿಕೊಂಡ ಖುಷಿಯೊಳಗ ವೈನಿ ನಾಷ್ಟಾ ತಂದೇ ಬಿಟ್ಟರು. ಎಲ್ಲಾ ಐಟಂ super size ಮಾಡಿ ತಂದಿದ್ದರು. ಬೆಷ್ಟೇ ಆತು. ಹಶಿವಿ! ಅನ್ನದಾತಾ ಸುಖೀ ಭವ.

ರೀ ವೈನಿ....ನಾನು ಯಾವಾಗರೇ passport ಅರ್ಜಿ ತೊಗೊಂಡು ಬರ್ತೇನಿ. ಬಂದಾಗ ತುಂಬಿ ಕೊಡತೇನಿ. ಓಕೆ? - ಅಂತ ನಾಷ್ಟಾ ಮುಕ್ಕೋದ್ರಾಗ ಮಗ್ನ ಆದೆ.

ಅಯ್ಯಾ ಇವನ.... ಅರ್ಜಿ ತಂದು ಇಟ್ಟೆನೋ. ನಾಷ್ಟಾ ಮುಗಿಸಿ ತುಂಬಿ ಬಿಡಪಾ. ಭಾವಚಿತ್ರ ಬ್ಯಾರೆ ಹಚ್ಚಬೇಕು ಅಂತ ಹೇಳಿಬಿಟ್ಟಿ. ಅದರದ್ದೇ ದೊಡ್ಡ ಕೆಲಸಾ. ತರ್ತೇನಿ ತಡಿ passport ಅರ್ಜೀ ಅಂತ ಹೇಳಿಕೋತ್ತ ರೂಪಾ ವೈನಿ ಒಳಗ ಹೋದರು.

ಭಾರಿ ಇದ್ದೀರಿ ಬಿಡ್ರೀ ವೈನಿ. ಎಲ್ಲಾ ರೆಡಿ ಮಾಡಿಕೊಂಡೇ ಕೂತೀರಿ. ವೆರಿ ಗುಡ್. ತುಂಬೇ ಬಿಡೋಣಂತ, ಅಂತ ಹೇಳಿ ಗಬಾ ಗಬಾ ನಾಷ್ಟಾ ಮುಕ್ಕಿದೆ.

ಹ್ಞೂ...ಒಂದು ಪೆನ್ನು ಕೊಡ್ರೀ ವೈನಿ, ಅಂತ ಹೇಳಿದೆ. ಸ್ಟ್ಯಾಂಡರ್ಡ್ Reynolds ಬಾಲ್ ಪೆನ್ ಕೊಟ್ಟರು.

ವೈನಿ ವಿವರ ಎಲ್ಲ ಗೊತ್ತಿತ್ತು. ಲಗು ಲಗು ತುಂಬಿದೆ. ಒಂದು ಸಲಾ ಎಲ್ಲಾ ಚೆಕ್ ಮಾಡಿದೆ.

ನೋಡ್ರೀ ವೈನಿ...ಎಲ್ಲಾ ತುಂಬಿ ಆತು. ಇಷ್ಟು ರೊಕ್ಕಕ್ಕ ಒಂದು ಡೀಡಿ ತೆಗೆಸಿಬಿಡ್ರೀ. ತಿಳೀತಾ? ಇದು, ಅದು, ಆದು ಮತ್ತ ಇದು, ಈ ಎಲ್ಲಾ ಡಾಕ್ಯುಮೆಂಟ್ಸ್ ಜೆರಾಕ್ಸ್ ಮಾಡಿಸಿ, attest ಮಾಡಿಸಿ ಲಗತ್ತಿಸಿರಿ. ಭಾವಚಿತ್ರದ್ದು ನಾಕು ಕಾಪಿ ಇಲ್ಲೆ, ಅಲ್ಲೆ, ಇಲ್ಲೆ ಮತ್ತ ಅಲ್ಲೆ ಹಚ್ಚಿರಿ. ಅಂಟು ಹಚ್ಚೇ ಅಂಟಿಸಿರಿ ಮತ್ತ. ಎಲ್ಲರೆ ಅನ್ನದ ಅಗಳು ಕಿವಿಚಿ ಹಚ್ಚೀರಿ. ಅದು ನಡೆಯೋದಿಲ್ಲ ಮತ್ತ. passport ಆಫೀಸ್ ಮಂದಿ ಕಲಸನ್ನ, ಚಿತ್ರಾನ್ನ ತಿಂದು ಹೈರಾಣ ಆಗ್ಯಾರ ಅಂತ. ಏನು ಮಂದೀರಿ ಅಂತೀನಿ....ಗಾಳಿಪಟಾ ಮಾಡೋವಾಗ ಅನ್ನಾ ಕಿವಿಚಿ ಅಂಟಿನ ಗತೆ ಮಾಡಿ ಹಚ್ಚೋದು ಬ್ಯಾರೆ. ಆದ್ರ passport ಫೋಟೋಕ್ಕೂ ಅದನ್ನ ಹಚ್ಚೋದು ಅಂದ್ರ  ಏನ್ರೀ? ಬುದ್ಧಿನೇ ಇಲ್ಲ. ಎಲ್ಲಾ ತಿಳೀತ್ರೀ? ಹಾಂ? - ಅಂತ ಕೇಳಿದೆ.

ಹಾಂ...ತಿಳೀತೋ. ಥಾಂಕ್ಯೂ ಥಾಂಕ್ಯೂ. ಭಾಳ ಹೆಲ್ಪ್ ಆತು, ಅಂತ ವೈನಿ passport ಬಂದು ಫಾರಿನ್ ಟ್ರಿಪ್ ಹೊಡೆದು ಬಂದವರಂಗ ಸಂಭ್ರಮ ಪಟ್ಟರು. ಪಾಪ!

ಭಾವಾ....ಚಿತ್ರಾ ?????? ಅಂತ ಹೇಳಿ ಒಂದು ಕ್ವೆಶ್ಚನ್ ಮಾರ್ಕ್ ಒಗೆದರು ರೂಪಾ ವೈನಿ.

ಏನ್ರೀ? ಅಂತ ಧ್ವನಿ ಎತ್ತರಿಸಿ ಕೇಳಿದೆ.

ಏನಿಲ್ಲ, ಏನಿಲ್ಲ...ನಿನ್ನ ಕೆಲಸ ಮುಗೀತು. ನಾ ಇನ್ನು ಮುಂದಿನ ಕೆಲಸ ಮಾಡತೇನಿ. ಇವತ್ತೋ ನಾಳಿಯೋ ಹೋಗಿ ರೊಕ್ಕದ ಡ್ರಾಫ್ಟ್ ತರ್ತೇನಿ. ಭಾವಚಿತ್ರಕ್ಕೂ ವ್ಯವಸ್ಥಾ ಮಾಡ್ತೇನಿ, ಅಂತ ಹೇಳಿದರು ವೈನಿ. ಏನೋ ಭಾನಗಡಿ ಮಾಡ್ತಾರೋ ಅಂತ ಸಂಶಯ ಬಂತು. ಭಾಳ ಸಂಶಯ ಪಡಬಾರದು. ಸಂಶಯಾತ್ಮಾ ವಿನಶ್ಯತಿ, ಅಂತ ಕೃಷ್ಣ ಹೇಳಿ ಬಿಟ್ಟಾನ. ಭಗವದ್ಗೀತಾ ಒಳಗ.

ನಾ ಬರ್ಲ್ಯಾ? - ಅಂತ ಕೇಳಿ ಹೊರಟು ಬಂದೆ.
*****

ರೂಪಾ ವೈನಿಗೆ passport ಸಿಕ್ಕುಬಿಡ್ತಾ? ಅಥವಾ ಮತ್ತೇನೋ ಆತಾ?.....ಅದು ಮುಂದಿನ ಭಾಗದಲ್ಲಿ.

(ಸಶೇಷ. ಮುಂದುವರಿಯಲಿದೆ) (ಭಾಗ - ೨ ಇಲ್ಲಿದೆ)