Sunday, December 29, 2013

ಎಲ್ಲಾ ಸಾಮವೇದದ ಪ್ರಕಾರ ಮಾಡಿ ಮುಗಿಸಿಬಿಡ್ರೀ!!

(ಧಾರವಾಡದ ಪ್ರಕಾಂಡ ಪಂಡಿತ, ಸಕಲ ವೇದವಿದ್ಯಾ ಪಾರಂಗತ, ಸಂಸ್ಕೃತ ವಿದ್ವಾಂಸ, ಬ್ರಹ್ಮರ್ಷಿ ಶ್ರೀ ಭಾಲಚಂದ್ರ ಶಾಸ್ತ್ರಿ ಜೋಶಿ ಅವರು ಡಿಸೆಂಬರ್ ೪ ರಂದು ತಮ್ಮ ೯೪ ನೇ ವಯಸ್ಸಿನಲ್ಲಿ ನಿಧನರಾದರು. ಶಾಸ್ತ್ರಿಗಳ ಪಾಂಡಿತ್ಯದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಜಾಸ್ತಿ ಏನೂ ಗೊತ್ತಿಲ್ಲ. ಆದರೂ ಕೆಲವು ನೆನಪುಗಳಿವೆ. ಅವನ್ನು ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ. ಇದು ಭಾಗ -೨. ಭಾಗ - ೧ ಇಲ್ಲಿದೆ. ಓದಿಕೊಳ್ಳಿ.)

ಬ್ರಹ್ಮರ್ಷಿ ಭಾಲಚಂದ್ರ ಶಾಸ್ತ್ರಿಗಳು (ಚಿತ್ರ ಕೃಪೆ: ಶ್ರೀ ಗುರುರಾಜ ಜಮಖಂಡಿ)

ಭಾಲಚಂದ್ರ ಶಾಸ್ತ್ರಿಗಳಿಗೆ ಮತ್ತು ನಮ್ಮ ತಂದೆ ಪ್ರೊಫೆಸರ್ ಹೆಗಡೆ ಅವರಿಗೆ ೧೯೫೦ ರ ಕಾಲದಿಂದಲೇ ಒಂದು ತರಹದ ಗುರುತು, ಪರಿಚಯ, ಆತ್ಮೀಯತೆ, ಪರಸ್ಪರ ಗೌರವ ಎಲ್ಲ.

ನಮ್ಮ ತಂದೆ ೧೯೫೦ ಕಾಲದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ವೀ.ಕೇ. ಗೋಕಾಕರು ಪ್ರಿನ್ಸಿಪಾಲ್ ಇದ್ದಾಗ ಕರ್ನಾಟಕ ಕಾಲೇಜಿಗೆ ವಿದ್ಯಾರ್ಥಿಯಾಗಿ ಸೇರಿದವರು. ಮುಂದೆ ಅಲ್ಲೇ ಭೌತಶಾಸ್ತ್ರದ ಪ್ರಾಧ್ಯಾಪಕರೂ ಆಗಿದ್ದವರು. ಕಲಿತದ್ದು, ಕಲಿಸಿದ್ದು ಭೌತಶಾಸ್ತ್ರವೇ ಆದರೂ ತಂದೆಯವರಿಗೆ ಮೊದಲಿಂದ ವೇದ, ವೇದಾಂತ, ವೇದಾಂಗವಾದ ಜ್ಯೋತಿಷ್ಯದಲ್ಲಿ ತುಂಬಾ ಆಸಕ್ತಿ ಮತ್ತು ಆಳವಾದ ಜ್ಞಾನ. ವಿದ್ಯಾರ್ಥಿಯಾಗಿದ್ದಾಗ ಕರ್ನಾಟಕ ಕಾಲೇಜಿನಲ್ಲಿ ದಿನವಿಡಿ ಅಭ್ಯಾಸ. ಸಂಜೆ ಹೊಸೆಲ್ಲಾಪುರದ ಪಂಡಿತರ ಸೇವೆ. ಅದೇ ವೇದ, ಉಪನಿಷತ್ತು, ಜ್ಯೋತಿಷ್ಯ, ಅದು ಇದು ಕಲಿಯಲಿಕ್ಕೆ. ಹೀಗಾಗಿ ಆ ಕಾಲದಿಂದಲೇ ಭಾಲಚಂದ್ರ ಶಾಸ್ತ್ರಿಗಳ ಕಣ್ಣಿಗೆ ಬಿದ್ದವರು ನಮ್ಮ ತಂದೆ. ಒಳ್ಳೆಯ ರೀತಿಯಿಂದ, ಸ್ವಂತ ಅಧ್ಯಯನದಿಂದ  ವೇದಾಧಾರಿತ ಜ್ಯೋತಿಷ್ಯದ (Vedic Astrology) ಮೇಲೆ ಪಾಂಡಿತ್ಯ ಸಾಧಿಸಿದ್ದ ತಂದೆಯವರ ಮೇಲೆ ಭಾಲಚಂದ್ರ ಶಾಸ್ತ್ರಿಗಳಿಗೆ ತುಂಬಾ ಗೌರವ ಮತ್ತು ಹೆಮ್ಮೆ. ಭಾಲಚಂದ್ರ ಶಾಸ್ತ್ರಿಗಳೂ ತಕ್ಕ ಮಟ್ಟಿಗೆ ಜ್ಯೋತಿಷ್ಯ ತಿಳಿದಿದ್ದರು. ಆದ್ರೆ ಅದು ಅವರ specialty ಇರಲಿಲ್ಲ. ಹೀಗಾಗಿ ಅವರ ಕಡೆ ಜ್ಯೋತಿಷ್ಯದ ಜಟಿಲ ಪ್ರಶ್ನೆ, ಕ್ಲಿಷ್ಟ ಸವಾಲು ಇತ್ಯಾದಿ ತಂದವರನ್ನು ಅವರು - ಇದಕೆಲ್ಲಾ ನೀವು ಹೋಗಿ ಪ್ರೊಫೆಸರ್ ಹೆಗಡೆ ಅವರನ್ನ ನೋಡ್ರೀ. ಶಾಸ್ತ್ರಬದ್ಧವಾಗಿ ಜ್ಯೋತಿಷ್ಯ ಕಲಿತು, ಕಲಿಸಬಲ್ಲವರು ಅಂದ್ರ ಅವರು. ಇಂತಾದಕ್ಕೆಲ್ಲಾ ಅವರೇ ಸರಿ - ಅಂತ ತುಂಬು ಹೃದಯದಿಂದ ನಮ್ಮ ತಂದೆಯವರ ಕಡೆ ಅಂತಹ ಜನರನ್ನು ಯಾವದೇ ಪೂರ್ವಾಗ್ರಹಗಳಿಲ್ಲದೆ, ಪ್ರೀತಿಯಿಂದ ಕಳಿಸಿದವರು ಭಾಲಚಂದ್ರ ಶಾಸ್ತ್ರಿಗಳು. ಕಾಲೇಜಿನ್ಯಾಗ physics ಕಲಿಸೋ ಮಾಸ್ತರಿಗೆ ಏನು ಜ್ಯೋತಿಷ್ಯ ಗೊತ್ತಿರ್ತದ? ಅನ್ನೋ ಕೆಲ ಕರ್ಮಠ ಬ್ರಾಹ್ಮಣರ ಚಿಕ್ಕ ಮನಸ್ಸು ಶಾಸ್ತ್ರಿಗಳದ್ದು ಅಲ್ಲವೇ ಅಲ್ಲ. ಇದೇ ತರಹ ಜ್ಯೋತಿಷ್ಯಕ್ಕೆ ಸಂಬಂಧಿಸಿದ ವೇದಗಳ ಬಗ್ಗೆ, ಕೆಲವು ಅನುಷ್ಠಾನಗಳ ಬಗ್ಗೆ ಪ್ರಶ್ನೆ ಬಂದಾಗ ನಮ್ಮ ತಂದೆಯವರು ಮೊದಲು ಹೋಗುತ್ತಿದ್ದುದು ಭಾಲಚಂದ್ರ ಶಾಸ್ತ್ರಿಗಳ ಬಳಿಯೇ. ಅದ್ವೈತ ಪರಂಪರೆಯ ದೊಡ್ಡ ದೊಡ್ಡ ಸ್ವಾಮಿಗಳೇ ಭಾಲಚಂದ್ರ ಶಾಸ್ತ್ರಿಗಳ ಸಲಹೆ ಕೇಳುತ್ತಿದ್ದರು. ಆ ಮಟ್ಟಿಗಿತ್ತು ಅವರ ಪಾಂಡಿತ್ಯ.
 
ಮತ್ತೆ ಭಾಲಚಂದ್ರ ಶಾಸ್ತ್ರಿಗಳ ಸೋದರ ಪ್ರೊ. ಎಂ. ಎನ್. ಜೋಶಿ ಅವರು ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರು. ನಮ್ಮ ತಂದೆಯವರಿಗೆ ಕೊಂಚ ಹಿರಿಯ ಸಹೋದ್ಯೋಗಿ. ಕೆಲ ವರ್ಷಗಳ ನಂತರ ಭಾಲಚಂದ್ರ ಶಾಸ್ತ್ರಿಗಳ ಸುಪುತ್ರ ಶ್ರೀ ವೀ. ಬೀ. ಜೋಶಿ ಸಹ ಕರ್ನಾಟಕ ಕಾಲೇಜಿನಲ್ಲೇ ಸಂಸ್ಕೃತ ಅಧ್ಯಾಪಕರಾಗಿ ಕೆಲಸ ಶುರು ಮಾಡಿ ನಮ್ಮ ತಂದೆಯವರ ಕಿರಿಯ ಸಹೋದ್ಯೋಗಿ ಆದರು. ಮತ್ತೆ ಭಾಲಚಂದ್ರ ಶಾಸ್ತ್ರಿಗಳ ಎಷ್ಟೋ ಜನ ಸಮಕಾಲೀನ ಪಂಡಿತರು  ನಮ್ಮ ತಂದೆಯವರಿಗೆ ಹಿರಿಯರಿದ್ದಂತೆ. ಹೀಗಾಗಿ ಒಳ್ಳೆಯ ಸಂಬಂಧ, ಪರಿಚಯ ಎಲ್ಲ ಇತ್ತು ಶಾಸ್ತ್ರಿಗಳ ಜೋಡಿ ನಮ್ಮ ತಂದೆಯವರದು.

೧೯೮೪-೮೫ ರ ಸಮಯ. ದೊಡ್ಡ ಉದ್ಯಮಿ ಶ್ರೀ ಆರ್. ಎನ್. ಶೆಟ್ಟಿಯವರು ಮುರುಡೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮಾಡುತ್ತಿದ್ದರು. ಅದು ಅವರ ಹುಟ್ಟೂರು. ಮುರುಡೇಶ್ವರ ದೇವಸ್ಥಾನ ಅಂದ್ರೆ ಜನ ಆಶ್ಚರ್ಯ ಪಡಬೇಕು, ಆ ರೀತಿಯಲ್ಲಿ ಅದನ್ನು ಮಾಡಬೇಕು ಅಂತ ನಿಶ್ಚಯಿಸಿ ದುಡ್ಡು ಕಾಸಿನ ಪರವಾ ಮಾಡದೆ, ಕೋಟ್ಯಂತರ ರೂಪಾಯಿ ಸುರಿದು, ಒಂದು ಕುಗ್ರಾಮವಾಗಿದ್ದ ಮುರುಡೇಶ್ವರವನ್ನು ಇವತ್ತಿನ ಸ್ಥಿತಿಗೆ ತಂದವರು ಶೆಟ್ಟರು.

ಶೆಟ್ಟರು ಮುರುಡೇಶ್ವರದಾಗ ದೊಡ್ಡ ದೇವಸ್ಥಾನ ಏನೋ ಕಟ್ಟಿ ಮುಗಿಸಿಬಿಟ್ಟರು. ಆದರ ಮುಂದ ಏನು? ದೇವಸ್ಥಾನ ಮೊದಲೂ ಇತ್ತು ಅಲ್ಲೆ. ಇವರು ಮಾಡಿದ್ದು ಜೀರ್ಣೋದ್ಧಾರ. ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಅದನ್ನು ಮತ್ತ ತೆಗಿಬೇಕು ಅಂದ್ರ ಏನೇನೋ ಪೂಜಿ ಪುನಸ್ಕಾರ ಎಲ್ಲ ಆಗಬೇಕು. ಸಾಧಾರಣ ಪೂಜಾರಿಗಳಿಗೆ, ಭಟ್ಟರಿಗೆ ಅವೆಲ್ಲ ಗೊತ್ತಿರೋದಿಲ್ಲ. ಅದಕೆಲ್ಲಾ ವೇದಗಳ ಕರ್ಮಕಾಂಡ ಅನ್ನೋ ಭಾಗದಾಗ ಹೋಗಿ, ಸರಿಯಾದ ಮಂತ್ರ, ಅನುಷ್ಠಾನ ಇತ್ಯಾದಿ ಆರಿಸಿ ತಂದು, ಸರಿ ಮಾಡಿ ಪೂಜಿ ಮಾಡಿದ ಮೇಲೇನೇ ಜೀರ್ಣೋದ್ಧಾರ ಮುಗಿದಂಗ. ಆನಂತರವೇ ದೇವಸ್ಥಾನ ತೆಗಿಬಹುದು.

ಈಗ ಶೆಟ್ಟರು ಅಂತಹ ಪಂಡಿತರನ್ನು ಹುಡಕಲಿಕ್ಕೆ ಶುರು ಮಾಡಿದರು. ಶೆಟ್ಟರು ನಮಗ ಮೊದಲಿಂದಲೂ ಭಾಳ ಕ್ಲೋಸ್.

ಭಟ್ಟರೇ, ಒಂದು ಕೆಲಸ ಆಗಬೇಕಿತ್ತು, ಅಂತ ಅನಕೋತ್ತ ಒಂದು ದಿವಸ ಶೆಟ್ಟರು ಬಂದೇ ಬಿಟ್ಟರು.

ಶೆಟ್ಟರಿಗೆ ಎಲ್ಲ ಬ್ರಾಹ್ಮಣರೂ  ಭಟ್ಟರೇ. ಹೀಗಾಗಿ ನಮ್ಮ ತಂದೆಯವರು ಸಹ ಅವರಿಗೆ ಭಟ್ಟರೇ.

ಏನ್ರೀ ಶೆಟ್ಟರೆ? ಏನು ಕೆಲಸ? - ಅಂತ ನಮ್ಮ ತಂದೆಯವರು ಕೇಳಿದರು.

ಮುರುಡೇಶ್ವರದ ಕೆಲಸ ಎಲ್ಲ ಮುಗಿಯಲಿದೆ. ದೇವಸ್ಥಾನ ತೆಗಿಲಿಕ್ಕಿದೆ. ಪೂಜೆ ಎಲ್ಲ ಮಾಡಲಿಕ್ಕಿದೆ. ಅದೇನೋ ದೊಡ್ಡ ದೊಡ್ಡ ಪೂಜೆಯಂತೆ. ಭಾರಿ ಭರ್ಜರೀ ಭಟ್ಟರೇ ಬೇಕಂತೆ. ಹೌದಾ? ನಿಮಗೆ ಯಾರಾದರೂ ಆ ನಮೂನಿ ದೊಡ್ಡ ಭಟ್ಟರು ಗೊತ್ತುಂಟಾ? ಒಳ್ಳೆ ಮಂಡೆ ಬಿಸಿ ಮಾರ್ರೆ - ಅಂತ ಹೇಳಿದ್ರು ಶೆಟ್ಟರು.

ಕೋಟ್ಯಂತರ ರುಪಾಯಿ ಖರ್ಚು ಮಾಡಿ, ಜಕಣಾಚಾರಿ ತರಹದ ಶಿಲ್ಪಿಗಳನ್ನ ಕರೆಸಿ, ಎಲ್ಲೆಲ್ಲಿಂದಲೋ ಏನೇನೋ ಸಾಮಾನು ತರಿಸಿ, ಸಮರೋಪಾದಿಯಲ್ಲಿ ಕೆಲಸ ಮಾಡಿ ಮುರುಡೇಶ್ವರದ ಗುಡಿ ಕಟ್ಟಿಸಬೇಕಾದ್ರೂ ಶೆಟ್ಟರಿಗೆ ಇಷ್ಟು ಮಂಡೆ ಬಿಸಿ ಆಗಿರಲಿಕ್ಕೆ ಇಲ್ಲ. ಈಗ ದೊಡ್ಡ ಪೂಜಿಗೆ ಅದಕ್ಕೆ ಸರಿಯಾದ ದೊಡ್ಡ ಭಟ್ಟರನ್ನು ಹುಡುಕೋದು ಮಾತ್ರ ಶೆಟ್ಟರಿಗೆ ದೊಡ್ಡ ತಲೆ ಬಿಸಿಯಾಗಿ ಹೋತು. ಕೇಳಿದ ಪಂಡಿತರು ಒಬ್ಬಬ್ಬರು ಒಂದೊಂದು ತರಹಾ ಹೇಳ್ತಾರ. ಇದು ಹೀಂಗ ಬಗೆಹರಿಯೋದು ಅಲ್ಲ. ಇದಕ್ಕ ಮತ್ತ ತಮ್ಮ ಆಪ್ತ ಭಟ್ಟರು, ಅಲ್ಲ ಹೆಗಡೇರು, ಕಡೆನೇ ಹೋಗಬೇಕು ಅಂತ ಶೆಟ್ಟರು ನಮ್ಮ ತಂದೆಯವರ ಕಡೆ ಬಂದಿದ್ದರು.

ಶೆಟ್ಟರೆ, ಚಿಂತೆ ಬೇಡ. ನಮ್ಮ ಹೊನ್ನಾವರದ ಕರ್ಕಿಯಲ್ಲಿ ಒಬ್ಬ ದೊಡ್ಡ ಪಂಡಿತರು ಇದ್ದಾರೆ. ಅವರನ್ನು ಕಾಣುವ - ಅಂತ ಶೆಟ್ಟರಿಗೆ ಹೇಳಿ, ಅವರಿಗೆ ಆ ದೊಡ್ಡ ಪಂಡಿತರನ್ನು ಗುರ್ತು ಮಾಡಿಸಿಕೊಟ್ಟರು ನಮ್ಮ ತಂದೆಯವರು.

ಆ ಕರ್ಕಿ ಪಂಡಿತರು ಖರೆ ದೊಡ್ಡ ಪಂಡಿತರು. ಮೂಲ ದೇವಸ್ಥಾನದ ಜೀರ್ಣೋದ್ಧಾರ ಮಾಡೋದು, ಅದಕ್ಕ ತಕ್ಕ ಪೂಜೆ ಪುನಸ್ಕಾರ ಮಾಡೋದು ಅಂದ್ರ ಸಣ್ಣ ಮಾತಲ್ಲ ಅಂತ ಅವರಿಗೆ ಗೊತ್ತೇ ಇತ್ತು.

ನನಗ ಇದ್ದರ ಬಗ್ಗೆ ಎಲ್ಲಾ ಗೊತ್ತದ. ಜೀರ್ಣೋದ್ಧಾರ ಹೇಗೆ ಸರಿಯಾಗಿ ಶಾಸ್ತ್ರಬದ್ಧವಾಗಿ ಮಾಡಬೇಕು ಅಂತ ಹೇಳಬಲ್ಲೆ. ಆದರೂ ನಾನೂ ಸಹಿತ ಇನ್ನೊಬ್ಬ ಪಂಡಿತರನ್ನ consult ಮಾಡಬೇಕು. ಅವರ ಜೋಡಿ meeting ಎಲ್ಲಾ ಮಾಡಸ್ರೀ - ಅಂದ್ರು ಆ ಹೊನ್ನಾವರದ ಪಂಡಿತರು.

ಯಾರ್ರೀ ಅವರು ಆ ಪಂಡಿತರು? ನೀವು ಭೆಟ್ಟಿ ಮಾಡಬೇಕು ಅಂದವರು? - ಅಂತ ನಮ್ಮ ತಂದೆ ಕೇಳಿದರು.

ಧಾರವಾಡದೊಳಗ ಭಾಲಚಂದ್ರ ಶಾಸ್ತ್ರಿ ಅಂತ ಇದ್ದಾರ. ನನಗ ಛೊಲೋ ಪರಿಚಯ ಅದ. ಅವರ ಜೋಡಿ ನಾ ಎಲ್ಲಾ ಫುಲ್ ಚರ್ಚೆ ಮಾಡಿ, ಅವರ ಸಲಹೆ ಎಲ್ಲಾ ತೊಗೋಂಡ ಮ್ಯಾಲೆನೇ ನಾ ನಿಮಗ ಜೀರ್ಣೋದ್ಧಾರಕ್ಕಾಗಿ ಮಾಡಬೇಕಾದ ಪೂಜಾ ವಿದಿಗಳ ಬಗ್ಗೆ ಎಲ್ಲಾ ಬರೆದು ಕೊಡತೇನಿ. ನಂತರ ನೀವು ಸರಿಯಾದ ವೈದಿಕರನ್ನು ಹಿಡಿದು ಎಲ್ಲಾ ಮಾಡಿಸಿಕೊಳ್ಳಿ - ಅಂತ ಅಂದ್ರು ಆ ಕರ್ಕಿ ಪಂಡಿತರು.

ಯಾರು ಈ ಹೊಸ ಭಟ್ಟರು? ಎಂತಾ ಶಾಸ್ತ್ರಿ ಅಂದ್ರು? - ಅಂತ ಶೆಟ್ಟರು ನಮ್ಮ ತಂದೆಯವರ ಕಡೆ ನೋಡಿದರು.

ಶೆಟ್ಟರೆ, ಚಿಂತೆ ಬೇಡ. ಅವರು ಭಾಲಚಂದ್ರ ಶಾಸ್ತ್ರಿಗಳು ಅಂತ. ನನ್ನ ಗುರುಗಳು ಅವರು. ನಾ ಎಲ್ಲ ಮಾಡುವೆ - ಅಂತ ಶೆಟ್ಟರಿಗೆ ನಮ್ಮ ತಂದೆಯವರು ಹೇಳಿದರು.

ಕರ್ಕಿ ಪಂಡಿತರಿಗೆ ಹಿಂತಿಂತ ದಿವಸ ಧಾರವಾಡಕ್ಕೆ ಬರ್ರಿ, ಕಾರು ಗೀರು ಎಲ್ಲಾ ವ್ಯವಸ್ಥೆ ಮಾಡ್ತೇವಿ, ಭಾಲಚಂದ್ರ ಶಾಸ್ತ್ರಿಗಳ ಜೋಡಿನೂ ಮೀಟಿಂಗ್ ಫಿಕ್ಸ್ ಮಾಡಿಸಿ, ಎಲ್ಲಾ ರೆಡಿ ಮಾಡಿ ಇಟ್ಟಿರ್ತೇವಿ. ನೀವು ಬಂದು, ಭಾಲಚಂದ್ರ ಶಾಸ್ತ್ರಿಗಳ ಜೋಡಿ ಎಲ್ಲಾ ಚರ್ಚೆ ಮಾಡಿ, ನಮ್ಮ ಮುರುಡೇಶ್ವರ ಜೀರ್ಣೋದ್ಧಾರದ ಪೂಜಾ ವಿಧಾನಗಳಿಗೆ ಒಂದು user manual ರೆಡಿ ಮಾಡಿಕೊಟ್ಟು ಹೋಗಿ ಬಿಡ್ರೀ. ಭಾಳ ಸಹಾಯ ಆಗ್ತದ, ಅಂತ ವಿನಂತಿ ಮಾಡಿಕೊಂಡು, ನಮಸ್ಕಾರ ಮಾಡಿ, ದಕ್ಷಿಣಾ ಗಿಕ್ಷಿಣಾ ಕೊಟ್ಟು ಬಂದ್ರು ಅಂತಾತು.

ಫಿಕ್ಸ್ ಮಾಡಿದ ದಿವಸ ಕರ್ಕಿ ಪಂಡಿತರು ಬಂದ್ರು. ಆರ್. ಎನ್. ಶೆಟ್ಟರು ಬಂದ್ರು. ಮೊದಲು ಎಲ್ಲಾ ನಮ್ಮ ಮನಿಗೇ ಬಂದ್ರು. ಅಲ್ಲಿಂದ ಶೆಟ್ಟರ ಆ ಕಾಲದ ಭಯಂಕರ ಲಕ್ಸುರಿ ವಾಹನ ಕಾಂಟೆಸ್ಸಾ ಕಾರ್ ಒಳಗ ಎಲ್ಲಾರೂ ಕೂಡಿ ಹಳೆ ಧಾರವಾಡದಲ್ಲಿದ್ದ ಭಾಲಚಂದ್ರ ಶಾಸ್ತ್ರಿಗಳ ಮನಿಗೆ ಹೋದರು. ನಾನೂ ಹೋಗಿದ್ದೆ. ಕಾಂಟೆಸ್ಸಾ ಕಾರ್ ಒಳಗ  ರೌಂಡ್ ಹೊಡಿಯೋದನ್ನ ಯಾರು ಬಿಡ್ತಾರ್ರೀ?! ಆ ಕಾಲದ ಮಹಾ ತುಟ್ಟಿ ಕಾರ್ ಅದು.

ಭಾಲಚಂದ್ರ ಶಾಸ್ತ್ರಿಗಳ ಮನಿ ಬಂತು. ದೊಡ್ಡವರೆಲ್ಲಾ ಇಳಿದು ಹೋದರು. ನಾನು ಮಾತ್ರ ಶೆಟ್ಟರ ಗಂಟ ಮಾರಿ ಡ್ರೈವರ್ ತಾನಾಜಿ ಜೋಡಿ ಕಾಂಟೆಸ್ಸಾ ಕಾರ್ ಒಳಗೇ ಕೂತೆ. ಅವನ ಕಡೆ ಅದು ಇದು ಕೇಳಿಕೋತ್ತ. ನಾ ಹತ್ತು ಪ್ರಶ್ನೆ ಕೇಳಿದರ ಆವಾ ಗಂಟ ಮಾರಿ ತಾನಾಜಿ ರೊಕ್ಕ ಖರ್ಚು ಆಗ್ತದೇನೋ ಅನ್ನೋರಾಂಗ, ಹೌದು, ಇಲ್ಲ, ಅಂತ ಉತ್ತರ ಕೊಡವಾ. ನಾ ಎಲ್ಲರೆ ಶೆಟ್ಟರ ಕಾಂಟೆಸ್ಸಾ ಕಾರ್ ಏನರೆ ಮಾಡಿಬಿಡ್ತೆನೇನೋ ಅಂತ ಅವಂಗ tension ಇದ್ದಂಗ ಅನ್ನಸ್ತಿತ್ತು. ನಾ ಏನ್ ಮಾಡಲಿಲ್ಲ ಬಿಡ್ರೀ.

ಕರ್ಕಿ ಪಂಡಿತರು, ಶೆಟ್ಟರು, ನಮ್ಮ ತಂದೆಯವರು ಭಾಲಚಂದ್ರ ಶಾಸ್ತ್ರಿಗಳ ಮನಿ ಒಳಗ ಹೋದರಲ್ಲ, ಮುಂದೇನಾತು? ನಾ ಏನ ಒಳಗ ಹೋಗಿರಲಿಲ್ಲ. ತಂದೆಯವರಿಂದ ಕೇಳಿದ್ದು. ಸ್ವಾರಸ್ಯಕರ  ಘಟನೆ.

ಕರ್ಕಿಯಿಂದ ತಮ್ಮ ಸ್ನೇಹಿತ ದೊಡ್ಡ ಪಂಡಿತರು ಬರ್ಲಿಕತ್ತಾರ. ಅದೂ ಏನೇನೋ ದೊಡ್ಡ ಚರ್ಚೆ ಮಾಡಲಿಕ್ಕೆ. ಯಾವದಕ್ಕೂ ಇರಲಿ ಅಂತ ಭಾಲಚಂದ್ರ ಶಾಸ್ತ್ರಿಗಳೂ ಸಹ ತಮ್ಮ ನಂಬಿಕಸ್ತ ಇನ್ನೊಂದಿಷ್ಟು ಜನ ಪಂಡಿತರನ್ನೂ ಸಹ ಕಲೆ ಹಾಕಿಕೊಂಡು ಕೂತಿದ್ದರು ತಮ್ಮ ಮನಿಯೊಳಗ.

ಪಂಡಿತರೆಲ್ಲರ ಉಭಯಕುಶಲೋಪರಿ ಇತ್ಯಾದಿ ಮಾತುಕತೆ ಮುಗಿದು ಮುಖ್ಯ ಪಾಯಿಂಟಿಗೆ ಎಲ್ಲರೂ ಬಂದ್ರು.

ಮುರುಡೇಶ್ವರದ ದೇವಸ್ಥಾನದ ಜೀರ್ಣೋದ್ಧಾರ ಹ್ಯಾಂಗೆ ಮಾಡಬೇಕು? ವೇದಗಳು, ಪುರಾಣಗಳು ಇತ್ಯಾದಿ ಏನು ಹೇಳ್ತಾವ? ಯಾವ ಯಾವ ಅನುಷ್ಠಾನ ಮಾಡಬೇಕು? ಅವಕ್ಕ ಮಂತ್ರಾ ಎಲ್ಲೆಲ್ಲಿಂದ ಎತ್ತಬೇಕು? ಪ್ರತಿಯೊಂದಕ್ಕೂ ಶಾಸ್ತ್ರಾಧಾರ ಎಲ್ಲೆ ಅದ? ಕೆಲವೊಂದು ಅನುಷ್ಠಾನಗಳು ಬೇರೆ ಬೇರೆ ವೇದದಲ್ಲಿ ಬೇರೆ ಬೇರೆ ತರಹ ಅವ. ಅವನ್ನ ಹ್ಯಾಂಗೆ reconcile ಮಾಡಬೇಕು - ಅಂತ ದೊಡ್ಡ ಮಟ್ಟದ ಚರ್ಚೆ, ಸಂವಾದ ಎಲ್ಲಾ ನೆರದ ಪಂಡಿತರಲ್ಲಿ ಆತು.

ಶೆಟ್ಟರು, ನಮ್ಮ ತಂದೆಯವರು ಸುಮ್ಮ ಕೇಳಿಕೋತ್ತ, ನೋಡಿಕೋತ್ತ ಕೂತರು.

ಇಷ್ಟೆಲ್ಲಾ ಮಂದಿ ಪಂಡಿತರು ಕೂಡಿ ಒಂದು ನಿರ್ಧಾರಕ್ಕೆ ಬರೋದು ಸಾಧ್ಯ ಅದ ಏನ್ರೀ?

ಯಾವದೋ ಒಂದು ಪಾಯಿಂಟ್ ಸಿಕ್ಕಾಪಟ್ಟೆ ತೊಂದ್ರೀ ತಂದು ಇಡ್ತು. ಕೆಲೊ ಮಂದಿ ಈ ವೇದದ, ಈ ಶಾಖೆಯೊಳಗ ಹೀಂಗ ಅದ, ಅದೇ ಸರಿ, ಅದರ ಪ್ರಕಾರನೇ ಮಾಡಬೇಕು ಅಂದ್ರ, ಉಳಿದ ಮಂದಿ, ಏ... ಅದು ತಪ್ಪು....ಮತ್ತೊಂದು ವೇದದ, ಮತ್ತೊಂದು ಶಾಖೆಯಲ್ಲಿ ಅದು ಹೀಂಗದ, ಅದೇ ಸರಿ, ಅದರಾಂಗೇ ಮಾಡಬೇಕು, ಅಂತ. ಅವರಲ್ಲೇ ವಾದ, ವಿವಾದ. ಒಟ್ಟಿನ್ಯಾಗ ಒಂದು ಒಪ್ಪಂದಕ್ಕೆ ಬರವಲ್ಲರು ಈ ದೊಡ್ಡ ದೊಡ್ಡ ಪಂಡಿತ ಮಂದಿ.

ಹತ್ತು ನಿಮಿಷಾತು, ಹದಿನೈದು ನಿಮಿಷಾತು, ಅರ್ಧಾ ತಾಸಾತು, ಪೌಣೆ ತಾಸಾತು. ಈ ಪಂಡಿತರ ಆ ವೇದ ಸರಿ, ಈ ವೇದ ಸರಿಯಲ್ಲ ಅನ್ನೋ ವಾದ ವಿವಾದ ಮುಗಿವಲ್ಲದು. ಈಗ temper ಬ್ಯಾರೆ rise ಆಗಿ ಕೆಲೊ ಮಂದಿ ಸುಮಾರು ಜಗಳಾನೇ ಮಾಡ್ಲಿಕತ್ತಾರ! ಹಾಂ!!! ಹವಾ ಫುಲ್ ಗರಂ!!

ಏನ್ರೀ ಭಟ್ಟರೇ ಅಲ್ಲಲ್ಲ ಹೆಗಡೇರೆ?! ಇದೆಂತಾ ಭಟ್ಟರ ಜಗಳ? - ಅನ್ನೋ ಲುಕ್ ಶೆಟ್ಟರು ನಮ್ಮ ತಂದೆಯವರಿಗೆ ಕೊಟ್ಟರು.

ದೊಡ್ಡ ಮಂದಿ ಚರ್ಚಾ ನೆಡದದ. ಎಲ್ಲಾ ನಿಮ್ಮ ಮುರುಡೇಶ್ವರದ ಜೀರ್ಣೋದ್ಧಾರಕ್ಕಾಗಿ. ಮಾಡ್ಲಿ ಬಿಡ್ರೀ ಅವರು ಚರ್ಚಾ. ಹೀಂಗ ಚರ್ಚಾ ಆದ್ರೆ ಮಾತ್ರ ನಿಮಗ ಸರಿಯಾಗಿ ಪೂಜಾ syllabus ಸಿಗೋದು. ಇಲ್ಲಂದ್ರ ಇಲ್ಲ - ಅಂತ ನಮ್ಮ ತಂದೆಯವರು ಶೆಟ್ಟರಿಗೆ ಕಣ್ಣ ಸನ್ನಿಯೊಳಗೇ ಹೇಳಿದರು.

ಏನೋ ದೊಡ್ಡ ಭಟ್ಟರ ದೊಡ್ಡ ಜಗಳಾ, ಅಂತ ಶೆಟ್ಟರು ವಾಚ್ ನೋಡ್ಕೊತ್ತ ಕೂತರು.

ಪೌಣಾ ತಾಸು ಹೋಗಿ ಒಂದು ತಾಸಾಗ್ಲಿಕ್ಕೆ ಬಂತು. ಈ ಪಂಡಿತರು ಇನ್ನೂ ಆ ವೇದ, ಈ ಶಾಖೆ, ಆ ಮಂತ್ರ, ಈ ಅನುಷ್ಠಾನ ಅಂತ ಇನ್ನೂ ತಮ್ಮ ವಾದ ವಿವಾದ ಮುಗಿಸವಲ್ಲರು. ಒಟ್ಟಿನ್ಯಾಗ ಇವರ ಜಗಳ ಬಗೆಹರಿವಲ್ಲದು. ಚರ್ಚೆ ಹೋಗಲಿ ಈಗ ಎಲ್ಲಾರೂ ಭುಸು ಭುಸು ಅನಕೋತ್ತ ಕೂತಾರ. ಮುಂದೇನು ಹೀಂಗ ಆದ್ರ?

ನಮ್ಮ ತಂದೆಯವರಿಗೆ ಅದು ಎಲ್ಲಿಂದ ಏನು ಪ್ರೇರಣೆ ಆತೋ ಗೊತ್ತಿಲ್ಲ. ಒಂದು ಬಾಂಬ್ ಒಗದೇ ಬಿಟ್ಟರು!

ಆ ವೇದ, ಈ ವೇದ ಏನ್ರೀ? ಎಲ್ಲಾ ಸಾಮವೇದದ ಪ್ರಕಾರ ಮಾಡಿ ಮುಗಿಸಿಬಿಡ್ರೀ!!

ಫುಲ್ ಸೈಲೆನ್ಸ್!

ಎಲ್ಲ ದೊಡ್ಡ ಪಂಡಿತರು ಒಂದು ಕ್ಷಣ ಫುಲ್ ಥಂಡಾ. ಏನು ಇವ ಕಾಲೇಜಿನ್ಯಾಗ ಕಲಿಸೋ ಮಾಸ್ತರ್ ಒಳ್ಳೆ ಅಧಿಕಪ್ರಸಂಗಿ ಹಾಂಗ, ನಮ್ಮ ದೊಡ್ಡ ಪಂಡಿತರ ಚರ್ಚಾ ನಡೆದಾಗ, ನಡು ಉಪದ್ವಾಪಿತನ ಮಾಡತಾನ? ಹಾಂ?! ಬುದ್ಧಿ ಗಿದ್ಧಿ ಅದನೋ ಇಲ್ಲೋ ಇವರಿಗೆ?! - ಅಂತ ಕೆಲೊ ಮಂದಿ ಮಾರಿ ಮ್ಯಾಲೆ ಏನೇನೋ ತರಹದ ಭಾವಗಳು ಮೂಡಿ ಮರೆಯಾದವು.

ನಮ್ಮ ತಂದೆಯವರನ್ನು ಅರಿತಿದ್ದ ಕೆಲ ಪಂಡಿತರು ಮಾತ್ರ, ಈ ಹೆಗಡೆಯವರು ಏನೋ ಪಾಯಿಂಟ್ ಇಟಗೋಂಡೇ ಹೀಗಂದಾರ. ಏನಿರಬಹುದು? - ಅಂತ ಕುತೂಹಲಿಗಳಾದ್ರು. ಕೆಲೊ ಮಂದಿ ದೇಶಾವರಿ ನಗು ನಕ್ಕರು.

ಮೊದಲು ಸುಧಾರಿಕೊಂಡು ಮಾತಾಡಿದವರು ಭಾಲಚಂದ್ರ ಶಾಸ್ತ್ರಿಗಳೇ.

ಸಾಮವೇದದ ಪ್ರಕಾರ ಎಲ್ಲಾ ಮಾಡಿ ಮುಗಿಸಿಬಿಡ್ರೀ ಅಂತ ಇಷ್ಟು ಗುಂಡು ಹೊಡೆದಂಗ ಹೇಳಲಿಕತ್ತಿರಲ್ಲಾ ಹೆಗಡೆಯವರ, ಅದು ಹ್ಯಾಂಗ್ರೀ? ಅದನ್ನೂ ಸ್ವಲ್ಪ ಹೇಳಿಬಿಡ್ರಲ್ಲಾ. ಹಾಂ! - ಅಂತ ಭಾಲಚಂದ್ರ ಶಾಸ್ತ್ರಿಗಳು ಕೇಳಿದರು. ಮಾತಿನಲ್ಲಿ ಅಕ್ಕರೆಯಿತ್ತು. ಸಣ್ಣ ಹುಡುಗುರು ಏನೋ ದೊಡ್ಡ ಮಾತಾಡಿದಾಗ ದೊಡ್ಡವರು ಮಾತಾಡೋ ಪ್ರೀತಿಯ ಧಾಟಿ ಇರ್ತದಲ್ಲ. ಹಾಂಗೆ.

ವೇದಾನಾಂ ಸಾಮ ವೇದೋಸ್ಮೀ, ಅಂದ್ರ, ವೇದಗಳಲ್ಲಿ ನಾನು ಸಾಮವೇದವಾಗಿದ್ದೇನೆ, ಅಂತ ಭಗವದ್ಗೀತೆಯೊಳಗೆ ಭಗವಾನ ಶ್ರೀ ಕೃಷ್ಣನೇ ಹೇಳಿಬಿಟ್ಟಾನ. ಅಂದ ಮ್ಯಾಲೆ ಮತ್ತೇನ್ರೀ ಶಾಸ್ತ್ರಿಗಳ?! ಎಲ್ಲಿ ಆ ವೇದ ಈ ವೇದ ಹಚ್ಚೀರಿ? ಸಾಮವೇದದ ಪ್ರಕಾರ ಎಲ್ಲಾ ಮಾಡಿ ಮುಗಿಸಿಬಿಡ್ರೀ - ಅಂತ ಅಂದ್ರು ನಮ್ಮ ತಂದೆಯವರು.

(ವೇದಾನಾಂ ಸಾಮ ವೇದೋಸ್ಮೀ - ಭಗವದ್ಗೀತಾ ಅಧ್ಯಾಯ ೧೦, ಶ್ಲೋಕ ೨೨)

ಈಗ ಭಾಲಚಂದ್ರ ಶಾಸ್ತ್ರಿಗಳು ಮಾತ್ರ ಅಲ್ಲ ಎಲ್ಲರೂ ಸ್ವಲ್ಪ loosen up ಆದರು. ಆ ಪರಿ ಫುಲ್ ಟೈಟ್ ಆಗಿದ್ದ ವಾತಾವರಣ ಸ್ವಲ ತಿಳಿ ಆತು.

ಅಧಿಕಪ್ರಸಂಗಿತನ ಮಾಡಿದರೂ ಶಾಸ್ತ್ರೋಕ್ತವಾಗಿ, ಎಲ್ಲಾ ಫುಲ್ ಶಾಸ್ತ್ರದ ಸಪೋರ್ಟ್ ಇಟ್ಟೇ  ಮಾಡ್ತೀರಿ ನೋಡ್ರೀ ಹೆಗಡೆಯವರ!!!! ಅನ್ನೋ ಲುಕ್ ಭಾಲಚಂದ್ರ ಶಾಸ್ತ್ರಿಗಳ ಮುಖದಲ್ಲಿ.

ಎಲ್ಲ ಪಂಡಿತರ ಮುಖದ ಮ್ಯಾಲಿನ ಗಂಟೆಲ್ಲ ಮಾಯವಾಗಿ, ಮೋಡ ಕವಿದ ವಾತಾವರಣ ತಿಳಿಯಾಗಿ, ಎಲ್ಲರೂ ಎಲ್ಲಾ ಬಿಚ್ಚಿ (ಅಂದ್ರ ಮನಸ್ಸು ಇತ್ಯಾದಿ ಮಾತ್ರ) ನಕ್ಕರು. ಮುಂದೆ ಎಲ್ಲಾ ಸುರಳೀತ ಆತು.

ತಂದೆಯವರ ಮಾತಿನ ಹಿಂದೆ ಯಾವದೇ ಕುಚೋದ್ಯ ಇರಲಿಲ್ಲ. ಕಾವೇರುತ್ತಿದ್ದ ವಾತಾವರಣಕ್ಕೆ ಒಂದು ತಣ್ಣನೆ ಟಚ್ ಕೊಡುವ ಯತ್ನವಿತ್ತು ಅಷ್ಟೇ. ಹಾಗಾಗಿ ಯಾರೂ ಸಿಟ್ಟಿಗೇಳಲಿಲ್ಲ.

ಶೆಟ್ಟರೂ ಸಹಾ ಹೇ! ಹೇ! ಅಂತ ನಕ್ಕರು. ಅವರಿಗೆ ಯಾವ ವೇದ ಆದರೇನು, ಒಟ್ಟಿನ್ಯಾಗ ಈ ದೊಡ್ಡ ಭಟ್ಟರ ಜಗಳ ಮುಗಿದು ಅವರ ಪೂಜಿ ಆದ್ರ ಸಾಕು. ಅವರಿಗೆ ಮಾಡಲಿಕ್ಕೆ ಸಾವಿರ ಕೆಲಸ ಬ್ಯಾರೆ ಅವ. ಸಾವಿರಾರು ಕೋಟಿ ಆ ಕಡೆಯಿಂದ ಈ ಕಡೆ ಹಾಕೋವಾಗ ಸಹಿತ ಶೆಟ್ಟರು ಇಷ್ಟು ತಲಿ ಕೆಡಿಸ್ಕೊತ್ತಾರೋ ಇಲ್ಲೋ! ಈ ಭಟ್ಟರು ಮಾತ್ರ ಇಷ್ಟು ರಿಪಿ ರಿಪಿ ಮಾಡ್ತಾರ!

ನಂತರ ಶಾಸ್ತ್ರಿಗಳು, ವೇದಾನಾಂ ಸಾಮ ವೇದೋಸ್ಮೀ, ಅಂತ ಭಗವದ್ಗೀತಾ ಒಳಗ ಕೃಷ್ಣ ಹೇಳಿದ್ದರ ಅರ್ಥ ಏನು, ಮತ್ತ ಪೂಜಾವಿಧಿ ವಿಧಾನ ಎಲ್ಲಾ ಹ್ಯಾಂಗ ಹೆಚ್ಚಾಗಿ ರಿಗ್ವೇದ, ಯಜುರ್ವೇದಿಂದ ಬರ್ತಾವ, ಅದು ಇದು ಅಂತ ಒಂದು ಸಣ್ಣ ಪ್ರವಚನ ಕೊಟ್ಟು, ಶಾಸ್ತ್ರಬದ್ಧವಾಗಿಯೇ ಅಧಿಕಪ್ರಸಂಗಿತನ ಮಾಡಿದ್ದ ತಂದೆಯವರಿಗೆ ಒಂದೆರಡು ಉತ್ತತ್ತಿ ಪ್ರಸಾದದಲ್ಲಿ ಹೆಚ್ಚೇ ಕೊಟ್ಟು, ಆಶೀರ್ವಾದ ಮಾಡಿ ಕಳಿಸಿದ್ದು ಭಾಲಚಂದ್ರ ಶಾಸ್ತ್ರಿಗಳ ದೊಡ್ಡ ಗುಣ.

ಮುಂದೆ ಭಾಲಚಂದ್ರ ಶಾಸ್ತ್ರಿಗಳು ಮತ್ತು ಇತರೆ ಪಂಡಿತರು ಎಲ್ಲಾ ಕೂಡಿ ಒಂದು proper vedic syllabus ಮಾಡಿ ಕೊಟ್ಟರು. ಅದರ ಪ್ರಕಾರ ಗೋಕರ್ಣದ ದೊಡ್ಡ ದೊಡ್ಡ ವೈದಿಕರು ಬಂದು ಶಾಸ್ತ್ರಸಮ್ಮತವಾಗಿ ಮುರುಡೇಶ್ವರದ ಜೀರ್ಣೋದ್ಧಾರ ಪೂಜೆ ಅದು ಇದು ಎಲ್ಲಾ ಮಾಡಿ ಕೊಟ್ಟರು.

ನಂತರ ಮುರುಡೇಶ್ವರ ಹಿಂತಿರುಗಿ ನೋಡಿಲ್ಲ. ಅಭಿವೃದ್ಧಿ ಆಗತಾನೇ ನೆಡದದ. ಭಾಲಚಂದ್ರ ಶಾಸ್ತ್ರಿಗಳ ಆಶೀರ್ವಾದ ಸಹಾ ಅದಕ್ಕೆ ಕಾರಣ.

ಇನ್ನು ಭಾಲಚಂದ್ರ ಶಾಸ್ತ್ರಿಗಳ ತಮ್ಮಾ ಪ್ರೊ. ಎಂ. ಎನ್. ಜೋಶಿ ಸರ್. ನಮ್ಮ ತಾಯಿಯವರಿಂದ ಹಿಡಿದು ನಮ್ಮ ಕುಟುಂಬದ ಕರ್ನಾಟಕ ಕಾಲೇಜಿಗೆ ಹೋದ ಎಲ್ಲರಿಗೂ ಸಂಸ್ಕೃತ ಕಲಿಸಿದವರು. ನಮ್ಮ ತಂದೆಯವರನ್ನು ಬಿಟ್ಟು. ಅವರ ಸಮಕಾಲೀನರು ಅವರು. ದೊಡ್ಡ ಪಂಡಿತರು. ಸಂಸ್ಕೃತ, ಇಂಗ್ಲೀಷ್, ಕನ್ನಡ ಭಾಷೆಗಳಲ್ಲಿ ಪೂರ್ತಿ ಪಾಂಡಿತ್ಯ. ಅವರ ಲೆಕ್ಚರ್ ಅಂದ್ರ ಏನ್ರೀ! ಸೂಪರ್!

ಪಿಯೂಸಿ ಮೊದಲನೇ ವರ್ಷ ಎಂ. ಎನ್. ಜೋಶಿ ಸರ್ ಕಾಳಿದಾಸನ ಯಾವದೋ ಒಂದು ಕಾವ್ಯದ ಮೇಲೆ ಅಮೋಘ ಲೆಕ್ಚರ್ ಕೊಟ್ಟು, what effect does it produce? ಅಂತ ಕೇಳಿದ್ದರು. ಆಗ ಮಾತ್ರ ಫಿಸಿಕ್ಸ್ ಕ್ಲಾಸ್ ಮುಗಿಸಿ ಬಂದಿದ್ದ ನಾವು, ಹಿಂದಿನ ಬೆಂಚಿನಿಂದ, Raman Effect, ಅಂತ ಒದರಿದಾಗ ಎಲ್ಲರೂ ನಕ್ಕಿದ್ದರು. ಎಂ. ಎನ್. ಜೋಶಿ ಸರ್ ಕೇಳಿದ್ದು ಯಾವ poetic effect ಅಂತ. ಹೋಗಿ ಹೋಗಿ ನಾವು Raman Effect ಅಂದ್ರ ಅವರಿಗೆ ಉರಿದೇ ಇರ್ತದ ಏನ್ರೀ?! ಹಾಕ್ಕೊಂಡು ಬೈದ್ರು. ಎಲ್ಲರಿಗೆ. ಇಂಗ್ಲೀಷ್ ಮಿಶ್ರಿತ ಸಂಸ್ಕೃತದಲ್ಲಿ ಬೈದ್ರೋ ಅಥವಾ ಸಂಸ್ಕೃತ ಮಿಶ್ರಿತ ಇಂಗ್ಲೀಷ್ ಒಳಗ ಬೈದ್ರೋ, ದೇವರಿಗೇ ಗೊತ್ತು. ಪುಣ್ಯಕ್ಕ ನನ್ನ ಒಬ್ಬವನ್ನೇ ಎಬ್ಬಿಸಿ ನಿಲ್ಲಿಸಿ ಬೈಲಿಲ್ಲ. ಎಲ್ಲಾರಿಗೂ ಕೂಡೆ ಹಾಕ್ಕೊಂಡು ಬೈದ್ರು.

ಇನ್ನು ವೀ.ಬೀ.ಜೋಶಿ ಸರ್. ಭಾಲಚಂದ್ರ ಶಾಸ್ತ್ರಿಗಳ ಪುತ್ರ. ದೊಡ್ಡ ಪಂಡಿತರು. ಅವರು ನಮಗೆ ಪಿಯುಸಿ ಎರಡನೇ ವರ್ಷ ಸಂಸ್ಕೃತ ಕಲಿಸಿದವರು. ಯಾವಾಗಲೂ ಒಂದು ಕಾಫಿ ಕಲರ್ ಕೋಟ್ ಮತ್ತು ಅದೇ ಬಣ್ಣದ್ದೋ ಅಥವಾ ಕರಿ ಬಣ್ಣದ್ದೋ ಟೊಪ್ಪಿಗಿ ಅವರ ತಲಿ ಮ್ಯಾಲೆ. ಅವರ ನೋಡಿದಾಕ್ಷಣ, ಅವರ ಬೋರ್ನವಿಟಾ ಬಣ್ಣದ ಖಾಯಂ ಕೋಟ್ ನೋಡಿದಾಕ್ಷಣ ನಮ್ಮ ಕಿಡಿಗೇಡಿ ದೋಸ್ತ ಒಬ್ಬ ಅವರಿಗೆ 'ಬೋರ್ನವಿಟಾ ಭಟ್ಟಾ' ಅಂತ ಹೆಸರು ಇಟ್ಟುಬಿಟ್ಟ. ಕೆಟ್ಟ ಹುಡುಗ. ಭಾರೀ ಮಸ್ತ ಸಂಸ್ಕೃತ ಕಲಸ್ತಿದ್ದರು. ಭಾಲಚಂದ್ರ ಶಾಸ್ತ್ರಿಗಳಂತಹ ತಂದೆಗೆ ತಕ್ಕ ಮಗ ಅವರು. ಕೇವಲ ಪಾಂಡಿತ್ಯದಿಂದ ಮಾತ್ರ ಬರುವಂತಹ ಒಂದು ತರಹದ ತೇಜಸ್ಸು ಅವರ ಮುಖದಲ್ಲಿ. ಈಗ ಅವರೂ ಸಹ ರಿಟೈರ್ ಆಗಿರಬಹುದು.

ಬಾಲಚಂದ್ರ ಶಾಸ್ತ್ರಿಗಳನ್ನು ನೋಡಿದ್ದು ಬಹುಶ ಎರಡೇ ಸರಿ. ಒಂದು ಓಪನ್ ಏರ್ ಥೀಯೇಟರ್ ನಲ್ಲಿ. ಇನ್ನೊಮ್ಮೆ ಶೃಂಗೇರಿ ಸ್ವಾಮಿಗಳು ಯಾರದೋ ಮನೆಗೆ ಪಾದಪೂಜೆಗೆ ಬಂದಾಗ ನೋಡಿ, ನಮಸ್ಕಾರ ಮಾಡಿ ಆಶೀರ್ವಾದ ತೆಗೆದುಕೊಂಡಿದ್ದು.

ಅದು ಏನೋ ಏನೋ! ಭಾಲಚಂದ್ರ ಶಾಸ್ತ್ರಿಗಳು ಹೋಗಿದ್ದೇ ಹೋಗಿದ್ದು ಈ ಎಲ್ಲ ನೆನಪುಗಳು ಬಂದು ಬಿಟ್ಟವು. ಬರೆಯೋ ತನಕಾ ನೆಮ್ಮದಿ ಇಲ್ಲ.

Friday, December 27, 2013

ಚಂದ್ರಂಗ ಬಾಲ ಹಚ್ಚಿ ಬಾಲಚಂದ್ರ ಯಾಕ ಮಾಡಬೇಕು ಅಂತ ಹೇಳಿ 'ಏನೇನೋ' ಸೀಳಿ 'ಭಾ'ಲಚಂದ್ರ ಮಾಡಿಬಿಟ್ಟಿದ್ದು!

(ಧಾರವಾಡದ ಪ್ರಕಾಂಡ ಪಂಡಿತ, ಸಕಲ ವೇದವಿದ್ಯಾ ಪಾರಂಗತ, ಸಂಸ್ಕೃತ ವಿದ್ವಾಂಸ, ಬ್ರಹ್ಮರ್ಷಿ ಶ್ರೀ ಭಾಲಚಂದ್ರ ಶಾಸ್ತ್ರಿ ಜೋಶಿ ಅವರು ಡಿಸೆಂಬರ್ ೪ ರಂದು ತಮ್ಮ ೯೪ ನೇ ವಯಸ್ಸಿನಲ್ಲಿ ನಿಧನರಾದರು. ಶಾಸ್ತ್ರಿಗಳ ಪಾಂಡಿತ್ಯದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಜಾಸ್ತಿ ಏನೂ ಗೊತ್ತಿಲ್ಲ. ಆದರೂ ಕೆಲವು ನೆನಪುಗಳಿವೆ. ಅವನ್ನು ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನ.)

ಬ್ರಹ್ಮರ್ಷಿ ಶ್ರೀ ಭಾಲಚಂದ್ರ ಶಾಸ್ತ್ರಿಗಳು (ಚಿತ್ರ ಕೃಪೆ: ಶ್ರೀ ಗುರುರಾಜ ಜಮಖಂಡಿ)

ಬಾಲಚಂದ್ರ ಶಾಸ್ತ್ರಿಗಳು....ಯಾವಾಗ  ಕೇಳಿದೆ ಈ ಹೆಸರು ಮೊದಲ ಬಾರಿಗೆ ಅಂತ ವಿಚಾರ ಮಾಡಿದೆ.

ಒಮ್ಮೆ ಭಾಳ ಸಣ್ಣವ ಇದ್ದಾಗ, ತಾಯಿಯವರ ಜೋಡಿ ಅಲ್ಲೆಲ್ಲೋ ದತ್ತಾತ್ರಯ ದೇವರ ಗುಡಿ ಹತ್ತಿರ ಹೊಂಟಾಗ, ತಾಯಿಯವರು ಏನೋ ತೋರಿಸಿ - ಇದs ನೋಡು ಬಾಲಚಂದ್ರ ಶಾಸ್ತ್ರಿಗಳ ಸಂಸ್ಕೃತ ಪಾಠಶಾಲಿ. ದೊಡ್ಡ ಸಂಸ್ಕೃತ ಪಂಡಿತರು ಅವರು. ಅವರ ತಮ್ಮಾ ಅಂದ್ರ ಎಂ. ಎನ್. ಜೋಶಿ ಪ್ರೊಫೆಸರ್. ನಮಗ ಕರ್ನಾಟಕ ಕಾಲೇಜ್ ಒಳಗ ಸಂಸ್ಕೃತ ಕಲಸ್ತಿದ್ದರು. ನಿಮ್ಮ ಅಪ್ಪನ colleague - ಅಂತ ಹೇಳಿದ್ದು  ನೆನಪು.

ಹಾಂ!!! ಅಣ್ಣನ ಹೆಸರು ಬಾಲಚಂದ್ರ ಶಾಸ್ತ್ರಿ. ತಮ್ಮನ ಹೆಸರು ಎಂ. ಎನ್. ಜೋಶಿ. ಅದೆಂಗ ಬ್ಯಾರೆ ಬ್ಯಾರೆ ಅಡ್ಡೆಸರು??!! - ಅಂತ ಕಿಡಿಗೇಡಿ ವಿಚಾರ ತಲಿಯೊಳಗ ಅವತ್ತು ಬಂದಿತ್ತಾ? ನೆನಪಿಲ್ಲ. ಬಂದಿರಲಿಕ್ಕೆ ಇಲ್ಲ. ಭಾಳ ಸಣ್ಣವ ಇದ್ದೆ ಅಂತ ಹೇಳಿದ್ನ್ಯಲ್ಲ. ಅವತ್ತೇನು ಭಾಳ ವರ್ಷದ ತನಕಾ ಶಾಸ್ತ್ರಿ ಅಂಬೋದು ಅವರಿಗೆ ಬಂದ ಬಿರಿದು (ಉಪಾಧಿ) ಅಂತ ನನಗ ಗೊತ್ತೇ ಇರಲಿಲ್ಲ ಬಿಡ್ರೀ.

ಅಷ್ಟು ಸಣ್ಣವ ಇದ್ದಾಗ ಶಾಸ್ತ್ರಿ ಅನ್ನೋದು ಸಹಿತ ಒಂದು ತರಹದ ವಿಶೇಷ ಹೆಸರೇ ಬಿಡ್ರೀ. ಬಾಲಚಂದ್ರ ಶಾಸ್ತ್ರಿ ಅನ್ನೋ ಹೆಸರು ಕೇಳೋ ಮೊದಲು ಕೇಳಿದ್ದ ಏಕೈಕ ಶಾಸ್ತ್ರಿ ಅಂದ್ರ ನಮ್ಮ ಮುತ್ತಜ್ಜ ಸಿರ್ಸಿ ಕೃಷ್ಣ ಶಾಸ್ತ್ರಿ. ಅವರೂ ಸಹ ದೊಡ್ಡ ಪಂಡಿತರು ಇದ್ದರಂತ. ಲಗೂನ ತೀರಿಕೊಂಡರು. ಆದರೂ ತೀರಿಕೊಳ್ಳೋ ಮೊದಲು ಆ ಕಾಲದ ಮೈಸೂರ ಮಹಾರಾಜರಿಂದ ಒಂದು ದೊಡ್ಡ ಬಂಗಾರದ ಕಡಗ ಅವರ ಮಹಾನ ಪಾಂಡಿತ್ಯಕ್ಕೆ ಅಂತ ಪ್ರೈಸ್ ಹೊಡಕೊಂಡ ಮ್ಯಾಲೇ ತೀರಿಕೊಂಡರು. ಹಾಂಗಾಗಿ ಈ ಬಾಲಚಂದ್ರ ಶಾಸ್ತ್ರಿಗಳೂ ಕೂಡ ಅದೇ ಟೈಪಿನ ಬಂಗಾರದ ಕಡಗ ಹಾಕ್ಕೊಂಡು, ದೊಡ್ಡ ಚಂಡಕಿ ಬಿಟ್ಟ ಪಂಡಿತರೇ ಇರಬೇಕು ಅಂತ ಊಹಾ ಮಾಡಿದೆ. ಭಾಳ ವರ್ಷದ ನಂತರ ಬಾಲಚಂದ್ರ ಶಾಸ್ತ್ರಿಗಳನ್ನು ನೋಡಿದಾಗ ನಾ ಮೊದಲು ಮಾಡಿದ್ದ ಊಹಾ ಎಷ್ಟು ತಪ್ಪಿತ್ತು ಅಂತ ಅರಿವಾತು.

ಇದಾಗಿ ಸುಮಾರು ವರ್ಷ ಬಾಲಚಂದ್ರ ಶಾಸ್ತ್ರಿಗಳು ಮರೆತು ಹೋಗಿದ್ದರು. ಅವರ ಹೆಸರು ನೆನಪು ಆಗೋವಂತಹ ಯಾವದೇ ಘಟನೆ ನಡಿಲಿಲ್ಲ.

೧೯೮೩-೮೪ ರ ಟೈಮ್. ನಾವೆಲ್ಲಾ ಆವಾಗ ಆರನೇತ್ತಾ (೬ ಕ್ಲಾಸ್). ಕೆ.ಇ. ಬೋರ್ಡ್ ಸಾಲಿ. ಶ್ರೀಮತಿ ಅನುರಾಧಾ ಜೋಶಿ ಟೀಚರ್ ನಮ್ಮ ಕ್ಲಾಸ್ ಟೀಚರ್. ಗಣಿತ ಮತ್ತ ಇಂಗ್ಲೀಷ್ ಎರಡೂ ಅವರದ್ದೇ.

ಮಹೇಶಾ, ನಡಿ ನನ್ನ ಜೋಡಿ - ಅಂತ ಅಂದ್ರು ಜೋಶಿ ಟೀಚರ್ ಒಂದು ದಿವಸ ಪೀರಿಯಡ್ ಮುಗಿದ ಕೂಡಲೆ.

ಎಲ್ಲಿಗರಿ? ಅಂತ ಕೇಳಲಿಲ್ಲ. ಎಲ್ಲೋ ಟೀಚರ್ ಸ್ಟಾಫ್ ರೂಮಿಗೆ ಕರಕೊಂಡು ಹೋಗಿ ಏನೋ administrative ಕೆಲಸ ಕೊಡ್ತಾರ, ಮಾಡಿ ಬಂದ್ರಾತು ಅಂತ ವಿಚಾರ ಮಾಡಿದೆ. ಮಾರ್ಕ್ಸ್ ಟೋಟಲ್ ಮಾಡೋದು, ಪ್ರೋಗ್ರೆಸ್ ಕಾರ್ಡ್ ತುಂಬೋದು ಮುಂತಾದ ಕೆಲಸ ಟೀಚರ್ ನಮಗ ಆಗಾಗ ಹಚ್ಚತಿದ್ದರು. ನಾವೂ ಖುಷಿಂದ ಮಾಡಿ ಬರ್ತಿದ್ದಿವಿ. ಹಾಂಗೇ ಏನೋ ಇರಬೇಕು ಅಂತ ತಿಳಕೊಂಡು, ಟೀಚರ್ ಹಿಂದ ಅವರ ಬಾಲಂಗೋಚಿ ಹಾಂಗ ಹೊಂಟೆ.

ಟೀಚರ್ ಸ್ಟಾಫ್ ರೂಮಿಗೆ ಬಂದ್ರು. ಹಿಂದೆ ನಾನು. ಟೀಚರ್ ತಮ್ಮ ಪುಸ್ತಕಾ ಗಿಸ್ತಕಾ ಕೆಳಗ ಇಟ್ಟು, ಹುಸ್ಸ್ ಅಂತ ಉಸಿರು ಬಿಟ್ಟು, ಎಲ್ಲೋ ಅವರ ಸ್ಟಾಫ್ ರೂಂ ಡೆಸ್ಕ್ ಕೆಳಗ ಕೈ ಹಾಕಿ, ಏನೋ ಒಂದು ಪುಸ್ತಕ ತೆಗೆದು ನನ್ನ ಕೈಯ್ಯಾಗ ಇಟ್ಟರು.

ಪುಸ್ತಕ ನೋಡಿ ಏನೂ ತಿಳಿಲಿಲ್ಲ. ಏನ್ರೀ ಟೀಚರ್? - ಅನ್ನೋ ಹಾಂಗ ಟೀಚರ್ ಮಾರಿ ನೋಡಿದೆ.

ಮಹೇಶಾ, ಒಂದು ಕೆಲಸ ಆಗಬೇಕೋ. ನಾಳಿಗೇ ಆಗಬೇಕು ನೋಡು. ತಪ್ಪಬಾರದು ನೋಡು. ಒಂದು ಕೆಲಸ ಆಗಬೇಕು ನೋಡಪಾ - ಅಂದ್ರು ಜೋಶಿ ಟೀಚರ್.

ಮತ್ತೂ confusion ಆತು. ಮೊದಲು ಒಂದು ಬುಕ್ ಕೈಯ್ಯಾಗ ಇಡ್ತಾರ. ಏನಂತ ಹೇಳಂಗಿಲ್ಲ. ಮ್ಯಾಲಿಂದ ಒಂದು ಕೆಲಸ ಆಗಬೇಕು ಅಂತಾರ. ಏನಂತ ಅರ್ಥ ಮಾಡಿಕೋಬೇಕು? ಹಾಂ?!

ಏನ್ರೀ ಟೀಚರ್? - ಅಂದೆ.

ನೋಡು....ಈ ಪುಸ್ತಕ ತೊಗೋ. ಓದಿ ಇದರ ಮ್ಯಾಲೆ ಒಂದೆರಡು ಪೇಜ್ ಆಗೋವಷ್ಟು ಒಂದು ಚಂದ ನಿಬಂಧ ತಯಾರ ಮಾಡು. ನಾಳೆ ಬೇಕೇ ಬೇಕು. ಏನಪಾ? ಹೆಡ್ ಮಾಸ್ಟರ್ ಗೆ ಹೇಳಿ ಬಿಟ್ಟೇನೋ. ನಾಳೆ ತಂದು ಕೊಡತೇನಿ ಅಂತ. ಹಾಂಗಾಗಿ ಏನರೆ ಮಾಡು. ಒಟ್ಟಿನ್ಯಾಗ ಒಂದು ನಿಬಂಧ ಬರೆದು ತಂದು ಬಿಡು. ನಾ ಚೆಕ್ ಮಾಡಿ ಹೆಡ್ ಮಾಸ್ಟರ್ ಗೆ ಕೊಟ್ಟು ಬಿಡ್ತೇನಿ. ಅದೇನೋ ಸ್ಕೂಲ್ ಮ್ಯಾಗಜಿನ್ ಗೆ ಬೇಕಂತಪಾ. ನಾಳೆ ಬೇಕೇ ಬೇಕಾ ಮತ್ತ! ನೀ ತಯಾರ ಮಾಡಲಿಕ್ಕೇ ಬೇಕಾ ಮತ್ತ - ಅಂತ ಜೋಶಿ ಟೀಚರ್ ಹೇಳಿದರು. ಮತ್ತ ಮತ್ತ ಹೇಳಿದರು.

ಅವರು ಕೊಟ್ಟ ಬುಕ್ ನೋಡಿದೆ. ಕವರ್ ಪೇಜ್ ಮ್ಯಾಲೆ ಆದಿ ಶಂಕರಾಚಾರ್ಯರ ಫೋಟೋ ಇತ್ತು. ಪುಸ್ತಕ ಶಂಕರರ  ಬಗ್ಗೆ ಇತ್ತಾ ಅಥವಾ ಅವರು ಪ್ರತಿಪಾದಿಸಿದ ಅದ್ವೈತದ ಮೇಲಿತ್ತಾ? ನೆನಪಿಲ್ಲ.

ಈಗ ತಿಳೀತು. ಏನೋ ಸ್ಕೂಲ್ ಮ್ಯಾಗಜಿನ್ ಬರೋದು ಅದ. ಎಲ್ಲಾ ಕ್ಲಾಸಿನವರೂ ಒಂದೊಂದು ಆರ್ಟಿಕಲ್ ಬರೆದು ಕೊಡಬೇಕು ಅಂತ ಕಾಣಿಸ್ತದ. ನಮ್ಮ ಕ್ಲಾಸಿನ ಆರ್ಟಿಕಲ್ ಟೀಚರ್ ನನಗ ಬರೆದು ತಂದು ಕೊಡು ಅಂತ ಹೇಳಲಿಕತ್ತಾರ.

ಹೂನ್ರೀ ಟೀಚರ್. ನಿಬಂಧ ಬರೆದು ತರತೇನ್ರೀ ನಾಳೆ. ತಪ್ಪಿಸಂಗಿಲ್ಲರಿ. ನೀವು ಕೊಟ್ಟ ಬುಕ್ ಅಲ್ಲದೇ ಬೇರೆ ಬೇರೆ ಬುಕ್ ಸಹಿತ ರೆಫರ್ ಮಾಡಿ ಮಸ್ತ essay ರೆಡಿ ಮಾಡ್ತೆನ್ರೀ ಟೀಚರ್ - ಅಂತ ಹೇಳಿದೆ.

ಬ್ಯಾರೆ ಬ್ಯಾರೆ ಬುಕ್ ಅಂತ! ಇಲ್ಲದ ಡೌಲು. ನಿಬಂಧ ತಯಾರ ಮಾಡಲಿಕ್ಕೆ ಒಂದು ಫುಲ್ ದಿವಸ ಸಹಾ ಇಲ್ಲ. ಟೀಚರ್ ಕೊಟ್ಟ ಪುಸ್ತಕನೇ ಸಾಕಷ್ಟು ದೊಡ್ಡ ಸೈಜಿನದು ಅದ. ಅದನ್ನೇ ಓದಿ ಮುಗಿಸೋದು ದೊಡ್ಡ ಮಾತು. ಅಂತಾದ್ರಾಗ ಬ್ಯಾರೆ ಬುಕ್ಸ್ ಸಹಿತ ರೆಫರೆನ್ಸ್ ಮಾಡ್ತೇನಿ ಅಂತ!

ಹ್ಞೂ....ಏನರೆ  ಮಾಡು. ಒಟ್ಟಿನ್ಯಾಗ ನಾಳೆ ನಿಬಂಧ ತಯಾರ ಆಗಬೇಕು ನೋಡಪಾ, ಅಂತ ಅಂದ್ರು ಜೋಶಿ ಟೀಚರ್. ಹೆಚ್ಚಿನ motivation ಗೆ ಮತ್ತ confidence ಬರಲಿ ಅಂತ ಹೇಳಿ, ತಲಿ ಸವರಿ - ನೀ ಬರೆದು ತರ್ತಿ ಅಂತ ಖಾತ್ರಿ ಅದನೋ. ಅದಕ್ಕs ನಿನಗೇ ಹಚ್ಚೇನಿ ಈ ಕೆಲಸಾ - ಅಂದ ಜೋಶಿ ಟೀಚರ್ ಕಡೀಕ್ಕ ತಲಿ ಮ್ಯಾಲೆ ಮೈಲ್ಡ್ ಆಗಿ ಮೊಟಕಿದರು. ಅವರು ತಲಿ ಮ್ಯಾಲೆ ಹಾಂಗ ಮೊಟಕಿದರು ಅಂದ್ರ ಮಾತು ಮುಗೀತು, ಜಾಗಾ ಖಾಲಿ ಮಾಡು ಅಂತ ಅರ್ಥ. ಒಂದು ಅರ್ಥದಾಗ ಸುಪಾರಿ ಕೊಟ್ಟಂಗ ಅದು. ನಂತರ ಹೇಳಿದ ಕೆಲಸ ಮಾಡಿಕೊಂಡು ಬಂದ್ರ ಆತು.

ಟೀಚರ್ ಕೊಟ್ಟ ಬುಕ್ ಇಸ್ಕೊಂಡು ಮನಿಗೆ ಬಂದೆ. ನಿಬಂಧ ಬ್ಯಾರೆ ಬರಿಬೇಕು ಅಂತ homework ಎಲ್ಲಾ ಲಗೂ ಲಗೂ ಮಾಡಿ ಮುಗಿಸಿದೆ.

ನೋಡೋಣ ನಡೀಪಾ, ಅಂತ ಹೇಳಿ ಟೀಚರ್ ಕೊಟ್ಟ ಪುಸ್ತಕ ಓಪನ್ ಮಾಡಿದೆ.

ಬೇತಾಳ ಬೆನ್ನು ಹತ್ತಿತು ನೋಡ್ರೀ!!!!!!!

ಹಾಂಗಿತ್ತು ಆ ಪುಸ್ತಕ. ಏನೂ ತಿಳಿವಲ್ಲತು. ಏನೇನೋ ಅದ. ಏನೇನೋ ಬರದಾರ. ಒಂದೆರಡು ಪ್ಯಾರಾ ಓದೋದ್ರೊಳಗ ತಲಿ ಪೂರ್ತಿ ಕಡೆದಿಟ್ಟ ಮೊಸರ ಗಡಿಗಿ ಆಗಿ ಹೋತು! ಹೋಗ್ಗೋ!!! ಇಂತಹ ಪುಸ್ತಕ ಪೂರ್ತಿ ಓದಿ, ಅರ್ಥ ಮಾಡಿಕೊಂಡು, ಅದರ ಮ್ಯಾಲೆ ನಿಬಂಧ ಬರಿಬೇಕು. ಅದೂ ಇನ್ನೆರಡು ತಾಸಿನ್ಯಾಗ. ಇಲ್ಲಂದ್ರ ನಿದ್ದಿ ಬರ್ತದ. ಮುಂಜಾನೆ ಜಾಸ್ತಿ ಟೈಮ್ ಇರಂಗಿಲ್ಲ. ಎಲ್ಲಾ ಇವತ್ತೇ ಈ ರಾತ್ರಿನೇ ಆಗಬೇಕು.

ಹ್ಯಾಂಗಪಾ ದೇವರಾ??!!! ಅಂತ ತಲಿ ಹಿಡಕೊಂಡು ಕೂತೆ. ಟೀಚರ್ ಬ್ಯಾರೆ ನಾಳೆ ನಿಬಂಧ ತಯಾರ ಇರಲೇ ಬೇಕು ಅಂತ ಸುಪಾರಿ ಕೊಟ್ಟು ಬಿಟ್ಟಾರ. ಬರೆದುಕೊಂಡು ಹೋಗಲಿಲ್ಲ ಅಂದ್ರ ಕೆಟ್ಟ ಅವಮಾನ.

ಏನು ಮಾಡೋದು?

ಮತ್ತ ಮತ್ತ ಓದಲಿಕ್ಕೆ ಪ್ರಯತ್ನ ಮಾಡಿದೆ. ಆಕಳಿಕೆ ಬಂತೇ ಹೊರತು ತಲಿಯೊಳಗೆ ಏನೂ ಹೋಗಲಿಲ್ಲ. ಮುನ್ನುಡಿನೇ ಓದಿ ಮುಗಿಸಲಿಕ್ಕೆ ಆಗವಲ್ಲತು. ಇನ್ನೆಲ್ಲಿ ಪೂರ್ತಿ ಪುಸ್ತಕ ಓದೋದು. ಅಷ್ಟರಾಗ ರಾತ್ರಿ ಊಟದ ಟೈಮ್ ಆತು. ಊಟಕ್ಕ ಕರೆದರು. ಊಟ ಮಾಡಿ ಬಂದ ಮೇಲೆ ನೋಡಿದರ ಆತು ಅಂತ ಬಿಟ್ಟೆ.

ಊಟ ಮಾಡಿದ ಮ್ಯಾಲೆ ಎಂತೆಂತ ರೋಚಕ ಪುಸ್ತಕ ಓದಿದರೂ ನಿದ್ದಿ ಬರ್ತದ. ಇನ್ನು ಇಂತಹ ಪುಸ್ತಕ ಓದಿದರ ಅಷ್ಟ ಮತ್ತ. ಆದರೂ ಪ್ರಯತ್ನ ಮಾಡಿದೆ. ಸಿಕ್ಕಾಪಟ್ಟೆ ಆಕಳಿಕೆ ಬಂತು.

ಆ ಪರಿ ಆಕಳಿಸೋದು ನೋಡಿ - ಹೋಗಿ ಮಲ್ಕೋ, ಸಾಕು ಓದಿದ್ದು - ಅಂದ್ರು ನಮ್ಮ ತಾಯಿ. ಅವರಿಗೆಲ್ಲಿ ಹೇಳಿಕೋತ್ತ ಕೂಡಲಿ ನನ್ನ ನಿಬಂಧ ಬರಿಲಿಕ್ಕೆ ತೊಗೋಂಡ ಸುಪಾರಿ ಬಗ್ಗೆ.

ಏನು ಮಾಡೋದು? ಎಷ್ಟೇ ಪ್ರಯತ್ನ ಮಾಡಿದರೂ ಪುಸ್ತಕದ ಮುನ್ನುಡಿಯ ಮೊದಲನೇ ಪೇಜ್ ಬಿಟ್ಟು ಮುಂದು ಹೋಗಲಿಕ್ಕೆ ಆಗವಲ್ಲದು. ಲಾಸ್ಟ್ ಟ್ರಿಕ್ ಅಂತ ಹೇಳಿ ಒಂದು ಉಪಾಯ ಮಾಡಿದೆ.

ಮುನ್ನುಡಿಯ ಪ್ರತಿ ಪ್ಯಾರಾದಿಂದ ಒಂದೋ ಎರಡೋ ಪಾಯಿಂಟ್ ಒಂದು ಹಾಳಿ ಒಳಗ ಬರಕೋತ್ತ ಹೋದೆ. ನೋಟ್ಸ್ ಮಾಡಿಕೊಂಡಂಗ ಅನ್ರೀ. ಅಷ್ಟು ಮಾಡೋದ್ರಾಗ ಸಿಕ್ಕಾಪಟ್ಟೆ ನಿದ್ದಿ ಬಂದು, ಮಾರಿ ಹೋಗಿ ನೋಟ್ ಬುಕ್ಕಿಗೆ ಅಪ್ಪಳಿಸಿ, ಮೂಗು ಚಪಟ್ ಆಗಿ, ನೋವಾಗಿ, ನಿಬಂಧ ತಯಾರ್ ಆಗಿಲ್ಲ ಅಂತ ಮತ್ತೂ ಹೆಚ್ಚು tension ಆಗಿ......ರಾಮ ರಾಮ....ಕೇಳಬ್ಯಾಡ್ರೀ ನಮ್ಮ ಹಾಲತ್.

ಹ್ಯಾಂಗೂ ನೋಟ್ಸ್ ಮಾಡಿದ್ದು ಆತು, ಆ ನೋಟ್ ಮಾಡಿಕೊಂಡ ಪಾಯಿಂಟ್ಸ್ ಎಲ್ಲಾ ಹ್ಯಾಂಗೋ(?) ಮಾಡಿ ಕೂಡಿಸಿ, ನಮಗ ತಿಳದ ಮಟ್ಟಿಗೆ ಬರೆದು ಬಿಟ್ಟರೆ ಒಂದು ಎರಡು ಪೇಜ್ ಆಗಿ ಹೋಗ್ತಾವ. ಅದನ್ನೇ ಕೊಟ್ಟು ಬಿಟ್ಟರ ಆತು, ಅಂತ ವಿಚಾರ ಮಾಡಿ ಮಲ್ಕೊಂಡು ಬಿಟ್ಟೆ. ಜೈ ಶಂಭುಲಿಂಗಾ!!! ಮುಂಜಾನೆ ಲಗೂ ಎಬ್ಬಸಪಾ  ದೇವರಾ. ನಿಬಂಧ ಬರೀಬೇಕು - ಅಂತ ಹೇಳಿ ಮಲಗಿದ್ದೆನಾ? ನೆನಪಿಲ್ಲ.

ರಾತ್ರಿ ಎಲ್ಲಾ ನಿಬಂಧದ ಬಗ್ಗೆನೇ ಕನಸು. ಎಲ್ಲಾ ದುಸ್ವಪ್ನಗಳೇ. ಒಂದೂ ಸ್ವೀಟ್ ಡ್ರೀಮ್ಸ್ ಇಲ್ಲ ತೊಗೊರೀ!

ಮುಂಜಾನೆ ಲಗೂನ ಎದ್ದುಬಿಟ್ಟೆ. ನಿಬಂಧದ tension ಇತ್ತಲ್ಲ.

ಎದ್ದು ನೋಟ್ಸ್ ಮತ್ತ ನೋಡಿಕೊಂಡೆ. ಉಳಿದ ಪುಸ್ತಕ ಸಹಿತ ಕಣ್ಣಾಡಿಸಿ ನೋಟ್ಸ್ ಮಾಡಲೋ ಏನೋ ಅಂತ ವಿಚಾರ ಮಾಡಿದೆ. ಟೈಮ್ ಇರಲಿಲ್ಲ. ಅದರಕಿಂತ ಹೆಚ್ಚಾಗಿ ಜೋಶಿ ಟೀಚರ್ ಕೊಟ್ಟ ಪುಸ್ತಕ ಓದಿ ಅರ್ಥ ಮಾಡಿಕೊಳ್ಳೋವಷ್ಟು ತಲಿ ಆವತ್ತಿನ ಮಟ್ಟಿಗೆ ಇರಲಿಲ್ಲ.

ಮಾಡಿಕೊಂಡಿದ್ದ ಪಾಯಿಂಟ್ಸ್ ಎಲ್ಲಾ ಹ್ಯಾಂಗೋ ಮಾಡಿ ಜೋಡಿಸಿ, ನಮಗ ತಿಳಿದ ಮಟ್ಟಿಗೆ ಒಂದು ನಿಬಂಧ ಛಂದ ಅಕ್ಷರದಾಗ ತಯಾರ ಮಾಡಿಬಿಟ್ಟೆ. ಏನೋ ಒಂದೆರಡು ತಾಸು ಖರ್ಚ ಮಾಡಿರಬೇಕು ಬಿಡ್ರೀ. ನಿಬಂಧ ಛಂದ ಅಂತೂ ಬಂತು. ನೋಡಲಿಕ್ಕೆ ಅಷ್ಟೇ ಮತ್ತ. ಒಳಗಿನ ಹೂರಣ ಹ್ಯಾಂಗಿತ್ತೋ ಏನೋ? ಯಾರಿಗೆ ಗೊತ್ತು?

ಎರಡು ಫುಲ್ ಉದ್ದನೆ ಪೇಜ್ ಒಂದಕ್ಕೊಂದು ಸ್ಟೇಪಲ್ ಮಾಡಿ, ಅದು ಪಾಟಿಚೀಲದಾಗ ಮುದ್ದಿ ಆಗದಂಗ ಒಂದು ರಟ್ಟಿನ ಫೈಲ್ ಫೋಲ್ಡರ್ ಒಳಗ ಅದನ್ನು ಇಟ್ಟು, ಭಾಳ ಕಾಳಜಿಯಿಂದ ಅವತ್ತು ಪಾಟಿಚೀಲಾ ಸೈಕಲ್ ಕ್ಯಾರಿಯರ್ ಗೆ ಹಾಕದೇ, ಹೆಗಲಿಗೆ ಹಾಕಿಕೊಂಡೇ ಸಾಲಿಗೆ ಸೈಕಲ್ ಹೊಡದೆ. ಸೂಟಿ ಬಿಟ್ಟಾಗ ಜೋಶಿ ಟೀಚರ್ ಗೆ ನಿಬಂಧ ಕೊಟ್ಟರಾತು ಅಂತ ಬಿಟ್ಟೆ. ಆ ಪ್ರಸಂಗ ಬರಲೇ ಇಲ್ಲ.

ಮೊದಲನೇ ಪಿರಿಯಡ್ absent ಪಿರಿಯಡ್ ಇತ್ತು. absentee ಟೀಚರ್ ಆಗಿ ಯಾರು ಬರಬೇಕು ಹೇಳ್ರೀ? ಜೋಶಿ ಟೀಚರ್! ಬಂದವರೇ ಕ್ಲಾಸ್ ಮಂದಿಗೆ ಏನೋ ಕೆಲಸಾ ಹಚ್ಚಿ, ನನಗ, ಬಾ, ಅಂತ ಕಣ್ಣಾಗs ಹೇಳಿದರು. ನಿಬಂಧ ನೋಡಬೇಕು, ತೊಗೊಂಡು ಬಾ ಅಂತ ಬ್ಯಾರೆ ಹೇಳೋ ಜರೂರತ್ ಅವರಿಗೆ ಕಾಣಲಿಲ್ಲ. ನಾ ಅಂತೂ ನಿಬಂಧ ಕೈಯ್ಯಾಗ ಹಿಡಕೊಂಡೇ ಅಡ್ಯಾಡಲಿಕತ್ತಿದ್ದೆ.

ಜೋಶಿ ಟೀಚರ್ ನಿಬಂಧ ತೊಗೊಂಡು ಓದಲಿಕ್ಕೆ ಶುರು ಮಾಡಿದರು. ತಪ್ಪಿದ್ದರ ತಿದ್ದಲಿಕ್ಕೆ ಅಂತ ಕೆಂಪ ಬಣ್ಣದ ಪೆನ್ನು ಅವರ ಕೈಯ್ಯಾಗ ಥಕಾ ಥಕಾ ಅಂತ ಕುಣಿಲಿಕತ್ತಿತ್ತು.

ಮಹೇಶಾ, ಒಂದು ಮಾತು - ಅಂತ ಹೇಳಿದ ಜೋಶಿ ಟೀಚರ್ ನನ್ನ ಕಡೆ ನೋಡಿದರು. ನಾ ಅವರ ಟೇಬಲ್ ಬಾಜೂಕೇ ನಿಂತಿದ್ದೆ.

ಏನ್ರೀ ಟೀಚರ್? - ಅಂತ ಕೇಳಿದೆ.

ಎಲ್ಲಾ ಕಡೆ 'ಭಾ'ಲಚಂದ್ರ ಶಾಸ್ತ್ರಿ, 'ಭಾ'ಲಚಂದ್ರ ಶಾಸ್ತ್ರಿ ಅಂತ ಬರದೀ. ಅದು 'ಭಾ'ಲಚಂದ್ರನೋ ಅಥವಾ ಬಾಲಚಂದ್ರ ಇರಬಹುದೋ? ಗೊತ್ತದ ಏನು? - ಅಂತ ಟೀಚರ್ ಕೇಳಿದರು. ಅವರ ಮಾರಿ ಮ್ಯಾಲೂ ಫುಲ್ confusion. ನೋಡಲಿಕ್ಕೆ ಮಸ್ತ ಇತ್ತು.

ಏ....ಟೀಚರ್....ಅದು 'ಭಾ'ಲಚಂದ್ರನೇ ಬಿಡ್ರೀ. ಸಂಶಯ ಬ್ಯಾಡ್ರೀ. ನೀವು ಕೊಟ್ಟ ಪುಸ್ತಕದಾಗೂ ಹಾಂಗೇ ಇತ್ತರಿ. ಅದಕ್ಕರೀ,  ನಾನೂ ಸಹಿತ 'ಭಾ'ಲಚಂದ್ರ 'ಭಾ'ಲಚಂದ್ರ ಅಂತ ಬರೆದು ಬಿಟ್ಟೆರಿ - ಅಂತ ಫುಲ್ confidence ನಿಂದ ಹೇಳಿದೆ.

ಹಾಂಗಾ???!!! - ಅನ್ನೋ ಲುಕ್ ಟೀಚರ್ ಕೊಟ್ಟರು.

ಹೂನ್ರೀ. ಹಾಂಗರೀ - ಅನ್ನೋ ಲುಕ್ ನಾ ತಿರುಗಿ ಕೊಟ್ಟೆ.

ಹ್ಞೂ - ಅಂದ ಟೀಚರ್ ಉಳಿದ essay ಓದೋದ್ರಲ್ಲಿ ಮಗ್ನರಾದರು.

ಹ್ಞೂ....ಮಸ್ತ ಬರದೀ. essay ಛೊಲೋ ಬಂದದ. ಹೆಡ್ ಮಾಸ್ತರಿಗೆ ಕೊಡಲೀ? - ಅಂತ ಟೀಚರ್ ಕೇಳಿದರು.

ಕೊಡ್ರೀ ಟೀಚರ್. ಅದ್ರಾಗ ಏನ್ರೀ? - ಅಂತ ಫುಲ್ guarantee ಕೊಡೋರ ಹಾಂಗೆ ಹೇಳಿದೆ.

ಮತ್ತಾ... ನಾ ಕೊಟ್ಟ ಬುಕ್? - ಅಂತ ಟೀಚರ್ ಕೇಳಿದರು. ಏನೂ ಮರಿಯೋ ಪೈಕಿ ಅಲ್ಲ ಜೋಶಿ ಟೀಚರ್.

ಅದನ್ನ ಕೊಡೋದೇ ಮರ್ತೆ ನೋಡ್ರೀ ಟೀಚರ್ - ಅಂತ ಹೇಳಿ ಅವರು ಕೊಟ್ಟ ಬುಕ್ ಅವರಿಗೆ ವಾಪಸ್ ಕೊಟ್ಟೆ. ಬೆನ್ನ ಮೇಲಿನ ಬೇತಾಳ ಬೆನ್ನು ಬಿಟ್ಟು ಹಾರಿ ಹೋಗಿ, ಮೈಯ್ಯೆಲ್ಲಾ ಹೂವಿನಷ್ಟು ಹಗುರವಾದ ಅನುಭವ. ಫುಲ್ ರಿಲೀಫ್.

ಆವತ್ತು ಸುಮಾರು ಮೂವತ್ತು ವರ್ಷಗಳ ಹಿಂದೆ ನನ್ನ ನಿಬಂಧದ ಒಳಗ ಬಾಲಚಂದ್ರ ಹೋಗಿ 'ಭಾ'ಲಚಂದ್ರ ಆದವರು ಬೇರೆ ಯಾರೂ ಅಲ್ಲ, ಇದೇ ಬ್ರಹ್ಮರ್ಷಿ ಬಾಲಚಂದ್ರ ಶಾಸ್ತ್ರಿಗಳು!

ಪುಸ್ತಕಕ್ಕೆ ಮುನ್ನುಡಿ ಬರೆದವರು ಯಾರೋ ಬಾಲಚಂದ್ರ ಶಾಸ್ತ್ರಿಗಳ ಶಿಷ್ಯರೋ, ಪರಿಚಯದವರೋ ಇರಬೇಕು ಬಿಡ್ರೀ. ಅದಕ್ಕೇ ಮಾತಿಗೊಮ್ಮೆ ಬಾಲಚಂದ್ರ ಶಾಸ್ತ್ರಿಗಳು ಹೀಗೆ ಹೇಳಿದ್ದಾರೆ, ಹಾಗೆ ಹೇಳಿದ್ದಾರೆ ಅಂತ ಮುನ್ನುಡಿಯೊಳಗ ಮತ್ತ ಮತ್ತ quote ಮಾಡಿದ್ದರು. ನಾವೂ ಸಹ ನಮ್ಮ ನಿಬಂಧದ ಸೇಫ್ಟಿಗೆ ದೊಡ್ಡ ಪಂಡಿತರ ಹೆಸರು ಇರಲಿ ಅಂತ ಎಲ್ಲಾ ಕಡೆ ಅವರ ಹೆಸರು ಭಾಲಚಂದ್ರ ಭಾಲಚಂದ್ರ ಅಂತ ಬರೆದಿದ್ದೆ.

ಅದ್ಯಾಕೆ 'ಭಾ'ಲಚಂದ್ರ ಅಂತ ಮಹಾಪ್ರಾಣ ಹಾಕಿ ಬರದೆ? ಅಂತ ಕೇಳಿಕೊಂಡರ ಉತ್ತರ ಈಗ ನೆನಪು ಆಗವಲ್ಲತು.

ನೋಡ್ರೀ....ನಮಗ ಆವತ್ತಿನ ಮಟ್ಟಿಗೆ 'ಬಾಲ' ಅಂದ್ರ ತಿಳಿದಿದ್ದು ಅಂದ್ರ ಮಂಗ್ಯಾನ ಬಾಲ, ಕತ್ತಿ ಬಾಲ, ನಾಯಿ ಬಾಲ, ಆ ಬಾಲ, ಈ ಬಾಲ. ಬಾಲ ಅಂದ್ರ ಒಟ್ಟಿನ್ಯಾಗ ಪಶುಗಳಿಗೆ ಇರೋ ಬಾಲ ಅಂತನೇ ನಮ್ಮ ಅಚಲ ನಂಬಿಕೆ. ಅದರ ಬಿಟ್ಟು ಬಾಲ ಅಂದ್ರ ಸಣ್ಣದು, ಚಿಕ್ಕದು ಅನ್ನುವ ಅರ್ಥಗಳು ನಮಗ ಖರೇ ಅಂದ್ರೂ ಗೊತ್ತಿರಲಿಲ್ಲ. ಆರನೇತ್ತಾ ಹುಡುಗಗ ಬಾಲ ಅನ್ನೋದರ ವಿವಿಧ ಅರ್ಥ ಗೊತ್ತಿಲ್ಲ, ಎಂತಾ ಹಶಿ ಧಡ್ಡ ಇದ್ದಾನ ಇವಾ?! ಅಂತ ನೀವು ಅಂದುಕೊಂಡರೂ ತೊಂದ್ರೀ ಇಲ್ಲರೀ. ಇದ್ದಿದ್ದು ಹೇಳಿದೆ. ಅಷ್ಟೇ.

ಬಾಲ ಏನಿದ್ದರೂ ಮಂಗ್ಯಾಗ ಇರೋದು. ಮುರುಳಿ ಅನ್ನೋ ಹುಡುಗ್ಗ ಬಾಲ ಹಚ್ಚಿ ಬಿಟ್ಟರ ಬಾಲಮುರುಳಿ ಆಗ್ತಾನ. ಕೃಷ್ಣಗ ಹಿಂದ ಒಂದು ಬಾಲ ಹಚ್ಚಿ ಬಿಟ್ಟರೆ ಬಾಲಕೃಷ್ಣ ಆಗಿ ಬಿಡ್ತಾನ - ಅಂತ ಜೋಕ್ ಮಾಡೋ ಕಿಡಿಗೇಡಿಗಳು ನಾವು. ಆವತ್ತು ನಮ್ಮ ಕನ್ನಡದ ಜ್ಞಾನ ಹಾಂಗಿತ್ತು.

ಹೀಂಗಿದ್ದಾಗ ಅಷ್ಟು ದೊಡ್ಡ ಶಾಸ್ತ್ರಿಗಳಿಗೆ, ಅವರ ಹೆಸರಿಗೆ ಬಾಲ ಹಚ್ಚೋದು ಅಂದ್ರ ಏನ್ರೀ?! ಅದಕ್ಕಾ ಬ್ಯಾಡ ಅಂತ ಹೇಳಿ ಅವರ ಹೆಸರು 'ಭಾ'ಲಚಂದ್ರ ಶಾಸ್ತ್ರಿ ಅಂತ ಮಾಡಿ ಬರೆದು ಬಿಟ್ಟಿದ್ದೆನಾ? - ಅಂತ ಈಗ ಡೌಟ್.

ಅದು ಬ್ಯಾರೆ ಇನ್ನೊಂದು ಲಫಡಾ ಬ್ಯಾರೆ ಆಗಿತ್ತು. ಅದೂ ಕಾರಣ ಇರಬಹುದು ಬಿಡ್ರೀ.

ಒಂದು ವರ್ಷ ಮೊದಲು ಅಂದ್ರ ಐದನೇತ್ತಾ (೫ ಕ್ಲಾಸ್) ಇದ್ದಾಗ, ಕನ್ನಡ ಟೀಚರ್ ಒಬ್ಬರು ಪರೀಕ್ಷಾ ಒಳಗ ಒಂದು ಅರ್ಧಾ ಮಾರ್ಕ್ಸ್ ಕಟ್ ಮಾಡಿ ಬಿಟ್ಟಿದ್ದರು. ಕಾರಣ - ಬುದ್ಧ ಬರೆಯೋವಾಗ ಮಹಾಪ್ರಾಣ ಕೊಡದೇ ಬುದ್ದ ಅಂತ ಬರೆದು ಬಿಟ್ಟಿದ್ದೆ. ಅದಕ್ಕ ಅಂತ ಅರ್ಧಾ ಮಾರ್ಕ್ಸ್ ಕಟ್ ಮಾಡಿದ್ದರಂತ. ಅದರ ಮ್ಯಾಲೆ ಊರು ತುಂಬಾ ಡಂಗುರಾ ಬ್ಯಾರೆ ಹೊಡೆದು ಬಿಟ್ಟಿದ್ದರು ಆ ಟೀಚರ್.

ಏ....ಆವಾ ಹೆಗಡೆ ಮಸ್ತ ಪೇಪರ್ ಬರದಿದ್ದಾ. ಆದ್ರ ಬುದ್ಧ ಬರಿಯೋವಾಗ ಕುಂಡಿ ಸೀಳೋದನ್ನ ಮರೆತಾ ನೋಡ್ರೀ ಅದಕ್ಕಾ ಅರ್ಧಾ ಮಾರ್ಕ್ಸ್ ಕಟ್ ಮಾಡಿಬಿಟ್ಟೆ. ಕುಂಡಿ ಒಂದು ಸೀಳಿ ಬಿಟ್ಟಿದ್ದರ ಫುಲ್ ಸೆಂಟ್ ಪರ್ಸೆಂಟ್ ಕೊಟ್ಟು ಒಗೆದು ಬಿಡಾಕಿ ನಾ. ಕುಂಡಿ ಸೀಳದೇ ಅರ್ಧಾ ಮಾರ್ಕ್ಸ್ ಕಳಕೊಂಡಾ ಪಾಪ!!! - ಅಂತ ಅವರ ಡಂಗುರಾ. ಏನಂತೀರಿ ಇದಕ್ಕ??!!

ಯಾವ ಪರಿ ಡಂಗುರಾ ಹೊಡೆದಿದ್ದರು ಅಂದ್ರ - ಏನಲೇ ಕುಂಡಿ ಸೀಳಲಿಕ್ಕೆ ಬರೋದಿಲ್ಲಾ ನಿನಗ? - ಅಂತ ಕಂಡವರು ಚಾಸ್ಟಿ ಮಾಡೋ ಹಾಂಗ. ಸೂಡ್ಲೀ!!!

(ಮಹಾಪ್ರಾಣ ಕೊಡುವದಕ್ಕೆ ಧಾರವಾಡ ಕಡೆ 'ಕುಂಡಿ ಸೀಳೋದು' ಅನ್ನುತ್ತಾರೆ. ಬೇರೆ ಅಪಾರ್ಥ ಬೇಡ.)

ಕುಂಡಿ ಸೀಳಲಿಕ್ಕೆ ಬರದವಾ. ಕುಂಡಿ ಸೀಳದೆ ಅರ್ಧಾ ಮಾರ್ಕ್ಸ್ ಕಳಕೊಂಡವಾ, ಅಂತ ಕೇಳಿ ಕೇಳಿ ಒಂದು ತರಹದ ಮಾನಸಿಕ್ ಆಗಿ ಬಿಟ್ಟಿದ್ದೆನೋ ಏನೋ? ಯಾರಿಗ್ಗೊತ್ತ?!

ಹೀಂಗಾಗಿ ನಾನು wholesale ಒಳಗ ಎಲ್ಲಾ ಕಡೆ, ಎಲ್ಲಾದರ ಕುಂಡಿ ಸೀಳಿ ಮಹಾಪ್ರಾಣ ಕೊಡಲಿಕ್ಕೆ ಶುರು ಮಾಡಿಬಿಟ್ಟಿದ್ದೆನೋ ಏನೋ? ಗೊತ್ತಿಲ್ಲ. ಹೀಂಗಾಗಿ ಮತ್ತ ಜೋಶಿ ಟೀಚರ್ ಸಹಾ, ಕುಂಡಿ ಸೀಳೋದು ಮರತೀ ಅಲ್ಲೋ, ಅಂತ ಮತ್ತ ಅನ್ನೋದು ಬ್ಯಾಡ ಅಂತ ಹೇಳಿ, ಸೇಫ್ಟಿಗೆ ಇರಲಿ ಅಂತ ಹೇಳಿ ಎಲ್ಲಾ ಕಡೆ ಮಹಾಪ್ರಾಣ ಕೊಟ್ಟು ಭಾಲಚಂದ್ರ ಶಾಸ್ತ್ರಿ ಭಾಲಚಂದ್ರ ಶಾಸ್ತ್ರಿ ಅಂತ ಬರೆದು ಬಿಟ್ಟಿದ್ದೆ ಅಂತ ಕಾಣಸ್ತದ. ಇದು ಒಂದು possibility.

ಹೆಚ್ಚಾಗಿ ಆ ಪುಸ್ತಕದಲ್ಲಿ ಸಹಾ 'ಭಾ'ಲಚಂದ್ರ ಶಾಸ್ತ್ರಿ ಅಂತನೇ misprint ಆಗಿತ್ತು ಅಂತ ಅನ್ನಸ್ತದ. ಅದಕ್ಕೇ ನಾನೂ ಸಹ ಹಾಂಗೆ ಬರದಿರಬೇಕು. ಇದು most likely possibility.

ಒಟ್ಟಿನ್ಯಾಗ ಧಾರವಾಡದ ದೊಡ್ಡ ಪಂಡಿತ ಬಾಲಚಂದ್ರ ಶಾಸ್ತ್ರಿ ನನ್ನ ನಿಬಂಧ ಒಳಗ 'ಭಾ'ಲಚಂದ್ರ ಶಾಸ್ತ್ರಿ ಆಗಿ ಒಂದು ಮಹಾಪ್ರಾಣ ಬಿಟ್ಟಿಯೊಳಗ ತೊಗೊಂಡು ಹೋಗಿಬಿಟ್ಟಿದ್ದರು.

ಇದಾದ ಒಂದೇ ವರ್ಷದ ನಂತರ ಬಾಲಚಂದ್ರ ಶಾಸ್ತ್ರಿಗಳನ್ನು ಪ್ರತ್ಯಕ್ಷ ನೋಡುವ ಸೌಭಾಗ್ಯ ನಮಗೆ. ನಮ್ಮ ಏಳನೇತ್ತಾ ಮುಗಿದಿದ್ದು ೧೯೮೫. ಆ ವರ್ಷ ಬೇಸಿಗೆ ರಜಾ ಒಳಗ ಶೃಂಗೇರಿ ಮಹಾಸ್ವಾಮಿಗಳು ಧಾರವಾಡಕ್ಕೆ ಬಂದು ಒಂದು ೮-೧೦ ದಿವಸ ಕ್ಯಾಂಪ್ ಹಾಕಿದ್ದರು. ದಿನಾ ಸಂಜಿ ಮುಂದ ಅವರ ಪ್ರವಚನ ಓಪನ್ ಏರ್ ಥಿಯೇಟರ್ ಒಳಗ. ಪ್ರವಚನದ ನಂತರವೋ ಅಥವಾ ಮೊದಲೋ ಒಂದು ಭಾಷಣ. ಒಬ್ಬ ದೊಡ್ಡ ಪಂಡಿತರಿಂದ. ನಿರರ್ಗಳವಾಗಿ ಸಂಸ್ಕೃತ ಒಳಗ. ಅವರೇ ಬಾಲಚಂದ್ರ ಶಾಸ್ತ್ರಿಗಳು ಅಂತ ದೊಡ್ಡವರು ಹೇಳಿದರು. ಇವರೇ ಏನು? ಅಂತ ಭಾಳ ಆಶ್ಚರ್ಯ ಆತು. ಬಹಳ ಸರಳ ಮನುಷ್ಯ. ಸ್ವಚ್ಛ ಬಿಳೆ ಧೋತ್ರಾ, ಮ್ಯಾಲೆ ಬಿಳೆ ಶಾಲು, ಮೈ ತುಂಬಾ ಭಸ್ಮ ಹಚ್ಚಿಕೊಂಡು, ಅವರ ಸ್ಮಾರ್ಥ ಸಂಪ್ರದಾಯದ ನಿಂಬಿಹುಳಿ ತಿಲಕ ಅದು ಇದು ಇತ್ಯಾದಿ ಹಚ್ಚಿಕೊಂಡು, ಸಂಕೋಚದಿಂದಲೋ ಅಥವಾ ಸ್ವಾಮಿಗಳ ಎದುರು ಅತಿ ವಿನಮ್ರತೆಯಿಂದಲೋ ಮೈಯೆಲ್ಲಾ ಗುಬ್ಬಿ ಗತೆ ಸಣ್ಣಗೆ ಮಾಡಿಕೊಂಡು ಗುಣು ಗುಣು ಭಾಷಣ ಮಾಡಿದ ಬಾಲಚಂದ್ರ ಶಾಸ್ತ್ರಿಗಳು ನೆನಪಾದರು. ಅವರ ಆ ಖಡಕ್ಕ ಸಂಸ್ಕೃತ ಭಾಷಣ ಕೇಳಿ, ಭಲೇ! ಭಲೇ!, ಅನ್ನುವಂತೆ ತಲೆಯಾಡಿಸಿದ ಕನವಳ್ಳಿ ಸರ್ ಅವರನ್ನು  ಹ್ಯಾಂಗ ಮರೀಲಿ!

(ಕನವಳ್ಳಿ ಸರ್ ಅಲ್ಲ್ಯಾಕೆ ಬರ್ತಿದ್ದರು ಅನ್ನೋದನ್ನ ಬ್ಯಾರೆ ಬರದೇನಿ. ಇಲ್ಲಿ ಓದಿಕೊಳ್ಳಿ)

ಬಾಲಚಂದ್ರ ಶಾಸ್ತ್ರಿಗಳ ಬಗ್ಗೆ ಇನ್ನೂ ಕೆಲವು ನೆನಪುಗಳಿವೆ. ಮತ್ತೊಂದು ಸಲ ಬರಿತೀನಿ.

ತಿದ್ದುಪಡಿ:  ಒಮ್ಮೊಮ್ಮೆ  ಹೀಂಗ ಆಗ್ತದ ಅಂದ್ರ, ನಾವು ಯಾವದನ್ನು ತಪ್ಪು ಅಂತ ತಿಳಿದಿರತೆವೋ ಅದು ಸರಿ ಇರ್ತದ ಮತ್ತು ಸರಿ ಅಂತ ತಿಳಿದಿದ್ದು ತಪ್ಪು ಇರ್ತದ. ಈಗ ನೋಡ್ರೀ ಆವಾಗ ಸಾಲಿ ನಿಬಂಧ ಒಳಗ "ಭಾಲಚಂದ್ರ" ಅಂತ ಮಹಾಪ್ರಾಣ ಕೊಟ್ಟು ಬರೆದಿದ್ದು ತಪ್ಪು, ಅದು ಬಾಲಚಂದ್ರ ಆಗಬೇಕಿತ್ತು ಅಂತ ಈಗ ಬರೆದೆ. ಈಗ ನೋಡಿದರ ಶಾಸ್ತ್ರಿಗಳ ನಿಜವಾದ ಮತ್ತು ಸರಿಯಾದ ಹೆಸರು "ಭಾಲಚಂದ್ರ" ಅಂತನೇ ಅಂತ ಮಾನ್ಯ ಶ್ರೀಕಾಂತ ಸವಣೂರ ಅವರು ಫೇಸ್ಬುಕ್ ಮೇಲೆ ಮೆಸೇಜ್ ಮಾಡಿ ತಿಳಿಸಿದರು. ಹಾಂಗಿದ್ದರ "ಭಾಲಚಂದ್ರ" ಅಂದ್ರ ಏನು ಅರ್ಥ? ಅದನ್ನೂ ಸಹ ಅವರೇ ಹೇಳಿದರು. ಭಾಲಚಂದ್ರ ಅಂದ್ರ "ಹಣೆಯ ಮೇಲೆ ಚಂದ್ರ ಇರುವವ" ಅಂತ ಅರ್ಥ. ಭಾಲಚಂದ್ರ ಎಂಬುದು ಗಣಪತಿಯ ಒಂದು ಹೆಸರು. ಶಾಸ್ತ್ರಿಗಳು ಸಂಕಷ್ಟ ಚತುರ್ತಿಯಂದು ಹುಟ್ಟಿದ್ದರಿಂದ ಅವರಿಗೆ ಗಣಪತಿಯ ಹೆಸರಾದ "ಭಾಲಚಂದ್ರ" ಅಂತ ಇಡಲಾಗಿತ್ತು ಅಂತ ಸವಣೂರ ಅವರು ತಿಳಿಸಿದ್ದಾರೆ. ಇದೆಲ್ಲ ವಿವರ ತಿಳಿಸಿ ತಪ್ಪು ತಿದ್ದಿದ ಸವಣೂರ ಅವರಿಗೆ ಧನ್ಯವಾದಗಳು. ಭಾಲಚಂದ್ರ ಅಂದ್ರೆ ಗಣಪತಿ ಅನ್ನುವ ಮಾಹಿತಿ ಇಲ್ಲಿದೆ ನೋಡಿ. 

ಬಾಲಚಂದ್ರ ಶಾಸ್ತ್ರಿಗಳ ಫೋಟೋ ಮಾತ್ರ ಸಿಗಲಿಲ್ಲ. ಯಾರಾದರೂ ಒದಗಿಸಿಕೊಟ್ಟರೆ ಜರೂರ್ ಹಾಕ್ತೇನಿ ಇಲ್ಲೆ. ಅಲ್ಲಿ ತನಕಾ ಅವರ ಪರಮ ಗುರುಗಳಾದ ಆದಿ ಶಂಕರರ ಫೋಟೋ ಇರಲಿ. ಧಾರವಾಡ ಅದ್ವೈತ ವೇದಾಂತದ ಮಟ್ಟಿಗೆ ಬಾಲಚಂದ್ರ ಶಾಸ್ತ್ರಿಗಳು ಅಭಿನವ ಆದಿ ಶಂಕರಾಚಾರ್ಯರೇ ಸರಿ.
-- ಹೈಸ್ಕೂಲಿನಲ್ಲಿ ನಮಗೆ ಭೂಗೋಳ ಕಲಿಸಿದ ಗುರುಗಳಾದ ಶ್ರೀ ಗುರುರಾಜ ಜಮಖಂಡಿ ಸರ್ ಅವರು ಭಾಲಚಂದ್ರ ಶಾಸ್ತ್ರಿಗಳ ಫೋಟೋ ಕಳಿಸಿದ್ದಾರೆ. ಮೇಲೆ ಹಾಕಿದ್ದೇನೆ. ಜಮಖಂಡಿ ಸರ್ ಗೆ ಒಂದು ದೊಡ್ಡ ಥ್ಯಾಂಕ್ಸ್.

* ಬಾಲಚಂದ್ರ ಶಾಸ್ತ್ರಿಗಳ ಮರಣದ ಮರುದಿವಸನೇ ಒಂದು ಲೇಖನ ಬರೆದು ಇಟ್ಟೆ. ಈ blogger.com ನಲ್ಲಿರುವ ಒಂದು glitch ನಿಂದಾಗಿ ಬರೆದ ಲೇಖನ ಢಂ ಅಂದು, cyber ಸಮುದ್ರದ ಸುಳಿಯಲ್ಲಿ ಯಾವದೇ ಕುರುಹು ಇಲ್ಲದಂತೆ ಲೀನವಾಗಿ ಹೋಯಿತು. ಮಟಾಶ್! ಆ ಮೇಲೆ (ವಿ)ದೇಶ ಪ್ರಯಾಣ ಅದು ಇದು ಅಂತ ಹೇಳಿ ಇಲ್ಲಿ ತನಕ ಬರೆಯಲಾಗಿರಲಿಲ್ಲ.

* ಇದರ ಮುಂದುವರಿದ ಭಾಗ ಇಲ್ಲಿದೆ ಓದಿಕೊಳ್ಳಿ.