Monday, September 22, 2014

ಜೋಡಿ ಕೊಲೆ ಪ್ರೇತಾತ್ಮಗಳು ಹೊಟ್ಟೆ ಹುಳಗಳಾಗಿ ಕಾಡಿದ್ದವೇ?

೧೯೮೦ ನೇ ಇಸವಿ. ಜುಲೈ, ಆಗಸ್ಟ್ ತಿಂಗಳ ಒಂದು ದಿನ. ಮೂರನೇ ಕ್ಲಾಸಿನಲ್ಲಿದ್ದೆ. ಸಂಜೆ ಶಾಲೆಯಿಂದ ಬರುವಷ್ಟರಲ್ಲಿ ಮನೆ ಹತ್ತಿರ ಸಿಕ್ಕಾಪಟ್ಟೆ ಪೋಲೀಸರು. ನಮ್ಮನೆ ಮುಂದಲ್ಲ. ಅಲ್ಲೇ ಸ್ವಲ್ಪ ಮುಂದೆ. ಸ್ವಲ್ಪ ಆಕಡೆ. ಯಾಕೆ ಅಷ್ಟೊಂದು ಪೋಲೀಸ್ ಅಂತ ನೋಡಿದರೆ ಅಲ್ಲೊಂದು ಜೋಡಿ ಕೊಲೆ (ಡಬಲ್ ಮರ್ಡರ್) ಆಗಿ ಹೋಗಿತ್ತು!

ಇನ್ನೂ ಕಟ್ಟುತ್ತಿದ್ದ ಮನೆ ಅದು. ಅದೇ ಪ್ಲಾಟಿನಲ್ಲಿ ಒಂದು ಚಿಕ್ಕ ಶೆಡ್ ಹಾಕಿಟ್ಟಿದ್ದರು. ಎಲ್ಲರೂ ಮನೆ ಕಟ್ಟುವಾಗ ಮಾಡುತ್ತಿದ್ದ ಕೆಲಸ ಅದು. ಮೊದಲು ಒಂದು ತಾತ್ಕಾಲಿಕ ಶೆಡ್ ಕಟ್ಟುವದು. ಸಿಮೆಂಟ್, ಕಬ್ಬಿಣ, ಮರ, ಇತ್ಯಾದಿ ಸಾಮಾನು ಇಡಲು ಅಂತ. ಕಾಯಲು ಇಡುತ್ತಿದ್ದ ಕಾವಲುಗಾರ ಉರ್ಫ್ ವಾಚ್ಮನ್ ಗೆ ಉಳಿಯಲೂ ಸಹ ಒಂದು ವ್ಯವಸ್ಥೆ ಮಾಡಿದ ಹಾಗೆ. ಆ ಮನೆ ಶೆಡ್ಡಿನಲ್ಲಿ ಇದ್ದಿದ್ದು ಒಂದು ವೃದ್ಧ ವಾಚ್ಮನ್ ದಂಪತಿ. ಅವರೂ ನಮಗೆ ಗೊತ್ತಿತ್ತು ಬಿಡಿ. ಯಾಕೆಂದರೆ ಅದೇ ದಂಪತಿಗಳ ಅಳಿಯ ನಮ್ಮನೆ ವಾಚ್ಮನ್ ಆಗಿದ್ದ. ನಮ್ಮ ಹೊಸ ಮನೆ ಕಟ್ಟಿ ಮುಗಿದು, ನಾವು ಆ ಏರಿಯಾಕ್ಕೆ ಬಂದು ಸಹ ಕೇವಲ ಒಂದೋ ಎರಡೋ ತಿಂಗಳಾಗಿತ್ತು ಅಷ್ಟೇ. ಹಾಗಿರುವಾಗ ಒಂದೆರೆಡು ಸೈಟ್ ಬಿಟ್ಟು ಇದ್ದಂತಹ ಆ ಸೈಟಿನಲ್ಲಿ ಡಬಲ್ ಮರ್ಡರ್! ವೃದ್ಧ ವಾಚ್ಮನ್ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಸಹಜವಾಗಿ ನಮಗೆ ಕೆಟ್ಟ ಕುತೂಹಲ. ಸುತ್ತುವರಿದಿದ್ದ ಜನರ ಮಧ್ಯೆ ಹೋಗಿ ತೂರಿಕೊಂಡೆವು. ಸಿಕ್ಕಾಪಟ್ಟೆ ಸಂಖ್ಯೆಯಲ್ಲಿ ಪೊಲೀಸರು ಇದ್ದರು. ಧಾರವಾಡ ಮಟ್ಟಿಗೆ ಡಬಲ್ ಮರ್ಡರ್ ಅಂದ್ರೆ ದೊಡ್ಡದೇ ಬಿಡಿ. ಸುಮಾರು ಜನ ಪೋಲೀಸ್ ಸಾಹೇಬರು ಎಲ್ಲ ಬಂದಿದ್ದರು ಅಂತ ಕಾಣುತ್ತದೆ. ಸುಮಾರು ಜೀಪು, ಕೆಂಪು ಗೂಟದ ಒಂದು ಬಿಳೆ ಕಾರು ಎಲ್ಲ ಬಂದಿತ್ತು. ದೊಡ್ಡ ಆಕರ್ಷಣೆ ಅಂದರೆ ಕೊಲೆ ಮಾಡಿದವರನ್ನು ಹಿಡಿಯಲು ಬಂದಿದ್ದ ಪೋಲೀಸ್ ನಾಯಿ. ಅದನ್ನು ನೋಡಿ, 'ಅವನೌನ್! ನಮ್ಮ ಏರಿಯಾಕ್ಕೆ ಇದೆಲ್ಲಿ ಹೊಸ ನಾಯಿ ಬಂತಲೇ!?' ಅಂತ ಸಾಯೋ ರೀತಿಯಲ್ಲಿ ಏರಿಯಾದ ಸಾಕಿದ ನಾಯಿಗಳ, ಬೀದಿ ನಾಯಿಗಳ ಬೊಗಳುವಿಕೆ, ಊಳಿಡುವಿಕೆ. ಅವನ್ನು ಓಡಿಸುತ್ತಿದ್ದ ಹೊಟ್ಟೆ ಬಿಟ್ಟ ಪೋಲೀಸರ ಕಷ್ಟ. ಎಲ್ಲ ಮಜವಾಗಿತ್ತು. ನೋಡವರಿಗೆ ಎಲ್ಲ ಮಜಾನೇ ಬಿಡಿ. ಪೋಲೀಸರ ಕರ್ಮ ಯಾರಿಗೂ ಬ್ಯಾಡಾ. ಮಳೆ ಬೇರೆ ಜಿನುಗುತ್ತಿತ್ತು.

ಕತ್ತಲಾಗುತ್ತ ಬಂತು. ಪೋಲೀಸರ ತನಿಖೆ ಕ್ಲೈಮಾಕ್ಸ್ ಗೆ ಬರುತ್ತಿತ್ತು. ಸುತ್ತ ನೆರದವರಲ್ಲಿ ಚಿತ್ರ ವಿಚಿತ್ರ ಸುದ್ದಿಗಳು. 'ಏ, ಪಿಕಾಸಿಲೇ ಹೆಟ್ಟಿ ಬಿಟ್ಟಾರ್ರಿ ಮೇಡಂ! ಹೊಟ್ಟಿ ನಟ್ಟ ನಡು ಹೆಟ್ಟಿ ಕೊಂದಾರ ನೋಡ್ರೀ,' ಅಂತ ಹೇಗೆ ಮರ್ಡರ್ ಮಾಡಲಾಗಿದೆ ಅಂತ ಅಂಕಲ್ ಒಬ್ಬರು ಆಂಟಿ ಒಬ್ಬರಿಗೆ ಹೇಳುತ್ತಿದ್ದರು. ತಾವೇ ಹೋಗಿ, ಪಿಕಾಸಿ ಹೆಟ್ಟಿ, ಮರ್ಡರ್ ಮಾಡಿ ಬಂದವರಂತೆ ಹೇಳುತ್ತಿದ್ದರು. ಆಂಟಿ ಮುಖ ಕಿವುಚಿದರು. ಕೆಟ್ಟ ಮಾರಿ ಮಾಡಿದರು. ಅದನ್ನ ನೋಡಿ ಅಂಕಲ್ ಸ್ವಲ್ಪ ಮೀಟರ್ ಕಮ್ಮಿ ಮಾಡಿಕೊಂಡರು. ಅಂಕಲ್ ಮೀಟರ್ ಕಮ್ಮಿಯಾಗಿದ್ದು ನೋಡಿ, ಬಾಯಿ ಬಿಟ್ಟು ಕೇಳುತ್ತಿದ್ದ ನಾವು ತಾತ್ಕಾಲಿಕವಾಗಿ ಬಾಯಿ ಬಂದು ಮಾಡಿಕೊಂಡೆವು.

Yes! ಅಷ್ಟರಲ್ಲಿ ಪೋಲೀಸ್ ನಾಯಿ ಹೊರಗೆ ಬಂತು. ಅದನ್ನು ಕೊಲೆಯಾಗಿದ್ದ ಶೆಡ್ಡ ಒಳಗೆ ಕರೆದುಕೊಂಡು ಹೋಗಿ, ಎಲ್ಲ ಮೂಸಿಸಿಕೊಂಡು ಕರೆದುಕೊಂಡು ಬಂದರು. ನಾಯಿ ಅಲ್ಲಿ ಇಲ್ಲಿ ಮೂಸುತ್ತ, ತನ್ನ ಜೊತೆ ಇದ್ದ ಪೊಲೀಸನನ್ನು ಎಳೆದುಕೊಂಡು ಓಡಿ ಹೋಗಿ ನಿಂತಿದ್ದು ಮುಂದಿದ್ದ ಇನ್ನೊಂದು ಸೈಟಿನಲ್ಲಿ. ಅಲ್ಲೂ ಮತ್ತೊಂದು ಮನೆಯ ನಿರ್ಮಾಣ ನಡೆಯುತ್ತಿತ್ತು. ಅಲ್ಲೂ ಒಂದು ಶೆಡ್ ಇತ್ತು. ಒಬ್ಬ ವಾಚ್ಮನ್ ಅಲ್ಲೂ ಇದ್ದ. ಪೋಲೀಸ್ ನಾಯಿ ಹೋಗಿ ಅವನನ್ನು ಹಿಡಿದು ಬಿಡಬೇಕೇ! 'ಇವನೇ ಕೊಲೆ ಮಾಡಿದ್ದಾನೆ. ಹಿಡೀರಿ ಇವನ್ನ,' ಅನ್ನುವ ರೀತಿಯಲ್ಲಿ ಬೊಗಳುತ್ತ ನಿಂತು ಬಿಟ್ಟಿತು. ಪೊಲೀಸರಿಗೆ ಮತ್ತೇನು ಬೇಕು!? ಒಂದಿಬ್ಬರು ಪೇದೆಗಳು ಬಂದವರೇ ಅವನಿಗೆ ರಪ್ರಪಾ ರಪ್ರಪಾ ಅಂತ ಬಡಿದರು. ಬಗ್ಗಿಸಿ ಬಗ್ಗಿಸಿ ಬಡಿದರು. 'ನಾ ಅಲ್ರೀ ಸಾಹೇಬ್ರ! ನಾ ಖೂನ್ ಮಾಡಿಲ್ಲರೀ! ನನಗೇನ್ ಗೊತ್ತಿಲ್ಲರೀ. ಆಣಿ ಮಾಡಿ ಹೇಳ್ತೇನ್ರೀ! ಯಪ್ಪಾ! ಹೊಡಿಬ್ಯಾಡ್ರೀ ಸಾಹೇಬ್ರಾ!' ಅಂತ ಆ ಇನ್ನೊಬ್ಬ ವಾಚ್ಮನ್ನನ ರೋಧನ. ಅದನ್ನೆಲ್ಲ ಕೇಳುವರು ಯಾರು? 'ನಮ್ಮ ನಾಯಿ ನಿನ್ನs ಹಿಡದೈತಿ. ಎಲ್ಲಾರನ್ನೂ ಬಿಟ್ಟು ನಿನ್ನs ಹಿಡಿಯಾಕ ಅದಕ್ಕೇನ ಹುಚ್ಚೇನಲೇ ಮಗನs? ನೀ ಹೀಂಗs ಬಗ್ಗೋ ಪೈಕಿ ಅಲ್ಲ ಅನಸ್ತೈತಿ. ತಡಿ, ನಿನ್ನ ಒಳಗ ಹಾಕಿ ನಾದ್ತೇವಿ. ಮಸ್ತ ರುಬ್ಬತೇವಿ. ಆವಾಗ ಹೇಳಿಯಂತ ಯಾರು ಖೂನ್ ಮಾಡಿದ್ರು ಅಂತ. ಭೋಸಡೀಕೆ!' ಅಂತ ಫುಲ್ ಪೋಲೀಸ್ ಭಾಷೆ ಪ್ರಯೋಗ ಮಾಡುತ್ತ, 'ಜೀಪ್ ತರ್ರಿ ಸರ್ರಾ. ಹಾಕ್ಕೊಂಡ ಹೋಗಿ ಬಿಡೋಣ,' ಅಂತ ಒದರುತ್ತ, ಇನ್ನೊಂದು ನಾಕು ಹೊಡೆತ ಹಾಕಿ, ಬೇಡಿ ಹಾಕಿ, ಅವನನ್ನ ಎತ್ತಾಕಿಕೊಂಡು ಹೋಗೇ ಬಿಟ್ಟರು. ಜೋಡಿ ಮರ್ಡರ್ ಕೇಸ್ ಖಲಾಸ್. ಮರ್ಡರ್ ಆಗಿ ಇಪ್ಪತ್ನಾಕು ತಾಸಿನೊಳಗೇ ಆರೋಪಿ ಬಂಧನ. ಇನ್ನು ನಾಳೆ ಪೇಪರಿನಲ್ಲಿ ಸುದ್ದಿ ಬಂದರೆ ಎಲ್ಲ ಮುಗಿದ ಹಾಗೆಯೇ.

ಮನೆಗೆ ಓಡಿ ಬಂದು ಫುಲ್ ಎಕ್ಸೈಟ್ ಆಗಿ ಹೇಳಿದೆ. 'ಪೊಲೀಸರು ಇನ್ನೊಬ್ಬ ವಾಚ್ಮನ್ನನ ಹಿಡಕೊಂಡು ಹೋದರು. ಪೋಲೀಸ್ ನಾಯಿ ಬಂದು ಅವನ್ನೇ ಹಿಡೀತು. ಅವನೇ ಖೂನ್ ಮಾಡಿದ್ನಂತ. ಅವಂಗೇನು ಮಾಡ್ತಾರ ಇನ್ನು?' ಅಂತೆಲ್ಲ ಫುಲ್ ಕಥೆ ಹೇಳಿದ ಮೇಲೆ ಲಕ್ಷಕ್ಕೆ ಬಂತು ಯಾರೋ ಹಿರಿಯ ಅಂಕಲ್ ಒಬ್ಬರು ಅಪ್ಪನ ಜೊತೆ ಕೂತು ಮಾತಾಡುತ್ತಿದ್ದರು ಅಂತ. ಪೋಲೀಸ್ ನಾಯಿ ಖೂನಿ ಮಾಡಿದವನ ಹಿಡಿಯಿತು, ಅದನ್ನು ನಾವು ನೋಡಿದೆವು ಅನ್ನೋ excitement ನಲ್ಲಿ ಅವರು ಬಂದಿದ್ದನ್ನೇ ಗಮನಿಸಿರಲಿಲ್ಲ. ಅವರಿಗೆ ನಮಸ್ಕಾರ ಅನ್ನೋದು ದೂರ ಉಳಿತು.

ಅಂದು ಮನೆಗೆ ಬಂದಿದ್ದ ಅಂಕಲ್ ಒಂದು ಮಹತ್ವದ ಮಾತು ಹೇಳಿದ್ದರು. 'ಅರೆಸ್ಟ್ ಆದವ ಮರ್ಡರ್ ಆದವರ ಮನೆಯ ಮುಂದೇ ಇದ್ದವ ಅಂತೀ. ಮತ್ತೆ ಇಬ್ಬರೂ ವಾಚ್ಮನ್ ಜನರು. ಹೋಗಿ ಬಂದು, ಕೊಟ್ಟು ತೊಗೊಳ್ಳೋದು, ಎಲ್ಲ ಅವರ ಮಧ್ಯೆ ಇದ್ದೇ ಇರ್ತದೆ. ಆ ಸಂಪರ್ಕದ ವಾಸನೆ ಸುಳಿವಿನ ಮೇಲೆ ಪೋಲೀಸ್ ನಾಯಿ ಅವನನ್ನೇ ಹಿಡಿದಿದ್ದು ಸಹಜನೇ ಇದೆ. ಅದೊಂದೇ ಕಾರಣದ ಮೇಲೆ ಅವನೇ ಖೂನ್ ಮಾಡಿದ್ದ ಅಂತ ಹೇಳಲಿಕ್ಕೆ ಬರೋದಿಲ್ಲ. ಹೌದೋ ಅಲ್ಲೋ?' ಅಂತ ಒಂದು ಖರೆ ಮಾತು ಹೇಳಿದ್ದರು. ಬರೋಬ್ಬರಿ ಪಾಯಿಂಟ್ ಹಾಕಿದ್ದರು. ಅವರು ಕ್ರಿಮಿನಲ್ ವಕೀಲರಾಗಿದ್ದರಾ? ನೆನಪಿಲ್ಲ. ಅಂಕಲ್ ಮಾತು ಕೇಳಿ ಒಂದು ಕ್ಷಣ ಫುಲ್ ಟೆನ್ಷನ್ ಆಗಿದ್ದು ಹೌದು. ಯಾಕೆಂದರೆ ನಾವೂ ಸಹ ಮರ್ಡರ್ ಆದ ಮನೆಯ ಹತ್ತಿರದಲ್ಲೇ ಇದ್ದೆವು. ಆ ಕೊಲೆಯಾದ ವಾಚ್ಮನ್ ಗೊತ್ತೂ ಇದ್ದ. ನಮ್ಮ ಫೇರಿ ಅಲ್ಲೆಲ್ಲ ಹೋಗುತ್ತಲೂ ಇತ್ತು. ಎಲ್ಲಿಯಾದರೂ ಪುಣ್ಯಾತ್ಮನ ಕೊಲೆಯಾಗುವ ಹಿಂದಿನ ದಿನ ನಾವೆಲ್ಲಾದರೂ ಅಲ್ಲಿ ಹೋಗಿ, ಮರುದಿವಸ ಪೋಲೀಸ್ ನಾಯಿ ನಮ್ಮ ಚೊಣ್ಣ ಜಗ್ಗಿ ಬಿಟ್ಟಿದ್ದರೆ ಅಂತ ಟೆನ್ಷನ್ ಆಯಿತು. ಹಾಗಾಗಲಿಲ್ಲ ಅಂತ ಆವತ್ತಿಗೆ ಅದೇ ನೆಮ್ಮದಿ.

ಎಲ್ಲಿ ಜೋಡಿ ಕೊಲೆಯಾಗಿದ್ದವೋ ಅಲ್ಲಿ ಮನೆ ಕಟ್ಟುವ ಕೆಲಸ ಮುಂದುವರಿಯಿತು. ಮುಂದೆ ಒಂದೋ ಒಂದೂವರೆ ವರ್ಷದಲ್ಲೋ ಅಲ್ಲಿ ಒಂದು ದೊಡ್ಡ ಮನೆಯೂ ತಯಾರಾಯಿತು. ದೊಡ್ಡ ಸೈಟಿನಲ್ಲಿ ಒಂದು ದೊಡ್ಡ ಮನೆ. ಮೊದಲು ಹಾಕಿದ್ದ ಶೆಡ್ ಸಹಿತ ಒಳ್ಳೆ ರೀತಿಯಲ್ಲಿ ಕಟ್ಟಿ, ಒಂದು ಕೆಲಸದವರ ಕ್ವಾರ್ಟರ್ ತರಹ ತಯಾರು ಮಾಡಿಟ್ಟರು. ಮನೆ ಮಾಲೀಕರು ಎಲ್ಲೋ ಬೇರೆ ಕಡೆ ಇದ್ದರು. ಮನೆ ಭಾಡಿಗೆಗೆ ಕೊಟ್ಟರು.

ಆ ಮನೆಗೆ ಮೊದಲು ಭಾಡಿಗೆಗೆ ಬಂದವರು ಸಕ್ಸೇನಾ ಅಂತ. ಉತ್ತರ ಭಾರತದವರು. ಆ ಕಾಲದಲ್ಲಿ ಧಾರವಾಡದಲ್ಲಿ ಹೆಚ್ಚು ಕೈಗಾರಿಕೆಗಳು ಇರಲಿಲ್ಲ. ಸ್ವಸ್ತಿ ಟೆಕ್ಸ್ಟೈಲ್ಸ್ ಅಂತ ಒಂದು ಸುಮಾರು ದೊಡ್ಡ ಕಂಪನಿ ಧಾರವಾಡಕ್ಕೆ ಬಂದಿತ್ತು. ಊರ ಹೊರಗೆ, ಹುಬ್ಬಳ್ಳಿ ಹೆದ್ದಾರಿ ಮೇಲೆ ದೊಡ್ಡ ಫ್ಯಾಕ್ಟರಿ ಬಂದಿತ್ತು. ಅದರ GM, ದೊಡ್ಡ ಸಾಹೇಬರು ಅಂತ ಹೇಳಿ ಈ ಸಕ್ಸೇನಾ ಬಂದಿದ್ದರು. ಎಲ್ಲೋ ಉತ್ತರದ ಕಡೆಯಿಂದ ಬಂದಿದ್ದರು ಅಂತ ನೆನಪು.

ಈ ಸಕ್ಸೇನಾ ಕುಟುಂಬ ಅಂದರೆ ಗಂಡ, ಹೆಂಡತಿ, ಮೂವರು ಮಕ್ಕಳು. ಒಬ್ಬವ ನನಗಿಂತ ಒಂದು ಮೂರು ವರ್ಷ ದೊಡ್ಡವ. ನಂತರದವ ನನ್ನ ವಯಸ್ಸಿನವ. ಅವನ ತಂಗಿ ಒಂದೆರೆಡು ವರ್ಷ ಚಿಕ್ಕವಳು. ನಮಗೆ ಅವರ ಪರಿಚಯ ಜಾಸ್ತಿ ಇರಲಿಲ್ಲ. ಆಮೇಲೆ ನಮ್ಮ ಪಾಲಕರಿಗೆ ಸುಮಾರು ಪರಿಚಯವಾಗಿ ಹೋಗೋದು ಬರೋದು ಎಲ್ಲ ಶುರುವಾಯಿತು. ಅವರ ಮಕ್ಕಳಿಗೋ ಇಂಗ್ಲೀಷ್, ಹಿಂದಿ ಬಿಟ್ಟರೆ ಬೇರೆ ಭಾಷೆ ಬರದು. ಕನ್ನಡ ನಾಸ್ತಿ. ನಮಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. 'ಹಿಂದಿ ಮುಲಾಮ್ (ಮಾಲೂಮ್) ನಹಿ. ನೋ ಇಂಗ್ಲೀಷ್ ಕಮಿಂಗ್,' ಅಂತ ಹೇಳಿ, ಅವರೆಡೂ ಭಾಷೆ ಬರೋದಿಲ್ಲ ಅಂತ ಹೇಳಲೂ ಸಹಿತ ಸರಿ ಬರುತ್ತಿದ್ದಿಲ್ಲ. ಹೊರಗೆ ಧಾರವಾಡ ಕನ್ನಡ, ಮನೆಯಲ್ಲಿ ಹವ್ಯಕ ಕನ್ನಡ. ಅಷ್ಟೇ. ಗ್ರಂಥ ಕನ್ನಡವೂ ಸರಿಯಾಗಿ ಬರದ ಕಾಲ. ಹಾಂಗಾಗಿ ಸಕ್ಸೇನಾ ಮಕ್ಕಳ ಜೊತೆ ನಮ್ಮ ದೋಸ್ತಿ ಆಗಲೇ ಇಲ್ಲ. ಮುಂದೆ ನಾಲ್ಕಾರು ವರ್ಷಗಳ ನಂತರ ತಕ್ಕ ಮಟ್ಟಿಗೆ ದೋಸ್ತಿ ಆಯಿತು ಅನ್ನಿ.

ಸಕ್ಸೇನಾ ಕುಟುಂಬ ಆ ಜೋಡಿ ಕೊಲೆಯಾಗಿದ್ದ ಕಾಂಪೌಂಡ್ ಗೆ ಬಂದ ಮೊದಲ ಒಂದಿಷ್ಟು ದಿವಸ ಏನೂ ಹೆಚ್ಚಿನ ವಿಶೇಷವಿರಲಿಲ್ಲ. ದೊಡ್ಡ ಮನೆ, ಮನೆ ಮುಂದೆ ಒಂದೋ ಎರಡೋ ಕಾರು, ಕಾಂಪೌಂಡ್ ತುಂಬ ಚೆಂದದ ಲಾನ್, ಗಾರ್ಡನ್, ನಾಲ್ಕಾರು ಕೆಲಸದವರು, ಎಲ್ಲ ಇತ್ತು. ಕೊಲೆಯಾಗಿದ್ದ ಶೆಡ್ ಔಟ್ ಹೌಸ್ ಆಗಿ, ನಂತರ ಸರ್ವಂಟ್ ಕ್ವಾರ್ಟರ್ ಆಗಿತ್ತು. ಅಲ್ಲಿ ಒಬ್ಬ ನೌಕರ, ಅವನ ಸಂಸಾರ ಸಹ ಇತ್ತು. ಅವನ ಹೆಂಡತಿ, ಮಕ್ಕಳು ಎಲ್ಲ ಸಕ್ಸೇನಾ ಮನೆಯಲ್ಲೇ ಕೆಲಸ ಮಾಡುತ್ತಿದ್ದರು ಅಂತ ನೆನಪು.

ಸಕ್ಸೇನಾ ಒಳ್ಳೆ ಖಾತೆ ಪೀತೇ ಮನೆಯವರು. ಅದೂ ಉತ್ತರ ಭಾರತದ ಜನ. ಅವರಲ್ಲಿ ಎಣ್ಣೆ, ತುಪ್ಪ ಎಲ್ಲ ಸ್ವಲ್ಪ ಜಾಸ್ತಿಯೇ. ಹಾಗಾಗಿ ದೊಡ್ಡವರು, ಮಕ್ಕಳು ಎಲ್ಲ ದಷ್ಟ ಪುಷ್ಟರಾಗಿಯೇ ಇದ್ದರು. ಧಾರವಾಡ ಭಾಷೆಯಲ್ಲಿ ಹೇಳುವದಾದರೆ ಎಲ್ಲರೂ ಸ್ವಲ್ಪ ಢಬ್ಬರೇ.

ಹೀಗಿದ್ದಾಗ ದೊಡ್ಡ ಮಗ ಒಮ್ಮೆಲೇ ಬಿಳುಚಿಕೊಳ್ಳತೊಡಗಿದ. ತೂಕ ಒಮ್ಮೆಲೇ ಕಮ್ಮಿಯಾಗತೊಡಗಿತು. ಅವನಿಗೆ ಆಗ ಹನ್ನೆರೆಡು, ಹದಿಮೂರು ವರ್ಷ. ಆ ವಯಸ್ಸಿನಲ್ಲಿ ಎಲ್ಲರಿಗೂ ಪ್ರಾಯ ಬರುವ ಸಮಯ. ಎತ್ತರ, ತೂಕ ಎಲ್ಲ ಹೆಚ್ಚಾಗುವದು ಸಹಜ. ಇವನದು ಉಲ್ಟಾನೇ ಆಯಿತು. ಕೇವಲ ತೂಕವೊಂದೇ ಕಮ್ಮಿಯಾಗಿ, ಸ್ವಲ್ಪ ಬಿಳುಚಿಕೊಂದಿದ್ದರೆ ಅಷ್ಟೆಲ್ಲ ತೊಂದರೆಯಿರಲಿಲ್ಲ ಬಿಡಿ. ಆದರೆ ಹುಡುಗನ ಹಸಿವೆ ಕಮ್ಮಿ ಆಗುತ್ತ ಹೋಯಿತು. ಏನು ಕೊಟ್ಟರೂ, 'ಬಾಯಿ ರುಚಿ ಇಲ್ಲ. ಬೇಡ,' ಅಂತ ತಟ್ಟೆ ಪಕ್ಕಕ್ಕೆ ಸರಿಸತೊಡಗಿದ ಹುಡುಗ. ಜಬರ್ದಸ್ತಿ ಮಾಡಿ ಊಟ ತುರುಕಿಕೊಂಡರೆ ಅದು ಒಳಗೆ ನಿಲ್ಲುತ್ತಲೇ ಇರಲಿಲ್ಲ. ಒಟ್ಟಿನಲ್ಲಿ ಊಟ ಇಲ್ಲ. ಉಂಡಿದ್ದು ಮೈಗೆ ಹಿಡಿಯುತ್ತಿಲ್ಲ. ಆ ಪರಿಸ್ಥಿತಿ ಬಂದು ಬಿಟ್ಟಿತು ಹುಡಗನಿಗೆ. ದಪ್ಪ ದಪ್ಪಗೆ, ಗುಂಡು ಗುಂಡಾಗಿದ್ದ ಹುಡುಗ ಆರೇಳು ತಿಂಗಳಲ್ಲಿ ಅರ್ಧಕ್ಕಿಂತ ಹೆಚ್ಚು ತೂಕ ಕಳೆದುಕೊಂಡು ಕಡ್ಡಿಯಾಗಿ ಹೋದ. ಮೇಲಿಂದ ಯಾವಾಗಲೂ ಸುಸ್ತು. ಆಟ ಪಾಠದಲ್ಲಿ ಆಸಕ್ತಿ ಇಲ್ಲ. ಒಟ್ಟಿನಲ್ಲಿ ಹುಡುಗನ ಆರೋಗ್ಯ ಸರಿ ಇಲ್ಲ. ಫುಲ್ ಖರಾಬ್! ಫುಲ್ ಬರ್ಬಾದ್!

ಮನೆಯವರು ಡಾಕ್ಟರ ಮಂದಿಗೆ ತೋರಿಸಿದರು. ಎಲ್ಲಿ ಪೋಷಕಾಂಶಗಳು ಕಮ್ಮಿಯಾಗಿವೆಯೋ ಏನೋ ಅಂತ ಡಾಕ್ಟರ ಜನ ದಬಾಯಿಸಿ ಆ ಟಾನಿಕ್, ಈ ಟಾನಿಕ್, ಆ ವಿಟಾಮಿನ್ ಗುಳಿಗೆ, ಈ ಬಿ-ಕಾಂಪ್ಲೆಕ್ಸ್ ಅಂತ ಏನೇನೋ ಔಷಧಿ, ಗುಳಿಗೆ ಕೊಟ್ಟಿದ್ದೇ ಕೊಟ್ಟಿದ್ದು. ಹಾಗೆಯೇ ಅವರು ಇವರು ಹೇಳಿದ್ದು ಅಂತ ಹೇಳಿ ಮನೆ ಔಶಧಗಳು, ಲೇಹ್ಯ, ಚೂರ್ಣ ಮತ್ತೊಂದು ಮಗದೊಂದು ಕೂಡ. ಅದೆಲ್ಲ ಟಾನಿಕ್ ಕುಡಿಯುತ್ತ, ಗುಳಿಗೆ ನುಂಗುತ್ತ ಹುಡುಗ ಹೈರಾಣಾಗಿ ಹೋದ. ಬಾಯಿಗೆ ರುಚಿಯೇ ಇಲ್ಲ. ಇನ್ನೆಲ್ಲಿ ಅವೆಲ್ಲ ಟಾನಿಕ್ ಕುಡಿದಾನು? ಎಲ್ಲಿ ಲೇಹ್ಯ ನೆಕ್ಕಿಯಾನು? ಔಷದಿ ಅಂಗಡಿಯವರು ಉದ್ಧಾರ ಆದರೇ ವಿನಃ ಹುಡುಗನ ಆರೋಗ್ಯದಲ್ಲಿ ಏನೂ ಸುಧಾರಣೆ ಆಗಲಿಲ್ಲ.

ಹುಡುಗನ ಸ್ಥಿತಿ ಬಗ್ಗೆ ಪಾಲಕರು ಈಗ ನಿಜವಾಗಿಯೂ ಚಿಂತಾಕ್ರಾಂತರಾದರು. ಹುಬ್ಬಳ್ಳಿ ಧಾರವಾಡದಲ್ಲಿ ತೋರಿಸದ ವೈದ್ಯರಿಲ್ಲ. ಮತ್ತೆ ಆವತ್ತಿನ ಕಾಲದಲ್ಲಿ ಅವಳಿ ನಗರಲ್ಲಿ ಅದೆಷ್ಟು ಜನ ಸ್ಪೆಷಲಿಸ್ಟ್ ಗಳು ಇದ್ದಾರು? ಇದ್ದವರೆಲ್ಲ ಪರಸ್ಪರ ದೋಸ್ತರೇ. ಒಬ್ಬ ಸ್ಪೆಷಲಿಸ್ಟ್ ನೋಡಿದ್ದರು ಅಂತ ಇನ್ನೊಬ್ಬರು ಜಾಸ್ತಿ ತಲೆ ಕೆಡಿಸಿಕೊಳ್ಳದೆ, ಚಿಕಿತ್ಸೆ ಪದ್ಧತಿ, ಬರೆದು ಕೊಟ್ಟ ಟಾನಿಕ್, ಇತ್ಯಾದಿ ನೋಡಿ, 'ಎಲ್ಲಾ ಬರೋಬ್ಬರಿ ಅದ. ಆ ಡಾಕ್ಟರ್ ಹೇಳಿದ್ದನ್ನೇ ಮಾಡಿಕೋತ್ತ ಹೋಗ್ರೀ. ಎಲ್ಲಾ ಸರಿಯಾಗ್ತದ,' ಅಂತ ಹೇಳಿ ಕೈ ತೊಳೆದುಕೊಂಡರು. ಅದೇನೋ ಅಂತಾರಲ್ಲ, ನಸೀಬ್ ಸರಿಯಿಲ್ಲ ಅಂದರೆ ಏನೂ ಉಪಯೋಗವಾಗುವದಿಲ್ಲ.

'ಧಾರವಾಡ ಹುಬ್ಬಳ್ಳಿ ಡಾಕ್ಟರಗಳನ್ನ ನಂಬಿಕೊಂಡರೆ ಅಷ್ಟೇ ಇನ್ನು. ಹುಡುಗನನ್ನು ಕರೆದುಕೊಂಡು ಮುಂಬೈಗೆ ಹೋಗಬೇಕು. ಅಲ್ಲಿನ ದೊಡ್ಡ ಡಾಕ್ಟರಿಗೆ ತೋರಿಸಬೇಕು. ಹೇಗೂ ಮುಂದಿನ ಸ್ವಲ್ಪ ದಿನಗಳಲ್ಲೇ ರಜಾ ಬರಲಿದೆ. ಆವಾಗ ಹೋಗಿ ಬಂದು ಬಿಟ್ಟರಾಯಿತು,' ಅಂತ ಸಕ್ಸೇನಾ ಮುಂಬೈ ಟ್ರಿಪ್ಪಿಗೆ ತಯಾರಿ ಮಾಡಿಕೊಳ್ಳತೊಡಗಿದ್ದರು.

ಅಷ್ಟರಲ್ಲಿ ಹುಡುಗ ಮತ್ತೊಂದು ಅತಿ ವಿಚಿತ್ರ ಅನ್ನಿಸುವಂತಹ ತೊಂದರೆ ಬಗ್ಗೆ ಹೇಳತೊಡಗಿದ. 'ರಾತ್ರಿ ನಿದ್ದೆ ಸರಿಯಾಗಿ ಆಗುತ್ತಿಲ್ಲ. ಯಾರೋ ಎದೆ ಮೇಲೆ ಬಂದು ಕುಳಿತ ಹಾಗೆ ಆಗುತ್ತದೆ. ಕುತ್ತಿಗೆ ಹಿಚುಕಿ, ಉಸಿರುಗಟ್ಟಿಸಿದ ಹಾಗೆ ಆಗುತ್ತದೆ. ತುಂಬ ತ್ರಾಸಾಗುತ್ತದೆ. ಸ್ವಲ್ಪ ಹೊತ್ತು ಕೊಸರಾಡಿದ ನಂತರ ಎದೆ ಮೇಲಿಂದ ಯಾರೋ ಎದ್ದು, ಇಳಿದು ಹೋದ ಫೀಲಿಂಗ್ ಬರುತ್ತದೆ. ದಿನಾ ಹೀಗೇ ಆಗುತ್ತಿದೆ. ಯಾಕೋ ಏನೋ?!'

ಅದೇ ಮನೆಯಲ್ಲಿ ಭೀಕರ ಜೋಡಿ ಕೊಲೆ ಬೇರೆ ಆಗಿತ್ತಲ್ಲ!

ಅಲ್ಲಿ ಭೂತ ಚೇಷ್ಟೆ, ಅತೃಪ್ತ ಆತ್ಮಗಳ ಆರ್ತನಾದ ಏನಾದರೂ ಶುರುವಾಗಿತ್ತೇ?

ಯಾವತ್ತೋ ಒಂದು ದಿವಸ ತಂದೆಯವರು ಅವರ ಮನೆಗೆ ಹೋಗಿದ್ದರು. ಸಕ್ಸೇನಾ ಕುಟುಂಬ ಆ ಮನೆಗೆ ಬಂದು ಅಷ್ಟೊತ್ತಿಗೆ ಎರಡು ಮೂರು ವರ್ಷದ ಮೇಲಾಗಿ ಹೋಗಿತ್ತು. ನಮ್ಮ ಕುಟುಂಬದ ಜೊತೆ ಒಳ್ಳೆ ಪರಿಚಯ ಎಲ್ಲ ಆಗಿತ್ತು. ಒಂದು ದಿವಸ ಹೀಗೆ ಮಾತಾಡುತ್ತ  ಇದ್ದಾಗ, ಸಕ್ಸೇನಾ ಅವರು ಹೇಳಿದರಂತೆ, 'ನೋಡಿ, ನಮ್ಮ ಹುಡುಗನಿಗೆ ಮೊದಲು ತೂಕ ಕಮ್ಮಿಯಾಗುವದು, ಸುಸ್ತು, ಹಸಿವೆ ಇಲ್ಲದಿರುವದು, ಇತ್ಯಾದಿ ಆರೋಗ್ಯದ ತೊಂದರೆ ಇತ್ತು. ಈಗ ಮತ್ತೊಂದು ಶುರು ಆಗಿದೆ. ರಾತ್ರಿ ನಿದ್ರೆಯೇ ಸರಿಯಾಗುತ್ತಿಲ್ಲ ಅಂತಾನೆ. ಅದಕ್ಕೇ ದಿನವಿಡೀ ಮತ್ತೂ ಹೆಚ್ಚಿನ ಸುಸ್ತು. ಎದೆ ಮೇಲೆ ಯಾರೋ ಬಂದು ಕೂತಂಗೆ ಆಗುತ್ತದೆ. ಉಸಿರುಗಟ್ಟಿಸಿದ ಹಾಗೆ ಆಗುತ್ತದೆ ಅಂತ ಹೊಸ ಹೊಸ ಸಮಸ್ಯೆ ಶುರುವಾಗಿದೆ ಅವನಿಗೆ. ನಮಗೆ ಏನೂ ತಿಳಿಯುತ್ತಿಲ್ಲ. ಹೇಗೂ ಇನ್ನೊಂದೆರೆಡು ತಿಂಗಳಲ್ಲಿ ರಜೆ ಬರುವದಿದೆ. ಮುಂಬೈಗೆ ಹೋಗಿ ದೊಡ್ಡ ಆಸ್ಪತ್ರೆಯಲ್ಲಿ, ದೊಡ್ಡ ದೊಡ್ಡ ಸ್ಪೆಷಲಿಸ್ಟ್ ಗಳ ಹತ್ತಿರ ಎಲ್ಲ ಚೆಕ್ ಮಾಡಿಸಿಕೊಂಡು ಬರಬೇಕು ಅಂತ ಮಾಡಿದ್ದೇವೆ ನೋಡಿ. ಆವಾಗಾದರೂ ಆರಾಮಾದರೇ ಸಾಕು ಅನ್ನುವಂತಾಗಿ ಬಿಟ್ಟಿದೆ. ನೋಡೋಕಾಗಲ್ಲ ಅವನ ಪರಿಸ್ಥಿತಿ, ಪಡೋ ಕಷ್ಟ. ಪಾಪದ ಹುಡುಗ. ಎಷ್ಟು ಚೂಟಿಯಾಗಿದ್ದ. ಈಗ ಆರು ತಿಂಗಳಲ್ಲಿ ನೋಡಿ ಹೇಗಿದ್ದವ ಹೇಗಾಗಿ ಬಿಟ್ಟಿದ್ದಾನೆ?' ಅಂತ ತಮ್ಮ ಸಂಕಟ ತೋಡಿಕೊಂಡರು. ಒಬ್ಬ ನೆರೆಮನೆಯವರು ಇನ್ನೊಬ್ಬರ ಹತ್ತಿರ ಕಷ್ಟ ಸುಖ ಹೇಳಿಕೊಂಡಂತೆ. ಅಷ್ಟರಲ್ಲಿ ಜೀವಚ್ಚವದಂತಾಗಿದ್ದ ಅದೇ ಹುಡುಗ ಬಂದ. ನಾಕು ಹೆಜ್ಜೆ ನಡೆದು ಬರುವಷ್ಟರಲ್ಲಿ ಅವನಿಗೆ ಸಾಕಾಗಿತ್ತು. ಶ್ವಾಸ ಬಿಡುತ್ತಲೇ, 'ನಮಸ್ತೇ ಅಂಕಲ್,' ಅಂತ ಟೀವಿ ಮುಂದೆ ಹುಸ್ಸ್ ಅಂತ ಕುಸಿದು ಕೂತ. ಚೈತನ್ಯವೆಲ್ಲ ಬಸಿದು ಹೋದವನ ರೀತಿಯಲ್ಲಿ. ನೋಡಿದವರಿಗೆ ಪಾಪ ಅನ್ನಿಸಬೇಕು.

'ಎದೆ ಮೇಲೆ ಯಾರೋ ಬಂದು ಕೂತಂಗೆ ಅನ್ನಿಸುವದು. ಕುತ್ತಿಗೆ ಹಿಚುಕಿದಂತೆ ಅನ್ನಿಸುವದು,' ಇದೆಲ್ಲ ಕೇಳಿದ ನಮ್ಮ ತಂದೆಯವರಿಗೆ ಅನ್ನಿಸಿದ್ದು, 'ಎಲ್ಲಾದರೂ ಭೂತ ಚೇಷ್ಟೆ ಆರಂಭವಾಗಿದೆಯೋ ಹೇಗೆ?' ಅಂತ. ಯಾಕೆಂದರೆ ಹಾಗಾಗುವಂತಹ ಕಾರಣ ಇತ್ತು ನೋಡಿ. ಕೆಲವೇ ವರ್ಷಗಳ ಹಿಂದೆ ಆಗಿದ್ದ ಭಯಂಕರ ಜೋಡಿ ಕೊಲೆ. ಡಬಲ್ ಮರ್ಡರ್. ಅದಾದ ನಂತರ ಆ ಮನೆ ಕಟ್ಟಿಸುತ್ತಿದ್ದವರು ಸರಿಯಾದ ರೀತಿಯಲ್ಲಿ ಶಾಂತಿ, ಪರಿಹಾರ ಎಲ್ಲ ಮಾಡಿಸಿದ್ದರೋ ಇಲ್ಲವೋ, ಯಾರಿಗೆ ಗೊತ್ತು? ಮತ್ತೆ ಹುಡುಗನ ಗ್ರಹಗತಿ ಕೂಡ ಹೆಚ್ಚು ಕಮ್ಮಿಯಾಗಿ, ಎಲ್ಲಾದರೂ ಭೂತ ಚೇಷ್ಟೆ ಶುರುವಾಗಿರಬಹುದಾ? ಜನರು ಜೀವನದ ಕೆಲವೊಂದು ಘಟ್ಟಗಳಲ್ಲಿ, ಬೇರೆ ಬೇರೆ ಕಾರಣಕ್ಕೆ, ಬೇರೆ ಬೇರೆ ಶಕ್ತಿಗಳಿಗೆ, ಬೇರೆ ಬೇರೆ ರೀತಿಯಲ್ಲಿ vulnerable ಆಗಿರುತ್ತಾರೆ. ಅಂತಹ vulnerability ಗಳನ್ನು ಅವರವರ ಕರ್ಮಕ್ಕೆ ತಕ್ಕಂತೆ exploit ಮಾಡಿಕೊಂಡು, ಸರಿಯಾದ ವೇಳೆ ವೇಳೆ ನೋಡಿ ಕ್ಷುದ್ರ ಶಕ್ತಿಗಳು ತೊಂದರೆ ಕೊಡಲು ಆರಂಭಮಾಡುತ್ತವೆ ಅನ್ನುವದು ಒಂದು ಥಿಯರಿ. ಅದು  ಒಂದು ಮೆಟಾಫಿಸಿಕಲ್ ಮಾಡೆಲ್. ಚಿಕ್ಕ ತೂತು ಬಿದ್ದ ದೋಣಿಯಲ್ಲಿ ನೀರು ನಿಧಾನಕ್ಕೆ ನುಗ್ಗಿ, ದೋಣಿಯನ್ನೇ ಮುಳುಗಿಸಿಬಿಟ್ಟಂತೆ ದೆವ್ವಗಳ ಕಾರ್ನಾಮೆ ಇರುತ್ತದೆ. ಆಟಕಾಯಿಸಕೊಂಡವ ಸರಿ ಸಮಯಕ್ಕೆ ಪೂಜೆ ಗೀಜೆ ಆಗಿ ಬಚಾವ್ ಆದ ಸರಿ. ಇಲ್ಲ ಅಂದರೆ ಹರೋ ಹರ!

ಆ ಮನೆಯಲ್ಲಿದ್ದ ಸಕ್ಸೇನಾ ಫ್ಯಾಮಿಲಿಗೆ ಅಲ್ಲಿ ಆಗಿಹೋಗಿದ್ದ ಭೀಕರ ಜೋಡಿ ಕೊಲೆ ಬಗ್ಗೆ ಗೊತ್ತಿತ್ತಾ? ಹೆಚ್ಚಾಗಿ ಗೊತ್ತಿರಲಿಕ್ಕೆ ಇಲ್ಲ. ಯಾಕೆಂದರೆ ಗೊತ್ತಿದ್ದರೆ, ನಮ್ಮ ಪ್ರಕಾರ, ಅವರು ಅಂತಹ ಮನೆಗೆ ಕಾಲಿಡುತ್ತಲೇ ಇರಲಿಲ್ಲ. ದೇವರು, ದಿಂಡರು ಅಂತ ಎಲ್ಲ ಸ್ವಲ್ಪ ಜಾಸ್ತಿಯೇ ನಂಬಿಕೆ ಅವರಿಗೆ. ಸ್ವಂತ ಪೂಜೆ ಪುನಸ್ಕಾರ ಅಷ್ಟೊಂದು ಮಾಡದಿದ್ದರೂ ನಂಬಿಕೆ ತುಂಬಾ ಇತ್ತು. ಅವರು ಬಂದ ಒಂದೆರೆಡು ವರ್ಷದಲ್ಲಿ ನಾವೇ ಅವರಿಗೆ ಪೂಜೆಗೆ, ಅದಕ್ಕೆ ಇದಕ್ಕೆ ಅಂತ ಭಟ್ಟರನ್ನು ಹುಡುಕಿ ಕೊಟ್ಟಿದ್ದೆವು. ಬೇರೆ ಬೇರೆ ಕಾರಣಕ್ಕೆ ಪೂಜೆ ಬಿಡಿ. ಭೂತ ಪ್ರೇತ ನಿವಾರಣೆಗೆ ಅಲ್ಲ.

ಮೊದಲೇ ಮಗನ ಅನಾರೋಗ್ಯದಿಂದ ಚಿಂತಿತ ತಂದೆ ತಾಯಿ. ಇದರ ಮೇಲೆ ಹಳೆ ಸುದ್ದಿ, ಜೋಡಿ ಕೊಲೆ, ಭೂತ ಪ್ರೇತ, ಅದು ಇದು ಅಂತ ಹೇಳಿ, ಅವರು ಮತ್ತೂ ತಲೆಕೆಡಿಸಿಕೊಂಡು ಕಷ್ಟ ಪಡುವದು ಬೇಡ ಅಂತ ಅವರಿಗೆ ಅದೆಲ್ಲ ಹೇಳಲು ಹೋಗಲಿಲ್ಲ ನಮ್ಮ ತಂದೆಯವರು. ಆದರೂ ಒಂದು ಮಾತು ಕೇಳಿದರು, 'ಯಾವದಕ್ಕೂ ಇರಲಿ ಅಂತ ಒಂದು ಮಹಾ ಮೃತ್ಯುಂಜಯ ಜಪ ಮಾಡಿಸಿಬಿಡೋಣ. ಏನಂತೀರಿ?' ಅಂತ. 'ಒಂದು ಸತ್ಯನಾರಾಯಣ ಪೂಜೆ ಮಾಡಿಸಿಬಿಡಿ,' ಅನ್ನುವ ಹಾಗೆ ಸರಳವಾಗಿಯೇ, ಸಹಜವಾಗಿ ಯಾವದೇ ತರಹದ ವಿಶೇಷ ಇಲ್ಲ ಅನ್ನುವ ಹಾಗೆ ಹೇಳಿದರು. ಅಷ್ಟೊತ್ತಿಗೆ ನಮ್ಮ ಕುಟುಂಬದ ಮೇಲೆ ತುಂಬ ವಿಶ್ವಾಸ ಬೆಳೆಸಿಕೊಂಡಿದ್ದ ಸಕ್ಸೇನಾ, 'ಸರಿ. ಮಾಡಿಸಿ, ಅದೇನೋ ಅಂದರಲ್ಲ ಮೃತ್ಯುಂಜಯ್ ಕಾ ಜಾಪ್,' ಅಂತ ಹಿಂದಿಯಲ್ಲಿ ಹೇಳಿದರು. ಮುಳುಗುವವನಿಗೆ ಹುಲ್ಲುಕಡ್ಡಿಯೂ ಓಕೆ, ಕಡ್ಡಿಪುಡಿಯೂ ಓಕೆ. ಮಗನ ತೀವ್ರ ಅನಾರೋಗ್ಯ ಅವರನ್ನು ಒಂದು ರೀತಿಯ ದೈನೇಸಿ ಪರಿಸ್ಥಿತಿಗೆ ತಂದು ನಿಲ್ಲಿಸಿತ್ತು. ಹಾಗಾಗಿ ಏನೇ ಹೇಳಿದರೂ ಒಂದು ಪ್ರಯತ್ನ ಮಾಡಲಿಕ್ಕೆ ಅವರು ತಯಾರಿದ್ದರು. ಅವರಿಂದ ಸಂಕಲ್ಪದ ರೀತಿಯಲ್ಲಿ ಒಂದು ಮಾಡಿಸಿ, ಹೋಗಿ ಮಹಾ ಮೃತ್ಯುಂಜಯ ಜಪ ಮಾಡಲು ಹಿಡಿದದ್ದು ಬ್ರಹ್ಮರ್ಷಿ ಬಾಲಚಂದ್ರ ಶಾಸ್ತ್ರಿಗಳನ್ನು. ಮಹಾ ಪಂಡಿತರು ಅವರು. ಅವರು ಒಂದಿಷ್ಟು ದೊಡ್ಡ ಪಂಡಿತರನ್ನು ಹುಡುಕಿ ಕೊಟ್ಟರು. ಅವರಿಗೆ ಎಲ್ಲ ವಿವರಿಸಿ, ಜೋಡಿ ಕೊಲೆ, ವಕ್ಕರಿಸಿಕೊಂಡಿರಬಹುದಾದ ಭೂತ ಚೇಷ್ಟೆ, ಹುಡುಗನ ಜಾತಕ ವಿವರ ಎಲ್ಲ ಹೇಳಿ, ಮಹಾ ಮೃತ್ಯುಂಜಯ ಜಪಕ್ಕೆ ವ್ಯವಸ್ಥೆ ಮಾಡಲಾಯಿತು.

ಮಹಾ ಮೃತ್ಯುಂಜಯ ಜಪ - ಒಂದು ದೊಡ್ಡ ಯಜ್ಞದ ಮಾದರಿಯ ಪೂಜೆ. ಅದೆಷ್ಟೋ ಲಕ್ಷವೋ ಕೊಟಿಯೋ ಸಲ ಮಹಾ ಮೃತ್ಯುಂಜಯ ಮಂತ್ರವನ್ನು ಪದ್ಧತಿ ಪ್ರಕಾರ ಜಪಿಸಬೇಕು. ಏನೇನೋ ಪೂಜೆಯಾಗಬೇಕು. ಅಷ್ಟೊಂದು ಜಪ ಮಾಡಲು ಸುಮಾರು ಜನ ವೈದಿಕರು  ಬೇಕಾಗುತ್ತಾರೆ. ಅಂತ್ಯದಲ್ಲಿ ಪೂರ್ಣಾಹುತಿ ತರಹದ ಏನೋ ದೊಡ್ಡ ಪೂಜೆ ಇರುತ್ತದೆ. ಸುಮಾರು ಕೆಲವು ವಾರಗಳ ಲೆಕ್ಕದಲ್ಲಿ ಆಗುವ ದೊಡ್ಡ ಮಟ್ಟದ ಪೂಜೆ ಅದು. ಭೂತ, ಪ್ರೇತ, ಇತ್ಯಾದಿ ಕ್ಷುದ್ರಶಕ್ತಿ ಪೀಡೆಗಳಿಗೆ ಒಂದು ತರಹದ wide spectrum, high potency ಔಷದಿ ಇದ್ದಂಗೆ ಅದು ಅಂತ ಯಂತ್ರ, ತಂತ್ರ, ಮಾಟ ಇತ್ಯಾದಿ ತಿಳಿದವರ ಹೇಳಿಕೆ. ಮತ್ತೆ ಇದು ವೈದಿಕರು ಮಾಡಬಹುದಾದಂತಹ, ಯಾವದೇ ತರಹದ ವಾಮಾಚಾರದ (black magic) ಕಳಂಕವಿಲ್ಲದಂತಹ ಪೂಜೆ. ಮಾಟ, ಮಂತ್ರ, ತಂತ್ರ ಬಲ್ಲ ವಾಮಾಚಾರಿಗಳು ಬೇರೆಯೇ ತರಹ ಪೂಜೆ ಮಾಡುತ್ತಾರೋ ಏನೋ. ಆದರೆ ಸರಿಯಾಗಿ ಗೊತ್ತಿಲ್ಲದ ವಾಮಾಚಾರಿಗಳು ಮಾಡುವ ಅಂತಹ ಪೂಜೆಗಳು ಉಲ್ಟಾ ಹೊಡೆದ ಪ್ರಕರಣಗಳೇ ಜಾಸ್ತಿ. ತಂದೆಯವರಿಗೆ ಅದೆಲ್ಲ ಗೊತ್ತಿದ್ದದ್ದೇ. ಅವರ ತಂದೆಯೇ (ನಮ್ಮ ಅಜ್ಜ) ಅದೆಲ್ಲ ಕಲಿತಿದ್ದರಲ್ಲ. ಹಾಗಾಗಿ ತಂದೆಯವರೂ ಎಲ್ಲ ಕಲಿತಿದ್ದರು. ಆಚರಣೆ, ಅನುಷ್ಠಾನ ಮಾಡುತ್ತಿರಲಿಲ್ಲ ಅಷ್ಟೇ. ಹಾಗಾಗಿ ಮೊದಲ ಹೆಜ್ಜೆ ಅಂತ, ಎಲ್ಲ ದೃಷ್ಟಿಯಿಂದ ಸೇಫ್ ಅನ್ನುವಂತಹ ಮಹಾ ಮೃತ್ಯುಂಜಯ ಜಪವನ್ನೇ ಹೇಳಿದ್ದರು. ಅದು ಫಲ ನೀಡಲಿಲ್ಲ ಅಂದರೆ ಮುಂದೆ ಬೇರೆ ನೋಡಿದರಾಯಿತು ಅಂತ ಯೋಚನೆ.

ಸರಿ ಆಕಡೆ ಶುರುವಾಯಿತು ಮಹಾ ಮೃತ್ಯುಂಜಯ ಜಪದ ಅನುಷ್ಠಾನ. ಈಕಡೆ ಹುಡುಗನ ಆರೋಗ್ಯದಲ್ಲಿ ಹೇಳುವಂತಹ ಏರು ಪೇರು ಏನೂ ಕಾಣಲಿಲ್ಲ. ಮೊದಲಿನ ಹಾಗೇ ಒಂದಲ್ಲ ಒಂದು ರೀತಿಯ ತೊಂದರೆ ಅನುಭವಿಸುತ್ತ, ಏನೋ ಒಂದು ತರಹದಲ್ಲಿ ಇದ್ದ ಹುಡುಗ.

ಒಂದು ದಿನ ಪರಮ ವಿಚಿತ್ರ ಅನ್ನಿಸುವಂತಹ ಘಟನೆಯೊಂದು ಸಂಭವಿಸಿ ಹೋಯಿತು. ಒಂದು ದಿನ ಅಂದರೆ ಯಾವದೋ ಸಾಮಾನ್ಯ ದಿನ ಅಲ್ಲ. ಮಹಾ ಮೃತ್ಯುಂಜಯ ಜಪದ ಸಮಾರೋಪದ ದಿನ. ಆಕಡೆ ಮಹಾ ಮೃತ್ಯುಂಜಯ ಜಪ ಮುಕ್ತಾಯಕ್ಕೆ ಬಂದು, ಪೂರ್ಣಾಹುತಿ ಮುಗಿದು, 'ಹುಡುಗನಿಗೆ ಮತ್ತು ಅವರ ಕುಟುಂಬಕ್ಕೆ ಪ್ರಸಾದ ಮುಟ್ಟಿಸಿಬಿಡಿ. ಎಲ್ಲ ಒಳ್ಳೆದಾಗುತ್ತೆ,' ಅಂತ ಮುಖ್ಯ ವೈದಿಕರು ಪ್ರಸಾದ ನಮ್ಮ ತಂದೆಯವರ ಕೈಗೆ ಕೊಡುತ್ತಿದ್ದರೆ ಈ ಕಡೆ ಸಕ್ಸೇನಾ ಅವರ ಮನೆಯಲ್ಲಿ ಆದ ಘಟನೆ ನೋಡಿ ಮನೆಯವರು, ಡಾಕ್ಟರು ಎಲ್ಲ ಬೆಚ್ಚಿ ಬಿದ್ದಿದ್ದರು. ಮನೆಯಲ್ಲಿ ಆ ಘಟನೆ ನೋಡಿದ ಕೆಲವರು ಎಚ್ಚರ ಕೂಡ ತಪ್ಪಿ ಬಿದ್ದರು. ಹಾಗಿತ್ತು ಆ ಭೀಕರ ಘಟನೆ!

ಮಹಾ ಮೃತ್ಯುಂಜಯ ಜಪದ ಶುಭ ಪರಿಣಾಮ ಆಗಲೇ ಗೋಚರಿಸಲು ಶುರುವಾಗಿ ಬಿಟ್ಟಿತ್ತೇ!? ಆವರಿಸಿಕೊಂಡಿದ್ದ ಕ್ಷುದ್ರಶಕ್ತಿಗಳ ಅಂತ್ಯ ಸನ್ನಿಹಿತವಾಗಿತ್ತೇ!?

ಆವತ್ತು ಹುಡುಗನ ಆರೋಗ್ಯ ತುಂಬ ಬಿಗಡಾಯಿಸಿತ್ತು ಅಂತ ಕಾಣಿಸುತ್ತದೆ. ಮನೆಯಲ್ಲೇ ಇದ್ದ ಹುಡುಗ. ಆರೋಗ್ಯದ ತೊಂದರೆಯಾಗಿ ಶಾಲೆ ತಪ್ಪುವದು ಜಾಸ್ತಿಯಾಗಿತ್ತು. ಹೊಟ್ಟೆ ತುಂಬ ನೋಯುತ್ತಿದೆ ಅಂತ ಮಂಚದ ಮೇಲೆ ಹಾಗೇ ಸುಮ್ಮನೆ ಅಡ್ಡಾಗಿದ್ದ ಹುಡುಗ. ಹೊಟ್ಟೆಯಲ್ಲಿ ಏನೋ ತಳಮಳ. ತಳಮಳ ಎಂದಿನಗಿಂತ ಆವತ್ತು  ಜಾಸ್ತಿಯೇ ಆಗುತ್ತಿತ್ತು. ಹೊಟ್ಟೆ ನೀವಿಕೊಳ್ಳುತ್ತ, 'ಮಮ್ಮಿ,' ಅಂತ ನರಳುತ್ತ ಮಲಗಿದ್ದ ಹುಡುಗ. ಒಮ್ಮೆಲೇ ಹೊಟ್ಟೆಯಲ್ಲಿ ಹಾರೆ ಹಾಕಿ, ತಿರುವಿ ಮೀಟಿದಂತಾಯಿತು. ಕರುಳನ್ನೆಲ್ಲ ಕೈ ಹಾಕಿ ಬಗೆದಂತಾಯಿತು. ಸಿಕ್ಕಾಪಟ್ಟೆ ನೋವು. ಆ ತಳಮಳಕ್ಕೆ ಒಂದು ಟೈಪ್ ವಾಕರಿಕೆ ಬಂದಂತಾಯಿತು. ಹೊಟ್ಟೆಯಲ್ಲಿ ಏನೂ ಇಲ್ಲದಾಗಲೂ ಒಮ್ಮೊಮ್ಮೆ ವಾಕರಿಕೆ ಬಂದು, ವಾಂತಿಯೇ ಬಂದು ಬಿಟ್ಟಿತೆನೋ ಅಂತ ಬಚ್ಚಲಿಗೆ ಓಡುತ್ತೇವಲ್ಲ ಆ ತರಹ ಆಯಿತು. ಬಚ್ಚಲಿಗೆ ಓಡಿ ಬೇಸಿನ್ ಮುಂದೆ ನಿಂತು ಕ್ಯಾಕರಿಸಿ ಉಗಿದ. ಒಳಗಿನ ಒತ್ತಡಕ್ಕೆ ಕರುಳು ಕಿತ್ತು ಹೋಗೋ ಹಾಗೆ ಕೆಮ್ಮು ಬಂತು ಅಷ್ಟೇ. ಕೇವಲ dry retching. ಕರುಳು ಕಿತ್ತು ಹೋದಷ್ಟು ನೋವು. ಅಮ್ಮಾ! ಅಂತ ಮುಲುಗಿ, ಸುಧಾರಿಸ್ಕೊಂಡು ವಾಪಸ್ ಬಂದು ಬಿದ್ದುಕೊಳ್ಳೋಣ ಅನ್ನುವಷ್ಟರಲ್ಲಿ ಒಳಗಿಂದ ಕಿಬ್ಬೊಟ್ಟೆಗೆ ಜಾಡಿಸಿ ಒದ್ದ ಅನುಭವ. ಹೊಟ್ಟೆ ಕೆಳಗಿಂದ, ಅನ್ನನಾಳದ ಗುಂಟ, ಗಂಟಲಿನ ಮೂಲಕ, ಹಾವಿನ ಮಾದರಿಯಲ್ಲಿ ಏನೋ ಗುಳುಗುಳು ಅಂತ ಹರಿದು, ಬಾಯಿಗೆ ಬಂದು ಒಂದು ತರಹದ ಜಿಗುಪ್ಸೆ ಫೀಲಿಂಗ್. ತಿರುಗಿ ಹಾಸಿಗೆ ಸಮೀಪ ಹೋದವ ಓಡಿ ಬಂದ.  ವ್ಯಾಕ್! ಅನ್ನುತ್ತ ತಿರುಗಿ ಬಂದು ವಾಶ್ ಬೇಸಿನ್ನಲ್ಲಿ ಉಗುಳಿದ. ಉಗುಳಿದ ಮರುಕ್ಷಣ ಸಾಯುತ್ತಿರುವವನಂತೆ ಚೀತ್ಕಾರ ಮಾಡಿದ. ಚೀತ್ಕಾರ ಕೇಳಿದ ಮನೆಯಲ್ಲಿದ್ದವರೆಲ್ಲ ಬೆಚ್ಚಿ ಬಿದ್ದರು. ಏನಾಯಿತೋ ಏನೋ ಅಂತ ಬಂದು ನೋಡಿದರು. ವಾಶ್ ಬೇಸಿನ್ ಮುಂದೆ ದೆವ್ವ ಬಡಿದಂತೆ ನಿಂತಿದ್ದ ಹುಡುಗ. 'ಏನಾಯಿತೋ!?' ಅಂತ ಕೇಳಿದರೆ ಮಾತಿಲ್ಲ, ಕಥೆಯಿಲ್ಲ. ಸುಮ್ಮನೆ ಬೇಸಿನ್ ಕಡೆ ಕೈಸನ್ನೆ ಮಾಡಿ ತೋರಿಸಿದ. ಅವನು ತೋರಿಸಿದ್ದನ್ನ ನೋಡಿದವರೂ ಸಹ ಬೆಚ್ಚಿ ಬಿದ್ದರು.

ಆಕಡೆ ಮಹಾ ಮೃತ್ಯುಂಜಯ ಜಪದ ಪೂಜೆ ಮುಗಿದು ಪ್ರಸಾದ ಕೈಗೆ ಬರುತ್ತಿದ್ದರೆ ಈಕಡೆ ಹುಡುಗ ಉಗುಳಿದ್ದು ಏನು ಅಂತ ತಿಳಿಯದ ಮನೆ ಮಂದಿ ಕಕ್ಕಾಬಿಕ್ಕಿಯಾಗಿ ಚಿಟ್ಟ ಅಂತ ಚೀರಿ ಬಿಟ್ಟಿದ್ದರು.

ಏನಾಗಿತ್ತು!?

ಅಂಥದ್ದೇನು ಭಯಾನಕ ಚೀಜ್ ಕಂಡಿತು ಬಾತ್ ರೂಂ ವಾಶ್ ಬೇಸಿನ್ ನಲ್ಲಿ?

ವಾಶ್ ಬೇಸಿನ್ ನಲ್ಲಿ ಕಂಡಿದ್ದು ಬರೋಬ್ಬರಿ ಒಂದು ಫೂಟಿಗೂ ಮೀರಿದ ಹಾವು! ಅಥವಾ ಹಾವಿನಂತೆ ಕಂಡಿತು. ನೋಡಿದರೆ ಹುಳ! ಹೊಟ್ಟೆ ಹುಳ! ಅದು ಏನು, ಎಂತ ಅಂತ ಮನೆಮಂದಿಗೆ ಆವಾಗ ತಿಳಿಯಲಿಲ್ಲ ಬಿಡಿ.

ಸಣ್ಣ ಹಾವಿನ ಸೈಜಿನ ಹುಳ! ಅದೂ ಬಾಯಿಂದ ಹೊರಗೆ ಬಂದು ಬಿಳೋದು! ಯಾರೂ ನೋಡಿರಲಿಕ್ಕೆ ಇಲ್ಲ ಬಿಡಿ ಅಂತಹ ಭೀಕರ ದೃಶ್ಯ. ನೋಡೋದು ದೂರ ಉಳಿಯಿತು ಕೇಳಿರಲಿಕ್ಕೂ ಇಲ್ಲ ಬಿಡಿ. ಆಮೇಲೆ ವೈದ್ಯರುಗಳೇ ಹೇಳಿದರು,'ಇಂತಹ ಕೇಸ್ ನೋಡಿಲ್ಲ ಬಿಡ್ರೀ. ಹೆಚ್ಚಂದ್ರ ಓದಿರಬಹುದು ಅಷ್ಟೇ,' ಅಂತ.

ಮುಂದೆ ಏನೇನೋ ಆಯಿತು ಅನ್ನಿ. ಡಾಕ್ಟರ ಹತ್ತಿರ ಓಡಿದರು. ಜೊತೆಗೆ ಹಾವಿನ ಸೈಜಿನ ಹುಳವನ್ನೂ ತೆಗೆದುಕೊಂಡು ಹೋಗಿ ತೋರಿಸಿದರೇ? ನೆನಪಿಲ್ಲ. ಆದರೆ ಹುಡುಗನ ಬಾಯಿಂದ ಹಾವಿನ ಸೈಜಿನ ಹುಳ ಹೊರಗೆ ಬಿತ್ತು ಅಂತ ಕೇಳಿದ ಡಾಕ್ಟರ ಮಲ ಪರೀಕ್ಷೆ, ಬೇರೆ ಬೇರೆ ತರಹದ ಪರೀಕ್ಷೆ ಮಾಡಿಸಿ ನೋಡಿದರೆ ಸ್ಪೆಷಲಿಸ್ಟ್ ವೈದ್ಯರುಗಳೇ ಎಚ್ಚರ ತಪ್ಪಿ ಬೀಳಬೇಕು ಹಾಗಿತ್ತು ಬಂದ ರಿಪೋರ್ಟ್. ಅದ್ಯಾವ ಮಟ್ಟದ ಸಾಂದ್ರತೆಯಲ್ಲಿ ಹೊಟ್ಟೆಯಲ್ಲಿ ಹುಳು ತುಂಬಿಕೊಂಡಿದ್ದವು ಅಂದರೆ ಯಾವದೇ ಡಾಕ್ಟರ ಆ ಲೆವೆಲ್ಲಿನ ಹೊಟ್ಟೆ ಹುಳುಗಳ ಪ್ರಾಬ್ಲಮ್ ತಮ್ಮ ವೃತ್ತಿ ಜೀವನದಲ್ಲಿ ನೋಡಿರಲಿಲ್ಲ. 'ಹೊಟ್ಟೆಯಲ್ಲಿ ಹುಳುಗಳ ಸಾಂದ್ರತೆ ತೀವ್ರ ಹೆಚ್ಚಾಗಿ ಹೆಚ್ಚಾಗಿ, ಒಳಗೆ ಹುಳಗಳಿಗೇ ಇರಲು ಆಗದಂತಾಗಿ, ಒಂದು ಹುಳ ಬುಳಕ್ ಅಂತ ಹಾರಿ ಹೊರಗೆ ಬಂದಿತ್ತು!' ಅಂತ ಡಾಕ್ಟರ ವಿವರಣೆ.

ಡಾಕ್ಟರ್ ಮಂದಿಗೆ ಈಗ ಗೊತ್ತಾಯಿತಲ್ಲ ತೊಂದರೆ ಏನು ಅಂತ. ಅವರು ಮಾಡದಿದ್ದ diagnosis ವಿಧಿಯೇ ಮಾಡಿಕೊಟ್ಟಿತ್ತು. 'Doctor treats. But, God cures,' ಅಂತ ಇದ್ದ ಮಾತನ್ನು 'Destiny diagnoses, doctor treats and God cures,' ಅಂತ ಬದಲು ಮಾಡಬೇಕೋ ಏನೋ? ಇವರು ಈಗ ಟ್ರೀಟ್ಮೆಂಟ್ ಕೊಟ್ಟರು. ಭಯಂಕರ ಶಕ್ತಿಶಾಲಿ (high potency), ಎಲ್ಲ ತರಹದ ಹುಳು ನಿವಾರಕ (wide spectrum) ಔಷದಿ ಕೊಟ್ಟರು. ತೆಗೆದುಕೊಂಡ ಹುಡುಗ ಪಟಕ್ ಅಂತ ಚೇತರಿಸಿಕೊಂಡ. ಎಲ್ಲ ತೊಂದರೆ ನಿವಾರಣೆಯಾಗಿ ಹೋಯಿತು. ಮುಂದೆ ಒಂದೆರೆಡು ತಿಂಗಳಲ್ಲಿ ಪೂರ್ತಿ ಆರಾಮಾಗಿ, ತೂಕ ಎಲ್ಲ ಮೊದಲಿನ ಲೆವಲ್ಲಿಗೆ ಬಂತು.

ಮಹಾ ಮೃತ್ಯುಂಜಯ ಜಪದ ಸಮಾರೋಪವಾಗುವದಕ್ಕೂ, ಹಾವಿನ ಸೈಜಿನ ಹೊಟ್ಟೆ ಹುಳವೊಂದು ಹೊರಬಿದ್ದು, ತೊಂದರೆ ಏನೆಂದು ಗೊತ್ತಾಗುವದಕ್ಕೂ ಒಂದಕ್ಕೊಂದು ಸಂಬಂಧವಿತ್ತೇ ಅಥವಾ ಶುದ್ಧ ಕಾಕತಾಳಿಯವೇ (just coincidence)? ಜೋಡಿ ಕೊಲೆಯಾದವರು ಅತೃಪ್ತ ಆತ್ಮಗಳಾಗಿ ಹೊಟ್ಟೆ ಹುಳದ ರೂಪದಲ್ಲಿ ತೊಂದರೆ ಕೊಡುತ್ತಿದ್ದವೇ? ಮಹಾ ಮೃತ್ಯುಂಜಯ ಜಪದ ಪರಿಣಾಮವಾಗಿ, ದೇವರ ಶಕ್ತಿ ದೆವ್ವಗಳ ಶಕ್ತಿಗಿಂತ ಹೆಚ್ಚಾಗಿ, ಹುಳದ ರೂಪದಲ್ಲಿದ್ದ ಪ್ರೇತಾತ್ಮಗಳು ಹೊರಬಿದ್ದು ಹೋದವೇ?

ಎಲ್ಲ ಉತ್ತರಗಳು, ವಿವರಣೆಗಳು ಅವರ ಅವರ ಭಾವಕ್ಕೆ ಭಕುತಿಗೆ ಬಿಟ್ಟಿದ್ದು.

ಒಟ್ಟಿನಲ್ಲಿ ಆ ಜೋಡಿ ಕೊಲೆಯಾಗಿದ್ದ ಮನೆಗೆ ಬಂದಿದ್ದ ಸಕ್ಸೇನಾ ಅವರಿಗೆ ಒಂದಲ್ಲ ಒಂದು ರೀತಿ ತೊಂದರೆ. ಮಗನ ಹೊಟ್ಟೆ ಹುಳದ ಕಾಟ ಮುಗಿಯುವಷ್ಟರಲ್ಲಿ ಫ್ಯಾಕ್ಟರಿಯಲ್ಲಿ ಕಾರ್ಮಿಕರ ತೊಂದರೆ ಶುರುವಾಯಿತು. ಒಮ್ಮೆ ಕಾರ್ಮಿಕರ ಸ್ಟ್ರೈಕ್ ಹಿಂಸಾಚಾರಕ್ಕೆ ತಿರುಗಿತು. ಸೆಕ್ಯೂರಿಟಿ ಗಾರ್ಡ್ ಒಂದು ಸುತ್ತು ಗುಂಡು ಹಾರಿಸಿಯೇ ಬಿಟ್ಟ. ಒಬ್ಬರೋ ಇಬ್ಬರೋ ಸತ್ತರು ಅಂತ ನೆನಪು.  ಒಂದೋ ಎರಡೋ ಸೆಕ್ಯೂರಿಟಿ ಗಾರ್ಡುಗಳು ಸಹಿತ ಕ್ರುದ್ಧ ಕಾರ್ಮಿಕರ ಕೈಗೆ ಸಿಕ್ಕು, ತಾರಾಮಾರಾ  ಬಡಿಸಿಕೊಂಡು ಸತ್ತರೋ ಅಥವಾ ಅರೆಜೀವವಾದರೋ ಏನೋ ಆಗಿತ್ತು. ದೊಡ್ಡ ತಲೆ ಬಿಸಿ. ಲಕ್ಷಗಟ್ಟಲೆ ದುಡ್ಡು ಖರ್ಚು ಮಾಡಿ ಹೇಗೋ ಎಲ್ಲ ಬಗೆಹರಿಸಿಕೊಂಡರು.

ಮುಂದೆ ಸುಮಾರು ಎರಡು ವರ್ಷಗಳ ನಂತರ ಸಕ್ಸೇನಾ, ಬೇರೆ ಯಾವದೋ ಕಾರಣಕ್ಕೆ, ಆ ಮನೆ ಬಿಟ್ಟು ಹೋದರು. ಬೇರೆ ಮನೆಗೆ ಶಿಫ್ಟ್ ಆದರು. ಮುಂದೆ ಬೇರೆ ಕಂಪನಿಗೆ ಅಂತ ಕೊಲ್ಕೊತ್ತಾಗೆ ಹೋದರು. ಈ ಕಂಪನಿಗೆ GM ಅಂತ ಬೇರೆ ಯಾರೋ ಬಂದರು. ಒಟ್ಟಿನಲ್ಲಿ ಧಾರವಾಡದ ಆ ಕಂಪನಿ ಬರ್ಕತ್ತಾಗಲಿಲ್ಲ. ಸುಮಾರು ವರ್ಷದ ನಂತರ ಲಾಕ್ ಔಟ್ ಆಗಿ, ಪೂರ್ತಿ ಬಂದಾಗಿ ಹೋಯಿತು. ಈಗ ಆ ಜಾಗ ಧರ್ಮಸ್ಥಳದವರು ತೆಗೆದುಕೊಂಡು ಏನೋ ಶೈಕ್ಷಣಿಕ ಸಂಸ್ಥೆ ಶುರು ಮಾಡಿದ್ದಾರಂತೆ.

ಇದೆಲ್ಲ ಹಳೆ ಸುದ್ದಿ ಯಾಕೆ ನೆನಪಾಯಿತು ಅಂದರೆ ಮೊನ್ನೆ ಫೇಸ್ಬುಕ್ ನಲ್ಲಿ  ಆಪ್ತರೊಬ್ಬರು ತಮ್ಮ ಮೆಚ್ಚಿನ ಹತ್ತು ಪುಸ್ತಕಗಳ ಪಟ್ಟಿ ಮಾಡಿ ಹಾಕಿ ನನ್ನನ್ನೂ ಸಹ ಟ್ಯಾಗ್ ಮಾಡಿದ್ದರು. ನಾನೂ ಸಹ ಹೋಗಿ, ನನಗೆ ತುಂಬಾ ಹಿಡಿಸಿದ ಹತ್ತು ಪುಸ್ತಗಳನ್ನು ದಾಖಲಿಸಿ ಬಂದೆ. ಅದರಲ್ಲಿ ಒಂದು ಪುಸ್ತಕ 'ತುಳಸಿ ದಳ'. ಯಂಡಮೂರಿ ವೀರೇಂದ್ರನಾಥ ಅವರ ಅದ್ಭುತ ಕಾದಂಬರಿ. ಕನ್ನಡಕ್ಕೆ ವಂಶಿ ಅನ್ನುವವರು ತಂದಿದ್ದರು ಅಂತ ನೆನಪು. ಇವತ್ತಿಗೂ ತುಂಬ ಕಾಡುವ ಕಾದಂಬರಿ ಅದು. ೧೯೮೬ ರಲ್ಲಿ ಮೊದಲ ಸಲ ಓದಿದ್ದು.

ತುಳಸಿ ದಳ - ಮಾಟ, ಮಂತ್ರ, ತಂತ್ರ, ವಾಮಾಚಾರ ಇತ್ಯಾದಿಗಳಿಂದ ಕೂಡಿದ ಭಯಂಕರ ಕುತೂಹಲ ಭರಿತ ಕಾದಂಬರಿ. ತುಳಸಿ ಅನ್ನುವ ಚಿಕ್ಕ ಮಗುವಿಗೆ ಚಿತ್ರ ವಿಚಿತ್ರ ತೊಂದರೆಗಳು ಶುರುವಾಗುತ್ತವೆ. ಮಾಟ ಮಂತ್ರದ ಕುರುಹುಗಳು ಎಲ್ಲ ಕಡೆ ಕಂಡು ಬರುತ್ತವೆ. ಹುಡುಕುತ್ತ ಹೋದ ತಂದೆಗೆ ಆಕೆಯ ಮೇಲೆ ವಾಮಾಚಾರ ಪ್ರಯೋಗ ಮಾಡುತ್ತಿದ್ದ ಮಾಂತ್ರಿಕನ ಬಗ್ಗೆ ತಿಳಿಯುತ್ತದೆ. ಮಾಟದ ಪ್ರಯೋಗ ಅಂತಿಮ ಹಂತದಲ್ಲಿದೆ, ಹೋಗಿ ತಡೆಯದಿದ್ದರೆ ಚಿಕ್ಕ ಮಗು ಕೈಬಿಟ್ಟು ಹೋಗುತ್ತದೆ ಅಂತ ತಿಳಿದ ತಂದೆ ಮಾಂತ್ರಿಕನನ್ನು ಹುಡುಕುತ್ತಾನೆ. ಹುಡುಕಿ ಮಾಟದ ಅಂತಿಮ ಪೂಜೆಯನ್ನು ತಡೆಯುತ್ತಾನೆ. ಮಗು ಉಳಿಯುತ್ತದೆ. ಇಷ್ಟೇ ಕಥೆಯಾಗಿದ್ದರೆ ದೊಡ್ಡ ಮಾತಿರಲಿಲ್ಲ. ಯಂಡಮೂರಿ ಅವರ ವೈಶಿಷ್ಟ್ಯವೆಂದರೆ ಅವರು ಮಾಟಕ್ಕೆ, ವಾಮಾಚಾರಕ್ಕೆ parallel track ಅನ್ನುವ ಹಾಗೆ ವೈಜ್ಞಾನಿಕವಾಗಿ ಇನ್ನೊಂದು ಜಾಡಿನಲ್ಲಿಯೂ ಕಥೆಯನ್ನು ಸಮಾನಾಂತರವಾಗಿ ಡೆವಲಪ್ ಮಾಡುತ್ತ ಹೋಗುತ್ತಾರೆ. ಎಲೆಕ್ಟ್ರಾನಿಕ್ಸ್, ಸಮ್ಮೋಹಿನಿ ವಿದ್ಯೆಯ ಉಪಯೋಗ ಮುಂತಾದವನ್ನೂ ಸಹ ಉಪಯೋಗಿಸಿ, 'ಮಗುವಿನ ಮೇಲೆ ಆದ ವೈಪರೀತ್ಯಗಳು ಆ ಕಾರಣಗಳಿಂದಲೂ ಇರಬಹುದೇ?' ಅನ್ನುವ ಸಂದೇಹ ಮೂಡಿಸುತ್ತಾರೆ. ಅತ್ತ ಕಡೆ ಸ್ಮಶಾನದಲ್ಲಿ ಮಾಂತ್ರಿಕನ ಬುರುಡೆ ಒಡೆದು ಮಾಟದ ಪೂಜೆಯನ್ನು ತುಳಸಿಯ ತಂದೆ ಭಗ್ನಗೊಳಿಸುತ್ತಿದ್ದರೆ, ಈಕಡೆ ಆಸ್ಪತ್ರೆಯಲ್ಲಿ ಮಲಗಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ತಾಯಿತವನ್ನೂ ಕಿತ್ತೆಸೆಯಲಾಗುತ್ತದೆ. ಆ ತಾಯಿತದಲ್ಲಿ ಇಟ್ಟಿದ್ದ ಸಣ್ಣ ಟ್ರಾನ್ಸಮೀಟರ್ ಮುಖಾಂತರ ಸಾವಿನ ಸೂಚನೆಗಳನ್ನು hypnotic suggestions ಮೂಲಕ ಕಳಿಸಿ ಮಗುವನ್ನು ಸಾವಿನ ಸಮೀಪ ತಳ್ಳಲಾಗುತ್ತಿತ್ತು ಅಂತ ಇನ್ನೊಂದು ಥಿಯರಿ. ಯಾವದರ ಪರಿಣಾಮ ಮಗುವಿನ ಮೇಲಾಗಿತ್ತು? ಮಾಟದ ಪರಿಣಾಮವೋ ಅಥವಾ ಹೈಟೆಕ್ ಯಂತ್ರದ ಮೂಲಕ ಮಾಡಿದ ಸಮ್ಮೋಹಿನಿ ಪರಿಣಾಮವೋ? ಅಥವಾ ಮಾಟ ಮಾಡಿಯಾಗಿತ್ತು, ಅದರ ಪರಿಣಾಮ ಹೈಟೆಕ್ ರೂಪದಲ್ಲಿ ಬಂದಿತ್ತು ಅಂತಲೋ? ಅದೆಲ್ಲ ಜಿಜ್ಞಾಸೆ ಯಂಡಮೂರಿ ನಿಮ್ಮ ನಿಮ್ಮ ಭಾವಕ್ಕೆ ಭಕುತಿಗೆ ಎಂಬಂತೆ ಬಿಟ್ಟು ಬಿಡುತ್ತಾರೆ. ಅವರ ಕಥೆ ಹೇಳುವ ಕೌಶಲ್ಯ ಅಂದರೆ ಮೇಲೆ ಹೇಳಿದ ಮೂರು ಸಾಧ್ಯತೆಗಳಲ್ಲಿ ಮೂರಕ್ಕೂ ಫಿಟ್ ಆಗುವ ರೀತಿಯಲ್ಲಿ ಆ ಕಾದಂಬರಿ ಇದೆ. (ಕನ್ನಡಲ್ಲಿ ಇದು ಅದೇ ಹೆಸರಿನ ಒಳ್ಳೆಯ ಸಿನಿಮಾ ಕೂಡ ಆಗಿದೆ. ಲಿಂಕ್ ಇಲ್ಲಿದೆ ನೋಡಿ.)

ಈ ಸಕ್ಸೇನಾ ಅವರ ಪ್ರಕರಣ ನೆನಪಿಗೆ ಬಂದಾಗೊಮ್ಮೆ ಅದೇ 'ತುಳಸಿದಳ' ಕಾದಂಬರಿ ನೆನಪಾಗುತ್ತದೆ.

ಸಕ್ಸೇನಾ ಅವರ ಹುಡುಗನಿಗೆ ದೆವ್ವದ ಗಿವ್ವದ ಕಾಟ ಗೀಟ ಏನೂ ಇರಲಿಲ್ಲ. ಹೊಟ್ಟೆ ಹುಳದ ತೊಂದರೆ ಇತ್ತು. ಹೊರಬಿದ್ದ ಹುಳ ನೋಡಿದ ಕೂಡಲೇ ಗೊತ್ತಾಯಿತು, ಚಿಕಿತ್ಸೆ ಕೊಟ್ಟರು, ಗುಣಮುಖನಾದ. ಅಷ್ಟೇ. ಜಪ ಗಿಪ ಎಲ್ಲ just coincidence. ಇದು ಒಂದು ವಿವರಣೆ. ಇದು ದೇವರು, ದೆವ್ವ ಎಲ್ಲವನ್ನೂ discount ಮಾಡಿದ ದೃಷ್ಟಿಕೋನದಿಂದ ಕೊಟ್ಟ ವಿವರಣೆ.

ದೆವ್ವದ ಕಾಟ ಗ್ಯಾರಂಟಿ ಇತ್ತು. ಪ್ರೇತ ಚೇಷ್ಟೆ ನಡೆಯುತ್ತಿತ್ತು. ಹಾಗಾಗಿಯೇ ಹುಡುಗನಿಗೆ ಆ ಮಟ್ಟದ ತೊಂದರೆಯಾಯಿತು. ಕ್ಷುದ್ರಶಕ್ತಿಗಳ ಕರಾಮತ್ತಿನಿಂದಲೇ ಹೊಟ್ಟೆ ಹುಳದಂತಹ ಸಾಮಾನ್ಯ ತೊಂದರೆ ಸಹ ವೈದ್ಯರ ಗಮನಕ್ಕೂ ಬರಲಿಲ್ಲ. ಇಲ್ಲವಾದರೆ ವೈದ್ಯರು ಅಷ್ಟು ತೀವ್ರ ಮಟ್ಟದ ತೊಂದರೆಯನ್ನು wrong diagnose ಮಾಡಿ, ಕೇವಲ ಟಾನಿಕ್ಕು, ವಿಟಾಮಿನ್ನು,  ಮತ್ತೊಂದು ಕೊಟ್ಟಿದ್ದು ಹೇಗೆ? ಮಹಾ ಮೃತ್ಯುಂಜಯ ಜಪ ಮಾಡಿಸಿದ ಪರಿಣಾಮವಾಗಿ ಭೂತಗಳಿಗೆ ಮುಕ್ತಿ ಸಿಕ್ಕಿತೋ, ಹೆದರಿ ಓಡಿ ಹೋದವೋ ಗೊತ್ತಿಲ್ಲ. ಒಟ್ಟಿನಲ್ಲಿ ನಿವಾರಣೆಯಾಯಿತು. ಭೂತ ಚೇಷ್ಟೆ ನಿವಾರಣೆಯಾಗಿ, ನಿಜವಾದ ತೊಂದರೆ ಏನೆಂದು ತಿಳಿದಿದ್ದು ಸಹ ಜಪದ ಪ್ರಭಾವದಿಂದಲೇ. ಇಲ್ಲವಾದರೆ ಜಪ ಮುಗಿದ ತಕ್ಷಣವೇ ತೊಂದರೆ ನಿವಾರಣೆಯಾಗಿದ್ದು ಹೇಗೆ? ಇದು ಇನ್ನೊಂದು ವಿವರಣೆ. ಮತ್ತೊಂದು ದೃಷ್ಟಿಕೋನದಿಂದ.

'ದೆವ್ವ ಇದ್ದರೆ ಆ ಹುಡುಗನಿಗೇ ಯಾಕೆ ಬಡಿದುಕೊಂಡಿತು? ಮನೆಯಲ್ಲಿ ಬೇರೆಯವರೂ ಇದ್ದರಲ್ಲ? ಅವರಿಗೇಕೆ ಏನೂ ಆಗಲಿಲ್ಲ? ಹಾಂ?' ಅಂದರೆ ಅದಕ್ಕೆ ಅವನ ಕರ್ಮ ಅನ್ನಬೇಕಾಗುತ್ತದೆ. ನಿಜವಾಗಿ. ತಮಾಷೆಯಲ್ಲ. ಉದಾಹರಣೆಗೆ - ರೋಗಾಣುಗಳು ಗಾಳಿಯಲ್ಲಿ ಎಲ್ಲ ಕಡೆ ಇದ್ದೇ ಇರುತ್ತವೆ. ನೀವೇ ಒಬ್ಬರು ಜಡ್ಡು ಬೀಳುತ್ತೀರಿ. ಯಾಕೆ? 'ನಿಮ್ಮ immune system ದುರ್ಬಲವಾಗಿತ್ತು. ಅದಕ್ಕೇ ರೋಗಾಣುಗಳು ನಿಮ್ಮನ್ನು ಸುಲಭವಾಗಿ ಆಟಕಾಯಿಸಿಕೊಂಡವು,' ಅಂತ 'ವೈಜ್ಞಾನಿಕ' ವಿವರಣೆ ಹಲವರಿಗೆ ಪಥ್ಯವಾಗುತ್ತದೆ. ಅದೇ ರೀತಿಯಲ್ಲಿ, 'ಅವನ spiritual immune system ಯಾವದೋ ಕಾರಣಕ್ಕೆ ದುರ್ಬಲವಾಗಿತ್ತು. ಅದೇ ಕಾರಣಕ್ಕೆ spiritual ರೋಗಾಣುಗಳಂತಹ ದೆವ್ವ, ಭೂತ, ಕ್ಷುದ್ರ ಶಕ್ತಿಗಳು ಆಟಕಾಯಿಸಿಕೊಂಡವು,' ಅಂತ ಹೇಳಿದರೆ ನಂಬುವವರು ಕಮ್ಮಿ. ಅದಕ್ಕೆಲ್ಲ ವಿವರಣೆ ಬೇರೆ ಬೇರೆ ಗ್ರಂಥಗಳಲ್ಲಿ ಇದೆ. ಅಷ್ಟೇ ನಮಗೆ ತಿಳಿಯುವಂತೆ ಹೇಳುವವರು ಸಿಗುವದು ಕಷ್ಟ. ಮತ್ತೆ ಅದೆಲ್ಲ ತಿಳಿಯಲು ಸಾಧನೆಯ ಒಂದು ಮಟ್ಟಕ್ಕೆ ಹೋಗಿರಬೇಕಾಗಿರುತ್ತದೆ. ಆಗ ಮಾತ್ರ ಮನಸ್ಸು, ಬುದ್ಧಿ ಅಂತಹ ವಿವರಣೆಗಳಿಗೆ ತೆರೆದುಕೊಳ್ಳುವದು. ಮತ್ತೆ ಹೋಗಬೇಕಾದ ದಿಕ್ಕು ಕೂಡ ಬೇರೆಯೇ. 'ನೀವು ಹೊರಜಗತ್ತಿಗೆ ತೆರೆದುಕೊಂಡಿರಿ. ದೂರದರ್ಶನ (ಟೀವಿ) ಕಂಡುಹಿಡಿದಿರಿ. ಯೋಗಿಗಳು ಒಳಜಗತ್ತಿಗೆ ತೆರೆದುಕೊಂಡರು. ಅವರು ಅಂತರ್ದರ್ಶನ ಕಂಡುಹಿಡಿದರು,' ಅಂತ ಒಂದೇ ಮಾತಲ್ಲಿ ಹೇಳುತ್ತಾರೆ ಪತಂಜಲಿ ಯೋಗ ಸೂತ್ರವನ್ನು ಇಂಗ್ಲೀಷಿಗೆ ಭಾಷಾಂತರ ಮಾಡಿ, ಅದ್ಭುತ ಭಾಷ್ಯ ಬರೆದ ಸ್ವಾಮೀ ಪ್ರಭವಾನಂದರು. ಪತಂಜಲಿಯ ಯೋಗ ಸೂತ್ರಗಳಲ್ಲಿ ಹೇಳಿರುವ ಸಿದ್ಧಿಗಳಲ್ಲಿ ಅನೇಕ ಅತೀಂದ್ರಿಯ ಶಕ್ತಿಗಳ ವಿವರಣೆ, ಸಾಧನೆ ಎಲ್ಲ ಇದೆ. ಅದನ್ನು ಸಿದ್ದಿಸಿಕೊಂಡ ಸಿದ್ಧರೂ ಇದ್ದಾರೆ. ಅದೆಲ್ಲ ತಿಳಿಯದ, ತಿಳಿಯದಿದ್ದರ ಬಗ್ಗೆ ತೆರದಿರುವ ಮನವೂ (open mind) ಸಹ ಇರದ 'ಗುಳಿಗೆ ಸಿದ್ಧರು', 'ಎಲ್ಲ ಸುಳ್ಳು. ವಿಜ್ಞಾನದ ಪ್ರಕಾರ ಪ್ರೂವ್ ಮಾಡಿ,' ಅಂದರೆ ಏನು ಮಾಡುವದು? 'ನಿಮಗೆ ತಿಳಿದಿರುವ ವಿಜ್ಞಾನದ ಲಿಮಿಟ್ ತಿಳಿದುಕೊಂಡು ಬನ್ನಿ,' ಅಂತ ಕಳಿಸೋದು ಒಳ್ಳೆಯದು. ಬಾಹ್ಯದ ವಿಜ್ಞಾನ (physical sciences) ಒಂದು ದಿವಸ ಅಭಿವೃದ್ಧಿ ಆಗಿ ಆಗಿ, ಒಂದು ತರಹದ convergence ಬಂದು,  ಆಧುನಿಕ ವಿಜ್ಞಾನ, ಋಷಿ ಮುನಿಗಳ ಅಂತರ್ಜ್ಞಾನ ಎಲ್ಲ ಒಂದಾಗಿ, ಒಂದು unified model of reality ಬರಬಹುದು ಬಿಡಿ. ಎಲ್ಲ ಸಂಶೋಧನೆಗಳ ('re'search) ಹಿಂದಿನ ಮೂಲ ಧ್ಯೇಯ ಅದೇ ತಾನೇ? ಅಲ್ಲಿ ತನಕ ಏನು ಮಾಡಬೇಕು? Patience & Open mind ನಿಂದ ಕಾದು, ಆದಷ್ಟು ಜ್ಞಾನಾರ್ಜನೆ ಮಾಡಿಕೊಳ್ಳುವದು :)

'ನಾವು ಹಾಕಿಕೊಂಡು ಕೂತಿದ್ದ ಬಲೆಗೆ ಒಂದೂ ಮೀನ ಬೀಳಲಿಲ್ಲ ಅಂದ ಮೇಲೆ ಈ ಕೆರೆಯಲ್ಲಿ ಮೀನಗಳು ಇಲ್ಲವೇ ಇಲ್ಲ ಬಿಡಿ,' ಅನ್ನುತ್ತ ಬರುವವರು ಮರೆಯುವ ವಿಷಯ ಏನೆಂದರೆ, 'ಅಲ್ಲಿದ್ದ ಮೀನಗಳು ಸಣ್ಣ ಸೈಜಿನವು ಇರಬಹದು. ನಮ್ಮ ಬಲೆಯಲ್ಲಿ ಬಂದು, ಅವಕ್ಕಿಂತ ದೊಡ್ಡದಿದ್ದ ಬಲೆಯ ತೂತುಗಳಲ್ಲಿ ನುಸುಳಿ, ತಪ್ಪಿಸಿಕೊಂಡು ಹೋಗಿ ಬಿಟ್ಟವು. ಬೇರೆ ಬಲೆ, ಇನ್ನೂ ಸಣ್ಣ ತೂತುಗಳಿದ್ದಿದ್ದು, ತೆಗೆದುಕೊಂಡು ಹೋದರೆ ಮೀನ ಸಿಕ್ಕರೂ ಸಿಕ್ಕಾವು,' ಅನ್ನುವ ವಿವೇಕ, ತಿಳುವಳಿಕೆ. ನಮಗೆ ಅರ್ಥವಾಗದ, ಪಥ್ಯವಾಗದ ಕೆಲವು ಸಂಗತಿಗಳೂ, ಹಲವು ಸತ್ಯಗಳೂ ಸಹ ಅದೇ ರೀತಿ ಇರುತ್ತವೆ. ನಮ್ಮ ಬುದ್ಧಿಯ ಬಲೆ ಆ ಮಟ್ಟದ್ದು ಇರುವದಿಲ್ಲ. ಹಾಗಾಗಿಯೇ ಅಂತಹ ಸತ್ಯದ ಆ ಮೀನುಗಳು ನಮ್ಮ ಬಲೆಗೆ ಬೀಳುವದಿಲ್ಲ. ಬಿದ್ದರೂ ನುಸುಳಿ ಹೋಗಿರುವದು ನಮಗೆ ತಿಳಿದಿರುವದಿಲ್ಲ. ಅದಕ್ಕೇ ನಮಗೆ ತಿಳಿಯದ್ದಿದ್ದೆಲ್ಲ ಸುಳ್ಳು, ಅರ್ಥವಾಗದ್ದೆಲ್ಲ impossible, ನಮ್ಮ ಥಿಯರಿಗೆ ಫಿಟ್ ಆಗದ್ದು improbable, implausible ಅಂದು ಬಿಡುತ್ತೇವೆ. ಮಾಟ, ಮಂತ್ರ, ತಂತ್ರ, ವಾಮಾಚಾರ, ಅತೀಂದ್ರಿಯ ಶಕ್ತಿಗಳು ಇತ್ಯಾದಿಗಳ ವಿಷಯದಲ್ಲಿ ಆಗಿರುವದೂ ಅದೇ.

'ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ,'  ಬಾಲವಾಡಿ ಮಾಣಿಗೆ ಅರ್ಥವಾಗಬಹುದಾದ ಸತ್ಯ ಅಷ್ಟೇ. 'ಸೂರ್ಯ ಹುಟ್ಟುವದೂ ಇಲ್ಲ, ಮುಳುಗುವದೂ ಇಲ್ಲ. ಇದ್ದಲ್ಲೇ ಇರುತ್ತದೆ. ಭೂಮಿ ತಿರುಗುತ್ತದೆ. ಅಷ್ಟೇ,' ಹೈಸ್ಕೂಲ್ ಮಾಣಿಗೆ ಅದು ಸತ್ಯ. ಜ್ಞಾನಿಗೆ ಇಡೀ so called reality ಒಂದು ಭ್ರಮೆ, ಒಂದು illusion. ಅದರ ಹೊರಗೆ ನಿಂತು ನೋಡಬಲ್ಲ ಯೋಗಿಗೆ ಯಾವದೇ physical theory, ಮೆಟಾಫಿಸಿಕಲ್ ಮಾಡೆಲ್ ಬೇಕಾಗಿಯೇ ಇಲ್ಲ. ಅವನಿಗೆ ಕಾಣುವ ರಿಯಾಲಿಟಿ ಬೇರೆಯೇ ಇರುತ್ತದೆ. ಬೇರೆ ಇರುತ್ತದೆಯೋ ಅಥವಾ ರಿಯಾಲಿಟಿಯೇ ಅವನಾಗಿ ಹೋಗಿರುತ್ತಾನೋ?

ಮಾಟ, ಮಂತ್ರ, ಪಾಪ, ಪುಣ್ಯ, ಕರ್ಮ ಫಲ, ಮರುಜನ್ಮ, relativity, quantum mechanics ಎಲ್ಲವೂ ಮಾಡೆಲ್ಲುಗಳು. ಕಂಡದ್ದನ್ನು ವಿವರಿಸಲು ಉಪಯುಕ್ತವಾದ ಮಾಡೆಲ್ಲುಗಳು.  'All models are wrong. But, some are useful,' ಅಂತ ಅದಕ್ಕೇ ತಾನೇ ಹೇಳುವದು?

ಹಲವರು ಮಾಟ, ಮಂತ್ರ, ಭೂತ, ಪ್ರೇತ, ಅತೀಂದ್ರಿಯ ಶಕ್ತಿಗಳು ಎಲ್ಲ ವೈಜ್ಞಾನಿಕವಾಗಿ incompatible ಅನ್ನುತ್ತಾರೆ. Quantum, Relativity, Consciousness And Beyond: A Scientific Quest for Ultimate Reality by Shan Gao ಅನ್ನುವ ಪುಸ್ತಕ ಓದಿ ನೋಡಿ. ಎಷ್ಟು ಫಿಸಿಕ್ಸ್ ಥಿಯರಿಗಳು ಒಂದಕ್ಕೊಂದು contradictory ಮತ್ತು incompatible ಇವೆ ಅಂತ ತಿಳಿಯುತ್ತ ಹೋಗುತ್ತದೆ. ಆದರೆ ಎಲ್ಲವೂ ಬೇರೆ ಬೇರೆ ಕಾರಣಕ್ಕೆ ಉಪಯುಕ್ತವಾಗಿವೆ.

***

ಭೂತ, ಪ್ರೇತ, ಅತೀಂದ್ರಿಯ ಶಕ್ತಿಗಳು, ಇತ್ಯಾದಿ ಎಲ್ಲ ಪೂರ್ತಿ ಸುಳ್ಳು, ಆಧಾರ ರಹಿತ ಅನ್ನುವ ಕಾಲ ಈಗಿಲ್ಲ. ಎರಡು ಸಲ ನೊಬೆಲ್ ಪ್ರಶಸ್ತಿ ಗಳಿಸಿದ್ದ ಭೌತವಿಜ್ಞಾನಿ ಜಾನ್ ಬಾರ್ಡೀನ್ ಅವರ ಪಟ್ಟದ ಶಿಷ್ಯ ಡೀನ್ ರಾಡಿನ್ ಅನ್ನುವವರು ಈ ಬಗ್ಗೆ ಬಹಳ ಸಂಶೋಧನೆ ಮಾಡಿದ್ದಾರೆ. ಭೌತಶಾಸ್ತ್ರದ ತುಂಬ ಕ್ಲಿಷ್ಟಕರವಾದ ಕ್ವಾಂಟಮ್ ಮೆಕ್ಯಾನಿಕ್ಸ್ ನಲ್ಲಿ ಬರುವ entanglement effect ಅನ್ನುವ ಥಿಯರಿ ಉಪಯೋಗಿಸಿ ಕೆಲವು ಅತೀಂದ್ರಿಯ ಶಕ್ತಿಗಳಿಗೆ ಸಮರ್ಪಕವಾದ ವಿವರಣೆಗಳನ್ನು ಅವರು ನೀಡಿದ್ದಾರೆ. ಪ್ರಯೋಗಗಳನ್ನೂ ಮಾಡಿ, ಡಾಟಾ ಸಂಗ್ರಹಿಸಿ, ಅದರ ಸಹಿತ ವಿಶ್ಲೇಷಣೆ ಮಾಡಿದ್ದಾರೆ.

'ಎಲ್ಲದರ ಮೂಲ ಒಂದು ಶಕ್ತಿ. ಅದೇ ಶಕ್ತಿ ಬೇರೆ ಬೇರೆ ರೂಪದಲ್ಲಿ manifest ಆಗುತ್ತದೆ,' ಅನ್ನುವದು ಎಲ್ಲದರ ಹಿಂದಿರುವ ವಿವರಣೆ.

ರಾಡಿನ್ ಅವರ ಎರಡು ಪುಸ್ತಕಗಳನ್ನೂ ಓದಿದ್ದೇನೆ. ಒಂದೇ ಸುತ್ತಿನ ಓದಿಗೆ ಎಲ್ಲ ಅರ್ಥವಾಗಲಿಕ್ಕಿಲ್ಲ ಯಾಕೆಂದರೆ ಸ್ವಲ್ಪ advanced physics ಮತ್ತೊಮ್ಮೆ refresh ಮಾಡಿಕೊಳ್ಳಬೇಕಾಗುತ್ತದೆ.

ನಾನು ಓದಿರುವ ಡೀನ್ ರಾಡಿನ್ ಬರೆದಿರುವ ಪುಸ್ತಕಗಳು.

Entangled Minds: Extrasensory Experiences in a Quantum Reality by Dean Radin

Supernormal: Science, Yoga, and the Evidence for Extraordinary Psychic Abilities by Dean Radin

ಡೀನ್ ರಾಡಿನ್ ಅವರ ವೆಬ್ ಸೈಟಿನಲ್ಲಿ ಸಹ ಬೇಕಾದಷ್ಟು ಮಾಹಿತಿ ಸಿಗುತ್ತದೆ. (http://www.deanradin.com/)

***

Quantum Physics and Ultimate Reality: Mystical Writings of Great Physicists by Michael Green ಪುಸ್ತಕ ಓದಿ. ದೊಡ್ಡ ದೊಡ್ಡ ಭೌತಶಾಸ್ತ್ರ ಪಂಡಿತರು, ಖ್ಯಾತನಾಮರು ಭೌತಶಾಸ್ತ್ರದ, ವಿಜ್ಞಾನದ ಸೀಮೆಯ ಆಚೆ ಇರುವ ಅನೇಕ concept ಗಳ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದಾರೆ. ಉಪನಿಷತ್ತುಗಳ ಬಗ್ಗೆ, ಶಾಸ್ತ್ರಗಳ ಬಗ್ಗೆ ಹಲವರ ಅಭಿಪ್ರಾಯ ತುಂಬ ಆಸಕ್ತಿದಾಯಕವಾಗಿದೆ.

***

ಇದೇ ಮಾದರಿಯ ಹಳೆಯ ಬ್ಲಾಗ್ ಪೋಸ್ಟುಗಳು ಕೆಳಗೆ ಇವೆ:

ಭೂತ, ಪಿಶಾಚಿ, ಪ್ರೇತಾತ್ಮ, ಕ್ಷುದ್ರಶಕ್ತಿಗಳು 

ಪೂರ್ವಜನ್ಮದ ನೆನಪುಗಳೇಕೆ ನೆನಪಾಗುವದಿಲ್ಲ?

ಪರಕಾಯ ಪ್ರವೇಶ

***

ಪಾತ್ರಗಳ ಹೆಸರುಗಳನ್ನು ಬದಲಾಯಿಸಿದ್ದೇನೆ. ಉಳಿದದ್ದೆಲ್ಲ ಸತ್ಯ ಘಟನೆ ಮೇಲೆ ಆಧಾರಿತ.

ಸ್ಯಾಂಪಲ್ ದೆವ್ವ :)

Friday, September 19, 2014

ಫೋನಲ್ಲೇ ಆಶೀರ್ವಚನ ಮಾಡಿದ್ದ ಸ್ವಾಮಿಗಳು

ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು
[ಹವ್ಯಕ ಭಾಷೆ ಗೊತ್ತಿಲ್ಲದವರಿಗೆ: ಒಮ್ಮೆ ನಮ್ಮ ಸ್ವಾಮಿಗಳ ಜೊತೆ ಫೋನಲ್ಲಿ ಮಾತಾಡುವ ಸೌಭಾಗ್ಯ ಸಿಕ್ಕಿತ್ತು. ಅದರ ಬಗ್ಗೆ ಒಂದು ಬ್ಲಾಗ್ ಪೋಸ್ಟ್. ಅಷ್ಟೇ]

'ಅದಾಗಿ ಹತ್ತು ವರ್ಷಾಗೋತ?' ಹೇಳಿ ನನ್ನನ್ನೇ ನಾ ಕೇಳಿಕೆಂಡಿ.

ಹೌದು, ೨೦೦೪ ರ ಒಂದು ದಿವಸ. ಆವಾಗ ಬಾಸ್ಟನ್ ನಗರದ ಆಸುಪಾಸಿನಲ್ಲಿ ಇದ್ದಿದ್ದಿ. ರಾತ್ರಿ ಸುಮಾರು ಹನ್ನೊಂದು ಗಂಟೆ ಹೊತ್ತು. ಭಾರತದಲ್ಲಿ ಬೆಳಿಗ್ಗೆ ಒಂಬತ್ತು ಘಂಟೆ ಹೊತ್ತು.

ಮನೆ ಫೋನ್ ರಿಂಗಾತು. 'ಯಾರಪಾ ಇಷ್ಟೊತ್ತಿನಲ್ಲಿ ಫೋನ್ ಮಾಡ್ಜಾ?' ಹೇಳಿ ನೋಡಿರೆ ಕಾಲರ್ ಐಡಿ ಒಳಗೆ ಅಪ್ಪನ ನಂಬರ್ ಕಂಡ್ಚು. ಅದೂ ಅಪ್ಪನ ಮೊಬೈಲ್ ನಂಬರ್. ಅಂವಾ ಫೋನ್ ಮಾಡದು ಕಮ್ಮಿ. ನಾನೇ ಮಾಡದು. ಅದೂ ವಾರದ ಒಂದು ದಿವಸ, ಒಂದು ಸಮಯ ಹೇಳಿ ನಿರ್ಧರಿಸಿಕೆಂಡು ಅದೇ ಹೊತ್ತಿಗೆ ಫೋನ್ ಮಾಡಿ, ವಾರದ ಮಾತುಕತೆ ಮುಗ್ಸದು ನಮ್ಮ ರೂಢಿ. ಹಾಂಗಿದ್ದಾಗ ಇಂವಾ ಈಗ ಎಂತಕ್ಕೆ ಫೋನ್ ಮಾಡ್ತಾ ಇದ್ದಾ? ಅದೂ ಮೊಬೈಲ್ ನಿಂದ? ಹೇಳಿ ಒಂದು ಕ್ಷಣ ವಿಚಾರ ಬಂದಿದ್ದು ಖರೆ. ಆವಾಗ ಮತ್ತೆ ಮೊಬೈಲ್ ಕಾಲ್ ರೇಟ್ ಅದೂ ಇಂಟರ್ನ್ಯಾಷನಲ್ ಕಾಲ್ ರೇಟ್ ಎಲ್ಲಾ ಸುಮಾರು ಜಾಸ್ತಿ ಇದ್ದಿತ್ತು ನೋಡಿ. ಹಾಂಗಾಗಿ ಏನೋ ಇಂಪಾರ್ಟೆಂಟ್ ವಿಷಯವೇ ಇದ್ದಿಕ್ಕು. ಅದಕ್ಕೇ ಅಪ್ಪಾ ಫೋನ್ ಮಾಡಿದ್ದಾ ಹೇಳಿ ತೆಳಕಂಡು ಫೋನ್ ಎತ್ತ್ಜಿ.

'ಹಲೋ ಅಪ್ಪಾ! ಎಂತದೋ ಸುದ್ದಿ?' ಅಂದಿ.

'ಯಾನು ಮಗಾ, ಅಪ್ಪಾ' ಅಂದಾ. ಇದು ಅಪ್ಪನ ಫೋನ್ ಮಾಡಿ ಗ್ರೀಟ್ ಮಾಡ ಭಾಷೆ. ಕಾಲ್ ಕ್ವಾಲಿಟಿ ಚೊಲೊ ಇತ್ತಿಲ್ಲೆ. ಗೊಜಾ ಗೊಜಾ ಅಂತು. ಸಿಗ್ನಲ್ ಸರಿ ಸಿಕ್ಕಾಂಗಿಲ್ಲೆ ಅಂದಕಂಡಿ. ಆ ಕಾಲದ ಮೊಬೈಲ್ ವ್ಯಾಷಾ ನೆನೆಸಿಕೆಂಡರೆ ಸಾಕು. ಸಿಗ್ನಲ್ ಸಿಗ್ತಿಲ್ಲೆ. ಕೂಗದ ಬಿಡ್ತ್ವಿಲ್ಲೆ. ಕೂಗದು ನೋಡಿರೆ ಸಾಕು. ಎಲ್ಲಾರು ಹನಿ ಹತ್ರ ಇದ್ದರೆ ಅವು ಕೂಗದೇ ಕೇಳಬುಡ್ಗು. ಆ ನಂನಿ ವ್ಯಾಷಾ. ಈಗೂ ಹಾಂಗೇ ಆತು. ಸರಿ ಕೇಳಿದ್ದೇ ಇಲ್ಲೆ.

ಸಿರ್ಸಿ, ಜೀಎಮ್ಮಾ, ರಾಮಚಂದ್ರಾಪುರ ಮಠ, ಸ್ವಾಮಿಗಳು, ಬಂಜ್ರು...... ಹೇಳಿ ಬಿಡಿಬಿಡಿಯಾಗಿ ಒಂದಿಷ್ಟು ಎಂತೋ ಕೇಳ್ಚು.

'ಸರಿ ಕೇಳ್ತಾ ಇಲ್ಲ್ಯೋ. ಎಂತಾ ಹೇಳ್ತಾ ಇದ್ಯನ. ಎಲ್ಲಾರು ಲ್ಯಾಂಡ್ ಲೈನ್ ಸಿಕ್ಕರೆ ನೋಡಾ,' ಅಂದಿ.

'ಅಡ್ಡಿಲ್ಲೆ ನೋಡ್ತೆ. ಸಿಗ್ನಲ್ಲು ಸರಿ ಸಿಕ್ತಿಲ್ಲೆ....' ಹೇಳಿಕೆತ್ತ ಅಪ್ಪಾ ಇಟ್ಟಾ ಫೋನ್.

ಸ್ವಲ್ಪೇ ಹೊತ್ತಿನ ನಂತರ ಮತ್ತ ಬಂತು ಫೋನ್. ಅದೇ ನಂಬರ್. ಈ ಸರಿಯಾದರೂ ಸಮಾ ಕೇಳಿರೆ ಸಾಕು ಅಂದ್ಕಂಡು ಫೋನ್ ಎತ್ತ್ಜಿ. ಮತ್ತೆ ಅಪ್ಪಾ. ಈ ಸರಿ ಸುಮಾರು ಸರಿ ಕೇಳ್ಚು.

'ಹಾಂ! ಈಗ ಸುಮಾರು ಸರಿ ಕೇಳ್ತು. ಹೇಳು' ಅಂದಿ. ಒಳಬದಿಂದ ಹೆರಗೆ ಬಂದು, ಎಲ್ಲೋ ಸಿಗ್ನಲ್ ಚೊಲೊ ಸಿಗ ಜಾಗಾ ಹುಡುಕ್ಜೀ ಅಂದನಪಾ ಅಪ್ಪಾ. 

ಸುಮಾರು ಹೊತ್ತು ಹೇಳಿದ ಮ್ಯಾಲೆ ವಿಷಯ ಗೊತ್ತಾತು. ವಿಷಯ ಇಷ್ಟಿತ್ತು.

ಅಪ್ಪಾ ಸಿರ್ಸಿ ಸಮೀಪದ ಕಾನಸೂರ ಹತ್ತಿರದ ಮಸಗುತ್ತಿಮನೆ ಹೇಳ ಹಳ್ಳಿಗೆ ಬಂಜಾ. ಧಾರವಾಡದ ಜೀಎಮ್ ಹೆಗಡೆ ಸಂಗ್ತಿಗೆ ಬಂಜಾ. ಅದು ಜೀಎಮ್ ಹೆಗಡೆ ಮೂಲ ಮನೆ. ಜೀಎಮ್ ಹೆಗಡೆ ನಮಗೆಲ್ಲ ಜೀಯಮ್ಮಾ ಹೇಳೇ ಆತ್ಮೀಯ. ಅಂವಾ ಧಾರವಾಡದಲ್ಲಿ ಕನ್ನಡ ಪ್ರೊಫೆಸರಾ. ಸಂಬಂಧಿ ಕೂಡ ಹೌದು. ಆವತ್ತು ನಮ್ಮ ರಾಮಚಂದ್ರಾಪುರದ ಮಠದ ಸ್ವಾಮಿಗಳು ಜೀಎಮ್ ಹೆಗಡೆ ಮನಿಗೆ ಬಂದಿದ್ದರು ಹೇಳ್ಯಾತು. ಪಾದಪೂಜೆಯೋ ಮತ್ತೆಂತೋ ಇತ್ತು ಕಾಣ್ತು. ಎಲ್ಲ ಕೂಡಿ ಇವೆಲ್ಲಾ ಧಾರವಾಡದಿಂದ ಸ್ವಾಮಿಗಳ ದರ್ಶನಕ್ಕೆ ಬಂದವು. ಇಷ್ಟು ಆಗಿದ್ದು .

'ಸರಿ. ಚೊಲೊ ಆತು. ಸ್ವಾಮಿಗಳಿಗೆ ನಮ್ಮದೂ ನಮಸ್ಕಾರ ಹೇಳಿಬಿಡು ಹಂಗಾರೆ,' ಹೇಳಿ ಮಾತು ಮುಗಸಲ್ಲೆ ಹೊಂಟಿ.

'ಸ್ವಾಮಿಗಳು ಮಾತಾಡ್ತಿ ಅಂದ್ರೆ ಮಾತಾಡ್ತ್ಯಾ?' ಹೇಳಿ ಕೇಳಿಬಿಡವ ಅಪ್ಪಾ!

ಹಾಂ! ಹೇಳಿ ಬೆಚ್ಚ್ಬಿದ್ದಿ. ಜೀವನದಲ್ಲಿ ಸ್ವಾಮಿಗಳನ್ನ, ಸನ್ಯಾಸಿಗಳನ್ನ ನೋಡಿದ್ದೇ ಭಾಳ ಕಮ್ಮಿ, ಮಾತು ಗೀತು ಆಡಿದ್ದೇ ಇಲ್ಲೆ. ಈಗ ಫೋನ್ ನಲ್ಲಿ ಸ್ವಾಮಿಗಳ ಸಂಗ್ತಿಗೆ ಮಾತಾಡಸ್ತಿ ಅಂಬಾ. ಹ್ಯಾಂಗನ? ಎಂತನ? ಎಂತಾರು ಮಳ್ಳ ಹಲ್ಬಿರೆ ಕಷ್ಟಾ. ನಾ ಮಳ್ಳ ಹಲ್ಬಿರೆ ಹೇಳಿ. ಸ್ವಾಮಿಗಳು ಮಳ್ಳ ಹಲ್ಬತ್ರು ಹೇಳಿ ಅಲ್ಲಾ ಮತ್ತೆ. ಮಳ್ಳ ಹಲಬಲ್ಲೆ ಅವ್ರಿಗೆಂತಾ ಮಳ್ಳಾ? ಮಳ್ಳ ಗಿಳ್ಳ ಹಲ್ಬ ವ್ಯಾಷ ಇದ್ದರೆ ಅದೆಲ್ಲಾ ನಮ್ಮದೇ.

'ಸರಿ ಮಾರಾಯಾ. ಆದ್ರೆ ಮೊಬೈಲ್ ನಲ್ಲಿ ಆದ್ರೆ ಸರಿ ಅಪ್ಪದು ಸುಳ್ಳು. ಕಡಿಗೆ ಸ್ವಾಮಿಗಳ ಕೈಗೆ ಫೋನ್ ಕೊಟ್ಟಾಗೂ ಗೊಜಾ ಗೊಜಾ ಆದ್ರೆ ಕಷ್ಟ. ಹ್ಯಾಂಗೆ ಮಾತಾಡಸ್ತೆ? ಒಳಬದಿಗೆ ಸಿಗ್ನಲ್ ಸರಿ ಸಿಗ್ತಿಲ್ಲೆ ಅಂಬೆ? ಹಾಂ?' ಹೇಳಿ ಕೇಳ್ಜೆ.

'ಒಳಬದಿಗೆ ಹೋಗಿ ನೋಡ್ತೆ. ಜೀಯಮ್ಮ ಹೆಗಡೆ ಕೂಡೆ ಮಾತಾಡಿ ಲ್ಯಾಂಡ್ ಲೈನ್ ವ್ಯವಸ್ಥೆ ಮಾಡಲಾಗ್ತಾ ನೋಡ್ತೆ. ಲೈನ್ ಮ್ಯಾಲೇ ಇರು. ಅಕಾ?' ಹೇಳಿಕೆತ್ತ ಒಳಬದಿಗೆ ಹೊಂಟಾ ಕಾಣ್ತು ಅಪ್ಪಾ. ಎಂತಕ್ಕೆ ಅಂದರೆ ಫೋನ್ ಮತ್ತ ಗೊಜಾ ಗೊಜಾ ಹೇಳಲ್ಲೆ ಶುರು ಮಾಡ್ಚು.

ನಂತರ ಕೇಳಿದ್ದು ಫುಲ್ ರನ್ನಿಂಗ್ ಕಾಮೆಂಟರಿ. ಖರೆ ಅಂದ್ರೂ ಅದು ರನ್ನಿಂಗ್ ಕಾಮೆಂಟರಿನೇ. ಎಂತಕ್ಕೆ ಅಂದ್ರೆ ಸ್ವಾಮಿಗಳು ಇದ್ದ ಜಾಗಕ್ಕೆ ಒಂದು ಲ್ಯಾಂಡ್ ಫೋನ್ ತಂದು ಇಡವು ಹೇಳಿ ಇಡೀ ಜೀಎಮ್ ಹೆಗಡೆ ಮನೆ ಜನಾ ಎಲ್ಲಾ ರನ್ನಿಂಗ್ ಅಂದ್ರೆ ಅತ್ಲಾಬದಿಂದ ಇತ್ಲಾ ಬದಿಗೆ ಓಡ್ಯಾಡ್ಜ ಕಾಣ್ತು.

'ಏ, ಹನಿ ಇತ್ಲಾಗ್ ಎಳಿಯಾ. ವೈರ್ ಹನಿ ಶಣ್ಣಾಗೋತು ಕಾಣ್ತು. ಮೊಬೈಲ್ ಸಿಗ್ನಲ್ ಇಲ್ಲೇ ಇಲ್ಯಾ? ಮಳ್ಳಸತ್ತ ಮೊಬೈಲೇಯಾ ಹೇಳಿ. ಒಳಬದಿಗೆ ಹತ್ತೇ ಇಲ್ಲೇ. ತಡೀರಿ. ವೈರ್ ತಪ್ಪಲೆ ಒಳ ಬದಿಗೆ ಹೋಜಾ ಮಾಣಿ. ಏ! ಸಿಗ್ಚನೋ ವೈರ್? ಬೆಗ್ಗನೆ ತಗಂಬಾ ಮಾರಾಯಾ!' ಹೇಳಿ ದೊಡ್ಡ ಮಟ್ಟದ ಕಾಮಗಾರಿ ಶುರು ಮಾಡಿದಿದ ಕಾಣ್ತು ಜೀಎಮ್ ಹೆಗಡೆ ಮನೆಯವರು. ಇದೆಲ್ಲ ಪೂರ್ತಿ ಕೇಳಿದ್ದಿಲ್ಲೆ. ಗೊಜಾ ಗೊಜಾ ಹೇಳಿ ಕೇಳ್ತಾ ಇದ್ದ ಚೂರು ಪಾರಿಂದ ಏನೋ ಒಂದು ತರಹದ ಅರ್ಥ ನಾವೇ ಮಾಡಿಕೆಂಡಿದ್ದು.

'ಥೋ! ಸ್ವಾಮಿಗಳನ್ನ ನಮ್ಮ ಸಂಗ್ತಿಗೆ ಫೋನ್ ನಲ್ಲಿ ಮಾತಾಡಸವು ಹೇಳಿ ಎಲ್ಲರಿಗೂ ಎಷ್ಟ ತೊಂದ್ರೆಯನ,' ಹೇಳಿ ಅನ್ನಿಸಿತ್ತಾ? ಗೊತ್ತಿಲ್ಲ. ಜೀಎಮ್ ಹೆಗಡೆ ಮನೆ ಜನಾ ಎಲ್ಲರೂ ಇಷ್ಟು ಆತ್ಮೀಯರು ಅಂದ್ರೆ ಅಷ್ಟು ಆತ್ಮೀಯರು. ಅಂತವಕ್ಕೆ ತ್ರಾಸು ಕೊಡದ್ದೇ ಮತ್ಯಾರಿಗೆ ತ್ರಾಸು ಕೊಡನ? ಹೇಳಿ.

'ಮಗಾ, ಯಾನು ಫೋನ್ ಇಡ್ತೆ. ನೀನೂ ಇಡು. ಜಿಎಮ್ ಮಾವನ ಮನೆ ಲ್ಯಾಂಡ್ ಲೈನ್ ತಯಾರಾತು. ಸ್ವಾಮಿಗಳ ಬುಡಕ್ಕೇ ತೆಕ ಹೋಗಿ ಇಟ್ಟಿದ್ದ ಅವ್ಕಾ. ಅಲ್ಲಿಂದಲೇ ಡಯಲ್ ಮಾಡ್ತೆ. ಅಕಾ? ಮಾಡಿ ಸ್ವಾಮಿಗಳ ಕೈಗೆ ಕೊಡ್ತೆ. ಅಡ್ಡಿಲ್ಯ?' ಹೇಳಿ ಅಪ್ಪಾ ಫೋನ್ ಕಟ್ ಮಾಡ್ಜಾ. ರನ್ನಿಂಗ್ ಕಾಮೆಂಟರಿ ಮುಗತ್ತು. ನಾನೂ ಫೋನ್ ಇಟ್ಟು. ಮುಂದೆ ಬಪ್ಪ ಸ್ವಾಮಿಗಳ ಫೋನಿಗೆ ಕಾದು ಕೂತೆ.

ರಿಂಗಾತು ಮತ್ತೆ. ಬಂತಲಿ ಫೋನ್. ಫೋನ್ ಎತ್ತಕರೆ ಒಂದು ನಮ್ನಿ ಭಯ ಮಿಶ್ರಿತ ಭಕ್ತಿಯೋ ಅಥವಾ ಭಕ್ತಿ ಮಿಶ್ರಿತ ಭಯವೋ. ಒಟ್ಟು ಒಂದ್ನಮ್ನಿ. ಹೇಳಿ ಕೇಳಿ ಸ್ವಾಮಿಗಳಪಾ. ಎದ್ರಿಗೆ ಭೆಟ್ಟಿಯಾದರೆ ನಮಸ್ಕಾರ ಹಾಕಿ, ಕೈ ಮುಕ್ಕಂಡು ನಿಂತಕಂಡು, ಹೇಳಿದ್ದ ಕೇಳಿಕೆಂಡು, ಪ್ರಸಾದ ಕೊಡ್ತ್ರು ತಂಗಂಡು ಬಂದರೆ ಮುಗತ್ತು. ಫೋನ್ ನಲ್ಲಿ ಹ್ಯಾಂಗೆ ಮಾಡವು? ಎಂತಾ ಹೇಳವು? ಹ್ಯಾಂಗನ?

ಫೋನ್ ಎತ್ತಿ ಹಲೋ ಅಂದೆ. ಮತ್ತೆ ಅಪ್ಪನೇ ಇದ್ದಿದ್ದಾ. ಇಂಟ್ರೊಡಕ್ಷನ್ ಕೊಡಲೆ.

'ಮಗಾ, ಫೋನ್ ಸ್ವಾಮಿಗಳ ಕೈಗೆ ಕೊಡ್ತೆ. ಮಾತಾಡು,' ಹೇಳಿಕೆತ್ತ ಅಪ್ಪ ಸ್ವಾಮಿಗಳ ಕೈಗೆ ಕೊಟ್ಟಾ ಕಾಣ್ತು.

'ಅವನ ಹೆಸರು ಮಹೇಶಾ ಹೇಳಿ. ಅಮೇರಿಕಾದಲ್ಲಿ ಇದ್ದಾ. ಯನ್ನ ಕಿರಿ ಮಗಾ. ಮಾತಾಡಿ ನೀವು.......' ಫೋನ್ ಕೊಡ್ತಾ, ಹೇಳದು ಕೇಳ್ಚು. ಓಹೋ! ಇದು ಸ್ವಾಮಿಗಳಿಗೆ ನಮ್ಮ ಇಂಟ್ರೊಡಕ್ಷನ್. ಅವರಿಗೂ ನಮ್ಮ ನಾಮಧೇಯ ಮತ್ತೊಂದು ಎಲ್ಲ ಗೊತ್ತಾಗವಲಿ. ಇಲ್ಲೆ ಅಂದ್ರೆ ಎಂತಾ ಹೇಳಿ ಮಾತಾಡವು ಅವರು?

ಸ್ವಾಮಿಗಳು ಲೈನ್ ಮ್ಯಾಲೆ ಬಂದ್ರು. ನಮಸ್ಕಾರ ಅಂದಿ. ಸ್ವಾಮಿಗಳು ಒಂದು ಮೂರು ನಾಕು ನಿಮಿಷ ಮಾತಾಡ್ಜ್ರು. ಶುದ್ಧವಾಗಿ, ಅಡೆ ತಡೆ ಇಲ್ಲದೇ, ಸರಳವಾಗಿ ಮಾತಾಡ್ಜ್ರು. ಫೋನ್ ಮೇಲೆ ಅಷ್ಟು ಚೊಲೊ ಮಾತಾಡದೂ ಒಂದು ಸ್ಕಿಲ್ಲು. ಎಲ್ಲರಿಗೂ ಬತ್ತಿಲ್ಲೆ. ಫೋನ್ ಮ್ಯಾಲೆ ಗೊಜ್ಜು ಬೀಸವೇ ಜಾಸ್ತಿ. ನನ್ನೂ ಹಿಡದು. ಆದ್ರೆ ಸ್ವಾಮಿಗಳದ್ದು ಶುದ್ಧ, ಸರಳ, ಸ್ಪಷ್ಟ, ಸುಲಲಿತ ಮಾತು.

ಸ್ವಾಮಿಗಳು ಮೊದಲು ನಮ್ಮ ಮನೆತನದ ಪರಿಚಯ ಎಲ್ಲ ಹೇಳ್ಜ್ರು. ಆಶ್ಚರ್ಯ ಅಂದ್ರೆ ಅವರು ಸ್ವಾಮಿಗಳಾಗಿದ್ದು ೧೯೯೦ ಆಸುಪಾಸಿನಲ್ಲಿ. ಆ ಹೊತ್ತಿಗೆ ಮಠದ ದೊಡ್ಡ ಭಕ್ತರಾಗಿದ್ದ ಅಜ್ಜ (ಅಪ್ಪನ ಅಪ್ಪ), ಸಣ್ಣಜ್ಜ  ಇತ್ಯಾದಿ ತೀರಿಹೋಗಿದ್ದ. ಅವೆಲ್ಲಾ ಇವರ ಹಿಂದಿನ ಸ್ವಾಮಿಗಳ ದೊಡ್ಡ ಭಕ್ತರಾಗಿದ್ದ. ಮತ್ತೆ ತಮ್ಮ ತಮ್ಮ ವಿದ್ವತ್ತು ಮತ್ತಿತರ ಕಾರಣಗಳಿಂದ ಹಿಂದಿನ ಸ್ವಾಮಿಗಳಿಗೆ ಭಾಳ ಕ್ಲೋಸ್ ಇದ್ದಿದ್ದ. ಆದ್ರೆ ಈ ಸ್ವಾಮಿಗಳು ಸ್ವತಃ ಅವರೆಲ್ಲರ ಪರಿಚಯ ಇಲ್ಲದಿದ್ದರೂ, ಅವರ ಮಠದ ಪರಿವಾರ ಕೊಟ್ಟ ಬ್ಯಾಕ್ ಗ್ರೌಂಡ್ ಮಾಹಿತಿ ತೆಳಕಂಡು, ಭಾಳ ಚಂದಾಗಿ ನಮ್ಮ ಮನೆತನದ ಹಿನ್ನಲೆ, ಹಿಂದಿನವರ ಭಕ್ತಿ, ಸೇವೆ ಎಲ್ಲಾ ಪ್ರಶಂಸಿದರು. ಒಳ್ಳೆದಾಗಲಿ ಹೇಳಿ ಆಶೀರ್ವಾದ ಮಾಡ್ಜ್ರು. ಬಂದಾಗ ಮಠಕ್ಕೆ ಮುದ್ದಾಂ ಬಾ ಅಂದ್ರು. ಎಂತಾರು ಕೇಳದಿದ್ದ ಹೇಳಿ ಕೇಳ್ಜ್ರು. 'ಎಂತದೂ ಇಲ್ಲೆ. ದೊಡ್ಡ ಮನಸ್ಸು ಮಾಡಿ, ತೊಂದರೆ ತಗಂಡು ಫೋನ್ ಮಾಡ್ಜ್ರೀ. ರಾಶಿ ಖುಷಿ ಆತು. ನಿಮ್ಮ ಆಶೀರ್ವಾದ ಇರ್ಲಿ ಯಾವಾಗಲೂ,' ಹೇಳಿ, ಮತ್ತೊಂದು ಸಲಾ ನಮಸ್ಕಾರ ಹೇಳ್ದಿ. ಸ್ವಾಮಿಗಳು ಫೋನ್ ಅಪ್ಪನ ಕೈಗೆ ಕೊಟ್ಟರು ಕಾಣ್ತು. ಮತ್ತ ಲೈನ್ ಮ್ಯಾಲೆ ಬಂದ ಅಪ್ಪಾ.

'ಆತಲಾ ಮಾತಾಡಿ. ನೀ ಹೋಗಿ ಮನೀಕ. ಸುಮಾರು ಹೊತ್ತಾಗಿಕ್ಕು ಅಲ್ಲದ?' ಅಂದಾ ಅಪ್ಪಾ.

ಟೈಮ್ ನೋಡಿರೆ ರಾತ್ರಿ ಹನ್ನೆರೆಡು ಘಂಟೆ ಮ್ಯಾಲಾಗೋಗಿತ್ತು. Absolutely worth it! ಹಾಳುವರಿ ಸಿನೆಮಾ, ಇಂಟರ್ನೆಟ್ ಅದು ಇದು ಹೇಳಿ ದಿನಾ ಲೇಟ್ ಆಗಿ ಮಲಗದು ಇದ್ದೇ ಇರ್ತಿತ್ತು. ಅಪರೂಪಕ್ಕೆ ಒಂದು ಒಳ್ಳೆ ಕೆಲಸದ ಸಲುವಾಗಿ ಮಲಗದು ಲೇಟ್ ಆದರೆ ಏನೂ ತೊಂದ್ರೆ ಇಲ್ಲೆ ಬಿಡಿ.

ಯಾರೋ ಭಕ್ತರು 'ಹೀಂಗೆ ಫೋನಲ್ಲಿ ಮಾತಾಡಿ,' ಹೇಳಿ ಒಂದು ಕೋರಿಕೆ ಮಾಡಿಕೆಂಡ್ರೆ ಅದನ್ನ ದೂಸರಾ ಮಾತಿಲ್ಲದೇ ಒಪ್ಪಿಗೆಂಡು, ಎಲ್ಲರಂಗೆ ಫೋನ್ ನಲ್ಲಿ ಮಾತಾಡಿದ್ದು ನೋಡಿ ಅವರ ಮೇಲೆ ರಾಶಿ ಗೌರವ, ಅಕ್ಕರೆ ಮೂಡ್ಚು. ರಾಶಿ ದೊಡ್ಡ ಗುಣ ಅದು.

ಇದೆಲ್ಲ ಆದ ಮೇಲೆ ಕಳೆದ ಹತ್ತು ವರ್ಷದಲ್ಲಿ ಭಾರತದಲ್ಲಿ ಮನೆ ಜನ ಬೇಕಾದಷ್ಟು ಸರಿ ಸ್ವಾಮಿಗಳನ್ನ ಬೇರೆ ಬೇರೆ ಸಂದರ್ಭದಲ್ಲಿ ಭೆಟ್ಟಿ ಆಜ. ನನ್ನ ಸಂಗ್ತಿ ಒಂದೇ ಒಂದು ಸಲ ಮಾತಾಡಿದ್ದು, ಅದೂ ಫೋನಲ್ಲಿ. ಅದನ್ನ ಸ್ವಾಮಿಗಳು ಮರ್ತಿದ್ದರಿಲ್ಲೆ ಹೇಳ್ಯಾತು. ಪ್ರತಿ ಸರಿ ನೆನಪಿಟ್ಟುಕೊಂಡು ನನ್ನ ಬಗ್ಗೆ ಕೇಳಿ, 'ಆಶೀರ್ವಾದ ತಿಳಿಸಿ,' ಹೇಳಿ ಸ್ವಾಮಿಗಳು ಮನೆ ಜನರ ಹತ್ತಿರ ಹೇಳ್ತ್ರು ಹೇಳ್ಯಾತು. ಅದು ಅವರ ದೊಡ್ಡ ಗುಣ. ಎಷ್ಟು ಜನ ಭಕ್ತರನ ಅವರಿಗೆ. ಅಂತಾದ್ರಲ್ಲಿ ನಮ್ಮನೆ ಜನ ಕಂಡಾಗ ನನ್ನನ್ನು  ನೆನಪಿಟ್ಟುಕೊಂಡು ವಿಚಾರಿಸಿ, ಆಶೀರ್ವಾದ ಮಾಡದು ಅಂದ್ರೆ ದೊಡ್ಡ ಮಾತು. ಅದಕ್ಕೇ ಅವರು ನಮ್ಮ ಸ್ವಾಮಿಗಳು.

ಈಗಿತ್ತಲಾಗೆ ನಮ್ಮ ಸ್ವಾಮಿಗಳ  ಬಗ್ಗೆ ಏನೇನೋ ಅಪವಾದ, ಆರೋಪ ಅದು ಇದು ಎಲ್ಲ ಬಂದಾಗ ಇದೆಲ್ಲ ಹಳೆ ಸುದ್ದಿ ನೆನಪಾತು. ಸ್ವಾಮಿಗಳ ಮೇಲೆ ಅಪವಾದ ಬಂದಿದ್ದು ಇದು ಮೊದಲನೇ ಸಲ ಅಲ್ಲ. ಆಗಾಗ ಅಗ್ನಿಪರೀಕ್ಷೆಗೆ ಒಳಗಾಗುತ್ತಲೇ ಬಂಜ್ರು ಅವರು. ಅಪವಾದ, ನಿಂದನೆ, ಆರೋಪ ಇತ್ಯಾದಿ ಶಂಕರಾಚಾರ್ಯರನ್ನೇ ಬಿಟ್ಟಿತ್ತಿಲ್ಲೆ ಅಂದ ಮ್ಯಾಲೆ ಮತ್ತೆಂತದು. ಸ್ವಾಮಿಗಳು ಎಲ್ಲವನ್ನೂ ಗೆದ್ದು ಬತ್ರು. ಅದರಲ್ಲಿ ಡೌಟ್ ಇಲ್ಲೆ.

ಸ್ವಾಮಿಗಳಿಗೆ ಇಲ್ಲಿಂದಲೇ ಒಂದು ಉದ್ದಂಡ, ಸಾಷ್ಟಾಂಗ ನಮಸ್ಕಾರ. ಅವರ ಆಶೀರ್ವಾದ ಸದಾ ಇರಲಿ.

Tuesday, September 09, 2014

ಬ್ರಾದಲ್ಲಿ ಬಾಂಬಿಟ್ಟುಕೊಂಡು ಬಂದಿದ್ದ LTTE ಹಂತಕಿ!

ಶ್ರೀಲಂಕಾದ ದುರ್ಗಮ ಅರಣ್ಯದ ಮಧ್ಯೆ ಇದ್ದ ತನ್ನ ಹೆಡ್ ಕ್ವಾರ್ಟರ್ ನಲ್ಲಿ ಕುಳಿತಿದ್ದ LTTE ಹುಲಿಗಳ ಸುಪ್ರೀಮೋ ವೇಲುಪಿಳ್ಳೈ ಪ್ರಭಾಕರನ್ ಬರಲಿಕ್ಕಿದ್ದ ಒಂದು ಮಹತ್ವದ ಸುದ್ದಿಗಾಗಿ ಕಾಯುತ್ತಿದ್ದ. ಆಗಾಗ ತನ್ನ ವಯರ್ಲೆಸ್ ಸೆಟ್ ನೋಡುತ್ತ ಕುಳಿತದ್ದ. ಪಕ್ಕದಲ್ಲಿ ಕುಳಿತಿದ್ದ ಅವನ ಖಾಸಮ್ ಖಾಸ್ ಬೇಹುಗಾರಿಕೆ ಚೀಫ್ ಖತರ್ನಾಕ್ ಪೊಟ್ಟು ಅಮ್ಮನ್.

ಅಷ್ಟರಲ್ಲಿ ವಯರ್ಲೆಸ್ ಸೌಂಡ್ ಮಾಡಿತು. ಮೆಸೇಜ್ ಬಂತು. 'ಆಪರೇಷನ್ ಫೇಲ್ ಆಗಿದೆ. ಡಗ್ಲಾಸ್ ದೇವಾನಂದ ಮತ್ತೊಮ್ಮೆ ಬಚಾವಾಗಿ ತಪ್ಪಿಸಿಕೊಂಡು ಹೋದ. ಓವರ್ ಅಂಡ್ ಔಟ್!'

'ಥತ್ ತೆರೇಕಿ....ಅವನಮ್ಮನ್! ಮತ್ತೊಮ್ಮೆ ಚಾನ್ಸ್ ಮಿಸ್ಸಾಯಿತು....' ಅಂದವನೇ, ವಯರ್ಲೆಸ್ ಸೆಟ್ ಹತಾಶೆಯಿಂದ ಎಸೆದಂತೆ ಮಾಡಿ, ಸೀಟ್ ಬಿಟ್ಟು, ಎದ್ದು ಹೊರಟ ಪ್ರಭಾಕರನ್. ಹಿಂದೆಯೇ ಹೋದ ಪೊಟ್ಟು ಅಮ್ಮನ್.

'ಪೊಟ್ಟು, ಮುಂದಿನ ಆಪರೇಷನ್ ಗೆ ತಯಾರಿ ಮಾಡು. ಇದು ಹೀಗೆಲ್ಲ ಬಗೆಹರಿಯೋ ಸಮಸ್ಯೆಯಲ್ಲ. ಇದಕ್ಕೆ ಒಂದು ಆತ್ಮಾಹುತಿ (ಸೂಸೈಡ್ ಬಾಂಬಿಂಗ್) ಕಾರ್ಯಾಚರಣೆಯೇ ಆಗಿಬಿಡಲಿ. ಬ್ಲಾಕ್ ಟೈಗರ್ ಸ್ಕ್ವಾಡಿನಲ್ಲಿ ಸೂಸೈಡ್ ಬಾಂಬರ್ ಇರಬೇಕಲ್ಲ? ಒಂದು ತಯಾರ್ ಮಾಡಿ ಕಳಿಸಿಬಿಡು. ಅಷ್ಟೇ ರೆಗ್ಯುಲರ್ ಆಗಿ ಉಪಯೋಗಿಸುವ ಸೂಸೈಡ್ ಬಾಂಬ್ ಬೆಲ್ಟ್ ಬೇಡ. ತಿಳೀತಾ?' ಅಂತ ಮುಂದಿನ ಕಾರ್ಯಾಚರಣೆಗೆ ಆದೇಶ ನೀಡಿದ ಪ್ರಭಾಕರನ್.

ಪೊಟ್ಟು ಅಮ್ಮನ್ ಗೆ ಎಲ್ಲ ತಿಳಿಯಿತು. ಸೂಸೈಡ್ ಬಾಂಬಿಂಗ್ ಅನ್ನುವ ಆತ್ಮಾಹುತಿ ಕಾರ್ಯಾಚರಣೆಗಳ ಪಿತಾಮಹ ಅವನು. ಸೂಸೈಡ್ ಬಾಂಬಿಂಗ್ ಮಾಡಿ, ತಾವೂ ಸತ್ತು, ಟಾರ್ಗೆಟ್ ಗಳನ್ನೂ ಸಹ ಮಟಾಶ್ ಮಾಡುತ್ತಿದ್ದ ಬ್ಲಾಕ್ ಟೈಗರ್ಸ್ ಎಂಬ ಸ್ಪೆಷಲ್ LTTE ಉಗ್ರರ ದಳ ಡೈರೆಕ್ಟ್ ಅವನ ಅಡಿಯಲ್ಲೇ ಕೆಲಸ ಮಾಡುತ್ತಿತ್ತು. ಒಂದು ಒಳ್ಳೆ ಬ್ಲಾಕ್ ಟೈಗರ್ ಉಗ್ರಗಾಮಿಯನ್ನು ತಯಾರು ಮಾಡಿ ಕಳಿಸುವದು ಪೊಟ್ಟು ಅಮ್ಮನ್ ಗೆ ದೊಡ್ಡ ಮಾತಾಗಿರಲಿಲ್ಲ. ರಾಜೀವ್ ಗಾಂಧಿ, ಶ್ರೀಲಂಕಾ ಅಧ್ಯಕ್ಷ ಪ್ರೇಮದಾಸ, ಇನ್ನೂ ಹಲವಾರು ಗಣ್ಯರನ್ನು ಸೂಸೈಡ್ ಬಾಂಬಿಂಗ್ ಮಾಡಿಸಿ ಕೊಂದು ಒಗೆದವನಿಗೆ ಇದೇನು ದೊಡ್ಡ ಸವಾಲಾಗಿರಲಿಲ್ಲ.

ಆದರೆ ಪ್ರಭಾಕರನ್, 'ಸೂಸೈಡ್ ಬೆಲ್ಟ್ ಬಾಂಬ್ ಬೇಡ,' ಅಂದಿದ್ದು ಯಾಕೆ ಅಂತ ತಿಳಿಯಲಿಲ್ಲ.

'ಸೊಂಟದ ಸುತ್ತ ಸುತ್ತಿಕೊಳ್ಳುತ್ತಿದ್ದ ಸೂಸೈಡ್ ಬೆಲ್ಟ್ ಬಾಂಬ್ ಬೇಡ ಅಂದರೆ ಮತ್ತೇನು?' ಅನ್ನೋ ಲುಕ್ ಕೊಟ್ಟ ಪೊಟ್ಟು ಅಮ್ಮನ್.

ಪ್ರಭಾಕರನ್ ಏನೋ ಗಹನ ವಿಚಾರದಲ್ಲಿ ಇದ್ದವ, ಪೊಟ್ಟು ಅಮ್ಮನನ ಡೌಟ್ ಅರ್ಥ ಮಾಡಿಕೊಂಡವನಂತೆ ಒಂದು ದೀರ್ಘ ಶ್ವಾಸ ಎಳೆದುಕೊಂಡು ಹೇಳಿದ, 'ಈ ಸಲ ಸೂಸೈಡ್ ಬಾಂಬ್ ಹೆಂಗಸರ ಬ್ರಾದಲ್ಲಿ ಫಿಟ್ ಮಾಡಿಬಿಡಿ. ಬೆಲ್ಟ್ ಬಾಂಬಿಗಿಂತ ಸೇಫ್ ಅದು. ಕಂಡು ಹಿಡಿಯುವದೂ ಕಷ್ಟ. ಬಾಂಬ್ ಚೆಕ್ ಮಾಡಲು ಪೂರ್ತಿ ಬಾಡಿ ಸ್ಕ್ರೀನಿಂಗ್, ಫ್ರಿಸ್ಕಿಂಗ್ ಮಾಡುವವರೂ ಸಹ, ದೇಹದ ಅಲ್ಲಿ ಇಲ್ಲಿ ತಡವಿ, ತಟ್ಟಿ ನೋಡಿಯಾರೆ ವಿನಃ ಸೀದಾ, ತೀರಾ ಎದೆಗೇ ಕೈಹಾಕುವದಿಲ್ಲ. ಅದಕ್ಕೇ ಬ್ರಾ ಬಾಂಬ್ ಮಾಡಿ, ಒಂದು ಲೇಡಿ ಬ್ಲಾಕ್ ಟೈಗರ್ ಒಬ್ಬಳಿಗೆ ಹಾಕಿ, ಕಳಿಸಿಬಿಡಿ. ಈ ಸಲ ಮಾತ್ರ ಡಗ್ಲಾಸ್ ದೇವಾನಂದ ಬದುಕಿರಬಾರದು,' ಅಂತ ಆಖ್ರೀ ಮಾತು ಹೇಳಿದ ಪ್ರಭಾಕರನ್ ಜಾಗ ಖಾಲಿ ಮಾಡಿದ. ಪೊಟ್ಟು ಅಮ್ಮನ್ ನಿಗೆ ಇದರಕಿಂತ ಹೆಚ್ಚಿನ ಸೂಚನೆ ಏನೂ ಬೇಕಾಗಿರಲೇ ಇಲ್ಲ. ಪದ್ಮಾಸನ ಹಾಕಿ ಕೂತುಬಿಟ್ಟ ಒಂದು ಹೊಸ ಅವಿಷ್ಕಾರ ತಯಾರ್ ಮಾಡಲು. ಅದೇ - ಸೂಸೈಡ್ ಬ್ರಾ ಬಾಂಬ್.

**
ಡಗ್ಲಾಸ್ ದೇವಾನಂದ

ಡಗ್ಲಾಸ್ ದೇವಾನಂದ್ ಒಬ್ಬನೇ LTTE ಮುಖಂಡ ಪ್ರಭಾಕರನ್ ಗೆ ಮುಳ್ಳಾಗಿದ್ದ. ಪ್ರಭಾಕರನದು ಶುದ್ಧ ಫ್ಯಾಸಿಸ್ಟ್ ಮನಸ್ಸು. ಬೇರೆ ಯಾರೂ ತಮಿಳ ನಾಯಕರು ಇರಲೇಬಾರದು, ಯಾವದೇ ತರಹದ ತಾತ್ವಿಕ ಅಥವಾ ಇತರೆ ಬಿನ್ನಾಭಿಪ್ರಾಯ ಸಲ್ಲದು.  ಪ್ರಭಾಕರನ ನಾಯಕತ್ವ, ತತ್ವ, ಸಿದ್ಧಾಂತ ಒಪ್ಪದ ಯಾರೇ ಆಗಿರಲಿ ಅವರಿಗೆ ಒಂದೇ ದಾರಿ. ಅದು ನೇರ ಮಸಣಕ್ಕೆ. ಅಂತಹ ಶುದ್ಧ ಫ್ಯಾಸಿಸ್ಟ್ ಡಿಕ್ಟೇಟರ್ ಮನಸ್ಸು ಪ್ರಭಾಕರನದು.

ಒಂದು ಲೆವೆಲ್ಲಿಗೆ ಪ್ರಭಾಕರನ್ ಬಂದ ಕೂಡಲೇ ಮಾಡಿದ್ದೇ ಅದು. ಸಿಸ್ಟಮ್ಯಾಟಿಕ್ ಆಗಿ ಉಳಿದ ತಮಿಳು ಸಂಘಟನೆಗಳನ್ನು, ಅವುಗಳ ನಾಯಕರನ್ನು ಬೇರು ಸಮೇತ ಕಿತ್ತೆಸೆದ.

ಒಂದು ಕಾಲದ ಸ್ನೇಹಿತ, TELO ಸಂಘಟನೆ ನಾಯಕ, ಸಭಾರತ್ನಂನನ್ನು ಜಾಫ್ನಾದಲ್ಲಿ ನಾಯಿಯಂತೆ ಬೇಟೆಯಾಡಿ ಕೊಂದರು LTTE ಹುಲಿಗಳು. TELO ದ ಸಾವಿರಕ್ಕೂ ಹೆಚ್ಚು ಕೇಡರ್ ಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿ, ಗುಂಡಿ ತೋಡಿ, ಹೂಳಿ, ಮುಚ್ಚಿ ಬಂದರು.

EPRLF ಅನ್ನುವ ಇನ್ನೊಂದು ತಮಿಳು ಸಂಘಟನೆಯ ಅಧಿವೇಶನ ಮದ್ರಾಸಿನಲ್ಲಿ ನಡೆಯುತ್ತಿತ್ತು. ಶಿವರಸನ್ ನೇತ್ರತ್ವದಲ್ಲಿ, AK - ೪೭ ಬಂದೂಕು ಹಿಡಿದು, ಮದ್ರಾಸ್ ಅಪಾರ್ಟ್ಮೆಂಟ್ ಒಂದಕ್ಕೆ ನುಗ್ಗಿದ ಉಗ್ರರು ಇಡೀ EPRLF ನಾಯಕ ಸಮೂಹವನ್ನೇ ವೈಪ್ ಔಟ್ ಮಾಡಿಬಿಟ್ಟರು. ಇದೇ ಸಿವರಸನ್ ಮುಂದಿನ ವರ್ಷ ರಾಜೀವ್ ಗಾಂಧಿಯನ್ನು ಉಡಾಯಿಸಿಬಿಟ್ಟ.

ತಮಿಳು ಸೌಮ್ಯ ನಾಯಕರಾದ ಅಮೃತಲಿಂಗಂ ಮತ್ತು ಯೋಗಿ ಅವರನ್ನು ಕೋಲಂಬೋದ ನಿವಾಸಕ್ಕೆ ಸಂಧಾನದ ಮಾತುಕತೆಯಾಡಲು ಬಂದ LTTE ಉಗ್ರರು ಗುಂಡಿಟ್ಟು ಕೊಂದರು.

PLOTE ನಾಯಕ ಉಮಾಮಹೇಶ್ವರನ್ ನನ್ನು ಕೊಲಂಬೋದ ಪೇಟೆಯಲ್ಲಿ ಅಟ್ಟಾಡಿಸಿ ಕೊಂದರು.

ಶ್ರೀಲಂಕಾದ ಸರಕಾರದಲ್ಲಿ ಮಂತ್ರಿಯಾಗಿ, ತಮಿಳರಿಂದ ಗದ್ದಾರ್ ಅಂತ ಬ್ರಾಂಡ್ ಆಗಿದ್ದ ಲಕ್ಷ್ಮಣ ಕದಿರಾಗಮರ ಈಜಲು ಸ್ವಿಮ್ಮಿಂಗ್ ಪೂಲಿಗೆ ಇಳಿದವ ಮತ್ತೆ ಎದ್ದು ಬರಲಿಲ್ಲ. ಪಕ್ಕದ ಮನೆಯ ಬಚ್ಚಲ ಕಿಟಿಕಿ ಮೂಲೆಯಿಂದ ಹಾರಿಸಿದ್ದ ಸ್ನೈಪರ್ ಬುಲೆಟ್ ಅವನ ಬುರುಡೆಯನ್ನು ಸೈಲೆಂಟ್ ಆಗಿ ಬಿಚ್ಚಿತ್ತು. ಅವನು ಸ್ವಿಮ್ಮಿಂಗ್ ಪೂಲಿನಲ್ಲೇ ಹೆಣವಾಗಿ ತೇಲಿದ್ದ. ಮಟಾಶ್!

EROS ಸಂಘಟನೆಯ ಬಾಲಕುಮಾರ್ ತನ್ನ ಸಂಘಟನೆಯನ್ನು ವಿಸರ್ಜಿಸಿ, ತನ್ನೆಲ್ಲ ಕೇಡರ್ ಗಳನ್ನು ಕರೆದುಕೊಂಡು ಬಂದು, ಶರಣಾಗತನಾಗಿ, ಅಂಬೋ! ಅಂದು ಬಿಟ್ಟ. ಬಾಲಕುಮಾರ ಶಾಲಾ ಬಾಲಕನಂತೆ, ಹಾಫ್ ಪ್ಯಾಂಟ್ ಹಾಕಿಕೊಂಡು, ಕೈಕಟ್ಟಿಕೊಂಡು ಪ್ರಭಾಕರನ್ ಎಂಬ ಹೆಡ್ ಮಾಸ್ತರ್ ಮುಂದೆ ವಿನೀತನಾಗಿ ನಿಂತ ಅಂತ ಬದುಕಿಕೊಂಡ.

ಇನ್ನೂ ಎಷ್ಟೋ ಜನ ತಮಿಳ ನಾಯಕರನ್ನು ಪ್ರಭಾಕರನ್ ಮುಲಾಜಿಲ್ಲದೆ ಕೊಂದು ಹಾಕಿದ್ದ. ತಮಿಳ್ ಈಲಂ ಅಂದರೆ ಪ್ರಭಾಕರನ್. ಪ್ರಭಾಕರನ್ ಅಂದರೆ ತಮಿಳ್ ಈಲಂ. ಹಾಗೆ ಇರಬೇಕು ಅಂತ ಅವನ ಡಿಮ್ಯಾಂಡ್. ಅದನ್ನ ಕಾಂಪ್ರಾಮೈಸ್ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ.

ಹೀಗೆ ಎಲ್ಲ ತರಹದ ತಮಿಳು ನಾಯಕರನ್ನು ಮುಗಿಸಿದ್ದ ಪ್ರಭಾಕರನಿಗೆ ಈ EPDP ಎಂಬ ಸಂಘಟನೆಯ ಡಗ್ಲಾಸ್ ದೇವಾನಂದ ಎಂಬ ಮುಖಂಡ ತುಂಬ ದೊಡ್ಡ ಅಡಚಿಣೆಯಾಗಿದ್ದ. ಸಾಲದ್ದಕ್ಕೆ ಶ್ರೀಲಂಕಾ ಸರ್ಕಾರ ಬೇರೆ ಸೇರಿಕೊಂಡು ಮಂತ್ರಿಯಾಗಿ ಮೆರೆಯುತ್ತಿದ್ದ. ಪ್ರಭಾಕರನ್ ಪ್ರಕಾರ ಅವನು ನಂಬರ್ ಒನ್ ಗದ್ದಾರ್. ಅವನನ್ನು ಕೊಲ್ಲಲೇ ಬೇಕಾಗಿತ್ತು. ಈ ಹಿಂದೆ ಕೆಲವು ಹತ್ಯಾ ಪ್ರಯತ್ನಗಳನ್ನು ಮಾಡಿತ್ತು LTTE. ದೇವಾನಂದನ ಗುಡ್ ಲಕ್ ಸಕತ್ತಾಗಿತ್ತು. ಬಚಾವಾಗಿಬಿಟ್ಟಿದ್ದ. ಮತ್ತೂ ಹುಶಾರಾಗಿದ್ದ. ಸೆಕ್ಯೂರಿಟಿ ಬಲಪಡಿಸಿಕೊಂಡಿದ್ದ.

ಈ ಸಲದ ಹತ್ಯೆಯ ಯತ್ನ ಯಶಸ್ವಿಯಾಗಲೇ ಬೇಕು ಅಂತ ಎರಡು ಅತ್ಯುತ್ತಮ ಕೇಡರುಗಳನ್ನು ಕಳಿಸಿದ್ದ ಪ್ರಭಾಕರನ್. ಆಟೋಮ್ಯಾಟಿಕ್ ವೆಪನ್ಸ್, ಗ್ರೆನೇಡು  ತೆಗೆದುಕೊಂಡ, ಸಾಯಿಸಿ, ಬೇಕಾದರೆ ತಾವೂ ಸತ್ತು ಬರಲು ರೆಡಿಯಾಗಿಯೇ ಇದ್ದ LTTE ಹಂತಕರು ಕೊಲಂಬೋ ಸೇರಿಕೊಂಡು, ಡಗ್ಲಾಸ್ ದೇವಾನಂದನ ಮನೆ ಮೇಲೆ ಒಂದು ದೊಡ್ಡ ಅಟ್ಯಾಕ್ ಮಾಡಲು ಬರೋಬ್ಬರಿ ಮುಹೂರ್ತಕ್ಕೆ ಹೊಂಚು ಹಾಕಿಕೊಂಡು ಕೂತಿದ್ದರು.

ಬಂತು ಮುಹೂರ್ತದ ದಿನ.

ಡಗ್ಲಾಸ್ ದೇವಾನಂದ ಎಂದಿನಂತೆ, ತನ್ನ ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿ ಏನೋ ಬರೆಯುತ್ತ, ಓದುತ್ತ ಕೂತಿದ್ದ. ಕೆಳಗೆ ಶಸ್ತ್ರಧಾರಿ ಅಂಗರಕ್ಷಕರು ಇದ್ದರು. ಆದರೆ ಅವರು LTTE ಕಮಾಂಡೋ ಟ್ರೇನಿಂಗ್ ಹೊಂದಿದ್ದ ಉಗ್ರರಿಗೆ ಸಾಟಿಯಾಗಿರಲಿಲ್ಲ ಬಿಡಿ. ಗ್ರೆನೇಡ್ ಎಸೆಯುತ್ತಲೇ ಬಂದು, ಹೊರಗಿದ್ದವರನ್ನು ಕೊಂದು, ಒಂದು ಕ್ಷಣದಲ್ಲಿ ಇಡೀ ಕಾಂಪೌಂಡನ್ನು ತಮ್ಮ ತಾಬಾಗೆ ತೆಗೆದುಕೊಂಡ LTTE ಉಗ್ರರಿಗೆ ಮುಂದಿನ ಹೆಜ್ಜೆ ಬಗ್ಗೆ ಏನೂ ಡೌಟ್ ಇರಲಿಲ್ಲ. ಸೀದಾ ಮೇಲೆ ಹೋಗುವದು, ರೂಮಿನಲ್ಲಿದ್ದ ದೇವಾನಂದನನ್ನು ಗುಂಡಿಕ್ಕಿ ಜರಡಿ ಜರಡಿ ಮಾಡಿ ಹಾಕಿಬಿಡುವದು. ಆ ಗಮ್ಯದ ಮೇಲೇ ಅವರ ಲಕ್ಷ್ಯ.

ಕೆಳಗಾಗುತ್ತಿದ್ದ ಗಲಾಟೆಯಿಂದ ಡಗ್ಲಾಸ್ ದೇವಾನಂದ ಎಚ್ಚತ್ತ. ಅವನೂ ಒಂದು ಕಾಲದಲ್ಲಿ ಗೆರಿಲ್ಲಾ ಯುದ್ಧ ಮಾಡಿದವನೇ ತಾನೇ. instincts, reflexes ಎಲ್ಲ ತಂತಾನೆ ಜಾಗೃತವಾದವು. ಆ ಕ್ಷಣದಲ್ಲಿ ಹತ್ತಿರ ಇದ್ದ ಆಯುಧ ಅಂದರೆ ಟೇಬಲ್ ಡ್ರಾವರಿನಲ್ಲಿದ್ದ ಒಂದು ಸಣ್ಣ ಪಿಸ್ತೂಲು ಮಾತ್ರ. LTTE ಹಂತಕರಿಬ್ಬರ ದೊಡ್ಡ ಮಟ್ಟದ ಶಸ್ತ್ರಗಳ ಮುಂದೆ ಅದು ಏನೂ ಅಲ್ಲ. ಹೇಗೆ ಆತ್ಮರಕ್ಷಣೆ ಮಾಡಿಕೊಳ್ಳಲಿ ಅಂತ ಕ್ವಿಕ್ ಆಗಿ ಯೋಚಿಸಿದ ಡಗ್ಲಾಸ್. ಹಂತಕರು ಕೆಳಗಿದ್ದ ಅಂಗರಕ್ಷಕರನ್ನು ಗುಂಡಿಟ್ಟು ಕೊಲ್ಲುತ್ತ, ದಾರಿ ಕ್ಲಿಯರ್ ಮಾಡಿಕೊಳ್ಳುತ್ತ, ಮೆಟ್ಟಿಲು ಹತ್ತಿ, ರಣಕೇಕೆ ಹಾಕುತ್ತ, ಮಹಡಿ ಮೇಲೆ ಬರುತಿದ್ದರು. ಕೆಲವೇ ಕೆಲವು ಕ್ಷಣ ಹೆಚ್ಚೆಂದರೆ. ಇನ್ನೇನು ದೇವಾನಂದನ ರೂಮಿನ ಎದುರಲ್ಲಿ ಪ್ರತ್ಯಕ್ಷರಾಗಿ, ಗುಂಡಿನ ಮಳೆಗರಿದೇ ಬಿಡುತ್ತಾರೆ ಅನ್ನುವಷ್ಟರಲ್ಲಿ ದೇವಾನಂದ ಒಂದು ಖತರ್ನಾಕ್ ಕೆಲಸ ಮಾಡಿಬಿಟ್ಟ. ತನ್ನಲ್ಲಿದ್ದ ಚಿಕ್ಕ ರಿವಾಲ್ವರಿನಿಂದ ಒಂದೇ ಒಂದು ಗುಂಡು ಗುರಿಯಿಟ್ಟು ಹೊಡೆದ. ಯಾವದಕ್ಕೆ? ರೂಮಿನಲ್ಲಿದ್ದ ಒಂದೇ ಒಂದು ದೀಪದ ಬಲ್ಬಿಗೆ. ಠಳ್! ಅಂತ ಶಬ್ದ ಮಾಡುತ್ತ ಬಲ್ಬ್ ಒಡೆದುಹೋಯಿತು. ಎಲ್ಲ ಕಡೆ ಕಗ್ಗತ್ತಲೆ ಆವರಿಸಿಬಿಟ್ಟಿತು. ಹಂತಕರು ಒಂದು ಕ್ಷಣ ಅಪ್ರತಿಭರಾದರು. ಕಾರ್ಯಾಚರಣೆಯನ್ನು ಸಾವಿರ ಬಾರಿ ರಿಹರ್ಸಲ್ ಮಾಡಿದ್ದರೂ ಇದೊಂದನ್ನು ಅವರು ನಿರೀಕ್ಷಿಸಿರಲಿಲ್ಲ. ಒಂದು ಕ್ಷಣ ಫೈರ್ ಮಾಡುವದನ್ನು ನಿಲ್ಲಿಸಿ, ಅಲ್ಲಿಲ್ಲಿ ಇರಬಹುದಾದ ಲೈಟ್ ಸ್ವಿಚ್ಚಿಗಾಗಿ ತಡಕಾಡಿದರು.

ಇದೇ ಟೈಮ್ ಅಂದ ದೇವಾನಂದ ಸದ್ದು ಮಾಡದೆ ತನ್ನ ರೂಮಿನ ಬಾಲ್ಕನಿಯತ್ತ ಸರಿದ. ಬಾಲ್ಕನಿ ಸೇರಿಕೊಂಡವನೇ ಕೆಳಗೆ ಹಾರಿಬಿಟ್ಟ. ದೊಡ್ಡ ಸೈಜಿನ ಆಸಾಮಿ ಅವನು. ಧಬ್! ಅಂತ ಶಬ್ದವಾಯಿತು. LTTE ಉಗ್ರರಿಗೆ ಗೊತ್ತಾಗಿಯೇ ಹೋಯಿತು. ಡಗ್ಲಾಸ್ ಜಿಗಿದು ಓಡಿ ಹೋಗುತ್ತಿದ್ದಾನೆ ಅಂತ. ಮೇಲೆ ಬಂದವರು ಕೆಳಗೆ ಇಳಿದು ಹೊರಬಾಗಿಲಿನತ್ತ ಓಡಿದರು. ಹೊರಗೆ ಬಂದು ನೋಡಿದರೆ ಬಾಲ್ಕನಿಯಿಂದ ಕೆಳಗೆ ಜಿಗಿದಿದ್ದ ಡಗ್ಲಾಸ್ ದೇವಾನಂದ ಗೇಟ್ ಹಾರಿ ರಸ್ತೆಗೆ ಓಡುವದರಲ್ಲಿದ್ದ. ಶುದ್ಧ ತಮಿಳ. ಹುಟ್ಟುವಾಗಲೇ ಲುಂಗಿಯನ್ನೇ ಉಟ್ಟು ಹುಟ್ಟಿರುತ್ತಾರೇನೋ ಅನ್ನುವಂತೆ ಅವನೂ ಲುಂಗಿಯಲ್ಲೇ ಇದ್ದ. ಬಾಲ್ಕನಿ ಜಿಗಿದು, ಹಾರಿ ಓಡುವಾಗ ಲುಂಗಿ ಬಿಚ್ಚಿ, ಎಲ್ಲೋ ಬಿದ್ದು ಹೋಗಿತ್ತು. ಲುಂಗಿ ಹೋದರೆ ಹೋಗಲಿ, ಪುಂಗಿ ಊದಲು ಪ್ರಾಣ ಉಳಿದರೆ ಸಾಕು ಅನ್ನುವ ರೀತಿಯಲ್ಲಿ ಅಂಡರ್ವೇರ್ ಚಡ್ಡಿಯಲ್ಲಿಯೇ ರಸ್ತೆಗೆ ಬಂದಿದ್ದ ಡಗ್ಲಾಸ್ ದೇವಾನಂದ. ಕೈಯಲ್ಲಿ ಒಂದು ಪಿಸ್ತೂಲಿತ್ತು. ಕೇವಲ ಐದೇ ಐದು ಗುಂಡು ಉಳಿದಿದ್ದವು. ಹಿಂದೆ ಫೈರ್ ಮಾಡುತ್ತ ಅಟ್ಟಿಸಿಕೊಂಡು ಬರುತ್ತಿದ್ದ LTTE ಯೋಧರು.

ಸ್ವತಃ ಗೆರಿಲ್ಲಾ ಆಗಿದ್ದ ದೇವಾನಂದನಿಗೆ ಗೊತ್ತೇ ಇತ್ತು, ಒಂದು ಕ್ಷಣ ಹಿಂತಿರುಗಿ ನೋಡಿದರೂ ಸಾವು ಕಟ್ಟಿಟ್ಟ ಬುತ್ತಿ ಅಂತ. ಹೇಗೋ ಮಾಡಿ, ಹಿಂತಿರುಗಿ ನೋಡದೇ, ಭುಜದ ಮೇಲಿಂದ, ಎತ್ತರಪತ್ತರ ಬ್ಯಾಕ್ ಫೈರಿಂಗ್ ಮಾಡುತ್ತ ಓಡಿಬಿಟ್ಟ. ಕೊಲೊಂಬೋದ ಪಾಶ್ ಬಡಾವಣೆಯೊಂದರಲ್ಲಿ, ಕೇವಲ ಚಡ್ಡಿ ಹಾಕಿಕೊಂಡು ಓಡುತ್ತಿದ್ದ ಒಬ್ಬ ವಿಚಿತ್ರ ಮನುಷ್ಯ, ಹಿಂದೆ ಫೈರ್ ಮಾಡುತ್ತ ಬರುತ್ತಿದ್ದ ಮತ್ತಿಬ್ಬರು. ಕಂಡವರು ಬೆಚ್ಚಿ ಬೀಳಬೇಕು.

ದೇವಾನಂದನ ನಸೀಬ ಚೊಲೋ ಇತ್ತು. ಬಚಾವ್ ಆಗಿ ಬಿಟ್ಟ! ಅದೇನಾಯಿತೋ ಏನೋ LTTE ಹಂತಕರಿಗೆ. ಎಲ್ಲಿ ಮದ್ದು, ಗುಂಡು ಮುಗಿಯಿತೋ, ಇನ್ನೂ ಬೆನ್ನಟ್ಟಿ ಸಿಕ್ಕಿ ಬಿದ್ದರೆ ರಿಸ್ಕ್ ಅಂದುಕೊಂಡರೋ ಅಥವಾ ವಯರ್ಲೆಸ್ ಮೇಲೆ ಮತ್ತಿನ್ನೇನಾದರೂ ಆರ್ಡರ್ ಬಂದಿತ್ತೋ ಗೊತ್ತಿಲ್ಲ. ದೇವಾನಂದನನ್ನು ಚೇಸಿಂಗ್ ಮಾಡುವದನ್ನು ಬಿಟ್ಟು ಪರಾರಿಯಾದರು. ಚಡ್ಡಿಧಾರಿ ದೇವಾನಂದ ಗುಂಡು ಇರುವ ತನಕ ಹಾರಿಸುತ್ತ, ಓಡುವಷ್ಟು ಓಡಿದ. ಗುಂಡು ಮುಗಿಯಿತು. ಲೈಫ್ ಸಹಿತ ಮುಗಿಯಿತು, ಅಂತ ಅಂದುಕೊಂಡು ಅಟ್ಟಿಸಿಕೊಂಡು ಬರುತ್ತಿದ್ದ ಸಾವಿಗೆ ತೆರೆದುಕೊಳ್ಳಲು ತಯಾರಾದರೆ ಹಂತಕರು ನಾಪತ್ತೆಯಾಗಿದ್ದರು. ಅಂತೂ ದೇವಾನಂದ ಮತ್ತೊಮ್ಮೆ ಬಚಾವಾಗಿದ್ದ. ಅದು ಎಷ್ಟನೇ ಸಲವಾಗಿತ್ತು? ಎಂಟನೇಯದೋ ಒಂಬತ್ತನೇಯದೋ ಸಲವಾಗಿರಬೇಕು. one lucky chap!

ಈ ಹತ್ಯಾಯತ್ನ ವಿಫಲವಾದ ನಂತರವೇ ಕುದ್ದು ಹೋಗಿದ್ದ ಪ್ರಭಾಕರನ್. ಮುಂದಿನ ಸಲ ಸೂಸೈಡ್ ಬಾಂಬರ್ ಕಳಿಸಿ, ದೇವಾನಂದನನ್ನು ತೆಗೆಸಿಬಿಡುವಂತೆ ಪೊಟ್ಟು ಅಮ್ಮನ್ ಗೆ ಆಜ್ಞೆ ಕೊಟ್ಟಿದ್ದ. ಆ ಕಾರ್ಯಾಚರಣೆಗೆ ಮೊತ್ತ ಮೊದಲ ಬ್ರಾ ಬಾಂಬ್ ತಯಾರ್ ಆಗುವದಿತ್ತು.

**

ಬ್ರಾ ಬಾಂಬ್ ತಯಾರ್ ಮಾಡಿದರು LTTE ಬಾಂಬ್ ತಂತ್ರಜ್ಞರು. padded bra ದ ಪ್ಯಾಡಿಂಗ್ ತೆಗೆದು, ಅದರಲ್ಲಿ ಬಾಂಬ್ ಕೆಮಿಕಲ್ ತುಂಬಿ, ಸೀಲ್ ಮಾಡಿ, ವೈರ್, ಸ್ವಿಚ್ ಎಲ್ಲ ಬರೋಬ್ಬರಿ ಫಿಟ್ ಮಾಡಿ, ಪಕ್ಕಾ ಆರ್ಡಿನರಿ ಬ್ರಾ ಕಾಣುವಂತೆ ಮಾಡಿ ಕೊಟ್ಟುಬಿಟ್ಟರು. ಮಹಾ ಕುಶಲಕರ್ಮಿಗಳು ಅವರು. ಯಾವ ಇಂಜಿನಿಯರಗೂ ಕಮ್ಮಿ ಇಲ್ಲ. ಬ್ರಾ ಬಾಂಬ್ ಪ್ರಾಜೆಕ್ಟಿನ ಪೂರ್ತಿ ಉಸ್ತುವಾರಿಯನ್ನು ಪೊಟ್ಟು ಅಮ್ಮನ್ ವಹಿಸಿಕೊಂಡಿದ್ದ. ಮತ್ತೆ ಮತ್ತೆ ಟೆಸ್ಟ್ ಮಾಡಿ, ಪರ್ಫೆಕ್ಟ್ ಆಗಿ ಕೆಲಸ ಮಾಡುತ್ತಿದೆ ಅಂತ ಖಾತ್ರಿ ಮಾಡಿಕೊಂಡಾದ ಮೇಲೆ ಒಂದು ಫೈನಲ್ ಬ್ರಾ ಬಾಂಬ್ ತಯಾರ್ ಮಾಡಿಕೊಟ್ಟರು. ಅದರ ಮೇಲೆ ಡಗ್ಲಾಸ್ ದೇವಾನಂದನ ಸಾವಿನ ನೋಟೀಸ್ ಅವರೇನೋ ಬರೆದರು. ಆದರೆ ಅದಕ್ಕೆ ದೇವರು ಸಹಿ ಹಾಕಿದನೇ?

LTTE ಸೂಸೈಡ್ ಬಾಂಬರಗಳು ಎಲ್ಲ ಬ್ಲಾಕ್ ಟೈಗರ್ಸ್ ಎಂಬ ಸ್ಪೆಷಲ್ ವಿಂಗ್ ನಿಂದ ಬರುತಿದ್ದರು. ಒಬ್ಬಳನ್ನು ಸೆಲೆಕ್ಟ್ ಮಾಡಲಾಯಿತು. ಭಾಗ್ಯದ ಬಾಗಿಲೇ ತೆರೆಯಿತು ಅನ್ನುವಷ್ಟು ಎಕ್ಸೈಟ್ ಆದಳು. ತಮಿಳ್ ಈಲಂ ಸಲುವಾಗಿ ಪ್ರಾಣವನ್ನು ಬಲಿದಾನ ಕೊಡಲು ಅಷ್ಟೆಲ್ಲ ಜನ ಕಾದಿರುವಾಗ ತನಗೇ ಆ ಭಾಗ್ಯ ಸಿಕ್ಕಿತಲ್ಲ ಅಂತ ಧನ್ಯತೆ ಫೀಲಿಂಗ್ ಅವಳಿಗೆ.

ಒಮ್ಮೆ ಮಿಶನ್ನಿಗೆ ಸೆಲೆಕ್ಟ್ ಆದಳು ಆದಾಗಿಂದ ಆಕೆಗೆ ಬೇರೆಯೇ ತರಬೇತಿ ಶುರು ಮಾಡಲಾಯಿತು. ಡಗ್ಲಾಸ್ ದೇವಾನಂದನ ಕೊಲಂಬೊ ಸಚಿವಾಲಯದ ಫುಲ್ ಡೀಟೇಲ್ಸ್ ತಂದಿದ್ದ LTTE ಬೇಹುಗಾರರು ಆಕೆಗೆ ಟ್ರೇನಿಂಗ ಕೊಡಲು ಶುರು ಮಾಡಿದರು. ಎಲ್ಲಿಂದ ಎಂಟ್ರಿ ಕೊಡಬೇಕು, ಎಲ್ಲೆಲ್ಲಿ ಮೆಟಲ್ ಡಿಟೆಕ್ಟರ್ ಇರುತ್ತವೆ, ಅವನ್ನು ಹೇಗೆ ಯಾಮಾರಿಸಬೇಕು, ಡಗ್ಲಾಸ್ ದೇವಾನಂದನನ್ನು ಭೇಟಿಯಾಗುವ ಮೊದಲು ಯಾರಾರು ಸಿಗುತ್ತಾರೆ, ಅವರಿಗೆಲ್ಲ ಏನೇನು ಪಟ್ಟಿ ಓದಿ, ಪಟಾಯಿಸಿ, ದೇವಾನಂದನ ಕಚೇರಿ ತಲುಪಿಕೊಳ್ಳಬೇಕು. ತಲುಪಿಕೊಂಡಾದ ಮೇಲೆ? ಆಮೇಲೇನು? ಅಣ್ಣ ಪ್ರಭಾಕರನ್, ತಮಿಳ್ ಈಳಂ ನೆನೆದು ಬಟನ್ ಒತ್ತಿ ಬಿಟ್ಟರೆ ಎಲ್ಲ ಭಸ್ಮ. ಖೇಲ್ ಖತಂ!

ಹಂತಕಿ ತಯಾರಾಗಿ ಕೊಲಂಬೊ ಸೇರಿಕೊಂಡಳು. ಬ್ರಾ ಬಾಂಬ್ ಸ್ಪೋಟಿಸಿ, ಆತ್ಮಾಹುತಿ ಮಾಡಿಕೊಂಡು, ಡಗ್ಲಾಸ್ ದೇವಾನಂದ ಅನ್ನುವ ಕ್ರಿಮಿಯನ್ನು ಕೊಂದು, ಅಣ್ಣ ಪ್ರಭಾಕರನ್ ಅವರ ಸಾಟಿಯಿಲ್ಲದ ನಾಯಕತ್ವಕ್ಕೆ ಇದ್ದ ಒಂದೇ ಒಂದು ತೊಡಕನ್ನು ತೆಗೆದೊಗೆಯುವ ಘಳಿಗೆ ಬಂತು.

ಮುಂದೇನಾಯಿತು ಅನ್ನುವದನ್ನ ತಿಳಿಯಲು ಕೆಳಗಿನ ವೀಡಿಯೊ ಕ್ಲಿಪ್ಪಿಂಗ್ ನೋಡಿಬಿಡಿ. ಕ್ಲೋಸ್ಡ್ ಸರ್ಕ್ಯೂಟ್ ಟೀವಿಯಲ್ಲಿ ಹಂತಕಿಯ ಎಲ್ಲ ಕಾರ್ನಾಮೆ ರೆಕಾರ್ಡ್ ಆಗಿದೆ.ಅದೇನು ಮಿಸ್ಟೇಕ್ ಆಯಿತೋ ಏನೋ. ಇಷ್ಟೆಲ್ಲ ತಯಾರಿ ಮಾಡಿಕೊಂಡು ಬಂದಿದ್ದ ಹಂತಕಿ ದೇವಾನಂದನನ್ನು ತಲುಪುವ ಮೊದಲೇ ಸ್ಪೋಟಿಸಿಕೊಂಡುಬಿಟ್ಟಳು. ದೇವಾನಂದನ ಸಚಿವಾಲಯದ ಹೊರಗಿನ ಆಫೀಸಿನಲ್ಲಿ  ಕುಳಿತು, ತನ್ನ ಭೇಟಿಗೆ ಸಂಬಂಧಿಸಿದ ಏನೋ ಪ್ರಕ್ರಿಯೆ, ನೋಂದಣಿ ಮುಗಿಸುತ್ತಿದ್ದ ಆಕೆ ಮೈಮೇಲೆ ಅದ್ಯಾವ ದೆವ್ವ ಬಂತೋ ಗೊತ್ತಿಲ್ಲ. ಟ್ರಿಗರ್ ಒತ್ತೇ ಬಿಟ್ಟಿದ್ದಾಳೆ. ಸುತ್ತ ಮುತ್ತ ಎಲ್ಲ ಮಟಾಶ್! ಖಲಾಸ್!

ಅವಳೇ ಸ್ವಿಚ್ ಒತ್ತಿಬಿಟ್ಟಳೋ ಅಥವಾ ಎಲ್ಲೋ ಮಿಸ್ಟೇಕಿನಲ್ಲಿ ಟ್ರಿಗರ್ ಒತ್ತಿ ಆಕ್ಸಿಡೆಂಟ್ ಆಯಿತೋ? ಮೊತ್ತ ಮೊದಲ ಬ್ರಾ ಬಾಂಬ್ ನೋಡಿ. ಎಲ್ಲೋ ಉತ್ಪಾದನಾ ನ್ಯೂನ್ಯತೆ ನುಸುಳಿ, ಏನಾದರೂ ಪೊರಪಾಟಾಯಿತಾ? ಗೊತ್ತಿಲ್ಲ. ಒಟ್ಟಿನಲ್ಲಿ ಅದೇ ಕಚೇರಿಯ ಬೇರೆಲ್ಲೋ ಕುಳಿತಿದ್ದ ಡಗ್ಲಾಸ್ ದೇವಾನಂದ ಮತ್ತೊಮ್ಮೆ ಬಚಾವಾಗಿಬಿಟ್ಟಿದ್ದ. ಎಂತಾ ಗುಡ್ ಲುಕ್ ಮಾರ್ರೆ!?

ಹತ್ತನೇ ಬಾರಿ ಹತ್ಯಾ ಯತ್ನ ನಡೆದುಹೋಗಿತ್ತು! ಅದರಲ್ಲೂ ಬಚಾವ್!

ಇದಾದ ಮೇಲೆ ಇನ್ನೊಂದು ಹತ್ಯಾ ಯತ್ನ ಕಡೇಯದು ನಡೆದಿತ್ತು ೨೦೦೭ ರಲ್ಲಿ. ಅದರಲ್ಲೂ ಬಚಾವ್!

ಅದಾದ ಮೇಲೆ ೨೦೦೯ ರಲ್ಲಿ LTTE ಯನ್ನೇ ನಿರ್ನಾಮ ಮಾಡಲಾಯಿತು. ಡಗ್ಲಾಸ್ ದೇವಾನಂದ ಮಾತ್ರ ಆರಾಮ ಇದ್ದಾನೆ.

**
ಇಷ್ಟೆಲ್ಲ ಹೆವಿ ಡ್ಯೂಟಿ ಓದಿದ ಮೇಲೆ ಒಂದು ತುಂಟ ಹಾಸ್ಯ ಇದ್ದರೆ ಹೆಂಗೆ?

ಆಕಸ್ಮಾತ ಬ್ರಾ ಬಾಂಬ್ ಹಂತಕಿ ಡಗ್ಲಾಸ್ ದೇವಾನಂದನನ್ನು ಏನಾದರೂ ಭೆಟ್ಟಿಯಾಗಿದ್ದಳು ಅಂದುಕೊಳ್ಳಿ. ಅವನಿಗೆ ಬ್ರಾದಲ್ಲಿರುವ ಬಾಂಬುಗಳನ್ನು ಕಂಡುಹಿಡಿಯುವ ದಿವ್ಯದೃಷ್ಟಿ ಮತ್ತು ಶಾಯರಿ ಹುಚ್ಚು ಎರಡೂ ಇದ್ದರೆ ಇದೇ ಶಾಯರಿ ಹೊಡೆಯುತ್ತಿದ್ದನೋ ಏನೋ!

ಪಲಟ್ ಕರ್ ದೇಖ್ ಜಾನೇಮನ್
ಜಿಗರ್ ಮೇ ದಮ್ ಹಮ್ ಭೀ ರಖತೆ ಹೈ
ಬ್ರಾ ಮೇ ದೋ ಬಾಂಬ್ ತುಮ್ ರಖತಿ ಹೋ ತೋ ಕ್ಯಾ ಹುವಾ?
ಚಡ್ಡಿ ಮೇ ಏಕ್ ಗನ್ ಹಮ್ ಭೀ ರಖಾ ಕರ್ ತೇ ಹೈ

ತಿರುಗಿ ನೋಡು ಜಾನೇಮನ್
ಎದೆಯಲ್ಲಿ ದಮ್ ನಾನೂ ಇಟ್ಟಿರುತ್ತೇನೆ
ಬ್ರಾದಲ್ಲಿ ಎರಡು ಬಾಂಬ್ ನೀನಿಟ್ಟುಕೊಂಡರೆ ಏನಾಯಿತು?
ಚಡ್ಡಿಯೊಳಗೆ ತುಪಾಕಿಯೊಂದನ್ನು ನಾನೂ ಇಟ್ಟಿರುತ್ತೇನೆ

ಆಕೆಯಂತೂ ಬ್ರಾದಲ್ಲಿ ಬಾಂಬಿಟ್ಟುಕೊಂಡು ಬಂದಿದ್ದಳು. ಆತ್ಮರಕ್ಷಣೆಗೆ ಅಂತ ಡಗ್ಲಾಸ್ ದೇವಾನಂದ ಸಹಿತ ಚಡ್ಡಿಯೊಳಗೆ ಒಂದು ಗನ್ ಇಟ್ಟಿರುತ್ತಿದ್ದ ನೋಡಿ!

(ಚಡ್ಡಿಯೊಳಗೆ ತುಪಾಕಿಯೆಂದರೆ ಅಂದ್ರೆ ಚಡ್ಡಿ ಜೇಬಿನೊಳಗೆ ಅಂತ. ಅಪಾರ್ಥ ಬೇಡ :) ಶಾಯರಿ ಇಂಟರ್ನೆಟ್ ನಿಂದ ಕದ್ದಿದ್ದು. )

**

ಈ ಬ್ಲಾಗ್ ಪೋಸ್ಟಿಗೆ ಬೇಕಾದ ಮಾಹಿತಿ ಹೆಕ್ಕಿದ್ದು ಕೆಳಗಿನ ಎರಡು ಪುಸ್ತಕಗಳಿಂದ ಮತ್ತು ಹಲವಾರು ವೆಬ್ ಸೈಟ್ ಗಳಿಂದ. ಇವನ್ನು ಇತ್ತೀಚಿಗೆ ಓದಿದೆ. ಮೊದಲನೇ ಪುಸ್ತಕ ಸೀದಾ ಶ್ರೀಲಂಕಾದಿಂದಲೇ ತರಿಸಿದೆ. ಆರ್ಡರ್ ಮಾಡಿ ಒಂದೂವರೆ ತಿಂಗಳ ನಂತರ ಬಂತು.

೧) Gota's War by C.A. Chandraperuma

೨) This Divided Island: Stories from the Sri Lankan War by Samanth Subramanian

**

LTTE ಬಗ್ಗೆ ಹಿಂದೆ ಬರೆದಿದ್ದ ಎರಡು ಬ್ಲಾಗ್ ಪೋಸ್ಟುಗಳಿಗೆ ಲಿಂಕ್ಸ್ ಇಲ್ಲಿವೆ.

೧) ಪೋಡಿ ನಂಗಿ ತಮಿಳ್ ಪುಲಿಯಾದದ್ದು

೨)  LTTE ಸೇರಬಾರದು. ಸೇರಿದರೆ ಪ್ರೀತಿ ಮಾಡಬಾರದು

**

ಪ್ರಭಾಕರನ್, ಪೊಟ್ಟು ಅಮ್ಮನ್ ಮೊದಲ ಸನ್ನಿವೇಶದ ಸೃಷ್ಟಿ, ಸಂಭಾಷಣೆ ಎಲ್ಲ ನನ್ನವು. ಆದ ಘಟನೆಗಳ ಮೂಲ ಮಾಹಿತಿಗೆ ಚ್ಯುತಿ ಬರದಂತೆ.

Monday, September 08, 2014

'ಫಾಲ್ಕನ್' ಎಂಬ ಖಲಿಸ್ತಾನಿ ಡಬಲ್ ಏಜೆಂಟ್ ಹೀಗೆ ಮುಗಿದುಹೋಗಿದ್ದ!

೧೯೯೦. ಅಮೃತಸರ್, ಪಂಜಾಬ್.

ಆತ ಒಬ್ಬ ಖಲಿಸ್ತಾನಿ ಮುಖಂಡ. ಸಿಖ್ ಯುವ ಮುಖಂಡ. ಉಗ್ರವಾದಿ ಅಂತ ಕೂಡ ಬ್ರಾಂಡ್ ಆಗಿದ್ದ. ಸುಮಾರು ವರ್ಷಗಳ ನಂತರ ಜೇಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಅವನನ್ನು ಭೆಟ್ಟಿ ಮಾಡುವವರ ಸಂಖ್ಯೆ ಜಾಸ್ತಿಯೇ ಇತ್ತು. ಅವತ್ತು ಸಹ ಹಾಗೇ ಆಯಿತು.

ಯಾರೋ ಎರಡು ಮೂರು ಜನ ಬಂದರು. ಮಾತಾಡಬೇಕು ಅಂದರು. ಪರಿಚಿತರೇ ಇರಬೇಕು. ಅವರೊಂದಿಗೆ ಮಾತಾಡುತ್ತ ಕೂತ. ಹೊರಗಿನ ಡ್ರಾಯಿಂಗ್ ರೂಮಿನಲ್ಲಿ. ಬಂದವರು ಹಂತಕರೆಂದು ಅವನಿಗೆ ಗೊತ್ತಿತ್ತಾ? ಇರಲಿಕ್ಕಿಲ್ಲ. ಸಂಶಯ ಬಂದಿತ್ತಾ? ಗೊತ್ತಿಲ್ಲ. ಮಾತಾಡಲು ಬಂದು ಕೂತವರು ಧರಿಸಿದ್ದ ನಿಲುವಂಗಿಯಂತಿದ್ದ ಸಿಖ್ ಜನರ ದಿರುಸಿನಲ್ಲಿ ಮಾತ್ರ ಕಾಡತೂಸು ತುಂಬಿದ ಪಿಸ್ತೂಲುಗಳು ಮೊರೆಯಲು ರೆಡಿಯಾಗಿ ಕೂತಿದ್ದವು.

ಕೊಲ್ಲಲು ಬಂದವರು ಮಾತಾಡುತ್ತ ಏಕೆ ಕೂತರು!?

ಯಾಕೆ!? why?

ಕೊಲ್ಲಲು ಬಂದವರು ಯಾಕೆ ಕಾಯುತ್ತ ಕುಳಿತರು ಅಂತ ನಂತರ ತಿಳಿಯಿತು.

ಅಷ್ಟರಲ್ಲಿ ಅವನ ಮನೆಯ ಲ್ಯಾಂಡ್ ಲೈನ್ ಫೋನ್ ರಿಂಗಾಯಿತು. ಆ ಫೋನ್ ಬೆಡ್ ರೂಮಿನಲ್ಲಿತ್ತು. ಯಾರೋ ಫೋನ್ ಎತ್ತಿದರು. ಹೊರ ಬಂದು, 'ಫೋನ್ ಇದೆ ನಿಮಗೆ,' ಅಂದು ಹೋದರು. 'ಒಂದು ನಿಮಿಷ. ಫೋನ್ ಬಂದಿದೆ. ಮಾತಾಡಿ ಬಂದು ಬಿಡುತ್ತೇನೆ. ನೀವು ಕುಳಿತಿರಿ,' ಅಂತ ಹೇಳಿದ ಖಲಿಸ್ತಾನಿ ಮುಖಂಡ ಎದ್ದು ಒಳಗೆ ಹೋದ.

ಹಂತಕರು ತಯಾರಾದರು. ಕೊಲ್ಲಲು ಮೊದಲನೇ ಸಿಗ್ನಲ್ ಬಂದಾಗಿತ್ತು. ಫೋನ್ ಬರುತ್ತದೆ ಅಂತ ಹಂತಕರಿಗೆ ಗೊತ್ತಿತ್ತು. ಅದೇ ಮೊದಲ ಸಿಗ್ನಲ್. ಆದರೆ ಇನ್ನೊಂದು ವಿಷಯ ಖಾತ್ರಿಯಾಗಬೇಕಿತ್ತು. ಅದು ಖಾತ್ರಿಯಾಗದೇ ಹಂತಕರು ಗುಂಡು ಹಾರಿಸಿ ಕೊಲ್ಲುವಂತಿರಲಿಲ್ಲ.

ಒಳಗೆ ಹೋದವ ಫೋನ್ ಎತ್ತಿಕೊಂಡು ಮಾತಾಡಲು ಶುರು ಮಾಡಿದ. ಹಂತಕರು ಸದ್ದಿಲ್ಲದೆ ಎದ್ದರು. ಕೊಲ್ಲುವ ಮೊದಲು ಹಂತಕರಿಗೆ ಒಂದು ಮುಖ್ಯ ವಿಷಯವನ್ನು ಅವನ ಫೋನ್ ಸಂಭಾಷಣೆಯ ಮೂಲಕವೇ ಖಾತ್ರಿ ಮಾಡಿಕೊಳ್ಳಬೇಕಿತ್ತು.

ಸನ್ನದ್ಧ ಹಂತಕರು ಡ್ರಾಯಿಂಗ್ ರೂಂ ಬಿಟ್ಟು ಎದ್ದು ಬಂದವರೇ, ಸೈಲೆಂಟ್ ಆಗಿ ಬೆಡ್ ರೂಂ ಹೊರಗೆ ನಿಂತು, ಫೋನ್ ಸಂಭಾಷಣೆ ಆಲಿಸಲು ನಿಂತರು. ಬಹಳ ಹೊತ್ತು ಕಾಯುವ ಸಂದರ್ಭ ಬರಲೇ ಇಲ್ಲ. ಅವನ ಸಾವಿನ ಘಳಿಗೆ ಬಂದಿತ್ತು ಅಂತ ಕಾಣುತ್ತದೆ. ಕೊಲ್ಲಲು ಎರಡನೇ ಮತ್ತು ಆಖ್ರೀ ಸಿಗ್ನಲ್ ಸಿಕ್ಕೇ ಬಿಟ್ಟಿತು.

'ಹಲೋ ! ಸತ್ ಶ್ರೀ ಅಕಾಲ್ ಜೀ! ಕೆನಡಾದಿಂದ ಮಾತಾಡುತ್ತಿದ್ದೀರಾ? ಏನು ವಿಷಯ?' ಅಂತ ಕೇಳಿದ ಖಲಿಸ್ತಾನಿ ಯುವ ಮುಖಂಡ.

ಕೆನಡಾ!

ಇದೇ! ಇದೇ ಒಂದನ್ನು ಖಾತ್ರಿ ಮಾಡಿಕೊಳ್ಳಬೇಕಾಗಿತ್ತು. ಫೋನ್ ಕೆನಡಾದಿಂದ ಬಂದಿದೆ ಅಂತ ಖಾತ್ರಿಯಾಯಿತು.

ಹಂತಕರಿಗೆ ಕೊಟ್ಟ ಸುಪಾರಿಯಲ್ಲಿ ಅದೊಂದು ಕರಾರನ್ನು ಹಾಕಲಾಗಿತ್ತು. 'ಕೆನಡಾದಿಂದ ಫೋನ್ ಬರುತ್ತದೆ. ಇವನು ಕೆನಡಾ  ಫೋನ್ ಕಾಲ್ ಮೇಲೆ ಇದ್ದಾನೆ ಅಂತ ಖಾತ್ರಿಯಾದ ಮೇಲೆಯೇ ಅವನಿಗೆ ಗುಂಡಿಕ್ಕಿ. ಆಕಡೆಯಿರುವ ಕೆನಡಾದ ಮನುಷ್ಯನಿಗೆ ಗುಂಡು ತಿಂದ ಇವನ ಚೀತ್ಕಾರ ಕೇಳಬೇಕು!' ಅಂತ.

ಫೋನ್ ಬಂತು. ಕೆನಡಾದಿಂದ. ಮಾತಾಡುತ್ತಿದ್ದಾನೆ. ಖಾತ್ರಿಯಾಯಿತಲ್ಲ? ಮತ್ತೇನು? ಬಂದಿದ್ದ ಹಂತಕರಿಗೆ ಕೊಲ್ಲುವದು ಹೊಸದೇ? ಒಳಗೆ ಬಂದವರೇ ಢಂ! ಢಂ! ಅಂತ ಗುಂಡು ನುಗ್ಗಿಸಿದರು. ಫುಲ್ ಮ್ಯಾಗಜಿನ್ ಖಾಲಿ ಮಾಡಿದರು. 'ವಾಹೇ ಗುರು!' ಅಂತ ಚೀರುತ್ತ ಕುಸಿದ ಸಿಖ್ ಯುವ ಮುಖಂಡ. ಗುಂಡು ಹೊಡೆದವರು ಪರಾರಿ. ಗೇಮ್ ಓವರ್!

ಆಕಡೆ ಕೆನಡಾದಲ್ಲಿ ಅದನ್ನೆಲ್ಲ ಒಂದು ತರಹದ ಸಮಾಧಿ ಸ್ಥಿತಿಯಲ್ಲಿ ಕುಳಿತು ಕೇಳಿದ ಒಬ್ಬ ಸಿಖ್ ಉಗ್ರವಾದಿ ಮುಖಂಡ, ತನ್ನ ಕೆಲಸ ಆದ ಸಂತೃಪ್ತಿಯಲ್ಲಿ ಉದ್ದನೆ ಗಡ್ಡ ನೀವಿಕೊಂಡ. 'ಬೆಹೆನ್ ಚೋದ್! ಸಾಲಾ! ಸತ್ತ' ಅಂತ ಪಂಜಾಬಿಯಲ್ಲಿ ಬೈಯುತ್ತ ಫೋನ್ ಇಟ್ಟ.

ಹರಮಿಂದರ್ ಸಿಂಗ್ ಸಂಧು ಅನ್ನುವ ಒಬ್ಬ ಸಿಖ್ ಯುವ ಮುಖಂಡ ಹೀಗೆ ಮುಗಿದುಹೋಗಿದ್ದ. ಇದರೊಂದಿಗೆ ಖಲಿಸ್ತಾನಿ ಉಗ್ರರ ಒಂದು ಸಂತತಿ ಪೂರ್ತಿ ಮುಗಿದಂತಾಗಿತ್ತು. ಹಳೆ ಉಗ್ರ ಭಿಂದ್ರನವಾಲೆ ಗುಂಪಿನ ಕೊನೇ ಪಳೆಯುಳಿಕೆ ಹೀಗೆ ಅಂತ್ಯ ಕಂಡಿತ್ತು.

ಯಾರಾಗಿದ್ದ ಈ ಹರಮಿಂದರ್ ಸಿಂಗ್ ಸಂಧು?

ಖಲಿಸ್ತಾನಿ ಉಗ್ರಗಾಮಿಗಳ ನಾಯಕ ಜರ್ನೇಲ್ ಸಿಂಗ್ ಭಿಂದ್ರನವಾಲೆಯ ಏಕ್ದಂ ಖಾಸಮ್ ಖಾಸ್ ಮನುಷ್ಯ. ಅವನೊಂದಿಗೇ ಇರುತ್ತಿದ್ದ. ಸಿಖ್ ಯುವಕರ ಉಗ್ರಗಾಮಿ ಸಂಘಟನೆಯಲ್ಲಿ ದೊಡ್ಡ ಹುದ್ದೆಯಿತ್ತು. ಭಿಂದ್ರನವಾಲೆ ಹೇಳಿದ್ದನ್ನ ಇಂಗ್ಲೀಷಿಗೆ ಇವನೇ ತರ್ಜುಮೆ ಮಾಡುತ್ತಿದ್ದ. ಇನ್ನೂ ಚಿಕ್ಕವ. ಮೂವತ್ತೈದರಕಿಂತ ಕಮ್ಮಿ ವಯಸ್ಸು.

ಇಷ್ಟೇ ಆಗಿದ್ದರೆ ದೊಡ್ಡ ಮಾತಲ್ಲ ಬಿಡಿ. ಇಂತಹ ಹರಮಿಂದರ್ ಸಿಂಗ್ ಸಂಧು ಭಾರತೀಯ ಬೇಹುಗಾರಿಕೆ ಸಂಸ್ಥೆಗಳು ಖಲಿಸ್ತಾನಿ ಉಗ್ರಗಾಮಿಗಳ ನಡುವೆ ನುಗ್ಗಿಸಿದ್ದ ಮೋಲ್ (mole) ಆಗಿದ್ದನೇ? ಒಳಗಿದ್ದೇ ಎಲ್ಲ ಮಾಹಿತಿ ಕೊಡುತ್ತಿದ್ದನೇ? ಹಾಗಾಗಿಯೇ ಆಪರೇಷನ್ ಬ್ಲೂಸ್ಟಾರ್ ಆದಾಗ, ಎಲ್ಲ ದೊಡ್ಡ ದೊಡ್ಡ ಉಗ್ರಗಾಮಿಗಳು ಅದರಲ್ಲಿ ಸತ್ತು ಹೋದರೂ, ಇವನೊಬ್ಬನೇ ಬದುಕಿ ಬಂದನೇ? ಗದ್ದಾರಿ ಮಾಡಿದ್ದ ಎಂದೇ ಮುಂದೆ ಸಿಖ್ ಉಗ್ರವಾದಿಗಳು ಇವನನ್ನು ಉಡಾಯಿಸಿಬಿಟ್ಟರೇ? ಹೀಗೆಲ್ಲ ಖತರ್ನಾಕ್ ಪ್ರಶ್ನೆಗಳು, ಊಹಾಪೋಹಗಳು ಎದ್ದವು.

೧೯೮೪ ರಲ್ಲಿ ಆಪರೇಷನ್ ಬ್ಲೂಸ್ಟಾರ್ ಮಾಡಲಾಯಿತು. ಅಮೃತಸರದ ಸ್ವರ್ಣ ಮಂದಿರದೊಳಗೆ ಹೊಕ್ಕಿಕೊಂಡಿದ್ದ ಸಿಖ್ ಉಗ್ರವಾದಿಗಳನ್ನು flush out ಮಾಡಲು ಹಾಕಿಕೊಂಡಿದ್ದ ಕಾರ್ಯಾಚರಣೆ ಅದು. 'ನಮ್ಮ ಸೇನೆ, ಟ್ಯಾಂಕ್, ಪವರ್ ಎಲ್ಲ ನೋಡಿ ಒಳಗಿದ್ದ ಉಗ್ರವಾದಿಗಳು ಹೆದರುತ್ತಾರೆ. ಶರಣಾಗತರಾಗಿ ಅಂತ ಆವಾಜ್ ಹಾಕಿದ ಕೂಡಲೇ ತೆಪ್ಪಗೆ ಹೊರಬರುತ್ತಾರೆ. ಏನೂ ಹೆಚ್ಚು ಕೆಲಸವಿಲ್ಲದೆ, ಟೆನ್ಷನ್ ಮತ್ತೊಂದು ಇಲ್ಲದೆ ಅವರನ್ನು ಅರೆಸ್ಟ್ ಮಾಡಿ, ಸ್ವರ್ಣಮಂದಿರ ಕ್ಲೀನ್ ಮಾಡಿ, ಪಂಜಾಬ್ ಸಮಸ್ಯೆಗೆ ಒಂದು ಮಂಗಳ ಹಾಡೋಣ,' ಅಂತ ಅಂದುಕೊಂಡಿತ್ತು ಆವತ್ತಿನ ಇಂದಿರಾ ಗಾಂಧಿ ಸರಕಾರ. ಉಗ್ರವಾದಿಗಳು ತಿರುಗಿ ಬಿದ್ದರೆ ಯಾವದಕ್ಕೂ ಇರಲಿ ಅಂತ ಎಲ್ಲ ಸಿದ್ಧತೆ ಕೂಡ ಮಾಡಿಟ್ಟುಕೊಂಡಿತ್ತು. ಆದರೆ ಒಳಗಿದ್ದ ಭಿಂದ್ರನವಾಲೆ ಕುದ್ದು ಹೋಗಿದ್ದ. ಒಂದು ಕಾಲದಲ್ಲಿ ತನ್ನನ್ನು ಎತ್ತಿ ಕಟ್ಟಿ, ಈಗ ಕಾಲ ಕಸದಂತೆ ಪಕ್ಕ ಸರಿಸಲು ಸರಕಾರ ಹಾಕಿಕೊಂಡಿದ್ದ ಯೋಜನೆ ಅವನಿಗೆ ಸುತಾರಾಂ ಮಂಜೂರ್ ಇರಲಿಲ್ಲ. ಅದಕ್ಕೆಂದೇ ಒಂದು do or die ಹೋರಾಟಕ್ಕೆ ಸಿದ್ಧನಾಗೇ ಕುಳಿತಿದ್ದ. ಸಾಕಷ್ಟು ಶಸ್ತ್ರಾಸ್ತ್ರ ಜಮಾ ಮಾಡಿಕೊಂಡಿದ್ದ. ಬಚ್ಚಿಟ್ಟುಕೊಳ್ಳಲು ಬಂಕರ್ ನಿರ್ಮಾಣ ಮಾಡಿಕೊಂಡಿದ್ದ. ಮುಖ್ಯವಾಗಿ ಭಾರತ ಸೈನ್ಯದ ಅರಿಭಯಂಕರ ಮಾಜಿ ಸೇನಾನಿ ಶಾಬೇಗ್ ಸಿಂಗ್ ಭಿಂದ್ರನವಾಲೆ ಜೊತೆ ಸೇರಿಕೊಂಡುಬಿಟ್ಟಿದ್ದ. ಅಲ್ಲಿಗೆ battle lines were drawn!

ಶಾಬೇಗ್ ಸಿಂಗ್ - ಸೇನೆಯಲ್ಲಿ ದೊಡ್ಡ ಹೆಸರು. ೧೯೭೧ ರಲ್ಲಿ ಆದ ಬಾಂಗ್ಲಾದೇಶ ವಿಮೋಚನೆ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾದೇಶದ 'ಮುಕ್ತಿ ಬಾಹಿನಿ' ಗೆರಿಲ್ಲಾ ಪಡೆ ತಯಾರು ಮಾಡಿ, ಅವರನ್ನು ಪಾಕ್ ಸೈನ್ಯದ ವಿರುದ್ಧ ಬಿಟ್ಟು, ಪಾಕ್ ಸೈನ್ಯಕ್ಕೆ ಸಾಕೋ ಸಾಕಾಗಿ ಹೋಗುವಂತೆ ಮಾಡಿ, ದೊಡ್ಡ ಹೆಸರು ಸಂಪಾದಿಸಿದ್ದ ಶಾಬೇಗ್ ಸಿಂಗ್. ಮುಂದೆ ನಿವೃತ್ತನಾದ ಬಳಿಕ ಭಿಂದ್ರನವಾಲೆಯ ಮಾತಿನ ಮೋಡಿಗೆ ಸಿಕ್ಕ. ಗುರು ಭಿಂದ್ರನವಾಲೆಯ ಉಪದೇಶದ ಆಫೀಮು ಧರ್ಮದ ಮತ್ತೇರಿಸಿತು. ಮತಾಂಧತೆ ಕವಿಯಿತು. ಖಲಿಸ್ತಾನ್ ಬೇಕೇ ಬೇಕು ಅಂತ ನಿಕ್ಕಿ ಮಾಡಿಕೊಂಡು, ಖಲಿಸ್ತಾನಿ ಉಗ್ರರ ತರಬೇತಿಗೆ ನಿಂತುಬಿಟ್ಟ ಶಾಬೇಗ್ ಸಿಂಗ್. ದೊಡ್ಡ ಗೆರಿಲ್ಲಾ ಪಡೆ ತಯಾರ್ ಮಾಡಿಬಿಟ್ಟ. ಅದೇ ಗೆರಿಲ್ಲಾ ಪಡೆ ಈಗ ಭಾರತದ ಸೈನ್ಯದೊಂದಿಗೆ ಹೋರಾಟಕ್ಕೆ ನಿಂತಿತ್ತು. ಸ್ವರ್ಣ ಮಂದಿರದಲ್ಲೇ ಹೊಕ್ಕಿಕೊಂಡು ಹೇಗೆ ಗೆರಿಲ್ಲಾ ಆಪರೇಷನ್ ಮಾಡಬೇಕು ಅಂತ ಶಾಬೇಗ್ ಸಿಂಗ್ ಬರೋಬ್ಬರಿ ಸ್ಕೆಚ್ ಹಾಕಿದ್ದ. sniper ಗುಂಡು ಹೊಡೆಯಲು ಸಿದ್ಧ ಮಾಡಿಕೊಂಡಿದ್ದ ಪಿಲ್ ಬಾಕ್ಸ್ ಗೂಡುಗಳ ಎಜ್ಜೆಯಿಂದ ಹಣಕುತ್ತಿದ್ದ ಅವನ ಕಣ್ಣುಗಳಲ್ಲಿ ಕಾಣುತ್ತಿದ್ದುದು ಶುದ್ಧ ದ್ವೇಷದ ಬೆಂಕಿ. ಹಗೆಯ ಹೊಗೆ.

ಮುಂದೆ ಆಗಿದ್ದೆಲ್ಲ ಗೊತ್ತಲ್ಲ? ದೊಡ್ಡ ಪ್ರಮಾಣದ ಕಾರ್ಯಾಚರಣೆ ಮಾಡಿ, ಟ್ಯಾಂಕುಗಳನ್ನೇ ಹಚ್ಚಿ, ಸ್ವರ್ಣ ಮಂದಿರವನ್ನು ದೊಡ್ಡ ಮಟ್ಟಿಗೆ ಉಡಾಯಿಸಿ, ಸುಮಾರು ಆರು ನೂರು ಸೈನಿಕರು, ಕಮಾಂಡೋಗಳ ಆಹುತಿ ಕೊಟ್ಟು, ಹೇಗೋ ಮಾಡಿ ಉಗ್ರರ ಮಟ್ಟ ಹಾಕಿಯಾಯಿತು. ಉಗ್ರರ ನಾಯಕ ಜರ್ನೇಲ್ ಸಿಂಗ್ ಭಿಂದ್ರನವಾಲೆ, ಅವನ ಬಲಗೈ ಬಂಟ ಅಮ್ರೀಕ್ ಸಿಂಗ್, ನಿವೃತ್ತ ಸೇನಾನಿ ಶಾಬೇಗ್ ಸಿಂಗ್, ಇನ್ನೂ ಹಲವು ದೊಡ್ಡ ದೊಡ್ಡ ಉಗ್ರಗಾಮಿಗಳು ಸತ್ತು ಹೋದರು.

ಕಾರ್ಯಾಚರಣೆಯನ್ನು ಗಮನಿಸುತ್ತಿದ್ದವರಿಗೆ ಭಯಂಕರ ಆಶ್ಚರ್ಯವಾದ ಸಂಗತಿ ಅಂದರೆ ಕೊನೆಯಲ್ಲಿ ಇದೇ ಹರಮಿಂದರ್ ಸಿಂಗ್ ಸಂಧು ಕೈಯೆತ್ತಿಕೊಂಡು, ಇತರೆ ಶರಣಾಗತರ ಜೊತೆ ಹೊರಗೆ ಬಂದುಬಿಟ್ಟಿದ್ದು!

ಕಟ್ಟರ್ ಉಗ್ರವಾದಿಗಳೆಲ್ಲ ಬಡಿದಾಡುತ್ತಲೇ ವೀರಮರಣ ಹೊಂದಿದ್ದರು. ಬಂದು ಶರಣಾದವರಲ್ಲಿ ಜನ ಸಾಮಾನ್ಯರೇ ಜಾಸ್ತಿ. ಪಾಪ! ಅವರು ಪೂಜೆಗೆ ಬಂದವರು ಈ ಲಫಡಾದಲ್ಲಿ ಸಿಕ್ಕಾಕಿಕೊಂಡಿದ್ದರು. ಎಷ್ಟೋ ಜನ ನಿಷ್ಪಾಪಿಗಳು ಕ್ರಾಸ್ ಫೈರಿಂಗ್ ನಲ್ಲಿ ಸಿಕ್ಕಿ ಸತ್ತು ಕೂಡ ಹೋದರು. ಇನ್ನು ಕೆಲವರನ್ನು ಪೊರಪಾಟಿನಲ್ಲಿ ಸೈನ್ಯ, ಸಿಖ್ ಉಗ್ರವಾದಿಗಳು ಕೊಂದರು.

ಆವಾಗಲೇ ಕೆಲವರು ಕೇಳಿದ್ದರು, 'ಅಲ್ಲ, ಈ ಆಸಾಮಿ ಹರಮಿಂದರ್ ಸಿಂಗ್ ಸಂಧು ಹೇಗೆ ಬಚಾವಾದಾ? ಅವನ ಜೊತೆಗಿದ್ದವರೆಲ್ಲ ಸತ್ತು ಹೋದರು. ಇವನೊಬ್ಬನೇ ಎಸ್ಕೇಪ್. ಏನೋ ಕರಾಮತ್ತು ಇದ್ದಂಗೆ ಇದೆ ಇವನೊಬ್ಬನೇ ಜೀವಂತ ಉಳಿದುಕೊಂಡಿರುವದರಲ್ಲಿ!' ಅಂತ.

ನಂತರ ಎಲ್ಲಿಂದಲೋ ಮಾಹಿತಿ ಲೀಕ್ ಆಯಿತು. ಅಥವಾ ಬೇಕಂತಲೇ ಲೀಕ್ ಮಾಡಲಾಯಿತು. 'ಈ ಹರಮಿಂದರ್ ಸಿಂಗ್ ಸಂಧು ಸರ್ಕಾರಿ ಏಜೆಂಟ್ ಆಗಿದ್ದ. ಭಿಂದ್ರನವಾಲೆ ಜೊತೆಗೇ ಇದ್ದು, ಒಳಗಿನ ಮಾಹಿತಿಯೆಲ್ಲ ಸರ್ಕಾರಕ್ಕೆ ತಲುಪಿಸುತ್ತಿದ್ದ,' ಅಂತ.

ಮುಂದೆ ಸುಮಾರು ಐದು ವರ್ಷ ಅಂದರೆ ೧೯೮೪ ರಿಂದ ೧೯೮೯ ರ ವರೆಗೆ ಜೈಲಿನಲ್ಲಿ ಇದ್ದ. ೧೯೮೯ ರಲ್ಲಿ ಚುನಾವಣೆ ನಡೆದು, ರಾಜೀವ್ ಗಾಂಧಿ ಸರಕಾರ ಅಧಿಕಾರ ಕಳೆದುಕೊಂಡಿತು. ಕುರ್ಚಿ ಬಿಟ್ಟು ಹೋಗುವ ಮುಂಚೆ ಜೈಲಿನಲ್ಲಿ ಇದ್ದ ಸಿಖ್ ಉಗ್ರವಾದಿಗಳನ್ನು ಬಿಡುಗಡೆ ಮಾಡಿ ಹೋಗಿಬಿಟ್ಟಿತು! 'ಮುಂದೆ ಬರುವ ವೀ.ಪಿ. ಸಿಂಗ್ ಸರಕಾರಕ್ಕೆ ತೊಂದರೆ ಕೊಟ್ಟು ಸಾಯಿರಿ ಮಕ್ಕಳಾ!' ಅನ್ನುವ ರೀತಿಯಲ್ಲಿ ಬಿಡುಗಡೆ ಮಾಡಿ ಹೋಗಿಬಿಟ್ಟಿತು. ಅಧಿಕಾರ ಕಳೆದುಕೊಂಡು ಹೋಗುತ್ತಿರುವವರ ಕೆಟ್ಟ ಬುದ್ಧಿ.

ಹರ್ಮಿಂದರ್ ಸಿಂಗ್ ಸಂಧು ಬಿಡುಗಡೆಯಾದದ್ದು ಹೀಗೆ. ಜೊತೆಗೆ ಬಿಡುಗಡೆಯಾದ ಉಗ್ರಗಾಮಿಗಳಲ್ಲಿ ಮಂಜಿತ್ ಸಿಂಗ್ ಅನ್ನುವವ ಸಹಿತ ಇದ್ದ. ಈ ಮಂಜಿತ್ ಸಿಂಗ್ ಯಾರು ಅಂತ ನೋಡಿದರೆ ಅವನು ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಮೃತನಾಗಿದ್ದ ಅಮ್ರೀಕ್ ಸಿಂಗ್ ಎಂಬ ಭಿಂದ್ರನವಾಲೆಯ ಖಾಸಾ ಶಿಷ್ಯನ ತಮ್ಮ.

ಹೊರಬಂದ ಹರ್ಮಿಂದರ್ ಸಿಂಗ್ ಸಂಧು, ಮಂಜೀತ್ ಸಿಂಗ್ ಇಬ್ಬರೂ ಸಿಖ್ ವಿದ್ಯಾರ್ಥಿ ಪರಿಷತ್ತಿನಲ್ಲಿ ತಮ್ಮ ತಮ್ಮ ಸ್ಥಾನ ಅಲಂಕರಿಸಿ, ಮತ್ತೆ ಕಿತಾಪತಿ ಶುರು ಮಾಡಿದರು. ವೀಪಿ ಸಿಂಗರ ಹೊಸ ಸರಕಾರವಿತ್ತು ನೋಡಿ. ಸ್ವಲ್ಪ ಸಲುಗೆ ಕೊಟ್ಟಿತ್ತು. ಮತ್ತೆ ಏನಾದರೂ ಖಡಕ್ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಮೆಜಾರಿಟಿ ಇದ್ದರೆ ತಾನೇ.

ಅದೇ ಹೊತ್ತಿನಲ್ಲಿ ಈ ಹರ್ಮಿಂದರ್ ಸಿಂಗ್ ಗದ್ದಾರ್ ಅನ್ನುವ ಮಾಹಿತಿ ಲೀಕ್ ಆಯಿತು. 'ಫಾಲ್ಕನ್ ಅಂತ ಕೋಡ್ ನೇಮ್ ಹೊಂದಿದ್ದ ಸರ್ಕಾರಿ ಏಜೆಂಟ್ ಬೇರೆ ಯಾರೂ ಅಲ್ಲ. ಇದೇ ಹರ್ಮಿಂದರ್ ಸಿಂಗ್ ಸಂಧು,' ಅಂತ ಎಲ್ಲ ಕಡೆ ಗುಸು ಗುಸು. ಈ ತರಹ ಮಾಹಿತಿ ಲೀಕ್ ಔಟ್ ಆಗುವದು ಅಂದರೆ ಏಜೆಂಟ್ ಒಬ್ಬನ ಡೆತ್ ವಾರಂಟಿಗೆ ಸಹಿ ಬಿದ್ದ ಹಾಗೆಯೇ. ಬೇಹುಗಾರಿಕೆ ಭಾಷೆಯಲ್ಲಿ ಇದನ್ನು blowing off the cover ಅನ್ನುತ್ತಾರೆ. ಒಮ್ಮೆ ಒಬ್ಬ ಏಜೆಂಟನ ಕವರ್ ಬ್ಲೋ ಆಯಿತು ಅಂದರೆ ಅವನು ಟೋಟಲ್ ಸ್ಕ್ರಾಪ್. ನಸೀಬ್ ಸರಿ ಇದ್ದರೆ, ಪಿಂಚಣಿ ಗಿಂಚಣಿ ಕೊಟ್ಟರೆ, ತೆಗೆದುಕೊಂಡು ಇರಬಹುದು. ಇಲ್ಲದಿದ್ದರೆ, 'ಯಾರು ಯಾವಾಗ ಬಂದು ಮಟಾಶ್ ಮಾಡುತ್ತಾರೋ!?' ಅಂತ ದಿನ ಲೆಕ್ಕ ಮಾಡುತ್ತಿರಬೇಕಾದಂತಹ ಆತಂಕದ ಪರಿಸ್ಥಿತಿ.

ಏನೇನು ಸಮೀಕರಣಗಳು ವರ್ಕ್ ಔಟ್ ಆಗಿ, ಏನೇನು ಡೀಲಿಂಗ್ ಗಳು ಅದವೋ ಗೊತ್ತಿಲ್ಲ. ಒಟ್ಟಿನಲ್ಲಿ ಕೆನಡಾದಲ್ಲಿ ಕುಳಿತಿದ್ದ ಸಿಖ್ ಖಲಿಸ್ತಾನಿ ಮುಖಂಡನೊಬ್ಬ ಹರ್ಮಿಂದರ್ ಸಿಂಗ್ ಸಂಧುವಿನ ಹತ್ಯೆಗೆ ಸುಪಾರಿ ಕೊಟ್ಟು ಬಿಟ್ಟ. ಯಾರಿಗೆ ಕೊಟ್ಟ? ಮತ್ಯಾರಿಗೆ ಕೊಟ್ಟಾನು? ಮತ್ತೊಬ್ಬ ಯಾರೋ ಉಗ್ರಗಾಮಿಗೇ ಕೊಟ್ಟ. ಅವನೇ ಸುಪಾರಿ ತೆಗೆದುಕೊಂಡು ಕೆಲಸ ಮುಗಿಸಿದನೇ ಅಥವಾ ಸಬ್ ಕಾಂಟ್ರಾಕ್ಟ್ ಕೊಟ್ಟನೋ ಗೊತ್ತಿಲ್ಲ.

ಆ ಕೆನಡಾದ ಉಗ್ರಗಾಮಿ ನಾಯಕ ಹರ್ಮಿಂದರ್ ಸಿಂಗ್ ಸಂಧು ಮಾಡಿದ್ದ ಗದ್ದಾರಿಯಿಂದ ಅದೆಷ್ಟು ಕ್ರುದ್ಧನಾಗಿದ್ದನೋ ಏನೋ. 'ಅವನು ಗುಂಡು ತಿಂದು ಚೀರುವದನ್ನು, ನರಳುವದನ್ನು ನಾನು ಕೇಳಲೇ ಬೇಕು. ಅದಕ್ಕೇ ನನ್ನ ಫೋನ್ ಬಂದಾಗಲೇ ಅವನಿಗೆ ಗೋಲಿ ಹೊಡೆಯಿರಿ,' ಅಂತ ಹೇಳಿ ಹೆಚ್ಚಿನ ಸೂಚನೆ ಬೇರೆ ಕೊಟ್ಟಿದ್ದ. ಅದನ್ನು ಪಾಲಿಸಿದ್ದ ಸುಪಾರಿ ಹಂತಕರು, ಸರಿಯಾಗಿ ನೋಡಿಕೊಂಡು, ಕೆನಡಾದಿಂದಲೇ ಫೋನ್ ಬಂದಿದೆ ಅಂತ ಖಾತ್ರಿ ಮಾಡಿಕೊಂಡ ಮೇಲೆಯೇ ಗುಂಡು ಹಾರಿಸಿ ಕೊಂದಿದ್ದರು. ಕೊಟ್ಟ ಸುಪಾರಿ ಸರಿಯಾಗಿ ನಿಭಾಯಿಸಿದ್ದರು.

ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಸತ್ತಿದ್ದ ಉಗ್ರವಾದಿ ಅಮ್ರೀಕ್ ಸಿಂಗನ ತಮ್ಮ ಮಂಜೀತ್ ಸಿಂಗನೇ ಕೆನಡಾದಲ್ಲಿ ಇದ್ದ ಉಗ್ರವಾದಿ ನಾಯಕನನ್ನು ಹಿಡಿದು, ಹರ್ಮಿಂದರ್ ಸಿಂಗನ ಗದ್ದಾರಿಯನ್ನೆಲ್ಲ ಹೇಳಿ, ಜಾಸ್ತಿ ಮಸಾಲೇನೂ ಹಾಕಿ, ಸುಪಾರಿ ಕೊಡುವಂತೆ ಮಾಡಿ, ಹರಮಿಂದರ್ ಸಿಂಗ್ ಸಂಧುವನ್ನು ತೆಗೆಸಿಬಿಟ್ಟ ಅಂತ ಗುಸು ಗುಸು ಸುದ್ದಿಯಾಯಿತು. ಒಟ್ಟಿನಲ್ಲಿ ಮಂಜಿತ್ ಸಿಂಗನ ಪ್ರತಿಸ್ಪರ್ಧಿಯೊಬ್ಬ ಹಾದಿಯಿಂದ ಪಕ್ಕಕ್ಕೆ ಸರಿದಿದ್ದ. ಸಿಖ್ ವಿದ್ಯಾರ್ಥಿ ಪರಿಷದ್ ಈಗ ಫುಲ್ ಮಂಜಿತ್ ಸಿಂಗ್ ಕೈಯಲ್ಲಿ ಬಂದಿತ್ತು.

ಹರಮಿಂದರ್ ಸಿಂಗ್ ಸಂಧು ನಿಜವಾಗಿ ಸರ್ಕಾರಿ ಏಜೆಂಟ್ ಆಗಿದ್ದನೇ?

ಇತೀಚಿನ ಕೆಲವೊಂದು ಮಾಹಿತಿ ಪ್ರಕಾರ ನಿಜವಾದ ಸರ್ಕಾರಿ ಏಜೆಂಟ್ ಅಮ್ರೀಕ್ ಸಿಂಗ್ ಆಗಿದ್ದ. ಗದ್ದಾರಿ ಮಾಡಿದವ ಅವನಾಗಿದ್ದ. ನಿಜವಾದ ಫಾಲ್ಕನ್ ಅವನೇ ಆಗಿದ್ದ. ಅವನಂತೂ ಆಪರೇಷನ್ ಬ್ಲೂಸ್ಟಾರ್ ಆದಾಗಲೇ ಸತ್ತು ಹೋಗಿದ್ದ. ಅವನೇ ಸರಕಾರಿ ಏಜೆಂಟ್ ಆಗಿದ್ದರೂ ಅವನನ್ನು ಉಳಿಸಿಕೊಂಡು ಸರ್ಕಾರಕ್ಕೆ ಆಗಬೇಕಾಗಿದ್ದು ಏನೂ ಇರಲಿಲ್ಲ ಬಿಡಿ.

ಹಾಗಿದ್ದರೆ ಈಗ ಈ ಹರಮಿಂದರ್ ಸಿಂಗ್ ಸಂಧುವಿನ ಮೇಲೆ ಗದ್ದಾರ್ ಅಂತ disinformation campaign ಅನ್ನುವಂತಹದನ್ನು ಮುದ್ದಾಂ ಬೇಕಂತಲೇ ಮಾಡಲಾಯಿತೇ? ಯಾಕೆ? ಒಂದು ವೇಳೆ ಅಮ್ರೀಕ್ ಸಿಂಗನೇ ನಿಜವಾದ ಸರ್ಕಾರಿ ಮಾಹಿತಿದಾರ ಆಗಿದ್ದರೆ, ಒಂದಲ್ಲ ಒಂದು ದಿವಸ ಅದು ಹೊರಗೆ ಬಂದು, ಅವನ ತಮ್ಮ ಮಂಜೀತ್ ಸಿಂಗನ ಬುಡಕ್ಕೇ ಬಂದರೆ ಅನ್ನುವ ಭಯದಿಂದಲೇ? ಹಾಗೇನಾದರೂ ಆದರೆ ಅವನ ರಾಜಕೀಯ ಭವಿಷ್ಯದ ಗತಿ ಏನಾಗಬೇಕು? ಅದಕ್ಕೇ ಸರ್ಕಾರದೊಂದಿಗೆ ಡೀಲ್ ಕುದುರಿಸಿದ ಮಂಜೀತ್ ಸಿಂಗ್, ಈ ಹರಮಿಂದರ್ ಸಿಂಗ್ ಸಂಧು ಗದ್ದಾರ್ ಅನ್ನುವಂತೆ ಸುಳ್ಳು ಮಾಹಿತಿ ಹರಿಬಿಟ್ಟು, ಖಾಲಿಸ್ತಾನಿ ಉಗ್ರರನ್ನು ಎತ್ತಿ ಕಟ್ಟಿ, ಅವನನ್ನು ನಿಕಾಲಿ ಮಾಡಿಸಿದನೇ? ಇದ್ದರೂ ಇರಬಹುದು. ಅಣ್ಣ ಅಮ್ರೀಕ್ ಸಿಂಗನ ಗದ್ದಾರಿಯನ್ನು ಮುಚ್ಚಿ ಹಾಕಿದ ಹಾಗೂ ಆಯಿತು, ತನ್ನ ಪ್ರತಿಸ್ಪರ್ಧಿ ಹರಮಿಂದರ್ ಸಿಂಗ್ ಸಂಧುನನ್ನು ದಾರಿಯಿಂದ ಸರಿಸಿದಂತಲೂ ಆಯಿತು, ಅಂತ ಸ್ಕೀಮ್ ಹಾಕಿದನೇ ಮಂಜೀತ್ ಸಿಂಗ್? ಗೊತ್ತಿಲ್ಲ. ಹಾಗಿತ್ತು ಅಂತಿದ್ದರೆ ಹರ್ಮಿಂದರ್ ಸಿಂಗ್ ಸಂಧು ವಿರುದ್ಧ disinformation campaign ಮಾಡಿ, ಅವನನ್ನು ಗದ್ದಾರ್ ಅಂತ ಸುಳ್ಸುಳ್ಳೇ ಜಾಹೀರು ಪಡಿಸಲು ಮಂಜೀತ್ ಸಿಂಗ್ ಸರ್ಕಾರದ ಜೊತೆ  ಡೀಲ್ ಮಾಡಿಕೊಂಡಿದ್ದನೇ? ಆ ಮೂಲಕ ಅವನೇ ಸರ್ಕಾರಿ mole ಆಗಿಬಿಟ್ಟನೇ?

ಯಾವದಕ್ಕೂ ಉತ್ತರ ಲಭ್ಯವಿಲ್ಲ. ಎಲ್ಲ ಉತ್ತರ ಸೀಲ್ ಮಾಡಿದ, classified ಸರ್ಕಾರಿ ಕಡತಗಳಲ್ಲಿ ಇರಬಹುದು. ಅಥವಾ ಆ ಸಮಯದ ಖತರ್ನಾಕ್ ಬೇಹುಗಾರರ ಮೆದುಳಲ್ಲಿ ಇರಬಹುದು. ಈ covert operations ಗಳ ದುನಿಯಾವೇ ಹೀಗೆ.

ಖಲಿಸ್ತಾನಿ ಉಗ್ರವಾದದ ಬಗ್ಗೆ ಓದುತ್ತ ಹೋದಂಗೆ ಉಗ್ರವಾದ ಎಲ್ಲಿ ಶುರುವಾಗುತ್ತದೆ, ಮುಗಿಯುತ್ತದೆ, ಎಲ್ಲಿ ಸರ್ಕಾರದ ಹಸ್ತಕ್ಷೇಪ ಶುರುವಾಗುತ್ತದೆ, ಸರ್ಕಾರ ಹೇಗೆ ಉಗ್ರವಾದಿಗಳನ್ನು ತನ್ನ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತದೆ, ಅದಕ್ಕೆ ಅಂತಲೇ ಹೇಗೆ ಉಗ್ರವಾದಿ ಸಂಘಟನೆಗಳನ್ನು infiltrate ಮಾಡುತ್ತದೆ, ಕೆಲಸ ಮುಗಿದ ನಂತರ ಏಜೆಂಟಗಳನ್ನು ಹೇಗೆ ಬಿಸಾಡುತ್ತದೆ ಅಂತೆಲ್ಲ ಅರಿಯುತ್ತ ಹೋದಂತೆ ತಿಳಿಯುವದು ಅಂದರೆ ಖಲಿಸ್ತಾನ ಸಮಸ್ಯೆ ಕೂಡ ಒಂದು ಸರ್ಕಾರವೇ ಮಾಡಿಕೊಂಡ ಕರ್ಮಕಾಂಡ ಅಂತ. ಒಮ್ಮೊಮ್ಮೆ ಅದು ನಮಗೇ ಉಲ್ಟಾ ಹೊಡೆಯುತ್ತದೆ. ಇಂದಿರಾ ಗಾಂಧಿ ಹುಟ್ಟು ಹಾಕಿದ್ದ ಭಿಂದ್ರನವಾಲೆ ಆಕೆಗೇ ಸೆಡ್ಡು ಹೊಡೆದು ನಿಂತ. ಮಾತು ಕೇಳಲಿಲ್ಲ. ಅವನನ್ನು ತೆಗೆದು, ಸಿಖ್ ಸಮುದಾಯಕ್ಕೆ ಒಂದು ದೊಡ್ಡ ಹೊಡೆತ ಕೊಟ್ಟು ಬಿಡಬೇಕು ಅಂದುಕೊಂಡು ಮಾಡಿದ ಬ್ಲೂಸ್ಟಾರ್ ಕಾರ್ಯಾಚರಣೆ ಎಕ್ಕುಟ್ಟಿ ಹೋಯಿತು. ಸಿಖ್ ಸಮುದಾಯ ಇಂದಿರಾ ಗಾಂಧಿ ವಿರುದ್ಧ ಮುರಕೊಂಡು ಬಿತ್ತು. ಎಲ್ಲಿಯವರೆಗೆ ಅಂದರೆ  ಮುಂದಿನ ನಾಕೇ ತಿಂಗಳಲ್ಲಿ ಇಂದಿರಾ ಗಾಂಧಿಯನ್ನೇ ತೆಗೆದು ಬಿಟ್ಟರು! ಶಿವನೇ ಶಂಭುಲಿಂಗ!

ಇಷ್ಟೆಲ್ಲ ಊಹೆ, ಇದ್ದರೂ ಇರಬಹುದು ಅನ್ನುವಂತಹ ಥಿಯರಿ ಎಲ್ಲ ಹಾಕಿಕೊಂಡು, ತಲೆ ಕೆಡಿಸಿಕೊಂಡು ಕೂತರೂ, 'ಎಲ್ಲ ಉಗ್ರವಾದಿಗಳು ಸತ್ತರೂ, ಹರ್ಮಿಂದರ್ ಸಿಂಗ್ ಸಂಧು ಒಬ್ಬನೇ ಹೇಗೆ ಬದುಕಿ ಬಂದ? ಅವನೇ ನಿಜವಾದ ಗದ್ದಾರ್ ಇದ್ದರೂ ಇರಬಹುದೇ?' ಅಂತ ಮತ್ತೆ ಬ್ಯಾಕ್ ಟು ಸ್ಕ್ವೇರ್ ಆದರೂ ಆಶ್ಚರ್ಯವಿಲ್ಲ. ಅದು ತಪ್ಪೂ ಅಲ್ಲ. :)

* ಹರ್ಮಿಂದರ್ ಸಿಂಗ್ ಸಂಧು ಉರ್ಫ್ ಫಾಲ್ಕನ್ ಹತ್ಯೆಯ ಬಗ್ಗೆ ಹೊಸ ಮಾಹಿತಿ ಸಿಕ್ಕಿದ್ದು ಕೆಳಗೆ ಹಾಕಿದ ಪುಸ್ತಕ ಓದಿದಾಗ. ಮೂಲ ಮಾಹಿತಿಗೆ ಚ್ಯುತಿ ಬರದಂತೆ ಹತ್ಯೆಯ ಸನ್ನಿವೇಶವನ್ನು dramatize ಮಾಡಿದ್ದು ನಾನು.  ಉಳಿದ ಮಾಹಿತಿ, ಊಹಾಪೋಹ ಬೇರೆ ಬೇರೆ ಪುಸ್ತಕಗಳಿಂದ, websites ಗಳಿಂದ ಎತ್ತಿದ್ದು.