Sunday, March 27, 2016

ಸಂಜೀವ್ ಕುಮಾರ್, ಸುಲಕ್ಷಣಾ ಪಂಡಿತ್ - ಬಾಲಿವುಡ್ಡಿನ ಪುರಾತನ ಹಿಟ್ ಜೋಡಿಯ ದುರಂತ ಕಥೆ

ಎಪ್ಪತ್ತನೇ (೧೯೭೦) ಇಸವಿಯ ಆಸುಪಾಸಿರಬಹುದು. ಮುಂಬೈ. ಆಗಿನ ಬಾಂಬೆ. ಸ್ಥಳ - ಯಾವದೋ ಒಂದು ಫಿಲ್ಮ್ ಸ್ಟುಡಿಯೋ.

'ಛಟೀರ್!' ಅಂತ ಆವಾಜ್  ಕೇಳಿಸಿತು. ಸಂಶಯವೇ ಬೇಡ. ಕಪಾಳಕ್ಕೆ ಬಾರಿಸಿದಾಗ ಹೊರಹೊಮ್ಮುವ ಶಬ್ದ. ಯಾರೋ ಯಾರಿಗೋ ಕಪಾಳಕ್ಕೆ ಬಾರಿಸಿದ್ದರು. ಸಾಕಷ್ಟು ಜೋರಾಗೇ ಬಾರಿಸಿದ್ದರು.

ನೋಡಿದರೆ ಒಬ್ಬ ಸಿನೆಮಾ ನಟ ಲಗುಬಗೆಯಲ್ಲಿ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಒಂದು ಕೆನ್ನೆಯ ಮೇಲೆ ಕೈಯಿಟ್ಟುಕೊಂಡು, ನೆಲ ನೋಡುತ್ತ, ಅಪಮಾನದಿಂದ ಗಡಿಬಿಡಿಯಲ್ಲಿ ಹೊರನಡೆಯುತ್ತಿದ್ದ. ಅನಿರೀಕ್ಷಿತವಾಗಿ ವಿನಾಕಾರಣ ಕಪಾಳಕ್ಕೆ ಏಟು ತಿಂದವರು ಒಂದು ತರಹದ ಪಾಪಪ್ರಜ್ಞೆ, ಮುಜುಗರ, ಅವಮಾನ, ಸಿಟ್ಟು, ಖೇದ, ವಿಷಾದ ಇತ್ಯಾದಿ ಭಾವನೆಗಳ ಮಿಶ್ರಣದಂತಿರುವ ಒಂದು ವಿಶೇಷ ಭಾವನೆಯನ್ನು ಮುಖದ ಮೇಲೆ ಹೊತ್ತು, ಒಂದು ವಿಶೇಷ ರೀತಿಯಲ್ಲಿ ನಡೆದು ಹೋಗುತ್ತಿರುತ್ತಾರೆ ನೋಡಿ. ಅದೇ ಮಾದರಿಯಲ್ಲಿ.

ಯಾವದೋ ಸಿನೆಮಾದ ಶೂಟಿಂಗಿನ ದೃಶ್ಯ ಅಂತ ಎಲ್ಲರೂ ಅಂದುಕೊಂಡರು. ಆದರೆ ಅದು ಯಾವದೇ ಸಿನಿಮಾದ ಶೂಟಿಂಗ್ ಆಗಿರಲಿಲ್ಲ. ಸಂಜೀವ್ ಕುಮಾರ್ ಎಂಬ ನಟನ ಕಪಾಳಕ್ಕೆ ನೂತನ್ ಎಂಬ ನಟಿ ಎಲ್ಲರ ಮುಂದೆಯೇ ಬಾರಿಸಿದ್ದಳು. ಎಲ್ಲರ ಸಮ್ಮುಖದಲ್ಲಾದ ದೊಡ್ಡ ಅವಮಾನದಿಂದ ಕುಸಿದುಹೋದ ನಟ ಅಲ್ಲಿಂದ ಹೊರಹೋಗುತ್ತಿದ್ದ.

ಸಂಜೀವ್ ಕುಮಾರ್

ಸಂಜೀವ್ ಕುಮಾರ್ ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ. Sanjeev Kumar the great actor ಅಂತ ಇನ್ನೂ ಖ್ಯಾತನಾಗಿರಲಿಲ್ಲ. ನೂತನ್ ಮಾತ್ರ ಆಗಲೇ ದೊಡ್ಡ ನಟಿ. ಮತ್ತೆ ನೂತನ್ ಸಿನಿಮಾ ಹಿನ್ನೆಲೆಯಿಂದ ಬಂದವಳು. ಅವಳ ತಾಯಿ ಶೋಭನಾ ಸಮರ್ಥ ಒಂದು ಕಾಲದ ದೊಡ್ಡ ನಟಿ. ತಂಗಿ ತನುಜಾ ಕೂಡ ನಟಿ. ಮತ್ತೆ ನೂತನಳಿಗೆ ದೊಡ್ಡ ಹೆಸರಿತ್ತು. ೧೯೫೦ ರ ದಶಕದಲ್ಲೇ ರಸ್ತೆ ಬದಿಯಲ್ಲಿ ಸ್ನಾನ ಮಾಡುವ ಬಡ ಹೆಂಗಸಿನ bold ದೃಶ್ಯದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸಿದ್ದಳು. ಮಡಿವಂತಿಕೆಯ ಆಕಾಲದಲ್ಲಿ ಒಬ್ಬ ನಟಿ ಅದನ್ನು ನಿಭಾಯಿಸಿದ್ದು ದೊಡ್ಡ ಮಾತು.

ಅಂತಹ ಖ್ಯಾತ ನಟಿ ನೂತನ್ ಸಂಜೀವ್ ಕುಮಾರನಿಗೆ ಯಾಕೆ ಬಾರಿಸಿದಳು?

ಎರಡು ವಿವರಣೆಗಳು ಇವೆ. ಒಂದು ಸಂಜೀವ್ ಕುಮಾರ್ ಆಕೆಯಲ್ಲಿ ನಿಜವಾಗಿಯೂ ಅನುರಕ್ತನಾಗಿದ್ದ. ದಿಲ್-ಓ-ಜಾನ್-ಸೇ ಪ್ರೀತಿಸುತ್ತಿದ್ದ. ಪ್ರೇಮ ನಿವೇದಿಸಿಕೊಂಡ. ಆಕೆಗೆ ಇಷ್ಟವಾಗಲಿಲ್ಲ. ಅವತ್ತು ಮೂಡು ಕೆಟ್ಟಿತ್ತು ಅಂತ ಕಾಣುತ್ತದೆ. ಮತ್ತೆ ಅದೇ ಮಾತು ಎತ್ತಿದ್ದ ಪಾಗಲ್ ಪ್ರೇಮಿಯ ಕೆನ್ನೆ ಊದಿಸಿ ಕಳಿಸಿದ್ದಳು.

ಮತ್ತೊಂದು ವಿವರಣೆ ಅಂದರೆ ಸಂಜೀವ್ ಕುಮಾರ್ ತನಗೆ ನೂತನ್ ಜೊತೆ ಸಂಬಂಧ (affair) ಇದೆ ಅಂತ ಗಾಳಿಸುದ್ದಿ ಹರಿಬಿಟ್ಟಿದ್ದ. ಯಾಕೆ? ಸಂಜೀವ್ ಕುಮಾರ್ ಆಗ ಇನ್ನೂ ಹೇಳಿಕೊಳ್ಳುವಂತಹ ನಟನಾಗಿರಲಿಲ್ಲ. ದೊಡ್ಡ ನಟಿಯೊಬ್ಬಳೊಂದಿಗೆ affair ಇದೆ ಅಂತ ಗಾಳಿಸುದ್ದಿ ಹಬ್ಬಿಸಿ scope ತೆಗೆದುಕೊಳ್ಳಲು ನೋಡಿದ್ದನೇ? ಇರಬಹುದು. ಅದು ನೂತನಳನ್ನು ಕೆರಳಿಸಿತ್ತು. ಅದಕ್ಕೇ ಬಾರಿಸಿದ್ದಳು. ಕೆನ್ನೆ ಊದಿಸಿದ್ದಳು.

ಏನೇ ಕಾರಣವಿರಲಿ ಆದರೆ ಸಂಜೀವ್ ಕುಮಾರ್ ಅನ್ನುವ ಸೂಕ್ಷ್ಮ ಸಂವೇದನೆಗಳ, ನಾಜೂಕು ಹೃದಯದ ನಟ ಮಾತ್ರ ಆ ಘಟನೆಯಿಂದ ಕುಸಿದುಹೋದ. ಮತ್ತೂ ಅಂತರ್ಮುಖಿಯಾದ. ಮದ್ಯದ ಬಾಟಲಿ ಮತ್ತೂ ಆತ್ಮೀಯವಾಯಿತು. ಸಿಗರೇಟ್ ಮತ್ತೂ ಪ್ರಿಯವಾಯಿತು. ಸಂಜೀವ್ ಕುಮಾರನ ಅವಸಾನ ಆರಂಭವಾಗಿತ್ತು.

ಹೀಗೆ ನೂತನಳಿಂದ ತಿರಸ್ಕೃತನಾಗಿ, ಅವಮಾನಿತನಾದ ಸಂಜೀವ್ ಕುಮಾರ್ ಒಳ್ಳೆ ನಟನಾಗುವತ್ತ ಗಮನ ಹರಿಸಿದ. ಪ್ರೀತಿ, ಪ್ರೇಮ ಎಲ್ಲ backseat ಗೆ ಹೋಯಿತು. ೧೯೬೫ ರಿಂದ ೧೯೭೦ ರ ವರೆಗೆ ಸಾಧಾರಣ ನಟನಾಗಿದ್ದವ ೧೯೭೦ ರ ನಂತರ ಏಕ್ದಂ ಟಾಪ್ ನಟನಾಗಿಬಿಟ್ಟ. ಸೂಪರ್ ಸ್ಟಾರ್ ಆಗಿರಲಿಕ್ಕಿಲ್ಲ. ಆದರೆ ಅದ್ಭುತ ನಟ ಅಂತ ಮಾತ್ರ ಖ್ಯಾತನಾದ. ಆಕಾಲದ ದೊಡ್ಡ ದೊಡ್ಡ ನಟರಿದ್ದ ಸಿನೆಮಾಗಳಲ್ಲಿ ತನ್ನದೇ ಒಂದು ಛಾಪು ಮೂಡಿಸಿಕೊಂಡು, ಅವರೆಲ್ಲರ ಕರಿಷ್ಮಾವನ್ನು ಮೀರಿ, ತನ್ನದೇ ಒಂದು ಬ್ರಾಂಡ್ ಸೃಷ್ಟಿಸಿಕೊಂಡಿದ್ದು ಸಣ್ಣ ಸಾಧನೆಯಲ್ಲ. ಮತ್ತೆ ಯಾವದೇ ನಖರಾಗಳಿಲ್ಲದ ಕಲಾವಿದ ಅಂತಲೇ ಖ್ಯಾತನಾದ. ನಿರ್ಮಾಪಕರ, ನಿರ್ದೇಶಕರ favorite ಆದ. ಒಂದಾದಮೇಲೊಂದು ಅದ್ಭುತ ಸಿನೆಮಾಗಳನ್ನು ಕೊಟ್ಟ.

ಮುಂದೆ 'ಶೋಲೆ' ಅನ್ನುವ blockbuster ಸಿನಿಮಾ ಬಂತು. ಶೋಲೆ ಅನ್ನುವ phenomenon ಬಗ್ಗೆ ಹೇಳುವದೇನಿದೆ. ಅಂತಹ ಮತ್ತೊಂದು ಮೂವಿ ಬರಲಿಲ್ಲ. ಬರಲಿಕ್ಕೂ ಇಲ್ಲ. ಅದರಲ್ಲಿ ಸಂಜೀವ್ ಕುಮಾರ ಅಭಿನಯಿಸಿದ ತೋಳಿಲ್ಲದ ಠಾಕೂರನ ಪಾತ್ರವನ್ನು ಮರೆಯಲಾದೀತೇ? ಸಾಧ್ಯವೇ ಇಲ್ಲ.

'ಶೋಲೆ' ಮಾಡುವ ಸಮಯದಲ್ಲಿ ಸಂಜೀವ್ ಕುಮಾರನನ್ನು ಸಂಪೂರ್ಣವಾಗಿ ಆವರಿಸಿಕೊಂಡವಳು ಸಹನಟಿ ಹೇಮಾಮಾಲಿನಿ. ಆಕೆ dream girl ಅಂತಲೇ ಖ್ಯಾತಳಾಗಿದ್ದಳು. ಆಕೆಗೆ ಭರತನಾಟ್ಯದಲ್ಲಿ ದೊಡ್ಡ ಮಟ್ಟದ ಸಾಧನೆಯಿತ್ತು. ಪ್ರಧಾನಿ ನೆಹರು ಮುಂದೆ ನೃತ್ಯ ಪ್ರದರ್ಶನ ಮಾಡಿದಾಗ ನೆಹರು 'ಹ್ಯಾಂ!' ಅಂತ ಬಿಟ್ಟ ಬಾಯಿ ಮುಚ್ಚದೇ ನೋಡುತ್ತ ಕುಳಿತಿದ್ದರಂತೆ. ಆ ಮಟ್ಟದ ಸುಂದರಿ ಅವಳು. ಏಕ್ದಂ ಅಪ್ಸರೆ.

'ಶೋಲೆ' ಸಿನಿಮಾದ ಸೆಟ್ಟಿನಲ್ಲಿ ಹೇಮಾಮಾಲಿನಿಯ ಕಳ್ಳಾಮಳ್ಳಿ ಆಟ ಇಬ್ಬರ ಜೊತೆಗೆ ನಡೆಯುತ್ತಿತ್ತು. ಆಕಡೆ ಪೈಲ್ವಾನ ಧರ್ಮೇಂದ್ರ ಕಾಳು ಹಾಕುತ್ತಿದ್ದ. ಈಕಡೆ ಸಂಜೀವ್ ಕುಮಾರ್ ತನ್ನದೇ dignified ಶೈಲಿಯಲ್ಲಿ ಓಲೈಸುತ್ತಿದ್ದ. ಇಬ್ಬರ ಜೊತೆಗೂ ಇವಳ ಸರಸ.

'ಶೋಲೆ' ಮುಗಿಯುವ ಹೊತ್ತಿಗೆ ಎಲ್ಲ ತೈರಾಗಿತ್ತು. ಹೇಮಾಮಾಲಿನಿಯ ಕಳ್ಳಾಮಳ್ಳಿ ಆಟ ಮುಗಿದಿತ್ತು. ಕಳ್ಳ ಧರ್ಮೇಂದ್ರ ಹೇಮಾಮಾಲಿನಿಯ ಹೃದಯವನ್ನು ಕದ್ದಿದ್ದ. ಗೆದ್ದಿದ್ದ. ಆಕಡೆ ಆ ಕಳ್ಳ ಗೆದ್ದರೆ ಕಳ್ಳಾಮಳ್ಳಿಯಲ್ಲಿ ಮಳ್ಳನಾದವ ಮತ್ತೆ ಇದೇ ಸಂಜೀವ್ ಕುಮಾರ್.

ನೂತನ್ ಕೆನ್ನೆಗೆ ಬಾರಿಸಿ ಕೈಕೊಟ್ಟಾಗ ಹೇಗೋ ಮಾಡಿ ಸುಧಾರಿಸಿಕೊಂಡಿದ್ದ. ಆದರೆ ಈಗ ಫುಲ್ crush ಆಗಿಹೋದ. ಹೇಮಾಮಾಲಿನಿ ಇವನ ಹೃದಯದ ಮೇಲೆಯೇ ಥೈಯ್ಯಾಥಕ್ಕಾ ಅಂತ ಕುಣಿದು, ಅದನ್ನು ಹೊಸಕಿಹಾಕಿ, ಕೈಕೊಟ್ಟು ಪೋಯಾಚ್ ಆಗಿದ್ದಳು. ಈ ಆಘಾತದಿಂದ ಮಾತ್ರ ಸಂಜೀವ್ ಕುಮಾರ್ ಚೇತರಿಸಿಕೊಳ್ಳಲೇ ಇಲ್ಲ. ದೊಡ್ಡ ಮಟ್ಟದ ಖಿನ್ನತೆ (depression) ಆವರಿಸಿಕೊಂಡಿತು.

೧೯೭೫ ರ ಹೊತ್ತಿಗೆ ಸಂಜೀವ್ ಕುಮಾರ್ ದೊಡ್ಡ ನಟ. ಒಂದರಮೇಲೊಂದು ಹಿಟ್ ಮೂವಿಗಳನ್ನು ಕೊಟ್ಟ. ಎಂತೆಂತಹ ಮೂವಿಗಳು! ಇವತ್ತಿಗೂ ನೋಡಿ ಖುಷಿಪಡಬಹುದು. ಪ್ರಬುದ್ಧ ನಟನೆ. ಮನಮುಟ್ಟುವ ಸಂಭಾಷಣೆ. Powerful screen presence. Totally awesome performance. ಅದು ಸಂಜೀವ್ ಕುಮಾರನ ಸ್ಪೆಷಾಲಿಟಿ.

೧೯೭೬ ರಲ್ಲಿ ಬಂತು 'ಉಲ್ಝನ್' ಎನ್ನುವ suspense thriller ಮೂವಿ. ಸಂಜೀವ್ ಕುಮಾರನೇ ನಾಯಕ. ನಾಯಕನಟಿ ಹೊಸಬಳು. ಅದು ಅವಳ ಮೊದಲ ಸಿನಿಮಾ. ಅವಳೇ ಸುಲಕ್ಷಣಾ ಪಂಡಿತ್. ಆಗ ಆಕೆಗೆ ಇನ್ನೂ ಮಾತ್ರ ಇಪ್ಪತ್ತು ವರ್ಷ. ಸಂಜೀವ್ ಕುಮಾರನಿಗೆ ಬರೋಬ್ಬರಿ ಮೂವತ್ತೆಂಟು. ಖ್ಯಾತ ಲೇಖಕಿ ಶೋಭಾ ಡೇ ಹೇಳುತ್ತಾಳೆ ಒಂದು ಪುಸ್ತಕದಲ್ಲಿ. ಬಾಲಿವುಡ್ಡಿನಲ್ಲಿ ಹೀರೋಗಳಿಗೆ ವಯಸ್ಸಾಗುವದೇ ಇಲ್ಲ. ಆದರೆ ಹೀರೋಯಿನ್ನಗಳನ್ನು ಮಾತ್ರ ಇಪ್ಪತ್ತೈದು ವರ್ಷ  ಆಗುವಷ್ಟರಲ್ಲೇ ಹುರಿದು ಮುಕ್ಕಿರುತ್ತದೆ ಈ ಬಾಲಿವುಡ್! ಅದು ನಿಜ ಅನ್ನಿ.

ಸುಲಕ್ಷಣಾ ಪಂಡಿತ್

ಈ ಸುಲಕ್ಷಣಾ ಪಂಡಿತ್ ಯಾರೋ ಅಬ್ಬೇಪಾರಿಯಲ್ಲ. ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ, ದಿಗ್ಗಜ, ಪಂಡಿತ್ ಜಸರಾಜ್ ಅವರ ಖಾಸಾ ಸಹೋದರನ ಮಗಳು. ನಂತರ ಆಕೆಯ ತಂಗಿ ವಿಜೇತಾ ಪಂಡಿತ್ ಕೂಡ ನಟಿಯೆಂದು ಮಿಂಚಿದ್ದಳು. ಸಂಗೀತ ಸಂಯೋಜಕರಾದ ಜತಿನ್-ಲಲಿತ್ ಸಹ ಈಕೆಯ ಖಾಸಾ ಸಹೋದರರು.

ಪ್ರಪ್ರಥಮ ಸಿನೆಮಾದಲ್ಲಿ ಸಂಜೀವ್ ಕುಮಾರನಂತಹ ಪ್ರಬುದ್ಧ ನಟನೊಂದಿಗೆ ನಟಿಸುವದು ಅಂದರೆ ಸಣ್ಣ ಮಾತಲ್ಲ. ಮತ್ತೆ 'ಉಲ್ಝನ್' ತುಂಬಾ intense ಅನ್ನುವಂತಹ ಸಿನೆಮಾ. ನೀವು ನೋಡಿ. ನಿಮಗೇ ಗೊತ್ತಾಗುತ್ತದೆ. ಅತಿ ಹತ್ತಿರದ ಸಂಬಂಧಗಳ ಮಧ್ಯೆ ಇರುವ complexity ಗಳನ್ನು ತೆರೆ ಮೇಲೆ ತೋರಿಸುವದು ಅಂದರೆ ಸುಲಭದ ಮಾತಲ್ಲ. ಸಂಜೀವ್ ಕುಮಾರ್ ಅಂತಹ ಅನೇಕ ಪಾತ್ರಗಳನ್ನು ನಿಭಾಯಿಸಿದ್ದ. ಅಂತಹ ಕಠಿಣ ಪಾತ್ರಗಳಲ್ಲೇ ಆತನ ಪ್ರತಿಭೆ ಮೂಡಿಬರುತ್ತಿತ್ತು. ಆದರೆ ತನ್ನ ಮೊದಲ ಸಿನಿಮಾದಲ್ಲಿ ನಟಿಸುತ್ತಿರುವ ಸುಲಕ್ಷಣಾ ಪಂಡಿತ್ ಎಂಬ ಇಪ್ಪತ್ತೂ ಪೂರ್ತಿ ತುಂಬದ ಹುಡುಗಿ ಸಂಜೀವ್ ಕುಮಾರ್ ಎದುರಲ್ಲಿ ತಕ್ಕ performance ಕೊಡಬಲ್ಲಳೇ ಅಂತ ಎಲ್ಲರೂ ವಿಚಾರ ಮಾಡುತ್ತಿದ್ದರು. But she delivered a stellar performance and the movie was a super duper hit of 1976.

'ಉಲ್ಝನ್' ಚಿತ್ರದಲ್ಲಿ ಸುಲಕ್ಷಣಾ ಪಂಡಿತಳ ಅಭಿನಯ ನೋಡಿದ ಬಾಲಿವುಡ್ಡಿನ ಹಿರಿತಲೆಗಳೆಲ್ಲ 'ವಾಹ್!' ಅಂದಿದ್ದರು. ಒಬ್ಬ ಪ್ರತಿಭಾವಂತ ನಟಿ ಬಂದಳು ಅಂದುಕೊಂಡರು. ಸೌಂದರ್ಯದಲ್ಲಂತೂ ಅಪ್ಸರೆಯರನ್ನು ಮೀರಿಸುವಂತಿದ್ದಳು. ಜೊತೆಗೆ ಒಳ್ಳೆ ನಟಿ. ಮತ್ತೆ ಸಂಗೀತಗಾರರ ಕುಟುಂಬದಿಂದ ಬಂದಿದ್ದಕ್ಕೆ ಸಂಗೀತ ರಕ್ತದಲ್ಲೇ ಇತ್ತು. ಎಷ್ಟೋ ಚಿತ್ರಗೀತೆಗಳನ್ನು ತಾನೇ ಹಾಡಿದ್ದಳು. ಹಿನ್ನೆಲೆ ಗಾಯನಕ್ಕಾಗಿ Film Fare ಪ್ರಶಸ್ತಿ ಪಡೆದ ನಟಿ ಇವಳೊಬ್ಬಳೇ ಇರಬೇಕು.

ಅದೇ ಸಮಯದಲ್ಲಿ ನಟಿ ಶಬಾನಾ ಆಜ್ಮಿ ಒಮ್ಮೆ ಹೇಳಿದ್ದಳು. 'ಈ ಸುಲಕ್ಷಣಾ ಪಂಡಿತ್ ನೋಡಿದರೆ ಒಂದು ತರಹದ ಅಸೂಯೆಯಾಗುತ್ತದೆ. ಎಂತಹ  ಅಪೂರ್ವ ಸೌಂದರ್ಯವತಿ! ಎಂತಹ ಪ್ರಬುದ್ಧ ಅಭಿನೇತ್ರಿ! ಎಂತಹ ಮಧುರ ಕಂಠದ ಗಾಯಕಿ! ಇವೆಲ್ಲವೂ ಒಬ್ಬಳಲ್ಲೇ ಇವೆ ಅಂದರೆ ಎಷ್ಟು rare! ನಟಿ ಅಂತ ಇದ್ದರೆ ಸುಲಕ್ಷಣಾಳಂತಿರಬೇಕು. ನನಗೆ ಆಕೆ ತುಂಬಾ ಇಷ್ಟ. ನನ್ನ ಮೆಚ್ಚಿನ ನಟಿ ಆಕೆ.' ಒಬ್ಬ ಮಹಾನ್ ನಟಿಯಿಂದ ಮತ್ತೊಬ್ಬ budding star ಗೆ genuine compliments. ಶಬಾನಾ ಆಜ್ಮಿ ಆಗಲೇ ದೊಡ್ಡ ನಟಿ. ಅಂತವಳೇ ಹೊಸ ಹುಡುಗಿ ಸುಲಕ್ಷಣಾ ಪಂಡಿತ್ ಬಗ್ಗೆ ಹೀಗೆ ಹೇಳಿದಳು ಅಂದರೆ ವಿಚಾರ ಮಾಡಿ ಸುಲಕ್ಷಣಾ ಪಂಡಿತಳ potential ಬಗ್ಗೆ.

'ಉಲ್ಝನ್' ಸಿನಿಮಾ ಏನೋ ಮುಗಿಯಿತು. ಹಿಟ್ ಕೂಡ ಆಯಿತು. ಆದರೆ ಬೇರೊಂದು ಶುರುವಾಯಿತು. love at first sight ಅನ್ನುವ ಹಾಗೆ love at first film ಆಗಿಬಿಟ್ಟಿತು. ಸಂಜೀವ್ ಕುಮಾರನೊಡನೆ ನಟಿಸಿದ್ದ ಸುಲಕ್ಷಣಾ ಪಂಡಿತ್ ಅವನ ಮೇಲೆ ಫುಲ್ ಫಿದಾ. head over heels in love ಅಂತಾರಲ್ಲ ಆ ಮಾದರಿಯ ಹುಚ್ಚು ಪ್ರೀತಿ.

ಆದರೆ ಸಂಜೀವ್ ಕುಮಾರನ ಸಂವೇದನೆಗಳು, ಭಾವನೆಗಳು ಸತ್ತುಹೋಗಿದ್ದವು. ಮೊದಲು ನೂತನ್ ನಂತರ ಹೇಮಾಮಾಲಿನಿಯಿಂದ ತಿರಸ್ಕೃತನಾಗಿದ್ದ ಸಂಜೀವ್ ಕುಮಾರನ ಹೃದಯ ಮುರುಟಿಹೋಗಿತ್ತೋ ಅಥವಾ ಕಲ್ಲಾಗಿಹೋಗಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಸುಲಕ್ಷಣಾ ಪಂಡಿತಳ ಪ್ರೀತಿಗೆ ಆತ ಸ್ಪಂದಿಸಲೇ ಇಲ್ಲ.

ಅವನು ಸ್ಪಂದಿಸಲಿಲ್ಲ ಅಂದ ಮೇಲೆ ಇವಳಾದರೂ ಬಿಟ್ಟಳೇ? ಇಲ್ಲ. ಅದು ಹುಚ್ಚು ಪ್ರೀತಿ. ಉಡದಂತೆ ಕಚ್ಚಿ ಹಿಡಿದಿತ್ತು. ಈಕಡೆ ಈ ಪುಣ್ಯಾತ್ಮ ಸಂಜೀವ್ ಕುಮಾರನಾದರೂ ಇಷ್ಟವಿಲ್ಲವೆಂದು ಬಿಟ್ಟುಹೋದನೇ? ಇಲ್ಲ. ಅಂತಹ ದಿವ್ಯ ಸುಂದರಿ ಮೈಮೇಲೆ ಬಿದ್ದು ಬಂದಾಗ ಅದೆಂಗೆ ಬಿಟ್ಟಾನು? ಹೇಳಿಕೇಳಿ ಗಂಡಸಿನ ಹಡಬೆ ಮನಸ್ಸು. ಸುಂದರಿಯ ಸಾಂಗತ್ಯ ಬಿಟ್ಟಿ ಸಿಗುತ್ತದೆ ಅಂದರೆ ನಾಯಿಯಂತಾಗಿಬಿಡುತ್ತದೆ. ಇಲ್ಲೂ ಅದೇ ಆಯಿತು.

ಸುಲಕ್ಷಣಾ ಪಂಡಿತ್ & ಸಂಜೀವ್ ಕುಮಾರ್. ಸೂಪರ್ ಜೋಡಿ

ಏನೋ ಒಂದು ತರಹದ ಸಂಬಂಧ ಇಬ್ಬರ ನಡುವೆ ಏರ್ಪಟ್ಟಿತು. live in relationship. ಇಬ್ಬರೂ ದಂಪತಿಯಂತೆಯೇ ಇದ್ದರು. ಅಷ್ಟೇ ದಾಂಪತ್ಯದ ಅಧಿಕೃತ ಮೊಹರು ಬಿದ್ದಿರಲಿಲ್ಲ. ಆದರೆ ಸುಲಕ್ಷಣಾ ಪಂಡಿತ್ ಮಾತ್ರ ಸಂಜೀವ್ ಕುಮಾರನನ್ನು ಯಾವದೇ ಪತ್ನಿಗಿಂತ ಹೆಚ್ಚಾಗಿ ನೋಡಿಕೊಂಡಳು. ಅವನ ಬೇಕುಬೇಡಗಳನ್ನು ಗಮನಿಸಿಕೊಂಡಳು.

ಸಂಜೀವ್ ಕುಮಾರನ ಖಿನ್ನತೆ ಜಾಸ್ತಿಯಾಯಿತು. ಅದಕ್ಕೆ ತಕ್ಕಂತೆ ಕುಡಿತ, ಸಿಗರೇಟ್ ಮಿತಿ ಮೀರತೊಡಗಿತ್ತು. ಒಂದು ಸಣ್ಣ ಹೃದಯಾಘಾತವೂ ಆಯಿತು. ಅಮೇರಿಕಾಗೆ ಹೋಗಿ ವೈದ್ಯರನ್ನು ಕಂಡು ಬಂದ. ಸಂಜೀವ್ ಕುಮಾರನ ಕುಟುಂಬದಲ್ಲಿ ಹೆಚ್ಚಿನ ಜನರಿಗೆ ಅದೇನೋ congenital heart problem ಇತ್ತಂತೆ. ಸಂಜೀವ್ ಕುಮಾರನ ಒಬ್ಬನೋ, ಇಬ್ಬರೋ ಸಹೋದರರು ಐವತ್ತು ವರ್ಷಗಳಾಗುವ ಮೊದಲೇ ಹೃದಯ ಸಂಬಂಧಿ ತೊಂದರೆಗಳಿಂದ ನಿಧನರಾಗಿದ್ದರು. ತಪಾಸಣೆ ಮಾಡಿದ ವೈದ್ಯರು ಖಡಕ್ ಎಚ್ಚರಿಕೆ ಕೊಟ್ಟಿದ್ದರು, 'ಮದ್ಯಪಾನ, ಸಿಗರೇಟ್ ಬಿಡಿ. ಇಲ್ಲವಾದರೆ ನಿಮಗೂ ಅದೇ ತೊಂದರೆ ಕಾದಿದೆ.'

ಎಲ್ಲ ಚಟ ಬಿಡೋಣ ಅಂದರೆ ಹೇಗೆ ಬಿಟ್ಟಾನು? ಕಣ್ಮುಚ್ಚಿ ಕೂತರೆ ನೂತನ್ ಕಪಾಳಕ್ಕೆ ಬಾರಿಸಿದ್ದು ನೆನಪಾಗುತ್ತಿತ್ತು. ಹೇಮಾಮಾಲಿನಿ ಕಳ್ಳಾಮಳ್ಳಿ ಆಟ ಆಡಿ ಮಳ್ಳನನ್ನಾಗಿ ಮಾಡಿಹೋಗಿದ್ದು ನೆನಪಾಗಿ ವಿಪರೀತ ವೇದನೆಯಾಗುತ್ತಿತ್ತು. ಅದನ್ನೆಲ್ಲ ಮರೆಸಲು, ತಾತ್ಕಾಲಿಕವಾಗಿ ಶಮನ ಮಾಡಲು ಮತ್ತೆ ಅವೇ ವಿಷಗಳು ಬೇಕು. ಮದ್ಯ, ಸಿಗರೇಟ್.

ಆಕೆಯನ್ನು ಅವನು ಪತ್ನಿ ಅಂತ ಸ್ವೀಕರಿಸದಿದ್ದರೂ ಸುಲಕ್ಷಣಾ ಮಾತ್ರ ಸಂಜೀವ್ ಕುಮಾರನನ್ನು ಪತಿಯಂತಲೇ ಭಾವಿಸಿ ಎಲ್ಲ ಸೇವೆ ಮಾಡಿದಳು. ಚಟಗಳಿಂದ ಬಿಡಿಸಲು ನೋಡಿದಳು. ಒಳೊಳಗೇ ಫುಲ್ ಖೋಕ್ಲಾ ಆಗಿಹೋಗಿದ್ದ ಸಂಜೀವ್ ಕುಮಾರ್ ಯಾವದಕ್ಕೂ ಸ್ಪಂದಿಸಲಿಲ್ಲ.

ಹೀಗೆ ಸಂಜೀವ್ ಕುಮಾರನ ಪ್ಯಾರ್ ಮೊಹಬ್ಬತ್ತಿನ ಮೋಹದಲ್ಲಿ ಕಳೆದುಹೋದ ಸುಲಕ್ಷಣಾಗೆ ಹೆಚ್ಚಿನ ಅವಕಾಶಗಳೂ ಬರಲಿಲ್ಲ. ಮತ್ತೆ ಬಾಲಿವುಡ್ಡಿನಲ್ಲಿ ಕೇವಲ ಸೌಂದರ್ಯ, ಪ್ರತಿಭೆ ಇದ್ದಾಕ್ಷಣ ಎಲ್ಲರೂ ಟಾಪ್ ಹೀರೋಯಿನ್ ಆಗುವದಿಲ್ಲ. ಎಷ್ಟೋ ಮಂದಿಯ ಹಾಸಿಗೆಯನ್ನು ಗರಮ್ ಮಾಡಬೇಕಾಗುತ್ತದೆ. ಯಾರ್ಯಾರದ್ದೋ ಜೊತೆ ಚಿತ್ರ ವಿಚಿತ್ರ ಒಂದು ರಾತ್ರಿಯ ಸಂಬಂಧಗಳನ್ನು ಮಾಡಿಕೊಂಡು ಯಶಸ್ಸಿನ ಏಣಿ ಹತ್ತಬೇಕಾಗುತ್ತದೆ. ಯಶಸ್ಸೇ ಮುಖ್ಯ ಅನ್ನುವ ನಟಿಯರು ಎಲ್ಲದಕ್ಕೂ ರೆಡಿ ಇರುತ್ತಾರೆ. ಹಾಗೆ ಮಾಡಿಯೇ ಒಂದು ಮಟ್ಟಕ್ಕೆ ಯಶಸ್ವಿ ಕೂಡ ಆಗುತ್ತಾರೆ. ಸಂಜೀವ್ ಕುಮಾರನನ್ನು ಆರಾಧಿಸುತ್ತಿದ್ದ ಸುಲಕ್ಷಣಾ ಇವೆಲ್ಲ ಮಾಡಲಿಲ್ಲ. ಮತ್ತೆ ಒಳ್ಳೆ ಸಂಸ್ಕಾರವಂತ ಮನೆತನದ ಹುಡುಗಿ. ಒಟ್ಟಿನಲ್ಲಿ ೧೯೮೦ ರ ಹೊತ್ತಿಗೆ ಆಕೆಯನ್ನು ಬಾಲಿವುಡ್ ಹಳೆಯ ಮಾಲು, old stock ಅಂತ discard ಮಾಡಿಯಾಗಿತ್ತು. ಆಗ ಆಕೆಗೆ ಕೇವಲ ಇಪ್ಪತ್ತನಾಲ್ಕು ವರ್ಷ ವಯಸ್ಸು.

ಈಕಡೆ ಸಂಜೀವ್ ಕುಮಾರ್ ವಿಪರೀತವಾಗಿ ಊದಿಕೊಳ್ಳತೊಡಗಿದ್ದ. ಅವನಿಗೂ ನಲವತ್ತು ವರ್ಷದ ಮೇಲಾಗಿತ್ತಲ್ಲ. ಸಣ್ಣ ಪ್ರಮಾಣದ ಬೊಜ್ಜು ಬರುವದು ಸಹಜ. ಆದರೆ ಇವನ ಕುಡಿತ ಇತ್ಯಾದಿ ಸೇರಿ ಜಾಸ್ತಿಯೇ ದಪ್ಪಗಾದ. ಸಂಜೀವ್ ಕುಮಾರ್ ಮೊದಲಿಂದಲೂ ಸ್ವಲ್ಪ heavyset ಮನುಷ್ಯ. ಆದರೆ ಗಾತ್ರದಿಂದಾಗಿ ವಿಕಾರವಾಗಿ ಎಂದೂ ಕಾಣುತ್ತಿರಲಿಲ್ಲ. ಸುಂದರನಾಗಿದ್ದ. pleasantly plump ಅನ್ನಬಹುದಿತ್ತು ಅಷ್ಟೇ.

೧೯೮೦ ರ ಸಮಯದಲ್ಲಿ ಸಂಜೀವ್ ಕುಮಾರ್ ಜಾಸ್ತಿ ದಪ್ಪಗಾದರೂ ಅವಕಾಶಗಳೇನೂ ಕಮ್ಮಿಯಾಗಲಿಲ್ಲ. ಮತ್ತೆ ಸಂಜೀವ್ ಕುಮಾರ್ ಸಹಿತ ತನ್ನ ವಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ನಟನೆಗೆ ನಿಂತ ಅಂದರೆ ಮುಗಿಯಿತು. ಯಾವಾಗಲೂ stellar performance. ಅದರ ಬಗ್ಗೆ ದೂಸರಾ ಮಾತೇ ಇಲ್ಲ.

ಎಂತೆಂತಹ ಮಂಗ್ಯಾ ತರಹ ಇರುವವರನ್ನೇ ಸುಂದರರನ್ನಾಗಿ ತೋರಿಸುವ ಬಾಲಿವುಡ್ ಮಂದಿಗೆ ವಿಪರೀತವಾಗಿ ಊದಿಕೊಂಡಿದ್ದ ಸಂಜೀವ್ ಕುಮಾರನನ್ನು presentable ಅಂತ ತೋರಿಸುವದು ಒಂದು ದೊಡ್ಡ ಕಷ್ಟವೇ? ತನ್ನ ಜೀವನದ ಕೊನೆಯ ವರ್ಷಗಳಲ್ಲಿ ಸಂಜೀವ್ ಕುಮಾರ್ ಸದಾ ಸೂಟ್ ಧರಿಸಿಕೊಂಡೇ ಪಾತ್ರ ಮಾಡುತ್ತಿದ್ದ. ಅದು ಅವನಿಗೆ ಒಪ್ಪುತ್ತಿತ್ತು ಕೂಡ. ಮತ್ತೆ ಒಳ್ಳೆ ಸೂಟ್ ಇದ್ದುಬಿಟ್ಟರೆ ಸಾಕು. ಎಲ್ಲ ಸಣ್ಣ ಪುಟ್ಟ ನ್ಯೂನ್ಯತೆಗಳು ಅದರಲ್ಲಿ ಮುಚ್ಚಿಹೋಗುತ್ತವೆ. ಆಕರ್ಷಕ ಸೂಟ್, ಇಲ್ಲ ಕನಿಷ್ಠ ಪಕ್ಷ ಒಂದು ಕೋಟ್ ಧರಿಸಿಯೇ ನಟಿಸುತ್ತಿದ್ದ. ಹೀಗಾಗಿ ಸಂಜೀವ್ ಕುಮಾರನ ಸ್ಥೂಲ ಕಾಯ ಒಂದು obstacle ಆಗಲೇ ಇಲ್ಲ. ಅದಕ್ಕೇ ಅಲ್ಲವೇ ಹೇಳೋದು, ಬಾಲಿವುಡ್ಡಿನಲ್ಲಿ ಹೀರೋಗಳಿಗೆ ವಯಸ್ಸಾಗುವದೇ ಇಲ್ಲ ಅಂತ.

ನವೆಂಬರ್ ೬, ೧೯೮೫. ದೊಡ್ಡ ದುರ್ದಿನ. ಸಂಜೀವ್ ಕುಮಾರ್ ತೀರಿಹೋದ. ವೈದ್ಯರು ಹೇಳಿದ ಮಾತು ನಿಜವಾಗಿತ್ತು. ಅವನ ಸಹೋದರರು ತೀರಿಹೋದ ರೀತಿಯಲ್ಲೇ ತೀರಿಹೋಗಿದ್ದ. ದೊಡ್ಡ ಹೃದಯಾಘಾತವಾಗಿತ್ತು. ಹೆಚ್ಚಿನ ಸಿನೆಮಾಗಳಲ್ಲಿ ಐವತ್ತು ವರ್ಷ ಮೀರಿದ ವ್ಯಕ್ತಿಯ ಪಾತ್ರಗಳಲ್ಲೇ ಪ್ರಬುದ್ಧ ಅಭಿನಯ ನೀಡಿದ್ದ ಮಹಾನ್ ನಟ ಸಂಜೀವ್ ಕುಮಾರ್ ತಾನು ಮಾತ್ರ ಐವತ್ತು ವರ್ಷ ಮುಟ್ಟುವ ಮೊದಲೇ ತನ್ನ ನಲವತ್ತೇಳನೆಯ ವಯಸ್ಸಿನಲ್ಲಿ ನಿಧನನಾಗಿದ್ದು ಒಂದು ದೊಡ್ಡ ವಿಪರ್ಯಾಸ. ಅದಕ್ಕಿಂತ ಹೆಚ್ಚಾಗಿ ದೊಡ್ಡ ದುರಂತ. ಅಂತಹ ಮನೋಜ್ಞ ಕಲಾವಿದ ಇನ್ನೊಂದಿಷ್ಟು ವರ್ಷ ಇರಬೇಕಿತ್ತು. Miss him a lot. What an actor he was!

ಸಂಜೀವ್ ಕುಮಾರನ ನಿಧನ ಸುಲಕ್ಷಣಾ ಪಂಡಿತ್ ಗೆ ದೊಡ್ಡ ಆಘಾತ. big shock. ಅದ್ಯಾವ ಮಟ್ಟದ ಆಘಾತ ಎಂದರೆ  ಅವಳು ಆ ಆಘಾತದಿಂದ ಅಂದು ಒಂದು ತರಹದ trans ಸ್ಥಿತಿಗೆ ಹೋದವಳು ಅದರಿಂದ ಇನ್ನೂ ಹೊರಗೇ ಬಂದಿಲ್ಲ. She has become a total mental wreck. 

ಸಂಜೀವ್ ಕುಮಾರ್ ಹೋಗಿದ್ದೇ ಹೋಗಿದ್ದು ಸುಲಕ್ಷಣಾ ಪಂಡಿತ್ ತನ್ನಲ್ಲೇ ತಾನು ಕಳೆದುಹೋದಳು. ಆಕೆಗಿನ್ನೂ ಆವಾಗ ಜಸ್ಟ್ ಇಪ್ಪತ್ತೊಂಬತ್ತು ವರ್ಷ. ಬಾಲಿವುಡ್ ಅಂತೂ ಎಂದೋ ಬಾಗಿಲು ಮುಚ್ಚಿತ್ತು. ಅಲ್ಲಿ ಇಲ್ಲಿ ಹಾಡುವ ಅವಕಾಶಗಳು ಸಿಗುತ್ತಿದ್ದವು. ಅವೂ ಅಷ್ಟಕಷ್ಟೇ. ಈಗಂತೂ ಒಂದು ತರಹದ ಹುಚ್ಚಿ ಬೇರೆ ಆಗಿಬಿಟ್ಟಳು. ನಿರುಪದ್ರವಿ ಹುಚ್ಚಿ.

ತಲೆ ಮೇಲೊಂದು ಸೂರು ಅಂತ ಮುಂಬೈನಲ್ಲಿ ಒಂದು ಫ್ಲಾಟ್ ಇತ್ತು. ಸಂಜೀವ್ ಕುಮಾರ್ ಸತ್ತುಹೋದ ಮೇಲೆ ಇವಳು ಒಬ್ಬಳೇ. ತಲೆ ಪೂರ್ತಿ ಕೆಟ್ಟುಹೋಯಿತು. ಸದಾ ಅವನ ಧ್ಯಾನದಲ್ಲೇ ಇರುತ್ತಿದ್ದಳು. ಅವಳ ಭ್ರಮೆಯ ಲೋಕದಲ್ಲಿ ಆತ ಸತ್ತಿರಲಿಲ್ಲ. ಮತ್ತೆ ಮತ್ತೆ 'ಉಲ್ಝನ್' ಸಿನೆಮಾದ ವೀಡಿಯೊ ಹಾಕಿಕೊಂಡು ನೋಡುತ್ತ ದಿನ ಕಳೆಯುತ್ತಿದ್ದಳು. ಬಾಕಿ ಯಾವುದರ ಬಗ್ಗೆಯೂ ಖಬರೇ ಇಲ್ಲ. ಯಾವಾಗಲೋ ಅಪರೂಪಕ್ಕೆ ಕೆಲಸದವಳು ಬಂದು ಮನೆ ಕ್ಲೀನ್ ಮಾಡಿಕೊಟ್ಟರೆ ಅದೇ ದೊಡ್ಡ ಮಾತು. ಸ್ನಾನ, ಊಟ, ತಿಂಡಿ, ನಿದ್ರೆ ಯಾವದರ ಬಗ್ಗೆ ಕೂಡ ಖಬರಿಲ್ಲ. ಮತ್ತೆ ಆಕೆಗೆ ಇದ್ದ ಸಂಬಂಧಿಕರಾದರೂ ಯಾರು? ಆಗಷ್ಟೇ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದ ತಂಗಿ ವಿಜೇತಾ ಪಂಡಿತ್ ಬ್ಯುಸಿ. ತಮ್ಮಂದಿರಾದ ಜತಿನ್-ಲಲಿತ್ ಆಗ ತುಂಬಾ ಚಿಕ್ಕವರು. ಬಾಲಿವುಡ್ಡಿನಲ್ಲಿ ಕಾಲಿಟ್ಟಿರಲೂ ಇಲ್ಲ. ಯಾರಾದರೂ ಬಂದು ಸಹಾಯ ಮಾಡೋಣ ಅಂದರೆ ಸುಲಕ್ಷಣಾ ಅದಕ್ಕೆ ತೆರೆದುಕೊಳ್ಳಬೇಕಲ್ಲ? ಒಪ್ಪಬೇಕಲ್ಲ? ಅದೆಲ್ಲ ತಲೆಗೆ ಹೋಗಬೇಕಲ್ಲ? ಪಾಪದವಳು ಸುಲಕ್ಷಣಾ. ತನ್ನದೇ ಲೋಕದಲ್ಲಿ ಇರುತ್ತಿದ್ದಳು. ಸಂಜೀವ್ ಕುಮಾರ್ ಜೊತೆ ನಟಿಸಿದ ದೃಶ್ಯಗಳನ್ನು ಮತ್ತೆ ಮತ್ತೆ ನೋಡುವದು. ಅವನ ಜೊತೆ ಹಾಡಿ ಕುಣಿದ ಡುಯೆಟ್ ಹಾಡುಗಳನ್ನು ನಿರಂತರವಾಗಿ ಕೇಳುವದು ಮತ್ತು ಹಾಡುವದು. ಇವನ್ನೇ ಮಾಡುತ್ತ ಹೇಗೋ ಬದುಕಿದ್ದಳು.

ಹೇಳಿದರೆ ನೀವು ನಂಬಲಿಕ್ಕಿಲ್ಲ. ಆದರೆ ಸುಲಕ್ಷಣಾ ಪಂಡಿತಳ ವಿಚಿತ್ರ ಭ್ರಮಾಲೋಕದ ಜೀವನ ಯಾವ ಮಟ್ಟವನ್ನು ಮುಟ್ಟಿತ್ತು ಅಂದರೆ ಆಕೆಯ ಮನೆಯ ಒಳಭಾಗದ ತುಂಬೆಲ್ಲ ಪಾಚಿ (moss, fungus) ಫುಲ್ ಬೆಳೆದುಬಿಟ್ಟಿತ್ತು. ಅದೂ ಆಕೆಗೆ ಖಬರಿಲ್ಲ. ಸಂಜೀವ್ ಕುಮಾರನ ಸುತ್ತ ಒಂದು ಭ್ರಮಾಲೋಕ ಸೃಷ್ಟಿಸಿಕೊಂಡು ಅದರಲ್ಲೇ ಕಳೆದುಹೋಗಿದ್ದಳು. ಇದು ಸುಮಾರು ೧೯೯೦ ರ  ಮಾತಿರಬಹುದು. ಸಂಜೀವ್ ಕುಮಾರ್ ತೀರಿಹೋಗಿ ಐದಾರು ವರ್ಷಗಳ ಬಳಿಕ. ನೀವೇ ಊಹಿಸಿಕೊಳ್ಳಬಹುದು ಪಾಪ ಅವಳ ಮನಃಸ್ಥಿತಿ ಹೇಗಿತ್ತು ಅಂತ.

ಪರಿಸ್ಥಿತಿ ಎಲ್ಲಿಯವರೆಗೆ ಬಿಗಡಾಯಿಸಿತು ಅಂದರೆ ಅವಳಿದ್ದ ಆ ಮನೆಯಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಅಲ್ಲೇ ಆಕೆಯನ್ನು ಉಳಿಯಲು ಬಿಟ್ಟರೆ ಸತ್ತೇಹೋಗುತ್ತಾಳೆ ಅನ್ನುವ ಪರಿಸ್ಥಿತಿ ಬಂದಾಗ ತಂಗಿ ವಿಜೇತಾ ಪಂಡಿತ್, 'ಈ ಅಕ್ಕನನ್ನು ಹೀಗೇ ಬಿಟ್ಟರೆ ಇನ್ನು ಕೆಲವೇ ದಿವಸಗಳಲ್ಲಿ ಇವಳು ಕೂಡ ಸ್ವರ್ಗ ಸೇರುತ್ತಾಳೆ. ಬೇರೆ ಏನಾದರೂ ವ್ಯವಸ್ಥೆ ಮಾಡಬೇಕು' ಅಂತ ನಿರ್ಧರಿಸಿದಳು. ಆದರೆ ಬೇಕಲ್ಲ ರೊಕ್ಕ? ಅದೇ ದೊಡ್ಡ ಪ್ರಾಬ್ಲಮ್. ಸುಲಕ್ಷಣಾ ಪಂಡಿತ್ ಅಂತೂ ಫುಲ್ ಠಣ್ ಠಣ್ ಗೋಪಾಲ್. ರೊಕ್ಕ ಹೋಗಲಿ ಆಕೆಗೆ ದಿನ ನಿತ್ಯದ ಊಟಕ್ಕೂ ತೊಂದರೆ. ಆಗ ಆಪತ್ಬಾಂಧವನಂತೆ ಬಂದವನು ನಟ ಜಿತೇಂದ್ರ. ಸುಲಕ್ಷಣಾ ಪಂಡಿತ್ ಜೊತೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದ. ಅವರದ್ದು ಹಿಟ್ ಜೋಡಿ ಕೂಡ. ಅದನ್ನೆಲ್ಲ ನೆನಪಿಸಿಕೊಂಡ ಜಿತೇಂದ್ರ ದೊಡ್ಡ ಮನಸ್ಸು ಮಾಡಿ, ಪೂರ್ತಿ ಎಕ್ಕುಟ್ಟಿಹೋಗಿದ್ದ ಆ ಸುಲಕ್ಷಣಾ ಪಂಡಿತಳ ಪಾಚಿಗಟ್ಟಿ ಹಾಳುಬಿದ್ದಿದ್ದ ಮನೆಯನ್ನು ಕೊಂಡುಕೊಂಡ. ಮಾರ್ಕೆಟ್ ರೇಟಿಗಿಂತ ಜಾಸ್ತಿ ಬೆಲೆಯನ್ನು ಕೊಟ್ಟೇ ಖರೀದಿ ಮಾಡಿದ. ಹಳೆಯ ಸಹನಟಿಯ ಉಳಿದ ಜೀವನಕ್ಕೆ ಉಪಯೋಗವಾಗಲಿ ಅನ್ನುವ ಉದಾತ್ತ ಭಾವನೆ. ಜಿತೇಂದ್ರ ಕೊಟ್ಟ ರೊಕ್ಕದಿಂದ ಒಂದು ಪುಟ್ಟ ಮನೆ ಖರೀದಿ ಮಾಡಿದರು. ಸುಲಕ್ಷಣಾ ಪಂಡಿತಳನ್ನು ಅಲ್ಲಿಗೆ ಶಿಫ್ಟ್ ಮಾಡಿದ ತಂಗಿ ವಿಜೇತಾ ಅಕ್ಕನ ದೇಖರೇಖಿಗೆ ನಿಂತಳು. ಆಕೆಗೂ ಅವಳ ಸಂಸಾರವಿತ್ತು. ಸಂಗೀತ ಸಂಯೋಜಕ ಆದೇಶ ಶ್ರೀವಾತ್ಸವ ಎಂಬುವವನನ್ನು ವಿವಾಹವಾಗಿದ್ದ ವಿಜೇತಾ ಎರಡು ಚಿಕ್ಕಮಕ್ಕಳ ತಾಯಿ. ಹಾಗಿದ್ದರೂ ಅಕ್ಕನನ್ನು ಬೇರೆ ಮನೆಗೆ ಶಿಫ್ಟ್ ಮಾಡಿದ ನಂತರ ಆಗಾಗ ಬಂದು ನೋಡಿ ಹೋಗುತ್ತಿದ್ದಳು. ತಕ್ಕಮಟ್ಟಿಗೆ ಅಕ್ಕನನ್ನು ನೋಡಿಕೊಂಡಳು. ಇಲ್ಲವಾದರೆ ಸುಲಕ್ಷಣಾ ಪಂಡಿತ್ ಎಂದೋ ಹರೋಹರ ಆಗಿರುತ್ತಿದ್ದಳು.

ಸುಲಕ್ಷಣಾಗೆ ಸುಮಾರು ನಲವತ್ತು ವರ್ಷ ವಯಸ್ಸು ಆಗುವ ಹೊತ್ತಿಗೆ ಇಷ್ಟೆಲ್ಲ ಆಗಿಹೋಗಿತ್ತು. ಒಂದು ಕಾಲದ ದಿವ್ಯ ಸುಂದರಿ ಈಗ ಜೀವಚ್ಚವ. Walking dead.

ಇಷ್ಟೆಲ್ಲ ಆಗಿಯೇ ಇಪ್ಪತ್ತು ವರ್ಷಗಳ ಮೇಲಾಗಿದೆ. ಈಗ ಸುಲಕ್ಷಣಾ ಪಂಡಿತ್ ಗೆ ಅರವತ್ತು ವರ್ಷ. ಮನಃಸ್ಥಿತಿಯಲ್ಲಿ ಏನೂ ಬದಲಾವಣೆ ಇಲ್ಲ. ಸಂಜೀವ್ ಕುಮಾರ್ ತೀರಿಹೋಗಿ ಆಗಲೇ ಮೂವತ್ತು ವರ್ಷದ ಮೇಲಾಗಿಹೋಯಿತು. ಇವಳು ಮಾತ್ರ ಕಳೆದ ಮೂವತ್ತು ವರ್ಷಗಳಿಂದ ತನ್ನದೇ ಭ್ರಮಾಲೋಕದಲ್ಲಿ ಇದ್ದಾಳೆ. She lives in the time frozen reality of her own.

ಈಗ ಸ್ವಲ್ಪ ವರ್ಷಗಳ ಹಿಂದೆ ಮನೆಯಲ್ಲೇ ಬಿದ್ದು ಮೂಳೆ ಮುರಿಯಿತಂತೆ. ಆವಾಗ ತನ್ನ ಮನೆಗೇ ಕರೆದುಕೊಂಡು ಬಂದಳು ವಿಜೇತಾ ಪಂಡಿತ್. ಅವಳ ಮನೆಯ ಒಂದು ಕೋಣೆಯಲ್ಲಿ ಸದಾ ಮಲಗಿಯೇ ಇರುತ್ತಾಳೆ ಸುಲಕ್ಷಣಾ ಪಂಡಿತ್. ತಾನೇ ಹಾಡಿದ್ದ ಹಳೆಯ ಹಾಡುಗಳೇ ಸಂಗಾತಿ. ಅವು ಬೇಜಾರಾದಾಗ ಮತ್ತೆ ಮತ್ತೆ ಸಂಜೀವ್ ಕುಮಾರನ ಜೊತೆ ನಟಿಸಿದ್ದ ಸಿನೆಮಾಗಳ ವೀಡಿಯೊ ನೋಡುವದು. ಅದರಲ್ಲಿ ಏನೂ ಬದಲಾವಣೆ ಇಲ್ಲ. ತಂಗಿ ವಿಜೇತಾ ಬಿಟ್ಟರೆ ಬೇರೆ ಯಾರ ಜೊತೆಗೂ ಮಾತಿಲ್ಲ, ಕಥೆಯಿಲ್ಲ. ಬೇರೆಯೇ ಲೋಕದಲ್ಲಿ ಇರುತ್ತಾಳೆ ಅಂದ ಮೇಲೆ ಆ ಭ್ರಮಾಲೋಕದಲ್ಲಿ ಬೇರೆ ಜನ ಇದ್ದರೆ ತಾನೇ ಪರಿಚಯ ಹಿಡಿಯುವದು, ಮಾತಾಡುವದು ಇತ್ಯಾದಿ? Totally lost case!

ಸುಲಕ್ಷಣಾ ಪಂಡಿತಳ ಈಗಿನ ಹಾಲತ್ ಇಷ್ಟು ನಾಜೂಕಾಗಿದೆ ಅಂದರೆ ಕೆಲವು ವಿಷಯಗಳನ್ನು ಅವಳಿಗೆ ತಿಳಿಸುವದೇ ಇಲ್ಲವಂತೆ. ತಿಳಿಸಿದರೆ ಮತ್ತೆಲ್ಲಿ ಮತ್ತೊಮ್ಮೆ ಆಘಾತಕ್ಕೆ ಒಳಗಾಗಿ ಮತ್ತೇನಾದರೂ ಆದೀತೋ ಅಥವಾ ಇವಳೂ ತೀರಿಹೋದರೆ ಅಂತ ಆತಂಕ. ತಂಗಿ ವಿಜೇತಾ ಪಂಡಿತ್ ಯಾವದೋ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಳು, 'ಎಲ್ಲರಿಗಿಂತ ಹಿರಿಯವಳಾಗಿದ್ದ ನಮ್ಮಕ್ಕ ಸಂಧ್ಯಾ ಭಯಾನಕವಾಗಿ ಕೊಲೆಯಾದಳು. ಅದನ್ನೂ ನಾವು ಸುಲಕ್ಷಣಾಳಿಗೆ ತಿಳಿಸಲಿಲ್ಲ. ಮೊನ್ನೆ ನನ್ನ ಪತಿ ಆದೇಶ ಕ್ಯಾನ್ಸರ್ ಗೆ ಬಲಿಯಾದ. ಅದನ್ನೂ ನಾವು ಸುಲಕ್ಷಣಾಳಿಗೆ ಹೇಳಲಿಲ್ಲ. ಯಾಕೆಂದರೆ ಅವಳದ್ದು ಮೊದಲೇ ಘಾಸಿಗೊಂಡಿರುವ ಮನಸ್ಸು. ಇಂತಹ ಆಘಾತಕಾರಿ ವಿಷಯಗಳನ್ನು ತಿಳಿಸಿದರೆ ಅವಳಿಗೆ ಮತ್ತೇನಾದರೂ ಆಗಿಬಿಟ್ಟರೆ ಅಂತ ಆತಂಕ. ಆಕೆಗೆ ಸಣ್ಣ ಪ್ರಮಾಣದ ಆಘಾತವನ್ನೂ ಸಹ ಸಹಿಸುವ ಶಕ್ತಿಯಿಲ್ಲ.' ಪಾಪ!

ಸುಲಕ್ಷಣಾ ಪಂಡಿತಳ ಹಿರಿಯಕ್ಕ ಸಂಧ್ಯಾ ಪಂಡಿತ್ ಸಿಂಗ್. ಸಹೋದರಿಯರಲ್ಲೇ ಅತ್ಯಂತ ಸುಂದರಿ ಅವಳಂತೆ. ಆಕೆಯನ್ನು ಸಿನೆಮಾ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಸಿನೆಮಾದಲ್ಲಿ ಆಸಕ್ತಿಯಿರದ ಆಕೆ ಯಾವದೋ ದೊಡ್ಡ ಸರ್ಕಾರಿ ಬಾಬು ಸಿಂಗ್ ಎಂಬುವವನನ್ನು ಮದುವೆಯಾಗಿ ಆರಾಮ್ ಇದ್ದಳು. ಒಂದೆರೆಡು ವರ್ಷಗಳ ಹಿಂದೆ ಭೀಕರವಾಗಿ ಕೊಲೆಯಾದಳು. ಸ್ವಂತ ಮಗನೇ ಅಮ್ಮನ ಬಳಿಯಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಡವೆಗಳನ್ನು ದೋಚಲು ಅಮ್ಮನನ್ನು ಕೊಂದುಬಿಟ್ಟ ಅಂತ ಪೋಲೀಸರ ಆರೋಪ. ಇನ್ನೂ ಕೋರ್ಟಿನ ತೀರ್ಮಾನ ಬಂದಿಲ್ಲ. ಇಂತಹ ಅಕ್ಕನ ಮಗನನ್ನು ಬಾಲ್ಯದಲ್ಲಿ ಆಡಿಸಿ ಬೆಳೆಸಿದವರು ಇದೇ ಸುಲಕ್ಷಣಾ ಮತ್ತು ವಿಜೇತಾ ಅನ್ನುವ ಚಿಕ್ಕಮ್ಮಂದಿರು. ಅಂತಹ ಹುಡುಗ ಇವರ ಅಕ್ಕನನ್ನು, ಸ್ವಂತ ತಾಯಿಯನ್ನು ಕೊಂದುಬಿಟ್ಟ ಅನ್ನುವ ಸುದ್ದಿ ಕೇಳಿದರೆ ಸುಲಕ್ಷಣಾಳ ಹಾಲತ್ ಅಷ್ಟೇ ಮತ್ತೆ. ಅಥವಾ ಅವಳಿಗೆ ಅವೆಲ್ಲ ಗೊತ್ತಾದರೂ ಆಗುತ್ತದೆಯೋ ಇಲ್ಲವೋ ಅನ್ನುವದೂ ದೊಡ್ಡ ಡೌಟ್. ಯಾಕೆಂದರೆ ಕಳೆದ ಮೂವತ್ತು ವರ್ಷಗಳಿಂದ ಆಕೆಯ brain ಬಂದಾಗಿಬಿಟ್ಟಿದೆ.

ಮೊನ್ನಿತ್ತಲಾಗೆ ಯಾಕೋ ನನ್ನ ಮೆಚ್ಚಿನ ನಟ ಸಂಜೀವ್ ಕುಮಾರ್ ಮತ್ತು ನೆಚ್ಚಿನ ನಟಿ ಸುಲಕ್ಷಣಾ ಪಂಡಿತ್ ಬಗ್ಗೆ ಮಾಹಿತಿ ಹುಡುಕುತ್ತಿದ್ದಾಗ ಇದೆಲ್ಲ ವಿಷಯ ತಿಳಿಯಿತು. ಹೃದಯ ಭಾರವಾಯಿತು. ಇಂತಹ ಪರಿಸ್ಥಿತಿ ಬರಬಾರದಿತ್ತು.

ಸಂಜೀವ್ ಕುಮಾರನ ನಸೀಬ್ ನೋಡಿದರೆ ಪಾಪ ಅನ್ನಿಸುತ್ತದೆ. ತಾನಾಗೇ ಒಲಿದು ಬಂದು, ಶಾಸ್ತ್ರೋಕ್ತವಾಗಿ ಮದುವೆಯಾಗದಿದ್ದರೂ ಯಾವದೇ ಪತ್ನಿಗೆ ಕಮ್ಮಿಯಿಲ್ಲದಂತೆ ಸೇವೆ ಮಾಡಿದ್ದ, ತಾಯಿಯಂತೆ ಸಲುಹಿದ್ದ, ಅಪರೂಪದ ಸುಂದರಿ ಸುಲಕ್ಷಣಾಳನ್ನು ಒಪ್ಪಿ, ಅವಳ ಭಾವನೆಗಳಿಗೆ ಸ್ಪಂದಿಸಿ, ಅವಳಿಗೊಂದು ಬಾಳು ಕೊಟ್ಟಿದ್ದರೆ ಎಲ್ಲಿ ಇವನ ಬಾಳೂ ಹಸನಾಗುತ್ತಿತ್ತೇನೋ!? ಯಾರಿಗೆ ಗೊತ್ತು. ಒಂದು ಅದ್ಭುತ ಫಿಲ್ಮಿ ಜೋಡಿಯಂತೂ ಆಗುತ್ತಿತ್ತು. ಅದರಲ್ಲಿ ಡೌಟೇ ಇಲ್ಲ. ಅವರಿಬ್ಬರ ಮಧ್ಯೆ super chemistry ಇತ್ತು.

ಏನು ಮಾಡಲಿಕ್ಕೆ ಬರುತ್ತದೆ? ಸಂಜೀವ್ ಕುಮಾರ್ ನೂತನ್, ಹೇಮಾಮಾಲಿನಿಯ ಗುಂಗಿನಿಂದ ಹೊರಗೇ ಬರಲಿಲ್ಲ. ಅದರಲ್ಲೇ ಕೊರಗಿ ಕೊರಗಿ ಕಳೆದುಹೋದ. ಸತ್ತೂಹೋದ. ಸುಲಕ್ಷಣಾ ಅವನ ಗುಂಗಿನಲ್ಲಿ ಕಳೆದುಹೋಗಿದ್ದಾಳೆ. ಜೀವಂತ ಶವದಂತೆ ಬದುಕಿದ್ದಾಳೆ. ಮುಂದೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಜೋಡಿಯದು ದುರಂತ ಕಥೆ.

ಸುಲಕ್ಷಣಾ ಪಂಡಿತ್

Saturday, March 26, 2016

Don't argue with ruffians


This is related to Pankaj Narang murder case. "Vikaspuri murder: Dr Pankaj Narang was dragged out of home, beaten to death with bats."

Terrible! Sad!

Moral - avoid arguments with ruffian type people. Swallow your pride. Bear the insult and let it go. You don't know how things will turn out to be. Sometimes what you think is a small argument becomes a fatal one like this. As a decent person you are no match for ruffians. Or keep a licensed gun. Not practical for many.

A similar incident, of lesser magnitude, comes to mind. A family friend of ours in hometown Dharwad experienced something similar a few years ago. He was going to work on his scooter. Suddenly a large dog came out of a compound and chased his scooter. Somehow he managed to evade the dog and also saved himself from falling from his scooter. He would have been seriously injured if he were to fall from his scooter. It was very scary and dangerous.

He was very upset, naturally, that people who keep crazy dogs can be so irresponsible. He traced his way back, went to the house and asked to see the owner. A large guy came out and inquired what the matter was. Our man told about the incident and told the dog's owner that he had to keep the dog properly restrained and not leave it like that which had become a menace to the people on the road. No heated argument or nothing like that. Genuine concern expressed in a very gentlemanly way. Without a second thought, that dog's owner thoroughly slapped our guy a few times and asked him to get the hell out of his place. Our guy, a very decent family man, was completely taken aback from the harsh treatment meted out to him. Insult and injury together. Totally unexpected.

Then he went to the local police station to lodge a complaint. You won't believe the advice he got when he complained and asked to register a complaint against the dog's owner who had thrashed him. Cops said, 'Sir, why do you want to take 'panga' (issue) with him? He is a noted rowdy (goonda) of that area. If you insist on registering the case, he might harm you or your family members in some other way later. Do you want all that 'laphada' (headache)? Just forget all about it and go home,' This is what cops told him. They were in no mood to bring the the goonda to books. May be he was their friend and may be there was some sort of 'understanding' between them.

Our hapless guy came to our house and cried before my parents whom he considered as mentors. My father even inquired if he should use his contacts in the police higher-ups to help him out. He had been so thoroughly brainwashed and scared by the cops that he did not want to pursue the matter any more. 'Who wants anymore headache Sir? I have two teenage daughters. I don't want any risk for them. I am crushed by the insult more than the injury. But, I will bear it'.

Logical decision? For him probably yes.

(Copied from my Facebook status)

Sunday, March 20, 2016

ಮೀರ್ ಡಾಗನ್ - ಇಸ್ರೇಲಿ ಬೇಹುಗಾರಿಕೆಯ ಧೀಮಂತ ನಾಯಕ

ಮೊಸ್ಸಾದ್ (Mossad)! ಹೆಸರು ಕೇಳಿರಬೇಕಲ್ಲ? ಇಸ್ರೇಲ್ ಎಂಬ ಪುಟ್ಟ ದೇಶದ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ. ಮೊಸ್ಸಾದ್ ಅಂತ ನೆನಪಾದರೂ ಸಾಕು ಇಸ್ರೇಲಿನ ವಿರುದ್ಧ ಕಿತಾಪತಿ ಮಾಡುವವರು ಕನಸಿನಲ್ಲೂ ಬೆಚ್ಚಿಬೀಳುತ್ತಾರೆ. ಅದಕ್ಕೆ ಕಾರಣವಿಲ್ಲದಿಲ್ಲ. 'ನೀವು ಇಸ್ರೇಲಿಗೆ ಯಾವದೇ ತರಹದಲ್ಲಿ ಅಪಾಯವನ್ನು ತಂದೊಡ್ಡುತ್ತೀರಿ ಅಥವಾ ಇಸ್ರೇಲ್ ವಿರುದ್ಧ ಪಾತಕ ಎಸೆಗಿದ್ದೀರಿ ಅಂತಾದರೆ ಇಸ್ರೇಲ್ ನೀವು ಬ್ರಹ್ಮಾಂಡದ ಯಾವ ಮೂಲೆಯಲ್ಲಿದ್ದರೂ ಬಂದು ನಿಮ್ಮನ್ನು ಬೇಟೆಯಾಡುತ್ತದೆ. No exceptions!' ಅನ್ನುವ ಅಲಿಖಿತ ನಿಯಮವೊಂದನ್ನು ಒಂದಾದಮೇಲೊಂದು ಖತರ್ನಾಕ್ ಕಾರ್ಯಾಚರಣೆಗಳಲ್ಲಿ ಸಾಬೀತು ಮಾಡಿ ತೋರಿಸಿದ್ದು ಮೊಸ್ಸಾದ್. ವಿಶ್ವದ ಬೇಹುಗಾರಿಕೆ ಸಂಸ್ಥೆಗಳಲ್ಲೇ ಮೊಸ್ಸಾದಿಗೆ ಅಗ್ರಸ್ಥಾನ. ಅಮೇರಿಕಾದ ಬೇಹುಗಾರಿಕೆ ಸಂಸ್ಥೆ CIA ಕೂಡ ಮೊಸ್ಸಾದಿನಿಂದ ಪಾಠ ಹೇಳಿಸಿಕೊಳ್ಳುತ್ತದೆ. ತನ್ನ ಹತ್ತಿರ ಸಾಧ್ಯವಿಲ್ಲದ ಅಥವಾ ಕೆಲವು ಅನಿವಾರ್ಯತೆಗಳಿಂದ ಮಾಡಲಾಗದ ಕಪ್ಪು ಕಾರ್ಯಾಚರಣೆಗಳನ್ನು (black ops, covert operations) ಮೊಸ್ಸಾದ್ ಮೂಲಕ ಮಾಡಿಸಿಬಿಡುತ್ತದೆ. When it comes to executing sensational black ops, no one is better than Israelis. They are the supreme experts.

ಮೀರ್ ಡಾಗನ್

ಇಂತಹ ಖತರ್ನಾಕ್ ಬೇಹುಗಾರಿಕೆ ಸಂಸ್ಥೆಯ ನೇತೃತ್ವ ವಹಿಸಿದ್ದ ಟಾಪ್ ಬೇಹುಗಾರ ಮೀರ್ ಡಾಗನ್ ತಮ್ಮ ಎಪ್ಪತ್ತೊಂದನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ೨೦೦೨ ರಿಂದ ೨೦೧೦ ರ ವರಗೆ ನಿರಂತರವಾಗಿ ಎಂಟು ವರ್ಷಗಳ ಕಾಲ ಮೊಸ್ಸಾದಿನ ಡೈರೆಕ್ಟರ್ ಆಗಿದ್ದವರು ಅವರು. ಎಂಟು ವರ್ಷಗಳ ಕಾಲ ಮೊಸ್ಸಾದಿನಂತಹ ಸಂಸ್ಥೆಯ ಡೈರೆಕ್ಟರ್ ಆಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವದೆಂದರೆ ಸಾಮಾನ್ಯ ಮಾತಲ್ಲ. ಹುಲಿಯ ಮೇಲಿನ ಸವಾರಿಯದು. ಮೊಸ್ಸಾದಿನ ರಹಸ್ಯ ಕಾರ್ಯಾಚರಣೆಗಳು ವಿಶ್ವದ ಎಲ್ಲಾ ಕಡೆ ನಡೆಯುತ್ತಲೇ ಇರುತ್ತವೆ. ಸದಾ ಸಿಕ್ಕಾಪಟ್ಟೆ ಒತ್ತಡ. ಎಲ್ಲಿಯಾದರೂ ಏನಾದರೂ ಕೊಂಚ ಹೇರಾಪೇರಿಯಾದರೂ ಇಸ್ರೇಲಿಗೆ ದೊಡ್ಡ ಮಟ್ಟದ ಗಂಡಾಂತರ. ಅಂತರರಾಷ್ಟ್ರೀಯ ಸಮುದಾಯದಲ್ಲಿ ಮಾನ ಹೋಗುತ್ತದೆ. ಸ್ಕೆಚ್ ಹಾಕಿದ್ದ ಉಗ್ರಗಾಮಿಯನ್ನು ಗಮನಿಸುವದು ಅಥವಾ ಅವನನ್ನು ಕೊಲ್ಲುವದು ಎಲ್ಲಿಯಾದರೂ ಹೆಚ್ಚುಕಮ್ಮಿಯಾದರೆ ಇಸ್ರೇಲಿಗೆ ದೊಡ್ಡ ಅಪಾಯ ಎದುರಾಗುತ್ತದೆ. ನಿಮಿಷ ನಿಮಿಷಕ್ಕೆ ಹೊಸ ಹೊಸ ಖತರ್ನಾಕ್ ಮಾಹಿತಿ ಪ್ರವಾಹದ ಮಾದರಿಯಲ್ಲಿ ಹರಿದು ಬರುತ್ತಿರುತ್ತದೆ. ಮೊಸ್ಸಾದಿನ ಡೈರೆಕ್ಟರ್ ಕೆಲಸ ಅಂದರೆ must be the most stressful job. ಮತ್ತೆ ವರ್ಷಕ್ಕೊಮ್ಮೆ ಬೇರೆ ರಾಜಕೀಯ ಪಕ್ಷದ ನಾಯಕ ಬಂದು ಕೂಡುತ್ತಾನೆ. ಹೀಗೆಲ್ಲ ಇರುವಾಗ ಮೊಸ್ಸಾದಿನಂತಹ ಸಂಸ್ಥೆಯ ನೇತೃತ್ವವನ್ನು ಅಖಂಡ ಎಂಟು ವರ್ಷ ಯಶಸ್ವಿಯಾಗಿ ನಿಭಾಯಿಸುವದು ಅಂದರೆ ಸಣ್ಣ ಮಾತಲ್ಲ.

ಮೀರ್ ಡಾಗನ್ ಇಸ್ರೇಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು. ಇಸ್ರೇಲಿನಲ್ಲಿ ಮೊಸ್ಸಾದಿನ ಡೈರೆಕ್ಟರ್ ಮುಂತಾದ ಪ್ರಮುಖ ಸ್ಥಾನಗಳಿಗೆ ಯಾರೋ ಅಬ್ಬೇಪಾರಿ ಸರ್ಕಾರಿ ಬಾಬುವನ್ನು ತಂದು ಕೂಡಿಸುವ ಪದ್ಧತಿ ಇಲ್ಲ. ಸೈನ್ಯ, ಬೇಹುಗಾರಿಕೆ, ಇತರೆ ರಕ್ಷಣಾ ಇಲಾಖೆಗಳಿಂದಲೇ ಬಂದಿರಬೇಕು. ಎಲ್ಲ ಕೆಲಸ ಗೊತ್ತಿರಬೇಕು. ಸಮಯ ಬಂದಾಗ ಮಾಡಲೂ ಬರಬೇಕು. ನೀವು ನಂಬಲಿಕ್ಕಿಲ್ಲ ಆದರೆ ಕೆಲವೊಂದು ಖತರ್ನಾಕ್ ಕಾರ್ಯಾಚರಣೆಗಳಲ್ಲಿ ಮೊಸ್ಸಾದಿನ ಡೈರೆಕ್ಟರ್ ಅವರೇ ಖುದ್ದಾಗಿ spot ಮೇಲಿರುತ್ತಾರೆ. ಇತರೆ ಬೇಹುಗಾರರಂತೆ ಮಾರುವೇಷ ಧರಿಸಿ ಇಡೀ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುತ್ತಾರೆ. ಉಳಿದವರು ತೆಗೆದುಕೊಂಡ ದೊಡ್ಡ ಮಟ್ಟದ risk ಇವರೂ ತೆಗೆದುಕೊಂಡಿರುತ್ತಾರೆ. ಒಂದೆರೆಡು ಉದಾಹರಣೆ ಕೊಡುತ್ತೇನೆ.

೧೯೯೨ ರಲ್ಲಿ ಇಪ್ಪತ್ತು ವರ್ಷಗಳ ನಿರಂತರ ಹುಡುಕಾಟದ ನಂತರ ಪ್ಯಾಲೆಸ್ಟೈನ್ ಉಗ್ರಗಾಮಿ ಅತಿಫ್ ಬೆಸೋ ಎಂಬುವನನ್ನು ಮೊಸ್ಸಾದಿನ ರಹಸ್ಯ ಹಂತಕರು ಪ್ಯಾರಿಸ್ಸಿನಲ್ಲಿ ಗುಂಡಿಟ್ಟು ಕೊಂದರು. ೧೯೭೨ ರಲ್ಲಿ ಜರ್ಮನಿಯ ಮ್ಯೂನಿಕ್ ಶಹರದಲ್ಲಿ ನಡೆದ ಒಲಿಂಪಿಕ್ ನಲ್ಲಿ ಇಸ್ರೇಲಿ ಕ್ರೀಡಾಪಟುಗಳ ಇಡೀ ತಂಡವನ್ನು ಪ್ಯಾಲೆಸ್ಟೈನ್ ಉಗ್ರಗಾಮಿಗಳು ಅಪಹರಿಸಿದ್ದರು. ಜರ್ಮನಿ ನಡೆಸಿದ rescue ಕಾರ್ಯಾಚರಣೆ ಎಕ್ಕುಟ್ಟಿಹೋಗಿತ್ತು. ಅಷ್ಟೂ ಇಸ್ರೇಲಿ ಕ್ರೀಡಾಪಟುಗಳನ್ನು ಉಗ್ರರು ಕೊಂದಿದ್ದರು. ಇಸ್ರೇಲ್ ಅಂದೇ ಒಂದು ನಿರ್ಧಾರ ಕೈಗೊಂಡಿತ್ತು. 'ಇವರನ್ನು ಬಿಡುವದಿಲ್ಲ. ಮ್ಯೂನಿಕ್ ಹತ್ಯಾಕಾಂಡಕ್ಕೆ ಕಾರಣವಾದವರನ್ನು ಒಬ್ಬೊಬ್ಬರನ್ನಾಗಿ ಹಿಡಿಹಿಡಿದು ಕೊಲ್ಲುತ್ತೇವೆ,' ಅಂತ ಖಡಕ್ ನಿರ್ಧಾರ ತೆಗೆದುಕೊಂಡಿದ್ದ ಇಸ್ರೇಲಿಗಳು ಅದೇ ಪ್ರಕಾರ ಮಾಡಿತೋರಿಸಿದ್ದರು. ೧೯೭೯ ರ ಹೊತ್ತಿಗೆ ಸುಮಾರು ಎಲ್ಲರನ್ನೂ ಮೊಸ್ಸಾದ್ ಒಂದಕ್ಕಿಂತ ಒಂದು ಖತರ್ನಾಕ್ ಕಾರ್ಯಾಚರಣೆಗಳಲ್ಲಿ ಮುಗಿಸಿಹಾಕಿತ್ತು. ಅಂದಿನ ಮೊಸ್ಸಾದಿನ ಡೈರೆಕ್ಟರ್ ಝ್ವೀ ಝಾಮಿರ್ ಕೆಲವು ಕಾರ್ಯಾಚರಣೆಗಳ ನೇತೃತ್ವವನ್ನು ತಾವೇ ವಹಿಸಿದ್ದರು. ಅದೂ ಹಂತಕರ ತಂಡದ ಕಾರ್ ಡ್ರೈವರ್ ಆಗಿ. ಎಲ್ಲಿಯಾದರೂ ಕೇಳಿದ್ದೀರೇನು ಈ ತರಹದ ನಾಯಕತ್ವದ ಬಗ್ಗೆ? Leading from the front ಅಂದರೆ ಇದು. ಮೊಸ್ಸಾದಿನ ಡೈರೆಕ್ಟರ್ ಅಂದರೆ ಹೀಗೆ. ಮೇಲೆ ಹೇಳಿದ ಅತಿಫ್ ಬೆಸೋ ಎಂಬ ಉಗ್ರಗಾಮಿ ಮ್ಯೂನಿಕ್ ಹತ್ಯಾಕಾಂಡದ ಹಂತಕರಲ್ಲಿ ಉಳಿದುಕೊಂಡಿದ್ದ ಕೊನೆಯ ಕೊಂಡಿ. ಇಪ್ಪತ್ತು ವರ್ಷ ತಲೆ ಮರೆಸಿಕೊಂಡಿದ್ದ. ಇಸ್ರೇಲ್ ನಿರಂತರವಾಗಿ ಹುಡುಕಿ ೧೯೯೨ ರಲ್ಲಿ ಅವನನ್ನು ಕೊಂದಿತು. ಅತಿಫ್ ಬೆಸೋನ ತಲೆಗೆ ಗುಂಡು ಬೀಳುವದನ್ನು ಮೊಸ್ಸಾದಿನ ಅಂದಿನ ಡೈರೆಕ್ಟರ್ ಶಾಬಟೈ ಶಾವಿತ್ ಕೇವಲ ಕೆಲವೇ ಅಡಿಗಳ ದೂರದಲ್ಲಿ ಮಾರುವೇಷದಲ್ಲಿ ಕಾರಿನಲ್ಲಿ ಕೂತು ನೋಡುತ್ತಿದ್ದರು. ಇಪ್ಪತ್ತು ವರ್ಷಗಳಿಂದ ಬೇಟೆಗಾಗಿ ಕಾದಿದ್ದ ಮಿಕ ಗುಂಡು ತಿಂದು ನೆಲಕ್ಕೆ ಉರುಳಿದಾಗಲೇ 'let's move' ಅಂದಿದ್ದರು ಶಾಬಟೈ ಶಾವಿತ್. ಉಳಿದೆಲ್ಲ ಮೊಸ್ಸಾದಿನ ಬೇಹುಗಾರರಂತೆ ರಹಸ್ಯವಾಗಿ ಫ್ರಾನ್ಸ್ ಪ್ರವೇಶಿಸಿದ್ದ ಅವರೂ ಸಹ ಅಲ್ಲಿಂದ ಅಷ್ಟೇ smooth ಆಗಿ ಕಳಚಿಕೊಂಡಿದ್ದರು. ಹೀಗಿರುತ್ತಾರೆ ಮೊಸ್ಸಾದ್ ಎಂಬ ಖತರ್ನಾಕ್ ಸಂಸ್ಥೆಯ ಮುಖ್ಯಸ್ಥರು. Always leading from the front.

ಮೊಸ್ಸಾದಿನ ನಾಯಕ ಅಂತ ಯಾರೋ ಸರ್ಕಾರಿ ಬಾಬುವನ್ನು ತಂದು ಕೂಡಿಸುವದಿಲ್ಲ ಅಂತ ವಿವರಿಸಲು ಮೇಲಿನ ಉದಾಹರಣೆಗಳನ್ನು ಕೊಟ್ಟೆ. ಮೊನ್ನೆ ತೀರಿಹೋದ ಮೊಸ್ಸಾದಿನ ಮಾಜಿ ಡೈರೆಕ್ಟರ್ ಮೀರ್ ಡಾಗನ್ ಇದೇ ಮಾದರಿಯ ನಾಯಕರು. ಅವರ ಬಗ್ಗೆ ಹೆಚ್ಚಿನ ಮಾಹಿತಿ ಹೊರಗೆ ಬಂದಿಲ್ಲ. ಇಸ್ರೇಲ್ ಹಾಗೆಲ್ಲ ಮಾಹಿತಿ ಕೊಡುವದೇ ಇಲ್ಲ. ಎಷ್ಟೋ ದಶಕಗಳ ನಂತರ ಯಾರೋ ಲೇಖಕರು ಹೇಗೋ ಮಾಡಿ ಒಂದಿಷ್ಟು ಮಾಹಿತಿ ಹೊರತೆಗೆಯುತ್ತಾರೆ. ಆಗ ತಿಳಿಯುತ್ತವೆ ಕೆಲವು ಖತರ್ನಾಕ್ ಮಾಹಿತಿ. ಇನ್ನು ಇಪ್ಪತ್ತು ಮೂವತ್ತು ವರ್ಷಗಳ ಮೇಲೆ ಮೀರ್ ಡಾಗನ್ ಅವರು ಖುದ್ದಾಗಿ on the spot ನೇತೃತ್ವ ವಹಿಸಿದ್ದ ಕಾರ್ಯಾಚರಣೆಗಳು, ಅವುಗಳಲ್ಲಿ ಇವರ ಪಾತ್ರ, ಇತ್ಯಾದಿಗಳ ಮೇಲೆ ಪುಸ್ತಕಗಳು, ಮಾಹಿತಿಗಳು ಹೊರಬಂದರೆ ಏನೂ ವಿಶೇಷವಿಲ್ಲ.

೨೦೦೨ ರಲ್ಲಿ ಮೊಸ್ಸಾದಿನ ಡೈರೆಕ್ಟರ್ ಅಂತ ನೇಮಕವಾದವರು ಮೀರ್ ಡಾಗನ್. ಆಗ ಇರಾಕಿನಲ್ಲಿ, ಅಫಘಾನಿಸ್ತಾನದಲ್ಲಿ ಅಮೇರಿಕಾ ಯುದ್ಧ ಮಾಡುತ್ತಿತ್ತು. ಇರಾಕ್ ಬಗ್ಗೆ ಇಸ್ರೇಲಿಗೆ ಬರೋಬ್ಬರಿ ಮಾಹಿತಿ ಇತ್ತು. ಯಾಕೆಂದರೆ ಅದು ಇಸ್ರೇಲಿನ ಪಕ್ಕದ ದೇಶ ಮತ್ತು ಬದ್ಧ ವೈರಿ. ಸದ್ದಾಮ್ ಹುಸೇನ್ ಅಂತೂ ಇಸ್ರೇಲಿನ ಹುಟ್ಟಡಗಿಸಿಯೇ ತೀರುತ್ತೇನೆ ಅನ್ನುತ್ತಲೇ ಸತ್ತ. ಇರಾಕಿನಲ್ಲಿ ಬರೋಬ್ಬರಿ ಬೇಹುಗಾರಿಕೆ ಮಾಡಿಕೊಟ್ಟಿದ್ದು ಮೊಸ್ಸಾದ್. ಅವೆಲ್ಲದರ overall in-charge ಇದೇ ಮೀರ್ ಡಾಗನ್. 'ಹರಿವ ಗಂಗೆಯಲ್ಲಿ ಮಿಂದವರೇ ಜಾಣರು,' ಎಂಬಂತೆ ಅಮೇರಿಕಾ ಸದ್ದಾಮ್ ಹುಸೇನನ ಹಿಂದೆ ಹೋದರೆ ಈ ಅವಕಾಶವನ್ನು ಬರೋಬ್ಬರಿ ಉಪಯೋಗಿಸಿಕೊಂಡ ಇಸ್ರೇಲ್ systematic ಆಗಿ ಇರಾಕಿನ ಬುದ್ಧಿವಂತರನ್ನು, ಮಿಸೈಲ್ ತಂತ್ರಜ್ಞಾನದ ಪರಿಣಿತರನ್ನು, ವಿಜ್ಞಾನಿಗಳನ್ನು ಕೊಂದುಹಾಕಿತು. ಮುಂದೊಂದು ದಿವಸ ಇಸ್ರೇಲ್ ವಿರುದ್ಧ ಕೆಲಸ ಮಾಡದಿರಲಿ ಅನ್ನುವ ದೂರಾಲೋಚನೆ. ಎಲ್ಲಿಯ ಮಟ್ಟಿಗೆ ಅಂದರೆ ಇನ್ನು ಐವತ್ತು ವರ್ಷಗಳ ಕಾಲ ಇರಾಕಿನಲ್ಲಿ ಯಾವದೇ ತರಹದ ದೊಡ್ಡ ಪ್ರಮಾಣದ ಮಿಸೈಲ್, ಪರಮಾಣು ತಂತ್ರಜ್ಞಾನ ಇತ್ಯಾದಿ ತಯಾರಾಗುವದೇ ಇಲ್ಲ. ಎರಡು ಮೂರು ತಲೆಮಾರಿನ ವಿಜ್ಞಾನಿಗಳ ಸಂಕುಲವನ್ನೇ ಇಸ್ರೇಲಿನ ಮೊಸ್ಸಾದ್ ಮೀರ್ ಡಾಗನ್ ಅವರ ನೇತೃತ್ವದಲ್ಲಿ ನಿರ್ನಾಮ ಮಾಡಿಹಾಕಿತು. ದಮ್ಮು ಅಂದರೆ ಅದು. ದೂರದೃಷ್ಟಿ ಅಂದರೆ ಅದು. ಉರಿವ ಮನೆಯಲ್ಲಿ ಗಳ ಹಿರಿದು ತಮ್ಮ ಬೀಡಿ ಹಚ್ಚಿಕೊಳ್ಳುವದು ಅಂದರೆ ಅದು. ಇಸ್ರೇಲಿನ ಭದ್ರತೆಯ ಮಾತು ಬಂತು ಅಂದರೆ ಅವರಿಗೆ ಎಲ್ಲ ಓಕೆ. ಹೇಗೂ ಅಮೇರಿಕಾ ಇರಾಕಿನಲ್ಲಿ ಅಬ್ಬರಿಸುತ್ತಿತ್ತು. ಒಂದಿಷ್ಟು ಬೆಂಕಿ ಹಚ್ಚಿತ್ತು. ಈಗಲ್ಲದೆ ಮತ್ತೆ ಯಾವಾಗ ಮೈ ಕಾಸಿಕೊಳ್ಳೋಣ ಅಂತ ಇಸ್ರೇಲಿಗಳೂ ತಮ್ಮ ಮೈ ಬಿಸಿಮಾಡಿಕೊಂಡು, ಬೇಕಾದ ಫಾಯಿದೆ ಮಾಡಿಕೊಂಡರು. ಇದಕ್ಕೆಲ್ಲ ಒಂದು ದೊಡ್ಡ ಪ್ರಮಾಣದ vision, overall strategy, orchestration ಕೊಟ್ಟು, ಇತರೆ ನಾಯಕತ್ವದ ಗುರುತರ ಜವಾಬ್ದಾರಿ ನಿಭಾಯಿಸಿದವರು ಇದೇ ಮೀರ್ ಡಾಗನ್. ಇಸ್ರೇಲಿ ಸೈನ್ಯದಲ್ಲಿ paratrooper commando ಆಗಿ ಸೇವೆ ಶುರು ಮಾಡಿದ್ದ ಮೀರ್ ಡಾಗನ್ ಮೇಜರ್ ಜನರಲ್ ಅಂತ ರಿಟೈರ್ ಆಗಿದ್ದರು. ಎಲ್ಲ ಯುದ್ಧಗಳಲ್ಲಿ ಭಾಗವಹಿಸಿದ್ದರು. ಸರಿಸುಮಾರು ಮೂವತ್ತು ವರ್ಷಗಳ ಖಡಕ್ ಅನುಭವವಿತ್ತು. ಅವೆಲ್ಲವನ್ನು ಮೊಸ್ಸಾದಿಗೆ ಧಾರೆಯರೆದಿದ್ದರು ಮೀರ್ ಡಾಗನ್.

ಇಮಾದ್ ಮುಗ್ನಿಯೇ

ಇಮಾದ್ ಮುಗ್ನಿಯೇ. ಜಾಸ್ತಿ ಜನ ಈ ಕಿರಾತಕನ ಹೆಸರು ಕೇಳಿರಲಿಕ್ಕಿಲ್ಲ. ಯಾಕೆಂದರೆ ಅವನು background operator. ತೆರೆಮರೆಯಲ್ಲಿದ್ದು ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದ. ಹೆಝಬೊಲ್ಲಾ ಎಂಬ ಉಗ್ರಗಾಮಿ ಸಂಘಟನೆಯ ಹಿರಿಯ ನಾಯಕ. ಮಿಲಿಟರಿ ವಿಭಾಗದ ಮುಖ್ಯಸ್ಥ. ಒಂದು ಕಾಲದಲ್ಲಿ ಯಾಸಿರ್ ಅರಾಫತ್ ಅವರಿಗಾಗಿ ಕೆಲಸ ಮಾಡಿದ್ದ. ೧೯೮೩ ರಲ್ಲಿ ಅರಾಫತ್ ಅವರ ಅಂಡಿನ ಮೇಲೆ ಒದ್ದು, ಅವರನ್ನು ಮತ್ತು ಅವರ ಫತಾ ಬಣದ ಉಗ್ರಗಾಮಿಗಳನ್ನು ಲೆಬನಾನಿನ ಬಿರೂಟ್ ನಗರದಿಂದ ಓಡಿಸಿತ್ತು ಇಸ್ರೇಲ್. ಆಗ ಈ ಇಮಾದ್ ಮುಗ್ನಿಯೇ ಎಂಬ ಕಿರಾತಕ ಎಲ್ಲೋ ಸಿಂಕ್ ಆಗಿದ್ದ. ಮುಂದೆ ಪ್ರತ್ಯಕ್ಷನಾಗಿದ್ದು ಹೆಝಬೊಲ್ಲಾ ಎಂಬಾ ಶಿಯಾ ಉಗ್ರಗಾಮಿ ಸಂಘಟನೆಯ ದೊಡ್ಡ ತಲೆಯಾಗಿ. ಹೆಝಬೊಲ್ಲಾ ಹಿಂದೆ ಇರಾನ್ ನಿಂತಿತ್ತು. ಸಿರಿಯಾ ಸಪೋರ್ಟ್ ಮಾಡುತ್ತಿತ್ತು. ಲೆಬನಾನಿನ ರಾಜಧಾನಿ ಬಿರೂಟಿನಲ್ಲಿ ತಳಊರಿದ ಹೆಝಬೊಲ್ಲಾ ವಿಪರೀತವಾಗಿ ಬೆಳೆಯಿತು. ಇಡೀ ಲೆಬನಾನನ್ನೇ ನಿಯಂತ್ರಿಸತೊಡಗಿತು. ಇರಾನ್ ಮತ್ತು ಸಿರಿಯಾ ದೇಶಗಳು ಹೇಳಿಕೊಟ್ಟಂತೆ ಇಸ್ರೇಲ್ ಮೇಲೆ ದಾಳಿ ಮಾಡತೊಡಗಿತು. ಉಗ್ರಗಾಮಿಗಳು ಕಿರಿಕಿರಿ ಶುರು ಮಾಡಿದರು. ಮತ್ತೇ ಅವೇ ಕಿತಾಪತಿಗಳು. ವಿಮಾನ ಅಪಹರಣ, ವಿದೇಶಿಗಳ ಹತ್ಯೆ, ಗಡಿಯಲ್ಲಿರುತ್ತಿದ್ದ ಇಸ್ರೇಲಿ ಸೈನಿಕರನ್ನು ಮರಾಮೋಸದಿಂದ ಅಪಹರಿಸಿ ಚಿತ್ರಹಿಂಸೆ ಕೊಟ್ಟು ಕೊಲ್ಲುವದು, ಇತ್ಯಾದಿ. ಇಂತಹ ಎಲ್ಲ ಕೃತ್ಯಗಳ ಹಿಂದಿದ್ದವ ಪೈಶಾಚಿಕ ಮನೋಭಾವದ ಇದೇ ಇಮಾದ್ ಮುಗ್ನಿಯೇ.

ಈ ಇಮಾದ್ ಮುಗ್ನಿಯೇ ಎಲ್ಲಿರುತ್ತಾನೆ ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಲೆಬನಾನಿನ ಬಿರೂಟ್ ನಗರದ ಒಂದು ಭಾಗ ಪೂರ್ತಿ ಹೆಝಬೊಲ್ಲಾ ಕೈಯಲ್ಲಿತ್ತು. ಅಲ್ಲಿ ಅವರದ್ದೇ ಹುಕುಮ್ಮತ್. ಅಲ್ಲೆಲ್ಲೋ ಒಂದು ನೆಲಮಾಳಿಗೆಯಲ್ಲಿ ಈ ಇಮಾದ್ ಮುಗ್ನಿಯೇ ಇರುತ್ತಾನೆ ಅಂತ ಗೊತ್ತಿತ್ತೇ ವಿನಃ ಬಾಕಿ ಏನೂ ಮಾಹಿತಿ ಇರಲಿಲ್ಲ. ಮತ್ತೆ ಅವನ ಮೇಲೆ ಇರಾನ್ ಮತ್ತು ಸಿರಿಯಾ ದೇಶಗಳ ಛತ್ರಛಾಯೆ. ಆ ದೇಶಗಳ ಬೇಹುಗಾರಿಕೆ ಸಂಸ್ಥೆಗಳು ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದವು. ಅವರಿಗೆ ಅಷ್ಟು ಮುಖ್ಯ ಅವನು. ಅವಕಾಶ ಸಿಕ್ಕರೆ ಮೊಸ್ಸಾದಿನ ಹಂತಕರು ಇಮಾದ್ ಮುಗ್ನಿಯೇನನ್ನು ಉಡಾಯಿಸುತ್ತಾರೆ ಅಂತ ಅವರಿಗೂ ಗೊತ್ತಿತ್ತು. ಹಾಗಾಗಿಯೇ ಇಮಾದ್ ಮುಗ್ನಿಯೇಗೆ extra protection ಕೊಟ್ಟಿದ್ದವು.

ಈ ಇಮಾದ್ ಮುಗ್ನಿಯೇ ಮೇಲೆ ಕಣ್ಣಿಟ್ಟಿದ್ದ ಮತ್ತೊಂದು ದೇಶ ಅಮೇರಿಕಾ. ಬಹಳ ಹಿಂದೊಮ್ಮೆ ಅಮೇರಿಕಾದ ವಿಮಾನವೊಂದನ್ನು ಅಪಹರಿಸಿದ್ದ ಈ ಇಮಾದ್. ಒಂದು ಖಡಕ್ ಸಂದೇಶ ಮುಟ್ಟಿಸಲು ವಿಮಾನದಲ್ಲಿದ್ದ ಒಬ್ಬ ಅಮೇರಿಕನ್ ನಾಗರಿಕನನ್ನು ಕೊಂದಿದ್ದ ಬೇರೆ. ಬಿರೂಟ್ ನಗರದಲ್ಲಿ ೧೯೮೩ ರಲ್ಲಿ ಅಮೇರಿಕಾದ ಶಾಂತಿಪಡೆಗಳ ಮೇಲಾದ ದೊಡ್ಡ ಪ್ರಮಾಣದ ಬಾಂಬ್ ದಾಳಿಗಳ ಹಿಂದೆಯೂ ಇಮಾದ್ ಮುಗ್ನಿಯೇಯ ಕೈವಾಡವಿತ್ತು. ಸರಿಸುಮಾರು ಮುನ್ನೂರು ಅಮೇರಿಕನ್, ಐವತ್ತು ಫ್ರೆಂಚ್ ಸೈನಿಕರ ರಕ್ತ ಈ ದುಷ್ಟನ ಕೈಗೆ ಮೆತ್ತಿಕೊಂಡಿತ್ತು. ಅಮೇರಿಕಾದ ಬೇಹುಗಾರಿಕೆ ಸಂಸ್ಥೆ CIA ಕೈತೊಳೆದುಕೊಂಡು ಇವನ ಹಿಂದೆ ಬಿದ್ದಿತ್ತು. ಒಸಾಮಾ ಬಿನ್ ಲಾಡೆನ್ ಹಿಂದೆ ಹೇಗೆ ಬಿದ್ದಿದ್ದರೋ ಅದೇ ಮಾದರಿಯಲ್ಲಿ. ಅಮೇರಿಕಾದವರ ದೃಷ್ಟಿಯಲ್ಲಿ ಈ ಇಮಾದ್ ಮುಗ್ನಿಯೇ ಲಾಡೆನ್ ಗಿಂತ ಏನೂ ಕಮ್ಮಿ ಅಪಾಯಕಾರಿಯಾಗಿರಲಿಲ್ಲ.

ಹೀಗೆ ಮೊಸ್ಸಾದ್ ಮತ್ತು ಸಿಐಎ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದವು. ತುಂಬಾ ಪರಿಶ್ರಮದ ನಂತರ ಇಮಾದ್ ಮುಗ್ನಿಯೇ ಬಗ್ಗೆ ಸ್ವಲ್ಪ ಸ್ವಲ್ಪವಾಗಿ ಮಾಹಿತಿ ಬರತೊಡಗಿತು. ಆಗಾಗ ಪಕ್ಕದ ಸಿರಿಯಾ ದೇಶಕ್ಕೆ ಹೋಗಿ ಬರುತ್ತಾನೆ ಅಂತ ಗೊತ್ತಾಗಿತ್ತು. ಅಷ್ಟು ಗೊತ್ತಾಗಿದ್ದೇ ಗೊತ್ತಾಗಿದ್ದು ಮೊಸ್ಸಾದ್ ಮತ್ತು ಸಿಐಎ ಸಿರಿಯಾ ದೇಶದಲ್ಲಿದ್ದ ತಮ್ಮ ಬೇಹುಗಾರಿಕೆ ಜಾಲವನ್ನು ಮತ್ತೂ ಬಲಪಡಿಸಿದವು. ಹೊಸ ಹೊಸ ರಹಸ್ಯ ಏಜೆಂಟಗಳ ನೇಮಕಾತಿಯಾಯಿತು. ಮೊಸ್ಸಾದಿನ ಬೇಹುಗಾರರು ಸಿರಿಯಾದ ರಾಜಧಾನಿ ಡಮಾಸ್ಕಸ್ ಗೆ ಹೋಗಿ ಝೇಂಡಾ ಹೊಡೆದರು. ಅತ್ಯಂತ ರಿಸ್ಕಿ ಕೆಲಸ ಅದು. ಶತ್ರು ದೇಶದಲ್ಲಿ ಹೋಗಿ ಕಾರ್ಯಾಚರಣೆ ಮಾಡುವದು ಅಂದರೆ ಕತ್ತಿಯ ಅಲಗಿನ ಮೇಲೆ ನಡೆದಂತೆ. ಮತ್ತೆ ಹಿಂದೆ ಸೆರೆ ಸಿಕ್ಕಿದ್ದ ಮೊಸ್ಸಾದಿನ ಬೇಹುಗಾರರನ್ನು ಸಿರಿಯಾ ಹಿಂಸಿಸಿ ಹಿಂಸಿಸಿ ಕೊಂದಿತ್ತು. ಪಬ್ಲಿಕ್ ನಲ್ಲಿ ಗಲ್ಲಿಗೆ ಹಾಕಿತ್ತು. ಹೀಗೆಲ್ಲ ಇರುವಾಗ ಅಪಾಯಕಾರಿ ಉಗ್ರವಾದಿ ಇಮಾದ್ ಮುಗ್ನಿಯೇ ವಿರುದ್ಧ ಸಿರಿಯಾದಲ್ಲಿ ಕಾರ್ಯಾಚರಣೆ ಮಾಡುವದೆಂದರೆ ಸಿಂಹದ ಗುಹೆಯನ್ನು ಹೊಕ್ಕು ಸಿಂಹ ಬರಲಿ ಅಂತ ಕಾದು ಕೂತಂತೆ!

ಹಲವಾರು ವರ್ಷಗಳ ಮೊಸ್ಸಾದ್, ಸಿಐಎ ತಂಡಗಳ ಪರಿಶ್ರಮ ಫಲ ಕೊಟ್ಟಿತ್ತು. ೨೦೦೮ ರ ಹೊತ್ತಿಗೆ ಇಮಾದ್ ಮುಗ್ನಿಯೇ, ಅವನು ಡಮಾಸ್ಕಸ್ ನಗರಕ್ಕೆ ಬಂದು ಹೋಗಿ ಮಾಡುವದು, ಅವನಿಗೆ ಅಲ್ಲಿದ್ದ ಪ್ರೇಯಸಿ ಎಲ್ಲದರ ಬಗ್ಗೆ ಬರೋಬ್ಬರಿ ಮಾಹಿತಿ ಸಿಕ್ಕಿತ್ತು. ಮೊಸ್ಸಾದಿನ ಹಂತಕರಿಗೆ ಬುಲಾವಾ ಹೋಯಿತು. 'ಮಿಕವನ್ನು ಹುಡುಕಿಕೊಟ್ಟಿದ್ದೇವೆ. ಬೇಟೆ ನಿಮಗೆ ಬಿಟ್ಟಿದ್ದು. ಒಟ್ಟಿನಲ್ಲಿ ಇಮಾದ್ ಮುಗ್ನಿಯೇ ಈ ಲೋಕ ಬಿಟ್ಟುಹೋಗಬೇಕು. ಅಷ್ಟೇ!' ಅಂದ ಶುದ್ಧ ಬೇಹುಗಾರರು ಪಕ್ಕಕ್ಕೆ ಸರಿದರು. ಮೊಸ್ಸಾದಿನ ಮತ್ತು ಸಿಐಎ ತಂಡಗಳ ನುರಿತ ಹಂತಕರು ಮುಂಚೂಣಿಗೆ ಬಂದರು. ಇಮಾದ್ ಮಿಯಾನನ್ನು ಮೇಲೆ ಕಳಿಸುವ ಪ್ಲಾನಿಂಗ್ ಶುರುವಾಯಿತು.

ಸಿಐಎ ಮತ್ತು ಮೊಸ್ಸಾದಿನ ರಹಸ್ಯ ಪ್ರಯೋಗಶಾಲೆಯಲ್ಲಿ ಅತಿ ಚಿಕ್ಕ ಸೈಜಿನ ಸ್ಪೋಟಕವನ್ನು ತಜ್ಞರು ತಯಾರಿಸಿದರು. ಮೊಸ್ಸಾದ್ ಅದನ್ನು ತನ್ನದೇ ರಹಸ್ಯ ರೀತಿಯಲ್ಲಿ ಡಮಾಸ್ಕಸ್ ನಗರಕ್ಕೆ ತಲುಪಿಸಿತು. ಮೊಸ್ಸಾದಿನ ಬೇಹುಗಾರರು ಅದು ಹೇಗೋ ಮಾಡಿ ಇಮಾದ್ ಮುಗ್ನಿಯೇ ಡಮಾಸ್ಕಸ್ ನಗರಕ್ಕೆ ಬಂದಾಗ ಸದಾ ಉಪಯೋಗಿಸ್ತುತ್ತಿದ್ದ Mitsubishi Pajero ವಾಹನವನ್ನು compromise ಮಾಡಿಬಿಟ್ಟಿದ್ದರು. ಒಂದು ವಾಹನ ಒಮ್ಮೆ compromise ಆಯಿತು ಅಂದರೆ ಸಾಕು. ಮುಗೀತು. ಉಳಿದಿದ್ದನ್ನು ಬಾಂಬ್ ಪರಿಣಿತರು ನೋಡಿಕೊಳ್ಳುತ್ತಾರೆ. ಮೊದಲೇ ತಯಾರುಮಾಡಿಟ್ಟುಕೊಂಡಿದ್ದ ಚಿಕ್ಕ ಶಕ್ತಿಶಾಲಿ ಸ್ಪೋಟಕವನ್ನು ಡ್ರೈವರ್ ಸೀಟಿನ headrest ನಲ್ಲಿ ಅತ್ಯಂತ ಕೌಶಲ್ಯದಿಂದ ಹುದುಗಿಸಿಟ್ಟರು ಮೊಸ್ಸಾದಿನ ಬಾಂಬ್ ತಂತ್ರಜ್ಞರು. ಇನ್ನು ಸರಿಯಾದ ಸಮಯಕ್ಕೆ ಕಾಯುವ ಕೆಲಸ.

ಕೆಲವು ದಿವಸಗಳ ನಂತರ ಮತ್ತೊಮ್ಮೆ ಡಮಾಸ್ಕಸ್ ನಗರಕ್ಕೆ ಬಂದ ಕಿರಾತಕ ಇಮಾದ್ ಮುಗ್ನಿಯೇ. ಸಿರಿಯಾದ ದೊಡ್ಡ ದೊಡ್ಡ ತಲೆಗಳ ಜೊತೆ ಮಾತುಕತೆ, ಮೇಜವಾನಿ ಎಲ್ಲ ಆಯಿತು. ಇಸ್ರೇಲ್ ವಿರುದ್ಧ ಮುಂದೆ ಮಾಡಬೇಕಾದ ಹೊಸ ಹೊಸ ವಿಧ್ವಂಸಕ ಕೃತ್ಯಗಳಿಗೆ ಬರೋಬ್ಬರಿ ಸುಪಾರಿ ತೆಗೆದುಕೊಂಡ. ಹೊಟ್ಟೆ ತುಂಬಾ ಊಟ ಮಾಡಿದ. ಹೊಟ್ಟೆ ತುಂಬಿದ ಮೇಲೆ ಹೊಟ್ಟೆ ಕೆಳಗಿನದರ ಬಗ್ಗೆ ಆಸಕ್ತಿ ಮೂಡಿತು. ಪ್ರೇಯಸಿ ನೆನಪಾದಳು. ಅದೇ Mitsubishi Pajero ವಾಹನವನ್ನು ತೆಗೆದುಕೊಂಡು ಹೋದ. ತಲೆ ಹಿಂದೆ ಬಾಂಬ್ ಕೂತಿರುವದು ಅವನಿಗೆ ಗೊತ್ತೇ ಇರಲಿಲ್ಲ. ಇಮಾದ್ ಮುಗ್ನಿಯೇನ ಪ್ರತಿಯೊಂದು ಚಲನವಲನಗಳನ್ನು ಡಮಾಸ್ಕಸ್ ನಗರಕ್ಕೆ ಬಂದಿಳಿದಿದ್ದ ಮೊಸ್ಸಾದ್ ಮತ್ತು ಸಿಐಎ ಜಂಟಿ ತಂಡ ಗಮನಿಸುತ್ತಿತ್ತು. ಅದರಲ್ಲಿ ಒಬ್ಬನ ಕೈಯಲ್ಲಿ ರಿಮೋಟ್ ಕಂಟ್ರೋಲ್. ಅದನ್ನು ಒತ್ತಿದರೆ ಮುಗಿಯಿತು. ಇಮಾದ್ ಮುಗ್ನಿಯೇ ಕೂತಿದ್ದ ವಾಹನ ಬ್ಲಾಸ್ಟ್ ಆಗಿಹೋಗುತ್ತಿತ್ತು.

೧೨ ಫೆಬ್ರವರಿ ೨೦೦೮. ಪ್ರೇಯಸಿ ಮನೆಗೆ ಹೋದ ಇಮಾದ್ ಮುಗ್ನಿಯೇ ಹೊಟ್ಟೆ ಕೆಳಗಿನ ಕೆಲಸ ಮುಗಿಸಿಬಂದ. ಕೊಂಚ ದೂರದಲ್ಲಿ ಕಾದಿದ್ದ ಮೊಸ್ಸಾದ್ ಮತ್ತು ಸಿಐಎ ಬೇಹುಗಾರರು ಎಲ್ಲ ಖಾತ್ರಿ ಮಾಡಿಕೊಂಡರು. ಇಮಾದ್ ಮುಗ್ನಿಯೇ ಡೋರ್ ತೆಗೆದು ವಾಹನ ಚಲಾಯಿಸಲು ಕೂತ. ಈ ಕಡೆ ರಿಮೋಟ್ ಕಂಟ್ರೋಲ್ ಹಿಡಿದವ ಸ್ವಿಚ್ ಒತ್ತಿಬಿಟ್ಟ. ದೊಡ್ಡ ಸ್ಪೋಟ. ಇಮಾದ್ ಮುಗ್ನಿಯೇ ಎಂಬ ಖತರ್ನಾಕ್ ಉಗ್ರಗಾಮಿ ಹರೋಹರ. ಅವನ ವಾಹನ, ಅವನು ಎಲ್ಲ ಆ ದೊಡ್ಡ ಸ್ಪೋಟದಲ್ಲಿ ಶಿವಾಯ ನಮಃ!

ಪೂರ್ತಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಮೊಸ್ಸಾದಿನ ಮುಖ್ಯಸ್ಥ ಇದೇ ಮೀರ್ ಡಾಗನ್ ಅಮೇರಿಕಾಗೆ ಫೋನ್ ಮಾಡಿ ಸಿಐಎ ಮುಖ್ಯಸ್ಥನಿಗೆ ಕಾರ್ಯಾಚರಣೆ ಯಶಸ್ವಿಯಾಗಿದ್ದನ್ನು ನಿರ್ಭಾವುಕರಾಗಿ ತಿಳಿಸಿದ್ದರು. ಇಡೀ ವಿಶ್ವಕ್ಕೇ ಇದೊಂದು most sensational ಕಾರ್ಯಾಚರಣೆಯಾದರೂ ಪಕ್ಕಾ ವೃತ್ತಿಪರ ಬೇಹುಗಾರ ಮೀರ್ ಡಾಗನ್ ತರಹದವರಿಗೆ ಇದು just a part of the job. ಅವರು ತಮ್ಮ ಮುಂದಿದ್ದ ಪಟ್ಟಿಯಲ್ಲಿ ಇಮಾದ್ ಮುಗ್ನಿಯೇ ಎಂಬ ದಿವಂಗತನ ಹೆಸರನ್ನು ತೆಗೆದುಹಾಕಿ ಮುಂದಿನ ಮಿಕ ಯಾರು ಅಂತ ನೋಡಿದರು. ಮುಂದಿನ ಟಾರ್ಗೆಟ್ ಹಮಾಸ್ ಎಂಬ ಉಗ್ರಗಾಮಿ ಸಂಸ್ಥೆಯ ದೊಡ್ಡ ತಲೆ ಮಹಮೂದ್ ಅಲ್-ಮಾಭೂ. ಅವನ ಪಾಪದ ಕೊಡ ತುಂಬಿತ್ತು. ಮೀರ್ ಡಾಗನ್ ಅವರ ರೇಡಾರಿನಲ್ಲಿ ಬಂದುಬಿಟ್ಟ. ಆದರೆ ಎರಡು ವರ್ಷ ಆಯುಸ್ಸು ಬಾಕಿ ಇತ್ತು. ೨೦೧೦ ರ ವರೆಗೆ ಸಾಯಲಿಲ್ಲ. ಅಷ್ಟು ಸಮಯ ಬೇಕಾಗಿತ್ತು ಒಂದು ದೊಡ್ಡ ಪ್ರಮಾಣದ ರಹಸ್ಯ ಕಾರ್ಯಾಚರಣೆಯನ್ನು ಪ್ಲಾನ್ ಮಾಡಲು. ಮೀರ್ ಡಾಗನ್ ಒಂದು ನೀಲನಕ್ಷೆ ಹಾಕಿಕೊಟ್ಟರು. ಮೊಸ್ಸಾದಿನ ಇತರೆ ಬೇಹುಗಾರರು ಮಹಮೂದ್ ಅಲ್-ಮಾಭೂನ ಹತ್ಯೆಗೆ ಮುಹೂರ್ತ ಹುಡುಕತೊಡಗಿದರು. ಸ್ಕೆಚ್ ಹಾಕತೊಡಗಿದರು.


ಮಹಮೂದ್ ಅಲ್-ಮಾಭೂ

ಮಹಮೂದ್ ಅಲ್-ಮಾಭೂ - ಹಮಾಸ್ ಎಂಬ ಉಗ್ರಗಾಮಿ ಸಂಸ್ಥೆಯ ಹಿರಿ ತಲೆ. ಇಸ್ರೇಲ್ ವಿರುದ್ಧ ಮಾಡುವ ಕಾರ್ಯಾಚರಣೆಗಳಿಗೆ ಬೇಕಾಗುವ ಯುದ್ಧ ಸಾಮಗ್ರಿಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬರೋಬ್ಬರಿ ಚೌಕಾಶಿ ಮಾಡಿ ಖರೀದಿಸುವದೇ ಅವನ ಕೆಲಸ. He was a weapons procurement specialist.

ಹಮಾಸ್ ಎಂಬುದು ಇಸ್ರೇಲಿಗೆ ಮಗ್ಗುಲ ಮುಳ್ಳು. ಯಾಕೆಂದರೆ ಹಮಾಸ್ ಉಗ್ರರು ಎಲ್ಲೋ ದೂರದಲ್ಲಿ ಇರುವವರಲ್ಲ. ಇಸ್ರೇಲ್ ಪಕ್ಕದ ಪ್ಯಾಲೆಸ್ಟೈನ್ ದೇಶದ ಗಾಜಾ ಪಟ್ಟಿಯಲ್ಲಿ (Gaza strip) ಇರುವವರು. ಸಾಮಾನ್ಯ ಅರಬ್ ಜನರಂತೆಯೇ ಇರುವವರು. ಕೆಲಸಕ್ಕಾಗಿ ಇಸ್ರೇಲ್ ಒಳಗೂ ಬರುತ್ತಿದ್ದರು. ಗಾಜಾ ಪಟ್ಟಿಯ ಅದೆಷ್ಟೋ ಜನ ಬೆಳಿಗ್ಗೆ ಇಸ್ರೇಲಿಗೆ ಕೆಲಸಕ್ಕೆ ಬಂದು ಸಂಜೆ ಗಾಜಾ ಪಟ್ಟಿ ಸೇರಿಕೊಳ್ಳುತ್ತಿದ್ದರು. ಬೇರೆ ಬೇರೆ ದೇಶವಾದರೂ ಆ ತರಹದ ವ್ಯವಸ್ಥೆ ಇತ್ತು. ಒಮ್ಮೊಮ್ಮೆ ಇಂತವರಲ್ಲಿ ಹಮಾಸ್ ಉಗ್ರಗಾಮಿಗಳೂ ಇರುತ್ತಿದ್ದರು. ಗಡಿರಕ್ಷಣಾ ಪಡೆಗಳ ಕಣ್ಣು ತಪ್ಪಿಸಿ ಬಂದು, ಒಳಗೆ ನುಗ್ಗಿ, ಆತ್ಮಹತ್ಯಾ ಬಾಂಬಿಂಗ್ (suicide bombing) ಮಾಡಿಕೊಂಡು ಒಂದೇ ಏಟಿನಲ್ಲಿ ಹತ್ತಿಪ್ಪತ್ತು ಇಸ್ರೇಲಿಗಳನ್ನು ಕೊಂದುಬಿಡುತ್ತಿದ್ದರು. ಇಸ್ರೇಲಿಗೆ ದೊಡ್ಡ ತಲೆನೋವು.

ಈ ಗಾಜಾ ಪಟ್ಟಿಯಲ್ಲಿ ಕುಳಿತ ಈ ಹಮಾಸ್ ಉಗ್ರಗಾಮಿ ಮಂದಿಗೆ ಎಲ್ಲಿಂದ ಆಯುಧ ಬರುತ್ತವೆ? ಯಾರು ಕಳಿಸುತ್ತಾರೆ? ಅಂತೆಲ್ಲ ತನಿಖೆ ಮಾಡಲು ಹೋದಾಗ ಎದ್ದು ಕಂಡ ಹೆಸರು - ಮಹಮೂದ್ ಅಲ್-ಮಾಭೂ ಎಂಬ weapons procurement specialist. ಅವನಿಗೆ ಒಂದು ಠಿಕಾಣಿ ಇಲ್ಲ. ಇಡೀ ಮಧ್ಯಪ್ರಾಚ್ಯದ ತುಂಬಾ ತಿರುಗುತ್ತಲೇ ಇರುತ್ತಿದ್ದ. ಒಂದಿನ ಕಟಾರಿನ ದೋಹಾದಲ್ಲಿದ್ದರೆ ಮರುದಿನ ಬಹರೇನಿನ ಮನಾಮಾದಲ್ಲಿ ಯಾವದೋ ಡೀಲ್ ಕುದುರಿಸುತ್ತಿದ್ದ. ಅಲ್ಲಿಂದ ದುಬೈಗೆ ಬಂದು ಹವಾಲಾ ರೊಕ್ಕ ತೆಗೆದುಕೊಂಡು ಮತ್ತೆಲ್ಲೋ ಹೋಗಿಬಿಡುತ್ತಿದ್ದ. ಒಟ್ಟಿನಲ್ಲಿ ಗಾಜಾ ಪಟ್ಟಿಯ ಹಮಾಸ್ ಉಗ್ರರಿಗೆ ಮಹಮೂದ್ ಅಲ್-ಮಾಭೂ ಅಂದರೆ ಉಡುಗೊರೆ ಕಳಿಸಿಕೊಡುತ್ತಿದ್ದ ದೂರ ದೇಶದ ಅಂಕಲ್ ಇದ್ದ ಹಾಗೆ. ಅಷ್ಟೇ ಈ ಅಂಕಲ್ ಕಳಿಸುತ್ತಿದ್ದ ಉಡುಗೊರೆ ಇಸ್ರೇಲಿಗೆ ತೊಂದರೆ ತಂದಿಡುತ್ತಿತ್ತು. ಆಗಲೇ ಅವನ ಮರಣಶಾಸನಕ್ಕೆ ಒಂದು ಸಹಿ ಹಾಕಿತು ಇಸ್ರೇಲ್. ಸಹಿ ಹಾಕಿದ ಮರಣಶಾಸನದ ಪತ್ರ ಮೊಸ್ಸಾದಿನ ಡೈರೆಕ್ಟರ್ ಮೀರ್ ಡಾಗನ್ ಅವರ ಟೇಬಲ್ ಮೇಲೆ ಬಂದು ಬಿತ್ತು. ತಮ್ಮ ಖಾಸ್ ಜನರನ್ನು ಕರೆದು, ಒಂದು ತಂಡ ಮಾಡಿ, ಅವರಿಗೊಂದು ನೀಲನಕ್ಷೆ ಹಾಕಿಕೊಟ್ಟು, 'Take care of him' ಅಂತ ಒಂದೇ ಸಾಲಿನ ಆಜ್ಞೆ ಕೊಟ್ಟು ಎದ್ದು ಹೋಗಿದ್ದರು ಮೀರ್ ಡಾಗನ್. ಸಾವಿರ ಕೆಲಸ ಅವರಿಗೆ.

ಮೀರ್ ಡಾಗನ್ ಅವರಿಗೆ ಈ ಮಹಮೂದ್ ಅಲ್-ಮಾಭೂ ಮತ್ತೆ ನೆನಪಾಗಿದ್ದು ಯಾವಾಗ ಗೊತ್ತೇ? ದುಬೈನ ಪೋಲಿಸ್ ಕಮಿಷನರ್ ಲಬೋ ಲಬೋ ಅಂತ ಬಾಯಿಬಾಯಿ ಬಡಿದುಕೊಂಡು, ಟೀವಿ ಕ್ಯಾಮರಾಗಳ ಮುಂದೆ ನಿಂತು, 'ಅಯ್ಯೋ! ಎಲ್ಲರೂ ನೋಡಿ. ಇಸ್ರೇಲಿನ ಮೊಸ್ಸಾದ್ ನಮ್ಮ ದುಬೈಗೆ ಬಂದು ಹಮಾಸ್ ನಾಯಕ ಮಹಮೂದ್ ಅಲ್-ಮಾಭೂವಿನ ಹತ್ಯೆ ಮಾಡಿ ಎಸ್ಕೇಪ್ ಆಗಿದೆ. ಇದ್ದಕ್ಕಾಗಿ ನಾನು ಮೊಸ್ಸಾದಿನ ಡೈರೆಕ್ಟರ್ ಮೀರ್ ಡಾಗನ್ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡುತ್ತೇನೆ. ಅವರನ್ನು ದುಬೈ ಕಾನೂನಿನ ಪ್ರಕಾರ ಬುಕ್ ಮಾಡುತ್ತೇನೆ,' ಅಂತ ಅಪದ್ಧ ಪ್ರಲಾಪ ಮಾಡಿದಾಗಲೇ ಮೀರ್ ಡಾಗನ್ ಅವರಿಗೆ ಮಹಮೂದ್ ಅಲ್-ಮಾಭೂ ನೆನಪಾದ. ಪೆಕಪೆಕಾ ಅಂತ ನಕ್ಕು ಟೀವಿ ಆಫ್ ಮಾಡಿದ್ದರು ಡಾಗನ್. ದುಬೈ ಪೋಲಿಸ್ ಕಮಿಷನರನ ಅಸಂಬದ್ಧ ಪ್ರಲಾಪ ನೋಡುತ್ತಾ ಕೂಡಲು ಅವರಿಗೆ ಬೇರೆ ಕೆಲಸವಿಲ್ಲವೇ?

ಎರಡು ವರ್ಷಗಳ ಹಿಂದೆ ಶುರುಮಾಡಿದ್ದ ಒಂದು ರಹಸ್ಯ ಕಾರ್ಯಾಚರಣೆ ಫಲ ಕೊಟ್ಟಿತ್ತು. ಮಹಮೂದ್ ಅಲ್-ಮಾಭೂವನ್ನು ಮೊಸ್ಸಾದಿನ ಹಂತಕರು ಜನನಿಬಿಡ ದುಬೈನ ಹೋಟೆಲ್ ಒಂದರಲ್ಲಿ ಮುಗಿಸಿದ್ದರು. ಅಷ್ಟೂ ವಿವರ CC ಟೀವಿಯಲ್ಲಿ ದಾಖಲಾಗಿತ್ತು. ಹಾಗಾಗುತ್ತದೆ ಅಂತ ಗೊತ್ತೇ ಇತ್ತು. ಆ ರಿಸ್ಕ್ ತೆಗೆದುಕೊಂಡೇ ಮಾಡಿದ್ದರು. ಅಷ್ಟೇ, ಮಹಮೂದ್ ಅಲ್-ಮಾಭೂವಿನ ಕೊಲೆಯಾಗಿದೆ ಅಂತ ದುಬೈನ ಪೋಲೀಸರಿಗೆ ಗೊತ್ತಾಗುವಷ್ಟರಲ್ಲಿ ಮೊಸ್ಸಾದಿನ ಹಂತಕರು ದುಬೈ ಬಿಟ್ಟು ಹಾರಿದ್ದರು.

೧೯ ಜನೇವರಿ  ೨೦೧೦. ಅಂದು ಮಹಮೂದ್ ಅಲ್-ಮಾಭೂ ಸಿರಿಯಾದ ಡಮಾಸ್ಕಸ್ ನಗರದಿಂದ ದುಬೈಗೆ ಆಗಮಿಸಿದ. ಅವನಿಗೆ ಗೊತ್ತಿಲ್ಲದಂತೆಯೇ ಫಾಲೋ ಮಾಡಿತ್ತು ಮೊಸ್ಸಾದಿನ ಹಂತಕರ ತಂಡ. ಬೇರೆ ಬೇರೆ ದೇಶಗಳ ನಕಲಿ ಪಾಸ್ಪೋರ್ಟ್ ಬಳಸಿ ದುಬೈ ಶಹರವನ್ನು ಪ್ರವಾಸಿಗರಂತೆ ಪ್ರವೇಶಿಸಿದ್ದ ಮೊಸ್ಸಾದಿನ ಹಂತಕರು ಎಲ್ಲ ಕಡೆ ಕಣ್ಣಿಟ್ಟಿದ್ದರು. ದುಬೈ ವಿಮಾನ ನಿಲ್ದಾಣದಲ್ಲಿ ಏನು ಲ್ಯಾಂಡ್ ಆದನೋ ಆದ. ನಂತರ ಮಹಮೂದ್ ಅಲ್-ಮಾಭೂವಿನ ಮೇಲಿಟ್ಟ ಹದ್ದಿನ ಕಣ್ಣನ್ನು ಅವರು ತೆಗೆಯಲಿಲ್ಲ. ಮಹಮೂದ್ ಅಲ್-ಮಾಭೂವಿನ ಕಾರ್ಯಕ್ರಮದ ಪ್ರತಿಯೊಂದು ವಿವರಗಳನ್ನೂ ಹೆಕ್ಕಿ ತೆಗೆದಿದ್ದರು. ಎಲ್ಲಿಯ ವರೆಗೆ ಅಂದರೆ ಅವನು ಯಾವ ಹೋಟೆಲ್ಲಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಯಾವ ಕೋಣೆಯನ್ನು ಕೊಡಲಾಗುತ್ತದೆ ಅನ್ನುವ ವಿವರಗಳಷ್ಟೇ ಅಲ್ಲ. ಮತ್ತೊಂದು ಖತರ್ನಾಕ್ ಕೆಲಸ ಮೊಸ್ಸಾದ್ ಮಾಡಿತ್ತು. ಮಹಮೂದ್ ಅಲ್-ಮಾಭೂವಿನ ಕೋಣೆಗೊಂದು ಡೂಪ್ಲಿಕೇಟ್ ಕೀ ಸಹಿತ ತಯಾರಿತ್ತು. ಬಕ್ರಾ ಬೋನಿಗೆ ಬರುತ್ತಿತ್ತು. ಬೋನಿನ ಕೀ ಮೊಸ್ಸಾದಿನ ಬೇಹುಗಾರರ ಕೀ ಚೈನಿನಲ್ಲಿ ತಿರುಗುತ್ತಿತ್ತು.

ಮಹಮೂದ್ ಅಲ್-ಮಾಭೂ ಸೀದಾ ಹೋಟೆಲ್ಲಿಗೆ ಬಂದ. check-in  ಮಾಡಿದ. ಮತ್ತೆ ಎದ್ದು ಬರಲಿಲ್ಲ. ಅವನ ಎದುರಿನ ಕೋಣೆಯಲ್ಲೇ ಇದ್ದರು ಮೊಸ್ಸಾದಿನ ಕಿಡೋನ್ ಎಂಬ ವಿಭಾಗದ ನುರಿತ ಹಂತಕರು. ಹತ್ಯೆಯ ಕೊನೆಯ ಭಾಗವನ್ನು ಸಂಬಾಳಿಸುವದು ಕಿಡೋನ್ ವಿಭಾಗದ ಕೆಲಸ. ನುರಿತ ಹಂತಕರು. actual ಹತ್ಯೆ ಮಾಡುವವರು, ಹತ್ಯಾಸ್ಥಳದಲ್ಲಿ ಯಾವದೇ ಕುರುಹುಗಳನ್ನು ಬಿಡದೇ ಕ್ಲೀನ್ ಮಾಡುವವರು ಎಲ್ಲ ಕಿಡೋನ್ ವಿಭಾಗದವರು. ಕಿಡೋನ್ ಅಂದರೆ ಹೀಬ್ರೂ ಭಾಷೆಯಲ್ಲಿ bayonet ಅಂತರ್ಥ.

ಯಾವದೋ ಮಾಯೆಯಲ್ಲಿ ಮಹಮೂದ್ ಅಲ್-ಮಾಭೂನ ಕೋಣೆ ಪ್ರವೇಶಿಸಿದ ಮೊಸ್ಸಾದಿನ ಕಿಡೋನ್ ಹಂತಕರ ತಂಡ ಅವನನ್ನು ಕೊಂದು ಮಿಂಚಿನ ವೇಗದಲ್ಲಿ ಹೋಟೇಲಿನಿಂದ ಮಾತ್ರವಲ್ಲ ದುಬೈನಿಂದಲೇ ಪರಾರಿಯಾಗಿತ್ತು. Another perfect assassination pulled off. Flawless execution. ಮೀರ್ ಡಾಗನ್ ಅವರ ಕಿರೀಟಕ್ಕೆ ಮತ್ತೊಂದು ಗರಿ.

ಮೀರ್ ಡಾಗನ್ ಅವರ ಉಸ್ತುವಾರಿಯಲ್ಲಾದ ಮತ್ತೊಂದು ಖತರ್ನಾಕ್ ಕಾರ್ಯಾಚರಣೆ ಅಂದರೆ ಇರಾನಿನ nuclear reactor ಗಳನ್ನು ಪೂರ್ತಿಯಾಗಿ ಕೆಡಿಸಿಬಿಟ್ಟಿದ್ದು. ಇದಕ್ಕಾಗಿ ಡಾಗನ್ ತಮ್ಮ ಜನರನ್ನು ಕಳಿಸಲಿಲ್ಲ. ಕಂಪ್ಯೂಟರ್ ಮೂಲಕ ಈ ಕಾರ್ಯಾಚರಣೆ ಮಾಡಿಸಿಬಿಟ್ಟರು. ಅದೇ ಅವರ ಮೇಧಾವಿತನ. ಎಲ್ಲ ಕಡೆ ದಂಡಂ ದಶಗುಣಂ ಅನ್ನುವ ಹುಂಬರ ಪೈಕಿ ಅಲ್ಲ ಅವರು.

ಮೊದಲು ೧೯೮೦ ರ ದಶಕದಲ್ಲಿ ಇರಾಕ್ ಆಟಂ ಬಾಂಬ್ ಮಾಡಲು ಹೊರಟಿತ್ತು. ಘಾಬರಿಬಿದ್ದ ಇಸ್ರೇಲ್ ಒಂದು dare devil ವೈಮಾನಿಕ ಕಾರ್ಯಾಚರಣೆ ಮಾಡಿ, ಇರಾಕಿನ ಅಣುಸ್ಥಾವರದ ಮೇಲೆ ಬಾಂಬ್ ದಾಳಿ ಮಾಡಿ, ಸದ್ದಾಮ್ ಹುಸೇನನ ಆಟಂ ಬಾಂಬ್ ಆಸೆಗೆ ತಣ್ಣೀರೆರೆಚಿ ಬಂದಿತ್ತು. ಆಮೇಲೆ ಸಿರಿಯಾದ ಸರ್ವಾಧಿಕಾರಿ ಅಸ್ಸಾದ್ ಆಟಂ ಬಾಂಬ್ ಮಾಡಲು ಹೊರಟ. ಅವನ ಅಣುಸ್ಥಾವರಕ್ಕೂ ಅದೇ ಗತಿ ಕಾಣಿಸಿತು ಇಸ್ರೇಲ್. ಆದರೆ ಇರಾನಿನ ಸಮಸ್ಯೆ ಸ್ವಲ್ಪ ಬೇರೆ ತರಹದ್ದು.

ಇರಾನ್ ಆಟಂ ಬಾಂಬ್ ಮಾಡುತ್ತೇನೆ ಅಂತ ಹೊರಡಲಿಲ್ಲ. ಶಾಂತಿಗಾಗಿ ಪರಮಾಣು ಶಕ್ತಿ ಅಂತ ಭೋಂಗು ಬಿಟ್ಟುಕೊಂಡು ಹೊರಟಿತ್ತು. ಹಾಗಂತ ಅಂತರರಾಷ್ಟ್ರೀಯ ಸಮುದಾಯವನ್ನು ನಂಬಿಸಿತ್ತು ಕೂಡ. ಹೀಗಿರುವಾಗ ವೈಮಾನಿಕ ದಾಳಿ ಮಾಡಿ ಇರಾನಿನ ಅಣುಸ್ಥಾವರವನ್ನು ಢಂ ಅನ್ನಿಸುವದು ಅಷ್ಟು ಸುಲಭದ ಮಾತಾಗಿರಲಿಲ್ಲ. ಮತ್ತೆ ಇರಾನ್ ಶಕ್ತಿಶಾಲಿ ದೇಶ. ಪ್ರತಿಭಾವಂತರ ದೇಶ.

ಅಂದಿನ ಇಸ್ರೇಲಿನ ಪ್ರಧಾನಿ ಮೀರ್ ಡಾಗನ್ ಅವರನ್ನು ಕರೆದು, 'ಸ್ವಲ್ಪ ಇರಾನನ್ನು ಗಮನಿಸಿಕೊಳ್ಳಿ,' ಅಂತ ಸೂಕ್ಷ್ಮವಾಗಿ ಹೇಳಿದ್ದು ಸಾಕಾಯಿತು ಮೀರ್ ಡಾಗನ್ ಅವರಿಗೆ. ಖತರ್ನಾಕ್ ಸ್ಕೀಮ್ ಹಾಕಲು ಕುಳಿತರು. ಇದು ದೇಹಶಕ್ತಿಯಿಂದಲ್ಲ ಮೆದುಳಿನ ಶಕ್ತಿಯಿಂದಲೇ ನಿವಾರಿಸಬೇಕಾದ ತೊಂದರೆ ಅಂತ ಅವರಿಗೆ ಗೊತ್ತಿತ್ತು. ಮೀರ್ ಡಾಗನ್ ನಂತರ ಮಾಡಿದ ಕೆಲಸ ಅಂದರೆ ಒಂದಿಷ್ಟು ಫೈಲುಗಳನ್ನು ಜೋಡಿಸಿಕೊಂಡು ಅಮೇರಿಕಾಗೆ ವಿಮಾನ ಹತ್ತಿಬಿಟ್ಟರು. ರಾಜಧಾನಿ ವಾಷಿಂಗ್ಟನ್ ತಲುಪಿದವರೇ ಸಿಐಎ ಮುಖ್ಯಸ್ಥರ ಜೊತೆ ದೊಡ್ಡ ಮಟ್ಟದ ಸಮಾಲೋಚನೆಯಲ್ಲಿ ಕುಳಿತರು. ಇರಾನನ್ನು ಹಣಿಯುವ ತಮ್ಮ ಯೋಜನೆಯ ರೂಪುರೇಷೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಡಾಗನ್ ಅವರ ಖತರ್ನಾಕ್ ಪ್ಲಾನ್ ಕೇಳಿದ ಸಿಐಎ ಸಮುದಾಯದಲ್ಲಿ ಸಿಕ್ಕಾಪಟ್ಟೆ excitement. ಮತ್ತೊಮ್ಮೆ ಮೊಸ್ಸಾದ್ ಮತ್ತು ಸಿಐಎ ಜಂಟಿ ಕಾರ್ಯಾಚರಣೆಗೆ ಸಿದ್ಧವಾದವು.

ನುರಿತ ಕಂಪ್ಯೂಟರ್ ತಂತ್ರಜ್ಞರ ತಂಡ ಒಂದು ಟೈಪಿನ ಕಂಪ್ಯೂಟರ್ ವೈರಸ್ ತಯಾರಿಸಲು ಕುಳಿತಿತು. ಅವರೆಲ್ಲ ಸಾಮಾನ್ಯ ಸಾಫ್ಟ್ವೇರ್ ಇಂಜಿನಿಯರ್ ಜನರಲ್ಲ. hacker ಟೈಪಿನ ಜನ. ಕಂಪ್ಯೂಟರ್ ವೈರಸ್ ತಯಾರಿಸಬಲ್ಲರು. ತಯಾರಿಸಿದ ವೈರಸ್ಸುಗಳನ್ನು ಕಂಪ್ಯೂಟರ್ ಜಾಲಗಳಲ್ಲಿ ಸೇರಿಸಿ, compromise ಆದ ಕಂಪ್ಯೂಟರಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಲ್ಲರು. ಇರಾನಿನ ಅಣುಸ್ಥಾವರದ ಕಂಪ್ಯೂಟರ್ ಜಾಲದಲ್ಲಿ ಹೊಕ್ಕು, ಅಲ್ಲಿನ control system software ಮೇಲೆ ಅಧಿಪತ್ಯ ಸ್ಥಾಪಿಸಿ, ಅಲ್ಲಿನ ಯಂತ್ರಗಳಿಗೆ ಒಂದಕ್ಕೆರೆಡು ಸೂಚನೆಗಳನ್ನು ಕೊಟ್ಟು, ಆ ಯಂತ್ರಗಳು ಹದಗೆಟ್ಟುಹೋಗುವಂತೆ ಮಾಡುವ ವೈರಸ್ಸಿನ ನಿರ್ಮಾಣದಲ್ಲಿ ಅಂತಹ ನುರಿತ ಕಂಪ್ಯೂಟರ್ ತಂತ್ರಜ್ಞರು ತೊಡಗಿಸಿಕೊಂಡರು.

ಹೀಗೆ ತಯಾರಿಸಿದ stuxnet ಎಂಬ ಕಂಪ್ಯೂಟರ್ ವೈರಸ್ಸನ್ನು ಇಂಟರ್ನೆಟ್ ಮೂಲಕ ಇರಾನಿನ ಕಂಪ್ಯೂಟರ್ ಜಾಲದಲ್ಲಿ ತಳ್ಳಿದರು. ನಂತರ step by step ಆ stuxnet ವೈರಸ್ಸನ್ನು ಇರಾನಿನ ಪರಮಾಣು ಸ್ಥಾವರದ ಕಂಪ್ಯೂಟರ್ ಜಾಲದಲ್ಲಿ, ಎಲ್ಲ ರಕ್ಷಣೆಗಳನ್ನೂ ಭೇದಿಸಿ, ಒಳ ನುಗ್ಗಿಸುವಲ್ಲಿ ಇಸ್ರೇಲಿ ಮತ್ತು ಅಮೇರಿಕನ್ ತಂತ್ರಜ್ಞರು ಯಶಸ್ವಿಯಾದರು. ಮೊಸ್ಸಾದ್ ಮತ್ತು ಸಿಐಎ ಸಂಸ್ಥೆಗಳ ಹಿರಿ ತಲೆಗಳು go ahead ಅಂತ ಅನುಮತಿ ಕೊಟ್ಟವು. ನಂತರ ಆಗಿದ್ದು ಇರಾನಿನ ಅಣುಸ್ಥಾವರದ ಅತ್ಯಂತ ಮುಖ್ಯ ಯಂತ್ರಗಳಾದ centrifuge ಗಳ ಮಾರಣಹೋಮ. centrifuge ಯಂತ್ರಗಳನ್ನು ನಿಯಂತ್ರಿಸುವ control system software ಒಳಹೊಕ್ಕಿದ್ದ stuxnet ವೈರಸ್ ಅದರ ಸಂಪೂರ್ಣ ನಿಯಂತ್ರಣವನ್ನು ದೂರದಲ್ಲಿ ಕುಳಿತಿದ್ದ ಇಸ್ರೇಲಿ ಮತ್ತು ಅಮೇರಿಕನ್ ತಂತ್ರಜ್ಞರ ಕೈಗೆ ಅರ್ಪಿಸಿಬಿಟ್ಟಿತು. ನಂತರ ಇಸ್ರೇಲಿ ಮತ್ತು ಅಮೇರಿಕನ್ ತಂತ್ರಜ್ಞರು ಯದ್ವಾತದ್ವಾ ಕಮಾಂಡ್ ಕೊಟ್ಟ ಅಬ್ಬರಕ್ಕೆ ಎಲ್ಲ centrifuge ಯಂತ್ರಗಳು ಮೈ ಮೇಲೆ ದೆವ್ವ ಬಂದವರಂತೆ ತಿರುಗಿ ಪೂರ್ತಿ ಎಕ್ಕುಟ್ಟಿಹೋದವು. ಹುಚ್ಚಾಪಟ್ಟೆ ವರ್ತಿಸುತ್ತಿದ್ದ ಅವನ್ನು ನಿಯಂತ್ರಿಸಲು ಇರಾನಿನ ತಂತ್ರಜ್ಞರು ಬೇರೆ ಕಮಾಂಡ್ ಕೊಟ್ಟರೆ ಅವು ಮಾತು ಕೇಳಲೇ ಇಲ್ಲ. ಯಾಕೆಂದರೆ ಅವುಗಳ ಜುಟ್ಟು ಬೇರೆಯವರ ಕೈಯಲ್ಲಿತ್ತು. ಇರಾನಿನ ಪರಮಾಣು ಪ್ರೋಗ್ರಾಮ್ at least ಹತ್ತು ವರ್ಷ ಹಿಂದಕ್ಕೆ ಹೋಯಿತು. ಈ remote attack ನಿಂದ ಅವರು ಸುಧಾರಿಸಿಕೊಳ್ಳಲಿಕ್ಕೆ ಬಹಳ ವರ್ಷ ಬೇಕು ಬಿಡಿ. ಆ ಮಟ್ಟಿಗೆ ಇಸ್ರೇಲ್ ಸೇಫ್.

ಹೀಗೆ ಕಂಪ್ಯೂಟರ್ ಮೂಲಕ ಕಾರ್ಯಾಚರಣೆ ಮಾಡಲಾಯಿತು ಅಂದ ಮಾತ್ರಕ್ಕೆ ಮೊಸ್ಸಾದಿನ ಹಂತಕರಿಗೆ ಕೆಲಸ ಏನೂ ಕಮ್ಮಿಯಿರಲಿಲ್ಲ. ಅವರಿಗೆ ಖಡಕ್ ಆಜ್ಞೆ. ಇರಾನಿನ ಪರಮಾಣು ವಿಜ್ಞಾನಿಗಳು ಎಲ್ಲೇ ಕಂಡುಬಂದರೂ ದೂಸರಾ ವಿಚಾರ ಮಾಡದೇ ಕೊಂದುಬಿಡಿ. ಸುಮಾರು ಜನ ಇರಾನಿನ ವಿಜ್ಞಾನಿಗಳನ್ನು ಆಯ್ಕೆ ಮಾಡಿ ಮಾಡಿ ಕೊಂದರು ಮೊಸ್ಸಾದಿನ ಹಂತಕರು. ಇರಾನ್ ಉರಿದುಕೊಂಡಿತು. ಇಸ್ರೇಲಿನ ಜಾಗತಿಕ ಆಸಕ್ತಿಗಳ ಮೇಲೆ ಅಲ್ಲಲ್ಲಿ ದಾಳಿಯಾಯಿತು. ದೊಡ್ಡ ನಷ್ಟವೇನೂ ಆಗಲಿಲ್ಲ. ಇಸ್ರೇಲಿಗಳಿಗೆ ಗೊತ್ತು ತಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು ಅಂತ. ದೆಹಲಿಯಲ್ಲಿ ಇಸ್ರೇಲಿ ರಾಯಭಾರಿಯೊಬ್ಬರ ಕಾರಿಗೆ ಬಾಂಬ್ ಅಂಟಿಸಿದ್ದರು. ಸ್ಪೋಟವಾದರೂ ಪ್ರಾಣಹಾನಿಯಾಗಲಿಲ್ಲ. ಇರಾನ್ ಅದನ್ನು ಮಾಡಿಸಿತ್ತು ಅಂತ ಬೇಹುಗಾರಿಕೆ ವಲಯದಲ್ಲಿ ಚರ್ಚೆಯಾಗಿತ್ತು.

ಹೀಗೆ ಅನೇಕಾನೇಕ ರೋಚಕ ಕಾರ್ಯಾಚರಣೆಗಳನ್ನು ರೂಪಿಸಿ, ಅವುಗಳ ಉಸ್ತುವಾರಿ ವಹಿಸಿಕೊಂಡು, ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ಮುಂಚೂಣಿಯಲ್ಲಿದ್ದು ಅವುಗಳನ್ನು ಮುನ್ನೆಡಿಸಿದ ಧೀಮಂತ ನಾಯಕ ಮೀರ್ ಡಾಗನ್, ಮೊಸ್ಸಾದಿನ ಮಾಜಿ ಡೈರೆಕ್ಟರ್.

ರಿಟೈರ್ ಆದ ನಂತರ ಡಾಗನ್ ಅವರಿಗೆ ದುರದೃಷ್ಟವಶಾತ್ ಕ್ಯಾನ್ಸರ್ ಬಂತು. ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ಸಫಲರಾಗಲಿಲ್ಲ. ತಮ್ಮ ಎಪ್ಪತ್ತೊಂದನೆಯ (೭೧) ವಯಸ್ಸಿನಲ್ಲಿ ಇದೇ ಮಾರ್ಚ್ ೧೭ ರಂದು ಧೀರ ಮೀರ್ ಡಾಗನ್ ನಿಧನರಾಗಿದ್ದಾರೆ.

ತಮ್ಮ ಧೀರತನದಿಂದ, ಧೀಮಂತ ವ್ಯಕ್ತಿತ್ವದಿಂದ, extraordinary leadership ನಿಂದ ತುಂಬಾ ಇಷ್ಟವಾಗುತ್ತಾರೆ ಮೀರ್ ಡಾಗನ್. ಅವರ ಸಮಯದಲ್ಲಿ ನಡೆದ ರಹಸ್ಯ ಕಾರ್ಯಾಚರಣೆಗಳ ರೋಚಕ ವಿವರಗಳು ಅವರ ಬಗೆಗೊಂದು ಅನನ್ಯ ಗೌರವವನ್ನು ಮೂಡಿಸುತ್ತವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

Rest in peace, Mr. Meir Dagan. Not only Israel but the whole world is grateful to you for making it a little more safe.

Friday, March 18, 2016

ಮೊಟ್ಟೆರಹಿತ ಕೇಕ್ (Eggless cake)...ಹುಚ್ಚು ಪ್ರೇಮದ ಪೆಚ್ಚು ಕಥೆ

ಅವಳು ಅಂದು ಒಂದು ಧೃಡ ನಿರ್ಧಾರವನ್ನು ಮಾಡಿದಳು. 'ಇನ್ನೆಂದೂ ಕೇಕ್ ಮಾಡುವದಿಲ್ಲ. ಮಾಡಿದರೂ ಮೊಟ್ಟೆರಹಿತ (eggless) ಕೇಕನ್ನಂತೂ ಸುತಾರಾಮ್ ಮಾಡುವದಿಲ್ಲ.' ಹಾಗೆಂದುಕೊಳ್ಳುತ್ತಲೇ ಕೆಟ್ಟುಹೋದ ಮೂಡಿನಲ್ಲಿ ದುಮುದುಮುಗುಟ್ಟುತ್ತಲೇ ಮನೆಯನ್ನು ಪ್ರವೇಶಿಸಿದಳು.

ಪಡಸಾಲೆಯಲ್ಲಿಯೇ ಕೂತಿದ್ದ ಗಂಡ ತಲೆಯತ್ತಿ ನೋಡಿದ. ಅವನ ಕಡೆ ಕೆಕ್ಕರಿಸಿ ನೋಡಿದಳು. 'ಇವಳ ತಲೆ ಯಾಕೋ ಗರಂ ಆಗಿರಬೇಕು,' ಅಂದುಕೊಂಡ ಪತಿ ಏನೂ ಕಿತಾಪತಿ ಮಾಡದೇ ಓದುತ್ತಿದ್ದ ತನ್ನ ಪೇಪರಿನಲ್ಲಿ ತಲೆ ಹುಗಿಸಿ ಕೂತ.

ಹೊರಗಿಂದ ಬಂದವಳು ಬಟ್ಟೆ ಬದಲಾಯಿಸಲು ಮಹಡಿ ಮೇಲಿನ ಕೋಣೆಗೆ ಹೋಗುವದು ಸಹಜ. ಆದರೆ ಇವಳು ಇಂದು ಸೀದಾ ಅಡಿಗೆಮನೆಗೆ ಹೋಗಿಬಿಟ್ಟಳು. ಸ್ವಲ್ಪೇ ತಲೆ ಎತ್ತಿ ನೋಡಿದ ಪತಿ ಸ್ವಲ್ಪ ಆಶ್ಚರ್ಯಪಟ್ಟ. ಯಾಕೆ ಸುಮ್ಮನೇ ರಿಸ್ಕ್ ಅಂತ ಏನೂ ಕೇಳಲು ಹೋಗಲಿಲ್ಲ.

ಅವಳು ಅಡಿಗೆಮನೆಗೆ ಹೋದಳು. ಅಲ್ಲಿ ಕಿಚನ್ ಕೌಂಟರ್ ಮೇಲೆ ಸಣ್ಣ ದೆವ್ವದಂತೆ ಕೂತಿತ್ತು ಅದು. ಅದೇ. ಅದೇ. ಕೇಕ್ ಮಾಡುವ ಓವೆನ್ (oven). ಅದನ್ನು ನೋಡಿದಾಕ್ಷಣ ಏನನ್ನಿಸಿತೋ ಏನೋ. ಹುಚ್ಚಿಯಂತೆ ತಲೆ ಕೆದರಿಕೊಂಡಳು. ಹಣೆಯ ಕುಂಕುಮ ಎಲ್ಲ ಕಡೆ ಹರಡಿತು. ದೆವ್ವದ ಖರಾಬ್ ಲುಕ್ ಬಂದಿತು. ಓವೆನ್ ಬಳಿ ಹೋದವಳೇ, 'ಏss!' ಅಂತ ವಿಚಿತ್ರವಾಗಿ ಕೂಗುತ್ತ, ಆ ಓವೆನ್ ಅನ್ನು ರೋಷದಿಂದ ಎತ್ತಿದಳು. ತಲೆಯತ್ತರಕ್ಕೆ ಎತ್ತಿದವಳೇ ಕೆಳಗೆ ಬಿಸಾಕಿಬಿಟ್ಟಳು. ಸುಮಾರು ದೊಡ್ಡ ಸೈಜಿನ ಕೇಕ್ ಮಾಡುವ ಓವೆನ್ ಅಷ್ಟೆತ್ತರದಿಂದ ನೆಲಕ್ಕೆ ಬಂದು ಅಪ್ಪಳಿಸಿದರೆ ಏನಾಗಬೇಕು? ದೊಡ್ಡ ಶಬ್ದ. ಫಳಾರ್! ಢಂ! ಅಂತ ಭೀಕರ ಆವಾಜ್ ಮಾಡುತ್ತ ಅಮೃತ ಶಿಲೆಯ ನೆಲದ ಮೇಲೆ ಬಿದ್ದ ಓವೆನ್ ಚೂರು ಚೂರು. ಫುಲ್ ನುಚ್ಚುನೂರು. ಒಳ್ಳೆ ಆಟಂ ಬಾಂಬ್ ಹಾಕಿಸಿಕೊಂಡಂತೆ ಶಿವಾಯ ನಮಃ ಆಗಿಬಿಟ್ಟಿತ್ತು.

ಕೇಕ್ ಮಾಡುವ ಓವೆನ್



ಈ ಪ್ರಕೋಪದಿಂದ ಬೆಚ್ಚಿಬಿದ್ದ ಗಂಡ ಎದ್ದು ಓಡಿ ಬಂದ. ಉಟ್ಟಿದ್ದ ಲುಂಗಿ ಕಾಲಿಗೆ ಅಡ್ಡಡ್ಡಾಗಿ ಬಂತು. ಎಡವಿ ಬೀಳುವನಿದ್ದ. ಹೇಗೋ ಮಾಡಿ ಸಂಬಾಳಿಸಿಕೊಂಡು ಅಡಿಗೆಮನೆಗೆ ಓಡಿ ಬಂದು ನೋಡಿದರೆ ಸಿಕ್ಕಾಪಟ್ಟೆ ಖರಾಬ್ ದೃಶ್ಯ.

ನೆಲದ ಮೇಲೆ ಓವೆನ್ ಚೂರುಚೂರಾಗಿ ಬಿದ್ದಿದೆ. ಖಬರಿಲ್ಲದ ಹುಚ್ಚಿಯಂತೆ ನಿಂತಿದ್ದಾಳೆ ಅವಳು. ನೋಡಿದ ಗಂಡನ ಬಾಯಿಯ ಪಸೆಯಾರಿತು. ಒಂದು ಗ್ಲಾಸ್ ನೀರು ಕೇಳೋಣ ಅಂದುಕೊಂಡ. 'ತನ್ನನ್ನೂ ಎತ್ತಿ ಒಗೆದುಬಿಟ್ಟಾಳು. ಯಾಕೆ ರಿಸ್ಕ್?' ಅಂತ ಬಾಯಿ ಬಿಟ್ಟುಗೊಂಡು 'ಹ್ಯಾಂ!?' ಅಂತ ನೋಡಿದ.

'ಏನ ಇದು? ಯಾಕ? ಏನಾತು? ಓವೆನ್ ಯಾಕ ಒಡೆದು ಹಾಕಿಬಿಟ್ಟಿ?' ಅಂತ ಅಳಕುತ್ತಲೇ ಕೇಳಿದ.

'ಅಯ್ಯೋ! ಸುಮ್ಮನಿರ್ರೀ! ಏನೂ ಕೇಳಬ್ಯಾಡ್ರೀ. ಇನ್ನು ಮುಂದ ಎಂದೂ ಕೇಕ್ ಮಾಡಂಗಿಲ್ಲ ನಾನು. ಒಟ್ಟೇ ಮಾಡಂಗಿಲ್ಲ. ಅದರಾಗೂ eggless ಕೇಕ್ ಅಂತೂ ಒಟ್ಟೇ ಮಾಡಂಗಿಲ್ಲ. ಕೇಕನ್ನೇ ಮಾಡಂಗಿಲ್ಲ ಅಂದ ಮ್ಯಾಲೆ ಈ ಓವೆನ್ ಯಾಕ? ಯಾಕ?' ಅಂದವಳೇ ನೆಲದ ಮೇಲೆ ಬಿದ್ದಿದ್ದ ಓವೆನ್ ಚೂರುಗಳ ಮೇಲೆ ಧಿಮಿಧಿಮಿ ಅಂತ ಒಂದು ನಾಲ್ಕು ಹೆಜ್ಜೆ ಕುಣಿದಳು. ತಲೆ ಎತ್ತಿ ಕೆಕ್ಕರಿಸಿ ನೋಡಿದಳು. ಥೇಟ್ ಆಪ್ತಮಿತ್ರ ಚಿತ್ರದ ನಾಗವಲ್ಲಿ ಹುಚ್ಚಿಯಂತೆ ಕಂಡಳು. ಎಲ್ಲಿ ಇವಳಿಗೂ ಹಾಗೆಯೇ ಹುಚ್ಚೇ ಹಿಡಿಯಿತೇನೋ ಅಂತ ಗಂಡ ಬೆಚ್ಚಿದ.

ಆಪ್ತಮಿತ್ರದ ಹುಚ್ಚಿ ನಾಗವಲ್ಲಿ. ಓವೆನ್ ಒಡೆದು ಹಾಕಿದ ಇವಳ ರೂಪವೂ ಸುಮಾರು ಹೀಗೇ ಇತ್ತು!

'ಏ ನಿಮ್ಮ! ಏನು ನೋಡಿಕೋತ್ತ ನಿಂತೀರಿ? ಎಲ್ಲಾ ಬಳದು ಸ್ವಚ್ಛ ಮಾಡ್ರೀ! ಇಲ್ಲಂದ್ರ ಕಾಲ್ಕಾಲಿಗೆ ಚುಚ್ಚತಾವ. ಲಗೂ!' ಅಂತ ಆಜ್ಞೆ ಬೇರೆ ಮಾಡಿಬಿಟ್ಟಳು. ರಾಡಿ ಇವಳು ಎಬ್ಬಿಸುತ್ತಾಳೆ. ಸಾಫ್ ಅವನು ಮಾಡಬೇಕು. ಕರ್ಮ ಕರ್ಮ ಅಂದುಕೊಳ್ಳುತ್ತ ಕಸಬರಿಗೆ ಮತ್ತು ಕಸ ಎತ್ತುವ ಪ್ಯಾನ್ ತರಲು ಆಕಡೆ ಹೋದ. ಇವಳು ಒಂದು ಗ್ಲಾಸ್ ನೀರು ಕುಡಿದು ಬಟ್ಟೆ ಬದಲಾಯಿಸಲು ಮಹಡಿ ಹತ್ತಿದಳು. ಮಗ ಕಂಡ. ಅಮ್ಮ ಯಾಕೋ ಗುಮ್ಮನ ಅವತಾರ ತಾಳಿದ್ದಾಳೆ ಅಂತ ಅವನಿಗೂ ಗೊತ್ತಾಯಿತು. ಅವನಿಗೂ ಅದು ರೂಢಿಯಾಗಿಬಿಟ್ಟಿದೆ. ಅಮ್ಮ ಗುಮ್ಮನಂತಾದಾಗ ಅಪ್ಪ ಬೆಪ್ಪನಂತಾಗುತ್ತಾನೆ.

ಈಕಡೆ ಗಂಡ ಕಸಬರಿಗೆ ತಂದು ಅಡಿಗೆಮನೆಯಲ್ಲಿ ಬಿದ್ದು ಒಡೆದು ಹೋಗಿದ್ದ ಓವೆನ್ ತುಣುಕುಗಳನ್ನು ಗುಡಿಸಿ ಎತ್ತತೊಡಗಿದ. 'ಇವಳ್ಯಾಕೆ ಹೀಗೆ ಮಾಡುತ್ತಾಳೆ? ಜಾಸ್ತಿಯೇ ಆಗಿದೆ ಇವಳ ಹುಚ್ಚಾಟ ಈಗಿತ್ತಲಾಗೆ,' ಅಂದುಕೊಂಡ. ಒಂದೆರೆಡು ಬಾರಿ ಯಾಕೆ ಅಂತ ಕೇಳುವ ಜುರ್ರತ್ ಮಾಡಿದ್ದ. 'ರೀ, ನಿಮಗೇನು ಗೊತ್ತಾಗ್ತದರೀ? ನೀವು ಗಂಡಸೂರಿಗೆ ಏನು ಗೊತ್ತಾಗಬೇಕು? ಪ್ಯಾಂಟ್ ಜಿಪ್ ಸುದಾ ಮ್ಯಾಲೆ ಎಳೆದುಕೊಳ್ಳದೇ ಹಾಂಗೇ ಹೋಗಿಬಿಡ್ತೀರಿ. ಹೆಂಗಸೂರ ಕಷ್ಟ ನಿಮಗ ಹೆಂಗ ಗೊತ್ತಾಗಬೇಕು? ತಿಂಗಳಿಗೊಮ್ಮೆ ಕಡಿಗ್ಯಾಗ ಆಗೋದರಿಂದ ಹಿಡಿದು ಬಸಿರು, ಬಯಕಿ, ಬಾಣಂತನ, ಈ ಮಕ್ಕಳು ಮರಿ, ಜೊತಿಗೆ ಮಂಗ್ಯಾನಂತಹ ನಿಮ್ಮ ತರಹದ ಪತಿದೇವರು, ಬಂಧು ಬಳಗದವರ ತಲಿಬ್ಯಾನಿ, ಎಲ್ಲಾ ಕಷ್ಟ ದೇವರು ನಮಗs ಕೊಟ್ಟಾನ ನೋಡ್ರೀ. ನಿಮಗೇನು? ಅದಕ್ಕೇ ಸುಖಪುರುಷರು ಅನ್ನೋದು. ಅಯ್ಯೋ! ಮೆನೋಪಾಸ್ (menopause) ನಡದದರೀ. ಯಾವಾಗ ನಿಲ್ತದೋ!? ಯಾವಾಗ ಈ ಕರ್ಮದಿಂದ ಬಿಡುಗಡೆನೋ?!' ಅಂದುಬಿಡುತ್ತಾಳೆ. ನಡೀರಿ ಶಿವಾ! 'ಈ ಮಹಿಳೆಯರು ಮಧ್ಯವಯಸ್ಸಿನ ಮನ್ಮಾನಿಗಳಿಗೆಲ್ಲ ಮೆನೋಪಾಸ್ ಮೆನೋಪಾಸ್ ಅಂದುಬಿಟ್ಟರೆ ಹ್ಯಾಂಗ್ರೀ?' ಅಂತ ಗಂಡ ತಲೆ ಮೇಲೆ ಕೈಹೊತ್ತು ಕೂಡುತ್ತಾನೆ. ಮೊದಲಾಗಿದ್ದರೆ ತಿಂಗಳಲ್ಲಿ ನಾಲ್ಕಾರು ದಿನ PMS ಅಂತ ಹೇಳಿ ಸಿಡಿಮಿಡಿ ಮಾಡುತ್ತಿದ್ದಳು. ತಿಂಗಳಲ್ಲಿ ನಾಲ್ಕೇ ದಿನದ ರಂಪ.  ಏನು ನಲವತ್ತು ವರ್ಷ ವಯಸ್ಸಾಯಿತೋ ಈಗ ಮೆನೋಪಾಸ್ ಅಂತ ಹೊಸ ವೇಷ. ಮಾಡೋದೆಲ್ಲ ಮಾಡಿ, ರಾಡಿ ಎಬ್ಬಿಸುವಷ್ಟು ಎಬ್ಬಿಸಿ, ಆಮೇಲೆ ಏನಾದರೂ ಕೇಳಿದರೆ 'ಹೋ!' ಅಂತ ಕೂಗಿ, ಅತ್ತು, ಕರೆದು ಎಲ್ಲದಕ್ಕೂ ಮೆನೋಪಾಸೇ ಕಾರಣ ಅಂದುಬಿಡುತ್ತಾಳೆ. ಕೇಳಿದರೆ ಮತ್ತೆ ಅದೇ ಭಾಷಣ. ಹೆಂಗಸರು, ಕಷ್ಟ, ಕರ್ಮ, ಗಂಡು ಮುಂಡೇವಕ್ಕೆ ಏನು ಗೊತ್ತು? ಅದೇ ರಗಳೆ.

ತನ್ನ ನಸೀಬಕ್ಕೆ ತಾನೇ ಬೈದುಕೊಳ್ಳುತ್ತ, ತುದಿಗಾಲ ಮೇಲೆ ಕೂತು, ಒಡೆದು ಹೋದ ಓವನ್ನಿನ ಚೂರುಗಳನ್ನು ಜಾಗರೂಕತೆಯಿಂದ ಕಸದ ಪ್ಯಾನಿಗೆ ತುಂಬಿದ. ಎಲ್ಲಾದಾರೂ ಏನಾದರೂ ಚೂರು ಪಾರು ಗಾಜಿನ ತುಣುಕುಗಳು ಉಳಿದು ಹೋಗಿವೆಯೇನೋ ಅಂತ ಮತ್ತೆ ಮತ್ತೆ ಚೆಕ್ ಮಾಡಿದ. ಯಾಕೆಂದರೆ ಏನಾದರೂ ಉಳಿದುಹೋಗಿ ಯಾರ ಕಾಲಿಗಾದರೂ ಚುಚ್ಚಿದರೆ ಮತ್ತೆ ಇವನಿಗೇ ಉರ್ಫ್ ಗಂಡನಿಗೇ ಮಂಗಳಾರತಿಯಾಗುತ್ತದೆ. ತಲೆ ಜಾಸ್ತಿ ಕೆಟ್ಟಿದ್ದರೆ ಪ್ರಸಾದ ಕೂಡ ಸಿಗುತ್ತದೆ. ಯಾರಿಗೆ ಬೇಕು ಆ ಲಫಡಾ ಅಂದುಕೊಂಡು ಬರೋಬ್ಬರಿ ಸ್ವಚ್ಛ ಮಾಡಿದ. ಹೋಗಿ ತಿಪ್ಪೆಗೆ ಎಸೆದು ಬಂದ. ಅವರ ಮದುವೆಯಾದ ವರ್ಷ ಕೊಂಡಿದ್ದ ಕೇಕ್ ಮಾಡುವ ಓವೆನ್ ಅದಾಗಿತ್ತು. ಬರೋಬ್ಬರಿ ಹತ್ತೊಂಬತ್ತು ವರ್ಷದ ಸರ್ವೀಸಿನ ನಂತರ ಶಿವಾಯ ನಮಃ ಆಗಿಹೋಯಿತು.

ಮದುವೆಯಾದ ಹೊಸದರಲ್ಲಿ 'ಓವೆನ್ ಯಾಕೆ? ನೀನು ಕೇಕ್ ಮಾಡ್ತೀಯೇನು?' ಅಂತ ಕೇಳಿದ್ದ. ಮುಂದೆ ಅಮ್ಮಾವ್ರ ಗಂಡನಾಗಬೇಕಾಗುವ ಕರ್ಮದ ಸ್ಪಷ್ಟ ಸೂಚನೆ ಆವಾಗಲೇ ಬಂದಿತ್ತು. 'ಏ, ನಿಮ್ಮ! ಸುಮ್ಮ ಕೇಳಿದ್ದು ಖರೀದಿ ಮಾಡಿ, ತಂದು ಒಗೀರಿ. ಏನು ಅದು ಇದು ಅಂತ ಪ್ರಶ್ನೆ ಕೇಳ್ತೀರಿ? ಬೇಕು ಅಂದ್ರ ಬೇಕು. ನಿಮ್ಮ ಕಡೆ ರೊಕ್ಕ ಇಲ್ಲ ಅಂದ್ರ ಹೇಳ್ರೀ. ನಮ್ಮ ಅಪ್ಪಗ ಒಂದು ಫೋನ್ ಹಚ್ಚಿದ್ರ ಒಂದಲ್ಲ ಹತ್ತು ಓವೆನ್ ತಂದು ಕೊಟ್ಟೇಬಿಡ್ತಾನ. ಬರೇ ಇದೇ ಆತು. ಪ್ರತಿಯೊಂದಕ್ಕೂ ಯಾಕ ಯಾಕ ಅಂತ ಕೇಳಿಕೋತ್ತ,' ಅಂತ ಬರೋಬ್ಬರಿ ದಬಾಯಿಸಿಬಿಟ್ಟಿದ್ದಳು. ದೊಡ್ಡವರ ಮನೆ ದೊಡ್ಡ ಮಗಳನ್ನು ಲಗ್ನ ಮಾಡಿಕೊಂಡ ಪರಿಣಾಮ. ಏನು ಮಾಡಲಿಕ್ಕೆ ಬರುತ್ತದೆ? ಅವಳ ಇಚ್ಛೆಯಂತೆಯೇ ಓವೆನ್ ತಂದಿದ್ದರು. ಯಾವಾಗ ಕೇಕ್ ಮಾಡಿದಳೋ, ಯಾರಿಗೆ ಕೇಕ್ ತಿನ್ನಿಸಿದಳೋ ಗೊತ್ತಿಲ್ಲ.

ಅದೆಲ್ಲ ಇರಲಿ ಅವಳು ಹಾಗೇಕೆ ಮಾಡಿದಳು? ಎಲ್ಲೋ ಹೊರಗೆ ಹೋಗಿದ್ದವಳು ಮನೆಗೆ ಬರಬರುತ್ತನೇ 'ಇನ್ನೆಂದೂ ಕೇಕ್ ಮಾಡುವದಿಲ್ಲ. ಅದೂ eggless ಕೇಕ್ ಅಂತೂ ಎಂದಿಗೂ ಮಾಡುವದಿಲ್ಲ,' ಅಂತೇಕೆ ನಿರ್ಧರಿಸಿದಳು? ಓವೆನ್ ಏಕೆ ನೆಲಕ್ಕೆಸೆದು ಒಡೆದು ಬಿಸಾಕಿದಳು?

ಇದೆಲ್ಲ ಪ್ರಶ್ನೆಗಳನ್ನು ಕೇಳಿದರೆ ಅದರ ಹಿಂದಿನ ಕಥೆ ಹೇಳಬೇಕಾಗುತ್ತದೆ.

****

ವರ್ಷಕ್ಕೆ ಒಂದೇ ಒಂದು ದಿನ ಆಕೆ ಕೇಕ್ ಮಾಡುತ್ತಿದ್ದಳು. ಒಂದೇ ಒಂದು ದಿನ. ಆದರೆ ಇಡೀ ವರ್ಷ ಅದೇ ಗುಂಗಿನಲ್ಲಿ ಇರುತ್ತಿದ್ದಳು. ಪ್ರತಿವರ್ಷ ಬೇರೆ ಬೇರೆ ತರಹದ ಕೇಕ್. ಅಷ್ಟೇ ಮೊಟ್ಟೆ ಮಾತ್ರ ಇಲ್ಲ. ಶುದ್ಧ ಶಾಖಾಹಾರಿ ಕೇಕ್. ಸಸ್ಯಾಹಾರಿಗಳೇನು ಜೈನರೂ ತಿನ್ನಬಹುದಾದಂತಹ ಕೇಕ್.

ಕೇವಲ ಕೇಕ್ ಮಾಡುವದೊಂದೇ ಅಲ್ಲ. ಅದೇ ಊರಿನಲ್ಲಿದ್ದ ನಾಲ್ಕಾರು ಬಾಲ್ಯದ ಗೆಳತಿಯರನ್ನು ಕರೆದು, 'ಲೀ, ಎಲ್ಲಾರೂ ಬರ್ರಿಲೇ. ಬಂದು ಕೇಕ್ ತಿಂದು ಹೋಗ್ರೀ. ಮುದ್ದಾಂ ಬರಬೇಕಾ ಮತ್ತ! ಬರಲಿಲ್ಲ ಅಂದ್ರ ನನಗ ಭಾಳ ಬೇಜಾರ ಆಗ್ತದ ಮತ್ತ! ನೋಡ್ಕೊಳ್ಳರೀ ಮತ್ತ! ಬರ್ಯಾ ಮತ್ತ! ಮರಿಬ್ಯಾಡ್ರೀ!' ಅಂತ ಒತ್ತಾಯದ ಆಹ್ವಾನ ಬೇರೆ.

ವರ್ಷದ ಒಂದು particular ದಿನ ಮಾಡುವ ಕೇಕ್ ತಿನ್ನಲು ಬನ್ನಿ ಅಂತ ಗೆಳತಿಯರಿಗೆ ಆಹ್ವಾನ. ಪದೇ ಪದೇ ಅದೇ ಆಹ್ವಾನ ಕೊಟ್ಟು ಕೊಟ್ಟು ಇವಳ ಫೋನ್ ಬಂತು ಅಂದರೆ ಗೆಳತಿಯರು, 'ನೆನಪದ. ಮರ್ತಿಲ್ಲಾ. ಜರೂರ್ ಬರ್ತೇನಿ. ಕೇಕ್ ತಿಂದೇ ಹೋಗ್ತೇನಿ. ನೀ ಏನೂ ಕಾಳಜಿ ಮಾಡಬ್ಯಾಡ,' ಅಂದೇ ಮುಂದಿನ ಮಾತು ಶುರು ಮಾಡುತ್ತಿದ್ದರು.

ಕೇಕ್ ಮಾಡುವ ದಿನದ ಮೊದಲಿನ ವಾರವಂತೂ ಕೇಳಬೇಡಿ. ಅಷ್ಟು ಬ್ಯುಸಿ ಅವಳು. ಗಂಡ ಮಗನಿಗೆ ಫುಲ್ ಲಂಗಣ. ಅವು ಏನೋ ದರ್ಶಿನಿ ಪರ್ಶಿನಿ ಅಂತ ಊಟ ತಿಂಡಿಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದವು. ಇವಳು eggless ಕೇಕ್ ಮಾಡುವದರಲ್ಲಿ ಫುಲ್ ಕಳೆದುಹೋಗಿರುವ ಪಿರ್ಕಿ ಗಿರಾಕಿ.

ಆ ಒಂದು ಸ್ಪೆಷಲ್ ದಿವಸ ಬೆಳಿಗ್ಗೆ ಬೆಳಿಗ್ಗೆನೇ ಕೇಕ್ ಹಿಟ್ಟನ್ನು ಓವೆನ್ ಒಳಗೆ ಇಟ್ಟಳು ಅಂದರೆ ಮುಗಿಯಿತು. ನಂತರ ಸಂಜೆ ಗೆಳತಿಯರು ಬರುವದನ್ನೆ ಕಾಯುತ್ತಿದ್ದಳು. ಕೇಕ್ ಮೇಲೆ 'I love you' ಅಂತ ಬೇರೆ icing ಮಾಡುತ್ತಿದ್ದಳು. ಅದನ್ನು ನೋಡಿ, ಆನಂದಿಸಿ ಕೇಕ್ ಕಟ್ ಮಾಡಿಬಿಡುತ್ತಿದ್ದಳು. ಚಿಕ್ಕ ಚಿಕ್ಕ bite size pieces. ಹಾಗಾಗಿ 'I love you' ಅನ್ನುವದು ಕಾಣುತ್ತಿರಲಿಲ್ಲ. ಕಂಡರೆ ನೋಡಿದವರು 'I love you' ಯಾಕೆ? ಅಂತ ಕೇಳಿಬಿಟ್ಟರೇ??



ಸಂಜೆ ಗೆಳತಿಯರು ಬರುತ್ತಿದ್ದರು. ಮತ್ತೆ ಅದೇ ರೂಟೀನ್. ಈಗ ಹತ್ತೊಂಬತ್ತು ವರ್ಷಗಳಿಂದ ನಡೆದುಕೊಂಡು ಬಂದಿದೆ. ಗೆಳತಿಯರು ಬರುತ್ತಾರೆ. ಕೊಟ್ಟ ಕೇಕ್, ಚೂಡಾ ತಿಂದು, ಚಹಾ ಕುಡಿದು, ಒಂದಿಷ್ಟು ಹಾಳುಹರಟೆ ಹೊಡೆಯುತ್ತಾರೆ. ನಾಲ್ಕು ಜನ ಸೇರಿದರೆ ಏನು ಮಾತಾಡುತ್ತಾರೋ ಅದೇ ಮಾತಾಡುತ್ತಾರೆ. ನೋಡಿ ಬೇಕಾದರೆ ನಾಲ್ಕು ಜನ ಹಾಳುಹರಟೆ ಹೊಡೆಯಲು ಕೂತರು ಅಂದರೆ ಮತ್ಯಾರೋ ಐದನೇಯವರ ಬಗ್ಗೆನೇ ಮಾತಾಡುತ್ತಾರೆ. ಅದೇ ನಾಲ್ವರಲ್ಲಿ ಯಾರಾದರೂ ಎದ್ದು ಹೋದರೆ ಉಳಿದ ಮೂವರು ಆ ಬಿಟ್ಟು ಹೋದ ನಾಲ್ಕನೆಯವರ ಬಗ್ಗೆನೇ ಮಾತಾಡುತ್ತಾರೆ. ಇವರದ್ದೂ ಅದೇ ರೀತಿ.

ಗೆಳತಿಯರು ಮೊದಲು ಒಂದೆರೆಡು ವರ್ಷ ಕೇಳಿದ್ದರು, 'ಏನಲೇ ಸ್ಪೆಷಲ್? ಯಾಕ ಕೇಕ್ ಮಾಡಿ? ಯಾರದ್ದು ಬರ್ತಡೇ?' ಅಂತ. ಇವಳು ಹೇಳಲಿಲ್ಲ. 'ಏ, ಹಾಂಗs! ಸುಮ್ಮ ಕೇಕ್ ತಿನ್ನಿರೀ! ಚುಪ್!' ಅಂತ ಸ್ನೇಹದಿಂದಲೇ ಬಾಯಿ ಮುಚ್ಚಿಸಿದ್ದಳು. ನಾಲ್ಕಾರು ವರ್ಷ ಕಳೆದ ಮೇಲೆ ಯಾರೂ ಕೆದಕಿ ಕೆದಕಿ ಕೇಳಲಿಲ್ಲ. ಆದರೆ ವರ್ಷದ ಆ ಒಂದು particular ದಿವಸದಂದೇ ಯಾಕೆ ಕೇಕ್ ಮಾಡುತ್ತಾಳೆ? ಅಂತ ಕುತೂಹಲ ಮಾತ್ರ ಇತ್ತು. ಅಷ್ಟೇ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿ ಇದ್ದಿದ್ದರಿಂದ ಯಾರೂ ತನಿಖೆ ಮಾಡಿರಲಿಲ್ಲ.

ಈ ವರ್ಷವೂ ಗೆಳತಿಯರು ಬಂದರು. ಬಂದು ಕೇಕ್ ಉಪಹಾರ ಮುಗಿಸಿ ತಮ್ಮ ತಮ್ಮ ಮನೆ ಕಡೆ ಹೊರಟರು. ಇವಳ ಮನೆಯಿಂದ ಹೊರಬಿದ್ದವರು ಯಾರ ಬಗ್ಗೆ ಮಾತಾಡಲು ಶುರು ಮಾಡಿದರು ಹೇಳಿ ನೋಡೋಣ? ಮತ್ಯಾರ ಬಗ್ಗೆ? ಇವಳ ಬಗ್ಗೆಯೇ. 'ಏನು ವಿಚಿತ್ರ ಇದ್ದಾಳಲೇ ಅಕಿ? ಪ್ರತಿ ವರ್ಷ ಕೇಕ್ ಮಾಡಿ ಕರಿತಾಳ ನೋಡವಾ. ಅದೂ ಪ್ರತಿವರ್ಷ ಇದೇ ತಾರೀಕಿಗೆ. ಯಾಕ ಅಂತ ಕೇಳಿದ್ರ ಮಾತ್ರ ಉತ್ತರ ಇಲ್ಲ ನೋಡವಾ. ವಿಚಿತ್ರ ಬುದ್ಧಿ,' ಅಂತ ಒಬ್ಬಳು ಹೇಳುತ್ತಾಳೆ. ಅವಳಿಗೆ ಜುಗಲಬಂದಿಯೋ ಎಂಬಂತೆ ಇನ್ನೊಬ್ಬಳು ಸಾಥ್ ಕೊಡುತ್ತಾಳೆ. 'ಹೂಂನಲೇ, ಖರೆನೇ ವಿಚಿತ್ರ ಬುದ್ಧಿ. ಅಲ್ಲ ನೋಡಲೇ, ಶ್ರಾವಣ ಮಾಸದಾಗ ಸುದಾ ಒಮ್ಮೆಯೂ ಅರಿಷಣ ಕುಂಕುಮಕ್ಕಂತ ಕರೆಯೋದಿಲ್ಲ ಇಕಿ. ಆದ್ರ ಈ ಕೇಕ್ ಮಾಡಿ, ಜುಲ್ಮಿ ಮಾಡಿ ಕರೆದು, ಕೇಕ್ ತಿನ್ನಿಸೋದನ್ನು ಮಾತ್ರ ಒಟ್ಟೇ ಬಿಟ್ಟಿಲ್ಲ ನೋಡು' ಅನ್ನುತ್ತಾಳೆ. 'ಹೌದಲೇ ಬರೋಬ್ಬರಿ ಹೇಳಿದಿ. ಶ್ರಾವಣ ಮಾಸದಾಗೂ ಇಲ್ಲ. ನವರಾತ್ರಿ ಮುಂದನೂ ಇಲ್ಲ. ಅದೆಲ್ಲಾ ಹೋಗ್ಲೀ ಮನಿ ವಾಸ್ತು ಮಾಡಿದಾಗಲೂ ಕರಿಲಿಲ್ಲ. ಕೇಕ್ ಅಂತ ಕೇಕ್. ಹುಚ್ಚ ಅದ ಅದು. ಮೊದಲಿಂದ ಒಂದು ತರಹದ ವಿಚಿತ್ರ ಪ್ರಾಣಿ ಅಕಿ,' ಅಂತ ಇನ್ನೊಬ್ಬಳು ಬಾಣ ಬಿಡುತ್ತಾಳೆ. ಅಬ್ಬಾ! ಗೆಳತಿಯರ ಸ್ನೇಹವೇ! ಈಗ ತಾನೇ ಅವಳ ಮನೆಯಲ್ಲೇ ಕಂಠ ಮಟ ಕೇಕ್, ಚೂಡಾ, ಚಹಾ  ಗದುಮಿ ಬಂದವರ ಮಾತು ನೋಡಿ. 'ಹೋದ ವರ್ಷ ಮಗನ ಮುಂಜ್ವೀ ಮಾಡಿದಳು ಅದಕ್ಕೂ ಸುದಾ ಕರಿಲಿಲ್ಲ. ಕೇಳಿದರೆ, 'ಗಡಿಬಿಡಿಯಾಗ ಸ್ವಾಧಿಯೊಳಗ ಮಾಡಿಕೊಂಡು ಬಂದುಬಿಟ್ಟವೀ. ಆಮ್ಯಾಲೆ ನಮ್ಮನಿಯವರು ಫಾರಿನ್ನಿಗೆ ಹೋಗಿಬಿಟ್ಟರು. ಅದಕ್ಕೇ ಇಲ್ಲಿ function ಮಾಡಲಿಕ್ಕೆ ಆಗಲೇ ಇಲ್ಲ!' ಅಂದುಬಿಟ್ಟಳು ನೋಡವಾ. ಆದ್ರ ಈ ಕೇಕ್ ಮಾತ್ರ ಪ್ರತಿ ವರ್ಷ ಮಾಡ್ತಾಳ ನೋಡವಾ. ನಾವು ಹೋಗೋ ಮೊದಲೇ ಕೇಕಿನ ಮುಂಜ್ವೀ ಮಾಡಿಬಿಟ್ಟಿರತಾಳ!' ಅಂದು ಕೀಕೀಕೀ ಅಂತ ಕೀರಲು ಧ್ವನಿಯಲ್ಲಿ ಒಬ್ಬಳು ನಕ್ಕಳು. ಮಹಾ ಉಡಾಳಿ. 'ಏನಲೇ ಹಾಂಗಂದ್ರ? ಕೇಕ್ ಮುಂಜ್ವೀ ಮಾಡಿಬಿಟ್ಟಿರತಾಳ ಅಂದ್ರ ಏನು?' ಅಂತ ಮತ್ತೊಬ್ಬಳು ಕೇಳಿದಳು. 'ಅಲ್ಲಲೇ ಕೇಕ್ 'ಕಟ್' ಮಾಡಿಬಿಟ್ಟಿರ್ತಾಳ ನೋಡು. ಅದಕ್ಕೆ ಕೇಕ್ ಮುಂಜ್ವೀ ಅಂದೆ,' ಅಂತ ಕಣ್ಣು ಮಿಟುಕಿಸಿ ತುಂಟ ನಗೆ ಬೀರಿದಳು. 'ಛೀ! ಹೇಶಿ! ಕಟ್ ಮಾಡೋದು ಸಾಬರ ಮುಂಜವಿಯಾಗಲೇ. ಹೇಶಿ ತಂದು!' ಅಂತ ಅವಳಿಗೆ ಗೆಳತಿಯರ ಹುಸಿಮುನಿಸಿನ ಪೂಜೆಯಾಯಿತು.

ಹೀಗೆ ಇಲ್ಲದ್ದು ಸಲ್ಲದ್ದನ್ನು ಮಾತಾಡುತ್ತ ತಮ್ಮ ತಮ್ಮ ಮನೆ ಮುಟ್ಟಿಕೊಂಡರು. ಈ ವರ್ಷದ eggless ಕೇಕ್ ಪ್ರಹಸನ ಮುಗಿದಿತ್ತು. ಇನ್ನೊಂದೆರೆಡು ತಿಂಗಳು ನಿರಾಳ. ನಂತರ ಮತ್ತೆ ಶುರುವಾಗುತ್ತದೆ. ಮುಂದಿನ ವರ್ಷದ ಕಿರುಕುಳ. 'ಲೀ, ಮರಿಬ್ಯಾಡ್ರಿಲೇ! ಮುದ್ದಾಂ ಬರಬೇಕು. ಬಂದು ಕೇಕ್ ತಿಂದೇ ಹೋಗಬೇಕಾ ಮತ್ತ!'

ಈ ಪುಣ್ಯಾತ್ಗಿತ್ತಿ ಯಾಕೆ ಕೇಕ್ ಮಾಡುತ್ತಾಳೆ? ಆ ದಿನವೇ ಯಾಕೆ ಮಾಡುತ್ತಾಳೆ? ಅದೂ eggless ಕೇಕನ್ನೇ ಯಾಕೆ ಮಾಡುತ್ತಾಳೆ?

ಈ ಪ್ರಶ್ನೆಗಳಿಗೆಲ್ಲ ಉತ್ತರ ಹೇಳುತ್ತದೆ ಈ ಕಥೆಯೊಳಗಿನ ಕಥೆ.

****

ಅದೇನೋಪ್ಪಾ ಗೊತ್ತಿಲ್ಲ. ಈ ಕೆಲವು ಮಂದಿ ಹುಡುಗಿಯರಿಗೆ ಐದು ಆರನೇ ಕ್ಲಾಸಿನಿಂದೆಲ್ಲ ಪ್ರೀತಿ, ಪ್ರೇಮ, ಪ್ಯಾರ್, ಮೊಹಬ್ಬತ್ ಎಲ್ಲ ಆಗಿಬಿಡುತ್ತದೆ. ಅದು ಹೇಗೋ ಏನೋ!

ಪಾಪ ಹುಡುಗಿಯರು. ಸಣ್ಣವರಿದ್ದಾಗಿಂದಲೇ ಗಂಡ, ಮಕ್ಕಳು, ಮನೆ ಅಂತ ಎಲ್ಲರೂ ಮೊಳೆ ಹೊಡೆಯಲು ಶುರು ಮಾಡಿಬಿಡುತ್ತಾರೆ. ಅದರಲ್ಲೂ ಕೊಂಚ ಲಕ್ಷಣವಂತೆಯಾದರಂತೂ ಮುಗಿದೇಹೋಯಿತು. ಮನೆ ಮಂದಿ, ಹೊರಗಿನ ಮಂದಿ, ಬಂಧು ಬಳಗದವರು ಎಲ್ಲರೂ ಪಾಪ ಆ ಹುಡುಗಿಯನ್ನು ಗಂಡ, ಗಂಡ, ಗಂಡ, ಮಕ್ಕಳು, ಮಕ್ಕಳು, ಮನೆ ಅಂತ ಹೇಳಿ ತಲೆ ತಿಂದುಬಿಡುತ್ತಾರೆ. ಅದು ಒಂದು ತರಹದ brainwash ಆಗಿಬಿಡುತ್ತದೆ ಅಂತ ಕಾಣುತ್ತದೆ.

ಹೀಗೆ brainwash ಆದವರು ಸದಾ ಅದೇ ಗುಂಗಿನಲ್ಲಿ ಇರುತ್ತಾರೇನೋ. ಕ್ಲಾಸಿನಲ್ಲೇ ಯಾರಾದರೂ ಒಳ್ಳೆ ಹುಡುಗ ಕಂಡುಬಿಟ್ಟರೆ ಕ್ಯಾಚ್ ಹಾಕಿಬಿಡುತ್ತಾರೆ. ಐದಾರನೇ ಕ್ಲಾಸಿನಲ್ಲಿದ್ದಾಗ ಒಂದು shortlist ಮಾಡಿಟ್ಟುಕೊಂಡು ಒಂದು ನಾಲ್ಕಾರು eligible candidates ಗಳನ್ನು ಗಮನಿಸುತ್ತಾ ಇರುತ್ತಾರೆ. ಎಂಟನೇ ಕ್ಲಾಸಿನ ಹೊತ್ತಿಗೆ ಪಟ್ಟಕ್ಕೆ ಬಂದವರು ಒಬ್ಬನನ್ನು ಗಂಡ ಅಂತ ಸ್ವೀಕರಿಸಿ ಮನದಲ್ಲೇ ಮಂಡಿಗೆ ತಿನ್ನಲು ಆರಂಭಿಸಿಬಿಡುತ್ತಾರೆ. ಮನದಲ್ಲೇ ಮಂಡಿಗೆ ತಿನ್ನುವದು ಅಂದಾದ ಮೇಲೆ ಜಿಪುಣತನ ಯಾಕೆ ಅಂತ ಹೇಳಿ ಬರೋಬ್ಬರಿ ಹಾಲು, ತುಪ್ಪ, ಸಕ್ಕರೆ ಹಾಕಿಕೊಂಡೇ ತಿಂದು ಮುಂದಿನ ಕನಸು ಕಾಣಲಾರಂಭಿಸುತ್ತಾರೆ.

ನಮ್ಮ ಕೇಕ್ ಗಿರಾಕಿಯದೂ ಅದೇ ಕೇಸು. ಪಾಪ! ಆರನೇ ಕ್ಲಾಸಿನಲ್ಲೇ ಆತ ಕಣ್ಣಿಗೆ ಬಿದ್ದ. ಸಹಪಾಠಿ. ಏನೋ ಒಂದು ತರಹ ಇದ್ದ. ಇವಳಂತೂ ಲೈಕ್ ಮಾಡಿದಳು. ಮತ್ತೆ ಆತ ಶುದ್ಧ ವೈಷ್ಣವ ಆಚಾರಿ. ಇವಳದ್ದೇ ಜಾತಿ. ಹಾಗಾಗಿ ಮುಂದೆ ಲಗ್ನ ಮಾಡಿಕೊಂಡರೂ ಜಾತಿ ಕೆಡುವ ಭಯವಿಲ್ಲ. ಹಾಗಾಗಿ ಮನಸ್ಸನ್ನು ಹರಿಯಲು ಬಿಟ್ಟಳು. ಹರಿಯಲು ಬಿಟ್ಟ ಮನಸ್ಸು ಸೂತ್ರ ಹರಿದ ಗಾಳಿಪಟದಂತಾಯಿತು. ಕಟಿ ಪತಂಗ!

ಹುಡುಗ ಒಮ್ಮೆ ಲೈಕಾಗಿಬಿಟ್ಟ ಅಂದರೆ ಮುಗಿದೇಹೋಯಿತು. ಅವನ ಬೇಕುಬೇಡಗಳ ಬಗ್ಗೆ ಒಂದು ಸಮಗ್ರ ಅಧ್ಯಯನವನ್ನೇ ಶುರು ಮಾಡಿಬಿಡುತ್ತಾರೆ ಹುಡುಗಿಯರು. ಇವಳೂ ಅದೇ ಮಾಡುತ್ತಿದ್ದಳು. ಖುಲ್ಲಂ ಖುಲ್ಲಾ ದೋಸ್ತಿ ಮಾಡೋಣ ಅಂದರೆ ಅವರದ್ದು ಶುದ್ಧ ಭಟ್ಟರ ಶಾಲೆ. coeducational ಇದ್ದರೂ ಹುಡುಗರು ಮತ್ತು ಹುಡುಗಿಯರ ಮಧ್ಯೆ ಸಂಪರ್ಕ ಇಲ್ಲವೇ ಇಲ್ಲ. ಮಾತು ಕತೆಯೂ ಇಲ್ಲ. ವಿಚಿತ್ರ ಸಂಸ್ಕೃತಿ. ಹಾಗಾಗಿ ತನ್ನ ಮೆಚ್ಚಿನ ಹುಡುಗನ ಬೇಕುಬೇಡಗಳ ಬಗ್ಗೆ ಸಮಗ್ರ ಅಧ್ಯಯನವನ್ನು indirect ಆಗಿ ಮಾಡಬೇಕಾಯಿತು. ಹಾಂಗೇ ಮಾಡಿದಳು.

ತನ್ನ ಹುಡುಗನಿಗೆ ಕೇಕ್ ಅಂದರೆ ತುಂಬಾ ಇಷ್ಟ ಅನ್ನುವದನ್ನು ಕಂಡುಹಿಡಿದಿದ್ದಳು. ಅದು ಅವಳು ಮಾಡಿದ ದೊಡ್ಡ ಸಂಶೋಧನೆ. ಹುಡುಗನಿಗೆ ಕೇಕ್ ಇಷ್ಟ. ಆದರೆ ತಿನ್ನಲಾರ. ಹ್ಯಾಂ? ಯಾಕೆ?

ಎಂದೋ ಒಂದು ದಿನ ಮಧ್ಯಾನದ ಊಟದ ಬಿಡುವಿನ ವೇಳೆಯಲ್ಲಿ ತರಗತಿಯಲ್ಲಿ ಕೂತು ಹುಡುಗರು ಊಟ ಮಾಡುತ್ತಿದ್ದರು. ಹುಡುಗಿಯರೂ ಸಹ. ಹಂಚಿ ತಿನ್ನುವದು ರೂಢಿ. potluck. ಅಂದು ಹುಡುಗರಲ್ಲಿ ಯಾರೋ ಕೇಕ್ ತಂದಿದ್ದರು ಅಂತ ಕಾಣುತ್ತದೆ. ಇವಳ ಹುಡುಗನಿಗೂ ಕೇಕ್ ಕೊಟ್ಟರು. ಬೇಡವೆಂದ. ಯಾಕೆಂದು ಕೇಳಿದರೆ, 'ನನಗ ಕೇಕ್ ಅಂದ್ರ ಭಾಳ ಅಂದ್ರ ಭಾಳ ಸೇರ್ತದಲೇ. ಆದ್ರ ಏನು ಮಾಡೋಣ? ತಿನ್ನೋ ನಸೀಬ್ ಇಲ್ಲಲೇ,' ಅಂದುಬಿಟ್ಟ. 'ಯಾಕಲೇ?' ಅಂತ ಕೇಳಿದರೆ, 'ಲೇ, ಕೇಕಿನ್ಯಾಗ ತತ್ತಿ, ಕೋಳಿ ತತ್ತಿ, ಹಾಕಿರ್ತಾರಲೇ. ನಾವು ವೈಷ್ಣವ ಬ್ರಾಮಂಡರು. ಅದರಾಗೂ ಆಚಾರ್ರು. ಅವನ್ನೆಲ್ಲಾ ತಿನ್ನಂಗಿಲ್ಲ. ತಿಂದ್ರ ಪಾಪ ಬರ್ತದ. ಸ್ವಾಮಿಗಳಿಗೆ ಸಿಟ್ಟು ಬರ್ತದ. ಗೊತ್ತೇನು? ಅದಕs ನಾ ಕೇಕ್ ತಿನ್ನೋದಿಲ್ಲ. ಆದ್ರ ತಿನ್ನಬೇಕು ಅಂತ ಭಾಳ ಅನ್ನಸ್ತದಲೇ. ಅಯ್ಯೋ ಕೇಕ್!' ಅಂತ ಅಂಬೋ ಅಂದುಬಿಟ್ಟಿದ್ದ. ತಿನ್ನಲಾರ ಆದರೆ ಆಸೆ ತಾಳಲಾರ!

ಹುಡುಗರಲ್ಲಿ ನಡೆದಿದ್ದ ಈ ಮಾತನ್ನು ಕೇಳಿದ ಹುಡುಗಿ ಮನದಲ್ಲೇ ಒಂದು ನೋಟ್ ಮಾಡಿಕೊಂಡಳು. ಹುಡುಗನಿಗೆ ಕೇಕ್ ಇಷ್ಟ. ಜೀವನದಲ್ಲೇ ಕೇಕ್ ತಿಂದಿಲ್ಲ. ಯಾಕೆಂದರೆ ಅದರಲ್ಲಿ ಮೊಟ್ಟೆ ಹಾಕಿರುತ್ತಾರೆ. ಪಾಪದ ಹುಡುಗ. ಅದೂ ನನ್ನ ಹುಡುಗ. ಕೇಕ್ ತಿನ್ನಬೇಕೆಂಬುದೇ ಅವನ ಮಹದಾಸೆ.

ಮನದಲ್ಲೇ ಒಂದು ನಿಶ್ಚಯ ಮಾಡಿದಳು. ತನ್ನ ಹುಡುಗನಿಗೆ ರಾಜಾ ಅನ್ನುತ್ತಿದ್ದಳು. ಅವನ ಹೆಸರೇನೋ ಬೇರೆ ಇತ್ತು. ಇವಳು ಪ್ರೀತಿಯಿಂದ ಇಟ್ಟಿದ್ದ ಹೆಸರು ರಾಜಾ. 'ರಾಜಾ, ನೀ ಚಿಂತಿ ಮಾಡಬ್ಯಾಡ ನನ್ನ ಮುದ್ದು ರಾಜಾ. ನಾ ನಿನಗ ಕೇಕ್ ಮಾಡಿ ತಿನ್ನಸ್ತೇನಿ. eggless ಕೇಕ್ ಮಾಡಲಿಕ್ಕೆ ಬರ್ತದ. ನನಗೇನು ಕೇಕ್ ಮಾಡೋದ್ರಾಗ ಅಷ್ಟೇನೂ ಇಂಟರೆಸ್ಟ್ ಇಲ್ಲ. ಆದರೂ ನಿನ್ನ ಸಲುವಾಗಿ ಕೇಕ್ ಮಾಡೋದನ್ನ ಕಲಿತೇನಿ. ಕಲಿತು ಮಸ್ತಾಗಿ eggless ಕೇಕ್ ಮಾಡಿ ನಿನಗ ತಿನ್ನಸ್ತೇನಿ ರಾಜಾ. ನಿನ್ನ ಆಚಾರಿತನಕ್ಕೂ ಭಂಗ ಬರಂಗಿಲ್ಲ. ಕೇಕ್ ತಿನ್ನಬೇಕು ಅನ್ನೋ ನಿನ್ನ ಆಶಾನೂ ತೀರ್ತದ. ಓಕೆ ರಾಜಾ?' ಅಂತ ಮನದಲ್ಲೇ ಮಾತುಕತೆ ಮಾಡಿ ಮುಗಿಸಿದ್ದಳು.

ಹುಡುಗನ ಬರ್ತಡೇ ಅಂತೂ ಗೊತ್ತೇ ಇತ್ತು. ಯಾಕೆಂದರೆ ಬರ್ತಡೇ ದಿವಸ ಇಡೀ ಕ್ಲಾಸಿಗೇ ಚಾಕಲೇಟ್ ಕೊಡುವ ಸಂಪ್ರದಾಯವಿತ್ತು. ಹಾಗಾಗಿ ತಮಗೆ ಬೇಕಾದವರ ಬರ್ತಡೇ ನೆನಪಿಡಲು ಅದು ಸಹಾಯಕಾರಿಯಾಗಿತ್ತು. ಒಮ್ಮೆ ಆಚಾರಿ ರಾಜಾನೇ ಅವಳ ದಿಲ್ ಕಾ ರಾಜಾ ಅಂತ ನಿರ್ಧರಿಸಿದ ಮೇಲೆ ರಾಜಾನ ಬರ್ತಡೇ ಬರೋಬ್ಬರಿ ನೋಟ್ ಮಾಡಿಟ್ಟುಕೊಂಡು ಫುಲ್ ಬಾಯಿಪಾಠ ಮಾಡಿಬಿಟ್ಟಿದ್ದಳು.

ಹೀಗೆ ಮೂಕ ಪ್ರೀತಿ ನಡೆಯುತ್ತಿತ್ತು. ಇವಳು ಮೂಕಿ. ತನ್ನ ಪ್ರೇಮ ಹೇಳಿಕೊಳ್ಳಲಾರಳು. ಅವನು ಕುರುಡ. ಇವಳ ಪ್ರೇಮವನ್ನು ನೋಡಲಿಲ್ಲ. ನೋಡಲಿಲ್ಲವೋ, ತಿಳಿಯಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಲವ್ ಶುರುವಾಗಲಿಲ್ಲ.

ಹತ್ತನೇ ಕ್ಲಾಸಿಗೆ ಬಂದಾಗ ಇವಳಿಗೆ ಸಿಕ್ಕಾಪಟ್ಟೆ ಜೋರಾಗೇ ಬವ್ವಾ ಕಡಿದುಬಿಟ್ಟಿತು. ಪ್ರೀತಿಯ ಬವ್ವಾ. ಪ್ರೇಮದ ಬವ್ವಾ. ಕಡಿದುಬಿಟ್ಟಿತು ಅಂದರೆ ಅಷ್ಟೇ ಮತ್ತೆ! 'ಪ್ರಾಯ ಬಂದರೆ ಯಾಕೋ ಅದು ಯಾಕೋ ನಿದ್ದೆ ಬರೋಲ್ಲ. ದಿಂಬು ಹಾಸಿಗೆ ಇದ್ದರೂ ಮಲಗಿದ್ದರೂ ನಿದ್ದೆ ಬರೋಲ್ಲ. ಮನವ ಕಾಡುವ ಬಯಕೆಗಳು ಮಾತೇ ಕೇಳೋಲ್ಲ,' ಅನ್ನುವ ಆಕಾಲದ ಪಾಪ್ಯುಲರ್ ಗೀತೆ ಕೇಳುತ್ತ ಹಾಸಿಗೆ ತುಂಬಾ ಹಾವಿನಂತೆ ಹರಿದಾಡಿಬಿಟ್ಟಳು. 'ರಾಜಾ! ನನ್ನ ಮುದ್ದು ರಾಜಾ! ನೀ ಬೇಕಲೇ. ಬೇಕೇಬೇಕಲೇ! ಲೇ ರಾಜಾ!' ಅಂತ ರಾತ್ರಿ ಪೂರ್ತಿ ಕನವರಿಸಿದಳು. ಆವಾಗ ರಾಜಾಚಾರಿ ಏನು ಮಾಡುತ್ತಿದ್ದನೋ ಯಾವನಿಗೆ ಗೊತ್ತು. ಎಲ್ಲೋ ಘಂಟೆ ತೂಗುತ್ತ ಕೂತಿರಬೇಕು.

'ನಾನೇ ಪ್ರಪೋಸ್ ಮಾಡಿಬಿಡಲೇ?' ಅಂತ ಕೇಳಿಕೊಂಡಳು. ಆತಂಕದಿಂದ ಹೃದಯ ಕಿತ್ತು ಬಾಯಿಗೇ ಬಂತು. 'ಅದೆಲ್ಲ ಸಾಧ್ಯವಿಲ್ಲ. ಅವನೇ ಪ್ರಪೋಸ್ ಮಾಡಲಿ. ಹಾಗಂತ ದೇವರನ್ನು ಪ್ರಾರ್ಥಿಸುತ್ತೇನೆ. ರಾಜಾ ಏನಾದರೂ ಪ್ರಪೋಸ್ ಮಾಡಿಬಿಟ್ಟರೆ ತಿರುಪತಿ ವೆಂಕಪ್ಪಗ ಮುಡಿ ಕೊಡತೇನಿ. ಒಂದಲ್ಲ ಎರಡು ಸಲ ಮುಡಿ ಕೊಡ್ತೇನಿ,' ಅಂತ ಹರಕೆ ಹೇಳಿಕೊಂಡಳು. ಮುಡಿ!? ಇವಳು ತಲೆ ಬೋಳಿಸಿಕೊಳ್ಳಲು ಹೊರಟಿದ್ದಳೇ?? ಅಯ್ಯೋ! ರಾಜಾ ಸಿಕ್ಕರೆ ಅವನ ಮುಡಿಯನ್ನೇ ತಿರುಪತಿ ತಿಮ್ಮಪ್ಪನಿಗೆ ಕೊಡುತ್ತೇನೆ ಅಂತ ಹರಕೆ ಹೊತ್ತಳು. ಮೊದಲು ರಾಜಾನ ಮುಡಿ. ನಂತರದ್ದು ಹುಟ್ಟುವ ಗಂಡು ಮಗುವಿನ ಮುಡಿ. ಟೋಟಲ್ ಎರಡು ಮುಡಿ ಶಿವಾಯ ನಮಃ.

ಯಾಕೋ ಯಾವ ದೇವರೂ ಮನಸ್ಸೇ ಮಾಡಲಿಲ್ಲ. SSLC ಮುಗಿಯಿತು. ಮೂಕ ಹಕ್ಕಿಯು ಹಾಡುತಿದೆ ಎಂಬಂತೆ ಮೂಕ ಪ್ರೇಮ ಮೂಕ ಪ್ರೇಮವಾಗೇ ಉಳಿಯಿತು. ಮುಂದೆಂದಾರೂ workout ಆದೀತು ಅಂತ ಆಸೆ ಮಾತ್ರ ಇತ್ತು.

PUC ಒಂದೇ ಕಾಲೇಜ್ ಮತ್ತು ಒಂದೇ ಕ್ಲಾಸ್. ಈಕೆಯಂತೂ ಅವನನ್ನು ನೋಡುತ್ತಲೇ ಕುಳಿತಿರುತ್ತಿದ್ದಳು. ಒಮ್ಮೆ ಅವನೂ ನೋಡಿಬಿಟ್ಟ. 'ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆ ಆಡಿದೆ ನೋಡಿ,' ಅನ್ನುವಂತೆ ಮನಸ್ಸು ಹೃದಯ ಎಲ್ಲಾ ಒಮ್ಮೆಲೇ ತಾಳತಪ್ಪಿ ಹೆಂಗೆಂಗೋ ಬಡಿದುಕೊಂಡ ಅಬ್ಬರಕ್ಕೆ ಏಕ್ದಂ ಉದ್ವೇಗ ಉಂಟಾಗಿ, ಹಾಕಿದ್ದ ಜಂಪರ್ ಒಮ್ಮೆಲೇ ಎದೆಯನ್ನೆಲ್ಲಾ ಬಿಗಿ ಮಾಡಿ, ಉಸಿರುಗಟ್ಟಿದಂತಾಗಿ, ಒಮ್ಮೆಲೇ ದೊಡ್ಡ ಶ್ವಾಸ, ಅದೂ ಕ್ಲಾಸಿನ ಪಿರಿಯಡ್ ನಡೆದಾಗ, ಬಿಟ್ಟಿದ್ದನ್ನು ನೋಡಿ ಘಾಬರಿಯಾದ ಗೆಳತಿಯರು ಕೇಳಿದ್ದರು, 'ಏನಾತಲೀ!?' ಅಂತ. 'ಏನಿಲ್ಲಲೇ! ಹಾಂಗs  ಒಂದು ಸೆಕೆಂಡ್ ಎದಿ ಒತ್ತಿ ಹಿಡದಂಗಾತು. ಈಗ ಎಲ್ಲಾ ಬರೋಬ್ಬರಿ ಅದ!' ಅಂತ ತಿಪ್ಪೆ ಸಾರಿಸಿದ್ದಳು. ಮನದಲ್ಲೇ ಪ್ರೀತಿ ಮಾಡಲಾರಂಭಿಸಿ ಐದಾರು ವರ್ಷಗಳೇ ಕಳೆದುಹೋಗಿದ್ದವು. ಆದರೆ ಹಾಕಿಕೊಂಡ ಜಂಪರ್ ಟೈಟ್ ಆಗುವಂತಹ ಸನ್ನಿವೇಶ ಬಂದಿದ್ದು ಇದೇ ಮೊದಲು. 'ರಾಜಾ, ನನ್ನ naughty ರಾಜಾ! ಎಷ್ಟು ಜೋರಾಗಿ ಅದೆಷ್ಟು ಜೋರಾಗಿ ಕಣ್ಣು ಹೊಡೆದುಬಿಟ್ಟಿ ಮಾರಾಯಾ!? ನನ್ನ ಜಂಪರ್ ಟೈಟ್ ಆಗಿಹೋಗಿತ್ತು! ಗೊತ್ತದ ಏನು!?' ಅಂತ ಮನದಲ್ಲೇ ಪ್ರೀತಿಯಿಂದ ರಾಜಾನನ್ನು ಮೈಲ್ಡಾಗಿ ಬೆಂಡೆತ್ತಿದ್ದಳು.

PUC ಸಹ ಮುಗಿಯಿತು. ರಾಜಾ ಪ್ರಪೋಸ್ ಮಾಡಲೇ ಇಲ್ಲ. ಇವಳು ಎಂದಿನಂತೆ ಮೂಕಿ. ಒಳಗೇ ಅದುಮಿಟ್ಟುಕೊಂಡೇ ಇದ್ದಳು. ಮೂಕ ಪ್ರೇಮ.

PUC ಮುಗಿಸಿದ ರಾಜಾ ವೃತ್ತಿಪರ ಶಿಕ್ಷಣಕ್ಕೆಂದು ಎಲ್ಲೋ ಹೋದ. ಇವಳ್ಯಾಕೆ ಅವನ ಬೆನ್ನತ್ತಿ ಹೋಗಲಿಲ್ಲ? ಅದು ಅವಳಿಗೇ ಗೊತ್ತು. ಅವೇನು ಅನಿವಾರ್ಯತೆಗಳು ಇದ್ದವೋ ಏನೋ. ಇವಳು ಅಲ್ಲೇ ಉಳಿದಳು. ಡಿಗ್ರಿ ಮಾಡತೊಡಗಿದಳು.

'ರಾಜಾ ದೂರ ಹೋದರೇನಾಯಿತು? ರಜೆಗೆ ಬರುತ್ತಾನೆ. ಆವಾಗ ಯಾವಾಗಲಾದರೂ ಪ್ರಪೋಸ್ ಮಾಡಬಹುದು,' ಅನ್ನುವ ಆಸೆಯಲ್ಲಿಯೇ ಬದುಕುತ್ತಿದ್ದಳು. ರಾಜಾ ರಜಾದಲ್ಲಿ ಬರುತ್ತಿದ್ದ. ಊರಿಗೆ ಬಂದವ ನೀರಿಗೆ ಬಂದ ಎಂಬಂತೆ ಇವಳ ಕಣ್ಣಿಗೂ ಬೀಳುತ್ತಿದ್ದ. ಆದರೆ ಪ್ರಪೋಸ್ ಮಾತ್ರ ಮಾಡಲೇ ಇಲ್ಲ. ಮತ್ತದೇ ಮೂಕ ಪ್ರೇಮ. ಪಾಪ!

ಇವಳ ಡಿಗ್ರಿ ಮುಗಿಯಿತು. ಆಕಡೆ ರಾಜಾನ ಡಿಗ್ರಿ ಮುಗಿದಿರಲಿಲ್ಲ. 'ಏ, ಲಗ್ನಾ ಮಾಡಿಕೋಳ. ಡಿಗ್ರಿನೂ ಮುಗೀತು. ಇಪ್ಪತ್ತೊಂದಾತು. ಬರೋಬ್ಬರಿ ವಯಸ್ಸು. ಲಗ್ನಾ ಮಾಡಿಕೊಂಡುಬಿಡು. ವರ ಹುಡುಕೋಣ ಏನು?' ಅಂತ ಮನೆ ಮಂದಿ ಸಹಜವಾಗಿ ಇವಳನ್ನು ಕೇಳಿದರು. ಇವಳಿಗೆ ರಾಜಾನದ್ದೇ ಧ್ಯಾನ. ಇನ್ನೂ ಆಸೆಯಿತ್ತು. ರಾಜಾ ಪ್ರಪೋಸ್ ಮಾಡಿದರೂ ಮಾಡಬಹುದು ಅಂತ. 'ನನಗ ಮಾಸ್ಟರ್ ಡಿಗ್ರಿ ಮಾಡಬೇಕು. ಅದು ಮುಗಿಸಿದ ಮ್ಯಾಲೆನೇ ಲಗ್ನದ ವಿಚಾರ. ಅಲ್ಲಿ ತನಕಾ ಏನೂ ಕೇಳಬ್ಯಾಡ್ರೀ,' ಅಂತ ಖಡಕ್ ಆಗಿ ಹೇಳಿದಳು. ಮನೆಯವರೂ ಪಾಪ ಒಳ್ಳೆಯವರು. ಹಾಗೇ ಆಗಲಿ ಅಂತ ಬಿಟ್ಟರು. ಮಾಸ್ಟರ್ ಡಿಗ್ರಿ ಸೇರಿಕೊಂಡಳು.

ಇತ್ತಕಡೆ ರಾಜಾ ವೃತ್ತಿಪರ ಡಿಗ್ರಿ ಮುಗಿಸಿದ. ಎಲ್ಲೋ ನೌಕರಿ ಹಿಡಿದ ಅಂತ ಸುದ್ದಿ ಬಂತು. ಈಕೆಗೆ ಒಂದು ತರಹದಲ್ಲಿ ಖುಷಿ. 'ಹುಡುಗನ ವಿದ್ಯಾಭ್ಯಾಸ ಮುಗಿಯಿತು. ನೌಕರಿ ಕೂಡ ಸಿಕ್ಕಿತು. ಇನ್ನೇನು? ಇದಕ್ಕಾಗಿಯೇ ಕಾಯುತ್ತಿದ್ದನೇನೋ ರಾಜಾ. ಈಗ ಎಲ್ಲಾ ಸೆಟಲ್ ಆದ. ಈಗ ಪ್ರಪೋಸ್ ಮಾಡಿದರೂ ಮಾಡಬಹುದು,' ಅಂದುಕೊಂಡಳು. ಕಮರಿಹೋಗುತ್ತಿದ್ದ ಆಸೆಗೆ ಗಿಚ್ಚಾಗಿ ನೀರು ಹಾಕಿದಳು. ಆಸೆಯ ಗಿಡ ಮತ್ತೆ ಜೀವ ಪಡೆದುಕೊಂಡು ಸೊಂಪಾಯಿತು.

ಇವಳ ಮಾಸ್ಟರ್ ಡಿಗ್ರಿ ಕೂಡ ಮುಗಿಯಿತು. ರಾಜಾ ಪ್ರಪೋಸ್ ಮಾಡಲೇ ಇಲ್ಲ. ನೌಕರಿ ಶುರು ಮಾಡಿದಾಗಿಂದ ಅವನು ಊರ ಕಡೆ ಜಾಸ್ತಿ ಬರುತ್ತಲೂ ಇರಲಿಲ್ಲ. ಸುದ್ದಿ ಬರುತ್ತಿತ್ತು.

ಮಾಸ್ಟರ್ ಡಿಗ್ರಿ ಮುಗಿದ ಕೂಡಲೇ ಮನೆ ಮಂದಿ ಮತ್ತೆ ಮದುವೆಯ ಬಗ್ಗೆ ಕೇಳಿದರು. ಈ ಸಲ ಸ್ವಲ್ಪ ಜಾಸ್ತಿಯೇ pressure ಹಾಕಿದ್ದರು. ಇವಳು ಐಡಿಯಾ ಮಾಡಿಟ್ಟುಕೊಂಡು ಸಿದ್ಧಳಾಗಿಯೇ ಇದ್ದಳು. 'ನನಗ MPhil ಮಾಡಬೇಕು. Just two more years. Please!'  ಅಂತ ಅಂಬೋ ಅಂದಳು. ಪಾಪ ಮನೆಯವರು. ಏನು ಮಾಡಬೇಕು? 'ಹೇಗೂ ಈಗ ಮಾತ್ರ ಇಪ್ಪತ್ತಮೂರು ವಯಸ್ಸು. ಇನ್ನೂ ಎರಡು ವರ್ಷ ಅಂದರೆ ಇಪ್ಪತ್ತೈದು. ಸ್ವಲ್ಪ ಲೇಟಾಗುತ್ತದೆ. ಆದರೂ ಓಕೆ. ಅದರ ನಂತರ ಮಾತ್ರ ಮುಂದೆ ಹಾಕಬಾರದು. ಹಾಕುವದಿಲ್ಲ,' ಹಾಗಂತ ವಿಚಾರ ಮಾಡಿ, ಇವಳ ಹತ್ತಿರವೂ ನುಗ್ಗಿಕೆರೆ ಹನುಮಪ್ಪನ ಮೇಲೆ ಆಣೆ ಪ್ರಮಾಣ ಹಾಕಿಸಿ MPhil ಮಾಡಲು ಅನುಮತಿ ಕೊಟ್ಟರು.

ಜೈ ಗುರುವೇ! ಅಂತ MPhil ಸೇರಿಕೊಂಡಳು. ರಾಜಾ ಎಲ್ಲಿ ಹೋದನೋ ಏನೋ. ಪ್ರಪೋಸ್ ಮಾತ್ರ ಮಾಡಲೇ ಇಲ್ಲ. ಯಾರೋ ಹೇಳಿದರು ಕೆಲಸದ ಮೇಲೆ ಫಾರಿನ್ನಿಗೆ ಹೋಗಿದ್ದಾನೆ. ಎರಡು ವರ್ಷದ ನಂತರವೇ ಬರುತ್ತಾನೆ ಅಂತ. ಒಳ್ಳೆಯದೇ ಆಯಿತು ಅಂದುಕೊಂಡಳು ಹುಡುಗಿ. ರೊಕ್ಕ ಮಾಡಿಕೊಂಡು ಬರುತ್ತಾನೆ. ಬಂದ ಕೂಡಲೇ ಪ್ರಪೋಸ್ ಮಾಡಿಬಿಡುತ್ತಾನೆ. ಸೆಟಲ್ ಆಗಿದ್ದಾನೆ. ರೊಕ್ಕ ಇರುತ್ತದೆ. ತಾಪಡ್ತೋಪ್ ಲಗ್ನ. ಹೀಗೆಲ್ಲಾ ವಿಚಾರ ಮಾಡುತ್ತಾ ಕುಳಿತಳು. MPhil ಎಮ್ಮೆ ಕಾಯಲು ಹೋಯಿತು.

ಹೀಗಿದ್ದಾಗ ಸಡನ್ನಾಗಿ ಒಂದು ಬ್ರೇಕಿಂಗ್ ನ್ಯೂಸ್ ಬಂತು. ನೇರವಾಗಿ, ದಿಟ್ಟವಾಗಿ, ನಿರಂತರವಾಗಿ ಬಂತು. ನ್ಯೂಸ್ ಮಾತ್ರ  ಬ್ರೇಕಿಂಗ್ ಇತ್ತು. ಯಾಕೆಂದರೆ ಇವಳ ಹೃದಯವನ್ನು ಬ್ರೇಕ್ ಮಾಡಿ ಛೋಟೆ ಛೋಟೆ ತುಕಡೆ ತುಕಡೆ ಮಾಡಿಬಿಟ್ಟಿತು. ರಾಜಾನ ಮದುವೆಯಾಗಿಹೋಗಿತ್ತು! ಶಿವಾಯ ನಮಃ! ಟೋಟಲ್ ಶಿವಾಯ ನಮಃ!

ದಿಲ್ ಕೆ ತುಕಡೆ ತುಕಡೆ ಕರ್ಕೆ.......... ಅಂತ ಹಾಡಿಕೊಂಡು ಡಿಗ್ರಿ ಮುಗಿಸಿದಳು. ಮನೆಯವರು ವರಾನ್ವೇಷಣೆಯನ್ನು ಸಮರೋಪಾದಿಯಲ್ಲಿ ಶುರುಮಾಡಿದರು. ಬರೋಬ್ಬರಿ ವರ ಸಿಗಲೇ ಇಲ್ಲ. ಎರಡು ವರ್ಷ ಬಹಳ ಹುಡುಕಿದ ಮೇಲೆ ಒಂದು ಒಳ್ಳೆ ವರ ಸಿಕ್ಕ. ವರನ ವಯಸ್ಸು ಜಾಸ್ತಿಯಾಗಿತ್ತು. ಸುಮಾರು ಮೂವತ್ತನಾಲ್ಕು ವರ್ಷ. ಈಕೆಗೆ ಫುಲ್ ಇಪ್ಪತ್ತೇಳು. ಲೇಟ್ ಅಂತ ಮನೆ ಮಂದಿಗೆ ಆತಂಕ. ಮತ್ತೆ ಸಿಕ್ಕ ವರ ಸ್ಮಾರ್ತರ ಪೈಕಿ. ಇವರೋ ವೈಷ್ಣವರು. ಮೊದಲಿನ ಕಾಲದಲ್ಲಿ ಸ್ಮಾರ್ತರಿಗೆ ಹೆಣ್ಣು ಕೊಟ್ಟರು ಅಂತ ವೈಷ್ಣವರ ಕುಟುಂಬವೊಂದಕ್ಕೆ ಮಠದವರು ಬಹಿಷ್ಕಾರ ಹಾಕಿದ್ದರಂತೆ. ಆ ರಿಸ್ಕ್ ಬೇಡ ಅಂತ ಸೀದಾ ಸ್ವಾಮಿಗಳನ್ನೇ ಕೇಳಿದರು. 'ವೈಷ್ಣವರ ವರ ಸಿಗಲಿಲ್ಲ ನಿಮಗ? ನಮಗ ಹೇಳಿದ್ದ್ರ ನಾವೇ ಹುಡುಕಿ ಕೊಡ್ತಿದ್ದಿವಿ. ನಮ್ಮ ಮಠದಾಗೇ ಬೇಕಾದಷ್ಟು ಮಂದಿ ಆಚಾರ್ ವರಗಳು ಅವ. ಅವರಿಗ್ಯಾರಿಗಾದರೂ ನಿಮ್ಮ ಮಗಳನ್ನು ಕೊಡಬಹುದಿತ್ತು,' ಅಂದುಬಿಟ್ಟರು ಸ್ವಾಮಿಗಳು. ಸ್ವಾಮಿಗಳ ಅಕ್ಕಪಕ್ಕ ಬಾಡಿಗಾರ್ಡಗಳಂತೆ ನಿಂತ ಖರ್ರ್ ಖರ್ರನೆ ಹೊನಗ್ಯಾ ಯಮದೂತರಂತಹ ಆಚಾರಿಗಳನ್ನು ನೋಡಿದ ಈ ಮಂದಿ, 'ಸ್ವಾಮಿಗಳೇ, ವರ ನಿಶ್ಚಯ ಆಗಿಬಿಟ್ಟದ್ರೀ. ಮೊದಲೇ ನಿಮ್ಮ ಕಡೆ ಬರದೇ ತಪ್ಪು ಮಾಡಿದಿವಿ. ಈಗ ಬಂದೇವಿ. ಏನರೆ ಪರಿಹಾರ ಹೇಳರೆಲ್ಲಾ? ಪ್ಲೀಸ್' ಅಂತ ಉದ್ದಂಡ ನಮಸ್ಕಾರ ಸಕುಟುಂಬ ಸಮೇತ ಹಾಕಿಬಿಟ್ಟರು. 'ಹೂಂ! ಸ್ಮಾರ್ತ ಮಂದಿಗೆ ಮಾತು ಕೊಟ್ಟುಬಿಟ್ಟೀರಿ ಅಂತಾತು. ಕೊಟ್ಟ ಮಾತು ಬಿಟ್ಟ ಬಾಣ ಹಿಂದ ಬರಂಗಿಲ್ಲ ನೋಡ್ರೀ. ನೀವು ಒಂದು ಕೆಲಸಾ ಮಾಡ್ರೀ,' ಅಂತ ಸ್ವಾಮಿಗಳು ಮಾತು ನಿಲ್ಲಿಸಿದರು. 'ಉಳಿದ ವಿಷಯ ಎಲ್ಲಾ ನಮ್ಮ ಮಠದ ಖಚಾಂಚಿ ಮಾಹುಲಿ ಆಚಾರ್ರು ಹೇಳ್ತಾರ. ಅವರು ಹೇಳಿದ್ದು ಮಾಡಿಬಿಡ್ರೀ. ಎಲ್ಲಾ ಸರಿಯಾಗ್ತದ. ಈಗಿನ ಕಾಲದಾಗ ಎಲ್ಲಿ ಬಹಿಷ್ಕಾರ ಅದು ಹಾಕಿಕೋತ್ತ ಕೂಡೋಣ?' ಅಂದವರೇ ಉತ್ತತ್ತಿ ಪ್ರಸಾದ ಕೊಟ್ಟು ಆಶೀರ್ವದಿಸಿ ಕಳಿಸಿದರು.

ನೋಡಲು ಥೇಟ್ ಸೈಬೇರಿಯನ್ ಹುಲಿ ಮಾದರಿ ಇದ್ದ ಮಾಹುಲಿ ಆಚಾರ್ರನ್ನು ಹೋಗಿ ನೋಡಿದರೆ ಅವರು ವಿಚಿತ್ರವಾಗಿ ಹಲ್ಲು ಕಿರಿದು, 'ಎಷ್ಟು ಅಂತ ಬರೆದುಕೊಳ್ಳಲಿ?'  ಅಂತ ಕೇಳಿದರು. ಇವರಿಗೆ ಗೊತ್ತಾಗಿಯೇ ಹೋಯಿತು. ಮಠದ ಖಚಾಂಚಿ ಮಾಹುಲಿ ಮಹಾ ಹುಲಿಯಂತೆ ಬೇಟೆಗೆ ರೆಡಿಯಾಗಿದೆ ಅಂತ. ಒಂದೆರೆಡು ಲಕ್ಷ ರೂಪಾಯಿಗಳನ್ನು ಕಿತ್ತಿಕೊಂಡೇ ಬಿಡುತ್ತದೆ ಅಂತ ಖಾತ್ರಿಯಾಯಿತು. ಮಠದ ಕಾಣಿಕೆ ಲೆಕ್ಕಾಚಾರ ಅಂದರೆ footpath ಮೇಲಿನ ವ್ಯಾಪಾರಿಗಳ ಜೊತೆ ಚೌಕಾಶಿ ಮಾಡಿದಂತೆಯೇ. ಇವರು ಇಪ್ಪತ್ತು ಸಾವಿರದಿಂದ ಶುರುಮಾಡಿದರು. ಮಾಹುಲಿ ಆಚಾರ್ರು ಅಂತೂ ಒಂದು ಲಕ್ಷಕ್ಕೆ ಒಪ್ಪಿದರು. ಕೇವಲ ಅರವತ್ತು ಸಾವಿರಕ್ಕೆ ಲೆಕ್ಕ ಕೊಟ್ಟರು. ಯಾಕೆ ಅಂತ ಕೇಳಿದರೆ 'income tax ಮಂದಿದು ಭಾಳ ಪ್ರಾಬ್ಲಮ್ ರೀ. ರಾಯರ ವೃಂದಾವನ ಸುದಾ ಬಿಡದs ಎಲ್ಲಾ ಕಡೆ ಹುಡುಕ್ಯಾಡಿ ಬಿಡ್ತಾರ. ರಾಮನ ಲೆಕ್ಕ ಕೃಷ್ಣನ ಲೆಕ್ಕ ಬರಿಬೇಕು ನೋಡ್ರಿ,' ಅನ್ನುತ್ತ ತಮ್ಮ ಉದ್ದನೆಯ ಚಂಡಿಕೆಯನ್ನು ನೀವಿಕೊಂಡು, ಚಂಡಿಕೆಯನ್ನು ನೀವಿದ ಕೈಯನ್ನು ಮೂಸಿ ನೋಡಿಕೊಂಡರು. ಎಲ್ಲರೂ ಎಣ್ಣೆ ಹಾಕಿ ಕೂದಲು ಬಾಚಿದರೆ ಮಾಹುಲಿ ಆಚಾರ್ರು ತುಪ್ಪ ಹಾಕಿ ಚಂಡಿಕೆ ಕಟ್ಟುತ್ತಾರೆ. ಅದು ಅವರ ಸ್ಪೆಷಾಲಿಟಿ. ರೊಕ್ಕ ತೊಗೊಂಡು, ರಸೀದಿ ಕೊಟ್ಟು, 'ಎಲ್ಲಾ ಒಳ್ಳೆದಾಗಲಿ. ಸ್ಮಾರ್ತರ ಹುಡುಗನ ಜೊತೆಗೇ ಲಗ್ನ ಆಗ್ಲಿ. ಲಗ್ನಾದ ಮೇಲೆ ಮಠಕ್ಕ ಕರಕೊಂಡು ಬರ್ರಿ. ವೈಷ್ಣವರ ಮಠ ಆದರೇನಾತು? ಎಲ್ಲರೂ ಬರಬಹುದು,' ಅಂದವರೇ ಓಬ್! ಅಂತ ಜೋರಾಗಿ ತೇಗಿದರು. ಊಟ ಗಡದ್ದಾಗಿತ್ತು ಅಂತ ಅನ್ನಿಸುತ್ತದೆ.

ಹೀಗೆ ರಾಜಾನ ಕಳೆದುಕೊಂಡ ಹುಡುಗಿಯ ಲಗ್ನ ನಿಶ್ಚಯವಾಗಿತ್ತು. 'ವೈಷ್ಣವರ ಆಚಾರಿ ಸಿಗಲಿಲ್ಲ. ಸ್ಮಾರ್ತರ ಭಟ್ಟ ಬಿಡಲಿಲ್ಲ,' ಅಂತ ಹಾಡು ಗುಣುಗುತ್ತ ರೆಡಿ ಆದಳು ಮೂಕಪ್ರೇಮದ ಮೂಕಿ. ಮದುವೆ ದಿನ ಬಂದೇಬಿಟ್ಟಿತು. ಬಗ್ಗಿದಳು. ಇವಳು ಬಗ್ಗಿದ್ದೇ ಬಗ್ಗಿದ್ದು ಜೋರಾಗಿ ಬಾರಿಸಿದರು. ಅಯ್ಯೋ! ಇವಳು ತಾಳಿ ಕಟ್ಟಿಸಿಕೊಳ್ಳಲು ಬಗ್ಗಿದಳು ಅಂತ. ಮುಹೂರ್ತದ ಸಮಯಕ್ಕೆ ಸರಿಯಾಗಿ ಘಟ್ಟಿಮೇಳ, ಬ್ಯಾಂಡು, ಬಜಂತ್ರಿಗಳನ್ನು ಭರ್ಜರಿ ಬಾರಿಸಿದರು ಅಂತ. ಅಷ್ಟೇ.

ಹೀಗೆ ರಾಜಾನ ಬದಲು ಮತ್ತೊಬ್ಬ ಗಂಡ ಸಿಕ್ಕಿದ್ದ. 'ಲವ್ ಮಾಡಿದವರ ಜೊತೆ ಮದುವೆಯಾಗುವದಿಲ್ಲ. ಮದುವೆಯಾದವರ ಜೊತೆ ಲವ್ ಆಗುವದಿಲ್ಲ,' ಅನ್ನುವ motto ಹೊಂದಿರುವ ಸಂಸ್ಥೆ ಬಹಳ ದೊಡ್ಡದು. ಅದಕ್ಕೆ ವಿಪರೀತ ಜನ ಸದಸ್ಯರು. ಇವಳೂ ಅದೇ ಸಂಸ್ಥೆಯ ಸದಸ್ಯತ್ವ ತೆಗೆದುಕೊಂಡಳು. ಶಿವಾಯ ನಮಃ!

ಆದರೂ ರಾಜಾ ಆಗಾಗ ನೆನಪಾಗುತ್ತಲೇ ಇದ್ದ. ಅದೇನೋ FL ಅಂತೆ. FL ಒಟ್ಟೇ ಮರೆಯುವದೇ ಇಲ್ಲವಂತೆ. 'FL ಅಂದ್ರ ಏನು? Full lapse ಅಂತ ಅರ್ಥೇನು?' ಅಂತ ಕೇಳಿದರೆ ವಿಪರೀತ ರೈಸ್ ಆಗಿ, 'ಅಯ್ಯೋ! FL ಅಂದ್ರ first love ಅಂತ. first love ಯಾರೂ ಎಂದೂ ಮರಿಲಿಕ್ಕೆ ಸಾಧ್ಯವಿಲ್ಲ!' ಅಂತ ದೊಡ್ಡ ಲೆಕ್ಚರ್ ಕೊಟ್ಟುಬಿಡುತ್ತಾರೆ. ಇವಳದ್ದೂ ಅದೇ ಕೇಸ್.

ಈ FL ಗಿರಾಕಿ ತನ್ನ ರಾಜಾನ ನೆನಪನ್ನು ಅಮರ ಮಾಡಬೇಕು ಅಂದರೆ ಏನು ಮಾಡಬೇಕು? ಅಂತ ತಲೆಕೆಡಿಸಿಕೊಂಡಳು. ಹೊಸದಾಗಿ ಮದುವೆಯಾಗಿರುವ ಹೆಂಡತಿ ತಲೆಕೆಡಿಸಿಕೊಂಡಳು ಅಂತ ಗಂಡ ತಲೆಕೆಡಿಸಿಕೊಂಡ. ಪಾಪ! ಹನಿಮೂನಲ್ಲೇ ಇಬ್ಬರ ತಲೆಯೂ ಕೆಟ್ಟು ಫುಲ್ ಮಟಾಶ್!

ಇವಳು ಅಷ್ಟು ತಲೆಕೆಡಿಸಿಕೊಂಡಿದ್ದಕ್ಕೆ ಒಂದು ಅದ್ಭುತ ಐಡಿಯಾ ಹೊಳೆಯಿತು. ಅದೇ ಕೇಕ್ ಮಾಡುವದು. ಹೇಗೂ ರಾಜಾನಿಗೆ ಕೇಕ್ ತುಂಬಾ ಇಷ್ಟ ಅಂತ ಗೊತ್ತಿತ್ತು. ಮೊಟ್ಟೆ ಹಾಕಿರುತ್ತಾರೆ ಅಂತ ಆತ ಆದನ್ನು ತಿನ್ನುತ್ತಿರಲಿಲ್ಲ. ಅವನನ್ನೇ ಮದುವೆಯಾಗಿದ್ದರೆ ಮೂರೂ ಹೊತ್ತು eggless ಕೇಕ್ ಮಾಡಿ ಹಾಕಲೂ ರೆಡಿ ಇದ್ದಳು. ರಾಜಾನ ನೆನಪನ್ನು ಅಮರವಾಗಿಡಬೇಕು ಅಂತ ಪ್ರತಿ ವರ್ಷ ರಾಜಾನ ಬರ್ತಡೇ ದಿನ eggless ಕೇಕ್ ಮಾಡಬೇಕು. ಮಾಡುತ್ತೇನೆ ಅಂತ ಒಂದು ನಿಶ್ಚಯ ಮಾಡಿಕೊಂಡೇ ಹನಿಮೂನ್ ಮುಗಿಸಿ ಮರಳಿದ್ದಳು.

ಮನೆಗೆ ಪಾತ್ರೆ, ಪಗಡೆ ಖರೀದಿಸೋಣ. ಬಚ್ಚಲು ಮನೆಗೊಂದೆರೆಡು ಬಕೆಟ್, ಪಾಯಖಾನೆಗೊಂದು ಚಂಬು ಖರೀದಿಸಿ ತರೋಣ ಅಂತ ಗಂಡ ಪೇಟೆಗೆ ಕರೆದುಕೊಂಡು ಹೋದರೆ ಆ ಬಡಪಾಯಿಗೆ ರೋಪ್ ಹಾಕಿ ಕೇಕ್ ಮಾಡುವ ಓವೆನ್ ಖರೀದಿ ಮಾಡಿಸಿಕೊಂಡು ಬಂದಿದ್ದಳು. ಚಂಬಿಗಿಂತ ಮೊದಲು ಓವೆನ್ ತಂದ ದಂಪತಿಗಳು ಯಾರಾದರೂ ಇದ್ದರೆ ಇವರೇ ಇರಬೇಕು.

ಆ ವರ್ಷದಿಂದ ಶುರುವಾಗಿದೆ ನೋಡಿ ಈ egglees ಕೇಕ್ ಮಾಡುವ ಪದ್ಧತಿ. ನಿರಂತರವಾಗಿ ಹದಿನೇಳು ವರ್ಷ ಚಾಚೂ ತಪ್ಪಿಸದೇ ಒಂದು ವೃತದಂತೆ ಮಾಡಿಕೊಂಡು ಬಂದಿದ್ದಾಳೆ. ಎಲ್ಲ ತನ್ನ FL ರಾಜಾನಿಗಾಗಿ. ರಾಜಾ ನನ್ನ ಮುದ್ದು ರಾಜಾ. ಮುದ್ದು ಮಾಡಿದರೆ ಗುದ್ದು ಕೊಟ್ಟೆಯಲ್ಲೋ ರಾಜಾ. ಈ ಸ್ಮಾರ್ತರ ಭಟ್ಟನ ಜೊತೆ ಸಂಸಾರ ಕಷ್ಟ ಕಷ್ಟ. ಸ್ಮಾರ್ತರ ಪದ್ಧತಿಗಳೇ ಬೇರೆ. ಇವಳ ವೈಷ್ಣವರ ಪದ್ಧತಿಗಳೇ ಬೇರೆ. ಏನೋ ಒಂದು ರೀತಿಯಲ್ಲಿ ಸಂಸಾರ ನಡೆಸಿಕೊಂಡು ಬರುತ್ತಿದ್ದಾಳೆ. ವರ್ಷಕ್ಕೊಂದು ಬಾರಿ ರಾಜಾನ ನೆನಪಲ್ಲಿ ಶುದ್ದ ಸಸ್ಯಾಹಾರಿ ಕೇಕ್ ಮಾಡುವದರಲ್ಲಿ ಏನೋ ಒಂದು ರೀತಿಯ ಧನ್ಯತೆಯ ಫೀಲಿಂಗ್.

ಹೀಗೆ ಪ್ರಥಮ ಪ್ರೇಮ ಮೊದಲು ಮೂಕ ಪ್ರೇಮವಾಗಿದ್ದು ಕೊನೆಗೆ ಭಗ್ನಪ್ರೇಮವಾದ ನೆನಪಲ್ಲಿ ಪ್ರತಿವರ್ಷ eggless ಕೇಕ್ ಮಾಡುತ್ತಿದ್ದಾಕೆ ಈಗೇಕೆ ಒಮ್ಮೆಲೇ, 'ಇನ್ನೆಂದೂ ಕೇಕ್ ಮಾಡುವದಿಲ್ಲ. ಮಾಡಿದರೂ eggless ಕೇಕ್ ಮಾತ್ರ ಸುತಾರಾಂ ಮಾಡುವದಿಲ್ಲ,' ಅನ್ನುವಂತಹ ಬಂಡಾಯಕಾರಿ ನಿರ್ಧಾರ ತೆಗೆದುಕೊಂಡಳು? ಕೇಕ್ ಮಾಡುವದಿಲ್ಲ ಅಂದರೆ ಓಕೆ. ಆದರೆ ಆ ಪರಿ ರೋಷಗೊಂಡು, ಅಬ್ಬರಿಸಿ, ಬೊಬ್ಬಿರಿದು, ಅಪ್ತಮಿತ್ರದ ಹುಚ್ಚಿಯಂತಾಗಿ, ಕೇಕ್ ಮಾಡುವ ಓವನ್ ಯಾಕೆ ಕೆಳಗೆ ಒಗೆದು ಚೂರು ಚೂರು ಮಾಡಿ ಹಾಕಿದಳು?

ಇವಕ್ಕೆಲ್ಲ ಉತ್ತರ ಸಿಗುತ್ತದೆ ಕಥೆಯ ಮುಂದಿನ ಭಾಗದಲ್ಲಿ.

****

ಮೊನ್ನೆ ಅವಳ ಶಾಲೆಯ ಸಹಪಾಠಿಗಳ ಒಂದು ಸ್ನೇಹ ಸಮ್ಮಿಲನ ತರಹದ ಸಮಾರಂಭವಾಯಿತು. ಯಾರೋ ಒಬ್ಬವ ಆ ಊರಿನಲ್ಲಿದ್ದ ಸಹಪಾಠಿಗಳೆನ್ನೆಲ್ಲ ಫೇಸ್ಬುಕ್ ಮುಖಾಂತರ ಹುಡುಕಿ, ಎಲ್ಲರನ್ನೂ ಸಂಪರ್ಕಿಸಿ, 'ನಾವೆಲ್ಲ ಶಾಲೆ ಬಿಟ್ಟ ಮೇಲೆ ಭೆಟ್ಟಿಯಾಗಿಯೇ ಇಲ್ಲ. ಇಪ್ಪತ್ತು ವರ್ಷಗಳ ಮೇಲಾಗಿಹೋಯಿತು. ಎಲ್ಲರೂ ಭೆಟ್ಟಿಯಾಗೋಣ. ನಾನು ಎಲ್ಲದರ ವ್ಯವಸ್ಥೆ ಮಾಡುತ್ತೇನೆ. ರೆಗ್ಯುಲರ್ ಮೆನು, ವೆಜ್ ಮತ್ತು ನಾನ್ವೆಜ್, ಇರುತ್ತದೆ. ಬೇಕಾದವರು ಮನೆಯಿಂದ ಕೂಡ ಏನಾದರೂ ಖಾದ್ಯ ಮಾಡಿ ತರಬಹುದು. potluck ತರಹ. ಎಲ್ಲರೂ ಮುದ್ದಾಂ ಬನ್ನಿ. ಎಲ್ಲರೂ ಎಂಜಾಯ್ ಮಾಡೋಣ. ಹಳೆಯ ಸುಂದರ ನೆನಪುಗಳನ್ನು ಮೆಲಕು ಹಾಕೋಣ. ಎಲ್ಲರೂ ಬರಲೇಬೇಕು. ಮಿಸ್ ಮಾಡಬೇಡಿ,'  ಅಂತ ಆಹ್ವಾನ ಕೊಟ್ಟೇಬಿಟ್ಟಿದ್ದ. ಇವಳಿಗೂ ಆಹ್ವಾನ ಬಂದಿತ್ತು. ಹೋಗಲೋ ಬೇಡವೋ ಅಂದುಕೊಂಡಳು. ಆದರೆ ಗೆಳತಿಯರು ಒತ್ತಾಯ ಮಾಡಿದರು. ಅವರ ಆಗ್ರಹಕ್ಕೆ ಒಪ್ಪಿ ಹೂಂ ಅಂದಿದ್ದಳು. ನಂತರ ಅದು ಮರೆತುಹೋಗಿತ್ತು. ನೆನಪೇ ಇಲ್ಲ. ಫುಲ್ ಶಿವಾಯ ನಮಃ!

ಸಮ್ಮಿಲನ ಸಮಾರಂಭದ ದಿನ ಒಂದೆರೆಡು ತಾಸುಗಳ ಮೊದಲು ಗೆಳತಿಯೊಬ್ಬಳು ಫೋನ್ ಮಾಡಿದಾಗಲೇ ನೆನಪಾಗಿದ್ದು. ಫುಲ್ ಮರೆತುಹೋಗಿತ್ತು. ಈಗ ಸಿಕ್ಕಾಪಟ್ಟೆ ಗಡಿಬಿಡಿ. ಸ್ನಾನ ಕೂಡ ಆಗಿರಲಿಲ್ಲ. ಕೆಟ್ಟ ಕೆಮ್ಮಾರಿ ಲುಕ್ಕಿನಲ್ಲಿ ಬಚ್ಚಲು ತಿಕ್ಕುತ್ತ ಕುಳಿತಿದ್ದಳು. ವೀಕೆಂಡ್ ಕೆಲಸ. ಮಾಡಲೇಬೇಕು. ಆಗ ಬಂತು ಗೆಳತಿಯ ಫೋನ್. ಮೊದಲೇ ಕಮಿಟ್ ಆಗಿಬಿಟ್ಟಿದ್ದಾಳೆ. ಕೊನೆಯ ಕ್ಷಣದಲ್ಲಿ ಬರುವದಿಲ್ಲ ಅಂತ ಹೇಳಲು ಆಗುವದಿಲ್ಲ. ಸರಿ ಹೇಗೂ ಇನ್ನೂ ಎರಡು ಘಂಟೆಗಳ ಸಮಯವಿದೆ. ಮತ್ತೆ ಸ್ಥಳ ಕೂಡ ಜಾಸ್ತಿ ದೂರವಿಲ್ಲ. ಹೋದರಾಯಿತು ಅಂದುಕೊಂಡಳು. ಬಚ್ಚಲು ತಿಕ್ಕುವ ಕೆಲಸವನ್ನು ಗಂಡನಿಗೆ ಹಚ್ಚಿದಳು. ತಿಂಗಳಲ್ಲಿ ಮೂರು ಬಾರಿ ಅವನೇ ತಿಕ್ಕುತ್ತಾನೆ. ಇದೊಂದು ವಾರ ಮೈಕೈ ನೋವು ಅಂದಿದ್ದ ಅನ್ನುವ ಕಾರಣಕ್ಕೆ ಇವಳು ತಿಕ್ಕುತ್ತಿದ್ದಳು. ಈಗ ಇವಳು ಸಮಾರಂಭಕ್ಕೆ ಹೋಗಲೇಬೇಕಾಗಿದೆ. ಹಾಗಾಗಿ ಗಂಡ ಬಚ್ಚಲು ತಿಕ್ಕಲೇಬೇಕಾಗಿದೆ. ಅವನ ಪ್ರಾರಬ್ಧ!

ಆವಾಗ ಮತ್ತೊಂದು ಲಫಡಾ ಆಯಿತು. ಸಮಾರಂಭಕ್ಕೆ ಹೋಗಲೇನೋ ಇವಳು ರೆಡಿ. ಆದರೆ potluck ಕೂಡ ಇದೆ ಅಂತ ಹೇಳಿದ್ದು ಈಗ ನೆನಪಾಯಿತು. 'ಹೆಚ್ಚಿನವರು ಏನಾದರೂ ಖಾದ್ಯ ಮಾಡಿ ತಂದೇತಂದಿರುತ್ತಾರೆ. ನಾನು ಬರಿಗೈಯಲ್ಲಿ ಹೋದರೆ ಸರಿಯಾಗುವದಿಲ್ಲ. ಏನಾದರೂ ಮಾಡೋಣ ಅಂದರೆ ಟೈಮ್ ಇಲ್ಲ. ಸ್ನಾನವಾಗಬೇಕು. ನಂತರ ಶೃಂಗಾರವಾಗಬೇಕು. ಹೀಗಿದ್ದಾಗ ಖಾದ್ಯ ಮಾಡುವದು ಹೇಗೆ? ಏನು ಮಾಡಲಿ?' ಅಂತ ಚಿಂತಿಸುತ್ತ ತಿಕ್ಕುವ ಬಚ್ಚಲನ್ನು ಬಿಟ್ಟು ಅಡುಗೆಮನೆ ಕಡೆ ಬಂದಳು. ಆಕಡೆ ಈಕಡೆ ನೋಡಿದಳು. ತಂಗುಳ ಪೆಟ್ಟಿಗೆ ಉರ್ಫ್ ಫ್ರಿಜ್ ತೆಗೆದಳು. ತಂಗುಳ ಪೆಟ್ಟಿಗೆಯಲ್ಲಿ ತಂಗುಳನ್ನ ತಂಪಾಗಿ ಕೂತಿತ್ತು. ಐಡಿಯಾ ಬಂತು. ಐಡಿಯಾ ಬಂದ ಖುಷಿಗೆ, YES! ಅಂತ ಉದ್ಗರಿಸಿದಳು. 'ತಂಗುಳನ್ನಕ್ಕೆ ಒಗ್ಗರಣೆ ಹಾಕಿಬಿಟ್ಟರಾಯಿತು. stylish ಆಗಿ ಚಿತ್ರಾನ್ನ ಅಂದುಬಿಟ್ಟರಾಯಿತು. ಅಲ್ಲಿ ಸಮಾರಂಭದಲ್ಲಿ ಯಾರಿಗೆ ಗೊತ್ತಾಗುತ್ತದೆ ನಾನು ತಂಗುಳನ್ನಕ್ಕೆ ಒಗ್ಗರಣೆ ಹಾಕಿ ತಂಗುಳು ಚಿತ್ರಾನ್ನ ಮಾಡಿಕೊಂಡು ಬಂದಿದ್ದೇನೆ ಅಂತ? ಎಲ್ಲರೂ ಗಪಾಗಪಾ ಮುಕ್ಕುತ್ತಾರೆ. ಒಗ್ಗರಣೆಯೊಂದು ಬರೋಬ್ಬರಿ ಬಿದ್ದರೆ ಸಾಕು. ನಾನಂತೂ ಚಿತ್ರಾನ್ನ ತಿನ್ನುವದಿಲ್ಲ. ಅದೇ ಸರಿ,' ಅಂದುಕೊಂಡವಳೇ ಫ್ರಿಜ್ಜಿನಿಂದ ತಂಗುಳನ್ನದ ಭಾಂಡಿ ತೆಗೆದವಳೇ ಅನ್ನವನ್ನು ಅಕ್ರಮ ಗಣಿಗಾರಿಕೆ ಮಾಡಿದ ಮಾದರಿಯಲ್ಲಿ ಕೆಬರತೊಡಗಿದಳು. ಅನ್ನ ತಳ ಹತ್ತಿತ್ತು. ಚೂಪಾದ ಚಾಕುವಿನಿಂದ ಕರಪರಾ ಅಂತ ಕೆರೆಕೆರೆದು ಅನ್ನವನ್ನು ತೆಗೆದಳು. ಒಗ್ಗರಣೆ ಹಾಕಿಯೇಬಿಟ್ಟಳು. ಅವಳಿಗೆ ಅಡುಗೆ ಬರುವದು ಅಷ್ಟರಲ್ಲೇ ಇದೆ. ಹೀಗೆ ತಯಾರಾದ ಒಗ್ಗರಣೆ ಅನ್ನವನ್ನು ಚಂದವಾದ ಡಬ್ಬಿಗೆ ಹಾಕಿ, ಮೇಲಿಂದ ಕೊತ್ತಂಬರಿ, ಗೋಡಂಬಿಗಳಿಂದ ಶೃಂಗಾರ ಮಾಡಿದಳು. ಅನ್ನ ತಂಗುಳನ್ನವಾಗಿದ್ದರೂ ಶೃಂಗಾರ ಜೋರಾಗಿತ್ತು. ಅದನ್ನೇ ತಾನೇ ಎಲ್ಲರೂ ನೋಡುವದು. ಚಿತ್ರಾನ್ನ ರೆಡಿ!

ಚಿತ್ರಾನ್ನದ ಡಬ್ಬಿ ತೆಗೆದುಕೊಂಡು, ಗೆಳತಿಯರ ಜೊತೆ ಹಳೆಯ ಸಹಪಾಠಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಹೋದಳು. ಯಾವದೋ ದೊಡ್ಡ ಹಾಲಿನಲ್ಲಿ ಮಾಡಿದ್ದರು. ಸುಮಾರು ಜನ ಕೂಡಿದ್ದರು. ಅದೇ ಊರಿನ ಒಂದಿಷ್ಟು ಜನ, ಸಮಾರಂಭಕ್ಕೆ ಅಂತಲೇ ಬೇರೆ ಊರಿನಿಂದ ಬಂದ ಜನ ಎಲ್ಲ ಇದ್ದರು. ವಿದೇಶಗಳಿಂದ ದೇಶಕ್ಕೆ ಬಂದವರೂ ಆ ಸಮಾರಂಭದ ಬಗ್ಗೆ ತಿಳಿದು ಅವರೂ ಬಂದಿದ್ದರು. ಸುಮಾರು ಐವತ್ತು ಜನರಾಗಿದ್ದರು. ಸುಮಾರು ಮೂವತ್ತು ವರ್ಷಗಳ ಮೇಲೆ ನಂತರ ಭೇಟಿಯಾದ ಹಳೆಯ ಗೆಳೆಯರು ಮತ್ತು ಗೆಳತಿಯರು. ಹಳೆ ಸಹಪಾಠಿಗಳ ಸ್ನೇಹ ಸಮ್ಮಿಲನ.

ಅವಳು ಒಂದನ್ನು ಮಾತ್ರ expect ಮಾಡಿರಲೇ ಇಲ್ಲ. ಈ ಸಮಾರಂಭದಲ್ಲಿ ರಾಜಾ ಸಿಗಬಹುದು ಅಂತ ತಲೆಗೆ ಬಂದಿರಲೇ ಇಲ್ಲ. ಯಾಕೋ ಏನೋ. ಸಮಾರಂಭವನ್ನೇ ಮರೆತುಬಿಟ್ಟಿದ್ದಳು ಅಂದ ಮೇಲೆ ಮೂಕಪ್ರೇಮದ ಕಾಲದ ರಾಜಾ ಎಲ್ಲಿಂದ ನೆನಪಾಗಬೇಕು? ಆದರೆ ರಾಜಾ ಮಾತ್ರ ಅಲ್ಲಿದ್ದ. ಅಷ್ಟೊಂದು ಜನರಿದ್ದರೂ ಆಕೆಯ ಕಣ್ಣಿಗೆ ಬಿದ್ದವನೇ ಅವನು. ಫಸ್ಟ್ ಲವ್ ಅಂದರೆ ಸುಮ್ಮನೆಯೇನು? ಮತ್ತೆ ಹೃದಯ ಗುಟರ್ ಗುಟರ್! ಇವಳನ್ನು ನೋಡಿದ ರಾಜಾ ಕೂಡ ಇವಳಿದ್ದ ಕಡೆಯೇ ಬಂದುಬಿಟ್ಟ. ಮತ್ತೆ ಎದೆ ಬಿಗಿದುಬಂತು. ಜಂಪರ್ ಬಿಗಿಯಾಗಲಿಲ್ಲ. ಯಾಕೆಂದರೆ ಜಂಪರ್ ಹಾಕಿರಲಿಲ್ಲ. ಹಾಕಿದ್ದ ಬ್ರಾ ಮಾತ್ರ excitement ತಡೆಯಲಾಗದೇ ಸಿಕ್ಕಾಪಟ್ಟೆ ಬಿಗಿಯಾಗಿ, ಎಲ್ಲಿ ಹುಕ್ ಮುರಿದುಹೋಗಿ ಶಿವಾಯ ನಮಃ ಆಗಿಹೋಗುತ್ತದೋ ಎನ್ನುವಂತಾಗಿತ್ತು. ಅಷ್ಟರಲ್ಲಿ ರಾಜಾ ಎದುರಿಗೇ ಬಂದು ನಿಂತಿದ್ದ. ಕೈಯಲ್ಲಿ ಊಟದ ಪ್ಲೇಟಿತ್ತು. ಪೂರ್ತಿ ಫುಲ್ ಪ್ಲೇಟ್. ಬಫೆ ಊಟದ ಲೈನಿನಲ್ಲಿ ನಿಂತವ ಪ್ಲೇಟ್ ತುಂಬಿಸಿಕೊಳ್ಳುತ್ತಿದ್ದಾಗ ಇವಳು ಕಂಡಿದ್ದಳು. ಸುಮಾರು ಎಲ್ಲರನ್ನೂ ಮಾತಾಡಿಸಿ ಮುಗಿಸಿದ್ದ ರಾಜಾ. 'ಇವಳನ್ನು ಮಾತಾಡಿಸಿಯೇ ಇಲ್ಲವಲ್ಲ. ಈಗ ಮಾತಾಡಿಸೋಣ,' ಅಂತ ಬಂದಿದ್ದ.

'ಏನವಾ? ಹ್ಯಾಂಗಿದ್ದಿ? ಆರಾಮ್ ಏನು? ಭಾಳ ವರ್ಷ ಆಗಿತ್ತು. ಎಲ್ಲಾರನ್ನೂ ಭೆಟ್ಟಿ ಮಾಡಿ ಭಾಳ ಖುಷಿಯಾತು. ನೀ ಈಗ ಮಾತ್ರ ಬಂದಿಯೇನು?' ಅಂತ ಸಹಜವಾಗಿ ಕೇಳಿದ ರಾಜಾ.

'ರಾಜಾ! ನನ್ನ ರಾಜಾ! ಎದುರಲ್ಲೇ ನಿಂತಿದ್ದಾನೆ. ಮಾತಾಡುತ್ತಿದ್ದಾನೆ. ಇದು ನಿಜವೇ? ಅಥವಾ ಭ್ರಮೆಯೋ?' ಅಂದುಕೊಂಡು ಬೆರಗಾಗಿ ನಿಂತಿದ್ದಳು. ಮಾತೇ ಹೊರಡಲಿಲ್ಲ. ರಾಜಾನೇ ಅವಳನ್ನು ಸಮಾಧಿ ಸ್ಥಿತಿಯಿಂದ ಹೊರತರಬೇಕಾಯಿತು.

'ಏನವಾ? ಎಲ್ಲೆ ಕಳೆದುಹೋದಿ? ನನ್ನ ನೆನಪರ ಅದನೋ ಇಲ್ಲೋ? ಏನ?' ಅಂತ ಅವಳ ಮುಖದ ಮುಂದೆ ಕೈಯಾಡಿಸುತ್ತ, ನಗುತ್ತ ಕೇಳಿದ ರಾಜಾ.

'ಏ, ಇಲ್ಲ. ಹಾಂಗೇನೂ ಇಲ್ಲ. ಎಲ್ಲ ನೆನಪದ. ಭಾಳ ವರ್ಷಾಗಿತ್ತು. ನೋಡೇ ಇರಲಿಲ್ಲ. ಅದಕ್ಕೇ ಹಾಂಗಾತು,' ಅಂದವಳೇ ಮತ್ತೂ ಸ್ವಲ್ಪ ಸೇರಿಸಿದಳು. 'ಎಲ್ಲರನ್ನೂ ನೋಡಿದ ಕೂಡಲೇ ಹೀಂಗೇ ಆಗ್ಲಿಕತ್ತದ ನೋಡು. ಹಳೆ ಗೆಳತಿಯರು, ಗೆಳೆಯರು. ಭಾಳ ವರ್ಷದ ಮೇಲೆ ಸಿಕ್ಕಾರ. ಅದಕ್ಕೇ ಹೀಂಗೆ,' ಅಂತ ಸಣ್ಣದಾಗಿ ಭೋಂಗು ಬಿಟ್ಟಳು. 'ಕೇವಲ ನಿನ್ನ ನೋಡಿದಾಗ ಮಾತ್ರ ಹೀಗಾಯಿತು,' ಅಂತ ಹೇಳಿಬಿಟ್ಟರೆ ಲಫಡಾ ಆಗುತ್ತದೆ ಅಂತ ಗೊತ್ತಿದೆ ಅವಳಿಗೆ.

ರಾಜಾ ಮಾತು ಮುಂದುವರೆಸಿದ. 'ನೀ ಏನು ಅಡಿಗಿ ಮಾಡಿಕೊಂಡು ಬಂದೀ? ಎಲ್ಲಾರೂ ಮಸ್ತ ಮಸ್ತ ಅಡಿಗಿ ಮಾಡಿಕೊಂಡು ಬಂದಾರ. ನಾನಂತೂ ಎಲ್ಲಾರ ಮನಿ ಅಡಿಗಿ, ಹೋಟೆಲ್ಲಿನವರ ಅಡಿಗಿ ಎಲ್ಲ ಹಾಕ್ಕೊಂಡು ಬಂದೆ ನೋಡವಾ. ಪ್ಲೇಟ್ ನೋಡು ಹ್ಯಾಂಗ ತುಂಬ್ಯದ,' ಅಂತ ಪ್ಲೇಟ್ ತೋರಿಸಿದ. ಚಿತ್ರ ವಿಚಿತ್ರ ಭಕ್ಷ್ಯಗಳಿದ್ದವು ರಾಜಾನ ಪ್ಲೇಟಿನಲ್ಲಿ.

ರಾಜಾ ಬರುತ್ತಿದ್ದಾನೆ ಅಂತ ಗೊತ್ತಾಗಿದ್ದರೆ ಅಥವಾ ನಿರೀಕ್ಷೆಯಾದರೂ ಇದ್ದಿದ್ದರೆ ಮುದ್ದಾಂ eggless ಕೇಕನ್ನೇ ಮಾಡಿಕೊಂಡು ಬರುತ್ತಿದ್ದಳು. ಈಗ ನೋಡಿದರೆ ತಂಗುಳನ್ನದ ಚಿತ್ರಾನ್ನ ಮಾಡಿಕೊಂಡು ಬಂದುಬಿಟ್ಟಿದ್ದಾಳೆ. ರಾಜಾ ಬೇರೆ ಮನೆಯಿಂದ ಏನು ಮಾಡಿಕೊಂಡು ಬಂದಿರುವೆ ಅಂತ ಕೇಳುತ್ತಿದ್ದಾನೆ. eggless ಕೇಕ್ ಇಲ್ಲದಿದ್ದರೂ ಮೂಕಪ್ರೇಮದ ಕಾಲದ ದಿಲ್ಬರ್ ಜಾನಿ ರಾಜಾನಿಗೆ ಮಾಡಿಕೊಂಡುಬಂದಿದ್ದ ಚಿತ್ರಾನ್ನವನ್ನಾದರೂ ತಿನ್ನಿಸಲೇಬೇಕೆಂದುಕೊಂಡಳು.

'ಬಾರಪಾ, ನಾ ಏನು ಅಡಿಗಿ ಮಾಡಿ ತಂದೇನಿ ಅಂತ ತೋರಸ್ತೀನಿ. ಬಾ,' ಅಂತ ಅವನನ್ನು ಕರೆದುಕೊಂಡು ಮತ್ತೆ ಬಫೆ ಟೇಬಲ್ ಕಡೆ ನಡೆದಳು. ಕೈಹಿಡಿದು ಕರೆದುಕೊಂಡು ಹೋಗಿಬಿಡೋಣ ಅಂತ ಬಹಳ ಅನ್ನಿಸುತ್ತಿತ್ತು. ಆದರೆ ಆಭಾಸವಾದೀತು ಅಂತ ಹಾಗೇ ನಡೆದಳು. ಅವಳ ಹಿಂದೆ ರಾಜಾ ಹೆಜ್ಜೆ ಹಾಕಿದ.

ಬಫೆ ಟೇಬಲ್ ಮೇಲೆ ಎಲ್ಲ ತರಹದ ಖಾದ್ಯಗಳು ಕೂತಿದ್ದವು. ಇವಳ ಚಿತ್ರಾನ್ನದ ಡಬ್ಬಿಯೂ ಇತ್ತು. ಯಾರೂ ತೆಗೆದುಕೊಂಡ ಹಾಗೆ ಕಾಣಲಿಲ್ಲ. ಎಲ್ಲೋ ಒಂದೆರೆಡು ಚಮಚ ತೆಗೆದುಕೊಂಡಿರಬಹುದು ಅಷ್ಟೇ. ಸ್ನೇಹಿತರ ಸಮ್ಮಿಲನದಂತಹ ದೊಡ್ಡ ಮೇಜವಾನಿಗೆ ಒಗ್ಗರಣೆ ಅನ್ನ ತೆಗೆದುಕೊಂಡು ಹೋದರೆ ಮತ್ತೇನಾಗುತ್ತದೆ? ನೀವು ಅದಕ್ಕೆ ಚಿತ್ರಾನ್ನ ಅಂತಾದರೂ ಅನ್ನಿ ವಿಚಿತ್ರಾನ್ನ, ಸಚಿತ್ರಾನ್ನ ಏನು ಬೇಕಾದರೂ ಅನ್ನಿ. ಮೇಜವಾನಿಯಲ್ಲಿ ಅದರ ಸ್ಥಾನ ಬಹಳ ಕೆಳಗೆ. ಪಾಪ! ಒಗ್ಗರಣೆ ಅನ್ನ.

'ಹೂಂ! ಏನು ಅಡಿಗಿ ಮಾಡಿಕೊಂಡು ಬಂದಾರ ನಮ್ಮ ಬಾಯಾರು?' ಅಂತ ತುಂಟನಂತೆ ಕೇಳಿದ ರಾಜಾ.

'ಎಷ್ಟು ಮಸ್ತ ಮಾತಾಡುತ್ತಾನೆ. ಶಾಲೆಯಲ್ಲಿ ಚುಪ್ ಚಾಪ್ ಗಪ್ ಕೂಡ್ತಿತ್ತು ಈ ನನ್ನ ಮುದ್ದು ಆಚಾರಿ,' ಅಂದುಕೊಂಡು ಮನದಲ್ಲೇ ಕಿಸಿಕಿಸಿ ನಕ್ಕಳು.

'ಇಲ್ಲಿ ಬಾರೋ. ಬಾ ಇಲ್ಲೆ. ಇಲ್ಲಿ ಅದ ನೋಡು ನಾ ಮಾಡಿಕೊಂಡು ಬಂದ ಅಡಿಗಿ. ಬಡಿಸಲೇನು?' ಅಂತ ಕೇಳಿದಳು. ಪುರಾತನ ಪ್ರೇಮಿ ರಾಜಾನಿಗೆ ತನ್ನ ಕೈಯಾರೆ ಬಡಿಸಬೇಕು ಅಂತ ಆಸೆ, ಮಹದಾಸೆ. ಪ್ರೇಮಿಗೆ ಬಡಿಸುವಾಸೆ, ಗಂಡನಿಗೆ ಬಡಿಯುವಾಸೆ. ಶಿವನೇ ಶಂಭುಲಿಂಗ!

'ಏನು ಮಾಡಿಕೊಂಡು ಬಂದಿ ಅದನ್ನು ಹೇಳವಾ?' ಅಂದ ರಾಜಾ.

'ಚಿತ್ರಾನ್ನ,' ಅಂದಳು. ಹೇಳುವಾಗ ಧ್ವನಿಯಲ್ಲಿ ಅಳುಕು.  ಇಂಟರ್ವ್ಯೂನಲ್ಲಿ ಮಾರ್ಕ್ಸ್ ಕೇಳಿದಾಗ ಥರ್ಡ್ ಕ್ಲಾಸ್ ಮಾರ್ಕ್ಸ್ ಅಂತ ಹೇಳಬೇಕಾದರೆ ಆಗುವಂತಹ ಅಳುಕು ಮತ್ತು ಸಂಕೋಚ.

ಈ ರಾಜಾನೋ ಶುದ್ಧ ಬಯಲುಸೀಮೆ ಆಚಾರಿ. ಆಕಡೆ ಮಂದಿ ಶುದ್ಧ ಜವಾರಿ ಭಾಷೆಯಲ್ಲಿ 'ಒಗ್ಗರಣಿ ಅನ್ನ' ಅನ್ನುತ್ತಾರೆ. ಚಿತ್ರಾನ್ನ, ಪತ್ರಾನ್ನ ಎಲ್ಲ ಗೊತ್ತಿಲ್ಲ ಅವರಿಗೆ. ಹಾಗಾಗಿ ರಾಜಾನಿಗೆ ಇವಳು ಚಿತ್ರಾನ್ನ ಅಂದಿದ್ದು ಸರಿಯಾಗಿ ಕೇಳಿಸಲಿಲ್ಲವೋ ಅಥವಾ ಕೇಳಿಸಿದರೂ ತಿಳಿಯಲಿಲ್ಲವೋ ಗೊತ್ತಿಲ್ಲ. ಅವನು ಮತ್ತೆ, 'ಹ್ಯಾಂ? ಏನೂ?' ಅಂತ ಸ್ವಲ್ಪ ಜೋರಾಗಿ ಕೇಳಿದ. ಅದು ಇವಳಿಗೆ ಹೆಬ್ಬುಲಿ ಬೊಬ್ಬಿರಿದಂತೆ ಕೇಳಿಸಿತು. ಹೃದಯ ಬಾಯಿಗೇ ಬಂತು.

ಮತ್ತೆ 'ಚಿತ್ರಾನ್ನ!' ಅಂದಳು. ಮತ್ತೆ ಅರ್ಥವಾಗದೇ ಅಬ್ಬರಿಸಿಬಿಟ್ಟಾನು ಅಂತ ಕೊನೆಯಲ್ಲಿ ಸಣ್ಣ ಧ್ವನಿಯಲ್ಲಿ, 'ಒಗ್ಗರಿಣಿ ಅನ್ನ' ಅಂತಲೂ ಹೇಳಿದಳು.

'ಹೋಗ್ಗೋ ಇಕಿನ! ಹೋಗಿ ಹೋಗಿ ಒಗ್ಗರಣಿ ಅನ್ನ ಮಾಡಿಕೊಂಡು ಬಂದು ಅದೇನೋ ಚಿತ್ರಾನ್ನ ಪತ್ರಾನ್ನ ಅಂತ ಡೌಲು ಬಡೀಲಿಕತ್ತಾಳ,' ಅಂತ ಈಗ ರಾಜಾನಿಗೆ ಬರೋಬ್ಬರಿ ತಿಳಿಯಿತು. ನಕ್ಕ. ಅಸಡ್ಡೆಯ ನಗೆ. ಪಾಪ. ಬಾಯ್ಬಿಟ್ಟು ಹೇಳಲಿಲ್ಲ. 'ಹೋಗಿ ಹೋಗಿ ದರಿದ್ರ ಒಗ್ಗರಣಿ ಅನ್ನ ಮಾಡಿಕೊಂಡು ಬಂದೀಯಾ? ನಿನಗ ದೊಡ್ಡ ನಮಸ್ಕಾರ' ಅನ್ನುವ ಅವನ ಲುಕ್ ಇವಳು ಮಿಸ್ ಮಾಡಿಕೊಳ್ಳುವಂತೆ ಇರಲಿಲ್ಲ. ಇವಳು ಪೆಚ್ಚಾದಳು. ಪಿಚ್ಚೆನ್ನಿಸಿತು. ಸಮಾರಂಭವನ್ನು ಮರೆತುಬಿಟ್ಟಿದ್ದಕ್ಕೆ ತನ್ನನ್ನೇ ತಾನು ಶಪಿಸಿಕೊಂಡಳು. ಗಡಿಬಿಡಿಯಲ್ಲಿ ತಂಗಳನ್ನಕ್ಕೆ ಒಗ್ಗರಣೆ ಹಾಕಿಕೊಂಡು ಬಂದರೆ ಇಲ್ಲಿ ಪುರಾತನ ಪ್ರೇಮಿ ರಾಜಾ ಸಿಕ್ಕುಬಿಡಬೇಕೇ? ಸಿಕ್ಕವ ಮನೆಯಿಂದ ಏನು ಮಾಡಿಕೊಂಡು ತಂದಿರುವೆ ಅಂತ ಮತ್ತೆ ಮತ್ತೆ ಕೇಳಬೇಕೇ? ಎಲ್ಲ ಕೂಡಿ ರಾಮ ರಾಡಿ.

ಅದರೂ formality ಗೆ ಎಂಬಂತೆ, 'ಹಾಕವಾ, ಒಂದೆರೆಡು ಚಮಚೆ ನೀ ಮಾಡಿಕೊಂಡ ಒಗ್ಗರಣಿ ಅನ್ನಾನೂ ಹಾಕು. ತಿಂದು ವಾತಾಪಿ ಜೀರ್ಣೋಭವ ಅಂದುಬಿಡ್ತೇನಿ,' ಅಂದ. ಸುಮ್ಮನೆ ಫಾರ್ಮಾಲಿಟಿಗೆ ಹೇಳುತ್ತಿದ್ದಾನೆ ಅಂತ ಅವಳಿಗೂ ಗೊತ್ತಾಯಿತು. ಆವಾಗ ಏನೋ ನೆನಪಾಯಿತು. ಮತ್ತೊಂದು ಲಫಡಾ ಆಯಿತು. ಚಿತ್ರಾನ್ನಕ್ಕೆ ಬರೋಬ್ಬರಿ ಖಡಕ್ ರುಚಿ ಮತ್ತು ವಾಸನೆ ಬರಲಿ ಅಂತ ಜಬರ್ದಸ್ತಾಗಿ ಉಳ್ಳಾಗಡ್ಡೆ ಮತ್ತು ಬಳ್ಳೊಳ್ಳಿ ಹಾಕಿಬಿಟ್ಟಿದ್ದಳು. ರಾಜಾ ಮೊದಲೇ ಆಚಾರಿ. ಕೇಕಿನಲ್ಲಿ ಮೊಟ್ಟೆಯಿರುತ್ತದೆ ಅನ್ನುವ ಕಾರಣಕ್ಕೆ ಕೇಕ್ ಕೂಡ ತಿನ್ನದಂತಹ ಕಟ್ಟರ್ ಆಚಾರಿ ಬ್ರಾಹ್ಮಣ. ಅಂತವನು ಈಗ ದಬಾಯಿಸಿ ಉಳ್ಳಾಗಡ್ಡೆ ಮತ್ತು ಬಳ್ಳೊಳ್ಳಿ ಹಾಕಿದ ಚಿತ್ರಾನ್ನವನ್ನು ತಿನ್ನುತ್ತಾನೆಯೇ? ಅವನಿಗೆ ಅದನ್ನು ಕೊಡುವದು ಸರಿಯೇ? ಆಚಾರ್ರಿಗೆ ಅಂತದ್ದನ್ನು ತಿನ್ನಿಸಿದರೆ ಪಾಪ ಬರುವದಿಲ್ಲವೇ?

'ರಾಜಾ, ಒಂದು ಮಾತು. ಇದರಾಗ ಉಳ್ಳಾಗಡ್ಡಿ, ಬಳ್ಳೊಳ್ಳಿ ಎಲ್ಲಾ ಅದ. ನೀ ಬರ್ತಿ ಅಂತ ಗೊತ್ತಿರಲೇ ಇಲ್ಲ. ಗೊತ್ತಿದ್ದರೆ ಏನರೆ ಬ್ಯಾರೆ ಮಾಡಿಕೊಂಡು ಬರ್ತಿದ್ದೆ. ಇಲ್ಲಾ at least ಉಳ್ಳಾಗಡ್ಡಿ, ಬಳ್ಳೊಳ್ಳಿ ಹಾಕದೇ ಮಾಡಿಕೊಂಡು ಬರ್ತಿದ್ದೆ. ಗೊತ್ತೇ ಇರಲಿಲ್ಲ. ನೀವು ಆಚಾರ್ರು. ಇದನ್ನೆಲ್ಲಾ ....ತಿಂತೀರಿ?' ಅಂತ ಪೇಚಾಡಿಕೊಂಡಳು.

ರಾಜಾನಿಗೆ ಪಾಪ ಎನ್ನಿಸಿರಬೇಕು. 'ಈಗ ಎಲ್ಲಾ ನಡಿತದ. ಮನಿ ಬಿಟ್ಟು ಇಂತಾ ಶಹರದಾಗ ಇದ್ದ ಮ್ಯಾಲೆ ಎಲ್ಲಿ ಆಕಾಲದ ಪದ್ಧತಿಯೆಲ್ಲಾ ಮಾಡಲಿಕ್ಕೆ ಆಗ್ತದ? ಈಗ ಎಲ್ಲಾ ಓಕೆ. ಒಂದೇ ಚಮಚ ಹಾಕು ಸಾಕು,' ಅಂದ. ಈ ಪುಣ್ಯಾತ್ಗಿತ್ತಿಯ ಚಿತ್ರಾನ್ನದ ಚಿತ್ರಹಿಂಸೆಯಿಂದ ಪಾರಾದರೆ ಸಾಕಾಗಿದೆ ಅವನಿಗೆ.

ಸಂಕೋಚಪಡುತ್ತಲೇ ಒಂದೆರೆಡು ಚಮಚ ಒಗ್ಗರಣೆ ಅನ್ನವನ್ನು ಹಾಕಿದಳು. ಮೂಕಪ್ರೇಮದ ಕಾಲದ ಕುರುಡು ಪ್ರೇಮಿ ಅಂತ ಮೇಲಿದ್ದ ಗೋಡಂಬಿಗಳನ್ನೇ ಜಾಸ್ತಿ ಹಾಕಿ ಏನೋ ಮಾನ ಉಳಿಸಿಕೊಂಡಳು. ಚಿತ್ರಾನ್ನ ಬಡ ಭಕ್ಷ್ಯವಾದರೇನು? ಗೋಡಂಬಿ ಶ್ರೀಮಂತರದು. ಅಲ್ಲವೇ?

ಒಂದು ಕಾಲದ ಕಟ್ಟರ್ ಆಚಾರಿ ರಾಜಾ ಈಗ ಉಳ್ಳಾಗಡ್ಡೆ, ಬಳ್ಳೊಳ್ಳಿ ಎಲ್ಲವನ್ನೂ ಕತ್ತರಿಸುತ್ತಾನೆ ಅಂತ ತಿಳಿದ ಮೇಲೆ ಕೇಕ್ ತಿನ್ನುತ್ತಾನೋ ಇಲ್ಲವೋ ಅನ್ನುವದನ್ನು ಕೇಳಬೇಕು ಅಂತ ಅನ್ನಿಸಿತು.

'ರಾಜಾ, ಒಂದು ಮಾತು ಹೇಳು,' ಅಂತ ಪೀಠಿಕೆ ಇಟ್ಟಳು.

'ಏನವಾ ಕೇಳು?' ಅಂತ ಆಹಾರವನ್ನು ಅಗಿಯುತ್ತಲೇ ಮಾತಾಡಿದ. ಅವನ ಬಿಟ್ಟ ಬಾಯಿಯನ್ನು ನೋಡಿದರೆ ಒಳ್ಳೆ ಮಿಕ್ಸಿಯಲ್ಲಿ ಬಗ್ಗಿ ನೋಡಿದಂತಾಯಿತು ಇವಳಿಗೆ. ಆದರೂ ಪುರಾತನ ಪ್ರೇಮಿ ರಾಜಾ. ಎಲ್ಲಾ ಓಕೆ.

'ಕೇಕ್ ತಿಂತಿಯೇನು ಈಗ? ಅಥವಾ ಕೇಕು ಈಗೂ ವರ್ಜ್ಯವೋ?' ಅಂತ ಕೇಳಿದಳು.

'ಕೇಕs?? ಕೇಕ್ ಯಾಕ ತಿನ್ನೋದಿಲ್ಲಾ? ಮಸ್ತ ತಿಂತೇನಿ. ಹಾಕ್ಕೊಂಡು ದಬಾಯಿಸಿ ಕೇಕ್ ಕಟಿತೇನಿ. ನೀಲಗಿರಿ ಬೇಕರಿಗೆ ಹೋದೆ ಅಂದ್ರ ಮುಗೀತು. ಆಮೇಲೆ ಊಟ ಇಲ್ಲ ನೋಡವಾ. ಕೇಕ್ ಅಂದ್ರ ಭಾಳ ಸೇರ್ತದ ನನಗ,' ಅಂದುಬಿಟ್ಟ ರಾಜಾ.

ಇವಳು ಡೀಪ್ ಥಿಂಕಿಂಗ್ ಮೋಡಿಗೆ ಹೋದಳು. ಮತ್ತೆ ಸಮಾಧಿ ಸ್ಥಿತಿ. 'ಈ ಚಿತ್ರಾನ್ನದ ಗಿರಾಕಿ ಹೀಗೇಕೆ ಪದೇಪದೇ ಸಮಾಧಿ ತರಹದ ವಿಚಿತ್ರ ಸ್ಥಿತಿಗೆ ಹೋಗುತ್ತಾಳೆ?' ಅಂತ ರಾಜಾನಿಗೆ ಚಿಂತೆ ಮತ್ತು ಕಿರಿಕಿರಿ.

'ಏ, ಏ, ಇಕಿನ. ಮತ್ತ ಎಲ್ಲೆ ಕಳಕೊಂಡಿ?' ಅಂತ ಜೋರಾಗಿ ಮಾತಾಡುತ್ತ ಮುಖದ ಮುಂದೆ ಕೈಯಾಡಿಸಿದ.

'ಏನಿಲ್ಲ, ಏನಿಲ್ಲ,' ಅನ್ನುತ್ತ ಇವಳು ಸಮಾಧಿ ಸ್ಥಿತಿಯಿಂದ ಹೊರಬಂದಳು.

'ಯಾಕ ಕೇಳಿದಿ, ನಾನು ಕೇಕ್ ತಿಂತೇನೋ ಇಲ್ಲೋ ಅಂತ? ಹಾಂ?' ಅಂತ ಕೇಳಿದ ರಾಜಾ.

'ಅಲ್ಲೋ ರಾಜಾ, ಕೇಕ್ ಒಳಗ ತತ್ತಿ, ಕೋಳಿ ತತ್ತಿ, ಹಾಕಿರ್ತಾರ. ಅದಕ್ಕೇ ತಿನ್ನೋದಿಲ್ಲಾ ಅಂತ ಒಮ್ಮೆ ಸಾಲಿಯಾಗ ಇದ್ದಾಗ ನಿನ್ನ ದೋಸ್ತಗ ಹೇಳೋದನ್ನ ಕೇಳಿದ್ದೆ. ಅದಕ್ಕೇ ಕೇಳಿದೆ ಕೇಕ್ ತಿಂತಿಯೇನು ಅಂತ. ಈಗ ಕೋಳಿ ತತ್ತಿ ನಡಿತದ? ತತ್ತಿ ನಡಿತದ?' ಅಂತ ಭಾಳ ಮುಗ್ಧವಾಗಿ ಕೇಳಿದಳು.

ರಾಜಾ ಬಿದ್ದು ಬಿದ್ದು ನಕ್ಕ. ಪ್ಲೇಟ್ ಟೇಬಲ್ ಮೇಲಿಟ್ಟು ಸಿಕ್ಕಾಪಟ್ಟೆ ನಕ್ಕ. ಕಣ್ಣಲ್ಲಿ ನೀರು ಬಂದವು. ತಿನ್ನುತ್ತಿದ್ದ ಆಹಾರ ಗಂಟಲಿಗೆ ಸಿಕ್ಕಂತಾಗಿ ಕೆಮ್ಮಿದ. ಕೆಮ್ಮುತ್ತಲೇ ನಕ್ಕ. ಇವಳೇ ನೀರು ಕುಡಿಸಿದಳು.

'ಮಾರಾಳ, ಮಾರಾಳ! ಈಗ ಎಲ್ಲಾ ನಡಿತದ ನಮ್ಮವ್ವಾ. ಎಲ್ಲಾ ಓಕೆ. ಕೋಳಿ ತತ್ತಿನೂ ಓಕೆ. ಬಾತುಕೋಳಿ ತತ್ತಿನೂ ಓಕೆ. ಬರೇ ಕೋಳಿ ತತ್ತಿಯೊಂದೇ ಏನು ಹಚ್ಚಿ? ತತ್ತಿ ಅವ್ವಾ ಅಂದ್ರ ಕೊಕ್ಕೋ ಕೋಳಿ ಸಹಿತ ನಡಿತದ. ನೋಡಿಲ್ಲೆ. ನೋಡು, ನೋಡು,' ಅನ್ನುತ್ತ ತುಂಬಿದ ಪ್ಲೇಟಿನ ಮೂಲೆಯಲ್ಲಿದ್ದ ತಂದೂರಿ ಕೋಳಿಯ ಕಾಲಿನ ಪೀಸನ್ನು ಕೈಯಲ್ಲಿ ತೆಗೆದುಕೊಂಡವನೇ ಕಚಾಪಚಾ ಅಂತ ಅಗಿದಗಿದು ತಿಂದ. ಅಂಅಂ ಅಂತ ಜಗಿಜಗಿದು ತಿಂದ. ರನ್ನಿಂಗ್ ಕಾಮೆಂಟರಿ ಕೊಡುತ್ತ ತಿಂದ. 'ನೋಡು, ನೋಡು, ಹ್ಯಾಂಗ ಕೋಳಿ ಕಾಲು ತಿನ್ನಲಿಕತ್ತೇನಿ ಅಂತ. ತಂದೂರಿ ಕೋಳಿ ಮಸ್ತ ಆಗ್ಯದ. ಎಲ್ಲಿಂದ ಮಾಡಿಸಿ ತಂದಾರೋ ಏನೋ,' ಅನ್ನುತ್ತ ಬೆರಳು ನೆಕ್ಕಿ ನೆಕ್ಕಿ ತಿಂದ.

ಇವಳು ಗಾಬ್ ಹೊಡೆದು ನಿಂತಿದ್ದಳು. ದೊಡ್ಡ ಶಾಕ್ ಹೊಡೆದಿತ್ತು. 'ಶಾಲಾ ಸಮಯದಲ್ಲಿ ಉಳ್ಳಾಗಡ್ಡೆ, ಬಳ್ಳೊಳ್ಳಿ ಕೂಡ ತಿನ್ನದ ಶುದ್ಧ ಆಚಾರಿ ರಾಜಾ ಎಲ್ಲಿ, ಕೋಳಿ ಮೊಟ್ಟೆ ಹಾಕಿರುತ್ತಾರೆಂದು ಕೇಕ್ ಕೂಡ ತಿನ್ನದ ರಾಜಾ ಎಲ್ಲಿ, ಈಗಿನ ಮಾಂಸಾಹಾರಿ ರಾಜಾ ಎಲ್ಲಿ! ಎಲ್ಲಿ ಹೋಯಿತು ಇವನ ಬಾಹ್ಮಣ್ಯ? ಅಸಹ್ಯವಾಗಿ ಕಚಾಪಚಾ ಅಂತ ಕೋಳಿ, ಕುರಿ ಕತ್ತರಿಸುತ್ತಿದ್ದಾನೆ. ಛೇ!' ಅಂದುಕೊಂಡಳು.

'ನೀ ಬರ್ತೀ ಅಂತ ಮೊದಲೇ ಗೊತ್ತಿದ್ದ್ರ eggless ಕೇಕ್ ಮಾಡಿ ತರ್ತಿದ್ದೆ ನೋಡು. ನಿನ್ನ ನೋಡಿದರೆ ಈಗ ಎಲ್ಲಾ ಓಕೆ ಅಂತೀ,' ಅಂದಳು. ಬೈ ಬೈ ಹೇಳುವ ಮೊದಲು ಮಾತು ಮುಗಿಸಿಯೇ ಹೋಗಬೇಕು ನೋಡಿ.

'ಏ, ಎಲ್ಲಿ eggless ಹಚ್ಚಿ? ಮಸ್ತಾಗಿ ತತ್ತಿ ಹಾಕಿಯೇ ಕೇಕ್ ಮಾಡಿಕೊಂಡು ಬಾ,' ಅಂದವನೇ, 'egg curry ಸಹಾ ಯಾರೋ ಮಾಡಿಕೊಂಡು ತಂದಾರ. ಮಟನ್ ಬಿರ್ಯಾನಿ ಮತ್ತ ಅದರ ಜೋಡಿ ಎಗ್ ಕರಿ ಮಸ್ತ ಆಗ್ತದ ನೋಡು. ನೀ ಟ್ರೈ ಮಾಡಿಯೇನು?' ಅಂದವನೇ ಮಟನ್ ಬಿರ್ಯಾನಿ ಮೇಲೆ ಎಗ್ ಕರಿ ಸುರುವಿಕೊಂಡು ಗರಗರ ಅಂತ ಕಲೆಸತೊಡಗಿದ. ಬಿರ್ಯಾನಿಯನ್ನು ಕಿವುಚಿ ಕಿವುಚಿ ಉಂಡೆ ಕಟ್ಟತೊಡಗಿದ. ಇವಳಿಗೆ ನೋಡಲಾಗಲಿಲ್ಲ. ಇವಳು ಮುಖ ಕಿವುಚಿದಳು. ಅಸಹ್ಯ.

ಪುರಾತನ ಪ್ರೇಮಿ, ಶುದ್ಧ ಬ್ರಾಹ್ಮಣ, ಸಾತ್ವಿಕ ಆಹಾರವನ್ನಲ್ಲದೇ ಬೇರೆ ಏನನ್ನೂ ಸೇವಿಸದ ರಾಜಾ ಪೂರ್ತಿ ಬದಲಾಗಿ ಹೋಗಿದ್ದ. ಕೆಟ್ಟು ಕೆರಹಿಡಿದುಹೋಗಿದ್ದ. 'ಇಂತವನಿಗಾಗಿ ನಾನು ಕಳೆದ ಹದಿನೇಳು ವರ್ಷ ತಪ್ಪದೇ eggless ಕೇಕ್ ಮಾಡಿದೆನೇ? ಛೇ! What a waste! He doesn't deserve all that. Brute fellow!' ಅಂತ ಪರಿತಪಿಸಿದಳು.

ದೊಡ್ಡ ಪ್ರಮಾಣದ ಭ್ರಮನಿರಸನವಾಯಿತು. ರಾಜಾನ ಬಗೆಗಿನ ಭ್ರಮೆ ಕರಗತೊಡಗಿತು. ರಾಜಾನ ಬಗ್ಗೆ ಕಟ್ಟಿಕೊಂಡಿದ್ದ impression ಫುಲ್ ನುಚ್ಚುನೂರಾಗಿತ್ತು. ಮೆದುಳಿನಲ್ಲಿ ಒಂದರ ಮೇಲೊಂದರಂತೆ ಸ್ಪೋಟವಾದಂತೆ ಫೀಲ್ ಆಗತೊಡಗಿತು. ದೊಡ್ಡ ಪ್ರಮಾಣದ ಭ್ರಮೆ ಹಾಗೆಯೇ ನುಚ್ಚುನೂರಾಗುತ್ತದೆಯೇ!?

ಯಾಕೋ ತಲೆಗೆ ಚಕ್ಕರ್ ಬಂದಂತಾಯಿತು. ಅಲ್ಲೇ ಇದ್ದ ಖುರ್ಚಿ ಹಿಡಿದು ಕೂತಳು. ನೀರು ಕುಡಿದಳು. ಇವಳು ಮತ್ತೆ ಸಮಾಧಿ ಸ್ಥಿತಿಗೆ ಹೋದರೆ ಕಷ್ಟ ಅಂತ ಎಸ್ಕೇಪ್ ಆಗಲು ರೆಡಿ ಆದ ರಾಜಾ. 'ನಿನ್ನ ಭೆಟ್ಟಿಯಾಗಿದ್ದು ಭಾಳ ಸಂತೋಷ ಆತು. ಮತ್ತ ಸಿಗೋಣ. ಬಾಕಿ ಮಂದಿಯನ್ನೂ ಭೆಟ್ಟಿಯಾಗೋದದ. ಬರ್ಲೀ?' ಅಂದವನೇ ರಾಜಾ ರೈಟ್ ಹೇಳಿದ. ಪ್ಲೇಟಿಗೆ ಮತ್ತೊಂದಿಷ್ಟು ನಾನ್ವೆಜ್ ಖಾದ್ಯಗಳನ್ನು ತುಂಬಿಕೊಂಡೇ ಹೋದ. ಫುಲ್ ಬರ್ಬಾದಾಗಿದ್ದಾನೆ, ಜಾತಿ ಕೆಡಿಸಿಕೊಂಡಿದ್ದಾನೆ ಅಂತ ಇವಳಿಗೆ ಖಾತ್ರಿಯಾಯಿತು.

ಆಗಲೇ ಇವಳು ನಿರ್ಧರಿಸಿದಳು. ಇನ್ನೆಂದೂ ಕೇಕ್ ಮಾಡುವದಿಲ್ಲ. eggless ಕೇಕ್ ಅಂತೂ ಸುತಾರಾಮ್ ಮಾಡುವದಿಲ್ಲ!

ಇದೇ ನಿರ್ಧಾರ ಮಾಡಿ ಮನೆಗೆ ಬಂದಳು. ಬಂದು ಏನು ಮಾಡಿದಳು ಅಂತ ಮರೆತುಹೋಗಿದ್ದರೆ ಮತ್ತೆ ಮೇಲಿಂದ ಕಥೆ ಓದಲು ಆರಂಭಿಸಿ.

ವಿ.ಸೂ: ಇದೊಂದು ಕಾಲ್ಪನಿಕ ಕಥೆ

Wednesday, March 16, 2016

ಉಡುಗೊರೆ

ಅವನು ಬಡವ. ಅವಳು ಬಡವಿ. ಇಬ್ಬರೂ ಬಡವರಾದರೂ ಇಬ್ಬರ ಮಧ್ಯೆ ಶ್ರೀಮಂತ ಪ್ರೇಮ. ಸಮೃದ್ಧ ಪ್ರೀತಿ. ಯಾಕೋ ಒಮ್ಮೆ ಹುಡುಗಿಗೆ ಹುಡುಗನಿಗೆ ಏನಾದರೂ ಅಚಾನಕ್ ಉಡುಗೊರೆ (surprise gift) ಕೊಡಬೇಕೆನ್ನಿಸಿತು. ಕಾಕತಾಳೀಯವೆಂಬಂತೆ ಹುಡುಗನಿಗೂ ಸಹ ಹಾಗೇ ಅನ್ನಿಸಬೇಕೇ!?

ಹುಡುಗನಿಗೆ ಏನು ಉಡುಗೊರೆ ಕೊಡಲಿ ಅಂತ ಹುಡುಗಿ ವಿಚಾರ ಮಾಡಿದಳು. ಒಂದು ಐಡಿಯಾ ತಲೆಗೆ ಬಂತು. ಹುಡುಗನ ಹತ್ತಿರ ಒಂದು ಒಳ್ಳೆ ಕೈಗಡಿಯಾರ (wrist watch) ಇತ್ತು. ಆದರೆ ಅದರ ಚರ್ಮದ ಪಟ್ಟಿ (strap) ಹಳೆಯದಾಗಿ ಅಲ್ಲಲ್ಲಿ ಹರಿದು ಹೋಗಿತ್ತು. ಕೈಗಡಿಯಾರಕ್ಕೆ ಒಪ್ಪುವಂತಹ ಒಂದು ಸುಂದರವಾದ ಚರ್ಮದ ಪಟ್ಟಿಯನ್ನು ಉಡುಗೊರೆಯನ್ನಾಗಿ ಕೊಡಬೇಕೆಂದುಕೊಂಡಳು. ಆದರೆ ರೊಕ್ಕ? ಮೊದಲೇ ಬಡವಿ. ರೊಕ್ಕ ಇಲ್ಲ. ರೊಕ್ಕ ಜೋಡಿಸಲು ಏನು ಮಾಡಲಿ? ಅಂತ ವಿಚಾರ ಮಾಡಿದಳು. ಏನೂ ಹೊಳೆಯಲಿಲ್ಲ. ಒಂದು ಐಡಿಯಾ ಬಂತು ಆದರೆ ಅಷ್ಟು ಇಷ್ಟವಾಗಲಿಲ್ಲ. ಆದರೆ ಇನಿಯನಿಗೆ ಉಡುಗೊರೆ ಕೊಡಬೇಕೆಂಬ ಬಯಕೆ ಉತ್ಕಟವಾಗಿತ್ತು. ಹಾಗಾಗಿ ಪ್ರೀತಿಗಾಗಿ, ಪ್ರೇಮದ ಉಡುಗೊರೆಗಾಗಿ ಯಾವ ತ್ಯಾಗಕ್ಕೂ ಸೈ ಅಂತ ಅದೇ ಕೆಲಸ ಮಾಡಿ ದುಡ್ಡು ಸಂಪಾದಿಸಿದಳು. ಹುಡುಗನ ಕೈಗಡಿಯಾರಕ್ಕೆ ಒಂದು ಸುಂದರವಾದ ಚರ್ಮದ ಪಟ್ಟಿಯನ್ನು ಖರೀದಿಸಿದಳು.

ಹುಡುಗನೂ ತನ್ನ ಹುಡುಗಿಗೆ ಏನು ಉಡುಗೊರೆ ಕೊಡಲಿ ಅಂತ ವಿಚಾರ ಮಾಡಿದ. ಹುಡುಗಿ ನೀಲವೇಣಿ. ತುಂಬಾ ಚಂದವಾದ, ಉದ್ದವಾದ, ಸೊಂಪಾದ ತಲೆಕೂದಲ ಕೇಶರಾಶಿಯ ಒಡತಿ. ಹಾಗಾಗಿ ಅಷ್ಟು ಸುಂದರವಾದ ಕೂದಲಿರುವ ಹುಡುಗಿಗೆ ಒಂದು ಚಂದವಾದ ದಂತದ ಬಾಚಣಿಗೆ ಕೊಡಲು ನಿರ್ಧರಿಸಿದ. ರೊಕ್ಕ ಬೇಕಲ್ಲ? ಅವನೂ ಬಡವ. ರೊಕ್ಕಕ್ಕೆ ಹೇಗೆ ಜುಗಾಡ್ ಮಾಡುವದು ಅಂತ ಹುಡುಗ ತಲೆಕೆಡಿಸಿಕೊಂಡ. ಏನೋ ಒಂದು ಐಡಿಯಾ ಬಂತು. ಆದರೆ ಇಷ್ಟವಾಗಲಿಲ್ಲ. ಯಾಕೋ ಸರಿಯೆನ್ನಿಸಲಿಲ್ಲ. ಆದರೆ ಅವನಿಗೂ ಉಡುಗೊರೆ ಕೊಟ್ಟೇಬಿಡಬೇಕೆಂಬ ಉತ್ಕಟ ಬಯಕೆ. ಪ್ರೀತಿಗಾಗಿ ಅವನೂ ತ್ಯಾಗ ಮಾಡಿದ. ರೊಕ್ಕ ಸಂಪಾದಿಸಿದ. ಒಂದು ಸುಂದರ ದಂತದ ಬಾಚಣಿಗೆಯನ್ನು ಕೊಂಡ.

ಮರುದಿನ ಇಬ್ಬರೂ ಭೇಟಿಯಾದರು. ತನ್ನ ಪ್ರೇಮಿಗೆ ಗಿಫ್ಟ್ ಕೊಡಬೇಕು, ಅವರ ಮುಖದಲ್ಲಿ ಮೂಡುವ ಆಶ್ಚರ್ಯ, ಸಂತೋಷ, ಹೆಮ್ಮೆ ಮತ್ತು ತರೇವಾರಿ ಭಾವನೆಗಳನ್ನು ಕಣ್ತುಂಬ ನೋಡಿ, ಹೃದಯದಲ್ಲಿ ತುಂಬಿಕೊಳ್ಳಬೇಕು ಅಂತ ಇಬ್ಬರಿಗೂ ಕಾತುರ. ಇಬ್ಬರಿಗೂ ಚಡಪಡಿಕೆ.

ಆಕೆ ಉಡುಗೊರೆ ತಂದಿದ್ದು ಇವನಿಗೆ ಗೊತ್ತಿಲ್ಲ. ಇವನು ತಂದಿದ್ದು ಆಕೆಗೆ ಗೊತ್ತಿಲ್ಲ. ಒಬ್ಬರನೊಬ್ಬರು ನೋಡಿಕೊಂಡರು. ಏನನ್ನೋ ಗಮನಿಸಿದರು. 'ಯಾಕೆ ಈ ಹಠಾತ್ ಬದಲಾವಣೆ?' ಅನ್ನುವ ಲುಕ್ ಇಬ್ಬರದ್ದೂ ಮುಖದ ಮೇಲೆ. ಏನೋ ಮಾಡಲು ಹೋದರೆ ಇಲ್ಲಿ ಬೇರೇನೋ ಆಗಿಬಿಟ್ಟಿದೆ ಅನ್ನುವದು ಅವರಿಗಷ್ಟೇ ಅರ್ಥವಾದಂತೆ ತಲೆಯಲ್ಲಾಡಿಸಿ, 'ಏನಿಲ್ಲ ಬಿಡು. ಹಾಗೇ ಸುಮ್ಮನೆ,' ಅನ್ನುವಂತೆ ದೇಶಾವರಿ ಮಳ್ಳ ನಗೆ ಇಬ್ಬರೂ ನಕ್ಕರು. ಹುಡುಗನಿಗಾಗಿ ತಂದಿದ್ದ ಕೈಗಡಿಯಾರದ ಚರ್ಮದ ಪಟ್ಟಿ ಹುಡುಗಿಯ ವ್ಯಾನಿಟಿ ಬ್ಯಾಗಿನಲ್ಲೇ ಉಳಿಯಿತು. ಹುಡುಗಿಗಾಗಿ ತಂದಿದ್ದ ದಂತದ ಬಾಚಣಿಕೆ ಹುಡುಗನ ಜೇಬಿನಲ್ಲೇ ಉಳಿಯಿತು. ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕೊಟ್ಟುಕೊಳ್ಳಲೇ ಇಲ್ಲ.

ಏಕೆ!?

ಹುಡುಗನ ಕೈಯಲ್ಲಿ ಕೈಗಡಿಯಾರ ಇರಲೇ ಇಲ್ಲ. ಹುಡುಗಿಯ ನೀಳ, ಸಮೃದ್ಧ ಕೇಶರಾಶಿ ಹೋಗಿ ಅದರ ಜಾಗದಲ್ಲಿ ಸಣ್ಣ boy cut  ತರಹದ hairstyle ಬಂದುಬಿಟ್ಟಿತ್ತು. ಹುಡುಗನ ಕೈಗಡಿಯಾರಕ್ಕೆ ಚರ್ಮದ ಪಟ್ಟಿ ಕೊಳ್ಳಲು ತನ್ನ ಕೇಶರಾಶಿಯನ್ನೇ ಕತ್ತರಿಸಿಕೊಂಡು wig ಮಾಡುವವರಿಗೆ ಮಾರಿದ್ದಳು ಹುಡುಗಿ. ಹುಡುಗಿಗೆ ದಂತದ ಬಾಚಣಿಗೆ ತರಲು ತನ್ನ ಕೈಗಡಿಯಾರವನ್ನೇ ಮಾರಿಬಿಟ್ಟಿದ್ದ ಹುಡುಗ.

* ಎಂದೋ ಎಲ್ಲೋ ಓದಿದ ಕಥೆಯೊಂದರಲ್ಲಿ ನೆನಪುಳಿದಿದ್ದು ಇಷ್ಟು. ಯಾವದೋ ಆಂಗ್ಲ ಕಥೆ ಕನ್ನಡಕ್ಕೆ ತರ್ಜುಮೆಯಾಗಿ ಬಂದಾಗ ಓದಿದ್ದು ಅಂತ ನೆನಪು. ಕಥೆಯ ಹೆಸರು ಗೊತ್ತಿದ್ದರೆ ತಿಳಿಸಿ.
-- ಇದು ಓ. ಹೆನ್ರಿ ಬರೆದಂತಹ The gift of magi ಎಂಬ ಕಥೆಯ ಮೇಲೆ ಆಧಾರಿಸಿದ್ದು ಅಂತ ಸುನಾಥ್ ಸರ್ ಕಾಮೆಂಟ್ ಮಾಡಿ ತಿಳಿಸಿದ್ದಾರೆ. ಅವರಿಗೊಂದು ಧನ್ಯವಾದ. ಮೂಲ ಕಥೆಯನ್ನು ಇನ್ನೊಮ್ಮೆ ಓದಬೇಕು.

Monday, March 14, 2016

'ಮದ್ದು ಹಾಕುವದು' ಎಂಬ ವಿಷವಿಕ್ಕುವ ವಿಚಿತ್ರ ಪದ್ಧತಿ



'ಮದ್ದು ಹಾಕುವದು' ಎಂಬ ವಿಷವಿಕ್ಕುವ ವಿಚಿತ್ರ ಪದ್ಧತಿ ಹಿಂದಂತೂ ಇತ್ತು. ಹಿಂದೆ ಅಂದರೆ ಬಹಳ ಹಿಂದೆಯೇನೂ ಅಲ್ಲ. ೧೯೯೦ ರ ವರೆಗೂ ಅದರ ಬಗ್ಗೆ ಸುದ್ದಿ ಕೇಳಿದ್ದಿದೆ. ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ನಮ್ಮ ಹವ್ಯಕ ಸಮುದಾಯದಲ್ಲಿತ್ತು. ಹಾಗಾಗಿ ನಮಗೆ ಗೊತ್ತು. ಬೇರೆ ಸಮುದಾಯಗಳಲ್ಲಿ ಇತ್ತೋ ಇಲ್ಲವೋ, ಈಗ ಇದೆಯೋ ಇಲ್ಲವೋ ಗೊತ್ತಿಲ್ಲ.

ಅದೇನೋ ಒಂದು ತರಹದ ವಿಷವಿರುತ್ತದೆಯಂತೆ. ಅದನ್ನು ಹೇಗಾದರೂ ಮಾಡಿ ವ್ಯಕ್ತಿಯೊಬ್ಬನ ಹೊಟ್ಟೆಗೆ ಸೇರಿಸಿಬಿಟ್ಟರೆ ಮುಗಿಯಿತು. ಅದೇ 'ಮದ್ದು ಹಾಕುವದು'. ಊಟದಲ್ಲಿ, ತಿಂಡಿಯಲ್ಲಿ ಅಥವಾ ಪಾನೀಯದಲ್ಲಿ ಒಂದೆರೆಡು ತೊಟ್ಟು ಹಾಕಿಕೊಟ್ಟುಬಿಟ್ಟರೆ ಸಾಕು.

ಒಮ್ಮೆ ವಿಷ ಒಳಗೆ ಹೋಯಿತು ಅಂದರೆ ನಂತರದ ಪರಿಣಾಮ slow poisoning  ರೂಪದಲ್ಲಿ ಗೋಚರಿಸುತ್ತದೆ. ಒಮ್ಮೆಲೇ ಏನೂ ಆಗುವದಿಲ್ಲ. ನಂತರ ಶುರುವಾಗುತ್ತದೆ. ಉಂಡ ಅನ್ನದ ಒಂದು ಅಗುಳೂ  ಒಳಗೆ ಉಳಿಯುವದಿಲ್ಲ. ಕುಡಿದ ನೀರಿನ ಒಂದು ಹನಿಯೂ ಬರಕತ್ತಾಗುವದಿಲ್ಲ. ಮದ್ದು ಹಾಕಿಸಿಕೊಂಡವ ವಾಂತಿ ಮಾಡಿ ಮಾಡಿಯೇ ಸುಸ್ತಾಗಿ ಹೋಗುತ್ತಾನೆ. ಹಾಗೇ ಬಿಟ್ಟರೆ severe dehydration ಆಗಿ ಏನು ಬೇಕಾದರೂ ಆಗಬಹುದು. ಬಹಳ dangerous ಸ್ಥಿತಿ ತಲುಪಿಬಿಡುತ್ತಾನೆ.

ಮದ್ದು ಹಾಕಿಸಿಕೊಂಡವರು ಸಿಕ್ಕಾಪಟ್ಟೆ ತೊಂದರೆ ಅನುಭವಿಸುವದು ಸತ್ಯ. ಆದರೆ ಸತ್ತು ಹೋದವರು ಬಹಳ ಕಮ್ಮಿ. ನಾನಂತೂ ಕೇಳಿಲ್ಲ. ಯಾಕೆಂದರೆ ಯಾರಿಗಾದರೂ ನಿಲ್ಲದ ವಾಂತಿ ಶುರುವಾಯಿತು ಅಂತಾದರೆ ಮನೆಯ ಹಿರಿಯ ತಲೆಗಳಿಗೆ ಐಡಿಯಾ ಬಂದೇಬಿಡುತ್ತದೆ. 'ಓಹೋ! ಇದು ಮದ್ದು ಹಾಕಿಸಿಕೊಂಡ ಕೇಸೇ ಇರಬೇಕು. ಬೇಗನೇ ಪ್ರತಿಮದ್ದು (antidote) ಮಾಡಿಸಬೇಕು. ಇಲ್ಲವಾದರೆ ದೊಡ್ಡ ಖತರಾ!' ಅಂದವರೇ ಪ್ರತಿಮದ್ದಿಗಾಗಿ ಪ್ಲಾನ್ ಮಾಡುತ್ತಾರೆ.

ಮದ್ದಿಗೆ ಪ್ರತಿಮದ್ದು ಹಾಕುವದೂ ಒಂದು ಆಸಕ್ತಿಕರ ವಿಷಯ. ನನಗೆ ತಿಳಿದ ಮಟ್ಟಿಗೆ ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದರು. ಮದ್ದು ಹಾಕುವವರು, ಹಾಕಿಸಿಕೊಳ್ಳುವವರು ಎಲ್ಲ ಹವ್ಯಕ ಸಮುದಾಯದವರಾದರೆ ಮದ್ದು ತೆಗೆಯುವವರು ಮಾತ್ರ ಬೇರೆ ಸಮುದಾಯದವರು. ಹಾಲಕ್ಕಿ ಗೌಡರೋ ಅಥವಾ ಅದೇ ರೀತಿಯ ಮತ್ಯಾವದೋ ಸಮುದಾದಯದವರು. ಅಂತವರ ಮನೆಗೆ ಒಂದು ನಿರ್ದಿಷ್ಟ ದಿವಸ, ತೆಂಗಿನಕಾಯಿ, ಅಕ್ಕಿ, ಇತರೆ ಬೇಕಾದ ವಸ್ತುಗಳೊಂದಿಗೆ ಹೋಗಬೇಕು. ಮದ್ದು ಹಾಕಿಸಿಕೊಂಡು ತೊಂದರೆ ಪಡುತ್ತಿರುವ ವ್ಯಕ್ತಿಯನ್ನೂ ಕರೆದೊಯ್ಯಬೇಕು.

ಮದ್ದು ತೆಗೆಯುವ ಗೌಡ ಯಾವದೋ ಮರದ ಎಲೆಗಳಿಂದಲೋ ತೊಗಟೆಯಿಂದಲೋ ಏನೋ ಒಂದು ಪುಡಿ ಮಾಡಿ ಇಟ್ಟುಕೊಂಡಿರುತ್ತಾನೆ. ಅದನ್ನು ನೀರಲ್ಲಿ ಕದಡಿ ಒಂದು ಪೇಯ ತಯಾರುಮಾಡುತ್ತಾನೆ. ಅದು ಸಿಕ್ಕಾಪಟ್ಟೆ ಕಹಿಯಾಗಿದ್ದು, ಕಂಡಾಪಟ್ಟೆ ಅಡ್ಡ ವಾಸನೆ ಹೊಡೆಯುತ್ತದೆಯಂತೆ. ಕುಡಿಯಲು ಸಾಧ್ಯವೇ ಇಲ್ಲದಂತಹ ಪೇಯ. ಆದರೆ ಅದನ್ನು ಕುಡಿಯಲೇಬೇಕು. ಹೇಗೋ ಮೂಗು ಮುಚ್ಚಿ ಕುಡಿಯುತ್ತಾರೆ. ಒಮ್ಮೆ ಕುಡಿದರೆ ಮುಗಿಯಿತು. ಹೊಟ್ಟೆ ಸೇರಿದ ಪ್ರತಿಮದ್ದು ಹೊಟ್ಟೆಯನ್ನು ಪೂರ್ತಿ ತಿರುವ್ಯಾಡಿ, ಅಲ್ಲಾಡಿಸಿ ಬಿಡುತ್ತದೆ. ಮದ್ದು ಹಾಕಿಸಿಕೊಂಡವರ ಹೊಟ್ಟೆಯಲ್ಲಿ ಏನೂ ನಿಲ್ಲುವದಿಲ್ಲ. ಅದರಂತೆ ಈ ಪೇಯ ಕೂಡ ಹೊರಬಿದ್ದು ಹೋಗುತ್ತದೆ. ಅಷ್ಟೇ ಹೊರ ಬರುವಾಗ ಹೊಟ್ಟೆಯಲ್ಲಿನ ಮದ್ದೆಲ್ಲವನ್ನೂ ಕೆರೆದು ಕೆರೆದು ತಂದಿರುತ್ತದೆ. ಗೌಡ ಹೋಗಿ ನೋಡುತ್ತಾನೆ. ಅವನ ಪರಿಣಿತರ ಕಣ್ಣಿಗೆ ಎಲ್ಲ ಬರೋಬ್ಬರಿ ಗೊತ್ತಾಗುತ್ತದೆ. ಬಂದು ಹೇಳುತ್ತಾನೆ - 'ಬಿದ್ದ ಮದ್ದು ಹೋಯಿತ್ರಾ. ಇನ್ನು ಎಂತೂ ತೊಂದರೆ ಇರೋದಿಲ್ಲ. ಹೋಗಿ ಬನ್ನಿ.' 'ಕಂಟಕ ಕಳೆಯಿತು,' ಅಂತ ಹೋದವರು ಫುಲ್ relax.  ಅವನಿಗೆ ಕೊಡಬೇಕಾದ ಕಾಣಿಕೆ ಕೊಟ್ಟು ಬರುತ್ತಾರೆ. ದುಡ್ಡು ಕಾಸಿನ ವ್ಯವಹಾರವಿಲ್ಲ. ಏನಿದ್ದರೂ ತೆಂಗು, ಅಡಿಕೆ, ಅಕ್ಕಿ, ಇತ್ಯಾದಿ. ಅದೂ ಪದ್ಧತಿ ಪ್ರಕಾರ.

ಮದ್ದು ಯಾಕೆ ಹಾಕುತ್ತಾರೆ? ಮತ್ಸರ, ದ್ವೇಷ, ಹೊಟ್ಟೆಕಿಚ್ಚು, ಇನ್ನೊಬ್ಬರ ಸಂತೋಷವನ್ನು ನೋಡಲಾಗದ ವಿಕೃತ ಮನಸ್ಥಿತಿ, ಮತ್ತೊಬ್ಬರು ಪೂರ್ತಿ ಹಾಳಾಗಿ ಹೋಗಲಿ ಅನ್ನುವ ಕೆಟ್ಟ ಮನಸ್ಸು. ಅಂತಹ ನೆಗೆಟಿವ್ ಭಾವನೆಗಳು ತಾರಕಕ್ಕೆ ಹೋಗಿ ತಡೆಯಲಾಗದಂತಾದಾಗ ಮನುಷ್ಯ psychopath ಆಗಿಬಿಡುತ್ತಾನೆ. sociopath ಆಗುತ್ತಾನೆ. ಸಮಾಜವನ್ನು ದ್ವೇಷಿಸತೊಡಗುತ್ತಾನೆ. ಅವನ್ನೆಲ್ಲ ಕಾರಿಕೊಳ್ಳಲು ಒಂದು outlet ಬೇಕಾಗುತ್ತದೆ. ಬಹಿರಂಗವಾಗಿ ಏನಾದರೂ ಮಾಡಲು ಹೋದರೆ ಒದೆ ಬೀಳುತ್ತವೆ. ಅದಕ್ಕೇ ಮದ್ದು ಹಾಕುತ್ತಾರೆ. ಗೊತ್ತೂ ಆಗುವದಿಲ್ಲ. ನಂತರ prove ಮಾಡಲೂ ಆಗುವದಿಲ್ಲ. ಮದ್ದು ಹಾಕಿಸಿಕೊಂಡವರು ಸಂಕಟ ಪಡುತ್ತಿದ್ದರೆ ಮದ್ದು ಹಾಕಿದವರು ವಿಕೃತಾನಂದ ಅನುಭವಿಸುತ್ತಿರುತ್ತಾರೆ. typical behavior of sociopaths and psychopaths.

ಮದ್ದು ಹಾಕುವವರು ಯಾರು? ಮಹಿಳೆಯರು. ಪುರುಷರು ಮದ್ದು ಹಾಕಿದ್ದನ್ನು ಅಥವಾ ಹಾಕುತ್ತಾರೆ ಎಂಬುದನ್ನು ನಾನಂತೂ ಕೇಳಿಲ್ಲ. ಎಂತಹ ಮಹಿಳೆಯರು? ಒಂದಲ್ಲ ಒಂದು ತರಹದಲ್ಲಿ ನೊಂದವರು ಮತ್ತು ಅತೃಪ್ತರು. ಪರಿತ್ಯಕ್ತೆಯರು. ಇನ್ನು ಕೆಲವರು pure sociopaths ಮತ್ತು dangerous psychopaths. ವಿಧವೆಯರ ಮೇಲೆ ಹೆಚ್ಚಿನ ಸಂಶಯ. ಅವರೇ ಹೆಚ್ಚಾಗಿ ಮದ್ದು ಹಾಕುವವರು ಅಂತ ಹೇಳುತ್ತಿದ್ದರು. ಅದೂ ಹಿಂದಿನ ಕಾಲ. ತುಂಬಾ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ, ವಯಸ್ಸಿಗೆ ಬರುವ ಮೊದಲೇ ಪತಿಯನ್ನು ಕಳೆದುಕೊಂಡು, ಕೇಶಮುಂಡನ ಮಾಡಿಸಿಕೊಂಡ ವಿಧವೆಯರ ಬಾಳು ಸಿಕ್ಕಾಪಟ್ಟೆ ನಿಕೃಷ್ಟ. ಅಂತವರಲ್ಲಿ ಕೆಲವರಿಗೆ ಸುಖವಾಗಿರುವ ಸಂಸಾರಸ್ಥರನ್ನು ನೋಡಿದರೆ ಮತ್ಸರ. ಅಂತವರು ಮದ್ದು ಹಾಕುತ್ತಾರೆ ಅಂತ ಹೇಳುತ್ತಿದ್ದರು. ಇನ್ನು ಮಕ್ಕಳಿಲ್ಲದ ಮಹಿಳೆಯರು. ಅವರಿಗೂ ಸಿಕ್ಕಾಪಟ್ಟೆ ಕಷ್ಟ. ಬಂಜೆ ಅನ್ನಿಸಿಕೊಳ್ಳಬೇಕಾದ ಕರ್ಮ. ಅವರಿಗೂ ಒಂದು ತರಹದ ಬಹಿಷ್ಕಾರ ಮತ್ತು ಇತರೆ ಜನರಿಂದ ತಾತ್ಸಾರ. ಅವರೂ ಮದ್ದು ಹಾಕುತ್ತಾರೆ ಅಂತ ಹೇಳುವ ರೂಢಿ ಇತ್ತು. ಇನ್ನು ಬೇರೆಯೇ ತರಹದ ಅತೃಪ್ತ ಮಹಿಳೆಯರು. ಏನೇನೋ ಕಾರಣಗಳಿಗೆ ಅತೃಪ್ತಿ. ಒಬ್ಬಳ ಗಂಡ ರೋಗಿಷ್ಠ. ಬೇಕಾದ ಸುಖ ಕೊಡಲಾರ. ಇವಳಿಗೆ ಚಡ್ತಿ ಜವಾನಿ. ಹಾಗಾಗಿ ಹಟ್ಟಾ ಕಟ್ಟಾ ಸಾಲಿಡ್ ಗಂಡಸರನ್ನು ನೋಡಿದರೆ ಒಂದು ತರಹದ ಆಸೆ. ಆದರೆ ಅದನ್ನು ಪೂರೈಸಿಕೊಳ್ಳುವದು ಕಷ್ಟ. ಅದಕ್ಕೇ ಮದ್ದು ಹಾಕಿಬಿಡುವದು. ಮತ್ತೊಬ್ಬಳ ಗಂಡ ಸ್ತ್ರೀಲೋಲ. ಉಪಪತ್ನಿಯರನ್ನು ಇಟ್ಟುಕೊಂಡಿರುತ್ತಿದ್ದ. ಹಾಗಾಗಿ ಧರ್ಮಪತ್ನಿಯ ತಲೆ ಹನ್ನೆರಾಡಾಣೆ. ಅವಳೂ ಮದ್ದು ಹಾಕಿದರೂ ಹಾಕಿದಳೇ!

ಯಾರಿಗೆ ಮದ್ದು ಹಾಕುತ್ತಿದ್ದರು? Who were the prime targets? ಇಂತವರೇ ಅಂತಿಲ್ಲ. ಯಾರ ಮೇಲೆ ಯಾರಿಗೆ ಯಾವ ತರಹದ ಮತ್ಸರವಿದೆಯೋ, ದ್ವೇಷವಿದೆಯೋ, ಮತ್ಯಾವ ನೆಗೆಟಿವ್ ಫೀಲಿಂಗ್ಸ್ ಇವೆಯೋ ಮತ್ತು ಅವು ಯಾವ ಕಾರಣಕ್ಕೆ ಟ್ರಿಗರ್ ಆಗುತ್ತವೆಯೋ ದೇವರಿಗೇ ಗೊತ್ತು. ಸುಂದರವಾಗಿರುವ ಮಕ್ಕಳು, ಆಗತಾನೇ ಮದುವೆಯಾದ ಯುವ ಜೋಡಿಗಳು, ಸಂಸಾರದಲ್ಲಿ ಸುಖವಾಗಿದ್ದು ಪ್ರಗತಿ ಸಾಧಿಸುತ್ತಿರುವವರು, ಸುಂದರ ಸುಮಂಗಲೆಯರು, ನಾಲ್ಕಾರು ಸುಂದರ ಮಕ್ಕಳ ತಾಯಂದಿರು, ಸುಂದರ ಪುರುಷರು ಇವರೆಲ್ಲ ಪ್ರೈಮ್ ಟಾರ್ಗೆಟ್. ಒಟ್ಟಿನಲ್ಲಿ physically, socially, economically ಮತ್ತೆ ಬೇರೆಲ್ಲ ರೀತಿಯಲ್ಲಿ ಸ್ವಲ್ಪ ಎದ್ದು ಕಾಣುವವರೇ ಪ್ರೈಮ್ ಟಾರ್ಗೆಟ್.

ಮದ್ದು ಅಂದರೇನು? ಅದೆಂತಹ ವಿಷ? ಒಂದು ತರಹದ ಹಲ್ಲಿ ಜಾತಿಗೆ ಸೇರಿದ ಪ್ರಾಣಿಯಿರುತ್ತದೆಯಂತೆ. ಅದು ತುಂಬಾ ವಿರಳ. ಮತ್ತೆ ಕಣ್ಣಿಗೆ ಕಾಣಿಸುವದು ಕಮ್ಮಿ. ಅದನ್ನು ಹಿಡಿಯುತ್ತಾರೆ. ಜಜ್ಜಿ ಕೊಂದುಬಿಡುತ್ತಾರೆ. ನಂತರ ಆ ಸತ್ತ ಹಲ್ಲಿ ಜಾತಿಯ ಪ್ರಾಣಿಯ ದೇಹಕ್ಕೆ ದಾರ ಕಟ್ಟಿ ಮೇಲಿಂದ ನೇತಾಕುತ್ತಾರೆ. ಆ ದೇಹ ಕೊಳೆಯುತ್ತ ಹೋದಂತೆ ಅದರಿಂದ ಒಂದು ತರಹದ ದ್ರವ ಸ್ರವಿಸತೊಡಗುತ್ತದೆ. ಸ್ರವಿಸಿ ಸ್ರವಿಸಿ ಒಂದೊಂದೇ ಹನಿಯಾಗಿ ತೊಟ್ಟಿಕ್ಕಲಾರಂಭಿಸುತ್ತದೆ. ಕೆಳಗೊಂದು ಪಾತ್ರೆಯನ್ನಿಟ್ಟು ಅದನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಅದೇ ವಿಷ. ಅದೇ ಮದ್ದು. ಒಂದೇ ಹನಿ ಸಾಕು. ಹಾಗಾಗಿ ಮದ್ದು ಹಾಕುವವರೆಲ್ಲ ಮದ್ದು ತಯಾರಿಸಲೇಬೇಕು ಅಂತಿರಲಿಲ್ಲ. ಎಷ್ಟೋ ಕಡೆ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಎಂದೋ ತಯಾರು ಮಾಡಿಟ್ಟ ಮದ್ದು ಒಬ್ಬರಿಂದ ಇನ್ನೊಬ್ಬರಿಗೆ ಬಳುವಳಿಯಂತೆ ಹೋಗಿದ್ದೂ ಇದೆಯಂತೆ.

ಮದ್ದು ಹಾಕಿಸಿಕೊಂಡವರ ಗತಿ? ಮೊದಲೇ ಹೇಳಿದಂತೆ ಒಮ್ಮೆ ಮದ್ದು ಹೊಟ್ಟೆಗೆ ಹೋಗಿ ತನ್ನ ಕೆಲಸ ಶುರು ಮಾಡಿತು ಅಂದರೆ ಮನುಷ್ಯ ಫುಲ್ ಔಟ್. ಊಟ, ತಿಂಡಿ ಮಾತು ಬಿಡಿ ಒಂದು ಹನಿ ನೀರು ಸಹ ಹೊಟ್ಟೆಯಲ್ಲಿ ನಿಲ್ಲುವದಿಲ್ಲ. ವಾರದಲ್ಲಿ ಕೇಜಿಗಟ್ಟಲೆ ತೂಕ ಕಳೆದುಕೊಂಡುಬಿಡುತ್ತಾನೆ. ಫುಲ್ weakness. ಬೇಗನೆ ಪ್ರತಿಮದ್ದು ಹಾಕಿಸಿಕೊಂಡರೆ ಬಚಾವ್! ಇಲ್ಲವಾದರೆ ಶಿವಾಯ ನಮಃ! ಅದರಲ್ಲೂ ಹೊಟ್ಟೆಗೆ ಸೇರಿದ ಮದ್ದು ಬೇಗನೆ ಹೊರಬೀಳಲಿಲ್ಲ ಅಂದರೆ ನಂತರ antidote ಸಹ ಕೆಲಸ ಮಾಡುವದಿಲ್ಲ. ಹಾಗಂತ ಹೇಳುತ್ತಾರೆ. ಒಂದು ಹಂತ ಮೀರಿತು ಅಂದರೆ ಹೊಟ್ಟೆಯಲ್ಲಿ ಮತ್ತೊಂದು ಹಲ್ಲಿಯ ಜಾತಿಯ ಅದೇ ಪ್ರಾಣಿಯೇ ಉದ್ಭವವಾಗಿ ಮನುಷ್ಯನನ್ನು ಸಾವಿನತ್ತ ದೂಡುತ್ತದೆ. ಹೊಟ್ಟೆಯಲ್ಲಿ ಮತ್ತೊಂದು ಹಲ್ಲಿ ಹುಟ್ಟುವದು??? ಅದೊಂದು ತರಹದ urban legend ಅಥವಾ ದಂತಕಥೆ ಅಂತ ಅಂದುಕೊಂಡರೂ multiple organ failure ಆಗಿ ಸಾಯುತ್ತಾರೆ.

ಮೊದಲೇ ಹೇಳಿದಂತೆ ಮದ್ದು ಹಾಕಿಸಿಕೊಂಡವರು ಸತ್ತು ಹೋಗಿದ್ದು ಬಹಳ ಕಮ್ಮಿ. ಚಿಕ್ಕಮಕ್ಕಳು ಸತ್ತು ಹೋಗಿರಬಹುದು ಬಿಟ್ಟರೆ ವಯಸ್ಕರು ತೀರಿಹೋಗಿದ್ದು ಕೇಳಿಲ್ಲ. ಯಾಕೆಂದರೆ ಮದ್ದು ಹಾಕಲಾಗಿದೆ ಅಂತ ಸಂಶಯ ಬಂದರೂ ಸಾಕು ಗೌಡನ ಹತ್ತಿರ ಹೋಗಿ ಪ್ರತಿಮದ್ದು ಕೊಡಿಸಿಕೊಂಡು ಬಂದುಬಿಡುತ್ತಾರೆ. ಒಮ್ಮೊಮ್ಮೆ ಮದ್ದು ಹಾಕಿರುವದಿಲ್ಲ. ಆಹಾರದಲ್ಲಿ ಏನೋ ವ್ಯತ್ಯಾಸವಾಗಿ ವಾಂತಿಯಾಗಿರುತ್ತದೆ. ಆದರೆ ಮನೆಯ ಹಿರಿಯರಿಗೆ ಬರೋಬ್ಬರಿ ಗೊತ್ತಾಗುತ್ತದೆ. ಯಾವದಕ್ಕೂ ಇರಲಿ ಅಂತ ಮದ್ದು ತೆಗೆಯುವ ಗೌಡನ ಕಡೆ ಹೋಗುತ್ತಾರೆ. ಗೌಡ ಕಹಿ ಕಷಾಯ ಕುಡಿಸಿ, ವಾಂತಿ ಮಾಡಿಸಿ, ನೋಡಿ ಖಚಿತ ಪಡಿಸುತ್ತಾನೆ. ಒಟ್ಟಿನಲ್ಲಿ ಗೌಡನ ಮಾತು ಕೇಳಿದ ನಂತರವೇ ಒಂದು ತರಹದ ಸಮಾಧಾನ.

ಮದ್ದು ಹಾಕುವದರಿಂದ ಆಗುವ ಮತ್ತೊಂದು ಲಫಡಾ ಅಂದರೆ ಕೆಲವು ಮನೆತನಗಳಿಗೆ, ಕುಟುಂಬಗಳಿಗೆ 'ಮದ್ದು ಹಾಕುವವರು' ಅನ್ನುವ ಲೇಬಲ್ ಬಂದುಬಿಡುತ್ತದೆ. ಅವರು ಒಂದು ತರಹದಲ್ಲಿ ಸಮಾಜದಿಂದ ಬಹಿಷ್ಕಾರ ಹಾಕಿಸಿಕೊಂಡವರು. ಅವರ ಜೊತೆ ಬಾಕಿ ಜನರ ಸಂಪರ್ಕ ಅಷ್ಟಕಷ್ಟೇ. ಅವರ ಮನೆಗೆ ಹೋದರೂ ಯಾರೂ ಏನೂ ತಿಂದು, ಕುಡಿದು ಮಾಡುವದಿಲ್ಲ. ಅವರಿಗೂ ಅದು ರೂಢಿಯಾಗಿರುತ್ತದೆ. ಮುಜುಗರವಾದರೂ ವಿಧಿಯಿಲ್ಲ. ಯಾಕೆಂದರೆ ಅವರು ಮದ್ದು ಹಾಕುವವರು. ಹಾಗಂತ ತಲೆತಲಾಂತರಗಳಿಂದ ಲೇಬಲ್ ಹಚ್ಚಿಬಿಡಲಾಗಿದೆ. ಆ ಮನೆತನದವರ ಜೊತೆ ವಿವಾಹ ಸಂಬಂಧಗಳೂ ನಿಷಿದ್ಧ. ಅಂತವರ ಮನೆಗಳಿಗೆ ಯಾರಾದರೂ ಹೆಣ್ಣು ಕೊಡಬೇಕು ಅಂದರೆ ಆಕೆ ಮತ್ತೊಂದು 'ಮದ್ದು ಹಾಕುವ' ಮನೆತನದಿಂದಲೇ ಬಂದಿರಬೇಕು. ಇಲ್ಲಾ ಎಲ್ಲೋ ದೂರದ ಸೀಮೆಯಿಂದ ಸಾವಿರ ಸುಳ್ಳು ಹೇಳಿ ಹೆಣ್ಣು ತರಬೇಕು.

'ಮದ್ದು ಹಾಕುವವರು' ಅನ್ನುವ ಲೇಬಲ್ ಇದು self fulfilling prophecy ಆಗಿಬಿಡುವ ಆಪಾಯ ಬಹಳ. ಒಂದು ಮನೆತನದವರು ನಿಜವಾಗಿಯೂ ಮದ್ದು ಹಾಕುತ್ತಾರೋ ಬಿಡುತ್ತಾರೋ ಆದರೆ ಒಮ್ಮೆ ಆ ಲೇಬಲ್ ಬಂತು ಮತ್ತು ಅದರಿಂದಾಗಿ ಒಂದು ತರಹದ ಬಹಿಷ್ಕಾರ ಬಿತ್ತು ಅಂತಾದರೆ ಅವರದ್ದೂ ತಲೆಕೆಟ್ಟು ಅವರೂ ಕ್ರುದ್ಧರಾಗುವದು ಸಹಜ. ಮತ್ತೆ ಮನೆಯಲ್ಲಿ ಮದುವೆಯಾಗದ ಗಂಡುಮಕ್ಕಳು ಹೆಣ್ಣುಮಕ್ಕಳು ಉಳಿದುಬಿಡುತ್ತಾರೆ. ಹಾಗಾಗಿ ಅವರಿಗೆ ಉಳಿದವರ ಮೇಲೆ ಭಯಂಕರ ಮತ್ಸರ ಪಡಲು, ದ್ವೇಷ ಸಾಧಿಸಲು ಸಿಕ್ಕಾಪಟ್ಟೆ ಸ್ಟ್ರಾಂಗ್ ಕಾರಣಗಳು ಸಿಕ್ಕಿಬಿಡುತ್ತವೆ. ಮೊದಲು ಮದ್ದು ಹಾಕದಿದ್ದವರೂ ಈಗ ಹಾಕಲು ಶುರುಮಾಡಿದರೆ ಏನೂ ಆಶ್ಚರ್ಯವಿಲ್ಲ. ಮದ್ದು ಹಾಕುವದು ಎಂಬ ಪದ್ಧತಿ ಶುರುವಾಗಿದ್ದೇ ಹೀಗೋ ಅನ್ನುವ ಸಂಶಯ ನನಗೆ. ಯಾವದೋ ಕಾಲದಲ್ಲಿ ಯಾರದ್ದೋ ಮೇಲೆ ಇಂತಹ ಅಪವಾದವೊಂದನ್ನು ಹೊರೆಸಿದ ಕಾರಣಕ್ಕೇ ಅವರು ಮದ್ದು ಹಾಕಲು ಆರಂಭಿಸಿದರೇ?

1976-77 ಇರಬಹುದು. ಆಗ ನನಗೆ ಇನ್ನೂ ನಾಲ್ಕೈದು ವರ್ಷ. ರಜೆ ಬಂತು ಅಂದರೆ ಸಿರ್ಸಿ ಹತ್ತಿರದ ಅಜ್ಜನಮನೆಗೆ ಓಟ. ಅಮ್ಮನ ತವರೂರು ಅದು. ಮೂರೂ ಹೊತ್ತೂ ಕಾಡು, ಮೇಡು, ತೋಟ, ಗದ್ದೆ, ನದಿ ಅಂತ ತಿರುಗುತ್ತಲೇ ಇರುತ್ತಿದ್ದೆ. ಪಟ್ಟಣದ ಮಂದಿ ನಾವು. ಹಾಗಾಗಿ ಹಳ್ಳಿಯ ಪರಿಸರ ಬಹಳ ಹಿಡಿಸುತ್ತಿತ್ತು. ಮತ್ತೆ ಅಜ್ಜನಮನೆಯಲ್ಲಿ ಅಜ್ಜ, ಅಜ್ಜಿ, ಚಿಕ್ಕಮ್ಮ, ಇಬ್ಬರು ಸೋದರಮಾವಂದಿರು, ಊರ ಜನ ಎಲ್ಲ ಬೇಕಾದಷ್ಟು ಮುದ್ದು ಮಾಡಿ, ಅಚ್ಛಾ ಅಚ್ಛಾ ಮಾಡಿ ನಮ್ಮದು ರಜೆ ಪೂರ್ತಿ ಫುಲ್ ಐಶ್ ಜಿಂದಗಿ.

ಹಾಗೆಯೇ ಒಮ್ಮೆ  ಅಜ್ಜನಮನೆಗೆ ಹೋದಾಗ ಒಂದು ದಿನ ಮಧ್ಯಾನ ತೋಟದ ಕಡೆಯಿಂದ ಮನೆಗೆ ಬರುತ್ತಿದ್ದೆ. ಜೊತೆಗೆ ಸೋದರಮಾವ ಇದ್ದ. ಇನ್ನೇನು ಮನೆ ಕಾಂಪೌಂಡ್ ಎಂಟ್ರಿ ಮಾಡುವ ಮೊದಲಿಗೆ ಸಿಗುತ್ತಿದ್ದ ದರೆ (ಸಣ್ಣ ದಿಬ್ಬ) ಹತ್ತಬೇಕು ಅನ್ನುವಷ್ಟರಲ್ಲಿ ಮಾವ ಕೈ ಜಗ್ಗಿ ನಿಲ್ಲಿಸಿದ. 'ಏನು?' ಅಂತ ಲುಕ್ ಕೊಟ್ಟೆ. 'ಶ್!ಸೈಲೆನ್ಸ್!' ಅಂತ ಬಾಯಿ ಮೇಲೆ ಕೈಯಿಟ್ಟು ಸನ್ನೆ ಮಾಡಿದ. ನಂತರ ಆಗಿದ್ದು ಮಾತ್ರ ವಿಚಿತ್ರ ಘಟನೆ.

ಮಾವ ಬಗ್ಗಿ ಒಂದು ಕಲ್ಲು ಎತ್ತಿಕೊಂಡವನೇ ಗುರಿಯಿಟ್ಟು ಕಲ್ಲು ಬೀಸಿದ. ಅಡಿಕೆ ಮರದ ಕಟ್ಟಿಗೆಯಿಂದ ಮಾಡಿದ ಬೇಲಿ ಕಲ್ಲಿನೇಟಿನ ಹೊಡೆತಕ್ಕೆ ಅದುರಾಡಿತು. ಬೇಲಿಯಿಂದ ಏನೋ ಕೆಳಗೆ ಬಿತ್ತು. ಏನೂಂತ ಗೊತ್ತಾಗಲಿಲ್ಲ. ಮಾವ ಮತ್ತು ನಾನು ಇಬ್ಬರೂ ಹತ್ತಿರ ಹೋಗಿ ನೋಡಿದರೆ ಒಂದು ದೊಡ್ಡ ಹಲ್ಲಿ ಸೈಜಿನ ಪ್ರಾಣಿ ಕಲ್ಲಿನೇಟಿನಿಂದ ಶಿವಾಯ ನಮಃ ಆಗಿತ್ತು. ಖಡಕ್ ಗುರಿಯೆಂದರೆ ಅದು. ಸುಮಾರು ಇಪ್ಪತ್ತಡಿ ದೂರದಿಂದ ಗುರಿಯಿಟ್ಟು ಎಸೆದ ಕಲ್ಲು ಆ ಪ್ರಾಣಿಯನ್ನು ಮಟಾಶ್ ಮಾಡಿತ್ತು. ದೊಡ್ಡ ಸೈಜಿನ ಹಲ್ಲಿ ತುಂಬಾ colorful ಆಗಿತ್ತು. ರಂಗೀನ್ ಹಲ್ಲಿ.

ಸಾಧಾರಣವಾಗಿ ಹೀಗೆಲ್ಲ ಪ್ರಾಣಿಹಿಂಸೆ ಮಾಡದ ಮಾವ ಯಾಕೆ ಹೀಗೆ ಮಾಡಿದ ಅಂತ ಗೊತ್ತಾಗಲಿಲ್ಲ. ಮಾವನೇ ಹೇಳಿದ, 'ಅದು ಮದ್ದು ಹಾಕುವವರು ಮದ್ದು ತಯಾರುಮಾಡುವ ಪ್ರಾಣಿ. ಗೊತ್ತಾತೇನು?' ನಮಗೆ ಏನು ಗೊತ್ತಾಗಬೇಕು? ಮದ್ದು ಹಾಕುವದು ಅನ್ನುವದನ್ನು ಕೇಳಿ ಗೊತ್ತಿತ್ತು. 'ಹೇಳದೇ ಕೇಳದೇ ಯಾರ್ಯಾರದ್ದೋ ಮನೆಗೆ ಹೋಗಬೇಡ. ಎಲ್ಲಾದರೂ ಮದ್ದು ಗಿದ್ದು ಹಾಕಿಬಿಟ್ಟಾರು,' ಅಂತ ಹಿರಿಯರ ಎಚ್ಚರಿಕೆಯ ಮಾತೊಂದೇ ಕೇಳಿದ್ದು. ಅದು ಬಿಟ್ಟರೆ ಮದ್ದು ಹಾಕುವದರ ಬಗ್ಗೆ ಅಂದು ಏನೂ ಗೊತ್ತಿರಲಿಲ್ಲ. ಇಲ್ಲಿ ನೋಡಿದರೆ ಈ ಮಾವ ಹಲ್ಲಿ ಜಾತಿಯ ಪ್ರಾಣಿಯೊಂದನ್ನು ಕೊಂದು ಅದೇ ಮದ್ದಿನ ವಿಷ ತಯಾರು ಮಾಡುವ ಪ್ರಾಣಿ ಅನ್ನುತ್ತಿದ್ದಾನೆ.

ಕೈಯಲ್ಲಿದ್ದ ಕೃಷಿ ಕತ್ತಿಯಿಂದ ಅಲ್ಲೇ ಒಂದು ಸಣ್ಣ ಗುಂಡಿ ತೋಡಿದ ಮಾವ ಆ ಸತ್ತ ಹಲ್ಲಿಯನ್ನು ಅದರಲ್ಲಿ ನೂಕಿ ಮೇಲಿಂದ ಮಣ್ಣು ಮುಚ್ಚಿದ. 'ಅದನ್ನು ಕೊಂದರಷ್ಟೇ ಸಾಲದು. ಸತ್ತ ಹಲ್ಲಿ ಸಿಕ್ಕರೂ ಅವರಿಗೆ ಓಕೆ. ಯಾಕೆಂದರೆ ವಿಷ ಮಾಡಲು ಹಲ್ಲಿಯನ್ನು ಕೊಲ್ಲಲೇಬೇಕು. ಹಾಗಾಗಿ ಅಕಸ್ಮಾತ ಅಂತಹ ಹಲ್ಲಿ ಕಂಡು ಅದನ್ನು ಕೊಂದರೆ ಹಾಗೆಯೇ ಬಿಟ್ಟು ಬರಬಾರದು. ಗುಂಡಿ ತೋಡಿ ಮುಚ್ಚಿಯೇ ಬರಬೇಕು. ಗೊತ್ತಾತೇನು?' ಅಂದ ಮಾವ. ತಲೆಯಾಡಿಸಿದೆ.

ಒಟ್ಟಿನಲ್ಲಿ ಆ ಹಲ್ಲಿ ಜಾತಿಯ ಪ್ರಾಣಿಯ ನಸೀಬ್ ಸರಿಯಿಲ್ಲ. ಮದ್ದು ಹಾಕುವವರಿಗೆ ಸಿಕ್ಕರೂ ಸಾವು. ಅವರು ಅದನ್ನು ಕೊಂದು, ನೇತಾಕಿ ಮದ್ದೆಂಬ ವಿಷ ತಯಾರಿಸುತ್ತಾರೆ. ಇತರೆ ಜನರ ಕೈಗೆ ಸಿಕ್ಕರೂ ಸಾವು. ಅವರು ಕೊಂದು, ಗುಂಡಿ ತೋಡಿ, ಸಮಾಧಿ ಮಾಡಿ ಹೋಗುತ್ತಾರೆ. ಆ ಹಲ್ಲಿ ಜಾತಿಯ ಪ್ರಾಣಿ ಇನ್ನೂ ಇದೆಯೋ ಅಥವಾ ಈ ಪರಿ ಹೊಡೆಯಿಸಿಕೊಂಡು ಪೂರ್ತಿ ವಿನಾಶವಾಗಿ extinct ಆಗಿಹೋಗಿದೆಯೋ ಗೊತ್ತಿಲ್ಲ.

ಆ ಹಲ್ಲಿ ರಂಗೀನ್ (colorful) ಆಗಿದ್ದು ನೋಡಿದರೆ ಅದು ಯಾವದೋ ಜಾತಿಯ ಊಸರವಳ್ಳಿ (chameleon) ಏನೋ ಅಂತ ಈಗ ವಿಚಾರ.

ಸಿರ್ಸಿ ಸೀಮೆಯಲ್ಲಿ ಮದ್ದು ಹಾಕುವದರ ಆರ್ಭಟ ಅಷ್ಟಿರಲಿಲ್ಲ. ನಮ್ಮ ಅಜ್ಜನಮನೆ ಊರು, ಸುತ್ತಮುತ್ತಲಿನ ಊರುಗಳಲ್ಲಿ ಅದರ ಸದ್ದಿರಲಿಲ್ಲ. ಹಾಗಾಗಿ ಆ ಕಡೆ ಹೋದಾಗ ಅಜ್ಜನಮನೆ ಮಂದಿ ಏನೂ ಎಚ್ಚರಿಕೆ ಕೊಡುತ್ತಿರಲಿಲ್ಲ. ಎಲ್ಲರ ಮನೆಗೆ ಹೋಗಿ ಆರಾಮಾಗಿ ಊಟ ತಿಂಡಿ ಮೆದ್ದು ಬರುತ್ತಿದ್ದೆವು.

ಆದರೆ ತಂದೆಯವರ ಊರಾದ ಕುಮಟಾ - ಹೊನ್ನಾವರ ಸೀಮೆಯ ವಿಷಯವೇ ಬೇರೆ. ಆ ಕಡೆ ಮದ್ದು ಹಾಕುವದು ಜಾಸ್ತಿ ಚಾಲ್ತಿಯಲ್ಲಿದ್ದಂತೆ ಕಾಣಿಸುತ್ತಿತ್ತು. ಅಜ್ಜ, ತಂದೆಯವರ ತಂದೆ, ಆಗಲೇ ಎಂಬತ್ತು ದಾಟಿದ ವೃದ್ಧ. ಆದರೆ ಪಟ್ಟಣದಿಂದ ಬಂದ ಮಗ, ಸೊಸೆ, ಮಮ್ಮಕ್ಕಳ ಬಗ್ಗೆ ವಿಪರೀತ ಕಾಳಜಿ. ಯಾರದ್ದಾದರು ಮನೆಗೆ, ಅಲ್ಲೇ ಸುತ್ತಮುತ್ತಲಿನ ಊರಿನ ನೆಂಟರ ಮನೆಗಳಿಗೆ, ಹೋಗಬೇಕು ಅಂತಾದರೆ ಅಜ್ಜ ಎಲ್ಲ ಕೇಳಿ, ತನ್ನ ತಲೆಯಲ್ಲಿರುವ ದೊಡ್ಡ ಮಾಹಿತಿ ಭಂಡಾರ ಅಗೆದು, ನಾವು ಯಾವದೇ ಮದ್ದು ಹಾಕುವವರ ಮನೆಗೆ ಹೋಗುತ್ತಿಲ್ಲ ಅಂತ ಖಾತ್ರಿ ಮಾಡಿಕೊಂಡೇ ಕಳಿಸಿಕೊಡುತ್ತಿದ್ದ. 'ಇಂತಾ ಊರಿನ, ಇಂತವರ ಮನೆಗೆ ಹೋಗಬೇಡಿ. ಹೋದರೂ ಏನೂ ತಿಂಡಿ ತೀರ್ಥ ಮಾಡಬೇಡಿ,' ಅಂತ ಅವನ ಕಟ್ಟೆಚ್ಚರಿಕೆ. ಅವರೆಲ್ಲ ಮದ್ದು ಹಾಕುವ ಮನೆತನದವರಂತೆ. ನಮ್ಮ ಬಳಗದಲ್ಲಿ ಅಂತವರು ಯಾರೂ ಇರಲಿಲ್ಲ. ಆದರೆ ನಮ್ಮ ಬಳಗದವರಿದ್ದ ಹಳ್ಳಿಗಳಲ್ಲಿ ಇದ್ದರು. ಒಮೊಮ್ಮೆ ಅಚಾನಕ್ ಆಗಿ ಅಂತವರ ಮನೆಗೆ ಹೋಗುವ ಪರಿಸ್ಥಿತಿ ಬಂದರೂ ಬರಬಹುದು. ಹಾಗೇನಾದರು ಆದರೆ ಲಕ್ಷ್ಯದಲ್ಲಿರಲಿ ಅಂತ ಅಜ್ಜನ ಕಳಕಳಿ. ಸಂಜೆ ಮನೆಗೆ ಬಂದ ಮೇಲೆ ಆವತ್ತು ಎಲ್ಲೆಲ್ಲಿಗೆ ಹೋಗಿ ಬಂದಿರಿ ಅಂತ ಕೇಳಿ, ಎಲ್ಲ ಡೀಟೇಲ್ಸ್ ತೆಗದುಕೊಂಡು ನಾವು ಎಲ್ಲೂ ಅಂತಹ ಮದ್ದು ಹಾಕುವವರ ಮನೆಗೆ even by mistake ಸಹಿತ ಹೋಗಿಬಂದಿಲ್ಲ ಅಂತ ಖಾತ್ರಿ ಮಾಡಿಕೊಂಡಾಗಲೇ ನೆಮ್ಮದಿ ಅವನಿಗೆ.

ನಮ್ಮ ಅಕ್ಕ (ಕಸಿನ್) ಒಬ್ಬಳ ಗಂಡನಮನೆ ಊರು ಮದ್ದು ಹಾಕುವವರ ಫೇಮಸ್ ಊರಂತೆ. ಆ ಊರಿನ ಒಂದೆರೆಡು ಕೇರಿಗಳು (ಓಣಿಗಳು) ಮದ್ದು ಹಾಕುವ ಕೇರಿಗಳು ಅಂತಲೇ ಕುಪ್ರಸಿದ್ಧ. ಆ ಒಂದೆರೆಡು ಓಣಿಯ ಮಂದಿ ಊರಿನ ಇತರೇ ಜನರಿಂದ ಒಂದು ತರಹ ostracized. ಬಹಿಷ್ಕೃತರು. ಪಾಪ. ನಾವು ಆ ಊರಿಗೆ ಒಂದರೆಡು ಬಾರಿ ಹೋದರೂ ಆ ಡೇಂಜರಸ್ ಓಣಿಗಳಿಗೆ ಹೋಗುವ ಜುರ್ರತ್ ಮಾಡಲಿಲ್ಲ. ಹೋಗುವ ಕಾರಣವೂ ಇರಲಿಲ್ಲ. ಆದರೆ ಆ ಊರಿನ ಆ ಖತರ್ನಾಕ್ ಓಣಿಗಳ ಬಗ್ಗೆ ಕೆಟ್ಟ ಕುತೂಹಲ ಮಾತ್ರ ಇರುತ್ತಿತ್ತು.

ಇದು ಒಂದು ಊರಿನ ಒಂದೆರೆಡು ಓಣಿಗಳ ಮಾತಾಯಿತು. ಇಡೀ ಒಂದು ಹಳ್ಳಿಗೆ ಹಳ್ಳಿಯೇ ಮದ್ದು ಹಾಕುವವರ ಹಳ್ಳಿ ಅಂತಲೇ ಕುಖ್ಯಾತವಾಗಿದ್ದು ಸಹ ಇದೆ. ಊರಿನ ಹೆಸರು ಬೇಡ ಬಿಡಿ. ಅಲ್ಲೂ ನಮಗೆ ಪರಿಚಯದವರು ಇದ್ದಾರೆ.

ಒಮ್ಮೆ ಹೀಗಾಗಿತ್ತು. ೧೯೮೮ ಜುಲೈ ತಿಂಗಳು. ಚೆನ್ನೈಗೆ ಅಂದರೆ  ಅಂದಿನ ಮದ್ರಾಸಿಗೆ ಹೋಗಿದ್ದೆ. ನ್ಯಾಷನಲ್ ಲೆವೆಲ್ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು. ತಂದೆಯವರೂ ಜೊತೆಗೆ ಬಂದಿದ್ದರು. ಅಲ್ಲಿ ಹೋದಾಗ ಬೇರೆಬೇರೆ ಕಡೆಯಿಂದ ಬಂದಿದ್ದ ಇತರೇ ವಿದ್ಯಾರ್ಥಿಗಳೂ ಭೆಟ್ಟಿಯಾದರು. ಒಬ್ಬನ ಜೊತೆ ಮಾತಾಡುತ್ತಿದ್ದೆ. ಅವನೂ ಹವ್ಯಕನೇ. ಅಷ್ಟರಲ್ಲಿ ತಂದೆಯವರೂ ಅಲ್ಲಿಗೆ ಬಂದರು. ಸಹಜವಾಗಿ ಅವನ ಹತ್ತಿರ 'ನಿಂದು ಯಾವೂರಪ್ಪ?' ಅಂತ ಕೇಳಿದರು. ಹವ್ಯಕರು ಭೆಟ್ಟಿಯಾದಾಗ ಮೂಲ ಊರಿನ ಬಗ್ಗೆ ಕೇಳುವದು ವಾಡಿಕೆ. ಆ ಇನ್ನೊಬ್ಬ ಮಾಣಿ ಹೇಳಿದ ಊರಿನ ಹೆಸರು ಕೇಳಿ ಬೆಚ್ಚಿಬಿದ್ದವ ಮಾತ್ರ ನಾನು. ಮೇಲೆ ಹೇಳಿದ ಹಳ್ಳಿಯೇ ಅವನ ಮೂಲ. ಇಡೀ ಹಳ್ಳಿಯೇ ಮದ್ದು ಹಾಕುವವರ ಹಳ್ಳಿ ಅಂತ ಫೇಮಸ್ ಆಗಿತ್ತಲ್ಲ ಅದೇ ಅವನ ಮೂಲ ಊರು. ನಾನು ಅವನು ಏನೂ ತಿಂಡಿ ತೀರ್ಥ exchange ಮಾಡಿಕೊಳ್ಳುವ ಸಂದರ್ಭ ಬರಲಿಲ್ಲ ಬಿಡಿ. ಬಂದಿದ್ದರೆ ಅವನ ಮದ್ದು ಹಾಕುವ ಊರಿನ background ನನ್ನ ಮನಸ್ಸಿನ ಯಾವದೋ ಒಂದು ಮೂಲೆಯಲ್ಲಿ ಸಂಶಯದ ಸುಳಿಯೊಂದನ್ನು ಎಬ್ಬಿಸುತ್ತಿತ್ತೇನೋ? ಗೊತ್ತಿಲ್ಲ.

ನಂತರ ತಂದೆಯವರಿಗೆ ಅವನ ಊರಿನ ಬಗ್ಗೆ, ಆ ಊರಿನ 'ಮದ್ದು ಹಾಕುವವರ ಊರು' ಅನ್ನುವ ಕುಖ್ಯಾತಿಯ ಬಗ್ಗೆ ಹೇಳಿದೆ. ಅವರಿಗೆ ಗೊತ್ತೂ ಇರಲಿಲ್ಲ. ಯಾಕೆಂದರೆ ಅದು ಹೊನ್ನಾವರ ಸೀಮೆಯ ಊರಾಗಿರಲಿಲ್ಲ. ಮತ್ತೆ ನಮ್ಮ ತಂದೆಯವರೋ ದೊಡ್ಡ absentminded  professor. ಕೆಲಸಕ್ಕೆ ಬಾರದ ಯಾವ ವಿಷಯವೂ ಅವರ ತಲೆಯಲ್ಲಿ ಉಳಿಯುವದಿಲ್ಲ. ಅಂತದ್ದೆಲ್ಲ ಉಪಯೋಗಿಲ್ಲದ ಮಾಹಿತಿ ಸಂಗ್ರಹಣೆ, ವಿಶ್ಲೇಷಣೆ ಎಲ್ಲ ನಮ್ಮದೇ ಕೆತ್ತೆಬಜೆ ಕಾರ್ಬಾರ್. ಅದಕ್ಕೇ ತಾನೇ ಇಂತಹ ಬ್ಲಾಗ್ ಬರೆಯುತ್ತಿದ್ದೇವೆ? :)

ಈ ಮದ್ದು ಹಾಕುವದರ ಬಗ್ಗೆ ಯಾವದೇ ತರಹದ scientific investigation ಆಗಿಲ್ಲ ಅಂತ ಭಾವನೆ. ಯಾಕೆಂದರೆ ಯಾರೂ ಡಾಕ್ಟರ್  ಹತ್ತಿರ 'ನನಗೆ ಮದ್ದು ಹಾಕಿದ್ದಾರೆ. ಔಷಧಿ ಕೊಡಿ,' ಅಂತ ಹೋದ ಬಗ್ಗೆ ಮಾಹಿತಿಯಿಲ್ಲ. ಮದ್ದು ತೆಗೆಸಲು ಹೋಗುವದು traditional ಗೌಡನ ಹತ್ತಿರವೇ. ಹಾಗಾಗಿ ಮಾಡ್ರನ್ ವೈದ್ಯರಿಗೆ ಇದರ ಬಗ್ಗೆ ಗೊತ್ತೇ ಇಲ್ಲ. ಆದರೂ ಒಂದೆರೆಡು ಪರಿಚಿತ ಡಾಕ್ಟರ್ ಹತ್ತಿರ ಇದರ ಬಗ್ಗೆ ಕೇಳಿದ್ದೇನೆ. 'ಆ ಮದ್ದು ಅನ್ನುವ ವಿಷದಿಂದ ಏನೋ bacterial infection ಆಗಿ digestive system ಅನ್ನು ಖರಾಬ್ ಮಾಡುತ್ತದೆ ಅಂತ ನಮ್ಮ ಭಾವನೆ. wide spectrum antibiotics ಕೊಟ್ಟರೆ ಎಲ್ಲ ಸರಿಹೋಗಬಹುದು. ಜೊತೆಗೆ saline, drips ಕೊಟ್ಟು hydrate ಮಾಡಬೇಕು. ಅಷ್ಟು ಮಾಡಿದರೆ ಆರಾಮ್ ಆಗುತ್ತಾರೆ ಅಂತ ನಮ್ಮ ಭಾವನೆ,' ಅಂದರು ಡಾಕ್ಟರ್. ಆದರೆ ಯಾರೂ ಆ ರಿಸ್ಕ್ ತೆಗೆದುಕೊಳ್ಳುವದಿಲ್ಲ. ಈ ಮಾಡ್ರನ್ ಡಾಕ್ಟರ 'ನಮ್ಮ ಭಾವನೆ, ನಮ್ಮ ಭಾವನೆ' ಅನ್ನುವ ಮಾತು ಕೇಳುತ್ತ ಕೂತರೆ ಮದ್ದು ಹಾಕಿಸಿಕೊಂಡ ಹವ್ಯಕ ಭಾವಯ್ಯ ಶಿವಾಯ ನಮಃ ಆಗಿಹೋದರೇ? ಅದೆಲ್ಲ ಬೇಡ ಅಂತ ಮದ್ದು ತೆಗೆಯುವ ಗೌಡನ ಮನೆಗೆ ಓಡುತ್ತಾರೆ. ಒಟ್ಟಿನಲ್ಲಿ ಈ ಮದ್ದು ಹಾಕುವದರ ಬಗ್ಗೆ ಒಂದು scientific ಅಧ್ಯಯನ ಆಗೇ ಇಲ್ಲ. ಅದರಲ್ಲೂ ಮದ್ದು ಹಾಕಿಸಿಕೊಂಡವನ ಹೊಟ್ಟೆಯಲ್ಲಿ ಮತ್ತೊಂದು ಹಲ್ಲಿ ಹುಟ್ಟಿ, ಅದೇ ಅವನ ಸಾವಿಗೆ ಕಾರಣವಾಗುವ ಬಗ್ಗೆಯಾದರೂ ಒಂದು ಅಧ್ಯಯನವಾಗಬೇಕಿತ್ತು. ಒಳ್ಳೆ horror ಸಿನೆಮಾದ ಕಥೆಯಂತಿದೆ ಆ ಕಲ್ಪನೆ - ಹೊಟ್ಟೆಯಲ್ಲಿ ಜೀವಂತ ಹಲ್ಲಿ!

ಇನ್ನು ನಮ್ಮ ಮನೆತನದಲ್ಲಿ ಅಜ್ಜ (ತಾಯಿಯ ತಂದೆ) ಒಬ್ಬರಿಗೇ ಮದ್ದು ಬಿದ್ದಿದ್ದು. ಅದೂ ಯಾವದೋ ಕಾಲದಲ್ಲಂತೆ. ಆಗ ನಾವಿನ್ನೂ ಹುಟ್ಟಿರಲಿಲ್ಲ. ಅಜ್ಜಿ (ತಾಯಿಯ ತಾಯಿ) ಮಾತ್ರ ಅದರ ಬಗ್ಗೆ ಒಂದೆರೆಡು ಬಾರಿ ಮಾತಾಡಿ, ಮದ್ದು ಹಾಕಿದ(!) ಮತ್ತೊಬ್ಬ ಮಹಿಳೆಗೆ ಮಾತಿನಲ್ಲೇ ಹಿಡಿಶಾಪ ಹಾಕಿದ್ದು ಬರೋಬ್ಬರಿ ನೆನಪಿದೆ. ಅದು ಯಾವಾಗಲೋ ಅಜ್ಜ, ಅಜ್ಜಿಯ ಮದುವೆಯಾದ ಹೊಸದರಲ್ಲಂತೆ. ಅಲ್ಲೇ ಸ್ವಲ್ಪ ದೂರದ ಊರಿನ ದೊಡ್ಡ ಮನೆತನದ ಮಹಿಳೆಯೊಬ್ಬಳು ಅಜ್ಜನಿಗೆ ಮದ್ದು ಹಾಕಿದ್ದಳು ಅಂತ ಅಜ್ಜಿಯ ಖಡಕ್ ನಂಬಿಕೆ. ಈಗ ಕೇಳೋಣ ಅಂದರೆ ಅಜ್ಜಿ ತನ್ನ ಅರವತ್ತೂ ಚಿಲ್ಲರೆ ವಯಸ್ಸಿನಲ್ಲಿ ಈಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಶಿವಾಯ ನಮಃ ಆಗಿಹೋದಳು. ಆಗ ಅಜ್ಜಿಯನ್ನು ಗೋಳಾಡಿಸುವದು ಮಾತ್ರ ಗೊತ್ತಿತ್ತೇ ವಿನಃ ಇಂತದ್ದರ ಬಗ್ಗೆ ಮಾಹಿತಿ ತೆಗೆಯುವ ಬುದ್ಧಿ ಬಂದಿರಲಿಲ್ಲ. ಈಗ ಬಂದಿದೆ. ಅಜ್ಜಿಯೂ ಇಲ್ಲ. ಅಜ್ಜನೂ ಇಲ್ಲ. ತಾರುಣ್ಯದಲ್ಲಿ ಮದ್ದು ಹಾಕಿಸಿಕೊಂಡು ಆರೋಗ್ಯ ಕೊಂಚ ಮಟ್ಟಿಗೆ ಬರ್ಬಾದ್ ಆಗಿದ್ದರೂ ತನ್ನ ೯೫ ನೇ ವಯಸ್ಸಿನಲ್ಲಿ ಈಗ ಎರಡ್ಮೂರು ವರ್ಷದ ಹಿಂದೆ ಶಿವಾಯ ನಮಃ ಆದ ಅಜ್ಜ. ಮದ್ದು ಹಾಕಿಸಿಕೊಳ್ಳುವ ಮೊದಲು ಸಿಕ್ಕಾಪಟ್ಟೆ ಸ್ಪುರದ್ರೂಪಿಯಾಗಿದ್ದನಂತೆ ಅಜ್ಜ. ಒಮ್ಮೆ ಮದ್ದು ಹಾಕಿಸಿಕೊಂಡ ಮೇಲೆ ಮೊದಲಿನ ರೂಪ ಬರಲೇ ಇಲ್ಲ ಅಂತ ಅಜ್ಜಿ ಹೇಳುತ್ತಿದ್ದಳು. ಅಷ್ಟು handsome ಇದ್ದಿದ್ದಕ್ಕೆಯೇ ಹತ್ತಿರದ ಊರಿನ ಯಾವದೋ ಅತೃಪ್ತ ಆಂಟಿ ಅಜ್ಜನಿಗೆ ಮದ್ದು ಹಾಕಿದ್ದಳೇ? ಇದ್ದರೂ ಇರಬಹದು.

ಯಂಡಮೂರಿ ವೀರೇಂದ್ರನಾಥ ಅವರ ಕಾದಂಬರಿಯೊಂದರಲ್ಲಿ ಮದ್ದು ಹಾಕುವದರ ಬಗ್ಗೆ ಓದಿದ ನೆನಪು. ಅಲ್ಲೂ ಹೆಚ್ಚಿನ ಮಾಹಿತಿ ಏನೂ ಇದ್ದ ನೆನಪಿಲ್ಲ. ಹಲ್ಲಿಯನ್ನು ನೇತಾಕಿ ಮದ್ದಿನ ವಿಷ ತೆಗೆಯುವ ವಿಧಾನ ಬರೆದಿದ್ದರು. ಅಷ್ಟೇ. ಅದೂ ಅವರ ಕಥೆಗೆ ಪೂರಕವಾಗಿ. ತೆಲಗು ಮೂಲದ ಕಾದಂಬರಿ. ಕನ್ನಡಕ್ಕೆ ಅನುವಾದವಾಗಿತ್ತು. ಹೆಸರು ನೆನಪಿಲ್ಲ.

೧೯೯೦ ರ ನಂತರ ಮದ್ದು ಹಾಕುವದರ ಬಗ್ಗೆ ಜಾಸ್ತಿ ಕೇಳಿಲ್ಲ. ಮತ್ತೆ ನಮಗೆ ಆಕಡೆಯ ಸಂಪರ್ಕವೂ ಕಮ್ಮಿಯಾಗಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಆ ಪದ್ಧತಿ ಇನ್ನೂ ಜೀವಂತವಾಗಿದೆಯೋ ಅಥವಾ ನಶಿಸಿಹೋಗಿದೆಯೋ ಎಂಬ ಬಗ್ಗೆ ಮಾಹಿತಿ ಇಲ್ಲ. ಮಾನವ ಸಹಜ ತಮೋ ಗುಣಗಳಾದ ಮತ್ಸರ, ದ್ವೇಷ, ಹೊಟ್ಟೆಕಿಚ್ಚು ಹೋಗಿರುವದಿಲ್ಲ. ಮದ್ದು ಹಾಕುವದು ಎಂಬ ಪದ್ಧತಿ ಹೋಗಿದ್ದರೂ ಅದರ ಸಾವಿರಪಟ್ಟು ವಿಷಪೂರಿತವಾದ ಮತ್ತೊಂದು ಏನಾದರೂ ಹುಟ್ಟಿಕೊಂಡಿರುತ್ತದೆ. ಈಗ ಹೊಟ್ಟೆಗೆ ಮದ್ದು ಹಾಕುವ ಜರೂರತ್ತಿಲ್ಲ. ತಲೆಗೇ ಮದ್ದು ಹಾಕಿಬಿಡುತ್ತಾರೆ. ಅಂದರೆ ತಲೆ ಕೆಡಿಸಿಬಿಡುತ್ತಾರೆ. ಹೊಟ್ಟೆಗೆ ಮದ್ದು ಹಾಕಿಸಿಕೊಂಡರೆ ಗೌಡ ಕೊಡುವ ಪ್ರತಿಮದ್ದಾದರೂ ಇತ್ತು. ತಲೆಗೆ ಮದ್ದು ಹಾಕಿಸಿಕೊಂಡರೆ ಅಷ್ಟೇ ಮತ್ತೆ! ಅದಕ್ಕೆ ಪ್ರತಿಮದ್ದಿಲ್ಲ. ನಂತರ ಹೊಗೆ ಹಾಕಿಸಿಕೊಳ್ಳುವದೇ. 

ಮದ್ದು ಹಾಕುವದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಹಂಚಿಕೊಳ್ಳಿ.