Sunday, July 16, 2017

ಕೈಗುಣ Vs ಮೈಗುಣ

ರೋಗಿ: ಡಾಕ್ಟರ್, ನಿಮ್ಮ ಚಿಕಿತ್ಸೆಯಿಂದ ನನಗೆ ಗುಣವಾಯಿತು. ನಿಮ್ಮ ಕೈಗುಣ ತುಂಬಾ ಚೆನ್ನಾಗಿದೆ.

ಡಾಕ್ಟರ್: ಅಯ್ಯೋ! ಕೈಗುಣ ಮತ್ತೊಂದು ಏನೂ ಇಲ್ಲ. ಎಲ್ಲಾ ನಿಮ್ಮ ಮೈಗುಣ. ನಿಮ್ಮ ಮೈಗುಣ ಚೆನ್ನಾಗಿತ್ತು. ಹಾಗಾಗಿ ನಾವು ಕೊಟ್ಟ ಚಿಕಿತ್ಸೆ ಯಶಸ್ವಿಯಾಯಿತು ಅಷ್ಟೇ.

ರೋಗಿ: ಮೈಗುಣ?? ಹಾಗೆಂದರೇನು??!!

ಡಾಕ್ಟರ್: ಈಗ ನೋಡಿ. ನನ್ನ ಹೆಂಡತಿ ನನ್ನ ಮಗನ ತಲೆ ಮೇಲೂ ಕೈ ಇಡುತ್ತಾಳೆ. ನನ್ನ ತಲೆ ಮೇಲಂತೂ ಇಟ್ಟೇ ಇಡುತ್ತಾಳೆ. (ತಮ್ಮ ಟೇಬಲ್ ಮೇಲಿದ್ದ ಪ್ರೀತಿಯ ಮಗನ ಫೋಟೋ ತೋರಿಸುತ್ತ) ಇವನ ಕೂದಲು ನೋಡಿ. ಎಷ್ಟು ಸೊಗಸಾಗಿ ಬೆಳೆಯುತ್ತಿದೆ. (ತಮ್ಮ ಬೋಡು ತಲೆಯ ಮೇಲೆ ಕೈಯಾಡಿಸುತ್ತ) ಅದೇ ನನ್ನ ಬೋಡು ತಲೆ ನೋಡಿ. ಫುಲ್ ಬಾಂಡ್ಲಿ ಆಗಿಬಿಟ್ಟಿದೆ. ಎರಡೂ ತಲೆಗಳ ಮೇಲೆ ಕೈಯಿಟ್ಟವಳು ಒಬ್ಬಳೇ. ಆದರೆ ಪರಿಣಾಮ ಮಾತ್ರ ಬೇರೆ ಬೇರೆ. ಇದು ಮೈಗುಣವೋ? ಅಥವಾ ಕೈಗುಣವೋ!?

ರೋಗಿ ಮಾತಾಡಲಿಲ್ಲ. ತನ್ನ ತಲೆ ಮೇಲೆ ಕೈಯಾಡಿಸಿದ. ಗರಮ್ಮಾಗಿ ಕಾದಿತ್ತು ಬಾಂಡ್ಲಿ. ಅವನೂ ಅದೇ ಕೇಸೇ.

ಜೋಕ್ ಹೊಡೆದವರು: ಸ್ವಾಮಿ ಅನುಭವಾನಂದ ಸರಸ್ವತಿ.

Friday, July 14, 2017

ಪ್ರಸಾದಬುದ್ಧಿಯಿಂದ ಪ್ರಸನ್ನಭಾವ

ಪ್ರಸಾದಬುದ್ಧಿ. ಇಂತಹ ಶಬ್ದವೊಂದನ್ನು ಮೊದಲು ಕೇಳಿರಲಿಲ್ಲ. ಸುಬುದ್ಧಿ, ದುರ್ಬುದ್ದಿ, ವಿಪರೀತಬುದ್ಧಿಯಂತಹ ಬುದ್ಧಿಗಳನ್ನು ಕೇಳಿದ್ದೆ.

ಪ್ರಸಾದಬುದ್ಧಿ ಅಂದರೆ ದೇವರ ಪ್ರಸಾದ ತೆಗೆದುಕೊಳ್ಳುವಾಗ ಇರುವಂತಹ ಅಥವಾ ಇರಬೇಕಾದಂತಹ ಬುದ್ಧಿ ಅಥವಾ ಮನೋಭಾವ.

ದೇವರ ಪ್ರಸಾದ ಕೊಟ್ಟಾಗ ನಾವು:

೧) ದೂಸರಾ ಮಾತಿಲ್ಲದೆ ತೆಗೆದುಕೊಳ್ಳುತ್ತೇವೆ. ತೆಗೆದುಕೊಳ್ಳಬೇಕು.

೨) ಕೊಟ್ಟಷ್ಟನ್ನು ಮಾತ್ರ ತೆಗೆದುಕೊಳ್ಳಬೇಕು. ಜಾಸ್ತಿ ಕೇಳಬಾರದು. ಕೊಟ್ಟದ್ದನ್ನು ವೇಸ್ಟ್ ಮಾಡಬಾರದು.

೩) ಪ್ರಸಾದವು ಅತ್ಯಮೂಲ್ಯವಾದದ್ದು. ಈ ಪವಿತ್ರ ಭಾವನೆಯೊಂದಿಗೆ ತೆಗೆದುಕೊಳ್ಳಬೇಕು.

೪) ಪ್ರಸಾದವನ್ನು ಉತ್ತಮಗೊಳಿಸುವದರ ಬಗ್ಗೆ (improvise ಮಾಡುವದರ) ಬಗ್ಗೆ ಯೋಚಿಸಬಾರದು. ಉದಾ: ಸತ್ಯನಾರಾಯಣ ಪೂಜೆಯ ಪ್ರಸಾದ ಶಿರಾ ತುಂಬಾ ಒಣಒಣ ಆಗಿದೆ. ಜಾಸ್ತಿ ತುಪ್ಪ ಹಾಕಬಹುದಿತ್ತು. ಇಂತಹ ಭಾವನೆಗಳು ಪ್ರಸಾದದ ಬಗ್ಗೆ ಬರಕೂಡದು.

೫) ಪ್ರಸಾದದ ಜೊತೆಗೆ ಮತ್ತೇನನ್ನೂ ಕೇಳಬಾರದು. ಉದಾ: 'ಸತ್ನಾರಣ ಪ್ರಸಾದ ಭಾಳ ಸಿಹಿ ಆತು. ಚಹಾ ಭಾಳ ಸಪ್ಪ ಅನ್ನಸಲಿಕತ್ತದ. ಸ್ವಲ್ಪ ಖಾರದ ಚೂಡಾ ಕೊಡ್ರಿ!' ಎಂದೆಲ್ಲ ಕೇಳಬಾರದು!

ಈ ಐದು ಅಂಶಗಳನ್ನು ಹೊಂದಿದ್ದು ಪ್ರಸಾದಬುದ್ಧಿ. ಈ ಬುದ್ಧಿ induce ಮಾಡುವ ಮನೋಭಾವದಿಂದ ದೇವರ ಪ್ರಸಾದ ತೆಗೆದುಕೊಳ್ಳಬೇಕು.

ಈಗ ಗೇರ್ ಬದಲಾಯಿಸಿ. Change the perspective. ದೇವರು ಕೊಟ್ಟ ನಮ್ಮ ಈ ಜೀವನವೇ ಅತಿ ದೊಡ್ಡ ಪ್ರಸಾದ. ಜೀವನವೆಂಬ ಮಹಾಪ್ರಸಾದವನ್ನು ನಾವು ಪ್ರಸಾದಬುದ್ಧಿಯಿಂದ ಸ್ವೀಕರಿಸಿದರೆ ಪ್ರಸನ್ನಭಾವ ಗ್ಯಾರಂಟಿ. ಅದು ಬಿಟ್ಟು ಜೀವನವನ್ನು ದುರ್ದಾನ ತೆಗೆದುಕೊಂಡಂತೆ ತೆಗೆದುಕೊಂಡರೆ ಅಷ್ಟೇ ಮತ್ತೆ!

ಯೋಚಿಸಬೇಕಾದ ಸಂಗತಿ. ಅಲ್ಲವೇ?


***

ಒಬ್ಬ ಹುಡುಗಿ ಸ್ಟೇಜ್ ಮೇಲೆ ಬಹಳ ಡೌಲು ಬಡಿಯುತ್ತ ಓಡಾಡಿಕೊಂಡಿದ್ದಳು. ನಮ್ಮ ಧಾರವಾಡ ಕಡೆ ಡೌಲು ಬಡಿಯೋದು ಅಂದರೆ ಎಲ್ಲ ತಮ್ಮಿಂದಲೇ ಆಗುತ್ತಿದೆ ಅನ್ನುವ ಮನೋಭಾವದೊಂದಿಗೆ ವರ್ತಿಸಿ ಸ್ಕೋಪ್ ತೆಗೆದುಕೊಳ್ಳುವದು. ಅವಳನ್ನು ಕರೆದು ಕೇಳಿದೆ. 

'ನಿನ್ನ ಹೆಸರು ಏನವಾ?' ಎಂದು ಕೇಳಿದೆ.

'ಭಾವನಾ,' ಎಂದು ನುಲಿದಳು.

'ನಿನ್ನ ಹೆಸರಿನ ಅರ್ಥ ಗೊತ್ತದೇನು??'

'ಗೊತ್ತಿಲ್ಲ. ನೀವೇ ಹೇಳ್ರೀ.'

'ಭಾವ ಅಂದ್ರ ಬೆಲೆ. ನಾ ಅಂದ್ರ ಇಲ್ಲ.'

ಇದನ್ನು ಕೇಳಿದ ಮೇಲೆ 'ಭಾವ ನಾ' ಸ್ಟೇಜ್ ಮೇಲೆಲ್ಲೂ ಕಾಣಲಿಲ್ಲ.

***

ಮಾಸ್ತರ್: ಸತ್ಯವಾನ-ಸಾವಿತ್ರಿ ಕಥೆಯ ನೀತಿ ಏನು?

ತುಂಟ: ಯಮನಿಂದಾದರೂ ಬಚಾವಾಗಬಹದು. ಆದರೆ ಹೆಂಡತಿಯಿಂದ ಬಚಾವಾಗುವದು ಮಾತ್ರ ಅಸಾಧ್ಯ!

ಪತಿವ್ರತೆ ಪತ್ನಿ ಯಮನನ್ನೂ ಗೆಲ್ಲಬಲ್ಲಳು ಎನ್ನುವ ಉತ್ತರ ನಿರೀಕ್ಷಿಸಿದ್ದ ಮಾಸ್ತರ್ರು ಢಮಾರ್!

***

ಸ್ವಾಮಿ ಅನುಭವಾನಂದರ ಮಜೇದಾರ್ ಉಪದೇಶಗಳಿಂದ ಎತ್ತಿದ್ದು.

***

ಇಷ್ಟೆಲ್ಲಾ ತಿಳಿದ ಮೇಲೂ ಜೀವನವನ್ನು ಪ್ರಸಾದಬುದ್ಧಿಯಿಂದ ಸ್ವೀಕರಿಸಿಯೇನೇ ಹೊರತು ಪ್ರಸಾದವನ್ನಲ್ಲ.

ನನಗೆ ತಿನ್ನಲು ಕೊಡುವ ದೇವರ ಪ್ರಸಾದಗಳಲ್ಲಿ ಡ್ರೈಫ್ರೂಟ್ಸ್ ಒಂದು ಬಿಟ್ಟರೆ ಬಾಕಿ ಯಾವದೂ ಸೇರುವದಿಲ್ಲ. ಪಂಚಾಮೃತ, ಸತ್ಯನಾರಾಯಣ ಪ್ರಸಾದಗಳ ಬಗ್ಗೆಯಂತೂ ಹೇಳಲೇಬೇಡಿ. ಕೊಡಲಿಕ್ಕಂತೂ ಬರಲೇಬೇಡಿ. U-turn ನಾಮದವರ ದೇವಸ್ಥಾನಗಳಲ್ಲಿ ಕೊಡುವ ಪುಳಿಯೋಗರೆ, ಮೊಸರನ್ನವಂತೂ ವರ್ಜ್ಯ!

ಹೀಗಾಗಿ ನಾವು ಕಿವಿ ಮೇಲೆ ಇಟ್ಟುಕೊಳ್ಳಬಹುದಾದಂತಹ ಹೂವು ಮತ್ತು ಹಚ್ಚಿಕೊಳ್ಳಬಹುದಾದಂತಹ (ಹಣೆಗೆ ಮಾತ್ರ) ಪ್ರಸಾದಗಳಾದ ಕುಂಕುಮ, ವಿಭೂತಿ, ಅಂಗಾರ, ಭಂಡಾರಗಳನ್ನು ಮಾತ್ರ ಸ್ವೀಕರಿಸುತ್ತೇವೆ. ಪೂರ್ತಿ ಪ್ರಸಾದಬುದ್ಧಿಯಿಂದಲೇ ಸ್ವೀಕರಿಸುತ್ತೇವೆ. ಹೀಗಾಗಿ ಗುಡಿಯಿಂದ ಹೊರಬಂದಾಗ ನಾವು KMF (ಕಿವಿ ಮೇಲೆ ಫ್ಲವರ್). ದೊಡ್ಡ ದೇವಸ್ಥಾನದಿಂದ ದೊಡ್ಡ ಪ್ರಸಾದ ತೆಗೆದುಕೊಂಡು ಬರುವಾಗ ಕಿವಿ ಮೇಲೆ ಫುಲ್ ಲಾಲಬಾಗ್ ಗಾರ್ಡನ್ ಇರುತ್ತದೆ! :)

Friday, July 07, 2017

ಮಣ್ಣು ತಿನ್ನುವವ ಸಕ್ಕರೆ ಕೊಳ್ಳಲು ಹೋದಾಗ...

ಮಣ್ಣು ತಿನ್ನುವ ಚಟ (ಕಾಯಿಲೆ) ಇದ್ದವನೊಬ್ಬ ಸಕ್ಕರೆಯನ್ನು ಕೊಳ್ಳಲು ಅಂಗಡಿಗೆ ಹೋದ.

'ಒಂದು ಸೇರು ಸಕ್ಕರೆ ಕೊಡಿ,' ಎಂದ.

'ತೂಕ ಮಾಡಲು ಒಂದು ಸೇರಿನ ತೂಕದಕಲ್ಲು ಇಲ್ಲ. ಆದರೆ ಒಂದು ಸೇರಿಗೆ ತೂಗುವ ಮಣ್ಣಿನ ಚಿಕ್ಕ ರಾಶಿಯಿದೆ. ತೂಕದಕಲ್ಲಿನ ಬದಲು ಆ ಒಂದು ಸೇರಿನ ಮಣ್ಣಿನ ರಾಶಿಯಿಂದ ಸಕ್ಕರೆಯನ್ನು ತೂಕ ಮಾಡಲೇ?' ಎಂದು ಕೇಳಿದ ಅಂಗಡಿಯವ.

'ಸರಿ. ಹಾಗೇ ಮಾಡಿ. ಒಟ್ಟಿನಲ್ಲಿ ಒಂದು ಸೇರು ಸಕ್ಕರೆ ಬೇಕು,' ಎಂದ ಗ್ರಾಹಕ.

ತಕ್ಕಡಿಯ ಒಂದು ಕಡೆ ಒಂದು ಸೇರು ತೂಗುತ್ತಿದ್ದ ಮಣ್ಣನ್ನು ಇಟ್ಟ ಅಂಗಡಿಯವ ಮತ್ತೊಂದು ಕಡೆ ಸಕ್ಕರೆಯನ್ನು ಇಟ್ಟು ತೂಕ ಮಾಡಲಾರಂಭಿಸಿದ.

ಗ್ರಾಹಕನಿಗೆ ಮೊದಲೇ ಮಣ್ಣು ತಿನ್ನುವ ಚಟ (ಕಾಯಿಲೆ). ಎದುರಿಗೇ ಇದೆ ಅಷ್ಟು ದೊಡ್ಡ ಸೊಗಸಾದ ಮಣ್ಣಿನ ರಾಶಿ. ಚಪಲ ತಡೆದುಕೊಳ್ಳಲಾದೀತೇ? ಆಗಲಿಲ್ಲ.

ಅಂಗಡಿಯವನ ಕಣ್ಣು ತಪ್ಪಿಸಿ ತಕ್ಕಡಿಯಿಂದ ಇಷ್ಟಿಷ್ಟೇ ಮಣ್ಣನ್ನು ತೆಗೆದು ತಿನ್ನತೊಡಗಿದ.

ಸಕ್ಕರೆ ತೂಕ ಮಾಡುತ್ತಿದ್ದ ಅಂಗಡಿಯವ ಗ್ರಾಹಕನ ಕಿತಾಪತಿಯನ್ನು ಗಮನಿಸಿದ.

ಅಂಗಡಿಯವ ಮನಸ್ಸಿನಲ್ಲೇ ಅಂದುಕೊಂಡ, 'ತಿನ್ನು ತಿನ್ನು. ಕದ್ದು ಮಣ್ಣು ತಿನ್ನು. ಎಷ್ಟು ಮಣ್ಣು ತಿನ್ನುತ್ತೀಯೋ ಅಷ್ಟೇ ತೂಕದ ಸಕ್ಕರೆ ಕಮ್ಮಿ ಪಡೆಯುತ್ತೀಯೆ!'

-- ಜಲಾಲುದ್ದೀನ್ ರೂಮಿ.

ನೀತಿ: ಒಂದೇ ನೀತಿ ಅಂತಿಲ್ಲ. ಸೂಫಿ ಕವಿ ಜಲಾಲುದ್ದೀನ್ ರೂಮಿಯ ವಿವೇಕಭರಿತ, ಜ್ಞಾನ ತುಂಬಿದ  ಇಂತಹ ಪದ್ಯಗಳನ್ನು ಒಂದೇ ರೀತಿಯಿಂದ ವಿಶ್ಲೇಷಿಸಿ, ಸತ್ವವನ್ನು (gist) ತೆಗೆಯಲು ಹೋದರೆ ಅದು ಬಾಲಿಶ ಮತ್ತು ನಮಗೇ ನಷ್ಟ. ಹಾಗಾಗಿ ಸದ್ಯಕ್ಕೆ ನನ್ನ ಕಾಮೆಂಟರಿ ಬರೆಯುವದಿಲ್ಲ. ನಿಮ್ಮ ವಿಶ್ಲೇಷಣೆಯನ್ನು ಕಾಮೆಂಟಿನಲ್ಲಿ ಹಾಕಲು ಯಾವದೇ ತಕರಾರಿಲ್ಲ.

ಇತ್ತೀಚಿನ ದಿನಗಳಲ್ಲಿ ತುಂಬಾ ಪ್ರಭಾವ ಬೀರಿದ ರೂಮಿ ಕವಿತೆ ಇದು. ಐದು ವರ್ಷ ಹಿಂದೆ ಓದಿದ್ದ ಪುಸ್ತಕ - The Soul of Rumi by Coleman Barks - ಮತ್ತೆ ಓದುತ್ತಿದ್ದಾಗ ಕಂಡಿತು. ಕ್ಯಾಶುಯಲ್ ಆಗಿ ಓದುತ್ತಿದ್ದಾಗ ಗಕ್ಕೆಂದು ನಿಲ್ಲಿಸಿ ಯೋಚಿಸಲು ಹಚ್ಚಿದ ಪದ್ಯ!

ಮನುಷ್ಯರು ಮಣ್ಣು ತಿನ್ನುತ್ತಾರೆಯೇ? ಯಾಕೆ? ಅಂತ ತಲೆಯಲ್ಲಿ ಬಂದರೆ ಅದಕ್ಕಾಗಿ ಈ ವಿವರಣೆ. ಕೆಲವೊಂದು ಪೋಷ್ಟಿಕಾಂಶ ಕೊರತೆಯಾದವರು ಮಣ್ಣು ತಿನ್ನುತ್ತಾರೆ. ಇದು ಪ್ರಾಣಿಗಳಲ್ಲಿ ಮತ್ತು ಮನುಷ್ಯರರಲ್ಲಿ ಇಬ್ಬರಲ್ಲೂ ಕಂಡುಬರುತ್ತದೆ.  ಬಸುರಿಯರು, ಬಾಣಂತಿಯರು, ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.