Friday, July 31, 2015

'ಚೇಳಿನ ಮಂತ್ರ ಬಾರದವರು ಹಾವಿನ ಬುಟ್ಟಿಗೆ ಕೈಹಾಕಬಾರದು'...ಎನ್ಕೌಂಟರ್ ಸ್ಪೆಷಲಿಸ್ಟ್ ಆಗಲು ಹೋದವ ಉತ್ತರ ಕುಮಾರನಾಗಿ ಮರಳಿದ ಕಥೆ

ನಾವೆಲ್ಲಾ ಶಾಲೆಗೆ ಹೋಗಿದ್ದು ಮೂವತ್ತು ವರ್ಷಗಳ ಹಿಂದೆ. ಆಗೆಲ್ಲ ಕ್ಯಾಪಿಟಲ್ ಪನಿಶ್ಮೆಂಟ್ ಅಂದರೆ ಓಕೆ. ಹುಡುಗರನ್ನು ಎಷ್ಟು ಬಾರಿಸಿದರೂ, ಹೇಗೆ ಬಾರಿಸಿದರೂ ಓಕೆ. ಮತ್ತೆ ಆಗಿನ ಪಾಲಕರೂ ಸಹ ಮಾಸ್ತರರು ಮಕ್ಕಳಿಗೆ ಬಾರಿಸಿದರೆ, ಹೊಡೆದರೆ, ಬಡಿದರೆ, ದವಡೆ ಹಲ್ಲುಗಳೆಲ್ಲ ಚದುರಿ ಹೋಗುವಂತೆ ಕಪಾಳಕ್ಕೆ ಇಕ್ಕಿದರೆ, TK ಎಲ್ಲ ಕರಗಿ ಅಂಡು ಚಪ್ಪಟೆಯಾಗಿ ಹೋಗುವಂತೆ ಝಾಡಿಸಿ ಅಂಡಿಗೆ ಒದ್ದರೆ, ಚಮಡಾ ನಿಕಾಲಿ ಮಾಡಿದರೆ ಮಕ್ಕಳ ಒಳ್ಳೇದಕ್ಕೇ ಮಾಡುತ್ತಾರೆ ಅಂತ ಅಂದುಕೊಂಡು ಏನೂ ಹೇಳುತ್ತಿರಲಿಲ್ಲ. 'ಬೇಕಾದರೆ ಇನ್ನೂ ನಾಲ್ಕು ಹಾಕಿ ಈ ನನ್ಮಗನಿಗೆ!' ಅನ್ನುತ್ತಿದ್ದರು. ಈಗ ಎಲ್ಲ ಬದಲಾಗಿದೆ ಬಿಡಿ. ಶಾಲಾ ಮಕ್ಕಳ ಮೇಲೆ ಮಾಸ್ತರ್ ಮಂದಿ ಕೈ ಮತ್ತೊಂದು ಎತ್ತುವಂತೆಯೇ ಇಲ್ಲ.

ಆಗಿನ ಎಲ್ಲ ಶಿಕ್ಷಕರೂ, ಶಿಕ್ಷಕಿಯರೂ ತಕ್ಕ ಮಟ್ಟಿಗೆ ಬಾರಿಸುವದನ್ನು ಕಲಿತೇ ಇರುತ್ತಿದ್ದರು. ತರಗತಿಯಲ್ಲಿ ಗಲಾಟೆ ಮಾಡಿದ, ಹೋಂವರ್ಕ್ ಮಾಡಿ ತರಲಿಲ್ಲ, ಇತ್ಯಾದಿ, ಇತ್ಯಾದಿ ಕಾರಣಗಳಿಗೆ ಮಕ್ಕಳಿಗೆ ತಪರಾಕಿ ಹಾಕಿ, ಕಿವಿ ಹಿಂಡಿ, ತಿದ್ದಿ ತೀಡುವ ಕೆಲಸ ಎಲ್ಲರಿಗೂ ಬರುತ್ತಿತ್ತು. ಆದರೆ ಪ್ರತಿ ಶಾಲೆಯಲ್ಲಿ 'ಅವರೂ' ಇರುತ್ತಿದ್ದರು. ಕಮ್ಮಿ ಕಮ್ಮಿ ಅಂದರೆ ಒಂದಿಬ್ಬರು. ಅವರೇ ಖತರ್ನಾಕ್ 'ಎನ್ಕೌಂಟರ್ ಸ್ಪೆಷಲಿಸ್ಟ್' (encounter specialist) ಶಿಕ್ಷಕರು. ದೊಡ್ಡ ಪ್ರಮಾಣದಲ್ಲಿ ಬಾರಿಸುವದು, ಚಮಡಾ ನಿಕಾಲಿ ಮಾಡುವದು, ಮಸಡಿ ಕಿತ್ತುಹೋಗುವಂತೆ, ಮುಖದ ಚಹರಾಪಟ್ಟಿಯೇ ಬದಲಾಗಿ ಹೋಗುವಂತೆ ಕಪಾಳ ಗೆಡ್ಡಿಗೆ ಜಪ್ಪುವದು ಇತ್ಯಾದಿ ಥರ್ಡ್ ಡಿಗ್ರಿ ಟಾರ್ಚರ್ ಮಾಡುವದು ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರುಗಳ ಸ್ಪೆಷಾಲಿಟಿ. ಶಾಲೆಯಲ್ಲಿ ದೊಡ್ಡ ಪ್ರಮಾಣದ ಅಶಿಸ್ತು, ಗದ್ದಲ, ಮನ್ಮಾನಿ, ಲಫಡಾ ಬಾಜಿ ಎಲ್ಲ ಆದಾಗ ಅವರೇ ಬೇಕು. ಶಾಲೆಗೆ ಒಂದಿಬ್ಬರು ಅಂತಹ ಖಡಕ್ ಮಾಸ್ತರರು ಇರುತ್ತಿದ್ದರು ಅಂತ ಶಾಲೆ ಬಚಾವು. ಯಾಕೆಂದರೆ ಶಾಲೆಯ ಶಿಸ್ತು ಕಾಪಾಡಲು ಪೊಲೀಸರಿಗೆ ಕರೆ ಮಾಡುವದು, ಶಾಲೆ ಗೇಟಿನ ಮುಂದೆ ಪೋಲೀಸ್ ವ್ಯಾನ್ ನಿಲ್ಲುವದು ಇತ್ಯಾದಿ ಆ ಕಾಲದ ಸಂಪ್ರದಾಯವಾಗಿರಲಿಲ್ಲ. ಈಗ ಅದೆಲ್ಲ ಆಗಿಹೋಗಿದೆ. ಶಾಲೆ ಕಾಲೇಜುಗಳಲ್ಲಿ ಪೋಲೀಸ್ ವ್ಯಾನ್ ಕಾಣುವದು ಅಪರೂಪವೇನಲ್ಲ ಈ ಕಾಲದಲ್ಲಿ.

ಇಂತಹ ಅರಿಭಯಂಕರ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರುಗಳು ಕೆಲವು ಪರ್ಟಿಕ್ಯುಲರ್ ಟೈಪಿನ ಕೇಸುಗಳನ್ನು ಹ್ಯಾಂಡಲ್ ಮಾಡುತ್ತಿದ್ದರು. ಸಣ್ಣ ಪ್ರಮಾಣದ ಗೂಂಡಾಗಿರಿ ಮಾಡುವವರು, ಶಾಲೆಯ ಆಸ್ತಿ ಪಾಸ್ತಿಗೆ ಹಾನಿ ಮಾಡುವವರು, ಶಾಲೆಯಿಂದ ಕದಿಯುವವರು, ಸೌಮ್ಯ ಸ್ವಭಾವದ ಶಿಕ್ಷಕ ಶಿಕ್ಷಕಿಯರಿಗೆ ಬೆದರಿಕೆ ಹಾಕುವವರು, ಹುಡುಗಿಯರನ್ನು ಅಸಭ್ಯವಾಗಿ ಚುಡಾಯಿಸಿ ತೊಂದರೆ ಕೊಡುವವರು, ಹೊರಗಿನಿಂದ ಸಣ್ಣ ಪ್ರಮಾಣದ ರೌಡಿಗಳನ್ನು, ಗೂಂಡಾಗಳನ್ನು ಕರೆಯಿಸಿಕೊಂಡು ತೋಳ್ಬಲ ಪ್ರದರ್ಶನ ಮಾಡಿಸಿ ತಮ್ಮ ಹವಾ ಮೈಂಟೈನ್ ಮಾಡುವವರು, ಶಾಲೆಯಲ್ಲಿ ಪಾನ್, ಬೀಡಿ, ಸಿಗರೇಟ್ ಸೇವನೆ ಮಾಡಿ ಸಿಕ್ಕಿಕೊಂಡವರು, ಇತ್ಯಾದಿ ಮಂದಿ... ಇಂತವರೇ ಎನ್ಕೌಂಟರ್ ಸ್ಪೆಷಲಿಸ್ಟ್ ಶಿಕ್ಷಕರ ಕಣ್ಣಿಗೆ ಬೀಳುತ್ತಿದ್ದರು. ಬರೋಬ್ಬರಿ ವಿಚಾರಿಸಿಕೊಳ್ಳುತ್ತಿದ್ದರು. ಹದ ಹಾಕುತ್ತಿದ್ದರು. ಪ್ರಯೋಗ ಶಾಲೆಯಿಂದ ಏನೋ ಕದ್ದವನನ್ನು ರವಿವಾರ ಮನೆಯಿಂದ ಮಾಲು ಸಮೇತ ಎತ್ತಾಕಿಕೊಂಡು ಬಂದು, ಶಾಲಾ ಆವರಣದಲ್ಲಿನ ಗಿಡಕ್ಕೆ ಕಟ್ಟಿ ಹಾಕಿ, ದನಕ್ಕೆ ಬಡಿದಂತೆ ಬಡಿದಿದ್ದರು. ರೌಡಿಸಂ ಮಾಡಿ ಸಣ್ಣ, ಸಭ್ಯ ಹುಡುಗರಿಗೆ ಬಾರಿಸಿ ಓಡಿಹೋಗಿದ್ದ ಪೊರ್ಕಿ ರೌಡಿಗಳನ್ನು (ಅವರು ಅದೇ ಶಾಲೆಯ ಮಾಜಿ ವಿದ್ಯಾರ್ಥಿಗಳು) ಒಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ಮನೆಗೇ ಹೋಗಿ ಹೊಡೆದು, ಒದ್ದು ಬಂದಿದ್ದರು. ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ಮನೆಗೇ ಬಂದರು ಅಂತ ಸಂಡಾಸ್ ಒಳಗೆ ಓಡಿದ್ದನಂತೆ ಆ ಪೊರ್ಕಿ. ಆ ಚಾಳಿನ ಸಮುದಾಯ ಸಂಡಾಸದ ಬಾಗಿಲು ತೆಗೆಯಿಸಿ, ಅಲ್ಲಿಯೇ ಉಳ್ಳಾಡಿಸಿ ಉಳ್ಳಾಡಿಸಿ ಹೊಡೆದು ಬಂದಿದ್ದರು. ಮುಂದೆ ಆ ಪುಡಿ ರೌಡಿ ನಮ್ಮ ಶಾಲೆ ಕಡೆ ಬಂದರೆ ಕೇಳಿ. ಅದೇ ಪ್ರಕರಣದ ಮತ್ತೊಬ್ಬ ಪುಡಿ ರೌಡಿ ಬಳ್ಳಾರಿ ಸೇರಿಕೊಂಡಿದ್ದ. ತಮ್ಮ ವಶೀಲಿ ಉಪಯೋಗಿಸಿ, ಆಗಿನ ಬಳ್ಳಾರಿ ಪೋಲೀಸ್ ವರಿಷ್ಠನಿಗೆ ಫೋನ್ ಮಾಡಿಸಿ, ಧಾರವಾಡದಲ್ಲಿ ಆ ಪುಡಿ ರೌಡಿ ಶಾಲೆಗೆ ಬಂದು ಮಾಡಿದ ಹಾವಳಿಯ ಬಗ್ಗೆ ವಿವರಿಸಿ, ಅವನಿಗೆ ಬಳ್ಳಾರಿ ಪೋಲೀಸರ ಮುಖಾಂತರವೇ ಪೂಜೆ ಮಾಡಿಸಿದ್ದ ಲೆವೆಲ್ಲಿನ influential ಎನ್ಕೌಂಟರ್ ಸ್ಪೆಷಲಿಸ್ಟ್ ಶಿಕ್ಷಕರು ನಮ್ಮ ಕಾಲದಲ್ಲಿ ನಮ್ಮ ಶಾಲೆಯಲ್ಲಿ ಇದ್ದರು ಅನ್ನುವದು ಹೆಮ್ಮೆಯ ವಿಷಯ. ಬಳ್ಳಾರಿಯ ಪೋಲೀಸ್ ವರಿಷ್ಠ ಅಲ್ಲಿಗೆ ಹೋಗುವ ಮೊದಲು ಧಾರವಾಡದಲ್ಲಿಯೇ ಇದ್ದ. ಆಗ ಮಾಡಿಕೊಂಡಿದ್ದ ದೋಸ್ತಿಯನ್ನು ಉಪಯೋಗಿಸಿಕೊಂಡಿದ್ದರು ನಮ್ಮ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು. ಬಳ್ಳಾರಿ ಪೊಲೀಸರು ಆ ಪೊರ್ಕಿಯನ್ನು ಅವನಿದ್ದ ಹಾಸ್ಟೆಲ್ ರೂಮಿನಿಂದಲೇ ಎತ್ತಾಕಿಕೊಂಡು ಹೋಗಿ, ಲಾಕಪ್ಪಿನಲ್ಲಿ ಹಾಕಿಕೊಂಡು ಅದು ಹೇಗೆ ರುಬ್ಬಿದ್ದರು ಅಂದರೆ ಹದಿನೈದು ದಿನ ಸರ್ಕಾರಿ ಆಸ್ಪತ್ರೆಯಲ್ಲಿದ್ದು ಬಂದ. ಟೋಟಲ್ ಸ್ಕ್ರಾಪ್ ಆಗಿದ್ದ ಮಗನ ವಾಗಾತಿ ಮಾಡಲು ಧಾರವಾಡದಿಂದ ಅಮ್ಮ ಅಪ್ಪ ಹೋಗಬೇಕಾಯಿತು. ಆ ಮಾದರಿಯ ಎನ್ಕೌಂಟರ್ ಸ್ಪೆಷಲಿಸ್ಟ್ ಶಿಕ್ಷಕರು ಇದ್ದರು ನಮ್ಮ ಕಾಲದಲ್ಲಿ, ನಮ್ಮ ಶಾಲೆಯಲ್ಲಿ. ಅವರ ಹವಾ ಅಪಾರ.

ಹೀಗೆ ಶಾಲೆಯಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಶಿಕ್ಷಕರು ಅಂದರೆ ಅವರಿಗೆ ಸಿಕ್ಕಾಪಟ್ಟೆ ಭಾವ್ ಇರುತ್ತಿತ್ತು. ಎಲ್ಲರೂ ಅವರನ್ನು ಒಂದು ಟೈಪಿನ ಭಯ ಮಿಶ್ರಿತ ಅಚ್ಚರಿಯಿಂದ ನೋಡುತ್ತಿದ್ದರು. ಆದರೆ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಅವತಾರ ತಾಳಲು ಸಾಕಷ್ಟು ದಮ್, ಗಂಡೆದೆ ಬೇಕಾಗುತ್ತಿತ್ತು. ಯಾಕೆಂದರೆ ಮಾಸ್ತರ್ ಮಂದಿ ಶಾಲೆಯ ಆವರಣದಲ್ಲಿ ಏನೇ ಆವಾಜ್ ಹಾಕಿದರೂ, ಏನೇ ಮನ್ಮಾನಿ ಮಾಡಿದರೂ, ಹೊರಗೆ ಬಂದಾಗ ಅವರೂ ಆರ್ಡಿನರಿ ಜನರೇ ತಾನೇ!!?? ಯಾವದ್ಯಾವದೋ ಸಂತೃಸ್ತ ಮಂದಿ, ಇವರಿಂದ ಗಜ್ಜು ತಿಂದು ಹೋದ ಪುಡಿ ರೌಡಿಗಳು ಇವರನ್ನೇ ಆಟಕಾಯಿಸಿಕೊಳ್ಳುವ ಅಪಾಯವಿದ್ದೇ ಇರುತ್ತಿತ್ತು. ಪ್ರತಿ ವರ್ಷ ವಾರ್ಷಿಕ ಪರೀಕ್ಷೆ ಮುಗಿದ ಮೇಲೆ ಆ ಮಾಸ್ತರರನ್ನು ಆಟಕಾಯಿಸಿಕೊಂಡು ತಪರಾಕಿ ಕೊಟ್ಟರು, ಈ ಮಾಸ್ತರನನ್ನು ಹಾಕಿಕೊಂಡು ನಾದಿದರು, ಈ ಮಾಸ್ತರಣಿಯ ಮೈಮೇಲೆ ಕೈ ಹಾಕಿದರು ಅಂತ ಸುದ್ದಿ ಬರುತ್ತಿತ್ತು. ಎಷ್ಟು ನಿಜವೋ ಗೊತ್ತಿಲ್ಲ. ಒಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ತಮ್ಮ ಮೋಟಾರ್ ಬೈಕಿನ ಬಾಕ್ಸಿನಲ್ಲಿ ಸದಾ ಒಂದು ಸೈಕಲ್ ಚೈನ್ ಇಟ್ಟಿರುತ್ತಾರೆಂದೂ, ಮತ್ತೆ ರೌಡಿಗಳು ಆಟಕಾಯಿಸಿಕೊಂಡಾಗ ಮುಲಾಜಿಲ್ಲದೇ ಅದನ್ನು ತೆಗೆದು ಅದರಲ್ಲೇ ಬಾರಿಸಿ ತಮ್ಮ ಸ್ವರಕ್ಷಣೆ ಮಾಡಿಕೊಳ್ಳುತ್ತಾರೆಂದೂ ದೊಡ್ಡ ಮಟ್ಟದ ಹವಾ ಇತ್ತು. ಅದು ನಿಜ. ಯಾಕೆಂದರೆ ಅವರೇ ಆ ಕಾಲದ ದೊಡ್ಡ ರೌಡಿ. ಶಾಲೆ ಒಳಗೆ ಹೊರಗೆ ಎಲ್ಲ ಅವರದ್ದೇ ಹವಾ. ಹೀಗೆ ಸಿಕ್ಕಾಪಟ್ಟೆ ರಿಸ್ಕ್ ತೆಗೆದುಕೊಂಡು, ಇರುವ ಅಪಾಯಗಳನ್ನು ನಗಣ್ಯ ಮಾಡಿ, ಪರಿಸ್ಥಿತಿ ಹತೋಟಿ ಮೀರಿದಾಗ, ಒಂದು ಎನ್ಕೌಂಟರ್ ಮಾಡಬೇಕಾದ ಸಂದರ್ಭ ಬಂದಾಗ, ಎನ್ಕೌಂಟರ್ ತರಹದ ಕಾರ್ಯಾಚರಣೆ ಮಾಡಿ ಖಡಕ್ ಶಿಸ್ತು ಕಾದುಕೊಂಡು ಬರುತ್ತಿದ್ದರು.

೧೯೮೭-೮೮. ನಾವು ಆವಾಗ ಹತ್ತನೇ ಕ್ಲಾಸ್. ಆವಾಗ ನಮ್ಮ ಶಾಲೆಗೆ ಎಂಟ್ರಿ ಕೊಟ್ಟವರು ಬಲರಾಮ ಭಟ್ಟಿ ಸರ್. ವಿಜಾಪುರ ಕಡೆಯ ಶುದ್ಧ ಆಚಾರ್ರು. ತುಂಬಾ handsome ಅನ್ನುವಂತಹ ಸಾಂಪ್ರದಾಯಕ ಸುಂದರ ವ್ಯಕ್ತಿತ್ವ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ತುಂಬಾ ಶ್ರಮಜೀವಿ. ಏನೇನೋ ಓದಿಕೊಂಡರು. ಏನೇನೋ ಪರೀಕ್ಷೆ ಪಾಸ್ ಮಾಡಿಕೊಂಡರು. ನಂತರ ಅವನ್ನು ಉಪಯೋಗಿಸಿಕೊಂಡು ಹೈಸ್ಕೂಲಿಗೆ ಜಂಪ್ ಹೊಡೆದು ದೊಡ್ಡ ಶಾಲೆ ಮಾಸ್ತರರು ಆಗಿಬಿಟ್ಟರು. ಅದು ಮೇಲ್ಮಟ್ಟದ ಹುದ್ದೆ. ಯಾಕೆಂದರೆ ನಮ್ಮ ಶಾಲೆ ಕ್ಯಾಂಪಸ್ಸಿನಲ್ಲಿ ಪ್ರೈಮರಿ ಶಾಲೆ ದಿಬ್ಬದ ಕೆಳಗೆ. ಹೈಸ್ಕೂಲ್ ದಿಬ್ಬದ ಮೇಲೆ. Literally it was a promotion.

ಹೀಗೆ ಹೈಸ್ಕೂಲಿಗೆ ಭಡ್ತಿ ಪಡೆದುಕೊಂಡ ಬಲರಾಮ ಭಟ್ಟಿ ಸರ್ ಮತ್ತೂ ಸುಂದರರಾಗಿ ಶಾಲೆಗೆ ಬರತೊಡಗಿದರು. ಮೊದಲೇ ತಕ್ಕಮಟ್ಟಿನ ಸುಂದರರು. ಈಗ ಪಗಾರ್ ಕೂಡ ಮೊದಲಿನಿಗಿಂತ ಜಾಸ್ತಿ. ಭಟ್ಟಿ ಸರ್ ಇನ್ನೂ ಮದುವೆ, ಮಕ್ಕಳಿಲ್ಲದ ಬ್ರಹ್ಮಚಾರಿ. ಹಾಗಾಗಿ ಪಗಾರಿನ ರೊಕ್ಕ ಎಲ್ಲ ಇವರಿಗೇ. ತುಂಬಾ ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡು ಬರತೊಡಗಿದರು. ನೀಟಾಗಿ ತಮಗೆ ಹೊಂದುವಂತಹ ಪ್ಯಾಂಟು, ಶರ್ಟು. ಅವಕ್ಕೆ ಖಡಕ್ ಇಸ್ತ್ರಿ. ಕಾಲಿಗೆ ಬರೋಬ್ಬರಿ ಪಾಲಿಶ್ ಮಾಡಿದ ಮಿರಿಮಿರಿ ಮಿಂಚುವ ಕರಿ ಬೂಟು. ಕಣ್ಣಿಗೆ ಕಪ್ಪು ಕನ್ನಡಕ. ಸಾಂಪ್ರದಾಯಿಕ ಕೇಶ ಶೈಲಿಯೇ ಆದರೂ ಅದನ್ನೇ ಸಾಕಷ್ಟು ಉದ್ದ ಬಿಟ್ಟಿದ್ದರು. ಓಡಾಡಲು ಒಂದು ಹೊಚ್ಚ ಹೊಸ BSA ಸೈಕಲ್ ಖರೀದಿ ಮಾಡಿದ್ದರು. ಕಡು ಹಸಿರು ಬಣ್ಣದ್ದು ಬರುತ್ತಿತ್ತು ನೋಡಿ ಆಗಿನ ಜಮಾನಾದಲ್ಲಿ. ಅದೇ. ಅದನ್ನು ಹತ್ತಿ ಬಲರಾಮ ಆಚಾರ್ ಭಟ್ಟಿ ಸರ್ ಹೊರಟರು ಅಂದರೆ ನೋಡಿದ ಮಂದಿ ಮತ್ತೊಮ್ಮೆ ತಿರುಗಿ ನೋಡಬೇಕು. ನಾವು ನಮಸ್ಕಾರ ಮಾಡಿದರೆ, ಅವರು ತಿರುಗಿ ನೋಡಿ, 'ಹೂಂ! ಹೂಂ! ಸಲಾಂ ಕಬೂಲ್ ಕಿಯಾ!' ಅನ್ನುವಂತೆ ರಿವರ್ಸ್ ಸಲಾಂ ಮಾಡಿ, ಕೂದಲನ್ನು ಒಂದು ತರಹ ಹಾರಿಸಿ, ಸ್ಟೈಲ್ ಹೊಡೆಯುತ್ತಿದ್ದರು. ಬಂವ್ವಂತ ಮತ್ತೂ ಜೋರಾಗಿ ಸೈಕಲ್ ಹೊಡೆಯುತ್ತಿದ್ದರು. ಜವಾನಿಯ ಗರಂ ಖೂನಿನ ತಿಮಿರು ಅಂದರೆ ಅದು!

ಭಟ್ಟಿ ಸರ್ ಮೊದಲು ಪ್ರೈಮರಿಯಲ್ಲಿ ಇದ್ದಾಗ ತಮ್ಮ ಪೂಜೆ, ಪುನಸ್ಕಾರ ಎಲ್ಲ ಮಾಡಿ, ಅವರ ಮತದ ಪದ್ಧತಿ ಪ್ರಕಾರ ಎಲ್ಲ ಮುದ್ರೆಗಳನ್ನು ಒತ್ತಿಕೊಂಡು, ನಾಮಗಳನ್ನು ಎಲ್ಲ ಬರೋಬ್ಬರಿ ಹಾಕಿಕೊಂಡು, ಊಟ ಮುಗಿದ ನಂತರ ನಾಮದ ಕೆಳಗೆ ಅಕ್ಷಂತಿ ಬೊಟ್ಟು ಸಹಿತ ಇಟ್ಟುಕೊಂಡು ಬರುತ್ತಿದ್ದರು. ತುಂಬಾ ಲಕ್ಷಣವಾಗಿ ಕಾಣುತ್ತಿದ್ದ ಆಚಾರಿ ಸುಂದರ. ಆವಾಗ ಅವರಿಗೆ ಇಷ್ಟೆಲ್ಲಾ ಫ್ಯಾಷನ್ ಗೀಶನ್ ಇರಲಿಲ್ಲ ಅನ್ನಿ. ಈಗ ಹೈಸ್ಕೂಲಿಗೆ ಬಂದ ಮೇಲೆ ಜೋರಾಗಿ ಡ್ರೆಸ್ ಮಾಡುವದು, ಬೂಟ್ ಹಾಕುವದು, ಗಾಗಲ್ ಹಾಕುವದು, ಸ್ಟೈಲ್ ಹೊಡೆಯುವದು ಎಲ್ಲ ಶುರುವಾದ ಮೇಲೆ ಪಕ್ಕಾ ಆಚಾರರ ಹಾಗೆ ಮೊದಲಿನ ತರಹ ಇದ್ದರೆ ಅದೆಂತ ಚಂದ? ನೋಡಿದವರು ಏನೆಂದುಕೊಂಡಾರು??? ಹಾಗಂತ ವಿಚಾರ ಮಾಡಿಯೋ ಏನೋ ಗೊತ್ತಿಲ್ಲ ಆದರೆ ಈಗ ಪೂಜೆ ಮುಗಿಸಿ, ಎಲ್ಲ ಮುದ್ರೆ, ನಾಮ ಇತ್ಯಾದಿಗಳನ್ನು ಅಳಿಸಿಕೊಂಡು ಬರುವ ಪ್ರಯತ್ನ ಮಾಡುತ್ತಿದ್ದರು. ಪ್ರಯತ್ನ ಮಾಡುತ್ತಿದ್ದರು. ಆದರೂ ಅದು ಪೂರ್ತಿ ಸಫಲವಾಗುತ್ತಿರಲಿಲ್ಲ. ಗಡಿಬಿಡಿಯಲ್ಲಿ ಮುದ್ರೆ, ನಾಮ ಅಳಿಸಿಕೊಂಡು ಸರ್ ಸೈಕಲ್ ಹತ್ತಿದ್ದಾರೆ ಅಂತ ಗೊತ್ತಾಗುತ್ತಿತ್ತು. ಮನೆಯಲ್ಲಿ ಅಳಿಸಿಕೊಳ್ಳೋಣ ಅಂದರೆ ಮನೆ ಮಂದಿ ಬೈಯ್ಯುತ್ತಾರೆ. ಅಳಿಸಿಕೊಳ್ಳದೇ ಬರಲಿಕ್ಕೆ ಭಟ್ಟಿ ಅವರಿಗೇ ಒಂದು ನಮೂನಿ. ಸಂಪ್ರದಾಯಸ್ತ ಮಂದಿಗೆ ಫ್ಯಾಷನ್ ಮಾಡಬೇಕು ಅಂದರೆ ತೊಂದರೆ ಒಂದೇ ಎರಡೇ!!??

ಮತ್ತೆ ಆಗ ಬಲರಾಮ ಭಟ್ಟಿ ಸರ್ ಅವರಿಗೆ ಹೆಚ್ಚೆಂದರೆ ಎಷ್ಟು ವಯಸ್ಸು? ಒಂದು ಇಪ್ಪತ್ತಮೂರು ಇಪ್ಪತ್ನಾಲ್ಕು ವರ್ಷ ಅಷ್ಟೇ. ಬರೋಬ್ಬರಿ ಕೊತ ಕೊತ ಕುದಿಯುವ ಜಲ್ತೀ ಜವಾನಿ. ಆವಾಗಲೇ ತಲೆಗೆ ಏನೇನೋ ವಿಚಾರ ಬರುತ್ತವೆ. ಏನೇನೋ ಮಾಡಬೇಕು ಅನ್ನಿಸುತ್ತದೆ. ನೌಕರಿ ಹತ್ತಿದ ಗಂಡುಮಕ್ಕಳಿಗೆ, 'ಮದುವೆ ಮಾಡಿಕೋ! ಮಕ್ಕಳ ಮಾಡಿಕೋ! ಮನೆ ಮಾಡಿಕೋ!' ಅಂತ ಎಲ್ಲರ ಒತ್ತಾಯ. ಅದರಲ್ಲೂ ಸ್ವಲ್ಪ ಲಕ್ಷಣವಂತರು ಇದ್ದರೆ ಮುಗಿದೇ ಹೋಯಿತು. 'ಭಾಳ ಚೆನ್ನಾಗಿದ್ದೀರಿ. ಬಹಳ handsome ಇದ್ದೀರಿ. ಎಲ್ಲ ಹುಡುಗಿಯರೂ, ಹೆಂಗಸರೂ ನಿಮ್ಮ ಮೇಲೆಯೇ ಫಿದಾ. ಎಷ್ಟು ಚಂದ ಇದ್ದೀರಿ ಅಂದರೆ ದೃಷ್ಟಿ ತೆಗೆಯಬೇಕು,' ಅದು ಇದು ಅಂತ ಮಂದಿ ಪಂಪ್ ಹೊಡೆದೇ ಹೊಡೆಯುತ್ತಾರೆ. ಭಟ್ಟಿ ಸರ್ ಅವರಿಗೂ ಸಾಕಷ್ಟು ಜನ ಹೀಗೆಯೇ ಹೇಳುತ್ತಿರಬೇಕು. ಸಹಜವಲ್ಲವೇ? ಅವರೂ ಇದ್ದಿದ್ದು ನಮ್ಮ ಸಮಾಜದಲ್ಲೇ ತಾನೇ??

ಮೊದಲೆಲ್ಲ ಪ್ರೈಮರಿ ಶಾಲೆಯಲ್ಲಿ ಕೇವಲ ಚಿಣ್ಣ ಚಿಣ್ಣ ಹುಡುಗ, ಹುಡುಗಿಯರಿಗೇ ಮಾತ್ರ ಪಾಠ ಮಾಡಿಕೊಂಡಿದ್ದವರಿಗೆ ಹೈಸ್ಕೂಲ್ ಶಾಲೆಯಲ್ಲಿ ಮತ್ತೊಂದು ಮಹಾ ದೊಡ್ಡ attraction ಅಂದರೆ ಹುಡುಗಿಯರು. ಕನ್ಯಾಕುಮಾರಿಯರು. ಆಗತಾನೆ ಪ್ರಾಯಕ್ಕೆ ಬರುತ್ತಿದ್ದ  ಎಳೆ ಜಿಂಕೆಮರಿಯಂತಹ ಹುಡುಗಿಯರಿಗೂ ಇಂತಹ handsome ಮಾಸ್ತರುಗಳನ್ನು ಕಂಡರೆ ಏನೋ, ಎಲ್ಲೋ, ಯಾವದೋ ತರಹದ 'ಬವ್ವಾ ಕಡಿದ' ಫೀಲಿಂಗ್. ಅದಕ್ಕೇನೋ crush ಅಂತಾರಂತಪ್ಪಾ! ನಮ್ಮ ಕ್ಲಾಸಿನ ಅಂದಿನ ಸುಂದರಿಯರು, ಇಂದಿನ ಆಂಟಿಯರು ಯಾವ್ಯಾವ ಮಾಸ್ತರ್ ಮೇಲೆ ಅವರಿಗೆ ಕ್ರಶ್ ಇತ್ತು, ಹ್ಯಾಗೆ ಇತ್ತು, ಅಂತ ಇವಾಗಲೂ ನೆನಪಿಟ್ಟು ಮಾತಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಆವಾಗಲೂ. ಕಾಲ ಯಾವಾಗಲೂ ಕಾಲವೇ. ಮತ್ತೆ ಹುಡುಗಿಯರು ಯಾವಾಗಲೂ ಪ್ರಾಕ್ಟಿಕಲ್ ನೋಡಿ. ಸ್ವಲ್ಪ ವಯಸ್ಸಿನ ಅಂತರ ಇದ್ದರೇ ಒಳ್ಳೇದು, ನೌಕರಿ ಗೀಕರಿ ಇದ್ದು, ಶುದ್ಧ ಸುಂದರ ಮಾಣಿಯಾದರೆ ಮತ್ತೂ ಚೊಲೋ ಅಂತ ಅವರ ವಿಚಾರ. ಮುಂದೆ ಸಂಸಾರ ಬೆಳೆಸಬೇಕಾದ maternal instinct  ಅವರನ್ನು ಆ ರೀತಿ ವಿಚಾರಕ್ಕೆ ಹಚ್ಚುತ್ತದೆ. ಹಾಗಾಗಿ ಭಟ್ಟಿ ಸರ್ ಅಂತಹ ಸ್ವಲ್ಪ ಹಿರಿಯ ವಯಸ್ಸಿನ ಸುಂದರಾಂಗ ಮಾಸ್ತರ್ ಕಂಡರೆ ಹುಡುಗಿಯರು ಸಹ ಯಾವದೋ ಲೋಕದಲ್ಲಿ ಕಳೆದು ಹೋಗುತ್ತಿದ್ದರು ಅಂತ ಸುದ್ದಿಯಿತ್ತು.

ಬಲರಾಮ ಭಟ್ಟಿ ಸರ್ ಸಹಿತ ಪ್ರಾಯದ ಹುಡುಗಿಯರು ಆಗಾಗ ತಮಗೆ ಸಿಗ್ನಲ್ ಕೊಡುತ್ತಿರುವದನ್ನು ಗಮನಿಸಿರಬೇಕು. ಗಮನಿಸದೇ ಇರಲಿಕ್ಕೆ ಅವರೇನು ಪ್ರಾಯದ ತರುಣರಲ್ಲವೇ? ಹಾಗಾಗಿ ಅವರೂ ಸ್ವಲ್ಪ ಜಾಸ್ತಿಯೇ ಸ್ಟೈಲ್ ಹೊಡೆಯತೊಡಗಿದರು. ಮತ್ತೂ ನಾಲ್ಕಾರು ದುಬಾರಿ ಹೊಸ ಪ್ಯಾಂಟ್, ಷರ್ಟುಗಳನ್ನು ಹೊಲೆಯಿಸಿಕೊಂಡರು. ಲೇಟೆಸ್ಟ್ ಫ್ಯಾಷನ್. ಮತ್ತೂ ಒಂದರೆಡು ಜೊತೆ ಬೂಟು ಬಂತು. ಸೈಕಲ್ ಅದೇ ಇತ್ತು. ಪ್ರೈಮರಿಯಲ್ಲಿ ಪಾಯಿಜಾಮ, ಜುಬ್ಬಾ ಹಾಕಿಕೊಂಡು, ಮಾಳಮಡ್ಡಿಯ ಚಮಗಾರ ರಾಜಪ್ಪ ಮಾಡಿಕೊಡುತ್ತಿದ್ದ ಚರಾ ಪರಾ ಅನ್ನುವ ಚಪ್ಪಲಿ ಮೆಟ್ಟಿ ಓಡಾಡುತ್ತಿದ್ದ ಭಟ್ಟಿ ಸರ್ ಎಲ್ಲಿ! ಇವತ್ತಿನ ಹೀರೋ ಮಾದರಿಯ ಹೈಸ್ಕೂಲ್ ಮಾಸ್ತರ್ ಭಟ್ಟಿ ಸರ್ ಎಲ್ಲಿ! ಅಜಗಜಾಂತರ!

ಬಲರಾಮ ಭಟ್ಟಿ ಸರ್ ನಮಗೇನೂ ಪಾಠ ಮಾಡುತ್ತಿರಲಿಲ್ಲ. ಅವರು ನಮ್ಮ ಕ್ಲಾಸಿಗೆ ಜಾಸ್ತಿ ಬಂದಿದ್ದೂ ಇಲ್ಲ. ಆದರೆ ನಾವು ಹತ್ತನೇ ಕ್ಲಾಸಿನಲ್ಲಿ ಇದ್ದಾಗ ಭಟ್ಟಿ ಸರ್ ಚಿತ್ತ ಮಾತ್ರ ಒಂಬತ್ತನೇ ಕ್ಲಾಸಿನ ಒಬ್ಬ ಅಪ್ರತಿಮ ಸುಂದರಿಯ ಮೇಲೆ ಇದ್ದಿದ್ದು ರಹಸ್ಯವೇನೂ ಇರಲಿಲ್ಲ. ಪಾಪ! ಆಕೆಗೂ ಒದ್ದುಕೊಂಡು ಬರುತ್ತಿರುವ ಹರೆಯ. ಚಡ್ತಿ ಜವಾನಿ! ಮೇಲಿಂದ ಸಿಕ್ಕಾಪಟ್ಟೆ ಸುಂದರಿ ಬೇರೆ. ಅದೂ ಸರಿಯಾಗಿ ಮುಂದಿನ ಬೆಂಚಲ್ಲೇ ಕೂತು ಪಾಠ ಕೇಳುತ್ತಿರುವಾಕೆ. ಸುಂದರ ಮಾಸ್ತರ್ ಬಂದರೆ ನೋಡಲೂ ಬೆಸ್ಟ್ ಜಾಗ. ಈ ಭಟ್ಟಿ ಮಾಸ್ತರರು ಆಕೆಯ ಕ್ಲಾಸಿಗೆ ಯಾವದಾದರೂ ವಿಷಯ ಪಾಠ ಮಾಡುತ್ತಿದ್ದರೇ? ನೆನಪಿಲ್ಲ. ಆದರೆ absent ಪಿರಿಯಡ್ ಇದ್ದಾಗ, ಅವಕಾಶ ಸಿಕ್ಕಾಗ, ಕ್ಲಾಸಿನಲ್ಲಿ ಗಲಾಟೆ ಹೆಚ್ಚಾಗಿ ಹುಡುಗರನ್ನು ಸುಮ್ಮನಿರಿಸಲು ಆ ಸುಂದರಿಯ ಕ್ಲಾಸಿಗೆ ಹೋಗುವದೆಂದರೆ ಭಟ್ಟಿ ಮಾಸ್ತರರಿಗೆ ಖುಷಿಯೋ ಖುಷಿ. ಮುದ್ದಾಂ ಕೇಳಿ ಕೇಳಿ ಅದೇ ಕ್ಲಾಸಿಗೆ ಹಾಕಿಸಿಕೊಂಡು ಹೋಗಿ absent ಪಿರಿಯಡ್ ಸಂಬಾಳಿಸಿ ಬರುತ್ತಿದ್ದರು. ಹೋಗಿ ಸುಂದರಿಯನ್ನು ಕಣ್ತುಂಬಾ ನೋಡಿ ಬರುತ್ತಿದ್ದರು. ಆಕೆಗೂ ಭಟ್ಟಿ ಸರ್ ಮೇಲೆ crush ಇತ್ತೇ? ಗೊತ್ತಿಲ್ಲ. ಆ ವಯಸ್ಸೇ ಹಾಗೆ. ಹೃದಯ ಗುಟರ್ ಗುಟರ್ ಅಂತ ಬಿಳೆ ಪಾರಿವಾಳದ ಹಾಗೆ ರೆಕ್ಕೆ ಹಾರಿಸುತ್ತದೆ. ಎದ್ದು ಎದ್ದು ಛಲಾಂಗ್ ಹೊಡೆಯುತ್ತದೆ. ಕಣ್ಣುಗಳು ಎಲ್ಲೆಲ್ಲೋ ತಿರುಗುತ್ತವೆ. ಮತ್ತೊಂದು ಜೋಡಿ ಸುಂದರ ಕಣ್ಣುಗಳ ಜೊತೆ ಕಲೆತುಬಿಡುತ್ತವೆ. ಮನಸ್ಸು ಚಂದ ಕಂಡಿದ್ದೆಲ್ಲ ಬೇಕು ಬೇಕು ಅಂತ ರಚ್ಚೆ ಹಿಡಿಯುತ್ತದೆ. ಅದು ಹುಡುಗರಿಗೂ ಅಷ್ಟೇ. ಹುಡುಗಿಯರಿಗೂ ಅಷ್ಟೇ. ಮೈಯಲ್ಲಿ ಹಾರ್ಮೋನುಗಳು ಹಾರ್ಮೋನಿಯಂ ಬಾರಿಸುತ್ತಿದ್ದರೆ ಮತ್ಯಾರೋ ವೀಣೆ ಶ್ರುತಿ ಮಾಡುತ್ತಿರುತ್ತಾರೆ. ಹೃದಯ ತಂತಾನೇ ಬಾರಿಸಿಕೊಂಡು ತಂತಿ ಮೀಟಿಕೊಂಡರೆ ಒಂದು ತರಹದ ಹಾಯೆನ್ನಿಸುವ ನೋವು. ದಿಲ್ ಮೇ ಮೀಠಿ ಸಿ ಚುಬನ್!

ಭಟ್ಟಿ ಮಾಸ್ತರರೋ ಕೆಲಸ ಗಿಲಸ ಹಿಡಿದು ಸೆಟಲ್ ಆದ ಸುಂದರ ಆಸಾಮಿ. ಸಂಸಾರಸ್ಥರಾಗಲು ಎತ್ತಿ ನಿಂತವರು. ಅಂದರೆ ಕಾಲು ಎತ್ತಿ ತಯಾರಾಗಿ ನಿಂತವರು ಅಂತ. ಅವರೂ ಸಹ ಏನೇನು ಕನಸು ಕಾಣುತ್ತಿದ್ದರೋ ಏನೋ? ಆವಾಗಲೇ ಈ ಒಂಬತ್ತನೇ ಕ್ಲಾಸಿನ ಸುಂದರಿ ಮೋಹಿನಿ ಬೇರೆ ಕಂಡುಬಿಟ್ಟಿದ್ದಾಳೆ. ಇಬ್ಬರದೂ ಜಾತಿ, ಗೀತಿ, ಕುಲ ಎಲ್ಲ ಒಂದೇ. ಆಕೆಯ ಗೋತ್ರವೂ ಓಕೆ. ಇವರ ಧೋತ್ರವೂ ಓಕೆ. ಆಕೆಯದು ಆವಾಗ ಯುನಿಫಾರ್ಮ್ ಸ್ಕರ್ಟ್ ಮತ್ತು ಶರ್ಟ್ ಆದರೆ ಭಟ್ಟಿ ಸರ್ ದು ಪ್ಯಾಂಟ್ ಶರ್ಟ್. ಮುಂದೆ ಇವರದ್ದು ಧೋತ್ರ, ಆಕೆಯದ್ದು ಕಚ್ಚೆ ಸೀರೆ. ಆಚಾರ್ ಮಂದಿಯ ಡ್ರೆಸ್ ಕೋಡ್. ಆಕೆ ಬಗ್ಗೆ ಇದೆಲ್ಲ ಮಾಹಿತಿ ಸಂಗ್ರಹಿಸಿದ್ದರು ಭಟ್ಟಿ ಸರ್. ಕುಂಡಲಿ ಸಹ ಮ್ಯಾಚ್ ಮಾಡಿಸಿಬಿಟ್ಟಿದ್ದರು ಅಂತ ನಮ್ಮ ಕಿತಬಿ ಜೋಕ್.  ಹೀಗೆಲ್ಲಾ ಆಗಿ ಭಟ್ಟಿ ಸರ್ ಏನೇನು ಕನಸು ಕಂಡರೋ ಏನೋ. ಇನ್ನು ಇಬ್ಬರ ನಡುವಿನ ವಯಸ್ಸಿನ ಅಂತರ? ಹೆಚ್ಚೆಚ್ಚು ಅಂದರೆ ಹತ್ತು ವರ್ಷ. ಏ! ಅದೆಲ್ಲ ಓಕೆ. ಎಲ್ಲಿಯಾದರೂ ಈ ಡಿಂಗ್ ಡಾಂಗ್ ಲಫಡಾ ವರ್ಕ್ ಔಟ್ ಆಗಿಬಿಟ್ಟರೆ ಇಂದಿನ ವಿದ್ಯಾರ್ಥಿನಿ ಸುಂದರಿ ಮೋಹಿನಿ ಮುಂದೆ ತಮ್ಮ ಮಡದಿ. ಆ ಪರಿ ಖತರ್ನಾಕ್ ಸುಂದರಿ. ಮೇಲೆ ದೊಡ್ಡ ಮಾಲದಾರ್ ಮಂದಿಯ ಮಗಳು. ಯಾರಿಗಿದೆ ಯಾರಿಗಿಲ್ಲ ಈ ಭಾಗ್ಯ? ಭಟ್ಟಿ ಸರ್ ಹೀಗೆಲ್ಲಾ ವಿಚಾರ ಮಾಡಿದರೋ ಏನೋ ಗೊತ್ತಿಲ್ಲ. ಆದರೆ ಒಂದು ವಿಚಿತ್ರ ಅನ್ನುವಂತಹ ಅಭ್ಯಾಸ ಶುರು ಮಾಡಿಕೊಂಡುಬಿಟ್ಟರು.

ಅದೇನೆಂದರೆ ದಿನಾ ಸಂಜೆ ಮೋಹಿನಿ ಎಂಬ ಸುಂದರಿಯ ಮನೆ ಮುಂದೆ ಒಂದು ನಾಲ್ಕು ಬಾರಿ ರೊಂಯ್ ರೊಂಯ್ ಅಂತ ಸೈಕಲ್ ಮೇಲೆ ರೌಂಡ್ ಹೊಡೆಯುವದು. ಆಕೆಯ ಮನೆಯ ಮುಂದಿನ ರಸ್ತೆಯೋ ಉದ್ದನೆಯ ರಸ್ತೆ. ಒಂದು ತುದಿಯಿಂದ ಇನ್ನೊಂದು ತುದಿಗೆ ಕಮ್ಮಿ ಕಮ್ಮಿ ಅಂದರೂ ಒಂದು ಒಂದೂವರೆ ಕಿಲೋಮೀಟರ್.

ಶಾಲೆ ಮುಗಿದ ನಂತರ ಆ ಮೋಹಿನಿ ಹೋಗಿ ಮನೆ ಸೇರಿಕೊಂಡು, ಯುನಿಫಾರ್ಮ್ ಬದಲು ಮಾಡಿ, ಅದೇನು ನೈಟಿಯೋ ಅಥವಾ ಮ್ಯಾಕ್ಸಿ ತರಹದ ಉದ್ದನೆಯ ಲಂಗವನ್ನು ಹಾಕಿಕೊಂಡು, ತಿಂಡಿ ಪಂಡಿ ಮುಗಿಸಿ, ಅವರ ಮನೆಯ ದೊಡ್ಡ ಕಾಂಪೌಂಡಿನಲ್ಲಿ ಓಡಾಡಿಕೊಂಡು ಇರುತ್ತಿದ್ದಳು. ಸಹಜವಾಗಿ. ಸಂಜೆಯ ಹವಾ ಸೇವನೆ. ವಾಕಿಂಗ್ ಬೇಜಾರು ಬಂದಾಗೊಮ್ಮೆ ಆಕೆಯ  ಮನೆಯ ಕಂಪೌಂಡ್ ಗೇಟ್ ಮೇಲೆ ಆಕೆಯ ಕ್ಯೂಟ್ ಗದ್ದವನ್ನು (chin) ಊರಿಕೊಂಡು, ಎರಡೂ ಕೈಯಿಂದ ತನ್ನ ಕೆಂಪು ಸೇಬು ಗಲ್ಲಗಳನ್ನು ಒತ್ತಿಕೊಂಡು, ಎತ್ಲಾಗೋ ನೋಡುತ್ತಾ ನಿಂತುಬಿಡುತ್ತಿದ್ದಳು. ಅದ್ಭುತ ದೃಶ್ಯ! ನಾವೂ ನೋಡಿ ಜೊಲ್ಲು ಸುರಿಸಿದವರೇ! ಗೇಟ್ ಮೇಲೆ ಗದ್ದವೂರಿ ನಿಂತಿದ್ದು ಬೇಸರವಾಯಿತು ಅಂದರೆ ಮತ್ತೆ ಓಡಾಟ ಶುರು. ಹೀಗೆ ಮಾಡಿ ಒಂದಿಷ್ಟು ಹವಾ ಕುಡಿದ ನಂತರ ಮನೆ ಒಳಗೆ ಸೇರಿಕೊಳ್ಳುತ್ತಿದ್ದಳು. ಅದೇನೋಪಾ ಗೊತ್ತಿಲ್ಲ ಆದರೆ ಆಕೆ ಧರಿಸುತ್ತಿದ್ದುದು ಯಾವಾಗಲೂ ಹೆಚ್ಚಾಗಿ ಬಿಳಿಯ ಬಣ್ಣದ ನೈಟಿಯೇ. ತುಂಬಾ ಅಂದವಾಗಿ ಕಾಣುತ್ತಿದ್ದಳು ಬಿಡಿ. ನೋಡಲಿಕ್ಕೆ ಮಾತ್ರ ಪಕ್ಕಾ ಮೋಹಿನಿ. ಬೇಗ ಕತ್ತಲಾಗುವ ದಿನಗಳಲ್ಲಿ ನೀಳಕಾಯದ ಈ ಖತರ್ನಾಕ್ ಸುಂದರಿ ಬಿಳಿ ನೈಟಿ ಧರಿಸಿ, ಗೇಟಿನ ಮೇಲೆ ಗದ್ದವೂರಿ ಒಂದು ತರಹದ 'ತನಹಾ ತನಹಾ ಪ್ಯಾಸಿ ಪ್ಯಾಸಿ' ಲುಕ್ ಕೊಡುತ್ತಾ ನಿಂತಳು ಅಂದರೆ ಅಷ್ಟೇ ಮತ್ತೆ.  ನೋಡಿದವರು ಮೊದಲು ಆಕರ್ಷಿತರಾಗಬೇಕು. ನಂತರ ಹತ್ತಿರ ಹೋದಾಗ ಮೋಹಿನಿ ದೆವ್ವ ನೆನಪಾಗಿಬಿಟ್ಟರೆ ಅಷ್ಟೇ ಮತ್ತೆ. ಹೆದರಿ ಏನೇನೋ ಆಗಿ ಪತರುಗುಟ್ಟಬೇಕು. ಹಾಗಿರುತ್ತಿತ್ತು ಮೋಹಿನಿ ಮಾಹೋಲ್!

ಮೋಹಿನಿ (ಸ್ಯಾಂಪಲ್ ಮಾತ್ರ)

ಇಂತಹ ಮೋಹಿನಿ ಮನೆಯ ಮುಂದೆ ಭಟ್ಟಿ ಸರ್ ದಿನಾ ಸಂಜೆ ಒಂದು ಸಾರೆ ಸೈಕಲ್ ಹೊಡೆಯಲಿಲ್ಲ ಅಂದರೆ ಅವರಿಗೆ ಸಮಾಧಾನವೇ ಇಲ್ಲ. ಒಮೊಮ್ಮೆ ಮೊದಲನೇ ಸಲ ರೌಂಡ್ ಹೊಡೆದಾಗಲೇ ಮೋಹಿನಿ ಕಂಡು ಭಟ್ಟಿ ಸರ್ ಫುಲ್ ಖುಷ್. ಒಮ್ಮೊಮ್ಮೆ ನಾಲ್ಕಾರು ರೌಂಡ್ ಹೊಡೆಯಲೇಬೇಕಾಗುತ್ತಿತ್ತು. ಭಟ್ಟಿ ಸರ್ ಆಕಡೆಯಿಂದ ಈಕಡೆ ರೌಂಡ್ ಹೊಡೆದೇ ಹೊಡೆಯುತ್ತಿದ್ದರು. ಅವರದ್ದೇ ಒಂದು ಲೆಕ್ಕ ಇತ್ತು ಅಂತ ನೆನಪು. ನಾಲ್ಕೋ ಆರೋ ರೌಂಡ್ ಹೊಡೆದಾದ ಮೇಲೂ ಮೋಹಿನಿ ಕಾಣಲಿಲ್ಲ ಅಂದರೆ ಹಾಂಗೆ ಎತ್ತಿಕೊಂಡು, ಮತ್ಲಬ್ ಸೈಕಲ್ ಎತ್ತಿಕೊಂಡು, ವಾಪಸ್ ಮಾಳಮಡ್ಡಿ ಮನೆ ಕಡೆ ಹೋಗುತ್ತಿದ್ದರು ಅಂತ ನೆನಪು. ಕಂಡರೂ ಮೋಹಿನಿ ಜೊತೆ ಮಾತು ಕತೆ ಎಲ್ಲ ಇಲ್ಲ. ಆಗಿನ ಕಾಲದ ಧಾರವಾಡದಲ್ಲಿ ಅಂತದ್ದಕ್ಕೆಲ್ಲ ಅವಕಾಶ ಇರಲೇ ಇಲ್ಲ. ತನ್ನ ಮಾಸ್ತರರು ಕಂಡರು, ಅದೂ crush ಇದ್ದಿರಬಹುದಾದ ಭಟ್ಟಿ ಸರ್ ಕಂಡರು ಅಂತ ಮೋಹಿನಿ ಒಂದು ನಮಸ್ಕಾರವನ್ನೋ, ಸುಂದರ ನಗೆಯನ್ನೋ ಕೊಟ್ಟು, ನಾಚಿ, ನೈಟಿಯನ್ನು ಸ್ವಲ್ಪೇ ಎತ್ತಿಕೊಂಡು, ಗೆಜ್ಜೆ ಘಲ್ ಘಲ್ ಮಾಡುತ್ತಾ ಮನೆ ಒಳಗೆ ಓಡಿದಳು ಅಂದರೆ ಅದೇ ದೊಡ್ಡ ಮಾತು. ಒಮ್ಮೆ ಭಟ್ಟಿ ಸರ್ ದರ್ಶನವಾಯಿತು ಅಂದರೆ ಮೋಹಿನಿ ಸಹಿತ ಜಾಗಾ ಖಾಲಿ ಮಾಡುತ್ತಿದ್ದಳು. ಹೇಳಿ ಕೇಳಿ ಒಳ್ಳೆ ಸಂಪ್ರದಾಯಸ್ತ ಮನೆತನದ ಹುಡುಗಿ. ಆಕೆಗೂ ಎಲ್ಲ ಟ್ರೇನಿಂಗ ಬರೋಬ್ಬರಿ ಆಗಿಯೇ ಇರುತ್ತದೆ. ಶಾಲೆಯಿಂದ ಬಂದ ಮೇಲೆ ಒಂದು ಸ್ವಲ್ಪ ಹೊತ್ತು ಆರಾಮವಾಗಿ ಕಾಂಪೌಂಡ್ ತುಂಬಾ ಗಾರ್ಡನ್ ಒಳಗೆ ಓಡಾಡಿಕೊಂಡು ಇರೋಣ ಅಂದರೆ ಈ ಭಟ್ಟಿ ಸರ್ ಒಬ್ಬರು ಬಂದು ಮೌನವಾಗಿ ಕಣ್ಣಲ್ಲೇ ಕಾಡುತ್ತಾರೆ.

ತುಂಬಾ ದಿನ ಇದು ಹೀಗೆಯೇ ನಡೆದಿತ್ತು. ನಾವೂ ದಿನಾ ನೋಡುತ್ತಿದ್ದೆವು. ಯಾಕೆಂದರೆ ನಾವು ಸಹ ಸುಮಾರು ಅದೇ ಹೊತ್ತಿಗೆ ಶಾಲೆಯಿಂದ ಮನೆ ಕಡೆ ಸೈಕಲ್ ಮೇಲೆ ಬರುತ್ತಿದ್ದೆವು. ಅದೇ ಏರಿಯಾದ ಮಂದಿ ನಾವು. ಮತ್ತೆ SSLC ಅಂತ ನಮಗೆ ಶಾಲೆ ಬಿಟ್ಟ ನಂತರ ಒಂದು ತಾಸು ಹೆಚ್ಚಿನ ಕೋಚಿಂಗ್ ಕ್ಲಾಸ್ ಇರುತ್ತಿತ್ತು. ನಾವು ಹೊರಡುವ ಹೊತ್ತಿಗೇ, ಭಟ್ಟಿ ಸರ್ ಸಹಿತ ತಮ್ಮ ಕೆಲಸ ಮುಗಿಸಿ, ಮೋಹಿನಿ ಮನೆ ಕಡೆ ಹೊರಡುತ್ತಿದ್ದರು. ಅವರಿಗೆ ಮುಜುಗರವಾಗಬಾರದು ಅಂತ ನಾವು ಸ್ವಲ್ಪ ದೂರದಲ್ಲಿ, ಅಥವಾ parallel ರೋಡಿನಲ್ಲಿ ಈ ಹಂಗಾಮಾ ನೋಡುತ್ತಾ ಬರುತ್ತಿದ್ದೆವು. ನಾವು ಮನೆಗೆ ಹೋಗಿ, ತಿಂಡಿ ಮುಗಿಸಿ, ಹರಟೆಕಟ್ಟೆಗೆ ಬರಬೇಕು ಅಂದರೆ ಅದೇ ಸುಂದರಿಯ ಮನೆಯ ಪಕ್ಕಕ್ಕೇ ಬರಬೇಕು. ಆಗ ಸಾಕಷ್ಟು ಹೊತ್ತಾಗಿರುತ್ತಿತ್ತು. ಮೋಹಿನಿ ಆಗಲೇ ಒಳಗೆ ಸೇರಿಕೊಂಡುಬಿಟ್ಟಿರುತ್ತಿದ್ದಳು. ಹರಟೆಕಟ್ಟೆಯ ಸ್ನೇಹಿತರು ಅಂದಿನ 'ಮೋಹಿನಿ ಭಸ್ಮಾಸುರ' ಪ್ರಸಂಗದ ವಿವರಣೆ ನೀಡುತ್ತಿದ್ದರು. ಸಿಕ್ಕಾಪಟ್ಟೆ ಮಷ್ಕಿರಿ ಹರಟೆ ಹೊಡೆದು, ಎಲ್ಲ ಮಾಹಿತಿ ಸಂಗ್ರಹಿಸಿ ವಾಪಸ್ ಬರುತ್ತಿದ್ದೆವು. ಮರುದಿನ ಅದನ್ನು ಶಾಲೆಯಲ್ಲಿ ಮಸಾಲೆ ಹಾಕಿ ಫುಲ್ broadcast ಮಾಡುವ ತನಕ ಸಮಾಧಾನವೇ ಇಲ್ಲ.

ಭಟ್ಟಿ ಸರ್ ಮಂಡೆಯಲ್ಲಿ ಅದ್ಯಾವ ಹುಳ ಮೊಟ್ಟೆ ಇಟ್ಟುಬಿಟ್ಟಿತೋ ಏನೋ ಗೊತ್ತಿಲ್ಲ. ಅವರಿಗೆ ತಾವೂ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗಿಬಿಡಬೇಕು ಅಂತ ತಲೆಗೆ ಬಂದುಬಿಡ್ತು. ಕೇವಲ handsome ಇದ್ದರೆ ಮಾತ್ರ ಸಾಕೇ? ಹುಡುಗಿಯರನ್ನು ಅದರಲ್ಲೂ ಮೋಹಿನಿಯನ್ನು ಇಂಪ್ರೆಸ್ ಮಾಡಲು ಒಂದಿಷ್ಟು brawn ಬೇಡವೇ!?? ರಫ್ ಅಂಡ್ ಟಫ್ ಅನ್ನುವ ಇಮೇಜ್ ಬೇಡವೇ??? angry young man ಇದ್ದರೆ ಹುಡುಗಿಯರು ಪಟಪಟಾ ಅಂತ ಬೀಳುತ್ತಾರೆ. Nice guys always finish last. ಅಂತೆಲ್ಲ ತಲೆಗೆ ಬಂದಿರಬೇಕು. ಏನೇನೋ ವಿಚಾರ ಮಾಡಿ ತಾವೂ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗುವ ನಿರ್ಧಾರ ತೆಗೆದುಕೊಂಡರು. ಅದೇ ರೀತಿ ಕಾರ್ನಾಮೆ ಶುರುವಿಟ್ಟುಕೊಂಡರು.

'ನಾನು ಭಟ್ಟರ ಶಾಲೆಯ ಹೊಸಾ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್!' ಅಂತ ಹೇಳಿಕೊಂಡು ಅಡ್ಯಾಡಲಿಲ್ಲ ಭಟ್ಟಿ ಸರ್. ಮಾಡಿ ತೋರಿಸಲು ಶುರು ಮಾಡಿಬಿಟ್ಟರು! ಕಂಡ ಕಂಡ ಮಂದಿಯನ್ನು ಹಿಡಕೊಂಡು ಬಾರಿಸಲು ಶುರು ಮಾಡಿಬಿಟ್ಟರು. ಮೊದಲು ಸಣ್ಣ ಕ್ಲಾಸಿನಿಂದ ಶುರು ಹಚ್ಚಿಕೊಂಡರು. ನಮ್ಮಲ್ಲಿ ಐದನೇ ಕ್ಲಾಸಿನಿಂದ ಹತ್ತನೆಯ ಕ್ಲಾಸಿನವರೆಗಿನ ತರಗತಿಗಳು ಹೈಸ್ಕೂಲ್ ಅಂತಲೇ ಇದ್ದವು. ಐದರಿಂದ ಎಂಟನೆಯ ಕ್ಲಾಸಿನ ಮಕ್ಕಳನ್ನು ಯಾರು ಬೇಕಾದರೂ ಬಾರಿಸುತ್ತಿದ್ದರು. ಅದಕ್ಕೆ ಎನ್ಕೌಂಟರ್ ಸ್ಪೆಷಲಿಸ್ಟ್ ಜನರೇ ಬೇಕು ಅಂತೇನೂ ಇರಲಿಲ್ಲ. ಪಾಪ ಚಿಕ್ಕ ಮಕ್ಕಳು! ಬಡಿಸಿಕೊಳ್ಳಬಾರದ ರೀತಿಯಲ್ಲಿ ಬಡಿಸಿಕೊಂಡು, ಅತ್ತು ಅತ್ತು, ಕಣ್ಣೀರು ಇಂಗಿ ಹೋಗಿ, ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದರು ಚಿಣ್ಣ ಮಕ್ಕಳು. ಮೊದಮೊದಲು ಅಂತಹ ಚಿಣ್ಣರನ್ನು ಬಡಿದು, ಮೀಸೆ ತಿರುವಿ, ಅದೇ ಕ್ಲಾಸಿನ ಚಿಣ್ಣ ಹುಡುಗಿಯರ ಕಡೆ ನೋಡಿ, 'ಹೆಂಗೆ????' ಅಂತ ಖತರ್ನಾಕ್ ಲುಕ್ ಕೊಡಲು ಶುರುಮಾಡಿಕೊಂಡುಬಿಟ್ಟರು ಭಟ್ಟಿ ಸರ್. ಭಟ್ಟಿ ಸರ್ ಅಂದರೆ ಮುಂದೆ ಆ ಚಿಕ್ಕಮಕ್ಕಳ ಚಡ್ಡಿ ಒದ್ದೆಯಾಗತೊಡಗಿತು. ಹುಡುಗಿಯರು ರೋಪ್ ಹಾಕಲು ಶುರು ಮಾಡಿದರು. 'ಭಟ್ಟಿ ಸರ್ ಕಡೆ ಹೋಗಿ ಹೇಳ್ತೇನಾ ಮತ್ತ!' ಅಂತ blackmail ಮಾಡುವ ಲಫಡಾ ಕೂಡ ಶುರುವಾಯಿತು. 'ಅಬಬಬಬಾ! ಭಟ್ಟಿ ಸರ್ ಮಹಿಮೆಯೇ!' ಅಂತ ಅಂದುಕೊಂಡೆವು.

ಆದರೆ ನಿಜವಾದ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಅಂತ ಒಂದು ಹವಾ ಬರಬೇಕು ಅಂದರೆ ಒಂಬತ್ತು, ಹತ್ತನೇ ಕ್ಲಾಸಿನ ಹುಡುಗರನ್ನು ಎನ್ಕೌಂಟರ್ ಮಾಡಬೇಕು. ಅದರಲ್ಲೂ ದಾಣಿಗ್ಯಾ ಹಾಂಗೆ ದೈತ್ಯ ಸೈಜಿಗೆ ಬೆಳೆದ ದಾಂಡಿಗರನ್ನು ಬಡಿದು, ಮರ್ದನ ಮಾಡಿ, ಮಟ್ಟ ಹಾಕಿ, ನೆಲಕ್ಕೆ ಬಿದ್ದ ಅವರ ಮೇಲೆ 'ರಂಭಾ ಹೋ!! ಹೋ!! ಹೋ!! ಸಂಭಾ ಹೋ!! ಹೋ!! ಹೋ!!' ಅಂತ ಡಿಸ್ಕೋ ಡಾನ್ಸ್ ಹೊಡೆದು, ಮದಕರಿನಾಯಕನ ಹಾಗೆ ಬೇಡರ ಕೇಕೆ ಹೊಡೆದು ಅಬ್ಬರಿಸಬೇಕು. ಅದು ನಿಜವಾದ ಎನ್ಕೌಂಟರ್. ಅಂತಹ ಒಂದು ಹತ್ತಾರು ಎನ್ಕೌಂಟರ್ ಮಾಡಿ, ನಂತರ ಏನೇ ಆದರೂ, ಏನೇ ಬಂದರೂ ಅವನ್ನೆಲ್ಲ  ನಿಪಟಾಯಿಸಿಕೊಂಡರೆ ಮಾತ್ರ ಖರೆ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್. ಇಲ್ಲವಾದರೆ ಇಲ್ಲ. ಅದು ಭಟ್ಟಿ ಸರಿಗೂ ಗೊತ್ತು.

ಆದರೆ ಒಂಬತ್ತು, ಹತ್ತನೇ ಕ್ಲಾಸಿನ ಹುಡುಗರನ್ನು ತಡವಿಕೊಳ್ಳುವದು ಸ್ವಲ್ಪ ಕಷ್ಟ. ವಯೋಸಹಜ teenage rebellion ಸಿಕ್ಕಾಪಟ್ಟೆ ಇರುತ್ತದೆ. ತಿರುಗಿ ತಿರಸಟ್ಟಾಗಿ ಮಾತಾಡುತ್ತಾರೆ. ಮತ್ತೆ ಕೆಲವರು ಹೊನಗ್ಯಾ ಮಾದರಿಯಲ್ಲಿ ದೈತ್ಯರಂತೆ ಬೆಳೆದುಬಿಟ್ಟಿರುತ್ತಾರೆ. ಕೈ ತಿರುವಲು ಹೋದರೆ ಕೈಯನ್ನು ಘಟ್ಟಿಯಾಗಿ ಹಿಡಿದು ಮಾಸ್ತರರ ಕೈಯನ್ನೇ ನೋಯಿಸುತ್ತಾರೆ. ತಲೆಗೆ ಫಟ್ ಅಂತ ಕೊಟ್ಟರೆ, ತಲೆ ಬಗ್ಗಿಸಿ ನಿಲ್ಲುವ ಬದಲು ತಲೆ ಎತ್ತಿ ಕೆಕ್ಕರಿಸಿ ನೋಡುತ್ತಾರೆ. ಓಪನ್ ಆಗಿ ಚಾಲೆಂಜ್ ಮಾಡುತ್ತಾರೆ. ನಂತರ ನೋಡಿಕೊಳ್ಳುವದಾಗಿ ಹೇಳುತ್ತಾರೆ. ಧಾರವಾಡದಲ್ಲಿ ಆ ಕಾಲದಲ್ಲಿ ಹೆಸರು ಮಾಡಿದ್ದ ರೌಡಿಗಳ ಹೆಸರನ್ನು ಚಿಲ್ಲರೆಯಂತೆ ಉದುರಿಸುತ್ತಾರೆ. ಒಂದೇ ಎರಡೇ ತಲೆಬಿಸಿ ದೊಡ್ಡ ಕ್ಲಾಸಿನ ದೊಡ್ಡ ಮಂದಿಯನ್ನು ಬೆಂಡ್ ಎತ್ತೋದು ಅಂದರೆ!?

ಆದರೂ ಭಟ್ಟಿ ಸರ್ ಅವರಿಗೆ ತಾಪಡ್ತೋಪ್ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗಿಯೇಬಿಡಬೇಕು ಅಂತ ಹಂಬಲ. ತುಂಬಾ ವತ್ರ. ಅರ್ಜೆಂಟ್. ಮೋಹಿನಿಗೆ ರಫ್ ಅಂಡ್ ಟಫ್ ಆಚಾರಿಯೇ ಇಷ್ಟವೇನೋ. ಯಾರಿಗೆ ಗೊತ್ತು!?

ಹೀಗೆಲ್ಲಾ ವಿಚಾರ ಮಾಡಿದ ಭಟ್ಟಿ ಸರ್ ತಮ್ಮ ಮೊದಲ ನಿಜವಾದ ಎನ್ಕೌಂಟರ್ ಕಾರ್ಯಾಚರಣೆಗೆ ಸ್ಕೆಚ್ ಹಾಕಿದರು. ಅನಾಹುತ ಮಾಡಿಕೊಳ್ಳುತ್ತೇನೆ ಅಂತ ಅವರಿಗೆ ಗೊತ್ತಿರಲಿಲ್ಲ. ನಸೀಬ್ ಕೆಟ್ಟಿತ್ತು. ಶನಿ ವಕ್ಕರಿಸಿತ್ತು. ಭಂಡಿವಡ್ಡರನೆಂಬ notorious ದೈತ್ಯನನ್ನು ತಡವಿಕೊಂಡು ತಪ್ಪು, ಮಹಾ ತಪ್ಪು ಮಾಡಿಕೊಂಡುಬಿಟ್ಟರು. ಅಕಟಕಟಾ!

ಭಂಡಿವಡ್ಡರ - ದುಷ್ಟನಲ್ಲ. ಆದರೆ ದೈತ್ಯ. ಎಷ್ಟೋ ವರ್ಷಗಳಿಂದ 10th D ಕ್ಲಾಸಿನಲ್ಲಿ ಝೇಂಡಾ ಹೊಡೆದಿದ್ದ ಭೂಪ. ನಮಗೆ ಮೂರ್ನಾಲ್ಕು ವರ್ಷಕ್ಕೆ ಸೀನಿಯರ್ ಇದ್ದವ ನಮ್ಮ ಜೊತೆಗೇ ಮತ್ತೆ SSLC ಪರೀಕ್ಷೆಗೆ ಕೂತಿದ್ದ. ಮುಗಿಸಿದನೋ ಇಲ್ಲವೋ ಗೊತ್ತಿಲ್ಲ. ವಡ್ಡರ ಓಣಿಯ ಮನುಷ್ಯ. ರಫ್ ಅಂಡ್ ಟಫ್. ಸ್ವಲ್ಪ ಮಷ್ಕಿರಿ, ತುಂಟಾಟ ಜಾಸ್ತಿ. ನಾವು ಸಣ್ಣವರು ಯಾರಾದರೂ ಸಿಕ್ಕರೆ ಸುಮ್ಮನೆ ಲೋಚಾ ಮಾಡಿ, ಸ್ವಲ್ಪ ಗೋಳು ಹೊಯ್ದುಕೊಳ್ಳುತ್ತಿದ್ದ ಅಷ್ಟೇ. ಅವನ ಜೊತೆ ಉಲ್ಟಾ ಮಾತು ಗೀತು ಇಲ್ಲ. ಬಾರಿಸಿಬಿಡುತ್ತಿದ್ದ. ಮತ್ತೆ ಅವನ ವಡ್ಡರ ಓಣಿಯ ಜನರೆಲ್ಲಾ ಖತರ್ನಾಕ್ ಮಂದಿಯೇ. ಆಗಾಗ ಶಾಲೆ ಹೊರಗೆ ಅವರನ್ನು ಕರೆಯಿಸಿ ತನ್ನ ತೋಳ್ಬಲ (muscle power) ಹೇಗಿದೆ ನೋಡಿ ಅಂತ ಜಬರ್ದಸ್ತ್ show ಬೇರೆ ಕೊಡುತ್ತಿದ್ದ. ಹಾಗಾಗಿ ಭಂಡಿವಡ್ಡರನನ್ನು ಕಂಡರೆ ಕೈಮುಗಿದು ದುವಾ ಸಲಾಮಿ ಮಾಡಿಕೊಂಡು ಇರುತ್ತಿದ್ದವರೇ ಭಾಳ ಜನ. ಇನ್ನು ಅವನ ದೋಸ್ತರೆಲ್ಲ ಹೆಚ್ಚಿನವರು ಹೊರಗಿನವರೇ. ಬೇರೆ ಬೇರೆ ಕಾರಣಕ್ಕೆ ಅವನನ್ನು ಹುಡುಕಿಕೊಂಡು ಶಾಲೆಗೆ ಬರುತ್ತಿದ್ದರು. ಭಂಡಿವಡ್ಡರನಿಗೆ ಖಡಕ್ ವಾರ್ನಿಂಗ್ ಕೊಡಲಾಗಿತ್ತು. 'ನಿನ್ನ ವಡ್ಡರ ಓಣಿಯ ರೌಂಡಿ ಗ್ಯಾಂಗ್ ಯಾವದೇ ಕಾರಣಕ್ಕೂ ಸ್ಕೂಲ್ ಒಳಗೆ ಬರಬಾರದು. ಬಂದರೆ ನಿನ್ನ ಪರಿಸ್ಥಿತಿ ನೆಟ್ಟಗಿರುವದಿಲ್ಲ! ಹುಷಾರ್!' ಹೀಗಂತ ಒರಿಜಿನಲ್ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರೇ ಎಚ್ಚರಿಕೆ ಕೊಟ್ಟಿದ್ದರು. ಮತ್ತೆ ಭಂಡಿವಡ್ಡರ ಸಹಿತ ಅದನ್ನು ಪಾಲಿಸಿಕೊಂಡು ಬಂದಿದ್ದ. ಆದರೆ ಭಂಡಿವಡ್ಡರನ ಪರವಾಗಿ ಅವನ ವಡ್ಡರ ಓಣಿ ಗ್ಯಾಂಗ್ ಶಾಲೆ ಮುಂದೆ ಬಂದಿದ್ದು ಒಂದೇ ಅಲ್ಲ, ನುಗ್ಗಿ ರೈಡ್ ಮಾಡುತ್ತೇವೆ, 'ಒಬ್ಬರನ್ನು' ಹಿಡಿದು ಬಡಿಯುತ್ತೇವೆ ಅಂತ ಕೂತುಬಿಡುವಂತಹ ಒಂದು ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತು. ಅದಕ್ಕೆ ಕಾರಣೀಭೂತರಾದವರು ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗಬೇಕು ಅಂತ ಹುಚ್ಚು ಹಿಡಿಸಿಕೊಂಡಿದ್ದ ಇದೇ ಭಟ್ಟಿ ಸರ್!

ಭಂಡಿವಡ್ಡರನ ಖತರ್ನಾಕ್ ಹಿನ್ನೆಲೆ ಗೊತ್ತಿಲ್ಲದ ಭಟ್ಟಿ ಸರ್ ಹೋಗಿ ಹೋಗಿ ಅವನನ್ನು ತಡವಿಕೊಂಡುಬಿಟ್ಟಿದ್ದಾರೆ. ಯಾವದೋ ಕಾರಣಕ್ಕೆ 10th  D ಕ್ಲಾಸಿಗೆ ಹೋಗಿದ್ದಾರೆ. ಏನೋ ಲೋಚಾ ಆಗಿದೆ. ಮತ್ತೆ ಭಂಡಿವಡ್ಡರ scanner ಒಳಗೆ ಬಂದಿದ್ದಾನೆ. ಅವನನ್ನು ಅಲ್ಲೇ ಎನ್ಕೌಂಟರ್ ಮಾಡಲು ಹೋಗಿದ್ದಾರೆ ಭಟ್ಟಿ ಸರ್. ಒಂದೆರೆಡು ಬಾರಿಸಿದ್ದಾರೆ. ಬಗ್ಗಿ ತಪ್ಪಿಸಿಕೊಂಡ ಅವನು ಉಲ್ಟಾ ಆವಾಜ್ ಹಾಕಿದ್ದಾನೆ. ಪುಣ್ಯಕ್ಕೆ ತಿರುಗಿ ಬಾರಿಸಿಲ್ಲ. ಮಾಸ್ತರರಿಗೇ ತಿರುಗಿ ಬಾರಿಸುವಷ್ಟು ಖರಾಬ್ ಪರಿಸ್ಥಿತಿ ಇನ್ನೂ ಬಂದಿರಲಿಲ್ಲ. ಭಂಡಿವಡ್ಡರ ಆವಾಜ್ ಹಾಕಿದ ಅಬ್ಬರಕ್ಕೆ ಭಟ್ಟಿ ಸರ್ ಬೆಚ್ಚಿಬಿದ್ದಿದ್ದಾರೆ. ಜಾಸ್ತಿ ಹೊಡೆಯಲು ಹೋಗಿಲ್ಲ. ಆದ್ರೆ ತಮ್ಮ ಕೀರಲು ದನಿಯಲ್ಲಿಯೇ 'ಖಡಕ್'(!) ವಾರ್ನಿಂಗ್ ಕೊಟ್ಟಿದ್ದಾರೆ. ಆರ್ತನಾದದ ಹಾಗಿದ್ದ ವಾರ್ನಿಂಗ್ ಕೇಳಿದ ಭಂಡಿವಡ್ಡರ ಅಸಡ್ಡೆಯಿಂದ ನೋಡಿದ್ದಾನೆ. ನಂತರ ನೋಡಿಕೊಳ್ಳುತ್ತೇನೆ ಅನ್ನುವ ಲುಕ್ ಕೊಟ್ಟಿದ್ದನ್ನು ಮಾತ್ರ ಭಟ್ಟಿ ಸರ್ ಗಮನಿಸಿಲ್ಲ. ಗಮನಿಸಿದರೂ ಅವರಿಗೆ ಅದರ ಅರಿವಿಲ್ಲ. ಅರಿವಿರಲು ಅವರೇನು ಮಹಾ veteran ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರೇ? ಇನ್ನೂ ಆ ಫೀಲ್ಡಿನಲ್ಲಿ ಅವರು ಬಚ್ಚಾ! ಬಚ್ಚಾಗಳಿಗೆ ಮಚ್ಚಾಗಳ ಬಗ್ಗೆ ಲುಚ್ಚಾಗಳ ಬಗ್ಗೆ ಹೇಗೆ ಗೊತ್ತಾಗಬೇಕು?????

ಮುಂದೆ ಒಂದು ವಾರದ ನಂತರ ದೊಡ್ಡ ಲಫಡಾ ಆಗಿದೆ. ಒಂದು ದಿನ ಸಂಜೆ ಶಾಲೆ ಮುಗಿದ ನಂತರ ಭಟ್ಟಿ ಸರ್ ಸೈಕಲ್ ತೆಗೆದುಕೊಂಡು ಸ್ಕೂಲ್ ಕ್ಯಾಂಪಸ್ ಬಿಟ್ಟು ಹೊರಗೆ ಹೊರಟಿದ್ದಾರೆ. ಮೋಹಿನಿ ಮನೆ ಕಡೆ. ಅದು ಸಂಜೆಯ ಖಾಯಂ ಕಾಯಕ. ವೈಷ್ಣವ ಆಚಾರರಾದ ಅವರಿಗೆ ಆ ಕಾಯಕವೊಂದೇ ಕೈಲಾಸ. ಬಾಕಿ ಎಲ್ಲ ವೈಕುಂಠ. ಶಾಲೆಯ ಮೇನ್ ಗೇಟ್ ವರೆಗೆ ಹೋಗಿದ್ದಾರೆ. ಆದರೆ ಅಲ್ಲಿ ದೆವ್ವ ಕಂಡವರಂತೆ ಬೆಚ್ಚಿಬಿದ್ದು ರಿವರ್ಸ್ ಗಾಡಿ ಹೊಡೆದುಕೊಂಡು ಬಂದುಬಿಟ್ಟಿದ್ದಾರೆ. ಅಷ್ಟೇ ಅಲ್ಲ. ಸೀದಾ ಹೆಡ್ ಮಾಸ್ಟರ್ ಕೋಣೆ ಹೊಕ್ಕಿ ಕೂತು ಬಿಟ್ಟಿದ್ದಾರೆ. ಕಾರಣ?? ಗೇಟ್ ಹೊರಗಡೆ ಖತರ್ನಾಕ್ ವಡ್ಡರ ಓಣಿ ರೌಡಿ ಗ್ಯಾಂಗ್ ಬಂದು ನಿಂತಿದೆ! ಭಟ್ಟಿ ಮಾಸ್ತರರಿಗೆ ಸಿಕ್ಕಾಪಟ್ಟೆ ಆವಾಜ್ ಹಾಕಿದೆ. 'ನೀ ಹ್ಯಾಂಗ ಇವತ್ತು ಈ ಸಾಲಿ ಬಿಟ್ಟು ಹೊರಗ ಹೋಗ್ತಿ ನೋಡೋಣ. ನಿನ್ನ ಒಂದು ಕೈ ನೋಡೇ ಹೋಗವರು ನಾವು. ನಮ್ಮ ಓಣಿ ಹುಡುಗಗ, ನಮ್ಮ ತಮ್ಮಗ ಹೆಟ್ಟಾಕ ಹೋಗಿದ್ದಿ??? ಹಾಂ? ಮೈಯಾಗ ಹ್ಯಾಂಗ ಐತಿ? ನೀ ಹೊರಗ ಬಂದಾರೆ ಬಾ, ಭಾಡ್ಕೋ. ನಿನ್ನ ಹಾಕ್ಕೊಂಡು ನಾದತೇವಿ!' ಅಂತ ನಾದಮಯ ಆವಾಜ್ ಹಾಕಿದ ಅಬ್ಬರಕ್ಕೆ, ಭಟ್ಟಿ ಸರ್ ತೊಳ್ಳೆ ನಡುಗಿ, ಥಂಡಾ ಹೊಡೆದು, ಸೀದಾ ವಾಪಸ್ ಓಡಿಬಂದು, ವೈಶಂಪಾಯನ ಸರೋವರದ ಮಾದರಿಯ ಹೆಡ್ ಮಾಸ್ಟರ್ ಕೋಣೆಯಲ್ಲಿ ಮುಳುಗಿ ಕೂತುಬಿಟ್ಟಿದ್ದಾರೆ. ಹೊರಗೆ ವಡ್ಡರ ಗ್ಯಾಂಗ್ ಇವರಿಗಾಗಿ ಕಾದು ನಿಂತೇ ಇದೆ. ಮೋಹಿನಿ ಮನೆ ಮುಂದೆ ಆವತ್ತು ಸೈಕಲ್ ಹೊಡೆಯೋದು ದೂರ ಉಳಿಯಿತು, ಬೆನ್ನೇರಿದ ಬೇತಾಳ ಇಳಿದರೆ ಸಾಕಾಗಿದೆ ಭಟ್ಟಿ ಸರ್ ಅವರಿಗೆ. ಆದಿನ ಮೋಹಿನಿಗೆ ಫುಲ್ ಟೈಮ್ ಹವಾ ಸೇವನೆ. ಯಾಕೆಂದರೆ ಭಟ್ಟಿ ಮಾಸ್ತರ್ ಕಂಡ ಕೂಡಲೇ ನಾಚಿ ಒಳಗೆ ಓಡುವ ಪ್ರಾರಬ್ಧ ಆವತ್ತಿಗಿಲ್ಲ ಆಕೆಗೆ. ಆಕೆ ಗೇಟಿನ ಮೇಲೆ ತನ್ನ ಕೆಂಪು ಕೆಂಪು ಸೇಬು ಗಲ್ಲ ಊರಿ ಅದೆಷ್ಟು ಹೊತ್ತು ನಿಂತೇ ಇದ್ದಳೋ! ಪಾಪ ಅಂತಹ ಕೋಮಲೆಯ ಕ್ಯೂಟ್ ಗದ್ದಕ್ಕೆ ಅದೆಂತಾ ಶಿಕ್ಷೆ ಹರಿಯೇ!

ನಮ್ಮ SSLC ಹೆಚ್ಚಿನ ಕೋಚಿಂಗ್ ಕ್ಲಾಸ್ ಆಗ ತಾನೇ ಮುಗಿದಿದೆ. ಸಮಯ ಸುಮಾರು ಸಂಜೆ ೬. ೧೫. ನಾವು ಇನ್ನೇನು ಮನೆ ಕಡೆ ಸೈಕಲ್ ಹೊಡೆಯೋಣ ಅನ್ನುವ ತನಕ ಅಲ್ಲೇ ಲಾಂಗ್ ಜಂಪ್, ಹೈ ಜಂಪ್ ಪ್ರಾಕ್ಟೀಸ್ ಮಾಡಿಕೊಂಡಿದ್ದ ಕಿಡಿಗೇಡಿಯೊಬ್ಬನಿಗೆ ಎಲ್ಲ ಅರಿವಾಗಿಬಿಟ್ಟಿದೆ. ಅವನಿಗೆ ವಡ್ಡರ ಓಣಿ ಗ್ಯಾಂಗ್ ಎಲ್ಲ ಗೊತ್ತು. ಅವರು ಬಂದಿದ್ದು, ಭಟ್ಟಿ ಮಾಸ್ತರರನ್ನು ಹಿಡಿದು ಝಾಡಿಸಿದ್ದು, ತೊಳ್ಳೆ ನಡಗಿಸಿಕೊಂಡು ಉತ್ತರ ಕುಮಾರನಂತೆ ಓಡಿ ಬಂದ ಭಟ್ಟಿ ಸರ್, ಆತ ಎಲ್ಲ ನೋಡಿಬಿಟ್ಟಿದ್ದಾನೆ, ತಿಳಿದುಕೊಂಡುಬಿಟ್ಟಿದ್ದಾನೆ. ಶಾಲೆಯಲ್ಲಿ ಉಳಿದುಕೊಂಡಿದ್ದ ನಮ್ಮಂತಹ ಮಂದಿಗೆ ಡಂಗುರ ಹೊಡೆದೇಬಿಟ್ಟಿದ್ದಾನೆ. ಸುದ್ದಿ ಕೇಳಿ ನಾವೆಲ್ಲಾ ಒಮ್ಮೆ ಘಾಬರಿಯಾಗಿದ್ದೇವೆ. ಘಾಬರಿ ತಮಾಷೆಯಾಗಿ ಬದಲಾಗಲಿಕ್ಕೆ ಜಾಸ್ತಿ ಹೊತ್ತು ಬೇಕಾಗಿಯೇ ಇಲ್ಲ. ಹಾ! ಹಾ! ಅಂತ ರಾಕ್ಷಸ ನಗೆ ನಗುತ್ತ ಮುಂದೆ ನಡೆಯಲಿರುವ ದೊಂಬರಾಟ ನೋಡಿ ಮಜಾ ತೆಗೆದುಕೊಳ್ಳಲು ತಯಾರಾಗಿ ಕೂತಿದ್ದೇವೆ.

ಅಂದು ನಮ್ಮ ಶಾಲೆಯ ದೌರ್ಭಾಗ್ಯಕ್ಕೆ, ಮಾಸ್ತರರ ಕೆಟ್ಟ ಗ್ರಹಚಾರಕ್ಕೆ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ಇಬ್ಬರೂ ಮಾಸ್ತರರೂ ಶಾಲೆಯಲ್ಲಿ ಇಲ್ಲವೇ ಇಲ್ಲ. ನಾಸ್ತಿ. ಹೊರಗೆ ಖಾಕ್ ಲಗಾಕೆ, baying for blood ಮಾದರಿಯಲ್ಲಿ ಅಬ್ಬರಿಸುತ್ತಿರುವ ವಡ್ಡರ ಓಣಿ ಗ್ಯಾಂಗನ್ನು ನಿಪಟಾಯಿಸುವ 'ಗಂಡಸರು' ಯಾರೂ ಇಲ್ಲ. ಭಟ್ಟಿ ಸರ್ ಅಂತೂ ಹೆಡ್ ಮಾಸ್ಟರ್ ರೂಂ ಬಿಟ್ಟು ಹೊರಗೆ ಬರಲು ತಯಾರೇ ಇಲ್ಲ. ಬಾಕಿ ಎಲ್ಲರಿಗೂ ಬೀಗ ಹಾಕಿ, ಶಾಲೆ ಬಂದು ಮಾಡಿಕೊಂಡು ಹೋಗಬೇಕು. ನೋಡಿದರೆ ಲಫಡಾ ಆಗಿ ಕೂತಿದೆ. ಮತ್ತೆ ಮೊದಲೇ ಹೇಳಿದಂತೆ ಆಗೆಲ್ಲ ಪೊಲೀಸರಿಗೆ ಫೋನ್ ಗೀನ್ ಮಾಡುವ ಪದ್ಧತಿ ಇಲ್ಲವೇ ಇಲ್ಲ. ಹೆಡ್ ಮಾಸ್ತರರಿಗೆ ಎಲ್ಲ ಅರ್ಥವಾಗಿಬಿಟ್ಟಿದೆ. ಒಂದಲ್ಲ ಒಂದು ತರಹದಲ್ಲಿ, ಏನಾದರೂ ಮಾಡಿ ಒಡ್ಡರ ಓಣಿ ಗ್ಯಾಂಗನ್ನು ಶಾಲೆಯಿಂದ ಸಾಗಹಾಕಲೇಬೇಕಾಗಿದೆ. ಏನು ಮಾಡಬೇಕು? ಕ್ಲಿಷ್ಟ ಪರಿಸ್ಥಿತಿ ಸಂಬಾಳಿಸಲು ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ಯಾರೂ ಇಲ್ಲ. ಹೆಡ್ ಮಾಸ್ತರ್ ತಲೆ ಓಡಿಸಿದ್ದಾರೆ. ತಲೆ ಓಡಿದೆ. ಅದಕ್ಕೆ ಕಾರಣ ಆಗ ಕಂಡುಬಂದವರು ಒಬ್ಬ ಒಳ್ಳೆ ಮಾಸ್ತರರು. ಅವರ ಹೆಸರು ಮಳಗಿ ಮಾಸ್ತರ್. ತುಂಬಾ ಒಳ್ಳೆ ಸರ್. ತುಂಬಾ ಸಾತ್ವಿಕರು. ಪಾಪದವರು. ಎಲ್ಲರಿಗೂ ಅವರನ್ನು ಕಂಡರೆ ಒಂದು ತರಹದ ಗೌರವ. 'ಪಾಪದವರು ನಮ್ಮ ಮಳಗಿ ಸರ್,' ಅನ್ನುವ ಭಾವನೆ. ಅವರು ಒಂದು ವಿನಂತಿ ಮಾಡಿಕೊಂಡರು ಅಂದರೆ ಅದನ್ನು ಯಾರೂ ತೆಗೆದು ಹಾಕಲು ಸಾಧ್ಯವೇ ಇಲ್ಲ. ಮಹಾಭಾರತದ ವಿದುರನ ಮಾದರಿಯ ಹಿರಿಯ ಮಾಸ್ತರರು ಅವರು. ಮಳಗಿ ಸರ್ ಅವರಿಗೆ ಹೆಡ್ ಮಾಸ್ತರರು ಎಲ್ಲ ವಿಷಯ ವಿವರಿಸಿದ್ದಾರೆ. ವಡ್ಡರ ಗ್ಯಾಂಗಿನ ಜೊತೆ ಅವರನ್ನು ಸಂಧಾನಕ್ಕೆ ಕಳಿಸಿದ್ದಾರೆ.

ಡೊಳ್ಳು ಹೊಟ್ಟೆ ಕುಣಿಸುತ್ತ, ಬಿಳಿ ಕೂದಲನ್ನು ಕೆರೆದುಕೊಳ್ಳುತ್ತ, ತಮ್ಮ ವಿದುರನ ಶೈಲಿಯಲ್ಲಿ ಸಾವಕಾಶವಾಗಿ ನಡೆದುಕೊಂಡು ಹೋದರು ಮಳಗಿ ಸರ್. ವಡ್ಡರ ಓಣಿ ಗ್ಯಾಂಗ್ ಅವರನ್ನು ನೋಡಿದೆ. ವಡ್ಡರಲ್ಲಿ ಕೆಲವರು ಅವರನ್ನು ಗುರುತಿಸಿದ್ದಾರೆ. ಹಳೆ ಮಾಸ್ತರರು ಅಂತ ಅವರಲ್ಲೇ ಸ್ವಲ್ಪ ಸಂಸ್ಕಾರ ಇದ್ದ ರೌಡಿಗಳು ಅವರಿಗೆ ಒಂದು ನಮಸ್ಕಾರ ಹಾಕಿದ್ದಾರೆ. ಅವರು ಮನೆಗೆ ಹೊರಟಿರಬೇಕು ಅಂದುಕೊಂಡಿದ್ದಾರೆ. ಆದರೆ ಅವರು ಸಂಧಾನಕ್ಕೆ ಬಂದಿದ್ದಾರೆ ಅಂತ ತಿಳಿದು ಅಪ್ರತಿಭರಾಗಿದ್ದಾರೆ. ಬೇರೆ ಯಾರೋ ಮಾಸ್ತರರು ಸಂಧಾನಕ್ಕೆ ಹೋಗಿದ್ದರೆ ಅವರಿಗೂ ನಾಕು ತಟ್ಟಿ ಕಳಿಸುತ್ತಿದ್ದರೋ ಏನೋ! ಆದರೆ ಇವರು ಮಳಗಿ ಸರ್! ಅಷ್ಟು ಪಾಪದವರು. ಸಾತ್ವಿಕರು. ಅವರ ಜೊತೆ ಸಂಧಾನಕ್ಕೆ ಒಪ್ಪುವದೋ ಬಿಡುವದೋ ಮುಂದಿನ ಮಾತು. ಆದರೆ ಮಾತಾಡದೇ ಇರಲಿಕ್ಕಂತೂ ಸಾಧ್ಯವೇ ಇಲ್ಲ. ಅಷ್ಟು ಮಟ್ಟಿನ ಮರ್ಯಾದೆ, ಗೌರವದ ಹವಾವನ್ನು ಮಳಗಿ ಸರ್ ಕೂಡ maintain ಮಾಡಿದ್ದಾರೆ. ಅಷ್ಟು ಮಾಡಲು ತಮ್ಮ ಮೂವತ್ತೂ ಚಿಲ್ಲರೆ ವರ್ಷದ ನೌಕರಿಯನ್ನು ಪಣಕ್ಕೆ ಇಟ್ಟಿದ್ದಾರೆ. ಬಿಸಿಲಿನಲ್ಲಿ ತಲೆ ಕೂದಲನ್ನು ಖಾಲಿಪೀಲಿ ಬಿಳೆ ಮಾಡಿಕೊಂಡಿಲ್ಲ ಅವರು. ವಯೋವೃದ್ಧರಷ್ಟೇ ಅಲ್ಲ ಜ್ಞಾನವೃದ್ಧರೂ ಕೂಡ.

ಮಳಗಿ ಸರ್ ವಡ್ಡರ ಮಂದಿಯನ್ನು ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಭಟ್ಟಿ ಸರ್ ಅವರನ್ನು ರುಬ್ಬವ ವಿಚಾರವನ್ನು ಬಿಟ್ಟು, ವಾಪಸ್ ಹೋಗುವಂತೆ ವಡ್ಡರ ಓಣಿ ಗ್ಯಾಂಗಿಗೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ. ಬಡಪಟ್ಟಿಗೆ ವಡ್ಡರು ಒಪ್ಪಿಲ್ಲ. 'ನೋಡ್ರೀ ಮಳಗಿ ಸರ್ರಾ, ನಿಮಗ respect ಕೊಡತೇವರಿ ಸರ್. ಆದರೆ ಆ ಭಾಡ್ಯಾ ಭಟ್ಟಿ ಆಚಾರಿನ ಮಾತ್ರ ಬಿಡವರಲ್ಲ ನಾವು! ಅವಂಗ ಬಡಿದೇ ಹೋಗವರು ನಾವು. ನೀವು ಸುಮ್ಮನೆ ಇದರಾಗ ನಡು ಬರಾಕ ಹೋಗಬ್ಯಾಡ್ರೀ! ಸುಮ್ಮ ಮನಿ ಹಾದಿ ಹಿಡೀರಿ ಸರ್! ನಿಮಗ್ಯಾಕ ಈ ತಲಿಬ್ಯಾನಿ?? ನೀವು ಒಳ್ಳೆಯವರು ಅದೀರಿ. ಹೋಗ್ರೀ ಹೋಗ್ರೀ!' ಅಂತ brush off  ಮಾಡುವ ರೀತಿಯಲ್ಲಿ ಮಾತಾಡಿದ್ದಾರೆ. ನಾವು ಸಹ ಅಲ್ಲೇ ಸನಿಹದಲ್ಲೇ ಸೈಕಲ್ ಹೊಡೆಯುತ್ತ ಎಲ್ಲ ಗಮನಿಸುತ್ತಿದ್ದೇವೆ. ನಾವು ಎಲ್ಲ ಕಿಡಿಗೇಡಿಗಳು ಘಟನೆ ಸ್ಥಳದ ಹತ್ತಿರ ಒಮ್ಮೆಲೇ ಹೋಗಿ, ಮಾಸ್ತರ್ ಮಂದಿಗೆ ಮತ್ತೂ embarrass ಮಾಡಿದರೆ ನಂತರ ಮರುದಿವಸ ನಮಗೆ ಕಡತ ಬೀಳುತ್ತದೆ ಅಂತ ಗೊತ್ತಿದೆ. ಅದಕ್ಕೇ ಶಿಫ್ಟ್ ಹಾಕಿಕೊಂಡು, ಒಬ್ಬರಾದ ನಂತರ ಒಬ್ಬರು ಲಫಡಾ ನಡೆಯುತ್ತಿದ್ದ ಜಾಗದ ಹತ್ತಿರ ಹೋಗಿ ಹೋಗಿ, ಮಳಗಿ ಸರ್ ಮತ್ತು ವಡ್ಡರ ಓಣಿ ಗ್ಯಾಂಗಿನ ಮಧ್ಯೆ ನಡೆಯುತ್ತಿರುವ ಶತಮಾನದ ಅಭೂತಪೂರ್ವ ಮಾಂಡವಲಿಯನ್ನು (ಸಂಧಾನವನ್ನು) ನೋಡಿ ಮಜಾ ತೆಗೆದುಕೊಳ್ಳುತ್ತಿದ್ದೇವೆ.

ಮೊದಲನೇ ಸುತ್ತಿನ ಸಂಧಾನ ವಿಫಲವಾಗಿದೆ. ಮಳಗಿ ಸರ್ ಮರಳಿ ಹೆಡ್ ಮಾಸ್ಟರ್ ರೂಮಿನತ್ತ ತಮ್ಮ ದೊಡ್ಡ ದೇಹದ ಸವಾರಿಯನ್ನು ವಾಪಸ್ ತೆಗೆದುಕೊಂಡು ಬಂದಿದ್ದಾರೆ. ಗೇಟಿನ ಹೊರಗೆ ವಡ್ಡರ ಓಣಿ ಗ್ಯಾಂಗ್ ಸೀಟಿ ಹೊಡೆದು, ಕೇಕೆ ಹಾಕಿದೆ. ರಣಕೇಕೆ ಅಂದರೆ ಅದೇ ಇರಬೇಕು. 'ಬಾರಲೇ ಭಟ್ಟಿ ಆಚಾರಿ!' ಅಂತ ರಣಭೇರಿ ಬಾರಿಸಿದೆ.

ಹೆಡ್ ಮಾಸ್ತರ್ ಮತ್ತು ಮಳಗಿ ಸರ್ ಮಧ್ಯೆ ಮತ್ತೆ ಏನೋ ವಿಚಾರ ವಿನಿಮಯ ಆಗಿದೆ. ಮತ್ತೆ ಮುಂದಿನ ಸುತ್ತಿನ ಮಾತುಕತೆಗೆ ಹೊರಟಿದ್ದಾರೆ ಮಳಗಿ ಸರ್. ಮತ್ತೆ ಅದೇ ತಣ್ಣನೆಯ ನಡೆ. ಏನೂ ಹೆಚ್ಚು ಕಮ್ಮಿ ಇಲ್ಲ. ಅದೇ ಭೋಳೆತನ. ಅದೇ ನಮ್ಮ ಪ್ರೀತಿಯ ಮಳಗಿ ಸರ್! ಮಳಗಿ ಸರ್ ಅವರದ್ದು ಯಾವಾಗಲೂ BJP ಪಕ್ಷ. ಅಂದರೆ ಭೋಳೆ ಜನರ ಪಾರ್ಟಿ ಅಂತ. ಅಷ್ಟು ಭೋಳೆ ಶಂಕರ ನಮ್ಮ ಮಳಗಿ ಸರ್. ಅವರ ಹೆಸರು ಕೂಡ ಶಂಕರ ಅಂತಲೇ ನೆನಪು.

ಎರಡನೇ ಸುತ್ತಿನ ಸಂಧಾನದಲ್ಲಿ ಮಳಗಿ ಸರ್ ಬಾಂಬ್ ಹಾಕಿಬಿಟ್ಟಿದ್ದಾರೆ. ಭಟ್ಟಿ ಸರ್ ಅವರಿಗೆ ಹೊಡೆಯುವ ಮೊದಲು ತಮಗೇ (ಮಳಗಿಯವರಿಗೇ) ಹೊಡೆಯಬೇಕೆಂದೂ, ಅವರು ಸಹಿತ ಭಟ್ಟಿ ಸರ್ ಅವರ ಜೊತೆಗೇ ಇರುವ ನಿರ್ಧಾರ ಮಾಡಿರುವದಾಗಿ ಹೇಳಿಬಿಟ್ಟಿದ್ದಾರೆ. ಸೆಂಟಿಮೆಂಟಲ್ ಫಿಟ್ಟಿಂಗ್ ಬರೋಬ್ಬರಿ ಮಡಗಿದ್ದಾರೆ. ಮಳಗಿ ಸರ್ ಇಟ್ಟ ಸೆಂಟಿಮೆಂಟಲ್ ಫಿಟ್ಟಿಂಗಿಗೆ ವಡ್ಡರ ಓಣಿ ಗ್ಯಾಂಗ್ ಮೆಂಟಲ್ ಆಗಿಬಿಟ್ಟಿದೆ. ಅವರೂ ಮನುಷ್ಯರಲ್ಲವೇ!!?? ಮತ್ತೆ ಹಾಗೆ emotional blackmail ಮಾಡಿದವರು ವಯೋವೃದ್ಧ, ಜ್ಞಾನವೃದ್ಧ ಮಳಗಿ ಸರ್. ಭಟ್ಟಿ ಸರ್ ಅವರಿಗೆ ಹೊಡೆಯಬೇಕೆಂಬ ಛಲದಲ್ಲಿ, ಆಕ್ರೋಶದಲ್ಲಿ, ಅಬ್ಬರದಲ್ಲಿ ಎಲ್ಲಾದರೂ, ಯಾರಾದರೂ ಮಳಗಿ ಸರ್ ಮೇಲೆ ಕೈಮಾಡಲು ಸಾಧ್ಯವೇ? ಅದನ್ನು ವಡ್ಡರ ದೇವರೂ ಕೂಡ ಮೆಚ್ಚಲಾರ. ಅವರ ದೇವರು ಯಾರು? ಈಗ ಮರೆತು ಹೋಗಿದೆ. ಅಲ್ಲೇ ಧಾರವಾಡದ ಲಕ್ಷ್ಮಿ ಸಿಂಗನ ಕೆರೆಯ ಆ ಕಡೆ ಇತ್ತು ಅವರ ಒಂದು ಗುಡಿ. ಅದರಲ್ಲಿದ್ದ ದೇವರೇ ವಡ್ಡರ ದೇವರು.

ಈಗ ವಡ್ಡರ ಓಣಿಯ ಮಂದಿ ಒಂದು ತರಹದ ಸಂದಿಗ್ಧಕ್ಕೆ ಬಿದ್ದಿದ್ದಾರೆ. ಪೂರ್ತಿ confuse ಆಗಿಬಿಟ್ಟಿದ್ದಾರೆ. 'ಕಬ್ಬಿಣ ಕಾದಿದೆ. ಈಗಲೇ ಹತೋಡಾ ಹೊಡೆಯಬೇಕು,' ಅಂತ ಮಳಗಿ ಸರ್ ಮತ್ತೊಂದು ಫಿಟ್ಟಿಂಗ್ ಇಟ್ಟೇಬಿಟ್ಟಿದ್ದಾರೆ.

'ನೋಡ್ರೀಪಾ! ನನಗ ನೀವು ಇನ್ನೊಂದು ಮಾತು ಕೊಡಬೇಕು. ಇವತ್ತು ಒಂದೇ ಅಲ್ಲ ಮುಂದೆ ಎಂದೂ ಭಟ್ಟಿ ಸರ್ ಅವರಿಗೆ ಹೊಡೆಯುವ ವಿಚಾರ ನೀವು ಮಾಡಲೇಬಾರದು. ಆ ಮಾತು ನೀವು ನನಗ ಕೊಡಲಿಕ್ಕೇಬೇಕು. ಅಲ್ಲಿ ತನಕಾ ನಾನೂ ಇವತ್ತು ಮನಿಗೆ ಹೋಗವಾ ಅಲ್ಲಾ. ನಾ ಮಧ್ಯಾನ ಊಟಾ ಸುದಾ ಮಾಡಿಲ್ಲ. ಇರಲಿ. ಹಾಂಗೇ ಇರ್ತೇನಿ. ನೀವು ಬಡಿದು ಕೊಂದು ಒಗೆದರೆ, ಸತ್ತೂ ಹೋಗ್ತೇನಿ. ನಾವೇ ವಿದ್ಯೆ ಕಲಿಸಿದ ಹುಡುಗುರ ಕಡೆ ಬಡಿಸಿಕೊಂಡು ಸತ್ತು ಹೋಗೋ 'ನಸೀಬಾ' ಎಷ್ಟು ಮಂದಿಗೆ ಇರ್ತದ? ಹಾಂ!? ಮಾತು ಕೊಡ್ರೋ. ಪ್ರಾಮಿಸ್ ಮಾಡ್ರೋ! ಏನೋ ನಿಮ್ಮ ತಮ್ಮ, ನಿಮ್ಮ ಓಣಿ ಹುಡುಗ ಭಂಡಿವಡ್ಡರಗ ಒಂದು ಮಾತು ಹೇಳಿದರು ಅಂದ್ರ ಭಟ್ಟಿ ಮಾಸ್ತರರಿಗೆ ಹೊಡಿಲಿಕ್ಕೆ ಬಂದು ಬಿಡೋದಾ? ಏನು ಇದ್ದೀರೀಪಾ? ಕಾಲ ಕೆಟ್ಟದ!' ಅಂತ ಅಂಬೋ ಅಂದು, ಮಳ್ಳ ಮಾರಿ, ಪಾಪದ ಮುಖ ಮಾಡಿಕೊಂಡು ನಿಂತೇ ಇದ್ದಾರೆ ಮಳಗಿ ಸರ್. ಅಲ್ಲಿಂದ ಸರಿದೇ ಇಲ್ಲ.

ಈಗ ಮಾಡಿದ ಖತರ್ನಾಕ್ emotional blackmail ನಿಂದ ಪಂಟರ್ ವಡ್ಡರ ರೌಡಿಗಳೂ ಸಹ ಹೈರಾಣಾಗಿ ಹೋಗಿದ್ದಾರೆ. ಲಫಡಾ ಶುರುವಾಗಿ ಸುಮಾರು ಒಂದು ತಾಸಾಗುತ್ತ ಬಂದಿದೆ. ಸಮಯ ಸುಮಾರು ಏಳು ಘಂಟೆ. ಅವರಿಗೆಲ್ಲ 'ದೇವಸ್ಥಾನಕ್ಕೆ' ಹೋಗಿ 'ತೀರ್ಥ' ತೆಗೆದುಕೊಳ್ಳುವ ಸಮಯ. ಹೇಗೂ ಭಟ್ಟಿ ಮಾಸ್ತರ್ ಸಿಗುತ್ತಾರೆ, ನಾಲ್ಕು ರಪಾರಪಾ ಅಂತ ಬಾರಿಸಿ, ಬೈದು, ಒದ್ದು, ಹೋಗಿ ವಿಜಯೋತ್ಸವ ಆಚರಿಸುತ್ತ 'ಎಣ್ಣೆ' ಹಾಕೋಣ ಅಂದರೆ ಇಲ್ಲಿ ಫುಲ್ KLPD ಆಗಿಬಿಟ್ಟಿದೆ. ಮಳಗಿ ಮಾಸ್ತರ್ ಫಿಟ್ಟಿಂಗ್ ಇಟ್ಟೂ ಇಟ್ಟೂ ಮಲಗಿಸಿಬಿಟ್ಟಿದಾರೆ. ಹೆಸರು ಮಳಗಿ. ಮಾಡಿದ ಕೆಲಸ ವಡ್ಡರ ಗ್ಯಾಂಗನ್ನು 'ಮಲಗಿ'ಸಿಬಿಟ್ಟಿದ್ದು. ಇದು ಒಂದು ತರಹದ ಗಾಂಧೀಜಿ ಟೈಪಿನ ಅಹಿಂಸಾತ್ಮಕ ಎನ್ಕೌಂಟರ್. ಅಂದು ಮಳಗಿ ಸರ್ ಅವರಿಗೆ ಕೂಡ ಗಾಂಧಿ ಎನ್ಕೌಂಟರ್ ಸ್ಪೆಷಲಿಸ್ಟ್ ಅಂತ ನಾಮಕರಣ ಮಾಡಿದೆವು.

ಮತ್ತೆ ಮತ್ತೆ ಅದೇ ಸೊಳೆ ರಾಗ ಹಾಡೀ ಹಾಡೀ ವಡ್ಡರ ಮಂದಿಯಿಂದ ಭಾಷೆಯನ್ನು ಪಡೆದುಕೊಂಡ ಮಳಗಿ ಸರ್ ಮುಖದಲ್ಲಿ ವಿಜಯದ ನಗೆ. ಆದರೆ ಅವರು ನಗಲಿಲ್ಲ. ನಕ್ಕರೆ ಸೌದಾ ಫೋಕ್! (deal is off) ಅಂತ ಗೊತ್ತು ಅವರಿಗೆ. ವಡ್ಡರ ಮಂದಿಗೆ ಮೈಯೆಲ್ಲಾ ಹಿಡಿ ಮಾಡಿಕೊಂಡು, ತಗ್ಗಿ ಬಗ್ಗಿ ನಮಸ್ಕಾರ ಮಾಡಲು ಸಹ ಹೋಗಿಬಿಟ್ಟರು. ಮಳಗಿ ಸರ್ ಅವರ ದೈನೇಸಿ ಸ್ಥಿತಿಯನ್ನು ನೋಡಿ ವಡ್ಡರ ಮಂದಿಗೇ ಸಿಕ್ಕಾಪಟ್ಟೆ embarrassment ಆಗಿ, ತಮ್ಮಲ್ಲೇ ತಮ್ಮ ಹಕ್ಕಿಪಿಕ್ಕಿ ಕನ್ನಡದಲ್ಲಿ ಏನೇನೋ ಮಾತಾಡಿಕೊಳ್ಳುತ್ತ ಅಲ್ಲಿಂದ ಜಾಗ ಖಾಲಿ ಮಾಡಿದರು. Deal clinched! Victory moment!

ಮುಂದೇನಾಯಿತು ಅಂತ ನೋಡಲಿಕ್ಕೆ ನಾವು ಅಲ್ಲಿ ಇರಲಿಲ್ಲ. ಬೇಗನೆ ಹೋಗಿ ನಮ್ಮ ಏರಿಯಾದ ಹರಟೆಕಟ್ಟೆಯಲ್ಲಿ ಕೂತಿದ್ದ ಗೆಳೆಯರಿಗೆ ಸುದ್ದಿ ಮುಟ್ಟಿಸಬೇಕಾಗಿತ್ತು. ಪ್ರತಿದಿನ ನಮಗೆ ಅವರು ಸುದ್ದಿ ಹೇಳುತ್ತಿದ್ದರು. ಇವತ್ತು ನಾವು ಹೋಗಿ ಹೇಳಬೇಕು. ಅದೂ ಖತರ್ನಾಕ್ ಸುದ್ದಿ. ಬ್ರೇಕಿಂಗ್ ನ್ಯೂಸ್ ಬ್ರೇಕ್ ಮಾಡಲು ಬಂವ್ವನೆ ಮನೆ ಕಡೆ ಸೈಕಲ್ ಹೊಡೆದೆ. ಈ ಕಡೆ ಶಾಲೆಯಲ್ಲಿ ಇನ್ನೂ ನಡೆಯುತ್ತಿದ್ದ ಪಂಚಾಯಿತಿ ಗಮನಿಸಲು ಬೇರೆ ಜನ ಇದ್ದರು. ನಾಳೆ ಉಳಿದ ಸುದ್ದಿ ಹೇಳುತ್ತಾರೆ. ಮುಖ್ಯ ಭಾಗವಂತೂ ಮುಗಿದೇಹೋಗಿದೆ. ಇನ್ನು ವೈಶಂಪಾಯನ ಸರೋವರದ ಮಾದರಿಯ ಹೆಡ್ ಮಾಸ್ತರ್ ರೂಮಿನಲ್ಲಿ ಅಡಗಿ ಕೂತಿರುವ ಉತ್ತರ ಕುಮಾರನ ಮಾದರಿಯ ಭಟ್ಟಿ ಸರ್ ಅವರಿಗೆ ಸಮಾಧಾನ ಮಾಡಿ, ಕಂಟಕ ನಿವಾರಣೆ ಆಗಿದೆ, ಶಾಶ್ವತವಾಗಿ ನಿವಾರಣೆ ಆಗಿದೆ ಅಂತ ಹೇಳಿ, ಮನದಟ್ಟು ಮಾಡಿಕೊಟ್ಟು ಮನೆಗೆ ಕಳಿಸಬೇಕು. ಅದೆಲ್ಲ ಓಕೆ. ಸಿನಿಮಾದಲ್ಲಿ ಎಲ್ಲ ಮುಗಿದ ಕೊನೆಗೆ ಪೊಲೀಸರು ಬಂದು 'ನಮ್ಮದು ಎಲ್ಲಿ ಇಡಲೀ??' ಅನ್ನುವ ರೀತಿಯ ಸೀನ್ ಅವೆಲ್ಲ. ಬ್ರೇಕಿಂಗ್ ನ್ಯೂಸ್ ಕೊಡುವದು ಅದಕ್ಕಿಂತ ಮುಖ್ಯ. ಅದಕ್ಕೇ ಮನೆ ಕಡೆ ಗಾಡಿ ಬಿಟ್ಟೆ.

ಮೊದಲಾಗಿದ್ದರೆ ಮೊದಲು ಮನೆ, ತಿಂಡಿ ನಂತರ ಹರಟೆಕಟ್ಟೆ. ಇವತ್ತು ಸೀದಾ ಹರಟೆಕಟ್ಟೆ. ಅದೂ ಮೋಹಿನಿ ಮನೆಯ ಎದುರಿಂದಲೇ ಹೋದೆ. ಕಂಡೇಬಿಟ್ಟಳು ಮೋಹಿನಿ! ಮತ್ತೆ ಅದೇ ತನಹಾ ತನಹಾ ಪ್ಯಾಸಾ ಪ್ಯಾಸಾ ಭಂಗಿ. ಗೇಟಿನ ಮೇಲೆ ಗದ್ದ ಊರಿ, ಮುಷ್ಟಿಗಳಿಂದ ತನ್ನ ಸೇಬು ಕೆನ್ನೆಗಳನ್ನು ಒತ್ತಿಕೊಂಡು, ಯಾರದೋ ನಿರೀಕ್ಷೆಯಲ್ಲಿ ನಿಂತ ಬೊಂಬಾಟ್ ಮೋಹಿನಿ. ಮತ್ತೆ ಅದೇ ಫುಲ್ ಬಿಳುಪಿನ ನೈಟಿ. ನಾನೂ ಆಕೆಯನ್ನೂ ಪಿಕಿಪಿಕಿ ನೋಡುತ್ತಾ ಸೈಕಲ್ ಹೊಡೆದೆ. ಆಕೆ ನನಗೇನೂ ಭಾವ್ ಕೊಟ್ಟ ನೆನಪಿಲ್ಲ. ಅಥವಾ ಕೊಟ್ಟಳೇ? ಕತ್ತಲಿತ್ತು. ಕತ್ತಲಲ್ಲಿ ಆಕೆ ಕಣ್ಣು ಹೊಡೆದರೆ ಕಾಣಲಿಕ್ಕೆ ನಮ್ಮ ಹತ್ತಿರ ಏನು ನೈಟ್ ವಿಷನ್ ಗಾಗಲ್ ಇತ್ತೇ ಆವಾಗ!? ನಾವು ಸೋಡಾ ಗ್ಲಾಸಿನ ಲಾಟನ್ ಮಂದಿ. ಮೊದಲೇ ಏನೂ ಸರಿಯಾಗ ಕಾಣಿಸದ ಚಸ್ಮಿಸ್ ಕುಡ್ಡರು! ಇನ್ನು ಕತ್ತಲಲ್ಲಿ ನಮ್ಮ ಸ್ಕೂಲ್ ಜೂನಿಯರ್ ಮೋಹಿನಿ ಭಾವ್ ಕೊಟ್ಟಳೋ ಇಲ್ಲವೋ ಹೇಗೆ ಗೊತ್ತಾಗಬೇಕು?!

ಹರಟೆಕಟ್ಟೆಯಲ್ಲಿ ಭರಪೂರ ನೆರೆದಿದ್ದ ಮಂದಿಗೆ ಸುದ್ದಿಯನ್ನು ಸಂಕ್ಷಿಪ್ತವಾಗಿ ಹೇಳಿದೆ. ಬಿದ್ದೂ ಬಿದ್ದೂ ನಕ್ಕೆವು. ಭಟ್ಟಿ ಸರ್ ಅವರಿಂದ ಬರೋಬ್ಬರಿ ನಾದಿಸಿಕೊಂಡಿದ್ದ ಮಂದಿಯೂ ಸಹ ಅವರಲ್ಲಿದ್ದರು. ನಮ್ಮ ಜೂನಿಯರ್ ಮಂದಿ. ಅವರಂತೂ ಅಲ್ಲಿಯೇ ಝಕ್ಕ ನಕ್ಕ ಅಂತ ಅಕಾಲದಲ್ಲಿ ಹೋಳಿ ಹುಣ್ಣಿಮೆ ಡಾನ್ಸ್ ಮಾಡಿ, ಲಬೋ ಲಬೋ ಅಂತ ಬಾಯ್ಬಾಯಿ ಬಡಕೊಂಡು, ಸಿಳ್ಳೆ ಹೊಡೆದೂ ಹೊಡೆದೂ, ಉಳ್ಳಾಡಿ ಉಳ್ಳಾಡಿ ನಕ್ಕರು. ಆವತ್ತಿನ ಹರಟೆ ಬಹಳ ಕಾಲ ನಡೆದಿತ್ತು. ಮೋಹಿನಿ ಕೂಡ ಆವತ್ತು ಸ್ವಲ್ಪ ಜಾಸ್ತಿ ಹೊತ್ತೇ ಕಂಪೌಂಡ್ ತುಂಬಾ ಓಡ್ಯಾಡಿ ಓಡ್ಯಾಡಿ, ಅವರ ಅಮ್ಮ 'ಒಳಗೆ ಬಾ ಅವ್ವಿ. ಕತ್ತಲಾತು,' ಅಂತ ಕರೆದ ಮೇಲೆಯೇ ಒಳಗೆ ಹೋದಳು.  'ಏ, ಮೋಹಿನಿ ಅವ್ವಿ! ಇವತ್ತು ಭಟ್ಟಿ ಮಾಸ್ತರ್ ಬರಂಗಿಲ್ಲ ಬೇ! ಹೋಗಿ ಊಟಾ ಮಾಡಿ ಲಗೂನೆ ಮಕ್ಕೋಳವಾ! ರಸ್ತೆದಾಗ ಬರದವ ಕನಸಿನ್ಯಾಗ ಬಂದರೂ ಬಂದ ನಿಮ್ಮ ಭಟ್ಟಿ ಆಚಾರಿ!' ಅಂತ ಕೂಗಿ ಹೇಳೋಣ ಅಂತ ಅನ್ನಿಸಿತು. ಮತ್ತೆ ಮನೆ ಮಂದಿ ಹೊರಗೆ ಬಂದು, ಹಿಡಕೊಂಡು ಒದ್ದಾರು ಅಂತ ನಮ್ಮಲ್ಲೇ ಹೇಳಿಕೊಂಡು ನಕ್ಕಿದ್ದೇ ನಕ್ಕಿದ್ದು. ಈ ಕಾರಣ ಮೋಹಿನಿಯ ಮನೆಯಲ್ಲಿ ಆಕೆಯನ್ನು ಕರೆಯುವ ಹೆಸರು ಅವ್ವಿ ಅಂತಲೂ ಗೊತ್ತಾಯಿತು. ಮರುದಿನ ನಮ್ಮ ಲಾಸ್ಟ್ ಬೆಂಚಿನಲ್ಲಿ ತಟ್ಟಿಕೊಂಡು ನಗಲಿಕ್ಕೆ ಒಂದು ವಿಷಯ ಸಿಕ್ಕಂತಾಯಿತು.

ಸರಿ, ಮರುದಿವಸ ಶಾಲೆಗೆ ಹೋಗಿ ನೋಡಿದರೆ ಭಟ್ಟಿ ಸರ್ ಬಂದಿದ್ದಾರೆ. ಎಲ್ಲಿ ವಡ್ಡರ ಗ್ಯಾಂಗಿನ ಭಯದಿಂದ ತಮ್ಮ ಮೂಲ ವಿಜಾಪುರದ ಕಡೆಗೇ ಹೋಗಿ, ಯಾವದಾದರೂ ರಾಯರ ಮಠದಲ್ಲಿ ಠಿಕಾಣಿ ಹಾಕಿದರೋ ಅಂತ ವಿಚಾರ ಮಾಡಿದರೆ ಠಾಕುಠೀಕಾಗಿ ಮೊದಲಿನ ಹಾಗೆ ಬಂದೇಬಿಟ್ಟಿದ್ದಾರೆ. ಒಂದೇ ವ್ಯತ್ಯಾಸ ಎದ್ದು ಕಂಡಿತು. ತಮ್ಮ ಸಂಪ್ರದಾಯದ ಎಲ್ಲ ನಾಮಗಳನ್ನು, ಮುದ್ರೆಗಳನ್ನು ಬರೋಬ್ಬರಿ ಹೊಡೆದುಕೊಂಡು, ಅಳಿಸಿಕೊಳ್ಳದೇ ಬಂದುಬಿಟ್ಟಿದ್ದಾರೆ! ಎಲ್ಲಿ ಮೊದಲೆಲ್ಲ ನಾಮ, ಮುದ್ರೆ ಅಳಿಸಿಕೊಂಡು ಸ್ಟೈಲ್ ಹೊಡೆದಿದ್ದಕ್ಕೆ ದೇವರು ಸಿಟ್ಟಿಗೆದ್ದು ಹಿಂದಿನ ದಿನದ ವಡ್ಡರ ಅವಗಢ ಸೃಷ್ಟಿ ಮಾಡಿದ್ದನೋ ಏನೋ ಅಂತ ವಿಚಾರ ಮಾಡಿದರೋ ಏನೋ ಭಟ್ಟಿ ಸರ್!? ಯಾರಿಗೆ ಗೊತ್ತು? ನಂತರ ಸುಮಾರು ದಿವಸ ಹಾಗೆಯೇ ಸರ್ವನಾಮಮುದ್ರಾಲಂಕೃತರಾಗಿಯೇ ಬರುತ್ತಿದ್ದರು. ಒಳ್ಳೆ ಸಕೇಶಿ ಮುತ್ತೈದೆಯ ತರಹ. ಒಳ್ಳೇದು ಬಿಡಿ. ಅಚಾರ್ರು ಸಂಪ್ರದಾಯ ಪಾಲಿಸಿಲ್ಲ ಅಂದರೆ ಹೇಗೆ!?

ಈ ಐತಿಹಾಸಿಕ ಘಟನೆಯಾದ ನಂತರ ಭಟ್ಟಿ ಸರ್ ಅವರಿಗೆ ಎನ್ಕೌಂಟರ್ ಸ್ಪೆಷಲಿಸ್ಟ್ ಆಗುವ ಹುಚ್ಚು ಬಿಟ್ಟುಹೋಯಿತು ಅಂತ ಅನ್ನಿಸುತ್ತದೆ. ಸಣ್ಣ ಕ್ಲಾಸಿನ ಮಂದಿಗೆ ಅಷ್ಟಿಷ್ಟು ಬಾರಿಸಿಕೊಂಡು, ರುಬ್ಬಿಕೊಂಡು ಇದ್ದರು. ಭಂಡಿವಡ್ಡರನ ಮೇಲಿನ ಸೇಡನ್ನು ಚಿಕ್ಕಮಕ್ಕಳ ಮೇಲೆ ತೀರಿಸಿಕೊಳ್ಳುತ್ತಿದ್ದರೆ ಭಟ್ಟಿ ಸರ್!? ಅವರನ್ನೇ ಕೇಳಬೇಕು.

ಹಿಂದಿನ ದಿವಸ ನಾವು ಮನೆ ಕಡೆ ಹೋದ ಮೇಲೆ ಏನಾಯಿತು ಅಂತ ಅಲ್ಲೇ ಉಳಿದುಕೊಂಡಿದ್ದ ನಮ್ಮ ಬಂಟರು ಮರುದಿನ ಹೇಳಿದರು. ನಂತರ ಜಾಸ್ತಿಯೇನೂ exciting ಆಗಲಿಲ್ಲವಂತೆ. ಮಳಗಿ ಸರ್ ಮತ್ತು ಭಟ್ಟಿ ಸರ್ ಇಬ್ಬರೂ ಕೂಡಿಯೇ ಹೋದರಂತೆ. ಮನೆ ಮುಟ್ಟುವ ತನಕ ಸೇಫ್ಟಿಗಾಗಿ ಇರಲಿ ಮಳಗಿ ಸರ್ ಅವರನ್ನು ಕರೆದುಕೊಂಡು ಹೋಗಿರಬೇಕು ಉತ್ತರ ಕುಮಾರ ಅಲ್ಲಲ್ಲ ಬಲರಾಮ ಭಟ್ಟಿ ಸರ್!

ಮೊದಲೇ ಹೇಳಿದಂತೆ ಭಟ್ಟಿ ಸರ್ ಬಹಳ ಶಾಣ್ಯಾ ಮನುಷ್ಯ. ಕಷ್ಟಪಡುವ ಪ್ರವೃತ್ತಿ ಇತ್ತು. ಮೊದಲು ಕೇವಲ SSLC, TCH ಮಾಡಿಕೊಂಡು ಪ್ರೈಮರಿ ಶಾಲೆ ಮಾಸ್ತರಾಗಿದ್ದವರು ಅವರು. ಆ ಕೆಲಸ ಮಾಡುತ್ತಲೇ ಡಿಗ್ರಿ, ಮಾಸ್ಟರ್ ಡಿಗ್ರಿ, BEd ಎಲ್ಲ ಮಾಡಿಕೊಂಡಿದ್ದರು. ಅದು ಸಣ್ಣ ಮಾತಲ್ಲ. ಅದಾದ ನಂತರವೇ ನಮ್ಮ ಹೈಸ್ಕೂಲಿಗೆ ಬಂದವರು ಅವರು. ನಡುವೆ ಏನೋ ಮನ್ಮಥನ ಪ್ರಭಾವಕ್ಕೆ ಒಳಗಾಗಿದ್ದರು ಅಂತ ಕಾಣುತ್ತದೆ. ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗಲು ಹೋಗಿ ಮಾಡಿಕೊಂಡ ಈ ಲಫಡಾ ಒಳ್ಳೆಯದನ್ನೇ ಮಾಡಿತು. ಮತ್ತೆ ಅವರನ್ನು ಓದಿನತ್ತ ನೂಕಿತು. ನೌಕರಿ ಮಾಡುತ್ತಲೇ ಮತ್ತೊಂದು ಮಾಸ್ಟರ್ ಡಿಗ್ರಿ, PhD ಸಹಿತ ಮಾಡಿಕೊಂಡರು ಅಂತ ಈಗಿತ್ತಲಾಗಿ ಕೇಳ್ಪಟ್ಟೆ. ನಂತರ ಶಾಲೆ ಬಿಟ್ಟು ಯಾವದೋ ಹೊಸದಾಗಿ ಸ್ಥಾಪಿತವಾದ ಯೂನಿವರ್ಸಿಟಿಯಲ್ಲಿ ಕೆಲಸಕ್ಕೆ ಸೇರಿಕೊಂಡರು ಅಂತ ಕೇಳಿದೆ. ಈಗ ಅವರಿಗೂ ಸುಮಾರು ಐವತ್ತರ ಮೇಲೆ. ಇಷ್ಟೆಲ್ಲಾ ನೆನಪಿದ್ದರೂ ಭಟ್ಟಿ ಸರ್ ಯಾವ ವಿಷಯ ಕಲಿಸುತ್ತಿದ್ದರು ಅನ್ನುವದೇ ಮರೆತು ಹೋಗಿದೆ. ಅವರು ನಮಗೆ ಕಲಿಸಿರಲಿಲ್ಲ ನೋಡಿ, ಅದಕ್ಕೇ ಮರೆತು ಹೋಗಿದೆ. ಹಾಳು ಮರೆವು!

ಮೋಹಿನಿಯೂ ಒಳ್ಳೆ ರೀತಿಯಿಂದ ಜೀವನ ಕಟ್ಟಿಕೊಂಡಳು ಅಂತ ತಿಳಿಯಿತು. ಕೆಟ್ಟದಾಗಿ ಕಟ್ಟಿಕೊಳ್ಳಲಿಕ್ಕೆ ಅವಳಿಗೇನು ಹುಚ್ಚೇ? ಭಾಳ ಒಳ್ಳೆ ಸ್ವಭಾವದ, ಒಳ್ಳೆ ಮನೆತನದ ಸಭ್ಯ ಹುಡುಗಿ ಅವಳು. ಅಪ್ರತಿಮ ಸುಂದರಿಯಾಗಿದ್ದರೂ ಒಟ್ಟೇ ನಖರಾ ಬಾಜಿ ಇಲ್ಲ. ಪಿಯೂಸಿ ನಮ್ಮ ಕಾಲೇಜಿನಲ್ಲಿಯೇ ಮಾಡುತ್ತಿದ್ದಳು. ಮುಂದೇನು ಮಾಡಿದಳು ಅಂತ ಗೊತ್ತಿರಲಿಲ್ಲ. ಆಮೇಲೆ ದೋಸ್ತರನ್ನು ಕೇಳಿದಾಗ ಆಕೆ ವೃತ್ತಿಪರ ಶಿಕ್ಷಣ ಪೂರೈಸಿ, ಅದೇ ವೃತ್ತಿಯ ಒಳ್ಳೆ ವರನನ್ನು ಮದುವೆಯಾಗಿ, ಎರಡು ಮಕ್ಕಳು ಮಾಡಿಕೊಂಡು, ಎಲ್ಲೋ ವಿದೇಶದಲ್ಲಿ ಸೆಟಲ್ ಆಗಿದ್ದಾಳೆ ಅಂತ ಗೆಳೆಯರು ಹೇಳಿದರು. ಒಳ್ಳೆಯದಾಯಿತು. ಮುಂದೂ ಒಳ್ಳೆಯದೇ ಆಗಲಿ.

ಮೋಹಿನಿಯ ತವರು ಮನೆ ಮಾತ್ರ ಅಲ್ಲೇ ಇದೆ. ನಾವು ಧಾರವಾಡಕ್ಕೆ ಹೋದಾಗ ಆ ರೋಡಿಗೂ ಹೋಗುತ್ತೇವೆ. ಅರ್ರೆ! ನಮ್ಮ ಏರಿಯಾ ಮಾರಾಯರೇ! ಅಲ್ಲೆಲ್ಲ ನಮ್ಮ ನೆಂಟರು, ಪರಿಚಿತರು ಎಲ್ಲ ಇದ್ದಾರೆ. ಹಾಗಾಗಿ ರೌಂಡ್ ಹೊಡೆಯುತ್ತೇವೆ. ಆದರೆ ಮೋಹಿನಿಯಾಗಲಿ ಬೇರೆ ಯಾರೇ ಆಗಲಿ ಮಾತ್ರ ಮೊದಲಿನ ರೀತಿಯಲ್ಲಿ ಬಿಳಿ ನೈಟಿ ಹಾಕಿಕೊಂಡು, ಗೇಟ್ ಮೇಲೆ  ಗದ್ದ ಊರಿಕೊಂಡು, ಗಲ್ಲವನ್ನು ವಾಕಡಾ ಮಾಡಿ ಗೇಟಿನ ಪಟ್ಟಿ ಮೇಲೆ ಮಲಗಿಸಿ, ತನಹಾ ತನಹಾ ಪ್ಯಾಸಾ ಪ್ಯಾಸಾ ಲುಕ್ ಕೊಡುತ್ತ ನಿಂತಿದ್ದು ಮಾತ್ರ ಕಂಡುಬಂದಿಲ್ಲ. ಹಳೆ ಹರಟೆಕಟ್ಟೆ ಹಾಗೇ ಇದೆ. ಹರಟೆಕಟ್ಟೆ ಮತ್ತೆ ಮೋಹಿನಿ ಮನೆ ಮಧ್ಯೆ ಇದ್ದ ಖಾಲಿ ಜಾಗ ಭರ್ತಿಯಾಗಿದೆ. ಈಗ ಹರಟೆಕಟ್ಟೆಯಿಂದ ಮೋಹಿನಿಯ ದರ್ಶನ ಸಾಧ್ಯವಿಲ್ಲ. ಹರಟೆ ಹೊಡೆಯುವ ಮಂದಿ ಕಮ್ಮಿ. ಕಟ್ಟೆ ಮೇಲೆ ಕೂತಿದ್ದರೂ ಎಲ್ಲರೂ ತಮ್ಮ ತಮ್ಮ ಮೊಬೈಲ್ ನಲ್ಲಿ ಮಗ್ನರು. ನಾನು ಹಳೆ ನೆನಪುಗಳನ್ನು ಮೆಲುಕಾಡುತ್ತ ಒಂದೆರೆಡು ನಿಮಿಷ ಹರಟೆಕಟ್ಟೆ ಮೇಲೆ ಧ್ಯಾನ ಮಾಡಿ ಬಂದೆ. ಯಾರ ಧ್ಯಾನ? ಏ ಅದೆಲ್ಲಾ ಹೇಳಲಿಕ್ಕೆ ಆಗೋದಿಲ್ಲ.

'ಚೇಳಿನ ಮಂತ್ರ ಬಾರದವರು ಹಾವಿನ ಬುಟ್ಟಿಗೆ ಕೈಹಾಕಬಾರದು' ಅಂತ ಒಂದು ಗಾದೆ ಮಾತಿದೆ. ಭಟ್ಟಿ ಸರ್ ಅವರ ಈ ಪುರಾನಿ ಕಹಾನಿ ನೆನಪಾದಾಗ ಅದೇ ಗಾದೆ ಮಾತು ನೆನಪಿಗೆ ಬರುತ್ತದೆ. ಅಲ್ಲರೀ! ರೌಡಿಗಳ ಎನ್ಕೌಂಟರ್ ಮಾಡುವದು ಅಂದರೆ ಏನು, ಅದರಲ್ಲಿ ಏನೇನು ಖತರಾ ಇರುತ್ತವೆ, ಅವರು ವಾಪಸ್ ಗ್ಯಾಂಗ್ ಕಟ್ಟಿಕೊಂಡು ಕಟಿಯಲು ಬಂದರೆ ಏನು ಮಾಡಬೇಕು, ಅದನ್ನೆಲ್ಲಾ ಮ್ಯಾನೇಜ್ ಮಾಡಲು ಬೇಕಾಗಿರುವ ಬುದ್ಧಿ ಮಂಡೆಯಲ್ಲಿಯೂ, ದಮ್ಮು (ಬಲ) ಕುಂಡೆಯಲ್ಲಿಯೂ ಇದೆಯೋ ಇಲ್ಲವೋ ಅಂತ ಎಲ್ಲವನ್ನೂ ತಿಳಿದುಕೊಂಡು, ಇರಬೇಕಾಗಿರುವ ಜಾಗದಲ್ಲಿ ಬುದ್ಧಿ, ದಮ್ಮು ಇಲ್ಲದಿದ್ದರೆ ಮೊದಲು ಅವನ್ನೆಲ್ಲ ಬೆಳೆಸಿಕೊಂಡುಬಂದ ನಂತರ, ಇದ್ದ ಇಬ್ಬರಲ್ಲಿ ಒಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಗುರುಗಳ ಶಿಷ್ಯನಾಗಿ, ಬರೋಬ್ಬರಿ ಎನ್ಕೌಂಟರ್ ವಿದ್ಯೆ ಕಲಿತಿದ್ದರೆ ಅದು ಒಂದು ಪದ್ಧತಿ. ಅದು ಬಿಟ್ಟು ಒಮ್ಮೆಲೇ ಹತ್ತನೇ ಕ್ಲಾಸಿನ ಅದೂ ಡಿ ಕ್ಲಾಸಿನ ದೊಡ್ಡ ಪೊರ್ಕಿ ದೈತ್ಯ ಭಂಡಿವಡ್ಡರನನ್ನು ತಡವಿಕೊಳ್ಳುವದು ಅಂದರೆ ಚೇಳಿನ ಮಂತ್ರವಲ್ಲ ಹಾವರಾಣಿ ಮಂತ್ರವೂ ಗೊತ್ತಿಲ್ಲದ ಗಾವಿಲ ಸಾಧಾರಣ ಹಾವಲ್ಲ ಕಾಳಿಂಗಸರ್ಪದ ಬುಟ್ಟಿಗೆ ಕೈಹಾಕಿದಂತೆಯೇ!! ಮಹಾ ಯಬಡತನದ ಕೆಲಸ. ಕೆಲವರಿಗೆ ಬಡತನವಲ್ಲದ ಬಡತನ ಬಂದು ಬಿಡುತ್ತದೆ. ಅದೇ ಯಬಡತನ. ಅದು ಬಂದು ತಲೆಗೆ ಏರಿದಾಗ ಇಂತಹ ಐತಿಹಾಸಿಕ ಲಫಡಾ ಆಗಿಬಿಡುತ್ತವೆ.

ವಿ. ಸೂ: ಸತ್ಯ ಘಟನೆಯ ಮೇಲೆ ಆಧಾರಿತ. ಹೆಸರುಗಳನ್ನು ತಕ್ಕ ಮಟ್ಟಿಗೆ ಬದಲಾಯಿಸಿದ್ದೇನೆ. ಸಾಕಷ್ಟು ಮಸಾಲೆ ಸೇರಿಸಿದ್ದೇನೆ. ಸಾಕಷ್ಟು obfuscate ಮಾಡಲು ಪ್ರಯತ್ನಿಸಿದ್ದೇನೆ. ಅದರೂ ನಮ್ಮ ಸಮಕಾಲೀನರಿಗೆ ನೆನಪಾಗಬಹುದು, ಒಳಗಿನ ಹೂರಣ ತಿಳಿಯಬಹುದು. ತಿಳಿದರೆ ಸುಮ್ಮನೆ ಇರಿ, ಪ್ಲೀಸ್. ಯಾರಿಗೂ embarrass ಮಾಡುವ, hurt ಮಾಡುವ ಇರಾದೆ ನಮ್ಮದಲ್ಲ. ನಿಮಗೂ ಅದು ಬೇಡ. ಇದು ನಮ್ಮ ನಮ್ರಂತಿ! (ನಮ್ರ + ವಿನಂತಿ)

ದಯಾ ನಾಯಕ್ - ಖತರ್ನಾಕ್ ಎನ್ಕೌಂಟರ್ ಸ್ಪೆಷಲಿಸ್ಟ್, ಮುಂಬೈ ಪೋಲೀಸ್. ಕನ್ನಡದ ಹೆಮ್ಮೆಯ ಕಂದ!

* ಚಿತ್ರಗಳನ್ನು ಅಂತರ್ಜಾಲದಿಂದ ಆರಿಸಿದ್ದು. ಅವುಗಳ ಕಾಪಿ ರೈಟ್ಸ್ ಅವುಗಳ ಮಾಲೀಕರದ್ದು.

ಗುರು ಪೂರ್ಣಿಮೆ....

ಜುಲೈ ೩೧, ಶುಕ್ರವಾರ. ಇಂದು ಗುರು ಪೂರ್ಣಿಮೆ. ಫೇಸ್ಬುಕ್ ಮೇಲೆ ಹಾಕಿದ್ದ ಕೆಲವು ಪೋಸ್ಟುಗಳನ್ನು ಇಲ್ಲೂ ಹಾಕಿದ್ದೇನೆ ಅಷ್ಟೇ.

ಶಿಕ್ಷಕ ಬದುಕುವದನ್ನು ಕಲಿಸಿದರೆ ಗುರು ಬದುಕನ್ನೇ ಬದಲಾಯಿಸಿಬಿಡುತ್ತಾನೆ.

*****
ಒಬ್ಬ ಶ್ರೀಮಂತ ಬಂಗಾಳಿ ಮನುಷ್ಯ ಪ್ರತಿ ವರ್ಷ ಸಿಕ್ಕಾಪಟ್ಟೆ ಭರ್ಜರಿಯಿಂದ ಕಾಳಿ ಪೂಜೆ ಮಾಡುತ್ತಿದ್ದ. ಹಲವಾರು ಬಲಿತ ಆಡುಗಳನ್ನು ಕಡಿಸುತ್ತಿದ್ದ. ಕಾಳಿಗೆ ಅರ್ಪಿಸುತ್ತಿದ್ದ. ಊರ ಮಂದಿಗೆ ಫ್ರೀ ಮಟನ್ ಊಟ ಹಾಕಿಸುತ್ತಿದ್ದ. ಕಾಳಿ ಮಾತೆಯ ಮೇಲೆ ಆತನದು ಭಕ್ತಿಯ ಪರಾಕಾಷ್ಠೆ!...ಅಂತ ಅಂದುಕೊಂಡಿದ್ದರು ಮಂದಿ. ಅಂದುಕೊಂಡಿದ್ದರು.

ಹೀಗಿದ್ದಾಗ ಒಂದು ವರ್ಷ ಅಚಾನಕ್ ಕಾಳಿ ಪೂಜೆ, ಆಡಿನ ಬಲಿ ಎಲ್ಲ ನಿಲ್ಲಿಸಿಬಿಟ್ಟ. ಕಾಳಿ ಪೂಜೆಯ ನೆಪದಲ್ಲಿ ಬಿಟ್ಟಿ ಮಟನ್ ಊಟ ತಪ್ಪಿಹೊಯಿತಲ್ಲಾ ಅಂತ ಊರಿನ ಮಂದಿ ಪೇಚಾಡಿಕೊಂಡರು.

'ಯಾಕೆ ಸ್ವಾಮೀ, ಕಾಳಿ ಪೂಜೆ, ಆಡಿನ ಬಲಿ ಎಲ್ಲ ನಿಲ್ಲಿಸಿಬಿಟ್ಟಿರಿ??' ಅಂತ ಕೇಳಿದರು.

'ಏನೂ ಇಲ್ಲ. ಏನು ಮಾಡೋಣ?? ಮಟನ್ ತಿನ್ನೋಣ ಅಂದರೆ ಎಲ್ಲ ಹಲ್ಲುಗಳೂ ಬಿದ್ದು ಹೋಗಿವೆ. ಮಾಂಸ ಅಗಿಲಿಕ್ಕೆ ಭಾಳ ಕಷ್ಟ!' ಅಂತ ಹಲ್ಲು ಬಿದ್ದೋದ ಬೊಚ್ಚು ಬಾಯಿ ತೆಗೆದು ಪೆಕಪೆಕಾ ಅಂತ ನಕ್ಕ ಆ ಶ್ರೀಮಂತ!

ಹಲ್ಲು ಹೋದ ಮೇಲೆ ಮಟನ್ ಮೇಲೆ ವೈರಾಗ್ಯ ಬಂದರೂ ಅಷ್ಟೇ ಬಿಟ್ಟರೂ ಅಷ್ಟೇ. ಹಲ್ಲಿದ್ದಾಗಲೇ ಕಡಲೆ ಮೇಲೆ ವೈರಾಗ್ಯ ಬಂದ ಮಂದಿ ಇದ್ದಾರೆಯೇ? :)

-- ಶ್ರೀ ರಾಮಕೃಷ್ಣ ಪರಮಹಂಸ

'ಶ್ರೀ ರವೀಂದ್ರನಾಥ ಟಾಗೋರರ ಪಿತಾಶ್ರೀ ವೃದ್ಧ ಶ್ರೀ ದೇವೇಂದ್ರನಾಥ ಟಾಗೋರರು ಒಮ್ಮೆಲೇ ಏಕ್ದಂ ವೈರಾಗಿಯಾಗಿ, ಎಲ್ಲವನ್ನೂ ತ್ಯಜಿಸಿಬಿಟ್ಟರಲ್ಲಾ. ಋಷಿ ಆಗಿಬಿಟ್ಟರಲ್ಲಾ. ಅವರ ಬಗ್ಗೆ ನಿಮ್ಮ ಅಭಿಪ್ರಾಯ???' ಅಂತ ಕೇಳಿದಾಗ ತಮ್ಮದೇ ಶೈಲಿಯಲ್ಲಿ ರಾಮಕೃಷ್ಣ ಪರಮಹಂಸರು ಉತ್ತರಿಸಿದ ರೀತಿ.

#ಡಂಬಾಚಾರ #ಗುರುಪೂರ್ಣಿಮೆ #ವೈರಾಗ್ಯ

*****

ದೊಡ್ಡ ದೊಡ್ಡ ವೇದಾಂತದ ತಿರುಳನ್ನು ಬಾಲವಾಡಿ ಮಾಣಿಗೆ ಅರ್ಥವಾಗುವ ರೀತಿಯಲ್ಲಿ ಹೇಳಲಿಕ್ಕೆ ಬರುವಂತಹ ಗುರುಗಳು ಬಹಳ ಕಮ್ಮಿ. ಅದೇನೋ ಅಂತಾರಲ್ಲಾ....'ಬಾಲವಾಡಿಯಲ್ಲಿ ಸರಿಯಾಗಿ ಕಲಿತುಬಿಟ್ಟರೆ ಸಾಕು. ಅದೇ ಜೀವನ ಪರ್ಯಂತ ಸಾಕಾಗುತ್ತದೆ,' ಅಂತ. ಬಾಲವಾಡಿಯಲ್ಲಿ ಅಧ್ಯಾತ್ಮವನ್ನು ಸರಿಯಾಗಿ ಕಲಿಯದ ನಮ್ಮಂತಹ ಮಂದಿಗೆ ಬರೋಬ್ಬರಿ ವೇದಾಂತವನ್ನು, ಅದೂ ಪಾಶ್ಚಾತ್ಯ ಚಿಂತನೆಗೆ ಬಲಿಯಾಗಿ ತಲೆ ಕಲಬೆರೆಕೆಯಾಗಿ ಹಾಪ್ ಆಗಿದ್ದ ಮಂದಿಗೆ ವೇದಾಂತವನ್ನು ಅತಿ ಸರಳವಾಗಿ ಬೋಧಿಸಿದ ನಮ್ಮ ಈ ಗುರುವರ್ಯನ ಬಗ್ಗೆ ಹಿಂದೊಮ್ಮೆ ಬರೆದಿದ್ದ ಬ್ಲಾಗ್ ಲೇಖನ ಇಂದು ಗುರು ಪೂರ್ಣಿಮೆಯಂದು with full gratitude ಮತ್ತೊಮ್ಮೆ!

ಗುರು ಬೆರಳನಿಂದ ಏನೋ ತೋರಿಸುತ್ತಾನೆ. ನಾವು ನೀವು ಗುರು ತೋರಿಸಿದ್ದನ್ನು ಬಿಟ್ಟು ಗುರುವಿನ ಬೆರಳನ್ನೇ ನೋಡುತ್ತಾ ಕೂತರೆ ಗುರು ಏನು ಮಾಡಿಯಾನು? :) (ಸೂಫಿ ಕವಿ ರೂಮಿ)

http://maheshuh.blogspot.com/2014/10/blog-post_27.html

*****

ಗುರು ಪೂರ್ಣಿಮೆಯಂದು ಪೂಜ್ಯ ಆದಿ ಶಂಕರರನ್ನು ಧ್ಯಾನಿಸುತ್ತ ಸಮುದ್ರದ ದಡದಲ್ಲಿ ಕೂತ ವ್ಯಕ್ತಿಗೆ ಅದ್ವೈತ ವೇದಾಂತದ, ಅಧ್ಯಾತ್ಮದ ದರ್ಶನವಾಯಿತು ಅಂದರೆ ಏಕ್ದಂ ಹೀಗೆ ಅನ್ನಿಸಬಹುದು.....ಅರೇ! ಏಳುವ ಅಲೆಗಳು 'ಬೇರೆ ಬೇರೆ' ಅಂತ ಕಂಡರೂ ಅದೇ 'ಒಂದು' ಸಮುದ್ರದಲ್ಲಿ ಲೀನವಾಗಿಬಿಡುತ್ತವೆ. ಅಲೆಗಳು ಬೇರೆಯಲ್ಲ, ಸಮುದ್ರ ಬೇರೆಯಲ್ಲ. ಎರಡೂ ಒಂದೇ.....ಅಲೆಗಳ ಆಕಾರ, ಗಾತ್ರ ಎಲ್ಲ ಬೇರೆ ಇರಬಹದು. ಆದ್ರೆ ಮೂಲ ಮಾತ್ರ ಒಂದೇ. ಅದೇ ಸಮುದ್ರ. ಎಷ್ಟೇ ಎತ್ತರಕ್ಕೆ ಎದ್ದರೂ ಅಲೆಗಳು ಮತ್ತೆ ಮೂಲ ಸಮುದ್ರದಲ್ಲೇ ಲೀನವಾಗಲಿಕ್ಕೇಬೇಕು.

ಇದೆಲ್ಲ ಅದ್ವೈತವನ್ನು ತಿಳಿದವರಿಗೆ ಅಥವಾ ಅದ್ವೈತವನ್ನು ಅಧ್ಯಯನ ಮಾಡಿ ಅದರ ಸತ್ಯಾಸತ್ಯತೆಯ ಬಗ್ಗೆ ಖುದ್ ತಿಳಿಯಬೇಕು ಅನ್ನುವವರಿಗೆ.

ಇನ್ನು...ಅದ್ವೈತ ಖಂಡನಾ ಶಾಸ್ತ್ರ ಓದಿಕೊಂಡು, ಮಣಿ ಮಂಜರಿ ಎನ್ನುವ ಅಪದ್ಧವನ್ನು ನಂಬಿಕೊಂಡು ಅದರಲ್ಲೇ ಬಿದ್ದು ಹೊರಳಾಡುತ್ತಿರುವವರಿಗೆ ಸಮುದ್ರದ ದಂಡೆ ಮೇಲೆ ಕೂತಾಗ, ಅಲೆಗಳನ್ನು ನೋಡಿದಾಗ ಇದೂ ನೆನಪಾಗಬಹದು...... ಅದೇ ಒಂದು ಶಾಯರಿ.....

Samunder Ke Kinare Bethe Hain Kabhi To Koi Lehar Aayegi
Kismat Badle Ya Na Badle G**nd To Dhul Jayegi

ಸಮುದ್ರದ ದಂಡೆಯಲ್ಲಿ ಕೂತಿದ್ದೇವೆ. ಎಂದೋ ಯಾವದೋ ಒಂದು ಅಲೆ ಬರಬಹುದು.
ಅದೃಷ್ಟ ಬದಲಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಮು*ಳಿ ಮಾತ್ರ ತೊಳೆದು ಹೋಗಬಹುದು! :)

Sunday, July 19, 2015

ಕೇಸರಿ ಹಾಲು.....ಸುಹಾಗ್ ರಾತ್ ಸ್ಪೆಷಲ್!

'ಕೇಸರಿ' ಹಾಲು ಹಿಡಿದುಕೊಂಡು ಹೊರಟ ಫಸ್ಟ್ ನೈಟ್ ಪುಣ್ಯಾತ್ಗಿತ್ತಿ!
ನಮ್ಮ ಪದ್ದಿ ಒಂದು ಅನಾಹುತ ಕೆಲಸ ಮಾಡಿಕೊಂಡು ಕೂತಾಳ. ಪದ್ದಿ ರೀ ಪದ್ದಿ. ನಮ್ಮ ದೋಸ್ತ ಚೀಪ್ಯಾನ ಕಿರೀ ನಾದಿನಿ. ಅವನ ಹೆಂಡ್ತಿ ಉರ್ಫ್ ರೂಪಾ ವೈನಿಯ ಕಡೇ ತಂಗಿ ಪದ್ಮಾವತಿ ಉರ್ಫ್ ಪದ್ದಿ. ಹೆಸರೇನೋ ಪದ್ದಿ ಅಂತ ಅದ. ಆದ್ರ ಮಾಡೋ ಕೆಲಸ ನೋಡಿಬಿಟ್ಟರೆ ಸಾಕು, ಬರೋಬ್ಬರಿ ಪೆದ್ದಿ ಕೆಲಸ ಅಷ್ಟೂ. ಹುಚ್ಚ ಪೆಕಡೂ!

ಏನು ಅಂತಹ ಅನಾಹುತ ಮಾಡಿಕೊಂಡಳು ಅಂತ ಕೇಳಿದರೆ ಲಗ್ನ (ಮದುವೆ) ಮಾಡಿಕೊಂಡುಬಿಟ್ಟಳು. ಅದೂ ಭಾರಿ ಬಂಡಾಯಕಾರಿ ಮದುವೆ. ಅಂತರ್ಜಾತೀಯ ವಿವಾಹ. ಇಕಿ ನೋಡಿದರೆ ಶುದ್ಧ ವೈಷ್ಣವ ಆಚಾರಿ ಮನೆತನದ ಹುಡುಗಿ. ಹೋಗಿ ಹೋಗಿ ಮೇಸ್ತ್ರಿ ಯಲ್ಲಪ್ಪನ ಮಗ ಗೌಂಡಿ ದ್ಯಾಮಪ್ಪನ್ನ ಲಗ್ನಾ ಮಾಡಿಕೊಂಡು ಕೂತಾಳ. ಆಚಾರಿ ಮತ್ತ ವಡ್ಡರು ಬೀಗಾ ಬೀಗರು. ಎಂತಾ ಯೋಗಾಯೋಗವಯ್ಯಾ!

ಅದೂ ಎಂತಾ ವೇಳ್ಯಾದಾಗ ಲಗ್ನಾ ಮಾಡಿಕೊಂಡಳು ಅಂದರ ಏನು ಕೇಳ್ತೀರಿ!? ಅಪ್ಪಾ, ಅವ್ವಾ, ಅಜ್ಜಾ, ಅಜ್ಜಿ ಎಲ್ಲ ಒಂದಿಷ್ಟು ಪುಣ್ಯ ಗಳಿಸಿ ಬರೋಣ ಅಂತ ಯಾತ್ರಾಕ್ಕ ಹೋಗ್ಯಾರ. ಇಕಿ ಪದ್ದಿ ಮನ್ಯಾಗೇ ಇದ್ದಾಳ. ಅಕಿ ಹಿರೇ ಅಣ್ಣ ಲಪುಟ ನಾಗಣ್ಣ ಉರ್ಫ್ ತೂತ ನಾಗ್ಯಾ ಮತ್ತ ಅವನ ಹೆಂಡತಿ ಬಿಟ್ಟರೆ ಮನಿಯಾಗ ಹಿರಿಯರು ಅನ್ನುವವರು ಯಾರೂ ಇಲ್ಲ. ತೂತ ನಾಗ್ಯಾ ಮತ್ತ ಅವನ ಹೆಂಡತಿ ವಿಷಯ ಬಿಡ್ರಿ. ಅವು ಮನ್ಯಾಗ ಇದ್ದರೂ ಅಷ್ಟ ಇಲ್ಲದಿದ್ದರೂ ಅಷ್ಟ. ತೂತ ನಾಗ್ಯಾ ಅಂತೂ ಶುದ್ಧ ಬೇವಡಾ ಆದಮೀ. ಒಂದು ಕ್ವಾರ್ಟರ್ ಹಳೆ ಮಂಗ್ಯಾ (Old Monk) ರಮ್ ಕುಡಿದುಬಿಟ್ಟ ಅಂದ್ರ ನಾಗಣ್ಣನಿಂದ 'ರಂ'ಗಣ್ಣ ಆಗಿ ಎಚ್ಚರ ತಪ್ಪಿ ಮಕ್ಕೊಂಡುಬಿಡ್ತಾನ. ಇನ್ನು ಅವನ ಹೆಂಡ್ತಿ ಅಕಿ ಮಂದಿ ಮನಿಗೆ ಅಡಿಗೆ ಅದು ಇದು ಕೆಲಸ ಮಾಡಲಿಕ್ಕೆ ಓಡಿ ಹೋಗ್ತಾಳ. ನಾಗಣ್ಣನಂತಹ ಬೇಕಾರ್ ಮನುಷ್ಯಾನ್ನ ಕಟ್ಟಿಕೊಂಡ ಮ್ಯಾಲೆ ಜಿಂದಗಿ ಕೇ ಲಿಯೇ ಏನರೆ ಜುಗಾಡ್ ಮಾಡಲಿಕ್ಕೇಬೇಕಲ್ಲಾ! ಪಾಪಿ ಪೇಟ್ ಕಾ ಸವಾಲ್! ಹೀಂಗಾಗಿ ಪ್ರಾಯದ ಪದ್ದಿ ಮ್ಯಾಲೆ ಒಂದು ಖಡಕ್ ನಜರ್ ಅಂದರೆ ಕಣ್ಣು ಇಡುವ ಮಂದಿನೇ ಇಲ್ಲ.

ಅದೂ ಈ ಪದ್ದಿ ಬ್ಯಾರೆ ಉದ್ಯೋಗಿಲ್ಲದ ಮನಿಯಾಗೇ ಕೂತದ. ಈಗ ಮೂರು ವರ್ಷಾತು. ಇನ್ನೂ SSLC ನೇ ಮುಗಿವಲ್ಲತು. ಮರಳಿ ಯತ್ನವ ಮಾಡು ಅನ್ನುವವರಂಗ ಅಕಿದು ದಂಡಯಾತ್ರೆ ನಡದೇ ಇದೆ. ಈ ಸಲಾನೂ ಮತ್ತೆ ಪರೀಕ್ಷಾ ಕೊಟ್ಟಾಳ. ಈಗ ಬರೋಬ್ಬರಿ ಹದಿನೆಂಟು ವಯಸ್ಸು ಕೂಡ ತುಂಬಿಬಿಟ್ಟದ. ಅದು ಯಾವಾಗಿಂದ ಗೌಂಡಿ ದ್ಯಾಮಪ್ಪನ ಜೋಡಿ ಲವ್ವಿ ಡವ್ವಿ ನಡೆದಿತ್ತೋ ಗೊತ್ತಿಲ್ಲ. ಒಟ್ಟಿನ್ಯಾಗ ಇಕಿ ವಯಸ್ಸಿಗೆ ಬರೋದನ್ನೇ ಕಾದುಕೋತ್ತ ಕೂತಿದ್ದರು ಅನ್ನಿಸ್ತದ. ಇಕಿ ಪದ್ದಿಗೆ ಹದಿನೆಂಟು ತುಂಬಿತು ಅಂತ ಖಾತ್ರಿಯಾದ ಕೂಡಲೇ ಗೌಂಡಿ ದ್ಯಾಮಪ್ಪಾ ಮತ್ತ ಇಕಿ ಪದ್ದಿ ಕೂಡಿ ಲಗ್ನಾ ಮಾಡಿಕೊಂಡೇಬಿಟ್ಟಾರ. ಮತ್ತ ಫುಲ್ ಸೇಫ್ಟಿ ಇರಲಿ ಅಂತ ರಿಜಿಸ್ಟರ್ ಸಹಿತ ಮಾಡಿಸೇಬಿಟ್ಟಾರ. ಫುಲ್ ಶಿವಾಯ ನಮಃ!

ಒಂದು ತಿಂಗಳು ಬಿಟ್ಟು ಮನಿ ಮಂದಿ ಯಾತ್ರಾ ಮುಗಿಸಿ ವಾಪಸ್ ಬಂದಾರ. ಅಲ್ಲೇ ಧಾರವಾಡ ರೈಲ್ವೆ ಸ್ಟೇಷನ್ ಒಳಗ ಇಳಿದ ಕೂಡಲೇ ಭೆಟ್ಟಿಯಾದ ಮಾಳಮಡ್ಡಿ ಮಹನೀಯರೊಬ್ಬರು ಕೇಳ್ಯಾರ, 'ನಿಮಗ ಸುದ್ದಿ ಗೊತ್ತಾತೇನು?' ಅಂತ. ಪದ್ದಿ ಅಪ್ಪಾ, ಅವ್ವಾ ಎಲ್ಲಾ ಕೂಡಿ, 'ಏನು ಸುದ್ದಿರೀ? ನಾವು ಈಗ ಮಾತ್ರ ಯಾತ್ರಾ ಮುಗಿಸಿಕೊಂಡು ಬರ್ಲಿಕತ್ತೇವಿ. ನಿನ್ನೆ ಮಾತ್ರ ತಿರುಪತಿ ವೆಂಕಪ್ಪನ  ದರ್ಶನ ಮಾಡಿಕೊಂಡು ಗಾಡಿ ಹತ್ತಿದ್ದಿವಿ. ಈಗ ಬಂದು ಮುಟ್ಟಲಿಕತ್ತೇವಿ. ಏನು ಸುದ್ದಿ?' ಅಂದಾರ. ಅದನ್ನು ಕೇಳಿದ ಅವರು ಪೆಕಪೆಕಾ ಅಂತ ಅಂಡು ತಟ್ಟಿಕೊಂಡು ನಕ್ಕು, 'ತಿರುಪತಿ ವೆಂಕಪ್ಪ ನಿಮಗ ನಾಮಾ ಹಾಕಿದನೋ ಇಲ್ಲೋ ಗೊತ್ತಿಲ್ಲ. ನಿಮ್ಮ ಮಗಳು ಪದ್ಮಾವತಿಯಂತೂ ಮಸ್ತ ನಾಮಾ ಹಾಕ್ಯಾಳ ನೋಡ್ರಿಪಾ. ಏ! congratulations! congratulations!' ಅಂತ ಮುಗುಮ್ಮಾಗಿ ಹೇಳ್ಯಾರ. ಡಬಲ್ ಮೀನಿಂಗ್ ಡೈಲಾಗ್ ಹೊಡೆದಾರ. ಪದ್ದಿ ಮನಿಯವರಿಗೆ ಮಾಮಲಾ ಏನು ಅಂತ ಗೊತ್ತೇ ಆಗಿಲ್ಲ. ಎಲ್ಲೆ ಈ ಪರಿ congratulations ಅಂತ ಹೇಳೋದು ನೋಡಿ ಎಲ್ಲಿ ಮಗಳು ತನ್ನ ಎಂಟನೆಯದ್ದೋ ಒಂಬತ್ತನೆಯದ್ದೋ ಪ್ರಯತ್ನದಲ್ಲಿ SSLC ಪಾಸಾಗಿಬಿಟ್ಟಳೋ ಅಂತ ವಿಚಾರ ಮಾಡ್ಯಾರ. ತೀರ್ಥಯಾತ್ರೆಯ ಪುಣ್ಯ ಫಲ ಇಷ್ಟು ಬೇಗ ಬಂದಿರಬಹುದೇನು ಅಂತ ಆಶ್ಚರ್ಯಪಟ್ಟಾರ. ಅವರಿಗೇನು ಗೊತ್ತು ಮನಿಯಾಗ ಏನು ಲಫಡಾ ಬಾಜಿ ಆಗಿ ಕೂತದ ಅಂತ ಹೇಳಿ.

ಮನಿಗೆ ಬಂದು ಮುಟ್ಟ್ಯಾರ. ಅವರು ಪ್ರಸಾದ ಕೊಟ್ಟರೆ ಪದ್ದಿ ಅಪ್ಪಾ ಅವ್ವಗ ಬಾಂಬ್ ಕೊಟ್ಟುಬಿಟ್ಟಾಳ. ಬಾಂಬ್ ಕೊಟ್ಟಾಳ ಅಂದ್ರ ಬಾಂಬಿನಂತಹ ಸುದ್ದಿ ಒಗೆದಾಳ ಅಂತ. ಎಲ್ಲಾ ಪುಣ್ಯ ಕ್ಷೇತ್ರಗಳ ಪ್ರಸಾದವನ್ನು ಗಿರಮಿಟ್ ಗತೆ ಮಿಕ್ಸ್ ಮಾಡಿಕೊಂಡು, ಎರಡೂ ಕೈಯಾಗ ಮುಕ್ಕಿಕೋತ್ತ, ಗೌಂಡಿ ದ್ಯಾಮಪ್ಪನ ಜೋಡಿ ರಿಜಿಸ್ಟರ್ ಲಗ್ನಾ ಮಾಡಿಕೊಂಡ ಸುದ್ದಿಯ ಬಾಂಬನ್ನು ಒಗೆದೇಬಿಟ್ಟಾಳ. ದೊಡ್ಡ ಪ್ರಮಾಣದ ಸ್ಪೋಟ ಆಗಿಬಿಟ್ಟದ. ಮನಿ ಮಂದಿಯೆಲ್ಲ ಪದ್ದಿಗೆ ಹಾಕುವಷ್ಟು ಹಾಕ್ಯಾರ. ಹೊಡೆದಾರ. ಬಡಿದಾರ. ಅತ್ತು ಕರೆದು ಎಲ್ಲ ಮಾಡ್ಯಾರ. ಪದ್ದಿ ಮಾತ್ರ ಅಟಲ್ ಬಿಹಾರಿ ವಾಜಪೇಯಿ ಗತೆ ಅಟಲ್ (ಅಚಲ) ನಿರ್ಧಾರ ತೊಗೊಂಡು ಕೂತುಬಿಟ್ಟಾಳ. ಮುಗೀತು ಕಥಿ. ಲಗ್ನಾ ರಿಜಿಸ್ಟರ್ ಬ್ಯಾರೆ ಆಗಿಬಿಟ್ಟದ. ಏನೂ ಮಾಡಲಿಕ್ಕೆ ಬರಂಗಿಲ್ಲ. ಡೈವೋರ್ಸ್ ಮಾಡಿಸಬಹುದು. ಡೈವೊರ್ಸೀ ಸ್ಟೇಟಸ್ ಬರುತ್ತದೆಯೇ ವಿನಃ ಮೊದಲಿನ ಕನ್ಯಾ ಸ್ಟೇಟಸ್ ಬರೋದಿಲ್ಲ. ಮುಗೀತ ಅಷ್ಟ. ಪದ್ದಿ ಅಪ್ಪ ದೊಡ್ಡ ಆಚಾರ್ರಿಗೆ ದೊಡ್ಡ ಗೌಂಡಿ ಅಳಿಯ. ಶುದ್ಧ ಅಂತರ್ಜಾತೀಯ ವಿವಾಹ. ಶಾದಿ ಭಾಗ್ಯ ಹೀಂಗೂ ಬರಬಹುದು ಅಂತ ಪದ್ದಿ ಪಾಲಕರು ವಿಚಾರ ಮಾಡಿರಲಿಲ್ಲ ಬಿಡ್ರೀ.

ಮತ್ತೇನು ಮಾಡೋದು? ಪುಣ್ಯಕ್ಕ ಪದ್ದಿಗೆ ಅಕಿಗಿಂತ ಕಿರಿಯರಾದ ತಂಗಿ, ತಮ್ಮ ಯಾರೂ ಇಲ್ಲ. ಅದೊಂದು ಛಲೋ ಆತು. ಇಲ್ಲ ಅಂದ್ರ ಮುಂದ ಅವರ ಲಗ್ನ ಆಗೋದು ಕಷ್ಟ ಇತ್ತು. ಯಾರಿಗೆ ಗೊತ್ತು ಗೌಂಡಿ ದ್ಯಾಮಪ್ಪಗ ತಮ್ಮ, ತಂಗಿ ಇದ್ದಾರೋ ಏನೋ. ಮತ್ತೊಂದಿಷ್ಟು ಅಂತರ್ಜಾತೀಯ ವಿವಾಹ ಆಗ್ತಿದ್ದವೋ ಏನೋ?

ಓಣಿ ಮಂದಿ, ಬಳಗದವರೂ ಎಲ್ಲ ಕೂಡಿ ಸಮಾಧಾನ ಮಾಡ್ಯಾರ. 'ಇರ್ಲಿ ಬಿಡ್ರೀ. ಹೋಗಿ ಹೋಗಿ ಗೌಂಡ್ಯಾರ ಹುಡುಗನ್ನೇ ಮಾಡಿಕೊಂಡಳು. ಮುಂದಿನ ಮನಿ ಡಿಸೋಜಾನ ಮನಿಯಾಗ ಜಗ್ಗೆ ಆಫ್ರಿಕಾದ ನಿಗ್ರೋ ಹುಡುಗುರು ಭಾಡಿಗೆಗೆ ಇದ್ದರು. ಯಾರರೆ ಕರೆ ದೆವ್ವದಂತಹ ನಿಗ್ರೋ ಹುಡುಗನ ಜೋಡಿ ಅಂತರರಾಷ್ಟ್ರೀಯ ಲಗ್ನಾ ಮಾಡಿಕೊಂಡು ಬಂದಿದ್ದಳು ಅಂದ್ರ ಭಾಳ ತೊಂದ್ರಿ ಇತ್ತು. ಹೌದಿಲ್ಲೋ?? ಈಗ ಏನು ಮಾಡಲಿಕ್ಕೆ ಬರ್ತದ? ಆ ಗೌಂಡಿ ಸೂಳಿಮಗ್ಗ ಪಂಚಗೇವ್ಯಾ ಕುಡಿಸಿ, ಆದಷ್ಟು ಶುದ್ಧಿ ಮಾಡಿಕೊಂಡು, ಕನ್ಯಾದಾನ ಮಾಡಿ ಮುಗಿಸಿರಿ. ಏನು ಮಾಡಲಿಕ್ಕೆ ಬರ್ತದ??' ಅಂತ ಸುಮ್ಮನೆ ಉದ್ರಿ ಉಪದೇಶ, ಬಿಟ್ಟಿ ಸಲಹೆ ಕೊಟ್ಟಾರ ಓಣಿ ಮಂದಿ.

ಪದ್ದಿಯ ಅಪ್ಪ ಅವ್ವಂಗೂ ಬ್ಯಾರೆ ದಾರಿ ಕಂಡಿಲ್ಲ. ಅವರ ಮಠದ ಸ್ವಾಮಿಗಳು ಬ್ಯಾರೆ ಏನೋ ಕೋರ್ಟ್ ಕೇಸಿನ್ಯಾಗ ಬ್ಯುಸಿ. ಹಾಂಗಾಗಿ ಮಠಕ್ಕೆ ಬರಲಿಕ್ಕೆ ಹೇಳಿ ಕಳಿಸಿಲ್ಲ. ಇಲ್ಲಂದ್ರ ಇಷ್ಟು ಆಗೋ ಪುರಸತ್ತಿಲ್ಲದೇ, ಮಠಕ್ಕೆ ಕರೆಯಿಸಿಕೊಂಡು, ಮಾಂಡವಲಿಗೆ ಕೂತುಬಿಡ್ತಾರ. 'ದೊಡ್ಡ ಲಫಡಾ ಆಗ್ಯದ. ನಿಮಗ ಮಠದಿಂದ ಬಹಿಷ್ಕಾರ ಬೀಳಬಾರದು ಅಂದ್ರ ಇಷ್ಟು ಕೊಡಬೇಕಾಗ್ತದ. ನಿಮಗ ಅಂತ ಸೋವಿ ರೇಟ್. ಮ್ಯಾಲಿಂದ ಇನ್ನೂ ಒಂದು ಲಕ್ಷ ಕೊಟ್ಟುಬಿಟ್ಟರೆ ನಿಮ್ಮ ಗೌಂಡಿ ಅಳಿಯಾಗೂ ಬೇಕಾದ್ರ ಒಂದು ಜನಿವಾರ ಹಾಕಿ ಕರೆ ಬ್ರಾಹ್ಮಣ ಅಲ್ಲಲ್ಲ ಖರೇ ಬ್ರಾಹ್ಮಣನನ್ನ ಮಾಡಿಬಿಡ್ತೇವಿ. ಇನ್ನೊಂದೆರೆಡು ತಲೆಮಾರು ಆದ ಮ್ಯಾಲೆ ಯಾರಿಗೂ ಗೊತ್ತಾಗಂಗಿಲ್ಲ. ಎಷ್ಟು ಕೊಡ್ತೀರಿ? ಐದು (ಲಕ್ಷ) ಅಂತ ಬರೆದುಕೊಳ್ಳಲೇ?' ಅಂತ ಡೀಲಿಂಗ್ ಶುರು ಆಗೇಬಿಡ್ತದ. ಸ್ವಾಮಿಗಳು ಪುಣ್ಯಕ್ಕೆ ಕೋರ್ಟ್ ಕೇಸಿನ್ಯಾಗ ಬ್ಯುಸಿ ಇರುವದರಿಂದ ಅಂತಹ ಬುಲಾವಾ ಇನ್ನೂ ಬಂದಿಲ್ಲ. ಬುಲಾವಾ ಬರೋಕಿಂತ ಮೊದಲು ಈ ಯಬಡ ಪದ್ದಿಯ ಅಂತರ್ಜಾತೀಯ ಲಗ್ನದ ಕೇಸನ್ನು ಮುಚ್ಚಿಹಾಕಿಬಿಡಬೇಕು.

ಆವಾ ಗೌಂಡಿ ದ್ಯಾಮಪ್ಪ ಏನೋ ರಿಜಿಸ್ಟರ್ ಲಗ್ನಾ ಮಾಡಿಕೊಂಡುಬಿಟ್ಟ. ಈಗ ಬಿರಾದರಿ, ರಿಷ್ತೇದಾರಿ ಮಂದಿಯನ್ನು ಹ್ಯಾಂಗರೆ ಮಾಡಿ ಸ್ವಲ್ಪಾದರೂ ಸಂಬಾಳಿಸಬೇಕಲ್ಲ. ಪದ್ದಿ ಮದುವೆಗೆ ಅಂತ ಒಂದಿಷ್ಟು ರೊಕ್ಕಾ ಕೂಡಿ ಇಟ್ಟಿದ್ದರು. ಪೂರ್ತಿ ಅಷ್ಟೂ ರೊಕ್ಕಾ ಖರ್ಚು ಮಾಡೋ ಪರಿಸ್ಥಿತಿಯಂತೂ ಇಲ್ಲ. ವರದಕ್ಷಿಣೆ ಇಲ್ಲದೇ ಫೆಂಟಾಸ್ಟಿಕ್ ಅಳಿಯ ಭಾಗ್ಯ ಸಿಕ್ಕದ. ವರದಕ್ಷಿಣೆ ರೊಕ್ಕಾ ಸೇವ್ ಆತು. ಒಂದು ಸಣ್ಣ ಪ್ರಮಾಣದಾಗ ಲಗ್ನಾ ಅಂತ ಮಾಡಿ, ಸ್ವಲ್ಪೇ ಮಂದಿ, ಅದೂ ಭಾಳ ಕಿರಿಕಿರಿ ಮಾಡುವ ಮಂದಿಯನ್ನು ಮಾತ್ರ ಕರೆದು, ಒಂದು ಊಟ ಹಾಕಿಸಿ, ಮಾಡಿಸಿದ ಆಚಾರ್ರಿಗೆ ಸಣ್ಣ ಪ್ರಮಾಣದ ದಕ್ಷಿಣೆ ಕೊಟ್ಟು, ಹ್ಯಾಂಗರೆ ತಮ್ಮ ಕನ್ಯಾಸರೆ ಬಿಡಿಸಿಕೊಂಡರಾತು ಅಂತ ಕಪಿಗಳು (ಉರ್ಫ್ ನ್ಯಾ ಪಿತೃಗಳು) ವಿಚಾರ ಮಾಡಿದರು. ಕನ್ಯಾದಾನಂ ಮಾಡಾಮಿ ಅಂತ ಬುದ್ಧಂ ಶರಣಂ ಗಚ್ಚಾಮಿ ಮಾದರಿಯಲ್ಲಿ ರೆಡಿ ಆದರು.

ಏನೋ ಒಂದು ಮುಹೂರ್ತ ನೋಡಿದರು. ಅಲ್ಲೇ ಯಾವದೋ ಒಂದು ಸಣ್ಣ ಹನುಮಪ್ಪನ ಗುಡಿಯ ತರಹದ್ದನ್ನು ನೋಡಿ, ಅಲ್ಲೇ ಬುಕ್ ಮಾಡಿ, ಒಂದು ಸ್ವಲ್ಪೇ ಮಂದಿಗೆ ಕರೆದು, ಸಣ್ಣ ಪ್ರಮಾಣದಲ್ಲಿ, ಬಾರಿಸುವ, ಅಂದರೆ ಬಾಜಾ ಬಜಂತ್ರಿ ಬಾರಿಸುವ ಮಂದಿಯನ್ನು ಕರೆದು, ಹೆಂಗೋ ಒಂದು ಲಗ್ನಾ ಮಾಡಿ ಮುಗಿಸಿದರು. ಆ ಅಳಿಯಾ ಗೌಂಡಿ ದ್ಯಾಮಪ್ಪನೋ ಸೀದಾ ವಡ್ಡರ ಓಣಿಯಿಂದ ಎದ್ದು ಬಂದು ಕೂತೇಬಿಟ್ಟ. ಸ್ನಾನರೆ ಮಾಡಿದ್ದನೋ ಇಲ್ಲೋ ಗೊತ್ತಿಲ್ಲ. ಪ್ಯಾಂಟು ಶರ್ಟಿನ ಮೇಲೆ ಧೋತ್ರಾ, ಜುಬ್ಬಾ ಹಾಕ್ಕೊಂಡು, ತಲಿ ಮ್ಯಾಲೆ ಬಾಸಿಂಗ ಇಟ್ಟುಕೊಂಡು, ಅಲ್ಲೇ ಕಿಡಕಿಯಿಂದಲೇ ಪಿಚಕ್ ಅಂತ ಒಂದು ಗುಟ್ಕಾ ಪಿಚಕಾರಿ ಹಾರಿಸಿ, ಹೊಸಾ ಗುಟ್ಕಾ ಪ್ಯಾಕೆಟ್ ಫುಲ್ ಹರಿದು ಬಾಯಿಗೆ ಹಾಕ್ಕೊಂಡು ಲಗ್ನ ಮಂಟಪದಾಗ ಕೂತ. ಲಗ್ನಾ ಮಾಡಿಸಲಿಕ್ಕೆ ಬಂದಿದ್ದ ಆಚಾರ್ರು ತಲಿ ತಲಿ ಚಚ್ಚಿಕೊಂಡರು. ಹುಚ್ಚ ಗೌಂಡಿ ದ್ಯಾಮಪ್ಪಾ ಅವರಿಗೂ ಒಂದು ಗುಟ್ಕಾ ಪ್ಯಾಕೆಟ್ ಕೊಡಲಿಕ್ಕೆ ಹೋಗಿದ್ದ. ದಕ್ಷಿಣೆ ಮಾದರಿಯಲ್ಲಿ. ಆವಾ ಸಣ್ಣ ಆಚಾರಿ ಇಸಿದುಕೊಂಡೇಬಿಡ್ತಿದ್ದ. ಯಾಕಂದ್ರ ಆವಾ ಆಚಾರಿ ಸಕಲ ಚಟ ಸಂಪನ್ನ. ಅದು ಏನೋ ಲಗ್ನಾ ಮಾಡಿಸಲಿಕ್ಕೆ ಕೂತೇನಿ ಅಂತ ಅರಿವಾಗಿ ಸುಮ್ಮನೇ ಬಿಟ್ಟಾನ. ಆಮ್ಯಾಲೆ ಇಸಿದುಕೊಂಡು ಹೋಗಿರಬೇಕು ಬಿಡ್ರೀ. ಆಚಾರ್ರು ಗುಟ್ಕಾ ಹಾಕಬಾರದು ಅಂತ ಎಲ್ಲರೆ ಕಾಯಿದೆ ಅದ ಏನು?????

ಏನೋ ಒಂದು ತರಹದಾಗ ಲಗ್ನಾ ಮಾಡಿ ಮುಗಿಸಿದರು. proper ವರ ಸಿಕ್ಕಿದ್ದರೆ ಇನ್ನೂ ಒಂದು ಶೇಕಡಾ ನಲವತ್ತು ಪರ್ಸೆಂಟ್ ಖರ್ಚು ಹೆಚ್ಚೇ ಬರ್ತಿತ್ತು ಅಂತ ಪದ್ದಿ ಪಾಲಕರ ಊಹೆ. ಲವ್ ಮ್ಯಾರೇಜ್ ಮಾಡಿಕೊಂಡು ಅಪ್ಪಾ ಅವ್ವನ ಖರ್ಚು ಕಮ್ಮಿ ಮಾಡಿದ ಪುಣ್ಯಾ ಪದ್ದಿಗೆ ಬಂತೇ? ಗೊತ್ತಿಲ್ಲ. ಆದ್ರ ಗೌಂಡಿ ದ್ಯಾಮಪ್ಪನನ್ನು ಮನೆ ಅಳಿಯನನ್ನಾಗಿ ಸಹ ತಂದ್ಕೋಬೇಕಾತು. ಯಾಕಂದ್ರ ಅವನ ಜೋಪಡಿ ಮನಿ ಇರೋದು ವಡ್ಡರ ಓಣಿಯಾಗ. ಅಲ್ಲೆ ವಡ್ಡರ ಜೋಡಿ ಇಕಿ ಪದ್ದಿ ಏಗಾಡಿ ಹಾರಿಬಿದ್ದಳು. ಸಾಧ್ಯವೇ ಇಲ್ಲ. ಅಲ್ಲಿ ಮನೆ ಮುಂದೆಯೇ ನಾವು ನೀವು ಅರವಿ ಒಣಗಿಸಿದಾಂಗ ಮೊಲದ ಮಾಂಸ ಒಣಗಿಸಿರ್ತಾರ. ಗೌಂಡಿ ದ್ಯಾಮಪ್ಪ ನನಗ ಖುದ್ದ ಹೇಳಿದ್ದ. 'ಸರ್ರಾ! ಒಮ್ಮೆ ನಿಮಗ ಮೊಲದ ಮಾಂಸಾ ತಿನ್ನಿಸಬೇಕು ನೋಡ್ರೀ. ಮಸ್ತ ರುಚಿ ಇರ್ತದ. ಅದೂ ಜಂಗಲಿ ಮೊಲದ ಮಾಂಸ ತಿಂದಿರಿ ಅಂದ್ರ ಅಷ್ಟೇ ಮತ್ತ. ಭಾರಿ ರುಚಿ. ಅದು ಟೈವಾಕ್ ಕಡೆ ಹೋದಾಗ ಮೊಲ ಕಂಡ್ರ ಹೊಡಕೊಂಡು ಬರತೇವರೀ. ಆಮ್ಯಾಲೆ ಮಾಂಸಾ ಎಳಿ ಎಳಿ ಮಾಡಿ ಅರವಿ ಒಣಾ ಹಾಕೋ ಹಗ್ಗದ ಮ್ಯಾಲೆ ಹಾಕಿ ಒಣಗಿಸಿ ಬಿಡ್ತೇವಿ ನೋಡ್ರೀ ಸರ್ರಾ. ಆಮೇಲೆ ಬೇಕಾದಾಗ ಅದನ್ನು ಹುರಕೊಂಡು ತಿನ್ನೋದು ನೋಡ್ರೀ. ಮಾಡಿಸಿ ತರ್ಲೇನು ನಿಮಗ?' ಅಂತ ಕೇಳಿದ್ದ. 'ಏ ಬ್ಯಾಡ ಮಾರಾಯಾ. ನಾವು ಖಟ್ಟರ್ ವೆಜಿಟೇರಿಯನ್ ಮಂದಿ,' ಅಂತ ಹೇಳಿ ಸಾಗಹಾಕಿದ್ದೆ.

ಒಮ್ಮೆ ಇದೇ ಗೌಂಡಿ ದ್ಯಾಮಪ್ಪ ನನ್ನ ಕ್ರಿಕೆಟ್ ಸ್ಟಂಪ್ ಕೇಳಿಬಿಟ್ಟಿದ್ದ. ಹ್ಯಾಂ!? ಈ ವಡ್ಡರ ಓಣಿ ಮಂದಿ ಯಾರ ಜೋಡಿ ಮ್ಯಾಚ್ ಆಡಲಿಕ್ಕೆ ಹೊಂಟಾರ ಅಂತ ನಾ ವಿಚಾರ ಮಾಡಿದರೆ ಗೌಂಡಿ ದ್ಯಾಮಪ್ಪ ಕ್ರಿಕೆಟ್ ಸ್ಟಂಪ್ ಕೇಳಿದ್ದು ಬೇರೆಯೇ ಕಾರಣಕ್ಕೆ ಇತ್ತು. ಮೊಲದ ಬೇಟೆ ಆಡಲಿಕ್ಕೆ ಕ್ರಿಕೆಟ್ ಸ್ಟಂಪ್ ಬೆಸ್ಟ್ ಆಗ್ತದಂತ. ಭರ್ಚಿಗತೆ ಭಲ್ಲೆಗತೆ ಒಗಿತಾರಂತ. ಚೂಪನೆ ಸ್ಟಂಪ್ ಹೋಗಿ ಮೊಲಕ್ಕ ಬಡಿದು ಮೊಲ ಮಟಾಶ್! ಹೋಗ್ಗೋ ಶಿವನೇ! ಮೊದಲು ಇದೆಲ್ಲ ಗೊತ್ತಿರದೇ ಎಷ್ಟು ಸಾರೆ ಈ ಹೊಲಸ್ ಸೂಳಿಮಗಗ ನನ್ನ ಕ್ರಿಕೆಟ್ ಸ್ಟಂಪ್ ಕೊಟ್ಟು ಪಾಪ ಮಾಡಿದೆ ನಾನು! ಈಗ ಅದಕ್ಕೆ ಪ್ರಾಯಶ್ಚಿತ ಅಂದ್ರ ಸ್ಟಂಪುಗಳಿಗೆ ಮಾಳಮಡ್ಡಿ ಎಮ್ಮಿಕೇರಿ ಮ್ಯಾಲಿನ ಕಮ್ಮಾರ ಶಾಲಿಯೊಳಗ ಬ್ಯಾರೆ ಕಬ್ಬಿಣದ ತುದಿ ಹಾಕಿಸಬೇಕು. ನಮ್ಮ ಪದ್ದಿ ಇಂತಾ ಗೌಂಡಿ ಮನ್ಯಾಗ ಹೋಗಿ ಜೀವನ ಮಾಡಲಿಕ್ಕೆ ಸಾಧ್ಯ ಅದೇನ್ರೀ? ಎಲ್ಲಿದು? ಸಾಧ್ಯವೇ ಇಲ್ಲ. ಹಾಂಗಾಗಿ ಗೌಂಡಿ ದ್ಯಾಮಪ್ಪಗ ಇಲ್ಲೇ ಬಂದು ಇರು ಅಂದಾರ ಪದ್ದಿ ಅಪ್ಪ. ಅವಾ ಒಬ್ಬನೇ ಬರಬೇಕು ಮತ್ತ. ಎಲ್ಲರೆ ಪೂರ್ತಿ ವಡ್ಡರ ಓಣಿ ಮಂದಿ ಕರೆದುಕೊಂಡು ಬಂದ್ರ ಕಷ್ಟ ಅಂತ ಹೇಳಿ ಬರೆ ಅವಂಗ ಒಬ್ಬವಗ ಬಾ ಅಂದಾರ. ಅವನೇ ಕಟ್ಟಿಕೊಟ್ಟಿದ್ದ ಮನಿ. ಈಗ ಮೂರು ವರ್ಷದದಿಂದ ಪದ್ದಿ ಮನಿಯ extension ಕಟ್ಟೋ ಕೆಲಸ ನಡೆದಿತ್ತು. extension ಭಾಡಿಗಿ ಕೊಟ್ಟು ಒಂದಿಷ್ಟು ರೊಕ್ಕಾ ಮಾಡಿಕೊಳ್ಳೋಣ ಅಂದ್ರ ಅದನ್ನ ಈಗ ಮಗಳು ಅಳಿಯನಿಗೇ ಬಿಟ್ಟುಕೊಡಬೇಕಾಗಿ ಬಂದಿದ್ದು ಏನು ವಿಪರ್ಯಾಸ ನೋಡಿ. ಗೌಂಡಿ ದ್ಯಾಮಪ್ಪ ಮನಿ ಕಟ್ಟಿದನೋ, ಪದ್ದಿ ಮನದಾಗ ಒಂದು ಗೂಡು ಕಟ್ಟಿದನೋ ಗೊತ್ತಿಲ್ಲ. ಗೂಡು ಕಟ್ಟಿ ಪಾರಿವಾಳದಾಂಗ ಬಂದು ಕೂತನೋ ಅಥವಾ ಸಣ್ಣ ಚಿಟಗುಬ್ಬಿ ತರಹ ಬಂದುಕೂತು ಪದ್ದಿ ತಲಿಕೆಡಿಸಿದನೋ ಗೊತ್ತಿಲ್ಲ. ಒಟ್ಟಿನಲ್ಲಿ 'ಮೈನೆ ಪ್ಯಾರ್ ಕಿಯಾ' ಆಗಿಬಿಡ್ತು. ಕಬೂತರ್ ಜಾ ಜಾ ಜಾ ಕಬೂತರ್ ಜಾ ಜಾ ಜಾ. ಚಿಟಗುಬ್ಬಿ ಆ ಆ ಆ ಚಿಟಗುಬ್ಬಿ ಆ ಆ ಆ. ಆವ್! ಆವ್! ಅಂತ ಕರೆದರೆ ಹಾವು ಬರಲಿಲ್ಲ. ಹಾವರಾಣಿಯಂತಹ ಪದ್ದಿ ಬಂದಳು.

ಒಟ್ಟಿನ್ಯಾಗ ಪದ್ದಿ ಲಗ್ನಾ ಗೌಂಡಿ ದ್ಯಾಮಪ್ಪನ ಜೋಡಿ ಆತು. ಓಣಿ ಮಂದಿ ಬಿಟ್ಟಿ ಊಟ ಕಟದು, ಇಲ್ಲದ್ದು ಸಲ್ಲದ್ದು ಮಾತಡಿಕೋತ್ತ ಹೋದವು. ಎಂತಾದ್ದೇ ಲಗ್ನಾ ಮಾಡಿ ಒಗಿರಿ ನೀವು. ಮಂದಿ ಮಾತ್ರ ಒಂದಕ್ಕೆರೆಡು ಮಾತಾಡೇ ಮಾತಾಡ್ತಾರ. ಅದು ಅವರ ಜನ್ಮ ಸ್ವಭಾವ. ಬೇರೆಯವರು ಮಾಡಿದ ಲಗ್ನದಾಗ ಕೊಂಕು ಕಂಡುಹಿಡಿಯೋದು ಅಂದ್ರ ಅಷ್ಟು ಖುಷಿ ಅವರಿಗೆ. ವರನ ಬಗ್ಗೆ, ಕನ್ಯಾ ಬಗ್ಗೆ, ಮಾಡಿದ arrangements ಬಗ್ಗೆ, ಹಾಕಿದ ಊಟ, ತುಂಬಿದ ಉಡಿ, ಕೊಟ್ಟ ಕಾಣಿಕೆ ಎಲ್ಲದರ ಬಗ್ಗೆ ಒಂದಲ್ಲ ಒಂದು ಕೊಂಕು ನುಡಿಲಿಕ್ಕೇಬೇಕು. ಮ್ಯಾಲಿಂದ ಖಾಲಿ ಲಕೋಟೆ ಗಿಫ್ಟ್ ಬ್ಯಾರೆ. ಮದ್ವಿಯೊಳಗ ಯಾರಿಗೆ ಗೊತ್ತಾಗಬೇಕು, ಯಾರು ರೊಕ್ಕಾ ಇಟ್ಟು ಕೊಟ್ಟರು, ಯಾರು ಪಕ್ಕಾ ಮಂದಿ ರೊಕ್ಕಾ ಇಲ್ಲದೇ ಖಾಲಿ ಲಕೋಟೆ ಕೊಟ್ಟರು ಅಂತ???

ಲಗ್ನಾ ಮುಗೀತು. ಆದ್ರ ಮುಂದಿನದು ಭಾಳ ಇಂಪಾರ್ಟೆಂಟ್ ಕಾರ್ಯಕ್ರಮ. ಪ್ರಸ್ಥ. ಏ ಅದು ಭಾಳ ಮುಖ್ಯರೀ. ಮದ್ವಿಗಿಂತ ಭಾಳ ಕಾಳಜಿ ವಹಿಸಿ ಮಾಡ್ಬೇಕಾಗ್ತದ. ಅದೇನೋ ಶೋಡಷ ಸಂಸ್ಕಾರಗಳಲ್ಲಿ ಒಂದಾದ ಗರ್ಭದಾನ ಅದು ಇದು ಅಂತ ಹೇಳಿ ಪ್ರಸ್ಥದ ಸಂಸ್ಕಾರ ಅಂದ್ರ ಮತ್ತ ಮುಹೂರ್ತ ನೋಡಿ, ಮತ್ತ ಪೂಜಿ ಮಾಡಿ, ನಂತರವೇ ಹುಡುಗ ಹುಡುಗಿ ಕೈಯಾಗ ಗಾಡಿ ಚಾವಿ ಕೊಟ್ಟು ಇನ್ನು ಬೇಕಾದ್ರ ಗಾಡಿ ಗಿಚ್ಚಾಗಿ ಹೊಡೀರಿ ಅಂದಂಗ ಅದು. ದೀಪಾವಳಿಗೆ ಒಂದು ವಾರ ಮೊದಲೇ ಪಟಾಕ್ಷಿ ತಂದು ಇಟ್ಟರೂ ದೀಪಾವಳಿ ದಿವಸದಂದೇ ಪಟಾಕ್ಷಿ ಹೊಡಿಲಿಕ್ಕೆ ಕೊಟ್ಟಂಗ. ಪ್ರಸ್ಥದ ತನಕಾ ಲಗ್ನಾದ ಗಂಡ ಹೆಂಡತಿ ದೂರದಿಂದಲೇ ನಮಸ್ಕಾರ ಮಾಡಿಕೋತ್ತ ಇರಬೇಕು ಅಷ್ಟೇ. ಬೇಕಾದಷ್ಟು ಮಾಡಬಹದು. ಯಾವ ಭಂಗಿ ಬೇಕು ಆ ಭಂಗಿಯೊಳಗ ಮಾಡಬಹುದು. ಆದ್ರ ನಮಸ್ಕಾರ ಮಾತ್ರ. ಮತ್ತ ಎಲ್ಲರೆ ಫ್ರೆಶ್ ಆಗಿ ಲಗ್ನಾದ ಹುಡುಗಿ ಹುಡುಗ ಕದ್ದು ಎಲ್ಲೆಲ್ಲೋ ಕೈಬಿಟ್ಟಾರು ಅಂತ ಕಾಯಲಿಕ್ಕೆ ಹಳೆ ಮುದಿಕ್ಯಾರು, ಹೊಸ ಆಂಟಿಗಳು ಎಲ್ಲ ಕಣ್ಣಿಗೆ ಎಣ್ಣಿ ಹಾಕ್ಕೊಂಡು ಕೂತಿರ್ತಾವ. ಮಂಗಳಸೂತ್ರ ಬಂತು ಹೇಳಿ ಕಾಮಸೂತ್ರ ಏನರೆ ಓದಲಿಕ್ಕೆ, ಓದಿಸಲಿಕ್ಕೆ ಹೋದ್ರ ಫಟ್ ಅಂತ ಒಂದು ಕಡತ ಬೀಳ್ತದ. ಜೋಡಿ ಬೇರೆಬೇರೆ ಮಾಡಿ ಓಡಸ್ತಾರ. ನಿಶ್ಚಯವಾಗಿರುವ ಪ್ರಸ್ಥವನ್ನು ಮತ್ತೂ postpone ಮಾಡ್ತೇವಿ ಅಂತ ಹೇಳಿಬಿಡ್ತಾರ. ಧಮಿಕಿ ಹಾಕ್ತಾರ!

ಅದು ಪದ್ದಿ ದ್ಯಾಮಪ್ಪನ ಲಗ್ನಾಗಿ ಭಾಳ ದಿವಸದ ಮ್ಯಾಲೆ ಪ್ರಸ್ಥದ ಮುಹೂರ್ತ ಕೂಡಿ ಬಂತು. ಲಗ್ನಾಗಿ ಒಂದು ವಾರದ ನಂತರ ಮುಹೂರ್ತ ಏನೋ ಇತ್ತು. ಆವಾ ಆಚಾರಿ ಅದೇ ಮುಹೂರ್ತಕ್ಕೇ ಪ್ರಸ್ಥ ಇಡೋಣೇನು ಅಂತ ಕೇಳಿದ. ಪದ್ದಿ ಅವ್ವಾ ಪದ್ದಿ ಕಡೆ ನೋಡಿದಳು. ಪದ್ದಿ ಹೇಳಿ ಕೇಳಿ ಹಾಪ್ ಪೆದ್ದಿ. ಅಕಿಗೆ ಪಾಪ ಪ್ರಸ್ಥ ಅಂದರೆ ಏನೂ ಅಂತನೂ ಗೊತ್ತಿಲ್ಲ. ಮೊನ್ನೆ SSLC ಸಮಾಜ ಶಾಸ್ತ್ರದ ಪರೀಕ್ಷಕ್ಕೆ ಬೇಕು ಅಂತ ದಕ್ಕನ್ ಪ್ರಸ್ಥಭೂಮಿ ಅಂತ ಬಾಯಿಪಾಠ ಹೊಡದೇ ಹೊಡದಾಳ. ಪ್ರಸ್ಥ ಇಡೋಣೇನು ಅಂತ ಕೇಳಿದ ಕೂಡಲೇ ಮತ್ತ ವಿಚಾರ ಮಾಡದೇ ಹೂಂ ಅಂದುಬಿಟ್ಟಾಳ. ಅಲ್ಲೇ ಕೂತ ಪದ್ದಿಯ ವೈನಿ ಒಂದು ತರಹ ಕೆಟ್ಟ ಮಸಡಿ ಮಾಡಿ ಪದ್ದಿ ಅವ್ವಂಗ ಏನೋ ಸನ್ನಿ ಮಾಡ್ಯಾಳ. ಇಬ್ಬರೂ ಕೂಡಿ ಪದ್ದಿನ ಕರ್ಕೊಂಡು ಒಳಗಿನ ಕಡೆ ಹೋಗಿ ಏನೋ ಕುಸುಪುಸು ಮಾತಾಡಿ ಬಂದರು. ಬರೋವಾಗ ಪದ್ದಿ ಅವ್ವಾ ಪದ್ದಿಯ ತಲಿಗೆ ಕೈ ತಿವಿಯುತ್ತ ಬಂದರು. ಪದ್ದಿದು ಮಾತ್ರ ಒಂದೇ ಮಾತು - 'ಮುಂದಿನ ವಾರದ ಆ ಮುಹೂರ್ತಕ್ಕ ಪ್ರಸ್ಥ ಯಾಕ ಬ್ಯಾಡ? ಅದಕೂ ಮುಂದಿನ ಮುಹೂರ್ತ ಮತ್ತ ಯಾವಾಗ ಅದನೋ ಏನೋ!?'. 'ಇದಕ್ಕೇ ನಿನಗ ತಲಿ ಇಲ್ಲಾ ಅನ್ನೋದು. ಬರೇ ಯಬಡಿ ಗತೆ ಲವ್ ಮಾಡಿಬಿಟ್ಟರೆ ಆತೇನು? ಕೆಟ್ಟ ಗಡಿಬಿಡಿಯಾಗ ಕುಂಡಿಗೆ ಕಾಲು ಹಚ್ಚಿ ಪೀಟಿ ಉಷಾನ ಗತೆ ಓಡಿಹೋಗಿ ರಿಜಿಸ್ಟರ್ ಲಗ್ನಾ ಮಾಡಿಕೊಂಡುಬಿಟ್ಟರೆ ಆತೇನು?? ಖಬರಗೇಡಿ ತಂದು. ಬುದ್ಧಿ ಅನ್ನೋದು ಒಟ್ಟೇ ಇಲ್ಲಾ ಮಬ್ಬ ಹುಡುಗಿಗೆ,' ಅಂತ ಬಯ್ಕೋತ್ತ ಮತ್ತ ಪಡಸಾಲಿಗೆ ಬಂದು ಕೂತರು ಪದ್ದಿ ಅವ್ವಾ. 'ಹೂಂ! ಏನ್ರೀ ಬಾಯಾರ? ಮುಂದಿನ ವಾರ ಪ್ರಸ್ಥದ ಮುಹೂರ್ತ ಇಟ್ಟುಬಿಡ್ಲ್ಯಾ?' ಅಂತ ಕೇಳಿದ ಆಚಾರಿ. 'ಆಚಾರ್ರ! ಮುಂದಿನ ವಾರ ಬ್ಯಾಡ್ರೀ. ಅದಕೂ ಮುಂದಿನ ವಾರ ನೋಡ್ರೀ,' ಅಂದರು ಪದ್ದಿ ಅವ್ವಾ. 'ಯಾಕ??' ಅನ್ನೋ ಲುಕ್ ಕೊಟ್ಟ ಆಚಾರಿ. ಅವಂಗ ಲಗೂನೆ ಮುಗಿಸಿ, ದಕ್ಷಿಣಾ ಕಲೆಕ್ಟ್ ಮಾಡಿಕೊಂಡು ಓಡಬೇಕು. 'ಅಯ್ಯ! ಆಚಾರ್ರ, ನೀವು ಸುಮ್ಮನೇ ಬ್ಯಾರೆ ಮೂರ್ತಾ ನೋಡ್ರೆಪಾ. ಮುಂದಿನ ವಾರ ಆಕಿ ಒಳಗ ಇರಂಗಿಲ್ಲ,' ಅಂತ ಕೆಟ್ಟ ಮಸಡಿ ಮಾಡಿ ಹೇಳಿದರು. ಆಚಾರ್ರಿಗೆ ಗೊತ್ತಾತು. 'ಹೂಂ, ಐದು ದಿನಾದ ಮ್ಯಾಲೆ ನೀರು. ಮತ್ತ ಮುಂದಿನ ವಾರದ ಕೊನೀಗೇ ರಜೋದರ್ಶನ ಆತು ಅಂದ್ರ ಅದರ ಮುಂದಿನ ವಾರ ಸಹಿತ ವಿಘ್ನ ಬಂದೀತು ನೋಡ್ರೀ!' ಅಂತ ವಾರ್ನಿಂಗ್ ಕೊಟ್ಟರು. ಏನು ಐದು ದಿನವೋ, ಏನು ನೀರೋ, ಏನು ರಜವೋ, ಏನು ದರ್ಶನವೋ, ಏನು ವಿಘ್ನವೋ...... ಪದ್ದಿಗೆ ಅಂತೂ ಏನೂ ಗೊತ್ತಾಗಲೇ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ 'ಪದ್ದಿ ಒಳಗಿರಂಗಿಲ್ಲ' ಅಂತ ಅವರ ಅವ್ವ ಹೇಳಿದ್ದರ ಅರ್ಥ ಪದ್ದಿಗೇ ಗೊತ್ತಾಗಲಿಲ್ಲ. 'ಒಳಗಿರಂಗಿಲ್ಲ ಅಂದ್ರ ಎಲ್ಲೆ ಹೊರಗ ಹೊಂಟೇನಿ?' ಅಂತ ತಲಿ ಕರಾಪರಾ ಕೆರಕೊಂಡಳು. ಏನೂ ನೆನಪಿಗೆ ಬರಲಿಲ್ಲ. ಅವ್ವನ್ನ ಕೇಳೋಣ ಅಂದ್ರ ಮತ್ತ ಬೈತಾಳ. ನೋಡೋಣ ಮುಂದಿನ ವಾರ ಎಲ್ಲೆ ಹೊರಗ ಹೋಗೋದದ ಅಂತ ವಿಚಾರ ಮಾಡಿ ಸುಮ್ಮನಾದಳು.

ಆಚಾರ್ರು ಒಂದು ವಾರ ಬಿಟ್ಟು ಪ್ರಸ್ಥಕ್ಕೆ ಅಂತನೇ ಒಂದು ಬೆಸ್ಟ್ ಮುಹೂರ್ತ ಹುಡುಕಿದರು. ಎಲ್ಲಾ ವಿವರವಾಗಿ ಹೇಳಿದರು. ಸಾಮಾನಿನ ಪಟ್ಟಿ ಗಿಟ್ಟಿ ಮಾಡಿಕೊಟ್ಟು, ಆವತ್ತಿನ ಸಣ್ಣ ಪ್ರಮಾಣದ ದಕ್ಷಿಣೆ ತೊಗೊಂಡು, ಚಂಡಿಕಿ ನೇವಿಕೊಳ್ಳುತ್ತ ಎದ್ದು ಹೋದರು.

ಮುಂದಿನ ವಾರ ಪದ್ದಿ ಸೀದಾ ಹೊರಗೆ. ಆವಾಗ ಗೊತ್ತಾತು ಅವರ ಅವ್ವ 'ಆಕಿ ಒಳಗಿರಂಗಿಲ್ಲ' ಅಂದಿದ್ದರ ಅರ್ಥ. ಒಳಗೆ ಇರದೇ ಇರುವದಕ್ಕೂ ಪ್ರಸ್ಥಕ್ಕೂ ಎತ್ತಣದೆತ್ತ ಸಂಬಂಧವಯ್ಯಾ ಅಂತ ಅಂದುಕೊಂಡಳು. ಫುಲ್ ರೆಸ್ಟ್. ಒಂದು ವಾರ ಫುಲ್ ರೆಸ್ಟ್.

ಅದರ ಮುಂದಿನವಾರ ಬರೋಬ್ಬರಿ ಪ್ರಸ್ಥದ ಮುಹೂರ್ತ ಬಂತು. ಆಚಾರ್ರು ಬರೋಬ್ಬರಿ ಮಧ್ಯಾನವೇ ಬಂದ್ರು. ಮಧ್ಯಾನದಿಂದಲೇ ದೊಡ್ಡ ಪೂಜೆ. ಗೌಂಡಿ ದ್ಯಾಮಪ್ಪನಿಗೆ ಹೊಗೆ ಹಾಕಿಸಿಕೊಂಡು ಹಾಕಿಸಿಕೊಂಡು ಸಾಕಾಗಿ ಹೋಗಿದೆ. ಅಂದ್ರೆ ಹೋಮ, ಹವನದ ಹೊಗೆ ಕುಡಿದೂ ಕುಡಿದೂ ಸಾಕಾಗಿ ಹೋಗಿದೆ. ಆವಾ ಬೀಡಿ ಸಹಿತ ಸೇದೊದಿಲ್ಲ. ಎಲಿ ಅಡಿಕಿ, ಗುಟ್ಕಾ ಬಿಟ್ಟರೆ ಬ್ಯಾರೆ ಯಾವದೂ ಚಟಾ ಇಲ್ಲ ಅವಂಗ. ಶೆರೆ ಗಿರೆ ಒಟ್ಟ ಕುಡಿಯಂಗಿಲ್ಲ. ಹ್ಯಾಂಗೋ ಕುಂತು ಪೂಜಿ ಮಾಡಿಸಿಕೊಂಡ. ಪದ್ದಿ ಬಿಡಿ, ಮಸ್ತ ಖುಷಿಯಲ್ಲೇ ಇದ್ದಳು. ಈ ಪ್ರಸ್ಥ ಅನ್ನೋದು ಮುಗಿದು ಹೋತು ಅಂದ್ರ ಅಕಿ ಫುಲ್ ನಿರಾಳ.

ಪ್ರಸ್ಥ ಭೂಮಿಯನ್ನು ಮಸ್ತ ಅಲಂಕಾರ ಮಾಡಿದ್ದರು. ಪ್ರಸ್ಥದ ಕೋಣೆ ಅನ್ನೋದು ಪದ್ಧತಿ. ಆದ್ರ ನಮ್ಮ ಗೌಂಡಿ ದ್ಯಾಮಪ್ಪ ಸಾಹೇಬರ ಸೈಜಿಗೆ ಅವರೇ ಕಟ್ಟಿಕೊಟ್ಟಿದ್ದ ಮನೆಯ ದೊಡ್ಡ ಹೊಸ ಪಡಸಾಲೆಯನ್ನೇ ಪ್ರಸ್ಥದ ಕೋಣೆ ಮಾಡಿದ್ದರು. ದೊಡ್ಡ ಸೈಜಿನ ಕೋಣೆ ಆದ್ದರಿಂದ ಪ್ರಸ್ಥ ಭೂಮಿ ಅನ್ನೋದೇ ಬೆಹತರ್. ದಕ್ಕನ್ ಪ್ರಸ್ಥ ಭೂಮಿ (Deccan Plateau) ಇದ್ದಂಗ. ದ್ಯಾಮಪ್ಪ ಮತ್ತ ಇಕಿ ಪದ್ದಿ ಇಬ್ಬರೂ ದೊಡ್ಡ ಹೊನಗ್ಯಾ ಸೈಜಿನವರೇ. ಅದಕ್ಕೇ ನೆಲದ ಮ್ಯಾಲೆ ನಾಕ್ನಾಕು ಗಾದಿ ಒಗೆದು, ಮ್ಯಾಲೆ ಧಪ್ಪನೆ ಜಮಖಾನಿ ಹಾಕಿ, ಫಸ್ಟ್ ನೈಟ್ ಬೆಡ್ ತಯಾರು ಮಾಡಿದ್ದರು. ಹೊನಗ್ಯಾ ಮಂದಿ ಕಟ್ಟಿಗೆ ಮಂಚದ ಮ್ಯಾಲೆ ಏನೋ ಮಾಡಲಿಕ್ಕೆ ಹೋಗಿ, ಏನೋ ಆಗಿ, ಬಿದ್ದು, ಸೊಂಟಾ ಮುರಕೊಂಡರು  ಅಂದ್ರ ಅಷ್ಟ ಮತ್ತ. 'ಪ್ರಥಮ ಚುಂಬನೆ ದಂತ ಭಗ್ನೆ' ಇದ್ದಂಗ 'ಪ್ರಥಮ ರಾತ್ರಿಯೇ ಸೊಂಟ ಮುರಿತೇ' ಆಗಬಾರದು ಅಂತ. ಪ್ರಸ್ಥದ ಬೆಡ್ಡಿಗೆ ಹಾಸಿದ ಮಸ್ಲೀನ್ bedsheets ಗಳನ್ನು ಭಾಡಿಗೆಗೆ ತಂದುಬಿಟ್ಟಿದ್ದನಂತ ಪದ್ದಿ ಅಣ್ಣ ಖತರ್ನಾಕ್ ತೂತ್ ನಾಗ್ಯಾ. ಅದು ದೋಭಿ ಅಂಗಡಿಯವಂಗೂ ಲಾಭ. ಇವರಿಗೂ ಕ್ಯಾಪಿಟಲ್ ಖರ್ಚು ಇಲ್ಲ. ಏಕ್ ರಾತ್ ಕಾ ಮಾಮಲಾ! ಮರುದಿವಸ ಹೋಗಿ ವಾಪಸ್ ಕೊಟ್ಟು ಬಂದರಾತು. ಆವಾ ದೋಭಿ ಹ್ಯಾಂಗೂ ವಾಶ್ ಮಾಡಿ ಅವನ ಗಿರಾಕಿಗೆ ಕೊಟ್ಟು ಕಳಿಸ್ತಾನ. ನೋಡ್ರೀ, ನೀವು ಡ್ರೈಕ್ಲೀನ್ ಮಾಡಲಿಕ್ಕೆ ಅರವಿ ಕೊಟ್ಟು ಬಂದಾಗ ಏನೇನು ಆಗಬಹುದು ಅಂತ. ನಿಮ್ಮ ರೇಶ್ಮಿ ಸೀರಿ ಯಾರ್ಯಾರಿಗೆ ಭಾಡಿಗೆ ಕೊಟ್ಟುಬಿಡ್ತಾರೋ ಏನೋ! ಮುಂದಿನ ಸಾರೆ ಎಲ್ಲರೆ ಲಗ್ನಕ್ಕ ಹೋದಾಗ ನೋಡ್ರಿ. ಎಲ್ಲರೆ ನಿಮ್ಮದೇ ಸೀರಿ ಯಾರರೆ ಉಟ್ಟುಕೊಂಡು ಬಂದಾರೋ ಅಂತ.

ರಾತ್ರಿ ಆತು. ಮುಹೂರ್ತ ಹತ್ರ ಬಂತು. ಎಲ್ಲಾ ತಯಾರಿಯಾಗಿತ್ತು. ಮಸ್ತ ಊಟಾದ ಮ್ಯಾಲೆ ಫೈನಲ್ ಟಚ್ ಕೊಡಲಿಕ್ಕೆ ಎಲ್ಲಾರೂ ರೆಡಿ ಆದರು. ಈ ಕಡೆ ಗೆಳತಿಯರು ಪದ್ದಿನ ಶೃಂಗಾರ ಮಾಡಲಿಕ್ಕೆ ಕರಕೊಂಡು ಹೋದರು. ಆವಾ ದ್ಯಾಮಪ್ಪ ಅಂತೂ ಎಲ್ಲೋ ಹೋದವ ಬಂದ. ಅಸಡ್ಡಾಳ ಹರ್ಕಾ ಪರ್ಕಾ ಜೀನ್ಸ್ ಪ್ಯಾಂಟ್ ಮ್ಯಾಲೆ ಕೆಂಪ ಸ್ಯಾಂಡೋ ಬನಿಯನ್ ಹಾಕ್ಕೊಂಡು ಅಡ್ಯಾಡಲಿಕತ್ತಿದ್ದ. ಪ್ರಸ್ಥದ ಕೋಣೆಗೆ ಹೋಗಿ ಸೆಟಲ್ ಆಗಪಾ ಅಂದ್ರ ಹಾಂಗೇ ಹೊಂಟಿತ್ತು ಅದು ಹಾಪಾ. ಚಂದಾಗಿ ದಾಡಿ ಗೀಡಿ ಮಾಡಿಕೊಂಡು, ಸ್ನಾನಾ ಗೀನಾ ಮಾಡಿದ ಮ್ಯಾಲೆ ಒಳಗ ಹೋಗಪಾ ಅಂತ explicit ಆಗಿ ಹೇಳಬೇಕಾತು ಆ ವಡ್ಡಗ. ಗಡಿಬಿಡಿಯಾಗ ಹೋಗಿ ಏನೋ ದಾಡಿ, ಸ್ನಾನ ಮುಗಿಸಿ ಮತ್ತ ಅದೇ ಅರಿವಿ ಹಾಕಿಕೊಂಡು ಬಂದು ಕೂತ. ಹೇಶಿ! 'ಪ್ರಸ್ಥದ ಕೋಣೆ ಒಳ ಹೊಕ್ಕಲೇನು?' ಅನ್ನೋ ಲುಕ್ ಕೊಟ್ಟ. ಪದ್ದಿ  ಅಪ್ಪಾ ಆಚಾರರು ತಲಿ  ತಲಿ ಚಚ್ಚಿಕೊಂಡರು. ಪ್ರಸ್ಥಕ್ಕಾಗೇ ಅಂತ ತಂದಿದ್ದ ಬಿಳೆ ಶರ್ಟ್, ಬಿಳೆ ಪಂಚೆ, ಬಿಳೆ ಶಾಲು ಕೊಟ್ಟರು. ಅದನ್ನು ಹಾಕಿಕೊಂಡು ಒಳಗ ಹೊಕ್ಕು ಅಂದರು. ಗೌಂಡಿ ದ್ಯಾಮಪ್ಪ ಡ್ರೆಸ್ ಬದಲು ಮಾಡಿಕೊಂಡು ಬಂದ. ರೆಡ್ ಅಂಡ್ ವೈಟ್ ಆಗಿ ಬಂದ. ಬಿಳೆ ಪಂಚೆಯೊಳಗೆ  ಢಾಳಾಗಿ ಕಾಣುತ್ತಿದ್ದ ಕೆಂಪು ಚಡ್ಡಿ. ಹಾ!!! ಹಾ!!!

ಏನು ಹೇಳೋಣ!? ಎಲ್ಲರೂ ತಟ್ಟಿಕೊಂಡು ತಟ್ಟಿಕೊಂಡು ನಕ್ಕರು. ಪದ್ದಿಯ ಗೆಳತಿಯರೆಲ್ಲ ಪೆಕಪೆಕಾ ಅಂತ ಏನೇನೋ ತಟ್ಟಿಕೊಂಡು ನಕ್ಕರು. ಪೆದ್ದ ಪದ್ದಿ ಮಾತ್ರ, 'ಯಾಕ ನಗ್ಲೀಕತ್ತೀರಿ ಎಲ್ಲಾರೂ? ಹಾಂ?' ಅಂತ ಇನ್ನೋಸೆಂಟ್ ಆಗಿ ಕೇಳಿದಳು. ಆಕೆಯ ತಲೆಗೆ ಮೊಟಕಿದ ಅವರ ಅವ್ವ ಪ್ರಸ್ಥಕ್ಕಾಗಿ ಆಕೆಯ ವಿಶೇಷ ಕೇಶ ಶೃಂಗಾರದಲ್ಲಿ ತೊಡಗಿದರು. ತಲೆ ತಗ್ಗಿಸಿಕೊಂಡು ಕೂತ ಪದ್ದಿ ಮನದಲ್ಲೇ, 'ಆಹಾ ನನ್ನ ಪ್ರಸ್ಥವಂತೆ! ಓಹೋ ನನ್ನ ಪ್ರಸ್ಥವಂತೆ! ನನಗೂ ನಿನಗೂ ಏನಂತೆ? ಟಾಂ ಟಾಂ ಟಾಂ!' ಅಂತ 'ಮಾಯಾ ಬಜಾರ್' ಅನ್ನುವ ಪುರಾತನ ಸಿನೆಮಾದ ಹಾಡೊಂದನ್ನು ಗುಣುಗಿದಳು. ತಾವು ಶುದ್ಧ ಆಚಾರ್ರಾಗಿ ವಡ್ಡರ ಹುಡುಗನನ್ನು ಅಳಿಯನನ್ನಾಗಿ ಪಡೆಯಬೇಕಾಗಿ ಬಂದಿದ್ದು ಜಗತ್ತೆಂಬ ಈ ಮಾಯಾ ಬಜಾರಿನ ಅತಿ ದೊಡ್ಡ ಮಾಯೆಯಲ್ಲದೇ ಇನ್ನೇನು ಅಂದುಕೊಂಡರು ಪದ್ದಿಯ ಮಾತಾಶ್ರಿ. ಮಾಯಾವಾದಿ ಅದ್ವೈತಿಗಳನ್ನು ಸಿಕ್ಕಾಪಟ್ಟೆ ಖಂಡಿಸುವ, ದ್ವೇಷಿಸುವ ದ್ವೈತಿಗಳಿಗೆ ಮಾಯಾವಾದದ ಖಡಕ್ ಟ್ರೀಟ್ಮೆಂಟ್ ಒಮ್ಮೊಮ್ಮೆ ಈ ಮಾದರಿಯಲ್ಲಿ ಸಿಕ್ಕಿಬಿಡುತ್ತದೆ. ಏನು ಮಾಡಲಿಕ್ಕೆ ಬರುತ್ತದೆ?? 'ಬ್ರಹ್ಮ ಸತ್ಯ ಜಗತ್ ಮಿಥ್ಯಾ, ಜೀವೋ ಬ್ರಹ್ಮೈವ ನ ಪರಹ' - ಅನ್ನುವ ಆದಿ ಶಂಕರರ ವಿವೇಕ ಚೂಡಾಮಣಿಯ ಮಾತು ಮಾತ್ರ ಶಂಬರ್ ಟಕಾ ಸತ್ಯ. ಸಿಕ್ಕಿರುವ ವಡ್ಡರ ಅಳಿಯ ಸತ್ಯ. ನಂಬಿದ ಮಗಳು ಮಿಥ್ಯಾ. ಕರ್ಮ! ಕರ್ಮ!

ಎಲ್ಲ ರೆಡಿ. ಆಚಾರ್ರು ಫೈನಲ್ ಪೂಜೆ ಮಾಡಿ, ಹೊಸ ದಂಪತಿಗಳನ್ನು ಹಾರೈಸಿ, ಏನೇನೋ ಮಂತ್ರ ಹೇಳಿದರು. ಕೆಟ್ಟ ತುಂಟ ಖತರ್ನಾಕ್ ಆಚಾರಿ. ಸಿಕ್ಕಾಪಟ್ಟೆ ಮಷ್ಕಿರಿ. 'ಕಭಿ ಕಭಿ' ಚಿತ್ರದ ಹಾಡನ್ನು ಅಪಭ್ರಂಶ ಮಾಡಿ ಸಂಸ್ಕೃತ ಮಂತ್ರದ ಧಾಟಿಯಲ್ಲಿಯೇ ಹೇಳಿ ಕೆಟ್ಟ ವಿಕಟ ನಗೆ ನಕ್ಕ. 'ಸುಹಾಗ್ ರಾತ್ ಹೈ, ಚಡ್ಡಿ ಉತಾರ್ ರಹಾ ಹೂಂ ಮೈ!' ಶಿವ ಶಿವಾ! ಆಚಾರ್ ಮಂದಿ ಸಹಿತ ಎಷ್ಟು ಕೆಟ್ಟು ಕೆರಾ ಹಿಡಿದು ಹೋಗ್ಯಾರ ನೋಡ್ರೀ. ಅಂತರ್ಜಾತೀಯ ವಿವಾಹ ಅಂತ ಆಚಾರರಿಗೂ ಸಹ ಇಲ್ಲದ ಮಷ್ಕಿರಿ. 'ಸುಹಾಗ್ ರಾತ್ ಹೈ, ಘುಂಗಟ್ ಉಠಾ ರಹಾ ಹೂಂ ಮೈ,' ಅಂತ ಇದ್ದ ಹಾಡನ್ನು ಹೆಂಗ ಹಾಡಿದ, ಅದೂ ಸಂಸ್ಕೃತ ಮಂತ್ರದ ಶೈಲಿಯಲ್ಲಿ ಅಂದರೆ ಏನು ಹೇಳೋಣ. ಇಂತಾ ಆಚಾರರು ಇದ್ದರೆ ಸನಾತನ ಧರ್ಮ, ಶೋಡಷ ಸಂಸ್ಕಾರಗಳ ಉದ್ಧಾರ ಆಗಿಹೋದಂತೆಯೇ!

ಸರಿ ಮೊದಲು ಗೌಂಡಿ ದ್ಯಾಮಪ್ಪನನ್ನು ಪ್ರಸ್ಥ ಭೂಮಿಯೊಳಗೆ ತಳ್ಳಿದರು. ಅವನ ದೋಸ್ತರು ಏನೇನೋ ಮಷ್ಕಿರಿ ಮಾಡಿ, ಕಿವಿಯಲ್ಲಿ ಏನೇನೋ ಕುಸುಪುಸು ಅಂದು, ಯಾವದ್ಯಾವದೋ ಒಂದಿಷ್ಟು ಪುಸ್ತಕ ಕೊಟ್ಟು ಕಳಿಸಿದರು. ಗೌಂಡಿ ದ್ಯಾಮಪ್ಪನಿಗೆ ವಾತ್ಸಾಯನ ಕಾಮಶಾಸ್ತ್ರದ ಪುಸ್ತಕವನ್ನೇ ಕೊಟ್ಟರೂ ಓದಲಿಕ್ಕೆ ಬರಬೇಕಲ್ಲ?? ಚಿತ್ರ ವಿಚಿತ್ರವಾದ ಚಿತ್ರಗಳಿರುವ ಪುಸ್ತಕವನ್ನೇ ಕೊಟ್ಟು ಕಳಿಸಿರಬೇಕು ಅಂದುಕೊಂಡೆ. ಬೇರೆ ಯಾವ ವಿಷಯದಲ್ಲಿ ಏನೋ ಗೊತ್ತಿಲ್ಲ. ಕಾಮಶಾಸ್ತ್ರಕ್ಕೆ ಬಂದಾಗ ಮಾತ್ರ - A picture is worth a thousand words!

ಸರಿ, ವರ ಮಹಾಶಯ ಅಂತೂ ಒಳಗೆ ಹೋಗಿ ಕೂತ. ಇನ್ನು ಕನ್ಯೆಯನ್ನು ಒಳಗೆ ಕಳಿಸುವ ಕಾರ್ಯಕ್ರಮ. ಅದಕ್ಕೆ ಬೇರೆಯೇ ಇವೆ ರೀತಿ ರಿವಾಜುಗಳು. ಪದ್ದಿಯ ಸಿಂಗಾರ ಮುಗಿಯಿತು. ಇನ್ನು ಆಕೆಯ ಕೈಯಲ್ಲಿ ಕೇಸರಿ ಹಾಕಿದ ಹಾಲಿನ ಲೋಟ ಕೊಟ್ಟು, ಒಂದಿಷ್ಟು ರೇಗಿಸಿ, ಒಳಗೆ ಕಳಿಸಿ, ಬಾಗಿಲು ಎಳೆದುಕೊಂಡರೆ ಒಂದು ಕೆಲಸ ಸಮಾಪ್ತ. ಆಗ ಬಂದೊದಗಿತು ಆಪತ್ತು!!

ಪದ್ದಿಯ ಅವ್ವ ಮಸ್ತ ಕೆನೆಹಾಲನ್ನು ಕಾಯಿಸಿ, ಆರಿಸಿ, ರೆಡಿ ಮಾಡಿದಳು. ಕೆಟ್ಟ ಗಡಿಬಿಡಿಯಲ್ಲಿರುವ ಪ್ರಸ್ಥದ ಗಂಡು ಹಿಂದೆ ಮುಂದೆ ನೋಡದೇ ಗಟಗಟ ಅಂತ ಕುಡಿದರೆ ಬಾಯಿ, ಗಂಟಲು ಸುಡುವದಿಲ್ಲ ಅಂತ ಖಾತ್ರಿ ಮಾಡಿಕೊಂಡಳು. ಪ್ರಥಮ ರಾತ್ರಿಯಲ್ಲಿ, ಗಡಿಬಿಡಿಯಲ್ಲಿ, ಕೆಟ್ಟ ಬಿಸಿ ಹಾಲು ಕುಡಿದು, ಬಾಯಿ ಗಂಟಲು ಸುಟ್ಟುಕೊಂಡು, ಜೀವನಪೂರ್ತಿ ತೆನಾಲಿ ರಾಮನ ಬೆಕ್ಕಿನ ಹಾಗೆ ಹಾಲಿನ ದ್ವೇಷ, ಹೆದರಿಕೆ ಬೆಳೆಸಿಕೊಂಡ ಅದೆಷ್ಟು ಗಂಡು ಮುಂಡೆಗಂಡರಿಲ್ಲ!? Dime a dozen!

ಮಸ್ತ ಕಾದಾರಿದ ಕೆನೆ ಹಾಲಿಗೆ ಸಕ್ಕರೆ ಪಕ್ಕರೆ ಹಾಕಿ, ಬೆಳ್ಳಿ ಲೋಟದಲ್ಲಿ ಹಾಕಿ ಇನ್ನೇನು ಪದ್ದಿಯ ಕೈಗೆ ಕೊಟ್ಟು, ದ್ಯಾಮಪ್ಪನಿರುವ ಪ್ರಸ್ಥ ಭೂಮಿಗೆ ಕಳಿಸೋಣ ಅನ್ನುವಾಗ ಪದ್ದಿಯ ಅಮ್ಮನಿಗೆ ಏನೋ ನೆನಪಾಯಿತು. ಹಾಲಿಗೆ ಕೇಸರಿಯನ್ನೇ ಹಾಕಿಲ್ಲ. ತಮ್ಮ ಮರೆವಿಗಾಗಿ ತಾವೇ ತಲೆ ತಲೆ ಚಚ್ಚಿಕೊಂಡರು. ಈ ಕಡೆ ಪದ್ದಿಗೆ ಲಗೂನೆ ಪ್ರಸ್ಥ ಭೂಮಿಗೆ ಹಾರುವ ತರಾತುರಿ. ಇಲ್ಲಿ ನೋಡಿದರೆ ಆಕೆಯ ಅವ್ವ ಅದು ಇದು ಅಂತ ಲೇಟ್ ಮಾಡುತ್ತಿದ್ದಾಳೆ. ಅಷ್ಟಕ್ಕೂ ಪ್ರಸ್ಥದ ಕೋಣೆಗೆ ಹಾಲಿನ ಲೋಟ ಯಾಕೆ ಹಿಡಿದುಕೊಂಡು ಹೋಗಬೇಕು ಅಂತ ಪದ್ದಿಯ ಜಿಜ್ಞಾಸೆ. ಕೇಳೋಣ ಅಂದರೆ ಅವ್ವ ಭಾಳ ಬ್ಯುಸಿ. ಅದಕ್ಕೇ ಗೆಳತಿಯರನ್ನು ಕೇಳಿಬಿಟ್ಟಳು. ಅಷ್ಟೇ ಮತ್ತೆ.

'ಲೇ, ಫಸ್ಟ್ ನೈಟ್ ಹಾಲು ತೊಗೊಂಡು ಯಾಕ ಹೋಗಬೇಕಲೇ? ಇದೇನು ನಾಗರ ಪಂಚಮಿ ಇದ್ದಂಗ ಏನು? ಪ್ರಸ್ಥದ ಕ್ವಾಣ್ಯಾಗ ಯಾವ ನಾಗಪ್ಪ ಇರ್ತದ? ಈ ನಾಗಪ್ಪಗ ಹ್ಯಾಂಗ ಹಾಲೆರೆಯಬೇಕು??' ಅಂತ ಇನ್ನೋಸೆಂಟ್ ಆಗಿ ಕೇಳಿಬಿಟ್ಟಳು ಪದ್ದಿ. ಅಕಿ ಪ್ರತಿ ನಾಗರ ಪಂಚಮಿಗೆ ಮುದ್ದಾಂ ನಾಗಪ್ಪಗ ಹಾಲೆರೆಯುತ್ತಾಳೆ.

ಅದನ್ನು ಕೇಳಿದ ಗೆಳತಿಯರು ಬಿದ್ದೂ ಬಿದ್ದೂ ನಕ್ಕರು. ಏನು ಹೇಳಬೇಕು ಅಂತಲೇ ಅವರಿಗೆ ಗೊತ್ತಾಗಲಿಲ್ಲ. ಅಷ್ಟರಲ್ಲಿ ಮಂಗ್ಯಾನಿಕೆ ಮಂಜಿ ಉರ್ಫ್ ಮಂಜುಳಾ ಮಾತಾಡಲು ಆರಂಭಿಸಿದಳು. ಅಕಿ ಭಾಳ ಖತರ್ನಾಕ್. ಸಾಲಿಯೊಳಗ ಇದ್ದಾಗಲೇ ನಾಲ್ಕಾರು ಅನಧೀಕೃತ ಪ್ರಸ್ಥ ಮುಗಿಸಿಬಿಟ್ಟಿದ್ದಳು. ಭಾಳ ಮಂದಿ ಜೋಡಿ. ಹಾಂಗಾಗಿ ಅಕಿಗೆ ಪ್ರಸ್ಥದ ಬಗ್ಗೆ ಎಲ್ಲಾ ಗೊತ್ತದ. veteran hand ಅಕಿ ಮಂಜಿ.

'ಹೂಂನಲೇ ಪದ್ದಿ. ಫಸ್ಟ್ ನೈಟ್ ಅಂದ್ರ ಒಂದು ತರಹದ ನಾಗರ ಪಂಚಮಿ ಇದ್ದಂಗ ನೋಡವಾ. ನಾಗಪ್ಪಗ ಹಾಲು ಕುಡಿಸಲಿಕ್ಕೇಬೇಕು. ಇಲ್ಲಂದ್ರ ನಾಗಪ್ಪ ಏಳೋದೇ ಇಲ್ಲ. ಭುಸ್ ಭುಸ್ ಅಂತ ಅನ್ನೋದೇ ಇಲ್ಲ!' ಅಂತ ಅಂದಾಕಿನೇ ತಟ್ಟಿಕೊಂಡು ತಟ್ಟಿಕೊಂಡು ನಕ್ಕಳು. ಉಳಿದ ಗೆಳತಿಯರೆಲ್ಲ ಬಿದ್ದೂ ಬಿದ್ದೂ ನಕ್ಕರು.

ಈಕಡೆ ಪದ್ದಿಯ ಅವ್ವನಿಗೆ ಕೇಸರಿ ಹುಡುಕುವ ಗಡಿಬಿಡಿ. ಅದು ಏನಾಗಿತ್ತು ಅಂದರೆ ಪದ್ದಿಯ ಲಗ್ನಕ್ಕೆ ಸ್ವೀಟಂತ ಕೇಸರಿಭಾತ್ ಮಾಡಿಸಿದ್ದರು. ಅಡಿಗೆ ಭಟ್ಟ ಆಚಾರಿ ಬಾಬಣ್ಣನಿಗೆ ಪದ್ದಿಯ ಅಮ್ಮ ಮರೆಯದೇ ಹೇಳಿದ್ದರು, 'ಸ್ವಲ್ಪ ಕೇಸರಿ ಉಳಿಸಿ ಹೋಗಪಾ. ನಂತರ ಬೇಕಾಗ್ತದ,' ಅಂತ. ಅವಂಗ ಎಲ್ಲೆ ನೆನಪಿರಬೇಕು? ಅಡಿಗೆ ಸಹಿತ ಬೀಡಿ ಸೇದಿಕೋತ್ತಲೇ ಮಾಡ್ತಿತ್ತು ಆ ಅಡಿಗೆ ಭಟ್ಟ. ಒಂದೋ ಎಲ್ಲಾ ಕೇಸರಿ ಖರ್ಚು ಮಾಡಿ ಹಾಕ್ಯಾನ. ಇಲ್ಲಾ ಉಳಿದ ಕೇಸರಿ ತೊಗೊಂಡು ಓಡಿ ಹೋಗ್ಯಾನ. ಒಟ್ಟೇ ಕೇಸರಿ ನಾಸ್ತಿ. ಈಗ ಫಸ್ಟ್ ನೈಟ್ ಹಾಲಿಗೆ ಹಾಕೋಣ ಅಂದರೆ ಕೇಸರಿ ಇಲ್ಲವೇ ಇಲ್ಲ. ಕೇಸರಿ ಹಾಕದೇ ಹಾಲು ಫಸ್ಟ್ ನೈಟ್ ಹಾಲು ಆಗುವದೇ ಇಲ್ಲ. ಏನು ಮಾಡಬೇಕು??? ರಾತ್ರಿ ಬ್ಯಾರೆ ಒಂಬತ್ತರ ಮ್ಯಾಲೆ ಆಗಿಹೋಗ್ಯದ. ಆ ಹೊತ್ತಿನಾಗ ಯಾವದೇ ಅಂಗಡಿ ತೆಗೆದಿರುವದಿಲ್ಲ.

ಓಣಿಯೊಳಗ ಯಾರದ್ದಾರ ಮನಿಯೊಳಗ ಕೇಸರಿ ಸಿಗಬಹುದೇನೋ ಅಂತ ವಿಚಾರ ಮಾಡಿದ ಪದ್ದಿಯ ಅವ್ವ ಕೇಸರಿ ಹುಡಕಿಕೊಂಡು ಹೋದರು. ಬಸುರಿಯರಿಗೆ ಕೇಸರಿ ಹಾಕಿದ ಹಾಲು ಕುಡಿಸುವದು ವಾಡಿಕೆ. ಬಸುರಿ ಹೆಂಗಸು ಕೇಸರಿ ಹಾಲು ಕುಡಿದರೆ ಮುಂದೆ ಹುಟ್ಟುವ ಮಗುವಿಗೆ ಬರೋಬ್ಬರಿ ಕೆಂಪು ಬಣ್ಣ ಬರುತ್ತದೆಯಂತೆ. ಹಾಗಾಗಿ ಓಣಿಯಲ್ಲಿ ಯಾರದಾದರೂ ಮನೆಯಲ್ಲಿ ಬಸುರಿ ಹೆಂಗಸರಿದ್ದರೆ ಅಂತವರ ಮನೆಯಲ್ಲಿ ಕೇಸರಿ ಸಿಗಬಹುದು ಅಂತ ವಿಚಾರ ಮಾಡಿದ ಪದ್ದಿಯ ಅವ್ವ ಕಂಡಕಂಡವರ ಮನೆ ಬಾಗಿಲನ್ನು ಬೇಕುಬೇಕಾದ ಹಾಗೆ ಬಡಿದೇ ಬಡಿದಳು. ಬಾಗಿಲು ತೆಗೆಯಲಿಲ್ಲ ಅಂದರೆ ಸೀರೆ ಮೇಲೆ ಮಾಡಿಕೊಂಡು ಕಾಲಿಂದ ಒದ್ದು ಒದ್ದು ತೆಗೆಸಿದಳು. ಬಾಗಿಲು ತೆಗೆದವರಿಗೆ ಕೇಳಿದ್ದು ಒಂದೇ ಮಾತು - 'ನಿಮ್ಮನ್ಯಾಗ ಯಾರರೆ ಬಸುರಿದ್ದಾರೇನು???' ಅಂತ. ಏನ್ರೀ ಇದು?? ಕೇಸರಿ ಇದೆಯೇನು? ಇದ್ದರೆ ಒಂದು ನಾಕು ಎಸಳು ಕೊಡಿ ಅಂದರೆ ಅದು ಒಂದು ಮಾತು. ಅದು ಬಿಟ್ಟು ಗೌತಮ ಬುದ್ಧ 'ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡ ಬಾ' ಅಂದರೆ ಕಿಸಾ ಗೋತಮಿ ಎಲ್ಲರೆ ಮನೆ ಹೊಕ್ಕು, ಸಾಸಿವೆ ಕೊಡ್ರೀ ಅನ್ನುವ ಮೊದಲು ನಿಮ್ಮದು ಸಾವಿಲ್ಲದ ಮನೆಯೇನು ಅಂತ ಕೇಳಿದ ಹಾಗೆ ಆಯಿತು ಈ ಕೇಸು. ಆಕೆ ಪದ್ದಿಯಾದರೆ ಇವರು ಪದ್ದಿಯ ತಾಯಿ. ಡಬಲ್ ಪೆದ್ದಿ. ಇಡೀ ಓಣಿ ಅಡ್ಯಾಡಿದರು. ಯಾರ ಮನೆಯಲ್ಲಿಯಾದರೂ ಕೇಸರಿ ಇತ್ತೋ ಏನೋ. ಆದರೆ ಯಾರ ಮನೆಯಲ್ಲೂ ಬಸುರಿ ಹೆಂಗಸರು ಮಾತ್ರ ಇರಲಿಲ್ಲ. ಅದೂ ಹೋಗಿ ಹೋಗಿ ಮುಟ್ಟು ನಿಂತ ವಿಧವೆಯರ ಮನೆಗಳಲ್ಲಿ, ಮದುವೆಯೇ ಆಗದ ಬ್ರಹ್ಮಚಾರಿಗಳ ಮನೆಗಳಲ್ಲಿ ಕೂಡ 'ನಿಮ್ಮನ್ಯಾಗ ಯಾರರೆ ಬಸುರಿದ್ದಾರೇನು??' ಅಂತ ಕೇಳಿದ್ದು ಮಾತ್ರ ಶುದ್ಧ ಅಪದ್ಧವಾಗಿ ಹೊರಹೊಮ್ಮಿ ಎಲ್ಲರೂ ಬಿದ್ದು ಬಿದ್ದು ನಕ್ಕು, ಪದ್ದಿಯ ಅವ್ವನನ್ನು ಓಡಿಸಿ, ಬಾಗಿಲು ಹಾಕಿಕೊಂಡು ಮತ್ತೂ ನಕ್ಕರು. ತಮ್ಮ ಓಣಿಯಲ್ಲಂತೂ ಕೇಸರಿ ಸಿಗಲಿಲ್ಲ ಪಕ್ಕದ ಓಣಿ ನೋಡೋಣ ಅಂತ ಆಕಡೆ ಹೋದರು. ಈ ಕಡೆ ಪ್ರಸ್ಥದ ಮುಹೂರ್ತ ಸಮೀಪಿಸುತ್ತಿತ್ತು. ಆಚಾರ್ರು ಸಿಕ್ಕಾಪಟ್ಟೆ ಗಡಿಬಿಡಿ ಮಾಡುತ್ತಿದ್ದರು. ಪದ್ದಿಗೆ ಬೇಗನೆ ಪ್ರಸ್ಥ ಭೂಮಿಗೆ ಜಂಪ್ ಹೊಡಿ ಅನ್ನುತ್ತಿದ್ದರು. ಆದರೆ ಪದ್ದಿಯ ಕೈಯಲ್ಲಿ ಕೇವಲ ಸಾಧಾರಣ ಹಾಲು ಮಾತ್ರ ಇತ್ತು. ಕೇಸರಿ ಹಾಕಿದಾಗ ಮಾತ್ರ ಅದು ಫಸ್ಟ್ ನೈಟ್ ಹಾಲಾಗುತ್ತದೆ. ಕೇಸರಿ ಇಲ್ಲ. ಕೇಸರಿ ತರಲು ಹೋದ ಅವ್ವನೂ ಇಲ್ಲ. ಈ ಕಡೆ ಆಚಾರಿಯ ಪ್ರೆಷರ್. ಸುಸ್ತೆದ್ದು ಹೋದಳು ಪದ್ದಿ.

'ಪದ್ದಕ್ಕಾ, ಏ ಪದ್ದಕ್ಕಾ, ಲಗೂನೇ ಪ್ರಸ್ಥದ ಕ್ವಾಣಿ ಸೇರಿಕೋ ಮಾರಾಳ. ಮುಹೂರ್ತ ಮೀರಲಿಕ್ಕೆ ಬಂದದ. ಈ ಪ್ರಸ್ಥದ ಸಂಸ್ಕಾರ ಸರಿಯಾದ ವೇಳ್ಯಾಕ್ಕ ಸರಿಯಾಗಿ ಆಗಿಬಿಡಬೇಕು ನಮ್ಮವ್ವಾ. ಇಲ್ಲಂದ್ರ ಮುಂದ ಹುಟ್ಟೋ ಮಕ್ಕಳು ಮಂಗೋಲಿಯನ್ ಆದರೂ ಆಗಬಹುದು. ಇಲ್ಲಾ ಕಾಡು ಮನುಷ್ಯರು ಆದರೂ ಆಗಬಹುದು. ಯಾಕ ತಡಾ? ಎಲ್ಲಾ ರೆಡಿ ಇದ್ದಂಗ ಅದ. ಎರಡೂ ಕೈಯಾಗ ಹಾಲಿನ ವಾಟಗಾ ಹಿಡಕೊಂಡು, ಮನಸ್ಸಿನಾಗ ನಿಮ್ಮ ಕುಲದೇವರಾದ ನರಸಿಂಹನ ನಾಮ ಸ್ಮರಣೆ ಮಾಡುತ್ತ, ಎಲ್ಲಾ ನಾಗಪ್ಪಗಳನ್ನೂ ನೆನಪು ಮಾಡಿಕೊಂಡು, 'ಹೆಡಿ ಎತ್ತಿ ಭುಸ್ ಭುಸ್ ಮಾಡಬ್ಯಾಡ್ರೀ, ಪ್ರೀತಿಯಿಂದ ಡಂಕ್ ಹೊಡಿ ನಾಗಪ್ಪಾ,' ಅಂತ ಮನಸ್ಸಿನಾಗೇ ಪ್ರಾರ್ಥನಾ ಮಾಡಿಕೊಂಡು, ಬಲಗಾಲಿಟ್ಟು ಲಗೂನೆ ಪ್ರಸ್ಥದ ಕ್ವಾಣಿ ಹೊಕ್ಕುಬಿಡು ಮಾರಾಳ, ಪದ್ದಕ್ಕಾ!' ಅಂತ ಆಚಾರ್ರು ಚಂಡಿಕಿ ನೀವಿಕೊಳ್ಳುತ್ತ ಬೊಂಬಡಾ ಹೊಡೆದರು. 'ಹ್ಯಾಂ!??? ನಾಗಪ್ಪ ಡಂಕ್ ಹೊಡಿತದೇನು???? ಹ್ಯಾಂ??? ಡಂಕ್ ಹೊಡೆಯೋದು ಚೇಳಲ್ಲಾ??? ಹಾಂಗಿದ್ರ ಮತ್ತ ಅಕಿ ನಟಿ ಸುಶ್ಮಿತಾ ಸೇನ್ 'ಬಿಚುವಾ ಜವಾನಿ ಕಾ ಡಂಕ್ ಮಾರೆ, ಡಂಕ್ ಮಾರೆ,' ಅಂತ ಯಾಕ ಹೊಯ್ಕೊಂಡಳು??' ಅಂತ ಪದ್ದಿ ಈಗಿತ್ತಲಾಗೆ ನೋಡಿದ್ದ 'ಚಿಂಗಾರಿ' ಸಿನೆಮಾದ ಹಾಡಿನ ನೆನಪು ಮಾಡಿಕೊಂಡಳು. ಚೇಳು ಒಂದೇ ಅಲ್ಲ ನಾಗಪ್ಪ ಕೂಡ ಡಂಕ್ ಹೊಡೆಯುತ್ತದೆಯೇ????!

ಈಗ do or die ಕ್ಷಣ ಪದ್ದಿಗೆ. ಕೇಸರಿ ತರಲು ಹೋದ ಅವ್ವ ಎಲ್ಲೋ ನಾಪತ್ತೆ. ಈಕಡೆ ಆಚಾರರು ಸಿಕ್ಕಾಪಟ್ಟೆ ಪ್ರೆಷರ್ ಹಾಕುತ್ತಿದ್ದಾರೆ. ಮುಹೂರ್ತಕ್ಕೆ ಸರಿಯಾಗಿ ಪ್ರಸ್ಥದ ಸಂಸ್ಕಾರ ಆಗಲಿಲ್ಲ ಅಂದರೆ ಮುಂದೆ ಮಂಗೋಲಿಯನ್ ಅಂತಹ ಮಂಗ್ಯಾ ಮಕ್ಕಳು ಹುಟ್ಟುವ ರಿಸ್ಕ್. ಏನು ಮಾಡಲಿ ಅಂತ ಪದ್ದಿ ವಿಚಾರ ಮಾಡಿದಳು. ಸುತ್ತ ಮುತ್ತ ನೋಡಿದಳು. ಹಳೆ ಮಂಗ್ಯಾ ರಮ್ ಕುಡಿದು ಫುಲ್ ಟೈಟಾಗಿ ಮಲಗಿಬಿಟ್ಟಿದ್ದ ಆಕೆಯ ಹಿರಿಯಣ್ಣ ನಾಗಣ್ಣ ಉರ್ಫ್ ತೂತ್ ನಾಗ್ಯಾ ರಾತ್ರಿಯ ಹೊತ್ತಿನಲ್ಲಿ ಉಚ್ಚೆ ಹೊಯ್ಯಲು ಎದ್ದು ಬಂದವ ಏನೋ ಮಾಡಿದ. ಪದ್ದಿಗೆ ಏನೋ ಐಡಿಯಾ ಬಂತು. ಐಡಿಯಾ ಬಂದಿದ್ದೇ ತಡ ಅದನ್ನು ಅಮಲು ಮಾಡಿಯೇಬಿಟ್ಟಳು. ಪ್ರಾಬ್ಲಮ್ ಫಿನಿಶ್. ಬಗೆಹರಿದೇಹೋಯಿತು. ಹಾಗೆ ಬಂದಿದ್ದು ಹೀಗೆ ಹೋದಂಗೆ. ಪದ್ದಿ ಈಗ ರೆಡಿ. ಪ್ರಸ್ಥ ಭೂಮಿಗೆ ಎಂಟ್ರಿ ಕೊಡಲಿಕ್ಕೆ ರೆಡಿ. ರೆಡಿ, ಸ್ಟೆಡಿ, ಗೋ!

ಹಾಲಿನ ವಾಟಗ ಹಿಡಿದ ಪದ್ದಿ ಪ್ರಸ್ಥ ಭೂಮಿಗೆ ಎಂಟ್ರಿ ಕೊಟ್ಟಳು. ಬಾಯಲ್ಲಿ ಗುಟ್ಕಾ ಹಾಕಿಕೊಂಡು, ಮೊಬೈಲ್ ಮೇಲೆ ಏನೋ ಮಾಡುತ್ತಿದ್ದ ಗಂಡ ಗೌಂಡಿ ದ್ಯಾಮಪ್ಪ ಗಹಗಹಿಸಿ ನಕ್ಕ. ಡಂಕು ಹೊಡೆಯುವ ಚೇಳಿನಂತೆ, ಭುಸುಗುಟ್ಟುವ ಹಾವಿನಂತೆ ನಕ್ಕ. ಪದ್ದಿ ಬೆದರಿದಳು.

'ಏ, ಪದ್ದಿ ಇಲ್ಲಿ ಬಾರಬೇ! ಇವತ್ತು ನಮ್ಮ ಫಸ್ಟ್ ನೈಟ್. ನಿನ್ನ ನಾ ಬಿಡಂಗಿಲ್ಲ,' ಅಂದವನೇ ಗೌಂಡಿ ದ್ಯಾಮಪ್ಪ ಡೈವ್ ಹೊಡೆದ. ಉಟ್ಟ ಪಂಚೆ ಎತ್ತಿಹೋಗಿ, ಬಿದ್ದುಹೋಗಿ, ಕೆಂಪು ಚಡ್ಡಿ ಕಂಡಿತು. 'ಏ, ನಿನ್ನ, ದ್ಯಾಮಪ್ಪ..... ಅಲ್ಲಲ್ಲ ನಿಮ್ಮ. ಲಗ್ನಾದ ಮೇಲೆ ನೀವು. ಗಂಡಗ ನೀನು ಅಂದ್ರ ಪಾಪ ಬರ್ತದ. ನೀವು ಸ್ವಲ್ಪ ನಿಮ್ಮ 'ಪಂಚಾಂಗ' ಅಂದರೆ ಪಂಚೆಯಲ್ಲಿರುವ ನಿಮ್ಮ ಅಂಗ ಉರ್ಫ್ ಕೆಂಪು ಚಡ್ಡಿ ಸ್ವಲ್ಪ ಮುಚ್ಚಿಕೊಂಡರೆ ಒಳ್ಳೇದು. ನನಗ ಭಾಳ ಕೆಲಸ ಅದ!' ಅಂದ ಪದ್ದಿ ಬಾಂಬ್ ಹಾಕಿಬಿಟ್ಟಳು.

ಕೇಳಿದ ಗೌಂಡಿ ದ್ಯಾಮಪ್ಪ ಥಂಡಾ ಹೊಡೆದ. 'ಏನು ಕೆಲಸ ಐತಿ? ಹಾಂ???' ಅಂತ ಹೂಂಕರಿಸಿದ.

'ಸ್ವಲ್ಪ ತಡಿರೀ. ನಾಗಪ್ಪಗ ಹಾಲು ಎರೆಯೋದು ಅದ. ಎಲ್ಲದ ನಾಗಪ್ಪ? ಎಲ್ಲದ ಹಾವಿನ ಹುತ್ತ??? ಎಲ್ಲೆ ಹಾಲು ಸುರುವಲಿ?' ಅಂತ ತನಗೆ ತಾನೇ ಅಂದುಕೊಂಡ ಪದ್ದಿ, 'ರೀ, ನಾಗಪ್ಪ ಎಲ್ಲದರೀ??? ನಾಗಪ್ಪಾ... ಅದೇ ಭುಸ್ ಭುಸ್ ನಾಗಪ್ಪಾ ಎಲ್ಲದ ಅಂತ??? ಅದಕ್ಕೇ ಅಂತನೇ ಕೇಸರಿ ಹಾಲು ಮಾಡಿಕೊಂಡು ಬಂದೇನಿ. ನಾಗಪ್ಪಗ ಹಾಲು ಎರದಾದ ಮ್ಯಾಲೆ ಮುಂದಿನ ಕೆಲಸ,' ಅಂದ ಪದ್ದಿ, 'ನಾಗಪ್ಪಾ! ಮೈ ಡಿಯರ್ ನಾಗಪ್ಪಾ! ಎಲ್ಲಿದ್ದಿ? ಎಲ್ಲಿ ಕದ್ದು ಮುಚ್ಚಿಟ್ಟುಕೊಂಡೀ??? ಲಗೂ ಬಾ! ಬಾ ನಾಗಪ್ಪಾ! ಲಗೂನೆ ಬಾ! ಭಾಳ ಕಾಯಿಸಬ್ಯಾಡ,' ಅನ್ಕೋತ್ತ ಇಡೀ ಪಡಸಾಲಿ ತುಂಬಾ ಓಡಾಡಿಬಿಟ್ಟಳು. ನಾಗಪ್ಪನ ಹುಡಿಕಿಕೊಂಡು ಪಡಸಾಲಿ ಮೂಲಿ ಮೂಲಿ ಅಡ್ಯಾಡಿಬಿಟ್ಟಳು.

ಪದ್ದಿಯಂತಹ ಪೆದ್ದಿಯ ಗಂಡನಾದರೂ ಗೌಂಡಿ ದ್ಯಾಮಪ್ಪ ಇಕಿಗಿಂತ ಭಾಳ ಶಾಣ್ಯಾ. ಅವನಿಗೆ ತಿಳಿದೇಹೋಯಿತು. ಬಿದ್ದು ಬಿದ್ದು ನಕ್ಕ.

'ಏ, ಪದ್ದಿ ಡಾರ್ಲಿಂಗ್!' ಅಂದ.

'ಏನದು ಅಸಹ್ಯ ಡಾರ್ಲಿಂಗ್?? ನಾ ಸ್ತ್ರೀಲಿಂಗ. ನೀವು ಪುಲ್ಲಿಂಗ. ಈ ನಮ್ಮ ಫಸ್ಟ್ ನೈಟ್ ಹಾಸಿಗೆ ನಪುಂಸಕಲಿಂಗ. ಹೀಂಗಿದ್ದಾಗ ಅದೆಲ್ಲಿಂದ ಬಂತು ಈ ವಿಚಿತ್ರ ಲಿಂಗ ಡಾರ್ಲಿಂಗ?????' ಅಂತ ಅಂದುಬಿಟ್ಟಳು ಪದ್ದಿ. SSLC ಇಂಗ್ಲಿಷ್ ಪೇಪರ್ ಇನ್ನೂ ಉಳದದ ಅಕಿದು. ಹೀಂಗ ಹೇಳಿದಳು ಅಂದ ಮ್ಯಾಲೆ ಈ ಸರೆನೂ ಇಂಗ್ಲಿಷ್ ಪಾಸ್ ಆಗೋದು ಖಾತ್ರಿ ಇಲ್ಲ ಬಿಡ್ರೀ.

'ಪದ್ದಿ, ಅದು ಹಾಂಗಲ್ಲ. ಆ ಹಾಲು ನನಗೇ ಅಂತನೇ ಕೊಟ್ಟು ಕಳಿಸಿದ್ದು. ನಾನೇ ಕುಡಿಬೇಕು. ಲಾಸ್ಟಿಗೆ ಒಂಚೂರೇ ಚೂರು ನಿನಗ ಕುಡಿಸಬೇಕು. ಇಲ್ಲಿ ಕೊಡು,' ಅಂದ ದ್ಯಾಮಪ್ಪ.

'ಹ್ಯಾಂ???? ನಿನ್ನ ಹೆಸರು ದ್ಯಾಮಪ್ಪ. ನೀನು ಹಾಲು ಕುಡಿಯೋ ನಾಗಪ್ಪ ಯಾವಾಗಾದೀ???' ಅಂತ ಇನ್ನೋಸೆಂಟ್ ಆಗಿ ಕೇಳಿಬಿಟ್ಟಳು ಪದ್ದಿ. ಎಲ್ಲರೆ ಈ ದ್ಯಾಮಪ್ಪ ಇಚ್ಛಾಧಾರಿ ನಾಗ ಇದ್ದಾನೇನು ಅಂತ ಸಂಶಯ ಬಂತು ಅಕಿಗೆ. ಅದು ಒಂಬತ್ತನೇತ್ತಾ ಇದ್ದಾಗ ಶ್ರೀದೇವಿಯ ನಗೀನಾ ಸಿನಿಮಾ ನೋಡಿ ಬಂದಾಳ. ಆ ಮೂವಿ ಒಳಗ ಶ್ರೀದೇವಿ ಇಚ್ಛಾಧಾರಿ ನಾಗಿನ್ ನೋಡ್ರಿ. ಬೇಕಾದಾಗ ಇಚ್ಛಾಧಾರಿ ಹಾವು. ಬೇಕಾದಾಗ ಕಚ್ಛಾಧಾರಿ ಹೆಂಗಸು. ಅಯ್ಯೋ! ಕಚ್ಛೆ ಸೀರಿ ಉಟ್ಟುಕೊಂಡ ಹೆಂಗಸು ಅಂತ. ಹಾಂಗ ಎಲ್ಲರೆ ಈ ದ್ಯಾಮಪ್ಪ ಕೂಡ ಇಚ್ಛಾಧಾರಿ ನಾಗಪ್ಪ ಇದ್ದಾನೇನೋ ಅಂತ ಸಂಶಯ ಬಂತು. ಲವ್ ಮಾಡಿ, ರಿಜಿಸ್ಟರ್ ಲಗ್ನಾ ಮಾಡಿಕೊಂಡ ಗಂಡ ಕೆಂಪು ಕಚ್ಛಾಧಾರಿ ದ್ಯಾಮಪ್ಪನೋ ಅಥವಾ ಇಚ್ಛಾಧಾರಿ ನಾಗಪ್ಪನೋ ಅಂತ ಡೌಟ್ ಬಂತು.

ಅದು ಹೆಂಗೋ ಮಾಡಿ ದ್ಯಾಮಪ್ಪ ಆ ಹಾಲು ತನಗೇ ಅಂತ convince ಮಾಡಿದ. ಅಷ್ಟು ಮಾಡುವಷ್ಟರಲ್ಲಿ ಅವನ ತಲೆ ಹನ್ನೆರೆಡಾಣೆ ಆಯಿತು. ಪದ್ದಿ ಯಾವದೋ ರೀತಿಯಲ್ಲಿ ನಂಬಿ ಹಾಲು ಕೊಟ್ಟಳು. ಈಗ ಆಯಿತು ದೊಡ್ಡ ಅನಾಹುತ!

ಪದ್ದಿ ಕೊಟ್ಟ ಹಾಲನ್ನು ತೆಗೆದುಕೊಂಡ ದ್ಯಾಮಪ್ಪ. ಏನೋ ಒಂದು ತರಹ ಇತ್ತು. ಮೂಸಿ ನೋಡಿದ. ಏನೋ ಒಂದು ತರಹದ ಪರಿಚಿತ ವಾಸನೆ ಬಂತು. ಏನು ಅಂತ ಏಕ್ದಂ ಹೊಳೆಯಲಿಲ್ಲ. ಕೇಸರಿ ಹಾಲಿಗೆ ಒಂದು ತರಹದ ಅಡ್ಡ ವಾಸನೆ ಇತ್ತು. ಎಲ್ಲಿಂದ ಬಂತು ಅಂತ ಆಕಡೆ ಈಕಡೆ ಮೂಸಿ ಮೂಸಿ ನೋಡಿದ. ಪದ್ದಿ ಏಕ್ದಂ ಮಸ್ತ ವಾಸನೆ ಹೊಡೆದಳು. ಐದು ದಿನದ ನಂತರ ಸ್ನಾನ ಮಾಡಿದಾಕೆ ಆಕೆ. ಆಕೆ ಫ್ರೆಶ್ ಆಗಿ ವಾಸನೆ ಹೊಡೆಯದೇ ಮತ್ತೆಂಗೆ ವಾಸನೆ ಹೊಡೆದಾಳು????

'ಏನಿದು? ಈ ಹಾಲಿನ್ಯಾಗ ಏನೋ ಒಂದು ತರಹದ ವಿಚಿತ್ರ ವಾಸನಿ ಬರಾಕತ್ತದ. ಯಾಕ????' ಅಂತ ಪ್ರಶ್ನೆ ಒಗೆದಿದ್ದಾನೆ ದ್ಯಾಮಪ್ಪ.

'ಅದು.... ಅದು...... ' ಅಂತ ತಡವರಿಸಿದ್ದಾಳೆ ಪದ್ದಿ.

'ಏನಾತು????' ಅಂತ ಕೇಳಿದ್ದಾನೆ ಪತಿ ದೇವರು. ಸ್ವಲ್ಪ ಆವಾಜ್ ಹಾಕಿದ್ದಾನೆ.

'ಅದು..... ಅದು..... ಹಾಲಿಗೆ ಹಾಕಲಿಕ್ಕೆ ಕೇಸರಿ ಸಿಗಲೇ ಇಲ್ಲ. ಇರಲೇ ಇಲ್ಲ. ಕೇಸರಿ ಹುಡಕಿಕೋತ್ತ ಹೋದಾಕಿ ನಮ್ಮ ಅವ್ವ ಬರಲೇ ಇಲ್ಲ. ಆಚಾರ್ರು ಗಡಿಬಿಡಿ ಮಾಡಿದರು. ಅದಕ್ಕsss...... ' ಅಂತ ಎಳೆದಿದ್ದಾಳೆ.

'ಕೇಸರಿ ಸಿಗಲಿಲ್ಲ. ಓಕೆ. ಅದಕ್ಕೇ?? ಏನು ಮಾಡಿದಿ?????' ಅಂತ ಕೇಳಿ, ಅಬ್ಬರಿಸಿದ್ದಾನೆ ದ್ಯಾಮಪ್ಪ.

'ಕೇಸರಿ ಸಿಗಲಿಲ್ಲ. ಅದಕ್ಕೇ ಅದರಾಗ ವಿಮಲ್ ಗುಟ್ಕಾ ಹಾಕಿಬಿಟ್ಟೆ. ರಾತ್ರಿ ಉಚ್ಚಿ ಹೊಯ್ಯಲಿಕ್ಕೆ ಎದ್ದು ಬಂದಿದ್ದ ನಾಗಣ್ಣ ಗುಟ್ಕಾ ಹಾಕಿದ. ಏನೋ ನೆನಪಾತು. ಅಲ್ಲೇ ನಾಗಣ್ಣನ ಗುಟ್ಕಾ ಕಾಣಿಸ್ತು. ಅದಕ್ಕೇ ಹಾಲಿಗೆ ಗುಟ್ಕಾ ಹಾಕಿಕೊಂಡು ತಂದುಬಿಟ್ಟೆ!' ಅಂತ ವರದಿ ಒಪ್ಪಿಸಿದಳು ಪದ್ದಿ.

'ಶಿವ ಶಿವಾ! ಫಸ್ಟ್ ನೈಟ್ ಹಾಲಿನಲ್ಲಿ ಗುಟ್ಕಾ ಮಿಕ್ಸ್ ಮಾಡಿಕೊಂಡು ಕುಡಿದವ ನಾನೇ ಮೊದಲಿಗ ಇರಬೇಕು. ನನ್ನನ್ನು ಎಂತಹ ಐತಿಹಾಸಿಕ ಪುರುಷನನ್ನಾಗಿ ಮಾಡಿಬಿಟ್ಟಿ ಪದ್ದಿ! ಮೈ ಡಿಯರ್ ಪೆದ್ದಿ!' ಅಂತ ತಲೆ ತಲೆ ಚಚ್ಚಿಕೊಂಡಿದ್ದಾನೆ ದ್ಯಾಮಪ್ಪ.

'ಹಾಲಿಗೆ ವಿಮಲ್ ಗುಟ್ಕಾ ಯಾಕ ಹಾಕಿದಿ???' ಅಂತ ಕೇಳಿದ್ದಾನೆ.

'ಅದು ಕೇಸರಿ ಇರಲಿಲ್ಲ. ಕೇಸರಿಯಿಲ್ಲದ ಹಾಲು ಫಸ್ಟ್ ನೈಟ್ ಹಾಲು ಆಗೋದೇ ಇಲ್ಲ. ಅದಕ್ಕೇ ವಿಮಲ್ ಗುಟ್ಕಾ ಹಾಕಿದೆ!' ಅಂತ ಹೇಳಿದಳು ಪದ್ದಿ.

'ಯಾಕ??? ವಿಮಲ್ ಗುಟ್ಕಾ ಹಾಕಿದರೆ ಕೇಸರಿ ಹಾಕಿದಂಗ ಏನು? ಕೆಟ್ಟ ಅಸಡ್ಡಾಳ ಅಡ್ಡ ವಾಸನಿ ಹೊಡಿಲಿಕತ್ತದ ಈ ಹಾಲು. ಯಾಕ ವಿಮಲ್ ಗುಟ್ಕಾ ಹಾಕಿದಿ ಹಾಲಿನ್ಯಾಗ? ಹ್ಯಾಂ????' ಅಂತ ಮತ್ತ ಕೇಳ್ಯಾನ ದ್ಯಾಮಪ್ಪ.


ಕೇಸರಿಯುಕ್ತ ವಿಮಲ್ ಗುಟ್ಕಾ ಮತ್ತು ಪಾನ್ ಮಸಾಲಾ!
'ಅದು ವಿಮಲ್ ಗುಟ್ಕಾ, ವಿಮಲ್ ಪಾನ್ ಮಸಾಲಾ ಒಳಗ ಕೇಸರಿ ಅದಂತ. ಕೇಸರಿ ಯುಕ್ತ. ಕಣಕಣದಲ್ಲಿಯೂ ಕೇಸರಿಯಿದೆ ಅಂತ advertisement ಒಳಗ ಹೇಳೇ ಹೇಳ್ತಾರ. ಅದಕ್ಕೇ ಕೇಸರಿ ಬದಲು ಕೇಸರಿಯುಕ್ತ ವಿಮಲ್ ಗುಟ್ಕಾ ಹಾಕಿಕೊಂಡು ಬಂದೆ. ಹಾಲು ಹೆಂಗದ? ನಿಮ್ಮ ನಾಗಪ್ಪಗ ಸೇರ್ತದ? ಎಲ್ಲದ ನಿಮ್ಮ ನಾಗಪ್ಪಾ? ಸ್ವಲ್ಪ ತೋರಿಸಿರಿ ನೋಡೋಣ. ನಾನೇ ಹಾಲು ಕುಡಿಸಲಿ ನಿಮ್ಮ ನಾಗಪ್ಪಗ??? ಡಂಕು ಹೊಡಿತದ ನಿಮ್ಮ ನಾಗಪ್ಪಾ?' ಅಂತ ಭಾಳ ಇನ್ನೋಸೆಂಟ್ ಆಗಿ ಕೇಳಿದ ಪದ್ದಿ, 'ಡಂಕು ಮಾರೆ ದ್ಯಾಮಪ್ಪ ಕಾ ನಾಗಪ್ಪ ಡಂಕು ಮಾರೆ! ಡಂಕು ಮಾರೆ!' ಅಂತ ಸುಶ್ಮಿತಾ ಸೇನ್ ಮಾದರಿಯಲ್ಲಿ ಪ್ರಸ್ಥದ ಕೋಣೆಯಲ್ಲಿ ಡಾನ್ಸ್ ಬ್ಯಾರೆ ಹೊಡೆದುಬಿಟ್ಟಳು.

ದ್ಯಾಮಪ್ಪ ನಕ್ಕ. ಬಿದ್ದೂ ಬಿದ್ದೂ ನಕ್ಕ. ಉಳ್ಳಾಡಿ ಉಳ್ಳಾಡಿ ನಕ್ಕ. ಯಾವ ಪರಿ ಉಳ್ಳಾಡಿದ ಅಂದ್ರ ಉಳ್ಳಾಡಿ ಉಳ್ಳಾಡಿ ಎಲ್ಲ ಬಟ್ಟೆ ಸ್ಥಾನ ಪಲ್ಲಟ ಆಗಿ ಹರೋ ಹರೋ ಆಗಿಬಿಟ್ಟಿತು.

'ಏನ್ರೀ ಇದು ಅಸಹ್ಯ??? ವಿಮಲ್ ಗುಟ್ಕಾ ಹಾಕಿ ಕೇಸರಿ ಹಾಲು ಮಾಡಿಕೊಂಡು ಬಂದೆ ಅಂದರೆ ಇಷ್ಟು ನಗ್ತೀರಲ್ಲಾ!? ಲಗೂನೆ ನಿಮ್ಮ ನಾಗಪ್ಪಗ ಕುಡಿಸಿರಿ. ಎಲ್ಲದ ನಿಮ್ಮ ನಾಗಪ್ಪಾ!?' ಅಂತ ಕೇಳೇ ಕೇಳಿದಳು ಪದ್ದಿ.

ಒಂದೇ ಗುಟುಕಿನಲ್ಲಿ ವಿಮಲ್ ಗುಟ್ಕಾ ಹಾಕಿದ್ದ 'ಕೇಸರಿ' ಹಾಲು ಕುಡಿದ ದ್ಯಾಮಪ್ಪ ಲೈಟ್ ಆಫ್ ಮಾಡಿದ್ದಾನೆ. ಪದ್ದಿಯನ್ನು ಬರಸೆಳೆದುಕೊಂಡವನೇ 'ದೇವರ ಪೂಜೆಗೆ' ಶುರು ಹಚ್ಚಿಕೊಂಡಿದ್ದಾನೆ. ಮೊದಲು ಕಲಶ ಪೂಜೆ!  ನಂತರ ಬಾಕಿಯದು.

ಕತ್ತಲಲ್ಲಿ ರಾತ್ರಿಯಿಡೀ ಪದ್ದಿಯದು ಒಂದೇ ವಾರಾತ - 'ಏ! ಏ! ಏನ್ರೀ ಇದು? ಎಂತಾ ನಾಗಪ್ಪಾ!? ವಿಚಿತ್ರ ನಾಗಪ್ಪಾ! ಒಟ್ಟೇ ಭುಸ್ ಭುಸ್ ಅನ್ನವಲ್ತಲ್ಲಾ????? ಹ್ಯಾಂ? ಎಂತಾ ನಾಗಪ್ಪರೀ ಇದು? ಸುಸ್ತಾಗಿ ಮಲ್ಕೊಂಡುಬಿಡ್ತು????'

'ನಿಮ್ಮೌನ್! ನೀನೂ ಮಲ್ಕೋಬೇ!' ಅಂತ ಚೀರಿದ ಗೌಂಡಿ ದ್ಯಾಮಪ್ಪ ಒಂದು ವಿಮಲ್ ಗುಟ್ಕಾ ಹರಿದು, ಬಾಯಿಗೆ ಹಾಕಿಕೊಂಡು ಮಲಗಿಬಿಟ್ಟಿದ್ದಾನೆ. ಪದ್ದಿ ಬಿಡಿ. ಕತ್ತಲಲ್ಲಿ ಕಳೆದು ಹೋದ ದ್ಯಾಮಪ್ಪನ ನಾಗಪ್ಪನನ್ನು ಹುಡುಕುತ್ತಲೇ ಇದ್ದಾಳೆ!

** ಹಾವಿನೊಡನೆ ಹನಿಮೂನ್ ಮಾಡಿಕೊಂಡವರ ವೀಡಿಯೊ ನೋಡಲು ಇಲ್ಲಿ ಹೋಗಿ! (ಫೇಸ್ಬುಕ್ ಅಕೌಂಟ್ ಇರಬೇಕು.)

** ಎರಡು ಲೈನ್ ಇರುವ ಈ ಜೋಕ್ ಹೇಳಿದವರು ಸದಾನಂದ ಭಟ್ಟರು. ಇಪ್ಪತ್ತು ಪೇಜಿನ ಕಥೆ ಬರೆದವರು ನಾವು. ಮೂಲದ ಎಲ್ಲ ಕ್ರೆಡಿಟ್ ಸದಾನಂದ ಭಟ್ಟರಿಗೇ ಸೇರಬೇಕು.

 
** ಇನ್ನೂ ಹೆಚ್ಚಿನ ಕಿಕ್ ಬೇಕಾದರೆ ಬಾಬಾ ಜರ್ದಾ - ೧೬೦ ಸಹಿತ ಹಾಕಿಬಿಡಬಹುದು. ಅದರಲ್ಲೂ ಕೇಸರಿ ಇದೆ.


** ಉಪಯೋಗಿಸಿದ ಚಿತ್ರಗಳನ್ನು ಇಂಟರ್ನೆಟ್ ನಿಂದ ಎತ್ತಿದ್ದು. ಎಲ್ಲ ಕಾಪಿ ರೈಟ್ಸ್ ಮಾಲೀಕರದು.

ವಿವಾಹಿತರ ದೆವ್ವದ ಸಿನಿಮಾ......


ವಿವಾಹಿತರಿಗೆ ದೆವ್ವದ ಸಿನಿಮಾ ನೋಡಿದರೆ ಅಷ್ಟೇನೂ ಭಯವಾಗುವುದಿಲ್ಲ...!

- ವಕ್ರೋಕ್ತಿ

ಆದರೆ ಕೆಲವು ವಿವಾಹಿತರ ವೈವಾಹಿಕ ಬದುಕಿನ ರಿಯಲ್ ಸಿನಿಮಾ ನೋಡಿಬಿಟ್ಟರೆ ದೆವ್ವಕ್ಕೂ ಭಯವಾಗಿ ಬಿಡುವ ಚಾನ್ಸ್ ಮಾತ್ರ ಇದೆ. ಅಬಬಬಾ!! ಈಗಿತ್ತಲಾಗೆ ಎಂತೆಂತಾ ಕೇಸುಗಳು ಮಾರಾಯರೇ! ಒಂದೊಂದರ ಮೇಲೆ ಒಂದಲ್ಲ ನಾಲ್ಕು ಹಾರರ್ ಮೂವಿ ಮಾಡಬಹುದು.

ಬದುಕಿನಲ್ಲಿ ಅಷ್ಟೆಲ್ಲಾ ಹಾರರ್ ಮಾಡಿಕೊಂಡ ನಂತರವೂ ಎಲ್ಲರ 'ದಿ ಎಂಡ್' ಮಾತ್ರ ಫುಲ್ predictable. ಅದೇ ಸೋಡಾ ಚೀಟಿ. ಅದೇ ನಾಮ ಹಾಕಿದ / ಹಾಕಿದಳು ಅನ್ನುವ ದೂರು, ಬೊಬ್ಬೆ. ಮಕ್ಕಳ ಕಸ್ಟಡಿಗಾಗಿ ಯುದ್ಧ. ಇಬ್ಬರೂ ಕೂಡಿ ಮಾಡಿದ ಒಂದು ತುಂಡು ಆಸ್ತಿಗೆ, ಚಿಲ್ಲರೆ ರೊಕ್ಕಕ್ಕಾಗಿ ಬಡಿದಾಟ. ನಂತರ ನೋಡಿದರೆ ಅದರ ದುಪ್ಪಟ್ಟು ಸಾಲ. ಬಡಿದಾಡಲು ವಕೀಲರಿಗೆ ಫೀಸ್ ಕೊಡಬೇಕಲ್ಲ!? ಅಂತ್ಯದಲ್ಲಿ ಡೈವೋರ್ಸ್ ಮಾಡಿಕೊಂಡು ಫುಲ್ ಡ್ರೈವಾಶ್. ಆ ಭಾಗ್ಯಕ್ಕೆ ಅಷ್ಟೊಂದು ಗುದ್ದಾಡಬೇಕೇ? ಎಲ್ಲರಿಗೂ, ಅದರಲ್ಲೂ ತಂದೆತಾಯಿಗೆ, ಆ ಪರಿ ನೋವು ಕೊಡಬೇಕೇ? ತಲೆ ಹನ್ನೆರೆಡಾಣೆ ಮಾಡಿಕೊಳ್ಳಬೇಕೇ?

ಶಿವಾ ಶಿವಾ ಎಂತಾ ಮಂದಿಗೆ ಬೇಕಾದರೂ ಕೌನ್ಸೆಲಿಂಗ್ ಮಾಡಬಹುದು. ಈ ವೈವಾಹಿಕ ಜೀವನದ ಹಾರರ್ ಮೂವಿ ತೋರಿಸಿ ತಲೆತಿನ್ನುವವರನ್ನು ಮಾತ್ರ ಸಹಿಸಿಕೊಳ್ಳೋದು ಕಷ್ಟ ಸ್ವಾಮಿ. ಅಂತವರಿಗೆ ಕೌನ್ಸೆಲಿಂಗ್ ಮಾಡಿ ಕೊನೆಗೆ ಕೆಟ್ಟವರಾಗುವವರು ನಾವೇ. ಯಾಕೆಂದರೆ ಅವರ ವೈವಾಹಿಕ ಹಾರರ್ ಮೂವಿಗೆ ಬೇರೆ ತರಹದ ಎಂಡಿಂಗ್ ಬರೆಯಲು ಸಾಧ್ಯವೇ ಇರುವದಿಲ್ಲ. ನಾವು ಕೌನ್ಸೆಲಿಂಗ್ ಮಾಡುವವರು ಏನು ಬ್ರಹ್ಮ ದೇವರೇ ಇವರ ಹಣೆಬರಹ ಬದಲಾಯಿಸಲಿಕ್ಕೆ??? ಹಾಂ???

ಇಂತವರದು ಅಪ್ಪಟ ಹಾರರ್ ಮೂವಿ. ಅದರ ಎಂಡಿಂಗ್ ಹ್ಯಾಪಿ ಹ್ಯಾಪಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟೇ least painful ಅಂದರೆ ಕಮ್ಮಿ ತೊಂದರೆಯಲ್ಲಿ ಇವರ ಕೇಸ್ ನಿಪಟಾಯಿಸೋಣ ಅಂದ್ರೆ ನಮಗೇ ಉಲ್ಟಾ ಡೈಲಾಗ್ ಬಾಜಿ, 'ನಿನಗೆ ನಾವು ಹ್ಯಾಪಿ ಆಗಿ ಇರೋದು ಬೇಕಾಗಿಲ್ಲ!' ಅದೇನೋ ಅಂತಾರಲ್ಲ ಬಿಟ್ಟಿಯಲ್ಲಿ ಸಹಾಯ ಮಾಡಿದರೆ ಉದ್ರಿಯಲ್ಲಿ ತೀರಿಸಿದರು ಅಂತ. ಹಾಗಾಯಿತು ಕಥೆ. ಹೀಗಾಗಿ ಅಂತವರಿಗೆ ಶಿವಾಯ ನಮಃ ಅಂತ ದೊಡ್ಡ ನಮಸ್ಕಾರ ಹಾಕಿಬಿಟ್ಟಿದ್ದೇವೆ. ತಮ್ಮ ಬಾಳನ್ನು ಭಯಾನಕ ಹಾರರ್ ಮೂವಿ ಮಾಡಿಕೊಂಡಿದ್ದ ಮೂರು ದಂಪತಿಗಳ ಡೈವೋರ್ಸ್ ಮಾಡಿಸಿದ್ದೇವೆ. ಅವರ ಪೈಕಿ ಇಬ್ಬರು ಮಾತು ಬಿಟ್ಟಿದ್ದಾರೆ. ಮಾತು ಬಿಟ್ಟವರು ಇಬ್ಬರ ಮಾಜಿ ಹೆಂಡತಿಯರು. ಒಂದು ದಂಪತಿ ಸಂಪರ್ಕದಲ್ಲಿದ್ದಾರೆ. ಈ ಮಾಜಿ ಗಂಡ ಹೆಂಡತಿ ಮಾತ್ರ ನಮಗೆ ಚಿರಋಣಿಯಾಗಿದ್ದಾರೆ. ಯಾಕೆಂದರೆ ಅವರಿಗೆ ತಲೆ, ಅದರ ಒಳಗೆ ಮೆದುಳು ಎರಡೂ ಇವೆ. ಅದೇ  ಸಂತೋಷ. ಗಂಡ ಒಂದು ತರಹದ ಸನ್ಯಾಸ ಸ್ವೀಕರಿಸಿ ಭಾರತದಲ್ಲಿ ಸೆಟಲ್ ಆಗಿದ್ದಾರೆ. ಪತ್ನಿ ಇಲ್ಲೇ ಅಮೇರಿಕಾದಲ್ಲೇ ಒಳ್ಳೆಯ ಬಾಳು ಕಟ್ಟಿಕೊಂಡು ಆರಾಮ್ ಇದ್ದಾರೆ.

ಅಂತಹ ಹಾರರ್ ಕೇಸುಗಳಿಗೆ ಹೇಳುವದು ಇಷ್ಟೇ....ಹೊಂದಾಣಿಕೆ ಮಾಡಿಕೊಂಡು ಇರುತ್ತೀರಿ ಅಂತಾದರೆ ಇರಿ. irreconcilable differences ಅಂತ ಕಾರಣ ಕೊಟ್ಟುಬಿಡುವದು ಈಗಿತ್ತಲಾಗೆ ಫ್ಯಾಷನ್ ಆಗಿಹೋಗಿದೆ. ನಿಜವಾಗಿ ಹಾಗೆನ್ನಿಸಿಬಿಟ್ಟರೆ ತಾಪಡ್ತೋಪ್ ಸೋಡಾ ಕುಡಿದುಬಿಡಿ....ಅಲ್ಲಲ್ಲ ಸೋಡಾ ಚೀಟಿ ಕೊಟ್ಟುಬಿಡಿ. ಅದು ಬಿಟ್ಟು ಏನು ರಗಳೆ, ಗದ್ದಲ, ರಾಮಾ ರಂಪ. ನಿಮ್ಮ ನಿಮ್ಮ ಅಪ್ಪ ಅಮ್ಮನ ಮುಖ ನೋಡಿಯಾದರೂ ಸ್ವಲ್ಪ ಬದಲಾಗಿ. ಮೊನ್ನೆ ಒಬ್ಬ ಆಪ್ತ ಹಿರಿಯರು ಭಾಳ ಫೀಲ್ ಮಾಡಿಕೊಂಡರು. ಅದೆಷ್ಟೋ ಲಕ್ಷ ಲಕ್ಷ ಖರ್ಚು ಮಾಡಿ ಮಗನ / ಮಗಳ ಮದುವೆ ಮಾಡಿದ್ದರಂತೆ. ಮದುವೆಯಾಗಿ ಒಂದು ವರ್ಷವಾಗಿಲ್ಲ. ಆಗಲೇ ಅದು ಢಮಾರ್. ಲಕ್ಷ್ಮಿದೇವಿಯ ಹೆಸರಿನ ಹುಡುಗಿ ಲಕ್ಷ್ಮಿ ಪಟಾಕಿ, ಆನೆ ಪಟಾಕಿ ಎಲ್ಲ ಹೊಡೆದು ಹೊಡೆದು ಹಾಕಿಬಿಟ್ಟಿದ್ದಾಳೆ. ಹಾಗಂತ ಹುಡುಗನ ಕಡೆಯವರ ಪಿರಿಪಿರಿ. ಹುಡುಗ ರಾಕೆಟ್ ಹಾರಿಸಿದನೋ, ಭೂಚಕ್ರ ಹಚ್ಚಿದನೋ, ಅಥವಾ ಥಂಡಿ ಹಿಡಿದ ಪಟಾಕಿ ಹಾರುವದಿಲ್ಲ ನೋಡಿ ಹಾಗೆ ಟಿಸಿಮದ್ದಾಗಿ ಹೋದನೋ ಗೊತ್ತಿಲ್ಲ. ಒಟ್ಟಿನಲ್ಲಿ ಮದುವೆ ಮಟಾಶ್! ಕ್ಲೀನ್ ಡ್ರೈಕ್ಲೀನ್ ಡೈವೋರ್ಸ್.

ಕಾಲ ಎಲ್ಲಿಗೆ ಬಂದು ಮುಟ್ಟಿದೆ ಅಂದರೆ ಹೊಸ ಕಾರುಗಳಿಗೆ ಮೂರು ವರ್ಷ / ೩೬, ೦೦೦ ಮೈಲಿ ವಾರಂಟಿ ಇರುವ ಹಾಗೆ ಮದುವೆಗಳಿಗೂ ಕಂಡೀಶನ್ ಹಾಕುವ ಪರಿಸ್ಥಿತಿ ಬಂದಿದೆ. 'ನೀವು ಗಂಡ ಹೆಂಡತಿ ಮೂರು ವರ್ಷ ಸಂಸಾರ ಮಾಡಿ ತೋರಿಸಿ. ನಂತರ ದೊಡ್ಡ ಪ್ರಮಾಣದ ಸಮಾರಂಭ, ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ರಿಸೆಪ್ಶನ್ ಎಲ್ಲ ಮಾಡೋಣ. ಬೇಕಾದರೆ ಈಗಿನಕಿಂತ ಅದ್ದೂರಿಯಾಗಿಯೇ ಮಾಡೋಣ. ಮೊದಲು ನಮಗೆ ಮೂರು / ಐದು ವರ್ಷದ ವಾರಂಟಿ ಕೊಡಿ.'

ಏನ್ರೀ ಇದು ಅಸಹ್ಯ!? ಬೆಡ್ರೂಮಿನ ಕಥೆಗಳನ್ನು ಬೋರ್ಡ್ ರೂಮಿಗೆ ತರುತ್ತಾರೆ? ಇವರ ಲೈಫೇನು ಪ್ರೈವೇಟ್ ಲಿಮಿಟೆಡ್ ಕಂಪನಿಯಾ ಅಥವಾ ಪಬ್ಲಿಕ್ ಲಿಮಿಟೆಡ್ ಕಂಪನಿಯಾ????

ಇನ್ನೂ ಕೆಲವರಿದ್ದಾರೆ. ಗಂಡ ಹೆಂಡತಿ ಇಬ್ಬರೇ ಇರಬೇಕು ಅಂತ ಗಂಡನ ಅಮ್ಮ ಅಪ್ಪನನ್ನು ಮನೆ ಬಿಟ್ಟು ಓಡಿಸಿದವರು. ಅವರು ಇವರಿಗಿಂತ ಕೀಳು. ಅಂತಹ ಬಿಕನಾಶಿ ಮಹಿಳೆಯರಿಗೆ ದೂಸರಾ ಮಾತಿಲ್ಲದೇ ಸೋಡಾ ಚೀಟಿ ಕೊಟ್ಟವರು ನಮ್ಮ ಗೆಳೆಯರಲ್ಲೇ ಇದ್ದಾರೆ. ಹೆಂಡತಿ ಹಾಳಾಗಿ ಹೋಗಲಿ ಅಂತ ಅಪ್ಪ ಅಮ್ಮನ ಜೊತೆ ಇದ್ದಾರೆ. ಅವರಿಗೆ ಒಂದು ದೊಡ್ಡ ಶಬ್ಬಾಸ್! ಎಲ್ಲೋ ಅಪರೂಪಕ್ಕೆ ಒಬ್ಬರು ಬೀವಿ ಕಾ ಗುಲಾಂ ಆಗಿ ಅನಧೀಕೃತ ಮನೆಯಾಳತನಕ್ಕೆ ಮಾವನ ಮನೆಗೇ ಹೋಗಿಬಿಟ್ಟಿದ್ದಾರೆ. ಜೋರು ಕಾ ಗುಲಾಂ! ಅವರದು ಮನೆಯಾಳತನವೋ ಮನೆಹಾಳತನವೋ! ಅಂತವರ ಶ್ರಾದ್ಧವನ್ನು ಮನೆಯವರೇ ಮಾಡಿದ್ದಾರೆ. ನೊಂದುಕೊಂಡ ಅಮ್ಮ ಅಪ್ಪನೇ ಎಳ್ಳು ನೀರು ಬಿಟ್ಟು ಆ ಮಗ ಸತ್ತ ಅಂತ ಅಂದುಕೊಂಡು ಇನ್ನೊಬ್ಬ ಮಗನ ಜೊತೆ ಇದ್ದಾರೆ. ಅದು ಅವರಿಗೂ ಗೊತ್ತಿದೆ. ಜೀವಂತವಿದ್ದಾಗಲೇ ತಿಥಿ ಶ್ರಾದ್ಧ ಮಾಡಿಸಿಕೊಳ್ಳುವವರು ಸನ್ಯಾಸಿಗಳು. ಇವರೋ ಸಂಸಾರಿಗಳು! ಆಹಾ ಏನು ಭಾಗ್ಯವಯ್ಯಾ! ಹಿರಿಯರನ್ನು ಹಾಗೆ ಕಣ್ಣೀರು ಹಾಕಿಸಿದ ಈ ಮಂದಿ ಉದ್ಧಾರ ಆಗ್ತಾರೇನ್ರೀ???? ಮೈ ಫುಟ್.

ಬರೆದಿದ್ದು ತಪ್ಪೆನ್ನಿಸಿದರೆ ಕ್ಷಮಿಸಿಬಿಡಿ. ಓದಿದ ಈ ಒಂದು ವಕ್ರೋಕ್ತಿ ಏನೇನೋ ಬರೆಯಿಸಿಬಿಟ್ಟಿತು. ಯಾರನ್ನೂ ಟಾರ್ಗೆಟ್ ಮಾಡಿಕೊಂಡು ಬರೆದಿದ್ದಲ್ಲ. ಆದರೆ ಕೆಲವು couple ಗಳು ಬುದ್ಧಿಯಿಲ್ಲದವರಂತೆ ಹುಚ್ಚಾಟ ಆಡುವದನ್ನು ಮಾತ್ರ ಸಹಿಸಲು  ಸಾಧ್ಯವಿಲ್ಲ. ಅದೂ ಮೊನ್ಮೊನ್ನೆ ಆಪ್ತ ಹಿರಿಯ ಜೀವಗಳು ಇಂತವರ ವೈವಾಹಿಕ ಲಫಡಾ ಬಾಜಿಯ ವಿವರಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದಾಗ ಆಕ್ರೋಶ ಉಕ್ಕಿ ಬಂತು. ಹಿಂದೆ ಇಂತಹದೇ ಹಾರರ್ ಮೂವಿ ಮಂದಿಗೆ ಸಹಾಯ ಮಾಡಲು ಹೋಗಿ ನಾವೇ ಕೆಟ್ಟವರಾಗಿ unjustified ನೋವು ಅನುಭವಿಸಿದ್ದು ಕರಪರಾ ಅಂತ ಕೆರೆಕೆರೆದು ನೆನಪಿಗೆ ಬಂತು.

Thursday, July 16, 2015

'ಬಜರಂಗಿ ಭಾಯಿಜಾನ್', 'ಮದರಂಗಿ ಮಾಮಿಜಾನ್'

ಈ ವೀಕೆಂಡ್ ಅದೇನೋ 'ಬಜರಂಗಿ ಭಾಯಿಜಾನ್' ಅಂತ ಫಿಲಂ ಬರುತ್ತದೆಯಂತೆ. ಅದೂ ಸಲ್ಲು ಮಿಯಾಂದು.

ಮುಂದೆ???

'ಮದರಂಗಿ ಮಾಮಿಜಾನ್'
'ಪಂಚರಂಗಿ ಪಪ್ಪಾಜಾನ್'
'ಸಾತರಂಗಿ ಸಾಲಿಜಾನ್'

ಅಂತನೂ ಫಿಲಂ ಬರುತ್ತವಾ??? ಗೊತ್ತಿಲ್ಲ.

ಹೀಗಂತ ತಲೆಗೆ ಮದರಂಗಿ ಹೊಡೆದುಕೊಂಡಿರುವ ನಮ್ಮ ಮಾಮಿ ಜಾನ್ ಕೇಳಿದರು. ಅಯ್ಯೋ ಮಾಮಿ ಅಂದರೆ ನಮ್ಮ ರಿಶ್ತೆದಾರ್ ಮಾಮಿ ಅಲ್ಲರೀ. ಆಂಟಿ. ಒಬ್ಬ ಆಂಟಿ. ಸಾಬರ ಕೂಸಿನ ನಿಖಾಹಗೆ ಮದುಮಗಳ ಕೈಗೆ, ಮೈಗೆ ಮೆಹಂದಿ ಬಳೆಯಲು ಬಂದವ ಉಳಿದ ಮೆಹಂದಿಯನ್ನು ಕೆಬರೀ ಕೆಬರೀ ನಮ್ಮ ಮಾಮಿ ಜಾನ್ ತಲೆಗೆ ಬಳಿದು ಹೋಗಿದ್ದಾನೆ. ನಮ್ಮ ಮಾಮಿ ಜಾನ್ ಲಾಲ್ ಮುಂಡವಾಲಿ ಬಂದರ್ / ಕೆಂಪ ಮಂಡೆ ಮಂಗ ಆಗಿ ಕೂತಿದ್ದಾರೆ. ಅದೇನೋ ಏನೋ. ಮೊದಲು ಖರ್ರಗೆ ಡಾಯಿಂಗ್ ಮಾಡಿಸಿಕೊಳ್ಳುತ್ತಿದ್ದರು. ಇದ್ದ ಒಂದೆರಡೂ ಬಿಳಿ ಕೂದಲು ಕಾಣಬಾರದು ಅಂತ. ಮುಂದೆ ಅದು ಸಾಲಲಿಲ್ಲ ಅಂತ ಹೈಲೈಟ್ ಮಾಡಿಸಿದರು. ಅದು ಏನೋ ಕೆಮಿಕಲ್ ರಿಯಾಕ್ಷನ್ ಆಗಿ ಶಿವಾಯ ನಮಃ ಆಗಿ ತಲೆ ಪೂರ್ತಿ ಬೋಳಿಸಿಕೊಂಡು ಫಣಿಯಮ್ಮ ಆಗಿಬಂದರು. ನಾನು ಕೇಳಿದರೆ ತಿರುಪತಿಗೆ ಹೋಗಿದ್ದೆ ಅಂದರು. ನಾಮ ಮಾತ್ರ ಕಾಣಲಿಲ್ಲ. ಇನ್ನೊಬ್ಬರು ಕೇಳಿದರೆ ಧರ್ಮಸ್ಥಳಕ್ಕೆ ಹೋಗಿದ್ದೆ ಅಂದರು. ಮತ್ತೊಬ್ಬರು ಕೇಳಿದರೆ ನಂಜನಗೂಡಲ್ಲಿ ಮುಡಿ ಕೊಟ್ಟೆ, ತಲ್ಯಾಗ ಭಾಳ ಹೇನಾಗಿತ್ತು ಅಂದರು. ಹಾ!!! ಹಾ!!! ಆವಾಗಲೇ ಗೊತ್ತಾಯಿತು, ಈ ಯಮ್ಮಾ ಎಲ್ಲೂ ಹೋಗಿಲ್ಲ. ಚೀಪಿನಲ್ಲಿ ಮಾಳಮಡ್ಡಿ ರಾಯಲ್ ಹೇರ್ ಕಟ್ಟಿಂಗ್ ಸಲೂನಿನಲ್ಲಿ ಪಾಂಡು ಹಜಾಮ್ ಕಡೆ ಫಣಿಯಮ್ಮಾ ಕಟ್ ಮಾಡಿಸೈತೆ ಅಂತ. ಮುತ್ತೈದೆ ಹತ್ತಿರ ಹಾಗೆಲ್ಲ ಕೇಳೋಕೆ ಆಗಲ್ಲ ನೋಡಿ. ಹೂಂ! ಹೂಂ! ಅಂದು ಸುಮ್ಮನಾಗಿದ್ದೆವು. ಹಿಂದಿಂದ ತಟ್ಟಿಕೊಂಡು ನಕ್ಕಿದ್ದೆವು.

ಆದ್ರೆ ಈ ವೀಕೆಂಡ್ ಅದೇನೋ 'ಬಜರಂಗಿ ಭಾಯಿಜಾನ್' ಅಂದ ಕೂಡಲೇ ಈ ನಮ್ಮ ಕೆಂಪು ತಲೆ ಮದರಂಗಿ ಮಾಮಿ ಸರಕ್ಕನೇ ರೈಸ್ ಆಗಿ ನಾನು ಮದರಂಗಿ ಮಾಮಿಜಾನ್ ಇದ್ದಾಗ ಇದೆಂಗೆ ಬಜರಂಗಿ ಭಾಯಿಜಾನ್ ರಿಲೀಸ್ ಆಗ್ತಾ ಇದೆ ಅಂತ ರೊಳ್ಳೆ ತೆಗೆದರೆ ನಾವೇನು ಮಾಡೋಣ??? :) :)

ಇದೆಲ್ಲಾ ಆದ ಮೇಲೆ ನಮ್ಮ ಮಾಮಿಜಾನ್ ಎಲ್ಲ ಕೆಮಿಕಲ್ಸ್ ಬಿಟ್ಟು ಫುಲ್ ಪ್ಯೂರ್ ಮೆಹಂದಿ ಮಾತ್ರ ಹಚ್ಚಿಗೋತ್ತದೆ. ಅದೇ ಬೆಷ್ಟ ಅಂತೆ. 'ಅದು ಆಯುರ್ವೇದಿ. ನೀನು ಅಲೋ'ಪತಿ',' ಅಂದರೆ, 'ಸಾಕು ಸುಮ್ಮನಿರೋ,' ಅಂತದೆ. ಪಕ್ಕದಲ್ಲಿ ನಿಂತ ಪತಿ ಕೋಲು ಬಸವನ ಹಾಗೆ ಗೋಣಾಡಿಸುತ್ತ ಹ್ಯಾಂ??? ಅಂತ ಸೋಡಾಗ್ಲಾಸ್ ಮೇಲೇರಿಸುತ್ತದೆ.

ಜೈ ಬಜರಂಗಿ ಭಾಯಿಜಾನ್
ಜೈ ಮದರಂಗಿ ಮಾಮಿಜಾನ್!

ನೀತಿ: ನಿಮ್ಮ ಕೂದಲು, ಮಂಡೆ ಅಮೂಲ್ಯ. ಅದಕ್ಕೆ ಹಾಳುವರಿ ಕೃತಕ ಕೆಮಿಕಲ್ಸ್ ಹಚ್ಚಬೇಡಿ. ಬೇಕಾದರೆ ನೈಸರ್ಗಿಕ ಮೆಹಂದಿ / ಹೆನ್ನಾ / ಮದರಂಗಿ ಹಚ್ಚಿಕೊಳ್ಳಿ.

ಸತ್ಯ ಘಟನೆ ಮೇಲೆ ಆಧಾರಿತ. ತಲೆ ಬೋಳಿಸಿಕೊಳ್ಳುವ ಮಟ್ಟಕ್ಕೆ ಹೋಗಿರಲಿಲ್ಲ. ಆದರೆ ರಿಯಾಕ್ಷನ್ ಆಗಿ ಏನೇನೋ ಆಗಿತ್ತು.

Saturday, July 11, 2015

ಕನಕನ ಕಿಂಡಿಯಲ್ಲಿ ಕದ್ದು ನೋಡಿದವಳ ಖತರ್ನಾಕ್ ಕಾರ್ನಾಮೆ...ಅದೂ ನೈಟ್ ಬಸ್ಸಿನಲ್ಲಿ

[ಶಾಸನ 'ವಿಧಿಸದ' ಎಚ್ಚರಿಕೆ: ಸಭ್ಯ ಮನಸ್ಸಿನ ತುಂಟರಿಗೆ, ತುಂಟ ಮನಸ್ಸಿನ ಸಭ್ಯರಿಗೆ ಮಾತ್ರ ;) ]

ಆಕೆಗೆ ಹುಡುಗರು ಇಟ್ಟಿದ್ದ ಹೆಸರು KKKN. KKKN ಅಂದರೆ 'ಕನಕನ ಕಿಂಡಿಯಲ್ಲಿ ಕದ್ದು ನೋಡಿದಾಕಿ' ಅಂತ. ಅದು ಹೇಳಲಿಕ್ಕೆ ಸುಲಭವಾಗಲಿ ಅಂತ ಅಂತ್ಯದ N ಸೈಲೆಂಟ್ ಮಾಡಿಕೊಂಡು ಕೇವಲ KKK ಅಥವಾ ಕೆಕೆಕೆ ಅಂತ ಕೇಕೆ ಹಾಕಲು ಅನುಕೂಲವಾಗುವಂತೆ ಮಾಡಿಕೊಂಡಿದ್ದೆವು. ಹೈಸ್ಕೂಲಿನಲ್ಲಿದ್ದಾಗಿನ ಕಥೆ.

ಆಕೆಗೆ KKKN ಅಂದರೆ 'ಕನಕನ ಕಿಂಡಿಯಲ್ಲಿ ಕದ್ದು ನೋಡಿದಾಕಿ' ಅಂತ ಹೆಸರು ಬರಲು ಬರೋಬ್ಬರಿ ಕಾರಣವಿತ್ತು. ಕ್ಲಾಸಿನಲ್ಲಿ ಆಕೆ ಕೂಡುತ್ತಿದ್ದುದು ಕಿಡಕಿ ಪಕ್ಕ. ಸದಾ ಕಿಡಕಿಯಲ್ಲಿ ಹೊರಗೇ ನೋಡುತ್ತ ಕೂತುಬಿಡುತ್ತಿದ್ದಳು. ನಾವಂತೂ ಗಮನಿಸಿರಲಿಲ್ಲ. ನಮ್ಮ ಗಮನ ಬೇರೆ ಕಡೆಯೇ ಇರುತ್ತಿತ್ತು ಬಿಡಿ. ನಾವು ಗಮನಿಸಿರದಿದ್ದರೂ ಒಬ್ಬರು ಗಮನಿಸಿದ್ದರು. ಅವರೇ ನಮ್ಮ ಮಾಸ್ತರ್ರು. ಪಾಪ ಕಷ್ಟಪಟ್ಟು ಪಾಠ ಮಾಡುತ್ತಿದ್ದರು. ಹೇಳಿಕೊಳ್ಳುವ ಹಾಗೇನೂ ಮಾಡುತ್ತಿದ್ದಿಲ್ಲ. ಆದರೆ ವೃತ್ತಿಯಲ್ಲಿ ಶ್ರದ್ಧೆಯಿತ್ತು. ಅದಕ್ಕೆ ಕಿಮ್ಮತ್ತು ಕೊಡಲೇಬೇಕು ಬಿಡಿ. ಅಷ್ಟೊಂದು ಶ್ರದ್ಧೆಯಿಂದ, ಶ್ರಮ ವಹಿಸಿ ಪಾಠ ಮಾಡುತ್ತಿದ್ದಾಗ ಈ ಪುಣ್ಯಾತ್ಗಿತ್ತಿ ಹುಡುಗಿ ಕಿಡಕಿಯಲ್ಲಿದ್ದ ಕಿಂಡಿ ಮುಖಾಂತರ ಹೊರಗೆ ನೋಡುತ್ತ, ಹಗಲುಗನಸು ಕಾಣುತ್ತ, ಕನಸಿನಲ್ಲಿ ಕಂಡಿದ್ದು ಮಜವಾಗಿದ್ದರೆ ತನ್ನ ಪಾಡಿಗೆ ತಾನು ಪೆಕಪೆಕಾ ಅಂತ ನಗುತ್ತ ಕೂತರೆ ಮಾಸ್ತರರಿಗೆ ಉರಿಯುವದಿಲ್ಲವೇ?? ಅದಕ್ಕೇ ಒಂದು ದಿವಸ ಕೇಳಿಯೇಬಿಟ್ಟಿದ್ದರು - 'ಏನವಾ? ಕನಕನ ಕಿಂಡಿಯಾಗ ಯಾರನ್ನ ನೋಡಿಕೋತ್ತ ಕೂತಿ? ಎಷ್ಟು ಹೊತ್ತಿನಿಂದ ನೋಡ್ಲಿಕತ್ತಿ, ಏನು ಕಥಿ! ಹಾಂ! ಕೃಷ್ಣ ಕಂಡನೇನು ಕನಕನ ಕಿಂಡಿಯಾಗ? ಹಾಂ???' ಅವಳು ಹೇಳಿಕೇಳಿ ಹುಡುಗಿ. ಅದೂ ಒಂಬತ್ತನೇ ಕ್ಲಾಸ್. ಸಣ್ಣ ತರಗತಿಯಲ್ಲಿದ್ದರೆ ಹುಡುಗಿಯಾಗಿದ್ದರೂ ರಪ್ಪಂತ ಒಂದು ಕಪಾಳಕ್ಕೆ ಬಿಡುತ್ತಿದ್ದರೋ ಏನೋ. ಆದರೆ ಏಳನೇ ಕ್ಲಾಸಿನ ನಂತರ ಹುಡುಗಿಯರಿಗೆ ಕೇವಲ ಬೈಗಳು ಮಾತ್ರ. ಹೊಡೆತ, ಬಡಿತ, ಹಾಕ್ಕೊಂಡು ಒದೆಯುವದು, ಚಮಡಾ ನಿಕಾಲಿ ಮಾಡುವದು ಎಲ್ಲ ಗಂಡುಮಕ್ಕಳಿಗೆ ಮಾತ್ರ. ಆ ದೃಷ್ಟಿಯಲ್ಲಿ ಹುಡುಗಿಯರು ಲಕ್ಕಿ ಅನ್ನಿ.

ಆಕೆಯನ್ನು ಮಾಸ್ತರರು ಅಷ್ಟು ಕೇಳಿದ್ದೇ ಕೇಳಿದ್ದು ಇಡೀ ಕ್ಲಾಸ್ ಹುಯ್ಯ ಅಂತ ನಕ್ಕಿತ್ತು. ಮರುದಿವಸದಿಂದ ಅವಳಿಗೆ KKK ಅಂತ ನಾಮಕರಣವಾಗಿಯೇ ಹೋಯಿತು. ಅವಳಿಗೆ ಗೊತ್ತಿರಲಿಕ್ಕಿಲ್ಲ ಬಿಡಿ. ಆ ಘಟನೆ ಸುತ್ತ ಏನೇನೋ ಜೋಕುಗಳು. 'ಲೇ, ಅಕಿ ಮನಿ ಬಾಜೂಕಿನ ಕೋಳಿಗಳು ಕೋಕೋಕೊಕ್ಕೋ ಅಂತ ಕೂಗುದಿಲ್ಲಲೇ!' ಅಂತ ಒಬ್ಬವ ಹೇಳುತಿದ್ದ. 'ಕೋಳಿಗಳು ಕೊಕೊಕೋ ಅಂತ ಕೂಗೋದಿಲ್ಲ ಅಂದ್ರ ಮತ್ತೆಂಗ ಕೂಗ್ತಾವಲೇ ಮಗನs?' ಅಂತ ಕೇಳಿದರೆ, ಕಿಡಿಗೇಡಿ ದೋಸ್ತ, 'KKK ಮನಿ ಬಾಜೂಕಿನ ಕೋಳಿಗಳು ಮಾರಾಯಾ. ಅವೂ ಸಹಿತ ಕೆಕೆಕೆ ಅಂತss ಕೂಗ್ತಾವ,' ಅಂತ ಮಷ್ಕಿರಿ ಮಾಡುತ್ತಿದ್ದ. ಆಗೊಂದಿಷ್ಟು ದಿನ ಎಲ್ಲ ಮಷ್ಕಿರಿ KKK ಸುತ್ತಲೇ ಗಿರಕಿ ಹೊಡೆಯುತ್ತಿತ್ತು.

ನಾವುಗಳು KKK ಅಂತ ಹೆಸರಿಟ್ಟಿದ್ದನ್ನು ಸಾರ್ಥಕ ಮಾಡಲೋ ಎನ್ನುವಂತೆ ಆಕೆ ಸಿಕ್ಕಾಪಟ್ಟೆ ಪಿಕಿಪಿಕಿ ಗಿರಾಕಿಯಾಗಿ ತಯಾರಾಗಿಬಿಟ್ಟಳು. ಅದನ್ನು ನೋಡಿ ನಾವು ಹುಡುಗರೇ ಬೆಚ್ಚಿಬಿದ್ದಿದ್ದೆವು. ಹುಡುಗರಾದ ನಾವೇ ಕದ್ದು ಮುಚ್ಚಿ, ಅವಕಾಶ ಸಿಕ್ಕಾಗ, ಅದೂ ಜೊತೆಗೆ ರೇಗಿಸಲು ಯಾರೂ ಇಲ್ಲ ಅಂತ ಖಾತ್ರಿಯಿದ್ದಾಗ ಮಾತ್ರ, ಕದ್ದು ಎಲ್ಲೋ ಸುಂದರಿಯರನ್ನು ನೋಡಿ ಖುಷಿಪಡುತ್ತಿದ್ದರೆ ಈಕೆ ಮಾತ್ರ ಖುಲ್ಲಂ ಖುಲ್ಲಾ ಆಗಿ ಹುಡುಗರನ್ನು ನೋಡುತ್ತ ಕೂತುಬಿಡುತ್ತಿದ್ದಳು. ಕ್ಲಾಸ್ ಇದ್ದರೂ ಓಕೆ. ಮಾಸ್ ಇದ್ದರೂ ಓಕೆ. ಕನಕನ ಕಿಂಡಿಯಲ್ಲಿ ಕೃಷ್ಣ ಕಂಡರೂ ಓಕೆ, ಅವನ ತಮ್ಮ ಬಲರಾಮ ಕಂಡರೂ ಓಕೆ, ಅವನ ಮಾವ ಕಂಸ ಕಂಡರೂ ಓಕೆ, ಅಕ್ರೂರ, ಚಾಣೂರ ಯಾರು ಕಂಡರೂ ಓಕೆ ಓಕೆ. ನಮ್ಮ ಕನಕನ ಕಿಂಡಿವಾಲಿಯ ನೋಟ ಮಾತ್ರ ದಿಟ್ಟ, ನೇರ ಮತ್ತು ನಿರಂತರ. ಆಕೆ ಹಾಗೆ ಮುಲಾಜಿಲ್ಲದೆ ಹುಡುಗರನ್ನು ಪಿಕಿಪಿಕಿ ನೋಡುತ್ತಿದ್ದಾಗ ನಮ್ಮ ಆಪ್ತ ಮಹಿಳೆಯೊಬ್ಬರು ನೆನಪಾಗುತ್ತಿದ್ದರು. ಅವರೋ ಸಿಕ್ಕಾಪಟ್ಟೆ ಸಂಪ್ರದಾಯಸ್ತರು. ಅವರ ಮಗಳಿಗೆ ಆಗ ಇನ್ನೂ ಏಳೋ ಎಂಟೋ ವರ್ಷ ವಯಸ್ಸು ಮಾತ್ರ. ಅಂತವಳಿಗೂ ಅವರ ಉಪದೇಶ. ಅದೂ ತೆಲುಗು ಮಿಶ್ರಿತ ಬೆಂಗಳೂರು ಕನ್ನಡದಲ್ಲಿ. ಯಾಕೆಂದರೆ ಅವರು ಆಕಡೆಯವರು. 'ಗಂಡ್ಮಕ್ಕಳನ್ನ ಚೂಡ್ವದ್ದು. ತಲೆ ತಗ್ಗಿಸಿಕೋಣಿ ಸೀದಾ ಗಂಭೀರಕ್ಕ ಅಂಗಡಿಗೆ ಪೋ. ಸಾಮಾನು ತಿಸ್ಕೋಣಿ ಗಂಭೀರಕ್ಕ ರಾ. ತಲೆ ಎತ್ತ್ವದ್ದು. ಹುಷಾರ್!' ಅಂತ ಆಂಟಿಯ ಉಪದೇಶ. ಶಿವನೇ ಶಂಭುಲಿಂಗ! ಕೇಳಿದಾಗೊಮ್ಮೆ ನಕ್ಕು ನಕ್ಕು ಸಾಕಾಗುತ್ತಿತ್ತು. ಜಿಗಿದು ಬಿದ್ದರೆ ಸಿಗುವಷ್ಟು ಹತ್ತಿರದಲ್ಲಿದ್ದ ಕಿರಾಣಿ ಅಂಗಡಿಗೆ ಅಷ್ಟು ಚಿಕ್ಕ ವಯಸ್ಸಿನ ಹುಡುಗಿಯನ್ನು ಕಳಿಸಬೇಕಾದರೂ ಆ ಮಹಾತಾಯಿ ಆ ರೀತಿ ಉಪದೇಶ ಮಾಡಿಯೇ ಕಳಿಸುತ್ತಿದ್ದಳು. 'ಗಂಡು ಹುಡುಗರನ್ನು ನೋಡಬೇಡ. ತಲೆ ತಗ್ಗಿಸಿಕೊಂಡು ಗಂಭೀರವಾಗಿ ಅಂಗಡಿಗೆ ಹೋಗು. ಸಾಮಾನು ತೆಗೆದುಕೊಂಡು ಗಂಭೀರವಾಗಿ ಬಾ. ತಲೆ ಎತ್ತಬೇಡ. ಹುಷಾರ್!' ಅಂತ ಅವರ ತೆಲುಗು ಮಿಶ್ರಿತ ಬ್ಯಾಂಗಲೂರ್ ಕನ್ನಡದ ಅರ್ಥ.

ಹಾಗೆ ತಲೆ ಎತ್ತದೇ, ಕಣ್ಣು ಬಿಡದೇ ಇರುವ ಚಿಣ್ಣ ವಯಸ್ಸಿನ ಹುಡುಗಿಯರು ಒಂದು ಕಡೆಯಾದರೆ ದಿಟ್ಟಿಸಿ ಪಿಕಿಪಿಕಿ ನೋಡುತ್ತಿದ್ದ ಈ KKK ತರಹದವರು ಇನ್ನೊಂದು ಕಡೆ. ನಮ್ಮ ಶಾಲೆಯ ಭಾಷೆಯಲ್ಲಿ ಎಲ್ಲರಿಗೂ ಗಿಚ್ಚಾಗಿ ಸಿಗ್ನಲ್ ಕೊಡುವ ಮಂದಿಗೆ ಸಿಗ್ನಲ್ ಸಿದ್ದಪ್ಪ / ಸಿದ್ದವ್ವ ಅನ್ನುತ್ತಿದ್ದರು. ಒಬ್ಬೊಬ್ಬರು ಒಂದೊಂದು ತರಹ.

ಅಂದು ಕನಕನ ಕಿಂಡಿಯಲ್ಲಿ ಕದ್ದು ನೋಡುತ್ತಿದ್ದಾಕೆ SSLC ಮುಗಿದ ನಂತರ ಎಲ್ಲಿ ಹೋದಳು ಅಂತ ಗೊತ್ತೇ ಇರಲಿಲ್ಲ. ಈಗ ಸುಮಾರು ದಿವಸದ ಹಿಂದೆ ಮಿತ್ರರ ಜೊತೆ ಪಾರ್ಟಿ ಮಾಡುತ್ತಿದ್ದಾಗ ಹಳೆಯ ನೆನಪುಗಳ ಭಂಡಾರ ಬಿಚ್ಚಿಕೊಂಡು ಕೂತಿದ್ದೆವು. ಆಗ ಮತ್ತೆ KKK ನೆನಪಿಗೆ ಬಂದಳು. ನೆನಪಿನಲ್ಲಿ ಬಂದವಳು ಮಾತಿನಲ್ಲೂ ಬಂದಳು. ಊರಿಗೆ ಬಂದವಳು ನೀರಿಗೂ ಬಂದ ಮಾದರಿಯಲ್ಲಿ. ನಾನು KKK ಅಂತ ನಾಮಕರಣವಾಗಿದ್ದ ಘಟನೆಯನ್ನು ನೆನಪಿದೆ. KKK ಶಾಲೆ ಬಿಟ್ಟ ನಂತರ ಏನು ಮಾಡಿದಳು ಅನ್ನುವದನ್ನು ಗೆಳೆಯರು ಬಿಚ್ಚಿಟ್ಟರು.

ಬೇರೆ ಕಾಲೇಜಿನಲ್ಲಿ ಪಿಯೂಸಿ ಮುಗಿಸಿದಳು. ಡೊನೇಷನ್ ಕೊಟ್ಟು ಇಂಜಿನಿಯರಿಂಗ್ ಸೇರಿದಳು. ಅಲ್ಲಿ ಮತ್ತೆ ಕನಕನ ಕಿಂಡಿಯಲ್ಲಿ ಕದ್ದು ನೋಡಿದ್ದರ ಪರಿಣಾಮವೋ ಏನೋ ಗೊತ್ತಿಲ್ಲ ಲವ್ ಮಾಡಿಬಿಟ್ಟಳು. ಸಿಕ್ಕಾಪಟ್ಟೆ ಸುಂದರ ಹುಡುಗನನ್ನೇ ಲವ್ ಮಾಡಿಬಿಟ್ಟಳಂತೆ. ಯಾರು, ಏನು ಅಂತ ಎಲ್ಲ ಹೇಳಿದರು. ನನಗೆ ಗೊತ್ತಾಗಲಿಲ್ಲ. ಯಾರೋ ಏನೋ? ಇಂಜಿನಿಯರಿಂಗ್ ಕಾಲೇಜಿನ ಕನಕನ ಕಿಂಡಿಯಲ್ಲಿ ಯಾರು ಕಂಡರೋ ಏನೋ? ಆಕೆಯಂತೂ ಕನಕನಂತೆ ತುಂಬಾ choosy ಅಲ್ಲವೇ ಅಲ್ಲ. ಕಿಂಡಿಯಲ್ಲಿ ಕೃಷ್ಣನೇ ಕಾಣಬೇಕು ಅಂತ ಏನೂ ಇಲ್ಲ. ಕೃಷ್ಣನಿಂದ ಹಿಡಿದು ಮುದಿ ಮುದಿ ಹಪ್ಪಾದ ಭೀಷ್ಮಜ್ಜ ಆದರೂ ಸರಿ, ದೊಡ್ಡ ಚಂಡಿಕೆ ಬಿಟ್ಟಿದ್ದ ದ್ರೋಣಾಚಾರಿಯಾದರೂ ಸರಿ. ಕಿರಾತಕನಂತಹ ದುರ್ಯೋಧನನೂ ಓಕೆ. ಸೀರೆ ಬಿಚ್ಚೋ ದುಶ್ಶಾಸನ?? ಅದು ಗೊತ್ತಿಲ್ಲ. ಕಿಂಡಿಯಲ್ಲಿ ಕಂಡವರಿಗೆ ಒಂದು ಪಿಕಿಪಿಕಿ ಲುಕ್ ಕೊಟ್ಟೇಬಿಡುತ್ತಿದ್ದಳು. ಹಾಗೆಯೇ ಮಾಡಿ ಯಾರೋ ಚಂದದ ಮಾಣಿಯನ್ನು ಪಟಾಯಿಸಿಬಿಟ್ಟಿದ್ದಳು.

ಅಷ್ಟು ಚಂದದ ಹುಡುಗ ಈಕೆಗೆ ಹೇಗೆ ಪಿಗ್ಗಿ ಬಿದ್ದ ಅಂತ ಕೇಳಿದರೆ, ಅರ್ಧ ಬಾಟಲಿ ರೆಡ್ ಲೇಬಲ್ ಸ್ಕಾಚ್ ವಿಸ್ಕಿ ಕುಡಿದು ಮುಗಿಸಿದ್ದ ಗೆಳೆಯರು ಅವರದ್ದೇ ಗಾವಟಿ ಭಾಷೆಯಲ್ಲಿ ಕೆಟ್ಟಾ ಕೊಳಕಾಗಿ ಹೇಳಿಬಿಟ್ಟರು. ಸಣ್ಣ ದನಿಯಲ್ಲಿ ಹೇಳುವಂತೆ ಕೇಳಿಕೊಂಡೆ. ಬಾರಿನಲ್ಲಿ ಪಕ್ಕದ ಟೇಬಲ್ ಮೇಲೆ ಕುಳಿತವರು ಕೇಳಿದರೆ ಎದ್ದು ಬಂದು ಒದ್ದಾರು ಅಂತ ಅಂಜಿಕೆ.

'ಏ, ನಿನಗೇನು ಗೊತ್ತೋ!? ಅಕಿ KKK ಆ ಹುಚ್ಚ ಸೂಳೆಮಗನ್ನ ಪಕ್ಕಡದಾಗ ಹಿಡಿದಾಂಗ ಹಿಡಿದಿದ್ದಳು ನೋಡು. ಕಾಲೇಜಿನ್ಯಾಗ ಒಂದೇ ಟೇಬಲ್ ಮ್ಯಾಲೆ ಇಬ್ಬರೂ ಪ್ರಾಕ್ಟಿಕಲ್ ಮಾಡವರು. ಇಕಿ ಕೈ ಮಾತ್ರ ಟೇಬಲ್ ಕೆಳಗೇ ನೋಡಪಾ. ದೇಹ ಮೇಲೆ, ಕೈ ಮಾತ್ರ ಕೆಳಗೇ! ಪ್ರಾಕ್ಟಿಕಲ್ ಮಾಡಿಸೋ ಮಾಸ್ತರ್ ಬಂದು, ಹುಡುಗನ ಮುಂದ ನಿಂತು, 'ಏನು ಇದು?? ಬರೇ ತಪ್ಪು ತಪ್ಪು ರೀಡಿಂಗ್ ಬಂದದ. ಯಾಕ ಹೀಂಗ???' ಅಂತ ಕೇಳಿದರೆ ಇಕಿ KKK ಕಿಸಿಕಿಸಿ ನಗಾಕಿ. ಅಕಿ boyfriend ಅಂತೂ ಬಿಡು. ಕೆಟ್ಟ ಮಸಡಿ ಮಾಡಿ, 'ಏ ಇಕಿನ ಬಿಡ. ಪ್ಲೀಸ್ ಬಿಡ,' ಅಂತಿದ್ದಾ. ಇಕಿ ಬಿಟ್ಟರೆ ಕೇಳು. ಅವನೌನ್! ಉಡಾ ಹಿಡದಂಗ ಹಿಡಕೊಳ್ಳತ್ತಿದ್ದಳು. ಲೆಕ್ಚರ್ ಕ್ಲಾಸಿನ್ಯಾಗ ಬಿಟ್ಟೂ ಬಿಡದೇ ಪಿಕಿಪಿಕಿ ನೋಡೋದು. ಪ್ರಾಕ್ಟಿಕಲ್ ಕ್ಲಾಸಿನ್ಯಾಗ ಟೇಬಲ್ ಬುಡಕ ಕೆಳಗ ಕೈಬಿಟ್ಟು ಹಿಡ್ಕೋಬಾರದ್ದನ್ನ ಹಿಡಿಯೋದು. ಹಿಡ್ಕೊಂಡು ಒತ್ತುವರಿ ಮಾಡೋದು. ಒತ್ತಾಕಿ ಇಕಿ. worry ಅವಂಗ. ಒಟ್ಟಿನಾಗ ಒತ್ತುವರಿ. ಇಂಜಿನಿಯರಿಂಗ್ ನಾಲ್ಕ ವರ್ಷ ಹೀಂಗss ಮಾಡಿದರೆ ಏನೋ ದೋಸ್ತ? ಹಾಂ? ಎಂತಾ ಸನ್ಯಾಸಿ ಸೂಳಿಮಗಾ ಆದರೂ ಬಿದ್ದೇಬೀಳ್ತಾನ. ಅವನೂ ಬಿದ್ದ. ಇಕಿ ಮಾಡುತ್ತಿದ್ದ ಒತ್ತುವರಿ ಸಾಕಾಗಿ ಹೋಗಿ, 'ಹೂಂ, ನಮ್ಮವ್ವಾ. ನಾ ರೆಡಿ. ಲವ್ ಮಾಡೋಣ ನಡಿ,' ಅಂತ ಅವನೂ ಲವ್ ಮಾಡಿಬಿಟ್ಟ ನೋಡಪಾ,' ಅಂತ KKK ಲವ್ ಸ್ಟೋರಿ ಹೇಳಿದ ಮಿತ್ರ, 'ಏ, ಶಂಭೂ, ಒಂದು ಚಿಲ್ಲಿ ಚಿಕನ್ ತೊಗೊಂಡು ಬಾರಪಾ,' ಅಂತ ನಾನ್ವೆಜ್ ಚಕಣಾ ಆರ್ಡರ್ ಮಾಡಿ, 'ನಿನಗೇನು ಬೇಕಪಾ ಭಟ್ಟ ಸೂಳಿಮಗನ? ಇಪ್ಪತ್ತು ವರ್ಷಾತು ಅಮೇರಿಕಾದಾಗಿದ್ದು. ನಾನ್ವೆಜ್ ತಿನ್ನೋದು ದೂರ ಉಳೀತು. ಚಿಕನ್ ಸಹಿತ ತಿನ್ನೋದಿಲ್ಲಲ್ಲೋ ಮಾರಾಯಾ ನೀ. ನಿನಗ ಏನು ತರಿಸಲಿ?' ಅಂತ ಕೇಳಿ, ಅವರೇ ಡಿಸೈಡ್ ಮಾಡಿ, 'ಏ ಶಂಭೂ. ಒಂದು ಪೀನಟ್ ಮಸಾಲಾ. ಇಲ್ಲೆ ನಮ್ಮ ದೋಸ್ತಗ,' ಅಂತ ನನಗೆ ಪೀನಟ್ ಮಸಾಲಾ ಅಂದರೆ ಮಸಾಲೆ ಶೇಂಗಾ ವಿತ್ ಕೋಸಂಬರಿ ತರಿಸಿದರು. ಚಿಕನ್ ಯಾವಾಗ ವೆಜಿಟೇರಿಯನ್ ಆಯಿತು ಅಂತ ತಿಳಿಯಲ್ಲ. ಕಥೆ ಹೇಳುತ್ತಿದ್ದ ದೋಸ್ತನ ಕೇಳೋಣ ಅಂದರೆ ಅವನ ಹಣೆ ಮೇಲೆ ಸ್ಮಾರ್ತ ಬ್ರಾಹ್ಮಣರ ಟ್ರೇಡ್ಮಾರ್ಕ್ ನಿಂಬೆ ಹೋಳಿನಾಕಾರದ ತಿಲಕ ಎದ್ದು ಕಂಡಿತು. ಅದನ್ನು ಧರಿಸಿದ್ದ ಶುದ್ಧ ಭಟ್ಟ ಮಾತ್ರ ನಿಂಬೆಹೋಳನ್ನು ಚಿಕನ್ ಮೇಲೆ ಹಿಂಡೇ ಹಿಂಡುತ್ತಿದ್ದ. 'ಅವನೌನ್! ಎಂತಾ ಲಿಂಬಿ ಹಣ್ಣಿನ ಚೂರು ಕೊಡ್ತಾರಲೇ. ರಸಾನೇ ಇಲ್ಲ!' ಅಂತ ಬೈದುಕೊಳ್ಳುತ್ತ ಕಥೆ ಮುಂದುವರಿಸಿದ. KKK ಹುಡುಗಿಯ ಇಂಜಿನಿಯರಿಂಗ್ ಡಿಗ್ರಿ ನಂತರದ ಕಥೆ.

ನಾಲ್ಕು ವರ್ಷದ ಇಂಜಿನಿಯರಿಂಗ್ ಮುಗಿಯುವ ಹೊತ್ತಿಗೆ ಎಲ್ಲಾ ಮಾಮಲಾ ಫಿಟ್ಟಾಗಿತ್ತು. ಹುಡುಗನಿಗೆ ನೌಕರಿ ಇಲ್ಲದಿದ್ದರೂ ಛೋಕರಿ ಅಂತೂ ಸಿಕ್ಕಿತ್ತು. ಛೋಕರಿಗೆ ಕಚೋರಿಯಂತಹ ಹುಡುಗ ಸಿಕ್ಕಿದ್ದ. ಈಗ ನೌಕರಿ ಹುಡುಕಬೇಕು. ಇಬ್ಬರೂ ಬೆಂಗಳೂರು ಬಸ್ ಹತ್ತಿದರು. ಬೇಕಲ್ಲ ಸಾಫ್ಟ್ವೇರ್ ನೌಕರಿ? ಅದಕ್ಕೇ ಬೆಂಗಳೂರಿಗೆ ಪಯಣ.

ನೌಕರಿ ಹುಡುಕುತ್ತ ಅಲೆದವರಿಗೆ ಒಂದೇ ಕಂಪನಿಯಲ್ಲಿ ನೌಕರಿ ಸಿಗಬೇಕೇ! ಏನು ಲಕ್ ನೋಡ್ರೀ. ಆ ಕಂಪನಿ ಮಾಲಿಕನೋ ದೊಡ್ಡ ಪಾಕಡಾ ಮನುಷ್ಯ. ಹೊಸ ಇಂಜಿನಿಯರಿಂಗ್ ಪದವೀಧರರಿಗೆ ಅಷ್ಟು ಸುಲಭವಾಗಿ ನೌಕರಿ ಸಿಗುವದಿಲ್ಲ ಎನ್ನುವದನ್ನೇ exploit ಮಾಡಿಕೊಳ್ಳುತ್ತಿದ್ದ. ಧಾರವಾಡ ಕಡೆಯಿಂದ ಹೋದ ಮಂದಿಗೆ ಕೆಲಸ ಕೊಟ್ಟು, ಮೊದಲು ಫುಲ್ ಬಿಟ್ಟಿಯಾಗಿ, ನಂತರ ಶೇಂಗಾ ಬೀಜದ ಹಾಗೆ ಸಣ್ಣ ಪಗಾರ್ ಕೊಟ್ಟು, ತಾನು ಮಾತ್ರ ರೊಕ್ಕಾ ಮಾಡಿಕೊಂಡು ಮಾಲಾಮಾಲ್ ಆಗಿಹೋದ. ಅಂತವನ sweatshop ಮಾದರಿಯ ಕಂಪನಿಯಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿತು. ಹಾಗಂತ ಗೆಳೆಯರು ಹೇಳಿದರು. ಧಾರವಾಡದಿಂದ ೧೯೯೦ ರಲ್ಲೇ disconnect ಆಗಿದ್ದ ನಮಗೆ ಅದೆಲ್ಲ ಗೊತ್ತಿರಲಿಲ್ಲ. ಸುಮ್ಮನೆ ತಲೆಯಾಡಿಸುತ್ತ, ಶೇಂಗಾ ಮಸಾಲಾ ತಿನ್ನುತ್ತ, ಅಮೇರಿಕಾದಲ್ಲಿ ಸುಲಭವಾಗಿ ಸಿಗದ ಕಿಂಗ್ ಫಿಷರ್ ಬಿಯರ್ ಕುಡಿಯುತ್ತ, ಕಥೆ ಕೇಳುತ್ತ ಕುಳಿತಿದ್ದೆ. ಕಥೆ ಮುಂದುವರೆಯಿತು. ವಿಸ್ಕಿ ಮುಗಿದಿತ್ತು. ಮತ್ತೊಂದು ಬಾಟಲಿ ಓಪನ್ ಮಾಡಿ ಗೆಳೆಯರ ಗ್ಲಾಸಿಗೆ ಬಗ್ಗಿಸಿದೆ. ಕಥೆ ಹೇಳುತ್ತಿರುವವರು ಅವರು. ಅಂತಹ ಪುಣ್ಯಾತ್ಮರ ಬಾಯಾರಬಾರದು ನೋಡಿ. ಸೋಡಾ ಗೀಡಾ ಹಾಕಿ ರೆಡಿ ಮಾಡಿ ಕೊಟ್ಟೆ. ಸಿಗರೇಟಿನ ಒಂದು ಉದ್ದನೆ ದಮ್ ಎಳೆದು, ಸುರುಳಿಸುರುಳಿಯಾಗಿ ಮೇಲೆ ಹೊಗೆಬಿಟ್ಟ ಗೆಳೆಯರು ಕಥೆ ಮುಂದುವರೆಸಿದರು.

ಲವ್ ಬರ್ಡ್ಸ್ ಬೆಂಗಳೂರಿಗೆ ಹೋಗಿ, ಏನೋ ಒಂದು ನೌಕರಿ ಹುಡುಕಿಕೊಂಡು, ಸೆಟಲ್ ಏನೋ ಆದರು. ಆದರೆ ಧಾರವಾಡದ ಮೋಹ. ಹಾಗಾಗಿ ವಾರಾಂತ್ಯದಲ್ಲಿ ಧಾರವಾಡಕ್ಕೆ ಪಯಣ. ಶುಕ್ರವಾರ ರಾತ್ರಿ ಬಸ್ ಹತ್ತುತ್ತಿದ್ದರು. ಶನಿವಾರ ಬೆಳಿಗ್ಗೆ ಧಾರವಾಡದಲ್ಲಿ. ಶನಿವಾರ, ರವಿವಾರ ಎರಡು ದಿನ ಕಳೆದು ಮತ್ತೆ ರವಿವಾರ ರಾತ್ರಿ ಬೆಂಗಳೂರು ಬಸ್ ಹತ್ತಿದರೆ, ಸೋಮವಾರ ಬೆಳಿಗ್ಗೆ ನೌಕರಿಗೆ ಹೋಗಲಿಕ್ಕೆ ಸರಿಯಾಗುತ್ತಿತ್ತು.

ಅದೇ ಪ್ರಕಾರ ಒಂದು ಶುಕ್ರವಾರ ರಾತ್ರಿ ಇಬ್ಬರೂ ಬಸ್ ಹತ್ತಿದ್ದಾರೆ. ಪ್ರೈವೇಟ್ ನೈಟ್ ಬಸ್. ಆ ಬಸ್ಸಿನಲ್ಲಿ ಇವರಂತೆಯೇ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಧಾರವಾಡದ ಇನ್ನೂ ಕೆಲವರು ಇದ್ದರು. ಈಗ ನನಗೆ ಕಥೆ ಹೇಳುತ್ತಿರುವವರೂ ಇದ್ದರಂತೆ. ಹಾಗಾಗಿ ಇದು ಆಂಖೋ ದೇಖಾ ಹಾಲ್. ಕಣ್ಣಾರೆ ಕಂಡಿದ್ದು.

ಬಸ್ ಹತ್ತಿದ ಲವ್ ಬರ್ಡ್ಸ್ ಬೇರೆ ಬೇರೆಯಾಗಿ ಕೂಡಲು ಸಾಧ್ಯವೇ? ಸಾಧ್ಯವೇ ಇಲ್ಲ. ನೋ ಚಾನ್ಸ್. ಒಬ್ಬರ ಪಕ್ಕ ಒಬ್ಬರು ಕೂತಿದ್ದಾರೆ. ರಾತ್ರಿ ಬಸ್ ಹೊರಟಿದೆ. ಥಂಡಿ ಇರಬೇಕು. ಒಂದು ಶಾಲೋ (shawl) ಅಥವಾ ಏನೋ ದೊಡ್ಡ ವಸ್ತ್ರವೊಂದನ್ನು ತೆಗೆದು ಇಬ್ಬರೂ ಹೊದ್ದುಕೊಂಡಿದ್ದಾರೆ. ಒನ್ ಬೈ ಟೂ ಮಾಡಿಕೊಂಡಿದ್ದಾರೆ. ಇಬ್ಬರೂ ಒಂದೇ ಶಾಲಿನಲ್ಲಿ ಮೈ ಹುದುಗಿಸಿಕೊಂಡು ಯಾವದೋ ಲೋಕದಲ್ಲಿ ಕಳೆದು ಹೋಗಿದ್ದಾರೆ. ಆ ಪುಣ್ಯಾತ್ಮ ಹುಡುಗ ವಾಕ್ಮನ್ ಅಥವಾ ಡಿಸ್ಕಮನ್ ಅನ್ನುವ ಮ್ಯೂಸಿಕ್ ಪ್ಲೇಯರ್ ಬೇರೆ ತಂದಿದ್ದ. ಒಂದು earphone ತನ್ನ ಕಿವಿಯಲ್ಲಿ ಹೆಟ್ಟಿಕೊಂಡಿದ್ದಾನೆ. ಮತ್ತೊಂದನ್ನು ಗೆಳತಿ ಉರ್ಫ್ KKK ಕಿವಿಯಲ್ಲಿ ತುರುಕಿದ್ದಾನೆ. ಮಸ್ತಾಗಿ ಮ್ಯೂಸಿಕ್ ಕೇಳುತ್ತ, ಮಜಾ ಮಾಡುತ್ತಿದ್ದಾರೆ. ಬಸ್ ಧಾರವಾಡದ ಕಡೆ ಹೊರಟಿದೆ.

ಈ ಜೋಡಿಯ ಪಕ್ಕದ ಪ್ರಯಾಣಿಕರಿಗೆ ಸ್ವಲ್ಪ ಸಮಯದ ನಂತರ ಕಿರಿಕಿರಿಯಾಗಿದೆ. ನಿದ್ದೆ ಮಾಡೋಣ ಅಂದರೆ ಈ ಪ್ರೇಮಿಗಳದ್ದು ಶುದ್ಧ ಗದ್ದಲ. ಕೇವಲ ನಗೆ, ಮಾತು ಮಾತ್ರ ಆಗಿದ್ದರೆ ಹೆಂಗೋ ಸಹಿಸಿಕೊಂಡು ಇರುತ್ತಿದ್ದರೋ ಏನೋ. KKK ಹುಡುಗಿ ಜೋರಾಗಿ ಚೀರಲು ಶುರುಮಾಡಿಬಿಟ್ಟಿದ್ದಾಳೆ. ಬೇಕಾದರೆ ಗಮನಿಸಿ ನೋಡಿ. ಕಿವಿಯಲ್ಲಿ earphone ಹೆಟ್ಟಿಕೊಂಡು ಸಂಗೀತ ಕೇಳುವವರು ಸ್ವಲ್ಪ ಜೋರಾಗಿಯೇ ಮಾತಾಡುತ್ತಾರೆ. ಅವರಿಗೆ ಅವರ ಕಿವಿಯಲ್ಲಿ ಮೊಳಗುತ್ತಿರುವ ಸಂಗೀತ ಬಿಟ್ಟರೆ ಮತ್ತೇನೂ ಕೇಳುವದಿಲ್ಲ. ಬೇರೆಯವರಿಗೂ ಹಾಗೆಯೇ ಅಂತ ತಿಳಿದು ಕೇಳುವವರ ಕಿವಿ ಕಿತ್ತು ಹೋಗುವಷ್ಟು ಜೋರಾಗಿ ಮಾತಾಡುತ್ತಾರೆ. ಇಲ್ಲಿಯೂ ಹಾಗೇ ಆಗಿದೆ. ಆ ಹುಡುಗಿಗೆ ಆ ಹುಡುಗನಿಗೆ ಏನೋ ಹೇಳಬೇಕು. ಇಬ್ಬರೂ ಸಂಗೀತ ಕೇಳುತ್ತಿದ್ದಾರೆ. ಅದಕ್ಕೇ ಜೋರುಜೋರಾಗಿ ದೊಡ್ಡ ದನಿಯಲ್ಲಿ ಮಾತಾಡುತ್ತಿದ್ದಾರೆ. ಅವರಿಗೆ ಓಕೆ. ಪಕ್ಕದವರಿಗೆಲ್ಲ ಕೆಟ್ಟ ತೊಂದರೆ.

ಪಕ್ಕದ ಮಂದಿ ಸಹಿಸಿಕೊಳ್ಳುವಷ್ಟು ಕಾಲ ಸಹಿಸಿಕೊಂಡಿದ್ದಾರೆ. ಯಾವಾಗ ಹುಡುಗಿ ಜೋರ್ ಜೋರ್ ಧ್ವನಿಯಲ್ಲಿ, 'ಏ! ಏ! ಅಷ್ಟು ಜೋರ್ ಮಾಡಬ್ಯಾಡೋ! ಏ! ಏ! ಅಷ್ಟು ಘಟ್ಟೆ ಒತ್ತಬ್ಯಾಡೋ!' ಅಂತ ಕೂಗಿ ಕೂಗಿ ಹೇಳಲು ಆರಂಭಿಸಿದಳೋ ಆವಾಗ ಬೆಚ್ಚಿಬಿದ್ದು ಇವರ ಕಡೆ ಕಣ್ಣು ಬಿಟ್ಟು ನೋಡಿದ್ದಾರೆ. ನೋಡಿದರೆ ಮಂದ ಬೆಳಕಿನಲ್ಲಿ ಏನು ಕಾಣಬೇಕು? ಏನೂ ಕಂಡಿಲ್ಲ. ಶಾಲು ಹೊದ್ದುಕೊಂಡು ಕೂತ ಯುವಜೋಡಿ. ಮುಖ ಬಿಟ್ಟರೆ ಏನೂ ಕಾಣುತ್ತಿಲ್ಲ. ಹುಡುಗಿ ಮಾತ್ರ, 'ಜೋರಾಗಿ ಮಾಡಬೇಡ, ಗಟ್ಟಿಯಾಗಿ ಒತ್ತಬೇಡ,' ಅಂತ ಆಗಾಗ ಕೂಗುತ್ತಿದ್ದಾಳೆ. ಹುಡುಗ ಮಾತ್ರ ನಗುತ್ತಿದ್ದಾನೆ. ಇವರ ಕಾರ್ನಾಮೆ ನಡದೇ ಇದೆ.

ಆಗ ಪಕ್ಕದಲ್ಲಿ ಕೂತವರಲ್ಲಿ ಒಬ್ಬರು ಎದ್ದು ಸೀದಾ ಮುಂದೆ ಹೋಗಿದ್ದಾರೆ. ಡ್ರೈವರ್ ಡ್ರೈವ್ ಮಾಡುತ್ತಿದ್ದ. ಪ್ರೈವೇಟ್ ಬಸ್ ಬೇರೆ. ಕಂಡಕ್ಟರ್ ಇರುವದಿಲ್ಲ. ಯಾರಿಗೆ ಕಂಪ್ಲೇಂಟ್ ಮಾಡಬೇಕು? ಪಕ್ಕದಲ್ಲೇ ಮಲಗಿದ್ದ ಕ್ಲೀನರ್ ಕಂಡಿದ್ದಾನೆ. ಅವನನ್ನು ತಟ್ಟಿ ತಟ್ಟಿ ಎಬ್ಬಿಸಿದ್ದಾರೆ. ಅವನಿಗೇ ಹೇಳಿದ್ದಾರೆ. ಮೊದಮೊದಲಿಗೆ ಅವನಿಗೆ ಮಾಮಲಾ ಏನು ಅಂತ ತಿಳಿದಿಲ್ಲ. ಹೇಗೋ ಮಾಡಿ ವಿವರಿಸಿದ್ದಾರೆ. 'ಅಕ್ಕಪಕ್ಕ ಕೂತ ಹುಡುಗ ಹುಡುಗಿ. ಶಾಲು ಹೊದ್ದು ಏನೋ ಖಟಿಪಿಟಿ ಮಾಡುತ್ತಿದ್ದಾರೆ. ಜೋರಾಗಿ ಅಸಹ್ಯವಾಗಿ ಒದರುತ್ತಿದ್ದಾರೆ. ಎಲ್ಲರಿಗೂ ತೊಂದರೆಯಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಸುತ್ತ ಮುತ್ತ ಸೀಟಿನಲ್ಲಿ ಕೂತ ಮಹಿಳೆಯರಿಗೆ ತುಂಬಾ ಮುಜುಗರವಾಗುತ್ತಿದೆ. ಏನಾದರೂ ಮಾಡಿ ಆ ಹುಡುಗ ಹುಡುಗಿಗೆ ಒಂದು ಮಾತು ಹೇಳಿ ಎಲ್ಲರನ್ನೂ ಬಚಾವ್ ಮಾಡಿ,' ಅಂತ ಕೇಳಿಕೊಂಡಿದ್ದಾರೆ. ಆಗ ಆ ಕ್ಲೀನರ್ ಯಪ್ಪನಿಗೆ ಅರ್ಥವಾಗಿದೆ. ಅಂತಹ ನಿದ್ದೆಗಣ್ಣಲ್ಲೂ ಒಂದು ತರಹದ ತುಂಟ ನಗೆ ಅವನ ಮುಖದಲ್ಲಿ ಮೂಡಿದೆ. ಅದೆಷ್ಟು ಯುವಜೋಡಿಗಳು ಅವನ ಬಸ್ಸಿನಲ್ಲಿ ಅಕ್ಕಪಕ್ಕ ಶಾಲು ಹೊದ್ದುಕೊಂಡು ಕೂತು, ಕತ್ತಲಲ್ಲಿ ಬಿಡಬಾರದ ಜಾಗದಲ್ಲಿ ಕೈಬಿಟ್ಟಿದ್ದನ್ನು ಆತ ನೋಡಿದ್ದನೋ ಏನೋ!

ಇವರ ಪಂಚಾಯಿತಿ ಸುಧಾರಿಸಲು ಕ್ಲೀನರ್ ಎದ್ದು ಬಂದಿದ್ದಾನೆ. ಪರಿಸ್ಥಿತಿಯನ್ನು ತನ್ನ ಕಣ್ಣಾರೆ ನೋಡಿದ್ದಾನೆ. ಕಿವಿಯಾರೆ ಕೇಳಿದ್ದಾನೆ. ಬರೋಬ್ಬರಿ ಶಾಲು ಹೊದ್ದುಕೊಂಡು, ಕಣ್ಣು ಮುಚ್ಚಿಕೊಂಡು ಮ್ಯೂಸಿಕ್ ಕೇಳುತ್ತ ಮೈಮರೆತಿರುವ ಯುವಜೋಡಿ. ಸುತ್ತ ಮುತ್ತಲಿನ ಖಬರೇ ಇಲ್ಲ. ಆದರೆ ಸ್ವಲ್ಪಸ್ವಲ್ಪ ಹೊತ್ತಿಗೆ ಆಕೆ ಕೇಕೆ ಹೊಡೆಯುತ್ತಾಳೆ. ಮತ್ತೆ ಅದೇ ಕೇಕೆ - 'ಏ! ಏ! ಅಷ್ಟು ಜೋರ್ ಮಾಡಬ್ಯಾಡೋ! ಏ! ಏ! ಅಷ್ಟು ಘಟ್ಟೆ ಒತ್ತಬ್ಯಾಡೋ!' ನಂತರ ಇಬ್ಬರೂ ನಗುತ್ತಾರೆ. ಮತ್ತೆ ಅದೇ ರಿಪೀಟ್! ಒನ್ಸ್ ಮೋರ್!

ಕ್ಲೀನರನಿಗೆ ಮನದಟ್ಟಾಗಿ ಹೋಗಿದೆ. ಇದು ಆದಾಬ್ ಆದಾಬ್ ಅನ್ನುತ್ತ ಪ್ರೇಮ ಶಾಯರಿ ಹಾಡುವವರ ಟಿಪಿಕಲ್ ದಬಾದಬಿ ಕೇಸ್ ಅಂತ. ಕ್ಲೀನರ್ ಮೆಲ್ಲನೆ ಹುಡುಗನ ಬುಜ ತಟ್ಟಿದ್ದಾನೆ. ಹುಡುಗ ರಸಭಂಗವಾದವನಂತೆ ಬೆಚ್ಚಿಬಿದ್ದು ನೋಡಿದರೆ ಯಮ ಕಿಂಕರನಂತಹ ಕ್ಲೀನರ್ ನಿಂತಿದ್ದಾನೆ. ನೈಟ್ ಬಸ್ಸಿನ ಮಬ್ಬು ಬೆಳಕಿನಲ್ಲಿ ಮತ್ತೂ ಖರಾಬಾಗಿ ಕಂಡಿದ್ದಾನೆ.

ಕ್ಲೀನರ್ ಮತ್ತೇನೂ ಹೇಳಲಿಲ್ಲ. ಹುಡುಗನಿಗೆ ಬೇರೆ ಕಡೆ ಹೋಗಿ ಕೂಡುವಂತೆ ಹೇಳಿದ್ದಾನೆ. ಯಾಕೆ, ಏನು, ಅಂತ ಎಲ್ಲ ವಿವರಣೆ ಕೊಟ್ಟು ಅವರನ್ನು embarrass ಮಾಡಲು ಇಷ್ಟವಿರಲಿಲ್ಲ ಅಂತ ಕಾಣುತ್ತದೆ. ಅಷ್ಟರ ಮಟ್ಟಿಗೆ ಶರೀಫ್ ಇದ್ದಾನೆ. ಸಹ ಪ್ರಯಾಣಿಕರೂ ಅಷ್ಟೇ ಶರೀಫ್ ಇದ್ದವರೇ. ಇಲ್ಲವಾದರೆ ಆ ಯುವಜೋಡಿಗೆ ಅಲ್ಲೇ ಚಡಾಬಡಾ ಅಂತ ಬಾರಿಸಿಬಿಡುತ್ತಿದ್ದರು. ಬಸ್ಸಿನಿಂದ ಒದ್ದು ಇಳಿಸಿ ಹೋಗುತ್ತಿದ್ದರು.

'ಅರೇ ಇಸ್ಕಿ! ಒಮ್ಮೆಲೇ ಬಂದು ಬೇರೆ ಸೀಟಿಗೆ ಹೋಗಿ ಕೂಡು ಅಂದರೆ ಹೆಂಗ್ರೀ? ಯಾಕ್ರೀ? ನಾವೇನು ಮಾಡೇವಿ? ಹಾಂ?' ಅಂತ ಹುಡುಗ ಹುಡುಗಿ ಇಬ್ಬರೂ ಕ್ಲೀನರನ ಜೊತೆ ಜಗಳಕ್ಕೆ ಬಿದ್ದಿದ್ದಾರೆ. ಅವನಿಗೇ ರಿವರ್ಸ್ ದಬಾಯಿಸತೊಡಗಿದ್ದಾರೆ. ಮೊದಲು ಕೇವಲ 'ಜೋರ್ ಮಾಡಬ್ಯಾಡ, ಘಟ್ಟೆ ಒತ್ತಬ್ಯಾಡ' ಅನ್ನುವ ಮುಲುಗುವಿಕೆ, ನರಳುವಿಕೆ ಒಂದೇ ಆಗಿತ್ತು. ಈಗ ದೊಡ್ಡ ಪ್ರಮಾಣದ ಹಾಕ್ಯಾಟವೇ ಶುರುವಾಗಿಬಿಟ್ಟಿದೆ. KKK ಹುಡುಗಿ ಘಟವಾಣಿ ಬೇರೆ. ಶಾಲು ಕಿತ್ತೆಸೆದು, ಕಿವಿಯಲ್ಲಿ ಬಾಯ್ ಫ್ರೆಂಡ್ ಹೆಟ್ಟಿದ್ದ earphone ಸಹ ತೆಗೆದು, ಜೋರ್ದಾರ್ ರೋಪ್ ಹಾಕಲು ಶುರುಮಾಡಿದ್ದಾಳೆ. ಆಗ ಕ್ಲೀನರ್ ಕೂಡ ರೈಸ್ ಆಗಿದ್ದಾನೆ. ದೊಡ್ಡ ಜಗಳ.

ತನ್ನ ಹುಡುಗಿಯ ಮುಂದೆ ಸ್ಕೋಪ್ ತೆಗೆದುಕೊಳ್ಳಲು, 'ನಾವು ಯಾಕೆ ಸೀಟ್ ಬಿಟ್ಟು ಹೋಗಬೇಕು? ಕಾರಣ ಹೇಳೋ ನಿಮ್ಮೌನಾ!'  ಅಂತ ಹುಡುಗ ಬೈದಾಗ ಮಾತ್ರ ಕ್ಲೀನರ್ ಕ್ಲೀನಾಗಿ ಹೇಳಿಯೇಬಿಟ್ಟಿದ್ದಾನೆ. ಅವನು ಹೇಳಿದ್ದನ್ನು ಕೇಳಿದ ಹುಡುಗ ಹುಡುಗಿ ಥಂಡಾ ಹೊಡೆದಿದ್ದಾರೆ. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ಮಾದರಿಯಲ್ಲಿ ಕ್ಲೀನರನಿಗೆ, ಉಳಿದ ಮಂದಿಗೇ ಉಲ್ಟಾ ಹೊಡೆದಿದ್ದಾರೆ. ಅವರು ಕೊಟ್ಟ ವಿವರಣೆ ಕೇಳಿ ಎಲ್ಲರೂ ಬೆರಗಾಗಿದ್ದಾರೆ. ಹಾಂ!!!! ಅಂತ ಬಾಯ್ಬಿಟ್ಟಿದ್ದಾರೆ.

ಏನು ವಿವರಣೆ ಅಂತೀರಿ? ಅಷ್ಟು authentic! ಆ ಹುಡುಗ ಹುಡುಗಿಯ ಪ್ರಕಾರ ಏನಾಗಿತ್ತು ಅಂದರೆ....... ಇಬ್ಬರೂ ಒಂದೊಂದು earphone ಹಾಕಿಕೊಂಡು ಮ್ಯೂಸಿಕ್ ಕೇಳುತ್ತಿದ್ದರು. ಹುಡುಗನಿಗೆ ಮಷ್ಕಿರಿ. ಆಗಾಗ ಸೌಂಡ್ ವಾಲ್ಯೂಮ್ ತುಂಬಾ ತುಂಬಾ ಹೆಚ್ಚಿಸಿಬಿಡುತ್ತಿದ್ದ. ಕಿವಿ ತಮ್ಮಟೆ ಮೊಳಗುತ್ತಿತ್ತು. ಆಗ ಹುಡುಗಿ, 'ಏ! ಏ! ಅಷ್ಟು ಜೋರ್ ಮಾಡಬ್ಯಾಡೋ!' ಅಂತ ಕೇಕೆ ಹೊಡೆದ ರೀತಿಯಲ್ಲಿ ಕೂಗುತ್ತಿದ್ದಳು. ಅಷ್ಟು ಜೋರ್ ಮಾಡಬೇಡ ಅಂದರೆ ಸೌಂಡ್ ವಾಲ್ಯೂಮ್ ಅಷ್ಟು ಜೋರಾಗಿ ಮಾಡಬೇಡ ಅಂತ ಅವಳ ಮಾತಿನ ಅರ್ಥ. ತಮ್ಮ ಮಾತನ್ನು ಸಮರ್ಥಿಸಿಕೊಳ್ಳುವವರ ಹಾಗೆ ತಮ್ಮ ವಾಕ್ಮನ್, ಡಿಸ್ಕಮನ್ ಮ್ಯೂಸಿಕ್ ಪ್ಲೇಯರ್ ಎಲ್ಲ ತೋರಿಸಿದರು.

ಸಿಕ್ಕಾಪಟ್ಟೆ ಖತರ್ನಾಕ್ ವಿವರಣೆ. Perfect alibi. ಈಗ ಕ್ಲೀನರನಿಗೆ, ಅಕ್ಕಪಕ್ಕದ ಮಂದಿಗೆ ಕೇಳಲು, ಹೇಳಲು ಏನೂ ಉಳಿದೇ ಇಲ್ಲ. ಕತ್ತಲಲ್ಲಿ ಬಿಡಬಾರದ ಜಾಗದಲ್ಲಿ ಕೈಬಿಟ್ಟು ದಬಾದಬಿ ಮಾಡುತ್ತಿರುವವರಾದರೆ ಹೀಗೆ ಡೈರೆಕ್ಟ್ ಆಗಿ confront ಮಾಡಿದಾಗ ಸ್ವಲ್ಪ ಭೀತರಾಗಿ ಸುಮ್ಮನಿರುತ್ತಾರೆ. ಕಳ್ಳನ ಜೀವ ಹುಳ್ಳಹುಳ್ಳಗೆ ಮಾದರಿಯಲ್ಲಿ. ವಾಪಸ್ ರೋಪ್ ಹಾಕುವದಿಲ್ಲ. ಇಷ್ಟು confident ಆಗಿ, ಉಲ್ಟಾ ರೋಪ್ ಹಾಕಿ, ಸಮರ್ಪಕ ವಿವರಣೆ ಕೊಡುತ್ತಿದ್ದಾರೆ ಅಂದ ಮೇಲೆ ಮತ್ತೇನು? ಯಾವ ಆಧಾರದ ಮೇಲೆ ಹುಡುಗನನ್ನು ಹುಡುಗಿಯಿಂದ ಬೇರ್ಪಡಿಸುವದು? ಹಾಗಾಗಿ ಕ್ಲೀನರ್ ಒಂದು ಫೈನಲ್ ಮಾತು ಹೇಳಿದ್ದಾನೆ. 'ನಿಮ್ಮ ಕೂಗಾಟ, ಚೀರಾಟ, ನರಳಾಟಗಳಿಂದ ಅಕ್ಕಪಕ್ಕದ ಮಂದಿಗೆ ತೊಂದರೆಯಾಗುತ್ತಿದೆ. ಸುಮ್ಮನೆ ಇರುವದಾದರೆ ಓಕೆ. ಇಲ್ಲವಾದರೆ ಸೀಟು ಬದಲಾಯಿಸಲೇಬೇಕಾಗುತ್ತದೆ. ಇನ್ನೂ ಹೆಚ್ಚಿನ ವಾದ ಮಾಡಿದರೆ ಇಬ್ಬರನ್ನೂ ಬಸ್ಸಿನಿಂದ ಇಳಿಸಿ ಹೋಗಿಬಿಡಲಾಗುತ್ತದೆ,' ಅಂತ ವಾರ್ನಿಂಗ್ ಕೊಟ್ಟು ತನ್ನ ಕ್ಯಾಬಿನ್ನಿಗೆ ಹೋಗಿ ಶಿವಾಯ ನಮಃ ಅಂತ ಮಲಗಿದ್ದಾನೆ.

ಯಬಡೇಶಿ ಕ್ಲೀನರನನ್ನು ಸಕತ್ತಾಗಿ ನಿಪಟಾಯಿಸಿದ ಯುವ ಜೋಡಿ ಸೆಲೆಬ್ರೇಟ್ ಮಾಡಿದ್ದಾರೆ. ಶಾಲನ್ನು ಮತ್ತೂ ಬರೋಬ್ಬರಿ ಹೊದ್ದುಕೊಂಡಿದ್ದಾರೆ. ಮ್ಯೂಸಿಕ್ ಆಫ್ ಮಾಡಿದ್ದಾರೆ. ಆದರೆ ಕಿಸಿ ಕಿಸಿ ನಗು ಮಾತ್ರ ನಿರಂತರ. ಸಹ ಪ್ರಯಾಣಿಕರು ಕೂಡ ಅಷ್ಟಕ್ಕೇ ಸುಮ್ಮನಾಗಿದ್ದಾರೆ. ಮರ್ಯಾದಸ್ತರಿಗೆ ಮುಜುಗುರವೆನ್ನಿಸುತ್ತಿದ್ದ 'ಜೋರಾಗಿ ಮಾಡಬ್ಯಾಡ, ಘಟ್ಟೆಯಾಗಿ ಒತ್ತಬ್ಯಾಡ,' ಅನ್ನುವ ಮಾದರಿಯ ಕೇಕೆಗಳು ನಿಂತಿವೆ. ಅಷ್ಟಾಗಿದ್ದಕ್ಕೆ ದೇವರಿಗೊಂದು ದೊಡ್ಡ ನಮಸ್ಕಾರ ಮಾಡಿದ ಮಂದಿ ತಮ್ಮ ತಮ್ಮ ಮಂಕಿ ಕ್ಯಾಪ್, ಸ್ವೆಟರ್, ಕುಂಚಿಗಿ ಎಲ್ಲ ಬರೋಬ್ಬರಿ ಅಡ್ಜಸ್ಟ್ ಮಾಡಿಕೊಂಡು ತಾಚಿ ತಾಚಿ ಮಾಡುತ್ತ ನಿದ್ದೆ ಹೋಗಿದ್ದಾರೆ. ಆದರೆ ಶಾಲು ಹೊದ್ದು ಕೂತ ಜೋಡಿಯ ಕಿಸಿಪಿಸಿ ನಗೆ ಮಾತ್ರ ನಿರಂತರ. ಅದು ನಿಂತಿದ್ದು ಬೆಳಿಗ್ಗೆ ಧಾರವಾಡ ಕೋರ್ಟ್ ಎದುರಿಗೆ ಬಸ್ ನಿಂತಾಗಲೇ.

'ಕನಕನ ಕಿಂಡಿವಾಲಿದು ಕಥಿ ಇಷ್ಟದ ಅಂತಾತು. ಭಾರಿ ಕಥಿ ಅಲ್ರೋ ಮಾರಾಯಾ! ನನಗ ಇವೆಲ್ಲಾ ಗೊತ್ತಿದ್ದಿಲ್ಲ ಬಿಡ್ರೀಪಾ!' ಅಂದೆ.

'ನಮ್ಮ ಕಡೆ ಕೇಳೋ ಅಣ್ಣಾ. ಒಂದರ ಮ್ಯಾಲೆ ಒಂದ ಇಂತಾ ಕಥಿ ಹೇಳತೇವಿ. ರಗಡ  ಸ್ಟಾಕ್ ಅದ ನಮ್ಮ ಕಡೆ,' ಅಂದ ದೋಸ್ತರು ಡಿನ್ನರ್ ಆರ್ಡರ್ ಮಾಡಲು ಮತ್ತೆ ವೇಟರ್ ಶಂಭೂನನ್ನು ಕರೆದರು. ಬಂದು ಆರ್ಡರ್ ತೆಗೆದುಕೊಂಡ ಹೋದ. ರೊಟ್ಟಿ ಬದಲಾಗಿ ಸ್ಪೆಷಲ್ ನೀರುದೋಸೆಗೆ ಹೇಳಿದರು. ಶಿವನೇ ಶಂಭುಲಿಂಗ! ರಾತ್ರಿ ಹನ್ನೆರೆಡು ಘಂಟೆ ಹೊತ್ತಿಗೆ ದೋಸೆ ತಿನ್ನುವ ಭಾಗ್ಯ!

ಈ ಕಥೆ ಕೇಳಿದ ಮೇಲೆ ನಮ್ಮ 'logical' ಮಂಡೆಯಲ್ಲಿ ಏನೋ ಒಂದು ಡೌಟ್ ಬಂತು. ಶಾಲು ಹೊದ್ದುಕೊಂಡು ಕೂತಿದ್ದ ಆ ಯುವಜೋಡಿ ಅಸಲಿಯಲ್ಲಿ ಏನು ಮಾಡುತ್ತಿತ್ತು?? ಕ್ಲೀನರನಿಗೆ ದಬಾಯಿಸಿ ವಿವರಣೆ ಕೊಟ್ಟಂತೆ ವಾಲ್ಯೂಮ್ ಕಂಟ್ರೋಲ್ ಹೆಚ್ಚು ಕಮ್ಮಿ ಮಾಡುತ್ತಾ ಕೂತಿದ್ದವೋ ಅಥವಾ ಆದಾಬ್ ಆದಾಬ್ ಅನ್ನುತ್ತ ದಬಾದಬಿ ಮಾಡುತ್ತಿದ್ದವೋ? ದೋಸ್ತರ ಹತ್ತಿರ ಕೇಳಿದೆ. ಫುಲ್ ಮಂಗಳಾರತಿ ಮಾಡಿಸಿಕೊಂಡೆ.

'ಏನಪಾ ನೀ!? ಹಾಂ!? ಶಾಣ್ಯಾ ಅಂತ ತಿಳಕೊಂಡರ ನೀನೂ ಸಹ ಬಸ್ಸಿನ ಕ್ಲೀನರ್ ಆಗಲಿಕ್ಕೇ ಬರೋಬ್ಬರ್ ಇದ್ದಿ ನೋಡು. ಏನೋ ನೀನು? ಅಷ್ಟೂ ತಿಳಿಲಿಲ್ಲಾ? ಸುಮ್ಮನ ವಾಪಸ್ ಬಂದು VRL ಒಳಗ ಕ್ಲೀನರ್ ಆಗು. ಸಾಫ್ಟ್ವೇರ್ ಮಾಡಿದ್ದು ಸಾಕು. ಏನು ಮಬ್ಬ ಇದ್ದಿ ಮಾರಾಯಾ!' ಅಂತ ಬೈದು, ತಮ್ಮ ಸಿಗರೇಟ್ ಬೂದಿ ಕೊಡವಿದ ಗೆಳೆಯರು ಪೆಕಪೆಕಾ ಅಂತ ನಕ್ಕರು.

ಅರೇ ಇಸ್ಕಿ! ಇದು ದೊಡ್ಡ suspense ಆಯಿತಲ್ಲಾ! ಆ ಯುವಜೋಡಿಯ ಅಂದಿನ ಕೇಕೆಗೆ ಬರೋಬ್ಬರಿ ವಿವರಣೆ ಇದೆ. ಹಾಗಾದರೆ ಯಾವ ಮಾಹಿತಿ ಪ್ರಕಾರ ನಮ್ಮ ದೋಸ್ತರು ಆ ಯುವಜೋಡಿ ದಬಾದಬಿಯಲ್ಲಿ ತೊಡಗಿತ್ತು ಅಂತ ಅಷ್ಟು ಖಾತ್ರಿಯಿಂದ ಹೇಳುತ್ತಿದ್ದಾರೆ?? ಇದನ್ನು ಇವರ ಹತ್ತಿರವೇ ಕೇಳಿ ಖಾತ್ರಿ ಮಾಡಿಕೊಳ್ಳಬೇಕು. ಮತ್ತೆ ಮಬ್ಬ, ಕ್ಲೀನರ್ ಆಗಲಿಕ್ಕೂ ಲಾಯಕ್ ಇಲ್ಲದವ ಅಂತ ಬೈಯ್ಯುತ್ತಾರೆ. ಆದರೇನು ಮಾಡುವದು? ಕೇಳಲೇಬೇಕು. ಕೆಟ್ಟ ಕುತೂಹಲ. ಕೇಳಿದೆ.

'ನೋಡಪಾ ನಿನಗ ಫುಲ್ ತಿಳಿಸಿ ಹೇಳತೇನಿ. ಆಕಿ ಕನಕನ ಕಿಂಡಿವಾಲಿ ಏನಂತ ಕ್ಯಾಕಿ (ಕೇಕೆ) ಹೊಡಿಲಿಕತ್ತಿದ್ದಳು??? ಹೇಳು ನೋಡೋಣ??' ಅಂತ ಕೇಳಿದ. ಮಾಸ್ತರರು ಒಳ್ಳೆ ಸ್ಟೆಪ್ ಬೈ ಸ್ಟೆಪ್  ಹೇಳಿಕೊಡುವಂತೆ ಕೇಳಿದ ಕಥೆ ಹೇಳಿದ ದೋಸ್ತ.

'ಅಷ್ಟು ಜೋರ್ ಮಾಡಬ್ಯಾಡೋ! ಅಷ್ಟು ಘಟ್ಟೆ ಒತ್ತಬ್ಯಾಡೋ!' - ಅವರು ಹೇಳಿದ್ದನ್ನ ಅವರಿಗೇ ತಿರುಗಿ ಒಪ್ಪಿಸಿದೆ.

'ಕರೆಕ್ಟ್! ಆವಾ ಕ್ಲೀನರ್ ಬಂದು ಜಬರಿಸಿದಾಗ ಏನಂತ ವಿವರಣೆ ಕೊಟ್ಟರು?? ಹೇಳೋ ಮಬ್ಬಾ!' ಅಂತ ಕೇಳಿದ ನಮ್ಮ ಗೆಳೆಯ.

'ಆವಾ ಅಕಿ ಕನಕನ ಕಿಂಡಿವಾಲಿಯ ಹುಡುಗ ಮ್ಯೂಸಿಕ್ ಪ್ಲೇಯರ್ ಸೌಂಡ್ ವಾಲ್ಯೂಮ್ ಭಾಳ ಜೋರ್ ಮಾಡ್ಲಿಕತ್ತಿದ್ದನಂತ. ವಾಲ್ಯೂಮ್ ಅಷ್ಟು ಜೋರ್ ಮಾಡಬ್ಯಾಡ ಅಂತ ಇಕಿ ಅವಂಗ ಹೇಳಲಿಕತ್ತಿದ್ದಳು,' ಅಂದು, 'ಮುಂದ???' ಅನ್ನುವ ಹಾಗೆ ನೋಡಿದೆ.

'ಕ್ಲೀನರ್ ಶಾಣ್ಯಾ ಇದ್ದರೆ ಏನು ಮಾಡ್ತಿದ್ದಾ ಹೇಳು?? ಹೇಳೋ ಹೇಳೋ ಅಮೇರಿಕಾ ವಾಸಿ ಸಾಫ್ಟ್ವೇರ್ ಮಬ್ಬಾ!' ಅಂತ ಕಿಚಾಯಿಸಿದರು.

ನನಗೆ ಏನೂ ಹೊಳೆಯಲಿಲ್ಲ. ಕ್ಲೀನರ್ ಮತ್ತೇನು ಕೇಳಬಹುದಿತ್ತು? ಅವರಿಬ್ಬರೂ ಶಾಲಿನ ಅಡಿಯಲ್ಲಿ ಕೈಬಿಟ್ಟು ಕಿತಾಪತಿ ದಬಾದಬಿಯನ್ನೇ ಮಾಡುತ್ತಿದ್ದಾರೆ ಅಂತ ಹೇಗೆ ಖಚಿತ ಮಾಡಿಕೊಳ್ಳಬಹುದಿತ್ತು? What else could he have done????!!!! Think. Think. ಎಷ್ಟೇ ಬಡಕೊಂಡರೂ ತಲೆಗೆ ಏನೂ ಹೊಳೆಯಲಿಲ್ಲ. ಮುಂದಿದ್ದ ಬಿಯರ್ ಮುಗಿಯಿತು. ಮತ್ತೊಂದು ಬೇಕು ಅಂದರೆ ಬಾರ್ ಬಂದಾಗಿತ್ತು. ಯಾವಾಗ ಬೇಕಾದರೂ ಬಾರ್ ಓಪನ್ ಮಾಡಿಸಿ ಎಣ್ಣೆ ಹೊಡೆಸಬಹುದಾದ ಧಾರವಾಡದ ಅಂಡರ್ವರ್ಲ್ಡ್ ಡಾನ್ ದೋಸ್ತ ಆವತ್ತು ಜೊತೆಯಲ್ಲಿ ಇರಲಿಲ್ಲ.

'ಗೊತ್ತಿಲ್ಲ ಬಿಡಪಾ. ಪಾಪ ಕ್ಲೀನರ್ ಇನ್ನೇನು ಮಾಡಲಿಕ್ಕೆ ಸಾಧ್ಯ ಅದನೋ? 'ಯಾಕ ಹಾಂಗ ಅಸಹ್ಯವಾಗಿ ಜೋರ್ ಮಾಡಬ್ಯಾಡ, ಘಟ್ಟೆಯಾಗಿ ಒತ್ತಬ್ಯಾಡ ಅಂತ ಒದರಲಿಕತ್ತೀರಿ?' ಅಂತ ಅವರನ್ನು ಕೇಳಿದ. ಅಕಿ ಘಟವಾಣಿ ಕನಕನ ಕಿಂಡಿಯಾಕಿ ಕೊಟ್ಟ ವಿವರಣೆ ತೊಗೊಂಡು, convince ಆಗಿ ಹೋದ. ಮತ್ತೇನು ಮಾಡಲಿಕ್ಕೆ ಬರ್ತದ???' ಅಂತ ಕೇಳಿದೆ.

'ಆ ಕ್ಲೀನರ್ ಶಾಣ್ಯಾ ಇದ್ದರೆ ಹೀಂಗ ಕೇಳಬೇಕಾಗಿತ್ತು. 'ಜೋರ್ ಮಾಡಬ್ಯಾಡ ಅಂದ್ರ ಸೌಂಡ್ ವಾಲ್ಯೂಮ್ ಜೋರ್ ಮಾಡಬ್ಯಾಡ ಅಂದ್ರೀ ಬಾಯಾರ. ಒಪ್ಪಿದೆ. ಆದ್ರ ನೀವು ಘಟ್ಟೆ ಒತ್ತಬ್ಯಾಡ ಅಂತ ಸಹಿತ ಕ್ಯಾಕಿ ಹೊಡಿಲಿಕತ್ತಿದ್ದಿರಿ ಅಂತ ಬಾಜೂಕಿನ ಮಂದಿ ಹೇಳಾಕತ್ತಾರು. ಅದಕ್ಕ ಏನಂತೀರಿ? ನಿಮ್ಮ ಮ್ಯೂಸಿಕ್ ಪ್ಲೇಯರ್ ಒಳಗ ಸೌಂಡ್ ವಾಲ್ಯೂಮ್ ಜೋರ್ ಮಾಡಾಕ ಮತ್ತ ಕಮ್ಮಿ ಮಾಡಾಕ ಒತ್ತಬೇಕೇನು? ಹೇಳ್ರೀ! ಸೌಂಡ್ ವಾಲ್ಯೂಮ್ ಹೆಚ್ಚು ಕಮ್ಮಿ ಮಾಡಾಕ ತಿರುಗಿಸಬೇಕೋ?? ಅಥವಾ ಒತ್ತಬೇಕೋ??' ಅಂತ ಆ ಕ್ಲೀನರ್ ಕೇಳಿದ್ದಾ ಅಂದ್ರ ಸಿಕ್ಕೊಂಡು ಬೀಳ್ತಿದ್ದರು ನೋಡಪಾ. ಎಲ್ಲಿಂದ ಕೇಳಬೇಕು ಆವಾ? ಅವಂಗ ಅಷ್ಟು ತಲಿ ಇರಬೇಕಲ್ಲಾ? ಅದೂ ಅಷ್ಟ ಕೆಟ್ಟ ರಾತ್ರ್ಯಾಗ!' ಅಂದ ದೋಸ್ತ ಒಂದು ತರಹದಲ್ಲಿ ರಹಸ್ಯವನ್ನು explain ಮಾಡಿದ. ಅಷ್ಟರಲ್ಲಿ ನೀರುದೋಸೆ, ಒಂದಿಷ್ಟು ಸಬ್ಜಿಗಳು ಎಲ್ಲ ಬಂತು. ಮುಕ್ಕಲಿಕ್ಕೆ ಶುರು ಮಾಡಿದಿವಿ.

'ಅಲ್ಲರೀಪಾ ದೋಸ್ತುಗಳ್ರ್ಯಾ, ಒತ್ತುವ ಟೈಪಿನ ವಾಲ್ಯೂಮ್ ಕಂಟ್ರೋಲ್  ಇರೋದೇ ಇಲ್ಲ ಏನು? ಬರೇ ತಿರುಗಿಸುವ ಟೈಪಿನ ವಾಲ್ಯೂಮ್ ಕಂಟ್ರೋಲ್ ಮಾತ್ರ ಇರ್ತಾವೇನು? ಅವರ ಮ್ಯೂಸಿಕ್ ಪ್ಲೇಯರ್ ವಾಲ್ಯೂಮ್ ಕಂಟ್ರೋಲ್ ಒತ್ತೋದು ಇರಬಹದು. ಒತ್ತಿದರೆ ವಾಲ್ಯೂಮ್ ಹೆಚ್ಚು ಕಮ್ಮಿ ಆಗ್ತಿತ್ತೋ ಏನೋ. ಅದಕ್ಕೇ ಆಕಿ ಕನಕನ ಕಿಂಡಿವಾಲಿ ಅವಂಗ ಅಷ್ಟು ಘಟ್ಟೆ ಒತ್ತಬ್ಯಾಡೋ ಅಂತ ಅಂದಿರಬಹುದು. ಹಾಂಗಾಗಿ ಅವರು ಶಾಲು ಹೊದಕೊಂಡು ಒಟ್ಟಿಗೆ ಕೂತಿದ್ದರೂ ಎಲ್ಲೆಲ್ಲೋ ಕೈಬಿಟ್ಟು ಕಿತಾಪತಿ ಮಾಡಿದರು, ದಬಾದಬಿ ಮಾಡಿದರು ಅಂತ ಹೇಳಲಿಕ್ಕೆ ಆಗೋದಿಲ್ಲಾ,' ಅಂತ ಏನೋ ಒಂದು defense ವಕೀಲ ಪಾಯಿಂಟ್ ಇಟ್ಟಂಗ ಇಟ್ಟೆ. ಮತ್ತ ನನ್ನ iPhone ತೋರಿಸಿದೆ. ಅದರಲ್ಲಿ ಮತ್ತು ಇತ್ತೀಚಿನ ಎಲ್ಲಾ ಉಪಕರಣಗಳಲ್ಲಿ ಮೇಲೆ ಕೆಳಗೆ ಒತ್ತಿದರೆ ಸೌಂಡ್ ವಾಲ್ಯೂಮ್ ಹೆಚ್ಚುಕಮ್ಮಿಯಾಗುವ ವ್ಯವಸ್ಥೆ ಇರುವದನ್ನು ತೋರಿಸಿದೆ.

'ಲೇ! ಈ ಅಮೇರಿಕನ್ ಮಬ್ಬಗ ಇವತ್ತೇನು ಆಗ್ಯದ್ರಿಲೇ??? ಇಂತಾ ಮಬ್ಬಗ ಅದ್ಯಾರು ನೌಕರಿ ಕೊಟ್ಟು ಇಟ್ಟುಕೊಂಡಾರೋ ಏನೋ!' ಅಂತ ದೋಸ್ತರು ಊಟ ಮಾಡುತ್ತ ನಕ್ಕು ನಕ್ಕು ಮತ್ತೂ ಮಂಗಳಾರತಿ ಮಾಡಿದರು.

'ನೋಡಪಾ ಅಮೇರಿಕನ್ ದೋಸ್ತ, ಈ ಲಫಡಾ ಆಗಿದ್ದು ಯಾವಾಗ ಹೇಳು?? ಇದು ಆಗಿದ್ದು ೧೯೯೫-೯೬ ಹೊತ್ತಿಗೆ ಮಾರಾಯ. ಆವಾಗಿನ ಮ್ಯೂಸಿಕ್ ಪ್ಲೇಯರ್ ಯಾವದೇ ಇರಲಿ, ವಾಕ್ಮನ್ ಇರಲಿ ಅಥವಾ ಡಿಸ್ಕಮನ್ ಇರಲಿ ಯಾವದ್ರಾಗೂ ಒತ್ತುವಂತಹ ವಾಲ್ಯೂಮ್ ಕಂಟ್ರೋಲ್ ಇರಲೇ ಇಲ್ಲ. ಏನಿದ್ದರೂ ಬರೇ ತಿರುಗಿಸೋದೇ. ಸುಮ್ಮ ಕೂತು ಊಟಾ ಮಾಡು. ವಿಲಂಡವಾದ ಮಾಡಬ್ಯಾಡ. ತಿಳೀತಾ????' ಅಂತ ಆಖ್ರೀ ಮಾತು ಹೇಳಿದರು.

ಹ್ಯಾಂ!!!! ವಿಲಂಡವಾದ!!! ನಾನು ಏನು ಮಾಡಿದೆ? ವಾದ ಮಾಡಿದೆನೇ??? ಅದೂ ವಿಲಂಡ ಅನ್ನುವಂತಹ ವಿಚಿತ್ರ ತರಹದ ವಾದ ಮಾಡಿದೆನೇ????

'ಲೇ, ಹೋಗಲಿ ಬಿಡ್ರಲೇಪಾ. ನೀವು ಹೇಳಿದ್ದೇ ಖರೆ. ಕನಕನ ಕಿಂಡಿಯಾಗ ಕೈ ಬಿಟ್ಟು ಕೂತು ಕೃಷ್ಣನ ರಂಗಿನಾಟ ನಡೆದಿತ್ತು ಅಂತಲೇ ಒಪ್ಪೋಣ. ಆದ್ರ ವಿಲಂಡವಾದ ಅಂದ್ರಲ್ಲಾ?? ಹಾಂಗಂದರೇನು??' ಅಂತ ಕೇಳಿದೆ.

'ಮಾರಾಯಾ! ಅದು ವಿತಂಡವಾದ ಅಂತ. ನಿನ್ನ ಜಂಗು ಹಿಡಿದ ಕಿವಿಗೆ ಏನೇನು ಕೇಳ್ತದೋ ಏನೋ?? ಬಿಯರ್ ಕುಡಿದಿದ್ದು ಕಮ್ಮಿಯಾತೋ ಹೆಚ್ಚಾತೋ?? ನೀ ಹುಚ್ಚುಚ್ಚರೆ ಪಾಯಿಂಟ್ ಹಾಕಿದಿ ನೋಡು ಅದಕ್ಕ ವಿತಂಡವಾದ ಮಾಡ್ತಿ ಅಂದ್ರ ವಿಲಂಡವಾದ ಅಂತ!' ಅಂತ ವಿವರಣೆ ಕೊಟ್ಟು ಮತ್ತೊಂದಿಷ್ಟು ಮಂಗಳಾರತಿ ಮಾಡಿದರು.

ಇಷ್ಟೆಲ್ಲ ಕಾರ್ನಾಮೆ ಮಾಡಿದ ಕನಕನ ಕಿಂಡಿಯಲ್ಲಿ ಅಂದು ಕದ್ದು ನೋಡಿದವಳು ಈಗ ಎಲ್ಲಿ ಅಂತ ಕೇಳಿದರೆ ಒಬ್ಬರಿಗೂ ಗೊತ್ತಿಲ್ಲ. ಅವರಿಗೂ ಟಚ್ ಇಲ್ಲವಂತೆ. ಶಿವನೇ ಶಂಭುಲಿಂಗ!

******

ವಿ. ಸೂ: ಇದೊಂದು ಕಾಲ್ಪನಿಕ ಕಥೆ. ಯಾವದೇ ವ್ಯಕ್ತಿಗಳಿಗಾದರೂ ಅಥವಾ ಯಾವದೇ ನೈಜ ಘಟನೆಗಳಿಗಾದರೂ ಸಾಮ್ಯತೆ ಕಂಡುಬಂದಲ್ಲಿ ಅದು ಶುದ್ಧ ಕಾಕತಾಳೀಯವಷ್ಟೇ.

ಒಂದು ಶಾಲು ತಂದು ಹೊದಿಸಿಬಿಡ್ರೀ! ಲಗೂ!
* ಮೇಲಿನ ಚಿತ್ರವನ್ನು ಈ ಲಿಂಕಿನಿಂದ ಎತ್ತಲಾಗಿದೆ. ಕಾಪಿರೈಟ್ಸ್ ಎಲ್ಲ ಚಿತ್ರದ ಮಾಲೀಕರಿಗೆ ಸೇರಿದ್ದು.

Thursday, July 02, 2015

ಮೋದಿ ಸಾಹೇಬರ #SelfieWithDaughter

'ನೀನು ಮತ್ತ ನಿನ್ನ ಮಗಳು ಏಕ್ದಂ ಅಕ್ಕಾ ತಂಗಿ ಕಂಡಂಗ ಕಾಣ್ತೀರಿ. ಅವ್ವಾ, ಮಗಳು ಅಂತ ಹೇಳಲಿಕ್ಕೆ ಸಾಧ್ಯವೇ ಇಲ್ಲ!' ಅಂದೆ.

'ಹಾಂಗss????' ಅಂತ ಎಳೆಯುತ್ತ, ಫುಲ್ ರೈಸ್ ಆಗಿ, ಮಗಳು ಸ್ವೀಟ್ ಸಿಕ್ಸ್ಟೀನ್ ಮಾದರಿಯಲ್ಲಿ, ಅವ್ವ ಸೆಕ್ಸಿ ಸೆವೆಂಟೀನ್ ಮಾದರಿಯಲ್ಲಿ ನಾಚಿ ನುಲಿದರು.

ಮುಂದೆ ಹೋದರೆ ಅವರ ಪತಿ, ಮಗ ಸಿಕ್ಕರು.

'ಸರ್ರಾ, ನೀವು ಮತ್ತ ನಿಮ್ಮ ಮಗಾ ಏಕ್ದಂ ಅಣ್ಣಾ ತಮ್ಮಾ ಕಂಡಂಗ ಕಾಣ್ತೀರಿ. ಅಪ್ಪಾ ಮಗ ಅಂತ ಹೇಳಲಿಕ್ಕೆ ಸಾಧ್ಯವೇ ಇಲ್ಲ!' ಅಂದೆ.

ಇಲ್ಲಿ ಅಪ್ಪ ಭಾಳ ಖುಷಿಯಾದ. ಮಗ 'ಹ್ಯಾಂ????' ಅಂತ ಬಾಯ್ಬಿಟ್ಟ. ಇಬ್ಬರೂ ಬೋಳು ತಲೆ ಮೇಲೆ ಶಿವಾಯ ನಮಃ ಅನ್ನುವ ಮಾದರಿಯಲ್ಲಿ ಕೈಯಾಡಿಸಿಕೊಂಡರು. ಅಪ್ಪ ಮಗನ ಬದಲು ಅಣ್ಣ ತಮ್ಮನಂತೆ ಕಾಣಲು ಕಾರಣವಾಗಿದ್ದ ಬೋಳು ತಲೆ ಬಗ್ಗೆ ಅಪ್ಪನಿಗೆ ಹೆಮ್ಮೆ. ಮಗನಿಗೆ ಕೇಶವಿಲ್ಲದ ಮಂಡೆಯ ಕ್ಲೇಶ. ಅದೇ ನಿರ್ಲಿಪ್ತ ಲುಕ್ ಕೊಟ್ಟು ಮುಂದೆ ಹೋದರು. ಅಪ್ಪನ ಸಂತೋಷ ಮಗನ ದುಃಖ ಒಂದಕ್ಕೊಂದು ಕ್ಯಾನ್ಸಲ್ ಮಾಡಿ ನಿರ್ಲಿಪ್ತ ಲುಕ್.

ನಂತರ ಮೇಲಿನ ಅಪ್ಪ, ಅವ್ವ ಅರ್ಥಾತ ಗಂಡ ಹೆಂಡತಿ ಸಿಕ್ಕರು. ಮೊದಲಿನ ಹಾಗೆಯೇ ಏನೋ ಜಬರ್ದಸ್ತ್ ಕಾಂಪ್ಲಿಮೆಂಟ್ ಕೊಡುತ್ತೇನೋ ಅಂತ ಗಾಳ ಹಾಕಿದರು. ಬಾಯಿ ತುದಿಗೆ ಬಂದಿತ್ತು ಒಂದು ಕಾಂಪ್ಲಿಮೆಂಟ್ ಕೊಟ್ಟೇಬಿಡೋಣ ಅಂತ. ಕೊಡಲಿಲ್ಲ.

'ನೋಡಿದರೆ ಮೋದಿ ಸಾಹೇಬರ #SelfieWithDaughter ಕಂಡಂಗೆ ಕಾಣುತ್ತೀರಿ. ಗಂಡ ಹೆಂಡತಿ ಅಂತ ಹೇಳಲಿಕ್ಕೆ ಸಾಧ್ಯವೇ ಇಲ್ಲ!'

ಹಾಗಂತ ಮಾತ್ರ ಹೇಳಲಿಲ್ಲ.

'ವನವಾಸದಿಂದ ಫ್ರೆಶ್ ಆಗಿ ವಾಪಸ್ ಆದ ಸೀತಾರಾಮರ ಜೋಡಿ ಹಾಂಗೆ ಕಾಣುತ್ತೀರಿ,' ಅಂತ ಹೇಳಿ ಓಡಿದೆ.

'ಹುಚ್ಚ ಇದ್ದಾನ. ಮಕ್ಕಳ ಜೋಡಿ ಇದ್ದಾಗ ಎಂತಾ ಚಂದಚಂದ ಕಾಂಪ್ಲಿಮೆಂಟ್ ಕೊಡ್ತಾನ. ನಾವಿಬ್ಬರೇ ಸಿಕ್ಕರೆ ವನವಾಸಿ ರಿಟರ್ನ್ಡ್ ರಾಮಸೀತಾ ಅಂತ. ಹುಚ್ಚಾ!' ಅಂದುಕೊಳ್ಳುತ್ತ ಹೋದರು. :)

ಇದು ಪೂರ್ತಿ ಕಾಲ್ಪನಿಕವಲ್ಲ. ಬಹಳ ವರ್ಷಗಳ ಹಿಂದೆ ನಮ್ಮ ಐದು ವರ್ಷದ ಚಿಕ್ಕ ಕಸಿನ್ ಒಬ್ಬಳು ದಂಪತಿಯೊಬ್ಬರನ್ನು ನೋಡಿ, ತುಂಬಾ ಇನ್ನೋಸೆಂಟ್ ಆಗಿ, ಪತಿಯನ್ನು ತೋರಿಸುತ್ತಾ ಅವರ ಪತ್ನಿಯನ್ನು, 'ಇಂವಾ ನಿನ್ನ ಅಪ್ಪಾ?' ಅಂತ ಆಂಗ್ಲ ಶೈಲಿಯಲ್ಲಿ ಕೇಳಿಬಿಟ್ಟಿದ್ದಳು. ನಮಗೆ ನಗು ತಡೆಯಲಾಗಿರಲಿಲ್ಲ. ಅವರಿಬ್ಬರಲ್ಲಿ ವಯಸ್ಸಿನ ಅಂತರವಿತ್ತು. ಮತ್ತೆ ಐವತ್ತರ ಆಜೂಬಾಜಿನಲ್ಲೂ ಆ ಮಹಿಳೆ ತುಂಬಾ ಆಕರ್ಷಕವಾಗಿದ್ದರು. ಪತಿ ತಮ್ಮ ವಯಸ್ಸಿಗೆ ಸರಿಯಾಗಿ ನ್ಯಾಚುರಲ್ ಆಗಿಯೇ ಇದ್ದರು. ಅಪ್ಪ, ಮಗಳೇನು ಅಂತ ಚಿಕ್ಕ ಹುಡುಗಿ ಕೇಳಿದ್ದರಲ್ಲಿ ಏನೂ ತಪ್ಪಿರಲಿಲ್ಲ. ಆದರೆ ಕೇಳಿದ ಶೈಲಿ, ಅವಳ accent, ಆ ಸಂದರ್ಭ, ದೊಡ್ಡವರಿಗೆ ಆದ ಮುಜುಗರ ಎಲ್ಲ ನೆನಪಾಗಿ ಭಾಳ ನಗು ಬಂತು.