Monday, August 31, 2015

ಅಂತೂ ಬದಲಾಯಿಸಿಬಿಟ್ಟೆ.....ಫೇಸ್ಬುಕ್ ಪ್ರೊಫೈಲ್ ಫೋಟೋ ಅಷ್ಟೇ!

ಸೆಲ್ಫಿ ...ಇದೇ ನಮ್ಮ ಫೇಸ್ಬುಕ್ ಪ್ರೊಫೈಲ್ ಫೋಟೋ ಈಗ!
ಅಪರೂಪಕ್ಕೆ ಫೇಸ್ಬುಕ್ ಪ್ರೊಫೈಲ್ ಪಿಕ್ ಚೇಂಜ್ ಮಾಡಿದೆ. ಅದೂ ಎರಡೂವರೆ ವರ್ಷಗಳ ನಂತರ. ಮಾಡಬೇಕು ಅಂತ ಏನೂ ಇರಲಿಲ್ಲ. ಕೆಲವು ಸಹೃದಯಿ(!) ಗೆಳೆಯ / ಗೆಳತಿಯರು, 'ಖಬರ್ದಾರ್! ಪ್ರೊಫೈಲ್ ಪಿಕ್ ಚೇಂಜ್ ಮಾಡದಿದ್ದರೆ 'ಸುಪಾರಿ' ಕೊಟ್ಟುಬಿಡುತ್ತೇವೆ. ಹುಷಾರ್!' ಅಂತ ಆವಾಜ್ ಹಾಕಿಬಿಟ್ಟರು. 'ಏನು ಸುಪಾರಿ?!' ಅಂತ ಕೇಳಿದರೆ, 'ಪ್ರೊಫೈಲ್ ಪಿಕ್ ಚೇಂಜ್ ಮಾಡು!!!!' ಅಂತ ನಿರಂತರವಾಗಿ ಟ್ಯಾಗ್ (Tag) ಮಾಡುತ್ತಾರಂತೆ. ಟ್ಯಾಗೋರ್ ಮಂಗ್ಯಾನ ಮಕ್ಕಳು! ಹಾಳಾಗಿ ಹೋಗಲಿ ಅಂತ ಒಂದು ಸೆಲ್ಫೀ (selfie) ತೆಗೆದು ಒಗಾಯಿಸಿದೆ. ಯಾಕೆಂದರೆ ಫೇಸ್ಬುಕ್ ಮೇಲೆ ಅನೇಕಾನೇಕ  ಸುಪಾರಿಗಳಿಂದ, ಎನ್ಕೌಂಟರ್ ಗಳಿಂದ ಜರ್ಜರಿತರಾದವರು ನಾವು. :)

'ಕೆಲವು ಮಂದಿ ಅದ್ಯಾವ ರೇಟಿನಲ್ಲಿ, ಅದ್ಯಾವ ವೇಗದಲ್ಲಿ, ಅದೆಂತಹ ವೇಗೋತ್ಕರ್ಷದಲ್ಲಿ ಪ್ರೊಫೈಲ್ ಪಿಕ್ ಬದಲಾಯಿಸುತ್ತಾರೆ ಮಾರಾಯರೇ! ಆ ರೇಟಿನಲ್ಲಿ, ಆ ವೇಗದಲ್ಲಿ, ಆ ವೇಗೋತ್ಕರ್ಷದಲ್ಲಿ ಅವರು ಕಾಚಾ ಚಡ್ಡಿ ಕೂಡ ಬದಲಾಯಿಸಲಿಕ್ಕಿಲ್ಲ,' ಅಂತ ಒಂದು ಜೋಕು.

(Some people change their FB profile picture more often than they probably change their underwear. So goes a saying. I had not changed mine in two plus years. I mean I had not changed my profile pic (not undies) in two plus years. So here is a selfie. Read somewhere that putting selfie is a psycho problem! True??)

ಸಿಕ್ಕಾಪಟ್ಟೆ, ಪದೇ ಪದೇ ಪ್ರೊಫೈಲ್ ಪಿಕ್ ಬದಲಾಯಿಸುವ ಗೆಳತಿಯೊಬ್ಬಾಕೆ ಸದಾ ದೊಡ್ಡ ಸೈಜಿನ ಗಾಗಲ್ಸ್ ಹಾಕಿಕೊಂಡೇ ಸೆಲ್ಫಿ (selfie) ಹೊಡೆದುಕೊಳ್ಳುತ್ತಾಳೆ. 'ಸೆಲ್ಫಿ ಓಕೆ ಮಾರಾಯಿತಿ. ಅಷ್ಟು ದೊಡ್ಡ ಗಾಗಲ್ಸ್ ಯಾಕೆ????' ಅಂತ ಕೇಳಿದರೆ, 'ಸ್ಟುಪಿಡ್! ನನಗ ನಾಚಿಗೆ ಬರ್ತದ! ನೀನು ನನ್ನ ಕಣ್ಣಾಗ ಕಣ್ಣಿಟ್ಟು ನೋಡಿ ನಿನ್ನ ಅಂಡರ್ವೇರ್ ಚಡ್ಡಿ ಬದಲಾವಣೆ ಡೈಲಾಗ್ ಹೊಡೆದುಬಿಟ್ಟರೆ ಏನು ಗತಿ ಅಂತ???!' ಅಂದುಬಿಡುತ್ತಾಳೆ!!!!! ಅಕಟಕಟಾ!!!! ಶಿವನೇ ಶಂಭುಲಿಂಗ!

ಪ್ರೊಫೈಲ್ ಪಿಕ್ ಬಗ್ಗೆ ಬರೆದಿದ್ದ ಒಂದು ಹಳೆ ಬ್ಲಾಗ್ ಪೋಸ್ಟ್ - http://maheshuh.blogspot.com/2013/08/blog-post_7994.html

(ಫೇಸ್ಬುಕ್ ಸ್ಟೇಟಸ್ ನಿಂದ ಎತ್ತಿದ್ದು)

Sunday, August 30, 2015

ಡಾ. ಕಲಬುರ್ಗಿ ಹತ್ಯೆ ಮತ್ತು ಜೊತೆಗೇ ಮರುಕಳಿಸಿದ ಬಂದೂಕಿನ ನೆನಪುಗಳು...


ದಿವಂಗತ ಡಾ. ಕಲಬುರ್ಗಿ
ಧಾರವಾಡದ ಕಲ್ಯಾಣ ನಗರ ಬಡಾವಣೆಯಲ್ಲಿ ಮತ್ತೊಮ್ಮೆ ಬಂದೂಕು ಘರ್ಜಿಸಿದೆ. ಗುಂಡು ಹಾರಿದೆ. ಯಾರೋ ಆಯುಧ ಪೂಜೆಯಂದು, ಮನೆಯಲ್ಲಿನ ಬಂದೂಕನ್ನು ಪೂಜಿಸಿ, ಗಾಳಿಯಲ್ಲಿ ಹಾರಿಸಿದ ಗುಂಡಿನ ಸದ್ದಲ್ಲ ಇದು. ಪಕ್ಕಾ ಕಸಬುದಾರ ಹಂತಕರ ಗುಂಡು. Lift to aim. Aim to shoot. Shoot to kill - ಅನ್ನುವ ಮಾದರಿಯಲ್ಲಿ ಕೊಲ್ಲಲೆಂದೇ ಹಾರಿಸಿದ ಗುಂಡು. ಹಿರಿಯ ಕನ್ನಡ ಪಂಡಿತ ಡಾ. ಎಂ. ಎಂ. ಕಲಬುರ್ಗಿ ಹಂತಕನ ಗುಂಡಿಗೆ ಬಲಿಯಾಗಿ ಹೋಗಿದ್ದಾರೆ.

ಈ ಕಲಬುರ್ಗಿ ಧಾರವಾಡದಲ್ಲಿ ನಮ್ಮ ನೆರೆಹೊರೆಯವರು. ಅವರದ್ದು ಕಲ್ಯಾಣ ನಗರದ ಒಂಬತ್ತನೇ ಕ್ರಾಸ್. ನಮ್ಮದು ಹತ್ತನೇ ಕ್ರಾಸಿನ A by-lane. ನಮ್ಮದು technically ನಿರ್ಮಲ ನಗರ. ಅದರೂ ಮೊದಲಿನಿಂದಲೂ ಕಲ್ಯಾಣ ನಗರ ಅಂತಲೇ ಆ ಪೂರ್ತಿ ಏರಿಯಾವನ್ನು ಕರೆಯುವದು. ನಮ್ಮ ಮನೆಯಿಂದ ಅವರ ಮನೆಗೆ ನಡೆದು ಹೋಗಲು ಐದು-ಏಳು ನಿಮಿಷ ಸಾಕು. ಹೆಚ್ಚೆಂದರೆ ಅರ್ಧ ಕೀಲೋಮೀಟರ್. ಕಲಬುರ್ಗಿ ಮತ್ತು ಅವರ ಕುಟುಂಬ ನಮ್ಮ ಕುಟುಂಬಕ್ಕೆಲ್ಲ ಪರಿಚಿತರೇ. ಅವರನ್ನು ಧಾರವಾಡದಲ್ಲಿ, ನಮ್ಮ ಬಡಾವಣೆಯಲ್ಲಿ ಬೇಕಾದಷ್ಟು ಸಲ ನೋಡಿದ್ದರೂ ನನಗೆ ವೈಯಕ್ತಿಕವಾಗಿ ಅವರ ಪರಿಚಯವಿರಲಿಲ್ಲ. ಅವರ ಪುತ್ರನೊಬ್ಬ ಧಾರವಾಡದ ಶಾಲೆಯಲ್ಲಿ ನಮಗೆ ಮೂರು ವರ್ಷಕ್ಕೆ ಹಿರಿಯ. ಆತನ ಮುಖ ಪರಿಚಯವಿತ್ತು ಅಷ್ಟೇ.

ನಮ್ಮ ಮನೆ ಎಲ್ಲಿ, ಕಲಬುರ್ಗಿಯವರ ಮನೆ ಎಲ್ಲಿ ಅಂತ ತೋರಿಸುವ ಚಿತ್ರ.

ಕಲ್ಯಾಣ ನಗರದ ಎಂತಾ ಜಾಗದಲ್ಲಿ ಕನ್ನಡ ಪಂಡಿತ ಕಲಬುರ್ಗಿ ಅವರ ಮನೆ ಇತ್ತು ಅಂತೀರಿ! ಅವರ ಪಕ್ಕದ ಮನೆಯವರು ಯಾರು ಗೊತ್ತೇನು? ಖ್ಯಾತ ಕವಿ ಚೆನ್ನವೀರ ಕಣವಿಯವರು. ಕಣವಿಯವರ ಪತ್ನಿ ಕೂಡ ಸಾಹಿತಿಯೇ. ಚೆನ್ನವೀರ ಕಣವಿಯವರ ಪಕ್ಕದ ಮನೆಯವರು ಯಾರು ಗೊತ್ತೇ? ಅವರೇ ಹಳೆ ಕಾಲದ ಸಾಹಿತಿಗಳಾಗಿದ್ದ ದಿವಂಗತ ಮಾಳವಾಡ ದಂಪತಿಗಳು. ಹೀಗಾಗಿ ಕಲ್ಯಾಣ ನಗರದ ಒಂಬತ್ತನೇ ಕ್ರಾಸಿನ ಒಂದು ತುದಿಯ ಕೊನೆಯ ಮೂರೂ ಮನೆಗಳು ಕನ್ನಡಮ್ಮನ ಹೆಮ್ಮೆಯ ಮಕ್ಕಳ ಮನೆಗಳೇ. ಈಗ ನಡುವೆ ಬೇರೆ ಯಾರದ್ದಾದರೂ ಮನೆ ಬಂದಿರಬಹುದು ಬಿಡಿ. ಆದರೆ ಕಲಬುರ್ಗಿ, ಕಣವಿ, ಮಾಳವಾಡ ಒಂದು ಕಾಲದಲ್ಲಿ, ನಡುವೆ ಎಲ್ಲ ಖಾಲಿ ಖಾಲಿ ಇದ್ದಾಗ, ಅಕ್ಕಪಕ್ಕದ ಮನೆಯವರೇ. 

ಧಾರವಾಡದಲ್ಲಿ ಎಲ್ಲಿ ನಿಂತು ಒಂದು ಕಲ್ಲು ಬೀರಿದರೂ ಅದು ಯಾವದಾದರೂ ಸಾಹಿತಿಯ ಮನೆಗೇ ಹೋಗಿ ಬೀಳುತ್ತದೆ ಅಂತ ಒಂದು ಆಡು ನುಡಿ. ಕಲ್ಯಾಣ ನಗರ ಬಡಾವಣೆಯ ಆ ಒಂಬತ್ತನೇ ಕ್ರಾಸಿನ ಸುತ್ತಮುತ್ತಲಿನ ಒಂದು ಚದುರ ಕಿಲೋಮೀಟರ ಪ್ರದೇಶಕ್ಕಂತೂ ಅದು ಅನ್ವಯಿಸುತ್ತದೆ. ಕಲಬುರ್ಗಿ, ಕಣವಿ, ಮಾಳವಾಡ ಒಂದು ಕಡೆ. ಕಲಬುರ್ಗಿ ಅವರ ಮನೆಯ ಮೇಲಿನ ಕ್ರಾಸ್ ಅಂದರೆ ಎಂಟನೇ ಕ್ರಾಸಿನಲ್ಲಿ ಮತ್ತೊಬ್ಬ ಕನ್ನಡ ಪಂಡಿತ ಪ್ರೊ. ವೃಷಭೇಂದ್ರ ಸ್ವಾಮಿ ಇದ್ದರು. ಈಗ ಕೆಲವು ತಿಂಗಳ ಹಿಂದೆ ನಿಧನರಾದರು. ಏಳನೇ ಕ್ರಾಸ್ ಒಂದು ಬಿಟ್ಟು ಆರನೇ ಕ್ರಾಸಿಗೆ ಹೋದರೆ ಅಲ್ಲಿ ನಮ್ಮ ಆತ್ಮೀಯರೂ, ಸಂಬಂಧಿಕರೂ ಆದ ಡಾ. ಜೀ. ಎಂ. ಹೆಗಡೆ ಇದ್ದಾರೆ. ಅವರೂ ಕನ್ನಡ ಸಾಹಿತಿಗಳೇ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು. ಕಲಬುರ್ಗಿ, ಕಣವಿ ಅಂತಹ ಹಿರಿಯ ಸಾಹಿತಿಗಳಿಗೆ ಕಿರಿಯ ಸಾಹಿತಿ ನಮ್ಮ ಜೀಎಂನನ್ನು ಕಂಡರೆ ಸಿಕ್ಕಾಪಟ್ಟೆ ಪ್ರೀತಿ, ಅಭಿಮಾನ. ಅವರ ಏನೇ ಕೆಲಸವಿದ್ದರೂ ಹೆಗಡೆಯವರು ಬೇಕೇಬೇಕು. ಜೀಎಂ ಹೆಗಡೆ ಕೂಡ ಅಷ್ಟೇ ಭಕ್ತಿಯಿಂದ ಗುರುಸೇವೆ ಮಾಡಿಕೊಂಡು ಬಂದಿದ್ದಾನೆ. ತನ್ನ ಹಿರಿಯ ಮಿತ್ರ ಕಲಬುರ್ಗಿ ಅವರ ನಿಧನದಿಂದ ಅದೆಷ್ಟು ನೊಂದುಕೊಂಡನೋ ನಮ್ಮ ಜೀಎಂ. ತುಂಬಾ ಸೂಕ್ಷ್ಮ ಮನಸ್ಸಿನ, ಸಹೃದಯದ ಮನುಷ್ಯ ಅವನು. ಕಲಬುರ್ಗಿ, ಕಣವಿ, ಮಾಳವಾಡ, ವೃಷಭೇಂದ್ರ ಸ್ವಾಮಿ, ಜೀಎಂ ಹೆಗಡೆ ಮುಂತಾದ ಕನ್ನಡ ಪಂಡಿತರು ಮಾತ್ರವಲ್ಲ, ಅದೇ ಏರಿಯಾದಲ್ಲಿ ಮತ್ತೂ ಕೆಲವು ಕನ್ನಡ ಪಂಡಿತರು ಇದ್ದ ನೆನಪು. ಒಂಬತ್ತನೇ ಕ್ರಾಸಿನ ಕಲಬುರ್ಗಿ ಅವರ ಮನೆಯ ಕಡೆಯಿಂದ ಈಕಡೆ ನಡೆದು ಬಂದು, ಕಲ್ಯಾಣ ನಗರ ಬಸ್ ಸ್ಟಾಪ್ ದಾಟಿಕೊಂಡು ಬಂದು, ಸ್ವಲ್ಪ ಪಕ್ಕಕ್ಕೆ ತಿರುಗಿದರೆ ಅಲ್ಲಿ ಡಾ. ಜವಳಿ ಇದ್ದಾರೆ. ಅವರೂ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡದ ನಿವೃತ್ತ ಪ್ರಾಧ್ಯಾಪಕರೇ. ಅವರ ಮನೆ ಮುಂದಿನಿಂದ ಸ್ವಲ್ಪ ಮೇಲೆ ಹೋಗಿ, ಎಡಕ್ಕೆ ತಿರುಗಿದರೆ ಡಾ. ಗುಂಜೆಟ್ಟಿ ಇದ್ದಾರೆ. ಕಲಬುರ್ಗಿ, ವೃಷಭೇಂದ್ರ ಸ್ವಾಮಿ, ಜವಳಿ, ಗುಂಜೆಟ್ಟಿ ಇವರೆಲ್ಲ ಕವಿವಿ ಕನ್ನಡ ಅಧ್ಯಯನ ಪೀಠದಲ್ಲಿ ಸಹೋದ್ಯೋಗಿಗಳು. ಎಲ್ಲರೂ ಮಾಜಿ ಅಧ್ಯಾಪಕರು. ಅಷ್ಟು ದೊಡ್ಡ ಕವಿಯಾದರೂ ಚೆನ್ನವೀರ ಕಣವಿಯವರು ತರಗತಿಯಲ್ಲಿ ಕನ್ನಡ ಪಾಠ ಮಾಡಲಿಲ್ಲ. ಕವಿವಿಯ ಪ್ರಸಾರಾಂಗ ವಿಭಾಗದಲ್ಲಿ ಪುಸ್ತಕ ಪ್ರಕಟಣೆಯ ಕೆಲಸ ಮಾಡಿಕೊಂಡಿದ್ದರು ಅಂತ ನೆನಪು. ಹಳೆಯ ತಲೆಮಾರಿನ ಸಾಹಿತಿ ಮಾಳವಾಡರು ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿದ್ದರು. ಪ್ರಿನ್ಸಿಪಾಲ್ ಆಗಿ ನಿವೃತ್ತರಾಗಿದ್ದರು. ಇನ್ನು ನಮ್ಮ ಪ್ರೀತಿಯ ಜೀಎಂ ಹೆಗಡೆ ಧಾರವಾಡದ ಕಿಟ್ಟೆಲ್ ಕಾಲೇಜಿನಲ್ಲಿ ನಿರಂತರವಾಗಿ ಮೂವತ್ತೈದು ವರ್ಷ ಕನ್ನಡದ ಡಿಂಡಿಮವನ್ನು ಬಾರಿಸಿ ನಿವೃತ್ತನಾಗಿದ್ದಾನೆ. ಆದರೆ ಈಗಲೂ ಬಾರಿಸುತ್ತಲೇ ಇದ್ದಾನೆ. ಅವನ ಬಾರಿಸುವಿಕೆ ನಿರಂತರ. ಅಂದರೆ ಕನ್ನಡ ಡಿಂಡಿಮ ಬಾರಿಸುವದು ಅಂತ ಅರ್ಥ. ಒಟ್ಟಿನಲ್ಲಿ ನಮ್ಮ ಕಲ್ಯಾಣ ನಗರ ಬಡಾವಣೆಯ ಒಂಬತ್ತನೇ ಕ್ರಾಸಿನ ಒಂದು ಚದುರ ಕಿಲೋಮೀಟರ್ ಸುತ್ತಮುತ್ತಲಿನ ಜಾಗದಲ್ಲಿ ಇಷ್ಟೊಂದು ಜನ ಕನ್ನಡದ ಕಟ್ಟಾಳು ಮಂದಿ ಇದ್ದಾರೆ. ಇನ್ನೂ ಒಂದಿಷ್ಟು ಜನ ಇರಬಹುದು. ಸದ್ಯಕ್ಕೆ ಇಷ್ಟು ಜನ ನೆನಪಿಗೆ ಬರುತ್ತಾರೆ.

ನಮ್ಮ ಮಾತಾಶ್ರೀ, ಶ್ರೀಮತಿ ಜೀಎಂ ಹೆಗಡೆ, ಡಾ. ಜೀಎಂ ಹೆಗಡೆ (ದೊಡ್ಡ ಸಾಹಿತಿ), ನಾನು (೨೦೧೨ ಮಾರ್ಚ್, ಧಾರವಾಡ)

ಖ್ಯಾತ ಸಾಹಿತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, ನಮ್ಮ ಆತ್ಮೀಯ ಡಾ. ಜೀಯಂ  ಹೆಗಡೆ ಮತ್ತು ನಾನು. ೧೯೯೯ ಸೆಪ್ಟೆಂಬರ್. ಅವರ ಮನೆಯಲ್ಲಿ. ಫೋಟೋವೊಂದರ ಫೋಟೋ ಇದು.

ನಮ್ಮ ಏರಿಯಾದ ಕಲಬುರ್ಗಿ ಅವರಿಗೆ ಇಂತಹ ಭೀಕರ ಸಾವು ಬಂದಿದ್ದು ದುಃಖಕರ ವಿಷಯ. ಒಮ್ಮೆ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ಸಂಪಾದಕ ರವಿ ಬೆಳಗೆರೆ ಅವರು ಕಲಬುರ್ಗಿ ಅವರ ಸರಳತೆ ಬಗ್ಗೆ ಒಂದು ಮಾತು ಬರೆದಿದ್ದರು. ಅದು ಮನದಲ್ಲಿ ಉಳಿದಿದೆ. ಕಲಬುರ್ಗಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದರು. ಅಲ್ಲಿನ ಅವಧಿ ಮುಗಿದ ನಂತರ ಏನೂ ಗಾಂಚಾಲಿ ಮಾಡದೆ, ಚುಪ್ಚಾಪ್ ಮನೆ ಖಾಲಿ ಮಾಡಿ, ಸಾಮಾನು ಟ್ರಕ್ಕಿಗೆ ಹಾಕಿಸಿ, ತಾವು ಸಾಮಾನ್ಯರಂತೆ ಕೆಂಪು ಬಸ್ಸು ಹಿಡಿದು ಧಾರವಾಡಕ್ಕೆ ಬಂದಿದ್ದರು. ನಿವೃತ್ತ ಕುಲಪತಿಯಾದರೂ ಯಾವದೇ ತರಹದ ಸೌಲಭ್ಯ, extra consideration, favors ಇತ್ಯಾದಿ ಬಯಸದ ಪ್ರಾಮಾಣಿಕ, ಸರಳ, ಸಜ್ಜನ ಮನುಷ್ಯ ಅಂತ ಅವರ ಬಗ್ಗೆ ಪತ್ರಿಕೆಯಲ್ಲಿ ಬಂದಿದ್ದ ಆ ಒಂದು ಚಿಕ್ಕ ಬಾಕ್ಸ್ ಐಟಮ್ಮಿನ ಸಾರಾಂಶ.

ವಿವಾದ, controversy - ಕಲಬುರ್ಗಿಯವರ ಮತ್ತೊಂದು ಹೆಸರು. ಮೊದಲಿಂದಲೂ ಅವರನ್ನು ವಿವಾದಗಳು ಸುತ್ತಿಗೊಂಡೇ ಬಂದಿವೆ. ಮೊದಲೆಲ್ಲ ನಮಗೆ ಏನೂ ಸರಿಯಾಗಿ ಗೊತ್ತಿರಲಿಲ್ಲ. ಧಾರವಾಡದಲ್ಲಿದ್ದಾಗ ಸಾಹಿತಿಗಳು, ಅವರ ವಿವಾದಗಳು ಅಂದರೆ ನಮಗೆ ಅಷ್ಟಕಷ್ಟೇ. ಈಗ ಅವುಗಳನ್ನು ಮತ್ತೆ ನೆನಪು ಮಾಡಿಕೊಟ್ಟಿವೆ ಇಂದಿನ ಪತ್ರಿಕಾ ವರದಿಗಳು. ತುಂಬಾ ಹಿಂದೆ ಕಲಬುರ್ಗಿ ಯಾವದೋ ಪುಸ್ತಕ ಬರೆದಿದ್ದರು. ಆ ಪುಸ್ತಕ ಅವರ ಸಮಾಜದ ಸ್ವಾಮೀಜಿಗಳನ್ನು ಕೆರಳಿಸಿತ್ತು. ಇವರ ಅಭಿಪ್ರಾಯ ಮತ್ತು ಅದರ ಪ್ರತಿಪಾದನೆ ಅವರ ಸಮುದಾಯದ ಗುರು ಸಮೂಹಕ್ಕೆ ಸೇರಿಬಂದಿರಲಿಲ್ಲ. ಇದು ಸುಮಾರು ೧೯೮೦ ರ ಮಾತಿರಬಹದು. ಸ್ವಾಮೀಜಿಗಳ ಜೊತೆ ಕಲಬುರ್ಗಿ ಸಾಕಷ್ಟು ವಾದ, ವಿವಾದ ಮಾಡಿದ್ದರು. ನಂತರ ಏನೋ ಒಂದು ತರಹದ ಸಂಧಾನ ಮಾಡಿಕೊಂಡಿದ್ದರು ಅಂತ ಓದಿದ ನೆನಪು.

ಕನ್ನಡದ ಮತ್ತೊಬ್ಬ ದೊಡ್ಡ ಪಂಡಿತ ಚಿದಾನಂದ ಮೂರ್ತಿಗಳಿಗೂ ಕಲಬುರ್ಗಿಯವರಿಗೂ ಯಾವಾಗಲೂ ವಾಗ್ವಾದ. ಕಲಬುರ್ಗಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಚಿದಾನಂದ ಮೂರ್ತಿಗಳು, 'ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ನಮ್ಮ ಭಿನ್ನಾಭಿಪ್ರಾಯ ಏನೇ ಇದ್ದರೂ ಅದು ಸಾಹಿತ್ಯ, ಇತಿಹಾಸ ಮುಂತಾದ ವಿಚಾರಗಳಿಗೆ ಮಾತ್ರ ಸೀಮಿತವಾಗಿತ್ತು,' ಅಂತ ಹೇಳಿ ದೊಡ್ಡತನ ಮೆರೆದಿದ್ದಾರೆ.

ಅಣ್ಣಿಗೇರಿ ಎಂಬ ಊರಿನಲ್ಲಿ ನೆಲವನ್ನು ಅಗೆಯುತ್ತಿದ್ದಾಗ ಅನಾಮತ್ತಾಗಿ ಒಂದು ನಲವತ್ತು ತಲೆಬುರುಡೆಗಳು ಕಂಡುಬಿಟ್ಟವು. ಸಂಶೋಧಕ ಕಲಬುರ್ಗಿ ಆ ತಲೆಬುರುಡೆಗಳು ಆತ್ಮಾಹುತಿ ಮಾಡಿಕೊಂಡ ಶರಣರವು ಅಂತ ತಮ್ಮ ಸಿದ್ಧಾಂತ ಮಂಡಿಸಿದರು. ಅದನ್ನು ಖಂಡಿಸಿದ ಚಿದಾನಂದ ಮೂರ್ತಿ ಬೇರೆ ಏನೋ ಥಿಯರಿ ಹೇಳಿದರು. ಆಗ ಸುಮಾರು ವಾದ ವಿವಾದ ನಡೆದಿತ್ತು ಅಂತ ಓದಿದ ನೆನಪು.

ಜ್ಞಾನಪೀಠಿ ಸಾಹಿತಿ ದಿವಂಗತ ಅನಂತ ಮೂರ್ತಿಗಳು ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಹಾಗಂತ ಅವರೇ ಅವರ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾರೆ ಅಂತ ಅನಂತ ಮೂರ್ತಿಗಳ ಯಾವದೋ ಲೇಖನವನ್ನು ಉಲ್ಲೇಖಿಸಿ ಭಾಷಣವೊಂದರಲ್ಲಿ ಕಲಬುರ್ಗಿ ಅವರು ಆಡಿದ ಮಾತು ಸಿಕ್ಕಾಪಟ್ಟೆ ವಿವಾದಕ್ಕೆ ಗುರಿಯಾಗಿತ್ತು. ಚಿದಾನಂದ ಮೂರ್ತಿಗಳು ಎಂದಿನಂತೆ ತಮ್ಮ ಮಿತ್ರನನ್ನು ಪತ್ರಿಕೆಗಳಲ್ಲಿ ಝಾಡಿಸಿದ್ದರು. ಆ ವಿವಾದದ ಕೇಂದ್ರವಾಗಿದ್ದ ಅನಂತ ಮೂರ್ತಿಗಳು ಆಗ ತುಂಬಾ ಅನಾರೋಗ್ಯದಲ್ಲಿದ್ದರು. ಹಾಗಿದ್ದರೂ ಮಾತಾಡಿ, ಅವರು ಬರೆದಿದ್ದನ್ನು out of context ಆಗಿ ಉಪಯೋಗಿಸಿ, ಸುಮ್ಮನೆ ಇಲ್ಲದ ಸಲ್ಲದ ವಿವಾದ ಆರಂಭವಾಗಲು ಕಲಬುರ್ಗಿ ಕಾರಣರಾಗಿದ್ದಾರೆ ಅಂತ ಉರಿದುಕೊಂಡು ಹೇಳಿದ್ದರು ಅನಂತ ಮೂರ್ತಿ. ನಂತರ ಕೆಲವೇ ದಿನಗಳಲ್ಲಿ ಅನಂತ ಮೂರ್ತಿ ತೀರಿಹೋದರು.

ಆಗ 'ಸಮಯ ಟೀವಿ'ಯ anchor ರಂಗನಾಥ್ ಭಾರದ್ವಾಜ ಕಲಬುರ್ಗಿಯವರನ್ನು ಟೀವಿ ಸ್ಟುಡಿಯೋಗೆ ಕರೆಯಿಸಿಕೊಂಡು ಒಳ್ಳೆ ರೀತಿಯಲ್ಲಿ ಆ ವಿಷಯದ ಬಗ್ಗೆ ಚರ್ಚಿಸಿದ್ದರು. ಅದರ ಒಂದು ಝಲಕ್ ಕೆಳಗಿದೆ ನೋಡಿ. ಕೆಳಗಿನದು ಭಾಗ - ೧. ಉಳಿದ ಭಾಗಗಳ ಲಿಂಕೂ ಕೆಳಗೆ ಇದೆ. ಆಸಕ್ತರು ನೋಡಬಹುದು.ಭಾಗ - ೨
ಭಾಗ  - ೩
ಭಾಗ - ೪ 

ಕಲಬುರ್ಗಿಯವರ ಕೊನೆಯ ವಿವಾದ, ನನಗೆ ನೆನಪಿರುವ ಹಾಗೆ, ನಡೆದಿದ್ದು ಕೆಲವು ತಿಂಗಳ ಹಿಂದೆ. ಹಿಂದೂ ಧರ್ಮದ ಬಗ್ಗೆ ಏನೋ ಒಂದು ಹೇಳಿಕೆ ಕೊಟ್ಟಿದ್ದರು. ಅದು ಹಲವರಿಗೆ ಪಥ್ಯವಾಗಿರಲಿಲ್ಲ. ಮತ್ತೆ ವಾದ ವಿವಾದ ನಡೆದಿತ್ತು.

'ವಿಗ್ರಹದ ಮೇಲೆ ಮೂತ್ರ ವಿಸರ್ಜನೆ' ವಿವಾದದ ನಂತರ ಯಾರೋ ಪೊರ್ಕಿಗಳು ಅವರ ಮನೆ ಮುಂದೆ ಗಲಾಟೆ ಮಾಡಿ, ಖಾಲಿ ಬಿಯರ್ ಬಾಟಲಿ ಎಸೆದು ಓಡಿಹೋಗಿದ್ದರು. ಆಗ ಅವರಿಗೆ ಪೋಲೀಸ್ ರಕ್ಷಣೆ ಕೊಟ್ಟಿದ್ದು ಕೂಡ ಸುದ್ದಿಯಾಗಿತ್ತು.

ಒಟ್ಟಿನಲ್ಲಿ ಈ ಸಲ ಬಂದೂಕು, ಗುಂಡಿನ ದೊಡ್ಡ ದಾಳಿಯೇ ಆಗಿ ಕಲಬುರ್ಗಿ ತಮ್ಮ ಎಪ್ಪತ್ತೇಳನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಆ ಭಗವಂತ ಶಾಂತಿ ಕೊಡಲಿ. ಅವರ ಕುಟುಂಬಕ್ಕೆ ನೆಮ್ಮದಿ, ದುಃಖ ಭರಿಸುವ ಶಕ್ತಿ ಎಲ್ಲ ನೀಡಲಿ.

ಕಲಬುರ್ಗಿಯವರನ್ನು ಯಾಕೆ ಕೊಂದರು, ಅದೂ ಗುಂಡಿಟ್ಟು? ಅದಕ್ಕೆ ಪೋಲೀಸರ ತನಿಖೆಯೇ ಉತ್ತರ ಹೇಳಬೇಕು. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಹಲವು ಜನರ, ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಅವರು. ಅದೇ ಕಾರಣವೇ ಅವರ ಕೊಲೆಗೆ? ಅಥವಾ ಅವರ ಅಭಿಪ್ರಾಯ, ಸಿದ್ಧಾಂತ, ಮೌಲ್ಯಗಳನ್ನು ಮೀರಿದ ಕಾರಣಗಳೂ ಇವೆಯೋ? 

ಈ ಲೇಖನದ ಮೊದಲ ವಾಕ್ಯದಲ್ಲಿ ಬರೆದೆ, 'ಧಾರವಾಡದ ಕಲ್ಯಾಣ ನಗರ ಬಡಾವಣೆಯಲ್ಲಿ "ಮತ್ತೊಮ್ಮೆ" ಬಂದೂಕು ಘರ್ಜಿಸಿದೆ' ಅಂತ. 'ಮತ್ತೊಮ್ಮೆ' ಅಂತ ಹೇಳಲಿಕ್ಕೆ ಮೊದಲು ಅಲ್ಲಿ ಯಾವಾಗ ಬಂದೂಕು ಮೊರೆಯುತ್ತಿತ್ತು? ಯಾಕೆ ಮೊರೆಯುತ್ತಿತ್ತು? ಯಾರು ಆ ಟೈಪಿನ ಕೋವಿ ಹುಚ್ಚಿನ ಕೋವಿದರಿದ್ದರು? ಅಂತೆಲ್ಲ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಬಂದರೆ ಅದಕ್ಕೆ ವಿವರಣೆ ಕೂಡ ಇದೆ. ನಮ್ಮ ಧಾರವಾಡದ ಮನೆಯಲ್ಲಿಯೇ ಕೋವಿ ಮೊರೆಯುತ್ತಿತ್ತು. ಪ್ರತಿವರ್ಷ ಆಯುಧ ಪೂಜೆಯಂದು, ಬರೋಬ್ಬರಿ ಆಯುಧವನ್ನೇ, ಅಂದರೆ ದೊಡ್ಡ ನಿಜವಾದ ಬಂದೂಕನ್ನೇ, ಪೂಜೆ ಮಾಡಿ, ಸಾಂಪ್ರದಾಯಕವಾಗಿ ಒಂದು ಗುಂಡನ್ನು ಗಾಳಿಯಲ್ಲಿ ಹಾರಿಸುವ ಸಂಪ್ರದಾಯ ಮೊದಲು ನಮ್ಮ ಹಳ್ಳಿ ಕಡೆ ಇತ್ತು. ಸಿರ್ಸಿ ಕಡೆ ಹಳ್ಳಿಯಲ್ಲಿದ್ದ ಬಂದೂಕನ್ನು ೧೯೯೫-೯೬ ರ ಹೊತ್ತಿಗೆ ತಂದೆಯವರು ಅವರ ಮಾವ ಅಂದರೆ ನಮ್ಮ ಅಜ್ಜನ (ಅಮ್ಮನ ಅಪ್ಪ) ಹತ್ತಿರ ಕೊಂಡುಕೊಂಡು, ಧಾರವಾಡಕ್ಕೆ ತಂದಿಟ್ಟುಕೊಂಡಿದ್ದರು. ಅಜ್ಜನಿಗೆ ಬೇಟೆ ಹುಚ್ಚಿತ್ತು. ಪ್ರಾಯದಲ್ಲಿ ದೊಡ್ಡ ಮಟ್ಟದ ಬೇಟೆ ಆಡಿದವನು ನಮ್ಮ ಮಾತಾಮಹ. ನಂತರ ೧೯೫೦ ರ ಹೊತ್ತಿಗೆ ಬೇಟೆಯನ್ನು ನಿಷೇಧಿಸಿ ಕಾನೂನುಗಳು ಬಂದ ನಂತರ ಬೇಟೆ ಕಮ್ಮಿಯಾಗಿತ್ತು. ಆದರೆ ತೋಟ, ಗದ್ದೆ ಹಾಳು ಮಾಡಲು ಬರುತ್ತಿದ್ದ ಕಾಡು ಹಂದಿ, ಮಂಗ ಇತ್ಯಾದಿಗಳ ಬೇಟೆ ಇತ್ತೀಚಿನವರೆಗೂ ನಡೆಯುತ್ತಿತ್ತು. ಕೊಂದ ಪಾಪ ತಿಂದು ಪರಿಹಾರ. ಹೆಗಡೆಗಳು ತೋಟ ಗದ್ದೆ ರಕ್ಷಿಸಿಕೊಳ್ಳಲು ಪ್ರಾಣಿಗಳನ್ನು ಕೊಂದರೆ ಕೆಲಸದವರು ತೆಗೆದುಕೊಂಡು ಹೋಗಿ ಮಸಾಲೆ ಹಾಕಿಕೊಂಡು ಸ್ವಾಹಾ ಮಾಡುತ್ತಿದ್ದರು. ಈಗ ಬಿಡಿ. ಗದ್ದೆ ಮಾಡುವದನ್ನೇ ಬಿಟ್ಟಾಗಿದೆ. ಭತ್ತದ, ಕಬ್ಬಿನ ಗದ್ದೆಗಳಲ್ಲಿ ಕಾಡು ಹುಲ್ಲು ಬೆಳೆಯುತ್ತದೆ. ಅದು ದನಗಳಿಗೆ ಆಗುತ್ತದೆ. ಕೃಷಿ ಕಾರ್ಮಿಕರದ್ದು ಅಷ್ಟು ತೊಂದರೆ, ಅಭಾವ. ಗದ್ದೆಯಂತೂ ಇಲ್ಲವೇ ಇಲ್ಲ. ಅಡಿಕೆ ತೋಟ ಅಷ್ಟಕಷ್ಟೇ. ಹಾಗಾಗಿ ಈಗ ಹಲವು ವರ್ಷಗಳಿಂದ ಬೇಟೆಯ ಪ್ರಶ್ನೆಯೇ ಬರುವದಿಲ್ಲ.

ಹೀಗೆಲ್ಲ ಆಗಿ ಅಜ್ಜನ ಮನೆಯ, ಹಳೇ ಕಾಲದ, ಮೇಡ್ ಇನ್ ಇಂಗ್ಲೆಂಡ್,  Webley & Scott of Birmingham, UK, ಬಂದೂಕನ್ನು ಅಜ್ಜನ ಮನೆಯವರು ಮಾರಲು ಹೊರಟಿದ್ದರು. ಕುಟುಂಬದ ಹಳೆಯ ಕಾಲದ ವಸ್ತು antique ಅಂತಾದರೂ ಸರಿ ಮನೆಯಲ್ಲೇ ಇರಲಿ ಅಂತ ನಮ್ಮ ತಂದೆಯವರು ಅದನ್ನು ತಂದಿಟ್ಟುಕೊಂಡಿದ್ದರು. ಬಂದೂಕನ್ನು ಹಾಗೇ ತಂದಿಟ್ಟುಕೊಳ್ಳಲು ಅದೇನು ಆಟಿಕೆ ಬಂದೂಕೇ? ಅಲ್ಲ. ಹಾಗಾಗಿ ಅದಕ್ಕೆ ಲೈಸೆನ್ಸ್ ಮಾಡಿಸಬೇಕು. ೧೯೯೬ ರಲ್ಲಿ, ತಮ್ಮ ಅರವತ್ತೆರೆಡು ಚಿಲ್ಲರೆ ವರ್ಷ ಇಳಿವಯಸ್ಸಿನಲ್ಲಿಯೂ ಇಲ್ಲದ ಖಟ್ಪಿಟಿ ಮಾಡಿ ಗನ್ ಲೈಸೆನ್ಸ್ ಮಾಡಿಸಿಕೊಂಡಿದ್ದರು ತಂದೆಯವರು. ಇಪ್ಪತ್ತು ವರ್ಷ ಲೈಸೆನ್ಸ್ ಇತ್ತು. ಈಗ ಅವರಿಗೆ ವಯಸ್ಸು ಎಂಬತ್ತರ ಮೇಲಾಯಿತು. ಈ ವಯಸ್ಸಿನಲ್ಲಿ ಗನ್ ಲೈಸೆನ್ಸ್ ನವೀಕರಣವಾಗುವದು ಕಷ್ಟ. ಮತ್ತೆ ಆ ಬಂದೂಕಿನ ವಾಗೈತಿ (maintenance) ಮಾಡುವದೂ ಸಾಧ್ಯವಿಲ್ಲ. ವಾಗೈತಿ ಮಾಡದೇ ಇಟ್ಟರೆ ತುಕ್ಕು ಹಿಡಿದು ಹಾಳಾಗಿ ಹೋಗುತ್ತದೆ. ಇವೆಲ್ಲ ಕಾರಣಗಳಿಂದ ಈಗ ಒಂದು ಆರು ತಿಂಗಳ ಹಿಂದೆ ನಮ್ಮ ಮನೆ ಬಂದೂಕನ್ನು ಮಾರಾಟ ಮಾಡಿದೆವು. ಮಾರಾಟ ಮಾಡಲು ತಂದೆಯವರಿಗೆ ಮನಸ್ಸೇ ಇರಲಿಲ್ಲ. ನನಗೆ, ಅಣ್ಣನಿಗೆ, 'ಲೈಸೆನ್ಸ್ ಮಾಡಿಸಿಕೊಳ್ಳಿ. ಅಮೇರಿಕಾಗೇ ತೆಗೆದುಕೊಂಡು ಹೋಗಿ ಇಟ್ಟುಕೊಳ್ಳಿ,' ಅಂತ ಬಹಳ ಹೇಳಿದ್ದರು. ಆದರೆ ನಮಗೆ ಅದು ಪ್ರಾಕ್ಟಿಕಲ್ ಅನ್ನಿಸಲಿಲ್ಲ. ಹೀಗಾಗಿ ಮನೆ ಬಂದೂಕನ್ನು ಆಪ್ತರೊಬ್ಬರ ಮೂಲಕ ಧಾರವಾಡ ಸಮೀಪದ ರೈತಾಪಿ ಜನರೊಬ್ಬರಿಗೆ ಮಾರಾಟ ಮಾಡಿದ್ದಾಯಿತು. ಹೀಗಾಗಿ ಇನ್ನು ಮುಂದೆ ನಮ್ಮ ಮನೆಯಲ್ಲಿ ಆಯುಧ ಪೂಜೆ ದಿವಸ ಬಂದೂಕು ಘರ್ಜಿಸುವದಿಲ್ಲ.

ಆ ಬಂದೂಕಿನಲ್ಲಿ ನಾನು ಗುಂಡು ಹಾರಿಸಿದ್ದು ಒಂದೇ ಒಂದು ಸಲ. ೧೯೯೬ ರಲ್ಲಿ. ಹುಟ್ಟಿದಾಗಿಂದ ಹೊನ್ನೆಗದ್ದೆ (ಸಿರಸಿ ಸಮೀಪ) ಹಳ್ಳಿಯ ಅಜ್ಜನ ಮನೆಯಲ್ಲಿ ಆ ಖತರ್ನಾಕ್ ಬಂದೂಕನ್ನು ಅಚ್ಚರಿಯಿಂದ ನೋಡುತ್ತಾ ಬೆಳೆದವನು ನಾನು. ಆ ಬಂದೂಕು, ಅದಕ್ಕೆ ಲೋಡ್ ಮಾಡುವ ದೊಡ್ಡ ಸೈಜಿನ ಕಡುಗೆಂಪು ಬಣ್ಣದ ಕಾರ್ತೂಸು ಎಲ್ಲ ದೊಡ್ಡ ಅಚ್ಚರಿಗಳೇ. ಅಜ್ಜನ ದೊಡ್ಡ ಮಂಚದ ಹಿಂದೆ ಸದಾ ತೂಗಾಡುತ್ತ ಇರುತ್ತಿತ್ತು ಆ ಬಂದೂಕು. ಅದನ್ನು ಮುಟ್ಟಿ, ಸಂಭ್ರಮಿಸಿ, ಕುದರೆ (ಟ್ರಿಗರ್) ಎಳೆದು, ಗುಂಡಿಲ್ಲದ ಖಾಲಿ ಬಂದೂಕನ್ನು ಕ್ಲಿಕ್ ಕ್ಲಿಕ್ ಅನ್ನಿಸಿಬಿಟ್ಟರೆ ಏನೋ ಸಾಧಿಸಿದ ಹೆಮ್ಮೆ. ೧೯೯೬ ರಲ್ಲಿ ಆವತ್ತು ಆಯುಧ ಪೂಜೆಯ ದಿನವಲ್ಲ. ಆದರೆ ಗನ್ ಹೊಸದಾಗಿ ಮನೆಗೆ ಬಂದಿತ್ತು. ಆಗಷ್ಟೇ ನಾನೂ ಸಹ  ಆಫ್ರಿಕಾದ ಟಾಂಜಾನಿಯದಲ್ಲಿ ಒಂದು ವರ್ಷ ಕೆಲಸ ಮಾಡಿ ವಾಪಸ್ ಭಾರತಕ್ಕೆ ಬಂದಿದ್ದೆ. ಬೆಂಗಳೂರಿಗೆ ಬಂದು ಇಳಿದಿವ ನಂತರ ಧಾರವಾಡಕ್ಕೆ ಬಂದಿದ್ದೆ. ನನಗೆ ಗುಂಡು ಹಾರಿಸುವ ಆಸಕ್ತಿಯೇನೂ ಜಾಸ್ತಿ ಇರಲಿಲ್ಲ. ಆದರೆ ತಂದೆಯವರಿಗೆ ಸಿಕ್ಕಾಪಟ್ಟೆ ಹುರುಪು. ಆಗ ಮಾತ್ರ ಲೈಸೆನ್ಸ್ ತೆಗೆದುಕೊಂಡಿದ್ದರು. ಸಿಕ್ಕಾಪಟ್ಟೆ ಉಪಟಳ ಕೊಡುತ್ತಿದ್ದ ಮಂಗಗಳನ್ನು ಬರೋಬ್ಬರಿ ಕೋವಿ ಉಪಯೋಗಿಸಿ ತಹಬಂದಿಗೆ ತಂದುಕೊಂಡಿದ್ದರು. ಸರಿಯಾಗಿ ಗುರಿಯಿಟ್ಟು ಮಂಗಗಳ ಗುಂಪಿನ ನಾಯಕನನ್ನೇ 'ಢಂ!' ಅನ್ನಿಸಿಬಿಟ್ಟಿದ್ದರು. ಅಷ್ಟೇ ಮಾಡಿದ್ದು. ಖಡಕ್ ಗುರಿಯೆಂದರೆ ಅದು! ಹೇಳಿಕೇಳಿ ಬಾಲ್ಯದಲ್ಲಿ ಕಾಡು ಮೇಡು ಅಲೆದು, ಕಬ್ಬಿನ ಗದ್ದೆಗೆ ಬರುವ ಪ್ರಾಣಿಗಳನ್ನು ಬೇಟೆಯಾಡಿ ಬರೋಬ್ಬರಿ ಗುರಿಯಿಡುವದನ್ನು ಕಲಿತವರು ನಮ್ಮ ತಂದೆಯವರು. ಇನ್ನು ಅವರ ಅಣ್ಣ, ಅಂದರೆ ನಮ್ಮ ದಿವಂಗತ ದೊಡ್ಡಪ್ಪ ಮತ್ತು ಅವನ ಮಕ್ಕಳ ಕತೆಯಂತೂ ಬಿಡಿ. ಈಗಲೂ ದಟ್ಟ ಕಾಡಿನ ನಡುವೆ ಒಂಟಿ ಮನೆಯಲ್ಲಿ ಇರುತ್ತಾರೆ. ಪಕ್ಕದಲ್ಲೇ ಹುಲಿ ಘರ್ಜಿಸುತ್ತದೆ. ಮನೆಯಿಂದ ಅನತಿ ದೂರದಲ್ಲಿ ಆನೆಗಳು ಘೀಳಿಡುತ್ತಾ ಸಾಗುತ್ತವೆ. ಅವರು ಅವೆಷ್ಟು ಪ್ರಾಣಿಗಳನ್ನು ಮಟಾಶ್ ಮಾಡಿಬಿಟ್ಟಿದ್ದಾರೋ! ನಮ್ಮ ದೊಡ್ಡಪ್ಪನಂತೂ ೧೯೪೦, ೫೦ ರ ದಶಕದಲ್ಲಿ ಹುಲಿ, ಆನೆ ಇತ್ಯಾದಿ ಎಲ್ಲ ಬೇಟೆ ಆಡಿದವರೇ. ಬೇಟೆ ಆಡಲಿಲ್ಲ ಅಂದರೆ ಅವು ಇವರನ್ನು ಬೇಟೆಯಾಡಿಬಿಡುತ್ತಿದ್ದವು. ಹಾಗಿತ್ತು ಪರಿಸ್ಥಿತಿ. Hunting was then an absolute necessity for survival . ಪಶ್ಚಿಮ ಘಟ್ಟಗಳ ದಟ್ಟ ಅಡವಿ ಮಧ್ಯೆ ಹೋಗಿ, ಹೊಸ ಗದ್ದೆ ತೋಟ ಮಾಡಿಕೊಂಡು, ಬಾಳು ಕಟ್ಟಿಕೊಳ್ಳುವದು ಅಂದರೆ ಹುಡುಗಾಟದ ಮಾತೇ?? ಅದನ್ನು ಮಾಡಿ ತೋರಿಸಿದವರು ನಮ್ಮ ದೊಡ್ಡಪ್ಪ. ಅವರ ಬೇಟೆಯ ಕಥನಗಳನ್ನು ಬರೆದರೆ ಬೇಟೆಗಾರ ಕಮ್ ಲೇಖಕ ಕೆದಂಬಾಡಿ ಜತ್ತಪ್ಪ ರೈ ಅವರ ಬೇಟೆಯ ಪುಸ್ತಕಗಳಿಗೆ ಸಡ್ಡು ಹೊಡೆದಾವು!

ಸರಿ, ಬಂದೂಕು ಹಾರಿಸಬೇಕು. ತಂದೆಯವರು ನನ್ನ ಕೈಗೆ ಒಂದು ಒಂದು ಕಾರ್ತೂಸು ಕೊಟ್ಟರು. ಎಲ್ಲ ವಿವರವಾಗಿ ಹೇಳಿದರು. ಗಮನವಿಟ್ಟು ಕೇಳಿಸಿಕೊಂಡೆ. ಅದರೂ ಒಂದು ತರಹದ ಅಳುಕು. ಬರಿ ಖಾಲಿ ಕೋವಿಯಿದ್ದಾಗ ಏನೂ ಅನ್ನಿಸುವದಿಲ್ಲ. ಜೊತೆಗೆ  ಹೆಬ್ಬೆರಳಿನ ಗಾತ್ರದ ಕೆಂಪು ಬಣ್ಣದ ಕಾರ್ತೂಸು ಕೈಯಲ್ಲಿ ಬಂದರೆ ಅಷ್ಟೇ ಮತ್ತೆ. ಇಡೀ ದೇಹ ಕಂಪಿಸಿಹೋಗುತ್ತದೆ. ಕಾರ್ತೂಸ್ ಜೊತೆಗಿದ್ದರೆ ಒಂದು ಒಲೆ ಊದುವ ಕೊಳವೆಯಂತಹ ಸಾಮಾನ್ಯ ನಳಿಕೆಯಂತಹ ಬಂದೂಕು ಎಂತಹ ಶಕ್ತಿಶಾಲಿ ಆಯುಧವಾಗಿ ಬಿಡುತ್ತದೆ! ಒಂದು ಆನೆಯನ್ನೂ ಸಹ ಒಂದು ಹೆಬ್ಬರಳಿನ ಗಾತ್ರದ ಕಾರ್ತೂಸು ಅಡ್ಡಡ್ಡ ಮಲಗಿಸಿಬಿಡುತ್ತದೆ. ಏನಾದರೂ ಹೆಚ್ಚು ಕಮ್ಮಿಯಾದರೆ ಮತ್ತೊಬ್ಬರ ಪ್ರಾಣ ಹೋಗುತ್ತದೆ. ಅದೆಷ್ಟು ಮಂದಿ ಪೊರಪಾಟಿನಲ್ಲಿ ತಮ್ಮದೇ ಮನೆ ಮಂದಿಯ ಪ್ರಾಣ ತೆಗೆದಿಲ್ಲ? ಇನ್ನೂ ಕೆಲವರು ಬಂದೂಕು ಕ್ಲೀನ್ ಮಾಡುವಾಗ ತಮ್ಮದೇ ಪ್ರಾಣ ಕಳೆದುಕೊಂಡಿದ್ದಾರೆ.


ನಮ್ಮ ಬಂದೂಕಿನ ಕಾರ್ತೂಸುಗಳು ಸುಮಾರು ಹೀಗೇ ಇದ್ದವು.


ಕಡುಗೆಂಪು ಬಣ್ಣದ ಕಾರ್ತೂಸು ಕೈಗೆ ಬಂದಾಗ ನನ್ನ ಎದೆ ಧಕ್ ಧಕ್. ಮಹಾ ತೂಕದ ಸಿಕ್ಕಾಪಟ್ಟೆ ವಜನದ ಬಂದೂಕು ಅದು. ಅದನ್ನು ಮಧ್ಯದಲ್ಲಿ ಮುರಿದಂತೆ ಮಾಡಿ ತೆಗೆದೆರೆ ಕಾರ್ತೂಸ್ ತುಂಬುವ ಚೇಂಬರ್ ಕಾಣುತ್ತಿತ್ತು. ಮುರಿದಂತೆ ಮಾಡಿ, ಸಾವಕಾಶವಾಗಿ ಚೇಂಬರ್ ಒಳಗೆ ಕಾರ್ತೂಸನ್ನು ಲೋಡ್ ಮಾಡಿದೆ. ಮತ್ತೆ ಒಂದು ಝಟಕಾ ಕೊಟ್ಟು ಬಂದೂಕನ್ನು ಸೀದಾ ಮಾಡಿಕೊಂಡೆ. ಮುಂದಿನದು ದೊಡ್ಡ ಖತರ್ನಾಕ್ ಕೆಲಸ. ಬರೋಬ್ಬರಿ ಸೂಚನೆ ಕೊಡುತ್ತ ತಂದೆಯವರು ಪಕ್ಕಕ್ಕೇ ನಿಂತಿದ್ದರು. ಮೊದಲು ಬಂದೂಕನ್ನು ಎತ್ತಿ, ಹೆಗಲಿಗೆ ಆನಿಸಿಕೋ ಅಂದರು. recoil ಸಿಕ್ಕಾಪಟ್ಟೆ ಆಗಿ ಬರೋಬ್ಬರಿ ಒದೆಯುತ್ತದೆ ಅಂತ ಗೊತ್ತಿತ್ತು. ಮತ್ತೆ ಒಳಗಿರುವದು ದೊಡ್ಡ ಪ್ರಮಾಣದ ಆನೆ ಕೊಲ್ಲುವ ಕಾರ್ತೂಸು. ಸಿಕ್ಕಾಪಟ್ಟೆ recoil ಆಗೇ ಆಗುತ್ತದೆ. ಹಾಗಾಗಿ ಸರಿಯಾಗಿ ಭುಜಕ್ಕೆ ಒತ್ತಿ ಇಟ್ಟುಕೊಳ್ಳಬೇಕು. ನಂತರ ಮೇಲಿನ ಒಂದು ಲೀವರ್ ಎಳೆಯಬೇಕು. ಈಗ ಶೂಟ್ ಮಾಡಲು ಬಂದೂಕು ರೆಡಿ. ಇದಾದ ಮೇಲೆ ಏಕಾಗ್ರತೆ ಇರಬೇಕು. ಯಾಕೆಂದರೆ ಈಗ ಕುದುರೆ ಎಳೆದುಬಿಟ್ಟರೆ 'ಢಂ!' ಅಂತ ಫೈರ್ ಆಗೇಬಿಡುತ್ತದೆ. ಸರಿ. ಲೀವರ್ ಎಳೆದು, ಬಂದೂಕನ್ನು ಕಾಕ್ (cock) ಮಾಡಿ, ಕುದುರೆ ಎಳೆದೆ ನೋಡಿ! ಅಬ್ಬಾ! ಅದು ಎಂತಹ ಅನುಭವ ಮಾರಾಯರೇ! ವರ್ಣಿಸಲು ಅಸಾಧ್ಯ! ಹಾಗಿರುತ್ತದೆ ಬಂದೂಕು ಹಾರಿಸಿದ ಮೊದಲ ಅನುಭವ. 'ಢಂ!' ಅಂತ ದೊಡ್ಡ ಶಬ್ದ ಮಾಡುತ್ತಾ ಫೈರ್ ಆಯಿತು. ಎಣಿಸಿದಂತೆ ಬಂದೂಕು ಝಾಡಿಸಿ ಒದೆಯಿತು. ಸರಿಯಾಗಿ ಭುಜಕ್ಕೆ ಆನಿಸಿಟ್ಟುಕೊಂಡಿದ್ದರಿಂದ ಗನ್ನು ಕೈಯಲ್ಲೇ ಉಳಿಯಿತು. ಇಲ್ಲವಾದರೆ ಬಂದೂಕು ಕೈತಪ್ಪಿ ಕೆಳಗೆ ಬೀಳುವದು ಖಾತ್ರಿಯಿತ್ತು.

ಹೀಗೆ ೧೯೯೬ ರಿಂದ ನಮ್ಮ ಧಾರವಾಡದ ಮನೆಯಲ್ಲಿ ನಿಜವಾದ ದೊಡ್ಡ ಬಂದೂಕೇ ಇತ್ತು. ಪ್ರತಿ ವರ್ಷ ಆಯುಧ ಪೂಜೆಯ ದಿವಸ, ತಂದೆಯವರು ಬರೋಬ್ಬರಿ ಆ ಬಂದೂಕೆಂಬ ಆಯುಧವನ್ನೇ ಪೂಜೆ ಮಾಡಿ, ಒಂದು ಕಾರ್ತೂಸ್ ಗಾಳಿಯಲ್ಲಿ ಹಾರಿಸಿ, ಇಡೀ ಬಡಾವಣೆಯೇ ಬೆಚ್ಚಿಬೀಳುವಂತಹ 'ಢಂ!' ಅನ್ನುವ ಸದ್ದು ಮಾಡುತ್ತಿದ್ದರು ಅಂತ ನೆನಪು. ಒಂದೆರೆಡು ಬಾರಿ ದೊಡ್ಡ ಗುಂಡಿನಲ್ಲೇ ಮಂಗಗಳನ್ನು ಹೊಡೆದು ಕೊಂದಿದ್ದರೂ ಅದು ರಿಸ್ಕಿ ಅಂತ ನಂತರ ವಿಚಾರ ಮಾಡಿದರು. ಮತ್ತೆ ಅಕ್ಕಪಕ್ಕಕ್ಕೆ ತುಂಬಾ ಮನೆಗಳು ಬೇರೆ ಬಂದುಬಿಟ್ಟವಲ್ಲ. ಎಲ್ಲಿಯಾದರೂ ಗುರಿ ಮಿಸ್ಸಾಗಿ ಯಾರಿಗಾದರೂ ತಾಗಿದರೆ ಅದು ಮಹಾ ದೊಡ್ಡ ಲಫಡಾ ಆದೀತು ಅಂತ ವಿಚಾರ ಮಾಡಿದರು. ಆದರೆ ಆವಾಗ ಮಂಗನ ಹಾವಳಿ ಇಷ್ಟಿತ್ತು ಅಂದರೆ ಹೇಳಲು ಸಾಧ್ಯವಿಲ್ಲ. ಅಷ್ಟಿತ್ತು. ಅಷ್ಟೂ ತೆಂಗಿನ ಕಾಯಿಯ ಮಿಡಿಗಳನ್ನೇ ತಿಂದೋ, ರುಚಿ ನೋಡೋ ಹಾವಳಿ ಎಬ್ಬಿಸಿಬಿಡುತ್ತಿದ್ದವು ಆ ಮಂಗಗಳು. ನಮ್ಮ ಕಂಪೌಂಡಿನಲ್ಲಿ ಅಷ್ಟೊಂದು ತೆಂಗಿನ ಮರಗಳಿದ್ದರೂ ಒಂದೇ ಒಂದು ಕಾಯಿ ಸಿಕ್ಕರೆ ಕೇಳಿ. ಕೆಲವು ಮಂಗಗಳು ಅದರಲ್ಲೂ ಕೆಂಪು ಮಂಗಗಳು ಅದೆಷ್ಟು ಜೋರಿರುತ್ತಿದ್ದವು ಅಂದರೆ ಯಾವದೇ ಭಯವಿಲ್ಲದೆ ಮನೆಯೊಳಗೇ ನುಗ್ಗಿ, ಸೀದಾ ಅಡುಗೆ ಮನೆಗೆ ನುಗ್ಗಿ,  ತರಕಾರಿ, ಹಣ್ಣು ಹಂಪಲಗಳನ್ನು ಕದ್ದೊಯ್ಯುವದು ಒಂದೇ ಅಲ್ಲ ಅಲ್ಲೇ ಡೈನಿಂಗ್ ಟೇಬಲ್ ಮೇಲೆಯೇ ಕೂತು ಸ್ವಾಹಾ ಮಾಡುತ್ತಿದ್ದವು. ಅಷ್ಟರ ಮಟ್ಟಿಗೆ ಮಂಗಗಳ ಹಾವಳಿ. ಹಾಗಾಗಿ ಏನಾದರೂ ಉಪಾಯ ಮಾಡಲೇಬೇಕಿತ್ತು. ಆಗ ಮತ್ತೆ ಬಂದೂಕು ಬೇಕಾಯಿತು. ಮಂಗಗಳನ್ನು ಬೆದರಿಸಲು ಅಂತಲೇ ಒಂದು ಏರ್ ಗನ್ ಖರೀದಿ ಮಾಡಿ ತಂದರು. ಅದಕ್ಕೆ ಲೈಸೆನ್ಸ್ ಏನೂ ಬೇಕಿಲ್ಲ. ಮತ್ತೆ ಮಂಗಗಳನ್ನು ಓಡಿಸಲು ಕೂಡ ಬರೋಬ್ಬರಿ ಆಗುತ್ತದೆ. ಏರ್ ಗನ್ನಿನಿಂದ ಗುಂಡು ಬರೋಬ್ಬರಿ ಬಿದ್ದರೆ ಮಂಗ ಸತ್ತರೂ ಸತ್ತಿತೇ. ಆಯಕಟ್ಟಿನ ಜಾಗಕ್ಕೆ ಬಿದ್ದರೆ ಮಂಗವೇನು ಮನುಷ್ಯ ಸಹ ಖಲಾಸ್. ಹಾಗಿರುತ್ತವೆ ಏರ್ ಗನ್ನಿನ ಸಣ್ಣ ಸಣ್ಣ ಗುಂಡುಗಳು. ಆದರೆ ರಿಸ್ಕ್ ಕಮ್ಮಿ. ದೂರದಿಂದ ಹಾರಿಸಿದಾಗ ನೋವಾಗುತ್ತದೆಯೇ ವಿನಹ ಸಾಯುವದು ಕಮ್ಮಿ. ಹಕ್ಕಿ ಪಿಕ್ಕಿ ಮಾತ್ರ ಮಟಾಶ್! ಡೌಟೇ ಬೇಡ.


ನಮ್ಮನೆ ಏರ್ ಗನ್. ಸುಮಾರು ಹೀಗೇ ಇತ್ತು. ಇಷ್ಟು polished ಇರಲಿಲ್ಲ. ಹೇಳಿಕೇಳಿ ದೇಸಿ ಮಾಲು.

ಏರ್ ಗನ್ನಿನ ಸಣ್ಣ ಸಣ್ಣ ಬುಲೆಟ್ಸ್

ಆದರೆ ಆ ಏರ್ ಗನ್ನಿನಿಂದ ಒಂದು ದೊಡ್ಡ fatal ಲಫಡಾ ಆಗುವದು ಸ್ವಲ್ಪದರಲ್ಲೇ ತಪ್ಪಿದ್ದು ದೇವರ ದೊಡ್ಡ ಅನುಗ್ರಹವೇ. ಆ ಏರ್ ಗನ್ ಸದಾ ಅಲ್ಲೇ ಹಿಂದಿನ ವರಾಂಡಾದಲ್ಲಿ ಹೊರಗೇ ಇರುತ್ತಿತ್ತು. ಎಲ್ಲರಿಗೂ ಕಾಣುತ್ತಿತ್ತು. ಮತ್ತೆ ಮನೆಯಲ್ಲಿ ಅಮ್ಮ, ಅಪ್ಪ ಇಬ್ಬರೇ. ಚಿಕ್ಕ ಮಕ್ಕಳಿಲ್ಲ. ಹಾಗಾಗಿ ಅದನ್ನು ಬೇರೆ ಯಾರೋ ತೆಗೆದುಕೊಂಡು, ಏನೇನೋ ಮಾಡಿಯಾರು ಅಂತ ತಲೆಬಿಸಿ ಇಲ್ಲ. ಆವತ್ತು ದಾಂಡೇಲಿಯಿಂದ ನಮ್ಮ ಯಾರೋ ಆಪ್ತರು ಕುಟುಂಬ ಸಮೇತ ಬಂದಿದ್ದಾರೆ. ಅವರ ನಾಲ್ಕೈದು ವರ್ಷದ ಚಿಕ್ಕ ಮಗ ಸಿಕ್ಕಾಪಟ್ಟೆ ಕಿಲಾಡಿ. ಅವನಿಗೆ ಆ ಏರ್ ಗನ್ನಿನ ಮೇಲೆ ಕಣ್ಣು. ಹಿಂದೆ ಮುಂದೆ ನೋಡಿಲ್ಲ. ಕಂಡಿದ್ದನ್ನು ಎತ್ತಿಕೊಂಡೇಬಿಟ್ಟಿದ್ದಾನೆ. ದೊಡ್ಡವರು ಗಮನಿಸಿಲ್ಲ. ಗನ್ ಎತ್ತಿಕೊಂಡವ ಆಟದ ಮಾದರಿಯಲ್ಲಿ ಆತನ ಅಕ್ಕನಿಗೆ ಗುರಿಯಿಟ್ಟು ಗನ್ನಿನ ಕುದುರೆ ಎಳೆದೇಬಿಟ್ಟಿದ್ದಾನೆ. ಯಾವಾಗಲೂ ಖಾಲಿ ಇರುತ್ತಿದ್ದ ಆ ಏರ್ ಗನ್ನಿನಲ್ಲಿ ಅಂದು ಯಾವದೋ ಮಿಸ್ಟೇಕಿನಲ್ಲಿ ಒಂದು ಗುಂಡು ಉಳಿದುಕೊಂಡಿತ್ತು. 'ಫಟ್!' ಅಂತ ಚಿಕ್ಕ ಪಟಾಕಿ ಹೊಡೆದ ಮಾದರಿಯಲ್ಲಿ ಏರ್ ಗನ್ ಫೈರ್ ಆಗೇಬಿಟ್ಟಿದೆ. ನಾಲ್ಕೈದು ವರ್ಷದ ಆ ಹುಡುಗ ಫುಲ್ ಥಂಡಾ! ಆ ಹುಡುಗನ ಖಾಸಾ ಅಕ್ಕ ಅವನ ಮುಂದೆ ಕೆಲವೇ ಅಡಿಗಳ ಅಂತರದಲ್ಲಿ ನಿಂತಿದ್ದಾಳೆ. ಹಾಗಿದ್ದರೂ ಅವನ ಗುರಿ ತಪ್ಪಿದೆ. ದೇವರೇ ತಪ್ಪಿಸಿದ್ದಾನೆ. ಶಬ್ದ ಕೇಳಿದ ಹಿರಿಯರು ಓಡಿ ಬಂದು ನೋಡಿದರೆ ಕಂಡವರು ಥಂಡಾ ಹೊಡೆದು ನಿಂತಿದ್ದ ಈ ಇಬ್ಬರು ಸಣ್ಣ ಹುಡುಗರು. ಆಗಿದ್ದನ್ನು ಕೇಳಿದ ದೊಡ್ಡವರು ದೇವರಿಗೆ ಸಾವಿರ ನಮಸ್ಕಾರ ಹಾಕಿದ್ದಾರೆ. ದೊಡ್ಡದೊಂದು ಅವಘಡ ತಪ್ಪಿಸಿದ್ದಕ್ಕೆ ಕಪ್ಕಪಾಳಕ್ಕೆ ರಪ್ರಪಾ ಅಂತ ತಟ್ಟಿಕೊಂಡು ದೇವರ ದಯೆಗೆ ಧನ್ಯವಾದ ಹೇಳಿದ್ದಾರೆ. ಅಷ್ಟು ಹತ್ತಿರದಿಂದ ಆ ಏರ್ ಗನ್ನಿನ ಸಣ್ಣ ಗುಂಡೇ ತಾಗಿದ್ದರೂ ಆ ಏಳೆಂಟು ವರ್ಷದ ಹುಡುಗಿಗೆ ಏನಾಗುತ್ತಿತ್ತೋ ಅಂತ ನೆನಸಿಕೊಂಡರೆ ಇವತ್ತಿಗೂ ಮೈ ಜುಮ್ ಅನ್ನುತ್ತದೆ. ಮಂಗಗಳನ್ನು ಓಡಿಸಿದ ನಂತರ ಯಾವದೋ ಪೊರಪಾಟಿನಲ್ಲಿ ಒಂದು ಗುಂಡು ಉಳಿದುಬಿಟ್ಟಿತ್ತು ಅಂತ ಕಾಣುತ್ತದೆ. ಏರ್ ಗನ್ನಿಗೆ ಒಂದೇ ಸಲಕ್ಕೆ ಸುಮಾರು ಗುಂಡುಗಳನ್ನು ತುಂಬಬಹದು. ಒಂದರ ನಂತರ ಇನ್ನೊಂದು ಚೇಂಬರಿಗೆ ಬರುವ ವ್ಯವಸ್ಥೆ ಇರುತ್ತದೆ.

ಅಂದು ಆ ಏರ್ ಗನ್ನಿನಿಂದ ಡೇಂಜರಸ್ ಭಾನಗಡಿ ಮಾಡಿಕೊಂಡಿದ್ದ ಆ ಸಣ್ಣ ಮಾಣಿಯ ಹೆಸರು ಗಜಾನನ ಉರ್ಫ್ ಗಜೂ ಅಂತಾಗಿತ್ತು. ಮೂರು ಜನ ಅಕ್ಕಂದಿರ ನಂತರ ಹುಟ್ಟಿದ ಅಪರೂಪದ ಹುಡುಗ. ಈ ಲಫಡಾ ಆದ ನಂತರ ಅವನಿಗೆ 'ಗನ್ ಗಜಾನನ' ಅಂತಲೇ nickname ಕೊಟ್ಟಿದ್ದರು ನಮ್ಮ ಅಮ್ಮ. ನಾನು ಅವನನ್ನು ನೋಡಿಲ್ಲ. ನಮಗಿಂತ ತುಂಬಾ ಚಿಕ್ಕವನು. ಬದುಕಿದ್ದರೆ ಇವತ್ತಿಗೆ ಒಂದು ೨೦-೨೨ ವರ್ಷದ ಚಂದದ ಹುಡುಗನಾಗುತ್ತಿದ್ದನೋ ಏನೋ. ದುರಾದೃಷ್ಟ! ಚಿಕ್ಕವನಿದ್ದಾಗ ಏರ್ ಗನ್ನಿನಿಂದ ಆಕಸ್ಮಿಕ ಪೊರಪಾಟಿನಲ್ಲಿ ಅಕ್ಕನನ್ನೇ  ಕೊಂದುಬಿಡಬಹುದಾಗಿದ್ದ ಗನ್ ಗಜಾನನ ಭೀಕರ ರಸ್ತೆ ಅಪಘಾತವೊಂದರಲ್ಲಿ ಈಗ ಒಂದೆರೆಡು ವರ್ಷದ ಹಿಂದೆ ತೀರಿಹೋದ. ಛೇ! ಎಂತಹ ಕೆಟ್ಟ ಘಟನೆ ಮಾರಾಯರೇ! ಅದಾಗುವ ಸ್ವಲ್ಪೇ ದಿವಸಗಳ ಹಿಂದೆ ಅವನ ತಂದೆಯವರು ಸಹಜವಾಗಿಯೇ ನಿಧನರಾಗಿದ್ದರು. ಅವರಿಗೆ ಒಂದು ಅರವತ್ತು ವರ್ಷವಾಗಿತ್ತು. ಹೃದಯಾಘಾತವಾಗಿ ಸಾವು ಬಂತು. ಅದು ಒಂದು ಮಾತು. ಆದರೆ ಈ ಗನ್ ಗಜಾನನ ಇನ್ನೂ ಸಣ್ಣ ಮಾಣಿ. ಮೋಟಾರ್ ಬೈಕ್ ಅಪಘಾತದಲ್ಲಿ ಹೋಗಿಬಿಟ್ಟ ಅಂತ ಕೇಳಿ ತುಂಬಾ ದುಃಖವಾಗಿತ್ತು. ಅವನ ತಾಯಿಯ ದುಃಖಕ್ಕೆ ಏನು ಹೇಳೋಣ? ಮೂರು ಹೆಣ್ಣು ಮಕ್ಕಳ ನಂತರ ಅವನನ್ನು ಹೆತ್ತಿದ್ದರು. ಅಕ್ಕರೆಯಿಂದ ಬೆಳೆಸಿದ್ದರು. ಈಗ ಅವನೇ ಇಲ್ಲ. ಪುತ್ರ ಶೋಕ. ಅದು ನಿರಂತರ. ಉಳಿದ ಹುಡುಗಿಯರು ಒಳ್ಳೆ ರೀತಿಯಲ್ಲಿ ಬಾಳು ಕಟ್ಟಿಕೊಂಡಿದ್ದಾರೆ. ಅವರನ್ನು ನೋಡುತ್ತಾ ದಿನ ದೂಡುತ್ತಿದ್ದಾರೆ ಆಕೆ. ಛೇ!

ಗನ್ ಗಜಾನನನ ಈ ಭಾನಗಡಿ ಆದ ಮೇಲೆ ಏರ್ ಗನ್ನಿಗೂ ವಿಶೇಷ ರಕ್ಷಣೆ. ಒಳಗೆ ಬರೋಬ್ಬರಿ under lock and key. ಮುಂದೆ ಏರ್ ಗನ್ ಸಹಿತ ಜಾಸ್ತಿ ಉಪಯೋಗ ಮಾಡುವ ಸಂದರ್ಭ ಕೂಡ ಬರಲೇ ಇಲ್ಲ. ಏರ್ ಗನ್ನಿನ ಸಣ್ಣ ಗುಂಡುಗಳಿಂದ ಬರೋಬ್ಬರಿ ಏಟು ತಿಂದಿದ್ದ ಮಂಗಗಳು ನಮ್ಮ ಕಂಪೌಂಡ್ ಕಡೆ ಬರುವದನ್ನೇ ಕಮ್ಮಿ ಮಾಡಿದವು. ಬಂದರೂ ಗನ್ ಹಾರಿಸುವ ಅವಶ್ಯಕತೆ ಅಷ್ಟಾಗಿ ಬರುತ್ತಿರಲಿಲ್ಲ. ಗನ್ ತೋರಿಸಿದರೂ ಸಾಕು ಓಡಿ ಹೋಗುತ್ತಿದ್ದವು. ನಮ್ಮ ತಾಯಿಯವರೂ ಸಹ ಗನ್ ಕೇವಲ ತೋರಿಸಿ ತೋರಿಸಿಯೇ ಎಷ್ಟೋ ಮಂಗಗಳನ್ನು ಓಡಿಸಿಬಿಟ್ಟಿದ್ದರು. ಒಂದು ಕೈಯಲ್ಲಿ ಅಡಿಗೆ ಸೌಟು, ಇನ್ನೊಂದು ಕೈಯಲ್ಲಿ ಖಾಲಿ ಏರ್ ಗನ್. ಆ ದೃಶ್ಯವನ್ನು ನೆನಪಿಸಿಕೊಂಡರೂ ಸಾಕು ಈಗಲೂ ಸಿಕ್ಕಾಪಟ್ಟೆ ನಗು ಬರುತ್ತದೆ.

ಆಗ ಮತ್ತೊಂದು ತೊಂದರೆ ಶುರುವಾಯಿತು. ಮಂಗಗಳು ನಮ್ಮ ಮನೆಯ ಏರ್ ಗನ್ ನೋಡಿದರೂ ಸಾಕು ಓಡಿಹೋಗುತ್ತವೆ ಅಂತ ತಿಳಿದ ನೆರೆಹೊರೆಯ ಮಂದಿ, 'ಆಂಟಿ, ಗನ್ ಕೊಡ್ರಿ. ಅಂಕಲ್, ಸ್ವಲ್ಪ ಗನ್ ಕೊಡ್ರಿ. ಮಂಗ್ಯಾನ್ನ ಓಡಿಸಿ, ವಾಪಸ್ ತಂದು ಕೊಡ್ತೇವಿ. ಖಾಲಿ ಗನ್ ಕೊಡ್ರಿ ಸಾಕು,' ಅಂತ ಇಲ್ಲದ ಲೊಟ್ಟೆ ಶುರು ಮಾಡಿಕೊಂಡರು. ಅದೊಂದು ದೊಡ್ಡ ತಲೆನೋವು. ನಾವು ಖಾಲಿ ಕೋವಿಯನ್ನೇ ಕೊಟ್ಟರೂ, ಇವರು ತಮ್ಮದೇ ಗುಂಡು ತುಂಬಿಕೊಂಡು ಏನಾದರೂ ಅನಾಹುತ ಮಾಡಿಕೊಂಡರೆ ಅಂತ ಚಿಂತೆ ಮನೆಯವರಿಗೆ. ಆದರೂ ಖಾಸ್ ನೆರೆಹೊರೆಯವರಿಗೆ ಗನ್ ಕೊಡುತ್ತಿದ್ದರು ಅಂತ ನೆನಪು. ಮತ್ತೆ ಇದೆಲ್ಲ ಹಳೆಯ ಮಾತು. ಆಗ ತಂದೆಯವರಿಗೂ ಮಂಗನ ಬೇಟೆ ಅಂದರೆ ಸಿಕ್ಕಾಪಟ್ಟೆ ಹುರುಪು. 'ನಡೀರಿ. ಮಂಗ್ಯಾ ಎಲ್ಲದ ಅಂತ ತೋರಿಸಿರಿ. ನಾನೇ ಗುಂಡು ಹೊಡೆದು ಓಡಿಸಿಬಿಡ್ತೇನಿ!' ಅಂತ ಒಮ್ಮೊಮ್ಮೆ ಅವರೇ ಏರ್ ಗನ್, ಸಣ್ಣ ಗುಂಡುಗಳನ್ನು ತೆಗೆದುಕೊಂಡು ಹೊರಟೇಬಿಡುತ್ತಿದ್ದರು. ಅದು ಅವರ 'ಸಮಾಜ ಸೇವೆ'ಯ ಮತ್ತೊಂದು ಮುಖ! ಒಟ್ಟಿನಲ್ಲಿ ಮಾಸ್ತರ್ ಮಂದಿಗೆ ಮಂಗ್ಯಾಗಳಿಂದ ಮುಕ್ತಿಯಿಲ್ಲ ಅಂತ ನಮ್ಮ ಜೋಕು. ಮಾಸ್ತರಿಕೆ ಮಾಡುತ್ತಿದ್ದಾಗ ಮಂಗ್ಯಾನಂತಹ 'ಒಳ್ಳೆ' ವಿದ್ಯಾರ್ಥಿಗಳು. ರಿಟೈರ್ ಆದ ನಂತರ ನಿಜವಾದ ಮಂಗಗಳ ಉಪದ್ರವ. ಏನು ಕೇಳ್ತೀರಿ! ತಂದೆಯವರ ಮಂಗನ ಬೇಟೆಯನ್ನು ನೆನಸಿಕೊಂಡು, ಆಡಿಕೊಂಡು ಇಂದಿಗೂ ನಗುತ್ತಲೇ ಇರುತ್ತೇವೆ.

ನೋಡಿ. ನೆನಪುಗಳೇ ಹೀಗೆ. ನಮ್ಮ ನೆರೆಹೊರೆಯವರಾಗಿದ್ದ ಕಲಬುರ್ಗಿ ಅವರು ಬಂದೂಕಿನ ಗುಂಡಿಗೆ ಬಲಿಯಾದರು ಅಂತ ಕೇಳಿದ್ದೇ ಕೇಳಿದ್ದು ಏನೇನೋ ನೆನಪಿಗೆ ಬಂದೇಬಿಟ್ಟವು!

೨೦೧೨ ರ ಮಾರ್ಚಿನಲ್ಲಿ ಧಾರವಾಡಕ್ಕೆ ಹೋಗಿದ್ದೆ. ಆಗ ಸುಮ್ಮನೆ ತಮಾಷೆಗೆಂದು ಒರಿಜಿನಲ್ Webley & Scott of Birmingham, UK ಬಂದೂಕು ಹಿಡಿದುಕೊಂಡು ಒಂದೆರೆಡು ಫೋಟೋ ತೆಗೆಯಿಸಿಕೊಂಡಿದ್ದೆ. ಸುಮ್ಮನೆ ಮಷ್ಕಿರಿಗೆ. ಖಾಲಿ ಬಂದೂಕು. ಖತರ್ನಾಕ್ ಕಾರ್ತೂಸುಗಳು ಭದ್ರವಾಗಿ ತಿಜೋರಿಯೊಳಗೆ ಇದ್ದವು.

ದೊಡ್ಡ ಬಂದೂಕಂತೂ ಇಲ್ಲ. ಸದ್ಯಕ್ಕೆ ಏರ್ ಗನ್ ಆದರೂ ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದರೆ ಅದನ್ನು ಫೈರ್ ಮಾಡಿ ನೋಡಬೇಕು ಮುಂದಿನ ಸಲ.

ಬಂದೂಕೆಂದರೆ ಆಟವೇ?? ಅಲ್ಲ!

ಕಾರ್ತೂಸ್ ತುಂಬುವ ಮೊದಲು ಹೀಗೆ ಮಾಡಿಕೊಳ್ಳಬೇಕು!
ಇದನ್ನು ನೋಡಿದ ಮಂದಿ ಡಾಕು ಗಬ್ಬರ್ ಸಿಂಗ್ ಅಂದರು!

Thursday, August 20, 2015

ಆ ಮುಂಬೈ ಮಾಣಿ ಸೂಸೂ ಮಾಡುತ್ತಿದ್ದನೋ ಅಥವಾ ಜಟಕಾ ಹೊಡೆಯುತ್ತಿದ್ದನೋ!?

ನಿನ್ನೆ ಮುಂಬೈಗೆ ಹೋಗಿದ್ದೆ. ಅದೂ ಅಲ್ಲಿನ ಒಂದು ಪೋಲಿಸ್ ಸ್ಟೇಷನ್ ಗೆ ಹೋಗಿಬಿಟ್ಟಿದ್ದೆ. ಏನೋ ಕೆಲಸ ಇತ್ತು. ಅಲ್ಲಿ ಸಿಕ್ಕ ಒಬ್ಬ ಪೋಲೀಸ್ ಪಾಂಡು, 'ಏ, ಭಾವೂ, ಥಾಂಬಾ! ತು ಇಕಡೆ ಬಸಾ. ಸಾಹೇಬ್ ನಂತರ್ ಆತೋಸ್,' ಅಂದ. ನಮಗಂತೂ ಮರಾಠಿ ಬರಂಗಿಲ್ಲ. ಏನು ಬಸ್ಯಾನೋ? ಏನು ಥಾಂಬೋ? ಏನು ಬಂಬೋ? ದೇವರಿಗೇ ಗೊತ್ತು. ಸಂದರ್ಭದೊಡನೆ ಸ್ಪಷ್ಟೀಕರಿಸಿರಿ ಇದ್ದಂಗ ಏನೋ ಒಂದು ಅರ್ಥ ಮಾಡಿಕೊಂಡೆ. ಸಾಹೇಬ ಬರೋ ತನಕಾ ಕಾದು ಕೂತೆ.

ಅಲ್ಲಿ ನನ್ನ ಬಾಜೂಕ ಒಬ್ಬವ ಕೂತಿದ್ದ. ಇನ್ನೂ ಪ್ರಾಯದ ಹುಡುಗ. ಮಾರಿ ಮಳ್ಳ ಮಸಡಿ ಆಗಿತ್ತು. ನೋಡಿದರೇ ಗೊತ್ತಾಗುವ ಹಾಂಗಿತ್ತು. ಇವಾ ಆಗಲೇ ಪೋಲೀಸರ ಕಡೆ ಗಜ್ಜು ತಿಂದುಬಿಟ್ಟಾನ. ಒಂದು ರೌಂಡ್ ರುಬ್ಬಿಸಿಕೊಂಡೇಬಿಟ್ಟಾನ ಅಂತ. ನನಗೂ ಕೆಟ್ಟ ಬೋರ್ ಹೊಡಿಲಿಕತ್ತಿತ್ತು. ಹಾಂಗss ಸಹಜ ಮಾತಾಡಿಸಿದೆ. ಕನ್ನಡದಾಗss ಮಾತಾಡಿಸಿದೆ. ನಮಗ ಬ್ಯಾರೆ ಯಾವ ಭಾಷಾನೂ ಬರೋಬ್ಬರಿ ಬರಂಗಿಲ್ಲ. ಅದೇನೋ ಮುಂಬೈ ಆದರೂ ಆ ಹುಡುಗಗೂ ಪುಣ್ಯಕ್ಕ ಸ್ವಲ್ಪ ಕನ್ನಡ ಬರ್ತಿತ್ತು.

'ಏನಪಾ ತಮ್ಮಾ, ಏನು ನಿನ್ನ ಹೆಸರು? ಯಾರ ಪೈಕಿ ನೀ??' ಅಂದೆ. ಇಟ್ಟೆ. ಒಂದು ಪ್ರಶ್ನೆ ಇಟ್ಟೆ ಅಂತ.

ಆಂವಾ ಮಾತಾಡಲಿಲ್ಲ. ಸುಮ್ಮನ ನನ್ನ ದುರು ದುರು ನೋಡಿದ. ಅವಂಗ ಆಗಲೇ ಜೀವನ ಬ್ಯಾಸರಾಗಿತ್ತು ಅನ್ನಸ್ತದ. ಅವಂಗ ಬ್ಯಾಸರಾಗಿ ನಮ್ಮ ಜೋಡಿ ಮಾತಾಡಲಿಕ್ಕೆ ಮನಸ್ಸಿಲ್ಲ ಅಂದ್ರ ನಾವೇನು ಮಾಡೋಣ? ನಮಗ ಅಲ್ಲಿ ಖಾಲಿ ಕೂಡೋದು ಅಂದ್ರ ಕೆಟ್ಟ ಬ್ಯಾಸರಾ. ಅದಕss ಅವನ್ನ ಮತ್ತ ಮತ್ತ, ಮುಟ್ಟಿ ಮುಟ್ಟಿ, ಮಾತಾಡಿಸಿದೆ. ಬಿಡಲಿಲ್ಲ.

'ಏನಪಾ ತಮ್ಮಾ, ಏನು ನಿನ್ನ ಹೆಸರು? ಯಾರ ಪೈಕಿ ನೀ??' ಅಂತ ಮತ್ತ ಇಟ್ಟೆ.

'ನನ್ನ ಹೆಸರು ಗೋವರ್ಧನ ಗೋಲ್ಮೀಕಿ ಅಂತ್ರಿ ಸರ್ರಾ,' ಅಂದು ಮಾರಿ ಆಕಡೆ ಹಾಕಿದ.

'ಅಲೀ ಇವನ! ಇವನ ಅಡ್ಡೆಸರು ಗೋಲ್ಮೀಕಿ ಅಂತ. ನನಗ ಮೊದಲು ವಾಲ್ಮೀಕಿ ಅಂದಂಗ ಕೇಳಿಸ್ತು. ನಮ್ಮ ಧಾರವಾಡ ಕರ್ನಾಟಕ ಕಾಲೇಜ್ ಇಂಗ್ಲಿಷ್ ಮಾಜಿ ಮಾಸ್ತರರಾದ ನಾರಾಯಣಾಚಾರ್ಯರು 'ವಾಲ್ಮೀಕಿ ಯಾರು?' ಅಂತ ಪುಸ್ತಕ ಬರೆದು, ಎಲ್ಲರೂ ಬ್ಯಾಡರವಾ (ಬೇಡರವ) ಅಂತ ತಿಳ್ಕೊಂಡಿದ್ದ ವಾಲ್ಮೀಕಿ ಮೂಲತ ಬ್ರಾಹ್ಮಣ ಅಂತ ಸಿದ್ದಪಡಿಸಿಬಿಟ್ಟಾರ. ಅದು ದೊಡ್ಡ controversy ಆಗಿಬಿಟ್ಟಿತ್ತು. ಸರ್ಕಾರ ಆ ಪುಸ್ತಕ ಬ್ಯಾನ್ ಮಾಡಿತ್ತು. ಆಮೇಲೆ ಹೈಕೋರ್ಟ್ ಸರಕಾರಕ್ಕೆ ಝಾಡಿಸಿ ಒದಿತು. ಆವಾಗ ಬ್ಯಾನ್ ಹಿಂದ ತೊಗೊಂಡ್ರು. ಇದೆಲ್ಲಾ ಮನ್ಮನ್ನೆ ಸುದ್ದಿ. ಹಾಂಗಾಗಿ ವಾಲ್ಮೀಕಿ ಅನ್ನೋ ಹೆಸರು ಮಂಡೆಯಲ್ಲಿ ಫ್ರೆಶ್ ಆಗಿ ಕೂತದ. ಇಲ್ಲಿ ನೋಡಿದರೆ ವಾಲ್ಮೀಕಿ ಅಲ್ಲಲ್ಲ ಗೋಲ್ಮೀಕಿ ಅನ್ನುವ ಹುಡುಗ ಪೋಲೀಸ್ ಸ್ಟೇಷನ್ ಒಳಗ ಸಿಗಬೇಕೇ? ಏನು ವಿಚಿತ್ರ!' ಅಂತ ಅಂದುಕೊಂಡೆ.

'ಹೂಂ. ಹೂಂ. ಗೋವರ್ಧನ ಗೋಲ್ಮೀಕಿ. ಯಾಕ ನಿನ್ನ ಹಿಡಕೊಂಡು ಬಂದಾರ ಪೊಲೀಸರು? ಏನು ಲಫಡಾ ಮಾಡಿಕೊಂಡ್ಯಪಾ ಗೋವರ್ಧನ? ಹೆಸರೇ ಗೋವರ್ಧನ. ಅಂದ್ರ ಕೃಷ್ಣ. ಅಂದ್ರ ಗೋಪಾಲ. ಅಂದ್ರ ದನಾ ಕಾಯವಾ ನೀ. ದನ ಕಾಯಿ ಹೋಗು ಅಂದ್ರ ದನಾ ಮಾರಿಬಿಟ್ಟಿಯೇನು? ಅಥವಾ ಕಾಯಲಿಕ್ಕೆ ಕೊಟ್ಟ ದನಾ ಕಳೆದುಕೊಂಡು ಬಂದು ಕೂತಿಯೋ? ಏನು ಲಫಡಾ ಮಾಡಿಕೊಂಡು ಬಂದ್ಯಪಾ ಗೋಲ್ಮೀಕಿ? ಬಂದು ಎಷ್ಟೊತ್ತಾತು? ಬಂದ ಕೂತ ಮ್ಯಾಲೆ ರಾಮಾಯಣ ಬರದಿಯೋ ಇಲ್ಲೋ?? ಹಾಂ??' ಅಂತ ಅಂದು, ಕಿಚಾಯಿಸುವರ ಹಾಂಗ 'ಹಾ! ಹಾ!' ಅಂತ ಗಫಾ ಹೊಡೆದೆ. ಆಂವಾ ಭಗ ಭಗ ಅಂತ ಉರಕೊಂಡ. ಮೊದಲೇ ಪೋಲೀಸರ ಹತ್ತಿರ ರುಬ್ಬಿಸಿಕೊಂಡ ಜೀವ ಅದು. ಮ್ಯಾಲಿಂದ ನಾ ಬ್ಯಾರೆ ಇಲ್ಲದ್ದು ಹೇಳಿ, ಸಲ್ಲದ್ದು ಕೇಳಿ ಅವನ ತಲಿ ತಿನ್ನಲಿಕತ್ತೇನಿ. ಪಾಪ ಹುಡುಗ! ಏನು ಮಾಡೋಣ? ನಮಗ ಅಲ್ಲಿ ಕೆಟ್ಟ ಬೋರ್. ಅದಕ್ಕೆ ಅವನ್ನ ಹಾಕ್ಕೊಂಡು ನಾ ಬೋರ್ವೆಲ್ ಹೊಡಿಲಿಕತ್ತಿದ್ದೆ.

ಯಾಕ ಅಂದರ್ ಆಗ್ಯಾನ ಅನ್ನೋದರ ಬಗ್ಗೆ ಗೋಲ್ಮೀಕಿ ಅಂತೂ ಏನೂ ಹೇಳಲಿಲ್ಲ. ಮತ್ತ ಮಂಗ್ಯಾನ ಮಾರಿ ಮಾಡಿಕೊಂಡು, ಎತ್ಲಾಗೋ ನೋಡಿಕೋತ್ತ ಕೂತ. ನಾ ಬಿಡಬೇಕಲ್ಲ!

'ಏನು ತುಡುಗು ಮಾಡಿದ್ಯಾ? ಕಳ್ಳತನ ಮಾಡಿ ಸಿಕ್ಕೊಂಡಿ??' ಅಂತ ಕೇಳಿದೆ.

ಉತ್ತರ ನಾಸ್ತಿ. ಇಲ್ಲೆ!

'ಇಲ್ಲಾ? ಮತ್ತ? ಏನು ಮಾಡಿ ಸಿಕ್ಕೊಂಡಿ? ಲೈಸೆನ್ಸ್ ಇಲ್ಲದೇ ಗಾಡಿ ಗೀಡಿ ಹೊಡೆದು, ಯಾರಿಗರೆ ಹೆಟ್ಟಿಬಿಟ್ಟಿಯೇನು? ಅಥವಾ ಕೊಂದೇಬಿಟ್ಯೋ? ಹಾಂ? ಏನು ಮಾಡಿ ಅಂದರ್ ಆದ್ಯೋ ಗೋವರ್ಧನ? ಗೋಲ್ಮೀಕಿ ಗೋವರ್ಧನ!' ಅಂತ ಕೇಳಿದೆ.

ಏನೂ ಮಾತಾಡದೇ ಕೂತಿತ್ತು ಆ ಹುಡುಗ. ಪೋಲೀಸರ ಕಡೆ ಭಾಳ ಕಟಿಸಿಕೊಂಡಿದ್ದ ಅಂತ ಕಾಣಿಸ್ತದ. ಬರೇ ಒಂದು ಬರ್ಮುಡಾ ಚೊಣ್ಣ, ಬನಿಯನ್ ಅಂತಹ ಅಂಗಿ ಹಾಕ್ಕೊಂಡು ಕೂತಿತ್ತು ಪಾಪ ಅದು.

'ಹೂಂ. ನೀ ಏನು ಮಾಡಿ ಇಲ್ಲಿಗೆ ಬಂದಿರಬಹುದು? ತಡಿ, ನಾನೇ ವಿಚಾರ ಮಾಡ್ತೇನಿ. ಎಲ್ಲರೆ ಮರ್ಡರ್ ಮಾಡಿ ಬಂದುಬಿಟ್ಟಿಯೇನು ಮತ್ತ??? ಹಾಪ್ ಮರ್ಡರ್ ಮಾಡಿದ್ಯೋ ಅಥವಾ ಫುಲ್ ಮರ್ಡರೇ ಮಾಡಿ ಒಗೆದಿಯೋ?? ಸಿಂಗಲ್, ಡಬಲ್ ಅಥವಾ ಟ್ರಿಪಲ್ ಮರ್ಡರ್? ಯಾಕ ಕೇಳಿದೆ ಅಂದ್ರ ನಮ್ಮ ಪೈಕಿ ಒಬ್ಬ ಹವ್ಯಕ ಮಾಣಿ, ಅಂದರ ಹುಡುಗ, ಅಲ್ಲಿ  ಬೆಳಗಾವ್ಯಾಗ ಟ್ರಿಪಲ್ ಮರ್ಡರ್ ಮಾಡಿ ಸಿಕ್ಕೊಂಡು ಬಿದ್ದಾನ. ಹಾಂಗಾಗಿ ಕೇಳಿದೆ. ನಿಂದು ಏನು ಕೇಸೋ ಗೋವರ್ಧನ? ಹೇಳಲ್ಲಾ? ನಾನೂ ನಿನಗ ಆದಷ್ಟು ಸಹಾಯ ಮಾಡ್ತೇನಿ. ನಿನ್ನ ಅಡ್ಡೆಸರು ಗೋಲ್ಮೀಕಿ ಅಂತಲೇ ಇರಬಹುದು. ನನಗಂತೂ ನಿನ್ನ ನೋಡಿದರೆ ವಾಲ್ಮೀಕಿ ಮಹಾಮುನಿಗಳೇ ನೆನಪಾಗತಾರ. ಅವರ ಮ್ಯಾಲಿನ ಪ್ರೀತಿ, ಅಭಿಮಾನಕ್ಕಾದರೂ ನಿನಗ ನಾ ಹೆಲ್ಪ್ ಮಾಡವನೇ. ನೀ ಬ್ಯಾಡ ಅಂದರೂ ಮಾಡವನೇ. ಹೇಳಪಾ ಏನು ಲಫಡಾ ಮಾಡಿಕೊಂಡು ಬಂದು ಇಲ್ಲಿ ಅಂದರ್ ಆಗಿ? ಲಗೂ ಹೇಳು. ಈಗ ಪೋಲೀಸ್ ಸಾಹೇಬಾ ಬಂದಾ ಅಂದ್ರ ನಾ ಎದ್ದೆ. ಅಥವಾ ಪೊಲೀಸರೇ ನಿನ್ನ ಒಳಗ ಎಳಕೊಂಡು ಹೋಗಿ, ಲಾಕಪ್ಪಿನ್ಯಾಗ ಒಗೆದರು ಅಂದ್ರೂ ಅಷ್ಟ ಮತ್ತ. ಹಾಂಗಾಗಿ ಲಗೂನೆ ಹೇಳಿಬಿಡು. ಏನು ಕಾರ್ನಾಮಾ, ಕೆತ್ತೆಬಜೆ, ಕಿತಾಪತಿ ಮಾಡಿಕೊಂಡು ಸಿಕ್ಕೊಂಡು ಬಿದ್ದಿ?' ಅಂತ ಕೇಳಿದೆ. ಸಹಾಯ ಮಾಡ್ತೇನಿ ಅಂತ ಸೆಂಟಿಮೆಂಟಲ್ ಫಿಟ್ಟಿಂಗ್ ಸಹಿತ ಇಟ್ಟೆ. ಫಿಟ್ಟಿಂಗ್ ಇಟ್ಟೆ ಅಂತ ಅಷ್ಟೇ. ಆ ಮಂಗ್ಯಾನ ಕಥಿ ಕೇಳಿ, ತಳಾ ಝಾಡಿಸಿಕೊಂಡು ಎದ್ದು ಬರ್ತೇನಿ ಅಷ್ಟೇ. ಎಲ್ಲಿ ಸಹಾಯ ಮತ್ತೊಂದು ಮಾಡಿಕೋತ್ತ ಕೂಡಲಿ!? ಬ್ಯಾರೆ ಉದ್ಯೋಗಿಲ್ಲಾ ಅಂತ ತಿಳ್ಕೊಂಡಿರೇನು??

ಬರೋಬ್ಬರಿ ಇಟ್ಟ ಸೆಂಟಿಮೆಂಟಲ್ ಫಿಟ್ಟಿಂಗಿನಿಂದ ಸ್ವಲ್ಪ ಕರಗಿದ ಹುಡುಗ. ವಾಲ್ಮೀಕಿ ಮುನಿಗಳ ಮ್ಯಾಲೆ ಬೆಳದಿದ್ದ ಹಾವಿನ ಹುತ್ತ ಸ್ವಲ್ಪ ಸಡಿಲಾದ ಮಾದರಿಯಲ್ಲಿ ಹುಡುಗ ನನ್ನ ಕಡೆ ಮುಖ ಹಾಕಿ ಕೂತ. ಮೊದಲು ತಿಕ ಹಾಕಿ ಕೂತವರು ಈಗ ಮುಖ ಹಾಕಿ ಕೂತರೆ ಅದು ಭಾಳ ದೊಡ್ಡ ಮಾತು. ಒಂದು ಒಳ್ಳೆ ಬೆಳವಣಿಗೆ.

'ಸರ್ರಾ! ಸರ್ರಾ! 'ಜಟಕಾ ಹೊಡೆದ' ಅನ್ನೋ ಕೇಸಿನ್ಯಾಗ ನನಗ ಒಳಗ ಹಾಕ್ಯಾರ್ರೀ,' ಅಂತ ಅಳು ದನಿಯಾಗ ಹೇಳಿದ.

ಹಾಂ! ಜಟಕಾ ಹೊಡೆಯೋದು ಎಂದಿನಿಂದ ಅಪರಾಧವಾಯಿತು!? ಕೃಷಿ ದೇಶದ ಬೆನ್ನೆಲಬು. ರೈತ ಕೃಷಿಯ ಬೆನ್ನೆಲಬು. ಜಟಕಾ ಅಂದ್ರ ಬಂಡಿ ಅಂದ್ರ ಚಕ್ಕಡಿ. ಅದು ರೈತನ ಬೆನ್ನೆಲಬು. ಹಾಂಗಾಗಿ ಜಟಕಾ ಹೊಡೆಯೋದು ಅಂದ್ರ ಪುಣ್ಯದ ಕೆಲಸ. ಹಾಂಗಿದ್ದಾಗ What's this nonsense, I say! ಸುಮ್ಮನೆ ತನ್ನ ಪಾಡಿಗೆ ತಾನು ಜಟಕಾ ಹೊಡಕೋತ್ತ ಇದ್ದರೆ ಯಾಕ ಪೊಲೀಸರು ಹಿಡಕೊಂಡು ಬಂದು ಒಳಗ ಒಗಿತಾರ? ಅವರಿಗೇನು ಬ್ಯಾರೆ ಕೆಲಸಿಲ್ಲಾ? ಏನೋ ಬ್ಯಾರೆ ಮಾಮಲಾ ಇರಬೇಕು. ಇವಾ ಏನೋ 'ನಾ ಜಟಕಾ ಹೊಡೆದೆ. ಅದಕss ಪೊಲೀಸರು ಹಿಡಕೊಂಡು ಬಂದ್ರು,' ಅಂತಾನ. ಇನ್ನೂ ವಿಚಾರಣೆ ಮಾಡಬೇಕು.

'ಅಲ್ಲಪಾ ಗೋವರ್ಧನಾ, ಜಟಕಾ ಹೊಡೆಯೋದ್ರಾಗ ಏನು ತಪ್ಪದ? ನಿಂದು ಅದೇ ಕೆಲಸ ಏನು? ಜಟಕಾ ಹೊಡೆದು ಸಾಮಾನು ಡೆಲಿವರಿ ಮಾಡ್ತಿ ಏನು? ಏನೇನು ಸಾಮಾನು ಹಾಕ್ಕೊಂಡು ಜಟಕಾ ಹೊಡಿತಿ?' ಅಂತ ಕೇಳಿದೆ. ಭಾಳ ಮುಗ್ಧನಾಗಿ ಕೇಳಿದೆ.

'ಹ್ಯಾಂ!!!!' ಅನ್ನುವಂತೆ ಬೆಚ್ಚಿಬಿದ್ದು ನನ್ನ ಮುಖ ನೋಡಿದ ಆ ಗೋವರ್ಧನ.

'ಯಾಕಪಾ? ಜಟಕಾ ಹೊಡೆದರ ಏನು ತಪ್ಪು? ನಾ ಹೇಳತೇನಿ ತೊಗೋ ಪೊಲೀಸರಿಗೆ. ಜಟಕಾ ಜಿಂದಾಬಾದ. ಗಿಚ್ಚಾಗಿ ಜಟಕಾ ಹೊಡಿ. ಈ ಕಾರು, ಬಸ್ಸು, ಸ್ಕೂಟರ್ ಎಲ್ಲದರಕಿಂತ ಜಟಕಾ ಭಾಳ ಛಲೋ. ಒಟ್ಟೇ pollution ಇಲ್ಲೇ ಇಲ್ಲ ನೋಡಪಾ. ಜಟಕಾ ಹೊಡೆಯುವವರಿಗೆ ಸರ್ಕಾರ ಪ್ರೋತ್ಸಾಹ ಕೊಡಬೇಕು. 'ಜಟಕಾ ಭಾಗ್ಯ' ಯೋಜನೆ ಘೋಷಣೆ ಮಾಡಬೇಕು. ಅದು ಬಿಟ್ಟು ಜಟಕಾ ಹೊಡೆದವರನ್ನೇ ಒಳಗ ಹಾಕ್ತಾರ ಅಂದ್ರ ಏನು ಕಾಲ ಬಂತಪಾ. ಕಲಿಯುಗ! ಘೋರ ಕಲಿಯುಗ! ಇದು ಜಟಕಾ ಹೊಡೆಯುವವರಿಗೆ ಕಾಲ ಅಲ್ಲ ಬಿಡಪಾ. ದೇವರು ಹ್ಯಾಂಗ ಮಾಡ್ತಾನ ಹಾಂಗ,' ಅಂತ ಒಂದು ತರಹ ಸಮಾಧಾನ ಮಾಡಿದೆ ಅವಂಗ.

ಆ ಗೋವರ್ಧನ ಗೋಲ್ಮೀಕಿ ಮಾತ್ರ 'ಹ್ಯಾಂ!' ಅಂತ ಬಾಯಿ ಬಿಟ್ಟುಕೊಂಡೇ ಕೂತಿದ್ದ. ಅದನ್ನ ನಾ ಗ್ರಹಿಸಲಿಲ್ಲ.

'ನೀನು ಜಟಕಾ ಭಾಳ ಸ್ಪೀಡಿನ್ಯಾಗ, ಭಾಳ ಜೋರಾಗಿ ಹೊಡೆದುಬಿಟ್ಟಿಯೇನು? ಜಟಕಾ ಸಹಿತ ಸ್ಪೀಡ್ ಲಿಮಿಟ್ ಒಳಗೇ ಹೊಡಿಬೇಕು. ಏನಪಾ?? ಭಾಳ ಸ್ಪೀಡಾಗಿ ಜಟಕಾ ಹೊಡೆದರ, ತಲಿ ತಿರುಗಿ, ಎಚ್ಚರ ತಪ್ಪಿ ಬಿದ್ದುಬಿಡ್ತಾರ. ರಾಡಿ ಎದ್ದುಬಿಡ್ತದ. ಅಂತಾದ್ದೇನಾದರೂ ರಾಡಾ ಮಾಡಿಕೊಂಡು ಬಂದಿಯೇನಪಾ ಗೋಲ್ಮೀಕಿ??? ಹಾಂ?' ಅಂತ ಕೇಳಿದೆ.

ಅಲ್ಲಿ ತನಕಾ ಸುಮ್ಮ ಕೂತಿದ್ದ ಗೋವರ್ಧನ ಈಗ ಬಾಯ್ಬಿಟ್ಟ.

'ಸರ್ರಾ, ನಾ ಪಬ್ಲಿಕ್ ಒಳಗ ಜಟಕಾ ಹೊಡೆದೆ ಅಂತ ಹೇಳಿ ನನ್ನ ಹಿಡಕೊಂಡು ಬಂದು ಒಗೆದಾರ್ರಿ,' ಅಂತ ಗೊಳೋ ಅಂತ ಅತ್ತ.

'ಹಾಂ! ಪಬ್ಲಿಕ್ ಒಳಗ ಪಬ್ಲಿಕ್ ಆಗಿ ಜಟಕಾ ಹೊಡೆಯದೇ ಮತ್ತ ಎಲ್ಲೆ ದೇವರ ಮನಿಯಾಗ ಜಟಕಾ ಹೊಡಿತಾರೇನೋ ಗೋವರ್ಧನ? ಏನು ಹಚ್ಚಿ? ನಿನ್ನ ಹಿಡಕೊಂಡು ಬಂದ ಪೋಲೀಸರ ಕಡೆ ಕೇಳಬೇಕಾಗಿತ್ತು.  'ಪೋಲೀಸ್ ಸಾಹೇಬರಾ, ಸಾರ್ವಜನಿಕವಾಗಿ ಅಂದರೆ ಪಬ್ಲಿಕ್ ಆಗಿ ಅಲ್ಲದೇ ನಿಮ್ಮ ತಲಿ ಮ್ಯಾಲೆ ಪ್ರೈವೇಟ್ ಆಗಿ ಜಟಕಾ ಹೊಡಿಬೇಕಾಗಿತ್ತೇನು??' ಅಂತ ಕೇಳಬೇಕಾಗಿತ್ತು. 'Indian republic stands because of public jataka. No public jataka no republic,' ಅಂತ ಘೋಷಣೆ ಕೂಗಬೇಕಾಗಿತ್ತು. ಏನಪಾ ನೀ? ಪೋಲೀಸರನ್ನು ನೋಡಿದ ಕೂಡಲೇ ಚಡ್ಡಿ ಒದ್ದಿ ಮಾಡಿಕೊಂಡು ಬಂದುಬಿಟ್ಟಿ ಅಂತ ಕಾಣಿಸ್ತದ. ಬರ್ಲಿ ತಡಿ ಆವಾ ಪೋಲೀಸ್ ಸಾಹೇಬಾ. ನಾನೇ ಎಲ್ಲಾ ಹೇಳಿ ನಿನ್ನ ಬಿಡಿಸಿ ಕಳಸ್ತೇನಿ. ಓಕೆ? ನಿನ್ನ ಜಟಕಾ ಎಲ್ಲದ ಈಗ? ಪೊಲೀಸರು ಅದನ್ನೂ ಜಪ್ತ ಮಾಡಿಬಿಟ್ಟಾರ ಏನು?' ಅಂತ ಕೇಳಿದೆ.

ಆವಾ ಗೋಲ್ಮೀಕಿ ಪೈಕಿ ಹುಡುಗ ತಲಿ ಅತ್ಲಾಗ ಇತ್ಲಾಗ ಅಲ್ಲಾಡಿಸಿದ. ಯಾಕೋ ಏನೋ.

'ಸರ್ರಾ, ಅದು ಹಾಂಗಲ್ಲರೀ ಸರ್. ನಾನು ಪಬ್ಲಿಕ್ ಒಳಗ ಜಟಕಾ ಹೊಡೆದೆ. ಅದರಾಗೂ ಒಬ್ಬ ಹೆಂಗಸಿನ ಮುಂದೆ ಜಟಕಾ ಹೊಡೆದೆ. ಮತ್ತೂ ಮುಖ್ಯವಾಗಿ ಒಬ್ಬ ಅಮೇರಿಕಾ ಹೆಂಗಸಿನ ಮುಂದೆ ಜಟಕಾ ಹೊಡೆದೆ ಅಂತ ಹೇಳಿ ಕೇಸು ಜಡದಾರ್ರಿ ಸರ್ರಾ!' ಅಂದು ಗೊಳೋ ಅಂದ ಗೋವರ್ಧನ.

'ಹಾಂ!? ಇದು ಭಾಳ ವಿಚಿತ್ರ ಆಗ್ಲಿಕತ್ತದಲ್ಲೋ ನಿನ್ನ ಕೇಸ್, ಮೈ ಡಿಯರ್ ಗೋವರ್ಧನ್. ನೀ ಏನು ಹೆಂಗಸೂರ ಮುಂದ ಜಟಕಾ ಒಳ್ಳೆ ಡೌಲಿನಾಗ ಹೊಡಿಲಿಕತ್ತಿದ್ದಿ ಏನು? ಸ್ಟೈಲ್ ಸ್ಟೈಲ್ ಆಗಿ, ಡಿಸೈನರ್ ಡಿಸೈನರ್ ಆಗಿ ಜಟಕಾ ಹೊಡಿಲಿಕತ್ತಿದ್ದಿ? ನೀ ಅಕಿ ಮುಂದ ಜಟಕಾ ಹೊಡೆದಿದ್ದು ಅಕಿಗೆ ಸೇರಲಿಲ್ಲ ಅಂತ ಕಾಣಿಸ್ತದ. ಈ ಅಮೇರಿಕನ್ ಹೆಂಗಸೂರು ಸ್ವಲ್ಪ ಯಬಡ ಇರ್ತಾವ. ಅದರಾಗೂ ಸ್ವಲ್ಪ ಫೆಮಿನಿಸ್ಟ್ ಮಾದರಿಯ ಮಂದಿ ಅಂತೂ ಬಿಡು. ಆ ಹುಚ್ಚು ಖೋಡಿಗಳಿಗೆ  ಸ್ವಾತಂತ್ರ ಮತ್ತು ಸ್ವೇಚ್ಛಾಚಾರದ ನಡುವಿನ ಅಂತರವೇ ಗೊತ್ತಿರೋದಿಲ್ಲ. ಅಂತಾ ಯಾವದೋ ಲೇಡಿ ಮುಂದ ನೀ ಬೀಡಿ ಸೇದಿಕೋತ್ತ ಜಟಕಾ ಹೊಡೆದಿರಬೇಕು. ಅದಕ್ಕೇ ಅಕಿ ಸಿಟ್ಟಿಗೆದ್ದು ಕಂಪ್ಲೇಂಟ್ ಕೊಟ್ಟಿರಬೇಕು. ಫಾರಿನ್ ಮಂದಿ ಮುಂದ ನಮ್ಮ ದೇಶದ ಮಾನ ಹೋತು ಅಂತ ತಿಳ್ಕೊಂಡು ಯಾರೋ ದೊಡ್ಡ ಮಂತ್ರಿ ಲೆವೆಲ್ ಮಂದಿನೇ ನಿನ್ನ ಅರೆಸ್ಟ್ ಮಾಡಲಿಕ್ಕೆ ಪೊಲೀಸರಿಗೆ ಸುಪಾರಿ ಕೊಟ್ಟಿರಬೇಕು. ಯಾರಲೇ ಅಕಿ ಅಮೇರಿಕನ್ ಲೇಡಿ? ಅಕಿನೌನ್! ಅಕಿಗೆ ನೀ ಪಬ್ಲಿಕ್ಕಿನ್ಯಾಗ ಜಟಕಾ ಹೊಡೆಯೋದು ಸೇರಲಿಲ್ಲ ಅಂದ್ರ ಮೂರ ಮುಚ್ಚಿಕೊಂಡು ಸುಮ್ಮ ಹೋಗಬೇಕು. ಅದು ಬಿಟ್ಟು, 'ಪಬ್ಲಿಕ್ಕಿನ್ಯಾಗ ಜಟಕಾ ಹೊಡಿತಾನ. ಅಸಹ್ಯ. ಮಣ್ಣು ಮಶಿ... ' ಅಂತ ನಿನ್ನ ಮ್ಯಾಲೆ ಕಂಪ್ಲೇಂಟ್ ಕೊಟ್ಟಾಳ ನೋಡು ಅಕಿ. ಪಾತರಗಿತ್ತಿ. ಅಕಿ ಪಕ್ಕಾ ಒಂದೊಂದೇ ಕಿತ್ತು ಕಿತ್ತು ಒಗಿಬೇಕು. ಅಕಿನೌನ್! ಜಟಕಾ ಅಂದ್ರ ಚಕ್ಕಡಿ ನಮ್ಮ ದೇಶದ ಹೆಮ್ಮೆ. ನಾವು ಅದನ್ನು ಎಲ್ಲಿ ಬೇಕಾದರೂ ಹೊಡಿತೇವಿ. ತರಹತರಹವಾಗಿ, ಕಲರ್ ಕಲರ್ ಆಗಿ, ರಂಗ್ರಂಗಾಗಿ ಹೊಡಿತೇವಿ. ಜಟಕಾ ಜಿಂದಾಬಾದ್!' ಅಂತ ಆವೇಶದಿಂದ ಹೇಳಿದೆ. ಜಟಕಾ ಹೊಡೆಯುವದು ನಮ್ಮ ಮೂಲಭೂತ ಹಕ್ಕುಗಳಲ್ಲೇ ಮೂಲವಾದದ್ದು. ಮೂಲಭೂತ ಹಕ್ಕಿಗೆ ಚ್ಯುತಿ ಬಂತು ಅಂದ್ರ ನನ್ನ ಮೇಲೆ ಭೂತ ಸವಾರ್ ಆಗಿಬಿಡ್ತದ. ಜಟಕಾ ಹೊಡಿಬ್ಯಾಡ್ರೀ ಅನ್ಕೋತ್ತ ಈ ಮಂದಿ ಆಟಾ ಹಚ್ಯಾರ ಏನ!? ಹಾಂ!?

ಪಾಪ ಗೋವರ್ಧನ ಗೋಲ್ಮೀಕಿ! ಪಬ್ಲಿಕ್ಕಿನ್ಯಾಗ ತನ್ನ ಪಾಡಿಗೆ ತಾನು, ತನ್ನ ಸಾಮಾನು ಹೇರಿಕೊಂಡು, ಜಟಕಾ ಹೊಡಕೋತ್ತ ಹೊಂಟಾನ. ಅವಾಗ ಯಾರೋ ಅಮೇರಿಕನ್ ಲೇಡಿ ಅದನ್ನು ನೋಡಿಬಿಟ್ಟಿರಬೇಕು. ಅಕಿಗೆ ಏನೋ ಕಿರಿಕಿರಿ ಆಗಿರಬೇಕು. ಅದಕ್ಕೇ ಕುಂಡಿಗೆ ಕಾಲು ಹಚ್ಚಿ ಓಡಿ, ಸೀದಾ ಪೋಲೀಸ್ ಸ್ಟೇಷನ್ ಗೆ ಹೋಗಿ ಕಂಪ್ಲೇಂಟ್ ಕೊಟ್ಟೇಬಿಟ್ಟಾಳ. ಹಾಕ್ಕ!

'ಗೋವರ್ಧನ, ಪೊಲೀಸರು ನಿನ್ನ ಹ್ಯಾಂಗ ಹಿಡಿದರು? ಆ ಅಮೇರಿಕನ್ ಲೇಡಿನೇ ನಿನ್ನ ಹಾಕ್ಕೊಂಡು ಒದ್ದು, ಒದಕೋತ್ತನೇ ಪೋಲೀಸ್ ಸ್ಟೇಷನ್ ತನಕಾ ಕರಕೊಂಡು ಬಂದು ಬಿಟ್ಟಳು ಏನು?' ಅಂತ ಕೇಳಿದೆ.

'ಸರ್ರಾ, ಅಕಿ ನನ್ನ ಫೋಟೋ ತೆಗೆದುಬಿಟ್ಟಾಳರೀ ಸರ್. ನಾ ಆ ಫೋಟೋದಾಗ ಜಟಕಾ ಹೊಡೆಯೋ ರೀತಿಯಲ್ಲಿ ಕಂಡುಬಿಟ್ಟೇನಿ. ಅಕಿಗೂ ಹಾಂಗೆ ಕಂಡದ. ಅದನ್ನ ತೊಗೊಂಡು ಸೀದಾ ಟ್ವಿಟರ್, ಫೇಸ್ಬುಕ್ ಎಲ್ಲಾದರ ಮ್ಯಾಲೆ ಹಾಕೇಬಿಟ್ಟಾಳ ಅಕಿ. ಆ ಫೋಟೋ ನೋಡಿ, ಎಲ್ಲರೂ ಕೂಡಿ, ನನ್ನ ಹಿಡಿದು, ಪೊಲೀಸರಿಗೆ ಕೊಟ್ಟುಬಿಟ್ಟಾರ್ರೀ ಸರ್ರಾ!' ಅಂತ ಹೇಳಿ, 'ಹೋ!!' ಅಂತ ಅತ್ತ ಗೋಲ್ಮೀಕಿ.

ಹಾಂ! ಅಂತ ಬೆಚ್ಚಿಬೀಳುವ ಪರಿಸ್ಥಿತಿ ನಂದು ಈಗ.

''ಫೋಟೋದಾಗ ಜಟಕಾ ಹೊಡೆಯೋ ರೀತಿಯಲ್ಲಿ ಕಂಡುಬಿಟ್ಟೇನಿ' ಅಂದ್ರ? ಅಂದ್ರ? ವಾಟ್ ಡೂ ಯು ಮೀನ್??? ನೀ ಏನು ಮಾಡಲಿಕತ್ತಿದ್ದಿ ಅದನ್ನ ಬರೋಬ್ಬರಿ ಹೇಳು. ಮೊದಲು ಜಟಕಾ ಹೊಡೆಯೋ ಕೇಸಿನಾಗ ಒಳಗ ಹಾಕ್ಯಾರ ಅಂದಿ. ಈಗ ಜಟಕಾ ಹೊಡಿಲಿಕತ್ತಿದ್ದಿಲ್ಲ ಆದರೂ ಫೋಟೋದಾಗ ಹಾಂಗ ಕಾಣಿಸ್ತದ ಅಂತಿಯಲ್ಲೋ. ಯಾವದು ಖರೆ? ನೀ ಏನು ಮಾಡ್ಲಿಕತ್ತಿದ್ದಿ ಆ ಅಮೇರಿಕನ್ ಲೇಡಿ ನೋಡಿದಾಗ?? ಅದನ್ನ ಸ್ವಲ್ಪ ಸರಿಮಾಡಿ ಬಿಡಿಸಿ ಹೇಳು,' ಅಂತ ಸ್ವಲ್ಪ ಜಬರಿಸಿ ಕೇಳಿದೆ.

'ಸರ್ರಾ, ನಾ ಸೂಸೂ ಮಾಡ್ಲಿಕತ್ತಿದ್ದೆ. ಅಕಿಗೆ ಅದು ಜಟಕಾ ಹೊಡೆದಂಗ ಕಂಡ್ರ ನಾ ಏನು ಮಾಡ್ಲಿರೀ ಸರ್ರಾ??' ಅಂತ ಅತ್ತ.

'ಹಾಂ!? ಏನೂ??!! ಇದು ಭಾಳ ವಿಚಿತ್ರ ಕೇಸಾತಲ್ಲೋ ಮಾರಾಯಾ. ನೀ ಸೂಸೂ ಮಾಡ್ಲಿಕತ್ತಿದ್ದಿ ಅಂದ್ರ ಉಚ್ಚಿ ಹೊಯ್ಕೋತ್ತ ನಿಂತಿದ್ದಿ ಹೌದಿಲ್ಲೋ? ಅಲ್ಲಾ ಕೇಳಿ ಖಾತ್ರಿ ಮಾಡಿಕೊಳ್ಳೋಣ ಅಂತ ಕೇಳಿದೆ. ಯಾಕಂದ್ರ ಕೆಲವು ಮಂದಿ ಸೂಸೂ ಮಾಡೋದು ಅಂತಾರ. ಕೆಲವು ಮಂದಿ ಸೀಟಿ ಹೊಡೆಯೋದು ಅಂತಾರ. ಕೆಲವು ಮಂದಿ ರೀಸೆಸ್ ಅಂತಾರ. ಇನ್ನು ಕೆಲವು ಮಂದಿಯಂತೂ ರಿಸರ್ಚ್ ಅಂದುಬಿಡ್ತಾರ. ರಿಸರ್ಚ್ ಹೆಸರಿನ್ಯಾಗ ರೀಸಸ್ಸೇ ಮಾಡ್ತಿರ್ತಾರ ಅವರು. ಅದಕ್ಕೆ PHD ಬ್ಯಾರೆ ಪಡಕೊಂಡುಬಿಡ್ತಾರ. ಹಾಂಗಾಗಿ ಯಾವದೇ ಗೊಂದಲ ಬ್ಯಾಡ ಅಂತ ವಿಚಾರ ಮಾಡಿ, ನೀನು ಉಚ್ಚಿ ಹೊಯ್ಕೋತ್ತನೇ ನಿಂತಿದ್ದಿ ಅನ್ನೋದನ್ನ ಖಾತ್ರಿ ಮಾಡಿಕೊಂಡೆ ಏನಪಾ ಗೋವರ್ಧನ. ನೀ ಸೀಟಿ ಹೊಡಕೋತ್ತ ನಿಂತಿದ್ದು ಅಕಿ ಅಮೇರಿಕನ್ ಯಬಡಿಗೆ ಜಟಕಾ ಹೊಡ್ಕೋತ್ತ ಹೋದಂಗ ಅದು ಹ್ಯಾಂಗ ಕಾಣಿಸ್ತು??? How is that possible?? ಸೀಟಿ ಹೊಡೆಯೋದು ಮತ್ತ ಜಟಕಾ ಹೊಡೆಯೋದು, ಈ  ಎರಡು ಕೆಲಸಗಳ ಮಧ್ಯೆ ಏನರೆ ಒಂದು ಕಾಮನ್ ಅದ ಏನು??? ಏನರೆ ಕಾಮನ್ ಇತ್ತು ಅಂದ್ರ ಒಂದು ಕೆಲಸ ಮಾಡಿಕೋತ್ತ ಇದ್ದಾಗ ಇನ್ನೊಂದು ಕೆಲಸ ಮಾಡಿದಂಗ ಕಾಣಿಸಬಹುದು. ಅಲ್ಲಾ???' ಅಂತ ಕೇಳಿದೆ.

ಈಗ ಗೋವರ್ಧನ ಮುಖ ಬೆಳಗಿತು. ನಾ ಏನೋ ಲಾಜಿಕಲ್ ಪಾಯಿಂಟ್ ಇಟ್ಟಿರಬೇಕು. ಅದಕ್ಕೆ ಮುಖ ಅಗಲವಾತು.

'ಸರ್ರಾ, ಸೀಟಿ ಹೊಡೆಯೋದು ಮತ್ತ ಜಟಕಾ ಹೊಡೆಯೋದು ಎರಡರಾಗೂ ಒಂದು ಕಾಮನ್ ಅದರೀ ಸರ್!' ಅಂದುಬಿಟ್ಟ.

'ಏನು ಕಾಮನ್ ಅದ? ಹಾಂ!' ಅಂತ ಕೇಳಿದೆ.

'ಸಾಮಾನು!' ಅಂದುಬಿಟ್ಟ.

'ಹಾಂ!? ಎರಡೂ ಕೆಲಸಗಳ ಮಧ್ಯೆ ಕಾಮನ್ ಅಂದರೆ ಸಾಮಾನ್ಯವಾಗಿರುವದು ಸಾಮಾನೇ? ಯಾವ ಸಾಮಾನು? ಅಬ್ಬಾ! ಸೀಟಿ ಹೊಡೆಯೋದು ಮತ್ತು ಜಟಕಾ ಹೊಡೆಯೋದರ ಮಧ್ಯೆ ಸಾಮಾನ್ಯವಾಗಿರುವ ಆ ಅಸಾಮಾನ್ಯ ಸಾಮಾನು ಯಾವದು?? ಏನೋ ಹಾಂಗಂದ್ರ???' ಅಂತ ಕೇಳಿದೆ. ಭಾಳ ಕಾಂಪ್ಲಿಕೇಟೆಡ್ ಆಗ್ಲಿಕತ್ತುಬಿಟ್ಟದ ಕೇಸ್!

'ಏ ಸಾಮಾನ್ರೀ ಸರ್ರಾ! ಸಾಮಾನ್! ಸಾಮಾನ್! ಬಾಬು! ಗೊತ್ತಾತ್ರೀ??' ಅಂತ ಒಂದು ತರಹ ವಿಚಿತ್ರವಾಗಿ ಹೇಳಿ, ಸ್ವಲ್ಪ ಕೂತಲ್ಲೇ ಅತ್ಲಾಗ ಇತ್ಲಾಗ ಆದ. Squirming! ಹುಚ್ಚ ಮಂಗ್ಯಾನಿಕೆ.

'ಯಪ್ಪಾ ಗೋವರ್ಧನ! ಏನು ಮಾತಾಡ್ತೀಪಾ!? ಹಾಂ!? ಮೊದಲು ಜಟಕಾ ಹೊಡೆದೆ ಅಂದಿ. ನಂತರ ಸೂಸೂ ಮಾಡಿಕೋತ್ತ ನಿಂತಿದ್ದೆ ಅಂದಿ. ಅದು ಆ ಅಮೇರಿಕನ್ ಯಬಡ ಹೆಂಗಸಿಗೆ ಜಟಕಾ ಹೊಡೆದಂಗ ಕಾಣಿಸ್ತು ಅಂದಿ. ಅದು ಹ್ಯಾಂಗ ಹಾಂಗ ಕಾಣಿಸ್ತು ಅಂತ ಕೇಳಿದರೆ ಎರಡಕ್ಕೂ ಸಾಮಾನ್ಯವಾದದ್ದು ಸಾಮಾನು ಅಂದಿ. ಯಾವದಪಾ ಅಂತಹ ಅಸಾಮಾನ್ಯ ಸಾಮಾನು ಅಂತ ಕೇಳಿದರೆ ಬಾಬು ಅಂತಿ! ಈಗ ಬಾಬು ಯಾರು? ನನಗ ಬಾಬು ಸಿಂಗ ಗೊತ್ತು. ಬಾಬು ಟೇಲರ್ ಗೊತ್ತು. ಆದ್ರ ಅವರು ಇರೋದು ನಮ್ಮ ಧಾರವಾಡದಾಗ. ನೀ ಲಫಡಾ ಎಲ್ಲಿ ಮಾಡಿಕೊಂಡಿ? ಮುಂಬೈನ್ಯಾಗೋ ಅಥವಾ ಧಾರವಾಡದಾಗೋ???' ಅಂತ ಕೇಳಿಬಿಟ್ಟೆ.

ನನ್ನ 'ಅದ್ಭುತ' 'ಲಾಜಿಕಲ್' ಮಾತುಗಳನ್ನು ಕೇಳಿದ ಗೋವರ್ಧನ ಮತ್ತ 'ಹ್ಯಾಂ!!' ಅಂತ ಬಾಯಿಬಿಟ್ಟು, 'ಈ ಮಬ್ಬಗ ಒಟ್ಟೇ ಅರ್ಥವಾಗವಲ್ಲತು!' ಅನ್ನೋ ಲುಕ್ ಕೊಟ್ಟು, ಸುಮ್ಮನೇ ಕೂತುಬಿಟ್ಟ. ನಾ ಬಿಡಬೇಕಲ್ಲ.

'ಏ, ಗೋವರ್ಧನ ಗೋಲ್ಮೀಕಿ, ನನಗ ಫುಲ್ ಮಾಮಾಲಾ ತಿಳಿಲಿಲ್ಲ. ಆದರೂ ಒಂದು ಐಡಿಯಾ ಬಂದದ. ಅದು ಏನಪಾ ಅಂದ್ರ.... ನೀ ರಸ್ತೆ ಬಾಜೂಕ ನಿನ್ನ ಟಂಕಿ ಖಾಲಿ ಮಾಡಿಕೋತ್ತ, ಸೀಟಿ ಹೊಡ್ಕೋತ್ತ, ಹಲ್ಕಾ ಆಗಿಕೋತ್ತ ನಿಂತಿ. ಅಕಿ ಅಮೇರಿಕನ್ ಯಬಡಿಗೆ ಅದು ಸೇರಿಲ್ಲ. ಅವರ ದೇಶದಾಗೂ ಸಹಿತ ಭಾಳ ವತ್ರ ಆತು ಅಂದ್ರ, ಸುತ್ತ ಮುತ್ತ ಒಮ್ಮೆ ನೋಡ್ತಾರ, ಯಾರೂ ಇಲ್ಲ ಅಂದ್ರ ಅವರೂ ಅಲ್ಲೇ ಸೀಟಿ ಹೊಡದೇಬಿಡ್ತಾರ. ಅವರೇನು ಬ್ಯಾರೆ ಏನು? ದೇವಲೋಕದಿಂದ ಇಳಿದು ಬಂದಾರ ಅಂತ ಮಾಡಿಯೇನು? ವತ್ರಾತು ಅಂದ್ರ ಅಷ್ಟ ಮತ್ತ. ಅಮೇರಿಕಾ, ಇಂಡಿಯಾ ಎಲ್ಲಾ ಒಂದೇ. ಅಕಿನೌನ್, ಇಲ್ಲಿ ನಮ್ಮ ದೇಶಕ್ಕ ಬಂದಾಗ ನಿನ್ನಂತಹ ಯಾರೋ ಅಬ್ಬೇಪಾರಿ ಬಡಪಾಯಿಗಳು ಟಾಯ್ಲೆಟ್ ಇಲ್ಲ ಅಂತ ರಸ್ತೆದಾಗss ಉಚ್ಚಿ ಹೊಯ್ದರೆ ಅದನ್ನೇ ದೊಡ್ಡ ಇಶ್ಯೂ ಮಾಡಿ, ಫೋಟೋನೂ ತೆಗೆದು, ಪೋಲಿಸ್ ಕಂಪ್ಲೇಂಟ್ ಕೊಡ್ತಾರ. ಹುಚ್ಚರು! ಏನು ಆಗಂಗಿಲ್ಲ ತೊಗೋ. ನೀ ಚಿಂತಿ ಮಾಡಬ್ಯಾಡ. 'ನಾ ಉಚ್ಚಿನೇ ಹೊಯ್ಕೋತ್ತ ನಿಂತಿದ್ದೆ!' ಅಂತಲೇ ಘಟ್ಟೆ ಹೇಳು. ಒಂದಿಷ್ಟು ರೊಕ್ಕಾ ಒಗೆದು, 'ಡಯಾಬೀಟಿಸ್ ಅದು ಇದು ಅದ,' ಅಂತ ಒಂದು ಸರ್ಟಿಫಿಕೇಟ್ ಮಾಡಿಸಿಬಿಡು. 'ಉಚ್ಚಿ ಕಟ್ಟಿಕೊಂಡು ಕೂಡಲಿಕ್ಕೆ ಆಗೋದಿಲ್ಲ. ಅದಕ್ಕೇ ವತ್ರ ಆದ ಕೂಡಲೇ ಪ್ಯಾಂಟ್ ಜಿಪ್ ಇಳಿಸೇಬಿಡ್ತೇನಿ. ಸುತ್ತ ಮುತ್ತ, ಮಂದಿ ಹಂದಿ, ಅದು ಇದು ಅಂತ ವಿಚಾರ ಮಾಡಿಕೋತ್ತ ಕೂತರೆ ಸತ್ತೇಹೋಗ್ತೇನಿ. ಆವತ್ತೂ ಹಾಂಗೇ ಆತು,' ಅಂತ ಕೋರ್ಟಿನ್ಯಾಗ ಜಜ್ಜರ ಮುಂದೆ ಬರೋಬ್ಬರಿ ಜಜ್ಜಿಬಿಡು. ಏನೂ ಶಿಕ್ಷೆ ಕೊಡದೇ, ದಂಡ ಪಿಂಡ ಹಾಕದೇ ಬಿಟ್ಟು ಕಳಿಸ್ತಾರ. ತಿಳಿತೇನು??' ಅಂತ ಹೇಳಿದೆ. ಲಾಸ್ಟಿಗೆ, 'ಒಂದು ಮಾತು ಮಾತ್ರ ನೆನಪಿಡ!' ಅಂದೆ.

'ಏನ್ರೀ ಸರ್ರಾ!???' ಅಂದ.

'ನೋಡಪಾ, ನಮ್ಮ ದೇಶದಾಗ ಎಲ್ಲೆ ಬೇಕಾದರೂ ಅಲ್ಲೆ ಪಿಸ್ (piss) ಹೊಡಿಬಹುದು. ಆದ್ರ ಎಲ್ಲೆ ಬೇಕಾದಲ್ಲಿ ಕಿಸ್ ಹೊಡೆಯಂಗಿಲ್ಲ. ಆದ್ರ ಎಲ್ಲಿಬೇಕಾದಲ್ಲಿ ಕಿಸ್ ಹ್ಯಾಂಗ ಹೊಡಿಬಾರದೋ ಹಾಂಗೇ ಎಲ್ಲಿಬೇಕಾದಲ್ಲಿ ಜಟಕಾ ಸಹಿತ ಹೊಡಿಬಾರದು ಅಂತ ನನಗ ಗೊತ್ತೇ ಇರಲಿಲ್ಲ. ಇವತ್ತೇ, ನಿನ್ನ ಮೂಲಕವೇ ಗೊತ್ತಾತು. ಎಲ್ಲಿಬೇಕಾದಲ್ಲಿ ಪಿಸ್ ಹೊಡೆಯುವ ಅಮೋಘ ಸೌಲಭ್ಯ ಇರೋ ಹಾಂಗss ಎಲ್ಲಾ ಕಡೆ ಕಿಸ್ ಹೊಡಿಲಿಕ್ಕೆ, ಜಟಕಾ ಹೊಡಿಲಿಕ್ಕೆ ಸಹ ಅವಕಾಶ ಸಿಕ್ಕಿಬಿಟ್ಟರೆ ಬೆಷ್ಟ್ ನೋಡಪಾ. ಆಮ್ಯಾಲೆ ಏನು ಕೇಳ್ತೀ???' ಅಂತ ಹೇಳಿಕೋತ್ತ ಕನಸಿನ ಲೋಕಕ್ಕೆ ಹೋದೆ.

'ಏನ್ರೀ ಸರ್ರಾ? ಪಿಸ್, ಕಿಸ್, ಜಟಕಾ ಹೊಡಿಲಿಕ್ಕೆ ಮುಕ್ತ ಅವಕಾಶ ಸಿಕ್ಕಿಬಿಡ್ತು ಅಂದ್ರ ಏನು ಮಾಡವರು ನೀವು??' ಅಂತ ಕೇಳಿದ ಗೋಲ್ಮೀಕಿ.

'ಹುಟ್ಟಿದರೆ ಭಾರತದಲ್ಲಿ ಹುಟ್ಟಬೇಕು. ರೊಕ್ಕಾ ಮಾಡೋಕೆ ಸಾವಿರ ನಾಡು. ಪಿಸ್, ಕಿಸ್, ಜಟಕಾ ಹೊಡೆಯೋಕೆ ಮಾತ್ರ ನಮ್ಮದೇ ನಾಡು. ಹುಟ್ಟಿದರೆ...... ' ಅಂತ ಅಣ್ಣಾವ್ರು ಹುಬ್ಬಳ್ಳಿ ಕಿತ್ತೂರು ಚನ್ನಮ್ಮನ ಪ್ರತಿಮೆ ಮುಂದೆ ಹಾಡಿಹಾಡಿ ಕುಣಿದ ಹಾಡನ್ನು ಸ್ವಲ್ಪ ಬದಲಾಯಿಸಿಕೊಂಡು ಹಾಡಿ ಸಂಭ್ರಮಿಸಿದೆ.

'ಆದರೂ ಗೋವರ್ಧನ, ಆ ಅಮೇರಿಕನ್ ಹೆಂಗಸಿಗೆ ನೀನು ರಸ್ತೆದಾಗ ಜಿಪ್ ಉಚ್ಚಿ ನಿಂತಿದ್ದು ಸೇರಲಿಲ್ಲ, ಅಸಹ್ಯ ಅನ್ನಿಸಿತು ಅಂದುಕೊಂಡರೂ ಅಕಿ ನೀ ಜಟಕಾ ಹೊಡಿಲಿಕತ್ತಿದ್ದಿ ಅಂತ ಯಾಕ ಕಂಪ್ಲೇಂಟ್ ಕೊಟ್ಟಳು? ಜಟಕಾ ಅಂದ್ರ ಗಾಡಿ ಇರಬೇಕು. ಗಾಡಿ ಎಳಿಲಿಕ್ಕೆ ಕುದುರೆ, ಎತ್ತು ಅಥವಾ ಕೋಣ ಇರಬೇಕು. ನಿಂದು ಕುದರಿ ಜಟಕಾ ಏನು? ಅಥವಾ ನಿಂದು ಸಿಂಗಲ್ ಎತ್ತಿನ ಜಟಕಾನೋ??? ಅಥವಾ ಡಬಲ್ ಎತ್ತಿನದೋ??? ಹಾಂ?? ನೀ ರಸ್ತೆದಾಗ ಸೂಸೂ ಮಾಡಿಕೋತ್ತ ನಿಂತಿದ್ದು ಯಾವ ಕೋನದಾಗ ಅಕಿಗೆ ನೀ ಜಟಕಾ ಹೊಡ್ಕೋತ್ತ ನಿಂತಾಗ ಕಾಣಿಸ್ತು? ಅಕಿದು ತಲಿ ಸರಿ ಅದನೋ ಇಲ್ಲೋ??? ನೀ ಬೇಕಾದರೆ ಅಕಿ ವಿರುದ್ಧ ಒಂದು ಕೌಂಟರ್ ಕಂಪ್ಲೇಂಟ್ ಕೊಡು. ಅಕಿನಾಪನಾ! ಆದರೂ ನೀ ರಸ್ತೆ ಬಾಜೂಕ ಸೀಟಿ ಹೊಡ್ಕೋತ್ತ ನಿಂತಿದ್ದು ಅಕಿಗೆ ಜಟಕಾ ಹೊಡ್ಕೋತ್ತ ನಿಂತಂಗ ಹ್ಯಾಂಗ ಕಾಣಿಸ್ತು!? ಅದೇ ತಿಳಿವಲ್ತು,' ಅಂತ ಹೇಳಿದೆ. ಭಾಳ ಗೊಂದಲ.

'ನನ್ನ ಬಿಟ್ಟುಬಿಡ್ರೀ ಸರ್ರಾ! ನಿಮ್ಮ ಕಾಲಿಗೆ ಬೀಳ್ತೇನಿ!'  ಅನ್ನುವ ದೈನೇಸಿ ಲುಕ್ ಕೊಟ್ಟ ಗೋವರ್ಧನ ಗೋಲ್ಮೀಕಿ.

'ಬಿಡ್ತೇನೋ ಮಾರಾಯಾ. ನನ್ನ ಗೊಂದಲ ದೂರ ಮಾಡಪಾ ತಂದೆ!' ಅಂದೆ.

'ಸರ್ರಾ ಸಾಮಾನ್ರೀ. ಎಲ್ಲಾ ಸಾಮಾನಿನ ಮಹಿಮೆ. ನಾ ನನ್ನ ಕೈಯಾಗ ನಂದೇ ಸಾಮಾನು ಹಿಡಕೊಂಡು ಉಚ್ಚಿ ಹೊಯ್ಲಿಕತ್ತಿದ್ದು ಅಕಿಗೆ ಜಟಕಾ ಹೊಡೆದಂಗ ಕಂಡುಬಿಟ್ಟದ್ರೀ. ಸಾಮಾನ್ರೀ ಯಪ್ಪಾ ಸಾಮಾನ್ರೀ. ನಿಮಗ ಇನ್ನೂ ಹ್ಯಾಂಗ ಬಿಡಿಸಿ ಹೇಳಲಿ ನಾನು!???' ಅಂತ ಮುಖ ಮುಚ್ಚಿಕೊಂಡು ಕುಂಯ್ ಕುಂಯ್ ಅಂದ.

'ಓಹೋ! ಈಗ ತಿಳಿಲಿಕತ್ತದ ನನಗ. ನೀನು ಎಲ್ಲಿಂದಲೋ ಸಾಮಾನು ತರ್ಲಿಕತ್ತಿದ್ದಿ ಅಂತ ಕಾಣಿಸ್ತದ. ಯಾವ ಸಾಮಾನು? ಕಿರಾಣಿ ಸಾಮಾನೇನು? ಆಗಲೇ ನಿನಗ ಉಚ್ಚಿ ಹೊಯ್ಯಲಿಕ್ಕೆ ವತ್ರಾಗಿ ಬಿಟ್ಟದ. ಸಾಮಾನು ನೆಲದ ಮ್ಯಾಲೆ ಇಡೋ ಹಾಂಗಿಲ್ಲ. ಯಾಕ?? ಅದೇನು ರಾವಣನ ಗತೆ ಶಿವನ ಆತ್ಮಲಿಂಗ ಹಿಡಕೊಂಡು ಬರ್ಲಿಕತ್ತಿದ್ದಿ ಏನು? ಹಾಂ? ಸಾಮಾನು ನೆಲದ ಮ್ಯಾಲೆ ಇಟ್ಟರೆ ನಿನ್ನ ಕೈಯಾಗಿನ ಸಾಮಾನೇನು ಗೋಕರ್ಣದ ಲಿಂಗದಾಂಗ ಅಲ್ಲೇ ಹೂತು ಹೋಗಿತ್ತು ಏನು? ಒಟ್ಟಿನಾಗ ಆ ಹೊತ್ತಿನ್ಯಾಗ ನಿನ್ನ ಕೈಯಾಗ ಆತ್ಮಲಿಂಗದಂತಹ ಸಾಮಾನು ಇತ್ತು ಅಂತಾತು. ಆ ಸಾಮಾನು ಲಿಂಗವೋ, ಆತ್ಮಲಿಂಗವೋ, ಪರಮಾತ್ಮಲಿಂಗವೋ, ಜೀವಾತ್ಮಲಿಂಗವೋ, ಪ್ರೇತಾತ್ಮಲಿಂಗವೋ ..... ಯಾವ ಲಿಂಗವೋ.... ಅದು ಆ ಶಂಭುಲಿಂಗನಿಗೇ ಗೊತ್ತು! ಒಟ್ಟಿನಾಗ ಆತ್ಮಲಿಂಗದಂತಹ ಸಾಮಾನು ಕೈಯಾಗ ಹಿಡಿದುಕೊಂಡೇ ಸೂಸೂ ಮಾಡಿಕೋತ್ತ ನಿಂತುಬಿಟ್ಟಿ. ಅದು ಹ್ಯಾಂಗೋ ಆ ಹಾಪ್ ಅಮೇರಿಕನ್ ಆಂಟಿಗೆ ನೀನು ಜಟಕಾ ಹೊಡೆದಾಂಗ ಕಂಡುಬಿಟ್ಟದ. ನೀ ಎಲ್ಲರೆ ನಿನ್ನ ಜಟಕಾ ಬಂಡಿ ಅಂದರ ಚಕ್ಕಡಿ ಎತ್ತು ಉಚ್ಚಿ ಹೊಯ್ದಂತ ಉದ್ದಕ ಉಚ್ಚಿ ಹೊಯ್ಲಿಕತ್ತಿದ್ದಿ ಏನು? ಹಾಂಗಾಗಿ ಅಕಿಗೆ ನೀ ಜಟಕಾ ಹೊಡಿಲಿಕತ್ತಂಗ ಕಾಣಿಸಿಬಿಟ್ಟದ. ಅಲ್ಲಾ!????' ಅಂತ ಕೇಳಿಬಿಟ್ಟೆ.

ಇದನ್ನು ಕೇಳಿದ ಗೋವರ್ಧನ ಗೋಲ್ಮೀಕಿ ಹುಚ್ಚು ಹಿಡಿದವನಂತೆ ನಕ್ಕ. ಉಳ್ಳಾಡಿ ಉಳ್ಳಾಡಿ ನಕ್ಕ. 'ಯಪ್ಪಾ, ನಿಮಗ ದೊಡ್ಡ ನಮಸ್ಕಾರ್ರೀ ಸರ್ರಾ! ಇನ್ನೂ ನಿಮ್ಮ ಇಂತಹ ಅದ್ಭುತ ಮಾತು ನಾ ಕೇಳಿಕೋತ್ತ ಕೂತೆ ಅಂದ್ರ ನಾ ಖರೆ ಹುಚ್ಚಾಗಿಬಿಡ್ತೇನಿ. ನಿಮ್ಮ ಸಹವಾಸ ಸಾಕ್ರೀಪಾ!' ಅಂದವನೇ ಬಂವ್ವಂತ ಓಡಿ ಹೋಗಿ, ಪೋಲೀಸ್ ಲಾಕಪ್ ಒಳಗ ಅಡಗಿ ಕೂತುಬಿಟ್ಟ. ಹೊರಗ ಆರಾಮ ಕೂತಿದ್ದ ಆದ್ಮಿ ತಂತಾನೇ ಹೋಗಿ ಲಾಕಪ್ಪಿನ್ಯಾಗ ಅಂದರ್ ಆಗಿದ್ದನ್ನು ನೋಡಿದ ಪೋಲೀಸ್, 'ಕಾಯ್ ರೇ ಗೋಲ್ಮೀಕಿ? ಕ್ಯಾ ಭಂಕಸ್ ಕರ್ತೋಸ್!? ರಾಡಾ ಕರೂ ನಕಾ!' ಅಂತ ಜಬರಿಸುತ್ತ ಬಂದ. 'ಸಾಬ್, ಹಮ್ ಕೋ ಅಂದರ್ ಹೀ ರಹೇನೆ ದೋ. ವೋ ಆದ್ಮಿ, ಬುಡ್ಡಾ ಚಸ್ಮಿಸ್ ಆದ್ಮಿ, ಹಮ್ ಕೋ ಪಾಗಲ್ ಕರ್ ಕೆ ಹೀ ಛೋಡೆಗಾ. ಏಕ ಘಂಟೆಸೇ ಧಿಮಾಕ್ ಕಾ ದಹಿ ಬನಾ ಕೆ ರಖಾ ಹೈ. ಆಗೆ ಲಸ್ಸಿ ಭೀ ಬನಾದೆಗಾ. ಮುಜೆ ಉನ್ಸೆ ಬಚಾವ್ ಸಾಬ್!' ಅಂತ ಗೋಲ್ಮೀಕಿ ಪೋಲೀಸರ ಕಡೆ ಬೇಡಿಕೊಂಡ.

ಅಲೀ ಇವನಾಪನ! ನಾ ಇವನ ತಲಿ ತಿಂದನಂತ! ಏನಂತ ಮಾತಾಡ್ತಾನ ನೋಡ್ರಿ! ಮಂಗ್ಯಾ ಸೂಳಿಮಗ!

ಅವನ ಮಾತು ಕೇಳಿದ ಆ ಪೋಲೀಸ್ ಪಾಂಡು ಮಾಮಾ ನನ್ನ ಕಡೆ ಬಂದು, 'ಕಾಯ್ ರೇ??' ಅಂದ. ನಾ ತಿಳ್ಕೊಂಡೆ ಕಾಯ್ ಅಂದ್ರ ಕಾಯಿ ಅಂದ್ರ ತೆಂಗಿನಕಾಯಿ ಕೇಳಲಿಕತ್ತಾನ ಅಂತ. ಪೋಲೀಸ್ ಸ್ಟೇಷನ್ ಅಂದ್ರ ದೇವರ ಗುಡಿ ಇದ್ದಂಗ ನೋಡ್ರಿ. ಕಾಯಿ, ಹಣ್ಣು ಎಲ್ಲಾ ತೊಂಗೊಂಡು ಹೋಗಿ, ಮ್ಯಾಲಿಂದ ಒಂದಿಷ್ಟು ಗರಿ ಗರಿ ಗಾಂಧೀಜಿ ನೋಟು ದಕ್ಷಿಣೆ ಅಂತ ಕೊಟ್ಟರೆ ಮಾತ್ರ ಕೆಲಸ ಆಗ್ತಾವ. ಹಾಂಗಾಗಿ ಇಂವಾ ಮುಂಬೈ ಪೋಲೀಸ್ ಪಾಂಡು ಸಹಿತ ನೈವೇದ್ಯಕ್ಕ ಕಾಯ್ ಅಂದ್ರ ಕಾಯಿ  ಕೇಳಲಿಕತ್ತಾನ ಅಂತ ಹೇಳಿ ನನ್ನ ಚೀಲದಾಗಿಂದ ಒಂದು ತೆಂಗಿನಕಾಯಿ ತೆಗೆದು ಕೊಟ್ಟೇಬಿಟ್ಟೆ. ನಾ ಮುಂಬೈನ ಫೇಮಸ್ ಸಿದ್ಧಿವಿನಾಯಕ ಗುಡಿಗೆ ಹೊಂಟಿದ್ದೆ ನೋಡ್ರಿ. ಹಾಂಗಾಗಿ ಇತ್ತು ಚೀಲದಾಗ ಒಂದು ಕಾಯಿ.  ಅದು ನಾ ಮೊದಲೇ ದೊಡ್ಡ ನಿದ್ದಿವಿನಾಯಕ. ಭಾಳ ನಿದ್ದಿ ಪ್ರಾಬ್ಲಮ್ ನನಗ. ನಿದ್ದಿ ಹತ್ತಿ ಒಮ್ಮೆ ಮಲ್ಕೊಂಡೆ ಅಂದ್ರ ಎರಡು ಮೂರು ದಿನ ಖಬರಿಲ್ಲದೇ ಮಕ್ಕೊಂಡುಬಿಡ್ತೇನಿ. ಇಲ್ಲಾ ಅಂದ್ರ ಒಟ್ಟೇ ನಿದ್ದಿನೇ ಇಲ್ಲಾ. ಒಟ್ಟಿನಾಗ ನಿದ್ದಿವಿನಾಯಕ ಆಗಿಬಿಟ್ಟೇನಿ. ನಮ್ಮಂತಾ ನಿದ್ದಿವಿನಾಯಕರು ಸಿದ್ಧಿವಿನಾಯಕನ ದರ್ಶನ ತೊಗೊಂಡು, ಹಣ್ಣು ಕಾಯಿ ಮಾಡಿಸಿಕೊಂಡು ಬಂದರೆ ನಿದ್ದಿ, ಬುದ್ಧಿ ಎಲ್ಲಾ ಬರೋಬ್ಬರಿ ಆಗ್ತಾವ ಅಂತ ಯಾರೋ ಹೇಳಿದರು. ಅದಕ್ಕೇ ಅಲ್ಲಿಗೆ ಹೊಂಟಿದ್ದೆ. ನಡು ದಾರ್ಯಾಗss ಈ ಪೋಲೀಸ್ ಸ್ಟೇಷನ್ ಬಂತು. ಒಳಗ ಕೆಲಸ ಇತ್ತು ಅಂತ ಬಂದು ಕೂತಿದ್ದೆ.

ನಾ ತೆಂಗಿನಕಾಯಿ ತೆಗೆದು ಕೊಟ್ಟ ಕೂಡಲೇ ಆ ಪೋಲೀಸ್ ಪಾಂಡು ಅದೇನು ಬಾಂಬೋ, ಗರ್ನಾಲೋ, ಗ್ರೆನೆಡೋ ಅನ್ನವರಾಂಗ, 'ಕ್ಯಾ ಭಾವು? ಮರಾಠಿ ನಹಿ ಆತಾ ತುಮ್ ಕೋ??? ಕಿದರ್ ಸೆ ಹೈ? ಮದರಾಸಿ ಹೈ? ತುಮ್ ಲುಂಗಿವಾಲಾ ಅಣ್ಣಾ ಹೈ ಕ್ಯಾ? ತುಮ್  ಲುಂಗಿವಾಲೋಂಕಾ ಪುಂಗಿ ಬಜಾತೆ ಹಮ್ ಲೋಗ್ ಇದರ್. ಕ್ಯಾ ಬಜಾತೆ? ಪುಂಗಿ. ಪುಂಗಿ. ಕ್ಯಾ ರಾಡಾ ಕರ್ತಾ? ಚುಪ್ ಬೈಠ್ ನಹಿ ಸಕ್ತಾ ಕ್ಯಾ? ವೋ ಗೋಲ್ಮೀಕಿ ಛೋಟೆ ಲಡ್ಕೆ ಕೋ ಕ್ಯೂಂ ತಂಗ್ ಕರತಾ ಹೈ ಬಾಬಾ??? ಹಾಂ!? ಶಾಂತಿ ಸೇ ಬೈಠ್. ಗಪ್ ಬೈಸ್! ಸಾಹೇಬ್ ಆಯೇಗಾ ಅಭಿ!' ಅಂತ ನನಗ ದೊಡ್ಡ ಉಪದೇಶ ಮಾಡಿದ ಆ ಪೋಲೀಸ್. ಮರಾಠಿಯಲ್ಲಿ ಕಾಯ್ ಅಂದ್ರ ಕಾಯಿ, ತೆಂಗಿನಕಾಯಿ ಅಂತೂ ಅಲ್ಲ ಅಂತ ಗೊತ್ತಾತು. ಕಾಯ್ ಅಂದ್ರ ಏನ್ರೀ???

ಸರಿ, ಆವಾ ಗೋವರ್ಧನ ಗೋಲ್ಮೀಕಿಯಂತೂ ನನ್ನ ಮಾತು ಕೇಳಿ, ಯಾಕೋ ತಲಿ ಪೂರ್ತಿ ಕೆಡಿಸಿಕೊಂಡು, ಲಾಕಪ್ಪಿನ್ಯಾಗ ಹೋಗಿ ಒಂದು ಮೂಲ್ಯಾಗ ಮಲ್ಕೊಂಡುಬಿಟ್ಟ. ನನ್ನ ಡೌಟ್ ಮಾತ್ರ ಬಗೆಹರಿದಿರಲಿಲ್ಲ. ಯಾರನ್ನು ಕೇಳೋಣ? ಹಾಂ! ಈ ಪೋಲೀಸ್ ಪಾಂಡು ಮಾಮಾನ್ನೇ ಕೇಳೋಣ ಅಂತ ಹರಕು ಮುರುಕು ಹಿಂದಿಯೊಳಗ ಕೇಳೇಬಿಟ್ಟೆ.

'ಸಾಬ್, ಉಸ್ ಲಡಕಾ ಗೋವರ್ಧನ ಗೋಲ್ಮೀಕಿ ಕೋ ಕ್ಯೂಂ ಉಠಾಕೆ ಲೇಕೆ ಆಯೇ ಆಪ್? ವೋ ಬಸ್ ರಾಸ್ತೆ ಬಾಜೂ ಸೂಸೂ ಕರ್ ರಹಾ ಥಾ. ವೋ ತೋ ಸಬ್ ಕರ್ತೆ ಹೈ. ಕರ್ತೆ ಹೈ ನಾ? ಉಸ್ ಕೋ ಛೋಡ್ ದೋ ಸಾಬ್!' ಅಂತ ಕಿತ್ತೋದ ಹಂದಿಯಲ್ಲಿ ಅಲ್ಲಲ್ಲ ಹಿಂದಿಯಲ್ಲಿ ಹರಕುಮುರುಕಾಗಿ ಬೇಡಿಕೊಂಡೆ.

'ಅರೇ ಭಾವು, ಕ್ಯಾ ಭಂಕಸ್ ಕರ್ತಾ ತುಮೀ? ಹಾಂ? ತುಮ್ಕೋ ಚುಪ್ ಚಾಪ್ ಬೈಠ್ ಬೋಲಾ ಥಾ ನಾ ಮೈ? ಹಾಂ? ಫಿರ್ ಕಾಹೇಕು ಚಾಟ್ತಾ ಹೈ ಮೇರಾ ಧಿಮಾಕ್?? ವೋ ಗೋಲ್ಮೀಕಿ ಲಡಕಾ ಸೂಸೂ ನಹಿ ಕರ್ ರಹಾ ಥಾ. ವೋ ಅಮೇರಿಕನ್ ಲೇಡಿ ಕೆ ಸಾಮನೇ MM ಕರ್ಕೆ ದಿಖಾಯಾ. MM ಸಮಜ್ತಾ ಹೈ ನಾ??? ಹಾಂ?? ಇಸ್ ಲಿಯೇ ಉಸಕೋ ಅಂದರ್ ಕಿಯಾ. ಝೂಠ್ ಬೋಲ್ತಾ ಹೈ ಸಾಲಾ, ಸೂಸೂ ಕರ್ ರಹಾ ಥಾ ಬೋಲ್ಕೆ! ಫೋಟೋ ಹೈ. ಎವಿಡೆನ್ಸ್ ಹೈ ರೇ ಬಾಬಾ! ಟೈಟ್ ಕೇಸ್ ಹೈ!' ಅಂತ ಅಂದುಬಿಟ್ಟ.

ನನಗ ಏನೂ ಸರಿ ತಿಳಿಲಿಲ್ಲ. ಆದ್ರ ಅದು ಏನೋ MM ಅಂದ. ಏನು MM ಮಾಡ್ಲಿಕತ್ತಿದ್ದಾ ನಮ್ಮ ಗೋವರ್ಧನ ಗೋಲ್ಮೀಕಿ???

'MM ಬೋಲೆತೋ ಕ್ಯಾ ಸಾಬ್???' ಅಂತ ಕೇಳಿಬಿಟ್ಟೆ. ಬೈದ್ರ ಬೈಸಿಕೊಂಡರಾತು. ಸಂಶಯ ಮಾತ್ರ ಬಗೆಹರಿಯಬೇಕು. 'ಸಂಶಯಾತ್ಮಾ ವಿನಷ್ಯತಿ' ಅಂತ ಕೃಷ್ಣ ಬ್ಯಾರೆ ಭಗವದ್ಗೀತಾ ಒಳಗ ಹೇಳೇಬಿಟ್ಟಾನ. ಹಾಂಗಾಗಿ ಡೌಟ್ ಕ್ಲಿಯರ್ ಮಾಡಿಕೊಂಡೇಬಿಡಬೇಕು.

'MM ಮತ್ಲಬ್ 'ಅಪನಾ ಹಾತ್ ಜಗನ್ನಾಥ್'. ಸಮಜಾ ಕ್ಯಾ? ವೋ ಭೀ ಪಬ್ಲಿಕ್ ಮೇ, ಲೇಡಿ ಲೋಗ್ ಕೆ ಏಕ್ದಂ ಸಾಮನೇ 'ಅಪನಾ ಹಾತ್ ಜಗನ್ನಾಥ' ಕರ್ ರಹಾ ಥಾ ಏ ಗೋಲ್ಮೀಕಿ. ಗಂಧಿ ಬಾತ್ ಹೈ ನಾ?? ಸಮಜಾ ಕ್ಯಾ? ಪಬ್ಲಿಕ್ ಮೇ 'ಅಪನಾ ಹಾತ್ ಜಗನ್ನಾಥ್' ಕರ್ನಾ  ಬರೋಬರ್ ಕ್ಯಾ???' ಅಂತ ಏನೇನೋ ಹೇಳಿಬಿಟ್ಟ.

ಈಗ ನನಗ ಮತ್ತೂ ಗೊಂದಲಾಗಿ ಬಿಡ್ತು. ಅದೇನೋ ಹಾಥ್ ಅಂತ. ಅದರಿಂದ ಜಗನ್ನಾಥ್ ಅಂತ. ಯಾವ ಜಗನ್ನಾಥ? ಪುರಿ ಜಗನ್ನಾಥ?? ದೊಡ್ಡ ದೇವರು????

ಅಯ್ಯೋ!!! ನನ್ನ ತಲಿ ಸಿಡಿಲಿಕತ್ತದ. ಒಂದು ಅನಾಸಿನ್ ಕೊಡ್ರಿ. ಆಂವಾ ಹುಸ್ಸೂಳಿಮಗ ಗೋಲ್ಮೀಕಿ ಏನೋ ಹೇಳಿದ. ಜಟಕಾ ಅಂದ. ಸೂಸೂ ಅಂದ. ಕೈಯಾಗ ಆತ್ಮಲಿಂಗದಾಂಗ ಸಾಮಾನು ಹಿಡಕೊಂಡು ಉಚ್ಚಿ ಹೊಯ್ದೆ ಅಂದ. ನಾ ವಿವರಣೆ ಕೇಳಿದರೆ ಅವಂಗ ಹುಚ್ಚೇ ಹಿಡಿತೋ ಅನ್ನವರಂಗ ಲಾಕಪ್ಪಿನ್ಯಾಗ ಹೋಗಿ ಕೂತುಬಿಟ್ಟ. ಈ ಪೋಲೀಸ್ ಪಾಂಡು ಮಾಮಾ ಮತ್ತ ಏನೇನೋ ಅಂತಾನ. ಎಲ್ಲೆ ಆ ಗೋಲ್ಮೀಕಿ ಪುಣ್ಯಾತ್ಮ ಜಟಕಾ ಹೊಡ್ಕೋತ್ತ ದೂರದ ಜಗನ್ನಾಥ ಪುರಿಗೆ ಹೊಂಟುಬಿಟ್ಟಿದ್ದನೋ ಏನೋ??? ಯಾರಿಗೆ ಗೊತ್ತು? ನಿಮಗೆ ಗೊತ್ತು? ಮಾಲೂಮ್ ಕ್ಯಾ????

ಈ ಗೋಲ್ಮೀಕಿ ರಸ್ತೆದಾಗ ಸಾಮಾನು ಹಿಡಿದುಕೊಂಡೇ ಉಚ್ಚಿ ಹೊಯ್ದಿದ್ದು ಆ ಅಮೇರಿಕನ್ ಲೇಡಿ ಮುಂದ ಜಟಕಾ ಹೊಡೆದಾಂಗ ಹ್ಯಾಂಗ ಕಾಣಿಸ್ತು ಅನ್ನೋದು ಮಾತ್ರ ಚಿದಂಬರ ರಹಸ್ಯ! ಅದು ಒಂದು ತರಹದ optical illusion ಇರಬಹುದೇ? ಕಣ್ಣಿಗೆ ಕಂಡಿದ್ದೆಲ್ಲ ಸತ್ಯವಲ್ಲ. ಮರಭೂಮಿಯ ಮೃಗಜಲದಲ್ಲಿ (mirage) ನೀರು ಇದ್ದ ಹಾಗೆ ಕಾಣಿಸುತ್ತದೆ. ಆದರೆ ಇರೋದಿಲ್ಲ. ಹಾಂಗೇ ಇದೂ ಇರಬಹುದೇ!?

ಸ್ಪೂರ್ತಿ: ಮೊನ್ನೆ ನಡೆದ ಒಂದು ಘಟನೆ. ವಿವರಗಳನ್ನು ಇಲ್ಲಿ ಓದಬಹದು. ಈ ಬ್ಲಾಗ್ ಪೋಸ್ಟ್ ಪೂರ್ತಿ ಕಾಲ್ಪನಿಕ.

ಭಾವನಾತ್ಮಕ ಮಂದಿ ಭಾವಿಗೆ ಬೀಳುವದು ಜಾಸ್ತಿ!

'ಜಗತ್ತಿನಲ್ಲಿ ಆಡಲು ಇಷ್ಟೊಂದು ಆಟಿಕೆಗಳಿದ್ದರೂ ಕೆಲವರು ಆಡುವದು ಇನ್ನೊಬ್ಬರ ಭಾವನೆಗಳೆಂಬ ಆಟಿಕೆಗಳೊಂದಿಗೇ ಮಾತ್ರ!'

-- ಚಾಣಕ್ಯ / ಕೌಟಿಲ್ಯ

ಚಾಣಕ್ಯನಂತಹ ruthless ಮನುಷ್ಯ ಇದನ್ನು ಹೇಳಿದನೇ??? ನಂಬಲು ಅಸಾಧ್ಯ. ಇರಲಿ ಬಿಡಿ.

ನಿಮ್ಮ ಭಾವನೆಗಳೆಂಬ ಆಟಿಕೆಗಳನ್ನು ಕಂಡಕಂಡವರ ಹತ್ತಿರ ಆಡಲು ಬಿಟ್ಟರೆ ಅಷ್ಟೇ ಮತ್ತೆ! ಫುಲ್ ಮಟಾಶ್!

ನಾವೆಲ್ಲ ಮಿಡ್ಲ್ ಕ್ಲಾಸ್ ಮಂದಿ. ರೊಕ್ಕ ಕಮ್ಮಿ. ಆದರೂ ಕೇಳಿದ್ದನ್ನು, ಬಯಸಿದ್ದನ್ನು ಎಂದೂ ಇಲ್ಲ ಅನ್ನಲಿಲ್ಲ ಮನೆ ಮಂದಿ. ಆಟಿಕೆಗಳನ್ನೂ ಹಿಡಿದು. ಆದರೆ ಒಂದೇ ಕಂಡೀಶನ್.....ಕೆಲವು ಆಟಿಕೆಗಳು ಭಾಳ ನಾಜೂಕ್ ಇರುತ್ತವೆ. ಡೆಲಿಕೇಟ್ ಇರುತ್ತವೆ. ಭಾಳ ತುಟ್ಟಿ. ಭಾವನೆಗಳ ತರಹ. ಕೆಲವು ಮಂದಿ ಗೆಳೆಯ ಗೆಳತಿಯರು ಅವನ್ನು ಬರ್ಬಾರ್ದ್ ಮಾಡಿಬಿಟ್ಟಾರು. ಹಾಗಾಗಿ ಅಂತಹ insensitive ಗೆಳೆಯ ಗೆಳತಿಯರ ಜೊತೆ ಈ ಡೆಲಿಕೇಟ್ ಆಟಿಕೆಗಳನ್ನು ಆಡ ಬೇಡ! ಅವರು ಬಂದಾಗ ಇವನ್ನು ಮುಚ್ಚಿಡು! That's the moral of the story.

ಯಾರ ಜೊತೆ ಯಾವ ಆಟಿಕೆ ಇಟ್ಟುಕೊಂಡು ಆಡುತ್ತೀರೋ ಅದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಏನೇ ಇರಲಿ. ಸ್ವಲ್ಪ ಎಮ್ಮೆ ಧಪ್ಪ ಚರ್ಮ ಬೆಳೆಸಿಕೊಂಡು ಬಿಡಿ. ಉಪಯೋಗಕ್ಕೆ ಬರುತ್ತದೆ. ಇಲ್ಲವಾದರೆ ನಂತರ ಅಳುತ್ತೀರಿ. ಕೊಂಯ್ಯಾ ಕೊಂಯ್ಯಾ ಅಂತ!

ಭಾವನಾತ್ಮಕ ಮಂದಿ ಭಾವಿಗೆ ಬೀಳುವದು ಜಾಸ್ತಿ! ನೀವು ಎಚ್ಚರಿಕೆಯಿಂದ ಇರಿ!

Wednesday, August 19, 2015

ನಿಮ್ಮ ಚಡ್ಡಿಯಲ್ಲಿ ಕಡ್ಡಿ ಇದೆಯೇ?

ಕೆಲವು ಮಂದಿ ಕೆಟ್ಟ ತಲಿ ತಿಂತಾರ. ಅದೂ ಮುಂಜಾನೆ ಮುಂಜಾನೆ. ನಮ್ಮ ಬಾಜೂ ಮನಿಯ ಮಹಾನುಭಾವ ಅದೇ ಪೈಕಿ. ಪಿಶಾಚಿ ಜಾತಿಯವ.

ಮನ್ನೆ ಹಾಂಗss ಆತು. ಮುಂಜಾನೆ ಎದ್ದು, ಹಲ್ಲು ತಿಕ್ಕಿ, ಮಾರಿ ತೊಳೆದು ಹೋಗೋಣ ಅಂತ ನಮ್ಮ ಹಿತ್ತಲದ ಕಡೆ ಬಂದೆ. ಕೈಯಾಗ ಟೂತ್ ಬ್ರಷ್ ಮತ್ತ ಅದರ ಮ್ಯಾಲಿಷ್ಟು ಪೇಸ್ಟ್. ಅಲ್ಲೇ ಕಂಡನಲ್ಲ ಈ ಮಹಾನುಭಾವ ನಮ್ಮ ಬಾಜೂಕಿನ ಮನಿಯವ. ಅವನೂ ಎದ್ದು, ಅದೇ ಕೆಲಸಕ್ಕೆ ಬಂದಿದ್ದ. ಇಬ್ಬರದ್ದೂ ಹಿತ್ತಲದಾಗ ಭೆಟ್ಟಿ.

ಆ ಹಾಪಾ ಮುಂಜ್ಮುಂಜಾನೆ ತಲಿ ತಿನ್ನುವ ಮೂಡಿನ್ಯಾಗ ಇದ್ದ ಅಂತ ಅನ್ನಿಸ್ತದ. ಶುರು ಮಾಡಿಯೇಬಿಟ್ಟ. ಸೂತ್ರ ಸಂಬಂಧವಿಲ್ಲದ ಮಾತು.

'ನಿಮ್ಮ ಟೂತ್ ಪೇಸ್ಟಿನಲ್ಲಿ ಉಪ್ಪು ಇದೆಯೇ??' ಅಂತ ರಾಗವಾಗಿ ಕೇಳಿಬಿಟ್ಟ ಹಾಪನ ತಂದು. ಪಕ್ಕಾ ಧಾರವಾಡಿಯಾಗಿ ಮೈಸೂರ್ ಕನ್ನಡ ಒಳಗ ಮಾತು ಮಗಂದು. ಸ್ಟೈಲ್ ನೋಡ್ರಿ!

'ಏನss????' ಅಂತ ಕೆಕ್ಕರಿಸಿ ನೋಡಿ ಕೇಳಿದೆ.

'ನಿನ್ನ ಟೂತ್ ಪೇಸ್ಟಿನ್ಯಾಗ ಉಪ್ಪು ಅದ ಏನು???' ಅಂತ ಆವಾ ಸ್ವಚ್ಛ ಧಾರವಾಡ ಕನ್ನಡದಾಗ ಕೇಳಿದಾಗ ತಿಳಿಯಿತು.

'ಟೂತ್ ಪೇಸ್ಟಿನ್ಯಾಗ ಏನು ಉಪ್ಪೋ ಮಾರಾಯಾ? ಉಪ್ಪು ಇರಲಿಕ್ಕೆ ಅದೇನು ಸಾರೋ, ಹುಳಿಯೋ, ಪಲ್ಯಾನೋ, ಕೋಸಂಬ್ರಿನೋ, ರಸಾನೋ? ಏನು ಅಡಿಗಿ ಅಂತ? ಏನಂತ ಮಾತು ಮಾರಾಯಾ, ಅದೂ ಮುಂಜಾನೆ ಮುಂಜಾನೆ. ಹಾಂ?' ಅಂದೆ.

ನನಗ ತಿಳಿಲಿಲ್ಲ ಅಂತ ಅವಂಗ ತಿಳೀತು. ತಟ್ಟಿಕೊಂಡು ಪೆಕಪೆಕಾ ಅಂತ ನಕ್ಕ. ತನ್ನ ತಲಿ ತಿನ್ನುವ ಕಾರ್ಬಾರ್ ಮುಂದುವರೆಸಿದ.

'ನಿಮ್ಮ ಟೂತ್ ಪೇಸ್ಟಿನಲ್ಲಿ ಇದ್ದಿಲು ಇದೆಯೇ???' ಅಂತ ಮತ್ತೊಂದು ಬಾಂಬ್ ಒಗೆದ. ಮತ್ತ ಮೈಸೂರ್ ಕನ್ನಡದಾಗ. ಏನು ಹುಚ್ಚ ಹಿಡದದ ಈ ಹಾಪ್ ಮಂಗ್ಯಾನಿಕೆಗೆ ಅಂದುಕೊಂಡೆ.

'ಏನss????' ಅಂತ ಮತ್ತ ಕೆಕ್ಕರಿಸಿ ನೋಡಿ ಕೇಳಿದೆ.

'ನಿನ್ನ ಟೂತ್ ಪೇಸ್ಟಿನ್ಯಾಗ ಇದ್ದಿಲು ಅದ ಏನು???' ಅಂತ ಕೇಳಿಬಿಟ್ಟ.

'ಲೇ, ಹಾಪಾ! ಟೂತ್ ಪೇಸ್ಟಿನ್ಯಾಗ ಇದ್ದಿಲು ಎಲ್ಲಿಂದ ಬರಬೇಕು? ಇದ್ದಿಲು ಬರಲಿಕ್ಕೆ ಅದೇನು ಮಡಿ ಇದ್ದಿಲ ಒಲಿಯೇನು? ಅಥವಾ ಉಗಿ ಬಂಡಿ ಅಂದ್ರ ಇದ್ದಿಲಿನ ಮ್ಯಾಲೆ ಓಡುವ ರೈಲ್ವೆ ಇಂಜಿನ್ ಏನು?' ಅಂದೆ. ದೊಡ್ಡ ಹಾಪಾ! ಏನೇನೋ ಮಂಗ್ಯಾತನ ಹಚ್ಚ್ಯಾನ. ಅದೂ ಮುಂಜ್ಮುಂಜಾನೆ.

ನಾ ಹೇಳಿದ್ದು ಕೇಳಿ ನಮ್ಮ ಬಾಜೂಕಿನ ಮನಿಯವ ಮತ್ತೂ ಬಿದ್ದು ಬಿದ್ದು ನಕ್ಕ. ಆವಾ ಆ ಪರಿ ಬಿದ್ದು ಬಿದ್ದು ನಗೋದು ನೋಡಿ ನನಗ  ಏನೋ ನೆನಪಾತು. ಇದು ಯಾವದೋ ಟೂತ್ ಪೇಸ್ಟಿನ advertisement ಇದ್ದಂಗ ಅದಲ್ಲಾ? ಇಲ್ಲಾ? ಕರೆಕ್ಟ್. ಅದೇ  ಕರೆಕ್ಟ್. ನನ್ನ tingle ಮಾಡಲಿಕ್ಕೆ, ಅಣಗಿಸಲಿಕ್ಕೆ ಬೇಕಂತಲೇ ಏನೇನೋ ಕೇಳಲಿಕತ್ತಾನ. ನೋಡ್ರಿ, ನಾವು ಉಪಯೋಗ ಮಾಡುವ ಟೂತ್ ಪೇಸ್ಟ್ ಒಳಗ ಪೇಸ್ಟ್ ಇದ್ದರೆ ಅದೇ ದೊಡ್ಡ ಮಾತು. ಯಾಕಂದ್ರ ನಾವು ಎಂದೂ ಟೂತ್ ಪೇಸ್ಟ್ ಖರೀದಿ ಮಾಡಂಗೇ ಇಲ್ಲ. ನಮ್ಮ ಆಪ್ತ ಡೆಂಟಿಸ್ಟ್ ಮಂದಿ ಅವರ ಕಡೆ ಬಂದ ಫ್ರೀ ಸ್ಯಾಂಪಲ್ ಏನು ಕೊಡ್ತಾರ ಅವೇ ನಮ್ಮ ಟೂತ್ ಪೇಸ್ಟುಗಳು. ಹಾಂಗಿದ್ದಾಗ ನಮ್ಮ ಕಡೆ ಎಲ್ಲಿಂದ ಲೇಟೆಸ್ಟ್ ಉಪ್ಪಿರುವ, ಇದ್ದಿಲಿರುವ, ಮತ್ತೊಂದಿರುವ, ಮಗದೊಂದಿರುವ ಟೂತ್ ಪೇಸ್ಟ್ ಬರಬೇಕು? ನಮ್ಮ ಬಾಜೂ ಮನಿಯವ ಅಂಥಾ ಟೂತ್ ಪೇಸ್ಟ್ ಖರೀದಿ ಮಾಡಿರಬೇಕು. ಅದಕ್ಕೇ ನನ್ನ tingle ಮಾಡಿ ಅಣಗಿಸಲಿಕತ್ತಾನ. ಮಂಗ್ಯಾನಿಕೆ ತಂದು. ತಡಿ ಇವಂಗ ಬರೋಬ್ಬರಿ ಇಡತೇನಿ ಈಗ.

'ನನ್ನ ಟೂತ್ ಪೇಸ್ಟಿನ್ಯಾಗ ಉಪ್ಪೂ ಇಲ್ಲ. ಇದ್ದಿಲೂ ಇಲ್ಲ. ಪೇಸ್ಟ್ ಇದ್ದರೆ ಅದೇ ದೊಡ್ಡ ಮಾತು. ಈಗ ನಾ ಒಂದು ಪ್ರಶ್ನೆ ಕೇಳತೇನಿ. ಉತ್ತರ ಹೇಳ್ತಿಯೇನಪಾ???' ಅಂತ ಕೇಳಿದೆ. ಪೀಠಿಕೆ ರೆಡಿ ಮಾಡಿಕೊಂಡೆ.

'ಏನು? ಏನು ಕೇಳ್ತಿ? ಕೇಳು,' ಅಂದ.

ನಾನೂ ಅವನ ತರಹನೇ ಅಣಕ ಮಾಡುತ್ತ, 'ನಿಮ್ಮ ಚಡ್ಡಿಯಲ್ಲಿ ಕಡ್ಡಿ ಇದೆಯೇ?' ಅಂತ ಕೇಳಿ ಗಪ್ಪಾಗಿಬಿಟ್ಟೆ.

'ಏನೂ!!?? ಏನಂತ ಮಾತಾಡ್ತೀ?? ಹಾಂ!!??' ಅಂತ ರೈಸ್ ಆಗಿ ಅಬ್ಬರಿಸಿದ ಬಾಜೂ ಮನಿ ಮಂಗ್ಯಾನಿಕೆ.

'ತಿಳಿಲಿಲ್ಲ?? ನಿನ್ನ ಚಡ್ಯಾಗ ಕಡ್ಡಿ ಅದ ಏನು ಅಂತ ಕೇಳಿದೆ. ತಿಳೀತು???' ಅಂತ ಧಾರವಾಡ ಭಾಷಾದಾಗ ಕೇಳಿದೆ.

'ಏನು? ಏನು ಮತ್ತ ಅದೇ ಅದೇ ಹಚ್ಚಿ??? ತಲಿ ಕೆಟ್ಟದ ಏನು? ಮುಂಜಾನೆ ಮುಂಜಾನೆ ಚಡ್ಡಿ, ಅದರ ಒಳಗಿನ ಕಡ್ಡಿ ಅಂತ ಏನೇನೋ ಅಸಹ್ಯ ಮಾತಾಡ್ಲಿಕತ್ತಿಯಲ್ಲಾ??? ನಿನ್ನೆ ರಾತ್ರಿ ಕುಡಿದಿದ್ದರ ನಶಾ ಇನ್ನೂ ಇಳಿದಿಲ್ಲ ಏನು? ಏನು ಇದ್ದೀಪಾ? ನಾ ಏನೋ ಕೇಳಿದೆ. ಅದಕ್ಕಂತೂ ಬರೋಬ್ಬರಿ ಉತ್ತರ ಹೇಳಲಿಲ್ಲ. ಈಗ ಹುಚ್ಚುಚ್ಚರೆ ಏನೇನೋ ಅಂತಿ. ಹಾಂ???' ಅಂತ ನನಗs ಝಾಡಿಸಿದ.

'ಅಲೀ ಇವನ. ಕೇಳಿದಷ್ಟಕ್ಕ ಉತ್ತರಾ ಕೊಡಪಾ ಹೀರೋ. ಜಾಸ್ತಿ ಮಾತು ಬ್ಯಾಡ. ಬೋಲ್ ಬಚನ್ ನಹಿ ಮಾಂಗ್ತಾ. ನಿನ್ನ ಪೇಸ್ಟಿನ್ಯಾಗ ಉಪ್ಪು, ಇದ್ದಿಲು ಎಲ್ಲಾ ಇದ್ದಂಗ ನಿನ್ನ ಚಡ್ಡಿ, ಅದೂ ಈಗ ಹಾಕ್ಕೊಂಡು ನಿಂತಿಯಲ್ಲಾ ಪಟ್ಟಾಪಟ್ಟಿ ಚಡ್ಡಿ, ಅದರಾಗ ಕಡ್ಡಿ ಅದನೋ ಇಲ್ಲೋ? ಅಷ್ಟೇ. ಆಪ್ ಕಿ ಚಡ್ಡಿ ಮೇ ಕಡ್ಡಿ ಹೈ? ಹೈ ಕ್ಯಾ??? ' ಅಂತ ನಾನೂ ಬತ್ತಿ ಬರೋಬ್ಬರಿ ಪ್ರೈಮ್ ಮಾಡಿಯೇ ಇಟ್ಟೆ.

ನಾನು ಅಷ್ಟು ಸಸಾರಿಲೆ ಬಿಡುವ ಪೈಕಿ ಪಿಶಾಚಿ ಅಲ್ಲ ಅಂತ ಅವಂಗ ಗೊತ್ತಾತು. ಕೆಟ್ಟ ಮಾರಿ ಮಾಡಿಕೊಂಡು, ಮನಿ ಒಳಗ ಹೊಂಟ ನಮ್ಮ ಮಷ್ಕಿರಿ ಬಾಜೂ ಮನಿಯವ. ರಿವರ್ಸ್ ಬತ್ತಿ ಬರೋಬ್ಬರಿ ಇಟ್ಟಿದ್ದೆ ನೋಡ್ರಿ. ಅದಕ್ಕೇ ರಿವರ್ಸ್ ಹೊಂಟ್ತು ಗಾಡಿ.

'ಏ, ಸ್ವಲ್ಪ ತಡೀಪಾ. ನಿನ್ನ ಚಡ್ಯಾಗ ಕಡ್ಡಿ ಅದನೋ ಇಲ್ಲೋ ಅಂತ ಹೇಳಿ ಹೋಗಪಾ. ಹೇಳಿ ಹೋಗಲೇ ಬೋಕಡ್ ಛಾಪ್!' ಅಂತ ಆವಾಜ್ ಹಾಕಿದೆ.

'ಏನು ಚಡ್ಡಿ? ಏನು ಅದರ ಒಳಗಿನ ಕಡ್ಡಿ? ಕೆಟ್ಟ ಅಸಹ್ಯ. ಮುಂಜ್ಮುಂಜಾನೆ ಅಸಹ್ಯ ಅಸಹ್ಯ ಮಾತಾಡಿಕೋತ್ತ. ಹೇಶಿ ತಂದು,' ಅಂತ ಕೆಟ್ಟ ಮಸಡಿ ಮಾಡಿ ಬೈದ.

'ಅಲ್ಲಲೇ, ನಿನ್ನ ಚಡ್ಯಾಗ ಕಡ್ಡಿ ಅದಯೇನು ಅಂತ ನಾ ಕೇಳಿದ್ದರ ಅರ್ಥ ಏನು ಅಂತ ಮಾಡಿ???' ಅಂತ ಕೇಳಿದೆ.

'ಏನು ಅರ್ಥ? ಆ ಅಸಹ್ಯಕ್ಕ ಅರ್ಥ ಬ್ಯಾರೆ. ಬರೇ ಅನರ್ಥ ಅಷ್ಟ!' ಅಂತ ಉರಕೊಂಡ. ಇಟ್ಟಿದ್ದ ಬತ್ತಿ ಅವನ ಬ್ಯಾಕ್ ಬ್ಲಾಸ್ಟ್ ಮಾಡಿತ್ತು.

'ಲಕ್ಷ ವಹಿಸಿ ಕೇಳು. ನಾ ಕೇಳಿದ್ದರ ಅರ್ಥ ಏನಪಾ ಅಂದ್ರ, ನೀ ಹಾಕ್ಕೊಂಡ ಪಟ್ಟಾಪಟ್ಟಿ ಚಡ್ಡಿಗೆ ಒಂದು ಕಿಸೆ ಅದ. ಆ ಕಿಸೆದಾಗ ಯಾವಾಗಲೂ ಒಂದು ಕಡ್ಡಿಪೆಟ್ಟಿಗಿ ಇಟ್ಟೇ ಇಟ್ಟಿರ್ತಿ. ಆ ಕಡ್ಡಿಪೆಟ್ಟಿಗಿ ಒಳಗ ಕಡ್ಡಿ ಅದಯೇನು ಅಂತ. ಚಡ್ಡಿ ಮೇ ಕಿಸೆ, ಕಿಸೆ ಮೇ ಕಡ್ಡಿಪೆಟ್ಟಿಗಿ, ಕಡ್ಡಿಪೆಟ್ಟಿಗೆ ಮೇ ಕಡ್ಡಿ, ಕಡ್ಡಿ ಪೇ ದಿಲ್ ಆಗಯಾ, ವೋ ಕಡ್ಡಿ ಪೇ ದಿಲ್ ಆಗಯಾ ಅಂತ ಉದ್ದ ಹೇಳೋದರ ಬದಲಾಗಿ ಶಾರ್ಟ್ & ಸ್ವೀಟ್ ಆಗಿ 'ನಿಮ್ಮ ಚಡ್ಡಿಯಲ್ಲಿ ಕಡ್ಡಿ ಇದೆಯೇ?' ಅಂತ ಕೇಳಿದೆ. ನೀ ಹ್ಯಾಂಗ ನನ್ನ ಕಡೆ, 'ನಿಮ್ಮ ಪೇಸ್ಟಿನಲ್ಲಿ ಉಪ್ಪು ಇದೆಯೇ? ಇದ್ದಿಲು ಇದೆಯೇ?' ಅಂತ ಕೇಳಿದಿ ನೋಡು ಹಾಂಗ. ಈಗರೆ ತಿಳಿತೇನು???' ಅಂತ ಫುಲ್ ವಿವರಣೆ ಕೊಟ್ಟೆ.

'ಇಷ್ಟs  ಏನು ಅರ್ಥ? ಚಡ್ಯಾಗ ಕಡ್ಡಿ ಅಂದ್ರ ನಾ ಏನೋ ತಿಳ್ಕೊಂಡಿದ್ದೆ,' ಅಂತ ಎಳೆದ.

'ನೀ ಏನು ತಿಳ್ಕೊಂಡಿದ್ದಿ ಮಹಾನುಭಾವ? ಎಲ್ಲೆ, ಹ್ಯಾಂಗ ಓಡಿತ್ತು ರಾಯರ ತಲಿ ಅನ್ನೋ ಹುಚ್ಚ ಕುದರಿ??? ಹಾಂ?? ಹೇಳೋ! ಹೇಳೋ! Tell I say. Nation wants to know. What is ಕಡ್ಡಿ ಇನ್ ಚಡ್ಡಿ?? Tell I say!' ಅಂತ ಬರೋಬ್ಬರಿ verbal ಬತ್ತಿ ಜಡಿಜಡಿದು ಇಟ್ಟೆ. 'ನನಗ ಕಾಡ್ಲಿಕತ್ತಿದ್ದಿ ಮಂಗ್ಯಾನಿಕೆ???' ಅಂತ ಅಂದುಕೊಂಡು ಸಿಟ್ಟಿಲೆ ಉಪ್ಪು, ಇದ್ದಿಲು ಎಲ್ಲಾ ಕೂಡಿಸಿಯೇ ಇಟ್ಟೆ ನೋಡ್ರಿ. ಫುಲ್ ಮಂಗ್ಯಾ ಆದ.

'ಅದು ಏನರೆ ಇರಲಿ. ಹೂಂ. ನನ್ನ ಚಡ್ಯಾಗ ಕಡ್ಡಿ ಜರೂರ್ ಅದ. ಅಂದ್ರ ನನ್ನ ಪಟ್ಟಾಪಟ್ಟಿ ಚಡ್ಡಿ ಕಿಸೆದಾಗಿರೋ ಕಡ್ಡಿಪೆಟ್ಟಿಗ್ಯಾಗ ಕಡ್ಡಿ ಜರೂರ್ ಅವ. ಅದ್ಯಾಕ ಬೇಕು?' ಅಂದ. ಹೇಳಿ ಕೇಳಿ ಗಣೇಶ್ ಬೀಡಿ ಸೇದೋ ಬೆರಕಿ ಮಂಗ್ಯಾನಿಕೆ ಇವಾ. ಕಡ್ಡಿ ಇರಲಿಲ್ಲ ಅಂದ್ರ ಹೆಂಗ?

'ಕಡ್ಡಿ ಅವನೇ? ಗುಡ್. ಒಂದು ಉದ್ದನೆ ಕಡ್ಡಿ ಈ ಕಡೆ ಕೊಡಪಾ. ಒಂದು ಕಡ್ಡಿ ಕೊಡು ಸಾಕು. ಉಳಿದ ಕಡ್ಡಿ ನೀನು ನಿನ್ನ ಚಡ್ಯಾಗೇ ಇಟ್ಟುಕೋ!' ಅಂದೆ.

ಚಡ್ಯಾಗಿನ ಕಿಸೆದಾಗಿಂದ ಕಡ್ಡಿಪೆಟ್ಟಿಗಿ ತೆಗೆದು ಒಂದು ಕಡ್ಡಿ ಕೊಟ್ಟ. 'ಯಾಕ? ಯಾಕ ಬೇಕಾಗಿತ್ತು?' ಅಂತ ಕೇಳಿದ.

'ಸ್ಟವ್ ಹಚ್ಚಿ ಚಹಾ ಮಾಡಿಕೊಂಡು ಕುಡಿಯೋಣ ಅಂದ್ರ ಕಡ್ಡಿನೇ ಇರಲಿಲ್ಲ ನೋಡಪಾ. ಖಾಲಿ ಕಡ್ಡಿಪೆಟ್ಟಿಗಿ ಮಾತ್ರ ಇತ್ತು. ಇನ್ನು ಕಡ್ಡಿಪೆಟ್ಟಿಗಿ ತರಲಿಕ್ಕೆ ಅಂಗಡಿಗೆ ಹೋಗಬೇಕು. ಆದಕ್ಕೇ ನಿನ್ನ ಕಡೆ ಕೇಳಿದೆ. ನೀ ಈಗ ಕಡ್ಡಿ ಕೊಟ್ಟಿ. ದೊಡ್ಡ ಥ್ಯಾಂಕ್ಸ್!' ಅಂದೆ.

ಹೇಳಿಕೇಳಿ ಮುಂಜಾನೆಯ ಚಹಾ ಮಾಡಿಕೊಳ್ಳಲಿಕ್ಕೆ ಕಡ್ಡಿ, ಅದೂ ಚಡ್ಯಾಗಿನ ಕಡ್ಡಿ, ಕೊಟ್ಟ ಮಹಾದಾನಿ ನಮ್ಮ ಬಾಜೂಕಿನ ಮನಿಯವ. ಅದನ್ನು ಸ್ಮರಿಸಿಕೊಂಡು, 'ಬಾರಲೇ, ನೀನೂ ಒಂದು ಕಪ್ಪು ಚಹಾ ಕುಡಿದು ಹೋಗು. ನೀ ಕೊಟ್ಟ ನಿನ್ನ ಚಡ್ಯಾಗಿನ ಕಡ್ಡಿಲೇ ಒಲಿ ಹಚ್ಚಿ ಚಹಾ ಮಾಡತೇನಿ. ಎಲ್ಲರೆ ನಿನ್ನ ಕಡ್ಡಿ ಭಾಳ ಮಂದಿ ಗಂಡಸೂರ ಕಡ್ಡಿ ಗತೆ ಟಿಸಮದ್ದು ಅಥವಾ ಥಂಡಿ ಹಿಡಿದಿದ್ದು ಮತ್ತೊಂದು ಆದರೆ ಇನ್ನೊಂದು ಕಡ್ಡಿ ಬೇಕಾಗಬಹದು. ಆವಾಗ ಮತ್ತ ಇನ್ನೊಂದು ಕಡ್ಡಿ ಕೊಟ್ಟಿಯಂತ. ಬಾ!! ಬಾ!! ಚಹಾ ಮಾಡಿ, ಕುಡಿಯೋಣ. ಬಾ! ಬಾ!' ಅಂತ ಕರೆದೆ.

ಬರೋಬ್ಬರಿ ರಿವರ್ಸ್ ಬತ್ತಿ ಇಡಿಸಿಕೊಂಡಿದ್ದ ನಮ್ಮ ಬಾಜೂ ಮನಿಯವ ತಲಿ ಕುಣಿಸಿಗೋತ್ತ ಬಂದ. ಇನ್ನು ಚಹಾ ಮಾಡಬೇಕು. ಇವನ ಚಡ್ಯಾಗಿನ ಕಡ್ಡಿಯಿಂದ ಮೊದಲು ಒಲಿ ಹಚ್ಚಬೇಕು. ಭಗ್! ಅಂತ ಹತ್ತತದೋ ಅಥವಾ ಟಿಸಮದ್ದು ಆಗ್ತದೋ ನೋಡಬೇಕು ಇವನ ಚಡ್ಡಿಯೊಳಗಿನ ಕಡ್ಡಿಯ ಕಮಾಲ್!

ನಿಮ್ಮ ಪೇಸ್ಟಿನಲ್ಲಿ ಉಪ್ಪು ಇದೆಯೇ? ಬೇವು ಇದೆಯೇ? ಮುಂದ? ಬೇವಿನ ನಂತರ ಬೆಲ್ಲ ಇದೆಯೇ??

Thursday, August 13, 2015

ರಂಗಿತರಂಗ.....ಅದು ಇದು

'ರಂಗಿತರಂಗ' - ಇಂದು ಅಮೇರಿಕಾದಲ್ಲಿ ಬಿಡುಗಡೆಯಂತೆ. ಒಳ್ಳೇದು. ಭಾಳ ಹವಾ ಮೈಂಟೈನ್ ಮಾಡಿರುವ ಮೂವಿ.

'ಬರ್ರಿ, ಕೂಡಿ ಹೋಗಿ ನೋಡೋಣ.  ಫಸ್ಟ್ ಶೋ ನೋಡಿ ಬಂದುಬಿಡೋಣ!' ಅಂದ್ರು ಕೆಲವು ಮಂದಿ. 'ದೊಡ್ಡ ನಮಸ್ಕಾರ. ನೀವು ಹೋಗಿ ನೋಡಿ ಬರ್ರಿ. ಹ್ಯಾಂಗದ ಅಂತ ಹೇಳ್ರಿ. ನಂತರ ನಾವು ನೋಡುವ ವಿಚಾರ ಮಾಡ್ತೇವಿ,' ಅಂದೆ. 'ನಂತರ ನಾವು ಒಬ್ಬರೇ ಹೋಗಿ ನೋಡಿಬರ್ತೇವಿ' ಅಂದುಕೊಂಡೆ. ಬಾಯ್ಬಿಟ್ಟು ಹೇಳಲಿಲ್ಲ. ಹೇಳಿಬಿಟ್ಟರೆ ಮುಂದೆ ಹೀಗೆ ಕರೆಯೋದು ದೂರ ಉಳೀತು. ಫೇಸ್ಬುಕ್ ಮೇಲೆ unfriend ಮಾಡಿಬಿಟ್ಟಾರು!

ಇದು ಮೊದಲೇ ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಮೂವಿ. ಮಂದಿ ಜೊತೆಗೆ ಹೋದರೆ ಸಿಕ್ಕಾಪಟ್ಟೆ ತೊಂದರೆ. ಒಂದೋ ಅವರಿಗೆ ಕಥೆ ಗೊತ್ತಾಗುವದೇ ಇಲ್ಲ. ನಿಮಿಷಕ್ಕೊಮ್ಮೆ, 'ಏನಾತ?? ಏನಾತ??? ಯಾಕ ಹಾಂಗ??? ಯಾಕ ಹೀಂಗ?? ಆವಾ ಹಿಂಗ್ಯಾಕ? ಅಕಿ ಹಾಂಗ್ಯಾಕ??' ಇದೇ ಮಾದರಿಯಲ್ಲಿ ಅವರ ಕಚಾಪಚಾ ಮಾತು ನಡೆದಿರುತ್ತದೆ. ಇವರಿಗೆ ಕಥೆ ನಾವು ಹೇಳಬೇಕು. ಕರ್ಮ! ಜೊತೆಗೆ ಆ ದರಿದ್ರ ಪಾಪ್ ಕಾರ್ನ್, ಅದು ಇದು ಅಂತ ತಿಂಡಿಗಳನ್ನು ಕುರ್ರಾ ಕುರ್ರಾ ಅಂತ ಪಚಗಡಿಸುತ್ತಿರುತ್ತಾರೆ. ಅದೊಂದು ಮಹಾ ದೊಡ್ಡ disturbance.

ಇನ್ನು ಕೆಲವು ಮಂದಿಗೆ ಸಿನಿಮಾದ ಮೊದಲ ಸೀನ್ ಮುಗಿಯುವ ಮೊದಲೇ ಪೂರ್ತಿ ಕಥೆ ಗೊತ್ತಾಗಿ ಹೋಗಿರುತ್ತದೆ. ಅಥವಾ ಹಾಗಂತ ತಿಳಿದುಬಿಟ್ಟಿರುತ್ತಾರೆ. ಕಥೆ ಹೇಳಲು ಶುರು ಮಾಡಿಬಿಡುತ್ತಾರೆ. ನಾವು ಇವರ ಕಥೆ ಕೇಳೋಣವೋ ಅಥವಾ ಸಿನಿಮಾ ಕಥೆ ನೋಡೋಣವೋ? ಇವರೂ ಪಾಪ್ ಕಾರ್ನ್ ತರಲೆಗಳೇ. ಜೊತೆಗೆ ಸ್ನಾನದ ಬಕೆಟ್ ಸೈಜಿನ ಕಪ್ಪಿನಲ್ಲಿ ಏನೋ ದ್ರವವನ್ನು ಕಲಗಚ್ಚಿನ ಮಾದರಿಯಲ್ಲಿ ಸೊರ್ರಾ ಸೊರ್ರಾ ಅಂತ ಕುಡಿಯುತ್ತಿರುತ್ತಾರೆ. ಸಿನಿಮಾ ಕೆಟ್ಟ ಬೋರ್ ಆಗಿ, ಮಂಡೆ ಬಿಸಿಯಾದರೆ ಅದರಲ್ಲೇ ನೀರು ತುಂಬಿಕೊಂಡು ಅಲ್ಲೇ ಸ್ನಾನ ಮಾಡೇಬಿಟ್ಟರೂ ಆಶ್ಚರ್ಯವಿಲ್ಲ.

ಎಲ್ಲ ಮುಚ್ಚಿಕೊಂಡು ಗಪ್ಪಾಗಿ ಕೂತು ಸಿನಿಮಾ ನೋಡುವ ಮಂದಿ ಭಾಳ ಕಮ್ಮಿ. ಏನೂ ಇಲ್ಲದಿದ್ದರೂ ತಮ್ಮ ಮೊಬೈಲ್ ತೆಗೆದು, ಮಿಣುಕು ಹುಳುಗಳಂತೆ ಮೊಬೈಲ್ ಫೋನಿನ ಪುಕಳಿ ಪಿಕಿ ಪಿಕಿ ಮಾಡಿಯಾದರೂ ರಸಭಂಗ ಮಾಡೇಬಿಡುತ್ತಾರೆ. ಇನ್ನು ಅವರ ಯಡಬಿಡಂಗಿ ಮಕ್ಕಳು ಬಂದರಂತೂ ಮುಗಿದೇ ಹೋಯಿತು. ಅವಕ್ಕೆ ಕನ್ನಡವೂ ಬರುವದಿಲ್ಲ. ಬಂದರೂ ಅಡ್ಡಾದಿಡ್ಡಿ. ನಮ್ಮ ದೇಶದಲ್ಲಿ ಮಕ್ಕಳು ಮಾಮಾ, ಅಂಕಲ್ ಅಂತ ನಿಮಿಷದಲ್ಲಿ ದೋಸ್ತಿ ಮಾಡಿಕೊಂಡುಬಿಟ್ಟರೆ ಇಲ್ಲಿಯವು 'ಹ್ಯಾಂ??!!' ಅಂತ ನೋಡುತ್ತಿರುತ್ತವೆ. ಅಪರಿಚಿತರು ಅಂದರೆ ಡೇಂಜರ್ ಅಂತ ಮಕ್ಕಳ ತಲೆಯಲ್ಲಿ ತುಂಬಿರುತ್ತಾರಲ್ಲ. ಅದರ ಪರಿಣಾಮ. ಅವಕ್ಕೋ ಕನ್ನಡ ಸಿನೆಮಾದ ತಲೆಬುಡ ತಿಳಿಯುವದಿಲ್ಲ. ತಮ್ಮ ವೀಡಿಯೊ ಗೇಮ್, ಐಪ್ಯಾಡ್ ತಂದಿರುತ್ತಾರೆ. ಅವರದ್ದೂ ಒಂದು ತರಹದ ಬೆಳಕಿನ ಪಿಕಿಪಿಕಿ. ಕಿರಿಕಿರಿ.

ಇನ್ನು ಇಂತಹ ಫೇಮಸ್ ಮೂವಿ, ಫಸ್ಟ್ ಶೋ ಅಂದರೆ ಮುಗಿದೇ ಹೋಯಿತು. ಚಿಳ್ಳೆ, ಪಿಳ್ಳೆ, ಕೂಸು, ಕುನ್ನಿ ಎಲ್ಲ ಕಟ್ಟಿಗೊಂಡು ಬಂದುಬಿಟ್ಟಿರುತ್ತಾರೆ. ಫುಲ್ ಗದ್ದಲ. 'ಮೊಬೈಲ್ ಫೋನ್ ಬಂದ್ ಮಾಡಿಕೊಂಡು, ಅದುಮಿಕೊಂಡು ಕೂಡ್ರಿ' ಅಂತ ಸಾವಿರ ಸಾರೆ ಹೇಳಿದ್ದು ತಿಳಿದರೆ ಕೇಳಿ. ಒಂದು ನಾಲ್ಕಾರು ರಿಂಗ್ ಕೇಳೇ ಕೇಳುತ್ತವೆ. ಇನ್ನು ಕೆಲವರಿಗೆ ಮೂವಿ ನಡೆಯುತ್ತಿದ್ದಂತೆಯೇ ಫೇಸ್ಬುಕ್, ಟ್ವಿಟ್ಟರ್ ಇತ್ಯಾದಿ ಅಪ್ಡೇಟ್ ಮಾಡುವ ಚಟ. ಒಟ್ಟಿನಲ್ಲಿ ಶಾಂತಿಯಿಂದ ಕೂತು ಸಿನಿಮಾ ನೋಡೋಣ ಅಂದರೆ ಅಲ್ಲಿ ಶಾಂತಿಯಿರುವದಿಲ್ಲ. ಬರೇ ಗದ್ದಲ ಮಾಡುವ ಡಿಸ್ಕೋ ಶಾಂತಿ, ಡಿಸ್ಕೋ ಶಾಂತರೇ ತುಂಬಿರುತ್ತಾರೆ.

ಶಾಂತಿಯಿಂದ ಕೂತು ಯಾವದೇ ಸಿನಿಮಾ ನೋಡಬೇಕು ಅಂದರೆ ಒಂದಿಷ್ಟು ದಿನ ಬಿಟ್ಟು, ಗದ್ದಲ ಎಲ್ಲ ಕಡಿಮೆಯಾದ ನಂತರ ನೋಡಿ. ಯಾವದಾದರೂ ವೀಕ್ ಡೇ ದಿನ, ಅಡ್ನಾಡಿ ಹೊತ್ತಿನಲ್ಲಿ ಹೋಗಿ ನೋಡಿ. ಒಮ್ಮೊಮ್ಮೆ ನಿಮ್ಮನ್ನು ಬಿಟ್ಟರೆ ಥೇಟರಿನಲ್ಲಿ ಬೇರೆ ಯಾರೂ ಇರುವದಿಲ್ಲ. ನಿಮಗೇ exclusive ಆಗಿ ಸ್ಪೆಷಲ್ ಶೋ ತೋರಿಸಿದಂತೆ ಸಿನಿಮಾ ತೋರಿಸುತ್ತಾರೆ.

ಇಡೀ ಬಾಲ್ಕನಿಯಲ್ಲಿ ಒಬ್ಬನೇ ಕೂತು ನೋಡಿದ ಮೂವಿಯೆಂದರೆ ಪುರಾನಾ ಜಮಾನಾದ 'ರಾಜಕೀಯ' ಅನ್ನುವ ಕನ್ನಡ ಮೂವಿ. ನಟ ದೇವರಾಜ್ ಇದ್ದಿದ್ದು. ೧೯೯೩ - ೯೪ ರಲ್ಲಿ ರಿಲೀಸ್ ಆಗಿತ್ತು. ಮತ್ತೊಮ್ಮೆ ತಿರುಗಿ ಬಂದಿತ್ತು ೯೪-೯೫ ರಲ್ಲಿ. ಅಲ್ಲಿ ಬೆಂಗಳೂರಿನ ಅಲಸೂರಿನ ಅಂಚಿನಲ್ಲಿದ್ದ ಥೇಟರ್ ಒಂದರಲ್ಲಿ ನೋಡಿದ ನೆನಪು. ಥೇಟರ್ ಹೆಸರು ಏನಂತ ಮರೆತುಹೋಗಿದೆ. ಪ್ರಸನ್ನ? ಇಂದಿರಾ ನಗರದ CMH ರಸ್ತೆಯ ಆರಂಭದಲ್ಲಿದ್ದ ಹಳೆಯ ಥೇಟರ್.

ನಮಗೋ ಆವಾಗ ಸಿನಿಮಾ ನೋಡುವ ಹುಚ್ಚು. ವೀಕೆಂಡ್ ಒಂದೆರೆಡು ಸಿನಿಮಾ ನೋಡಲಿಕ್ಕೇಬೇಕು. ಹಾಗೇ ಹೋದೆ. ಜನವೇ ಇಲ್ಲ. ಇದ್ದ ನಾಲ್ಕಾರು ಜನ ಎಲ್ಲ ಗಾಂಧಿ ಕ್ಲಾಸ್ ತೆಗೆದುಕೊಂಡು ಹೋಗಿ ಕೂತರು. ಬಾಲ್ಕನಿಗೆ ಹೋಗಿ ನಾ ಕೂತೆ. ಕತ್ತಲಲ್ಲಿ ಜಾಸ್ತಿ ಜನರಿಲ್ಲ ಅಂತ ಗೊತ್ತಾಯಿತೇ ವಿನಃ ಯಾರೂ ಇರಲಿಲ್ಲ ಅಂತ ಮಾತ್ರ ಗೊತ್ತಾಗಲಿಲ್ಲ. ಅದು ಗೊತ್ತಾಗಿದ್ದು ಅಂತ್ಯದಲ್ಲಿ, ಮೂವಿ ಮುಗಿದು ಫುಲ್ ಲೈಟ್ಸ್ ಹಾಕಿದಾಗ. ಹಾಗಾಗಿ 'ರಾಜಕೀಯ' ಅನ್ನುವ ಮೂವಿ ಯಾವಾಗಲೂ ನೆನಪಲ್ಲಿ ಉಳಿಯುತ್ತದೆ.

ಈ ಮೂವಿ ಮಂದಿ ಮೂವಿಗಳನ್ನು online ಯಾಕೆ ಬಿಡುಗಡೆ ಮಾಡುವದಿಲ್ಲವೋ ಗೊತ್ತಿಲ್ಲ. ಮಾಡಿದರೆ ಕಾಸು ಕೊಟ್ಟೇ ನೋಡುತ್ತೇವೆ. ಕಾಪಿ ಗೀಪಿ ಮಾಡಿ ಹಂಚುವದಿಲ್ಲ. ಕನ್ನಡ ಮೂವಿ ಅಷ್ಟೇನೂ ಪೈರೇಟ್ ಆಗಲಿಕ್ಕಿಲ್ಲ. ಯಾಕೆಂದರೆ ರಂಗಿತರಂಗದ ಪೈರೇಟೆಡ್ ಕಾಪಿ ಎಲ್ಲೂ ಕಂಡಿಲ್ಲ. screen capture ಕಾಪಿ ಸಹಿತ ಎಲ್ಲೂ torrent ಸೈಟುಗಳಲ್ಲಿ ಕಂಡುಬಂದಿಲ್ಲ. ಅಷ್ಟರ ಮಟ್ಟಿಗೆ ಅದು ಬಚಾವು. ಅದೇ ಹಿಂದಿ ಮೂವಿ ನೋಡಿ. ಬಂದ ಕೆಲವೇ ಘಂಟೆಗಳಲ್ಲಿ ಕ್ಯಾಮೆರಾ ಸ್ಕ್ರೀನ್ ಕ್ಯಾಪ್ಚರ್ ಕಾಪಿ ರೆಡಿ. torrent ನಲ್ಲಿ download ಮಾಡಿಕೊಂಡಾಗಿರುತ್ತದೆ ನಮಗೆ. ಬೇಕಾದರೆ ನೋಡಿದರಾಯಿತು. ಅದನ್ನೇ online ರಿಲೀಸ್ ಮಾಡಿಬಿಟ್ಟಿದ್ದರೆ ಕಾಸು ಕೊಟ್ಟೇ ನೋಡುತ್ತಿದ್ದೆವು. ಇದು ಯಾಕೆ ಸಿನಿಮಾ ಜನರ ತಲೆಗೆ ಬಂದಿಲ್ಲ ಅಂತ ನಮಗೆ ಅರ್ಥವಾಗಿಲ್ಲ. ಒಂದೋ piracy ಆಗದಂತೆ ನೋಡಿಕೊಳ್ಳಿ. ಇಲ್ಲ online ರಿಲೀಸ್ ಮಾಡಿ ಆದಷ್ಟು ಜಾಸ್ತಿ ಕಾಸು ಮಾಡಿಕೊಳ್ಳಿ.

ರಂಗಿತರಂಗ, ಮರಾಠಿಯ 'ನಾಗರಿಕ್' ಇನ್ನೂ ವರೆಗೆ ಎಲ್ಲೂ ಸಿಕ್ಕಿಲ್ಲ. piracy ಮಂದಿ ರೀಜನಲ್ ಮೂವೀಸ್ ಕ್ಯಾಮೆರಾ ಕಾಪಿ ಜಾಸ್ತಿ ತೆಗೆಯುವದಿಲ್ಲ ಅಂತ ಕಾಣುತ್ತದೆ.

ಏನೇ ಇರಲಿ. ರಂಗಿತರಂಗ ಒಳ್ಳೆ ಮೂವಿಯಂತೆ. ನೋಡಿ. ಅಪರೂಪಕ್ಕೊಂದು ಒಳ್ಳೆ ಮೂವಿ ಕನ್ನಡದಲ್ಲಿ. ಇಲ್ಲವೆಂದರೆ ಉಳಿದವೆಲ್ಲ 'ಲೊಡ್ಡೆ' ಮಾದರಿಯ ಮೂವಿಗಳೇ.

Sunday, August 09, 2015

ಪ್ರಿನ್ಸಿಪಾಲ್ ವೀ.ಕೆ.ಗೋಕಾಕರಿಗೇ ಆವಾಜ್ ಹಾಕಿ ಕಾಲೇಜ್ ಸೀಟ್ ಗಿಟ್ಟಿಸಿಕೊಂಡ ಮಾಣಿಯೊಬ್ಬನ ಬಗ್ಗೆ.....

ಶ್ರೀ  ವೀ. ಕೆ. ಗೋಕಾಕ

ಆಗಸ್ಟ್ ೯. ಇವತ್ತು ಡಾ. ವೀ.ಕೆ. ಗೋಕಾಕರ ಜನ್ಮದಿವಸವಂತೆ. ನಿನ್ನೆ, ಆಗಸ್ಟ್ ೮,  ನಮ್ಮ ತಂದೆಯವರ ಜನ್ಮದಿನ. ವೀ.ಕೆ. ಗೋಕಾಕರಿಗೇ ಆವಾಜ್ ಹಾಕಿ ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡ ಭೂಪ ಅವರು.

ಆಗಿದ್ದು ಇಷ್ಟೇ. ಪಾಪ. ನಮ್ಮ ತಂದೆಯವರು. ಅದೂ ೧೯೫೪ ರ ಕಾಲ. ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಆಗಿನ ಮ್ಯಾಟ್ರಿಕ್ ಮುಗಿಸಿದ್ದರು. ಇಪ್ಪತ್ತನೇ ವರ್ಷಕ್ಕೆ ಮ್ಯಾಟ್ರಿಕ್ ಮುಗಿಸಿದರೇ? ಹೌದು. ಬಾಲ್ಯದಲ್ಲಿ ನಾನಾ ತೊಂದರೆ. ಹುಟ್ಟಿದ್ದು, ಬೆಳೆದಿದ್ದು ಎಲ್ಲ ಕುಗ್ರಾಮ. ಸರಿಯಾದ ಶಾಲೆಗಳು ಇರುತ್ತಿರಲಿಲ್ಲ. ಬಾಲ್ಯದಲ್ಲಿ ಆರೋಗ್ಯ ಬೇರೆ ಸರಿಯಿರುತ್ತಿರಲಿಲ್ಲ. ಎರಡನೇ ಮಹಾಯುದ್ಧದ ಸಮಯ ಬೇರೆ. ಮೇಲಿಂದ ದೊಡ್ಡ economic depression. ಮೂಲ ಊರಾದ ಹೊನ್ನಾವರದ ಸಮೀಪದ ಬೊಮ್ಮನಹೊಂಡದಲ್ಲಿ ಬೆಳೆದು ರಾಶಿಹಾಕಿದ್ದ ಅಡಿಕೆ ಬೇಕಾದಷ್ಟು ಇತ್ತು. ಆದರೆ ಅಡಿಕೆಗೆ ರೇಟೇ ಇಲ್ಲ. ಹಾಗಾಗಿ ಕೈಯಲ್ಲಿ ರೊಕ್ಕವೇ ಇಲ್ಲ. ಅಂತಹ ಸಂದರ್ಭದಲ್ಲಿ ವಿಪರೀತ ಜಡ್ಡು ಬಿದ್ದ ಮಗನಿಗೆ ಔಷಧ ಕೊಡಿಸೋಣ ಅಂದರೆ ಅಜ್ಜನ ಕಡೆ ರೊಕ್ಕವಿಲ್ಲ. ಎಂತೆಂತದೋ ಕಠಿಣ ಪರಿಸ್ಥಿತಿಯಲ್ಲಿ 'ಬಾಲ್ ಬಾಲ್ ಬಚ್ ಗಯೇ' ಮಾದರಿಯಲ್ಲಿ ಬದುಕುಳಿದವರು ತಂದೆಯವರು. ಹೇಗೋ ಮಾಡಿ ಆಕಾಲದಲ್ಲಿ ಮೆಟ್ರಿಕ್ ಪರೀಕ್ಷೆ ಎಲ್ಲಿಂದಲೋ ಪಾಸ್ ಮಾಡಿದರು. ಗೋಕರ್ಣದ ಭದ್ರಕಾಳಿ ಹೈಸ್ಕೂಲಿನಿಂದ ಪಾಸ್ ಮಾಡಿದರೆ ಅಥವಾ ಬೆಳಗಾವಿಯ ಹೈಸ್ಕೂಲಿನಿಂದ ಪಾಸ್ ಮಾಡಿದರೆ ಅನ್ನುವದು ಮರೆತು ಹೋಗಿದೆ. ತಂದೆಯವರ ಚಿಕ್ಕಪ್ಪ education inspector ಆಗಿದ್ದರು. ಅವರ ಮನೆಯಲ್ಲಿದ್ದು ತಮ್ಮ ವಿದ್ಯಾಭ್ಯಾಸ ಮಾಡಿದವರು ನಮ್ಮ ತಂದೆ. ತಂದೆಯವರ ಚಿಕ್ಕಪ್ಪನವರಿಗೆ ಎಲ್ಲೆಲ್ಲಿ ವರ್ಗವಾಗುತ್ತಿತ್ತೋ ಅಲ್ಲಿಗೆ ಹೋಗಿ ಓದಿಕೊಂಡಿರುತ್ತಿದ್ದರು ನಮ್ಮ ತಂದೆ. ಒಟ್ಟಿನಲ್ಲಿ ಸ್ವಲ್ಪ ತಡವಾದರೂ ಒಳ್ಳೆ ಮಾರ್ಕ್ಸಿನಲ್ಲೇ ಮೆಟ್ರಿಕ್ ಮುಗಿಸಿದ್ದರು.

ಸರಿ, ಮುಂದೆ ಆಗಿನ ಇಂಟರ್ (ಪಿಯೂಸಿ) ಮಾಡಲು ಕಾಲೇಜಿಗೆ ಅಡ್ಮಿಶನ್ ತೆಗೆದುಕೊಳ್ಳೋಣ ಅಂತ ಧಾರವಾಡಕ್ಕೆ ಬಂದರು. ಆಗಿನ ಕಾಲದಲ್ಲಿ ದೂರದ ಹೊನ್ನಾವರದಿಂದ ಧಾರವಾಡಕ್ಕೆ ಬರಲಿಕ್ಕೆ ಪೂರ್ತಿ ದಿವಸ ಬೇಕಾಗುತ್ತಿತ್ತು. ಡೈರೆಕ್ಟ್ ಬಸ್ಸೂ ಇರಲಿಲ್ಲ. ಹುಬ್ಬಳ್ಳಿಗೆ ಬಂದು ನಂತರ ಜುಗಾಡ್ ಮಾಡಬೇಕಾಗುತ್ತಿತ್ತು.

ಅಷ್ಟೆಲ್ಲಾ ಮಾಡಿಕೊಂಡು ಇಲ್ಲಿ ಧಾರವಾಡಕ್ಕೆ ಬಂದು ನೋಡಿದರೆ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಅಡ್ಮಿಶನ್ ಮುಗಿದುಬಿಟ್ಟಿದೆ. ಒಂದೋ ಎರಡೋ ದಿವಸದ ಹಿಂದೆ ಅಷ್ಟೇ. ಜಸ್ಟ್ ಮಿಸ್!

ನಮ್ಮ ತಂದೆಯವರೋ ಏಕ್ದಂ ದಮ್ ಇರುವವರು. ಸಿಂಹ ರಾಶಿಯವರು. ತಾರುಣ್ಯದ ಫುಲ್ ಮೀಟರ್ ಬೇರೆ. ಅಡ್ಮಿಶನ್ ವಿಭಾಗದ ಕಾರ್ಕೂನನಿಗೆ ಮೊದಲು ಆವಾಜ್ ಹಾಕಿದ್ದಾರೆ. ಜಗಳವಾಡಿದ್ದಾರೆ. ಏನೂ ಉಪಯೋಗವಾಗಿಲ್ಲ. ರೈಸ್ ಆಗಿದ್ದಾರೆ. ಸೀದಾ ಅಂದಿನ ಕರ್ನಾಟಕ ಕಾಲೇಜಿನ ಪ್ರಿನ್ಸಿಪಾಲ್ ವೀಕೆ ಗೋಕಾಕರ ಚೇಂಬರಿಗೆ ನುಗ್ಗಿಬಿಟ್ಟಿದ್ದಾರೆ. ಒಂದೇ ಮಾತು ಖಡಕ್ಕಾಗಿ ಹೇಳಿದ್ದಾರೆ. 'ಮಾಸ್ತರರೇ, ನಿಮ್ಮನ್ನು ಮತ್ತೆ ನಿಮ್ಮ ಕಾಲೇಜನ್ನು ನಂಬಿಕೊಂಡು ಧಾರವಾಡಕ್ಕೆ ಬಂದೆ. ಅಡ್ಮಿಶನ್ ಕೊಟ್ಟಿದ್ದರೆ ಇಲ್ಲೇ ಇದ್ದು ಓದುತ್ತಿದ್ದೆ. ಸೀಟ್ ಇಲ್ಲಾ ಅಂತಿದ್ದಾರೆ. ನೀವು ಸೀಟ್ ಕೊಡಲಿಲ್ಲ ಅಂದರೆ ನಾ ಮುಂಬೈಗೆ ಹೊಂಟೆ. ಅಲ್ಲಿ ಸೀಟ್ ಪಡೆದುಕೊಳ್ಳಲು ಬೇಕಾದಷ್ಟು ಮಾರ್ಕ್ಸ್ ಇದೆ ನನ್ನ ಹತ್ತಿರ. ಅಲ್ಲಿದ್ದು ಕಲಿಯಲಿಕ್ಕೆ ಬೇಕಾಗುವಷ್ಟು ರೊಕ್ಕ ನಮ್ಮಪ್ಪ ಹ್ಯಾಂಗೋ ಕಷ್ಟಪಟ್ಟು ಜೋಡಿಸಿಕೊಟ್ಟಿದ್ದಾನೆ. ಏನಂತೀರಿ?? ಸೀಟು ಕೊಡ್ತೀರಿ ಏನು? ಹಳ್ಳಿಯ ಕಡೆಯ ಬಡ ಹುಡುಗ ನಾನು. ಬರೋದು ಸ್ವಲ್ಪ ತಡವಾಗಿದೆ ನಿಜ. ಆದರೆ ಮಾಹಿತಿಯೇ ಸಿಗಲಿಲ್ಲ. ಏನು ಮಾಡೋದು??? ಪ್ಲೀಸ್ ಒಂದು ಸೀಟ್ ಕೊಡ್ರೀ ಸರ್!'

ತಮ್ಮ ಚೇಂಬರಿಗೇ ನುಗ್ಗಿ ಹೀಗೆ ಸಾತ್ವಿಕ ಆವಾಜ್ ಹಾಕಿದ, ಖಾಕಿ ಹಾಫ್ ಪ್ಯಾಂಟ್ ಬಿಳೆ ಶರ್ಟ್ ಹಾಕಿ ಬ್ರಹ್ಮಕ್ಷಾತ್ರ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಹವ್ಯಕ ಮಾಣಿಯೊಬ್ಬನನ್ನು ನೋಡಿದ ಪರಮ ಪೂಜ್ಯ ಗೋಕಾಕರು ಫುಲ್ ಇಂಪ್ರೆಸ್ ಆಗಿಬಿಟ್ಟಿದ್ದಾರೆ. ಸ್ಪೆಷಲ್ ಕೇಸ್ ಅಂತ ಪರಿಗಣಿಸಿ ಒಂದು ಸೀಟು ಕೊಟ್ಟು, 'ಒಳ್ಳೆ ರೀತಿಯಿಂದ ಅಭ್ಯಾಸ ಮಾಡಿ, ಮುಂದ ಛಲೋ ಮಾಡಿಕೋ ಮೈ ಬಾಯ್!' ಅಂತ ಆಶೀರ್ವದಿಸಿ ಕಳಿಸಿದ್ದಾರೆ. Rest is history!

ಅಂದು ಗೋಕಾಕರಿಗೇ ಸಾತ್ವಿಕ ಆವಾಜ್ ಹಾಕಿ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದ ಪ್ರೀತಿಯ ತಂದೆಯವರಿಗೆ ನಿನ್ನೆಗೆ ಬರೋಬ್ಬರಿ ಎಂಬತ್ತೊಂದು ವರ್ಷ! God bless him! ಆರಾಮ್ ಇದ್ದಾರೆ! ಹಾಗೇ ಇರಲಿ!

ಇವತ್ತು ಗೋಕಾಕರ ಜನ್ಮದಿನ ಅಂತ ಫೇಸ್ಬುಕ್ ಮೇಲೆ ಕಂಡ ಅವರ ಪರಿಚಯ ಮಾಡಿಕೊಡುವ ಈ ಲೇಖನವನ್ನು ಓದಿದ ನಂತರ ನೆನಪಾಗಿ ಬರೆದಿದ್ದು ಇದು.

ತಂದೆಯವರು ಮತ್ತು ನಾನು. ಮಾರ್ಚ್ ೨೦೧೨. ಧಾರವಾಡ.

Friday, August 07, 2015

ಕಡಜೀರಿಗೆ ಕಂಪಕ (Wasp Vibrator).....ನೀವೂ ಮಾಡಿನೋಡಿ

ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಬ್ಲಾಗರ್ ಮಂಗೇಶ್.

ಇಂದು ನಮ್ಮ ಬ್ಲಾಗಿಗೆ ಅತಿಥಿಗಳಾಗಿ ಬಂದಿದ್ದಾರೆ ನಮ್ಮ ರೂಪಾ ವೈನಿ. ಅವರ ಬಗ್ಗೆ, ಅವರ ಪತಿದೇವರಾದ ಮತ್ತು ನಮ್ಮ ಮಿತ್ರರಾದ ಚೀಪ್ಯಾ ಅವರ ಬಗ್ಗೆ ಹಿಂದೆ ಬರೆದಿದ್ದು ಭಾಳ ಇದೆ. ಆದರೆ ಇಂದು ರೂಪಾ ವೈನಿಯೇ ನಮ್ಮ ನಿಮ್ಮ ಜೊತೆ ಇದ್ದಾರೆ. ಅವರು ಇತ್ತೀಚೆಗೆ ಮಾಡಿದ ಅವಿಷ್ಕಾರದ (invention) ಬಗ್ಗೆ ನಾಲ್ಕು ಮಾತಾಡಲಿದ್ದಾರೆ. ಪ್ರಾತ್ಯಕ್ಷಿಕೆ (demo) ಸಹ ತೋರಿಸಲಿದ್ದಾರೆ. ಜೊತೆಗೆ ನಾನೂ ನಡು ನಡು ಅಡ್ಡಬಾಯಿ ಹಾಕಿ ಆಗಾಗ ಅಲ್ಲಲ್ಲಿ ನಂದೂ ಇಡ್ತೇನಿ .

'ನಮಸ್ಕಾರ ವೈನಿ, ಸ್ವಾಗತ. ನಿಮ್ಮ ಇತ್ತೀಚಿನ ಅವಿಷ್ಕಾರದ ಬಗ್ಗೆ ಕೇಳಿದೆ. ಅದರ ಬಗ್ಗೆ ತಿಳ್ಕೊಬೇಕು ಅಂತ ಭಾಳ ಆಸಕ್ತಿ ಅದ. ನಮ್ಮ ಬ್ಲಾಗಿನ ಓದುಗರಿಗೂ ಅಷ್ಟೇ. ನಿಮ್ಮ ಹೊಸ ಅವಿಷ್ಕಾರದ ಬಗ್ಗೆ ಹೇಳಿರಿ.'

'ನಿನಗೂ ದೊಡ್ಡ ನಮಸ್ಕಾರಪಾ ಮಂಗೇಶಾ. ನನ್ನ ಅವಿಷ್ಕಾರದ ಹೆಸರು 'ಕಡಜೀರಿಗೆ ಕಂಪಕ' ಅಂತ. ಇಂಗ್ಲಿಷ್ ಒಳಗ 'Wasp Vibrator' ಅಂತಲೂ ಹೇಳಬಹುದು.'

'ಭಾಳ ಸಂತೋಷ ವೈನಿ. 'ಕಡಜೀರಿಗೆ ಕಂಪಕ'! ನಿಮ್ಮ ಅವಿಷ್ಕಾರದ ಹೆಸರು ಒಂದು ತರಹ ಮಜಾ ಅದ. ಏನು ಅದರ ಅರ್ಥ?'

'ನೋಡು, ಆ ಹೆಸರಿನ ಅರ್ಥ ಹೀಂಗದ. ಕಡಜೀರಿಗೆ ಅಂದರಂತೂ ಗೊತ್ತಾಗಿರಲಿಕ್ಕೇಬೇಕು. ಅದೇ...ಕಡಜೀರಿಗಿ ಹುಳ. ಕಣಜ ಅಂತಲೂ ಅಂತಾರ. ಇಂಗ್ಲಿಷ್ ಒಳಗ Wasp ಅಂತಾರ. ಈ ನನ್ನ ಹೊಸ ಅವಿಷ್ಕಾರದೊಳಗ ಅವನ್ನು ಉಪಯೋಗಿಸಿಕೊಂಡೇನಿ.'

ಹಾಂ!! What's this??? ಕಡಜೀರಿಗೆ ಹುಳ ಉಪಯೋಗ ಮಾಡಿದರೆ ವೈನಿ!!?? ಮುಂದೆ ಕೇಳೋಣ. ಈಗ ಸುಮ್ಮಿರೋಣ.

'ವೆರಿ ಇಂಟೆರೆಸ್ಟಿಂಗ್. ಕೆಟ್ಟದಾಗಿ ಕಡಿದುಬಿಡುವ ಕಡಜೀರಿಗೆ ಹುಳುಗಳನ್ನು ಉಪಯೋಗಿಸಿಕೊಂಡು ಏನೋ ಒಂದು ಹೊಸದನ್ನು ಕಂಡುಹಿಡಿದೀರಿ ಅಂತಾತು. ಮುಂದೆ ಹೇಳ್ರಿ ವೈನಿ.'

'ಕಂಪಕ ಅಂದ್ರ ಕಂಪಿಸುವದು ಅಂತ ಅರ್ಥ. ಈಗ ನೋಡಪಾ. ಚುಂಬಕ ಅಂದರೇನು? ಚುಂಬಕ ಅಂದರೆ ಯಾವದು ಚುಂಬಿಸುತ್ತದೋ ಅದೇ ಚುಂಬಕ. ಹಾಂಗೇ ಯಾವದು ಕಂಪಿಸುತ್ತದೋ ಅದೇ ಕಂಪಕ. ಇಂಗ್ಲಿಷ್ ಒಳಗ ಕಂಪನಕ್ಕೆ vibration ಅಂತಾರ. ಹಾಂಗಾಗಿ ಕಂಪಕ ಅಂದರೆ vibrator ಅಂತ ಅರ್ಥ. ಕಡಜೀರಿಗೆ ಹುಳುಗಳನ್ನು ಉಪಯೋಗಿಸಿ ತಯಾರು ಮಾಡಿದ ಕಂಪಕ ಅಥವಾ vibrator ಗೆ ಕಡಜೀರಿಗೆ ಕಂಪಕ ಅಥವಾ wasp vibrator ಅನ್ನಬಹುದು. ಅದೇ ನನ್ನ ಹೊಸ ಅವಿಷ್ಕಾರ.'

'ವೆರಿ ಗುಡ್ ವೈನಿ. ಭಾಳ ಇಂಟೆರೆಸ್ಟಿಂಗ್ ಅದ. ಚುಂಬಕ ಅಂದ್ರ ಏನೋ ಬ್ಯಾರೆ ಅಂತ ತಿಳಿದುಕೊಂಡಿದ್ದೆ. ನೀವು ಹೇಳಿದ್ದೇ ಖರೆ ಇರಬೇಕು ಬಿಡ್ರಿ. ಯಾವದು ಚುಂಬಿಸುತ್ತದೋ ಅದೇ ಚುಂಬಕ. ಅರ್ಥಾತ್ ಕಿಸ್ಸಿಂಗ್ ಕಿಡಿಗೇಡಿ. ಕರೆಕ್ಟ್ ರೀ ವೈನಿ???'

'ಹೂಂ! ಹೂಂ! ಸುಮ್ಮನಿರು ಸಾಕು. ಇಲ್ಲೆ ನಾ ಸೀರಿಯಸ್ ವಿಷಯದ ಬಗ್ಗೆ ಮಾತಾಡ್ಲಿಕ್ಕೆ ಬಂದೇನಿ. ಕಿಸ್ಸಿಂಗ್ ಕಿಡಿಗೇಡಿ, ಪಿಸ್ಸಿಂಗ್ ಪಿಶಾಚಿ ಅಂತೆಲ್ಲ ಅಡ್ಡಡ್ಡ ಮಾತಾಡಬ್ಯಾಡ. ಏನು ಕಿಸ್ಸಿಂಗೋ ಏನು ಪಿಸ್ಸಿಂಗೋ!? ನಮ್ಮ ದೇಶ ಹಿಂಗದ ಅಂದ್ರ - You can piss everywhere but you can't kiss anywhere. ಅಡ್ಡಡ್ಡ ಬಾಯಿ ಹಾಕಬ್ಯಾಡ ಉಪದ್ವ್ಯಾಪಿ ತಂದು. ಆಮೇಲೆ ನನಗ ಏನು ಹೇಳಬೇಕು ಅನ್ನೋದೇ ಮರ್ತು ಹೋಗ್ತದ.' ಅಂತ ಜಬರಿಸಿದರು ವೈನಿ, ಅದೂ ಲೈವ್ ಇಂಟರ್ವ್ಯೂ ನಡೆದಾಗ.

ಹ್ಯಾಂ?? ಇವತ್ತು ಏನು ಇಂಗ್ಲಿಷ್, ಏನು ಕಥಿ ನಮ್ಮ ರೂಪಾ ವೈನಿದು!? ಅಂತ ಮನಸ್ಸಿನ್ಯಾಗ ಅಂದುಕೊಂಡೆ. ಭಾಳ ಒಳ್ಳೆ ಕೊಟೇಶನ್ ಹೇಳ್ಯಾರ. You can piss everywhere but you can't kiss anywhere!

ಮನಸ್ಸಿನ್ಯಾಗೇ ಅಂದುಕೊಂಡೆ. ಅವು ಕಡಜೀರಿಗೆ ಹುಳ ಕಂಪಿಸಿಕೊಂಡು ಹಾಳಾಗಿ ಹೋಗ್ಲಿ. ಅವೇನರೆ ಚುಂಬಿಸಲಿಕ್ಕೆ ಬಂದರೆ ಅಷ್ಟೇ ಮತ್ತೆ. ಗೋವಿಂದಾ! ಗೋssವಿಂದಾ. ವಿಷಕನ್ಯೆ ಕೊಡುವ ಕಿಸ್ ಬ್ಯಾರೆ ಅಲ್ಲಾ ಕಡಜೀರಿಗೆ ಹುಳ ಕೊಡುವ ಕಿಸ್ ಬ್ಯಾರೆ ಅಲ್ಲಾ ಅಂತ KKK ಗಳ ಹೇಳಿಕೆ. KKK ಅಂದ್ರ ಕಡಜೀರಿಗೆ ಕಿಸ್ಸಿಂಗ್ ಕಿಡಿಗೇಡಿ ಅಂತ.

'ನೀವು ಹೇಳ್ರೀ ವೈನಿ. ನಿಮ್ಮ ಕಡಜೀರಿಗೆ ಹುಳದ ಕಂಪಕ, ಚುಂಬಕದ ಬಗ್ಗೆ ಹೇಳಿರಿ.'

'ನೋಡು ಮಂಗೇಶಿ, ಈ ಕಡಜೀರಿಗೆ ಕಂಪಕದ ಅವಿಷ್ಕಾರದ ಹಿಂದಿನ ಕಥೆ ಭಾಳ ಮಜಾ ಅದ. ಅದು ನಮ್ಮ ಬಾಜೂ ಮನಿ ಸಣ್ಣ ಹುಡುಗ ಗೋಪ್ಯಾಗ ಏನರೆ ಒಂದು ಹೊಸಾ ಆಟಿಗಿ ಸಾಮಾನು ಮಾಡಿಕೊಡೋಣ ಅಂತ ವಿಚಾರ ಮಾಡಿ, ಏನೋ ಮಾಡಲಿಕ್ಕೆ ಹೋದೆ. ಅದು ಈ ತರಹದ ವಿಶೇಷ ಅವಿಷ್ಕಾರ ಆಗ್ತದ ಅಂತ ಗೊತ್ತೇ ಇರಲಿಲ್ಲ. ಭಾಳ ಪಾಪ್ಯುಲರ್ ಮತ್ತು ಫೇಮಸ್ ಆಗಿಬಿಟ್ಟದ. ಆರ್ಡರ್ ಭಾಳ ಬಂದಾವ. ಪೇಟೆಂಟ್ ಗೆ ಸಹಿತ ಅರ್ಜಿ ಹಾಕೇನಿ. ಪೇಟೆಂಟ್ ಒಂದು ಸಿಕ್ಕುಬಿಟ್ಟರೆ ಭಾಳ ಛಲೋ ಆಗಿಬಿಡ್ತದ.'

'ಓಹೋ! ಫೆಂಟಾಸ್ಟಿಕ್! ಮುಂದ ಹೇಳ್ರೀ ನಿಮ್ಮ ಕಡಜೀರಿಗೆ ಕಂಪಕದ ಬಗ್ಗೆ. Wasp Vibrator! What a name!'

'ಕಡಜೀರಿಗೆ ಕಂಪಕ ಉರ್ಫ್ wasp vibrator ಮಾಡೋ ಪದ್ಧತಿ ಹೀಂಗ. ಒಂದು ವಾಸು ಊದಿನಕಡ್ಡಿಯ ಕೊಳವೆಯಂತಹ ಖಾಲಿ ಡಬ್ಬಿ ಬೇಕಾಗ್ತದ. ಊದಿನಕಡ್ಡಿ ಎಲ್ಲಾ ಖಾಲಿ ಆದ ಮ್ಯಾಲೆ ಒಲಿ ಊದುವ ಕೊಳವಿಯಂತಹ ರಟ್ಟಿನ ಡಬ್ಬಿ ಒಗಿಬ್ಯಾಡ್ರೀ. ಹಾಂಗೇ ಇಟ್ಟುಕೊಳ್ಳಿರಿ. ವಾಸು ಬ್ರಾಂಡ್ ಇಲ್ಲಾ ಅಂದ್ರ ಬೇರೆ ಬ್ರಾಂಡಿನದೂ ನಡಿತದ. ಅಷ್ಟೇ ರೌಂಡ್ ಕೊಳವಿಯಂತಹ, ಟ್ಯೂಬಿನಂತಹ ಡಬ್ಬಿ ಇರಬೇಕು. ಚೌಕ್ ಡಬ್ಬಿ ಇರೋದು ನಡೆಯೋದಿಲ್ಲ. vibrator ಕೊಳವೆಯಂತೆ ಗುಂಡಗೆ, ಉದ್ದ ಇದ್ದರೇ ಛಲೋ ಅಂತ ಉಪಯೋಗ ಮಾಡಿದ ನನ್ನ ಗೆಳತಿಯರು ಸಹ ಹೇಳಿದರು. ಇಲ್ಲಾ ಅಂದ್ರ square peg in a round hole ಆಗಿಬಿಡ್ತದ. ಅದು ಉಪಯೋಗಿಲ್ಲ.'

ವಾಸು ಊದಿನಕಡ್ಡಿ ಕೊಳವೆ ಡಬ್ಬಿ


square peg in a round hole! ಹ್ಯಾಂ!? ಏನಿವತ್ತು wholesale ಒಳಗ ಇಂಗ್ಲಿಷ್ ಕೊಟೇಶನ್ ಮ್ಯಾಲೆ ಕೊಟೇಶನ್ ಹೊಡಿಲಿಕತ್ತಾರ ರೂಪಾ ವೈನಿ!? ಅದೂ hole ಬಗ್ಗೆ. ಯಾವ ಹೋಲೋ, ಯಾವ ಸೇಲೋ ಏನೋ? ಇರಲಿ ಮುಂದ ತಿಳಿಬಹದು

'ಓಕೆ ವೈನಿ. ಮೊದಲು ಒಂದು ಖಾಲಿ ವಾಸು ಊದಿನಕಡ್ಡಿ ಕೊಳವಿಯಂತಹ ಡಬ್ಬಿ ತೊಗೊಬೇಕು. ಈ ಡಿಗ್ರಿ ಸರ್ಟಿಫಿಕೇಟ್ ಹಾಕಿಕೊಡೋ ಟ್ಯೂಬ್ ತರಹದ ಡಬ್ಬಿ ಸಹಿತ ನಡಿತದೇನು ವೈನಿ?'

ಡಿಗ್ರಿ ಸರ್ಟಿಫಿಕೇಟ್ ಹಾಕಿಡುವ ಉದ್ದನೆಯ ದೊಡ್ಡ ಸೈಜಿನ ಕೊಳವೆ ಡಬ್ಬಿ


'ನಡಿತದ. ಆದ್ರ ಅದು ಭಾಳ ದೊಡ್ಡದಾಗಬಹುದು. ನಿಮ್ಮ ಸೈಜಿಗೆ ಸರಿ ಹೊಂದ್ತದ ಅಂದ್ರ ಓಕೆ. ಒಟ್ಟಿನ್ಯಾಗ ಗುಂಡಗೆ, ಉದ್ದವಾಗಿ, ಘಟ್ಟೆ ಇರಬೇಕು ಅಷ್ಟೇ.'

'ಖಾಲಿ ಊದಿನಕಡ್ಡಿ ಕೊಳವಿ ಡಬ್ಬಿ ತೊಗೊಂಡು, ಅದನ್ನ ಕುಟ್ಟಿ ಕುಟ್ಟಿ ಕ್ಲೀನ್ ಮಾಡ್ರಿ. ಒಳಗಿರೋ ಊದಿನಕಡ್ಡಿಯ ಚೂರು ಗೀರು ಹೊರಗ ಬಿದ್ದು ಹೋಗಲಿ. ಕೊಳವಿಯನ್ನು ಬಾಯಿಯ ಮುಂದ ಹಿಡಕೊಂಡು ಒಂದು blow job ಮಾಡ್ರಿ. ಅಂದ್ರ ಭುಸ್ ಅಂತ ಊದಗೊಳವ್ಯಾಗ ಒಲಿ ಊದಿದಾಂಗ ಊದ್ರಿ ಅಂತ. blow ಗಾಳಿ ಹೊಡಿರಿ ಅಂತ. blow job ಹ್ಯಾಂಗಿರಬೇಕು ಅಂದ್ರ ಒಳಗಿರುವ ಎಲ್ಲಾ ಊದಿನಕಡ್ಡಿ ಕಣ ಕಣ ಹಾರಿಹೋಗಬೇಕು. ಹಾಂಗ ಊದಿರಿ. ಹೀಂಗ ಸ್ವಚ್ಛ ಮಾಡಿದ ವಾಸು ಊದಿನಕಡ್ಡಿ ಕೊಳವಿ ಡಬ್ಬಿ ಬಾಜೂ ಇಡ್ರಿ.  ಈಗ ಒಂದು ರಟ್ಟು ತೊಗೋರಿ. ನೋಟ್ಬುಕ್ ಕವರ್ ಇರ್ತಾವಲ್ಲಾ? ಅಂತಾದ್ದು. ಕೊಳವೆ ಡಬ್ಬಿಯ ಬಾಯಿಯ ಆಕಾರಕ್ಕೆ ಸರಿಯಾಗಿ ಹೊಂದುವಂತೆ ಎರಡು ಪೀಸ್ ರಟ್ಟು ಕತ್ತರಿಸಿ ಇಟ್ಟುಕೊಳ್ಳಿ. ಕೊಳವೆ ಡಬ್ಬಿಯ ಒಂದು ತುದಿ ಮುಚ್ಚಿರಿ. ಹ್ಯಾಂಗ ಮುಚ್ಚಬೇಕು? ಕತ್ತರಿಸಿ ಇಟ್ಟುಕೊಂಡ ರಟ್ಟಿನ ತುಂಡು ಕೊಳವೆಯ ಬಾಯಿಗೆ ಇಟ್ಟು, ಮ್ಯಾಲಿಂದ ಟಿಕ್ಸೋ ಟೇಪ್ ಹಚ್ಚಿಬಿಡ್ರಿ. ಟೇಪಿನ ಒಂದೆರೆಡು ಕೋಟಿಂಗ್ ಜಾಸ್ತಿನೇ ಇರಲಿ. ಮಜಬೂತ್ ಆಗಿ ಬಂದ್ ಆಗಬೇಕು. ಹೀಂಗ ತಯಾರಾದ, ಒಂದು ತುದಿ ಮುಚ್ಚಿದ, ಊದಿನಕಡ್ಡಿ ಕೊಳವೆ ಡಬ್ಬಿ ಬಾಜೂ ಇಡ್ರಿ. ಮತ್ತೊಂದು ರಟ್ಟಿನ ತುಂಡು, ಟಿಕ್ಸೋ ಟೇಪ್ ಸಹಿತ ಬಾಜೂಕ ಇಡ್ರಿ. ಅವು ನಂತರ ಬೇಕಾಗ್ತಾವ.'

blow job ಅಂದ್ರ??? ಹೀಂಗ ಕೊಳವಿ, ಊದಗೊಳವಿ ಊದೋದಕ್ಕೂ blow job ಅಂತಾರೇನು? ವೈನಿ ಹೇಳ್ಯಾರ ಅಂದ ಮ್ಯಾಲೆ ಖರೆನೇ ಇರಬೇಕು. ಲೈಫಿನ್ಯಾಗ ಎಷ್ಟು ಊದಿಬಿಟ್ಟಾರೋ ಏನೋ. ಅಂದ್ರ ಎಷ್ಟು ಊದಿನಕಡ್ಡಿ ಕೊಳವಿ ಡಬ್ಬಿ ಊದಿ ಊದಿ ಕಂಪಕ, vibrator ಮಾಡಿಬಿಟ್ಟಾರೋ ಏನೋ ಅಂತ.

ಇಷ್ಟು ಹೇಳಿದ ರೂಪಾ ವೈನಿ ಮೊದಲೇ ರೆಡಿ ಮಾಡಿಕೊಂಡುಬಂದಿದ್ದ ವಾಸು ಊದಿನಕಡ್ಡಿ ಅಂಡೆಯನ್ನು ಅಂದರೆ ಕೊಳವೆ ಡಬ್ಬಿಯನ್ನು ಬಾಜೂಕ ಇಟ್ಟರು.

'ಸರಿ, ವಾಸು ಊದಿನಕಡ್ಡಿ ಕೊಳವೆ ಡಬ್ಬಿ ಕ್ಲೀನ್ ಮಾಡಿ, ಒಂದು ತುದಿ ಬಂದ್ ಮಾಡಿ ಇಟ್ಟ ನಂತರ ಏನು ವೈನಿ? '

'ನಂತರ ನಾವು ಕಡಜೀರಿಗೆ ಕಂಪಕಕ್ಕೆ ಮುಖ್ಯವಾಗಿ ಬೇಕಾದ ಕಡಜೀರಿಗೆ ಹುಳುಗಳನ್ನು ಹಿಡಿಯಬೇಕು. ಅದು ಭಾಳ ಕೇರ್ಫುಲ್ ಆಗಿ ಮಾಡಬೇಕಾದ ಕೆಲಸ. ಇಲ್ಲಂದ್ರ ಅಷ್ಟೇ. ಕಡಜೀರಿಗಿ ಹುಳ ಭಾಳ ಡೇಂಜರ್. ಎಲ್ಲರೆ ಸಿಟ್ಟಿಗೆದ್ದು ಹೊಕ್ಕಬಾರದ ಜಾಗಾದಾಗ ಅದೂ ನವರಂಧ್ರ, ಬ್ರಹ್ಮರಂಧ್ರದಾಗ ಹೊಕ್ಕಿಬಿಟ್ಟವು ಅಂದರೆ ಅಷ್ಟೇ ಮತ್ತ. ಆದ್ರ ಅವನ್ನು ಒಂದು ಪದ್ಧತಿ ಪ್ರಕಾರ ಹಿಡಿಯುವದು ಭಾಳ ಸುಲಭ. ಅದೂ ನಮ್ಮ ಧಾರವಾಡ ಮಂದಿಗೆ ಸಣ್ಣವರಿದ್ದಾಗ ಬೋರಂಗಿ ಹುಳ ಹಿಡಿದ ರೂಢಿ ಇರ್ತದ. ಅದೂ ಸಹಿತ ಸ್ವಲ್ಪ ಮಟ್ಟಿಗೆ ಸಹಾಯಕ್ಕೆ ಬರ್ತದ. ಆದ್ರ ಕಡಜೀರಿಗಿ ಹುಳ ಹಿಡಿಯುವದು ಅಂದ್ರ ಸ್ವಲ್ಪ ಬ್ಯಾರೆ. ಬೋರಂಗಿ ಸಭ್ಯ ಹುಳ. ಇವು ಕಡಜೀರಿಗೆ ಹುಳ ಭಾಳ ಕೆಟ್ಟ ಹುಳ. ತಿಳಿತೇನು?'

ಕಡಜೀರಿಗೆ ಹುಳ / wasp


'ಈ ಕಡಜೀರಿಗಿ ಹುಳ ಎಲ್ಲಿ ಸಿಗ್ತಾವ ವೈನಿ?'

'ಏ....ಮನಿ ಹೊರಗ ಸ್ವಲ್ಪ ಕಣ್ಣು ಬಿಟ್ಟು ನೋಡಿದರೆ ಕಂಡೇಕಾಣ್ತಾವ. ಜೇನು ಹುಳುಗಳ ಹಾಂಗ ಅಲ್ಲಲ್ಲೆ ಮೂಲಿಯಾಗ ಗೂಡು ಕಟ್ಟಿಕೊಂಡು ಇರ್ತಾವ. ಒಂದೇ ವ್ಯತ್ಯಾಸ ಅಂದರ ಕಡಜೀರಿಗಿ ಹುಳದ ಗೂಡು ಮಣ್ಣಿನದು ಇರ್ತದ. ಹಾವಿನ ಹುತ್ತದ ತರಹದ್ದು. ಜಾಳಿಗಿ ಜಾಳಿಗಿ ಇರ್ತದ. ಸಣ್ಣು ಸಣ್ಣು ತೂತು ಇರ್ತಾವ. ಅದರಾಗ ಹುಳಾ ಇರ್ತಾವ.'

ಕಡಜೀರಿಗೆ ಹುಳದ ಗೂಡು 

'ಓಹೋ! ಹಾಂಗೇನು? ಈಗ ಗೂಡಿನಿಂದ ಕಡಜೀರಿಗಿ ಹುಳುಗಳನ್ನು ತೆಗೆಯೋದು ಹ್ಯಾಂಗ ವೈನಿ? ಮೊದಲೇ ಕೆಟ್ಟ ಡೇಂಜರ್ ಹುಳ. ಕಡಿದರೆ ಅಥವಾ ಹೊಕ್ಕಬಾರದಂತಹ ಜಾಗಾದಾಗ ಹೊಕ್ಕಿಬಿಟ್ಟರೆ ಕಷ್ಟ.'

'ಅದೂ ಖರೆ. ಮೊದಲು ಒಂದಿಷ್ಟು ನೀರು ತೊಗೊಂಡು ಕಡಜೀರಿಗಿ ಹುಳದ ಗೂಡಿನ ಮ್ಯಾಲೆ ಸಾವಕಾಶವಾಗಿ ಹಾಕಬೇಕು. ಜೋರಾಗಿ ಹಾಕಬಾರದು ಮತ್ತ. ಕೃಷ್ಣಾರ್ಪಣಮಸ್ತು ಅಂತ ಶ್ರಾದ್ಧದ ದಿವಸ ಎಳ್ಳು ನೀರು ಬಿಡ್ತಾರ ನೋಡು. ಹಾಂಗ ಸಾವಕಾಶ ನೀರು ಬಿಡಬೇಕು. ಏನಪಾ? ತಿಳಿತss?'

'ಹೂನ್ರಿ ವೈನಿ. ತಿಳೀತು. ಕಡಜೀರಿಗಿ ಹುಳದ ಗೂಡಿನ ಮ್ಯಾಲೆ ಸಾವಕಾಶ ನೀರು ಬಿಡಬೇಕು. ಎಳ್ಳು ನೀರು ಬಿಟ್ಟಂಗ ಬಿಡಬೇಕು. ಗೊತ್ತಾತು. ಮುಂದ ವೈನಿ?'

'ನೀರಿಂದ ಗೂಡು ಒದ್ದಿಯಾದ ಕೂಡಲೇ ಒಳಗ ಇದ್ದ ಕಡಜೀರಿಗೆ ಹುಳ ಸಾವಕಾಶವಾಗಿ ಹೊರಗ ಬರ್ತಾವ. ನಿದ್ದಿಯೊಳಗ ಇದ್ದವರ ಮೇಲೆ ನೀರು ಸುರುವಿದರೆ ಹ್ಯಾಂಗ ಎದ್ದು ಕಣ್ಣು ಬಿಡ್ತಾರ ನೋಡು ಹಾಂಗ. ಇವೂ ಹಾಂಗ. ನಿದ್ದಿಬಡಕ ಕಡಜೀರಿಗೆ ಹುಳ! ಸೂಡ್ಲಿ ತಂದು. ನಾನು ಈ ಬಾಟಲಿ ಒಳಗ ಮೊದಲೇ ಹಿಡಿದಿಟ್ಟಿರುವ ಒಂದು ಹತ್ತು ಕಡಜೀರಿಗಿ ಹುಳಾ ತೊಗೊಂಡು ಬಂದೇನಿ,' ಅಂತ ಬೇಡೇಕರ್ ಉಪ್ಪಿನಕಾಯಿ ಬಾಟಲಿ ತೋರಿಸಿದರು. ಒಳಗ ಖತರ್ನಾಕ್ ಕಡಜೀರಿಗೆ ಹುಳ ಇದ್ದವು. ಸುಮ್ಮನೆ ಮಕ್ಕೊಂಡಿದ್ದವು.

'ಮುಂದ್ರಿ ವೈನಿ??'

'ಮುಂದ ಭಾಳ ಸಸಾರ. ಒಮ್ಮೆ ಕಡಜೀರಿಗಿ ಹುಳಾ ಗೂಡುಬಿಟ್ಟು ಹೊರಗ ಬರಲಿಕ್ಕೆ ಶುರು ಮಾಡಿದವು ಅಂದ್ರ ಒಂದು ರದ್ದಿ ಪೇಪರ್ ತೊಗೊಂಡು ಗೂಡಿನ ಮುಂದ ಹಿಡಿದುಬಿಟ್ಟರಾತು. ಒದೊಂದೇ ಹುಳ ಪೇಪರ್ ಮ್ಯಾಲೆ ಬಂದು ಕೂಡತಾವ. ನಂತರ ಸಾವಕಾಶ ಪೇಪರ್ ತೆಗಿಬೇಕು. ಗಡಬಿಡಿ ಮಾತ್ರ ಮಾಡಬಾರದು. ಪೇಪರ್ ಅಲ್ಲಾಡಿಸಬಾರದು. ಶೇಕ್ ಅಬ್ದುಲ್ಲಾ ಗತೆ ಶೇಕ್ ಮಾಡಿದರೆ ಅಷ್ಟೇ ಮತ್ತ. ಎಲ್ಲಿ ತನಕಾ ನೀನು ಅಲ್ಲಾಡಿಸುವದಿಲ್ಲವೋ ಮತ್ಲಬ್ ಕೈಯಾಗ ಹಿಡಿದುಕೊಂಡ ಕಡಿಜೀರಿಗಿ ಹುಳದ ಪೇಪರ್ ಅಲ್ಲಾಡಿಸುವದಿಲ್ಲವೋ ಅಲ್ಲಿ ತನಕಾ ಓಕೆ. ಫುಲ್ ಸೇಫ್. ಏನೂ ತೊಂದ್ರಿಲ್ಲಾ. ತಿಳಿತss??? ಏನರೆ ಸಂದೇಹ? ಸಂಶಯ?'

'ಏಕ್ದಂ ತಿಳೀತು. ಮುಂದೇನು ಮಾಡಬೇಕು?'

ನಂತರ ರೂಪಾ ವೈನಿ ಸಾವಕಾಶವಾಗಿ ಆ ಬಾಟಲಿ ಮುಚ್ಚಳ ತೆಗೆದು, ಒಳಗಿರುವ ಕಡಜೀರಿಗೆ ಹುಳುಗಳನ್ನು ಒಂದು ಪೇಪರ್ ಮೇಲೆ ಹಾಕಿಕೊಂಡರು. ಮೊದಲು ಥಿಯರಿ ಹೇಳ್ತಾರ. ನಂತರ ಪ್ರಾಕ್ಟಿಕಲ್ ಮಾಡೇಬಿಡ್ತಾರ. ಮಸ್ತ ವೈನಿ!

'ಒಂದು ಕಂಪಕ ಮತ್ಲಬ್ vibrator ಮಾಡಲಿಕ್ಕೆ ಕಮ್ಮಿ ಕಮ್ಮಿ ಅಂದರೂ ಆರರಿಂದ ಎಂಟು ಕಡಜೀರಿಗಿ ಹುಳ ಬೇಕಾಗ್ತಾವ. ಹೆಚ್ಚಿನ ಪ್ರಮಾಣದ vibration ಬೇಕು ಅನ್ನುವವರು ಜಾಸ್ತಿ ಹುಳಗಳನ್ನು ಹಾಕಬಹುದು. ಆದ್ರ ಇಪ್ಪತ್ತರ ಮ್ಯಾಲೆ ಮಾತ್ರ ಹಾಕಬಾರದು. ಒಳಗ ಭಾಳ ಹುಳಾ ಹಾಕಿಬಿಟ್ಟರೆ ಭಾಳ ಜೋರಾಗಿ ಕಂಪಿಸಿ, ಬರೇ vibrate ಏನು ಫುಲ್ ಶೇಕ್ ಆಗಿಬಿಡ್ತದ. ಆಮ್ಯಾಲೆ ಭಾಳ ತೊಂದ್ರಿ,' ಅಂತ ಎಚ್ಚರಿಕೆ ಕೊಡುವ ಮಾದರಿಯಲ್ಲಿ ಹೇಳಿದರು.

ಒಂದು ಸಣ್ಣ ಬ್ರೇಕ್ ತೆಗೆದುಕೊಂಡ ವೈನಿ ಮುಂದುವರೆಸಿದರು.

'ಮತ್ತೊಮ್ಮೆ ಹೇಳತೇನಿ. ಸ್ಪಷ್ಟ ಹೇಳತೇನಿ. ಕೇಳಿಸಿಕೊಳ್ಳರಿ. ಒಂದು ಖಾಲಿ ಊದಿನಕಡ್ಡಿ ಕೊಳವಿ ಡಬ್ಬಿಯೊಳಗ ಇಪ್ಪತ್ತಕ್ಕಿಂತಲೂ ಹೆಚ್ಚಿನ ಕಡಜೀರಿಗಿ ಹುಳಾ ಹಾಕಬ್ಯಾಡ್ರೀ!'

'ಹಾಕಿದರೆ ಏನಾಗ್ತದರೀ ವೈನಿ???'

'ಏನಾಗ್ತದ?? ಮಬ್ಬರ ಗತೆ ಏನಾಗ್ತದ ಅಂತ ಕೇಳ್ತಿಯಲ್ಲಾ? ನಿನಗ ನಮ್ಮ ಗೆಳತಿ ಒಬ್ಬಾಕಿನ ಪರಿಚಯ ಮಾಡಿಸಿಕೊಡತೇನಿ. ಅಕಿ ಕಡೆ ಕೇಳ್ಕೋ. ಮಸ್ತ ಆಗ್ತದ ಅಂತ ಜಗ್ಗೆ ಭರಪೂರ ಕಡಜೀರಿಗಿ ಹುಳಾ ಹಾಕಿಕೊಂಡು ಮಾಡಿಕೊಂಡಿದ್ದಳು, ಅಕಿದೇ ಒಂದು ಕಂಪಕ custom made vibrator. ಮುಂದ ಒಂದು ತಿಂಗಳು ದವಾಖಾನ್ಯಾಗ ಇದ್ದು ಬಂದಳು.'

'ಹಾಂಗ್ರೀ ವೈನಿ!? ಏನು ಮಾಡಿಕೊಂಡಿದ್ದಳು ನಿಮ್ಮ ಗೆಳತಿ? ಏನಾಗಿತ್ತು?'

'ಏನು ಆಗೋದು? ಮೊದಲೇ ಅಕಿ ಇಂಜಿನ್ ಒಳಗ ಆಯಿಲ್ ಕಮ್ಮಿ. ಆಯಿಲ್ ಕಮ್ಮಿ ಇದ್ದಾಗ ಇಂಜಿನ್ ಒಳಗ ಆ ಪರಿ ಹುಚ್ಚಾಪಟ್ಟೆ vibration ಆದ್ರ ಮತ್ತೇನು?? ಅಕಿ ಇಂಜಿನ್ ಫುಲ್ ಸೀಜ್ ಆಗಿ ಬರ್ಬಾದಾಗಿತ್ತು. ಫುಲ್ ಇಂಜಿನ್ rebuild ಮಾಡ್ಯಾರಂತ. 'ಇನ್ನು ಮ್ಯಾಲೆ ಒಟ್ಟss wasp vibrator ಹತ್ತಿರ ಹೋಗಂಗಿಲ್ಲವಾ. ಸಾಕಾಗಿ ಹೋತು,' ಅಂದಳು,' ಅಂತ ವಿವರಿಸಿದರು ವೈನಿ.

ಏನು ಹೇಳಲಿಕತ್ತಾರ ವೈನಿ? ಗೆಳತಿ ಅಂತಾರ. ಅಕಿದು ಇಂಜಿನ್ ಅಂತಾರ. ಅದರಾಗ ಆಯಿಲ್ ಇಲ್ಲ ಅಂತಾರ. ಆಯಿಲ್ ಇಲ್ಲದಾಗ ಕಡಜೀರಿಗಿ ಕಂಪಕ ಉಪಯೋಗಿಸಿ ಅಕಿ ಇಂಜಿನ್ ಸೀಜ್ ಆತು ಅಂತಾರ. ಬರ್ಬಾದ್ ಆತು ಅಂತಾರ. ಅಕಿ ಇಂಜಿನ್ rebuild ಮಾಡಿದರು ಅಂತಾರ. ಏನೂ ತಿಳಿವಲ್ಲತು. ಒಟ್ಟೇ ತಿಳಿವಲ್ಲತು. ಇರಲಿ. ಬಹುಶ ರೂಪಾ ವೈನಿ ಗೆಳತಿ ಕಡಜೀರಿಗೆ ಕಂಪಕ ತೊಗೊಂಡು ಹೋಗಿ ಅಕಿ ಕಾರಿನ ಇಂಜಿನ್ ನ್ಯಾಗ  ಹೆಟ್ಟಿಬಿಟ್ಟಿರಬೇಕು. ಆವಾಗೇ ಲಫಡಾ ಆಗಿರಬೇಕು. ಇಂಜಿನ್ ಬರ್ಬಾದ್ ಆಗ್ಯದ. ಯಾವ ಗಾಡಿ ಇತ್ತೋ ಏನೋ? ಆ ಸುದ್ದಿ ಮತ್ತೊಮ್ಮೆ ಕೇಳೋಣ.

'ಮುಂದ ಹೇಳ್ರಿ ರೂಪಾ ವೈನಿ. ಗೂಡಿನ್ಯಾಗಿಂದ ಕಡಜೀರಿಗಿ ಹುಳ ಹಿಡಕೊಂಡು ಬಂದ್ರಿ ಅಂತಾತು. ಮುಂದ?'

'ಈಗ ಸ್ವಚ್ಛ ಮಾಡಿ, ಒಂದು ತುದಿ ಮುಚ್ಚಿಟ್ಟಿರುವ ಊದಿನಕಡ್ಡಿ ಕೊಳವಿ ಡಬ್ಬಿ ಈಕಡೆ ತೊಗೊಂಡು ಬರ್ರಿ. ಪೇಪರ್ ಮೇಲೆ ಇರುವ ಕಡಜೀರಿಗೆ ಹುಳಗಳನ್ನು ಸಾವಕಾಶವಾಗಿ ಊದಿನಕಡ್ಡಿ ಕೊಳವಿಯೊಳಗೆ ಸೇರಿಸಿರಿ. ಏನೂ ಆಗೋದಿಲ್ಲ. ಅಷ್ಟೇ ಶೇಕ್ ಮಾಡಬ್ಯಾಡ್ರೀ. ಒಮ್ಮೆ ಅಷ್ಟೂ ಹುಳಗಳು ಒಳಗೆ ಹೋದವು ಅಂದ್ರ ಒಂದು ದೊಡ್ಡ ಕೆಲಸ ಮುಗೀತು. ಈಗ ಮೊದಲು ರೆಡಿ ಮಾಡಿಟ್ಟುಕೊಂಡಿರುವ ರಟ್ಟಿನ ಪೀಸ್ ತೆಗೆದುಕೊಳ್ಳರಿ. ಅದರಾಗ ಒಂದು ಸಣ್ಣ ತೂತು ಮಾಡ್ರಿ. ಅದನ್ನು ಊದಿನಕಡ್ಡಿ ಕೊಳವೆ ಡಬ್ಬಿಯ ಇನ್ನೊಂದು ತುದಿಗೆ ಹಚ್ಚಿರಿ. ಟಿಕ್ಸೋ ಟೇಪ್ ತೊಗೊಂಡು ಮೊದಲಿನ ಹಾಂಗೇ ಬಂದ್ ಮಾಡಿ ಮುಚ್ಚಿಬಿಡ್ರಿ. ಒಂದು ಮಾತು ನೆನಪು ಇರಲಿ. ತೂತನ್ನು ಮಾತ್ರ ಮುಚ್ಚಬ್ಯಾಡ್ರಿ. ಇಲ್ಲಂದ್ರ ಉಸಿರಾಡಲಿಕ್ಕೆ ಆಗದೇ ಒಳಗಿನ ಕಡಜೀರಿಗಿ ಹುಳಾ ಎಲ್ಲಾ ಸತ್ತು ಹೋಗ್ತಾವ. ತಿಳಿತss??? '

ನಂತರ ವೈನಿ ಉಪ್ಪಿನಕಾಯಿ ಬಾಟಲಿಯಿಂದ ತೆಗೆದು ಪೇಪರ್ ಮೇಲೆ ಹಾಕಿಕೊಂಡಿದ್ದ ಕಡಜೀರಿಗೆ ಹುಳುಗಳನ್ನು ಮೆತ್ತಗೆ ವಾಸು ಊದಿನಕಡ್ಡಿ ಕೊಳವೆ ಡಬ್ಬಿಯೊಳಗೆ ಸೇರಿಸಿದರು. ಅವರೇ ಮೊದಲು ವಿವರಿಸಿದಂತೆ ತೆರೆದಿದ್ದ ಊದಿನಕಡ್ಡಿ ಕೊಳವೆ ಡಬ್ಬಿಯ ತುದಿಗೆ ರಟ್ಟಿನ ತುಂಡು ಹಚ್ಚಿ, ಮ್ಯಾಲೆ ಟೇಪ್ ಹಚ್ಚಿ ಮುಚ್ಚಿದರು.

'ವಾಹ್! ಎಂಥಾ ಅವಿಷ್ಕಾರ ವೈನಿ? ಇಷ್ಟರೀ? ಅಥವಾ ಮತ್ತೇನಾದರೂ ಅದ ಏನ್ರೀ?'

'ಇನ್ನೂ ಕಂಪಕ ಅಂದ್ರ vibrator ಆಗಿಲ್ಲ. ದೊಡ್ಡ ಕೆಲಸ ಬಾಕಿ ಅದ. ಆ ಕೆಲಸ ಮಾಡೋಕಿಂತ ಮೊದಲು ಕೆಲವೊಂದು ವಿಷಯಗಳನ್ನು ಖಾತ್ರಿ ಮಾಡಿಕೋಬೇಕು. Safety first!'

'ಏನು ಖಾತ್ರಿ ಮಾಡಿಕೊಬೇಕರೀ?'

'ವಾಸು ಊದಿನಕಡ್ಡಿ ಕೊಳವೆ ಡಬ್ಬಿಯ ಎರಡೂ ತುದಿಗಳು ಬರೋಬ್ಬರಿ ಮುಚ್ಚಿವೆ ಅಂತ ಖಾತ್ರಿ ಮಾಡಿಕೊಳ್ಳಬೇಕು. ಎಲ್ಲರೆ ಅವು ರಟ್ಟಿನ ಚೂರು ಮುಚ್ಚಿದ್ದು ಸಡಿಲವಾಗಿ, ಬಿಚ್ಚಿಬಿದ್ದರೆ ಅಷ್ಟೇ ಮತ್ತ. ಕಡಜೀರಿಗೆ ಹುಳಾ ಹೊರಗ ಬಂದ್ರ ಅಷ್ಟೇ ಮತ್ತ. ಅನಾಹುತ ಆಗಿಬಿಡ್ತದ. ತಿಳಿತss?'

'ತಿಳೀತು. ಎರಡೂ ಕಡೆ ಬಂದ್ ಮಾಡಿಕೊಂಡು ಅಂದರೆ ಊದಿನಕಡ್ಡಿ ಕೊಳವೆ ಡಬ್ಬಿಯ ಎರಡೂ ತುದಿಗಳನ್ನು ಬಂದ್ ಮಾಡಿಕೊಂಡು, ಅದನ್ನು ಖಾತ್ರಿ ಮಾಡಿಕೊಳ್ಳಬೇಕು. ಮುಂದ?'

'ಇನ್ನೇನು ಮುಂದ? ಹೀಂಗ ತಯಾರ್ ಮಾಡಿದ ಊದಿನಕಡ್ಡಿ ಕೊಳವೆ ಡಬ್ಬಿಯನ್ನು ಈಗ ಮಸ್ತಾಗಿ ಅಲ್ಲಾಡಿಸಬೇಕು. ಯಾರಿಗೆ ಏನೂ ಬರಂಗಿಲ್ಲಾ ಅಂದರೂ ಅಲ್ಲಾಡಿಸಲಿಕ್ಕಂತೂ ಬಂದೇಬರ್ತದ. ಹಾಂಗಾಗಿ ಯಾರು ಬೇಕಾದರೂ ಅಲ್ಲಾಡಿಸಬಹುದು. ಗಿಚ್ಚಾಗಿ ಶೇಕ್ ಅಬ್ದುಲ್ಲಾನ ಗತೆ ಮಸ್ತ ಶೇಕ್ ಮಾಡು. ಇಲ್ಲೆ ನೋಡು. ಹೀಂಗ ಮಾಡು! ಹೀಂಗ ಅಲ್ಲಾಡಿಸು!  ಘಂಟಿ ಬಾರಿಸಿದಾಂಗ ಅಲ್ಲಾಡಿಸಬೇಕು. ಜೈ ಶೇಕ್ ಅಬ್ದುಲ್ಲಾ!' ಅಂತ ಕಾಪಾಲಿಕರಂತೆ ಹೂಂಕರಿಸಿದ ರೂಪಾ ವೈನಿ ಕಡಜೀರಿಗೆ ಹುಳಗಳು ತುಂಬಿದ್ದ ಊದಿನಕಡ್ಡಿ ಕೊಳವೆ ಡಬ್ಬಿಯನ್ನು ಗಿಚ್ಚಾಗಿ ಅಲ್ಲಾಡಿಸಿದರು. ಅಲ್ಲಾಡಿಸೋದು ಅಂದ್ರ ಏನು?! ಭಾಳ ಆವೇಶದಿಂದ ಅಲ್ಲಾಡಿಸಿಬಿಟ್ಟರು ವೈನಿ. ಶಿವಾ ಡಮರುಗ ಬಾರಿಸಿದಾಂಗ ಅಲ್ಲಾಡಿಸಿಬಿಟ್ಟರು.

ಮುಂದೆ ಆಗಿದ್ದು ಮಾತ್ರ ಪರಮ ವಿಚಿತ್ರ. ಅದ್ಭುತ. ಚಮತ್ಕಾರ. ಮ್ಯಾಜಿಕ್.

ಓ ಮೈ ಗಾಡ್! ಏನು ವಿಚಿತ್ರ ಇದು? ವಾಸು ಊದಿನಕಡ್ಡಿ ಕೊಳವೆ ಡಬ್ಬಿ ಹೀಂಗ ಥಕಾಥಕಾ, ಜಿಂಗಾಚಿಕ್ಕಾ, ಥೈಯ್ಯಾಥಕ್ಕಾ ಝಕ್ಕನಕ್ಕ ಅಂತ ಕುಣಿಲಿಕ್ಕೆ ಶುರು ಮಾಡಿಬಿಡ್ತು. ಏನು ಹೇಳಲಿ!? ಆ ವಾಸು ಊದಿನಕಡ್ಡಿ ಕೊಳವೆ ಡಬ್ಬಿಯೊಳಗ ಎಲ್ಲರೆ ದೆವ್ವ ಬಂದು ಕೂತದೋ ಅನ್ನೋ ಹಾಂಗ ಭಾಳ violent ಆಗಿ ಕುಣಿಲಿಕತ್ತಿತ್ತು ನೋಡ್ರಿ!

'ಮೈ ಗಾಡ್! ವೈನಿ! ಏನ್ರೀ ಇದು!? ಇದೆಂಗ? ಇದು ಸಾಧಾರಣ ಕಂಪಕ ಅಲ್ಲ ಬಿಡ್ರೀ. ಇದು ಕಂಪಿಸೋ ಅಬ್ಬರವನ್ನು ನೋಡಿದರೆ ಇದು ಭೂಕಂಪಕ ಇದ್ದಂಗ ಅದ ನೋಡ್ರಿ. ಆ ನಮನಿ vibration ಹೊಡಿಲಿಕತ್ತದ. ಇದು ಖರೆನೇ vibrator! ಇದು ಹ್ಯಾಂಗ್ರೀ?' ಅಂದು ಮೂಗಿನ ಮೇಲೆ ಬೆರಳಿಟ್ಟುಕೊಂಡೆ.

'ಏನು ಗಾಡ್, ಏನು ರಾಡ್  ಹಚ್ಚಿ? ಟೈಮಿಗೆ ಸರಿಯಾಗಿ ಬರೋಬ್ಬರಿ ರಾಡ್ ಸಿಕ್ಕಿಲ್ಲ ಅಂದ್ರ ಇದೇ ಕಂಪಕವೇ ಗತಿ ಅಂತಾರ ನನ್ನ ಗೆಳತಿಯರು. ಗೊತ್ತದ ಏನು?'

ಹ್ಯಾಂ?! ನಾವು ಗಾಡ್ ಅಂದರೆ ಇವರು ರಾಡ್ ಅಂದರು. ಮತ್ತ ಇವರ ಗೆಳತಿಯರಿಗೆ ರಾಡ್ ಸಿಗೋದಿಲ್ಲ ಅಂದ್ರೇನು? ಯಾವ ರಾಡ್? ಅರಬಿ (ವಸ್ತ್ರ) ಒಣಗಿಸಲಿಕ್ಕೆ ಮ್ಯಾಲೆ ಹಾಕಿರ್ತಾರಲ್ಲಾ ಆ ರಾಡ್ ಏನು? ಏನರೆ ಇರಲಿ. ನಮಗ್ಯಾಕ ಇವರ ಗೆಳತಿಯರ ಸಿಕ್ಕಿರುವ ಸಿಗದಿರುವ ರಾಡಿನ ಉಸಾಬರಿ? ರಾಡಾ ಹುಯಿಗವಾ ರಾಡ್ ಕಾ!

'ಈಗ ಹೇಳ್ರಿ ವೈನಿ. ಈ ಕಂಪಕ ಹ್ಯಾಂಗ ಈ ಪರಿ vibrate ಆಗ್ತದ??'

'ಅದು ಊದಿನಕಡ್ಡಿ ಕೊಳವಿ ಡಬ್ಬಿಯೊಳಗ ಏಳೆಂಟು ಕಡಜೀರಿಗಿ ಹುಳ ಹಾಕಿ, ಒಮ್ಮೆಲೇ ಅಲುಗಾಡಿಸಿದ ಕೂಡಲೇ ಅವು ಏಕ್ದಂ ರೈಸ್ ಆಗಿ ಅಂದ್ರ ಉದ್ರೇಕಗೊಂಡು ಒಳಗೇ ಗಿರ್ರ್ ಅಂತ ಗಿರಕಿ ಹೊಡಿತಾವ. ಊದಿನಕಡ್ಡಿ ಕೊಳವೆಯ ಒಳಭಾಗಕ್ಕೆ ಹೋಗಿ ಡಿಕ್ಕಿ ಹೊಡ್ಕೊತ್ತಾವ. ಅದು ಯಾವ ಪರಿಲೆ, ಯಾವ ಫೋರ್ಸಿನಿಂದ ಡಿಕ್ಕಿ ಹೊಡೆದುಕೊಳ್ಳತಾವ ನೋಡು. ಅದಕ್ಕೇ ಇದು ಈ ಪರಿ vibrate ಆಗ್ತದ. ಹ್ಯಾಂಗದ ನನ್ನ ಅವಿಷ್ಕಾರ? ಇದೇ 'ಕಡಜೀರಿಗೆ ಕಂಪಕ'. ನನ್ನ ಗೆಳೆತ್ಯಾರು ಕನ್ನಡ ಹೆಸರು ಅಷ್ಟು ಮಾಡರ್ನ್ ಇಲ್ಲ ಅಂತ ಹೇಳಿ ಇಂಗ್ಲಿಷ್ ಒಳಗ ಟಸ್ ಪುಸ್ ಅಂತ Wasp Vibrator ಅಂತಾರ.'

'ನಿಮ್ಮ ಅವಿಷ್ಕಾರ ಭಾಳ ಮಸ್ತದರೀ ವೈನಿ. ಇದರ ಉಪಯೋಗಗಳೇನು???'

'ಏ..... ನಾ ಹಾಂಗೇ ಸುಮ್ಮನೇ ಏನೋ ಕಿತಬಿ ಅಂತ ಮಾಡಿದ್ದೆ. ನಮ್ಮ ಬಾಜೂ ಮನಿ ಸಣ್ಣ ಹುಡುಗ ಗೋಪೂಗ ಏನರೆ ಆಟಿಗಿ ಸಾಮಾನು ಮಾಡಿಕೊಡೋಣ ಅಂತ ವಿಚಾರ ಬಂತು. ಆಮ್ಯಾಲೆ ನೋಡಿದರೆ ಸಣ್ಣ ಹುಡುಗೂರಕಿಂತ ದೊಡ್ದವರೇ ಇದನ್ನ ಭಾಳ ಲೈಕ್ ಮಾಡ್ಲಿಕತ್ತಾರ! ಅದೂ ನನ್ನ ಗೆಳೆತಿಯರು ಅಂತೂ ಮುಗಿದೇ ಹೋತು. ಭಾಳ ಅಂದ್ರ ಭಾಳ ಲೈಕ್ ಮಾಡ್ಲಿಕತ್ತುಬಿಟ್ಟಾರ.'

'ವಾಹ್! ಇದು ಒಳ್ಳೆ ವಯಾಗ್ರಾ ಗುಳಿಗಿ ಕಂಡು ಹಿಡಿದಂಗ ಆತಲ್ರೀ ವೈನಿ!'

'ಏನದು ವಯಾಗ್ರಾ ಗುಳಿಗಿ? ನಿಮ್ಮ ಗೆಳಯಾ ಚೀಪ್ಯಾ ಉರ್ಫ್ ನಮ್ಮನಿಯವರು ತೊಗೋತ್ತಾರಲ್ಲ ಅದೇನು ಮತ್ತ?' ಅಂತ ಜಬರಿಸಿದರು ವೈನಿ.

'ಏ, ಅದು ಚೀಪ್ಯಾ ತೊಗೊಳ್ಳೋದು ನಯಾಗ್ರಾ ಗುಳಿಗಿ ಬಿಡ್ರೀ. ಇದು ವಯಾಗ್ರಾ ಅಂದ್ರ ಬ್ಯಾರೆ ಟೈಪಿನ ಗುಳಿಗಿ. ಅದು ಹಾರ್ಟ್ ಪ್ರಾಬ್ಲಮ್ ಸಲುವಾಗಿ ಅಂತ ಕಂಡುಹಿಡಿದಿದ್ದರಂತ. ಹಾರ್ಟ್ ಪ್ರಾಬ್ಲಮ್ಮಿಗೆ ಏನೂ ಅಷ್ಟು ಉಪಯೋಗವಾಗಲಿಲ್ಲ. ಆದರೆ ಹಾರ್ಟ್ ಕೆಳಗಿನ ಭಾಗವಾದ 'ಪಂಚಾಂಗದ' ತೊಂದರೆಗೆ ಭಾಳ ಉಪಯೋಗ ಆಗ್ಯದಂತ ಆ ಗುಳಿಗಿ. ನಿಮ್ಮ ಅವಿಷ್ಕಾರವೂ ಹಾಂಗೇ ಅದ. ಸಣ್ಣ ಹುಡುಗರ ಸಲುವಾಗಿ ಅಂತ ಏನೋ ಆಟಿಗೆ ಸಾಮಾನು ಮಾಡಿದರೆ ಅದು ನಿಮ್ಮ ಮಹಿಳಾ ಮಂಡಲದಾಗ ಭಾಳ ಫೇಮಸ್ ಆಗಿಬಿಟ್ಟದ ಅಂತಾತು. ಬೆಸ್ಟ್ ಆತು ಬಿಡ್ರೀ.'

'ಹೂಂನೋ ಮಾರಾಯಾ. ಅದೂ ಈ ನನ್ನ ಗೆಳೆತಿಯರಲ್ಲಿ ಇಂಗ್ಲೆಂಡ್, ಅಮೇರಿಕಾ, ಆಸ್ಟ್ರೇಲಿಯಾ, ಆಫ್ರಿಕಾ, ದುಬೈ ಅಲ್ಲೆಲ್ಲ ಇದ್ದು ಬಂದ ಕೆಲವು ಮಾಡರ್ನ್ liberated ಮಂದಿ ಇದ್ದಾರ ನೋಡು. ಅವರಂತೂ ಇದಕ್ಕೆ ಫುಲ್ ಫಿದಾ. 'ಇದು ಏನು ಮಸ್ತ ಅದಲೇ ರೂಪಿ! ಎಂತೆಂತಾ vibrator ಅವ ನಮ್ಮ ಕಡೆ. ಆದರೆ ಈ ಕಡಜೀರಿಗೆ ಹುಳದ vibrator ನ್ನು ಮಾತ್ರ ಬೇರೆ ಯಾವದಕ್ಕೂ ಹೋಲಿಸಲಿಕ್ಕೆ ಸಾಧ್ಯವೇ ಇಲ್ಲ. ಏಕ್ದಂ ಮಸ್ತ ಅಂದ್ರ ಮಸ್ತ. ಒಮ್ಮೆ ಮಸ್ತ ಅಲ್ಲಾಡಿಸಿ ಒಳಗ ಜಡಿದುಕೊಂಡುಬಿಟ್ಟರೆ ಅಷ್ಟೇ ಮತ್ತ. ಸ್ವರ್ಗ ಸುಖ. ಸ್ವರ್ಗಕ್ಕೆ ಕಿಚ್ಚು ಹಚ್ಚತಾವ ನೋಡು ಈ ಸೂಡ್ಲಿ ಕಡಜೀರಿಗೆ ಹುಳ. ಏನು ಐಡಿಯಾ ಮಾರಾಳ ನಿಂದು??? ಮಸ್ತ ತಯಾರ್ ಮಾಡಿ ನೋಡಲೇ ರೂಪಿ!' ಅಂತಾರ. ಮ್ಯಾಲಿಂದ, 'ನನಗ ವಾರಕ್ಕೆ ಒಂದು ಐದು ಮಾಡಿಕೊಡು. ನನಗ ತಿಂಗಳಕ್ಕೆ ಒಂದು ಇಪ್ಪತ್ತು ಮಾಡಿಕೊಡು,' ಅಂತ ಹೀಂಗ ಗಂಟು ಬಿದ್ದಾರ ನೋಡು. ಏನು ಹೇಳಲಿ ಮಾರಾಯಾ? ಅವರ ಡಿಮ್ಯಾಂಡ್ ಪೂರೈಸಲಿಕ್ಕೆ ಆಗವಲ್ಲತು. ನನಗಂತೂ ಇಡೀ ಧಾರವಾಡ ತುಂಬಾ ಕಡಜೀರಿಗಿ ಹುಳಾ ಹುಡುಕಿಕೊಂಡು ಅಡ್ಯಾಡೋದೇ ಆಗಿಬಿಟ್ಟದ. ಇದು ಹೀಂಗss ಮುಂದುವರೀತು ಅಂದ್ರ ಕಡಜೀರಿಗಿ ಹುಳಾ ಹಿಡಿಲಿಕ್ಕೆ ಅಂತನೇ ಮಂದಿ ಇಟ್ಟುಕೊಳ್ಳೊ ಪರಿಸ್ಥಿತಿ ಬರ್ತದ ನೋಡಪಾ. ಸಣ್ಣಾಕಿದ್ದಾಗ ನಾ ಇಷ್ಟೊಂದು ಬೋರಂಗಿ ಸಹಿತ ಹಿಡಿದಿರಲಿಲ್ಲ. ಈಗ ಅದರ ಸಾವಿರಪಟ್ಟು ಕಡಜೀರಿಗಿ ಹುಳಾ ಹಿಡಿಲಿಕತ್ತೇನಿ! ಏನಂತಿ ಇದಕ್ಕೆ??'

ಇಷ್ಟು ಮಾತಾಡುವಷ್ಟರಲ್ಲಿ ನಮ್ಮ ಮುಂದಿದ್ದ wasp vibrator ಜಿಗಿದು ಜಿಗಿದು ಕುಣಿದು ಶಾಂತವಾಗಿತ್ತು. ಅದು ಶಾಂತವಾಗಿಬಿಡ್ತು ಅಂತ ಅಶಾಂತರಾದ ರೂಪಾ ವೈನಿ ಅದನ್ನು ಮತ್ತೊಮ್ಮೆ ಕೈಯಾಗ ತೊಗೊಂಡು ಆವೇಶದಿಂದ ಗಿಚ್ಚಾಗಿ ಜೋರಾಗಿ ಅಲ್ಲಾಡಿಸಿಬಿಟ್ಟರು. ಅದು ಮತ್ತ ಎರ್ರಾಬಿರ್ರಿಯಾಗಿ vibrate ಆತು. ವೈನಿ ಸಣ್ಣ ಹುಡುಗಿ ಗತೆ ಕಣ್ಣರಳಿಸಿ ನಕ್ಕರು. ಜಿಗಿದು ಜಿಗಿದು ಚಪ್ಪಾಳಿ ಹೊಡೆದರು. ಡಿಸ್ಕೋ ಶಾಂತಿ ನೆನಪಿಗೆ ಬಂದಳು. ಅವರ ಅವಿಷ್ಕಾರದ ಮೇಲೆ ಎಷ್ಟೊಂದು ಅಭಿಮಾನ, ಪ್ರೀತಿ ರೂಪಾ ವೈನಿಗೆ! ಏನು ಹೇಳಲಿ?

'ವೈನಿ, ಈ ಕಡಜೀರಿಗೆ ಕಂಪಕ (Wasp Vibrator) ಎಷ್ಟು ದಿವಸ ಬಾಳಿಕೆ ಬರ್ತದ ಅಂತೀರಿ?'

'ಒಳಗ ಇರೋ ಕಡಜೀರಿಗಿ ಹುಳಗಳಿಗೆ ಎಷ್ಟು ಆಯುಷ್ಯ ಇರ್ತದೋ ಅಲ್ಲಿ ತನಕಾ ಬಾಳಿಕೆ ಬರ್ತದ. ಇನ್ನು ಯಾರರೆ ಧೈರ್ಯಮಾಡಿ, ಒಳಗಿರುವ ಕಡಜೀರಿಗೆ ಹುಳುಗಳನ್ನು ಮೆತ್ತಗೆ ಹೊರಗೆ ತಂದು, ಅವಕ್ಕ ಊಟ ಗೀಟಾ ಹಾಕಿ, ಅವನ್ನು ಸಾಕಿ ಸಲುಹಿದರೆ ಜಾಸ್ತಿ ದಿನ ಬರಬಹುದು. ಆದ್ರ ಅದನ್ನೆಲ್ಲ ಯಾರು ಮಾಡಿಕೋತ್ತ ಕೂಡತಾರ? ಮತ್ತ ಕೆಟ್ಟ ರಿಸ್ಕಿ ಬ್ಯಾರೆ. ಹಾಂಗಾಗಿ ಒಂದು ಹತ್ತು ಸಾರೆ ಗಿಚ್ಚಾಗಿ ಶೇಕ್ ಮಾಡಿ, vibrator ಮಜಾ ತೊಗೊತ್ತಾರ. ಯಾವಾಗ ಒಳಗಿನ ಹುಳಾ ಸತ್ತು, vibrate ಆಗೋದು ನಿಂತಿತು ಅಂದ್ರ ಮತ್ತೊಂದು vibrator ತೊಗೊತ್ತಾರ. ಎಲ್ಲಾ use & throw. ಚೈನಾ ಮಾಲು ಇದ್ದಂಗ. ಏನಪಾ? ಕಡಜೀರಿಗೆ ಹುಳಾ ಏನು ಬೇಕಾದಷ್ಟು ಸಿಗ್ತಾವ. ಇನ್ನು ವಾಸು ಊದಿನಕಡ್ಡಿ ಕೊಳವಿ ಡಬ್ಬಿ. ಅವೂ ಸಿಗ್ತಾವ. ತಿಪ್ಪಿ ಆರಿಸೋ ಹೇಮಾಮಾಲಿನಿ ಅಂತಾಕಿಗೆ ಹೇಳಿಬಿಟ್ಟರೆ ಆತು. ನಾ ಅಂತೂ ಅಕಿಗೇ ಕಾಂಟ್ರಾಕ್ಟ್ ಕೊಟ್ಟುಬಿಟ್ಟೇನಿ. ಎಲ್ಲೆ ವಾಸು ಊದಿನಕಡ್ಡಿ ಕೊಳವಿ ಡಬ್ಬಿ ಸಿಕ್ಕರೂ ನನಗೇ ತಂದುಕೊಡುವ ಮೋಡ್ಕಾ ಮಂದಿ ತಯಾರಾಗಿಬಿಟ್ಟಾರೋ ಈಗ ಧಾರವಾಡದಾಗ! ಗೊತ್ತದೇನು??'

'ರೀ ವೈನಿ, ಒಂದು ಪ್ರಶ್ನೆ. ನಿಮ್ಮ ಗೆಳತಿಯರು ಅದೂ ಫಾರಿನ್ ರಿಟರ್ನ್ಡ್ ಗೆಳತಿಯರು ಇದನ್ನು ಇಷ್ಟ್ಯಾಕ ಲೈಕ್ ಮಾಡ್ತಾರ? ಯಾಕ ಅವರಿಗೆ ಇದು ಅಷ್ಟು ಸೇರ್ತದ??'

'ಅದು ನಂಗೂ ಗೊತ್ತಿಲ್ಲೋ. ನಾ ಅವರನ್ನು ಕೇಳಿದೆ. ಅವರು ಉತ್ತರ ಹೇಳದೇ ತಟ್ಟಿಕೊಂಡು ತಟ್ಟಿಕೊಂಡು ಪೆಕಪೆಕಾ ಅಂತ ನಕ್ಕುಬಿಟ್ಟರು. ನನಗ ಏನೂ ತಿಳಿಲಿಲ್ಲ. ಮತ್ತ ಮತ್ತ ಕೇಳಿದರೆ, 'ಈ ಕಡಜೀರಿಗೆ ಕಂಪಕ (Wasp Vibrator) ಭಾಳ ಮಸ್ತ ಅದಲೇ ರೂಪಿ. ನಮ್ಮ ಗಂಡಂದಿರಕಿಂತ ಛಲೋ ಕೆಲಸ ಮಾಡ್ತದಲೇ ಇದು. ಇದು ಒಂದು ಇದ್ದುಬಿಟ್ಟರೆ ಆಂವಾ ಗಂಡ, ಲಂಡ, ಭಂಡ ಯಾರೂ ಬ್ಯಾಡ ನೋಡಲೇ ರೂಪಿ. Wasp vibrator is simply awesome!' ಅಂದ್ರಪಾ. ನನಗ ಏನೂ ತಿಳಿಲಿಲ್ಲ. ಮುಂದ ಒಮ್ಮೆ ಯಾವಗರೆ ನೀನೇ ನನ್ನ ಗೆಳತಿಯರಾಗ ಯಾರನ್ನರೆ ಹೀಂಗss ಕರೆದು ಇಂಟರ್ವ್ಯೂ ಮಾಡು. ಆಗಾದರೂ ಹೇಳ್ತಾರೋ ನೋಡೋಣ. ನಾ ಕೇಳಿದರೆ ಬರೇ ಕಿಸಿಕಿಸಿ ನಗ್ತಾರ! ಸೂಡ್ಲಿ ಗೆಳೆತ್ಯಾರು!'

'ವೈನಿ, ನಿಮ್ಮ ಗೆಳತಿಯರು ಹೇಳಿದ್ದರಾಗ ಪಾಯಿಂಟ್ ಅದ ಅಂತ ಅನ್ನಿಸ್ತದ. ಇಲ್ಲಂದ್ರ ನಿಮ್ಮ wasp vibrator ಸಿಕ್ಕಿದ ಮ್ಯಾಲೆ ಗಂಡ ಬ್ಯಾಡೇ ಬಾಡ ಅಂತಾರ ಅಂದ ಮ್ಯಾಲೆ ಗಂಡನ ಮೇಲಿನ ಅವಲಂಬನೆಯನ್ನು ಈ ನಿಮ್ಮ ಅವಿಷ್ಕಾರ ತೆಗೆದುಹಾಕಿಬಿಟ್ಟದ ಅಂತಾತು. ಹಾಂಗಿದ್ದರೆ ಈ ನಿಮ್ಮ ಕಡಜೀರಿಗಿ ಕಂಪಕ, wasp vibrator ಗಂಡಂದಿರು ಮಾಡುವ ಯಾವ ಯಾವ ಕೆಲಸಗಳನ್ನು ಮಾಡ್ತದ ಅಂತೀರಿ?'

'ಗಂಡಂದಿರು ಮಾಡುವ ಕೆಲಸ ಅಂದ್ರ ಮತ್ಯಾವದಾಪಾ?? ಅದೇ ಭಾಂಡೆ ತಿಕ್ಕೋದು, ಫರ್ಶಿ ಒರಸೋದು, ರಂಗೋಲಿ ಹಾಕೋದು, ಕಸಾ, ಮುಸರಿ ಮಾಡೋದು, ಅರಬಿ ಒಗೆಯೋದು, ಮಕ್ಕಳ ಕುಂಡಿಗೆ ನೀರು ಹಾಕೋದು, ಚಡ್ಡಿ ಕಳಿಯೋದು ಮತ್ತ ಹಾಕಿಸೋದು, ರೇಶನ್ ತರೋದು, ಪಂಪ್ ಹೊಡೆದು ನೀರು ತರೋದು, ಇತ್ಯಾದಿ ಕೆಲಸಗಳನ್ನು ಗಂಡಂದರು ಮಾಡ್ತಾರ. ನಿನ್ನ ದೋಸ್ತಾ ಚೀಪ್ಯಾ ಉರ್ಫ್ ನಮ್ಮನಿಯವರಂತೂ ಇವೆಲ್ಲಾ ಮಾಡ್ತಾರ. ನನ್ನ ಗೆಳತಿಯರಿಗೆ ಅವೆಲ್ಲಾ ಕೆಲಸಾ ಈ ನನ್ನ vibrator ಹ್ಯಾಂಗ ಮಾಡಿಕೊಡ್ತದ ಅನ್ನೋದೇ ನನಗ ಒಟ್ಟೇ ತಿಳಿವಲ್ಲತು ನೋಡೋ. ನಿನಗೇನರೆ ಐಡಿಯಾ ಬಂತೇನು? ಏನೇ ಮಾಡಿದರೂ ಇಷ್ಟು ಸಣ್ಣ vibrator ಕಸಾ ಹ್ಯಾಂಗ ಹೊಡಿತದ? ಫರ್ಶಿ ಹ್ಯಾಂಗ ಒರಸ್ತದ? ರಂಗೋಲಿ ಹ್ಯಾಂಗ ಹಾಕ್ತದ? ಅರವಿ ಹ್ಯಾಂಗ ಒಗಿತದ? ರೇಶನ್ ಹ್ಯಾಂಗ ತರ್ತದ? ನನಗಂತೂ ತಿಳಿವಲ್ಲತು. ನನ್ನ ಗೆಳತಿಯರಂತೂ ಬಿಡು. vibrator ಸಿಕ್ಕ ಮ್ಯಾಲೆ ಅವರೇ ನನಗ ಸಿಗವಲ್ಲರು. ವ್ಯಾನಿಟಿ ಬ್ಯಾಗಿನಾಗ ಒಂದು ನಾಲ್ಕು wasp vibrator ಹಾಕ್ಕೊಂಡು ಟ್ರಿಪ್ ಮ್ಯಾಲೆ ಟ್ರಿಪ್ ಹೊಡದೇ ಹೊಡಿಲಿಕತ್ತಾರ. ಅದೂ ಗಂಡನ ಬಿಟ್ಟು ಇವರ ಮಹಿಳಾ ಮಂಡಲದ ಟ್ರಿಪ್. ಈ ಕಡಜೀರಿಗಿ ಹುಳದ ಕಂಪಕದ ಮಹಿಮೆ ಅಂದ್ರ ಏನಂತ ಮಾಡಿ? ಹಾಂ!?'

'ಇರಲಿ ಬಿಡ್ರಿ ವೈನಿ. ನಿಮ್ಮ ಗೆಳತಿಯರದ್ದು ಏನು ಗೊಳೋ ಏನೋ. ಒಟ್ಟಿನಾಗ ಅವರ ಗಂಡಂದಿರು ಮಾಡುವ, ಮಾಡದೇ ಇರುವ ಎಲ್ಲಾ ತರಹದ ಕೆಲಸಗಳನ್ನೂ ನಿಮ್ಮ ಈ ಅವಿಷ್ಕಾರ ಮಾಡಿಬಿಡ್ತದ ಅಂತಾತು. ಅದಕ್ಕೇ ಅವರಿಗೆ ಇದು ಭಾಳ ಸೇರಿಬಿಟ್ಟದ. ಅಲ್ಲರೀ ವೈನಿ?'

'ಹೂಂ! ನನಗೂ ಹಾಂಗೇ ಅನ್ನಿಸ್ತದ. ಆದರೂ ನನ್ನ ಗೆಳತಿಯರ ಯಾವ ಖಾಸ್ ಕೆಲಸಾ ಈ ನನ್ನ ಕಿತಬಿ ಅವಿಷ್ಕಾರ ಅಷ್ಟು ಮಸ್ತಾಗಿ ಮಾಡಿಕೊಡ್ತದ ಅಂತ ಗೊತ್ತಾಗಿದ್ದರೆ ನಾನೂ ಉಪಯೋಗ ಮಾಡಬಹುದಿತ್ತು ಅಂತ. ಅದೇನೋ ಅಂತಾರಲ್ಲ... ಮಾಡಿದ್ದು ನಾವು ಆದ್ರ ಫಲಾ ಮಾತ್ರ ಬೇರೆಯವರಿಗೆ. ಹಾಂಗಾತು ಇದು. ಇರಲಿ ನನಗ ಭಾಳ ಪುಣ್ಯ ಬರ್ತದ ತೊಗೊ. ಇಷ್ಟು ಮಂದಿ ಗೆಳತಿಯರಿಗೆ ಹೆಲ್ಪ್ ಆಗ್ಯದ ನೋಡು. ಭಾಳ ಪುಣ್ಯಾ ಬಂತು!'

'ವೈನಿ, ನಿಮಗ ಭಾಳ ಧನ್ಯವಾದ. ನೀವು ಈಗ ಭಾಳ ಬ್ಯುಸಿ ಆಗೀರಿ ಅಂತ ಗೊತ್ತದ. ಸದ್ಯಕ್ಕೆ ತೀರಿಸಲಾಗದಷ್ಟು ಕಡಜೀರಿಗೆ ಕಂಪಕ, wasp vibrator ಗೆ ಆರ್ಡರ್ ಬಂದು ಕೂತಾವ ಅಂತ ಬ್ಯಾರೆ ಹೇಳಿದಿರಿ. ಊರ ತುಂಬಾ ಕಡಜೀರಿಗೆ ಹುಳಾ ಹುಡುಕಿಕೊಂಡು ಹುಚ್ಚಿ ಗತೆ ಅಡ್ಯಾಡಲಿಕತ್ತೀರಿ ಅಂತನೂ ಹೇಳಿದಿರಿ. ಇಷ್ಟೆಲ್ಲಾ ಇದ್ದರೂ ನಮ್ಮ ಬ್ಲಾಗಿಗೆ ಬಂದು ಸಂದರ್ಶನ ಕೊಟ್ಟಿರಿ. ಕಡಜೀರಿಗೆ ಹುಳದ ಕಂಪಕ ಉರ್ಫ್ wasp vibrator ಹ್ಯಾಂಗ ಮಾಡೋದು ಅನ್ನೋದನ್ನ ಹೇಳಿಕೊಟ್ಟಿರಿ. ತೋರಿಸಿ ಸಹಿತ ಕೊಟ್ಟಿರಿ. ಎಲ್ಲರ ಪರವಾಗಿ ನಿಮಗೆ ಧನ್ಯವಾದ. ಥ್ಯಾಂಕ್ಸ್ ರೂಪಾ ವೈನಿ!'

'mention not! mention not! ಏ..... ಇದೇನು ಮಹಾ? ನೀ ನನ್ನ ಪೆಟ್ ಮೈದುನಾ. ನಾ ನಿನ್ನ ಪೆಟ್ ವೈನಿ. ನೀ ಕರೆದರೆ ನಾ ಬರಂಗಿಲ್ಲಾ ಅಂತೇನೇನು?  ಯಾರಿಗಾದರೂ ಏನರೆ ಹೆಚ್ಚಿನ ಮಾಹಿತಿ ಬೇಕು ಅಥವಾ ಆರ್ಡರ್ ಕೊಡಬೇಕು ಅಂದರ ನನ್ನ ಫೋನ್ ನಂಬರಿಗೆ ಫೋನ್ ಮಾಡಲು ಹೇಳು.'

'ಸರಿ ವೈನಿ. ನಿಮ್ಮ ಫೋನ್ ನಂಬರ್ ಹಾಕೇಬಿಡ್ತೇನಿ,' ಅಂತ ಹೇಳಿ ವೈನಿ ನಂಬರ್ ತೋರಿಸಿದೆ.

'ಮಂಗೇಶಾ, ಒಂದು ಪ್ರಶ್ನೆ?'

'ಕೇಳ್ರಿ ವೈನಿ.'

'vibrator ಅಂದ್ರ ಏನೋ?'

'ಅಯ್ಯ ಇವರ! that which vibrates is a vibrator. ಅಷ್ಟರೀ ವೈನಿ.'

'ಈ ನನ್ನ ಮೊಬೈಲ್ ಫೋನ್ ಸುದಾ vibrate ಆಗ್ತದ. ಇದಕ್ಯಾಕ vibrator ಅನ್ನೋದಿಲ್ಲ??!!'

ಭಾರಿ ಪ್ರಶ್ನೆ.

'ವೈನಿ ಅದು ಹೀಂಗ ಇರಬಹುದು ನೋಡ್ರೀ.....'

'ಏನು ಹ್ಯಾಂಗ ಇರಬಹುದು!?'

'ಅದು vibrate ಭಾಳ ವಸ್ತುಗಳು ಆಗ್ತಾವ. ಮೊಬೈಲ್ ಫೋನ್ vibrate ಆಗ್ತದ. ಶೇಕ್ ಅಬ್ದುಲ್ಲಾ ಟೈಪಿನ ಮಂದಿಯಂತೂ ಬಿಡ್ರೀ. vibrate ಒಂದೇ ಅಲ್ಲ ಫುಲ್ ಶೇಕ್ ಆಗಿಬಿಡ್ತಾರ. ಹಾಂಗಾಗಿ vibrator ಅಂತ ಕರೆಸಿಕೊಳ್ಳಬೇಕು ಅಂದ್ರ.........'

'ಅಂದ್ರ????'

'ಅದು ಉದ್ದಕ, ರೌಂಡ್ ಇರಬೇಕು. ಮ್ಯಾಲಿಂದ vibrate ಸುದಾ ಆಗಬೇಕು. ಹಾಂಗಿದ್ದರೆ ಮಾತ್ರ ಅದಕ್ಕೆ vibrator ಅನ್ನಬಹುದು ನೋಡ್ರೀ ವೈನಿ. ಹೀಂಗಂತ ನನಗ ಅನಿಸ್ತದ. ಖಾತ್ರಿ ಗೊತ್ತಿಲ್ಲರಿ ಮತ್ತ.'

'ಹಾಂ! ನೀ ಹೇಳೋದು ಬರೋಬ್ಬರಿ ಅದ ಅನಿಸ್ತದ. ವಾಸು ಊದಿನಕಡ್ಡಿ ಕೊಳವಿ ಡಬ್ಬಿ ಉದ್ದನೂ ಇರ್ತದ. ರೌಂಡ್ ಸುದಾ ಇರ್ತದ. ಒಳಗ ಕಡಜೀರಿಗಿ ಹುಳಾ ಹಾಕಿದ್ದರಿಂದ vibrate ಸಹಿತ ಆಗ್ತದ. ಅದಕ್ಕೇ ಇದು vibrator. ಅಲ್ಲಾ???'

'ಇರಬಹುದ್ರಿ ವೈನಿ. ಆದರೂ ಖಾತ್ರಿ ಮಾಡಿಕೊಳ್ಳಬೇಕು ಅಂದ್ರ ನಿಮ್ಮ ಗೆಳತಿಯರ ಕಡೆ ಬೇಕಾದರೆ ಕೇಳೇಬಿಡ್ರಿ, ಅವರು ಯಾವ vibrator ಬಗ್ಗೆ ಮಾತಾಡಿದರು ಅಂತ. ನನಗ ಮಾತ್ರ ಗೊತ್ತಿಲ್ಲ ಬಿಡ್ರೀ.'

'ನಾ ಇನ್ನು ಬರ್ತೇನಪಾ ಮಂಗೇಶಾ. ಮನಿ ಕಡೆ ಬಾ. ನಿನಗೂ ಬೇಕಾದ್ರ ಮಾಡಿಕೊಡ್ತೇನಿ wasp vibrator,' ಅಂತ ಹೇಳಿದ ವೈನಿ ಹೊರಡಲಿಕ್ಕೆ ಎದ್ದರು.

'ಥ್ಯಾಂಕ್ಸ್ ರೀ ವೈನಿ. ಆ ಕಡಜೀರಿಗಿ ಹುಳದ vibrator ತೊಗೊಂಡು ನಾ ಏನು ಮಾಡ್ಲಿ?' ಅಂತ ಕೇಳಿದೆ.

'ನಾ ಅಂತೂ ನಿನಗ ಅಂದ್ರ ನನ್ನ ಪೆಟ್ ಮೈದ್ನಗ ಅರ್ಧಾ ಡಜನ್ ಮಾಡಿ ಕೊಡಾಕಿನೇ. ಅದೂ ಫ್ರೀ. ನೀ ಏನರೆ ಮಾಡ್ಕೋ. ನಿನಗ ಬ್ಯಾಡಾದ್ರ ನಿನ್ನ ಗೆಳತಿಯರಿಗೆ ಕೊಡು. ಇರಬೇಕಲ್ಲ ಗೆಳತಿಯರು? ಅವರಿಗೆ ಕೊಡು,' ಅಂದ ವೈನಿ, 'ಒಂದೊಂದರಾಗ ಎಷ್ಟೆಷ್ಟು ಕಡಜೀರಿಗಿ ಹುಳಾ ಹಾಕಿದ್ದು ಬೇಕು ನಿನಗ? ಆರರಿಂದ ಎಂಟು ಸ್ಟ್ಯಾಂಡರ್ಡ್. ನೀ ಜಾಸ್ತಿ ಹಾಕಿ ಮಾಡಿಕೊಡು ಅಂದ್ರ ಹಾಂಗೇ ಮಾಡಿಕೊಡತೇನಿ. ಓಕೆನಾ??' ಅಂತ ಕೇಳಿದರು.

'ಹೂಂನ್ರಿ ಹಾಂಗೇ ಮಾಡ್ತೇನಿ. ಯಾರರೆ ಗೆಳತಿಯರು ಬೇಕು ಅಂದ್ರ ಅವರಿಗೇ ಕೊಟ್ಟುಬಿಡ್ತೇನಿ ನಿಮ್ಮ ಕಡಜೀರಿಗಿ ಕಂಪಕವನ್ನು. ಹೋಗಿ ಬರ್ರಿ ವೈನಿ,' ಅಂದೆ.

***

ಗುಡ್ ಐಡಿಯಾ. ಇನ್ನು ಸಿಕ್ಕ ಸಿಕ್ಕ ಗೆಳತಿಯರೆಲ್ಲರ ಹತ್ತಿರ ಕೇಳಬೇಕು. ಪತ್ರ ಬರದೇಬಿಡಬೇಕು. ಬರದೇಬಿಟ್ಟೆ. ಮಂಗೇಶ ಬರೆದನು ಒಲವಿನ ಓಲೆ ಕಡಜೀರಿಗೆ ಕಂಪಕದ ಬಗ್ಗೆ..... 

ಪ್ರಿಯ ಗೆಳತಿ,

ನಿನಗೆ ನನ್ನ ಹಾಪ್ ನಮಸ್ಕಾರಗಳು.

ನಾ ಇಲ್ಲೆ ಆರಾಮ್. ನೀ ಅಲ್ಲೆ ಆರಾಮ ಏನು? ನಮ್ಮ ವೈನಿ ಒಬ್ಬರು ಹೀಂಗ ಒಂದು ಹೊಸ ಅವಿಷ್ಕಾರ ಮಾಡ್ಯಾರ ನೋಡು. ಗಂಡಂದಿರು ಮಾಡೋ ಕೆಲಸಕ್ಕಿಂತ ಮತ್ತೂ ಛಲೋ ಕೆಲಸಾ ಮಾಡ್ತದಂತ ನೋಡು. ನಿನಗ ಬೇಕೇನು? ನಿನ್ನ ಗಂಡಾ ಕೆಲಸಾ ಗಿಲಸಾ ಮಾಡ್ತಾರೋ ಇಲ್ಲೋ??? how's his performance? ಅಂದ್ರ ಮನಿಕೆಲಸದಾಗ performance ಹ್ಯಾಂಗದ ಅಂತ. ಯಾವ ಕೆಲಸ ಅಂತ ಕೇಳಿದಿಯೇನು? ಅದು ಮಾತ್ರ ನನಗೂ ಗೊತ್ತಿಲ್ಲ. ನಮ್ಮ ವೈನಿಗೂ ಗೊತ್ತಿಲ್ಲ. ಆದ್ರ ಅವರ ಕಡಜೀರಿಗೆ ಕಂಪಕ (Wasp Vibrator) ಭಾಳ ಫೇಮಸ್ ಅಂತೂ ಆಗ್ಯದ. ನಿನಗ ಬೇಕು ಅಂತಾದರೆ ಸರಿಯಾಗಿ ವಿಚಾರ ಮಾಡಿ ತಿಳಿಸು. ನಿನಗ ನಮ್ಮ ವೈನಿಯ wasp vibrator ರೆಗ್ಯುಲರ್ ಮಾಡೆಲ್ ಅಂದ್ರ ವಾಸು ಊದಿನಕಡ್ಡಿ ಡಬ್ಬಿ ಒಳಗ, ಆರರಿಂದ ಎಂಟು ಕಡಜೀರಿಗಿ ಹುಳಾ ಹಾಕಿದ್ದು ಸಾಕೋ ಅಥವಾ ಡಿಗ್ರಿ ಸರ್ಟಿಫಿಕೇಟ್ ಕೊಡುವ ದೊಡ್ಡ ಕೊಳವಿಯೊಳಗ ಇಪ್ಪತ್ತು ಕಡಜೀರಿಗಿ ಹುಳಾ ಹಾಕಿದ್ದು ಬೇಕೋ? ಅಷ್ಟ ಸ್ವಲ್ಪ ತಣ್ಣಗೆ ವಿಚಾರ ಮಾಡಿ ತಿಳಿಸು. ಇಲ್ಲಿ ಒಬ್ಬಾಕಿದು ಇಂಜಿನ್ rebuild ಮಾಡಬೇಕಾತಂತ. ನೀ ಹಾಂಗೆಲ್ಲಾ ಕಾರ್ ಇಂಜಿನ್ ಒಳಗ ತುರಕಬಾರದ್ದನ್ನು ತುರಕೋ ಜಾತಿಯಾಕಿ ಅಲ್ಲ ಅಂತ ನನಗ ಗೊತ್ತದ. ಆದರೂ ಹೇಳಿದೆ. ಇಲ್ಲಿನ ಹಾಪ್ ಲೇಡಿ ಏನು ಮಾಡ್ಯಾಳ ಅಂದ್ರ ಇಂಜಿನ್ ಆಯಿಲ್ ಕಮ್ಮಿ ಇದ್ದಾಗ ಗಿಚ್ಚಾಗಿ ದೊಡ್ಡ vibrator ತುರುಕಿಬಿಟ್ಟಾಳ. ಫುಲ್ ಇಂಜಿನ್ ಬರ್ಬಾದ್ ಆಗ್ಯದ ಅಂತ ಅಕಿದು. ಹೋಗಿ ಹೋಗಿ ಕಾರಿನ ಇಂಜಿನ್ ಒಳಗ vibrator ಯಾಕ ತುರುಕಿದಳೋ ಗೊತ್ತಿಲ್ಲ. ಗಂಡಾ ಹೊಸಾ ಕಾರ್ ಕೊಡಿಸಲಿ ಅಂತ ಪ್ಲಾನ್ ಇರಬೇಕು.

ನಿನ್ನ ಗಂಡಗ ನನ್ನ ಫುಲ್ ನಮಸ್ಕಾರ ತಿಳಿಸು. ಅವರಿಗೆ ಹೇಳು, 'ನಮ್ಮ ಗೆಳೆಯ ಮಂಗೇಶನ ವೈನಿ ಏನೋ wasp vibrator ಅಂತ ಅವಿಷ್ಕಾರ ಮಾಡ್ಯಾರಂತ. ಅದು ಬಂತು ಅಂದ್ರ ನೀವು ಇದ್ದರೂ ಅಷ್ಟ ಬಿಟ್ಟರೂ ಅಷ್ಟ.' ಹಾಂಗss ಸುಮ್ಮನss ಮಷ್ಕಿರಿ ಮಾಡಿ ಧಮಕಿ ಹಾಕು ನಿಮ್ಮ ಯಜಮಾನರಿಗೆ. ಗಂಡಪ್ಪನ್ನ ಗುಂಡಪ್ಪನನ್ನಾಗಿ ಮಾಡು. ಅದನ್ನು ನಾ ನಿನಗ ಹೇಳಿಕೊಡಬೇಕೇನು? ಅದರಾಗ ಮಾಹಿರ್ ನೀ ;)

ಬಾಕಿ ಎಲ್ಲಾ ಆರಾಮ್. ಸರಿ ಹಾಂಗಿದ್ರ. ತಿಳಿಸು. ನೀ ತಿಳಿಸಿದ ಕೂಡಲೇ ನಮ್ಮ ವೈನಿ ಕಡೆ ಕಡಜೀರಿಗೆ ಕಂಪಕ (Wasp Vibrator) ಮಾಡಿಸಿ ನಿನಗ ಕಳಿಸೇಬಿಡ್ತೇನಿ.

ಇಂತಿ ನಿನ್ನ ಮಿತ್ರ,

ಮಂಗೇಶ

* An empty aluminum cigar tube filled with angry wasps makes an inexpensive vibrator. - ಅನ್ನುವ ಒಂದು ಲೈನಿನ ಜೋಕ್ (!) ಈ ಲೇಖನಕ್ಕೆ ಸ್ಪೂರ್ತಿ.

* ಚಿತ್ರಗಳನ್ನು ಅಂತರ್ಜಾಲದಿಂದ ಆರಿಸಿದ್ದು. ಅವುಗಳ ಕಾಪಿ ರೈಟ್ಸ್ ಅವುಗಳ ಮಾಲೀಕರದ್ದು. 

Sunday, August 02, 2015

ನಾದಬ್ರಹ್ಮನ ನಾದಿನಿ!

ಇಲ್ಲಿನ ಮಹನೀಯರೊಬ್ಬರು ತಮ್ಮ ಧರ್ಮಪತ್ನಿಯನ್ನು ತಮ್ಮ 'ಧರ್ಮನಾದಿನಿ' 'ಧರ್ಮನಾದಿನಿ' ಅಂತ ಪರಿಚಯಿಸುತ್ತಾರೆ.

ಧರ್ಮನಾದಿನಿ!!?? ಹ್ಯಾಂ!!!??? What's this nonsense!?

ಫುಲ್ confuse ಆದವರು, 'ಏ, ನಿಮ್ಮಾss! ಸರಿ ಮಾಡಿ ಹೇಳ್ರೀ. ಇವರು ನಿಮ್ಮ ಹೆಂಡತಿಯೋ ಅಥವಾ ನಿಮ್ಮ ನಾದಿನಿಯೋ??' ಅಂತ ಕೇಳಿದರೆ ವಿಚಿತ್ರ ವಿವರಣೆ ಕೊಡುತ್ತಾರೆ. ಹೆಂಡತಿಯ ತಂಗಿಗೆ ನಾದಿನಿ ಅನ್ನುತ್ತಾರೆ ನೋಡಿ. ಅದೇನೋ ಅಂತ ಸಂದೇಹ.

'ಅವಳಿಗೆ ಮತ್ತು ನನಗೆ ಇರುವ ಸಂಬಂಧಾನುಸಾರ ಆಕೆ ನಮ್ಮ ಪತ್ನಿ. ಕರ್ಮಾನುಸಾರ ನಮ್ಮ ನಾದಿನಿ,' ಅಂತ ವೇದಾಂತ ಹೇಳಿಬಿಡುತ್ತಾರೆ.

ಆಗ ಮತ್ತೂ ಕೆಟ್ಟ confusion.

'ಯಾರ ಕರ್ಮಾನುಸಾರ ಇವರು ನಿಮ್ಮ ನಾದಿನಿ????' ಅಂತ ಕೇಳಿದರೆ ಮತ್ತೂ ದೊಡ್ಡ ವೇದಾಂತ.

'ಇಬ್ಬರ ಕರ್ಮಾನುಸಾರವಾಗಿಯೂ ಇವಳು ನನ್ನ ನಾದಿನಿಯೇ,' ಅಂತ ತಮ್ಮ ಬೋಳು ತಲೆ ಮೇಲೆ ಶಿವಾಯ ನಮಃ ಮಾದರಿಯಲಿ ಕೈಯಾಡಿಸುತ್ತಾರೆ. ರೋಡ್ ಮೇಲೆ ಅಲ್ಲಲ್ಲಿ ಅಡ್ಡಾದಿಡ್ಡಿ ಎದ್ದಿರುವ ಹಂಪುಗಳಂತೆ ತಲೆ ಮೇಲೆದ್ದಿರುವ ಗುಮ್ಮಟೆಗಳು ಅವರಿಗೆ ಫೀಲ್ ಆಗುತ್ತವೆ. ನಿಮಗೆ ಕಂಡರೂ ಕಾಣಬಹುದು.

'ಹೆಂಡತಿ ಮತ್ತು ನಾದಿನಿ, ಟೂ ಇನ್ ಒನ್. ಅದು ಹ್ಯಾಂಗ ಸಾದ್ಯರೀ ಸರ್ರಾ!? ತಲಿ ಕೆಟ್ಟು ನಪರ ಎತ್ತು. ಸ್ವಲ ಬಿಡಿಸಿ ಹೇಳ್ರೀಪಾ!' ಅಂತ ಕೇಳಿಕೊಂಡಾಗ ಬರುತ್ತದೆ ಅಂತಿಮ ಉತ್ತರ.

'ಆಕೆಯ ಹತ್ತಿರ ನಾದಿಸಿಕೊಳ್ಳುವದು ನನ್ನ ಕರ್ಮ. ನನ್ನನ್ನು ಹಿಡಿದು ನಾದಿಬಿಡುವದು ಅವಳ ಕರ್ಮ. ಹಾಗಾಗಿ ಆಕೆ ನನ್ನ ನಾದಿನಿಯೇ. ಅದೂ ಧರ್ಮನಾದಿನಿ. ಪೂರ್ವ ಜನ್ಮದ 'ಪುಣ್ಯ' ಕರ್ಮದ ಫಲವಾಗಿ ಈ ಜನ್ಮದಲ್ಲಿ ನಮಗೆ ಧರ್ಮಪತ್ನಿ ಧರ್ಮನಾದಿನಿಯ ರೂಪದಲ್ಲಿ ಸಿಕ್ಕಿಬಿಟ್ಟಿದ್ದಾಳೆ!' ಅಂದು ಮತ್ತೆ ಬೋಳು ತಲೆ ಮೇಲಿನ ಗುಮ್ಮಟೆಗಳ ಸುತ್ತ ಬೆರಳುಗಳಿಂದ ಪ್ರದಕ್ಷಿಣೆ ಹಾಕುತ್ತಾರೆ. ಪತ್ನಿ ಉರ್ಫ್ ನಾದಿನಿಯ ನಾದುವ, ಲಟ್ಟಿಸುವ ಕರ್ಮಯೋಗದ ಪರಿಣಾಮಗಳೇ ಆ ಗುಮ್ಮಟೆಗಳು ಅಂತ ಈಗ ಬರೋಬ್ಬರಿ ಗೊತ್ತಾಗುತ್ತದೆ.

'ಸರಿ, ಕರ್ಮಾನುಸಾರ ನಿಮ್ಮ ಹೆಂಡತಿ ನಿಮ್ಮ ಹೆಂಡತಿಯಲ್ಲ ನಿಮ್ಮ ನಾದಿನಿ. ವಿಚಿತ್ರ ಆದರೂ ಸತ್ಯ. ಒಪ್ಪಿದೆ. ನೀವು ಯಾರು ಅವರಿಗೆ? ನೀವು ಅವರಿಗೆ ಪತಿಯೋ?? ಅಥವಾ......??' ಅಂತ ಕೇಳಿದರೆ ಮತ್ತೂ ವಿಚಿತ್ರ ವಿವರಣೆ ಸಿಗುತ್ತದೆ.

'ನಾನು ಆಕೆಗೆ ನಾದಬ್ರಹ್ಮ!' ಅಂದುಬಿಟ್ಟರು.

ಅವಳು ಇವರಿಗೆ ನಾದಿನಿ. ಇವರು ಆಕೆಗೆ ನಾದಬ್ರಹ್ಮ. What's this????

'ಆಕೆಯ ಹಣೆಯಲ್ಲಿ ನನ್ನನ್ನು ನಾದುವದನ್ನೂ, ನನ್ನ ಹಣೆಯಲ್ಲಿ ಆಕೆಯ ಕೈಯಲ್ಲಿ ನಾದಿಸಿಕೊಳ್ಳುವ ಹಣೆಬರಹವನ್ನು ಖುದ್ದಾಗಿ ಬರೆದುಕೊಂಡು ಬಂದ ಅದೃಷ್ಟವಂತ ನಾನು. ಸಾದಾ ಬ್ರಹ್ಮ ಸಾದಾ ಹಣೆಬರಹ ಬರೆದರೆ ನಮ್ಮಂತಹ ನಾದಬ್ರಹ್ಮರು ನಾದುವ ಮತ್ತು ನಾದಿಸಿಕೊಳ್ಳುವ ಹಣೆಬರಹ ಬರೆದುಬಿಡುತ್ತೇವೆ!' ಅಂದು ತಾವು ಹೇಗೆ ನಾದಬ್ರಹ್ಮ ಅನ್ನುವದನ್ನು ವಿವರಿಸಿದರು.

'ನೀವು ಅದೆಂಗ ನಾದಬ್ರಹ್ಮ ಆದ್ರೀ ಸರ್ರಾ??' ಅಂತ ಕೇಳಿದರೆ ಸಿಗುವ ಉತ್ತರ ಭೀಕರ ಅಷ್ಟೇ ಕರುಣಾಜನಕ.

'ಏನು ಮಾಡೋದ್ರೀ?? ಕಚ್ಚಾ ರಸ್ತೆದಾಗ ಹೊಂಟಿದ್ದ ಉಗುಳು ಮಾರಿ ಮಾರಮ್ಮನ ಮಾದರಿಯ ಇವಳನ್ನು ಪಕ್ಕಾ ಮನಿಯೊಳಗೆ ಕರೆಸಿಕೊಂಡೆ. ಕರೆಯಿಸಿಕೊಂಡಿದ್ದಷ್ಟೇ ಅಲ್ಲ ಅಕಿ ಕೈಯಾಗ ನಾದಿಸಿಕೊಂಡ ಮ್ಯಾಲೆ ನನ್ನನ್ನು ಲಟ್ಟಿಸಿಯೂಬಿಡಲಿಕ್ಕೆ ಅನುಕೂಲವಾಗಲಿ ಅಂತ ಅಕಿ ಕೈಯಾಗ ಸಾಗವಾನಿ ಲಟ್ಟಣಿಗೆ ಕೂಡ ಕೊಟ್ಟ ನಾದಬ್ರಹ್ಮ ರೀ ನಾ  ನಾದಬ್ರಹ್ಮ ರೀ...... ಈ....ಈ... ಈ .... ಈ .... ಈ .... ಈ .... ಈ !!!!' ಅಂತ ಗೊಳೋ ಅಂತ ಅಳುವ ಮಾದರಿಯಲ್ಲಿ ಹಾಡಲಿಕ್ಕೆ ಶುರು ಮಾಡಿಬಿಟ್ಟರು. ಕಾಲಾಗಿನ ಬಾಟಾ ಚಪ್ಪಲ್ ಕೈಯಾಗ ತೊಗೊಂಡು ತಮಗೆ ತಾವೇ ರಪ್ರಪಾ ಅಂತ ಬಾರಿಸಿಕೊಂಡರು. ಹಾಡಿಗೆ ಸಂಗೀತದ ಮಾದರಿಯಲ್ಲಿ ರಪ್ರಪಾ ಕೇಳಿಸಿತು! ಪಾಪ ಅನ್ನಿಸಿತು. ನಾದಬ್ರಹ್ಮರ ತಲೆಗೆ ಒಂದಿಷ್ಟು ಬ್ರಾಹ್ಮೀ ತೈಲದ ಜರೂರತ್ತಿದೆ ಅಂತ ಅನ್ನಿಸಿತು. ಅವರ ಸಾದಾ ನಸೀಬ ಬರೆದಿರುವ ಸಾದಾ ಬ್ರಹ್ಮ ಬ್ರಾಹ್ಮೀ ತೈಲವನ್ನು ಬರೆದಿದ್ದಾನೋ ಇಲ್ಲವೋ?! ಯಾರಿಗೆ ಗೊತ್ತು!?

ನಾದಮಯ….ನಾದಮಯ ಈ ಲೋಕವೆಲ್ಲ...ನಾದಿನಿಯಿಂದ ನಾದಿಸಿಕೊಳ್ಳೋ ನಾದಬ್ರಹ್ಮರ....ನಾದಮಯ….ನಾದಮಯ ಈ ಲೋಕವೆಲ್ಲ.

** ನಾದಬ್ರಹ್ಮನ ಬಗ್ಗೆ ತಿಳಿದುಕೊಂಡಿರಿ. ಇನ್ನು ಕುಂಚಬ್ರಹ್ಮನೊಬ್ಬ ಕುಚಬ್ರಹ್ಮ ಹೇಗೆ ಆದ ಅನ್ನುವ ರೋಚಕ ಕಹಾನಿ ಓದಲು ಇಲ್ಲಿ ಹೋಗಿ.... ಹೋಮಿಯೋಪತಿ ಕು(o)ಚ ಬ್ರಹ್ಮ. ಹಿಂದೊಮ್ಮೆ ಬರೆದಿದ್ದ ಲೇಖನ.