Tuesday, March 28, 2017

ಆ್ಯoಟಿ ರೋಮಿಯೋ ಸ್ಕ್ವಾಡ್ (anti romeo squad) ಬರುತ್ತಿದೆ ಎಂದಾಗ ನೆನಪಾಯಿತು...

೧೯೮೪-೮೫ ರ ಹೊತ್ತಿನ ಮಾತು. ಅವರು ನಾಲ್ಕು ಜನ ಒಳ್ಳೆ ಹುಡುಗರು. ಕೂಡಿಯೇ ಬೆಳೆದು ದೊಡ್ಡವರಾದವರು. ನಾಲ್ಕೂ ಜನ ಮೆರಿಟ್ ಮೇಲೆಯೇ ಇಂಜಿನಿಯರಿಂಗ್ ಸೀಟುಗಳನ್ನು ಸಂಪಾದಿಸಿದರು. ರಾಜ್ಯದ, ರಾಷ್ಟ್ರದ ಬೇರೆ ಬೇರೆ ಕಡೆ ಇಂಜಿನಿಯರಿಂಗ್ ಅಧ್ಯಯನ ಮಾಡಿಕೊಂಡಿದ್ದವರು. ಒಳ್ಳೆಯ ಸ್ನೇಹಿತರು. ಒಂದೇ ಓಣಿಯ (ಬೀದಿಯ) ಗೆಳೆಯರು.

ಮೊದಲು ಒಟ್ಟಿಗಿದ್ದವರು ಪಿಯೂಸಿ ಮುಗಿದ ಮೇಲೆ ಬೇರೆಬೇರೆಯಾದರು. ಒಂದು ಸಲ ರಜೆಗೆ ಊರಿಗೆ, ಮನೆಗೆ ವಾಪಸ್ ಬಂದಿದ್ದರು. ಆಗ ಮತ್ತೆ ಸ್ನೇಹಿತರ ಸಮ್ಮಿಲನ. ರಜೆಯಿದ್ದ ಒಂದೆರೆಡು ತಿಂಗಳು ಮೊದಲಿನ ಹಾಗೆಯೇ ಸಂತೋಷದ ಸಮಯ. ರಜೆ ಮುಗಿದು ಮತ್ತೆ ಕಾಲೇಜ್ ತೆರೆಯುವ ದಿನ ಬಂತು. ಆವತ್ತೇ ಕಡೆಯ ದಿನ. ಅಂದು ರಾತ್ರಿಯ ರೈಲಿನಲ್ಲಿ ನಾಲ್ವರಲ್ಲಿ ಇಬ್ಬರು ಬೆಂಗಳೂರು, ಮೈಸೂರು ಕಡೆ ಹೊರಡುವವರಿದ್ದರು. ಆತ್ಮೀಯ ಗೆಳೆಯರ ಗುಂಪಿಗೆ ಮತ್ತೊಮ್ಮೆ ಬೇರೆಬೇರೆಯಾಗುವ ಬೇಸರ.

ಕೊನೆಯದಾಗಿ ಒಂದು ಕೆಲಸ ಮಾಡೋಣ ಅಂದುಕೊಂಡರು. ಏನು? ಗಿಚ್ಚಾಗಿ ಪಾರ್ಟಿ ಮಾಡಿ, ಎಣ್ಣೆ ಹೊಡೆದು, ಗದ್ದಲ ಹಾಕಿ ಬರೋಣ ಅಂತ ಪ್ಲಾನ್ ಮಾಡಿದರೆ? ಅಯ್ಯೋ! ಇಲ್ಲ. ಅವರು ಅಂತಹ ಹುಡುಗರೇ ಅಲ್ಲ. ಪಾರ್ಟಿ ಗೀರ್ಟಿ ದೂರ ಉಳಿಯಿತು. ಅವರೆಲ್ಲ ಚಹಾ, ಕಾಫಿ ಸಹ ಕುಡಿಯದ ಮುಗ್ಧ ಬಾಲಕರು. ಅಂತವರು ವಿಚಾರ ಮಾಡಿದ್ದು ಏನು ಅಂದರೆ, 'ಎಲ್ಲರೂ ಕೂಡಿ ರಾಯರ ಮಠಕ್ಕೆ ಹೋಗಿ, ನಮಸ್ಕಾರ ಮಾಡಿ, ಪ್ರಸಾದ ತೆಗೆದುಕೊಂಡು ಬರೋಣ. ನಾವು ಗೆಳೆಯರ ಮೇಲೆ ರಾಯರ ಆಶೀರ್ವಾದ ಇರಲಿ,' ಎಂದು. ಅಷ್ಟು ಸಾತ್ವಿಕ ಸ್ವಭಾವದ ಮುಗ್ಧ ಹುಡುಗರು. ಮತ್ತೆ ಆ ಓಣಿಯಲ್ಲಿಯೇ ರಾಯರಮಠ ಕೂಡ ಇತ್ತಲ್ಲ. ಮೊದಲೆಲ್ಲ ದಿನಕ್ಕೆ ಒಂದು ಬಾರಿಯಾದರೂ ಅಲ್ಲಿಗೆ ಹೋಗಿಯೇ ಹೋಗುತ್ತಿದ್ದರು. ಆವತ್ತು ಸಹ ಅಷ್ಟೇ. ರಜೆಯ ಕೊನೆಯ ದಿವಸವಾಗಿದ್ದರಿಂದ ಅಂದಿನ ರಾಯರ ಮಠದ ಭೇಟಿಗೆ ವಿಶೇಷ ಮಹತ್ವವಿತ್ತು.

ಸುಮಾರು ಸಂಜೆ ಏಳೂವರೆ ಸಮಯ. ಬೆಂಗಳೂರಿಗೆ ಹೋಗುವ ರೈಲು ಒಂಬತ್ತು ಘಂಟೆ ಸುಮಾರಿಗೆ ಇತ್ತು. ರಾಯರ ಮಠಕ್ಕೆ ಹೋಗಿ, ಪೂಜೆ ಮುಗಿಸಿ, ಮನೆಗೆ ಬಂದು, ಊಟ ಮುಗಿಸಿ ಹೊರಡಬೇಕು. ಅದು ಪ್ಲಾನ್.

ಅರ್ಧ ಫರ್ಲಾಂಗ್ ದೂರವಿದ್ದ ಮಠಕ್ಕೆ ಹೋದರು. ಎಂದಿನಂತೆ ಪೂಜೆ, ಪುನಸ್ಕಾರ, ಪ್ರದಕ್ಷಿಣೆ ಮುಗಿಸಿದರು. ದೂರದೂರಿಗೆ ಹೊರಟಿದ್ದಾರೆ ಅಂತ ಆಚಾರ್ರು ದೊಡ್ಡ ಮಟ್ಟದ ಆಶೀರ್ವಾದ ಮಾಡಿ ಕಳಿಸಿದರು. ಅವರ ಕಣ್ಮುಂದೆಯೇ ಹುಟ್ಟಿ, ಬೆಳೆದು, ದೊಡ್ಡವರಾದ ಹುಡುಗರು ಅವರೆಲ್ಲ.

ರಾಯರ ಮಠದ ಹೊರಗೆ, ಸ್ವಲ್ಪ ದೂರದಲ್ಲಿ, ಪೋಲೀಸ್ ವ್ಯಾನೊಂದು ನಿಂತಿದ್ದನ್ನು ಅವರು ಗಮನಿಸಿರಲಿಲ್ಲ. ಮನೆಗೆ ವಾಪಸ್ ಹೊರಟಿದ್ದರು. ಯಾರೋ ಕರೆದಂತಾಯಿತು. ನೋಡಿದರೆ ವ್ಯಾನಿನ ಪಕ್ಕ ನಿಂತಿದ್ದ ಪೋಲೀಸರಿಬ್ಬರು ಕರೆಯುತ್ತಿದ್ದರು. ಇವರನ್ನೇ ಕರೆಯುತ್ತಿದ್ದರು. ಪೊಲೀಸರು ಅವರನ್ನು ಯಾಕೆ ಕರೆಯುತ್ತಿದ್ದಾರೆ ಎಂದು ಈ ಹುಡುಗರಿಗೆ ಆಶ್ಚರ್ಯ. ಕರೆದವರು ಪೊಲೀಸರು. ಹಾಗಾಗಿ ಹೋಗಲೇಬೇಕು. ಏನು ವಿಷಯ ಎಂದು ಕೇಳೋಣ ಅಂತ ನಾಲ್ವರೂ ಕೂಡಿಯೇ ಪೋಲೀಸರು ನಿಂತಿದ್ದ ಕಡೆ ಹೋದರು.

ಹತ್ತಿರ ಬಂದವರನ್ನು ಒಂದು ಸಾರೆ ಮೇಲಿಂದ ಕೆಳಗಿನ ತನಕ ಒಂದು ಕ್ಷಣ ನೋಡಿದ ಆ ಇಬ್ಬರು ಪೊಲೀಸರು, ಒಮ್ಮೆಲೇ ನಾಲ್ವರ ಕುತ್ತಿಗೆಗೂ ಕೈ ಹಾಕಿ, 'ವ್ಯಾನ್ ಹತ್ತಿ ಕೂಡ್ರಿ. ನಡ್ರಿ, ನಡ್ರಿ,'  ಎಂದು ಹೂಂಕರಿಸಿದವರೇ ನಾಲ್ವರನ್ನೂ ವ್ಯಾನಿನ ಒಳಗೆ ದೂಡಿಯೇಬಿಟ್ಟರು. ದೊಡ್ಡಿಯೊಳಗೆ ದನಗಳನ್ನು ದೂಡಿದ ಹಾಗೆ ದೂಡಿದರು. ಏನಾಯಿತು? ಏಕಾಯಿತು? ಅಂತೆಲ್ಲ ಅರಿವಾಗುವಷ್ಟರಲ್ಲಿ, ಪೊಲೀಸರು ದೂಡಿದ ಅಬ್ಬರಕ್ಕೆ, ನಾಲ್ವರೂ ಮಿತ್ರರು ಪೋಲೀಸ್ ವ್ಯಾನಿನಲ್ಲಿ ಹೋಗಿ ಬಿದ್ದಿದ್ದರು. ಅವರ ಹಿಂದೆಯೇ ಪೊಲೀಸರು ಹತ್ತಿಕೊಂಡರು. 'ನಡೀಪಾ ಡ್ರೈವರ್! ಸ್ಟೇಷನ್ ಕಡೆ ಹೊಂಡು!' ಎಂದು ಅವರು ಅಂದಿದ್ದೇ ತಡ ಪೋಲೀಸ್ ವ್ಯಾನ್ ಹೊರಟೇಬಿಟ್ಟಿತು.

ಅವರನ್ನು ಯಾಕೆ ಪೊಲೀಸರು ಕರೆದರು, ಯಾಕೆ ಒಳಗೆ ತಳ್ಳಿದರು, ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ, ಒಂದೂ ಗೊತ್ತಾಗಲಿಲ್ಲ. ಆದ ಆಘಾತದಿಂದ ಚೇತರಿಸಿಕೊಳ್ಳಲಿಕ್ಕೇ ಸುಮಾರು ಸಮಯ ಬೇಕಾಯಿತು. ವ್ಯಾನಿನಲ್ಲಿ ಅವರನ್ನು ಬಿಟ್ಟು ಇನ್ನೂ ನಾಲ್ಕಾರು ಹುಡುಗರಿದ್ದರು. ಎಲ್ಲ ಅದೇ ಏರಿಯಾದವರೇ. ಇವರಿಗೆ ಅಲ್ಪ ಸ್ವಲ್ಪ ಪರಿಚಿತರೇ. ಇವರು ನಾಲ್ಕು ಜನರಂತೂ ಮೊದಲೇ ಸಿಕ್ಕಾಪಟ್ಟೆ ಸಂಭಾವಿತ ಹುಡುಗರು. ಸಭ್ಯರು. ಮಧ್ಯಮವರ್ಗ, ಕೆಳಮಧ್ಯಮವರ್ಗದವರು. ನಾಲ್ವರಲ್ಲಿ ಒಬ್ಬವ ಇದ್ದುದರಲ್ಲಿಯೇ ಸ್ವಲ್ಪ ದೊಡ್ಡ ಮನುಷ್ಯರಾದ ದೇಸಾಯಿ ಅವರ ಮಗ.

ನಾಲ್ವರಲ್ಲಿ ಒಬ್ಬ ಸ್ವಲ್ಪ ಧೈರ್ಯಮಾಡಿ, ಅವರನ್ನು ಯಾಕೆ ಪೊಲೀಸರು ಕರೆದೊಯ್ಯುತ್ತಿದ್ದಾರೆ ಅಂತ ಕೇಳಿದರೆ ಏನೂ ಉತ್ತರ ಬರಲಿಲ್ಲ. ಕೆಕ್ಕರಿಸಿ ನೋಡಿದ ಪೋಲೀಸ್ ಪೇದೆ, 'ಸುಮ್ಮನೆ ಕೂತರೆ ಒಳ್ಳೆಯದು! ಇಲ್ಲವಾದರೆ ಅಷ್ಟೇ ಮತ್ತೆ!' ಅನ್ನುವ ಖತರ್ನಾಕ್ ಲುಕ್ ಕೊಟ್ಟ. ಮೊದಲೇ ಹೆದರಿದ್ದ ಸಭ್ಯ ಹುಡುಗರು. ಪೊಲೀಸರು ಅಂದರೆ ಏನು, ಎತ್ತ, ಹೆಂಗೆ ಅನ್ನುವದೆಲ್ಲ ಗೊತ್ತಿರಲಿಕ್ಕೆ ಅವರೇನು ರೌಡಿಗಳೇ? ಗೂಂಡಾಗಳೇ? ಅಲ್ಲ.

ವ್ಯಾನ್ ಪೋಲೀಸ್ ಸ್ಟೇಷನ್ನಿಗೆ ಬಂದು ಮುಟ್ಟಿತು. ಎಲ್ಲರನ್ನೂ ಇಳಿಸಿ, ಒಳಗೆ ಕರೆದುಕೊಂಡು ಹೋಗಿ, ಒಂದು ಕಡೆ ಕೂಡಿಸಲಾಯಿತು. ಪೊಲೀಸರು ತಮ್ಮ ಕೆಲಸ ಮುಂದುವರೆಸಿದರು.

ಈ ನಾಲ್ವರನ್ನು ಪೊಲೀಸರು ವ್ಯಾನಿನಲ್ಲಿ ತುಂಬಿಕೊಂಡು ಹೋಗಿದ್ದನ್ನು ಯಾರೋ ನೋಡಿದ್ದರು. ನೋಡಿದವರು ಮನೆಗೆ ಬಂದು ಸುದ್ದಿ ಮುಟ್ಟಿಸಿದರು. ಮೊದಲೇ ಹೇಳಿದಂತೆ ನಾಲ್ವರಲ್ಲಿ ಒಬ್ಬವ ದೇಸಾಯಿಯವರ ಮಗ. ಇದ್ದವರಲ್ಲಿ ಅವರೇ ಕೊಂಚ ಸ್ಥಿತಿವಂತರು. ಸ್ವಲ್ಪ ಪ್ರಭಾವ, ಸಂಪರ್ಕಗಳು, ದೊಡ್ಡ ಮಂದಿಯ ವಶೀಲಿ, ಎಲ್ಲ ಇದ್ದವರು. ಉಳಿದ ಮೂವರು ಪಕ್ಕಾ ಬಡ ಬ್ರಾಹ್ಮಣರ ಕುಟುಂಬಗಳಿಗೆ ಸೇರಿದವರು. ಟಿಪಿಕಲ್ ಮಧ್ಯಮ ಅಥವಾ ಕೆಳಮಧ್ಯಮವರ್ಗ ಅನ್ನುವಂತಹ ಫ್ಯಾಮಿಲಿಗಳಿಗೆ ಸೇರಿದವರು. ಒಬ್ಬ ಹುಡುಗನಂತೂ ಅನಾಥ. ಹುಟ್ಟುತ್ತಲೇ ತಂದೆ ತಾಯಿ ಕಳೆದುಕೊಂಡವ. ಸಂಬಂಧಿಕರಾರೋ ಬೆಳೆಸಿದ್ದರು. ಬಡತನದಲ್ಲಿಯೇ ಬೆಳೆದು, ಓದಿ, ಈಗ ಇಂಜಿನಿಯರಿಂಗ್ ಮಾಡುತ್ತಿದ್ದ.

ಸುದ್ದಿ ತಿಳಿದು ಥಂಡಾ ಹೊಡೆದ ಮೂರೂ ಹುಡುಗರ ಪಾಲಕರು ಬಂದು ದೇಸಾಯಿಯವರನ್ನು ಕಂಡರು. ಮನೆಯ ಮಕ್ಕಳನ್ನು ಪೊಲೀಸರು ಎತ್ತಾಕಿಕೊಂಡು ಹೋಗಿದ್ದಾರೆ. ಏನು ಮಾಡಬೇಕು ಎಂದು ಆತಂಕದಿಂದ ಕೇಳಿದರು. ಆಗ ಟೈಮ್ ನೋಡಿದರೆ ಸುಮಾರು ರಾತ್ರಿ ಎಂಟೂವರೆ. ಇನ್ನೊಂದು ಘಂಟೆಯಲ್ಲಿ ಇಬ್ಬರು ಟ್ರೈನ್ ಹತ್ತಬೇಕು. ನೋಡಿದರೆ ನಾಲ್ವರೂ ನಾಪತ್ತೆ. ಪೊಲೀಸರು ಕರೆದುಕೊಂಡು ಹೋದರು ಎಂದು ಯಾರೋ ಹೇಳಿದ್ದಾರೆ ಅನ್ನುವದನ್ನು ಬಿಟ್ಟರೆ ಬೇರೆ ಏನೂ ಮಾಹಿತಿಯಿಲ್ಲ.

ದೇಸಾಯಿ ಅಪ್ರತಿಭರಾದರು. ಉಳಿದ ಮೂವರು ಹುಡುಗರ ಮನೆಯ ಒಂದಿಬ್ಬರು ಗಂಡಸರನ್ನು (ಪಾಲಕರನ್ನು) ಕರೆದುಕೊಂಡು ತಮ್ಮ ಕಾರಿನಲ್ಲಿಯೇ ಪೋಲೀಸ್ ಠಾಣೆಯತ್ತ ಧಾವಿಸಿದರು. ಗಡಬಡಾಯಿಸಿ ಒಳಗೆ ಹೋಗಿ ನೋಡಿದರೆ ನಾಲ್ವರೂ ಹುಡುಗರು ಸಾಮಾನ್ಯ ಅಪರಾಧಿಗಳಂತೆ ಪೋಲೀಸ್ ಸ್ಟೇಷನ್ ಒಳಗೆ ಕೂತಿದ್ದರು. ಬಟ್ಟೆ ಬಿಚ್ಚಿಸಿ ಲಾಕಪ್ ಒಳಗೆ ತಳ್ಳಿರಲಿಲ್ಲ. ಅದೇ ದೊಡ್ಡ ಮಾತು. (ಲಾಕಪ್ಪಿಗೆ ತಳ್ಳುವ ಮುಂಚೆ ಬಟ್ಟೆ ಬಿಚ್ಚಿಸುವದರ ಹಿಂದೆ ಇರುವ ಕಾರಣವೆಂದರೆ ಆರೋಪಿಗಳು ಮೈಮೇಲಿನ ಬಟ್ಟೆ ತೆಗೆದು ನೇಣು ಹಾಕಿಕೊಂಡು ಸತ್ತುಹೋಗದಿರಲಿ ಅನ್ನುವ ದೂ(ದು)ರಾಲೋಚನೆ!)

ಪೋಲೀಸರ ಹತ್ತಿರ ವಿವರಣೆ ಕೇಳಿದಾಗ ಸಿಕ್ಕ ಉತ್ತರದಿಂದ ಹುಡುಗರ ಪಾಲಕರು ಫುಲ್ ಥಂಡಾ ಹೊಡೆದರು. 'ಯಾಕೆ ಅರೆಸ್ಟ್ ಮಾಡಿ ಕರೆದುಕೊಂಡು ಬಂದಿದ್ದೀರಿ??' ಎಂದು ಕೇಳಿದರೆ ಬಂದ ಉತ್ತರ ದಂಗು ಹೊಡೆಸುವಂತಿತ್ತು. ಆ ಹುಡುಗರು ಹುಡುಗಿಯರನ್ನು / ಮಹಿಳೆಯರನ್ನು ಛೇಡಿಸುತ್ತಿದ್ದರು! eve teasing ಆರೋಪದಡಿಯಲ್ಲಿ ಎಳೆದುಕೊಂಡು ಬಂದಿದ್ದೇವೆ! ಇಷ್ಟು ಹೇಳಿದ್ದಷ್ಟೇ ಅಲ್ಲ, ಅಲ್ಲೇ ಕೂಡಿಸಿದ್ದ ಮತ್ತೊಂದು ಹದಿನೈದು ಇಪ್ಪತ್ತು ಮಂದಿ ಹುಡುಗರನ್ನೂ ತೋರಿಸಿದರು. ಎಲ್ಲರೂ ಅದೇ ಆರೋಪದಡಿಯಲ್ಲಿ ಠಾಣೆ ಸೇರಿದವರೇ.

ತಮ್ಮ ಮಗ ಮತ್ತು ಅವನ ಸ್ನೇಹಿತರನ್ನು ಮಹಿಳೆಯರನ್ನು ಛೇಡಿಸಿದ ಆರೋಪದಡಿಯಲ್ಲಿ ಬಂಧಿಸಿ ತಂದಿದ್ದಾರೆ ಎಂದು ಕೇಳಿದ ದೇಸಾಯಿ ಸಿಕ್ಕಾಪಟ್ಟೆ ಆಕ್ರೋಶಗೊಂಡರು. ಆ ನಾಲ್ಕು ಗಂಡುಮಕ್ಕಳ ಸಚ್ಚಾರಿತ್ರ್ಯ ಎಲ್ಲರಿಗೂ ಗೊತ್ತಿತ್ತು. ಎಷ್ಟು ಸಭ್ಯರು, ಎಷ್ಟು ಸಂಭಾವಿತರು, ಎಷ್ಟು ಒಳ್ಳೆ ಹುಡುಗರು ಎಂದು ಎಲ್ಲರೂ ಹೇಳುತ್ತಿದ್ದರು. ಶಾಲೆ, ಕಾಲೇಜ್, ಬೇರೆ ಜನರಿಂದ ಒಂದೇ ಒಂದು ಮಾತು, ತಕರಾರು, ಆಕ್ಷೇಪಣೆ ಆ ಹುಡುಗರ ಬಗ್ಗೆ ಕೇಳಿಬಂದಿರಲಿಲ್ಲ. ಆ ನಾಲ್ವರ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ನಾಲ್ಕು ಒಳ್ಳೆಯ ಮಾತುಗಳೇ. ಆ ಹುಡುಗರ ಪ್ರತಿಭೆ ಬಗ್ಗೆ, ಕಷ್ಟ ಪಟ್ಟು ಓದುತ್ತಿದ್ದ ಬಗ್ಗೆ ಅಭಿಮಾನದ ಮಾತುಗಳೇ. ಹೀಗಿರುವಾಗ ಅಂತವರನ್ನು ಪೊಲೀಸರು ಏಕಾಏಕಿ ಮಹಿಳೆಯರನ್ನು ಛೇಡಿಸಿದ ಆರೋಪದ ಮೇಲೆ ಒಳಗೆ ಹಾಕಿದ್ದೇವೆ ಅಂದರೆ ನಂಬುವ ಮಾತೇ?

ಬಾಕಿ ಮೂವರ ಪಾಲಕರು ಫುಲ್ ನರ್ವಸ್. ಯಾಕೆಂದರೆ ಅವರು ಪಾಪ ಕೆಳಮಧ್ಯಮವರ್ಗದ ಬಡ ಬ್ರಾಹ್ಮಣ ಮಂದಿ. ಜೀವನದಲ್ಲೇ ಪೋಲೀಸ್ ಠಾಣೆಯ ಮೆಟ್ಟಿಲು ಹತ್ತಿದವರಲ್ಲ. ಹತ್ತುವ ಯಾವ ಇರಾದೆಯೂ ಇರಲಿಲ್ಲ. ಒಟ್ಟಿನಲ್ಲಿ ಮಕ್ಕಳನ್ನು ಬಿಡಿಸಿಕೊಂಡು ಹೋದರೆ ಸಾಕು. ಕೈ ಕೈ ತಿಕ್ಕುತ್ತ ದೇಸಾಯಿ ಅವರ ಕಡೆ ನೋಡುತ್ತಾ ನಿಂತಿದ್ದರು.

ದೇಸಾಯಿ ಅವರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ತಪ್ಪೇ ಮಾಡದಿದ್ದಾಗ ಯಾರಾದರೂ ತಪ್ಪು ಮಾಡಿದ್ದಿ ಅಂತ ಸುಳ್ಳು ಆಪಾದನೆ ಮಾಡಿದಾಗ ಬರುವಂತಹ ಸಾತ್ವಿಕ ಕೋಪ. ಸಿಕ್ಕಾಪಟ್ಟೆ ಶಕ್ತಿಶಾಲಿ ಅದು. ಅಲ್ಲಿಯೇ ರೇಗಾಡಿಬಿಟ್ಟರು. ಆಗ ಪೊಲೀಸರು ಸ್ವಲ್ಪ ಥಂಡಾ ಹೊಡೆದರು. ಹೀಗೆ ಠಾಣೆಗೆ ಬಂದು ಪೊಲೀಸರಿಗೇ ರೇಗಾಡುವಷ್ಟು ಮೀಟರ್ ಇಟ್ಟಿದ್ದಾನೆ ಅಂದರೆ ಯಾರೋ influential ಪಾರ್ಟಿನೇ ಇರಬೇಕು ಅಂದುಕೊಂಡು ಸ್ವಲ್ಪ ವಿಚಾರಿಸಿಕೊಳ್ಳಲು ಮುಂದಾದರು. ರೋಪ್ ಹಾಕುತ್ತ, ಮೀಸೆ ತಿರುವುತ್ತ ಪೋಲೀಸ್ ಸಾಹೇಬನೇ ಬಂದು ಗತ್ತಿನಿಂದ, 'ಏನು ಮ್ಯಾಟರ್? ಯಾಕೆ? ಏನು?' ಎಂದು ವಿಚಾರಿಸಿದ.

ದೇಸಾಯಿ ಸಿಟ್ಟಿನಲ್ಲೇ ಅವನಿಗೂ ವಿಷಯ ಹೇಳಿದರು. ತಮ್ಮ ಮಗನ ಬಗ್ಗೆ ಮತ್ತೆ ಅವನ ಸ್ನೇಹಿತರ ಬಗ್ಗೆ ತಿಳಿಸಿ ಹೇಳಿದರು. ಅವರ ಒಳ್ಳೆ ಚಾರಿತ್ರ್ಯದ ಬಗ್ಗೆ ವಿವರಣೆ ಕೊಟ್ಟರು. ಆ ನಾಲ್ಕು ಹುಡುಗರು ಮಹಿಳೆಯರನ್ನು ಛೇಡಿಸುವದು ಸಾಧ್ಯವೇ ಇಲ್ಲ. ಪೋಲೀಸರ ಹತ್ತಿರ ಏನು ಸಾಕ್ಷಿಯಿದೆ? ಬೇಕಾದರೆ ಇಡೀ ಬಡಾವಣೆಯ ಜನರನ್ನು ಈಗಲೇ ಠಾಣೆಗೆ ಕರೆಯಿಸಿ ಆ ಹುಡುಗರ ಚಾರಿತ್ರ್ಯದ ಬಗ್ಗೆ ಸಾಕ್ಷಿ ಹೇಳಿಸಲು ತಯಾರಿದ್ದೇನೆ. ಬೇಕಾದರೆ ಹಿರಿಯ ಅಧಿಕಾರಿಗಳ ಜೊತೆಗೂ ಮಾತಾಡುತ್ತೇನೆ. ಯಾರ್ಯಾರನ್ನೋ ಸುಖಾ ಸುಮ್ಮನೆ ತಂದು ಅಂದರ್ ಮಾಡಲಿಕ್ಕೆ ಪೊಲೀಸರು ಏನು ಆಟ ಅಂದುಕೊಂಡಿದ್ದಾರೇನು? ಅಂತೆಲ್ಲ ರೇಗಾಡಿಬಿಟ್ಟರು.

ಓಹೋ! ಇದು ಯಾವದೋ ಜೋರ್ ಪಾರ್ಟಿ. ಪೊಲೀಸರಿಗೆ ಹೆದರುವ ಆಸಾಮಿಯಲ್ಲ. ಇವರನ್ನು ತಡವಿಕೊಂಡರೆ ಮುಂದೆ ಹಿರಿಯ ಅಧಿಕಾರಿಗಳು, ಮಾಧ್ಯಮ, ಪಬ್ಲಿಕ್ ಎಲ್ಲವನ್ನೂ ಎಳೆದು ತರಲು ಸಿದ್ಧವಿರುವ ಗಟ್ಟಿಗ ಆಸಾಮಿ ಇವರು. ಹಾಗಾಗಿ ಇವರ ಮಕ್ಕಳನ್ನು ಬಿಟ್ಟು ಕಳಿಸುವದೇ ಒಳ್ಳೆಯದು ಎಂದು ವಿಚಾರ ಮಾಡಿದ ಪೊಲೀಸರು ಆ ನಾಲ್ವರು ಹುಡುಗರನ್ನು ಯಾವದೇ ಕೇಸ್ ಹಾಕದೇ ಬಿಟ್ಟುಕಳಿಸಿದರು.

ದೇಸಾಯಿ ಇನ್ನೂ ಕೊತಕೊತ ಕುದಿಯುತ್ತಿದ್ದರು. ಯಾವ ಆಧಾರದ ಮೇಲೆ ಆ ನಾಲ್ಕು ಜನ ಸಭ್ಯ ಹುಡುಗರನ್ನು ಪರಮ ಅಸಹ್ಯ ಮಹಿಳಾ ಪೀಡನೆ ಅಪರಾಧದ ಮೇಲೆ ಅರೆಸ್ಟ್ ಮಾಡಿಕೊಂಡು ಬಂದರು ಅನ್ನುವ ಪ್ರಶ್ನೆಗೆ ಸಮಂಜಸ ಉತ್ತರ ಸಿಕ್ಕಿರಲಿಲ್ಲ. ನಂತರ ದೊರೆಯಿತು. ಅವರದ್ದೇ ರೀತಿಯಲ್ಲಿ ವಿಚಾರಣೆ ಮಾಡಿದಾಗ ವಿಷಯ ತಿಳಿದುಬಂತು. ಯಾರೋ ಒಬ್ಬ ಪೋಲೀಸ್ ಒಳಗಿನ ಖಾಸ್ ವಿಚಾರವನ್ನು ಹೇಳಿದ್ದ. ಆಗ eve teasing ಸಿಕ್ಕಾಪಟ್ಟೆ ಹೆಚ್ಚಾಗಿತ್ತಂತೆ. ದಿನಕ್ಕೆ ಇಷ್ಟು ಜನರು ಅಂತ ಹಿಡಿದು, ಒಳಗೆ ತಳ್ಳಿ, ಕೇಸ್ ಬುಕ್ ಮಾಡಿದ ಲೆಕ್ಕ ತೋರಿಸಲೇಬೇಕಾಗಿತ್ತಂತೆ. ಯಾರನ್ನು ಹಿಡಿದು ಒಳಗೆ ತಳ್ಳಿ, ಲೆಕ್ಕ ತೋರಿಸಿದರೂ ಅಡ್ಡಿಯಿಲ್ಲ. ಒಟ್ಟಿನಲ್ಲಿ ದಿನದ quota ಮುಟ್ಟಬೇಕು. ಅಷ್ಟೇ. ಅದೇ ಕೋಟಾ ತಲುಪಲು ಆವತ್ತು ಮಿಕಗಳ ಸಂಖ್ಯೆ ಕಮ್ಮಿ ಬಿದ್ದಿತ್ತು. ವೇಳೆ ಬೇರೆ ಆಗಿತ್ತು. ಅಂತಹ ಸಂದರ್ಭದಲ್ಲಿ ರಾಯರ ಮಠದಿಂದ ಬರುತ್ತಿದ್ದ ಈ ನಾಲ್ವರು ಕಂಡಿದ್ದಾರೆ. ಹಿಡಿದುಕೊಂಡು ಹೋಗಿಬಿಟ್ಟಿದ್ದಾರೆ. ಅಂದಿನ ಕೋಟಾ ಪೂರಾ ಮಾಡಿಕೊಂಡಿದ್ದಾರೆ.

ಆಗೊಂದಿಷ್ಟು ದಿನ ಇದೆಲ್ಲ ನಡೆದಿತ್ತು ಬಿಡಿ. ದಿನವೂ ಒಂದಿಷ್ಟು ಜನ ಯುವಕರನ್ನು ಎತ್ತಾಕಿಕೊಳ್ಳುವದು, ಅವರನ್ನು ಮಹಿಳಾ ಪೀಡಕರು ಅಂತ ತೋರಿಸುವದು ಮತ್ತು ಅದರ ಬಗ್ಗೆ ಪತ್ರಿಕೆಗಳಲ್ಲಿ ಹಾಕಿಸಿಕೊಂಡು ಸಂಭ್ರಮಿಸುವದು. ಹಾಗೆ ಮಾಡಿದ್ದರಿಂದ ನಿಜವಾದ ಮಹಿಳಾ ಪೀಡಕರು ಕೊಂಚ ಹೆದರಿ ಮಹಿಳಾ ಪೀಡನೆ ಕಮ್ಮಿಯಾಗಿರಬಹುದು. ಆದರೆ on the flip side ಇಂತಹ ಅದೆಷ್ಟು ಬಡಪಾಯಿಗಳು ವಿನಾಕಾರಣ ಸಿಕ್ಕಾಕಿಕೊಂಡು ಫಜೀತಿ ಅನುಭವಿಸಿದರೋ ಏನೋ.

ಕೆಲವೊಂದು ಕಡೆ ಪೊಲೀಸರು ಇನ್ನೂ ಮುಂದೆ ಹೋಗಿ ತಾವೇ ಶಿಕ್ಷೆ ವಿಧಿಸುವ ನ್ಯಾಯಾಧೀಶರೂ ಆಗಿಬಿಡುತ್ತಿದ್ದರು. ಭಯಂಕರ ಅವಮಾನಕ್ಕೀಡುಮಾಡುವ ಶಿಕ್ಷೆ. ಮಹಿಳಾ ಪೀಡಕರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿಸಿ, ಊರು ತುಂಬಾ ಮೆರವಣಿಗೆ ಮಾಡುವದು. ಸೂಕ್ಷ್ಮ ಮನಸ್ಸಿನ ನಿರಪರಾಧಿ ಹುಡುಗರಿಗೆ ಅಂತಹ ಶಿಕ್ಷೆ ಕೊಟ್ಟರೆ ಏನಾಗಬಹುದು ಊಹಿಸಿ. ವಿನಾಕಾರಣ ಆದ ಅವಮಾನ ಭರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡರೂ ಆಶ್ಚರ್ಯವಿಲ್ಲ. ಧಾರವಾಡದಲ್ಲಿ ಪರಿಸ್ಥಿತಿ ಆ ಮಟ್ಟಕ್ಕೆ ಹೋಗಿದ್ದು ನನಗೇನೂ ನೆನಪಿಲ್ಲ. ಎಷ್ಟೆಂದರೂ ಪೇಡಾ ನಗರಿಯ ಪೊಲೀಸರೂ ಸಹ comparatively ಸಭ್ಯರು. ಸುಸಂಸ್ಕೃತಿಯ ಪ್ರಭಾವ ಕೊಂಚವಾದರೂ ಆಗದೇ ಹೋದರೆ ಹೇಗೆ.

ಪೋಲೀಸರು ತ್ವರಿತವಾಗಿ ನ್ಯಾಯ(!) ಒದಗಿಸಿದಾಗ ಹೊಗಳುವವರೇ ಹೆಚ್ಚು. ಆದರೆ ಹೀಗೆಲ್ಲ ನ್ಯಾಯ ಒದಗಿಸುವದು ಸಂವಿಧಾನ ಸಮ್ಮತವಲ್ಲ. ಪೊಲೀಸರು ಮಹಿಳಾ ಪೀಡಕರು ಎಂಬ ಸಂಶಯದ ಮೇಲೆ ಬಂಧಿಸಿದ ಜನರ ತಲೆ ಬೋಳಿಸಿ ಮೆರವಣಿಗೆ ಮಾಡಿದರೆ ಉಘೇ ಉಘೇ ಅನ್ನುತ್ತೇವೆ. so called ರೌಡಿಯೊಬ್ಬನನ್ನು ನಕಲಿ ಎನ್ಕೌಂಟರಿನಲ್ಲಿ cold blood ನಲ್ಲಿ ಕೊಂದು ಒಗೆದರೆ ಸಮಾಜದ ಕೊಳೆ ಸ್ವಚ್ಛವಾಯಿತು ಅನ್ನುತ್ತೇವೆ. ತುಂಬಿದ ಬಜಾರಿನಲ್ಲಿ ವೇಶ್ಯಾವೃತ್ತಿ ಮಾಡುತ್ತ ಸಭ್ಯರಿಗೆ ಕಿರಿಕಿರಿ ಮಾಡುವ ಮಹಿಳೆಯರನ್ನು ಬಂಧಿಸಿ ಕಾನೂನುಬದ್ಧ ಪ್ರಕ್ರಿಯೆ ಕೈಗೊಳ್ಳದೇ ಆ ಬಲಹೀನ ಶೋಷಿತೆಯರನ್ನು ರಸ್ತೆಯಲ್ಲಿ ಅಟ್ಟಾಡಿಸಿ ಬಡಿದು ಓಡಿಸುವ ಪೊಲೀಸ್ ಕ್ರಮವನ್ನೂ ಶ್ಲಾಘಿಸುತ್ತೇವೆ. ಹಾಗೆಲ್ಲ ಮಾಡುವದು ಕಾನೂನುಬಾಹಿರ, ತಪ್ಪು ಅನ್ನುವ ಯೋಚನೆ ನಮ್ಮಲ್ಲಿ ಹೆಚ್ಚಿನವರಿಗೆ ಬರುವದಿಲ್ಲ. ಸದ್ಯದ ತೊಂದರೆ ತಾಪತ್ರಯ ನಿವಾರಣೆಯಾಯಿತಲ್ಲ. ಅಷ್ಟು ಸಾಕು. ಬಾಕಿ ಏನಾದರೂ ಆಗಲಿ. ಅದರ ತಲೆಬಿಸಿ ನಮಗೇಕೆ? ಅದೂ ಈಗೇಕೆ? ಅನ್ನುವ ಮನೋಭಾವದವರೇ ಹೆಚ್ಚು.

ನಮಗೆ ತಲೆಬಿಸಿ ಏಕಾಗಬೇಕು ಅಂದರೆ ಮೇಲೆ ನಾನು ಹೇಳಿದಂತಹ ಆಘಾತಕಾರಿ ಘಟನೆಗಳು ನಡೆದುಹೋಗುತ್ತವೆ. ಅಮಾಯಕರು ಬಲಿಯಾಗುತ್ತಾರೆ. ನಮ್ಮ, ನಿಮ್ಮ ಆಪ್ತರಿಗೇ ಆಗಿಹೋಗುತ್ತವೆ. ಆಗ ನಮಗೆ ಎಚ್ಚರವಾಗುತ್ತದೆ. ನಮ್ಮನೆ ನಿಮ್ಮನೆಯ ಸಭ್ಯ ಹುಡುಗರನ್ನು ಎತ್ತಾಕಿಕೊಂಡು ಹೋಗಿ, ಮಹಿಳಾ ಪೀಡಕರು ಅಂತ ಬುಕ್ ಮಾಡಿ, ಬರೀ ಚಡ್ಡಿಯಲ್ಲಿ ಲಾಕಪ್ಪಿನಲ್ಲಿ ಕೂಡಿಹಾಕಿ, ಮರುದಿನ ತಲೆ ಬೋಳಿಸಿ ಮೆರವಣಿಗೆ ಮಾಡಿದಾಗ ನಮ್ಮ ಬುಡಕ್ಕೆ ಬಂದಿರುತ್ತದೆ. ಯಾವದೋ ಪೊರಪಾಟಿನಲ್ಲಿ, in a case of mistaken identity, ನಮ್ಮನೆ ನಿಮ್ಮನೆಯ ಹುಡುಗನೊಬ್ಬನನ್ನು ಪೊಲೀಸರು ನಕಲಿ ಎನ್ಕೌಂಟರಿನಲ್ಲಿ ಕೊಂದಾಗ ಎದೆ ಬಡಿದುಕೊಂಡು ಅಳುತ್ತೇವೆ. ಆರೋಪಿಯಾಗಿದ್ದರೆ ಕಾನೂನಿನಂತೆ ಕ್ರಮ ಕೈಗೊಳ್ಳಬೇಕಿತ್ತು. ಎನ್ಕೌಂಟರ್ ಮಾಡುವ ಹಕ್ಕು ಯಾರು ಕೊಟ್ಟರು ಎಂದು ಆಕ್ರೋಶದಿಂದ ಕೇಳುತ್ತೇವೆ. ಯಾಕೆಂದರೆ ಈಗ ಬಲಿಯಾದವ ನಮ್ಮವ. 'ಯಾರೋ' ಅಲ್ಲ.

ಬಂಧಿಸಿ ಜೈಲಿಗಟ್ಟಿದರೆ ರೊಕ್ಕ, ಪ್ರಭಾವ ಬಳಸಿಕೊಂಡು ಹೊರಗೆ ಬರುತ್ತಾರೆ. ಅದಕ್ಕೇ ಎನ್ಕೌಂಟರಿನಲ್ಲಿ ಮುಗಿಸುತ್ತೇವೆ ಎಂದು ಪೊಲೀಸರು ಖಾಸಗಿಯಾಗಿ ಸಮರ್ಥಿಸಿಕೊಳ್ಳುತ್ತಾರೆ. ನಾವು ಒಪ್ಪಿಕೊಳ್ಳುತ್ತೇವೆ. ಅದು ತಪ್ಪು ಅಂತ ಪ್ರತಿಭಟಿಸುವದಿಲ್ಲ ಅಂದ ಮೇಲೆ ಒಪ್ಪಿಕೊಂಡಂತೆಯೇ.

ಹಿಂದೊಮ್ಮೆ ಧಾರವಾಡದ ಈ ನಾಲ್ಕು ಬಡಪಾಯಿ ಹುಡುಗರು ಮಹಿಳಾ ಪೀಡಕರು ಅಂತ ಸುಖಾಸುಮ್ಮನೆ ಬುಕ್ಕಾಗಿ, ಬಂಧಿತರಾಗಿ, ಪೋಲೀಸ್ ಠಾಣೆಗೆ ಹೋಗಿಬಂದಿದ್ದರ ಬಗ್ಗೆ ಯಾಕೆ ಬರೆದೆ ಅಂದರೆ ನಮ್ಮಲ್ಲಿ ಬಹಳ ಜನ ಪೋಲೀಸರ ಕಾನೂನುಬಾಹಿರ extra-judicial ಕ್ರಮಗಳನ್ನು ಸಮರ್ಥಿಸಿಕೊಳ್ಳುತ್ತೇವೆ. ನಿಮಗೇ ಅಂತಹ ಪರಿಸ್ಥಿತಿ ಬಂದರೆ ಏನು ಮಾಡುತ್ತೀರಿ? ಆವಾಗ ಪೊಲೀಸರು ಕಾನೂನುಬದ್ಧವಾಗಿ ನಡೆದುಕೊಳ್ಳಬೇಕೋ ಅಥವಾ ಬೇರೆಯವರಿಗೆ ಮಾಡಿದಂತೆ ತಾವೇ ಶಿಕ್ಷೆ ವಿಧಿಸಿಬೇಕೋ? ಎಂದು ಕೇಳಿದರೆ 'ಛೇ! ಛೇ! ಅದೆಲ್ಲ ಹೇಗೆ ಸಾಧ್ಯ? ತಪ್ಪು ಮಾಡಿಲ್ಲ ಅಂದರೆ ಪೊಲೀಸರು ಯಾಕೆ ಹಿಡಿಯುತ್ತಾರೆ? ಆಕಸ್ಮಾತ್ by mistake ಹಿಡಿದರೂ ತಪ್ಪಿತಸ್ಥರಲ್ಲ ಅಂದ ಮೇಲೆ ಬಿಟ್ಟುಕಳಿಸುತ್ತಾರೆ,' ಎಂದು ಅವಗಣಿಸುತ್ತೇವೆ. ಅಂತವರಿಗೆ ಅಂತ ಈ ಕಥೆ ಹೇಳಬೇಕಾಯಿತು.

ನೀವು ನಿಮಗೆ ಕಾನೂನಬದ್ಧ ಪ್ರಕ್ರಿಯೆಯನ್ನೇ ನಿರೀಕ್ಷಿಸುತ್ತೀರಿ ಅಂದ ಮೇಲೆ ಅದೇ ಹಕ್ಕನ್ನು ಇತರರಿಗೂ ಅಪೇಕ್ಷಿಸಬೇಕು. ಪೊಲೀಸರ ಕೆಲಸವೇನಿದ್ದರೂ ತನಿಖೆ ಮಾಡಿ, ಆರೋಪಿಯನ್ನು ಅವಶ್ಯಕತೆ ಇದ್ದರೆ ಮಾತ್ರ ಬಂಧಿಸಿ, ಆರೋಪಪಟ್ಟಿ ಸಲ್ಲಿಸುವದು. ಅಪರಾಧಿಯೋ ನಿರಪರಾಧಿಯೋ ಎಂದು ನಿರ್ಧರಿಸುವದು ನ್ಯಾಯಾಲಯ. ಮತ್ತೆ ಅಪರಾಧಿ ಎಂದು ಸಾಬೀತಾಗುವವರೆಗೆ ಎಲ್ಲ ಆರೋಪಿಗಳು ನಿರಪರಾಧಿಗಳೇ. ಮತ್ತೆ ಒಮ್ಮೆ ನ್ಯಾಯಾಲಯ ನಿರಪರಾಧಿ ಎಂದು ತೀರ್ಮಾನಿಸಿದರೆ ಅದನ್ನು ಸಮಾಜ ಒಪ್ಪಬೇಕು. ನಿಮ್ಮ ಕಣ್ಣೆದುರಿನಲ್ಲೇ ಒಂದು ಅಪರಾಧ ನಡೆದಿರಬಹುದು. ಆದರೆ ಅದು ನ್ಯಾಯಾಧೀಶರ ಎದುರಲ್ಲಿ ನಡೆದಿರುವದಿಲ್ಲ. ನ್ಯಾಯಾಲಯದಲ್ಲಿ ಸಾಬೀತು ಮಾಡಬೇಕು ಅಂದರೆ ಬರೋಬ್ಬರಿ ಸಾಕ್ಷ್ಯಗಳು ಬೇಕು. ಅದಿಲ್ಲವಾದರೆ ಕೇವಲ ನಿಮ್ಮ ಸಾಕ್ಷಿಯನ್ನು ನಂಬಿ ಒಬ್ಬನನ್ನು ಅಪರಾಧಿ ಅಂತ ತೀರ್ಮಾನಿಸಲು ಬರುವದಿಲ್ಲ.

ಇದೇನೋ ಸಣ್ಣ ಪ್ರಕರಣವಾಯಿತು. ನಮ್ಮ ದೋಸ್ತನೊಬ್ಬ ಮಂಡಲ್ ವರದಿಯನ್ನು ವಿರೋಧಿಸುವ ಸಂದರ್ಭದಲ್ಲೋ ಅಥವಾ ಅಂತಹದೇ ಮತ್ಯಾವದೋ ಸಂದರ್ಭದಲ್ಲಾದ ಗಲಭೆಯಲ್ಲಿ, ಗುಂಪಿನಲ್ಲಿ ಗೋವಿಂದ, ಎಂಬಂತೆ ಬಂಧಿತನಾಗಿದ್ದ. ಒಂದು ಕೇಸ್ ಬಿತ್ತು. Wrong place, wrong time ಅನ್ನುತ್ತಾರಲ್ಲ. ಹಾಗೆ. ಗಲಾಟೆ ಗಲಭೆಗಳ ಸನಿಹಕ್ಕೂ ಹೋಗದವ ಅಂದು ಯಾವದೋ ಪೊರಪಾಟಿನಲ್ಲಿ ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾನೆ. ಸಿಕ್ಕವರೆಲ್ಲರನ್ನೂ ಒಳಗಾಕಿದ್ದಾರೆ. ಗುಂಪಿನಲ್ಲಿ ಗೋವಿಂದ ಎಂಬಂತೆ ಇವನೂ ಒಂದೆರೆಡು ದಿನ ಜೇಲಿನಲ್ಲಿ ಸಮಯ ಕಳೆದಿದ್ದಾನೆ. ನಂತರ ಜಾಮೀನ್ ಮೇಲೆ ಹೊರಗೆ ಬಂದಿದ್ದಾನೆ. ಆದರೆ ಹಲವಾರು ವರ್ಷಗಳ ಕಾಲ ತೀರ್ಮಾನವಾಗದೇ ಉಳಿದ ಪ್ರಕರಣ ಅವನನ್ನು ಅದೆಷ್ಟು ಕಾಡಿತು ಅಂದರೆ ಅದರಿಂದ ಪಾರಾಗಿ ಬರುವಷ್ಟರಲ್ಲಿ ಅವನು ಮತ್ತು ಅವನ ಮನೆಯವರು ಸೋತು ಸುಣ್ಣವಾದರು. ಡಿಗ್ರಿ ಮುಗಿಸಿ ಜಾಬ್ ಹುಡುಕಬೇಕು ಅಂದರೆ ಅದೊಂದು ತೊಡಕು. passport ಮಾಡಿಸೋಣ ಅಂದರೆ, 'ನಿಮ್ಮ ಮ್ಯಾಲೆ ಕೇಸ್ ಐತಲ್ಲರೀ?? ಪೊಲೀಸ್ ಸರ್ಟಿಫಿಕೇಟ್ ಹ್ಯಾಂಗ ಕೊಡೋಣ??' ಎಂದು ರೋಪ್ ಹಾಕಿ ದೊಡ್ಡ ಮೊತ್ತಕ್ಕೆ ಡಿಮ್ಯಾಂಡ್. ಕಡೆಗೆ ಹೇಗೋ ಮಾಡಿ ಎಲ್ಲ ಸಾಫ್ ಮಾಡಿಸಿಕೊಂಡ.

ಸ್ವಲ್ಪ ದಿವಸಗಳ ಹಿಂದೆ YouTube ಮೇಲೆ ಯಾವದೋ ವಿಡಿಯೋ ನೋಡುತ್ತಿದ್ದೆ. ಕಾಲೇಜೊಂದರ ಮೇಲೆ ದಾಳಿ ಮಾಡಿದ್ದ ಪೊಲೀಸರು ಒಂದಿಷ್ಟು ಹುಡುಗರನ್ನು ರೌಂಡಪ್ ಮಾಡಿದ್ದರು. ಕೆಲವರಿಗೆ ಬರೋಬ್ಬರಿ ಏಟುಗಳು ಬೀಳುತ್ತಿದ್ದವು. ಕೆಲವರಿಗೆ ಬಸ್ಕಿ ತೆಗೆಯಲು ಹಚ್ಚಿದ್ದರು. ಎಲ್ಲರ ಮೇಲೆ ಹುಡುಗಿಯರನ್ನು ಚುಡಾಯಿಸಿದ ಆರೋಪ. ರೌಂಡಪ್ ಆಗಿದ್ದ ಆ ಹುಡುಗರು, ಎಲ್ಲರೂ, ತಪ್ಪು ಮಾಡಿದ್ದರು ಅಂತೇ ಇಟ್ಟುಕೊಳ್ಳೋಣ. ಅವರನ್ನು ಬಂಧಿಸಿ, ಕೇಸ್ ಹಾಕಿ, ಮುಂದಿನ ಪ್ರಕ್ರಿಯೆಯನ್ನು ನ್ಯಾಯಾಲಯಕ್ಕೆ ಬಿಡುವದು ಸರಿಯಾದ ಮಾರ್ಗ. ಆದರೆ ಅದನ್ನೆಲ್ಲ ಮಾಡುತ್ತಾ ಕೂಡಲು ಟೈಮ್ ಎಲ್ಲಿ? ಹಾಗೇ ಮಾಡಿದರು ಅಂತಿಟ್ಟುಕೊಳ್ಳೋಣ. ಸರಿಯಾದ ಸಾಕ್ಷ್ಯ ಸಿಗದಿದ್ದರೆ ಬಚಾವಾಗಿ ಬರುತ್ತಾರೆ. ಅದೆಲ್ಲ ತಲೆಬಿಸಿಗಿಂತ ಸಿಕ್ಕಸಿಕ್ಕವರಿಗೆಲ್ಲ ನಾಲ್ಕು ಏಟು  ಕೊಟ್ಟು, ಬುರುಡೆ ತಟ್ಟಿ ಕಳಿಸಿದರಾಯಿತು. ಬಡಿಸಿಕೊಂಡ ಹುಡುಗರು ಅಪರಾಧಿಗಳೋ ನಿರಪರಾಧಿಗಳೋ. Who cares! ಅವರು ಬಡಿಸಿಕೊಂಡಿದ್ದನ್ನು ನೋಡಿದ ಇತರರು ಮಹಿಳಾ ಪೀಡನೆ ಕಮ್ಮಿ ಮಾಡುತ್ತಾರೆ. ಒಟ್ಟಿನಲ್ಲಿ ಪರಿಸ್ಥಿತಿ ಹತೋಟಿಗೆ ಬರುತ್ತದೆ ಅಥವಾ ಬಂದಂತೆ ಕಾಣುತ್ತದೆ. Public memory is very short.

ಎಲ್ಲೋ ಓದಿದ ನೆನಪು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಮುಕ್ಕಾಲು ಶತಮಾನವೇ ಕಳೆದರೂ ನಮ್ಮ ಕ್ರಿಮಿನಲ್ ಕಾನೂನುಗಳು (CrPC) ಎಲ್ಲಾ ಇನ್ನೂ ಬ್ರಿಟಿಷರ ಕಾಲದವು. ಪೋಲೀಸರನ್ನು ತಯಾರು ಮಾಡುವ ಪದ್ಧತಿ, ಅವರಿಗೆ ಕೊಡುವ ತರಬೇತಿ ಎಲ್ಲ ಆ ಕಾಲದ್ದೇ. ಬ್ರಿಟಿಷರ ಕಾಲದಲ್ಲಿ ಜನರಿಗಾಗಿ, ಅವರ ಸೇವೆಗಾಗಿ ಸರ್ಕಾರವಿರಲಿಲ್ಲ. ಬ್ರಿಟಿಷರ ಜಾಗತಿಕ ಆಸಕ್ತಿಗಳನ್ನು ಕಾಯಲು ಸರ್ಕಾರವಿತ್ತು. ಕಾನೂನುಗಳು, ಕಾನೂನು ಪ್ರಕ್ರಿಯೆಗಳು ಎಲ್ಲಾ ಮೂಲನಿವಾಸಿಗಳನ್ನು ಮತ್ತು ಅವರ ಮೂಲಭೂತ ಹಕ್ಕುಗಳನ್ನು ಮಟ್ಟ ಹಾಕಲೆಂದೇ ಮಾಡಿದಂತಿದ್ದವು. ಅವೇ ಜನವಿರೋಧಿ ಕಾನೂನುಗಳು ಮತ್ತು ಜನವಿರೋಧಿ ಧೋರಣೆಗಳು ಈಗಲೂ ಮುಂದುವರಿದಿವೆ.

ಯೋಗಿ ಆದಿತ್ಯನಾಥರು ಉತ್ತರಪ್ರದೇಶದ ಮುಖ್ಯಮಂತ್ರಿ ಆದ ಕೂಡಲೇ ಆ್ಯoಟಿ ರೋಮಿಯೋ ಸ್ಕ್ವಾಡ್ (anti romeo squad) ಎನ್ನುವ ಪೋಲಿಸ್ ತಂಡವನ್ನು ಹುಟ್ಟುಹಾಕಿದ್ದಾರಂತೆ. ಮಹಿಳಾ ಪೀಡಕರನ್ನು ಹಿಡಿದು ಮಟ್ಟ ಹಾಕುವದೇ ಈ ತಂಡದ ಕೆಲಸ. ಉದ್ದೇಶ ಒಳ್ಳೆಯದೇ. ಆದರೆ ಆಗಬಹುದಾದ ಅತಿರೇಕಗಳ ಬಗ್ಗೆ ಎಚ್ಚರಿಕೆ ಇರಬೇಕು. ಪ್ರಜ್ಞಾವಂತರು ಅಂತಹ feedback ನ್ನು ಸರ್ಕಾರಕ್ಕೆ ಕೊಡಬೇಕು. ಮಹಿಳೆಯರಿಗೇ ಆಗಲಿ, ಪುರುಷರಿಗೇ ಆಗಲಿ, ತೃತೀಯಲಿಂಗಿಗಳಿಗೇ ಆಗಲಿ ಅಥವಾ ಪ್ರಾಣಿಗಳಿಗೇ ಆಗಲಿ, ಯಾರಿಗೂ ಪೀಡನೆ ಸಲ್ಲ. ಪೀಡಿಸುವವರ ವಿರುದ್ಧ ಪೊಲೀಸರು ಜರೂರ್ ಕ್ರಮ ಕೈಗೊಳ್ಳಲಿ. ಅಷ್ಟೇ ತಾವೇ ನ್ಯಾಯಾಧೀಶರೂ ಆಗಿ instant ನ್ಯಾಯ ಕೊಡುವ ದಾರ್ಷ್ಟ್ಯ ತೋರದೆ ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯದ  ಮುಂದೆ ಹಾಜರುಪಡಿಸಲಿ. ಅಲ್ಲಿ ತೀರ್ಮಾನವಾಗಿ ಅಪರಾಧಿಯೆಂದು ಸಾಬೀತಾದರೆ ಶಿಕ್ಷೆಯಾಗಲಿ. ಅಪರಾಧಿಯೆಂದು ಸಾಬೀತಾಗದಿದ್ದರೆ ಸರ್ಕಾರದ ಹಿರಿತಲೆಗಳು, 'ಅಪರಾಧ ಯಾಕೆ ಸಾಬೀತಾಗಲಿಲ್ಲ? ಸಾಕ್ಷ್ಯದ ಕೊರತೆಯೇ? ಮತ್ತೇನಾದರೂ ಕೊರತೆಯೇ?' ಎಂದು ಆತ್ಮವಿಚಾರ ಮಾಡಿಕೊಳ್ಳಲಿ. conviction rate ತುಂಬಾ ಕಮ್ಮಿಯಾಗಿರಲು ಕಾರಣ ಯಾರ್ಯಾರನ್ನೋ ಸುಖಾಸುಮ್ಮನೆ ಕೇಸಿನಲ್ಲಿ 'ಫಿಟ್' ಮಾಡುವದು, ಕಾಟಾಚಾರಕ್ಕೆ ತನಿಖೆ ಮಾಡುವದು, ಸಾಕ್ಷ್ಯಗಳನ್ನು ಸರಿಯಾಗಿ ಸಂಗ್ರಹಿಸದೇ ಇರುವದು, ಇತ್ಯಾದಿ. ಪೊಲೀಸರ ಮೇಲೆ ಅದೆಷ್ಟು ಕೆಲಸದ ಒತ್ತಡವಿರುತ್ತದೆ ಅಂದರೆ ತನಿಖೆಯ ಇದ್ಯಾವ ಪ್ರಕ್ರಿಯೆಯೂ ಸರಿಯಾಗಿ ಆಗುವದಿಲ್ಲ. ಪೊಲೀಸರಿಗೆ ಸರಿಯಾಗಿ ಕೆಲಸ ಮಾಡಲು ಹೆಚ್ಚಿನ ಸವಲತ್ತುಗಳು ದೊರೆಯಲಿ.

'ಅಯ್ಯೋ, ಹೋಗ್ಲಿ ಬಿಡ್ರೀ. ಯಾರದ್ದು ತಪ್ಪೋ, ಯಾರದ್ದು ಸರಿಯೋ. ಯಾವುದೋ ಹುಡುಗ ತನ್ನ ತಪ್ಪಿಲ್ಲದಿದ್ದರೂ ಪೊಲೀಸರ ಕೈಯಲ್ಲಿ ತಾರಾಮಾರಾ ಏಟು ತಿಂದ ಎಂದ ಮಾತ್ರಕ್ಕೆ ಇಷ್ಟೆಲ್ಲಾ ತಲೆಕೆಡಿಸಿಕೊಳ್ಳಬೇಕೇ?' ಎನ್ನುವ ಉಡಾಫೆ ಮಾಡಿದರೆ ನಾಳೆ ಇದು ನಿಮ್ಮ ಬುಡಕ್ಕೇ ಬಂದೀತು. ಗ್ರಹಚಾರ ಕೆಟ್ಟರೆ ನಿಮ್ಮ ಮನೆಯ ಸಭ್ಯ ಹುಡುಗನೇ ಮಹಿಳಾ ಪೀಡಕ ಅಂತ ಬ್ರಾಂಡ್ ಆದಾನು. ನಿಮ್ಮ ಮನೆಯ ಸಂಸ್ಕಾರವಂತ ಹುಡುಗಿಯೇ ವೇಶ್ಯೆ ಅಂತ ಲೇಬಲ್ ಆದಾಳು. ನಿಮ್ಮ ಮನೆಯ ಜನಪರ ಹೋರಾಟಗಾರನೇ ರೌಡಿಯೆಂದು ನಕಲಿ ಎನ್ಕೌಂಟರಿನಲ್ಲಿ 'ಢಂ!' ಅಂದುಹೋದಾನು. ಆಗ, 'ಅಯ್ಯೋ! ಕಾನೂನಿನ ಪರಿಪಾಲನೆಯಾಗಲಿಲ್ಲ. ಅನ್ಯಾಯವಾಯಿತು,' ಎಂದು ರೋಧಿಸಿದರೆ ಉಪಯೋಗವಿಲ್ಲ. ಹಾಗಾಗಬಾರದು ಅಂದರೆ grassroots ಹಂತದಿಂದ ಕ್ರಿಮಿನಲ್ ಕಾನೂನಿನಲ್ಲಿ ಮತ್ತು ಕಾನೂನನ್ನು ಪಾಲಿಸುವ ಧೋರಣೆಯಲ್ಲಿ ಸಮಗ್ರ ಬದಲಾವಣೆಗಳು ಬರಬೇಕು. ಜನಸ್ನೇಹಿ ಕಾನೂನುಗಳು ಮತ್ತು ಜನಪರ ಪೋಲೀಸ್ ವ್ಯವಸ್ಥೆ ಬರಬೇಕು. ಆ ದಿಕ್ಕಿನಲ್ಲಿ ಜನರು ಮತ್ತು ಅವರ ಪ್ರತಿನಿಧಿಗಳು ಆಸ್ಥೆ ವಹಿಸಲಿ. in the mean time, ಸಾರ್ವಜನಿಕರು ಒಂದು ಕೆಲಸ ಮಾಡಲಿ. ಪೊಲೀಸರು ಬಂಧಿಸಿದಾಕ್ಷಣ ಅಥವಾ ಕೇಸ್ ಬುಕ್ ಆಯಿತು ಅಂದಾಕ್ಷಣ ಅಪರಾಧಿ ಎಂದು ತೀರ್ಮಾನಿಸುವದು ಬೇಡ. ಮಾಧ್ಯಮಗಳೂ ಅಷ್ಟೇ. ವರ್ಣರಂಜಿತವಾಗಿ ವರದಿ ಮಾಡುವ ಅಬ್ಬರದಲ್ಲಿ ಆರೋಪಿಯನ್ನು ಅಪರಾಧಿ ಎಂದು ಬಿಂಬಿಸದಿರಲಿ. ಎಷ್ಟೋ ವರ್ಷಗಳ ನಂತರ ಆತ ನಿರಪರಾಧಿ ಎಂದು ಹೊರಬಂದಾಗ ಅದು ಯಾರಿಗೂ ತಿಳಿಯುವದೇ ಇಲ್ಲ.

ಎಲ್ಲೋ ದೂರದ ಅಮೇರಿಕಾದಲ್ಲಿ ಕುಳಿತು ಉದ್ರಿ ಉಪದೇಶ ಮಾಡುತ್ತಿದ್ದೇನೆ ಅಂತ ಭಾವಿಸಬೇಡಿ. ಇದು ನನಗೆ ತುಂಬಾ ಆಪ್ತವಾದ ವಿಷಯ. ಇದರ ಬಗ್ಗೆ ತುಂಬಾ passionate ನಾನು. ಇಲ್ಲಿಗೆ ಬರುವ ಮೊದಲು ನಾನೂ ಸಹ, 'ಎಲ್ಲರನ್ನೂ ಎನ್ಕೌಂಟರ್ ಮಾಡಿ ಕೊಂದು ಎಸೆಯಬೇಕು! ಅದೇ ಸರಿಯಾದ ಮಾರ್ಗ!' ಎಂದು ಹೇಳಿದವನೇ. ಪೊಲೀಸರು extra judicial ಕ್ರಮ ಕೈಗೊಂಡಾಗ ಸಮರ್ಥಿಸಿಕೊಂಡವನೇ. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಮನೋಭಾವ ಬದಲಾಗಿದೆ. extra judicial ಕ್ರಮಗಳು ತಾತ್ಕಾಲಿಕವಾಗಿ ಪರಿಹಾರವನ್ನು ತಂದುಕೊಟ್ಟರೂ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತವೆ ಅಂತ ಈಗ ಪೂರ್ತಿಯಾಗಿ convince ಆಗಿದೆ. ಒಂದು ಕಾಲದಲ್ಲಿ ನಾನೂ ಸಹ ಮಾನವಹಕ್ಕುಗಳ ಹೋರಾಟಗಾರರು (human rights activists) ಎಂದರೆ useless evils ಎಂದು ಸಿಕ್ಕಾಪಟ್ಟೆ ಸಿಡಿಮಿಡಿಗೊಂಡವನೇ. ಆದರೆ ಈಗ ಆ ಧೋರಣೆ ಇಲ್ಲ. 

ಇಲ್ಲೂ ಆಗಾಗ ಪೊಲೀಸ್ ಅತಿರೇಕಗಳು ಆಗುತ್ತವೆ. ಆದರೆ ಅದಕ್ಕೆ ಸರ್ಕಾರ ಜವಾಬ್ದಾರಿಯಾಗುತ್ತದೆ. ಸಂತ್ರಸ್ತನಿಗೆ ತಕ್ಕ ಪರಿಹಾರ ಸಿಗುತ್ತದೆ. ಸರ್ಕಾರದ ವರಿಷ್ಠರು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಮುಂದೆ ಅಂತಹ ಅತಿರೇಕಗಳಾಗುವದನ್ನು ತಡೆಯಲು ಮುಂಜಾಗ್ರತೆಯ ಕ್ರಮಗಳನ್ನು ರೂಪಿಸಲಾಗುತ್ತದೆ. ಇದೆಲ್ಲ ಸಾಮಾಜಿಕ ಪರಿವರ್ತನೆ ಒಂದು ದಿನದಲ್ಲಾಗಿದ್ದಲ್ಲ. ಇಲ್ಲೂ ಆಳಿಹೋದವರು ಬ್ರಿಟಿಷರೇ. ಅಮೇರಿಕವೂ ಸಹ ಅವರ ವಸಾಹತೇ ಆಗಿದ್ದರಿಂದ ಇಲ್ಲಿದ್ದವೂ ಜನವಿರೋಧಿ ಕಾನೂನುಗಳೇ. ಆದರೆ ಬ್ರಿಟಿಷರನ್ನು ಓಡಿಸಿದ ಜನ ಎಚ್ಚೆತ್ತುಕೊಂಡರು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಎಷ್ಟೋ ವರ್ಷಗಳ ಪರಿಶ್ರಮದ ನಂತರ ಜಾರಿಗೆ ಬಂತು. All good things take time and persistent effort.

Friday, March 24, 2017

'ಪಂಚನಾಮೆ' ಪ್ರಹಸನ

೧೯೭೭-೭೮ ರ ಆಸುಪಾಸು ಇರಬೇಕು. ಸಿರ್ಸಿ ಸಮೀಪದ ಅಜ್ಜನಮನೆಗೆ ಹೋಗಿದ್ದೆ. ಅಮ್ಮನ ಜೊತೆ. ಅದು ನವೆಂಬರ್ ತಿಂಗಳ ಸಮಯ. ಆಗ ಯಾವದೇ ರಜೆ ಇರಲಿಲ್ಲ. ಆ ವರ್ಷ ಕಬ್ಬು ಸೊಗಸಾಗಿ ಬೆಳೆದಿತ್ತು. ಹಾಗಾಗಿ ಆಲೆಮನೆ ಹಾಕಿದ್ದರು. ಆಲೆಮನೆ ಅಂದರೆ ಕಬ್ಬನ್ನು ಅರೆದು ಕಬ್ಬಿನರಸ ತೆಗೆಯಲು ನಮ್ಮ ಹಳ್ಳಿ ಕಡೆ ಹಾಕುವ ಕಬ್ಬಿನ ಗಾಣ. ಸೊಪ್ಪಿನ ಬೆಟ್ಟದಲ್ಲಿ ಚಂದದ ಅಂಗಳ ಮಾಡಿ, ಗಾಣ ಹಾಕಿ, ಅದನ್ನು ತಿರುಗಿಸಲು ಸ್ಪೆಷಲ್ ಕೋಣಗಳನ್ನು ತಂದು, ಕಬ್ಬನ್ನು ಅರೆದು, ಕಬ್ಬಿನ ರಸವನ್ನು ತೆಗೆದು, ಅದನ್ನು ಕಾಯಿಸಿ, ಬೆಲ್ಲ ತೆಗೆಯುವದೇ ಆಲೆಮನೆ. ವಾರಗಟ್ಟಲೇ ನಡೆಯುತ್ತದೆ. ಬೇಕಾದಷ್ಟು ಕಬ್ಬಿನಹಾಲು ಕುಡಿಯಬಹುದು. ಫ್ರೆಶ್ ಆಗಿ ತಯಾರಾಗುವ ಬೆಲ್ಲವನ್ನು ಸವಿಯಬಹುದು. ಮೇಲಿಂದ ತರತರಹದ ಇತರೆ ತಿಂಡಿ ತಿನಸುಗಳು ಬೋನಸ್ ಇದ್ದ ಹಾಗೆ.

ಆಲೆಮನೆಗೆ ಮುದ್ದಾಂ ಬಂದು ಹೋಗಿ ಅಂತ ಅಜ್ಜ ಆಹ್ವಾನಿಸಿದ್ದ. ಅದಕ್ಕಿಂತ ಮೊದಲು ನನಗಂತೂ ಆಲೆಮನೆಗೆ ಹೋದ ನೆನಪಿರಲಿಲ್ಲ. ಪ್ರತಿವರ್ಷ ಆಲೆಮನೆ ಹಾಕುತ್ತಲೂ ಇರಲಿಲ್ಲ. ಕಾಡುಹಂದಿಗಳ ಕಾಟದಿಂದ ಹೆಚ್ಚಿನ ಕಬ್ಬು ಕಟಾವಿಗೆ ಬರುತ್ತಿರಲೇ ಇಲ್ಲ. ಕಾಡುಹಂದಿಗಳನ್ನು ಗುಂಡಿಟ್ಟು 'ಢಂ!' ಅನ್ನಿಸೋಣ ಅಂದರೆ ಅರಣ್ಯ ಇಲಾಖೆ ಮಂದಿಯ ರಗಳೆ. ಆಗ ಬೇಟೆ ಎಲ್ಲ ನಿಷೇಧ ಮಾಡಿಯಾಗಿತ್ತಲ್ಲ. ಹೀಗಾಗಿ ಒಳ್ಳೆ ಕಬ್ಬಿನ ಬೆಳೆ ಬಂದ ವರ್ಷ ಮಾತ್ರ ಆಲೆಮನೆ. ಒಟ್ಟಿನಲ್ಲಿ ಅಪರೂಪದ ಆ ವರ್ಷದ ಆಲೆಮನೆಯನ್ನು ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಯಾವದೇ ಕಾರಣವಿಲ್ಲದಾಗೂ ಯಾವಾಗ ಬೇಕಾದರೂ ಅಜ್ಜನ ಮನೆಗೆ ಓಡಲು ರೆಡಿ ನಾವು. ಹಾಗಿದ್ದಾಗ ಈಗ ತಪ್ಪಿಸಿಕೊಳ್ಳಲು ಆಗುತ್ತದೆಯೇ!? ಸಾಧ್ಯವೇ ಇಲ್ಲ. ಒಂದೆರೆಡು ದಿನ ಶಾಲೆಗೆ ಚಕ್ಕರ್. ಹೇಳಿಕೇಳಿ ಆಗ ಇನ್ನೂ ಒಂದನೇ ಕ್ಲಾಸ್. ಶಾಲೆಗೆ ಹೋದರೂ ಅಷ್ಟೇ ಬಿಟ್ಟರೂ ಅಷ್ಟೇ.

ಆಲೆಮನೆಗೆಂದು ಊರಿಗೆ ಹೋದರೆ, ಊರಿನಲ್ಲಿ ಒಂದು ಖತರ್ನಾಕ್ ಘಟನೆಯಾಗಿಬಿಟ್ಟಿತು. ಅಡಿಕೆ ತೋಟದಲ್ಲಿ ಒಬ್ಬನ ಮೇಲೆ ಇನ್ನೊಬ್ಬ ಕತ್ತಿಯಿಂದ (ಕುರ್ಪಿ, sickle) ಹಲ್ಲೆ ಮಾಡಿದ್ದ. ಕೊಲೆ ಯತ್ನ. ಇಬ್ಬರೂ ಒಂದೇ ಊರಿನವರು. ಒಬ್ಬರ ಮನೆ ತೋಟದ ಕೆಳಗಿನ ಕೊಳ್ಳದಲ್ಲಿದ್ದರೆ ಮತ್ತೊಬ್ಬರ ಮನೆ ತೋಟದ ಮೇಲಿನ ದಿಬ್ಬದಲ್ಲಿ. ಹೆಚ್ಚುಕಮ್ಮಿ ಒಂದೇ ವಯಸ್ಸಿನ ಯುವಕರು. ಇಬ್ಬರ ನಡುವೆ ಏನೋ ಮನಸ್ತಾಪ. ಸಣ್ಣಗೆ ದ್ವೇಷ, ಅಸಹನೆ ಬೆಳೆದಿದೆ. ಆ ದಿನ ಅಡಿಕೆ ತೋಟದಲ್ಲಿ ಒಬ್ಬರಿಗೊಬ್ಬರು ಎದುರಾಗಿದ್ದಾರೆ. ಏನು ಮಾತುಕತೆ, ಹಾಥಾಪಾಯಿ ನಡೆಯಿತೋ ಗೊತ್ತಿಲ್ಲ. ತೋಟದಲ್ಲಿ ಓಡಾಡುವರ ಹತ್ತಿರ ಕೃಷಿ ಕತ್ತಿ (ಕುರ್ಪಿ) ಇದ್ದೇ ಇರುತ್ತದೆ. ಒಬ್ಬವ ಅದನ್ನೇ ತೆಗೆದು ಇನ್ನೊಬ್ಬನ ಮೇಲೆ ಹಲ್ಲೆ ಮಾಡಿದ್ದಾನೆ. ಪುಣ್ಯಕ್ಕೆ ಸಾಯುವಂತೆ ಹೊಡೆದಿಲ್ಲ. ಹಾಗಾಗೆಂದೇ ಕತ್ತಿಯಿಂದ ಹಲ್ಲೆ ಮಾಡಿಸಿಕೊಂಡವ ಬಚಾವಾಗಿದ್ದಾನೆ. ಗಾಯಗೊಂಡವನನ್ನು ಅಸ್ಪತ್ರೆಗೆ ಸೇರಿಸಿದ್ದಾರೆ. ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. ಒಟ್ಟಿನಲ್ಲಿ ಹಿಂದೆಂದೂ ಕೇಳರಿಯದ ಕೊಲೆಯತ್ನವೊಂದು ನಡೆದುಹೋಗಿದೆ. ಊರಿಗೆ ಊರೇ ಫುಲ್ ಥಂಡಾ ಹೊಡೆದಿದೆ.

ಅಲ್ಲಿಗೆ ಎಲ್ಲ ಮುಗಿಯುತೇ? ಇಲ್ಲ. ಇದು ಪೋಲೀಸ್ ಕೇಸ್. ಬಂದರಲ್ಲ ಪೊಲೀಸರು ಸಿರ್ಸಿ ಪಟ್ಟಣದಿಂದ. ಒಂದರ ಮೇಲೊಂದು ಕೌತುಕಮಯ ಘಟನೆಗಳು. ಹಲ್ಲೆಯಾಗಿದ್ದನ್ನು ಪ್ರತ್ಯಕ್ಷವಾಗಿ ನೋಡಲಾಗಿರಲಿಲ್ಲ. ತೋಟದ ಕಡೆ ಹೋಗಿದ್ದ ಮಾವ ಮನೆಗೆ ಬೇಗ ಬಂದಿದ್ದ. ಬೆಳಗಿನ ಉಪಹಾರ ಮುಗಿಸಿ ತೋಟದ ಕಡೆ ಹೋದ ಗಂಡಸರು ತಿರುಗಿ ವಾಪಸ್ ಬರುವದು ಮಧ್ಯಾಹ್ನದ ಊಟದ ಹೊತ್ತಿಗೇ. ಅಂದು ಹೋಗಿ ಒಂದೆರೆಡು ತಾಸಾಗುವ ಮೊದಲೇ ಗಡಿಬಿಡಿಯಲ್ಲಿ ಮನೆಗೆ ವಾಪಸ್ ಬಂದ ಮಾವ ತೋಟದಲ್ಲಾದ ಹಲ್ಲೆ ಬಗ್ಗೆ ಮನೆಯಲ್ಲಿ ಹೇಳಿದ್ದ. ಮನೆಯಲ್ಲಿ ಚಿಕ್ಕವ ಅಂತ ಇದ್ದವ ನಾನೇ. ಹಲ್ಲೆಯ ವಿವರಗಳು ನನಗೆ censored. ಹಾಗಾಗಿ ಹಿರಿಯರು ತಮಗಷ್ಟೇ ತಿಳಿಯುವಂತೆ ಸಣ್ಣ ದನಿಯಲ್ಲಿ ಕೊಚಪಚ ಮಾತಾಡಿಕೊಂಡರು. ನಮಗೋ ಕೆಟ್ಟ ಕುತೂಹಲ. ನಾನು ನಿರಂತರವಾಗಿ ಅಡ್ಡಬಾಯಿ ಹಾಕುತ್ತ ‘ಏನಾತು? ಯಾಕಾತು?’ ಅಂತ ಕೇಳಿಯೇ ಕೇಳಿದೆ. ಬೇರೆ ಯಾರಾದರೂ ಮಾಣಿಯಾಗಿದ್ದರೆ, ‘ಸುಮ್ಮನಿರು ಅಧಿಕಪ್ರಸಂಗಿ!’ ಅಂತ ಬುರುಡೆಗೆ ಎರಡು ತಟ್ಟುತ್ತಿದ್ದರೋ ಏನೋ. ಆದರೆ ನಾನು ಪಟ್ಟಣದಿಂದ ಆಗಮಿಸಿರುವ ಪ್ರೀತಿಯ ಮೊಮ್ಮಗ. ಅದರಲ್ಲೂ ಸಣ್ಣವ. ಮತ್ತೆ ಸಿಕ್ಕಾಪಟ್ಟೆ ರಗಳೆ ಪಾರ್ಟಿ. ಹಾಗಾಗಿ ಬಯ್ಯುವ ಅಥವಾ ಹೊಡೆಯುವ ಮಾತೇ ಇರಲಿಲ್ಲ. ನನಗೂ ಸಂಕ್ಷಿಪ್ತವಾಗಿ ಸುದ್ದಿ ಹೇಳಿ ಮುಗಿಸಿದರು. ಹೀಗೀಗೆ ಆಯಿತಂತೆ.....ಅವರ ಮನೆ ಆ ಮಾಮಾನನ್ನು ಮತ್ತೊಬ್ಬರ ಮನೆಯ ಇನ್ನೊಬ್ಬ ಮಾಮಾ ಹೊಡೆದಿದ್ದಾನೆ. ಕತ್ತಿಯಿಂದ ಹೊಡೆದಿದ್ದಾನೆ. ಗಾಯವಾಗಿದೆ. ಆಸ್ಪತ್ರೆಗೆ ಸೇರಿಸಿದ್ದಾರೆ. ಆರಾಮಾಗುತ್ತಿದ್ದಾನೆ. ಇಷ್ಟೇ ಹೇಳಿ ಮುಗಿಸಿದರು.

ಮಧ್ಯಾಹ್ನದ ಊಟ ಮುಗಿಯುವ ಹೊತ್ತಿಗೆ ನೀಲಿ ಬಣ್ಣದ ಪೋಲೀಸರ ವ್ಯಾನು ತುಂಬಿದ ಬಸುರಿಯಂತೆ ಎರ್ರಾಬಿರ್ರಿ ಓಲಾಡುತ್ತ, ಕೆಟ್ಟ ಕರಿ ಹೊಗೆ ಬಿಡುತ್ತ ಊರಿಗೆ ಬಂತು. ಸೀದಾ ಕೆಳಗಿನ ಕೇರಿಗೇ ಹೋಯಿತು. ತೋಟದಲ್ಲಿ ಬೆಳಿಗ್ಗೆಯಾದ ಹಲ್ಲೆಯನ್ನಂತೂ ನೋಡುವ ನಸೀಬ್ ಇರಲಿಲ್ಲ. ಈಗ ಬಂದಿರುವ ಪೊಲೀಸರು ಮಾಡಲಿರುವ ಕಾರ್ಯಾಚರಣೆಯನ್ನು ಮಿಸ್ ಮಾಡಿಕೊಳ್ಳುವಂತೆಯೇ ಇರಲಿಲ್ಲ. ‘ಏ, ಬಿಸಿಲಲ್ಲಿ ಹೋಗಬೇಡ. ಊಟಾದ ಮೇಲೆ ಮಲಗಿ ಸ್ವಲ್ಪ ನಿದ್ದೆ ಮಾಡು’ ಅಂತ ಹಿರಿಯರು ಬೊಂಬಡಾ ಹೊಡೆಯುತ್ತಿದ್ದರೂ ಕ್ಯಾರೇ ಮಾಡದೇ ಕೆಳಗಿನ ಕೇರಿಗೆ ಓಡಿದ್ದೆ.

ಪೋಲೀಸ್ ವ್ಯಾನ್ ಯಾರ ಮನೆಗೆ ಬಂದಿತ್ತೋ ಅವರ ಮನೆ ಮುಂದೆ ಆಗಲೇ ಸಣ್ಣ ಗುಂಪು ನೆರೆದಿತ್ತು. ಮೂರ್ನಾಲ್ಕು ಜನ ಪೊಲೀಸರು ಬಂದಿದ್ದರು. ಅವರಲ್ಲಿ ಒಬ್ಬವ ಬರೆಯಲು ಉಪಯೋಗಿಸುವ ಕ್ಲಿಪ್ ಬೋರ್ಡನ್ನು (clipboard) ಶಿಸ್ತಾಗಿ ಹಿಡಿದಿದ್ದ. ಅದರ ಮೇಲೆ ಬಿಳಿಯ ಹಾಳೆಗಳನ್ನು ನೀಟಾಗಿ ಪೇರಿಸಿಟ್ಟುಕೊಂಡಿದ್ದ. ಪೆನ್ನು ಹಿಡಿದು (ಹಿರಿದು!) ಬರೆಯಲು ರೆಡಿಯಾಗಿ ನಿಂತಿದ್ದ. ಅದೇಕೋ ಗೊತ್ತಿಲ್ಲ. ಅಷ್ಟು ಜನ ಪೊಲೀಸರಲ್ಲಿ ಅವನೇ ಬಹಳ ಆಕರ್ಷಿಸಿಬಿಟ್ಟ. ಆಗಿಂದಲೂ ನಾವೂ ಬರಹಗಾರರೇ ನೋಡಿ. ಆಗ ಬರೆಯುತ್ತಿರಲಿಲ್ಲ. 'ಜೀರಕ್ಕೆ ಜೀರೋ' ಅಂತ ರಾಗವಾಗಿ ಹಾಡುತ್ತ ಶಿಸ್ತಾಗಿ ಪೇಜುಗಟ್ಟಲೆ ಗೀಚುತ್ತಿದ್ದೆ. ಅದನ್ನೇ ಬರೆಯುವದು ಅಂದುಕೊಂಡಿದ್ದೆ. ಹಾಗಾಗಿ ಈಗ ಕ್ಲಿಪ್ ಬೋರ್ಡ್ ಹಿಡಿದು ಬರೆಯಲು ಅಣಿಯಾಗಿದ್ದ ಪೋಲೀಸ್ ಸಿಕ್ಕಾಪಟ್ಟೆ impress ಮಾಡಿಬಿಟ್ಟ.

ಪೋಲೀಸರು ಅಲ್ಲಿದ್ದವರ ಹತ್ತಿರ ಏನೇನೋ ಪ್ರಶ್ನೆ ಕೇಳುತ್ತಿದ್ದರು. ಅವರು ಉತ್ತರ ಕೊಟ್ಟಂತೆ, ವಿವರಣೆ ಹೇಳಿದಂತೆ ಕ್ಲಿಪ್ ಬೋರ್ಡ್ ಹಿಡಿದಿದ್ದ ಪೋಲೀಸ್ ಬರೆದುಕೊಳ್ಳುತ್ತಿದ್ದ. ‘ಅಬ್ಬಾ! ಇವನ ಕೌಶಲ್ಯವೇ! ಜನ ಎಷ್ಟೊಂದು ವೇಗವಾಗಿ, ಅದೂ ನಮ್ಮ ಹಳ್ಳಿ ಭಾಷೆಯಲ್ಲಿ ಮಾತಾಡುತ್ತಿದ್ದಾರೆ. ಆದರೂ ಈ ಪೋಲೀಸ್ ಎಷ್ಟು ಮಸ್ತಾಗಿ, ವೇಗವಾಗಿ ಬರೆದುಕೊಳ್ಳುತ್ತಿದ್ದಾನೆ. ಬರೆದರೆ ಇವನ ಹಾಗೆ ಬರೆಯಬೇಕು,’ ಅಂದುಕೊಂಡೆ. ಬರವಣಿಗೆಗೆ ಹೊಸ benchmark ಹೊರಹೊಮ್ಮಿತು. ಅದೇ ಆ ಸಿರ್ಸಿ ಪೋಲೀಸನ ಬರವಣಿಗೆಯ ವೇಗ, ಗತಿ, ಸ್ಟೈಲ್.

ಅಲ್ಲೊಬ್ಬಳು ಮಡಿ ಅಮ್ಮ ಇದ್ದಳು. ಕೇಶಮುಂಡನ ಮಾಡಿಸಿಕೊಂಡಿದ್ದ ವಿಧವೆ ಅಜ್ಜಿ. ಹಲ್ಲೆಯಾಗಿ ಗಾಯಗೊಂಡವನ ಮನೆಯವಳು. ಅವನ ತಾಯಿಯೋ ಅಥವಾ ಅಜ್ಜಿಯೋ ಇರಬೇಕು. ಅವಳ ಹತ್ತಿರವೂ ಹೇಳಿಕೆಯನ್ನು ತೆಗೆದುಕೊಂಡರು. ಪೋಲೀಸರು ಕೇಳಿದ್ದು ಅವಳಿಗೆ ತಿಳಿಯುತ್ತಿರಲಿಲ್ಲವೋ ಅಥವಾ ಪೋಲೀಸರನ್ನು ಕಂಡು ಗಾಬರಿಯಾಗಿ ಎಡಬಿಡಂಗಿಯಂತೆ ಮಾತಾಡುತ್ತಿದ್ದಳೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಮುದುಕಿಯಿಂದ ಹೇಳಿಕೆ ತೆಗೆದುಕೊಂಡು, ಅದನ್ನು ಬರೆದುಕೊಳ್ಳುವಷ್ಟರಲ್ಲಿ ಪೋಲೀಸರ ತಲೆ ಪೂರ್ತಿ ಕೆಟ್ಟು ಹನ್ನೆರಡಾಣೆಯಾಗಿತ್ತು. ಅವರ ತಲೆ ಹನ್ನೆರಡಾಣೆಯಾಗಿದೆ ಅಂತ ಹೇಗೆ ಗೊತ್ತಾಯಿತು ಅಂದರೆ ಅವರು ಮಾತಿಗೊಮ್ಮೆ ಆ ಮುದುಕಿಯನ್ನು ಧ್ವನಿ ಎತ್ತರಿಸಿ ಬೈಯ್ಯುತ್ತಿದ್ದರು. ಅವರು ಬೈದಾಗೊಮ್ಮೆ ಈ ಮುದುಕಿ ಕೂಡ ಕೀರಲು ಧ್ವನಿಯಲ್ಲಿ, ‘ಥೋ! ಆನೂ ಅದನ್ನೇ ಹೇಳಜ್ಞಲ್ಲರಾ!? ತೆಳಜ್ಜಿಲ್ಯ?’ ಅಂತ ಶುದ್ಧ ಹವ್ಯಕ ಭಾಷೆಯಲ್ಲಿ ಅಂಬೋ ಅನ್ನುತ್ತಿತ್ತು. ‘ಅಯ್ಯೋ, ನಾನೂ ಅದನ್ನೇ ಹೇಳಿದೆನಲ್ಲಾ?! ತಿಳಿಯಲಿಲ್ಲವೇ?’ ಅಂತ ಅರ್ಥ. ಜನರಿಗೆ ಒಂದು ತರಹದ ನಗೆ ಉಕ್ಕಿ ಬರುತ್ತಿತ್ತು. ಬೇಗ ಕೆಲಸ ಮುಗಿಸಿ ಊರು ಸೇರಿಕೊಳ್ಳೋಣ ಅಂತ ಅಂದುಕೊಂಡಿದ್ದ ಪೋಲೀಸರಿಗೆ ಸಿಕ್ಕಾಪಟ್ಟೆ irritate ಆಗುತ್ತಿತ್ತು. ಹಾಗಾಗಿ ಆ ಮುದುಕಿಯನ್ನು, ‘ಎಂತಾ ಹೇಳ್ತೇ ಅಮಾ??? ಸರಿಯಾಗಿ ಹೇಳು!’ ಎಂದು ಜಬರಿಸಿ ಜೋರು ಮಾಡುತ್ತಿದ್ದರು. ಮುದುಕಿಯದು ಮತ್ತೆ ಅದೇ ರಾಗ.

ಸುಮಾರು ಹೊತ್ತಿನ ನಂತರ ಎಲ್ಲರ ಹೇಳಿಕೆ ಪಡೆದುಕೊಂಡ ಪೊಲೀಸರು ಹೊರಟು ನಿಂತರು. ಪೋಲೀಸ್ ಕಾರ್ಯಾಚರಣೆ ಇಷ್ಟು ಬೇಗ ಮುಗಿದುಹೋಯಿತೇ? ಅಂತ ಬೇಸರವಾಯಿತು. ಒಂದೆರೆಡು ಘಂಟೆ ಮಜವಾಗಿ ಹೋಗಿದ್ದು ಗೊತ್ತೇಯಾಗಿರಲಿಲ್ಲ. ಅಷ್ಟು ಮಸ್ತಾಗಿತ್ತು.

ಕಾಲೆಳೆಯುತ್ತಾ ಅಜ್ಜನ ಮನೆಗೆ ವಾಪಸ್ ಬರುತ್ತಿರುವಾಗ ತಲೆಯಲ್ಲಿ ಒಂದೇ ಗುಂಗು. ಅದೇನೆಂದರೆ ಆ ಕ್ಲಿಪ್  ಬೋರ್ಡ್ ಹಿಡಿದು, ಹಾಳೆ ಮೇಲೆ ಹಾಳೆಯನ್ನು ಬರೆದು ಬರೆದು ತುಂಬಿಸುತ್ತಿದ್ದ ಆ ಪೋಲಿಸ್. ಬರೆದರೆ ಹಾಗೆ ಬರೆಯಬೇಕು. ಅದೇ ರೀತಿ ಕ್ಲಿಪ್ ಬೋರ್ಡ್ ಮ್ಯಾಲೆ ಹಾಳೆ ಇಟ್ಟುಕೊಂಡು, ಗತ್ತಿನಿಂದ ಬರೆಯಬೇಕು. ಕೇಳಿ ಕೇಳಿ ಬರೆಯಬೇಕು. ನಡುನಡುವೆ ಬೈದು ಬೈದು ಬರೆಯಬೇಕು. ಹೀಗೆಲ್ಲಾ ಅನ್ನಿಸಿತು. ಅನ್ನಿಸಿತು ಖರೆ. ಆದರೆ ಆಗಿನ್ನೂ  ಬರೆಯಲು ಬರುತ್ತಿರಲಿಲ್ಲ. ಎಲ್ಲೋ ಅಆಇಈ ಕಲಿತಿದ್ದೇನೋ ಏನೋ. ಅದು ಬಿಟ್ಟರೆ ಸರಿಯಾಗಿ ಬರೆಯಲು ಬರುತ್ತಿರಲಿಲ್ಲ.

ಮನೆಗೆ ಬಂದರೆ ಮಧ್ಯಾಹ್ನದ ಚಹಾ ಕುಡಿಯುವ ಸಮಯ. ಎಲ್ಲರೂ ಕುಳಿತು ಚಹಾ ಸಮಾರಾಧನೆ ಮಾಡುತ್ತಿದ್ದರು. ನಾನೂ ಸೇರಿಕೊಂಡು ಚಹಾ ಗ್ಲಾಸ್ ಎತ್ತಿದೆ. ಚಿಣ್ಣ ಬಾಲಕನಾದರೂ ಆಗಲೇ ಚಹಾ ದೊರೆಯುತ್ತಿತ್ತು. ಅಡಿಕೆ, ಚಹಾ, ಕಾಫಿ ಮೇಲೆ ಹವ್ಯಕ ಹುಡುಗರಿಗೆ ಅಷ್ಟೆಲ್ಲ ನಿರ್ಬಂಧ ಇರುವದಿಲ್ಲ. ಹಾಗಾಗಿ ಚಹಾ ಕುಡಿದು ಕವಳ (ಎಲೆಯಡಿಕೆ) ಹಾಕುವ ಅಭ್ಯಾಸ ನಮಗೆ ಬೇಗ ಹತ್ತಿಕೊಳ್ಳುತ್ತದೆ. ‘ಪೊಲೀಸರು ಬಂದಿದ್ದನ್ನು ನೋಡಲು ಹೋಗಿದ್ದೆಯೆಲ್ಲ? ಏನಾಯಿತು? ಏನು ನೋಡಿ ಬಂದೆ?’ ಅಂತೆಲ್ಲ ಮನೆ ಮಂದಿ ಕೇಳಿದರು. ನನಗೆ ವಿಷಯ ಹೇಳುವದರಲ್ಲಿ ಜಾಸ್ತಿ ಆಸಕ್ತಿ ಏನೂ ಇರಲಿಲ್ಲ. ಕಾಟಾಚಾರಕ್ಕೆ ಏನೋ ಹೇಳಿ ಮುಗಿಸಿದೆ.

ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದ ವಿಷಯವೇ ಬೇರೆ. ಕ್ಲಿಪ್ ಬೋರ್ಡ್ ಮೇಲೆ ಆ ಪೋಲೀಸ್ ಏನು ಬರೆದುಕೊಳ್ಳುತ್ತಿದ್ದ? ಅದಕ್ಕೆ ಏನೆನ್ನುತ್ತಾರೆ? ಅದನ್ನು ತಿಳಿದುಕೊಳ್ಳಬೇಕಾಗಿತ್ತು. ಹಾಂ! ಹೇಳುವದನ್ನೇ ಮರೆತಿದ್ದೆ. ಆ ಕ್ಲಿಪ್ ಬೋರ್ಡ್ ಮೇಲೆ ಪೋಲೀಸ್ ಬರೆದುಕೊಳ್ಳುತ್ತಿದ್ದಿದ್ದೊಂದೇ ಅಲ್ಲ, ಕಾರ್ಬನ್ ಪ್ರತಿ ಕೂಡ ಮಾಡುತ್ತಿದ್ದ. ಎರಡು ಹಾಳೆ ಮಧ್ಯೆ ಕಾರ್ಬನ್ ಕಾಗದ. ಒಂದು ಹಾಳೆ ಬರೆದು ತುಂಬಿದ ನಂತರ ಕಾರ್ಬನ್ ಕಾಗದ ಮತ್ತೆರೆಡು ಖಾಲಿ ಕಾಗದಗಳ ಮಧ್ಯೆ ಹೋಗುತ್ತಿತ್ತು.

ಪಂಚನಾಮೆ!’ ಅಂದರು ಅಜ್ಜನಮನೆ ಜನ.

ಮೊದಲ ಬಾರಿಗೆ ಆ ಶಬ್ದ ಕೇಳಿದ್ದೆ. ಆ ಪೂರ್ತಿ ಪೋಲೀಸ್ ಪ್ರಕ್ರಿಯೆಗೆ ಪಂಚನಾಮೆ ಅನ್ನುತ್ತಾರೋ ಅಥವಾ ಬರೆದು ತಯಾರು ಮಾಡುವ ದಾಖಲೆಗೆ ಪಂಚನಾಮೆ ಅನ್ನುತ್ತಾರೋ ಅಂತ ಗೊತ್ತಾಗಲಿಲ್ಲ. ಅಲ್ಲಿದ್ದವರಿಗೂ ಗೊತ್ತಿರಲಿಲ್ಲ. ಒಟ್ಟಿನಲ್ಲಿ ಪೊಲೀಸರು ಬಂದು, ಹೇಳಿಕೆ ಬರೆದುಕೊಂಡು, ಸಹಿ ಮಾಡಿಸಿಕೊಂಡಿದ್ದಕ್ಕೆ ಪಂಚನಾಮೆ ಅಂದರು.

ಆಗ ಮೂಡ್ ಬಂದುಬಿಟ್ಟಿತು. ಬಾಕಿ ಏನೂ ಬರೆಯುವದರಲ್ಲಿ ಏನೂ ಮಜಾ ಇಲ್ಲ. ಬರೆದರೆ ಆ ಪೋಲೀಸನಂತೆ ಪಂಚನಾಮೆಯನ್ನೇ ಬರೆದುಬಿಡಬೇಕು. ಕಾರ್ಬನ್ ಇಟ್ಟುಕೊಂಡು ಕ್ಲಿಪ್ ಬೋರ್ಡ್ ಮೇಲೆ ಪಂಚನಾಮೆ ಬರೆಯುವದರಲ್ಲಿ ಅದೇನು ಸ್ಟೈಲು! ಅದೇನು ಗತ್ತು! ಅದೇನು ಗಾಂಭೀರ್ಯ! ಅದೇನು ಗೈರತ್ತು! ಅದೇನು ಠೀವಿ! ಮಾನ್ ಗಯೇ ಉಸ್ತಾದ್! – ಅಂದುಕೊಂಡೆ. ತಲೆಯಲ್ಲಿ ಒಂದೇ ಗುಂಗು. ಅದೇನೆಂದರೆ ಅದೇ ರೀತಿ ನಾವೂ ಒಂದು ಪಂಚನಾಮೆ ಬರೆಯಬೇಕು. ಆಗಿಂದಾಗಲೇ ಬರೆಯಬೇಕು. ಬರೆಯಲಿಕ್ಕೆ ಬರದಿದ್ದರೂ ಪಂಚನಾಮೆಯನ್ನು ಗೀಚಬೇಕು.

ಎಲ್ಲಿಂದಲೋ ಒಂದು ಕ್ಲಿಪ್ ಬೋರ್ಡ್ ಹೊಂದಿಸಿಕೊಂಡೆ. ಅಜ್ಜ ಲೆಕ್ಕ ಬರೆಯುತಿದ್ದ ಕ್ಲಿಪ್ ಬೋರ್ಡ್ ಅದು. ಅವನ ಕಾಗದಗಳನ್ನು ಬೇಕಾಬಿಟ್ಟಿ ಬಿಸಾಡಿ ಬೈಸಿಕೊಂಡೆ. ನಮಗೆ ಆಗ ತುರ್ತಾಗಿ ಬೇಕಾಗಿದ್ದು ಕ್ಲಿಪ್ ಬೋರ್ಡ್. ಮೇಲಿದ್ದ ಕಾಗದವಲ್ಲ. ಕ್ಲಿಪ್ ಬೋರ್ಡ್ ಸಿಕ್ಕಿತು. ಒಂದಿಷ್ಟು ಬಿಳೆ ಹಾಳೆಗಳೂ ಸಿಕ್ಕವು. ಪೋಲೀಸಿನವನ ಹತ್ತಿರವಿದ್ದಷ್ಟು ಬಿಳಿಯಾಗಿರಲಿಲ್ಲ. ಚೆನ್ನಾಗಿಯೂ ಇರಲಿಲ್ಲ. ಹೇಳಿಕೇಳಿ ಹಳ್ಳಿಯ ಮನೆಯಲ್ಲಿನ ಹಾಳೆಗಳು. ಕಚ್ಚಾ ಲೆಕ್ಕ ಬರಿಯಲಿಕ್ಕೆ ಲಾಯಕ್ಕು. ಆದರೂ ಅಡ್ಜಸ್ಟ್ ಮಾಡಿಕೊಂಡೆ. ಒಂದು ತಗಡು ಬಾಲ್ ಪಾಯಿಂಟ್ ಪೆನ್ನೂ ಸಿಕ್ಕಿತು. ಸಿಗದೇ ಇದ್ದಿದ್ದು ಅಂದರೆ ಕಾರ್ಬನ್ ಕಾಗದ ಮಾತ್ರ. ಆ ಹಳ್ಳಿಗಾಡಿನಲ್ಲಿ ಕಾರ್ಬನ್ ಕಾಗದ ಸಿಗುವ ಚಾನ್ಸೇ ಇರಲಿಲ್ಲ. ಸಿರ್ಸಿ ಪೇಟೆಗೇ ಹೋಗಬೇಕು. ಅಲ್ಲಾದರೂ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ ಅಂದಿನ ಸಿರ್ಸಿ ಪಟ್ಟಣವೇ ಒಂದು ದೊಡ್ಡ ಹಳ್ಳಿಯ ಹಾಗಿತ್ತು.

ಬೇರೆ ಸಂದರ್ಭವಾಗಿದ್ದರೆ 'ಹಠಯೋಗಿ' ಆಗಬಹುದಿತ್ತು. ಶರಂಪರ ಹಠ ಮಾಡಬಹುದಿತ್ತು. ನಮ್ಮ legendary ಹಠವನ್ನು ತಡೆದುಕೊಳ್ಳಲಾಗದೇ ಬೇಡಿಕೆಯನ್ನು ಈಡೇರಿಸುತ್ತಿದ್ದರು. ಆದರೆ ಅಂದಿನ ಮಾಹೋಲ್ ಸರಿಯಾಗಿರಲಿಲ್ಲ. ಊರಿನಲ್ಲಿ ಕೊಲೆಯತ್ನದಂತಹ ದುರ್ಘಟನೆ ನಡೆದು ಎಲ್ಲರೂ ಒಂದು ತರಹದ ವಿಷಾದದಲ್ಲಿದ್ದರು. ನಮ್ಮನ್ನು ಅಚ್ಛಾ ಮಾಡುವ, ಮುದ್ದು ಮಾಡುವ, ರಮಿಸುವ ಉಮೇದಿ ಮತ್ತು ಆಸಕ್ತಿ ಯಾರಿಗೂ ಇದ್ದಂತಿರಲಿಲ್ಲ. ಹಾಗಿರುವಾಗ ಇಲ್ಲದ ಹಠ ಮಾಡುವದು ರಿಸ್ಕಿ. ಏನೇ ಹೇಳಿದರೂ ಶಿರಸಾವಹಿಸಿ ಪೂರೈಸುವ ತಂದೆಯವರೂ ಇಲ್ಲ. ಎಂದೂ ಪೆಳ್ಳಪ್ಪನೆ (ಅಚ್ಛಾ) ಮಾಡದ ಅಮ್ಮನ ತಲೆಕೆಟ್ಟು ಎರಡು ಏಟು ಕೊಟ್ಟಳು ಅಂದರೆ ಕಷ್ಟ. ಮತ್ತೆ ಹೇಗೂ ಒಂದೆರೆಡು ದಿವಸಗಳಲ್ಲಿ ಧಾರವಾಡಕ್ಕೆ ವಾಪಸ್ ಹೋಗುವದಿತ್ತು. ಮನೆಯಲ್ಲಿ ಕಾರ್ಬನ್ ಕಾಗದ ಇತ್ತು. ಅಲ್ಲಿ ಹೋದ ಮೇಲೆಯೇ ಪಂಚನಾಮೆ ಬರೆಯೋಣ, ಗೀಚೋಣ ಅಂತ ಸುಮ್ಮನಾದೆ. ಸುತ್ತುಮುತ್ತಲಿನ ಪರಿಸ್ಥಿತಿಯನ್ನು ಗಮನಿಸಿ ಗ್ರಹಚಾರವನ್ನು ಊಹಿಸುವ ಕಲೆ ನಮಗೆ ಅಂದೇ ಬಂದಿತ್ತು ಅಂತ ಕಾಣುತ್ತದೆ. ಈಗ ಕಾರ್ಪೊರೇಟ್ ಜಗತ್ತಿನಲ್ಲಿ ಬಹಳ ಉಪಯೋಗಕ್ಕೆ ಬರುವ ಸ್ಕಿಲ್ ಅದು.

ಕೆದಕಿ ಕೆದಕಿ ಆ ಪಂಚನಾಮೆ ಅನ್ನುವ ವಿಚಿತ್ರ ಹೆಸರಿನ ದಾಖಲೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ. ಯಾವದೇ ತರಹದ ಅಪರಾಧವಾದಾಗ ಪೊಲೀಸರು ಹಾಗೆ ಮಾಡುತ್ತಾರೆ ಅಂತ ತಿಳಿಯಿತು. ಈಗ ಹೊಸ ಕಷ್ಟ ಎದುರಾಯಿತು. ಪಂಚನಾಮೆ ಬರೆಯಬೇಕು ಅಂದರೆ ಏನಾದರೂ ಲಫಡಾ ಆಗಲೇಬೇಕು. ಲಫಡಾ ಆಗದೇ ಪಂಚನಾಮೆ ಬರೆದರೆ ಅದರಲ್ಲೇನೂ ಮಜವಿರುವದಿಲ್ಲ. ಹಾಗಾಗಿ ಒಂದು ಹೆಚ್ಚಿನ ಕಿರಿಕ್ ಆಯಿತು. ಪಂಚನಾಮೆ ಬರೆಯಲಿಕ್ಕೆ ಬೇಕಾದ ಲಫಡಾ, ಅದೂ ಪೊಲೀಸರು ಬರುವಂತಹ ಲಫಡಾ, ಹೇಗೆ ಹೊಂಚೋಣ?

ಆಲೆಮನೆಯನ್ನು ಬರೋಬ್ಬರಿ ಮುಗಿಸಿ, ಮಜಾ ಮಾಡಿ, ಒಂದೆರೆಡು ದಿನಗಳ ಬಳಿಕ ಧಾರವಾಡಕ್ಕೆ ಮರಳಿದ್ದಾಯಿತು. ಪಂಚನಾಮೆ ಬರೆಯುವದು ಮರೆತುಹೋಗಿತ್ತು. ತಾತ್ಕಾಲಿಕವಾಗಿ.

ಅದೊಂದಿನ ‘ಆನಂದಾಶ್ರಮ'ಕ್ಕೆ ಹೋದವ ವಾಪಸ್ ಮನೆಗೆ ಮರಳುತ್ತಿದ್ದೆ. ಧಾರವಾಡದ ಮಾಳಮಡ್ಡಿಯ ರಾಯರ ಮಠದ ಕೆಳಗೆ ಮಾಸೂರ್ ನಾಯಕ್ ಡಾಕ್ಟರರ ಕ್ಲಿನಿಕ್ ಮುಂದಿದ್ದ ಎರಡಂತಸ್ತಿನ ದೊಡ್ಡ ಭೂತಬಂಗಲೆಯೇ ‘ಆನಂದಾಶ್ರಮ.’ ಅದಕ್ಕೆ ಮಾವಿನಕುರ್ವೆ ಕಾಂಪೌಂಡ್ ಅಂತ ಕೂಡ ಹೇಳುತ್ತಿದ್ದರು. ಅದು ಹವ್ಯಕ ಮಾಣಿಗಳ ಒಂದು ತರಹದ ಅನಧಿಕೃತ ಹಾಸ್ಟೆಲ್ ಆಗಿತ್ತು. ಅಲ್ಲಿನ ಹತ್ತು ಹದಿನೈದು ರೂಮುಗಳಲ್ಲಿ ಇದ್ದವರೆಲ್ಲ ಧಾರವಾಡದಲ್ಲಿ ಬೇರೆ ಬೇರೆ ಕಡೆ ಓದಿಕೊಂಡಿದ್ದ ಹವ್ಯಕ ಮಾಣಿಗಳೇ. ಹೆಚ್ಚಿನವರು ಸಿರ್ಸಿ ಕಡೆಯವರು. ಅದಕ್ಕೆ ಒಂದೇ exception ಅಂದರೆ ನಮ್ಮ ಪೈ ಮಾಸ್ತರರು. ಬಾಸೆಲ್ ಮಿಷನ್ ಗರ್ಲ್ಸ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದ ಆಜನ್ಮ ಬ್ರಹ್ಮಚಾರಿ ಪೈ ಮಾಸ್ತರ್ ಬಗ್ಗೆ ಬರೆಯಲಿಕ್ಕೆ ಕೂತರೆ ಬರೆಯಲಿಕ್ಕೆ ಬಹಳವಿದೆ. ಮತ್ತೊಮ್ಮೆ ಬರೆಯೋಣ. ಧಾರವಾಡ ಮಟ್ಟಿಗೆ ಪ್ರೈವೇಟ್ ಟ್ಯೂಶನ್ ಪ್ರಪಂಚದ ಪಿತಾಮಹ ಅವರು.

‘ಆನಂದಾಶ್ರಮ’ ಬಂಗಲೆ ಅಂದರೆ ನಮಗೆ ಏನೋ ಒಂದು ತರಹದ ಆತ್ಮೀಯತೆ. ಸಿರ್ಸಿ ಸಮೀಪದ ಅಜ್ಜನಮನೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೆ. ಆಗಾಗ ಈ ಆನಂದಾಶ್ರಮಕ್ಕೆ ಹೋಗಿ, ಅಲ್ಲಿನ ಮಾಣಿಗಳೊಂದಿಗೆ ಮನಸ್ಸು ಬಿಚ್ಚಿ ಹರಟೆ ಹೊಡೆದು, ಒಂದಿಷ್ಟು ಗದ್ದಲ ಹಾಕಿ ಬಂದರೆ ಹಾಯ್ ಅನ್ನಿಸುತ್ತಿತ್ತು. ಆಗಾಗ ಸಿರ್ಸಿ ಕಡೆ ಹೋಗಿ ಬಂದು ಮಾಡುತ್ತಿದ್ದ ಅವರುಗಳ ರೂಮಿನಲ್ಲಿ ಸ್ಪೆಷಾಲಿಟಿ ತಿಂಡಿ ಅದು ಇದು ಸಿಗುತ್ತಿತ್ತು. ಫ್ರೆಶ್ ಆದ ಎಲೆ ಅಡಿಕೆ ಕೂಡ ಇರುತ್ತಿತ್ತು. ಕೆಲವರಂತೂ ಜರ್ದಾ ತಂಬಾಕಿನ ದೊಡ್ಡ ಡಬ್ಬಿಯನ್ನೇ ಇಟ್ಟುಕೊಂಡಿರುತ್ತಿದ್ದರು. ಆಗ ಜರ್ದಾ ಕವಳದ ಹುಚ್ಚು ಇನ್ನೂ ಹತ್ತಿರಲಿಲ್ಲ. ಆನಂದಾಶ್ರಮದ ಒಂದು ರೌಂಡ್ ಹೊಡೆದು, ಒಂದಿಷ್ಟು ಪೊಕಳೆ (ಹರಟೆ) ಹೊಡೆದು ಬಂದರೆ ಒಂದು ಸಾರಿ ಸಿರ್ಸಿಗೆ ಹೋಗಿ ಬಂದಂತೆಯೇ. ಅಷ್ಟು ಮಸ್ತಾಗಿರುತ್ತಿತ್ತು.

ಆನಂದಾಶ್ರಮಕ್ಕೆ ಹೋಗುವಾಗ ರಾಯರ ಮಠದ ಪಕ್ಕದ ರಸ್ತೆ ಗುಂಟ ಹೋಗಿ, ವಾಪಸ್ ಬರುವಾಗ ಆಕಡೆಯಿಂದ ಹಿಟ್ಟಿನ ಗಿರಣಿಯಿದ್ದ ಗುಡ್ಡ ಇಳಿದು ಬರುವದು ರೂಢಿ. ಅಂದೂ ಅದೇ ರೀತಿ ಬರುತ್ತಿದ್ದೆ. ಗಿರಣಿ ಗುಡ್ಡ ಇಳಿಯಲು ರೆಡಿ ಆಗುತ್ತಿದ್ದೆ. ಯಾಕೋ ಬಲಗಡೆ ತಿರುಗಿ ನೋಡಿದೆ. ಅಲ್ಲಿ ನೋಡಿದರೆ…..ಆಕಡೆ ಕೆಸಿಡಿಯಲ್ಲಿ ಬಾಟನಿ ಪ್ರೊಫೆಸರ್ ಆಗಿದ್ದ ಪ್ರೊ. ಆರ್. ಎಮ್. ಪಾಟೀಲರ ಮನೆ ಮುಂದೆ, ಮಾಸೂರ್ ನಾಯಕ್ ಚಾಳಿನ ಎದುರು ಕಿಕ್ಕಿರಿದ ಜನಜಂಗುಳಿ. ಪೋಲೀಸ್ ವ್ಯಾನ್ ಬೇರೆ ಬಂದಿತ್ತು. ‘ಅರೇ ಇಸ್ಕಿ! ಏನೋ ಲಫಡಾ ಆಗಿದೆ,’ ಅಂತ ಗೊತ್ತಾಯಿತು. ಆಕಡೆ ಹೆಜ್ಜೆ ಹಾಕಿದೆ. ಕುತೂಹಲ. ಕೆಟ್ಟ ಕುತೂಹಲ.

ಗುಂಪು ಸೇರಿದ್ದ ದೊಡ್ಡವರ ಮಧ್ಯೆ ನಮ್ಮ ಚಿಣ್ಣ ದೇಹವನ್ನು ತೂರಿಸಿಕೊಂಡು ಹೋದರೆ ಅಲ್ಲೊಬ್ಬ ಅಂಗಾತ ಬಿದ್ದಿದ್ದ. ಫುಲ್ ಫ್ಲಾಟ್. ಕುಡಿದು ಬಿದ್ದ ಪುಣ್ಯಾತ್ಮನಂತೆ. ಕುಡಿದು ಬಿದ್ದಿದ್ದೊಂದೇ ಅಲ್ಲ ಸತ್ತೇಹೋಗಿದ್ದಾನೆ. ಹಾಗಂತ ಅಲ್ಲಿ ನೆರೆದವರು ಹೇಳಿದರು. ಬೀಳುವಂತಹದ್ದನ್ನು ಅದೇನು ಕುಡಿದ? ಬಿದ್ದವನ್ಯಾಕೆ ಸತ್ತ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಆಗಿನ್ನೂ ಕುಡಿತದ ಬಗೆ, ಹೆಂಡದ ಬಗ್ಗೆ ಸಾಮಾನ್ಯಜ್ಞಾನ ಬಂದಿರಲಿಲ್ಲ.

ಬಂದಿದ್ದ ನಾಲ್ಕಾರು ಜನ ಪೊಲೀಸರಲ್ಲಿ ಅಲ್ಲೂ ಒಬ್ಬವ ಪಂಚನಾಮೆ ಬರೆದುಕೊಳ್ಳುತ್ತಿದ್ದ. ಮತ್ತೆ ಅದೇ ಕ್ಲಿಪ್ ಬೋರ್ಡ್, ಬಿಳೆ ಹಾಳೆಗಳು, ಕಾರ್ಬನ್ ಕಾಗದ. ನಾನು ಮರೆತುಬಿಟ್ಟಿದ್ದೆ. ಈಗ ಮತ್ತೆ ನೆನಪಾಯಿತು. ಪಂಚನಾಮೆ ಬರೆದೇಬಿಡಬೇಕೆಂಬ ಆಸೆ ಮತ್ತೆ ಉತ್ಕಟವಾಯಿತು.

ಸರಿ. ಮನೆಗೆ ಬಂದೆ. ಕ್ಲಿಪ್ ಬೋರ್ಡ್ ಅಂತೂ ಇತ್ತು. ನನ್ನದೇ ಕ್ಲಿಪ್ ಬೋರ್ಡ್ ಇತ್ತು. ಕಾಡಿ ಕೊಡಿಸಿಕೊಂಡಿದ್ದೆ. ಬೇಕಾದಷ್ಟು ಹಾಳೆ, ಕಾರ್ಬನ್ ಪೇಪರ್, ಪೆನ್ನು ಎಲ್ಲ ಇತ್ತು. ಸಾಧಾರಣವಾಗಿ ಇಂಕ್ ಪೆನ್ನಲ್ಲಿ ಬರೆಯುತ್ತಿದ್ದೆ. ಅಥವಾ ಗೀಚುತ್ತಿದ್ದೆ. ಕಾರ್ಬನ್ ಕಾಪಿ ತೆಗೆಯಬೇಕು ಅನ್ನುವ exceptional ಪರಿಸ್ಥಿತಿ ಬಂದಿದ್ದರಿಂದ ಬಾಲ್ ಪಾಯಿಂಟ್ ಪೆನ್ ತೆಗೆದುಕೊಂಡೆ. ಬಾಲ್ ಪಾಯಿಂಟ್ ಪೆನ್ನಿನಲ್ಲಿ ಬರೆದರೆ ಹಸ್ತಾಕ್ಷರ ಹಾಳಾಗುತ್ತದೆ. ಮತ್ತೆ ಜಾಸ್ತಿ ವೇಗವಾಗಿ ಬರೆಯಲು ಆಗುವದಿಲ್ಲ ಅಂತೆಲ್ಲ ಹೇಳುತ್ತಿದ್ದರು. ಆದರೆ ಈಗ ಪಂಚನಾಮೆ ಬರೆಯಬೇಕಾಗಿದೆ. ಕಾರ್ಬನ್ ಪ್ರತಿ ತೆಗೆಯಬೇಕಾಗಿದೆ ಅಂತ ಬಾಲ್ ಪಾಯಿಂಟ್ ಪೆನ್ ಓಕೆ.

ಪಂಚನಾಮೆ ರಿಪೋರ್ಟ್ ಬರೆಯಲು ಎಲ್ಲ ರೆಡಿ ಮಾಡಿಕೊಂಡೆ. ಆದರೆ ಒಂದು ತೊಂದರೆ ಬಂತು. ಬರೆಯಲು ಬರುತ್ತಿರಲಿಲ್ಲ. ಆಗ ಇನ್ನೂ ಒಂದನೇ ಕ್ಲಾಸ್. ಇದು ಕನಕನ ಅಂಗಿ. ಅದು ಕಮಲಳ ಲಂಗ. ಕನಕನ ಅಂಗಿ ಫಳಫಳ. ಕಮಲಳ ಲಂಗ ಝಳಝಳ. ಇಂತಹ ಸರಳ ವಾಕ್ಯಗಳನ್ನು ಮಾತ್ರ ಬರೆಯಲು ಬರುತ್ತಿತ್ತು. ಪೋಲೀಸ್ ಪಂಚನಾಮೆ ಬರೆಯುವದು ಹೇಗೆ? ಈಗ ಒಬ್ಬ ಭಾಡಿಗೆ ರೈಟರ್ ಬೇಕಾಯಿತು. ಮತ್ಯಾರು? ಅಮ್ಮ.

ಅಂತೂ ಅಮ್ಮನನ್ನು ಪಂಚನಾಮೆ ಬರೆಯುವ ರೈಟರ್ ಅಂತ ನೇಮಕ ಮಾಡಿದೆ. ಅದೇನೋ ಗೊತ್ತಿಲ್ಲ. ಬರವಣಿಗೆ ಇತ್ಯಾದಿ ಮಂಗ್ಯಾತನಗಳಿಗೆ ಅಂದಿನ ಕಾಲದಲ್ಲಿ ಅಮ್ಮನೇ ಬೇಕಾಗುತ್ತಿತ್ತು. ಮನೆಯಲ್ಲಿ ನನ್ನ ಬಿಟ್ಟರೆ ಬರವಣಿಗೆಯಲ್ಲಿ ಏನಾದರೂ ಆಸಕ್ತಿ, ಕೌಶಲ್ಯ, skill ಇದೆ ಅಂತಾದರೆ ಅದು ಅಮ್ಮನಿಗೇ ಇರಬೇಕು. ಮುಂದೆ ಬಹಳ ವರ್ಷಗಳ ನಂತರ ಅಲ್ಲಿಲ್ಲಿ ದೇಶ ವಿದೇಶ ತಿರುಗಾಡಿ ಬಂದ ಅಮ್ಮ ಪ್ರವಾಸ ಸಾಹಿತ್ಯ, ಅದು ಇದು, ಅಂತ ಬರೆದಿದ್ದರು. ನಾನು ಡ್ರಾಫ್ಟ್ ಓದಿ, ‘ಇದೇನು ಯಬಡರ ಗತೆ ಬರದಿ? ಇದನ್ನ ಓದಿದ್ರ ಎಲ್ಲಾರೂ ನಗ್ತಾರ!’ ಅಂತ ಅಣಗಿಸಿ ಅಣಗಿಸಿ ಅವರು ಪಾಪ ತಮ್ಮ ಬರವಣಿಗೆಯನ್ನು ಅಷ್ಟಕ್ಕೇ ಬಿಟ್ಟಿದ್ದರು. ಮತ್ತೆ ಮನೆಕೆಲಸದ ಮಧ್ಯೆ ಜಾಸ್ತಿ ಸಮಯವೂ ಇರಲಿಲ್ಲ. ಭಿಡೆಗೆ ಬಿದ್ದು ಬಸುರಾದ ಪರಿಚಿತರೊಬ್ಬರು, ‘ಏ, ಭಾಳ ಛಂದ ಬರದೀರಿ. ನನಗ ಕೊಡ್ರಿ. ನನಗ ಸಂಯುಕ್ತ ಕರ್ನಾಟಕ ಪೇಪರಿನ್ಯಾಗ ಮಂದಿ ಗೊತ್ತಿದ್ದಾರ. ಅವರಿಗೆ ಹೇಳಿ ಪ್ರಿಂಟ್ ಮಾಡಸ್ತೇನಿ,’ ಅಂತ ತೆಗೆದುಕೊಂಡು ಹೋಗಿದ್ದರು. ಪ್ರಿಂಟಂತೂ ಆಗಿರಲಿಲ್ಲ. ‘ನೀ ಹಾಂಗ ಹಾಪರ ಗತೆ ಬರೆದರ ಅಷ್ಟೇ ಮತ್ತ. ಯಾರು ಪ್ರಿಂಟ್ ಮಾಡ್ತಾರ? ಯಾರು ಓದ್ತಾರ?’ ಅಂತ ನಮ್ಮ ಮೂದಲಿಸುವಿಕೆ ಬೇರೆ. ಇದೆಲ್ಲಾ ಮುಂದೆ ಬಹಳ ವರ್ಷಗಳ ನಂತರ ಆಗಿದ್ದು. ಅಂದು ಅಮ್ಮನನ್ನು ಪಂಚನಾಮೆ ಬರೆಯುವ ಭಾಡಿಗೆ ರೈಟರ್ ಅಂತ ನೇಮಕ ಮಾಡಿದೆ ಅಂತ ಈಗ ಹೇಳಿದಾಗ ಇದೆಲ್ಲ ನೆನಪಾಯಿತು.

ಮಧ್ಯಾಹ್ನ ಊಟದ ನಂತರ ಅಮ್ಮ ಕಾರ್ಡ್ ಬೋರ್ಡ್ ಹಿಡಿದು ಕೂತರು. ಹಾಳೆಗಳ ಮಧ್ಯೆ ಕಾರ್ಬನ್ ಕಾಗದ ಬರೋಬ್ಬರಿ ಹಾಕಿಯೇ ಕೊಟ್ಟಿದ್ದೆ. ಖಾಕಿ ಸೀರೆಯೊಂದನ್ನು ಉಟ್ಟಿದ್ದರೆ ಅಮ್ಮ ಥೇಟ್ ಮಹಿಳಾ ಪೋಲೀಸರೇ ಆಗುತ್ತಿದ್ದರೇನೋ. ಅದೊಂದು ಕಮ್ಮಿ!

ನನ್ನ ಅಂದಿನ ಉತ್ಕಟ ಹುಚ್ಚನ್ನು ಶಮನಗೊಳಿಸಲಿಕ್ಕಾಗಿ ಅವರೇನೋ ಪಂಚನಾಮೆ ಬರೆಯಲಿಕ್ಕೆ ರೆಡಿ. ಆದರೆ ಪಂಚನಾಮೆಯಲ್ಲಿ ಏನು ಬರೆಯುತ್ತಾರೆ? ಅದೇ ಗೊತ್ತಿಲ್ಲ. ಅಮ್ಮನಿಗೂ ಸರಿಯಾಗಿ ಗೊತ್ತಿಲ್ಲ. ಅದರೂ ಏನೋ ಹೇಳಿದರು. ಒಟ್ಟಿನಲ್ಲಿ ಘಟನೆಯ ಬಗ್ಗೆ, ವಸ್ತುಸ್ಥಿತಿಯ ಬಗ್ಗೆ, ಜನರಿಂದ ಸಂಗ್ರಹಿಸಿದ ಮಾಹಿತಿಯ ಬಗ್ಗೆ ಪೊಲೀಸರು ಎಲ್ಲ ವಿವರಗಳನ್ನು ಬರೆಯುತ್ತಾರೆ ಅಂತ ಹೇಳಿದರು. ಹೀಗೆ ಪಂಚನಾಮೆ ಎಂಬ ದಾಖಲೆಗೆ ಏನೋ ಒಂದು ತರಹದ ರೂಪರೇಷೆ ಬಂತು. ವಿವರ ತುಂಬುವದಷ್ಟೇ ಬಾಕಿ ಉಳಿದಿದ್ದು.

ಅಲ್ಲಿ ಮಾಸೂರ ನಾಯಕ ಚಾಳ್ ಎದುರಲ್ಲಿ ಕುಡಿದು ಸತ್ತವನ್ಯಾರೋ? ಎಲ್ಲಿಯವನೋ? ಯಾವ ವಯಸ್ಸಿನವನೋ? ಒಂದೂ ಗೊತ್ತಿಲ್ಲ. ಮುಖ ಕೆಳಗೆ ಮಾಡಿ, ಕುಂಡೆ ಮೇಲೆ ಮಾಡಿಕೊಂಡು ನೆಗೆದು ಬಿದ್ದಿದ್ದ. ಅವನ ವಿವರ ಯಾರಿಗೆ ಗೊತ್ತು? ಆದರೂ ಪಂಚನಾಮೆ ಬರೆಯಬೇಕು. ವಿವರ ಗೊತ್ತಿಲ್ಲದಿದ್ದರೆ ಅದನ್ನು ಉತ್ಪಾದಿಸಬೇಕು. ಪಂಚನಾಮೆಯಲ್ಲಿ ದಾಖಲಿಸಬೇಕು.

ಸರಿ. ಸ್ವಲ್ಪ ಚರ್ಚಿಸಿದ ನಂತರ ಕುಡಿದು ಮೇಲೆ ದೇವರ ಹತ್ತಿರ ಹೋಗಿದ್ದ ಆ ಮಹಾನುಭಾವನಿಗೆ ಹನುಮಂತಪ್ಪನೋ, ನಿಜಲಿಂಗಪ್ಪನೋ ಅಂತ ನಾಮಕರಣ ಮಾಡಿದ್ದಾಯಿತು. ಮುಕ್ಕಾಂ - ಗೌಳಿಗರ ದಡ್ಡಿ. ರಾಯರ ಮಠದ ಸಮೀಪ ಕುಡಿದು ನೆಗೆದು ಬಿದ್ದಿದ್ದ ಅಂದ ಮೇಲೆ ಪಕ್ಕದ ಗೌಳಿಗರ ದಡ್ಡಿಯವನೇ ಇರಬೇಕು. ಮಾಳಮಡ್ಡಿಯ ಜನ ಕುಡಿಯುತ್ತಿರಲಿಲ್ಲ. ಅಲ್ಲಿ ಇದ್ದವರೆಲ್ಲ ಗರೀಬ್ ಬ್ರಾಹ್ಮಣರು. ಅವರೆಲ್ಲಿ ಕುಡಿದಾರು? ಕುಡಿದರೂ ತೀರ್ಥದಂತೆ ಒಂದಿಷ್ಟೇ ಇಷ್ಟು ಕುಡಿದು ತಲೆ ಮೇಲೆ ಪ್ರೋಕ್ಷಣೆ ಮಾಡಿಕೊಂಡು ಬರುತ್ತಿದ್ದರೆ ವಿನಃ ಜಾಸ್ತಿ ಇಲ್ಲ. ಕುಡಿದು ನೆಗೆದು ಬೀಳುವಷ್ಟು ರೊಕ್ಕ ಅವರ ಕಡೆ ಇರುತ್ತಿರಲಿಲ್ಲ. ಮತ್ತೆ ಅಷ್ಟೆಲ್ಲ ರೊಕ್ಕ ಇದ್ದ ಒಂದೆರೆಡು ಚಟಭಯಂಕರ ಬ್ರಾಹ್ಮಣರು ಬೇರೆ ಊರಿಗೆ ಹೋಗಿ, ಹೋಟೆಲ್ಲಿನಲ್ಲಿ ರೂಮ್ ಮಾಡಿ, ಗಿಚ್ಚಾಗಿ ಕುಡಿದು, ಹುಚ್ಚಾಗಿ ಕುಣಿದು, ಮಜಾ ಮಾಡಿ, ನಶೆ ಇಳಿದ ಮೇಲೆ ವಾಪಸ್ ಬರುತ್ತಾರೆ ಅಂತ ಪಿಸುಮಾತಿತ್ತು. ಹೀಗೆಲ್ಲ ಇರುವಾಗ ರಾಯರ ಮಠದ ಹತ್ತಿರ ಹಾಗೆ ಅಡ್ಡಾದಿಡ್ಡಿ ಕುಡಿದು ನೆಗೆದವ ಯಾರೋ ಗೌಳ್ಯಾನೇ ಇರಬೇಕು. ಸಾಂದರ್ಭಿಕ ಸಾಕ್ಷ್ಯ ಅದನ್ನೇ ಹೇಳುತ್ತಿತ್ತು. ಅಮ್ಮ ಮತ್ತು ನನ್ನ ಜಾಯಿಂಟ್ ತನಿಖೆ. ಅಥವಾ ಜಂಟಿ ಊಹೆ.

ಒಟ್ಟಿನಲ್ಲಿ ಒಂದು ಪೇಜಿನ ಪಂಚನಾಮೆ ವರದಿಯನ್ನು ಬರೆದಿದ್ದಾಯಿತು. ಬರೆದವರು ಅಮ್ಮ ಆದರೆ ಕೊನೆಗೆ ಸಹಿ ಹಾಕಿದ್ದು ಮಾತ್ರ ನಾನು. ಆಗಿನ ಕಾಲದಲ್ಲಿ ಸಹಿ ಹಾಕುವದರ ಬಗ್ಗೆ ಇದ್ದ ನಂಬಿಕೆಗಳನ್ನು ನೆನಪಿಸಿಕೊಂಡರೆ ಈಗ ಸಿಕ್ಕಾಪಟ್ಟೆ ನಗು ಬರುತ್ತದೆ. ಹಾಕಿದ ಸಹಿಯನ್ನು ಯಾರಿಗೂ ಓದಲು ಮತ್ತು ನಕಲು ಮಾಡಲು ಬರಬಾರದು. ಇದು ಸಹಿ ಹಾಕುವದರ ಬಗ್ಗೆ ಇದ್ದ ಮೊದಲ ನಿಯಮ. ಅದರಂತೆ ತಿರುವ್ಯಾಡಿ, ಕೈಕಾಲೆತ್ತಿ, ಮುಖವನ್ನು ಚಿತ್ರವಿಚಿತ್ರ ಮಾಡಿ, ಅದಕ್ಕಿಂತ ಜಾಸ್ತಿ ಚಿತ್ರವಿಚಿತ್ರವಾಗಿ ಗೀಚಿದೆ. ಅದೇ ಸಹಿಯೆಂದೆ.

ಜತನದಿಂದ ಎತ್ತಿದೆ. ಭಕ್ತಿಯಿಂದ ನೋಡಿದೆ. ಕ್ಲಿಪ್ ಬೋರ್ಡ್ ಮೇಲಿದ್ದ ಹಾಳೆ ಎತ್ತಿ ನೋಡಿದೆ ಅಂತ. ಕಾರ್ಬನ್ ಕಾಪಿ ಬರೋಬ್ಬರಿ ಮೂಡಿ ಬಂದಿತ್ತು. ಗುಡ್! ಇಲ್ಲವಾದರೆ ಮೊದಲ ಸಲ ಬರೆದಿದ್ದರೆ ಮೇಲೆಯೇ ಮತ್ತೆ ಒತ್ತಿ, ತೀಡಿ ಬರೆದು ಕಾರ್ಬನ್ ಪ್ರತಿ ಸರಿಯಾಗಿ ಬರುವಂತೆ ಮಾಡಬೇಕಾಗುತ್ತಿತ್ತು. ಅದರ ಅಗತ್ಯವಿರಲಿಲ್ಲ.

ಪಂಚನಾಮೆ ಕಾಪಿಯನ್ನು ಪೋಲೀಸರು ಊರಲ್ಲಿ ಜನರಿಗೆ ಕೊಟ್ಟು ಹೋಗಿದ್ದನ್ನು ನೋಡಿದ್ದೆ. ಈಗ ಯಾರಿಗೆ ಕೊಡೋಣ? ಅಮ್ಮನಿಗೆ ಕೊಡೋಣ ಅಂದರೆ ಪಂಚನಾಮೆ ಬರೆದ ಮಹಿಳಾ ಪೊಲೀಸರೇ ಅವರು. ಪೋಲೀಸರ ಬಳಿ ಒರಿಜಿನಲ್ ಇರುತ್ತದೆ. ಸರಿ role play ಮಾಡಿದರಾಯಿತು. ನಾನೇ ಜನ ಆದೆ. ದನ, ಜನ ಎಲ್ಲಾ ನಾವೇ. ಕಾಪಿ, ಒರಿಜಿನಲ್ ಎಲ್ಲ ನಾನೇ ಇಟ್ಟುಕೊಂಡೆ.

ಹೀಗೆ ಪಂಚನಾಮೆ ಬರೆದು ಅದೊಂದು ಮಂಗ್ಯಾ ಇಚ್ಛೆಯನ್ನು ತೀರಿಸಿಕೊಂಡಿದ್ದೆ. ಇಂತಹ ವಿಚಿತ್ರ ವಿಲಕ್ಷಣ ಕಾರ್ನಾಮೆಗಳಿಂದಲೇ ಕುಟುಂಬವಲಯದಲ್ಲಿ ಫೇಮಸ್ ಆಗಿಹೋದೆ. ಐದಾರು ವರ್ಷದ ಬಾಲಕರಾರೂ, ಎಲ್ಲಾ ಬಿಟ್ಟು, ಹೋಗಿ ಹೋಗಿ,  ಪಂಚನಾಮೆ ಪ್ರಕ್ರಿಯೆಯಿಂದ ಅಷ್ಟು ಪ್ರಭಾವಿತರಾಗಿ, ಪಂಚನಾಮೆ ಬರೆಯುವ ಜುರ್ರತ್ ಮಾಡಿರಲಿಕ್ಕಿಲ್ಲ. ನೆಂಟರಿಷ್ಟರಿಗೆ ನೆಗೆಯಾಡಲು ಬೆಸ್ಟ್ ಆಯಿತು. ನಮಗೇನೂ ಫರಕ್ ಆಗಲಿಲ್ಲ. ಮನಸ್ಸಿಗೆ ಬಂದಿದ್ದನ್ನು ಮಾಡುತ್ತ ಹೋಗುವದೇ ನಮ್ಮ ಕೆಲಸ. ನಮಗೆ ಬರುತ್ತಿದ್ದ ಇಂತಹ ಗ್ರೇಟ್ (ವಿಚಿತ್ರ!) ಆಲೋಚನೆಗಳು ಬೇರೆಯವರಿಗೆ ಯಾಕೆ ಬರುವದಿಲ್ಲ ಅಂತ ತಿಳಿಯುತ್ತಿರಲಿಲ್ಲ. ಈಗ ಅದೇ ನಮ್ಮ ಸ್ಪೆಷಾಲಿಟಿ ಅಂತ ಗೊತ್ತಾಗಿದೆ.

ಆಮೇಲೂ ಬಸ್ ಕಂಡಕ್ಟರನಂತೆ ಕ್ಲಿಪ್ ಬೋರ್ಡ್ ಹಿಡಿದು, ಏನೇನೋ ಗೀಚುತ್ತ ಓಡಾಡಿಕೊಂಡಿರುತ್ತಿದ್ದೆ. ಮತ್ತೆ ಪಂಚನಾಮೆ ಬರೆಯುವ ಸಂದರ್ಭ ಬರಲಿಲ್ಲ. ಯಾಕೆಂದರೆ ಮತ್ತೆ ಪೋಲೀಸರು ಬರುವಂತಹ ಲಫಡಾ ಸುತ್ತಮುತ್ತಲೆಲ್ಲೂ ಆಗಲೇ ಇಲ್ಲ. ಅಂತಹ ಲಫಡಾ ಆದಾಗ ಮಾತ್ರ ಪಂಚನಾಮೆ ಬರೆಯಬಹುದು.

ಒಮ್ಮೆ ಸಾಂಬ್ರಾಣಿ ಸಾವಕಾರರು ಮನೆಗೆ ಬಂದಿದ್ದರು. ಅವರದ್ದು ಲೈನ್ ಬಜಾರಿನಲ್ಲಿ ಸನ್ಮೇಕಾ ಅಂಗಡಿಯಿತ್ತು ಅಂತ ನೆನಪು. ದುಬಾರಿ ಸನ್ಮೇಕಾ ಹಾಕಿ ತಯಾರಿಸಿದ್ದ ಕ್ಲಿಪ್ ಬೋರ್ಡ್ ಸ್ಪೆಷಲ್ ಆಗಿ ನನಗೆ ಅಂತ ಮಾಡಿ ಪ್ರೀತಿಯಿಂದ ತಂದುಕೊಟ್ಟಿದ್ದರು. ನನಗೆ ಅಂತ ಕೊಟ್ಟಿದ್ದರೋ ಅಥವಾ ತಂದೆಯವರಿಗೋ, ಅಣ್ಣನಿಗೋ ಕೊಟ್ಟಿದ್ದರೋ ಗೊತ್ತಿಲ್ಲ. ಆದರೆ ಅದನ್ನು ವಶಪಡಿಸಿಕೊಂಡಿದ್ದು ಮಾತ್ರ ನಾನು. ವಸ್ತುವೊಂದರ ಮೇಲೆ ಕಣ್ಣು ಬಿತ್ತೆಂದರೆ ಮುಗಿಯಿತು. ಬೇಕೇಬೇಕು.

ವಿಪರ್ಯಾಸ ನೋಡಿ. ದುಬಾರಿ ಸನ್ಮೇಕಾ ಹಾಕಿದ ಕ್ಲಿಪ್ ಬೋರ್ಡ್ ಏನೋ ಕೈಗೆ ಬಂತು ಆದರೆ ಪಂಚನಾಮೆ ಬರೆಯುವ ಹುಚ್ಚು ಬಿಟ್ಟುಹೋಯಿತು. ಬಾಲ್ಯದ ಹುಚ್ಚುಗಳೇ ಹಾಗೆ. ಬೇಗ ಕಳಚಿಕೊಳ್ಳುತ್ತವೆ.

ಆದರೂ ಸಾಂಬ್ರಾಣಿ ಸಾವಕಾರರು ಕೊಟ್ಟ ಕ್ಲಿಪ್ ಬೋರ್ಡ್ ಮಾತ್ರ ಮಸ್ತಾಗಿ ಉಪಯೋಗಿಸಲ್ಪಟ್ಟಿತು. ಪಿಯೂಸಿ ಮುಗಿಯುವವರೆಗೆ ಎಲ್ಲ ಪರೀಕ್ಷೆಗಳನ್ನು ಅದೇ ಕ್ಲಿಪ್ ಬೋರ್ಡ್ ಉಪಯೋಗಿಸಿ ಬರೆದಿದ್ದು. ಒಂದು ತರಹದ ಅದೃಷ್ಟಶಾಲಿ ಲಕ್ಕಿ ಕ್ಲಿಪ್ ಬೋರ್ಡ್ ಅದಾಗಿತ್ತು. ಅಂತಹ ಕ್ಲಿಪ್ ಬೋರ್ಡ್ ಕೊಟ್ಟಿದ್ದ ಸಾಂಬ್ರಾಣಿ ಸಾವಕಾರರಿಗೊಂದು ದೊಡ್ಡ ಧನ್ಯವಾದ.

ನಮ್ಮ ಬಾಲ್ಯದ ಇಂತಹ ಮಂಗ್ಯಾನಾಟಗಳು ನಮಗೇ ಮರೆತುಹೋದರೂ ಇಳಿವಯಸ್ಸಿನ ನೆಂಟರಿಷ್ಟರಿಗೆ ಈಗಲೂ ನೆನಪಿರುತ್ತವೆ. ನಮಗೆ ಮುಜುಗರವಾಗುತ್ತದೆ ಅಂತ ಗೊತ್ತಿದ್ದರೂ ಇಂತಹ ಘಟನೆಗಳನ್ನು ನೆನಪಿಸಿ ಅವರು ಮಜಾ ತೆಗೆದುಕೊಳ್ಳುತ್ತಾರೆ. ಕಾಲೆಳೆಯುತ್ತಾರೆ. ಇಂದಿನ ತಲೆಮಾರಿನ ಚಿಣ್ಣರಿಗೆ ನಮ್ಮ ಜಮಾನಾದಲ್ಲಿ ನಾವು ಹೇಗಿದ್ದೆವು ಎಂಬುದನ್ನು ಭಾಳ ರಸವತ್ತಾಗಿ ವರ್ಣಿಸುತ್ತಾರೆ. ಇಂದಿನ smartphone ಯುಗದ ಚಿಣ್ಣರಿಗೆ ಅದನ್ನೆಲ್ಲ ಊಹಿಸಲೂ ಸಾಧ್ಯವಿಲ್ಲ. 'ಹ್ಯಾಂ!?' ಅಂತ ಅವು ಪೆಕರು ಮುಖ ಮಾಡುತ್ತವೆ. ನಮಗೆ ನಮ್ಮ ಹಳೆಯ ನೆನಪುಗಳು ತಾಜಾ ಆಗುತ್ತವೆ. ಹಾಗಾದಾಗ ಪಂಚನಾಮೆಯಂತಹ ಖತರ್ನಾಕ್ ಬಾಲಲೀಲೆಗಳು ನೆನಪಾಗುತ್ತವೆ. ನಮ್ಮ ಬಾಲಲೀಲೆಗಳನ್ನು ಸಹಿಸಿಕೊಂಡು ಸಹಕರಿಸಿದವರಿಗೆಲ್ಲ ಅನಂತಾನಂತ ವಂದನೆಗಳು. ನಮ್ಮ ಕುಟುಂಬದ ಹಿರಿಯರೆಲ್ಲ ನಮ್ಮ ಚಿತ್ರವಿಚಿತ್ರ ಬಾಲಲೀಲೆಗಳನ್ನು ಸಹಿಸಿಕೊಂಡಿದ್ದೇ ದೊಡ್ಡ ಮಾತು. ಬೇರೆ ಹಿರಿಯರಾಗಿದ್ದರೆ ಬಾಲ ಕಟ್ ಮಾಡಿರುತ್ತಿದ್ದರೇನೋ! ಅಷ್ಟರಮಟ್ಟಿಗೆ ಧನ್ಯೋಸ್ಮಿ.

Saturday, March 18, 2017

ಟೈವಾನಿನ ಕವಳದ ಕನ್ನಿಕೆಯರು ಉರ್ಫ್ ತಾಂಬೂಲದ ತರುಣಿಯರು ಉರ್ಫ್ ಎಲೆಯಡಿಕೆ ಅಪ್ಸರೆಯರು

೨೦೦೧ ರಲ್ಲಿ ಕೆಲಸದ ಮೇಲೆ ಟೈವಾನ್ ದೇಶಕ್ಕೆ ಹೋಗುವ ಅವಕಾಶ ಬಂದಿತ್ತು. ಆಗ ಟೈವಾನ್ ದೇಶ, ಅದರಲ್ಲೂ ಕೌಶಾಂಗ್ ಅನ್ನುವ ನಗರ ಪ್ರದೇಶ, ವಿಶ್ವದ ಸೆಮಿಕಂಡಕ್ಟರ್ ಚಿಪ್ ಉತ್ಪಾದಿಸುವ ರಾಜಧಾನಿ (semiconductor capital of the world) ಎಂದು ಪ್ರಸಿದ್ಧವಾಗುತ್ತಿತ್ತು. ಸಾವಿರಾರು ಎಕರೆಗಟ್ಟಲೆ ಜಾಗದಲ್ಲಿ ಬಿಲಿಯನ್ ಡಾಲರಿಗಿಂತಲೂ ಹೆಚ್ಚು ವೆಚ್ಚದ ಚಿಪ್ ತಯಾರಿಕಾ ಕೇಂದ್ರಗಳು ತಲೆಯತ್ತುತ್ತಿದ್ದವು. ಅಂತಹ ಕಾರ್ಖಾನೆಗಳನ್ನು ನಡೆಸಲು ಸಾಫ್ಟ್ವೇರ್ ತಂತ್ರಜ್ಞಾನ ಬೇಕಲ್ಲ. ನಾನು ಆಗಿದ್ದ ನಮ್ಮ ಕಂಪನಿ ಅಂತಹ ಸಾಫ್ಟ್ವೇರ್ ತಯಾರಿಸುತ್ತಿತ್ತು. ಟೈವಾನಿನ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಸಾಫ್ಟ್ವೇರ್ ಕರ್ಮಿಗಳಾಗಿ ನಮ್ಮಂತವರು ಹೋಗಿ ಬಂದು ಮಾಡುತ್ತಿದ್ದೆವು.

ಟೈವಾನ್ ಅಂದರೆ ಚೀನಾ ತರಹ ಇರಬಹುದು ಅಂದುಕೊಂಡರೆ ಫುಲ್ ಬೇರೆಯೇ. ಚೀನಾದೊಂದಿಗೆ ಜಗಳ ಮಾಡಿಕೊಂಡು ಹುಟ್ಟಿದ ದೇಶ ಟೈವಾನ. ಮಾವೋ ಎಂಬ ಕ್ರಾಂತಿಕಾರಿ ಬಂದನಲ್ಲ. ಆಗ ಅವನ ವಿರುದ್ಧ ಸಿಡಿದೆದ್ದು ನಿಂತ ಜನ ಅವನ ಏಟುಗಳನ್ನು ತಡೆದುಕೊಳ್ಳಲಾಗದೇ ಸಮುದ್ರ ದಾಟಿ ಬಂದು ಪಕ್ಕದ ಫಾರ್ಮೋಸಾ ದ್ವೀಪದಲ್ಲಿ ನೆಲೆಸಿದರು. ಅಂದಿನ ಫಾರ್ಮೋಸಾ ಇಂದಿನ ಟೈವಾನ್. ಇವತ್ತಿಗೂ ಚೀನಾ ದೇಶ ಟೈವಾನ್ ತನ್ನ ದೇಶದ ಭಾಗವೆಂದೇ ಪರಿಗಣಿಸುತ್ತದೆ. ಅದೇನೋ ಅಂತರರಾಷ್ಟ್ರೀಯ ಸಮುದಾಯದ ಮಾತಿಗೆ ಕೊಂಚ ಬೆಲೆ ಕೊಟ್ಟಿದೆ ಅನ್ನುವ ಕಾರಣಕ್ಕೆ ಟೈವಾನ್ ಮೇಲೆ ದಾಳಿ ಮಾಡಿ ಆಪೋಶನ ತೆಗೆದುಕೊಂಡಿಲ್ಲ, ಸ್ವಾಹಾ ಮಾಡಿಲ್ಲ ಅಷ್ಟೇ.

ಮೊದಲು ಬಾಸ್ಟನ್ನಿನಿಂದ ಚಿಕಾಗೊ ನಗರಕ್ಕೆ ಪಯಣ. ಚಿಕಾಗೋ ನಗರದಿಂದ ಹದಿನೈದು ತಾಸುಗಳ ದೀರ್ಘ ವಿಮಾನಯಾನದ ನಂತರ ಹಾಂಗ್ ಕಾಂಗ್ ತಲುಪಿಕೊಂಡೆ. ಅಲ್ಲಿಂದ ಒಂದು ಚಿಕ್ಕ ವಿಮಾನದಲ್ಲಿ ಟೈವಾನ್ ಜಲಸಂಧಿ (Strait of Taiwan) ದಾಟಿದರೆ ಬರೋಬ್ಬರಿ ಎದುರಿಗೇ ಇದೆ ಟೈನಾನ್ ಶಹರ. ರಾಜಧಾನಿ ತೈಪೆ ನಂತರದ ದೊಡ್ಡ ಶಹರಗಳಲ್ಲೊಂದು ಈ ಟೈನಾನ್. ಹಾಂಗಕಾಂಗಿನಿಂದ ಎರಡು ತಾಸಿನ ಪಯಣ ಅಷ್ಟೇ.

ಟೈನಾನಿಗೆ ಬಂದು ಇಳಿದದ್ದಾಯಿತು. ಅಲ್ಲಿಂದ ನಮ್ಮ ಕಂಪನಿಯ ಪ್ರಾಜೆಕ್ಟ್ ನಡೆಯುತ್ತಿದ್ದ ಕೌಶಾಂಗ್ ಪಟ್ಟಣಕ್ಕೆ ಒಂದು ಐವತ್ತು ಮೈಲಿ ದೂರ. ಕರೆದೊಯ್ಯಲು ಒಬ್ಬ ಸ್ಥಳೀಯ ಟೈವಾನಿ ಮನುಷ್ಯ ಬಂದಿದ್ದ. ದೊಡ್ಡ ವ್ಯಾನ್ ಕೂಡ ತಂದಿದ್ದ.

ರಾತ್ರಿ ಸುಮಾರು ಹತ್ತು ಘಂಟೆ ಸಮಯ. ಟೈನಾನ್ ವಿಮಾನ ನಿಲ್ದಾಣದಿಂದ ಹೊರಬಿದ್ದರೆ ರಾಷ್ಟ್ರೀಯ ಹೆದ್ದಾರಿ.

ಹೆದ್ದಾರಿಗೆ ಇಳಿದಾಗ ಕಂಡಿದ್ದು ಒಂದು ವಿಶಿಷ್ಟ ದೃಶ್ಯ. ಒಂದು ಕಡೆ ಅಂತಲ್ಲ. ಹೆದ್ದಾರಿಗುಂಟ ಕಾಣುತ್ತಲೇ ಇತ್ತು. ಅದೇನು ಅಂದರೆ….ಹೆದ್ದಾರಿ ಪಕ್ಕದಲ್ಲಿ ಚಿಕ್ಕಚಿಕ್ಕ ಗಾಜಿನ ಕುಟೀರಗಳು. ಬಣ್ಣಬಣ್ಣದ ಪ್ರಖರ ನಿಯಾನ್ ದೀಪಗಳಿಂದ ಅಲಂಕೃತ. ಎಲ್ಲ ಕಡೆ ಜಗಮಗ. ನಮ್ಮ ಕಡೆ ರಸ್ತೆ ಮೇಲೆ ಕಾಣುವ ಪಾನ್ ಬೀಡಾ ಗೂಡಂಗಡಿಗಳಂತೆಯೇ ಇದ್ದವು. ಪೂರ್ತಿ ಗಾಜಿನವು ಇದ್ದವು ಮತ್ತು ಕೊಂಚ sophisticated ಅನ್ನಿಸುವಂತೆ ಇದ್ದವು ಅನ್ನುವದನ್ನು ಬಿಟ್ಟರೆ ಥೇಟ್ ನಮ್ಮ ರಸ್ತೆ ಪಕ್ಕದ ಚುಟ್ಟಾ ಬೀಡಿ ಅಂಗಡಿಗಳಂತೆಯೇ ಇದ್ದವು.

ಅಂತಹ ಗಾಜಿನ ಗೂಡಂಗಡಿಗಳಲ್ಲಿ ರಪ್ಪಂತೆ ಕಣ್ಣಿಗೆ ರಾಚುವಂತೆ ಇದ್ದವರು ಒಳಗಿದ್ದ ತುಂಡುಡುಗೆ ತೊಟ್ಟ ಲಲನೆಯರು. ಶಿವನೇ, ಟೈವಾನ್ ದೇಶ ಕೂಡ ಥೈಲಾಂಡ್ ದೇಶದಂತಾಗಿಹೋಯಿತೇ!? ಅನ್ನುವ ಯೋಚನೆ ಬಂತು. ಇಲ್ಲೂ ಕಂಡಕಂಡಲ್ಲಿ ಕಾಮದಾಟದ ಕೇಂದ್ರಗಳೇ? ಈ ಜಗಮಗ ದೀಪದ ಗಾಜಿನ ಗೂಡುಗಳು, ಅವುಗಳಲ್ಲಿರುವ ತುಂಡುಡುಗೆ ತೊಟ್ಟು ಮುಗುಳ್ನಗೆ ಬೀರುತ್ತಿರುವ ಲಲನೆಯರು….ಮತ್ತೇನಾಗಿರಲು ಸಾಧ್ಯ? ಹೆದ್ದಾರಿ ಪಕ್ಕದಲ್ಲಿ ಅಂತಹ ದಂಧೆಗಳು ನಡೆಯುತ್ತವೆ. ಬೇರೆ ಕಡೆ ಕದ್ದುಮುಚ್ಚಿ ನಡೆಯುತ್ತವೆ. ಇಲ್ಲಿ ನೋಡಿದರೆ ಖುಲ್ಲಂಖುಲ್ಲಾ ನಡೆಯವ ಹಾಗೆ ಕಾಣುತ್ತದೆ. ಆದರೂ ಏನೋ ವಿಚಿತ್ರವಾಗಿದೆ ಅಂದುಕೊಂಡೆ.

ಮರುದಿನ ಆಫೀಸಿಗೆ ಹೋದಾಗ ಕೇಳಿದ್ದೇ ಆ ಗಾಜಿನ ಗೂಡುಗಳ ಬಗ್ಗೆ ಮತ್ತೆ ಅಲ್ಲಿ ನಡೆಯುವ ವ್ಯವಹಾರದ ಬಗ್ಗೆ. ಕೇವಲ ಜನರಲ್ ನಾಲೆಜ್ ಸಲುವಾಗಷ್ಟೇ. ದೊರೆತ ಉತ್ತರ ಭಯಂಕರ ಆಶ್ಚರ್ಯಕರವಾಗಿತ್ತು.

ಆ ಗಾಜಿನ ಗೂಡುಗಳಲ್ಲಿ ಎಲೆಯಡಿಕೆ (ಪಾನ್, ತಾಂಬೂಲ, ಕವಳ) ಮಾರುತ್ತಾರೆ. ಅವುಗಳ ಮಾರಾಟ ಹೆಚ್ಚಲಿ ಅಂತ ತುಂಡುಡುಗೆ ತೊಟ್ಟ ಆಕರ್ಷಕ ಕನ್ನಿಕೆಯರನ್ನು ನಿಯಮಿಸಿರುತ್ತಾರೆ. ಅಲ್ಲೇನೂ ವೇಶ್ಯಾವೃತ್ತಿ ದಂಧೆ ನಡೆಯುವದಿಲ್ಲ. Those girls are the famous betel nut beauties of Taiwan!Betel nut beauties of Taiwan - ಅಂದರೆ ಕವಳದ ಕನ್ನಿಕೆಯರು ಅನ್ನಿ. ಅಥವಾ ಎಲೆಯಡಿಕೆ ಅಪ್ಸರೆಯರು ಅನ್ನಿ. ಪಾನ್ ಪಟಾಕಿಗಳು ಅನ್ನಿ. ವಿಚಿತ್ರವಾಗಿದೆ. ಟೈವಾನ್ ದೇಶದಲ್ಲಿ ಎಲೆಯಡಿಕೆ ತಿನ್ನುತ್ತಾರೆ ಅನ್ನುವದೇ ದೊಡ್ಡ ಸುದ್ದಿ ನಮಗೆ. ಆಮೇಲೆ ನೆನಪಾಯಿತು. ಅಂದು ವಿಮಾನನಿಲ್ದಾಣಕ್ಕೆ ಬಂದಿದ್ದ ವ್ಯಾನ್ ಡ್ರೈವರ್ ಸಹ ದವಡೆಯಲ್ಲಿ ಏನನ್ನೋ ತುಂಬಿಟ್ಟುಕೊಂಡಿದ್ದ. ಭಾಷೆ ಬರದ ಕಾರಣ ಮಾತಿರಲಿಲ್ಲ. ಅವನಿಗೆ ಒಳ್ಳೆಯದೇ ಆಯಿತು. ಬಾಯಲ್ಲಿದ್ದ ಕವಳವನ್ನು ಉಗುಳಿ ಮಾತಾಡುವ ಜರೂರತ್ ಬರಲಿಲ್ಲ. ವ್ಯಾನ್ ಹೊರಟ ನಂತರ ಮಧ್ಯೆ ಕಿಡಕಿಯ ಗ್ಲಾಸ್ ಇಳಿಸಿ ಪಚಕ್ ಅಂತ ಪಿಚಕಾರಿ ಹಾರಿಸಿದ್ದ. ಎಲ್ಲೋ ಎಂಜಲನ್ನು ಉಗುಳಿರಬೇಕು ಅಂದುಕೊಂಡಿದ್ದೆ. ಈಗ ಒಂದಕ್ಕೊಂದು ಪಾಯಿಂಟುಗಳನ್ನು ಜೋಡಿಸಿದರೆ ಒಂದು ವಿಷಯ ಖಾತ್ರಿಯಾಯಿತು. ಆ ವ್ಯಾನ್ ಡ್ರೈವರ್ ಸಹಿತ ಬಾಯಲ್ಲಿ ತಾಂಬೂಲ ತುಂಬಿಕೊಂಡೇ ಕೂತಿದ್ದ. ನಡುವೆ ಅದರ ಪಿಚಕಾರಿಯನ್ನೇ ಹಾರಿಸಿದ್ದ. ಎಲ್ಲ ಕಡೆಯೂ ಕವಳ, ತಾಂಬೂಲ. Universal stimulant!

ಟೈವಾನಿನಲ್ಲಿ ಸಹ ತಾಂಬೂಲ ಬಹಳ ಪಾಪ್ಯುಲರ್. ತಾಂಬೂಲ ಮಾಡುವ ಪದ್ಧತಿ ಸ್ವಲ್ಪ ಬೇರೆ. ಆದರೆ ಎಲೆಗೆ ಸುಣ್ಣ ಹಚ್ಚಿ, ಅಡಿಕೆ ಹಾಕಿ, ಬೇಕಾದರೆ ಜೊತೆಗೆ ತಂಬಾಕು, ದಾಲ್ಚಿನ್ನಿ, ಲವಂಗ, ಇತ್ಯಾದಿ ಹಾಕಿಯೇ ಮೆಲ್ಲುತ್ತಾರೆ. ಯಾವದೇ ಮುಲಾಜಿಲ್ಲದೆ ಕಂಡಲ್ಲಿ ಪಿಚಕಾರಿ ಹಾರಿಸುತ್ತಾರೆ. ರಸ್ತೆ ಮೇಲೆ ರಕ್ತದೋಕುಳಿಯಾಡಿದಂತೆ ಕೆಂಪು ಚಿತ್ತಾರಗಳು ಅಲ್ಲೂ ಕಾಣುತ್ತವೆ. ಅಷ್ಟರಮಟ್ಟಿಗೆ ನಮ್ಮ ದೇಶದ ಫೀಲಿಂಗ್ ತಂದುಕೊಡುವಲ್ಲಿ ಟೈವಾನ್ ದೇಶ ಯಶಸ್ವಿಯಾಗುತ್ತದೆ. ಜೈ ಟೈವಾನ್! ಆದರೆ ಪಿಚಕಾರಿ ಹಾರಿಸಿ ಗೋಡೆಗೆ ಕೆಂಪು ಪೇಂಟ್ ಹೊಡೆಯುವದು ಕಮ್ಮಿ. ಮತ್ತೆ ಸ್ವಚ್ಛತೆ ನಮ್ಮಲ್ಲಿಗಿಂತ ಸ್ವಲ್ಪ ಜಾಸ್ತಿಯಿರುವದರಿಂದ ಬೇಗನೆ ಕ್ಲೀನ್ ಆಗುತ್ತದೆ ಅಂತ ಕಾಣುತ್ತದೆ.

ಟೈವಾನಿನಲ್ಲಿ ಮಧ್ಯಮವರ್ಗ, ಬಡವರು, ಕಾರ್ಮಿಕರು ಎಲ್ಲ ಬಾಯಲ್ಲಿ ತಾಂಬೂಲ ಜಡಿದುಕೊಂಡು ಓಡಾಡುವರೇ. ಏನಾದರೂ ಮಾತಾಡಿಸಿದರೆ ಪಿಚಕಾರಿ ಹಾರಿಸಿಯೇ ಮುಂದಿನ ಮಾತು. ಪಿಚಕಾರಿ ಹಾರಿಸದಿದ್ದರೆ ಮಾತೆಲ್ಲಿಂದ ಬರಬೇಕು? ದಿನಾ ಬೆಳಿಗ್ಗೆ ಕೆಲಸದ ಜಾಗಕ್ಕೆ ಕರೆದೊಯ್ಯಲು ಬರುತ್ತಿದ್ದ ಟ್ಯಾಕ್ಸಿ ಡ್ರೈವರ್ ನಾವು ಹೋಟೆಲ್ ಬಾಗಿಲಿಗೆ ಬರುವ ಹೊತ್ತಿಗೆ ಬಾಯಲ್ಲಿದ್ದ ತಾಂಬೂಲ ಉಗುಳಿ ನಗುತ್ತ ನಿಂತಿರುತ್ತಿದ್ದ. ಕಸ್ಟಮರ್ ಮುಂದೆ ಪಿಚಕಾರಿ ಹಾರಿಸಬಾರದು ಅಂತ ಅವನಿಗೆ ಯಾರು ಸೂಚನೆ ಕೊಟ್ಟಿದ್ದರೋ ಗೊತ್ತಿಲ್ಲ. ನಮ್ಮನ್ನು ಆಫೀಸಿಗೆ ಡ್ರಾಪ್ ಮಾಡಿದವನೇ, ತಲುಬು ತಡೆಯಲಾಗದೇ ಅಲ್ಲೇ ಒಂದು ಟೈವಾನಿ ತಾಂಬೂಲವನ್ನು ದವಡೆಯಲ್ಲಿ ಜಡಿದ ನಂತರವೇ ಗಾಡಿ ಎತ್ತುತ್ತಿದ್ದ. ಎಲೆಯಡಿಕೆ ಚಟ ಹತ್ತಿದರೆ ಎಲ್ಲಾದರೂ ಅಷ್ಟೇ. ಬೇಕೆಂದರೆ ಬೇಕೇಬೇಕು.

ಆದರೂ ಈ ರೀತಿಯಲ್ಲಿ ಹೆದ್ದಾರಿಗುಂಟ ಟೈವಾನೀ ಪಾನ್ ಮಾರಾಟ ಮಾಡುವ ವಿಶಿಷ್ಟ ಪದ್ಧತಿ ಮಜಾ ಅನ್ನಿಸಿತು. ಜಗಮಗ ನಿಯಾನ್ ದೀಪಗಳಿಂದ ಅಲಂಕೃತವಾದ ಗಾಜಿನ ಗೂಡುಗಳಲ್ಲಿ ತುಂಡುಡುಗೆ ಉಟ್ಟು ಮುಗುಳ್ನಗೆ ಬೀರುವ ಲಲನೆಯರು ಅದೇನು value add ಮಾಡುತ್ತಾರೋ ಗೊತ್ತಾಗಲಿಲ್ಲ. ಎಲೆಯಡಿಕೆ, ತಂಬಾಕಿನ ಪಾನ್ ಒಂದು stimulant ಅಂತೂ ಹೌದು. ಹೆದ್ದಾರಿ ಮೇಲೆ ತಾಸುಗಟ್ಟಲೆ ವಿರಾಮವಿಲ್ಲದೆ ಗಾಡಿ ಚಲಾಯಿಸುವ ಜನ ಕಾಫಿ, ಟೀ, ತಂಬಾಕು, ತಾಂಬೂಲದಂತಹ stimulants ಮೇಲೆ ಅವಲಂಬಿತರು. ಅವರಿಗೆ ಅವೆಲ್ಲ ಬೇಕೇಬೇಕು. ಇಲ್ಲವಾದರೆ ಹೆದ್ದಾರಿಗುಂಟ ಗಾಡಿ ಹೊಡೆಯುವ ಏಕತಾನತೆ ಹುಚ್ಚು ಹಿಡಿಸುತ್ತದೆ. Highway hypnosis ಆಗಿ ತಾತ್ಕಾಲಿಕ ಮತಿಭ್ರಮಣೆ ಆದಂತಾಗಿ ಅಪಘಾತಗಳು ಸಹ ಆಗುವದುಂಟು. ಬುರ್ಕಾ ಹಾಕಿಕೊಂಡವಳಾದರೂ ಸರಿ, ತುಂಡುಡುಗೆ ತೊಟ್ಟವಳಾದರೂ ಸರಿ, ಚಾಲಕರು ತಾಂಬೂಲ ಕೊಳ್ಳುತ್ತಾರೆ. ಕಣ್ಣಿಗೆ ಹಿತವಾಗಿ ಕಂಡು, ಮಾದಕ ಮುಗುಳ್ನಗೆ ಬೀರಿ ಮಾರಿದರೆ premium ದರಕ್ಕೆ ಮಾರಾಟವಾಗಿ ಲಾಭ ಹೆಚ್ಚು ಸಿಗಬಹುದೇನೋ.

ಒಟ್ಟಿನಲ್ಲಿ ಈ ತಾಂಬೂಲದ ತರುಣಿಯರ concept ನಮ್ಮ ದೇಶದಲ್ಲಿ ಕೆಲವು ಕಡೆ ಲೇಡೀಸ್ ಬಿಯರ್ ಬಾರುಗಳಿರುವ ಹಾಗೆ ಅನ್ನಿಸುತ್ತದೆ. ಬಿಯರ್ ಬಾರುಗಳಲ್ಲಿ ಹೆಂಗಳೆಯರು ಡ್ರಿಂಕ್ ಸರಬರಾಜು ಮಾಡುತ್ತಾರೆ ಅನ್ನುವದೇ ಥ್ರಿಲ್ಲು ಕೆಲವರಿಗೆ. ಅಲ್ಲಿ ಒಂದಕ್ಕೆರೆಡು ರೇಟ್ ಹಾಕಿದರೂ ಅಲ್ಲೇ ಹೋಗುತ್ತಾರೆ. ಅಲ್ಲಿ live-band ಕೂಡ ಇದ್ದರೆ ಮುಗಿದೇ ಹೋಯಿತು. ತಗಡು ಸಾರಾಯಿಗೆ ಒಂದಕ್ಕೆರೆಡು ರೇಟ್ ಹಾಕಿದರೂ ಸರಿ. ಕಂಪನಿ ಕೊಡುವ ನೆಪದಲ್ಲಿ ಮಾನಿನಿಯರು ಬಂದು ಕೂತು ಮನ್ಮಾನಿ  ಮಾಡಿ ರೊಕ್ಕವನ್ನೆಲ್ಲ ಬೋಳಿಸಿ ಕಳಿಸಿದರೂ ಸರಿ. ಆದರೂ ಅಲ್ಲೇ ಹೋಗಿ ಎಣ್ಣೆ ಹೊಡೆಯುವದರಲ್ಲಿ ಕೆಲವರಿಗೆ ಮಜಾ ಬರುತ್ತದೆ. ಈ ಎಲೆಯಡಿಕೆ ಅಪ್ಸರೆಯರ ಕಾನ್ಸೆಪ್ಟ್ ಕೂಡ ಹಾಗೇಯೇ ಏನೋ. ಯಾರಿಗೆ ಗೊತ್ತು.

ಆದರೂ ಈ ಕವಳದ ಕನ್ನಿಕೆಯರು ಗಾಜಿನ ಗೂಡುಗಳಲ್ಲಿ ತಾಂಬೂಲ ಮಾರುವದು ವೇಶ್ಯಾವೃತ್ತಿ ದಂಧೆಗೆ front ಇರಬಹುದೇನೋ ಅನ್ನುವ ಅನುಮಾನವಂತೂ ಇತ್ತು. ಟೈವಾನಿನ ಜನರನ್ನು ಕೇಳಿದರೆ ಅಲ್ಲಿ ವೇಶ್ಯಾವೃತ್ತಿ ಬಿಲ್ಕುಲ್ ನಡೆಯುವದಿಲ್ಲವೆಂದರು. ಅದರೂ ಸದಾ ಒಬ್ಬಳಲ್ಲೇ ಕವಳ ತೆಗೆದುಕೊಳ್ಳುವ ಗಿರಾಕಿಗಳು ಒಮ್ಮೊಮ್ಮೆ ಸಲುಗೆಯಿಂದ ಅಲ್ಲಿಲ್ಲಿ ಕೈಬಿಟ್ಟು ಮಷ್ಕಿರಿ ಮಾಡುತ್ತಾರೆ ಅಂದರು. ಅದೂ ಕವಳದ ಕನ್ನಿಕೆ ಸ್ವಂತ ಇಚ್ಛೆಯಿಂದ ಅನುಮತಿ ಕೊಟ್ಟರೆ ಮಾತ್ರ. ಅಷ್ಟು ಬಿಟ್ಟರೆ ಹೆಚ್ಚಿನ ಲಫಡಾ ಏನೂ ಅಲ್ಲಿ ನಡೆಯುವದಿಲ್ಲ. ಮೇಲಿಂದ ಚಿಕ್ಕ ಗೂಡುಗಳಲ್ಲಿ ಜಾಗವೂ ಇರುವದಿಲ್ಲ. ಮತ್ತೆ ಪೂರ್ತಿ ಗಾಜಿನ ಮನೆಗಳಾಗಿರುವದರಿಂದ ಅಲ್ಲಿ ಏನು ನಡೆದರೂ ಎಲ್ಲರಿಗೂ ಎಲ್ಲವೂ ಕಾಣುತ್ತದೆ. ಏನೂ privacy ಇರುವದಿಲ್ಲ. ಹಾಗಾಗಿ ಅವರ ವಿವರಣೆಯನ್ನು ನಂಬಬೇಕಾಯಿತು. ಆದರೂ ಕವಳದ ಕನ್ನಿಕೆಯರು ಅಲ್ಲಿ ದಂಧೆ ಮಾಡದಿದ್ದರೂ ದಂಧೆ ಕುದುರಿಸಿಕೊಂಡು, ಬಕರಾಗಳನ್ನು ಹುಡುಕಿಕೊಂಡು ಬೇರೆಲ್ಲೋ ದಂಧೆ ನಡೆಸಿದರೆ ಆಶ್ಚರ್ಯವಿಲ್ಲ. ನಮ್ಮಲ್ಲಿನ ಲೇಡೀಸ್ ಬಿಯರ್ ಬಾರು, live-band ಅಂದರೆ ವೇಶ್ಯಾವೃತ್ತಿ ದಂಧೆಗೆ front ಗಳು. ಮತ್ತೇನೂ ಅಲ್ಲ. ಎಲ್ಲ ಸ್ಥಳೀಯ ಸಮಾಜ ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ಅವಲಂಬಿತ.

ಅಂತೂ ಸೀದಾಸಾದಾ ತಾಂಬೂಲವನ್ನು ಹೀಗೂ ಮಾರುತ್ತಾರೆ ಅಂತ ತಿಳಿಯಿತು. ಹೆದ್ದಾರಿ ಮೇಲೆ ಹೋಗುವ ಚಾಲಕರು ಸಿಕ್ಕಾಪಟ್ಟೆ ಹೈರಾಣಾಗಿರುತ್ತಾರೋ ಏನೋ ಪಾಪ. ತುಂಡುಡುಗೆ ತೊಟ್ಟ ಸುಂದರಿಯನ್ನು ನೋಡಿ, ಕಣ್ಣು ತಂಪು ಮಾಡಿಕೊಂಡು, ತಾಂಬೂಲಕ್ಕೆ ಒಂದಕ್ಕೆರೆಡು ರೇಟ್ ಕೊಟ್ಟು ಕೊಂಡುಹೋಗುತ್ತಾರೋ ಏನೋ. ಯಾರಿಗೆ ಗೊತ್ತು.

ಮೊನ್ನಿತ್ತಲಾಗೆ ಟೈವಾನ್ ಬಗ್ಗೆ ಏನೋ ಮಾಹಿತಿಯನ್ನು ಇಂಟರ್ನೆಟ್ ಮೇಲೆ ಹುಡುಕುತ್ತಿದ್ದೆ. ಆವಾಗ ಈ ಕವಳದ ಕನ್ನಿಕೆಯರು ನೆನಪಾದರು. ಅವರಿಗೆ ಏನೆನ್ನುತ್ತಾರೆ ಅಂತಲೂ ಗೊತ್ತಿರಲಿಲ್ಲ. ಗೂಗಲ್ ಮೇಲೆ ಏನೋ ಸರ್ಚ್ ಹಾಕಿದೆ. ಆಗ ತಿಳಿಯಿತು ಅವರಿಗೆ betel girl  ಎಂದು ಕರೆಯುತ್ತಾರೆ ಅಂತ.

ತಾಂಬೂಲದ ತರುಣಿಯರ ಬಗ್ಗೆ ಒಂದು ಡಾಕ್ಯುಮೆಂಟರಿ.

 

Saturday, March 11, 2017

ಕೋರಂಟಿ.....The Qurantine

'ನಮ್ಮ ವಿಮಾನ ಈಗ ಟಾಂಜಾನಿಯಾದ ದಾರ್-ಏ-ಸಲಾಮ್ ವಿಮಾನನಿಲ್ದಾಣದಲ್ಲಿ ಇಳಿಯಲು ಸಜ್ಜಾಗುತ್ತಿದೆ. ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿ, ಮುಂದಿರುವ ಟ್ರೇ ಟೇಬಲ್ ಮಡಚಿಟ್ಟು, ಸೀಟನ್ನು ಸೀದಾ ಮಾಡಿಕೊಂಡು ಕುಳಿತು ಸಹಕರಿಸಬೇಕಾಗಿ ವಿನಂತಿ' - ಗಗನಸಖಿಯ ಇಂಪಾದ ದನಿ ತಂಪಾಗಿ ತೇಲಿಬಂತು.

ಅಕ್ಟೋಬರ್ ೧೧, ೧೯೯೫. ಮುಂಬೈನಿಂದ ಎಂಟು ತಾಸುಗಳ ಪಯಣದ ಬಳಿಕ ಟಾಂಜಾನಿಯಾ ತಲುಪಲಿದ್ದೆ. ಸಿಕ್ಕಾಪಟ್ಟೆ excitement. ಹೇಳಿಕೇಳಿ ಆಫ್ರಿಕಾ. ಕಪ್ಪುಖಂಡ ಆಫ್ರಿಕಾ ಬಗ್ಗೆ ಕೇಳಿದ್ದು, ಓದಿದ್ದು ಎಲ್ಲ ಬಹಳವಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಪ್ರತ್ಯಕ್ಷ ದರ್ಶನವಾಗಲಿದೆ. ಹೇಗಿರುತ್ತದೆಯೋ ಏನೋ? ವಿಮಾನ ಕೆಳಗಿಳಿಯುತ್ತಿದ್ದಂತೆಯೇ ಎಲ್ಲಿ ಕಾಡುಜನರು ಬಂದು 'ಜಿಂಗಾಚಿಕ್ಕಾ ಜಿಂಗಾಲೆ. ಜಿಂಗಾಚಿಕ್ಕಾ ಜಿಂಗಾಲೆ,' ಎಂದು ಕಾಡು ನೃತ್ಯ ಶುರು ಮಾಡುತ್ತಾರೇನೋ! ಎಲ್ಲಿ runway ಮೇಲೆಯೇ ಕಾಡುಪ್ರಾಣಿಗಳು ಓಡಾಡಿಕೊಂಡಿರುತ್ತವೆಯೋ ಏನೋ! ಯಾರಿಗೆ ಗೊತ್ತು? ಆಫ್ರಿಕಾದಲ್ಲಿ  ಏನೂ ಆಗಬಹುದು. totally unpredictable ಅಂತ ಕೇಳಿದ್ದೆ. ಮತ್ತೆ ಆಫ್ರಿಕಾದ ಬಗ್ಗೆ ಸಿಕ್ಕಾಪಟ್ಟೆ impression ಮಾಡಿದ ಚಿತ್ರ Gods must be crazy (ಭಾಗ ೧ & ೨). ಅದರ ಗಾಢವಾದ ಪ್ರಭಾವ ಇತ್ತು ನೋಡಿ.

ಆಗೆಲ್ಲ ವಿಮಾನದಲ್ಲಿ ವಿಂಡೋ ಸೀಟ್ ಹಿಡಿದು ಪ್ರಯಾಣಿಸುವ ಚಟ ಇತ್ತು. ಅಜ್ಜನಮನೆ ಸಿರ್ಸಿಗೆ ಹೋಗುವಾಗ ಬಸ್ಸಿನಲ್ಲಿ ಕಿಡಕಿ ಪಕ್ಕದ ಸೀಟಿಗಾಗಿ ಯುದ್ಧ, ರಕ್ತಪಾತ ಮಾಡಿ ಬಂದ ನಮಗೆ ವಿಮಾನದಲ್ಲಿ ಕೇಳಿದರೆ ಕಿಡಕಿ ಪಕ್ಕದ ಸೀಟನ್ನು ನಗುತ್ತ ಕೊಡುತ್ತಾರೆ ಅನ್ನುವದೇ ದೊಡ್ಡ ಮಾತಾಗಿತ್ತು. ಮುಂಬೈನಲ್ಲಿ ಕೇಳಿ ಕಿಡಕಿ ಸೀಟು ಪಡೆದುಕೊಂಡಿದ್ದೆ. ಅಂತಹ ಕಿಡಕಿ ಸೀಟಿನಿಂದ ಕೆಳಗೆ ಬಗ್ಗಿ ನೋಡಿದರೆ  ರಮಣೀಯ ಅರಬ್ಬೀ ಸಮುದ್ರ. ಕೊಲ್ಲಿಯಂತೆ ಕೊರೆದು ಒಳಗೆ ಬಂದಿತ್ತು. ನಮ್ಮ ದೇಶದಲ್ಲಿ ಅರಬ್ಬೀ ಸಮುದ್ರವನ್ನು ಕುಮಟಾ, ಗೋವಾ, ಕಾರವಾರದಲ್ಲಿ ನೋಡಿದ್ದೆ. ಆದರೆ ಆಫ್ರಿಕಾದಲ್ಲಿ ಅರಬ್ಬೀ ಸಮುದ್ರಕ್ಕಿರುವ ಲುಕ್ಕೇ ಬೇರೆ. ಒಂದು ತರಹದ mesmerizing effect.

ಕೊಲ್ಲಿ ಸುತ್ತ ಒಂದು ರೌಂಡ್ ಹೊಡೆದ ಏರ್ ಇಂಡಿಯಾದ ವಿಮಾನ  ಇಳಿಯಲು ಆರಂಭಿಸಿತು. ದಾರ್-ಏ-ಸಲಾಮ್ ನಗರ ಸ್ಪಷ್ಟವಾಗಿ ಕಾಣತೊಡಗಿತು. ಎಲ್ಲೂ ಕಾಡು, ಕಾಡು ಪ್ರಾಣಿಗಳು ಕಾಣಿಸಲಿಲ್ಲ. ನಾಡು ಮತ್ತು ನಾಡು ಪ್ರಾಣಿಗಳೇ ಕಂಡವು. ಎಲ್ಲ ದೊಡ್ಡ ನಗರಗಳಲ್ಲಿ ಇರುವಂತೆ ಸ್ಲಮ್ಮು, ಟ್ರಾಫಿಕ್ ಎಲ್ಲ ಕಂಡಿತು. ಒಳ್ಳೇದು. ನಮ್ಮ ದೇಶ ಇದ್ದಂತೆಯೇ ಇದೆ. ಅಲ್ಲಿ ನಮ್ಮ ಭಾರತ ಮೂಲದ ಜನರಂತೂ ಭರಪೂರ ಇದ್ದಾರೆ ಅಂತ ಗೊತ್ತಿತ್ತು. ಬಾಕಿ ಎಲ್ಲ ಸಹಿತ ನಮ್ಮ ದೇಶ ಇದ್ದಂತೆಯೇ ಇದೆ. ಒಳ್ಳೆಯದೇ ಆಯಿತು.

ವಿಮಾನ ಯಾವದೇ ತೊಂದರೆಯಿಲ್ಲದೆ ಲ್ಯಾಂಡ್ ಆಯಿತು. Jetway ಇರಲಿಲ್ಲ. ಮೆಟ್ಟಿಲುಗಳಿರುವ ಸಾದಾ ಏಣಿಯನ್ನು ಹಾಕಿದ್ದರು. ಇಳಿದು ಬಂದರೆ ಮೈಗೆ ರಾಚಿದ್ದು ರಣ ರಣ ಬಿಸಿಲು. ಭೂಮಧ್ಯರೇಖೆಯಿಂದ (equator) ಕೊಂಚ ಮಾತ್ರ ಕೆಳಗಿರುವ ಪ್ರದೇಶ. ಹಾಗಾಗಿ ಬಿಸಿಲು ಜಾಸ್ತಿ. ಆವಾಗ ಇನ್ನೂ ಬೆಳಿಗ್ಗೆ ಒಂಬತ್ತು ಘಂಟೆ ಸಮಯ. ಆವಾಗಲೇ ಅಷ್ಟು ಬಿಸಿಲು. ಇನ್ನು ಮಧ್ಯಾಹ್ನವಾದಂತೆ ಹೇಗಿರುತ್ತದೋ ಏನೋ.

ವಿಮಾನ ನಿಲ್ದಾಣ ಸಾಕಷ್ಟು ದೊಡ್ಡದಾಗಿತ್ತು. ಬೇರೆ ಬೇರೆ ದೇಶಗಳ ಸುಮಾರು ವಿಮಾನಗಳು ಕಂಡುಬಂದವು. Runway ಮೇಲೆ ಯಾವ ಕಾಡುಪ್ರಾಣಿಗಳೂ ಕಂಡುಬರಲಿಲ್ಲ. ಕಾಡುಜನರೂ ಕಂಡುಬರಲಿಲ್ಲ. ಅಷ್ಟರಮಟ್ಟಿಗೆ ನೆಮ್ಮದಿ. ನಿರಾಳ.

ಮೆಟ್ಟಿಲಿರುವ ಏಣಿ ಇಳಿದು ಒಂದು ನೂರು ಹೆಜ್ಜೆ ದೂರದಲ್ಲಿ arrival lounge ಇತ್ತು. ಒಳಗೆ ಬಂದರೆ ಅಲ್ಲೂ ಸಿಕ್ಕಾಪಟ್ಟೆ ಸೆಕೆ. ಮೂಲೆಯಲ್ಲಿದ್ದ AC ಗೊಳೋ ಎಂದು ತಿಣುಕಾಡುತ್ತಿತ್ತು.

ಎಲ್ಲಿ ನೋಡಿದರೂ ಕಪ್ಪು ಜನರು. ಕಪ್ಪುಖಂಡದಲ್ಲಿ ಕಪ್ಪು ಜನರಲ್ಲದೇ ಮತ್ಯಾರು ಇರುತ್ತಾರೆ? ಆದರೂ ಕಪ್ಪು ಜನರು ಅಂದರೆ ಏನೋ ಒಂದು ತರಹದ uneasiness. ಅದು ನಮ್ಮ ಪೂರ್ವಗ್ರಹ (prejudice). ದರಿದ್ರ ಅಮೇರಿಕನ್ ಹಾಲಿವುಡ್ ಮೂವಿಗಳ ಪ್ರಭಾವ. ಅವುಗಳಲ್ಲಿ ಕಪ್ಪು ಜನರನ್ನು ಸಿಕ್ಕಾಪಟ್ಟೆ ಖರಾಬ್ ಬೆಳಕಿನಲ್ಲಿ ತೋರಿಸಿ ಕಪ್ಪು ಜನರ ಬಗ್ಗೆ ಒಂದು ತರಹದ  ಭಯ ಹುಟ್ಟಿಸಿಬಿಟ್ಟಿರುತ್ತಾರೆ. ಆದರೆ ಆಫ್ರಿಕಾದ ಕಪ್ಪು ಜನ ಎಷ್ಟು  ಒಳ್ಳೆಯವರು, ಎಷ್ಟು ಮುಗ್ಧರು, ಎಷ್ಟು ಸರಳ ಜನ ಅಂತೆಲ್ಲ ಆಮೇಲೆ ಗೊತ್ತಾಯಿತು. ಅದರಲ್ಲೂ ಮಿಲಿಟರಿ ಸಮವಸ್ತ್ರ ಧರಿಸಿ, ಏಕೆ-೪೭ ಬಂದೂಕು ಹಿಡಿದು ಓಡಾಡುತ್ತಿದ್ದ ಪೋಲಿಸ್ ಮಂದಿಯಂತೂ ಪುರಾಣದ ರಾಕ್ಷಸರನ್ನು ನೆನಪಿಸುವಂತಿದ್ದರು. ಏರ್ಪೋರ್ಟ್ ಬಿಟ್ಟು ಹೊರಗೆ ಹೋಗಿ ತಣ್ಣನೆ ಸ್ಟಾಫ್ ಕ್ವಾರ್ಟರ್ಸ್ ಸೇರಿಕೊಂಡರೆ ಸಾಕು ಅನ್ನಿಸಿತ್ತು.

ಪಾಸ್ಪೋರ್ಟ್, ವೀಸಾ ತಪಾಸಣೆ ಎಲ್ಲ ಆಯಿತು. ಎಲ್ಲ ಸರಿಯಾಗಿತ್ತು. ಇನ್ನೇನು ಲಗೇಜ್ ಸಂಗ್ರಹಿಸಿಕೊಂಡು ಹೊರಗೆ ಹೋಗೋಣ ಅನ್ನುವಷ್ಟರಲ್ಲಿ ಮತ್ತೊಂದು formality ಬಗ್ಗೆ ಒಬ್ಬ ಕಪ್ಪು ಮನುಷ್ಯ ಬಂದು ಹೇಳಿದ.

ಹಳದಿ ಜ್ವರದ ಲಸಿಕೆ (yellow fever vaccination) ಹಾಕಿಸಿಕೊಂಡಿದ್ದರ ಪ್ರಮಾಣಪತ್ರ. ನೆನಪಾಯಿತು. ಆಫ್ರಿಕಾಗೆ ಹೋಗಬೇಕು ಅಥವಾ ಆಫ್ರಿಕಾದಿಂದ ಬರಬೇಕು ಅಂದರೆ ಈ ಲಸಿಕೆಯ ಅಗತ್ಯವಿತ್ತು. ಅದೇ ಪ್ರಕಾರ ಮುಂಬೈನಲ್ಲಿ ಲಸಿಕೆ ಹಾಕಿಸಿ, ಸರಿಯಾದ ಪ್ರಮಾಣಪತ್ರ ತೆಗೆದುಕೊಂಡಿದ್ದೆ. ಅದನ್ನು ಭಯ ಭಕ್ತಿಯಿಂದ ತೋರಿಸಿದೆ.

ನೋಡಿದ ಕಪ್ಪು ಮನುಷ್ಯ ತನ್ನ ಕಪ್ಪು ಮೊಗದಲ್ಲಿ ಅಷ್ಟೂ ಬಿಳಿ ಹಲ್ಲುಗಳನ್ನು ತೋರಿಸುತ್ತ ವಿಚಿತ್ರವಾಗಿ ನಕ್ಕ. ಅವನ  ಪಕ್ಕದಲ್ಲಿ, ಒಂದು ಕಡೆ, ಆಗಲೇ ಒಂದಿಷ್ಟು ಪ್ರಯಾಣಿಕರ ಗುಂಪು ಸೇರತೊಡಗಿತ್ತು. ನನಗೂ ಅಲ್ಲೇ ಹೋಗಿ ನಿಲ್ಲು ಅಂದ. ನಾನು ಕೇಳುವ ಮೊದಲೇ, 'ನಿನ್ನ ಹಳದಿ ಜ್ವರದ ಲಸಿಕೆ ಸರ್ಟಿಫಿಕೇಟ್ ಸರಿ ಇಲ್ಲ!' ಅಂದುಬಿಟ್ಟ. ಅರೇ ಇಸ್ಕಿ! ಲಸಿಕೆ ಹಾಕಿಸಿಕೊಂಡು, ಸರ್ಟಿಫಿಕೇಟ್ ತೆಗೆದುಕೊಂಡು ಹೋಗಬೇಕು ಅಂತ ಹೇಳಿದ್ದರು. ಅದೇ ಪ್ರಕಾರ ಮಾಡಿದ್ದೆ. ಇಲ್ಲಿ ನೋಡಿದರೆ ಲಸಿಕೆ ಸರ್ಟಿಫಿಕೇಟ್ ಸರಿಯಿಲ್ಲ ಅನ್ನುತ್ತಿದ್ದಾನೆ. ಏನಿದರರ್ಥ!? ತಿಳಿಯಲಿಲ್ಲ.

ಸ್ವಲ್ಪ ಹೊತ್ತಿನ ನಂತರ ಎಲ್ಲ ಪ್ರಯಾಣಿಕರ ಲಸಿಕೆ ಪ್ರಮಾಣಪತ್ರದ ಪರಿಶೀಲನೆ ಮುಗಿಯಿತು. ಒಂದು ಹತ್ತು ಹದಿನೈದು ಜನ ನನ್ನಂತವರಿದ್ದರು. ಲಸಿಕೆ ಪ್ರಮಾಣಪತ್ರದ ಪ್ರಾಬ್ಲಮ್ ಜನ. ನಮ್ಮನ್ನೆಲ್ಲ ಅಲ್ಲೇ ಪಕ್ಕದಲ್ಲಿದ್ದ ಒಂದು ಕೋಣೆಗೆ ಹೋಗುವಂತೆ ಹೇಳಿದ. ಹಿಂದೆ ಅವನೂ ಬಂದ. ದನದ ದೊಡ್ಡಿಯೊಳಗೆ ದೂಡಿಸಿಕೊಂಡಂತಾಯಿತು.

'ನಿಮ್ಮ ಲಸಿಕೆ ಪ್ರಮಾಣ ಪತ್ರಗಳು ಸರಿಯಿಲ್ಲ. ನಿಮ್ಮಗಳನ್ನು quarantine ನಲ್ಲಿ ಹೆಚ್ಚಿನ ವೀಕ್ಷಣೆಗೆ ಇಡಲಾಗುತ್ತದೆ. ಅದು ಇಲ್ಲಿನ ನಿಯಮ. ನಿಮ್ಮ ಆರೋಗ್ಯದಲ್ಲಿ ಯಾವದೇ ತೊಂದರೆಯಿಲ್ಲ ಅಂತ ಸರ್ಕಾರಿ ವೈದ್ಯರು ಖಾತ್ರಿ ಮಾಡಿದ ಮೇಲೆಯೇ ನಿಮ್ಮನ್ನು ಹೊರಗೆ ಬಿಡಲಾಗುತ್ತದೆ. ಏನೂ ಭಯಪಡುವ ಕಾರಣವಿಲ್ಲ. ಆರಾಮಾಗಿರಿ,' ಅಂದವನೇ ಹೀ ಹೀ ಅಂತ ಮೈಯನ್ನೆಲ್ಲ ಕುಲುಕಿಸಿ ನಕ್ಕ. ಅದೇನೋ ಗೊತ್ತಿಲ್ಲ. ಆಫ್ರಿಕಾದ ಕಪ್ಪು ಜನ ಸುಖಜೀವಿಗಳು. ಮಾತಿಗೊಮ್ಮೆ ಎದೆಯಾಳದಿಂದ ಡೀಪಾಗಿ ನಗುತ್ತಾರೆ. ಅವರು ನಗುವದನ್ನು ನೋಡಿದರೆ ನಮಗೆ ನಗು ಬರುತ್ತದೆ. ಅಥವಾ ನಮ್ಮ ಪರಿಸ್ಥಿತಿ ಖರಾಬ್ ಇದ್ದರೆ irritate ಆಗಿ ಸಿಟ್ಟು ಬರುತ್ತದೆ. ನುಣ್ಣಗೆ ಬೋಳಿಸಿಕೊಂಡಿದ್ದ ಆ ಕರಿಯನ ತಲೆಬುರುಡೆಗೆ ಚಡಾಪಡಾ ತಟ್ಟುವಷ್ಟು ಸಿಟ್ಟು ಬಂತು. ಎಂಟು ತಾಸುಗಳ ಪಯಣದ ನಂತರ ನಮ್ಮ ತಲೆ ಮೊದಲೇ ಹನ್ನೆರಡಾಣೆ ಆಗಿದೆ. ಮನೆಗೆ ಹೋಗಿ ಏನಾದರೂ ತಿಂದು ಕುಡಿದು, ಮುಚ್ಚಾಕಿಕೊಂಡು ಮಲಗೋಣ ಅಂದರೆ ಇವನದ್ದೊಂದು ಕಿರ್ಕಿರಿ. ಮೇಲಿಂದ ನಗುತ್ತಿದ್ದಾನೆ ಬೇರೆ. ಅಧಿಕಪ್ರಸಂಗಿ!

'ಸರ್, ನಮ್ಮ ಹತ್ತಿರ ಲಸಿಕೆ ಪ್ರಮಾಣ ಪತ್ರ ಇದೆ. ಇದರಲ್ಲೇನು ತಪ್ಪಿದೆ!?' ಅಂತ ಒಂದಿಬ್ಬರು ಕೇಳಿದರು. ಉಳಿದ ನಾವೆಲ್ಲಾ ಅವರ ಧ್ವನಿಗೆ ಕೋರಸ್ ಧ್ವನಿ ಕೂಡಿಸಿದೆವು.

'ಹಾಂಗೆ ಕೇಳಿ. ಎಲ್ಲ ಹೇಳ್ತೇನಿ!' ಅನ್ನುವವನಂತೆ ತೊಡೆ ತಟ್ಟಿ ಮತ್ತೆ ನಕ್ಕ ಕರಿಯ 'ನನಗೆ ಗೊತ್ತಿತ್ತು. ನೀವು ಶಾಣ್ಯಾ ಮಂದಿ ಇದನ್ನು ಕೇಳೇ ಕೇಳುತ್ತೀರಿ ಎಂದು,' ಅನ್ನುವ ಲುಕ್ ಕೊಟ್ಟ. ಮತ್ತೆ ಅದೇ ಪ್ಯಾಲಿ ನಗು. ಗಹಗಹಿಸಿ ನಗು. ಅದೊಂದನ್ನು ಅವರಿಂದ ಕಲಿಯಬಹುದು. 'ಆಕಾಶವೇ ಬೀಳಲಿ ಮೇಲೆ, ನಾನಂತೂ ನಗುವವನೇ,' ಅನ್ನುವ ಅವರ carefree ಮನೋಭಾವ.

'ನೋಡಿ, ನಿಮ್ಮಲ್ಲಿ ಕೆಲವು ಜನರ ಹತ್ತಿರ ಲಸಿಕೆ ಸರ್ಟಿಫಿಕೇಟ್ ಇಲ್ಲವೇ ಇಲ್ಲ. ಇನ್ನು ಕೆಲವರ ಹತ್ತಿರ ಇದ್ದವು expire ಆಗಿವೆ,' ಅಂದು suspenseful ಆಗಿ ಮಾತು ನಿಲ್ಲಿಸಿದ.

'ನಾವು  ಅವೆರೆಡೂ ವಿಭಾಗಕ್ಕೆ ಸೇರಿಲ್ಲ. ನಾವು ಹೊಸದಾಗಿ ಲಸಿಕೆ ಹಾಕಿಸಿಕೊಂಡು, ಫ್ರೆಶ್ ಆದ ಗರಿಗರಿ ಸರ್ಟಿಫಿಕೇಟ್  ತಂದಿದ್ದೇವೆ,' ಅಂತ ನಾವುಗಳು ಹೇಳುವ ಮುಂಚೆ ಅವನೇ ಹೇಳಿದ, 'ನಿಮ್ಮ ಸರ್ಟಿಫಿಕೇಟನ್ನು ಸರಿಯಾಗಿ ಓದಿ. ಚಿಕ್ಕ ಅಕ್ಷರಗಳಲ್ಲಿ ಬರೆದಿದ್ದಾರೆ. ಪ್ರಯಾಣಕ್ಕಿಂತ ಕನಿಷ್ಠ ಮೂರು ದಿನ ಮೊದಲು ತೆಗೆದುಕೊಂಡ ಲಸಿಕೆಗಳು ಮಾತ್ರ valid. ಉಳಿದವು invalid!'

ಅಲ್ಲಿಗೆ ಶಿವಾಯ ನಮಃ!

ನಾನಂತೂ ಹೊರಡುವ ದಿನವಷ್ಟೇ ಲಸಿಕೆ ತೆಗೆದುಕೊಂಡಿದ್ದೆ. ಹೊರಡಲು ಮೂರು ದಿನವಿದ್ದಾಗಷ್ಟೇ ಇದೊಂದು ಹೊಸ ಕಂಡೀಶನ್ ಬಗ್ಗೆ ಗೊತ್ತಾಗಿತ್ತು. ಗುಜರಾತಿನ ಅಹಮದಾಬಾದಿನಲ್ಲಿ ಕುಳಿತಿದ್ದ ನೌಕರಿ ಕೊಡಿಸಿದ್ದ ಏಜೆಂಟ್ ಫೋನ್ ಮಾಡಿ, 'ಅದೇನೋ ಹಳದಿ ಜ್ವರದ ಲಸಿಕೆಯಂತೆ. ತೆಗೆದುಕೊಂಡು ಹೋಗಬೇಕಂತೆ,' ಅಂದಿದ್ದ. ಅವನಿಗೂ ಸರಿಯಾದ ಮಾಹಿತಿ ಇರಲಿಲ್ಲ. ಆಗ ನಾನಿದ್ದದ್ದು ಬೆಂಗಳೂರಿನಲ್ಲಿ. 'ಅಲ್ಲೇ ವಿಚಾರಿಸು. ಸಿಗಬಹುದು. ಒಟ್ಟಿನಲ್ಲಿ ಆ ಲಸಿಕೆ ಹಾಕಿಸಿಕೊಂಡೇ ದೇಶ ಬಿಡು,' ಅಂದಿದ್ದ. ಹೊರಡುವ ಮುನ್ನ ಮತ್ತೊಂದು ತಲೆಬಿಸಿ.

ಯಾರ ಹತ್ತಿರ ಕೇಳೋಣ? ಆಗ ನಮ್ಮ ಮನೆಯಿದ್ದ ದೊಮ್ಮಲೂರಿನ ಅಥವಾ ಪಕ್ಕದ ಇಂದಿರಾ ನಗರದಲ್ಲಿದ್ದ ಖಾಸಗಿ ಚಿಕಿತ್ಸಾಲಯಗಳಲ್ಲಿ ಹೋಗಿ ಕೇಳಿದರೆ ಅವರಿಗೆ ಏನೂ ಗೊತ್ತಿರಲಿಲ್ಲ. ಹಳದಿ ಜ್ವರ ಅಂದರೆ ಅವರಿಗೆ ಹಳದಿರಾಮ ಮತ್ತು ಅವನ ಚೂಡಾ, ಸ್ವೀಟ್ಸ್ ನೆನಪಾಗಿರಬೇಕು. ಆ ಯಬಡ ಲುಕ್ ಕೊಟ್ಟರು. ಉಪಯೋಗಿಲ್ಲದವರು ಅಂತ ವಾಪಸ್ ಬಂದೆ.

ಮನೆಯಲ್ಲಿದ್ದ ದೈತ್ಯ ಫೋನ್ ಡೈರೆಕ್ಟರಿ ತೆಗೆದು ಕೂತೆ. ಬೆಂಗಳೂರಿನಲ್ಲಿದ್ದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಫೋನ್ ಮಾಡಿದೆ. ಅಲ್ಲೂ ಅಷ್ಟೇ. ಮೊದಲೇ ಸರ್ಕಾರಿ ಆಸ್ಪತ್ರೆಗಳು. ಕೆಲವೊಂದು ಕಡೆ ಫೋನ್ ಎತ್ತುವವರಿಗೂ ಗತಿ ಇರಲಿಲ್ಲ. ಉಳಿದ ಕಡೆ ಫೋನೆತ್ತಿ, ತಾಸುಗಟ್ಟಲೇ ಕಾಯಿಸಿದ ನಂತರ 'ನಮಗೆ ಗೊತ್ತಿಲ್ಲ' ಅಂತ ಫೋನಿಟ್ಟರು. ಕೆಲವು ಕಡೆ ಮಾಹಿತಿ ಕೇಳಿ ಫೋನ್ ಮಾಡಿದ್ದೇ ತಪ್ಪೇನೋ ಎಂಬಂತೆ ಬೈದರು. 'ಜನಸೇವೆಯೇ ಜನಾರ್ಧನ ಸೇವೆ,' ಅಂತ ಸರ್ಕಾರ ಲಬೋ ಲಬೋ ಹೊಯ್ಕೊಳ್ಳೋದೇ ಆಯಿತು. ಜನಸೇವೆ ಹೋಗಲಿ ದನಸೇವೆ ಅಂದರೆ ದನಕ್ಕೆ ಬಡಿದಂತೆ ಬಡಿಯಲಿಲ್ಲ ಅನ್ನುವದೇ ದೊಡ್ಡ ಪುಣ್ಯ.

ಒಟ್ಟಿನಲ್ಲಿ ಪ್ರಯಾಣಕ್ಕೆ ಕೇವಲ ಎರಡೇ ದಿನ ಇತ್ತು. ಈ ಹಳದಿ ಜ್ವರದ ಲಸಿಕೆಯ ವಿಷಯ ಇತ್ಯರ್ಥವಾಗದೇ ತಲೆ ಹನ್ನೆರಡಾಣೆಯಾಯಿತು.

ರಾತ್ರಿ ಮಲಗಿದರೆ ಹಳದಿ ಜ್ವರದ ಲಸಿಕೆಯೊಂದೇ ಏನು ಕಾಮನಬಿಲ್ಲಿನಲ್ಲಿರುವ ಏಳೂ ಬಣ್ಣಗಳ ಜ್ವರದ ಲಸಿಕೆ ಹಾಕಿಸಿಕೊಂಡ ಭಯಾನಕ ಕನಸು ಬಿತ್ತು. ಬೆಚ್ಚಿ ಬಿದ್ದೆ. ಎದ್ದೆ. ಬೆಳಗಿನ ಜಾವದಲ್ಲಿ ಒಳ್ಳೆ ನಿದ್ದೆ ಬಂತು. ಎದ್ದಾಗ ಒಂದು ಮಸ್ತ್ ಐಡಿಯಾ ಬಂತು. ಮತ್ತೆ 'ಓಂ ನಮೋ ಬೆಳಗಾಂವಕರಾಯ ನಮಃ!'. ಮಿಸ್ಟರ್ ಬೆಳಗಾಂವಕರ್ ಅವರಿಗೇ ಫೋನ್ ಹಚ್ಚುವದು. ಅದೇ ಒಂದು ಉಳಿದ ದಾರಿ.

ಶ್ರೀ ಬೆಳಗಾಂವಕರ್ - ಧಾರವಾಡ ಮೂಲದ ಖ್ಯಾತ ಕನ್ನಡ ಲೇಖಕಿ / ಕಾದಂಬರಿಗಾರ್ತಿ ಶ್ರೀಮತಿ ಸುನಂದಾ ಮಹಿಷಿ ಬೆಳಗಾಂವಕರ್ ಅವರ ಪತಿ. ಬೆಳಗಾಂವಕರ್ ಕುಟುಂಬ ಸರಿಸುಮಾರು ಮೂವತ್ತು ವರ್ಷ ಆಫ್ರಿಕಾದ ವಿವಿಧ ದೇಶಗಳಲ್ಲಿ ಇದ್ದು ಬಂದಿತ್ತು. ಶ್ರೀ ಬೆಳಗಾಂವಕರ್ ಆಫ್ರಿಕಾದ ವಿವಿಧೆಡೆ ಚಾರ್ಟರ್ಡ್ ಅಕೌಂಟೆಟ್ ಅಂತ ಕೆಲಸ ಮಾಡಿ ನಿವೃತ್ತರಾಗಿದ್ದರು.

೧೯೯೫ ರಲ್ಲಿ ಒಂದು ವರ್ಷದ ಮಟ್ಟಿಗೆ ಆಫ್ರಿಕಾದ ಟಾಂಜಾನಿಯಾಕ್ಕೆ ಹೋಗುವ ಅವಕಾಶ ಬಂದಾಗ ಮೊದಲು ನೆನಪಾದವರೇ ಸುನಂದಾ ಬೆಳಗಾಂವಕರ್. ಅವರು ಅಮ್ಮನ ಖಾಸ್ ಗೆಳತಿ ಸುಜಾತಾ ಮಹಿಷಿಯ ಅಕ್ಕ. ಅಮ್ಮನಿಗೂ ಒಳ್ಳೆಯ ಪರಿಚಯವಿದ್ದವರೇ. ಆಫ್ರಿಕಾದಿಂದ ಮರಳಿದ ನಂತರ ಬೆಂಗಳೂರಿಗೇ ಬಂದು ನೆಲೆಸಿದ್ದರು. ಅಮ್ಮ ಅವರ ಫೋನ್ ನಂಬರ್ ಕೊಟ್ಟಿದ್ದಳು. ಕೆಲವೇ ದಿವಸಗಳ ಹಿಂದೆ ಫೋನ್ ಮಾಡಿದ್ದೆ. ಅವರ ಮನೆಗೆ ಹೋಗಿ, ಅವರನ್ನೆಲ್ಲ ಭೇಟಿಯಾಗಿ, ಆಫ್ರಿಕಾ ಬಗ್ಗೆ ಸಾಕಷ್ಟು ಮಾಹಿತಿ ತೆಗೆದುಕೊಂಡು ಬಂದಿದ್ದೆ. ಆವಾಗ ಇಂಟರ್ನೆಟ್ ಇತ್ಯಾದಿ ಇರಲಿಲ್ಲ. ಮಾಹಿತಿಯನ್ನು ಇದೇ ರೀತಿಯಲ್ಲಿ  ಸಂಗ್ರಹಿಸಬೇಕಾಗುತ್ತಿತ್ತು. ಅವರ ಮನೆಗೆ ಹೋದಾಗ ಸುನಂದಾ, ಅವರ ಪತಿ, ಪುತ್ರ ಎಲ್ಲ ಬಹಳ ಆದರದಿಂದ ಉಪಚರಿಸಿ ಸಾಕಷ್ಟು ಮಾಹಿತಿ ಕೊಟ್ಟಿದ್ದರು. ಆವಾಗ ಈ ಹಳದಿ ಜ್ವರದ ಲಸಿಕೆ ಬಗ್ಗೆ ನನಗೆ ಗೊತ್ತೂ ಇರಲಿಲ್ಲ. ಹಾಗಾಗಿ ಅದರ ಬಗ್ಗೆ ಕೇಳುವ ಪ್ರಶ್ನೆಯೇ ಬರಲಿಲ್ಲ. ಅವರಾದರೂ ಹೇಗೆ ನೆನಪುಮಾಡಿಕೊಂಡು ಅದರ ಬಗ್ಗೆಯೇ ಹೇಳಿಯಾರು? ಒಟ್ಟಿನಲ್ಲಿ ಒಂದು ಮಹತ್ವದ ಮಾಹಿತಿ ಬೇಕಾಗುವದರ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಸಿಕ್ಕಿರಲಿಲ್ಲ.

ಈಗ ಮತ್ತೆ ಫೋನ್ ಹಚ್ಚಿದೆ. ಬೆಳಗಾಂವಕರ್ ಸಿಕ್ಕರು. ಹಳದಿ ಜ್ವರದ ಲಸಿಕೆಯ ವಿಷಯ ಹೇಳಿದೆ. ಎಲ್ಲಿ ಸಿಗಬಹುದು ಅಂತ ಕೇಳಿದೆ. ಬೆಂಗಳೂರಿನಲ್ಲಿ ಎಲ್ಲಿ ಸಿಗಬಹುದು ಅಂತ ಅವರಿಗೆ ಗೊತ್ತಿರಲಿಲ್ಲ. ಆದರೆ ಮುಂಬೈನಲ್ಲಿ ಎಲ್ಲಿ ಸಿಗಬಹುದು ಅಂತ ಗೊತ್ತಿತ್ತು. ಅದರ ವಿವರ ಕೊಟ್ಟರು. ನಾನು ಹೇಗೂ ಮುಂಬೈನಿಂದಲೇ ಟಾಂಜಾನಿಯಾಕ್ಕೆ ಹೊರಟಿದ್ದೆ. ಸಾಕಷ್ಟು ಸಮಯವೂ ಇತ್ತು. ಮುಂಬೈನಲ್ಲೇ ಲಸಿಕೆ ಹಾಕಿಸಿದರಾಯಿತು ಅಂದುಕೊಂಡೆ.

ಮುಂಬೈನಲ್ಲಿ ಅದೆಲ್ಲೋ ಕೊಲಾಬಾ ಪ್ರದೇಶದಲ್ಲಿ ನೌಕಾನೆಲೆ ಇದೆ. ಅಲ್ಲಿ ನೌಕಾದಳದವರ ಆಸ್ಪತ್ರೆ ಇದೆ. ಅಲ್ಲಿ ಆಫ್ರಿಕಾಗೆ ಹೋಗುವ ಪ್ರಯಾಣಿಕರಿಗೆ ಹಳದಿ ಜ್ವರದ ಲಸಿಕೆ ಹಾಕುತ್ತಾರೆ. ಪಾಸ್ಪೋರ್ಟ್, ವೀಸಾ ತೆಗೆದುಕೊಂಡು ಹೋಗಬೇಕು. ಇಷ್ಟು ಮಾಹಿತಿ ಕೊಟ್ಟರು ಶ್ರೀ ಬೆಳಗಾಂವಕರ್. ಅನಂತಾನಂತ ಧನ್ಯವಾದ ಹೇಳಿ ಫೋನ್ ಇಟ್ಟೆ. ಇಷ್ಟು ಮಾಹಿತಿ ಸಿಕ್ಕ ಬಳಿಕ ಎಷ್ಟೋ ನಿರಾಳ.

ಹೇಗೂ ಬೆಂಗಳೂರಿನಿಂದ ಬೆಳಿಗ್ಗೆ ಹೊರಟ ವಿಮಾನ ಮಧ್ಯಾನ್ಹ ಮುಂಬೈ ಮುಟ್ಟುತ್ತದೆ. ಹೋಟೆಲ್ ಕೊಟ್ಟಿದ್ದಾರೆ. ಟಾಂಜಾನಿಯಾಕ್ಕೆ ಹೋಗುವ ವಿಮಾನವಿರುವದು ಮರುದಿನ ಬೆಳಗಿನ ಜಾವ. ಹೀಗಾಗಿ ಮಧ್ಯೆ ಬೇಕಾದಷ್ಟು ಟೈಮ್ ಇತ್ತು.

ಮುಂಬೈ ಮುಟ್ಟಿದೆ. ಏರ್ ಇಂಡಿಯಾ ಅಲ್ಲೇ ಹತ್ತಿರದಲ್ಲಿದ್ದ ಸೆಂಟಾರ್ ಹೋಟೆಲ್ಲಿನಲ್ಲಿ ರೂಮ್ ಕೊಟ್ಟಿತ್ತು. ಮೊದಲ ಬಾರಿಗೆ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ತಂಗುವ ಭಾಗ್ಯ. ಮೇಲಿಂದ ಊಟಕ್ಕೆ ಬೇರೆ ಕೂಪನ್ ಕೊಟ್ಟಿದ್ದರು. ಫೈವ್ ಸ್ಟಾರ್ ಬಫೆ ಊಟ.

ಮತ್ತೆ ಯಾವಾಗ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ಊಟ ಮಾಡುವ ಭಾಗ್ಯ ಸಿಗುತ್ತದೋ ಇಲ್ಲೋ ಅಂತ ಆಲೋಚಿಸಿ ಪಾಂಗಿತವಾಗಿ ಕಂಠಪೂರ್ತಿ ಊಟ ಮಾಡಿ ತಂಪಾದ ಕೋಣೆಗೆ ಬಂದರೆ ಮುಚ್ಚಾಕಿಕೊಂಡು ಮಲಗಿಬಿಡೋಣ ಅನ್ನಿಸಿತು. ಆದರೆ ಲಸಿಕೆ ಕೆಲಸ ಬಾಕಿಯಿತ್ತು. ಆದರೂ ಕಣ್ಣು ಮುಚ್ಚಿಯೇಬಿಟ್ಟೆ. ಒಂದು ಅರ್ಧ ಮುಕ್ಕಾಲು ಘಂಟೆ ನಿದ್ದೆ ಮಾಡಿ ಎದ್ದೆ.

ಸೆಂಟಾರ್ ಹೋಟೆಲಿನಿಂದ ಹೊರಬಂದರೆ 'ಬಕ್ರಾ ಸಿಕ್ಕಿತು!' ಅಂತ ಟ್ಯಾಕ್ಸಿ ಮಂದಿ ಸುತ್ತುವರೆದರು. ಒಂದು ಟ್ಯಾಕ್ಸಿ ಮಾಡಿಕೊಂಡು, ಹರ್ಕು ಮುರ್ಕು ಹಿಂದಿಯಲ್ಲಿ ನನ್ನ ಉದ್ದೇಶ ಹೇಳಿದೆ. ಟ್ಯಾಕ್ಸಿ ಮಂದಿಗೆ ಗೊತ್ತಿಲ್ಲದ ವಿಷಯವಿರುತ್ತದೆಯೇ? ಅವನಿಗೆ ಎಲ್ಲ ಬರೋಬ್ಬರಿ ಗೊತ್ತಿತ್ತು. ನೌಕಾದಳದ ಆಸ್ಪತ್ರೆಗೆ ಕರೆದೊಯ್ಯುವದಾಗಿ, ನನ್ನ ಕೆಲಸ ಮುಗಿಯುವವರೆಗೆ ಕಾದು ವಾಪಸ್ ಕರೆತರುವದಾಗಿ ಹೇಳಿದ. ಅವನು quote ಮಾಡಿದ ರೇಟ್ ಕೇಳಿ ನನಗೆ ಸಣ್ಣ ಪ್ರಮಾಣದ ಟೋಪಿ ಬಿದ್ದ ಬಗ್ಗೆ ಸಂಶಯವಿರಲಿಲ್ಲ. ಆದರೆ ತುರ್ತಾಗಿ ಹೋಗಿ ಲಸಿಕೆ ಹಾಕಿಸಿಕೊಂಡು ಬರಬೇಕಿತ್ತು. ಸರಿಯೆಂದು ಟ್ಯಾಕ್ಸಿ ಹತ್ತಿದೆ.

ಮುಂಬೈ ಟ್ರಾಫಿಕ್ಕಿನಲ್ಲಿ ಸುಮಾರು ಹೊತ್ತು ಪಯಣಿಸಿದ ನಂತರ ನೌಕಾದಳದ ಆಸ್ಪತ್ರೆ ಬಂತು. ಅಲ್ಲಿ ಎಲ್ಲ ಶಿಸ್ತುಬದ್ಧ. ರಕ್ಷಣಾಸಂಸ್ಥೆಗಳು ಏನು ಮಾಡಿದರೂ ಚೆನ್ನಾಗಿ ಮಾಡುತ್ತವೆ. ಅದರ ಬಗ್ಗೆ ದೂಸರಾ ಮಾತಿಲ್ಲ.

ಅಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹತ್ತು ಹದಿನೈದು ಜನರಿದ್ದರೂ ಸಿಕ್ಕಾಪಟ್ಟೆ efficient ವ್ಯವಸ್ಥೆ ಹೊಂದಿದ್ದರಿಂದ ಹತ್ತು ನಿಮಿಷದಲ್ಲಿ ಲಸಿಕೆ ಹಾಕಿ, ಒಂದು ಸರ್ಟಿಫಿಕೇಟ್ ಕೊಟ್ಟು ಕಳಿಸಿದರು. ಐದು ಘಂಟೆಗೆ ಆಸ್ಪತ್ರೆ ಮುಚ್ಚಲಿತ್ತು. ನನಗೆ ಅದೂ ಗೊತ್ತಿರಲಿಲ್ಲ. ಎಲ್ಲ ಪ್ರಕ್ರಿಯೆ ಮುಗಿದು, ಕೈಯಲ್ಲಿ ಲಸಿಕೆ ಸರ್ಟಿಫಿಕೇಟ್ ಬಂದಾಗ ಘಂಟೆ ನಾಲ್ಕೂ ಮುಕ್ಕಾಲು. ಅದೃಷ್ಟ ಚೆನ್ನಾಗಿತ್ತು. ಇನ್ನೂ ತಡವಾಗಿದ್ದರೆ ಅಷ್ಟೇ ಮತ್ತೆ.

ಹೀಗೆ ಹೊರಡುವ ದಿನ, ಅದೂ ಕೊನೇ ಕ್ಷಣದಲ್ಲಿ, ಹಳದಿ ಜ್ವರದ ಲಸಿಕೆ ಹಾಕಿಸಿಕೊಂಡಾಗಿತ್ತು. ಈಗ ಇಲ್ಲಿ ಟಾಂಜಾನಿಯಾದಲ್ಲಿ ನೋಡಿದರೆ ಇಷ್ಟೆಲ್ಲಾ ಸಾಹಸ ಮಾಡಿ ಲಸಿಕೆ ಹಾಕಿಸಿಕೊಂಡು ಬಂದ ಲಸಿಕೆ valid ಇಲ್ಲ ಅನ್ನುತ್ತಿದ್ದಾನೆ. ಏನಿದರ ಅರ್ಥ? ಪರದೇಶಕ್ಕೆ ಬಂದಾಗ ಹೀಗಾಗಿಬಿಟ್ಟರೆ ಹೇಗೆ? What to do now?

ಅಷ್ಟರಲ್ಲಿ, 'ಮಿಸ್ಟರ್ ಮ್ಯಾಹೇಶ್!' ಅನ್ನುತ್ತ ಯಾರೋ ಒಬ್ಬ ಕರಿಯ ಬಂದ. 'ನಾನೇ ಮಹೇಶ್,' ಅಂತ ಹೇಳಿದೆ. 'ಜಾಂಬೋ! ಜಾಂಬೋ! ಹಬಾರಿ ಗಾನಿ?' ಅಂದ. ಪೆಕರು ನಗೆ ನಕ್ಕ. ಅದು ಯಾವ ಭಾಷೆಯಂತಲೇ ಗೊತ್ತಾಗಲಿಲ್ಲ. ಹಾಗಿದ್ದ ಮೇಲೆ ಏನಂದ ಅಂತ ಹೇಗೆ ಗೊತ್ತಾಗಬೇಕು? ಆಮೇಲೆ ಅಲ್ಲಿನ ಸ್ವಾಹಿಲಿ ಭಾಷೆ ಸ್ವಲ್ಪ ತಿಳಿದ ಮೇಲೆ ಗೊತ್ತಾಗಿದ್ದು ಏನೆಂದರೆ ಜಾಂಬೋ ಅಂದರೆ ಹಲೋ. ಹಬಾರಿ ಗಾನಿ ಅಂದರೆ how are you. ಶಿವನೇ ಶಂಭುಲಿಂಗ!

ಆ ಕರಿಯ ಹರಕು ಮುರುಕು ಇಂಗ್ಲೀಷಿನಲ್ಲಿ ಹೇಳಿದ ಮೇಲೆ ಗೊತ್ತಾಗಿದ್ದು ಅವನು ನಾನು ಕೆಲಸ ಮಾಡಲು ಬಂದಿದ್ದ ಕಂಪನಿಯವನು. ನನ್ನನ್ನು ವಿಮಾನನಿಲ್ದಾಣದಲ್ಲಿ receive ಮಾಡಿ, ಕರೆದುಕೊಂಡು ಹೋಗಲು ಬಂದಿದ್ದ. ಸುಮಾರು ಹೊತ್ತಾದರೂ ನಾನು ಹೊರಗೆ ಬರದ ಕಾರಣ ನನ್ನನ್ನು ಹುಡುಕಿಕೊಂಡು ಅವನೇ ಒಳಗೆ ಬಂದಿದ್ದಾನೆ.

ನಮ್ಮ ಕಂಪನಿಯ ಮನುಷ್ಯ ಮತ್ತು ನನ್ನನ್ನು ಹಿಡಿದಿಟ್ಟುಕೊಂಡಿದ್ದ ಏರ್ಪೋರ್ಟ್ ಅಧಿಕಾರಿ ಮನುಷ್ಯ ಇಬ್ಬರೂ ಸ್ವಲ್ಪ ಪಕ್ಕಕ್ಕೆ ಇನ್ನೊಂದು ರೂಮಿಗೆ ಹೋದರು. ಏನೇನೋ ಗುಸುಪುಸು ಮಾತಾಡಿಕೊಂಡರು. ಏನೋ ವ್ಯವಹಾರ ಕುದುರಿತು ಅಂತ ಕಾಣುತ್ತದೆ. ಇಬ್ಬರೂ ಸಂತುಷ್ಟರಾಗಿ, ಒಬ್ಬರ ಬೆನ್ನನ್ನು ಇನ್ನೊಬ್ಬರು ತಟ್ಟುತ್ತ, ಭಯಂಕರವಾಗಿ ನಗುತ್ತ ಬಂದರು.

ಅಲ್ಲಿಯವರೆಗೆ ಲಸಿಕೆ ಸರ್ಟಿಫಿಕೇಟ್ ಸರಿಯಿಲ್ಲ ಅಂತ ನನ್ನನ್ನು ಹಿಡಿದಿಟ್ಟುಕೊಂಡಿದ್ದ ಅಧಿಕಾರಿ, 'ನೀವು ಹೋಗಬಹುದು,' ಅಂದ. ನಮ್ಮ ಕಂಪನಿಯ ಮನುಷ್ಯನನ್ನು ತೋರಿಸುತ್ತ, 'ಇವರು ಎಲ್ಲ ಬಗೆಹರಿಸಿದ್ದಾರೆ,' ಅಂತ ನಗುತ್ತ ಹೇಳಿದ. ನಮ್ಮ ಕಂಪನಿಯ ಮನುಷ್ಯನಿಗೆ ಧನ್ಯವಾದ ಹೇಳಿದ. ಮತ್ತೆ ಮತ್ತೆ ಹೇಳಿದ. ಸಿಕ್ಕಾಕಿಕೊಂಡು ಬಿದ್ದವನು ನಾನು. ನನ್ನನ್ನು ಬಿಡಿಸಿಕೊಂಡ ನಮ್ಮ ಕಂಪನಿಯ ಮನುಷ್ಯ ಆ ಅಧಿಕಾರಿಗೆ ಥ್ಯಾಂಕ್ಸ್ ಹೇಳಬೇಕು. ಇಲ್ಲಿ ನೋಡಿದರೆ ಉಲ್ಟಾ. ಎಲ್ಲ ವಿಚಿತ್ರ. ಏನು ವಿಷಯವೋ ಏನೋ!

'ಯಪ್ಪಾ! ಅಂತೂ ಕೋರಂಟಿಯಲ್ಲಿ (quarantine) ಕೊಳೆಯುವ ಕರ್ಮದಿಂದ ಬಚಾವಾದೆ,' ಅನ್ನುವ ನೆಮ್ಮದಿಯಲ್ಲಿ ಹೊರಗೆ ಬಂದು ಲಗೇಜ್ ಹುಡುಕಿದೆ. ಪುಣ್ಯಕ್ಕೆ ಎಲ್ಲ ಲಗೇಜ್ ಸರಿಯಾಗಿ ಬಂದಿತ್ತು. ಮತ್ತೆ ನಾನು ತುಂಬಾ ತಡವಾಗಿ ಬಂದರೂ ಲಗೇಜ್ ಅಲ್ಲೇ ಇತ್ತು. ಆಫ್ರಿಕಾದ ವಿಮಾನನಿಲ್ದಾಣಗಳಲ್ಲಿ ಪ್ರಯಾಣಿಕರೇ ನಾಪತ್ತೆಯಾಗಿಬಿಡುತ್ತಾರೆ. ಹಾಗಿರುವಾಗ ಲಗೇಜ್ ನಾಪತ್ತೆಯಾಗುವದೇನೂ ದೊಡ್ಡ ಮಾತಲ್ಲ ಬಿಡಿ. ಹಾಗಾಗಿರಲಿಲ್ಲ. ಅದೇ ಪುಣ್ಯ.

ಕಂಪನಿ ಮನುಷ್ಯನ ಜೊತೆ ಹೊರಗೆ ಬಂದೆ. ನಿಲ್ಲಿಸಿದ್ದ ಕಾರಿನತ್ತ ಕರೆದೊಯ್ದ. ಅದಕ್ಕೊಬ್ಬ ಕರಿಯ ಡ್ರೈವರ್. ನಮ್ಮ ಕಂಪನಿ ಮನುಷ್ಯನೇ ದಡಿಯ ಅಂದುಕೊಂಡರೆ ಡ್ರೈವರ್ ಮತ್ತೂ ದಡಿಯ. ಇಂತಹ ಎರಡು ದೈತ್ಯಾಕೃತಿಗಳ ಜೊತೆ ನಾನು ಹೋಗಬೇಕು. ಮುಂದೆ ಏನು ಕಾದಿದೆಯೋ ಅಂತ ಚಿಂತೆಯಾಯಿತು. ಹೇಳಿಕೇಳಿ ಆಫ್ರಿಕಾ ನೋಡಿ.

ಸುಖಾಸುಮ್ಮನೆ ಬಡಪಾಯಿ ಕರಿಯರ ಮೇಲೆ ಸಂಶಯಪಟ್ಟೆ. ಸುರಕ್ಷಿತವಾಗಿ ಮನೆ ಮುಟ್ಟಿಸಿದರು. ಟಿಪ್ ಕೊಡೋಣ ಅಂದರೆ ನನ್ನ ಹತ್ತಿರ ಲೋಕಲ್ ಕರೆನ್ಸಿಯಲ್ಲಿ ಕಾಸೂ ಇರಲಿಲ್ಲ. 'ಹೇ!ಹೇ!' ಅಂತ ಹಾಪನ ಹಾಗೆ ನಕ್ಕು ಅವರನ್ನು ಕಳಿಸಿದೆ. ಅವರೂ ನಗುತ್ತ ಹೋದರು. ನಮಗೆ ಅಲ್ಲಿನ ಸ್ವಾಹಿಲಿ ಭಾಷೆ ಗೊತ್ತಿರಲಿಲ್ಲ. ಅವರಿಗೆ ಬರುವ ಇಂಗ್ಲಿಷ್ ಅಷ್ಟಕಷ್ಟೇ.

ಮರುದಿನ ಆಫೀಸಿಗೆ ಹೋದಾಗ ಹಿಂದಿನ ದಿನದ ಲಫಡಾ ಬಗ್ಗೆ ಹೇಳಿಕೊಂಡೆ. ಭಾರತೀಯ ಮೂಲದ ಬಾಸ್ ಪೆಕಪೆಕಾ ಅಂತ ನಕ್ಕ. 'ನೂರಕ್ಕೆ ತೊಂಬತ್ತು ಜನರ ಜೊತೆ ಹೀಗೇ ಆಗುತ್ತದೆ. ಎಷ್ಟೋ ಜನ ಹಳದಿ ಜ್ವರದ ಲಸಿಕೆಯನ್ನೇ ಹಾಕಿಸಿರುವದಿಲ್ಲ. ಏಕೆಂದರೆ ಅವರಿಗೆ ಗೊತ್ತೇ ಇರುವದಿಲ್ಲ. ಇನ್ನು ಕೆಲವರು, ನಿನ್ನಂತವರು, ಲಸಿಕೆ ಹಾಕಿಸಿರುತ್ತಾರೆ ಆದರೆ ಮೂರು ದಿವಸಗಳಾಗುವ ಮೊದಲೇ ಪ್ರಯಾಣ ಮಾಡಿರುತ್ತಾರೆ. ಒಟ್ಟಿನಲ್ಲಿ ಪ್ರತಿ ಸಲ ಇದು ಇದ್ದಿದ್ದೇ,' ಅಂದ.

'ಹಾಗಾದರೆ ನನ್ನನ್ನು ಹೇಗೆ ಬಿಡಿಸಿಕೊಂಡು ಬಂದರು? ನಿಯಮಗಳ ಪ್ರಕಾರ ಕೋರಂಟಿಗೆ ಹಾಕಬೇಕಿತ್ತು ತಾನೇ? ಕೋರಂಟಿಯಲ್ಲಿ ವೈದ್ಯರ ದೇಖರೇಖಿಯಲ್ಲಿಟ್ಟು, ಆರೋಗ್ಯದಲ್ಲಿ ಏನೂ ತೊಂದರೆಯಿಲ್ಲ, ಇವರಿಂದ ಹಳದಿ ಜ್ವರ ಹರಡುವದಿಲ್ಲ ಎಂದು ಖಾತ್ರಿಯಾದ ಮೇಲೆಯೇ ಹೊರಗೆ ಬಿಡಬೇಕು ತಾನೇ?' ಅಂತ ಮುಗ್ಧನಾಗಿ ಕೇಳಿದೆ.

ಬಾಸ್ ತಟ್ಟಿಕೊಂಡು ನಕ್ಕ.

'ಕೋರಂಟಿಯೂ ಇಲ್ಲ, ಮಣ್ಣೂ ಇಲ್ಲ. ಒಂದಿಷ್ಟು ರೊಕ್ಕ ಬಿಸಾಕಿ ಬಿಡಿಸಿಕೊಂಡು ಬರುತ್ತೇವೆ. ಅದಕ್ಕೆಲ್ಲ ಅವರ ರೇಟ್ ಕಾರ್ಡ್ ಇದೆ. ಕಂಪನಿ ಮನುಷ್ಯನಿಗೆ ಇದೆಲ್ಲ ಕಾಮನ್. ಬರಬೇಕಾದವರು ಟೈಮಿಗೆ ಸರಿಯಾಗಿ ಹೊರಗೆ ಬರಲಿಲ್ಲ ಅಂದರೆ ಇವನು ಒಳಗೆ ಹೋಗುತ್ತಾನೆ. ಸೀದಾ ಕೋರಂಟಿಗೆ. ಅಲ್ಲಿ ನಿನ್ನಂತವರು ನಿಂತಿರುತ್ತೀರಿ. ನಮ್ಮ ಜನ ಅಂತ ಖಾತ್ರಿಯಾದ ಕೂಡಲೇ ರೇಟ್ ಕಾರ್ಡ್ ಪ್ರಕಾರ ವ್ಯವಹಾರ ಕುದುರಿಸುತ್ತಾನೆ. ಅಲ್ಲಿಗೆ ಎಲ್ಲ ಸಾಫ್. ಎಲ್ಲ ಕಡೆ ಇದೇ ಮಾರಾಯ. ದುಡ್ಡೇ ದೊಡ್ಡಪ್ಪ,' ಅಂದ. ಶಿವಾಯ ನಮಃ!

ಒಹೋ! ಇಲ್ಲೂ ಎಲ್ಲ ಲಂಚಮಯ ಅಂತ ಆವಾಗ ಗೊತ್ತಾಯಿತು. ಅದೇನು ದೇವಲೋಕವೇ. ಹೇಳಿಕೇಳಿ ಆಫ್ರಿಕಾ. ಅಭಿವೃದ್ಧಿ ಹೊಂದುತ್ತಿರುವ ದೇಶವೂ ಅಲ್ಲ. ಹಿಂದುಳಿದ ದೇಶ. ಟಾಂಜಾನಿಯಾ ಎಷ್ಟೋ ಪಾಲು ಬೇಕು. ಸಾಕಷ್ಟು ಮುಂದುವರೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಬೇರೆ ಕೆಲವು ದೇಶಗಳೂ ಇವೆ. ಶುದ್ಧ ಕೊಂಪೆಗಳು.

ಹೀಗೆ ಹಳದಿ ಜ್ವರದ ಲಸಿಕೆ ಪ್ರಮಾಣಪತ್ರದ ಲಫಡಾದಿಂದ ಪಾರಾಗಿ ಬಂದಾಯಿತು. ಗರಿಗರಿ ನೋಟು ಎಲ್ಲವನ್ನೂ ನಿಭಾಯಿಸಿತ್ತು.

ಒಂದು ವಿಷಯ ಅರ್ಥವಾಗಲಿಲ್ಲ. ಲಸಿಕೆ ಹಾಕಿದ ಮೇಲೆ ಮೂರು ದಿವಸ ಕಾಯಬೇಕು ಅಂತ ನಿಯಮವಿದೆ ಅಂತ ಏರ್ ಇಂಡಿಯಾದವರು ಮೊದಲೇ ತಿಳಿಸಬಹುದಿತ್ತು. ಎರಡು ವಾರಗಳಿಂದ ಬೆಂಗಳೂರಿನಲ್ಲಿ ಅವರ ಆಫೀಸಿಗೆ ತಡಕಾಡುತ್ತಿದ್ದೆ. ಅದು ಬಿಡಿ ಹೋಗಲಿ. ಹೋಗುವ ದಿನ ಬೋರ್ಡಿಂಗ್ ಕಾರ್ಡ್ ಕೊಡುವ ಸಮಯದಲ್ಲಾದರೂ ಹೇಳಬಹುದಿತ್ತು. ಪ್ರಯಾಣವನ್ನು ಮುಂದೂಡಲು ಹೇಳಬಹುದಿತ್ತು. ಅದೇನನ್ನೂ ಮಾಡದೇ ಸೀದಾ ವಿಮಾನ ಹತ್ತಿಸಿ ಕಳುಹಿಸಿ, ಗೊತ್ತಿಲ್ಲದ ದೇಶದಲ್ಲಿ ಫಜೀತಿಗೆ ಸಿಗಿಸುವದ್ಯಾಕೆ ಎಂದು ವಿಚಾರ ಬಂತು.

ಕೇಳಿದರೆ ಯಾರಿಗೂ ಉತ್ತರ ಗೊತ್ತಿರಲಿಲ್ಲ. ಮತ್ತೆ ಏರ್ ಇಂಡಿಯಾ ಅಥವಾ ಬೇರೆ ಏರ್ಲೈನ್ಸ್ ಜನ ಅಥವಾ ವಲಸೆ ಅಧಿಕಾರಿಗಳು ಅಷ್ಟೆಲ್ಲಾ ಮುತುವರ್ಜಿ ವಹಿಸಿ, ಲಸಿಕೆ ಸರ್ಟಿಫಿಕೇಟ್ ಎಲ್ಲ ಚೆಕ್ ಮಾಡಿದರೆ ಆಕಡೆ ಆಫ್ರಿಕಾದ ಮಂದಿ ರೊಕ್ಕ ಮಾಡಿಕೊಳ್ಳುವದು ಹೇಗೆ? ಹೆಚ್ಚಾಗಿ ಏನೋ ಕನೆಕ್ಷನ್ ಇರಬೇಕು. 'ನೀವು ಏನೂ ಚೆಕ್ ಮಾಡದೇ ವಿಮಾನದಲ್ಲಿ ಬಕರಾಗಳನ್ನು ಕಳಿಸಿ. ನಾವು ಇಲ್ಲಿ ಸರಿಯಾಗಿ ಬೋಳಿಸುತ್ತೇವೆ. ನಾವೂ ಈಕಡೆಯಿಂದ ಹಾಗೇ ಮಾಡುತ್ತೇವೆ. ನೀವು ನಿಮ್ಮ ಕಡೆ ಇಳಿದ ಬಕರಾಗಳನ್ನು ಬೋಳಿಸಿಕೊಳ್ಳಿ!' ಹೀಗಂತ ಡೀಲ್ ಇರಬೇಕು.

ಒಂದು ವರ್ಷದ ನಂತರ ವಾಪಸ್ ಬಂದೆ. ಮುಂಬೈನಲ್ಲಿ ಮತ್ತೆ ಲಸಿಕೆ ಸರ್ಟಿಫಿಕೇಟ್ ಕಾರಣವಾಗಿ ಕ್ಯಾತೆ ತೆಗೆದು ತೊಂದರೆ ಕೊಟ್ಟರೆ ಅಂತ ಒಂದು ದೊಡ್ಡ ಮೊತ್ತವನ್ನು ಡಾಲರ್ ರೂಪದಲ್ಲಿ ಬೇರೆಯೇ ತೆಗೆದಿಟ್ಟುಕೊಂಡಿದ್ದೆ. ಮುಂಬೈನಲ್ಲಿ ಹಿಡಿದು ನಿಲ್ಲಿಸಿ,'ಲಸಿಕೆ ಸರ್ಟಿಫಿಕೇಟ್ ಸರಿಯಿಲ್ಲ. ಕೋರಂಟಿಗೆ ಕಳಿಸುತ್ತೇವೆ,' ಅಂತೆಲ್ಲ ರಗಳೆ ಶುರು ಮಾಡಿದರೆ ಅಷ್ಟು ರೊಕ್ಕ ಕೊಟ್ಟು, ಕೃಷ್ಣಾರ್ಪಣಮಸ್ತು ಅಂದು ಕೈಮುಗಿಯಲಿಕ್ಕೆ. ದೇವರ ದಯೆ. ನನ್ನ ಪುಣ್ಯ. ಮುಂಬೈನಲ್ಲಿ ಲಸಿಕೆ ಸರ್ಟಿಫಿಕೇಟ್ ನೋಡಿದರೇ ವಿನಃ ಏನೂ ಕಿರಿಕ್ ಮಾಡಲಿಲ್ಲ. ಬದುಕಿದೆಯಾ ಬಡ ಜೀವವೇ ಎಂಬಂತೆ ಬೇರೆ ಪ್ಲೇನ್ ಹಿಡಿದು ಬೆಂಗಳೂರು ತಲುಪಿಕೊಂಡೆ.

ಮುಂದೆ ಯಾವದೋ ಕನ್ನಡ ಪತ್ರಿಕೆಯೊಂದರಲ್ಲಿ ಲೇಖಕರೊಬ್ಬರು ತಮ್ಮ ಕೋರಂಟಿ ಅನುಭವ ಬರೆದುಕೊಂಡಿದ್ದರು. ಲೇಖಕರ ಹೆಸರು ಮರೆತುಹೋಗಿದೆ. ಆ ಲೇಖಕ ಆಫ್ರಿಕಾ ಪ್ರಯಾಣ ಮುಗಿಸಿ ಮುಂಬೈಗೆ ಬಂದು ಇಳಿದಿದ್ದಾರೆ. ಮತ್ತೆ ಹಳದಿ ಜ್ವರದ ಲಸಿಕೆ ಪ್ರಾಬ್ಲಮ್. ಕೋರಂಟಿಗೆ ಹಾಕುತ್ತೇವೆ ಅಂತ ಅಧಿಕಾರಿಗಳು ರಂಪ ಮಾಡಿದ್ದಾರೆ. ಬಿಟ್ಟು ಕಳಿಸಲು ಯಥಾಪ್ರಕಾರ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇವರು ಲಂಚ ಕೊಡಲು ಒಪ್ಪಿಲ್ಲ. ಆಗಿದ್ದಾಗಲಿ, ಕೋರಂಟಿ ಅಂದರೇನು ಅಂತ ನೋಡಿಯೇಬಿಡೋಣ ಅಂತ ನಿಶ್ಚಯಿಸಿದ್ದಾರೆ. ಅಧಿಕಾರಿಗಳು, 'ಕೋರಂಟಿ ಅಂದರೆ ಹಾಗಿರುತ್ತದೆ. ಹೀಗಿರುತ್ತದೆ. ಸುಮ್ಮನೆ ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ? ರೊಕ್ಕ ಕೊಟ್ಟು ಹೋಗಿರಿ,' ಅಂತೆಲ್ಲ ಬ್ರೈನ್ ವಾಶ್ ಮಾಡಲು ನೋಡಿದ್ದಾರೆ. ಇವರು ಒಪ್ಪಿಲ್ಲ. ಬೇರೆ ವಿಧಿಯಿಲ್ಲದೆ ಇವರನ್ನು ಕೋರಂಟಿಗೆ ಕಳಿಸಿದ್ದಾರೆ.

ಅಲ್ಲಿ ಹೋದ ಲೇಖಕರು ಥಂಡಾ ಹೊಡೆದಿದ್ದಾರೆ. ಥೇಟ್ ನರಕ. 'ಹಳದಿ ಜ್ವರ ಬಂದರೆ ಏನಾಗುತ್ತದೋ ಗೊತ್ತಿಲ್ಲ. ಆದರೆ ಭಾರತದ ಸರ್ಕಾರಿ ಕೋರಂಟಿಯಲ್ಲಿದ್ದರೆ ಮಾತ್ರ ಏನಾದರೂ ಸೋಂಕು ಹತ್ತಿ ಸಾಯುವದು ಗ್ಯಾರಂಟಿ. ಬರಬಾರದ ರೋಗ ಬರುವದು ಖಚಿತ. ಕೊಲೆ ಯತ್ನವಾದರೂ ಆಶ್ಚರ್ಯವಿಲ್ಲ..... ' ಇದು ಅವರ ಸ್ವಂತ ಅನುಭವ. ಅದನ್ನೆಲ್ಲ ವಿವರವಾಗಿ ಬರೆದುಕೊಂಡಿದ್ದರು. ಭಯಾನಕವಾಗಿತ್ತು.

ಮುಂಬೈನ ಕೋರಂಟಿ (quarantine) ಮಹಾ ಕೊಳಕು ಜಾಗವಾಗಿತ್ತಂತೆ. ಮತ್ತೆ ಅದರಲ್ಲಿ ಆಫ್ರಿಕಾದಿಂದ ಬಂದಿದ್ದ ನೀಗ್ರೋ ಜನ ತುಂಬಿದ್ದರಂತೆ. ಯಾರೂ ಸುಬಗರಲ್ಲ. ಡ್ರಗ್ ಮಾರಾಟಗಾರರು, ಕಳ್ಳರು, ಕೊರಮರು ಇತ್ಯಾದಿ. ಕೋರಂಟಿಯೊಂದಿಗೆ ಮತ್ತು ಅದನ್ನು ನಡೆಸುತ್ತಿದ್ದ ಲಂಚಕೋರ ಅಧಿಕಾರಿಗಳೊಂದಿಗೆ ಡೀಲ್ ಹೊಂದಿದವರು. ಕೋರಂಟಿಯನ್ನು ಕಮ್ಮಿ ದರದ ವಸತಿಗೃಹವನ್ನಾಗಿ ಮಾಡಿಕೊಂಡು ಮಜಾ ಮಾಡುತ್ತಿರುವವರು. ಹಲವರಿಗೆ ಏಡ್ಸ್ ಮತ್ತಿತರ ಕಾಯಿಲೆಗಳು ಇದ್ದಿರಬಹುದು ಅಂತಲೂ ಇವರ ಊಹೆ. ಒಟ್ಟಿನಲ್ಲಿ ನರಕಸದೃಶ ಜಾಗ. Hellhole!

ಅದನ್ನು ನೋಡಿ, ಅಲ್ಲಿರುವ ಖತರ್ನಾಕ್ ನಿವಾಸಿಗಳಿಂದ ಒಂದು ತರಹದ hostility ಅನುಭವಿಸಿದ ಇವರ resolve ಕರಗಿದೆ. ಕೋರಂಟಿ ಸಹವಾಸ ಸಾಕೋ ಸಾಕು ಅಂತ ಕೊನೆಗೆ ಅಲ್ಲಿಯ ಲಂಚಗುಳಿ ಮಂದಿಗೆ ಕಾಣಿಕೆ ಕೊಟ್ಟು ಓಡಿ ಬಂದಿದ್ದಾರೆ. ತಮ್ಮ ಅನುಭವ ಬರೆದುಕೊಂಡಿದ್ದಾರೆ. quarantine ಗೆ ಕೋರಂಟಿ ಅನ್ನುವ ಶಬ್ದವನ್ನು ಮೊದಲ ಸಲ ಓದಿದ್ದೇ ಅವರ ಲೇಖನದಲ್ಲಿ. ಅವರ ಕೆಟ್ಟ ಅನುಭವ ಓದಿ ಅನ್ನಿಸಿದ್ದು - ಪುಣ್ಯಕ್ಕೆ ನಾನು ಬಚಾವಾದೆ!

ಸ್ವಲ್ಪ ದಿವಸಗಳ ಹಿಂದೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜೀವನಚರಿತ್ರೆ ಓದುತ್ತಿದ್ದೆ. ಅವರಿಗೂ ಇದೇ ಅನುಭವವಾಗಿತ್ತಂತೆ. ನೈಜೀರಿಯಾದಲ್ಲಿ ಟೂರ್ನಮೆಂಟ್ ಮುಗಿಸಿ ಬಂದಿದ್ದಾರೆ. ಮುಂಬೈನಲ್ಲಿ ಇಳಿದರೆ ಮತ್ತೆ ಹಳದಿ ಜ್ವರದ ಲಸಿಕೆ ಪ್ರಾಬ್ಲಮ್. ಸಾನಿಯಾ ಮತ್ತು ಅವರ ತಾಯಿಯನ್ನು ಕೋರಂಟಿಗೆ ಕಳಿಸಿದ್ದರಂತೆ. ಅವರ ಅನುಭವವನ್ನು ಅವರ ಮಾತುಗಳಲ್ಲೇ ಕೇಳಿ. 'Ace against odds' by Sania Mirza ಪುಸ್ತಕದಿಂದ ಎತ್ತಿದ್ದು.

I traveled to Benin City, Nigeria in February 2003 and the trip proved to be a rewarding one as I won both the $10,000 singles titles on African soil to add to my growing confidence. I was in a very positive frame of mind when I caught the flight for Mumbai. However, I was in for a rude shock when I landed at the Sahar International Airport. My mother and I were stopped at the exit point by an official who claimed to be from the Health Department for Control of Yellow Fever. I believed that the dreadful disease was long eradicated and had no idea that I needed to be vaccinated before leaving for the African country. This was infuriating. If this killer disease was still a danger, the Nigerian Embassy could surely have warned us before stamping my visa!

Since we did not have the required papers to show that we had been immunized for yellow fever, we were quarantined in a remote place in the outskirts of the city of Mumbai for five days. We could hardly believe what was happening as my mom and I were whisked away by unknown men in a special car to a huge, depressingly old and ancient looking monument. The irony was dreadful. This bungalow that was to be our quarantine for yellow fever had yellow doors, windows, walls and beds! I remember praying for the doctors to come soon and declare us free of the disease.

Mom called up Dad, who was in Hyderabad, to inform him of the situation and he immediately flew down to Mumbai. To be fair, the officials tried to make us as comfortable as they could, given the limited budget they seemed to have. But my mother was livid. ‘Why are passengers not checked before they board the flight to Nigeria? Why should you even allow people to travel to that country without confirming that they have the immunization certificate if there is a risk of infection?’ she questioned the doctor who was in charge of looking after us.

‘Our department has been in existence for decades now and we need to go according to the rules since we have been employed specially for this purpose,’ was his dubious, unconvincing answer. ‘Madam, you will be glad to know that we have quarantined several famous people and celebrities as we want to protect everyone from this terrible disease.’ We didn’t even know what to say!

We spent the next five days lazing about. News had leaked to the media and our phones rang continuously as the press tried monitoring my health. We spent time playing cards or carrom in the ‘yellow house’ and I read books and magazines for most of the day. There was no television and the days seemed like weeks. It was a huge relief when we were finally cleared of any risk of having contracted yellow fever and were allowed to go back to the comforts of home and civilization.

ಜೀವನದಲ್ಲಿ ಪ್ರಪ್ರಥಮ ಬಾರಿಗೆ ನಾನೂ ಕೋರಂಟಿಗೆ almost ಹೋಗಿದ್ದೆ. ಅದೂ ಪರದೇಶದ ಕೋರಂಟಿಗೆ. ಸ್ವಲ್ಪದರಲ್ಲಿ ಬಚಾವ್. ಮತ್ತೆ ಆಫ್ರಿಕಾಗೆ ಹೋಗುವ ಸಂದರ್ಭ ಬಂದಿಲ್ಲ. ಈಗ ಬಿಡಿ. ಎಲ್ಲ ಮಾಹಿತಿ ಇಂಟರ್ನೆಟ್ ಮೇಲೆ ಸಿಗುತ್ತದೆ.

ಇಲ್ಲಿ ಅಮೇರಿಕಾದಲ್ಲಿ ನಿಮ್ಮ ಡಾಕ್ಟರ್ ಹತ್ತಿರ ಇಂತಹ ದೇಶಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದರೆ ಬೇಕಾದ ಎಲ್ಲ ಲಸಿಕೆ ಹಾಕಿ, ಸರ್ಟಿಫಿಕೇಟ್ ಕೊಡುತ್ತಾರೆ. ಸುಮ್ಮನೆ ಟೆಸ್ಟ್ ಮಾಡೋಣ ಅಂತ ನಮ್ಮ ಡಾಕ್ಟರ್ ಹತ್ತಿರ ಕೇಳಿದೆ. 'ಎಲ್ಲಿಗೆ?' ಅಂದರು. 'ಭಾರತಕ್ಕೆ' ಅಂದೆ. ಕಂಪ್ಯೂಟರಿನಲ್ಲಿ ಡಾಟಾ ಹಾಕಿ ಚೆಕ್ ಮಾಡಿದರು. 'ಯಾವದೇ ಲಸಿಕೆಗಳ ಅಗತ್ಯವಿಲ್ಲ. ಟೈಫಾಯಿಡ್, ಕಾಲರಾ, ಮಲೇರಿಯಾ ಲಸಿಕೆಗಳನ್ನು ಹಾಕಿಸಿಕೊಳ್ಳಲು ಸಲಹೆ ನೀಡುತ್ತೇವೆ. ಬೇಕಾದರೆ ಹಾಕಿಸಿಕೊಳ್ಳಿ,' ಅಂದರು. 'ಎಷ್ಟು ರೊಕ್ಕ?' ಅಂತ ಕೇಳಿದೆ. 'ಟೈಫಾಯಿಡ್, ಕಾಲರಾ ಲಸಿಕೆ ಉಚಿತ. ಮಲೇರಿಯಾದ್ದು ದೀರ್ಘ ಕೋರ್ಸ್ ಇದೆ. ಅದಕ್ಕೆ ನೂರು ಡಾಲರ್,' ಅಂದರು. 'ನಮ್ಮ ಧಾರವಾಡ ಗುಂಗಾಡ (ಸೊಳ್ಳೆ) ಕಡಿದರೆ ಮಲೇರಿಯಾ ಬರಲಿಕ್ಕಿಲ್ಲ. ಟೈಫಾಯಿಡ್, ಕಾಲರಾ ಹಾಕಿ,' ಅಂದು ಇಂಜೆಕ್ಷನ್ ತೆಗೆದುಕೊಳ್ಳಲು ರೆಡಿ ಆದೆ. ನೋಡಿದರೆ ಮಾತ್ರೆ ಮೂಲಕ ಲಸಿಕೆ. ಅದೂ ಐದು ವರ್ಷ ಬಾಳಿಕೆ ಬರುವಂತಹದ್ದು. ಸೂಪರ್! 'ನಮ್ಮ ಕಡೆ ಚಿಕನ್ ಗುನ್ಯಾ, ಡೆಂಗ್ಯೂ ಇದೆ. ಅದಕ್ಕೆ ಲಸಿಕೆ ಇಲ್ಲವೇ ಡಾಕ್ಟರ್?' ಅಂತ ಕೇಳಿದರೆ 'ಸದ್ಯಕ್ಕೆ ಇಲ್ಲ ಮಾರಾಯ,' ಅಂದು, 'ತಲೆ ತಿನ್ನಬೇಡ. ಜಾಗ ಖಾಲಿ ಮಾಡು,' ಅನ್ನುವ ಲುಕ್ ಕೊಟ್ಟ. ಇಪ್ಪತ್ತು ಡಾಲರ್ ಫೀ ಏನು ಪುಕ್ಕಟೆ ಕೊಟ್ಟಿರುತ್ತೇವೆಯೇ!? ಹಾಗಾಗಿ ಕೊಂಚ ತಲೆ ತಿಂದು, ಕಿಚಾಯಿಸಿಯೇ ಬರಬೇಕು. ನಮ್ಮ ಇಪ್ಪತ್ತು ಡಾಲರ್, ವಿಮೆ ಕಂಪನಿ ಮತ್ತೂ ನೂರು ಡಾಲರ್ ನಮ್ಮ ಪರವಾಗಿ ಕೊಡುತ್ತದೆ. ಪುಗಸಟ್ಟೆನೇ!?

ಆಫ್ರಿಕಾದಲ್ಲಿ ಹಳದಿ ಜ್ವರದ ಲಸಿಕೆ ಲಫಡಾವನ್ನೆಲ್ಲ ಮುಗಿಸಿಕೊಂಡು ೧೯೯೬ ಅಕ್ಟೋಬರಿನಲ್ಲಿ ಒಂದು ವರ್ಷದ ಬಳಿಕ ಬೆಂಗಳೂರಿಗೆ ವಾಪಸ್ ಬಂದೆ. ನಂತರ ಇಲ್ಲಿನ ನೌಕರಿ ಸಿಕ್ಕಿತು. ಅಮೇರಿಕಾಗೆ ಬರುವ ವೀಸಾ ಇತ್ಯಾದಿಗಳ processing ನಡೆಯುತಿತ್ತು. ಮೂರ್ನಾಲ್ಕು ತಿಂಗಳ ಟೈಮ್ ಇತ್ತು. ಆಗ ಮನೆಗೆ ಬಂದವನು ಒಬ್ಬ ಖತರ್ನಾಕ್ ನೆಂಟ! ಬಂದವನೇ ಪ್ಯಾಂಟ್ ಕಳಚಿಟ್ಟವನೇ ಪೈಜಾಮಾ ಹಾಕಿದ. ಅದೂ ಹಳದಿ ಬಣ್ಣದ ಪೈಜಾಮಾ. ಹಳದಿ ಬಣ್ಣದ ಪೈಜಾಮಾ ಹಾಕಿದ್ದು ಅವನು. ಆದರೆ ಹಳದಿ ಜ್ವರ ಬಂದಿದ್ದು ಮಾತ್ರ ನಮಗೆ ಮತ್ತು ನಮ್ಮ ಮನೆ ಜನರಿಗೆ. ಅಲ್ಲಿಯವರೆಗೆ 'ಉಂಡೂ ಹೋದ. ಕೊಂಡೂ ಹೋದ' ಮಾದರಿಯ ನೆಂಟರನ್ನು ಮಾತ್ರ ನೋಡಿದ್ದೆವು. ಇವನು ಉಂಡು, ಕೊಂಡು ಹೋಗಿದ್ದೊಂದೇ ಅಲ್ಲ ತಲೆ ಕೂಡ ಪೂರ್ತಿಯಾಗಿ ತಿಂದೂ ಹೋದ. ಅವನೇ the one and the only one ಹಳದಿ ಹಾಪಾ. ಹಳದಿ ಪೈಜಾಮ ಹಾಕಿ ನಮ್ಮನ್ನೆಲ್ಲ ಅವನ ತರಲೆ ಕಾರ್ನಾಮೆಗಳಿಂದ ಹಾಪರನ್ನಾಗಿ ಮಾಡಿದವ. ಅವನ ಪೀಡೆಯಿಂದ ಮುಕ್ತಿ ದೊರೆಯಬೇಕಾದರೆ ಇಡಗುಂಜಿ ಮಹಾಗಣಪತಿಯ ಕೃಪೆಯಾಗಬೇಕಾಯಿತು. ಮುಂದೆ ಅವನು ಹಳದಿ ಹಾಪನಿಂದ ಹಳದಿ ರಾಮನೂ ಆದ. ಅದೆಲ್ಲ ಕಥೆಯನ್ನು ಹಳದಿರಾಮಾಯಣದ ಹಾಪಖಾಂಡದಲ್ಲಿ ಓದಬಹುದು. ಆ ತಮಾಷೆಗಳನ್ನೆಲ್ಲ ಮತ್ತೆ ಯಾವಾಗಲಾದರೂ ಬರೆಯೋಣ. ಇಪ್ಪತ್ತು ವರ್ಷಗಳ ಹಿಂದೆ ಆಗಿದ್ದು. ಆದರೆ ಹಳದಿ ಹಾಪನಿಂದ ಬಂದ ಹಳದಿ ಜ್ವರ ಇನ್ನೂ ಬಿಟ್ಟಿಲ್ಲ. ಹಳದಿ ಹಾಪನಿಂದ ಬರುವ ಜ್ವರಕ್ಕೆ ಮಾತ್ರ ಯಾವ ಲಸಿಕೆ ಇದ್ದ ಹಾಗಿಲ್ಲ. ಆ ಪುಣ್ಯಾತ್ಮನ ಸಹವಾಸದಿಂದ ಸಾಕಾಗಿಹೋಗಿತ್ತು. ಇವತ್ತಿಗೂ ಹಳದಿ ರಾಮ ಅಂದರೆ ಬೆಚ್ಚಿ ಬೀಳುತ್ತೇವೆ.

ನೀವು ಮಾತ್ರ ಹುಷಾರಾಗಿರಿ. ಅಫ್ರಿಕಾ ಇರಲಿ ಅಥವಾ ಬೇರೆ ಎಲ್ಲಿ ಹೋಗುತ್ತಿದ್ದರೂ ಸರಿ. ಯಾವ್ಯಾವ ಲಸಿಕೆ ಇತ್ಯಾದಿಗಳು ಕಡ್ಡಾಯವಾಗಿ ಹಾಕಿಸ್ಕೊಳ್ಳಬೇಕು ಅನ್ನುವ ಮಾಹಿತಿಯನ್ನು ಬರೋಬ್ಬರಿ ಸಂಗ್ರಹಿಸಿ, ಅವನ್ನೆಲ್ಲ ಹಾಕಿಸಿಕೊಂಡು, ಡಬಲ್ ಚೆಕ್ ಮಾಡಿಕೊಂಡೇ ವಿಮಾನ ಹತ್ತಿ. ಇಲ್ಲವಾದರೆ ಕೋರಂಟಿ ದರ್ಶನವಾದೀತು! ಜೋಕೆ!

* ಶ್ರೀಮತಿ ಸುನಂದಾ ಬೆಳಗಾಂವಕರ್ ಅವರ ಕಿರಿಯ ಸಹೋದರ ವಿಠಲ್ ಮಹಿಷಿ, ಇಪ್ಪತ್ತು ವರ್ಷಕ್ಕೆ ಹಿರಿಯನಾದರೂ, ನನ್ನ ಆತ್ಮೀಯ ಸ್ನೇಹಿತ. ಎರಡು ವರ್ಷಗಳ ಹಿಂದೆ ತೀರಿಹೋದ. ಆಗ ಬರೆದ ಲೇಖನ - ಧಾರವಾಡದ ಮಹಿಷಿ ರೋಡಿನ 'ವಿಠಲ ಮಹಿಷಿ' ಎಂಬ ಹಿರಿಯ ಮಿತ್ರನ ನೆನಪಲ್ಲಿ.... 

* ಟಾಂಜಾನಿಯಾದ ಮತ್ತೊಂದು ಅನುಭವ - ಕ್ಯಾಬರೆ, ಲೈವ್ ಬ್ಯಾಂಡ್, ಕೈಕುಲುಕಿದ್ದ ದೇಶದ ಅಧ್ಯಕ್ಷನ ಮಗ! 

Thursday, March 09, 2017

ಹಳಿ ಮೇಲೆ ಹೆಣ

೧೯೮೦. ಆಗಿನ್ನೂ ಮೂರನೇ ಕ್ಲಾಸ್. ಹೊಸದಾಗಿ ಸ್ವಂತ ಮನೆ ಕಟ್ಟಿಕೊಂಡು ಆ ಏರಿಯಾಗೆ ಬಂದು ಒಂದೆರೆಡು ತಿಂಗಳಾಗಿತ್ತು ಅಷ್ಟೇ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕೆಳಗಿನ ಕೊಳ್ಳಪ್ರದೇಶಕ್ಕೆ ನಿರ್ಮಲ ನಗರ ಅಂತ ಹೆಸರು. ಅದರ ಕೊಂಚ ಮೇಲಿದ್ದದ್ದು relatively ಹಳೆಯ ಬಡಾವಣೆಯಾದ ಕಲ್ಯಾಣ ನಗರ. ಅದರ ಹೆಸರು ಸುಮಾರು ಜನರಿಗೆ ಗೊತ್ತಿತ್ತು. ಆದರೆ ಜನವಸತಿ ತುಂಬಾ ವಿರಳವಾಗಿದ್ದ ನಮ್ಮ ಏರಿಯಾ ನಿರ್ಮಲ ನಗರದ ಹೆಸರು ಜಾಸ್ತಿ ಜನರಿಗೆ ಗೊತ್ತಿರಲಿಲ್ಲ.

ಅಂದು ನಮ್ಮ 10th A ಕ್ರಾಸಿನಲ್ಲಿ ಇದ್ದವೇ ಎರಡು ಮನೆಗಳು. ನಮ್ಮ ಮನೆ. ನಮ್ಮ ಪಕ್ಕದವರ ಮನೆ.  ಬಾಕಿ ಎಲ್ಲಾ ಬಟಾಬಯಲು. ಫರ್ಲಾಂಗು ದೂರದಲ್ಲಿ ರೈಲ್ವೆ ಹಳಿ. ಅದರ ಸುತ್ತಮುತ್ತಲೆಲ್ಲ ದಟ್ಟ ಮಾವಿನ ತೋಪು. ಜನ ಸಂಚಾರವೂ ಬಹಳ ಕಮ್ಮಿ. ಇಳಿಸಂಜೆ ಆರು ಆರೂವರೆಯ ನಂತರ ಗವ್ವೆನ್ನುವ ಮೌನ. ರಸ್ತೆಗಳೇ ಕಮ್ಮಿ. ಹಾಗಾಗಿ ರಸ್ತೆ ದೀಪಗಳು ಇನ್ನೂ ಕಮ್ಮಿ. ಹೊತ್ತಲ್ಲದ ಹೊತ್ತಲ್ಲಿ ಭೋಂ ಅನ್ನುತ್ತ ಹೋಗುವ ರೈಲುಗಳಂತೂ ಎದೆಯ ಮೇಲೆಯೇ ಹರಿದುಹೋದ ಅನುಭವ. ಒಟ್ಟಿನಲ್ಲಿ ಒಂದು ತರಹದ ಗಾಬರಿಯಾಗುವಂತಹ haunting ವಾತಾವರಣ.

ನಾವೋ ಕರ್ಮಠ ಬ್ರಾಹ್ಮಣರ ಅಪ್ಪಟ ಅಗ್ರಹಾರದಂತಿದ್ದ ಮಾಳಮಡ್ಡಿ ಬಡಾವಣೆ ಬಿಟ್ಟು ಈ ಏರಿಯಾಗೆ ಬಂದಿದ್ದೆವು. ಅದು ಪಕ್ಕಾ ಕಿಷ್ಕಿಂಧೆ. ಜನಸಂದಣಿ ಬಹಳ ಜಾಸ್ತಿ ಅಲ್ಲಿ. ಖಾಲಿ ಜಾಗವೇ ಇಲ್ಲ. ಇಕ್ಕಟ್ಟಾದ ರಸ್ತೆಗಳು. ಅಂತಹ ಏರಿಯಾದಿಂದ ಇಂತಹ ಬಟಾಬಯಲಿಗೆ ಬಂದಿದ್ದು ನಮಗೆಲ್ಲ ಒಂದು ತರಹದ ಶಾಕ್. ತಂದೆಯವರು ಕಾಡಿನ ಮಧ್ಯದ ಒಂಟಿ ಮನೆಗಳಿರುವ ಹಳ್ಳಿಯಿಂದ ಬಂದವರಾಗಿದ್ದರಿಂದ ಅವರಿಗೊಬ್ಬರಿಗೆ ಮಾತ್ರ ಮೂಲಸ್ಥಳಕ್ಕೆ ಬಂದಂತಾಗಿತ್ತು. ಅಮ್ಮ ಮೊದಲಿಂದಲೂ ಮಾಳಮಡ್ಡಿಯಲ್ಲೇ ಇದ್ದು ಅಲ್ಲಿನ ಮೂಲನಿವಾಸಿಗಳಿಗಿಂತ hardcore ಆಗಿದ್ದರು. ಹೊಸಮನೆಯಿದ್ದ ನಿರ್ಜನ ಪ್ರದೇಶಕ್ಕೆ ಹೊಂದಿಕೊಳ್ಳಲು ನಮಗೆಲ್ಲ ಕೊಂಚ ವೇಳೆ ಹಿಡಿಯಿತು.

ಇಂತಿಪ್ಪ ಹೊಸದಾದ ಮನೆಗೆ ಬಂದ ಹೊಸತರಲ್ಲಿಯೇ ಒಂದು ದಿನ ರಾತ್ರಿ ಮೂರು ಘಂಟೆ ಹೊತ್ತಿಗೆ ವ್ಯಕ್ತಿಯೊಬ್ಬನ ಭೀಕರ ಚೀತ್ಕಾರ ರಾತ್ರಿಯ ನೀರವತೆಯನ್ನು ಸೀಳಿಕೊಂಡು ಬಂದಿತ್ತು. ಯಾರಿಗೆ ಏನಾಯಿತೋ ಅಂತ ಘಾಬರಿಯಾಗಿದ್ದೆವು. ತಂದೆಯವರು ನೋಡಿಬರುತ್ತೇನೆ ಅಂತ ಹೊರಟಿದ್ದರು. ‘ಸುಮ್ಮ ಮಲಕೊಳ್ಳರೀ. ಯಾರಿಗೆ ಏನಾತೋ ಏನೋ! ಮೊದಲೇ ಅಂಜಿಕಿ ಬರುವಂತಾ ಸುಡುಗಾಡ್ ಜಾಗಾ ಇದು. ಅದರ ಮ್ಯಾಲೆ ಈ ಅಪರಾತ್ರ್ಯಾಗ ಎದ್ದು ಹೋಗಿ ನೋಡಿ ಬರ್ತೇನಿ ಅಂತ ಹೊಂಟಿರಲ್ಲಾ?!’ ಎನ್ನುವ ಅಮ್ಮನ ‘ಪ್ರೋತ್ಸಾಹದ’ ಮಾತು ಕೇಳಿ ಹೋಗಿರಲಿಲ್ಲ. ದಟ್ಟ ಕಾಡಿನ ಮಧ್ಯದ ಹಳ್ಳಿಯ ಒಂಟಿ ಮನೆಯಲ್ಲಿ ಬೆಳೆದ ಅವರಿಗೆ ಹೆದರಿಕೆ ಗೊತ್ತಿಲ್ಲ. ಅಲ್ಲೆಲ್ಲ ರಾತ್ರಿ ಹೊರಗೆ ಹೋಗಿ ಬರುವದು ಅಸಹಜವೂ ಅಲ್ಲ. ಹಾಗಾಗಿ ಹೊರಟಿದ್ದರು. ಹೋಗಿಯೇ ಬಿಡುತ್ತಿದ್ದರೇನೋ. ಮಳೆಗಾಳವಾಗಿತ್ತು. ಥಂಡಿ ಬೇರೆ ಜಾಸ್ತಿಯಿದ್ದರಿಂದ ಬಿಟ್ಟಿರಬೇಕು. ಇಂದಿಗೂ ನಮ್ಮ ಮೂಲ ಊರಿನಲ್ಲಿ ರಾತ್ರಿ ಹುಲಿ ಘರ್ಜಿಸುತ್ತದೆ. ಹಳೆಕಾಲದಲ್ಲಿ ತಂದೆಯವರ ಅಣ್ಣ ಬಂದೂಕು ರೆಡಿ ಮಾಡಿಕೊಂಡು ಹೊರಟರೆ ತಂದೆಯವರು ಬೆಳಕು ತೋರಲು ಪಂಜಿನೊಂದಿಗೆ ರೆಡಿಯಾಗಿರುತ್ತಿದ್ದರು. ಕಬ್ಬಿನ ಗದ್ದೆಯ ಕಡೆ ಆನೆಗಳು ಘೀಳಿಟ್ಟರೆ ಅವನ್ನು ಓಡಿಸಲು ದೊಡ್ಡಪ್ಪ ಗರ್ನಾಲ್ (ದೊಡ್ಡ ಸೈಜಿನ ಪಟಾಕಿ) ಹೊಡೆಯಲು ಹೊರಟರೆ ಮತ್ತೆ ಪಂಜು ಹಿಡಿದು ಬೆಳಕು ತೋರಲು ತಂದೆಯವರೇ ಹೋಗುತ್ತಿದ್ದರು. ಅಂತಹ ಖತರ್ನಾಕ್ ವಾತಾವರಣದಲ್ಲಿದ್ದು ಜೀವನ  ಜೈಸಿ ಬಂದವರಿಗೆ ರೈಲ್ವೆ ಹಳಿಯ ಪಕ್ಕ ಅಪರಾತ್ರಿಯಲ್ಲಿ ಆ ರೀತಿಯಲ್ಲಿ ಅದ್ಯಾವ ಪುಣ್ಯಾತ್ಮ ಅದ್ಯಾಕೆ ಸಾಯುವಂತೆ ಹೊಯ್ಕೊಂಡ ಅಂತ ನೋಡಿ ಬರುವದೇನೂ ದೊಡ್ಡ ಮಾತಾಗಿರಲಿಲ್ಲ ಬಿಡಿ.

ಮರುದಿನ ಬೆಳಿಗ್ಗೆ ನೋಡಿದರೆ ಯಾವದೋ ವ್ಯಕ್ತಿ ರೈಲಿಗೆ ತಲೆ ಕೊಟ್ಟು ಶಿವಾಯ ನಮಃ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದ. ದೇಹ ತುಂಡುತುಂಡಾಗಿ ಬಿದ್ದಿದೆ ಅಂತ ನೋಡಿ ಬಂದವರು ಹೇಳಿದರು. ಹೋಗಿ ನೋಡಲು ಭಯ. ಆದರೆ ಕೆಟ್ಟ ಕುತೂಹಲ. ಮನೆಯಲ್ಲಿ ತುಂಬಾ ಕಟ್ಟಳೆಗಳಂತೂ ಇರಲಿಲ್ಲ. 'ನೀವು ಹೆದರುವದಿಲ್ಲ ಅಂದರೆ ಹೋಗಿ ನೋಡಿ ಬನ್ನಿ,' ಅಂದರು. ಸಿಂಪಲ್. ಎಲ್ಲ ಜವಾಬ್ದಾರಿ ನಮ್ಮ ಮೇಲೆಯೇ. ಧೈರ್ಯ ಮಾಡಿ ಹೋಗಿ ನೋಡಿದ್ದೆ. ಇತರೇ ಹುಡುಗರೂ ಬಂದಿದ್ದರು. ದೃಶ್ಯ ಅಷ್ಟೇನೂ ಖರಾಬಾಗಿರಲಿಲ್ಲ. ಅಥವಾ ಸಾಕಷ್ಟು ದೂರದಿಂದ ನೋಡಿದ್ದರಿಂದ ಅಷ್ಟು ಭೀಕರ ಅನ್ನಿಸಿರಲಿಲ್ಲ. ಆಗಲೇ ಪೊಲೀಸರು ಬಂದಿದ್ದರು. ಹಾಗಾಗಿ ಜಾಸ್ತಿ ಹತ್ತಿರ ಹೋಗಲು ಧೈರ್ಯವಿರಲಿಲ್ಲ. ಲಾಠಿಯಿಂದ ಎಲ್ಲಾದರೂ ಬಾರಿಸಿದರೆ ಬೆನ್ನು ಮುರಿದುಹೋದೀತು ಎಂಬ ಸಣ್ಣ ವಯಸ್ಸಿನ ದೊಡ್ಡ ಭಯ!

ನಮಗಿಂತ ಮೊದಲೇ ಆ ಬಡಾವಣೆಗೆ ಬಂದಿದ್ದ ಮಂದಿ ಹೇಳಿದರು -  ‘ಇಲ್ಲಿ ಇದೆಲ್ಲಾ ಮಾಮೂಲು. ಎರಡು ಮೂರು ತಿಂಗಳಿಗೊಮ್ಮೆ ಯಾರಾದರೂ ಹೀಗೆ ರೈಲಿಗೆ ಬಿದ್ದು ಸಾಯುತ್ತಿರುತ್ತಾರೆ. ಬೇಗ ಹೆಣ ಎತ್ತಿಕೊಂಡು ಹೋದರೆ ಅದೇ ನಮ್ಮ ಪುಣ್ಯ!’ ಆದರೆ ನಮಗೆ ಅದು ಮೊದಲ ಅನುಭವ. ಎಷ್ಟೋ ಸಲ ದಿನಗಟ್ಟಲೆ ಹೆಣಗಳನ್ನು ಎತ್ತುತ್ತಲೇ ಇರಲಿಲ್ಲವಂತೆ. ರೈಲ್ವೆ ಪೊಲೀಸರು ಬಂದು ಹಳಿಗಳ ಮೇಲೆ ಬಿದ್ದ ಹೆಣವನ್ನು ಹಳಿಯಿಂದ ಆಚೆ ಸರಿಸಿ ಹೋಗುತ್ತಿದ್ದರಂತೆ. ಒಮ್ಮೆ ಹೆಣ ಹಳಿಯಿಂದ ಆಚೀಚೆ ಇದೆ ಅಂತಾದರೆ ಅದು ನಗರ ಪೋಲೀಸರ ಜವಾಬ್ದಾರಿ. ಅವರು ಬರಬೇಕು. ಅವರು ಉರಿದುಕೊಂಡೇ ಬರುತ್ತಿದ್ದರು. ರೈಲ್ವೆ ಪೋಲೀಸರ ಮೇಲೆ ಕೆಂಡ ಕಾರುತ್ತಲೇ ಹೆಣವನ್ನು ಮತ್ತೆ ಹಳಿಗಳ ಪಕ್ಕ ಹಾಕಿ ಹೋಗುತ್ತಿದ್ದರು. ಈಗ ಇದು ಮತ್ತೆ ರೈಲ್ವೆ ಪೋಲೀಸರ ತಲೆಬಿಸಿ. ಹಳಿ ಮೇಲೆ ತುಂಡಾಗಿ ಬಿದ್ದ ಹೆಣ ಮಾತ್ರ ಬೇವರ್ಸಿಯಾಗಿ ಪಿಂಗ್ ಪಾಂಗ್ ಚೆಂಡಿನಂತೆ ಆಕಡೆ ಈಕಡೆ ಸ್ಥಾನಪಲ್ಲಟವಾಗುತ್ತಿತ್ತು. ಇಷ್ಟೆಲ್ಲಾ ಆಗುವ ಹೊತ್ತಿಗೆ ಯಾರೋ ಹಿರಿಯ ಅಧಿಕಾರಿಗೆ ಕೊಂಚ ವಿವೇಕ ಮೂಡಿ ಹೆಣ ಎತ್ತಿಸುತ್ತಿದ್ದ. ಇದೆಲ್ಲ ಸುದ್ದಿಯನ್ನು ಹಳಬರು ಹೇಳಿದರು. ‘ಹೀಗೂ ಉಂಟೆ!?’ ಅಂತ ಚಕಿತನಾಗಿ ವಾಪಸ್ ಮನೆಗೆ ಬಂದಿದ್ದೆ. ಎಲ್ಲವನ್ನೂ ವಿವರವಾಗಿ ವರದಿ ಮಾಡಿದ್ದೆ.

ಈ ಸಲ ಕೂಡ ಹಾಗೇ ಆಯಿತು. ಆವತ್ತು ಸಂಜೆ ಶಾಲೆ ಮುಗಿಸಿಕೊಂಡು ಬಂದಾಗಲೂ ಹೆಣ ಹಳಿಯ ಪಕ್ಕವೇ ಇತ್ತು. ಮತ್ತೊಮ್ಮೆ ದಿವ್ಯದರ್ಶನ. ಅಂತೂ ರಾತ್ರೆಗೂಡಿ ಹೆಣ ಸಾಗಿಸಿದರು. ಬರೋಬ್ಬರಿ ಹದಿನಾರು-ಹದಿನೆಂಟು ಘಂಟೆಗಳ ನಂತರ. ಮತ್ತೆ ರೈಲ್ವೆ ಪೊಲೀಸರು ಮತ್ತು ನಗರ ಪೋಲೀಸರ ಮಧ್ಯೆ ‘ತು ತು ಮೈ ಮೈ’ ಆಗಿರಬೇಕು.

ವರ್ಷಕ್ಕೆ ಕಮ್ಮಿಕಮ್ಮಿಯೆಂದರೂ ಮೂರ್ನಾಲ್ಕು ಅಂತಹ ಕೇಸುಗಳು ಆಗುತ್ತಿದ್ದವು. ಕೊಲೆ ಮಾಡಿ ರೈಲ್ವೆ ಹಳಿಗಳ ಮೇಲೆ ಒಗೆದು ಹೋಗಿದ್ದ ಸಂದರ್ಭಗಳೂ ಇದ್ದವು. ಹಾಗಂತ ಜನ ಮಾತಾಡಿದ್ದು ಕೇಳಿದ್ದೆ.

ಅದೇ ಪ್ರದೇಶದಲ್ಲಿ ಮೊನ್ನಿತ್ತಲಾಗೆ ಯಾರೋ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕಾಲು ಕಳೆದುಕೊಂಡಳಂತೆ. ಸಾವು ಬರಲಿಲ್ಲ. ಕಾಲೊಂದನ್ನು ಕಳೆದುಕೊಂಡು ಅಂಗಹೀನಳಾದಳು. ಛೇ! ಪಾಪ. ಸುದ್ದಿ ಓದಿ ಬೇಜಾರಾಯಿತು. ಆಗ ನೆನಪಾಗಿದ್ದೇ ಈ ಮೊದಲ ಅನುಭವ. ಅದೇ ರೈಲ್ವೆ ಹಳಿ ಮೇಲೆ ಹೆಣ ನೋಡಿದ ಮೊದಲ ಅನುಭವ.

ಇದಾದ ಎರಡೇ ತಿಂಗಳಲ್ಲಿ ಮನೆ ಮೇಲಿನ ಕ್ರಾಸಿನಲ್ಲಿ ಮರ್ಡರ್! ಅದೂ ಡಬಲ್ ಮರ್ಡರ್!! ಅದಕ್ಕಿಂತ ವಿಶೇಷವಾಗಿದ್ದು ಡಬಲ್ ಮರ್ಡರ್ ಆದ ಮನೆಗೆ ಬಂದು ನೆಲಸಿದವರಿಗೆ ದೆವ್ವದ ಕಾಟ! ಅದರ ಬಗ್ಗೆ ಹಿಂದೊಮ್ಮೆ ಬರೆದಿದ್ದು ಇಲ್ಲಿದೆ ನೋಡಿ - ಜೋಡಿ ಕೊಲೆ ಪ್ರೇತಾತ್ಮಗಳು ಹೊಟ್ಟೆ ಹುಳಗಳಾಗಿ ಕಾಡಿದ್ದವೇ?

Monday, March 06, 2017

ಡಾ. ಪ್ರಕಾಶ್ ಆಮ್ಟೆ

Dr. Prakash Baba Amte – The Real Hero : ಸಮಾಜಸೇವಕ ಪ್ರಕಾಶ್ ಆಮ್ಟೆ ಅವರ ಜೀವನಾಧಾರಿತ ಚಿತ್ರ.

ಬಾಬಾ ಆಮ್ಟೆ ಅವರ ಹೆಸರು ಚಿರಪರಿಚಿತ. ಖಡಕ್ ಗಾಂಧಿವಾದಿ. ಸ್ವಾತಂತ್ರ್ಯಪೂರ್ವದಲ್ಲೇ ನಿಷೇಧಿತ ಸಾಮಾಜಿಕ ಸುಧಾರಣಾ ಕಾರ್ಯಗಳಾದ ಶೌಚಾಲಯ ಸ್ವಚ್ಛತೆ, ಕುಷ್ಠರೋಗಿಗಳ ಆರೈಕೆಗಳಲ್ಲಿ ತೊಡಗಿಸಿಗೊಂಡವರು. ಏಷ್ಯಾದ ನೊಬೆಲ್ ಪ್ರಶಸ್ತಿಯೆಂದೇ ಖ್ಯಾತವಾದ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಪಡೆದುಕೊಂಡವರು.

ಅಂತಹ ಬಾಬಾ ಆಮ್ಟೆಯವರ ಪುತ್ರ ಪ್ರಕಾಶ್ ಆಮ್ಟೆ. ತಂದೆಗೆ ತಕ್ಕ ಮಗ. ವೃತ್ತಿಯಿಂದ ವೈದ್ಯರು. ಪ್ರಕಾಶರ ಅಣ್ಣ ವಿಕಾಸರಿಗೆ ಇಂಜಿನಿಯರ್ ಆಗಬೇಕೆಂದಿತ್ತು. ‘ನಿಮ್ಮಲ್ಲಿ ಒಬ್ಬರು ಇಂಜಿನಿಯರ್, ಇನ್ನೊಬ್ಬರು ಡಾಕ್ಟರ್ ಆಗಬೇಕು ಅಂದರೆ ಖರ್ಚು ನಿಭಾಯಿಸುವದು ಬಡವನಾದ ನನಗೆ ಕಷ್ಟ. ಒಬ್ಬರು ಓದಿದ ಪುಸ್ತಕ ಇನ್ನೊಬ್ಬರು ಓದುವಂತಾದರೆ ಎಷ್ಟೋ ಖರ್ಚು ಉಳಿತಾಯವಾದಂತಾಗುತ್ತದೆ. ಹಾಗಾಗಿ ಇಬ್ಬರೂ ಒಂದೇ ವಿಷಯ ಓದಿ. ಯಾವ ವಿಷಯ ಅಂತ ನಿಮಗೆ ಬಿಟ್ಟಿದ್ದು. ಇಬ್ಬರೂ ಇಂಜಿನಿಯರಿಂಗ್ ಓದಿ ಅಥವಾ ಮೆಡಿಕಲ್ ಓದಿ,’ ಎಂದು ಹೇಳಿದ ತಂದೆ ಬಾಬಾ ಆಮ್ಟೆ ಖಾಲಿ ಕೈ ತೋರಿಸಿದ್ದರು. ಇದ್ದಬಿದ್ದ ದುಡ್ಡನ್ನೆಲ್ಲ ಸಮಾಜಸೇವೆಗೇ ವ್ಯಯಿಸಿದ್ದ ಅವರು ಸುಳ್ಳನ್ನೇನೂ ಹೇಳಿರಲಿಲ್ಲ.

ತಮ್ಮ ಪ್ರಕಾಶನ ಆಸೆ ನೆರವೇರಿಸಲು ಅಣ್ಣ ವಿಕಾಸ್ ಸಹ ಮೆಡಿಕಲ್ ಆಯ್ದುಕೊಂಡರು. ಇಬ್ಬರೂ ನಾಗಪುರ್ ಮೆಡಿಕಲ್ ಕಾಲೇಜ್ ಸೇರಿದರು. ವೈದ್ಯಕೀಯ ಪದವಿ ಪಡೆದುಕೊಂಡರು. ಪ್ರಕಾಶ್ ಮಾಸ್ಟರ್ ಡಿಗ್ರಿ ಸಹ ಶುರು ಮಾಡಿದ್ದರು. ಆಗ ಸಮಾಜಸೇವೆ ಕೈಬೀಸಿ ಕರೆಯಿತು. ಮಾಸ್ಟರ್ ಡಿಗ್ರಿಯನ್ನು ಅರ್ಧಕ್ಕೆ ಬಿಟ್ಟು ಮಹಾರಾಷ್ಟ್ರದ ಗೊಂಡಾರಣ್ಯದ ಮೂಲೆಯಲ್ಲಿದ್ದ ಹೇಮಲಕಸಾ ಪ್ರದೇಶಕ್ಕೆ ಹೊರಟರು. ಮೆಡಿಕಲ್ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಮಂದಾಕಿನಿ ದೇಶಪಾಂಡೆ ಅಷ್ಟೊತ್ತಿಗೆ ಪ್ರಕಾಶರ ಪತ್ನಿಯಾಗಿದ್ದರು.

ಮಹಾರಾಷ್ಟ್ರ ಮತ್ತು ಚತ್ತೀಸಘರ್ ಸರಹದ್ದಿನಲ್ಲಿರುವ ಹೇಮಲಕಸಾ ಕಾಡುಪ್ರದೇಶ ಇವರ ಕರ್ಮಭೂಮಿಯಾಯಿತು. ಅಲ್ಲಿರುವ ಆದಿವಾಸಿಗಳಿಗೆ ಎಲ್ಲ ತರಹದ ಸಹಾಯ ಮಾಡುವದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವದು ಆಮ್ಟೆ ದಂಪತಿಗಳ ಜೀವನದ ಪರಮೋಚ್ಛ ಧ್ಯೇಯವಾಯಿತು. ಅಲ್ಲಿನ ಆದಿವಾಸಿಗಳಿಗೆ ಹೊರಗಿನ ಜನಸಂಪರ್ಕವೇ ಇರಲಿಲ್ಲ. ಆಮ್ಟೆ ದಂಪತಿಗಳು ಧೃತಿಗೆಡಲಿಲ್ಲ. ನಿಧಾನವಾಗಿ ಆದಿವಾಸಿಗಳ ಮನಸ್ಸು ಮತ್ತು ಹೃದಯವನ್ನು ಗೆದ್ದರು. ಯಾವ ಪ್ರಾಥಮಿಕ ಸೌಲಭ್ಯಗಳೂ ಇಲ್ಲದ ಆ ಕಾಡಿನ ಕೊಂಪೆಯಲ್ಲಿ ಸಂಪೂರ್ಣ ಸ್ವಪ್ರಯತ್ನದಿಂದ ಆಸ್ಪತ್ರೆ, ಶಾಲೆ ಇತ್ಯಾದಿಗಳನ್ನು ಸ್ಥಾಪಿಸಿದರು. ಜವಾನನಿಂದ ಹಿಡಿದು ಡಾಕ್ಟರ್ ವರೆಗೆ ಎಲ್ಲ ರೀತಿಯ ಕೆಲಸಗಳ್ನೂ ತಾವೇ ಮಾಡಿದರು. ಅವರ ಸೇವೆಯಿಂದ ಪ್ರಭಾವಿತರಾದ ಒಂದಿಷ್ಟು ಜನ ಆಮ್ಟೆ ದಂಪತಿಗಳ ಸಹಾಯಕ್ಕೆ ನಿಂತರು. ಆಗ ಅವರ ಸಂಘಟನೆಗೆ ಹೆಚ್ಚಿನ ಶಕ್ತಿ ಬಂತು. ಅದನ್ನೆಲ್ಲ ಆದಿವಾಸಿಗಳ ಏಳ್ಗೆಗೆ ವಿನಿಯೋಗಿಸಿದರು.

ಮನುಷ್ಯರ ಸೇವೆ ಮಾಡೋಣ ಅಂತ ಬಂದಿದ್ದರು. ಒಂದಿಷ್ಟು ಕಾಡು ಪ್ರಾಣಿಗಳೂ ಜೊತೆಯಾದವು. ಬೇರೆಬೇರೆ ಕಾರಣಗಳಿಂದ ಅನಾಥವಾದ ಕಾಡುಪ್ರಾಣಿಗಳು. ನೋಡಿದರೆ ಪ್ರಾಣಿಸಂಗ್ರಹಾಲಯ ಅನ್ನಿಸಬೇಕು. ಹಾಗೆಂದರೆ ಪ್ರಕಾಶ್ ಆಮ್ಟೆ ತಿದ್ದುತ್ತಾರೆ – ‘ಇದು ಪ್ರಾಣಿಸಂಗ್ರಹಾಲಯವಲ್ಲ. ಪ್ರಾಣಿಗಳ ಅನಾಥಾಲಯ.’ ಅವರ ಪ್ರೀತಿಯ ಆಶ್ರಯ ಪಡೆದ ಹುಲಿ, ಚಿರತೆಗಳಂತಹ ಕ್ರೂರ ಪ್ರಾಣಿಗಳೂ ಸಹ ಸಾಕು ಬೆಕ್ಕುಗಳಂತಾಗಿಬಿಟ್ಟಿವೆ.

ಪ್ರಕಾಶ್ ಆಮ್ಟೆಯವರಿಗೂ ಖ್ಯಾತ ಮ್ಯಾಗ್ಸೆಸ್ಸೆ ಪ್ರಶಸ್ತಿ ದೊರೆತಿದೆ. ತಂದೆ ಮತ್ತು ಮಗನ ಜೋಡಿಯೊಂದು ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಪಡೆದಿರುವದು ಇದೇ ಮೊದಲು.

ಡಾ. ಪ್ರಕಾಶ್ ಮತ್ತು ಮಂದಾಕಿನಿ ಆಮ್ಟೆ 

ಇಂತಹ ಅದ್ಬುತ ವ್ಯಕ್ತಿಯ ಜೀವನಚರಿತ್ರೆಯನ್ನು ಸಿನೆಮಾ ಮಾಡಲಾಗಿದೆ. ಪ್ರಕಾಶ್ ಆಮ್ಟೆಯವರ ಪಾತ್ರದಲ್ಲಿ ನಾನಾ ಪಾಟೇಕರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಮಂದಾಕಿನಿ ಆಮ್ಟೆ ಪಾತ್ರವನ್ನು ಸೋನಾಲಿ ಕುಲಕರ್ಣಿ ಅಷ್ಟೇ ಸೊಗಸಾಗಿ ನಿಭಾಯಿಸಿದ್ದಾರೆ.

ಸಮಾಜಸೇವೆ ಎಂದರೆ ಏನು ಅಂತ ತಿಳಿಯಬೇಕಾದರೆ ಪ್ರಕಾಶ್ ಆಮ್ಟೆ ಅಂತಹವರ ಜೀವನನ್ನು ನೋಡಿ ಅರಿಯಬೇಕು. ಸಮಾಜಸೇವೆಗೆ benchmark ಅಂತ ಏನಾದರೂ ಇದ್ದರೆ ಅದು ಪ್ರಕಾಶ್ ಆಮ್ಟೆ ತರಹದವರ ಜೀವನವೇ ಇರಬೇಕು. ಸರಕಾರದ ಸಹಕಾರ ಹಾಳಾಗಿ ಹೋಗಲಿ. ಸರಕಾರ ಎಲ್ಲ ತರಹದ ಅಡೆತಡೆಗಳನ್ನು ಒಡ್ಡಿದಾಗಲೂ ವಿಚಲಿತರಾಗದೇ ತಪಸ್ಸಿನಂತೆ ನಿಕೃಷ್ಟರ ಸೇವೆ ಮಾಡುವದಿದೆಯಲ್ಲ, ಅದಕ್ಕೊಂದು hats off. ಕೇವಲ ಮಹಾತ್ಮರು ಮಾತ್ರ ಮಾಡಬಹುದಾದಂತಹ ಸಾಧನೆ ಅದು.