Tuesday, July 31, 2012

'ಕೆಂಪು ಯುವರಾಜ'ನೆಂಬ ಆ ಉಗ್ರಗಾಮಿ 'ಮಿಸ್ ಯುನಿವರ್ಸ' ಸುಂದರಿಯನ್ನೇ ಪಟಾಯಿಸಿದ್ದ

ಅತ್ತ ದೂರದ ಅಮೇರಿಕಾದ ಫ್ಲೋರಿಡಾದಲ್ಲಿ ಲೆಬನಾನಿನ ರಾಷ್ಟ್ರೀಯ ಸುಂದರಿ, ಮಿಸ್ ಲೆಬನಾನ್, ಮಿಸ್ ಯುನಿವರ್ಸ್ ಫೈನಲ್ಸ್ ನಲ್ಲಿ  ಕ್ಯಾಟ್ ವಾಕ್ ಮಾಡುತ್ತಾ ತನ್ನ ಸೌಂದರ್ಯ ಪ್ರದರ್ಶಿಸುತ್ತಿದ್ದರೆ, ಬಿರೂಟ್(ಲೆಬನಾನಿನ ರಾಜಧಾನಿ) ನಲ್ಲಿ  ಐಶಾರಾಮಿ ಬಾರನಲ್ಲಿ ಕೂತಿದ್ದ ಪ್ಯಾಲೆಸ್ತೇನಿ ಉಗ್ರಗಾಮಿಯೊಬ್ಬ ಬಿಟ್ಟ ಕಣ್ಣು ಮುಚ್ಚದೆ, ಬಾಯಿ ಬಿಟ್ಟುಗೊಂಡು ಆಕೆಯ ಸೌಂದರ್ಯ ಹೀರುತ್ತಿದ್ದ. ಆ ಕಾಲದ ದೊಡ್ಡ, ದುಬಾರಿ ಟಿವಿ ಅದರ ಸಲುವಾಗಿಯೇ ಹಾಕಿಸಿದ್ದ.

ನೋಡ್ರೀ..............ನಮ್ಮ ಝಕಾಸ್ ಮಾಲು.........ಹೇಗಿದೆ? ಅವಳೇ ಈ ವರ್ಷದ ಮಿಸ್ ಯುನಿವರ್ಸ್. ಗ್ಯಾರಂಟೀ. ಬೆಟ್ ಕಟ್ಟುತ್ತೀರಾ? ಹೇಳಿ - ಅಂತ ಅವನು ದುಬಾರಿ ಸ್ಕಾಚ್ ಹೀರುತ್ತಾ, ಪರಮ ದುಬಾರಿ ಅಮೇರಿಕನ್ ಸಿಗರೇಟ್ ಎಳೆಯುತ್ತ, ಸುಂದರಿಯ ಮಾರ್ಜಾಲ ನಡಿಗೆ ನೋಡುತ್ತಾ, ಬಳಕುತ್ತಿರುವ ಆಕೆಯ ಒರೆ ಕೋರೆಗಳಿಗೆ ತಾನೂ ಬಳಕುತ್ತಾ, ಪ್ರಚೋದನಕಾರಿಯಾಗಿ ತೊಡೆ ಕುಣಿಸುತ್ತಾ, ತುಂಟ ನಗೆ ಬೀರುತ್ತಿದ್ದರೆ, ಸುತ್ತ ಮುತ್ತ ಕುಳಿತಿದ್ದ ಅವನ ಸಹಚರ ಉಗ್ರಗಾಮಿಗಳು ಕಂಟ್ರಿ ಶೆರೆ ಕುಡಿಯುತ್ತ, ಬೀಡಿ ಸೇದುತ್ತ ತಮ್ಮ ಖೋಟಾ ನಸೀಬ್ ಶಪಿಸುತ್ತ ಅಯ್ಯೋ ನಮ್ಮ ಕರ್ಮವೇ ಅಂತ ಲುಕ್ ಕೊಡುತ್ತ ಒಂದು ತರಹ ಅಸೂಯೆ ಫೀಲ್ ಮಾಡಿಕೊಳ್ಳುತ್ತಿದ್ದರು.

ಮಿಸ್ ಲೆಬನಾನ್ ಆಗಿದ್ದ ಜಾರ್ಜಿನಾ ರಿಜ್ಕ್ ಎಂಬ ಆ ಕಾಲದ ಬಾಂಬ್ ಸುಂದರಿ ಆ ವರ್ಷದ ಮಿಸ್ ಯುನಿವರ್ಸ್ ಆಗೇ ಬಿಟ್ಟಳು. ಅದನ್ನೂ ಈ ಉಗ್ರಗಾಮಿಯೇ ಫಿಕ್ಸ್ ಮಾಡ್ಸಿದ್ದನಾ? ಗೊತ್ತಿಲ್ಲ.

ಅವನಿಗೆ ಆವಾಗಲೇ ಮಿಸ್ ಲೆಬನಾನ್ ಜೊತೆ ಅಫೇರ್ ಇತ್ತಾ....?ಅಥವಾ ಮುಂದೆ ಆಯಿತಾ....?.....ಗೊತ್ತಿಲ್ಲ. ಒಟ್ಟಿನಲ್ಲಿ ಆಕೆಯನ್ನು ಪಟಾಯಿಸಿದ್ದು ಹೌದು. ಆಗಲೇ ಒಂದು ವಿವಾಹವಾಗಿ ಲೆಬನಾನಿನ ಮತ್ತು ವಿಶ್ವದ ಎಲ್ಲ ದೊಡ್ಡ ಶಹರಗಳಲ್ಲಿ ಗಲ್ಲಿಗೊಬ್ಬ ಮಾಡೆಲ್ ಜೊತೆಗೋ, ಸಿನೆಮಾ ತಾರೆ ಜೊತೆಗೋ ಅಫೇರ್ ಮತ್ತೊಂದು ಇಟ್ಟುಗೊಂಡು ದೊಡ್ಡ ಮಟ್ಟದ ಪ್ಲೇಬಾಯ್ ಅಂತ ಖ್ಯಾತನಾಗಿದ್ದವನ ಹ್ಯಾರೆಮ್ ಗೆ ಮತ್ತೊಂದು ಬೆಕ್ಕು ಸೇರ್ಪಡೆ ಆಗಿ ಮ್ಯಾವ್ ಅಂದಿತ್ತು. ಈ ಉಗ್ರಗಾಮಿ ಗಡವ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದು ಮಿಸ್ ಯುನಿವರ್ಸ ಗೆ ಒಂದು ಮಗುವನ್ನು ಕರುಣಿಸಿಯೇ ಬಿಟ್ಟಿತು.

ಅವನೇ.....ಕೆಂಪು ಯುವರಾಜ (Red Prince)....ಎಂದೇ ಪ್ರಸಿದ್ಧನಾಗಿದ್ದ ಪ್ಯಾಲೆಸ್ಟೈನ್ ಉಗ್ರಗಾಮಿ ಅಲಿ ಹಸನ್ ಸಲಾಮೆ.

ಯಾಸೀರ್ ಅರಾಫತ್ ಅವರ ಏಕ್ದಂ ಖಾಸ್ ಮನುಷ್ಯ ಅವನು. ಅವರ ಫೋರ್ಸ್ - 17 ಎಂಬ ಖಾಸಗೀ ಕಮಾಂಡೋ ಪಡೆಯ ನಾಯಕ. ಕೆಲವೊಂದು ವಲಯದಲ್ಲಿ ಅರಾಫತ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿತನಾದವನು. ಅತಿ ವಿಚಿತ್ರವೆಂಬಂತೆ ಅಮೇರಿಕಕ್ಕೆ ಬೇಕಾದವನು. ಹಾಗಾಗಿಯೇ ಇಸ್ರೇಲ್ ಬೇರೆಲ್ಲಾ ಉಗ್ರಗಾಮಿಗಳನ್ನು ಹಿಡಿಹಿಡಿದು ಬ್ಯಾಂಡ್ ಬಾರಿಸುತ್ತಿದ್ದರೆ ಇವನು ಮಾತ್ರ ಅಮೇರಿಕಾದ ಕೆಲಸ ಲೆಬನಾನಿನಲ್ಲಿ ಏನೇ ಇದ್ದರೂ ಮಾಡಿಕೊಟ್ಟು ಅವರ ಛತ್ರಛಾಯೆಯಲ್ಲಿ ಆರಾಮ ಇದ್ದ.

ಅವನ ಪರ್ಸನಾಲಿಟಿಯೂ ಹಾಗೆ. ಆರು ಫೂಟಿಗೂ ಮೀರಿದ ಆಜಾನುಬಾಹು. ಗುಂಗುರು ಕೂದಲು. ಮೇಲೆ ಫುಲ್ ಬಿಲ್ಡಪ್ ಬೇರೆ. ಹಿಂದೆ ಮುಂದೆ ನೋಡದೆ ದುಡ್ಡು ಉಡಾಯಿಸುತ್ತಿದ್ದ. ಬಿರೂಟಿನ ಉನ್ನತ ಜನರ ಪಾರ್ಟಿಗಳಿಗೆ ಅವನಿಗೆ ಆಹ್ವಾನ ಎಂದೂ ತಪ್ಪುತ್ತಿದ್ದಿಲ್ಲ. ನೀರೆಯರ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ಅವರೇ ಮೈಮೇಲೆ ಬಿದ್ದು ಬರುತ್ತಿದ್ದರು.  Power is the ultimate aphrodisiac (ಶಕ್ತಿಯಷ್ಟು ಬಲಿಷ್ಠ ಕಾಮೋತ್ತೇಜಕ ಇನ್ನೊಂದಿಲ್ಲ)- ಅಂತ ಒಂದು ಮಾತಿದೆ. ಅದು ಅವನನ್ನೇ ನೋಡಿ ಹೇಳಿದಂಗಿತ್ತು. ಬಿರೂಟ್ ನಲ್ಲಿ ಅತ್ಯಂತ ಪವರಫುಲ್ ಆದ್ಮಿ ಅಂದ್ರೆ ಅವನು ಆವತ್ತಿನ ಮಟ್ಟಿಗೆ. ತನ್ನ ದುಬಾರಿ ಜೀಪಿನಲ್ಲಿ ಹೊರಟರೆ ಹಿಂದೆ ಮುಂದೆ 3-4 ಜೀಪ್ ತುಂಬಾ AK -47, ರಾಕೆಟ್, ಮತ್ತಿತರ ಆಯುಧ ಸಜ್ಜಿತ ಕಮಾಂಡೋಗಳು. ಒಟ್ಟಿನಲ್ಲಿ ರಾಜಕುಮಾರ್ ಜೀವನಶೈಲಿ. ನೋಡಲಿಕ್ಕೂ ಸುರಸುಂದರಾಂಗ ಇದ್ದ. ಕೆಂಪ ಕೆಂಪಗೆ. ಅದಕ್ಕೆ ಅವನಿಗೆ ನಿಕ್ ನೇಮ್ - ಕೆಂಪು ಯುವರಾಜ - Red Prince.

1970 ರ ಶುರುವಿನ ದಿನಗಳು. ಇಸ್ರೇಲ್ ಪಕ್ಕದ ಜೋರ್ಡಾನ್ ನಿಂದ ಪ್ಯಾಲೆಸ್ಟೈನ್ ಉಗ್ರಗಾಮಿಗಳನ್ನು ಅಲ್ಲಿನ ದೊರೆ ಹುಸೇನ್ ಓಡಿಸಿದ್ದರು. ಸಾಕಾಗಿ ಹೋಗಿತ್ತು ಅವರಿಗೆ. ಪಾಪ ಅಂತ ಬಿಟ್ಟರೆ.....ಇದ್ದು ತಮ್ಮ ಸ್ವಾತಂತ್ರ ಸಮರ ಮಾಡಿಕೊಳ್ಳಲಿ ಅಂತ ಬಿಟ್ಟರೆ, ಈ ಪ್ಯಾಲೆಸ್ಟೈನ್ ಮಂದಿ ಹುಸೇನರ ಬುಡಕ್ಕೇ ಬತ್ತಿ ಇಟ್ಟು ಅವರನ್ನೇ ಪದಚ್ಯುತ ಮಾಡುವ ಬಗ್ಗೆ  ಸ್ಕೀಮ್ ಹಾಕುತ್ತಿದ್ದರು. ಈ ಬಗ್ಗೆ ಸುಳಿವು ಹತ್ತಿದ ಹುಸೇನ್, ಅರಾಫತ್  ಅವರ ಅಂಡಿನ ಮೇಲೆ ಒದ್ದು ಓಡಿಸಿದ್ದರು. ಹಾಗೆ ಬಡಿಸಿಕೊಂಡು ಓಡಿದ ಅರಾಫತ್ ರಿಗೆ ಕಂಡಿದ್ದು ಪಕ್ಕದ ಲೆಬನಾನ್. ಓಡಿ ಬಂದವರೇ ರಾಜಧಾನಿ ಬಿರೂಟ್ ನಲ್ಲಿ ಗುಂಡಾಗರ್ದೀ ಶುರು ಮಾಡಿಯೇ ಬಿಟ್ಟರು.

ಲೆಬನಾನಿಗೆ ಒಂದು ತರಹದ ರಾಷ್ಟ್ರೀಯತೆ ಎಂಬುದಿಲ್ಲ. ಹಲವಾರು ಧರ್ಮ, ಉಪಧರ್ಮ, ವಲಸಿಗರು, ವ್ಯಾಪಾರಿಗಳು ಮುಂತಾದವರ ಮಧ್ಯೆ ಒಗ್ಗಟ್ಟೇ ಇಲ್ಲ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡವರು ಅರಾಫತ್. ಬಂದು ಅಲ್ಲಿ ತಮ್ಮ ಬೇಸ್ ಸ್ಥಾಪನೆ ಮಾಡಿ, ಹಫ್ತಾ ವಸೂಲಿ ಮಾಡಿಕೊಂಡು, ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಶುರು ಮಾಡಿಯೇ ಬಿಟ್ಟರು. ಹಾಗಂತ ಎಲ್ಲವೂ ಸಲೀಸಾಗಿ ಏನೂ ಇರಲಿಲ್ಲ. ಬೇರೆ ಬೇರೆ ಉಗ್ರಗಾಮಿ ಬಣಗಳೂ ಇದ್ದವು. ಅವರವರ ಮಧ್ಯೆ ಅತ್ಯಂತ ಕ್ರೂರ ಅಂತರ್ಯುದ್ಧಗಳು ದಿನವೂ ಸಾಕಷ್ಟು ನೆತ್ತರು ಹರಿಸುತ್ತಿದ್ದವು. ಮಧ್ಯಪ್ರಾಚ್ಯದ ಪ್ಯಾರಿಸ್ ಎಂದು ಫೇಮಸ್ ಆಗಿದ್ದ ಲೆಬನಾನಿನ ರಾಜಧಾನಿ ಬಿರೂಟ್ ಗಬ್ಬೆದ್ದುಹೋಯಿತು.

ಅಮೇರಿಕಾ ಮತ್ತು ಪಶ್ಚಿಮ ದೇಶಗಳ ವ್ಯಾಪಾರಿ ಆಸಕ್ತಿ, ಆಸ್ತಿ, ಪಾಸ್ತಿ ಸಾಕಷ್ಟು ಇದ್ದವು ಲೆಬನಾನಿನಲ್ಲಿ. ಅವರೆಲ್ಲ ತಮ್ಮ ತಮ್ಮ ಸರಕಾರಗಳ ಮೇಲೆ ಒತ್ತಡ ತಂದರು. ಪಶ್ಚಿಮದ ರಾಷ್ಟ್ರಗಳೆಲ್ಲ ತಾತ್ವಿಕವಾಗಿ ಇಸ್ರೇಲ್ ಪರ. ಆದ್ರೆ ತತ್ವ ಬೇರೆ ವಾಸ್ತವಿಕತೆ  ಬೇರೆ. ಈ ಇಸ್ರೇಲಿ, ಪ್ಯಾಲೆಸ್ಟೈನ್ ಲಫಡಾ ವ್ಯಾಪಾರಿಗಳಿಗೆ ದೊಡ್ಡ ಮಟ್ಟದ ಹೊಡೆತ ಕೊಡತೊಡಗಿತು. ಆವಾಗ ಅಮೇರಿಕಾದ ಮಂದಿ ಇದನ್ನು ಹೇಗಪ್ಪ ಸುಧಾರ್ಸೋದು ಅಂತ ತಲೆ ಕೆಡಿಸಿಕೊಂಡರು. ಓಪನ್ ಆಗಿ ಆರಾಫತ್ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಯಾಕೆಂದ್ರೆ ಇಸ್ರೇಲ್ ಗೆ ವಚನ ಕೊಟ್ಟಾಗಿದೆ. ಇಸ್ರೇಲ್ ಲಾಬಿ ತುಂಬಾ ಸ್ಟ್ರಾಂಗ್ ಮತ್ತು ಸಾಕಷ್ಟು ಬಿಸಿನೆಸ್ಸ್ ಬೇರೆ ಇದೆ. ಈ ಉಗ್ರಗಾಮಿಗಳ ಜಗಳದಲ್ಲಿ ಬಿರೂಟ್ ನಲ್ಲಿ ಇರೋ ನಮ್ಮ ಜನ ಮತ್ತು ನಮ್ಮ ಆಸ್ತಿ ಪಾಸ್ತಿ ರಕ್ಷಿಸುವದೂ ಮುಖ್ಯ. ಆವಾಗ ಅವರಿಗೆ ಕಂಡವನು ಇದೇ ಕೆಂಪು ಯುವರಾಜ - ಅಲಿ ಹಸನ್ ಸಲಾಮೆ.

ಅವನಿಗೆ ಬಿರೂಟ್ ನಲ್ಲಿ ದೊಡ್ಡ ಮಟ್ಟದ ತಾಕತ್ತು ಇತ್ತು. ಅಮೇರಿಕಾದವರು ಅವನನ್ನು ಭೆಟ್ಟಿ ಆದರು.
ಸುಪಾರಿ ತೊಗೋತ್ತಿಯಾ? - ಅಂದರು.
ಅವನು ಎಲ್ಲರಂತೆ ಅವನ ರೇಟ್ ಹೇಳಿದ. ಇಸ್ರೇಲಿಗಳಿಂದ ಬಚಾವ್ ಮಾಡ್ಬೇಕು ಮತ್ತು ಮೇಲಿನ ಗುಂಡು, ತುಂಡು, ಮತ್ತೊಂದು ಕೊಟ್ಟು ಲೈಫ್ ಮಾಡಿ ಕೊಟ್ಟರೆ ನಿಮ್ಮ ಅಮೇರಿಕನ್ನರ ಒಂದೇ ಕೂದಲು ಲೆಬನಾನ್ ನಲ್ಲಿ ಕೊಂಕಲು ಬಿಟ್ಟರೆ ಕೇಳಿ - ಅಂತ ಭಾಷೆ ಕೊಟ್ಟ.

ಅವನಿಗೆ ಇಸ್ರೇಲಿಗಳ ಭಯ ತುಂಬಾ ಇತ್ತು. ಮ್ಯೂನಿಕ್ ಒಲಂಪಿಕ್ಸ್ ನಲ್ಲಿ ಪ್ಯಾಲೆಸ್ಟೈನ್ ಉಗ್ರಗಾಮಿಗಳು ಇಡೀ ಇಸ್ರೇಲಿ ತಂಡವನ್ನೇ ಕಿಡ್ನಾಪ್ ಮಾಡಿ ಎಲ್ಲರನ್ನು ಕೊಂದಿದ್ದರಲ್ಲ. ಅದರ ರೂವಾರಿಯೇ ಇವನಾಗಿದ್ದ. ಹಾಗಾಗಿ ಇಸ್ರೇಲಿನಲ್ಲಿ ಇವನನ್ನು ಕಂಡಲ್ಲಿ ಕೊಂದು ಮೇಲೆ ಕಳಿಸಲು ಆಜ್ಞೆ ಹೊರಬಿದ್ದಿತ್ತು. ಇಸ್ರೇಲಿ ಗೂಢಚಾರ ಸಂಸ್ಥೆ ಮೊಸ್ಸಾದ್ ಆಗಲೇ ಒಂದು ಲಿಸ್ಟ್ ಮಾಡಿಕೊಂಡು ಅತ್ಯಂತ ಕ್ರಮಬದ್ಧವಾಗಿ ಮ್ಯೂನಿಕ್ ಹತ್ಯಾಕಾಂಡಕ್ಕೆ ಕಾರಣರು ಎಂಬ ಉಗ್ರಾಗಾಮಿಗಳ ಬೇಟೆ ಶುರು ಮಾಡಿ ಬಿಟ್ಟಿತ್ತು. ಕೆಂಪು ಯುವರಾಜನ ನಸೀಬ್ ನೆಟ್ಟಗಿತ್ತು ಬಚಾವಾಗಿದ್ದ. ಇಲ್ಲವಾಗಿದ್ದರೆ ಇಸ್ರೇಲಿ ಕಮಾಂಡೋಗಳು ಬಿರೂಟ್ ಗೆ ನುಗ್ಗಿ ಅಪಾರ್ಟಮೆಂಟ್ ಒಂದರಲ್ಲಿ ಮೂರು ಹಿರಿಯ ಉಗ್ರಗಾಮಿಗಳ ಹತ್ಯೆ ಮಾಡಿದಾಗ ಅಲ್ಲೇ ಸಮೀಪದ ಇನ್ನೊಂದು ಅಪಾರ್ಟಮೆಂಟ್ ಒಂದರಲ್ಲಿ ಮಿಸ್ ಯುನಿವರ್ಸ್ ನೊಂದಿಗೆ ಜಮ್ಮಚಕ್ಕ ಮಾಡುತ್ತಿದ್ದ ಇವನು ಬಚಾವಾಗಿಬಿಟ್ಟಿದ್ದ.

ಮುಂದೆ ನಾರ್ವೆದಲ್ಲಿ, ನೋಡಲು ಥೇಟ್ ಇವನಂತೆ ಇದ್ದ ಮೊರೋಕ್ಕೋದ ಹೋಟೆಲ್ ವೇಟರ್ ಒಬ್ಬ ಮೊಸ್ಸಾದ್ ಬೇಟೆಗಾರರ ಗುಂಡಿಗೆ ಬಲಿಯಾದ. ಆ ತಪ್ಪು ಹತ್ಯೆ ಇಸ್ರೇಲಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತುಂಬಾ ಮುಜುಗರ ಉಂಟು ಮಾಡಿ ಆಗಿನ ಪ್ರಧಾನಿ, ಉಕ್ಕಿನ ಮಹಿಳೆ, ಗೋಲ್ಡಾ ಮೆಯಿರ್ ಅವರ ನೌಕರಿಗೇ ಕುತ್ತು ತಂದಿತಲ್ಲದೆ ಸುಮಾರು ಅಧಿಕಾರಿಗಳ ನೌಕರಿ ಸಹ ಹರೋಹರ ಅಂದುಹೋಗಿತ್ತು. ಆ ತಪ್ಪು ಆದ ಮೇಲೆ ಇಸ್ರೇಲ್ ಮೇಲೆ ತುಂಬಾ ಪ್ರೆಶರ್ ಬಂದು ಉಗ್ರಗಾಮಿಗಳನ್ನು ಕಂಡಲ್ಲಿ ಹಿಡಿದು ಕೊಲ್ಲುವ ಕಾರ್ಯಾಚರಣೆ ಸ್ವಲ್ಪ ಕಮ್ಮಿ ಆಗಿತ್ತು. ಅದಾದ ನಂತರವೇ ಕೆಂಪು ಯುವರಾಜ ತಣ್ಣನೆ ಉಸಿರು ಬಿಟ್ಟಿದ್ದು.

ಇದೇ ಸಮಯದಲ್ಲಿ ಅಮೆರಿಕನ್ನರು ಬಂದು ತಮ್ಮ ಜನ, ತಮ್ಮ ಆಸ್ತಿ ಪಾಸ್ತಿ ಕಾಪಾಡುವಂತೆ ಸುಪಾರಿ ಕೊಟ್ಟರು. ಇಸ್ರೇಲಿಗಳಿಗೆ ಇವನನ್ನು ಮುಟ್ಟದಿರಿ ಅಂತ ಕಟ್ಟಾಜ್ಞೆ ಕೂಡ ಆಯಿತು. ಇಲ್ಲದ ಮನಸ್ಸಿನಿಂದ ಇಸ್ರೇಲಿಗಳೂ ಒಪ್ಪಿದರು. ಯಾಕೆಂದರೆ ಅವರಿಗೂ ಬಿಲಿಯನ್ ಗಟ್ಟಲೆ ಅಮೇರಿಕಾದ ಡಾಲರ್ ದುಡ್ಡು ಬೇಕಾಗಿತ್ತು ನೋಡಿ. ಇವನು ಹೋದರೆ ಹೋಗಲಿ. ಬಾಕಿ ಉಗ್ರಗಾಮಿಗಳನ್ನು ಹಿಡಿದು ಜಡಿಯುವ ಅಂತ ಬೇರೆ ಕಡೆ ಫೋಕಸ್ ಮಾಡಿದರು.

ಅಮೇರಿಕನ್ನರ ಸುಪಾರಿ ಸಿಕ್ಕ ಮೇಲಂತೂ ಕೆಂಪು ಯುವರಾಜ ತಾನು ರಾಜನೇ ಆಗಿ ಹೋದೆ ಅನ್ನುವಷ್ಟು ಸಂಭ್ರಮಿಸಿದ. ಮಿಸ್ ಯುನಿವರ್ಸ ಳನ್ನು ಮದುವೆ ಆದ. ಅಮೇರಿಕನ್ನರು - ಬಾರಯ್ಯ ದೊರೆ. ನಮ್ಮ ಆತಿಥ್ಯ ಸ್ವೀಕರಿಸು - ಅಂತ ಟಿಕೆಟ್ ಕಳಿಸಿಕೊಟ್ಟರು. ಅಮೇರಿಕಾದಲ್ಲಿ ಹನಿಮೂನ್. ಹೊರಗೆ ಅಮೇರಿಕಾ ಪ್ಯಾಲೆಸ್ಟೈನ್ ಉಗ್ರಗಾಮಿ ಅದು ಇದು ಅನ್ನುತ್ತ ಭೊಂಗು ಬಿಡುತ್ತಿದ್ದರೆ ನಿಷಿದ್ಧ ಉಗ್ರವಾದಿ ಡಿಸ್ನಿಲ್ಯಾಂಡ್ ನಲ್ಲಿ ಹೊಸ ಹೆಂಡತಿಯೊಂದಿಗೆ ಸೈಕಲ್ ಹೊಡೆಯುತ್ತಿದ್ದನಂತೆ.

ಕಾಲಚಕ್ರ ಉರುಳುತ್ತಲೇ ಇರುತ್ತದೆ ನೋಡಿ. ಈ ದೊಡ್ಡ ಮಟ್ಟದ ವಿಷಯಗಳಲ್ಲಿ ಯಾರೂ ಖಾಯಂ ವೈರಿಗಳೂ ಅಲ್ಲ. ಸ್ನೇಹಿತರೂ ಅಲ್ಲ. ಅಮೇರಿಕಾ, ಇಸ್ರೇಲ್, ಲೆಬನಾನ್ ಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುತ್ತಿದ್ದವು. ಕೆಲವೊಂದು ಕೆಂಪು ಯುವರಾಜನ ಗಮನಕ್ಕೆ ಬರಲೇ ಇಲ್ಲ. ಅವನು ಸಕ್ಕತ್ತ್ ಸಿಗುತ್ತಿದ್ದ ಗುಂಡು, ತುಂಡು, ಇಂಟರ್ನ್ಯಾಷನಲ್ ಸುಂದರಿಯರ   ಮಧ್ಯೆ ಮುಳುಗಿ ಹೋಗಿದ್ದ. ಪ್ಯಾಲೆಸ್ಟೈನ್ ಸಂಗ್ರಾಮ ಸುಮಾರು ಎಲ್ಲರಿಗೂ ದುಡ್ಡು ಮಾಡುವ ದಂಧೆಯಾಗಿ ಹೋಗಿತ್ತು. ಇವನಿಗೂ ಅಷ್ಟೇ.

ಇಸ್ರೇಲಿಗಳಿಗೆ ಇವನು ಆ ಪರಿ ಮೆರೆಯುತ್ತಿರುವದು ಪಕ್ಕೆಯಲ್ಲಿ ಮುಳ್ಳು ಚುಚ್ಚಿದಂಗೆ ನೋವಾಗುತ್ತಿತ್ತು. ಸತ್ತು ಹೋದ ಕ್ರೀಡಾಪಟುಗಳ ಕುಟುಂಬ ಬಳೆ, ಸೀರೆ ಬೇಕಾ ಅಂತ ಮೂದಲಿಸುತ್ತಿದ್ದರು. ಆಗಾಗ ಅಮೇರಿಕನ್ನರ ಜೊತೆ ಚರ್ಚೆ ಆದಾಗೊಮ್ಮೆ - ಏನು? ಇನ್ನೂ ನಿಮಗೆ ಅವನಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಾ ಅಥವಾ ನಾವು ಅವನನ್ನು ಡೀಲ್ ಮಾಡಲು ಓಕೆನಾ? - ಅಂತ ಕೇಳುತ್ತಲೇ ಇರುತ್ತಿದ್ದರು. ಇಸ್ರೇಲಿ ಲಾಬಿ ಕೂಡ ಸಕತ್ ಪ್ರೆಶರ್ ಹಾಕುತ್ತಿತ್ತು ಅಂತ ಕಾಣುತ್ತದೆ. ಏನೇನೋ ಆಗಿ, ಯಾವ್ಯಾವದೋ ಸಮೀಕರಣಗಳು ಹೇಗೇಗೋ ಆಗಿ, ಅಮೇರಿಕ ಕೆಂಪು ಯುವರಾಜನ ತಲೆ ಮೇಲೆ ಇಟ್ಟಿದ್ದ ಅಭಯಹಸ್ತ ತೆಗೆಯಿತು. 1978-79 ಟೈಮ್ ಇರಬೇಕು. ಇಸ್ರೇಲಿಗಳು ಅತ್ಯಂತ ದೊಡ್ಡ ಬಲಿಗೆ ಮುಹೂರ್ತ ಇಟ್ಟೇ ಬಿಟ್ಟರು.

ಕೆಲವೇ ವರ್ಷಗಳ ಹಿಂದೆ ಇವನನ್ನೇ ನಾರ್ವೆದಲ್ಲಿ ಕೊಲ್ಲಲು ಹೋಗಿ, ಬೇರೆ ಯಾರೋ ಬಡಪಾಯಿಯನ್ನು ಮಿಸ್ಟೇಕ್ ನಲ್ಲಿ ಕೊಂದು, ದೊಡ್ಡ ಲಫಡಾ ಆಗಿದ್ದು ನೆನಪಿತ್ತಲ್ಲ.....ಈ ಸಲ ಅದಕ್ಕೆಲ್ಲ ಅವಕಾಶ ಇರಲಿಲ್ಲ. ಆಜ್ಞೆಗಳು ಅಷ್ಟು ಕ್ಲೀಯರ್ ಇದ್ದವು.

ಮೊಸ್ಸಾದ್ ನಿಂದ ಗೂಢಚಾರರ  ದೊಡ್ಡ ಗುಂಪೊಂದು ಬಿರೂಟ್ ಗೆ ರವಾನೆಯಾಯಿತು. ಕೆಂಪು ಯುವರಾಜನ ಚಲನವಲನಗಳನ್ನು ಹಲವಾರು ತಿಂಗಳು ಗಮನಿಸಲಾಯಿತು. ಮೊಸ್ಸಾದ್ ಸಂಸ್ಥೆಯ ಲೇಡಿ ಗೂಢಚಾರಿಣಿಯೊಬ್ಬಳು ಪೇಂಟರ್ ಅಂತ ಹೇಳಿಕೊಂಡು ಬಂದು ಬಿರೂಟ್ ನಲ್ಲಿ ಝೆಂಡಾ ಹೊಡೆದಳು. ಕೆಂಪು ಯುವರಾಜ್ ದಿನಾ ಅವಳ ಮನೆ ಮುಂದಿನ ರೋಡ್ನಲ್ಲಿಯೇ ಬೆಳಿಗ್ಗೆ ತನ್ನ ಮನೆಯಿಂದ ತನ್ನ ತಾಯಿಯೋ, ಮೊದಲ ಪತ್ನಿಯೋ ಇದ್ದ ಮನೆಗೆ ಹೋಗುತ್ತಿದ್ದ. ಅಷ್ಟು ದೊಡ್ಡ ಉಗ್ರಗಾಮಿ ಯಾಕೆ ದಿನಾ ಒಂದೇ ರೋಡ್ನಲ್ಲಿ ಹೋಗುತ್ತಿದ್ದನೋ ದೇವರಿಗೇ ಗೊತ್ತು. ಕೇರ್ಲೆಸ್ ಆಗಿದ್ದ ಅಂತ ಕಾಣುತ್ತದೆ. ಸಾವು ಹತ್ತಿರ ಬಂದಾಗ ಯಾರ್ಯಾರೋ ಹೇಗೇಗೋ ಮೈಮರೆಯುತ್ತಾರೆ ನೋಡಿ.

ಸುಮಾರು ದಿವಸಗಳ ನಂತರ ಇಸ್ರೇಲಿನ ಬಾಂಬ್ ನಿಷ್ಣಾತರು ಒಂದು ಕಾರ್ ತುಂಬಾ ಸ್ಪೋಟಕ ತುಂಬಿ ಒಂದು ಕಾರ್ ಬಾಂಬ್ ಮಾಡಿದರು. ರಸ್ತೆ ಬದಿಯಲ್ಲಿ ಅದನ್ನು ಕರೆಕ್ಟಾಗಿ ಪಾರ್ಕ್ ಮಾಡಿದ್ದು ಆಯಿತು. ಬಲಿಗೆ ಎಲ್ಲವೂ ಸಿದ್ಧವಾಗಿತ್ತು. ಬಕರಾ ಬರುವದು ಬಾಕಿ ಇತ್ತು.

ಮರುದಿವಸ ಬಂತು ಬಕರಾ. ಟೈಮ್ ಗೆ ಸರಿಯಾಗಿ. ಕಾರ್ ಬಾಂಬಿನ ಪಕ್ಕದಲ್ಲಿ ಇವನ ದೊಡ್ಡ ಜೀಪ್ ಬಂತು ನೋಡಿ. ಕಿಡಕಿಯಲ್ಲಿ ನೋಡುತ್ತಾ ಕೂತಿದ್ದ ಗೂಢಚಾರಿಣಿ ರಿಮೋಟ್ ಕಂಟ್ರೋಲ್ ಒತ್ತಿಯೇ ಬಿಟ್ಟಳು. ಭಯಂಕರ ದೊಡ್ಡ ಸ್ಪೋಟವಾಯಿತು. ಸುತ್ತಮುತ್ತ ಎಲ್ಲ ಛಿದ್ರ ಛಿದ್ರ. ಕೆಂಪು ಯುವರಾಜನ ಜೀಪ್ ಗಾಳಿಯಲ್ಲಿ 20-30 ಅಡಿ ಹಾರಿತು. ಕೆಳಗೆ ಬಂದು ಅಪ್ಪಳಿಸಿತು. ಅಂಗರಕ್ಷಕರ ಅಂಗಾಂಗಳು ಸುತ್ತ ಮುತ್ತ ಹಾರಿದವು. ಅಷ್ಟಾದರೂ ಆ ಗಟ್ಟಿಗ ಕೆಂಪು ಯುವರಾಜ ಮಾತ್ರ ಸ್ಪಾಟ್ ನಲ್ಲಿ ಸಾಯಲಿಲ್ಲ. ಆಸ್ಪತ್ರೆಯಲ್ಲಿ ಸತ್ತ.

ಅವನ ಅಂತ್ಯಸಂಸ್ಕಾರಕ್ಕೆ ಇಡೀ ಬಿರೂಟ್ ಬಂದಿತ್ತು. ಬಿರೂಟಿನ ಹಲವಾರು ಪೇಜ್ -3 ಸುಂದರಿಯರಿಗೆ ಒಂದಲ್ಲ ಒಂದು ತರಹದ ಅಕಾಲ ವೈಧವ್ಯ ಬಂದಿತ್ತು. ನನ್ನ ಬಲಗೈ ಹೋಗಿಯೇ ಬಿಟ್ಟಿತು ಅಂತ ಗೋಳಿಡುತ್ತ ಅರಾಫತ್ ಅವರೇ ಬಂದಿದ್ದರು. ಕೆಂಪು ಯುವರಾಜನ 5-6 ವರ್ಷದ ಮಗನಿಗೆ ಪ್ಯಾಲಸ್ತೈನ್ ಉಗ್ರಗಾಮಿಗಳ ವೇಷ ತೊಡಿಸಿ ಕೈಯಲ್ಲಿ ಒಂದು ಆಟಿಕೆ AK-47 ಹಿಡಿಸಲಾಗಿತ್ತು. ಯಾಸಿರ್ ಅರಾಫತ್ ಅವರೇ ಆ ಚಿಕ್ಕ ಮಗುವನ್ನು ಎತ್ತಿಕೊಂಡಿದ್ದರು. ಇತ್ತ ಕಡೆ ಇಸ್ರೇಲಿ ತಂಡ ಬೇರೆ ಬೇರೆಯಾಗಿ ಬಿರೂಟ್ ಏರ್ಪೋರ್ಟ್ ನಿಂದ ಬೇರೆ ಬೇರೆ ದೇಶದ ಮಾರ್ಗವಾಗಿ ಇಸ್ರೇಲ್ ಸೇರಿಕೊಳ್ಳುತ್ತಿದ್ದರು.

ಇಸ್ರೇಲ್ ನಲ್ಲಿ ಒಂದು ತರಹದ ನಿರುಮ್ಮಳ. ರಿಲೀಫ್. ಪರಮ ಪಾತಕಿಯೋಬ್ಬನಿಗೆ ತಕ್ಕ ಶಾಸ್ತಿ ಆಯಿತು ಅನ್ನೋ ಭಾವನೆ ಎಲ್ಲರಿಗೆ. 

ಮೊಸ್ಸಾದ್ ಬೇಹುಗಾರರು ತಮ್ಮ ಹಿಟ್ ಲಿಸ್ಟ್ ನಲ್ಲಿ ಒಂದು ಹೆಸರಿನ ಮುಂದೆ ಕಾಟು ಹಾಕಿ, ಮುಂದಿನ ಉಗ್ರಾಗಾಮಿಗೆ ಮುಹೂರ್ತ ಇಡುವ ಪ್ಲಾನ್ ಶುರು ಮಾಡುತ್ತಿದ್ದರು.

ಹೆಚ್ಚಿನ ಮಾಹಿತಿಗೆ ಲಿಂಕ್ಸ್:

ಅಲಿ ಹಸನ್ ಸಲಾಮೆ

ಜಾರ್ಜಿನಾ ರಿಜ್ಕ್

The Quest for the Red Prince: Israel's Relentless Manhunt for One of the World's Deadliest and Most Wanted Arab Terrorists  by Michael Bar Bar-Zohar, Eitan Haber 

ರಿಮೋಟ್ ಕಂಟ್ರೋಲ್ ಒತ್ತಿದ ಗೂಢಚಾರಿಣಿ

ಬಡಪಾಯಿ ಮೊರೊಕ್ಕೋದ ವೇಟರ್ ನನ್ನು ಹತ್ಯೆಗೈದ ಘಟನೆ ಲಿಲ್ಲಿಹ್ಯಾಮ್ಮರ್ ಅಫೇರ್ ಅಂತ ಖ್ಯಾತವಾಯಿತು.

ಸ್ವಗತ ಜುಲೈ 2012

ಜುಲೈ ಮುಗಿದೇ ಹೋಯಿತು. ಒಂದು ಕ್ಷಣ ಹಿಂದೆ ತಿರುಗಿ ನೋಡಲು ಸಕಾಲ.

ಈ ಒಂದು ತಿಂಗಳಲ್ಲಿ ಕನ್ನಡದಲ್ಲಿ ಸಾಕಷ್ಟು ಬರೆದಿದ್ದು ಆಯಿತು. ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡಿದೆ.

ಮೊದಮೊದಲು ಕನ್ನಡದಲ್ಲಿ ಬರೆಯೋದು ಅಂದರೆ ತುಂಬಾ ಕಷ್ಟ ಕಷ್ಟ. ಕಾಗುಣಿತ ಸರಿ ಮಾಡುವದರಲ್ಲಿಯೇ ತುಂಬಾ ಟೈಮ್ ಹೋಗುತ್ತಿತ್ತು. ಬೋರೆದ್ದು ಹೋಗುತ್ತಿತ್ತು. ಈಗೇನು.....ಇಂಗ್ಲಿಷ್-ಕನ್ನಡ ಡಿಕ್ಷನರಿ,  ಬರೆಯಲು ಒಳ್ಳೊಳ್ಳೆ ಎಡಿಟರ್......ಎಲ್ಲ ಆನ್ಲಾಯಿನ್ ಲಭ್ಯ. ಬರೆಯುವ ಆಸಕ್ತಿ, ಬರೆಯಲಿಕ್ಕೆ ವಿಷಯ ಇದ್ದರೆ ಸಂತೋಷವೋ ಸಂತೋಷ.

ಮುಖ್ಯವಾಗಿ ಅನೇಕ ಸಹೃದಯಿಗಳು ಬ್ಲಾಗ್ ಓದಿದ್ದಷ್ಟೇ ಅಲ್ಲ, ಸುಮಾರು ಜನ ಅಲ್ಲಿ ಇಲ್ಲಿ ಒಂದೆರಡು ಒಳ್ಳೆ ಮಾತು ಕೂಡ ಹೇಳಿದ್ದಾರೆ. ಕೆಲವರು ಕಾಮೆಂಟ್ಸ್ ಹಾಕಿದರೆ, ಕೆಲವರು ಫೇಸ್ಬುಕ್ ಮೇಲೆ, ಇನ್ನು ಕೆಲವರು ಇ-ಮೇಲ್, ಕೆಲವರು ಫೋನ್ ನಲ್ಲಿ ಹರಟೆಗೆ ಸಿಕ್ಕಾಗ. ತುಂಬಾ ಜನ ಓದಿದ್ದಾರೆ. ಅದು ಸಂತೋಷ.

ಬರೆಯುತ್ತಿರುವದಕ್ಕೆ ಹೆಚ್ಚಿಗೆ ಏನೂ ಪ್ರಚಾರ ಕೊಟ್ಟಿಲ್ಲ. ನನ್ನ ಫೇಸ್ಬುಕ್ ಮೇಲೆ ಶೇರ್ ಮಾಡುತ್ತೇನೆ. ಟ್ವಿಟ್ಟರ್ ಒಂದು. ನಾನೇನೂ ಟ್ವಿಟ್ಟರ್ ಜಾಸ್ತಿ ಉಪಯೋಗಿಸುವದಿಲ್ಲ.

ಕಂಡ ಕಂಡ ಕಡೆ ಹೋಗಿ - ನಂದು ಎಲ್ಲೆ ಇಡ್ಲಿ? ಇಟ್ಟೆ. ಓದ್ರೀ. ಪ್ಲೀಜ್.  - ಅಂತ ಹೇಳುವ ಅವಶ್ಯಕತೆ ಇಲ್ಲ. ಅದಕ್ಕೇ ಸುಮಾರು ಫೇಸ್ಬುಕ್ ಗ್ರುಪ್ಪುಗಳಲ್ಲಿ ಹಾಕುವ ಅವಕಾಶವಿದ್ದರೂ ಹಾಕಿಲ್ಲ. 

ಅದು ಬಿಟ್ಟರೆ ನಮ್ಮ 'ಹವ್ಯಕ' ಜನರ ಒಂದು ಫೇಸ್ಬುಕ್ ಗ್ರುಪ್ ಇದೆ. ಅದರಲ್ಲಿ ಬ್ಲಾಗ್ ಗಳಿಗಾಗಿಯೇ ಒಂದು ಸೆಕ್ಷನ್ ಇದೆ.  ಹೊಸ ಪೋಸ್ಟ್ ಬರೆದಾಗ ಅಲ್ಲಿ ಹಾಕಿ ಬರುತ್ತೇನೆ. ಸುಮಾರು ಜನ ಓದಿ, ಅಲ್ಲಿಯೇ ಕಾಮೆಂಟ್ ಮಾಡಿ ಪ್ರೋತ್ಸಾಹಿಸಿದ್ದಾರೆ. ಎಷ್ಟೋ ಜನ, ನಮ್ಮ ಟಿಪಿಕಲ್ ಹವ್ಯಕ ಸ್ಟೈಲ್ ನಲ್ಲಿ ಅತ್ಯಂತ ಆತ್ಮೀಯವಾಗಿ "ಮಹೇಶಣ್ಣ" ಅಂತ ಕರೆದು ಪ್ರೀತಿ ತೋರಿಸಿದ್ದಾರೆ. ಕೆಲವರಿಗೆ ನಾವು  "ಮಹೇಶ್ ಸರ್". ಹಾಗೆಲ್ಲ ಕರೆಯುವದು ನಮ್ಮ ಸಂಸ್ಕೃತಿ. ಅವರಿಗೆಲ್ಲ ಚಿರಋಣಿ. ಪ್ರೀತಿ ಹಾಗೆಯೇ ಇರಲಿ. ಮತ್ತೂ ಬೆಳೆಯಲಿ.

ನಮ್ಮ "ಹವ್ಯಕ" ಫೇಸ್ಬುಕ್ ಗ್ರುಪ್ ತುಂಬಾ ಒಳ್ಳೆ ರೀತಿಯಲ್ಲಿ ಡೆವಲಪ್ ಆಗಿದೆ. ಬೇರೆಬೇರೆ ವಿಷಯಗಳಿಗೆ ಬೇರೆ ಬೇರೆ ಥ್ರೆಡ್ ಇವೆ. ಹಾಡಿಗೆ, ಹರಟೆಗೆ, ಬ್ಲಾಗ್ ಗಳಿಗೆ, ಮತ್ತೊಂದಕ್ಕೆ ಅಂತ. ತುಂಬಾ ಇಂಟರೆಸ್ಟಿಂಗ್ ಚರ್ಚೆ ಮತ್ತೊಂದು ನಡೆಯುತ್ತಿರುತ್ತದೆ. ಬೇಕಾದಷ್ಟು ಮಾಹಿತಿ, ನಮ್ಮ ಸಂಸ್ಕೃತಿ, ನಮ್ಮ ಊರ ಕಡೆ ಸುದ್ದಿ ಎಲ್ಲ ಚನ್ನಾಗಿ ತಿಳಿಯುತ್ತಿದೆ. ಅಂತಹ ಗ್ರುಪ್ ಒಂದನ್ನು ಸೇರಿ ಅಲ್ಲಿಯ  ಜನರ ಸ್ನೇಹ ಪ್ರೀತಿ ಇತ್ಯಾದಿ ಸಿಕ್ಕಿದ್ದು ತುಂಬಾ ಸಂತೋಷದ ಸಂಗತಿ.

ಕೆಲವು ಜನ ಇಂಗ್ಲಿಷ್ನಲ್ಲಿ ಬರೆಯೋದನ್ನು ನಿಲ್ಲಿಸಿಬಿಟ್ಟಿರಾ ಅಂತ ಕೇಳಿದ್ದಾರೆ. ಸದ್ಯದ ಮಟ್ಟಿಗೆ ಗೊತ್ತಿಲ್ಲ. ಮುಂದೆ ನೋಡೋಣ. ಪೋಸ್ಟ್ ಬೈ ಪೋಸ್ಟ್ ವಿಚಾರ ಮಾಡಿದರಾಯಿತು.

ಅತ್ಯಂತ ಹೆಚ್ಚಿನ ಹಿಟ್ಸ್ ಬಂದಿದ್ದು ನಮ್ಮ ಸ್ಕೂಲ್ ಮಾಸ್ತರ್ ಆಗಿದ್ದ ದಿವಂಗತ ಎಚ್. ಆರ್. ಕನವಳ್ಳಿ ಸರ್ ಬಗ್ಗೆ ಬರೆದ ಪೋಸ್ಟ್ ಗೆ. ನಮ್ಮ ತುಂಬ ಜನ ಸ್ನೇಹಿತರು, ಅವರ ಸ್ನೇಹಿತರು ಓದಿರಬೇಕು. ತುಂಬಾ ಖುಷಿ ಆಯಿತು. ಮಾಸ್ತರಿಗೂ ಖುಷಿ ಆಗಿರುತ್ತದೆ.

ನಂತರ ಕರೀಮನ ಸಾಹಸಗಳು (?). "ನಿಮ್ಮ ಕರೀಂ ಒಳ್ಳೆ ಮಿ.ಬೀನ್ ಇದ್ದಾಗೆ ಇದ್ದಾನಲ್ಲರೀ.." - ಅಂತ ಒಬ್ಬರು ಅಂದರು. ದೊಡ್ಡ ಮಾತು. ಕರೀಮನ ಲೈಕ್ ಮಾಡಿದವರು ತುಂಬಾ ಜನ. ಆದರೆ ಹೇಳಿದಂತೆ ಕರೀಮನ ಬಗ್ಗೆ ನಿಜವಾಗಿ ಹಾಸ್ಯ ಬರೆಯಲು ಅದು ಅದಾಗೇ ಫ್ಲಾಶ್ ಆದಾಗ ಮಾತ್ರ ಸಾಧ್ಯ. ಇಲ್ಲಾಂದರೆ ಜಬರ್ದಸ್ತಿ ತುರುಕಿದ ಹಾಸ್ಯವಾದೀತು. ಅದಕ್ಕೆ ತಲೆ ಓಡದಿದ್ದಾಗ.....ಯಾವದೋ ಪುಸ್ತಕದಲ್ಲಿ ಓದಿದ ಯಾವದಾದರು ಇಂಟರೆಸ್ಟಿಂಗ್ ಮಾಹಿತಿ ಬಗ್ಗೆ ಬರೆದು ಪುಸ್ತಕ ಪರಿಚಯ. ಅದಕ್ಕೆ ನಮಗೆ ಇರೋ ಮಟ್ಟಿನ ಕೆಪಾಸಿಟಿ ಸಾಕು.

ಸದ್ಯಕ್ಕೆ ಟೈಮ್ ಕೂಡ ಇದೆ. ಕೆಲಸ ಇದ್ದರೂ ಆ ಪಾಟಿ ಬಿಜಿ ಇಲ್ಲ. ಸುಮ್ಮನೆ ಹಾಳುವರಿ ಇಂಟರ್ನೆಟ್, ಫೇಸ್ಬುಕ್ ಮತ್ತೊಂದು ಮಾಡಿ ಟೈಮ್ ವೆಸ್ಟ್ ಮಾಡುವದಕಿಂತ ಸಿಕ್ಕಾಗ ನಾಕು ಲೈನ್ ಗೀಚೋದು, ಬರಿಯೋದೇ  ಹಾಯನಿಸತೊಡಗಿದೆ. ನ್ಯೂಸ್ ಓದೋದು ಒಂದೈದು ನಿಮಿಷ ಮಾತ್ರ. ಟೀವಿ ಗೀವಿ ಇಲ್ಲವೇ ಇಲ್ಲ.

ನೀವು ಓದಿ. ಏನೇ ಅನ್ನಿಸಿದರೂ ಕಾಮೆಂಟ್ ಮಾಡಿ. ಎಲ್ಲಾ ರೀಸನೆಬಲ್ ಕಾಮೆಂಟ್ಸ್ ಗೆ ಸ್ವಾಗತ.

ಓದಿ ಪ್ರೋತ್ಸಾಹಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ. ಭಗವಂತ ಇಚ್ಛಿಸಿದಲ್ಲಿ (God willing)..........ಓದುವ, ಬರೆಯುವ, ಹೊಸ ಹೊಸ ಸಹೃದಯೀ, ಸಮಾನಮನಸ್ಕ ಮಿತ್ರರನ್ನು ಮಾಡಿಕೊಳ್ಳುವ, ಲಘುಹರಟೆ ಹೊಡೆಯುವ, ಒಟ್ಟಿನಲ್ಲಿ ಬಿಂದಾಸ್ ಜಿಂದಗೀ ಜೀಯುವ ಕೆಲಸ  ಮುಂದುವರೆಯುತ್ತದೆ.

ಪ್ರೀತಿ, ವಿಶ್ವಾಸ ಹೀಗೆ ಮುಂದುವರಿಯಲಿ. ಬೆಳೆಯಲಿ.

ದೇವರು ಎಲ್ಲರಿಗೂ ಒಳ್ಳೇದು ಮಾಡಲಿ.

Monday, July 30, 2012

ರುಂಡಚೀಲಿ

ರುಂಡಮಾಲಿ, ರುಂಡಮಾಲಿನಿ ಅಂದ್ರೆ ರುಂಡಗಳನ್ನು ಮಾಲೆಯಾಗಿ ಧರಿಸಿರುವ ದೇವಿ - ಮಹಾಕಾಳಿ. ತಾನು ಕೊಂದ ಅಸುರರ ರುಂಡಗಳನ್ನು ಮಾಲೆ ಮಾಡಿಕೊಂಡು ಹಾಕಿಕೊಂಡಾಕೆ ಕಾಳಿಕಾದೇವಿ.

ರುಂಡಚೀಲಿ ಅಂದ್ರೆ? ಗೊತ್ತಾ? ಮುಂದೆ ಓದಿ.

ಅವರೊಬ್ಬರು ದೊಡ್ಡ ಕ್ರಿಮಿನಲ್ ವಕೀಲರು. 

ಸಿಕ್ಕಾಪಟ್ಟೆ ಪ್ರಾಕ್ಟೀಸ್. ದಿನಕ್ಕೆ 14-16 ಘಂಟೆ ಕೆಲಸ. ಇದು ಸುಮಾರು 20-25 ವರ್ಷದ ಹಿಂದೆ. ಆಗ ಮಾತ್ರ ಅವರು ಪ್ರವರ್ಧಮಾನಕ್ಕೆ ಬರುತ್ತಿದ್ದರು. ಇನ್ನೂ ಬಹಳ ಮಂದಿ ಜ್ಯೂನಿಯರ್ ವಕೀಲರು, ದೊಡ್ಡ ಆಫೀಸ್ ಎಲ್ಲ ಆಗಿರಲಿಲ್ಲ. ಇದ್ದ ಭಾಡಿಗೆ ಮನೆಯಲ್ಲೇ ಆಫೀಸ್ ಮಾಡಿಕೊಂಡಿದ್ದರು.

ಅವತ್ತು ಒಂದು ದಿನ ರಾತ್ರೆ ಒಂದೋ ಎರಡೋ ಘಂಟೆಯ ಟೈಮ್ ಇರಬಹುದು. ಯಾರೋ ಬಾಗಿಲು ಬಡಿಯುವ ಸದ್ದು. ರಾತ್ರಿ 11.30 ವರಗೆ ಕಕ್ಷೀದಾರರ ಜೊತೆ ಕುಳಿತಿದ್ದು ನಂತರ ಒಂದು ತುತ್ತು ತಿಂದು ಮಲಗಿದ್ದರೋ ಇಲ್ಲವೋ, ಈಗ ಮತ್ತೆ ಯಾರೋ ಬಂದು ಬಾಗಿಲು ಬಡಿಯುತ್ತಿದ್ದಾರೆ. ಕಿತ್ತುಕೊಂಡು ಬರುತ್ತಿದ್ದ ನಿದ್ದೆ. ಆದರೂ ವೃತ್ತಿಯ ಮೇಲೆ ಅಷ್ಟು ಪ್ರೀತಿ. ಎದ್ದು ಬಂದು ಬಾಗಿಲು ತೆರೆದರು. ನೋಡಿದರೆ ಮತ್ತೆ ಅದೇ ಗೌಡರು.

"ಏನ್ರೀ ಗೌಡರ ಇದು? ರಾತ್ರಿ 8 ಘಂಟೆ ತನಕ ನಿಮ್ಮದ ಕೇಸ್ ಮ್ಯಾಲೆ ಕೆಲ್ಸಾ ಮಾಡಿ, ನಿಮ್ಮ ಜೊತಿನಾ ಮಾತಾಡಿ, ನಾಳೆ ಮುಂಜಾನೆ 9 ಘಂಟೆಕ್ಕ ಬರ್ರಿ, ಅಲ್ಲಿ ತನಕ ಏನ್ ಮಾಡ್ಲಿಕ್ಕೆ ಸಾಧ್ಯ ಇಲ್ಲ ಅಂತ ಹೇಳೇನಿ. ಅಂತಾದ್ರಾಗ ಈ ನಡು ರಾತ್ರಿಯಾಗ  ಬಂದೀರಲ್ಲರಿ. ಏನು ಕಥಿ?" - ಅಂತ ಸ್ವಲ್ಪ ಅಸಹನೆ, ಅಸಮಾಧಾನ ಬೆರೆತ ದನಿಯಲ್ಲಿ ಹೇಳಿದರು.

"ಸಾರೀ ರೀ ಸರ್ರಾ.....ಅದು ಏನ ಆಗೈತಿ ಅಂದ್ರ....ಏ ತಮ್ಮಾ.....ಇಲ್ಲೇ ಮುಂದ ಬಾರೋ...." - ಅಂತ ಯಾರನ್ನೋ ಕರೆದರು. ವಕೀಲರಿಗೆ ಸರಿಯಾಗಿ ಕಾಣಲಿಲ್ಲ. ಕಂಪೌಂಡ್ ಗೇಟಿನ ಹತ್ತಿರ ಯಾರೋ ನಿಂತಂತೆ ಕತ್ತಲಲ್ಲಿ ಮಸುಕು ಮಸುಕಾಗಿ ಕಂಡಿತು.

ಗೌಡರು ಕರೆದ ವ್ಯಕ್ತಿ ಮುಂದೆ ಬರಲು ಹಿಂದೆ ಮುಂದೆ ನೋಡಿದ.

"ಬಾರೋ....ದೌಡ್ ಬಾರೋ....ವಕೀಲ್ ಸಾಹೇಬರಿಗೆ ಹೊಸ ಖಬರ್ ಲಗೂನ್ ಹೇಳ್ಬೇಕು. ಅದ ಹೇಳಿದ್ರ ಕೇಸಿಗೆ ಏನರ ಉಪಯೋಗ ಆದರೂ ಆದೀತು..ಬಾ...ಬಾ....ಏನ ಚಿಂತಿ ಮಾಡ ಬ್ಯಾಡ್.....ನಮ್ಮ ವಕೀಲರ ಅದಾರ್....." -  ಅಂತ ಗೌಡರು ಆಶ್ವಾಸನೆ ಕೊಟ್ಟರು.

ಹಿಂಜಾರುತ್ತ, ಮಿಸುಕಾಡುತ್ತ ಒಬ್ಬ ವ್ಯಕ್ತಿ ಇಲ್ಲದ ಮನಸ್ಸಿನಿಂದ ಮುಂದೆ ಬಂದ. ಈಗ ಮುಂಬಾಗಿಲಿನ ದೀಪದಲ್ಲಿ ಸ್ವಲ್ಪ ಕ್ಲೀಯರ್ ಆಗಿ ಕಂಡು ಬಂದ.

ಸಾಮನ್ಯನಂತೆ ಕಾಣುವ ಆ ವ್ಯಕ್ತಿ ಅಂತಾದ್ದೇನು ಹೊಸ ವಿಷಯ, ಅದೂ ಕೇಸಿಗೆ ಸಂಬಂಧಿಸಿದ್ದು, ತಂದಾನು  ಅಂತ ವಕೀಲರು ಅವನನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.

"ವಕೀಲ್ ಸಾಹೇಬರ.....ಸ್ವಲ್ಪ ಒಳಗ ಕೂತ ಮಾತಾಡೋಣ ಏನ್ರೀ? ಪ್ಲೀಜ್ ರೀ ಸರ್ರಾ.....ಪ್ಲೀಜ್ ರೀ....." - ಅಂತ ಗೌಡರು ಅಂಗಾಲಾಚುವ ದನಿಯಲ್ಲಿ ಕೇಳಿಕೊಂಡರು.

ಮತ್ತೇನು ಮಾಡುವದು. ನಿದ್ದಿಯಿಂದ ಅಂತೂ ಎಬ್ಬಿಸಿ ಬಿಟ್ಟಾರ್.ಮನಿ ಬಾಗಿಲದಾಗ ನಿಂತು ಏನು ಮಾತಾಡೋದು ಅಂತ ವಕೀಲರು - "ಬರ್ರೀ....ಒಳಗ ಬರ್ರೀ.....ಕೂತಾ ಮಾತಾಡೋಣಂತ... "- ಅಂತ ತಮ್ಮ ಕಚೇರಿ ಎಂಬ ಕೋಣೆಗೆ ಕರೆದೋಯ್ದರು.

ಗೌಡರ ಹಿಂದೆ ಹೊಸ   ವ್ಯಕ್ತಿಯೂ ಬಂದ. ಅವನ ಕೈಯಲ್ಲಿ ಒಂದು ದೊಡ್ಡ ಚೀಲ. ವಾರಕ್ಕೊಮ್ಮೆ ತರಕಾರಿ ತರುವ ಸೈಜಿನದು. ಯಾಕೋ ಏನೋ? ಅತ್ಯಂತ ಜತನದಿಂದ ಹಿಡ್ಕೊಂಡಿದ್ದ ಚೀಲವನ್ನ. ಚೀಲ ಒದ್ದೆ ಒದ್ದೆ ಆದಂಗಿತ್ತು. ಬಲ್ಬಿನ ಬೆಳಕಲ್ಲಿ ಸರಿ ಬಣ್ಣ ಕಾಣಲಿಲ್ಲ.

"ಈಗ ಹೇಳ್ರೀ ಗೌಡ್ರ....ಏನು ಹೊಸ ಸುದ್ದಿ ತೊಗೊಂಡ ಬಂದೀರಿ" - ಅಂತ ವಕೀಲರು ತಮ್ಮ ಖುರ್ಚಿಯಲ್ಲಿ ಆರಾಮಾದರು.

"ಸರ್ರಾ....ಏನಂದರ....ಇವ ನೋಡ್ರೀ ನಮ್ಮ ಕೇಸಿನ್ಯಾಗ ಪೊಲೀಸರಿಗೆ ಇನ್ನೂ ಸಿಗದ ಇರೋವ. ಇವನ ಕಡೆ ಏನ ಅದ ಅಂದರ...." - ಅಂತ ಎಳಿಯುತ್ತಿರುವಾಗ ವಕೀಲರು ಅವರನ್ನು ತಡೆದರು.

"ಓಹೋ....ಇವನ ಏನು? ಬಾಕಿ ಎಲ್ಲಾರನ್ನ ಪೊಲೀಸರು ಹಾಕಿಕೊಂಡು ಬಡದ್ ಬಡದ್ ಹೆಣ ಮಾಡ್ಲಿಕತ್ತಾರ್....ಇವ ಈಗ ಬಂದು ಸರೆಂಡರ್ ಆಗವಾ ಏನು? ಅದೂ ಮುಂಜಾನೆ ಮಾತ್ರ ಆಗೋ ಕೆಲಸ. ಈಗೆಲ್ಲಿ ಪೋಲಿಸರನ್ನ ಎಬ್ಬಿಸಲಿ ನಾ? ಗಿಚ್ಚ್ ಕುಡದ ಮಲ್ಕೊಂಡಿರ್ತಾರ್ ಎಲ್ಲಾರೂ....ನಾಳೆ ಬರ್ರಿ....ನಡ್ರೀ...."- ಅಂತ ಸಾಗ ಹಾಕಲು ಹೊರಟರು ವಕೀಲರು.

"ಅದಲ್ಲರೀ ಸರ್ರಾ....ತಡೀರಿ....ಏ ತಮ್ಮಾ.....ತೆಗೆದ್ ತೋರ್ಸೀ ಬಿಡೋ ವಕೀಲರಿಗೆ....." - ಅಂತ ಹೇಳಿದರು ಗೌಡರು.

ಚೀಲ ಹಿಡಿದುಕೊಂಡಿದ್ದ ವ್ಯಕ್ತಿ ಹಿಂದೆ ಮುಂದೆ ನೋಡಿದ. ಸ್ವಲ್ಪ ಹಿಂಜರಿದ. ವಕೀಲರ ಮುಖವನ್ನೂ, ಗೌಡರ ಮುಖವನ್ನೂ ಮತ್ತೆ ಮತ್ತೆ ನೋಡಿದ. ಖರೇನ ತೋರಿಸ್ಲೀ ಏನು? ಅನ್ನುವಂತೆ ಮಾರಿ ಮಾಡಿದ.

"ತೋರ್ಸೋ ಅಪ್ಪಾ.....ಇದ ಆ ಪೋಲಿಸರಿಗೆ ಬೇಕಾಗಿದ್ದು. ಸಾಹೇಬರು ನೋಡಿದ ಮ್ಯಾಲೆ ಮುಂದೇನು ಅಂತ ಹೇಳ್ತಾರ...." - ಅಂತ ಗೌಡರು ಅವನಿಗೆ ಆಶ್ವಾಸನೆ ಕೊಟ್ಟರು. ವಕೀಲರೂ ಸಹ ಓಕೆ ಎಂಬಂತೆ ತಲೆ ಕುಣಿಸಿದರು.

ಆ ವ್ಯಕ್ತಿ ಚೀಲದೊದಳಗೆ ಕೈ ಹಾಕಿ ತೆಗೆದ. ತೆಗೆದು ತೋರ್ಸಿಯೇ ಬಿಟ್ಟ. ವಕೀಲರಿಗೆ ಸಣ್ಣ ಪ್ರಮಾಣದ ಹಾರ್ಟ್ ಎಟಾಕ್ ಆಯಿತು. ಅಷ್ಟು ಭೀಕರವಾಗಿತ್ತು ದೃಶ್ಯ.

ಅವನು ತೆಗೆದು ತೋರಿಸಿದ್ದು ಏನು? 

ಚೀಲದಿಂದ ತೆಗೆದೆದ್ದು ಒಂದು ನೀಟಾಗಿ ಕತ್ತರಿಸಿ ಬೇರ್ಪಡಿಸಲ್ಪಟ್ಟಿದ್ದ ಒಂದು ಮಾನವ ರುಂಡ!!!!!!!! ಅದರ ಜುಟ್ಟು ಹಿಡಿದು ವಕೀಲರಿಂದ ಕೇವಲ 4-6 ದೂರದಲ್ಲಿ ನಿಂತಿದ್ದ ಅವನು. ದೀಪದ ಬೆಳಕಿನಲ್ಲಿ, ಆ ಕಾಳ ರಾತ್ರಿಯಲ್ಲಿ ಅತಿ ಭೀಕರ ದೃಶ್ಯ ಅದು.

ವಕೀಲರು ಇಂದಿಗೂ ಒಂದು ಮಾತು ಹೇಳುತ್ತಾರೆ. ನನಗೆ ಆ ಕೇಸ್ ಬಗ್ಗೆ ಮಾಹಿತಿ ಇತ್ತು. ರುಂಡ ಮಿಸ್ಸಾಗಿದ್ದು ಗೊತ್ತಿತ್ತು. ಮತ್ತೆ ಕಕ್ಷೀದಾರರು ಆದ ಗೌಡರೂ ಅವನ ಜೊತೆಯಲ್ಲಿಯೇ ಇದ್ದರು. ಹಾಗಾಗಿ ನನಗೆ ಅವತ್ತು ಹಾರ್ಟ್ ಎಟಾಕ್ ಆಗಲಿಲ್ಲ. ಇಲ್ಲ ಅಂದ್ರೆ ಸಡನ್ ಆಗಿ ಅಂತಹ ಒಂದು ದೃಶ್ಯ ತೋರಿಸಿಬಿಟ್ಟಿದ್ದರೆ ಸಾಯೋದು ಗ್ಯಾರಂಟೀ ಇತ್ತು ಅವತ್ತು.

ಆಗಿದ್ದು ಇಷ್ಟು. ಆ ಗೌಡರ ಮನೆಯ ಹೆಣ್ಣುಮಗಳೊಬ್ಬಳು ಅವರ ಮನೆಯ ಕೆಲಸದವನೊಂದಿಗೆ ಸಂಬಂಧ ಇಟ್ಟುಗೊಂಡಿದ್ದಳಂತೆ. ಅದು ಗೌಡರ ಮನೆತನದ ಗೌರವ, ಪ್ರತಿಷ್ಠೆಯ ಮಾತಾಗಿತ್ತು. ಆ ಕೆಲಸದವನಿಗೆ ಕೊಟ್ಟ ಎಚ್ಚರಿಕೆ ಏನೂ ಉಪಯೋಗವಾದ ಹಾಗೆ ಕಾಣಲಿಲ್ಲ. ಅದಕ್ಕೇ - "ಅವನನ್ನ ತೆಗೆದು ಬಿಡಿ" - ಎಂಬ ಆಜ್ಞೆ ಹೊರಬಿದ್ದಿತ್ತು.

ತೆಗೆಯುವವರು ಯಾರು? ಗೌಡರ ಕಡೆ ಮಂದಿ. ಅವರು ಲೀಡ್ ಮಾಡೋರು. ಕೊಲ್ಲುವವರು ಬೇರೆ ಆಳು ಮಂದಿ. ಇಷ್ಟೆಲ್ಲಾ ಮಂದಿ ಕೂಡಿ ಒಬ್ಬನನ್ನು  ತೆಗೆಯೋದು ದೊಡ್ಡದೇ.....ತೆಗೆದೇ ಬಿಟ್ಟರು. ಅದೇನು ಪ್ಲಾನ್ ಇತ್ತೋ ಗೊತ್ತಿಲ್ಲ. ರುಂಡ ಬೇರ್ಪಡಿಸಿ ಕೇವಲ ಮುಂಡ ಬಿಟ್ಟು ಹೋಗಿಬಿಟ್ಟರು. ಪೋಲಿಸರನ್ನು ದಾರಿ ತಪ್ಪಿಸಲಿಕ್ಕೋ ಅಥವಾ ಮತ್ಯಾವದೋ ಕಾರಣಕ್ಕೋ ರುಂಡ ತೆಗೆದುಕೊಂಡು ಹೋಗಿ ಬಿಟ್ಟಿದ್ದ ಈ ಪುಣ್ಯಾತ್ಮ ರುಂಡಚೀಲಿ.

ಕೊಲೆ ಮರುದಿನ ಮುಂಡ ಸಿಕ್ಕಿತು. ಪೊಲೀಸರು ಬಂದು ವಿಚಾರಣೆ ಮಾಡಿದರು. ಸಿಕ್ಕ ಮಾಹಿತಿ ಮೇಲೆ ಗೌಡರ ಪೈಕಿ ಸುಮಾರು ಜನರನ್ನು ಎತ್ತಾಕಿಕೊಂಡು ಹೋದರು.

ರುಂಡ ಸಿಗದಿದ್ದು ಭಯಂಕರ ತಲೆ ನೋವಾಯಿತು ಪೊಲೀಸರಿಗೆ. ಪ್ರತಿಷ್ಠೆಯ ಪ್ರಶ್ನೆಯೂ ಆಯಿತು. ಎತ್ತಾಕಿಕೊಂಡು ಬಂದವರಲ್ಲಿ ಯಾರಿಗೂ ರುಂಡ ಎಲ್ಲಿ ಹೋಯಿತು ಅನ್ನೋ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. 

ನಾರ್ಮಲಿ ಮರ್ಡರ್ ಕೇಸ್ನಲ್ಲಿ ಆರೋಪಿಗಳನ್ನ ಎತ್ತಾಕಿಕೊಂಡು ಬಂದ್ ಕ್ಷಣದಿಂದ ಡೀಲಿಂಗ್ ಶುರು ಆಗಿಬಿಡುತ್ತದೆ. ಚೌಕಾಶಿ ಶುರು. ಇಷ್ಟು ಲಕ್ಷ ಕೊಟ್ಟರೆ ಟಾರ್ಚರ್ ಇಲ್ಲ. ಅಷ್ಟು ದುಡ್ಡು ಇಲ್ಲವೋ? ಓಕೆ. ಇದು ಟಾರ್ಚರ್ ಮೆನು. ನೀವು ಕೊಡೊ ದುಡ್ಡಿಗೆ ಇಷ್ಟ ಟಾರ್ಚರ್ ಮಾಡಲೇ ಬೇಕಾಗುತ್ತದೆ. ಹಾಗೆ ಹೀಗೆ. ಒಟ್ಟಿನಲ್ಲಿ ದುಡ್ಡು ಗುಂಜಿ ಗುಂಜಿ ಕೇಸ್ ಲೂಸ್ ಮಾಡಿ ಬಿಟ್ಟರೆ, ಒಳ್ಳೆ ಡಿಫೆನ್ಸ್ ವಕೀಲರು ಬಿಡಿಸಿಕೊಂಡು ಬರುತ್ತಾರೆ. ಪೊಲೀಸರು, ಸರ್ಕಾರಿ ವಕೀಲರು, ನ್ಯಾಯಾಧೀಶರು, ಡಿಫೆನ್ಸ್ ವಕೀಲರು ಎಲ್ಲರೂ ಮಾಲಾಮಾಲ್. ಕೊಲೆ ಮಾಡಿದವರು ಕೇಸ್ ಮುಗಿಯುವತನಕ ಎಲ್ಲಾ ಅಸ್ತಿ ಪಾಸ್ತಿ ಮಾರಿಕೊಂಡು ಆಲ್ಮೋಸ್ಟ್ ರೋಡಿಗೆ ಬಂದಿರುತ್ತಾರೆ. ಅದು ವಾಸ್ತವಿಕತೆ. ದುರಂತ.

ಆದರೆ ಈ ಕೇಸಿನಲ್ಲಿ ರುಂಡ ಸಿಗದಿದ್ದಕ್ಕೆ ಮೇಲಿಂದ ಪ್ರೆಶರ್ ಭಾಳ ಬಂತು ಅನ್ನಿಸುತ್ತದೆ. "ರುಂಡ ಎಲ್ಲಿ? ಹೇಳ್ರೋ?" - ಅಂತ ಟಾರ್ಚರ್ ಶುರು ಆಗಿಯೇ ಬಿಟ್ಟಿತು. ಅದೂ ಥರ್ಡ್ ಡಿಗ್ರೀ. ಫುಲ್ ಫಾರಂ. ಗೌಡರು, ವಕೀಲರಿಗೆ ತೋರ್ಸಿಯೇ ಮಾಡುತ್ತಿದ್ದರು. ನೋಡಿದವರ ಮೇಲೆ ಪರಿಣಾಮವಾಗಿ, ಎಲ್ಲಿಂದಾದರೂ ರುಂಡ ಹುಡಕಿ ತಂದು ಕೊಡಲಿ ಅಂತ. ಅಲ್ಟಿಮೇಟ್ ಹೆದರಿಕೆ ಕೊಟ್ಟಿದ್ದು ಅಂದರೆ - "ನಿಮ್ಮ ಮನಿ ಹೆಂಗಸೂರನ್ನ ಇನ್ನು ಮುಂದ ಅರೆಸ್ಟ್ ಮಾಡಿಕೊಂಡು ಬರ್ತೇವಿ. ಖಬರ್ದಾರ್." ಅದು ಮಹಾ ಡೇಂಜರ್.

ಗೌಡರು ರಾತ್ರಿ ಹಗಲು ಭೂಮಿ ಆಕಾಶ ಒಂದು ಮಾಡಿ ರುಂಡವಿದ್ದ ಆಳನ್ನ ಹುಡುಕಿದ್ದರು. ಅವ ಪೋಲೀಸರ ಭಯದಿಂದ ಎಲ್ಲೋ ಅಡಗಿ ಕೂತಿದ್ದ. ಸಿಕ್ಕ ನಂತರ ಒಂದು ಕ್ಷಣವೂ ಕಾಯದೇ ಸೀದಾ ವಕೀಲರ ಮನಿಗೆ ಕರ್ಕೊಂಡು ಬಂದಿದ್ದರು. ಹಿರಿ ಗೌಡರಿಗೆ ತಮ್ಮ ಮನೆಯ ಜನ ಟಾರ್ಚರ್ ಚೆಂಬರನಲ್ಲಿ ಸ್ಕ್ರಾಪ್ ಆಗುತ್ತಿದ್ದರ ಬಗ್ಗೆಯೇ ಚಿಂತೆ. ಅದು ಸಹಜವೂ ಹೌದು. 

ಹೀಗೆ ರುಂಡಚೀಲಿಯೊಬ್ಬ ವಕೀಲರಿಗೆ ಭೆಟ್ಟಿ ಆಗಿದ್ದ. ಮರುದಿನ ಮತ್ತೆ ಪೋಲೀಸರ ಜೊತೆ ಮಾತುಕತೆ ಮುಂದುವರೆಯಿತು. ರುಂಡ ಸಿಕ್ಕಿದ್ದಕ್ಕೆ ಪೊಲೀಸರು ಎಷ್ಟೋ ರಿಲೀವ್ ಆಗಿದ್ದರು. ಇವನನ್ನೂ ಅರೆಸ್ಟ್ ಮಾಡಿದರು. ದುಡ್ಡು ಕಾಸಿನ ಮಾತುಕತೆಯೂ ಮುಗಿಯಿತು ಅಂತ ಕಾಣುತ್ತದೆ. ಟಾರ್ಚರ್ ಬಂದಾಯಿತು. ಮುಂದೆ ಬೇಲ್ ಸಿಕ್ಕಿತು. ಕೇಸ್ ಸಹಿತ ಡಿಫೆನ್ಸ್ ವಕೀಲರು ಹೇಳಿದಾಗೆ ಹಾಕಿದ್ದರಿಂದ  ಅದೂ ನಿಲ್ಲಲಿಲ್ಲ. ಎಲ್ಲರೂ ಹೊರಬಂದರು. 2-3 ವರ್ಷ ಜೇಲ್ ನಲ್ಲಿ ಇದ್ದರು ಅಂತ ಕಾಣುತ್ತದೆ.

ಹಾಗೆ ನೋಡಿದರೆ ಇದೇನೂ ದೊಡ್ಡ ಸುದ್ದಿ ಆಗಿರಲಿಲ್ಲ. ಇಂತಹ ಸುಮಾರು ಮರ್ಡರ್ ಆಗುತ್ತಲೇ ಇರುತ್ತವೆ. ಆದ್ರೆ ನಮ್ಮ ದೋಸ್ತ ವಕೀಲರಿಗೆ ಮಾತ್ರ ವೈಯಕ್ತಿಕವಾಗಿ ಈ ಕೇಸ್ ಒಂದು ವಿಚಿತ್ರ ಕೇಸ್ ಆಗಿತ್ತು. ಕಕ್ಷಿದಾರನೊಬ್ಬ ಎಂದಿಗೂ ಇಂತಹ ವಿಲಕ್ಷಣ ವಸ್ತುವೊಂದನ್ನು  ಹಿಡಿದುಕೊಂಡು ಆ ಮೊದಲು ಅವರ ಎದುರಿಗೆ ಬಂದಿರಲಿಲ್ಲ. ಕ್ರಿಮಿನಲ್ ವಕೀಲರಿಗೆ ಕೊಲೆ, ಹೆಣ, ಪೊಲೀಸರು, ಟಾರ್ಚರ್, ಕರಪ್ಶನ್, ಯಾವದೂ ಹೊಸತಲ್ಲ. ಆದ್ರೆ ಅಪರಾತ್ರಿ ರುಂಡ ನೋಡುವದು ಜೀವಮಾನದಲ್ಲಿ ಒಂದೇ ಸಲವಿರಬಹುದು. ಸಾಕಲ್ಲವೇ ಒಂದೇ ಸಲ?

ಹೀಗೆ ವಕೀಲರು, ಪೊಲೀಸರು, ಪತ್ರಕರ್ತರು ಮಿತ್ರರಾಗಿದ್ದರೆ ಏನೇನೋ ಸುದ್ದಿ. ರೋಚಕ ಸುದ್ದಿ. ಇವತ್ತಿಗೂ ಈ ಮೂವರ ಜೊತೆ ಕೂತು ಹರಟುವದು ಅಂದ್ರೆ ಏನೋ ಒಂದು ಮಜಾ. ತಾಸು ತಾಸು ಕಳೆದು ಹೋಗಿದ್ದು ಗೊತ್ತೇ ಆಗುವದಿಲ್ಲ. ಆದರೆ ಅವರ ಜೊತೆ ಹರಟಿದ್ದೆಲ್ಲವನ್ನೂ ಬರೆಯಲು ಆಗುವದಿಲ್ಲ. ಯಾಕೆಂದರೆ ಅಷ್ಟು ಸ್ಫೋಟಕ ಮಾಹಿತಿಗಳು ಅವರ ಹತ್ತಿರವಿರುತ್ತವೆ. ಪತ್ರಿಕೆಗಳಲ್ಲಿ ಬರುವ ಮಾಹಿತಿ ಹೆಚ್ಚಂದರೆ 30-40% ಮಾತ್ರ. ಬಾಕಿ 60% ಬರೆದರೆ ಎಷ್ಟೋ ಜನ ಪತ್ರಕರ್ತರು ಬೇಗ ಬೇಗ ಈ ಭೂಮಿ ಖಾಲಿಮಾಡಬೇಕಾಗುತ್ತದೆ. ಮತ್ತೆ ಎಲ್ಲದಕ್ಕೂ ಸಪೋರ್ಟ್ ಮಾಹಿತಿ ಹುಡುಕಲು ಟೈಮ್ ಬೇರೆ ಇರುವದಿಲ್ಲ.ಆದರೆ ಹರಟೆ ಹೊಡಿಯುವಾಗ ಏನೂ ಕಟ್ಟಳೆ ಇರುವದಿಲ್ಲ. ನೀವು ಹೋಗಿ ಅವರನ್ನು ತೊಂದರೆಯಲ್ಲಿ ಸಿಲಿಕಿಸುವದಿಲ್ಲ ಅಂತ ಖಾತ್ರಿ ಆದರೆ ಎಂತೆಂತ ಸುದ್ದಿ ಹೇಳುತ್ತಾರೆ ಅನ್ನೋದನ್ನ ಕೇಳಿಯೇ ತಿಳಿಬೇಕು.

ಪತ್ರಕರ್ತರು, ಪೊಲೀಸರು, ವಕೀಲರು ನಿಮ್ಮ ಸ್ನೇಹಿತರಾಗಿದ್ದಾರೆ ಕೇಳಿ ನೋಡಿ. ಏನೇನೋ ಸುದ್ದಿ ತಿಳಿದೀತು ನಿಮಗೆ.

Sunday, July 29, 2012

ಸುಪಾರಿ ಕೊಟ್ಟ ಸಂಗಿ, ಎನ್ಕೌಂಟರ ಮಾಡಿದ ಪುಂಗಿ

ಮೆಹಮೂದ್ ಫೋನ್ ಮಾಡಿ ಕರೀಂ ಸಾಬರಿಗೆ ಆರಾಮ ಇಲ್ಲ, ಹಾಸ್ಪಿಟಲ್ಗೆ ಅಡ್ಮಿಟ್ ಮಾಡ್ಯಾರ್ ಅಂದ ಕೂಡಲೇ ಒಮ್ಮೆ ಎದಿ ಧಸಕ್ ಅಂತು. ಮತ್ತೇನು ಅನಾಹುತ ಮಾಡಿಕೊಂಡ್ರಪಾ ಅಂತ ಕಾಳಜಿ ಆತು.

ಏನಾತೋ ಮೆಹಮೂದ್? ಎಲ್ಲೇ? ರೆಗ್ಯುಲರ್ ಜರ್ಮನ್ ಹಾಸ್ಪಿಟಲ್ ಏನಪಾ?.....ಅಂತ ಕೇಳಿದೆ. ಯಾಕಂದ್ರ ಲಾಸ್ಟ್ ಟೈಮ್ ಅವರ ಸಾಲೀಗೆ (ಹೆಂಡ್ತಿ ತಂಗಿಗೆ) ಭಾಗವತಂ ಹೇಳಲಿಕ್ಕೆ ಹೋಗಿ ಗಜ್ಜು ತಿಂದು, ಕಾಲ್ ಮುರಕೊಂಡು, ಅಲ್ಲೇ ಅಡ್ಮಿಟ್ ಆಗಿದ್ದರು. ಅದಕ್ಕ.

ನಹಿ ಸಾಬ್. ಈ ಸಲ ಮೆಂಟಲ್ ಹಾಸ್ಪಿಟಲ್ ಗೆ ಹಾಕಿದಾರೆ......ಬೆಳಗಾಂ ರೋಡ....ಗೊತ್ತು ನಿಮಗೆ.....ಅಲ್ಲ?....ಅಂತ ಹೇಳಿ ಫೋನ್ ಇಟ್ಟ ಬಿಟ್ಟ ಕರೀಮನ ಅಣ್ಣನ ಮಗ ಮೆಹಮೂದ್.

ಹಾಂ!!!!!!!!!!!.....ಸಾಬರಿಗೆ ಈ ಸಲಿ ಹುಚ್ಚು ಹಿಡೀತು ಏನು? ಏನ ಆತೋ ಏನು? ನೋಡಲಿಕ್ಕೆ ಹೊನಗ್ಯಾ ಪರ್ಸನಾಲಿಟಿ ಇದ್ದರೂ ಭಾಳ ಸೂಕ್ಷ್ಮ ಮನಸ್ಸಿನ ಮನುಷ್ಯಾ ಅವ. ಮದ್ವಿ ಬ್ಯಾಡೋ ಬ್ಯಾಡೋ ಅಂತ ಹೇಳಿದ್ರೂ ತಲಾಕ್ ಆದಂಗ ಆದಂಗ ಮತ್ತ ಮತ್ತ ಹೊಸ ಹುರುಪಿನಿಂದ ಸಣ್ಣ ಸಣ್ಣ ಹುಡುಗ್ಯಾರನ್ನ ರೊಕ್ಕ ಕೊಟ್ಟ ಕಟ್ಟಿಗೊಂಡ ಬರ್ತಾನ. ಅವರು ಬಂದು ಇವಂಗ ಪಾಪ ಅನ್ನಬಾರದ್ದು ಅಂದು, ಫೀಲಿಂಗ್ ಹರ್ಟ್ ಮಾಡ್ತಾರ. ಅದ ಹೆಚ್ಚಾಗಿ ಈಗ ಏನರ ಹುಚ್ಚು ಹಿಡದಿರಬೇಕು ಅಂತ ಅನ್ನಿಸ್ತು. ಒಂದ ಸಲ ನೋಡಿ ಬರೋಣ ಅಂತ ಬೆಳಗಾಂ ರೋಡ ಕಡೆ ಹೊರಟೆ. ಮೆಂಟಲ್ ಹಾಸ್ಪಿಟಲ್ ಗೆ.

ಹೋದೆ.

ಹೀಂಗ....ಕರೀಂ ಸಾಬ್ ಅಂತ....ಅಡ್ಮಿಟ್ ಆಗ್ಯಾರ್ ಅಂತ....ಸ್ವಲ್ಪ ಭೆಟ್ಟಿ ಮಾಡಸರಿ....ಅಂತ ವಿನಂತಿ ಮಾಡಿಕೊಂಡೆ.

ಅವನೌನ್....ಈ ಮೆಂಟಲ್ ಹಾಸ್ಪಿಟಲ್ ಒಳಗ ಸ್ವಾಗತಕಾರಿಣಿ ಅಂತಾ ಕೂತಾಕಿನೂ ಹುಚ್ಚ ಇದ್ದಾಂಗ ಇದ್ದಳು.

ಸ್ವಲ್ಪ ವೇಟ್ ಮಾಡ್ರಿ.....ಕರೀಂ ಅವರು ಇರೊ ವಾರ್ಡ್ ಬಾಯ್ ಎಲ್ಲೋ ಹೋಗ್ಯಾರ್....ಬಂದ ಕೂಡಲೇ ಇಲ್ಲೇ ಬರಲಿಕ್ಕೆ ಹೇಳೇನಿ....ಅಂತ ಸ್ವಲ್ಪೂ ಕರ್ಟಸೀ ಇಲ್ಲದ ಹೇಳಿದಳು. ಇಕಿ ಯಾರೋ ಗವರ್ನಮೆಂಟ್ ಬ್ರಾಹ್ಮಣರಾಕಿ ಇರಬೇಕು ಅಂತ ಅಕಿಗೂ ದೇವರು ಒಳ್ಳೇದು ಮಾಡ್ಲಿ ಅಂತ ಬೇಡಿಕೊಂಡು  ಸುಮ್ಮಾ ಕೂತೆ.

ಸುಮಾರ ಒಂದು ತಾಸ್ ಆದ ಮ್ಯಾಲೆ ಒಬ್ಬ ಫುಲ್ ವೈಟ್  ಯುನಿಫಾರ್ಮ್ ಹಾಕಿಕೊಂಡು, ಬಿಳೆ ಗಾಂಧೀ ಟೊಪ್ಪಿಗಿ ಹಾಕಿಕೊಂಡ ಹಟ್ಟಾ ಕಟ್ಟಾ ಆದ್ಮಿ ಒಬ್ಬವ ಬಂದ. ಆ ಸ್ವಾಗತಕಾರಿಣಿ ನನ್ನ ಅವಂಗ ತೋರಿಸಿದಳು.

ನೀವಾ ಏನು.....ಕರೀಮಗ ಹುಡಿಕಿಕೊಂಡು ಬಂದವರು?........ಅಂತ ಮ್ಯಾಲಿಂದ ಕೆಳವರೆಗೂ ನೋಡುತ್ತಾ ಒಂಚೂರು ನಯ ವಿನಯ ಇಲ್ಲದ ಕೇಳಿದ. ಇಲ್ಲೆ ಅದನ್ನೆಲ್ಲಾ ನಿರೀಕ್ಷೆ ಮಾಡೋದೇ ತಪ್ಪು ಅಂತ ಗೊತ್ತಾಗಿ....ಹೌದರೀ, ಸರ್ರಾ.....ಅಂತ ಬೆನ್ನು ಬಗ್ಗಿಸಿ ಅವನಿಗೆ ಇಲ್ಲದ ಗೌರವ ಕೊಟ್ಟುಗೋತ್ತ ಹೇಳಿದೆ.

ನೋಡ್ರೀ.....ಅವಾ ಕರೀಂ ಭಾಳ ವಾಯೋಲೆಂಟ್ ಆಗ್ಯಾನ....ಹಾಂಗಿದ್ದಾಗ ನೀವ ನಿಮ್ಮ ಸುರಕ್ಷತೆಗೆ ಜವಾಬದಾರರು ನೋಡ್ಕೊಳ್ಳರೀ ಮತ್ತ.....ಹಾಂಗಂತ ಇಲ್ಲೆ  ಸಹಿ ಮಾಡಿ, ಅವರ ಕಡೆ ಕೊಡ್ರೀ....ಅಂತ ಒಂದು ಫಾರ್ಮ್ ಕೊಟ್ಟ.

ಓದಿಲ್ಲ...ಏನೂ ಇಲ್ಲ....ಸಹಿ ಮಾಡಿದೆ. ಕೊಟ್ಟೆ. ಕರೀಂ ನಮ್ಮ ಎಷ್ಟು ಒಳ್ಳೆ ದೋಸ್ತ ಅಂದ್ರ ಅವಾ ಎಷ್ಟ ಯಾಕ ವಾಯೋಲೆಂಟ್ ಆಗ್ವಲ್ಲನ್ಯಾಕ....ಏನೂ ಫರಕ್ ಇಲ್ಲ ನನಗ. ಅವ ಕುತ್ತಗಿ ಹಿಚುಕಿ ಕೊಂದರೂ ಚಿಂತಿಲ್ಲ...ಒಟ್ಟಿನ್ಯಾಗ್ ಲಗೂನ ಅವನ್ನ ಭೆಟ್ಟಿ ಆದ್ರ ಸಾಕಾಗೆದ.

ಆ ವಾರ್ಡ್ ಬಾಯ್ ಫಾಲೋ ಮಾಡ್ಕೊತ್ತಾ  ಹೊಂಟೆ.

ಒಂದು ಚಿಕ್ಕ ಗಾರ್ಡೆನ್ ತರಹ ಇರೋ ಕಡೆ ಕರಕೊಂಡ ಬಂದ. ಅಲ್ಲೇ ಸುಮಾರ್ ಮಂದಿ ನೋಡಿದ್ರಾ ಹುಚ್ಚರು ಅಂತ ತಿಳಿಬಹುದಾದ ಮಂದಿ ಚಿತ್ರ ವಿಚಿತ್ರ ರೀತಿಯಲ್ಲಿ ತಮ್ಮದೇ ಲೋಕದಲ್ಲಿ ಇದ್ದರು. ಎಲ್ಲರೂ ಒಂದೇ ತರಹ ಬಿಳೆ ಶರ್ಟ್ ಮತ್ತು ಬಿಳೆ ಹಾಪ್ ಪ್ಯಾಂಟ್ ಹಾಕಿಕೊಂಡಿದ್ದರಿಂದ ನಮ್ಮ ಕರೀಮನ್ನ ಹುಡುಕೋದು ಸ್ವಲ್ಪ ಟೈಮ್ ಹಿಡೀತು. ಆದರೂ ಅವನ ಸಂಜೀವ್ ಕುಮಾರ್ ಬಿಲ್ಡ್ ಇರೋದ್ರಿಂದ ಕಂಡು ಹಿಡಿದೆ.

ಸ್ವಲ್ಪ ನೋಡಿಕೊಂಡು ಹೋಗ್ರೀ.....ಮೊದಲ ಸಿಕ್ಕಾಪಟ್ಟೆ ಹೊನಗ್ಯಾ ಪರ್ಸನಾಲಿಟಿ ಕರೀಂ....ಹಿಡದು ಒದ್ದಾ ಗಿದ್ದಾ ಅಂದ್ರಾ ನೀವು ಸತ್ತು ಗಿತ್ತು ಹೋದೀರಿ....ಅಂತ ವಾರ್ಡ್ ಬಾಯ್ ಎಚ್ಚರಿಕೆ ಕೊಟ್ಟ.

ಸಾವಕಾಶ ಕರೀಂ ಹತ್ತಿರ ಹೋದೆ. ಗಿಡದ ಕೆಳಗೆ ಸುಮ್ಮನ ಏನೋ ವಿಚಾರ ಮಾಡಿಕೋತ್ತ ಕೂತಿದ್ದ. ಪಾಪ ಅನ್ನಿಸ್ತು.

ಕರೀಮಾ....ಏನಾತೋ ಅಪ್ಪಾ? ಯಾಕೋ? ಬೆಳಗಾಂ ರೋಡ ಬೆಳಗಾಂ ರೋಡ ಅಂತ ಎಷ್ಟ ಮಂದಿಗೆ ನಾನು ನೀನು ಜೋಕ್ ಮಾಡ್ತಿದ್ವಿ. ಈಗ ನೀನಾ ಇಲ್ಲಿ ಬಂದು ಅಡ್ಮಿಟ್ ಆಗಿ ಅಲ್ಲೋ. ಏನಾತೋ? ಹೇಳೋ ದೋಸ್ತ.....ಅಂತ ಭಾಳ ದುಃಖದಿಂದ ಹೇಳಿದೆ.

ನನ್ನ ದನಿ ಕೇಳಿದ ಕೂಡಲೇ ಕರೀಂ ಒಂದು ಸಲೆ ಮಾರಿ ಮ್ಯಾಲ ಮಾಡಿದ. ಎರಡು ಮೂರು ದಿವಸದಿಂದ ದಾಡಿ ಮತ್ತೊಂದು ಏನೂ ಆದಂಗ ಇರಲಿಲ್ಲ. ಒಂದು ತರಹದ ವಿಚಿತ್ರ ಲುಕ್ ಕೊಟ್ಟ. ಹಾಕ್ಕೊಂಡಿದ್ದ ಟೊಪ್ಪಿಗಿ ಕಿತ್ತು ವಗದವನಾ ಓಡಿ ಬಂದು ಅಪ್ಪಿಕೊಂಡು ಬಿಟ್ಟ. ವಾರ್ಡ್ ಬಾಯ್ ಘಾಬರಿ ಆಗಿ ತನ್ನ ಕಟ್ಟಗಿ ಬೇಟನ್ ತೆಗೆದು ಅವಂಗ ಹೊಡಿಲಿಕ್ಕೆ ಬಂದ. ನಾ ಇದೆಲ್ಲಾ ಓಕೆ...ನಮ್ಮ ದೋಸ್ತ....ಪ್ರೀತಿಯಿಂದ ಅಪ್ಪಿಕೊಳ್ಳಲಿಕ್ಕೆ ಬರಲಿಕತ್ತಾನ....ಹೊಡಿಬ್ಯಾಡರಿ.....ಅಂದೆ.

ಕರೀಂ ಬಂದವನ ನನ್ನ ಅಪ್ಪಿಕೊಂಡು ಹಾಡಲಿಕ್ಕೆ ಶುರು ಮಾಡಿ ಬಿಟ್ಟ.

ಸುಪಾರಿ ಕೊಟ್ಟ ಸಂಗಿ
ಎನ್ಕೌಂಟರ ಮಾಡಿದ ಪುಂಗಿ

ಆ ರಾಜೇಶ್ ಖನ್ನಾ, ಮುಮತಾಜ್ ಒಂದು ಹಳೆ ಹಾಡ ಇತ್ತ ನೋಡ್ರೀ. ಜೈ ಜೈ ಶಿವ ಶಂಕರ್. ಕಾಟಾ ಲಗೇನಾ ಕಂಕರ್......ಅಂತ. ಅದೇ ಧಾಟಿವಳಗ ಮತ್ತ ಮತ್ತ ಹಾಡಿದ್ದ ಹಾಡಿದ.

ಸುಪಾರಿ ಕೊಟ್ಟ ಸಂಗಿ
ಎನ್ಕೌಂಟರ ಮಾಡಿದ ಪುಂಗಿ

ಹೊಟ್ಟಿ ಬಿಟಗೋಂಡು, ತುಂಬಿದ ಗಲ್ಲದ ನನ್ನ ನೋಡಿ ನೀನಾ ಮುಮ್ತಾಜ್ ಅನ್ನೋ ರೀತಿಲೇ ನನಗ ಡ್ಯಾನ್ಸ್ ಮಾಡು ಅಂದ....ಸ್ವಲ್ಪ ಮಾಡಿದೆ.

ಡಾನ್ಸ್ ಮುಗೀತು. ಆದ್ರ ಅವ ಮಾತ್ರ ಸಣ್ಣ ದನಿವಳಗ ಸುಪಾರಿ ಕೊಟ್ಟ ಸಂಗಿ................ಏನಕೌಂಟರ ಮಾಡಿದ ಪುಂಗಿ....ಅಂತ ಹೇಳ್ಕೊತ್ತಾ ಇದ್ದ.

ಏನಾತೋ ಕರೀಮಾ.....ರಾಜೇಶ್ ಖನ್ನಾ ತೀರಿಕೊಂಡಿದ್ದಕ್ಕ ಹುಚ್ಚ ಹಿಡೀತೇನೋ? ನನಗ ಗೊತ್ತದ....ಅವರು ನಿನ್ನ ಫೇವರೀಟ್ ಹೀರೋ.....ಅಂತ ....ಆದರೂ ಅದನ್ನ ಅಷ್ಟು ತಲಿಗೆ ಹಚ್ಚಿಗೋತ್ತರ ಏನು?....ಏನಪಾ ಇದು? ಈ ಪರಿಸ್ಥಿತಿ ತಂದ್ಕೊಂಡಿ?  ಹಾಂ.....ಹಾಂ.....ಇದು ನಿನಗ ಸರಿ ಅನ್ನಸ್ತದ ಏನು?.......ಅಂತ ಕೇಳಿದೆ.

ಇಲ್ಲಾ....ಸಾಬ್...ಹಾಗೇನು ಇಲ್ಲಾ....ನಮ್ಮದು ಫೇಸ್ಬುಕ್ ಮೇಲೆ encounter ಆಯಿತು ಸಾಬ್....ಅಂತ ಬಾಂಬ್ ಹಾಕಿದ.

ಹಾಂ.....ಏನಪಾ ಇದು ಫೇಸ್ಬುಕ್ encounter? ಮುಂಬೈದಾಗ ಪೊಲೀಸರು ಗೂಂಡಾಗಳನ್ನ encounter ಮಾಡೋದನ್ನ ಕೇಳಿದ್ದೆ. ಈ ಕಡೆ ಗೂಂಡಾ ಮಂದಿಯಿಂದ ಸುಪಾರಿ ತೊಗೊಂಡು ಅವರ ಆಪೋಸಿಟ್ ಪಾರ್ಟಿ ಗುಂಡಾಗಳನ್ನ ಢಂ ಅನ್ನಿಸಿಬಿಡೋದಕ್ಕ ಸುಪಾರಿ ತಗೊಂಡು ಏನಕೌಂಟರ ಮಾಡೋದು ಅಂತಾರ್. ಇವಾ ನೋಡಿದ್ರಾ ಫೇಸ್ಬುಕ್ ಮೇಲೆ encounter ಆತು ಅಂತಾನ. ಏನು ಅರ್ಥ?

ಸಂಗಿ ಅಂದ್ರಾ ಯಾರು? ಅಕಿ ಏನು ಸುಪಾರಿ ಕೊಟ್ಟಳು? ಯಾರಿಗೆ ಕೊಟ್ಟಳು? ಯಾಕ ಕೊಟ್ಟಳು? ಪುಂಗಿ ಯಾರು? ಅಕಿ ಏನು encounter ಮಾಡಿದಳು? ಸ್ವಲ್ಪ ತಿಳಿಸಿ ಹೇಳಿದರ ಗೊತ್ತಾದೀತು ನೋಡಪಾ ಕರೀಮ....ಅಂತ ಹೇಳಿ ಸುಮ್ಮಾದೆ.

ಸಾಬ್....ಸಂಗಿ ಅಂದ್ರೆ ನಮ್ ಹಾಪ್ ಬೇಗಂ ಸಾಬ್....ಅಂದ ಕರೀಂ.

ಹಾಂ....ಅಕಿ ಹೆಸರು ಮೆಹರುನ್ನೀಸಾ ಅಲ್ಲೇನೋ? ಅಕಿ ತಂಗಿ ಸರಗಂ. ಅಲ್ಲೇನು? ಈ ಸಂಗಿ ಯಾರು?.....ಒಟ್ಟ ತಿಳಿಲಿಲ್ಲ.

ಹೌದು ಸಾಬ್....ಅಕಿ ಹೆಸರು ಮೆಹರುನ್ನೀಸಾ ಖರೆ. ಆದ್ರೆ ನಾವು ಅಕಿಗೆ ಪ್ಯಾರ್ ಮೊಹಬ್ಬತ್ ಸೆ "ಸಂಗದಿಲ್ ಸನಂ" ಉರ್ಫ್ ಸಂಗೀ ಅಂತ ಕರೀತಿವಿ ಸಾಬ್.....ಅಂದು ಕಣ್ಣು ವರಸಿಕೊಂಡ.

ಓಕೆ....ಹೆಂಡ್ತೀ ಸಂಗೀ....ಅಕಿ ಏನು ಸುಪಾರಿ ಕೊಟ್ಟಳು?  - ಅಂತ ಕೇಳಿದೆ.

ಸಾಬ್....ಅವತ್ತು ಅಕಿದು ಬರ್ತ್ ಡೆ....ನಮ್ಮದು ಫೇಸ್ಬುಕ್ ಗ್ರೂಪ್ ನಲ್ಲಿ ಯಾರೋ ಅಕಿಗೆ ಹ್ಯಾಪಿ ಬರ್ತ್ ಡೆ ಅಂತ ಹಾಕಿದ್ರು. ನಾವು ಹೋಗಿ ಹ್ಯಾಪಿ ಬರ್ತ್ ಡೆ ಅಂತ ಕಾಮೆಂಟ್ ಹಾಕಿದ್ವಿ ಸಾಬ್...ಕೆಲವು ನಮ್ಮ ಕಾಮನ್ ದೋಸ್ತರು ಬಂದು ನಮ್ಮ ಕಾಮೆಂಟ ಲೈಕ್ ಕೂಡ ಮಾಡಿದ್ರು. ಆ ಮೇಲೆ ನಾವು ಸ್ವಲ್ಪ ದಿವಸ ಫೇಸ್ಬುಕ್ ಮೇಲೆ ಬರಲಿಲ್ಲ ಸಾಬ್....ಆ ಮೇಲೆ ಬಂದು ನೋಡಿದ್ರೆ, ನಮ್ಮದು ಒಂದೇ ಕಾಮೆಂಟ್ ಗಾಯಬ್ ಆಗಿ ಬಿಟ್ಟಿದೆ. ಆವಾಗ ನಮಗೆ ತಿಳೀತು....ಇದು ನಮ್ಮ ಸಂಗೀ ಬೇಗಂ ಅವರ ಕರಾಮತ್.....ಸುಪಾರಿ ಕೊಟ್ಟಬಿಟ್ಟಿ ನಮ್ಮ ಕಾಮೆಂಟ್ encounter ಮಾಡಿಸಿ ಬಿಟ್ಟಿದ್ದಾರೆ ಅಂತ.....ಹಾಗೆ ಹೇಳಿ ಕರೀಂ ನಿಟ್ಟುಸಿರು ಬಿಟ್ಟ.

ಹೋಗ್ಗೋ....ನಿಮ್ಮಾ.....ಸಾಬ್ರಾ....ನಾ ಹೇಳಿದ್ದೆ....ಆ ಫೇಸ್ಬುಕ್ ಸಹವಾಸ ಬ್ಯಾಡ ಅಂತ. ಆದರೂ ಮಾಡ್ಲಿಕ್ಕೆ ಹೋಗಿ, ಈಗ ಹುಚ್ಚ ಆಗಿ ಕೂತಿರಿ ನೋಡ್ರೀ.....ಅಂದೆ.

ಅಲ್ಲ ಸಾಬ್...ಫೇಸ್ಬುಕ್ ದು ಏನೂ ತಪ್ಪು ಇಲ್ಲ......ಸುಪಾರಿ ಕೊಟ್ಟಾ ಬೇಗಂ ಸಂಗೀದು ಮತ್ತು encounter ಮಾಡಿದ ಪುಂಗಿದೇ ತಪ್ಪು....ಅಂತ ಮತ್ತೆ  ಒಂದು ರೌಂಡ ಸುಪಾರಿ ಕೊಟ್ಟ ಸಂಗಿ, ಎನ್ಕೌಂಟರ ಮಾಡಿದ ಪುಂಗಿ.....ಅಂತ ಡ್ಯಾನ್ಸ್ ಮಾಡೇ ಬಿಟ್ಟ.

ಅಲ್ಲೋ....ಕರೀಂ...ಯಾವದೋ ಫೇಸ್ಬುಕ್ ಗ್ರೂಪ್ ನ್ಯಾಗ ಹಾಕಿದ ಪೋಸ್ಟ್ ಅಂತಿ. ಅದನ್ನ ಹ್ಯಾಂಗ ಡಿಲೀಟ್ ಮಾಡ್ಲಿಕ್ಕೆ ಸಾಧ್ಯ? ಕೇವಲ ಅಡ್ಮಿನ್ ಮಾತ್ರ ಮಾಡಬಹುದು. ಅಥವಾ ನೀನಾ ಹೋಗಿ ಡಿಲೀಟ್ ಮಾಡಬಹುದು. ನೀನಾ ಮತ್ತೇನರಾ ಡಿಲೀಟ್ ಮಾಡಿಕೊಂಡು ಪಾಪಾ ಬೇಗಂ ಮೇಲೆ ಇಲ್ಲದ ಸಲ್ಲದ ಆರೋಪ ಮಾಡ್ಲಿಕತ್ತಿ ಏನು?......ಅಂತ ಕೇಳಿದೆ. ಯಾಕೋ ಲಾಜಿಕಲ್ ಅನ್ನಿಸಲಿಲ್ಲ ಅವನ ವಾದದ ಧಾಟಿ. ಯಾರೋ ಹೋಗಿ ಯಾಕ ಇವನ ಕಾಮೆಂಟ್ ಡಿಲೀಟ್ ಮಾಡ್ತಾರ?

ನಮಗೆ ಗೊತ್ತಿಲ್ಲ ಕ್ಯಾ? ಅಡ್ಮಿನ್ ಮಾತ್ರ ಕಾಮೆಂಟ್ ಡಿಲೀಟ್ ಮಾಡೋಕೆ ಸಾಧ್ಯ. ನಾವೂ ರೀಸರ್ಚ್ ಮಾಡಿ ತಿಳ್ಕೊಂಡಿದೀವಿ. ಫೇಸ್ಬುಕ್ ನಲ್ಲಿ ಗ್ರೂಪ್ ಅಡ್ಮಿನ್  ಪೋಸ್ಟ್ ಡಿಲೀಟ್ ಮಾಡಿದ್ರೆ ಯಾರಿಗೂ ಗೊತ್ತಾಗೋದೇ ಇಲ್ಲ. ಯಾಕೆಂದ್ರೆ ಅದು ಇನ್ಫಾರ್ಮೇಶನ್ ಫೇಸ್ಬುಕ್ ಕಡೆ ಇದ್ದರೂ ಅವರು ಅದನ್ನ ಹೊರಗೆ ಬಿಟ್ಟಿಲ್ಲ. ಹಾಂಗಾಗಿ ಒಮ್ಮೆ ಗ್ರುಪ್ ಅಡ್ಮಿನ್ ಆದ್ರಿ ಅಂದ್ರೆ ನಿಮಗೆ ಹ್ಯಾಗೆ ಬೇಕು ಹಾಗೆ ಮನ್ಮಾನಿ ಮಾಡಿಕೊಂಡು ಇರಬಹದು ನೋಡಿ.............ಅಂದ ಕರೀಂ.

ಓಹೋ....ನಿನ್ನ ಪ್ರಕಾರ ನಿಮ್ಮ ಸಂಗದಿಲ್ ಸನಂ ಉರ್ಫ್ ಸಂಗೀ ಬೇಗಂ ಗೆ ನೀನು ಹಾಕಿದ ಹ್ಯಾಪಿ ಬರ್ತ್ ಡೆ ಪೋಸ್ಟ್ ಸೇರಿಲ್ಲ. ಅದಕ್ಕೆ ಅಡ್ಮಿನ್ ಗೆ ಹೇಳಿ ಅದನ್ನ ಡಿಲೀಟ್ ಮಾಡಿಸಿದಾಳೆ ಅಂತ ನಿನ್ನ ಅರ್ಥ.....ಹೌದಿಲ್ಲೋ?......ಅಂತ ಕೇಳಿದೆ.

ಎಜ್ಜಾಟ್ಲೀ....ಹಾಗೆ ಆಗಿರೋದು ಸಾಬ್....ಇಲ್ಲ ಅಂದ್ರೆ ನಂದು  ಒಂದೇ ಪೋಸ್ಟ್ ಹೇಗೆ ಗಾಯಬ್ ಆಯ್ತು ಸಾಬ್?.....ಅಂತ ಕೌಂಟರ್ ಪ್ರಶ್ನೆ ಕೇಳಿದ.

ಆದ್ರ ಕರೀಂ....ಯಾರೂ ಒಳ್ಳೆ ಬುದ್ಧಿ, ವಿವೇಕ ಇರೋ ಅಡ್ಮಿನ್ ಮಂದಿ ಹಾಂಗ ಹಿಂದ ಮುಂದ ನೋಡದೇ, ತಮ್ಮ ಸ್ವಂತ ಜಜ್ಮೆಂಟ್ ಉಪಯೋಗಿಸದೆ, ತುಂಬಾ ಮುಖ್ಯವಾಗಿ ನಿನ್ನ ಕಡೆ ಕೇಳದೆ ಹಾಂಗೆ ಕಾಮೆಂಟ್ ಡಿಲೀಟ್ ಮಾಡೋದಿಲ್ಲ. ನಾನು ಒಂದು ಕಾಲಕ್ಕೆ ಕೆಲವು ಫೇಸ್ಬುಕ್ ಗ್ರುಪ್ಗಳ ಅಡ್ಮಿನ್ ಇದ್ದೆ. ಆದ್ರ ಒಂದೂ ಪೋಸ್ಟ್ ಡಿಲೀಟ್ ಮಾಡೋವಂತಹ ಸಂದರ್ಭ ಬರಲೇ ಇಲ್ಲ. ಬಂದರೂ ಮೇಲೆ ಹೇಳಿದಂಗ ಆಕ್ಷೇಪ ಇದ್ದವರಿಗೆ, ಮತ್ತ ಅವರ ಆಪೋಸಿಟ್ ಪಾರ್ಟಿಗೆ ಕೇಳಿಯೇ ಒಂದು ನಿರ್ಧಾರ ತಗೋಬೇಕೆ ವಿನಹಾ ಕೇವಲ ನಾ ಅಡ್ಮಿನ್ ಆಗೇನಿ, ನನಗ ಬೇಕಾದವರು ಸುಪಾರಿ ಕೊಟ್ಟರಾ ಅಂತ ಹೇಳಿ ಪೋಸ್ಟ್ ಡಿಲೀಟ್ ಮಾಡಿದರ ಆ ಬದಿರಿನಾಥ ಶಿವ ಮೆಚ್ಚೋದಿಲ್ಲ ನೋಡಪಾ. ನನಗ ತಿಳಿದ ಮಟ್ಟಿಗೆ ಯಾರೂ, ಅದು ಅಡ್ಮಿನ್ ಅಂತ ಜವಾಬ್ದಾರಿ ತೊಗೊಂಡವರು, ಹಾಂಗ ಮಾಡಲಿಕ್ಕೆ ಇಲ್ಲ......ಅಂತ ಕ್ಲಾರಿಫಿಕೆಶನ್ ಕೊಟ್ಟೆ.

ನಮಗೆ ಗೊತ್ತಿಲ್ಲ ಕ್ಯಾ? ಆದ್ರೆ ನಾ ಹ್ಯಾಪಿ ಬರ್ತ್ ಡೆ ಕಾಮೆಂಟ್ ಹಾಕಿದ ಕೂಡಲೇ ಕೆಲವು ಅನಿರೀಕ್ಷೀತ ಬೆಳವಣಿಗೆಗಳು ಆದವು ಸಾಬ್.....ಅಂದ ಕರೀಂ.

ಏನಪಾ ಅಂಥಾ ದೊಡ್ಡ ಅನಿರೀಕ್ಷೀತ ಬೆಳವಣಿಗೆಗಳು?.....ಅಂತ ಕೇಳಿದೆ.

ನಮ್ಮ ಸಂಗೀ ಬೇಗಂ ಸುಪಾರಿ ಕೊಟ್ಟಿದ್ದು ಆಕಿ ದೋಸ್ತ ಪುಂಗಿಗೆ. ಪೆಂಗೀ ಏನೂ ಅಡ್ಮಿನ್ ಇರಲಿಲ್ಲ. ಎಲ್ಲೋ ಇದ್ದವಳು ಬೋರ್ಡ್ ಮೇಲೆ ಬಂದ್ಬಿಟ್ಟಿ ನನಗೆ ಅಡ್ಮಿನ್ ಮಾಡಿ. ಲೇಡೀಸ್ ಯಾರೂ ಅಡ್ಮಿನ್ ಇಲ್ಲ ಅಂತ ಶಂಖಾ  ಹೊಡೆದಳು. ಯಾವಾಗಲೂ ನಿದ್ದಿ ಮಾಡುವ ಒಬ್ಬ ನಿದ್ದಿಬಡಕ್ ಅಡ್ಮಿನ್ ಅಕಿ ಶಂಖಾ ಹೊಡೆಯೋದು ಕೇಳಿ ಅಕಿನ್ನ ಅಡ್ಮಿನ್ ಮಾಡಿಬಿಟ್ಟಿ, ನಾನಾ ಪಾಟೇಕರ್ ತರಹ ಚಪ್ಪಾಳೆ ಹೊಡೆದುಬಿಟ್ಟಿ ಹೋಗಿ ಮತ್ತೆ ರಗ್ಗ್ ಎಳಕೊಂಡು ಮಲಗಿಬಿಟ್ಟ. ಈಗ ಮಂಗ್ಯಾನ್ ಕೈಯಲ್ಲಿ ಮಾಣಿಕ್ಯ ಕೊಟ್ಟಾಗೆ ಆಯಿತು ಸಾಬ್. ಅಡ್ಮಿನ್ ಆದವಳೇ ಪುಂಗಿ ನನ್ನ ಪೋಸ್ಟ್ ಡಿಲೀಟ್ ಮಾಡಿ ತೊಗೊಂಡಿದ್ದ ಸುಪಾರಿಗೆ ನಿಯತ್ತಾಗಿ encounter ಮಾಡಿದಳು ಸಾಬ್.....ಅಂತ ಅಂದವನೇ.......... ಸುಪಾರಿ ಕೊಟ್ಟ ಸಂಗಿ, ಎನ್ಕೌಂಟರ ಮಾಡಿದ ಪುಂಗಿ............ ಅಂತ ಮತ್ತೊಂದು ರೌಂಡ್ ಡ್ಯಾನ್ಸ್ ಮಾಡೇ ಬಿಟ್ಟ. ಈ ಸರ ನವರಸಗಳಲ್ಲಿ  ವಿಷಾದ ರಸ ಜಾಸ್ತಿ ಇತ್ತು. ತುಂಬಾ ಬೇಜಾರಾಯಿತು.

ನೋಡ್ರೀ ಸಾಬ್ರಾ....ಯಾವದು ಖರೆ...ಯಾವದು ಸುಳ್ಳು ಅಂತ ನಮಗ ಗೊತ್ತಿಲ್ಲ. ಯಾರು ನಿಮ್ಮ ಕಾಮೆಂಟ್ ಡಿಲೀಟ್ ಮಾಡಿದ್ರು ಅಂತ ಹೇಳೋದು ಕಷ್ಟ. ಕೇವಲ ನಿಮಗ ನಿಮ್ಮ ಬೇಗಂ ಜೊತಿ ಹೊಂದಾಣಿಕೆ ಆಗ್ತಾ ಇಲ್ಲ ಅಂದಾ ಮಾತ್ರಕ್ಕ ಅವರು ಯಾರಿಗೋ ನಿಮ್ಮ ಕಾಮೆಂಟ್ ಡಿಲೀಟ್ ಮಾಡಲಿಕ್ಕೆ ಸುಪಾರಿ ಕೊಟ್ಟರು, ಮತ್ಯಾರೋ ಪುಂಗಿ ಅನ್ನೋರು ಅಡ್ಮಿನ್ ಆಗಿ ನಿಮ್ಮ ಕಾಮೆಂಟ ಡಿಲೀಟ್ ಮಾಡಿದ್ರು ಅನ್ನೋದು ಯಾಕೋ ಸರಿ ಅನ್ನಿಸೋದಿಲ್ಲ ನೋಡಿ. ಯಾರ್ ಯಾರಿಗೋ ಬೆನಿಫಿಟ್ ಆಫ್ ಡೌಟ್ ಕೊಡಬೇಕು ಅಂತ ಹಿರಿಯರು ಹೇಳ್ಯಾರ್. ಹಾಂಗಿದ್ದಾಗ ನೀವು ನಿಮ್ಮ ಸ್ವಂತ ಬೇಗಂ ಮತ್ತು ಅಕಿ ದೋಸ್ತ ಪುಂಗಿಗೆ ಯಾಕ್ ಬೆನಿಫಿಟ್ ಆಫ್ ಡೌಟ್ ಕೊಡಬಾರದು ಅಂತ ನಾ ಹೇಳೋದು.....ಅಂತ ಒಂದು ಪ್ರೊಪೋಸಲ್ ಕೊಟ್ಟೆ ಕರೀಮ್ಗಾ.

ಅದೂ ಸರಿ ಸಾಬ್....ಯಾರೋ ನಮ್ಮ ಬರ್ತ್ ಡೆ ವಿಷಶ್ ಕಾಮೆಂಟ್ ಡಿಲೀಟ್ ಮಾಡಿದ್ರೆ ನಾವೇನು ಮಾಡೋಕೆ ಆಗ್ತದೆ? ಪ್ರೂಫ್ ಇಲ್ಲ. ಆದರೂ ಎಲ್ಲ ಪಾಯಿಂಟ್ಸ್ ಕೂಡ್ಸಿದ್ರೆ ಸಂಗೀ ಬೇಗಂ ಸುಪಾರಿ ಮೇಲೆ ಭಾಳ್ ಡೌಟ್ ಸಾಬ್....ಅಂತ ನಿಟ್ಟುಸಿರು ಬಿಟ್ಟ.

ನೋಡಪಾ ಕರೀಂ....ನೀ ಏನೂ ಬರೀಬಾರದಂತ ಕಾಮೆಂಟ್ ಏನೂ ಹಾಕಿಲ್ಲ. ಅಕಿ ಹಾಪ್ ಬೇಗಂ ನಿನಗ ಏನಾ ಅಂದಿರ್ಲೀ, ನಿನ್ನ ಹ್ಯಾಂಗಾ ಟ್ರೀಟ್ ಮಾಡಿರಲಿ, ನಿನ್ನ ಫೀಲಿಂಗ್ ಎಷ್ಟಾ ಹರ್ಟ್ ಮಾಡಿರಲಿ, ಪುಂಗಿಗೆ ಹೇಳಿ ನಿನ್ನ ಮ್ಯಾಲೆ ಎಷ್ಟಾ ಪಾಟ್ ಶಾಟ್ (potshot) ಹಾಕ್ಸಿರಲಿ, ಅದೆಲ್ಲ ಮರೆತು ಹೋಗಿ  ಪ್ರೀತಿಯಿಂದ ಹ್ಯಾಪಿ ಬರ್ತ್ ಡೆ ಅಂತ ಕಾಮೆಂಟ್ ಹಾಕೀದಿ. ನಿನ್ನ ಬಗ್ಗೆ ನಮಗ ಭಾಳ ಹೆಮ್ಮೆ ಅದ. ಆದ್ರ ನಿನ್ನ ಜನ್ಮ ದಿನ ಹಾರೈಕೆ ಯಾವದೋ ಕಾರಣಕ್ಕ ಅವರಿಗೆ ಸೇರಿಲ್ಲ. ಏನು ಮಾಡ್ಲಿಕ್ಕೆ ಬರ್ತದ? ಹಾಂಗಾಗಿ ಡಿಲೀಟ್ ಮಾಡಿಸಿರಬಹುದು. ಹೋಗ್ಲೀ ಬಿಡು. ಬೇಕಾದ್ರ ಒಂದಲ್ಲ ಹತ್ತು ಸರೆ ಮನಿಸ್ಸಿನ್ಯಾಗ ಹ್ಯಾಪಿ ಬರ್ತ್ ಡೆ ಅಂದು ಬಿಡು. ಅದನ್ನ ಯಾವ ಪುಂಗಿ ಅಥವಾ ಮಂಗಿ ಡಿಲೀಟ್ ಮಾಡ್ಲಿಕ್ಕೆ ಸಾಧ್ಯ ಇಲ್ಲ ನೋಡು. ಅಲ್ಲ ಫೇಸ್ಬುಕ್ ಮೇಲೆ ಕಾಮೆಂಟ್ ಡಿಲೀಟ್ ಮಾಡಿದಾಕ್ಷಣ ನಿನ್ನಂತ ಸಚ್ಚೆ ದಿಲ್ ಕಾ ಆದ್ಮಿ ಮಾಡಿದ ದುವಾ ಏನು ಬೇಕಾರ್ ಹೋಗ್ತಾವ್ ಅಂತ ಮಾಡಿ ಏನು? ನಿಮ್ಮ ಸಾಲ್ ಗಿರಾ ದುವಾ ನಿಮ್ಮ ಬೇಗಂ ಗೆ ಮುಟ್ಟು ಟೈಮ್ನ್ಯಾಗ ಸರಿಯಾಗಿ ಮುಟ್ಟಿ ಅಕಿಗೇ ಗೊತ್ತಾಗ್ತದ ನಿನ್ನ ಒಳ್ಳೆತನ. ಅಲ್ಲಿ ತನಕ ಸಹನಾ ತೋಗೊಪ್ಪಾ ದೋಸ್ತ. ಈ ಕಲಿಯುಗದಾಗ ಒಳ್ಳೆ ಮಂದಿದು ಭಾಳ್ ಪರೀಕ್ಷಾ ಆಗ್ತಾವ ನೋಡೋ ಕರೀಂ. ನನಗ ಗೊತ್ತದ ನೀ ಎಷ್ಟ ಒಳ್ಳೆಯವ ಅಂತ.....ಅಂತ ತಿಳಿದ ತಿಳಿಯದ ಫಿಲೋಸೋಫಿ ಝಾಡಿಸಿದೆ.

ಹೌದು ಸಾಬ್....ಕರೆಕ್ಟ್...ಇನ್ನು ಮುಂದೆ ಗ್ರೂಪ್ ನಲ್ಲಿ ಎರಡು, ಮೂರು ಸಲೆ ಹ್ಯಾಪಿ ಬರ್ತ್ ಡೆ ಹಾಕಿ ಬಿಡ್ತೇನಿ. ಮೊದಲನೇಯದನ್ನು ಡಿಲೀಟ್ ಮಾಡಿದರೂ ಎರಡನೇ ಪೋಸ್ಟ್ ಡಿಲೀಟ್ ಮಾಡೋವಾಗ ಆತ್ಮಸಾಕ್ಷಿ ಅಂತ ಇರ್ತದೆ ನೋಡಿ, ಅದು ಬಂದಿ ಕಟ್, ಕಟ್ ಅಂತಾ ಕಡಿಬೇಕು ನೋಡಿ. ಹಾಂಗಾಗಿ ಒಂದೇ ಡಿಲೀಟ್ ಮಾಡಿಬಿಟ್ಟು ಅವರಿಗೇ  ಪಾಪಪ್ರಜ್ಞೆ ಬಂದು ನಮಗೆ ಮನಸ್ಸಿನಲ್ಲೇ ಸಾರಿ ಅನ್ನಬೇಕು ನೋಡಿ ಅಷ್ಟು ಒಳ್ಳೇತನ ತೋರ್ಸ್ತೀನಿ ಸಾಬ್.....ಏನು ಅಂತ ತಿಳ್ಕೊಂಡಿದಾರೆ ನಮಗೆ? ಮುನ್ನಾಭಾಯಿ ನೋಡಿಲ್ಲ? ಎಲ್ಲರಿಗೂ ರೋಸ್ ಕೊಟ್ಟಿ ಅಂದರ ಮಾಡಿಕೊಂಡವರು ನಾವು ಸಾಬ್.....ಅಂತ ಹುರುಪಿನಿಂದ ಹೇಳಿದ.

ಅದು ನೋಡ್ರೀ ಸಾಬರ.....ಮಾತು ಅಂದ್ರ....ಅಲ್ಲ ನೀವು ಏನ ಮಾಡ್ರಿ....ಅದು ನಿಮ್ಮ ಮತ್ತು ನಿಮ್ಮ ಖುದಾ ನಡುವೆ ನೋಡ್ರೀ. ನಿಮ್ಮ ಮತ್ತು ನಿಮ್ಮ ಬೇಗಂ ಅಥವಾ ಪುಂಗಿ ಅಥವಾ ಇನ್ನೊಬ್ಬರ ಜೊತಿ ಅಲ್ಲವೇ ಅಲ್ಲ. ಅದನ್ನ ಮನಸ್ಸಿನ್ಯಾಗ ಇಟ್ಟುಗೊಂಡು ಎಲ್ಲ ಕೆಲಸ ಮಾಡ್ರಿ. ಎಲ್ಲವೂ ಶುಭಂ ಆಗ್ತದ ನೋಡ್ರೀ. ಈಗ ಮನಿಗೆ ಹೋಗೋಣ ಏನು?.....ಅಂತ ಕೇಳಿದೆ.

ಆದ್ರೆ ಸಾಬ್....ನಮ್ಮ ಹುಚ್ಚು?......ಅಂತ ಹಿಂದೆ ಮುಂದೆ ನೋಡಿದ ಕರೀಂ.

ಅಲ್ಲರೀ.....ನಿಮ್ಮ ಹ್ಯಾಪಿ ಬರ್ತ್ ಡೆ ಕಾಮೆಂಟ್ ಗಾಯಬ ಆಗಿದ್ದಕ್ಕ ಟೆನ್ಷನ್ ತಗೊಂಡು ಸ್ವಲ್ಪ ನರ್ವಸ್ ಬ್ರೆಕಡೌನ್ ಆಗಿತ್ತು ಅಂತ ಅನ್ನಸ್ತದ.....ಅದ ನೆವ ಮಾಡಿಕೊಂಡು ನಿಮ್ಮ ಹಾಪ್ ಬೇಗಂ ನಿಮ್ಮನ್ನು ಮೆಂಟಲ್ ಹಾಸ್ಪಿಟಲ್ ಗೆ ಅಡ್ಮಿಟ್ ಮಾಡಿ ಬಿಟ್ಟಿದ್ದರು ಅಂತ ಕಾಣಸ್ತದ. ಈಗೆಲ್ಲಾ ಸರಿ ಇದ್ದೀರಿ. ಮಸ್ತ ಡ್ಯಾನ್ಸ್ ಮಾಡಿ ರಿಲ್ಯಾಕ್ಸ್ ಆಗೀರಿ. ಈಗ ಏನೂ ಹುಚ್ಚು ಪಚ್ಚು ಇಲ್ಲ. ಬರ್ರಿ....ಮನಿಗೆ ಹೋಗಿ ಮಸ್ತ ಪಾರ್ಟಿ ಮಾಡೋಣ.....ಅಂತ ಕರ್ಕೊಂಡು ಬಂದೆ. ಡಾಕ್ಟರ್ ನೋಡಿ ಎಲ್ಲ ಬರಾಬರ್ ಅದ ಅಂತ ರಿಲೀಸ್ ಮಾಡಿದ್ರು. ಇಬ್ಬರೂ ಕೂಡಿ ಮನಿಗೆ ಬಂದ್ವಿ.


** ಈ ಲೇಖನಕ್ಕೆ ಸ್ಪೂರ್ತಿ ಒಂದು ನೈಜ ಘಟನೆ. ಈ ಫೇಸ್ಬುಕ್ ಎಂಬ ಮನೆಹಾಳ್ ವೆಬ್ ಸೈಟ್ ಎಷ್ಟೋ ಬಾಂಧವ್ಯಗಳನ್ನು ಹೊಸಕಿ ಹಾಕಿದೆ. ನಮ್ಮದು ಒಂದು ಗ್ರುಪ್ ಇದೆ. ಕೆಲ ಸ್ನೇಹಿತರು ಕೂಡಿ ಹರಟೆ ಮತ್ತೊಂದು ಹೊಡೆಯುತ್ತಿದ್ದೆವು. ಒಂದು ದಿವಸ ಅಚಾನಕ್ ಕೆಲವು ಪೋಸ್ಟ್ ಗಳು ಮಾಯವಾದವು. ಯಾರೂ ಪೋಸ್ಟ್ ಡಿಲೀಟ್ ಮಾಡಿದ ಹಾಗೆ ಇರಲಿಲ್ಲ. ಫೇಸ್ಬುಕ್ ಪ್ರಾಬ್ಲೆಮ್ ನಿಂದ ಅವೇ ಹೇಗೋ ಕಳೆದು ಹೋಗಿದ್ದವು ಅಂತ ಅನ್ನಿಸುತ್ತದೆ. ಪೋಸ್ಟ್ ಹಾಕಿದವರು ತಮ್ಮ ಪೋಸ್ಟ್ ಕಾಣದೇ, ಇದು ಅಡ್ಮಿನ್ ಗಳ ಕಿತಾಪತಿಯೆಂದು ಸಿಟ್ಟಿಗೆದ್ದು ಗ್ರುಪ್ ಬಿಟ್ಟೇ ಹೋದರು. ಅದು ದುರಂತ. ನಾನು ವೈಯಕ್ತಿಕ ಮಟ್ಟದಲ್ಲಿ ಎಷ್ಟೇ ಹೇಳಿದರೂ ಅವರಿಗೆ ನಂಬಿಕೆ ಬರಲಿಲ್ಲ. ಯಾವದೇ ಸಭ್ಯ, ಒಳ್ಳೆಯ, ವಿವೇಕವಂತ, ನೈತಿಕ  ಅಡ್ಮಿನ್ ಪೋಸ್ಟ್ ಡಿಲೀಟ್ ಮಾಡೋದಿಲ್ಲ ಅಂತ ಹೇಳೇ ಹೇಳಿದೆ ಆದರೂ ಅವರನ್ನು ನಂಬಿಸಲು ಬೇಕಾದ ಪುರಾವೆ ಇರಲಿಲ್ಲ. ದರಿದ್ರ ಫೇಸ್ಬುಕ್ ಆಡಿಟ್ ಲಾಗ್ ಕೊಡೋದಿಲ್ಲ. ಹಾಗಾಗಿ ಅಡ್ಮಿನ್ ಏನು ಮಾಡಿದರು ಗ್ರುಪ್ ಮೇಲೆ ಅಂತ ತಿಳಿಯುವದು ಅಸಾಧ್ಯ. ಆಡಿಟ್ ಲಾಗ್ಸ್ ಇದ್ದರೆ ಯಾರು ಏನು ಮಾಡಿದರು ಅನ್ನುವದರ ಬಗ್ಗೆ ಸಂಶಯವೇ ಇರುತ್ತಿದ್ದಿಲ್ಲ. ಅಡ್ಮಿನ್ ಸಹಿತ ನಮ್ಮವರೇ ಇರುವದರಿಂದ ಹಾಗೆ ಮಾಡಬಾರದ್ದು ಮಾಡಲಿಕ್ಕಿಲ್ಲ, ಅನೈತಿಕ ಕೆಲಸ, ಕುಕೃತ್ಯ ಮಾಡಲಿಕ್ಕಿಲ್ಲ ಅಂತ ಬೆನಿಫಿಟ್ ಆಫ್ ಡೌಟ್ ಕೊಡುವದು ಒಳ್ಳೆಯದು. ಹಾಗೆ ಕೊಟ್ಟವರೂ ಒಂದು ವೇಳೆ ನಮ್ಮ ವಿಶ್ವಾಸಕ್ಕೆ ವಿರುದ್ಧವಾಗಿ ಅನ್ಯಾಯದ ಕೆಲಸ ಮಾಡಿದರೆ, ಅದು ಅವರ ಮತ್ತು ಅವರ ಅಂತರಾತ್ಮದ ನಡುವೆ ಬಿಟ್ಟಿದ್ದು.

ಆದರೂ ಕೆಲವೊಮ್ಮೆ ಹೇಗೆ ಘಟನೆಗಳು ನಡೆಯುತ್ತವೆ ಅಂದರೆ - ಇತನೇ ಸಾರೆ coincidences. ಹಜಂ ನಹಿ ಹೋತಾ, ಜೋ - ಅಂತ ಕಾರ್ಪೋರೆಟ್ ಮೂವಿ ಡೈಲಾಗ್ ನೆನಪಾಯಿತು.

Thursday, July 26, 2012

ಬಗಲೆತ್ತಿದ ಭಗವಂತ, ಬೆಚ್ಚಿಬಿದ್ದ ಬಾರ್ಬರಿಣಿ

1965-70 ಇಸವೀ ಆಸುಪಾಸಿನ ಮಾತು.

ಆಗೆಲ್ಲ ವಿದೇಶಕ್ಕೆ ಹೋಗುವದು, ಅಲ್ಲಿರುವದು, ಎಲ್ಲ ದೊಡ್ಡ ಮಾತು.

ನಾವು ಧಾರವಾಡ ಮಂದಿ. ಕರ್ನಾಟಕ ವಿಶ್ವವಿದ್ಯಾಲಯ ನಮ್ಮ ಹೆಮ್ಮೆ. ಅದು  ಕವಿವಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ. ಸುಮಾರು ಜನ ಪ್ರೊಫೆಸರ್ ಮಂದಿ ಬೇರೆ ಬೇರೆ ದೇಶಕ್ಕೆ ಹೋಗಿ ರಿಸರ್ಚ್, ಅದು, ಇದು, ಮಾಡಿಕೊಂಡು ಬರುತ್ತಿದ್ದರು.

ಇದೇ ಸ್ಕೀಂನಲ್ಲಿ ಅಮೇರಿಕಕ್ಕೆ ಹೋದವರು ಒಬ್ಬ ಪ್ರೊಫೆಸರ್. ಆ ಕಾಲದಲ್ಲಿ ಇಷ್ಟೆಲ್ಲಾ ಮಾಹಿತಿ ಇರಲಿಲ್ಲ ನೋಡಿ. ಯಾರೋ ಹೇಳಿದ್ದು, ಎಲ್ಲೋ ಸಿಕ್ಕ ಪ್ರವಾಸ ಪುಸ್ತಕ ಓದಿದ್ದು, ಅಮೇರಿಕನ್ ಕಾನ್ಸುಲೇಟ್ ಕೊಟ್ಟ ಮಾಹಿತಿ, ಇತ್ಯಾದಿಗಳ ಮೇಲೆ ಹೋಗುವ, ಅಮೇರಿಕಕ್ಕೆ ಹೊಂದಿಕೊಳ್ಳುವ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕಷ್ಟ ಕಷ್ಟ.

ಅಂತೂ ಇಂತೂ ತಯಾರ್ ಆಗಿ ಹೊರಟರು ಈ ಕವಿವಿ ಪ್ರೊಫೆಸರ್. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ , "ವಿದೇಶ ಪ್ರಯಾಣ" ಎಂಬ ಶೀರ್ಷಿಕೆ ಅಡಿಯಲ್ಲಿ,  ಸೂಟು ಬೂಟು ಹಾಕಿಕೊಂಡು, ಕಳ್ಳ ಗುಮ್ಮನಂತೆ ಕಾಣುವ ಫೋಟೋ ಇರುವ ಪ್ರಕಟಣೆಯೂ ಬಂತು. ಅದು ಬಂದಿಲ್ಲ ಅಂದರೆ ಬಾಕಿ ಎಲ್ಲ ಇದ್ದರೂ ನೀವು ವಿದೇಶಕ್ಕೆ ಹೋಗೊ ಹಾಗೆ ಇಲ್ಲ. ಹೊರಡೋ ದಿನ ರೇಲ್ವೆ ಸ್ಟೇಶನ್ ನಲ್ಲಿ ಹಾರ, ತುರಾಯಿ, ಎಲ್ಲ ಹಾಕಿ ಪ್ರೊಫೆಸರ್ ಮತ್ತು ಅವರ ಕುಟುಂಬವನ್ನು ಬಾಂಬೆಗೆ ಕಳಿಸಲಾಯಿತು. ಅಲ್ಲಿಂದ ವಿಮಾನದಲ್ಲಿ ಅವರ ಪಯಣ ಅಮೇರಿಕಾಗೆ.

ಪ್ರೊಫೆಸರ್ ಬಂದರು. ಅಮೇರಿಕಾದ ಯಾವದೋ ಒಂದು ಮೂಲೆಯಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಅವರ ನೇಮಕ ಆಗಿತ್ತು. ಆ ಊರಿನ ಜನ ನೋಡಿದ ಮೊದಲನೇ ಭಾರತೀಯರು ಇವರು ಇರಬೇಕು. ಎರಡೂ ಕಡೆಯಿಂದ ಸಿಕ್ಕಾಪಟ್ಟೆ ಕುತೂಹಲವೋ ಕುತೂಹಲ.

ತಿಂಗಳ ಆ ಟೈಮ್ ಬಂತು. ಅಯ್ಯೋ...ತಪ್ಪು ತಿಳಿಬೇಡಿ. ಹೇರ್ ಕಟಿಂಗ್ ಟೈಮ್. ಅಷ್ಟೇ.

ಒಂದು ತಿಂಗಳ ನಂತರ ಪ್ರೊಫೆಸರ್ ಗೆ ಹೇರಕಟಿಂಗ್ ಮಾಡಿಸಬೇಕಾಯಿತು.ಶುದ್ಧ ಧಾರವಾಡ  ಕನ್ನಡದದಲ್ಲಿ ಹಜಾಮತಿ ಅಥವಾ ಕಷ್ಟಾ. ಹಜಾಮತಿ ಅನ್ನೋದು ಹಿಂದಿಯ ಹಜಾಮತ್ ಅನ್ನೊ ಪದದ ಕನ್ನಡ ತತ್ಸಮ. ಈ ಹಜಾ'ಮತಿ' ಯಾವದೇ ತರಹದ ಇತರೆ ಮತಿಯರಿಗೆ ಸೇರಿದ್ದಲ್ಲ. ಭಾನುಮತಿ, ಮಧುಮತಿ, ಚಾರುಮತಿ ಎಲ್ಲ ಮತಿಗಳೇ ಬೇರೆ. ಹಜಾಮತಿಯೇ ಬೇರೆ.

ಗೋಕರ್ಣ ಹಜಾಮತಿಗೆ ಮೊದಲನೇ ಸಲ ಇರುವಂತೆ ಅಮೇರಿಕನ್ ಹಜಾಮತಿಗೂ ಮೊದಲನೇಯ ಸಲ ಅಂತ ಇರುತ್ತದೆ ನೋಡಿ. ಇದು ಮಾಸ್ತರರ ಮೊದಲ ಅಮೇರಿಕನ್ ಹಜಾಮತಿ. ಸಲೂನ್ ಹುಡುಕಿಕೊಂಡು ಹೊರಟರು. ಸಿಕ್ಕಿತು. ಒಳಹೊಕ್ಕರು. ನೋಡಿದರೆ ಕೇವಲ ಲಲನಾಮಣಿಗಳೇ ಅಲ್ಲಿ ಕತ್ತರಿ ಆಡಿಸುತ್ತಿದ್ದರು. ಅವರ ಮುಂದೆ ತಲೆ ಬಗ್ಗಿಸಿ ಕೂತವರಲ್ಲಿ ಗಂಡಸರೂ ಹೆಂಗಸರೂ ಇಬ್ಬರೂ ಇದ್ದರು.

ಮಾಸ್ತರರಿಗೆ ಒಂದು ಕ್ಷಣ ಘಾಬರಿ ಆಯಿತು. ಎಲ್ಲಿ ಬೇರೆಯೇ ತರಹದ ಜಾಗಕ್ಕೆ ಬಂದೆನೋ ಹೇಗೆ? ಇಲ್ಲಿ ಹಜಾಮತಿಯ ಹೆಸರಿನಲ್ಲಿ ಅದು, ಮಸಾಜು, ಮತ್ತೊಂದು ಅನ್ನುವ ಇತರೆ(?) ತರಹದ ಸರ್ವೀಸ್ ಸಹಿತ ಮಾಡಲಾಗುತ್ತದೆಯೇ ಹೇಗೆ?

ಭಾರತದ ಕುಖ್ಯಾತ ಮಸಾಜು ಪಾರ್ಲರ್ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿದಿದ್ದ ಅವರು ಒಂದು ಕ್ಷಣ ಅಲ್ಲಿ ಕಟಿಂಗ್ ಮಾಡಿಸಲು ಹಿಂದೆ ಮುಂದೆ ನೋಡಿದರು.  ಮಾಸ್ತರ್ ಹೋಗಿ ಕೂಡುವದಕ್ಕೂ, ಪೋಲಿಸ್ ರೇಡ್ ಆಗುವದಕ್ಕೂ, ನಂತರ ಪೋಲಿಸ್ ಸ್ಟೇಶನ್ ನಲ್ಲಿ ಪಾಟಿ ಹಿಡಿದುಕೊಂಡು ನಿಂತು ಫೋಟೋ ತೆಗೆಸಿಕೊಂಡು,  ಅಮೇರಿಕಾದ ಮಸಾಜ್ ಪಾರ್ಲರನಲ್ಲಿ "ಸಮಾಜ ಸೇವೆ" ಮಾಡಿಸಿಕೊಳ್ಳುತ್ತಿದ್ದ ಭಾರತೀಯ ಪ್ರೊಫೆಸರ್ ಬಂಧನ ಅಂತ ಸುದ್ದಿ ಬಂದು, ಹಲ್ಲಾ ಗುಲ್ಲಾ ಎದ್ದು..........ಯಾರಿಗೆ ಬೇಕ್ರೀ.....ಅಂತ ಒಂದು ಕ್ಷಣ ಮುಂದಾಲೋಚನೆ ಮಾಡಿದರು. ಆದರೆ ಆ ತರಹದ ಮಸಾಜ್ ಅಡ್ಡೆ ತರಹ ಕಾಣಲಿಲ್ಲ. ಹಜಾಮತಿ ಮಾಡುತ್ತಿರುವ ಹೆಂಗಸರೂ, ಮಾಡಿಸಿಕೊಳ್ಳುತ್ತಿರುವ ಗಂಡಸರೂ ಕೇವಲ ಅದರಲ್ಲೇ ಮಗ್ನರಾಗಿದ್ದರೇ ವಿನಹಾ ಮತ್ತೇನು ಅಂತಹ ವಿಶೇಷ ಕಂಡು ಬರಲಿಲ್ಲ. ಸೇಫ್ ಅಂತ ಒಳಗೆ ಬಂದು ಕೂತರು ಮಾಸ್ತರರು.

ಸ್ವಲ್ಪ ಹೊತ್ತಿನ ನಂತರ ಅವರ ಪಾಳಿ ಬಂತು. ಹೋಗಿ ಹಜಾಮತಿ ಕುರ್ಚಿ ಮೇಲೆ ವಿರಾಜಮಾನರಾದರು.

ಎಷ್ಟು ನಂಬರ್ ಹಚ್ಚಲಿ? - ಅಂದು ನಗು ನಗುತ್ತ ಕೇಳಿದಾಕೆ ಬಾರ್ಬರಿಣಿ.

ಅಂದ್ರೆ? ನಂಬರ್ರ? ಏನು?  ಫೋನ್ ನಂಬರ್ರ್ ಏನು?- ಅಂತ ಮಾಸ್ತರ್ ಕನ್ಫ್ಯೂಸ್ ಆಗಿ ಕೇಳಿದ್ರು.

ಅಯ್ಯೋ...ಅಲ್ಲ....ಹೇರ್ ಕ್ಲಿಪ್ಪರ್ ಸೆಟ್ಟಿಂಗ್ ನಂಬರ.....- ಅಂತ ಬಾರ್ಬರಿಣಿ (ಲೇಡಿ ಬಾರ್ಬರ್) ವಿವರಿಸಿದಳು.

ಓಹೋ....ಇದು ಮಶೀನ್ ಕಟ್ಟಿಂಗ್. ಚಿಕ್ಕಂದಿನಲ್ಲಿ ಇಲಿ ತಿಂದ ಹಾಗೆ ಮಷಿನ್ ಕಟ್ ಮಾಡಿಸಿ ಗೊತ್ತಿದ್ದ ಮಾಸ್ತರರು ಅದು ಬೇಡ, ಕೇವಲ ಕತ್ತರಿ ಸಾಕು ಅಂದರು.

ಬರೇ ಕತ್ರೀನಾ? - ಅಂತ ರಾಗ ಎಳೆದಳು ಆಕೆ. ಕತ್ತರಿ ಕಟ್ಟಿಂಗ್ ಸ್ವಲ್ಪ ಜಾಸ್ತಿ ಟೈಮ್ ತೋಗೋತ್ತದೆ ನೋಡಿ. ಮಶೀನ್ ಹಚ್ಚಿ ಒಂದು ದೊಡ್ಡ ಮಟ್ಟದ್ದನ್ನು ಮಾಡಿಬಿಟ್ಟಿದ್ದರೆ, ನಂತರ ಕತ್ರಿ ಆಡಿಸಿದ ನೆವ ಮಾಡಿ, ಕಾಸ್ ಕಿತ್ತುಗೊಂಡು, ಹ್ಯಾವ ಎ ನೈಸ್ ಡೇ, ಅಂತ ಸಾಗಹಾಕಬಹುದಿತ್ತು. ಫುಲ್ ಸೀಸರ್ ಕಟ್ ಮಾಡಿ ಅಂತಾನೆ ಕೊರಮ - ಅಂತ ಗೊಣಗುತ್ತ ಕತ್ತರಿ, ಹಣಿಗೆ ಮತ್ತೊಂದು ತೆಗೆದುಕೊಂಡು ಶುರು ಮಾಡಿದಳು.

ನಮ್ಮಲ್ಲಿ ನಾಪಿತರು ಚಕಚಕ ಮಾಡಿ ಮುಗಿಸುವ ಸೀಸರ್ ಕಟಿಂಗ್ ಅಂದ್ರೆ ಇಲ್ಲಿಯವರಿಗೆ ತುಂಬಾ ಕಷ್ಟ. ಏನೇನೋ ಯೋಗಾಸನ ಹಾಕಿದಂತೆ ತಲೆ ಸುತ್ತಾ ಮುತ್ತಾ ಬಗ್ಗಿ, ಒಂದೊಂದೇ ಕೂದಲನ್ನ ಎಣಿಸಿ, ಎಣಿಸಿ  ಕಟ್ ಮಾಡುತ್ತಾರೆ. ಹಾಗೆಯೇ ಮಾಡಿ ಮುಗಿಸಿದಳು.

ಸಾರ್,ಆಯಿತು - ಅಂದಳು ಬಾರ್ಬರಿಣಿ.

ಮಾಸ್ತರಿಗೆ ಆಶ್ಚರ್ಯ. ನಮ್ಮೂರಲ್ಲಿ ಕತ್ತರಿ ಮುಗಿದ ನಂತರ ಕತ್ತಿ (ರೇಸರ್, ಕೂಪು) ಹಚ್ಚಿ ನುಣುಪಾಗಿ ಕುತ್ತಿಗೆ ಮೇಲೆ, ಕಿವಿ ಸುತ್ತ ಒಂದು ಸಾರೆ ರೇಸರ್ ನಲ್ಲಿ ಎಳಿಸಿಕೊಳ್ಳದಿದ್ದರೆ ಕಟಿಂಗ್ ಪೂರ್ತಿ ಆದ ಅನುಭೂತಿಯೇ ಭಾಳ ಜನರಿಗೆ ಬರುವದಿಲ್ಲ. ಕೇಳಿದರೆ - ರೇಸರ್ ಯ್ಯೂಸ್ ಮಾಡೋಕೆ ಸ್ಪೆಷಲ್ ಪರ್ಮಿಶನ್ ಬೇಕು. ಸಾಮಾನ್ಯ ಹೇರ್ಕಟಿಂಗ್ ಮಂದಿ ಹತ್ರ ಅದು ಇರೋದಿಲ್ಲ. ನಮ್ಮ ಹತ್ರಾನೂ ಇಲ್ಲ. ಅದಕ್ಕೇ ಚಿಕ್ಕ ಮಶೀನ್ ನಿಂದ ಹಿಂದೆ, ಕಿವಿ ಮೇಲೆ ಸಾಪ್ ಮಾಡಿದ್ದೇನೆ. ಇಲ್ಲೆಲ್ಲಾ ಅಷ್ಟೇ - ಅಂದಳು.

ಮಾಸ್ತರಿಗೋ ಸಿಕ್ಕಾಪಟ್ಟೆ ಆಶ್ಚರ್ಯ. ನಾಪಿತರ ಹತ್ರ ರೇಸರ್ ಇಲ್ಲಾ ಅಂದ್ರೆ ಏನು ಸರ್ಜನ್ ಕತ್ತಿ ಇರೋತ್ತಾ ಮತ್ತೆ? ಥತ್ ಇವರ ಅಂತ ಕತ್ತು ಸವರಿಕೊಂಡರು. ಸರಿ ಸ್ಮೂತ್ ಆದ ಫೀಲಿಂಗ್ ಅಂತೂ ಬರಲಿಲ್ಲ. ಹಾಳಾಗಿ ಹೋಗಲಿ ಅಂತ ಬಿಟ್ಟರು.

ಹೇರ್ ಡ್ರೈಯರ್ ನಲ್ಲಿ ಡರ್ರ್ ಬರ್ರ್ ಅಂತ ವ್ಯಾಕ್ಯೂಮ್ ಕ್ಲೀನರ್ ಹಾಗೆ ಕತ್ತರಿಸಿಕೊಂಡು ಬಿದ್ದಿದ್ದ ಇದ್ದ ಬದ್ದ ಕೂದಲೆಲ್ಲ ಹಾರಿಸಿ, ಮೇಲೆ ಹೊದಿಸಿದ್ದ ಹೊದಿಕೆ ತೆಗೆದು.......ಡನ್....ಡನಾ...ಡನ್....ಮುಗೀತು....ಏಳಿ....ಅನ್ನೊ ಲುಕ್ ಕೊಟ್ಟಳು.

ಪ್ರೊಫೆಸರ್ ಕೂತೇ ಇದ್ದರು. ಬಾರ್ಬರಣಿಗೂ ತಿಳಿಯಲಿಲ್ಲ. ಯಾಕೆ ಕಸ್ಟಮರ್ ಕಟಿಂಗ್ ಆದ ನಂತರವೂ ಇನ್ನೂ ಕೂತೇ ಇದ್ದಾನೆ ಅಂತ.

ಮತ್ತೇನಾದರು ಮಾಡಬೇಕೆ, ಸಾರ್? - ಅಂತ ಕೇಳಿದಳು.

ಇದಕ್ಕಾಗಿಯೇ ಕಾಯುತ್ತಿದ್ದೆ ಅಂತ ಲುಕ್ ಕೊಡುತ್ತ ಕೂತಿದ್ದ ಪ್ರೊಫೆಸರ್ ಸಾಹೇಬರು ರೆಗುಲರ್ ಆಗಿ ಮಾಡುತ್ತಿದ್ದ ಒಂದು ಕೆಲಸ ಮಾಡಿಯೇ ಬಿಟ್ಟರು. ಅನಾಹುತ.

ಎರಡೂ ಕೈ ಕೆಳಗೆ ತೆಗೆದುಕೊಂಡು ಹೋದವರೇ ಇನ್ ಶರ್ಟ್ ಮಾಡಿದ್ದ ಶರ್ಟು, ಬನಿಯನ್ ಕಿತ್ತು ಔಟ್ ಶರ್ಟ್ ಮಾಡಿಕೊಂಡರು. ಮರುಕ್ಷಣದಲ್ಲಿ ಎರಡನ್ನೂ ಮೇಲೆ ಎತ್ತಿ ಬಿಟ್ಟರು. ಎತ್ತಿ ಬಿಟ್ಟು, ನಂತರದ ಕೆಲಸ ಆಕೆಯದು ಅನ್ನೋ ಹಾಗೆ ಮುಖದ ಮೇಲೆ ಬುರ್ಕಾ ತರಹ ಬನಿಯನ್, ಶರ್ಟ್ ಎಳ್ಕೊಂಡು, ತಲೆ ಮೇಲೆ ಕೈ ಇಟ್ಟುಗೊಂಡು ಕೂತುಬಿಟ್ಟರು. ಅವರ ಕುತ್ತಿಗೆಯಿಂದ ಸೊಂಟದವರೆಗಿನ ಬರೀಮೈ ನೋಡುವ ಭಾಗ್ಯ(?) ಸುತ್ತಲಿನ ಜನರದ್ದು ಆಗಿತ್ತು.

ಬಾರ್ಬರಣಿಗೆ ಇಂತಹ ಸನ್ನಿವೇಶ ಎದುರಾಗಿದ್ದು ಇದೇ ಮೊದಲ ಸಲ ಅನ್ನಿಸುತ್ತದೆ. ದಿಗ್ಭ್ರಾಂತಳಾಗಿಬಿಟ್ಟಳು. ಏನು ಮಾಡಬೇಕು ಅಂತ ತಿಳಿಯಲಿಲ್ಲ ಆಕೆಗೆ.

ಆದರೂ ಹತ್ತಾರು ಧೀರ್ಘ ಉಸಿರೆಳೆದುಕೊಂಡು, ಸಾವರಿಸಿಕೊಂಡು ಕೇಳಿದಳು.

ಏನು ಮಾಡಬೇಕು ಸಾರ್? ಹೀಗೆ ಅಂಗಿ ಮುಖದ ಮೇಲೆ ಏರಿಸ್ಕೊಂಡು ಕೂತ್ರಿ. ತಿಳಿಲಿಲ್ಲ -  ಅಂತ ಅಳಕುತ್ತ ಹೇಳಿದಳು.

ಪ್ರೊಫೆಸರ್ ಸಾಹೇಬರಿಗೆ ಈಗ ಅಸಹನೆ. ನಮ್ಮ ಧಾರವಾಡದಲ್ಲಿ ಆಗಿದ್ದರೆ ಮಸ್ತ ಕಟಿಂಗ್ ಮಾಡಿ, ಒಂದು ಹತ್ತು ನಿಮಿಷ ತಲೆಗೆ ಎಣ್ಣೆ ತಪತಪ ಬಡಿದು ಮಸಾಜ್ (ತಲೆಗೆ ಮಾತ್ರ ಮತ್ತೆ!) ಮಾಡಿ, ಬೇಕಾದ್ರೆ ಉಗರೂ ತೆಗೆದು, ಅಂಗಿ ಎತ್ತಿದ ತಕ್ಷಣ ಮಿಂಚಿನಂತೆ ಎರಡೂ ಕಂಕುಳ (ಬಗಲ) ಸಂದಿಗಳಲ್ಲಿ ಕರ್ರ್, ಕರ್ರ್  ಅಂತ ರೇಸರ್ ಆಡಿಸಿ, ಅಲ್ಲೂ ಕ್ಲೀನ್ ಶೇವ್ ಮಾಡಿ - ಆತ ನೋಡ್ರೀ, ಸರ್ರಾ - ಅನ್ನುತ್ತಾರೆ. ಇಲ್ಲಿ ಈ ಹಾಪ್ ಬಾರ್ಬರಿಣಿ ಏನು ಮಾಡಲಿ ಅನ್ನುತ್ತಾಳೆ. ಮೂಸಿ ನೋಡು ಮಂಗ್ಯಾನ್ ಮಗಳಾ!!!! - ಅನ್ನುವಷ್ಟು ಸಿಟ್ಟು ಬಂದಿತ್ತು. ಹಾಗೇನಾದರು ಹೇಳಿದರೆ, ಅದನ್ನೂ ಸೀದಾ ಮಾಡಿ, ಎಚ್ಚರ ತಪ್ಪಿ ಬಿದ್ದಾಳು ಅಂದುಕೊಂಡು ತಮ್ಮ ಕೋಪ ಸ್ವಲ್ಪ ಕಂಟ್ರೋಲ್ ಮಾಡಿಕೊಂಡರು.

ಏನು ಹೇಳಬೇಕು ಅಂತನೇ ಅವರಿಗೆ ತಿಳಿಯಲಿಲ್ಲ. ಇದೆಲ್ಲ ಹೇಳುವ ಮಾತೆ? ಕನ್ನಡದಲ್ಲೇ ಹೇಳಿ ಗೊತ್ತಿಲ್ಲ ಯಾಕೆಂದರೆ ಪ್ರಾಯ ಬಂದ ಮೇಲೆ  ಬಗಲಲ್ಲಿ 'ಅವು' ಬಂದವು. ಚಿಕ್ಕ ಹುಡುಗನಾಗಿದ್ದಾಗ ಅಂಗಿ ಎತ್ತು ಅನ್ನದ ಹಜಾಮರು, ಆಮೇಲೆ ಎತ್ತಪ್ಪ ಅಂತ ಅಂಗಿ ಎತ್ತಿಸಿ, ಅದನ್ನೂ ಬೋಳಿಸಿ, ಸಾಪ್ ಮಾಡಿ ಕಳಿಸುತ್ತಿದ್ದರು. ಈಗ ಅದನ್ನು ಇಂಗ್ಲಿಷ್ನಲ್ಲಿ, ಈ ತಿಳಿಯದ ಬಿಳಿ ಬಾರ್ಬರಿಣಿಗೆ ಹೇಳಬೇಕಾಗಿದೆ. ಕರ್ಮ. ಕರ್ಮ. ತಲೆ ಚಚ್ಚಿಕೊಳ್ಳುವದೊಂದೇ ಬಾಕಿ.

ಪ್ರೊಫೆಸರ್ ಮುಖದ ಮೇಲೆ ಹಾಕಿಕೊಂಡಿದ್ದ ಬುರ್ಕಾ ಸ್ವಲ್ಪ ಕೆಳಗೆ ಇಳಿಸಿದರು. ಒಂದು ತರಹದ ಸಂಕೋಚ ಅವರಿಗೆ. ಅದೂ ಹೆಂಗಸಿಗೆ ಹೇಳಬೇಕಲ್ಲ ಅಂತ. ತಲೆ ಕಟಿಂಗ್ ಹೆಂಗಸರು ಮಾಡಿದರೇ ಏನೋ ಒಂದು ತರಹ. ಇನ್ನು ಅಲ್ಲಿ, ಇಲ್ಲಿ ಅದು ಮಾಡು, ಇದು ಮಾಡು ಅನ್ನೋಕೆ ಹೋಗಿ, ಅವಳು ಏನೇನೋ ಅರ್ಥ/ಅನರ್ಥ ಮಾಡಿಕೊಂಡು, ಒಂದಕ್ಕೆರಡು ಆಗಿ.....ಶಿವ....ಶಿವ...

ಆದರೂ ಇಂಗ್ಲಿಷ್ನಲ್ಲಿ ಹೇಳಲಿಕ್ಕೆ ಪ್ರಯತ್ನ ಮಾಡತೊಡಗಿದರು.

ಧಾರವಾಡ ಭಾಷೆಯಲ್ಲಿ ನಾವು ಅದಕ್ಕೆ ಬೇರೆಯವರಿಗೆ ಪರಮ ಕೊಳಕು ಅನ್ನಿಸಬಹುದಾದಂತಹ ಶಬ್ದ - ಬಗಲ ಶೆಂ*  - ಅಂದು ಬಿಡುತ್ತೀವಿ. ನಮ್ಮ ಭಾಷೆ. ನಮಗೆ ಓಕೆ. ಇಂಗ್ಲೀಷ್ನಲ್ಲಿ ಏನು ಅನ್ನಬೇಕು?

ಪ್ಲೀಜ್ ಅಲ್ಸೋ ಶೇವ್ ಅಂಡರ್ ಆರ್ಮ್ ಪ್ಯುಬಿಕ್ ಹೇರ್.....ಪ್ಲೀಜ್...ಥಾಂಕ್ಯೂ....ಓಕೆ...ಹಾಂ....ಓಕೆ? ಓಕೆ?....ಅಂತ ಉಗುಳು ನುಂಗುತ್ತ, ಮತ್ತೆ ತಮ್ಮ ಬನಿಯನ್ ಮತ್ತು  ಅಂಗಿ ತಲೆ ಮೇಲೆ ಎತ್ತಿ, ಮುಖದ ಮೇಲೆ ಬುರ್ಕಾ ಬರೋ ಹಾಗೆ ಮಾಡಿಕೊಂಡು, ಅಂಬೋ ಅನ್ನುವಂತೆ ಬಗಲಸಂದಿ ತೋರಿಸುತ್ತ ಮುಕ್ತಿಗಾಗಿ ಕಾದು ಕೂತ ಶಬರಿಯಂತೆ ಕೂತು ಬಿಟ್ಟರು.

ನಾವು ಧಾರವಾಡ ಮಂದಿಯೋ.....ಕಟಿಂಗ ಮಾಡಿಸಲಿಕ್ಕೆ ಹೋಗುವಾಗ ಎಂದೂ ಸ್ನಾನ ಮಾಡಿ, ಪೌಡರ್ ಹಾಕಿಕೊಂಡು, ಸುವಾಸನೆ ಸೂಸುತ್ತ ಏನೂ ಹೋಗುವದಿಲ್ಲ. ಅಲ್ಲರೀ....ಕಟಿಂಗ್ ಮಾಡ್ಸಿಕೊಂಡು ಬಂದ ಮೇಲೆ ಮುದ್ದಾಂ ಸ್ನಾನ ಆಗ್ಬೇಕು. ಹಾಕ್ಕೊಂಡ ಹೋದ ವಸ್ತ್ರ ಎಲ್ಲ ವಗಿಬೇಕು. ಹಾಂಗಾಗಿ ನಾವು ಮುಂಜಾನೆ ಎದ್ದ ಕೂಡಲೇ, ಕೆಟ್ಟಾ ಕೊಳಕ್ ವಸ್ತ್ರ ಹಾಕಿಕೊಂಡು ಹಜಾಮತಿ ಅಂಗಡಿಗೆ ಓಡತೇವಿ.

ಕೆಲವು ಜನ ಹೇಗೆ ಅಂದರೆ ಸ್ನಾನ ಮಾಡ್ಲಿಕ್ಕೆಂದೇ ಕಟಿಂಗ್ ಮಾಡಿಸಲು ಹೋಗುತ್ತಾರೆ. ವಾರಕ್ಕೊಮ್ಮೆ, ತಿಂಗಳಿಗೆ ಒಮ್ಮೆ ಸ್ನಾನ ಮಾಡುವವರಿಗೆ,  ಅವರಿಗೆ ಸ್ನಾನ ಮಾಡಲು ಪ್ರೇರೇಪಿಸಲು - ಏ ಹೋಗಿ ಕಟಿಂಗ್ ಮಾಡ್ಸಿಕೊಂಡು ಬಾರೋ..ಅಪ್ಪಾ....ಅಣ್ಣಾ.... - ಅಂದು ಅಂಗಾಲಾಚುವ ರೂಢಿ ಇದೆ. ಕಟಿಂಗ್ ಮಾಡಿಸಿಕೊಂಡಮೇಲಾದರೂ  ಸ್ನಾನ ಮಾಡಿ ಶುಧ್ಧನಾಗಿ ಸುವಾಸನೆ ಹೊಡೆದಾನು ಎಂಬ ಆಸೆಯಲ್ಲಿ.

ಪ್ರೋಫೆಸರೂ ಹಾಗೆ. ಅಮೆರಿಕಾಕ್ಕೆ ಹೋದರೇನಾಯಿತು? 35 ವರ್ಷದ ಹ್ಯಾಬಿಟ್ಸ್ ಹೋದಾವೆ? ಸ್ನಾನ ಮಾಡದೇ, ವಾರಾಂತ್ಯದಲ್ಲಿ ಒಗೆಯಬೇಕಾದ ಬಟ್ಟೆ ಹಾಕ್ಕೊಂಡು ಹೋಗಿದ್ದರು ಅಂತ ಕಾಣುತ್ತದೆ.

ಅಂಗಿ ಮೇಲೆತ್ತಿ, ಬಗಲಸಂದಿ ತೋರಿಸುತ್ತ ಕುಳಿತ ಪ್ರೊಫೆಸರ್ ಅವರ  "ವೈಯಕ್ತಿಕ (ಸು)ವಾಸನೆ" (personal scent) ಘಮ್ಮೆಂದು ಗಪ್ಪಂತ್ ಮೂಗಿಗೆ ಅಡರಿರಬೇಕು. ಜೊತೆಗೆ ತೊಳೆಯಬೇಕಾದ ವಸ್ತ್ರಗಳ ಘಮ ಬೇರೆ. ತನ್ನ ಚೂಯಿಂಗಮ್ಮ ಸುವಾಸನೆ ಹರಡುತ್ತಾ, ನಗು ನಗುತ್ತ ಮಾತಾಡುತ್ತಿದ್ದ ಬಿಳಿ ಬಾರ್ಬರಿಣಿ ಎರಡು ಮಾರು ದೂರ ಹಾರಿದಳು. ಆಕೆಗೆ ತಿಳಿಯದಂತೆಯೇ ಅಂಗೈ ಮೂಗು ಮುಚ್ಚಿತು.

ಸಾರ್, ಅದೆಲ್ಲ ಇಲ್ಲಿ ಮಾಡೋದಿಲ್ಲ. ಇಲ್ಲಿ ಯಾರೂ ಅದೆಲ್ಲ ಸಲೂನ್ ನಲ್ಲಿ ಮಾಡಿಸೋದಿಲ್ಲ. ಸಾರಿ...ಸಾರಿ....ಸಾರಿ ಸಾರ್- ಅಂತ ನುಲಿದಳು. ಆಮೇಲೆ ಅಂಡು ಬಡಿದುಕೊಂಡು ನಕ್ಕಿರಬೇಕು ಬಿಡಿ.

ಪ್ರೊಫೆಸರ್ ಸಾಹೇಬರಿಗೆ ಒಂದು ರೀತಿ ಮುಜುಗರವಾಯಿತು. ಭರೆ ತುಂಬಿದ್ದ ಸಲೂನಿನಲ್ಲಿ ಅಂಗಿ ತಲೆ ಮೇಲೆ ಎತ್ತಿ, ಕುತ್ತಿಗೆ ಕೆಳಗೆ ನಗ್ನರಾಗಿ ಕೂತಿದ್ದು, ಸುತ್ತ ಮುತ್ತ ಕಟಿಂಗ ಮಾಡಿಸಿಕೊಳ್ಳುತ್ತ ಕೂತಿದ್ದ ಬಾಕಿ ಕಸ್ಟಮರುಗಳಿಗೆ, ಬಾಕಿ ಹಜಾಮಿಣಿಯರಿಗೆ ಬಿಟ್ಟಿ ಮನೋರಂಜನೆ ಕೊಟ್ಟೆನೋ ಅಂತ ಒಂದು ರೀತಿಯ ಫೀಲಿಂಗ್ ಬಂದು ಒಂದು ತರಹ ಆಯಿತು. 

ಗಡಬಡಾಯಿಸಿ ಎದ್ದು ಓಡಿ ಕೌಂಟರ್ ಹತ್ತರ ಬಂದರು.

ಎಷ್ಟು? - ಅಂತ ಕೇಳಿದರು ಪ್ರೊಫೆಸರ್.

ಕೇವಲ ಎಂಟು ಡಾಲರ್ ಸಾರ್ - ಅಂತ ಉಲಿದಳು ಕೌಂಟರ್ ಹಜಾಮಿಣಿ.

ಹಾಂ!!!!....ಎಂಟು ಡಾಲರ್...ಅಂದ್ರೆ ಎಂಟು ಗುಣಾ ಒಂಬತ್ತು ರುಪಾಯೀ. ಎಪ್ಪತ್ತೆರಡು ರುಪಾಯೀ!!!! ಇಡೀ ವರ್ಷ, ತಿಂಗಳಿಗೆ ನಾಕು ನಾಕು ಸಾರೆ ಕಟಿಂಗ್ ಮಾಡಿಸಿದರೂ, ಇಷ್ಟು ದುಡ್ಡು ಕರ್ಚಾಗಲಿಕ್ಕಿಲ್ಲ.....ಶಿವ....ಶಿವ....ತುಟ್ಟಿ.....ತುಟ್ಟಿ.....ಅಂತ ಹಣೆ ಹಣೆ ಚಚ್ಚಿಕೊಳ್ಳುತ್ತಾ ಎಂಟು ಡಾಲರ್, ಮೇಲೊಂದು ಡಾಲರ್ ಟಿಪ್ ಇಟ್ಟು, ತಲೆ ಸವರಿಕೊಳ್ಳುತ್ತಾ ಹೊರಟು ಬಂದರು.

ಆ ಪ್ರೊಫೆಸರ್ ಸ್ವಲ್ಪ ವರ್ಷ ಆದ ನಂತರ ವಾಪಸ್ ಬಂದರು. ಬರೋವಾಗ ಒಂದೋ, ಎರಡೋ ಮಕ್ಕಳನ್ನು ಅಮೇರಿಕಾದಲ್ಲೇ ಮಾಡಿಕೊಂಡು, ಅವರಿಗೆ US ಸಿಟಿಜೆನಶಿಪ್ ಕೊಡಿಸಿಕೊಂಡು, ಧನ್ಯನಾದೆ ಎಂಬ ಲುಕ್ ಕೊಡುತ್ತಾ ಬಂದರು.

ಆಮೇಲೆ ಅವರು ಕಂಡವರಿಗೆಲ್ಲ, ಸಿಕ್ಕಾಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು.

ಎಲ್ಲೀದು ಬಿಡ್ರೀ....ಅಮೇರಿಕಾದಲ್ಲಿ ಕಟಿಂಗ ಸರಿ ಮಾಡೋದಿಲ್ಲ. ಕತ್ತಿ (ರೇಸರ್) ಇಲ್ಲ. ಬಗಲ ಶೆಂ* ಬೋಳಿಸೋದೆ ಇಲ್ಲ. ನೀವು ಮಾತ್ರ ಅಲ್ಲೆ ಹೋಗುವಾಗ ಒಂದು ಕತ್ತಿ (ರೇಸರ್), ಮತ್ತ ಅದನ್ನ ಆಗಾಗ ಚೂಪ್ ಮಾಡ್ಕೊಳ್ಳಿಕ್ಕೆ ಒಂದು ಸಾಣಿ ಕಲ್ಲು ತೆಗೆದುಕೊಂಡು ಹೋಗುದ್ ಮಾತ್ರ ಮರಿಬ್ಯಾಡ್ರಿ....ಹಾಂ....ಹಾಂ.... -  ಅಂತ ಪ್ರೊಫೆಸರ್ ಉವಾಚ.

ಹೀಗೆ ಸ್ವಂತ ಊರಿನಲ್ಲಿ ರಂಗ, ಪರಊರಿನಲ್ಲಿ ಮಂಗ ಅನ್ನುವ ಘಟನೆ ಆಗ್ತಾನೆ ಇರ್ತಾವೆ.

ಅದಕ್ಕೇ ಇರಬೇಕು ಹೇಳಿದ್ದು - ಕೋಶ ಓದಿ ಕಲಿ. ದೇಶ ತಿರುಗಿ ಕಲಿ. ಕೇಶ ಬೋಳಿಸಿ(ಕೊಂಡು) ಕಲಿ - ಅಂತ.

** ಇದು ಧಾರವಾಡದಲ್ಲಿ, ಅದೂ ಕವಿವಿ ಗೊತ್ತಿರುವ ಹಲವಾರು ಮಂದಿ ಕೇಳಿರಬಹುದಾದಂತಹ ಜೋಕ್. ಸತ್ಯಕಥೆ ಮೇಲೆ ಆಧಾರಿತ. ಯಾವ ಪ್ರೊಫೆಸರ್ ಅಂತ ನಿಜವಾಗಿಯೂ ನನಗೆ ಗೊತ್ತಿಲ್ಲ. ಒಬ್ಬರ ಕಥೆ ಇದಾಗಿದ್ದರೂ , ಹಲವರ ಅನುಭವ ಇದೇ ಇರುವ ಸಾಧ್ಯತೆಗಳಿವೆ.

** ರೇಸರ್ ಉಪಯೋಗಿಸಲು ಸ್ಪೆಷಲ್ ಪರ್ಮಿಶನ್ ಬೇಕು, ಸುಮಾರು ಕಡೆ ಇಲ್ಲಿ. ಮೊನ್ನೆ ಮೊನ್ನೆ ಒಬ್ಬ ಪರಿಚಿತ ಹೇಳುತ್ತಿದ್ದ - ತಲೆ ಬೋಳಿಸಿ ಅಂದರೂ.....ಜೀರೋ ನಂಬರ್ ಇಟ್ಟು ಕ್ಲಿಪ್ಪರ್ ಹೊಡಿತೀವಿ. ಓಕೆನಾ? - ಅಂದರಂತೆ. ಅವನು ಬೇಡ. ಕತ್ತಿ (ರೇಸರ್) ಹಚ್ಚಿಯೇ ಬೋಳಿಸಿ ಅಂದರೆ ಅದಕ್ಕೆ ಬೇರೆ ಕಡೆ ಇರೋ ಬಾರ್ಬರ್ ಶಾಪ್ ಅಡ್ರೆಸ್ಸ್ ಕೊಟ್ಟರಂತೆ. ಯಾಕೆ? ಅಂದ್ರೆ, ರೇಸರ್ ಒಂದು ಆಯುಧದ ತರಹ. ಹಾಗಾಗಿ ಬೇರೆ ಪರ್ಮಿಶನ್ ಬೇಕು ಅಂತೆ. ಇದು ಇಲ್ಲಿ ಕ್ಯಾಲಿಫೋರ್ನಿಯಾ ಕಥೆ. ಬೇರೆ ಕಡೇನೂ ಎಲ್ಲಿಯೂ ಆರ್ಡಿನರಿ ಕಟಿಂಗ್ ಅಂಗಡಿಯವರ ಕಡೆ ರೇಸರ್ ಇರುವದನ್ನು ನನ್ನಾಣೆ ಕಂಡಿಲ್ಲ. ಹಾಗಾಗಿ ದಾಡಿ ಮತ್ತೊಂದು ಶೇವ್ ಇಲ್ಲಿ ಹೇರ್ಕಟಿಂಗ್ ಅಂಗಡಿನಲ್ಲಿ ಮಾಡೋದಿಲ್ಲ.

(ಚಿತ್ರ ಕೃಪೆ: ಉಡಾಳ ಬಸ್ಯಾ ಎಂಬ ಫೇಸ್ಬುಕ್ ಗುಂಪು)

Wednesday, July 25, 2012

ಸಿಗ್ಗಿಲ್ಲೇಶ್ವರಿ ಸತಿಯೂ, ವಿಗ್ಗೇಶ್ವರ ಪತಿಯೂ

ಆವತ್ತು ಮತ್ತ ಕರೀಂ ಸಾಬ್ರು ಕಂಡರು. ಸ್ಕೂಟರ್ ಮ್ಯಾಲೆ ಬರ್ರ್ ಅಂತ ಜೋರ ಹೊಂಟಿದ್ರು. ಎಲ್ಲಕ್ಕಿಂತ ಆಶ್ಚರ್ಯವಾಗಿ ಕಂಡಿದ್ದು ಹೆಲ್ಮೆಟ್ ಹಾಕಿಕೊಂಡು ಹೊಂಟ ಸಾಬ್ರು. ಹೆಲ್ಮೆಟ್ ಕಂಪಲ್ಸರಿ ಇಲ್ಲ. ಅದೂ ಕೆಟ್ಟ ರಣ ರಣ ಬಿಸಿಲಿರೊ ಬ್ಯಾಸಗಿ ಟೈಮ್. ಇನ್ತಾದ್ರಾಗ ಯಾಕ್ ಹೆಲ್ಮೆಟ್ ಹಾಕ್ಕೊಂಡು ಹೊಂಟಾರ ಅಂತ ತಿಳಿಲಿಲ್ಲ.

ನಮ್ಮ ಕರಿಯೋ ಸ್ಟೈಲ್ ಗೊತ್ತಲ್ಲ ನಿಮಗ.

ಏ...........ಏ............ಕರೀಮ....ನಿಂದ್ರಪಾ.....ನಿಂದ್ರೋ......ಅಂತ ಹೊಯ್ಕೊತ್ತ ಚಪ್ಪಾಳಿ ಹೊಡದೆ ನೋಡ್ರಿ. ಅದು ಹ್ಯಾಂಗ ಇತ್ತ ಅಂದ್ರ ಅವನ ಹೆಲ್ಮೆಟ್ ಒಳಗ ಮುಚ್ಚಿದ್ದ ಕಿವಿಯೊಳಗೂ ಹೋಗಿ, ಅವನಿಗೆ ಕೇಳಿ, ಗಾಡಿ ನಿಲ್ಲಿಸಿದ. ರಸ್ತೆ ಕ್ರಾಸ್ ಮಾಡಿ ಹೋಗಿ ಸಾಬರನ್ನ ಭೆಟ್ಟಿ ಮಾಡಿದೆ.

ಫುಲ್ ಮಸಡಿ ಕವರ್ ಮಾಡೋ ಹಾಂಗ ಇರ್ತಾವ್ ನೋಡ್ರಿ, ಗಗನಯಾತ್ರಿ ಮಂದಿ ಹಾಕ್ಕೊತ್ತಾರಾ, ಅಂತಾ ಫುಲ್ ಹೆಲ್ಮೆಟ್ ಹಾಕಿಕೊಂಡಿದ್ದ ಕರೀಂ.

ಜಸ್ಟ್ ಮಸಡಿ ಮುಂದಿನ ಜಾಳ್ಗಿ ಹಾಂಗ ಇರೋದನ್ನ ಮಾತ್ರ ಮ್ಯಾಲೆ ಮಾಡಿ ಮಾತಾಡ್ಲಿಕ್ಕೆ ಶುರು ಮಾಡಿದಾ ಕರೀಂ.

ಲೇ....ಮಂಗ್ಯಾನ್ ಕೆ....ಪೂರ್ತ ಹೆಲ್ಮೆಟ್ ಕಳೆದು ಮಾತಾಡೋ....ಏನ್ ಈ ರಣ ರಣ ಬ್ಯಾಸಿಗಿ ಒಳಗಾ ಫುಲ್ ಹೆಲ್ಮೆಟ್? - ಅಂದೆ.

ಹ್ಞೂ....ಹ್ಞೂ...ಅನಕೊತ್ತ ಮೊದಲು ಮಸಡಿ ಮುಂದಿನ ಜಾಳಗಿ ಒಳಗಾ ಕೈ ಹಾಕಿ ನೆತ್ತಿ ಒತ್ತಿಕೊಂಡಾ. ಯಾಕೋ ಏನೋ?

ಹೆಲ್ಮೆಟ್ ತೆಗೆದು ತನ್ನ ಮಸಡಿ ತೋರ್ಸೀದಾ ನೋಡ್ರಿ!!!! ನಾ ಬೆಚ್ಚಿ ಬೀಳೊದೊಂದು ಬಾಕಿ ಇತ್ತು.

ಹಾಪ್ ಬೋಡ್ಯಾ (ಹಾಫ್ ಬಾಲ್ಡಿ , ಬಕ್ಕ ತಲಿ) ಆಗಿದ್ದ ಕರೀಮ. ಈಗ ನೋಡಿದ್ರಾ ಏನ ಮಸ್ತ ತಲಿ ತುಂಬಾ ಫುಲ್ ಕೂದ್ಲಾ.

ಏನೋ? ಎಲ್ಲಿಂದ ಬಂದ್ವೋ ಬೋಡ್ಯಾ ತಲಿತುಂಬ ಕೂದಲ? ಏನು ಪವಾಡ ಆಗಿಬಿಟ್ಟದಲ್ಲೋ ದೋಸ್ತಾ?.....ಅಂದೆ.

ಹೌದು ಸಾಬ್.....ನಮ್ಮದು ಬೇಗಂ ನಮಗೆ ಟೋಪನ್ ಹಾಕಿ ಬಿಟ್ಟಿದ್ದಾರೆ......ಅಂದ ಕರೀಂ.

ವಿಗ್ಗ್ ಹಾಕ್ಕೊಂಡು  ವಿಗ್ಗೇಶ್ವರ ಆಗಿಬಿಟ್ಟಿದ್ದ ನಮ್ಮ ಕರೀಂ.

ಸಾಬ್ರಾ....ನಿಮಗ ವಿಗ್ಗೇಶ್ವರ ಅಂತ ಹೆಸರು ಮಸ್ತ ಸೂಟ್ ಆಗ್ತದ ನೋಡ್ರೀ....ಅಂದೆ.

ವಿಗ್ಗೇಶ್ವರ ಅಂದ್ರೆ ನಿಮ್ಮದು ದೇವರು ಅಲ್ಲ ಕ್ಯಾ?....ಅಂದ ಕರೀಂ.

ಇಲ್ರೀ...ಸಾಬ್ರಾ....ದೇವರು ವಿಘ್ನೇಶ್ವರ.....ಅಂದ್ರ ಗಣಪ್ಪ....ನೀವು ವಿಗ್ಗ್ ಹಾಕ್ಕೊಂಡವರು ವಿಗ್ಗೇಶ್ವರ....ಅಂತ ಕ್ಲಾರಿಫೈ ಮಾಡಿದೆ.

ಚೊಲೋ ಆತ ತೊಗೋ, ಕರೀಂ. ಸಿಕ್ಕ ಸಿಕ್ಕ ಮಂದಿಗೆ ಟೊಪ್ಪಿಗಿ ಹಾಕು ಮಂದಿ ಇರುವಾಗ, ಪಾಪ ನಿಮ್ಮ ಬೇಗಂ ನಿಮಗ ಚಂದಾಗಿ ಹಾಕ್ಯಾಳ ನೋಡ್ರಿ.....ಅಂದ್ರ ಟೋಪನ್ ಹಾಕ್ಯಾಳ ಅಂತ.....ಅಂದೆ ನಾನು.

ಟೋಪನ್ ಹಾಕ್ಕೊಂಡಿ. ಓಕೆ. ಆದ್ರ ಮ್ಯಾಲೆ ಹೆಲ್ಮೆಟ್ ಯಾಕೋ?......ಅಂದೆ. ಆ extra ಫಿಟ್ಟಿಂಗ್ ಯಾಕ್ ಅಂತ ತಿಳಿಲಿಲ್ಲ.

ಏನು ಸಾಬ್ ನೀವು? ಹೆಲ್ಮೆಟ್ ಇಲ್ದೆ ಹೋದ್ರೆ, ಗಾಳಿಗೆ ಟೋಪನ್ ಹಾರಿ ಹೋಗೋದಿಲ್ಲ ಕ್ಯಾ? ಒಂದೆರಡು ಸಲ ಹಾರಿ ಹೋಗ್ಬಿಟ್ಟಿ, ಮಂದಿ ಎಲ್ಲಾ ನಕ್ಕಿ, ಬೇಗಂಗೆ ಇನ್ಸಲ್ಟ್ ಆಗಿ, ನನಗೆ ಬೈದಿಬಿಟ್ಟಿ, ಯಾವಾಗಲೂ ಹೆಲ್ಮೆಟ್ ಹಾಕಿಕೊಂಡೇ ಗಾಡಿ ಹೊಡಿಬೇಕು ಅಂತ ಹುಕುಂ ಆಗಿದೆ....ಅಂದು ಪಾಪ ಸ್ಯಾಡ್ ಲುಕ್ ಕೊಟ್ಟ ಕರೀಂ.

ಕರೀಂ....ಇರ್ಲಿ...ಯಾಕ್ ಟೋಪನ್ ಹಾಕ್ಸಿದಳು ನಿನ್ನ ಹೆಂಡ್ತಿ?.....ಅಂತ ಕೇಳಿದೆ.

ಎಲ್ಲಾ ನಿಮ್ಮಿಂದ ಸಾಬ್.....ಅಂತ ಅಂದು ನಿಲ್ಲಿಸಿಬಿಟ್ಟ ಕರೀಂ.

ಹಾಂ.....ಹಾಂ....ನಾಯೇನ್ ಮಾಡಿದೆನೋ?.....ಅಂತ ಸ್ವಲ್ಪ ಡಿಫೆನ್ಸಿವ್ ಆಗಿ ಕೇಳಿದೆ.

ಮತ್ತೆ ನಮ್ಮದು ಬಗ್ಗೆ, ನಮ್ಮ ಬೇಗಂ ಬಗ್ಗೆ, ಆಕಿ ಫೇಸ್ಬುಕ್ ಹುಚ್ಚು ಬಗ್ಗೆ, ಅಕಿ ಹ್ಯಾಂಗೆ ಹಾಪ್ ಬೋಲ್ಡೀ ಆಗಿದಾಳೆ ಅನ್ನೋದರ ಬಗ್ಗೆ ಎಲ್ಲ ನೀವು ಅದೇನೋ ಬ್ಲಾಗ್ ನಲ್ಲಿ ಬರೆದು ಬರೆದು ಹಾಕ್ಬಿಟ್ಟಿ, ಅಕಿನೂ ಅದನ್ನ ಎಲ್ಲ ಓದ್ಬಿಟ್ಟಿ, ಅಕಿಗೆ ಸಿಟ್ಟು ಬಂದ್ಬಿಟ್ಟಿ, ನಮಗೆ ಟೋಪನ್, ಹೆಲ್ಮೆಟ್ ಎಲ್ಲ ಬಂದು ಬಿಡ್ತು ಸಾಬ್....ನಮ್ಮದು ನಸೀಬ್ ಸರಿ ಇಲ್ಲ...ಈ ಸುಡು ಸುಡು ಬ್ಯಾಸಿಗೆ ಒಳಗೆ ನಮಗೆ ಈ ಶಿಕ್ಷೆ. ಎಲ್ಲಾರೂ ಬೇಸಿಗೆಗೆ ಅಂತ ಸಮ್ಮರ್ ಕಟ್ ಮಾಡ್ಸಿದ್ರೆ, ನಮ್ಮದು ನ್ಯಾಚುರಲ್ ಸಮ್ಮರ್ ಕಟ್ಟೇ ಇತ್ತು....ಅಂತ ನಿಟ್ಟುಸಿರು ಬಿಟ್ಟ ಕರೀಂ.

ಓಹೋ.....ವೆರಿ ಗುಡ್....ಓದಿದಳು ಅಲ್ಲ ನಿಮ್ಮ ಬೇಗಂ? ಚೊಲೋ ಆತು ತೊಗೋ. ಅಕಿಗೆ ನಾ ಹೇಳಿದ್ರಂತು ತಿಳಿಯೋದಿಲ್ಲ. ತಿಳಿಯೋದು ಹೋಗ್ಲಿ. ಕೇಳೂ ಪೇಷನ್ಸ್ ಸಹ ಅಕಿಗೆ ಇಲ್ಲ. ಬ್ಯಾಕ್ ಬ್ಲಾಸ್ಟ್ ಆದವರ ಗತೆ ಚಿಟಿ ಚಿಟಿ ಚೀರ್ತಾಳ್. ಓದಿ ತಿಳ್ಕೊಂಡು ಸುಧಾರಿಸಲಿಕ್ಕೆ ಹತ್ಯಾಳ್ ಅಂದ್ರ ಚೊಲೋ ಆತ.....ಅಂತ ಸಾರ್ಥಕ್ಯ ಭಾವದ ಲುಕ್ ಕೊಟ್ಟೆ.

ಏನು ಚೊಲೋ ಆಗೋದು? ನಿಮ್ಮ ಕರ್ಮ....ಅಲ್ಲ ನಮ್ಮ ಕೆಟ್ಟ ಕರ್ಮ....ಅಂತ ನಿಡುಸೋಯ್ದ ಕರೀಂ.

ಸಾಬ್ ನೋಡಿ...ನೀವು ಅಕಿ ಫೇಸ್ಬುಕ್ ಹುಚ್ಚು ಬಗ್ಗೆ ಬರೆದ್ರಿ. ಆ ಮ್ಯಾಲೆ ಎಲ್ಲರೂ ಅಕಿಗೆ ನಿಂದು ಗಂಡಾದು ಫೋಟೋ ಎಲ್ಲಿ? ಅವಂದು ಜೊತೆ ನಿಂದು ಫೋಟೋ ಯಾಕೆ ಇಲ್ಲಾ?....ಅಂತ ಎಲ್ಲರೂ ಕೇಳಿದ್ರು ಸಾಬ್ ಅಕಿಗೆ.....ಕರೆಕ್ಟಾಗೆ ಕೇಳಿದ್ರು....ಆದ್ರೆ ಆಕಿಗೆ....ನಿಮಗೆ ಗೊತ್ತಲ್ಲಾ.....ನಮ್ಮದು ಮುದ್ಕಾ ಗಂಡಾ ಜೊತೆ ಫೋಟೋ ಹಾಕ್ಕೊಂಡ್ರೆ ಆಕಿದು ಜವಾನಿಗೆ ಇನ್ಸಲ್ಟ್ ನೋಡಿ.....ಅಂತ ಮುಂದುವರಿಸಿದ ಕರೀಂ.

ಓಹೋ....ನಿಮ್ಮ ಬೋಡ್ಯಾ ಲುಕ್ ಅಕಿಗೆ ಸೇರಿಲ್ಲ ಅಂತ ಆತು. ಅದಕ್ಕ ನಿಮಗ ಟೋಪನ್ ಹಾಕ್ಸಿ ನೀವು ಬೋಡಾ ಅಲ್ಲಾ ಅಂತ ಪ್ರೂವ್ ಮಾಡ್ಲಿಕ್ಕೆ ಹೊಂಟಾಳ್ ಏನು?.......ಅಂದೆ.

ಹ್ಞೂ....ಸಾಬ್...ಹಾಗೆ ಅನ್ನಿ. ಅವತ್ತು ಏನು ಆಯ್ತು ಗೊತ್ತಾ? ಫೇಸ್ಬುಕ್ ಮೇಲೆ?....ಅಂತ ಒಂದು ಸಣ್ಣ ಪ್ರಶ್ನೆ ಬಾಂಬ್ ಹಾಕಿದ.

ಏನಾತಪಾ? ನಿನಗೂ ಫೇಸ್ಬುಕ್ ಹುಚ್ಚು ಹಿಡಿತೇನೋ? ಥತ್ ನಿನ್ನಾ....ಅದು ಬ್ಯಾಡೋ....ನಿನ್ನ ಹೆಂಡ್ತಿ ಫೇಸ್ಬುಕ್ ಹುಚ್ಚ್  ನಿನಗ ಸಂಭಾಳಿಸಲಿಕ್ಕೆ ಆಗವಲ್ಲತು. ಇನ್ನು ನಿನಗೂ ಫೇಸ್ಬುಕ್ ಹುಚ್ಚು ಹತ್ತಿದ್ರಾ ಮುಗೀತು. ಫುಲ್ ವೆಂಕಟರಮಣ ಗೋವಿಂದಾ.....ಗೋವಿಂದಾ...ಅಷ್ಟ ಮತ್ತ......ಅಂತ ಇವರಿಬ್ಬರಿಗೂ ಫೇಸ್ಬುಕ್ ಹುಚ್ಚು ಹಿಡದರ ನಾನ ಇಬ್ಬರನ್ನೂ ನೋಡ್ಕೊಬೇಕಾದೀತು ಅಂತ ಹೆದ್ರಕಿ ಆತು.

ಇಲ್ಲಾ ಸಾಬ್....ಅದು ಏನೂ ಇಲ್ಲ...ನಾವು ಸ್ವಲ್ಪ ಸ್ವಲ್ಪ ಫೇಸ್ಬುಕ್ ಕಲ್ತಿದೀವಿ ಈಗ. ಜಾಸ್ತಿ ಏನೂ ಇಲ್ಲ. ನಮ್ಮ ಹಾಪ್ ಬೇಗಂ ಏನೇನು ಕೆತ್ತೆಬಜೆ ಕಾರ್ಬಾರ್ ಮಾಡ್ತಾರೆ ಅಂತ ನೋಡುದು. ಅಷ್ಟೇ. ಮತ್ತೆ ವತ್ತೋದು. ಸ್ವಲ್ಪ ಸ್ವಲ್ಪ ವತ್ತೋದು. ಅದೇ ಸಾಬ್ ಲೈಕ್ ವತ್ತೋದು ಅಷ್ಟೇ.....ತಿಳೀತು ಕ್ಯಾ?.....ಅಂದ ಕರೀಂ.

ಓಕೆ...ಇದರಾಗ ಏನ್ ಪ್ರಾಬ್ಲೆಮ್ ಅಂತ ನಿಮ್ಮ ಹೆಂಡತೀದು?....ಅಂತ ಕೇಳಿದೆ.

ಅವತ್ತು ನೋಡಿ ಸಾಬ್....ಅಕಿದು ಮೂಡ ಖರಾಬ್ ಇತ್ತು ಅಂತ ಕಾಣಿಸ್ತದೆ. ತನ್ನ ಪುರಾನಾ ಆಶಿಕ್ ಸಲುವಾಗಿ ಯಾವದೋ ಒಂದೆರಡು ಹಾಡಿಗೆ ಲಿಂಕ್ ತನ್ನ ಫೇಸ್ಬುಕ್ ವಾಲ್ ಮೇಲೆ ಹಾಕಿಕೊಂಡು ಕೂತಿದ್ಳು. ನಾನೂ ಆಗ ಫೇಸ್ಬುಕ್ ಮೇಲೆ ಇದ್ದೆ. ತುಂಬಾ ಒಳ್ಳೆ ಹಳೆ ಹಿಂದಿ ಮೂವಿ ಹಾಡು ಸಾಬ್. ನನಗೆ ಹಿಡಿಸ್ತು. ಬೇಗಂ ನಮಗೆ ಹಾಕಿರಬೇಕು ಅಂತ ಖುಷ್ ಆಗಿ ಲೈಕ್ ವತ್ತೇ ಬಿಟ್ಟೆ ಸಾಬ್. ವತ್ತಬಿಟ್ಟಿ ಮರೆತು ಬಿಟ್ಟೆ. ಸಂಜೆ ಮುಂದೆ ಮತ್ತೆ ಫೇಸ್ಬುಕ್ ನೋಡಿದ್ರೆ ನಮ್ಮ ಬೇಗಂ ಗ್ವಾಡಿ ಮ್ಯಾಲೆ ಆ ಎರಡೂ ಹಾಡ ಇಲ್ಲೇ ಇಲ್ಲ. ಗಾಯಬ್ ಆಗಿ ಬಿಟ್ಟಿವೆ.....ಅಂತ ಫುಲ್ ಆಶ್ಚರ್ಯ ಲುಕ್ ಕೊಟ್ಟ.

ಹೋಗ್ಗೋ ಸಾಬ್ರಾ ....ಎಲ್ಲೆ ಹೋತು ಹಾಡಿನ ಲಿಂಕ್ಸ್ ಸಾಬರ?.....ಅಂದೆ.

ಸಾಬ್....ನಮ್ಮದು ಹರಾಮಕೊರ್ ಬೇಗಂ ಅದನ್ನ ಡಿಲೀಟ್ ಮಾಡಿ ಬಿಟ್ಟೆ ಅಂತ ಹೇಳಿಬಿಟ್ಟಳು ಸಾಬ್.....ಅಂತ ದುಃಖ ತೋಡಿಕೊಂಡ.

ಯಾಕ್ ಡಿಲೀಟ್ ಮಾಡಿದಳು ನಿಮ್ಮ ಬೇಗಂ? ಅದೂ ನೀವು ಲೈಕ್ ಮಾಡಿದ ಮ್ಯಾಲೆ. ಅದೂ ನೀವು ಸ್ವಂತ, ಒಬ್ಬನೇ ಗಂಡ. ಲೈಕ್ ಆಗಿ ವತ್ತೀರಿ ಅಕಿ ಹಾಡನ್ನ. ಅದನ್ನ ನೋಡಿದ್ ಮ್ಯಾಲೂ ಡಿಲೀಟ್ ಮಾಡೋದು ಅಂದ್ರ ಎಷ್ಟು ದುರ್ಬುದ್ಧಿ ಅಕಿಗೆ ಅಂತೀನಿ....ಅಂತ ನನ್ನ ಮಾರಲ್ ಸಪೋರ್ಟ್ ಕೊಟ್ಟೆ ಸಾಬ್ರಿಗೆ.

ಹೌದು ಸಾಬ್....ನಮ್ಮ ಬೇಗಂ ಹೇಳಿದಳು....ನಾನು ಹೋಗಿ ಲೈಕ್ ಮಾಡಿ ಬಿಟ್ಟರೆ, ಆ ಮೇಲೆ ಅಕಿದು ದೋಸ್ತರು ಯಾರೂ ಲೈಕ್ ಮಾಡೋದಿಲ್ಲವಂತೆ. ಗಂಡಾನೇ ಮೊದಲು ಮಾಡಿ ಬಿಟ್ಟಾನೆ, ನಾವೇನು ಲೈಕ್ ಮಾಡೋದು ಅಂತ. ಒಟ್ಟಿನಲ್ಲಿ ಟೋಟಲ್ ಲೈಕ್ ಕಡಿಮೆ ಆಗ್ತದೆ ನೋಡಿ. ಅದಕ್ಕೆ ಡಿಲೀಟ್ ಮಾಡಿ ಬಿಟ್ಟಳಂತೆ ಸಾಬ್. ನನಗೆ ಗೊತ್ತು ರೀಯಲ್ ಕಾರಣ....ಅಂತ ನಿಗೂಢ ಲುಕ್ ಕೊಟ್ಟ.

ಏನ್ರೀ ರಿಯಲ್ ಕಾರಣ? ಸ್ವಲ್ಪ ಹೇಳ್ರೀ...ಅಂದೆ.

ನೋಡಿ ಸಾಬ್...ಅಕಿ ಆ ಎರಡೂ ಹಾಡು ಆಕಿ ಪುರಾನಾ ಆಶಿಕ್ ಗೆ ಹಾಕ್ಕೊಂಡು ಕೂತಿದ್ದಳು. ಅವನು ಮೊದಲೆಲ್ಲ ತಾಪಡತೊಪ್ ಲೈಕ್ ವತ್ತೋದು, ಕಾಮೆಂಟ್ ಹಾಕೋದು ಮಾಡ್ತಿದ್ದ. ಅವನದೂ ತಲೆ ತಿಂದಿರಬೇಕು ಇವಳು. ಅದಕ್ಕೆ ಅವನೂ ಈಗಿತ್ತಲಾಗೆ ಅಕಿಗೆ ತಪ್ಪಿಸಿಕೊಂಡು ಓಡಾಡ್ತಾನೆ. ಅವ ಬಂದು ಲೈಕ್ ವತ್ತಲೇ ಇಲ್ಲ. ಅಷ್ಟರಲ್ಲಿ ನಾನು ಬೋಡ್ಯಾ ಖಾನ್ ಹೋಗಿ ವತ್ತಿಬಿಟ್ಟೆ ನೋಡಿ...ಅದಕ್ಕೆ ಉರಕೊಂಡು ಉರಕೊಂಡು ಚಿಟಿ ಚಿಟಿ ಚೀರಿ ಇಮ್ಮಿಡಿಯೇಟ್ಲಿ ಸಾಂಗ್ಸ್ ಲಿಂಕ್ಸ್ ಡಿಲೀಟ್ ಮಾಡಿ ಬಿಟ್ಟಳು ಸಾಬ್....ಅಂತ ಕರೀಂ ದುಖ ತೋಡಿಕೊಂಡ.

ಛೆ!!ಛೆ!!! ಹತ್ತ ಲಕ್ಷ ರೂಪಾಯಿ ಕೊಟ್ಟ ಸ್ವೀಟ್ ಸಿಕ್ಸಟೀನ್ ಹೆಂಡ್ತಿ ಮಾಡಿಕೊಂಡ ಸಾಬರಿಗೆ ಬೋಡ್ಯಾ ಖಾನ್ ಅಂದಿದ್ದು ಮಾತ್ರ ಅಲ್ಲದೇ , ಅವ ಪಾಪ ಲೈಕ್ ಮಾಡಿದ ಅನ್ನೋ ಒಂದೇ ಕಾರಣಕ್ಕೆ  ಸಾಂಗ್ಸ್ ಡಿಲೀಟ್ ಮಾಡ್ಯಾಳ ಇಕಿ. ಎಷ್ಟು ಕೆಟ್ಟ ಬುದ್ಧಿ ಇಕಿದು ಅಂತ ಅನ್ನಿಸ್ತು.

ನೀವೇನ್ ಮಾಡ್ಲಿಲ್ಲ ಏನು ಸಾಬ್ರಾ ?....ಅಂತ ಕೇಳಿದೆ.

ನಾನು ಅತ್ತೆ ಸಾಬ್. ಬಕೆಟ್ ಬಕೆಟ್ ಆಸೂ ಬಹಾಯಾ ಸಾಬ್.....ಅಂತ ಅಂದ ಕರೀಂ.

ಕುಸ್ತಿ ಅಖಾಡಾದಾಗ ಮಂದಿ ಎತ್ತಿ ಎತ್ತಿ ಒಗೆದವಾ ಇವನ ಏನು?.......ಅಂತ ಸಂಶಯ ಬಂತು.....ಹೆಂಡ್ತಿ ಮುಂದ ಅತ್ತನಂತ. ಹೆಣ್ಯಾ ಮಂಗ್ಯಾನ್ ಕೆ.

ಯಾಕ್ರೀ ಸಾಬ್ರಾ? ಏನಾತು ಎಲ್ಲಾ ಪೌರುಷ? ಮೊನ್ನೆ ಒಮ್ಮೆ ಅಕಿ ಬೆನ್ನ ಮುರಿಯುಹಾಂಗ ಗುದ್ದಿದ್ದ್ರೀ....ಈಗ ಯಾಕ್ ಅತ್ರೀ? ಯಾಕ್ ಕಣ್ಣೀರ ಹಾಕಿದ್ರಿ?....ಅಂದೆ.

ಆ ಮೇಲೆ ಸರಗಂ ಕೇಸ್ನಲ್ಲಿ ಕಲ್ಲೂ ಮಾಮಾ, ಕಲ್ಲೂ ಮಾಮಿ ಕೂಡಿ ನಮ್ಮ ಕಾಲು ಮುರದಿದ್ದರಲ್ಲ ಸಾಬ್...ಮತ್ತೆ ಬೇಡ ಹಾಗೆ ಫುಲ್ ಬಾಡಿ ಸ್ಕ್ರಾಪ್ ಆಗೋದು ಅಂತ ಸುಮ್ಮನೆ ಇದ್ದೆ ಸಾಬ್. ಕಲ್ಲೂ ಮಾಮಿನೇ ಹೇಳಿದಾಳೆ. ಸುಮ್ಮನೆ ಅತ್ತು ಬಿಡು ಅಂತ.....ಅದೇ ಬೆಷ್ಟು ಸಾಬ್....ಅಂತ ಸಾಧು ಪ್ರಾಣಿ ಲುಕ್ ಕೊಟ್ಟ.

ಹ್ಞೂ....ಅಂತೂ ಇಂತೂ ಪಾಲ್ತು ಪ್ರಾಣಿ ಆದಿ ಅನ್ನು....ಮುಂದ ಹೇಳಪಾ....ಅಂತ ಹೇಳಿದೆ.

ಏ....ಬೋಡ್ಯಾ ಕರೀಂ ಖಾನ್....ನಮ್ಮದು ಫೇಸ್ಬುಕ್ ಪೋಸ್ಟ್ ಮೇಲೆ ಲೈಕ್ ವತ್ತೋದು, ಕಾಮೆಂಟ್ ಹಾಕೋದು ಎಲ್ಲಾ ಮಾಡ್ಬೇಕು ಅಂದ್ರೆ ಮೊದಲು ನಿನ್ನ ಬೋಡ್ಯಾ ಲುಕ್ ಚೇಂಜ್ ಮಾಡ್ಕೋ. ಸಮಜೆ ಕ್ಯಾ?....ಅಂದಳು ಸಾರ್.....ನಮ್ಮ ಬೇಗಂ....ಅಂದ ಕರೀಂ.

ಹ್ಯಾಂಗೆ ಬೇಗಂ?.........ಉದರಿ ಹೋಗಿರೋ ಕೂದಲ ಹ್ಯಾಂಗೆ ವಾಪಸ್ ತರೋದು?....ಅಂತ ಹೆಲ್ಪಲೆಸ್ಸಾಗಿ ಹೇಳಿದೆ ಅಂದ ಕರೀಂ.

ಅದಕ್ಕೆ ನಿಮಗೆ ದುಬೈನಿಂದ ಛೋಟಾ ವಕೀಲ್ ಮಾಮೂಜಾನ್ಗೆ ಹೇಳಿ ಒಂದು ಒಳ್ಳೆ ಸಂಜೀವ್ ಕುಮಾರ್ ವಿಗ್ಗ್ ತರ್ಸಿ ಕೊಡ್ತೀನಿ. ಅದನ್ನ ಹಾಕ್ಕೊಂಡು ಫೋಟೋ ತೆಗಿಸ್ಕೊಂಡಿ, ಫೇಸ್ಬುಕ್ ಮೇಲೆ ಹಾಕ್ಕೊ. ಆ ಮ್ಯಾಲೆ ಬೇಕಾದ್ರೆ ನನ್ನ ಫೇಸ್ಬುಕ್ ಪೋಸ್ಟ್ ಲೈಕ್ ಮಾಡು. ಸಮಜೆ ಕ್ಯಾ? ಅಂದಳು ಸಾಬ್.....ಅಂದ ಕರೀಮ್.

ಓಹೋ....ಇಷ್ಟೆಲ್ಲಾ ಕಥಿ ಆದ ಮ್ಯಾಲೆ ನಿಮಗ ಸಂಜೀವ್ ಕುಮಾರ್ ವಿಗ್ಗ್ ಬಂತು ಅಂತ ಆತು. ಚೊಲೋ ಆತ ಬಿಡ್ರೀ. ಸಂಜೀವ್ ಕುಮಾರ್ ಪರ್ಸನಾಲಿಟಿ ಅದ ನಿಮಗ. ಈಗ ವಿಗ್ಗೂ ಬಂದು ಬಿಡ್ತು. ಮತ್ತೇನು ಹಾಕ್ಕೊಂಡು ಹೀರೋಗತೆ ಮಿಂಚ್ರೀ ಸಾಬ್ರಾ.....ಅಂತ ಬಿ-ಪಾಸಿಟಿವ್ ಅನ್ನೋ ಹಾಂಗ ಹೇಳಿದೆ.

ಅಲ್ಲಾ.....ಸಂಜೀವ್ ಕುಮಾರ್ ವಿಗ್ಗನ್ನಾ ಯಾಕ್ ನಿಮಗ ಹಾಕ್ಸಿದ್ರು ನಿಮ್ಮ ಬೇಗಂ?.....ಅಂತ ಕೇಳಿದೆ ಸಾಬರನ್ನ.

ಅದು ಸಂಜೀವ್ ಕುಮಾರ್ ಭಾಳ ಒಳ್ಳೆ ನಟ. ನಮಗೂ, ಬೇಗಂ ಇಬ್ಬರಿಗೂ ತುಂಬಾ ಸೇರ್ತಾನೆ.....ಅಂದ್ರು ಸಾಬರು.

ನಿಮಗೆ ಗೊತ್ತಾ ಸಾಬ್ ಈ ವಿಗ್ಗನಲ್ಲಿ ಇರೋ ಕೂದಲ ಎಲ್ಲೀದು ಅಂತ?....ಅಂತ ಕೇಳಿದ ಕರೀಂ.

ಎಲ್ಲಿ ಹೊಲಸ್ ಕೂದಲನೋ ಏನೋ? ನಮ್ಮ ರಾಯಲ್ ಹೇರ ಕಟ್ಟಿಂಗ್ ಸಲೂನ್ ಹಜಾಮ್ ಪಾಂಡು, ಬೋಳಿಸಿದ ಕೂದಲ ಎಲ್ಲಾ ಚೌರಿ ಮಾಡೋ ಮಂದೀಗೆ ಹೋಲ್ಸೇಲ್ ನ್ಯಾಗ್  ಮಾರ್ತಿದ್ದ. ಅಂತಹ  ಕಡೆ ಎಲ್ಲಿಂದಾರ ಬಂದಿರಬೇಕು....ಅಂತ ಸಾಕ್-ಮಾಡು ಅನ್ನೋ ಹಾಂಗ ಹೇಳಿದೆ.

ಇಲ್ಲಾ....ಸಾಬ್....ಇದು ತಿರುಪತಿ ಕೂದಲದಿಂದ ಮಾಡಿದ ವಿಗ್ಗು ಸಾಬ್....ಅಂತ ಹೆಮ್ಮೆಯ  ಕೃತಾರ್ಥನಾದೆ  ಅನ್ನೋ ಲುಕ್ ಕೊಟ್ಟು ಹೇಳಿದ ಕರೀಂ.

ಪುಣ್ಯಾ ಮಾಡಿರಿ ಸಾಬ್ರಾ ನೀವು. ಯಾವ್ ಯಾವದೋ ಪ್ರಾಣಿಗಳ,  ಎಲ್ಲಿ ಎಲ್ಲಿದೋ ಕೂದಲದ್ದು ವಿಗ್ಗ್ ಹಾಕ್ಕೊತ್ತಾರ ಮಂದಿ. ಹಾಂಗಿದ್ದಾಗ ನಿಮಗ ತಿರುಪತಿ ತಿಮ್ಮಪ್ಪನ ಭಕ್ತರು ಭಕ್ತಿಯಿಂದ ಮುಡಿ ಅಂತ ಹೇಳಿ ಕೊಟ್ಟ ಕೂದಲದಿಂದ ಮಾಡಿದ ವಿಗ್ಗ ಸಿಕ್ಕದ. ಮುದ್ದಾಂ ಹಾಕ್ಕೊಳ್ರೀ. ತಿಮ್ಮಪ್ಪ ಒಳ್ಳೇದು ಮಾಡೇ ಮಾಡ್ತಾನ.....ಅಂತ ಹೇಳಿದೆ. ಸಾಬರು ಖುಷ್ ಆದಂಗ ಕಂಡರು.

ಕೇರಳದ ತೆಂಗಿನಕಾಯಿ ಕಾಶಿಯ ವಿಶ್ವನಾಥನಿಗೆ ಅರ್ಪಿತವಾಗುವದರ ಬಗ್ಗೆ ಕೇಳಿದ್ದೆ. ಕಾಶ್ಮೀರದ ಸೇಬುಹಣ್ಣು ದಕ್ಷಿಣೇಶ್ವರದ  ಮಹಾಕಾಳಿಗೆ ಸಲ್ಲೋದನ್ನ ಕೇಳಿದ್ದೆ. ಆದ್ರ ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಕೂದಲು, ವಿಗ್ಗಾಗಿ, ದುಬೈನಲ್ಲಿ ಡ್ಯೂಟಿ ಫ್ರೀ ಬಿಕರೀ ಆಗಿ, ಧಾರವಾಡಕ್ಕೆ ಬಂದು ಯಾರದೇ ಶಿರೋಮಣಿಯಾಗಿ ನಳನಳಿಸಿದ್ದು ಮಾತ್ರ ಕೇಳಿರಲಿಲ್ಲ. ಬೋಲ್ಡೀ ಬೇಗಂ ದೆಸೆಯಿಂದ ಅದೂ ಆಗಿ ನಾನು ಧನ್ಯೋಸ್ಮಿ.

ಈಗ ವಿಗ್ಗ ಹಾಕಿಕೊಳ್ಳಲಿಕ್ಕೆ ಶುರು ಮಾಡಿದ ಮ್ಯಾಲೆ ನಿಮ್ಮ ಬೋಲ್ಡೀ ಬೇಗಂ ವರ್ತನೆ ಹ್ಯಾಂಗ್ ಅದ? ಸ್ವಲ್ಪ ಇಂಪ್ರೂವ್ ಆಗಿದೆ ಏನು? ತನ್ನ ಹಳೆ ಆಶಿಕ್ ಹುಚ್ಚು ಕಡಿಮಿ ಮಾಡ್ಯಾಳ ಏನು?....ಅಂತ ಕೇಳಿದೆ.

ಯಾರಿಗೆ ಗೊತ್ತು ಸಾಬ್? ಇಡೀ ದಿವಸ ಫೇಸ್ಬುಕ್ ಮೇಲೆ ಇರೋದು ಬಿಟ್ಟಿಲ್ಲ. ನಮಗೆ ಹೋಟೆಲಿಂದ ಖಾನಾ ತರೋದು, ಮನಿ ಕೆಲಸ ಮಾಡೋದು ತಪ್ಪಿಲ್ಲ. ಅದರ ಮ್ಯಾಲೆ ಈ ತಲಿ ಪರಾ ಪರಾ ಕೆರಕೋ ಬೇಕು ಅನ್ನಿಸೋ ವಿಗ್ಗ್ ಬ್ಯಾರೆ.....ಅಂತ ಹೇಳಿದ ಕರೀಂ.

ಹ್ಞೂ...ಮತ್ತೇನು ಬೇಗಂ ಕಾರ್ಬಾರ್?....ಅಂದೆ.

ಯಾರಿಗೆ ಗೊತ್ತು ಸಾಬ್? ಎರಡು ವಾರದಿಂದ ಅಕಿ ಇಲ್ಲ.ಎಲ್ಲೋ ಟ್ರಿಪ್ ಅಂತ ಪ್ಯಾಂಟ್, ಸ್ಲೀವ್ ಲೆಸ್ ಬನಿಯನ್ ಹಾಕಿಕೊಂಡು ಹೋಗಿ ಬಿಟ್ಟಿದ್ದಾಳೆ.....ಅಂತ ಬೇಗಂ ಬುರ್ಕಾ ಬಿಟ್ಟು ಬೆಪರ್ದಾ ಆಗಿ ಹೋದ ನ್ಯೂಸ್ ಕೊಟ್ಟ.

ಹೋಗ್ಗೋ....ಸಾಬರ....ನಿಮ್ಮ ಪೈಕಿ ಮಂದಿ ಅದು ಹ್ಯಾಂಗ ಪ್ಯಾಂಟ್, ಸ್ಲೀವಲೆಸ್ ಬನಿಯನ್ ಹಾಕ್ಕೊಂಡು ಹೋದರು? ಅದೂ ಬುರ್ಕಾ ಇಲ್ಲದ....ಅಂತ ಘಾಬರಿ ವ್ಯಕ್ತಪಡಿಸಿದೆ.

ನಿಮ್ಮದು ಒಳ್ಳೆ ಮಾತು ಆಯಿತು. ನಿಮ್ಮದು ಔರತ್ ಮಂದಿ ಎಲ್ಲಾ ಕಚ್ಛಿ ಸೀರಿ ಹಾಕ್ಕೊತ್ತಾರೆ ಕ್ಯಾ? ನಿಮ್ಮದೂ ಮಂದಿನೂ ಹಾಪ್ ಚಡ್ಡಿ, ಸ್ಲೀವಲೆಸ್ ಬನಿಯನ್ ಹಾಕಿಕೊಂಡು ಆಧಾ ನಂಗಾ ಪಂಗಾ ಆಗೇ ಅಲ್ಲಿ ಇಲ್ಲಿ ಹೋಗ್ತಾರೆ.....ಹಾಗೆ ಈ ಹಾಪ್ ಬೇಗಂ ಕೂಡ....ಅಂತ ಕರೀಂ ಸ್ವಲ್ಪ ಡಿಫೆಂಡ್ ಮಾಡಿಕೊಂಡ.

ನೀವು ಹೇಳಿದ್ದು ಕೇಳಿ ಒಂದು ಹಳೆ ತೆಲಗು ಹಾಡು ನೆನಪ ಆತ ನೋಡ್ರೀ ಸಾಬ್ರಾ.....ಅಂದೆ.

ಏನು ಸಾಬ್ ಹಾಡು? ತೆಲಗು ಹಾಡು ಅಂದ್ರೆ ತಿರುಪತಿ ಮೇಲಿನ ಹಾಡು ಕ್ಯಾ ಸಾಬ್?........ಅಂದ ಕರೀಮ. ಪಾಪ ತಿರುಪತಿ ಮುಡಿ ಕೂದಲಿನ ವಿಗ್ಗ್ ಹಾಕಿಕೊಂಡ ತಿರುಪತಿ ವಿಗ್ಗೇಶ್ವರನಿಗೆ ತೆಲಗು, ಆಂಧ್ರ ಅಂದ್ರೆ ತಿರುಪತಿಯದೇ ಗುಂಗು.

ಜ್ಯೋತಿಲಕ್ಷ್ಮಿ ಸೀರೆ ಉಟ್ಟಿಂದಿ.
ಸೀರೆಗು ಸಿಗ್ಗು ವಚ್ಚಿಂದಿ.

ಅಂದ್ರೆ ಏನು ಸಾಬ್?....ಅಂತ ಕೇಳಿದ ಕರೀಂ.

ಜ್ಯೋತಿಲಕ್ಷ್ಮಿ ಸೀರಿ ಉಟ್ಟುಗೊಂಡರ ಸೀರಿಗೇ ನಾಚಿಗೆ ಬಂತು....ಅಂತ ನೋಡಪಾ....ಅಂತ ಕನ್ನಡದಾಗ ಅರ್ಥ ಹೇಳಿದೆ.

ಅಲ್ಲಾ ಸಾಬ್....ಯಾವದೋ ಜ್ಯೋತೀದು ಲಕ್ಷ್ಮಿ ಬಾಯಿ ಸೀರೆ ಉಟ್ಟರೆ ಸೀರೆಗೆ ಯಾಕೆ ಶರ್ಮ್ ಬರಬೇಕು? ತಿಳಿಲಿಲ್ಲ ಸಾಬ್....ಅಂತ ಹೇಳಿದ ಕರೀಂ.

ಜ್ಯೋತಿಲಕ್ಷ್ಮಿ ಅಂದ್ರ ನಮ್ಮ ಕಾಲದ ಫೇಮಸ್ ಕ್ಯಾಬರೆ ಡ್ಯಾನ್ಸರ್. ನಾನು, ನೀನು ಕೂಡಿ ಅಕಿ ಎಷ್ಟ ಮೂವಿ ನೋಡೇವಿ. ನೆನಪ ಇಲ್ಲೇನು? ಅಂಥಾ ಜ್ಯೋತಿಲಕ್ಷ್ಮಿ ಮೈತುಂಬ ಸೀರಿ ಉಟ್ಟುಗೊಂಡು ಬಿಟ್ಟಳು ಅಂದ್ರ ಮತ್ತೇನೋ? ಸೀರಿ ನಾಚಿ ನಾಚಿ ನೀರಾಗಿ ಕರಗಿ ಕರಗಿ ಹೋಗ್ತದ ನೋಡಪಾ....ಅಂತ ನಮ್ಮ ಹೈಸ್ಕೂಲ್ ಜಮಾನಾದಾಗ ಹ್ಯಾಂಗ್ ನಗ್ತಿದ್ವಿ ಹಾಂಗ ಖೀ...ಖೀ...ಅಂತ ಖುಲ್ಲಾ ಖುಲ್ಲಾ ನಕ್ಕೆ. ಅವನೂ ಖೀ ಖೀ ಅಂತ ನಕ್ಕು ಜುಗಲಬಂದಿ ಆಫ್ ನಗು.

ಓಹೋ....ಹಾಂಗೆ ಹೇಳಿ ಸಾಬ್...ಈಗ ನೆನಪ ಆಯಿತು.ಇದು ಜ್ಯೋತಿಲಕ್ಷ್ಮಿ, ಜಯಮಾಲಿನಿ ತಂಗಿ ಅಲ್ಲ ಕ್ಯಾ? ಅಕ್ಕಾ ತಂಗಿ ಇಬ್ಬರೂ ಏಕ್ದಂ ಝಾಕಾಸ್, ರಾಪ್ಚಿಕ್ ಮಾಲ್. ಎಷ್ಟು ಸಿನೆಮಾದಲ್ಲಿ ಅವರ ಡ್ಯಾನ್ಸ್ ಖಾಯಂ....ಅಂತ ಹೇಳಿ ಗತಕಾಲ ವೈಭವ ನೆನಿಸ್ಕೊಂಡು ಕರೀಂ ತನ್ನ ಕಷ್ಟ ಎಲ್ಲ ಸ್ವಲ್ಪ ಮರೆತು ರಿಫ್ರೆಶ್ ಆದ.

ಹಾಗಾದ್ರೆ ಸಾಬ್....ನಮ್ಮ ಬೇಗಂಗೆ ಸಿಗ್ಗಿಲ್ಲೇಶ್ವರಿ ಅಂತ ಹೆಸರು ಇಟ್ಟು ಬಿಡೋಣ. ಕ್ಯಾ ಸಾಬ್?....ಅಂತ ಕಣ್ಣು ಹೊಡೆದ ಕರೀಂ.

ಸಿಗ್ಗಿಲ್ಲೇಶ್ವರಿ...ಅಂದ್ರಾ........ಸಿಗ್ಗು ಅಂದ್ರ ನಾಚಿಗಿ. ಇಲ್ಲೇಶ್ವರಿ ಅಂದ್ರ ಇಲ್ಲದಾಕಿ. ನಾಚಿಗಿ ಇಲ್ಲದಾಕಿ ಅಂತ ಅರ್ಥ ಏನು ನಿಂದು? ಮಸ್ತ ತೆಲಗು ಹೆಸರ ಇಟ್ಟಿ ನೋಡು....ಶಭಾಶ್.....ಅಂದೆ.

ಬ್ಯಾಡ್ ಬಿಡಪಾ....ಪಾಪ್ ಏನೋ ಪ್ಯಾಂಟು, ಸ್ಲೀವಲೆಸ್ ಬನಿಯನ್ ಹಾಕ್ಕೊಂಡು ಒಂದೆರಡು ವಾರ ಮನಿ ಬಿಟ್ಟು ಹೊಗ್ಯಾಳ್ ಅಂದ ಮಾತ್ರಕ್ಕ ನಾಚಿಗಿ ಇಲ್ಲದಾಕಿ ಅಂತ ಹೇಳಿಬಿಡೋದು ಸರಿ ಏನೋ?...ಪಾಪ್ ಅಕಿನೂ ಚೊಲೋ ಇರಬಹದು. ಇನ್ನೂ ಸಣ್ಣಾಕಿ ಇದ್ದಾಳ. ಮುಂದ ಸರಿ ಆದರೂ ಆಗಬಹುದು. ಬಿ ಪಾಸಿಟಿವ್ ಐ ಸೆ.....ಅಂದೆ ನಾನು.

ಅಕಿ ಬೇಕಾದ್ರೆ ಪ್ಯಾಂಟು, ಹಾಪ್ ಪ್ಯಾಂಟು, ಬನಿಯನ್ ಏನ ಬೇಕಾದರೂ ಹಾಕಿಕೊಂಡು ಹಾಳಾಗಿ ಹೋಗ್ಲಿ ಸಾಬ್....ಆದರೆ ನಮಗೆ ಈ ದರಿದ್ರ ವಿಗ್ಗ್ ಹಾಕಿಸಿ ನಮ್ಮನ್ನ ವಿಗ್ಗೇಶ್ವರ ಮಾಡಿಸಿದಳು ನೋಡಿ.ಅದಕ್ಕೆ ಅವಳಿಗೆ ಸಿಗ್ಗಿಲ್ಲೇಶ್ವರಿ ಅಂತ ಹೆಸರೇ ಕರೆಕ್ಟ್....ಅಂತ ಫುಲ್ ವಿವರಣೆ ಕೊಟ್ಟ.

ಈ ಸಾಬ್ರದ್ದು ಮತ್ತ ಅವರ ಮಂಗ್ಯಾನ್ ಕೆ ಬೇಗಂದು ಯಾವಾಗಲೂ ಇರೋದ ಅಂತ ಹೇಳಿ ಸಾಬರಿಗೆ ಸಲಾಂ ಹೇಳಿ ವಾಪಸ್ ಬಂದೆ.

ಒಟ್ಟಿನಲ್ಲಿ ಇವತ್ತು - ಸಿಗ್ಗಿಲ್ಲೇಶ್ವರಿ ಸತಿಯೂ, ವಿಗ್ಗೇಶ್ವರ ಪತಿಯೂ- ಅಂತ ಬ್ಲಾಗ್ ಬರೀಲಿಕ್ಕೆ ಮಸ್ತ ಮಾಲ್ ಸಿಕ್ತು.

ಮನಿಗೆ ಬಂದು ಟೀವಿ ಆನ್ ಮಾಡಿದ್ರ ಎಲ್ಲಕಿಂತ ದೊಡ್ಡ ಸಿಗ್ಗಿಲ್ಲೇಶ್ವರಿ ಡಿಸ್ಕೋ ಶಾಂತಿ ಐಟಂ ನಂಬರ್ ಬರ್ಲಿಕತ್ತಿತ್ತು. ಚೀರಿ ಟೀವಿ ಆಫ್ ಮಾಡಿದೆ. ಡಿಸ್ಕೋ ಶಾಂತಿ ಅವತಾರ ನೋಡಿದ್ರ ಸೀರಿಗೆ ಒಂದ ಅಲ್ಲ ಲುಂಗಿಗೂ, ಅಂಗಿಗೂ, ಪುಂಗಿಗೂ ಎಲ್ಲಾದಕ್ಕೂ ಸಿಗ್ಗು ಮತ್ತೊಂದು ಬಂದ್ರ ಕಷ್ಟ ನೋಡ್ರೀ ಅದಕ್ಕ.

** ಕರೀಂ ಬಗ್ಗೆ ಬರೆಯದೇ ತುಂಬಾ ದಿವಸವಾಗಿತ್ತು. ಕರೀಂ ಬಗ್ಗೆ ಬರೆದ ಎಲ್ಲಾ ಹಾಪ್ ಲೇಖನಗಳನ್ನ ಓದಿ, ಎಂಜಾಯ್ ಮಾಡಿ, ಸಿಕ್ಕಾಪಟ್ಟೆ ನಕ್ಕೆ- ಅಂತ ಹೇಳಿದವರು ಒಬ್ಬ ಹಳೆಯ ಸಹೃದಯೀ ಧಾರವಾಡದ ಆಪ್ತರು. ಅವರೇ ಕೇಳಿದ್ದರು - ಮುಂದಿನ ಕರೀಂ ಪೋಸ್ಟ್ ಯಾವಾಗ? - ಅಂತ. ಕರೀಂ ಪೋಸ್ಟ್ ಬರೆಯಲು ತುಂಬಾ ಸೃಜನಶೀಲತೆ ಬೇಕು. ಅದು ಯಾವದೋ ಪುಸ್ತಕದ ಬುಕ್ ರಿವ್ಯೂ ಮಾಡಿದ ಹಾಗೆ ಅಲ್ಲ. ನಾವು ಅಷ್ಟು ದೊಡ್ಡ ಮಟ್ಟಿನ ಸೃಜನಶೀಲರಂತೂ ಅಲ್ಲವೇ ಅಲ್ಲ. ಆದರೂ ಅವರು ಕೇಳಿದ್ದಕ್ಕೆ ಇವತ್ತು ಮತ್ತೆ ಕರೀಮನನ್ನು ನೆನಪು ಮಾಡಿಕೊಂಡೆ. ಬಂದು ನಗಿಸಿ ಹೋಗೇ ಬಿಟ್ಟ. ಥ್ಯಾಂಕ್ಸ್ ಕರೀಂ ಭಾಯಿ.

** ಸಿಗ್ಗು, ವಿಗ್ಗು ಪದಗಳನ್ನು ಒಂದೇ ಸಲ ಮೊದಲಬಾರಿಗೆ ಬಳಸಿದವರು ನನಗೆ ತಿಳಿದ ಮಟ್ಟಿಗೆ ಪತ್ರಕರ್ತ ರವಿ ಬೆಳಗೆರೆ ಅವರು. ಮಾಜಿ ಮುಖ್ಯಮಂತ್ರಿ  ಶ್ರೀ. ಎಸ್. ಎಮ್. ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಳ್ಳುವಾಗ - ಸಿಗ್ಗಿಲ್ಲದವನಿಗೆ ವಿಗ್ಗೊಂದು ಬ್ಯಾರೆ ಕೇಡು- ಅಂತೇನೋ ಟೈಟಲ್ ಕೊಟ್ಟ ಅವರ ಲೇಖನ ನೋಡಿ ಬಿದ್ದು ಬಿದ್ದು ನಕ್ಕಿದ್ದೆ. ಕೃಷ್ಣ ಕೂಡ ವಿಗ್ಗೇಶ್ವರರಂತೆ.

** ಫೇಸ್ಬುಕ್ addiction ಬಗ್ಗೆ ತುಂಬಾ ಚರ್ಚೆ ಆಗುತ್ತಿದೆ. ಮೊನ್ನೆ ಒಂದು ಆರ್ಟಿಕಲ್ ಓದಿದೆ. ವಿವಾಹದ ನಂತರ ಫೇಸ್ಬುಕ್ ನಲ್ಲಿ ಗಂಡ relationship status ಚೇಂಜ್ ಮಾಡಲಿಲ್ಲ ಅಂತ ಯಾರೋ ಒಬ್ಬ ಮಹಿಳಾಮಣಿ ಡೈವೋರ್ಸ್ ಗೆ ಅರ್ಜಿ ಹಾಕಿದ್ದಾಳೆ ಅಂತೆ. ಲಿಂಕ್ ಇಲ್ಲಿದೆ ನೋಡಿ.

** ಫೇಸ್ಬುಕ್ ನಲ್ಲಿ ಸಿಕ್ಕ ಜನರೊಂದಿಗೆ ಸರಿಯಲ್ಲದ ಸಲಿಗೆ, ಸಂಬಂಧ, ವಿಪರೀತ ಹರಟೆ ಇತ್ಯಾದಿಗಳನ್ನು  ಶುರು ಹಚ್ಚಿಕೊಳ್ಳುವದೇ ಒಂದು ದೊಡ್ಡ ಸಮಸ್ಯೆ ಆಗಿ ಸಾಕಷ್ಟು ದಾಂಪತ್ಯಗಳನ್ನು ಮುರಿದಿದೆ ಅಂತ ಹೇಳುತ್ತದೆ ಒಂದು ನ್ಯೂಸ್ ರಿಪೋರ್ಟ್. ಲಿಂಕ್ ಇಲ್ಲಿದೆ ನೋಡಿ.


Tuesday, July 24, 2012

ಹೋಲ್ ಸೇಲಿನಲ್ಲಿ ಖರೀದಿಸಿದರೆ ಅಂಡರ್ವೇರ್ ಚೀಪೋ ಚೀಪು....ಅಂದಿದ್ದ ಆ ವಿಚಿತ್ರ ಉಗ್ರಗಾಮಿ

1970 ದಶಕದ ಅಂತ್ಯವೋ 1980 ದಶಕದ ಆದಿಯೋ ಇರಬೇಕು.

ಲೆಬನಾನಿನ ಬೆಕಾ ಕೊಳ್ಳ ಪ್ರದೇಶ ಅಂದರೆ ಪ್ಯಾಲೆಸ್ಟೈನ್ ಉಗ್ರಗಾಮಿಗಳ ಸ್ವರ್ಗ. ಬೇರೆ ಬೇರೆ ಬಣಗಳ ಸಾಕಷ್ಟು ಉಗ್ರವಾದಿಗಳು ಅಲ್ಲಿ ಬೀಡು ಬಿಟ್ಟಿದ್ದರು. ಅಲ್ಲೇ ಅವರ ವಸತಿ, ತರಬೇತಿ. ಮನಸ್ಸು ಬಂದಾಗ, ಅವಕಾಶ ಸಿಕ್ಕಾಗ, ಗಡಿ ದಾಟಿ ಇಸ್ರೇಲ್ ಒಳಗೆ ನುಗ್ಗಿ ವಿಧ್ವಂಸಕಾರಿ ಕೃತ್ಯ ಮಾಡಿ ವಾಪಸ್ ಓಡಿ ಬರುವದು ಅವರ ಗೆರಿಲ್ಲಾ ಯುದ್ಧ ನೀತಿ.

ರೀ.....ಬಜೆಟ್ ಡಿಟೇಲ್ಸ್ ಎಲ್ಲ ತಂದಿದೀರಿ ಏನ್ರಿ? - ಅಂತ ಏರಿದ ದನಿಯಲ್ಲಿ ಅಬ್ಬರಿಸುತ್ತಿದ್ದವನು ಯಾವದೇ ಕಂಪನಿಯ CEO ಅಲ್ಲ. ಒಂದು ಉಗ್ರಗಾಮಿ ಸಂಘಟನೆಯ ನಾಯಕ.

ಸಾರ್....ನೋಡಿ ಇಲ್ಲಿದೆ ಲಿಸ್ಟ್. ಫುಲ್ ಡಿಟೇಲ್ಸ್ ಒಟ್ಟಾಕಿ ತಂದಿದ್ದೇವೆ  - ಅಂತ ಬಜೆಟ್ ವಿವರ ಕೊಟ್ಟರು ಅವನ ಎರಡನೇ ಹಂತದ ಉಗ್ರಗಾಮಿ ನಾಯಕರು.

ನೋಡ್ರಯ್ಯ.....ನಾನು ANO ಉಗ್ರಗಾಮಿ ಸಂಘಟನೆಯ ನಾಯಕನೇ ಆಗಿರಬಹುದು. ಆದ್ರೆ ನಾನು ಕಂಪನಿ CEO ಇದ್ದಂಗೆ. ಒಂದು ಸರಿಯಾದ ಬಜೆಟ್ ಇಲ್ಲ ಅಂದ್ರೆ ಹ್ಯಾಗ್ರಯ್ಯ ನಾವು ಪ್ಲಾನ್ ಮಾಡೋದು? ಯಾವ ಅರಬ್ ಅಮೀರರನ್ನು ಹೆದರಿಸಿ ಎಷ್ಟು ದುಡ್ಡು ಅಂತ ಕೀಳುವದು? ಯಾರಿಗೆ ಎಷ್ಟು ಧಮಕಿ ಕೊಡುವದು? ಯಾವ ಏರ್ಲೈನ್ಸ್ ನ  ಎಷ್ಟು ಪ್ಲೇನ್ ಬಾಂಬಿಟ್ಟು ಉಡಾಯಿಸುವದು? ಎಷ್ಟು ಪ್ಲೇನ್ ಹೈಜಾಕ್ ಮಾಡುವದು? ಇದೆಲ್ಲ ನಿರ್ಧರಿಸಲು ವಿವರವಾಗಿ ಮಾಡಿದ ಕರಾರುವಾಕ್ ಖಡಕ್ ಬಜೆಟ್ ಬೇಕ್ರಯ್ಯ...ಅದಕ್ಕೆ ಎಲ್ಲ ಡಿಟೈಲ್ಸ್ ಕೇಳಿದ್ದು - ಅಂತ ಅಬ್ಬರಿಸಿದ ಆ ಉಗ್ರಗಾಮಿಗಳ ಪರಮ ನಾಯಕ.

ನಂತರ ತನ್ನ ಅನುಯಾಯಿಗಳು ಕೊಟ್ಟ ಬಜೆಟ್ ವಿವರ ಲೈನ್ ಬೈ ಲೈನ್ ನೋಡುತ್ತಾ ಹೊರಟ.

ನಡುವೆ ಒಮ್ಮೆ ಏಕದಂ ಎರ್ರಾ ಬಿರ್ರಿ ರೈಸ್ ಆಗಿ ಚೀರಿದ. ಕೂಗಿದ ದನಿಗೆ ಬೆಕಾ ಕೊಳ್ಳವೇ ಬೆಚ್ಚಿ ಬಿದ್ದಿರಬೇಕು.

ಏನ್ರಯ್ಯಾ ಇದು!!!!???? ಹೆಂಡ್ತೀರಿಗೆ, ಪ್ರೇಯಸಿಯರಿಗೆ ವರ್ಷಕ್ಕೆ ಎಷ್ಟು ಜೊತೆ ಕಾಚಾ (panties), ಬಾಡಿ (bra)  ಗೆ ಇಂಡೆಂಟ್ ಹಾಕಿದ್ದೀರಾ? ಅಯ್ಯಯ್ಯೋ!!!! ಇಷ್ಟು ದೊಡ್ಡ ಮೊತ್ತದ ದುಡ್ಡು ಕಾಚಾ, ಬಾಡಿಗಾ? ಇಷ್ಟು ದೊಡ್ಡ ಮೊತ್ತ ಖರ್ಚು ಮಾಡಿ ಅವರಿಗೆ ಒಳವಸ್ತ್ರ ಕೊಡ್ಸೋಕೆ ನಾವೇನು ಪ್ಯಾಲೆಸ್ತೇನಿ ಸ್ವಾತ್ರಂತ್ರ ಹೋರಾಟಗಾರರಾ ಅಥವಾ ಕೊಲ್ಲಿ ರಾಷ್ಟ್ರಗಳ ಸಿರಿವಂತರಾ? ಹಾಂ? ಹಾಂ? ನಾಚಿಗೆ ಬರಲ್ಲಾ ನಿಮಗೆಲ್ಲ? - ಅಂತ ಒಂದೇ ಉಸಿರಿನಲ್ಲಿ ಬೈದು ಅವರೆಲ್ಲರ ಉಸಿರು, ದನಿ, ಮತ್ತೊಂದು ಎಲ್ಲ ಅಡಗಿಸಿಬಿಟ್ಟ.

ಮುಂದುವರೆದು ಅವನೇ ಹೇಳಿದ.

ನೋಡ್ರಯ್ಯ....ನನಗೆ ಬಿರೂಟ್ (ಲೆಬನಾನಿನ ರಾಜಧಾನಿ) ನಲ್ಲಿ ಹೋಲ್ ಸೇಲ್ ನಲ್ಲಿ ಒಳಉಡುಪು ಸಪ್ಲೈ ಮಾಡೋ ಜನ ಗೊತ್ತು. ಅವರಿಗೆ ಬರೋಕೆ ಹೇಳ್ತೀನಿ. ಬಂದು ಅಳತೆ ತೊಗೊಂಡು ಹೋಗ್ತಾರೆ. ನಿಮ್ಮ ಹೆಂಡ್ರೀಗೆ, ಗೆಳತಿಯರಿಗೆ ಅಳತೆ ಕೊಡೋಕೆ ರೆಡಿ ಇರೋಕೆ ಹೇಳಿ. ಯವರೇಜ್(average) ಸೈಜ್ ನಲ್ಲಿ ಹೋಲ್ ಸೇಲ್ ನಲ್ಲಿ ತರ್ಸಿ ಬಿಟ್ಟರೆ ತುಂಬಾ ಉಳಿತಾಯ. ತಿಳಿತಾ? ಹಾಂ....ಹಾಂ.....- ಅಂತ ಮತ್ತೆ ಅಬ್ಬರಿಸಿದ.

ಸುತ್ತ ಕುಳಿತ ಜನ ಮುಖ ಮುಖ ನೋಡಿದರು. ಆ ಉಗ್ರಗಾಮಿ ನಾಯಕನಿಗೆ ಎದುರು ಮಾತು ಆಡುವ ಚಾನ್ಸೇ ಇಲ್ಲ. ಸುಖಾ ಸುಮ್ಮನೆ ತಲೆ ಕೆಟ್ಟಾಗೊಮ್ಮೆ, ಸಂಶಯ ಬಂದ ಮಾತ್ರಕ್ಕೆ, ತನ್ನದೇ ಜನರನ್ನು ನೂರು ಇನ್ನೂರರ  ಸಂಖ್ಯೆಯಲ್ಲಿ ಮಶೀನ್ ಗನ್ನ್ ಹಚ್ಚಿ ಕೊಂದು, ಸಾಮೂಹಿಕ ಗೋರಿಯಲ್ಲಿ ಮುಚ್ಚಿ, ಅದರ ಮೇಲೆ ಡೇರೆ ಹಾಕಿಕೊಂಡು ಮಲುಗಿದ ವಿಲಕ್ಷಣ ವ್ಯಕ್ತಿತ್ವದ ಮನುಷ್ಯ ಅವನು. ಅವನಿಗೇನು ಹೇಳುವದು? ಸಾಯಬೇಕಾಗಿದೆಯೇ?

ಒಂದೇ ಸೈಜಿನ ಒಳಉಡುಪು ಎಲ್ಲ ಹೆಂಗಳೆಯರಿಗೆ ಅನ್ನುವ ಸುದ್ದಿ ಉಗ್ರಗಾಮಿಗಳ ಶಿಬಿರದಲ್ಲಿ ಮಿಂಚಿನಂತೆ ಹರಡಿತು. ಮತ್ತೆ ಅಳತೆ ತೆಗೆದುಕೊಳ್ಳಲು ಪರಕೀಯರು ಬರುವ ವಿಚಾರ. ಮೊದಲೇ ಎಲ್ಲರೂ ಕಟ್ಟರ್ ಪರ್ದಾ ಹಾಕಿಕೊಂಡಿರುವ ಸಂಪ್ರದಾಯಸ್ತ ಮಹಿಳೆಯರು. ಯಾ ಅಲ್ಲಾ. ಯಾ ಖುದಾ  - ಅಂತ ಲಟಿಕೆ ಮುರಿದವರೇ ನಾಲಿಗೆ ಕೆಳಗೆ ಬೆರಳಿಟ್ಟು - ಳೋಳೋಳೋಳೋಳೋಳೋಳೋ - ಅಂತ ಅರಬ್ ಮಹಿಳೆಯರ ಟ್ರೇಡ್ಮಾರ್ಕ್ ವಿಚಿತ್ರ ಕೇಕೆ ಹೊಡೆದೇ  ಬಿಟ್ಟರು. ಅವರ ಕೇಕೆ ಬೆಕಾ ಕೊಳ್ಳದ ಸುತ್ತ ಮಾರ್ದನಿಸಿತು.

ತಮ್ಮ ಹೆಂಡಿರು, ಪ್ರೇಯಸಿಯರು ಆ ಪರಿ ದುಃಖಭರಿತ ಕೇಕೆ ಹೊಡೆದಿದ್ದು ನೋಡಿದ ಸಿಪಾಯಿ ಲೆವೆಲ್ ಉಗ್ರವಾದಿಗಳು ಒಂದು ಕೈಯಲ್ಲಿ ಲಬೋ ಲಬೋ ಬಾಯಿ ಬಡಿದುಕೊಳ್ಳುತ್ತ ಇನ್ನೊಂದು ಕೈಯಲ್ಲಿ ತಮ್ಮ AK -47 ಬಂದೂಕಿನ ಸುಮಾರು ಗುಂಡು ಗಾಳಿಯಲ್ಲಿ ಹಾರಿಸಿ ತಮ್ಮ ಆಕ್ರೋಶ ತೋರಿಸಿದರು. ಸಂತೋಷವಾಗಲಿ ದುಖವಾಗಲಿ ಗಾಳಿಯಲ್ಲಿ ಒಂದು ಕೈಯೆತ್ತಿ ಗುಂಡು ಹಾರಿಸುವದು ಅವರ ಸಂಪ್ರದಾಯ.

ಹೆಂಗಳೆಯರ ಕಾಚಾ, ಬಾಡಿ ವಿಷಯದಲ್ಲಿ ಆ ಉಗ್ರಗಾಮಿ ಸಂಘಟನೆಯಲ್ಲಿ ಮೊದಲ ಬಾರಿ ಒಳಬಂಡಾಯದ ಹೊಗೆ ಎದ್ದಿತ್ತು.

ಆ ಉಗ್ರಗಾಮಿ ನಾಯಕನಿಗೆ ಏನು ಅನ್ನಿಸಿತೋ ಏನೋ ಒಂದೇ ಸೈಜ್ ಹೋಲ್ಸೇಲ್  ಕಾಚಾ, ಬಾಡಿ ಯೋಚನೆ ಅಷ್ಟಕ್ಕೇ ಬಿಟ್ಟ.

ಆ ವಿಲಕ್ಷಣ ಪ್ಯಾಲೆಸ್ತೇನಿ ಉಗ್ರರ ನಾಯಕನೇ ಮಹಾನ್ ಖತರ್ನಾಕ್ ಅಬು ನಿದಾಲ್. ಅಬು ನಿದಾಲ್ ಆರ್ಗನೈಜೇಶನ್ (ANO) ಎಂಬ ಸಂಘಟನೆಯ ನಾಯಕ.

ಈ  ಒಸಾಮಾ ಬಿನ್ ಲಾಡೆನ್ ಬರುವ ಮೊದಲು ಆ ಪರಿಯ ಕುಖ್ಯಾತಿ ಪಡೆದವರು ಯಾರಾದರು ಇದ್ದರಾ ಅಂತ ನೋಡುತ್ತಾ ಹೋದರೆ ಸಿಗುವವನೇ ಅಬು ನಿದಾಲ್.

ಅಬು ನಿದಾಲ್
ಯಾವದೇ ತತ್ವ, ಸಿದ್ಧಾಂತ, ಜಿಹಾದ್, ಅದು, ಇದು ಅಂತ ಬೊಗಳೆ ಇಲ್ಲ ಅವನದು. ಕಾಸ್ ಕೊಡ್ತೀಯ? ನಿನ್ನ ಕೆಲಸ ಮಾಡಿ ಕೊಡ್ತೀನಿ. ತಿಳಿತಾ? - ಅಂತ ಅಂದು ಅವನ ಲೆವೆಲ್ ಗೆ ಕಾಸು ಬಿಚ್ಚಿದ ಜನರ ವಿಧ್ವಂಸಕ ಕೃತ್ಯಗಳನ್ನು 'ಪ್ಯಾಲೆಸ್ತೀನಿನ ಸ್ವಾತಂತ್ರ ಸಮರ' ಎಂಬ ಲೇಬೆಲ್ ಅಂಟಿಸಿ ಕರಾರುವಕ್ಕಾಗಿ ಮಾಡಿ ಕೊಟ್ಟವನು ಅಬು ನಿದಾಲ್.

ಒಂದು ಕಾಲದಲ್ಲಿ ಅರಬ್ ಕೊಲ್ಲಿಯ ಸುತ್ತ ಮುತ್ತ ಮೆರೆದ ಇರಾಕನ ಸದ್ದಾಮ್ ಹುಸೇನ್, ಲಿಬ್ಯಾದ ಗಡಾಫಿ ಗೆ ತೋಳ್ಬಲ ಬಂದಿದ್ದೇ ಅಬು ನಿದಾಲನಿಂದ.

ಸದ್ದಾಮ್, ಗಡಾಫಿ ಅಂದರೆ ಆ ಏರಿಯಾದ ಪುಂಡರ ತರಹ. ಸುತ್ತ ಮುತ್ತಲಿನ ದೇಶಕ್ಕೆ ತಲೆನೋವು. ಯಾರಾದರು ಸುತ್ತ ಮುತ್ತ ದೇಶದ ರಾಜರು, ಪ್ರಧಾನ ಮಂತ್ರಿಗಳು ಅಥವ ಮತ್ತಾರೋ ಉನ್ನತ ಮಂದಿ ನಿಮ್ಮ ಮಾತು ಕೇಳಲಿಲ್ಲವಾ? ಓಕೆ....ಅಬು ನಿದಾಲ್ ಕರೆದು ಸುಪಾರಿ ಕೊಟ್ಟರಾಯಿತು. ನೀವು ಹೇಳಿದಂತೆ ಕೆಲಸ ಮಾಡಿ ಕೊಡುತ್ತಾನೆ ಅಬು ನಿದಾಲ್. ಮೇಲೆ ಪ್ಯಾಲೆಸ್ತೇನ್ ಸಂಘರ್ಷ ಅಂತ ಲೇಬಲ್ ಹಚ್ಚಿ ಎಲ್ಲ ಸಾಫ್ ಶುದ್ಧ ಮಾಡಿ ಬಿಡ್ತಾನೆ.

ಏನು ನಿಮಗೆ ಆಗದ ದೇಶದ ರಾಜತಾಂತ್ರಿಕರ ಮೇಲೆ ಹೊರದೇಶದಲ್ಲಿ ಹಲ್ಲೆ ಮಾಡಿಸಬೇಕೆ? ಫುಲ್ ಮರ್ಡರಾ? ಅಥವಾ ಹಾಪ್ ಮರ್ಡರಾ? ಕಾರ್ ಬಾಂಬಿಟ್ಟು ಢಂ ಅನ್ನಿಸಬೇಕೆ? ನಿಮ್ಮ ಜನ ಸೆರೆಯಲ್ಲಿದ್ದರೆ ಪ್ಲೇನ್ ಹೈಜಾಕ್ ಮಾಡಿ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡು ನಿಮ್ಮ ಜನರನ್ನು ಬಿಡಿಸಿಕೊಡಬೇಕೆ? ಅಥವಾ ಬಾಂಬ್ ಹಾಕಿ ವಿಮಾನವನ್ನೇ ಢಂ ಅನ್ನಿಸಿಬಿಡಬೇಕೆ? ಹೇಳಿ. ಎಲ್ಲದಕ್ಕೂ ರೆಡಿ ನಾವು. ಕಾಸ್ ರೆಡಿ ಮಾಡಿಕೊಳ್ಳಿ. ಫುಲ್ ವಿವರ ಕೊಡಿ - ಈ ಧಾಟಿಯಲ್ಲಿ ತನ್ನದೇ ರೀತಿಯಲ್ಲಿ ಪ್ಯಾಲೆಸ್ತೀನಿ ಸ್ವಾತಂತ್ರ ಸಂಘರ್ಷ ನಡೆಸಿದವನು ಅಬು ನಿದಾಲ್.

ಅವನ ಆಕರ್ಷಣೆ ಅಂದರೆ ತಣ್ಣನೆಯ ಕ್ರೌರ್ಯ. ಯಾರೂ ಕೇಳರಿಯದಂತ  ಕ್ರೌರ್ಯ. ಅದರ ಮೇಲೆ ವಿಪರೀತ ಸಂಶಯ ಪ್ರವೃತ್ತಿ. ವಿಲಕ್ಷಣ ಸ್ವಭಾವ. ತರಬೇತಿಗೆ ತುಂಬಾ ಪ್ರಾಮುಖ್ಯತೆ. ಹೈ ಪ್ರೊಫೈಲ್ ಅನ್ನುವಂತಹ ಘಟನೆ ಮಾಡಿ, ವಿಶ್ವಾದ್ಯಂತ ಗಮನ ಸೆಳೆದು, ತನ್ನ ಇಮೇಜ್ ಬೆಳೆಸಿಕೊಂಡು, ಎಲ್ಲ ಕಡೆ ಹವಾ ಎಬ್ಬಿಸಿ, ಅಬು ನಿದಾಲ್ ಅಂದ್ರೆ ಜನ ನಿದ್ದೆಯಲ್ಲೂ ಗಡಗಡ ನಡುಗಬೇಕು ನೋಡಿ ಆ ತರಹ ಮಾಡಿಟ್ಟುಕೊಂಡವನು ಅಬು ನಿದಾಲ್. ಅದೇ ಅವನ ಸೆಲ್ಲಿಂಗ್ ಪಾಯಿಂಟ. ಅದಕ್ಕೇ  ಜನ ಬಂದು ಅವನ ANO ಸೇರಲು ಸಾಲು ನಿಲ್ಲುತ್ತಿದ್ದರು. ಗೆದ್ದೆವೋ.....ಯಾವದೋ ಒಂದು ಹಿಂದೆಂದೂ ಆಗಿರದ ಬಾಂಬ್ ಸ್ಪೋಟವನ್ನೋ, ವಿಮಾನ ಅಪಹರಣವನ್ನೋ, ಅಥವಾ ಯಾವದೋ ಒಬ್ಬ ದೊಡ್ಡ ನಾಯಕನ ಹತ್ಯೆ ಮಾಡುವ ಅವಕಾಶ. ನಸೀಬ್ ಸರಿ ಇಲ್ಲವೋ....ಅಬು ನಿದಾಲ್ ನ ಸಂಶಯಕ್ಕೆ ಒಳಗಾಗಿ ಬೆಕಾ ಕೊಳ್ಳದ ಯಾವದೋ ಒಂದು ಪರಮ ಯಾತನಾಮಯ ಟಾರ್ಚರ್ ಚೇಂಬರ್ ನಲ್ಲಿ ವಿಲವಿಲ ಒದ್ದಾಡಿ ನಾಯಿ ಸಾವು.

ಒಂದು ಕಾಲಕ್ಕೆ ಪ್ಯಾಲೆಸ್ತೀನಿಯರ ಪರಮ ನಾಯಕ ಯಾಸೀರ್ ಅರಾಫತ್ ಅವರ ಜೊತೆಗಾರ ಅಬು ನಿದಾಲ್. ಮುಂದೆ ಅರಫಾತ್ ಮೃದು ಆದರು. ಸ್ವಲ್ಪ ಮಟ್ಟಿಗಾದರೂ ಹಿಂಸೆ ಬಿಟ್ಟು ಇಸ್ರೇಲ್ ಜೊತೆ ಮಾತುಕತೆಯಿಂದ ವಿವಾದ ಬಗೆಹರಿಸಿಕೊಳ್ಳೋಣ ಅಂತ ವಿಚಾರ ಮಾಡಿದರು. ಹಿಂಸೆಯೇ ಆದಿ, ಹಿಂಸೆಯೇ ದಾರಿ, ಹಿಂಸೆಯೇ ಅಂತ್ಯ ಅಂತ ಭಾವಿಸಿದ್ದ ಕೆಲವು ಜನರಿಗೆ ಅದು ಸೇರಲಿಲ್ಲ. ಅವರಲ್ಲಿ ಅಬು ನಿದಾಲ್ ಮುಖ್ಯ. ಅರಾಫತ್ ಅವರ ಫತಾ ಸಂಘಟನೆ ಒಡೆದ. ತನ್ನ ಒಂದಿಷ್ಟು ಜನರನ್ನು ಕರೆದುಕೊಂಡು ಹೋಗಿ, ದುಡ್ಡು ಕೊಟ್ಟ ಸದ್ದಾಮನ ಕೆಲಸವನ್ನೋ ಅಥವಾ ಗಡಾಫಿಯ ಕೆಲಸವನ್ನೋ ಮಾಡುತ್ತಾ ಮೂಲ ಗುರಿಯನ್ನು ಮರೆತೇಬಿಟ್ಟ. ಹಾಗಾಗಿದ್ದು ಅಂತಹ ಒಳ್ಳೆ CEO ಮನೋಭಾವವಿದ್ದ ನಾಯಕನ ದುರಂತ.

2005 ರಲ್ಲಿ ಸ್ಪೀಲಬರ್ಗ್ ಅವರ 'ಮ್ಯೂನಿಕ್' ಚಿತ್ರ ನೋಡಿದಾಗಿಂದ ಹತ್ತಿದ್ದು ಇಸ್ರೇಲ್-ಪ್ಯಾಲೆಸ್ತೀನ್ ಕಲಹದ ಬಗ್ಗೆ ತಿಳಿದುಕೊಳ್ಳುವ ಹುಚ್ಚು. ಸರಿ ಸುಮಾರು 70-80 ಪುಸ್ತಕ ಓದಿದ್ದೇನೆ. ಹಲವಾರು ಬಂಡುಕೋರರ ಬಗ್ಗೆ ಒಳ್ಳೆಯ ವಿವರಗಳಿವೆ. ಆದ್ರೆ ಅಬು ನಿದಾಲ್ ನಷ್ಟು ಕಾಡಿದವನು ಯಾರೂ ಇಲ್ಲ. ಹಾಗಂತ ಮಾತ್ರಕ್ಕೆ ಅವನ ಬಗ್ಗೆ ತುಂಬಾ ಪುಸ್ತಕ ಮಾಹಿತಿ ಲಭ್ಯವಿದೆ ಅಂದುಕೊಳ್ಳಬೇಡಿ. ಅವನ ಬಗ್ಗೆ ಇರುವದು ಎರಡೇ ಎರಡು ಸುಮಾರು ಹಳೇ ಪುಸ್ತಕಗಳು. ಆದರೆ ಬೇರೆ ಬೇರೆ ಪುಸ್ತಕಗಳಲ್ಲಿ, ವೆಬ್ ಸೈಟ್ಗಳಲ್ಲಿ ಅವನ ಬಗ್ಗೆ ಅಲ್ಲಿ ಇಲ್ಲಿ ಝಳಕ್ ಸಿಗುತ್ತದೆ. ಅವೆಲ್ಲವನ್ನು ಕೂಡಿಸಿದರೆ ಬೆಚ್ಚಿ ಬೀಳುವಂತ ಕ್ರೂರಿಯೊಬ್ಬನ ಚಿತ್ರಣ ಕಣ್ಣ ಮುಂದೆ ಬಂದು ಒಂದು ತರಹದ ಬೀಭತ್ಸ ಫೀಲಿಂಗ್. ಅದರ ಬಗ್ಗೆ ಮತ್ತೆ ಯಾವಾಗಲೋ ಬರೆದೇನು.

ಇಂತಹ ಕ್ರೂರಿ ಅಬು ನಿದಾಲ್ 2002 ರಲ್ಲಿ ಬಾಗ್ದಾದಿನಲ್ಲಿ ನಾಯಿಯಂತೆ ತಲೆಗೆ ನಾಕು ಗುಂಡು ತಿಂದು ಸತ್ತ. ಆವಾಗ ಇನ್ನೂ ಇದ್ದು, ತನ್ನ ಸಾಮ್ರಾಜ್ಯ ಉಳಿಸಿಕೊಳ್ಳಲು ತನ್ನ ಕಡೆಯ ಪ್ರಯತ್ನ ಮಾಡುತ್ತಿದ್ದ ಸದ್ದಾಮ್, ಅಬು ನಿದಾಲ್ ಆತ್ಮಹತ್ಯೆ ಮಾಡಿಕೊಂಡ ಅಂದ. ಉಳಿದವರು  ಅಬು ನಿದಾಲ್ ಗೆ ತುಂಬಾ ರಹಸ್ಯ ಗೊತ್ತಿತ್ತು, ತನ್ನ ಪ್ರಾಣ ಉಳಿಸಿಕೊಳ್ಳಲು ಅಮೇರಿಕನ್ನರಿಗೆ ಖಬರ್ ಕೊಟ್ಟಾನು ಅಂತ ಸಂಶಯಿಸಿದ ಸದ್ದಾಮನೇ ಅವನನ್ನು ಕೊಂದುಬಿಟ್ಟ ಅಂತ ಮಾತಾಡಿಕೊಂಡರು.

ಒಟ್ಟಿನಲ್ಲಿ ಒಬ್ಬ ವಿಲಕ್ಷಣ ಪಾತಕಿಯ ಅಂತ್ಯ ಹಾಗಾಗಿತ್ತು.


** ಹೋಲ್ ಸೇಲ್ ನಲ್ಲಿ ಅಂಡರ್ ವೇರ್ ಖರೀದಿಸುವ ಘಟನೆಯ ಬಗ್ಗೆ ವಿವರ ಸುಮಾರು ವೆಬ್ ಸೈಟ್, ಪುಸ್ತಕಗಳಲ್ಲಿ ಸ್ವಲ್ಪ ಸ್ವಲ್ಪ ಬೇರೆ ಬೇರೆ ತರಹ ಬಂದಿತ್ತು. ಕೆಲವು ಕಡೆ ಹಾಸ್ಯಕ್ಕೆ ಒತ್ತು ಇದ್ದರೆ ಇನ್ನು ಕೆಲವು ಕಡೆ ಅವನ ವಿಕ್ಷಿಪ್ತ ಮನೋಭಾವಕ್ಕೆ. ಕನ್ನಡೀಕರಿಸುವಾಗ ಎರಡನ್ನೂ ಸ್ವಲ್ಪ ಮಿಕ್ಸ್ ಮಾಡುವ ಪ್ರಯತ್ನ ಮಾಡಿದೆ.

** ಅಬು ನಿದಾಲ್, ಅಬು ನಿಡಾಲ್ - ಹೀಗೆ ಎರಡೂ ರೀತಿಯಲ್ಲಿ ಬರೆಯುವದನ್ನು ಮತ್ತು ಹೇಳುವದನ್ನು ನೋಡಿದ್ದೇನೆ. ನನಗೆ ಈ ಪುಣ್ಯಾತ್ಮನ ಹೆಸರು ಮೊದಲು ತಿಳಿದಿದ್ದು 1986 ರಲ್ಲಿ, ಸಂಯುಕ್ತ ಕರ್ನಾಟಕದಲ್ಲಿ. ಅದರಲ್ಲಿ ಅಬು ನಿದಾಲ್ ಅಂತ ಇತ್ತು. ಅದಕ್ಕೆ ಹಾಗೇ ಬರೆದೆ.

ಲಿಂಕ್ಸ್:
ಅಬು ನಿದಾಲ್ ಬಗ್ಗೆ ತುಂಬಾ ಹಿಂದೆ ಬರೆದ ಬೇರೆ ಬ್ಲಾಗ್ ಎಂಟ್ರೀ. ಬೇರೆ ಮತ್ತು ಹೆಚ್ಚಿನ ವಿವರಗಳಿವೆ. ಓದಿ. ಆಸಕ್ತಿ ಇದ್ದರೆ.

ಅಬು ನಿದಾಲ್

Abu Nidal : A Gun for Hire : The Secret Life of the World's Most Notorious Arab Terrorist  by Patrick Seale

ಮ್ಯೂನಿಕ್ ಚಿತ್ರ

ಬೆಕಾ ಕೊಳ್ಳ ಪ್ರದೇಶ

Monday, July 23, 2012

ಸರ್ವ ಗುರುಗಳ, ಸ್ವಾಮಿಗಳ ಕಚ್ಛೆ ಬಿಚ್ಚೋಡಿಸ್ಯಾಮಿ



ಬುದ್ಧಂ ಶರಣಂ ಗಚ್ಛಾಮಿ. ಧರ್ಮಂ ಶರಣಂ ಗಚ್ಛಾಮಿ. ಇವೆಲ್ಲ ಕೇಳಿದ್ದು ಆಯಿತು.

ಇಲ್ಲೊಬ್ಬರು ಲೇಖಕರು. ಅವರ ಹೆಸರು ಜೆಫ್ರಿ ಫಾಕ್ ಅಂತೆ.

ಸರ್ವ ಗುರುಗಳ ಕಚ್ಛೆ ಬಿಚ್ಚಾಮಿ. ಬಿಚ್ಚಿ ಓಡಿಸ್ಯಾಮಿ ಅಂತ ಹೊಂಟು ಬಿಟ್ಟಿದ್ದಾರೆ ನೋಡಿ. 

ಈಗ ಜೆಫ್ರಿ ಫಾಕ್ ಬರೆದ - Stripping The Gurus - ಎಂಬ ಪುಸ್ತಕ ನೋಡೋಣ ಬನ್ನಿ.

ಯಾರ್ರೀ ಇವರು ಜೆಫ್ರಿ ಫಾಕ್?

ಈಗ ಸುಮಾರು ವರ್ಷಗಳ ಹಿಂದೆ ಜೆಫ್ರಿ ಫಾಕ್ ಅವರು ಸ್ವಾಮಿ ಯೋಗಾನಂದರ ದಕ್ಷಿಣ ಕ್ಯಾಲಿಫೋರ್ನಿಯದ ಆಶ್ರಮದಲ್ಲಿ ಇದ್ದರಂತೆ. ತಮ್ಮ ಎಲ್ಲವನ್ನೂ ಅರ್ಪಣೆ ಮಾಡಿಕೊಂಡು  ಸ್ವಾಮಿ ಯೋಗಾನಂದರ ಶಿಷ್ಯ ಸ್ವಾಮಿ ಕ್ರಿಯಾನಂದರನ್ನು ತಮ್ಮ ಪರಮ ಗುರುಗಳು ಅಂತ ತಿಳಕೊಂಡು ಇದ್ದವರು. ಒಟ್ಟಿನಲ್ಲಿ ಆಶ್ರಮ ಸರಿ ಬರಲಿಲ್ಲ. ಭ್ರಮನಿರಸನವಾಯಿತು ಅಂತ ಕಾಣಿಸುತ್ತದೆ. ಆಶ್ರಮ ಬಿಟ್ಟು ಬಂದವರೇ - ಈ ಎಲ್ಲ ಸ್ವಾಮಿ, ಸಾಧು, ಸಂತರ ಜನ್ಮ ಜಾಲಾಡಿ ಬಿಡುತ್ತೇನೆ - ಅಂತ ನಿರ್ಧರಿಸಿದವರೇ ಪುಸ್ತಕ ಬರೆಯಲು ಕೂತು ಬಿಟ್ಟರು. ಅದರ ಪ್ರತಿಫಲವೇ - Stripping The Gurus - ಎಂಬ ಪುಸ್ತಕ.

ಯಾವದೇ ಪೂರ್ವಾಗ್ರಹಗಳನ್ನು (prejudices) ಇಟ್ಟುಗೊಳ್ಳದೆ ಓದಿದರೆ ಒಂದು ತರಹದ ವಿಭಿನ್ನ ರೀತಿಯ ಪುಸ್ತಕ ಓದಿದಂತೆ ಅನ್ನಿಸಬಹುದು. ಪೂರ್ವಾಗ್ರಹ ಇಟ್ಟುಗೊಂಡು ಯಾವದೇ ಪುಸ್ತಕ  ಓದಬಾರದು. ಈ ಪುಸ್ತಕವನ್ನು ಪೂರ್ವಾಗ್ರಹ ಪೀಡಿತರು ನೋಡಲೂ ಬಾರದು.

ಈ ಪುಸ್ತಕ ನಾನು ಸುಮಾರ್ 2-3 ವರ್ಷದ ಹಿಂದೆ ಓದಿದ್ದು. ಏನೋ ರೋಚಕ ಇದ್ದಂಗೆ ಕಂಡಿತು. ಆ ದಿನಗಳಲ್ಲಿ ರೋಚಕ ಪುಸ್ತಕ, ಟ್ಯಾಬ್ಲಾಯಿಡ್ ಎಲ್ಲ ಬಾಯಿ ಚಪ್ಪರಿಸಿ ಓದುವ ಹವ್ಯಾಸ ನಮಗೆ. ಅದೂ ಬಿಟ್ಟಿ ಸಿಗುವ ಪುಸ್ತಕ. ನಮಗೆ ತಿಳಿದ, ಕೇಳಿದ ಸ್ವಾಮಿಗಳನ್ನ, ಆಚಾರ್ಯರನ್ನ ಎಲ್ಲರನ್ನೂ ನಂಗಾ ಮಾಡಿ ಎಕ್ಸಪೋಸ್ ಮಾಡಿದ್ದೇನೆ ಅನ್ನುತ್ತಾರೆ. ದೊಡ್ಡ ವಿದ್ವಾಂಸ ಡಾ.ನರಸಿಂಗ ಸೀಲ್ ಮುನ್ನುಡಿ ಬೇರೆ ಬರೆದ್ದಿದ್ದಾರೆ. ಹಾಗಾಗಿ ಓದಿದ ಟೈಮ್ ಗೆ ಖೋತಾ ಆಗಲಿಕ್ಕೆ ಇಲ್ಲ ಅಂದುಕೊಂಡು ಪುಸ್ತಕ ಎತ್ತಿಕೊಂಡರೆ ಒಂದು ವಿಚಿತ್ರ ಲೋಕಕ್ಕೆ ಹೋದ ಅನುಭವ.

ಸ್ವಾಮಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಸ್ವಾಮಿ ಯೋಗಾನಂದರು ಮತ್ತು ಅವರ SRF ಸಂಘಟನೆ, ಸ್ವಾಮಿ ರಾಮ, ಓಶೋ ರಜನೀಶ್, ಗಣೇಶಪುರಿಯ ಸ್ವಾಮಿ ನಿತ್ಯಾನಂದ, ಅವರ ಶಿಷ್ಯ ಸ್ವಾಮಿ ಮುಕ್ತಾನಂದ, ಹರೇ ರಾಮ ಹರೇ ಕೃಷ್ಣ, ಇತ್ಯಾದಿ, ಇತ್ಯಾದಿ ಸ್ವಾಮಿಗಳು, ಸಂಘ ಸಂಸ್ಥೆಗಳು ಜೆಫ್ರಿ ಫಾಕ್  ರ ಮೊನಚು ಕಲಮಿಗೆ ಬಲಿಯಾಗಿವೆ. ಕೇವಲ ಸನಾತನ  ಧರ್ಮದ ಗುರುಗಳಷ್ಟೇ ಅಲ್ಲ. ಸುಮಾರು ಬೌದ್ಧರನ್ನೂ ಹಿಡಿದು ಅಲುಗಾಡಿಸಿದ್ದಾರೆ ಫಾಕ್.

ತಾವು ದಾಖಲಿಸಿದ್ದಕ್ಕೆ ಎಲ್ಲ ಪೂರಕ ಮಾಹಿತಿ ಒದಗಿಸಿದ್ದಾರೆ ಲೇಖಕ ಫಾಕ್. ಅಷ್ಟರಮಟ್ಟಿಗೆ ಅವರನ್ನು ಗೌರವಿಸುತ್ತೇನೆ. ಪುಸ್ತಕದಲ್ಲಿ ಇರುವ ಮಾಹಿತಿಗಿಂತ ರೆಫರನ್ಸ್ ಜಾಸ್ತಿ ಇದೆ. ಸುಮಾರು ರೆಫರನ್ಸ್ ಎಲ್ಲ ಆ ಕಾಲದ ದಿನಪತ್ರಿಕೆಗಳು. ಅವನ್ನು ಹುಡಕಿಕೊಂಡು ಎಲ್ಲಿ ಹೋಗೋಣ? ಕೆಲವೊಂದು ನೂರಾರು ವರ್ಷದ ಹಿಂದಿಯ ಸಂಗತಿಗಳು.

ಇದರಲ್ಲಿ ಬರುವ ಸ್ವಾಮಿಗಳ, ಸಂತರ, ಗುರುಗಳ ವೈಯಕ್ತಿಕ ವೈಪರೀತ್ಯಗಳು, ವಿಲಕ್ಷಣತೆಗಳು, ವಿಕ್ಷಿಪ್ತತೆಗಳು  ಏನೇ ಇರಲಿ, ಆ ಮಹಾನುಭಾವರು ನಮ್ಮ ಸಂಸ್ಕೃತಿಯನ್ನು ಉಳಿಸಲು, ಬೆಳೆಸಲು ಕೊಟ್ಟ ಕೊಡುಗೆ ಅಮೂಲ್ಯ. ಅವರುಗಳು ಬರೆದ ಪುಸ್ತಕಗಳು, ಕೊಟ್ಟ ಪ್ರವಚನಗಳು ಇಂದಿಗೂ ನಮಗೆ ಉಪಯೋಗಕಾರಿ. ಈ ಪುಸ್ತಕದಲ್ಲಿ ಜೆಫ್ರೀ ಫಾಕ್ ಕೊಟ್ಟ ಸ್ಫೋಟಕ ಮಾಹಿತಿ ಇನ್ನೊಂದು ದೃಷ್ಟಿಕೋನ ಬೇಕಾದರೆ  ನೀಡಲಿ. ಆದರೆ 10% ಋಣಾತ್ಮಕ ಮಾಹಿತಿ ಉಳಿದ 90% ಉಪಯುಕ್ತ ಮಾಹಿತಿಗಳನ್ನು  ಕೊಳೆಯಂತೆ ದೂರ ಸರಿಸದಿರಲಿ. ಅಷ್ಟೇ ನಮ್ಮ ಕೋರಿಕೆ.

ಈ ಕಾಲದಲ್ಲಿ ಇರುವಂತೆ ಆಗಲೂ ಇದ್ದಿದ್ದು ಇಲ್ಲದ್ದಕ್ಕೆ ಮಸಾಲೆ ಹಾಕಿ ಬರೆಯುವ ಪತ್ರಿಕೆಗಳು ಇದ್ದೇ ಇದ್ದವು. ಪ್ರತಿ ಖ್ಯಾತನಾಮರ ಸುತ್ತ ಮುತ್ತ ಅವರನ್ನು ಒಂದಲ್ಲ ಒಂದು ಕಾರಣಕ್ಕೆ ವಿರೋಧಿಸುವ ಜನ ಇದ್ದೇ ಇರುತ್ತಾರೆ. ಅವರು ಹೇಳುವ ವಿಷಯ ಒಂದೊಂದು ಸಲ ನಿಜವಿರುತ್ತದೆ. ಒಮ್ಮೊಮ್ಮೆ ನಿಜವಿದ್ದರೂ ಏನೂ ಸಂಬಂಧವಿರುವದಿಲ್ಲ.

ಮತ್ತೆ ಇನ್ನೊಂದು. ಜೆಫ್ರೀ ಫಾಕ್ ಬಿಚ್ಚಿದ್ದೇನೆ ಎನ್ನುವ ಕೆಲವು ಸಾಧು ಸಂತರು ತಾಂತ್ರಿಕ ಯೋಗ ಪದ್ಧತಿಯವರು. ಅವರಲ್ಲಿ ಕೆಲವೊಂದು ವಿಚಿತ್ರ ಆಚಾರಗಳು, ಆಚರಣೆಗಳು ಇರುವದು ಸತ್ಯ. ಅವಕ್ಕೆ ವೇದಗಳಿಂದಲೇ ಬಂದಂತಹ ತಾಂತ್ರಿಕ ಗ್ರಂಥಗಳಲ್ಲಿ ವಿವರಣೆ ಸಿಗುತ್ತದೆ. ನಮಗೆ ಅರ್ಥವಾಗಲಿಕ್ಕೆ ಇಲ್ಲ. ಅಷ್ಟು ಮಾತ್ರಕ್ಕೆ ಅವೆಲ್ಲ ತಪ್ಪು, ನಮ್ಮ ಸಂಸ್ಕೃತಿಯಲ್ಲಿ ಅವಕ್ಕೆಲ್ಲ ಜಾಗ ಇಲ್ಲ ಅಂದ್ರೆ ತಪ್ಪಾಗುತ್ತದೆ. ಅಘೋರಿಗಳ ಆಚರಣೆಗಳು, ಜೀವನ ಪದ್ಧತಿ ತುಂಬಾ ವಿಚಿತ್ರ. ಅದಕ್ಕೇ ಅವರು ನಾಗರೀಕ ಸಮಾಜದಿಂದ ದೂರ ಇರುತ್ತಾರೆ. ಯಾರೋ ಒಬ್ಬ ನಾಗರಿಕ ಹೋಗಿ ಅಘೋರಿಗಳೋ, ನಾಗಾ ಸಾಧುಗಳೋ ಮುಂತಾದ ಬೇರೆಯೇ ತರಹದ ಜನರ ಮಧ್ಯೆ ಇದ್ದು ಬಂದು ಅವರ ಬಗ್ಗೆ ಬರೆದು ಅವೆಲ್ಲ ತಪ್ಪು ಅಂದರೆ ಅದನ್ನು ನಾವು ಒಪ್ಪಬೇಕು ಅಂತ ಏನೂ ಇಲ್ಲ.

ರಾಮಕೃಷ್ಣ ಪರಮಹಂಸರ ಮೇಲೆ ಈ ಪುಸ್ತಕದಲ್ಲೇ ಆಗಲಿ ಅಥವಾ ಬೇರೆಯವರ ಹತ್ತಿರ ಆಕ್ಷೇಪಣೆ ಕೇಳಿದ್ದೇನೆ. ಸುಮಾರು ಜನರ ಆಕ್ಷೇಪಣೆ ಅಂದರೆ - ರಾಮಕೃಷ್ಣರು ತಾಂತ್ರಿಕ ಯೋಗದ ಮೇಲೆ ಹಿಡಿತ ತಂದುಕೊಳ್ಳುವ ಕಾಲದದಲ್ಲಿ ಕೆಲವೊಂದು ಆಚರಣೆಗಳನ್ನು ಮಾಡಿದರು. ವಿಚಿತ್ರ ದೈಹಿಕ ಪರಿಣಾಮಗಳಾದವು. ಅವೆಲ್ಲ ವೇದಾಂತಿಗಳಿಗೆ ಶೋಭೆ ತಂದುಕೊಡುವಂತಹದ್ದು ಅಲ್ಲ. ಸರಿ. ಅದು ಒಂದು ವಾದ ಸರಣಿ. ಕೇಳಿಸಿಕೊಳ್ಳೋಣ. ಅದು ಸರಿಯೋ ತಪ್ಪೋ? ಏನೇ ಇರಲಿ. ಆದರೆ ಅದೊಂದೇ ಇಷ್ಟವಾಗಲಿಲ್ಲ ಅಂದ ಮಾತ್ರಕ್ಕೆ ರಾಮಕೃಷ್ಣರು ಕೊಟ್ಟ ಕೊಡುಗೆ ಕಮ್ಮಿಯೇ? ಒಂದೂವರೆ ಡಝನ್ ಶಿಷ್ಯರ ಪಡೆ ಸ್ಥಾಪಿಸಿ ನಿರ್ಗಮಿಸಿದವರು ಅವರು. ಅದೂ ಎಂಥ ಎಂಥ ಶಿಷ್ಯರು? ಸ್ವಾಮೀ ವಿವೇಕಾನಂದ, ಬ್ರಹ್ಮಾನಂದ, ಅಭೇದಾನಂದ. ಪ್ರೇಮಾನಂದ, ತ್ರಿಗುಣತೀತಾನಂದ, ಮುಂತಾದವರು. ಇಂಥ ಮಹಾತ್ಮರಿಂದ ತಾನೇ ರಾಮಕೃಷ್ಣ ಮಿಶನ್ ಎಂಬ ಅದ್ಭುತ ಸಂಸ್ಥೆ ಎದ್ದು ಬಂದು ನಮ್ಮ ದೇಶದ ವೇದಾಂತವನ್ನು ಇಡೀ ಜಗತ್ತಿಗೆ ಪರಿಚಯಿಸಿದ್ದು?

ಇನ್ನು ಗಣೇಶಪುರಿಯ ನಿತ್ಯಾನಂದರು. ದಕ್ಷಿಣ ಭಾರತದಲ್ಲಿ ಕುಂಡಲಿನಿ ಮಹಾಯೋಗವನ್ನು ಸಾಮಾನ್ಯರಿಗೆ ತಿಳಿಯುವಂತೆ ಕಲಿಸಿದವರು ಗಣೇಶಪುರಿಯ ನಿತ್ಯಾನಂದರು. ಅದನ್ನು ದೇಶ ವಿದೇಶಗಳಲ್ಲಿ ಹರಡಿದವರು ಅವರ ಶಿಷ್ಯ ಸ್ವಾಮಿ ಮುಕ್ತಾನಂದರು. ಇಬ್ಬರ ಮೇಲೂ ಹಲವಾರು ಆಪಾದನೆಗಳು ಬಂದವು. ನಿಜ ಇರಬಹುದು. ಸುಳ್ಳೇ ಇರಬಹುದು. ಆದರೆ ಕಾಶ್ಮೀರದ ತಾಂತ್ರಿಕ ಶೈವರಲ್ಲಿ ಮಾತ್ರ ಕೊಂಚ ಮಟ್ಟಿಗೆ ಪ್ರಚಲಿತವಿದ್ದ ತುಂಬಾ ಶಕ್ತಿಶಾಲಿಯೂ ಆದರೆ ಅಷ್ಟೇ ಅಪಾಯಕಾರಿಯೂ ಆದ ಕುಂಡಲಿನಿ ಮಹಾಯೋಗವನ್ನು ಸರಳೀಕರಿಸಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದವರು ಈ ಇಬ್ಬರು ಮಹನೀಯರು. ಮುಂದೆ ಮುಕ್ತಾನಂದರ ಶಿಷ್ಯ ಸ್ವಾಮಿ ರುದ್ರಾನಂದರು ಮತ್ತೆ ಅವರ ಶಿಷ್ಯ ಸ್ವಾಮಿ ಕೇಕರಾಂತರು ಆ ಕೆಲಸವನ್ನು ಮುಂದುವರೆಸಿದ್ದಾರೆ.

ಗಣೇಶಪುರಿಯ ನಿತ್ಯಾನಂದರ ಬಗ್ಗೆ ಅವರ ಭಕ್ತರಿಂದ ಕೇಳಿದ್ದೋ ಅಥವಾ ಪುಸ್ತಕದಲ್ಲಿ ಓದಿದ್ದೋ ನೆನಪಿಲ್ಲ. ಅವರು ಮನಸ್ಸು ಬಂದಾಗ ಟ್ರೈನ್ ಹತ್ತಿ ಹೊರಟು ಬಿಡುತ್ತಿದ್ದರು. ಗೊತ್ತಿದ್ದ ಟಿಕೆಟ್ ಚೆಕರ್ ಯಾರೂ ಅವರನ್ನು ಟಿಕೆಟ್ ಕೇಳುತ್ತಿದ್ದಿಲ್ಲ. ಒಂದು ಸಲ ಟಿಕೆಟ್ ತೋರಿಸಿ ಟಿಕೆಟ್ ತೋರಿಸಿ ಅಂತ ಪಿರಿ ಪಿರಿ  ಮಾಡಿದ ಟಿಕೆಟ್ ಚೆಕರ್ ಗೆ ಗಾಳಿಯಲ್ಲಿ ಟಿಕೆಟ್ಗಳ ಗೊಂಚಲನ್ನೇ ಸೃಷ್ಟಿ ಮಾಡಿಸಿ ತೋರಿಸಿ ಅವನನ್ನು ಥಂಡಾ ಹೊಡೆಸಿದವರಂತೆ ನಿತ್ಯಾನಂದರು. ಅಂತಹ  ಮಹಾನ್ ಸಾಧಕರಿಗೆ ಇಂತಹ ಚಿಲ್ಲರೆ ಗಿಮ್ಮಿಕ್ಸ್ ಬೇಕಿತ್ತಾ ಅನ್ನುತ್ತಾರೆ ಕೆಲವರು. ಯಾರಿಗೆ ಗೊತ್ತು ಯಾವದು ಸರಿ ಅಂತ. ಅವರ ಪ್ರಸಾದ ಕೊಡುವ ವಿಧಾನವೂ ವಿಚಿತ್ರವಂತೆ. ಪಕ್ಕದಲ್ಲಿರುವ ಚೀಲದಿಂದ ತೆಂಗಿನಕಾಯಿ ತೆಗೆದು ಕ್ರಿಕೆಟ್ನಲ್ಲಿ ಬಾಲಿಂಗ್ ಮಾಡಿದಂತೆ ಎಸೆಯುವದು. ನಗು ಬಂತು ನಿಜ. ಆದ್ರೆ ಅದು ಅಷ್ಟು ದೊಡ್ಡ ಆಕ್ಷೇಪದ ಮಾತೆ? ಗೊತ್ತಿಲ್ಲ.

ಕಂಚಿ  ಪೀಠದ ಸ್ವಾಮಿಗಳಂತೂ ಕೊಲೆ ಅಪರಾಧದಲ್ಲಿ ಜೈಲಿಗೆ ಹೋಗಿ ಬಂದರು. ವಿಚಾರಣೆ ಇನ್ನೂ ನಡೆಯುತ್ತಿದೆ ಅಂತ ಕಾಣುತ್ತೆ. ಅವರ ಜೂನಿಯರ್ ಸ್ವಾಮಿಗಳು ಒಬ್ಬ  ನಟಿ ಜೊತೆ ಇರೋ ಕೆಸೆಟ್ ಇದೆಯಂದು ಪೊಲೀಸರು ಜೂನಿಯರ್ ಸ್ವಾಮಿಗಳನ್ನು ಮತ್ತು ಆ ನಟಿಯನ್ನು ವಿಚಾರಿಸಿದರು. ತಪ್ಪೋ, ಸರಿಯೋ? ಒಂದು ವೇಳೆ ತಪ್ಪಿದ್ದು ಶಿಕ್ಷೆ ಆದರೂ ಆ ಮಹಾನುಭಾವರು ಮಾಡಿರುವ ಒಳ್ಳೆ ಕೆಲಸಗಳು ಕಮ್ಮಿಯೇ?

ಮೊನ್ನೆ ಮೊನ್ನೆ ನಮ್ಮ ಬಿಡದಿ ನಿತ್ಯಾನಂದರ ಬಗ್ಗೆ ಒಂದು ಹಾಸ್ಯ ಲೇಖನ ಬರೆದಿದ್ದೆ. ಪೂರಕ ಓದಿಗೆ ಇಲ್ಲಿದೆ ನೋಡಿ. ಕಾಮಾಚಾರಿ ಸ್ವಾಮಿ ವಾಮಾಚಾರ ಮಾಡ್ತಾರಾ?

ಸ್ವಾಮಿಗಳೇ ಆದರೂ ಅವರೂ ಮನುಷ್ಯರೇ ತಾನೇ? ಸಾಧನೆಯ ಶುರುವಿನಲ್ಲಿ, ಮಧ್ಯೆ ಮಧ್ಯೆ ಅವರಿಂದ ಕೆಲವೊಂದು ವಿಲಕ್ಷಣ ಅನ್ನಿಸುವಂತಹ ಕೆಲವು ಘಟನೆಗಳು ನೆಡದಿರಬಹುದು. ಅದರ ಬಗ್ಗೆ ನಾವು ನಿರ್ಣಾಯಕ ಅಭಿಪ್ರಾಯ (judgmental opinion) ಹೊಂದುವದು ಎಷ್ಟು ಸರಿ? ಅವರು ಮಾಡಿದ್ದು ಸರಿಯೋ ತಪ್ಪೋ ಅನ್ನುವದು ಅವರಿಗೆ ಮಾತ್ರ ಗೊತ್ತು. ಇಲ್ಲ ದೇವರಿಗೆ ಗೊತ್ತು. ನಾವು ಕೇವಲ ಎಲ್ಲವನ್ನೂ ಕೇಳಿಸಿಕೊಂಡು ಹಂಸಕ್ಷೀರ ನ್ಯಾಯದಂತೆ ಒಳ್ಳೆಯದ್ದನ್ನು ಮಾತ್ರ ತೆಗೆದುಕೊಂಡು ನಮಗೆ ಸೇರದ್ದನ್ನು ಬಿಟ್ಟು ಬಿಟ್ಟರೆ ಆಯಿತು.

ಹಾಗಂತ ಜೆಫ್ರೀ ಫಾಕರು ಬರೆದಿದ್ದು ತಪ್ಪು ಅಂತ ನನ್ನ ಅಭಿಪ್ರಾಯವಲ್ಲ.  ಅವರಿಗೆ ಅಭಿವ್ಯಕ್ತಿ ಸ್ವಾತಂತ್ರವಿದೆ. ಬರೆದಿದ್ದಾರೆ. ಎಲ್ಲ ಕಡೆ ಪೂರಕ ಮಾಹಿತಿ ಕೊಟ್ಟಿದ್ದಾರೆ. ಮುಗಿಯಿತು. ಪುಸ್ತಕ ಓದಿ ಅಂತ ಅವರೇನೂ ಹೇಳಿಲ್ಲ. ಓದಿ ನಮಗೆ ಅಭ್ಯಂತರ ಇದ್ದರೆ ಅವರೊಂದಿಗೆ ತಗಾದೆ ತೆಗೆಯಬಹುದು. ಸುಮಾರು ಜನ ತೆಗೆದಿದ್ದರೂ ತೆಗೆದಿದ್ದರಬಹುದು. 

ಯಾವದೇ ಪೂರ್ವಾಗ್ರಹ ಇಟ್ಟುಗೊಳ್ಳದೆ ಓದಿದೆ. ಹೀಗೂ ಇರಬಹುದೇ ಶಿವಾ!!!??? - ಅಂತ ಭಾವನೆ ಬಂತೆ ವಿನಹಾ ಯಾರ ಮೇಲೂ ಭಕ್ತಿ ಅಥವಾ ಗೌರವ ಕಮ್ಮಿಯಾಗಲಿಲ್ಲ. Just another point of reference - ಅಷ್ಟೇ.

ಡಾ. ನರಸಿಂಗ ಸಿಲ್ ಎಂಬವರೂ ಸಹ ಸಾಕಷ್ಟು ' ಸ್ವಾಮಿಗಳನ್ನು ಬಿಚ್ಚಾಮಿ' ತರಹದ ಲೇಖನ, ಪುಸ್ತಕಗಳನ್ನು ಬರೆದಿದ್ದಾರೆ. ಅವನ್ನು ಇನ್ನೂ ಓದಬೇಕಿದೆ. ಒಂದು ಇಷ್ಟವಾಗುವ ಸಂಗತಿ ಅಂದರೆ ಫಾಕ್ ಆಗಲಿ, ಡಾ. ಸೀಲ್ ಆಗಲಿ ಯಾವದೇ ರಾಗ ದ್ವೇಷ ಇಟ್ಟುಗೊಂಡು ಬರೆದ ಹಾಗೆ ಕಾಣುವದಿಲ್ಲ. ತುಂಬಾ ಸಹಜ ಶೈಲಿಯಲ್ಲಿ ಬರೆಯುತ್ತಾರೆ. ಇಲ್ಲವಾದಲ್ಲಿ ಇಂತಹ ವಿಷಯ ಸಿಕ್ಕರೆ ವಿನಾಕಾರಣ ರೋಚಕವಾಗಿ ಬರೆಯುವವರೇ ಹೆಚ್ಚು. ಆ  ತರಹದ ಅಸಹಜ ರೋಚಕ ಪುಸ್ತಕಗಳನ್ನು ಬಹಳ ವಿಚಾರ ಮಾಡಿ ಓದುವದು ಒಳಿತು.

** Stripping the gurus - ಪುಸ್ತಕ ಓದಲು ವೆಬ್ ಸೈಟ್ ಗೆ (http://www.strippingthegurus.com/) ಹೋಗಿ. ಕೆಳಗೆ ಸ್ಕ್ರೋಲ್ ಮಾಡಿ. ಪೂರ್ತಿ ಕೆಳಗೇ ಪರಿವಿಡಿ ಇದೆ. ಅಲ್ಲಿಂದ ಪುಸ್ತಕದ ಎಲ್ಲ ಚಾಪ್ಟರ್ ಗೆ ಲಿಂಕ್ಸ್ ಇವೆ.

** ಕಚ್ಛೆ ಬಿಚ್ಚಾಮಿ - ಯಾವದೋ ಜಗ್ಗೇಶ್ ಸಿನೆಮಾದಿಂದ ಎತ್ತಿದ್ದು. ಅದರಲ್ಲಿ ಬ್ಯಾಂಕ್ ಜನಾರ್ಧನ್ ಅವರದ್ದು ಮಾರವಾಡಿ ಸೇಟು ಪಾತ್ರ. ಬ್ಯಾಂಕಿನಲ್ಲಿ ದುಡ್ಡು ಡ್ರಾ ಮಾಡಿಕೊಂಡ ಬಂದ ಅವರ ಪಂಚೆಯ ಕಚ್ಛೆಯನ್ನು ಕಿಡಿಗೇಡಿಯೊಬ್ಬ ಹಿಂದಿನಿಂದ ಮೆಲ್ಲನೆ ಜಗ್ಗಿಬಿಡುತ್ತಾನೆ. ಇನ್ನೊಬ್ಬ ಮುಂದಿನಿಂದ ಬಂದು - ಸೇಟು, ನಿಮ್ಮ ಕಚ್ಛೆ.....ಬುಧ್ಧಂ ಶರಣಂ ಬಿಚ್ಚಾಮಿ ಆಗಿಬಿಟ್ಟಿದೆ. ಸರಿ ಮಾಡಿಕೊಳ್ಳಿ - ಅನ್ನುತ್ತಾನೆ. ಮಾರವಾಡಿ ಕಚ್ಚೆ ಸರಿಮಾಡಿಕೊಳ್ಳುತ್ತಿರುವಾಗ ಅವನ ದುಡ್ಡಿಗೆ ನಾಮ ಹಾಕಿ ಎತ್ತಾಕಿಕೊಂಡು ಜಗ್ಗೇಶ್ ಮತ್ತು ಕಂಪನಿ ಪರಾರಿ. ಆ ಸಿನಿಮಾ ನಂತರ ಕಚ್ಛೆ ಬಿಚ್ಚಾಮಿ ಡೈಲಾಗ್ ತುಂಬಾ ಪಾಪ್ಯುಲರ್ ಆಗಿತ್ತು. 1992-1993 ಟೈಮ್ ಇರಬೇಕು.

** ಬಿಚ್ಚಿ + ಓಡಿಸ್ಯಾಮಿ = ಬಿಚ್ಚೋಡಿಸ್ಯಾಮಿ. ಯಾವ ಸಂಧಿಯೋ? ಯಾವ ಸಮಾಸವೋ ಗೊತ್ತಿಲ್ಲ. ತಮಾಷೆಗೆ  ಹೀಗೆ  ಮಾಡಿದ್ದು.