Wednesday, September 20, 2017

ಬಂಗಾರದ ಹೆಂಡತಿ & ಬೆಳ್ಳಿಯ ಹೆಂಡತಿ

ಶಿಷ್ಯ: ಸ್ವಾಮೀಜಿ, ನನಗೊಬ್ಬಳು ಹೆಂಡತಿ ಬೇಕಾಗಿದ್ದಾಳೆ.

ಸ್ವಾಮೀಜಿ: ನಿನಗೆ ಬಂಗಾರದ ಹೆಂಡತಿ ಬೇಕೋ? ಬೆಳ್ಳಿಯ ಹೆಂಡತಿ ಬೇಕೋ?

ಶಿಷ್ಯ: ಬಂಗಾರದ ಹೆಂಡತಿ, ಬೆಳ್ಳಿಯ ಹೆಂಡತಿ ಅಂದ್ರೇನು ಸ್ವಾಮೀಜಿ?

ಸ್ವಾಮೀಜಿ: ಬಂಗಾರದ ಹೆಂಡತಿ ನಿನ್ನನ್ನು ಇಂಗ್ಲೀಷಿನಲ್ಲಿ, 'ಏ, ಯು,' ಎಂದು ಕರೆಯುತ್ತಾಳೆ. ಬೆಳ್ಳಿಯ ಹೆಂಡತಿ ನಿನ್ನನ್ನು ಹಿಂದಿಯಲ್ಲಿ, 'ಏ, ಜೀ' ಎಂದು ಕರೆಯುತ್ತಾಳೆ.

ಶಿಷ್ಯ: ಬಂಗಾರದ ಹೆಂಡತಿಯ 'ಏ, ಯು,' ಅಂದರೆ 'hey you' ಎಂದು ತಿಳಿಯಿತು. ಬೆಳ್ಳಿಯ ಹೆಂಡತಿಯ 'ಏ, ಜೀ' ಅಂದರೆ ಏನು ಸ್ವಾಮೀಜಿ?

ಸ್ವಾಮೀಜಿ: 'ಏ, ಜೀ' (A G) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದರ್ಥ!

ಕೇಳಿ ಶಿಷ್ಯನ ತಲೆಗೆ ಚಕ್ಕರ್ ಬಂದಂತಾಯಿತು. ಆದರೂ ಒಂದು ಕುತೂಹಲವಿತ್ತು.

ಶಿಷ್ಯ: ನಿಮ್ಮ ಬಂಗಾರದ ಮತ್ತು ಬೆಳ್ಳಿ ಹೆಂಡತಿ ಸಿಕ್ಕಾಪಟ್ಟೆ ಖತರ್ನಾಕ್. ಕೊಂಚವೂ ಗೌರವ ಕೊಡದೇ 'ಏ, ಯು,' ಎಂದು ಕರೆಯುವವಳಿಗೆ ಬಂಗಾರದ ಹೆಂಡತಿಯೆಂದೂ ಮತ್ತು ಖರಾಬಾಗಿ  'ಏ, ಜೀ' (A G) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದು ಕೂಗುವವಳಿಗೆ ಬೆಳ್ಳಿಯ ಹೆಂಡತಿಯೆಂದು ಏಕೆ ಕರೆಯುತ್ತೀರಿ? ಬಂಗಾರ, ಬೆಳ್ಳಿ ಎಂದರೆ ಉತ್ತಮ ಎಂದರ್ಥವಲ್ಲವೇ?

ಸ್ವಾಮೀಜಿ: ನಿನ್ನ ತಲೆ! ನಿನಗೆ ಬೇಸಿಕ್ ಕೆಮಿಸ್ಟ್ರಿ ಕೂಡ ಗೊತ್ತಿಲ್ಲ ಅನ್ನಿಸುತ್ತದೆ. 'ಏ, ಯು,' (AU) ಎಂದು ಕೂಗುವವಳು ಬಂಗಾರದ ಹೆಂಡತಿ ಏಕೆಂದರೆ ಬಂಗಾರದ ರಾಸಾಯನಿಕ ಚಿನ್ಹೆ AU. ಹಾಗೇ ಬೆಳ್ಳಿಯ ರಾಸಾಯನಿಕ ಚಿನ್ಹೆ AG. ಹಾಗಾಗಿ 'ಏ, ಜೀ' (AG) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದು ಕೂಗುವವಳು ಬೆಳ್ಳಿಯ ಹೆಂಡತಿ.

ಕೇಳಿದ ಶಿಷ್ಯ ಢಮಾರ್!

**

ಶಿಷ್ಯ: ಪತಿಗೆ husband ಎಂದೇಕೆ ಹೇಳುತ್ತಾರೆ?

ಸ್ವಾಮೀಜಿ: husband ಅಂದರೆ ಜಿಸ್ಕಾ ಹಸ್ನಾ ಬಂದ್ ಹೋಗಯಾ ಹೈ ವೋ ಹಸಬಂದ್ ಹೈ! ಅರ್ಥಾತ್ ಯಾರ ನಗು ನಿಂತು ಹೋಗಿದೆಯೋ ಅವನೇ ಹಸ್ಬೆಂಡ್!

**

ಶಿಷ್ಯ: ಮದುವೆಯ ದಿನ ಹುಡುಗಿಯೇಕೆ ಅಳುತ್ತಾಳೆ?

ಸ್ವಾಮೀಜಿ: ಅವಳು ಮದುವೆಯ ದಿನವೊಂದೇ ಅಳುತ್ತಾಳೆ. ಹುಡುಗ ನಂತರ ಜೀವನಪರ್ಯಂತ ಅಳುತ್ತಾನೆ!

**

ಸಂಸಾರಿ ಅಂದರೇನು?

ಸಂಸಾರಿ (ಸ್ತ್ರೀಲಿಂಗ): ಅರ್ಜೆಂಟಿನಲ್ಲಿ ನೈಟಿ ಸಿಗದಿದ್ದಾಗ ಕೈಗೆ ಸಿಕ್ಕ (some) ಸೀರೆ (Saree)ಯನ್ನೇ ಸುತ್ತಿಕೊಂಡವಳು. Some Saree = ಸಂಸಾರಿ.

ಸಂಸಾರಿ (ಪುಲ್ಲಿಂಗ): ಅರ್ಜೆಂಟಿನಲ್ಲಿ ಲುಂಗಿ, ಪಂಚೆ, ಪ್ಯಾಂಟು, ಚೊಣ್ಣ ಏನೂ ಸಿಗದಿದ್ದಾಗ ಕೈಗೆ ಸಿಕ್ಕ (some) ಹೆಂಡತಿಯ ಸೀರೆ (Saree)ಯನ್ನೇ ಸುತ್ತಿಕೊಂಡವನು. Some Saree = ಸಂಸಾರಿ.

**

What is THE height of reverse gender discrimination?

Cow dung is holy. Bullshit is you-know-what :)

**

ಸ್ವಾಮಿ ಅನುಭವಾನಂದ ಸರಸ್ವತಿಗಳು ತಮ್ಮ ಪ್ರವಚನಗಳ ಮಧ್ಯೆ ಇಂತಹ ಅಮೋಘ ಜೋಕುಗಳನ್ನು ಹೊಡೆಯುತ್ತಿರುತ್ತಾರೆ. ಬಿಡಿಬಿಡಿಯಾಗಿ ಓದಿದಾಗ, 'ಏನಪ್ಪಾ ಇವರು ಕೇವಲ ಸಂಸಾರಿಗಳನ್ನು, ದಂಪತಿಗಳನ್ನು ವ್ಯಂಗ್ಯ ಮಾಡುತ್ತಾರೆ' ಎಂದೆನಿಸಬಹುದು. ಆದರೆ ಸ್ವಾಮೀಜಿಯವರ ಸ್ಪೆಷಾಲಿಟಿ ಅಂದರೆ ಜನ ನಗಲು ಬಾಯ್ತೆರೆದಾಗ ಜ್ಞಾನದ, ವಿವೇಕದ ಅಮೂಲ್ಯ ಗುಳಿಗೆಯೊಂದನ್ನು ಕೂಡ ನುಸುಳಿಸಿರುತ್ತಾರೆ. ಅದು ಭಾಳ ಮಸ್ತ!

ಈಗ ಒಂದು ವರ್ಷದಿಂದ ನಾನಂತೂ ಸ್ವಾಮಿಗಳ ಬಿಗ್ ಫ್ಯಾನ್. ಅವರೂ ಅಷ್ಟೇ. ಏಕ್ದಂ ಹೈಟೆಕ್ ಸ್ವಾಮೀಜಿ. ತಮ್ಮ ಪ್ರತಿಯೊಂದು ಪ್ರವಚನವನ್ನೂ ನೀಟಾಗಿ ವಿಡಿಯೋ ಮಾಡಿ YouTube ಮೇಲೆ ಹಾಕಿರುತ್ತಾರೆ.

ನೋಡಿ. ಮಜಾ ಮಾಡಿ. ಪ್ರಯೋಜನ ಪಡೆದುಕೊಳ್ಳಿ.

Friday, September 08, 2017

ಪ್ರತಿಯೊಂದರಲ್ಲೂ ಒಂದು ಅಮೂಲ್ಯ ವಜ್ರವಿತ್ತು...ಅನುಭವಾಮೃತ

ರಾಜಾ ವಿಕ್ರಮಾದಿತ್ಯನಿಗೆ ಒಬ್ಬ ಗುರುವಿದ್ದ. ಗುರು ಎಂದರೆ ರಾಜಗುರುವಲ್ಲ. ಒಂದು ತರಹದ ಫಕೀರ. ಸದಾ ಕಾಡುಮೇಡು ಅಲೆದುಕೊಂಡಿರುತ್ತಿದ್ದ. ಆದರೆ ತಪ್ಪದೆ ಪ್ರತಿದಿನವೂ ರಾಜನನ್ನು ಭೇಟಿ ಮಾಡುತ್ತಿದ್ದ. ತಾನು ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಸಂಗ್ರಹಿಸಿದ ಹಣ್ಣೊಂದನ್ನು ರಾಜನಿಗೆ ಪ್ರಸಾದದ ರೂಪದಲ್ಲಿ ಕೊಟ್ಟು ಹೋಗುತ್ತಿದ್ದ. ಗುರುವಿನ ಮೇಲಿನ ಗೌರವದಿಂದ ರಾಜ ಕೂಡ ಗುರು ಕೊಟ್ಟ ಹಣ್ಣನ್ನು ಭಕ್ತಿಯಿಂದ ಸ್ವೀಕರಿಸುತ್ತಿದ್ದ.

ಆ ಹಣ್ಣುಗಳೋ ಕಾಡು ಹಣ್ಣುಗಳು. ನೋಡಲು ವಕ್ರವಕ್ರವಾಗಿ ಇರುತ್ತಿದ್ದವು. ಕೆಲವೊಂದನ್ನು ಹಕ್ಕಿಗಳು ಅರ್ಧಂಬರ್ಧ ತಿಂದಿರುತ್ತಿದ್ದವು. ಕೆಲವು ನೆಲಕ್ಕೆ ಬಿದ್ದು ಘಾಸಿಗೊಂಡಿರುತ್ತಿದ್ದವು. ಯಾವ ರೀತಿಯಿಂದ ನೋಡಿದರೂ ನೋಡಿದಾಕ್ಷಣ, 'ಆಹಾ! ಹಣ್ಣುಗಳು ಎಷ್ಟು ಚೆನ್ನಾಗಿವೆ. ರಸಭರಿತವಾಗಿವೆ!' ಅಂತೇನೂ ಅನ್ನಿಸುತ್ತಿರಲಿಲ್ಲ.

ಮತ್ತೆ ರಾಜಾ ವಿಕ್ರಮಾದಿತ್ಯನಿಗೆ ತಿನ್ನಬೇಕು ಅಂದರೆ ಹಣ್ಣುಗಳ ಕೊರತೆಯೇ!? ಬೇಕಾದ ವಿಧದ ಒಳ್ಳೊಳ್ಳೆ ಹಣ್ಣುಗಳು ಸದಾ ತುಂಬಿರುತ್ತಿದ್ದವು. ಹೀಗಿರುವಾಗ ಫಕೀರನಂತಹ ಗುರು ಎಲ್ಲೋ ಕಾಡಿನಲ್ಲಿ ಸಿಕ್ಕ ಹಣ್ಣು ತಂದುಕೊಟ್ಟರೆ ರಾಜನೇಕೆ ತಿಂದಾನು? ಗುರುವಿಗೆ ಬೇಸರವಾಗದಿರಲಿ ಎಂದು ತೆಗೆದುಕೊಳ್ಳುತ್ತಿದ್ದ. ಗುರು ಆಚೆ ಹೋದಾಕ್ಷಣ ತಿರುಗಿ ಕೂಡ ನೋಡದೆ ಆ ಹಣ್ಣುಗಳನ್ನು ಎಸೆಯುತ್ತಿದ್ದ. ಅವು ಹೋಗಿ ಸಿಂಹಾಸನದ ಪಕ್ಕದಲ್ಲಿದ್ದ ನೆಲಮಾಳಿಗೆಯೊಂದರಲ್ಲಿ ಬೀಳುತ್ತಿದ್ದವು.

ತುಂಬಾ ದಿನ ಹೀಗೆಯೇ ನಡೆದಿತ್ತು. ಒಂದು ದಿನ ಎಂದಿನಂತೆ ರಾಜ ಗುರು ಕೊಟ್ಟ ಹಣ್ಣನ್ನು ಎಸೆಯುವದರಲ್ಲಿದ್ದ. ಆಗ ಅಲ್ಲಿಯೇ ಇದ್ದ ರಾಜ ಸಾಕಿದ್ದ ಮಂಗವೊಂದು ಹಣ್ಣನ್ನು ಬೇಡಿತು. ಸಾಕುಪ್ರಾಣಿಯ ಮೇಲಿನ ಪ್ರೀತಿಯಿಂದ ರಾಜ ಆ ಹಣ್ಣನ್ನು ಎಸೆಯುವದರ ಬದಲಾಗಿ ಮಂಗನಿಗೆ ಕೊಟ್ಟ.

ತಿನ್ನಲೆಂದು ಆ ಮಂಗ ಹಣ್ಣನ್ನು ಒಡೆಯಿತು. ಒಳಗೆ ನೋಡಿದರೆ ಒಂದು ವಜ್ರ! ಅಮೂಲ್ಯ ವಜ್ರ! ಫಳ ಫಳ ಹೊಳೆಯುತ್ತಿದೆ. ಆ ವಜ್ರದ ಪ್ರಕಾಶ ರಾಜನ ಅರಮನೆಯಲ್ಲವನ್ನೂ ಬೆಳಗಿತು.

ರಾಜನಿಗೆ ಏನೋ ಹೊಳೆಯಿತು. ಗಡಬಡಾಯಿಸಿ ನೆಲಮಾಳಿಗೆಯತ್ತ ಧಾವಿಸಿದ. ಅಲ್ಲಿ ಹಿಂದೆ ಎಸೆದಿದ್ದ ಗುರು ಪ್ರಸಾದ ರೂಪದಲ್ಲಿ ಕೊಟ್ಟಂತಹ ಹಣ್ಣುಗಳು ಬಿದ್ದಿದ್ದವು. ಒಂದನ್ನು ಎತ್ತಿಕೊಂಡ. ಒಡೆದು ನೋಡಿದ. ಅದರಲ್ಲೂ ಒಂದು ಅಮೂಲ್ಯ ವಜ್ರವಿತ್ತು. ಮತ್ತೊಂದು ಹಣ್ಣನ್ನು ಒಡೆದು ನೋಡಿದ. ಅದರಲ್ಲೂ ಒಂದು ವಜ್ರ. ಚೆನ್ನಾಗಿಲ್ಲ ಎಂದು ಎಸೆದಿದ್ದ ಪ್ರತಿಯೊಂದು ಕಾಡಿನ ಹಣ್ಣಿನಲ್ಲೂ ಒಂದೊಂದು ಅಮೂಲ್ಯ ವಜ್ರವಿತ್ತು.

ರಾಜಾ ವಿಕ್ರಮಾದಿತ್ಯನಿಗೆ ತನ್ನ ಮೇಲೆ ತನಗೇ ಬೇಸರವಾಯಿತು. ನಾಚಿಗೆಯಾಯಿತು. ಗುರುವು ಪ್ರತಿದಿನ ಅಷ್ಟೊಂದು ಪ್ರೀತಿಯಂದ ತಂದುಕೊಡುತ್ತಿದ್ದ ಹಣ್ಣುಗಳನ್ನು ಅವು ಕಾಡಿನ ಹಣ್ಣುಗಳು, ಏನೂ ಚೆನ್ನಾಗಿಲ್ಲ ಎಂದು ಭಾವಿಸಿ ಎಸೆದಿದ್ದರ ಬಗ್ಗೆ ಪಶ್ಚಾತ್ತಾಪವಾಯಿತು. ಗುರುವನ್ನು ಕಂಡು, ವಿಷಯವನ್ನು ನಿವೇದಿಸಿಕೊಂಡು, ಕ್ಷಮೆ ಕೇಳಿ ಬರೋಣ ಎಂದು ಕುದುರೆಯನ್ನೇರಿ ಕಾಡಿನತ್ತ ತೆರಳಿದ.

ಕಾಡಿನಲ್ಲಿ ಗುರುವನ್ನು ಭೇಟಿಯಾದ. ವಿಷಯವನ್ನು ಹೇಳಿದ. ತನ್ನ ವರ್ತನೆಗಾಗಿ ಕ್ಷಮೆ ಕೇಳಿದ.

ಪ್ರೀತಿಯಿಂದ ಆಶೀರ್ವದಿಸಿದ ಗುರು ಮುಗುಳ್ನಗುತ್ತ ಕೇಳಿದ, 'ಈ ಘಟನೆಯಿಂದ ಏನು ಪಾಠ ಕಲಿತೆ ರಾಜ?'

'ಕೇವಲ ಮೇಲ್ನೋಟಕ್ಕೆ ಚೆನ್ನಾಗಿಲ್ಲ. ನೋಡಲು ಆಕರ್ಷಕವಾಗಿಲ್ಲ ಎಂದು ಯಾವುದನ್ನೂ ತಿರಸ್ಕರಿಸಬಾರದು. ಈ ಪಾಠ ಕಲಿತೆ ಗುರುವರ್ಯ,' ಎಂದ ರಾಜ.

'ಅಷ್ಟೇನಾ? ಮತ್ತೇನನ್ನೂ ಕಲಿಯಲಿಲ್ಲವೇ?' ಎಂದು ಕೇಳಿದ ಗುರು.

ರಾಜನಿಗೆ ಮತ್ತೇನೂ ಹೊಳೆಯಲಿಲ್ಲ.

ಗುರುವೇ ಹೇಳಿದ. 'ಜೀವನದ ಅನೇಕ ಅನುಭವಗಳೂ ಹೀಗೇ ಇರುತ್ತವೆ. ಈ ಕಾಡಿನ ಹಣ್ಣುಗಳಂತೆ. ಹೊರಗಿನಿಂದ ನೋಡಲು ಚೆನ್ನಾಗಿರುವದಿಲ್ಲ. ಹಾಗಾಗಿ ಒಮ್ಮೆಲೇ ಇಷ್ಟವಾಗುವದಿಲ್ಲ. ಆದರೆ ತಾಳ್ಮೆಯಿಂದ, ವ್ಯವಧಾನದಿಂದ ಪರೀಕ್ಷಿಸಿ ನೋಡಿದರೆ ಪ್ರತಿಯೊಂದು ಅನುಭವದಲ್ಲೂ ಒಂದೊಂದು ಅಮೂಲ್ಯ ವಜ್ರವಿರುತ್ತದೆ. ಎಲ್ಲರಿಗೂ ಹಲವಾರು ಅನುಭವಗಳಾಗುತ್ತವೆ. ಅನೇಕ ಅನುಭವಗಳು ಇಷ್ಟವಾಗುವದಿಲ್ಲ. ಕೆಲವೊಂದರಿಂದ ತುಂಬಾ ದುಃಖವೂ ಆಗಬಹುದು. ನಾವು ಅನುಭವಗಳಲ್ಲಿ ಅಡಗಿರುವ ಅಮೂಲ್ಯ ವಜ್ರಗಳಂತಹ ಪಾಠವನ್ನು ಕಲಿಯಲು ಹೋಗುವದೇ ಇಲ್ಲ. ನೀನು ಕಾಡಿನ ಹಣ್ಣು ಎಂದು ನಿರ್ಲಕ್ಷಿಸಿ ಉಪೇಕ್ಷೆಯಿಂದ ಎಸೆದಂತೆ ನಾವು ಅನುಭವಗಳನ್ನೂ ಎಸೆದುಬಿಡುತ್ತೇವೆ. ಮುಂದೆ ಅವು ದುಃಖಗಳಾಗಿ ಕಾಡಬಹುದೇ ಹೊರತೂ ಮತ್ತೇನನ್ನೂ ಮಾಡುವದಿಲ್ಲ. ಬುದ್ಧಿವಂತನಾದವನು ಯಾವದೇ ಅನುಭವವನ್ನೂ ನಿರ್ಲಕ್ಷಿಸದೇ, ಸಮಚಿತ್ತದಿಂದ ಅವುಗಳ ಬಗ್ಗೆ ವಿಚಾರ ಮಾಡಿ, ಅವುಗಳನ್ನು ಕಲಿಯಬಹುದಾದ ಪಾಠಗಳನ್ನು ಕಲಿತು, ಸಾರವನ್ನು ಹೀರಿ ಮತ್ತೂ ಪ್ರಬುದ್ಧನಾಗುತ್ತಾನೆ. ಹಾಗಾಗಿಯೇ ಅನುಭವಾಮೃತ ಅನ್ನುವದು. ಕಲಿಯಬೇಕಾದ ಪಾಠ ಕಲಿತರೆ ಪತ್ರಿಯೊಂದು ಅನುಭವವೂ ಅಮೃತ ಸಮಾನ.'

ಗುರುವಿನ ಮಾತು ಕೇಳಿದ ರಾಜಾ ವಿಕ್ರಮಾದಿತ್ಯ ತಲೆದೂಗಿದ. ಆಗುವ ಅನುಭಗಳನ್ನು ನಿರ್ಲಕ್ಷಿಸದೇ ಸಮಚಿತ್ತದಿಂದ ಅವುಗಳನ್ನು ವಿಶ್ಲೇಷಿಸಿ ಅವುಗಳಲ್ಲಿ ಅಡಗಿರುವ ಅಮೂಲ್ಯ ಪಾಠಗಳನ್ನು ಕಲಿಯುವದಾಗಿ ಹೇಳಿ, ಗುರುವಿಗೆ ವಂದನೆಗಳನ್ನು ಅರ್ಪಿಸಿ ಮರಳಿದ.

ಸ್ವಾಮಿ ಸುಖಬೋಧಾನಂದರ Personal Excellence Through The Bhagavadgita ಅನ್ನುವ ಪುಸ್ತಕದಲ್ಲಿ ಓದಿದ ಕಥೆ ಇದು.

ಅನುಭವಗಳು ಒಳ್ಳೆಯವವೋ ಕೆಟ್ಟವೋ, ಇಷ್ಟವಾದವೋ ಕಷ್ಟವಾದವೋ....ಹೇಗೇ ಇರಲಿ, ಅವುಗಳಿಂದ ಪಾಠ ಕಲಿಯಬೇಕು. Every cloud has a silver lining ಅನ್ನುವ ಹಾಗೆ ಅದೆಂತಹ horrible ಅನುಭವವಾದರೂ ಅದರಲ್ಲೂ ಕೂಡ ಒಂದು ಅಮೂಲ್ಯ ವಜ್ರ, ಅನುಭವಾನುಮೃತ ಇದ್ದೇ ಇರುತ್ತದೆ. ಇದು ದೊಡ್ಡವರು ಹೇಳುವ ಮಾತು.

ಇದೆಲ್ಲ ಹೇಳಲು ಕೇಳಲು ಮಾತ್ರ ಚೆನ್ನಾಗಿರುತ್ತದೆ. ಆದರೆ ಪಾಲಿಸುವದು ಕಷ್ಟ ಎಂದು ಅನ್ನಿಸಿದರೆ ತಪ್ಪೇನಿಲ್ಲ. ಮತ್ತೆ ಕೆಲವು ಆಘಾತಕಾರಿ ಅನುಭವಗಳಿಂದ ಅದೆಂತಹ ನೀತಿ ಪಾಠ ಕಲಿಯಲು ಸಾಧ್ಯ? ಅವುಗಳನ್ನು ಮರೆತರೆ ಸಾಕಾಗಿರುತ್ತದೆ.

ಹೀಗೆ ಯೋಚಿಸುತ್ತ ಕುಳಿತಾಗ ಎಲ್ಲೋ ಓದಿದ ಒಂದು ಘಟನೆ ನೆನಪಾಯಿತು. ಅದರ ಸಾರಾಂಶ ಇಷ್ಟು.

ಅವರೊಬ್ಬ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್. ಇಸ್ಲಾಮ್ ಧರ್ಮದವರು. ಅವರಿಗೊಬ್ಬ ಏಳೆಂಟು ವರ್ಷದ ಮಗ. ಏನೋ ಅನಾರೋಗ್ಯವಾಗಿ ಒಮ್ಮೆಲೇ ಸತ್ತುಹೋದ. ಎಲ್ಲರಿಗೂ ತುಂಬಾ ದುಃಖವಾಯಿತು. ಅವರ ಆಪ್ತರು ಮನೆಗೆ ಹೋಗಿ ಸಂತಾಪ ಸೂಚಿಸಿದರೆ ಪ್ರೊಫೆಸರ್ ಹೇಳಿದ ಮಾತು -  'ನಾನು ನಂಬಿದ್ದ ಅಲ್ಲಾಹುವೇ ಮಗನ ರೂಪದಲ್ಲಿ ಬಂದಿದ್ದ. ಎಂಟು ವರ್ಷ ಇದ್ದ. ಅಲ್ಲಾಹು ನನ್ನ ಮಗನಾಗಿ ಎಂಟು ವರ್ಷ ನಮ್ಮೆಲ್ಲರ ಜೊತೆ ಇದ್ದ ಬಗ್ಗೆ ತುಂಬಾ ಸಂತಸವಿದೆ. ದೇವರು ಅಂದ ಮೇಲೆ ಒಂದೇ ಕಡೆ ಇರಲು ಸಾಧ್ಯವೇ? ಅದೆಷ್ಟು ಮಂದಿ ಭಕ್ತರ ಕೋರಿಕೆ ಇದೆಯೋ? ಅವನ್ನು ತೀರಿಸಲು ಮತ್ತೊಂದು ಮನೆಗೆ ಹೋದ ಅಂದುಕೊಂಡೆ ಅಷ್ಟೇ. ನಮಗೆ ಸಿಕ್ಕ ಸುಖ ಸಂತೋಷ ಅವರಿಗೂ ಸಿಗಲಿ!' ಎಂದು ಹೇಳಿ ಕಣ್ಣು ಒರೆಸಿಕೊಂಡರು.

'ಪುತ್ರಶೋಕಂ ನಿರಂತರಂ' ಅಂತ ಮಾತಿದೆ. ಯಾವುದೇ ಪಾಲಕರಿಗೆ ಮಕ್ಕಳನ್ನು ಕಳೆದುಕೊಳ್ಳುವದು most traumatic ಅನುಭವ. ಅಂತಹ ಅತ್ಯಂತ ಕೆಟ್ಟ ಅನುಭವದಲ್ಲೂ ಸಾರ್ಥಕತೆಯನ್ನು ಕಂಡುಕೊಳ್ಳುವದು ಹೇಗೆ ಅನ್ನುವದನ್ನು ಪ್ರೊಫೆಸರ್ ಸಾಹೇಬರು ತೋರಿಸಿಕೊಟ್ಟಿದ್ದರು.

ಮತ್ತೆ ಮತ್ತೊಂದು ಮಾತು. ಹಲವಾರು ಘಟನೆಗಳು ಆಗುತ್ತಿರುತ್ತವೆ. ಅವುಗಳನ್ನು ನಾವು 'ನಮ್ಮದು' ಅಂತ ಮಾಡಿಕೊಂಡಾಗ ಮಾತ್ರ ಅವು ನಮ್ಮ ಅನುಭವಗಳಾಗುತ್ತವೆ. ಅಲ್ಲಿ ಮತ್ತೆ 'ನಾನು, ನನ್ನದು, ನನ್ನಿಂದ' ಅನ್ನುವ ಅಹಂಕಾರ ಬರುತ್ತದೆ. ಹಾಗೆ ನಮ್ಮ ಅಹಂಕಾರದೊಂದಿಗೆ associate ಮಾಡದೇ ಇದ್ದರೆ ಅದೊಂದು ಘಟನೆ ಅಷ್ಟೇ. ಹಾಗಾಗಿ ಅನುಭವಗಳಿಂದ ಪಾಠ ಕಲಿಯುವದು ಉತ್ತಮ. ಅದಕ್ಕಿಂತ ಉತ್ತಮವಾದದ್ದು ಹಿಂದಾಗ ಮತ್ತು ಮುಂದಾಗಲಿರುವ ಘಟನೆಗಳನ್ನು ಘಟನೆಗಳನ್ನಾಗಿಯೇ ಬಿಟ್ಟುಬಿಡುವದು. ನಾನು, ನನ್ನದು, ನನ್ನಿಂದ ಅನ್ನುವ label ಹಚ್ಚಿ ನಮ್ಮ ಅನುಭವಗಳನ್ನಾಗಿ ಮಾಡಿಕೊಳ್ಳಲೇಬಾರದು. Every experiment has an outcome. But, we label the outcome either as success or failure. Similarly incidents happen. When we associate incidents with ourselves they become 'our' experiences.

ಅನುಭವಾಮೃತ ಮಾತ್ರ ಮಿಸ್ ಮಾಡಿಕೊಳ್ಳಬೇಡಿ.

Monday, September 04, 2017

ನಮ್ಮ ಟೀಚರ್ ಪೇಪರಿನ್ಯಾಗ ಬಂದಾರ...

ಸೆಪ್ಟೆಂಬರ್ ೫. ಶಿಕ್ಷಕರ ದಿನಾಚರಣೆ. ನೆನಪಿದೆ. ಆದರೆ ಯಾವದೇ ಟೀಚರ್ ಅಥವಾ ಮಾಸ್ತರ್ ಬಗ್ಗೆ ಬರೆದಿಲ್ಲ. 'ಅಯ್ಯೋ! ಬರೆಯಲೇ ಇಲ್ಲವಲ್ಲ,' ಎಂದು ಜಾಸ್ತಿ ಕೊರಗಬೇಕಾಗಿ ಬರಲಿಲ್ಲ. ಇವತ್ತಿನ ವಿಜಯವಾಣಿಯಲ್ಲಿ ಹಲವಾರು ಶಿಕ್ಷಕರ ಬಗ್ಗೆ ಅವರ ವಿದ್ಯಾರ್ಥಿಗಳಾಡಿದ ನಾಲ್ಕು ಮಾತುಗಳನ್ನು ಹಾಕಿದ್ದಾರೆ. ನಮಗೆ ಪಾಠ ಮಾಡಿದ್ದ 'ಭಾರತಿ ನಾಯಕ್ ಉಣಕಲ್' ಟೀಚರ್ ಬಗ್ಗೆನೂ ಅವರ ವಿದ್ಯಾರ್ಥಿಗಳು ಹೇಳಿದ ಮಾತುಗಳು ಬಂದಿವೆ. ನೋಡಿ ಸಂತೋಷವಾಯಿತು.



 

ನಮ್ಮ ಕಾಲದಲ್ಲಿ ಅವರು ನಮಗೆಲ್ಲ ಬಿ.ಆರ್.ನಾಯಕ್ ಟೀಚರ್ ಅಂತಲೇ ಪರಿಚಿತರು. ೧೯೮೩-೮೪ ರ ಸಮಯದಲ್ಲಿ, ಆರನೇ ಕ್ಲಾಸಿನಲ್ಲಿದ್ದಾಗ, ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದರು. ಆಗ ಮಾತ್ರ ನೌಕರಿಗೆ ಸೇರಿದ್ದರು ಅಂತ ನೆನಪು. ಸಿಕ್ಕಾಪಟ್ಟೆ ಜೋಷ್ ಇತ್ತು. ದಬಾಯಿಸಿ ಪಾಠ ಮಾಡುತ್ತಿದ್ದರು. ಉತ್ಸಾಹದ ಚಿಲುಮೆ ಅನ್ನುವ ಮಾತಿಗೆ ಉದಾಹರಣೆ ಬೇಕೆಂದರೆ ನಾಯಕ್ ಟೀಚರ್ ಅವರನ್ನು ತೋರಿಸಬಹುದಿತ್ತು. ಸಿಕ್ಕಾಪಟ್ಟೆ ಚಟುವಟಿಕೆಯ ಮಾಸ್ತರಿಣಿ. 

ಅವರು ಮೂಲತಃ ಅಂಕೋಲಾ ಕಡೆಯವರು ಅಂತ ನೆನಪು. ಧಾರವಾಡ ಭಾಷೆ ಮಾತಾಡುತ್ತಿದ್ದರೂ ಉತ್ತರಕನ್ನಡದ ನಾಡವರ ಭಾಷೆಯ ಛಾಪು ಬರೋಬ್ಬರಿ ಇರುತ್ತಿತ್ತು. ಒಮ್ಮೆ ಅವರು ಯಾವದೋ ವಿಷಯವನ್ನು ಹೇಳುತ್ತ 'ಕೆಲಶಿ' ಅನ್ನುವ ಪದ ಉಪಯೋಗಿಸಿದ್ದರು. ಎಷ್ಟೋ ಜನ 'ಕೆಲಶಿ' ಅಂದರೆ ಕೆಲಸ ಮಾಡುವವರು ಅಂದುಕೊಂಡು ಸುಮ್ಮನೆ ಕೂತಿದ್ದರು. ಸದಾ ಪ್ರಶ್ನೆ ಕೇಳುತ್ತಿದ್ದ ವಿದ್ಯಾರ್ಥಿಯೊಬ್ಬ ಎದ್ದು ನಿಂತು, 'ಟೀಚರ್, ಕೆಲಶಿ ಅಂದರೇನ್ರೀ??' ಎಂದು ಕೇಳಿದ್ದ. ನಾಯಕ್ ಟೀಚರ್ ಉತ್ತರಿಸಿದ್ದನ್ನು ನೆನಪಿಸಿಕೊಂಡರೆ ಸಿಕ್ಕಾಪಟ್ಟೆ ನಗು ಬರುತ್ತದೆ. 'ಕೆಲಶಿ ಅಂದ್ರೆ ಗೊತ್ತಿಲ್ಲ ನಿನಗೆ? ತಲೆ ಕಟಿಂಗ್ ಮಾಡ್ತಾರಲ್ಲಾ? ಗೊತ್ತಾಯ್ತು? ತಲೆ ಕಟ್ ಮಾಡುವವರು. ಅವರೇ ಕೆಲಶಿ,' ಅಂದುಬಿಟ್ಟಿದ್ದರು. ತಲೆಕೂದಲನ್ನು ಕಟ್ ಮಾಡುವವ ಕೆಲಶಿ ಉರ್ಫ್ ನಾಪಿತ ಅಂತ ಹೇಳುವ ಭರಾಟೆಯಲ್ಲಿ ತಲೆ ಕಟ್ ಮಾಡುವವ ಅಂದುಬಿಟ್ಟಿದರು. ಅದನ್ನು ಕ್ಯಾಚ್ ಮಾಡಿದ ನಮ್ಮಂತವರು ತಟ್ಟಿಕೊಂಡು ಪೆಕಪೆಕಾ ನಕ್ಕರೆ ಟೀಚರಿಗೆ ಯಾಕೆ ನಗುತ್ತಿದ್ದಾರೆ ಅಂತ ತಿಳಿಯದೆ, 'ಅದೇನು ಹೆಗಡೆ ನಗೋದು? ಏನು ತಮಾಷೆ ಉಂಟು ಅದರಲ್ಲಿ!?' ಅಂದು ಬೈದಿದ್ದರು. ನೆನಪಾಗಿ ನಗು ಬಂತು. 

ನಮ್ಮ ಹವ್ಯಕ ಭಾಷೆಯಲ್ಲೂ ನಾಪಿತನಿಗೆ ಕೆಲಶಿ ಅಂತಲೇ ಹೇಳುತ್ತಾರೆ. ಹಾಗಾಗಿ ಅವರು ಮೊದಲನೇ ಬಾರಿಗೆ 'ಕೆಲಶಿ' ಅಂದಾಗಲೇ ನನಗೆ ಗೊತ್ತಾಗಿತ್ತು. 'ಟೀಚರ್, ಕೆಲಶಿ ಅಂದರೇನ್ರೀ??' ಅಂತ ಬೇರೊಬ್ಬ ವಿದ್ಯಾರ್ಥಿ ಕೇಳಿದಾಗ ತಾವೇ ಉತ್ತರ ಕೊಡುವ ಬದಲಿಗೆ, 'ಹೆಗಡೆ, ನೀ ಹೇಳು ನೋಡುವಾ. ನಿನಗೆ ಗೊತ್ತಿರಬೇಕಲ್ಲ ಕೆಲಶಿ ಅಂದರೆ ಏನು ಅಂತ. ನೀನೂ ಆಕಡೆಯವನೇ,' ಅಂತ ನನ್ನನ್ನು ಕೇಳಿದ್ದರೆ ಮುದ್ದಾಂ ಹೇಳುತ್ತಿದ್ದೆ with action ಬೇಕಾದ್ರೆ! 'ಉತ್ತರ ಹೇಳು ನೋಡೋಣ!' ಎಂದು ಸದಾ ನನ್ನನ್ನು ಎಬ್ಬಿಸುತ್ತಿದ್ದ ಟೀಚರ್ ಅಂದೇಕೋ ನನ್ನನ್ನು ಕೇಳಲಿಲ್ಲ. ತಾವೇ ಹೇಳಲು ಹೋಗಿ, ಅದು ಏನೋ ಆಗಿಹೋಗಿತ್ತು. ನೆನಸಿಕೊಂಡು ಇವತ್ತು ಸಿಕ್ಕಾಪಟ್ಟೆ ನಕ್ಕೆ. 

೨೦೧೨ ಡಿಸೆಂಬರಿನಲ್ಲಿ ನಮ್ಮ SSLC ಬ್ಯಾಚಿನ ೨೫ ನೇ ವರ್ಷದ ರಜತಮಹೋತ್ಸವಕ್ಕೆ ಹೋದಾಗ ನಾಯಕ್ ಟೀಚರ್ ಸಿಕ್ಕಿದ್ದರು. ಶಾಲೆಯಲ್ಲಿದ್ದಾಗ ಅವರದ್ದು ಮತ್ತು ನಂದು ಆರನೇ ಕ್ಲಾಸಿನಲ್ಲಿ ಒಂದು ತರಹದ ವಿಚಿತ್ರ ಸಂಬಂಧ. ತುಂಬಾ ಪ್ರೀತಿಸುತ್ತಿದ್ದರು. ಆದರೆ ಸಿಕ್ಕಾಪಟ್ಟೆ ಕಿತಾಪತಿ ಮಾಡುತ್ತಾನೆ, ಗದ್ದಲ ಹಾಕುತ್ತಾನೆ, ಕಿರಿಕಿರಿ ಮಾಡುತ್ತಾನೆ, ಗೆಳೆಯರ ಗುಂಪು ಕಟ್ಟಿಕೊಂಡು ಏನೇನೋ ಜೋಕ್ ಮಾಡುತ್ತಾನೆ ಅಂತ ಅವರಿಗೆ ಸಿಕ್ಕಾಪಟ್ಟೆ ಕೋಪ ಕೂಡ ಬರುತ್ತಿತ್ತು. ಆದರೂ ಪ್ರೀತಿ ಜಾಸ್ತಿಯಿತ್ತು. ಹಾಗಾಗಿ ಕೋಪ ಬಂದರೂ ಆ ಕ್ಷಣದಲ್ಲಿ ಒಂದೆರೆಡು ಮಾತು ಬೈದಿದ್ದು ಬಿಟ್ಟರೆ ಒಳ್ಳೆ ಮಾರ್ಕ್ಸ್ ತೆಗೆದಾಗ ಪ್ರೀತಿಯಿಂದ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದೇ ಜಾಸ್ತಿ. ೨೦೧೨ ರಲ್ಲಿ ಇಪ್ಪತ್ತೈದು ವರ್ಷಗಳ ನಂತರ ಸಿಕ್ಕ ನಾಯಕ್ ಟೀಚರ್ ಅದೆಷ್ಟು ಮಾತಾಡಿದರು, ಅದೆಷ್ಟು ಪ್ರೀತಿ ತೋರಿಸಿದರು ಅಂದರೆ ಅವರ ಮನೆಗೆ ಊಟಕ್ಕೆ ಬರಲೇಬೇಕು ಅಂತ ಕೂತಿದ್ದರು. 'ಟೀಚರ್, ನಿಮ್ಮ ಮನಿ ಊಟ ಇನ್ನೊಮ್ಮೆ ನೋಡೋಣಂತ್ರಿ. ಇವತ್ತಿನ ಊಟ ನಿಮ್ಮ ಜೋಡಿನೇ ಕೂತು ಮಾಡೋಣಂತ,' ಎಂದು ಹೇಳಿ ಅವರ ಜೊತೆಯೇ ಉಳಿದ ಕೆಲ ಮಿತ್ರರ ಜೊತೆ ಊಟ ಮಾಡಿದ್ದು ಇವತ್ತಿಗೆ ಸವಿನೆನಪು. 

ಟೀಚರ್ ಬಗ್ಗೆ ಒಳ್ಳೆ ಮಾತಾಡಿದ ನಂತರದ ತಲೆಮಾರಿನ ವಿದ್ಯಾರ್ಥಿಗಳಿಗೆ, ಪ್ರಕಟಿಸಿದ ವಿಜಯವಾಣಿ ಪತ್ರಿಕೆಗೆ ಧನ್ಯವಾದಗಳು. 

ಬಿ. ಆರ್. ನಾಯಕ್ ಟೀಚರ್ ಅವರಿಗೆ ಶಿಕ್ಷಕರ ದಿನದ ಶುಭಾಶಯಗಳು. ನಮ್ಮಂತಹ ಮಂಗ್ಯಾಗಳನ್ನು ಸಹಿಸಿಕೊಂಡು ಪಾಠ ಮಾಡಿ ವಿದ್ಯೆ ಕಲಿಸಿದ್ದಕ್ಕೆ ಒಂದು ದೊಡ್ಡ ನಮೋ ನಮಃ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಟೀಚರ್!

OCI Experience...lessons learnt


OCI - Overseas Citizen of India. OCI is a privilege granted by government of India to people of Indian origin who have become foreign nationals. OCI brings foreign nationals of Indian origin on par with NRIs (Non Resident Indian). OCI allows the holder to travel freely to India, stay as long as one wants, take up private jobs, invest, buy property (except agricultural land) etc.

Earlier, once you gave up the Indian citizenship, you were treated purely like a foreigner without any consideration to your Indian origin. You had to get a tourist visa like any other foreigner to visit India. Length of the stay was limited and there were regulations like having to register with local police authorities if the stay exceeded certain number of days etc.

OCI is a good measure from the government of India for people who want to have flexibility about their visit to and stay in India. Earlier it started as PIO (Person of Indian Origin) scheme and now has become OCI. It is a lifelong visa to visit and stay in India. (Technically not lifelong as one has to renew it at least once after reaching 50 years of age. Other than that it is a permanent Indian visa.)

Probably all this is known to most of the people. There is plenty of information available on websites both in India and abroad. If you are interested to apply and get OCI for yourself, please visit them and follow the instructions accurately and you should get your OCI without any problem.

Here I want to let you know about a few points, which if ignored even if unintentionally, can cause some problems and thus delay the processing of your OCI card.

1) The passport size photographs that you need to attach to the OCI application have to be different than the one on your passport. This requirement is found only on CKGS's website, the company which verifies your documents before forwarding your application to the Indian government.

Glad I noticed this rule before finalizing my OCI application. Otherwise I would have sent the same photos that I had used to get my recent US passport as I had a few extras.

So, always get a new set of photos when you send your OCI application and make sure it is different than the one in your passport.

2) Variations in name. In India, it is common to write your full name as 'your name' 'father's name' 'surname'. In US, unless you have a real middle name, you simply write 'your name' and 'your surname'.

All my Indian documents have my father's name and US documents like naturalization certificate, US passport etc. don't have it.

So, they flagged my OCI application for inconsistency in name and put it on hold. Options given were 1) if you have changed your name, send the name change court order or 2) send an affidavit stating that both the names belong to one and the same person.

I am glad that they provided option #2. I also searched on the web and found that many people had similar problem. Some people had shared what they had done, type of affidavit they had used etc. Using such information, I also prepared a simple affidavit, got it notarized and sent it following the instructions given by CKGS, the outsourced company which handles all the paperwork. Once they reviewed and accepted the affidavit, everything went smoothly. OCI card was processed in India, sent to the Indian consulate here in San Francisco and after the local consular officer signed it, it was delivered to me. Total time taken was one month and ten days. If not for the glitch with the name, probably it would have been taken a month. Thankfully the delay was not really very long.

So if you are applying for OCI, make sure that your name is written exactly same in all the documents you are sending along with your application like your old passports, birth certificate, US naturalization certificate, US passport etc. If you have really changed your name, no worries. It is straight forward. Just attach the name change documentation. If you have NOT changed the name but your name is written DIFFERENTLY in different documents then you are better off sending a notarized affidavit clearly explaining different variations of your name, why they exist and how they are one and the same and most importantly belong to you only. There is no one affidavit format which may work for all situations. Just type up a simple but accurate document, take its printout, sign it before a notary and include it with the application right in the beginning. That way your application probably will not be put on hold and you can save pain and cost later.

If I had understood this sooner, I could have definitely saved a few dollars of having to rush the affidavit by overnight courier later and the stress involved in searching for information on the web, coming up with the right affidavit, going to a notary etc. because when they put the application on hold, you need to resolve the issue within seven days. Otherwise the application may be cancelled. That's not something you want as it takes a lot of time and effort in putting together the application.

For all other instructions, just accurately follow the procedure you find on the official website. Read the instructions multiple times. Before sending, check the documents multiple times for correctness. Exercise maximum care and due diligence. It should all be just fine and you should get your OCI without any problem.

If I can answer any related questions, feel free to e-mail me.

Good luck in getting your OCI!

Saturday, September 02, 2017

ಏ ಜೀ! ಏ ಜೀ! (A G) ಎಂದು ಗಂಡನನ್ನು ಕೂಗುವದರ ಹಿಂದಿನ ಕಥೆ

ಒಂದಾನೊಂದು ಕಾಲದಲ್ಲಿ ಪತ್ನಿಯೊಬ್ಬಳು ಗಂಡನಿಗೆ ನೂರು ಬೆಳ್ಳಿ ವರಹಗಳನ್ನು ಕೊಟ್ಟು, 'ರೀ, ಪೇಟೆಗೆ ಹೋಗಿ ಮೂರು ಕತ್ತೆಗಳನ್ನು ಕೊಂಡು ತನ್ನಿ,' ಎಂದು ಹೇಳಿದಳು.

'ಮೂರೇ ಕತ್ತೆ ಮತ್ತೆ. ಒಂದು ಹೆಚ್ಚು ಅಥವಾ ಒಂದು ಕಮ್ಮಿ ತರಬೇಡಿ,' ಎಂದು ಎಚ್ಚರಿಸಲು ಮರೆಯಲಿಲ್ಲ.

ಏಕೆ? ಏನು? ಕತ್ತೆಯೇ ಯಾಕೆ? ಕುದುರೆ ಏಕಾಗಬಾರದು? ಅಂತೆಲ್ಲ ತಲೆಹರಟೆ ಪ್ರಶ್ನೆ ಕೇಳಲು ಗಂಡ ಹೋಗಲಿಲ್ಲ. ಶಾಣ್ಯಾ ಮನುಷ್ಯ.

ಪೇಟೆಗೆ ಹೋದ. ಏನೇನೋ ಚೌಕಾಸಿ ವ್ಯವಹಾರ ಮಾಡಿ ನೂರು ವರಹಗಳಿಗೆ ಬರೋಬ್ಬರಿ ಮೂರು ಕತ್ತೆಗಳನ್ನು ಕೊಂಡ. ಅವುಗಳನ್ನು ಮನೆಯತ್ತ ಹೊಡೆದುಕೊಂಡು ಹೊರಟ.

ಮನೆ ಹತ್ತಿರ ಬಂದಾಗ ನೋಡಿದರೆ ಎರಡೇ ಕತ್ತೆಗಳಿದ್ದವು! ಒಂದು ಕತ್ತೆ ಗಾಯಬ್! ಅತ್ತಿತ್ತ ನೋಡಿದ. ಆದರೆ ಮೂರನೇ ಕತ್ತೆ ಎಲ್ಲೂ ಕಾಣಲಿಲ್ಲ. ಇನ್ನು ಮನೆಗೆ ಹೋದ ಮೇಲೆ ಹೆಂಡತಿ ಕೈಯಲ್ಲಿ ಬರೋಬ್ಬರಿ ಮಂಗಳಾರತಿ, ಪೂಜೆ ಎಲ್ಲ ಇದೆ ಎಂದು ತಿಳಿದು, ಮುಂದಾಗಲಿರುವ ಅನಾಹುತವನ್ನು ಎದುರಿಸಲು ತಯಾರಾದ.

ಮನೆಗೆ ಹೋದವನೇ, ಹೆಂಡತಿ ಏನು ಎತ್ತ ಎಂದು ಕೇಳುವ ಮೊದಲೇ ಎಲ್ಲ ಹೇಳಿಕೊಂಡುಬಿಟ್ಟ.

'ನೀನು ಮೂರು ಕತ್ತೆಗಳನ್ನು ಕೊಂಡು ತಾ ಅಂದಿದ್ದೆ. ಅದರ ಪ್ರಕಾರವೇ ಮೂರು ಕತ್ತೆಗಳನ್ನು ಕೊಂಡುಕೊಂಡೆ. ದಾರಿಯಲ್ಲಿ ಬರುವಾಗ ಒಂದು ಕತ್ತೆ ತಪ್ಪಿಸಿಕೊಂಡಿದೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ಪ್ಲೀಸ್ ಕ್ಷಮಿಸು!' ಎಂದವನೇ ಹೆಂಡತಿ ಕಾಲಿಗೆ ಡೈವ್ ಹೊಡೆಯಲು ಪೋಸ್ ರೆಡಿ ಮಾಡಿಕೊಂಡ.

ಹೆಂಡತಿ 'ಥಾಂಬಾ!' ಅಂದರೆ 'ಒಂದು ಕ್ಷಣ ನಿಲ್ಲು' ಅನ್ನುವಂತೆ ಕೈ ಮಾಡಿದಳು.

'ಏನು????' ಎನ್ನುವಂತೆ ನೋಡಿದ.

'ನನಗೆ ನಾಲ್ಕು ಕತ್ತೆಗಳು ಕಾಣುತ್ತಿವೆ!' ಅಂದಳು ಪತ್ನಿ.

'ನಾಲ್ಕೇ?? ಎಲ್ಲಿ?? ಹೇಗೆ??' ಎಂದು ಆಶ್ಚರ್ಯಚಕಿತನಾಗಿ ಕೇಳಿದ ಗಂಡ.

'ಎರಡು ಕತ್ತೆ ನಿನ್ನ ಮುಂದಿವೆ.... ' ಅಂದಳು ಪತ್ನಿ.

'ಸರಿ. ಮತ್ತೆರೆಡು ಎಲ್ಲಿವೆ??' ಎಂದು ಕೇಳಿದ ಪತಿ.

'ಮೂರನೆಯ ಕತ್ತೆಯ ಮೇಲೆ ಕೂತಿರುವ ನಾಲ್ಕನೇ ಕತ್ತೆ ನೀನೇ!' ಎಂದವಳೇ ಸಿಕ್ಕಾಪಟ್ಟೆ irritate ಆಗಿ ಒಂದು ಬಿಟ್ಟಳು.

ಅಂದಿನಿಂದ ಪತಿಯನ್ನು 'ಏ ಜೀ! ಏ ಜೀ!' ಎಂದು ಕರೆಯುವ ಪದ್ಧತಿ ಜಾರಿಯಲ್ಲಿ ಬಂತು.

ಏ ಜೀ = A G ಅಂದರೆ ಅಬೇ ಗಧೆ ಅಂದರೆ ಹೇ ಕತ್ತೆ!

ಮೂಲ: ಕತ್ತೆ ವ್ಯಾಪಾರದ ಕಥೆ ಮುಲ್ಲಾ ನಸ್ರುದ್ದೀನನ ಕಥೆ. ಸ್ವಾಮಿ ಸುಖಬೋಧಾನಂದರ 'Personal Excellence Through Bhagavadgita' ಪುಸ್ತಕದಲ್ಲಿ ಓದಿದ್ದು. A G = ಅಬೇ ಗಧೆ ಜೋಕ್ ಹೇಳಿದವರು ಸ್ವಾಮಿ ಅನುಭವಾನಂದ ಸರಸ್ವತಿ.