Thursday, October 30, 2014

ಇಂದಿರಾ ಗಾಂಧಿ ಹತ್ಯೆ, ಮುಂಬೈ ಟ್ರಿಪ್ಪು, ಮೂವತ್ತು ವರ್ಷಗಳ ಬಳಿಕ ಮತ್ತೆ ನೆನಪು

೩೧ ಅಕ್ಟೋಬರ್ ೧೯೮೪. ಅಂದು ಇಂದಿರಾ ಗಾಂಧಿ ಹತ್ಯೆಯಾಗಿ ಹೋಯಿತು. ಇವತ್ತಿಗೆ (೩೧ ಅಕ್ಟೋಬರ್ ೨೦೧೪) ಬರೋಬ್ಬರಿ ಮೂವತ್ತು ವರ್ಷ. ನಮ್ಮ ತಲೆಮಾರಿನ ಮಂದಿಗೆ, ಅಂದರೆ ೧೯೭೦ ರ ಜಮಾನಾದಲ್ಲಿ ಹುಟ್ಟಿದ ಮಂದಿಗೆ, ಮೂರು ಗಾಂಧಿಗಳ ಸಾವಿನ ಬಗ್ಗೆ ಬರೋಬ್ಬರಿ ನೆನಪಿರುತ್ತದೆ. ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ. 'ಆದಿನ ಎಲ್ಲಿದ್ದೆ? ಏನು ಮಾಡುತ್ತಿದ್ದೆ?' ಅಂತ ಕೇಳಿ ನೋಡಿ. ನೆನಪುಗಳು ಬರೋಬ್ಬರಿ ಬಿಚ್ಚಿಕೊಳ್ಳುತ್ತವೆ. ಅಮೇರಿಕಾದಲ್ಲಿ ೧೯೫೦ ರ ಜಮಾನಾದಲ್ಲಿ ಹುಟ್ಟಿದ ಮಂದಿಗೆ ೧೯೬೩ ರಲ್ಲಿ ಆದ ಜಾನ್ ಕೆನಡಿ ಹತ್ಯೆ, ೧೯೬೮ ರಲ್ಲಿ ಆದ ರಾಬರ್ಟ್ ಕೆನಡಿ ಮತ್ತು ಮಾರ್ಟಿನ್ ಲೂಥರ್ ಕಿಂಗ್ ಹತ್ಯೆಗಳು ಮನಸ್ಸಿನಲ್ಲಿ ಹೇಗೆ ಅಚ್ಚೊತ್ತಿ ನಿಂತಿರುತ್ತವೋ ಹಾಗೇ ನಮಗೆ ಭಾರತೀಯರಿಗೆ ಗಾಂಧಿ ಕುಟುಂಬದ ಸಾವುಗಳು.

ನಾನಂತೂ ಅವತ್ತು ಮುಂಬೈನಲ್ಲಿದ್ದೆ. ಆಗಿನ ಬಾಂಬೆ. ಆಗ ಹನ್ನೆರೆಡು ವರ್ಷ, ಏಳನೇ ಕ್ಲಾಸ್. ಅಕ್ಟೋಬರ್ ರಜೆಯ ಸಮಯ. ಅದಕ್ಕೇ ಅಂತಲೇ ಮುಂಬೈಗೆ ಹೋಗಿದ್ದಾಗಿತ್ತು. ನೆಂಟರ ಮನೆಯಲ್ಲಿ ಒಂದೆರೆಡು ವಾರ ಕಳೆದು ಬರಲು. ನಮ್ಮ ಚಿಕ್ಕಜ್ಜಿ (ಅಮ್ಮನ ಚಿಕ್ಕಮ್ಮ) & ಫ್ಯಾಮಿಲಿ ಆಗ ಅಲ್ಲೇ ಇತ್ತು. ಅವರ ಮನೆಯಲ್ಲೇ ಉಳಿದಿದ್ದು. ಅಣ್ಣ IIT ಮುಂಬೈನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ. ಅದೂ ಒಂದು ಎಕ್ಸಟ್ರಾ ಬೋನಸ್ ಮುಂಬೈಗೆ ಹೋಗಲು. ಬೇರೆ ಯಾರೋ ನೆಂಟರು ಅಲ್ಲಿಗೆ ಹೊರಟಿದ್ದರು. ನಾನೂ ಅವರ ಜೊತೆ ತಗಲಾಕಿಕೊಂಡು ಹೋಗಿದ್ದೆ.

ಮುಂಬೈಗೆ ಹೋಗಿ, ರಜೆ ಎಂಜಾಯ್ ಮಾಡಿ, ಊರು ಸುತ್ತಿ, ವಾಪಸ್ ಬರೋ ಟೈಮ್ ಬಂದಿತ್ತು. ಆವತ್ತು ೩೧ ಅಕ್ಟೋಬರ್ ೧೯೮೪ ರಂದು ಪಾಕಿಸ್ತಾನದಲ್ಲಿ ಇಂಡಿಯಾ ಪಾಕಿಸ್ತಾನ ಒನ್ ಡೇ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು.

ಟೀವಿಯಲ್ಲಿ ಕ್ರಿಕೆಟ್ ನೋಡುವದು ಅಂದರೆ ಆಗೆಲ್ಲ ದೊಡ್ಡ ಮಾತು. ಧಾರವಾಡಕ್ಕೆ ಇನ್ನೂ ಟೀವಿ ಬಂದಿರಲಿಲ್ಲ. ಕೆಲವೇ ತಿಂಗಳ ಹಿಂದೆ ಇಂದಿರಾ ಗಾಂಧಿಯೇ ಮಂಜೂರ್ ಮಾಡಿ ಹೋಗಿದ್ದರು. ಅವರ ಮರಣದ ನಂತರ ಒಂದೋ ಎರಡೋ ತಿಂಗಳಲ್ಲಿ ಬಂತು ಅನ್ನಿ. ದೇಶದ ತುಂಬೆಲ್ಲ low power tv transmitters ಮಂಜೂರು ಮಾಡಿದ್ದರು ಇಂದಿರಾ ಗಾಂಧಿ. ಸಾಯುವ ಮುಂಚೆ ಮಾಡಿದ ಒಂದು ದೊಡ್ಡ ಕೆಲಸ ಅದು. ಮತ್ತೆ ಜನರಲ್ ಎಲೆಕ್ಷನ್ ಬೇರೆ ಬಂದಿತ್ತು. ಅದಕ್ಕೆ ಅನುಕೂಲವಾಗಲಿ ಅಂತ ದೇಶದ ತುಂಬೆಲ್ಲ ಟೀವಿ ಭಾಗ್ಯ.

ಕ್ರಿಕೆಟ್ ಮ್ಯಾಚಿನಲ್ಲಿ ಭಾರತದ ಬ್ಯಾಟಿಂಗ್ ಮುಗಿದಿತ್ತು. ಆಗ ಒಮ್ಮೆಲೇ ಟೀವಿಯಲ್ಲಿ ಕ್ರಿಕೆಟ್ ಮ್ಯಾಚ್ ಪ್ರಸಾರ ನಿಂತು ಹೋಯಿತು. ಇಂದಿರಾ ಗಾಂಧಿ ಮೇಲೆ ದಾಳಿಯಾಯಿತು ಅಂತ ಟೀವಿಯಲ್ಲಿ ಸುದ್ದಿ ಬಂತೇ? ನೆನಪಿಲ್ಲ. ಆದರೆ ಟೀವಿ ಪ್ರಸಾರ ನಿಂತು, ಸೊಳೆ ರಾಗದ, ಹೊಗೆ ಹಾಕಿಸ್ಕೊಂಡವರ ಮನೆಯ ಕೊಂಯ್ ಅನ್ನುವ ಮ್ಯೂಸಿಕ್ ಅಂತೂ ಶುರುವಾಗಿ ಏನೋ ಅಪಶಕುನದ ಸೂಚನೆ ಕೊಡುತ್ತಿತ್ತು. ಕೇವಲ ಟೀವಿ ಪ್ರಸಾರ ಒಂದೇ ಅಲ್ಲ, ಆಕಡೆ ಕ್ರಿಕೆಟ್ ಮ್ಯಾಚ್ ಸಹಿತ ಅರ್ಧಕ್ಕೆ ನಿಂತು ಹೋಗಿತ್ತು ಅಂತ ಆಮೇಲೆ ಗೊತ್ತಾಯಿತು. ಮ್ಯಾಚ್ ಒಂದೇ ಏನು, ಉಳಿದ ಸರಣಿ ಸಹಿತ ಖತಂ ಆಗಿ, ಭಾರತ ಕ್ರಿಕೆಟ್ ತಂಡ ತಾಪಡ್ತೋಪ್ ವಾಪಸ್ ಬಂದುಬಿಟ್ಟಿತು.

ಆಫೀಸಿನಿಂದ ಚಿಕ್ಕಜ್ಜ ಫೋನ್ ಮಾಡಿ ಸುದ್ದಿ ಹೇಳಿದ್ದರು, 'ಇಂದಿರಾ ಗಾಂಧಿಗೆ ಗುಂಡು ಹಾಕಿದರಂತೆ' ಅಂತ. ಅಷ್ಟೇ ಸುದ್ದಿ ಹೊರಬಿಟ್ಟಿತ್ತು ಸರಕಾರ. ನಿಧನರಾಗಿದ್ದಾರೆ ಅಂತ ಅಧಿಕೃತ ಸುದ್ದಿ ಬಂದದ್ದು ಬಹಳ ತಡವಾಗಿ. ರಾತ್ರಿ ಯಾವಾಗಲೋ ಡಿಕ್ಲೇರ್ ಆಯಿತು, 'ಇಂದಿರಾ ಗಾಂಧಿ ಇನ್ನಿಲ್ಲ,' ಅಂತ.

ಮಧ್ಯಾನ ಊಟಕ್ಕೆ ಚಿಕ್ಕಜ್ಜ ಮನೆಗೆ ಬಂದಿದ್ದರು. ಇಂದಿರಾ ಗಾಂಧಿ ಮೇಲೆ ಆದ ದಾಳಿ ಆಹೊತ್ತಿನ ಬ್ರೇಕಿಂಗ್ ನ್ಯೂಸ್. ಈಗಿನ ಹಾಗೆ ಬ್ರೇಕಿಂಗ್ ನ್ಯೂಸ್ ಕೊಡುವ ಮಂದಿ, ಸಾವಿರ ಚಾನೆಲ್ ಇರಲಿಲ್ಲ ಅಷ್ಟೇ. ರೇಡಿಯೋ ಮೇಲೆ ಸ್ವಲ್ಪ updates ಬರುತ್ತಿತು. ಇಂದಿರಾ ಗಾಂಧಿಯನ್ನು ಸೇರಿಸಿದ್ದ AIIMS ಆಸ್ಪತ್ರೆಯಿಂದ ಮೆಡಿಕಲ್ ಬುಲೆಟಿನ್ ಬರುತ್ತಿತ್ತು. ಅದನ್ನು ಉಪಯೋಗಿಸಿ AIR ಸುದ್ದಿ ಕೊಡುತ್ತಿತ್ತು ಅಂತ ನೆನಪು.

ಊಟ ಮುಗಿಸಿದ ಚಿಕ್ಕಜ್ಜ ವಾಪಸ್ ಹೊರಟರು ಆಫೀಸಿಗೆ. ಹೋಗುವಾಗ ಸುದ್ದಿ ಕೇಳಲಿಕ್ಕೆ ಇರಲಿ ಅಂತ ಪಾಕೆಟ್ ಟ್ರಾನ್ಸಿಸ್ಟರ್ ತೆಗೆದುಕೊಂಡು, ಸ್ವಿಚ್ ಆನ್ ಮಾಡಿ ನೋಡಿದರೆ ಅದರಲ್ಲಿನ ಬ್ಯಾಟರಿ ಸೆಲ್ಲು ಸತ್ತು ಹೋಗಿತ್ತು. ಬ್ಯಾಟರಿ ಪವರ್ ನಾಸ್ತಿ. ಇಲ್ಲೆ. 'ಬ್ಯಾಟರಿ ಸೆಲ್ಲಿಗೆ ಏನು ಮಾಡೋಣ?' ಅಂತ ಅವರು ವಿಚಾರ ಮಾಡುತ್ತಿದ್ದಾಗ ನಾನು ನನ್ನ 'ಭಯಂಕರ ತಲೆ' ಓಡಿಸಿ, ನನ್ನ ಹತ್ತಿರ ಇದ್ದ ಪಾಕೆಟ್ ಪೆನ್ ಟಾರ್ಚ್ ಬ್ಯಾಟರಿಯಿಂದ ಸೆಲ್ ತೆಗೆದು ಕೊಟ್ಟಿದ್ದೆ. ಆ ಪೆನ್ ಟಾರ್ಚ್ ಅಲ್ಲೇ ಮುಂಬೈನಲ್ಲಿ ಖರೀದಿ ಮಾಡಿದ್ದೆ, ಒಂದು ವಾರದ ಹಿಂದೆ. ವಾರಾಂತ್ಯಕ್ಕೆ IIT ಹಾಸ್ಟೆಲ್ ಬಿಟ್ಟು, ಜೊತೆಗಿದ್ದು ಟೈಮ್ ಕಳೆಯಲು ಬಂದಿದ್ದ ಅಣ್ಣನ ಜೊತೆ ಫೋರ್ಟ್ ಏರಿಯಾಕ್ಕೆ ಶಾಪಿಂಗಿಗೆ ಹೋಗಿದ್ದೆ. ಖರೀದಿ ಮಾಡಿದ್ದು ಒಂದು ಮೂರು ನಾಕು ಇಲೆಕ್ಟ್ರಾನಿಕ್ ವಾಚು, ಒಂದು ಟಾರ್ಚ್ ಬ್ಯಾಟರಿ. ಅದೂ ಚೈನಾ ಮೇಡ್, ಸ್ಪೆಷಲ್ ಬೆಳ್ಳಿ ಕೋಟಿಂಗ್ ಇದ್ದ ಪೆನ್ ಟಾರ್ಚ್. ಪೆನ್ನುಗಳಲ್ಲಿ ಚೈನಾ ಹೀರೋ ಪೆನ್ ಹೇಗೆ ಫೇಮಸ್ ಇತ್ತೋ ಹಾಗೇ ಈ ಚೈನಾ ಮೇಡ್ ಟಾರ್ಚ್ ಕೂಡ. ಭಾಳ ಸ್ಲಿಕ್ ಆಗಿ, ಮಸ್ತ ಇತ್ತು. ಹಸಿರು ಬಣ್ಣದ ಪ್ರಕಾಶ. ಅದೇ ಭಯಂಕರ ವಿಶೇಷ. ಅಂತಹ ಟಾರ್ಚ್ ಒಂದರ ಮೇಲೆ ಮೊದಲಿಂದ ಒಂದು ಕಣ್ಣಿತ್ತು. ಆದರೆ ಧಾರವಾಡದಲ್ಲಿ ಎಲ್ಲೂ ಕಣ್ಣಿಗೆ ಬಿದ್ದಿರಲಿಲ್ಲ. ಈಗ ಮುಂಬೈನಲ್ಲಿ ಫುಟ್ ಪಾತ್ ವ್ಯಾಪಾರಿ ಬಳಿ ಕಂಡ ಮೇಲೆ ಮುಗಿಯಿತು. ಖರೀದಿ ಮಾಡಿಸಿ, ಕೊಡಿಸಿಕೊಂಡೇಬಿಟ್ಟೆ. ಆದರೆ ಅದು ಸಿಕ್ಕಾಪಟ್ಟೆ ಸೆಲ್ ತಿನ್ನುತ್ತಿತ್ತು ಅಂತ ನಂತರ ಗೊತ್ತಾಯಿತು. ಏನೋ ಅಂದು ಆ ಟಾರ್ಚಿನಲ್ಲಿದ್ದ ಸೆಲ್ ನಲ್ಲಿ ಇನ್ನೂ ಪವರ್ ಇತ್ತು. ಅವನ್ನೇ ತೆಗೆದು ಅಜ್ಜನ ಟ್ರಾನ್ಸಿಸ್ಟರಿಗೆ ಹಾಕಿ ಕೊಟ್ಟೆ. ಅಜ್ಜ ಫುಲ್ impress ಆಗಿ, ಖುಷ್ ಆಗಿ, ಟ್ರಾನ್ಸಿಸ್ಟರ್ ಹಚ್ಚಿಕೊಂಡು, ಕಿವಿ ಹತ್ತಿರ ಇಟ್ಟುಕೊಂಡು, ಕಾರ್ ಡ್ರೈವ್ ಮಾಡಿಕೊಂಡು ಹೋಗಿಬಿಟ್ಟರು. ಮುಂದೆ ಆ ನನ್ನ ಟಾರ್ಚ್ ಮುರ್ಡೇಶ್ವರದಲ್ಲಿ ಕಣ್ಮರೆಯಾಯಿಯಿತು. ದೇವಸ್ಥಾನದ ಉದ್ಘಾಟನೆಗೆ ಹೋಗಿದ್ದ ತಂದೆಯವರು ಎಲ್ಲೋ misplace ಮಾಡಿಕೊಂಡುಬಿಟ್ಟಿದ್ದರು. ಹೋಗಿದ್ದೇ ಒಳ್ಳೇದಾಯಿತು ಅನ್ನಿ. ಆ ಟಾರ್ಚಿಗೆ ಬ್ಯಾಟರಿ ಸೆಲ್ ಹಾಕುತ್ತ ಹೋಗಿದ್ದರೆ ದಿವಾಳಿ ತೆಗೆಯಬೇಕಾಗುತ್ತಿತ್ತು. ಕಳೆದು ಹೋಗಿ ರೊಕ್ಕ ಉಳಿಯಿತು.

ಇಂದಿರಾ ಗಾಂಧಿ ಹತ್ಯೆಯ ಬಳಿಕ, ಮುಂಬೈನಲ್ಲಿ, ಅದೂ ನಾವಿದ್ದ ತುಂಬ posh ಕೊಲಾಬಾ ಏರಿಯಾದಲ್ಲಿ, ಏನೂ ಗಲಭೆ ಗಿಲಭೆ ಆಗಿರಲಿಲ್ಲ. ದೇಶದ ಬೇರೆ ಕಡೆ ಆದ ಗಲಭೆ ನೋಡಿ ಕೆಲ ಮಂದಿ ತಾವಾಗೇ ಅಂಗಡಿ ಬಂದ್ ಮಾಡಿಕೊಂಡು ಹೋಗಿದ್ದರು. ಮನೆ ಹತ್ತಿರದಲ್ಲೇ ಇದ್ದ ಒಬ್ಬ ಸರ್ದಾರ್ಜೀ ಅಂಗಡಿ ಮಾತ್ರ ಬಂದಾಗಿತ್ತು. ನಾವು ವಾಪಸ್ ಬರೋ ತನಕಾ ಆ ಸರ್ದಾರ್ಜೀ ಅಂಗಡಿ ಬಾಗಿಲು ತೆಗೆದಿರಲಿಲ್ಲ. ಅದು ನೆನಪಿದೆ. ಅದ್ಯಾಕೆ ನೆನಪಿದೆ ಅಂದರೆ ಅವನ ಅಂಗಡಿಗೆ ಒಂದೆರೆಡು ಸಲ ಹೋಗಿದ್ದೆ. ಬ್ಯಾಟರಿ ಟಾರ್ಚಿಗೆ ಬಲ್ಬ್ ತಂದುಕೊಳ್ಳಲು. ನಮ್ಮ ಚೈನಾ ಬ್ಯಾಟರಿಗೆ ಅಲ್ಲ. ಅಲ್ಲೇ ನೆಂಟರ ಮನೆಯಲ್ಲಿದ್ದ ಎಲ್ಲ ಬ್ಯಾಟರಿ ಟಾರ್ಚ್ ತೊಗೊಂಡು, ಪುಕುಳಿ ಕುಟ್ಟಿ, ಬಿಚ್ಚಿ ನೋಡೋ ಅಬ್ಬರದಲ್ಲಿ ಬಲ್ಬ್ ಒಂದೆರೆಡು ಬಾರಿ ಢಂ ಅಂದಿತ್ತು. ನಾವು ಹವ್ಯಕರು ಬ್ಯಾಟರಿ ಟಾರ್ಚ್ ಹೊತ್ತಲಿಲ್ಲ ಅಂದರೆ ಪುಕುಳಿ, ಅಂದರೆ ಬ್ಯಾಟರಿ ಪುಕುಳಿ, ತಟ್ಟಿ ತಟ್ಟಿ ಹೊತ್ತಿಸಲು ನೋಡುತ್ತೇವೆ. ಒಮ್ಮೊಮ್ಮೆ ಬ್ಯಾಟರಿ ಪುಕುಳಿ ತಟ್ಟುವ ಅಬ್ಬರದಲ್ಲಿ ಬಲ್ಬು ಮತ್ತೊಂದು ಮಟಾಶ್ ಆಗಿಹೋಗುತ್ತವೆ. ಏನು ಮಾಡಲಿಕ್ಕೆ ಬರುತ್ತದೆ? collateral damage. ಹೋದವರ ಮನೆ ಸಾಮಾನು ಮುಟ್ಟೋದೇ ತಪ್ಪು. ಅಂತಾದರಲ್ಲಿ ಮುಟ್ಟಿದ್ದೊಂದೇ ಅಲ್ಲದೇ ಹಾಳು ಮಾಡಿದ್ದು ದೊಡ್ಡ ತಪ್ಪು. ಅದನ್ನೇ ಸರಿಪಡಿಸೋಣ ಅಂತ ಇದ್ದ ಬಿದ್ದ ಒಂದೆರೆಡು ರೂಪಾಯಿ ಜೋಡಿಸಿಕೊಂಡು ಸರ್ದಾರ್ಜೀ ಅಂಗಡಿಗೆ ಹೋಗಿ, ಗುಟ್ಟಾಗಿ ಬಲ್ಬ್ ತಂದು, ಅದು ನೆಂಟರ ಮನೆ ಬ್ಯಾಟರಿಗೆ ಸರಿ ಹೊಂದದೇ, ಮತ್ತೆ ಅದನ್ನು ಹಿಂದೆ ಕೊಡಲು ಹೋದಾಗ ಸರ್ದಾರ್ಜೀ ಕೆಟ್ಟ ಮುಖ ಮಾಡಿ, ಅವನಿಗೆ ಹರಕು ಮುರುಕು ಹಿಂದಿಯಲ್ಲಿ ಏನೋ ಹೇಳಿ, ಅವ 'ಇದೇ ಕೊನೆ. ಮುಂದೆ ಬದಲು ಮಾಡಿ ಕೊಡಲ್ಲ,' ಅನ್ನುವ ರೀತಿಯಲ್ಲಿ ರೋಪ್ ಹಾಕಿ, ಬೇರೆ ಬಲ್ಬ್ ಕೊಟ್ಟು ಕಳಿಸಿದ್ದ. ಪುಣ್ಯಕ್ಕೆ ಅದು ಬರೋಬ್ಬರಿ ಫಿಟ್ ಆಗಿ, ನೆಂಟರ ಮನೆ ಬ್ಯಾಟರಿ ಮೊದಲಿನ ಸ್ಥಿತಿಗೆ ಬಂದಿತ್ತು. ಅಬ್ಬಾ! ಆತಂಕ ದೂರವಾಗಿತ್ತು. 'ಮಾಣಿ ಬಂದು ಬ್ಯಾಟರಿ ಹಾಳುಗರಿದು ಹೋದ,' ಅನ್ನುವ ಅಪಖ್ಯಾತಿ ತಪ್ಪಿತ್ತು. ಆವಾಗ ನಮಗೆ ಬ್ಯಾಟರಿ ಮಳ್ಳು ಅಂತ ಕಾಣುತ್ತದೆ. ಅದಕ್ಕೇ ಕಂಡ ಕಂಡ ಬ್ಯಾಟರಿಯ ಪುಕಳಿ ತಟ್ಟಿ ತಟ್ಟಿ ಬುರುಡೆ ಬಿಚ್ಚುತ್ತಿದ್ದೆ. ಒಳಗಿನ ಮೆಕ್ಯಾನಿಸಮ್ ಅರಿಯಲು. ಬೇರೆ ಬೇರೆ ವಯಸ್ಸಿಗೆ ನಮಗೆ ಬೇರೆ ಬೇರೆ ಮಳ್ಳುಗಳಿದ್ದಿದ್ದು ಬೇರೆ ಮಾತು ಬಿಡಿ. ಈಗ ಓದೋದು, ಬರೆಯೋದು ಬಿಟ್ಟರೆ ಬೇರೆ ಯಾವದೂ ಮಳ್ಳು ಇದ್ದ ಹಾಗಿಲ್ಲ. ಇದೆಲ್ಲ ಕಾರಣಗಳಿಂದ ಅಂಗಡಿ ಮುಚ್ಚಿಕೊಂಡು ಹೋಗಿದ್ದ ಬ್ಯಾಟರಿ ಬಲ್ಬಿನ ಸರ್ದಾರ್ಜೀ ಇನ್ನೂ ನೆನಪಿನಿಂದ ಮಾಸಿಲ್ಲ.

ಇಂದಿರಾ ಗಾಂಧಿ ಹತ್ಯೆ ಬಿಟ್ಟರೆ ಇನ್ನೂ ಹಲವು ವಿಶೇಷಗಳಿದ್ದವು ಆ ಮುಂಬೈ ಪ್ರವಾಸಕ್ಕೆ. ನಾವಿದ್ದ ಮನೆಯ ಮುಂದೇ ಸಮುದ್ರ. ನೋಡಲು ಮಾತ್ರ. ಹೋಗಲಿಕ್ಕೆ ದಾರಿ ಇರಲಿಲ್ಲ. ಎಲ್ಲ ನೌಕಾದಳದವರ ನಿಗರಾಣಿಯಲ್ಲಿತ್ತು. ಮನೆ ಮುಂದೇ 'ಸಾಗರ್ ಸಂಗೀತ್' ಎಂಬ ಸುಮಾರು ಮೂವತ್ತು ಮಹಡಿಗಳ ಗಗನಚುಂಬಿ ಕಟ್ಟಡವಿತ್ತು. ಅದರ ಟಾಪ್ ಫ್ಲೋರಿನಲ್ಲಿ ಆಕಾಲದ ಖ್ಯಾತ ಹಿಂದಿ ಸಿನೆಮಾ ತಾರೆ ನೂತನ್ ಇರುತ್ತಿದ್ದಳು.

ನೂತನ್

ನೂತನ್ ಅಂತ ಹೇಳಿದರೆ 'ನೀತೂ ಸಿಂಗಾ!?' ಅಂತ ಕೇಳಿ ನಾವು ಮಳ್ಳಾಗಿದ್ದೆವು. ಆ ವಯಸ್ಸಿನಲ್ಲಿ ನೂತನ್ ಯಾರೋ ನೀತೂ ಸಿಂಗ್ ಯಾರೋ? ಎಲ್ಲ ಒಂದೇ. ಅಂತೂ ಒಂದು ದಿವಸ ಸಂಜೆ ಹೊರಗೆ ಹೋಗಿ, ಆ ಗಗನಚುಂಬಿ ಕಟ್ಟಡದ ಲಿಫ್ಟ್ ಸುತ್ತ ಮುತ್ತ ಕಾಯುತ್ತ ನಿಂತು, ಹೊರಗಿಂದ ಬಂದು ಲಿಫ್ಟ್ ಸೇರಿಕೊಂಡ ನೂತನ್ ಎಂಬ ತಾರೆಯನ್ನು ನೋಡಿ ಬಂದಾಯಿತು. 'ಅವಳೇ ನೋಡಿ ನೂತನ್,' ಅಂತ ಯಾರೋ ತೋರಿಸಿದರು. ನಾವು ಒಟ್ಟು ಆಕಡೆ ನೋಡಿ, ನೂತನ್ ನೋಡಿದ್ದೂ ಆಯಿತು, ಡನ್ ಅಂತ ಒಂದು ಚೆಕ್ ಮಾರ್ಕ್ ಹಾಕಿದೆವು ಅನ್ನಿ.

ನೂತನ್ ಮಗ ಮೋಹನೀಶ್ ಬಹ್ಲ್ ತನ್ನ ಆಕಾಲದ ಗರ್ಲ್ ಫ್ರೆಂಡ್ ಕಿಮಿ ಕಾಟ್ಕರ್ ಜೊತೆ

ಆಕೆಯ ಮಗ ಮೋಹನೀಶ್ ಬೆಹಲ್ ಆಗ ಇನ್ನೂ ಇಪ್ಪತ್ತು ವರ್ಷದ ಪಡ್ಡೆ ಹುಡುಗ. ಆ ಕಾಲದ ಫೇಮಸ್ ಮಾಡೆಲ್ ಕಿಮಿ ಕಾಟ್ಕರ್ ಅವನ ಆವತ್ತಿನ ಗರ್ಲ್ ಫ್ರೆಂಡ್. ಅಂತೆಲ್ಲ ಹಿರಿಯರು ಹೇಳುತ್ತಿದ್ದರು. ಇಂಪೋರ್ಟೆಡ್ ಕಾರ್ ಒಂದನ್ನು ಸುಂಯ್ಯ ಅಂತ ಫಾಸ್ಟಾಗಿ ಓಡಿಸಿಕೊಂಡು ಹೋಗಿ ಬಂದು ಮಾಡುತ್ತಿದ್ದ ನೂತನಳ ಮಗ ಮೋಹನೀಶ್. ಪಕ್ಕದಲ್ಲಿ ಯಾವದೋ ಒಂದು ಪಟಾಕಾ ಹುಡುಗಿ ಕೂತಿರುತ್ತಿತ್ತು. ಅವಳು ಕಿಮಿ ಕಾಟ್ಕರ್ ಅಂತೆ. ಅಜ್ಜನ ಮನೆ ದೊಡ್ಡ ಬಾಲ್ಕನಿಯಿಂದ ಎಲ್ಲ ನೋಡಿದ್ದು ನೆನಪಿದೆ. ೧೯೮೬ ರಲ್ಲಿ ಮುಂದೆ ಎರಡು ವರ್ಷಗಳ ಬಳಿಕ 'ಟಾರ್ಜನ್' ಎಂಬ ಹಿಂದಿ ಸಿನೆಮಾದಲ್ಲಿ ಕಿಮಿ ಕಾಟ್ಕರಳ 'ವಿಶ್ವರೂಪ' ದರ್ಶನವಾಗಿ ಜನ್ಮ ಪಾವನವಾಯಿತು. 'ಕಾಡಿನ ರಾಜ' ಕನ್ನಡ ಸಿನೆಮಾದಲ್ಲಿ ಮಲಯಾಳಿ ಕುಟ್ಟಿ ದೀಪಾ, 'ಟಾರ್ಜನ್' ಹಿಂದಿ ಸಿನೆಮಾದಲ್ಲಿ ಕಿಮಿ ಕಾಟ್ಕರ್ ನೋಡದಿದ್ದರೆ ಈ ಜೀವನವೇ ವ್ಯರ್ಥ. ಈ ಮೊದಲು ನೋಡಿಲ್ಲ ಅಂದರೆ ಏನೂ ಚಿಂತೆ ಮಾಡದಿರಿ. ಅವೆಲ್ಲ ಈಗ ಯೂಟ್ಯೂಬ್ ಮೇಲೆ ಲಭ್ಯ. ಈಗ ನೋಡಿ ಕಣ್ಣು ತಂಪು ಮಾಡಿಕೊಳ್ಳಿ. ಅಷ್ಟೇ ಹೆಂಡತಿ ಮಕ್ಕಳ ಮುಂದೆ ನೋಡಿ, ಸಿಕ್ಕಿ ಬಿದ್ದು, ನಿಮ್ಮದು ನಾಯಿಪಾಡಾದರೆ ಅದಕ್ಕೆ ನಾವು ಜವಾಬ್ದಾರರಲ್ಲ.

ಮುಂಬೈಗೆ ಉಳಿಯಲು, ನೋಡಲು ಅಂತ ಹೋಗಿದ್ದು ಅದೇ ಕೊನೆ. ೧೯೭೬, ೧೯೮೪ ಎರಡೇ ಎರಡು ಸಲ ಮುಂಬೈನಲ್ಲಿ ಇದ್ದು ಬಂದಿದ್ದು. ಉಳಿದೆಲ್ಲ ಟೈಮ್ ನಲ್ಲಿ ಕೇವಲ ಟ್ರಾನ್ಸಿಟ್ ಅಥವಾ ಹೆಚ್ಚೆಂದರೆ ಒಂದೆರೆಡು ದಿವಸದ ಆಫೀಸ್ ಕೆಲಸ ಅಷ್ಟೇ.

ಇವತ್ತು ಇಂದಿರಾ ಗಾಂಧಿ ಮೂವತ್ತನೇ ಪುಣ್ಯ ತಿಥಿ. ಇದೆಲ್ಲ ಯಾಕೋ ನೆನಪಾಯಿತು.

ಇಂದಿರಾ ಗಾಂಧಿಯ ಹತ್ಯೆಯ ದಿನ ನೀವೆಲ್ಲಿದ್ದಿರಿ? ಏನು ಮಾಡುತ್ತಿದ್ದಿರಿ? ಪ್ಲೀಸ್ ಹೇಳಿ :)

ಮುಂದಿನ ಬ್ಲಾಗ್ ಪೋಸ್ಟಿನಲ್ಲಿ ಇಂದಿರಾ ಗಾಂಧಿ ಹತ್ಯೆಯ ಹಿಂದೆ ಇರಬಹುದಾದ ಒಂದು ಸಂಭವನೀಯ ಅಂತರಾಷ್ಟ್ರೀಯ ಷಡ್ಯಂತ್ರದ ಭಯಂಕರ ರೋಚಕ ವಿವರಗಳ ಬಗ್ಗೆ ಬರೆಯಲಿದ್ದೇನೆ. ನಿರೀಕ್ಷಿಸಿ.
-- ಇಲ್ಲಿದೆ ನೋಡಿ. (http://maheshuh.blogspot.com/2014/11/blog-post.html)


Monday, October 27, 2014

ಪ್ರಯಾಣದಲ್ಲಿ ಪವಾಡಗಳೊಂದಿಗೆ ಶುರುವಾಗುವ 'ಶ್ರೀ ಏಕನಾಥ ಈಶ್ವರನ್' ಎಂಬ ಶ್ರೇಷ್ಠ ದಾರ್ಶನಿಕರ ಜೀವನ ಚರಿತ್ರೆ

೧೯೫೯ ರ ಸಮಯ. ಆವಾಗೆಲ್ಲ ಭಾರತದಿಂದ ಅಮೇರಿಕಾಗೆ ಹೋಗಿ ಬಂದು ಮಾಡುವದೆಲ್ಲ ಹೆಚ್ಚಾಗಿ ಹಡಗಿನಲ್ಲಿಯೇ. ಹಾಗೇ ಹೊರಟವರು ಒಬ್ಬರು ಯೂನಿವರ್ಸಿಟಿ ಪ್ರೊಫೆಸರರು. ಅವರಿಗೆ ಪ್ರತಿಷ್ಠಿತ ಫುಲ್ ಬ್ರೈಟ್ ಸ್ಕಾಲರ್ಷಿಪ್ ಸಿಕ್ಕಿತ್ತು. ಅದರ ಸಲುವಾಗಿ ಅಮೇರಿಕಾಗೆ ಹೊರಟಿದ್ದರು.

ಮುಂಬೈ ಬಿಟ್ಟಿದ್ದೇ ಬಿಟ್ಟಿದ್ದು, ಅರಬ್ಬೀ ಸಮುದ್ರದಲ್ಲಿ ಸಿಕ್ಕಾಪಟ್ಟೆ ಚಂಡಮಾರುತ. ಎಲ್ಲರ ಚಂಡೆ ಬಾರಿಸಿ ಹೋಯಿತು. ಹಡಗು ಸಿಕ್ಕಾಪಟ್ಟೆ ಹೊಯ್ದಾಡುತ್ತಿತ್ತು. ದೊಡ್ಡ ಹಡಗಾಗಿದ್ದರಿಂದ ಮುಳುಗುವ ಅಪಾಯವಿರಲಿಲ್ಲ. ಆದರೆ ಪ್ರಯಾಣಿಕರು ಮಾತ್ರ ತತ್ತರಿಸಿಹೋದರು. ಎಲ್ಲ ಸರಿಯಾಗಿದ್ದರೂ, ಹಡಗಿನ ಸಾಮಾನ್ಯ ಹೊಯ್ದಾಟದಿಂದಲೇ ಜನರಿಗೆ sea sickness ಆಗಿ, ತುಂಬ ತೊಂದರೆಯಾಗುತ್ತದೆ. ಇನ್ನು ಈ ರೀತಿಯಾದ ಚಂಡಮಾರುತ ಎದ್ದರೆ ಕೇಳಬೇಕೇ? ಒಬ್ಬರ ಹೊಟ್ಟೆಯಲ್ಲಿ ಒಂದು ಅಗುಳು ಊಟ ನಿಲ್ಲಲಿಲ್ಲ. ಅಡುಗೆ ಮಾಡಬೇಕಾದವರೇ ಹೊಟ್ಟೆ ಹಿಡಿದುಕೊಂಡು, ವಾಂತಿ ಮಾಡುತ್ತ, ಹಡಗಿನ ರೈಲಿಂಗ್ ಮೇಲೆ ವಾಲಿಕೊಂಡು ನಿಂತಿದ್ದರು.

ಹೀಗಿದ್ದಾಗ ಒಂದು ದಿವಸ ಮುಂಜಾನೆ ನಮ್ಮ ಪ್ರೊಫೆಸರ್ ಸಾಹೇಬರು ಎಂದಿನಂತೆ ಬೆಳಗಿನ ಉಪಹಾರಕ್ಕೆ ಬಂದು ಕೂತರು. ಹಡಗಿನ ಅಡಿಗೆ ಭಟ್ಟ ವಿಚಿತ್ರವಾಗಿ ನೋಡಿದ. ಇತರೆ ಪ್ರಯಾಣಿಕರೆಲ್ಲರ ಹೊಟ್ಟೆ ಅದ್ಯಾವ ರೀತಿಯಲ್ಲಿ ತೊಳೆಸಿ, ಸಿಕ್ಕಾಪಟ್ಟೆ sea sickness ಆಗಿ, ಏನೂ ತಿನ್ನಲು, ಉಣ್ಣಲು ಆಗದೇ, ಬಲವಂತದಿಂದ ಏನಾದರೂ ಹೊಟ್ಟೆಗೆ ಹಾಕಿಕೊಂಡರೆ ಒಂದು ಅಗುಳೂ ನಿಲ್ಲದೆ, ಎಲ್ಲರೂ, 'ತಿಂಡಿ ಬೇಡ. ಊಟ ಬೇಡ. ಕೇವಲ ನೀರು, ಎಳನೀರು, ಸೂಪು ಅದು ಇದು ಕೊಡಿ,' ಅಂತ ಬೊಬ್ಬೆ ಹೊಡೆಯುತ್ತಿದ್ದರೆ, ಈ ಮಹಾನುಭಾವ ಪ್ರೊಫೆಸರ್ ಮಾತ್ರ ಬೆಳಿಗ್ಗೆ ಬರೋಬ್ಬರಿ ಏಳು ಘಂಟೆಗೆ ಹಡಗಿನ ಉಪಾಹಾರ ಗೃಹಕ್ಕೆ ಬಂದು, 'ಎಲ್ರೀ ಬ್ರೇಕ್ ಫಾಸ್ಟ್? ತುಂಬ ಹಸಿವೆಯಾಗಿದೆ. ಬೇಗ ಕೊಡ್ರೀ,' ಅನ್ನೋ ರೀತಿ ಕೂತು ಬಿಟ್ಟಿದ್ದಾನೆ. ಇವನಿಗೇನು sea sickness ಅಂತ ಏನೂ ಆಗುವದೇ ಇಲ್ಲವೇ? ಯಾವ ತರಹದ ವಿಚಿತ್ರ ಮನುಷ್ಯ ಇವನು? ಅಂತ ಅಚ್ಚರಿಪಟ್ಟುಕೊಂಡು, ಸರಿಯಾದ ಬ್ರೇಕ್ ಫಾಸ್ಟ್ ತಯಾರು ಮಾಡಿ, ತಿನ್ನಿಸಿ ಕಳಿಸಿದ ಹಡಗಿನ ಅಡುಗೆ ಭಟ್ಟ.

ಹೋಗೋಕಿಂತ ಮೊದಲು ಪ್ರೊಫೆಸರ್ ಸಾಹೇಬರನ್ನು ಒಂದು ಮಾತು ಕೇಳಬೇಕು ಅನ್ನಿಸಿತು ಅಡುಗೆಯವನಿಗೆ. 'ಸಾರ್, ಒಂದು ಪ್ರಶ್ನೆ. ಅದ್ಯಾವ ತರಹದ medication ತೆಗೆದುಕೊಳ್ಳುತ್ತೀರಿ? ನಿಮಗೆ sea sickness ಏನೂ ಆದ ಹಾಗೆ ಕಾಣುವದೇ ಇಲ್ಲವಲ್ಲ. ಏನು ನಿಮ್ಮ ರಹಸ್ಯ?' ಅಂತ ಕೇಳಿಬಿಟ್ಟ. ಪ್ರೊಫೆಸರ್ ಸಾಹೇಬರು ನಕ್ಕು ಹೇಳಿದರು, 'medication ಅಲ್ಲಯ್ಯ meditation. ಎಲ್ಲ ಧ್ಯಾನದ ಪ್ರಭಾವ,' ಅಂತ ಹೇಳಿ, ಕಣ್ಣು ಹೊಡೆದು ಹೋಗಿಬಿಟ್ಟರು. ಆ ಪ್ರೊಫೆಸರರು ಹಡಗಿನಲ್ಲಿದ್ದಾಗಲೂ ತಮ್ಮ ಮುಂಜಾನೆಯ ಧ್ಯಾನ, ಯೋಗ ಇತ್ಯಾದಿಗಳನ್ನು ಮಾತ್ರ ಬಿಡುತ್ತಿದ್ದಿಲ್ಲ. ತಮ್ಮ ಕ್ಯಾಬಿನ್ ನಲ್ಲಿ ಸ್ವಲ್ಪ ಗದ್ದಲ, ಸ್ಥಳದ ಅಭಾವ ಅಂತ ಹೇಳಿ ಬೆಳಿಗ್ಗೆ ಐದು ಘಂಟೆಗೆ ಎದ್ದು, ಖಾಲಿಯಿರುತ್ತಿದ್ದ, ಪೂರ್ತಿ ಶಾಂತವಿರುತ್ತಿದ್ದ ಹಡಗಿನ ಡೆಕ್ಕಿನ ಮೇಲೆ, ಒಂದು ಮೂಲೆಯಲ್ಲಿದ್ದ ಟೆನಿಸ್ ಕೋರ್ಟಿನಲ್ಲಿ ತಮ್ಮ ಬೆಳಗಿನ ಕೋಟಾ ಆದ ಎರಡು ಘಂಟೆ ಧ್ಯಾನ, ಯೋಗ ಎಲ್ಲ ಮುಗಿಸಿಕೊಂಡು ಬಂದು ಬಿಡುತ್ತಿದ್ದರು. ಅದೇ ಅವರನ್ನು sea sickness ನಿಂದ ಬಚಾವ್ ಮಾಡಿತ್ತು. ಹಾಗಂತ ಅವರ ಅಚಲ ನಂಬಿಕೆ. ಅದನ್ನೇ ಹಡಗಿನ ಅಡುಗೆ ಭಟ್ಟನಿಗೆ ಹೇಳಿ ಹೊರಟಿದ್ದರು. ಯಾವ medication ಅಂತ ಕೇಳಿದರೆ meditation ಅನ್ನುವ ಪ್ರೊಫೆಸರರನ್ನು,'ಇದು ಯಾರೋ ತಲೆ ಪಿರ್ಕಿ ಗಿರಾಕಿ,' ಅನ್ನುವಂತೆ ನೋಡಿ ಕಳಿಸಿರಬೇಕು ಬಿಡಿ ಆ ಅಡುಗೆ ಭಟ್ಟ.

ಮುಂದೆ ಹಡಗು ಯುರೋಪ್ ತಲುಪಿತು. ಅಲ್ಲಿಂದ ಮತ್ತೆ ಬೇರೆ ಹಡಗಿನಲ್ಲಿ ಪಯಣ. ಮುಂದಿನ ಪ್ರಯಾಣ ಬೇರೆ ಯಾವದೋ ಒಂದು ಬಂದರಿನಿಂದ. ಹೋಗಿ ಮುಟ್ಟಿದ ಬಂದರು ನಗರದಿಂದ ಟ್ರೈನ್ ನಲ್ಲಿ ಎಲ್ಲ ಪ್ರಯಾಣಿಕರನ್ನು ಬೇರೆ ನಗರಕ್ಕೆ ಕಳುಹಿಸಲಾಯಿತು. ಜೊತೆಗೆ ಅವರ ಸಾಮಾನುಗಳನ್ನೂ ಸಹ. ಪ್ರತಿ ಪ್ರಯಾಣಿಕರ ಸಾಮಾನುಗಳನ್ನು ಒಂದೊಂದು ಟ್ರಂಕ್ ತರಹದ ದೊಡ್ಡ ಪೆಟ್ಟಿಗೆಗಳಲ್ಲಿ ಹಾಕಿ, ಸಾಮಾನು ಸಾಗಾಣಿಕೆ ರೈಲ್ವೆ ಬೋಗಿಗಳಲ್ಲಿ ಹಾಕಿ ಕಳಿಸಲಾಯಿತು. ಟ್ರೈನ್ ನಿಂದ ಸೀದಾ ಹಡಗಿಗೆ ಸಾಮಾನು ರವಾನೆ. ಪ್ರಯಾಣಿಕರು ಮಾತ್ರ ರೈಲಿನಿಂದ ಇಳಿದು, ತಮ್ಮ ಪಾಸ್ಪೋರ್ಟ್, ವೀಸಾ ಇತ್ಯಾದಿ ತೋರಿಸಿ ಹಡಗು ಹತ್ತಿದರೆ, ಮುಂದೆ ಇಳಿಯುವದು ಸೀದಾ ನ್ಯೂಯಾರ್ಕ್ ನಗರದ ಬಂದರಿನಲ್ಲಿ. ಅದಕ್ಕೇ  ಅಂತಲೇ ಹೇಳಿದ್ದರು, 'ನಿಮ್ಮ ಪಾಸ್ಪೋರ್ಟ್, ವೀಸಾ ಇತ್ಯಾದಿಗಳನ್ನು ನಿಮ್ಮ ಜೊತೆಯೇ ಇಟ್ಟುಕೊಂಡಿರಿ. ಬಾಕಿ ಎಲ್ಲ ಸಾಮಾನುಗಳನ್ನು ಪೆಟ್ಟಿಗೆಯೊಳಗೆ ಹಾಕಬಹದು. ಆದರೆ ಅವುಗಳಲ್ಲಿ ಹಾಕಿದ ಯಾವದಾದರೂ ಸಾಮಾನು ನಂತರ ಬೇಕು ಅಂದರೆ ಸಿಗುವದಿಲ್ಲ. ಎಚ್ಚರಿಕೆ!' ಅಂತ.

ಹೇಳಿ ಕೇಳಿ absent minded ಪ್ರೊಫೆಸರ್ ಸಾಹೇಬರು. ಮೇಲಿಂದ ಮೊದಲನೇ ಸಲ ವಿದೇಶ ಪ್ರಯಾಣ. ಯಾವದೋ ಪೊರಪಾಟಿನಲ್ಲಿ ತಮ್ಮ ಎಲ್ಲ ಸಾಮಾನು including ಪಾಸ್ಪೋರ್ಟ್, ವೀಸಾ ಎಲ್ಲವನ್ನೂ ದೊಡ್ಡ ಸರಕು ಸಾಗಾಣಿಕೆ ಟ್ರಂಕ್ ತರಹದ ಬಾಕ್ಸಿನಲ್ಲಿ ಹಾಕಿ ರೈಲು ಹತ್ತಿಬಿಟ್ಟಿದ್ದರು. ಶಿವನೇ ಶಂಭುಲಿಂಗ!

ಪ್ರಯಾಣದ ನಂತರ ಬೇರೆ ಶಹರ ಬಂತು. ಅಲ್ಲಿಂದಲೇ ಅಮೇರಿಕಾಗೆ ಹೋಗುವ ಹಡಗು ಹತ್ತಬೇಕು. ಅದಕ್ಕಿಂತ ಮೊದಲು ಪಾಸ್ಪೋರ್ಟ್, ವೀಸಾ ಎಲ್ಲ ಪರಿಶೀಲನೆ ಆಗಬೇಕು. ಅದರ ಪ್ರಕಾರ ಅಲ್ಲಿಯ ವಲಸೆ ಅಧಿಕಾರಿ ಬಂದು, ನಮ್ಮ ಪ್ರೊಫೆಸರ್ ಅವರ ಹತ್ತಿರ, 'ಪಾಸ್ಪೋರ್ಟ್, ವೀಸಾ ಕೊಡಿ' ಅಂದ. ಆವಾಗಲೇ ಅವರಿಗೆ ಅರ್ಥವಾಗಿದ್ದು, 'ಓಹೋ! ಈಗ ವೀಸಾ, ಪಾಸ್ಪೋರ್ಟ್ ಎಲ್ಲ ತೋರಿಸಬೇಕು. ಆದರೆ ನನ್ನ ಪಾಸ್ಪೋರ್ಟ್, ವೀಸಾ ಎಲ್ಲ ಸರಕು ಸಾಗಾಣಿಕೆ ಬಾಕ್ಸಿನಲ್ಲಿ ಹೋಗಿಬಿಟ್ಟಿವೆ,' ಅಂತ. ಅದನ್ನೇ ಆ ಅಧಿಕಾರಿಗೆ ಹೇಳಿಕೊಂಡರು. ಅವನೇನು ಮಾಡಿಯಾನು? 'ನೋಡಿ ಸರ್! ಒಂದೇ ತರಹದ ಸಾವಿರಾರು ಬಾಕ್ಸುಗಳಿವೆ. ಮತ್ತೆ ಇಲ್ಲಿ ಅವನ್ನೆಲ್ಲವನ್ನೂ ತೆಗೆದು, ನಿಮ್ಮ ಬಾಕ್ಸ್ ಯಾವದು ಅಂತ ಹುಡುಕಿಕೊಡುವ ಯಾವದೇ ವ್ಯವಸ್ಥೆ ಇಲ್ಲ. ಅದಕ್ಕೇ ಪ್ರಯಾಣಿಕರಿಗೆ ಸೂಚನೆ ಕೊಟ್ಟಿದ್ದೆವು. ನಿಮಗೆ ಅವಶ್ಯವಾದ ವಸ್ತುಗಳನ್ನು ಸರಕಿನ ಬಾಕ್ಸಿನಲ್ಲಿ ಹಾಕದೇ ಜೊತೆಗೇ ಇಟ್ಟುಕೊಳ್ಳಿ ಅಂತ. ನೀವು ಹಾಗೆ ಮಾಡದೇ ಈಗ ಪಾಸ್ಪೋರ್ಟ್, ವೀಸಾ ಜೊತೆಗೆ ಇಲ್ಲ ಅನ್ನುತ್ತೀದ್ದೀರಿ. ಏನೂ ಮಾಡಲು ಸಾಧ್ಯವಿಲ್ಲ. ನೀವು ಮುಂದಿನ ಹಡಗಿಗೆ ಕಾಯಬೇಕಾಗುತ್ತದೆ ಅಥವಾ ವಾಪಸ್ ಇಂಡಿಯಾಕ್ಕೆ ಹೋಗಬೇಕಾಗುತ್ತದೆ. ಅದರ ವ್ಯವಸ್ಥೆ ಬಗ್ಗೆ ಯೋಚನೆ ಮಾಡಿ,' ಅಂತ ಹೇಳಿದ ಅಧಿಕಾರಿ ಒಂದು ತರಹದ ಸಂತಾಪ ಸೂಚಿಸಿದ.

ಪ್ರೊಫೆಸರ್ ಬಿಟ್ಟು ಬೇರೆ ಯಾರೋ ಆಗಿದ್ದರೆ, 'ನಮ್ಮ ಕರ್ಮ. ಏನು ಮಾಡೋದು? ಮುಂದಿನ ಸಲ ಹೋದರಾಯಿತು,' ಅಂತ ಅಂದುಕೊಂಡು, ಕೈ ಚೆಲ್ಲಿ, ತಲೆ ಹಿಡಿದುಕೊಂಡು, ಮುಂದೆ ಏನಾಗುತ್ತದೆಯೋ ಅದು ಆಗಲಿ ಅನ್ನುವ ತರಹ, ಶಿವಾ! ಅಂತ ಕೂತು ಬಿಡುತ್ತಿದ್ದರೋ ಏನೋ. ಆದರೆ ಇವರು ಮಹಾನ್ ಖತರ್ನಾಕ್ ಪ್ರೊಫೆಸರ್. ಆ ಅಧಿಕಾರಿ ಜೊತೆ ಮಾತುಕತೆ ಶುರು ಹಚ್ಚಿಕೊಂಡರು.

'ಹೌದು. ನನ್ನಿಂದ ತಪ್ಪಾಗಿದೆ. ನೀವು ಕೊಟ್ಟಿದ್ದ ಸೂಚನೆ ಗಮನಿಸಲೇ ಇಲ್ಲ. ಆದರೆ ತಾವು ಈಗ ಒಂದು ಸಹಾಯ ಮಾಡಬಹುದೇ?' ಅಂತ ಒಂದು ಫಿಟ್ಟಿಂಗ್ ಇಟ್ಟರು ಪ್ರೊಫೆಸರ್.

'ಏನು?????' ಅಂದ ಆ ಅಧಿಕಾರಿ.

'ನೋಡಿ. ನನ್ನ ಸಾಮಾನುಗಳೆಲ್ಲ ಆ ಬಾಕ್ಸಿನಲ್ಲಿ ಇವೆ. ಬಾಕ್ಸುಗಳೆಲ್ಲ ಇದೇ ರೈಲು ಗಾಡಿಯಲ್ಲಿ ಬಂದಿವೆ. ನನ್ನ ಬಾಕ್ಸನ್ನು ಹೊರಗೆ ತೆಗೆದು ಕೊಡಿಸಿ ಬಿಟ್ಟರೆ, ನಾನು ನಿಮಗೆ ಚಿರಋಣಿಯಾಗಿರುತ್ತೇನೆ. ಒಂದು ಸಲ ನನ್ನ ಬಾಕ್ಸ್ ಸಿಕ್ಕಿದರೆ ಸಾಕು. ಅದರಲ್ಲಿ ನನ್ನ ಪಾಸ್ಪೋರ್ಟ್, ವಿಸಾ ಎಲ್ಲ ಇದೆ. ನನ್ನ ಬಾಕ್ಸ್ ಸ್ವಲ್ಪ ತೆಗೆಸಿ ಕೊಡ್ತೀರಾ?' ಅಂತ ರಿಕ್ವೆಸ್ಟ್ ಮಾಡಿಕೊಂಡರು ಪ್ರೊಫೆಸರ್.

'ರೀ ಸ್ವಾಮೀ. ಅದೆಲ್ಲ ಆಗೋ ಮಾತಲ್ಲ ಅಂತ ಹೇಳಿದೆ. ಹೇಳಿದ್ದು ತಿಳಿಯೋದಿಲ್ಲವೇ ನಿಮಗೆ? ಯಾವ ಬಾಕ್ಸ್ ನಿಮ್ಮದು ಅಂತ ತೆಗೆಸಿಕೊಡೋಣ? ಎಲ್ಲ ಒಂದೇ ಮಾದರಿಯ ಬಾಕ್ಸಗಳಲ್ಲಿ ಎಲ್ಲರ ಸಾಮಾನು ಹಾಕಲಾಗಿದೆ. ಬಾಕ್ಸ್ ಮೇಲೆ ಹೆಸರು, ವಿಳಾಸ ಎಲ್ಲ ಇದೆ ಬಿಡಿ. ಆದರೆ ಸಾವಿರಾರು ಬಾಕ್ಸುಗಳನ್ನು ಒಂದರಮೇಲೊಂದರಂತೆ ಪೇರಿಸಿ ಇಡಲಾಗಿದೆ. ಹಾಗಿರುವಾಗ ಒಂದೊಂದೇ ಬಾಕ್ಸ್ ತೆಗೆದು, ಅದು ನಿಮ್ಮದು ಹೌದೋ ಅಲ್ಲವೋ ಅಂತ ನೋಡುತ್ತ ಕೂಡಲು ಟೈಮ್ ಇಲ್ಲ. ಮತ್ತೆ ಅದೆಲ್ಲ ಮಾಡಲು ಕೆಲಸಗಾರರಿಲ್ಲ. ಮತ್ತೆ ಅದು ನಮ್ಮ ಪದ್ದತಿಯೂ ಅಲ್ಲ. ನೀವು ಸುಮ್ಮನೆ ವಾಪಸ್ ಇಂಡಿಯಾಕ್ಕೆ ಹೋಗುವದನ್ನೋ ಅಥವಾ ಎಲ್ಲರ ಬಾಕ್ಸ್ ಹಡಗಿಗೆ ಶಿಫ್ಟಾದ ಮೇಲೆ ಇಲ್ಲೇ ಉಳಿವ ನಿಮ್ಮ ಬಾಕ್ಸ್ ಬಿಡಿಸಿಕೊಂಡು, ಮುಂದಿನ ಹಡಗಲ್ಲಿ ಅಮೇರಿಕಾಗೆ ಹೋಗುವ ಬಗ್ಗೆಯೋ ವಿಚಾರ ಮಾಡಿ. ತಿಳೀತಾ?' ಅಂತ ಕರ್ಟ್ ಆಗಿ ಹೇಳಿ ಹೊರಟ.

'ಸರ್, ಒಂದು ನಿಮಿಷ. ಒಂದೇ  ನಿಮಿಷ. ಇನ್ನೊಂದೇ ಮಾತು. ಪ್ಲೀಸ್ ಕೇಳಿ,' ಅಂದರು ಪ್ರೊಫೆಸರ್ ಸಾಹೇಬರು. 'ಇದೇ ಆಖ್ರೀ ರಿಕ್ವೆಸ್ಟ್. ಇದರ ಮೇಲೆ ಮತ್ತೇನೂ ಕೇಳುವದೇ ಇಲ್ಲ,' ಅನ್ನುವ ರೀತಿಯಲ್ಲಿ ಕೇಳಿಕೊಂಡರು.

ಆ ವಲಸೆ ಅಧಿಕಾರಿಗೆ ಏನೋ ಕರುಣೆ ಬಂದಿರಬೇಕು. ಸ್ವಲ್ಪ ಕರಗಿದ. 'ಏನು ಹೇಳಿ?' ಅನ್ನೋ ಲುಕ್ ಕೊಟ್ಟು ನಿಂತ.

'ಆಕಸ್ಮಾತ್ ಇಲ್ಲಿರುವ ಸಾವಿರಾರು ಬಾಕ್ಸುಗಳಲ್ಲಿ ನನ್ನ ಬಾಕ್ಸ್ ಯಾವದು ಅಂತ ನಾನು ಗುರುತಿಸಿ ಹೇಳಬಲ್ಲೆ ಅಂತಾದರೆ ನೀವು ನನ್ನ ಬಾಕ್ಸ್ ಹೊರಗೆ ತೆಗೆಸಿಕೊಡುತ್ತೀರಾ ಸರ್?' ಅಂತ ಒಂದು ಚಾಲೆಂಜ್ ಒಗೆದರು ಪ್ರೊಫೆಸರ್ ಸಾಹೇಬರು.

ಅಧಿಕಾರಿ ಈಗ ಬೆರಗಾದ. ಒಂದೇ ನಮೂನಿಯ ಸಾವಿರಾರು ಬಾಕ್ಸುಗಳಿವೆ. ಅವುಗಳಲ್ಲಿ ತಮ್ಮ ಬಾಕ್ಸ್ ಯಾವದು ಅಂತ ನಿಖರವಾಗಿ ತೋರಿಸುತ್ತೇನೆ ಅನ್ನುತ್ತಿದ್ದಾರೆ ಈ ಆಸಾಮಿ. ಇವರೇನು ಪವಾಡ ಪುರುಷರೇ? ಮತ್ತೆ ಒಂದೇ ಒಂದು ಚಾನ್ಸ್ ಕೇಳುತ್ತಿದ್ದಾರೆ. ಎಲ್ಲ ಬಾಕ್ಸ್ ತೆಗೆಸುವ ತಲೆಬಿಸಿಯಂತೂ ಇಲ್ಲವೇ ಇಲ್ಲ. ಬಾಕ್ಸ್ ರಾಶಿ ಇರುವ ಜಾಗಕ್ಕೆ ಕರೆದುಕೊಂಡು ಹೋದರಾಯಿತು. ಅವರ ಬಾಕ್ಸ್ ಯಾವದು ಅಂತ ತೋರಿಸುತ್ತಾರೆ. ತೋರಿಸಿದ ಒಂದೇ ಬಾಕ್ಸನ್ನು ರಾಶಿಯಿಂದ ತೆಗೆಸಿದರಾಯಿತು. ಅದು ಅವರದ್ದೇ ಆಗಿದ್ದರೆ ಒಳ್ಳೆಯದು. ಇಲ್ಲವೆಂದರೆ ವಾಪಸ್ ಕಳುಹಿಸಿ ಬಿಟ್ಟರಾಯಿತು ಅಂತ ಅಂದುಕೊಂಡ ಆ ಅಧಿಕಾರಿ. ವಲಸೆ ಅಧಿಕಾರಿಯಾದರೇನು? ಒಮ್ಮೊಮ್ಮೆ ಅವರೂ ಮನುಷ್ಯತ್ವದಿಂದ ವರ್ತಿಸುತ್ತಾರೆ ನೋಡಿ.

ಆಯಿತು. ಪ್ರೊಫೆಸರ್ ಸಾಹೇಬರನ್ನು ಕರೆದುಕೊಂಡು ಹೊರಟ. ರೈಲಿನಲ್ಲಿ ಬಂದಿದ್ದ ಎಲ್ಲ ಬಾಕ್ಸುಗಳನ್ನು ಒಂದು ದೊಡ್ಡ ರಾಶಿ ಮಾಡಿ ಪೇರಿಸಿಟ್ಟಿದ್ದರು. ಹಡಗಿಗೆ ಸಾಗಿಸುವ ಪ್ರಕ್ರಿಯೆ ಆರಂಭವಾಗಲಿತ್ತು.

'ನಿಮ್ಮ ಬಾಕ್ಸ್ ಯಾವದು ಅಂತ ತೋರಿಸಿ. ಒಂದೇ ಅವಕಾಶ. ಓನ್ಲಿ ಒನ್ ಚಾನ್ಸ್,' ಅಂದ ಅಧಿಕಾರಿ.

ಹಡಗಿನ ಸಂಸ್ಥೆಯ generic ಬಾಕ್ಸುಗಳು. ಎಲ್ಲ ಒಂದೇ ತರಹ ಇದ್ದವು. ಅದೂ ಸಾವಿರಾರು ಸಂಖ್ಯೆಯಲ್ಲಿ. ಅವುಗಳಲ್ಲಿ ತಮ್ಮದು ಯಾವದು ಅಂತ ಪ್ರೊಫೆಸರ್ ತಮ್ಮ ಬಾಕ್ಸ್ ಕಂಡು ಹಿಡಿದು ಕೊಡಬೇಕು.

ಪ್ರೊಫೆಸರ್ ಕಣ್ಣು ಮುಚ್ಚಿ ಒಂದು ಕ್ಷಣ ಧ್ಯಾನಸ್ಥರಾದರು. ಕಣ್ಣು ತೆರೆದವರೇ, ಪೂರ್ತಿ ವಿಶ್ವಾಸದಿಂದ, ಒಂದು particular ಬಾಕ್ಸ್ ತೋರಿಸಿ, 'ಅದೇ ನನ್ನ ಬಾಕ್ಸ್. ಅದನ್ನು ಪ್ಲೀಸ್ ಕೆಳಗಿಸಿಕೊಡಿ,' ಅಂದು ಮತ್ತೆ ಕಣ್ಣು ಮುಚ್ಚಿದರು. ಅವರನ್ನು ನೋಡಿದರೆ ದೇವರನ್ನು ಪ್ರಾರ್ಥಿಸುತ್ತಿದ್ದಾರೋ ಅನ್ನುವ ಹಾಗಿತ್ತು.

ಅಧಿಕಾರಿ, 'ಇದೆಲ್ಲ ಆಗೋ ಹೋಗೋ ಮಾತೇ?' ಅನ್ನುವ ರೀತಿಯಲ್ಲಿ ತಲೆ ಅಡ್ಡಡ್ಡ ಆಡಿಸುತ್ತ, ಅಲ್ಲಿದ್ದ ಪೋರ್ಟರ್ ಒಬ್ಬನ ಹತ್ತಿರ ಪ್ರೊಫೆಸರ್ ತೋರಿಸಿದ್ದ ಆ ಬಾಕ್ಸನ್ನು ಇಳಿಸಿ, ಈಕಡೆ ತರುವಂತೆ ಹೇಳಿದ. ಅದರಂತೆ ಪೋರ್ಟರ್ ಬಾಕ್ಸ್ ಇಳಿಸಿ, ತಂದು ಕೊಟ್ಟ.

ನೋಡಿದರೆ ಅದು ಪ್ರೊಫೆಸರ್ ಸಾಹೇಬರ ಬಾಕ್ಸೇ ಆಗಿರಬೇಕೇ!! ಒನ್ ಇನ್ ಮಿಲಿಯನ್ ಚಾನ್ಸ್ ಅಂದರೆ ಇದೇ ಇರಬೇಕು!

ಮೇಲಿದ್ದ ಹೆಸರು, ವಿಳಾಸ ಇತ್ಯಾದಿ ನೋಡಿದ ಪ್ರೊಫೆಸರ್ ಸಾಹೇಬರು, 'Yes! ಇದು ನಂದೇ!' ಅಂತ ಉದ್ಗರಿಸಿದರು. ಓಪನ್ ಮಾಡಿ, ಬೇಗ ಬೇಗನೆ ತಮ್ಮ ಪಾಸ್ಪೋರ್ಟ್, ವೀಸಾ ಇತ್ಯಾದಿಗಳನ್ನು ತೆಗೆದುಕೊಳ್ಳತೊಡಗಿದರು.

ವಲಸೆ ಅಧಿಕಾರಿ ಅಚ್ಚರಿಯಿಂದ 'ಹಾಂ!' ಅಂತ ತೆರೆದ ಬಾಯಿ ಮುಚ್ಚಲಿಲ್ಲ. ಪ್ರೊಫೆಸರ್ ಸಾಹೇಬರೇ ಅವನ ಮುಖದ ಮುಂದೆ ಕೈಯಾಡಿಸಿ, 'ಸರ್, ತುಂಬ ಥ್ಯಾಂಕ್ಸ್. ನನ್ನ ಪಾಸ್ಪೋರ್ಟ್, ವೀಸಾ ಎಲ್ಲ ತೆಗೆದುಕೊಂಡೆ ಸರ್. ನೀವು ಈಗ ಬೇಕಾದರೆ ಆ ಬಾಕ್ಸ್ ಬಂದ್  ಮಾಡಿಸಿ, ಹಡಗಿಗೆ ಸಾಗಿಸಬಹುದು. ನನ್ನ ಪಾಸ್ಪೋರ್ಟ್, ವೀಸಾ ಸ್ಟ್ಯಾಂಪ್ ಮಾಡಿಕೊಟ್ಟು ಬಿಟ್ಟರೆ ನಾನೂ ಸಹ ಹೋಗಿ ಹಡಗು ಹತ್ತಿಕೊಳ್ಳುತ್ತೇನೆ. ಮತ್ತೊಮ್ಮೆ ನಿಮಗೆ ಬಹಳ ಬಹಳ ಥ್ಯಾಂಕ್ಸ್!' ಅಂದರು.

ವಲಸೆ ಅಧಿಕಾರಿ ಗರಬಡಿದವನಂತೆ ನಿಂತೇ ಇದ್ದ. 'ಇದ್ದ ಸಾವಿರಾರು, ಒಂದೇ ತರಹದ, ಬಾಕ್ಸುಗಳಲ್ಲಿ ತಮ್ಮ ಬಾಕ್ಸ್ ಯಾವದು ಅಂತ ಅದೆಂಗೆ ಕಂಡು ಹಿಡಿದರು? ಅದೂ ಮೊದಲನೇ ಸಲವೇ ಕರೆಕ್ಟಾಗಿ,' ಅಂತ ಅವನಿಗೆ ತಿಳಿಯಲಿಲ್ಲ. 'ಹೆಂಗ್ರೀ????' ಅಂತ ಪ್ರೊಫೆಸರ್ ಕಡೆ ನೋಡಿದರೆ ಅವರು ತುಂಟ ನಗೆ ನಗುತ್ತ ನಿಂತಿದ್ದರು.

ವಲಸೆ ಅಧಿಕಾರಿ ತನ್ನ ಕೆಲಸ ಮುಗಿಸಿ, ಶುಭ ಪ್ರಯಾಣ ಕೋರಿ, ಪ್ರೊಫೆಸರ್ ಸಾಹೇಬರನ್ನು ಕಳಿಸಿಕೊಟ್ಟ. ಕಳಿಸುವ ಮುಂಚೆ ಕೇಳೇ ಬಿಟ್ಟ. 'ಅದೆಂಗೆ ನಿಮ್ಮ ಬಾಕ್ಸ್ ಅಷ್ಟು ನಿಖರವಾಗಿ ಕಂಡುಹಿಡಿದಿರಿ? ನಿಮಗೇನು ಅತೀಂದ್ರಿಯ ಶಕ್ತಿಗಳಿವೆಯೇ? ಅಷ್ಟೊಂದು ಒಂದೇ ತರಹದ ಬಾಕ್ಸುಗಳಿದ್ದವು. ಹೆಂಗ್ರೀ? ಸ್ವಲ್ಪ ಹೇಳಿ' ಅಂತ ಕೇಳಿದ. 'ಪ್ಲೀಸ್ ಹೇಳಿ ಹೋಗಿ,' ಅನ್ನುವ ಲುಕ್ ಕೊಟ್ಟ.

'ಎಲ್ಲ ಶ್ರೀಕೃಷ್ಣನ ಮಹಿಮೆ. ಅವನದೇ ಕೃಪೆ. ಅವನು ಎಂದೂ ನನ್ನ ಕೈಬಿಟ್ಟಿಲ್ಲ. ಬಿಡುವದೂ ಇಲ್ಲ. ಅಷ್ಟಿದೆ ಅವನ ಮೇಲೆ ನನ್ನ ನಂಬಿಕೆ. ಸರಿ ಈಗ ಬರ್ಲಾ? ಮತ್ತೊಮ್ಮೆ ತುಂಬ ಥ್ಯಾಂಕ್ಸ್' ಅಂತ ಹೇಳಿ ಹಡಗು ಹತ್ತಲು ಹೊರಟೇ ಬಿಟ್ಟರು.

'ಶ್ರೀ....ಕೃಷ್.... ನಾ. ಏನಪ್ಪಾ ಹೇಳ್ತಾನೆ ಈ ಆಸಾಮಿ. ತಲೆ ಬುಡವಿಲ್ಲ. ಆದರೂ ಸಕತ್ ಇದ್ದಾನೆ,' ಅಂದುಕೊಂಡ ವಲಸೆ ಅಧಿಕಾರಿ ಅವರನ್ನು ಅಭಿನಂದಿಸಿ ಕಳುಹಿಸಿಕೊಟ್ಟ.

ಹೀಗೆ ತಮಾಷೆಯಾಗಿ ತಮ್ಮ ಪ್ರಥಮ ವಿದೇಶಪ್ರಯಾಣದ ಬಗ್ಗೆ ಹೇಳಿಕೊಂಡವರು ಶ್ರೀ ಏಕನಾಥ ಈಶ್ವರನ್. ಇಪ್ಪತ್ತನೇ ಶತಮಾನದ ಒಬ್ಬ ಪ್ರಮುಖ ದಾರ್ಶನಿಕರು, ಮಹತ್ವದ philosopher, ಧ್ಯಾನದ (Meditation) ಹಿರಿಯ ಶಿಕ್ಷಕರು, ಅಧ್ಯಾತ್ಮದ ಉನ್ನತ ಚಿಂತಕರು, ಜಗತ್ತಿನ ಎಲ್ಲ ಪ್ರಮುಖ ಧರ್ಮಗ್ರಂಥಗಳ ಮೇಲೆ ಭಾಷ್ಯ ಬರೆದ ಖ್ಯಾತ ಲೇಖಕರು. ಕೇರಳದಲ್ಲಿ ಹುಟ್ಟಿ, ನಾಗಪುರ್ ಯೂನಿವರ್ಸಿಟಿಯಲ್ಲಿ ಇಂಗ್ಲೀಶ್ ಪ್ರೊಫೆಸರ್ ಆಗಿದ್ದವರು. ಐವತ್ತರ ದಶಕದಲ್ಲಿ ಭಾರತದಲ್ಲಿ ಅಂಕಣಕಾರರಾಗಿ, ಭಾಷಣಕಾರರಾಗಿ ಸುಮಾರು ಪ್ರಸಿದ್ಧರಾಗಿದ್ದವರು. ಆದರೆ ಅವರು ದಾರ್ಶನಿಕ, spiritual teacher, philosopher ಅಂತ ಹೊರಹೊಮ್ಮಿದ್ದು, ಪ್ರಸಿದ್ಧರಾಗಿದ್ದು ಅಮೇರಿಕಾದಲ್ಲಿ.

ಶ್ರೀ ಏಕನಾಥ ಈಶ್ವರನ್
ಶ್ರೀ ಏಕನಾಥ ಈಶ್ವರನ್ ಅವರು ಅಮೇರಿಕಾಗೆ ಫುಲ್ ಬ್ರೈಟ್ ಸ್ಕಾಲರ್ಷಿಪ್ ಮೇಲೆ ಬಂದರು. ಸ್ಯಾನ್ ಫ್ರಾನ್ಸಿಸ್ಕೋ ಏರಿಯಾದಲ್ಲಿರುವ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೀ, ಇಂಗ್ಲೀಶ್ ವಿಭಾಗದಲ್ಲಿ ತಮ್ಮ ಕಾರ್ಯ ನಿರ್ವರ್ಹಿಸುತ್ತಿದ್ದರು. ಆಹೊತ್ತಿಗಾಗಲೇ ಅವರಿಗೆ ವೇದ, ಉಪನಿಷತ್ತು, ಭಗವದ್ಗೀತೆ, ಪತಂಜಲಿಯ ಯೋಗ ಸೂತ್ರಗಳು, ವೇದಾಂತ, ಬೌದ್ಧರ ಧರ್ಮ ಗ್ರಂಥವಾದ ಧಮ್ಮಪಾದ, ಸೂಫಿ ಕವಿಗಳ ಕವಿತೆಗಳು ಎಲ್ಲದರ ಮೇಲೆ ಅಗಾಧ ಪಾಂಡಿತ್ಯವಿತ್ತು. ನಿರಂತರ ಸಾಧನೆಯಿತ್ತು. ಸಂಸ್ಕೃತ, ಇಂಗ್ಲೀಶ್ ಎರಡೂ ಭಾಷೆಗಳ ಮೇಲೆ ಒಳ್ಳೆ ಹಿಡಿತವಿತ್ತು. ಮತ್ತೆ ಆಗಲೇ ಸುಮಾರು ಹದಿನೈದು ವರ್ಷಕ್ಕಿಂತಲೂ ಹೆಚ್ಚಿನ ಅಧ್ಯಾತ್ಮಿಕ ಸಾಧನೆಯಿತ್ತು. ಹೀಗಾಗಿ spirituality / ಅಧ್ಯಾತ್ಮದ ಬಗ್ಗೆ ಆಸಕ್ತಿಯಿದ್ದ ವಿದ್ಯಾರ್ಥಿಗಳು ಅವರ ಸುತ್ತ ಕಲೆಯತೊಡಗಿದರು. ಅದ್ಭುತ ಇಂಗ್ಲೀಶ್ ಪ್ರೊಫೆಸರ್ ಅಂತ ಖ್ಯಾತರಾಗಿಯೇ ಇದ್ದರು. ಈಗ ಅಮೇರಿಕಾದಲ್ಲಿ ಅದ್ಭುತ ದಾರ್ಶನಿಕ, ಅತ್ಯುತ್ತಮ ಅಧ್ಯಾತ್ಮಿಕ ಶಿಕ್ಷಕ ಅಂತ ಹೊರಹೊಮ್ಮ ತೊಡಗಿದರು. ಇದಕ್ಕಾಗಿ ಅವರು ಮಾಡಿದ್ದು ಏನೂ ಇಲ್ಲ. ಕೇವಲ ತಮ್ಮ ಜ್ಞಾನ, ಅದಕ್ಕಿಂತ ಹೆಚ್ಚಾಗಿ ಸ್ವಂತ ಅನುಭವಗಳಿಂದ ಪರಿಪಕ್ವಗೊಂಡಿದ್ದ ಜ್ಞಾನವನ್ನು ಯಾವದೇ ಪ್ರತಿಫಲದ ಆಸೆಯಿಲ್ಲದೆ ಎಲ್ಲರೊಂದಿಗೆ ಹಂಚಿಕೊಂಡಿದ್ದು. ಅಲ್ಲಿಂದ ಶುರುವಾದ ಅವರ ಯಶೋಗಾಥೆ ಮುಂದುವರೆಯುತ್ತಲೇ ಇದೆ.

ಅವರ ಇಂಗ್ಲೀಶ್ ಕ್ಲಾಸಿಗಿಂತ ಅವರ ಮನೆಯಲ್ಲಿಯೇ ಜಾಸ್ತಿ ವಿದ್ಯಾರ್ಥಿಗಳು ಸೇರತೊಡಗಿದರು. ದಿನಾ ಸಂಜೆ informal ಆಗಿ ಪ್ರವಚನ ನೀಡಲು ಶುರುವಿಟ್ಟುಕೊಂಡರು ಶ್ರೀ ಈಶ್ವರನ್. ಅದ್ಯಾವ ರೀತಿಯ response ಬಂತು ಅಂದರೆ ಪ್ರೊಫೆಸರ್ ಸಾಹೇಬರ ಸಣ್ಣ ಬ್ಯಾಚುಲರ್ apartment ಯಾವದಕ್ಕೂ ಸಾಲಲಿಲ್ಲ. ಪ್ರವಚನಗಳನ್ನು ಬೇರೆ ಕಡೆ ಪಬ್ಲಿಕ್ ಜಾಗಗಳಿಗೆ ಶಿಫ್ಟ್ ಮಾಡಬೇಕಾಯಿತು. ಪ್ರವಚನಗಳು ತುಂಬಿ ತುಳುಕತೊಡಗಿದವು. ಸನಾತನ ಧರ್ಮದ ತಿರುಳನ್ನು ಸರಳ ಭಾಷೆಯಲ್ಲಿ ಹೇಳುವ ಅವರ ಶೈಲಿಗೆ ಇಲ್ಲಿಯ ಜನ ಫುಲ್ ಫಿದಾ. ಮತ್ತೆ ಅವರ ಪ್ರವಚನಗಳು ಫುಲ್ ಪ್ರಾಕ್ಟಿಕಲ್. ದಿನನಿತ್ಯದ ಬದುಕಿಗೆ ಅಳವಡಿಸಿಕೊಳ್ಳಲು ಅನುಕೂಲವಾಗುವ ಹಾಗೆಯೇ ಇರುತ್ತಿದ್ದವು. ಅವರ ಪ್ರವಚನಗಳಲ್ಲಿ ಒಣ ವೇದಾಂತ, ಮಣ್ಣು ಮಶಿ ಇಲ್ಲವೇ ಇಲ್ಲ, ಕೇಳಲೇಬೇಡಿ.

ಧ್ಯಾನದ (Meditation) ಮೇಲೆ ಆಪರಿ ಆಸಕ್ತಿಯನ್ನು ಗಮನಿಸಿದ ಶ್ರೀ ಏಕನಾಥ ಈಶ್ವರನ್ ಬರ್ಕ್ಲೀ ಯೂನಿವರ್ಸಿಟಿಗೆ ಒಂದು ಐತಿಹಾಸಿಕ ಪ್ರಪೋಸಲ್ ಇಟ್ಟರು. 'ಮೆಡಿಟೇಶನ್ ಅಂದರೆ ಧಾನ್ಯವನ್ನೂ ಸಹ ಇತರೆ ವಿಷಯಗಳಂತೆ ಪಾಠ ಮಾಡುತ್ತೇನೆ. ಅನುಮತಿ ಕೊಡಿ,' ಅಂತ. ಬರ್ಕ್ಲೀ ವಿಶ್ವವಿದ್ಯಾಲಯ ಅಂತಹ ಹೊಸ ಪ್ರಯೋಗಗಳಿಗೆ ಯಾವಾಗಲೂ ತೆರೆದುಕೊಳ್ಳುವಂತಹ radical ಯೂನಿವರ್ಸಿಟಿ. 'ಆಯಿತು  ಮಾಡಿಕೊಳ್ಳಿ. ಮೊದಲು syllabus, textbook ಇತ್ಯಾದಿಗಳ ಬಗ್ಗೆ ಮಾಹಿತಿ ಕೊಡಿ. ಕೊಟ್ಟ ನಂತರ ಧ್ಯಾನದ ಕೋರ್ಸಿಗೆ ಅನುಮತಿ ಸಿಗುತ್ತದೆ. ಮುಂದಿನ ಸೆಮಿಸ್ಟರ್ ನಿಂದ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು, ನಿಮ್ಮ ಕೋರ್ಸ್ ಸೇರಬಹುದು. ಅದರಲ್ಲಿ ಗಳಿಸುವ ಕ್ರೆಡಿಟ್ (ಅಂಕಗಳು) ಡಿಗ್ರಿಗಾಗಿ ಉಪಯೋಗಿಸಬಹುದು' ಅಂತ ಹೇಳಿತು ಯೂನಿವರ್ಸಿಟಿ.

ಜಗತ್ತಿನ ವಿಶ್ವವಿದ್ಯಾಲಯವೊಂದು ಧ್ಯಾನದ ಮೇಲೆ ಕ್ರೆಡಿಟ್ ಕೋರ್ಸ್ ಶುರು ಮಾಡಿದ್ದು ಅದೇ ಮೊದಲು. ಇದೆಲ್ಲ ೧೯೬೦ ರ ಸುಮಾರಿನ ಮಾತು.

ಅಲ್ಲಿಯವರೆಗೆ ತಮ್ಮ ಪಾಡಿಗೆ ತಮ್ಮ ಧ್ಯಾನ, ಅಧ್ಯಾತ್ಮ ಅಧ್ಯಯನ, ಅಧ್ಯಾಪನ ಮಾಡಿಕೊಂಡಿದ್ದ ಶ್ರೀ ಏಕನಾಥ ಈಶ್ವರನ್ ಈಗ ಕ್ರಮಬದ್ಧವಾಗಿ ಒಂದು spiritual framework ಅಭಿವೃದ್ಧಿ ಮಾಡಲು ಕುಳಿತರು. ಅದರ ಪರಿಣಾಮವಾಗಿ ತಯಾರಾಗಿದ್ದೇ Passage Meditation & 8 Points Program.

ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಕಿಕ್ಕಿರಿದ ತರಗತಿಗೆ ಮೆಡಿಟೇಶನ್ ಪಾಠ ಮಾಡುತ್ತಿರುವ ಪ್ರೊಫೆಸರ್ ಈಶ್ವರನ್

ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಧ್ಯಾನ / meditation ಅನ್ನುವ ಕೋರ್ಸಿಗೆ ಅಭೂತಪೂರ್ವ ಯಶಸ್ಸು ಸಿಕ್ಕಿತು. ಮುಂದೆ ಹಲವು ವರ್ಷಗಳ ಕಾಲ ಬರ್ಕ್ಲೀ ಯೂನಿವರ್ಸಿಟಿಯಲ್ಲಿ ಆ ಕೋರ್ಸ್ ಮತ್ತು ಇತರ ಸಂಬಂಧಿತ ಕೋರ್ಸುಗಳನ್ನು ಶ್ರೀ ಏಕನಾಥ ಈಶ್ವರನ್ ಮತ್ತು ಅವರಿಂದ ತಯಾರಾದ ಶಿಷ್ಯರು ಪಾಠ ಮಾಡಿದರು. ಸಾವಿರಾರು ಜನ ವಿದ್ಯಾರ್ಥಿಗಳು ಧ್ಯಾನವನ್ನು ಪದ್ಧತಿ ಪ್ರಕಾರ ಕಲಿತು ಜೀವನ ಹಸನು ಮಾಡಿಕೊಂಡರು. 'ವಾರಕ್ಕೊಮ್ಮೆ ತರಗತಿಯ ನಂತರ ಧ್ಯಾನದ ನೆಪದಲ್ಲಿ ಕಣ್ಣು ಮುಚ್ಚಿ ಕೂತು, ಸೆಮಿಸ್ಟರ್ ಕೊನೆಗೆ ಒಂದು ಪ್ರಬಂಧ ಬರೆದು ಕೊಟ್ಟರೆ ಒಂದಿಷ್ಟು ಮಾರ್ಕ್ಸ್ ಸಿಗುತ್ತದೆ. ಡಿಗ್ರಿಗೆ ಒಂದು ಸಹಾಯವಾಗುತ್ತದೆ,' ಅಂತ ಅಂದುಕೊಂಡು, ಅಷ್ಟೇ ಮಾಡಿ, ಎದ್ದು ಹೋದವರೂ ಇದ್ದರು ಬಿಡಿ.

ಧ್ಯಾನದ ಬಗ್ಗೆ, ಅಧ್ಯಾತ್ಮದ ಬಗ್ಗೆ, spirituality ಬಗ್ಗೆ, philosophy ಬಗ್ಗೆ, metaphysics ಬಗ್ಗೆ ಬೇಕಾದಷ್ಟು ಪುಸ್ತಕಗಳಿದ್ದವು. ಅವನ್ನೆಲ್ಲ ಕಲಿಸಿಕೊಡುವ ಗುರುಗಳೂ ಇದ್ದರು. ಅದೆಲ್ಲ ಸರಿ. ಆದರೆ ಇಷ್ಟು ಸರಳವಾಗಿ, practical ಆಗಿ, systematic ಆಗಿ, methodical ಆಗಿ, ಒಂದು integrated approach ರೀತಿಯಲ್ಲಿ, ಭಾರತೀಯ ಸನಾತನ ಸಂಪ್ರದಾಯಕ್ಕೆ ಚ್ಯುತಿ ಬರದಂತೆ, ಧ್ಯಾನ / meditation ಹೇಳಿಕೊಟ್ಟವರಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಶ್ರೀ ಏಕನಾಥ ಈಶ್ವರನ್.

ವಿಶ್ವವಿದ್ಯಾಲದ ಒಳಗೆ ಮತ್ತು ಹೊರಗೆ ಅವರು ನೀಡುತ್ತಿದ್ದ ಪ್ರವಚನಗಳಿಂದ ಪ್ರಭಾವಿತರಾದ, ತುಂಬ ಶ್ರದ್ಧಾವಂತರಾದ ಒಂದಿಷ್ಟು ಶಿಷ್ಯರ ದಂಡು ಅವರ ಸುತ್ತ ಬೆಳೆಯತೊಡಗಿತು. ಎಲ್ಲರೂ ಬೇರೆ ಬೇರೆ ಕೆಲಸ, ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡವರೇ. ಮತ್ತೆ ಈಶ್ವರನ್ ಹೇಳಿದ್ದು ಸಹ ಅದನ್ನೇ. 'ಅಧ್ಯಾತ್ಮ, spirituality ಯಲ್ಲಿ ಸಾಧನೆಯನ್ನು ಜೀವನದ ಯಾವದೇ ಘಟ್ಟದಲ್ಲಿ, ನಾವಿರುವ ಜೀವನದ context ನಲ್ಲಿಯೇ ಮಾಡಬಹುದು. ಮತ್ತೆ ಅದರಲ್ಲೇ ಮಾಡುವದು ಸಹಜ ಧರ್ಮ. ಅಧ್ಯಾತ್ಮ ಸಾಧನೆಗಾಗಿ ಚಿತ್ರ ವಿಚಿತ್ರ ವೇಷ ಭೂಷಣ, ತರೇವಾರಿ ಆಚರಣೆ ಎಲ್ಲದರ ಜರೂರತ್ತೇ ಇಲ್ಲ. ಮುಖ್ಯವಾಗಿ ಸಮಾಜದ ಮುಖ್ಯವಾಹಿನಿಗೆ ಬೆನ್ನು ಹಾಕುವ ಅವಶ್ಯಕತೆಯಂತೂ ಇಲ್ಲವೇ ಇಲ್ಲ,' ಅಂತ ಈಶ್ವರನ್ ಉವಾಚ. ಅವರು ಇದ್ದಿದ್ದು ಸಹ ಹಾಗೆಯೇ. ಧ್ಯಾನದ, ಅಧ್ಯಾತ್ಮದ ಶಿಕ್ಷಕರೇ ಆದರೂ ಟಿಪಿಕಲ್ ಪ್ರೊಫೆಸರ್ ಹಾಗೆ ಯಾವಾಗಲೂ ನೀಟಾಗಿ ಸೂಟ್ ಅಥವಾ ಬಿಸಿನೆಸ್ ಕ್ಯಾಶುಯಲ್ ಡ್ರೆಸ್ ಹಾಕಿಕೊಳ್ಳುತ್ತಿದ್ದರು. ಯಾವದೇ ತರಹದ ನಾಮ, ವಿಭೂತಿ, ಜುಟ್ಟ, ಗಿಟ್ಟ ಅಂತ ಯಾವದೇ ತರಹದ ಎಕ್ಸಟ್ರಾ ಫಿಟ್ಟಿಂಗ್ ಗಿಟ್ಟಿಂಗ್ ಇಲ್ಲ. ಡಂಬಾಚಾರ ಕೇಳಲೇಬೇಡಿ.

ಅವರಡಿಯಲ್ಲಿ ಶ್ರದ್ಧೆಯಿಂದ ಸಾಧನೆ ಶುರು ಮಾಡಿಕೊಂಡಿದ್ದ ಅವರ ಶಿಷ್ಯರಿಗೆ ಅನ್ನಿಸಿದ್ದು, 'ನಮ್ಮದೇ ಒಂದು ಅಧ್ಯಾತ್ಮಿಕ ಸಮುದಾಯ (spiritual community) ಮಾಡಿಕೊಂಡರೆ ಹೇಗೆ?' ಅಂತ. ಬರ್ಕ್ಲೀ ಕ್ಯಾಂಪಸ್ ನಂತಹ ಜನಜಂಗುಳಿ ಇರುವ ಪ್ರದೇಶಕ್ಕಿಂತ, ಸ್ವಲ್ಪ ದೂರದಲ್ಲಿ, ಊರ ಹೊರಗೆ, ಶಾಂತಿಯಿಂದ ಇರುವ, ನಿಸರ್ಗದ ಮಡಿಲಲ್ಲಿರುವ ಪ್ರದೇಶ ಸಿಕ್ಕರೆ ಒಳ್ಳೆಯದು ಅನ್ನುವ ಭಾವನೆ ಎಲ್ಲರಿಗೂ ಬರಲು ಆರಂಭವಾಗಿತ್ತು. ಅಂತಹ ಆಸೆಗೆ ದೇವರೇ ತಥಾಸ್ತು ಅನ್ನುವಂತೆ ಸಿಕ್ಕಿದ್ದು ಇನ್ನೂರೈವತ್ತು ಎಕರೆಗಳ ಸುಂದರ ಕೃಷಿ ಪ್ರದೇಶ. ಒಳ್ಳೆ ಭಾರತದ ಆಶ್ರಮಗಳ ಸೆಟ್ಟಿಂಗ್ ಇತ್ತು. ಆ ಕಾಲದಲ್ಲಿ ತುಂಬ ಚೀಪಲ್ಲೇ ಸಿಕ್ಕಿತ್ತಂತೆ. ಸ್ಯಾನ್ ಫ್ರಾನ್ಸಿಸ್ಕೋ ನಗರದಿಂದ ಉತ್ತರಕ್ಕೆ ಒಂದು ಎಪ್ಪತ್ತು ಮೈಲಿ ದೂರ. ತುಂಬ ಸುಂದರ ಸ್ಥಳ. ನಿಸರ್ಗ ರಮಣೀಯ. ಎಕರೆಗಟ್ಟಲೆ ಹುಲ್ಲುಗಾವಲು. ಹಾಯಾಗಿ ಓಡಾಡಿಕೊಂಡಿರುವ ಕಾಡು ಜಿಂಕೆ, ಮೊಲ, ಹಂಸ, ಇತ್ಯಾದಿ. ಸಣ್ಣ ತೊರೆ. ಇವರದ್ದೇ ಆದ ಗದ್ದೆ. ಹಸುಗಳಿರುವ ಕೊಟ್ಟಿಗೆ. ಒಂದು ಸಣ್ಣ ಹಳ್ಳಿಯ ಹಾಗೆ. ಎರಡು ಮೈಲಿ ದೂರದಲ್ಲಿ ಸುಂದರ ಡಿಲ್ಲನ್ ಬೀಚ್. ಅಂತಹ ಜಾಗದಲ್ಲಿ ಶುರುವಾದದ್ದೇ 'ರಾಮಗಿರಿ ಆಶ್ರಮ'. ಇದು ಮುಂದೆ ಶ್ರೀ ಈಶ್ವರನ್ ಮತ್ತು ಅವರ ಖಾಸ್ ಶಿಷ್ಯರ ಖಾಯಂ ನೆಲೆಯಾಯಿತು. ಟಿಪಿಕಲ್ ಗುರುಕುಲದ ಮಾದರಿಯ ಸೆಟಪ್. ವ್ಯತ್ಯಾಸ ಅಂದರೆ ಗುರುಕುಲದ ಸೆಟ್ಟಿಂಗ್ ಆದರೂ ಹೊರಗಡೆ ಹೋಗಿ ಕೆಲಸ ಮಾಡುವವರು, ವಿದ್ಯಾಭ್ಯಾಸ ಮಾಡುವವರು, ಸಂಸಾರಸ್ಥರೂ ಎಲ್ಲ ಇದ್ದರು. ಇನ್ನು ಕೆಲವರು ಆಶ್ರಮದ ಫುಲ್ ಟೈಮ್ ಕೆಲಸಗಾರರಾದರು. ಯಾಕೆಂದರೆ ಆವಾಗಲೇ 'ನೀಲಗಿರಿ ಧ್ಯಾನ ಕೇಂದ್ರ' (Blue Mountain Center of Meditation) ಅನ್ನುವ ಸಂಸ್ಥೆಯನ್ನು ಶ್ರೀ ಈಶ್ವರನ್ ಮತ್ತು ಶಿಷ್ಯರು ಸ್ಥಾಪಿಸಿ, ಪುಸ್ತಕಗಳ ಪ್ರಕಟಣೆ, ಧ್ಯಾನದ ಕ್ಯಾಂಪ್ ಗಳನ್ನು ನಡೆಸುವದು ಇತ್ಯಾದಿ ಶುರುಮಾಡಿಕೊಂಡಿದ್ದರು. ನೀಲಗಿರಿ ಅನ್ನುವ ಹೆಸರು ಏಕನಾಥ ಈಶ್ವರನ್ ಅವರ ಮೂಲ ಸ್ಥಳದಿಂದ ಪ್ರಭಾವಿತ. ಅವರು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಕೇರಳದ ನೀಲಗಿರಿ ಬೆಟ್ಟದ ತಪ್ಪಲಲ್ಲೇ.

ನಿಸರ್ಗದ ಮಡಿಲಲ್ಲಿ ರಾಮಗಿರಿ ಆಶ್ರಮ

ಸುಮಾರು ೧೯೬೫ ರ ಹೊತ್ತಿಗೆ ಶ್ರೀ ಏಕನಾಥ ಈಶ್ವರನ್ ಪೂರ್ಣ ಪ್ರಮಾಣದ ಧ್ಯಾನದ ಶಿಕ್ಷಕ, ಪ್ರವಚನಕಾರ, ಲೇಖಕ  ಅಂತ ಬದಲಾದರು. ಇಂಗ್ಲೀಶ್ ಅಧ್ಯಾಪನ ನಿಂತಿತು. full time ಅಧ್ಯಾತ್ಮದ ಅಧ್ಯಾಪನ ಶುರುವಾಯಿತು. ಅವರೇ ಹೇಳುವಂತೆ, 'Earlier I used to teach skills to make a living. Now I teach skills to make a life' ಅನ್ನುವ ಮಾದರಿಯಲ್ಲಿ ತಮ್ಮ professional direction ಬದಲು ಮಾಡಿಕೊಂಡರು. ಅವರ ಪ್ರಕಾರ ಎಲ್ಲವನ್ನೂ ಶ್ರೀಕೃಷ್ಣ ಮಾಡಿಸಿದ. ಶ್ರೀಕೃಷ್ಣ ಅವರ ಆರಾಧ್ಯ ದೈವ. ಅವರ ಅಜ್ಜಿ (ತಾಯಿಯ ತಾಯಿ) ಅವರ ಅಧ್ಯಾತ್ಮಿಕ ಗುರು.

ಅವರ ಪ್ರವಚನಗಳನ್ನು ಆಧಾರಿಸಿ ಅನೇಕ ಪುಸ್ತಕಗಳನ್ನು ಬರೆದು ಪ್ರಕಟಮಾಡಿದರು. ಅವುಗಳಲ್ಲಿ ಭಗವದ್ಗೀತೆ ಭಾಷ್ಯ, ಉಪನಿಷತ್ತುಗಳ ಭಾಷ್ಯ, ಧಮ್ಮಪಾದದ ಭಾಷ್ಯ, ಮತ್ತಿತರ ಪುಸ್ತಕಗಳು ಬಹಳ ಪ್ರಖ್ಯಾತವಾದವು. ಬೇರೆ ಧರ್ಮಗಳ ಅನೇಕ ಗ್ರಂಥಗಳ ಮೇಲೂ ಸಾಕಷ್ಟು ಪುಸ್ತಕ ಬರೆದರು. ತಾವು ತುಂಬ ಇಷ್ಟಪಡುತ್ತಿದ್ದ ಗಾಂಧಿ, ಗಡಿನಾಡ ಗಾಂಧಿ ಬಾದಶಾ ಖಾನ್ ಮೇಲೂ ಪುಸ್ತಕ ಬರೆದರು. ಅವೆಲ್ಲ ತುಂಬ ಪಾಪ್ಯುಲರ್ ಆದವು. ಮಾರುಕಟ್ಟೆಯಲ್ಲಿ ಯಶಸ್ವಿಯೂ ಆದವು. ಇಂದೂ ಸಹ ಅನೇಕ ಪುಸ್ತಕಗಳು ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿವೆ. ಅಂತಹ ಪುಸ್ತಕಗಳು ಅನೇಕ ಭಾಷೆಗಳಿಗೆ ತರ್ಜುಮೆಗೊಂಡು ಅಮೇರಿಕಾದ ಹೊರಗೂ ಶ್ರೀ ಈಶ್ವರನ್ ಅವರಿಗೆ ಅನುಯಾಯಿಗಳು ಸಿಕ್ಕರು. ಧ್ಯಾನದ ಕ್ಯಾಂಪುಗಳಿಗೆ (Meditation Retreats) ಜಗತ್ತಿನ ಬೇರೆ ಬೇರೆ ಕಡೆಯಿಂದ ಜನರು ಬರಲು ಶುರು ಮಾಡಿ ಅಮೇರಿಕಾದ ಹೊರಗೂ ಈಶ್ವರನ್ ಖ್ಯಾತರಾದರು.

ಇಷ್ಟೆಲ್ಲ ಸಾಧನೆ ಮಾಡಿದರೂ ಶ್ರೀ ಏಕನಾಥ ಈಶ್ವರನ್ publicity ಹಿಂದೆ, ಪ್ರಚಾರದ ಹಿಂದೆ ಎಂದೂ ಓಡಲಿಲ್ಲ. ತಮ್ಮ ಶಿಷ್ಯ ಸಮುದಾಯದ ಅಭ್ಯುದಯವೇ ತಮ್ಮ ಮುಖ್ಯ ಗುರಿ ಅನ್ನುವ ಮಾದರಿಯಲ್ಲಿ, ಟಿಪಿಕಲ್ ಗುರುಕುಲದ ಪರಮಗುರುವಿನ ಹಾಗೆ, ತಮ್ಮ ಶಿಷ್ಯರನ್ನು, ಅವರ ಅಧ್ಯಾತ್ಮ ಸಾಧನೆಯನ್ನು ಗಮನಿಸುತ್ತ, ಅಗತ್ಯವಿದ್ದಲ್ಲಿ ತಿದ್ದುತ್ತ, ಸತತವಾಗಿ ಸುಮಾರು ನಲವತ್ತು ವರ್ಷ ಪ್ರತಿನಿತ್ಯ ಪ್ರವಚನ ಕೊಡುತ್ತ, ಪುಸ್ತಕ ಬರೆಯುತ್ತ, ತಮ್ಮದೇ ಪ್ರಕಾಶನದ ಮೂಲಕ ಅವನ್ನು ಪ್ರಕಟಿಸುತ್ತ, ತಮ್ಮ ಜೀವನ ಸವೆಸಿದರು ಶ್ರೀ ಏಕನಾಥ ಈಶ್ವರನ್. ಮಹಾನ್ ವ್ಯಕ್ತಿ. ಅದರ ಬಗ್ಗೆ ದೂಸರಾ ಮಾತಿಲ್ಲ.

ಮೊದಲೇ ಹೇಳಿದಂತೆ ಶ್ರೀ ಏಕನಾಥ ಈಶ್ವರನ್ ಅವರದು holistic approach to spirituality. ಹಾಗಾಗಿಯೇ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು, ತಮ್ಮ ಶಿಷ್ಯ ಸಮುದಾಯವನ್ನು ತೊಡಗಿಸಿಕೊಂಡರು. ಆಫ್ರಿಕಾದ ಆನೆಗಳ ಸಂರಕ್ಷಣೆ ಬಗ್ಗೆ ಮಾಡಿದ ಕೆಲಸಕ್ಕೆ ಯುನೈಟೆಡ್ ನೇಶನ್ಸ್ ಪ್ರಶಸ್ತಿ ಬಂತು. ಅಮೇರಿಕಾದಲ್ಲಿ ಸಸ್ಯಾಹಾರವನ್ನು ಒಂದು ಚಳುವಳಿ  ಮಾದರಿಯಲ್ಲಿ ಬೆಳಸಿದವರೇ ಅವರು. ಅವರ ಶಿಷ್ಯೆ, ನಮ್ಮ ಆತ್ಮೀಯ ಹಿರಿಯ ಭಗಿನಿ, ಲಾರೆಲ್ ರಾಬರ್ಟ್ಸನ್ ಬರೆದ ಸಸ್ಯಾಹಾರಿ ಅಡುಗೆಯ ಪುಸ್ತಕ ಇಂದಿಗೂ ಬೆಸ್ಟ್ ಸೆಲ್ಲರ್. ಈಶ್ವರನ್ ಅಂತಹ ಮಹನೀಯರು ಮಾಡಿದ ಕೆಲಸಗಳಿಂದಲೇ ಇಂದು ಸಸ್ಯಾಹಾರ ಅಮೇರಿಕಾದಲ್ಲಿ ಪ್ರಸಿದ್ಧವಾಗಿ, ಜನರಿಗೆ ಸಸ್ಯಾಹಾರದ ಮಹತ್ವ ತಿಳಿದದ್ದು.

ಶಿಷ್ಯರೆಂದರೆ ಕೇವಲ ಮನುಷ್ಯರಷ್ಟೇ ಅಲ್ಲ. ಶ್ವಾನ ಶಿಷ್ಯರಾದ ಮೂಕಾ ಮತ್ತು ಗಣೇಶರೊಂದಿಗೆ ಗುರುಗಳು

೧೯೫೯ ರಲ್ಲಿ, ತಮ್ಮ ಐವತ್ತನೇ ವಯಸ್ಸಿನಲ್ಲಿ, ಕೇವಲ ಎರಡು ವರ್ಷದ ಮಟ್ಟಿಗೆ ಅಂತ ಅಮೇರಿಕಾಗೆ ಬಂದಿದ್ದರು ಶ್ರೀ ಈಶ್ವರನ್. ಆದರೆ ಆ ಭಗವಂತ ಹಾಕಿದ ಯೋಜನೆ ಬೇರೇನೋ ಇತ್ತು. ಅದಕ್ಕೇ ಇಂಗ್ಲೀಶ್ ಮಾಸ್ತರರು ಅಧ್ಯಾತ್ಮದ ಮಾಸ್ತರರಾಗಿ ಬದಲಾದರು. ಎರಡು ವರ್ಷಕ್ಕೆ ಬಂದವರು ಅಖಂಡ ನಲವತ್ತೂ ಚಿಲ್ಲರೆ ವರ್ಷ ಇಲ್ಲೇ ಇದ್ದರು. ೧೯೯೯ ರಲ್ಲಿ ತಮ್ಮ ತೊಂಬತ್ತನೇ ವಯಸ್ಸಿನಲ್ಲಿ ಸಮಾಧಿ ಹೊಂದಿದರು. ಹಲವಾರು ಶ್ರೇಷ್ಠ ಪುಸ್ತಕಗಳಿಂದ, ಪ್ರವಚನಗಳ ಸಾವಿರಾರು ಘಂಟೆಗಳ ಆಡಿಯೋ ವೀಡಿಯೊ ರೆಕಾರ್ಡಿಂಗ್ ಗಳಿಂದ ಇವತ್ತಿಗೂ ಆಸಕ್ತಿಯುಳ್ಳವರಿಗೆ ಮಾರ್ಗದರ್ಶನ ಮಾಡುತ್ತಲೇ ಇದ್ದಾರೆ ಶ್ರೀ ಈಶ್ವರನ್. ಮುಂದೆಯೂ ಇರುತ್ತಾರೆ.

ಶ್ರೀ ಏಕನಾಥ ಈಶ್ವರನ್ ಅವರ ಮಹಾ ಸಮಾಧಿಯ ನಂತರ ಅವರ ಪತ್ನಿ ಶ್ರೀಮತಿ ಕ್ರಿಸ್ಟಿನ್ ಈಶ್ವರನ್ ಮತ್ತು ಅವರ ಮೊದಲನೇ ತಲೆಮಾರಿನ ಶಿಷ್ಯರು ಅವರ ಕೆಲಸವನ್ನು Blue Mountain Center of Meditation ಮುಖಾಂತರ ಮುಂದುವರೆಸಿದ್ದಾರೆ. ಶ್ರೀಮತಿ ಈಶ್ವರನ್ ಅವರಿಗೆ ಈಗ ೯೪ ರ ತುಂಬು ಹರೆಯ. ಹೆಚ್ಚೆಂದರೆ ಅರವತ್ತು ವರ್ಷದ ಮಹಿಳೆಯ ಹಾಗೆ ಕಾಣುವ ಅವರು ತುಂಬ ಚಟುವಟಿಕೆಯಿಂದ ಇದ್ದಾರೆ. ಹೋದವರನ್ನೆಲ್ಲ ತುಂಬ ಪ್ರೀತಿಯಿಂದ ಮಾತಾಡಿಸುತ್ತ, ಈಶ್ವರನ್ ಅವರ ಸಂದೇಶವನ್ನು ಸಾರುತ್ತ, ಓದುತ್ತ, ಬರೆಯುತ್ತ, ಚಟುವಟಿಕೆಯ ಚಿಲುಮೆಯಂತೆ ಇದ್ದಾರೆ. ಎಲ್ಲ ಅವರ ಅರವತ್ತು ಚಿಲ್ಲರೆ ವರ್ಷಗಳ ಅಖಂಡ ಸಾಧನೆಯ ಫಲ. ಈಶ್ವರನ್ ಅವರ ಮೊದಲನೇ ತಲೆಮಾರಿನ ಉಳಿದ ಶಿಷ್ಯರೂ ಅಷ್ಟೇ. ಎಲ್ಲರಿಗೂ ಎಪ್ಪತ್ತರ ಹತ್ತಿರ ವಯಸ್ಸು. ಆದರೆ ಅವರ energy level ನೋಡಿದರೆ ನಮ್ಮಂತವರು ದಂಗು ಹೊಡೆಯಬೇಕು. ಎಲ್ಲ ಹಲವಾರು ವರ್ಷಗಳ ಸಾಧನೆಯ ಫಲ. ಶಿಸ್ತು ಬದ್ಧ ಜೀವನ ಶೈಲಿ. ಮುಖ್ಯವಾಗಿ integrated & holistic approach to spirituality. ಅದೇ ಮುಖ್ಯ ಕಾರಣ. ಎದ್ದು ನಾಕು ಹೆಜ್ಜೆ ಇಡಲು ಆಗದೇ, ಪಲ್ಲಕ್ಕಿ ಏರುವ ಸ್ವಾಮಿಗಳೇ ಜಾಸ್ತಿಯಾಗಿರುವ ಸಮಯದಲ್ಲಿ ಇಲ್ಲಿನ ರಾಮಗಿರಿಯ ಸಂತರು ತುಂಬ ವಿಶಿಷ್ಟರಾಗಿ ಕಾಣುತ್ತಾರೆ. ಅವರು ತಮ್ಮನ್ನು ಸಂತರು, ಸ್ವಾಮಿಗಳು ಅಂತೆಲ್ಲ ಬ್ರಾಂಡ್ ಮಾಡಿಕೊಳ್ಳುವದೇ ಇಲ್ಲ. ಆ ಮಾತು ಬೇರೆ.

ಈಗಲೂ ಅಷ್ಟೇ. ಶ್ರೀ ಈಶ್ವರನ್ ಸ್ಥಾಪಿಸಿದ ಸಂಸ್ಥೆಗೆ ಪ್ರಚಾರದ ಹಪಾಹಪಿಯಿಲ್ಲ. ಹುಯ್ಯಂತ ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಆಲೋಚನೆಯಂತೂ ಇಲ್ಲವೇ ಇಲ್ಲ. ಎಷ್ಟರ ಮಟ್ಟಿಗೆ ಅಂದರೆ ಆಶ್ರಮಕ್ಕೆ ಒಂದು ಸರಿಯಾದ ಬೋರ್ಡ್ ಸಹ ಇಲ್ಲ. ರಸ್ತೆಯ ಮೇಲೆಯೇ ಇದ್ದರೂ, ಅದರ ಬಗ್ಗೆ ಗೊತ್ತಿಲ್ಲದವರಿಗೆ, ಇಲ್ಲಿಯೇ ರಾಮಗಿರಿ ಆಶ್ರಮ ಇದೆ ಅಂತ ಗೊತ್ತೂ ಆಗುವದಿಲ್ಲ. ದೇವಸ್ಥಾನದಂತೆ ಮಾಡಿಕೊಂಡು, ಉತ್ಸವಮೂರ್ತಿಗಳಂತೆ ಆಗಿ, ಮಾಡುವ ಮುಖ್ಯವಾದ ಕೆಲಸ ಬಿಟ್ಟು, ಸುಮ್ಮನೆ ಕೆಲಸವಿಲ್ಲ ಅಂತ ಆಶ್ರಮಕ್ಕೆ ಬಂದು ಹಾಳು ಹರಟೆ ಹೊಡೆಯುವವರ ಕಿರಿಕಿರಿ ಬೇಡ ಅಂತಲೇ ಹಾಗೆ ಮಾಡಿಟ್ಟುಕೊಂಡು ಇರಬೇಕು ಅವರು. ಯಾಕೆಂದರೆ ತುಂಬ ಚಿಕ್ಕ ಸೆಟಪ್ ಅವರದು. ಆದರೆ ಕೆಲಸ ಬಹಳ. ನಿಜವಾದ ಆಸಕ್ತರು ಹೋದರೆ ತುಂಬ ಪ್ರೀತಿಯಿಂದ ಆಶ್ರಮ ತೋರಿಸಿ, ಎಲ್ಲ ವಿವರಣೆ ನೀಡಲು ಅಲ್ಲಿನವರು ಸದಾ ಸಿದ್ಧ.

ಈಗಲೂ ಆಶ್ರಮದಲ್ಲಿ ಸುಮಾರು ಮೂವತ್ತು ಜನರಿದ್ದಾರೆ. ಶ್ರೀ ಈಶ್ವರನ್ ಹಾಕಿ ಕೊಟ್ಟ ಮಾರ್ಗದಲ್ಲಿಯೇ ಸಾಧನೆ ಮಾಡಿಕೊಂಡಿದ್ದಾರೆ. spiritual retreats ಗಳ ಮೂಲಕ, ಇಂಟರ್ನೆಟ್ ವೆಬಿನಾರ್ ಗಳ ಮೂಲಕ, ಪುಸ್ತಕಗಳ ಮೂಲಕ, ಉಚಿತ ಸೆಮಿನಾರ್ ಗಳ ಮೂಲಕ ಆಸಕ್ತರಿಗೆ, ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆ. ಆದರೆ ಪರಮಗುರು ಮಾತ್ರ ಶ್ರೀ ಈಶ್ವರನ್ ಅವರೇ. ಎಲ್ಲವೂ ಅವರು ಸ್ಥಾಪಿಸಿದ ಪದ್ಧತಿ ಮೇಲೇ ಆಧಾರಿತ. ಮತ್ತೆ ಅದರಲ್ಲಿ ಎಂದಿಗೂ ಬದಲಾವಣೆ ಇರುವದಿಲ್ಲ.

ಈಗ ಸುಮಾರು ಹನ್ನೆರೆಡು ವರ್ಷಗಳಿಂದ Blue Mountain Center of Meditation ಜೊತೆಗೆ ಒಡನಾಟ ನನ್ನದು. ೨೦೦೧ ರಲ್ಲಿ ಭಗವದ್ಗೀತೆಯ ಮೇಲೆ ಯಾವದಾದರೂ ಒಳ್ಳೆಯ ಪುಸ್ತಕ ಓದೋಣ ಅಂತ ಹುಡುಕುತ್ತಿದ್ದಾಗ ಅಚಾನಕ್ ಆಗಿ ಕಣ್ಣಿಗೆ ಬಿದ್ದಿದ್ದು ಶ್ರೀ ಏಕನಾಥ ಈಶ್ವರನ್ ಬರೆದ ಮೂರು ಸಂಪುಟಗಳ ಅದ್ಭುತ ಗೀತಾ ಭಾಷ್ಯ. ಮುಂದೆ ಒಂದಕ್ಕೊಂದು ಆಯಿತು. ಅತೀ ಸರಳವೆನ್ನಿಸುವ ಅವರ spiritual system ಸುಮ್ಮನೆ ಟ್ರೈ ಮಾಡಿ ನೋಡಿದೆ. ಅದ್ಭುತ positive ಪರಿಣಾಮಗಳು ಮೂಡಿ ಬಂದವು. ಮುಖ್ಯವಾಗಿ stress ಕಮ್ಮಿಯಾಗಿ, vision ಶುಭ್ರವಾಗಿ, ಜೀವನದ ಆದ್ಯತೆಗಳು ಸ್ಪಷ್ಟವಾಗುತ್ತ ಹೋದವು. ಮುಂದೆ ಬೇರೆ ಏನೇನೋ ವೇದಾಂತ, ತತ್ವಜ್ಞಾನ, metaphysics ಎಲ್ಲ ಓದಿರಬಹುದು ಬಿಡಿ. ಆದರೆ ಅದ್ವೈತ ವೇದಾಂತದ ಹೆಚ್ಚಿನ ಅಧ್ಯಯನಕ್ಕೆ, ಸಾಧನೆಗೆ ಒಂದು ಫೌಂಡೇಶನ್ ಹಾಕಿ ಕೊಟ್ಟಿದ್ದು ಮಾತ್ರ ಶ್ರೀ ಈಶ್ವರನ್ ಮತ್ತು ಅವರ ಧ್ಯಾನದ ಪದ್ಧತಿ. ಅದಕ್ಕೆ ಚಿರಋಣಿ. ನಂತರ ಆಶ್ರಮದಲ್ಲಿ ನಡೆಯುವ ವಾರಾಂತ್ಯದ, ಪೂರ್ತಿ ವಾರದ spiritual retreats ಗೆ ಹೋಗುವದನ್ನು ಶುರು ಮಾಡಿದಾಗಿಂದ ಆಶ್ರಮದ ಜನರು ತುಂಬ ಆತ್ಮೀಯರಾದರು. ಅವರ extended family ಒಳಗೆ ನಮಗೂ ಒಂದು ಜಾಗ ಸಿಕ್ಕಿ, ಆಶ್ರಮದಲ್ಲಿ ಆಗುವ ಕಾರ್ಯಕ್ರಮಗಳಿಗೆ ಇತ್ಯಾದಿಗಳಿಗೆ ಆಹ್ವಾನ ಬರತೊಡಗಿತು. ಈಗ ಆರು ವರ್ಷಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋ ಏರಿಯಾಗೆ ಬಂದ ನಂತರ ಅವರೆಲ್ಲರ ಜೊತೆ ಒಡನಾಟ ಇನ್ನೂ ಹೆಚ್ಚಾಯಿತು. ನಾವಿದ್ದ ಜಾಗದಿಂದ ಕೇವಲ ೯೦ ಮೈಲಿ ದೂರ. ಒಂದೂವರೆ ಘಂಟೆ ಸಾಕು ಕಾರಿನಲ್ಲಿ ಹೋಗಲು. ಇಷ್ಟು ಹತ್ತಿರದಲ್ಲಿ ಇಷ್ಟೆಲ್ಲ ಮಹಾನ್ ಸಾಧಕರ ಒಡನಾಟ ಸಿಕ್ಕಿದ್ದು ನಮ್ಮ ಪುಣ್ಯ, ಭಾಗ್ಯ. ನಾವು ಅಂತ ಅಲ್ಲ, ಎಲ್ಲರನ್ನೂ ಅದೇ ರೀತಿ ಆದರಿಸುವದು ಅವರ ರೂಢಿ.

ಮೊನ್ನೆ ಅಕ್ಟೋಬರ್ ೨೫ ರಂದು ಶ್ರೀ ಏಕನಾಥ ಈಶ್ವರನ್ ಅವರ ಹದಿನೈದನೇ ಪುಣ್ಯತಿಥಿಯನ್ನು ಆಚರಿಸಲಾಯಿತು. Attendance by invitation only. ಆಶ್ರಮಕ್ಕೆ ಆಪ್ತರಾದ ಸುಮಾರು ಒಂದು ನೂರು ಜನ ಆಮಂತ್ರಿತರಾಗಿದ್ದರು. ಅದರಲ್ಲಿ ಒಂದಿಷ್ಟು ತುಂಬ ಖಾಸ್ ಜನರಿಗೆ ವಾರಾಂತ್ಯದಲ್ಲಿ ಆಶ್ರಮದ ಪಕ್ಕದಲ್ಲಿರುವ retreat house ನಲ್ಲಿ ಉಳಿಯುವ ಅವಕಾಶ ಕಲ್ಪಿಸಿದ್ದರು. ನಮ್ಮ ಸೌಭಾಗ್ಯಕ್ಕೆ ನಮಗೂ ಆ ಅವಕಾಶ ಸಿಕ್ಕಿತ್ತು. ಆ ಸುಂದರ, ನಿಸರ್ಗ ರಮಣೀಯ ವಾತಾವರಣವಿರುವ ಆಶ್ರಮದ ಸೆಟಪ್ ನಲ್ಲಿ ಮೂರು ದಿವಸ ಇದ್ದು ಬರುವ ಭಾಗ್ಯ ನಮ್ಮದು. spiritual retreat ಅಂತ ಅಲ್ಲಿ ವರ್ಷಕ್ಕೆ ಎರಡು ಮೂರು ಸಲ ಹೋಗಿ, ಒಂದು ವಾರ ಇದ್ದು ಬರುವದು ಬೇರೆ. ಅದೆಲ್ಲ ಒಂದು ತರಹದ structured retreat ತರಹದ ಪ್ರೊಗ್ರಾಮ್. ಅದೇ ಬೇರೆ. ಈಗ ಪುಣ್ಯತಿಥಿ ಬಿಟ್ಟರೆ ಯಾವದೇ ನಿಶ್ಚಿತ ಕಾರ್ಯಕ್ರಮ ಇಲ್ಲದೆ, ಮಳೆಗಾಲದ ತಂಪು ಹವೆಯಲ್ಲಿ, ಸುಂದರ ನಿಸರ್ಗ ನೋಡುತ್ತ, ಎದ್ದು ಹೋದರೆ ಮೈಮೇಲೆ ಕೈಯಾಡಿಸುವಷ್ಟು ಹತ್ತಿರದಲ್ಲಿ ತಮ್ಮ ಪಾಡಿಗೆ ಇರುವ ಜಿಂಕೆಗಳನ್ನು ನೋಡುತ್ತ, ಒಂದಿಷ್ಟು ಪುಸ್ತಕ ಓದುತ್ತ, ಮೊಬೈಲ್, ಇಂಟರ್ನೆಟ್, ನ್ಯೂಸ್ ಪೇಪರ್ ಇತ್ಯಾದಿಗಳ ಜಂಜಡವಿಲ್ಲದೇ ನಾಕು ದಿವಸ ಆರಾಮಾಗಿ ಇದ್ದು ಬಂದಾಯಿತು. ನಂತರ ಬರೆದಿದ್ದೇ ಇದು.

ಇದನ್ನು ಓದಿದ ಕೆಲವರಾದರೂ ಶ್ರೀ ಈಶ್ವರನ್ ಅವರ website ನೋಡಿ, ಅವರ ಪ್ರವಚನದ  ವೀಡಿಯೊಗಳನ್ನು ವೀಕ್ಷಿಸಿ, ಅವರ ಪುಸ್ತಕಗಳನ್ನು ಓದಿ, ಅವುಗಳಿಂದ ಏನಾದರೂ ಉಪಯೋಗ ಪಡೆದುಕೊಂಡರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ನಮಗೆ ಸಿಕ್ಕ ಭಾಗ್ಯ ತಮಗೂ ಸಿಗಲಿ. ಅಧ್ಯಾತ್ಮ ಸಾಧನೆಯಿಂದ (spiritual practice) ಎಲ್ಲರಿಗೂ ಒಳ್ಳೆಯದಾಗಲಿ. ಶುಭಂ ಅಸ್ತು।।

*******************
ಒಂದಿಷ್ಟು ಫೋಟೋಗಳು:

ರಾಮಗಿರಿ ಆಶ್ರಮ - ೧
ರಾಮಗಿರಿ ಆಶ್ರಮ - ೨
ರಾಮಗಿರಿ ಆಶ್ರಮದಲ್ಲಿ ಕಾಡು ಜಿಂಕೆಗಳು. 

*******************

http://www.easwaran.org/ -  ಭರಪೂರ ಮಾಹಿತಿಯಿಂದ ಕೂಡಿದ ಆಶ್ರಮದ website. ಆಸಕ್ತರಿಗೆ ಎಲ್ಲ ವಿವರಗಳೂ ಸಿಗುತ್ತವೆ. youtube ಮೇಲೆ, ಗೂಗಲ್ ಬುಕ್ಸ್ ಮೇಲೆ ಸಹ ಬೇಕಾದಷ್ಟು ಮಾಹಿತಿ ಇವೆ. ಆಸಕ್ತರು ಅವನ್ನೂ ನೋಡಬಹದು.

ಭಾರತದಲ್ಲಿ ಜೈಕೋ ಬುಕ್ಸ್ ಶ್ರೀ ಈಶ್ವರನ್ ಅವರ ಪುಸ್ತಕಗಳ ಲೋಕಲ್ ಎಡಿಷನ್ ಹೊರತರುತ್ತದೆ. ಭಾರತದ ಎಲ್ಲ ದೊಡ್ಡ ಪುಸ್ತಕದ ಅಂಗಡಿಗಳಲ್ಲಿ ಅವರ ಪುಸ್ತಕಗಳು ಲಭ್ಯ.

*******************

ಶ್ರೀ ಏಕನಾಥ ಈಶ್ವರನ್ ಅವರ ಪುಸ್ತಕಗಳು, ಪ್ರವಚನಗಳ ಮೇಲೆ ಆಧಾರಿತ ಹಳೆಯ ಬ್ಲಾಗ್ ಪೋಸ್ಟುಗಳು ಎಲ್ಲ ಇಲ್ಲಿವೆ. 

*******************

೨೦೦೫ ರಲ್ಲಿ ಮೊದಲ ಬಾರಿಗೆ ರಾಮಗಿರಿ ಆಶ್ರಮಕ್ಕೆ ಭೆಟ್ಟಿ ಕೊಟ್ಟು ಬಂದ ನಂತರ ಬರೆದ ಒಂದು ಹಳೆಯ ಬ್ಲಾಗ್ ಪೋಸ್ಟ್.

Monday, October 13, 2014

ಮಾಡಿ ಅಂಡರ್ವರ್ಲ್ಡ್ ಸಂಗ, ರೆಕ್ಕೆ ಸುಟ್ಟುಕೊಂಡ ಪತಂಗ

ಗೀತಿಕಾ ಮಹಡಿಯಿಂದ ಕೆಳಗೆ ಇಳಿದು ಬಂದಳು. ಈಗ ಆಕೆ ಮಾಜಿ ನಟಿ. ಮದುವೆಯಾಗಿದೆ, ಮಕ್ಕಳಿವೆ. ಮೊದಲಿನ ಹಾಗೆ ಮೂರೂ ಹೊತ್ತು ಶೂಟಿಂಗ್, ಅದು ಇದು ಅಂತ ಸದಾ ಬ್ಯುಸಿ ಅಲ್ಲ ಆಕೆ.

ಡ್ರಾಯಿಂಗ್ ರೂಮಿಗೆ ಬಂದು ಸೋಫಾದ ಮೇಲೆ ಕುಳಿತಳು. ಎದುರಿಗಿದ್ದ ಯಾವದೋ ಪತ್ರಿಕೆ ಕೈಗೆತ್ತಿಕೊಂಡು ಹಾಗೆ ಸುಮ್ಮನೆ ಕಣ್ಣಾಡಿಸಿದಳು. ಅಷ್ಟರಲ್ಲಿ ಆಕೆಯ ಚಿಕ್ಕ ಮಗಳು ಬಂದಳು. ಬಂದವಳೇ ಟಿವಿ ಆನ್ ಮಾಡಿದಳು. 'ಎಷ್ಟು ಟೀವಿ ನೋಡ್ತೀಯಾ ಪುಟ್ಟಿ? ಸಾಕು ಆಫ್ ಮಾಡು.........' ಅನ್ನಲು ಹೊರಟಿದ್ದ ಗೀತಿಕಾ ಮಾತು ಅರ್ಧಕ್ಕೆ ನಿಲ್ಲಿಸಿದಳು. ಟೀವಿ ಮೇಲೆ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ಫಟಾಕ್ ಅಂತ ಸೆಳೆಯಿತು. ಭಯಂಕರ ಆಸಕ್ತಿಯಿಂದ ನೋಡತೊಡಗಿದಳು. ಅಷ್ಟರಲ್ಲಿ ಮಗಳು ಚಾನೆಲ್ ಚೇಂಜ್ ಮಾಡಿಬಿಟ್ಟಳು. ಒಂದೇ ಕ್ಷಣ. ಮಗಳ ಮೇಲೆ ಸಿಕ್ಕಾಪಟ್ಟೆ ರೇಗಿದ ಗೀತಿಕಾ, ಆಕೆ ಕೈಯಿಂದ ರಿಮೋಟ್ ಕಿತ್ತುಕೊಂಡು, ತುರಂತವಾಗಿ ಮೊದಲಿನ ಚಾನೆಲ್ ಗೆ ವಾಪಸ್ ಬಂದು, ಬಿಟ್ಟ ಕಣ್ಣು ಮುಚ್ಚದೆ, ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ನೋಡುವದನ್ನು ಮುಂದುವರೆಸಿದಳು. 'ನನಗೆ ಟೀವಿ ನೋಡಬೇಡ ಅಂದೆ ಮತ್ತೆ? ಈಗ ನೀನೇ ನೋಡ್ತಾ ಇದ್ದೀಯಲ್ಲಾ ಮಮ್ಮಿ? ಬೇರೆ ಚಾನೆಲ್ ಹಾಕು,' ಅಂತ ಹಟ ಮಾಡಿದ ಮಗಳನ್ನು ಕೆಕ್ಕರಿಸಿ ನೋಡಿದಳು. ಒಂದೇ ಕ್ಷಣ. ಮತ್ತೆ ಪದೇ ಪದೇ ರಿಪೀಟ್ ಆಗುತ್ತಿದ್ದ, ರೋಚಕ, sensational ಬ್ರೇಕಿಂಗ್ ನ್ಯೂಸ್ ನೋಡುವದರಲ್ಲೇ ಮಗ್ನಳಾಗಿ ಹೋದಳು. 'ಅಮ್ಮಾ ಯಾಕೋ ಇವತ್ತು ಕಿರಿಕ್ ಮೂಡಿನಲ್ಲಿ ಇದ್ದ ಹಾಗೆ ಕಾಣ್ತಾಳೆ. ಯಾರಿಗೆ ಬೇಕು ಈ ಅಮ್ಮನ ಸಹವಾಸ?' ಅನ್ನೋ ಹಾಗೆ ಲುಕ್ ಕೊಟ್ಟ ಚಿಕ್ಕ ಮಗಳು, 'ರಾಣೀ....... ' ಅಂತ ಕರೆಯುತ್ತ, ಕೆಲಸದ ಹೆಂಗಸನ್ನು ಹುಡುಕುತ್ತ ಹೋದಳು.

ಅದೆಂತಹ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು? ಅದನ್ನು ಯಾಕೆ ಅಷ್ಟೊಂದು ಕಾತುರತೆಯಿಂದ, ಭಯದಿಂದ, ಆತಂಕದಿಂದ, ಕುತೂಹಲದಿಂದ ಗೀತಿಕಾ ನೋಡುತ್ತಿದ್ದಳು?

ಬ್ರೇಕಿಂಗ್ ನ್ಯೂಸ್: ನಾಪತ್ತೆಯಾಗಿದ್ದ ಮುಂಬೈ ಪೋಲೀಸ್ ಮಾಜಿ ಅಧಿಕಾರಿ, ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ಅವರು, ತನಿಖೆಗೆ ಹಾಜರಾಗದೇ ನಾಪತ್ತೆಯಾಗಿದ್ದರು. ಎನ್ಕೌಂಟರ್ ಸ್ಪೆಷಲಿಸ್ಟ್ ಅಂತಲೇ ಹೆಸರು ಮಾಡಿದ್ದ ಕೋರ್ಡೆ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಸಂದೇಹಗಳಿಗೆ ಒಳಗಾಗಿದ್ದರು. ವಿವಾದಗಳಿಗೆ ಈಡಾಗಿದ್ದರು. ಅವರ ಮೇಲೆ ಇತರ ಬೇರೆ ಆರೋಪಗಳೂ ಇದ್ದವು. ಮೊದಲಿನ ಇಲಾಖಾ ತನಿಖೆಗಳಲ್ಲಿ ಯಾವದೂ ಸಾಬೀತಾಗಿರಲಿಲ್ಲ. ಈಗ ಒಮ್ಮೆಲೇ ರೈಲು ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿರುವ ಕರುಣ್ ಕೋರ್ಡೆ ತಮ್ಮ ಸಾವಿನಲ್ಲಿ ಅನೇಕ ಪ್ರಶ್ನೆಗಳನ್ನು ಪ್ರಶ್ನೆಗಳನ್ನಾಗಿಯೇ ಉಳಿಸಿ ಹೋಗಿಬಿಟ್ಟಿದ್ದಾರೆ......

ಹೀಗೆ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು. ಕರುಣ್ ಕೋರ್ಡೆ ಅಂತ ಹೆಸರು ಕೇಳಿದ ಗೀತಿಕಾಳ ಚಹರಾಪಟ್ಟಿ ಏಕ್ದಂ ಬದಲಾಗಿ ಹೋಯಿತು. ಒಮ್ಮೆಲೇ ಮುಖ ಕಳಾಹೀನವಾಯಿತು. ಆದರೆ ಕರುಣ್ ಕೋರ್ಡೆ ಸತ್ತ ಅಂತ ಸುದ್ದಿ ಮನಸ್ಸಿನಲ್ಲಿ ಇಳಿದು, ಕಾಂಕ್ರೀಟ್ ನಂತೆ ಗಟ್ಟಿಯಾದ ತಕ್ಷಣ ಒಂದು ತರಹದ ರಿಲೀಫ್ ಮುಖದ ಮೇಲೆ ಮೂಡಿ ಬಂತು. ಪೂರ್ತಿ ನಿರುಮ್ಮಳ. ಏನೋ ಒಂದು ದೊಡ್ಡ ಪೀಡೆ ಕಳೆದಂತಾಯಿತು. ಸತ್ತ, ಅದೂ ನಾಯಿಯಂತೆ ರೈಲ್ವೆ ಹಳಿ ಮೇಲೆ ಸತ್ತ ಅನ್ನುವದನ್ನು ಕೇಳಿದ ಗೀತಿಕಾ ತಾನೇ ಕೊಂದು, ಪ್ರತಿಕಾರ ತೀರಿಸಿಕೊಂಡಳೋ ಎಂಬಂತೆ ಗಹಗಹಿಸಿ ನಕ್ಕಳು. ಯಾರಾದರೂ ನೋಡಿ ಘಾಬರಿಯಾದಾರು ಅಂತ ಸುಮ್ಮನಾಗಿ, ಸಾವರಿಸಿಕೊಂಡು ಮತ್ತೆ ಬ್ರೇಕಿಂಗ್ ನ್ಯೂಸ್ ನೋಡತೊಡಗಿದಳು.

ಅದ್ಯಾರೋ ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಸತ್ತು ಹೋದರೆ ಮಾಜಿ ನಟಿ ಗೀತಿಕಾ ಅದೇಕೆ ಆಪರಿ ರಿಯಾಕ್ಟ್ ಮಾಡಿದಳು!?

ಅದರ ಹಿಂದೊಂದು ದೊಡ್ಡ ಕಥೆಯಿತ್ತು. ಭಯಾನಕ ನೆನಪುಗಳಿದ್ದವು.

೧೯೯೦ ರ ದಶಕದ ಮೊದಲಿನ ದಿನಗಳು. ಆಗಷ್ಟೇ ಗೀತಿಕಾ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದಳು. ಅಪ್ರತಿಮ ಸುಂದರಿ ಆಕೆ. ಎಲ್ಲ ಹೀರೋಯಿಣಿಯರಿಗಿಂತ ಒಂದ್ನಾಕು ಇಂಚು ಜಾಸ್ತಿಯೇ ಎತ್ತರವಿದ್ದಳು. ತಂದೆ ಕೂಡ ಬಾಲಿವುಡ್ಡಿನ ನಿರ್ಮಾಪಕರೇ. ೬೦, ೭೦ ರ ದಶಕದಲ್ಲಿ ಒಂದಿಷ್ಟು ಸಿನೆಮಾ ಅವರೂ ಮಾಡಿದ್ದರು. ಹಾಗಾಗಿ ಗೀತಿಕಾಳ ಬಾಲಿವುಡ್ಡ ಎಂಟ್ರಿ ತುಂಬ ಸುಲಭವಾಗಿಯೇ ಆಗಿತ್ತು. ಅದ್ಯಾಕೆ ಮಾಡಬಾರದ ಲಫಡಾ ಮಾಡಿಕೊಂಡು ಕೂತಳೋ ಏನೋ? ತಂದೆಯಾದರೂ ಮಗಳಿಗೆ ಸರಿಯಾಗಿ ವಾರ್ನಿಂಗ್ ಕೊಡಬಾರದೇ? ಕೊಟ್ಟಿದ್ದರೋ ಏನೋ? ಯಾರಿಗೆ ಗೊತ್ತು? ನಸೀಬ್ ಸರಿಯಿಲ್ಲ ಅಂದರೆ ರಾತ್ರಿ ಕಂಡ ಬಾವಿಯಲ್ಲಿ ಹಗಲು ಹೋಗಿ ಬೀಳಬೇಕಾಗುತ್ತದೆ. ಆ ಮಾದರಿಯಲ್ಲಿ ಗೀತಿಕಾಳ ಲೈಫ್ ಒಂದು ವಿಚಿತ್ರ ತಿರುವು ತೆಗೆದುಕೊಂಡುಬಿಟ್ಟಿತು.

೯೦ ರ ದಶಕದ ಮೊದಲಿನ ದಿನಗಳು ಅಂದರೆ ಕೇಳಬೇಕೇ? ಮುಂಬೈ ಮಾಫಿಯಾದ ಮೇರು ದಿನಗಳು ಅವು. ಇನ್ನೂ ೧೯೯೩ ರ ಮುಂಬೈ ಸ್ಪೋಟಗಳು ಆಗಿರಲಿಲ್ಲ. ಮುಂಬೈ ಅಂಡರ್ವರ್ಲ್ಡ್ ಪೂರ್ತಿ ದುಬೈನಲ್ಲಿ ಬೀಡು ಬಿಟ್ಟಿತ್ತು. ದೊಡ್ಡ ದೊಡ್ಡ ಭಾಯಿಗಳೆಲ್ಲ ಅಲ್ಲಿದ್ದರು. ಹಾಯಾಗಿ ಲಕ್ಸುರಿ ಜೀವನ ಮಾಡಿಕೊಂಡು ಆರಾಮಿದ್ದರು. ಅವರ ಚೇಲಾಗಳು ಮುಂಬೈನಲ್ಲಿ ಘೋಡಾ (ಪಿಸ್ತೂಲು) ಒತ್ತುತ್ತ, ಹಲ್ಲಾ ಗುಲ್ಲಾ ಎಬ್ಬಿಸುತ್ತ, ದೊಡ್ಡ ಪ್ರಮಾಣದ ವಸೂಲಿ ಮಾಡುತ್ತ, ಮಾಡಿದ ಕಾಸನ್ನು ಹವಾಲಾ ಮೂಲಕ ದುಬೈಗೆ ತಲುಪಿಸುತ್ತ ಎಲ್ಲರೂ ಮಜವಾಗಿದ್ದರು. ದೊಡ್ಡ ದೊಡ್ಡ ಕೆಲಸ ಮಾಡಿದ ಲೋಕಲ್ ರೌಡಿಗಳಿಗೆ ಪ್ರಮೋಷನ್ ಅಂದರೆ ದುಬೈ ಟ್ರಿಪ್ಪು. ಅಲ್ಲಿ ಲಿಮಿಟ್ ಇಲ್ಲದ ಮೋಜು, ಮಸ್ತಿ. ಭಾರತದಲ್ಲಿ ಭಯಂಕರ ದೊಡ್ಡ ಕೊಲೆ ಗಿಲೆ ಮಾಡಿಬಿಟ್ಟರೆ ದುಬೈನಲ್ಲೇ ಪರ್ಮನೆಂಟ್ ವಾಸ್ತ್ಯವ್ಯ. ಡಾನ್ ಜೊತೆಗೇ ಇದ್ದು, ಅಲ್ಲಿಂದಲೇ ಕೆಲಸ. ಚಿಕ್ಕ ಡಾನ್ ಆದ ಹಾಗೆ.

ದುಬೈನಲ್ಲಿದ್ದ ಅಂಡರ್ವರ್ಲ್ಡ್ ಭಾಯಿಗಳಿಗೆ ದೊಡ್ಡ ಆಕರ್ಷಣೆ ಅಂದರೆ ಬಾಲಿವುಡ್ಡು. ಇದು ನಿನ್ನೆ ಮೊನ್ನೆಯದಲ್ಲ. ಹಾಜಿ ಮಸ್ತಾನನ ಕಾಲದಿಂದಲೂ ಇದ್ದಿದ್ದು. ಭಾಯಿಗಳ ಶಕ್ತಿಗೆ, ತಾಕತ್ತಿಗೆ, ರೊಕ್ಕದ ಝಣಝಣಕ್ಕೆ ಬಾಲಿವುಡ್ ಫುಲ್ ಫಿದಾ. ತಾರೆಯರ ಸೌಂದರ್ಯಕ್ಕೆ, ನಾಚ್ ಗಾನಾಕ್ಕೆ, ನಖರಾಕ್ಕೆ, ಹೈ ಫೈ ನೌಟಂಕಿಗಳಿಗೆ ಅಂಡರ್ವರ್ಲ್ಡ್ ನ ಭಾಯಿ ಲೋಗ್ ಫುಲ್ ಫಿದಾ. ಯಾವಾಗ ಭಾಯಿಗಳಿಗೆ ಬಾಲಿವುಡ್ಡಿನಲ್ಲಿದ್ದ ಬೇರೆ ಬೇರೆ ರೊಕ್ಕದ ಮೂಲಗಳು ತಿಳಿದವೋ ಆವತ್ತಿನಿಂದ ಚಿತ್ರ ನಿರ್ಮಾಣದಿಂದ ಹಿಡಿದು, overseas rights, VCD, DVD, ಮ್ಯೂಸಿಕ್ ರೈಟ್ಸ್, ತಾರೆಯರನ್ನು ಒಟ್ಟಾಗಿ ಕರೆದುಕೊಂಡು ಹೋಗಿ ಮೂವಿಗಳ ಪ್ರಮೋಷನ್ ಮಾಡುವದು, ಎಲ್ಲವನ್ನೂ ಭಾಯಿ ಜನರೇ ಶುರು ಹಚ್ಚಿಕೊಂಡರು. ಸಿಕ್ಕಾಪಟ್ಟೆ ರೊಕ್ಕ ಮಾಡಿಕೊಂಡರು. ಹೀಗೆ ಪೂರ್ತಿ ಬಾಲಿವುಡ್ಡಿಗೆ ಬಾಲಿವುಡ್ಡೇ ಅಂಡರ್ವರ್ಲ್ಡ್ ಮಯವಾಗಿ ಹೋಯಿತು. ಎರಡೂ ಕಡೆ ಸಲ್ಲುವವರೇ ಜಾಸ್ತಿಯಾಗಿ, ಬಾಲಿವುಡ್ಡಿನಲ್ಲಿ ಇದ್ದಾರೆ ಅಂದ್ರೆ ಅಂಡರ್ವರ್ಲ್ಡ್ ಜೊತೆ ಸಂಪರ್ಕ ಹೊಂದೇ ಇರುತ್ತಾರೆ ಬಿಡಿ ಅನ್ನುವ ಹಾಗೆ ಆಗಿಹೋಯಿತು.

ಹೀಗೆ ಇದ್ದಾಗ ಗೀತಿಕಾ ಕೂಡ ಒಂದು ಶೋ ಮಾಡಲು ದುಬೈಗೆ ಹೋಗಬೇಕಾಯಿತು. ಭೂಗತ ಲೋಕದ ದೊಡ್ಡ ಭಾಯಿಯೊಬ್ಬನ ಮನೆಯಲ್ಲಿ ಏನೋ ಕಾರ್ಯಕ್ರಮ. ಅದಕ್ಕೆ ದೊಡ್ಡ ದೊಡ್ಡ ನಟ, ನಟಿಯರನ್ನು ಕರೆಯಿಸಿ, ಒಂದು ಮನೋರಂಜನಾ ಕಾರ್ಯಕ್ರಮ ಏರ್ಪಡಿಸಿ, ದುಬೈನಲ್ಲಿ ತಮ್ಮ ಸಾಮರ್ಥ್ಯದ ಒಂದು ಝಳಕ್ ತೋರಿಸಿ, ಅಲ್ಲಿನ ಅರಬ್ ಶೇಖ್ ಗಳ ಮುಂದೆ ಸ್ಕೋಪ್ ತೆಗೆದುಕೊಳ್ಳುವ ಹುನ್ನಾರ ಡಾನ್ ಗಳದ್ದು. ಮತ್ತೆ ಡಾನ್ ಗಳ ಮತ್ತು ಹಲವು ನಟ ನಟಿಯರ ಮಧ್ಯೆ ವ್ಯವಹಾರ ಮೀರಿದ ಚಿತ್ರ ವಿಚಿತ್ರ ವಯಕ್ತಿಕ ಸಂಬಂಧಗಳೂ ಇದ್ದವು ನೋಡಿ. ಎಲ್ಲದಕ್ಕೂ ಆಯಿತು ಅಂತ ಒಂದು ದುಬೈ ಟ್ರಿಪ್. ಇಡೀ ಟ್ರಿಪ್ಪಿನ ಪ್ರಾಯೋಜಕ ಕುಖ್ಯಾತ ಡಾನ್ ಛೋಟಾ ಫಕೀರ್.

ಹೊರಟವರಲ್ಲಿ ಮೂರ್ನಾಕು ಜನ ದೊಡ್ಡ ದೊಡ್ಡ ನಟ ನಟಿಯರು ಇದ್ದರು. ಇನ್ನೂ ಒಂದಿಷ್ಟು ಜನ ಸೆಕೆಂಡ್ ಲೆವೆಲ್ ನಟ ನಟಿಯರೂ ಇದ್ದರು. ಗೀತಿಕಾ ತರಹದವರು. ಮ್ಯೂಸಿಕ್ ಕಂಪೋಸರ್ ಜನ ಸಹಿತ ಹೊರಟಿದ್ದರು. ದೊಡ್ಡ ಟೋಳಿ. ಆಗ ಮಾತ್ರ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದ ಗೀತಿಕಾಳಿಗೆ ಇದು ಮೊದಲನೇ ದುಬೈ ಟ್ರಿಪ್. ಆಕೆಗೆ ಅಂಡರ್ವರ್ಲ್ಡ್ ಭಾಯಿ ಲೋಗ್ ಗಳ ಬಗ್ಗೆ ಗೊತ್ತಿತ್ತಾ? ಭಾಯಿ ಲೋಗ್ ಬೇರೆ ಬೇರೆ ತಾರೆಯರನ್ನು ಹೇಗೇಗೆ, ಯಾತ್ಯಾತಕ್ಕೆಲ್ಲ ಉಪಯೋಗಿಸಿಕೊಂಡಿದ್ದರು ಅಂತೆಲ್ಲ ಆಕೆಗೆ ಗೊತ್ತಿತ್ತಾ? ಆದರೂ ಹೋದಳೇ? ಅಥವಾ ಹೋಗಲೇಬೇಕಾದಂತಹ ಒಂದು ತರಹದ ಅನಿವಾರ್ಯತೆಯನ್ನು ತಂದು ಹಾಕಿತ್ತಾ ಬಾಲಿವುಡ್? ಬಾಲಿವುಡ್ ನಲ್ಲಿ ಯಶಸ್ಸು ಬೇಕು ಅಂದರೆ ಭಾಯಿ ಲೋಗ್ ಜೊತೆ compromise ಮಾಡಿಕೊಳ್ಳಲೇ ಬೇಕು ಅಂತ ಆಗಿಂದಲೇ ಪರೋಕ್ಷವಾಗಿ brain washing ಶುರುವಾಗಿ ಬಿಟ್ಟಿತ್ತೇ? ಒಟ್ಟಿನಲ್ಲಿ ಎಲ್ಲ ಕೂಡಿ ಬಂದು ಗೀತಿಕಾಳ ದುಬೈ ಟ್ರಿಪ್ ನಿಕ್ಕಿಯಾಗಿತ್ತು.

ದುಬೈಗೆ ಹೋದಳು. ಸುಮಾರು ಒಂದು ವಾರದ ಪ್ರೊಗ್ರಾಮ್ ಇತ್ತು. ಪ್ರತಿದಿನ ಸಂಜೆ ಪ್ರೊಗ್ರಾಮ್ ಇರುತ್ತಿತ್ತು. ಲೈವ್ ನಾಚ್ ಗಾನಾ. ಏನೂ ವಿಶೇಷ ಅನ್ನಿಸಲಿಲ್ಲ ಗೀತಿಕಾಗೆ. ಯಾವದೇ ರೀತಿಯ ತೊಂದರೆಯೂ ಆಗಲಿಲ್ಲ. ಇದ್ದ ದೊಡ್ಡ ದೊಡ್ಡ ನಾಲ್ಕಾರು ಭಾಯಿ ಲೋಗ್ ಜನ ಇವಳ ಬಗ್ಗೆ ಏನೂ ವಿಶೇಷ ಆಸಕ್ತಿ ತೋರಿಸಿರಲಿಲ್ಲ. ಮತ್ತೆ ಗೀತಿಕಾಗಿಂತ ದೊಡ್ಡ ದೊಡ್ಡ ನಟಿಮಣಿಯರೆಲ್ಲ ಅಲ್ಲಿ ಇದ್ದರಲ್ಲ? ಅವರೆಲ್ಲ ಭಾಯಿ ಜನರ ಡವ್ವುಗಳು. ಅವರ ಮಧ್ಯೆ ಲವಿ ಡವಿ ಜೋರಾಗಿ ನಡೆಯುತ್ತಿತ್ತು. ಅವನ್ನೆಲ್ಲ ಬೆರಗುಗಣ್ಣಿಂದ ನೋಡುತ್ತ, ಮುಂಬೈನಲ್ಲಿದ್ದಾಗ ಕೇವಲ ಹೆಸರು ಮಾತ್ರ ಕೇಳಿದ್ದ ಭೂಗತ ದೊರೆಗಳನ್ನು ಹತ್ತಿರದಿಂದ ನೋಡಿ, ರೋಮಾಂಚನ ಫೀಲ್ ಮಾಡಿಕೊಳ್ಳುವ ಥ್ರಿಲ್ ಗೀತಿಕಾಳದ್ದು. ಅದರಲ್ಲೂ ಎಲ್ಲೋ ಒಮ್ಮೆ ದೊಡ್ಡ ಭೂಗತ ದೊರೆ ಅಪರೂಪಕ್ಕೆ ಎಂಬಂತೆ ಸ್ವಲ್ಪ ಕಾಳು ಹಾಕಿದ ಅಂದರೆ ನೆಲದ ಮೇಲೆ ಕಾಲೇ ನಿಲ್ಲುತ್ತಿರಲಿಲ್ಲ ಗೀತಿಕಾ ತರಹದ ಇನ್ನೂ ಮಾತ್ರ ಬಾಲಿವುಡ್ಡಿನಲ್ಲಿ ಅಂಬೆಗಾಲಿಡುತ್ತಿದ್ದ ಕಂದಮ್ಮಗಳಿಗೆ. ಡಾನ್ ಜನಗಳು ಯಾರ್ಯಾರನ್ನೋ ಹೀರೋ ಹೀರೋಯಿಣಿ ಮಾಡಿದ್ದರು. ಯಾರ್ಯಾರನ್ನೋ ಕೊಳೆತ ಹಣ್ಣಿನಂತೆ ತೆಗೆದು ಬಿಸಾಕಿದ್ದರು. ಭಾಯಿಗಳ ಮಾತು ಕೇಳದ ಕೆಲವು ನಿರ್ಮಾಪಕರು ಡಾನ್ ಗಳು ಕಳಿಸಿದ್ದ ಶಾರ್ಪ್ ಶೂಟರ್ ಗಳು ಹಾರಿಸಿದ್ದ ಗುಂಡು ತಿಂದು ಸತ್ತೇ ಹೋಗಿದ್ದರು. ಆಮಟ್ಟಿಗಿತ್ತು ಬಾಲಿವುಡ್ ಮೇಲೆ ಭಾಯಿಗಳ ಹಿಡಿತ.

ಗೀತಿಕಾಳ ಖಾತಿರ್ದಾರಿಗೆ ನಿಂತವ ರಫೀಕ್. ಡಾನ್ ಛೋಟಾ ಫಕೀರನ ಖಾಸಮ್ ಖಾಸ್ ಮನುಷ್ಯ. ಹಾಗಂತ ಅವನೇ ಹೇಳಿಕೊಂಡಿದ್ದ. ಡಾನ್ ಛೋಟಾ ಫಕೀರನ ಬಲಗೈ ಬಂಟನೇ ತನ್ನ ಆತಿಥ್ಯಕ್ಕೆ, ಸತ್ಕಾರಕ್ಕೆ ನಿಂತು ಬಿಟ್ಟಿದ್ದಾನೆ ಅಂತ ತಿಳಿದ ಗೀತಿಕಾ ಫುಲ್ ಥ್ರಿಲ್. ಆ ವಯಸ್ಸೇ ಅಂತಹದು. ಇನ್ನೂ ಇಪ್ಪತ್ತರ ಹರೆಯ ಆಕೆಗೆ. ಫುಲ್ ಖುಷ್. ರಫೀಕ್ ಕೂಡ ತುಂಬ ಸಭ್ಯವಾದ ರೀತಿಯಲ್ಲಿಯೇ ನಡೆದುಕೊಂಡಿದ್ದ. ತನ್ನ ಬಾಸ್ ಛೋಟಾ ಫಕೀರ್ ಬಗ್ಗೆ ಏನೇನೋ ಭಯಂಕರ ರೋಚಕ ಕಥೆ ಹೇಳುತ್ತಿದ್ದ ರಫೀಕ್. ಅವನ್ನೆಲ್ಲ ಬಾಯಿ ಬಿಟ್ಟುಗೊಂಡು ತನ್ಮಯತೆಯಿಂದ ಕೇಳುತ್ತಿದ್ದಳು ಗೀತಿಕಾ. ರಫೀಕ್ ಆಗಲೇ ಹೊಸ ಹಕ್ಕಿಗೆ ಕಾಳು ಹಾಕಲು ಶುರು ಮಾಡಿದ್ದನೇ? ಹೇಗೂ ಬಾಸ್ ಛೋಟಾ ಫಕೀರ್ ದೊಡ್ಡ ದೊಡ್ಡ ನಟಿಯರ ತೆಕ್ಕೆಯಲ್ಲಿಯೇ ಇರುತ್ತಿದ್ದರು. ಅವರ ಸಹಾಯಕರಾದ ರಫೀಕನಂತವರು ಸೆಕೆಂಡ್ ಲೆವೆಲ್ ನಟಿಯರನ್ನು ಪಟಾಯಿಸಿದರೆ ತಪ್ಪೇನು? ಹಾಗಂತ ಅಂದುಕೊಂಡನೇ ರಫೀಕ್?

ನೋಡಲು ಸಕತ್ತಾಗಿದ್ದ ರಫೀಕ್. ಹೇಳಿ ಕೇಳಿ ಲಂಬಾ ಚೌಡಾ ಪಠಾಣ. ಮೂಲತಃ ಅಫ್ಘಾನಿ. ಮತ್ತೆ ಕೇಳಬೇಕೆ? ಇನ್ನೂ ಮೂವತ್ತು ವರ್ಷ ಅವನಿಗೆ. ಮುಂಬೈನಲ್ಲಿ ಅವನಿಗೂ ದೊಡ್ಡ ಹೆಸರಿತ್ತು. ಒಂದೆರೆಡು ಬಹಳ ದೊಡ್ಡ ಗೇಮ್ ಬಾರಿಸಿದ್ದ. ಇನ್ನೂ ಮುಂಬೈನಲ್ಲೇ ಇದ್ದರೆ ಪೊಲೀಸರು ಎನ್ಕೌಂಟರ್ ಮಾಡೇ ಬಿಡುತ್ತಾರೆ ಅನ್ನುವ ಸನ್ನಿವೇಶ ಉಂಟಾದಾಗ ಖುದ್ದು ಡಾನ್ ಛೋಟಾ ಫಕೀರನೇ ಮಾಂಡವಲಿ (ಸಂಧಾನ) ಮಾಡಿಸಿ, ಕೊಡಬೇಕಾದ ಪೋಲೀಸರಿಗೆಲ್ಲ ಕೊಡಬೇಕಾದಷ್ಟು ಕಾಣಿಕೆ ಎಲ್ಲ ಸಲ್ಲಿಸಿ, ಮುಂಬೈನಿಂದ ದುಬೈಗೆ ರಫೀಕನನ್ನು ಉಡ್ಕಿ ಹಾರಿಸಿದ್ದ. ದುಬೈಗೆ ಬಂದು ನೆಲೆಸಿದ್ದ ರಫೀಕ್ ಈಗ ರಫೀಕ್ ಭಾಯ್. ಇದೆಲ್ಲ ಗೀತಿಕಾಳಿಗೆ ಈಗ ಗೊತ್ತಾಯಿತು. ಗೊತ್ತಾಗಿ, 'ಹೌದಾ!?' ಅನ್ನುವ ಹಾಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿಬಿಟ್ಟಳು.

ಒಂದು ವಾರ ರಫೀಕ್ ಜೊತೆ ದುಬೈ ಸುತ್ತಿದ್ದೇ ಸುತ್ತಿದ್ದು. ಸಕತ್ತಾಗಿ ಶಾಪಿಂಗ್ ಮಾಡಿಸಿಬಿಟ್ಟ ರಫೀಕ್. ಆದರೆ ಸಭ್ಯತೆಯ ಎಲ್ಲೆ ಎಂದೂ ಮೀರಲಿಲ್ಲ. ಸ್ವಲ್ಪ ಒಳ್ಳೆ ಪರಿಚಯವಾಗಿ, ಕ್ಲೋಸ್ ಫ್ರೆಂಡ್ ಫೀಲಿಂಗ್ ಬಂದ ಮೇಲೆ ಒಂದಿಷ್ಟು ಪೋಲಿ ಜೋಕ್ಸ್ ಮಾತ್ರ ಎಗ್ಗಿಲ್ಲದೆ ಹೊಡೆಯುತ್ತಿದ್ದ ರಫೀಕ್. ಕೆಂಪು ಕೆಂಪಾಗುತ್ತಿದ್ದ ಗೀತಿಕಾ ಬಿದ್ದು ಬಿದ್ದು ನಗುತ್ತಿದ್ದಳು. 'ಮಂಚಕ್ಕೆ ಕರೆಯೋ ಮೊದಲು ಮಾಲನ್ನು ಸಾಕಷ್ಟು ನಗಿಸಬೇಕು ರಫೀಕ್ ಮಿಯಾ. ಗೊತ್ತು ಕ್ಯಾ? ಹಸೀ ತೋ ಫಸೀ ರೇ! ನಕ್ಕರೆ ಬಿದ್ದಳು. ಹುಡುಗಿಯನ್ನು ನಗಿಸುವದರಲ್ಲಿ ಗೆದ್ದೆ ಅಂದರೆ ಎಲ್ಲ ಗೆದ್ದಂತೆ. ನಂತರ ಹಾಸಿಗೆಗೆ ತಾನಾಗೇ ಬರುತ್ತಾಳೆ. ಅಂಡರ್ವರ್ಲ್ಡ್ ಭಾಯಿ ಅಂತ ಹೆದರಿಸಿ, ಬೆದರಿಸಿ ಮಾಲು ಪಟಾಯಿಸಬೇಕು ಅಂತಿಲ್ಲ ಮಿಯಾ. ಥೋಡಾ ನರ್ಮೀ ಸೆ ಕಾಮ್ ಕರೋ ಜೀ. ಬಾಲಿವುಡ್ ಹುಡುಗಿಯರಿಗೆ ದುಬೈ ತೋರಿಸಿ, ಐಶ್ ಮಾಡಿಸಿ, ಶಾಪಿಂಗ್ ಮಾಡಿಸಿ, ನಗಿಸಿ, ನಗು ನಗುತ್ತಲೇ ಮಂಚ ಹತ್ತಿಸಿ. ಏ ಬಾಲಿವುಡ್ ಕಿ ಲಡ್ಕಿಯಾ ಸಬ್ ಕುತ್ತೀ ಚೀಜ್ ಹೋತಿ ಹೈ. ಪೈಸೆ ಕೆ ಪೀಛೆ. ಎಲ್ಲ ರೊಕ್ಕದ ಹಿಂದೆ ಓಡ್ತಾರೆ. ಪೈಸಾ ಫೇಂಕ್ ಔರ್ ತಮಾಷಾ ದೇಖ್ ಭಾಯ್. ದುಡ್ಡು ಎಸೆದು ಮಜಾ ನೋಡಿ,' ಅಂತ ಬಾಸ್ ಛೋಟಾ ಫಕೀರ್ ಉವಾಚ. ಅದೇ ಟೆಕ್ನೀಕ್ ಉಪಯೋಗಿಸಿ ರಫೀಕ್ ಗೀತಿಕಾಗೆ ಕಾಳು ಹಾಕಲು ಶುರು ಮಾಡಿದ್ದ. ಬೆಣ್ಣೆ ಹತ್ತಿರ ಬೆಂಕಿ ಹೋಗಲಿ ಅಥವಾ ಬೆಂಕಿ ಹತ್ತಿರ ಬೆಣ್ಣೆಯೇ ಹೋಗಲಿ ಕರಗುವದು ಮಾತ್ರ ಬೆಣ್ಣೆಯೇ. ಅಲ್ಲವೇ? ಬೆಣ್ಣೆಯಂತಿದ್ದ ಗೀತಿಕಾ ರಫೀಕ್ ಎಂಬ ಅಂಡರ್ವರ್ಲ್ಡ್ ಭಾಯಿಯ ಬೆಂಕಿಯ ಝಳಕ್ಕೆ ಕರಗಲು ಆರಂಭಿಸಿದ್ದಳು. ಪ್ರಕೃತಿಯ ನಿಯಮ. ಯಾರೇನು ಮಾಡಲು ಆಗುತ್ತದೆ?

ರಫೀಕ್ ಕೂಡ ಗೀತಿಕಾ ಮೇಲೆ ಫಿದಾ ಆಗಿದ್ದನೇ? ಅಥವಾ ಅವನ ಮಿದುಳಲ್ಲಿ ಬೇರೇನೋ ಖತರ್ನಾಕ್ ಪ್ಲಾನಿಂಗ್ ನಡೆಯುತ್ತಿತ್ತೋ? ಗೀತಿಕಾ ಮಾತ್ರ ರಫೀಕ್ ಮೇಲೆ ಫುಲ್ ಫಿದಾ. infatuation ಅನ್ನಿ. ಭೂಗತ ಡಾನ್ ಗಳ ಮೇಲೆ ಹುಚ್ಚಿಯರಂತೆ ಫುಲ್ ಫಿದಾ ಆದ ಬಾಲಿವುಡ್ ಸುಂದರಿಯರ ಲಿಸ್ಟ್ ಬಹಳ ದೊಡ್ದದಿದೆ ಬಿಡಿ. ಅದಕ್ಕೆ ಮತ್ತೊಂದು ಹೆಸರು ದಾಖಲಾಗಿತ್ತು. ಅದೇ ಗೀತಿಕಾ.

ಒಂದು ವಾರ ಮುಗಿದೇ ಹೋಯಿತು. ಗೀತಿಕಾಳಿಗೆ ದುಬೈ ಬಿಟ್ಟು ಬರುವ ಮನಸ್ಸೇ ಇಲ್ಲ. ದಿನವಿಡೀ ರಫೀಕ್ ಜೊತೇನೇ ಇರಬೇಕು ಅನ್ನಿಸುತ್ತಿತ್ತು. ಆದರೇನು ಮಾಡುವದು? ವಾಪಸ್ ಮುಂಬೈಗೆ ಬರಲೇಬೇಕಾಗಿತ್ತು. ಕೊನೆಯ ದಿವಸ ರಫೀಕ್ ಭರ್ಜರಿ ಶಾಪಿಂಗ್ ಮಾಡಿಸಿದ. ಕಬ್ಬಿಣ ಸರಿಯಾಗಿ ಕಾದಿದೆ ಅಂತ ಅರಿತಿದ್ದ ರಫೀಕ್ ಒಂದು ದೊಡ್ಡ ಹೊಡೆತ ಹಾಕೇಬಿಟ್ಟ. ಹೃದಯದಾಕಾರದ ಒಂದು ಮಹಾ ತುಟ್ಟಿ ಪೆಂಡೆಂಟ್ ಇರುವ ಬಂಗಾರದ ಚೈನ್ ಗೀತಿಕಾಳಿಗೆ ಗಿಫ್ಟ್ ಅಂತ ಕೊಟ್ಟುಬಿಟ್ಟ. ರಫೀಕ್, ಗೀತಿಕಾ ಅಂತ ಹೆಸರು ಬೇರೆ ಕೆತ್ತಿಸಿಬಿಟ್ಟಿದ್ದ. ಸುಮ್ಮನೆ ಪ್ರೆಸೆಂಟ್ ಕೊಡಲಿಲ್ಲ. ಪಾಕೀಜಾ ಚಿತ್ರದ ಭಯಂಕರ ರೋಮ್ಯಾಂಟಿಕ್ ಡೈಲಾಗ್ ಬೇರೆ ಹೊಡೆದಿದ್ದ. ಆ ಗಿಫ್ಟ್ ತೆಗೆದುಕೊಳ್ಳುವಷ್ಟರಲ್ಲಿ ಗೀತಿಕಾ ಫುಲ್ ಕರಗಿ ಹೋಗಿದ್ದಳು. ಇಲ್ಲದ ಮನಸ್ಸಿನಿಂದ ವಾಪಸ್ ಮುಂಬೈಗೆ ಪ್ಲೇನ್ ಹತ್ತಿದ್ದಳು. 'ನೀನು ಎಲ್ಲೇ ಇರು. ನಿನ್ನ ಹುಡುಕಿ ಫೋನ್ ಮಾಡ್ತೀನಿ,' ಅಂತ ರಫೀಕ್ ಹೇಳಿಬಿಟ್ಟಿದ್ದ. ಅವನಿಗೆ ಮುಂಬೈನಲ್ಲಿ, ಬಾಲಿವುಡ್ಡಿನಲ್ಲಿ ಇದ್ದ ವ್ಯಾಪಕ ಸಂಪರ್ಕಗಳನ್ನು ತಿಳಿದಿದ್ದ ಗೀತಿಕಾಗೆ ಅದರಲ್ಲಿ ಏನೂ ಆಶ್ಚರ್ಯ ಅನ್ನಿಸಲಿಲ್ಲ.  ಆದರೆ ಮುಂದೆ ರಫೀಕನ ಜೊತೆ ಆಗಲಿದ್ದ ಫೋನ ಸಂಭಾಷಣೆಗಳೇ ಆಕೆಯ ಭವಿಷ್ಯದ ಬುಡಕ್ಕೇ ಬತ್ತಿ ಇಡುತ್ತವೆ ಅಂತ ಏನಾದರೂ ಅವಳಿಗೆ ತಿಳಿದಿತ್ತೇ?

ಗೀತಿಕಾಳನ್ನು ಪ್ಲೇನ್ ಹತ್ತಿಸಿದ ನಂತರ ರಫೀಕ್ ವಾಪಸ್ ಬಂದ. ಮನೆಗೆ ಬಂದವನೇ ಒಂದು ಮಗ್ ಬಿಯರ್ ರೆಡಿ ಮಾಡಿಕೊಂಡ. ಒಂದು ನಂಬರ್ ಡಯಲ್ ಮಾಡಿದ. ಫೋನ್ ನಲ್ಲಿ ಮಾತಾಡಿದ್ದು ಇಷ್ಟು. 'ಸಾಬ್, ಕಾಮ್ ಹೋ ಗಯಾ ಹೈ. ನಿಮ್ಮ ಕೆಲಸ ಆಗಿದೆ. ನಿಮ್ಮದೂಕಿ ಕೆಲಸ ಶುರು ಹಚ್ಚಿಕೊಳ್ಳಿ ಸಾಬ್. ಮತ್ತೇನಾದರೂ ಕೆಲಸ ಇದ್ದರೆ ಹೇಳಿ ಸಾಬ್. ಮುಂಬೈನಲ್ಲಿ ನಮ್ಮದು ಗ್ಯಾಂಗಿನ ಬಚ್ಚಾ ಲೋಗ್ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ ಸಾಬ್. ಕಳೆದ ವಾರ ಮೂವರನ್ನು ಎನ್ಕೌಂಟರ್ ನಲ್ಲಿ ಉಡಾಯಿಸಿ ಬಿಟ್ಟಿರಿ. ಭಾಯಿ ಛೋಟಾ ಫಕೀರ್ ಜೊತೆ ಡೀಲ್ ಆಗಿದ್ದು ಇಬ್ಬರು ಅಂತ ತಾನೇ? ಯಾಕೆ ಸಾಬ್ ಹಾಗೆ ಮಾಡಿಬಿಟ್ಟಿರಿ? ಅದರಲ್ಲೂ ದೊಡ್ಡ ಶಾರ್ಪ್ ಶೂಟರ್ ಒಬ್ಬನನ್ನೂ ಕೂಡ ತೆಗೆದುಬಿಟ್ಟಿರಿ. ಸ್ವಲ್ಪ ರೆಹೆಮ್ (ಕರುಣೆ) ತೋರಿಸಿ ಸಾಬ್,' ಅಂದ. ಆಕಡೆ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ ವಿಕೃತ ನಗೆ ನಕ್ಕ. 'ಅಚ್ಛಾ, ಅಚ್ಛಾ, ಈಗ ಫೋನ್ ಇಡು ಸಾಕು,' ಅಂತ ಪೋಲೀಸರ ದಬಾಯಿಸೋ ದನಿಯಲ್ಲಿ ಆರ್ಡರ್ ಮಾಡಿ ಫೋನ್ ಕುಕ್ಕಿದ ಕರುಣ್ ಕೋರ್ಡೆ, 'ಇಸ್ಕಿ ಮಾಯಿಲಾ, ಇನ್ನು ಮುಂದೈತೆ ಊರ ಹಬ್ಬ. ಮಸ್ತ ಬಕರಾ ಬಿತ್ತು ಬಲೆಗೆ. ಇನ್ನು ಬಲಿ ತೆಗೆದುಕೊಂಡು ಆಪೋಶನ ತೆಗೆದುಕೊಂಡು ಬಿಡ್ತೀನಿ,' ಅಂತ ಗಹಗಹಿಸಿದ. ದುಬೈನಲ್ಲಿ ಕೂತ ಭೂಗತ ಪಾತಕಿ ರಫೀಕ್  ಮುಂಬೈ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆಗೆ ಅದೆಂತಹ ಡೀಲ್ ವರ್ಕ್ ಔಟ್ ಮಾಡಿ ಕೊಟ್ಟಿದ್ದ?

ಗೀತಿಕಾ ಬಂದು ಮುಂಬೈ ತಲುಪಿಕೊಂಡಳು. ಮನೆ ಮಾತ್ರ ಮುಟ್ಟಿದ್ದಳು. ಅಷ್ಟರಲ್ಲಿ ಒಬ್ಬ ದೊಡ್ಡ ಪ್ರೊಡ್ಯೂಸರ್ ಬಂದವನೇ ಒಂದು ದೊಡ್ಡ ಬಜೆಟ್ಟಿನ ಬಿಗ್ ಬ್ಯಾನರ್ ಮೂವಿಗೆ ಸೈನ್ ಹಾಕಿಸಿಕೊಂಡು ಬಿಟ್ಟ. ಅದೂ ಸೂಪರ್ ಹೀರೋ ತರುಣ್ ಕುಮಾರ್ ಜೊತೆಗೆ. ದೊಡ್ಡ ಮಟ್ಟದ ಪೇಮೆಂಟ್ ಕೂಡ ಕೊಟ್ಟ. ಥ್ಯಾಂಕ್ಸ್ ಹೇಳಿದರೆ, 'ದುಬೈ ಭಾಯಿ ಹೇಳಿದ ಅಂದ ಮೇಲೆ ನಮ್ಮದೇನಿದೆ? ಅವರದ್ದೇ ದುಡ್ಡು ತಾಯಿ. ಟೈಮಿಗೆ ಸರಿಯಾಗಿ ಬಂದು ಶೂಟಿಂಗ್ ಮಾಡಿ ಹೋಗಿ. ದೊಡ್ಡ ಉಪಕಾರವಾಗುತ್ತೆ,' ಅಂತ ಏನೋ ಹೇಳಿ ಹೋಗಿಬಿಟ್ಟಿದ್ದ ಆ ಪ್ರೊಡ್ಯೂಸರ್. 'ಏನಪ್ಪಾ ಇದು ಒಮ್ಮೆಲೇ ನಸೀಬ್ ಖುಲಾಯಿಸಿಬಿಟ್ಟಿತು?' ಅಂತ ಅಂದುಕೊಂಡ ಗೀತಿಕಾ ಹ್ಯಾಪಿ ಹ್ಯಾಪಿ ಫೀಲಿಂಗ್ ಅನುಭವಿಸೋಣ ಅನ್ನುವಷ್ಟರಲ್ಲಿ ಫೋನ್ ರಿಂಗಾಯಿತು. ಅದೂ ಮನೆ ಲ್ಯಾಂಡ್ ಲೈನ್. ಆವಾಗೆಲ್ಲ ಅದೇ ತಾನೇ? ಎಲ್ಲಿಯ ಮೊಬೈಲ್? ಫೋನ್ ಎತ್ತಿದರೆ, ಆಕಡೆ ದುಬೈನಿಂದ ಆಶಿಕ್ ರಫೀಕ್. ಎಕ್ಸೈಟ್ಮೆಂಟ್ ತಡಿಯಲಾಗದೇ, 'ರಫೀಕ್! ಮೈ ಡಾರ್ಲಿಂಗ್! ಐ ಯಾಮ್ ಸೋ ಹ್ಯಾಪಿ ಯಾರ್!' ಅಂತ ಚೀರಿಯೇ ಬಿಟ್ಟಳು ಗೀತಿಕಾ. ಒಂದೇ ಉಸಿರಿನಲ್ಲಿ ಎಲ್ಲ ಕಥೆ ಹೇಳಿ ಮುಗಿಸಿದಳು. ಕೇಳಿದ ರಫೀಕ್, ಅತಿ ತಣ್ಣಗೆ, 'ಎಲ್ಲ ಗೊತ್ತು ಜಾನೇಮನ್' ಅಂದುಬಿಟ್ಟ. 'ಎಲ್ಲಾ ಗೊತ್ತಾ? ಹೇಗೆ!?' ಅಂತ ಸಿಕ್ಕಾಪಟ್ಟೆ ಆಶ್ಚರ್ಯದಿಂದ ಕೇಳಿದಳು. 'ಏನಿಲ್ಲ. ನೀನು ಹೋದ ನಂತರ ಬಾಸ್ ಛೋಟಾ ಫಕೀರ್ ಹತ್ತಿರ ಮಾತಾಡಿದೆ. ಯಾವದೋ ಒಂದು ಹೊಸ ಸಿನೆಮಾದ ಕಾಸ್ಟಿಂಗ್ ಬಗ್ಗೆ ಯಾವದೋ ಪ್ರೊಡ್ಯೂಸರ್ ಹತ್ತಿರ ಬಾಸ್ ಮಾತಾಡುತ್ತಿದ್ದರು. ಯಾವದಾದರೂ ಒಳ್ಳೆ, ಹೊಸ ಮುಖ ಇದ್ದರೆ ಹೇಳಿ ಅಂತ ಬಾಸ್ ಕೇಳಿದರು. ನಿನ್ನನ್ನು ಬಾಸ್ ಗೆ ನೆನಪಿಸಿಕೊಟ್ಟೆ. ಬಾಸ್ ಗೆ ತುಂಬ ಇಷ್ಟವಾಯಿತು. ಅದೂ ಮತ್ತೆ ನಾನು, ಅವರ ರೈಟ್ ಹ್ಯಾಂಡ್, ಹೇಳ್ತಾ ಇದಿನೀ ಅಂದ್ರೆ ಇಲ್ಲ ಅಂತಾರಾ? ಓಕೆ ಅಂತ ಹೇಳಿ, ಪ್ರೊಡ್ಯೂಸರನಿಗೆ ನಿನ್ನನ್ನೇ ಹಾಕಿಕೊಳ್ಳುವಂತೆ ಬಾಸ್ ತಾಕೀತು ಮಾಡೇಬಿಟ್ಟರು. ಭಾಯಿ ಹೇಳಿದ ಮಾತು ಅಂದರೆ ಮುಗೀತು ಅಷ್ಟೇ. ಅದೇ ಕಾರಣ. All the best for your new movie. ಮತ್ತೆ ಮಾತಾಡೋಣ,' ಅಂತ ಹೇಳಿ ರಫೀಕ್ ಫೋನ್ ಇಟ್ಟೇ ಬಿಟ್ಟ. 'ರಫೀಕ್, ಒಂದು ನಿಮಿಷ ಇರೋ ಪ್ಲೀಸ್,' ಅಂತ ಏನೋ ಹೇಳಲು ಹೊರಟ ಗೀತಿಕಾ ಕೂಡ ಫೋನ್ ಇಟ್ಟಳು. ಆ ಕಡೆ, ಮುಂಬೈ ಪೋಲಿಸ್ ಕ್ರೈಂ ಬ್ರಾಂಚಿನ ರಹಸ್ಯ ಕೋಣೆಯೊಂದರಲ್ಲಿ ಇನ್ನೊಬ್ಬರು ಕೂಡ ಫೋನ್ ಇಟ್ಟರು. ರೆಕಾರ್ಡರ್ ಸ್ವಿಚ್ ಆಫ್ ಮಾಡಿದರು. ಅವರೇ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ!  ಗೀತಿಕಾ ಮತ್ತು ಭೂಗತ ಪಾತಕಿ ರಫೀಕ್ ನಡುವಿನ ಸಂಭಾಷಣೆಗಳನ್ನು ಕದ್ದಾಲಿಸಿ, ಟೇಪ್ ಮಾಡಲು ಶುರು ಮಾಡಿದ್ದರು ಕರುಣ್ ಕೋರ್ಡೆ. ಯಾಕೆ? ಏನಿತ್ತು ಇನ್ಸ್ಪೆಕ್ಟರ್ ಕೋರ್ಡೆಯ ಭಯಂಕರ ಬುರುಡೆಯಲ್ಲಿ?

ಖತರ್ನಾಕ್ ಕರುಣ್ ಕೋರ್ಡೆ ನಂತರ ಫೋನ್ ಮಾಡಿದ್ದು ಸೂಪರ್ ಹೀರೋ ತರುಣ್ ಕುಮಾರನಿಗೆ. ಅವನೇ ಅದೇ ತರುಣ್ ಕುಮಾರ್. ಈಗ ಮಾತ್ರ ಗೀತಿಕಾ ಸೈನ್ ಹಾಕಿದಳು ನೋಡಿ ಒಂದು ಸಿನೆಮಾಕ್ಕೆ. ಅದರ ಹೀರೋ. ದೊಡ್ಡ ಮಟ್ಟಿಗೆ ಚಲಾವಣೆಯಲ್ಲಿದ್ದ ಹೀರೋ. ದುಬೈ ಭೂಗತ ದೊರೆಗಳ ಚಾಯ್ ವಾಲಾ ಹುಡುಗ ಇದ್ದ ಹಾಗೆ ಇದ್ದ. ಅವರಿಗೆ ಇಲ್ಲದ ಬೆಣ್ಣೆ ಹಚ್ಚುತ್ತಿದ್ದ. ರಾತ್ರಿ ಕುಡಿದು ಹುಚ್ಚುಚ್ಚಾಗಿ ಮಾತಾಡುತ್ತಿದ್ದ. ಏನೇನೋ ಕನವರಿಸುತ್ತಿದ್ದ. ಭೂಗತರಿಗೆ ಫ್ರೀ ಎಂಟರ್ಟೈನ್ಮೆಂಟ್. ಪೊಲೀಸರಿಗೆ ಮಸ್ತ ಕಮಾಯಿ. ಆ ಹೀರೋ ಭೂಗತರ ಜೊತೆ ಮಾತಾಡುತ್ತ, ಮಳ್ಳು ಹರಿಯುವದನ್ನೂ ಕೂಡ ಇದೇ ಪೋಲೀಸ್ ಇನ್ಸಪೆಕ್ಟರ್ ಕೋರ್ಡೆ ಪತ್ತೆ ಹಚ್ಚಿದ್ದರು. ಒಂದು ದಿವಸ ಆ ಹೀರೋನನ್ನು ಆಟಕಾಯಿಸಿಕೊಂಡರು. ಚನ್ನಾಗಿ ಮಾತಿನಲ್ಲಿಯೇ ಬೆಂಡೆತ್ತಿ, ಧಮಿಕಿ ಹಾಕಿದ್ದರು. ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿದ ಕಾರಣ TADA ಒಳಗೆ ಅಂದರ್ ಮಾಡಿಬಿಡುವದಾಗಿ ಹೆದರಿಸಿದ್ದರು. ಪತ್ರಿಕೆಗಳಿಗೆ ಸುದ್ದಿ ಕೊಡುವದಾಗಿ ಹೇಳಿದ್ದರು. ಸಿನೆಮಾ ಕರಿಯರ್ ಪೂರ್ತಿಯಾಗಿ ಬರ್ಬಾದ್ ಮಾಡಿ ಬಿಡುತ್ತೇನೆ ಅಂತ ಹೇಳಿದ್ದ ಕೋರ್ಡೆ ಮಾತಿನಲ್ಲಿ ತರುಣ್ ಕುಮಾರ್ ಗೆ ಏನೂ ಸಂಶಯವಿರಲಿಲ್ಲ. ಅವರ ಕಾಲು ಹಿಡಿದು ದಮ್ಮಯ್ಯ ಗುಡ್ಡೆ ಹಾಕಿದ್ದ. ಮುಂದೆ ಒಂದು ದಿವಸ ಇವನಿಂದ ಮಸ್ತಾಗಿ ವಾಪಸ್ ಕೆತ್ತೋಣ ಅಂತ ಹೇಳಿ, ಆವತ್ತು ಏನೂ ಕಾಸು ಗೀಸು ಕಿತ್ತುಕೊಳ್ಳದೆ, 'ಕೋಯಿ ಬಾತ್ ನಹಿ. ಚಿಂತೆ ಬೇಡ. ಹೀಗೆ ಇರು. ಏನಾದರೂ ಕೆಲಸವಿದ್ದರೆ ಬಂದು ನೋಡು,' ಅಂತ ಉಪದೇಶ ಮಾಡಿ ಕಳಿಸಿದ್ದರು ಕೋರ್ಡೆ. ಆವತ್ತಿಂದ ಇನ್ಸಪೆಕ್ಟರ್ ಕೋರ್ಡೆ ಹಂಗಿಗೆ ಬಂದಿದ್ದ ತರುಣ್ ಕುಮಾರನಿಗೆ ಕೋರ್ಡೆ ಅಮ್ಮ ಅಪ್ಪನಿಕಿಂತಲೂ ಹೆಚ್ಚಾಗಿ ಹೋಗಿದ್ದರು. ಅಂತಹವನಿಂದ ಒಂದು ಖತರ್ನಾಕ್ ಕೆಲಸ ಮಾಡಿಸಲೇ ಬೇಕಾಗಿತ್ತು. ಹಿಂದಿನ ಪೋಲೀಸ್ ಉಪಕಾರಗಳನ್ನು ನೆನಪಿಸಿ ಈಗ ಏನೋ ವಸೂಲಿ ಮಾಡಬೇಕಾಗಿತ್ತು.

ಕೋರ್ಡೆ ಫೋನ್ ಮಾಡಿದಾಗ ತರುಣ್ ಕುಮಾರ್ ಯಾವದೋ ಸಿನೆಮಾದ ಸೆಟ್ಟಲ್ಲಿ ಇದ್ದ. ಅವನಿಗೆ ಹೇಳುವದನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಿದರು. ಎಲ್ಲಾ ತರಹದ ಭಡವಾಗಿರಿ (ತಲೆಹಿಡುಕತನ) ಮಾಡಿದ್ದ ತರುಣ್ ಕುಮಾರನಿಗೆ ಇನ್ಸ್ಪೆಕ್ಟರ್ ಕರುಣ್ ಕೋರ್ಡೆ ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲು ಜಾಸ್ತಿ ಸಮಯ ಬೇಕಾಗಲೇ ಇಲ್ಲ. 'ಆಯಿತು ಸಾಬ್. ನೀವು ಚಿಂತೆ ಮಾಡ್ಬೇಡಿ. ದೇಖೋ ಆಪ್! ನೋಡಿ ನಿಮ್ಮ ಮಿಕವನ್ನು ಹೇಗೆ ಬಲೆಗೆ ಬೀಳಸ್ತೀನಿ ಅಂತ. ಅಷ್ಟೇ ಸಾಬ್, ನಿಮ್ಮದು ಎಲ್ಲ ಆದ ಮೇಲೆ ನಮಗೂ ಸ್ವಲ್ಪ ಮಜಾ ಮಾಡೋಕೆ ಬಿಡಿ ಸಾಬ್,' ಅಂದು ಬಿಟ್ಟ ನಾಚಿಗೆಗೆಟ್ಟ ಹೀರೋ. ಸಿಂಹದ ಭೋಜನ ಮುಗಿದ ನಂತರ ಸೀಳು ನಾಯಿಗಳು ಉಳಿದ, ಇದ್ದ ಬಿದ್ದ ಕಳೆವರವನ್ನು ಕಿತ್ತು ಕಿತ್ತು ತಿನ್ನಲು ಅನುಮತಿ ಕೇಳಿದಂತೆ. 'ಥತ್! ನಿನ್ನ ಹೀರೋ ಜನ್ಮಕ್ಕಿಷ್ಟು ಬೆಂಕಿ ಹಾಕ,' ಅಂದುಕೊಂಡ ಕೋರ್ಡೆ ಫೋನಿಟ್ಟರು. ಯಾಕೋ ಮೈಯೆಲ್ಲ ನೋವೆನ್ನಿಸಿತು. ಮಸಾಜ್ ಮಾಡಿಸಿಕೊಳ್ಳಬೇಕು ಅನ್ನಿಸಿತು. ಎಳೆ ಚಿಗರೆ ಮರಿಯಂತಹ ಹುಡುಗಿ ಗೀತಿಕಾ ನೆನಪಾದಳು. ಯಾಕೋ ಏನೋ ಈಗಿತ್ತಲಾಗೆ ಕೋರ್ಡೆ ಸಾಹೇಬರಿಗೆ ನಟಿ ಗೀತಿಕಾ ಪದೇ ಪದೇ ನೆನಪಾಗುತ್ತಾಳೆ. ಅವರ ಪಲ್ಲಂಗ ಪುರಾಣ ಬಹಳ ದೊಡ್ಡದು. ಮನಸ್ಸು ಬಂತು ಅಂದರೆ ಅಷ್ಟೇ. ಮನಸ್ಸಿಗೆ ಬಂದವರನ್ನು ಹುರಿದು ಮುಕ್ಕಿದ ಹೊರತೂ ಅವರಿಗೆ ಸಮಾಧಾನವೇ ಇಲ್ಲ. ಆದರೆ ಹುಲಿಯಂತಹ ಸಹನೆ ಕೂಡ ಇದೆ ಅವರಿಗೆ. ಗಡಿಬಿಡಿ ಮಾಡಿ ಬೇಟೆ ತಪ್ಪಿಸಿಕೊಳ್ಳೋ ಪೈಕಿ ಅವರು ಅಲ್ಲವೇ ಅಲ್ಲ. ಒಂದೊಂದು ಎನ್ಕೌಂಟರ್ ಮಾಡುವಾಗಲೂ ಅಷ್ಟೇ. ಪಕ್ಕಾ ಪ್ಲಾನಿಂಗ್ ಕೋರ್ಡೆ ಸಾಹೇಬರದ್ದು. ಈಗ ಅಂತಹುದೇ ಒಂದು ಬೇರೆಯೇ ತರಹದ ಎನ್ಕೌಂಟರ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಕರುಣ್ ಕೋರ್ಡೆ.

ಮುಂದೆ ಸ್ವಲ್ಪ ದಿವಸದಲ್ಲಿಯೇ ಗೀತಿಕಾ ಸಹಿ ಹಾಕಿದ್ದ ಬಿಗ್ ಬ್ಯಾನರ್ ಚಿತ್ರದ ಮುಹೂರ್ತ ಸಮಾರಂಭವಿತ್ತು. ದೊಡ್ಡ ಬಜೆಟ್ಟಿನ ಚಿತ್ರ. ಬಹಳ ಅದ್ದೂರಿಯಾಗಿಯೇ ಮಾಡಿದ್ದರು ಸಮಾರಂಭವನ್ನು. ಒಳ್ಳೆ ಪೇಜ್ 3 ಪಾರ್ಟಿ ಇದ್ದ ಹಾಗೆ ಇತ್ತು. ಕೆಲವು ಸಣ್ಣ ಬಜೆಟ್ಟಿನ ಮೂವಿಗಳಲ್ಲಿ ಮಾತ್ರ ಮಾಡಿದ್ದ ಗೀತಿಕಾ ಅಷ್ಟು ಅದ್ದೂರಿ ಮುಹೂರ್ತ ಸಮಾರಂಭ ಅಲ್ಲಿಯ ತನಕ ನೋಡಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಆಕೆ ಚಿಕ್ಕಂದಿನಿಂದ ತುಂಬ ಇಷ್ಟಪಟ್ಟಿದ್ದ ಹೀರೋ ತರುಣ್ ಕುಮಾರ್ ಜೊತೆ ಮೊದಲ ಬಾರಿಗೆ ಭೆಟ್ಟಿಯಾಗೋ ಅವಕಾಶ. ಜೊತೆಗೆ ನಾಯಕಿಯಾಗಿ ನಟಿಸುವ ಭಾಗ್ಯ ಬೇರೆ. ಗೀತಿಕಾ ಸಕತ್ತಾಗಿ ತಯಾರಾಗಿಯೇ ಬಂದಿದ್ದಳು ಮುಹೂರ್ತದ ಸಮಾರಂಭಕ್ಕೆ.

ಮುಹೂರ್ತದ ಶಾಟ್ ಗೆ ಮೇಕ್ಅಪ್ ಮಾಡಲು ಬಂದಿದ್ದ ಮೇಕ್ಅಪ್ ಮ್ಯಾನ್ ವಿಚಿತ್ರ ಲುಕ್ ಕೊಟ್ಟ. ಯಾರೋ ಆಕೆಗೆ ಪರಿಚಯವಿಲ್ಲದವ. ಏನೋ ರಹಸ್ಯ ಹೇಳುವಂತೆ ಕಿವಿ ಹತ್ತಿರ ಬಂದು ಗುಸು ಗುಸು ಅಂದ. 'ಈ ಸಿನೆಮಾದಲ್ಲಿ ಅಂಡರ್ವರ್ಲ್ಡ್ ರೊಕ್ಕ ಇನ್ವೆಸ್ಟ್ ಆಗಿದೆ ಗೊತ್ತಾ? ಭಾಯಿ ಲೋಗ್. ಮಹಾ ಡೇಂಜರ್. ಅದಕ್ಕೇ ಇರಬೇಕು ಪೊಲೀಸರು ಅದರಲ್ಲೂ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ ಸೆಟ್ ಮೇಲೆ ಇದ್ದಾನೆ ಇವತ್ತು. ಪ್ರೊಡ್ಯೂಸರ್ ಜೊತೆ ಕೂಡ ಏನೋ ಮಾತಾಡುತ್ತಿದ್ದ. ಏನೋ ಎಂತೋ!?' ಅಂತ ಒಂದು ರೀತಿಯ ಭೀತಿಯ ಧ್ವನಿಯಲ್ಲಿ ಉಸುರಿದನು. ಗೀತಿಕಾ ಏನೂ ಜಾಸ್ತಿ ಲಕ್ಷ್ಯ ಕೊಡಲಿಲ್ಲ ಅವನ ಮಾತುಗಳ ಕಡೆ. ಅವಳಿಗೆ ಬಾಲಿವುಡ್ಡು, ಭೂಗತ ಜಗತ್ತು, ಪೊಲೀಸರು ಅದೆಲ್ಲ ಇನ್ನೂ ಗೊತ್ತಾಗಿರಲಿಲ್ಲ. ಚಿಕ್ಕ ಮಕ್ಕಳ innocence ಇನ್ನೂ ಸ್ವಲ್ಪ ಉಳಿದುಕೊಂಡಿತ್ತು. ಕಾಲ ಅದನ್ನು ಹುರಿದು ಮುಕ್ಕಲಿಕ್ಕೆ ಇನ್ನೂ ಟೈಮ್ ಇತ್ತು.

ಮುಹೂರ್ತದ ಶಾಟ್ ಗೆ ರೆಡಿಯಾಗಿ ಬಂದವಳ ಎದುರಿಗೆ ಬಂದವನು ಅದೇ ಹೀರೋ ತರುಣ್ ಕುಮಾರ್. ಆಕೆಯ ಆರಾಧ್ಯ ದೈವ. ಆಕೆಗಿಂತ ಕಮ್ಮಿ ಕಮ್ಮಿ ಅಂದರೂ ಇಪ್ಪತ್ತು ವರ್ಷಕ್ಕೆ ದೊಡ್ಡವ. ಸಕತ್ ಬಾಡಿ ಮೆಂಟೇನ್ ಮಾಡಿ ಇನ್ನೂ ಯಂಗ್ ಹೀರೋ ಇದ್ದಾಗೆ ಇದ್ದ. ಭಯ ಭಕ್ತಿಯಿಂದ ಕಾಲು ಮುಟ್ಟಿ ನಮಸ್ಕಾರ ಮಾಡಿದಳು. ಎಬ್ಬಿಸಿ, ಹಿಡಿದೆತ್ತಿ, ಅಪ್ಪಿಕೊಂಡುಬಿಟ್ಟ ತರುಣ್. ಹಿರಿಯರು ಎಬ್ಬಿಸಿ, ಅಪ್ಪಿದ ಹಾಗಿರಲಿಲ್ಲ ಅದು. ಗೀತಿಕಾಳಿಗೆ ಮೈಮೇಲೆ ಜಿರಳೆ ಹರಿದ ಅನುಭವ. ಆದರೆ ಏನಂತ ನಿರ್ಧರಿಸಲಾಗದೇ ಬಾಲಿವುಡ್ಡಿನ ದಿಗ್ಗಜ ತರುಣ್ ಕುಮಾರ್ ಜೊತೆ ಗುಬ್ಬಿಯಾಗಿ ನಿಂತು ಫೋಟೋಗ್ರಾಫರುಗಳಿಗೆ ಪೋಸ್ ನೀಡಿದಳು. ಮುಹೂರ್ತದ ಶಾಟ್ ಕೂಡ ಓಕೆ ಆಯಿತು. ಸ್ಕ್ರಿಪ್ಟ್ ಚರ್ಚೆ ಮಾಡೋಣ ಅಂತ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್, ಹೀರೋ ಎಲ್ಲ ಹೋದರು. ಗೀತಿಕಾಳನ್ನೂ ಸಹ ಬಾ ಅಂದರು. ಅವರ ಜೊತೆ ಹೋಗಿ ಕೂತಳು.

ಸ್ವಲ್ಪ ಸಮಯದ ಚರ್ಚೆ ನಂತರ ಡೈರೆಕ್ಟರ್ ಎಲ್ಲ ಎದ್ದು ಬೇರೆ ಏನೋ ಕೆಲಸಕ್ಕೆ ಅಂತ ಹೋದರು. ಹೀರೋ ಮತ್ತೆ ಗೀತಿಕಾ  ಇಬ್ಬರೇ ಉಳಿದರು. ಹೀರೋ ಸ್ಪಾಟ್ ಬಾಯ್ ಹತ್ತಿರ ತನಗೆ ಬಿಯರ್ ಮತ್ತು ಗೀತಿಕಾಗೆ ಸಾಫ್ಟ್ ಡ್ರಿಂಕ್ ತರಿಸಿದ. ಅಷ್ಟರಲ್ಲಿ ಇನ್ನೊಬ್ಬರು ಯಾರೋ ಬಂದರು. ಅವರನ್ನು ನೋಡಿದಾಕ್ಷಣ ಹೀರೋ ಖುದ್ದಾಗಿ ಎದ್ದು ನಿಂತು, ವಿಪರೀತ ಭಯ ಭಕ್ತಿಯಿಂದ ಸ್ವಾಗತ ಮಾಡಿ, ಲಗುಬಗೆಯಿಂದ ಮತ್ತೊಂದು ಖುರ್ಚಿ ತರಿಸಿ, ಅರ್ಜೆಂಟ್ ಆಗಿ, 'ಏನು ಕುಡಿತೀರಿ ಸರ್?' ಅಂತ ಕೇಳಿದ್ದಕ್ಕೆ ಅವರು, 'ಡ್ಯೂಟಿ ಮೇಲೆ ಇದ್ದಾಗ ಬರೇ ಸಾಫ್ಟ್ ಡ್ರಿಂಕ್ ಹೀರೋ ಭಾಯ್,' ಅಂದಿದ್ದರು. ಎಂತ ಡ್ಯೂಟಿಯೋ ಏನೋ ಅಂತ ಅಂದುಕೊಂಡಳು ಗೀತಿಕಾ. ಸೂಪರ್ ಹೀರೋ ತರುಣ್ ಕುಮಾರನೇ ಆಪರಿ ಖಾತಿರ್ದಾರಿ ಮಾಡೋದು ನೋಡಿದರೆ ಯಾರೋ ದೊಡ್ಡ ಮನುಷ್ಯರೇ ಇರಬೇಕು ಅಂದುಕೊಂಡಳು.

'ಗೀತಿಕಾ ಇವರು ಗೊತ್ತಿರಬೇಕಲ್ಲಾ?' ಅಂದ ಹೀರೋ ತರುಣ್.

'ಸ್ವಾರಿ, ಗೊತ್ತಾಗಲಿಲ್ಲ. ಯಾರು?' ಅಂದಳು. ಪರಿಚಯವಿಲ್ಲದ್ದಕ್ಕೆ ತನ್ನನ್ನು ತಾನೇ ಬೈದುಕೊಂಡಳು. ಜನರಲ್ ನಾಲೆಜ್ ಸ್ವಲ್ಪ ಜಾಸ್ತಿ ಮಾಡಿಕೊಳ್ಳಬೇಕು ಅಂದುಕೊಂಡಳು. ಯಾರಾದರೂ ದೊಡ್ಡ ಪ್ರೋಡ್ಯೂಸರೋ, ಡೈರೆಕ್ಟರೋ ಆಗಿದ್ದು, ತಾನು ಪರಿಚಯವಿಲ್ಲವೆಂದರೆ ಅದು ಅವಮಾನ ಅಂತ ತಿಳಿದುಕೊಂಡು ಬಾಲಿವುಡ್ಡಿನಲ್ಲಿ ಬಲಿ ಹಾಕಿಬಿಟ್ಟರೆ? ಅಲ್ಲಿನ ಜನರ ಬೃಹತ್ ego ಗಳ ಬಗ್ಗೆ ಆಕೆಗೆ ಸಾಕಷ್ಟು ಪರಿಚಯವಿತ್ತು.

'ಇವರಮ್ಮಾ. ಫೇಮಸ್ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ ಸಾಹೇಬರು. ಯಾವಾಗಲೂ ಪೇಪರ್ ನಲ್ಲಿ ಮಿಂಚ್ತಾನೇ ಇರ್ತಾರೆ. ಇವರೇ ಒರಿಜಿನಲ್ ಎನ್ಕೌಂಟರ್ ಸ್ಪೆಷಲಿಸ್ಟ್. ಉಳಿದವರೆಲ್ಲ ಇವರ ಕಾಪಿ ಮಾಡಿದವರೇ. ಈಗಾಗಲೇ ಐವತ್ತರ ಮೇಲೆ ಎನ್ಕೌಂಟರ್ ಮಾಡಿ ಮುಗಿಸಿದ್ದಾರೆ. ಇವರಿದ್ದಾರೆ ಅಂತ ನಮ್ಮಂತಹ ಜನ extortion call ಗಳ ಭಯವಿಲ್ಲದೆ, ನೆಮ್ಮದಿಯಿಂದ ಫೋನ್ ಎತ್ತಬಹುದು. ಗೊತ್ತಾ? ಅಂಡರ್ವರ್ಲ್ಡ್ ಜನರಿಗೆ ಸಿಂಹಸಪ್ನ ಕೋರ್ಡೆ ಸಾಹೇಬರು. ಗೊತ್ತಾ?' ಅಂತ ಕೋರ್ಡೆ ಸಾಹೇಬರಿಗೆ ಸಕತ್ ಬಿಲ್ಡ್ ಅಪ್ ಕೊಟ್ಟ ಹೀರೋ.

ಕೋರ್ಡೆ ಸಾಹೇಬರು ಅತ್ಮಾಭಿಮಾನದಿಂದ ಬೀಗಿದರು. ಮೊದಲೇ ಲಂಬಾ ಚೌಡಾ ಇದ್ದ ವಿಶಾಲ ಎದೆ ಮತ್ತೂ ಉಬ್ಬಿತು. ಬೆನ್ನು ಹುರಿ ನೇರ ಮಾಡಿಕೊಂಡು ಕೂತರು. ಆದರೂ ದೊಡ್ಡ ಪ್ರಮಾಣದ ಪೋಲಿಸ್ ಹೊಟ್ಟೆ ಕಾಣುತ್ತಿತ್ತು. ಎತ್ತರಕ್ಕೆ, ದಪ್ಪಕ್ಕೆ ಇದ್ದರು ಕೋರ್ಡೆ. ಸುಮಾರು ಐವತ್ತು ವರ್ಷದವರಿರಬಹುದು. ಮುಖದಲ್ಲಿ ಒಂದು ತರಹದ ಮಹಾ ಒರಟುತನ, ಪೋಲೀಸ್ ಹುಂಬತನ ಎದ್ದು ಕಾಣುತ್ತಿತ್ತು. ಸಿವಿಲ್ ಡ್ರೆಸ್ಸಿನಲ್ಲಿ ಇದ್ದರೂ ಖಾಕಿ ಪ್ಯಾಂಟ್, ಬಿಳಿಯ ಶರ್ಟ್ ಧರಿಸಿದ್ದರು. ಪ್ಯಾಂಟ್ ಎಡಗಡೆ ಸ್ವಲ್ಪ ಉಬ್ಬಿತ್ತು. ಅದು ಅವರ ಸರ್ವೀಸ್ ರಿವಾಲ್ವರ್ ಅಂತ ಗೀತಿಕಾಗೆ ಗೊತ್ತಾಗಲಿಲ್ಲ ಬಿಡಿ. ಆಕೆ ಸಂಕೋಚದಿಂದ ಏನೋ ಒಂದು ತರಹದ ವಿಶ್ ಮಾಡಿ, ತಲೆ ತಗ್ಗಿಸಿ, ತನ್ನ ಸಾಫ್ಟ್ ಡ್ರಿಂಕ್ ಹೀರುತ್ತ ಕೂತಳು. ಎದ್ದು ಹೋಗೋಣ ಅಂದರೆ ಹೀರೋ ತರುಣ್ ಸರ್ ಪರ್ಮಿಷನ್ ಬೇಕು.

ಅಷ್ಟರಲ್ಲಿ ಪ್ರೊಡ್ಯೂಸರ್ ಬಂದ. ಕೋರ್ಡೆ ಸಾಹೇಬರು ಎದ್ದು ಅವನ ಜೊತೆ ಲಕ್ಸುರಿ ವ್ಯಾನ್ ಒಳಗೆ ಹೋದರು. ಏನೋ ಮಾತುಕತೆಗೆ ಅಂತ ಅಂದುಕೊಂಡಳು ಗೀತಿಕಾ. ಖಾಲಿ ಕೈಯಲ್ಲಿ ಹೋಗಿದ್ದ ಕೋರ್ಡೆ ಒಂದು ಬ್ರೀಫ್ ಕೇಸ್ ಸಮೇತ ಹೊರಗೆ ಬಂದಿದ್ದ. ಡಾನ್ ಛೋಟಾ ಫಕೀರ್ ಮಂತ್ಲಿ ಪೇಮೆಂಟ್ ಕಳಿಸಿದ್ದ. ಮಾಫಿಯಾದ ಫ್ರಂಟ್ ಅಂತ ಮುಂಬೈನಲ್ಲಿದ್ದ ಪ್ರೊಡ್ಯೂಸರ್ ಅದನ್ನು ಪೋಲೀಸ್ ಸಾಹೇಬರಿಗೆ ಒಪ್ಪಿಸಿದ್ದ. ಅದು ತುಂಬ ಹಳೆಯ ಸಿಸ್ಟಮ್.

ಕೋರ್ಡೆ ಹೊರಡುವ ಮೊದಲು ಮತ್ತೊಮ್ಮೆ ಬಂದು ಹೀರೋ ತರುಣ್ ಕುಮಾರನ ನ ಬೆನ್ನು ಚಪ್ಪರಸಿ, 'ಮತ್ತೆ ಸಿಗೋಣ. ಇನ್ನೂ ಸ್ವಲ್ಪೇ ದಿವಸದಲ್ಲಿ ಮುಂದಿನ ಸ್ಟೆಪ್. ನೆನಪಿದೆಯೆಲ್ಲ? ಹಾಂ?' ಅಂತ ಏನೋ ನಿಗೂಢ ಅರ್ಥದಲ್ಲಿ ಹೇಳಿದ್ದನ್ನು ಗೀತಿಕಾ ಗಮನಿಸಲಿಲ್ಲ. ಅವಳು ಎಲ್ಲೋ ನೋಡುತ್ತಿದ್ದರೆ ತರುಣ್ ಮತ್ತು ಕೋರ್ಡೆ ಒಂದು ತರಹ ವಿಕೃತವಾಗಿ ಗೀತಿಕಾ ಕಡೆ ನೋಡಿ ತುಟಿ ಸವರಿಕೊಂಡರು. ಏನೋ ನೆನೆಸಿಕೊಂಡು ಕೋರ್ಡೆ ಅವರ ಸೊಂಟ  ಒಂದು ಸಲ ಕಳಕ್ ಅಂತು. ಭಂಗಿ ಸರಿ ಮಾಡಿಕೊಂಡವರೇ ಅಲ್ಲಿಂದ ಹೊರಟು ಹೋದರು.

ಗೀತಿಕಾ ಶೂಟಿಂಗ್ ನಲ್ಲಿ ಬ್ಯುಸಿ ಆದಳು. ಅದು ಆಕೆಯ ಮೊದಲನೇ ದೊಡ್ಡ ಫಿಲಂ ಅಂತ ದಿಲ್ ಲಗಾಕೆ ಅನ್ನುವಂತೆ ಪೂರ್ತಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಳು. ಅವಳು ಹೇಳಿಕೊಳ್ಳುವಂತಹ ಅಭಿನೇತ್ರಿ ಅಲ್ಲ. ಹಾಗಾಗಿ ಕಷ್ಟ ಸ್ವಲ್ಪ ಜಾಸ್ತಿಯೇ ಪಡಬೇಕಾಗುತ್ತಿತ್ತು. ಅದೂ ಒಬ್ಬ ಚಾಲ್ತಿಯಲ್ಲಿರುವ ಸೂಪರ್ ಹೀರೋ ಮುಂದೆ ನಟಿಸೋದು  ಅಂದ್ರೆ ಅಷ್ಟು ಸುಲಭವೇ? ಏನೋ ಅವಳ ನಸೀಬಕ್ಕೆ ಹೀರೋ ತರುಣ್ ಸಹಿತ ತುಂಬ ಸಪೋರ್ಟ್ ಮಾಡಿ ಹೇಗೋ ಚಿತ್ರೀಕರಣ ನಡೆದಿತ್ತು. ತರುಣ್ ಮೇಲೆ ಭಕ್ತಿಭಾವ ಜಾಸ್ತಿಯೇ ಆಗಿತ್ತು. ಮುಂದೊಂದು ದಿನ ಅದೇ ಮುಳ್ಳಾಗಲಿತ್ತೇ?

ಆಗಾಗ ದುಬೈದಿಂದ ರಫೀಕ್ ಫೋನ್ ಮಾಡುತ್ತಲೇ ಇರುತ್ತಿದ್ದ. ಅದೆಂಗೋ ಮಾಡಿ ಬರೋಬ್ಬರಿ ಅವಳ ಲೊಕೇಶನ್ ಹುಡುಕಿ ಫೋನ್ ಮಾಡುತ್ತಿದ್ದ. ಒಮ್ಮೊಮ್ಮೆ ಸ್ಟುಡಿಯೋಕ್ಕೇ ಫೋನ್. ಫೋನ್ ಬಂತು, ಶೂಟಿಂಗ್ ಗೆ ತೊಂದರೆಯಾಯಿತು ಅಂತ ಡೈರೆಕ್ಟರ್ ಸಿಡಿಮಿಡಿ ಮಾಡಿದರೆ ಪ್ರೊಡ್ಯೂಸರ್ ಪಿಸುಮಾತಿನಲ್ಲಿ, 'ಭಾಯಿ ಲೋಗ್ ಫೋನ್. ಸ್ವಲ್ಪ ಅಡ್ಜಸ್ಟ್ ಮಾಡಿ,' ಅಂತ ದಮ್ಮಯ್ಯ ಹಾಕುತ್ತಿದ್ದ. ಗೀತಿಕಾಳಿಗೆ ಫೋನ್ ಮಾಡುವ ಮೊದಲು ಇನ್ಸ್ಪೆಕ್ಟರ್ ಕೋರ್ಡೆಗೆ ತಿಳಿಸುವದನ್ನು ಮಾತ್ರ ರಫೀಕ್ ಮರೆಯುತ್ತಿರಲಿಲ್ಲ. ಖತರ್ನಾಕ್ ಕೋರ್ಡೆ ಎಲ್ಲವನ್ನು ಬರೋಬ್ಬರಿಯಾಗಿ ಕೇಳುತ್ತ, ರೆಕಾರ್ಡ್ ಮಾಡಿಕೊಳ್ಳುತ್ತ ಹೊರಟಿದ್ದ. ಸೆಟ್ ಮೇಲೆ ಗುಸು ಗುಸು. 'ಹೀರೋಯಿನ್ ಗೀತಿಕಾ ಭಾಯಿ ಲೋಗ್ ಜನರ ಮಾಲು. ಅದಕ್ಕೇ ಅವಳಿಗೆ ರೋಲ್ ಸಿಕ್ಕಿದೆ' ಅಂತ. ಅವಳಿಗೇ ತಿಳಿಯದಂತೆ ಗೀತಿಕಾ ಅಂಡರ್ವರ್ಲ್ಡ್ ನ ಆಳಕ್ಕೆ ಇಳಿಯುತ್ತಿದ್ದಳು.

ಮುಂದೊಂದು ದಿನ ಇನ್ಸ್ಪೆಕ್ಟರ್ ಕೋರ್ಡೆ ಶೂಟಿಂಗ್ ನಡೆಯುತ್ತಿದ್ದ ಲೊಕೇಶನ್ ಗೆ ಬಂದ. ಒಬ್ಬನೇ ಬರಲಿಲ್ಲ. ಜೊತೆಗೆ ಇನ್ನೂ ನಾಕು ಜನ ಇದ್ದರು. ಇಬ್ಬರು ಮಹಿಳೆಯರೂ ಇದ್ದರು. ಎಲ್ಲರೂ ಮಫ್ತಿಯಲ್ಲಿ ಇದ್ದರು. ಬಂದವರು ಫಿಲಂ ಯೂನಿಟ್ ಜನರೊಂದಿಗೆ ಮಾತಾಡಿಕೊಂಡು, ತಮಾಷೆ ಮಾಡಿಕೊಂಡು ಇದ್ದರು.

ಶಾಟ್ ಮುಗಿಯಿತು. ಹೀರೋ ತರುಣ್, ಗೀತಿಕಾ ಬಂದು ಕೂತರು. ಕೋರ್ಡೆ ಕೂಡ ಬಂದು ಕೂತ. ತರುಣ್ ಜೊತೆ ಏನೋ ಒಂದಿಷ್ಟು ಹರಟೆ, ನಗು, ಪೋಲಿ ಮಾತು. ಗೀತಿಕಾ ಎದ್ದು ತನ್ನ ಮೇಕ್ಅಪ್ ವ್ಯಾನ್ ಸೇರಿಕೊಂಡಳು. ಬಾಗಿಲು ಹಾಕಿಕೊಂಡು ಏನೋ ಓದುತ್ತ ಕೂತಳು. ಮುಂದಿನ ಶಾಟ್ ಗೆ ಇನ್ನೂ ಒಂದೆರೆಡು ಘಂಟೆ ಟೈಮ್ ಇತ್ತು. ತಂಪಾದ AC ವ್ಯಾನ್ ಒಳಗೆ ಸಕತ್ ಹಾಯಾಗಿತ್ತು.

ಯಾರೋ ವ್ಯಾನಿನ ಬಾಗಿಲು ಬಡಿದರು. ಅದು ಅವಳಿಗೆ ಅಂತ ಮಂಜೂರು ಮಾಡಿದ್ದ exclusive ವ್ಯಾನ್ ಆಗಿತ್ತು. ಹೀರೋಯಿನ್ ಅಂದರೆ ಅಷ್ಟೂ ಬೇಡವೇ? ಯಾರಪಾ ಇದು ಅಂತ  ಬಾಗಿಲು ತೆಗೆದು ನೋಡಿದರೆ, ಗಂಟು ಮುಖ ಹಾಕಿಕೊಂಡು ನಿಂತಿದ್ದ ಇನ್ಸಪೆಕ್ಟರ್ ಕೋರ್ಡೆ. ಅವನ ಜೊತೆ ಮಾರಮ್ಮನ ಲುಕ್ಕಿನ ಇಬ್ಬರು ಧಾಡಸಿ ಮಹಿಳೆಯರು. ಅವರು ಮಫಿಯಲ್ಲಿದ್ದ ಕ್ರೈಂ ಬ್ರಾಂಚ್ ಲೇಡಿ ಕಾನ್ಸ್ಟೇಬಲ್ ಗಳು ಅಂತ ಗೀತಿಕಾಗೆ ಗೊತ್ತಾಗಿದ್ದು ನಂತರ.

ಯಾವದೇ ಅನುಮತಿ ಗಿನುಮತಿ ಕೇಳದೆ ವ್ಯಾನ್ ಒಳಗೆ ನುಗ್ಗೇ ಬಿಟ್ಟ ಕೋರ್ಡೆ. ಹಿಂದೆ ಫಾಲೋ ಮಾಡಿದ ಇಬ್ಬರು ಮಾರಮ್ಮರಲ್ಲಿ ಒಬ್ಬಳು ಧಡ್ ಅಂತ ವ್ಯಾನಿನ ಬಾಗಿಲು ಹಾಕಿಕೊಂಡು ಒಳಗೆ ಬಂದು ವಿಕೃತವಾಗಿ ನಕ್ಕಳು. ಪಾನ್ ಜಗಿದು ಜಗಿದು ಕೆಂಪಾಗಿದ್ದ ಅವಳ ಹಲ್ಲುಗಳಿಂದ ರಕ್ತ ಜಿನುಗಿದಂತೆ ಪಾನ್ ರಸ ಜಿನುಗುತ್ತಿತ್ತು. ಮೇಲಿಂದ ವಿಕೃತ ನಗು. ಗೀತಿಕಾ ಒಮ್ಮೆಲೇ ಬೆಚ್ಚಿದಳು.

'ಏನು ಸಾರ್? ಹೀಗೆ ಒಮ್ಮೆಲೆ..... ' ಅಂತ ಏನೋ ಹೇಳಲು ಗೀತಿಕಾ ಹೊರಟಿದ್ದಳು. ಮುಂದಾಗುವದನ್ನು ಅವಳು ಸ್ವಲ್ಪವೂ ನಿರೀಕ್ಷಿಸಿರಲಿಲ್ಲ. ಒಬ್ಬಳು ಲೇಡಿ ಕಾನ್ಸ್ಟೇಬಲ್ ಒಮ್ಮೆಲೇ ಅವಳನ್ನು ಹಿಂದೆ ನೂಕಿದಳು. ಸೋಫಾ ಮೇಲೆ ಹೋಗಿ ಬಿದ್ದ ಗೀತಿಕಾ ಒಂದು ತರಹದ ಶಾಕ್ ಆಗಿ, confuse ಆದಳು.

'ಚುಪ್! ಕೇಳಿದಾಗ ಮಾತ್ರ ಮಾತಾಡಬೇಕು. ಓಕೆ?' ಅಂತ ಇನ್ನೊಬ್ಬ ಮಾರಮ್ಮ ಗೊಗ್ಗರು ದನಿಯಲ್ಲಿ ಒದರಿದಳು.

ಗೀತಿಕಾ ಬೆದರಿದ ಹುಲ್ಲೆಯಂತೆ ಸೋಫಾದ ಮೇಲೆ ಕುಳಿತಿದ್ದಳು. 'ಏನು ಸಾರ್ ಇದೆಲ್ಲ?' ಅನ್ನುವ ರೀತಿಯಲ್ಲಿ, ದೈನ್ಯದಿಂದ ಕೋರ್ಡೆಯತ್ತ ನೋಡುತ್ತಿದ್ದಳು. ಅವಳಿಗೇನು ಗೊತ್ತು ಕ್ರೈಂ ಬ್ರಾಂಚ್ ಪೊಲೀಸರು ಹೇಗೆ ಬೇರೆ ಬೇರೆ ಟೈಪಿನ ಜನರನ್ನು ಮೆತ್ತಗೆ ಮಾಡುತ್ತಾರೆ ಅಂತ.

ಈಗ ಕೋರ್ಡೆ ಮಾತಾಡಲು ಶುರು ಮಾಡಿದ. ದನಿಯಲ್ಲಿ ಯಾವದೇ ಭಾವನೆಗಳಿಲ್ಲ. ಯಾವದೇ ಏರಿಳಿತಗಳಿಲ್ಲ. ಗಂಟು ಮುಖದಲ್ಲಿ ಯಾವದೇ ಬದಲಾವಣೆಯಿಲ್ಲ.

'ಮೇಡಂ, ಸ್ವಲ್ಪ ವಿಚಾರಣೆ ಮಾಡೋದು ಇದೆ. ಪ್ಲೀಸ್ ಸಹಕರಿಸಿ. ಇವರಿಬ್ಬರು ನಮ್ಮ ಕಾನ್ಸ್ಟೇಬಲ್ಸ. ನಾವೆಲ್ಲ ಕ್ರೈಂ ಬ್ರಾಂಚ್ ನವರು. ಗೊತ್ತಿರಬಹುದು ಅಂತ ಅಂದುಕೊಂಡಿದ್ದೀನಿ,' ಅಂದ ಕೋರ್ಡೆ.

ಆಪರಿ ಘಾಬರಿಗೊಂಡಿರುವ ಗೀತಿಕಾ ಏನು ಹೇಳಿಯಾಳು? ಇಲ್ಲಿಯ ತನಕ ಪೋಲೀಸ್, ಕೇಸ್, ಎನ್ಕ್ವೈರಿ ಏನೂ ಗೊತ್ತಿಲ್ಲದ, ಲೋಕ ಜ್ಞಾನವಿಲ್ಲದ ಹುಡುಗಿ ಅವಳು. ಈಗ ಧುತ್ತನೆ ಕ್ರೈಂ ಬ್ರಾಂಚ್ ಪೊಲೀಸರು ಬಂದು ಆಟಕಾಯಿಸಿಕೊಂಡರೆ ಏನು ಮಾಡಿಯಾಳು?

'ಗೀತಿಕಾ ಮೇಡಂ, ನಿಮಗೆ ಮತ್ತು ಅಂಡರ್ವರ್ಲ್ಡ್ ಜನರಿಗೆ ಸಂಬಂಧ ಇದೆ ಅಂತ ಸುದ್ದಿಯಾಗುತ್ತಿದೆ. ಅದಕ್ಕೆ ತನಿಖೆ ಮಾಡಬೇಕು. ದುಬೈ ಭಾಯಿಗಳೊಂದಿಗೆ ತುಂಬ ಕ್ಲೋಸ್ ಅಂತೆ ನೀವು. ಹೌದಾ?' ಅಂತ ಹೇಳಿ, 'ಈ ಸಿನೆಮಾ ಹುಡುಗಿಯರದ್ದೆಲ್ಲ ಇದೇ ಗೋಳು. ಅಲ್ಲವಾ?' ಅಂತ ಮಾರಮ್ಮನಂತಹ ಕಾನ್ಸ್ಟೇಬಲ್ ಒಬ್ಬಳನ್ನು ನೋಡಿ ಹೇಳಿದ. ಆಕೆ, 'ಹೋ ಸಾಬ್! ಬರಾಬರ್ ಬೋಲಾ. ಕುತ್ತೀ ಚೀಜ್ ಸಾಲಿ ಸಬ್' ಅಂದು ಕೆಕ್ಕರಿಸಿ ನೋಡಿ, 'ನಿನಗೆ ಇದೆ ಇನ್ನು....' ಅನ್ನೋ ಕೆಟ್ಟ ಲುಕ್ ಕೊಟ್ಟಳು. ಅದೇ ಹೊತ್ತಿಗೆ ಇನ್ನೊಬ್ಬ ಮಾರಮ್ಮ ಎದ್ದಳು. ಮೊದಲು ಗೀತಿಕಾಳನ್ನು ಸೋಫಾದ ಮೇಲೆ ತಳ್ಳಿದಾಕೆ ಆಕೆ. ಎದ್ದು ಬಂದು, ಗೀತಿಕಾಳಿಗೆ ನಾಕು ಕೊಟ್ಟೇ ಬಿಡ್ತಾಳೋ ಅನ್ನುವ ಮಾದರಿಯಲ್ಲಿ ಒಮ್ಮೆಲೇ ಹತ್ತಿರಕ್ಕೆ ಬಂದು, ಗೀತಿಕಾ ಹೆದರಿ ಮುದ್ದೆಯಾದರೆ, 'ಬಾತ್ರೂಮ್ ಎಲ್ಲಿ? ಎಲೆಅಡಿಕೆ ಉಗಳಬೇಕು,' ಅಂದು ಬಿಟ್ಟಳು. ವಿಕೃತವಾಗಿ ಕೆಂಪು ಹಲ್ಲು ತೋರಿಸುತ್ತ ನಕ್ಕಳು. 'ಬದುಕಿದೆಯಾ ಬಡ ಜೀವವೇ,' ಅಂತ ಸುಧಾರಿಕೊಂಡ ಗೀತಿಕಾ ವ್ಯಾನಿನ ಕೊನೆಯಲ್ಲಿದ ಬಾತ್ರೂಮ್ ತೋರಿಸಿದಳು. ಒಳಗೆ ಹೋದ ಕಾನ್ಸ್ಟೇಬಲ್ ಮಾರಮ್ಮ, ಬಾಗಿಲೂ ಹಾಕಿಕೊಳ್ಳದೆ, ಕ್ಯಾಕರಿಸಿ ಪಾನ್ ಉಗುಳಿದಳು. ನೀರೂ ಹಾಕದೇ, ಹಾಗೇ ಬಂದು, ಕೆಂಪನೆ ಹಲ್ಲು ತೋರಿಸುತ್ತ ಕೋರ್ಡೆ ಸಾಹೇಬರ ಜೊತೆ ಕೂತು ಶೋ ಕೊಡತೊಡಗಿದಳು. ಒಟ್ಟಿನಲ್ಲಿ ಒಳಹೊಕ್ಕ ಹತ್ತೇ ಹತ್ತು ನಿಮಿಷದಲ್ಲಿ ಗೀತಿಕಾಳನ್ನು ಮಾನಸಿಕವಾಗಿ ಹಣ್ಣು ಹಣ್ಣು ಮಾಡಿ ಹಾಕಿಬಿಟ್ಟರು ಕೋರ್ಡೆ ಮತ್ತು ಅವರ ತಂಡ. ಅದೆಲ್ಲ ಅವರಿಗೆ ರೂಟೀನ್. ಹಮ್ ಕೋ ಪತಾ ಹೈ ಕಿಸ್ ಕೊ ಕೈಸೆ ತೋಡ್ನೇಕಾ. ನಮಗೆ ಗೊತ್ತು ಯಾರನ್ನು ಹೇಗೇಗೆ ಮುರಿಯಬೇಕು ಅಂತ. ಅದು ಕ್ರೈಂ ಬ್ರಾಂಚ್ ಸ್ಪೆಷಾಲಿಟಿ.

ಇಷ್ಟೆಲ್ಲ ಒತ್ತಡ ಹಾಕಿದರೂ, ಒಂದು ತರಹ ಬ್ಲಾಂಕ್ ಔಟ್ ಆಗಿಬಿಟ್ಟಿದ್ದ ಗೀತಿಕಾಳಿಗೆ ತಲೆ ಬುಡ ಗೊತ್ತಾಗಲಿಲ್ಲ. 'ಇಲ್ಲ, ಇಲ್ಲ. ನಿಮಗೇನೋ ತಪ್ಪು ಮಾಹಿತಿ ಸಿಕ್ಕಿರಬೇಕು ಸಾರ್. ನಾನು ಅಂತವಳು ಅಲ್ಲವೇ ಅಲ್ಲ,' ಅಂತ ಏನೋ ಸಮಜಾಯಿಷಿ ಕೊಡಲು ಹೋದಳು. ಮಾರಮ್ಮ ಕಾನ್ಸ್ಟೇಬಲ್ ರಪ್ಪ್ ಅಂತ ಒಂದು ಬೀಸಿದಳು. ಗೀತಿಕಾ ಏಟಿನಿಂದ ತಪ್ಪಿಸಿಕೊಂಡಳು. ತಪ್ಪಿಸಿಕೊಳ್ಳಲಿ ಅಂತಲೇ ಅವರ ಉದ್ದೇಶವಾಗಿತ್ತು. ಗೀತಿಕಾ ಯಾವಾಗಲೂ ಫುಲ್ ಟೆನ್ಷನ್ ನಲ್ಲಿ ಇರಬೇಕು. ಅದೇ ಅವರ ಉದ್ದೇಶ. ಅದಕ್ಕೇ ಎಲ್ಲ ರೋಪ್ ಹಾಕುತ್ತಿದ್ದುದು.

ಈಗ ಇನ್ನೊಬ್ಬ ಮಾರಮ್ಮ ಕಾನ್ಸ್ಟೇಬಲ್ ಒಂದು ವಾಕ್ಮನ್ (ಚಿಕ್ಕ ಟೇಪ್ ಪ್ಲೇಯರ್) ತೆಗೆದಳು. ಒಳಗೆ ಒಂದು ಕ್ಯಾಸೆಟ್ಟು ತುರುಕಿದಳು. ಬಲವಂತವಾಗಿ ಹೆಡ್ ಫೋನ್ ಗೀತಿಕಾಳಿಗೆ ಜಡಿದು, 'ಮೊದಲು ಕೇಳು, ನನ್ಮಗಳೇ! ಮುಂದೆ ಮಾತಾಡುವಿಯಂತೆ!' ಅನ್ನೋ ಹಾಗೆ ರೋಪ್ ಹಾಕಿದಳು. ಹೆಡ್ ಫೋನ್ ಒಳಗೆ ಕೇಳಿಬರುತ್ತಿದ್ದನ್ನು ಕೇಳುತ್ತ ಹೋದಂತೆ ಗೀತಿಕಾಳ ಚಹರಾಪಟ್ಟಿ ಬದಲಾಗುತ್ತ ಹೋಯಿತು. ಮುಖ ಬಿಳುಚಿತು. ಮುಖದ ಮೇಲೆ ದೆವ್ವ ನೋಡಿದವಳ ಲುಕ್ ಬಂತು. ಏನೋ ಹೇಳಲು ಬಾಯ್ತೆರೆದಳು. 'ಚುಪ್! ಬಾಯ್ಮುಚ್ಚಿ ಕೇಳು!' ಅನ್ನೋ ಹಾಗೆ ಸಂಜ್ಞೆ ಮಾಡಿದಳು ಮಾರಮ್ಮ. ಕೋರ್ಡೆ ಸಾಹೇಬರು ತಮ್ಮ ಮೀಸೆಯಡಿ ನಗುತ್ತ, ಕುಹಕ ನೋಟ ಬೀರುತ್ತ, 'ಈಗೆನಂತೀ?????' ಅನ್ನುವ ಲುಕ್ ಕೊಟ್ಟರು.

ಒಂದೈದು ನಿಮಿಷದ ನಂತರ ವಾಕ್ಮನ್ ಆಫ್ ಮಾಡಿದಳು. 'ಸಾರ್, ಅದು ಅದು ರಫೀಕ್ ಕೇವಲ ಗೊತ್ತು ಸಾರ್. ಅದೂ ದುಬೈಗೆ ಹೋದಾಗ ಭೆಟ್ಟಿಯಾಗಿದ್ದು. ಅವನೇ ದೋಸ್ತಿ ಮಾಡಿಕೊಂಡಿದ್ದು. ಅವನೇ ಫೋನ್ ಮಾಡುತ್ತಿರುತ್ತಾನೆ. ನಾನೇನು ಮಾಡ್ಲೀ ಸಾರ್? ಫೋನ್ ಮಾಡಬೇಡ ಅನ್ನೋಕೆ ನಾನ್ಯಾರು? ಮತ್ತೆ ಇಂಡಸ್ಟ್ರಿನಲ್ಲಿ ಇರಬೇಕು ಅಂದ್ರೆ ಏನು ಮಾಡ್ಲೀ ಸಾರ್?' ಅಂತ ಗೀತಿಕಾ ಏನೋ ಹೇಳಲು ಹೋದಳು.

ಈಗ ಇನ್ಸ್ಪೆಕ್ಟರ್ ಕೋರ್ಡೆ ಫುಲ್ ಅವಾಜ್ ಹಾಕಿದ. ಒಮ್ಮೆಲೆ ಪೋಲೀಸ್ ಭಾಷೆಗೆ ಇಳಿದುಬಿಟ್ಟ. 'ಇದು ಸ್ಯಾಂಪಲ್ ಅಷ್ಟೇ. ಇನ್ನೂ ಹಲವಾರು ತಾಸುಗಳ ರೆಕಾರ್ಡಿಂಗ್ ಇವೆ ನನ್ನ ಹತ್ತಿರ. ಅಂಡರ್ವರ್ಲ್ಡ್ ಜೊತೆ ಸಂಪರ್ಕವಿರುವವರನ್ನೆಲ್ಲ TADA ಒಳಗೆ ಅಂದರ್ ಮಾಡುವಂತೆ ಕಮಿಷನರ್ ಸಾಹೇಬರ ಆರ್ಡರ್ ಆಗಿದೆ. ಗೊತ್ತಿರಬೇಕಲ್ಲ ಜಾನಕೀ ಭಾಯ್ ಶಾ? ಡೈಮಂಡ್ ಕಿಂಗ್. ದೊಡ್ಡ ಪ್ರೊಡ್ಯೂಸರ್. ಅವನನ್ನೂ ಒಳಗೆ ಹಾಕಿ ರುಬ್ಬುತ್ತ ಇದೀವಿ. ನಿಮ್ಮಂತಾ ಸೂಳೆರನ್ನೂ ಅಷ್ಟೇ ಮಾಡ್ಬೇಕು. ನಿಮ್ಮನ್ನ ರುಬ್ಬೋ ರೀತಿನೇ ಬೇರೆ. TADA ಅಂದ್ರೆ ಜಾಮೀನ್ ಗೀಮೀನ್ ಇಲ್ಲ. ಗೊತ್ತು ತಾನೇ?' ಅಂತ ಹೇಳಿ ವಿಕಾರವಾಗಿ ನಕ್ಕ. ಅವನ ಆವಾಜು, ಆ ಪೋಲೀಸ್ ಕೊಳಕು ಭಾಷೆ, TADA ಅನ್ನೋ ಕರಾಳ ಕಾಯಿದೆಯ ಧಮ್ಕಿ, ಟಾರ್ಚರ್ ಬೆದರಿಕೆ, ಅಬ್ಬಾ! ಮತ್ತೇನು ಬೇಕು? ಎಂತೆಂತವರೋ ಮಾನಸಿಕವಾಗಿ ಮುರಿದು ಹೋಗಬೇಕು. ಇನ್ನು ಗೀತಿಕಾಳಂತಹ ಮುಗ್ಧೆಯ ಗತಿಯೇನಾಗಬೇಕು? ಅಂತವರನ್ನು ತಾನೇ ಎಲ್ಲರೂ ಶೋಷಣೆ ಮಾಡೋದು? ಎಲ್ಲದಕ್ಕೂ ಫಸ್ಟ್ ಟೈಮ್ ಅಂತ ಇದ್ದೇ ಇರುತ್ತದಲ್ಲ? ಬಾಲಿವುಡ್ಡಿನಲ್ಲೂ ಅಷ್ಟೇ. ಅಂಡರ್ವರ್ಲ್ಡ್, ಪೋಲೀಸ್, ರಾಜಕಾರಣಿಗಳಿಂದ ಶೋಷಣೆ ಒಂದಲ್ಲ ಒಂದು ಟೈಮ್ ನಲ್ಲಿ ಶುರುವಾಗಿಯೇ ಆಗುತ್ತದೆ. professional hazard ಅದು.

ಅಷ್ಟರಲ್ಲಿ ಇನ್ಸ್ಪೆಕ್ಟರ್ ಕೋರ್ಡೆ ಮೊಬೈಲ್ ಮೇಲೆ ಕಾಲ್ ಬಂತು. ಆಗ ಮೊಬೈಲ್ ಇತ್ತು ಅಂದರೆ ಅದು ದೊಡ್ಡ ಮಾತು. ಅಂತದ್ದರಲ್ಲಿ ತುಂಬ ದುಬಾರಿ ಮೊಬೈಲ್ ಇಟ್ಟಿದ್ದ ಕೋರ್ಡೆ. 'ಸಾಬ್, ಎಸ್ ಸರ್,' ಅಂದು, ಮಾತು ನಿಲ್ಲಿಸಿ, ಮೌತ್ ಪೀಸ್ ಮೇಲೆ ಕೈಯಿಟ್ಟು, 'ಕಮಿಷನರ್ ಸಾಹೇಬರ ಫೋನ್. ಇನ್ನೂ ಯಾಕೆ ನಿನ್ನ ಎತ್ತಾಕಿಕೊಂಡು ಬಂದಿಲ್ಲ ಅಂತ ರೇಗುತ್ತಿದ್ದಾರೆ!' ಅಂತ ಗೀತಿಕಾಳಿಗೆ ಭೋಂಗು ಬಿಟ್ಟ ಕೋರ್ಡೆ ಫೋನಲ್ಲಿ ಮಾತು ಮುಂದುವರೆಸಿದ, 'ಸಾರ್, ಗೀತಿಕಾನ್ನ ಮಾತಾಡಸ್ತಾ ಇದೀವಿ ಸಾರ್. ಇನ್ನೂ ಒಂದು ಸ್ವಲ್ಪ ಹೊತ್ತು ವಿಚಾರಣೆ ಮಾಡ್ಬಿಟ್ಟು, ಅರೆಸ್ಟ್ ಮಾಡಿಕೊಂಡು ಬಂದು ಬಿಡ್ತೀನಿ ಸಾರ್. ಎಲ್ಲಿ ಸಾರ್? ನಿಮ್ಮ ಚೇಂಬರ್ ಪಕ್ಕ ಇರೋ ಕಾಲಾ ಟಾರ್ಚರ್ ಸೆಲ್ ಗೆ ತನ್ನಿ ಅಂದ್ರಾ? ಓಕೆ ಸಾರ್,' ಅಂತ ಅಂದು, 'ಮುಗೀತು ಇನ್ನು. ಹೇಳಲು ಕೇಳಲು ಏನೂ ಉಳಿದಿಲ್ಲ. ತಯಾರಾಗು,' ಅನ್ನುವ ಲುಕ್ ಕೊಟ್ಟ ಕೋರ್ಡೆ, 'ಏ, ಬಾಯಾರೇ, ಅದೇನು ನಿಮ್ಮ ಪದ್ಧತಿ ಇರುತ್ತಲ್ಲ? ಹೆಂಗಸರನ್ನು ಅರೆಸ್ಟ್ ಮಾಡೋದು? ಅದನ್ನ ಫಾಲೋ ಮಾಡಿ, ಎಳೆದ್ಕೊಂಡು ಬನ್ನಿ. ನಮ್ಮ ಕಾನೂನಿನಲ್ಲಿ ಹೆಂಗಸರನ್ನು ಗಂಡಸು ಪೊಲೀಸರು ಮುಟ್ಟೋ ಹಾಗಿಲ್ಲ. ಆದರೆ ಹಾಕ್ಕೊಂಡು ರುಬ್ಬೋ ಮಾತು? ಅದು  ಬೇರೇನೇ,' ಅಂತ ವಿಕಾರವಾಗಿ ನಕ್ಕು, 'ಜಲ್ದೀ! ಜಲ್ದೀ!' ಅಂತ ಅವಸರಿಸಿ, ಮೇಕ್ಅಪ್ ವ್ಯಾನಿನ ಬಾಗಿಲನ್ನು ತೆಗೆದು ಹೊರಬಂದ. ಲೇಡಿ ಕಾನ್ಸ್ಟೇಬಲ್ ಇಬ್ಬರು ಒಳಗೇ ಇದ್ದು, ಒತ್ತಡ ಮೈಂಟೈನ್ ಮಾಡಿದ್ದರು. ಅಷ್ಟೊತ್ತಿಗೆ ಗೀತಿಕಾಗೆ ಫುಲ್ ನರ್ವಸ್ ಬ್ರೇಕ್ ಡೌನ್ ಆಗಿ, ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಕೋರ್ಡೆ ಸಾಹೇಬ ಹಾಕಿದ ಪ್ಲಾನ್ ಅಲ್ಲಿಯವರೆಗೆ ಪರ್ಫೆಕ್ಟ್ ಆಗಿ ವರ್ಕ್ ಆಗಿತ್ತು. ಕರೆಕ್ಟ್ ಆಗಿ ಅಷ್ಟೊತ್ತಿಗೆ ಮೊಬೈಲ್ ಮೇಲೆ ಫೋನ್ ಮಾಡುವಂತೆ ಮೊದಲೇ ಯಾರಿಗೋ ಹೇಳಿಟ್ಟಿದ್ದ. ಅದನ್ನೇ ಕಮಿಷನರ್ ಫೋನ್ ಅಂತ ಹೇಳಿ ultimate ಧಮಿಕಿ ಹಾಕಿದ್ದ. ಮಾಸ್ಟರ್ ಸ್ಟ್ರೋಕ್.

ಕೋರ್ಡೆ ಹೊರಗೆ ಬಂದ ಕೂಡಲೇ ಸೂಪರ್ ಹೀರೋ ತರುಣ್ ಅವನನ್ನು ವಕ್ಕರಿಸ್ಕೊಂಡ. ಏನು ವಿಷಯ ಅಂತ ಕೇಳಿದ. ಕೋರ್ಡೆ ಸಂಕ್ಷಿಪ್ತವಾಗಿ ಹೇಳಿದಂತೆ ನಟಿಸಿದ. ಹೇಳಲು ಏನು ಉಳಿದಿತ್ತು? ಆ ಸೂಪರ್ ಹೀರೋ ತರುಣ್ ಕೂಡ ಈ ಸ್ಕೀಮಿನಲ್ಲಿ ಭಾಗಿ ತಾನೇ? ಈಗ ಅವನ ಪಾತ್ರ ಮಾಡುವ ಟೈಮ್ ಬಂದಿತ್ತು. ಗೀತಿಕಾಳನ್ನು ಪೂರ್ತಿಯಾಗಿ ಮಾನಸಿಕವಾಗಿ ಮುರಿಯುವ ಸ್ಕೀಮಿನಲ್ಲಿ ಆಖ್ರೀ ಹೊಡೆತ ಸೂಪರ್ ಹೀರೋ ಮಹಾನುಭಾವನದೇ ಇತ್ತು.

ಒಮ್ಮೆಲೇ ಗೀತಿಕಾಳ ಮೇಕ್ಅಪ್ ವ್ಯಾನ್ ಒಳಗೆ ಬಂದುಬಿಟ್ಟ ಹೀರೋ. ಅದೇ ಸಮಯಕ್ಕೆ ಇನ್ಸ್ಪೆಕ್ಟರ್ ಕೋರ್ಡೆ ತನ್ನ ದೊಡ್ಡ ದನಿಯಲ್ಲಿ ತನ್ನ ಇಬ್ಬರು ಲೇಡಿ ಕಾನ್ಸ್ಟೇಬಲ್ ಗಳನ್ನು ಹೊರಗೆ ಬರುವಂತೆ ಆಜ್ಞೆ ಮಾಡಿದ. ಒಳಗೆ ಗೀತಿಕಾ ಮೇಲೆ ಒತ್ತಡ ಹಾಕುತ್ತ ಕುಳಿತಿದ್ದ ಮಾರಮ್ಮರಿಬ್ಬರು ಎದ್ದು, ಪೋಲೀಸ್ ಭಾಷೆಯಲ್ಲಿ ಆಕೆಯನ್ನು ಬೈಯುತ್ತ, ಹೊರಗೆ ಬಂದರು. ಅವರು ಹೊರಗೆ ಹೋಗಿದ್ದೇ ತಡ, ಒಳಗಿಂದ ಸೂಪರ್ ಹೀರೋ ತರುಣ್ ಕುಮಾರ್ ಬಾಗಿಲು ಹಾಕಿಕೊಂಡು ಗೀತಿಕಾಳಿಗೆ ಉಲ್ಟಾ ಪಟ್ಟಿ ಓದತೊಡಗಿದ. ಖತರ್ನಾಕ್ ಕೋರ್ಡೆ ನಿರ್ದೇಶಿಸುತ್ತಿದ್ದ ನಾಟಕದಲ್ಲಿ ತನ್ನ ಪಾತ್ರ ಶುರು ಮಾಡಿದ್ದ.

'ಏನಮ್ಮಾ ಗೀತಿಕಾ? ಛೆ!ಛೆ! ಹೀಗಾ ಮಾಡಿಕೊಳ್ಳೋದು? ಹೋಗಿ ಹೋಗಿ ಅಂಡರ್ವರ್ಲ್ಡ್ ಜನರ ಸಂಗ ಮಾಡಿಕೊಂಡು ಕೂತೆಯಲ್ಲಮ್ಮಾ? ಈಗ ನೋಡು ಅವರ ಹತ್ತಿರ ನಿನ್ನ ರೆಕಾರ್ಡಿಂಗ್ ಎಲ್ಲ ಇದೆ. TADA ದಲ್ಲಿ ಹಾಕುತ್ತೇನೆ ಅಂತ ಕೋರ್ಡೆ ಕೂತಿದ್ದಾರೆ. ಮೇಲಿಂದ ಪ್ರೆಷರ್ ಬೇರೆ ತುಂಬ ಇದೆಯಂತೆ. ಜಾನಕಿ ಭಾಯಿ ಶಾನಂತಹ ನೂರಾರು ಕೋಟಿಗೆ ತೂಗುವ ಪ್ರೋಡ್ಯೂಸರನನ್ನೇ ಬಿಡಲಿಲ್ಲ. ಗೊತ್ತಲ್ಲ? ಎಲ್ಲೋ ದುಬೈನಲ್ಲಿ ಯಾವದೋ ಡಾನ್ ಜೊತೆ ಇದ್ದ ಅವನ ಒಂದು ಫೋಟೋ ಸಿಕ್ಕಿತು ಅಂತ ಒಳಗೆ ಹಾಕಿ ಹಣಿಯುತ್ತಿದ್ದಾರೆ. ಇನ್ನು ನಿನ್ನ ಬಿಟ್ಟಾರೆಯೇ? ಏನೋ ಒಂದು ನಿಮಿಷ ಟೈಮ್ ಕೊಡಿ ಅಂತ ಕೋರ್ಡೆ ಸಾಹೇಬರನ್ನು ಕೇಳಿಕೊಂಡು ಬಂದೆ. ಛೆ! ಎಂತ ಕೆಲಸವಾಯಿತು. ಈ ಸಿನೆಮಾ ಅಂತೂ ಗೋವಿಂದಾ. ನಿನ್ನ ಸಿನೆಮಾ ಕರಿಯರ್ ಕೂಡ ಗೋವಿಂದಾ ಗೋssವಿಂದಾ!' ಅಂತ ಎದ್ದ. ಗೊತ್ತಿತ್ತು ಅವನಿಗೆ ಗೀತಿಕಾ ಸೀದಾ ಕಾಲಿಗೇ ಬೀಳುತ್ತಾಳೆ ಅಂತ. ಅಂತಹ ಅದೆಷ್ಟು ಅಂತಹ ಆಕ್ಟಿಂಗ್ ಮಾಡಿದ್ದನೋ ಅವನೋ!

ಇನ್ಸ್ಪೆಕ್ಟರ್ ಕೋರ್ಡೆ ಮತ್ತು ಹೀರೋ ನಡುವೆ ಇದ್ದ ಕ್ಲೋಸ್ ಗೆಳೆತನವನ್ನು ಗೀತಿಕಾ ಗಮನಿಸಿದ್ದಳು. ಈಗ ತನ್ನನ್ನು ಯಾರಾದರೂ ಉಳಿಸಿದರೆ, ಸಿಲುಕಿರುವ ಕಷ್ಟದಿಂದ ಪಾರು ಮಾಡಿದರೆ ಅದು ಸೂಪರ್ ಹಿರೋ ತರುಣ್ ಕುಮಾರನೇ ಅಂತ ಹೇಳಿ ಅವನ ಕಾಲಿಗೆ ಬಿದ್ದು, 'ಹೇಗಾದರೂ ಮಾಡಿ ಕಾಪಾಡಿ. ಒಂದು ಮಾತು ಕೋರ್ಡೆಗೆ ಹೇಳಿ ನೋಡಿ. ರೆಕಾರ್ಡಿಂಗ್ ಇದ್ದರೂ ನಾನು ಏನೂ ಮಾತಾಡಿಲ್ಲ. ಆ ರಫೀಕನೇ ಮಾತಾಡಿ ಏನೇನೋ ಹೇಳುತ್ತಿರುತ್ತಿದ್ದ. ನಾನು ಕೇವಲ ಮಾತು ಕೇಳುತ್ತಿದ್ದೆ ಅಷ್ಟೇ ಸಾರ್. ಮತ್ತೆ, ಮತ್ತೆ, ಸಿನೆಮಾಕ್ಕೆ ಫೈನಾನ್ಸ್ ಮಾಡಿಸಿದ್ದು, ನನ್ನ ಹೀರೋಯಿನ್ ಅಂತ ಸೆಲೆಕ್ಟ್ ಮಾಡಿಸಿದ್ದು ಎಲ್ಲ ಅವನೇ ಸಾರ್. ನಾನು ಏನೂ ಕೇಳಿರಲೇ ಇಲ್ಲ. ಈಗ ನೋಡಿದರೆ ಈ ಪೊಲೀಸರು ನಾನೇ ಅಂಡರ್ವರ್ಲ್ಡ್ ನವರ ಹಿಂದೆ ಬಿದ್ದು ಎಲ್ಲ ಮಾಡಿಸಿಕೊಂಡೆ ಅನ್ನುವ ರೀತಿಯಲ್ಲಿ ಮಾತಾಡುತ್ತಿದ್ದಾರೆ. ನಿಮಗಾದರೂ ನನ್ನ ಮೇಲೆ ನಂಬಿಕೆ ಇದೆಯಲ್ಲ ಸರ್? ಇದೆ ತಾನೇ?' ಅಂತ ಗೊಳೋ ಅಂತ ಅಳುತ್ತ, ಹೀರೋ ಕಾಲಿಗೆ ತಲೆ ಕುಟ್ಟಿ, ಕುಟ್ಟಿ ಅತ್ತಳು. ಅವಳಿಗೆ ಕಾಣದಂತೆ ಹೀರೋ ವಿಕೃತವಾಗಿ ನಕ್ಕ. ಕ್ಲೈಮಾಕ್ಸ್ ಗೆ ಹತ್ತಿರ ಬರುತ್ತಿತ್ತು.

'ನಾನೇನೋ ನಂಬ್ತೀನಿ ಗೀತಿಕಾ. ಆದ್ರೆ ಇನ್ಸ್ಪೆಕ್ಟರ್ ಕೋರ್ಡೆನ ನಂಬಿಸೋದು ಹೇಗೆ? ಅವನು ಮಹಾ ಪ್ರಚಂಡ. ಅಂಡರ್ವರ್ಲ್ಡ್ ನಲ್ಲೂ ಅವನ ಮಾಹಿತಿದಾರರಿದ್ದಾರೆ. ಅವರಿಂದಲೂ ಮಾಹಿತಿ ತೆಗೆದಿದ್ದಾನೆ. ಅವನ ಹತ್ತಿರ ಮತ್ತೂ ಕೆಲವು ಸಾಕ್ಷ್ಯಗಳಿವೆ. ನಿನಗೆ ರಫೀಕ್ ಕೊಟ್ಟಿದ್ದ ಹಾರ್ಟ್ ಪೆಂಡೆಂಟ್ ಚೈನ್ ಬಗ್ಗೆ ಸಹಿತ ಅವನಿಗೆ ಗೊತ್ತು. ಇಷ್ಟೆಲ್ಲ ಇದ್ದ ಮ್ಯಾಲೆ ಏನು ಮಾಡೋಣ? ನನಗೂ ಏನೂ ತೋಚ್ತಾ ಇಲ್ಲ. ಆದರೂ ಇರು. ಇನ್ನೊಂದು ಸಲ ಮಾತಾಡಿ ಬರ್ತೀನಿ,' ಅಂತ ಇನ್ಸ್ಪೆಕ್ಟರ್ ಕೋರ್ಡೆಯೊಂದಿಗೆ ಮಾತಾಡಿ ಬರುತ್ತೇನೆ ಅಂತ ವ್ಯಾನಿನಿಂದ ಇಳಿದು ಹೋದ. ಶೂನ್ಯವನ್ನು ದಿಟ್ಟಿಸುತ್ತ ಗೀತಿಕಾ ಹಾಗೇ ಕುಳಿತಿದ್ದಳು. ಜಾಸ್ತಿ ಏನೂ ಹೋಪ್ ಉಳಿದಿರಲಿಲ್ಲ ಆಕೆಗೆ.

ವಾಪಸ್ ಬಂದ ಸೂಪರ್ ಹೀರೋ ತರುಣ್ ಕುಮಾರ್. ಏನಾದರೂ ಜುಗಾಡ್ ಮಾಡಿ, ಅರೆಸ್ಟ್ ಆಗುವದರಿಂದ ತಪ್ಪಿಸಿಕೊಳ್ಳೋ ಉಪಾಯ ಹೇಳಿಯಾನೇ ಅಂತ ಗೀತಿಕಾ ಆಸೆಯ ಕಂಗಳಿಂದ ನೋಡಿದಳು. ಮುಳುಗುವವರಿಗೆ ಹುಲ್ಲು ಕಡ್ಡಿಯೂ ದೊಡ್ಡ ಆಸರೆಯೇ.

'ಕೋರ್ಡೆ ಜೊತೆ ಮಾತಾಡಿದೆ. 'ಏನೋ ಪೊರಪಾಟಿನಲ್ಲಿ ಹುಡುಗಿ ಅಂಡರ್ವರ್ಲ್ಡ್ ಜನರ ಜೊತೆ ಮಾತಾಡಿ, ಸಹವಾಸ ಮಾಡಿ ತಪ್ಪು ಮಾಡಿಕೊಂಡಿದಾಳೆ. ಮತ್ತೆ ಅವಳಾಗೇ ಸಂಪರ್ಕ ಮಾಡಲು ಹೋಗೇ ಇರಲಿಲ್ಲ. ದುಬೈಗೆ ಎಲ್ಲರ ಹಾಗೆ ಹೋಗಿದ್ದಳು. ಅಲ್ಲಿ ಅವನು ಯಾರೋ ರಫೀಕ್ ಅಂತ ತಗಲಾಕಿಕೊಂಡು, ಹಿಂದೆ ಬಿದ್ದಿದ್ದಾನೆ. ಈ ಸಲ ಮಾಫ್ ಮಾಡಿ ಬಿಟ್ಟು ಬಿಡಿ.ಒಳ್ಳೆ ಹುಡುಗಿ ಅವಳು,' ಅಂತೆಲ್ಲ ಹೇಳಿದೆ,' ಅಂದ  ಹೀರೋ ತರುಣ್ ದೊಡ್ಡದೊಂದು ನಿಟ್ಟುಸಿರು ಬಿಟ್ಟ.

'ಸೊ ಏನಂದ್ರು ಕೋರ್ಡೆ? ಅರ್ಥವಾಯಿತಾ ಅವರಿಗೆ? ನನ್ನನ್ನು ಬಿಟ್ಟು ಬಿಡುತ್ತಾರಂತೆಯೇನು? ಮತ್ತೆ ಕಮಿಷನರ್??' ಅಂತ ಏನೋ ಒಂದು ಆಸೆಯಿಂದ ಕೇಳಿದಳು.

'ಅಷ್ಟು ಸುಲಭವಿಲ್ಲಮ್ಮ ಅದು. ಕೋರ್ಡೆ ಏನೋ ಕೇಳುತ್ತಿದ್ದಾನಮ್ಮ. ಅದೆಲ್ಲ ಆಗೋ ಮಾತಲ್ಲ ಬಿಡು. ಸುಮ್ಮನೆ ಅರೆಸ್ಟ್ ಆಗಿ, ಅವರ ಜೊತೆ ಹೋಗು. ಮುಂದೆ ಕೋರ್ಟಲ್ಲಿ ಬಡಿದಾಡಿ, ಬಿಡಿಸಿಕೊಂಡು ಬರೋಣವಂತೆ. ನನ್ನತ್ರ ಇನ್ನು ಏನೂ ಸಾಧ್ಯವಿಲ್ಲಮ್ಮ,' ಅಂತ ಹೇಳಿ ಹೊರಡಲು ಮುಂದಾದ ಹೀರೋ ತರುಣ್.

'ಸಾರ್, ನಿಲ್ಲಿ. ಏನು ಬೇಕಂತೆ ಕೋರ್ಡೆಗೆ? ಎಷ್ಟು ಕಾಸು ಬೇಕಂತೆ? ಈ ಫಿಲ್ಮಿಂದು ಎಲ್ಲ ಅವರಿಗೇ ಕೊಟ್ಟು ಬಿಡ್ತೇನಿ. ಬೇಕಾದರೆ ಮುಂದಿನ ಕೆಲವು ಫಿಲ್ಮಿನ ದುಡ್ಡು ಸಹ ಅವರಿಗೇ ಕೊಡ್ತೀನಿ. ಕೇಳಿ ಸಾರ್ ಅವರತ್ರ. ಎಷ್ಟು ಬೇಕು ಅಂತ?' ಅಂತ ಗೀತಿಕಾ ಗೋಗರೆದಳು.

'ದುಡ್ಡಲ್ಲ ಅವನು ಕೇಳಿದ್ದು,' ಅಂತ ಅರ್ಧ ಮಾತ್ರ ಹೇಳಿ ಅಡ್ಡ ಗೋಡೆ ಮೇಲೆ ಉದ್ದಕ್ಕೆ ದೀಪ ಇಟ್ಟ ತರುಣ್ ಕುಮಾರ್.

'ಮತ್ತೆ?!' ಅಂತ ಕೇಳಿದಳು ಗೀತಿಕಾ. ದುಡ್ದಲ್ಲದಿದ್ದರೆ ಮತ್ತೇನಿರಬಹುದು!!!!!

'ಸ್ವಲ್ಪ ಅಡ್ಜಸ್ಟ್ ಮಾಡಿಕೋಬೇಕಂತೆ. compromise. ಮಾಮೂಲಿ. ಎಲ್ಲ ಹೀರೋಯಿನ್ಸ್ ಮಾಡೋದೇ. ಅದನ್ನೇ ಕೇಳ್ತಾ ಇದಾನೆ ಅವನು,' ಅಂತ ಹೇಳಿ ಒಂದು ಹಾವು ಬಿಟ್ಟುಬಿಟ್ಟ ಹೀರೋ. ಹೆಚ್ಚಿನ ಎಫೆಕ್ಟ್ ಗೆ ಅಂತ ಹೇಳಿ, ಅವನೇ ಹೇಳಿದ, 'ನನಗೆ ಗೊತ್ತು ನೀನಿದಕ್ಕೆಲ್ಲ ಒಪ್ಪುವ ಪೈಕಿ ಅಲ್ಲ ಅಂತ. ಆದರೂ ಅವನು ಕೇಳಿದ ಅಂತ ಹೇಳಿದೆ. ಅಷ್ಟೇ. ಇರಲಿ ಬಿಡು,' ಅಂತ ಹೇಳಿ ಮತ್ತೆ ಹೊರಗೆ ಹೊರಟ ನಾಟಕ ಮಾಡಿದ. ಹೋಗಲಿಲ್ಲ.

adjustment , compromise - ಚಿತ್ರರಂಗದಲ್ಲಿ ಎಲ್ಲರಿಗೂ ಗೊತ್ತಿರುವ ಕುಖ್ಯಾತ ಶಬ್ದಗಳು. ಗೀತಿಕಾಳಿಗೂ ಎಲ್ಲ ಗೊತ್ತಿತ್ತು. ಏನೋ ಅವಳ ಪುಣ್ಯಕ್ಕೆ ಅಲ್ಲಿ ತನಕ ಯಾರೂ ಅವಳನ್ನು casting couch ಅಂತ ಹೇಳಿ ಮಂಚಕ್ಕೆ ಎಳೆದಿರಲಿಲ್ಲ. ಈಗ ಕೋರ್ಡೆ ಅದನ್ನೇ ಬೇರೆ ರೀತಿಯಲ್ಲಿ ಡಿಮ್ಯಾಂಡ್ ಮಾಡುತ್ತಿದ್ದ. ಡೈರೆಕ್ಟರ್, ಪ್ರೊಡ್ಯೂಸರ್ ಯಾರೂ ಕೇಳದ್ದನ್ನ ಒಬ್ಬ ಪೋಲೀಸ್ ಆಫೀಸರ್ ಕೇಳುತ್ತಿದ್ದ. ಅದಕ್ಕಾಗಿಯೇ ಒಂದು ತಪ್ಪಿಸಿಕೊಳ್ಳಲಾಗದಂತಹ ಚಕ್ರವ್ಯೂವಹದಂತಹ ಬಲೆ ಹಾಕಿ, ಸರಿಯಾಗಿ ಸಿಗಿಸಿ ಹಾಕಿದ್ದ. ಟ್ರ್ಯಾಪ್ ಮಾಡಿದ್ದ.

ಗೀತಿಕಾ ಒಂದು ದೊಡ್ಡ ದ್ವಂದ್ವದಲ್ಲಿ ಸಿಲುಕಿದಳು. ಏನು ಮಾಡಲಿ? ಅಂತ ಫುಲ್ confuse ಆದಳು. ಅದೇ ಟೈಮಿಗೆ ಹೊರಗಿಂದ ದಬ್ ದಬ್ ಅಂತ ಜೋರಾಗಿ ಯಾರೋ ಬಾಗಿಲು ಬಡಿದರು. ಜೊತೆಗೆ ಕಾನ್ಸ್ಟೇಬಲ್ ಮಾರಮ್ಮನ ಕರ್ಕಶ ದನಿ. 'ಏ ಕತ್ತೆ! ಏ ಲೌಡಿ! ಹೊರಗೆ ಬಾರೆ. ನಡಿ ಇನ್ನು. ತಡವಾಗ್ತಿದೆ,' ಅಂತ ಅವಸರ ಮಾಡಿದಳು. ಎಲ್ಲ ಮೊದಲೇ ಪ್ರಿ ಪ್ಲಾನ್ಡ್. ಪರ್ಫೆಕ್ಟ್ ಟೈಮಿಂಗ್. ಗೊತ್ತು ಅವರಿಗೆ. ಪೂರ್ತಿಯಾಗಿ ಮಾನಸಿಕವಾಗಿ ಬ್ರೇಕ್ ಡೌನ್ ಮಾಡಿದ ನಂತರ ಗಡಿಬಿಡಿ ಮಾಡಿಬಿಟ್ಟರೆ ಮುಗಿಯಿತು ಅಂತ. ಎಂತವರೂ ಕಮಿಟ್ ಆಗಿ ಬಿಡುತ್ತಾರೆ. ಆಕಡೆ ಮಾಫಿಯಾ, ಈಕಡೆ ಹಿತಚಿಂತಕರಂತೆ ಪೋಸ್ ಕೊಡುತ್ತ ಪಾಪಕೂಪದ ಮತ್ತಿಷ್ಟು ಆಳಕ್ಕೆ ತಳ್ಳುತ್ತಿದ್ದ ಸೂಪರ್ ಹೀರೋ ತರುಣ್ ಕುಮಾರ್ ಅಂತಹ ಜನರನ್ನು ಉಪಯೋಗಿಸಿಕೊಂಡು ಅದೆಷ್ಟು ಜನ ಬಾಲಿವುಡ್ ಬೆಡಗಿಯರನ್ನು ಪಳಗಿಸಿಕೊಂಡಿದ್ದರೋ ಕೋರ್ಡೆಯಂತಹ ಖಾಕಿ ದುರುಳರು. ಗೀತಿಕಾಗೆ ಅದೆಲ್ಲ ಗೊತ್ತಿರಲಿಲ್ಲ ಬಿಡಿ.

'ಆಯ್ತು ಹೀರೋ ಸರ್! ಒಪ್ಪಿಗೆ ಅಂತ ಕೋರ್ಡೆ ಸಾಹೇಬರಿಗೆ ತಿಳಿಸಿ,' ಅಂದವಳೇ ಮುಖ ಆಕಡೆ ತಿರುಗಿಸಿದಳು. ಅವಳ ಮೇಲೆ ಅವಳಿಗೇ ಅಸಹ್ಯವಾಯಿತೇ? ಗೊತ್ತಿಲ್ಲ.

ಮುಂದೇನು? ಮುಗಿಯಿತಲ್ಲ ಇವರ ನಾಟಕ? ಮುಂದಿನ ಹೆಜ್ಜೆಗಳು ಸ್ಟ್ಯಾಂಡರ್ಡ್ ಪ್ರೋಸೆಸ್. ಮೊದಲು ಇನ್ಸ್ಪೆಕ್ಟರ್ ಕೋರ್ಡೆ ಗೀತಿಕಾಳನ್ನು ಹುರಿದು ಮುಕ್ಕಿದ. ನಂತರ ತನಗೆ ಬೇಕಾದ ಹಿರಿಯ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಆಹುತಿ ಕೊಟ್ಟ. ನೀರಿಗಿಳಿದ ಮೇಲೆ ಮಳೆಯೇನು ಚಳಿಯೇನು? ಅದೇ ಮನೋಭಾವ ಗೀತಿಕಾಳಿಗೂ ಬಂತು. ಪಕ್ಕಾ ಪ್ರೊಫೆಶನಲ್ ಕಾಲ್ ಗರ್ಲ್ ಆಗಿ ತಯಾರಾಗಿಬಿಟ್ಟಳು. ಸಿನೆಮಾಕ್ಕಿಂತ ಹೆಚ್ಚಿನ ಕಾಸು ರಾತ್ರಿ ರಾಣಿ ಬಿಸಿನೆಸ್ಸಿನಲ್ಲಿ ಇತ್ತು. ಅದು ಮುಂದೆ ಅವಳಿಗೂ ತಿಳಿಯಿತು. ಡೈರೆಕ್ಟರ್, ಪ್ರೊಡ್ಯೂಸರ್, ಹೀರೋಗಳು ಎಲ್ಲರೂ adjustment, compromise ಕೇಳುವವರೇ ಅಂತ. ಕೋರ್ಡೆ ಒಬ್ಬನೇ ದುಡ್ಡು ಕೊಡದೆ ಅನುಭವಿಸುತ್ತಿದ್ದ. ಅವನ ಹತ್ತಿರ ಬಿಡಿ ಇವಳನ್ನು ನಾಲ್ಕು ಜನ್ಮಕ್ಕೆ ಬ್ಲಾಕ್ ಮೇಲ್ ಮಾಡುವಷ್ಟು ಮಟೀರಿಯಲ್ ಇತ್ತು. ಅವೆಲ್ಲ ತೋರಿಸಿ ತೋರಿಸಿಯೇ ಹೆದರಿಸಿ ಇಟ್ಟುಕೊಂಡಿದ್ದ.

'ನಿನ್ನ ಪರಿಸ್ಥಿತಿ ಎಷ್ಟೋ ಬೆಟರ್ ಗೀತಿಕಾ. ಆ ಕೋರ್ಡೆ ಎಷ್ಟು ದುರುಳ ಅಂದರೆ ಹೀರೋಯಿನ್ನುಗಳನ್ನು ದಂಧೆಗೆ ಇಳಿಸಿ, ಅವರಿಂದ ಕಮಿಷನ್ ಕೂಡ ಪಡೆಯುತ್ತಾನೆ. ನಿನ್ನ ಹತ್ತಿರ ಫ್ರೀ ಸರ್ವೀಸ್ ಒಂದೇ ಪಡೆಯುತ್ತಾನೆ. ದಂಧೆಯ ದುಡ್ಡನ್ನು ಮುಟ್ಟಲು ಬರುವದಿಲ್ಲ ಅಂದರೆ ಎಷ್ಟೋ ಬೆಟರ್ ಬಿಡು. ನಮ್ಮ ಸ್ಥಿತಿ ನೋಡು. ಅವನಿಗೆ, ಅವನ ಗೆಳೆಯರಿಗೆ ಬಿಟ್ಟಿ ಸರ್ವೀಸ್ ಕೊಡಬೇಕು. ಮೇಲಿಂದ ಮಂತ್ಲಿ ಪೇಮೆಂಟ್ ಕೂಡ ಕೊಡಬೇಕು,' ಅಂತ ಸೈಡ್ ರೋಲ್ ಮಾಡುತ್ತಿದ್ದ ನಟಿ ಒಬ್ಬಾಕೆ ಹೇಳಿದ್ದಳು. ಕೋರ್ಡೆನೇ ಹಾಗೆ ಹೇಳಿಸಿದ್ದ. ಬಲೆಗೆ ಬಿದ್ದ ಮಿಕಕ್ಕೆ ಸ್ವಲ್ಪ ಹಾಯೆನಿಸುವ ಹಾಗೆ ಮಾಡಿದರೆ ಮಿಕ ಅಷ್ಟು ಒದ್ದಾಡುವದಿಲ್ಲ ನೋಡಿ. ಬಲೆಯಲ್ಲಿಯೇ ಹೊಂದಿಕೊಂಡು ಇರುತ್ತದೆ.

ರಫೀಕ್ ತನ್ನ ಕೆಲಸ ಮುಗಿಯಿತು ಅನ್ನುವವಂತೆ ಫೋನ್ ಮಾಡುವದನ್ನು ನಿಲ್ಲಿಸಿದ. ಗೀತಿಕಾಳ ದೋಸ್ತಿ ಮಾಡಿ, ಅವಳನ್ನು ಪಟಾಯಿಸಿ, ಫೋನ್ ಮಾಡಿ, ಕೋರ್ಡೆಗೆ ಬ್ಲಾಕ್ ಮೇಲ್ ಮಾಡಲು ಅನುವು ಮಾಡಿ ಕೊಡುವದಷ್ಟೇ ಅವನ ಕೆಲಸವಾಗಿತ್ತು. ಅಷ್ಟು ಮಾಡಿಕೊಟ್ಟಿದ್ದ. ಅದಕ್ಕೆ ಪ್ರತಿಫಲವಾಗಿ ಇನ್ಸ್ಪೆಕ್ಟರ್ ಕೋರ್ಡೆ ರಫೀಕನ ಎದುರಾಳಿ ಗ್ಯಾಂಗಿನ ಗೂಂಡಾಗಳಿಬ್ಬರನ್ನು ಡಿಸ್ಕೌಂಟ್ ರೇಟಿನಲ್ಲಿ ಎನ್ಕೌಂಟರ್ ಮಾಡಿಕೊಟ್ಟಿದ್ದ.

ಸೂಪರ್ ಹೀರೋ ತರುಣ್ ಕುಮಾರ್ ಸಹಿತ ಗೀತಿಕಾಳನ್ನು ಹುರಿದು ಮುಕ್ಕಿದ. ಮುಂದೆ ಅವನ ಯಾವದೋ ಒಂದು ಫಿಲ್ಮಿಗೆ ಹೀರೋಯಿನ್ ಅಂತ ಆಯ್ಕೆಯಾಗಬೇಕು ಅಂದರೆ ಎಲ್ಲರೊಂದಿಗೆ ಮಲಗುವದು ಅನಿವಾರ್ಯವಾಗಿತ್ತು. ಮಲಗಿ ಬಂದಳು. ಒಂದು ಕಾಲದಲ್ಲಿ ಪೂಜಿಸಿದ್ದ ತರುಣ್ ಕುಮಾರ್ ಬಗ್ಗೆ ಕಣ್ಣಲ್ಲಿ ಅಸಹ್ಯವಿತ್ತು. ಅವನಿಗೆ ಅದೆಲ್ಲ ಫರಕ್ ಇಲ್ಲ ಬಿಡಿ.

ಮುಂದೆ ಸಿನೆಮಾದಲ್ಲಿ ಅವಕಾಶ ಕಮ್ಮಿ ಆದಂತೆ ದುಬೈ ಟ್ರಿಪ್ ಹೊಡೆಯುವದು ಜಾಸ್ತಿಯಾಯಿತು. ರಫೀಕ್ ಮತ್ತೆ ಭೆಟ್ಟಿಯಾದರೂ ಗೀತಿಕಾನೇ ಅವನಿಗೆ ಕ್ಯಾರೆ ಅನ್ನದೇ ಹೋಗುತ್ತಿದ್ದಳು. ಅವನಿಗಿಂತ ದೊಡ್ಡ ಲೆವೆಲ್ಲಿನ ಭಾಯಿ ಲೋಗ್ ಜೊತೆ, ಅರಬ್ ಶೇಖ್ ಜನರ ಜೊತೆ, ದೊಡ್ಡ ದೊಡ್ಡ ಇಂಟರ್ನ್ಯಾಷನಲ್ ಕುಳಗಳ ಜೊತೆಯಲ್ಲ ವ್ಯವಹಾರ ಕುದುರಿದ ಮೇಲೆ ರಫೀಕ್ ಅಂದರೆ ಯಾರೋ ಏನೋ.

ಮುಂದೆ ಯಾರೋ ಒಬ್ಬವ ಡಿಸ್ಟ್ರಿಬ್ಯೂಟರ್ ಸಿಕ್ಕ. ಅವನಿಗೂ ಒಂದೋ ಎರಡೋ ಮದುವೆಯಾಗಿ ಡೈವೋರ್ಸ್ ಆಗಿತ್ತು. ಸಕತ್ ರೊಕ್ಕ ಇದ್ದ ಪಾರ್ಟಿ. ಅವನ ಜೊತೆ ಶಾದಿ ಮಾಡಿಕೊಂಡ ಗೀತಿಕಾ ಧರ್ಮ ಕೂಡ ಚೇಂಜ್ ಮಾಡಿಕೊಂಡುಬಿಟ್ಟಳು. ಈಗ ಬೇಗಂ ಆಗಿ ಹಾಯಾಗಿದೆ ಬದುಕು. ಮದುವೆ ಮುಂಚೆ, ಯಾವದೋ ಕಾಲದಲ್ಲಿ, ಮೊದಲು ಗ್ರಾಹಕರಾಗಿ, ನಂತರ ಗೆಣೆಕಾರರಾಗಿ ಸಿಕ್ಕಿದ್ದ ಸಿಕ್ಕಾಪಟ್ಟೆ powerful ಮಿನಿಸ್ಟರ್ ಒಬ್ಬನನ್ನು ಹಿಡಿದು, ಕೋರ್ಡೆ ಮೇಲೆ ವಶೀಲಿ ಬಾಜಿ ಮಾಡಿಸಿ, ಅವನ ಬ್ಲಾಕ್ ಮೇಲ್ ಇಕ್ಕುಳದಿಂದ ಪಾರಾದಳು ಗೀತಿಕಾ. ಮತ್ತೆ ಅದೇ ಹೊತ್ತಿಗೆ ಕೋರ್ಡೆ ಸಾಹೇಬರ ಗ್ರಹಗತಿ ಕೂಡ ಕೆಟ್ಟುಹೋಗಿ, ಸಾಕಷ್ಟು ವಿವಾದಗಳಲ್ಲಿ ಸಿಕ್ಕಿ ಒದ್ದಾಡುತ್ತಿದ್ದರು. ಅವರ ದಸ್ತಾವೇಜಿನಿಂದ ಗೀತಿಕಾ ಎಂದೋ ನಿಕಾಲಿಯಾಗಿ ಹೋಗಿದ್ದಳು.

ಕೋರ್ಡೆ ಸಾಹೇಬರ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಿದ್ದು ಒಂದು ಅತ್ಯಾಚಾರದ ಕೇಸ್. ವರ್ಜಿನ್ ಕನ್ಯೆಯರು ಎಂದರೆ ವಿಪರೀತ ಹುಚ್ಚು, ಮೂಢನಂಬಿಕೆ ಬೆಳೆಸಿಕೊಂಡಿದ್ದ ಕೋರ್ಡೆ ಅಪ್ರಾಪ್ತ ವಯಸ್ಕ ಹುಡುಗಿಯೊಬ್ಬಳ ಮೇಲೆ ರೇಪ್ ಮಾಡಿದ ಆರೋಪಕ್ಕೆ ಸಿಕ್ಕು ಸಸ್ಪೆಂಡ್ ಆದರು. ಅದೇನು ಅನಿವಾರ್ಯತೆಗಳು ಇದ್ದವೋ ಏನೋ. ತನಿಖೆಗೆ ಒಳಗಾಗದೇ ನಾಪತ್ತೆಯಾಗಿಬಿಟ್ಟರು. ಈಗ ನೋಡಿದರೆ ಮುಂಬೈಯಿಂದ ಎಷ್ಟೋ ದೂರದಲ್ಲಿ ರೈಲು ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದರು. ಪಾಪದ ಕೊಡ ತುಂಬಿ ಬಂದಿತ್ತು.

ಟೀವಿ ಮೇಲೆ ಬ್ರೇಕಿಂಗ್ ನ್ಯೂಸ್ ಹಾಗೇ ಮುಂದುವರೆದಿತ್ತು. ಕೋರ್ಡೆ ಸಾಹೇಬರದು ಆತ್ಮಹತ್ಯೆಯೋ ಅಥವಾ ಕೊಲೆಯೋ ಅಂತ ಜಿಜ್ಞಾಸೆ ನಡೆದಿತ್ತು. ಗೀತಿಕಾಗೆ ಅದ್ಯಾವದೂ ಬೇಕಾಗಿರಲಿಲ್ಲ. ಪಿಶಾಚಿಯಂತೆ ಕಾಡಿದ್ದ ಕಿರಾತಕ ಕೋರ್ಡೆ ನಿರ್ನಾಮವಾಗಿ ಹೋಗಿದ್ದ. ಅಷ್ಟೇ ಸಾಕಾಗಿತ್ತು. ಬದುಕಿದ್ದರೆ ಮುಂದೊಮ್ಮೆ ಗೀತಿಕಾಳ ಮಕ್ಕಳನ್ನೂ ಬಿಡದೇ, ಅವರನ್ನೂ ಭಕ್ಷಿಸಿ ಬಿಡುವಂತಹ ರಾಕ್ಷಸನಾಗಿದ್ದ ಕೋರ್ಡೆ. ಯಾವದೋ ಒಂದು ತಾರಾ ಕುಟುಂಬದ ಮೂರು ತಲೆಮಾರುಗಳ ಅಬಲೆಯರನ್ನು ತಿಂದು ಮುಗಿಸಿದ್ದೆ ಅಂತ ಗರ್ವದಿಂದ ಹೇಳಿಕೊಳ್ಳುತ್ತಿದ್ದ ಆ ರಾಕ್ಷಸ ಕೋರ್ಡೆ. ಯಾವ ದೌರ್ಭಾಗ್ಯವಂತ ತಾರಾ ಕುಟುಂಬವೋ ಅದು?

ಅಷ್ಟರಲ್ಲಿ ಗೀತಿಕಾಳ ಇಬ್ಬರೂ ಹೆಣ್ಣು ಮಕ್ಕಳು ಬಂದರು. ಕೋರ್ಡೆಯಂತಹ ರಾಕ್ಷಸರಿಂದ ರಕ್ಷಿಸಲೋ ಎಂಬಂತೆ ಗೀತಿಕಾ ಮಕ್ಕಳಿಬ್ಬರನ್ನೂ ಗಟ್ಟಿಯಾಗಿ ಅಪ್ಪಿಕೊಂಡುಬಿಟ್ಟಳು. ಆ ಕಂದಮ್ಮಗಳಿಗೆ ಯಾಕೆ ಅಂತ ತಿಳಿಯಲಿಲ್ಲ. ಯಾಕೆಂದರೆ ಅವರಿಗೆ ಕೋರ್ಡೆ ಬಗ್ಗೆ ಗೊತ್ತಿರಲಿಲ್ಲ. ಕೋರ್ಡೆಯಂತಹ ಕಿರಾತಕ ಯಾರ ಬಾಳಲ್ಲೂ ಬರದೇ ಇರಲಿ ಅಂತ ಒಂದು ಕ್ಷಣ ಕಣ್ಮುಚ್ಚಿ ಪ್ರಾರ್ಥಿಸಿದಳು ಗೀತಿಕಾ.

ಒಂದು ವಿಷಯ ಮಾತ್ರ ಗೀತಿಕಾಗೆ ಗೊತ್ತೇ ಇರಲಿಲ್ಲ. ಇನ್ಸ್ಪೆಕ್ಟರ್ ಕೋರ್ಡೆಗೆ ಗೀತಿಕಾಳನ್ನು ಕಾಣಿಕೆ ಮಾದರಿಯಲ್ಲಿ ಒಪ್ಪಿಸಿದ್ದು  ಡಾನ್ ಛೋಟಾ ಫಕೀರ್ ಅಂತ. ವರ್ಷಕ್ಕೆ ಇಷ್ಟು ಕೋಟಿ ರೂಪಾಯಿ, ಇಷ್ಟು ಹೊಸ ಬಾಲಿವುಡ್ ನಟಿಮಣಿಯರ ಆಹುತಿ ಅಂತ ಒಪ್ಪಂದ ಕೋರ್ಡೆ ಮತ್ತು ಡಾನ್ ಛೋಟಾ ಫಕೀರ್ ನಡುವೆ. ಮತ್ತೆ ಆ ಚದುರಂಗದಾಟದಲ್ಲಿ ರಫೀಕ್, ತರುಣ್ ಕುಮಾರ್ ಎಲ್ಲರಿಗೆ ಬೇರೆ ಬೇರೆ ಪಾತ್ರವಿತ್ತು. ಅದೆಲ್ಲ ರಹಸ್ಯ ಕೋರ್ಡೆಯೊಂದಿಗೆ ಸಮಾಧಿಯಾಯಿತು.

(ಇಂತಹ ಅನೇಕ ಸುದ್ದಿಗಳನ್ನು ಅಲ್ಲಿ ಇಲ್ಲಿ ಓದಿದ್ದರೂ ಈ ಕಥೆಗೆ ಒಂದು ಸಾಲಿಡ್ ಐಡಿಯಾ ಸಿಕ್ಕಿದ್ದು ಒಂದು ನೈಜ ಘಟನೆಯ ಬಗ್ಗೆ ಈ ಪತ್ರಿಕಾ ವರದಿ ಓದಿದಾಗ. ಅದು ಕಥೆಯ ಎಳೆ ಅಷ್ಟೇ. ವಿವರಗಳೆಲ್ಲವೂ ಪೂರ್ತಿಯಾಗಿ ನನ್ನ ಕಲ್ಪನೆ. ನೈಜ ಘಟನೆಯಲ್ಲಿ ಇರಬಹುದಾದ ಯಾವದೇ ಸನ್ನಿವೇಶಗಳಿಗೆ, ವ್ಯಕ್ತಿಗಳಿಗೆ ಸಾಮ್ಯತೆ ಕಂಡು ಬಂದರೆ ಅದು ಖಂಡಿತವಾಗಿಯೂ ಉದ್ದೇಶಪೂರ್ವಕವಲ್ಲ. ಈ ಮಾದರಿಯ ವಿವರಗಳು ಸುಕೇತು ಮೆಹತಾ ಬರೆದ 'Maximum City', ವಿಕ್ರಮ ಚಂದ್ರ ಬರೆದ 'Sacred Games' ಪುಸ್ತಕದಲ್ಲಿ ಬೇಕಾದಷ್ಟು ಇವೆ. ಹುಸೇನ್ ಝೈದಿ ಬರೆದ 'Dongri to Dubai', 'Byculla to Bankok' ಇತ್ಯಾದಿ ಪುಸ್ತಕಗಳಲ್ಲಿ ಬಾಲಿವುಡ್, ಮಾಫಿಯಾ, ಪೋಲೀಸ್ ಎಲ್ಲದರ ಬಗ್ಗೆ ಬೇಕಾದಷ್ಟು ವಿವರಗಳು ಇವೆ.)

Thursday, October 09, 2014

ವಿಚಿತ್ರ ಗುರುದಕ್ಷಿಣೆ ಕೇಳಿದ್ದ ಮಾಸ್ತರ್ರು!

ಪಾಠ ಮಾಡಿರುವ ಶಿಕ್ಷಕರಲ್ಲಿ ಅನೇಕರು ಬೇರೆ ಬೇರೆ ಕಾರಣಗಳಿಗೆ ನೆನಪಿನಲ್ಲಿರುತ್ತಾರೆ. ಅಂತಹವರಲ್ಲಿ ಒಬ್ಬರು ಡಾ. ದೇವಿ ಪ್ರಸಾದ. BITS, Pilani ಯಲ್ಲಿ ಇಂಜಿನಿಯರಿಂಗ್ ಮಾಡುತ್ತಿರುವಾಗ ನಮ್ಮ ಮಾಸ್ತರರು ಅವರು. ಗಣಿತ ವಿಭಾಗದವರು. ಒಳ್ಳೆ ಶಿಕ್ಷಕರು. ಶಾಂತವಾಗಿ ಬಂದು, ಪಾಠ ಮಾಡುವಷ್ಟು ಮಾಡಿ, ಆಗಾಗ ಒಂದಿಷ್ಟು ಪ್ರಾಕ್ಟಿಕಲ್ ಫಿಲಾಸಫಿ ತಮ್ಮ ಮಜೇದಾರ್ ಶೈಲಿಯಲ್ಲಿ ಝಾಡಿಸಿ, ಬೇಕಾದರೆ ತಮ್ಮನ್ನು ತಾವೇ ಒಂದಿಷ್ಟು ಗೇಲಿ ಮಾಡಿಕೊಂಡು, ಮಜವಾಗಿ ಪಾಠ ಮಾಡುತ್ತಿದ್ದರು ಡಾ. ದೇವಿ ಪ್ರಸಾದ.

ಒಳ್ಳೆ ಟಿಪಿಕಲ್ ಅಜ್ಜನ ಪರ್ಸನಾಲಿಟಿ ದೇವಿ ಪ್ರಸಾದರದ್ದು. ಚಳಿಗಾಲದಲ್ಲಿ ಓವರ್ ಕೋಟ್, ತಲೆ ಮೇಲೊಂದು ಕಾಶ್ಮೀರಿ ಜನರ ಟೊಪ್ಪಿ ಹಾಕಿಕೊಂಡು, ನಿಧಾನವಾಗಿ, absent minded ಆಗಿ, ಏನೋ ಯೋಚಿಸುತ್ತ ಬರುತ್ತಿದ್ದ ಅವರನ್ನು ನೋಡಿದರೇ ಒಂದು ತರಹ ಮಜಾ ಅನ್ನಿಸುತ್ತಿತ್ತು. ಬಂದವರೇ, ಕೈ ಕೈ ತಿಕ್ಕಿ, ಬಿಸಿ ಶಾಖ ಜನರೇಟ್ ಮಾಡಿ, ಬೆಚ್ಚಗೆ ಮಾಡಿಕೊಂಡು, ' ಕಿತ್ನಾ ಥಂಡ್ ಹೈ ಜೀ!' ಅಂತ ಚಳಿಗಾಲದ ಕೊರೆಯುವ ಚಳಿಯ ವರ್ಣನೆ ಮಾಡುತ್ತ, ಚಾಕ್ ಕೈಗೆತ್ತಿಕೊಂಡರೆಂದರೆ ಒಂದು ತಾಸು ಅಮೋಘ ಪಾಠ ಅವರದ್ದು. ಸಣ್ಣ ಅಕ್ಷರಗಳಲ್ಲಿ ಬರೆಯುತ್ತ, ಇಡೀ ದೊಡ್ಡ ಬೋರ್ಡ್ ತುಂಬಿಸುತ್ತಿದ್ದರು. ನಡು ನಡು ಮಜೇದಾರ ಫಿಲಾಸಫಿ.

೧೯೯೨, ಅಕ್ಟೋಬರ್. ಇಂಜಿನಿಯರಿಂಗ್ ಮೂರನೇ ವರ್ಷದ  ಮೊದಲನೇ ಸೆಮಿಸ್ಟರ್. ಅರ್ಧ ಮುಗಿದಿತ್ತು. Numerical Analysis ಅನ್ನುವ ಒಂದು ಕೋರ್ಸ್ ಇತ್ತು. ಎಲ್ಲರಿಗೂ ಕಾಮನ್ ಕೋರ್ಸ್ ಆದ್ದರಿಂದ ಸುಮಾರು ಜನ ಪ್ರೊಫೆಸರಗಳು ಅದನ್ನು ಕಲಿಸುತ್ತಿದ್ದರು. ನಾನಿದ್ದ ವಿಭಾಗಕ್ಕೆ (section) ಇದೇ ಪ್ರೊ. ದೇವಿ ಪ್ರಸಾದರು ಬಂದಿದ್ದರು.

ಒಂದು ದಿವಸ ಕ್ಲಾಸ್ ಮುಗಿಯಿತು. ಕ್ಲಾಸ್ ಮುಗಿದ ನಂತರ ಎಲ್ಲರೂ ಕ್ಲಾಸ್ ರೂಂ ಖಾಲಿ ಮಾಡುವವರೆಗೆ ಕ್ಲಾಸಿನಲ್ಲಿಯೇ ಕೂತಿದ್ದು, ಯಾರದ್ದಾದರೂ ಡೌಟ್ ಏನಾದರೂ ಇದ್ದರೆ ಅದನ್ನು ಬಗೆಹರಿಸಿ, ನಂತರ ನಿಧಾನಕ್ಕೆ ಎದ್ದು, ಅವರ ಪುಸ್ತಕ, ಇತ್ಯಾದಿ ಹೊಂದಿಸಿಕೊಂಡು ಹೋಗುವದು ಪ್ರೊ. ದೇವಿ ಪ್ರಸಾದರ ರೂಢಿ. ಅವತ್ತೂ ಹಾಗೇ ಆಯಿತು.

ನನಗೆ ಏನೋ ಒಂದು ಡೌಟ್ ಬಂತು. ನಾನು ನೋಟ್ಸ್ ಬರೆದುಕೊಳ್ಳುವಾಗ ತಪ್ಪಿದ್ದೆನೋ ಅಥವಾ ಅವರೇ ಒಂದು ಸ್ಟೆಪ್ ಹಾರಿಸಿದ್ದರೋ ಏನೋ. ಡೌಟ್ ಬಗೆಹರಿಸಿಕೊಳ್ಳೋಣ ಅಂತ ಹೋದೆ. ಡೌಟ್ ಅದು ಇದು ಎಂದು ಅದೇ ಮೊದಲ ಸಲ ಅವರನ್ನು ಭೆಟ್ಟಿಯಾಗಿದ್ದು.

ಹೋಗಿ ನಿಂತೆ. 'ಏನು? ಹೇಳಿ,' ಅನ್ನೋ ಲುಕ್ ಕೊಟ್ಟರು ದೇವಿ ಪ್ರಸಾದ್. ಅವರಿಗೆ ಯಾವದೇ ತರಹದ ಬಿಂಕ ಬಿಗುಮಾನ ಇಲ್ಲ. ತುಂಬ ಸುಲಭವಾಗಿ ಹೋಗಿ, ಮಾತಾಡಿಸಬಹುದಾದಂತಹ ವ್ಯಕ್ತಿತ್ವದವರು ಅವರು. Easily approachable.

ನನ್ನ ಡೌಟ್ ಹೇಳಿದೆ. ನನ್ನ ನೋಟ್ ಬುಕ್ ತೋರಿಸಿ, ಏನೋ ಕೇಳಿದೆ.

ನನ್ನ ನೋಟ್ಸ್ ನೋಡುತ್ತ, ಡೌಟ್ ಅರ್ಥ ಮಾಡಿಕೊಂಡ ದೇವಿ ಪ್ರಸಾದ್ ಡೌಟ್ ಕ್ಲಿಯರ್ ಮಾಡುವ ಮೊದಲು ಬೇರೆನೇ ಏನೋ ಮಾತುಕತೆ ಶುರು ಹಚ್ಚಿಕೊಂಡರು.

ಅವರು ಶುದ್ಧ ಹಿಂದಿ ಆಸಾಮಿ. ಕ್ಲಾಸಿನಲ್ಲಿ ಪಾಠ ಮಾಡುವದನ್ನು ಒಂದನ್ನು ಇಂಗ್ಲೀಷಿನಲ್ಲಿ ಬಿಟ್ಟರೆ, ಬಾಕಿ ಮಾತುಕತೆ, ಅವರ ಮಜವಾದ ಉಪದೇಶಗಳು ಎಲ್ಲ ಹಿಂದಿಯಲ್ಲಿಯೇ. ಹಾಗಾಗಿ ಹಿಂದಿಯಲ್ಲಿಯೇ ಶುರು ಹಚ್ಚಿಕೊಂಡರು.

ನನ್ನ ನೋಟ್ ಬುಕ್ ನೋಡುತ್ತ, 'ನೋಟ್ಸ್ ಬಹಳ ಚಂದಾಗಿ, ನೀಟಾಗಿ ಬರೆಯುತ್ತೀರಲ್ಲ? ಬಹಳ ಸಂತೋಷ,' ಅಂತ ಏನೋ ಒಂದು ಪೀಠಿಕೆ ಇಟ್ಟರು. ಮಾಸ್ತರ್ರು ನೋಟ್ಸ್ ಚನ್ನಾಗಿದೆ, ಕೈಬರಹ ಚನ್ನಾಗಿದೆ ಅಂದರೆ ಯಾರಿಗೆ ಖುಷಿಯಾಗುವದಿಲ್ಲ? 'ಹೇ, ಹೇ, ದೊಡ್ಡ ಮಾತು ಸರ್,' ಅನ್ನುವ ರೀತಿಯಲ್ಲಿ ದೇಶಾವರಿ ನಗೆ ನಕ್ಕು, ತರೇವಾರಿ ಬಾಡಿ ಬೆಂಡಿಂಗ್ ಮಾಡಿದೆ. ಯಾರಾದರೂ compliments ಕೊಟ್ಟರೆ, gracefully ಸ್ವೀಕರಿಸಲೂ ಬರದ ಕಾಲ ಅದು.

ಏನೋ ಒಂದು ಲೆವೆಲ್ಲಿಗೆ ಕೈಬರಹ ಚನ್ನಾಗಿತ್ತು ಅನ್ನಿ. ಸಣ್ಣಂದಿನಲ್ಲಿ ಮನೆಯಲ್ಲಿ, ಶಾಲೆಯಲ್ಲಿ ಕೈಬರಹಕ್ಕೆ ತುಂಬ ಪ್ರಾಮುಖ್ಯತೆ ಕೊಟ್ಟು, ವರ್ಷಾನುಗಟ್ಟಲೆ ಕಾಪಿ ತಿದ್ದಿಸಿ, 'ಇಂಕ್ ಪೆನ್ನಲ್ಲಿ ಮಾತ್ರ ಬರೆಯಿರಿ. ಬಾಲ್ ಪಾಯಿಂಟ್ ಪೆನ್ನಿನಲ್ಲಿ ಬರೆದರೆ ಹ್ಯಾಂಡ್ ರೈಟಿಂಗ್ ಹಾಳಾಗುತ್ತದೆ. ಹ್ಯಾಂಡ್ ರೈಟಿಂಗ್ ಚನ್ನಾಗಿದ್ದರೆ ಒಂದೈದು ಮಾರ್ಕ್ಸ್ ಜಾಸ್ತಿಯೇ ಬರುತ್ತದೆ,' ಅಂತೆಲ್ಲ ಹೇಳಿ, ಏನೇನೋ ಮಾಡಿ, ಏನೋ ಒಂದು ರೀತಿಯಲ್ಲಿ ಒಳ್ಳೆ ಹ್ಯಾಂಡ್ ರೈಟಿಂಗ್ ಗೆ ಒಳ್ಳೆ ಬುನಾದಿ ಹಾಕಿ ಕೊಟ್ಟಿದ್ದರು. ಇಂಜಿನಿಯರಿಂಗ್ ಗೆ ಹೋದ ಮೇಲೆ ಅದಕ್ಕೆ ಅಷ್ಟೊಂದು ಮಹತ್ವ ಇರದಿದ್ದರೂ, ಮೊದಲಿನಷ್ಟು ಸುಂದರವಲ್ಲದಿದ್ದರೂ, ತುಂಬ ನೀಟಾಗಿ ಅಂತೂ ಬರಹ ಇರುತ್ತಿತ್ತು. ಅದೇ ಈಗ ಪ್ರೊ. ದೇವಿ ಪ್ರಸಾದರನ್ನು ಇಂಪ್ರೆಸ್ ಮಾಡಿತ್ತು.

'ಅಲ್ಲಾ, ಒಂದು ಕೆಲಸ ಮಾಡ್ತೀಯಾ? ಸೆಮಿಸ್ಟರ್ ಮುಗಿದ ನಂತರ ನಿನ್ನ ನೋಟ್ ಬುಕ್ ನನಗೆ ಕೊಡುತ್ತೀಯಾ? ಪ್ಲೀಸ್,' ಅಂತ ಅಂದು ಬಿಟ್ಟರು ಪ್ರೊಫೆಸರ್ ಸಾಹೇಬರು. ಇವರು ಏನು ಹೇಳುತ್ತಿದ್ದಾರೆ, ಏನನ್ನು ಕೇಳುತ್ತಿದ್ದಾರೆ ಅಂತ ಅರ್ಥವಾಗುವ ಮೊದಲೇ ಮತ್ತೆ ಅವರೇ ಹೇಳಿದರು. 'ನನ್ನ ಕ್ಲಾಸ್ ನೋಟ್ಸ್ ನೋಡು. ತುಂಬ ಹಳೆಯದಾಗಿ ಹೋಗಿದೆ. ಎಲ್ಲ ಹಾಳೆಗಳು ಲಡ್ಡಾಗಿ ಹೋಗಿವೆ. ಅವಸ್ಥೆ ನೋಡಯ್ಯಾ! ಅದಕ್ಕೇ ಮಾರಾಯಾ ನಿನ್ನ ನೋಟ್ಸ್ ಕೊಟ್ಟು ಬಿಡಯ್ಯಾ,' ಅಂತ ಅಂದು ಬಿಡಬೇಕೇ!? ಅದು ದೇವಿ ಪ್ರಸಾದರ ಸರಳತೆ. ಭಿಡೆ ಗಿಡೆ ಇಲ್ಲ. 'ಏಕ್ ಮಾರ್ ದೋ ತುಕಡೆ,' ಶೈಲಿಯಲ್ಲಿ ಮಾತು.

ಏನು ಹೇಳೋಣ? ಮಾಸ್ತರರು ಕೇಳಿದರೆ ಇಲ್ಲ ಅನ್ನಲಿಕ್ಕೆ ಆಗುತ್ತದೆಯೇ? ಅದೂ ಅವರು ಕೇಳಿದ್ದು ಕೇವಲ ನೋಟ್ಸ್. ದ್ರೋಣಾಚಾರ್ಯರು ಏಕಲವ್ಯನನ್ನು ಕೇಳಿದಂತೆ ಬೆರಳನ್ನೇನೂ ಕೇಳಿಲ್ಲವಲ್ಲ?  ಅದೂ ಸೆಮಿಸ್ಟರ್ ಮುಗಿದ ನಂತರ ಕೊಡು ಅಂತ ಕೇಳುತ್ತಿದ್ದಾರೆ. ನನ್ನ ನೋಟ್ಸ್ ಹೆಚ್ಚಾಗಿ ರದ್ದಿಗೆ ಹೋಗುತ್ತಿತ್ತು. ಅದರ ಬದಲಿ ಇವರು ಕೇಳುತ್ತಿದ್ದಾರೆ. ಕೊಟ್ಟರಾಯಿತು ಅಂತ ವಿಚಾರ ಮಾಡಿ, 'ಆಯಿತು ಸಾರ್. ಸೆಮಿಸ್ಟರ್ ಮುಗಿದ ನಂತರ ತಂದು ಮುಟ್ಟಿಸ್ತೀನಿ,' ಅಂತ ಹೇಳಿದೆ.

ಅಷ್ಟಾದ ನಂತರವೇ ನಾನು ಕೇಳಿದ್ದ ಡೌಟ್ ಬಗೆಹರಿಸಲು ರೆಡಿ ಆದರು ಪ್ರೊಫೆಸರ್. ಹಾಕಿಕೊಂಡಿದ್ದ ಕೋಟ್ ಕಿಸೆಯಿಂದ ಕನ್ನಡಕ ತೆಗೆದು, ಮೂಗಿನ ಮೇಲೆ ಏರಿಸಿ, 'ನೋಡೋಣ ಏನು ನಿಮ್ಮ ಡೌಟ್ ಅಂತ. ತೋರಿಸಿ,' ಅನ್ನುತ್ತ ನಾನು ಬರೆದುಕೊಂಡಿದ್ದ ನೋಟ್ಸ್ ನೋಡುತ್ತ, 'ಹಾಂ! ಇಲ್ಲೊಂದು ಸ್ಟೆಪ್ ಮಿಸ್ ಮಾಡಿದ್ದಿರಿ ನೋಡಿ. ಇಲ್ಲಿ ಅದನ್ನು ಹಾಕಿ, ನಂತರ ಮತ್ತೊಂದು ಸ್ಟೆಪ್ ಹಾಕಿ, ಕೆಳಗೆ ತನ್ನಿ. ಅಷ್ಟೇ ಬೇಕಾಗಿದ್ದು, ' ಅಂತ ಅಲ್ಲೇ ಎಲ್ಲ ಬಗೆಹರಿಸಿ ಕೊಟ್ಟರು. ತಮ್ಮ ಪೆನ್ನಿನಿಂದಲೇ ತಿದ್ದಿ, 'ಎಲ್ಲ ಸರಿಯಾಯಿತು ತಾನೇ? any other doubt?' ಅನ್ನೋ ಲುಕ್ ಕೊಟ್ಟು, 'ನಿಮ್ಮಷ್ಟು ಸುಂದರ ಇಲ್ಲ ಬಿಡಿ ನನ್ನ ಬರವಣಿಗೆ,' ಅಂತ ಮತ್ತೆ ನಮ್ಮ ಹ್ಯಾಂಡ್ ರೈಟಿಂಗ್ ತಾರೀಫು ಬೇರೆ ಮಾಡಿದರು. ಹೈಸ್ಕೂಲ್ ಬಿಟ್ಟ ನಂತರ ಹ್ಯಾಂಡ್ ರೈಟಿಂಗ್ ಇಷ್ಟೆಲ್ಲ ಯಾರೂ ಹೊಗಳಿರಲಿಲ್ಲ ಬಿಡಿ.

ಡೌಟ್ ಕ್ಲೀರ್ ಆಯಿತು ಅನ್ನಿ. ಥ್ಯಾಂಕ್ಸ್ ಹೇಳಿ ಹೊರಡಲು ಮುಂದಾದೆ. ಮತ್ತೊಮ್ಮೆ ಸರ್ ನೆನಪಿಸಿದರು. 'ಸೆಮಿಸ್ಟರ್ ಮುಗಿದ ನಂತರ ನಿಮ್ಮ ನೋಟ್ಸ್ ತಂದು ಕೊಡ್ತೀರಿ ತಾನೇ? ಮರಿಬೇಡಿ,' ಅಂತ ಹೇಳಿದರು. 'ಆಯಿತು ಸರ್,' ಅಂತ ಹೇಳಿ ಬಂದೆ. ಅದರ ಬಗ್ಗೆ ಅಷ್ಟೇನೂ ಸೀರಿಯಸ್ ಆಗಿ ವಿಚಾರ ಮಾಡಿರಲಿಲ್ಲ ಬಿಡಿ.

ಡಿಸೆಂಬರ್ ಮಧ್ಯಕ್ಕೆ ಸೆಮಿಸ್ಟರ್ ಮುಗಿಯಿತು. ನಂತರ ಮೂರು ವಾರ ರಜೆ. ಧಾರವಾಡದಲ್ಲಿ ಫುಲ್ ಐಶ್! ಮತ್ತೆ ಜನೇವರಿ ಎರಡನೇ ವಾರದಿಂದ ಮುಂದಿನ ಸೆಮೆಸ್ಟರ್ ಶುರುವಾಗಿಯೇ ಬಿಟ್ಟಿತು. ಅದೆಲ್ಲ ಒಳ್ಳೆ ಒಳ್ಳೆ ಕ್ಲಾಕ್ ವರ್ಕ್ ಇದ್ದಂತೆ. ಸೆಮೆಸ್ಟರ್, ಕ್ಲಾಸುಗಳು, ಟೆಸ್ಟುಗಳು, ಮತ್ತೊಂದು, ಮಗದೊಂದು. ಅವಕ್ಕೆಲ್ಲ ಕೊನೆಯೇ ಇಲ್ಲ. ಇದೆಲ್ಲೆದರ ಮಧ್ಯೆ ಪ್ರೊ. ದೇವಿ ಪ್ರಸಾದರ ನೋಟ್ ಬುಕ್ ಕೋರಿಕೆಯನ್ನು ಮರೆತೇ ಬಿಟ್ಟೆ. ಎಲ್ಲಿಯಾದರೂ ಅವರನ್ನು ಎದುರಿಗೆ ಕಂಡಿದ್ದರೆ ನೆನಪಾಗುತ್ತಿತ್ತೋ ಏನೋ. ಅವರೂ ಕಾಣಲಿಲ್ಲ. ಅವರ ಗಣಿತ ವಿಭಾಗ, ಅದರಲ್ಲಿ ಅವರ ಸ್ಟಾಫ್ ರೂಂ ಎಲ್ಲ ಕ್ಯಾಂಪಸ್ಸಿನ ಒಂದು ಮೂಲೆಯಲ್ಲಿತ್ತು. ನಮಗೆ ಆಕಡೆ ಹೋಗುವ ಜರೂರತ್ತು ಮುಂದಿನ ಸೆಮೆಸ್ಟರ್ ನಲ್ಲಿ ಇರಲಿಲ್ಲ.

ಮುಂದೆ ಸ್ವಲ್ಪ ದಿವಸದ ನಂತರ ಒಬ್ಬ ದೋಸ್ತ ಭೆಟ್ಟಿಯಾಗಿದ್ದ. ಭೆಟ್ಟಿ ಸದಾ ಆಗುತ್ತಿದ್ದ. ಅದೇ ಹಾಸ್ಟೆಲ್ ಮೆಸ್ಸಿನಲ್ಲಿ. ಮುದ್ದಾಂ ನಿಲ್ಲಿಸಿ ಮಾತಾಡಿಸಿದ್ದು ಆವತ್ತಿನ ವಿಶೇಷ.

'ಏನು ಮಹೇಶ್, ದೇವಿಪೀಗೆ ಸಕತ್ ಟೋಪಿ ಹಾಕಿದ ಹಾಗಿದೆ!!??' ಅಂದು ಬಿಟ್ಟ. ಕಿಚಾಯಿಸೋ ಹಾಗೆ ಪೆಕಪೆಕಾ ನಕ್ಕ.

ದೇವಿಪೀ (Devi P) ಅಂದರೆ ದೇವಿ ಪ್ರಸಾದ್ ಅಂತ.

ಏನೋ TK ಜಾಸ್ತಿಯಾಗಿ ಸುಮ್ಮನೆ ಕಾಲೆಳೆಯುತ್ತಿರಬೇಕು ಅಂತ ಅಂದುಕೊಂಡು, ನಾನೂ ಸುಮ್ಮನೆ ನಕ್ಕು, ಅವನ ಬೆನ್ನಿಗೊಂದು ಲೈಟಾಗಿ ಗುದ್ದಿ ಹೊರಟೆ. ತಡೆದು ನಿಲ್ಲಿಸಿದ.

'ಏ, ಜೋಕ್ ಅಲ್ಲ ಮಾರಾಯಾ. ಇವತ್ತು ಕ್ಲಾಸ್ ಮುಗಿದ ನಂತರ ಪಾಪ ಅಳ್ತಾ ಇದ್ದಾ ದೇವಿಪೀ' ಅಂದ ದೋಸ್ತ್.

Numerical Analysis ಅನ್ನುವ ಕೋರ್ಸ್ ಎಲ್ಲರಿಗೂ ಕಾಮನ್ ಕೋರ್ಸ್ ಆಗಿತ್ತು. ಅರ್ಧ ಜನ ವಿದ್ಯಾರ್ಥಿಗಳು, ನಮ್ಮ ಹಾಗೆ, ಮೂರನೇ ವರ್ಷ ಮೊದಲ ಸೆಮಿಸ್ಟರ್ ನಲ್ಲಿ ಮಾಡಿದ್ದರೆ, ಉಳಿದರ್ಧ ಜನ ಎರಡನೇ ಸೆಮಿಸ್ಟರ್ ನಲ್ಲಿ ಮಾಡುತ್ತಿದ್ದರು. ಈಗ ಮಾತಾಡುತ್ತಿದ್ದ ದೋಸ್ತ್ ಎರಡನೇ ಸೆಮಿಸ್ಟರ್ ಒಳಗೆ ಮಾಡುತ್ತ ಇದ್ದ. ದೇವಿ ಪ್ರಸಾದ್ ಮತ್ತೆ ಅದೇ ಪಾಠ ಮಾಡುತ್ತಿದ್ದರು.

'ಏನಯ್ಯಾ ನಿನ್ನ ಗೋಳು? ದೇವಿಪೀ, ಟೋಪಿ ಅಂತ ಏನೇನೋ ಹೇಳ್ತೀಯಾ?' ಅಂತ ಝಾಡಿಸಿದೆ.

'ಏನು ಹೀರೋ ಸಾಹೇಬರು ದೇವಿಪೀಗೆ ಏನೋ ಕೊಡ್ತೀನಿ ಅಂತ ಹೇಳಿ ಬಂದು ಇನ್ನೂ ಕೊಟ್ಟೇ ಇಲ್ಲವಂತೆ? 'ಲಾಸ್ಟ್ ಸೆಮಿಸ್ಟರ್ ನ ಸ್ಟೂಡೆಂಟ್ ಒಬ್ಬ ನೋಟ್ಸ್ ಕೊಡ್ತೀನಿ ಅಂತ ಹೇಳಿದ್ದ. ಇನ್ನೂ ತಂದು ಕೊಟ್ಟೇ ಇಲ್ಲ,' ಅಂತ ಈಗ ಎರಡು ಕ್ಲಾಸ್ ಆಯಿತು ದೇವಿಪೀ ಬೊಂಬಡಾ ಹೊಡಿತಾ ಇದ್ದಾನೆ. ಹೀಗಾ ಮಾಡೋದು?ಹಾಂ!?' ಅಂತ ಮತ್ತೆ ಕಿಚಾಯಿಸಿದ ದೋಸ್ತ.

ಆವಾಗ ನೆನಪಾಯಿತು. ಕೆಲ ತಿಂಗಳ ಹಿಂದೆ ದೇವಿ ಪ್ರಸಾದ್ ಹತ್ತಿರ ಡೌಟ್ ಕೇಳೋಕೆ ಹೋಗಿದ್ದು, ನೋಟ್ಸ್ ನೋಡಿ, ಸಿಕ್ಕಾಪಟ್ಟೆ ತಾರೀಫ್ ಮಾಡಿ, ಸೆಮಿಸ್ಟರ್ ಮುಗಿದ ನಂತರ ಅವರಿಗೆ ಕೊಡುವಂತೆ ಕೇಳಿಕೊಂಡಿದ್ದು, ಆಯಿತು ಅಂತ ಹೇಳಿ ಬಂದಿದ್ದು. ಎಲ್ಲ ಫುಲ್ ನೆನಪಾಯಿತು.

'ಅಬೇ ಸಾಲೇ, ನಿನಗೆ ಹೇಗೆ ಗೊತ್ತಾಯಿತು ದೇವಿಪೀ ನನ್ನನ್ನೇ ಕುರಿತು ಮಾತಾಡುತ್ತಿದ್ದರು?' ಅಂತ ಕೇಳಿದೆ.

'ದೇವಿ ಪ್ರಸಾದ್ ಚಹರಾಪಟ್ಟಿ ಎಲ್ಲ ಹೇಳಿದ ಮಾರಾಯಾ. ಬರೋಬ್ಬರಿ ನಿನಗೇ ಫಿಟ್ ಆಗೋ ಚಹರಾಪಟ್ಟಿ ಹೇಳಿದ ನೋಡು.  'ಭಯಂಕರ ಸುಂದರ ಹ್ಯಾಂಡ್ ರೈಟಿಂಗ್, ಸಿಕ್ಕಾಪಟ್ಟೆ ನೀಟಾಗಿ ನೋಟ್ಸ್ ಬರೆದುಕೊಳ್ಳುತ್ತಿದ್ದ,' ಅಂತೆಲ್ಲ ಹೇಳಿ, ಒಂದು ಹತ್ತು ನಿಮಿಷ, ತನ್ನ ಹಳೆ, ಲಡ್ಡಾದ ನೋಟ್ಸ್ ತೋರಿಸುತ್ತ, 'ನೋಡಿ ನನ್ನ ನೋಟ್ಸ್ ಎಷ್ಟು ಲಡ್ಡಾಗಿ ಹೋಗಿವೆ. ಅವನ ನೋಟ್ಸ್ ಕೊಡ್ತೀನಿ ಅಂದಿದ್ದ. ಪತ್ತೇನೇ ಇಲ್ಲ. ಆ ಹುಡಗ ಎಲ್ಲಾದರೂ ಸಿಕ್ಕರೆ, ನೋಟ್ಸ್ ಸ್ವಲ್ಪ ತಂದು ಕೊಟ್ಟು ಹೋಗೋಕೆ ಹೇಳಿ. ನನ್ನ ಪ್ರಾರಬ್ಧ ಅಂದರೆ ಅವನ ಹೆಸರೂ ನೆನಪಿಲ್ಲ,' ಅಂತ ಅಲವತ್ತುಕೊಂಡ ದೇವಿಪೀ. ಹೋಗಿ ನೋಟ್ಸ್ ಕೊಟ್ಟು ಬಾರಯ್ಯ. ಎಷ್ಟೊಂದು ಮಿಸ್ ಮಾಡಿಕೊಳ್ತಾ ಇದಾರೆ ಅವರು. ಒಳ್ಳೆ ಗಿರಾಕಿ ನೀನು,' ಅಂತ ಫ್ರೆಂಡ್ ಮತ್ತೂ ಕಿಚಾಯಿಸಿದ.

ಈ ಫ್ರೆಂಡ್ ಸಹಿತ ಸುಮಾರು ಸಲ ನನ್ನ ನೋಟ್ಸ್ ಜೆರಾಕ್ಸ್ ಮಾಡಿಸಿದ್ದ. ಬೇರೆ ಬ್ರಾಂಚ್ ಆದರೂ ಒಳ್ಳೆ ಪರಿಚಯವಿತ್ತು. ದೇವಿಪೀ ಹೇಳಿದ ಚಹರಾಪಟ್ಟಿ, ಒಳ್ಳೆ ಹ್ಯಾಂಡ್ ರೈಟಿಂಗ್ ವರ್ಣನೆ ಇತ್ಯಾದಿ ಕೇಳಿ, ನಾನೇ ಇರಬೇಕು ಅಂತ ಒಂದು ಬಾಣ ಕತ್ತಲಲ್ಲಿ ಬಿಟ್ಟಿದ್ದ. ಅದು ನಿಜವೇ ಆಗಿತ್ತು.

ಮತ್ತೇನು? ಇನ್ನು ತಡ ಮಾಡಬಾರದು ಅಂತ ವಿಚಾರ ಮಾಡಿದೆ. ಮರುದಿವಸ ಕ್ಯಾಂಪಸ್ಸಿನ ಒಂದು ಮೂಲೆಯಲ್ಲಿದ್ದ ಗಣಿತ ವಿಭಾಗಕ್ಕೆ ಹೋಗಿ, ಅದರಲ್ಲಿ ಮೂಲೆಯಲ್ಲಿದ್ದ  ದೇವಿ ಪ್ರಸಾದರ ಆಫೀಸ್ ಹುಡುಕಿದೆ. ಸರ್ ಇಲ್ಲದಿದ್ದರೆ, ತಲೆ ಬಿಸಿಯಿಲ್ಲದೆ, ಬಾಗಿಲಿನ ಕೆಳಗಿನ ಸಂದಿಯಲ್ಲಿ ನೋಟ್ ಬುಕ್ ನೂಕಿ ಬಂದರಾಯಿತು ಅಂತ ಅಂದುಕೊಂಡಿದ್ದೆ. ದೇವಿ ಪ್ರಸಾದ್ ಸ್ಟಾಫ್ ರೂಮಿನಲ್ಲೇ ಇದ್ದರು. ನನ್ನ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿಬಿಟ್ಟರು. 'ಕಿದರ್ ಗಾಯಬ್ ಹೋ ಗಯೇ ಥೇ ಆಪ್? (ಎಲ್ಲಿ ಕಳೆದು ಹೋಗಿದ್ದಿರಿ ನೀವು?)' ಅನ್ನುತ್ತ ಚೇರ್ ಬಿಟ್ಟು, ಶೇಕ್ ಹ್ಯಾಂಡ್ ಮಾಡಲಿಕ್ಕೆ ಎದ್ದು ಬಂದೇ ಬಿಟ್ಟರು ಮಾಸ್ತರ್ರು. ಕೈಕುಲುಕಿ, ಬೆನ್ನು ತಟ್ಟಿದರು. ಮಸ್ತ್ ಅನ್ನಿಸಿತು. ಅವರು ಕೇಳುವ ಮೊದಲೇ ಹಳೆ ನೋಟ್ ಬುಕ್ ಸರ್ ಕೈಯಲ್ಲಿಟ್ಟೆ. 'ಒಪ್ಪಿಸಿಕೊಳ್ಳಿ ಸರ್!' ಅನ್ನೋ ಲುಕ್ ಕೊಟ್ಟೆ. ಸರ್ ಫುಲ್ ಖುಷ್. ಮತ್ತೊಮ್ಮೆ ತಮ್ಮ ಲಡ್ಡಾದ ನೋಟ್ಸ್ ಬಗ್ಗೆ ಕೊರೆದು, ಸಿಕ್ಕಾಪಟ್ಟೆ ಥ್ಯಾಂಕ್ಸ್ ಹೇಳಿ, ಒಳ್ಳೆದಾಗಲಿ ಅಂದರು. ಆ ಸೆಮಿಸ್ಟರ್ ಬಗ್ಗೆ ಕೇಳಿದರು. 'ಕ್ಯಾಂಪಸ್ ಇಂಟರ್ವ್ಯೂ ಆಯಿತಾ?' ಅಂದರು. 'ಸರ್, ನಾನು ಇನ್ನೂ ಥರ್ಡ್ ಇಯರ್. ಕ್ಯಾಂಪಸ್ ಇಂಟರ್ವ್ಯೂ ಎಲ್ಲ ಮುಂದಿನ ವರ್ಷ ಸರ್,' ಅಂತ ವಿವರಿಸಿದೆ. 'ಓಹೋಹೋ! ಸರಿ ಸರಿ,' ಅಂದರು ಸರ್. ಟಿಪಿಕಲ್ absent minded ಪ್ರೊಫೆಸರ್ ದೇವಿ ಪ್ರಸಾದ್. ಮತ್ತೊಮ್ಮೆ ನಮಸ್ಕಾರ ಹೇಳಿ ಬಂದೆ.

ಅದೇ ಕೊನೆಯಿರಬೇಕು. ಮತ್ತೆ ದೇವಿ ಪ್ರಸಾದರನ್ನು ಭೆಟ್ಟಿಯಾಗುವ ಸಂದರ್ಭ ಬರಲಿಲ್ಲ. ಮುಂದಿನ ಒಂದು ವರ್ಷದಲ್ಲಿ ಕ್ಯಾಂಪಸ್ಸಿನಲ್ಲಿ ಅಲ್ಲಿ ಇಲ್ಲಿ ಎಲ್ಲೋ ದೂರದಲ್ಲಿ ನೋಡಿರಬೇಕು ಅಷ್ಟೇ.

ಕಳೆದ ತಿಂಗಳ ಶಿಕ್ಷಕ ದಿನಾಚರಣೆ ದಿನ (ಸೆಪ್ಟೆಂಬರ್, ೫) ಎಲ್ಲರೂ ತಮ್ಮ ತಮ್ಮ ನೆಚ್ಚಿನ ಶಿಕ್ಷಕರಿಗೆ, ಗುರುಗಳಿಗೆ, ಫೇಸ್ ಬುಕ್ ಮೇಲೆ ಅಲ್ಲಿ ಇಲ್ಲಿ, ತಮ್ಮ ನಮನ, ಶುಭಾಶಯ ಎಲ್ಲ ಹೇಳುತ್ತಿದ್ದಾಗ ಇದೆಲ್ಲ ನೆನಪಾಯಿತು. ಬಾಲವಾಡಿಯಿಂದ ಹಿಡಿದು ಮಾಸ್ಟರ್ ಡಿಗ್ರಿ ಮುಗಿಯುವ ತನಕ ಅದೆಷ್ಟು ಜನ ಶಿಕ್ಷಕರು ಪಾಠ ಮಾಡಿದರೋ ಏನೋ. ಕಮ್ಮಿ ಕಮ್ಮಿ ಅಂದರೂ ಎರಡನೂರು ಚಿಲ್ಲರೆ ಮಾಸ್ತರ್ರು. ಆದರೆ 'ಹಳೆ ನೋಟ್ ಬುಕ್ ಕೊಡು,' ಅಂತ ವಿಚಿತ್ರ ಗುರು ದಕ್ಷಿಣೆ ಕೇಳಿದ್ದ ಪ್ರೊ. ದೇವಿ ಪ್ರಸಾದ್ ಆಗಾಗ ನೆನಪಾಗುತ್ತಲೇ ಇರುತ್ತಾರೆ. ಇನ್ನೂ ಆರೇಳು ಶಿಕ್ಷಕರು ಬೇರೆ ಬೇರೆ ಚಿತ್ರ ವಿಚಿತ್ರ ಕಾರಣಗಳಿಗೆ ನೆನಪಾಗುತ್ತಾರೆ. ಮತ್ತೆ ಬರೆಯೋಣ ಅವರುಗಳ ಬಗ್ಗೆ ಕೂಡ.

ಈಗ ಎಲ್ಲಿದ್ದಾರೋ ಏನೋ ದೇವಿ ಪ್ರಸಾದ್? ಆಗಲೇ ಅವರಿಗೆ ಅರವತ್ತರ ಹತ್ತಿತ್ತರಾಗಿತ್ತು. ಇನ್ನೂ ಇದ್ದರೆ ಆರಾಮ್ ಇರಲಿ. ಇಲ್ಲದಿದ್ದರೆ ಆತ್ಮಕ್ಕೆ ಚಿರಶಾಂತಿ ಸಿಗಲಿ. Belated teachers' day greetings, Sir!

ದೇವಿ ಪ್ರಸಾದರನ್ನು ಇಂಟರ್ನೆಟ್ ಮೇಲೆ ಹುಡುಕಿದಾಗ ಅವರು ಬರೆದ ಪುಸ್ತಕಗಳ ಲಿಂಕ್ ಸಿಕ್ಕಿತು. ಆವಾಗ ನೆನಪಾಯಿತು. ಆ Numerical Analysis ಕೋರ್ಸಿನ ಟೆಕ್ಸ್ಟ್ ಬುಕ್ ಅವರೇ ಬರೆದಿದ್ದರು. ಟೆಕ್ಸ್ಟ್ ಬುಕ್  ಬರೆದರೇನಾಯಿತು? Problems & Solutions  ತಾನೇ ಮುಖ್ಯವಾಗಿ ಬೇಕಾಗಿದ್ದು? ಅದೆಲ್ಲ ಅವರ ಹಳೇ ಲಡ್ಡಾಗಿ ಹೋಗಿದ್ದ ನೋಟ್ಸ್ ನಲ್ಲಿ ಇತ್ತು. ಅದರ replacement ಸಲುವಾಗಿ ನನ್ನ ನೋಟ್ ಬುಕ್ ಕೇಳಿದ್ದರು ಮಾಸ್ತರ್ರು.

ಇಲ್ಲಿವೆ ನೋಡಿ ಗಣಿತ ವಿಭಾಗದವರು ಪ್ರಕಟಿಸಿದ್ದ ಪುಸ್ತಕಗಳು. ಮೊದಲಿನೆರೆಡು ದೇವಿ ಪ್ರಸಾದ್ ಬರೆದಿದ್ದ ಪುಸ್ತಗಳು. ಪುಸ್ತಕಗಳ ಪಟ್ಟಿ ನೋಡುತ್ತ ಹೋದಂತೆ ಗಣಿತ ವಿಭಾಗದ ಅತಿರಥ ಮಹಾರಥರೆಲ್ಲ ನೆನಪಾದರು. ಅವರಲ್ಲಿ ಸುಮಾರು ಜನ ನಮಗೆ ಪಾಠ ಮಾಡಿಯೂ ಇದ್ದರು. ಈಗ ೨೫ ವರ್ಷಗಳ ನಂತರ ಯಾರೂ ಇರಲಿಕ್ಕಿಲ್ಲ ಬಿಡಿ. ಪುಸ್ತಕಗಳು ಮಾತ್ರ ಇರುತ್ತವೆ. ಎಲ್ಲರಿಗೂ ಒಂದು ನಮನ.

ದೇವಿ ಪ್ರಸಾದ್ ನನ್ನ ನೋಟ್ಸ್ ಅದ್ಯಾವ ಪರಿ ಲೈಕ್ ಮಾಡಿದ್ದರು ಅಂದರೆ ಅದನ್ನು Numerical Analysis ಪಾಠ ಮಾಡುವ ಅವರ ಜೂನಿಯರ್ ಕಲೀಗ್ ಯಾರಿಗಾದರೂ ಕೊಟ್ಟು ಹೋಗಿರಬಹುದೇ? ಅಂತ ಒಂದು ಡೌಟ್. ಚಿಕ್ಕ ಆಸೆ. ಹಾಗೇನಾದರೂ ಕೊಟ್ಟು ಹೋಗಿ, ಆ ನೋಟ್ಸ್ ಇನ್ನೂ ಚಲಾವಣೆಯಲ್ಲಿ ಇದ್ದಿದ್ದೇ ಆದರೆ ಕೈಬರಹವನ್ನು ಆಪರಿ ತಿದ್ದಿ, ತೀಡಿ, ಸುಂದರಗೊಳಿಸಿದ್ದ ಮೊದಲಿನ ಶಿಕ್ಷಕರಿಗೆಲ್ಲ ನಮೋ ನಮಃ!

ದೇವಿ ಪ್ರಸಾದ್ ಅಲ್ಲ! ಸ್ವಲ್ಪ ಹೀಗೇ ಇದ್ದರು. ಪೆದ್ಪೆದ್ದ ಲುಕ್! :)

Thursday, October 02, 2014

ಮುತ್ತೈದೆ ಭಾಗ್ಯ : ಅವಳಿಗೆ ಹಾಗೆ. ಇವನಿಗೆ ಹೀಗೆ. ಆದರೆ ಯಾಕೆ? But Why?

[ಶಾಸನ 'ವಿಧಿಸದ' ಎಚ್ಚರಿಕೆ: ಸಭ್ಯ ಮನಸ್ಸಿನ ತುಂಟರಿಗೆ, ತುಂಟ ಮನಸ್ಸಿನ ಸಭ್ಯರಿಗೆ ಮಾತ್ರ ;) ]

ನಾನು ಎಂದಿನಾಂಗ ಭೀಮ್ಯಾನ ಚುಟ್ಟಾ ಅಂಗಡಿ ಮುಂದ ಗುಟ್ಕಾ ತಿಂದಕೋತ್ತ ನಿಂತಿದ್ದೆ. ನಮ್ಮ ಪುರಾತನ ಸಖಿ, ಮಾಲ್ ಕಬಾಡೆ ಸಿಕ್ಕಿದ್ದಳು. ಅಯ್ಯೋ! ಪುರಾತನ ಸಖಿ ಅಂದ್ರ ಹಳೆ ಗೆಳತಿ, ಸಾಲಿ ಹಳೆ ಕ್ಲಾಸ್ಮೇಟ್ ಅಂತ ಅಷ್ಟೇ ಮತ್ತ. ಏನೇನರೆ ತಿಳ್ಕೋಬ್ಯಾಡ್ರೀ ಮತ್ತ.

ಮಾಲವಿಕಾ ಕಬಾಡೆ ಉರ್ಫ್ ಮಾಲ್ ಕಬಾಡೆ. ಅಕಿ ಗೆಳೆತ್ಯಾರಿಗೆ ಕಬಾಡಿ ಮಾಲಿ. ಅವರಪ್ಪಾ 'ಹಳೆ ಮೋಡಕಾ, ರದ್ದಿ ಪೇಪರ್,' ಅನ್ನೋ ದೊಡ್ಡ ವ್ಯಾಪಾರಿ. ಆವಾ ಧಾರವಾಡ ಮಟ್ಟಿಗೆ ಕಿಂಗ್ ಆಫ್ ಕಬಾಡಾ.

'ಏನವಾ ಮಾಲ್...ವಿಕಾ? ಆರಾಮ ಏನ? ಭಾಳ ದಿವಸ ಆತು ಏನು ಕಂಡೇ ಇಲ್ಲಾ?' ಅಂದೆ.

'ಏನದು ಅಸಹ್ಯ ಮಾಲ್, ವಿಕಾ ಅಂತ ಬಿಟ್ಬಿಟ್ಟ ಅನ್ನೋದು? ಸೊಕ್ಕೆನ? ಹಾಂ?' ಅಂತ ಜಬರಿಸಿಬಿಟ್ಟಳು.

'ಬಿಟ್ಟಿ ಸಿಕ್ಕ ಬಡ ಬ್ರಹ್ಮಚಾರಿ ಅಂದ್ರ ಎಲ್ಲಾರೂ ಜಬರಿಸವರೇ, ಸಿಕ್ಕರೆ ಬಾರಿಸವರೇ. ಅ...ಅ...ಅ....ಇವರ ತಂದು. ಸೂಡ್ಲಿ. ಯಾರಿಗೆ ಬೇಕು ಈ ಹಳೆ ಮೋಡಕಾ ಹುಡುಗಿ ಸಹವಾಸ? ಏನೋ ಪುರಾತನ ಸಖಿ ಅಂತ ಮಾತಾಡಿಸಿದರ, ಜಿಗದೇ ಬರ್ಲಿಕತ್ತಾಳ. ಸೂಡ್ಲಿ ತಂದು,' ಅಂತ ಮನಸ್ಸಿನ್ಯಾಗ ಅಂದುಕೊಂಡೆ.

'ಸ್ವಾರೀ, ಸ್ವಾರೀ. ಮಾಲವಿಕಾ ಕಬಾಡೆ. ಹೇಳವಾ. ಏನು?' ಅಂತ ಕೇಳಿ ನಿಂತೆ.

'ನಿಮ್ಮ ಗೆಳೆಯಾಗ ಸ್ವಲ್ಪ ಹೇಳಲಾ? ನಾ ಹೇಳಿದ್ದು ಒಟ್ಟ ಕೇಳಂಗಿಲ್ಲ ಅದು ಖೋಡಿ. ನೀ ಹೇಳಿದ್ರ ಕೇಳ್ತಾನೋ ಏನೋ ಅಂತ ಆಶಾ ಅದ. ಸ್ವಲ್ಪ ಹೇಳಲಾ?' ಅಂತು ಹುಡುಗಿ.

'ಯಾರಿಗೆ ಏನು ಹೇಳಬೇಕ ಮಾರಾಳ? ಯಾವ ನನ್ನ ಗೆಳೆಯಾಗ ಏನು ಹೇಳಬೇಕು?' ಅಂತ ಕೇಳಿದೆ.

ನಾಚಿ, ನೆಲ ಕೆರೆದಳು. ಮಾರಿ ಕೆಂಪಾತು.

'ಏ! ಸುಮ್ಮನ ಏನೂ ಗೊತ್ತಿಲ್ಲದವರಂಗ ನಾಟಕಾ ಮಾಡಬ್ಯಾಡ. ಗೊತ್ತಿಲ್ಲೇನು ನಿನಗ? ಹಾಂ?' ಅಂತ ರಂಗ್ರಂಗ್ ಆಗೇ ರಾಂಗ್ ಆದಳು. 

ಗುಟಚಿಪ್ಪಿ ಗಿರ್ಯಾ. ಅವನೇ ಇರಬೇಕು. ಆವಾ ಇಕಿ ಮಾಲ್. ಇಕಿ ಅವನ ಮಾಲ್. ಸುಮಾರು ವರ್ಷ ಆತು ಏನೋ ನೆಡದದ. ಗುಸ ಪುಸಾ ಗುಸ ಪುಸಾ ಅಂತ. ನನಗ ಗೊತ್ತs ಅದ.

'ಯಾರ? ಗುಟಚಿಪ್ಪಿ ಗಿರ್ಯಾನ ಜೋಡಿ ಮಾತಾಡ್ಲೇ? ಏನು?' ಅಂತ ಕೇಳಿದೆ.

ಗುಟಚಿಪ್ಪಿ ಗಿರ್ಯಾನ ಹೆಸರು ಕೇಳಿದ ಕೂಡಲೇ ಕಬಾಡೆ ಮಾಲಿ ಭಾರಿ ಖುಷ್ ಆಗಿಬಿಟ್ಟಳು. 'ಹೂಂ! ಹೂಂ!' ಅನ್ನೋ ಹಾಂಗ 'ಹೂಂ'ಕಾರ ಮಾಡಿದಳು. ಮೊದಲು ಮಾಡಿದ ಹೂಂಕಾರಕ್ಕಿಂತ ಸೇಫ್ ಇತ್ತು ಇದು.

'ಮತ್ತ, ಮತ್ತ, ಲಗೂನೇ ಲಗ್ನಾ ಮಾಡಿಕೋ ಅಂತ ಹೇಳಲಾ? ಎಷ್ಟ ವರ್ಷಾತು ಅಡ್ಯಾಡಿಸಲಿಕ್ಕೆ ಶುರು ಮಾಡಿ? ಮಾಡ್ಕೋ ಅಂದ್ರ ಮುಂದ ಮುಂದ ಹಾಕ್ಕೋತ್ತ ಹೊಂಟಾನ. ಲಗೂನೆ ಮುತ್ತೈದೆ ಭಾಗ್ಯ ಕೊಡಿಸೋ ಹಾಂಗ ಮಾಡಿಬಿಡಪಾ ನಿನಗ ಪುಣ್ಯಾ ಬರ್ತದ,' ಅಂದು ಬಿಟ್ಟಳು ಮಾಲಿ.

'ಮುತ್ತೈದೆ ಭಾಗ್ಯ ಬೇಕಂದ್ರ ಗಿರ್ಯಾಗ ಯಾಕ್ ಹೇಳ್ಬೇಕ? ನಾನೇ ಕೊಡಸ್ತೇನಿ ಬಾ,' ಅಂತ ಸುಮ್ಮ ಮಸ್ಕಿರಿ ಮಾಡಿದೆ.

'ಯಾಕ!? ಮೈಯ್ಯಾಗ ಹ್ಯಾಂಗ ಅದ? ಹೀಂಗೆಲ್ಲಾ ಮಸ್ಕಿರಿ ಮಾಡಿದರ ಹಾಕ್ಕೊಂಡು ಬಡಿತಿನಿ. ನೋಡ್ಕೋ ಮತ್ತ,' ಅಂತ ಹೀಲ್ ಚಪ್ಪಲಿ ಕಟ್ ಕಟಾ ಮಾಡಿದಳು. ಡೇಂಜರ್!

'ಅಯ್ಯ ಇಕಿನ. ಯಾಕ ಶಟಗೊಂಡಿ? ನಾ ಏನ ಹೇಳಿದೆ? ಹೇಳು. ಸುಮ್ಮಸುಮ್ಮನ ಬೈತಿಯಲ್ಲಾ? ಹಾಂ?' ಅಂತ ರಿವರ್ಸ್ ಪಾಯಿಂಟ್ ಹಾಕಿದೆ.

'ಏನು ಹೇಳಿದಿ? ನಿನ್ನ ಗೆಳೆಯಾ ಗುಟಚಿಪ್ಪಿ ಗಿರೀಶ್ ರಾವ್ ಅವರ ಜೋಡಿ ಲಗ್ನಾ ಮಾಡಿಸು ಅಂದ್ರ ನೀನೇ ಮುತ್ತೈದೆ ಭಾಗ್ಯ ಕೊಡತೇನಿ ಅಂದ್ರ ಏನು ಅರ್ಥ? ನಾಚಿಗಿ ಬರಂಗಿಲ್ಲ? ಮುಂಜಾನೆ ಮುಂಜಾನೆ ಎಷ್ಟು ಏರಿಸಿ ಬಂದಿ? ಹಾಂ!?' ಅಂತ ಮತ್ತ ಜಬರಿಸಿದಳು.

'ಇನ್ನೂ ಲಗ್ನ ಆಗಿಲ್ಲ ಬಿಟ್ಟಿಲ್ಲ. ಆಗಲೇ ಇಕಿ ಡೌಲ್ ನೋಡ್ರೀ. ಗುಟಚಿಪ್ಪಿ ಗಿರೀಶ್ ರಾವ್ ಅಂತ. ರಾಹುನ ಗತೆ ಇಕಿಗೇ ಕಾಡ್ಲಿಕತ್ತಾನ ನಮ್ಮ ಗಿರ್ಯಾ. ಅಂತವಗ ರಾವ್ ಅನ್ನೋ ಟೈಟಲ್ ಬ್ಯಾರೆ. ಲವ್ ಅನ್ನೋದು ಏನೇನೋ ಮಾಡಿಸಿಬಿಡ್ತದ ಅನ್ನೋದು ಖರೆ ಅದ,' ಅಂತ ಅಂದುಕೊಂಡೆ.

'ಅಲ್ಲಾ ಮುತ್ತೈದೆ ಭಾಗ್ಯ ಬೇಕು ಅಂದಿ. 'ಮುತ್ತೈದೆ ಭಾಗ್ಯ' ಅಂತ ಟೈಗರ್ ಪ್ರಭಾಕರ್ ಸಿನೆಮಾ ಬಂದಿತ್ತು ನೋಡು. ಅದು ಈಗ ಯೂಟ್ಯೂಬ್ ಮ್ಯಾಲೂ ಇರಬೇಕು. ಅದನ್ನ ತೋರಿಸಿ, ನಿನಗ ಮುತ್ತೈದೆ ಭಾಗ್ಯ ಕರುಣಿಸೋಣ ಅಂದ್ರ ನಿಂದು ಐಡಿಯಾ ಬ್ಯಾರೆನೇ ಇದ್ದಂಗ ಅದ ನೋಡು. ನೀ ಕೇಳೋ ಮುತ್ತೈದೆ ಭಾಗ್ಯ ಬ್ಯಾರೆನೇ ಅದ. ಅದನ್ನ ಮಾತ್ರ ನೀ ಹೇಳಿದಂಗ ಗುಟಚಿಪ್ಪಿ ಗಿರ್ಯಾನೇ ಕರುಣಿಸಬೇಕು. ಅವನೇ ಅಂತಹ ಭಾಗ್ಯ ಕರುಣಿಸಬಲ್ಲ ಭಾಗ್ಯವಂತ,' ಅಂತ ಹೇಳಿದೆ.

ಮುತ್ತೈದೆ ಭಾಗ್ಯ. ಜೊತೆಗೆ ಶಂಖಾ ಫ್ರೀನಾ? ಯಾಕೆ? ಶಂಖಾ ಹೊಡೆಯಕ್ಕಾ?
'ಕೇಳಲಾ ಅವಂಗ. ಯಾಕ ಲಗ್ನಾ ಮಾಡಿಕೋವಲ್ಲ ಅಂತ? ಬರೇ ಮುಂದ ನೋಡೋಣ, ಮುಂದ ನೋಡೋಣ ಅಂತಾನ. ಮುಂದ ಏನು ನೋಡ್ತಾನೋ ಏನೋ? ಹುಚ್ಚನ್ನ ತಂದು. ಮುತ್ತೈದೆ ಭಾಗ್ಯ ಯಾವಾಗ ಕರುಣಿಸವ ಇದ್ದಾನ ಅಂತ ಕೇಳು. ಅವನ ಜೋಡಿ ಖಾಲಿ ಪುಕ್ಕಟ ಬರೇ ಅಡ್ಯಾಡಿಕೋತ್ತ ಇರಲಿಕ್ಕೆ ನಾ ಏನೂ ಬಿಟ್ಟಿ ಬಿದ್ದಿಲ್ಲ. ನಮ್ಮಪ್ಪ ಬ್ಯಾರೆ ಹೇಳ್ಯಾನ, 'ಲಗ್ನಾ ಮಾಡ್ಕೋ. ಇಲ್ಲಂದ್ರ ಬಂದು ಹಳೆ ಮೋಡಕಾ ಬಿಸಿನೆಸ್ಸ್ ನೋಡ್ಕೋ,' ಅಂತ. ವಯಸ್ಸು ಮೂವತ್ತೈದು ದಾಟಿ, ನಾನೇ ಹಳೆ ಮೋಡ್ಕಾ, ರದ್ದಿ ಪೇಪರ್ ಆಗಲಿಕ್ಕೆ ಬಂದು ಬಿಟ್ಟೇನಿ. ಆದರೂ ನಿಮ್ಮ ಗಿರ್ಯಾ ಲಗ್ನಾ ಮಾಡಿಕೋವಲ್ಲಾ. ನೋಡಲಾ,' ಅಂತ ಕೊಂಯ್ ಅಂದಳು ಮಾಲಿ.

'ಏನು ಮಾಡ್ಲೆಪಾ? ಇವರ ಲಫಡಾ ಹ್ಯಾಂಗೆ ಬಗೆಹರಿಸಲಿ?' ಅಂತ ವಿಚಾರ ಮಾಡ್ಲಿಕತ್ತಾಗ ಮತ್ತ ಅಕಿನೇ ಹೇಳಿದಳು.

'ನಿನಗ ಏನು ಬೇಕು ಅದನ್ನ ಕೊಡಸ್ತೇನಿ. ಬೇಕಾದ್ರ ವಿಲ್ ಬರೆದು ಕೊಟ್ಟ ಬಿಡ್ತೇನಿ. ದಿನಕ್ಕ ಎಷ್ಟು ಬಾಟಲಿಗೆ ಅಂತ ಬರಿಲಿ? ಅದನ್ನೂ ಹೇಳಿಬಿಡು. ಬಿಟ್ಟಿ ಕೆಲಸಾ ಮಾಡಿಸೋದಿಲ್ಲ ತೊಗೋ ನಿನ್ನ ಕಡೆ. ಮುತ್ತೈದೆ ಭಾಗ್ಯ ಕೊಡಿಸಿಬಿಟ್ಟರೆ ಆತು ನೋಡಪಾ,' ಅಂತ ಏನೇನೋ ಆಶಾ ಬ್ಯಾರೆ ತೋರಿಸಿಬಿಟ್ಟಳು.

ಏನು ವಿಲ್  ಬರಿಯಾಕಿ ಇದ್ದಾಳೋ ಏನೋ?

'ಏನು? ಎಷ್ಟು ಬಾಟಲಿ? ಏನು ವಿಲ್? ಹಾಂ?' ಅಂತ ಕೇಳಿದೆ.

'ದಿನಕ್ಕ ಎಷ್ಟು ಬಾಟಲಿ ಬಿಯರಿಗೆ ವಿಲ್ ಬರೆದು ಕೊಡಲೀ ಅಂತ? ನನಗ ಗೊತ್ತಿಲ್ಲ ಅಂತ ಮಾಡಿಯೇನು? ಹಣ ಅಂದ್ರ ಹೆಣಾನೂ ಬಾಯಿ ಬಿಡ್ತದ. ಬಿಯರ್ (beer) ಅಂದ್ರ ಬ್ರಹ್ಮಚಾರಿನೂ ಬಾಯಿ ಬಿಡ್ತದ. ನೀ ಅಂತಾದ್ದೇ ಬ್ರಹ್ಮಚಾರಿ ಹೌದಿಲ್ಲೋ? ನನಗೆಲ್ಲಾ ಗೊತ್ತದ. ಭಿಡೆ ಬಿಟ್ಟು ಹೇಳು. ಎಷ್ಟು ಬಾಟಲಿ ಬರೀಲಿ ಅಂತ. ನಿಮ್ಮ ಗಿರ್ಯಾನ ಕೈಯಾಗ ನನಗ ಮುತ್ತೈದೆ ಭಾಗ್ಯ ಕೊಡಿಸಿಬಿಡು ಸಾಕು,' ಅಂದಳು ಮಾಲಿ.

'ಹಣ ಅಂದ್ರ ಹೆಣಾನೂ ಬಾಯಿ ಬಿಡ್ತದ. ಬಿಯರ್(beer) ಅಂದ್ರ ಬ್ರಹ್ಮಚಾರಿನೂ ಬಾಯಿ ಬಿಡ್ತದ!' ಅಕಟಕಟ!!!!! ತೊಳೆದು ಬಿಟ್ಟಳು ಸ್ವಚ್ಚ! ಮಾನ, ಮಾರ್ಯಾದೆ, ಬ್ರಹ್ಮಚರ್ಯ ಎಲ್ಲಾ ತೊಗೊಂಡು ಹೋಗಿ ಬಿಯರ್ ಡ್ರಮ್ ಒಳಗ ಮುಳುಗಿಸಿಬಿಟ್ಟಳು! ಹೋಗ್ಗೋ ಇಕಿನ!!!!

'ಬಿಯರ್ ಗಿಯರ್ ಅವೆಲ್ಲಾ ಬಿಟ್ಟೇವಿ ಈಗ. ಏನೂ ಬೇಕಾಗಿಲ್ಲ. ನಾನು ಮುಂದಿನ ಸಲೆ ಗುಟಚಿಪ್ಪಿ ಗಿರ್ಯಾ ಸಿಕ್ಕಾಗ ಕೇಳತೇನಿ. ಏನಂತಾನ ಅಂತ ನೋಡೋಣ,' ಅಂತ ಹೇಳಿದೆ.

'ಅಷ್ಟ ಮಾಡಿ ಪುಣ್ಯಾ ಕಟ್ಟಿಕೋ. ಇಲ್ಲಿ ತನಕಾ ಬರೇ ಪಾಪಾ ಮಾಡಿ ನೀ. ಪಾಪಿ!' ಅಂತ ಅಂದು ಬಿಡಬೇಕ!? ಸೂಡ್ಲಿ ಮಾಲಿ. ತಲಿಕೆಟ್ಟದ ಅನ್ನಸ್ತದ ಇಕಿದು. ಮಾಲವಿಕಾ ಕಬಾಡೆ ಅವರ ತಲಿನೇ ಕಬಾಡಾ ಆಗಿ ಮೋಡ್ಕಾ ಬಜಾರಕ್ಕೆ ಹೋದಂಗ ಕಾಣಿಸ್ತದ.

ಟಾಟಾ ಹೇಳಿ ಹೋತು ಹುಚ್ಚ ಹುಡುಗಿ ಮಾಲಿ.

ನಾ ಮತ್ತೊಂದು ಮಾಣಿಕ್ ಚಂದ್ ಹಾಕ್ಕೊಂಡೆ.

*****

ಅಕಿ ಮಾಲವಿಕಾ ಕಬಾಡೆ ಆಕಡೆ ಏನ್ ಹೋದಳೋ ಇಲ್ಲೋ, ಈಕಡೆ ಗುಟಚಿಪ್ಪಿ ಗಿರ್ಯಾ ಪ್ರತ್ಯಕ್ಷ ಆದ.

'ಬಾರಲೇ ಮಗನs! ಈಗಷ್ಟೇ ನಿನ್ನ ಮಾಲ್ ಹೋತ ನೋಡಲೇ ಗಿರ್ಯಾ,' ಅಂದೆ.

'ನೀ ಅಕಿಗೆ ಮಾಲ್ ಗೀಲ್ ಅನಬ್ಯಾಡ. ಚಂದಾಗಿ ವೈನಿ ಅನ್ನು. ಮಾಲ್ ಅಂತ ಮಾಲ್!' ಅಂತ ಆಶಿಕ್ ಗಿರ್ಯಾ ಸ್ವಲ್ಪ ಸಿಟ್ಟು ಮಾಡಿದ.

ಅವನ ಯೆಜ್ಡಿ ಗಾಡಿಗೆ ಸ್ಟಾಂಡ್ ಹಾಕಿ ಬಂದು, ಅವನೂ ಏನೋ ಅದು ಡ್ರೈ ಮಾವಾನೋ ಏನೋ ಮಾಡಿಸ್ಕೊಂಡು ಹಾಕ್ಕೊಂಡಾ. ಹೆಣ್ಣು ಕೊಟ್ಟ ಮಾವ ಇಲ್ಲದವರಿಗೆ ಏನೋ ಒಂದು ತರಹದ ಅಡಿಕೆ ಪುಡಿ, ಜರ್ದಾ ಹಾಕಿ ತಿಕ್ಕಿದ 'ಮಾವ' ಒಟ್ಟಿನ್ಯಾಗ. ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ಮಾವ ಅಂತ. ಆದ್ರ ಈ ಡ್ರೈ ಮಾವ ಅಂದ್ರ ಕಿಕ್ ಕೊಡೋ ಮಾವ. ಡ್ರೈ ಮಾವಾ ಕಿಕ್ ಅಂದ್ರ ತಲಿ ಗಿಂವ್ವ್ ಅಂತದ.

'ಲೇ ಗಿರ್ಯಾ, ಮಂಗ್ಯಾನಿಕೆ. ನಾವೇನೋ ನಿಮ್ಮ ಮಾಲ್ ಉರ್ಫ್ ಮಾಲವಿಕಾಗ ವೈನಿ ಅನ್ನಲಿಕ್ಕೆ ತಯಾರ್ ನೋಡಪಾ. ಆದ್ರ..... ' ಅಂತ ಹೇಳಿ ಒಂದು ಬ್ರೇಕ್ ತೊಗೊಂಡೆ.

'ಏನ್ ಆದ್ರ? ಹಾಂ?' ಅಂತ ಕೆಕ್ಕರಿಸಿ ಲುಕ್ ಕೊಟ್ಟಾ ಗಿರ್ಯಾ.

'ಅಲ್ಲಲೇ ನೀ ಅಕಿನ್ನ ಚಂದಾಗಿ, ಶಾಸ್ತ್ರೋಕ್ತವಾಗಿ ಲಗ್ನಾ ಮಾಡಿಕೊಂಡು, ಮಂಗಳ ಸೂತ್ರ ಕಟ್ಟಿ, ನಿನ್ನಂತಾ ಮಂಗ್ಯಾನ ಸೂತ್ರ ಅಕಿ ಕೈಯ್ಯಾಗ ಕೊಟ್ಟು, ಅಕಿ ದೊಡ್ಡ ಕುಂಕುಮ, ದೊಡ್ಡ ಕಚ್ಚಿ ಸೀರಿ ಮುತ್ತೈದಿ ಆದಳು ಅಂದ್ರ ಮುದ್ದಾಂ ವೈನೀ ಅಂತ ಬಾಯ್ತುಂಬ ಕರಿತೇನಿ ನೋಡಪಾ. ಲಗೂನ ಹೋಳಗಿ ಊಟ ಹಾಕಿಸಪಾ ಗಿರಣ್ಣಾ,' ಅಂತ ಮಾಲವಿಕಾನ ಮುತ್ತೈದೆ ಭಾಗ್ಯಕ್ಕೆ ಫಸ್ಟ್ ಇಂಡೆಂಟ್ ಹಾಕಿದೆ. ಫಿಟ್ಟಿಂಗ್ ಇಟ್ಟೆ.

'ತಡೀಪಾ. ಅರ್ಜೆಂಟ್ ಏನದ? ಎಲ್ಲಾ ಮಸ್ತ ನಡದದ ಹಿಂಗೇ. ಇದೇ ಛಲೋ ಮಾರಾಯಾ. ಅಕಿ ನನ್ನ ಮಾಲ್. ನಾ ಅಕಿ ಮಾಲ್. ಎಲ್ಲಿ ಲಗ್ನಾ ಪಗ್ನಾ ಹಚ್ಚಿಲೇ?' ಅಂತ ಎಲ್ಲ ಬ್ಯಾಚಲರ್ ಮಂದಿ ಗತೆ ಗಿರ್ಯಾನೂ ಹೇಳಿದ.

'ಮಸ್ತ ಆಕಳ ಸಿಕ್ಕದ. ಹಾಲೂ ಕೊಡ್ತದ. ಅದೇ ಬೆಷ್ಟ್. ಅದನ್ನ ತಂದು ಎಲ್ಲಿ ಮನ್ಯಾಗ ಕಟ್ಟಿಗೋ ಅಂತೀಲೇ?' ಅನ್ನೋ ಬೇಶರಮ್ ಬ್ಯಾಚಲರ್ ಧಾಟಿ.

'ಲೇ ಮಗನs, ಅಕಿ ಜೊತಿ ಅಡ್ಯಾಡ್ಲಿಕತ್ತು ಮೂರು ವರ್ಷದ ಸಮೀಪ ಬಂತು. 3 years / 36, 000 KMS ವಾರಂಟಿ ಲ್ಯಾಪ್ಸ್ ಆಗೋದ್ರೊಳಗ ಮದ್ವಿ ಮಾಡಿಕೊಳ್ಳಲೇ. ಇಲ್ಲಂದ್ರ ಆಮ್ಯಾಲೆ ಯಾರದ್ದೂ ಏನೂ ವಾರಂಟಿ, ಗ್ಯಾರಂಟಿ ಸಿಗಂಗಿಲ್ಲ ನೋಡ್ಕೋ. ಒರಿಜಿನಲ್ ವಾರಂಟಿ ಇರೋದ್ರೊಳಗೇ ಮಾಡಿಕೊಂಡಿ ಅಂದ್ರ extended warranty ಸಹಿತ ಸಿಕ್ಕರೂ ಸಿಗಬಹುದು. ನಿಮ್ಮ ಮಾಲವಿಕಾನ ಅಪ್ಪಾ ಅಂದ್ರ ಕಿಂಗ್ ಆಫ್ ಕಬಾಡಾ. ಎಲ್ಲಾ ಮಸ್ತ ವ್ಯವಸ್ಥಾ ಮಾಡಿಕೊಡ್ತಾನ ನಿನಗ. ಲಗೂನ ಮಾಡಿಕೊಂಡು ನಮಗ ಇನ್ನೊಂದು ವೈನಿ ಭಾಗ್ಯ, ಅಕಿಗೆ ಮುತ್ತೈದೆ ಭಾಗ್ಯ ಕರುಣಿಸಿಬಿಡಪಾ ರಾಜಾ,' ಅಂತ ಮಸ್ತ selling ಮಾಡಿದೆ.

'ಏನ? ಏನ ವಾರಂಟಿಯೋ ಮಾರಾಯಾ? ಒಳ್ಳೆ ಕಾರ್ ಗಾಡಿಗೆ ವಾರಂಟಿ ಇದ್ದಂಗ ಮನುಷ್ಯಾರಿಗೂ ವಾರಂಟಿ ಇದ್ದವರ ಗತೆ ಮಾತಾಡ್ತಿಯಲ್ಲಪಾ? ಹೇ! ಹೇ!' ಅಂತ ತಟ್ಟಿಕೊಂಡು ನಕ್ಕಾ ಗಿರ್ಯಾ. ಒಟ್ಟ ಸೀರಿಯಸ್ ಆಗಲಿಕ್ಕೆ ತಯಾರಿಲ್ಲ ಅವಾ.

'ಹೂಂನಲೇ, ತಗಡಿನ ಬಾಡಿಗೆ ಅಂದ್ರ ಕಾರಿಗೆ ವಾರಂಟಿ ಇದ್ದಂಗ ಚರ್ಮದ ಬಾಡಿಯಿರುವ ದೇಹಕ್ಕೂ ವಾರಂಟಿ ಇರ್ತದ ನೋಡಪಾ. ಮೂವತ್ತು ದಾಟಿತು ಅಂದ್ರ ಔಟ್ ಆಫ್ ವಾರಂಟಿ ಇದ್ದಂಗ ನೋಡಪಾ. ಅದಕ್ಕs ಎಲ್ಲಾ ಮೂವತ್ತರ ಒಳಗೇ ಮಾಡಿ ಮುಗಿಸಿ ಬಿಡಬೇಕು ನೋಡಲೇ. ನಿಂದಂತೂ ವಾರಂಟಿ ಮುಗದು ಹತ್ತು ವರ್ಷದ ಮ್ಯಾಲೆ ಆಗಿ ಹೋತು. ಮ್ಯಾಲಿಂದ ಎಲ್ಲಾ ಚಟದ ಚಟರ್ಜೀ ಬ್ಯಾರೆ ನೀ. ಚಟದ ಚಟರ್ಜೀ ಚಟ್ಟ ಹತ್ತೋ ಚಟ್ಟೋಪಾಧ್ಯಾಯ ಆಗೋಕಿಂತ ಮೊದಲೇ ಲಗೂನೆ ಮಾಲವಿಕಾ ಜೋಡಿ ಲಗ್ನಾ ಮಾಡಿಕೊಂಡು ಒಂದು ಕೆಲಸಾ ಮುಗಿಸಲೇ,' ಅಂದೆ.

'ದಯವೇ ಧರ್ಮದ ಮೂಲವಯ್ಯ ಇದ್ದಂಗs ಚಟಗಳೇ ಚಟುವಟಿಕೆಗಳ ಮೂಲವಯ್ಯ ಅಂತ ನಂಬಿದವರು ನಾವು ನೋಡಪಾ . ಆದರೂ ನೀ ಇಷ್ಟು ಸೀರಿಯಸ್ ಆಗಿ ಹೇಳಲಿಕತ್ತಿ ಅಂದ್ರ ವಿಚಾರ ಮಾಡಬೇಕಾತು,' ಅಂತ ಏನೋ ಯೋಚನೆಗೆ ಬಿದ್ದವರಂಗ ಕಂಡಾ ಗಿರ್ಯಾ.

'ಆದರೂ ಈಗೇ ಮಜಾ ಬಿಡಪಾ. ಅಕಿನೂ ಫ್ರೀ, ನಾನೂ ಫ್ರೀ. ಅಡ್ಯಾಡಲಿಕ್ಕೆ ನನ್ನ ಗಾಡಿ, ಖರ್ಚ ಮಾಡಲಿಕ್ಕೆ ಅಕಿ ಅಪ್ಪನ ರೊಕ್ಕಾ. ಯಾರಿಗದ ಯಾರಿಗೆ ಇಲ್ಲ ಈ ಭಾಗ್ಯ? ಹಾಂ? ಅಂತಾದ್ರಾಗ ಅಕಿಗೆಲ್ಲಿ ಮುತ್ತೈದೆ ಮತ್ತೊಂದು ಅಂತ ಭಾಗ್ಯ ಕೊಟ್ಟು ನಾ ಎಲ್ಲಾ ಭಾಗ್ಯ ಕಳಕೊಳ್ಳೋ ಮಾರಾಯಾ?' ಅಂತ ಗಂಡು ಗೂಳಿ ಗತೆ ಹೇಳಿದ ಗಿರ್ಯಾ.

'ಲೇ ಗಿರ್ಯಾ, ಅಕಿ ಮಾಲವಿಕಾ ಈ ಸಲೆ  ಆಖ್ರೀ ವಾರ್ನಿಂಗ್ ಕೊಟ್ಟ ಹೋಗ್ಯಾಳ ನೋಡಪಾ. ಅವರಪ್ಪಾ ದೊಡ್ಡ ಕಬಾಡೆ ಹೇಳೇ ಬಿಟ್ಟಾನ ಅಂತ ಆತು. 'ಮಾಲೂ, ಲಗೂ ಲಗ್ನಾ ಮಾಡಿಕೋ. ಇಲ್ಲಂದ್ರ ಅಂಗಡಿಗೆ ಬಂದು ಕೂಡು,' ಅಂತ. ಲೇ, ನೀ ಇನ್ನೂ ಲೇಟ್ ಮಾಡಿಕೋತ್ತ ಕೂತರ ಅಕಿ ನಿನಗ ಹಾಥ್ ಫಿರಾದೆ ಅಂತ ಕೈಯೆತ್ತಿ ಹೋಗ್ತಾಳ ನೋಡು. ಆಮೇಲೆ ಹಾಪ್ ಆಗೀ. ನೋಡ್ಕೋ ಮತ್ತ. ಮಸ್ತ ಕಬಾಡೆ ಮಂದಿ ಸಿಕ್ಕಾರ. ಇಡೀ ಧಾರವಾಡ ರದ್ದಿ ಪೇಪರ್ ನಿಮ್ಮಾವನೇ ಡೀಲ್ ಮಾಡ್ತಾನ. ಮಸ್ತ್ ಸಂಬಂಧ. ತಪ್ಪಿಸಿಕೊಂಡಿ ನೋಡ್ಕೋ ಮತ್ತ!' ಅಂತ ಕಬಾಡೆ ಮಾಲವಿಕಾ ಕೊಟ್ಟುಹೋದ ವಾರ್ನಿಂಗ್ verbatim ಕೊಟ್ಟೆ.

ಗಿರ್ಯಾ ಏನೋ ಗಹನ ವಿಚಾರಕ್ಕೆ ಬಿದ್ದ ಅಂತ ಕಾಣಿಸ್ತದ. ಅದೇನೋ ಅಂತಾರಲ್ಲ ಎಲ್ಲಾದಕ್ಕೂ ಕಾಲ ಕೂಡಿ ಬರಬೇಕು ಅಂತ. ಗುಟಚಿಪ್ಪಿ ಗಿರ್ಯಾ ಅನ್ನೋ ಗಂಡು ಗೂಳಿಗೂ ಒಂದು ಮೂಗುದಾಣ ಹಾಕೋ ಟೈಮ್ ಬಂತೋ ಏನೋ. ಗೊತ್ತಿಲ್ಲ.

'ಹಾಂಗಂತೀ ಏನಲೇ? ಅಕಿ ಅಷ್ಟು ಸೀರಿಯಸ್ ಆಗಿ ಹೇಳಿ ಹೋಗ್ಯಾಳ ಅಂದ ಮ್ಯಾಲೆ ವಿಚಾರ ಮಾಡ್ತೇನಪಾ ದೋಸ್ತಾ. ಮನಿಯಾಗ ಹೋಗಿ ಇವತ್ತs ಕೇಳೇ ಬಿಡ್ತೇನಿ. ನಮ್ಮನಿಯಾಗ ಒಪ್ಪತಾರ ತೊಗೋ,' ಅಂತ ಹೇಳಿ, ಪಟಪಟಿ ಬರ್ರ್ ಅಂತ ಅವಾಜ್ ಮಾಡಿಸ್ಕೋತ್ತ ಹೋಗಿಬಿಟ್ಟ ಗುಟಚಿಪ್ಪಿ ಗಿರ್ಯಾ.

*****

ಅಕಿ ಕಬಾಡೆ ಮಾಲಿಗೆ ಮಾಂಗಲ್ಯ ಭಾಗ್ಯ ಕೂಡಿ ಬಂದಿತ್ತು ಅಂತ ಕಾಣ್ತದ. ಇವಾ ಗೂಳಿ ಸೂಳಿಮಗಾ ಗಿರ್ಯಾಗ ಮೂಗುದಾಣದ ಭಾಗ್ಯ ಸಹಿತ ಕೂಡಿ ಬಂದಿತ್ತು ಅಂತ ಕಾಣಸ್ತದ. ಪಾಪ. ಒಟ್ಟಿನ್ಯಾಗ ಲಗ್ನ ಆಗಿ ಬಿಡ್ತು. ದೊಡ್ಡ ಆಶ್ಚರ್ಯದ ಸಂಗತಿನೇ ಏನ್ರಪಾ?

ಅದಾದ ಭಾಳ ದಿವಸ ಆದ ಮ್ಯಾಲೆ ಮತ್ತ ಗಿರ್ಯಾ ಸಿಕ್ಕಿದ್ದ. ಯಾಕೋ ಸ್ವಲ್ಪ ಸಪ್ಪ ಆದಂಗ ಕಂಡ. ಆಫ್ಟರ್ ಶಾದಿ ಎಫೆಕ್ಟ್ ಅಂತ ತಿಳಕೊಂಡೆ. ಆದ್ರ ಅದನ್ನ ಶೋಧನೆ ಮಾಡಲಿಲ್ಲ ಅಂದರ ಹೆಂಗ?

'ಯಾಕಪಾ ದೋಸ್ತಾ, ಯಾಕೋ ಸ್ವಲ್ಪ ಸುಸ್ತ ಆದಂಗ ಕಾಣ್ತಿಯಲ್ಲಾ. ಯಾಕ? ಎಲ್ಲೆರೆ 'ಅನಂತನ ಆವಾಂತರ' ಕೇಸೇನು? ಹೇಳಪಾ. ಭಿಡೆ ಬಿಟ್ಟು ಹೇಳಪಾ. ನಾನೇ ದೊಡ್ಡ ಡಾಕ್ಟರ ಉಳ್ಳಾಗಡ್ಡಿ ಇದ್ದಂಗ. ಎಲ್ಲಾ ಬಗೆಹರಿಸಿ ಕೊಟ್ಟುಬಿಡತೇನಿ. ಓಕೆ?' ಅಂತ ಕೇಳಿದೆ.

'ಹಲ್ಕಟ್ ಮಂಗ್ಯಾನಿಕೆ! ಏನಂತ ಹೇಳಿ ಲಗ್ನಾ ಮಾಡಿಸಿದ್ಯೋ ಪಾಪಿ ಮುಂಡೆ ಮಗನ? ನನ್ನ ಹಾಲತ್ ಮೊದಲೇ ಭಾಳ್ ಮಸ್ತ್ ಇತ್ತು. ಥತ್ ನಿನ್ನ,' ಅಂತ ಗಿರ್ಯಾ ನನಗೇ ಉಲ್ಟಾ ಹೊಡೆದ.

'ಯಾಕಪಾ ದೋಸ್ತಾ? ನಿನ್ನ ಮಾಲಾದ ಮಾಲವಿಕಾ ಮುತ್ತೈದೆ ಭಾಗ್ಯ ಕೊಡಿಸು ಅಂತ ಗಂಟ ಬಿದ್ದಿದ್ದಳು. ಅದಕ್ಕೇ ಅಕಿಗೆ ಒಂದು ಮಂಗ್ಯಾನ ಸೂತ್ರ ಅಲ್ಲಲ್ಲ ಮಂಗಳ ಸೂತ್ರ ಕಟ್ಟಿ, ಅಕಿಗೊಂದು ಮುತ್ತೈದೆ ಭಾಗ್ಯ ಕರುಣಿಸಿ, ನೀನೂ ಆರಾಮ ಇರಪಾ ಅಂತ ಏನೋ ಒಂದು ಸಲಹೆ ಕೊಟ್ಟಿದ್ದೆ ನೋಡಪಾ. ಎಲ್ಲಾರೂ ಶಾದಿ ಭಾಗ್ಯ, ನಂತರದ ಗಾದಿ ಭಾಗ್ಯ ಅಂತ ಯೋಜನಾ ಹಮ್ಮಿಕೋತ್ತ ಹೊಂಟಾಗ ನೀನೂ ಸಹ ಏನರೆ ಮಾಡಬೇಕಲ್ಲಪಾ? ನಿಂದು ಮುತ್ತೈದೆ ಭಾಗ್ಯ. ವೈನಿ ಹ್ಯಾಂಗಿದ್ದಾರ? ವೈನಿ ಅಂದ್ರ ನಿನ್ನ ಹೇಣ್ತೀ ಮತ್ತ. ಯಾರೋ ಅಂತ ತಿಳಕೊಂಡಿ ಮತ್ತ,' ಅಂತ ಹೇಳಿದೆ.

'ಮುತ್ತೈದೆ ಭಾಗ್ಯ ಅಂತ ಮುತ್ತೈದೆ ಭಾಗ್ಯ! ಕತ್ತೈದೆ ಭಾಗ್ಯ! ಕತ್ತೈದೆ ಅಂದ್ರ ಐದು ಕತ್ತಿ ಭಾಗ್ಯ ಪಡಕೊಂಡು ಬಂದ ಕತ್ತಿಯಾಗಿಬಿಟ್ಟೇನಿ ನಾನು. ಥತ್ ನಿನ್ನ!' ಅಂತ ಮತ್ತ ನನ್ನ ಬೈದು, ರೊಚ್ಚಿಲೆ ಒಂದು ಗುಟ್ಕಾ ಪ್ಯಾಕೆಟ್ ಹಲ್ಲಿಂದಲೇ ಹರಿದು, ಮ್ಯಾಲಿಂದಲೇ ಫುಲ್ ಪ್ಯಾಕೆಟ್ ಹಾಕ್ಕೊಂಡು ಬಿಟ್ಟ ನಮ್ಮ ದೋಸ್ತ. ಆವಾ ಹಾಂಗ ಮಾಡಿ ಫುಲ್ ಡೋಸ್ ಗುಟ್ಕಾ ಒಂದೇ ಹೊಡೆತಕ್ಕ ತೊಗೊಂಡ ಅಂದ್ರ ಮಾಮಲಾ ಗಂಭೀರ ಅದ ಅಂತ ಅರ್ಥಾತು. ಅಷ್ಟು ದೊಡ್ಡ ಕಿಕ್ ಬೇಕು ಅಂದ್ರ ಅವನ ತಲಿ ಫುಲ್ ಕೆಟ್ಟಿರಬೇಕು.

'ಹಾಂ? ಏನಂತ ಮಾತಲೇ ನಿಂದು? ಅಕಿಗೆ ಮುತ್ತೈದೆ ಭಾಗ್ಯ ಅಂದ್ರ ನಿನಗ ಕತ್ತೈದೆ ಭಾಗ್ಯ ಅಂತ ಏನೇನೋ ಅಂತೀಯಲ್ಲಲೇ. ಹಾಂ?' ಅಂದೆ.

ಒಟ್ಟ ತಿಳಿಲಿಲ್ಲ ನನಗ.

'ಮತ್ತೇನು? ಅಕಿಗೆ ಮುತ್ತೈದೆ ಭಾಗ್ಯ. ನನಗ ಮುತ್ತೈದೇ ಭಾಗ್ಯ. ಇದರಕಿಂತ ಮೊದಲೇ ಛೋಲೋ ಇತ್ತ ಬಿಡಲೇ. ಲಗ್ನಾದ ಮ್ಯಾಲೆ ಇದೆಂತಾ ಹಡಬಿಟ್ಟಿ ಮುತ್ತೈದೇ ಭಾಗ್ಯಲೇ? ಯಾರಿಗೆ ಬೇಕಾಗಿತ್ತು ಈ ಭಾಗ್ಯ? ಹೋಗ್ಗೋ ನಿನ್ನ ದರಿದ್ರ. ದೋಸ್ತ್ ಏನಲೇ ನೀ? ದುಶ್ಮನ್ ನೀ. ಜಾನೀ ದುಶ್ಮನ್. ಅಕಿಗೆ ಮುತ್ತೈದೆ ಭಾಗ್ಯ ಕೊಡಿಸಿ ನನಗ ಮುತ್ತೈದೇ ಭಾಗ್ಯ ಕೊಡಿಸಿ ಕೂತ್ಯಲ್ಲೋ ಪಾಪಿ!' ಅಂತ ಗಿರ್ಯಾ ನನಗ ಶಾಪಾ ಹೊಡೆದ.

'ಹಾಂ! ಏನನ್ನಲಿಕತ್ತಾನ ಇವಾ? ಅಕಿಗೆ ಮುತ್ತೈದೆ ಭಾಗ್ಯ ಬಂತು ಸರಿ. ಇವಂಗೇನು ಮುತ್ತೈದೇ ಭಾಗ್ಯ ಬಂತು? ಅದಕ್ಯಾಕ ಕತ್ತೈದೆ ಅದು ಇದು ಅಂದು ಲಬೋ ಲಬೋ ಅನ್ನಲಿಕತ್ತಾನ ಈ ಹಾಪ್ ಮಂಗ್ಯಾನಿಕೆ?' ಅಂತ ನನಗ ತಿಳಿಲಿಲ್ಲ. ನಮ್ಮನಿ ಕುಲದೇವರ ಆಣಿ ತಿಳಿಲಿಲ್ಲ.

''ಸರಿತ್ನಾಗಿ ಹೇಳಲೇ ಹಾಪಾ. ಏನದು ಹುಚ್ಚುಚ್ಚರೆ ಇಬ್ಬರಿಗೂ ಮುತ್ತೈದೆ ಭಾಗ್ಯ ಅಂದ್ಕೋತ್ತ. ಹಾಂ? ತಲಿ ಇಲ್ಲ ಬುಡ ಇಲ್ಲ,' ಅಂತ ಝಾಡಿಸಿದೆ.

'ಅವೆಲ್ಲಾ ನಿನಗೆಲ್ಲಿ ಗೊತ್ತಾಗಬೇಕು? ನಾ ನನ್ನ ಕಳಕೊಂಡ ಬ್ಯಾಚಲರ್ ಭ್ಯಾಗ್ಯದ ಮೇಲೆ ಒಂದು ತರಾ ಸೆಂಟಿ ಒಳಗ ಇದ್ದೇನಿ ಬಿಡಪಾ. Leave me alone, I say,' ಅಂತ ಹೇಳಿದ.

ನಾವು ಬಿಡಬೇಕಲ್ಲ? ಮತ್ತ ಮತ್ತ ಕೇಳಿದೆ, 'ಏನಲೇ ನಿಂದು ಪ್ರಾಬ್ಲೆಮ್?' ಅಂತ.

'ಅಕಿಗೆ ಮುತ್ತೈದೆ ಭಾಗ್ಯ. ನನಗ ಮುತ್ತೈದೇ ಭಾಗ್ಯ,' ಅಂತ ಮತ್ತ ಮತ್ತ ಎಳೆದು ಎಳೆದು ಹೇಳಿದ.

'ಏನಲೇ ಹಾಂಗಂದ್ರ? ಅದೇನು ನಿನಗ ಮುತ್ತೈದೇss ಭಾಗ್ಯ ಅಂತ ದೇs ಅಂತ ಎಳೀತಿ? ದೇ ದೇ ಪ್ಯಾರ್ ದೇ ಹಾಡಿನ್ಯಾಗ ಕಿಶೋರ್ ಕುಮಾರ್ ಸಹಿತ ಹೀಂಗ ಊದ್ದ ದೇ ಅಂತ ಎಳಿಲಿಲ್ಲ ನೋಡಲೇ. ದೇ ಅಂತ ದೇ. ಮುತ್ತೈದೇsss ಅಂತ. ಹಾಂ?' ಅಂತ ಝಾಡಿಸಿ ಕೇಳಿದೆ.

'ಅದು ಏನಂದ್ರ, ಅಂದ್ರ......' ಅಂತ ಹತ್ತಿರ ಬಂದು ಕಿವಿಯೊಳಗ ಗುಸು ಗುಸು ಹೇಳಿ, ಮಳ್ಳ ಮಾರಿ ಮಾಡಿ ನಿಂತಾ ಗಿರ್ಯಾ.

'ಹೋಗ್ಗೋ!!!' ಅಂತ ಉದ್ಗಾರ ಮಾಡಿ ಭಾಳ ನಕ್ಕೆ. ನಂದು ಆವಂದು ಇಬ್ಬರದ್ದೂ ಏನೇನೋ ತಟ್ಟಿ ತಟ್ಟಿ ನಕ್ಕೆ.

ಮುತ್ತೈದೇ ಭಾಗ್ಯ. Only five.


'ಅಲ್ಲಲೇ ಗಿರ್ಯಾ ಅಕಿ ಹಾಪ್ ನಿನ್ನ ಹೆಂಡ್ತಿ ಮಾಲವಿಕಾ ತಲ್ಯಾಗ ಮುತ್ತೈದೆ ಅಂದ್ರ ಆ ಅರ್ಥಾ ಯಾರು ತುಂಬ್ಯಾರ? ಮುತ್ತೈದೆ ಅನ್ನೋದರ ಫುಲ್ ಅನರ್ಥ ಮಾಡಿಕೊಂಡು ಕೂತಾಳೋ ಅಕಿ. ಯಪ್ಪಾ. ಅಕಿ ಮೊದಲೇ ಹಾಪ್. ಮೊದಲು ಮುತ್ತೈದೆ ಆಗಿರಲಿಲ್ಲ ಅಂತ ಭಾಳ ಟೆನ್ಷನ್ ಒಳಗ ಇದ್ದಳು. ಈಗ ಮುತ್ತೈದೆ ಆದ ಮ್ಯಾಲೆ ಮುತ್ತೈದೆ ಅನ್ನೋದರ ಅರ್ಥ ಏನೋ ಮಾಡಿಕೊಂಡು, ನಿನಗ ಲಂಗಣಾ ಹೊಡಸಲಿಕತ್ತಾಳ ಅಂತ ಆತು. ಕಂಗಣಾ ರಣಾವತ್ ಇದ್ದಂಗ ಇಕಿ ಲಂಗಣಾ ರಣಾವತ್ ಆಗಿ ಬಿಟ್ಟಾಲಲ್ಲೋ .  ಹೋಗ್ಗೋ!!!!' ಅಂತ ಹೇಳಿದೆ.

ಅದು ಏನು ಆಗ್ಯದ ಅಂದ್ರ, ಅಕಿ ಹುಚ್ಚ ಕಬಾಡೇ ಮಾಲವಿಕಾ ಉರ್ಫ್ ಮಾಲಿ ಲಗ್ನಾಗಿ ಮುತ್ತೈದೆ ಆದಾಗಿಂದ ಅಕಿ ಗಂಡ ಉರ್ಫ್ ನಮ್ಮ ಗಿರ್ಯಾಗ ಎಣಿಸಿ ಎಣಿಸಿ, ದಿನಕ್ಕ, ಬರೋಬ್ಬರಿ ಐದೇ ಐದು ಮುತ್ತು ಅಂದ್ರ ಪಪ್ಪಿ ಅಂದ್ರ ಕಿಸ್ ಅಂದ್ರ ಚುಮ್ಮಾ ಕೊಡ್ತಾಳಂತ!!! ಐದೇ ಐದು!!

ಏನೂsssssssssssss?????????!!!!!!!!!!!!!!!!!!!!!!!!!!!!!!!!!!!

'ಯಾಕ ಮಾಲೂ ಡಾರ್ಲಿಂಗ್ ಬರೇ ಐದಕ್ಕ ಲಿಮಿಟ್ ಮಾಡಿ?' ಅಂತ ಗಿರ್ಯಾ ಕೇಳಿದರ, 'ಅಯ್ಯ! ಈಗೇನು ಮೊದಲಿನ ಹಾಂಗ ಅಂತ ತಿಳ್ಕೊಂಡಿರೇನು? ಈಗ ನಾ ಮುತ್ತೈದಿ. ಮುತ್ತು ಐದೇ ಐದು ಕೊಡಾಕಿನೇ ಮುತ್ತೈದೆ. ಧಾರವಾಡ ಕಡೆ ಮತ್ತೈದಿ. ಅದಕ್ಕ ನಿಮಗ ಇನ್ನು ಮ್ಯಾಲೆ ಅಷ್ಟೇ. ಐದಕ್ಕಿಂತ ಜಾಸ್ತಿ ಇಲ್ಲ. ತಿಳೀತs?' ಅಂತ ಉಲ್ಟಾ ಸೀದಾ ಲಾಜಿಕ್ ಬ್ಯಾರೆ ಒಗಿತಾಳ ಅಂತ ಹಾಪ್ ಮಾಲಿ.

'ಮೊದಲು ಬರೇ ಮಾಲ್ ಮಾಲ್ ಅಂದ್ರ ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಇದ್ದಾಗೇ ಬೆಷ್ಟ್ ಇತ್ತು. ಅಕಿ ಚೂಡಿದಾರದ ಓಡ್ನಿ ತೊಗೊಂಡು, ಇಬ್ಬರ ಮಾರಿನೂ ಮುಚ್ಚುವಾಂಗ ಒಂದು ಮುಸುಕು ಬುರ್ಕಾದ ಗತೆ ಹಾಕ್ಕೊಂಡು, ಕಂಡ ಕಂಡಲ್ಲೆ, ಬೇಕ್ಬೇಕಾದಷ್ಟು ಕಿಸ್ ಹೊಡಕೊಂಡು, ಕಿಸ್ಸಿಂಗ್ ಕಿಡಿಗೇಡಿಗಳಾಗಿ ಆರಾಮ್ ಇದ್ದಿವಿ. ಈಗ ದಿನಕ್ಕೆ ಐದೇ ಐದು ಅಂತ ರೇಶನ್ ಆಗಿ, ಜೀವನ ಭಾಳ ಬೋರ್ ಆಗಿ, ಜಿಂದಗಿನೇ ಹಾಳಾಗ್ ಬುಟ್ಟೈತೆ, ಚುಮ್ಮಾ ಚುಮ್ಮಿ ಐದಕ್ಕೇ ನಿಂತು ಬುಟ್ಟೈತೆ ಅಂತ ಶಂಕಾ ಹೊಡೆಯೋದು ಆಗ್ಯದ,' ಅಂತ ಹೇಳಿದ ಗಿರ್ಯಾ. ಹಾಗಂತ ಹೇಳಿ ಪರಿತಪಿಸಿಬಿಟ್ಟ ಗಿರ್ಯಾ.

ಒಂದು ತರಾ ಫೀಲಿಂಗ್ ಒಳಗ, ಸಣ್ಣ ದನಿಯೊಳಗ, ಚುಮ್ಮಾ ಚುಮ್ಮಿ ಭಾಳ ಮಿಸ್ ಮಾಡಿಕೊಂಡವರ ಬೆಗ್ಗರ್ ಫೀಲಿಂಗ್ ಒಳಗ, 'ಚುಮ್ಮಾ ಚುಮ್ಮಾ ದೇ ದೇ. ಚುಮ್ಮಾ ಚುಮ್ಮಾ ದೇ ದೇ ಚುಮ್ಮಾ,' ಅಂತ ಹಾಡಿ ಸಹಿತ ಬಿಟ್ಟ ಗಿರ್ಯಾ. ಸುತ್ತಮುತ್ತಲಿನ ಪರಿವೇ ಇರಲಿಲ್ಲ ಅವಂಗ.

ಅಲ್ಲೇ ಬಾಜೂಕ ಉಸುಕಿನ ಬುಟ್ಟಿ ಹೊತ್ಕೊಂಡು ಹೊಂಟಿದ್ದ ಹೆಣ್ಣಾಳು ಒಬ್ಬಾಕಿ, ಇವನ ಹಾಡಾ ಕೇಳಿ, ಸಿಟ್ಟಿಗೆದ್ದು, ಕಣ್ಣು ಕೆಕ್ಕರಿಸಿ ನೋಡಿ, 'ಯಾಕs ಹ್ಯಾಂಗ ಐತೀ ಮೈಗೆ?' ಅಂತ ಗಿರ್ಯಾಗ ಝಾಡಿಸಿ, ನನ್ನ ಕಡೆ ನೋಡಿ, 'ಅಣ್ಣಾರ ಈ ಹೋರಿ ಬೆದಿಗೆ ಬಂದೈತಿ ಅಂತ ಕಾಣಸ್ತೈತಿರೀ. ಒಂದು ಆಕಳಾ ತಂದು ಕಟ್ಟರೀ. ಅಥವಾ ಹೋರಿ ಬೀಜಾ......' ಅಂತ ಫುಲ್ ಮಲಯಾಳೀ ಡೈಲಾಗಿಗೆ ಶಿಫ್ಟ್ ಆಗಲಿಕ್ಕೆ ಹೊಂಟಿದ್ದಳು. ನಾನೇ ಅಕಿಗೆ, 'ನಿನಗ ಆವಾ ಚುಮ್ಮಾ ದೇ ದೇ ಅಂತ ಹಾಡಿಲ್ಲ ಮಾರಾಳ. ಏನೋ ಆ ಹಾಡು ಭಾಳ ಸೇರ್ತದ ಅಂತ ಗುಣು ಗುಣು ಅಂದಾನ. ಅವನ ತಪ್ಪು ನೀ ಹೊಟ್ಯಾಗ ಹಾಕ್ಕೋ. ನನ್ನ ಮಾರಿ ನೋಡ್ಯಾರ ಹೊಟ್ಟ್ಯಾಗ ಹಾಕ್ಕೋಳವ್ವಾ. ಕ್ಷಮಾ ಮಾಡಿ ಬಿಡು. ನಿನ್ನ ಕೆಲ್ಸಾ ನೋಡ್ಕೊವ್ವಾ,' ಅಂತ ಹೇಳಿ, ಆ ಹೆಣ್ಣಾಳನ್ನು ಸಮಾಧಾನ ಮಾಡೋದ್ರಾಗ ನನ್ನ ತಲಿ ಹನ್ನೆರಡಾಣಿ ಆಗಿ ಹೋಗಿತ್ತು. ಆ ಹೆಣ್ಣಾಳಿಂದ ಗಜ್ಜು ಖರೇನೇ ತಿಂತಿದ್ದಾ ಆವತ್ತು ಗಿರ್ಯಾ. ಸೂಡ್ಲಿ ತಂದು!

'ಯಾವ ಹಾಪ್ ಸೂಳಿಮಗ ಅಕಿಗೆ ಮುತ್ತೈದೆ ಅಂದ್ರ ಗಂಡಗ ಬರೇ ಐದೇ ಕಿಸ್ ಹೊಡಿಬೇಕು, ಜಾಸ್ತಿ ಹೊಡಿಬಾರ್ದು ಅಂತ ಹೇಳ್ಯಾನಂತ? ಕೇಳಿದಿ ಏನು ಅಕಿ ಕಡೆ? ಇಲ್ಲದ್ದು ಸಲ್ಲದ್ದು ತಲಿಯೊಳಗ ತುಂಬೋ ಮಂದಿ ಬೇಕಾದಷ್ಟು ಇರ್ತಾರ ತೊಗೋ. ಹಾಂಗೇ ಏನೋ ಆಗಿ ಅಕಿ ಗಲತ್ ಅರ್ಥಾ ಮಾಡಿಕೊಂಡಿರಬೇಕು. ಮೊದಲೇ ಹಳೆ ಮೋಡಕಾ ದಂಧೆ ಮಾಡವರ ಪೈಕಿ ಹುಡುಗಿ. ತಲಿ ಸಹಿತ ಮೋಡಕಾ ಆಗಿರಬೇಕು. ಭಾಳ ಹುಚ್ಚತನ ಬಿಡು ಇದು ಅಕಿದು,' ಅಂತ ಏನೋ ಸಮಾಧಾನ ಹೇಳಿದೆ.

'ದ್ರೌಪದಿ!' ಅಂದು ಬಿಟ್ಟ ಗಿರ್ಯಾ. ಬಾಂಬ್ ಒಗೆದ.

'ಹಾಂ? ಏನಲೇ ದ್ರೌಪದಿ? ಯಾವ ದ್ರೌಪದಿ ಗಂಡಗ ದಿನಕ್ಕ ಐದೇ ಐದು ಕಿಸ್ ಹೊಡಿ ಅಂದಳಂತ? ಹಾಂ?' ಅಂತ ಕೇಳಿದೆ.

'ನಮ್ಮ ಹೆಂಡ್ರು ಅಂದ್ರ ನಿಮ್ಮ ಮಾಲೂ ವೈನಿ ಪ್ರಕಾರ ಮೊತ್ತ ಮೊದಲ ಮುತ್ತೈದೆ ಅಂದ್ರ ಮಹಾಭಾರತದ ದ್ರೌಪದಿ ಅಂತ ನೋಡಪಾ. ಅಕಿಗೆ ಯಾಕ ಮುತ್ತೈದೆ ಅಂತ ಹೆಸರು ಬಂತು ಅಂತ ಕೇಳಿದರ ಅಕಿಗೆ ಐದು ಮಂದಿ ಗಂಡಂದಿರು ನೋಡು. ಅಕಿ ಒಬ್ಬ ಪಾಂಡವಗ ಒಂದರಂತೆ ಐದು ಮಂದಿ ಪಂಚ ಪಾಂಡವರಿಗೆ ಕೂಡಿಸಿ, ಒಟ್ಟ ಟೋಟಲ್ ಐದು ಕಿಸ್ ಹೊಡಿತಿದ್ದಳು ಅಂತ ಆತು. ಆವಾ ಭೀಮಾ, 'ಏ ದ್ರೌಪದಿ ಡಾರ್ಲಿಂಗ್, ನಂದು ಸೈಜು ಭಾಳ ದೊಡ್ಡದದ. ಇನ್ನೊಂದೆರೆಡು ಕಿಸ್ ಜಾಸ್ತಿ ಹೊಡಿಯಲ್ಲಾ? ಪ್ಲೀಸ್ ಲೇ ದ್ರೌಪದಿ ಪ್ಲೀಸ್ ಲೇ,' ಅಂತ ಪರಿಪರಿಯಾಗಿ ಕೇಳಿಕೊಂಡರೂ ಅಕಿ ಮಾತ್ರ ಒಬ್ಬರಿಗೆ ಒಂದರಕಿಂತಾ ಹೆಚ್ಚು ಮುತ್ತು ಒಟ್ಟs ಕೊಡ್ತಿದ್ದಿಲ್ಲಾ ಅಂತಾತು. ಹಾಂಗಾಗಿ ಕಡ್ಡಾಯವಾಗಿ, ಲೆಕ್ಕಾ ಇಟ್ಟು, ಐದೇ ಐದು ಮುತ್ತು ಕೊಡುವದು ದ್ರೌಪದಿ ಶುರು ಮಾಡಿದ ಪದ್ಧತಿ ಅಂತ ನೋಡಪಾ. ಇದು ನಮ್ಮ ಹೆಂಡ್ರ ಮುತ್ತೈದೆ ಪದ್ಧತಿ. ಹಾಂಗಾಗಿ ಅಕಿ ದ್ವಾಪರಯುಗದ ದ್ರೌಪದಿ ಎಕ್ಸಾಂಪಲ್ ಮುಂದ ಇಟಗೊಂಡು ಚುಮ್ಮಾ ಚುಮ್ಮಿ ರೇಶನ್ ಮಾಡ್ಯಾಳ ನೋಡಪಾ. ನಮ್ಮ ಲಗ್ನಾ ಮಾಡಿಸಿ ಏನು ಬತ್ತಿ ಇಟ್ಟಿಲೇ ಹುಚ್ಚ ಮಂಗ್ಯಾನಿಕೆ!?' ಅಂತ ಮತ್ತ ಬೈದಾ ಗಿರ್ಯಾ.

'ಹೋಗ್ಗೋ! ಖತರ್ನಾಕ್ ಮೋಡಕಾ ತಲಿ ಇಟ್ಟಾಳೋ ನಿನ್ನ ಹೆಂಡ್ತಿ ಉರ್ಫ್ ಕಬಾಡಿ ಮಾಲಿ. ಐದು ಮಂದಿ ಪಾಂಡವರಿಗೆ, ಒಬ್ಬರಿಗೆ ಒಂದೇ ಒಂದರಂತೆ, ಟೋಟಲ್ಲಾಗಿ ಐದೇ ಐದು ಕಿಸ್ ಹೊಡಿತಿದ್ದ ದ್ರೌಪದಿ ಮೊದಲ ಮುತ್ತೈದೆ. ಅಕಿ ಹಾಂಗೇ ತಾನೂ ಅಂತ ಹೇಳಿ ನಿಮ್ಮ ಹೆಂಡ್ರು ಉರ್ಫ್ ಮಾಲವಿಕಾ ಹಿಂಗ ಮಾಡಲಿಕತ್ತಾಳ ಅಂದ್ರ ವಿಚಿತ್ರ ಆತು ಬಿಡಪಾ,' ಅಂದೆ. ಇದೊಂದು ತರಹದ ರಿಪ್ಲೆ ಅವರ ನಂಬಿದರೆ ನಂಬಿ ಬಿಟ್ಟರೆ ಬಿಡಿ. ಕಡ್ಕಿ (shortage) ಮಾಡಿಸ್ಕೊಂಡ ಗಂಡನೆಂಬ ಪ್ರಾಣಿಯೇ ಹೇಳಲಿಕತ್ತಾನ ಅಂದ ಮ್ಯಾಲೆ ನಂಬಲೇಬೇಕಲ್ಲರೀ.

'ಗಿರ್ಯಾ, ಒಂದು ರೀತಿಲೇ ನಿನಗ ಛೋಲೇನೇ ಆತಲ್ಲಲೇ. ಬೆಸ್ಟ್ ಡೀಲ್ ಸಿಕ್ಕಂಗೆ ನೋಡಪಾ,' ಅಂದೆ.

Always try to see something positive in everything, ಅಂತ ನಮ್ಮ ಯೋಚನೆ.

'ಏನಪಾ ನೀನು!? ಕುಲಗೆಟ್ಟು ಹೋದ ನಮ್ಮ ಕಿಸ್ಸಿಂಗ್ ಕಿಸ್ಮತ್ ಬಗ್ಗೆ ನಾನು ಭಾಳ ಸ್ಯಾಡ್ ಫೀಲಿಂಗ್ ಒಳಗ ಇದ್ದರೆ ಏನು ಬೆಸ್ಟ್ ಡೀಲ್ ಅಂತೀ? ಹಾಂ?' ಅಂದಾ ಗಿರ್ಯಾ.

'ಅಲ್ಲಲೇ, ಪಾಂಡವರಿಗೆ ಒಬ್ಬರಿಗೆ ದಿನಕ್ಕೆ ಒಂದೇ ಒಂದು ಪಚ್ ಪಚ್ ಪಪ್ಪಿ ಕೊಡ್ತಿದ್ದಳು ದ್ರೌಪದಿ. ಇಕಿ ನಿನಗ ಐದು ಕೊಡ್ತಾಳ ಅಂದ್ರ ಛೋಲೋ ಅಲ್ಲೆನಲೇ? ೪೦೦% ಮುನಾಫಾ ನೋಡಪಾ. ಯಾವ ದಂಧೆ ಒಳಗ ಅದ ಈ ಟೈಪಿನ ಪ್ರಾಫಿಟ್? ಹಾಂ? Be happy with your ಮುತ್ತೈದೇ ಭಾಗ್ಯ I say,' ಅಂತ ಕುಟ್ಟಿದೆ ಏನೋ ಒಂದು.

'ಲೇ! ಹಾಪ್ ಮಂಗ್ಯಾನಿಕೆ, ಏನೂ ಪ್ರಾಫಿಟ್ ಗೀಫಿಟ್ ಇಲ್ಲ. ಅಕಿ ದ್ರೌಪದಿಗೆ ಐದು ಮಂದಿ ಗಂಡಂದಿರು ಇದ್ದರು. ಇಕಿಗೆ ನಾ ಒಬ್ಬನೇ. ನೆನಪಿರಲಿ. ಮತ್ತೆಲ್ಲೆರ ಹೋಗಿ ನನ್ನ ಹೆಂಡತಿಗೂ ಸಹ ಇನ್ನೂ ನಾಕು ಮಂದಿ ಗಂಡಂದ್ರನ್ನ ಮಾಡಿಕೋ ಅಂತ ಹೇಳಿ ಗೀಳಿ ಮತ್ತ. ಮೊದಲೇ ದೊಡ್ಡ ಪಾಪಿ ಇದ್ದಿ ನೀನು. ನನಗ ಈಗ ಗೊತ್ತಾತಲಾ. ನಿನ್ನ ನೋಡಿದ್ರ, ನೀ ಬತ್ತಿ ಇಟ್ಟಿದ್ದನ್ನ ನೆನೆಸಿಕೊಂಡ್ರ ನಿನ್ನ ಮರ್ಡರ್ ಮಾಡಿಬಿಡಬೇಕು ಅನ್ನಸ್ತದ!' ಅಂತ ವಾರ್ನಿಂಗ್ ಬ್ಯಾರೆ ಕೊಟ್ಟ.

'ಲೇ ಅಕಿ ಹಾಪ್ ಇದ್ದಾಳಲೇ ನಿನ್ನ ಮಾಲ್ ಅಲ್ಲಲ್ಲ ಈಗ ಮಾಲ್ ಅಲ್ಲ ನಿನ್ನ ಕರ್ಮ ಪತ್ನಿ ಥೋ! ಥೋ! ಅಲ್ಲಲ್ಲ ಸ್ಲಿಪ್ ಆಫ್ ಟಂಗ್ ನಿನ್ನ ಧರ್ಮ ಪತ್ನಿ. ಮುತ್ತೈದೆ ಅಂದ್ರ ಅರ್ಥ ಬ್ಯಾರೆನೇ ಅದ. ಹೋಗಿ ಹೇಳಿ ನೋಡು. ನಿನ್ನ ಮ್ಯಾಲಿನ ಚುಮ್ಮಾ ರೇಶನ್ ಕೋಟಾ ತೆಗೆದರೂ ತೆಗೆಯಬಹುದು ಅಕಿ,' ಅಂತ ಹೇಳಿದೆ.

'ಮುತ್ತೈದೆ ಅಂದ್ರ ಏನಲೇ?' ಅಂತ ಕೇಳಿದ.

'ಮುತ್ತೈದೆ ಅಂದ್ರ ಐದು ಮುತ್ತು ಧರಿಸಿದಾಕೆ ಅಂತ ಅರ್ಥ. ಹಣಿ ಮ್ಯಾಲಿನ ಕುಂಕುಮ, ಕೊರಳಾಗಿನ ಮಾಂಗಲ್ಯ, ಕಾಲಾಗಿನ ಕಾಲುಂಗುರ, ಮೂಗಿನಾಗಿನ ನತ್ತು, ಕೈಯ್ಯಾಗಿನ ಹಸಿರು ಬಳೆ. ಇವೇ ಆ ಐದು proverbial ಮುತ್ತುಗಳು. ಈ ಐದು ಮುತ್ತು ಧರಿಸಿದಾಕಿ ಮುತ್ತೈದಿ. ಇದನ್ನ ಹೋಗಿ ಅಕಿಗೆ ಹೇಳು. ನಿನ್ನ ಪರಿಸ್ಥಿತಿ ಸುಧಾರಿಸಿದರೂ ಸುಧಾರಿಸಬಹುದು. ಎಲ್ಲೆಲ್ಲಿಂದ ಬರ್ತೀರಿಪಾ ಎಂತೆಂತಾ ಮಂದಿ? ಹೋಗ್ಗೋ ನಿಮ್ಮ!' ಅಂತ ಹೇಳಿದೆ, ಬೈದೆ.

'ಹೀಂಗೇನು!?' ಅಂತ ದೊಡ್ಡದಾಗಿ ಉದ್ಗಾರ ಮಾಡಿ, 'ಎಲ್ಲಾ ಮಸ್ತ ಮಾಹಿತಿ ಇಟ್ಟ ಪಂಡಿತ ಸೂಳಿಮಗ ಇದ್ದಿ ನೋಡಲೇ. ಮಸ್ತ ಇದ್ದಿ ತೊಗೋ!' ಅಂತ ಇಲ್ಲದ ಪ್ರಶಂಸೆ ಬೇರೆ. 'ಸಾಕ್, ಸಾಕ್,' ಅಂತ ಹೇಳಿದೆ.

'ಇದೆಲ್ಲಾ ಎಲ್ಲಿಂದ ಕಲತೀಲೆ? ಭಾರಿ ಮಾಹಿತಿ ಇಟ್ಟಿರ್ತೀ ನೋಡಲೇ,' ಅಂದಾ ಗಿರ್ಯಾ.

'ಇವೆಲ್ಲಾ ಸಮಾಧಿ ಸ್ಥಿತಿಯಿಂದ ಗೊತ್ತಾಗಿದ್ದು,' ಅಂತ ಏನೋ ಛೋಡ್ ಬಿಟ್ಟೆ.

'ಡಬಲ್ ಡಬಲ್. ಅದಕ್ಕೇ ಎಲ್ಲಾ ಗೊತ್ತದ ನಿನಗ,' ಅಂದು ಬಿಟ್ಟಾ ಗಿರ್ಯಾ.

'ಏನಲೇ ಡಬಲ್ ಡಬಲ್? ಹಾಂ?' ಅಂತ ಕೇಳಿದೆ. ಏನು ತಿಳ್ಕೊಂಡನೋ ಹಾಪಾ.

'ಅಂದ್ರ ಎರಡು ಮಾಲ್ ಇಟ್ಟಿ ನೀ. ಅದಕ್ಕೇ ಎಲ್ಲಾ ಗೊತ್ತದ ನಿನಗ ಅಂತ. ಎಲ್ಲಿ ಮುಚ್ಚಿ ಇಟ್ಟಿಲೇ ಅವೆರೆಡು ಮಾಲ್? ಹಾಂ?'  ಅಂತ ಕೇಳಿಬಿಟ್ಟ.

'ಏನ್ ಮಾಲಲೇ? ಏನಂತೀ?' ಅಂತ ಝಾಡಿಸಿದೆ.

ಅಕಿ ಮಾಲವಿಕಾ, 'ಬಿಯರ್ ಕಂಡ್ರ ಬಾಯ್ಬಿಡೋ ಬ್ರಹ್ಮಚಾರಿ,' ಅಂತ ಹೇಳಿ ಮಂಗಳಾರತಿ ಮಾಡಿದ್ದಳು. ಇವಾ ನೋಡಿದರ ಒಂದಲ್ಲ ಎರಡು ಮಾಲು (ಡವ್ವು) ಇಟ್ಟೇನಿ ಅನ್ನಲಿಕತ್ತಾನ.

'ಮತ್ತ?? ಸಮಾಧಿ, ಸ್ಥಿತಿ ಅಂದ್ಯಲ್ಲೋ. ಎರಡೂ ಹುಡುಗಿಯರ ಹೆಸರಲ್ಲೇನು? ಅವೇ ಎರಡು ನಿನ್ನ ಮಾಲು. ಅಲ್ಲಾ?' ಅಂತ ಕೇಳಿಬಿಟ್ಟ. ಏನು ತಲೀಪಾ ದೇವರಾsss?

'ಸಮಾಧಿ, ಸ್ಥಿತಿ ಅಂದ್ರ ನನ್ನ ಎರಡು ಮಾಲು. ಅಲ್ಲಾ? ಲೇ, ಯಾರರ ಮುಂದ ಹಾಂಗ ಹೇಳಿಬಿಡು ಆತು. ಇಷ್ಟು ವರ್ಷ ಮಾಡಿದ ನನ್ನ ಸಾಧನಾ ಎಲ್ಲಾ ಗೋವಿಂದಾ ಗೋssವಿಂದಾ,' ಅಂತ ತಲಿ ಚಚ್ಚಿಕೊಂಡೆ.

'ಹಾಂ? ಸಾಧನಾ ಅಂತ ಮತ್ತೊಂದು ಮಾಲ?? ಮೂರನೋ ಅಥವಾ ಮತ್ತೂ ಅವನೋ?' ಅಂತ ಮೊದಲಿನ ಹಾಂಗೇ ಕೇಳಿದ. ಸ್ಟುಪಿಡ್. ಈಡಿಯಟ್.

'ಅದೆಲ್ಲಾ ಮಾತು ಬಿಡು. ನಮ್ಮದು ಅಕ್ಬರ್ ಬಾದಷಾನ ಬಳಗ,' ಅಂತ ಹೇಳಿ ಮಾತು ನಿಲ್ಲಿಸಿದೆ.

'ಗಿರ್ಯಾ ಒಂದು ಮಾತು ಹೇಳಪಾ,' ಅಂದೆ.

'ಏನು? ಕೇಳಪಾ,' ಅಂದಾ ಗಿರ್ಯಾ.

'ಅಲ್ಲಲೇ, ಲಗ್ನಾಗುಕಿಂತ ಮೊದಲು ನೀನು ಮತ್ತ ಅಕಿ ಕಬಾಡೆ ಮಾಲಿ ಅಂದ್ರ legendary ಕಿಸ್ಸಿಂಗ್ ಕಿಡಿಗೇಡಿಗಳು. ಚುಮ್ಮಾ ಚುಮ್ಮಿ ಮಾಡೋವಾಗ, ಭಾಳ ಒಳಗ ಒಳಗ ಹೋಗಿ ಹೋಗಿ, ದಂತಕ್ಕೆ ದಂತ ಸಹಿತ ತಿಕ್ಕಿ ತಿಕ್ಕಿ ದಂತಕಥೆ ಕೂಡ ಆಗಿಬಿಟ್ಟಿದ್ದಿರಿ. ಹಾಂಗೇ ಫೇಮಸ್ ಆಗಿದ್ದಿರಿ. ಸುತ್ತ ಮುತ್ತಲಿನ ಖಬರೇ ಇಲ್ಲದೆ, ಎಲ್ಲೆ ಸ್ವಲ್ಪ, ಭಾಳ ಬೇಕಂತಿಲ್ಲ ಮತ್ತ, privacy ಸಿಗ್ತು ಅನ್ನೋ ತಡಾ ಇಲ್ಲಾ, ಅಕಿ ಓಡ್ನೀ (ವೇಲ್) ಬುರ್ಕಾದ ಗತೆ ಮಾಡಿಕೊಂಡು, ಮುಸುಕು ಹಾಕಿಕೊಂಡು, ಬಿಳೆ ಮೊಲಾ, ಬಿಳೆ ಪಾರಿವಾಳ ಖಬರಿಲ್ಲದೇ ಕಿಸ್ ಹೊಡೆದಾಂಗ ಕಿಸ್ ಹೋಡಕೋತ್ತ ಇರ್ತಿದ್ದಿರಿ. ವೆರಿ ನೈಸ್. ಎಲ್ಲಾ ಪಾರ್ಕುಗಳ ವಾಚ್ಮನ್ ಕಡೆ ಸಹಿತ ಸಿಕ್ಕೊಂಡು ಬಿದ್ದು, ಹಾಕ್ಕೊಂಡು ಬೈಸ್ಕೊಂಡಿರೀ. ಬೋಟಾನಿಕಲ್ ಗಾರ್ಡನ್ ನಲ್ಲಿ ಇರೋ ಸಾಬರ ವಾಚ್ಮನ್ ಅಂತೂ, 'ಪರ್ದೇ ಮೇ ರೆಹೆನೇ ದೋ. ಪರ್ದಾ ನ ಹಟಾವೋ. ಪರ್ದಾ ಜೋ ಹಟ ಗಯಾತೋ ಖುಲ್ ಜಾಯೇಗಾ. ಕಿಸ್ಸಿಂಗ್ ಕಿಡಿಗೇಡಿ ದೋನೋ ದಿಖ್ ಜಾಯೇಗಾ,' ಅಂತ ಹಾಡಾ ಬ್ಯಾರೆ ಹಾಡ್ತಿದ್ದ. ಹಾಂಗಿದ್ದಾಗ ಈಗ ಒಮ್ಮೆಲೇ ದಿನಕ್ಕ, ಲೆಕ್ಕಾ ಇಟ್ಟು, ಬರೇ ಐದೇ ಐದು ಕಿಸ್ ಅಂದ್ರ ಅದೆಂಗ ಅಡ್ಜಸ್ಟ್ ಆದ್ರಿಲೇ? ಹಾಂ? ದಿನಕ್ಕ ಎರಡು ಪ್ಯಾಕ್ ಸಿಗರೇಟ್ ಸೇದವರು ಒಮ್ಮೆಲೇ ದಿನಕ್ಕ ಬರೇ ಮೂರs ಮೂರು ಸಿಗರೆಟ್ ಸೇದತೇನಿ, ಅದೂ ಮುಂಜಾನೆ ಸಂಡಾಸ್ ಹೋಗೋವಾಗ ಬೇಕೇ ಬೇಕು ಅಂತ ಒಂದು, ಮಧ್ಯಾನ ಊಟ ಆದ ಮ್ಯಾಲೆ ನಿದ್ದಿ ಬರ್ತದ ಅಂತ ಇನ್ನೊಂದು, ರಾತ್ರಿ ನಿದ್ದಿ ಬರೋದಿಲ್ಲ ಅಂತ ಮತ್ತೊಂದು ಸಿಗರೇಟ್ ಅಂದಂಗ ಆತು ಇದು. ಹಾಂ? ಒಮ್ಮೆಲೇ ಕಮ್ಮಿ ಮಾಡಿದ್ದಕ್ಕ ಬಾಡಿ ಭಯಂಕರ ಹೀಟ್ ಆಗಂಗಿಲ್ಲ? ಹೀಟಿಗೆ ಅಂತ ಒಂದರೆಡು ಲೀಟರ್ ಮಜ್ಜಿಗಿ ಜಾಸ್ತಿ ಕುಡಿತೀರಿ ಏನು? ಯಾಕ ಕೇಳಿದೆ ಅಂದ್ರ ಆವಾ ಗೌಳ್ಯಾರ ದಡ್ಡಿ ಗೌಳ್ಯಾ ನಿಮ್ಮನಿಗೆ ಈಗ ಹಾಲು ಹಾಕೋದು ಬಿಟ್ಟಾನಂತ. ಸೀದಾ ನಿಮ್ಮನಿಗೇ ಆಕಳಾ ಕರಕೊಂಡು ಬಂದು, ನಿಮ್ಮ ಗೇಟ್ ಮುಂದೇ ಕರಾ ಪರಾ ಅಂತ ಪಂಪ್ ಹಚ್ಚಿ, ಅವನ ಆಕಳಾ, 'ಸಾಕಲೇ ಎಷ್ಟು ಜಗ್ಗತೀ ನನ್ನ ಕೆಚ್ಚಲಾ?' ಅಂತ ಜಾಡಿಸಿ ಒದೆಯೋ ತನಕಾ, ಫುಲ್ ಮಿಲ್ಕಿಂಗ್ ಮಾಡಿ, ಅಷ್ಟೂ ಮಿಲ್ಕ್ ನಿಮಗೇ ಕೊಟ್ಟು ಹೋಗ್ತಾನಂತ. ಹೌದ? ಅದಕ್ಕೇ ಕೇಳಿದೆ,' ಅಂತ ವಿವರಣೆ ಕೇಳಿದೆ.

'ಹೀಟ್. ಅಕಿಗೇನೂ ಇಲ್ಲ ಬಿಡಪಾ. ಅಕಿ ಮಾಲವಿಕಾ ಏನು ತನ್ನ ಪಾಡಿಗೆ ತಾನು 'ಒಂದು ಮುತ್ತಿನ ಕಥೆ' ಅಂತ ಹೇಳಿಕೋತ್ತ ಯಾರ್ಯಾರಿಗೋ ಮುತ್ತು ಕೊಟ್ಟುಗೋತ್ತ ಅಡ್ಯಾಡಲಿಕತ್ತಾಳ ಬಿಡು. ನನಗ ಕಿಸ್ ಕಮ್ಮಿಯಾಗಿ ಹೀಟ್ ಜಾಸ್ತಿಯಾಗಿ ನಾ ಮಜ್ಜಿಗಿ ಜಾಸ್ತಿ ಕುಡಿಲಿಕತ್ತಿದ್ದು ಖರೇ ಅದ,' ಅಂದು ಬಿಟ್ಟ ಗಿರ್ಯಾ.

'ಹಾಂ!? ಏನಲೇ ಹಾಂಗಂದ್ರ? ನಿನಗ ಬರೇ ಐದೇ ಐದು ಅಂತ ಹೇಳಿ ಗಪ್ ಕೂಡಿಸಿ, ರಸ್ತೆದಾಗ ಹೋಗೋ ಬರೋವರಿಗೆಲ್ಲ ಮುತ್ತಿನ ದಾನ ಮಾಡ್ಲಿಕತ್ತಾಳೇನು ಏನು ಅಕಿ ಕಬಾಡೆ? ಹೋಗ್ಗೋ! ಮನಿ ಮುಂದ ಉದ್ದ ಕ್ಯೂ ಏನಲೇ?' ಅಂತ ಸುಮ್ಮ ಮಸ್ಕಿರಿ ಮಾಡಿದೆ.

'ಇಲ್ಲಲೇ! ಹಾಂಗೆಲ್ಲಾ ಇಲ್ಲ ಅಕಿ,' ಅಂದ. ಪಬ್ಲಿಕ್ ಒಳಗ ಎಲ್ಲರ ಪತ್ನಿಯರೂ ಪತಿವ್ರತೆಯರೇ.

'ಮತ್ತ?????' ಅಂತ ಕೇಳಿದೆ.

'ನೋಡಪಾ, ಅಕಿ ಈಗ ನಮ್ಮ ಮನಿಗೆ ಸೊಸಿ ಅಂತ ಬಂದಾಗಿನಿಂದ ಬ್ಯಾರೆ ಬ್ಯಾರೆ ಮನಿ ಮಂದಿಗೆ, ಬ್ಯಾರೆ ಬ್ಯಾರೆ ಕಾರಣಕ್ಕೆ, ಬೇರೆ ಬೇರೆ ರೀತಿಯಲ್ಲಿ ಕಿಸ್ ಹೊಡಿಲಿಕತ್ತಾಳ ನೋಡಪಾ,' ಅಂದು ಒಂದು ಸಣ್ಣ ಬ್ರೇಕ್ ತೊಗೊಂಡ ಗಿರ್ಯಾ.

'ನಮ್ಮಪ್ಪಾ ದೊಡ್ಡ ಡಯಾಬೀಟಿಸ್ ಪೇಷಂಟ್. ಆದರೂ ಕದ್ದು ಮುಚ್ಚಿ ಸಿಹಿ ತಿಂತಾನ. ನನ್ನ ಹೆಂಡ್ತಿ ಕೈಯ್ಯಾಗ ಸಿಕ್ಕೊಂಡು ಬೀಳ್ತಾನ. 'ಅತ್ತಿಯವರ ಮುಂದ ಹೇಳತೇನಿ ನೋಡ್ರೀ,' ಅಂತ ನಮ್ಮಪ್ಪನ ಬ್ಲಾಕ್ ಮೇಲ್ ಮಾಡ್ತಾಳ. ಆವಾ ಅರ್ಧಾ ಹೆದರಿಕಿಯಿಂದ, ಅರ್ಧಾ ಪ್ರೀತಿಯಿಂದ ಇಕಿ ಕೈಯ್ಯಾಗ ರೆಗ್ಯುಲರ್ ಆಗಿ ಎರಡೋ ಮೂರೋ ಸಾವಿರ ರೂಪಾಯಿ ಇಡ್ತಾನ. ರೊಕ್ಕಾ ಇಸ್ಕೊಂಡು, ಫುಲ್ ಖುಷಿಯಿಂದ, 'ಥ್ಯಾಂಕ್ಯೂ ಮಾವಾರ!' ಅಂದು ನಮ್ಮಪ್ಪನ ಬೋಳು ತಲಿಗೆ, ಪಚ್ಪಚಾ, ಪಚಾ, ಪಚಾ ಅಂತ ಪ್ರೀತಿಯಿಂದ, ಭಕ್ತಿಯಿಂದ, ಐದೇನು ಐವತ್ತು ಕಿಸ್ ಒಮ್ಮೆಲೇ ಹೊಡೆದು, ತಲಿ ಮ್ಯಾಲೆ ತಬಲಾ ಬಾರಿಸಿ, ನಮ್ಮಪ್ಪನ ತಲಿ India is Shining ಗತೆ ಮಾಡಿಬಿಡ್ತಾಳ. ಇನ್ನು ನಮ್ಮ ತಮ್ಮಾ ಇದ್ದಾನಲ್ಲಾ? ಅವನೇ ಭೋಕುಡ್ ಚಾಪ್ ರಾಘ್ಯಾ. ಆವಾ ಇಕಿಗೆ ಕೇಳಿದಾಗೆಲ್ಲ ಗುಟ್ಕಾ, ಪಾನ್ ಎಲ್ಲಾ ಮಸ್ತಾಗಿ ಸಪ್ಲೈ ಮಾಡ್ತಾನ. ಅವಂಗೂ ಒಂದಿಷ್ಟು ಕಿಸ್, ಹಣಿ ಮ್ಯಾಲೆ, ಭಾಬಿ ಜಾನ್ ಪ್ರೀತಿಲೇ ಕೊಟ್ಟು ಬಿಡ್ತಾಳ. ಇನ್ನು ನನ್ನ ತಂಗ್ಯಾರೂ ಸಹ ಹೊಸಾ ವೈನಿ ಅಂತ ಹೇಳಿ ಭಾಳ ಅಚ್ಚಾ ಮಾಡ್ತಾರ. ಅವರಿಗೂ ಒಂದಿಷ್ಟು ಭಾಭಿ ಕಿಸ್ಸಿನ ಕಾಣಿಕೆ ಕೊಡ್ತಾಳ. ನಮ್ಮವ್ವಾ ಇಕಿಗೆ ಏನೂ ಕೆಲಸಾ ಹಚ್ಚಂಗೇ ಇಲ್ಲ. ಯಾಕಂದ್ರ ಇಕಿ ಒಂದು ದಿವಸ ನಮ್ಮ ಅವ್ವನ ಹಳೆ ಭಾಂಡೆ ಎಲ್ಲ ತೊಗೊಂಡು ಹೋಗಿ ಅವರಪ್ಪನ ಮೋಡಕಾಕ್ಕ ಹಾಕಲಿಕ್ಕೆ ಹೊಂಟು ಬಿಟ್ಟಿದ್ದಳು. ಅದನ್ನ ನೋಡಿದ ನಮ್ಮವ್ವನ ಎದಿ ಧಸಕ್ ಅಂತು. ಆವತ್ತಿಂದ ಅಕಿಗೆ ಏನೂ ಕೆಲಸಾ ಹಚ್ಚದೇ ನಮ್ಮ ಅವ್ವನೂ ಅಚ್ಚಾ ಅಚ್ಚಾ ಮಾಡ್ಯಾರ. ಅದಕ್ಕೇ ಅವರಿಗೂ ಸಹಿತ, 'ಅತ್ತಿಯವರ, ಅತ್ತಿಯವರ,' ಅಂತ ಹೇಳಿ ಒಂದಿಷ್ಟು ಭಕ್ತಿಯಿಂದ ಕೂಡಿದ ಕಿಸ್. ಎಲ್ಲಾಕಿಂತ ಹೆಚ್ಚು ಅಂದ್ರ ನಮ್ಮ ಡಿಂಗ್ಯಾಗ ನೋಡಪಾ. ಹೀಂಗಾಗಿ ಅಕಿದು ಲೆಕ್ಕಾ ಎಲ್ಲಾ ಸರಿ ಅದ. ನನಗ ಮಾತ್ರ ಐದೇ ಐದು ನೋಡಪಾ. ಥತ್ ಇದರಾಪನ! ಮೊದಲೇ ಬೆಷ್ಟಿತ್ತು ಬಿಡಪಾ. ಎಲ್ಲಿಂದ ಲಗ್ನಾ ಮಾಡಿಸಿ ಜಿಂದಗಿ ಬರ್ಬಾದ್ ಮಾಡಿ ಹಾಕಿದ್ಯೋ ಹಾಪಾ?' ಅಂತ ಹೇಳಿ, ಬೈದು, ಭಾಳ ಫೀಲ್ ಮಾಡಿಕೊಂಡ ಗಿರ್ಯಾ.

'ಡಿಂಗ್ಯಾ ಯಾರಲೇ? ನಿಮ್ಮ ಅಕ್ಕನ ಮಗಾ? ಸಣ್ಣ ಕೂಸು ಅದು. ಮಸ್ತ ಟುಂಟುಂ ಅದ. ಮರ್ಫಿ ಬೇಬಿ ಗತೆ. ನೋಡಿದರ ಸಾಕು ಸಾವಿರ ಪಪ್ಪಿ ಕೊಡಬೇಕು ಅನ್ನಸ್ತದ. ಅಂತಾ ಕೂಸಿಗೆ ನಿಮ್ಮ ಹೆಂಡ್ರು ಮ್ಯಾಕ್ಸಿಮಮ್ ಪಪ್ಪಿ ಕೊಡ್ತಾರ ಅಂದ್ರ ಆಶ್ಚರ್ಯ ಇಲ್ಲ ಬಿಡಲೇ,' ಅಂತ ಹೇಳಿದೆ.

'ಲೇ! ನಮ್ಮ ಅಕ್ಕನ ಮಗಾ ಸಂಗ್ಯಾ. ಡಿಂಗ್ಯಾ ಅಲ್ಲ,' ಅಂದುಬಿಟ್ಟ ಗಿರ್ಯಾ.

'ಮತ್ತ?? ಯಾರಲೇ ಇವಾ ಲಕ್ಕಿ ಸೂಳಿಮಗಾ ಡಿಂಗ್ಯಾ? ಹಾಂ?' ಅಂತ ಕೇಳಿದೆ.

ಯಾರೋ ಏನೋ ಈ ಬಡೀ 'ಕಿಸ್'ಮತ್ ವಾಲಾ ಡಿಂಗ್ಯಾ?

'ನಮ್ಮ ನಾಯಿಲೇ. ನಮ್ಮ ಚಾಕಲೇಟ್ ಬಣ್ಣದ, ಮೃದು ತುಪ್ಪಳದ, ಲ್ಯಾಬ್ರಡಾರ್ ನಾಯಿ ಹೆಸರು ಡಿಂಗೊ ಉರ್ಫ್ ಡಿಂಗ್ಯಾ ಅಂತ. ಅದಕ್ಕ ನೋಡಲೇ ಮ್ಯಾಕ್ಸಿಮಮ್ ಪಪ್ಪಿ ಕೊಡ್ತಾಳ ನೋಡಪಾ ಇಕಿ. ಅದಕ್ಯಾಕ ಅಷ್ಟೊಂದು ಪಪ್ಪಿ ಕೊಡ್ತೀ ಅಂತ ಕೇಳಿದರ ಏನಂತಾಳ ಅಂತ ಗೊತ್ತೇನ?' ಅಂದಾ ಗಿರ್ಯಾ.

'ಏನಂತಾಳ? ಆ ನಾಯಿ ಮುಂಡೆದಕ್ಕ ಯಾಕ ಅಷ್ಟೊಂದು ಚುಮ್ಮಾ ಚುಮ್ಮಿ ಅಂತ? ಹಾಂ' ಅಂತ ಕೇಳಿದೆ.

'unconditional love ಅಂದು ಬಿಟ್ಟಳು. ನಾಯಿಯೊಂದೇ ಹಾಂಗ ಪ್ರೀತಿ ಮಾಡ್ತದಂತ. ಅದಕ್ಕೇ ಆ ಡಿಂಗ್ಯಾಗ ಆ ಪರಿ ಮುತ್ತಿನ ಸುರಿಮಳೆ. ಲಕ್ಕಿ ನಾಯಿ ಸೂಳಿಮಗ. ಎಲ್ಲಾರೂ ಆ ಡಿಂಗ್ಯಾಗ ಫುಲ್ ಅಚ್ಚಾ ಮಾಡ್ತಾರ ನೋಡಪಾ. ಏನು ನಸೀಬಲೇ ಆ ನಾಯಿದು? ಥತ್!' ಅಂತ ನಾಯಿ ನಸೀಬದ ಮೇಲೆ ಗಿರ್ಯಾ ಕರುಬಿದ.

'ಒಟ್ಟು ಇಷ್ಟದ ಅಂತ ಆತು ಐದು ಗುಣಲೇ ಒಂದು ಮುತ್ತಿನ ಕಥೆ,' ಅಂತ ಹೇಳಿದೆ. 'ಒಂದು ಮುತ್ತಿನ ಕಥೆ'  ರಾಜ್ಕುಮಾರ್ ಹಳೇ ಸಿನೆಮಾ. ಮಸ್ತ ಇತ್ತು.

'ಅದೇನೋ ಅಂತಾರಲ್ಲಲೇ, 'ಮಾತು ಆಡಿದರೆ ಹೋಯಿತು. ಮುತ್ತು ಕೊಟ್ಟರೆ ಹೋಯಿತು,' ಅಂತ. ಏನಲೇ ಹಾಂಗಂದ್ರ? ಹಾಂ?' ಅಂತ ಕೇಳಿಬಿಟ್ಟ. ಇವಗ ಚುಮ್ಮಾ ರೇಶನ್ ಆಗಿ ಪೂರಾ ಸಟಿಯಾ ಗಯಾ ಹೈ ಏ ಆದಮೀ ಗಿರ್ಯಾ!

'ಲೇ, ಅದು, 'ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು,' ಅಂತನೋ ಪುಣ್ಯಾತ್ಮ. ತಪ್ತಪ್ಪ ಗಾದಿ ಹೇಳಬ್ಯಾಡಲೇ,' ಅಂತ ಒದರಿ ಹೇಳಿದೆ.

ಗಾದಿ ಅದು ಇದು ಅಷ್ಟಕ್ಕೇ ಬಿಟ್ಟಾ ಗಿರ್ಯಾ.

'ದೋಸ್ತ, ಇಕಿ ದ್ರೌಪದಿ ಗತೆ ಮುತ್ತೈದೇ ಅಂತ ಐದೇ ಮುತ್ತಿನ ಅವತಾರ ಹಾಕ್ಕೊಂಡು ಕೂತಾಳಲ್ಲ ಅದಕ್ಕೇನಾದರೂ ಪರಿಹಾರ ಅದ ಏನಲೇ? ಹೇಳಲೇ ಮಗನs. ಒಂದು ಬಾಟಲಿ ಬಿಯರ್ ಕೊಡಿಸಿದರ ಏನೇನೋ ಐಡಿಯಾ ಕೊಡ್ತೀ ಅಂತ. ಕೊಡಲೇ ಐಡಿಯಾ. ಬೇಕಾದಷ್ಟು ಬಿಯರ್ ಕುಡಸ್ತೇನಿ,' ಅಂದಾ ಗಿರ್ಯಾ.

'ಯಾರು ಹೇಳಿದರು ನಿನಗ, ಬಿಯರ್ ಕೊಡಿಸಿದರ ನಾ ಐಡಿಯಾ ಕೊಡತೇನಿ, ಅಂತ? ಹಾಂ?' ಅಂತ ಕೇಳಿದೆ. ಇಲ್ಲದ ಸುಳ್ಳ ಸುದ್ದಿ. ಬಿಯರ್ ಅಂದ್ರ ಶೆರೆ. ಶಾಂತಂ ಪಾಪಂ.

'ಮಾಲವಿಕಾನೇ ಹೇಳಿದಳು. ಅಕಿ ಕಡೆ ಬಿಯರ್ ಲಂಚಾ ತೊಗೊಂಡೇ ನೀ ನನಗ ಲಗ್ನಾ ಮಾಡಿಕೋ ಅಂತ ಫಿಟ್ಟಿಂಗ್ ಇಟ್ಟಿ. ಹೌದಿಲ್ಲೋ? ಪಾಪಿ ಸೂಳಿಮಗನ! ಅದನ್ನ ನನಗs ಕೇಳಿದ್ದರ, ಅಕಿ ಕೊಡಸಿದ ಹತ್ತು ಪಟ್ಟು ಬಿಯರ್ ನಿನಗ ಕುಡಿಸಿ, ನಾ ಇನ್ನೂ ಬ್ಯಾಚಲರ್ ಆಗಿ, ಗಂಡು ಗೂಳಿ ಗತೆ  ಆರಾಮ್ ಇರ್ತಿದ್ದೆ. ಅಕಿ ಕಬಾಡಿ ಮಾಲಿ ಕೊಡಿಸಿದ ಬಿಯರ್ ಸಲುವಾಗಿ ಮಿತ್ರ ದ್ರೋಹ ಮಾಡಿಬಿಟ್ಟಿಯಲ್ಲಲೇ ಪಾಪಿ?' ಅಂತ ಫುಲ್ ಫೀಲಿಂಗ್ ಒಳಗ ಹೇಳಿಬಿಟ್ಟ ಗಿರ್ಯಾ.

ಬಿಯರ್ ಗಿಯರ್ ಏನೂ ಇಲ್ಲದೇ, ಪಾಪ ಅಂತ ಹೇಳಿ ಅಕಿ ಮಾಲವಿಕಾಗ ಮುತ್ತೈದೆ ಭಾಗ್ಯ ಬರೋ ಹಾಂಗ ಮಾಡಿಕೊಟ್ಟರ, ನಾ ಬಿಯರ್ ಲಂಚಾ ತೊಗೊಂಡು, ನಮ್ಮ ದೋಸ್ತಗ ಬತ್ತಿ ಇಟ್ಟೆ ಅಂತ ಅಕಿ ಹೇಳ್ಯಾಳ ಅಂದ ಮ್ಯಾಲೆ ಅಕಿಗೂ ಒಂದು ಬತ್ತಿ ಇಡಲೇಬೇಕು ಅಂತ ಹೇಳಿ ಒಂದು ಐಡಿಯಾ ಹಾಕಿದೆ.

'ಗಿರ್ಯಾ ಒಂದು ಕೆಲಸಾ ಮಾಡಲೇ,' ಅಂದೆ.

'ಏನಲೇ? ಏನು ಮಾಡ್ಲೀ? ಹೇಳಿ ಸಾಯಿ,' ಅಂದಾ ಗಿರ್ಯಾ.

'ಅಕಿಗೆ ಮಾಲವಿಕಾಗ ಹೇಳು. ಹೀಂಗೆಲ್ಲಾ ಹುಚ್ಚುಚ್ಚರೆ ಮುತ್ತೈದೆ ಅದು ಇದು ಅಂತ ಹೇಳಿ, ಚುಮ್ಮಾ ಚುಮ್ಮಿ ಮ್ಯಾಲೆ ರೇಶನ್ ಕೋಟಾ ಹಾಕಿಕೊಂಡು ಕೂತರ ಅಕಿಗೆ ಮಂಗೋಲಿಯನ್ ಕಿಸ್ ಕೊಡ್ತಾರ ಅಂತ ಹೇಳಿ ಒಂದು ಖಡಕ್ ವಾರ್ನಿಂಗ್ ಕೊಡು. ಮಂಗೋಲಿಯನ್ ಕಿಸ್ ಬಿತ್ತು ಅಂದ್ರ ಅಕಿ ಒಂದು ಐದಾರು ವಾರ ಫುಲ್ ಔಟ್ ಆಫ್ ಆರ್ಡರ್ ಆಗಿ ಬಿಡ್ತಾಳ. ನಸೀಬ್ ಖರಾಬ್ ಇತ್ತು ಅಂದ್ರ ತುಟಿ, ಪಟಿ ಎಲ್ಲಾ ಹರಿದು ಹೋದರೂ ಹೋತು. ಭಾಳ ಡೇಂಜರ್ ಅಂತ ವಾರ್ನ್ ಮಾಡಲೇ. ಬೇಕಾದ್ರ ನಮ್ಮ ಗೆಳೆಯಾ ಚೀಪ್ಯಾನ ಹೇಣ್ತೀ ರೂಪಾ ವೈನಿ ಮಂಗೋಲಿಯನ್ ಕಿಸ್ ಎಪಿಸೋಡ್ ಹೇಳು. ಆ ಮಂಗ್ಯಾ ಇನ್ನೂ ಧಾರವಾಡ ಒಳಗೇ ಅದ. ಇಂತಾ ಹುಚ್ಚುಚ್ಚ ಹೆಂಗಸೂರನ್ನ ಹಿಡದು ಹಿಡದು ಮಂಗೋಲಿಯನ್ ಕಿಸ್ ಕೊಟ್ಟು ಓಡಿ ಹೋಗ್ತದ,' ಅಂತ ಹೇಳಿ, ಹೆಂಡತಿ ಹೆದರಿಸು ಅಂತ ಹೇಳಿಕೊಟ್ಟೆ.

'ಮಂಗೋಲಿಯನ್ ಕಿಸ್? ಅಂದ್ರಾ?' ಅಂತ ಕೇಳಿದ.

ಚೀಪ್ಯಾನ ಹೆಂಡತಿ ರೂಪಾ ವೈನಿಗೆ ಮಂಗ್ಯಾ ಬಂದು ಮಂಗೋಲಿಯನ್ ಕಿಸ್ ಕೊಟ್ಟು ಹೋಗಿದ್ದರ ಕಥೆ ವಿವರವಾಗಿ ಹೇಳಿದೆ. ಕೇಳಿದ ಗಿರ್ಯಾ ಖುಷ್ ಆದ.

'ಭಾರಿ ಜಾಬಾದ್ ಮಂಗ್ಯಾ ಇದ್ದಂಗ ಅದ ಅಲ್ಲಲೇ ಇದು. ನೋಡಿ ನೋಡಿ ಮಂಗೋಲಿಯನ್ ಕಿಸ್ ಕೊಟ್ಟು ಹೋಗ್ತದ ಅಂತಾತು. ಇದನ್ನ ಕೇಳಿ ನಮ್ಮ ಮಾಲವಿಕಾ ಹೆದರಿ, ಮುತ್ತೈದೆ ಅಂತ ಐದೇ ಮುತ್ತಿನ ಹುಚ್ಚ ಕೋಟಾ ತೆಗೆದು ಹಾಕಿದರೂ ಹಾಕಬಹುದು,' ಅಂತ ಗಿರ್ಯಾ ಭಾಳ ಆಶಾವಾದಿಯಾದ.

'ಒಳ್ಳೆದಾಗಲಿ. ಲಗ್ನಾಗಿ ಹೊಸದಾಗಿ ಒಂದೆರೆಡು ತಿಂಗಳು ಅಷ್ಟಲೇ. ಆಮ್ಯಾಲೆ ಅಕಿನೇ unlimited ಚುಮ್ಮಾ ಕೊಡತೇನಿ ಅಂದರೂ ನೀನೇ ಬ್ಯಾಡ ಅಂತಿ ತೊಗೋ. ಈಗ ಸದ್ಯಾ ವ್ಯವಸ್ಥಾ ಆದರ ಸಾಕಲ್ಲಾ?' ಅಂತ ಹೇಳಿದೆ.

'ಯಾಕ?' ಅಂತ ಕೇಳಿದ.

'ಮೊದಲೆಲ್ಲಾ ಹಾಂಗ ಕಿಸ್ಸಿಂಗ್ ಕಿಡಿಗೇಡಿಗಳಾದವರೆಲ್ಲ, ನಂತರ ಕಾಲ ಕ್ರಮೇಣ, ಗಂಡಾ ಅಂದ್ರ ಹೆಂಡತಿಗೆ ಸಾಕಾಗಿ, ಹೆಂಡತಿ ಅಂದ್ರ ಗಂಡಗ ಸಾಕಾಗಿ, ಮುತ್ತು ಬ್ಯಾಡ, ಹೊತ್ತಿಗೆ ಸರಿಯಾಗಿ ತುತ್ತು ಅಂದ್ರ ಕೂಳು ಹಾಕು ಸಾಕು ಅಂತ ಗಂಡಾ, ನಿನ್ನ ಗುಟಕಾ, ಸಿಗರೇಟ್, ಗಣೇಶ್ ಬೀಡಿ ವಾಸನಿ ಮುತ್ತು ಅಂದ್ರ ನನ್ನ ಜೀವಕ್ಕೆ ಕುತ್ತು ಅಂತ ಅಕಿ ಹೆಂಡತಿ ಹೇಳಿ, ಬ್ಯಾರೇನೇ ಟೈಪಿನ ಕಿಸ್ ಹೊಡಿಲಿಕ್ಕೆ ಶುರು ಮಾಡಿ ಬಿಡ್ತಾರ ನೋಡಪಾ. ಎಲ್ಲರ ಹಾಂಗೇ ನಿಮ್ಮದೂ ಅದೇ ಗತಿ ಆಗೋದು ಅದ ತೊಗೋ. ಕೆಲೊ ಮಂದಿದು ಭಾಳ ಲಗೂ ಆಗ್ತದ. ಕೆಲೊ ಮಂದಿದು ಸ್ವಲ್ಪ ಲೇಟ್. but ಎಲ್ಲಾ ದಂಪತಿಗಳೂ ಆ ಟೈಪಿನ tasteless ಚುಮ್ಮಾ ಚುಮ್ಮಿಗೆ ಬಂದು ಬಿಡ್ತಾರ ನೋಡಪಾ. ಇದೆಲ್ಲಾ ಗರ್ಮೀ, ನರ್ಮೀ, ಹುಚ್ಚು ಎಲ್ಲಾ ಹೊಸತನ ಇರೋ ತನಕಾ ಅಷ್ಟೇ. ಆಮ್ಯಾಲೆ ಎಲ್ಲಾ ಓಲ್ಡ್. ಓಲ್ಡ್ ಮಾಡೆಲ್,' ಅಂತ ಹೇಳಿದೆ.

'ಯಾವ್ ಟೈಪಿನ ಕಿಸ್ ಹೊಡಿತಾರ ಸ್ವಲ್ಪ ದಿವಸ ಆದ ಮ್ಯಾಲೆ?' ಅಂತ ಕೇಳಿದ.

'ಕೇವಲ flying kiss,' ಅಂತ ಹೇಳಿ ಹೊಡೆದು ತೋರಿಸಿದೆ.

ಮುಂದೊಂದು ದಿನ ಗಿರ್ಯಾ ಇದೇ ಟೈಪ್ ಗಾಳಿ ಮುತ್ತು (flying kiss) ಕೊಡ್ತಾನೋ ಏನೋ!?
'ಇದ್ರಾಗೇನು ಮಜಾ ಇರ್ತದಲೇ? ದೂರಿಂದ ಹೀಂಗ ಉಫ್ ಅಂತ ಗಾಳ್ಯಾಗ ಮುತ್ತು ಕೊಡೋದ್ರಾಗ? ಹೊಗಲೇ. ಏನ್ ಹಚ್ಚಿ?' ಅಂತ brush off  ಮಾಡಿಬಿಟ್ಟ.

'ಭಾಳ indirect ಅನುಭವದ ಮಾತಪಾ. ಲಗ್ನಾದ ಹೊಸತ್ರಾಗ ಆ ಟೈಪ್ ಚಿಪ್ಕಾ ಚಿಪ್ಕಿ ಇದ್ದವರು ಸಹಿತ ಇವತ್ತು ಒಂದು flying kiss ಕೊಡಲಿಕ್ಕೆ, ತೊಗೊಳ್ಳಿಕ್ಕೆ ಆಗದವರಷ್ಟು ಗತಿಗೆಟ್ಟು ಹೋಗ್ಯಾರ. ಸಂಸಾರ ಸಾಗರದಾಗ ಅವನೌನ್ ಈಜು ಹೊಡೆಯೋದ್ರಾಗ ಸಾಕಾಗಿಬಿಟ್ಟಿರ್ತದ. ಅದರ ಮ್ಯಾಲೆ ಎಲ್ಲಿಂದ ಪಪ್ಪಿ ,ಚುಮ್ಮಾ ಅದು ಇದು ಹಚ್ಚಿ ಅಂತ ಹೇಳಿ ಯಾವಾಗರ ಅಪರೂಪಕ್ಕೊಮ್ಮೆ ಗಾಳಿ ಮುತ್ತು (flying kiss) ಕೊಟ್ಟರೆ ಅದೇ ಜಾಸ್ತಿ ನೋಡಪಾ. ಆವಾಗ ಅವರ ನಡು ಮಾತು ಅಂದ್ರ ಗಾಳಿ ಮಾತು. ಮುತ್ತು ಅಂದ್ರ ಗಾಳಿ ಮುತ್ತು. ತಿಳೀತಾ?' ಅಂತ ದೊಡ್ಡ ಉಪದೇಶ ಮಾಡಿದೆ.

'ಇದೆಲ್ಲಾ ಹ್ಯಾಂಗ ತಿಳ್ಕೊಂಡೀ ನೀ?' ಅಂತ ಮತ್ತ ನನ್ನ ಮೂಲಕ್ಕೇ ಕೈಯಿಟ್ಟ.

'ಸಾಧನಾ, ಸಮಾಧಿ, ಸ್ಥಿತಿ, ಶ್ರದ್ಧಾ. ಎಲ್ಲಾ ಅವುಗಳ ಫಲ,' ಅಂತ ಹೇಳಿದೆ.

'ಹಾಂ!? ಮೊದಲು ಮೂರೇ ಮಾಲು ಅಂದ್ರ ಈಗ ನಾಕನೆಯದ್ದೂ ಬಂತಲ್ಲಲೇ. ಯಾರಕಿ ಶ್ರದ್ಧಾ? ಹೊಸಾ ಡವ್ವಾ? ಚೀಪ್ಯಾನ ಹೆಂಡ್ತೀ ಕಿರೀ ತಂಗಿ? ಹೌದಿಲ್ಲೋ? ಅಕಿನ್ನ ಪಟಾಯಿಸಿ ಏನು? ಹೋಗ್ಗೋ!' ಅಂದು ಬಿಟ್ಟಾ ಗಿರ್ಯಾ.

ಇವಂಗ ನಮ್ಮ ಬಗ್ಗೆ ಸರಿ ಅರಿವಿಲ್ಲ. ತಿಳಿಸಿ ಹೇಳೋಣ ಅಂದ್ರ ಇವನ ತಲಿನೇ ಸರಿ ಇಲ್ಲ.

'ಲೇ, ಅದೆಲ್ಲಾ ಇರಲೀ. ನೀ ಹೋಗಿ ಅಕಿ ಮಾಲವಿಕಾಗ ಮಂಗೋಲಿಯನ್ ಕಿಸ್ ಕಥಿ ಹೇಳಿ ಹೆದರಿಸು. ಏನಾತು ಅಂತ ಬಂದು ಹೇಳು. ಆವಾಗಲೂ ಬಗೆಹರಿಲಿಲ್ಲ ಅಂದ್ರ ಮತ್ತೇನರೆ ಉಪಾಯ ಮಾಡೋಣ ಅಂತ. ಓಕೆ?' ಅಂತ ಹೇಳಿದೆ.

'ಮುಂದ ಬರೇ ಗಾಳಿ ಮುತ್ತು ಅಂದ್ರ flying kiss ಅಂತ. ಏನೇನೋ ಹೇಳ್ತಾನ ಹಾಪಾ,' ಅಂತ ಹೇಳಿಕೋತ್ತ ಗಿರ್ಯಾ ತನ್ನ ಯೆಜ್ಡೀ ಗಾಡಿಗೆ ಕಿಸ್ ಅಲ್ಲಲ್ಲ ಕಿಕ್ ಹೊಡೆದ. ಮೊದಲೆಲ್ಲ ಒಂದೇ ಕಿಕ್ಕಿಗೆ ಸ್ಟಾರ್ಟ್ ಆಗುತ್ತಿದ್ದ ಬೈಕ್ ನಾಕು ಕಿಕ್ ಹಾಕ್ಕೊಂಡು ಒದ್ದ ನಂತರ ಹ್ಯಾಂಗೋ ಜೀವಂತ ಆತು. ಇವನ ಲಗ್ನಾದ ನಂತರ ಅದಕ್ಕೂ ಏನೋ ತೊಂದ್ರಿ ಅಂತ ಕಾಣಸ್ತದ. ಒಟ್ಟ ಹೊಂಟು ಹೋದಾ ನಮ್ಮ ಗಿರ್ಯಾ.

ಗಿರ್ಯಾನ ಮುತ್ತೈದೇ ಪ್ರಾಬ್ಲಮ್ ಪರಿಹಾರ ಆಯಿತಾ?

ಕಾದು ನೋಡಬೇಕು.