Tuesday, December 24, 2019

ರಾವಣ ಕೇಳಿದ ದಕ್ಷಿಣೆ

ಭಗವಾನ್ ಪರಶಿವ ಆರಾಮಾಗಿ ಸ್ಮಶಾನ ಗಿಶಾನ ಅಲೆದುಕೊಂಡು ಹಾಯಾಗಿದ್ದ. ಎಲ್ಲಿಯವರೆಗೆ?? ಯಾರನ್ನೂ ಬಿಡದ ಮಾಯೆ ಮಹಾಮಾತೆ ಪಾರ್ವತಿಯ ರೂಪದಲ್ಲಿ ಶಿವನ ಜೀವನದಲ್ಲಿ ಎಂಟ್ರಿ ಕೊಡುವವರೆಗೆ.

ಪಾರ್ವತಿಯನ್ನು ವಿವಾಹವಾದರೂ ಶಿವನ ಜೀವನಶೈಲಿಯೇನೂ ಬದಲಾಗಲಿಲ್ಲ. ಸ್ಮಶಾನದಲ್ಲೇ ಅಲೆದಾಡಿಕೊಂಡಿರುತ್ತಿದ್ದ. ಮನಸ್ಸು ಬಂದಾಗ ಕಂಡಲ್ಲಿ ತಾಂಡವ ನೃತ್ಯ ಬಿಂದಾಸ್ ಮಾಡಿಕೊಂಡಿರುತ್ತಿದ್ದ. ತಾನೂ ಬೂದಿ ಬಳಿದುಕೊಂಡ. ಪೌಡರ್ ಸ್ನೋ ಕೇಳಿದ ಪಾರ್ವತಿಗೂ 'ಟ್ರೈ ದಿಸ್ ಬೂದಿ! ಇದು ಎಲ್ಲದರಕಿಂತ ಬೆಸ್ಟ್!' ಅಂದ. ಆಕೆ ಹಣೆಹಣೆ ಚಚ್ಚಿಕೊಂಡಳು.

ಎಷ್ಟು ದಿನ ಆಕೆ ಸ್ಮಶಾನದಲ್ಲಿ ಸಂಸಾರ ಮಾಡಿಯಾಳು? ಸಂಸಾರದ ಕೆಲಸ ಮುಗಿಸಿದವರು ಅಂತಿಮವಾಗಿ ಬರುವ ಜಾಗ ಸ್ಮಶಾನ. ಶಿವ ಪಾರ್ವತಿ ದಂಪತಿ ಈಗ ಮಾತ್ರ ಸಂಸಾರ ಶುರು ಮಾಡಿದವರು.

'ರೀ, ನಾವೂ ಒಂದು ಮನೆ ಕಟ್ಟೋಣ. ಅಥವಾ ಫ್ಲಾಟ್ ತೆಗೆದುಕೊಳ್ಳೋಣ. ಈ ಸ್ಮಶಾನದಲ್ಲಿ ಸಂಸಾರ ಮಾಡಲು ಆಗುತ್ತಿಲ್ಲ. ಆ ಕಷ್ಟ ಒಂದು ಕಡೆಯಾದರೆ ಯಾರನ್ನೂ ಯಾವುದಕ್ಕೂ ಕರೆಯಲಾಗದ ಕಿರಿಕಿರಿ ಮೇಲಿಂದ. ಬೇಗ ಒಂದು ಮನೆ ಮಾಡ್ರೀ!' ಎಂದು ಇಂಡೆಂಟ್ ಇಟ್ಟಳು ಪಾರ್ವತಿ.

ಬಿಂದಾಸ್ ಬ್ಯಾಚುಲರ್ ಮನೋಭಾವದ ಶಿವ ಸಾಕಷ್ಟು ತಿಳಿಸಿ ಹೇಳಿದ. ಸ್ಮಶಾನದಲ್ಲಿ ನೆಲೆಸುವುದರಲ್ಲಿ ಇರುವ ಹಲವಾರು 'ಲಾಭ'ಗಳ ಬಗ್ಗೆ ತಿಳುವಳಿಕೆ ನೀಡಲು ಪ್ರಯತ್ನಿಸಿದ. ಮನೆ ಮಠ ಮಾಡಿಕೊಂಡ ನಂತರ ಬರುವ ಕಿರಿಕಿರಿಗಳ ಬಗ್ಗೆ ವಿವರಿಸಿದ. ಆದರೆ ಪಾರ್ವತಿ ಕೇಳಲಿಲ್ಲ. ಅವಳಿಗೆ ಮನೆ ಮಾಡುವ ಭೂತ ತಲೆಗೇರಿತ್ತು ಅಂತ ಕಾಣುತ್ತದೆ.

ಅಲ್ಲೇ ಸ್ಮಶಾನದ ಹತ್ತಿರವೇ ಒಂದು ಜಾಗ ನೋಡಿದ ಶಿವ. ಎಲ್ಲ ಚೌಕಾಸಿ ಮಾಡಿದ ನಂತರ ಆ ಜಾಗವನ್ನು ಕೊಂಡುಕೊಂಡ. ಕಂಟ್ರಾಕ್ಟರ್ ಒಬ್ಬನನ್ನು ಹಿಡಿದು ಒಂದು ಮನೆಯನ್ನೂ ಕಟ್ಟಿ ಮುಗಿಸಿದ.

ಮನೆಯನ್ನೇನೋ ಕಟ್ಟಿದ್ದಾಯಿತು. ಶಿವ ಡೈರೆಕ್ಟ್ ಆಗಿ ಎಂಟ್ರಿ ಹೊಡೆಯಲು ರೆಡಿ ಆಗಿದ್ದ. ಪಾರ್ವತಿ ನೆನಪಿಸಿದಳು - ಗೃಹಪ್ರವೇಶ ಮಾಡಬೇಕು.

ಹೌದಲ್ಲ. ಮಾಡಲೇಬೇಕು. ಪೂಜೆ ಪುನಸ್ಕಾರ ಮಾಡಬೇಕು ಅಂದರೆ ಬ್ರಾಹ್ಮಣ ಪುರೋಹಿತರು ಬೇಕು. ಯಾರನ್ನು ಕರೆಯಬೇಕು? ಎಂದು ಶಿವ ತಲೆಮೇಲಿನ ಜಟೆ ಕೆರೆದುಕೊಂಡ.

ಆಗ ನೆನಪಾದವನು ಒಬ್ಬ ಮಹಾಬ್ರಾಹ್ಮಣ. ಶಿವನ ಪರಮಭಕ್ತ...ಅವನೇ ಲಂಕಾಧಿಪತಿ ರಾವಣ.

ರಾವಣನನ್ನು ಕರೆದು ಗೃಹಪ್ರವೇಶದ ಪೂಜೆಯನ್ನು ಮಾಡಿಕೊಡುವಂತೆ ಕೇಳೋಣ ಎನ್ನುವ ತೀರ್ಮಾನವಾಯಿತು. ಪಾರ್ವತಿಯದೇನೂ ಆಕ್ಷೇಪಣೆ ಇದ್ದಂತೆ ಕಾಣಲಿಲ್ಲ. ರಾವಣನನೋ, ಮತ್ತೊಬ್ಬ ಪುರೋಹಿತರೋ... ಒಟ್ಟಿನಲ್ಲಿ ಬೇಗ ಗೃಹಪ್ರವೇಶವಾಗಿ ಜಲ್ದಿ ಮನೆ ಸೇರಿಕೊಂಡರೆ ಸಾಕಾಗಿದೆ ಆಕೆಗೆ. ಸ್ಮಶಾನವಾಸ ಸಾಕಾಗಿಹೋಗಿದೆ.

ರಾವಣನಿಗೆ ಶಿವನ ಕರೆ ಹೋಯಿತು. ರಾವಣ ಒಪ್ಪಿಕೊಂಡ.

ಒಪ್ಪಿಕೊಂಡ ದಿನ ಮುಹೂರ್ತಕ್ಕೆ ಬರೋಬ್ಬರಿಯಾಗಿ ರಾವಣ ಆಗಮಿಸಿದ.

ಮೊದಲೇ ಮಹಾಬ್ರಾಹ್ಮಣ. ತನ್ನ ಆರಾಧ್ಯದೈವ ಪರಶಿವನ ಮನೆಯ ಗೃಹಪ್ರವೇಶದ ಪೂಜೆ ಎಂದು ಭರ್ಜರಿ ಪೂಜೆ ಮಾಡಿದ. ಸಕಲ ಕಾರ್ಯವನ್ನೂ ಸರಿಯಾಗಿ ಸಂಪನ್ನ ಮಾಡಿಕೊಟ್ಟ.

ಪೂಜೆ ಮುಗಿಸಿದ ಬ್ರಾಹ್ಮಣನಿಗೆ ದಕ್ಷಿಣೆ ಕೊಡಬೇಕಲ್ಲವೇ? ಕೊಡಲೇಬೇಕು. ಇಲ್ಲವಾದರೆ ಪೂಜೆಯ ಫಲ ದಕ್ಕುವುದಿಲ್ಲ.

'ರಾವಣ, ನಿನಗೆ ಏನು ದಕ್ಷಿಣೆ ಕೊಡೋಣ?' ಎಂದು ಕೇಳಿದ ಶಿವ.

ರಾವಣ ಬೆರಗಾದ. ಬಂದ ಪುರೋಹಿತರ ಹತ್ತಿರ ಯಾರೂ ಏನು ದಕ್ಷಿಣೆ ಎಂದು ಕೇಳುವುದಿಲ್ಲ. ಪದ್ಧತಿ ಪ್ರಕಾರ, ರೂಢಿ ಪ್ರಕಾರ ಮತ್ತು ತಮ್ಮ ಶಕ್ತ್ಯಾನುಸಾರ ಕೊಡುತ್ತಾರೆ. ಅಲ್ಲಿಗೆ ಬಾತ್ ಖತಮ್. ಪುರೋಹಿತರಿಗೆ ಅದರಿಂದ ತೃಪ್ತಿಯಾಗುತ್ತದೋ ಇಲ್ಲವೋ ಅದು ಬೇರೆ ಮಾತು.

ರಾವಣ ಕಣ್ಣರಳಿಸಿ ಅತ್ತಿತ್ತ ನೋಡಿದ. ಶಿವನ ಹತ್ತಿರ ದಕ್ಷಿಣೆಯಾಗಿ ಕೊಡುವಂತಹದ್ದು ಏನೂ ಕಾಣಲಿಲ್ಲ. ಅದು ಗೊತ್ತೇಯಿತ್ತು. ಶಿವ ಎಲ್ಲವನ್ನೂ ತ್ಯಜಿಸಿದವ. ಅದೇನೋ ಪಾರ್ವತಿಯ ಒತ್ತಡದ ಪೊರಪಾಟಿನಲ್ಲಿ ಮನೆಯೊಂದನ್ನು ಕಟ್ಟಿಬಿಟ್ಟಿದ್ದಾನೆ. ಅದು ಬಿಟ್ಟರೆ ಅವನ ಹತ್ತಿರ ಬೇರೇನೂ ಇಲ್ಲ.

'ಮಹಾಪ್ರಭು, ಈ ಮನೆಯನ್ನೇ ನನಗೆ ದಕ್ಷಿಣೆಯಾಗಿ ಕೊಟ್ಟುಬಿಡಿ...' ಅಂದುಬಿಟ್ಟ ರಾವಣ. ಹೊಡಿರೀ ಹಲಗಿ!

ಪೂಜೆ ಮಾಡಿದ ಪುರೋಹಿತ. ಆತ ಕೇಳಿದ ದಕ್ಷಿಣೆ ಬಗ್ಗೆ ಚೌಕಾಸಿ ಮಾಡುವಂತಿಲ್ಲ. ಮಾಡಿದರೂ ದಕ್ಷಿಣೆಯಾಗಿ ಕೊಡಲು ಬೇರೇನೂ ಇಲ್ಲ.

ಶಿವನಿಗೆ ಮಾಡಲು ಬೇರೇನೂ ಇರಲಿಲ್ಲ. ಹೊಸ ಮನೆಯನ್ನು ರಾವಣನಿಗೆ ಕೊಟ್ಟು ಎಳ್ಳು ನೀರು ಬಿಟ್ಟ. ಮತ್ತೆ ಪಾರ್ವತಿಯನ್ನು ಕರೆದುಕೊಂಡು ಸ್ಮಶಾನದ ಕಡೆಗೆ ಹೋದ. ಮೂಲನೆಲೆಗೆ ಬಂದಿದ್ದಕ್ಕೆ ಅವನಿಗೆ ಸಂತೋಷವೇ ಆಗಿತ್ತು. ಅದೇ ಖುಷಿಯಲ್ಲಿ terrific ತಾಂಡವ ಮಾಡಿಬಿಟ್ಟ.

ಪಾರ್ವತಿ ಶಿವ ಮದುವೆಯಾದ ಹೊಸದರಲ್ಲಿ ಹೇಳಿದ ಮಾತನ್ನು ನೆನಪುಮಾಡಿಕೊಂಡು ನಿಡುಸುಯ್ಯ್ದಳು....'ನಾನು ಶಿವ. ಎಲ್ಲವನ್ನೂ ಬಿಟ್ಟವನು. ಸಂಸಾರಿಗಳಿಗೆ ಇದೇ ನಿಮ್ಮ ಕೊನೆಯ ಮನೆ ಎಂದು ತೋರಿಸಲು ಸ್ಮಶಾನದಲ್ಲಿ ನಿಂತವನು. ನನಗೆ ಮನೆ ಮಠದ ಯೋಗವಿಲ್ಲ.'

===

ಸ್ವಾಮೀ ಅನುಭವಾನಂದರು ಹೇಳಿದ ಕಥೆ.

ಹತ್ತು ಹದಿನೈದು ವರ್ಷಗಳ ಹಿಂದೆ ಫ್ಲಾಟ್ ಬುಕ್ ಮಾಡಿ ಇನ್ನೂ ಸಿಗದವರು ಕೂಡ ಈಗಿತ್ತಲಾಗೆ ಇದೇ ತರಹದ ವೇದಾಂತ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಮಕಾಡೆ ಮಲಗಿರುವ ರಿಯಲ್ ಎಸ್ಟೇಟ್ ಉದ್ಯಮ ಕೂಡ ತಮ್ಮ ಪ್ರಾಜೆಕ್ಟುಗಳಿಗೆ ಶಿವಾ ರೆಸಿಡೆನ್ಸಿ, ಶಿವಾ ಪ್ಯಾರಡೈಸ್, ಶಿವಾ ಹೆವೆನ್ಸ್ ಅಂತೆಲ್ಲ ಹೆಸರಿಟ್ಟು ಬುಕಿಂಗ್ ರೊಕ್ಕ ಮುಂಡಾಯಿಸಿ ಪಾಪದ ಮಂದಿಯನ್ನು ಸ್ಮಶಾನದ ಕಡೆ ಕಳಿಸುತ್ತಿದೆ. ಒಂದು ಕಡೆ ಭಾಡಿಗೆ, ಇನ್ನೊಂದು ಕಡೆ ಸಿಗದ ಪ್ಲಾಟಿನ EMI ಕಟ್ಟಿ ಜನ ಬೇಗನೆ ಸ್ಮಶಾನ ಸೇರುವ ಶೋಚನೀಯ ಪರಿಸ್ಥಿತಿಗೆ ಬಂದಿದ್ದಾರೆ. ಅದು ದುರಂತ.

ಮನೆ ಮಠ ಕಟ್ಟಲೇಬೇಡಿ. ಭಾಡಿಗೆ ಮನೆಯಲ್ಲಿ ಹಾಯಾಗಿರಿ. ಅದು ಮೀರಿ ಮನೆ ಮಠ ಮಾಡಿಕೊಳ್ಳಲೇಬೇಕು ಅಂತಾದರೆ ಜಾಗ ತೆಗೆದುಕೊಂಡು ಇಂಡಿಪೆಂಡೆಂಟ್ ಮನೆ ಕಟ್ಟಿಕೊಳ್ಳಿ. ಕಷ್ಟ ಮತ್ತು ಬೆಲೆ ಜಾಸ್ತಿಯಾದರೂ ಜಾಗ ನಿಮ್ಮದಾಗಿರುವದರಿಂದ ಅದಕ್ಕೊಂದು ಬೆಲೆ ಅನ್ನೋದು ಇರುತ್ತದೆ. ಅದೂ ಸದ್ಯದ ಮಟ್ಟಿಗೆ ನೋಡಿದರೆ. ಮುಂದೆ ಹೇಗೋ ಗೊತ್ತಿಲ್ಲ.

ಇನ್ನು ಫ್ಲ್ಯಾಟೇ ಬೇಕು, ಅಪಾರ್ಟ್ಮೆಂಟೇ ಬೇಕು ಅನ್ನುವವರು ಸಿದ್ಧವಾಗಿರುವ ಫ್ಲಾಟ್ ಕೊಳ್ಳಿ. ಮುಂಗಡ ಬುಕಿಂಗ್ ಮಾಡಿದ್ದರಕಿಂತ ೧೦-೨೦% ಜಾಸ್ತಿ ಬೆಲೆಯಾದೀತು. ಆದರೆ ತಲೆಬಿಸಿ ಕಮ್ಮಿ. ರೊಕ್ಕ ಕೊಟ್ಟ ಮೇಲೆ ಹೋಗಿ ಉಳಿಯಬಹುದು. ಕಮ್ಮಿ ಬೆಲೆಯಲ್ಲಿ ಸಿಗುತ್ತದೆ ಎಂದು ಬುಕಿಂಗ್ ಮಾಡಿಕೊಂಡು, EMI ಕಟ್ಟುತ್ತಾ ಕುಳಿತಿರೋ, ಈಗಿನ ಪರಿಸ್ಥಿತಿ ನೋಡಿದರೆ ಫ್ಲಾಟ್ ಸಿಗುವುದು ಯಾವ ಕಾಲಕ್ಕೋ.

ಮತ್ತೆ ಅದೇನೋ ಗೊತ್ತಿಲ್ಲ... ಹೊಸದರಲ್ಲಿ ಅದೆಷ್ಟು ಲಕ್ಸುರಿಯಾಗಿ ಕಾಣುವ ಅಪಾರ್ಟ್ಮೆಂಟುಗಳು ಒಂದೆರೆಡೇ ವರ್ಷದಲ್ಲಿ ಎಲ್ಲ ಸೌಂದರ್ಯ ಕಳೆದುಕೊಂಡು ಅದೆಷ್ಟು ಅಸಡ್ಡಾಳ ಕಾಣುತ್ತವೆ ಎಂದರೆ ಇವಕ್ಕೇ ನಾವು ಕೋಟಿ ಕೋಟಿ  ಕೊಟ್ಟು ಕೋತಿಗಳು ಆದೆವೇ ಎಂದು ಎನ್ನಿಸದೇ ಇರದು. ಮತ್ತೆ ಮೇಲಿಂದ ನೆರೆಹೊರೆಯವರ ಗದ್ದಲ. ಅದನ್ನು ಕೇಳಬೇಡಿ. ಅದು ಬೋನಸ್ ಆಫರ್ ಮಾದರಿ.

ಮೊನ್ನೆ ಎಲ್ಲೋ ಓದಿದೆ... return ON investment ಹಾಳಾಗಿಹೋಗಲಿ return OF investment ಬಂದರೆ ಸಾಕಾಗಿದೆ. ಅದು ಖರೆ. ಶಂಬರ್ ಟಕಾ ಖರೆ!

ಮನೆ ಮಠದ ವಿಷಯದಲ್ಲಿ ಸ್ಮಶಾನ ವೈರಾಗ್ಯ ಬೇಗ ಬಂದಷ್ಟೂ ಒಳ್ಳೆಯದು. ಅಷ್ಟರಮಟ್ಟಿಗೆ ನೀವು ಅದೃಷ್ಟವಂತರು. ಮನೆ ಮಠಗಳ ಬಗ್ಗೆ ಸ್ಮಶಾನ ವೈರಾಗ್ಯ ಬರಬೇಕು. ಸ್ಮಶಾನದ ಬಗ್ಗೆ ಅಂದರೆ ವೈರಾಗ್ಯದ ಬಗ್ಗೆ ಇನ್ನಿಲ್ಲದ ಆಸಕ್ತಿ ಮೋಹ ಬರಬೇಕು. ಅಂದರೆ ಮುಮುಕ್ಷತ್ವದತ್ತ ಹೊರಟಿರಿ ಎಂದರ್ಥ.

Wednesday, November 20, 2019

ಬಳ್ಳೊಳ್ಳಿ ಮಹಾತ್ಮೆ

ಬಳ್ಳೊಳ್ಳಿ !! ??

ಹಾಗೆಂದರೆ ಏನ್ರೀ!! ??

ಬಳ್ಳೊಳ್ಳಿ ಉರ್ಫ್ ಬೆಳ್ಳುಳ್ಳಿ.

ನಮ್ಮ ಧಾರವಾಡ ಕಡೆ ಬಳ್ಳೊಳ್ಳಿ ಅನ್ನುತ್ತಾರೆ. ಉಳಿದ ಕಡೆ ಬೆಳ್ಳುಳ್ಳಿ ಅನ್ನುತ್ತಾರೆ. ನಮ್ಮ ಕಡೆ ಉಳ್ಳಾಗಡ್ಡಿ ಎನ್ನುತ್ತಾರೆ. ಉಳಿದ ಕಡೆ ಉಳ್ಳಾಗಡ್ಡೆ, ಈರುಳ್ಳಿ, ನೀರುಳ್ಳಿ ಎನ್ನುತ್ತಾರೆ. ವಿವಿಧ ಪ್ರಾಂತಗಳಲ್ಲಿನ ಕನ್ನಡ ಭಾಷೆಯ ಸೊಬಗನ್ನು ಏನು ಹೇಳೋಣ! ನಾವೇ ಧನ್ಯರು!

ಧಾರವಾಡ ಕಡೆ ಬಳ್ಳೊಳ್ಳಿ ಅನ್ನುತ್ತಾರೆ. ಬಳ್ಳೊಳ್ಳಿ ಅಂತ ಅಡ್ಡಹೆಸರು (surname) ಇರುವವರೂ ಇದ್ದಾರೆ. ೧೯೯೦ ರ ದಶಕದಲ್ಲಿ ವಿಕ್ಕಿ ಬಳ್ಳೊಳ್ಳಿ ಅನ್ನುವ ಖತರ್ನಾಕ್ ಲೋಕಲ್ ಕ್ರಿಕೆಟರ್ ಇದ್ದ ಎಂದು ನೆನಪು. ಭಯಂಕರ ಸ್ಪಿನ್ನರ್. ಅದೆಂತಹ ಭಯಂಕರ ಸ್ಪಿನ್ನರ್ ಅಂದರೆ, 'ವಿಕ್ಕಿ ಬಳ್ಳೊಳ್ಳಿ ಮಾರಕ ಸ್ಪಿನ್ ತಿರುಗುಣಿ ಬೌಲಿಂಗಿಗೆ ಎದುರಾಳಿಗಳು ಧ್ವಂಸ' ಅನ್ನುವಂತಹ ಶೀರ್ಷಿಕೆ ಉಳ್ಳ ಲೇಖನ ನಮ್ಮ ಪ್ರೀತಿಯ ಲೋಕಲ್ ಪತ್ರಿಕೆ ಸಂಕದಲ್ಲಿ (ಸಂಯುಕ್ತ ಕರ್ನಾಟಕ) ಬರುತ್ತಿತ್ತು ಅಂದರೆ ನೀವು ನಂಬಬೇಕು. ಸುದ್ದಿಯ ಆಂತರ್ಯ ಗೊತ್ತಿಲ್ಲದವರು 'ಇದೇನಪ್ಪಾ, ಅಡಿಗೆಗೆ ಬಳಸುವ ಬಳ್ಳೊಳ್ಳಿ ಅದೆಂತಹ ಸ್ಪಿನ್ ಬೌಲಿಂಗ್ ಮಾಡುತ್ತದೆ? ಅದೆಂತಹ ತಿರುಗಣಿ ತಿರುಗಿಸುತ್ತದೆ?' ಎಂದು ಬೆರಗಾಗಬೇಕು. ವಿಕ್ಕಿ ಬಳ್ಳೊಳ್ಳಿ ಬೌಲಿಂಗ್ ವೀರನಾದರೆ ಉದಯ ಕೊಡ್ಲಿ ಅನ್ನುವ ನಾಮಧೇಯದ ಖತರ್ನಾಕ್ ಬ್ಯಾಟ್ಸಮನ್ ಕಮ್ ಕ್ಯಾಪ್ಟನ್ ಇದ್ದ. ಬಳ್ಳೊಳ್ಳಿ ಸ್ಪಿನ್ ಬೌಲಿಂಗ್ ತಿರುಗಣಿಯಿಂದ ಬ್ಯಾಟಿಂಗ್ ಧ್ವಂಸ ಮಾಡಿದರೆ ಉದಯ ಕೊಡ್ಲಿ ಬ್ಯಾಟನ್ನು ಪರಶುರಾಮನ ಕೊಡಲಿಯಂತೆ ಬೀಸಿ ಎದುರಾಳಿಗಳ ಚೆಂಡಿನ ರುಂಡ ಚೆಂಡಾಡಿ ದೊಡ್ಡ ಮೊತ್ತ ಪೇರಿಸಿಡುತ್ತಿದ್ದ. ಆ ಕಾಲದ ಕ್ರಿಕೆಟ್ ಮ್ಯಾಚುಗಳು ಬಹಳೇ ಮಜವಾಗಿರುತ್ತಿದ್ದವು. ಆಗ ಬೇರೇನೂ ಮನರಂಜನೆ ಇರಲಿಲ್ಲ. ಕೊಡ್ಲಿಯ ಬ್ಯಾಟಿಂಗ್ ಮತ್ತು ಬಳ್ಳೊಳ್ಳಿಯ ಬೌಲಿಂಗ್ ನೋಡುವುದೇ ನಮ್ಮಂತಹ ಚಿಣ್ಣರಿಗೆ ಇರುತ್ತಿದ್ದ ಟೈಮ್ ಪಾಸ್.

ನಮಗೆ ಬಳ್ಳೊಳ್ಳಿ ಎಂಬ ತರಕಾರಿಯಯ ರುಚಿ ಗೊತ್ತಾಗಿದ್ದೇ ತುಂಬಾ ತಡವಾಗಿ. ಮನೆಯಲ್ಲಿ ಬಳ್ಳೊಳ್ಳಿಯ ಉಪಯೋಗ ಇರಲಿಲ್ಲ. ಅದೇನೋ ಬ್ರಾಹ್ಮಣರ ಪದ್ಧತಿಯಂತೆ. ಮೂಲ ಮನೆಯಾದ ಹೊನ್ನಾವರ ಮತ್ತು ಸಿರಸಿ ಕಡೆ ಬಳ್ಳೊಳ್ಳಿ, ಉಳ್ಳಾಗಡ್ಡೆ ಪೂರ್ತಿ ನಿಷಿದ್ಧ. 'ಕೆಟ್ಟು ಪಟ್ಟಣ ಸೇರು...' ಮಾದರಿಯಲ್ಲಿ ಧಾರವಾಡ ಸೇರಿಕೊಂಡಿದ್ದ ತಂದೆತಾಯಿಗಳು ಭಾಡಿಗೆ ಮನೆ ಮಾಡಿದ್ದು ಕಟ್ಟರ್ (ವೈಷ್ಣವ) ಬ್ರಾಹ್ಮಣರ ಅಗ್ರಹಾರದಂತಿದ್ದ ಮಾಳಮಡ್ಡಿ ಬಡಾವಣೆಯಲ್ಲಿ. ಅಲ್ಲಿಯೂ ಬಳ್ಳೊಳ್ಳಿ ವರ್ಜ್ಯ.

ಆಗಿನ ಕಾಲದ ಮಾಳಮಡ್ಡಿಯ ಬ್ರಾಹ್ಮಣರು ಅದೆಷ್ಟು ಕರ್ಮಠರಾಗಿದ್ದರು ಅಂದರೆ ನಮ್ಮ ಪಾಲಕರಿಗೆ ಭಾಡಿಗೆಗೆ ಮನೆ ಸಿಗುವುದೇ ಕಷ್ಟವಾಗಿತ್ತಂತೆ.

'ನೀವು ಯಾರು? ಎಲ್ಲಿಯವರು??' ಮನೆ ಮಾಲೀಕರ ಪ್ರಶ್ನೆ.

'ನಾವು ಹೆಗಡೆ ಅಂತ. ಹೊನ್ನಾವರ ಸಿರ್ಸಿ ಕಡೆಯವರು. ನಾವೂ ಬ್ರಾಹ್ಮಣರೇ,' ಎಂದು ಪಾಲಕರ ಉತ್ತರ.

ಮಾಳಮಡ್ಡಿಯೆಂಬ ಅಗ್ರಹಾರದಲ್ಲಿ ಬ್ರಾಹ್ಮಣರನ್ನು ಬಿಟ್ಟು ಬೇರೆಯವರಿಗೆ ಮನೆ ಸಿಗುವುದಿಲ್ಲ ಅಂತ ಗೊತ್ತಿದ್ದ ಕಾರಣ 'ನಾವೂ ಬ್ರಾಹ್ಮಣರೇ. ನಿಮ್ಮವರೇ!' ಎಂದು explicit ಆಗಿ ಹೇಳಬೇಕಾಗಿತ್ತು. ಏಕೆಂದರೆ ನಮ್ಮ ತಂದೆತಾಯಿ ನಮ್ಮ ಮತದ ಸಂಕೇತಗಳಾದ ಭಸ್ಮ ವಿಭೂತಿಗಳನ್ನು ಢಾಳಾಗಿ ಬಳಿದುಕೊಂಡು, ಜನಿವಾರ ಉಡದಾರ ಹೊರಗೆ ಅಲ್ಲಾಡಿಸಿಕೊಂಡು ಹೋಗುತ್ತಿರಲಿಲ್ಲ. ಮಾಳಮಡ್ಡಿಯ ಮೂಲನಿವಾಸಿಗಳ ಹಾಗೆ ಕರಿ ಗೂಟದ ನಾಮ ಗಂಡಸರಿಗೆ, ಕಚ್ಛೆ ಸೀರೆ ಮತ್ತು ಕೆಂಪು ಗೂಟದ ನಾಮ ಹೆಂಗಸರಿಗೆ ಮಾದರಿಯಲ್ಲಿ ಮೇಕ್ಅಪ್ ಮಾಡಿಕೊಂಡು ಹೋಗೋಣ ಅಂದರೆ ನಮ್ಮ ಮತ ಬೇರೆ. ದ್ವೈತಿಗಳ ನಡುವೆ ಅದ್ವೈತಿಗಳು ನಾವು. ಹೀಗಾಗಿ 'ಬ್ರಾಹ್ಮಣ' ಎಂದು ಹೇಳಿಕೊಳ್ಳಬೇಕಾಗುತ್ತಿತ್ತು.

'ಹೊನ್ನಾವರ ಶಿರಸಿ ಅಂದರೆ ಕಾರವಾರ ಕಡೆಯವರೇ? ಕಾರವಾರಿ ಬ್ರಾಹ್ಮಣರೇನು?' ಅಂತ ಮುಂದಿನ ಪ್ರಶ್ನೆ.

'ಕಾರವಾರಿ ಬ್ರಾಹ್ಮಣರು!!' ಎನ್ನುವ ವಿಚಿತ್ರ ಶಬ್ದ ನಮ್ಮ ಪಾಲಕರು ಕೇಳಿದ್ದು ಅದೇ ಮೊದಲಿರಬೇಕು. ನಮ್ಮನ್ನು ಯಾರೂ ಕಾರವಾರಿ ಬ್ರಾಹ್ಮಣರು ಎಂದು ಗುರುತಿಸಿರಲಿಲ್ಲ. ನಮ್ಮ ಪಾಲಕರಿಗೆ ಅರ್ಥವಾಗಿದ್ದೂ ಅಷ್ಟರಲ್ಲೇ ಇರಬೇಕು ಅಂದುಕೊಳ್ಳಿ. ಏನೋ ಸಾಮಾನ್ಯಜ್ಞಾನ ಉಪಯೋಗಿಸಿ ಹೊನ್ನಾವರ ಸಿರ್ಸಿ ಎಲ್ಲ ಅಂದಿನ ಕಾರವಾರ ಜಿಲ್ಲೆಯೊಳಗೆ ಬರುತ್ತಿದ್ದ ಕಾರಣ,

'ಹೌದ್ರಿ. ನಾವು ಕಾರವಾರ ಬ್ರಾಹ್ಮಣರು. ಮನೆ ಭಾಡಿಗೆಗೆ ಬೇಕಾಗಿತ್ತು,' ಎಂದು ಕೇಳಿಕೊಂಡಿದ್ದಾರೆ.

'ಅಯ್ಯ! ಕಾರವಾರಿ ಬ್ರಾಹ್ಮಣರಾ?? ಇಲ್ಲಪ್ಪಾ, ಮನೆ ಕೊಡೋದಿಲ್ಲ! ಹರ್ಗೀಸ್ ಕೊಡೋದಿಲ್ಲ,' ಎಂದು ಹೇಳಿ ಧೋತ್ರ ಎತ್ತಿ ಪೀಛೆಮೂಡ್ ಮಾಡಿ ಹೊರಟರು ಮಾಲೀಕರು.

'ಯಾಕ್ರೀ??' ಎಂದು ಪಾಲಕರ ಆಕ್ಷೇಪ ಭರಿತ ಪ್ರಶ್ನೆ.

'ಕಾರವಾರಿ ಬ್ರಾಹ್ಮಣರು ಮೀನಾ ತಿಂತಾರ. ಅದಕ್ಕೇ ಕೊಡೋದಿಲ್ಲ!' ಅಂದುಬಿಡಬೇಕೇ ಮಾಲೀಕರು.

'ಅಯ್ಯೋ, ನಾವು ಮೀನಾ ಗೀನಾ ತಿನ್ನೋ ಆ ಕೊಂಕಣಿ ಬ್ರಾಹ್ಮಣರು ಅಲ್ಲರೀ. ಸುತಾರಾಂ ಅಲ್ಲರೀ. ನಾವು ಬ್ಯಾರೇನೇ. ನಾವು ಬ್ಯಾರೆ ಬ್ರಾಹ್ಮಣರು,' ಎಂದು ವಿವರಣೆ ಕೊಟ್ಟರು ಪಾಲಕರು.

'ಮೀನಾ ತಿನ್ನೋದಿಲ್ಲಾ?? ಖರೇನೇ ಮೀನಾ ತಿನ್ನೋದಿಲ್ಲಾ?' ಎಂದು ಉಲ್ಟಾ ಪ್ರಶ್ನೆ. ಕೇಳುವ ಪರಿ ಹೇಗಿರುತ್ತಿತ್ತು ಅಂದರೆ ಮೀನಾ ತಿನ್ನೋದಿಲ್ಲಾ ಅಂದ ಮೇಲೆ ಸಿಗಡಿ, ಆಮೆ, ಹಾವು, ಹರಣೆ, ಹಾವ್ರಾಣಿ ಮತ್ತಿತರ ಜಲಚರಗಳನ್ನು ಇತ್ಯಾದಿಗಳನ್ನು ಸ್ವಾಹಾ ಮಾಡುತ್ತೀರೋ ಎಂಬಂತೆ ಇರುತ್ತಿತ್ತು.

'ನಾವು ಹವ್ಯಕ ಬ್ರಾಹ್ಮಣರು. ಶುದ್ಧ ಬ್ರಾಹ್ಮಣರು. ಮೀನಾ ಮತ್ತೊಂದು ದೂರ ಉಳೀತು. ಉಳ್ಳಾಗಡ್ಡಿ ಬಳ್ಳೊಳ್ಳಿ ಸಹ ತಿನ್ನೋದಿಲ್ಲ. ಖರೇ!' ಎಂದು ಒಂದು ಟೈಪಿನ ಆಣೆ ಪ್ರಮಾಣ ಮಾಡಿದ ಮೇಲೆಯೇ ಏನೋ ಒಂದು ಟೈಪಿನ ನಂಬಿಕೆ ಬರುತ್ತಿತ್ತು ಮನೆಯ ಮಾಲೀಕರಿಗೆ. ಮತ್ತೆ ಮೊದಲು ಭಾಡಿಗೆಗೆ ಮನೆ ಕೊಟ್ಟಿದ್ದ ದೇಶಪಾಂಡೆ, ಪಾಟೀಲ ಇತ್ಯಾದಿ ಬ್ರಾಹ್ಮಣ ಮಹನೀಯರ ರೆಫರೆನ್ಸ್ ಕೊಟ್ಟ ಮೇಲೆ ಏನೋ ಒಂದು ರೀತಿಯ ನಂಬಿಗೆ ಬಂದು ಮನೆ ಭಾಡಿಗೆಗೆ ಕೊಟ್ಟರು ಅಂತ ಪಾಲಕರು ಕಥೆ ಹೇಳಿದ್ದರು.

ಇಷ್ಟಾದ ಮೇಲೂ ಮಾಲೀಕರ ಮನೆಯವರೆಲ್ಲ ನಮಗೆ ತುಂಬಾ ಚೆನ್ನಾಗಿ ಹೊಂದಿಕೊಂಡು, ನಾವೂ ಅವರಿಗೆ ಚೆನ್ನಾಗಿ ಹೊಂದಿಕೊಂಡು ಒಂದೇ ಮನೆಯವರ ತರಹ ಆಗಿಹೋದರೂ ಮಾಲೀಕರ ಮನೆಯ ಹಳೆ ಮುದುಕಿಯೊಬ್ಬರಿಗೆ ಮಾತ್ರ ಖಾತ್ರಿಯಾಗಿರಲಿಲ್ಲ. ಆಗಾಗ ಹೇಳುತ್ತಲೇ ಇರುತ್ತಿದ್ದರಂತೆ, 'ಭಾಡ್ಗಿಗೆ ಬಂದವರು ಮೀನಾ ತಿಂತಾರ ಅಂತ ಕಾಣಿಸ್ತದ. ಏನೋ ವಾಸನಿ ಬರ್ತದ!' ಆ ಮುದುಕಿಯ ನಾಸಿಕಕ್ಕೆ ಏನಾಗಿತ್ತೋ ದೇವರಿಗೇ ಗೊತ್ತು. ಪೂರ್ವಗ್ರಹ ಪೀಡಿತ ನಾಸಿಕ. Prejudiced mind ಇದ್ದ ಹಾಗೆ prejudiced nose!

ಹೀಗೆ ಮಾಳಮಡ್ಡಿಯೆಂಬ ಅಗ್ರಹಾರದಲ್ಲಿ ನೆಲೆಸಿದ ನಮಗೆ ಬಳ್ಳೊಳ್ಳಿ ಅಂದರೇನು ಅಂತ ಗೊತ್ತಾಗಲಿಕ್ಕೆ ಭಾಳ ಟೈಮ್ ಹಿಡಿಯಿತು.

ಕೆಲವೊಮ್ಮೆ ಕೆಲವು ಹೋಟೆಲುಗಳಿಗೆ ಹೋದಾಗ ಚಟ್ನಿ ಒಂದು ತರಹದ ಅಡ್ಡ ವಾಸನೆ ಹೊಡೆಯುತ್ತಿತ್ತು. ಕಾಮತ್, ಉಡುಪಿ ಹೋಟೆಲ್ಲುಗಳಲ್ಲಿ ಚಟ್ನಿಗೆ ಆ ಅಡ್ಡ ವಾಸನೆ ಇರುತ್ತಿರಲಿಲ್ಲ. ಖಾನಾವಳಿ ಟೈಪಿನ, ಚಹಾದಂಗಡಿ ಎಂದು ಕರೆಯಿಸಿಕೊಳ್ಳುತ್ತಿದ್ದ, ಅಡ್ಡೆಗಳಲ್ಲಿ ಮಾತ್ರ ಆ ವಾಸನೆ ಬರುತ್ತಿತ್ತು. of course ಭರಿಸಲಾರದಂತಹ ಅಡ್ಡವಾಸನೆಯೇನೂ ಅಲ್ಲ. ಆದರೆ ಇಡ್ಲಿ, ವಡಾ, ದೋಸೆ  ಜೊತೆ ಜಬರ್ದಸ್ತಾಗಿ ಜಡಿಯಬಹುದಾದ ಚಟ್ನಿಗೆ ಆ ವಾಸನೆ ಒಗ್ಗುತ್ತಿರಲಿಲ್ಲ ಅನ್ನಿಸಿತ್ತು. ಗರಂ ಮಸಾಲಾ ಹಾಕಿದ ಬಿರ್ಯಾನಿಗೆ ವೆನಿಲ್ಲಾ ವಾಸನೆ ಬಂದರೆ ಹೇಗೆ!? ಆ ಮಾದರಿಯ ಹೊಂದಾಣಿಕೆ ಆಗದ ಅಡ್ಡವಾಸನೆ!

ಅದು ಏನೆಂದು ವಿಚಾರ ಮಾಡಿದಾಗ ತಿಳಿದಿದ್ದು, ಕೆಲ ಹೊಟೇಲುಗಳಲ್ಲಿ ಚಟ್ನಿಗೆ ಬಳ್ಳೊಳ್ಳಿ ಹಾಕುತ್ತಾರೆ. ಅದೇ ಆ ಅಡ್ಡವಾಸನೆಗೆ ಕಾರಣ.

ಒಮ್ಮೆ ಆ ವಾಸನೆ ತಿಳಿದ ಮೇಲೆ ಎಲ್ಲಾ ಕಡೆ ಅದೇ ವಾಸನೆ ಬರತೊಡಗಿತು. ಅವಲಕ್ಕಿಯಲ್ಲಿ ಬಂತು. ಚುರುಮುರಿಯಲ್ಲಿ ಅಂದರೆ ಮಂಡಕ್ಕಿಯಲ್ಲಿ ಬಂತು. ಸರ್ವಂ ಬಳ್ಳೊಳ್ಳಿ ಮಯಂ.

ಮಾಳಮಡ್ಡಿಯಲ್ಲಿ ಇರುವ ತನಕ ನಮ್ಮ ಮನೆಯಲ್ಲಿ ಬಳ್ಳೊಳ್ಳಿ ವಾಸನೆ ಬಂದಿದ್ದು ನನಗಂತೂ ನೆನಪಿಲ್ಲ. ತತ್ತಿಯ ಆಮ್ಲೆಟ್ ಮಾಡಿಕೊಂಡು ತಿನ್ನುತ್ತಿದ್ದುದು ನೆನಪಿದೆ. ತಂದೆ ತಾಯಿ ಇಬ್ಬರೂ NCC ಗಿರಾಕಿಗಳು. ಹಲವಾರು ವರ್ಷಗಳ ಕಾಲ ಶಾಲೆ ಕಾಲೇಜುಗಳಲ್ಲಿ NCC ಮಾಡಿದ್ದರು. ಹತ್ತಾರು ಕಡೆ ಕ್ಯಾಂಪ್ ಇತ್ಯಾದಿ ಹೋಗಿದ್ದರು. NCC ಜನ ತತ್ತಿಯ ಮಹಾತ್ಮೆಯನ್ನು ಸರಿಯಾಗೇ ಬುರುಡೆಯಲ್ಲಿ ತುಂಬಿದ್ದರು ಎಂದು ಕಾಣುತ್ತದೆ. ಮತ್ತೆ NCC ಆಮ್ಲೆಟ್ ರುಚಿ ತಿಂದೇ ತಿಳಿಯಬೇಕು ಎಂದು ಹೇಳುತ್ತಿದ್ದರು. ನಮ್ಮ ಕಾಲದಲ್ಲಿ NCC ನಾಷ್ಟಾದಲ್ಲಿ ತತ್ತಿ ಪತ್ತಿ ಸಿಗುತ್ತಿರಲಿಲ್ಲ. ಶಾಲೆ ಹತ್ತಿರದ 'ಮಥುರಾ ಭವನ' ಹೋಟೇಲಿನ ತಗಡು ಅವಲಕ್ಕಿ ಪವಲಕ್ಕಿ ಸಿಕ್ಕರೆ ಅದೇ ದೊಡ್ಡ ಮಾತು. NCC ಕ್ಯಾಂಪುಗಳಲ್ಲಿ ಆಮ್ಲೆಟ್, ನಾನ್ವೆಜ್ ಎಲ್ಲ ಸಿಗುತ್ತಿತ್ತಂತೆ. ಕ್ಯಾಂಪಿಗೆ ಹೋದರೆ ಅಸಡ್ಡಾಳ ರೀತಿಯಲ್ಲಿ ಚಿಕ್ಕದಾಗಿ ಮಿಲಿಟರಿ ಹೇರ್ ಕಟಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ನಾವಂತೂ ಮಿಲಿಟರಿ ಕ್ಯಾಂಪಿಗೆ ಹೋಗಲೇ ಇಲ್ಲ. ಅಂತಹ ಅಸಡ್ಡಾಳ ಕಟಿಂಗ್ ಮಾಡಿಸಿಕೊಂಡು co-ed ಶಾಲೆಯಲ್ಲಿರಲು ಭಯಂಕರ ಮುಜುಗುರ ನಮಗೆ. ಹಾಗಾಗಿ NCC ಕ್ಯಾಂಪಿನ ಆಮ್ಲೆಟ್ಟಿನ ರುಚಿ ಸವಿಯಲಿಲ್ಲ ಬಿಡಿ.

ಮಾಳಮಡ್ಡಿಯಲ್ಲಿ ಮಾಲೀಕರ ಮನೆಯ ಮುದುಕಿ ರಾಯರ ಮಠದ ಕಡೆಯೋ  ಅಥವಾ ಬೇರೆ ಎಲ್ಲೋ ಹೋದಾಗ ಗಡಿಬಿಡಿಯಲ್ಲಿ ಆಮ್ಲೆಟ್ ಮಾಡಿಕೊಂಡು ಸ್ವಾಹಾ ಮಾಡಿದ್ದು ನೆನಪಿದೆ. ಅದೂ  ಎಲ್ಲೋ ತಿಂಗಳಿಗೆ ಒಂದು ಎರಡು  ಬಾರಿ ಮಾತ್ರ. ಆ ಆಮ್ಲೆಟ್ (ಸು)ವಾಸನೆಯನ್ನೇ ಪೊಲೀಸ್ ನಾಯಿಯಂತೆ ಮೂಸಿದ್ದ ಆ ಮುದುಕಿ ನಾವೆಲ್ಲೋ ಮೀನ ಮೊಸಳೆ ಹುರಿದು ಸ್ವಾಹಾ ಮಾಡಿದ್ದೇವೆ ಎಂದುಕೊಂಡಿತ್ತೋ ಏನೋ!? ಗೊತ್ತಿಲ್ಲ.

ಮುಂದೆ ಸ್ವಂತ ಮನೆ ಕಟ್ಟಿಕೊಂಡು ಊರ ಹೊರಗಿನ ಬಡಾವಣೆಗೆ ಬಂದ ಮೇಲೆ ಇವೆಲ್ಲ ಅಡೆತಡೆಗಳು ಇರಲಿಲ್ಲ. ಆದರೆ ಬಳ್ಳೊಳ್ಳಿ ಮಾತ್ರ ಎಂಟ್ರಿ  ಕೊಡಲಿಲ್ಲ. ಆದರೆ ಪ್ರೀತಿಯ ಆಮ್ಲೆಟ್ಟಿಗೆ ಮಾತ್ರ ಯಾವುದೇ ತೊಂದರೆ ಇರಲಿಲ್ಲ. ಶ್ರಾವಣ ಮಾಸದಲ್ಲಿ ಮತ್ತು ಊರ ಕಡೆಯ ಕಟ್ಟರ್ ಜನ ಬಂದಾಗ ಮಾತ್ರ ಮಾತಾಶ್ರೀ ಅವರು ಆಮ್ಲೆಟ್ ಮಾಡುತ್ತಿರಲಿಲ್ಲ. ಆಮ್ಲೆಟ್ ರುಚಿಗೆ ಫಿದಾ ಆಗಿದ್ದ ನಾನು ಎಲ್ಲ ನಿರ್ಬಂಧನೆಗಳನ್ನೂ ಧಿಕ್ಕರಿಸಿ ನಾನೇ ಸ್ವತಃ ಆಮ್ಲೆಟ್ ಮಾಡಿಕೊಂಡು ಸ್ವಾಹಾ ಮಾಡುತ್ತಿದ್ದೆ. ದಿನವೂ ಆಮ್ಲೆಟ್ ಬೇಕೇಬೇಕು! ಬೇಕೆಂದರೆ ಬೇಕೇಬೇಕು! ಶ್ರಾವಣವಾದರೂ ಇರಲಿ. ಆಷಾಢವಾದರೂ ಇರಲಿ. ನಾನು ಕಲಿತ ಮೊದಲ ಮತ್ತು ಪ್ರಾಯಶ ಕೊನೆಯ ಅಡಿಗೆ ಅಂದರೆ ಆಮ್ಲೆಟ್ ಮಾಡುವುದು. ಆಮ್ಲೆಟ್ ಬೇಜಾರಾದರೆ ಎಗ್ ಭುರ್ಜಿ. ಇಲ್ಲವಾದರೆ ಸಿಂಪಲ್ ಬೇಯಿಸಿದ ತತ್ತಿ. ತತ್ತಿಯೊಂದು ಇಷ್ಟವಾಗಿಬಿಟ್ಟರೆ ನಿಮಗೆ ಜೀವನದಲ್ಲಿ ಆಹಾರದ ಮತ್ತು ಪೋಷಕಾಂಶಗಳ ತೊಂದರೆ ಎಂದೂ ಬರುವುದಿಲ್ಲ. ಈ ಮಾತಿಗೆ ನಾವೇ ಸಾಕ್ಷಿ. ನಿಮ್ಮ ಕೊಲೆಸ್ಟ್ರಾಲ್ ಕೊಂಚ ಏರಬಹುದು. ಬಾಕಿ ಮಾಂಸಾಹಾರ ತ್ಯಜಿಸಿ, ದಿನಕ್ಕೆ ೧೫-೨೦ ನಿಮಿಷಗಳ ಸರಳ ವ್ಯಾಯಾಮ ರೂಢಿಸಿಕೊಂಡರೆ ಆ ಪ್ರಾಬ್ಲಮ್ ಸಹಿತ ಇರುವುದಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ತತ್ತಿಗಳನ್ನು ಸ್ವಾಹಾ ಮಾಡಿ. ನಿಮ್ಮ ಮನೆಯಲ್ಲಿ ಬೆಳೆಯುತ್ತಿರುವ ಮಕ್ಕಳಿದ್ದರೆ ಮುದ್ದಾಂ ತತ್ತಿ ಕೊಡಿ. ಬಿಂದಾಸ್ ಕೊಡಿ. ಹೇಗೆ ಮಸ್ತಾಗಿ ಮಕ್ಕಳು ಅರಳುತ್ತಾರೆ ನೀವೇ ನೋಡಿ. ಸಸ್ಯಾಹಾರಿಗಳ ಆಹಾರದಲ್ಲಿ ಪ್ರೋಟೀನ್ ಅಂಶ ಕಮ್ಮಿ. ಮೊಟ್ಟೆ ಆ ಕೊರತೆಯನ್ನು ನೀಗಿಸಲು ಬೆಸ್ಟ್!

ತತ್ತಿಗಳನ್ನು ತಿಂದರೆ ಭ್ರೂಣಹತ್ಯಾ ದೋಷ ಮತ್ತು ಪಾಪ ಬರುತ್ತದೆಯೇ? ಎನ್ನುವ ಜಿಜ್ಞಾಸೆ ನನ್ನನ್ನೂ ಕಾಡಿದೆ. ಅಂಗಡಿಗಳಲ್ಲಿ ಸಿಗುವ ಫಾರ್ಮ್ ತತ್ತಿಗಳು fertilize ಆಗಿರುವುದೇ ಇಲ್ಲ. ಗಂಡು ಕೋಳಿ ಉರ್ಫ್ ಹುಂಜದ ಸಂಪರ್ಕ ಸಿಕ್ಕರೆ ತಾನೇ fertilize ಆಗುವುದು? ಫಾರ್ಮ್ ಕೋಳಿಗಳು ಹಾಕುವ ತತ್ತಿಗಳು unfertilized. ಅದು ಭ್ರೂಣ ಅಲ್ಲ. ಕೇವಲ ಅಂಡ. ಎಲ್ಲಾದರೂ by chance fertilized ತತ್ತಿ ತಿಂದರೆ ಮಾತ್ರ ಭ್ರೂಣಹತ್ಯಾ ದೋಷ ಸುತ್ತಿಕೊಂಡೀತು. ಅದಕ್ಕೂ ಏನಾದರೂ  ಪರಿಹಾರ ಹುಡುಕೋಣ ಬಿಡಿ. ನಮ್ಮಲ್ಲಿ ಎಲ್ಲ ತಪ್ಪುಗಳನ್ನು ಮಾಡಲೂ ಅವಕಾಶವಿದೆ. ನಂತರ ಪರಿಹಾರ ಮಾಡಿಕೊಳ್ಳಲೂ ಅವಕಾಶವಿದೆ.

ಆದರೆ ಭ್ರೂಣಹತ್ಯೆ ಮಾತ್ರ ಘೋರ ಪಾಪ. ಹಾಗಂತ ಶಾಸ್ತ್ರಗಳು ಹೇಳುತ್ತವೆಯಂತೆ. ಕೋಳಿ ತತ್ತಿಯ ಮಾತು ಬಿಡಿ. ಎಷ್ಟೋ ಜನ ಹೆಂಗಸರು ಬೇರೆ ಬೇರೆ ಕಾರಣಗಳಿಗಾಗಿ ಬಸಿರು ಇಳಿಸಿಕೊಳ್ಳುತ್ತಾರಲ್ಲ, ಅಬಾರ್ಶನ್ ಮಾಡಿಸಿಕೊಳ್ಳುತ್ತಾರಲ್ಲ, ಅದು ಭ್ರೂಣಹತ್ಯಾ ಪಾಪವೆಂದು ಪರಿಗಣಿಸಲ್ಪಡುತ್ತದೆ. ಕೇವಲ ಮಹಿಳೆಯೊಬ್ಬಳಿಗೆ ಮಾತ್ರ ಅಲ್ಲ. ಬೇಡವಾದ ಬಸಿರಿಗೆ ಕಾರಣವಾಗಿರುವ ಬೇವಕೂಫ್ ಭಾಡ್ಕೋವ್ ಗಂಡಸಿಗೂ ಪಾಪ ತಟ್ಟುತ್ತದೆ. ಹೆಚ್ಚಿನ ಪಾಪ ಅವನಿಗೇ ತಟ್ಟಬೇಕು. ಪೇಟೆ ಒಳಗೆ ಪಟೇಲರನ್ನು ತೂರಿಸುವ ಮೊದಲು ಪಟೇಲರಿಗೆ ಪೇಟ ತೊಡಿಸುವ ವ್ಯವಧಾನವೂ ಇಲ್ಲದೆ ಅರ್ಥಾತ್ ಕಾಂಡೊಮ್ ಧರಿಸದೇ ಇನ್ನಿಲ್ಲದ ಗಡಿಬಿಡಿ ಮಾಡಿ ಬೇಡವಾದ ಬಸಿರಿಗೆ ಕಾರಣವಾಗಿಬಿಡುವ ಗಂಡುಮುಡೇಗಂಡರಿಗೆ ಹೆಚ್ಚಿನ ಪಾಪ ತಟ್ಟಬೇಕು. ಇನ್ನು ಕೆಲವು ಯಬಡ ಮಹಿಳೆಯರೂ ಇರುತ್ತಾರೆ. ಸಿನೆಮಾಗಳಲ್ಲಿ ಈ ಸೀನ್ ನೋಡಿರುತ್ತೀರಿ. ಕೆಂಡದಂತೆ ಕಾದಿರುವ ಮಹಿಳೆಯರಿಗೂ ಸಿಕ್ಕಾಪಟ್ಟೆ ಅವಸರ. 'ಅಯ್ಯೋ, ಏನು ಕಾಂಡೋಮ್ ಕಾಂಡೋಮ್ ಅಂತ ಬಡಿದುಕೊಳ್ಳುತ್ತಿ ಮಾರಾಯಾ!? ಎಷ್ಟಂತ ಹುಡುಕುತ್ತೀ? ಇನ್ನೆರೆಡು ದಿನಗಳಲ್ಲೇ ನನಗೆ ಪಿರಿಯಡ್(ಮುಟ್ಟು) ಬರಲಿದೆ. ಬಸಿರು ಗಿಸಿರು ಏನೂ ಆಗಲ್ಲ. ಜಲ್ದಿ ಜಡಾಯಿಸಿಬಿಡು! ಜಲ್ದೀ!' ಎಂದು ಆಹ್ವಾನ ಕೊಟ್ಟುಬಿಡುತ್ತಾರೆ. ಹಾಟ್ ಡೇಟಿಂಗ್ ಮುಗಿಸಿ ಕ್ಲಬ್ಬಿನಿಂದ ಸೀದಾ ಮನೆಗೆ ಆಗಮಿಸಿರುವ, ಮಸ್ತು ಎಣ್ಣೆಯ ಏಟಿನಲ್ಲಿರುವ ಸುಂದರಿಗೆ ಮುಟ್ಟಿನ ಗುಟ್ಟೇ ಮರೆತು ಹೋಗಿರುತ್ತದೆ. ಎರಡು ದಿವಸಗಳಲ್ಲಿ ಬರಲಿರುವುದು ಮುಟ್ಟಲ್ಲ ಬೇರೇನೋ ಡೇಟು ಎನ್ನುವುದು ನಂತರ ಮುಂದಿನ ತಿಂಗಳು ಮುಟ್ಟು ಬರದಿದ್ದಾಗಲೇ ಅರಿವಿಗೆ ಬರುತ್ತದೆ. ಅಷ್ಟರಲ್ಲಿ ಶಿವಾಯ ನಮಃ ಮಾದರಿಯ ಅನಾಹುತ ಆಗಿಹೋಗಿರುತ್ತದೆ. ನಿಮ್ಮವಳ ಮುಟ್ಟು ಮತ್ತು ನಿಮ್ಮ ಸಂಬಳ ತಿಂಗಳು ತಿಂಗಳಿಗೆ ನಿಯಮಿತವಾಗಿ ಬಂದರೇ ಸುಖ. ಇಲ್ಲವಾದರೆ  ಬರದೇ ಇದ್ದ ಎರಡೂ ಸಂದರ್ಭಗಳಲ್ಲಿ 'you are screwed!' ಅನ್ನುವುದು ಮಾತ್ರ ಖಾತ್ರಿ. ಹೀಗೆ ಯಡಬಿಡಂಗಿ ಲಫಡಾದಿಂದಾಗಿ ಬಸಿರು ಕಟ್ಟಿದಾಗ ಇಬ್ಬರೂ ಕೂಡಿ ಬ್ರೂಣಹತ್ಯೆಗೆ ತಯಾರಾಗುತ್ತಾರೆ. ಕಾಂಡೋಮ್ ಸಿಗದ ಮತ್ತು ಧರಿಸದ ಪೊರಪಾಟಿನಲ್ಲಿ ದೊಡ್ಡ ಪಾಪವೊಂದು ಘಟಿಸಿಹೋಗಿರುತ್ತದೆ. ಈಗ ಪಾಪ ಮಾಡದಿದ್ದರೆ ಮುಂದೆ ಪಾಪು ಹೊರಬರುತ್ತದೆ. ಅದು ಮತ್ತೂ ದೊಡ್ಡ ಗೋಳು!

ಅದೆಲ್ಲಾ ಇರಲಿ. ತತ್ತಿ ತಿಂದರೆ ಭ್ರೂಣ ಹತ್ಯಾ ದೋಷ ಬರುತ್ತದೆಯೇ ಎಂದು ತಲೆಯಲ್ಲಿ ವಿಚಾರ ಅಥವಾ ಸಂಶಯ ಬಂದರೆ ಎಂದು ಇಷ್ಟೆಲ್ಲಾ ವಿವರಣೆ ಕೊಡಬೇಕಾಯಿತು.

ಮತ್ತೆ ಬಳ್ಳೊಳ್ಳಿಗೆ ಬರೋಣ.  ಹೊಸ ಮನೆಗೆ ಬಂದ ಮೇಲೆ ಯಾವುದೇ ತರಹದ ಅಡಿಗೆ ಮಾಡಲು ತೊಂದರೆ ಇರಲಿಲ್ಲ. ಯಾವುದೇ ಅಡಿಗೆಯಿಂದ ಏನೇ ವಾಸನೆ ಬಂದರೂ ಅಡ್ಡಿಯಿರಲಿಲ್ಲ. ಅದನ್ನು ಆಸ್ವಾದಿಸಿ 'ಇವರು ಮೀನ ಹುರಿಯುತ್ತಿರಬಹುದೇ!?' ಎಂದು ವಿನಾಕಾರಣ ಮೂಗು ತೂರಿಸುವಂತಹ ಮಾಲೀಕರ ಮುದುಕಿ ಟೈಪಿನ ಜನರೂ ಇರಲಿಲ್ಲ.  ಊರ ಹೊರಗಿನ ಬಡಾವಣೆ. ಜನರೇ ಇರದ ಬಡಾವಣೆ. ಬೆಸ್ಟ್ ಆಯಿತು.

ಯಾವಾಗಲೋ ಒಮ್ಮೆ ಚಳಿಗಾದಲ್ಲಿ ಕೆಟ್ಟ ಚಳಿ ಬಿದ್ದಾಗ ರಾತ್ರಿಯೂಟಕ್ಕೆ ಬಳ್ಳೊಳ್ಳಿ ಒಗ್ಗರಣೆ ಹಾಕಿದ ಪೊಳೆದ್ಯೆ (ಪೋಳಜೆ, ಮಜ್ಜಿಗೆ ಹುಳಿ) ಮಾಡಿದ್ದು ನೆನಪಿದೆ. ನನಗಂತೂ ಹವ್ಯಕರ ಸಾಂಪ್ರದಾಯಿಕ ಅಡಿಗೆಗಳಾದ ಹಸಿ, ಪೊಳೆದ್ಯೆ ಅಂದರೆ ಅಷ್ಟಕಷ್ಟೇ. ನಾವು ಊಟದ ವಿಷಯದಲ್ಲಿ ಶುದ್ಧ ಧಾರವಾಡಿಗಳು. ರೊಟ್ಟಿ, ಚಪಾತಿ, ಪಲ್ಲ್ಯೆ, ಅನ್ನ, ಸಾರು ಮುಖ್ಯವಾಗಿ ಆಮ್ಲೆಟ್ ಇದ್ದರೆ ಸಾಕು. ಹವ್ಯಕರ ಸಾಂಪ್ರದಾಯಿಕ ಅಡಿಗೆಗಳು ಅವರಿಗೇ  ಮುಬಾರಕ್! ನಮಗೆ ಅಷ್ಟೇನೂ ಇಷ್ಟವಲ್ಲ.

ಎಂದೋ ಒಂದು ದಿವಸ ಮುಹೂರ್ತ ನೋಡಿ ಬಳ್ಳೊಳ್ಳಿ ಒಗ್ಗರಣೆ ಹಾಕಿದ ಪೊಳೆದ್ಯೆಯನ್ನು, ಅದೂ ರಾತ್ರಿ ಊಟಕ್ಕೆಂದು ಮಾಡಿದರೆ, ದೊಡ್ಡ ಪ್ರಮಾಣದ ಮಡಿವಂತರೊಬ್ಬರು ಅದೇ ಸಮಯಕ್ಕೆ ಬಂದು ವಕ್ಕರಿಸಬೇಕೇ!? ಶಿವನೇ ಶಂಭುಲಿಂಗ ಆಗಿದ್ದು ನಮ್ಮ ಪಾಲಕರ ಪರಿಸ್ಥಿತಿ.

ಆ ದಿನ ತಡರಾತ್ರಿ ಮನೆಗೆ ಆಗಮಿಸಿದವರು (ವಕ್ಕರಿಸಿದವರು ಅನ್ನಬಾರದು) ದಿವಂಗತ ಶ್ರೀಪಾದ ಶೆಟ್ಟರು. ಶ್ರೀಪಾದ ಶೆಟ್ಟರು ಅಂದರೆ ಮುಗಿಯಿತು. ಧಾರವಾಡದ ಮಟ್ಟಿಗೆ ದೊಡ್ಡ ದೇವರ ಭಕ್ತರು. ತಾವು ಶೆಟ್ಟರಾಗಿದ್ದರೂ ಬ್ರಾಹ್ಮಣರಗಿಂತಲೂ ಹೆಚ್ಚಾಗಿ ಪೂಜೆ ಪುನಸ್ಕಾರ ಮಾಡುವವರು. ಮೇಲಾಗಿ ಶೃಂಗೇರಿ ಮಠದ ದೊಡ್ಡ ಭಕ್ತರು. ಸ್ವಾಮಿಗಳಿಗೆ ತುಂಬಾ ಪ್ರಿಯರಾದವರು. ಅದೆಷ್ಟು ಪ್ರಿಯರು ಅಂದರೆ ಸ್ವಾಮಿಗಳು ಧಾರವಾಡಕ್ಕೆ ಬಂದಾಗ ಶ್ರೀಪಾದ ಶೆಟ್ಟರ ಮನೆಯಲ್ಲೇ ತಂಗುತ್ತಿದ್ದರು. of  course ಸ್ವಾಮಿಗಳು ಬಂದಾಗ ತಂಗಲೆಂದೇ ಬೇರೆ ಮನೆ ಕಟ್ಟಿಸಿಟ್ಟಿದ್ದರು ಶೆಟ್ಟರು. ವಿದ್ಯಾಗಿರಿಯಲ್ಲಿರುವ ಶಂಕರ ಮಠಕ್ಕೆ ಹತ್ತಾರು ಗುಂಟೆ ಜಾಗವನ್ನು ದಾನವಾಗಿ ಕೊಟ್ಟಿದ್ದರು. ಅಲ್ಲಿ ಶಂಕರ ಮಠ ಕಟ್ಟಿದವರು ಇನ್ನೊಬ್ಬ ಶೆಟ್ಟರಾದ ಆರ್. ಎನ್. ಶೆಟ್ಟರು. ಇಬ್ಬರೂ ಶೆಟ್ಟರಿಗೆ ನಮ್ಮ ತಂದೆಯವರು ಅಂದರೆ ತುಂಬಾ ನಂಬಿಕೆ ಮತ್ತು ಪ್ರೀತಿ. ತಂದೆಯವರೂ ಕೂಡ ಅಂತಹ ದೇವತಾ ಕಾರ್ಯಗಳಲ್ಲಿ ತುಂಬಾ ತೊಡಗಿಸಿಕೊಂಡಿದ್ದರು. ಶೆಟ್ಟರುಗಳ ದೇವತಾಕಾರ್ಯಗಳಲ್ಲಿ ತಮ್ಮ ಅಳಿಲುಸೇವೆ ಮಾಡುತ್ತಿದ್ದರು.

ಶಂಕರ ಮಠ ಕಟ್ಟುತ್ತಿರುವಾಗ ಶ್ರೀಪಾದ ಶೆಟ್ಟರು ಪದೇ ಪದೇ ಮನೆಗೆ ಬರುತ್ತಿದ್ದರು. ಒಂದು ರೀತಿಯಲ್ಲಿ ನಮ್ಮ ಮನೆಯವರೇ ಆಗಿಹೋಗಿದ್ದರಿಂದ ಅವರ ವ್ಯಾಪಾರ ವ್ಯವಹಾರ ಮುಗಿಸಿದ ನಂತರ ಸಮಯ ಸಿಕ್ಕಾಗೆಲ್ಲ ಬಂದು ಶಂಕರ ಮಠದ ಬಗ್ಗೆ ಚರ್ಚೆ ಇತ್ಯಾದಿ ಮಾಡುತ್ತಿದ್ದರು.

ಅಂತಹ ಧರ್ಮಭೀರು ಶ್ರೀಪಾದ ಶೆಟ್ಟರು ಮನೆಗೆ ಬಂದರೆ ನಮ್ಮ ಮನೆಯಲ್ಲಿ ಬಳ್ಳೊಳ್ಳಿ ಘಾಟು ಹೊಡೆಯುತ್ತಿರಬೇಕೇ!? ಶಿವಾಯ ನಮಃ!

ಶೆಟ್ಟರು ಏನಾದರೂ ತಪ್ಪು ತಿಳಿದುಕೊಂಡಾರು ಎಂದು ಯೋಚಿಸಿದ ನಮ್ಮ ಮಾತಾಶ್ರೀಯವರು ಅವರು ಆಸನದ ಮೇಲೆ ಕೂಡುವ ಮೊದಲೇ ಕ್ಷಮಾಪಣೆ ಕೇಳಿಕೊಂಡುಬಿಟ್ಟರು. ಸ್ಕೀಮ್ ಅಂದರೆ ಅದು. ತಪ್ಪು ಮಾಡಿದ್ದೀಯಾ ಎಂದು ಬೇರೊಬ್ಬರು ಹೇಳುವ ಮೊದಲೇ ಕ್ಷಮೆ ಕೇಳಿಬಿಡಬೇಕು.

ಶ್ರೀಪಾದ ಶೆಟ್ಟರು ಏನೂ ತಪ್ಪು ತಿಳಿಯಲಿಲ್ಲ. ಆ ರಾತ್ರಿ ಬಿದ್ದಿದ್ದ ಕೆಟ್ಟ ಚಳಿಯಿಂದ ಬಚಾವಾಗಲು ಬಡ ಬ್ರಾಹ್ಮಣರು ಏನೋ ಅಪರೂಪಕ್ಕೆ ಬಳ್ಳೊಳ್ಳಿ ಒಗ್ಗರಣೆ ಹಾಕಿ ಮನೆ ತುಂಬಾ ಘಾಟು ಎಬ್ಬಿಸಿಕೊಂಡುಬಿಟ್ಟಿದ್ದಾರೆ. ದೊಡ್ಡ ತಪ್ಪೇನಲ್ಲ ಎಂದುಕೊಂಡು ಮಾಫ್ ಮಾಡಿದ್ದಾರೆ. ಮತ್ತು ಅಡುಗೆಮನೆಯಿಂದ ದೂರವಿದ್ದ ತಂದೆಯವರ ಕೋಣೆಯಲ್ಲಿ ಸ್ಥಾಪಿತರಾಗಿದ್ದಾರೆ. ಬಳ್ಳೊಳ್ಳಿ ಘಾಟಿನಿಂದ ಬಚಾವಾಗಿದ್ದಾರೆ. ಶೆಟ್ಟರಿಗೆ ಬಳ್ಳೊಳ್ಳಿ ವಾಸನೆಯನ್ನು ಕುಡಿಸಿದ್ದಕ್ಕೆ ಪ್ರಾಯಶ್ಚಿತ ಎನ್ನುವ ಮಾದರಿಯಲ್ಲಿ ಅವರಿಗೆ ಬಿಸಿಬಿಸಿ ಕೇಸರಿ ಹಾಕಿದ ಹಾಲಿನ ಸಮರ್ಪಣೆ ಆಗಿದೆ. ಅಂದು ಎಂದಿಗಿಂತ ಹೆಚ್ಚಿನ ಕೇಸರಿ ಹಾಕಿದ್ದರಲ್ಲಿ ಯಾವುದೇ ಸಂಶಯವಿರಲಿಲ್ಲ. ಶೆಟ್ಟರೂ ಸಹಿತ ಎಂದಿನಂತೆ ಏನೂ ಮುಜುಗುರವಿಲ್ಲದೆ ಬಳ್ಳೊಳ್ಳಿ ಹುರಿದ ಅಡಿಗೆಮನೆಯಿಂದಲೇ ಬಂದಿದ್ದಾದರೂ ಸಾತ್ವಿಕ ಎಂದು ಪರಿಗಣಿಸಲ್ಪಡುವ ಕೇಸರಿ ಹಾಲನ್ನು ಸ್ವೀಕರಿಸಿ ನಮ್ಮನ್ನೆಲ್ಲ ಹರಿಸಿ ಹೋಗಿದ್ದಾರೆ.

ನನಗೆ ನೆನಪಿರುವ ಮಟ್ಟಿಗೆ ಮನೆಯಲ್ಲಿ ಬಳ್ಳೊಳ್ಳಿ ಹೊಗೆ ಹಾಕಿಸಿದ್ದು ಅದೇ ಕೊನೆ. of course ಅದಾದ ಕೆಲವೇ ತಿಂಗಳುಗಳಲ್ಲಿ ನಾನೂ ಸಹ ಇಂಜಿನಿಯರಿಂಗ್ ಮಾಡಲು ಮನೆ ಬಿಟ್ಟು ಕಳಚಿಕೊಂಡೆ. ಮನೆಯಲ್ಲಿ ಪಾಲಕರಿಬ್ಬರೇ. ಏನೇನು ಸಾಹಸಗಳನ್ನು ಮಾಡಿದವೋ ಅವರಿಗೇ ಗೊತ್ತು. ನಾನು ರಜೆಗೆ ಬಂದಾಗಂತೂ ಬಳ್ಳೊಳ್ಳಿಯ ಘಾಟು ಬರಲಿಲ್ಲ.

ಬಳ್ಳೊಳ್ಳಿ ಇರಲಿಲ್ಲ ಅಂದ ಮಾತ್ರಕ್ಕೆ ತಕ್ಕಮಟ್ಟಿನ ಉಳ್ಳಾಗಡ್ಡೆ ಉಪಯೋಗ ಇತ್ತು. ಆದರೆ ಆದೂ ಕಮ್ಮಿ. ಹಬ್ಬಹರಿದಿನಗಳಲ್ಲಿ, ಊರ ಕಡೆಯ ಕಟ್ಟರ್ ಜನ ಆಗಮಿಸಿದಾಗ ಇರುತ್ತಿರಲಿಲ್ಲ. ಈಗಿನ ಜನ ನೋಡಿದರೆ ಉಳ್ಳಾಗಡ್ಡೆ ಇಲ್ಲದೇ ಅಡಿಗೆ ಮಾಡಲಿಕ್ಕೇ ಬರುವದಿಲ್ಲ ಅನ್ನುವ ತರಹ ಆಡುತ್ತಾರೆ. ನೀವು ಗೋಕರ್ಣಕ್ಕೆ ಹೋಗಿ. ಅಥವಾ ಬೇರೆ ಯಾವುದೇ ಪುಣ್ಯಕ್ಷೇತ್ರಗಳಿಗೆ ಹೋಗಿ. ಅಲ್ಲಿನ ಅರ್ಚಕರ ಮನೆಯಲ್ಲಿ ತಂಗಿ. ಆವಾಗ ಗೊತ್ತಾಗುತ್ತದೆ ಉಳ್ಳಾಗಡ್ಡೆ, ಬಳ್ಳೊಳ್ಳಿ ಮತ್ತಿತರ ರಾಜಸಿಕ ತಾಮಸಿಕ ಪದಾರ್ಥಗಳಿಲ್ಲದೆಯೂ ಹೇಗೆ ರುಚಿಕರವಾದ ಅಡಿಗೆ ಮಾಡಬಹುದು ಎಂದು. ಕಳೆದ ವರ್ಷ ದಿವಂಗತರಾದ ಪೂಜ್ಯ ತಂದೆಯವರ ಅಪರಕ್ರಿಯೆಗಳನ್ನು ಮುಗಿಸಲು ಗೋಕರ್ಣದಲ್ಲಿ ವಾರಗಟ್ಟಲೆ ಉಳಿದಿದ್ದೆವು. ಪದ್ಧತಿ ಪ್ರಕಾರ ಊಟ ತಿಂಡಿಯೆಲ್ಲ ನಮ್ಮ ಮನೆತನದ ಪುರೋಹಿತರ ಮನೆಯಲ್ಲೇ. ಅಬ್ಬಾ! ಎಂತಹ ರುಚಿಕರ ಊಟ! of course ಉಪ್ಪು ಮಿಶ್ರಿತ ನೀರಲ್ಲಿ ಬೆಳೆಯುವ ಗೋಕರ್ಣದ ತರಕಾರಿಗೆ ಅದರದ್ದೇ ಆದ ಹೆಚ್ಚಿನ ರುಚಿಯಿದೆ ಬಿಡಿ. ಆದರೂ ಉಳ್ಳಾಗಡ್ಡೆ ಬಳ್ಳೊಳ್ಳಿ ಇಲ್ಲದೆ  ರುಚಿಕಟ್ಟಾದ ಅಡಿಗೆ ಮಾಡುವ ಕಲೆಯನ್ನು ಅಂತಹ ಭಟ್ಟರಿಂದಲೇ ಕಲಿಯಬೇಕು ಬಿಡಿ!

ಮನೆ ಬಿಟ್ಟು ಹೊರಬಂದ ಮೇಲೆ ಬೇರೆ ಬೇರೆ ರೀತಿಯ ತಿಂಡಿ ತೀರ್ಥ ಎಲ್ಲ ಮಾಡಿದ್ದಾಯಿತು. ಉತ್ತರಭಾರತದ ಖಾದ್ಯಪದಾರ್ಥಗಳಲ್ಲಿ ಅದರಲ್ಲೂ ಮೊಗಲಾಯ್ ಖಾದ್ಯಗಳಲ್ಲಿ ಒಂದು ರೀತಿಯ ವಿಶಿಷ್ಟ ವಾಸನೆ ಇರುತ್ತಿತ್ತು. ಮೊದಮೊದಲಿಗೆ ಏನು ಅಂತ ಗೊತ್ತಾಗುತ್ತಿರಲಿಲ್ಲ. ಆಮೇಲೆ ಯಾರೋ ಹೇಳಿದರು, 'ಉತ್ತರ ಭಾರತದ ಎಲ್ಲ ಐಟಮ್ಮುಗಳಲ್ಲಿ ಬಳ್ಳೊಳ್ಳಿ ಮತ್ತು ಶುಂಠಿಯ ಪೇಸ್ಟ್ (garlic ginger paste) ಹಾಕುತ್ತಾರೆ. ಅದಿಲ್ಲದೇ ನಾರ್ತ್ ಇಂಡಿಯನ್ ಐಟೆಮ್ಸ ತಯಾರಾಗುವುದೇ ಇಲ್ಲ. ಅದರದ್ದೇ distinct ವಾಸನೆ ಮತ್ತು ಟೇಸ್ಟ್.'

ಸರಿ. ನಮ್ಮಲ್ಲಿನ ಬಳ್ಳೊಳ್ಳಿ ಹಾಕಿದ ಚಟ್ನಿಯಂತೆ ಅಡ್ಡವಾಸನೆಯೇನೂ ಬರುತ್ತಿಲ್ಲವಲ್ಲ. ಅಲ್ಲಿಗೆ ಎಲ್ಲಾ ಓಕೆ. ಹಾಕಿ ಜಮಾಯಿಸು. ಬರೋಬ್ಬರಿ ಕಟಿ ಗಂಟಲು ಮಟ!

ಬಳ್ಳೊಳ್ಳಿ ಕಡೆ ಗಂಭೀರವಾಗಿ ನೋಡುವ ಸಂದರ್ಭ ಹೋದ ವರ್ಷ ಬಂದು ಒದಗಿತು. ಅದೂ ಒಂದು ವಿಶಿಷ್ಟ ರೀತಿಯಲ್ಲಿ.

ಸೋದರಸಂಬಂಧಿಯ ಪತ್ನಿ ಧಾರವಾಡಕ್ಕೆ ಬಂದಿದ್ದಳು. ನಮಗೆ ಹಿರಿಯಕ್ಕನಂತವಳು. ತುಂಬಾ ಸಲುಗೆ ಇದೆ. ಆಕೆ ಬೆಳಿಗ್ಗೆ ಎದ್ದಾಕ್ಷಣ ಹಸಿ ಬೆಳ್ಳುಳ್ಳಿಯ ಎರಡು ಎಸಳು ತಿನ್ನುತ್ತಿದ್ದಳು. ನೋಡಿ ದಂಗು ಹೊಡೆದವನು ನಾನು.

'ಇದೇನು ಮಾರಾಯ್ತೀ!? ಮೊದಲೇ ದೊಡ್ಡ ಭಟ್ಟರ ಮನೆಯ ಹಿರಿಯ ಸೊಸೆ ನೀನು. ಅಂತವಳು ಇಷ್ಟು ಢಾಳಾಗಿ ಬೆಳ್ಳುಳ್ಳಿ ತಿನ್ನುವುದೇ!? ಶಾಂತಂ!ಪಾಪಂ! ಮುಗಿಯಿತು ಕಥೆ. ಹೋಯಿತು ನಿಮ್ಮ ಭಟ್ಟರ ಧರ್ಮ! ಜಾತಿ ಕೆಟ್ಟುಹೋಯಿತಲ್ಲೇ ಅತ್ತಿಗೆ!' ಎಂದು ತಮಾಷೆ ಮಾಡಿದೆ.

'ಇಲ್ಲ ಮಾರಾಯ. ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕೇ ಎಲ್ಲ ಕಟ್ಟುಪಾಡುಗಳನ್ನು ಮೀರಿ ಬೆಳ್ಳಂಬೆಳಿಗ್ಗೆ ಹಸಿ ಬಳ್ಳೊಳ್ಳಿ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇವೆ,' ಎಂದಳು.

'ಹಾಂ!? ಆರೋಗ್ಯಕ್ಕೆ ತುಂಬಾ ಒಳ್ಳೆಯದೇ? ಹೇಗೆ??'  ಎಂದು ಚಕಿತನಾಗಿ ಕೇಳಿದೆ.

ಕಥೆ ಹೇಳಿದಳು. ನನ್ನ ಸೋದರಸಂಬಂಧಿ (ಆಕೆಯ ಪತಿ) ಕೊಂಚ ಶೀತ ಥಂಡಿ ಪ್ರಕೃತಿಯವನು. ಕರಾವಳಿಯ ಒಣ ಹವೆಯಲ್ಲಿ ಆರಾಮಾಗೇ ಇದ್ದ. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಶೀತ ಥಂಡಿ ಜಾಸ್ತಿ ತೊಂದರೆ ಕೊಡತೊಡಗಿತು. ಅದೂ ಈಗಿನ ಕೆಲವು ವರ್ಷಗಳಲ್ಲಿ ಪರಿಸರ ಮಾಲಿನ್ಯ ವಿಪರೀತವಾಗಿ, ಶೀತ ಥಂಡಿ ತೊಂದರೆ ತುಂಬಾ ಉಲ್ಬಣಗೊಂಡು, ಪದೇಪದೇ ಎದೆ ಕಟ್ಟಿ ಉಸಿರಾಟಕ್ಕೆ ತೊಂದರೆ. ವೈದ್ಯರ ಬಳಿ ಹೋದರೆ ಮತ್ತೆ ಅದೇ ಟ್ರೀಟ್ಮೆಂಟ್. inhaler ಉಪಯೋಗಿಸಿ. ಅದು ತಾತ್ಕಾಲಿಕ ಶಮನ. ಎದೆ ಕಟ್ಟಿದಾಗೊಮ್ಮೆ inhaler ಉಪಯೋಗಿಸಬೇಕು. ಮತ್ತೆ ಕೆಲ ಸಮಯದ ನಂತರ ಅದೇ ಪ್ರಾಬ್ಲಮ್. ರಾತ್ರಿ ಎದ್ದು inhaler ಹೆಟ್ಟಿಕೊಳ್ಳಬೇಕು. ಇಲ್ಲವಾದರೆ ನಿದ್ದೆ ಅಸಾಧ್ಯ. ಹೀಗೆ ತುಂಬಾ ಹೈರಾಣಾಗಿ ಹೋದ ನಮ್ಮ ಸೋದರಸಂಬಂಧಿ (cousin). ತಿಂಗಳಿಗೆ ಡಜನ್ ಗಟ್ಟಲೆ inhaler ಬೇಕಾಗತೊಡಗಿತು.

ಆಗ ಯಾರೋ ಬೆಳಿಗ್ಗೆ ಎದ್ದು ಹಸಿ ಬಳ್ಳೊಳ್ಳಿ ತಿನ್ನುವ ಸಲಹೆ ಕೊಟ್ಟರಂತೆ. ಸಲಹೆ ಪಾಲಿಸಲು ಹಿಂದೆ ಮುಂದೆ ನೋಡಿದ. ಮೊದಲೇ ದೊಡ್ಡ ಭಟ್ಟರ ಮನೆತನದವನು. ಇಂಜಿನಿಯರಿಂಗ್ ಮಾಡಿ ಸಾಫ್ಟ್ವೇರ್ ಕರ್ಮಚಾರಿಯಾದರೂ ಇನ್ನೂ ಪೂಜೆ ಪುನಸ್ಕಾರ ಎಲ್ಲ ಮಾಡುವವನು. ಅಧ್ಯಾತ್ಮದಲ್ಲಿ ಹೆಚ್ಚಿನ ಆಸಕ್ತಿ ಉಳ್ಳವನು. ವೇದಾಧ್ಯಯನಕ್ಕೆ ಅನುಕೂಲವಾಗಲಿ ಎಂದು ಬಾಹ್ಯವಾಗಿ ಸಂಸ್ಕೃತ ಪರೀಕ್ಷೆ ಕಟ್ಟಿ ಉನ್ನತ ಶ್ರೇಣಿಯಲ್ಲಿ ಸಂಸ್ಕೃತದಲ್ಲಿ MA ಡಿಗ್ರಿ ಮಾಡಿಕೊಂಡ ಪ್ರತಿಭಾವಂತ. ಪರಿಶುದ್ಧ ಸನ್ಯಾಸಿಯೊಬ್ಬರ ಶಿಷ್ಯನಾಗಿ ಶ್ರದ್ಧೆಯಿಂದ ವೇದೋಪನಿಷತ್ತುಗಳನ್ನು ಅಧ್ಯಯನ ಮಾಡುತ್ತಿರುವ ಸಾಧಕ ಮನುಷ್ಯ. ಹೀಗಾಗಿ ಮುಂಜಾನೆ ಎದ್ದ ಕೂಡಲೇ ಬಳ್ಳೊಳ್ಳಿ ತಿನ್ನಿ ಅನ್ನುವ ಸಲಹೆಯನ್ನು ಪಾಲಿಸಲು ಅವನಿಗೆ ತುಂಬಾ ಇರುಸುಮುರುಸಾಯಿತು.

ಆದರೆ ಆರೋಗ್ಯದ ಪರಿಸ್ಥಿತಿ ಬಹಳ ಖರಾಬಾಗಿತ್ತು. ಆರೋಗ್ಯದ ಮುಂದೆ ಎಲ್ಲ ಗೌಣ. ಹಾಗಾಗಿ ಹೇಗೋ ಮಾಡಿ ಬೆಳ್ಳುಳ್ಳಿ ಸೇವನೆ ಶುರುಮಾಡಿದ. ನಿಯಮಿತವಾಗಿ ಮಾಡಿದ.

ಪರಿಣಾಮ ಮಾತ್ರ ಬೆರಗಾಗುವಂತಿತ್ತು!

ಒಂದೇ ತಿಂಗಳು! ಶೀತ, ಥಂಡಿ, ಎದೆ ಕಟ್ಟುವಿಕೆ ಎಲ್ಲ ಮಾಯ! ಮಂಗಮಾಯ! ಯಾವುದೇ ಬೇರೆ ಔಷಧೋಪಚಾರ ಬೇಕೇ ಆಗಲಿಲ್ಲ. ತನ್ನ ಎಲ್ಲ ಸಮಸ್ಯೆಗಳಿಂದ ಮುಕ್ತ! ಮುಕ್ತ!

ಅವನು ಬೆಳ್ಳುಳ್ಳಿ ಚಿಕಿತ್ಸೆಗೆ ಪೂರ್ತಿ committed. ಆದರೆ ಅವನ ಗುರುಗಳು ಹೇಳಿದರಂತೆ, 'ಭಟ್ಟರೇ, ವೇದಾಧ್ಯಯನ ಮಾಡುವವರಿಗೆ ಬೆಳ್ಳುಳ್ಳಿ ನಿಷಿದ್ಧ. ನಿಮಗೆ ತಿಳಿಯದ ವಿಷಯವೇನೂ ಅಲ್ಲ. ಅದರ ಬಗ್ಗೆ ವಿಚಾರ ಮಾಡಿ. ನಿಮ್ಮ ಸಾಧನೆಗೆ ಆ ರಾಜಸಿಕ ತಾಮಸಿಕ ಪದಾರ್ಥ ಅಡ್ಡಿಯಾಗದಿರಲಿ ಎಂಬುದಿಷ್ಟೇ ನಮ್ಮ ಕಾಳಜಿ.'

ಗುರುಗಳಿಗೆ ಎಲ್ಲ ವಿಷಯವನ್ನೂ ಸಾದ್ಯಂತ ತಿಳಿಸಿದ ಮೇಲೆ ಅವರೂ ಒಪ್ಪಿಕೊಂಡರು. ರುಚಿಗಾಗಿ ಬೆಳ್ಳುಳ್ಳಿ ತಿಂದರೆ, ಅದೂ ಇತಿಮಿತಿ ಮೀರಿ ತಿಂದರೆ ಮಾತ್ರ, ಅದು ತಾಮಸಿಕ, ರಾಜಸಿಕ ಮತ್ತು ಸಾತ್ವಿಕ ಜೀವನಶೈಲಿಗೆ ವಿರುದ್ಧವಾದುದು. ಔಷಧಿಗಾಗಿ ಸೇವಿಸಿದರೆ ಎಲ್ಲ ಓಕೆ. ಬಾರಾ ಖೂನ್ ಮಾಫ್!

ಇದನ್ನು ಕೇಳಿ ನನ್ನ ತಲೆಯಲ್ಲಿ ಬಂದಿದ್ದು ಏನಪ್ಪಾ ಅಂದರೆ ಔಷಧಿ ಅದು ಇದು ಅಂತ ಸಮರ್ಥನೆ ಕೊಟ್ಟುಕೊಂಡು ನಾವೇನೋ ಬೆಳಿಗ್ಗೆ ಬೆಳಿಗ್ಗೆ ಹಸಿ ಬಳ್ಳೊಳ್ಳಿ ತಿಂದು ಬಿಸಿನೀರು ಕುಡಿದು ಕೂತುಬಿಡಬಹದು. ನಮ್ಮ ಸುತ್ತಮುತ್ತಲಿನ ಜನರ ಗತಿ ಏನು ಸ್ವಾಮೀ!? ಬಳ್ಳೊಳ್ಳಿಯ ಉಸಿರಿನ (ಸು)ವಾಸನೆಯನ್ನು ಭರಿಸಬೇಕಾದವರು ಅವರು ತಾನೇ!??

An apple a day keeps the doctor away. A garlic a day keeps everyone away. - ಎಂದು ತಮಾಷೆ ಮಾಡುತ್ತಾರೆ. ದಿನಕ್ಕೊಂದು ಸೇಬು ಸೇವಿಸಿದರೆ ಅದು ವೈದ್ಯರನ್ನು ದೂರವಿಡುತ್ತದೆ. ಹಾಗೆಯೇ ದಿನಕ್ಕೊಂದು ಬೆಳ್ಳುಳ್ಳಿಯನ್ನು ಸೇವಿಸಿದರೆ ಅದು ಎಲ್ಲರನ್ನೂ ದೂರವಿಡುತ್ತದೆ. ವೈದ್ಯರನ್ನೂ ಒಳಗೊಂಡು.

ಅತ್ಯುತ್ತಮ ಔಷಧೀಯ ಗುಣಗಳ ಖನಿಯಾಗಿರುವ ಇಂತಹ ಬಳ್ಳೊಳ್ಳಿಯನ್ನು ಇನ್ನೊಬ್ಬರಿಗೆ ಮುಜುಗುರವಾಗದಂತೆ ಸೇವಿಸುವುದು ಹೇಗೆ?

ಅನೇಕ ಬೆಳ್ಳುಳ್ಳಿಯ capsule, ಮಾತ್ರೆ ಬಂದಿವೆ. ಅವನ್ನು ತೆಗೆದುಕೊಳ್ಳಬಹುದು. ಆದರೆ ಖ್ಯಾತ ವೈದ್ಯ ಡಾ. ಬಿ. ಎಂ. ಹೆಗ್ಡೆ ಹೇಳುತ್ತಾರೆ, 'ಬೆಳ್ಳುಳ್ಳಿಯ ಮಾತ್ರೆ, ಕ್ಯಾಪ್ಸುಲ್ ಉಪಯೋಗಕಾರಿಯಲ್ಲ. ಏಕೆಂದರೆ ಬೆಳ್ಳುಳ್ಳಿಯ ಔಷಧೀಯ ಗುಣಗಳು ಬಿಡುಗಡೆಯಾಗುವುದು ಬೆಳ್ಳುಳ್ಳಿಯನ್ನು ಕಚ್ಚಿದಾಗ ಅದರಿಂದ ಸ್ರವಿಸುವ ರಸದಲ್ಲಿರುವ ರಾಸಾಯನಿಕದಿಂದ. ಮಾತ್ರೆ ಕ್ಯಾಪ್ಸುಲ್ ತೆಗೆದುಕೊಂಡರೆ ಆ ಬೆನಿಫಿಟ್ ಸಿಗುವುದಿಲ್ಲ. ಸುಮ್ಮನೆ ದುಡ್ಡು ದಂಡ. ಔಷಧಿಯ ರೂಪದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಲೇಬೇಕು ಅಂತಾದರೆ ಹಸಿ ಬೆಳ್ಳುಳ್ಳಿಯನ್ನು ಕಚ್ಚಿ ತಿನ್ನಲೇಬೇಕು. ಬೇರೆ ದಾರಿಯಿಲ್ಲ!'

ಶಿವಾಯ ನಮಃ!!

ಎರಡು ತೊಂದರೆಗಳು. ಒಂದು ಹಸಿ ಬೆಳ್ಳುಳ್ಳಿಯ ಕಮಟು ರುಚಿ ಮತ್ತು ಘಾಟು. ಎಲ್ಲರಿಗೂ ಭರಿಸಲು ಸಾಧ್ಯವಿಲ್ಲ. ಮತ್ತು ಎರಡನೆಯ ತೊಂದರೆಯಂತೂ obvious. ಬೆಳ್ಳುಳ್ಳಿ ಹಾಕಿದ ಪದಾರ್ಥ ಸೇವಿಸಿದ ಮೇಲೆ ಅದೆಷ್ಟೇ ಚೆನ್ನಾಗಿ ಬ್ರಷ್ ಮಾಡಿದ ಮೇಲೂ ಅದರ 'ಸುವಾಸನೆ' ನಿರ್ಮೂಲವಾದ ಬಗ್ಗೆ ಖಾತ್ರಿಯಿರುವದಿಲ್ಲ. 'ನನ್ನ ಬಾಯಿ ಬೆಳ್ಳುಳ್ಳಿ ವಾಸನೆ ಹೊಡೆಯುತ್ತಿಲ್ಲ ತಾನೇ??' ಎಂದು ಕೇಳಿ ಖಾತ್ರಿ ಮಾಡಿಕೊಂಡಾಗಲೇ ಸಮಾಧಾನ. ಬೆಳ್ಳುಳ್ಳಿ ಮತ್ತು ಉಳ್ಳಾಗಡ್ಡೆ ಸೀದಾ ರಕ್ತ ಸೇರಿಬಿಡುತ್ತವೆ. ಏನೇನೋ ಬ್ರಷ್ ಮಾಡಿ, ಯಾಲಕ್ಕಿ ತಿಂದು, ಪಾನ್ ಹಾಕಿ ಬಾಯಿ ವಾಸನೆ ನಿವಾರಿಸಿಕೊಂಡರೂ ಬೆವರಿನ 'ಸುಗಂಧ'ದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಎರಡು ಸಲ ಸ್ನಾನ ಮಾಡಿಬಿಡಿ. ಬರೋಬ್ಬರಿ ಡಿಯೋಡರೆಂಟ್ ತಿಕ್ಕಿಕೊಳ್ಳಿ. ಅಷ್ಟರಮಟ್ಟಿಗೆ ಸೇಫ್ ಎಂದುಕೊಂಡಿದ್ದೇನೆ.

ಈ ಸಮಸ್ಯೆಗಳಿಗೆ ಒಂದು ಸಮಾಧಾನ ಸಿಕ್ಕಿದೆ. ಅದೇನಪ್ಪಾ ಅಂದರೆ... ಹಸಿ ಬೆಳ್ಳುಳ್ಳಿಯ ಎಸಳುಗಳನ್ನು ಚಿಕ್ಕದಾಗಿ ಕತ್ತರಿಸುವುದು. ನಂತರ ಒಂದು ಗ್ಲಾಸ್ ನೀರಿನೊಂದಿಗೆ ಅದನ್ನು ಮಾತ್ರೆಯಂತೆ ನುಂಗಿಬಿಡುವುದು. ಬೆಳ್ಳುಳ್ಳಿಯ ಎಸಳನ್ನು ಕತ್ತರಿಸುವುದು ಹಲ್ಲಿಂದ ಅಗಿದಿದ್ದಕ್ಕೆ ಸುಮಾರು ಸಮಾನ. ರಸವಂತೂ ಬಿಡುತ್ತದೆ. ರಸದಲ್ಲಿನ ಔಷಧಿಯುಕ್ತ ರಾಸಾಯನಿಕದ ಬೆನಿಫಿಟ್ ಸಿಗುತ್ತದೆ. ಜಗಿಯುವ ಉಸಾಬರಿ ಇಲ್ಲ. ಹಾಗಾಗಿ ಹೋದಲ್ಲೆಲ್ಲಾ ಬಳ್ಳೊಳ್ಳಿಯ (ಸು)ವಾಸನೆ ಹರಡುತ್ತಾ ವಾಯು ಮಾಲಿನ್ಯ ಮಾಡುವ ರಿಸ್ಕೂ ಇಲ್ಲ. ನಂತರ ಬರೋಬ್ಬರಿ ಬ್ರಷ್ ಮಾಡಿ, mouthwash ಹಾಕಿ ಬಾಯಿ ಮುಕ್ಕಳಿಸಿ, ಸ್ನಾನ ಮಾಡಿ, ಡಿಯೋಡರೆಂಟ್ ಬರೋಬ್ಬರಿ ಹೊಡೆದುಕೊಂಡು ಹೋದರೆ ಸಾಮಾನ್ಯ ಸಂದರ್ಭಗಳಲ್ಲಿ ಅಂತೂ ರಿಸ್ಕ್ ಇಲ್ಲ. ನಿಮಗೆ ಇನ್ನೂ intimate ಸಂದರ್ಭಗಳಿವೆ ಅಂದರೆ  ಉದಾಹರಣೆಗೆ dating ಹೋಗಬೇಕು, ಮಾಲು ಪಟಾಯಿಸಬೇಕು, ಕಿಸ್ ಹೊಡೆಯಬೇಕು, ಪಲ್ಲಂಗಾರೋಹಣ ಅಂತೆಲ್ಲಾ ಇದ್ದ ದಿನಗಳಲ್ಲಿ ಬೆಳ್ಳುಳ್ಳಿ ಚಿಕಿತ್ಸೆ ಬಿಡಬೇಕಾಗಬಹುದು.

ಈಗ ಒಂದು ವರ್ಷದಿಂದ ನಾನೂ ಬೆಳ್ಳುಳ್ಳಿ ಚಿಕಿತ್ಸೆ ಆರಂಭಿಸಿದ್ದೇನೆ. ಬೆಳಿಗ್ಗೆ ಎದ್ದಾಕ್ಷಣ ಎರಡು ಅಥವಾ ಮೂರು ಎಸಳುಗಳನ್ನು ಚಿಕ್ಕದಾಗಿ ಕತ್ತರಿಸಿ ನೀರಿನ ಜೊತೆ ನುಂಗಿಬಿಡುವುದು.

ಏನಾದರೂ ಉಪಯೋಗವಾಗಿದೆಯೇ? ಗೊತ್ತಿಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅದೇನೋ ಬೆಳ್ಳುಳ್ಳಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಕೇಳಿದ ಕಾರಣ ಶುರು ಮಾಡಿದ್ದು. ದೇವರ ದಯವೋ ಅಥವಾ ಬೆಳ್ಳುಳ್ಳಿಯ ಮಹಾತ್ಮೆಯೋ ಗೊತ್ತಿಲ್ಲ. ವರ್ಷಕ್ಕೆ ಒಂದೆರೆಡು ಬಾರಿ ಆಗುತ್ತಿದ್ದ ಸಣ್ಣ ಪ್ರಮಾಣದ flu ಅಂದರೆ ಜ್ವರ, ಮೈಕೈ ನೋವು, ಗಂಟಲ ನೋವು ಇತ್ಯಾದಿ ಆಗಿಲ್ಲ. ಕೊಂಚ ಆದರೂ ಹಿಂದೆಲ್ಲಾ ಆಗುತ್ತಿದ್ದ ದೊಡ್ಡ ಪ್ರಮಾಣದಲ್ಲಿ ಕಳೆದ ಒಂದು ವರ್ಷದಲ್ಲಿ ಆಗಿಲ್ಲ. ಅದು ಬೆಳ್ಳುಳ್ಳಿ ಚಿಕಿತ್ಸೆ ಪರಿಣಾಮವೋ ಅಥವಾ ಅರಿಶಿಣ ಹಾಕಿದ ಹಾಲಿನ ಪರಿಣಾಮವೋ ಅಥವಾ ವರ್ಷವೂ ತೆಗೆದುಕೊಳ್ಳುವ flu ಚುಚ್ಚುಮದ್ದಿನ ಪರಿಣಾಮವೋ ಗೊತ್ತಿಲ್ಲ.

ಸದ್ಯಕ್ಕಂತೂ ಬೆಳ್ಳುಳ್ಳಿ ಚಿಕಿತ್ಸೆ ಜಾರಿಯಲ್ಲಿರುತ್ತದೆ. ನಾವಂತೂ ಯಾವಾಗಲೂ ಮನೆಯಿಂದಲೇ ಕೆಲಸ ಮಾಡುವವರು. ಜನ ಸಂಪರ್ಕವೇ ಇಲ್ಲ. ಹಾಗಾಗಿ, ಇಷ್ಟೆಲ್ಲಾ preventive ಕ್ರಮ ತೆಗೆದುಕೊಂಡ ಮೇಲೂ, ಎಲ್ಲಾದರೂ ಅಪ್ಪಿ ತಪ್ಪಿ ಬೆಳ್ಳುಳ್ಳಿ (ಸು)ವಾಸನೆ ಹರಡಿದರೆ ಅದರಿಂದ ಯಾರಿಗೂ ತೊಂದರೆಯಿಲ್ಲ. ಸಾಮಾಜಿಕವಾಗಿ ಮಿಳಿತಗೊಳ್ಳಬೇಕಾದ ಸಂದರ್ಭಗಳು ಇದ್ದಾಗ ಹೆಚ್ಚಿನ precautions ತೆಗೆದುಕೊಂಡರಾಯಿತು.

ಬಳ್ಳೊಳ್ಳಿ ಉರ್ಫ್ ಬೆಳ್ಳುಳ್ಳಿ ಮಹಾತ್ಮೆ ಇನ್ನೂ ಬಹಳವಿದೆ. ನೀವೂ ಟ್ರೈ ಮಾಡಿ. ನಿಮ್ಮ ಆರೋಗ್ಯ ವೃದ್ಧಿಸಿದರೆ ಸಾಕು. ಬೇರೆಯವರ ಚಿಂತೆ ನಿಮಗ್ಯಾಕೆ? ಅವರ ಮೂಗು. ಅವರ ಕರ್ಮ. ಮೂಗು ಮುಚ್ಚಿಕೊಂಡು ಹೋಗ್ತಾ ಇರಲಿ ಬಿಡಿ! :)

Wednesday, November 13, 2019

ನಿದ್ದೆ (ಬಾರದಂತೆ ಮಾಡುವ) ಗುಳಿಗೆ

೧೯೮೭, ೮೮ ರ ಮಾತು. SSLC ವರ್ಷದ ಭಯಾನಕ ದಿನಗಳು ಅವು!

'ಮಹೇಶಾss' ಎಂದು ಉದ್ದಕ್ಕೆ ಊದ್ದವಾಗಿ ಕರೆದವನು ನನ್ನ ಖಾಸ್ ದೋಸ್ತ.

ಆ ಪುಣ್ಯಾತ್ಮ ಆ ರೀತಿಯಲ್ಲಿ ಕರೆದ ಅಂದರೆ ಮುಗಿಯಿತು. ಏನೋ ಬ್ರೇಕಿಂಗ್ ನ್ಯೂಸ್ ಕೊಡುವವನು ಇದ್ದಾನೆ ಎಂದು ಗ್ಯಾರಂಟಿ. ಆ ಮನುಷ್ಯನೇ ಹಾಗೆ. ಅವನಿಗೆ ಗೊತ್ತಿಲ್ಲದ ಸುದ್ದಿಯಿಲ್ಲ. ಊರ ಮಂದಿಯೆಲ್ಲರೂ ಅವನ ದೋಸ್ತರೇ. ಅವರ ತಲೆಯೊಳಗೆಲ್ಲ ಕೈ ಹಾಕಿ, ಮಿದುಳನ್ನೆಲ್ಲ ತಿರುವ್ಯಾಡಿ, ಮಾಹಿತಿ ಹೆಕ್ಕಿ, ಭಟ್ಟಿ ಇಳಿಸಿಟ್ಟುಕೊಂಡಿರುತ್ತಿದ್ದ. ಸ್ವಾರಸ್ಯಕರ ಮಾಹಿತಿಯುಳ್ಳ ಅಂತಹ ಖಡಕ್ ಭಟ್ಟಿ ಸಾರಾಯಿಯನ್ನು ನಮಗೆ ಕುಡಿಸುತ್ತಿದ್ದ. ನಂತರ ಅದರದ್ದೇ ಗುಂಗು.

xyz ನಮ್ಮ ಒಬ್ಬ ಸಹಪಾಠಿ. ಹೆಸರು ಬೇಡ ಬಿಡಿ.

'xyz ಅವರ ಅಪ್ಪ ಅವಂಗ ಗುಳಿಗಿ ತಂದು ಕೊಟ್ಟಾನಂತ! ನಿದ್ದಿ ಬರದಾಂಗ ಮಾಡತೈತಿ. ಅಂತಾ ಗುಳಿಗಿ!' ಅಂದುಬಿಟ್ಟ.

'ಏನೂ!!??' ಎಂದು ಉದ್ಗರಿಸಿದೆ.

'ನಿದ್ದಿ ಬರ್ಬಾರ್ದು. ಮಗಾ ಕುಂತ ರಾತ್ರಿಯೆಲ್ಲಾ ಓದ್ಲಿ ಅಂತ ಎಲ್ಲಿಂದಲೋ ಹುಡುಕಿ ತಂದುಕೊಟ್ಟಾನಂತ!' ಅಂದ ನಮ್ಮ ದೋಸ್ತ.

ನಿದ್ದೆ ಬರುವಂತೆ ಮಾಡುವ ನಿದ್ದೆ ಮಾತ್ರೆ ಬಗ್ಗೆ ಕೇಳಿ ಗೊತ್ತಿತ್ತು. ಆಗಿನ ಕಾಲದಲ್ಲಿ ನಿದ್ರೆ ಮಾತ್ರೆ ತೆಗೆದುಕೊಳ್ಳುವವರು ಭಾಳ ಕಮ್ಮಿ ಜನ. ನಿದ್ರೆ ಮಾತ್ರೆ ತೆಗೆದುಕೊಂಡರು ಅಂದರೆ ಆತ್ಮಹತ್ಯೆ ಮಾಡಿಕೊಳ್ಳಲು ತೆಗೆದುಕೊಂಡರು ಎಂದೇ ಅರ್ಥ.

ಹೀಗಿರುವಾಗ ಈ ಪುಣ್ಯಾತ್ಮ ನಿದ್ದೆ ಬಾರದಂತೆ ಮಾಡುವ ಮಾತ್ರೆಗಳೂ ಇರುತ್ತವೆ ಮತ್ತು ನಮ್ಮ ಸಹಪಾಠಿಯ ತಂದೆಯೊಬ್ಬ ಅವನಿಗೆ ಅವನ್ನು ತಂದುಕೊಟ್ಟಿದ್ದಾನೆ ಎಂದು ಹೇಳಿಬಿಟ್ಟ. ದೊಡ್ಡ ಬ್ರೇಕಿಂಗ್ ನ್ಯೂಸ್.

ಅದೋ SSLC ಕಾಲ. ಕೆಟ್ಟ ಬೋರಿಂಗ್ ಸಮಯ. ಅದಕ್ಕಿಂತ ದೊಡ್ಡ ಬೋರಿಂಗ್ ಪರೀಕ್ಷೆ. ವರ್ಷದ ಕೊನೆಗೆ ಒಂದು ದೊಡ್ಡ ಪರೀಕ್ಷೆ. ಅದ್ಯಾವ ಬುದ್ಧಿಮತ್ತೆಯನ್ನು ಪರೀಕ್ಷೆ ಮಾಡುವ ಪರೀಕ್ಷೆಯೋ ಎಂದು ನೋಡಿದರೆ ಅದರ ಕರ್ಮಕ್ಕೆ ಅದೊಂದು ದೊಡ್ಡ ಶಿಕ್ಷೆ ಬಿಟ್ಟರೆ ಏನೂ ಅಲ್ಲ. ೮,೯,೧೦ ತರಗತಿಗಳ ಮೂರು ವರ್ಷಗಳಲ್ಲಿ ಬಾಯಿಪಾಠ ಹೊಡೆದದ್ದನ್ನು (ಕಲಿತದ್ದನ್ನು ಅಲ್ಲ!) ಮೂರು ಘಂಟೆಯ ಆರು ಪರೀಕ್ಷೆಗಳಲ್ಲಿ ಕಕ್ಕಿ ಬರಬೇಕು. ಶಿವನೇ ಶಂಭುಲಿಂಗ!

ಗಣಿತ ಒಂದು ಬಿಟ್ಟರೆ ಮತ್ತೆಲ್ಲ ಭಾಷೆ ಮತ್ತು ವಿಷಯಗಳಲ್ಲಿ ಕಂಠಪಾಠಕ್ಕೆ (rote learning) ಹೆಚ್ಚು ಮಹತ್ವ. ಯಾಕೆಂದರೆ ಕೇಳಿದ ಪ್ರಶ್ನೆಗಳಿಗೆ ಬರೋಬ್ಬರಿ, ಅವರು ನಿರೀಕ್ಷೆ ಮಾಡಿದಂತೆ, ಬರೆದು ಒಗಾಯಿಸಿ ಬರಬೇಕು. ಹಾಗೆ ಬರೆದಾದ ಮೇಲೂ ಒಳ್ಳೆ ಮಾರ್ಕ್ಸ್ ಬರುತ್ತವೆ ಅಂತ ಖಾತ್ರಿಯಿಲ್ಲ.

ಪಠ್ಯ ಬಾಯಿಪಾಠ ಹೊಡೆಯಬೇಕು. ಜೊತೆಗೆ ಮಾಸ್ತರ್ ಮಂದಿ ಕೊಟ್ಟ ನೋಟ್ಸ್ ಇತ್ಯಾದಿ ಕಂಠಪಾಠ ಮಾಡಬೇಕು. ಜೊತೆಗೆ ಆಕಾಲದ ಗೈಡ್ ನಮೂನಿ ಪುಸ್ತಕಗಳಾದ ಮ್ಯಾಗಜಿನ್, ಬಂಧು, ಹದ ಮತ್ತೊಂದು ಮಗದೊಂದು ಎಲ್ಲವನ್ನೂ ಭಟ್ಟಿ ಇಳಿಸಿ ಮೆದುಳಿಗೆ ಇಳಿಸಿಕೊಳ್ಳಬೇಕು. ಕೆಲವರು ಬಾಯಿಪಾಠ ಮಾಡುತ್ತಿದ್ದರು. ಕೆಲವರು ಮತ್ತೆ ಮತ್ತೆ ಬರೆದು ತೆಗೆದು ತೆಗೆದು ತೈದು ಹೈರಾಣಾಗಿ ಹೋಗುತ್ತಿದ್ದರು. ಒಟ್ಟಿನಲ್ಲಿ ಏನೇನೋ ಮಂಗ್ಯಾನಾಟಗಳು SSLC ಎಂಬ ಶೂಲದಿಂದ ಬಚಾವಾಗಲು.

SSLC ಕರ್ಮ ಯಾರಿಗೂ ಬೇಡ ಶಿವನೇ! ಅದಕ್ಕೆ ಹೋಲಿಸಿದರೆ PUC ಎಷ್ಟೋ ಬೆಟರ್. ವಿಜ್ಞಾನದ ವಿಷಯಗಳಲ್ಲಿ ಅಷ್ಟೊಂದು ಕಂಠಪಾಠ ಹೊಡೆಯುವ ಅವಶ್ಯಕತೆ ಬರುತ್ತಿರಲಿಲ್ಲ. ಮತ್ತೆ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ವಿಷಯವೂ ಇರುತ್ತಿತ್ತು. ಒಳ್ಳೊಳ್ಳೆ ಪುಸ್ತಕಗಳೂ ಸಿಗುತ್ತಿದ್ದವು.

SSLC ವಿಷಯ ಕೇಳಬೇಡಿ. ಯಾವ ಯುದ್ಧ ಯಾವಾಗ ಶುರುವಾಯಿತು? ಯಾವ ಪುಣ್ಯಾತ್ಮ ರಾಜ ಯಾವಾಗ ಗೊಟಕ್ ಅಂದ? ಬೋಳ್ಕಾಳು (ಕರಿಮೆಣಸು) ವ್ಯಾಪಾರಕ್ಕೆ ಬಂದ ಬ್ರಿಟಿಷರು ಹೇಗೆಲ್ಲ ಬೋಳು ಕೆತ್ತಿ ನಮ್ಮ ದೇಶದ ಸಂಪತ್ತನ್ನು ಮುಂಡಾಯಿಸಿಬಿಟ್ಟರು? ಇಂತಹ ಅಸಂಬದ್ಧ ವಿಷಯಗಳಿಗೆಲ್ಲ, ಏಕ್ದಂ ಪಠ್ಯದಲ್ಲಿದಂತೇ, ಬರೆದು ಕಕ್ಕಬೇಕು. ಕರ್ಮ!

ಹೋಗಲಿ ಹೇಗೋ ಮಾಡಿ ಓದೋಣ, ಬಾಯಿಪಾಠ ಹೊಡೆಯೋಣ ಅಂದರೆ ಟೈಮ್ ಎಲ್ಲಿದೆ ಸ್ವಾಮಿ!? ಟೈಮ್! ಶಾಲೆಯಲ್ಲಿಯೇ ಸುಮಾರು ಎಂಟು ತಾಸು ಮೊಳೆ ಹೊಡೆಯುತ್ತಿದ್ದರು. ನಂತರ BSC ಅಂದರೆ Bright Students' Class ಎನ್ನುವ ಮತ್ತೊಂದು ತಾಸಿನ ಹೆಚ್ಚಿನ ಸ್ಕ್ರೂ ಮೊಳೆ, ಅದೂ ದೊಡ್ಡ ಸೈಜಿನದು. ಯಾವ ದಿಕ್ಕಿನಿಂದ ನೋಡಿದರೂ ಆ ಕ್ಲಾಸಿನಿಂದ ಹೊರಬಂದವರಾರೂ ಬ್ರೈಟ್ ಆಗಿ ಕಾಣುತ್ತಿದ್ದಿಲ್ಲ. ಮುಸ್ಸಂಜೆ ಬೆಳಕಿನಲ್ಲಿ, ಕೆಟ್ಟ ಹಸಿವಿನಿಂದ ರಕ್ತದಲ್ಲಿ ಶುಗರ್ ಕಮ್ಮಿಯಾಗಿ ಜೋಲಿ ಹೊಡೆಯುತ್ತಿರುವ ಡಿಮ್ ಹೊಡೆದ ಮಂಗ್ಯಾಗಳಂತೆ ಕಾಣುತ್ತಿದ್ದರು. ನನ್ನ ಪರಿಸ್ಥಿತಿಯಂತೂ ಹಾಗೇ ಇರುತ್ತಿತ್ತು.

ಮುಂಜಾನೆ ಹತ್ತೂವರೇ ಹನ್ನೊಂದರ ಹೊತ್ತಿಗೆ ಶಾಲೆಗೆ ಹೋದರೆ ಸಂಜೆ ಮನೆಗೆ ಬರುವ ತನಕ ಸಂಜೆ ಏಳು ಘಂಟೆ ಮೇಲೆ. ಬಂದು ತಿಂಡಿ ತೀರ್ಥ ಮಾಡಿದ ಮರುಕ್ಷಣವೇ ಕಣ್ಣೆಳೆಯುತ್ತಿದ್ದವು. ನಿದ್ದೆ ಒತ್ತರಿಸಿ ಬರುತ್ತಿತ್ತು. ಹೇಗೋ ಮಾಡಿ ಊಟದ ತನಕ ಎಳೆಯುತ್ತಿದ್ದೆ. ರೇಡಿಯೋ "ವಿವಿಧ ಭಾರತಿ"ಯಲ್ಲಿ ಕನ್ನಡದ ಹಾಡುಗಳು ಬರುತ್ತಿದ್ದವಲ್ಲ. ಸಣ್ಣಗೆ ಹಚ್ಚಿಕೊಂಡು ಅಥವಾ earphone ಕಿವಿಯಲ್ಲಿ ಹೆಟ್ಟಿಕೊಂಡು ಅಂದಿನ homework ಮಾಡಲು ಪ್ರಯತ್ನಿಸುತ್ತಿದ್ದೆ. ಮತ್ತೇ ಅವೇ ಬೋರಿಂಗ್ ವಿಷಯಗಳು. Nylon ಹೆಸರು ಹೇಗೆ ಬಂತು? ಬೆಂಜೀನ್ ಹೇಗೆ ಕಂಡುಹಿಡಿದ? ಇತ್ಯಾದಿ. Nylon ಅಂದರೆ New York London ಎಂದು ಮಾಸ್ತರ್ ಹೇಳಿದ್ದರು. ಆವಾಗ ಕೇಳಿದ್ದನ್ನು ಮತ್ತೆ ಸಂಶೋಧನೆ ಮಾಡಲು ಹೋಗಿಲ್ಲ. ಒಂದನ್ನೊಂದು ಹಿಂಬರ್ಕಿಯಲ್ಲಿ ಭೋಗಿಸುತ್ತಿದ್ದ ಹಾವುಗಳ ಕನಸನ್ನು ಕಂಡ ವಿಜ್ಞಾನಿ ಬೆಂಜೀನಿನ (Benzene) ರಚನೆ ಕಂಡುಹಿಡಿದಿದ್ದನಂತೆ. ಅಷ್ಟು ಖರಾಬಾಗಿ ಮಾಸ್ತರ್ ಹೇಳಿರಲಿಲ್ಲ. ಆದರೆ ಉಡಾಳರು ಮಾತ್ರ, 'ಆ ಹುಚ್ಚ ಸೂಳೆಮಗ ವಿಜ್ಞಾನಿಗೆ ನಾಗಪ್ಪಗಳು (ಹಾವುಗಳು) ಮು*ಳಿ ಹಡು ಕನಸು ಹ್ಯಾಂಗ ಬಿತ್ತಲೇ!?? ಹೋಗ್ಗೋ!' ಎಂದು ಕೇಕೆ ಹೊಡೆಯುತ್ತಿದ್ದುದು ಮಾತ್ರ ಇನ್ನೂ ನಿನ್ನೆ ಮೊನ್ನೆಯಂತೆ ನೆನಪಿದೆ.

ರಾತ್ರಿ ಒಂಬತ್ತರ ಸುಮಾರಿಗೆ ಊಟ ಮುಗಿಸಿ ಮತ್ತೆ ಓದಲು ಕುಳಿತರೆ ಹತ್ತು-ಹತ್ತೂವರೆ ಘಂಟೆ ಹೊತ್ತಿಗೆ ನಿದ್ದೆ ಸಿಕ್ಕಾಪಟ್ಟೆ ಬರುತ್ತಿತ್ತು. ಅದೆಷ್ಟೇ ಕಷ್ಟಪಟ್ಟರೂ ತಲೆ ಹೋಗಿ ಪುಸ್ತಕದ ಮೇಲೆ ಶಿವಾಯ ನಮಃ ಮಾದರಿಯಲ್ಲಿ ಪವಡಿಸಿಬಿಡುತ್ತಿತ್ತು. ಅದರಲ್ಲೇ ಚಿಕ್ಕ ಕನಸು ಬೇರೆ. ಅದರಲ್ಲಿ ಮತ್ತೆ ಹಿಂಬರ್ಕಿ ಹಾವುಗಳು ಕಂಡು ಬಂದಾಗಲೇ ಬೆಚ್ಚಿಬಿದ್ದು ಎದ್ದು ಕೂತು ಓದು ಮುಂದುವರೆಸಬೇಕು. ಹೀಗೆ ನಡೆಯುತ್ತಿತ್ತು ರಾತ್ರಿ ಓದು.

ಚಹಾ, ಕಾಫಿ ಟ್ರೈ ಮಾಡಿ ನೋಡಿಯಾಯಿತು. ನಿದ್ರಾದೇವಿ ಮತ್ತೂ ಚೆನ್ನಾಗಿ ಆವರಿಸಿಕೊಂಡಳು. ಮೈಯೆಲ್ಲಾ ಹಗುರಾಗಿ ಮತ್ತೂ ಒಳ್ಳೆ ನಿದ್ದೆ ಬರುತ್ತಿತ್ತು.

ನಮ್ಮ ಊರ ಕಡೆ ಯಾರೋ ಹೇಳಿದರು, 'ಜರ್ದಾ ಪಾನ್ ಹಾಕಿದರೆ ನಿದ್ರೆ ಬರುವುದಿಲ್ಲ...' ಎಂದು. ನಮ್ಮ ಊರ ಕಡೆ ರಾತ್ರಿಯೆಲ್ಲ ಯಕ್ಷಗಾನ ನಡೆಯುತ್ತದೆ ನೋಡಿ. ಅಲ್ಲಿ ಎಲ್ಲರೂ ಜರ್ದಾ ತಂಬಾಕಿನ ಕವಳ (ಎಲೆಯಡಿಕೆ) ಜಡಿದುಕೊಂಡೇ ಯಕ್ಷಗಾನ ನೋಡುತ್ತಾರೆ. ಪಾತ್ರಧಾರಿಗಳೂ ಕೂಡ ಕವಳ ಜಗಿಯುತ್ತಲೇ ಇರುತ್ತಾರೆ. ರಂಗದ ಮೇಲೆ ಬರುವ ಮೊದಲು ಬಣ್ಣದ ಚೌಕಿ (greenroom) ಮೂಲೆಯಲ್ಲೋ ಕವಳದ ಪಿಚಕಾರಿ ಹಾರಿಸಿ ಬಂದಿರುತ್ತಾರೆ. ರಂಗ ಬಿಟ್ಟು ಇಳಿದುಹೋದವರೇ ಮತ್ತೆ ಚಹಾ ಕುಡಿದು ಕವಳ ಹಾಕುತ್ತಾರೆ. ಮುಂದಿನ ದೃಶ್ಯಕ್ಕೆ ತಯಾರಾಗುತ್ತಾರೆ.

ಸರಿ ಜರ್ದಾ ಕೂಡ ಟ್ರೈ ಮಾಡಿನೋಡಿದ್ದಾಯಿತು. ಪುರಾತನ ದೋಸ್ತ್ ಪಠಾಣನ ಚುಟ್ಟಾ ಅಂಗಡಿಯಿಂದ ಕೊಂಚವೇ ಜರ್ದಾ ತಂದಿಟ್ಟುಕೊಂಡೆ. ರಾತ್ರಿ ಹತ್ತರ ಹೊತ್ತಿಗೆ ಎಲೆಯಡಿಕೆ ಮಾಡಿಕೊಂಡು ಕೊಂಚ ಜರ್ದಾ ಮಿಕ್ಸ್ ಮಾಡಿಕೊಂಡು ಹಾಕಿನೋಡಿದೆ. ಅಷ್ಟೇನೂ ಮಜಾ ಬರಲಿಲ್ಲ. ಇನ್ನೂ ಜರ್ದಾಕ್ಕೆ ಅಂಟಿಕೊಳ್ಳುವ ವಯಸ್ಸಾಗಿರಲಿಲ್ಲ ಅದು ಅನ್ನಿಸುತ್ತದೆ. ರುಚಿ ತಕ್ಕಮಟ್ಟಿಗೆ ಬಂದರೂ ಕವಳವನ್ನು ಕಚಾಪಚಾ ಎಂದು ಅಗಿಯುತ್ತ ಓದಲಾಗುತ್ತಿರಲಿಲ್ಲ. ಅದರಲ್ಲೂ ಆಸಕ್ತಿಯಿಲ್ಲದ ವಿಷಯಗಳನ್ನಂತೂ ರಾತ್ರಿ ಓದಲೇ ಆಗುತ್ತಿರಲಿಲ್ಲ. ಗಣಿತವನ್ನು ಎಷ್ಟಂತ ಓದೋಣ, ಎಷ್ಟಂತ ಅವೇ ಸಮಸ್ಯೆಗಳನ್ನು ಮತ್ತೆ ಮತ್ತೆ ಬಿಡಿಸೋಣ?

ಏನೇ ಮಾಡಿದರೂ ರಾತ್ರಿ ಹನ್ನೊಂದರ ಮೇಲೆ ನಿದ್ದೆ ತಡೆದುಕೊಳ್ಳುವುದು ಸಾಧ್ಯವೇ ಆಗುತ್ತಿರಲಿಲ್ಲ. ಕೆಲವರು ಅಂದರು, 'ಶಾಲೆಯಿಂದ ಬಂದ ತಕ್ಷಣ ನಿದ್ದೆ ಮಾಡಿಬಿಡು. ರಾತ್ರೆ ಎಷ್ಟೋ ಹೊತ್ತಿಗೆ ಎಚ್ಚರವಾಗುತ್ತದೆ. ಆವಾಗ ಎದ್ದು ಬೆಳಗಿನ ತನಕ ಓದಬಹುದು. ಬೆಳಿಗ್ಗೆ ಒಂದು ಸಣ್ಣ ನಿದ್ದೆ ತೆಗೆದರೆ ಸಾಕು.'

ಸರಿ. ಅದನ್ನೂ ಮಾಡಿ ನೋಡಿಯಾಯಿತು. ಅದೂ ಸರಿಯಾಗಲಿಲ್ಲ. ಸಂಜೆ ಏಳಕ್ಕೆ ಮಲಗಿ, ರಾತ್ರಿ ಊಟವಿಲ್ಲದೆ ಹನ್ನೆರೆಡು ಒಂದು ಘಂಟೆಗೆ ಎಚ್ಚರವಾದಾಗ ಎದ್ದು ಬಂದು ಅಡಿಗೆಮನೆಯಲ್ಲಿ ಧಡಂ ಧುಡುಂ ಮಾಡಿ, ಕೈಗೆ ಸಿಕ್ಕಿದ್ದನ್ನು ಮುಕ್ಕಿ ನಂತರ ಓದಬೇಕು. ಯಾರಿಗೆ ಬೇಕ್ರಿ ಆ ಕರ್ಮ? ಮನೆ ಮಂದಿ ಜೊತೆ ಊಟ ಮಾಡಿದರೆ ರುಚಿಯೋ ಪಚಿಯೋ, at least, ಬಿಸಿಬಿಸಿಯಾಗಿಯಾದರೂ ಸಿಗುತ್ತಿತ್ತು. ಬಿಸಿ ಬಿಸಿ ಫುಡ್ ಮಾರಾಯರೇ! ಕಡತ ಅಲ್ಲ! ಬಿಸಿ ಬಿಸಿ ಕಡತ ಕೊಡುವ ಕಾಲ ಎಲ್ಲ ಮುಗಿದಿತ್ತು. ಆಗಲೇ ಆರಡಿ ಎಂಬತ್ತು ಕೇಜಿ ಇದ್ದ ದೈತ್ಯನನ್ನು ತಡವಿಕೊಳ್ಳುವ ಉಪದ್ವಾಪಿತನ ಯಾರೂ ಮಾಡುತ್ತಿರಲಿಲ್ಲ. ಅದೇ ದೊಡ್ಡ ಪುಣ್ಯ!

ಒಟ್ಟಿನಲ್ಲಿ ರಾತ್ರಿಯೆಲ್ಲ ಓದಬೇಕು ಎನ್ನುವ ಇಚ್ಛೆ ಫೇಲ್ ಆಗಿತ್ತು. ಅಷ್ಟೆಲ್ಲ ಓದುವುದು ಏನಿರುತ್ತಿತ್ತೋ ಎಂದುಕೊಂಡರೆ ಅದೂ ಸರಿಯೇ. ನಿಜವಾಗಿ ಏನೂ ಇರುತ್ತಿರಲಿಲ್ಲ. ಆದರೆ ಓದಿದ್ದೆಲ್ಲ ನೆನಪಿರಬೇಕಲ್ಲ. ನನಗೆ ಪಠ್ಯವನ್ನು ಬಿಟ್ಟು ಬೇರೆಲ್ಲಾ ವಿಷಯ ಸಕತ್ತಾಗಿ ನೆನಪಿರುತ್ತಿತ್ತು. ಹಾಗಾಗಿ ಪಠ್ಯವನ್ನು ಮತ್ತೆ ಮತ್ತೆ ಓದಿದ್ದನ್ನೇ ಓದಬೇಕು. ಮತ್ತೆ ಮತ್ತೆ ಅದನ್ನೇ ಬರೆದು ಬರೆದು ತೆಗೆಯಬೇಕು. ಮೆದುಳಿನಲ್ಲಿ ಜಾಗ ಇಲ್ಲದಿದ್ದರೂ ಹೇಗೋ ಮಾಡಿ ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಮತ್ತೊಂದು ಜೋಪಡಿಯನ್ನು ಫಿಟ್ ಮಾಡಿದಂತೆ ಪಠ್ಯದ ಮಾಹಿತಿಯನ್ನೂ ಫಿಟ್ ಮಾಡಬೇಕು. SSLC ಕರ್ಮಕಾಂಡ.

ಬೆಳಿಗ್ಗೆ ಬೇಗ ಎದ್ದು ಓದೋಣ ಅಂದರೆ ತುಂಬಾ ಬೇಗನೆ ಏಳಬೇಕು. ಅದನ್ನೂ ಮಾಡಿಯಾಯಿತು. ನಾಲ್ಕಕ್ಕೆ ಐದಕ್ಕೆ ಎಲ್ಲ ಎದ್ದು ನೋಡಿಯಾಯಿತು. ಸೊಳ್ಳೆ ಕಾಟ. ಅವನ್ನು ಓಡಿಸಲು ಹಚ್ಚಿದ ಖಚುವಾ ಚಾಪ್ ಸೊಳ್ಳೆಬತ್ತಿಯ ಘಾಟು. ಅದನ್ನೆಲ್ಲ ಕೇರೇ ಮಾಡದ ಧಾರವಾಡದ ಗುಂಗಾಡುಗಳು. ಕ್ಷಣಕ್ಕೊಮ್ಮೆ ಫಟ್ ಫಟ್ ಅಂತ ಸೊಳ್ಳೆ ಹೊಡೆಯುತ್ತ, ಸಾಯುವಾಗ ಅವು ಕಾರಿಕೊಳ್ಳುತ್ತಿದ್ದ  ರಕ್ತವನ್ನು ಕಂಡು ವಾಕರಿಕೆ ಬಂದು, ಅದರ ವಾಸನೆಯನ್ನು 'ಆಸ್ವಾದಿಸಿ' ಹೇಸಿಗೆ ಪಟ್ಟುಕೊಳ್ಳುತ್ತ ಓದುವಷ್ಟರಲ್ಲಿ ಅತ್ಲಾಗೆ ನಿದ್ದೆಯೂ ಇಲ್ಲ, ಇತ್ಲಾಗೆ ಓದೂ ಇಲ್ಲ. ಆರು ಘಂಟೆ ನಂತರ ಎದ್ದರೆ ಸೊಳ್ಳೆಗಳು ಗಾಯಬ್ ಆಗಿರುತ್ತಿದ್ದವು. ಆದರೆ ಬೆಳಗಿನ ಮತ್ತದೇ ನಾಷ್ಟಾ, ಸ್ನಾನ, ಸಂಧ್ಯಾವಂದನೆ (ನೆನಪಾದಾಗ ಅಥವಾ ಬ್ರಾಹ್ಮಣ್ಯ ಅಮ್ಮನ ತಲೆಗೇರಿ ಅಮ್ಮ ಬಾಯ್ಬಾಯಿ ಬಡಿದುಕೊಂಡಾಗ ಅಥವಾ ಜನಿವಾರ ಹರಿದುಹೋದಾಗ ಮಾತ್ರ) .... ಇವುಗಳಲ್ಲಿಯೇ ಟೈಮ್ ಹೋಗುತ್ತಿತ್ತು. ಹತ್ತೂವರೆ ಆಗಿಬಿಡುತ್ತಿತ್ತು. ಮತ್ತೆ ಶಾಲೆಗೆ ಹೋಗು. ಮತ್ತದೇ ಮೊಳೆ. ಮತ್ತದೇ ದೊಡ್ಡ ಮೊಳೆ.

ಹೀಗೆ ನಿದ್ದೆಯ ಕಾರಣದಿಂದ ಜೀವನವೇ ಬೇಸರವಾಗಿಬಿಟ್ಟಾಗ ನಿದ್ದೆ ಬರದಿರುವಂತೆ ಮಾಡುವ ಗುಳಿಗೆ ಇರುತ್ತದೆ ಮತ್ತೆ ಧಾರವಾಡದಲ್ಲೂ ಸಿಗುತ್ತದೆ ಎನ್ನುವ ವಿಷಯ ತಿಳಿದು ಹೊಸದೊಂದು ಆಶಾಕಿರಣ ಮೂಡಿತ್ತು. ಎಲ್ಲ ಮಾಡಿ ಮುಗಿಸಿದ್ದಾಗಿದೆ. ಇದನ್ನೂ ಮಾಡಿನೋಡಬೇಕು ಎಂದುಕೊಂಡೆ.

ಸಹಪಾಠಿಯೊಬ್ಬನ ಅಪ್ಪ ತಂದುಕೊಟ್ಟಿದ್ದ ಎಂದು ಕೇಳಿದ್ದೆ. ಬಹಳ ಜನ ಮಿತ್ರರೂ ಆ ಸುದ್ದಿ ಕೇಳಿರಬಹುದು. ಆದರೆ ಯಾರೂ ಆ ಆಸಾಮಿ ಬಳಿ ಹೋಗಿ, 'ನಿಮ್ಮ ಅಪ್ಪಾರು  ಅದೇನೋ ನಿದ್ದಿ ಬಾರದಂತಹ ಗುಳಿಗಿ ತಂದುಕೊಟ್ಟಾರಂತಲ್ಲಲೇ. ಹೌದೇನು? ಯಾವ ಗುಳಿಗಿ? ಸ್ವಲ್ಪ ಮಾಹಿತಿ ಕೊಡಲ್ಲಾ,' ಎಂದು ಕೇಳಿದ್ದು ಸುಳ್ಳು. ಅಂತಹ ಅಸಡ್ಡಾಳ manners ಇಲ್ಲದ ಮಿತ್ರತ್ವ ಯಾರ ಮಧ್ಯೆಯೂ ಇರಲಿಕ್ಕಿಲ್ಲ ಅಂತ ನನ್ನ ಭಾವನೆ. ಮಾತ್ರೆ ಗುಳಿಗೆ ಎಲ್ಲ ವೈದ್ಯ ಮತ್ತು ರೋಗಿ ನಡುವಿನ ಖಾಸಗಿ ವಿಷಯ.

ಸಹಪಾಠಿಯ ಬಳಿ ಅಂತಹ ವಿಷಯ ಕೇಳಲು ಸಾಧ್ಯವಿರಲಿಲ್ಲ. ಕೇಳಿ ಅವನಿಗೆ awkward ಅನ್ನಿಸಿದರೇ? ಅವನು ಫೀಲ್ ಮಾಡಿಕೊಂಡರೇ? ಅವನಿಗೆ ಬೇಜಾರಾದರೇ? ಹಾಗೆಂದು ಅನ್ನಿಸಿತ್ತು. ಒಮ್ಮೊಮ್ಮೆ ಏನೋ ಪ್ರಶ್ನೆ ಕೇಳಿಬಿಡುತ್ತೇವೆ. reply ಬರುವುದಿಲ್ಲ. reaction ಬರುತ್ತದೆ. ಗೆಳೆತನ ಢಂ ಅಂದುಬಿಟ್ಟರೂ ಆಶ್ಚರ್ಯವಿಲ್ಲ. ಯಾವನಿಗೆ ಬೇಕು ಅದೆಲ್ಲ ಲಫಡಾ!

ಆದರೂ ಆ ನಿದ್ದೆ ಬಾರದಂತೆ ಮಾಡುವ ಮಾತ್ರೆ ಬಗ್ಗೆ ಭಯಂಕರ ಕುತೂಹಲವಂತೂ ಇತ್ತು. ಅಂತಹ ಮಾತ್ರೆ ತೆಗೆದುಕೊಳ್ಳುತ್ತಾನೆ ಎಂದು ಆಪಾದಿಸಿಪಟ್ಟಿದ್ದ ಆ ಸಹಪಾಠಿಯನ್ನು ಗಮನಿಸಿದೆ. ಆತನ ವರ್ತನೆಯಲ್ಲಂತೂ ಏನೂ ದೊಡ್ಡ ಬದಲಾವಣೆ ಕಂಡುಬರಲಿಲ್ಲ. ಭಟ್ಟರ ಶಾಲೆಯ ನೂರಾರು ಹಾಪ್ ವಿದ್ಯಾರ್ಥಿಗಳಲ್ಲಿ ಅವನೂ ಒಬ್ಬ. ಶುದ್ಧ ಯಬಡನ ಹಾಗಿದ್ದ. ಮಾತ್ರೆ ತೆಗೆದುಕೊಂಡಾದ ಮೇಲೂ ಹಾಗೇ ಕಂಡ.

ತಂದೆಯವರ ಜೊತೆ ನಾನು ತುಂಬಾ ಫ್ರೀ. ಅವರೂ ಹಾಗೇ. ಅವರ ಜೊತೆ ಸಾಕಷ್ಟು ಮಾತು ಕತೆ ಎಲ್ಲ ನಡೆಯುತ್ತಿತ್ತು. ಅವರ ಹತ್ತಿರವೇ ಕೇಳಿದೆ. ಹೀಗೆ, ಅದೇನೋ ನಿದ್ದೆ ಬರದಿರುವ ಮಾತ್ರೆ ಇದೆಯಂತೆ. ನಿಮಗೆ ಗೊತ್ತೇ?

'ಹೌದು. ಅದು ನಮ್ಮ ಕಾಲದಲ್ಲೂ ಇತ್ತು. ಆವಾಗಲೇ ಅದನ್ನು ಬ್ಯಾನ್ ಮಾಡಿದ್ದರು ಅಂತ ನೆನಪು. ಅದನ್ನು ತೆಗೆದುಕೊಂಡರೆ ನಿದ್ದೆಯೇನೋ ತಾತ್ಕಾಲಿಕವಾಗಿ ದೂರವಾಗುತ್ತಿತ್ತು. ಆದರೆ ಅಧ್ಯಯನ ಮಾಡಲು ಬೇಕಾಗುವಂತಹ ಏಕಾಗ್ರತೆ ಮಾತ್ರ ಬರುತ್ತಿರಲಿಲ್ಲ. ಎಷ್ಟೋ ದಿನಗಳ ಕಾಲ ಒಂದು ರೀತಿಯ ಅಸಹಜ ಅನ್ನಿಸುತ್ತಿತ್ತು. ಒಮ್ಮೆ ತೆಗೆದುಕೊಂಡವರಾರೂ ಮತ್ತೊಮ್ಮೆ ತೆಗೆದುಕೊಂಡಿದ್ದು ಸುಳ್ಳು. ಗಂಭೀರವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗೊತ್ತಾಗಿಬಿಡುತ್ತಿತ್ತು ಇದು ಉಪಯೋಗವಿಲ್ಲದ ಮಾತ್ರೆ. ಉಪಯೋಗಕ್ಕಿಂತ ತೊಂದರೆಯೇ ಜಾಸ್ತಿಯೆಂದು. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಸೂರ್ಯೋದಯದಿಂದ ಸೂರ್ಯಾಸ್ತದ ಒಳಗಿನ ಅವಧಿ ಬೇಕಾದಷ್ಟಿದೆ. ಬೆಳಿಗ್ಗೆ ಆರರಿಂದ ರಾತ್ರಿ ಹತ್ತರ ನಡುವೆ ಎಷ್ಟಾಗುತ್ತದೋ ಅಷ್ಟು ಕೆಲಸವನ್ನು, ಯೋಜನಾಬದ್ಧವಾಗಿ, ಮಾಡಿಕೊಳ್ಳಬೇಕು. ಪ್ಲಾನಿಂಗ್ ಮುಖ್ಯ. ಏಕಾಗ್ರತೆ ಮುಖ್ಯ,' ಅಂದರು ತಂದೆಯವರು. ಅವರು ಹಾಗೆಯೇ ಇದ್ದರು. ಬೆಳಿಗ್ಗೆ ಸೂಯೋದಯಕ್ಕೆ ಮೊದಲೇ ಎದ್ದಿರುತ್ತಿದ್ದರು. ಸೂರ್ಯಾಸ್ತದ ನಂತರ ವಿನಾಕಾರಣ ಎಲ್ಲೂ ಹೋಗುತ್ತಿರಲಿಲ್ಲ. ತುಂಬಾ ಶಿಸ್ತಿನ ಜೀವನಶೈಲಿ ಅವರದ್ದು.

ಹೆಚ್ಚಿನ ವಿಷಯ ಗೊತ್ತಾಯಿತು. ತಂದೆಯವರ ಕಾಲದಲ್ಲೇ ಬ್ಯಾನ್ ಮಾಡಲಾಗಿದ್ದ ಮಾತ್ರೆಯಾಗಿದ್ದರೆ ಈಗ ಸಿಗುವ ಚಾನ್ಸ್ ಕಮ್ಮಿ. ಆದರೂ ಸಿಕ್ಕಾಪಟ್ಟೆ curiosity. ಒಮ್ಮೆ ಟ್ರೈ ಮಾಡಿ ನೋಡೇಬಿಡಬೇಕು. ಯಾರಿಗೆ ಗೊತ್ತು ನಮ್ಮ ದೇಹಪ್ರಕೃತಿಗೆ ಒಗ್ಗಿದರೂ ಒಗ್ಗೀತು. ಮಾತ್ರೆ ಸಿಕ್ಕು, ಒಗ್ಗಿಬಿಟ್ಟರೆ ರಾತ್ರಿಯೆಲ್ಲ ವಿದ್ಯಾಯಜ್ಞ ಮಾಡಿಬಿಡಬಹುದು. ವಿದ್ಯಾರ್ಜನೆಯನ್ನು ತಪಸ್ಸಿನಂತೆ ಮಾಡಬೇಕಂತೆ. ತಪಸ್ಸು ಮಾಡುವವರಿಗೆ ರಾತ್ರಿಯಾದರೇನು, ಹಗಲಾದರೇನು? ಅಲ್ಲವೇ?

ಆ ಕಾಲದಲ್ಲಿ ನಮಗೆ ಗೊತ್ತಿದ್ದ ಮೆಡಿಕಲ್ ಅಂಗಡಿಗಳೆಂದರೆ ಮಾಳಮಡ್ಡಿಯಲ್ಲಿದ್ದ 'ಸುಯೇಶ್ ಮೆಡಿಕಲ್ಸ್' ಮತ್ತು ಪೇಟೆಯಲ್ಲಿದ್ದ 'ಕರ್ನಾಟಕ ಫಾರ್ಮಸಿ' ಮತ್ತು 'ಹೆಗಡೆ ಮೆಡಿಕಲ್ಸ್'. ಪೇಟೆ ದೂರ. ಮಾಳಮಡ್ಡಿ ಹತ್ತಿರ.

ಒಂದು ದಿನ ಸಂಜೆ ಮಾಳಮಡ್ಡಿ ಕಡೆ ಹೋದೆ. ಸುಯೇಶ್ ಮೆಡಿಕಲ್ಸ್ ಮೆಟ್ಟಿಲು ಹತ್ತಿದೆ. ನಾಡಕರ್ಣಿ ಬಾಯಿ ಕಂಡರು. ಅವರಿಗೆ ನನ್ನ ಪರಿಚಯ ಸಿಕ್ಕಿರಲಿಕ್ಕಿಲ್ಲ ಎಂದುಕೊಂಡೆ. ಕುಟುಂಬಸ್ನೇಹಿತರೇ ಆದರೂ ಸಣ್ಣವರಿದ್ದಾಗ ನೋಡಿರಬಹುದು ಅಷ್ಟೇ. ಅವರನ್ನು ಮಾತ್ರ ನಾವು ನೋಡಿಕೊಂಡೇ ಬೆಳೆದವರು.

ಔಷಧಿ ಅಂಗಡಿ ನಾಡಕರ್ಣಿ ಬಾಯಿ 'ಏನು? prescription ಎಲ್ಲಿ? ಕೊಡಿ,' ಎನ್ನುವಂತೆ ತಲೆ ಕುಣಿಸಿದರು.

ಏನು ಹೇಳಬೇಕು? What a difficult situation! ಮಾತ್ರೆ ಹೆಸರೇ ಗೊತ್ತಿಲ್ಲ. prescription ಎಲ್ಲಿಂದ ತರೋಣ?

'ಅದು...ಅದು.... ಅದೇನೋ ನಿದ್ದಿ ಬರದಿರುವಂತಹ ಗುಳಿಗಿ ಇರ್ತದಂತಲ್ಲರೀ. ಅದು ಅದರೀ???' ಅನ್ನುವಷ್ಟರಲ್ಲಿ ಸಾಕಾಗಿ ಹೋಗಿತ್ತು. ದೇಹ ಎಂಬುದು ಎಲ್ಲೆಲ್ಲೋ ಹೇಗೇಗೋ ಬೆಂಡಾಗಿ ಹೋಗಿತ್ತು. Sheer embarrassment ಅಂದರೆ ಏನು ಅಂತ ಗೊತ್ತಾಗಿತ್ತು.

ನಾಡಕರ್ಣಿ ಬಾಯಿಗೆ ಏನು ಕೇಳುತ್ತಿದ್ದೇನೆ ಎಂದು ಮೊದಮೊದಲು ಅರ್ಥವಾಗಲೇ ಇಲ್ಲ. ಅಥವಾ ಮಜಾ ತೆಗೆದುಕೊಳ್ಳೋಣ ಅಂತ ಬೇಕಂತಲೇ ಮತ್ತೆ ಮತ್ತೆ 'ಏನು?? ಏನು??' ಎಂದು ಕೊಂಕಣಿ accent ಕನ್ನಡದಲ್ಲಿ ಉಲಿದರೋ ಗೊತ್ತಿಲ್ಲ.

ಅಕ್ಕಪಕ್ಕದಲ್ಲಿ ಜನರಿದ್ದಾರೆ. ಈ ಮೇಡಂ ಬೇರೆ ಮತ್ತೆ ಮತ್ತೆ ಕೇಳುತ್ತಿದ್ದಾರೆ. ನನಗೋ ಏನು ಕೇಳಬೇಕೆಂಬುದೇ ಗೊತ್ತಿಲ್ಲ. ಕರ್ಮ ಮಾರಾಯರೇ!

ಹೇಗೋ ಮಾಡಿ ಮತ್ತೆ ಹೇಳಿದೆ. ಒಂದು ಹಂತದ ನಂತರ ನಾಡಕರ್ಣಿ ಬಾಯಿಗೆ ಅದೆಷ್ಟು ತಿಳಿಯಿತೋ ಬಿಟ್ಟಿತೋ ನನಗೆ ಗೊತ್ತಿಲ್ಲ. ಈ ಅಡ್ನಾಡಿ ಗಿರಾಕಿಯನ್ನು ಸಾಗಹಾಕೋಣ ಅಂದುಕೊಂಡರೋ ಏನೋ ಗೊತ್ತಿಲ್ಲ. 'ಹೇ!!ಹೇ!!' ಎಂದು ಹುಚ್ಚಪ್ಯಾಕಡೂ ನಗೆ ನಕ್ಕು, 'ನಮ್ಮ ಕಡೆ ಅವೆಲ್ಲಾ ಇಲ್ಲ!!ಹೀ!!ಹೀ!!' ಎಂದು ನಕ್ಕರು.

ಅವರಲ್ಲಿ pharmacist ಎಂದು ಕೆಲಸ ಮಾಡಿಕೊಂಡಿದ್ದ ಹೊಂಬಳ ಆಚಾರರ ಕಡೆ ನೋಡಿದರು. ಅವರಿಬ್ಬರೂ ಖುಲ್ಲಾ ಮಾತಾಡಲಿಲ್ಲ ಆದರೂ ಏನೋ ಮಾತಾಡಿಕೊಂಡು ನನ್ನ ಮೇಲೆ ತಮಾಷೆ ಮಾಡಿಕೊಂಡು ನಕ್ಕಂತೆ ನನಗೆ ಅನ್ನಿಸಿತು. ಎಷ್ಟು ನಿಜವೋ ಸುಳ್ಳೋ. ಹೊಂಬಳ ಆಚಾರರೂ ಪರಿಚಯದವರೇ. ಅವರಿಗೂ ನನ್ನ ಗುರುತು ಸಿಕ್ಕಹಾಗಿರಲಿಲ್ಲ. ಗುರುತು ಸಿಕ್ಕು ಲಫಡಾ ಆಗುವ ಮುನ್ನವೇ ಕಳಚಿಕೊಂಡೆ.

ಮಾತ್ರೆ ಮಾತ್ರ ಸಿಗಲಿಲ್ಲ. ಹೋಗಿ ಹೋಗಿ ನಾಡಕರ್ಣಿ ಬಾಯಿಗೆ ಪುಕ್ಕಟೆಯಾಗಿ ತಮಾಷೆ ಮಾಡಿಕೊಂಡು ನಗಲು ಅವಕಾಶಮಾಡಿಕೊಟ್ಟು ಬಂದೆನಲ್ಲಾ ಎಂದು ಬೇಸರವಾಯಿತು. ರಾತ್ರಿ ಮನೆಗೆ ಹೋದ ನಾಡಕರ್ಣಿ ಬಾಯಿ ಕಿಟ್ಟೆಲ್ ಕಾಲೇಜಿನಲ್ಲಿ ಮಾಸ್ತರಿಕೆ ಮಾಡಿಕೊಂಡಿದ್ದ ಅವರ ಗಂಡನ ಎದುರು ಅದೆಷ್ಟು ತಮಾಷೆ ಮಾಡಿಕೊಂಡು ನಕ್ಕಿರಬಹುದು ಎಂದು ಊಹಿಸಿಕೊಂಡರೆ ಕೆಟ್ಟ ಮುಜುಗರ embarrassment. ಶಾಲೆ ಹತ್ತಿರವೇ ಇದ್ದ ಮೆಡಿಕಲ್ ಶಾಪ್. ಇಂತಹ ಯಬಡ ವಿದ್ಯಾರ್ಥಿಗಳು ಅದೆಷ್ಟು ಜನ ಇಂತಹ ಚಿತ್ರವಿಚಿತ್ರ ಮಾತ್ರೆ ಮಣ್ಣು ಮಸಿ ಕೇಳಿಕೊಂಡು ಬರುತ್ತಿದ್ದರೋ? ನಾಡಕರ್ಣಿ ಬಾಯಿಗೆ ಉಚಿತವಾಗಿ ಮನರಂಜನೆ ಕೊಟ್ಟು ಹೋಗುತ್ತಿದ್ದರೋ?

ಒಟ್ಟಿನಲ್ಲಿ ನಿದ್ದೆಯನ್ನು ದೂರಮಾಡುವಂತಹ ಗುಳಿಗೆ ಎಲ್ಲೂ ಸಿಗಲಿಲ್ಲ. ಸಹಪಾಠಿಯನ್ನು ಕೇಳುವ ಧೈರ್ಯವಾಗಲಿಲ್ಲ. ಧೈರ್ಯಕ್ಕಿಂತ ಆ ತರಹದ ಸಲಿಗೆ ಯಾರ ಜೊತೆಗೂ ಬಂದಿಲ್ಲ. ಎಂತಹ ಆಪ್ತ ಮಿತ್ರರೇ ಇರಲಿ ಕೆಲವೊಂದು ವಿಷಯಗಳನ್ನು ಕೇಳಲು ಸಾಧ್ಯವಿಲ್ಲ. ಕೇಳಲೂಬಾರದು. ಹಾಗಂತ ನನ್ನ ಭಾವನೆ. ಅಂತಹ ಇತಿಮಿತಿಗಳನ್ನು ಹಾಕಿಕೊಂಡಾಗ ಮಾತ್ರ ಗೆಳೆತನಗಳು ಬಾಳುತ್ತವೆ. ಕೆಲವು ಜನರನ್ನು ನೋಡಿದ್ದೇನೆ. ಕೊಂಚ ಸಲಿಗೆ ಕೊಟ್ಟರೆ ಸಾಕು ತಲೆ ಮೇಲೆ ಹತ್ತಿ ಕೂಡುತ್ತಾರೆ. ಏನೇನೋ ಕೇಳುತ್ತಾರೆ. ಏನು ಮಾತಾಡುತ್ತಿದ್ದಾರೆ, ಅದರ ಪ್ರಭಾವವೇನಾಗುತ್ತದೆ ಎನ್ನುವ ಖಬರೇ ಇರುವುದಿಲ್ಲ. ಅಂತಹ ಜನರಿಗೆ ಗೆಳೆತನದ ಬಗ್ಗೆ ನೈಜ ಕಾಳಜಿಯೂ ಇರುವುದಿಲ್ಲ. ಬಂದರೆ ಬೆಟ್ಟ ಹೋದರೆ ಜುಟ್ಟ ಮಾದರಿಯಲ್ಲಿ ಅವರ ವರ್ತನೆ. ಅಂತವರನ್ನು ನಿಮ್ಮ ಆಪ್ತವಲಯದಿಂದ ಒದ್ದು ಹೊರಗಾಕಿ. ನಾನಂತೂ ಮುಲಾಜಿಲ್ಲದೆ ಹೇಳಿಬಿಡುತ್ತೇನೆ. ಇಂತಹ ವರ್ತನೆ ಅಸಹ್ಯ. Unacceptable. ತಿದ್ದಿಕೊಂಡು ಇರುವುದಾದರೆ ಇರು. ಇಲ್ಲ ರೈಟ್ ಹೇಳ್ತಾ ಇರು. ನಿಮ್ಮಂತಹ ಮಿತ್ರರು ಬೇಕಿಲ್ಲ.

ಇಷ್ಟೆಲ್ಲಾ ಆದರೂ, ಈಗ ವಿಚಾರ ಮಾಡಿದರೆ, ಆ ಸಹಪಾಠಿ ನಿದ್ದೆ ಬಾರದಿರುವಂತಹ ಮಾತ್ರೆ ತೆಗೆದುಕೊಂಡಿದ್ದನೇ ಎಂಬುದಕ್ಕೆ ಖಚಿತ ಉತ್ತರವಿಲ್ಲ. ಹಾಗಂತ ಸುದ್ದಿ ಹೇಳಿದ್ದ ಮಿತ್ರ ಕೊಂಚ ಮಸಾಲೆ ಹಾಕಿ, ಅದೂ ಜಾಸ್ತಿಯೇ ಮಸಾಲೆ ಹಾಕಿ, ಸುದ್ದಿ ಹೇಳುತ್ತಿದ್ದ ಎಂದು ಆಗ ಗೊತ್ತಿರಲಿಲ್ಲ. ನಂತರ ಗೊತ್ತಾಯಿತು. ಹಾಗಾಗಿ ಆವಾಗಲೂ ಹಾಗೇ ಪಂಟು ಹೊಡೆದಿದ್ದನೇನೋ ಅಂತ ಡೌಟ್. ಕೇಳುವ ಹಾಗಿಲ್ಲ. ಮತ್ತದೇ ನಾವೇ ಹಾಕಿಕೊಂಡ ಲಕ್ಷ್ಮಣ ರೇಖೆ. ಅವನ ಹತ್ತಿರ 'ಲೇ, ನಿಮ್ಮಪ್ಪ ನಿನಗ ನಿದ್ದಿ ಬರದಾಂಗ ಮಾಡು ಗುಳಗಿ ತಂದುಕೊಟ್ಟಾ?' ಎಂದು ಕೇಳುವ ಹಾಗಿಲ್ಲ. ಸುದ್ದಿ ಕೊಟ್ಟವನ ಹತ್ತಿರ, 'ಲೇ, ನೀ ಖರೇ ಸುದ್ದಿ ಹೇಳಿದ್ಯೋ? ಅಥವಾ ಚೌಕ್ ಗುಳಿಗಿ ಉಳ್ಳಸ್ಲಿಕತ್ತಿಯೋ?' ಎಂದೂ ಕೇಳುವಂತಿಲ್ಲ. ನಮ್ಮ ಕಾಲದಲ್ಲಿ ಚೌಕ್ ಗುಳಿಗೆ ಉಳ್ಳಿಸುವುದು ಅಂದರೆ ರೈಲು ಬಿಡುವುದು ಅಂದರೆ ಬುರುಡೆ ಬಿಡುವ ಬುರುಡೆ ಬ್ರಹ್ಮಾಂಡ ಕೋವಿದರು ಬೇಕಾದಷ್ಟು ಜನರಿದ್ದರು. ಹಾಗಾಗಿ ಎಲ್ಲವನ್ನೂ ಸೀದಾ ನಂಬುವಂತಿಲ್ಲ.

ರಾತ್ರಿಯ ನಿದ್ದೆಗೆ ಪರಿಹಾರ ಕೊನೆಗೆ ದೊರೆಯಿತು ಅನ್ನಿ. ಇಷ್ಟವಾದ ವಿಷಯಗಳನ್ನು ಓದುತ್ತ ಕುಳಿತಾಗ ಅಥವಾ ಕಠಿಣವಾದ ಸಮಸ್ಯೆಯೊಂದನ್ನು ಹಿಡಿದು ಕುಳಿತಾಗ ವೇಳೆ ಹೋಗಿದ್ದು ಗೊತ್ತಾಗುತ್ತಲೇ ಇರುತ್ತಿರಲಿಲ್ಲ. ಎಷ್ಟೋ ಹೊತ್ತಿನ ನಂತರ ನೋಡಿದರೆ ಗಡಿಯಾರ ರಾತ್ರಿ ಎರಡು ಮೂರು ನಾಲ್ಕು ಘಂಟೆ ತೋರಿಸಿದ್ದೂ ಇದೆ. ಇಡೀ ರಾತ್ರಿ ಪ್ರಾಜೆಕ್ಟ್ ರಿಪೋರ್ಟ್, ಪೇಪರ್ ಬರೆದು ಮುಗಿಸಿ, ಮರುದಿವಸ ಕೆಲಸವನ್ನೂ ಮಾಡಿ, ಸಂಜೆ ಕ್ಲಾಸಿಗೂ ಹೋಗಿ, ಬಾಕಿ ಉಳಿದ ನಿದ್ದೆಯ ಸ್ಟಾಕನ್ನು ವಾರಾಂತ್ಯದಲ್ಲಿ ದಿನಪೂರ್ತಿ ನಿದ್ದೆ ಹೊಡೆದು ಪರಿಹಾರ ಮಾಡಿಕೊಂಡಿದ್ದೂ ಇದೆ. ಎಲ್ಲ ನಿಮ್ಮ ನಿಮ್ಮ ಇಷ್ಟದ ಮೇಲೆ ಹೋಗುತ್ತದೆ. ಕೆಲವರಿಗೆ ಗಣಿತದ ಪುಸ್ತಕ ಹಿಡಿದರೆ ನಿದ್ದೆ ಬರುತ್ತದೆ. ನಮಗೆ ಇತಿಹಾಸ, ಭೂಗೋಳ ತೆಗೆದೆರೆ ನಿದ್ರೆ ಬರುತ್ತದೆ. ಒಟ್ಟಿನಲ್ಲಿ ಇಷ್ಟವಾದ ವಿಷಯ ತೆಗೆದುಕೊಂಡು ಕೂತರೆ ಓದುವ ಸುಖವೇ ಸುಖ. ಆಗ ನಿದ್ದೆಗೆ ನಿದ್ದೆ ಬಂದಿರುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೂ ಆರೋಗ್ಯಕರ ಜೀವನಶೈಲಿ ಎಂದರೆ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ಮಧ್ಯದ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುವುದು. ಅದು ಎಲ್ಲಕ್ಕಿಂತ ಉತ್ತಮ.

ನಿದ್ದೆಯನ್ನು ಕಮ್ಮಿ ಮಾಡಿ ಜೀವಿಸುತ್ತೇನೆ. ಹಾಗೆ 'ಉಳಿಸಿದ' ಸಮಯವನ್ನು 'ಗಳಿಸಲು' ಬಳಸುತ್ತೇನೆ ಎನ್ನುವುದು ಮೂರ್ಖತನ. ದೇಹಕ್ಕೆ ಚೆನ್ನಾಗಿ ಗೊತ್ತು ಎಷ್ಟು ನಿದ್ದೆ ಬೇಕು ಮತ್ತು ಅದನ್ನು ಹೇಗೆ ತೆಗೆಯಬೇಕು ಎಂದು. ಯಾವಾಗಲೋ ಒಮ್ಮೆ, ಅನಿವಾರ್ಯ ಕಾರಣಗಳಿಗಾಗಿ, ನಿದ್ದೆಗೆ ಖೋತಾ ಮಾಡಿಕೊಂಡರೆ ಓಕೆ. ದೇಹ ಮಾಫ್ ಮಾಡಿ ಸಮಯ ಸಿಕ್ಕಾಗ ನಿದ್ದೆಯ ಕೊರತೆಯನ್ನು ನೀಗಿಸಿಕೊಳ್ಳುತ್ತದೆ. ಪದೇ ಪದೇ ನಿದ್ದೆಗೆ ಖೋತಾ ಮಾಡಿಕೊಂಡರೆ ಆರೋಗ್ಯ ಎಕ್ಕುಟ್ಟಿಹೋಗುವುದರಲ್ಲಿ ದೂಸರಾ ಮಾತೇ ಇಲ್ಲ. ನಿದ್ದೆ ನಿಜವಾಗಿಯೂ ಭಾಗ್ಯ. ಮಲಗಿದಾಕ್ಷಣ ನಿದ್ದೆ ಬಂದುಬಿಟ್ಟರೆ ಅದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ!

Friday, September 13, 2019

Puppies available @Dharwad

Update, 4-Nov-2019: All pups have found loving homes. Thanks for your interest and enquiry.

Our neighbor in Dharwad has five puppies available.

3 male and 2 female.

Approximately 7 weeks old. Healthy and well cared for. Looking for loving homes and committed owners.

If you are interested to check out, please e-mail me at maheshuh@gmail.com. I will provide our neighbor's contact details. You can visit and check out the pups.

Pups' mother is Mudhol hound cross breed. Pups, I think, are cross breed of cross breed of Mudhol hound.

Mother dog is one of the friendliest and most loving dogs that I have ever met in my life. She is adorable and so are her pups. This is the second litter.

Hurry! these excellent pups won't last long.

Feel free to share with your friends on FB, WhatsApp etc. Thanks in advance.










ಡ್ರಗ್ ಮಾಫಿಯಾಕ್ಕೆ ಮರ್ಮಾಘಾತ ಕೊಟ್ಟ ಅಮೇರಿಕಾದ DEA

ಅಮೇರಿಕಾದ ಮಾದಕ ವಸ್ತು ನಿಗ್ರಹ ದಳ (DEA - Drug Enforcement Agency) ಖುಷಿಯಲ್ಲಿದೆ. ಕೀನ್ಯಾ ಮೂಲದ ಮಾದಕ ದ್ರವ್ಯಗಳ ಕುಖ್ಯಾತ ಖದೀಮರಿಗೆ ದೊಡ್ಡ ಪ್ರಮಾಣದ ಶಿಕ್ಷೆಯಾಗಿದೆ. ಖತರ್ನಾಕ್ ಆಕಾಶಾ ಸಹೋದರರು ಮೂವತ್ತಕ್ಕೂ ಹೆಚ್ಚು ವರ್ಷಗಳ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿದ್ದಾರೆ.

ಈಗ ಸುಮಾರು ನಾಲ್ಕೈದು ವರ್ಷಗಳ ಹಿಂದೆಯೇ ಕೀನ್ಯಾದಲ್ಲಿ ದೊಡ್ಡ ಮಟ್ಟದ ಸಂಘಟಿತ ದಾಳಿ ಮಾಡಿತ್ತು ಅಮೇರಿಕಾದ DEA ತಂಡ. ಆಗ ಆಕಾಶಾ ಸಹೋದರರ ಜೊತೆ ಒಂದು ಮಹಾ ಇಂಟೆರೆಸ್ಟಿಂಗ್ ಸ್ಟಾರ್ ಜೋಡಿ ಕೂಡ ಸಿಕ್ಕಿಬಿದ್ದಿತ್ತು. ಅದೇ ಬಾಲಿವುಡ್ಡಿನ 'ಮಾದಕ ನಟಿ' ಖ್ಯಾತಿಯ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ವಿಕಿ ಗೋಸ್ವಾಮಿ. ಹೆಸರಿಗೆ ತಕ್ಕಂತೆ 'ಮಾದಕ ನಟಿ' ಮಾದಕ ವಸ್ತುಗಳ ಲಫಡಾದಲ್ಲಿ ಸಿಕ್ಕಾಕಿಕೊಂಡುಬಿದ್ದಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ.

ಮಮತಾ ಕುಲಕರ್ಣಿಯನ್ನು ಏನು ಮಾಡಿದರೋ ಗೊತ್ತಿಲ್ಲ. ಆದರೆ ಆಕೆಯ ಪತಿ ಗೋಸ್ವಾಮಿಯನ್ನು ಮಾತ್ರ ಉಳಿದ ಆರೋಪಿಗಳೊಂದಿಗೆ ಅಮೇರಿಕಾಕ್ಕೆ ಎಳೆದುಕೊಂಡು ಹೋದರು.

ಮುಂದೆ ಸುಮಾರು ವರ್ಷ ಕೇಸ್ ನಡೆದಿದೆ. ಒಂದು ಕಾಲದಲ್ಲಿ ಆಕಾಶಾ ಸಹೋದರರ ನಿಕಟವರ್ತಿಯಾಗಿದ್ದ ಗೋಸ್ವಾಮಿ ತನ್ನ ಹಳೆಯ ದೋಸ್ತುಗಳಿಗೆ Go ಎಂದು ಕೈಯೆತ್ತಿ ಸಂಪೂರ್ಣವಾಗಿ ಸರ್ಕಾರಿ ಸ್ವಾಮಿಯಾಗಿಬಿಟ್ಟಿದ್ದಾನೆ. ಮಾಫಿ ಸಾಕ್ಷಿದಾರನಾಗಿ ಆಕಾಶಾ ಸಹೋದರರ ಪೂರ್ತಿ ಭಾಂಡಾ ಬಿಚ್ಚಿಟ್ಟುಬಿಟ್ಟಿದ್ದಾನೆ. ಪುಣ್ಯಾತ್ಮನ ಹೇಳಿಕೆಗಳಿಂದಾಗಿ ಅರಿಭಯಂಕರ ಆಕಾಶಾ ಸಹೋದರರು ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವಂತಾಗಿದ್ದಾರೆ.

ಮಾಫಿ ಸಾಕ್ಷಿದಾರ ವಿಕಿ ಗೋಸ್ವಾಮಿಯ ಗತಿಯೇನಾಗುತ್ತದೋ? ಅವನಿಗೆ ಯಾವ ತರಹದ ಶಿಕ್ಷೆ ವಿಧಿಸುತ್ತಾರೋ? ಗೊತ್ತಿಲ್ಲ. ಆ ಮನುಷ್ಯ ಹಿಂದೊಮ್ಮೆ ಐದಾರು ವರ್ಷಗಳ ಕಾಲ ದುಬೈ ಜೈಲಿನಲ್ಲಿ ಸರ್ವಿಸ್ ಮಾಡಿ ಬಂದಿದ್ದಾನೆ. ಮತ್ತದೇ ಮಾದಕ ವಸ್ತುಗಳ ಕೇಸಿನಲ್ಲೇ. ದಾವೂದ್ ಇಬ್ರಾಹಿಂನ ಅವಕೃಪೆಗೆ ತುತ್ತಾದ. ಅದಕ್ಕಾಗಿ ಕಾರಸ್ಥಾನ ಮಾಡಿ ಅವನನ್ನು ಜೈಲಿಗೆ ಕಳಿಸಲಾಯಿತು ಎಂದು ಒಂದು ಸಿದ್ಧಾಂತ ಇದೆ. ಡ್ರಗ್ ಕಳ್ಳಸಾಗಾಣಿಕೆದಾರರ ಮೇಲೆ ಹೆಸರಿಗಾದರೂ (ನಾಮ್ ಕೆ ವಾಸ್ತೆ) ಕ್ರಮ ಕೈಗೊಳ್ಳಬೇಕಾಗಿತ್ತು. ಹಿಂದೂ ಧರ್ಮೀಯನನ್ನು ಬಕ್ರಾ ಮಾಡಿ ಕೊಲ್ಲಿ ರಾಷ್ಟ್ರಗಳಲ್ಲಿ ಹಣಿಯುವುದು ಸುಲಭ ಎಂದು ಇವನಿಗಿಂತ ನೂರು ಪಟ್ಟು ದೊಡ್ಡ ಖದೀಮರೆಲ್ಲರನ್ನೂ ಬಿಟ್ಟು ಈ 'ಬಡಪಾಯಿ'ಯನ್ನು ಜೈಲಿಗೆ ಅಟ್ಟಿತು ದುಬೈ ಸರ್ಕಾರ ಅನ್ನುವವರೂ ಇದ್ದಾರೆ.

ದುಬೈನಲ್ಲಿ ಜೈಲಿಗೆ ಹೋದ ಗೋಸ್ವಾಮಿ. ಅದೇ ಸಮಯದಲ್ಲಿ ಮಮತಾ ಕುಲಕರ್ಣಿ ಹಿಮಾಲಯಕ್ಕೆ ಹೋದಳಂತೆ. ಆಕೆಯೇ ಹೇಳಿಕೊಂಡಂತೆ, ಅಲ್ಲಿ ಭಯಂಕರ ತಪಸ್ಸು ಮಾಡಿ, ಆತ್ಮದ ಸಾಕ್ಷಾತ್ಕಾರ ಮಾಡಿಕೊಂಡು ವಾಪಸ್ ಬರುವ ತನಕ ಈ ಕಡೆ ದುಬೈನಲ್ಲಿ ವಿಕಿ ಗೋಸ್ವಾಮಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಮುಸ್ಲಿಂ ಆದರೆ ದುಬೈನಲ್ಲಿ ಜೈಲು ಶಿಕ್ಷೆ ಕಮ್ಮಿಯಾಗುತ್ತದೆ ಎಂದು ತಿಳಿದಿದ್ದ ಆತ ಹಾಗೆ ಮಾಡಿದ್ದರಲ್ಲಿ ದೊಡ್ಡ ಆಶ್ಚರ್ಯವೇನಿಲ್ಲ.

ಜೈಲಿನಿಂದ ಬಿಡುಗಡೆ ಹೊಂದಿದ ಗೋಸ್ವಾಮಿ ಮತ್ತು ಇತ್ತಕಡೆ ಹಿಮಾಲಯದಿಂದ ಏಕ್ದಂ ಸಾಧ್ವಿಯ ರೂಪದಲ್ಲಿ ಹಿಂತಿರುಗಿದ ಮಮತಾ ಕುಲಕರ್ಣಿ ಏನೋ ಒಂದು ತರಹದ ಶಾದಿ ಭಾಗ್ಯ ಮಾಡಿಕೊಂಡು ಆಫ್ರಿಕಾದ ಕೀನ್ಯಾ ದೇಶಕ್ಕೆ ಬಂದು ನೆಲೆಸಿದರು.

ಅಲ್ಲಿ ಆಗಲೇ ಆಕಾಶಾ ಸಹೋದರರು ದೊಡ್ಡ ಮಟ್ಟದ ಕುಖ್ಯಾತಿ ಗಳಿಸಿದ್ದರು. ಅವರ ವಿರೋಧ ಕಟ್ಟಿಕೊಂಡರೆ ಕಷ್ಟ ಎಂದು ತಿಳಿದು ಅವರೊಂದಿಗೆ ಮಾಂಡವಳಿ ಸಂಧಾನ ಮಾಡಿಕೊಂಡ ಗೋಸ್ವಾಮಿ ಡ್ರಗ್ ದಂಧೆಯನ್ನು ಮುಂದುವರೆಸಿದ. ಅವರಿಗೆ ಹೊಸ ಹೊಸ ಸಂಪರ್ಕಗಳನ್ನು ಮಾಡಿಸಿಕೊಟ್ಟ. ಭಾರತದ ಔಷಧಿ ಕಂಪನಿಯಿಂದ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಆಮದು ಮಾಡಿಕೊಂಡ. ಪಕ್ಕದ ಉಗಾಂಡಾ ದೇಶದ ಅಧ್ಯಕ್ಷನ ತಂಗಿಗೆ ದೊಡ್ಡ ಪ್ರಮಾಣದ ತಾಂಬೂಲ ಬಾಗಿನ ಕೊಟ್ಟು ಆಕೆಯನ್ನೂ ಒಳಗೆ ಹಾಕಿಕೊಂಡ. ಭಾರತದ ದೇಶದಿಂದ ದೊಡ್ಡ ಪ್ರಮಾಣದ ಎಪಿಡ್ರಿನ್ ಎಂಬ ರಾಸಾಯನಿಕ ಟನ್ನುಗಟ್ಟಲೆ ಬಂದು ಉಗಾಂಡಾದಲ್ಲಿ ಇಳಿಯಿತು. ರಾಷ್ಟ್ರಾಧ್ಯಕ್ಷನ ತಂಗಿ ತಾಂಬೂಲ ಉಗುಳಿ, ಪಿಚಕಾರಿ ಹಾರಿಸಿ ಪೆಕಪೆಕನೆ ನಕ್ಕಳು. ಏನಾದರೂ ಮಾಡಿಕೊಳ್ಳಿ. ಟೈಮಿಗೆ ಸರಿಯಾಗಿ ನನ್ನ ಪಾಲಿನ ತಾಂಬೂಲ ತಪ್ಪಿಸಬೇಡಿ ಎಂದು ಹೇಳಿದ ಮೇಡಂ ತನ್ನ ಅಭಯಹಸ್ತ ತೋರಿಸಿದಳು. ಡ್ರಗ್ ಉತ್ಪಾದನೆಗೆ ಗ್ರೀನ್ ಸಿಗ್ನಲ್ ಕೊಟ್ಟಳು. ಖತರ್ನಾಕ್ ಡ್ರಗ್ ಆಗಿರುವ ಮ್ಯಾನ್ಡ್ರಾಕ್ಸ್ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ನಡೆಯಿತು. ವಿಶ್ವದ ತುಂಬೆಲ್ಲಾ ಗೋಸ್ವಾಮಿ ಮತ್ತು ಆಕಾಶಾ ಸಹೋದರರು ಎಬ್ಬಿಸಿದ ಮಾದಕ ದ್ರವ್ಯಗಳ ಘಾಟೋ ಘಾಟು.

ಆಗ ಮುರಿದುಕೊಂಡು ಬಿತ್ತು ನೋಡಿ ಅಮೇರಿಕಾದ DEA. ಸೀದಾ ಹೋದವರೇ ಕೀನ್ಯಾದ ಆಧಿಕಾರಶಾಹಿಯ ತಲೆಗೆ ಬಂದೂಕಿಟ್ಟರು. 'ನಿಮ್ಮ ದೇಶದಲ್ಲಿ ಇಂತಿಂತಹ ಕೇಡಿಗಳಿದ್ದಾರೆ. ಅವರು ನಮಗೆ ಬೇಕು. ಬೇಕೇಬೇಕು. ಸಹಕರಿಸಿದರೆ ಒಳ್ಳೆಯದು. ಇಲ್ಲವಾದರೆ ಗೊತ್ತಲ್ಲ? ನಾವು ಯಾರೆಂದು?? ನಾವು DEA. ಎಲ್ಲಿ ಹೇಗೆ ತಟ್ಟಿದರೆ ಏನು ಹೇಗೆ ಉದುರುತ್ತದೆ ಎಂದು ನಮಗೆ ಬರೋಬ್ಬರಿ ಗೊತ್ತಿದೆ!' ಎಂದು ಧಮ್ಕಿ ಹಾಕಿದರು. ಡ್ರಗ್ ಮಾಫಿಯಾದಿಂದ ಸಾಕಷ್ಟು ಸತ್ಯನಾರಾಯಣ ಪ್ರಸಾದ ಸ್ವೀಕರಿಸಿದ್ದರೂ ಕೀನ್ಯಾದ ಪೊಲೀಸರಿಗೆ ಸಹಕರಿಸುವುದನ್ನು ಬಿಟ್ಟು ಬೇರೆ ಗತಿಯಿರಲಿಲ್ಲ.

೨೦೧೫ ರಲ್ಲಿ ಆದ ದೊಡ್ಡ ಪ್ರಮಾಣದ ದಾಳಿಯಲ್ಲಿ ಆಕಾಶಾ ಸಹೋದರರನ್ನು ಮತ್ತು ಗೋಸ್ವಾಮಿಯನ್ನು ಎತ್ತಾಕಿಕೊಂಡ DEA, ಸ್ಪೆಷಲ್ ವಿಮಾನದಲ್ಲಿ, ಎಲ್ಲ ಖದೀಮರನ್ನು ಅಮೇರಿಕಾಗೆ ಸಾಗಿಸಿತ್ತು. ಈಗ ಕೇಸ್ ಮುಗಿದಿದೆ. ಬಕ್ತಾಶ್ ಮತ್ತು ಇಬ್ರಾಹಿಂ ಎನ್ನುವ ಆಕಾಶಾ ಸಹೋದರರು ಖಾಯಮ್ಮಾಗಿ ಅಮೇರಿಕಾದ ಜೈಲು ಸೇರಿದ್ದಾರೆ. ಗೋಸ್ವಾಮಿ ತನ್ನ ಗತಿಯೇನೋ ಎಂದು ಎದುರು ನೋಡುತ್ತಿದ್ದಾನೆ. ಮಾಫಿ ಸಾಕ್ಷಿದಾರನಾದ ಕಾರಣ ಕಮ್ಮಿ ಶಿಕ್ಷೆ ಕೊಡಬಹುದು. ಯಾರಿಗೆ ಗೊತ್ತು, ನಸೀಬ್ ಛಲೋ ಇದ್ದರೆ ಏನೂ ಶಿಕ್ಷೆ ಕೊಡದೆ ಬಿಟ್ಟು ಕಳಿಸಿದರೂ ಆಶ್ಚರ್ಯವಿಲ್ಲ.

ಈ ಮಧ್ಯೆ ಮಮತಾ ಕುಲಕರ್ಣಿ ಎಲ್ಲಿ? ಆಕೆಯ ಸುದ್ದಿಯೇ ಇಲ್ಲ. ಆಕೆ ಮುಂಬೈಗೆ ಬರುವಂತಿಲ್ಲ. ಅಲ್ಲಿ ಆಕೆಯ ಮೇಲೆ ವಾರಂಟ್ ಇದೆ. DEA ಕೊಟ್ಟ ಮಾಹಿತಿ ಪ್ರಕಾರ ಮಹಾರಾಷ್ಟ್ರ ದ ಸೊಲ್ಲಾಪುರ ಸಮೀಪದ ಔಷಧಿ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ ಮಹಾರಾಷ್ಟ್ರ ಪೊಲೀಸರು ಟನ್ನುಗಟ್ಟಲೆ ಅಪಾಯಕಾರಿ ರಾಸಾಯನಿಕಗಳನ್ನು ವಶಪಡಿಸಿಕೊಂಡು ಆ ಫ್ಯಾಕ್ಟರಿಗೆ ಬೀಗ ಜಡಿದರಲ್ಲ. ಆ ಕೇಸಿನಲ್ಲಿ ಗೋಸ್ವಾಮಿ ದಂಪತಿಯನ್ನೂ ಆರೋಪಿಗಳು ಎಂದು ತೋರಿಸಲಾಗಿತ್ತು. ಆಗ ಮಾಧ್ಯಮಕ್ಕೆ ಬಂದಿದ್ದ ಮಮತಾ ಕುಲಕರ್ಣಿ ಅದೆಲ್ಲ ತನ್ನ ವಿರುದ್ಧ ಮಾಡಿರುವ ಕಾರಸ್ಥಾನ, ಷಡ್ಯಂತ್ರ ಎಂದು ಹೇಳಿ ಬೊಬ್ಬೆ ಹೊಡೆದು ಹೋದಾಕೆ ನಂತರ ನಾಪತ್ತೆ. ಈಗ ಕೀನ್ಯಾದಲ್ಲಿದ್ದಾಳೋ, ಪೀಣ್ಯಾದಲ್ಲಿದ್ದಾಳೋ? ಯಾರಿಗೆ ಗೊತ್ತು!?

ಇದೇ ಕೇಸಿನಲ್ಲಿ DEA ಮತ್ತು ಕೀನ್ಯಾ ಪೊಲೀಸರಿಂದ ಬಚಾವಾಗಿ ಭಾರತಕ್ಕೆ ಓಡಿ ಬಂದು ಸದ್ಯಕ್ಕೆ ಮುಂಬೈ ಆಸ್ಫತ್ರೆಯಲ್ಲಿ ಮಲಗಿಬಿಟ್ಟಿರುವವನು ಅಲಿ ಪಂಜಾನಿ (ಪುಂಜಾನಿ). ಇವನೂ ಕೀನ್ಯಾ ದೇಶದವನೇ. ಭಾರತೀಯ ಮೂಲದವನು ಎಂದು ಕಾಣಿಸುತ್ತದೆ. ಆಕಾಶಾ ಸೋದರರ ಪಕ್ಕಾ ಪ್ರತಿಸ್ಪರ್ಧಿಯಾಗಿದ್ದವನು ಈ ಪಂಜಾನಿ. ಡ್ರಗ್ ಸಾಮ್ರಾಜ್ಯದ ಮೇಲೆ ಹತೋಟಿ ಸಾಧಿಸುವ ಪೈಪೋಟಿಯಲ್ಲಿ ಈ ಪಂಜಾನಿ ಮತ್ತು ಆಕಾಶಾ ಸಹೋದರರ ಮಧ್ಯೆ ಜಗಳಗಳಾಗಿದ್ದವು. ಒಮ್ಮೆಯಂತೂ ನೈಟ್ ಕ್ಲಬ್ ಒಂದರಲ್ಲಿ ಒಬ್ಬರಿಗೊಬ್ಬರು ಎದುರಾದಾಗ ಬಂದೂಕುಗಳು ಘರ್ಜಿಸಿದ್ದವು. ಗುಂಡುಗಳು ಹಾರಿದ್ದವು. ಪಂಜಾನಿಯ ಅಂಗರಕ್ಷಕ ಗಂಭೀರವಾಗಿ ಗಾಯಗೊಂಡಿದ್ದ.

ಹೀಗಾಗಿ DEA ಆಕಾಶಾ ಸಹೋದರರನ್ನು ಎತ್ತಾಕಿಕೊಂಡು ಹೋದಾಗ ಪಂಜಾನಿ ಸಕತ್ ಖುಷಿ ಪಟ್ಟಿರಬೇಕು. ತನಗಿನ್ನು ಪ್ರತಿಸ್ಪರ್ಧಿಗಳೇ ಇಲ್ಲ ಎಂದು ಮೆರೆಯಲು ಆರಂಭಿಸಿದ್ದಾನೆ. ಎರಡನೇ ಸುತ್ತಿನಲ್ಲಿ DEA ಪಂಜಾನಿಯ ಮೇಲೆಯೇ ಮುರ್ಕೊಂಡು ಬಿದ್ದಿದೆ. ಕೀನ್ಯಾದ ಆಡಳಿತ ವ್ಯವಸ್ಥೆಗೆ ಬರೋಬ್ಬರಿ ಬಿಸ್ಕೀಟ್ ಹಾಕಿದ್ದ ಕಾರಣಕ್ಕೆ ಈ ಮಾಹಿತಿ ಸರಿಯಾದ ಸಮಯಕ್ಕೆ ಪಂಜಾನಿಗೆ ಸಿಕ್ಕಿದೆ. ಪಂಜಾನಿ ಪಂಚೆ ಎತ್ತಿಕೊಂಡು ಕೀನ್ಯಾ ಬಿಟ್ಟು ಓಡಿಬಂದಿದ್ದಾನೆ. ಭಾರತದಲ್ಲಿ ಬಂದು ಮುಂಬೈನ  ಬಾಂದ್ರಾ ಪ್ರದೇಶದ ಆಸ್ಪತ್ರೆಯಲ್ಲಿ ಶಿವನೇ ಶಂಭುಲಿಂಗ ಮಾದರಿಯಲ್ಲಿ ಮಲಗಿಬಿಟ್ಟಿದ್ದಾನೆ. DEA ಮಾತ್ರ ಇಂಟರ್ಪೋಲ್ ನೋಟೀಸ್ ಹೊರಡಿಸಿದೆ. ಅದರ ಬಗ್ಗೆ ಮುಂಬೈ ಪೊಲೀಸರು ಹೆಚ್ಚಿನ ಗಮನ ಹರಿಸಿಲ್ಲವಂತೆ. ಕೇಳಿದರೆ ಪಂಜಾನಿ ಮೇಲೆ ಮುಂಬೈನಲ್ಲಿ ಏನೂ ಕೇಸುಗಳು ಇಲ್ಲ. ಹಾಗಾಗಿ ಏನೂ ಮಾಡುವಂತಿಲ್ಲ ಅಂದರಂತೆ. ಇನ್ನು ಯಾವತ್ತು ತಲೆಕೆಟ್ಟ DEA ಮುಂಬೈ ಪೊಲೀಸರಿಗೆ ತಪರಾಕಿ ಕೊಡುತ್ತದೋ ಗೊತ್ತಿಲ್ಲ. ದೊಡ್ಡ ಮಟ್ಟದಲ್ಲಿ ತಪರಾಕಿ ಬಿದ್ದ ದಿನ ಪಂಜಾನಿಯನ್ನು ಬಂಧಿಸಿ ಅಮೇರಿಕಾಕ್ಕೆ ಕಳಿಸಬಹುದು. ಯಾರಿಗೆ ಗೊತ್ತು, ಅಷ್ಟರಲ್ಲಿ ಈ ಕಳ್ಳ ಪರಮಾತ್ಮ ಭಾರತ ಬಿಟ್ಟು ಮತ್ತೆಲ್ಲಾದರೂ ಗಾಯಬ್ ಆದರೂ ಆದನೇ. ಆದರೆ ಒಮ್ಮೆ DEA ಹಿಂದೆ ಬಿತ್ತು ಅಂದರೆ ಬಚಾವಾಗುವುದು ಕಷ್ಟ.

ಈ ಮಾಫಿಯಾ ಮಂದಿಗೂ ಬಾಲಿವುಡ್ ನಟಿಯರಿಗೂ ಅದೇನು ಸಂಬಂಧವೋ, ಅದೇನು ಆಕರ್ಷಣೆಯೋ ದೇವರೇ ಬಲ್ಲ. ವಿಕಿ ಗೋಸ್ವಾಮಿ ಆಕಾಲದ ಹಾಟ್ ನಟಿ ಮಮತಾ ಕುಲಕರ್ಣಿಯನ್ನು ಮದುವೆಯಾದ. ತಾನೇನು ಕಮ್ಮಿ ಎಂಬಂತೆ ಈ ಅಲಿ ಪಂಜಾನಿ ಸಾಹೇಬರು ಕಿಮ್ ಶರ್ಮಾ ಎಂಬ ನಟಿಯನ್ನು ೨೦೧೦ ಮದುವೆಯಾಗಿ ಕೀನ್ಯಾಕ್ಕೆ ಕರೆದುಕೊಂಡು ಹೋಗಿದ್ದರಂತೆ. ಕಿಮ್ ಶರ್ಮಾ ೨೦೦೦ ರ ಕಾಲದಲ್ಲಿ ಸಾಕಷ್ಟು ದೊಡ್ಡ ನಟಿ. ಕ್ರಿಕೆಟಿಗ ಯುವರಾಜ್ ಸಿಂಗನ ಗೆಳತಿ ಎಂದು ಖ್ಯಾತಳಾಗಿದ್ದವಳು. ಅಲ್ಲಿ ವರ್ಕೌಟ್ ಆಗಲಿಲ್ಲ ಅಂತ ಕಾಣುತ್ತದೆ. ಸಿಕ್ಕ ಪಂಜಾನಿ ಸಾಹೇಬ್ರನ್ನು ವಿವಾಹವಾಗಿ ಕೀನ್ಯಾ ಸೇರಿಕೊಂಡಿದ್ದಳು.

ಆರು ವರ್ಷಗಳ  ಕಾಲ ಸಂಸಾರ ಮಾಡಿದ ನಂತರ ಪಂಜಾನಿ ಬೇರೆ ಯಾರನ್ನೋ ಹುಡುಕಿಕೊಂಡು ಹೋಗಿ ಹೊಸ ಹಕ್ಕಿಯ ಜೊತೆ ಸೆಟಲ್ ಆಗಿಬಿಟ್ಟನಂತೆ. ಹಾಗಾಗಿ ವಿವಾಹ ಸೋಡಾಚೀಟಿಯಲ್ಲಿ ಅಂತ್ಯವಾಗಿದೆ.

ಬರಿಗೈಯಲ್ಲಿ ಠಣ್ ಠಣ್ ಗೋಪಾಲ್ ಆಗಿ, ಕಾಸು ಆಸ್ತಿ ಏನೂ ಇಲ್ಲದೆ ಭಾರತಕ್ಕೆ ಮರಳಿರುವ ಕಿಮ್ ಶರ್ಮಾ ಮುಂಬೈನಲ್ಲಿ ಹೊಸ ಬಾಳನ್ನು ಹುಡುಕಿಕೊಳ್ಳುತ್ತಿದ್ದಾಳೆ. ಬಾಲಿವುಡ್ಡಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಲು ಉಚಿತವಾಗಿ ನಟಿಸಲೂ ರೆಡಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾಳೆ. ಯಾರೂ ಉದ್ಯೋಗ ಕೊಟ್ಟ ಹಾಗೆ ಕಾಣುವುದಿಲ್ಲ. ಜೊತೆಗೊಬ್ಬ ಗೆಣೆಕಾರ ಇರಲಿ ಎಂದು ಯಾರೋ ಹರ್ಷವರ್ಧನ್ ರಾಣೆ ಎನ್ನುವ, ತನಗಿಂತ ಐದು ವರ್ಷ ಚಿಕ್ಕವನಾದ, ಮಾಡೆಲ್ ಜೊತೆ ಡೇಟಿಂಗ್ ಶುರುವಿಟ್ಟುಕೊಂಡಿದ್ದಳು. ಅದೂ ಕೂಡ ಮೊನ್ನೆ ಮಕಾಡೆ ಮಲಗಿ ಅಂತ್ಯಗೊಂಡಿದೆ.

ಕಿಮ್ ಶರ್ಮಾ ಈಗ ಕಿಮಿ ಶರ್ಮಾ ಎನ್ನುವ ಹೆಸರಿನಲ್ಲಿ ಬಾಲಿವುಡ್ಡಿನಲ್ಲಿ ಚಲಾವಣೆಗೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಹೆಸರು ಬದಲಾಯಿಸಿಕೊಂಡ ತಕ್ಷಣ ಅದೃಷ್ಟ ಬದಲಾಯಿಸುತ್ತದೆಯೇ? ಕಾದು ನೋಡಬೇಕು.

ಪಂಜಾನಿ DEA ಮಂದಿಯ ಹದ್ದಿನ ದೃಷ್ಟಿಯಲ್ಲಿ ಬರುವ ಮೊದಲೇ ಆತನಿಂದ ದೂರವಾದ ಕಿಮ್ ಶರ್ಮಾ ಒಂದು ರೀತಿಯಲ್ಲಿ ಅದೃಷ್ಟವಂತಳೇ. ಪಂಜಾನಿಯಂತೂ ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವುದು ಗ್ಯಾರಂಟಿ. ಆತನಿಂದ ಮೊದಲೇ ದೂರವಾಗಿ ಆ ಕರ್ಮದಿಂದ ತಪ್ಪಿಸಿಕೊಂಡಿದ್ದಾಳೆ ಕಿಮ್ ಶರ್ಮಾ. ಅಷ್ಟರಮಟ್ಟಿಗೆ ಆಕೆ ಅದೃಷ್ಟವಂತೆ.

ಹೆಚ್ಚಿನ ಮಾಹಿತಿಗೆ:

ಅಲಿ ಪಂಜಾನಿ

ಕಿಮ್ ಶರ್ಮಾ

Mamta Kulkarni, Vicky Goswami complete saga summarized for the uninitiated

ಮಮತಾ ಕುಲಕರ್ಣಿಯ ಸಂದರ್ಶನ (ಪೋಸ್ಟಿನ ಕೊನೆಯಲ್ಲಿದೆ)

'ಕುಲಕರ್ಣಿ ಮಮ್ಮಿ' ಸನ್ಯಾಸ ತೊಗೋಂಡಳಾ?!.....ಅಕಟಕಟಾ!

Thursday, September 12, 2019

ಬನವಾಸಿ

'ಎಂಥಾ ಹುಡುಗರಪ್ಪಾ!? ಹಾಂ!? ಜನರಲ್ ನಾಲೆಜ್, ಕಾಮನ್ ಸೆನ್ಸ್ ಕೇಳಬ್ಯಾಡ. ಸರಳ ವಿಷಯ ಸಹಿತ ಗೊತ್ತಿರೋದಿಲ್ಲಾ! ಯಬಡ ಹುಡುಗರು!' ಅನ್ನುತ್ತ ಅಮ್ಮ ಎಂಟ್ರಿ ಕೊಟ್ಟರು.

೧೯೯೦ ರ ಸಮಯ. ಆಗ ಕೆಲವು ವರ್ಷಗಳ ಕಾಲ ನಮ್ಮ ತಾಯಿಯವರು ಮಾಸ್ತರಣಿ ಅವತಾರ ತಾಳಿದ್ದರು. ನಾನೂ ಊರು ಬಿಟ್ಟಿದ್ದೆ. ಊರಲ್ಲಿ ಇರುವ ತನಕ ಎಲ್ಲರಿಗೂ ನನ್ನನ್ನು ಸಂಬಾಳಿಸುವುದರಲ್ಲಿಯೇ ಸಮಯ ಸಾಕಾಗುತ್ತಿರಲಿಲ್ಲ. ನಾನು ಊರು ಬಿಟ್ಟಿದ್ದೇ ಬಿಟ್ಟಿದ್ದು ಅಮ್ಮ ಫುಲ್ ಫ್ರೀ.  ಅವರಿಗೆ ಮೊದಲಿಂದಲೂ ಸಮಾಜಸೇವೆ ಬಗ್ಗೆ ಆಸಕ್ತಿ. ಮಾಸ್ತರಿಕೆ ಕೂಡ ಇಷ್ಟದ ವಿಷಯವೇ. ಈಗ ಅವೆಲ್ಲ ತಲುಬುಗಳನ್ನು ತೀರಿಸಿಕೊಳ್ಳಲು ಸದವಕಾಶ.

ಹೋಗಿ ಹೋಗಿ ಅಂಧ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮಾಸ್ತರಣಿ ಆದರು. ಅದ್ಯಾರೋ ಮಹನೀಯರು ಒಂದಿಬ್ಬರು ಅಂಧ ವಿದ್ಯಾರ್ಥಿಗಳನ್ನು ಪರಿಚಯ ಮಾಡಿ ಕೊಟ್ಟಿದ್ದರು. ಕಾಲೇಜು ಓದುವ ವಿದ್ಯಾರ್ಥಿಗಳು. ಅವರಿಗೆ ಪಾಠ ಓದಿ ಹೇಳಬೇಕು. ಆ ಪಾಪದ ವಿದ್ಯಾರ್ಥಿಗಳು ಇವರು ಓದಿದ್ದನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಅವನ್ನೇ ಮತ್ತೆ ಮತ್ತೆ ಕೇಳಿ ಕೇಳಿ ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಕೊನೆಗೆ ಪರೀಕ್ಷೆಯಲ್ಲಿ ಅವರ ಪರವಾಗಿ ಅವರ ಸಹಾಯಕರು ಉತ್ತರ ಬರೆದುಕೊಡುತ್ತಿದ್ದರು. ನಿವೃತ್ತ ಶಿಕ್ಷಿಕಿಯಾಗಿದ್ದ ನಮ್ಮ ನೆರೆಯವರಾದ ಉಪಾಧ್ಯೆ ಟೀಚರ್ ಮತ್ತು ಅಮ್ಮ ಕೂಡಿ ಜಂಟಿ ಮಾಸ್ತರಿಕೆ ಮಾಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದರು.

ಅವತ್ತು ಏನಾಗಿತ್ತು ಅಂದರೆ...ಆ ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಮಾಡಿಸುತ್ತಿದ್ದರು. 'ಬನವಾಸಿ ಎಲ್ಲಿದೆ?' ಎಂದು ಪ್ರಶ್ನೆ ಕೇಳಿದ್ದಾರೆ. ಉತ್ತರ ಹೇಳಲು ಅವರು ತಡವಡಿಸಿದ್ದಾರೆ. ತಪ್ಪು ಉತ್ತರ ಹೇಳಿದ್ದಾರೆ.

'ಎಂಥಾ ಹುಡುಗುರೋ ನೀವು?! ಬನವಾಸಿ ನಮ್ಮ ಉತ್ತರ ಕನ್ನಡ ಜಿಲ್ಲಾದೊಳಗ ಇಲ್ಲೇನರೋ? ಅಷ್ಟೂ ಗೊತ್ತಿಲ್ಲ? ಹಿಂಗಾದ್ರ ಹೆಂಗ? ಎಷ್ಟು ಸರೆ ಹೇಳಿಕೊಟ್ಟೇನಿ? ಹಾಸ್ಟೆಲ್ಲಿನಾಗ ಕೂತು ಟೇಪ್ ರೆಕಾರ್ಡರಿನಾಗ ಪಾಠ ಕೇಳ್ತೀರೋ ಅಥವಾ ಸಿನಿಮಾ ಹಾಡು ಕೇಳಿಕೊತ್ತ ಕೂಡ್ತೀರೋ? ಹಾಂ!' ಅಂತ ಬರೋಬ್ಬರಿ ಮಾಸ್ತರಣಿ ಸ್ಟೈಲಿನಲ್ಲಿ ಬೆಂಡ್ ಎತ್ತಿದ್ದಾರೆ.

ಪಾಪ ಆ ಅಂಧ ವಿದ್ಯಾರ್ಥಿಗಳು ಟೇಪ್ ರೆಕಾರ್ಡರನ್ನು ಹಂಚಿಕೊಳ್ಳುತ್ತಿದ್ದರು. ಅದೂ ಯಾವುದೋ ಜಮಾನಾದ ಡಬ್ಬಾ ಟೇಪ್ ರೆಕಾರ್ಡರ್. ಸಮಾಜಸೇವೆಯ ಜೊತೆ ಕೊಂಚ ದಾನ ಧರ್ಮವೂ ಇರಲಿ ಎಂದು ಮನೆಯಲ್ಲಿ ಧೂಳು ತಿನ್ನುತ್ತಾ ಕೂತಿದ್ದ ಎರಡು ವಾಕ್ಮನ್ (ಸಣ್ಣ ಟೇಪ್ ರೆಕಾರ್ಡರ್) ಗಳನ್ನು ಅವರಿಗೆ ಕೊಟ್ಟಿದ್ದರು. ಅದೂ ಹೆಡ್ ಫೋನ್ ಇದ್ದವು. ನನ್ನ ಕಡೆ ಮೂರ್ನಾಲ್ಕು ವಾಕ್ಮನ್ ಇದ್ದವಲ್ಲ? ಅದು ವಾಕ್ಮನ್ ಜಮಾನಾ. ಅಮೇರಿಕಾದಲ್ಲಿದ್ದ ಅಣ್ಣ ಒಂದಾದಮೇಲೊಂದರಂತೆ, 'ಇದು ನಿನಗೆ!' ಅಂತ ಪ್ರೀತಿಯಿಂದ ತಂದುಕೊಟ್ಟಿದ್ದ ಸೋನಿ ವಾಕ್ಮನ್ನುಗಳು. ನನಗೂ ಎಲ್ಲರಂತೇ ಎರಡೇ ಕಿವಿ. ಹಾಗಾಗಿ ಒಂದೇ ವಾಕ್ಮನ್ ಸಾಕಾಗಿತ್ತು. ಇದ್ದುದರಲ್ಲಿಯೇ ಆಗಿನ ಕಾಲದ ಅತ್ಯಾಧುನಿಕ ಮಾಡೆಲ್ ಒಂದೆರೆಡನ್ನು ಇಟ್ಟುಕೊಂಡು ಉಳಿದವನ್ನು ಅಂಧರಿಬ್ಬರಿಗೆ ದಾನ ಮಾಡಿದ್ದಾಗಿತ್ತು. ಹಾಗಂತ ನೆನಪು. ದಾನ ಮಾಡಿದ್ದೆವೋ ಅಥವಾ ಉಪಯೋಗಿಸಿ ವಾಪಸ್ ಕೊಡಿ ಅಂದಿದ್ದೆವೋ ನೆನಪಿಲ್ಲ.

ವಾರಗಟ್ಟಲೆ, ವಾರಕ್ಕೆ ಘಂಟೆಗಟ್ಟಲೆ ಪಾಠ ಮಾಡಿ, ಅವನ್ನು ರೆಕಾರ್ಡ್ ಮಾಡಿಸಿ, ಕೇಳಲು ವಾಕ್ಮನ್ ಕೊಟ್ಟು, ಪಾಠಕ್ಕೆ ಬಂದವರಿಗೆ, ಅದೂ ಪಾಪ ಅಂಧರು ಅಂತ, ಜಾಸ್ತೀನೇ ಜುಲುಮೆ ಮಾಡಿ ತಿಂಡಿ ತೀರ್ಥ ಮಾಡಿಸಿಯಾದ ಮೇಲೂ ಈ ಹುಡುಗರು ಓದುವ ಈ ಛಂದಕ್ಕೆ ಅಮ್ಮ disappoint ಆಗಿದ್ದರು. ಇಷ್ಟೆಲ್ಲಾ ಮಾಡಿದ ಮೇಲೂ ಸರಳವಾದ ಪ್ರಶ್ನೆ 'ಬನವಾಸಿ ಎಲ್ಲಿದೆ?' ಎಂದು ಕೇಳಿದರೆ ಬೆಬ್ಬೆ ಬೆಬ್ಬೆ ಅಂದಾಗ ಆದ ದೊಡ್ಡ ಪ್ರಮಾಣದ disappointment.

ಹೀಗೆ ಪಾಠ ಮುಗಿಸಿ, ಬನವಾಸಿ ವಿಷಯದಲ್ಲಿ ತಲೆ ಕೆಡಿಸಿಕೊಂಡು, ಯಬಡ ವಿದ್ಯಾರ್ಥಿಗಳ ನಾಮಾರ್ಚನೆ ಮಾಡುತ್ತಾ ಅಮ್ಮ ಮನೆಗೆ ಬಂದರೆ ಅಲ್ಲಿ ನಾನಿದ್ದೆ. ಮೂರು ವಾರಗಳ ಸೆಮಿಸ್ಟರ್ ರಜೆಗೆಂದು ಮನೆಗೆ ಬಂದು ಸ್ಥಾಪಿತನಾಗಿದ್ದೆ.

'ಬನವಾಸಿನೇ? ಎಲ್ಲದ ಅದು? ನಿನಗ ಗೊತ್ತದಯೇನು??' ಎಂದು ಅಮ್ಮನನ್ನೇ ರೈಸ್ ಮಾಡಿಸಿದೆ.

'ಏ, ಏನಂತ ಕೇಳ್ತೀ? ನನಗ ಗೊತ್ತಿಲ್ಲೇನು? ನಮ್ಮ ಜಿಲ್ಲಾ ಉತ್ತರ ಕನ್ನಡದಾಗ ಅದ. ನಮ್ಮ ಸಿರ್ಸಿ ತಾಲೂಕಿನಾಗೇ ಅದ,' ಅಂದರು ಅಮ್ಮ.

ಬನವಾಸಿ ಸಿರ್ಸಿ ಸೀಮೆಯ ಹೆಮ್ಮೆಯ ತಾಣ. ಅಮ್ಮನ ಸೋದರಮಾವನ ಹೆಂಡತಿಯ ತವರೂರು ಬೇರೆ. ಅಮ್ಮನೇ ಒಮ್ಮೆ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು. ೧೯೮೩ ರಲ್ಲಿ. ವರದಾ ನದಿಯ ದಂಡೆ ಮೇಲಿರುವ ಸುಂದರ ಊರು. ದೊಡ್ಡ ಹಳ್ಳಿ. Very beautiful place.

'ಇದಕ್ಕೇ ನೋಡು ನೀ ಅಮ್ಮ ಅಲ್ಲ ಮಳ್ಳಮ್ಮ ಅನ್ನೋದು! ಬನವಾಸಿ ಉತ್ತರ ಕನ್ನಡ ಜಿಲ್ಲಾದಾಗ ಅದನೇ? ಬಾ ಇಲ್ಲೆ ಸ್ವಲ್ಪ,' ಎಂದು ಮನೆಯ ಹಾಲಿನ ಗೋಡೆಯ ಮೇಲೆ ಎಷ್ಟೋ ವರ್ಷಗಳಿಂದ ರಾರಾಜಿಸುತ್ತಿದ್ದ ಕರ್ನಾಟಕ ರಾಜ್ಯದ ಭೂಪಟದ ಹತ್ತಿರ ಕರೆದೆ. ಪಕ್ಕದಲ್ಲಿ ಭಾರತ ದೇಶದ ಭೂಪಟ.

'ನೋಡಿಲ್ಲಿ. ಬರೋಬ್ಬರಿ ನೋಡಿಕೋ. ಎಲ್ಲದ ಬನವಾಸಿ? ಶಿವಮೊಗ್ಗ ಜಿಲ್ಲಾದಾಗ ಅದ. ನೋಡು! ತಿಳೀತಾ? ಉತ್ತರ ಕನ್ನಡ ಅಲ್ಲ. ಶಿವಮೊಗ್ಗ. ಸಿರ್ಸಿ ಹತ್ತಿರ ಅಂದಕೂಡಲೇ ಎಲ್ಲಾ ಉತ್ತರ ಕನ್ನಡ ಅಂದುಬಿಟ್ಟರೆ ಹ್ಯಾಂಗ? ಹಾಂ!?' ಅಂದೆ. ಮನೆ ಮಂದಿಯನ್ನು ಕಿಚಾಯಿಸಿದಾಗ ಸಿಗುವ ಸುಖಕ್ಕೆ ಹೋಲಿಕೆ ಇಲ್ಲ. ಅದಕ್ಕೆ ಅದೇ ಸಾಟಿ.

ಅಮ್ಮ ಫುಲ್ ಥಂಡಾ. ಅವರಿಗೆ ನಂಬಲೇ ಸಾಧ್ಯವಾಗಲಿಲ್ಲ. ಹುಟ್ಟಿದಾಗಿಂದ ಬನವಾಸಿ ಅಂದರೆ ಉತ್ತರ ಕನ್ನಡ ಜಿಲ್ಲೆ ಅಂದುಕೊಂಡರೆ ಭೂಪಟದಲ್ಲಿ ಅದನ್ನು ಶಿವಮೊಗ್ಗ ಜಿಲ್ಲೆಯಲ್ಲಿ ನಮೂದಿಸಿಬಿಟ್ಟಿದ್ದಾರೆ.

ಬುದ್ಧಿ ಬಂದಾಗಿನಿಂದ ಆ ಭೂಪಟಗಳನ್ನೇ ನೋಡುತ್ತಾ ಬೆಳೆದಿದ್ದ ನನಗೆ ಆ ಭೂಪಟಗಳು ಫುಲ್ ಕಂಠಪಾಠ. ಕರ್ನಾಟಕದ ಭೂಪಟ ಅದರ ಪಕ್ಕದಲ್ಲಿದ್ದ ಭಾರತದ ಭೂಪಟ ಜೊತೆಗೆ ಮತ್ತೂ ವಿವರವಾಗಿದ್ದ ಬ್ರಿಜಬಾಸಿ ಅಟ್ಲಾಸ್ ಎಲ್ಲ ಫುಲ್ ಕಂಠಪಾಠ. ಅವನ್ನು ಉಪಯೋಗಿಸಿಕೊಂಡೇ ವಾದ, ವಿವಾದ, ವಿತಂಡವಾದ ಎಲ್ಲ ಮಾಡಿದ್ದೆ. ಮೂರನೇ ಕ್ಲಾಸಿನಲ್ಲಿ ಇದ್ದಾಗ ತಾತ್ಕಾಲಿಕ ಹೆಡ್ಮಾಸ್ಟರ್ ಅಂತ ಬಂದಿದ್ದ ಕುಲಕರ್ಣಿ (ಅವರ ಹೆಸರು ಎಂದು ನೆನಪು) ಸರ್ ಅವರ ತಪ್ಪುಗಳನ್ನೇ ತಿದ್ದಿದ್ದೆ. ಆಸ್ಸಾಮಿನ ರಾಜಧಾನಿ ಗೌಹಾತಿ ಅಂದಿದ್ದರು. ತಪ್ಪು, ಅದು ದಿಸ್ಪುರ್ ಎಂದು ತೋರಿಸಿದ್ದೆ. ಪಾಕಿಸ್ತಾನದ ರಾಜಧಾನಿ ರಾವಲಪಿಂಡಿ ಎಂದು ಹಳೆಯ ಮಾಹಿತಿ ಕೊಟ್ಟಿದ್ದರು. ನಿಮ್ಮ ಪಿಂಡ ಎಂದು ಮನಸಿನಲ್ಲೇ ಅಂದುಕೊಂಡು ಪಾಕಿಸ್ತಾನದ ರಾಜಧಾನಿ ಯಾವ ಪಿಂಡ ಅಥವಾ ಪಿಂಡಿ ಅಲ್ಲ ಇಸ್ಲಾಮಾಬಾದ್ ಎಂದು ಹೇಳಿದ್ದೆ. ಕುಲಕರ್ಣಿ ಸರ್ ಅವರದ್ದು ದೊಡ್ಡ ಮನಸ್ಸು. ತಪ್ಪು ಒಪ್ಪಿಕೊಂಡಿದ್ದರು. ಪುಣ್ಯಕ್ಕೆ ಅಟ್ಲಾಸ್ ಕೇಳಿ ತೆಗೆದುಕೊಂಡು ಹೋಗಿ ಗಾಯಬ್ ಮಾಡಿರಲಿಲ್ಲ. ಆದರೆ ಬ್ಯಾಂಕ್ ನೌಕರಿ ಸಿಕ್ಕಿತು ಅಂತ ಮಾಸ್ತರಿಕೆ ಬಿಟ್ಟು ಗಾಯಬ್ ಆಗಿಬಿಟ್ಟರು.

ಮುಂದೊಮ್ಮೆ ಬೇರೆ ಮಾಸ್ತರರೊಬ್ಬರು ರೀಡರ್ಸ್ ಡೈಜೆಸ್ಟ್ ಸಂಚಿಕೆಯೊಂದನ್ನು ಮಾಯ ಮಾಡಿದ್ದರು. ಎಲ್ಲಾ ತಪ್ಪು ನನ್ನದೇ. ದೊಡ್ಡದಾಗಿ ಸ್ಕೋಪ್ ತೆಗೆದುಕೊಳ್ಳಲು ರೀಡರ್ಸ್ ಡೈಜೆಸ್ಟ್ ನಲ್ಲಿ ಬಂದಿದ್ದ ವಿಶೇಷ ಮಾಹಿತಿಯನ್ನು ಅವರಿಗೆ ತೋರಿಸಿದ್ದೆ. 'ಓದಿ ಕೊಡ್ತೇನಾ. ಓಕೆ??' ಅಂದು ತೆಗೆದುಕೊಂಡು ಹೋದವರು ತಾವೂ ಮಾಯವಾಗಿ ಪತ್ರಿಕೆಯನ್ನೂ ಮಾಯ ಮಾಡಿಬಿಟ್ಟರು. ರೀಡರ್ಸ್ ಡೈಜೆಸ್ಟ್ ಪತ್ರಿಕೆಯನ್ನು ಪ್ರಾಣಕ್ಕಿಂತಲೂ ಜತನವಾಗಿ ಕಾದಿಟ್ಟುಕೊಳ್ಳುತ್ತಿದ್ದ ತಂದೆಯವರು ಹುಡುಕಿ ಹುಡುಕಿ ಸುಸ್ತಾದರು. ನಾನು ಮುಗುಮ್ಮಾಗಿದ್ದೆ. ಕಳೆದುಹೋಗಲು ನಾನೇ ಕಾರಣ ಎಂದು ತಿಳಿದಿದ್ದರೆ ಬೈಯುತ್ತಿರಲಿಲ್ಲ ಆದರೆ ನನ್ನ ಬೇಜವಾಬ್ದಾರಿ ಬಗ್ಗೆ ಅವರಿಗೆ ಆಗಬಹುದಾಗಿದ್ದ ನೋವು ನನಗಾಗಬಹುದಾಗಿದ್ದಂತಹ ಯಾವುದೇ ನೋವಿಗಿಂತ ದೊಡ್ಡದಾಗಿತ್ತು. ಅದಕ್ಕೇ ಸುಮಡಿಯೊಳಗೆ ಕೂತು ಬಚಾವಾಗಿದ್ದೆ. ಆ ಒಂದು ಸಂಚಿಕೆ ಮಿಸ್ಸಾದ ಅಗಲಿಕೆಯ ನೋವು ಅವರನ್ನು ತುಂಬಾ ಕಾಡಿತ್ತು. ೧೯೫೫ ರಿಂದ ಹಿಡಿದು ಸತತವಾಗಿ ರೀಡರ್ಸ್ ಡೈಜೆಸ್ಟ್ ಚಂದಾದಾರರು ಅವರು. ಮತ್ತೆ ಎಲ್ಲವನ್ನೂ ಸಂಗ್ರಹಿಸಿ ಜತನದಿಂದ ಕಾಪಿಟ್ಟುಕೊಳ್ಳುವ ದೊಡ್ಡ ಪ್ರಮಾಣದ ಶಿಸ್ತಿನ ಮಂದಿ. Anyway...back to ಬನವಾಸಿ.

'ಹ್ಮ್! ಬನವಾಸಿ ಶಿವಮೊಗ್ಗಾ ಜಿಲ್ಲಾದಾಗ ಬರ್ತದ ಅಂತಾತು. ಗೊತ್ತೇ ಇರಲಿಲ್ಲ ನೋಡು. ಹೋಗಿ ಆ ಹುಡುಗುರಿಗೆ ಬರೋಬ್ಬರಿ ಹೇಳಬೇಕು. ಇಲ್ಲಂದ್ರ ನಾ ಈಗ ಉತ್ತರ ಕನ್ನಡ ಅಂತ ಹೇಳಿ ಬಂದೇನಿ. ಅದನ್ನೇ ಬರೆದು ಮಾರ್ಕ್ಸ್ ಕಳೆದುಕೊಂಡಾವು ಪಾಪ. ಮೊದಲೇ ಕುರುಡರು. ಮಾರ್ಕ್ಸ್ ಕಮ್ಮಿ ಬೀಳ್ತಾವ. ಉತ್ತರ ಬರೆಯುವವರು ಸರಿ ಬರೆಯೋದಿಲ್ಲರೀ ಅಂತ ಅಳ್ತಾವ. ಮುಂದಿನ ಕ್ಲಾಸಿನಾಗ ಬರೋಬ್ಬರಿ ಹೇಳಿ ಕಳಿಸ್ತೇನಿ,' ಅನ್ನುತ್ತ ಕಳಚಿಕೊಂಡರು ಅಮ್ಮ. ಸಾವಿರ ಕೆಲಸ ಅವರಿಗೆ. ನಾ ರಜೆಗೆ ಬಂದಾಗ ಕೆಲಸ ಜಾಸ್ತಿನೇ. ಯಾಕೆಂದ್ರೆ ನಾವು ಯಾವ ಕೆಲಸವನ್ನೂ ಮಾಡದೇ ಕೇವಲ ಮಸ್ತಿ ಮಾಡಲಿಕ್ಕೆ ರಜೆಗೆ ಬಂದವರು.

ನಮ್ಮ ಕೀರಿಟಕ್ಕೆ ಮತ್ತೊಂದು ಗರಿ. ಉಪಯೋಗಿಲ್ಲದ ಗರಿ. ಆಗಿನ ಕಾಲದಲ್ಲಿ ಜನರಲ್ ನಾಲೆಜ್ ಅನ್ನುವುದು ಒಂದು ತರಹದ ಹೆಮ್ಮೆ. ಉಳಿದವರಿಗೆ ಗೊತ್ತಿಲ್ಲದ ಏನಾದರೂ ಒಂದು ಸಣ್ಣ ವಿಷಯ ಗೊತ್ತಿದ್ದುಬಿಟ್ಟರೆ ಅದು ಜನರಲ್ ನಾಲೆಜ್ ಅನ್ನುವ ಭ್ರಮೆ. ತಪ್ಪು ಅಭಿಪ್ರಾಯ. ಆಗಿನ ಕಾಲದಲ್ಲಿ ಜನರಲ್ ನಾಲೇಜಿಗೆ ಸಿಕ್ಕಾಪಟ್ಟೆ ಒತ್ತು ಕೊಡುತ್ತಿದ್ದರು. ಅದಕ್ಕಾಗಿಯೇ ದಿನ ಪತ್ರಿಕೆ ಓದಲು ಹೇಳುತ್ತಿದ್ದರು. ಉಪಯುಕ್ತ ಮಾಹಿತಿಗಳನ್ನು ಶೇಖರಿಸಿಟ್ಟುಕೊಳ್ಳಲು ಹೇಳುತ್ತಿದ್ದರು. ಬೇಕಾದ ಮಾಹಿತಿ ಪಟ್ಟಂತ ಸಿಗಲು ಆಗ ಗೂಗಲ್, ಇಂಟರ್ನೆಟ್ ಇರಲಿಲ್ಲ ನೋಡಿ. ಅವೆಲ್ಲಾ ಹೋಗಲಿ. ಬೇಕಾದ ಪುಸ್ತಕಗಳೇ ಸಿಗುತ್ತಿರಲಿಲ್ಲ. ವಿದೇಶದಲ್ಲಿದ್ದ ಬಂಧುಗಳಿಂದ ಕಾಡಿ ಬೇಡಿ ಪುಸ್ತಕ ತರಿಸಿಕೊಂಡರೆ ಅವನ್ನು ದೇಸಿ ಪರಿಚಿತರಿಂದ ಕಾದಿಟ್ಟುಕೊಳ್ಳುವುದು ಕಷ್ಟ. ಒಮ್ಮೆ ಓದಲಿಕ್ಕೆಂದು ತೆಗೆದುಕೊಂಡು ಹೋಗಿ, ಅನೇಕ ಪುಸ್ತಕಗಳು ವಾಪಸ್ ಬರದೇ, ಕೊಟ್ಟು ಮಂಗ್ಯಾ ಆದ ತಂದೆಯವರ ಕಹಿ ಅನುಭವಗಳು ಸಾಕಷ್ಟಿದ್ದವು.

ಮುಂದೆ ಆ ಅಂಧ ವಿದ್ಯಾರ್ಥಿಗಳು ಏನಾದರೋ ಗೊತ್ತಿಲ್ಲ. ಅವರು ಹೋದ ಮೇಲೆ ಮುಂದಿನ ಬ್ಯಾಚ್ ಬಂತು. ಮತ್ತೇ ಅದೇ ರೀತಿಯ ಪಾಠ ಪ್ರವಚನ ಜೊತೆಗೆ ತಿಂಡಿ ತೀರ್ಥದ ಆತಿಥ್ಯ ಎಲ್ಲ ನಡೆದಿತ್ತು. ಸುಮಾರು ವರ್ಷ ಅಮ್ಮನ ಸಮಾಜಸೇವೆ ಹೀಗೆ ನಡೆದಿತ್ತು.

ಈಗ ಕೆಲವು ವರ್ಷಗಳ ಹಿಂದೆ ಏನೋ ನೋಡುತ್ತಿದ್ದಾಗ ಇಂಟರ್ನೆಟ್ ಮೇಲೆ ಬನವಾಸಿ ನೋಡಿದೆ. ಈಗ ಶಾಕ್ ಆಗುವ ಬಾರಿ ನನ್ನದು. ನೋಡಿದರೆ ಬನವಾಸಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಇದೆ! ಸಿರ್ಸಿ ತಾಲೂಕಿನಲ್ಲೇ ಇದೆ! ಅಕಟಕಟಾ! ಇದೇಗೆ ಹೀಗಾಯಿತು?

ನಂತರ ಹೊಳೆಯಿತು. ಭೂಪಟಗಳಿಗೆ ಇರುವ ಜಾಗದ ಇತಿಮಿತಿಗಳಲ್ಲಿ ಎಲ್ಲ ಮಾಹಿತಿ ತೋರಿಸುವುದು ಕಷ್ಟ. ಬನವಾಸಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಸರಹದ್ದಿನಲ್ಲಿಇದೆ. ಭೂಪಟದವರು ಅದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಮೂದಿಸಿದ್ದಾರೆ. ಹಾಗಾದರೂ ಸ್ಥಳವನ್ನು ಸೂಚಿಸುವ ಬಿಂದು ಉತ್ತರ ಕನ್ನಡದಲ್ಲಿ ಇರಬೇಕಿತ್ತು. ಹಾಗಾದರೂ ಸಾಕಿತ್ತು. confusion  ಆಗುತ್ತಿರಲಿಲ್ಲ. ಅದೇನಾಗಿತ್ತೋ ಗೊತ್ತಿಲ್ಲ. ಮೊದಲಿಂದಲೂ ಬನವಾಸಿ ಶಿವಮೊಗ್ಗ ಜಿಲ್ಲೆಯಲ್ಲಿದೆ ಅನ್ನುವ ತಪ್ಪು ಕಲ್ಪನೆ ನನ್ನ ತಲೆಯಲ್ಲಿ ಕೂತಿತ್ತು. ಅದು ಅಲ್ಲಿಂದ ಎಲ್ಲೆಲ್ಲೋ ಪಸರಿಸಿಬಿಟ್ಟಿತ್ತು.

ಆ ಅಂಧ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಬನವಾಸಿ ಎಲ್ಲಿದೆ ಎನ್ನುವ ಪ್ರಶ್ನೆ ಬಂದಿತ್ತೋ ಏನೋ? ಪಾಪದ ಅವು ಏನು ಉತ್ತರ ಬರೆದವೋ ಏನೋ? ಗೊತ್ತಿಲ್ಲ. ಶಿವಮೊಗ್ಗ ಅಂತ ಬರೆದು ಮಂಗ್ಯಾ ಆಗಿ ಮಾರ್ಕ್ಸ್ ಕಳೆದುಕೊಂಡರೆ ಆ ಪಾಪ ನಮಗೂ ಮುಟ್ಟುತ್ತದೆ. ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಹೇಗೆ? ಮತ್ತೆ ಹೇಗೆ? ಕೊಂಚ ದಾನ ಧರ್ಮ ಮಾಡಿ. ಮನೆ ಕಡೆಯಿಂದ ಅಂಧರ ಸಂಸ್ಥೆಗಳಿಗೆ ದಾನ ಧರ್ಮ ಸಂದಾಯವಾಗುತ್ತಿರುತ್ತದೆ. ಅದರಲ್ಲೇ ಎಲ್ಲ ಬಾರಾ ಖೂನ್ ಮಾಫ್ ಮಾಡಿ ಎಂದು ಬೇಡಿಕೊಳ್ಳಬೇಕು.

'ಅಂಕುಶವಿಟ್ಟರೂ ನನ್ನ ಮನಸ್ಸು ನೆನೆಯುವುದು ಬನವಾಸಿಯನ್ನೇ,' ಎಂದು ಆದಿಕವಿ ಪಂಪ ಹೇಳಿಕೊಂಡನಂತೆ. ನಮಗೂ ಆಗಾಗ ಬನವಾಸಿ ನೆನಪಾಗುತ್ತದೆ. ಅದರಲ್ಲೂ ಇಂಟರ್ನೆಟ್ ಮೇಲೆ ವಿಷಯ ಹುಡುಕುವಾಗ ಮುದ್ದಾಂ ನೆನಪಾಗುತ್ತದೆ. ಹಿಂದೆಂದೋ ಆಗಿಹೋದ ಈ ಜನರಲ್ ನಾಲೆಜ್ ಲಫಡಾ ನೆನಪಾಗುತ್ತದೆ.

ಬನವಾಸಿಯ ಮಹತ್ವ ಬಹಳ. ಕದಂಬರ ರಾಜ ಮಯೂರ ವರ್ಮ ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡ. ಯಜ್ಞಯಾಗಾದಿಗಳನ್ನು ಮಾಡಲು ಬ್ರಾಹ್ಮಣರು ಬೇಕೆಂದು ಉತ್ತರ ಭಾರತದಲ್ಲಿ ನೆಲೆಸಿದ್ದ ಬ್ರಾಹ್ಮಣರನ್ನು ಕರೆತಂದ. ಅಲ್ಲಿಂದ ಬಂದ ಬ್ರಾಹ್ಮಣರೇ ಇಂದಿನ ಹವ್ಯಕ ಬ್ರಾಹ್ಮಣರ, ಅಂದರೆ ನಮ್ಮ ಸಮುದಾಯದ, ಮೂಲ ವಂಶಜರು ಅಂತ ಐತಿಹ್ಯವಿದೆ. ಮಯೂರ ವರ್ಮ ಬನವಾಸಿಯಲ್ಲಿ ನೆಲೆಸದೇ ಹೋಗಿದ್ದರೆ, ಉತ್ತರದಿಂದ ಬ್ರಾಹ್ಮಣರನ್ನು ಆಮದು ಮಾಡಿಕೊಳ್ಳದೇ ಹೋಗಿದ್ದರೆ ನಾವೆಲ್ಲಾ ಇವತ್ತು ಎಲ್ಲಿರುತ್ತಿದ್ದೆವೋ? ದೇವರಿಗೇ ಗೊತ್ತು. ಹಾಗಾಗಿ ನಮ್ಮ ಕುಲಕ್ಕೂ ಮೂಲವಾದ ಬನವಾಸಿ ಆಗಾಗ ನೆನಪಾಗುತ್ತಲೇ ಇರುತ್ತದೆ.

Sunday, September 08, 2019

ಅಂಧ ಪೈಲಟ್ಟುಗಳು ವಿಮಾನ ಹಾರಿಸಿದ್ದು!

ಅದೊಂದು ದೊಡ್ಡ ವಿಮಾನನಿಲ್ದಾಣ. ಒಂದು ವಿಮಾನ ಹಾರಲು ಸಜ್ಜಾಗಿ ನಿಂತಿತ್ತು. ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸಿ ಸಿದ್ಧರಾಗಿ ಕುಳಿತಿದ್ದರು. ವಿಮಾನ ಹಾರಿಸುವ ಪೈಲಟ್ಟುಗಳು ಮಾತ್ರ ನಾಪತ್ತೆ!

ಅಷ್ಟರಲ್ಲಿ ಹಿಂದಿಂದ ಇಬ್ಬರು ವ್ಯಕ್ತಿಗಳು ಬರುತ್ತಿರುವುದು ಕಂಡಿತು. ಇಬ್ಬರೂ ಕಪ್ಪು ಕನ್ನಡಕ ಧರಿಸಿದ್ದರು. ಒಬ್ಬ ಕೈಯಲ್ಲಿ ಬಿಳಿ ಕೋಲು ಹಿಡಿದಿದ್ದ. ಮತ್ತೊಬ್ಬ ಬಿಳಿ ಕೋಲಿನೊಂದಿಗೆ ಕುರುಡರಿಗೆ ಸಹಾಯ ಮಾಡುವ ನಾಯಿಯನ್ನೂ ತಂದಿದ್ದ.

ಈ ಕುರುಡರಿಬ್ಬರೂ ತಡಕಾಡುತ್ತ, ಅಕ್ಕಪಕ್ಕದವರಿಗೆ ಡಿಕ್ಕಿ ಹೊಡೆಯುತ್ತ,ಬಿಳಿ ಕೋಲು ಮತ್ತು ನಾಯಿಯ ಸಹಾಯದಿಂದ ವಿಮಾನದ cockpit ತಲುಪಿಕೊಂಡರು. ಹೇಗೋ ಮಾಡಿ ವಿಮಾನ ಹಾರಿಸುವ ಕುರ್ಚಿಗಳ ಮೇಲೆ ಆಸೀನರಾದರು. ತಡಕಾಡುತ್ತಲೇ ವಿಮಾನ ಹಾರಿಸುವ ಮೊದಲು ಮಾಡಬೇಕಾದ ಕೆಲಸಗಳನ್ನು ಏನೋ ಒಂದು ರೀತಿಯಲ್ಲಿ ಮಾಡತೊಡಗಿದರು. ಒಬ್ಬ ಪೆನ್ನು ಕೆಳಗೆ ಬೀಳಿಸಿದರೆ ಮತ್ತೊಬ್ಬ ಹೇಗೋ ಮಾಡಿ ಎತ್ತಿಕೊಡುತ್ತಿದ್ದ. ಒಬ್ಬ ತಪ್ಪಾಗಿ ಯಾವುದೋ ಸ್ವಿಚ್ ಹಾಕಿದರೆ ಮತ್ತೊಬ್ಬ ತಡಕಾಡುತ್ತ ಹೇಗೋ ಸರಿ ಮಾಡುತ್ತಿದ್ದ. ಒಟ್ಟಿನಲ್ಲಿ ರೂಢಿ ಮೇಲೆ ಏನೋ ಮಾಡುತ್ತಿದ್ದರು.

ಇದನ್ನು ನೋಡಿದ ಪ್ರಯಾಣಿಕರಿಗೆ ಆಶ್ಚರ್ಯ. ಇದೇನು ತಮಾಷೆ ಮಾಡುತ್ತಿದ್ದಾರೋ ಎಂದುಕೊಂಡರು. ಎಲ್ಲ ಅಂಗಾಂಗಳು ಸರಿಯಿರುವ ಮನುಷ್ಯರೂ ಸಹ, ತರಬೇತಿಯ ನಂತರವೂ, ಎಲ್ಲ ವಿಮಾನ ಹಾರಿಸಲಾರರು. ಇಲ್ಲಿ ನೋಡಿದರೆ ಇಬ್ಬರು ಅಂಧರು ವಿಮಾನ ಹಾರಿಸಲು ತಯಾರಾಗುತ್ತಿದ್ದಾರೆ. ಏನಾಗುತ್ತಿದೆ ಇಲ್ಲಿ ಎಂದು ಯಾತ್ರಿಕರು ಆತಂಕಗೊಂಡರು.

ಅಷ್ಟರಲ್ಲಿ ವಿಮಾನದ ಇಂಜೀನುಗಳು ಆರಂಭವಾಗಿ ಗುಡುಗತೊಡಗಿದವು. ಅಂಧ ಪೈಲಟ್ ಪ್ಲೇನ್ ಎತ್ತಿಯೇಬಿಟ್ಟ. ಅಂದಾಜಿನ ಮೇಲೆ ಅತ್ತಿತ್ತ ಓಲಾಡಿಸುತ್ತ ವಿಮಾನವನ್ನು runway ಮೇಲೆ ತಂದವನೇ ಫುಲ್ ವೇಗ ಕೊಟ್ಟ. ಎತ್ತರ ಪತ್ತರ ಓಲಾಡುತ್ತ, ಎಲ್ಲಿ runway ಬಿಟ್ಟು ಹೋಗಿ ಅಪಘಾತವಾಗಿಬಿಡುತ್ತದೋ ಮಾದರಿಯಲ್ಲಿ ವಿಮಾನ ವೇಗವಾಗಿ ಚಲಿಸತೊಡಗಿತು.

ಈಗ ಮಾತ್ರ ಪ್ರಯಾಣಿಕರಿಗೆ ಖಾತ್ರಿಯಾಯಿತು, ಇದು ತಮಾಷೆ ಅಲ್ಲ. ಖಂಡಿತ ತಮಾಷೆಯೆಲ್ಲ. ಜೀವ ಬಾಯಿಗೆ ಬಂತು. ಈ ಕುರುಡ ಪೈಲಟ್ಟುಗಳು ತಮ್ಮನ್ನು ಸ್ವರ್ಗಕ್ಕೋ ನರಕಕ್ಕೋ ಕಳಿಸುವದು ಖಾತ್ರಿಯೆಂದುಕೊಂಡು, ಪ್ರಾಣಭಯದಿಂದ ಜೋರಾಗಿ ಕೂಗಿಕೊಳ್ಳಲು ಆರಂಭಿಸಿದರು.

runway ಮೇಲೆ ಕೇವಲ ಇಪ್ಪತ್ತು ಅಡಿ ಮಾತ್ರ ಉಳಿದಿತ್ತು. ಮುಂದೆ ಕಂದಕ. ಅಷ್ಟರಲ್ಲಿ ವಿಮಾನ ಮೇಲೆ ಹಾರಬೇಕು. ಹಾರಿದರೆ ಬಚಾವು. ಇಲ್ಲವಾದರೆ ಗೋವಿಂದಾ ಗೋವಿಂದಾ!

ಪ್ರಯಾಣಿಕರ ಆರ್ತನಾದ ತಾರಕಕ್ಕೆ ಏರಿತು. ಹತ್ತಡಿ, ಐದಡಿ..... ಆರ್ತನಾದ ಈಗ ಉತ್ತುಂಗದ ಸ್ಥಿತಿಯಲ್ಲಿ. ಇನ್ನೇನು runway ಮುಗಿದೇಹೋಯಿತೇನೋ ಅನ್ನುವಷ್ಟರಲ್ಲಿ ವಿಮಾನ ಪವಾಡಸದೃಶವಾಗಿ ಮೇಲಕ್ಕೇರಿತು.

ನಿರುಮ್ಮಳರಾದ ಪ್ರಯಾಣಿಕರು ಬದುಕಿದೆಯಾ ಬಡಜೀವವೇ ಎಂಬಂತೆ ನಿಟ್ಟುಸಿರು ಬಿಟ್ಟು ಎಲ್ಲ ದೇವರಿಗೂ ದೊಡ್ಡ ನಮಸ್ಕಾರ ಹಾಕಿದರು.

ಆಗ ಪೈಲಟ್ಟುಗಳು ಮಾತಾಡಿಕೊಂಡರು, 'ಗುರೂ, ಒಂದು ದಿನ ಈ ಪ್ರಯಾಣಿಕರು ಕೂಗುವುದನ್ನು ನಿಲ್ಲಿಸುತ್ತಾರೆ. ಅಂದು ದೊಡ್ಡ ಅಪಘಾತವಾಗಲಿದೆ. ಎಲ್ಲರೂ ಸಾಯುತ್ತೇವೆ!!'

ಅರ್ಥವಾಯಿತು ತಾನೇ? ಪೈಲಟ್ಟುಗಳು ನಿಜವಾಗಿಯೂ ಕುರುಡರೇ ಆಗಿದ್ದರು. ಪುಣ್ಯಕ್ಕೆ ಕಿವುಡರಾಗಿರಲಿಲ್ಲ. ಪ್ರಯಾಣಿಕರ ಆರ್ತನಾದದ ಅಂದಾಜಿನ ಮೇಲೆ ವಿಮಾನ ಹಾರಿಸುತ್ತಿದ್ದರು. runway ಯಾವಾಗ ಮುಗಿಯುತ್ತದೆ ಅಂತ ಗೊತ್ತೂ ಆಗುತ್ತಿರಲಿಲ್ಲ. ಆದರೆ runway ಮುಗಿಯಲಿದೆ, ವಿಮಾನ ಮೇಲಕ್ಕೆ ಏರದಿದ್ದರೆ ಢಮ್ ಅನ್ನಲಿದೆ ಅನ್ನುವುದು ಪ್ರಯಾಣಿಕರಿಗೆ ಗೊತ್ತಾಗುತ್ತಿತ್ತು. ಅವರ ಆರ್ತನಾದ ತಾರಕಕ್ಕೆ ಏರುತ್ತಿತ್ತು. ಪ್ರಯಾಣಿಕರ ಆರ್ತನಾದ ಒಂದು ಲೆವೆಲ್ಲಿಗೆ ಬಂತು ಅಂದಾಗ ಪೈಲಟ್ಟುಗಳಿಗೆ ಗೊತ್ತಾಗುತ್ತಿತ್ತು, 'runway ಮುಗಿಯಲಿದೆ. ವಿಮಾನವನ್ನು ಎತ್ತಲು ಸರಿಯಾದ ಸಮಯ,' ಎಂದುಕೊಂಡು ಎತ್ತುತ್ತಿದ್ದರು.

ಪ್ರಜಾಪ್ರಭುತ್ವಕ್ಕೂ ಇದು ಅನ್ವಯವಾಗುತ್ತದೆ. ನಮ್ಮ ದೇಶದ ಚುಕ್ಕಾಣಿ ಹಿಡಿದ ನಾಯಕರೂ ಸಹ ಅಂಧರೇ. ನಾವು ಕೂಗುವುದನ್ನು, ಅಂದರೆ ಪ್ರತಿಭಟನೆ ಮಾಡುವುದನ್ನು, ನಿಲ್ಲಿಸಿದ ದಿನ ದೇಶವನ್ನು ಪ್ರಪಾತಕ್ಕೆ ತಳ್ಳುತ್ತಾರೆ. ಹಾಗಾಗಿ ಕೂಗುತ್ತಲೇ ಇರಬೇಕು. ಪ್ರತಿಭಟಿಸುತ್ತಲೇ ಇರಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿಭಟನೆ ಅವಶ್ಯ. ನಮ್ಮ ಆರ್ತನಾದದ ಮರ್ಮ ಅರಿತಿರುವ "ನಾಯಕರು" ಹೇಗೋ ಮಾಡಿ ದೇಶವನ್ನು ಏನೋ ಒಂದು ತರಹ ಮುನ್ನೆಡಿಸುತ್ತಾರೆ. ಹಾಗಂತ ಆಶಿಸಬಹುದು.

ನಿನ್ನೆ ನಿಧನರಾದ ಖ್ಯಾತ ವಕೀಲ ರಾಮ್ ಜೇಠಮಲಾನಿ ತಮ್ಮ ಪುಸ್ತಕದಲ್ಲಿ ಹೀಗೆ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ.

ಮಾಹಿತಿ ಆಧಾರ: Maverick Unchanged, Unrepentant by Ram Jethmalani

 

ರಾಮ್ ಜೇಠಮಲಾನಿ ಬಗ್ಗೆ ಹಿಂದೆ ಬರೆದಿದ್ದ ಲೇಖನಗಳು.

* ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ?

* ಯಾರದ್ದೋ ಔಷದಿ, ಇನ್ನ್ಯಾರೋ ತೊಗೊಂಡು, ತೊಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದು!

* ಕಿಸ್ಸಿಂಗ್ ಕಿಡಿಗೇಡಿ

Sunday, August 18, 2019

"ಚಡ್ಡಿ ಕೊಳ್ಳಿರೋ, ನೀವೆಲ್ಲರೂ 'ಗಂಡಸರ' ಚಡ್ಡಿ ಕೊಳ್ಳಿರೋ..."

'ಕಲ್ಲುಸಕ್ಕರೆ ಕೊಳ್ಳಿರೋ, ನೀವೆಲ್ಲರೂ ಕಲ್ಲುಸಕ್ಕರೆ ಕೊಳ್ಳಿರೋ...' ಅಂತ ಒಂದಾನೊಂದು ಕಾಲದಲ್ಲಿ ಪುರಂದರದಾಸರು ಹಾಡಿದ್ದರು. ನಮ್ಮ ಧಾರವಾಡ ಕಡೆ ಪುರಂದರದಾಸರು ಅಂತ ಫುಲ್ ಉಚ್ಚಾರ ಮಾಡೋದೇ ಇಲ್ಲ. ಪುರಂಧ್ರದಾಸ್ರು ಅಂತ ಅಸಡ್ಡಾಳ ಉ(ಹು)ಚ್ಚಾರ ಮಾಡಿಬಿಡ್ತಾರ. ಅಷ್ಟss, ನವರಂಧ್ರಗಳಲ್ಲಿ ಇದ್ಯಾವ ರಂಧ್ರಪಾ ಈ ಪುರಂಧ್ರ ಅಂತ ವಿಚಾರ ಮಾಡ್ಲಿಕ್ಕೆ ಹೋಗಬ್ಯಾಡ್ರಿ. ಅನಾಹುತ ಆದೀತು!

ಬ್ಯಾಕ್ ಟು ದಿ ಪಾಯಿಂಟ್.... ಆ ದಾಸರೇನೋ 'ಕಲ್ಲುಸಕ್ಕರೆ ಕೊಳ್ಳಿರೋ, ನೀವೆಲ್ಲರೂ ಕಲ್ಲುಸಕ್ಕರೆ ಕೊಳ್ಳಿರೋ...' ಅಂತ ಹಾಡಿಬಿಟ್ಟರು. ಈಗ ಖತರ್ನಾಕ್ 'ಮಂದಿ' ಬಂದದ. ಹಾಂಗಾಗಿ ಅದನ್ನು ಬದಲಾಯಿಸಿ, 'ಚಡ್ಡಿ ಕೊಳ್ಳಿರೋ, ನೀವೆಲ್ಲರೂ 'ಗಂಡಸರ' ಚಡ್ಡಿ ಕೊಳ್ಳಿರೋ...' ಅಂತ ಹಾಡಬೇಕಾಗ್ತದ.

ಏನ್ರೀ ಹಾಂಗಂದ್ರ? ಯಾರೋ ಮಂದಿ ಬಂದಳಂತ. ಅದಕ್ಕಾಗಿ ಎಲ್ಲರೂ ಚಡ್ಡಿ ಅದ್ರಾಗೂ ಗಂಡಸರ ಚಡ್ಡಿ ತೊಗೋಬೇಕಂತ. ಅದೂ ರೊಕ್ಕಾ ಕೊಟ್ಟು! ಹುಚ್ಚ ಗಿಚ್ಚ ಹಿಡದದೇನು??

ಆದ್ರೂ ಈ ಮಂದಿ ಯಾರ್ರೀ? ಅಕಿಗ್ಯಾಗ ಗಂಡಸೂರ ಚಡ್ಡಿ? ಇದೊಳ್ಳೆ ಶ್ರೀನಿವಾಸ-ಪದ್ಮಾ ಟಾಕೀಸ್ ಲೇಡಿ ಸೆಕ್ಯೂರಿಟಿ ಗಾರ್ಡ್ ಕಥಿ ಆತಲ್ಲಾ. ನಮ್ಮ ಕಾಲದಾಗ ಅಂದ್ರ ಈಗ ಮೂವತ್ತೈದು ನಲವತ್ತು ವರ್ಷಗಳ ಹಿಂದೆ, ಧಾರವಾಡದ ಶ್ರೀನಿವಾಸ ಮತ್ತು ಪದ್ಮಾ ಎಂಬ ಅವಳಿ ಜವಳಿ ಸಿನಿಮಾ ಟಾಕಿಸೀನ್ಯಾಗ crowd management ಮಾಡಲಿಕ್ಕೆ ಒಬ್ಬಾಕಿ ಲೇಡಿ ಸೆಕ್ಯೂರಿಟಿ ಗಾರ್ಡ್ ಇದ್ದಳು. ಅಕಿ ಆದ್ಮಿ ಜಾಸ್ತಿ ಔರತ್ ಕಮ್ಮಿ. ಏನ್ರೀಪಾ? ಸೀರಿ ಕೆಳಗ ಸೀದಾ ಗಂಡಸೂರ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ಅಡ್ಯಾಡ್ತಿದ್ದಳು. ಬಾಯಿ ಅಂದ್ರ ಬೊಂಬಾಯಿ. ಅಲ್ಲೇ ಬಾಜೂಕ ಮ್ಯಾದಾರ ಓಣಿಯಾಗ ಸಿಕ್ಕ ಬಿದರಿನ ಕೋಲೊಂದನ್ನ ಲಾಠಿ ಗತೆ ಹಿಡಕೊಂಡು, ಸಕಲ ದೇವರ 'ಸಹಸ್ರನಾಮಾಚರಣೆ' ಮಾಡುತ್ತ, ಪಾನ್ ಪಿಚಕಾರಿ ಹಾರಿಸ್ಗೋತ್ತ, ಒಂದು ಖಡಕ್ ಆವಾಜ್ ಹಾಕಿದಳು ಅಂದ್ರ ಮುಗೀತಷ್ಟss. ಎಲ್ಲರೂ ಚುಪ್ ಚಾಪ್! ಗಪ್ ಚುಪ್! ಅಂತಾ ಗಂಡಬೀರಿ ಔರತ್ ಇದ್ದಳು ಅಕಿ. ಏ, ಅಕಿ ಮುಂದ ಎಂತೆಂತಾ ಗುಂಡಾ ಮಂದಿ ಸಹಿತ ಮೆತ್ತಗ ಆಗಿ, ಪಾಳಿ ಪ್ರಕಾರ ಟಿಕೆಟ್ ತೊಗೊಂಡು, ಸುಮಡಿ ಒಳಗ ಸುಮ್ಮ ಕೂತು ಸಿನಿಮಾ ನೋಡಿ ಬರ್ತಿದ್ದರು. ಹಾಂಗಿತ್ತು ಅಕಿ ಖದರು. ಆ ಖದರಿಗೆ ಒಳಗಿನ ಪಟ್ಟಾಪಟ್ಟಿ ಕಾರಣವೇ? ಗೊತ್ತಿಲ್ಲ!

ಎಲ್ಲೋ ಹೋತು ಕಥಿ... ಫೋಕಸ್ ಫೋಕಸ್!

'ಮಂದಿ' ಬಂದದ ಅಂದೆ. ಬಂದಾಳ ಅನ್ನಲಿಲ್ಲ. ಮಂದಿ ಉರ್ಫ್ ಮಂದಾಕಿನಿ ಅಂತ ಯಾರೂ ಎಲ್ಲೂ ಬಂದಿಲ್ಲ. ಬಾಜಾರಿನ್ಯಾಗ ಮಂದಿ ಬಂದದ ಅಂತ. ಅರ್ಥಾತ್ economic slowdown. ಆರ್ಥಿಕ ಮಂದಿ. ಅದು ಬಂದದ. ಹಾಂಗಾಗಿ ಗಂಡಸೂರ ಚಡ್ಡಿ ತೊಗೋಬೇಕಂತ.

ಅಯ್ಯ! ಇದೊಳ್ಳೆ ಕಥಿ ಆತಲಾ! ಮಂದಿ, ಆರ್ಥಿಕ ಮಂದಿನೇ, ಬಂದ್ರೂ ಮಂದಿಯೆಲ್ಲ ಅಂದ್ರ ಜನರೆಲ್ಲ ಯಾಕ ಚಡ್ಡಿ ತೊಗೋಬೇಕು? ಅದೂ ಗಂಡಸೂರ ಚಡ್ಡಿನೇ ಯಾಕ ತೊಗೋಬೇಕು????

ಅದೇನೋ Men's Underwear Index ಅಂತ ಒಂದು ಎಕನಾಮಿಕ್ ಇಂಡಿಕೇಟರ್ ಅದ ಅಂತ. ಅದು ಆರ್ಥಿಕ ಮಂದಿ ಯಾವಾಗ ಶುರು ಆಗ್ತದ ಮತ್ತು ಯಾವಾಗ ಬಿಸಿನೆಸ್ ಸುಧಾರಿಸ್ತದ ಅಂತ ಹೇಳ್ತದ ಅಂತ. ಯಾವಾಗ ಗಂಡಸೂರ ಚಡ್ಡಿ ಖರೀದಿ ಕಮ್ಮಿ ಆತೋ ಆವಾಗಿಂದ ಆರ್ಥಿಕ ಮಂದಿ ಶುರು ನೋಡ್ರಿ. ಯಾವಾಗ ಗಂಡಸೂರ ಚಡ್ಡಿ ಖರೀದಿ ಪಿಕಪ್ ಆತೋ ಆವಾಗ ತಿಳಿದುಕೊಳ್ರಿ ಎಕಾನಮಿ ಇಂಪ್ರೂವ್ ಆತು ಅಂತ. ಗಂಡಸೂರ ಚಡ್ಡಿ, ಪಟ್ಟಾಪಟ್ಟಿ ಚಡ್ಡಿ, ಅದಕ್ಕೇನು ಕಿಮ್ಮತ್ತು? ಅಂತ ಅಸಡ್ಡೆ ಮಾಡಬ್ಯಾಡ್ರಿ. ಸಬ್ ಅಂದರ್ ಕಿ ಬಾತ್ ಹೈ! ಇದು ಸಹ ಒಂದು ಅಂಡರ್ವೇರ್ ಚಡ್ಡಿ advertisement ಟ್ಯಾಗ್ ಲೈನ್ ಆಗಿತ್ತಲ್ಲಾ? ಯಾವ ಬ್ರಾಂಡ್? ನೆನಪಿಲ್ಲಾ.

Men's Underwear Index ಬಗ್ಗೆ ನಾನೂ ಸ್ವಲ್ಪ ತಲಿ ಕೆಡಿಸಿಕೊಂಡೆ. ಯಾಕಪಾ ಅಂದ್ರ... ಇವರು ಗಂಡಸೂರ ಚಡ್ಡಿ ಹಿಂದೇ ಯಾಕ ಬಿದ್ದಾರ? ಚಡ್ಡಿಗಳು ಬೇಸಿಕ್ ಅವಶ್ಯಕತೆ. ಚಡ್ಡಿ ಇಲ್ಲ ಅಂದ್ರ ನಡೆಯೋದಿಲ್ಲಾ. ಗಂಡಸೂರಿಗೂ ಅಷ್ಟೇ. ಹೆಂಗಸೂರಿಗೂ ಅಷ್ಟೇ. ಹೆಂಗಸೂರಿಗೆ ಚಡ್ಡಿ ಅವಶ್ಯಕತೆ ನಮಗಿಂತ ಸ್ವಲ್ಪ ಜಾಸ್ತಿನೇ ಅದೇ ಅಂತ ನನ್ನ ಭಾವನಾ. ಅವಶ್ಯಕತೆಗಿಂತ ಚಡ್ಡಿ criticality ಅವರಿಗೇ ಜಾಸ್ತಿ ಅಂತ ನಮ್ಮ ಅಭಿಪ್ರಾಯ. ಅವರ ಚಡ್ಡಿ ಬಗ್ಗೆ ನಾವು ಜಾಸ್ತಿ ಮಾತಾಡಿದ್ರ ನಮ್ಮ ಕೆಲವು ಖಡಕ್ ಫೆಮಿನಿಸ್ಟ್ ಗೆಳತಿಯರು, 'ಏ! sexist ಗತೆ ಮಾತಾಡಿದ್ರ ನೋಡ ಮತ್ತ. ಎಲ್ಲಾ equal. ಸಮಾನತೆ. ನಮಗೂ ಚಡ್ಡಿ ಅಷ್ಟೇನೂ ಜರೂರತ್ತಿಲ್ಲ ಅಂತ ತೋರಿಸಿಕೊಳ್ಳಲು ನಾವೂ ಚಡ್ಡಿ ಕಳೆದು ಓಡಾಡತೇವಿ...' ಅಂತ ಚಾಲೆಂಜ್ ತೊಗೊಂಡು 'ಚಡ್ಡಿ ಕಳಚಿ ಒಗೆಯಿರಿ. ಸಬಲೆಯರಾಗಿರಿ' ಅಂತ ಅಭಿಯಾನ ಶುರು ಆದ್ರ ಕಷ್ಟ. ಇಲ್ಲೆ ಅಮೇರಿಕಾದಾಗ ಅಂತೂ ಇಂತಾವೆಲ್ಲಾ ಭಾಳ. ಬರೇ ಗಂಡಸೂರಷ್ಟೇ ಯಾಕ ಎದಿ ತೋರಿಸ್ಕೊಂಡು ಓಡ್ಯಾಡಬಹುದು? ನಮಗ್ಯಾಕ ಆ ಹಕ್ಕಿಲ್ಲಾ? ಅಂತ ಜಗಳ ಮಾಡಿಕೊಂಡು, ವರ್ಷದಾಗ ಒಂದು ದಿವಸ go topless day ಅಂತ ಏನೋ ಮಾಡಿಕೊಂಡು, ಅವತ್ತು ನ್ಯೂಯಾರ್ಕಿನ ಸಿಟಿ ತುಂಬಾ ಬರೇ ಬತ್ತಲೆ ಓಡ್ಯಾಡೋ ಸತ್ಸಂಪ್ರದಾಯ ಹಾಕ್ಕೊಂಡುಬಿಟ್ಟಾರ. ಇರಲಿ. ಅಬಲೆಯರ ಸಬಲೀಕರಣ ಹಾಂಗಾದ್ರೂ ಆಗ್ಲಿ ಬಿಡ್ರಿ.

ಆದ್ರೂ ಈ ಅರ್ಥಶಾಸ್ತ್ರಜ್ಞರು ಗಂಡಸೂರ ಚಡ್ಡಿಗೇ ಯಾಕ ಗಂಟು ಬಿದ್ದರು ಅಂತ ಪೂರ್ತಿ ಕ್ಲಿಯರ್ ಆಗಲಿಲ್ಲ. ಆದರೂ ಕೆಲವೊಂದು ವಿಚಾರ ತಲಿಗೆ ಬಂದವು.

ಹೆಂಗಸು ಮನಿ ಜವಾಬ್ದಾರಿ ಸಂಬಾಳಿಸಿಕೊಂಡು ಹೋಗಾಕಿ ಅಂತ ಒಂದು stereotype ಮಾಡಿಬಿಟ್ಟಾರ. ಗಂಡ ನೌಕರಿ ಮಾಡೋದಂತ. ತಿಂಗಳ ಮೊದಲ್ನೇ ತಾರೀಕಿಗೆ, ಪೈಲಾಕ್ಕ ಪಕ್ಕಾ, ಅಷ್ಟೂ ಪಗಾರ ತಂದು ಹೆಂಡ್ತಿ ಕೈಯಾಗ ಕೊಡೋದಂತ. ಇವನ ಖರ್ಚಿಗೆ ಅಕಿನೇ ರೊಕ್ಕಾ ಕೊಡಬೇಕು. ಇಂತಾ stereotype ದೃಶ್ಯಗಳನ್ನ ಸಿನಿಮಾ ಒಳಗ ಭಾಳ ನೋಡೇವಿ ಬಿಡ್ರಿ.

ಹೀಂಗಾಗಿ ರೊಕ್ಕ ಹೆಂಗಸೂರ ಕೈಯಾಗ ಬಂತು ಅಂದ್ರ ಅವರು ಮೊದಲು ತಮಗ ಎಷ್ಟು ಬೇಕು ಅಷ್ಟು ಚಡ್ಡಿ ಮತ್ತಿತರ ಒಳಉಡುಪು ಖರೀದಿ ಮಾಡ್ತಾರ. ನಂತ್ರ ಮಕ್ಕಳಿಗಂತೂ ಕಮ್ಮಿ ಮಾಡಲಿಕ್ಕೆ ಆಗೋದಿಲ್ಲ. ಅದ್ರಾಗೂ ಸಣ್ಣ ಮಕ್ಕಳಿಗಂತೂ ದಿನಕ್ಕೆ ನಾಲ್ಕ್ನಾಲ್ಕ ಜೋಡಿ ವಸ್ತ್ರ ಬೇಕಾಗ್ತಾವ. ಜಗತ್ತಿನದೇ ಇರಲಿ ಮನೆಯದೇ ಇರಲಿ, ಆರ್ಥಿಕ ಪರಿಸ್ಥಿತಿ ಎಷ್ಟೇ ಹಾಳಾಗಲಿ, ಹೆಂಗಸೂರು ತಮ್ಮ ಚಡ್ಡಿ ಮತ್ತು ಮಕ್ಕಳ ಚಡ್ಡಿಗೆ ಖೋತಾ ಮಾಡಿಕೊಳ್ಳೋದಿಲ್ಲ ಅಂತ ನಮ್ಮ ಭಾವನಾ. ಹಾಂಗಾಗಿ ಕೊನೆಗೆ ಕೊಕ್ಕೆ ಬೀಳೋದು ಗಂಡಸೂರ ಚಡ್ಡಿಗೇ ಅಂತ ನಮ್ಮ ಭಾವನಾ. 'ಹ್ಯಾಂಗೂ ಗಂಡಸೂರ ಚಡ್ಡಿ ಅಲ್ಲಾ? ಏನು ಮಹಾ? ಪಿಸದಿತ್ತು ಅಂದ್ರ ಕೈಹೊಲಿಗೆ ಹಾಕಿ ಕೊಡೋದು. ಮತ್ತೂ ದೊಡ್ಡದಾಗಿ ಪಿಸಿದು, ಗಿಲ್ಲಿ ಬೋಕಾ ಬಿಟ್ಟು ಹೊರಗ ಬರುವಷ್ಟು ದೊಡ್ಡದಾಗಿ ಹರದಿತ್ತು ಅಂದ್ರ ಹರಿದು ಹೋದ ಹಳೆ ಸೀರಿ ತುಂಡಿನ ಪ್ಯಾಚ್ ಹಚ್ಚಿಕೊಡೋದು. ಒಟ್ಟಿನ್ಯಾಗ ಹ್ಯಾಂಗೋ ಮ್ಯಾನೇಜ್ ಮಾಡೋದು. ಈ ಮಂದಿ ಹೋದ ಮ್ಯಾಲೆ ಅಂದ್ರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಮ್ಯಾಲೆ ಗಂಡಸೂರಿಗೆ ಹೊಸಾ ಚಡ್ಡಿ ತಂದ್ರ ಆತು ಬಿಡು,' ಅನ್ನುವ neglect ಮಾಡುವ ಮನೋಭಾವ ಇರ್ತದೇನೋಪಾ?? ಗೊತ್ತಿಲ್ಲ. ಇದೇ ವಾಸ್ತವಿಕತೆ ಅಂತಾದರೆ ಅಂತಹ ಗಂಡು ಮುಂಡೇವುಗಳಿಗೆ ನಮ್ಮದೊಂದು ಸಂತಾಪ. ಈ ಆರ್ಥಿಕ ಮಂದಿ ಲಗೂನ ಹೋಗಿ ನಿಮಗೆಲ್ಲಾ ಹಬ್ಬಕ್ಕೆ ಹೊಸ ಅರಿವಿ (ಬಟ್ಟೆ) ಅಲ್ಲದಿದ್ದರೂ ಹೊಸ ಚಡ್ಡಿಗಳನ್ನು ಆ ಪರಮಾತ್ಮ ದಯಪಾಲಿಸಲಿ!

ಈ ಕಾರಣಕ್ಕೇ ಇರಬೇಕು ಈ ಅರ್ಥಶಾಸ್ತ್ರಜ್ಞರು ಗಂಡಸೂರ ಚಡ್ಡಿಗೆ ಗಂಟು ಬಿದ್ದಾರ ಅಂತ. ಗಂಡಸೂರ ಚಡ್ಡಿ ಮಾರಾಟ ಕಮ್ಮಿ ಆತು ಅಂದ್ರ ಮಂದಿ ಬಂದಳು ಅಂತ.... ಅಲ್ಲಲ್ಲ... ಮಂದಿ ಬಂತು ಅಂತ ಅರ್ಥ. ಗಂಡಸೂರ ಚಡ್ಡಿ ಮಾರಾಟ ಜಾಸ್ತಿ ಆತು ಅಂದ್ರ ಮಂದಿ ಹೋದಳು...ಅಲ್ಲಲ್ಲ... ಮಂದಿ ಹೋತು ಅಂತ ಅರ್ಥ. ಮಂದಿ ಅಂದ್ರ ನನಗಂತೂ 'ರಾಮ್ ತೇರಿ ಗಂಗಾ ಮೈಲಿ' ಸಿನೆಮಾದ ಮಂದಾಕಿನಿನೇ ನೆನಪಾಗ್ತಾಳ. ಹಾಂಗಾಗಿ ಆಟೋಮ್ಯಾಟಿಕ್ ಆಗಿ ಸ್ತ್ರೀಲಿಂಗ ಪ್ರಯೋಗಾಗಿಬಿಡ್ತದ.

ಸದ್ಯದ ಪರಿಸ್ಥಿತಿ ಹೀಂಗದ ಅಂದ್ರ...ಭಾರತದಾಗಂತೂ ಗಂಡಸೂರ ಚಡ್ಡಿ ಭಾಳ ಕೆಳಗ ಇಳಿದುಬಿಟ್ಟದಂತ. ಅಯ್ಯೋ ಚಡ್ಡಿ ಕೆಳಗ ಇಳೀತು ಅಂದ್ರ ಚಡ್ಡಿ ವ್ಯಾಪಾರ ಕೆಳಗ ಇಳೀತು ಅಂತ ಅರ್ಥ. ಎಲ್ಲಾ 'ಬಿಚ್ಚಿ' ಹೇಳು ಅಂದ್ರ ಹ್ಯಾಂಗ? ಅದೂ ಚಡ್ಡಿ ಪಡ್ಡಿ ವಿಷಯ ಬಂದಾಗ ಎಲ್ಲಾ ಬಿಚ್ಚಿ ಹೇಳಬಾರದು. ಮೊನ್ನೆ mirror now ಟೀವಿ ಚಾನೆಲ್ಲಿನಾಗ ಈ ಸುದ್ದಿ ಹೇಳೋವಾಗ ಆಂಕರ್ ಹುಡುಗಿ ನಾಚಿಗೊಂಡು ಬರೇ inner wear ಅಂದುಬಿಡ್ತು. 'ಯವ್ವಾ ಬೇ! ಅದು inner wear ಅಲ್ಲಾ. specific ಆಗಿ ಗಂಡಸೂರ ಚಡ್ಡಿ ಬೇ!' ಅಂತ ಇಲ್ಲಿಂದಲೇ ಕೂತು ಒದರಿದೆ. ಕೇಳ್ಬೇಕಲ್ಲಾ!?

ಹಾಂಗಾಗಿ ಭಾರತದ ಮತ್ತು ವಿಶ್ವದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಅಂದ್ರ ಹೆಂಗಸೂರು ದೊಡ್ಡ ಮನಸ್ಸು ಮಾಡಬೇಕು. ಬೇಕಾಗಲಿ ಅಥವಾ ಬ್ಯಾಡಾಗ್ಲಿ, ಹುಯ್ಯ! ಅಂತ ಜಗ್ಗೆ ಗಂಡಸೂರ ಚಡ್ಡಿ ಖರೀದಿ ಮಾಡಿಬಿಡ್ರಿ. ದೊಡ್ಡ ಕೃಪಾ ಆಗ್ತದ. ನಿಮ್ಮ ನಿಮ್ಮ ಮನಿಯಾಗಿನ ಎಲ್ಲಾ ಗಂಡಸೂರಿಗೂ ಆಜ್ಞಾ ಮಾಡಿಬಿಡ್ರಿ - ಎಲ್ಲಾರೂ ಒಂದಲ್ಲ, ಎರಡೆರೆಡು ಮೂರ್ಮೂರು ಚಡ್ಡಿ, ಚಡ್ಡಿ ಮ್ಯಾಲೆ ಚಡ್ಡಿ ಹಾಕ್ಕೊಳ್ರೀ. ಒಂದೇ ಚಡ್ಡಿ ಹಾಕ್ಕೊಂಡ್ರ ಒಂದೇ ಸಲ ಊಟ or ತಿಂಡಿ. ಎರಡು ಚಡ್ಡಿ ಹಾಕ್ಕೊಂಡ್ರ ಎರಡು ಸಲ. ಮೂರು ಅಥವಾ ಜಾಸ್ತಿ ಚಡ್ಡಿ ಹಾಕ್ಕೊಂಡ್ರ ಮಾತ್ರ ಮೂರೂ ಹೊತ್ತು ಊಟ. ಇಲ್ಲಂದ್ರ ಇಲ್ಲ. no ಚಡ್ಡಿ. no ಊಟ. ಕಟ್ಟಾಜ್ಞೆ ಮಾಡಿಬಿಡ್ರಿ. ಹೀಂಗಾದ್ರೂ ಮಾಡಿ ಚಡ್ಡಿ ಮಾರಾಟ ಜಾಸ್ತಿ ಮಾಡಲಿಕ್ಕೆ ಸಹಕರಿಸಬೇಕಾಗಿ ವಿನಂತಿ. ಒಮ್ಮೆ ಗಂಡಸೂರ ಚಡ್ಡಿ ಮಾರಾಟ ಜಾಸ್ತಿ ಆದ ಮ್ಯಾಲೆ ಎಲ್ಲಾ relax ಮಾಡೀರಂತ. ಆವಾಗ ಗಂಡಸೂರೂ ಸಹಿತ ಎಲ್ಲಾ ಕಳೆದು, ಈ ಮಲ್ಟಿಪಲ್ ಚಡ್ಡಿ ಸಹವಾಸ ಸಾಕಪ್ಪೋ ಸಾಕು ಅಂತ ಎಲ್ಲಾ ಬಿಚ್ಚಿ ಒಗೆದು, ಭಂ!ಭಂ!ಭೋಲೇನಾಥ! ಅಂತ ಗೋವಾ ನಗ್ನ ಬೀಚಿನಾಗ ನಾಗಾ ಸಾಧುಗಳ ಗತೆ ಅವರವರ ಹೆಂಡ್ರ ಸಹವಾಸ ಸಾಕಾಗಿ ಗಾಂಜಾ ಹೊಡೆದು ಮಕ್ಕೊಂಡು ಬಿಡ್ತಾರ. ಚಡ್ಡಿ ವ್ಯಾಪಾರ ಹೆಚ್ಚಿಸಲಿಕ್ಕೆ ಬಹುಕೃತ 'ವೇಷ' ಭಾಳ ಜರೂರ್ ಅದ ಸದ್ಯದ ಮಟ್ಟಿಗೆ. ಹೆಂಗಸೂರು ಜಗ್ಗೆ ಗಂಡಸೂರ ಚಡ್ಡಿ ಖರೀದಿ ಮಾಡಿ ಮತ್ತು ಗಂಡಸೂರು ಬಾಯಿ ಮತ್ತೊಂದು ಮುಚ್ಚಿಕೊಂಡು ಚಡ್ಡಿ ಪೇ ಚಡ್ಡಿ ಧರಿಸಿ ಕಡ್ಡಿ ಪೈಲ್ವಾನನಿಂದ ಚಡ್ಡಿ ಪೈಲ್ವಾನರಾಗಿ ಭಡ್ತಿ ಪಡೆದುಕೊಂಡು ಆರ್ಥಿಕ ಮಂದಿಯನ್ನು ಓಡಿಸಲು ಸಹಕರಿಸಬೇಕು.

ಚಡ್ಡಿ ಮ್ಯಾಲೆ ಚಡ್ಡಿ ಅಂದ ಕೂಡಲೇ ಶರ್ಮೀಳಾ ಟಾಗೋರಳ ಹಳೆ ಹಾಡೊಂದು ನೆನಪಾತು. ಸ್ವಲ್ಪ ಬದಲಾವಣೆ ಮಾಡಿಕೊಂಡ್ರ ಬೆಷ್ಟ! ಆಹಾ! ಏನು ಹಾಡು, ಏನು ಸುಂದರಿ! ಎಲ್ಲಿ ಹೋತು ಆ ಜಮಾನಾ!!??

ಜಬ್ ಹೀ ಜೀ ಚಾಹೇ ನಯೀ ದುನಿಯಾ ಬಸಾ ಲೇತೇ ಹೈ ಲೋಗ್
ಏಕ್ ಚಡ್ಡಿ ಪೇ ಕಯೀ ಚಡ್ಡಿ ಲಗಾ ಲೇತೇ ಹೈ ಲೋಗ್

(ಬೇಕೆಂದಾಗ ಹೊಸ ಜೀವನವೊಂದನ್ನು ಜನರು ಶುರು ಮಾಡಿಕೊಳ್ಳುತ್ತಾರೆ
ಒಂದು ಚಡ್ಡಿಯ ಮೇಲೆ ಮತ್ತಿಷ್ಟು ಚಡ್ಡಿಗಳನ್ನು ಧರಿಸುತ್ತಾರೆ ಜನರು...)

ಒಂದರಮೇಲೊಂದು ಚಡ್ಡಿ ಹಾಕಿಸಿ ಚಡ್ಡಿ ವ್ಯಾಪಾರ ಏನೋ ಏರಿಸಬಹುದು. ಆದ್ರ ದಿನಕ್ಕ ಮೂರ್ಮೂರು ಚಡ್ಡಿ ಹಾಕಿಕೊಂಡ್ರ ಅವನ್ನು ಒಗಿಲಿಕ್ಕೆ (ತೊಳಿಲಿಕ್ಕೆ) ನೀರು ಎಲ್ಲಿಂದ ತರೋಣ? ಧಾರವಾಡದಾಗಂತೂ ೧೦-೧೫ ದಿನಕ್ಕೆ ಒಮ್ಮೆ, ಅದೂ ಜನಿವಾರದ ಎಳಿ ಸೈಜಿನಾಗ, ನೀರು ಬಿಟ್ಟರೆ ಅದೇ ದೊಡ್ಡ ಮಾತು. ನೀರು ಎಲ್ಲಿಂದ ತರೋಣ? ಟ್ಯಾoಕರಿನಾಗ ನೀರು ನಿಮ್ಮಜ್ಜ ತರಿಸಿಕೊಡ್ತಾನೇನು? ಅಥವಾ ಜಾಸ್ತಿ ಜಾಸ್ತಿ ಗಂಡಸೂರ ಚಡ್ಡಿ ಖರೀದಿ ಮಾಡ್ರಿ ಅಂತ ಹೇಳಿದ ಯಬಡ ಅರ್ಥಶಾಸ್ತ್ರಜ್ಞ ಮಹಾನುಭಾವ ತಂದುಕೊಡ್ತಾನೋ? ಅಂತ ನೀವು ರಾವ್ ರಾವ್ ರುದ್ರಪ್ಪ ರುದ್ರಮ್ಮ ಆದ್ರ ಅದಕ್ಕೂ ಸಮಾಧಾನ ಅದ. ಮೂರ್ಮೂರು ಚಡ್ಡಿ ಹಾಕ್ಕೊಂಡ್ರು ಅಂದಾಕ್ಷಣ ಮೂರೂ ಚಡ್ಡಿ ದಿನಾ ಒಗಿಬೇಕು ಅಂತ ಎಲ್ಲೆ ರೂಲ್ ಅದ? ಮ್ಯಾಲಿನ ಎರಡು ಚಡ್ಡಿ ಯಾವಾಗರೆ ಅಪರೂಪಕ್ಕೆ ಒಗೀರಿ. ಇಲ್ಲಾ ಮಾಳಮಡ್ಡಿ ಶಿಂಧೆ ಲಾಂಡ್ರಿಗೆ ಕೊಟ್ಟು dry clean ಮಾಡಿಸಿಬಿಡ್ರಿ. ಅಥವಾ ಎಲ್ಲಾ dry clean ಮಾಡಿಸಿಬಿಡ್ರಿ. ನೀರಿನ ಗದ್ದಲನೇ ಇಲ್ಲ. ಎಲ್ಲಾ ಪೆಟ್ರೋಲ್ ಒಳಗ ತೊಳೆದು ಕೊಟ್ಟುಬಿಡ್ತಾನ ಶಿಂಧೆ. ಅವಂದೂ ಬಿಸಿನೆಸ್ ಉದ್ಧಾರ ಆಗಿ ದೇಶದ GDP ಜಾಸ್ತಿ ಆಗ್ತದ. ಮೋದಿ ಸಾಹೇಬ್ರು, ನಿರ್ಮಲಾ ಬಾಯಾರು ಇಬ್ಬರೂ GDP ೫ ಟ್ರಿಲಿಯನ್ ಲಗೂನ ಮಾಡೋಣ ಅಂತ ಹೇಳ್ಯಾರ. ಅದಕ್ಕೂ ಇದು ಸಹಕಾರಿ. GDP ಜಾಸ್ತಿ ಮಾಡಲಿಕ್ಕೆ ನಮ್ಮಲ್ಲಿ animal spirits (ಮೃಗೀಯ ಮನೋಭಾವ) ವಾಪಸ್ ಬರಬೇಕಂತ. ಹಾಕ್ಕೊಂಡು ಜಗ್ಗೆ ಚಡ್ಡಿ ಖರೀದಿ ಮಾಡೋದು ಸಹ ಒಂದು ರೀತಿಯ ಮೃಗೀಯ ಮನೋಭಾವವೇ ಅಂತ ನಮ್ಮ ಅಭಿಪ್ರಾಯ. ಯಾಕಂದ್ರ ಮನುಷ್ಯ ಸಾಮಾಜಿಕ ಮೃಗ ನೋಡ್ರಿ. Man is a social animal. ಹಾಂಗಿಂದ್ರ What about woman? ಅಂತ ಕೇಳಿದ್ರ She is a devil! ಅಂತ ಮುಖ ಮೂತಿ ನೋಡದೇ ಹೆಂಡತಿ ಕಡೆ ಕಟಿಸಿಕೊಂಡ 'ಅದೃಷ್ಟವಂತರ' ಅಭಿಪ್ರಾಯ.

ಎಷ್ಟು ಚಡ್ಡಿ ಖರೀದಿ ಮಾಡಿದ್ರಿ ಅಂತ ಲೆಕ್ಕ ಕೊಡ್ರಿ ಅಂತ ಕೇಳೋದು, ಅದರ ಮ್ಯಾಲೆ GST ಕಟ್ಟಿರೋ ಇಲ್ಲೋ ಅಂತ ಕಾಡೋದು ಎಲ್ಲಾ ತೆರಿಗೆ ಆತಂಕವಾದದ (tax terrorism) ಪರಮೋಚ್ಚ ಸ್ಥಿತಿ ಅನ್ನಬಹುದು. ಆ ಪರಿಸ್ಥಿತಿ ಬರುವ ಮೊದಲು ಗಂಡಸರ ಚಡ್ಡಿ ವ್ಯಾಪಾರ ಗಗನಚುಂಬಿಯಾಗಲಿ. ಆರ್ಥಿಕ ಮಂದಿ ಮಾರ್ಕೆಟ್ ಬಿಟ್ಟು ಓಡಿಹೋಗಲಿ ಅಂತನೇ ನಮ್ಮ ಆಶಾ!

ಒಟ್ಟಿನ್ಯಾಗ ಚಡ್ಡಿ ಮಹಾತ್ಮೆ ಅಪಾರ.

-------------------------------------------------------------------------------

ಚಡ್ಡಿ ಬಗ್ಗೆ ಹಿಂದೆ ಬರೆದಿದ್ದ ಕೆಲವು ಬ್ಲಾಗ್ ಪೋಸ್ಟುಗಳು. ಚಡ್ಡಿಪ್ರಿಯರ ಅವಗಾಹನೆಗೆ....

* ಹಸಿ ಹಸಿ ತಾಳೆನು ಈ ಹಸಿಯ, ಚೊಣ್ಣವ ನೀನು ಒಣಗಿಸೆಯಾ?....ಮಳೆಗಾಲದ ಒಣಗದ ಬಟ್ಟೆಯ ಕಥೆ ವ್ಯಥೆ

* ಒಂದೇ ಬಣ್ಣದ ಚಡ್ಡಿಗಳ ಕಥೆ....ವ್ಯಥೆ!

* 'ನಮ್ಮ ಯಜಮಾನರ ಚೊಣ್ಣಾ ಕಳೀರಿ ಅಂದ್ರ ನನ್ನ ಚಡ್ಡಿ ಕಳದಿರಲ್ಲರೀ!' - ರೂಪಾ ವೈನಿ ಅನಾಹುತ ಉವಾಚ

* ಚಡ್ಯಾಗ ಏನೈತಿ? ಅಂಥಾದ್ದೇನೈತಿ? 

Friday, August 09, 2019

Home remedies for Dry Eye Syndrome

Disclaimer: All health related matters are best resolved between one's doctor and oneself. Use the information in this blog post with due discretion. It may or may not be suitable for you. I just want to share a few tips that have worked very well for me. Your mileage may vary.

What is dry eye syndrome? For more information - visit this website.

If you are not troubled by dry eyes, good for you. Enjoy the blessings of healthy eyes as long as possible. Wish you healthy eyes and perfect vision for a long long time. :)

Dry eye syndrome may create different problems. The remedies given below have worked well for me, particularly for extreme dry eyes at the time of waking up in the morning.

1) Drink more water. Keep yourself hydrated all the time. Lack of water makes dry eyes worse.

2) Give up or reduce alcohol. Alcohol dehydrates you and dry eyes feel much worse the next morning.

3) Keep your surroundings well humidified. Air conditioners and room heaters make the air very dry. This makes dry eyes worse. Use a humidifier which converts water into mist and sprays the mist to keep surroundings humid.

A word of caution about humidifiers. Water in the humidifier tank tend to breed bacteria rapidly and when such water is converted to mist and sprayed indoors, it tends to cause chest infection. This has been well researched and documented. You don't want to have chest infection while trying to deal with dry eyes. If you must use a humidifier, clean its water tank everyday with vinegar and then put fresh water. Even this may not completely solve the problem as bacteria may grow in other parts of the humidifier which are hard to clean. If you experience chest congestion in the morning after using humidifier, this could be the reason. If cleaning the humidifier does not help, stop using humidifier.

Another way to increase humidity in your bedroom is to use the shower in the attached bathroom (if you have one) before going to bed. Keep the bathroom door open and take a good long hot shower before going to bed. Or just run the shower for 10 minutes. The steam produced by hot water humidifies the surroundings to some extent. Keep the bathroom door open so that humidity seeps into the bedroom.

4) Turmeric. Magic herb. Increase turmeric intake. Drink a few glasses of turmeric milk during the day and one final before going to bed. Turmeric has many health benefits and reducing dry eye symptoms is one of them. Add a pinch of finely ground turmeric powder to a cup of hot milk, add sugar, crushed black pepper, almond powder to taste. Everything other than milk and turmeric is optional. This makes a very tasty drink for anytime. Turmeric does not dissolve in milk or water. So you need to shake it well at the end and drink it all in one last gulp to get the turmeric into body and not leave the residue at the bottom of the cup. :)

5) Warm compress. Dip a clean piece of cloth in comfortably hot water, wring to remove excess water, test it on the inside of wrists to make sure it is not too hot and then place it on eyes for a few minutes. This relaxes eyes and helps reduce dry eyes. This can be done as many times as needed during the day and one last time before going to bed. You can also try ready made compresses which you can heat up in a microwave oven for 30 seconds and then place it on your eyes.

6) Keep lubricating eye drops near all the time. Dry eye problem tends to get progressively worse or gets worse during winter months when the heater dries up the air. It becomes hard to open eyes in the morning without first putting a drop or two of lubricating drops. If you try to force open when the eyes are very dry, you may risk having a corneal abrasion which will result in debilitating condition for good 5-6 hours till the eyes heal themselves after excessive tearing and pain. This is the worst aspect of dry eyes, having to face corneal abrasion right in the morning.

7) Sometime the entire eye socket assembly is so dry in the morning when you wake up that even before you can manage to put lubricating eye drops, slightest eye movement can cause a corneal abrasion leading to swelling of the entire eye, extreme redness, unstoppable reflexive tearing / watering, stinging pain, inability to open eyes and inability to keep them closed due to the feeling of a foreign particle. Once this happens, there is no easy solution. You just have to deal with it till the eyes become normal on their own. Depending on how badly cornea got scratched and scuffed, it may take 6-8 hours and may require some painkiller to deal with swelling. It is hard to do anything during this time and you will be completely down. Good thing is eyes heal on their own in most of the cases without causing any permanent damage after corneal abrasion. It is just those 6-8 hours which are extremely miserable. If you experience frequent and serious corneal abrasions, consult your doctor. It could be more complicated than mere dry eye.

One very effective way to avoid corneal abrasion in the morning is to take precaution the night before. After following above tips, follow this ritual before going to bed.
- Wash eyes with comfortably hot/warm water.
- After drying the eyes, put the nighttime severe dry-eye-gel ointment in the eyes which is nothing but a combination of petrolatum (petroleum jelly) and mineral oil.
- Close eyes. Now take regular petroleum jelly (Vaseline). With clean fingers apply small amount of regular petrolatum jelly on upper and lower eye lids.
- After sometime, due to body temperature, petroleum jelly may melt to become semi-liquid. So keep a clean piece of cloth / tissue to wipe off the excess if it bothers you.

Next morning, you may still feel dryness in the eyes but it won't be so bad to give you a corneal abrasion which can knock you down for 6-8 hours. Since entire eye assembly is well lubricated and stays well lubricated during the night due to petroleum jelly, all the parts of eyes are relatively moist. You won't have red eye, pain, reflexive tearing and loss of your productive day. Put a couple of lubricating drops to gain some moisture and you are good to open your eyes and start your day.

Simply putting lubricating eye drops in the night does not help in case of severe dry eyes. It may be because lubricating eye drops are not viscous enough. They probably evaporate fast and leave eyes very dry in the morning. Since petroleum jelly is more viscous, it tends to keep entire eye socket soft and moist for longer time.

8) Ghee (Clarified butter). Great help but may not be as convenient of petroleum jelly. Also depending upon the ghee, it may be somewhat sandy or too fluid to be comfortable. But it is safe and definitely helps. As an alternative, try applying ghee a few times a week, take a short nap and then wash it off or take shower. If you apply ghee at night, you will probably end up replacing pillow covers and bed covers more often. Ghee melts faster and spreads everywhere creating a lovely mess. :)

9) Reduce electronic glare. If you can't avoid using computer monitors, mobiles, tablets etc., try to use the display mode which is less harmful to eyes like blue light filter, night  mode etc. This tip has been hard to follow but I use night mode and blue light filter from 7 pm to 7 am.

10) Pain killers - easily available over the counter painkillers like ibuprofen make dry eyes worse especially if taken before going to sleep. Avoid them. If you must take them, take them a few hours before going to sleep.

11) Hygrometer- simple device to monitor humidity in your room. You can buy one for less than $10. Good way to make sure your room is adequately humidified. After getting a hygrometer, I realized my surroundings were adequately humid without requiring additional humidification. Interesting discovery.

12) 5% Sodium Chloride ophthalmic eye drops. Use this only if suggested by your doctor. It is available without prescription and recommended for relief from corneal edema (swelling of cornea). Although this medication burns a bit, it is quite useful if you have the particular problem.

13)  Omega 3 supplement - recommended. Can't say if it has been helpful or not as I was taking it all along much before the onset of dry eyes.

14) Vitamin A supplement - dry eyes may be due vitamin A deficiency. Taking supplement did not make any difference for me.

It has been a long process of self discovery over last 10+ years. Lot of trial and error to come up with these home remedies. Thanks to Dr. Google, Dr.YouTube along with human doctors :)

I will update the post if I come across any other useful remedies to deal with dry eye syndrome. Feel free to write in comments if you have other tips.

Rest assured it is not as bad as it sounds. It is very distressing initially when you experience dry eye symptoms without knowing what the problem is. After consulting your doctor and coming up with a preventive routine, it is quite manageable. Right now there is no permanent cure for dry eye syndrome although a few experimental cures like laser surgery, heat treatment etc. are in the offing. Let's wait and hope for better treatment and permanent cure.

Note: When it came to self-help-home remedies, Mahatma Gandhi used to ask people to follow one simple but very important principle. When he invited readers to send self-help-home-remedies to be published in his newspaper 'Harijan', he asked them  'send only those home remedies that you have personally followed yourself. Don't send remedies that you have heard from somebody and so on.'. I have followed that diktat here and continue to do so with new home remedies that I may discover in future. Try it on yourself before suggesting to others. :)

Thursday, August 08, 2019

ಕುಸಿದ ಷೇರುಪೇಟೆಯಲ್ಲಿ ರೊಕ್ಕ ಮಾಡಿಕೊಳ್ಳುವ 'ಕುಳ್ಳ ವ್ಯಾಪಾರಿಗಳು'

ಪಕ್ಕದ ಮನೆ ಹೊತ್ತಿ ಉರಿಯುತ್ತಿದ್ದರೆ, ಅದರಲ್ಲೇ ಬೀಡಿ ಹಚ್ಚಿಕೊಂಡನಂತೆ. ಷೇರುಪೇಟೆಯಲ್ಲಿನ 'ಕುಳ್ಳ ಮಾರಾಟ' (short selling) ಎನ್ನುವುದು ಇದೇ ಮಾದರಿಯದ್ದು. ಷೇರುಪೇಟೆ ಕುಸಿದಾಗ ಹೆಚ್ಚಿನ ಹೂಡಿಕೆದಾರರು ನಷ್ಟ ಅನುಭವಿಸಿದರೆ ಈ ಪ್ರಚಂಡ ಕುಳ್ಳರು (short sellers) ಬರೋಬ್ಬರಿ ಲಾಭ ಕಮಾಯಿಸುತ್ತಾರೆ. ಅದೇ ಷೇರುಪೇಟೆ ಮೇಲಕ್ಕೆ ಹೋದರೆ ಕುಳ್ಳರು ವಿಲವಿಲ ಒದ್ದಾಡಿಬಿಡುತ್ತಾರೆ. ಒಮ್ಮೊಮ್ಮೆ ಸರಿಯಾಗಿ ಪ್ಲಾನ್ ಮಾಡಿಕೊಳ್ಳದೇ ಷೇರುಪೇಟೆಗೆ ಬರುವ ಕುಳ್ಳ ಮಾರಾಟಗಾರರು ಅಂಗಿ ಚಡ್ಡಿ ಸಮೇತ ಸರ್ವಸ್ವವನ್ನೂ ಕಳೆದುಕೊಂಡ ಉದಾಹರಣೆಗಳಿಗೆ ಏನೂ ಕಮ್ಮಿಯಿಲ್ಲ ಬಿಡಿ.

ಏನಿದು 'ಕುಳ್ಳ ಮಾರಾಟ' ಅಥವಾ short selling?

ನಿಮ್ಮ ಹತ್ತಿರ ಎಬಿಸಿಡಿ ಕಂಪನಿಯ ೧೦೦ ಷೇರುಗಳು ಇವೆ ಎಂದಿಟ್ಟುಕೊಳ್ಳಿ. ಕುಳ್ಳ ಬರುತ್ತಾನೆ. 'ಸಾರ್, ನಿಮ್ಮ ಷೇರುಗಳನ್ನು ಒಂದಿಷ್ಟು ಕಾಲ ಭಾಡಿಗೆಗೆ ಕೊಡುತ್ತೀರಾ?' ಎಂದು ಕೇಳುತ್ತಾನೆ. ಪುಗಸಟ್ಟೆ ಕೇಳುವುದಿಲ್ಲ. ಭಾಡಿಗೆ ಕೊಡುತ್ತೇನೆ ಅನ್ನುತ್ತಾನೆ. ಕುಳ್ಳನಿಗೆ ಷೇರುಗಳನ್ನು ಭಾಡಿಗೆ ಕೊಟ್ಟ ಸಮಯದಲ್ಲಿ ಡಿವಿಡೆಂಡ್ ಬಂದರೆ ಅದನ್ನೂ ನಿಮಗೇ ಕೊಡುತ್ತಾನೆ. ಒಪ್ಪಂದದಂತೆ ಭಾಡಿಗೆಗೆ ತೆಗೆದುಕೊಂಡ ಷೇರುಗಳನ್ನು ವಾಪಸ್ ಮಾಡುತ್ತೇನೆ ಅನ್ನುತ್ತಾನೆ. ಕುಳ್ಳನ ಪರವಾಗಿ ಒಬ್ಬ ಬ್ರೋಕರ್ ಗ್ಯಾರಂಟಿ ಕೊಡುತ್ತಾನೆ. ಬ್ರೋಕರ್ ಏನೂ ಸುಮ್ಮನೇ ಗ್ಯಾರಂಟಿ ಕೊಡುವುದಿಲ್ಲ. ಕುಳ್ಳನ ಹತ್ತಿರ ಡೆಪಾಸಿಟ್ ಇಸಿದುಕೊಂಡಿರುತ್ತಾನೆ. ಭಾಡಿಗೆಗೆ ಷೇರುಗಳನ್ನು ತೆಗೆದುಕೊಂಡ ಕುಳ್ಳ ನಾಪತ್ತೆಯಾದರೆ ಕುಳ್ಳನ ಡೆಪಾಸಿಟ್ ಹಣದಲ್ಲಿ ಷೇರುಗಳನ್ನು ಖರೀದಿ ಮಾಡಿ ಮೂಲ ಮಾಲೀಕನಿಗೆ ಮುಟ್ಟಿಸುವ ಜವಾಬ್ದಾರಿ ಬ್ರೋಕರನದು.

ಷೇರುಗಳನ್ನು ಭಾಡಿಗೆ ಮೇಲೆ ಕೊಡುವುದೇ? ಭಾಡಿಗೆ ರೊಕ್ಕ ಬಂದರೆ ಯಾರಿಗೆ ಬೇಡ? ಡಿವಿಡೆಂಡ್ ಸಹಿತ ಬರುತ್ತದೆ. ಮೇಲಿಂದ ಬ್ರೋಕರ್ ಗ್ಯಾರಂಟಿ ಬೇರೆ ಕೊಡುತ್ತಾನೆ. ಷೇರುಪೇಟೆಯಲ್ಲಿ ರೊಕ್ಕ ಬಂದರೆ ಯಾರಿಗೆ ಬೇಡ ಹೇಳಿ. ಹಾಗಾಗಿ ಕುಳ್ಳನಿಗೆ ಷೇರುಗಳು ಭಾಡಿಗೆಗೆ ಸಿಗುತ್ತವೆ.

ಭಾಡಿಗೆ ಷೇರುಗಳು ಸಿಕ್ಕ ತಕ್ಷಣ ಕುಳ್ಳ ಮಾಡುವ ಕೆಲಸವೇನು ಗೊತ್ತೇ? ಭಾಡಿಗೆ ಷೇರುಗಳನ್ನು ಮಾರುಕಟ್ಟೆಯಲ್ಲಿ ತನ್ನದೇ ಷೇರುಗಳೇನೋ ಅನ್ನುವಂತೆ ಮಾರಾಟ ಮಾಡಿಬಿಡುತ್ತಾನೆ. ಬಂದ ರೊಕ್ಕ ಎಣಿಸುತ್ತಾನೆ.

ಭಾಡಿಗೆಗೆ ತಂದುಕೊಂಡ ಷೇರುಗಳನ್ನು ಮಾರಿಬಿಡುವ ಕುಳ್ಳನ ಯೋಜನೆ ಏನಿರುತ್ತದೆ? ಭಾಡಿಗೆಗೆ ತೆಗೆದುಕೊಂಡ ಷೇರುಗಳನ್ನು ಮರಳಿಸಬೇಕಲ್ಲ??

ಕುಳ್ಳ ಸುಖಾಸುಮ್ಮನೆ ಷೇರುಪೇಟೆಗೆ ಬಂದಿರುವುದಿಲ್ಲ. ಅವನ ಯೋಜನೆ ಮತ್ತು ಯೋಚನೆ ಖತರ್ನಾಕ್.

ಮುಂದೊಂದು ದಿನ ಷೇರುಪೇಟೆಯಲ್ಲಿ ಎಬಿಸಿಡಿ ಕಂಪನಿಯ ಷೇರುಗಳು ಮಕಾಡೆಯಾಗಿ ಬಿದ್ದವು ಅಂದುಕೊಳ್ಳಿ. ಕುಳ್ಳ ಹೋದವನೇ ಕಮ್ಮಿ ಬೆಲೆಯಲ್ಲಿ ಆ ಷೇರುಗಳನ್ನು ಕೊಳ್ಳುತ್ತಾನೆ. ವಾಯಿದೆ ಪ್ರಕಾರ ಅವನ್ನು ಮೂಲ ಮಾಲೀಕನಿಗೆ ಹಿಂತಿರುಗಿಸಿ ರೊಕ್ಕ ಎಣಿಸುತ್ತ ಹೋಗುತ್ತಿರುತ್ತಾನೆ.

ಇಲ್ಲಿ ಕುಳ್ಳ ರೊಕ್ಕ ಎಲ್ಲಿ ಮಾಡಿಕೊಂಡ?

ಕುಳ್ಳ ಎಬಿಸಿಡಿ ಕಂಪನಿಯ ಷೇರುಗಳನ್ನು ಭಾಡಿಗೆಗೆ ತೆಗೆದುಕೊಂಡಾಗ ಅದರ ಬೆಲೆ ೧೦೦ ರೂಪಾಯಿ ಇತ್ತು ಎಂದಿಟ್ಟುಕೊಳ್ಳಿ. ಅದನ್ನು ಮಾರಿದ ಕುಳ್ಳ ೧೦೦ ರೂಪಾಯಿ ಗಳಿಸಿದ. ನಂತರ ಆ ಷೇರುಗಳು ಬಿದ್ದುಹೋಗಿ ೭೫ ರೂಪಾಯಿ ಆಯಿತು ಅಂದಿಟ್ಟುಕೊಳ್ಳಿ. ಕುಳ್ಳ ಆವಾಗ ಖರೀದಿ ಮಾಡಿದ. ಇದರಲ್ಲಿ ೨೫ ಪರ್ಸೆಂಟ್ ಲಾಭ ಮಾಡಿಕೊಂಡ. ಷೇರುಗಳ ಮೇಲೆ ಒಂದಿಷ್ಟು ಭಾಡಿಗೆ ಅಂತ ಕೊಟ್ಟ. ಒಟ್ಟಿನಲ್ಲಿ ಷೇರು ಬೆಲೆ ಬಿದ್ದಷ್ಟೂ ಕುಳ್ಳನಿಗೆ ಲಾಭ.

ಆಕಸ್ಮಾತ ಷೇರಿನ ಬೆಲೆ ಏರಿಬಿಟ್ಟರೇ? ಕುಳ್ಳನಿಗೆ ನಷ್ಟ. ೧೦೦ ರೂಪಾಯಿಗೆ ಮಾರಿದ ಭಾಡಿಗೆ ಷೇರುಗಳನ್ನು ೧೦೫ ರೂಪಾಯಿಗೆ ಖರೀದಿಸಿ ಮರಳಿಸಬೇಕು ಅಂದರೆ ಕುಳ್ಳನಿಗೆ ಜೀವ ಹೋದಷ್ಟು ನೋವಾಗುತ್ತದೆ. ಮತ್ತೆ ಆಗಬಹುದಾದ ನಷ್ಟಕ್ಕೆ ಲಿಮಿಟ್ ಇಲ್ಲ. ಷೇರುಗಳು ಸಿಕ್ಕಾಪಟ್ಟೆ ಜಂಪ್ ಆಗಿ ೧೦೦ ಬೆಲೆಯ ಎಬಿಸಿಡಿ ಕಂಪನಿ ಷೇರುಗಳು ೧೫೦, ೨೦೦ ಎಲ್ಲ ತಲುಪಿಬಿಟ್ಟರೆ ಕುಳ್ಳ ಮಟಾಷ್!! ಕುಳ್ಳ ರಿಯಾಕ್ಟ್ ಮಾಡುವ ಮೊದಲೇ ಬ್ರೋಕರ್ ಇವನ ಡೆಪಾಸಿಟ್ ಜಪ್ತಿ ಮಾಡಿ, ಅದರಲ್ಲೇ ಬಂದಷ್ಟು ಷೇರುಗಳನ್ನು ಖರೀದಿಸಿ, 'ಯೋ ಕುಳ್ಳ, ಜಾಸ್ತಿ ಡೆಪಾಸಿಟ್ ಕೊಡ್ತೀಯಾ ಅಥವಾ ಅಕೌಂಟ್ ಬಂದ್ ಮಾಡಲಾ?' ಎಂದು ರೋಪ್ ಹಾಕುತ್ತಾನೆ. ಅದೇ ಮಾರ್ಜಿನ್ ಕಾಲ್! ಷೇರುಪೇಟೆಯಲ್ಲಿನ ಧಮ್ಕಿ! ಕುಳ್ಳನ ಮನೆ ಮುಂದೆ ಜನ ಪ್ರತ್ಯಕ್ಷರಾಗುತ್ತಾರೆ. ದೊಡ್ಡ ಪ್ರಮಾಣದ ಲಫಡಾ ಆದರೆ ಕುಳ್ಳ ಮನೆಮಠ ಕಳೆದುಕೊಂಡು ಬೀದಿಗೆ ಬರುತ್ತಾನೆ.

ವೃತ್ತಿಪರ ಕುಳ್ಳರು ತಮ್ಮ ರಿಸರ್ಚ್ ಮಾಡಿಕೊಂಡೇ ಬಂದಿರುತ್ತಾರೆ. ಅವರೂ ನುರಿತ ಪಟುಗಳೇ. ಯಾವ ಕಂಪನಿಯ ಷೇರುಗಳು ಬೀಳಲಿವೆ ಎನ್ನುವ ಅಂದಾಜು ಇಟ್ಟುಕೊಂಡೇ 'ಕುಳ್ಳ ಮಾರಾಟಕ್ಕೆ' ಇಳಿದಿರುತ್ತಾರೆ. ಮತ್ತೆ ತಾವು ಕುಳ್ಳ ವ್ಯಾಪಾರಕ್ಕೆ ಸ್ಕೆಚ್ ಹಾಕಿದ ಷೇರುಗಳ ಮೇಲೆ ಹದ್ದಿನಕಣ್ಣು ಇಟ್ಟಿರುತ್ತಾರೆ. ಷೇರಿನ ಬೆಲೆ ತಾವು ಮಾರಿದ ಬೆಲೆಗಿಂತ ಕೊಂಚ ಮೇಲೆ ಹೋಗುವ ಲಕ್ಷಣ ಕಂಡುಬಂದರೂ ಸಾಕು. ಕುಳ್ಳ ಪಟಾಕ್ ಅಂತ ಷೇರು ಖರೀದಿ ಮಾಡಿಬಿಡುತ್ತಾನೆ. ನಷ್ಟವನ್ನು ಅಷ್ಟಕ್ಕೇ ಲಿಮಿಟ್ ಮಾಡಿಕೊಳ್ಳುತ್ತಾನೆ.

ಒಂದು ಕಂಪನಿಯ ಷೇರುಗಳು ಬೀಳಬಹುದು ಎನ್ನುವ ಮಾಹಿತಿ ಕುಳ್ಳರಿಗೆ ಎಲ್ಲಿಂದ ದೊರೆಯುತ್ತದೆ? ಒಮ್ಮೊಮ್ಮೆ ಆ ಮಾಹಿತಿ ಪಬ್ಲಿಕ್ ಆಗಿಯೇ ಸಿಗುತ್ತದೆ. ಕಂಪನಿ ತೊಂದರೆಯಲ್ಲಿದೆ ಅಂತ ಗೊತ್ತಾದರೆ ಅದರ ಷೇರು ಬೀಳುತ್ತದೆ. ಆದರೆ ಕುಳ್ಳರಿಗೆ ಒಳಗಿನ ಖಾಸಗಿ ಮಾಹಿತಿ ಕೂಡ ಇರುವ ಸಾಧ್ಯತೆಗಳನ್ನು ತೆಗೆದುಹಾಕಲಿಕ್ಕೆ ಸಾಧ್ಯವಿಲ್ಲ. ಅದು insider information. ಅಂತಹ ಮಾಹಿತಿ ಉಪಯೋಗಿಸಿಕೊಂಡು ಕುಳ್ಳ ಮಾರಾಟ ಮಾಡುವುದು ತಪ್ಪು ಮತ್ತು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬಹುದು. ಆದರೆ ಅದನ್ನು ಕೋರ್ಟಿನಲ್ಲಿ ಸಿದ್ಧ ಮಾಡುವುದು ಅಷ್ಟೇ ಕಷ್ಟ. ಹಾಗಾಗಿ short sellers walk a fine line between legal and illegal.

ಕಂಪನಿಯ ಷೇರುಗಳ ಪೈಕಿ ಎಷ್ಟು ಷೇರುಗಳು ಕುಳ್ಳರ ಹತ್ತಿರ ಇವೆ ಎನ್ನುವ ಮಾಹಿತಿ ಸಾರ್ವಜನಿಕವಾಗಿ ಸಿಗುತ್ತದೆ. ಸ್ಟಾಕ್ ಎಕ್ಸ್ಚೇಂಜ್ ಅವನ್ನು ಕ್ರೋಢೀಕರಿಸಿ ಷೇರುದಾರರಿಗೆ ಸಿಗುವಂತೆ ಮಾಡಿರುತ್ತಾರೆ. ಅದನ್ನೇ short ratio ಅನ್ನುತ್ತಾರೆ. ಕುಳ್ಳ ಅನುಪಾತ! :)

ಕುಳ್ಳ ಅನುಪಾತ ಏರುತ್ತಿದೆ ಅಂದರೆ ಕಂಪನಿಯ ಷೇರು ಬೆಲೆ ಕುಸಿಯಲಿದೆ ಎನ್ನುವ ಲೀಡಿಂಗ್ ಇಂಡಿಕೇಟರ್. ಕುಳ್ಳ ಅನುಪಾತ ಇಳಿಯುತ್ತಿದೆ ಅಂದರೆ ಉಲ್ಟಾ. ಷೇರು ಬೆಲೆ ಏರಲಿದೆ. ಹಾಗಾಗಿ ಕುಳ್ಳರು ಜಾಗ ಖಾಲಿ ಮಾಡುತ್ತಿದ್ದಾರೆ ಎನ್ನುವ ಸೂಚನೆ.

ದೊಡ್ಡ ದೊಡ್ಡ ಅನಾಹುತಗಳಾದಾಗ ತನಿಖಾಧಿಕಾರಿಗಳು ಇದೇ ಕುಳ್ಳ ಅನುಪಾತವನ್ನು ಗಮನಿಸುತ್ತಾರೆ. ಅಮೇರಿಕಾದಲ್ಲಿ ೯/೧೧ ದುರಂತವಾಯಿತು. ಕೆಲ ದಿವಸಗಳ ಮೊದಲು ಅನೇಕ ವಿಮಾನ ಕಂಪನಿಗಳ ಕುಳ್ಳ ಅನುಪಾತ ಏರಿತ್ತು. ಅರ್ಥ ಏನು? ೯/೧೧ ಆಗಲಿದೆ ಎಂದು ಮೊದಲೇ ಗೊತ್ತಿತ್ತು ಅಂತ ತಾನೇ? ವಿಮಾನ ಕಂಪನಿಗಳ ಷೇರುಗಳನ್ನು ಕುಳ್ಳ ಮಾರಾಟ ಮಾಡಲು ಯಾರು ಕೂತಿದ್ದರು? ಅವರಿಗೆ ಮತ್ತು ೯/೧೧ ದುರಂತಕ್ಕೆ  ಕಾರಣನಾದ ಒಸಾಮಾ ಬಿನ್ ಲಾಡೆನ್ ಮತ್ತು ಅಲ್ಕೈದಾಕ್ಕೆ ಏನು ಸಂಬಂಧ? ಅಮೇರಿಕಾ ಹೊತ್ತಿ ಉರಿದರೆ ಇವರು ಅದರಲ್ಲೇ ಬೀಡಿ ಹಚ್ಚಿ ರೊಕ್ಕ ಮಾಡಿಕೊಂಡರೇ? ಆ ದಿಕ್ಕಿನಲ್ಲಿ ತನಿಖೆ ಹೋಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ೯/೧೧ ಆಗುವ ಕೆಲ ದಿವಸಗಳ ಮೊದಲು ಅನೇಕ ಕಂಪನಿಗಳ, ಅದರಲ್ಲೂ ದೊಡ್ಡ ದೊಡ್ಡ ವಿಮಾನಯಾನ ಕಂಪನಿಗಳ, ಕುಳ್ಳ ಅನುಪಾತ ಗಣನೀಯವಾಗಿ ಏರಿತ್ತು.

ಮೊನ್ನೆ ಕೆಫೆ ಕಾಫಿ ಡೇ ಪ್ರೊಮೋಟರ್ ಸಿದ್ಧಾರ್ಥ್ ಮೃತರಾದರು. ಮರುದಿವಸವೇ ಆ ಕಂಪನಿಯ ಷೇರುಗಳು ೧೦-೨೦% ಬಿದ್ದವು. ಯಾರಾದರೂ ಆ ಕಂಪನಿಯ ಕುಳ್ಳ ಮಾರಾಟದ ಪೊಸಿಷನ್ ತೆಗೆದುಕೊಂಡು ಕೂತಿದ್ದೇ ಹೌದಾದರೆ ಅವರು ಸಿಕ್ಕಾಪಟ್ಟೆ ಕಮಾಯಿಸಿಬಿಟ್ಟರು. ಅವರಿಗೆ ಒಳಗಿನ ಮಾಹಿತಿ ಏನಾದರೂ ಗೊತ್ತಿತ್ತೇ? ತನಿಖಾಧಿಕಾರಿಗಳು ಆ ಬಗ್ಗೆ ವಿಚಾರಣೆ ಮಾಡಿರುತ್ತಾರೆ ಬಿಡಿ. ಈಗ ಅದೊಂದು ಸಾಮಾನ್ಯ ಪ್ರಕ್ರಿಯೆ ಆಗಿಬಿಟ್ಟಿದೆ. ತನಿಖಾ ಸಂಸ್ಥೆಗಳು ಮತ್ತು ಸ್ಟಾಕ್ ಎಕ್ಸ್ಚೇಂಜ್ ಗಳು ಕುಳ್ಳ ಅನುಪಾತದ ಮೇಲೆ ಮತ್ತು ಖತರ್ನಾಕ್ ಕುಳ್ಳರ ಮೇಲೆ ಒಂದು ಕಣ್ಣು ಇಟ್ಟಿರುತ್ತವೆ. ಖತರ್ನಾಕ್ ಕುಳ್ಳರು ಎಷ್ಟು ಜಾಬಾದ್ ಇರುತ್ತಾರೆ ಅಂದರೆ ದೊಡ್ಡ ದೊಡ್ಡ ಕುಳಗಳಿಗೇ ಗುಂಡು ತುಂಡು ಎಲ್ಲ ಸಮರ್ಪಣೆ ಮಾಡಿ ಅವರನ್ನೂ ಒಳಗಾಕಿಕೊಂಡಿರುತ್ತಾರೆ. ಒಂದು ತರಹದ ಮ್ಯಾಚ್ ಫಿಕ್ಸಿಂಗ್. ಎಲ್ಲರೂ ಬಿಕರಿಯಾಗುವವರೇ! ಅಷ್ಟೇ ಸರಿಯಾದ ಬೆಲೆ ಬಂದಾಗ ಮಾತ್ರ. ಸರಿಯಾದ ಬೆಲೆಗೆ  ಎಲ್ಲರೂ ಬಿಕರಿಯಾಗಿ ಷೇರುಪೇಟೆ ತನ್ನ ಮೇಲಿನ ನಂಬಿಕೆ ಕಳೆದುಕೊಳ್ಳುತ್ತದೆ. ಷೇರುಪೇಟೆಯಲ್ಲಿ ಭೂಗತಲೋಕದ ಹೂಡಿಕೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಕೆಲವು ದೊಡ್ಡ ಪಂಟರುಗಳು, ಅವರು ಸಾಮಾನ್ಯ ಹೂಡಿಕೆದಾರರು ಇರಬಹುದು ಅಥವಾ ಕುಳ್ಳರಿರಬಹುದು, ಅವರು ಭೂಗತ ಲೋಕದ ಜೊತೆ ಸಂಪರ್ಕ ಇಟ್ಟುಕೊಂಡಿದ್ದರೆ ಆಶ್ಚರ್ಯವಿಲ್ಲ.

ಕೆಲವು ದೇಶಗಳು ಈ ಕುಳ್ಳ ಮಾರಾಟ ಪದ್ಧತಿಯನ್ನು ನಿಷೇಧಿಸಿವೆ. ಹೆಚ್ಚಿನ ದೇಶಗಳು 'ನಗ್ನ ಕುಳ್ಳ ಮಾರಾಟ' (naked short selling) ಮಾತ್ರ ನಿಷೇಧಿಸಿವೆ. ನಗ್ನ ಕುಳ್ಳ ಮಾರಾಟದಲ್ಲಿ ಕುಳ್ಳರು ಷೇರುಗಳನ್ನು ಭಾಡಿಗೆಗೂ ತೆಗೆದುಕೊಳ್ಳುವುದಿಲ್ಲ. ಷೇರುಗಳು ಇವೆ ಎಂದು ಸುಳ್ಳು ಹೇಳಿ ಮಾರಾಟ ಮಾಡಿಕೊಂಡು ಗಾಯಬ್ ಆಗುತ್ತಾರೆ. ಮೂರು ದಿವಸಗಳ ನಂತರ ಕುಳ್ಳರಿಂದ ಷೇರು ಕೊಂಡವನಿಗೆ ಷೇರು ಸಿಗದೇ ಆ ಟ್ರೇಡ್ ಫೇಲ್ ಆಗುತ್ತದೆ. ಮತ್ತೂ ಇನ್ನಿತರ ತೊಂದರೆಗಳೂ ಆಗಿ ಮಾರುಕಟ್ಟೆ ಮೇಲೆ ಮತ್ತು ಕಂಪನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ನಗ್ನ ಕುಳ್ಳರನ್ನು ಶಿಕ್ಷಿಸುವ ಕಾನೂನುಗಳೂ ಇವೆ.

ಒಮ್ಮೊಮ್ಮೆ ಸರ್ಕಾರವೇ ಕುಳ್ಳ ಮಾರಾಟವನ್ನು ನಿಷೇಧಿಸುತ್ತದೆ. ೨೦೦೮ ರಲ್ಲಿ ದೊಡ್ಡ ಮಟ್ಟದ ಆರ್ಥಿಕ ಹಡಾಗತಿ ಆಗಿ, ಅಮೇರಿಕಾದ ಆರ್ಥಿಕ ವ್ಯವಸ್ಥೆ ಅದರಲ್ಲೂ ಅಮೇರಿಕಾದ ಬ್ಯಾಂಕುಗಳೆಲ್ಲ ತಲೆ ಮೇಲೆ ಟಾವೆಲ್ ಹಾಕಿಕೊಂಡು ಮಕಾಡೆ ಮಲಗಿದಾಗ ಅವುಗಳ ಷೇರುಗಳ ಕುಳ್ಳ ವ್ಯಾಪಾರ ಮಾಡುವುದನ್ನು ತಾತ್ಕಾಲಿಕವಾಗಿ ಸರ್ಕಾರ ನಿಷೇಧಿಸಿತ್ತು. ಮೊದಲೇ ಸಾಯಲು ಬಿದ್ದಿದ್ದ ಬ್ಯಾಂಕುಗಳು. ಕುಳ್ಳರು ಅವಕ್ಕೂ ಸ್ಕೆಚ್ ಹಾಕಿದ್ದರೆ ಅಮೇರಿಕಾ ಜೊತೆಗೆ ವಿಶ್ವದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಗೋವಿಂದಾ ಗೋವಿಂದಾ ಆಗುತ್ತಿತ್ತು ಅನ್ನುವ ಭಯ. ಆದರೂ Lehman Brothers ಎನ್ನುವ ದೊಡ್ಡ investment bank ಢಮ್ ಅಂದುಹೋಗಲು ಈ ಕುಳ್ಳರ ಕಾಣಿಕೆ ಸಹಿತ ದೊಡ್ಡ ಮಟ್ಟದಲ್ಲಿ ಕಾರಣ.

ಇಷ್ಟೆಲ್ಲಾ ಹೇಳಿದ ಮೇಲೆ ಕುಳ್ಳ ಮಾರಾಟ ತಪ್ಪು ಅಂತಲ್ಲ. ಅದು ಒಂದು stock portfolio management ಮಾಡುವ ವಿಧಾನ. ರಿಸ್ಕ್ ಮ್ಯಾನೇಜ್ ಮಾಡಲು ತುಂಬಾ ಸಹಾಯಕಾರಿ. ಕೆಲವು ಷೇರುಗಳ ಮೇಲೆ ಲಾಂಗ್ ಪೊಸಿಷನ್ ತೆಗೆದುಕೊಂಡರೆ, ಅವುಗಳ ಮೇಲಿನ ರಿಸ್ಕ್ ಮ್ಯಾನೇಜ್ ಮಾಡಲು ಬೇರೆ ಕೆಲವು ಷೇರುಗಳ ಮೇಲೆ ಶಾರ್ಟ್ (ಕುಳ್ಳ) ಪೊಸಿಷನ್ ತೆಗೆದುಕೊಂಡರೆ ಅಲ್ಲಿಗಲ್ಲಿಗೆ ರಿಸ್ಕ್ ತಕ್ಕಮಟ್ಟಿಗೆ hedge ಆದಂತೆ. Hedge funds ಇಂತಹ ಅನೇಕಾನೇಕ ಟೆಕ್ನೀಕುಗಳನ್ನು ಉಪಯೋಗಿಸುತ್ತವೆ. ಹಾಗಾಗಿಯೇ ಷೇರುಪೇಟೆ ಹೇಗೇ ಇದ್ದರೂ ಅವು ಸದಾ ಲಾಭದಲ್ಲೇ ಇರುತ್ತವೆ. ಅಥವಾ ಲಾಭದಲ್ಲಿ ಇರಲು ಸಾಧ್ಯ ಅಂತ ತಮ್ಮ ಹೂಡಿಕೆದಾರರಿಗೆ ಹೇಳುತ್ತವೆ.

ಕುಳ್ಳ ಮಾರಾಟದಲ್ಲಿ ಷೇರನ್ನು ಭಾಡಿಗೆಗೆ ತೆಗೆದುಕೊಳ್ಳುವುದು, ಅದಕ್ಕೆ ಭಾಡಿಗೆ ಕೊಡುವುದು, ಮಾರಾಟ ಮಾಡುವುದು, ಬೆಲೆ ಕಮ್ಮಿಯಾದಾಗ ವಾಪಸ್ ಖರೀದಿ ಮಾಡುವುದು ಎಲ್ಲ automated. ಎಲ್ಲ ಕಂಪ್ಯೂಟರಗಳ ಮೂಲಕ ಆಗಿಹೋಗುತ್ತದೆ. ಅಲ್ಲಿ ಯಾರು ಕುಳ್ಳ, ಯಾರು ಲಂಬೂ, ಯಾರು ಬ್ರೋಕರ್ ಏನೂ ತಿಳಿಯುವುದಿಲ್ಲ. ಷೇರುಪೇಟೆಯ ಗೂಳಿ, ಕರಡಿಗಳ ಮಧ್ಯೆ ಎಲ್ಲರೂ ಕಳೆದುಹೋಗುತ್ತಾರೆ!

ಕಳ್ಳರನ್ನು ನಂಬಿದರೂ ಕುಳ್ಳರನ್ನು ನಂಬಬಾರದಂತೆ. ಆದರೆ ಷೇರುಪೇಟೆಯ ಕುಳ್ಳರನ್ನು ನಂಬಿ. ಏಕೆಂದರೆ ಅವರಿಗೆ ಗೊತ್ತಿರುವ ಮಾಹಿತಿ ಯಾರಿಗೂ ಗೊತ್ತಿರುವುದಿಲ್ಲ. ಅಷ್ಟೇ ಅವರನ್ನೂ ಸಹ ಅಳೆದೂ ತೂಗಿಯೇ ನಂಬಿ!

Monday, July 29, 2019

ಆರ್ಥಿಕ ಸ್ವಾತಂತ್ರ್ಯ & ಬೇಗನೆ ನಿವೃತ್ತಿ... ಹೊಸ ತಲೆಮಾರಿನ ವಿನೂತನ ಚಿಂತನೆ

ಅಮೇರಿಕಾದ millennial ತಲೆಮಾರಿನ ಯುವಜನತೆ ಹೊಸ ಯೋಚನೆ / ಯೋಜನೆಯೊಂದರ ಹಿಂದೆ ಬಿದ್ದಿದೆ. ಹಾಗಾಗಿ ಬೆಂಕಿ ಬಿದ್ದಿದೆ.

ಬೆಂಕಿ ಬಿದ್ದಿದೆ?? ಅಂದ್ರೆ ಏನ್ರೀ??

ಬೆಂಕಿ = FIRE ಅಂದರೆ Financial Independence & Retire Early. ಅದನ್ನೇ "ಆರ್ಥಿಕ ಸ್ವಾತಂತ್ರ್ಯ & ಬೇಗನೆ ನಿವೃತ್ತಿ" ಅಂದಿದ್ದು.

ಹೊಸ ತಲೆಮಾರಿನವರ ಈ 'ಬೆಂಕಿಯಂತಹ' ಯೋಚನೆ ಏನು ಅಂದರೆ ಆದಷ್ಟು ಬೇಗ ಆರ್ಥಿಕವಾಗಿ ಸ್ವತಂತ್ರರಾಗುವುದು ಮತ್ತು ಬೇಗ ನಿವೃತ್ತಿ ತೆಗೆದುಕೊಳ್ಳುವುದು.

ಆರ್ಥಿಕ ಸ್ವಾತಂತ್ರ್ಯ ಅಂದರೆ ಸಾಲ ಇರಬಾರದು. ಇದ್ದರೂ ತೀರಿಸಲು ಬೇಕಾಗುವ ದುಡ್ಡಿಗಾಗಿ ಸಂಬಳದ ಹಂಗಿನಲ್ಲಿ ಇರಬಾರದು. ಜೀವನದ ಅಗತ್ಯಗಳಿಗಾಗಿ ಕೆಲಸ ಮಾಡಲೇಬೇಕು ಅನ್ನುವಂತಹ ಪರಿಸ್ಥಿತಿ ಇರಬಾರದು. ಇಷ್ಟಿದ್ದ ಮೇಲೆ ನೀವು ನಿಮ್ಮ ಖುಷಿಯ ಕೆಲಸ ಮಾಡಿ, ಅದರಿಂದ ರೊಕ್ಕ ಮಾಡಿಕೊಂಡರೆ ಅದು ನಿಮಗೆ ಬಿಟ್ಟಿದ್ದು. ಕೇವಲ ಸಂಬಳಕ್ಕಾಗಿ ಮಾತ್ರ ಕೆಲಸ ಮಾಡುವ compulsion ಇರಬಾರದು.

ಬೇಗನೆ ನಿವೃತ್ತಿ ಅಂದರೆ ಎಲ್ಲ ಬಿಟ್ಟು ಕೂತುಬಿಡುವುದು ಅಂತಲ್ಲ. ಆತ್ಮಸಂತೋಷದ ಕೆಲಸ ಮಾಡಿಕೊಂಡಿರುವುದು. ಎಲ್ಲರೂ ಎರಡೇ ಕಾರಣಕ್ಕೆ ಕೆಲಸ ಮಾಡುತ್ತಾರೆ. ೧) ಕೆಲಸ ಮಾಡದಿದ್ದರೆ ಹೊಟ್ಟೆ ತುಂಬುವುದಿಲ್ಲ. ೨) ಮಾಡುವ ಕೆಲಸವನ್ನು ಅದೆಷ್ಟು ಪ್ರೀತಿಸುತ್ತಾರೆ ಅಂದರೆ ರೊಕ್ಕ ಬರದಿದ್ದರೂ ಅವರು ಆ ಕೆಲಸ ಮಾಡಲಿಕ್ಕೆ ತಯಾರಿರುತ್ತಾರೆ.

೯೯. ೯೯% ಜನ ಮೊದಲನೇ ವರ್ಗಕ್ಕೆ ಸೇರುವವರು. ಜೀವನೋಪಾಯಕ್ಕೊಂದು ಕೆಲಸ ಬೇಕು. ಏನೋ ಒಂದು ಕೆಲಸ ಆರಂಭ ಮಾಡಿದ್ದಾಗಿದೆ. ಏನೋ ಒಂದು ರೀತಿಯ ಪ್ರಾವಿಣ್ಯತೆ ಬಂದಿದೆ. ತಕ್ಕಮಟ್ಟಿನ ಸಂಬಳ ಸಿಗುತ್ತಿದೆ. ಮೈತುಂಬಾ ಜವಾಬ್ದಾರಿಗಳಿವೆ. ಕೆಲಸ ಬಿಡುವಂತಿಲ್ಲ. ನಿವೃತ್ತಿಯ ಬಗ್ಗೆ ವಿಚಾರ ಮಾಡುವುದು ದೂರದ ಮಾತು. ನಿವೃತ್ತಿಯ ಕನಸನ್ನು ಕಾಣುವುದೂ ಕೂಡ ಕಷ್ಟ. ಗಾಣದೆತ್ತಿನಂತೆ ಸಾಯುವ ತನಕ ಅಥವಾ  ವಯಸ್ಸು ಅರವತ್ತು ಆಗುವ ತನಕ, most importantly ಒಂದು ದೊಡ್ಡ ಮಟ್ಟದ ರೊಕ್ಕದ ಗಂಟು ಕೂಡುವ ತನಕ ಕೆಲಸ ಮಾಡಲೇಬೇಕು. ಆ ಕೆಲಸ soul crushing ಇದ್ದರೂ ಸರಿ. ಆತ್ಮಸಂತೋಷವನ್ನು ಕೊಂದಾದರೂ ರೊಕ್ಕ ಮಾಡಲೇಬೇಕು.

ಇನ್ನು ೦. ೦೧% ಜನ ಎರಡನೇ ವರ್ಗದವರು. ತುಂಬಾ ಅದೃಷ್ಟವಂತರು. ಅವರಿಗೆ perfect ಆಗಿ ಹೊಂದುವ ಕೆಲಸಕ್ಕೆ ಇವರು ಬರೋಬ್ಬರಿ ಬಂದುಬಿಟ್ಟಿರುತ್ತಾರೆ. ಆ ಕೆಲಸದಲ್ಲೇ ಕೈಲಾಸ ಕಂಡು ಸಂತೋಷ ಪಡುವವರು. ಅಂತವರಲ್ಲಿ ಕೆಲವರು ತುಂಬಾ ರೊಕ್ಕ ಕೂಡ ಸಂಪಾದಿಸುತ್ತಾರೆ. ರೊಕ್ಕ ಕಮ್ಮಿ ಗಳಿಸಿದರೂ ಆತ್ಮಸಂತೋಷದ ಕಾರಣ ಕೆಲಸದಲ್ಲಿ  ಮುಳುಗಿರುತ್ತಾರೆ. ಅವರು ಸತ್ತರೂ ಆ ಕೆಲಸ ಬಿಟ್ಟು ಬರುವುದಿಲ್ಲ. ಅವರಿಗೆ ಈ FIRE ಅಭಿಯಾನ ದೊಡ್ಡ ಮಾತಲ್ಲ. ಆತ್ಮಸಂತೋಷದ ಕೆಲಸ ಒಂದು ತರಹದ ನಿವೃತ್ತಿಯೇ. When you enjoy your work, your vocation becomes your vacation.

ಹಾಗಾದರೆ ಆರ್ಥಿಕ ಸ್ವಾತಂತ್ರ್ಯ ಗಳಿಸುವುದು ಹೇಗೆ? ರೊಕ್ಕ ಗಳಿಸಲೂ ರೊಕ್ಕ ಬೇಕು. ಹಾಗಾಗಿ ಮೊದಲು ಒಂದು ಕೆಲಸ ಮಾಡಲೇಬೇಕು. ಸಂಬಳ ಗಳಿಸಬೇಕು. ಗಳಿಸಿದ್ದರಲ್ಲಿ ಗರಿಷ್ಠ ಮೊತ್ತವನ್ನು ಉಳಿಸಬೇಕು. ಉಳಿಸಿದ್ದನ್ನು ಜತನದಿಂದ ಹೂಡಿಕೆ ಮಾಡಿ ಬೆಳೆಸಬೇಕು. ಹಾಗೆ ಹನಿಹನಿಯಾಗಿ ಬೆಳೆದಿದ್ದು ಒಂದು ಹಂತ ಮುಟ್ಟಿದಾಗ ಸಿಗುತ್ತದೆ ಆರ್ಥಿಕ ಸ್ವಾತಂತ್ರ್ಯ. FIRE ಅಭಿಯಾನಕ್ಕೆ ಪೂರಕ ಪರಿಕಲ್ಪನೆ minimalism. minimalism ಅಂದರೆ ಅನವಶ್ಯಕ ಖರ್ಚುಗಳನ್ನು ಕಮ್ಮಿ ಮಾಡುವುದು. ಇದು ಕೇವಲ ರೊಕ್ಕ ಉಳಿಸಲು ಮಾತ್ರವಲ್ಲ, ಜೀವನವನ್ನು ಸರಳ ಮಾಡಿಕೊಳ್ಳಲೂ ಸಹ minimalism ತುಂಬಾ ಸಹಾಯಕಾರಿ.

ಆರ್ಥಿಕ ಸ್ವಾತಂತ್ರ್ಯ ಬಂತು ಅಂತ ಹೇಗೆ ತಿಳಿದುಕೊಳ್ಳುವುದು? ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದೇ ವ್ಯಾಖ್ಯಾನವಿಲ್ಲ. ಅದು ವೈಯಕ್ತಿಕ. ಆದರೆ ಒಂದು ಜನರಲ್ ವ್ಯಾಖ್ಯಾನ ಕೊಡಬಹುದು. ಅದೇನು ಅಂದರೆ...

೧) ಸಾಲ ಇರಬಾರದು. ಸಾಲ ಇದ್ದರೂ ತಿಂಗಳ ಕಂತನ್ನು ಕಟ್ಟುವಷ್ಟು ರೊಕ್ಕ ನಿಮ್ಮ ಹೂಡಿಕೆಗಳಿಂದ ಬರುತಿರಬೇಕು.

೨) ದೊಡ್ಡ ದೊಡ್ಡ ಖರ್ಚುಗಳಿಗೆ ಬೇರೆ ಬೇರೆ ಫಂಡ್ಸ್ ತೆಗೆದಿಟ್ಟಿರಬೇಕು. ಉದಾಹರಣೆಗೆ: ಮಕ್ಕಳ ಶಿಕ್ಷಣಕ್ಕೆ, ವಿವಾಹಗಳಿಗೆ, ಮತ್ತಿತರ ಖರ್ಚುಗಳಿಗೆ.

೩) ಮಾಸಿಕ / ವಾರ್ಷಿಕ ಖರ್ಚಿನಲ್ಲಿ ಜಾಸ್ತಿ ವ್ಯತ್ಯಾಸ ಬರಬಾರದು. ಖರ್ಚಿಗೆ ತಿಂಗಳಿಗೆ ಸರಾಸರಿ ೫೦,೦೦೦ ಬೇಕು ಅಂತಿಟ್ಟುಕೊಳ್ಳಿ. ಮುಂದಿನ ವರ್ಷ ತಿಂಗಳಿಗೆ ಒಮ್ಮೆಲೇ ೧,೦೦,೦೦೦ ಖರ್ಚು ಬರುವಂತಿರಬಾರದು. ಬರುವಂತಿದ್ದರೆ ಹೆಚ್ಚಿನ ಖರ್ಚಿಗೆ ಬೇರೆ ಒಂದು category ಯಲ್ಲಿ ಪ್ರತ್ಯೇಕ ಫಂಡ್ ಇರಬೇಕು. ವರ್ಷದಿಂದ ವರ್ಷಕ್ಕೆ ಖರ್ಚು ಹಣದುಬ್ಬರದ ಅನುಪಾತದಲ್ಲಿ ಬೆಳೆಯಬಹುದು ಅಷ್ಟೇ.

೪) ಆರೋಗ್ಯ ವಿಮೆ ಮತ್ತಿತರ ವಿಮೆ ಇರಬೇಕು. ವಿಮೆ ಇಲ್ಲ ಅಂದರೆ ಒಂದು ಸಣ್ಣ ಅನಾರೋಗ್ಯ ಹಣಕಾಸು ಪರಿಸ್ಥಿತಿಯನ್ನು ರಾಡಿ ಎಬ್ಬಿಸಿಬಿಡಬಹುದು.

ಇಷ್ಟು ಇದ್ದ ಮೇಲೆ... ನಿಮ್ಮ ಹತ್ತಿರ ವಾರ್ಷಿಕ ಖರ್ಚಿನ ೨೫ ಪಟ್ಟು ಮೊತ್ತದ ರೊಕ್ಕವಿದ್ದರೆ ನೀವು ಆರ್ಥಿಕವಾಗಿ ಸ್ವತಂತ್ರರು. ನಿಮ್ಮ ಮಾಸಿಕ ಖರ್ಚು ೫೦,೦೦೦ ಅಂದಿಟ್ಟುಕೊಳ್ಳಿ. ವಾರ್ಷಿಕ ಖರ್ಚು ೬,೦೦,೦೦೦ ಆಯಿತು. ೬,೦೦,೦೦೦ x ೨೫ = ೧,೫೦,೦೦,೦೦೦. ಒಂದು ಕೋಟಿ ಐವತ್ತು ಲಕ್ಷ. ಇದರಿಂದ ವರ್ಷವೂ ೪% ತೆಗೆದರೆ ನಿಮ್ಮ ವಾರ್ಷಿಕ ಖರ್ಚು ೬,೦೦,೦೦೦ ಬರುತ್ತದೆ. ಹಾಗಾಗಿ ಇದಕ್ಕೆ ೪% ನಿಯಮ ಎಂದು ಕೂಡ ಹೇಳುತ್ತಾರೆ. ಇದು FIRE ಅಭಿಯಾನದ ಬೆನ್ನುಮೂಳೆ.

ಯಾವತ್ತು ನಿಮ್ಮ ಕಡೆ ನಗದು ರೋಕ್ಡಾ ಒಂದೂವರೆ ಕೋಟಿ ಬಂತೋ ಅಂದು ನೀವು ಆರ್ಥಿಕವಾಗಿ ಸ್ವತಂತ್ರರು.

ನೀವು ಇನ್ನೂ conservative ಮತ್ತು ಕಮ್ಮಿ ರಿಸ್ಕ್ ತೆಗೆದುಕೊಳ್ಳಬೇಕು ಅಂದರೆ ವಾರ್ಷಿಕ ಖರ್ಚಿನ ೩೩ ಪಟ್ಟು ಇರುವ ಗಂಟಿನ ಗುರಿ ಇಟ್ಟುಕೊಳ್ಳಿ. ಅದು ಮತ್ತೂ ಸೇಫ್. ಅದಕ್ಕಾಗಿ ಬೇಕಾಗುವ ಗಂಟು ಸುಮಾರು ಎರಡು ಕೋಟಿ. ಅಷ್ಟೇ. ಇದು ೩% ನಿಯಮ.

ಕೇವಲ ಇಷ್ಟು ರೊಕ್ಕ ಮಾಡಿಟ್ಟುಕೊಂಡುಬಿಟ್ಟರೆ ಬೇಗನೆ ನಿವೃತ್ತಿ ತೆಗೆದುಕೊಂಡು ಕೂತುಬಿಡಬಹುದೇ? ರೊಕ್ಕ ಇದ್ದರಷ್ಟೇ ಸಾಲದು ಸ್ವಾಮೀ. ರೊಕ್ಕ ಬೆಳೆಯಬೇಕು ಕೂಡ. ಅರವತ್ತು ವರ್ಷಕ್ಕೆ ನಿವೃತ್ತರಾದಾಗಲೇ ಮತ್ತೂ ಇಪ್ಪತ್ತೈದು ಮೂವತ್ತು ವರ್ಷಗಳಿಗಾಗಿ ಪ್ಲಾನ್ ಮಾಡಬೇಕಾಗುತ್ತದೆ. ಮೂವತ್ತು ನಲವತ್ತು ವಯಸ್ಸಿಗೆಲ್ಲ ರಿಟೈರ್ ಆದರೆ ಕಮ್ಮಿ ಕಮ್ಮಿಯೆಂದರೂ ೪೦-೫೦ ವರ್ಷಕ್ಕಾಗಿ ಪ್ಲಾನ್ ಮಾಡಬೇಕಾಗುತ್ತದೆ. ಹಾಗಾಗಿ ಈ ರೊಕ್ಕ ಕಮ್ಮಿ ಕಮ್ಮಿಯೆಂದರೂ ೬-೮% ದರದಲ್ಲಿ ಬೆಳೆಯಬೇಕು. ಯಾಕೆ ಅಂದರೆ ಸುಮಾರು ೪% ಹಣವನ್ನು ವಾರ್ಷಿಕ ಹಣದುಬ್ಬರ (inflation) ತಿಂದುಹಾಕುತ್ತದೆ. ಮತ್ತೊಂದು ೪% ನಿಮ್ಮ ಖರ್ಚಿಗಾಗಿ ಬೇಕು. ಹಾಗಾಗಿ ಕನಿಷ್ಠ ೮% ದರದಲ್ಲಿ ನಿಮ್ಮ ಇಡುಗಂಟು ಬೆಳೆದರೆ ನಿಮ್ಮ ಖರ್ಚಿಗೂ ಸಾಕು ಮತ್ತು ಅಸಲು ಹಾಗೆ ಉಳಿಯುತ್ತದೆ. ಒಂದು ವರ್ಷ ಹೆಚ್ಚು ಮತ್ತೊಂದು ವರ್ಷ ಕಮ್ಮಿ ಬಂದರೂ ಓಕೆ. ನಿಮ್ಮ ವಾರ್ಷಿಕ ಖರ್ಚು ಮಾತ್ರ ಬದಲಾಗಬಾರದು.

FIRE ಅಭಿಯಾನ ಏಕೆ ಆರಂಭವಾಯಿತು? ಆತ್ಮಸಂತೋಷಕ್ಕಾಗಿ. ಸಂಬಳಕ್ಕಾಗಿ ಕೆಲಸ ಮಾಡಿದ್ದು ಸಾಕು. ಇನ್ನೊಂದಿಷ್ಟು ವರ್ಷ ಆತ್ಮಸಂತೋಷಕ್ಕಾಗಿ ಬದುಕೋಣ ಎನ್ನುವ ಆಸೆ.

ಎಷ್ಟೋ ಜನರಿಗೆ ನಿವೃತ್ತರಾಗುವ ಆಸೆ ಇರುತ್ತದೆ. ಆರ್ಥಿಕವಾಗಿಯೂ ಸ್ವತಂತ್ರರಾಗಿರುತ್ತಾರೆ. ಅದು ಅವರಿಗೆ ಗೊತ್ತಿರುವುದಿಲ್ಲ ಅಷ್ಟೇ. 'ಮುಂದೆ ರೊಕ್ಕ ಕಮ್ಮಿ ಬಿದ್ದೀತು,' ಎನ್ನುವ ಆತಂಕದಲ್ಲಿ ಕೆಲಸ ಮಾಡುತ್ತಲೇ ಇರುತ್ತಾರೆ. FIRE ಉಪಯೋಗಿಸುವ ೪% ನಿಯಮದ framework ಒಂದು ಫಾರ್ಮುಲಾ ಕೊಡುತ್ತದೆ. ಅವರವರ ಆರ್ಥಿಕ ಸ್ವಾತಂತ್ರ್ಯದ ಮಟ್ಟವನ್ನುಅರಿಯಲೊಂದು ಸಾಧನ.

ಸರಿಯಾಗಿ ಯೋಚಿಸಿ ಯೋಜನೆ ಮಾಡಿಕೊಂಡರೆ ೨೨ ವರ್ಷದಲ್ಲಿ ಕೆಲಸ ಶುರುಮಾಡಿ, ಒಳ್ಳೆ ಕೆಲಸ ಮಾಡಿ, ಒಳ್ಳೆ ಸಂಬಳ ಗಳಿಸಿ, ಗಳಿಸಿದ್ದರಲ್ಲಿ ಜಾಸ್ತಿ ಉಳಿಸಿ, ಉಳಿಸಿದ್ದನ್ನು ಕ್ರಮಬದ್ಧವಾಗಿ ಹೂಡಿಕೆ ಮಾಡಿ ಬೆಳೆಸಿ ಒಂದು ಗಂಟು ಮಾಡಿಟ್ಟುಕೊಂಡರೆ ೩೫-೪೦ ವರ್ಷಕ್ಕೆ ನಿವೃತ್ತರಾಗುವುದು ಸಾಧ್ಯ. ಹಾಗಂತ FIRE ಮಂದಿಯ ಅಭಿಮತ. ನಿವೃತ್ತಿಯೆಂದರೆ, ನೆನಪಿಡಿ, ಪೂರ್ತಿ ವಿಶ್ರಾಂತ ಜೀವನವಲ್ಲ. ಆತ್ಮಸಂತೋಷದ ಕೆಲಸ ಮಾಡಿಕೊಂಡಿರಬಹುದು. ಯಾರಿಗೆ ಗೊತ್ತು? ಅದರಲ್ಲೇ ದೊಡ್ಡ ಕಮಾಯಿ ಆಗಬಹುದು.

ಹೆಚ್ಚಿನ ಮಾಹಿತಿಗಾಗಿ ಒಂದಿಷ್ಟು ಲಿಂಕುಗಳು:

https://en.wikipedia.org/wiki/FIRE_movement

https://www.firecalc.com/

https://www.mrmoneymustache.com/

https://www.investopedia.com/terms/f/four-percent-rule.asp

https://www.theminimalists.com/minimalism/