Friday, August 31, 2012

ನೀನು ಇಂಜಿನಿಯರ್ ಆದ್ರೆ, ನಾವು ಸೂಪರ್ ಇಂಜಿನಿಯರ್ಸ - ಅಂದಿದ್ದರು ಇಸ್ರೇಲಿಗಳು

ಮೊದಲಿಂದ ಅವನು ಮೊಬೈಲ್ ಫೋನ್ ಉಪಯೋಗಿಸುವದು ಕಮ್ಮಿಯೇ. ಈಗಿತ್ತಲಾಗೆ ಶುರು ಮಾಡಿದ್ದ. ಲ್ಯಾಂಡ್ ಲೈನ್ ಟ್ರಾಪ್ ಆಗಿರುವ ವಿಚಾರ ಗೊತ್ತಿತ್ತು. ಹಾಗಾಗಿ ಹೆಚ್ಚು ಮಾತಾಡುತ್ತಿರಲಿಲ್ಲ. ಆದರೂ ವೃದ್ಧ ತಂದೆಯೊಂದಿಗೆ ವಾರಕ್ಕೆ ಒಂದು ಸಾರಿ ಮಾತಾಡುತ್ತಿದ್ದ. ಫೋನ್ ಇಟ್ಟ ತಕ್ಷಣ ಓಡುತ್ತಿದ್ದ. ಅದು ರುಟೀನ್ ಆಗಿತ್ತು. ಯಾಕೆಂದ್ರೆ ಅವನಿರುವ ಜಾಗ ಪೊಲೀಸರಿಗೆ 2-3 ನಿಮಿಷದಲ್ಲಿ ತಿಳಿದು, ಕಂಟ್ರೋಲ್ ರೂಮಿನಿಂದ ಅದು ಹತ್ತಿರದ ಪೋಲಿಸ್ ಚೌಕಿಗೆ ರವಾನೆಯಾಗಿ, ಅವರು ಬಂದು ಮುಟ್ಟುವ ಹೊತ್ತಿಗೆ ಇವನು ಪರಾರಿ. ಎಷ್ಟೋ ಸಲ ಅವರ ಮುಂದೆಯೇ ಬುರ್ಕಾ ಹಾಕಿದ ಮಹಿಳೆ ರೂಪದಲ್ಲಿ ಪರಾರಿಯಾಗಿದ್ದ ಭೂಪ ಅವನು.

ಇವತ್ತು ಯಾಕೋ ಮೊಬೈಲ್ ಫೋನ್ ಎತ್ತಿದ. ಅದೇ ಹಳೆ ಫೋನ್. ಒಂದು ಇಟ್ಟಿಗೆ ಸೈಜಿಗೆ ಇತ್ತು. ಆತ್ಮೀಯ ದೋಸ್ತ ಕೊಟ್ಟಿದ್ದ. ಸೇಫ್ ಅಂದಿದ್ದ. ಮತ್ತೆ ಜೊತೆಗೆ ತೆಗೆದುಕೊಂಡು ಓಡಬಹುದು. ಫೋನ್ ಬೂತಿನಿಂದ ಬೂತಿಗೆ ಓಡುವ ಜರೂರತ್ ಇಲ್ಲ.

ಅಪ್ಪನಿಗೆ ಫೋನ್ ಮಾಡಿದ. ಅಪ್ಪ ಎತ್ತಿದ ಆ ಕಡೆ. ಒಂದೆರಡು ನಿಮಿಷ ಮಾತಾಡಿರಬಹುದು. ಅಷ್ಟೇ. ಜಾಸ್ತಿ ಇಲ್ಲ. 

ಟಪ್ ಅಂತ ಒಂದು ಚಿಕ್ಕ ಸ್ಪೋಟ. ಫೋನ್ ಹಿಡಿದಿದ್ದ ಕಡೆಯ ತಲೆ ನೀಟಾಗಿ ಒಡೆದ ತೆಂಗಿನಕಾಯಿ ರೀತಿಯಲ್ಲಿ ಸೀಳಿ, ಮೆದಳು ಹೊರಗೆ ಬಂತು. ಧರೆಗೆ ಉರುಳಿದ. ಮಟಾಶ್. ಖೇಲ್ ಖತಂ.

ಇಂಜಿನಿಯರ್ ಎಂದೇ ಖ್ಯಾತನಾಗಿದ್ದ ಯಾಹ್ಯಾ ಅಯ್ಯಾಶ್ ಎಂಬ ಪ್ಯಾಲೆಸ್ಟೈನ್ ಉಗ್ರಗಾಮಿಯನ್ನು ಇಸ್ರೇಲಿಗಳು ಮೊಬೈಲ್ ಫೋನಿನಲ್ಲಿ ಸಣ್ಣ ಪ್ರಮಾಣದ RDX ಸ್ಪೋಟಕ ತುಂಬಿ, ಅದನ್ನ ರಿಮೋಟ್ ಕಂಟ್ರೋಲಿನಿಂದ ಸ್ಪೋಟಿಸಿ ಅವನಿಗೆ ಸ್ವರ್ಗದ ದಾರಿ ತೋರಿಸಿದ್ದರು. ಮರು ದಿವಸದ ಹೆಡ್ಲೈನ್ಸ್ - Engineer out engineered!

ಯಾಹ್ಯಾ ಅಯ್ಯಾಶ್ ತುಂಬ ಬುದ್ಧಿವಂತ ಹುಡುಗ. ಪ್ಯಾಲೆಸ್ಟೈನ್ ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿ ಬೆಳೆದಿದ್ದ. ಅಂತಹ ವಾತವರಣದಲ್ಲಿ ಬೆಳೆದಿದ್ದರೂ ಕಷ್ಟಪಟ್ಟು ಓದಿ ಇಂಜಿನಿಯರ್ ಡಿಗ್ರಿ ಮಾಡಿಕೊಂಡಿದ್ದ. ಇಲೆಕ್ಟ್ರೋನಿಕ್ಸ್ ನಲ್ಲಿ. ಮುಂದೆ ಹೊರ ದೇಶಕ್ಕೆ ಹೋಗಿ ಓದುವ ಆಸೆ. 

ಆಗಿನ್ನೂ ಗಾಜಾ ಪಟ್ಟಿ, ವೆಸ್ಟ್ ಬ್ಯಾಂಕ್ ಎರಡೂ ಕಡೆ ಇಸ್ರೇಲಿಗಳ ಆಡಳಿತ. ಅವರು ಎಕ್ಸಿಟ್ ಪಾಸ್ ಕೊಟ್ಟರೆ ಮಾತ್ರ ಹೊರಗೆ ಹೋಗಬಹುದು. ಇಲ್ಲಾಂದ್ರೆ ಇಲ್ಲ. ಅವರು ಕೊಡಲಿಲ್ಲ. ನಂತರ 'ಯಾಕೆ ಕೊಡಲಿಲ್ಲವೋ' ಅಂತ ಅವರಿಗೇ ಅನ್ನಿಸಿರಬೇಕು. ಆ ತರಹದ ಖತರ್ನಾಕ್ ಉಗ್ರಗಾಮಿಯಾಗಿ ತಯಾರ್ ಆಗಿ ಬಿಟ್ಟ ಯಾಹ್ಯಾ ಅಯ್ಯಾಶ್.

ಕೊತ ಕೊತ  ಉರಿಯುತ್ತಿದ್ದ  ಯಾಹ್ಯಾ ಅಯ್ಯಾಶ್ ಹೋಗಿ ನಿಂತಿದ್ದು ಆಗತಾನೆ ಎದ್ದು ನಿಲ್ಲುತ್ತಿದ್ದ 'ಹಮಾಸ್' ಎಂಬ ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಯ ಬಾಗಿಲಲ್ಲಿ. ಅವನಿಗೆ ಅಲ್ಲಿ ಸ್ವಾಗತವೇ ದೊರೆಯಿತು. ಪೂರ್ತಿ ಹಿಂಸಾತ್ಮಕ ಅವರ ರೂಟ್. ದೊಡ್ಡ ಮಟ್ಟದ ಬಾಂಬ್ ತಯಾರಕನಾಗಿ ರೆಡಿ ಆದ ಯಾಹ್ಯಾ ಅಯ್ಯಾಶ್. ಸೂಸೈಡ್ ಬಾಂಬಿಂಗ್ ಎಂಬ ಖತರ್ನಾಕ್ ಟೆಕ್ನಿಕ್ ಅನ್ನು ಸಿಕ್ಕಾಪಟ್ಟೆ ಇಂಪ್ರೂವ್ ಮಾಡಿಬಿಟ್ಟ ತನ್ನ ಆವಿಷ್ಕಾರಗಳಿಂದ.

ಮೊದಲೆಲ್ಲ ಸೂಸೈಡ್ ಬಾಂಬರ್ಗಳು ದೊಡ್ಡ ದೊಡ್ಡ ಬಾಂಬ್ ಬೆಲ್ಟ್ ಇತ್ಯಾದಿ ಕಟ್ಟಿಕೊಂಡು ಹೋಗಬೇಕಾಗಿತ್ತು. ಎದ್ದು ಕಾಣುತ್ತಿತ್ತು. ಇಸ್ರೇಲಿಗಳು ಹುಷಾರಾಗಿ ಬಿಟ್ಟಿದ್ದರು. ದಪ್ಪ ದಪ್ಪ ವೇಷ ಹಾಕಿಕೊಂಡ ಡೌಟ್ ಬಂದ ಜನರೆಲ್ಲರ ಅಂಗಿ ಚಡ್ಡಿ ಬಿಚ್ಚಿ ತಪಾಸಣೆ ಮಾಡಿಯೇ ಇಸ್ರೇಲ್ ಒಳಗೆ ಬಿಟ್ಟುಕೊಳ್ಳುತ್ತಿದ್ದರು. ಅರಬ್ ಮಹಿಳೆಯರನ್ನೂ ಬಿಡುತ್ತಿರಲಿಲ್ಲ.

ಯಾಹ್ಯಾ ಅಯ್ಯಾಶ್ ಬಹಳ ಕಾಂಪಾಕ್ಟ್ ಆಗಿ ಸೂಸೈಡ್ ಬೆಲ್ಟ್ ತಯಾರ್ ಮಾಡಿದ. ಸೈಜ್ ಕಮ್ಮಿ ಹೊಡೆತ ಜಾಸ್ತಿ. ಒಳ್ಳೆ ಜಪಾನೀಸ್ ತರಹ. ಮಿನಿಯೇಚರೈಸೆಶನ್ ಅಂತಾರಲ್ಲ. ಹಾಗೆ.

ಈ ತರಹ ತಯಾರ್ ಮಾಡಿದ ವಿಧವಿಧದ ಸೂಸೈಡ್ ಬೆಲ್ಟ್ ಹಾಕಿಕೊಂಡು ಹೋಗುತ್ತಿದ್ದ ಕಟ್ಟರ್ ಪ್ಯಾಲೆಸ್ಟೈನ್ ಹುಡುಗರು ಇಸ್ರೇಲ್ ಒಳಗೆ ಹೋಗಿ ದೊಡ್ಡ ಮಟ್ಟದ ವಿಧ್ವಂಸಕಾರಿ ಕೃತ್ಯ ಮಾಡುತ್ತಿದ್ದರು. ಕಡಿಮೆ ಕಡಿಮೆ ಅಂದರೂ 15-20 ಇಸ್ರೇಲಿಗಳು ಖಲಾಸ್. ಅದಕ್ಕೆ ಹಮಾಸ್ ದೊಡ್ಡ ಮಟ್ಟದ ಪಬ್ಲಿಸಿಟಿ ಕೊಡುತ್ತಿತ್ತು. ಅದರಿಂದ ಮತ್ತೊಂದಿಷ್ಟು ಮಂದಿ ತಯಾರ್ ಆಗುತ್ತಿದ್ದರು. ತಮ್ಮನ್ನು ತಾವೇ ಸ್ಪೋಟಿಸಿಕೊಳ್ಳಲಿಕ್ಕೆ ಮತ್ತು ಜೊತೆಗೆ ಮ್ಯಾಕ್ಸಿಮಮ್ ಇಸ್ರೆಲಿಗಳನ್ನು ಕೊಲ್ಲಲಿಕ್ಕೆ.

ಇಸ್ರೇಲಿಗೆ ದೊಡ್ಡ ತಲೆನೋವು. ಅರಬರಿಗೆ  ಬರಲೇ ಬೇಡಿ ಅನ್ನುವ ಹಾಗಿಲ್ಲ. ಯಾಕಂದ್ರೆ ಅವರೂ ಬೇಕು ಇಸ್ರೇಲಿ ಎಕೊನೊಮಿ ಮುಂದೆ ಹೋಗಲು. ಆದ್ರೆ ಕೆಲವರು ಈ ಪರಿ ಸೂಸೈಡ್ ಬಾಂಬ್ ಬೆಲ್ಟ್ ಕಟ್ಟಿಕೊಂಡು ಬರುತ್ತಾರೆ. ಕಂಡು ಹಿಡಿಯುವದೂ ಕಷ್ಟ. ಈ ಯಾಹ್ಯಾ ಅಯ್ಯಾಶ್ ಎಂತಹ ಜಾಣ ಅಂದ್ರೆ ಸೂಸೈಡ್ ಬೆಲ್ಟ್ ಕಿಟ್ಸ್ ತಯಾರ್ ಮಾಡಿದ್ದ. ಕಿಟ್ ತೊಗೊಂಡು ಹೋಗಿ ಆನ್ ಡಿಮಾಂಡ್ ಚಕಚಕ ಅಂತ ಅಸ್ಸೆಂಬಲ್ ಮಾಡಿಕೊಳ್ಳಬಹುದು. ಇದು ಇನ್ನೂ ದೊಡ್ಡ ತಲೆನೋವಾಗಿತ್ತು.

ಇದು ಇಸ್ರೇಲಿ ಇಂಟರ್ನಲ್ ಪ್ರಾಬ್ಲೆಮ್. ಹಾಗಾಗಿ ಶಿನ್-ಬೆಟ್ ಎಂಬ ಪೋಲಿಸ್ ಸಂಸ್ಥೆ ಡಿಟೇಲ್ ಆಗಿ ವಿಚಾರಣೆ ಶುರು ಮಾಡಿತು. ಹಿಂದೆ ಇರುವ ಕಾಣದ ಕೈ ಯಾಹ್ಯಾ ಅಯ್ಯಾಶ್ ಎಂಬವನದು ಅಂತ ಬೇಗ ತಿಳಿಯಿತು. ಆದ್ರೆ ಅವನನ್ನು ಹಿಡಿಯುವದು ಮಾತ್ರ ತುಂಬಾ ಕಷ್ಟವಾಗತೊಡಗಿತು.

ಹಮಾಸ್ ಅವನನ್ನು ತುಂಬಾ ಜಾಗರೂಕತೆಯಿಂದ ಕಾಯುತ್ತಿತ್ತು. ಅವರಿಗೆ ಅವನ ವ್ಯಾಲ್ಯೂ ಗೊತ್ತಾಗಿತ್ತು. ಅವನಿಂದಲೇ ಹಮಾಸ್ ಅಂದ್ರೆ ಇಸ್ರೇಲ್ ಬೆಚ್ಚಿ ಬೀಳುವ ಹಾಗೆ ಆಗಿತ್ತು. ಹಾಗಾಗಿ ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿತ್ತು.

ಗಾಜಾ ಪಟ್ಟಿ ಅಥವಾ ವೆಸ್ಟ್ ಬ್ಯಾಂಕಿನಲ್ಲೇ ಇದ್ದುಕೊಂಡು ಕಿತಾಪತಿ ಮಾಡುವ ಉಗ್ರರನ್ನು ಮಟ್ಟ ಹಾಕಲು ಇಸ್ರೇಲ್ ಉಪಯೋಗಿಸುವ ಟೆಕ್ನಿಕ್ ಅಂದ್ರೆ ಸಂಬಂಧಿಗಳನ್ನು ಹಿಡಿದು ಅವರಿಗೆ ಕೊಡಬಾರದ ಕಾಟ ಕೊಟ್ಟು ಅವರ ಮೂಲಕ ಮಾಹಿತಿ ತೆಗೆಯುವದು.

ಉದಾಹರಣೆಗೆ ನೀವು ಒಬ್ಬ ಕಿತ್ತಳೆ ಬೆಳೆಗಾರ ಅಂದುಕೊಳ್ಳಿ. ಪೀಕು ರೆಡಿ ಇದೆ. ಕಿತ್ತಿ, ಪ್ಯಾಕ್ ಮಾಡಿ, ಇಸ್ರೇಲ್ ಮೂಲಕ ಹೊರಗೆ ರಫ್ತು ಮಾಡಬೇಕು. ಟೈಮ್ ಗೆ ಸರಿ ಮಾಡಲಿಲ್ಲ ಅಂದ್ರೆ ಪೂರ್ತಿ ಬೆಳೆ ಕೊಳೆತು ಹೋಗುತ್ತದೆ. ರಫ್ತು ಮಾಡಲು ಇಸ್ರೇಲಿ ಪರ್ಮಿಟ್ ಬೇಕು. ಹೋಗಿ ಕೇಳುತ್ತೀರಿ. ಪರ್ಮಿಟ್ ಬೇಕು ಅಂದ್ರೆ ನಿಮ್ಮ ಸಂಬಂಧಿಯಾದ ಆ ಉಗ್ರಗಾಮಿ ಬಗ್ಗೆ ಮಾಹಿತಿ ಕೊಡಿ ಅಂತ ಡೀಲ್ ಮಾಡುತ್ತಾನೆ ಆ ಕಡೆ ಕೂತ ಇಸ್ರೇಲಿ ಅಧಿಕಾರಿ. ಏನು ಮಾಡುತ್ತೀರಿ? ಮಾಹಿತಿ ಕೊಟ್ಟರೂ ರಿಸ್ಕ್ ಇದೆ. ಕೊಡಲಿಲ್ಲ ಅಂದ್ರೆ ಊಟಕ್ಕೆ ಗತಿ ಇಲ್ಲ. ಹೆಚ್ಚಿನ ಜನ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪುತ್ತಾರೆ. ಅಂಥವರು ಕೊಟ್ಟ ಮಾಹಿತಿ ಎಲ್ಲ ಕೂಡಿ ಹಾಕಿ ಇಸ್ರೇಲಿಗಳು ಉಗ್ರಾಗಾಮಿಗಳನ್ನು ಹಿಡಿದು ಮಟ್ಟ ಹಾಕುತ್ತಾರೆ. ಒಮ್ಮೊಮ್ಮೆ ಇದು ಹೊರಬಂದು ಮಾಹಿತಿ ಕೊಟ್ಟವರನ್ನು ಹಮಾಸ್ ತರಹದ ಸಂಘಟನೆಗಳೇ 'ಗದ್ದಾರ್' ಅಂತ ಬ್ರಾಂಡ್ ಮಾಡಿ ಕೊಲ್ಲುತ್ತವೆ. ಬೇರೆಯವರಿಗೆ 'ಹುಷಾರ್' ಅನ್ನೋ ವಾರ್ನಿಂಗ್ ಕೊಟ್ಟ ರೀತಿಯಲ್ಲಿ.

ಇದೇ ಟೆಕ್ನಿಕ್ ವೇರಿಯೇಶನ್ ಅಂದ್ರೆ ಆಮಿಷ ಒಡ್ಡುವದು. ಗಾಜಾ ಪಟ್ಟಿ, ವೆಸ್ಟ್ ಬ್ಯಾಂಕ್ ನಲ್ಲಿ ನಿರಾಶ್ರಿತರ ಜೀವನ ಮಾಡಿ ಸಾಕಾದವರಿಗೆ ಎಲ್ಲೋ ಅಮೆರಿಕಾದಲ್ಲೋ, ಕೆನಡಾದಲ್ಲೋ ಸೆಟಲ್ ಮಾಡಿ ಕೊಡುತ್ತೀವಿ ಅಂದ್ರೆ ದೊಡ್ಡ ಮಟ್ಟದ ಸೀಕ್ರೆಟ್ ಬಿಚ್ಚುತ್ತಾರೆ. ಎಷ್ಟೋ ಮಂದಿಯನ್ನು ಇಸ್ರೇಲ್ ಈ ತರಹ ಉಪಯೋಗಿಸಿಕೊಂಡು ಕೊಟ್ಟ ಮಾತಿಗೆ ತಪ್ಪದಂತೆ ನೆಡದುಕೊಂಡಿದೆ. ಕೆಲವೊಮ್ಮೆ ಹೊರಗೆ ಹೋದವರೇ, ಹುಟ್ಟು ಭೂಮಿ ಮೇಲಿನ ಪಾಶ ತಡಿಯಲಾಗದೆ ವಾಪಸ್ ಬರುವ ತಪ್ಪು ಮಾಡಿ, ಬಂದಾಗ ಉಗ್ರಾಗಮಿಗಳ ಕೈಗೆ ಸಿಕ್ಕು ಸಾಯಬಾರದ ಸಾವು ಸತ್ತಿದ್ದಾರೆ. ಎರಡು ದೊಡ್ಡ ಕೇಸಗಳನ್ನು ಓದಿದ್ದು ನನಗೇ ನೆನಪಿದೆ. ಅದರ ಸುದ್ದಿ ಮತ್ತೊಮ್ಮೆ.

ಇನ್ನೊಂದು ಟೆಕ್ನಿಕ್ ಅಂದ್ರೆ ಉಗ್ರಗಾಮಿಗಳಿಗೆ ಬೇಕಾದವರನ್ನು ಹಿಡಿದು ಅವರನ್ನು ಅಮುಕ ಬಾರದ ರೀತಿಯಲ್ಲಿ ಅಮುಕಿ ಅದು ಉಗ್ರವಾದಿಗಳಿಗೆ ತಿಳಿಯುವಂತೆ ಮಾಡುವದು. ತಮ್ಮನನ್ನೋ, ತಂಗಿಯನ್ನೋ, ಹೆಂಡತಿಯನ್ನೋ ಕರೆದುಕೊಂಡು ಬಂದು ಇಸ್ರೇಲಿಗಳ ಸ್ಪೆಷಾಲಿಟಿ ಥರ್ಡ್ ಡಿಗ್ರೀ ಟಾರ್ಚರ್ ಶುರು ಮಾಡಿ ಉಗ್ರಗಾಮಿಗೆ ಸುದ್ದಿ ಮುಟ್ಟಿಸಿದರೆ, ಎಂತವರೂ ಡೀಲಿಗೆ ಬಂದು ಕೂಡುತ್ತಾರೆ. ನಿಮಗೆ ನೆನಪಿರಬಹುದು. 1994-96 ರ ಮಾತು. ಕಾಶ್ಮೀರದಲ್ಲಿ ಉಗ್ರಗಾಮಿಗಳಿಂದ ಕಿಡ್ನಾಪ್ ಆದ ವಿದೇಶಿಯರಲ್ಲಿ ಕೆಲವು ಇಸ್ರೆಲಿಗಳೂ ಇದ್ದರು. ಭಾರತ ಮತ್ತು ಇತರ ದೇಶಗಳು ತಮ್ಮ ತಮ್ಮ ದೇಶದ ಪ್ರಜೆಗಳನ್ನು ಹೇಗೆ ಬಿಡಿಸಿಕೊಳ್ಳಬೇಕು ಅಂತ ಯೋಚಿಸುತ್ತಿದ್ದರೆ, ಇಸ್ರೇಲ್ ಆಗಲೇ ಮಾಹಿತಿ ತೆಗೆದು ಆ ಉಗ್ರರಿಗೆ ಹೇಗೋ ಬೇಕಾಗಿದ್ದ, ಸಂಬಂಧಪಟ್ಟಿದ್ದ ಮಂದಿಯನ್ನೋ, ವ್ಯಾಪಾರವನ್ನೋ ಹಿಡಿದು ಸರಿಯಾಗಿ ತಿಕ್ಕುತ್ತಿತ್ತು. ಅರಬ್ ಕೊಲ್ಲಿಯ ಸುತ್ತ ಮುತ್ತ ಎಲ್ಲೋ ಬಿಸಿ ಮಾಡಿದ್ದರೆ, ಇಲ್ಲಿ ಕಾಶ್ಮೀರದಲ್ಲಿ ಬೆಣ್ಣೆ ಕರಗುತ್ತಿತ್ತು. ಹಾಗೆ ಮಾಡಿಯೇ ತಮ್ಮ ಪ್ರಜೆಗಳನ್ನು ಇಂಡಿಯಾ ಅಥವಾ ಪಾಕಿಸ್ತಾನಕ್ಕೆ ಕಾಲಿಡದೆ ಬಿಡಿಸಿಕೊಂಡವರು ಇಸ್ರೇಲಿಗಳು. ಆಮೇಲೆ ಬೇರೆ ದೇಶದವರ ಪರವಾಗಿಯೂ ಅವರೇ ಸಂಧಾನ ಮಾಡಿ ಬಿಡಿಸಿಕೊಟ್ಟರು ಅಂತ ಸುದ್ದಿ ಆಗಿತ್ತು. ಅದು ಇಸ್ರೇಲಿಗಳ ಕರಾಮತ್ತ್. ಅದು ಅವರ ಹಿಮ್ಮತ್. ಅದು ಅವರ ಕ್ಯಾಪಾಸಿಟಿ. ಹಾಟ್ಸ್ ಆಫ್!

ಇದೇ ಟೆಕ್ನಿಕ್ ಉಪಯೋಗಿಸಿದರು ಈ ಯಾಹ್ಯಾ ಅಯ್ಯಾಶ್ ನನ್ನು ಹಣಿಯಲು.

ಯಾರೋ ಒಬ್ಬ ಪ್ಯಾಲೆಸ್ಟೈನಿ ಸಿಕ್ಕ. ಅವನ ಸಂಬಂಧಿಯೊಬ್ಬ  ಯಾಹ್ಯಾ ಅಯ್ಯಾಶ್ ನ ಖಾಸಮ್ ಖಾಸ್ ಗೆಳೆಯ. ಈ ಸಂಬಂಧಿಗೆ ಗಾಜಾ ಪಟ್ಟಿ ಬಿಟ್ಟು ಬೇರೆ ಎಲ್ಲೋ ಹೊರಗೆ ಸೆಟಲ್ ಆಗಬೇಕಿತ್ತು. ಇಸ್ರೇಲಿಗಳು ಆಗಲಿ ಅಂದರು. ಅದಕ್ಕೆ ಪ್ರತಿಯಾಗಿ ನಾವು ಒಂದು ಮೊಬೈಲ್ ಕೊಡುತ್ತೇವೆ. ಅದನ್ನು ಯಾಹ್ಯಾ ಅಯ್ಯಾಶ್ ಗೆ ಮುಟ್ಟಿಸಬೇಕು ಅಂತ. ಅವನು ಓಕೆ ಅಂದ.

ಈ ಕಡೆ ಗದ್ದಾರ್ ಪ್ಯಾಲೆಸ್ಟೈನಿ ಮತ್ತು ಅವನ ಕುಟುಂಬವನ್ನು ಹೊರಗೆ ಸಾಗಿಸುವ ಕೆಲಸ  ಇಸ್ರೇಲಿಗಳು ಶುರು ಮಾಡಿದರು. ಮತ್ತೊಂದು ಕಡೆ ಇಸ್ರೇಲಿ ಇಂಜಿನಿಯರ್ ಗಳು ಒಂದು ಮೊಬೈಲ್ ಫೋನ್ ತಂದು ಅದನ್ನು ರಿಮೋಟ್ ಕಂಟ್ರೋಲ್ ಬಾಂಬಾಗಿ ಪರಿವರ್ತಿಸುವ ಕಾರ್ಯ ಶುರು ಮಾಡಿದ್ದರು. ಎಲ್ಲೆಲ್ಲೋ ಬಾಂಬ್ ಫಿಟ್ ಮಾಡುವ ಅವರಿಗೆ ಅದು ದೊಡ್ಡ ಮಾತಾಗಿರಲಿಲ್ಲ. ಅಷ್ಟೇ ಕಾಣಬಾರದು ಹಿಂದಿನ ಕವರ್ ತೆಗೆದರೆ. ಆಗಿನ ಕಾಲದ ಮೊಬೈಲ್ ಫೋನ್ ಗಳು ಸ್ವಲ್ಪ ದೊಡ್ಡ ಸೈಜಿನವು ಇರುವದು ಒಳ್ಳೆಯದೇ ಆಯಿತು.

ಏನೋ ಪೊರಪಾಟಿನಲ್ಲಿ ಅಂತೂ ಇಂತೂ ಫೋನ್ ಹೋಗಿ ಮುಟ್ಟಿತು. ಯಾಹ್ಯಾ ಅಯ್ಯಾಶ್ ಅದನ್ನು ಉಪಯೋಗಿಸಲು ಶುರು ಮಾಡಿದ. ಬೇಕಂತಲೇ ಅವನ ಮೇಲಿನ ಕಾರ್ಯಾಚರಣೆ ಸ್ವಲ್ಪ ಕಮ್ಮಿ ಮಾಡಲಾಯಿತು. ಅವನಿಗೂ ಅನ್ನಿಸಬೇಕು - ಈ ಫೋನ್ ಸೇಫ್ - ಅಂತ. ಅವನಿಗೇನು ಗೊತ್ತಿತ್ತು ತನ್ನ ಫೋನೇ ತನಗೆ ಮುಳುಗಡೆ ತರಲಿದೆ ಅಂತ.

ಮುಹೂರ್ತದ ದಿನ ಬಂದೇ ಬಿಟ್ಟಿತು. ವಾಡಿಕೆಯಂತೆ ತಂದೆಯೊಂದಿಗೆ ಮಾತಾಡುತ್ತಿದ್ದ. ಕಾಲ್ ಆಲಿಸುತ್ತಿದ್ದರು ಇಸ್ರೇಲಿಗಳು. ಯಾಹ್ಯಾ ಅಯ್ಯಾಶ್ ಅಂತ ಖಚಿತ ಮಾಡಿಕೊಂಡವರೇ ಅದರಲ್ಲಿದ್ದ ಅತಿ ಚಿಕ್ಕ RDX ಬಾಂಬನ್ನು ರಿಮೋಟ್ ಕಂಟ್ರೋಲ್ ಮುಖಾಂತರ ಸ್ಪೋಟಿಸಿಯೇ ಬಿಟ್ಟರು. ಚಿಕ್ಕ ಟಪ್ಪ್ ಅಂತ ಶಬ್ದ. ಫೋನ್ ಹಿಡಿದ ಕಡೆಯ ತಲೆಯ ಭಾಗದಲ್ಲೊಂದು ದೊಡ್ಡ ದೊಗರು. ಭೇಜಾ ಬಾಹರ್. ಆದ್ಮಿ ಊಪರ್. ಖೇಲ್ ಖತಂ.

ಈ ಕಡೆ ಫೋನ್ ಕೊಟ್ಟು ಗದ್ದಾರಿ ಮಾಡಿದವ ಕುಟುಂಬ ಸಮೇತ ಟೆಲ್-ಅವಿವ್  ನಲ್ಲಿ ಅಂತರಾಷ್ಟ್ರೀಯ ವಿಮಾನ ಹತ್ತುತ್ತಿದ್ದ. ಕೊಟ್ಟ ಮಾತು ಉಳಿಸಿಕೊಂಡಿದ್ದರು ಇಸ್ರೇಲಿಗಳು. ಮುಂದೆ ಸಿಟ್ಟಿಗೆದ್ದ "ಹಮಾಸ್" ಅವನ ಮೇಲೆ ಸುಪಾರಿ ಕೊಟ್ಟಿತ್ತು. ಏನಾಯಿತೋ ಗೊತ್ತಿಲ್ಲ.

ಹೀಗೆ - ನೀನು ಇಂಜಿನಿಯರ್ ಆದ್ರೆ, ನಾವು ನಿಮ್ಮಪ್ಪನಂತಹ ಇಂಜಿನಿಯರ್ ಗಳು - ಅಂತ ಇಸ್ರೇಲಿಗಳು ಕರೆಕ್ಟಾಗಿ ಟಾಂಗ್ ಕೊಟ್ಟಿದ್ದರು.

ಯಾಹ್ಯಾ ಅಯ್ಯಾಶ್ ಗೆ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕಿನಲ್ಲಿ ದೊಡ್ಡ ಮಟ್ಟದ ಸಪೋರ್ಟ್ ಇತ್ತು. ಅವನು ಒಂದು ಕಲ್ಟ್ ಫಿಗರ್ ತರಹ ಆಗಿಹೋಗಿದ್ದ. ಅವನ ಅಂತ್ಯಕ್ರಿಯೆಗೆ ಲಕ್ಷಾಂತರ ಜನ ಸೇರಿದ್ದರು. ದೊಡ್ಡ ದೊಡ್ಡ ಪ್ಯಾಲೆಸ್ಟೈನ್ ನಾಯಕರು ಬಣ ಭೇದ ಮರೆತು ಬಂದಿದ್ದರು. ಯಬಡೇಶಿ  ಯಾಸೀರ್ ಅರಾಫತ್ ಕೂಡ ನಿಧನಕ್ಕೆ ಶೋಕ ವ್ಯಕ್ತ ಪಡಿಸಿ ಮಂಗ್ಯಾ ಆದರು. ನೀವು ಒಂದು ಕಡೆ ಶಾಂತಿ ಶಾಂತಿ ಅನ್ನುತ್ತೀರಿ. ಇನ್ನೊಂದು ಕಡೆ ಯಾಹ್ಯಾ ಅಯ್ಯಾಶ್ ನಂತಹ ಪಕ್ಕಾ ಉಗ್ರಗಾಮಿ ಸತ್ತರೆ ನಿಮಗೇ ವೈಧವ್ಯ ಬಂದಂತೆ ಅಳುತ್ತೀರಿ. ಡಬಲ್ ಸ್ಟ್ಯಾಂಡರ್ಡ್ ನಿಮ್ಮದು - ಅಂತ ಇಸ್ರೇಲ್, ಅಮೇರಿಕಾ, ಬ್ರಿಟನ್ ಅರಾಫತ್ ಅವರಿಗೆ ಝಾಡಿಸಿದವು. ದೇಶಾವರಿ ನಗೆ ಹುಳ್ಳಗೆ ನಕ್ಕರು ಅರಾಫತ್. ಮನೆಗೆ ಬೆಂಕಿ ಹತ್ತಿದರೆ ಅದರಲ್ಲಿ ಬೀಡಿ ಹಚ್ಚೋ ಕೆಲಸ ಅವರಿಗೆ ಹೇಳಿ ಕೊಡಬೇಕಿಲ್ಲ. ಎಕ್ಸ್ಪರ್ಟ್ ಅವರು. ಯಾಹ್ಯಾ ಅಯ್ಯಾಶ್ ನನ್ನು ದೊಡ್ಡ ಹುತಾತ್ಮ ಅಂತ ತೋರಿಸಿ ತಮ್ಮ ಬೇಳೆ ಮತ್ತೊಂದು ಬೇಯಿಸಿಕೊಳ್ಳುವ ಇರಾದೆ ಅವರದು.

ಯಾಹ್ಯಾ ಅಯ್ಯಾಶ್ ಹೆಸರಿನಲ್ಲಿ ರೋಡು, ಬಡಾವಣೆ  ಎಲ್ಲ ಆದವು. ಹಮಾಸ್ ಮುರಕೊಂಡು ಬಿದ್ದು ಒಂದೆರಡು ತಿಂಗಳಲ್ಲಿ 60-70 ಇಸ್ರೇಲಿಗಳನ್ನು ಸೂಸೈಡ್ ಬಾಂಬಿಂಗ್ ಗಳಲ್ಲಿ ಕೊಂದಿತು. ಅದು ಎಂದೂ ಮುಗಿಯದ ಕಲಹ.

ಹೆಚ್ಚಿನ ಮಾಹಿತಿಗೆ:

ಯಾಹ್ಯಾ ಅಯ್ಯಾಶ್

The Hunt for the Engineer by Samuel Katz - ಸಕ್ಕತ್ ಪುಸ್ತಕ. ಕಾರ್ಯಾಚರಣೆಯ ಫುಲ್ ಡಿಟೆಲ್ಸ್ ಇವೆ. ಒಳ್ಳೆ ಥ್ರಿಲ್ಲರ್ ಕಾದಂಬರಿ ತರಹ ಓದಿಸಿಕೊಂಡು ಹೋಗುತ್ತದೆ.

ಒಂದು ಸಿನೆಮಾ ಕೂಡ ಬಂದಿತ್ತು. ಸಣ್ಣ ಬಜೆಟ್ಟಿನದು. ಓಕೆ ಅನ್ನುವ ಹಾಗಿತ್ತು. youtube ಮೇಲೆ ಸುಮಾರು ವಿಡಿಯೋಸ್ ಇವೆ. ಬೇಕಾದ್ರೆ ನೋಡಿ.

Wednesday, August 29, 2012

ಭರ್ಜರಿ ಬಾಸ್, ಖತರ್ನಾಕ್ ಕಲೀಗ್ಸ್

ಅವರೊಬ್ಬರು ದೊಡ್ಡ ಕಂಪನಿಯ ದೊಡ್ಡ ಬಾಸ್. ಅವರದ್ದೇ ಕಂಪನಿ. ಸ್ಥಾಪಿಸಿ ತುಂಬ ಜತನದಿಂದ ಬೆಳೆಸಿದ್ದರು. ಒಂದು ಕುಟುಂಬದ ತರಹ ಅವರಿಗೆ ಕಂಪನಿ ಅಂದ್ರೆ. ಜೊತೆಗೆ ಕೆಲಸ ಮಾಡುವರು ಅಂದ್ರೆ ಮನೆ ಮಂದಿ ಇದ್ದ ಹಾಗೆ. ಅವರ ಜೊತೆ ಕೆಲಸ ಮಾಡುವವರಿಗೂ ಹಾಗೆಯೇ. ಅದಕ್ಕೇ ಇರಬೇಕು  ಅವರ ಜೊತೆ ತುಂಬ ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಹೀಗೆ ಇರುವಾಗ ಒಂದು ಅವಘಡವಾಯಿತು. ಇರಾನಿನಲ್ಲಿ ಅವರ ಕಂಪನಿಯ ಕೆಲವು ಜನರನ್ನು ಇರಾನ್ ಸರ್ಕಾರ ಬಂಧಿಸಿತು. ಲಂಚ ಕೊಟ್ಟು ಡೀಲ್ಸ್ ಪಡೆಯುತ್ತಿದ್ದರು ಎಂಬ  ಆರೋಪದ ಮೇಲೆ. ಅದು ಆರೋಪ. ಹಿಂದೆ ನಿಜವಾದ ಕಾರಣ ಬೇರೆಯೇ ಇತ್ತು. 

ಅದು 1978 ರ ಸಮಯ. ಇರಾನಿನಲ್ಲಿ ಬಂಡಾಯದ ಟೈಮ್. ಸರ್ವಾಧಿಕಾರಿ ರೆಜಾ ಶಹಾ ಪೆಹಲವಿಯನ್ನು ಮುಲ್ಲಾಗಳು, ಖೋಮೇನಿಗಳು ಇರಾನಿನಿಂದ ಓಡಿಸಿದ್ದರು. ಅವನು ಪನಾಮಾದಲ್ಲಿ ಆಶ್ರಯ ಪಡೆದಿದ್ದ.

ಒಟ್ಟಿನಲ್ಲಿ ಪರದೇಶದ ಕಂಪನಿಗಳಿಗೆ ಕಷ್ಟ ಕೊಟ್ಟು, ಬಂದಷ್ಟು ದುಡ್ಡು ಗುಂಜಿಕೊಂಡು ಇರಾನಿನಿಂದ ಓಡಿಸಿಬಿಡುವದು ಅವರ ಪ್ಲಾನ್. ಹಾಗಾಗೇ ಬಂಧಿಸಿದ್ದ ಇಬ್ಬರು ಅಧಿಕಾರಿಗಳ ಜಾಮೀನಿಗೆ ಆ ಕಾಲದ 1.5 ಮಿಲಿಯ ಡಾಲರ್ ಡಿಮ್ಯಾಂಡ್ ಇಟ್ಟಿದ್ದರು. ಅಷ್ಟು ದೊಡ್ಡ ಕಂಪನಿಗೆ ಆ ಮೊತ್ತ ಕೊಟ್ಟು ಬಿಡಿಸಿಕೊಂಡು ಬರುವದು ದೊಡ್ಡ ಮಾತಾಗಿರಲಿಲ್ಲ. ಆದರೂ ಪ್ರಿನ್ಸಿಪಲ್ ಅಂತ ಇರುತ್ತದೆ ನೋಡಿ. ಯಾಕೆ ಕೊಡಬೇಕು ಅಂತ? ಇಲ್ಲಿ ಒಮ್ಮೆ ಕೊಟ್ಟರೆ ಇನ್ನೊಂದು ದೇಶದಲ್ಲಿ ಇನ್ನೊಬ್ಬ ಕೊರಮ ಮತ್ತೊಂದಿಷ್ಟು ದುಡ್ಡು ಕೇಳುತ್ತಾನೆ. ಬಗ್ಗುತ್ತಾರೆ ಅಂತ ಗೊತ್ತಾದರೆ ಬಗ್ಗಿಸಿ ಬಾರಿಸುವವರಿಗೆ ಏನೂ ಕಮ್ಮಿ ಇಲ್ಲ.

ಈ ಪರಿಸ್ಥಿತಿ ಬಂದಿದ್ದು EDS (Electronic Data Systems) ಎಂಬ ಆ ಕಾಲದ ದೊಡ್ಡ ಕಂಪನಿಗೆ. ಅದರ ಸ್ಥಾಪಕ, CEO ಆಗಿದ್ದವರು ರಾಸ್ ಪೆರೋ ಎಂಬವರು. ಅತ್ಯಂತ ಶಿಸ್ತಿನ, ಖಡಕ್ ಮನುಷ್ಯ. ಸಕ್ಕತ್ ತಲೆ ಇರುವ ವ್ಯಾಪಾರಿ. ಆಗಲೇ ಮಲ್ಟಿ-ಮಿಲಿಯನರ್ ಆಗಿದ್ದವರು. ಈಗ ಬಿಲಿಯನರ್ ಆಗಿ ವಿಶ್ವದ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು.

ರಾಸ್ ಪೆರೋ ದೊಡ್ಡ ಮಟ್ಟದ ಪ್ರಿನ್ಸಿಪಲ್ ಇರುವ ಮನುಷ್ಯ. ತಮಗೆ ಸರಿ ಕಂಡಿದ್ದು ಮಾಡುತ್ತಿದ್ದರು. ಅವರ ಮೌಲ್ಯಗಳ ಜೊತೆ ಹೊಂದಾಣಿಕೆ ಇಲ್ಲವೇ ಇಲ್ಲ. ಲಂಚ ಪಂಚ ಕೊಟ್ಟು ಕಾರ್ಯ ಮಾಡಿಸಿಕೊಳ್ಳುವ ದರ್ದು ಅವರಿಗೆ ಇರಲಿಲ್ಲ. ಹಾಗಿರುವಾಗ ಮುಲ್ಲಾಗಳ ಸರ್ಕಾರ ಅವರ ಕಂಪನಿಯ ಅಧಿಕಾರಿಗಳನ್ನು ಲಂಚ ಕೊಡುತ್ತಿದ್ದರು ಅಂತ ಬಂಧಿಸಿ, ಜಾಮೀನಿನ ಹೆಸರಲ್ಲಿ ಮಿಲಿಯಗಟ್ಟಲೆ ಡಾಲರ್ ಗುಂಜಲು ನೋಡಿದರೆ ಅವರಿಗೆ ಉರಿಯದೇ ಇರುತ್ತದೆಯೇ?

ಏನು ಮಾಡುವದು? ತಮ್ಮ ಕಂಪನಿಯ ಜನರನ್ನು ಮನೆ ಮಂದಿಯಂತೆ ನೋಡಿಕೊಳ್ಳುತ್ತಿದ್ದರು. ಆ ಮಟ್ಟದ ನಿಷ್ಠೆ ನೌಕರರಿಂದ ಮಾಲಿಕರೆಡೆಗೆ ಮತ್ತು ಮಾಲಿಕರಿಂದ ನೌಕರರೆಡೆಗೆ ಇತ್ತು. ದುಡ್ಡು ಕೊಟ್ಟು ಜಾಮೀನ ಕೊಡಿಸುವದಿಲ್ಲ. ಸರಿ. ಆದ್ರೆ ತಮ್ಮನ್ನು  ನಂಬಿದ ನೌಕರರನ್ನು ನರಕಸದೃಶ ಜೇಲಿನಲ್ಲಿ ಬಿಡುವದು ಹೇಗೆ? ದುಡ್ಡು ಬರಲಿಲ್ಲ ಅಂತ ಅವರಿಗೆ ಇರಾನಿಗಳು ಚಿತ್ರಹಿಂಸೆ ಮತ್ತೊಂದು ಕೊಟ್ಟರೆ ಹೇಗೆ? ಏನಾದರು ಹೆಚ್ಚು ಕಮ್ಮಿ ಆದರೆ ಆ ತನಕ ಕಷ್ಟು ಪಟ್ಟು ಬೆಳೆಸಿಕೊಂಡಿದ್ದ - ರಾಸ್ ಪೆರೋ ಅಂದ್ರೆ ಮನೆ ಹಿರಿಯ. ಅವರಿರುವ ತನಕ ಚಿಂತೆ ಮಾಡೋ ಅಗತ್ಯ ಇಲ್ಲ - ಅಂತ ಜನ ತಮ್ಮ ಮೇಲೆ ಇಟ್ಟಿದ್ದ ನಂಬುಗೆ ಹೋದರೆ ವಾಪಾಸ್ ಬರುವದು ಕಷ್ಟ. ಆ ಚಿಂತೆ ಪೆರೋ ಅವರಿಗೆ.

ಏನು ಮಾಡುವದು? ಅಮೇರಿಕಾದ ಆ ಕಾಲದ ಸರ್ಕಾರದ ಕಡೆ ನೋಡಿದರು. ಜಿಮ್ಮಿ ಕಾರ್ಟರ್ ಅಧ್ಯಕ್ಷರಾಗಿದ್ದರು. ಮೃದು ಮನುಷ್ಯ. ಅವರು 1977 ರಲ್ಲಿ ಅಧಿಕಾರವಹಿಸಿಕೊಂಡಿದ್ದಾಗಿಂದ ಒಂದಲ್ಲ ಒಂದು ತೊಂದರೆ. 1976 ಅರಬ್ ಇಸ್ರೇಲಿ ಯುದ್ಧದ ನಂತರ ಅರಬ್ ರಾಷ್ಟ್ರಗಳು ಪೆಟ್ರೋಲ್ ಮೇಲೆ ನಿರ್ಬಂಧ ವಿಧಿಸಿ, ಪೆಟ್ರೋಲ್ ಬೆಲೆ ವಿಪರೀತ ಮೇಲೆ ಹೋಗಿ, ಅಮೇರಿಕಾದ ಜನ ರೊಚ್ಚಿಗೆದ್ದಿದ್ದರು. ಅರ್ಥಿಕ ಸ್ಥಿತಿ ಹದಗೆಟ್ಟಿತ್ತು. ಮತ್ತೇನೋ ತೊಂದರೆಗಳು. ಎಲ್ಲಕ್ಕೂ ಮೀರಿ ಇರಾನಿನ ರಾಜಧಾನಿ ಟೆಹರಾನಿನಲ್ಲಿ ಇದ್ದ ಅಮೇರಿಕಾದ ಇಡೀ ರಾಯಭಾರ ಕಛೇರಿಯನ್ನೇ ಇರಾನಿನ ಮೂಲಭೂತವಾದಿ ವಿದ್ಯಾರ್ಥಿ ಸಂಘಟನೆಯೊಂದು ಆಕ್ರಮಿಸಿತ್ತು. ಸುಮಾರು 70 ಅಮೇರಿಕನ್ನರು ಒತ್ತೆಯಾಳಾಗಿದ್ದರು. ಅದೊಂದು ದೊಡ್ಡ ತಲೆ ಬಿಸಿ ಕಾರ್ಟರ್ ಅವರಿಗೆ. ಸಿಕ್ಕಾಪಟ್ಟೆ ಪ್ರೆಶರ್ ಬರುತ್ತಿತ್ತು. ಅಂತಾದ್ದರಲ್ಲಿಯೇ ಒಂದು ಕಮಾಂಡೋ ಕಾರ್ಯಾಚರಣೆ ಮಾಡಲು ಹೋಗಿ, ಅದು ಪೂರ್ತಿ ಎಕ್ಕುಟ್ಟು ಹೋಗಿ, ದೊಡ್ಡ ಮಟ್ಟದ ಅವಮಾನ ಮತ್ತು ಮುಜುಗರ ಅನುಭವಿಸಿದ್ದರು ಕಾರ್ಟರ್. ಮತ್ತೆ ಅವರ ಎರಡನೇ ಅವಧಿಯ ಚುನಾವಣೆ ಬೇರೆ ಬರುತ್ತಿತ್ತು. ಇಷ್ಟೆಲ್ಲ ತೊಂದರೆಗಳ ಅಡಿ ಸಿಕ್ಕು ನಲಗುತ್ತಿದ್ದ ಕಾರ್ಟರ್ ರಾಸ್ ಪೆರೋ ಅವರಿಗೆ ಏನೂ ಮಾಡುವ ಹಾಗೆ ಇರಲಿಲ್ಲ. ಅಮೇರಿಕಾದ ಸುಮಾರು ಮಂದಿ ನಾಗರಿಕರು ಇರಾನಿನಲ್ಲಿ ಬಂಧಿಗಳಾಗಿದ್ದಾರೆ. ಎಲ್ಲರೂ ಒಂದಲ್ಲ ಒಂದು ಸರೆ ತಿರುಗಿ ಬರುತ್ತಾರೆ ಬಿಡಿ - ಅಂದಿದ್ದರು ಕಾರ್ಟರ್. ಸೋತಿದ್ದರು ಅವತ್ತಿನ ಮಟ್ಟಿಗೆ ಅವರು. ಮುಂದೆ ರೋಸಿದ್ದ ಜನ ಕಾರ್ಟರ್ ಅವರನ್ನು ಮನೆಗೆ ಕಳಿಸಿ ರೀಗನ್ ಅವರನ್ನು ಆರಿಸಿದ್ದು ಇತಿಹಾಸ.

ರಾಸ್ ಪೆರೋ ಹಾಗೆ ಏನೂ ಮಾಡಲು ಆಗಲ್ಲ ಅಂತ ಕೈಚೆಲ್ಲಿ ಕೂಡುವರಲ್ಲ. ಅಷ್ಟೆಲ್ಲ ಯಶಸ್ಸು ಸಾಧಿಸಿದವರು ಅವರು. ಕಾರ್ಟರ್ ಸರ್ಕಾರ ಸಹಾಯ ಮಾಡಲಿಲ್ಲ ಅಂದ್ರೆ ಏನಾಯಿತು, ನಾವೇ ಏಕೆ ಏನಾದರು ಮಾಡಬಾರದು ಅಂತ ಯೋಚಿಸಿದರು. ಅವರಿಗೂ ದೊಡ್ಡ ಮಟ್ಟದ ಸಂಪರ್ಕಗಳಿದ್ದವು. ಆ ಸಂಪರ್ಕಗಳನ್ನು ಉಪಯೋಗಿಸಿ ಅವರು ಕಾಂಟಾಕ್ಟ್ ಮಾಡಿದ್ದು ಯಾರನ್ನ ಅಂದರೆ ಕೇಳಿದವರು ಸಿಕ್ಕಾಪಟ್ಟೆ ಆಶ್ಚರ್ಯಪಟ್ಟರು.

ರಾಸ್ ಪೆರೋ ಸಂಪರ್ಕಿಸಿದ್ದು ಎರಡನೇ ವಿಶ್ವಯುದ್ಧದಲ್ಲಿ, ವಿಯೆಟ್ನಾಂ ಯುದ್ಧದಲ್ಲಿ ಅರಿಭಯಂಕರ ಅಂತ ಹೆಸರು ಮಾಡಿದ್ದ ನಿವೃತ್ತ ಕಮಾಂಡೋ ನಾಯಕ ಆರ್ಥರ್ "ಬುಲ್" ಸೈಮನ್ಸ್ ಎಂಬವರನ್ನು.

ದೊಡ್ಡ ಮಟ್ಟದ ಹೆಸರಿತ್ತು ಸೈಮನ್ಸ್ ಗೆ. ವಿಯೆಟ್ನಾಂ ಯುದ್ಧ ಗರಂ ಆಗುವ ಹೊತ್ತಿಗೆ ಸೈಮನ್ಸ್ ರಿಟೈರ್ ಆಗಿದ್ದರು. ಆದರೂ ಹಳೆಯ ದೋಸ್ತರು - ಬನ್ನಿ ಸಾರ್! ನಿಮ್ಮಂತ ಜನ ಬೇಕು ನಮಗೆ ಮಾರ್ಗದರ್ಶನ ಮಾಡಲಿಕ್ಕೆ - ಅಂತ ಕೇಳಿಕೊಂಡಿದ್ದಕ್ಕೆ ವಿಯೆಟ್ನಾಂ ಗೆ ಹೋಗಿ ಕೂತಿದ್ದರು. ದೊಡ್ಡ ಮಟ್ಟದ ಕಾರ್ಯಾಚರಣೆಗಳಿಗೆ ಪ್ಲಾನ್ ಹಾಕಿ ಕೊಡುತ್ತಿದ್ದರು.

ಒಮ್ಮೆಯಂತೂ ಕೆಲವು ಕಾರ್ಯಾಚರಣೆಗಳ ವೈಫಲ್ಯದಿಂದ  ರೊಚ್ಚಿಗೆದ್ದ ಅವರು - ನಾಲಾಯಕ್ ನನ್ನ ಮಕ್ಕಳಾ! ನಿಮಗೆ ಕಮಾಂಡೋ ಕಾರ್ಯಾಚರಣೆ ಮಾಡೋಕೆ ಬರೋತ್ತೇನ್ರೀ? ಸರೀರಿ ಆ ಕಡೆ. ಈ ಸಲ ನಾನೇ ಬರುತ್ತೇನೆ. ನಾನೇ ಲೀಡ್ ಮಾಡುತ್ತೇನೆ - ಅಂತ ಹೊಂಟುಬಿಟ್ಟರು. ಅದೇ 'ಸೋನ್ ಟೋಯ್ ರೇಡ್' ಕಾರ್ಯಾಚರಣೆ.

ಸೋನ್ ಟೋಯ್ ಎಂಬುದು ಉತ್ತರ ವಿಯೆಟ್ನಾಂ ನಲ್ಲಿ ಇದ್ದ ಯುದ್ಧಕೈದಿಗಳ ಶಿಬಿರ. ವಿಯೆಟ್ನಾಂ ಬಂಡುಕೋರರು ಹಿಡಿದ 61 ಜನ ಅಮೇರಿಕನ್ನ ಸೈನಿಕರು ಅಲ್ಲಿದ್ದರು. ಅವರನ್ನು ಬಿಡಿಸಿಕೊಂಡು ಬರಲು ಒಂದು ಕಮಾಂಡೋ ಕಾರ್ಯಾಚರಣೆ ಮಾಡಲಾಯಿತು. ಆಗಲೇ 52 ವರ್ಷದವರಾಗಿದ್ದ ಬುಲ್ ಸೈಮನ್ಸ್ ಆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಬೇರೆ ಬೇರೆ ಕಾರಣಗಳಿಂದ ಆ ಕಾರ್ಯಾಚರಣೆ ವಿಫಲವಾದರೂ ಬುಲ್ ಸೈಮನ್ನರ ಛಾತಿಗೆ, ಧೈರ್ಯಕ್ಕೆ, ಸಾಹಸಕ್ಕೆ, ನಾಯಕತ್ವಕ್ಕೆ ಮತ್ತೊಂದು ಗರಿ ಏರಿತ್ತು.

ಮುಂದೆ ಸೈಮನ್ಸ್ ವಾಪಸ್ ಬಂದು ಫ್ಲೋರಿಡಾದಲ್ಲಿ ರಿಟೈರ್ ಆಗಿದ್ದರು. ಆವಾಗಲೇ ರಾಸ್ ಪೆರೋ ತಮ್ಮ ಇರಾನಿ ಪ್ರಾಬ್ಲೆಮ್ ತೆಗೆದುಕೊಂಡು ಅವರ ಹತ್ತಿರ ಬಂದಿದ್ದರು.

ಬುಲ್ ಸೈಮನ್ಸಗೆ ಇದೆಲ್ಲಾ ಬೇಕಾಗಿರಲಿಲ್ಲ. ಸಕಲ ಸರಕಾರೀ ಗೌರವಗಳಿಂದ ವಿಯೆಟ್ನಾಂನಿಂದ ವಾಪಸ್ ಬಂದಿದ್ದರೂ, 'ಸೋನ್ ಟೋಯ್ ರೇಡ್' ಕಾರ್ಯಾಚರಣೆ ವಿಫಲವಾದ ಬಗ್ಗೆ ಅವರಿಗೆ ನೋವಿತ್ತು. ಮತ್ತೆ ಬಂದವರು ಯಾರೋ ದೊಡ್ಡ ಬಿಸಿನೆಸ್ಸ್ ಮ್ಯಾನ್ ರಾಸ್ ಪೆರೋ. ಬುಲ್ ಸೈಮನ್ಸ್ ಸಹಿತ ಅತ್ಯಂತ ಉನ್ನತ ಮೌಲ್ಯಗಳಿರುವ ಸೈನಿಕ. ಖಾಸಗಿ ಮಂದಿಗೆ ಭಾಡಿಗೆ ಸೈನಿಕ ಕೆಲಸ ಮಾಡುವ ಮರ್ಸಿನರಿ ಆಗುವ ಆಸಕ್ತಿ ಇರಲಿಲ್ಲ. ಅಂತಹ ಕೆಲಸಗಳನ್ನೇ ಮಾಡುವ ಜನರ ಕಡೆ ರಾಸ್ ಪೆರೋ ಅವರನ್ನು ಸಾಗ ಹಾಕಲು ನೋಡಿದರು. ಹಾಗೆ ಕೇವಲ ದುಡ್ಡಿಗಾಗಿ ಭಾಡಿಗೆ ಹಂತಕರಾಗಿ ಕೆಲಸ ಮಾಡುವ ಜನರನ್ನು ರಾಸ್ ಪೆರೋ ಕೂಡ ನಂಬುತ್ತಿರಲಿಲ್ಲ.

ರಾಸ್ ಪೆರೋ ಬುಲ್ ಸೈಮನ್ಸ್ ಅವರ ಹೃದಯಕ್ಕೆ ತಾಗುವಂತೆ ಮಾತಾಡಿದರು. ಆ ಸಂಭಾಷಣೆಯ ಅಂತ್ಯಕ್ಕೆ ಬುಲ್ ಸೈಮನ್ಸ್ ಅವರಿಗೆ ಅನ್ನಿಸಿದ್ದು  ಇಷ್ಟು. ಈ ರಾಸ್ ಪೆರೋ ಎನ್ನುವ ಮಲ್ಟಿ ಮಿಲಿಯನರ ಕೇವಲ ಕಾಸೆಣಿಸುವ ಶೆಟ್ಟಿ ಅಲ್ಲ. ಒಳ್ಳೆ ಮನುಷ್ಯ. ಇಲ್ಲಾಂದ್ರೆ ತನ್ನ ಮನೆಯವರಲ್ಲ, ರಿಷ್ತೆದಾರರಲ್ಲ, ಕೇವಲ ಸಂಬಳ ತೆಗೆದುಕೊಂಡು ಕೆಲಸ ಮಾಡುವವರು. ಅವರ ಸಲುವಾಗಿ ಈ ಮಟ್ಟದ ಸಹಾಯ ಕೇಳಿಕೊಂಡು ಬಂದಿದ್ದಾನೆ. ದಿಲ್ದಾರ್ ಮನುಷ್ಯ. ಇವನಿಗೆ ಆದಷ್ಟು ಹೆಲ್ಪ್ ಮಾಡಬೇಕು.

ರೀ.....ರಾಸ್ ಪೆರೋ ಅವರೇ....ಇರಾನಿನ ಹೃದಯಕ್ಕೆ ನುಗ್ಗಿ, ನಿಮ್ಮ ಜನರಿರುವ ಕಾರಾಗೃಹವನ್ನು ರೇಡ್ ಮಾಡಿ, ಅಷ್ಟೊಂದು ಕೈದಿಗಳ ಮಧ್ಯೆ ನಿಮ್ಮ ಜನರನ್ನ ಹುಡುಕಿಕೊಂಡು ಬರೋದು ಅಂದ್ರೆ ಸುಲಭ ಅಂತ ಮಾಡಿದ್ದೀರಾ? ಮತ್ತೆ ನನಗೆ 60 ವರ್ಷ ಸಮೀಪ. ನಾನು ಡೈರೆಕ್ಟ್ ಆಗಿ ಅಂತೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ಸಲಹೆ ಕೊಟ್ಟೇನು. ಆದ್ರೆ ಹೆಚ್ಚಿಗೆ ಉಪಯೋಗವಾಗಲಿಕ್ಕಿಲ್ಲ. ನಿಮ್ಮತ್ರ ಕಮಾಂಡೋ ತಂಡ ಇದೆಯೇನ್ರೀ? - ಅಂದರು ಬುಲ್ ಸೈಮನ್ಸ್.

ಇಲ್ಲಾ ಸಾರ್....ನಾವು EDS ಕಂಪನಿ ಜನ. ನಾವು ಸಾಫ್ಟವೇರ್, ಹಾರ್ಡ್ವೇರ್, ಕಂಪ್ಯೂಟರ್ ಜನ. ನಿಮಗೇ ಫುಲ್ ಕಾಂಟ್ರಾಕ್ಟ್ ಕೊಟ್ಟು ಬಿಡೋಣ - ಅಂತ ಅಂದರು ಪೆರೋ. 

ರಾಸ್ ಪೆರೋ ಅವರಿಗೆ ಕಂಪ್ಯೂಟರ್ ಕಾಂಟ್ರಾಕ್ಟ್ ತೆಗೆದುಕೊಂಡು ಕೆಲಸ ಮಾಡಿಕೊಟ್ಟು ರೂಢಿ. ಕಮಾಂಡೋ ಕಾರ್ಯಾಚರಣೆಯೂ ಹಾಗೆ ಅಂದುಕೊಂಡು ಒಂದು ಗುತ್ತಿಗೆ ಸೈಮನ್ಸ್ ಅವರಿಗೆ ಕೊಟ್ಟುಬಿಡೋಣ ಅಂತ ಅಂದುಕೊಂಡರೆ ಏನೇನೋ ಕೇಳುತ್ತಿದ್ದಾರೆ ಸೈಮನ್ಸ್.

ಹಾಗಾದ್ರೆ.....ನಾನು ಏನೂ ಮಾಡಲು ಸಾಧ್ಯವಿಲ್ಲ ಮಿಸ್ಟರ್ ಪೆರೋ. ಗುಡ್ ಬೈ - ಅಂತ ಬಾಗಿಲು ಮುಚ್ಚಿ ಹೊಂಟಿದ್ದರು ಬುಲ್ ಸೈಮನ್ಸ್.

ಸಾರ್....ಅಕಸ್ಮಾತ್ ನಾನು ಕಮಾಂಡೋ ಆಗಲಿಕ್ಕೆ ತಯಾರ್ ಇರೋ ಜನರನ್ನು ತಂದು ಕೊಟ್ಟರೆ, ಹೆಲ್ಪ್ ಮಾಡುತ್ತೀರಾ? ಪ್ಲೀಜ್ - ಅಂತ ಕೇಳಿಕೊಂಡರು ಪೆರೋ.

ಓಕೆ....ಓಕೆ.....ಜನರನ್ನು ಕರೆದುಕೊಂಡು ಬನ್ನಿ ನೋಡೋಣ -ಅಂತ ನಮಸ್ಕಾರ ಅಂದು ಪೆರೋ ಅವರನ್ನು ಸಾಗಹಾಕಿದರು ಸೈಮನ್ಸ್. 

ಇನ್ನೇನು ಈ ಶೆಟ್ಟಿ ಬರಲಿಕ್ಕೆ ಇಲ್ಲ ಅಂತ ಅಂದುಕೊಂಡರು ಸೈಮನ್ಸ್.

ಈ ಕಡೆ ವಾಪಸ್ ಬಂದರು ರಾಸ್ ಪೆರೋ. ಇರಾನಿನಲ್ಲಿ ಬಂಧಿಯಾಗಿದ್ದ ಅವರ ನೌಕರರ ಹೆಂಡರು, ಮಕ್ಕಳು, ಮನೆಯವರು ದಿನವೂ ಫೋನ್ ಮಾಡಿ - ಏನು ಮಾಡ್ತೀರಿ ಸಾರ್? ಯಾವಾಗ ಬಿಡಿಸಿಕೊಂಡು ಬರುತ್ತೀರಿ? - ಅಂತ ಕೇಳುತ್ತಿದ್ದರು. ಪೆರೋ ಕೂಡ ಎಲ್ಲ ಲಭ್ಯವಿರುವ ಮಾರ್ಗಗಳನ್ನು ಹುಡುಕುತ್ತಿದ್ದರು. ಎಲ್ಲಿಯೂ ಭಾಗ್ಯದ ಬಾಗಿಲು ತೆಗೆಯಲಿಲ್ಲ. ಹಾಗಂತ ಸುಮ್ಮನೆ ಕೂಡುವ ಪೈಕಿ ಅವರಲ್ಲ.

ಮರುದಿನವೇ ತಮ್ಮ ಖಾಸ್ 10-12 ಜನ EDS ನೌಕರರನ್ನು ಕರೆದರು. ಅವರೆಲ್ಲ ಪೆರೋ ಅವರಿಗೆ ಸಿಕ್ಕಾಪಟ್ಟೆ ಕ್ಲೋಸ್. ಪೆರೋ ಕೇಳಿದರೆ ಪ್ರಾಣ ಕೂಡ ಕೊಡಲೂ ಸಿದ್ಧ. ಅಂತಹ ಜನ.

ಯೋ.....ನಿಮ್ಮ ಗೆಳೆಯರು, ಕಲೀಗ್ಸ್ ಅಲ್ಲಿ ಇರಾನಿನ ಜೇಲಿನಲ್ಲಿ ಬಂಧಿಯಾಗಿದ್ದಾರೆ. ನಮ್ಮ ದೇಶವಂತೂ ಅವರನ್ನು ಬಿಡಿಸಲು ಏನೂ ಮಾಡುತ್ತಿಲ್ಲ. ನೀವೇ ಹೋಗಿ ಬಿಡಿಸಿಕೊಂಡು ಬರುವಿರಾ ಹೇಗೆ? ಇದು ಒಂದು ಚಾಲೆಂಜ್. ತೆಗೆದುಕೊಳ್ಳುವಿರಾ? ಯಾರ ಮೇಲೂ ಪ್ರೆಶರ್ ಇಲ್ಲ. ತುಂಬಾ ರಿಸ್ಕ್ ಇದೆ. ನಿಮಗೆ ಬೇಕಾದ ಎಲ್ಲಾ ಸವಲತ್ತು ನಾನು ಒದಗಿಸುತ್ತೇನೆ. ಅಕಸ್ಮಾತ್ ನೀವು ಅಲ್ಲಿ ಹೋಗಿ ವಾಪಸ್ ಬರದಿದ್ದರೆ ನೀವು ಹೇಳಿದವರಿಗೆ ಇಷ್ಟು ಮಿಲಿಯ ಡಾಲರ್ ಅಂತ ಬರೆದುಕೊಡುತ್ತೇನೆ. ಮತ್ತೊಮ್ಮೆ ಹೇಳುತ್ತೇನೆ. ಯಾವದೇ ಒತ್ತಾಯ ಇಲ್ಲ. ಬೇಕಾದ್ರೆ ಮನೆಯಲ್ಲಿ ಕೇಳಿಕೊಂಡು ಬಂದು ಹೇಳಿ. ನಿಮ್ಮನ್ನು ನಂಬಿದ್ದೇನೆ. ಹಿಂದೆಲ್ಲ ನಾನು ಯಾವದೇ ಚಾಲೆಂಜ್ ಒಡ್ಡಿದರೂ, ಅದನ್ನು ಮಾತಿಲ್ಲದೆ ತೆಗೆದುಕೊಂಡು, ಗೆದ್ದು ಬಂದು ನಮ್ಮ ನಿಮ್ಮ EDS ಕಂಪನಿ ಈ ಉನ್ನತ ಸ್ಥಿತಿಯಲ್ಲಿ ಇರುವ ಹಾಗೆ ಮಾಡಿದ್ದೀರಿ. ಅದೇ ರೀತಿ ಇದೂ ಒಂದು ಚಾಲೆಂಜ್ - ಅಷ್ಟೇ ಹೇಳಿ  ಹೋಗಿ ಬಿಟ್ಟರು ಪೆರೋ.

ಅದು ಅವರ ನಾಯಕತ್ವದ ಶೈಲಿ. ತಮ್ಮ ಕೆಳಗೆ ಕೆಲಸ ಮಾಡುವ ಜನರಿಗೆ ಏನು ಆಗಬೇಕು ಅಂತ ಕ್ಲೀಯರ್ ಆಗಿ ಹೇಳಿ, ಪೂರ್ತಿ ವಿಶ್ವಾಸವಿಟ್ಟು ಹೋಗಿಬಿಡುವದು.  ನಾಯಕ ತಮ್ಮಲ್ಲಿ ಇಟ್ಟಿರುವ ಆ ಪರಿ ವಿಶ್ವಾಸ ನೋಡಿಯೇ ಜನ ಹುಮ್ಮಸ್ಸಿನಿಂದ ಕೆಲಸ ಮಾಡಬೇಕು. ಗುರಿ ಮುಟ್ಟಬೇಕು. ಅದು ರಾಸ್ ಪೆರೋ ಲೀಡರಷಿಪ್ ಸ್ಟೈಲ್.

ಪೆರೋ ನೌಕರರು ಮುಖ ಮುಖ ನೋಡಿಕೊಂಡರು. ಅವರಲ್ಲಿ ಯಾರೂ ಸೈನಿಕ ಕಾರ್ಯಾಚರಣೆ ಇತ್ಯಾದಿ ಮಾಡಿದವರಲ್ಲ. ಎಲ್ಲೋ ಸೈನ್ಯದಲ್ಲಿ ಚೂರು ಪಾರು ಕೆಲಸ ಮಾಡಿರಬಹುದು. ಅಷ್ಟೇ. ಈಗೆಲ್ಲ ಅವರು EDS ಕಂಪನಿಯಲ್ಲಿ ಮ್ಯಾನೇಜರ್ಗಳು. ಯಾರೂ ಕಮಾಂಡೋ ತರಹದ ಜನರಲ್ಲ. ಎಲ್ಲ ಸೇಲ್ಸಮನ್ಸ್. ಆದರೂ ಪೆರೋ ಬಗ್ಗೆ ನಿಷ್ಠೆ. ತಮ್ಮ ಕಲೀಗ್ಸ್ ಬಗ್ಗೆ ಒಂದು ತರಹದ ಸೋದರಭಾವ. ಮತ್ತೆ ಅದು ಈಗಿನ ಕಾಲದ ಕೊಡುವ ಸಂಬಳಕ್ಕೆ ಮಾತ್ರ ನಿಷ್ಠೆ ತೋರುತ್ತಿದ್ದ ಕಾಲವಲ್ಲ. ನೌಕರಿ ಹಿಡಿದ ಜನ ಜೀವನಪೂರ್ತಿ ಒಂದೇ ಕಡೆ ಕೆಲಸ ಮಾಡಲು ಬಯಸುತ್ತಿದ್ದರು. ಕಂಪನಿಗಳೂ ಅಷ್ಟೇ, ತಮ್ಮ ಜನರನ್ನು ಈಗಿನ ತರಹ use & throw ರೀತಿಯಲ್ಲಿ ಟ್ರೀಟ್ ಮಾಡುತ್ತಿರಲಿಲ್ಲ. ಒಂದು ತರಹದ mutual commitment.

ಪೆರೋ ಆಯ್ಕೆ ಮಾಡಿದ ಜನ ಸಿದ್ಧರಾಗಿಯೇ ಬಿಟ್ಟರು. ಪೆರೋ ಮೆಚ್ಚಿ ಬೆನ್ನು ತಟ್ಟಿದರು. ಎಲ್ಲರೂ ಕೂಡಿ ಮತ್ತೆ ಫ್ಲೋರಿಡಾಕ್ಕೆ ಹೋಗಿ ಬುಲ್ ಸೈಮನ್ಸ್ ಅವರನ್ನು ಭೆಟ್ಟಿ ಮಾಡುವದು ಎಂದಾಯಿತು.

ಹೋದರು ಫ್ಲೋರಿಡಾಗೆ. ಬುಲ್ ಸೈಮನ್ಸ್ ಗೆ ಆಶ್ಚರ್ಯ. 

ಮತ್ತೆ ಬಂದೇ ಬಿಟ್ಟನಾ ರಾಸ್ ಪೆರೋ ಎಂಬ ಶೆಟ್ಟಿ? ಅದೂ 8-10 ಜನರನ್ನು ಬೇರೆ ಕರೆದುಕೊಂಡು ಬಂದಿದ್ದಾರೆ. ಏನು ಸ್ಕೀಮೋ ಈ ರಾಸ್ ಪೆರೋದು? - ಅಂತ ಅಂದುಕೊಂಡರು ಸೈಮನ್ಸ್.

ಬುಲ್ ಸೈಮನ್ಸ್ ಸಾಹೇಬ್ರೆ....ಇವರೇ ನಮ್ಮ ಜನ. ನಿಮ್ಮ ಕಡೆ ತರಬೇತಿ ಪಡೆದು, ಕಮಾಂಡೋ ಅಂತ ತಯಾರಾಗಿ, ಇರಾನಿಗೆ ಹೋಗಿ  ಅವರ ಕಲೀಗ್ಸ್ ಬಿಡಿಸಿಕೊಂಡು ಬರುವವರು. ಇವರಿಗೆ ಟ್ರೇನ್ ಮಾಡ್ತೀರಾ? ಪ್ಲೀಸ್....ಅಂದ ಪೆರೋ ಅವರ ಮಾತನ್ನು ಬುಲ್ ಸೈಮನ್ಸ್ ನಂಬುವ ಸ್ಥಿತಿಯಲ್ಲಿ ಇರಲಿಲ್ಲ.

ರೀ....ಪೆರೋ ಅವರೇ....ಕಮಾಂಡೋ ಆಗೋದು ಅಂದ್ರೆ ನಿಮ್ಮ ಕಂಪ್ಯೂಟರ್ ಮಾರಿದಾಂಗೆ ಅಂತ ಮಾಡಿದ್ದೀರೇನು? ಈ ಜನ 5 ವರ್ಷ ಟ್ರೇನ್ ಮಾಡಿದರೂ ಕಮಾಂಡೋ ಆಗುತ್ತಾರೆ ಅಂತ ಖಾತ್ರಿಯಿಲ್ಲ. ಇದೆಲ್ಲ ಆಗುವ ಮಾತಲ್ಲ. ಬಂದಿದ್ದೀರಾ. ಒಳ್ಳೇದು. ಡ್ರಿಂಕ್ಸ್ ತೊಗೊಂಡು ಹೊರಡಿ. ಏನು ಬಿಯರ್ ಓಕೆನಾ? ಅಥವಾ ಸಾಫ್ಟ್ ಡ್ರಿಂಕಾ? -ಅಂತ ಕೈ ತೊಳೆದುಕೊಳ್ಳುವ ತಯಾರಿ ಮಾಡಿದರು ಸೈಮನ್ಸ್.

ಪೆರೋ ಹೇಳಿ ಕೇಳಿ ವ್ಯಾಪಾರಿ. ಎಷ್ಟೆಷ್ಟೋ ದೊಡ್ಡ ದೊಡ್ಡ ಡೀಲ್ಸ್ ಮಾಡಿ, ಜನರಿಗೆ ಮಾರಾಟ ಮಾಡಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿಯಲ್ಲೂ ಮಾರಿ ದುಡ್ಡು ಮಾಡಿದ ಜನ ಅವರು. ಇನ್ನು ಬುಲ್ ಸೈಮನ್ಸ್ ನನ್ನು ಅಷ್ಟು ಸುಲಭವಾಗಿ ಬಿಟ್ಟಾರೇ? ತಮ್ಮ salesmanship ಎಲ್ಲ ಉಪಯೋಗಿಸಿ ಏನೋ ಒಂದು ತರಹ ಕನ್ವಿನ್ಸ್ ಮಾಡಿದರು. ಅವರ ಪ್ರಾಮಾಣಿಕ ಕಳಕಳಿಗೆ ಸೈಮನ್ಸ್ ಸಹಿತ ಸ್ವಲ್ಪ ಕರಗಿದರು.

ಏನೇನೋ ಚರ್ಚೆಗಳು ಆದ ಮೇಲೆ, ಪೆರೋ ಕೂಡ ದೊಡ್ಡ ಮಟ್ಟದ ವಶೀಲಿ ಅದು ಇದು ಹಚ್ಚಿ ಮುಂದಿನ ತಯಾರಿ ಮಾಡಿಕೊಳ್ಳುತ್ತಿದ್ದರು.

ಈ 10-12 ಜನರಿಗೆ EDS ನಿಂದ ಟೆಂಪೊರರಿ ರಜೆ ನೀಡಲಾಯಿತು. ಅವರೆಲ್ಲ ಬಂದು ಬುಲ್ ಸೈಮನ್ಸ್ ಅವರ ಫ್ಲೋರಿಡಾದ ಫಾರ್ಮ್ ಹತ್ತಿರ ವಸತಿ ಮಾಡಿದರು. ಅರವತ್ತು ವರ್ಷದ ಬುಲ್ ಸೈಮನ್ಸ್ ಗೆ ಎಲ್ಲಿಲ್ಲದ ಉತ್ಸಾಹ. ಈ ಜನರಿಗೆ ಅವಶ್ಯವಿರುವ ತರಬೇತಿ ಡಬಲ್ ಟ್ರಿಪಲ್ ಸ್ಪೀಡಿನಲ್ಲಿ ನೀಡಲು ಶುರು ಮಾಡಿಯೇ ಬಿಟ್ಟರು.

ಮೊದಲು ಒಂದಿಷ್ಟು ದಿನ ಸಿಕ್ಕಾಪಟ್ಟೆ ದೈಹಿಕವಾಗಿ ದಂಡಿಸಲಾಯಿತು. ಬಾಡಿ ಒಂದು ಶೇಪಿಗೆ ಬಂದ ಕೂಡಲೇ ಬೇರೆ ಬೇರೆ ತರಹದ ಶಸ್ತ್ರ ಇತ್ಯಾದಿ ಉಪಯೋಗಿಸುವದು, ಜೇಲ್ ಆಕ್ರಮಣದ ಪ್ಲಾನಿಂಗ್ ಇತ್ಯಾದಿಗಳನ್ನು ಬೇಕಾದಷ್ಟು ಮಟ್ಟಿಗೆ ಹೇಳಿಕೊಟ್ಟರು ಸೈಮನ್ಸ್. ಇವರ ಮಿಶನ್ ಕ್ಲೀರ್ ಇತ್ತು. ಅದಕ್ಕೆ ತಕ್ಕಂತೆ ಕರಾರುವಕ್ಕಾಗಿ ತರಬೇತಿ ಕೊಟ್ಟರು ಸೈಮನ್ಸ್. ಅವರೋ ತುಂಬಾ ಸ್ಟ್ರಿಕ್ಟ್. ಸಿಕ್ಕಾಪಟ್ಟೆ ದಂಡಿಸಿಬಿಟ್ಟರು. ದುರುದ್ದೇಶದಿಂದಲ್ಲ. ಟೈಮ್ ಕಮ್ಮಿ ಇತ್ತು. ತಮ್ಮ ಕಲೀಗ್ಸ್ ಸಲುವಾಗಿ EDS ನೌಕರರೂ ಸಿಗರೇಟು, ಡ್ರಿಂಕ್ಸ್ ಎಲ್ಲಾ ಬಿಟ್ಟು ಟ್ರೇನಿಂಗ್ ಮಾಡಿದರು. ಮೆಚ್ಚಬೇಕಾಗಿದ್ದೇ ಅವರ ಕಮಿಟ್ಮೆಂಟ್. ಅದೂ ತಮ್ಮ ಕಲೀಗ್ಸ್ ಸಲುವಾಗಿ ಮತ್ತು ಬಾಸ್ ಪೆರೋ ಅವರ ಸಲುವಾಗಿ. ಹ್ಯಾಟ್ಸ್ ಆಫ್!

ಈ ಕಡೆ ರಾಸ್ ಪೆರೋ ಹೀಗೆ ತಯಾರ್ ಆದ ತಮ್ಮ ಖಾಸಗಿ ಕಮಾಂಡೋಗಳನ್ನು ಇರಾನಿಗೆ ನುಗ್ಗಿಸುವ ಪ್ಲಾನ್ ಮಾಡುತ್ತಿದ್ದರು.

ಮುಂದೆ ಏನೇನೋ ಆಯಿತು. 

ಕಮಾಂಡೋಗಳು ಇರಾನ್ ಹೊಕ್ಕರು. ಆದರೆ ಅಷ್ಟೊತ್ತಿಗೆ ಅವರ ಕಲೀಗ್ಸ್ ಗಳನ್ನು ಬೇರೆ ಎಲ್ಲೋ ಕಡೆ ಶಿಫ್ಟ್ ಮಾಡಲಾಗಿತ್ತು. ಅದು ಖೊಮೇನಿ ಅಧಿಕಾರಕ್ಕೆ ಬರುತ್ತಿದ್ದ ಸಮಯ. ಇರಾನಿನ ಎಲ್ಲ ಕಡೆ ದೊಂಬಿ, ಗಲಾಟೆ, ಗದ್ದಲ. ಎಲ್ಲೂ ಸರಿ ಮಾಹಿತಿ ಸಿಗುತ್ತಿರಲಿಲ್ಲ. ಹಾಗಾಗಿ ಹೋದ EDS  ಕಮಾಂಡೋಗಳಿಗೆ ಏನು ಮಾಡುವದು ಅಂತ ತಿಳಿಯಲಿಲ್ಲ. ಮತ್ತೆ ರಿಯಲ್ ಟೈಮ್ ನಲ್ಲಿ ಪ್ಲಾನ್ ಚೇಂಜ್ ಮಾಡಿಕೊಂಡು ಕಾರ್ಯಾಚರಣೆ ಮಾಡಲು ಅವರು ನುರಿತ ಕಮಾಂಡೊಗಳೂ ಅಲ್ಲ. ಮತ್ತೆ ಅವರ ಬೆನ್ನಿಗೆ ದೊಡ್ಡ ಮಟ್ಟದ ಸಪೋರ್ಟ್ ಸಿಸ್ಟಮ್ ಕೂಡ ಇರಲಿಲ್ಲ. ಮೊದಲೇ ಪ್ಲಾನ್ ಮಾಡಿದಂತೆ ರಾಜಧಾನಿ ಟೆಹ್ರಾನ್ ಬಿಟ್ಟು ಟರ್ಕೀ ಬಾರ್ಡರ್ ಹತ್ತಿರ ಬಂದು ಮುಂದಿನ ಸೂಚನೆಗೆ ಕಾದು ನಿಂತಿದ್ದರು.

ಒಳ್ಳೆ ಕೆಲಸಕ್ಕೆ ದೇವರೂ ಕೈಜೋಡಿಸುತ್ತಾನೆ ಎಂಬಂತೆ, EDS ನ ಇಬ್ಬರು ನೌಕರರನ್ನು ಇಟ್ಟ ಜೈಲಿನಲ್ಲಿ ದೊಡ್ಡ ಮಟ್ಟದ ದಂಗೆ. ಅಲ್ಲಿದ್ದವರೆಲ್ಲ ಮೊದಲಿನ ಸರ್ವಾಧಿಕಾರಿ ರೇಜಾ ಶಾಹನ ಕಾಲದಲ್ಲಿ ಬಂಧಿಸಲ್ಪಟ್ಟಿದ್ದ ಜನ. ಖೊಮೇನಿ ಜನ ಅಧಿಕಾರಕ್ಕೆ ಹತ್ತಿರ ಬರುತ್ತಿದ್ದಂತೆ ಜೈಲಿಗೆ ಜೈಲೇ ಒಡೆದು ಬಂಧಿಗಳನ್ನು ಬಿಟ್ಟು ಕಳಿಸುತ್ತಿದ್ದರು. ಅದೇ ರೀತಿ ಈ ಜೈಲಿನಲ್ಲೂ ಆಯಿತು. EDS ನ ಇಬ್ಬರು ನೌಕರರೂ ಸಹ ಗುಂಪಿನಲ್ಲಿ ಗೋವಿಂದ ಅನ್ನುವ ರೀತಿ ಜೇಲಿನಿಂದ ಪರಾರಿ ಆದರು. ಹೇಗೋ ಮಾಡಿ EDS ಸಂಪರ್ಕ ಮಾಡಿದರು. ರಾಸ್ ಪೆರೋ ಖುಷ್. ಸಾಕಷ್ಟು ಕಾಸ್ ಖರ್ಚು ಮಾಡಿ ಹೇಗೋ ಇವರಿಬ್ಬರನ್ನೂ ಸಹ ಟರ್ಕೀ ಬಾರ್ಡರಿಗೆ ಕರೆಸಿಕೊಂಡರು. ಅಲ್ಲಿಂದ ಎಲ್ಲರೂ ಟರ್ಕಿಗೆ ಬಂದು ಒಂದು ಉಸಿರು ಬಿಟ್ಟರೆ,  ಈ ಕಡೆ ಅಮೇರಿಕಾದಲ್ಲಿ ಎಲ್ಲರ ಕುಟುಂಬಗಳು ದೇವರಿಗೆ ಮಾಡಿಕೊಂಡಿದ್ದ ಹರೆಕೆ ತೀರಿಸಲು ತಯಾರಾಗುತ್ತಿದ್ದವು.

ಒಟ್ಟಿನಲ್ಲಿ ಎಲ್ಲ ಸುಖಾಂತ್ಯ. 

ಕೇವಲ ಇಷ್ಟೇ ವಿವರ ತಿಳಿದ ಕೆಲವರಿಗೆ ರಾಸ್ ಪೆರೋ ಅವರ ಹುಚ್ಚು ಪ್ಲಾನ್, ಅವರ ನೌಕರರ blind faith ತುಂಬ ಬಾಲಿಶ ಮತ್ತು ಅವಿವೇಕ ಅನ್ನಿಸಬಹುದು. ಒಂದು ಲೆವೆಲ್ ಗೆ ಅದು ಕರೆಕ್ಟ್ ಇರಬಹುದು ಕೂಡ. ಆದ್ರೆ ತನ್ನ ಮೌಲ್ಯಗಳಿಗೆ compromise ಮಾಡಿಕೊಳ್ಳದ ಪೆರೋ, ತನ್ನ ನೌಕರರು ಇಟ್ಟ ನಿಷ್ಠೆಗೆ ಪ್ರತಿಯಾಗಿ ತೋರಿಸಿದ ಪೆರೋ ಅವರ ನಿಷ್ಠೆ, ಅವರ ನೌಕರರು ಕಲೀಗ್ಸ್ ಬಗ್ಗೆ, ಬಾಸ್ ಬಗ್ಗೆ ಇಟ್ಟಿದ್ದ ಮನೋಭಾವ, ಕಲೀಗ್ಸ್ ಸಲುವಾಗಿ ಪ್ರಾಣವನ್ನೇ ದಾವ್ ಇಟ್ಟಿದ್ದ ಅವರ ಬಡಾ ದಿಲ್ ಇತ್ಯಾದಿ ಮಾತ್ರ ತುಂಬಾ impressive. ಅವೆಕ್ಕೆಲ್ಲ ಒಂದು ದೊಡ್ಡ ಸಲಾಂ.

ಆ ತರಹದ ಕಂಪನಿಗಳು, ಬಾಸ್, ಕಲೀಗ್ಸ್ ಎಲ್ಲ ವಿರಳ ಈ ಕಾಲದಲ್ಲಿ. ಮಾಡಿದ ಕೆಲಸಕ್ಕೆ ಸರಿಯಾಗಿ ಕಾಸ್ ಕೊಡುವ ಬಾಸ್, ಕೊಟ್ಟ ಕಾಸಿಗೆ ನಿಯತ್ತಾಗಿ ಕೆಲಸ ಮಾಡುವ ನೌಕರರು ಸಿಕ್ಕರೆ ಅದೇ ದೊಡ್ಡ ಮಾತು ಈ ಕಾಲದಲ್ಲಿ. ನಿಷ್ಠೆ ಮತ್ತೊಂದು ಕೇಳಬೇಡಿ. ಅವೆಲ್ಲ ಓಲ್ಡ್ ಸ್ಟೈಲ್. ಅದಕ್ಕೇ ಇರಬೇಕು ಒಂದು ಕಾಲದಲ್ಲಿ ಗ್ರೇಟ್ ಆಗಿದ್ದ ಕಂಪನಿಗಳೆಲ್ಲ ದಿವಾಳಿಯೆದ್ದು ಹೋಗುತ್ತಿವೆ. 

ಅದಕ್ಕೆ ಕಾರಣ ಇಷ್ಟೇ- ರಾಸ್ ಪೆರೋ ತರಹದ ನಾಯಕರು ಮತ್ತು ಅವರಿಗಿದ್ದ ತರಹದ ನೌಕರರು ಮತ್ತು ನಿಷ್ಠೆ ಮಾಯವಾಗುತ್ತಿವೆ. ಕಂಪನಿಗಳು hire & fire ಅನ್ನುವ ಮನೋಭಾವ ತೋರಿದರೆ, ನೌಕರರು ತಾವು ಕೇವಲ ಸಂಬಳಕ್ಕೆ ಮಾತ್ರ ಬಂದಿರುವ ಮಂದಿ ಅಂತ ತೋರಿಸಿಕೊಳ್ಳುವದರಲ್ಲಿ ಏನು ತಪ್ಪು? ಒಂದು ಕಾಲದಲ್ಲಿ ಎಂತಹ ಸಂಕಷ್ಟ ಬಂದರೂ ಕಂಪನಿಗಳು mass layoff ಮತ್ತೊಂದು ಮಾಡುತ್ತಿರಲಿಲ್ಲ. ನೌಕರರೂ ಅಷ್ಟೇ. ಸಂಬಳದಲ್ಲಿ ಕಟ್ ತೆಗೆದುಕೊಂಡೋ, ದುಡ್ಡಿಲ್ಲದೆ ಓವರ್ ಟೈಮ್ ಮಾಡಿಯೋ ಕಂಪನಿ ಉಳಿಸುತ್ತಿದ್ದರು. 

ಇವತ್ತಿನ ಕಾಲವೋ.....ಒಂದು ಕ್ವಾರ್ಟರ್ ನಲ್ಲಿ ಒಂದು ಪೆನ್ನಿ ಲಾಭ ಕಮ್ಮಿ ಆಯಿತು ಅಂದ್ರೆ ಸುಖಾಸುಮ್ಮನೆ ಸಾವಿರಾರು ಜನರನ್ನು ಮನೆಗೆ ಕಳಿಸುವ ಕಂಪನಿಗಳು. ಒಂದೆರಡು ಸಾವಿರ ಜಾಸ್ತಿ ಕಾಸ್ ಸಿಕ್ಕರೆ ಬಿಟ್ಟು ಹೋಗುವ ನೌಕರರು. ಎಲ್ಲಿಂದ ಎಲ್ಲಿಗೆ ಬಂತು ಕಾರ್ಪೊರೇಟ್ ಜಗತ್ತು.

ಮುಂದೆ ರಾಸ್ ಪೆರೋ ಏನೇನೋ ಆದರು. ಎರಡು ಬಾರಿ ಅಮೆರಿಕಾದ ಅಧ್ಯಕ್ಷ ಚುನಾವಣೆಯಲ್ಲಿಯೂ ನಿಂತು ಸೀನಿಯರ್ ಬುಶ್, ಕ್ಲಿಂಟನ್ ಅಂತವರಿಗೆ ದೊಡ್ಡ ಮಟ್ಟದ ಟಾಂಗ್ ಕೊಟ್ಟಿದ್ದರು.

EDS ನ್ನು ಒಂದು ದೊಡ್ಡ ಲಾಭಕ್ಕೆ IBM ಗೆ ಮಾರಿದ್ದರು. ಸರಿಯಾಗಿ ಮ್ಯಾನೇಜ್ ಮಾಡದ IBM ನಷ್ಟದಲ್ಲಿ ಇದ್ದಾಗ ಅದೇ EDS ನ್ನು ಅತೀ ಕಡಿಮೆ ಬೆಲೆಗೆ ಖರೀದಿಸಿ, ಎಲ್ಲಾ ಸರಿ ಮಾಡಿ, ಮತ್ತೆ ಮೂರ್ನಾಕು ಪಟ್ಟು ಲಾಭಕ್ಕೆ ಮತ್ತೆ IBM ಗೆ ಮಾರಿದ್ದ ಜೀನಿಯಸ್ ಭೂಪ ರಾಸ್ ಪೆರೋ.

ಈಗಲೂ ಇದ್ದಾರೆ ರಾಸ್ ಪೆರೋ. ತಮಗೆ ಅತಿ ಖಾಸ್ ಅದ ಆಪ್ತ ವಿಷಯ ಬಂದರೆ ಈಗಲೂ 82 ನೆ ವಯಸ್ಸಿನಲ್ಲೂ ಅಬ್ಬರಿಸಲಿಕ್ಕೆ ರೆಡಿ ರಾಸ್ ಪೆರೋ. ಅವರಿಗೊಂದು ಸಲಾಂ.

ಹೆಚ್ಚಿನ ಮಾಹಿತಿಗೆ:

On Wings of Eagles -  ರಾಸ್ ಪೆರೋ ಮಾಡಿಸಿದ ಈ ಕಾರ್ಯಾಚರಣೆಯ ಬಗ್ಗೆ ಕೆನ್ ಫೊಲೇಟ್ ಬರೆದ ಅತ್ಯುತ್ತಮ ಪುಸ್ತಕ.


ಬುಲ್ ಸೈಮನ್ಸ್ 

Operation eagle claw - ಜಿಮ್ಮಿ ಕಾರ್ಟರ್ ಮಾಡಿಸಿದ ರಹಸ್ಯ ಇರಾನ್ ಕಾರ್ಯಾಚರಣೆ. ಪೂರ್ತಿ ಎಕ್ಕುಟ್ಟಿ ಹೋಗಿತ್ತು.

Monday, August 27, 2012

ಕಾಮನ ಸೆನ್ಸ್ ಇಲ್ಲಾಂದ್ರೆ 'ಕಾಮಣ್ಣ ಸೂತ್ರ' ಓದಬೇಕಾ?


ಕರೀಂ ಮತ್ತೆ ಸಿಕ್ಕಿದ್ದ.

ಏನ್....ಸಾಬ್ರಾ.....ರಮಜಾನ್ ರೋಜಾ ಎಲ್ಲಾ ಮುಗೀತ ಏನು? ಇನ್ನೇನು ಖಾನಾ, ಪಿನಾ, ಬೀವಿ, ಡೌ ಎಲ್ಲಾ ಬ್ಯಾಕ್ ಟು ನಾರ್ಮಲ್ .....ಹೌದಿಲ್ಲೋ? ಖುಷ್ ಏನು? ಏನ್ರೀ ಸಾಬ್ರಾ? ಹಾಂ?.......ಅಂತ ಕೇಳಿದೆ.

ಕರೀಂ ಸ್ವಲ್ಪ ತೆಳ್ಳಗ ಆಗಿದ್ದ ಡೈಟ್ ಮಾಡಿ.

ಹಾಂ...ಸಾಬ್.....ಎಲ್ಲಾ ಮುಗೀತು? ನಿಮ್ಮದೂ ಕಡೆ "ಆ ಬುಕ್" ಐತೆ ಕ್ಯಾ? - ಅಂತ ಒಂದು ತರಹದ ನಿಗೂಢವಾಗಿ ಕೇಳಿದ ಕರೀಂ.

ಯಾವ ಬುಕ್ಕೋ? ನನ್ನ ಕಡೆ ಭಾಳ ಬುಕ್ಕ್ ಅವ. ಓದೋದು, ಬರೆಯೋದು ಬಿಟ್ಟರ ನನಗ ಬ್ಯಾರೆ ಉದ್ಯೋಗ ಇಲ್ಲ. ನಿನಗ ಯಾವ ಬುಕ್ ಬೇಕು? ಅಷ್ಟಾವಕ್ರ ಗೀತಾ ಅಂತ ಒಂದು ಮಸ್ತ ಪುಸ್ತಕ ಅದ. ಕೊಡಲೇನು? ನೀ ಹ್ಯಾಂಗೂ ಈಗ ಭಾಳ ಅಧ್ಯಾತ್ಮ ಓದಲಿಕತ್ತಿ ನೋಡು ಅದಕ್ಕ - ಅಂತ ಕೇಳಿದೆ.

ಸಾಬ್.....ಇಲ್ಲಿ ಹತ್ತಿರ ಬನ್ನಿ....ಜೋರಾಗಿ ಹೇಳಬಾರದು....ಮಂದಿ ಕೇಳಿದ್ರೆ ತಪ್ಪು ತಿಳ್ಕೊತ್ತಾರೆ....- ಅಂತ ಹೇಳಿ ಹತ್ತಿರ ಕರೆದ.

ಅವನ ಹತ್ತಿರ ಹೋದೆ. ಕಿವಿ ಹತ್ತಿರ ಬಂದ. ಅವ ಬಾಯಾಗ ಹಾಕ್ಕೊಂಡಿದ್ದ ಮಾಣಿಕಚಂದ ಗುಟ್ಕಾ ವಾಸನಿ ಘಂ ಅಂತ ಮೂಗಿಗೆ ಹೊಡಿತು. ಮಸ್ತ ವಾಸನಿ. ನಮಗ ಮಾಣಿಕಚಂದ ತಿನ್ನೋ ನಸೀಬ್ ಇಲ್ಲ. ಪ್ರಕೃತಿಗೆ ಒಗ್ಗೋದಿಲ್ಲ. ಬರೆ ವಾಸನಿ ಕುಡಿಯುದ್ರಾಗ ನಮ್ಮ satisfaction.

ಅದೇ ಸಾಬ್.....'ಕಾಮಣ್ಣ ಸೂತ್ರ'.....ವತ್ಸಣ್ಣ ಅನ್ನೋರು ಬರೆದಿರುವ ಕಾಮಣ್ಣ ಸೂತ್ರ......ಅಂತ ಕಿವಿಯೊಳಗ ಸಣ್ಣಗ ಹೇಳಿದ ಕರೀಂ.

ಹಾಂ!!!....ಹಾಂ!!!!....ಇದು ಯಾವ ಪುಸ್ತಕನೋ? ಕಾಮಣ್ಣ ಸೂತ್ರ? ಬರೆದವರು ಯಾರಂದಿ? ವತ್ಸಣ್ಣ? ಯಾರೋ ಅವರು? - ಅಂತ ಕೇಳಿದೆ.

ಒಂದೂ ತಿಳಿಲಿಲ್ಲ ನನಗ.

ಸಾಬ್....ಜೋರಾಗಿ ಹೇಳಬ್ಯಾಡಿ ಸಾಬ್. ನಮ್ಮದೂಕಿ ಇಜ್ಜತ್ ಹೋಗಿ ಬಿಡ್ತದೆ. ಸಣ್ಣ ದನಿ ಒಳಗೆ ಹೇಳಿ ಸಾಬ್ - ಅಂತ ಕೇಳಿಕೊಂಡ ಕರೀಂ.

ಏನೋ ಸುರತಿ, ರತಿವಿಜ್ಞಾನ ಸೆಕ್ಸ್ ಪುಸ್ತಕ ಕೇಳಿದಾಂಗ ಯಾಕ ಇಷ್ಟು ನಾಚಗೋಳ್ಳಿಕತ್ತಾನ ಅಂತ ತಿಳಿಲಿಲ್ಲ.

ಕಾಮಣ್ಣ ಸೂತ್ರ...??? ಅಂದ್ರ ಹೋಳಿ ಹುಣ್ವ್ಯಾಗ ಹ್ಯಾಂಗ ಕಾಮಣ್ಣನ ಸುಡಬೇಕು, ಹ್ಯಾಂಗ ಕಟ್ಟಿಗಿ ಕದಿಬೇಕು, ಹ್ಯಾಂಗ ಪಟ್ಟಿ ಕಲೆಕ್ಟ್ ಮಾಡಬೇಕು, ಹ್ಯಾಂಗ ಲಬೋ ಲಬೋ ಅಂತ ಬಾಯಿ ಬಡಕೋಬೇಕು, ಇತ್ಯಾದಿ ಹೇಳಿಕೊಡುವಂತಹ ಪುಸ್ತಕ ಏನಪಾ? - ಅಂತ ಕೇಳಿದ.

ಅಲ್ಲ ಸಾಬ್....ಎಲ್ಲಿ ಹೋಳಿ ಹುಣ್ಣಿವಿ, ಕಾಮಣ್ಣ ಹಚ್ಚೀರಿ....? ನಾವು ಕೇಳಿದ್ದು ಬ್ಯಾರೆನೇ....ಅದೇ ಸಾಬ್...ವತ್ಸಣ್ಣ ಬರೆದಿದ್ದು....ಕಾಮಣ್ಣ ಸೂತ್ರ ಸಾಬ್......ಮಸ್ತ ಬುಕ್....ಅಂತ ಹೇಳಿ ಮತ್ತೂ confuse ಮಾಡಿಬಿಟ್ಟ.

ಸಾಬ್ರಾ..ಹೋಳಿ ಹುಣ್ಣಿವಿ ಅಂತ ಅಷ್ಟು ಕ್ಯಾಶುವಲ್ ಆಗಿ ಹೇಳಬ್ಯಾಡ್ರೀ. ನೀ ಹೋಳಿ ಹುಣ್ಣಿವಿ ಒಳಗ ಆಡಿದ ಆಟ ಎಲ್ಲಾ ಮರತೀ ಏನು? - ಅಂತ ಕೇಳಿದೆ.

ಏನು ಸಾಬ್? ನಾವು ಏನು ಮಾಡಿದ್ವಿ? ಹಾಂ? ಹಾಂ? - ಅಂತ ನನಗ ಚಾಲೆಂಜ್ ಮಾಡಿದ.

ಯಾಕಪಾ? ನೆನಪ ಇಲ್ಲೇನು? ಹೋಳಿ ಹುಣ್ಣಿವಿ ರಾತ್ರಿ. ಅಂದ್ರ ಬಣ್ಣದ ಹಿಂದಿನ ರಾತ್ರಿ. ಕರ್ನಾಟಕ ಕಾಲೇಜ್ ಲೇಡೀಸ್ ಹಾಸ್ಟೆಲ್ ಮುಂದ ಏನು ಮಸ್ತ ಡ್ಯಾನ್ಸ್ ಮಾಡಿದ್ದಿ. ಅವನೌನ ಹಲಿಗಿ ಶಬ್ದ ಏರಿದಂಗ ಏರಿದಂಗ ಹಾಕ್ಕೊಂಡ ವಸ್ತ್ರಾ ಎಲ್ಲ ಕಳದ್ ಕಳದ್ ಡ್ಯಾನ್ಸ್ ಮಾಡಿದ್ದಿ. ನೆನಪ ಅದ?  ಯಾರೋ ಒಬ್ಬಾಕಿ ಕಿಡಕಿಯಿಂದ ನಿನ್ನ ಡ್ಯಾನ್ಸ್ ನೋಡಿ ಸುದ್ದಿ ಹಬ್ಬಿಸಿದಳು ನೋಡು. ಫುಲ್ ಲೇಡೀಸ್ ಹಾಸ್ಟೆಲ್ ಎಲ್ಲಾ ಹುಡುಗ್ಯಾರ ರೂಮನ್ಯಾಗ ಲೈಟ್ ಒಮ್ಮೆಲೆ ಝಾಗ್ ಅಂತ ಹತ್ತಿಕೊಂಡು ಬಿಟ್ಟವು, ನಿನ್ನ ಪೈಲ್ವಾನ್ ಬಾಡಿ ನಂಗಾ ನಾಚ್ ನೋಡಲಿಕ್ಕೆ. ಏನು ಡ್ಯಾನ್ಸ್ ನಿಂದು? ಅಷ್ಟ ಮಸ್ತ ಮಾಡಿದಿ. ಅಷ್ಟರಾಗ ಹಡಬಿಟ್ಟಿ ಪ್ರಿನ್ಸಿಪಾಲ್ ಪೋಲಿಸರರಿಗೆ ಫೋನ್ ಮಾಡಿದ್ದ. ಪೊಲೀಸರು ಬಂದ ಬಿಟ್ಟರು. ನೀ ವಸ್ತ್ರಾನೂ ಬಿಟ್ಟು ನಂಗಾ ಓಡಿದ್ದಿ. ನೆನಪ ಆತೇನೋ? - ಅಂತ ಕರೀಂ ಇಪ್ಪತ್ತು ವರ್ಷದ ಹಿಂದ ಮಾಡಿದ ಹೋಳಿ ಹುಣ್ಣಿವಿ ಕಮಾಲ್ ನೆನಪ ಮಾಡಿಸಿ ಕೊಟ್ಟೆ.

ಕ್ಯಾ ಸಾಬ್? ಇನ್ನೂ ನೆನಪ ಇಟ್ಟೀರಿ ಕ್ಯಾ? ಏನು ಮಾಡೋದು ಸಾಬ್? ಆವಾಗ ನಿಮ್ಮದು ಸಿರ್ಸಿ ಕಡೆ ಹುಡುಗಿ ಒಬ್ಬಾಕಿ ನಮ್ಮ ಡೌ ಆಗಿದ್ದಳು. ಹಾಸ್ಟೆಲ್ಲಿನಲ್ಲಿ ಇರತಿದ್ದಳು. ಎಷ್ಟೇ ದಾನಾ ಹಾಕಿದ್ರೂ ಬುಟ್ಟಿಗೆ ಬೀಳೋ ಟೈಪ್ ಅಲ್ಲಾ ಅಕಿ. ಅದಕ್ಕೇ ಫುಲ್ ರ್ಯಾಶ್ (rash) ಆಗಿಬಿಟ್ಟಿ, ನಂಗಾ ಡ್ಯಾನ್ಸ್ ಮಾಡಿದ್ದೆ ಅಂತ ಕಾಣಸ್ತದೆ. ಕಪಡೆ ಬಿಚ್ಚಿ ನಿಮ್ಮ ಕಡೆನೇ ಕೊಟ್ಟಿದ್ದೆ. ಪೋಲಿಸ್ ಬಂದ ಕೂಡಲೇ ಕಪಡೆ ಅಲ್ಲೇ ಬಿಟ್ಟು ಓಡಿ ಬರೋದು ಕ್ಯಾ? ನಿಮಗೆ ದಂ ಇಲ್ಲಾ ನೋಡಿ. ಅವತ್ತು ನಾನು ಫುಲ್ ನಂಗಾ ಆಗ್ಬಿಟ್ಟಿ, ಕಾವಾಸಾಕಿ ಬೈಕ್ ಮೇಲೆ ಅಂಡರ್ವೇರ್ ಸಹಿತ ಇಲ್ಲದೆ ಎಲ್ಲೊ ಹೋಗಿ, ಯಾರದೋ ಬಟ್ಟಿ ಹಾಕ್ಕೊಂಡು ಮನಿ ಮುಟ್ಟೋದ್ರಾಗೆ ಜಾನ್ ಹೋಗಿತ್ತು ನಮ್ಮದು. ಗೊತ್ತು ಕ್ಯಾ? - ಅಂತ ತನ್ನ ಗತಕಾಲದ ಹೋಳಿ ಹುಣ್ಣಿವಿ ನೆನಪ ಮಾಡಿಕೊಂಡ ಕರೀಂ.

ಅದೆಲ್ಲ ಇರ್ಲಿ ಸಾಬ್.....ಎಲ್ಲಿ ಹೋಳಿ ಹುಣ್ಣಿವಿ, ಕಾಮಣ್ಣ ಹಚ್ಚೀರಿ....? ನಾವು ಕೇಳಿದ್ದು ಬ್ಯಾರೆನೇ....ಅದೇ ಸಾಬ್...ವತ್ಸಣ್ಣ ಬರೆದಿದ್ದು....ಕಾಮಣ್ಣ ಸೂತ್ರ ಸಾಬ್......ಮಸ್ತ ಬುಕ್....ಅಂತ ಮತ್ತ ಅದನ್ನ ಹೇಳಿದ ಕರೀಂ.

ಯಾರ್ರೀ ಈ ವತ್ಸಣ್ಣ ? ನಮ್ಮ ಪೈಕಿ ಯಾರೂ ವತ್ಸಣ್ಣ ಅಂತ ಇಲ್ಲ. ನಮಗ ಗೊತ್ತಿರವ ಅಂದ್ರ ಗೋಬಣ್ಣ. ಅವ ಅಡಿಗಿ ಮಾಡೋ ಆಚಾರಿ. ಅವಾ ಏನೂ ಪುಸ್ತಕ ಗಿಸ್ತಕ ಬರದಿಲ್ಲ. ಮತ್ತ ಗೋಬಣ್ಣಗ ವಯಸ್ಸ ಆಗ್ಯದ. ಅವಾ ಕಾಮಣ್ಣ ಅದು ಇದು ಅಂತ ಎಲ್ಲೂ ಹೋಗೋದಿಲ್ಲ. ಹೀಂಗಿದ್ದಾಗ ವತ್ಸಣ್ಣ, ಕಾಮಣ್ಣ ಸೂತ್ರ ಅಂತ ಹೇಳಿ ತಲಿ ಪೂರ್ತಿ ಬಗ್ಗಡ ಮಾಡಿ ಇಟ್ಟು ಬಿಟ್ಟಿರಿ ನೋಡ್ರೀ.....ಅಂದೆ.

ಅಯ್ಯೋ.....ಅದಲ್ಲ ಸಾಬ್.....ನಿಮ್ದೂ ಪೈಕಿ ಯಾವದೋ ಹಳೆ ಕಾಲದ ಋಷಿ ವತ್ಸಣ್ಣ ಅಂತಾ ಇದ್ದಾ ನೋಡಿ. ಅವಾ ಬರೆದಿಲ್ಲ ಕ್ಯಾ ಕಾಮಣ್ಣ ಸೂತ್ರ ಅಂತ ಒಂದು ಬುಕ್? ಎಲ್ಲಾ ಹ್ಯಾಂಗೆ ಮಾಡ್ಬೇಕು ಅಂತ ಫುಲ್ ಡೀಟೇಲ್ಸ್ ಕೊಟ್ಟ ಪುಸ್ತಕ ಸಾಬ್....ಶಾದಿ ಮೇ ಖಾಸ್ ದೋಸ್ತ್ ದೇತೇ ಹೈ.....ಗೊತ್ತು ಕ್ಯಾ? ನೀವು ನಮಗೆ ನಮ್ಮ ಮೊದಲನೇ ಶಾದಿ ಒಳಗೆ ಕೊಟ್ಟಿದ್ದಿರಿ.....ಯಾದ್ ಹೈ ಕ್ಯಾ? - ಅಂತ ಕೇಳಿದಾ ಕರೀಂ.

ಹೋಗ್ಗೋ....ಸಾಬ್ರಾ....ಅದು 'ವಾತ್ಸಾಯನ' ಬರೆದಿರುವ 'ಕಾಮಸೂತ್ರ' ಅನ್ನೋ ಬುಕ್ ಇರಬೇಕು ನೋಡ್ರೀ.....ಏನ್ರೀ ಇದು? ಈ ಪರಿ ಅಪಭ್ರಂಶ ಮಾಡಿ ವಾತ್ಸಾಯನಗ ವತ್ಸಣ್ಣ, ಕಾಮಸೂತ್ರಕ್ಕ ಕಾಮಣ್ಣ ಸೂತ್ರ ಅಂತೀರಲ್ಲರೀ....ಹೈಸ್ಕೂಲನ್ಯಾಗ ಮೂರ ವರ್ಷ ಸಂಸ್ಕೃತ ಬ್ಯಾರೆ ತೊಗೊಂಡಿದ್ದಿರಿ....ಛೆ ....ಛೆ.....ಅಂದೆ.

ಸಿಕ್ಕಾಪಟ್ಟೆ ನಗು ಮಾತ್ರ ಬಂದಿತ್ತು.

ಈಗ್ಯಾಕ್ರೀ ಏಕದಂ ಆ ಪುಸ್ತಕ ಬೇಕು ನಿಮಗ? - ಅಂತ ಕೇಳಿದೆ.

ಇವ ಮೂರು ಮದಿವಿ, ಎರಡು ತಲ್ಲಾಕ್ ಮಾಡಿಕೊಂಡು ಬಿಟ್ಟಾನ ನಲವತ್ತು ವರ್ಷ ಆಗೋದ್ರಾಗ. ಒಂಬತ್ತು ಮಂದಿ ಮಕ್ಕಳು ಮ್ಯಾಲೆ. ಇವಂಗ ಯಾಕ ಕಾಮಸೂತ್ರ? ತಾನ ಕಾಮಸೂತ್ರ ಭಾಗ ಒಂದು, ಎರಡು, ಮೂರು ಹಾಂಗ ಬರೆಯುವಾಂಗ ಇವನ ಇದ್ದಾನ .

ಸಾಬ್....ನಮ್ಮ ಬೇಗಂ ನಮಗೆ 'ಕಾಮ'ನ ಸೆನ್ಸ್ ಇಲ್ಲ ಅಂತ ಬೈದು ಬಿಟ್ಟಳು ಸಾಬ್. ಅದಕ್ಕೆ ಕಾಮಣ್ಣ ಸೂತ್ರ ಓದಿ ಕಾಮನ ಸೆನ್ಸ್ ಕಲಿಯೋಣ ಅಂತ ಹೇಳಿ - ಅಂತ ಹೇಳಿದ ಕರೀಂ.

ಹಾಂ? ಹಾಂ? ನಿಮ್ಮ ಸ್ವೀಟ್ ಸಿಕ್ಸಟೀನ್ ಬೇಗಂ ನಿಮಗ ಕಾಮದ ಸೆನ್ಸ್ ಇಲ್ಲ ಅಂತ ಹೇಳಿದಳು ಅಂದ್ರ ನಂಬೂ ಮಾತ್ರ ಅಲ್ಲ ತೊಗೋರಿ. ಅಕಿಗೆ ಒಂದ ಮದಿವಿ ಒಂದ ಬಚ್ಚಾ ಆಗ್ಯದ. ನೀವೋ....ಎಷ್ಟ ಮದಿವಿ, ಎಷ್ಟ ಬಚ್ಚಾ....ಮ್ಯಾಲೆ ಹೊರಗಿನ ಡೌಗಳು ಬ್ಯಾರೆ...ಹಾಂಗಿದ್ದಾಗ ನಿಮಗ ಕಾಮದ ಸೆನ್ಸ್ ಇಲ್ಲ ಅಂದ್ರ...ಏನ ಅರ್ಥರೀ?.....ಅಂತ ಸಾಬರಿಗೆ reassure ಮಾಡಿದೆ.

ಕಾಮದ ಸೆನ್ಸ್ ಅಲ್ಲಾ ಸಾಬ್....ಕಾಮನ ಸೆನ್ಸ್....- ಅಂತ ನನ್ನ ಕರೆಕ್ಟ್ ಮಾಡೋ ತರಹ ಹೇಳಿದ ಕರೀಂ.

ಎಲ್ಲಾ ಒಂದ ಅಲ್ಲೇನೋ? ನೀ ಅಸಡ್ಡಾಳಾಗಿ  ಕಾಮನ  ಸೆನ್ಸ್ ಅನ್ನಲಿಕತ್ತಿ. ನಾ ಕರೆಕ್ಟಾಗಿ ವ್ಯಾಕರಣಕ್ಕ ಹೊಂದು ಹಾಂಗ  ಕಾಮದ ಸೆನ್ಸ್ ಅಂತ ಹೇಳಿದೆ. ಆದರೂ ನಿನ್ನ ಹೆಂಡತಿ ಹೇಳಿದ ಕಾಮನ ಸೆನ್ಸ್ ಬೇರೇನ ಏನೋ ಇರಬೇಕೋ ಮಾರಾಯ. ಯಾಕಂದ್ರ ನಿನ್ನ ಪ್ರೇಕಾಮ (ಪ್ರೇಮ+ಕಾಮ) ಪ್ರತಾಪ ತಿಳಿದವರ್ಯಾರೂ ನಿನಗ ಪ್ರೇಮದ ಅಥವಾ ಕಾಮದ ಸೆನ್ಸ್ ಇಲ್ಲ ಅಂತ ಹೇಳಲಿಕ್ಕೆ ಸಾಧ್ಯವೇ ಇಲ್ಲ. ನೀ ಏನ ಮಾಡಲಿಕ್ಕೆ ಹೋದಾಗ ನಿಮ್ಮ ಬೇಗಂ ನಿನಗ ಕಾಮನ ಸೆನ್ಸ್ ಇಲ್ಲ ಅಂತ ಬೈದ್ರು? - ಅಂತ ಕೇಳಿದೆ.

ಇವನ ಕಾಮನ ಸೆನ್ಸ್ ಏನೋ ಬ್ಯಾರೇನ ಇರಬೇಕು ಅಂತ ಡೌಟ್ ಬಂದಿತ್ತು.

ಸಾಬ್....ಅದು ಒಂದು ಶರಮ್ನಾಕ್ ಕಹಾನಿ. ಭಾಳ ನಾಚಗಿ ಬರ್ತದೇ ಸಾಬ್. ನಾವ ಅದನ್ನ ಹೇಳೋದಿಲ್ಲ ಸಾಬ್ - ಅಂದ ಕರೀಂ.

ದೋಸ್ತರ ನಡುವೆ ಅದೆಂತಾ ನಾಚ್ಗಿನೋ ಸಾಬ? ಎಂತೆಂತಾ ಸುದ್ದಿ ಎಲ್ಲ ನನ್ನ ಕಡೆ ಹೇಳಿಕೋತ್ತಿ. ಇದೇನ ಮಹಾ ಹೇಳಿಕೊಳ್ಳಬಾರದಂತ ಸುದ್ದಿನೋ? ಹೇಳೋ. ಇಲ್ಲಾಂದ್ರ ನಿನ್ನ ಪ್ರಾಬ್ಲೆಮ್ ಹ್ಯಾಂಗ ಸಾಲ್ವ್ ಮಾಡೋಣ? ಹಾಂ? ಹಾಂ? - ಅಂದೆ.

ಸಾಬ್, ಈಗ ರಮಜಾನ್ ಮಹಿನಾ ಮುಗೀತು ನೋಡಿ. ಒಂದು ತಿಂಗಳಿಂದ ಬಿವಿ ಕಡೆ ಹೋಗಿರಲಿಲ್ಲ. ಮುಗದ ಕೂಡಲೇ ಹೋಗಿ ಪ್ಯಾರ್, ಮೊಹಬ್ಬತ್ ಮಾಡೋಣ ಅಂತ ಅನ್ನಿಸ್ತು. ಮೊದಲಿನ ಹಾಗೆ ಪ್ರೀತಿಯಿಂದ ಹಿಂದೆ ಹೋಗಿ ಹೆಗಲ ಮೇಲೆ ಕೈ ಹಾಕಿ, ಕಿವಿಯೊಳಗೆ ಕುಸು ಕುಸು ಅಂದ್ರೆ, ನಮ್ಮ ಬೇಗಂ ಸರ್ರಂತ ಸಿಟ್ಟಾಗಿ, ನಿಮಗೆ ಕಾಮನ ಸೆನ್ಸ್ ಇಲ್ಲ ಕ್ಯಾ? ದಿನದ ಟೈಮ್ ನ್ಯಾಗೆ ಬಂದು ಪ್ಯಾರ್ ಮಾಡು, ಮೊಹಬ್ಬತ್ ಮಾಡು ಅಂತೀರಿ? ತಲಿ ಇಲ್ಲ ಕ್ಯಾ? ಅಕಲ್  ನಹಿ ಕ್ಯಾ? "ಕಾಮನ ಸೆನ್ಸೇ" ಇಲ್ಲ. ಬೇವಕೂಫ್ ಭಾಡಕೊವ್ ಅಂತ ಬೈದಳು ಸಾಬ್.....ಅಂತ ತನ್ನ ಕಹಾನಿ ಹೇಳಿ ಮುಗಿಸಿದ.

ಹೋಗ್ಗೋ ನಿಮ್ಮ ಸಾಬ್ರಾ....ನಿಮ್ಮ ಬೇಗಂ ಹೇಳಿದ್ದು "ಕಾಮನ್ ಸೆನ್ಸ್" ಅಂದ್ರ "ಸಾಮಾನ್ಯ ಜ್ಞಾನ" (commonsense). ಅದು ಬ್ಯಾರೆ. ನೀವು ಅದನ್ನ 'ಕಾಮ'ನ ಸೆನ್ಸ್ ಅಂತ ತಿಳ್ಕೊಂಡು, ಕಾಮಸೂತ್ರ ಓದಲಿಕ್ಕೆ ಹೊಂಟೀರಿ. ಏನ ಅನ್ನೋಣ ಇದಕ್ಕ? ಹಾಂ?ಹಾಂ? - ಅಂದೆ.

ಅಕಿ ಯಬಡೇಶ್ವರಿ ಕಾಮನ್ ಅಂದ್ರ ಇವ ಕಾಮೇಶ್ವರಗ ಕಾಮನ ಅಂತ ಕೇಳಿಸ್ಯದ. ಒಂದು ತಿಂಗಳ ತಲಿಯೊಳಗ ಅದ ಕಾಮ ಗಿರಕಿ ಹೊಡಿಲಿಕತ್ತಿತ್ತು ನೋಡ್ರೀ. ಹಾಂಗ ಕೇಳಿದ್ರ ತಪ್ಪಿಲ್ಲ.

ಹಾಂಗೆ ಕ್ಯಾ ಸಾಬ್? ಓಹೋ ಇದು ಇಂಗ್ಲಿಷ್ ಕಾಮನ್ ಸೆನ್ಸ್. ನಮಗೆ ಇಲ್ಲ ಕ್ಯಾ? ನಮ್ಮ ಡೌ ಐತೆ ನೋಡಿ ಸಾಬ್. ಶಬನಂ. ಅಕಿಗೆ ಮಾತ್ರ ನಾವು ಹೀಗೆಲ್ಲ ಮಾಡೋದು ಸೇರ್ತದೆ ಸಾಬ್. ಇಕಿ ಬೇಗಂ ಸೇರಿಲ್ಲ ಅಂದ್ರೆ ಹೇಗೆ? ಅದಕ್ಕೆ ನಮಗೆ ಕಾಮನ್ ಸೆನ್ಸ್ ಇಲ್ಲ ಅಂತ ಅಂದು ಬಿಡೋದು ಕ್ಯಾ? - ಅಂತ ತನಗ ಕಾಮನ್ ಸೆನ್ಸ್ ಅದ ಅಂತ ಹೇಳಿ ಡಿಫೆಂಡ್ ಮಾಡಿಕೊಂಡ.

ಸಾಬ್ರಾ...ನಿಮಗ ಕಾಮನ್ ಸೆನ್ಸ್ ಇಲ್ಲ ಅಂತ ತೋರಿಸಿಕೊಂಡ್ರೀ ನೋಡ್ರಿ - ಅಂತ ಅಂದೆ.

ಹೆಂಗೆ ಸಾಬ್? - ಅಂತ ಕರೀಮ ಕೇಳಿದ.

ಅಲ್ಲೋ...ನಿನ್ನ ಡೌ ಉರ್ಫ್ ನಿನ್ನ ಎಕ್ಸಟ್ರಾ ಸ್ಟೆಪ್ನೀ ಶಬನಂಗ ನೀ ಹಾಂಗ ಹಿಂದಿಂದ ಹೋಗಿ ಲಬಕ್ಕನ ಹಿಡಕೊಳ್ಳುದು, ಮತ್ತೊಂದು ಮಾಡೋದು ಎಲ್ಲಾ ಪ್ಯಾರ್ ಮೊಹಬ್ಬತ್ ಅಂತ ಅನ್ನಿಸಬಹುದು. ಬೇಗಂಗೆ ಅಂದ್ರ ಧರ್ಮಪತ್ನಿಗೆ ಬ್ಯಾರೆ ಸ್ಥಾನ ಇರ್ತದ ನೋಡು ಅದಕ್ಕ ಅಕಿಗೆ ಅವೆಲ್ಲಾ ಸೇರೋದಿಲ್ಲ. ಮಂದಿ ಸ್ಥಾನ ನೋಡಿ ಪ್ಯಾರ್ ಮೊಹಬ್ಬತ್ ಎಲ್ಲಾ ಮಾಡಬೇಕಪಾ. ಅದು ನೋಡು ಕಾಮನ್ ಸೆನ್ಸ್. ಅದು ನಿನಗ ಇಲ್ಲ. ಅವತ್ತಿನ ಮಟ್ಟಿಗೆ ಇರಲಿಲ್ಲ ಅಂತ ಹೇಳಿದ್ದು ನಿಮ್ಮ ಬೇಗಂ - ಅಂತ ಹೇಳಿದೆ.

ಓಹೋ....'ಸ್ತನ ನೋಡಿ ಮಾನ ಕೊಡಬೇಕು' ಅಂತ ಗಾದಿ ಮಾತು ಐತಲ್ಲ ಸಾಬ್. ಹಾಗೆ ಅನ್ನಿ. ಆಯ್ತು ಇನ್ನು ಅವರ ಅವರ ಸ್ತನ ನೋಡಿಯೇ ನಾವು ಪ್ಯಾರ್ ಮೊಹಬ್ಬತ್ ಮಾಡ್ತೇವೆ ಸಾಬ್....- ಅಂತ ಅಂದು ಇಲ್ಲಿ ತನಕ ಹಾಕದೇ ಇದ್ದಾ ಬಾಂಬ್ ಹಾಕೇ ಬಿಟ್ಟ.

ಗಾದಿ ಮಾತು ಇದ್ದಿದ್ದು "ಸ್ಥಾನ ನೋಡಿ ಮಾನ ಕೊಡು" ಅಂತ. ಇವ ಅದನ್ನೂ ಕುಲಗೆಡಿಸಿದ್ದ. ಹದಗೆಡಿಸಿದ್ದ.

ಅಯ್ಯೋ ಸಾಬ್ರಾ, ಅದು ಸ್ತನ ಅಲ್ಲರೀ. ಸ್ಥಾನ....ಸ್ಥಾನ......ಸ್ಥಾನ.....ಸರೀತ್ನಾಗಿ ಹೇಳ್ರೀ. ಕನ್ನಡ, ಸಂಸ್ಕೃತ ಗೊತ್ತಿದ್ದವರ ಕಡೆ ಹೋಗಿ "ಸ್ತನ ನೋಡಿ ಮಾನ ಕೊಡಬೇಕು" ಅಂದ್ರ ಹಿಂದ, ಮುಂದ, ಬಾಜೂಕ, ಮ್ಯಾಲಿಂದ ಎಲ್ಲಾ ಕಡೆಯಿಂದ ಒದಕಿ, ಗಜ್ಜು ತಿಂದು ಬರ್ತೀರಿ ನೋಡ್ರೀ. ಅದು ಭಾಳ ಅನರ್ಥ ಕೊಡ್ತದ. ಇಲ್ಲಾ ಅಂದ್ರ ಸುಮ್ಮನ ಇಂಗ್ಲಿಷ್ ವರ್ಡ್ ಲೆವೆಲ್ ಅಂತ ಅಂದು ಬಿಡ್ರೀ. ಲೆವೆಲ್ ನೋಡಿ ಮಾನ ಕೊಡಬೇಕು ಅಂತ. ತಿಳಿತೇನು? - ಅಂದೇ.

ಸಿಕ್ಕಾಪಟ್ಟೆ ನಗು ಮಾತ್ರ ಬಂತು. ಸ್ಥಾನ ಅನ್ನಲಿಕ್ಕೆ ಸ್ತನ ಅಂದುಬಿಟ್ಟಿದ್ದ ಸಾಬಣ್ಣ.

ಆಯ್ತು ಸಾಬ್...ಹಾಗಾರೆ ನಮಗೆ ಕಾಮಣ್ಣ ಸೂತ್ರ ಬುಕ್ಕು ಓದೋದು ಬ್ಯಾಡ ಅಂತೀರಿ ಕ್ಯಾ? - ಅಂದ ಕರೀಂ.

ಬ್ಯಾಡವೇ ಬ್ಯಾಡ. ಕಾಮನ್ ಸೆನ್ಸ್ ಇಂಪ್ರೂವ್ ಮಾಡ್ಕೋ. ಶಬ್ದ ಸರೀತ್ನಾಗಿ ಉಚ್ಚಾರ ಮಾಡೋದನ್ನು ಕಲಿ. ಅಷ್ಟಕ್ಕ ಎಲ್ಲಾ ಸರಿ ಆಗ್ತದ. ತಿಳಿತೇನು? - ಅಂದೆ.

ಸಾಬ್....ಒಂದು ಕೊಸ್ಚನ್ ಅದೆ. ಅವಾ ವಾತ್ಸಾಯನ ಬ್ಯಾಚಲರ್ ಇದ್ದಾ ಅಂತೆ. ಹೌದು ಕ್ಯಾ? ಅಲ್ಲಾ ಬ್ಯಾಚಲರ್ ಇದ್ದುಕೊಂಡು ಕಾಮಾದು ಶಾಸ್ತ್ರಾ ಮ್ಯಾಲೆ ಬುಕ್ ಹ್ಯಾಗೆ ಬರದಾ ಸಾಬ್ ಅವನು? - ಅಂದ ಕರೀಂ.

ಭಾರಿ ಕೊಸ್ಚನ್ ಮಗಂದು.

ಹೌದೋ. ಅವ ಬ್ಯಾಚಲರ್ ಇದ್ದನಂತ. ಅವರೆಲ್ಲ ಯೋಗಿಗಳು ಮಾರಾಯ. ಯೋಗ ಶಕ್ತಿಯಿಂದ ಹ್ಯಾಂಗೋ ಎಲ್ಲ ತಿಳಿದುಕೊಂಡು ಬಿಟ್ಟಿರ್ತಾರ. ಅವರೆಲ್ಲ ನಮ್ಮ ಗತೆ ಅಂತ ತಿಳ್ಕೊಂಡಿ ಏನು? ಯೋಗ ಶಕ್ತಿಯಿಂದ ತಿಳ್ಕೊಳ್ಳುದು ಅಂದ್ರ ಹೋಟೆಲ್ಲಿನ್ಯಾಗ ಮೆನು ಕಾರ್ಡ್ ನೋಡಿ ಹೊಟ್ಟಿ ತುಂಬಿಸ್ಕೊಂಡ ಹಾಂಗ. ತಿಳೀತ? - ಅಂತ ವಿವರಣೆ ಕೊಟ್ಟೆ.

ಹಾಗೆ ಕ್ಯಾ ಸಾಬ್? ಇರಬಹದು. ಇರಬಹದು. ಬನ್ನಿ ಛಾ ಅದೂ ಒಂದು ಹಾಪ್ ಛಾ ಕುಡಿಯೋಣ - ಅಂತ ಕರೆದ.

ನಡೀಪಾ. ನೀ ಒಂದು ಛಾ ಕುಡಿ. ನಮಗ ಒಂದು ಬದಾಮ ಮಿಲ್ಕ್ ಕೊಡಸು. ಛಾ, ಕಾಫಿ ಎಲ್ಲ ಬಿಟ್ಟು ಭಾಳ ವರ್ಷಾತು. ರಾತ್ರಿ ನಿದ್ದಿ ಬರಂಗಿಲ್ಲ ಕುಡದ್ರ - ಅಂತ ಹೇಳಿ ಹೊಂಟ್ವೀ ಅಲ್ಲೇ ಬಾಜೂಕ ಮಥುರಾ ಭವನಕ್ಕ.

ಭೀಮು....ಏಕ ಫೋರ್ಟ್ವೆಂಟಿ ಬನಾರಸ್ ಪಾನ್ ಬನಾಕೆ ರಖ್ ರೆ. ಮೈ ಆತಾ ಅಭಿ ಚೈ ಪೀಕೆ - ಅಂತ ಅಲ್ಲೇ ಬಾಜೂಕ ಚುಟ್ಟಾ ಅಂಗಡಿ ಒಳಗಾ ಜೋರ ಬಿಸಿನೆಸ್ಸ್ ನೆಡಸಿದ್ದ ಭೀಮುಗ ಹೇಳಿದ. 

ಏನ ಸಿಸ್ಟಮ್ ಇಟ್ಟಾನ? ಹೊರಗ ಬರೋ ತನಕ ಪಾನ್ ರೆಡಿ ಇರ್ತದ. ಭಲೇ ಕರೀಂ. ಇಂತಾದ್ರಾಗೆಲ್ಲಾ ಕಾಮನ್ ಸೆನ್ಸ್ ಭಾಳ ಅದ ನೋಡು ಮಂಗ್ಯಾನ ಮಗಂಗ.

** ಸ್ಥಾನ ಎಂಬುದು ಸ್ತನ ಆದ ಅನಾಹುತ ಸುದ್ದಿ ಓದಿದ್ದು ಸುಮಾರು 20-25 ವರ್ಷಗಳ ಹಿಂದೆ. ಆವಾಗ ದಿವಂಗತ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದರು. ಎಲ್ಲೋ ಯಾವದೋ ಸಭೆಗೆ ಹೋಗಿದ್ದರಂತೆ. ಅಲ್ಲಿ ಒಬ್ಬ ಮಹಿಳಾ ಮುಸ್ಲಿಂ ಕಾಂಗ್ರೆಸ್ಸ್ ಲೀಡರ್ ಭಾಷಣ ಮಾಡಲು ಶುರು ಮಾಡಿದಳು. ಕನ್ನಡದಲ್ಲಿ. ಅವರ ಕನ್ನಡದಲ್ಲಿ. "ಬಂಗಾರಪ್ಪಾಜಿ ನಮಗೆ ಅಂದ್ರೆ ಔರತ್ ಮಂದಿಗೆ ತುಂಬಾ ಮದದ್ ಮಾಡಿದಾರೆ. ಕಾಂಗ್ರೆಸ್ಸಿನಲ್ಲಿ ನಮಗೆ ಒಳ್ಳೆ ಸ್ತನ (ಸ್ಥಾನ), ಮನ (ಮಾನ) ಕೊಟ್ಟಾರೆ. ನಮಗೆ ಸ್ತನ, ಮನ  ಕೊಟ್ಟ ಬಂಗಾರಪ್ಪಾಜಿಗೆ ನಾವು ಶುಕ್ರಗುಜಾರ್". ಎಲ್ಲರೂ ನಕ್ಕಿದ್ದರಂತೆ. ನಂತರ ಅದು  ಪತ್ರಿಕೆಯಲ್ಲಿ ಬಂದು ಎಲ್ಲರೂ ನಕ್ಕಿದ್ದೆವು.

** ಉಡಾಳ ಹುಡುಗುರು ಧಾರವಾಡದಲ್ಲಿ ಲೇಡೀಸ್ ಹಾಸ್ಟೆಲ್ ಮುಂದೆ ಮಂಗ್ಯಾತನ ಮಾಡುವದು, ಪೋಲಿಸ್ ಬಂದು ಸಿಕ್ಕವರಿಗೆ ಲಾಠಿಯಿಂದ ನಾಕು ಕೊಡುವದು, ಓಡಿ ಹೋಗಿ ಮತ್ತೆ ಬಂದು ಮಂಗ್ಯಾತನ ಮುಂದುವರೆಸುವದು ಕಾಮನ್ ಆಗಿತ್ತು. ಪಾರ್ಟ್ ಆಫ್ ಹೋಳಿ ಹುಣ್ಣಿವಿ ಸೆಲೆಬ್ರೇಶನ್.

Wednesday, August 22, 2012

ಟ್ಯೂನಿಸ್ಸಿನಲ್ಲಿ ತಿಥಿಗೆ ಮುಹೂರ್ತ (ಭಾಗ 2)


ಅಬು ಜಿಹಾದ್ ಮೈಕೊಡವಿ ನಿಂತ. ಅರಾಫತ್ ದೊಡ್ಡ ಮಟ್ಟದ ಜವಾಬ್ದಾರಿ ವಹಿಸಿದ್ದರು. ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಬೇಕಿತ್ತು ಅವನಿಗೆ.

ಆಗಲೇ ಅಬು ಜಿಹಾದ್ ಬಗ್ಗೆ ಕೆಲ ದಂತಕಥೆಗಳಿದ್ದವು. ಬೀರೂಟಿನಲ್ಲಿ ಇದ್ದಾಗ ಒಮ್ಮೆ ಎದುರು ಬಣದವರೋ, ಇಸ್ರೇಲಿಗಳೋ ಇವನಿದ್ದ ಜಾಗಕ್ಕೆ ದಾಳಿ ಮಾಡಿದ್ದರಂತೆ. ಬಾಲ್ಕನಿಯಿಂದ ಚಿಕ್ಕ ಮಗುವಿನೊಡನೆ ಜಿಗಿದು ಪಾರಾಗಿದ್ದ ಅಂತ ಕೆಲವರು ಅಂದರೆ, ಇನ್ನು ಕೆಲವರು ಕಿರಿಚುತ್ತಿದ್ದ ಮಗುವನ್ನು ಎಸೆದಿದ್ದ ಎಂದೋ, ಉಸಿರುಗಟ್ಟಿಸಿ ಕೊಂದಿದ್ದ ಅಂದೋ, ಏನೇನೋ ಕಥೆ ಹೇಳುತ್ತಿದ್ದರು. ಒಟ್ಟಿನಲ್ಲಿ ಒಂದು ಕಾರಿಶ್ಮಾಟಿಕ್  ಪ್ರಭಾವಳಿ ಅವನ ಸುತ್ತ ಬೆಳೆದಿತ್ತು.

ಅಬು ಜಿಹಾದ್ ದೊಡ್ಡ ಮಟ್ಟದಲ್ಲಿ ಪ್ಲಾನಿಂಗ್ ಶುರು ಮಾಡಿದ. ಆ ಹೊತ್ತಿಗೆ ಆಗಲೇ ಮೊದಲನೇಯ "ಇಂತಿಫದಾ" ಚಳುವಳಿ ಶುರು ಆಗಿತ್ತು. ಅದು "ಹಮಾಸ್" ಸಂಘಟನೆಯ ಕೂಸಾಗಿದ್ದರೂ ದುಡ್ಡು, ಕಾಸು ಕೊಟ್ಟು ಅರಾಫತ್ ಅವರ ಫತಾ ಕೂಡ ಒಂದಿಷ್ಟು ಮೈಲೇಜ್ ಗಳಿಸಿಕೊಂಡಿತು. ಅದರ ಪಬ್ಲಿಕ್ ರಿಲೇಶನ್ ಎಲ್ಲ ಮ್ಯಾನೇಜ್ ಮಾಡಿದ ಅಬು ಜಿಹಾದ್ ಅರಾಫತ್ ಅವರ ಕಡೆ ಭಲೇ, ಭಲೇ ಅನ್ನಿಸಿಕೊಂಡ.

ನಾಮ್ಕೆ ವಾಸ್ತೇ ಟ್ಯೂನಿಸ್ ಗೆ ಹೋದರೂ ಪದೆ ಪದೆ ಜೋರ್ಡಾನ್ ಗೆ ಬಂದು, ಉಳಿದು ಹೋಗುತ್ತಿದ್ದ ಅಬು ಜಿಹಾದ್. ಕಿಂಗ್ ಹುಸೇನರಿಗೆ ಎಲ್ಲ ಅರಬರ ವಿರೋಧ ಕಟ್ಟಿಗೊಂಡು, ಮುಖ ಮುರಿದುಕೊಂಡು ಬರಲೇ ಬೇಡಿ ಅನ್ನುವ ಛಾತಿ ಇರಲಿಲ್ಲ. ಮೊದಲೇ ಪ್ಯಾಲೆಸ್ಟೈನ್ ವಿರೋಧಿ ಅಂತ ಅವರನ್ನು ಬ್ರಾಂಡ್ ಮಾಡಿದ್ದ ಬೇರೆ ಬೇರೆ ಬಣದವರು ಕಿಂಗ್ ಹುಸೇನ್ ಅವರ ಪೈಕಿ ಮಂದಿಯನ್ನು ಹಿಡಿಹಿಡಿದು - ಪ್ಯಾಲೆಸ್ಟೈನ್ ದ್ರೋಹಿಗಳಿರಾ! ಸಾಯಿರಿ. - ಅಂತ  ಗೇಮ್ ಬಾರಿಸುತ್ತಿದ್ದರು.

ಹೀಗೆ ಜೋರ್ಡಾನಿಗೆ ಬಂದಾಗೊಮ್ಮೆ ಅಬು ಜಿಹಾದ್ ತಾನೇ ವೆಸ್ಟ್ ಬ್ಯಾಂಕ್ ಒಳಗೆ ಬಂದೋ, ಅಥವಾ ವೆಸ್ಟ್ ಬ್ಯಾಂಕಿನಲ್ಲಿ ಇರುವ ತನ್ನ ಜನರನ್ನು ಕರೆಸಿಕೊಂಡೋ ಸ್ಕೀಮ್ ಹಾಕಿ, ಸ್ಕೆಚ್ ಹಾಕಿಕೊಟ್ಟು ವಾಪಸ್ ಟ್ಯೂನಿಸ್ ಗೆ ಹೋಗುತ್ತಿದ್ದ.

ಒಮ್ಮೆ ಫತಾ ಬಣದ ಉಗ್ರಗಾಮಿಗಳು ಇಸ್ರೇಲ್ ಒಳಗೆ ನುಗ್ಗಿ ಚಿಕ್ಕಮಕ್ಕಳಿಂದ ತುಂಬಿದ್ದ ಒಂದು ಸ್ಕೂಲ್ ಬಸ್ ಅಪಹರಿಸಿಬಿಟ್ಟರು. ದೊಡ್ಡ ಮಟ್ಟದ rescue ಕಾರ್ಯಾಚರಣೆ ಮಾಡಲಾಯಿತು. ಉಗ್ರಗಾಮಿಗಳು ಬಸ್ ಬಿಟ್ಟವರೇ ಮಕ್ಕಳನ್ನು ಒತ್ತೆಯಾಳಾಗಿ ಇಟ್ಟುಗೊಂಡು ಯಾವದೋ ಕಟ್ಟಡ ಹೊಕ್ಕಿಬಿಟ್ಟರು. ಒತ್ತೆಯಾಳುಗಳನ್ನು ಬಿಡಿಸಲೆಂದೇ ಇದ್ದ ವಿಶೇಷ ಕಮಾಂಡೋ ಪಡೆ ದೊಡ್ಡ ಕಾರ್ಯಾಚರಣೆ ಮಾಡಿತು. ಆದ್ರೆ ಪೂರ್ತಿ ಯಶಸ್ವಿ ಆಗಲಿಲ್ಲ. ಸುಮಾರು ಮಕ್ಕಳು ಸತ್ತು ಹೋದರು. ಪಾಪ. ಇಸ್ರೇಲಿನಲ್ಲಿ ದೊಡ್ಡ ಮಟ್ಟಿನ ದುಃಖ ಮತ್ತು ಶೋಕಾಚರಣೆ.

ಆಗಲೇ ಇಸ್ರೇಲ್ ಸರ್ಕಾರ್ ಒಂದು ನಿರ್ಧಾರಕ್ಕೆ ಬಂತು - ಈ ಜನರನ್ನು ದೂರ ಟ್ಯೂನಿಸಿಯಾಕ್ಕೆ ಅಟ್ಟಿದರೂ, ಅಲ್ಲೇ ಕೂತು ಕಿತಾಪತಿ ಮಾಡುತ್ತಾರೆ. ಅಲ್ಲೇ ಹೋಗಿ ಸರಿಯಾಗಿ ಒದ್ದು ಬರಬೇಕು - ಅಂತ.

ಇಸ್ರೇಲ್ ವಾಯುಪಡೆ ಸಜ್ಜಾಯಿತು. ಟ್ಯೂನಿಸ್ ಇಸ್ರೇಲಿನಿಂದ 3000-3500 ಮೈಲ್ ದೂರ. ಇಸ್ರೇಲಿನಿಂದ ಹೊರಟ ವಿಮಾನಗಳು ಮೆಡಿಟರೇನಿಯನ್ ಸಮುದ್ರದ ಮೇಲೆ ಓರೆ ಕೋರೆಯಾಗಿ ಹಾರಿದವು. ಸ್ವಲ್ಪ ಹೆಚ್ಚು ಕಮ್ಮಿ ಆದರೆ ಶತ್ರು ದೇಶಗಳಾದ ಸೂಡಾನ್, ಲಿಬಿಯಾ, ಇಜಿಪ್ಟ್, ಅಲ್ಜೇರಿಯ ದೇಶಗಳ ರೇಡಾರಗಳ ಕಣ್ಣಿಗೆ ಬೀಳುತ್ತಿದ್ದವು ಇಸ್ರೇಲಿ ಫೈಟರ್ ವಿಮಾನಗಳು. ಈ ತರಹದ ಕಾರ್ಯಾಚರಣೆ ಮೊದಲು ಇರಾಕ್ ಮೇಲೆ ಮಾಡಿದ್ದ ಇಸ್ರೆಲಿಗಳಿಗೆ ಇದೇನೂ ದೊಡ್ಡ ಮಾತಾಗಿರಲಿಲ್ಲ. 10-12 F15  ಸಿರೀಸ್ ಅಮೇರಿಕದಿಂದ ಸಪ್ಲೈ ಆಗಿದ್ದ ವಿಮಾನಗಳು ಸೀದಾ ಟ್ಯೂನಿಸ್ ಗೆ ಹಾರಿ, ಅಲ್ಲಿ ಮೂರು ವರ್ಷದ ಹಿಂದೆ ಅರಾಫತ್ ಕಟ್ಟಿಕೊಂಡಿದ್ದ ಹೊಸ ರೆಸಾರ್ಟ್ ಹಾಗೆ ಇದ್ದ ಶಿಬಿರದ ಮೇಲೆ ಬಾಂಬಿನ ಮಳೆಗರಿದವು. ಅರಾಫತ್ ಅವರ ಕಮಾಂಡ್ ಸೆಂಟರ್ ಪೂರ್ತಿ ಚಪ್ಪಡಿ. ಅರಾಫತ್ ಅವರಿಗೆ ಮೊದಲಿಂದಲೂ ಅಂತರಾಷ್ಟ್ರೀಯ ಸಮುದಾಯದ ಅಭಯಹಸ್ತ. ಹಾಗಾಗಿ ಅವರಿಗೆ ಮೊದಲೇ ಯಾರೋ ಸುದ್ದಿ ಮುಟ್ಟಿಸಿದ್ದರು ಅಂತ ಕಾಣುತ್ತದೆ. ಅವರು ಬಚಾವ್ ಆದರು. ಸುಮಾರು 100-200 ಕೆಳಗಿನ ಸಿಪಾಯಿ ಮಟ್ಟದ ಪ್ಯಾಲೆಸ್ಟೈನ್ ಉಗ್ರವಾದಿಗಳು ಮಾತ್ರ ಸತ್ತು ಹೋದರು. ಟ್ಯೂನಿಸಿಯದ  ಸರ್ಕಾರಕ್ಕೆ ಲಟಿಕೆ ಮುರಿದು ಇಸ್ರೇಲಿಗೆ ಶಾಪ ಹಾಕುವದನ್ನು ಬಿಟ್ಟರೆ ಮತ್ತೇನೂ ಮಾಡುವ ತಾಕತ್ತಿರಲಿಲ್ಲ. ಅಷ್ಟು ಮಾಡಿ ವಿಶ್ವಸಂಸ್ಥೆಗೊಂದು ಕಂಪ್ಲೇಂಟ್ ಕೊಟ್ಟು ಸುಮ್ಮನಾಯಿತು.

ಅರಾಫತ್ ಲಬೋ ಲಬೋ ಅಂತ ಬಾಯಿಬಡಕೊಂಡರು. ಇಸ್ರೇಲ್ ಸಾಕ್ಷಿ ಸಮೇತ ಅವರ ಬಣದ ಉಗ್ರಗಾಮಿಗಳು   ಮಾಡುತ್ತಿದ್ದ ಕಾರ್ನಾಮೆಗಳ ಬಗ್ಗೆ ಹೇಳಿತು. ಆಮೇಲೆ ಬೇರೆ ಬೇರೆ ಅರಬ್ ದೇಶಗಳು, ಅಮೆರಿಕ, ಇತ್ಯಾದಿ ಕೂಡಿ ಒಂದು ದೊಡ್ಡ ಮಟ್ಟದ ಚಂದಾ ಎತ್ತಿ ಅರಾಫತ್ ಅವರ ಕೈಗೆ ಹಲವಾರು ಮಿಲಿಯನ್ ಡಾಲರ್ ಗಳ ಪ್ರಸಾದವನ್ನು ವೀಳ್ಯ ತಾಂಬೂಲದ ಜೊತೆ ಕೊಟ್ಟರು. ದೊಡ್ಡ ಮೊತ್ತದ ಪ್ರಸಾದ ನೋಡಿದ ಅರಾಫತ್ ಮತ್ತೆ ಫುಲ್ ಖುಷ್. ತಮ್ಮ ಮತ್ತು ತಮ್ಮ ಮ್ಯಾನೇಜ್ಮೆಂಟಿನ ಕಟ್ ತೆಗೆದಿಟ್ಟುಕೊಂಡು ಹೊಸ ರೆಸಾರ್ಟ್ ಕಟ್ಟಿಕೊಂಡರು. ಬಾಕಿ ದುಡ್ಡು ಇಸ್ರೇಲ್ ವಿರೋಧಿ ಕೃತ್ಯಗಳಿಗೆ ಮಂಜೂರ ಮಾಡಿದರು.

ಇದು ಆಗಿದ್ದು 1985 ರಲ್ಲಿ. ಇದರಿಂದ ಅಬು ಜಿಹಾದ್ ಪಾಠ ಕಲಿಯಬೇಕಾಗಿತ್ತು. ಎಲ್ಲಿಯದು? ಅವನು ವಿಮಾನ ದಾಳಿಯಲ್ಲಿ ತನಗೆ ಏನೂ ಆಗಲಿಲ್ಲ ಅಂತ ಆರಾಮಿದ್ದ. ಹೊಸ ದುಡ್ಡು ಬಂದ ಕೂಡಲೇ ಮತ್ತೊಂದು ಖತರ್ನಾಕ್ ಕೆಲಸಕ್ಕೆ ಕೈ ಹಾಕೇ ಬಿಟ್ಟ. ಅವನಿಗೇನು ಗೊತ್ತಿತ್ತು ಈ ಸಲ ಮಾತ್ರ ಇಸ್ರೇಲಿಗಳು ತನಗೆ ನಿಜವಾಗಿಯೂ ಮುಹೂರ್ತ ಇಟ್ಟು ಬಿಡುತ್ತಾರೆ ಅಂತ?

ಮತ್ತೊಂದು ಬಸ್ ಅಪಹರಣ ಮಾಡಿಸಿದ. ರಾಜಧಾನಿ ಟೆಲ್-ಅವಿವ್ ಹತ್ತಿರ ಹೋಗುತ್ತಿದ್ದ ರಸ್ತೆ ಸಾರಿಗೆ ಬಸ್ಸೊಂದನ್ನು 3 ಜನ ಅಬು ಜಿಹಾದ್ ಕಳಿಸಿದ್ದ ಉಗ್ರಗಾಮಿಗಳು ಅಪಹರಿಸಿದರು. ಈ ಸಲ ಅವರು ಇಸ್ರೇಲಿಗೆ ಇಸ್ರೇಲೇ ಬೆಚ್ಚಿ ಬೀಳುವಂತಹ ಕೆಲಸಕ್ಕೆ ಕೈ ಇಟ್ಟುಬಿಟ್ಟರು. ಅಪಹರಿಸಿದ ಬಸ್ಸನ್ನು ಅವರು ಓಡಿಸಿಕೊಂಡು ಹೋಗಿದ್ದು ಎಲ್ಲಿ ಗೊತ್ತೆ?  ಇಸ್ರೇಲಿನ ಅತಿ ಮುಖ್ಯ, ಗೌಪ್ಯ ಡಿಮೋನಾ ಅಣುಸ್ಥಾವರದ ಕಡೆ. ಅಣುಸ್ಥಾವರ ಮುಟ್ಟಿ  ಅಲ್ಲಿ ವಿಧ್ವಂಸಕ ಕೃತ್ಯ  ಮಾಡುವದು ದೂರ ಉಳಿಯಿತು ಬಿಡಿ. ಅಲ್ಲಿಂದ ಸುಮಾರು ದೂರವಿದ್ದಾಗಲೇ ನುರಿತ ಕಮಾಂಡೋಗಳು ಸ್ಪೆಷಲಿಸ್ಟ್ ಕಾರ್ಯಾಚರಣೆ ನೆಡಸಿ, ಉಗ್ರರನ್ನು ಕೊಂದು, ಅವತ್ತಿನ ಆತಂಕವನ್ನು ದೂರಮಾಡಿದ್ದರು. ಆದ್ರೆ ಕೆಲ ಜನ ಉಗ್ರಗಾಮಿಗಳನ್ನು ಬಂಧಿಸಿದ ನಂತರ ಅವರನ್ನು ಕೋಲ್ಡ್ ಬ್ಲಡ್ ನಲ್ಲಿ ಎನ್ಕೌಂಟರ್ ಮಾಡಿದ್ದು ಮಾತ್ರ ಇಸ್ರೇಲಿಗೆ ಕೆಟ್ಟ ಹೆಸರು ತಂದಿತ್ತು.

ಇದರ ನಂತರ ದೊಡ್ಡ ಮಟ್ಟದ ತನಿಖೆ ಆಯಿತು. ಅಣುಸ್ಥಾವರದ ಮೇಲೆ ದಾಳಿ ಮಾಡಲು ಸ್ಕೀಮ್ ಹಾಕಿದ್ದ ಅಬು ಜಿಹಾದನನ್ನು ಉಳಿಸಿದರೆ ಮತ್ತೂ ಖತರ್ನಾಕ್ ಯೋಜನೆಗಳನ್ನೇ ಹಾಕಿಯಾನು ಅಂತ ಅವನಿಗೆ ಒಂದು ಸಾಲಿಡ್ ಮುಹೂರ್ತವಿಡಲು ಇಸ್ರೇಲ್ ನಿರ್ಧರಿಸಿಯೇ ಬಿಟ್ಟಿತು.

ಅಬು ಜಿಹಾದ್ ಈಗಿತ್ತಲಾಗೆ ಅಲ್ಲೇ ಟ್ಯೂನಿಸ್ ನಲ್ಲಿಯೇ ಸೆಟಲ್ ಆಗಿದ್ದ. ಅವನಿಗೂ ಸುಳಿವು ಹತ್ತಿತ್ತು ಅಂತ ಕಾಣುತ್ತದೆ. ತುಂಬಾ ಕೇರ್ಫುಲ್ ಆಗಿ ಇರುತ್ತಿದ್ದ. ಎಕ್ಸಟ್ರಾ ಸೆಕ್ಯೂರಿಟಿ ಇಟ್ಟುಗೊಂಡಿದ್ದ. ಟ್ಯೂನಿಸಿಯನ್ ಸರ್ಕಾರ ಕೂಡ ಈ ಪ್ಯಾಲೆಸ್ಟೈನ್ ಮಂದಿ ಇದ್ದ ಕಡೆ ದೊಡ್ಡ ಪ್ರಮಾಣದ ಕಾವಲು ಹಾಕಿತ್ತು.

ಈ ಅಬು ಜಿಹಾದ್ ನನ್ನು ಎನ್ಕೌಂಟರ್ ಮಾಡುವ ಪ್ರಾಜೆಕ್ಟಿನ ಪ್ರಾಜೆಕ್ಟ್ ಮ್ಯಾನೇಜರ್ ಆದವರು ಏಹೂದ್ ಬರಾಕ್. ಈಗ ಇಸ್ರೇಲಿನ ರಕ್ಷಣಾ ಮಂತ್ರಿ ಆಗಿದ್ದಾರೆ. ಆಗ ಇಸ್ರೇಲಿನ ಸೈನ್ಯದ ಮುಖ್ಯಸ್ಥರಾಗಿದ್ದರು. ಬರಾಕ್ ಮೊದಲು "ಸೆಯೇರೆಟ್ ಮಟ್ಕಾಲ್ " ಎಂಬ ಸಿಕ್ಕಾಪಟ್ಟೆ ಖತರ್ನಾಕ್ ಕಮಾಂಡೋ ಪಡೆಯಲ್ಲಿ ಕಮಾಂಡೋ ಆಗಿದ್ದರು. ನಂತರ ಅದರ ನಾಯಕರೂ ಆಗಿದ್ದರು. 1968 ರಲ್ಲಿ ಲೈಲಾ ಖಾಲೆದ್ ಎಂಬ ಪ್ಯಾಲೆಸ್ಟೈನ್ ಯುವತಿ ಮತ್ತು ಆಕೆಯ ಸಹಚರರು ವಿಮಾನ ಅಪಹರಿಸಿದಾಗ, ವಿಮಾನದ ರಿಪೇರಿ ಮಾಡುವವರ ವೇಷದಲ್ಲಿ ಕೇವಲ 8-10 ಜನ ಕಮಾಂಡೋಗಳೊಂದಿಗೆ ದಾಳಿ ಮಾಡಿ, ಕರಾರುವಕ್ಕಾಗಿ ಕೆಲ ಉಗ್ರರ ಬುರುಡೆಗೆ ಗುಂಡು ಹೊಡೆದು, ಉಳಿದವರನ್ನು ಬಂಧಿಸಿ ಎಲ್ಲ ಪ್ರಯಾಣಿಕರನ್ನು ಸೇಫಾಗಿ ಬಿಡುಗಡೆ ಮಾಡಿದ ಕಾರ್ಯಾಚರಣೆಯಿಂದ ಅವರಿಗೆ ದೊಡ್ಡ ಮಟ್ಟದ ಹೆಸರು ಬಂದಿತ್ತು.

ಮುಂದೆ ಮ್ಯೂನಿಕ್ ಒಲಂಪಿಕ್ ಇಸ್ರೇಲಿ ಕ್ರೀಡಾಪಟುಗಳ ಅಪಹರಣ ಮತ್ತು ಹತ್ಯಾಕಾಂಡದ ನಂತರ ಇಸ್ರೇಲಿ ಕಮಾಂಡೋಗಳು 1973 ರಲ್ಲಿ ಸೀದಾ ಬಿರೂಟ ನಗರದ ಹೃದಯ ಭಾಗಕ್ಕೆ ನುಗ್ಗಿ, ಅಪಾರ್ಟ್ಮೆಂಟ್ ಒಂದರಲ್ಲಿ ಇದ್ದ ನಾಕು ಜನ ದೊಡ್ಡ ಮಟ್ಟದ ಪ್ಯಾಲೆಸ್ಟೈನ್ ಉಗ್ರಗಾಮಿಗಳಿಗೆ ದೇವರ ಕಡೆ ಹೋಗುವ ಟಿಕೆಟ್ ಕೊಟ್ಟಿದ್ದರಲ್ಲ, ಅದರಲ್ಲೂ ಏಹೂದ್ ಬರಾಕ್ ತುಂಬ ಪ್ರಮುಖ ಪಾತ್ರ ವಹಿಸಿದ್ದರು. ಮುಕಿ ಬೆಟ್ಸರ್ ಎಂಬ ಮತ್ತೊಬ್ಬ ಕಮಾಂಡೋ ಮತ್ತು ಇವರು ರೋಮಾಂಟಿಕ್ ಜೋಡಿ ತರಹ ಉಗ್ರರ ಅಪಾರ್ಟ್ಮೆಂಟ್ ಹತ್ತಿರ ಹೋಗಿದ್ದರು. ಬ್ಲಾಂಡ್ ಹುಡುಗಿಯ ಕೆಂಚುಕೂದಲ ವಿಗ್ ಹಾಕಿಕೊಂಡಿದ್ದ ಬರಾಕ್ ತಮ್ಮ ಸ್ಪೆಷಲ್ ಬ್ರಾದಲ್ಲಿ ಎರಡು ಗ್ರೆನೇಡ್ ಇಟ್ಟುಕೊಂಡಿದ್ದರಂತೆ. ಲಂಗದ ಸ್ಪೆಷಲ್ ಕಿಸೆಗಳಲ್ಲಿ ಬೇರೆ ಬೇರೆ ಆಯುಧಗಳು, ನಕ್ಷೆಗಳು, ಬಾಕುಗಳು. ಕಮಾಂಡೋ ಡ್ರೆಸ್ಸಿನಲ್ಲಿ ಹೋಗುವಹಾಗಿರಲಿಲ್ಲ. ಅದಕ್ಕೆ ಹಾಕಿಕೊಂಡ ವಸ್ತ್ರಗಳನ್ನೇ ವಿಶೇಷವಾಗಿ ಮಾರ್ಪಡಿಸಿಕೊಂಡಿದ್ದರು ಕಮಾಂಡೋಗಳು. ಆ ಕಾರ್ಯಾಚರಣೆ 'operation spring of youth' ಅಂತ ಫೇಮಸ್ ಆಗಿತ್ತು. ಅದಾದ ನಂತರ ಉಗ್ರಾಗಾಮಿಗಳ ಕಾಟ ಸ್ವಲ್ಪ ಕಮ್ಮಿ ಆಗಿತ್ತು. ಅರಾಫತ್ ಮತ್ತು ಇತರ ಉಗ್ರಾಗಾಮಿಗಳಿಗೆ "ನಿಂತ್ರೆ ಕೂತ್ರೆ ಅವರದ್ದೇ ಧ್ಯಾನ, ಮನಸಿಗಿಲ್ಲ ಸಮಾಧಾನ, ಅವರಿಗೆ ಎಂತಾ ಬಿಗುಮಾನ" ಅನ್ನುವ ಹಾಡಿನ ಹಾಗೆ ಕನಸಿನಲ್ಲೂ ಇಸ್ರೇಲಿಗಳು ಬಂದು ತಮ್ಮ ಗೇಮ್ ಬಾರಿಸಿದ ಹಾಗೆ  ಕೆಟ್ಟ ಕೆಟ್ಟ ಕನಸುಗಳು.

ಈ ತರಹ ಹಲವಾರು ದೊಡ್ಡ ಮಟ್ಟದ ಅತಿ ರಹಸ್ಯ, ಅತಿ ಡೇಂಜರಸ್ ಕಾರ್ಯಾಚರಣೆಗಳಲ್ಲಿ ಪಳಗಿದ್ದ ಏಹೂದ್ ಬರಾಕ್ ಸ್ಕೆಚ್ ಹಾಕಲು ಕುಳಿತರೆ ತಪ್ಪುವ ಚಾನ್ಸೇ ಇಲ್ಲ. ಅಬು ಜಿಹಾದ್ ನ ತಿಥಿಗೆ ಮುಹೂರ್ತ ಪಕ್ಕಾ ಆಗುತ್ತಿತ್ತು.

ಮೊದಲೇ ಹೇಳಿದಂತೆ ಟ್ಯೂನಿಸ್ ಇಸ್ರೇಲಿನಿಂದ ತುಂಬಾ ದೂರ. ಮತ್ತೆ ಕಮಾಂಡೋ ಕಾರ್ಯಾಚರಣೆ ಆದ್ದರಿಂದ ವಿಮಾನದಲ್ಲಿ ಹೋಗಿ ಬರುವದು ಕಷ್ಟ. ಹಾಗಾಗಿ ಸಮುದ್ರದ ಮೂಲಕ ಹೋಗುವದೆಂದು ತಿರ್ಮಾನ ಮಾಡಲಾಯಿತು. ಇಸ್ರೇಲಿ ನೇವಿಯ ಮಿಸ್ಸೈಲ್ ಬೋಟೊಂದು ಎರಡು ಕಮಾಂಡೋ ಪಡೆಗಳನ್ನು ತುಂಬಿಕೊಂಡು ಟ್ಯೂನಿಸ್ ಕಡೆ ಹೊರಟಿತು. ಒಂದು "ಸೆಯೇರೆಟ್ ಮಟ್ಕಾಲ್ " ಕಮಾಂಡೋಗಳ ತಂಡ. ಇನ್ನೊಂದು ಇಸ್ರೇಲಿ ನೇವಿಯ "ಫ್ಲೋಟಿಲ್ಲಾ" ಎಂಬ ಸ್ಪೆಷಲಿಸ್ಟ್ ಕಮಾಂಡೋ ತಂಡ. ಟ್ಯೂನಿಸ್ ಹತ್ತಿರ ಹೋದ ಮಿಸ್ಸೈಲ್ ಬೋಟ್ ಅಂತರಾಷ್ಟ್ರೀಯ ಸಮುದ್ರದಲ್ಲಿ ಲಂಗರು ಹಾಕಿತು.

ಈ ಕಡೆ ಪ್ರಾಜೆಕ್ಟ್ ಮ್ಯಾನೇಜರ್ ಏಹೂದ್ ಬರಾಕ್ ಮತ್ತು ಇತರೇ  ಮುಖ್ಯ ಜನರನ್ನು ಹೊತ್ತ ಒಂದು ದೊಡ್ಡ B-27 ವಿಮಾನವೊಂದು ಟೆಲ್-ಅವಿವ್ ನಿಂದ ಹಾರಿತು. ಈ ಕಾರ್ಯಾಚರಣೆಗೆಂದೇ ವಿಮಾನವನ್ನು ಸ್ಪೆಶಲ್ಲಾಗಿ ಪರಿವರ್ತಿಸಲಾಗಿತ್ತು. ಅದು ಬರಾಕ್ ಅವರ "ಹಾರುವ ಕಮಾಂಡ್ ಸೆಂಟರ್". ಅಲ್ಲಿಂದ ಅವರು ಕಾರ್ಯಾಚರಣೆ ನಿಯಂತ್ರಿಸುತ್ತಿದ್ದರು. ಟ್ಯೂನಿಸ್ ನಗರದ ಮೇಲೆ ಅತಿ ಎತ್ತರದಲ್ಲಿ ರೇಡಾರ್ ಗಳ ಪರೀಧಿಯಿಂದ ದೂರದಲ್ಲಿ ವಿಮಾನ ಸುತ್ತು ಹೊಡೆಯುತ್ತಿತ್ತು. ಇಂಧನ ಖಾಲಿಯಾದ ಹಾಗೆ ಇಂಧನ ತುಂಬುವ ಟ್ಯಾಂಕರ್ ವಿಮಾನ ಬಂದು ಇಂಧನ ತುಂಬಿಸುತ್ತಿತ್ತು. ಎಲ್ಲ ಕಡೆ ಸ್ಯಾಟೆಲೈಟ್ ಸಂಪರ್ಕ ಇತ್ತು.

ಬಹಳ ಮೊದಲೇ ಟ್ಯೂನಿಸ್ ನಲ್ಲಿ ಬೇಹುಗಾರಿಕೆ ಸಂಸ್ಥೆಯಾದ ಮೊಸ್ಸಾದ್ ನ ಜನ ಮಾರು ವೇಷದಲ್ಲಿ ಹೋಗಿ ಅಬು ಜಿಹಾದ್ ಗೆ ನೀಟಾಗಿ ಫೀಲ್ಡಿಂಗ್ ಹಾಕುತ್ತಿದ್ದರು. ಅವನ ಚಲನವಲನ, ಟೈಮಿಂಗ್, ಹ್ಯಾಬಿಟ್ಸ್ ಎಲ್ಲ ಗಮನಿಸಿ ಕರೆಕ್ಟಾಗಿ ಮಾಹಿತಿ ಸಪ್ಲೈ ಮಾಡಿದ್ದರು. ಅದನ್ನು ಉಪಯೋಗಿಸಿ ಬರಾಕ್ ಮಾಸ್ಟರ್ ಪ್ಲಾನ್ ಮಾಡಿದ್ದರು. ರಿಯಲ್ ಟೈಮ್ ಮಾಹಿತಿ ಅವರ ಕಮಾಂಡ್ ಸೆಂಟರ್ ಗೆ ಬಂದು ಮುಟ್ಟಿ , ಕಮಾಂಡೋಗಳಿಗೆ ರವಾನೆ ಆಗುತ್ತಿತ್ತು.

ಏಪ್ರಿಲ್ 16, 1988 ಮುಹೂರ್ತದ ದಿನ. ಬಂದೇ ಬಿಟ್ಟಿತು.

ರಾತ್ರಿ ಕಗ್ಗತ್ತಲಲ್ಲಿ ಮಿಸ್ಸೈಲ್ ಬೋಟಿನಿಂದ ಹೊರಟ "ಫ್ಲೋಟಿಲ್ಲಾ" ಕಮಾಂಡೋಗಳು ಟ್ಯೂನಿಸ್ ನಗರದ ನಿರ್ಜನ  ಬೀಚೊಂದರ ಮೇಲೆ ತಮ್ಮ ರಬ್ಬರ್ ದೋಣಿಗಳಲ್ಲಿ ಬಂದು ಇಳಿದರು. ಬೀಚ್ ಏರಿಯಾವನ್ನು ಫುಲ್ ಕಂಟ್ರೋಲಿಗೆ ತೆಗೆದುಕೊಂಡು ಕಾರ್ಯಾಚರಣೆ ಮುಗಿಯುವರೆಗೆ ಕಾಯುವದು ಅವರ ಕೆಲಸ. ಬೀಚನ್ನು ತಮ್ಮ ವಶಕ್ಕೆ ತೆಗೆದುಕೊಂಡವರೇ ಟ್ಯೂನಿಸ್ ನಗರದಲ್ಲಿ ಕಾರು, ವ್ಯಾನುಗಳ ಜೊತೆ ತಯಾರಾಗಿದ್ದ ಮೊಸ್ಸಾದ್ ಬೇಹುಗಾರರಿಗೆ 'ಕೋಸ್ಟ್ ಇಸ್ ಕ್ಲೀರ್" ಅಂತ ಸಂದೇಶ ಕಳಿಸಿದರು. ಅವರು ಬೀಚಿನತ್ತ ಹೊರಟರು. ಇತ್ತ "ಸೆಯೇರೆಟ್ ಮಟ್ಕಾಲ್ " ಕಮಾಂಡೋ ಪಡೆಗೂ "ಹೊರಟು ಬನ್ನಿ" ಅಂತ ಮೆಸೇಜ್ ಹೋಯಿತು. ಮೇಲೆ ವಿಮಾನದಲ್ಲಿ ಕುಳಿತಿದ್ದ ಬರಾಕ್ "ಗೋ ಅಹೆಡ್" ಕೊಟ್ಟರು.

"ಸೆಯೇರೆಟ್ ಮಟ್ಕಾಲ್ " ಕಮಾಂಡೋಗಳು ಸಹ ರಬ್ಬರ್ ದೋಣಿಗಳಲ್ಲಿ ಸರಸರ ಬಂದು ಬೀಚಿನ ಮೇಲೆ ಲ್ಯಾಂಡ್ ಆದರು. ಅದೇ ವೇಳೆಗೆ ಮೊಸ್ಸಾದ್ ಜನ ಸಹಿತ ತಮ್ಮ ಕಾರು ವ್ಯಾನುಗಳ ಸಮೇತ ಬೀಚಿಗೆ ಬಂದರು. "ಸೆಯೇರೆಟ್ ಮಟ್ಕಾಲ್ " ಕಮಾಂಡೋಗಳು ಕಾರು ವ್ಯಾನುಗಳಲ್ಲಿ ತಮ್ಮ ಫುಲ್ ಕಿಟ್ ನೊಂದಿಗೆ ತೂರಿಕೊಂಡರು. ಆ ಕಡೆಯಿಂದ ಅಬು ಜಿಹಾದನ ಮನೆಯನ್ನು ಗಮನಿಸುತ್ತಿದ್ದ ಜನರಿಂದ "ಕ್ಲೀರ್" ಅಂತ ಮೆಸೇಜ್ ಬಂದೇ ಬಿಟ್ಟಿತು. ಈಗ ತಂಡ ಟ್ಯೂನಿಸ್ ನಗರದತ್ತ ಹೊರಟಿತು. ಫ್ಲೋಟಿಲ್ಲಾ ಕಮಾಂಡೋಗಳು ಕತ್ತಲಲ್ಲಿ ಬೀಚನ್ನು, ತಮ್ಮ ದೋಣಿಗಳನ್ನು ಕಾಯುತ್ತ ನಿಂತಿದ್ದರು.

ಅದು ಟ್ಯೂನಿಸ್ ಎಲೆಕ್ಟ್ರಿಕ್ ಬೋರ್ಡಿನ ಜನರಿಗೆ ದುಡ್ಡು ಕೊಟ್ಟು ಕರೆಂಟ್ ತೆಗೆಸಿದ್ದರೋ, ಅಥವಾ ಆ ಏರಿಯದ ಟ್ರಾನ್ಸ್ಫಾರ್ಮರಿಗೇ ಚಿಕ್ಕ ಬಾಂಬಿಟ್ಟು  ಸ್ಪೊಟಿಸಿದ್ದರೋ ಗೊತ್ತಿಲ್ಲ. ರಾತ್ರಿ 1.30 ಹೊತ್ತಿಗೆ ಕಿಲ್ಲರ್ ಕಮಾಂಡೋಗಳು ಅಲ್ಲಿ ಅಬು ಜಿಹಾದ್ ಮನೆಯ ಹತ್ತಿರ ಹೊಂಚು ಹಾಕಿ ದಡಕ್ಕೆ ಬರುತ್ತಿದ್ದ ಮೊಸಳೆಗಳಂತೆ ಬರುತ್ತಿದ್ದರೆ, ಸುತ್ತ ಪೂರ್ತಿ ಕಗ್ಗತ್ತಲು ಆವರಿಸಿತ್ತು.

ಅಬು ಜಿಹಾದ್ ಮನೆಯಲ್ಲೇ ಇದ್ದಾನೆ ಅನ್ನುವದನ್ನು ಡಬಲ್, ಟ್ರಿಪಲ್ ಖಚಿತ ಮಾಡಿಕೊಳ್ಳಬೇಕಿತ್ತು. ಅವನ ಮನೆಯ ಸುತ್ತ ಗಮನಿಸುತ್ತಿದ್ದ ಮೊಸ್ಸಾದ್ ಬೇಹುಗಾರರು ಮನೆಗೆ ಬಂದಿದ್ದಾನೆ ಅಂತ ರೀಯಲ್ ಟೈಮ್ ಮಾಹಿತಿ ಕೊಟ್ಟಿದ್ದರು. ಮೇಲೆ ಸುತ್ತುತ್ತಿದ್ದ ವಿಮಾನದ ಕಮಾಂಡ್ ಸೆಂಟರ್ ನಿಂದ ಒಬ್ಬ ಅರೇಬಿಕ್ ಭಾಷಾ ತಂತ್ರಜ್ಞನೊಬ್ಬ ಅಬು ಜಿಹಾದನ ಮನೆಯ ನಂಬರಿಗೆ ಫೋನ್ ಮಾಡಿದ. ಆ ಮಟ್ಟದ ಸಂಪರ್ಕ ವ್ಯವಸ್ಥೆ ಇತ್ತು. ಹೆಚ್ಚಾಗಿ ಆ ಕಾಲ್ ವಿಮಾನದಿಂದ, ಸಾಟೆಲೈಟ್  ಮೂಲಕ, ಎಲ್ಲೆಲೋ ಹೋಗಿ, ಟ್ಯೂನಿಸ್ ಗೆ ರೌಟ್ ಆಗಿ, ಅಬು ಜಿಹಾದನ ಮನೆಯ ಏಕ್ದಂ ಖಾಸ್ ಫೋನ್ ಟ್ರಿನ್, ಟ್ರಿನ್ ಅಂದಿತ್ತು.

ಫೋನ್ ಎತ್ತಿದ ಅಬು ಜಿಹಾದ್ ಹಲೋ ಅಂದ.

ಈ ಕಡೆ ಅರೇಬಿಕ್ ಭಾಷಾ ತಂತ್ರಜ್ಞ ಪಕ್ಕಾ ಪ್ಯಾಲೆಸ್ಟೈನ್ ಜನರ ತರಹ "ಅಸಲ್ಲಾಮ್ ಅಲೈಕುಂ" ಅಂದ. ಪದ್ಧತಿಯಂತೆ ಅಬು ಜಿಹಾದ್ "ವಾಲೈಕುಂ ಸಲಾಂ" ಅಂದ. ಲೈನ್ ಕಟ್ಟಾಯಿತು. ಯಾರೋ ಪಿರ್ಕಿ ಫೋನ್ ಮಾಡಿ ಕಟ್ಟ ಮಾಡಿದ ಅಂತ ಅಬು ಜಿಹಾದ್ ಫೋನಿಟ್ಟು ಹೊರಟ.

ಚಕಚಕನೆ ಆ ಸಂಭಾಷಣೆಯನ್ನು ಅಬು ಜಿಹಾದನ ಧ್ವನಿ ಸ್ಯಾಂಪಲ್ ನೊಂದಿಗೆ ಕಂಪೇರ್ ಮಾಡಲಾಯಿತು. ಪಾಸಿಟಿವ್ ಅಂತ ಬಂತು.

ಮೇಲಿಂದ ಯೆಹುದ್ ಬರಾಕ್ "ಅಟ್ಟ್ಯಾಕ್" ಅಂತ ಫೈನಲ್ ಕ್ಲಿಯರನ್ಸ್ ಕೊಟ್ಟರು.

ಕಮಾಂಡೋಗಳು ಮೊದಲೇ ಸಾವಿರ ಸಲ ರೀಹರ್ಸಲ್ ಮಾಡಿದ್ದ ಪ್ಲಾನಿನ ಆಚರಣೆ ಶುರು ಮಾಡಿದರು. ಮೊದಲು ಗೇಟಿನ ಸುತ್ತ ಮುತ್ತ ಇದ್ದ ಕಾವಲಿನವರನ್ನು ಸೈಲೆನ್ಸರ್ ಹಚ್ಚಿದ ಪಿಸ್ತೂಲಿನಿಂದ ಖತಂ ಮಾಡಲಾಯಿತು. ಕಮಾಂಡೋಗಳು ಮೇನ್ ಡೋರಿನತ್ತ ಓಡಿದರು.ಅಲ್ಲಿ ಇನ್ನೊಬ್ಬ ಇದ್ದ. ಅವನ ಕತ್ತು ತರಿಯಲಾಯಿತು. ಸತ್ತ ಅವನು.

ಬಾಗಿಲಿನ ಹಿಂಜಿಗೆ ಸ್ಪೋಟಕ ಇಟ್ಟವರೇ ನಾಕು ಫೂಟ್ ಹಿಂದೆ ಸರಿದರು. ಚಿಕ್ಕ ಟಪ್ ಅನ್ನುವ ಶಬ್ದದೊಂದಿಗೆ ಹಿಂಜಿನ ಸಮೇತ ಬಾಗಿಲು ಕಿತ್ತು ಬಂತು. ಅದನ್ನು ಪಕ್ಕಕ್ಕೆ ಇಟ್ಟವರೇ, ತಮ್ಮ ನೈಟ್ ವಿಶನ್ ಗಾಗಲ್ ಅಡ್ಜಸ್ಟ್ ಮಾಡಿಕೊಂಡ ಮೂರು ಜನ ಕಮಾಂಡೋಗಳು ಸರಸರನೆ ಒಳಗೆ ನುಗ್ಗಿದರೆ ಉಳಿದವರು ಮನೆ ಸುತ್ತ ಸುರಕ್ಷಿತ ಪೆರಿಮೀಟರ್ ಹಾಕಿಕೊಂಡು ಕಾಯುತ್ತ ನಿಂತರು.

ಅಬು ಜಿಹಾದನ ಮನೆಯ ಮೂಲೆ ಮೂಲೆಯ ಮಾಹಿತಿ ಇತ್ತು. ಅದೇ ಮಾದರಿಯ ಮನೆಯೊಂದರ ಮಾಡೆಲ್ ಮಾಡಿಕೊಂಡು ಹಲವಾರು ಬಾರಿ ರೀಹರ್ಸಲ್ ಮಾಡಿ ಪರ್ಫೆಕ್ಟ್ ಆಗಿದ್ದರು.

ಸೀದಾ ಅಬು ಜಿಹಾದನ ಬೆಡ್ ರೂಮಿನತ್ತ ನುಗ್ಗಿದರು. ಕತ್ತಲು. ಅವನ ಬೆಡ್ರೂಮ್ ಮೊದಲ ಮಹಡಿಯಲ್ಲಿತ್ತು. ಸ್ವಲ್ಪ ಮಟ್ಟಿನ ಗದ್ದಲ ಕೇಳಿದ ಉಗ್ರಗಾಮಿ ತಡವರಿಸುತ್ತ ಸ್ಟೇರಕೇಸ್ ಹತ್ತಿರ ಬಂದ. ನೈಟ್ ವಿಶನ್ ಗಾಗಲ್ಸ್ ನಲ್ಲಿ ಕಣ್ಣಿಗೆ ಬಿದ್ದ ಕೂಡಲೇ ಗುಂಡಿನ ಮಳೆಗರಿದೇ ಬಿಟ್ಟರು ಇಬ್ಬರು ಕಮಾಂಡೋಗಳು. ಕೆಲವೇ ಸೆಕೆಂಡುಗಳಲ್ಲಿ 60-70 ಗುಂಡು ನುಗ್ಗಿಸ್ಸಿದ್ದರಂತೆ. ಒಬ್ಬ ಸ್ಪೆಷಲ್ ವೀಡಿಯೊ ಕ್ಯಾಮರಾದಲ್ಲಿ ಈ "ಶೂಟಿಂಗಿನ" ಶೂಟಿಂಗ ಮಾಡುತ್ತಿದ್ದ.

ಇತ್ತ ಕಡೆ ಅಬು ಜಿಹಾದ್ ನೆಲಕ್ಕೆ ಉರುಳುತ್ತಿದ್ದಂತೆ ಕಮಾಂಡೋಗಳು ಮನೆಯನ್ನು ಶೋಧಿಸಿ ಸುಮಾರು ದಾಖಲೆ ಇತ್ಯಾದಿ ವಶಪಡಿಸಿಕೊಂಡರು. ಅಬು ಜಿಹಾದನ ಹೆಂಡತಿ ಇಂತಿಸ್ಸಾರ್ ಮತ್ತು ಮಕ್ಕಳ ಮುಂದೆಯೇ ಹತ್ಯಾಕಾಂಡ ನೆಡದು ಹೋಗಿತ್ತು. ಅವರಿಗೆ ಏನೂ ಆಗಿರಲಿಲ್ಲ. ಗಂಡ, ಅಪ್ಪ ಹೋಗಿದ್ದು ಒಂದು ಬಿಟ್ಟರೆ.

ಕೆಲವೇ ಮಿನಿಟುಗಳಲ್ಲಿ ಮುಗಿದು ಹೋದ ಕಾರ್ಯಾಚರಣೆ ಇದು. ಅಬು ಜಿಹಾದ್ ಸ್ಟೇರ್ ಕೇಸ್ ಮೇಲೆ ಕಂಡ ನಂತರ ಕೆಲವೇ ಸೆಕೆಂಡುಗಳು. ಅಷ್ಟೇ.

ಮನೆಯಿಂದ ಹೊರ ಬಂದವರೇ ಮತ್ತ ತಮ್ಮ ತಮ್ಮ ಕಾರು ವ್ಯಾನುಗಳಲ್ಲಿ ತೂರಿಕೊಂಡು ಬೀಚಿನತ್ತ ಹೊರಟರೆ ದಾರಿಯಲ್ಲಿ ಟ್ಯೂನಿಸ್ ಪೊಲೀಸರು ಕೆಂಪು ದೀಪ ಹಾಕಿಕೊಂಡು ಅಬು ಜಿಹಾದ್ ಮನೆ ಕಡೆ ಧಾವಿಸುತ್ತಿದ್ದರು. ವಾಪಸ್ ಹೋಗುತ್ತಿದ್ದ ಇಸ್ರೇಲಿಗಳು ನಕ್ಕಿರಬೇಕು. ಹೋಗಿ ಹೆಣ ಕಾಯಲು ಹೋಗಿ - ಅಂತ.

ಬೀಚ್ ಕಾಯುತ್ತಿದ್ದ "ಫ್ಲೋಟಿಲ್ಲಾ" ಕಮಾಂಡೋಗಳು ಮತ್ತೊಮ್ಮೆ ಎಲ್ಲ ಚೆಕ್ ಮಾಡಿ ಬೀಚ್ ಕ್ಲೀರ್ ಅಂತ ಮೆಸೇಜ್ ಕೊಟ್ಟರು. ಕೊಟ್ಟ ಕೆಲವೇ ಕ್ಷಣಗಳಲ್ಲಿ ಬೀಚಿಗೆ ಬಂದು ಮುಟ್ಟಿದ್ದರು ಹಂತಕರು. ಮೊಸ್ಸಾದಿನ ಬೇಹುಗಾರರು, ಕಮಾಂಡೋಗಳನ್ನು ಜೋಡಿಯಾಕ್ ರಬ್ಬರ್ ದೋಣಿಯಲ್ಲಿ ತುಂಬಿದಾಕ್ಷಣ ಎಂಜಿನ್ ಚಾಲೂ ಮಾಡಿಯೇ ಬಿಟ್ಟ ಕಾದು ಕುಳಿತಿದ್ದ ಡ್ರೈವರ್. ಮಿಸ್ಸೈಲ್ ಬೋಟಿಗೆ ವಾಪಸ್ ಪಯಣ. ಮಿಶನ್ ಸಕ್ಸೆಸ್ಸ್.

ಲಾಸ್ಟ್ ಒಂದು ಸಲ ಎಲ್ಲ ಸರಿಯಾಗಿದೆ, ಬೀಚ್ ಮೇಲೆ ಏನೂ ಬಿಟ್ಟಿಲ್ಲ ಅಂತ ಖಚಿತ ಮಾಡಿಕೊಂಡ "ಫ್ಲೋಟಿಲ್ಲಾ" ಕಮಾಂಡೋಗಳು ಬೀಚ್ ಬಿಟ್ಟು ಹೊರಟರು. ಕೆಲ ನಿಮಿಷಗಳ ನಂತರ ಎಲ್ಲರೂ ಇಸ್ರೇಲ್ ನೇವಿಯ ನೌಕೆ ಹತ್ತಿ ಅಂತರಾಷ್ಟ್ರೀಯ ಸಮುದ್ರದಲ್ಲಿ ಶಾಂಪೇನ್ ಬಾಟಲಿ ಬಿರಡೆ ಹಾರಿಸುತ್ತಿದ್ದರೆ, "ಈಗ ತಾನೇ ಬುರುಡೆ ಹಾರಿಸಿ ಬಂದಿದ್ದೀರಿ. ಅದೂ ಅಬು ಜಿಹಾದನದು. ಈಗ ಒಂದಲ್ಲ ಹತ್ತು ಶಾಂಪೇನ್ ಬಾಟಲಿಗಳ ಬಿರಡೆ ಹಾರಿಸಿ"  ಅಂತ ಮೇಲಿಂದ ಯೆಹುದ್ ಬರಾಕ್, ಆ ಕಡೆಯಿಂದ ಇಸ್ರೇಲ್ ಪ್ರಧಾನಿ ಅಭಿನಂದಿಸುತ್ತಿದ್ದರು.

ಒಟ್ಟಿನಲ್ಲಿ ಅರಾಫತ್ ಅಬು ಜಿಹಾದನ ತಿಥಿಗೆ ಏರ್ಪಾಡು ಮಾಡಿಕೊಳ್ಳುತ್ತಿದ್ದರು. ಬೇರೆ ಬೇರೆ ಉಗ್ರಗಾಮಿಗಳು ಹೆಚ್ಚಿನ ಸೆಕ್ಯೂರಿಟಿಗೆ ಆರ್ಡರ್ ಮಾಡುತ್ತಿದ್ದರು. ಅರಬ್ ಗಣ್ಯರೆಲ್ಲ ಟ್ಯೂನಿಸ್ ಗೆ ಬಂದು ಇಳಿಯತೊಡಗಿದ್ದರು - ಅಬು ಜಿಹಾದನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು.

ಹೆಚ್ಚಿನ ಮಾಹಿತಿಗೆ:


** ಇಸ್ರೇಲ್ ಆಫಿಶಿಯಲ್ ಆಗಿ ಇಂತಹ ಕಾರ್ಯಾಚರಣೆಗಳನ್ನು ತಾವು ಮಾಡಿದ್ದೇವೆ ಅಂತ ಒಪ್ಪಿಕೊಳ್ಳುವದಿಲ್ಲ. ಆದ್ರೆ ಆಪ್ತ ಪತ್ರಕರ್ತರಿಗೆ ಸೆನ್ಸಾರ್ ಮಾಡಿದ ಸುದ್ದಿ ಬಿಡುಗಡೆ ಮಾಡುತ್ತದೆ. ಅವರು ಬರೆದ ಮಾಹಿತಿ ನಾವು ಓದಿದ್ದು. ಹಾಗಾಗಿ ಬೇರೆ ಬೇರೆ ಪತ್ರಕರ್ತರು ಬರೆದ ಲೇಖನಗಳಲ್ಲಿ ಸ್ವಲ್ಪ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತದೆ. ಉದಾಹರಣೆಗೆ  -  ಕೆಲ  ಜನ ಅಬು ಜಿಹಾದನನ್ನು ಸ್ಟೇರ್ ಕೇಸ್ ಮೇಲೆ ಮುಗಿಸಿದರು ಅಂದ್ರೆ, ಇನ್ನು ಕೆಲ ಜನ ಇಲ್ಲ ಬೆಡ್ರೂಮ್ ಬೆಡ್ಡಿನ ಮೇಲೆ ಮುಗಿಸಿದರು ಅನ್ನುತ್ತಾರೆ. ಕೆಲ  ಜನ ಏಹುದ್ ಬರಾಕ್ ವಿಮಾನದಲ್ಲಿ ಕುಳಿತು ಇಡೀ ಆಪರೇಶನ್ ಮ್ಯಾನೇಜ್ ಮಾಡುತ್ತಿದ್ದರು ಅಂತ ಬರೆದರೆ, ಇನ್ನು ಕೆಲವರು ಇಲ್ಲ ಬರಾಕ್ ಮಿಸ್ಸೈಲ್ ಬೋಟಿನಲ್ಲಿ ಇದ್ದರು ಅಂತ ಬರೆಯುತ್ತಾರೆ. ವಿಮಾನದಲ್ಲಿ ಇದ್ದವರು ಇನ್ನೊಂದು ಬೇಹುಗಾರಿಕೆ ಸಂಸ್ಥೆಯ ಮುಖ್ಯಸ್ಥರು ಅನ್ನುತ್ತಾರೆ. ಆದರೆ ಅವೆಲ್ಲ ಮೈನ್ಯೂಟ್  ಡೀಟೈಲ್ಸ್. ಒಂದು ಮಾತ್ರ ಖಾತ್ರಿ ಇಸ್ರೇಲಿಗಳು ಎಲ್ಲಿ ಬೇಕಾದರೂ ಹೋಗಿ ಯಾರನ್ನು ಬೇಕಾದರೂ ಎನ್ಕೌಂಟರ್ ಮಾಡಿ ಬರುತ್ತಾರೆ. ಅದು ಅವರ ಹಿಮ್ಮತ್. ಅದಕ್ಕೊಂದು ಸಲಾಂ!

Tuesday, August 21, 2012

ಟ್ಯೂನಿಸ್ಸಿನಲ್ಲಿ ತಿಥಿಗೆ ಮುಹೂರ್ತ (ಭಾಗ 1)

1979 ರಲ್ಲಿ ಅಂದಿನ ಇಸ್ರೇಲಿನ  ಖಡಕ್  ಪ್ರಧಾನಿ ಮೆನಾಕೆಮ್ ಬೆಗಿನ್ ಮತ್ತು ಅವರ ಗರಂ ಖೋಪಡೀ ಸೇನಾನಿ ಏರಿಯಲ್ ಶರೋನ್ ಕೂಡಿ ಪಕ್ಕದ ಲೆಬನಾನನ್ನು ಮುತ್ತಿಗೆ ಹಾಕಿದ್ದರು. ಅಲ್ಲಿ  ಹೊಕ್ಕಿ ಇಸ್ರೇಲ್ ವಿರುದ್ಧ ಕಿತಬಿ ಮಾಡುತ್ತಿದ್ದ ಪ್ಯಾಲೆಸ್ಟೈನ್ ಉಗ್ರಗಾಮಿಗಳನ್ನು ಅಲ್ಲಿಂದ ಪರ್ಮನೆಂಟಲಿ ಓಡಿಸಿ ಬಿಡುವದು ಅವರ ಅಂತಿಮ ಗುರಿ.

ಸುಮಾರು ಮೂರು ವರ್ಷ ಯುದ್ಧ ನಡೆಯಿತು. ತಿಳಿದಷ್ಟು ಸುಲಭ ಆಗಿರಲಿಲ್ಲ ಬೇರೆ ಬೇರೆ ಬಣದ ಬಂಡುಕೋರರನ್ನು ಬಗ್ಗು ಬಡಿದು ಒಂದು ತರಹದ ಖಾಯಂ ಶಾಂತಿ ಸ್ಥಾಪಿಸುವದು. ಆಗಿನ ಅಮೆರಿಕನ್ನರಿಗೆ ವಿಯೆಟ್ನಾಂ ಯುದ್ಧ ಆದ ಹಾಗೆ, ಈಗ ಅಮೇರಿಕಾದವರಿಗೆ ಇರಾಕ್, ಅಫ್ಘಾನಿಸ್ತಾನ್ ಆದ ಹಾಗೆ ಮಾಡಿದಷ್ಟೂ ಮುಗಿಯದ ಯುದ್ಧವಾಗುತ್ತ ಬಂದಿತ್ತು ಈ ಲೆಬನಾನ್ ಯುದ್ಧ ಇಸ್ರೇಲಿಗೆ.

ಲೆಬನಾನಿನಲ್ಲಿ ಕೇವಲ ಯಾಸೀರ್ ಅರಾಫತ್ ಮತ್ತು ಅವರ ಫತಾ ಸಂಘಟನೆ ಒಂದೇ ಇರಲಿಲ್ಲ. ಆಗ ತಾನೇ ಸಿರಿಯಾ ಬೆಂಬಲದಿಂದ ಅರಾಫತ್ ಅವರಿಂದ ಒಡೆದು ದೂರವಾಗಿದ್ದ ಅಬು ಮುಸಾ ಇದ್ದ. ಅರಾಫತರಿಗೆ ತಿರುಗಿ ಬಾರಿಸುತ್ತಿದ್ದ. ಶಿಯಾ ಮುಸ್ಲೀಮರ ಸಂಘಟನೆ "ಹೆಜಬುಲ್ಲಾ" ವಿಪರೀತವಾಗಿ ಮೇಲೆ ಬರುತ್ತಿತ್ತು. ಅದಕ್ಕೆ ಇರಾನ್ ಬೆಂಬಲ. ಲೆಬನಾನಿನವೇ ಆದ ಬೇರೆ ಬೇರೆ ಬಣಗಳಿದ್ದವು. ಬಷೀರ್ ಗೆಮಾಯಲ್ ನೇತೃತ್ವದಲ್ಲಿ ಕ್ರಿಶ್ಚಿಯನ್ ಮಿಲಿಶಿಯಾ "ಫ್ಯಾಲಿಂಜೆ" ಕೂಡ ಇತ್ತು. ಇಸ್ರೇಲ್ ಗೆಮಾಯಲ್ ನನ್ನು ಎತ್ತಿ ಕಟ್ಟುತಿತ್ತು. ಅವನು ಪ್ಯಾಲೆಸ್ಟೈನ್ ಉಗ್ರವಾದಿಗಳನ್ನು ಲೆಬನಾನ್ ನಲ್ಲಿ ಹಿಡಿದು ಬಡಿಯುತ್ತಿದ್ದ. ಇಸ್ರೇಲಿನ ಕೆಲಸ ಮಾಡಿಕೊಡುತ್ತಿದ್ದ. ಒಟ್ಟಿನಲ್ಲಿ ರಾಮ ರಾಡಿ. ಆ ರಾಡಿಯಲ್ಲಿಯೇ ಸಿಕ್ಕ ಮೀನ ಹಿಡಿಯಲು ಅಮೇರಿಕಾದ ಪಡೆಗಳು, ಫ್ರೆಂಚ್ ಪಡೆಗಳು UN ಧ್ವಜದಡಿ ಶಾಂತಿ ಪಾಲನಾ ಪಡೆ ಎಂಬ ರೂಪ ಧರಿಸಿ ಬಂದಿದ್ದವು. ಮೊದಲೇ ಗಣಕಾಗಿದ್ದ ರಾಡಿ ನೀರು ಮತ್ತಷ್ಟು ಬಗ್ಗಡವಾಯಿತು.

ಅಂಥದರಲ್ಲಿಯೇ ಏನೇನೋ ಮಾಡಿ ಒಂದು ಚುನಾವಣೆ ಅಂತ ಮಾಡಲಾಯಿತು. ಮೊದಲೇ ಪ್ಲಾನ್ ಮಾಡಿ ಇಟ್ಟಂತೆ  ಬಷೀರ್ ಗೆಮಾಯಲ್ ಗೆದ್ದ. ಗೆದ್ದು ಇನ್ನೇನು ಪ್ರಧಾನಿ ಆಗಬೇಕು ಅನ್ನುವದರೊಳಗೆ ಅವನ ಕುರ್ಚಿ ಕೆಳಗೇ  ವಿರೋಧಿಗಳು ಇಟ್ಟಿದ್ದ ಮಹಾಬಾಂಬಿಗೆ ಸಿಕ್ಕು ಹರೋಹರೋ ಅಂದು ಮೇಲೆ ಹೋದ. ಅವನ ಪೂರ್ತಿ ಬಿಲ್ಡಿಂಗೇ ನೆಲಸಮವಾಗಿ ಧೂಳೆದ್ದು ಹೋಗಿತ್ತು. ಆ ಮಟ್ಟಿನ ಶಕ್ತಿಶಾಲಿ ಬಾಂಬಾಗಿತ್ತು ಅದು. ಗಮಾಯೆಲ್ ಗೆ ಆಗದ ವಿರೋಧಿ ಬಣಗಳು ಪಶ್ಚಿಮದ ಶಕ್ತಿಗಳಿಗೆ ಸರಿಯಾದ ಟಾಂಗ್ ಕೊಟ್ಟಿದ್ದವು. ಮುಂದೆ ಸೂಸೈಡ್ ಬಾಂಬರ್ಗಳು ಅಮೇರಿಕಾದ ಸೈನ್ಯ ಶಿಬಿರ, ಫ್ರೆಂಚ್ ಶಿಬಿರಗಳ ಮೇಲೆ ದಾಳಿ ಮಾಡಿ 283 ಅಮೆರಿಕಾದ ಸೈನಿಕರನ್ನು, 70-80 ಫ್ರೆಂಚ್ ಸೈನಿಕರನ್ನು ಕೊಂದರು. ಬಷೀರ್ ಗೆಮಾಯಲ್ ಹತ್ಯೆಯ ಪ್ರತಿಕಾರ ಎಂಬಂತೆ ಅವನ ಕಡೆ ಜನ ಪ್ಯಾಲೆಸ್ತೈನಿಯರ ನಿರಾಶ್ರಿತರ ಶಿಬಿರಗಳಿಗೆ ನುಗ್ಗಿ ಹೆಂಗಸರು, ಮಕ್ಕಳನ್ನೂ ಬಿಡದೆ 800-1000 ಜನರ ಮಾರಣಹೋಮ ಮಾಡಿ ಬಿಟ್ಟರು. ಆವಾಗ ಮಾತ್ರ ಅಂತರಾಷ್ಟ್ರೀಯ ಸಮುದಾಯ ಲಬೋ ಲಬೋ ಅಂತ ಬೊಬ್ಬೆ ಹೊಡೆಯಲು ಶುರು ಮಾಡಿತು. ಒಟ್ಟಿನಲ್ಲಿ ಒಂದು ಪರಿಹಾರ ಕಂಡು ಹಿಡಿಯಲೇ ಬೇಕಾಗಿತ್ತು.

"ನಮ್ಮ ಕೈ ಕಟ್ಟಿದ್ದೀರಿ. ಬಿಚ್ಚಿ. ಯಕ್ಕಾಮಕ್ಕಾ ಬಾಂಬಿಂಗ ಮಾಡಿ, ಇಡೀ ಬಿರೂಟ್ ನಗರವನ್ನೇ ನೆಲಸಮ ಮಾಡಿ ಬಿಡುತ್ತವೆ.
ಎಲ್ಲರೂ ಹೋಗುತ್ತಾರೆ. ಖೇಲ್ ಖತಂ. ಪ್ರಾಬ್ಲೆಮ್ ಸಾಲ್ವ್" - ಅಂತ ಅಂದವರು ಇಸ್ರೇಲಿಗಳು. ಅವರಿಗೆ ಸಿವಿಲಿಯನ್ ಜನರಿಗೆ ತೊಂದರೆಯಾಗದಂತೆ ಗಲ್ಲಿ ಗಲ್ಲಿ, ಸಂದಿ ಗೊಂದಿ  ಅಲೆಯುತ್ತ ಸಿವಿಲಿಯನ್ ಹಾಗೆ ಕಂಡು ಮರಾಮೋಸದ ದಾಳಿ ಮಾಡುತ್ತಿದ್ದ ಉಗ್ರಗಾಮಿಗಳ ಜೊತೆ ಯುದ್ಧ ಮಾಡಿ ಸಾಕಾಗಿತ್ತು. ಒಂದು ದೊಡ್ಡ ಮಟ್ಟದ ಬಾಂಬಿಂಗ ಮಾಡಿ ಮುಗಿಸಿಬಿಡೋಣ ಅಂತ ಇತ್ತು ಅವರ ಪ್ಲಾನ್. ಪೂರ್ತಿ ಹತಾಶರಾದವರ - "ಮಾಡಿ ಮುಗಿಸಿಬಿಡೋಣ" - ಅನ್ನೋ ಪ್ಲಾನ್.

"ಇಲ್ಲ....ಇಲ್ಲ....ಹಾಗೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿ ದಕ್ಕಿಸಿಕೊಳ್ಳುವದು ಅಸಾಧ್ಯ. ಬೇರೇನಾದರು  ಮಾಡಬೇಕು. ಲೆಬನಾನಿನಿಂದ ಅರಾಫತ್ ಮತ್ತು ಅವರ ಪಡೆಗಳನ್ನು ಕಳಿಸಿಬಿಟ್ಟರೆ, ದೊಡ್ಡ ಮಟ್ಟದ ತಲೆನೋವು ಕಡಿಮೆಯಾದ ಹಾಗೆ. ಅವರು ಇಸ್ರೇಲಿನಿಂದ ದೂರ ಹೋದಷ್ಟು ಒಳ್ಳೆಯದೇ. ದೂರ ಕುಳಿತು ಇಷ್ಟು ಕಿತಬಿ ಕಿತಾಪತಿ ಮಾಡುವದು ಕಷ್ಟ. ಏನೇ ಆಗಲಿ ಅರಾಫತ್ ಜೀವಂತ ಇರಬೇಕು. ಯಾಕೆಂದರೆ ಅವರನ್ನು ಬಿಟ್ಟರೆ ಬಾಕಿ ಎಲ್ಲ ನಾಯಕರು ಪಕ್ಕಾ ಹುಂಬ ಜನರೇ ಹೊರತೂ ಯಾರಿಗೂ ಒಂದು ಸಮಚಿತ್ತದಿಂದ ಕೂತು  ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವ ಆಸಕ್ತಿ ಇಲ್ಲ. ಬಾಕಿ ಹುಂಬರು ಇರಾಕ್, ಸಿರಿಯಾ, ಇರಾನ್, ಲಿಬಿಯಾ ದೇಶಗಳ ಬಾಡಿಗೆ ಹಂತಕರಾಗಿ ಕೆಲಸ ಮಾಡಿ ದುಡ್ಡು ಮಾಡಿಕೊಳ್ಳುವದರಲ್ಲೇ ನಿರತರು. ಅವರು ಲೆಬನಾನಿನಲ್ಲಿಯೇ ಇದ್ದರೆ ಇರಲಿ. ಇದ್ದು ಹೊಡೆದಾಡಿ ಸತ್ತರೆ ಸಾಯಲಿ." - ಅಂತ ಅಮೇರಿಕ, ಬ್ರಿಟನ್, UN ಗಳ ಅಭಿಮತ.

ಅರಾಫತ್ ಅವರನ್ನು ಎಲ್ಲಿಗೆ ಕಳಿಸುವದು? ತನ್ನ ಸುತ್ತ ಮುತ್ತಲಿನ ದೇಶಗಳಲ್ಲಿ ಅರಾಫತ್ ಇರುವ ಹಾಗಿಲ್ಲ ಅಂತ ಇಸ್ರೇಲ್ ಹೇಳಿ ಬಿಟ್ಟಿತ್ತು. ಮತ್ತೆ ಜೋರ್ಡಾನ್, ಸಿರಿಯಾ, ಇಜಿಪ್ಟ್, ಇರಾಕ್  ದೇಶಗಳಿಗೆ ಅರಾಫತ್ ಸಾಕಾಗಿ ಹೋಗಿದ್ದರು. ಹಾಗಾಗಿ ಬೇರೆ ಯಾವದಾದರು ದೇಶ ಹುಡುಕಬೇಕಾಗಿತ್ತು. ಅಮೇರಿಕನ್ನರು ಒಂದಿಷ್ಟು ಮಿಲಿಯ ಡಾಲರ್ ಹಿಡಿದುಕೊಂಡು ಶಾಪ್ಪಿಂಗ್ ಗೆ ಹೊರಟರು. ತಕ್ಕ ಬೆಲೆಗೆ ಸಿಕ್ಕಿದ್ದು ಉತ್ತರ ಆಫ್ರಿಕಾದ ಚಿಕ್ಕ ದೇಶ ಟ್ಯೂನಿಸಿಯಾ. ರಾಜಧಾನಿ ಟ್ಯೂನಿಸ್ ನಲ್ಲಿ ನೂರಾರು ಎಕರೆ ಜಾಗ ಅರಾಫತ್ ಮತ್ತು ಅವರ ಕೆಲವು ಸಾವಿರ ಉಗ್ರಗಾಮಿಗಳಿಗೆ ಮಂಜೂರ್ ಮಾಡಲಾಯಿತು.

ಮೂರು ವರ್ಷಗಳಿಂದ ಬಿರೂಟ್ ನಗರದ ಯಾವದೋ ಸುಸಜ್ಜಿತ ನೆಲಮಾಳಿಗೆಯಲ್ಲಿ (ಬಂಕರ್) ಅಡಗಿಕೊಂಡು ಕೂತಿದ್ದ ಅರಾಫತ್ ಅವರಿಗೆ ಅಲ್ಲಿಂದ ಬಿಟ್ಟು ರಸ್ತೆಯಲ್ಲಿ ಎರಡು ಹೆಜ್ಜೆ ಹಾಕಲಿಕ್ಕೆ ಭಯ. ಯಾವ ಮಹಡಿಯಿಂದ ಯಾವ ಸ್ನೈಪರ್, ಶಾರ್ಪ್ ಶೂಟರ್ ಬುರುಡೆಗೆ ಗುರಿಯಿಟ್ಟು ಬುರುಡೆ ಬಿಚ್ಚಿ ಮೇಲೆ ಕಳಿಸುತ್ತಾನೋ? ರಸ್ತೆ ಬದಿಯಲ್ಲಿ ಯಾವ ಕಾರ್ ಬಾಂಬ್ ಸ್ಪೋಟವಾಗಿ ಅವರು  ಹೋಗುತ್ತಿರುವ ಕಾರ್ವಾನಿಗೆ ಕಾರವಾನೇ ಭಸ್ಮವಾಗಿ ಹೋಗುತ್ತದೆಯೋ? ಅಂತ ಜೀವ ಭಯ ಅವರಿಗೆ. ಅವರಿಗೆ ಗೊತ್ತಿಲ್ಲದ್ದು ಏನಿದೆ? ಅವರು ಮತ್ತು ಅವರ ಫತಾ ಉಗ್ರಗಾಮಿಗಳೇ ಅಂತಹ ಬೇಕಾದಷ್ಟು ಕೆಲಸ ಮಾಡಿದ್ದರು. ಜಪ್ಪಯ್ಯ ಅಂದ್ರೂ ಅವರ ಬಂಕರ್ ಬಿಟ್ಟು ಬರುವದಿಲ್ಲ ಅಂತ ಹಠ ಹಿಡಿದು ಕೂತಿದ್ದರು ಅರಾಫತ್. ಬಿರೂಟ್ ನಗರದ ಬಂದರಿಗೆ ಅವರನ್ನು ಕರೆದೊಯ್ಯಬೇಕಾಗಿತ್ತು. ಅಲ್ಲಿ ನೌಕೆಗಳು  ಅವರನ್ನು ಮತ್ತು ಅವರ ಸಹಚರರನ್ನು ಟ್ಯೂನಿಸ್  ಗೆ ಕರೆದೊಯ್ಯಲು ತಯಾರಾಗಿ ನಿಂತಿದ್ದವು.

ಹೇಗಪ್ಪಾ....ಈ ಪುಣ್ಯಾತ್ಮ ಅರಾಫತ್ ಅವರನ್ನು ಸೇಫ್ ಆಗಿ ಬಂದರಿಗೆ ಕರೆದೊಯ್ಯುವದು? ಅಂತ ಅಮೆರಿಕ ತಲೆ ಕೆಡಿಸಿಕೊಂಡಿತು. ಹೆಲಿಕಾಪ್ಟರ್ ಬಹಳ ಡೇಂಜರ್. ಒಂದು ರಾಕೆಟ್, ಯಾರೋ ಬಿಟ್ಟಿದ್ದು, ಬಂದು ತಟ್ಟಿದರೆ ಅಷ್ಟೇ. ಮುಗೀತು ಕಥೆ. ಗೋವಿಂದಾ ಗೋವಿಂದ. ಕಡೆಗೆ ಅಮೇರಿಕಾದ ಅಧ್ಯಕ್ಷರು ಉಪಯೋಗಿಸುವ ಲೆವೆಲ್ಲಿನ ಬುಲೆಟ್ ಪ್ರೂಫ್, ಬಾಂಬ್ ಪ್ರೂಫ್ ಕಾರಿನಲ್ಲಿ, ನೇವಿ  ಸೀಲ್  ಕಮಾಂಡೋಗಳ ರಕ್ಷಣೆಯ ಮಧ್ಯೆ ಅರಾಫತ್ ಅವರನ್ನು ಹಡಗುಕಟ್ಟೆಗೆ ಕಳಿಸುವದು ಅಂತ ತೀರ್ಮಾನ ಮಾಡಲಾಯಿತು. ಅಮೇರಿಕ, ಇಂಗ್ಲೆಂಡಗಳಿಂದ ದೊಡ್ಡ ಮಟ್ಟದ ಆಶ್ವಾಸನೆ ಬಂದ ನಂತರವೇ ಅರಾಫತ್ ಪ್ಯಾಂಟ್, ಶರ್ಟ್ ಹಾಕಿಕೊಂಡು, ಚೌರ ಮಾಡಿಸಿಕೊಂಡು ಬಿರೂಟ್ ಬಿಟ್ಟು ಹೊರಡಲು ತಯಾರಾದರು.

ಅವರ ಅದೃಷ್ಟಕ್ಕೆ ಅಮೆರಿಕನ್ನರು ದೊಡ್ಡ ಮಟ್ಟದ ರಕ್ಷಣಾ ವ್ಯವಸ್ಥೆ ಮಾಡಿದ್ದರು. ಅವರ ಬಂಕರನಿಂದ ಬಂದರಿನವರಗಿನ ಹಾದಿಗೆ ದೊಡ್ಡ ಮಟ್ಟದ ಕಾವಲು ಹಾಕಲಾಗಿತ್ತು. ಪ್ರತಿ ಕಟ್ಟಡದ ಮೇಲೆ ಅಮೆರಿಕ, ಫ್ರೆಂಚ್, ಇಸ್ರೇಲ್ ಇತ್ಯಾದಿ ಪಡೆಗಳ ಶಾರ್ಪ್ ಶೂಟರ್ಸ್ ನಿಂತಿದ್ದರು. ಈ ಸಲ ಒಬ್ಬ ಪ್ಯಾಲೆಸ್ಟೈನ್ ಉಗ್ರಗಾಮಿಯನ್ನು ಕಾಯಲಿಕ್ಕೆ. ದೊಡ್ಡ ಪ್ರಮಾಣದ ವಿಪರ್ಯಾಸ ಅಂದ್ರೆ ಇದೇ ಇರಬೇಕು. ಅಲ್ಲಿ ತನಕ ಕೊಲ್ಲಲು ಕಾದಿದ್ದವರೇ ಇಂದು ಕಾಯಲು ನಿಂತಿದ್ದರು.

ಅಂತೂ ಇಂತೂ ಯಾವ ಅವಘಡವಿಲ್ಲದೆ ಅರಾಫತ್ ಬಂದರಿಗೆ ಬಂದು ಮುಟ್ಟಿದರು. ಕಡೆಯಲ್ಲಿ ಒಂದು ಹತ್ತು ಹೆಜ್ಜೆ ಕಾರಿಳಿದು ನಡದೇ ಹೋಗಬೇಕಿತ್ತು. ಅಕ್ಷರಶಃ ನೇವಿ  ಸೀಲ್ ಕಮಾಂಡೋಗಳು ಅರಾಫತ್ ಅವರನ್ನು ತಬ್ಬಿಕೊಂಡು ಹಡಗು ಹತ್ತುವ ಏಣಿಗೆ  ಕರೆದೊಯ್ದರು.

ಅಂತೂ ಇಂತೂ ಟ್ಯೂನಿಸಿಯಾಕ್ಕೆ ಹೋಗುವ ಹಡಗು ಹತ್ತಿದ ಅರಾಫತ್ ಕೊನೆಗೆ ಒಂದು ಸಲ ಲೆಬನಾನ್ ಕಡೆ ತಿರುಗಿ ಕೈ ಬೀಸಿದರು. ಹೋಗಿ ಬರುತ್ತೇನೆ ಅನ್ನುವ ರೀತಿಯಲ್ಲಿ.

"ಆ ಕ್ಷಣದಲ್ಲೂ ಕೂಡ ನನ್ನ ಮತ್ತು ನನ್ನ ತಂಡದ ಶಾರ್ಪ್ ಶೂಟರ್ಗಳ ಬಂದೂಕಿನ ಟೆಲೆಸ್ಕೋಪಿಕ್ ಸೈಟಿನಲ್ಲಿ ಅರಾಫತ್ ಅವರ ಕಾಫಿಯಾ (ಅರಬ್ ಟರ್ಬನ್) ಸುತ್ತಿದ್ದ  ತಲೆಬುರುಡೆ ನೀಟಾಗಿ ಕಾಣುತ್ತಿತ್ತು. ಒಂದು ಆರ್ಡರ್ ನಾನು ಕೊಟ್ಟಿದ್ದರೆ, ನಾಕು ಗುಂಡು ಒಂದೇ ಸಲ ಹಾರಿ ಅವರ ತಲೆಯನ್ನು ಕರ್ಬೂಜಿನಂತೆ ಒಡೆದು ಚೆಲ್ಲುತ್ತಿದ್ದವು. ಹದಿನೈದು ವರ್ಷದಿಂದ ಬೇಟೆಯಾಡುತ್ತಿದ್ದ ಮೃಗವೊಂದಕ್ಕೆ ನಾವೇ ರಕ್ಷಣೆ ಕೊಟ್ಟು ಹೊರಗೆ ಹೋಗಲು ಬಿಡುತ್ತಿದ್ದೇವಾ? ಅಂತ ಅನ್ನಿಸಿತು ನಮಗೆ. ಆದರೂ ಸೈನಿಕರು ನಾವು. ಮೇಲಿಂದ ಬಂದ ಆರ್ಡರ್ ಫಾಲೋ ಮಾಡುವದೇ ನಮ್ಮ ಕೆಲಸ. ಹಾಗಾಗಿ ಆ ಮನುಷ್ಯ ಅರಾಫತ್ ಮತ್ತು ಅವನು ಮಾಡಿದ ಕುಕೃತ್ಯಗಳ ನೆನಪಾಗಿ ರಕ್ತ ಕುದ್ದರೂ, ಯಾರೂ ಬಂದೂಕಿನ ಕುದರೆಯೆಳೆಯಲಿಲ್ಲ" - ಅಂತ ಬರೆದು ಕೊಂಡವರು ಮುಕಿ ಬೆಟ್ಸರ್ ಎಂಬ ಇಸ್ರೇಲಿ ಕಮಾಂಡೋಗಳ ನಾಯಕ. ಅವರ ಅಪ್ರತಿಮ ಪಡೆ ಬಿರೂಟ್ ಬಂದರಿನ ಸುತ್ತ ಅರಾಫತ್ ಅವರನ್ನು ಕಾಪಾಡಿತ್ತು. ಈ ಬೆಟ್ಸರ್  ಮಹಾ ಪ್ರಳಯಾಂತಕ. ಎಂಟಬ್ಬೆಯಲ್ಲಿ ಅಪಹೃತ ವಿಮಾನದ ಪ್ರಯಾಣಿಕರನ್ನು ರಕ್ಷಿಸಿದ ಕಾರ್ಯಾಚರಣೆ ಮತ್ತು ಬಿರೂಟಿನ ಹೃದಯಕ್ಕೆ ಪ್ರವಾಸಿಗರ ರೂಪದಲ್ಲಿ ನುಗ್ಗಿ, ಸೀದಾ ಪ್ಯಾಲೆಸ್ಟೈನ್ ನಾಯಕರ ಅಪಾರ್ಟಮೆಂಟಗಳಿಗೆ ನುಗ್ಗಿ ನಾಲ್ವರನ್ನು ಹತ್ಯೆ ಮಾಡಿದ್ದ ತಂಡದಲ್ಲಿ ಇದ್ದವರು ಮುಕಿ ಬೆಟ್ಸರ್.

ಹೀಗೆ ಬಿರೂಟನಿಂದ ಓಡಿದ ಅರಾಫತ್ ಟ್ಯೂನಿಸ್ ಗೆ ಹೋದರು. ಸೆಟಲ್ ಆದರು. ಅವರ ಫತಾ ಸಂಘಟನೆಯೂ ಸೆಟಲ್ ಆಯಿತು. ಖಾನಾ ಪೀನಾ ಮತ್ತೊಂದು ಎಲ್ಲಾ ಅರೆಂಜ್ ಆಯಿತು. ಆದ ಮೇಲೆ ಮುಂದೇನು? ಪ್ಯಾಲೆಸ್ಟೈನ್ ಸಂಗ್ರಾಮ ಮುಂದುವರಿಸಬೇಕು. ಹೇಗೆ?

ತಾವು ಮತ್ತು ತಮ್ಮ ಖಾಸ್ ಜನ ಟ್ಯೂನಿಸ್ ಗೆ ಬಂದರೂ ಹಲವಾರು ಸಂತೃಸ್ತ ಪ್ಯಾಲೆಸ್ಟೈನ್ ಜನರು ಗಾಜಾ ಪಟ್ಟಿ, ಜೋರ್ಡಾನ್ ನದಿಯ ಪಶ್ಚಿಮ ತೀರ (ವೆಸ್ಟ್ ಬ್ಯಾಂಕ್), ಲೆಬನಾನ್ ನಲ್ಲಿ ಇದ್ದರು. ಅಂದ್ರೆ ಇಸ್ರೇಲ್ ಸುತ್ತ ಮುತ್ತ. ಅವರನ್ನು ಉತ್ತೇಜಿಸಿ ಮತ್ತೆ ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಶುರು ಮಾಡಬೇಕು. ಅದನ್ನು ಇಲ್ಲಿ ಟ್ಯೂನಿಸ್ ನಲ್ಲಿ ಕೂತು ನಿಯಂತ್ರಿಸಬೇಕು. ಅದಕ್ಕೆ ಸರಿಯಾದ ವ್ಯಕ್ತಿ ಯಾರು ಅಂತ ನೋಡಿದ ಆರಾಫತ್ ಅವರಿಗೆ ಕಂಡವನೇ ಅವನು.

ಅಬು ಜಿಹಾದ್. ಅವನೇ ಸರಿ ಅನ್ನಿಸಿತು.

ದೊಡ್ಡ ಮಟ್ಟದ ಕೆಲಸಗಾರ. ದಿನ ರಾತ್ರಿ ಅನ್ನುವದರ ಖಬರಿಲ್ಲದೆ ದುಡಿಯುತ್ತಿದ್ದ. ಮಸ್ತ ಸ್ಕೆಚ್ ಹಾಕುತ್ತಿದ್ದ. ಸ್ಕೀಮಿಂಗ್ ಮಾಡುತ್ತಿದ್ದ. ದೊಡ್ಡ ಮಟ್ಟದ ಪ್ಲಾನಿಂಗ್ ಮಾಡುತ್ತಿದ್ದ.

ಅವನನ್ನು ಕರೆದ ಅರಾಫತ್ ಅವನನ್ನು ತಮ್ಮ ಮುಖ್ಯ operational ಕಮಾಂಡರ್ ಅಂತ ನೇಮಕ ಮಾಡಿ, "ಇಸ್ರೇಲಿಗಳಿಗೆ ಬತ್ತಿ ಇಡು. ಅವರು ನೆಮ್ಮದಿಯಿಂದ ನಿದ್ದೆ ಮಾಡಬಾರದು. ಹಾಕು ಸ್ಕೆಚ್. ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ರಾಕೆಟ್ಗಳ ಸುರಿಮಳೆ ಶುರುವಾಗಲಿ. ಏನು ಬೇಕೋ ಮಾಡು. ದೊಡ್ಡ ಪ್ರಮಾಣದ ಸುದ್ದಿ ಆಗಬೇಕು. ಕಾಸು ಬರಬೇಕು. ಇಸ್ರೇಲ್ ಕೊತ ಕೊತ ಕುದಿಯಬೇಕು. ತಿಳಿಯಿತಾ?" - ಅಂತ ಬ್ಲಾಂಕೆಟ್ ಪರ್ಮಿಶನ್ ಕೊಟ್ಟರು.

ಅಬು ಜಿಹಾದ್ ಹುರುಪಿನಿಂದ ಮೇಲೆದ್ದ. ಸಿಕ್ಕ ಅಧಿಕಾರದಿಂದ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದ. ಇಸ್ರೇಲ್ ವಿರುದ್ಧ ಸ್ಕೆಚ್ ಹಾಕಲು ಶುರು ಮಾಡಿದ.

ಅಬು ಜಿಹಾದ್ ಏನೇನು ಮಾಡಿದ? 

ಅವನ ಕಾಟ ತಡಿಯಲಾಗದ ಇಸ್ರೇಲಿಗಳು ಅವನನ್ನು ಹೇಗೆ ಮೇಲೆ ಕಳಿಸಿಬಿಟ್ಟರು? ಹೇಗೆ "ಅಲ್ಲಾ ಕೋ ಪ್ಯಾರೆ" ಆಗುವಂತೆ ಮಾಡಿದರು? ಅನ್ನುವದೇ ಒಂದು ಅತಿ ರೋಚಕ ಕಾರ್ಯಾಚರಣೆ. ಅದೇ ಟ್ಯೂನಿಸ್ಸಿನಲ್ಲಿ  ತಿಥಿಗೆ ಮುಹೂರ್ತ (ಭಾಗ 2)

ಅದನ್ನು ಮುಂದಿನ ಭಾಗದಲ್ಲಿ ನೋಡೋಣ.

[ಟ್ಯೂನಿಸ್ಸಿನಲ್ಲಿ ತಿಥಿಗೆ ಮುಹೂರ್ತ (ಭಾಗ 2)]

Monday, August 20, 2012

ಪುಂಗಿ ಟ್ರೀಟ್ಮೆಂಟ್

ಸಾಬ್.....ನಮ್ಮ ಜೀನಾ ಹರಾಮ್ ಆಗಿ ಹೋಗಿದೆ......ರಾತ್ರಿಯೊಳಗೆ ನಿದ್ದಿ ಇಲ್ಲಾ.....ದಿನದ ಒಳಗೆ ನೆಮ್ಮದಿ ಇಲ್ಲಾ.....ಒಟ್ಟಿನಲ್ಲಿ ಜಿಂದಗೀನೆ ಹಾಳಾಗ್ ಬುಟ್ಟೈತೆ.....ಅಂತ ಅಂದ ಕರೀಮ್ ನಿಟ್ಟುಸಿರು ಬಿಟ್ಟ.

ಸಾಬ್ರಾ.....ಜಿಂದಗೀನೆ ಹಾಳಾಗ್ ಬುಟ್ಟೈತೆ ಅಂದ್ರಾ, ಮತ್ತ ಪ್ಯಾರಗೆ ಆಗಿ ಬುಟ್ಟೈತೆ.....ಏನು?.....ಅಂತಾ ಕೇಳಿದೆ.

ಕ್ಯಾ ಸಾಬ್.....ಮಜಾಕ್ ಕರ್ತಾ ಕ್ಯಾ? ನಮ್ಮದು ಇಲ್ಲಿ ಹಾಲತ್ ಖರಾಬ್ ಇದ್ದರೆ ನಿಮಗೆ ಮಜಾಕ್ ಕ್ಯಾ? ಏನು ಸಾಬ್.....ಅಂತ ಅಪ್ಸೆಟ್ ಲುಕ್ ಕೊಟ್ಟಾ ಕರೀಮ್.

ಅಲ್ಲಾ....ಆ "ಪ್ಯಾರಗೆ ಆಗಿ ಬುಟ್ಟೈತೆ" ಹಾಡಿನಾಗೆ ಹೀಂಗ "ಜಿಂದಗೀನೆ ಹಾಳಾಗ್ ಬುಟ್ಟೈತೆ" ಅಂತ ಬರ್ತದ ನೋಡ್ರೀ ಅದಕ್ಕ ಕೇಳಿದೆ. ಅಷ್ಟ. ಸಾರೀ....ಸಾಬ್ರಾ....ಹೇಳ್ರೀ....ಏನಾತು?....ಅಂದೆ.

ಸಾಬ್......ಈಗ ಪುಂಗೀದೆ ಪ್ರಾಬ್ಲೆಮ್......ಅಂತ ಅಂದ ಕರೀಮ ನಿಲ್ಲಿಸಿದ.

ಪುಂಗಿ ಅಂದ್ರಾ ಯಾರ್ರೀ? ನಿಮ್ಮ ಹೊಸ ಡೌ ಏನು? - ಅಂತ ಕಣ್ಣ ಹೊಡದೆ.

ನಿಮ್ಮ ತಲಿ ಸಾಬ್.....ಪುಂಗಿ ಅಂದ್ರೆ ಲಡ್ಕಿ ಕ್ಯಾ? ಬೇವಕೂಫ್ ಸಾಬ್.....ಅಲ್ಲಾ ಸಾಬ್.....ಪುಂಗಿ......ಪುಂಗಿ.....ಬೀನ್.....ನಾಗಿನ್ ಸಿನೆಮಾದಲ್ಲಿ ಊದಿದ್ದು......ಅದು ಸಾಬ್.....ಪುಂಗಿ......ಅಂತ ಹೇಳಿ ಇದು ಪುಂಗಿಯೆಂಬ ವಾದ್ಯ ಅಂತ ಹೇಳಿದ ಕರೀಂ.

ಹಾಂ.....ಹಾಂ.....ಪುಂಗಿನಾ? ಏನೋ ಹಾಂಗ ಅಂದ್ರಾ? ಯಾಕ ಯಾರಾದರು ಹಾವಾಡಿಗರು ಮನಿ ಸುತ್ತಾ ಮುತ್ತ ಬಂದು ಹೊತ್ತಿಲ್ಲದ ಹೊತ್ತಿನಲ್ಲಿ ಪುಂಗಿ ಊದತಾರ ಏನು?......ಅಂತ ಕೇಳಿದೆ.

ಅಯ್ಯೋ.....ಸಪೇರಾ (ಹಾವಾಡಿಗ) ಮಂದಿ ಏನೂ ಇಲ್ಲಾ ಸಾಬ್.....ಎಲ್ಲಾ ನಮ್ಮಾ ಬೇಗಂ ಕಿತಬಿ.....ಪುಂಗಿ ಊದೋಕೆ ಶುರು ಮಾಡಿ ಬಿಟ್ಟಿದ್ದಾಳೆ.....ಹೊತ್ತು ಗೊತ್ತು ಏನೂ ಇಲ್ಲಾ.....ಹಗಲು ರಾತ್ರಿ ಅಂತ ಖಬರ ಇಲ್ಲಾ....ಊದೇ ಊದತಾಳೆ.....ಮೊದಲು ಶಂಖಾ ಹೊಡೀತಿದ್ದಳು....ಈಗಾ ಫುಲ್ ಪುಂಗಿ.....ಅದೂ ಹ್ಯಾಂಗೆ ಅಂತೀರಿ.....ಹಾವು ಕೂಡ ಕಿವಿ ಮತ್ತೊಂದು ಮುಚ್ಚಿಕೋಬೇಕು. ಆ ಪರಿ ಕೆಟ್ಟದಾಗಿ ಊದತಾಳೆ ಸಾಬ್....ಅಂತ ಅಂದು ಕಿವಿಯೊಳಗೆ ಕಿರಿಬೆರಳ ಹೆಟ್ಟಿ ಪುಂಗಿ ನಾದ ಅಲ್ಲೇ ಇದ್ದು ತುಂಬಾ ತೊಂದರೆ ಮಾಡ್ತಾ ಇದ್ದ ಹಾಗೆ ಕರಾ ಕರಾ ಪರಾ ಪರಾ ಅಂತ ಕಿವಿ ತುರಿಸ್ಕೊಂಡ.

ಹಾಂ....ಹಾಂ....ನಿಮ್ಮಾ ಬೇಗಂ ಪುಂಗಿ ಬಾರ್ಸ್ಲಿಕತ್ತಾರಾ? ಏನು ಇದು ವಿಶೇಷ? ಅವರು ಹಾವ ಹಿಡಿಯೋ ಮಂದಿ ಪೈಕಿ ಏನು?.....ಅಂತ ಕೇಳಿದೆ.

ಅಯ್ಯೋ.....ಇಲ್ಲಾ ಸಾಬ್....ಅಕಿ ಏಕದಂ ಒಳ್ಳೆ ಖಾಂದಾನ್ ಸೆ ಬಂದಾಳೆ ಸಾಬ್....ಈಗ ಏನೋ ಹುಚ್ಚು.....ಪುಂಗಿ ಬಾರಿಸಬೇಕು ಅಂತ....ಯಾಕೆ ಅಂತ ಗೊತ್ತಿಲ್ಲ ಸಾಬ......ಅಂತ ಅಂದ ಕರೀಮ್.

ಸಾಬ್ರಾ....ಇದು ಯಾಕೋ ಭಾಳ complicated ಆತಲ್ಲರೀ....ಯಾಕ ಪುಂಗಿ ಊದಲಿಕ್ಕೆ ಶುರು ಮಾಡ್ಯಾಳ ನಿಮ್ಮ ಬೇಗಂ? ಅವರಿಗೆ ಏನಾರ ಸರ್ಪದೋಷ, ಕಾಳ ಸರ್ಪದೋಷ ಏನಾರಾ ಅದನೋ ಹ್ಯಾಂಗ? ಇಲ್ಲ ಅಂದ್ರಾ ಅಕಿಗೆ ಯಾಕ್ರೀ ಪುಂಗಿ ಹುಚ್ಚು? ಹಾಂ.....ಹಾಂ....? ಯಾಕ ಹೇಳ್ರೀ.......ಅಂತ ಕೇಳಿದೆ ಸಾಬರನ್ನ.

ಏನೂ....ಇಲ್ಲಾ ಸಾಬ್....ಯಾರೋ ಡಾಕ್ಟರ್ ಅಕಿಗೆ ಪುಂಗಿ ಊದು ಅಂತ ಹೇಳಿ ಬಿಟ್ಟಾನೆ ಸಾಬ್....ಅಂದ ಕರೀಮ್.

ಏನಪಾ  ಇದು....? ಯಾವಾಗಿಂದ ಡಾಕ್ಟರ್ ಮಂದಿ ಪುಂಗಿ ಊದುದನ್ನ ಟ್ರೀಟ್ಮೆಂಟ್ ಅಂತ ಶುರು ಮಾಡಿದರು ಅಂತ ನನಗ ಆಶ್ಚರ್ಯ ಆತು.

ಇದೇನ್ರೀ ಸಾಬ್ರಾ.....? ಯಾವ ತರಹದ ಡಾಕ್ಟರ್ ರೀ ಅವ? ಅವನೌನ.....ಏನು ಪುಂಗಿ ಊದಲಿಕ್ಕೆ ಹೇಳಿ ಬಿಟ್ಟನಾ? ಹಾಂ....ಹಾಂ....- ಅಂತ ನನ್ನ ಸಿಕ್ಕಾಪಟ್ಟೆ ಆಶ್ಚರ್ಯ ವ್ಯಕ್ತಪಡಿಸಿದೆ.

ಸಾಬ್....ಅದೇ...ಡಾ. ಎಸ್.ಎಸ್. ಉಳ್ಳಾಗಡ್ಡಿ ಅನ್ನೋ ಡಾಕ್ಟರ್.....ಅದೇ ಸಾಬ್...."ಅನಂತನ ಆವಾಂತರ" ಸಿನೆಮಾದಲ್ಲಿ ಬಂದ ಮಂಗ್ಯಾ ಡಾಕ್ಟರ್......ಅಂತ ಹೇಳಿದ ಕರೀಂ.

ಸಂಯುಕ್ತ ಕರ್ನಾಟಕದಲ್ಲಿ ಹುಚ್ಚುಚ್ಚಾರೆ ಅಡ್ವರಟೈಸಮೆಂಟ್ ಕೊಡೊ ಉಳ್ಳಾಗಡ್ಡಿ ಡಾಕ್ಟರ್. ಇವತ್ತು ಹುಬ್ಬಳ್ಳಿ, ನಾಳೆ ಬಾದಾಮಿ, ನಾಡದು ಬೆಳಗಾಂ, ಅಚ್ಚಿನಾಡದು ಬೈಲಹೊಂಗಲ್  ಅಂತ ಒಂದೂರಿಂದ ಇನ್ನೊಂದು ಊರಿಗೆ ಹೋಗೋ ಟ್ರಾವೆಲಿಂಗ ಡಾಕ್ಟರ್. ಅವನ ಕಡೆ ಹೋಗಿ ಬೇಗಂ ಯಾಕ ಟ್ರೀಟ್ಮೆಂಟ್ ತೊಗೊಳ್ಳಿಕತ್ತಾಳ ಅಂತ ತಿಳಿಲಿಲ್ಲ.

ಉಳ್ಳಾಗಡ್ಡಿ ಡಾಕ್ಟರ್ ಏನು? ಏನ್ರೀ ನಿಮ್ಮ ಬೇಗಂ ಹೋಗಿ ಹೋಗಿ ಅವನ ಕಡೆ ಹೋಗಿ ಯಾಕ ಟ್ರೀಟ್ಮೆಂಟ್ ತೊಗೊಳ್ಳಿಕತ್ತಾಳ? ಅವ ಹೋದ ಪೇಶಂಟ್ ಮಂದಿ ಕಡೇನೇ ತನ್ನ ರೋಗಕ್ಕ ಟ್ರೀಟ್ಮೆಂಟ್ ಕೇಳ್ತಿದ್ದ. "ಅನಂತನ ಆವಾಂತರ" ಫಿಲಂನಲ್ಲಿ ಗಂಡನ ಪ್ರಾಬ್ಲೆಮ್ಮಿಗೆ ಸಾಲ್ಯೂಶನ್ ಕೇಳಲಿಕ್ಕೆ ಬಂದಾಕಿ ಕಡೇನಾ - ನಿನ್ನ ಗಂಡಗ ಹೊಟ್ಟಿಗೆ ಏನ್ ಹಾಕ್ತಿ - ಅಂತ ಕೇಳಿದ್ದ ಹಾಪ,  ಡಾಕ್ಟರ್ ಉಳ್ಳಾಗಡ್ಡಿ. ಅಂಥಾ ಡಾಕ್ಟರ್ ಪುಂಗಿ, ಲುಂಗಿ ಮತ್ತೊಂದು ಬಾರಿಸು ಅಂತ ಪ್ರಿಸ್ಕ್ರಿಪ್ಶನ್ ಕೊಟ್ಟರ ಏನೂ ಆಶ್ಚರ್ಯ ಇಲ್ಲ......-  ಅಂತ ಅಂದೆ. ನೆನಪ ಆತು ಉಳ್ಳಾಗಡ್ಡಿ ಡಾಕ್ಟರನ ಹಿಂದಿನ ಪ್ರತಾಪ.

ಅಲ್ಲ...ಅದೆಲ್ಲ ಖರೆ. ಆದ್ರ ಪುಂಗಿ ಬಾರ್ಸು ಅಂತ ಯಾಕ್ ಹೇಳ್ಯಾನ್ ಅವ ನಿಮ್ಮ ಬೇಗಂಗೆ? - ಅಂತ ಕೇಳಿದೆ.

ಸಾಬ್..ಅವ ಉಳ್ಳಾಗಡ್ಡಿ ಡಾಕ್ಟರ್ ಈಗ ಮಂದಿಗೆ ಬೀಳೋ ಕನಸು ಕೇಳಿ ಟ್ರೀಟ್ಮೆಂಟ್ ಕೊಡ್ತಾನೆ ಸಾಬ್. ಮೊದಲಿನ ತರಹದ ಡಾಕ್ಟರ್ ಅಲ್ಲ ಅವನು - ಅಂತ ಏನೋ ಹೊಸಾ ಬಾಂಬ್ ಹಾಕಿದ ಕರೀಂ.

ಏನಪಾ ಇದು....? ಬೀಳೋ ಕನಸಿನ ಮ್ಯಾಲೆ ಟ್ರೀಟ್ಮೆಂಟ್ ಅಂದ್ರ.....ಏನಪಾ ಇದು? ಅಂತ ನನಗಂತೂ ತಿಳಿಲಿಲ್ಲ.

ಸಾಬ್ರಾ....ಏನು ಕನಸು, ಏನು ಕಥಿ? ಸ್ವಲ್ಪ ತಿಳಿಸಿ ಹೇಳ್ರೀ - ಅಂತ ಕೇಳಿದೆ.

ಅದು ನೋಡಿ ಸಾಬ್.....ನಮ್ಮ ಬೇಗಂ ಗೆ ತುಂಬಾ ಸಾಂಪ್ ದು ಕನಸು ಬಿದ್ದು, ರಾತ್ರಿಯೆಲ್ಲಾ ಸಾಂಪ್ ಆಯಾರೆ , ಅಜಗರ್ ಆಯಾರೆ ಅಂತ ಚೀರತಿದ್ದಳು ಸಾಬ್. ನಿದ್ದಿಯಿಂದ ಎಬ್ಬಿಸಿ ಕೇಳಿದೆ. ಕೇಳಿದ್ರೆ ಕನಸ್ಸಿನ್ಯಾಗೆ ಸಾಂಪ್ ಬಂದಿತ್ತು. ಉದ್ದ ಇತ್ತು. ಕನಸ್ಸಿನ್ಯಾಗೆ ಅಜಗರ್....ಅಂದ್ರೆ ಹೆಬ್ಬಾವು ಬಂದಿತ್ತು.....ದಪ್ಪ ಇತ್ತು.....ಕನಸ್ಸಿನ್ಯಾಗೆ ಬಂದ ಹಾವು ತುಂಬಾ ಕಾಡ್ತಾವೆ ಹಾಗೆ ಹೀಗೆ ಅಂತ ಚೀರಿದಳು....ಏನೋ ಮೆಂಟಲ್ ಕೇಸ್ ಅಂತ ಅನ್ನಿಸ್ತು ಸಾಬ್.....ಆ ಮ್ಯಾಲೆ ಅಕಿ ದೋಸ್ತ್ ಯಾರೋ ಒಬ್ಬಾಕಿಗೆ ಕನಸ್ಸಿನೊಳಗೆ ಮಗರ್ ಮಚ್ಚ್ ಬರ್ತಿತ್ತಂತೆ, ಅಕಿಗೆ ಉಳ್ಳಾಗಡ್ಡಿ ಡಾಕ್ಟರ್ ಕೊಳಲು ಬಾರಿಸು ಅಂದನಂತೆ. ಅವಳು ಬಾಸುರಿ ಬಾರಿಸಿದಳಂತೆ. ಆ ಮ್ಯಾಲೆ ಅವಳಿಗೆ ಕನಸ್ಸಿನಲ್ಲಿ ಮಗರ್ ಮಚ್ಚ್ ಅಂದ್ರೆ ಮೊಸಳೆ ಬರೋದು ನಿಂತು ಹೋಯ್ತಂತೆ. ಅದಕ್ಕೇ ನಮ್ಮ ಬೇಗಂ ಸಹಿತ ಉಳ್ಳಾಗಡ್ಡಿ ಕಡೆ ಹೋಗಿ ತನ್ನ ಸಾಂಪ್ ಸಪ್ನಾ ಪ್ರಾಬ್ಲೆಮ್ ಹೇಳಿದ ಕೂಡಲೇ ಇಕಿಗೆ ನೀನು ಪುಂಗಿ ಬಾರ್ಸು ಅಂದು ಬಿಟ್ಟಾನೆ ಬೇವಕೂಫ್ ಡಾಕ್ಟರ್ ಕಹೀಂಕಾ .....ನಮಗೆ ಕಿರಿ ಕಿರಿ......- ಅಂತ ದೊಡ್ಡ ವಿವರಣೆ ಕೊಟ್ಟ.

ಇದು ಭಾರಿ ಆತಲ್ಲರೀ ಸಾಬ್ರಾ.....ಕನಸ್ಸಿನ್ಯಾಗ ಯಾವ ಪ್ರಾಣಿ ಬರ್ತಾವ ಅದಕ್ಕ ತಕ್ಕಂತೆ ವಾದ್ಯ ಬಾರಿಸಿ ಅನ್ನೋದು ಭಾರಿ ವಿಚಿತ್ರ ಅನ್ನಸ್ತದ ನೋಡ್ರೀ. ಅವ ಸಿಗ್ಮಂಡ್ ಫ್ರಾಯ್ಡ್ ಕಡೆ ಏನರ ಟ್ರೇನಿಂಗ್ ತೊಗೊಂಡು ಬಂದಾನ್ ಏನು? ಅವ ಫ್ರಾಯ್ಡ್ ಕೂಡ ಕನಸ್ಸುಗಳ ಬಗ್ಗೆ ಭಾಳ್  ರಿಸರ್ಚ್ ಮಾಡಿದ್ದ......- ಅಂತ ಕೇಳಿದೆ.

ಸಾಬ್....ನಮಗೆ ಅದೆಲ್ಲ ಗೊತ್ತಿಲ್ಲ.....ಈ ಸಿಗ್ಮಂಡ್ ಫ್ರಾಯ್ಡ್ ಅಂದ್ರೆ ಏನು ಸಾಬ್? ನಮಗೆ ಕೇವಲ ಫಿಶ್ ಫ್ರಾಯ್ಡ್, ಚಿಕನ್ ಫ್ರಾಯ್ಡ್, ಭೇಜಾ ಫ್ರಾಯ್ಡ್ ಗೊತ್ತು......- ಅಂತ ಅಂದ. ಇನ್ನೆಲ್ಲಿ ಇವಗ ಡಾ. ಸಿಗ್ಮಂಡ್ ಫ್ರಾಯ್ಡ್ ಎಂಬ ಹಳೇ ಕಾಲದ ಮನೋವಿಜ್ಞಾನಿ ಬಗ್ಗೆ ಹೇಳಿಕೋತ್ತ ಕೂಡಲಿ? ವೆಸ್ಟ್ ಅದು.

ಅದು ಯಾವದಾ ಮಾಂಸದ ಫ್ರಾಯ್ ಅಲ್ಲ....ಮತ್ತ ಯಾವಾಗಾರ ಹೇಳತೇನಿ. ನಿಮ್ಮ ಬೇಗಂ ಗೆಳತಿಗೆ ಯಾಕ ಕೊಳಲು ಬಾರಿಸಲಿಕ್ಕೆ ಹೇಳಿದ ಆ ಉಳ್ಳಾಗಡ್ಡಿ ಡಾಕ್ಟರ್? ಹಾವಿಗೆ ಪುಂಗಿ ಓಕೆ. ಏನೋ ಒಂದು ಅರ್ಥ ಅದ. ಆದ್ರ ಮೊಸಳಿಗೆ ಕೊಳಲು ಅಂದ್ರ ಏನೋ ಅರ್ಥ? - ಅಂತ ಕೇಳಿದೆ.

ಸಾಬ್.....ನಿಮಗೆ ಗೊತ್ತಿಲ್ಲ ಕ್ಯಾ? ನಿಮ್ಮದು ಕೃಷ್ಣ ಭಗವಾನ್ ಏನು ಹೇಳ್ಯಾರೆ ಅಂತ? - ಅಂತ ನನಗ ತಿರುಗಿ ಗೂಗ್ಲಿ ಒಗದಬಿಟ್ಟ.

ಏನು ಹೇಳ್ಯಾರೋ ಕೃಷ್ಣ ಅವರು? ನನಗ ಗೊತ್ತಿಲ್ಲದ್ದು. ಆದರೂ  ನೀ ನಮ್ಮ ಧರ್ಮದ ಬಗ್ಗೆ ಈಗಿತ್ತಲಾಗ ಭಾಳ ತಿಳ್ಕೊಲ್ಲಿಕ್ಕೆ ಹತ್ತಿ ನೋಡು. ಅವತ್ತು ಉಪನಿಷದ್ ಬಗ್ಗೆ ಏನೋ ಹೇಳಿದಿ. ವೆರಿ ಗುಡ್...ಮುಂದ ಹೇಳು - ಅಂತ ಹುರುಪ ಮಾಡಿದೆ ಸಾಬಗ.

ಸಾಬ್....ನೋಡಿ ನಿಮ್ಮದು ಭಗವತ್ಗೀತಾ ಗ್ರಂಥದಲ್ಲಿ ಕೃಷ್ಣ ಹೇಳಿದಾರೆ, ನಾವು (ಕೃಷ್ಣ) ನೀರಾಗೆ ಇರೋ ಜಲಚರಗಳಲ್ಲಿ ಮೊಸಳೆ ಅಂತ. ಅದಕ್ಕೆ ಉಳ್ಳಾಗಡ್ಡಿ ಡಾಕ್ಟರ್ ನಮ್ಮ ಬೇಗಂ ದೋಸ್ತಗೆ ಹೇಳಿದ- ನಿನ್ನ ಕನಸಲ್ಲಿ ಮಗರ್ ಮಚ್ಚ್ ಬರ್ತದೆ ಅಂದ್ರೆ ನೀನು ಕೃಷ್ಣ ಅವರಿಗೆ  ಪ್ರಿಯವಾದ ಕೊಳಲು ಊದು. ಮೊಸಳಿ ಕನಸು ಕಡಿಮಿ ಆದರೂ ಆದೀತು ಅಂತ. ತಿಳೀತು ಕ್ಯಾ? - ಅಂತ ನನಗೆ ನೆನಪಿಲ್ಲದ ಅಥವಾ ಮರೆತು ಹೋಗಿದ್ದ ಭಗವದ್ಗೀತೆಯ ಶ್ಲೋಕವೊಂದನ್ನು ನೆನಪಿಸಿದ. 

ಭಲೇ.....ಭಲೇ.....ಸಾಬ್ರಾ......ಮೆಚ್ಚಿದೆ ನಿಮ್ಮ ಜ್ಞಾನವನ್ನ....ಎಷ್ಟು ಚಂದಾಗಿ ನಮ್ಮ ಧರ್ಮ ಗ್ರಂಥ ಎಲ್ಲಾ ಓದಿ ತಿಳಿದುಕೊಳ್ಳಲಿಕ್ಕೆ ಹತ್ತೀರಿ....ಏಕದಂ ಖುಷ್.....ಅಂತ ಕರೀಮನನ್ನು ಅಭಿನಂದಿಸಿದೆ.

ಹೀಂಗ ಅನ್ನು.....ನಿನ್ನ ಹೆಂಡ್ತಿ ಕನಸ್ಸಿನ್ಯಾಗ ಹಾವು ಬರ್ಲಿಕತ್ತಾವು....ಅದಕ್ಕ ಉಳ್ಳಾಗಡ್ಡಿ  ಡಾಕ್ಟರ್ ಅಕಿಗೆ ಪುಂಗಿ ಬಾರ್ಸಲಿಕ್ಕೆ ಹೇಳ್ಯಾನ ಅಂತ ಆತು. ಖರೆ ಏನಪಾ, ಕರೀಮ? - ಅಂತ ಕೇಳಿದೆ.

ಹೌದು ಸಾಬ್ - ಅನ್ನುವಂತೆ ತಲೆ ಕುಣಿಸಿದ.

ಸಾಬ್ರಾ....ಅದೆಲ್ಲಾ ಇರಲಿ....ನಿಮ್ಮ ಬೇಗಂ ಎಲ್ಲಿಂದ ಪುಂಗಿ ತಂದರು? - ಅಂತ ಕೇಳಿದೆ. ಪುಂಗಿ ಅಷ್ಟು ಈಜಿ ಸಿಗೋದಿಲ್ಲ ನೋಡ್ರೀ ಅದಕ್ಕ ಕೆಟ್ಟ ಕುತೂಹಲ.

ಸಾಬ್....ಅದೇ ಉಳ್ಳಾಗಡ್ಡಿ ಡಾಕ್ಟರ್ ನೇ ಪುಂಗಿ ಕೊಟ್ಟು ಬಿಟ್ಟಾನೆ - ಅಂದ ಕರೀಂ.

ಹಾಂ.....ಏನು ಉಳ್ಳಾಗಡ್ಡಿ ಡಾಕ್ಟರ್ ತನ್ನ ಟ್ರೀಟ್ಮೆಂಟ್ ಗೆ ಬೇಕಾದ ಸಾಮನು ಸಹಿತ ಸಪ್ಲೈ ಮಾಡತಾನೇನು? ಅದು ಹ್ಯಾಂಗ ಸ್ಟಾಕ್ ಇಟ್ಟಿರ್ತಾನ್ ಅವಾ? - ಅಂತ ಕೇಳಿದೆ.

ಸಾಬ್....ಅದು ಏನು ಆಗಿತ್ತು ಅಂದ್ರೆ.....ನಮ್ಮ ಬೇಗಂ ಹೋಗೋಕಿಂತ ಸ್ವಲ್ಪ ದಿನ ಮೊದಲು  ಯಾರೋ ಒಬ್ಬಾ ಸಪೇರಾ (ಹಾವಾಡಿಗ) ಬಂದು ಅವನಿಗೆ ಕನಸಿನ್ಯಾಗೆ ದೀಪಿಕಾ ಪಡುಕೋಣೆ ಬರ್ತಾಳೆ ಅಂದನಂತೆ.....ದೀಪಿಕಾ ಪಡುಕೋಣೆ ಕನಸ್ಸಿನ್ಯಾಗ ಬರ್ತಾಳ ಅಂದ್ರಾ ಅದು KF ದೋಷ ಇರಬೇಕು. KF ದೋಷ ಕರೆಕ್ಟ್ ಆಗಬೇಕು ಅಂದ್ರ ಗಿಚ್ಚಾಗಿ 7x 24 KF ಕುಡೀಬೇಕು....ಅದಕ್ಕಾ ಆ ಸಫೇರಾಗೆ ಉಳ್ಳಾಗಡ್ಡಿ ಡಾಕ್ಟರ್ ನೀನು KF ಕುಡಿ ಅಂದನಂತೆ.....ಸಫೇರಾ ಕಡೆ ಕಂಟ್ರಿ ಶೆರೆ ಕುಡಿಯೋ ರೊಕ್ಕ ಇರೋದಿಲ್ಲ, ಇನ್ನು KF ಹ್ಯಾಂಗೆ ಕುಡಿತಾನೆ ಸಾಬ್....? ಅದಕ್ಕೆ ಉಳ್ಳಾಗಡ್ಡಿ ಡಾಕ್ಟರ್ ಅವನ ಕಡೆ 10,000 ಕೊಟ್ಟು ಅವನ ಪುಂಗಿ ಇಸ್ಕೊಂಡು ಅವನಿಗೆ ರೊಕ್ಕ ಕೊಟ್ಟು, KF ಕುಡಿ ಹೋಗು ಅಂತ ಕಳಿಸಿದನಂತೆ. ಅದೇ ಪುಂಗೀನಾ ನಮ್ಮ ಹಾಪ್ ಬೇಗಂ ಗೆ 20,000 ಮಾರಿದಾನೆ......ಮ್ಯಾಲೆ 5,000 ಫೀ ಬ್ಯಾರೆ......ಮೈ ಬರ್ಬಾದ್ ಹೋಗಯಾ ಸಾಬ್.....ಅಂತ ಕರೀಂ ಅವನ ಬೇಗಂ ಹ್ಯಾಂಗ ಪುಂಗಿ ತೊಗೊಂಡು ಬಂದಳು ಅಂತ ಫುಲ್ ಡೀಟೇಲ್ಸ್ ಕೊಟ್ಟ.

KF ಅಂದ್ರಾ? ಏನೋ - ಅಂತ ಕೇಳಿದೆ. ನನಗ ಗೊತ್ತಿರಲಿಲ್ಲ.

ಅದೇ...ಸಾಬ್.....ಕಿಂಗ್ ಫಿಷರ್ ಬೀಯರ್. ಅವ ಸಫೇರಾಗೆ ದೀಪಿಕಾ ಪಡುಕೋಣೆ ಕನಸು ಬೀಳೋ ದೋಷ. ಅವಳಿಗೆ ಮತ್ತೆ KF  ಗೆ ಕನೆಕ್ಷನ್ ಐತೆ. ಅದಕ್ಕೆ ಅವನು KF ಕುಡಿದು ಕುಡಿದು ಬಿಟ್ಟರೆ ದೋಷ ಕಮ್ಮಿ ಆಗ್ತದೆ ಸಾಬ್....ತಿಳೀತು ಕ್ಯಾ?

ಹೂನಪ್ಪಾ....ತಿಳೀತು. ಏನೋ ಒಂದು ತರಹ. ವಿಚಿತ್ರ ಟ್ರೀಟ್ಮೆಂಟ್ ನಿಮ್ಮ ಉಳ್ಳಾಗಡ್ಡಿ ಡಾಕ್ಟರ್ ದು. ಅವನ ಕಡೆ ಹೋಗೋ ಪೇಶಂಟ್ ಇನ್ನೂ ವಿಚಿತ್ರ.

ಹ್ಮಂ.....ಇಷ್ಟೆಲ್ಲಾ ಕಥಿ ಅದ ಅಂತ ಆತು. ಆದ್ರ ನಿಮ್ಮ ಬೇಗಂ ಪುಂಗಿ ಬಾರ್ಸೋದು ಹ್ಯಾಂಗ ಕಲ್ತ್ರೋ? ಅದು ಈಜಿ ಅಲ್ಲ ನೋಡು. ಭಾಳ ಕಷ್ಟದ ವಿದ್ಯಾ ಅದು? ಯಾವ ಉಸ್ತಾದ್ ಕಡೆ ಟ್ರೇನಿಂಗ ತೊಗೊಂಡ್ರು? - ಅಂತ ಕೇಳಿದೆ.

ಕರೆಕ್ಟ್ ಸಾಬ್....ಪುಂಗಿ ಊದೋದು ಕಷ್ಟ ಸಾಬ್.....ನಮ್ಮ ಬೇಗಂ ಪುಂಗಿ ತಂದುಕೊಂಡು ಒಂದೆರಡು ದಿನ ಊದೋಕೆ ನೋಡಿದಳು. ಬರಲಿಲ್ಲ. ಗೊರ್ರ್ ಗೊರ್ರ್ ಅಂತ ಶಬ್ದ ಬಂತು ಅಷ್ಟೇ. ಮತ್ತೆ ಉಳ್ಳಾಗಡ್ಡಿ ಡಾಕ್ಟರ್ ಕಡೆ ಓಡಿದಳು. ಅವನು KF ಕುಡೀತಾ ಕೂತಿದ್ದ ಸಫೇರಾ ನಾ ಕರೆದಬಿಟ್ಟಿ ನಮ್ಮ ಬೇಗಂಗೆ ಉಸ್ತಾದ್ ಅಂತ ಅಪಾಯಿಂಟ್ ಮಾಡಿದಾನೆ. ದಿನಕ್ಕೆ 500 ರುಪಾಯಿ ಅವನಿಗೆ. ಅದರಲ್ಲಿ 300 ಸಫೇರಾಗೆ. 200 ಉಳ್ಳಾಗಡ್ಡಿ ಡಾಕ್ಟರ್ ಗೆ. ಅಲ್ಲೂ ನಮ್ಮದೂಕಿ ತಲಿ ಬೋಳಸ್ತಾ ಇದಾರೆ ಸಾಬ್ - ಅಂತ ಅಲವತ್ತುಕೊಂಡ.

ಸಾಬ್ರಾ.....ಇರ್ಲಿ....ಈಗ ಪುಂಗಿ ಬಾರ್ಸಿಲಿಕ್ಕೆ ಹತ್ತಿದ ಮ್ಯಾಲೆ ನಿಮ್ಮ ಬೇಗಂ ಕನಸ್ಸಿನ್ಯಾಗ ಹಾವು ಮತ್ತೊಂದು ಬರೋದು ಕಮ್ಮಿ ಆಗ್ಯಾವ್ ಏನು? - ಅಂತ ಕೇಳಿದೆ.

ಯಾರಿಗೆ ಗೊತ್ತು ಸಾಬ್....ಅಕಿ ಮೊದಲೇ ಹಾಪ್.....ಪುಂಗಿ ಊದೋದನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಾ ಇದ್ದಾಳೆ. ಹಾವು ಬರಲಿ ಬಿಡಲಿ ಇಕಿ ಊದಾಕಿನೇ ಅಂತೆ.....ಜೊತಿಗೆ ಲುಂಗಿ ಎತ್ತಿಕೊಂಡು ಅಕಿಗೆ ಪುಂಗಿ ಊದೋದಾ ಹೇಳಿಕೊಡುವ ಹಲ್ಕಟ್ ಸಫೇರಾ.....ಇಬ್ಬರೂ ಹಾಪ್ರಗತೆ ನಕ್ಕೋತ್ತಾ, ಪುಂಗಿ ಊದಿಕೋತ್ತ ನಮ್ಮ ಜೀವನ ಹರಾಮ್ ಮಾಡಿ ಹಾಕಿದಾರೆ ಸಾಬ್. ನಡು ನಡು "ಮನ ಡೋಲೆ ಮೇರಾ ತನ ಡೋಲೆ", "ಜಾದುಗರ್ ಸಯ್ಯಾನ್, ಛೋಡೋ ಮೊರೆ ಬಯ್ಯಾನ್" ಅಂತ ನಾಗಿನ್ ಹಿಟ್ ಸಾಂಗ್ ಹಾಡ್ಬಿಟ್ಟಿ, ನಾಗಿನ್ ಡ್ಯಾನ್ಸ್ ಕೂಡ ಮಾಡ್ತದೆ ನಮ್ಮ ಬೇಗಂ. ಆವಾಗ ಅವ್ನು ಬದ್ಮಾಶ್ ಸಫೇರಾ ಲುಂಗಿ ಎತ್ತ್ಕೊಂಡ್ಬಿಟ್ಟಿ ,ಸಿಕ್ಕಾಪಟ್ಟೆ ರೈಸ್ ಆಗಿಬಿಟ್ಟಿ ಪುಂಗಿ ಊತ್ತಾನೆ....ಹರಾಮಕೋರ್ ............- ಅಂತ ಹೇಳಿ ಕರೀಂ ಸ್ಟೋರಿ ಮುಗಿಸಿದ.

ಒಟ್ಟಿನಲ್ಲಿ ಬೇಗಂ ಹುಚ್ಚಿನ ಹಲವಾರು ಮುಖಗಳಲ್ಲಿ ಇನ್ನೊಂದು ಮುಖವೂ ಬಹಿರಂಗವಾಗಿತ್ತು. ಪುಂಗಿಪ್ರಿಯೆ ನಮ್ಮ ಸಾಬ್ರ ಬೇಗಂ.

ಇಷ್ಟಕ್ಕೂ ಬೇಗಂ ಕನಸ್ಸಿನಲ್ಲಿ ಹಾವ್ಯಾಕೆ ಬರುತ್ತಿದ್ದವು? ಆಪಕೋ ಮಾಲೂಮ್ ಕ್ಯಾ? ಹಾಂ? ಹಾಂ?

ನಿರಾಶಾವಾದಿ, ಆಶಾವಾದಿ

ಒಬ್ಬ ತಂದೆಗೆ ಇಬ್ಬರು ಗಂಡು ಮಕ್ಕಳು. ಅವಳಿ ಜವಳಿ. ನೋಡಲೂ ಒಂದೇ ತರಹ ಇದ್ದರು. ಸ್ವಭಾವ ಮಾತ್ರ ಬೇರೆ ಬೇರೆ. ತದ್ವಿರುದ್ಧ ಅಂದರೂ ತಪ್ಪಿಲ್ಲ. ಒಬ್ಬ ಸಿಕ್ಕಾಪಟ್ಟೆ ನಿರಾಶಾವಾದಿ(pessimist). ಇನ್ನೊಬ್ಬ ಸಿಕ್ಕಾಪಟ್ಟೆ ಆಶಾವಾದಿ(optimist).

ಅವರ ಹುಟ್ಟುಹಬ್ಬ ಬಂತು. ತಂದೆಗೆ ಒಂದು ಯೋಚನೆ ಬಂತು. ಇವರ ಆಶಾವಾದ, ನಿರಾಶಾವಾದದ ಒಂದು ಪರೀಕ್ಷೆ ಮಾಡಿಬಿಡೋಣ ಅಂತ.

ಜನ್ಮದಿನದ ಹಿಂದಿನ ದಿನ ನಿರಾಶಾವಾದಿ ಮಗನ ಕೋಣೆ ತುಂಬಾ ಆಟಿಗೆಗಳನ್ನು ತುಂಬಿಸಿದ.

ಒಂದು ಲೋಡ್ ಕುದರೆ ಲದ್ದಿ ಒಂದು ಬಕೆಟ್ನಲ್ಲಿ ತುಂಬಿಸಿ ಅದನ್ನು ಆಶಾವಾದಿ ಮಗನ ಕೋಣೆಯಲ್ಲಿ ಇಡಿಸಿದ.

ಇಬ್ಬರ ಪ್ರತಿಕ್ರಿಯೆ ನೋಡಲು ಕಾದು ನಿಂತ. ಹೇಗೆ ರಿಯಾಕ್ಟ್ ಮಾಡುತ್ತಾರೆ ಮಕ್ಕಳು ತಮ್ಮ ಕೋಣೆಯಲ್ಲಿರುವ ಬರ್ತ್ ಡೆ ಪ್ರೆಸೆಂಟ್ ಗಳಿಗೆ?

ನಿರಾಶಾವಾದಿ ಮಗ ಎದ್ದ. ಕೋಣೆ ಆಟಿಕೆಗಳಿಂದ ತುಂಬಿತ್ತು. ಕೇಳಿದ್ದು, ಕೇಳದಿದ್ದು, ಊಹಿಸಿಯೂ ಇಲ್ಲದ ಆಟಿಕೆಗಳು ಬಂದು ಕೂತಿದ್ದವು. 

ಒಮ್ಮೆ ಎಲ್ಲಾ ಆಟಿಕೆಗಳನ್ನು ನೋಡಿದ ಮಗನ ಮುಖದಲ್ಲಿ ಚಿಂತೆ ಆವರಿಸತೊಡಗಿತು. ಯಾಕೋ ಚಿಂತೆ ತುಂಬಾ ಹೆಚ್ಚಾಯಿತು ಅಂತ ಕಾಣುತ್ತದೆ. ಅಳಲು ಶುರು ಮಾಡಿ ಬಿಟ್ಟ. ಏನು ಮಾಡಿಕೊಂಡನೋ - ಅಂತ ಘಾಬರಿಯಾಗಿ ಹೊರಗಿಂದ ಕದ್ದು ನೋಡುತ್ತಿದ್ದ ತಂದೆ ಬಾಗಿಲು ದೂಡಿಕೊಂಡು ಒಳಗೆ ಬಂದ.

"ಏನಾಯಿತೋ.....ನಿನ್ನ ಹುಟ್ಟುಹಬ್ಬ ಇವತ್ತು. ಇಷ್ಟೆಲ್ಲಾ ಆಟಿಗೆ ತಂದು ಕೊಟ್ಟಿದ್ದೇನೆ. ಯಾಕೆ ಅಳುತ್ತಿಯೋ?"

"ಅಪ್ಪ....ಅದೇನೋ ನಿಜ. ಥ್ಯಾಂಕ್ಸ್. ಆದ್ರೆ ಈ ಆಟಿಗೆಗಳನ್ನು ಹೇಗೆ ಕಾಪಾಡಿಕೊಳ್ಳಬೇಕೋ ಅಂತ. ಅದೇ ದೊಡ್ಡ ಚಿಂತೆಯಾಗಿದೆ. ನನ್ನ ಸ್ನೇಹಿತರು ಆಟಿಗೆಗಳನ್ನು ಮುರಿದುಬಿಟ್ಟರೆ? ಕದ್ದುಕೊಂಡು ಹೋಗಿಬಿಟ್ಟರೆ? ಅವೇ ಹಾಳಾಗಿ ಹೋಗಿಬಿಟ್ಟರೆ? ಬ್ಯಾಟರಿ ಖರ್ಚಾಗಿ ಹೋಗಿ ಬಿಟ್ಟರೆ?" - ಅಂತ ಅದಾಗಿ ಬಿಟ್ಟರೆ, ಇದಾಗಿ ಬಿಟ್ಟರೆ ಅಂತ ಏನೇನು ಹದಗೆಟ್ಟು ಹೋಗಬಹುದು ಅನ್ನುವದನ್ನೇ ಒತ್ತಿ ಒತ್ತಿ ಹೇಳುತ್ತಾ ಅಳುವದನ್ನ ಮುಂದುವರಿಸಿದ. 

ಈ ಮಗನ ಗತಿಯೇ ಇಷ್ಟು. ಇವನ ನಿರಾಶಾವಾದಕ್ಕೆ ಮದ್ದಿಲ್ಲ. ಇನ್ನೊಬ್ಬ ಮಗನನ್ನು ಗಮನಿಸಿಕೊಂಡು ಬರೋಣ ಅಂತ ಅವನ ರೂಮಿಗೆ ಹೋರಾಟ.

ಸುಮಾರು ದೂರದಿಂದಲೇ ಕುದರೆ ಲದ್ದಿಯ ವಾಸನೆ ಹೊಡೆಯುತ್ತಿತ್ತು. ಆದರೂ ಹೋದ ಮಗನ ರೂಮಿಗೆ. ಬಾಗಿಲು ಮೆಲ್ಲನೆ ತಳ್ಳಿ ನೋಡಿದ.

ಮಗ ಎದ್ದಿದ್ದ. ಎದ್ದು ತನ್ನ ರೂಮಿನ ಎಲ್ಲ ಕಿಟಕಿ ಬಾಗಿಲು ತೆಗೆದು ಹೊರಗಡೆ ಕತ್ತು ಚಾಚಿ ಚಾಚಿ ನೋಡುತ್ತಿದ್ದ. ವರಾಂಡಕ್ಕೆ ಹೋಗಿ ಗಾರ್ಡನ್ ಸುತ್ತ ಕಣ್ಣು ಹಾಸಿದ. "ಎಲ್ಲಿ  ಹೋಯಿತೋ? ಇಲ್ಲೇ ಎಲ್ಲೋ ಇರಲೇ ಬೇಕು?" ಅನ್ನುವ ಲುಕ್ ಕೊಡುತ್ತ ಮತ್ತೆ ರೂಮಿನೊಳಗೆ ಬಂದ. ತುಂಬಾ ಖುಷಿಯಾಗಿದ್ದ. ಎಕ್ಸೈಟ್ ಆಗಿದ್ದ. ಏನೋ ಹುಡುಕುತ್ತಿದ್ದ. ಮತ್ತು ಅದು ಅಲ್ಲೇ ಎಲ್ಲೋ ಇದ್ದೇ ಇದೆ ಅಂತ ಖಾತ್ರಿಯಾಗಿದ್ದ.

ತಂದೆಗೆ ಆಶ್ಚರ್ಯ. ಏನಪ್ಪಾ ಇವನ ಕಥೆ? ಕುದರೆ ಲದ್ದಿ ಇಟ್ಟು ರೂಂ ಘಂ ಅನ್ನಿಸಿದರೂ ಎದ್ದ ಕೂಡಲೇ ಇಷ್ಟು ಖುಷಿಯಾಗಿದ್ದಾನಲ್ಲ ಇವನು?

"ಏನೋ....ಏನು ಹುಡುಕುತ್ತಾ ಇದ್ದೀಯ? ಏನಿದು ವಾಸನೆ? ಕುದರೆ ಲದ್ದಿದು?" - ಅಂದ ತಂದೆ.

"ಅಯ್ಯೋ....ಅದು ಇರ್ಲಿ ಅಪ್ಪ. ಕುದರೆ ಎಲ್ಲಿ? ಲದ್ದಿ ಇಲ್ಲಿ ಹಾಕಿದೆ ಅಂದ್ರೆ ಇಲ್ಲೇ ಎಲ್ಲೋ ಇರಬೇಕು. ನನ್ನ ಬರ್ತ್ ಡೇ ಗೆ ಚಿಕ್ಕ ಕುದರೆ ಮರಿ (pony) ತಂದಿರುವೆಯಾ? ಥ್ಯಾಂಕ್ಸ್" - ಅಂತ ಅಂದು ಅಪ್ಪನಿಗೂ ಕುದರೆ ಹುಡಕಲು ಬಾ ಎಂದು ಕರೆದ.

ಇದು ಆಶಾವಾದಿಯ ಆಶಾವಾದದ ಪರಾಕಾಷ್ಠೆ. ಕುದರೆ ಲದ್ದಿ ಇದ್ದಲ್ಲಿ ಕುದರೆಯೂ ಇರಬಹುದು. ಅದು ತನಗೇ ಅಂತ ತಂದಿರಬಹದುದು. ಹುಡುಕಿದರೆ ಸಿಗಬಹುದು ಅಂತ.

ಎಲ್ಲೋ ಓದಿದ ಒಂದು ಚಿಕ್ಕ ಇಂಗ್ಲಿಷ್ ನೀತಿ ಕಥೆಯಂತಹದು. ಹಿಡಿಸಿತು. ಹಂಚಿಕೊಳ್ಳೋಣ ಅನಿಸಿತು.

ಕುದರೆ ಲದ್ದಿ ಇದ್ದರೆ ಕುದರೆ ಇರಬೇಕು ಅನ್ನುವದು, ಅದು ತನಗೇ ತಂದಿರುವದು ಅಂತ ಅಂದುಕೊಳ್ಳುವದು ಆಶಾವಾದವಲ್ಲ ಮೂರ್ಖತನ ಅಂತ ಅನ್ನಿಸಬಹುದು. ಆದರೆ 4-5 ವರ್ಷದ ಹುಡುಗನೊಬ್ಬ ಈ ತರಹ ಯೋಚಿಸಿದ ಅಂದರೆ ಗ್ರೇಟ್ ಅನ್ನಿಸಿತು. ಮುಂದೆ ದೊಡ್ಡವನಾದ ಮೇಲೆ ವಾಸ್ತವಿಕತೆ ಮಿಕ್ಸ್ ಮಾಡಿಕೊಂಡು ಆಶಾವಾದವನ್ನು ಮತ್ತೂ fine tune ಮಾಡಿಕೊಳ್ಳಬಹುದು. ಆದರೆ ಈ ತರಹದ ಆಶಾವಾದವೇ ಇಲ್ಲದಿದ್ದರೆ ಮುಂದೆ ಅದನ್ನು ರೂಢಿ ಮಾಡಿಕೊಳ್ಳುವದು ಕಷ್ಟ.

ಮತ್ತೊಂದು ಅಂದರೆ - ದೊಡ್ಡವರಿಗೂ ಸಹ ಅನ್ವಯಿಸುವದು ಅಂದರೆ, "ಅಯ್ಯೋ, ಕೋಣೆ ತುಂಬಾ ಲದ್ದಿ. ಏನು ಮಾಡುವದು? ಕರ್ಮ ಕರ್ಮ" - ಅಂತ ತಲೆ ಚಚ್ಚಿಕೊಳ್ಳುವದ ಬದಲು ಅದನ್ನು ಪಾಸಿಟಿವ್ ಆಗಿ ಹೇಗೆ ಮಾಡಿಕೊಳ್ಳಬಹುದು ಅಂತ ಯೋಚಿಸುವದು ಒಳ್ಳೆಯದು. Make lemonade if life gives you a lemon - ಅನ್ನೋ ತರಹ. ಯಾರಿಗೋ ಗೊಬ್ಬರದ ಸಲುವಾಗಿ ಕುದರೆ ಲದ್ದಿ ಬೇಕಾಗಿರಬಹುದು. ಅವರೇ ಬಂದು ರೂಮಿನಿಂದ ಎತ್ತಿಕೊಂಡು ಹೋಗುತ್ತೇವೆ ಅಂದ್ರೆ ನಿಮಗೂ ಒಂದು ಡೀಲ್ ಸಿಕ್ಕ ಹಾಗೆಯೇ.

ಆಶಾವಾದಕ್ಕೆ ಒಂದು ಜೈ. ಒಂದು ಸಲಾಂ.

ಇಂಗ್ಲಿಷ್ ಮೂಲ (ಒಂದು ವರ್ಶನ್) ಇಲ್ಲಿದೆ.

Sunday, August 19, 2012

"ಜೈ ತುಳುನಾಡ" ಅನ್ನುತ್ತಿದ್ದ ಕಲರಫುಲ್ ಡಾನ್

ಸಾಧು ಶೆಟ್ಟಿ
 ಶೆಟ್ಟರು ಯಾಕೋ ತುಂಬಾ ನೆನಪಾದದರು ಇವತ್ತು.

ಅವರು ಹೋಗಿ ಹತ್ತು ವರ್ಷದ ಮೇಲಾಗಿ ಹೋಯಿತಾ? ಆಯಿತು ಅಂದ್ರೆ ನಂಬಲೇ ಬೇಕು.

ಸಂಗೀತಕಾರ ಗುರುಕಿರಣ ಎಲ್ಲೋ ಒಂದು ಕಡೆ ತುಂಬಾ ವರ್ಷದ ಹಿಂದೆ ಹೇಳಿದ್ದರು. ಓದಿದ್ದೆ. "ನೋಡ್ರೀ.....ನಾವು ಬಂಟರು. ಎಲ್ಲದರಲ್ಲೂ ಇದ್ದೇವೆ. ಮಿಸ್ ವರ್ಲ್ಡ್ ನಿಂದ ಹಿಡಿದು ಅಂಡರ್ ವರ್ಲ್ಡ್ ತನಕ".

ಮಿಸ್ ವರ್ಲ್ಡ್ ಅಂದರೆ ಐಶ್ವರ್ಯ ರೈ. ಅವರೂ ಬಂಟ ಸಮುದಾಯದವರೇ. ಇನ್ನು ಅಂಡರ್ವರ್ಲ್ಡ್ ಅಂದ್ರೆ ಆವತ್ತಿನ ಕಾಲದಲ್ಲಿ ಪುರಾತನ ಡಾನ್, ಒನ್ ಅಂಡ್ ದಿ ಓನ್ಲಿ ಒನ್ - ಸಾಧು ಶೆಟ್ಟಿ.

ಯಾಕೋ ತುಂಬ ಮೊದಲಿಂದ ತಲೆಯಲ್ಲಿ ಉಳಿದು ಹೋಗಿರುವ ಡಾನ್ ಅಂದ್ರೆ ಸಾಧು ಶೆಟ್ಟಿ. ಬೇರೆ ಬೇರೆ ಅಂಡರ್ವರ್ಲ್ಡ್ ಮಂದಿ ಬಗ್ಗೆ ಸಿಕ್ಕಾಪಟ್ಟೆ ಓದಿ ತಿಳಿದುಕೊಂಡಿದ್ದರೂ ಶೆಟ್ಟರು ಮಾತ್ರ ಮನಸ್ಸಿನಲ್ಲಿ ನಿಂತೇ ಇದ್ದಾರೆ. ಯಾಕೋ ಗೊತ್ತಿಲ್ಲ. ಅವರ ಶೆಟ್ಟಿ ಸಮುದಾಯದವರೇ ಆದ ಬೇರೆ ಬೇರೆ ಡಾನ್ ಗಳು ಹಿಂದೆಯೂ ಇದ್ದರು, ಇಗಲೂ ಇದ್ದಾರೆ. ಆದ್ರೆ ಎಂದೋ ಮೆರದು, ಈಗ ಹತ್ತು ವರ್ಷದ ಹಿಂದೆ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ವಿಜಯ ಸಲಸ್ಕರ್ ಗುಂಡಿಗೆ ಬಲಿಯಾಗಿ ಹೋದ ಸಾಧು ಶೆಟ್ಟರು ಮಾತ್ರ ಪದೇ ಪದೇ ನೆನಪಿಗೆ ಬರುತ್ತಾರೆ. ವೈಚಿತ್ರ್ಯ ನೋಡಿ 2002, ಮೇ ನಲ್ಲಿ ಶೆಟ್ಟರನ್ನು ಎನ್ಕೌಂಟರ್ ಮಾಡಿದ ಸಲಸ್ಕರ್ ಸಹಿತ 26/11/2008 ಬಾಂಬೆ ನಲ್ಲಿ ಆದ ಉಗ್ರರ ದಾಳಿಯಲ್ಲಿ ಕರ್ಕರೆ, ಕಾಮಟೆ ಇತ್ಯಾದಿ ಅಧಿಕಾರಿಗಳ ಜೊತೆ ಕಸಬ್ ಇತ್ಯಾದಿ ಉಗ್ರರು ಹಾರಿಸಿದ ಗುಂಡುಗಳಿಗೆ ಬಲಿಯಾಗಿ ಹೋದರು.

ಸಾಧು ಶೆಟ್ಟರ ಹೆಸರು ಮೊದಲು ಕೇಳಿದ್ದು 93-94 ನಲ್ಲಿ ಇರಬೇಕು. ಅದು 1993 ಬಾಂಬೆ ಬ್ಲಾಸ್ಟ್ ಆದ ಮೇಲಿನ ಸುದ್ದಿ. ಮುಂಬೈ ಅಂಡರ್ವರ್ಲ್ಡ್ ಒಡೆದು ಹೋಗಿತ್ತು. ದಾವೂದ್ ಇಬ್ರಾಹಿಮ್ ಬೇರೆ ಮತ್ತು ಅವನ ಒಂದು ಕಾಲದ ಪರಮ ಬಂಟ ಛೋಟಾ ರಾಜನ್ ಬೇರೆ. ಒಬ್ಬ ಮುಸ್ಲಿಂ ಡಾನ್ ಅಂತ ಬ್ರಾಂಡ್ ಆಗಿ ಹೋದ. ರಾಜನ್ ಹಿಂದೂ ಡಾನ್ ಅಂತ ಗುರುತಿಸಿಕೊಂಡ ಅಥವಾ ನಾವೇ ಹಾಗೆ ಗುರುತಿಸಿಬಿಟ್ಟೆವು. ಆಗ ಸಾಧು ಶೆಟ್ಟರು ರಾಜನ್ ಜೊತೆ ಹೋದರು. ಶೆಟ್ಟಿ ಜನಗಳ ಬ್ಯಾಲನ್ಸ್ ಇರಲಿ ಅಂತನೋ ಏನೋ ಇನ್ನೊಬ್ಬ ಫೇಮಸ್ ಶೆಟ್ಟಿ - ಶರದ ಶೆಟ್ಟಿ- ದಾವೂದ್ ಜೊತೆ ಹೋಗಿ ಬಿಟ್ಟರು. 

ಸಾಧು ಶೆಟ್ಟರ ಹೆಸರು ಕೇಳಿದ್ದು ಹೀಗೆ. ಯಾವತ್ತೋ ಒಂದು ರವಿವಾರ ಹಾಸ್ಟೆಲ್ನಲ್ಲಿ ಕೂತು ಆರಾಮಾಗಿ ಪೇಪರ್ ಓದುತ್ತಿದ್ದೆ. ಮುಂಬೈನಲ್ಲಿ ಯಾವದೋ ಒಂದು ಶೂಟ್ ಔಟ್ ಆಗಿತ್ತು. ಸಾಧು ಶೆಟ್ಟಿ ಮುಂತಾದವರ ಮೇಲೆ ಕೋರ್ಟ್ ಆವರಣದಲ್ಲಿಯೇ ದಾಳಿ ಮಾಡಿದ್ದರು ಎದುರಾಳಿ ಗುಂಪಿನ ಜನ. ಕೈಗೆ ಬೇಡಿ ಹಾಕಿಸ್ಕೊಂಡು ಕೂತಿದ್ದ ಸಾಧು ಶೆಟ್ಟಿ ಮತ್ತೆ ಇತರರು ಬಚಾವಾಗಿದ್ದೇ ದೊಡ್ಡದು. ಹೇಗೋ ಮಾಡಿ ಪೋಲಿಸ್ ವ್ಯಾನ್ ನಲ್ಲಿ ತೂರಿಕೊಂಡ ಶೆಟ್ಟರು ಅವತ್ತು ಸಾವನ್ನು  ಗೆದ್ದಿದ್ದರು. ಇಲ್ಲಾಂದ್ರೆ ಸ್ಟೆನ್ ಗನ್ನ್ ದಾಳಿಯಿಂದ ಬಚಾವಾಗುವದು ಭಾಳ ಕಮ್ಮಿ. ಅವತ್ತೇ ಅನ್ನಿಸಿದ್ದು - "ಯಾರಪಾ ಈ ಸಾಧು ಶೆಟ್ಟರು? ಬರಿ ಉಡುಪಿ ಹೋಟೆಲ್ ಮಾಡಿಕೊಂಡು ಇರುವವರು ಶೆಟ್ಟಿ ಮಂದಿ ಅಂತ ಗೊತ್ತಿತ್ತು. ಅಂಡರ್ವರ್ಲ್ಡ್ ನಲ್ಲೂ ಇದ್ದಾರಾ?" ಅವತ್ತೇನು ಗೊತ್ತಿತ್ತು ನಮಗೆ, ಬರೀ ಸಾಧು ಶೆಟ್ಟರು ಮಾತ್ರವಲ್ಲ, ಬೇರೆ ಯಾರ್ಯಾರೋ ಶೆಟ್ಟರು ಇತ್ಯಾದಿ ಮಂದಿ ಅಂಡರ್ವರ್ಲ್ಡ್ ನಲ್ಲಿ ತುಂಬಾ ಆಳದಲ್ಲಿ ಇದ್ದಾರೆ ಅಂತ.

ಏನೋ......ಆ ದಾಳಿಯ ನಂತರ ಸಾಧು ಶೆಟ್ಟರು ಮುಂಬೈ ಬಿಟ್ಟು ಸೀದಾ ಅವರ ಮೂಲ ದಕ್ಷಿಣ ಕನ್ನಡಕ್ಕೆ ಬಂದು ಬಿಟ್ಟರು. ಮುಂಬೈನಲ್ಲಿ ವಾತಾವರಣ ಗರಂ ಆಗಿತ್ತು. ಒಂದು ಕಡೆ ವಿರೋಧಿ ಪಾರ್ಟಿ. ಇನ್ನೊಂದು ಕಡೆ ಎನ್ಕೌಂಟರ್ ಸ್ಪೆಷಲಿಸ್ಟಗಳು. ಬೇಡವೇ ಬೇಡ ಅಂತ ತಮ್ಮ ಊರು ಉಡುಪಿಯ ಸಮೀಪದ ಪಣಿಯೂರಿಗೆ ಬಂದು ಕೂತರು. 

ಅಲ್ಲಿಗೂ ಬಂದಿದ್ದರಂತೆ ಅವರ ವಿರೋಧಿ ಪಾರ್ಟಿ. ಒಟ್ಟಿನಲ್ಲಿ ಶೆಟ್ಟರ ನಸೀಬ್ ಗಟ್ಟಿಯಿತ್ತು. ಮಂಗಳೂರಿನ ಪೊಲೀಸರಿಗೆ ಖಬರ್ ಹತ್ತಿ ಅವರನ್ನು ಶೆಟ್ಟರ ಬಳಿ ಬರುವ ಮೊದಲೇ ಓಡಿಸಿಬಿಟ್ಟಿದ್ದರು. ಹೀಗಾಗಿ ಸಾಧು ಶೆಟ್ಟಿ ಬಚಾವಾಗಿದ್ದರು.

ಪಣಿಯೂರಿನಲ್ಲಿ ಶೆಟ್ಟರು ಏನೋ ರಾಜಕೀಯಕ್ಕೆ ಇಳಿಯುವ ಬಗ್ಗೆ ವಿಚಾರ ಮಾಡುತ್ತಿದ್ದರು. ತುಳು ಮತ್ತು ತುಳು ಸಂಸ್ಕೃತಿ ಬಗ್ಗೆ ಅವರಿಗೆ ಏನೋ ಒಂದು ತರಹದ ಅಭಿಮಾನ, ಪ್ರೀತಿ. ಅವರೂ ತುಳು ಮಂದಿಯೇ. ಏನೋ ತುಳುನಾಡು ಅಂತ ಪಾರ್ಟಿ ಮಾಡಿಕೊಂಡು, ಅದೇ ಹೆಸರಿನ ಪೇಪರ್ ಮಾಡಿಕೊಂಡು ಏನೇನೋ ಮಾಡುತ್ತಿದ್ದರು. "ನಮಸ್ಕಾರ, ಶೆಟ್ಟರೆ" ಅಂದರೆ  "ಜೈ ತುಳುನಾಡ" ಅಂತ ಹಿಟ್ಲರ್ ರೀತಿ ಕೈಯೆತ್ತಿ ಅವರದ್ದೇ  ವಿಶಿಷ್ಟ ರೀತಿಯಲ್ಲಿ ನಮಸ್ಕಾರ ಮಾಡುತ್ತಿದ್ದರು ಶೆಟ್ಟರು. ವಿಚಿತ್ರ.

ಮತ್ತೆ ಏನೋ ಗಲಾಟೆ ಆಯಿತು. ಮಂಗಳೂರಿನ ಪೊಲೀಸರು ಬಂಧಿಸಿದರು. ಸುಮಾರು ತಿಂಗಳು ಜೈಲಿನಲ್ಲಿಯೇ ಇದ್ದರು ಶೆಟ್ಟರು. ಹೊರಗೆ ಬಂದು ಎಲ್ಲಿಯೋ ಹೋಗಿ ಬಿಟ್ಟರು. ಕೆಲವರು ಛೋಟಾ ರಾಜನ್ ಎಲ್ಲೋ ಬ್ಯಾಂಕಾಕ್ ಮತ್ತೆಲ್ಲೋ ಇದ್ದಾನೆ, ಶೆಟ್ಟರು ಅಲ್ಲಿಯೇ ಹೋಗಿದ್ದಾರೆ ಅಂತ. ಗೊತ್ತಿಲ್ಲ ಎಲ್ಲಿದ್ದರು ಅಂತ ಶೆಟ್ಟರು.

ಮುಂದೆ ಕಾರವಾರ ಶಾಸಕ ಅಸ್ನೋಟಿಕರ್ ಕೊಲೆಯಾದರು. ಏನೋ ಬಿಸಿನೆಸ್ಸ್ ಜಗಳ ಅವರದ್ದು ಅವರ ಮೊದಲಿನ ಬಿಸಿನೆಸ್ಸ್ ಪಾರ್ಟನರ್ ಆಗಿದ್ದ ದಿಲೀಪ್ ನಾಯಕ್ ಜೊತೆ. ದಿಲೀಪ್ ನಾಯಕ್ ಸುಪಾರಿ ಕೊಟ್ಟು ತೆಗೆಸಿಬಿಟ್ಟರು ಅಂತ ಸುದ್ದಿ ಆಯಿತು. ಅದರಲ್ಲಿ ಮತ್ತೆ ಶೆಟ್ಟರ ಹೆಸರು ಬಂತು. ಪೊಲೀಸರು ಮತ್ತೆ ಹಿಂದೆ ಬಿದ್ದರು. ಅಸ್ನೋಟಿಕರ್ ಅವರನ್ನು ಮರ್ಡರ್ ಮಾಡಿದ್ದು ಛೋಟಾ ರಾಜನ್ ಕಡೆಯ ಮಂದಿ ಅಂತ ಪೋಲೀಸರ ಥೇರಿ. ಅದಕ್ಕೆ ಸಾಧು ಶೆಟ್ಟಿ ಮಧ್ಯವರ್ತಿ ಅಂತ ಅವರನ್ನು ಪೊಲೀಸರು ಹುಡುಕುತ್ತಿದ್ದರು. ದಿಲೀಪ್ ನಾಯಕ್ ಕೂಡ ಇಂಡಿಯಾ ಬಿಟ್ಟು ದುಬೈ ಗೆ ಹೋಗಿ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಕಿಶ್ ಎಂಬ ದ್ವೀಪದಲ್ಲಿ ತಲೆ ಮರೆಸಿಕೊಂಡಿದ್ದರು. ಪೊಲೀಸರು ಹೋಗಿ ಏನೇನೋ ಮಾಡಿ ವಾಪಸ್ ಕರೆದುಕೊಂಡು ಬಂದರು. ದಿಲೀಪ್ ನಾಯಕ್ ಸೆರೆಮನೆಗೆ ಹೋದರು. ಮುಂದೆ ಜಾಮೀನ ಮೇಲೆ ಹೊರಗೆ ಬಂದರು. ಹಾಗೆ ಹೊರಗೆ ಬಂದಾಗ  ಅವರನ್ನೂ ಕೂಡ ಯಾರೋ ಮರ್ಡರ್ ಮಾಡಿ ಬಿಟ್ಟರು. ರಿವೆಂಜ್ ಮರ್ಡರ್ ಅಂದರು. ಒಟ್ಟಿನಲ್ಲಿ ಈಗ ಸಾಧು ಶೆಟ್ಟರ ಮೇಲಿನ ಪೋಲಿಸ್ ಹೀಟ್ ಸ್ವಲ್ಪ ಕಮ್ಮಿ ಆಯಿತು.

ಮುಂದೆ 2000 ಸೆಪ್ಟೆಂಬರ್ ನಲ್ಲಿ ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿದ್ದು ಎಲ್ಲರಿಗೂ ಗೊತ್ತು. ದೊಡ್ಡ ಸುದ್ದಿ ಅದು. 8-10 ಬುಲೆಟ್ ತಿಂದಿದ್ದ ರಾಜನ್ ಕಿಡಕಿಯಿಂದ ಜಿಗಿದು ರಸ್ತೆಗೆ ಬಿದ್ದು, ಓಡಿ  ಹೇಗೋ ತಪ್ಪಿಸಿಕೊಂಡಿದ್ದ. ನಂತರ ಬ್ಯಾಂಕಾಕ್ ಹಾಸ್ಪಿಟಲ್ನಲ್ಲಿ ಸ್ವಲ್ಪ ಚೇತರಿಸಿಕೊಂಡ ನಂತರ ಥೈಲ್ಯಾಂಡ್ ಬಿಟ್ಟು ಎಲ್ಲೋ ಹೋದ ಅವನು. ಆದ್ರೆ ತನ್ನ ಮೇಲೆ ಆದ ದಾಳಿಯ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದ ರಾಜನ್ ತನ್ನದೇ ಆದ ರೀತಿಯಲ್ಲಿ - ಯಾರು ತಾನು ಥೈಲ್ಯಾಂಡಿನಲ್ಲಿ ಇರುವದನ್ನು ಆಪೋಸಿಟ್ ಪಾರ್ಟಿಗೆ ಖಬರ್ ಕೊಟ್ಟು ಗದ್ದಾರಿ ಮಾಡಿರಬಹುದು - ಅಂತ  ವಿಚಾರ ಮಾಡುತ್ತಾ ಹೋದ. ಗದ್ದಾರರು ಸಿಕ್ಕರು. ಯಾರೋ ವಿನೋದ ಶೆಟ್ಟಿ ಎಂಬ ಮುಂಬೈನ ತುಂಬಾ ದೊಡ್ಡ ಮಟ್ಟದ ಹೋಟೆಲಿಗರು. ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಇತ್ತು. ಸೈಡ್ ನಲ್ಲಿ ಅಂಡರ್ವರ್ಲ್ಡ್ ಕನೆಕ್ಷನ್ ಕೂಡ ಇತ್ತಂತೆ. ಮುಂದೆ ಸ್ವಲ್ಪ ದಿವಸದಲ್ಲಿ ವಿನೋದ ಶೆಟ್ಟಿ ಮತ್ತು ಇತರೆ ಮೂವರನ್ನು ಪನವೇಲ್ ಸಮೀಪ ಗುಂಡಿಟ್ಟು ಕೊಂದು ಬಿಟ್ಟರು. ಹೆಸರು ಬಂದಿದ್ದು ಜಗ್ಗು ಶೆಟ್ಟಿ ಅಂತ ಒಬ್ಬನದು. ಆದರೆ ಫೀಲ್ಡಿಂಗ್ ಹಾಕಿ ಮಾಡಿಸಿದ್ದು ಮಾತ್ರ ರಾಜನ್ ಬಂಟ ಸಾಧು ಶೆಟ್ಟರೇ  ಅಂತ ಪೊಲೀಸರು ನಿರ್ಧರಿಸಿ ಆಗಿತ್ತು. ಮತ್ತೆ ಅವರ ಮೇಲೆ ಹೀಟ್. ಎಲ್ಲೋ ಹೋಗಿ ತಲೆ ಮರೆಸಿಕೊಂಡಿದ್ದರು.

ಮುಂದೆ ಸ್ವಲ್ಪ ತಿಂಗಳಲ್ಲಿ ಅಂದ್ರೆ 2001 ಆಗಸ್ಟ್ ಇರಬೇಕು, ಆವಾಗ ಬೆಂಗಳೂರಿನಲ್ಲಿ ಒಂದು ಎನ್ಕೌಂಟರ್ ಆಯಿತು. ಬಾಂಬೆಯಿಂದ ಬಂದಿದ್ದ ವಿಜಯ ಸಲಸ್ಕರ್ ಮತ್ತು ಅವರ ತಂಡ ಜಗ್ಗು ಶೆಟ್ಟಿ ಮತ್ತೆ ಇಬ್ಬರನ್ನು ಬೆಂಗಳೂರಿನ HAL ಏರ್ಪೋರ್ಟ್ ಮುಂದೆ ಎನ್ಕೌಂಟರನಲ್ಲಿ ಕೊಂದು ಬಿಟ್ಟರು. ಜಗ್ಗು ಶೆಟ್ಟಿ ತಪ್ಪಿಸಿಕೊಳ್ಳಲು ಇಂಡಿಯಾ ಬಿಟ್ಟು ಬ್ಯಾಂಕಾಕ್ ಗೆ ಹೋಗುತ್ತಿದ್ದನಂತೆ. ಅದರ ಸುಳಿವು ಹಿಡಿದ ಬಾಂಬೆ ಪೊಲೀಸರು ಬಂದು ಬೆಂಗಳೂರಿನಲ್ಲಿ ಎನ್ಕೌಂಟರ್ ಮಾಡಿದ್ದರು. ಕೆಲವರು ಅಂದರು, ಎಲ್ಲಾ ಎನ್ಕೌಂಟರಗಳಂತೆ ಇದೂ ಸಹ staged ಅಂತ. ಮೊದಲೇ ಹಿಡಿದುಕೊಂಡಿದ್ದರು. ನಂತರ ಕೊಂದು ಹಾಕಿದರು ಅಂತ. ಒಟ್ಟಿನಲ್ಲಿ ಸಾಧು ಶೆಟ್ಟರ ಪರಮ ಶಿಷ್ಯನಂತೆ ತಯಾರ ಆಗುತ್ತಿದ್ದ ಜಗ್ಗು ಹೋಗಿದ್ದ.

ನಂತರ ಪೊಲೀಸರು ತಮ್ಮ ಗನ್ನು ತಿರುಗಿಸಿದ್ದು ಸಾಧು ಶೆಟ್ಟರ ಕಡೆ. ಎಲ್ಲಾ ಕಡೆ ಫೀಲ್ಡಿಂಗ್ ಶುರು ಆಗಿತ್ತು. ಸಾಧು ಶೆಟ್ಟರು ಎಲ್ಲೆಲ್ಲೋ ತಲೆ ಮರೆಸಿಕೊಂಡಿದ್ದಾರೆ ಅಂತ ಪೇಪರ್ ನಲ್ಲಿ ಅದು ಇದು ಸುದ್ದಿ ಬರುತ್ತಿತ್ತು. ಒಮ್ಮೆ ಪೂನಾದಲ್ಲಿ ಕಂಡರು ಅಂತ ಬಂದರೆ ಇನ್ನೊಮ್ಮೆ ನಾಸಿಕ್ನಲ್ಲಿ ಕಂಡರು ಅಂತ ಸುದ್ದಿ. ಒಟ್ಟಿನಲ್ಲಿ ಎಲ್ಲೊ ಅಲ್ಲಿಯೇ ಮಹಾರಾಷ್ಟ್ರದಲ್ಲಿ ಸುತ್ತಾಡಿಕೊಂಡು ಪೋಲಿಸರಿಂದ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದರು ಶೆಟ್ಟರು.

ಮುಂದೆ 2002 ರ ಮೇ ತಿಂಗಳಿನಲ್ಲಿ ಪೋಲೀಸರ ಕಡೆ ಸಿಕ್ಕು ಬಿದ್ದರು. ಮತ್ತೆ ಅದೇ ಫೇಮಸ್ ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್ ತಂಡಕ್ಕೆ. ಹಿಡಿದಿದ್ದೇ ಎನ್ಕೌಂಟರ್ ಮಾಡಲು ಅನ್ನುವಂತೆ ಇತ್ತು. ಒಟ್ಟಿನಲ್ಲಿ ಸಲಸ್ಕರ್ ಗುಂಡಿಗೆ ಶೆಟ್ಟರು ಬಲಿಯಾದರು. ಸಲಸ್ಕರ್ ಮಾಡಿದ ಎನ್ಕೌಂಟರ್ಗಳ ಸಂಖೆ ಮತ್ತೊಂದು ಏರಿತು.

ಛೋಟಾ ರಾಜನ್ ಗೆ ಬಲಗೈ ಹೋದ ಅನುಭವ. ಮುಂದೆ ಸ್ವಲ್ಪ ದಿವಸದಲ್ಲಿಯೇ ಇನ್ನೊಬ್ಬ ಯಾರೋ ದಿನೇಶ ಶೆಟ್ಟಿ ಎಂಬಾತ ಗುಂಡಿಗೆ ಬಲಿಯಾದ. "ಸಾಧು ಶೆಟ್ಟರ ಮಾಹಿತಿ ಪೊಲೀಸರಿಗೆ ಕೊಟ್ಟವನೇ ಅವನಾಗಿದ್ದ. ಅದಕ್ಕೇ ಛೋಟಾ ರಾಜನ್ ಅವನನ್ನು ತೆಗೆಸಿಬಿಟ್ಟ" - ಅಂತ ಜನ ಮಾತಾಡಿಕೊಂಡರು.

ಏನೋ......ಒಮ್ಮೆ ಮುಂಬೈ ಬಿಟ್ಟು ಬಂದ ಶೆಟ್ಟರು ಉಡುಪಿ ಕಡೆ ಸರಿಯಾಗಿ ಸೆಟಲ್ ಆಗಿದ್ದರೆ ಇವತ್ತು ಶಾಸಕನೋ, ಮಂತ್ರಿಯೋ, ಪತ್ರಿಕೋದ್ಯಮಿಯೋ ಏನೋ ಆಗುತ್ತಿದ್ದರೋ ಏನೋ? ಅವರ ನಸೀಬನಲ್ಲಿ ಅದು ಇರಲಿಲ್ಲ. ಬಿಟ್ಟೆನಂದರೂ ಬಿಡದ ಮಾಯೆ ಅದು ಅಂಡರ್ ವರ್ಲ್ಡ್. 

ಶೆಟ್ಟರ ಬಗ್ಗೆ ಬರಿಯಲಿಕ್ಕೆ ಇನ್ನೂ ತುಂಬ ವಿಷಯವಿದೆ. ಬೇರೆ ಜನ ಬರೆದಿದ್ದಾರೆ. ಓದಿಕೊಳ್ಳಿ. ಆದ್ರೆ ಕೇವಲ ಉಡುಪಿ ಹೋಟೆಲಿನಲ್ಲಿ ಮಾಣಿಯಾಗಿ ಸೇರಿದ್ದ ಸದಾನಂದ ನಾಥು ಶೆಟ್ಟಿ, ಸಾಧು ಶೆಟ್ಟಿ ಆಗಿ, ಅಂಡರ್ವರ್ಲ್ಡ್ ನಲ್ಲಿ ಉಲ್ಕೆಯಂತೆ ಮಿಂಚಿ, ಸುಮಾರು 20 ವರ್ಷ ದೊಡ್ಡ ಪ್ರಮಾಣದ ಡಾನ್ ಅಂತ ಗುರುತಿಸಲ್ಪಟ್ಟು ಮರೆಯಾದದ್ದು ಸಣ್ಣ ಮಾತಲ್ಲ.

ಹೆಚ್ಚಿನ ಮಾಹಿತಿ:

ರವಿ ಬೆಳಗೆರೆ ಬರೆದಿರುವ "D ಕಂಪನಿ" ಪುಸ್ತಕದಲ್ಲಿ ಸಾಧು ಶೆಟ್ಟರ ಬಗ್ಗೆ ಒಂದು ಫುಲ್ ಚಾಪ್ಟರ್ ಇದೆ ಮತ್ತು ತುಂಬಾ ರೋಚಕವಾದ ವಿವರಗಳಿವೆ. ಅಂಡರ್ವರ್ಲ್ಡ್ ಆಸಕ್ತರಿಗೆ ಹೇಳಿ ಮಾಡಿಸಿದ ಪುಸ್ತಕ ಅದು.

Friday, August 17, 2012

ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದಾದರೆ, ಲಂಡನ್ ಯಾರಿಗೆ ಸೇರಿದ್ದು?

ಬೆಳಗಾವಿ (ಬೆಳಗಾಂ) ಯಾರಿಗೇ ಸೇರಿದ್ದು?

ಕರ್ನಾಟಕಕ್ಕೋ ಅಥವಾ ಮಹಾರಾಷ್ಟ್ರಕ್ಕೋ?

ಅದೆಲ್ಲಾ  ಜಗಳ ಏನೇ ಇರಲಿ ಬಿಡಿ.

ಮನ್ನೆ ಇಲ್ಲಿ  ಒಬ್ಬ ಕಲೀಗ್ ಹೇಳಿದ ಜೋಕ್ ತುಂಬಾ ನಗು ತರಿಸಿತು. ಓದಿ ನೋಡಿ. ಲೈಟಾಗಿ ತೊಗೊಳ್ಳಿ. ಸಿರಿಯಸ್ ಆಗಿ ತೊಗೊಂಡು ಸಿಟ್ಟಾಗಬೇಡಿ.

ಒಬ್ಬ ಕನ್ನಡಿಗ ಮತ್ತೆ ಒಬ್ಬ ಮರಾಠಿಗ ಸೀರಿಯಸ್ಸಾಗಿ ವಾದಿಸುತ್ತಿದ್ದರು. ಬೆಳಗಾವಿ ಯಾರಿಗೆ ಸೇರಬೇಕು? ಅನ್ನುವದರ ಬಗ್ಗೆ.

ಬೆಳಗಾವಿ ಒಳಗೆ "ಬೆಳ" ಅಂತ ಇದೆ ನೋಡಿ, ಅದು ಫುಲ್ ಕನ್ನಡದ್ದು. ಬೆಳಗ್ಗೆ, ಬೆಳವಡಿ, ಬೆಳವಣಿಗೆ  ಇತ್ಯಾದಿ ಶಬ್ದಗಳು ಕನ್ನಡದವು. ಹಾಗಾಗಿ ಬೆಳಗಾವಿ ಶಬ್ದವೇ ಮೂಲತಃ ಕನ್ನಡದ್ದು. ಹಾಗಾಗಿ ಅದು ಕರ್ನಾಟಕ್ಕೆ ಸೇರಿದ್ದು. ದೂಸರಾ ಮಾತೇ ಇಲ್ಲ - ಅಂತ ಅಂದ ಕನ್ನಡಿಗ.

ಮರಾಠಿಗನಿಗೆ ಉರಿಯಿತು. ಕನ್ನಡಿಗ ಲಾಜಿಕಲ್ ರೀಸನ್ ಕೊಟ್ಟಿದ್ದ.

ಹಾಗಾದ್ರೆ ನಿಮ್ಮ ಪ್ರಕಾರ ಲಂಡನ್ ಮಹಾರಾಷ್ಟ್ರಕ್ಕೆ ಸೇರಬೇಕು ಏನು???????????????!!!!!!!!!!!!!!! - ಕೋಪದಿಂದ ಕೇಳಿದ ಮರಾಠಿಗ.

ಪಾಪ  ಮರಾಠಿಗ.

ಇನ್ನು 'ಲಂಡನ್ ಝಾಲಾಚ್  ಪಾಯಿಜೆ' ಅಂತ ಹೋಗುತ್ತಾರೆ ಏನು? - ಅಂತ ಕನ್ನಡಿಗ ಕನ್ಫ್ಯೂಸ್ ಆದ.

ಮೊದಲೇ ಹೇಳಿದಂತೆ ಬರೀ ಜೋಕ್. ತಿಳಿಲಿಲ್ಲ ಅಂದ್ರೂ ಒಕೆನೇ . :) :)

Thursday, August 16, 2012

ಮಾಂಗಲ್ಯ ಕಟ್ಟಬೇಡಿ ಸಾರ್.....ಕೊಟ್ಟುಬಿಡಿ ಸಾಕು

ಇಂಗ್ಲಿಷ್ ನಲ್ಲಿ ಎರಡು ಶಬ್ದ ಇವೆ. ಒಂದು ನಾಲೇಜ್  (knowledge). ಇನ್ನೊಂದು ವಿಸ್ಡಂ (wisdom).

ನಾಲೇಜ್ ಗೆ ಜ್ಞಾನ ಅನ್ನಬಹುದು. ವಿಸ್ಡಂ ಗೆ ಸಂದರ್ಭಾನುಸಾರ ವಿವೇಕ, ತಿಳುವಳಿಕೆ, ಅರಿವು, ಪ್ರಜ್ಞೆ ಹೀಗೆ ಬೇರೆ ಬೇರೆ ಶಬ್ದ ಉಪಯೋಗಿಸುತ್ತಾರೆ.

ಉದಾರಣೆ ಸಮೇತ ಹೇಳಿದರೆ ಸುಲಭ.

ಇಂಗ್ಲಿಷ್ ನಲ್ಲಿ ಒಂದು ಮಾತಿದೆ.

“Knowledge is knowing the tomato is a fruit, wisdom is not putting in your fruit salad.”

― Miles Kington 

ಅಂದ್ರೆ - ಟೊಮ್ಯಾಟೋ ಒಂದು ಹಣ್ಣು ಅಂತ ಗೊತ್ತಿರುವದು ಜ್ಞಾನ. ಟೊಮ್ಯಾಟೋವನ್ನು ಫ್ರುಟ್ ಸಾಲಡ್ ನಲ್ಲಿ ಹಾಕಬಾರದು ಅಂತ ಗೊತ್ತಿರುವದು ವಿವೇಕ, ಅರಿವು, ಪ್ರಜ್ಞೆ.

ಏನೋ..............ಸುಮಾರು ವರ್ಷದ ಹಿಂದೆ ಓದಿದ ಘಟನೆ ನೆನಪಾಯಿತು.

ಬೆಂಗಳೂರು.  2003-4-5 ರ ಮಾತು. ಪೋಲೀಸರ ಒಂದು ಕಾರ್ಯಕ್ರಮ. ನಿಮಗೆ  ಗೊತ್ತಿರುವಂತೆ ಪೊಲೀಸರು ಆಗಾಗ ವಶಪಡಿಸಿಕೊಂಡ ಕದ್ದ ಮಾಲು ಸಾರ್ವಜನಿಕರಿಗೆ ವಾಪಸ್ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ.

ಇದೂ ಅಂತಹದೇ ಕಾರ್ಯಕ್ರಮ. ಪೊಲೀಸರು ಕಳ್ಳರನ್ನು ಹಿಡಿದು, ವಶಪಡಿಸಿಕೊಂಡಿದ್ದ ಮಾಲುಗಳನ್ನೆಲ್ಲ ನೀಟಾಗಿ ಅರೇಂಜ್
ಮಾಡಿ ಇಟ್ಟಿದ್ದರು. ಹೆಚ್ಚಿಗೆ ಸಂಖ್ಯೆಯಲ್ಲಿ ಇದ್ದ ಆಭರಣಗಳು ಅಂದರೆ - 'ಮಾಂಗಲ್ಯ' (ಕರಿಮಣಿ ಸರ). ಹಾಗಾಗಿ ತಮ್ಮ ಮಾಲು ವಾಪಸ್ ಪಡಿಯಲು ಬಂದಿದ್ದ ಹೆಂಗಸರಲ್ಲಿ ಮುತ್ತೈದೆಯರೇ ಜಾಸ್ತಿ ಇದ್ದರು.

ಆಗಿನ ಪೋಲಿಸ್ ಕಮೀಷನರ ಸಾಹೇಬರೂ ಬಂದಿದ್ದರು. ಅಷ್ಟು ದೊಡ್ಡ ಪ್ರೊಗ್ರಾಮ್. ಅವರು ಬಂದಿಲ್ಲ ಅಂದರೆ ಹೇಗೆ? ಅವರೇ ಸುಮಾರು ಜನರಿಗೆ ಆಭರಣ ಹಿಂದೆ ತಿರುಗಿಸುವ ಕೆಲಸ ಮಾಡಿ, ಫೋಟೋ ತೆಗಿಸಿಕೊಂಡು ಹೋಗುವ ಪ್ಲಾನ್ ನಲ್ಲಿ ಇದ್ದರು.

ಕಾರ್ಯಕ್ರಮ ಶುರು ಆಯಿತು. ಮೊದಲ ಮಹಿಳೆಯ ಹೆಸರು ಕರಿಯಲಾಯಿತು. ಆಕೆ ಬಂದರು. ಜೂನಿಯರ್ ಪೋಲಿಸ್ ಅಧಿಕಾರಿ ಆಕೆಯ ಕಳೆದು ಹೋಗಿದ್ದ 'ಮಾಂಗಲ್ಯ' ಕಮೀಷನರ ಸಾಹೇಬರ ಕೈಗೆ ಕೊಟ್ಟರು.

ಎಲ್ಲರೂ expect ಮಾಡಿದ್ದೇನು? ಕಮೀಷನರ ಸಾಹೇಬರು ಆ ಮಹಿಳೆಯ ಕೈಗೆ ಮಾಂಗಲ್ಯ ಕೊಟ್ಟು ಕೈ ಮುಗಿಯುತ್ತಾರೆ. ಆಕೆಯೂ ಮಾಂಗಲ್ಯ ಸರ ಇಸಿದುಕೊಂಡು ಧನ್ಯವಾದದ ರೂಪದಲ್ಲಿ ಕೈ ಮುಗಿದು, ವೇದಿಕೆ ಇಳಿದು ಹೋಗುತ್ತಾರೆ.

ಆದ್ರೆ ಆಗಿದ್ದೆ ಬೇರೆ. ನೋಡಿ ಜನರೆಲ್ಲ ಘಾಬರಿ ಬಿದ್ದು ಹೋದರು. ಮಾಂಗಲ್ಯ ಇಸಿದುಕೊಳ್ಳಲು ಬಂದ ಮಹಿಳೆಯ ಕೈಯಲ್ಲಿ ಅದನ್ನು ಕೊಟ್ಟು ಕಳಿಸುವ ಬದಲು, ಕೊರಳಿಗೆ ಕಟ್ಟಲು  / ಹಾಕಲು  ಹೊರಟು ಬಿಟ್ಟರು ಕಮೀಷನರ ಸಾಹೇಬರು. ಮಹಿಳೆ ಮುಜುಗರದಿಂದಲೋ, ಅಸಹ್ಯದಿಂದಲೋ ಎರಡು ಮಾರು ದೂರ ಹಾರಿದರು. ಆ ಮಹಿಳೆಗೆ ಅನ್ನಿಸಿರಬೇಕು - ಏನಪ್ಪಾ ಇವರು. ಇಷ್ಟು ದೊಡ್ಡ ಸಾಹೇಬರು. ಕಾಮನ್ ಸೆನ್ಸ್ ಇಲ್ಲವಾ ಇವರಿಗೆ? ಕರಿಮಣಿ ಸರ ಕೊರಳಿಗೆ ಹಾಕಲು ಬರುತ್ತಾರಲ್ಲ. ಅದೇನು ಸತ್ಕಾರಕ್ಕೆ ಹಾಕುವ ಹೂವಿನ ಮಾಲೆಯೇ? ಹೂವಿನ ಮಾಲೆಯೇ ಇದ್ದರೂ ಮಹಿಳೆಯರ ಕೈಗೆ ಕೊಟ್ಟು ಕೈ ಮುಗಿಯುವದು ನಮ್ಮ ಸಂಸ್ಕೃತಿ.

ಜೂನಿಯರ್ ಅಧಿಕಾರಿಗಳು - ಸಾರ್....ಸಾರ್....ಸುಮ್ಮನೆ ಕೈಗೆ ಕೊಡಿ ಸಾರ್ - ಅಂತ ಸಣ್ಣ ದನಿಯಲ್ಲಿ ಹೇಳುತ್ತಿದ್ದರು. ಏನು ಮಾಡಿಯಾರು? ಒಬ್ಬ ಸಬ್ ಇನ್ಸ್ಪೆಕ್ಟರ್ ಕಮೀಷನರ ಸಾಹೇಬರಿಗೆ ಏನಂತ ಹೇಳಿಯಾನು? ಸಣ್ಣ ದನಿಯಲ್ಲಿ ಅಲ್ಲದೆ ಮತ್ತೆ ಹೇಗೆ ಹೇಳಿಯಾನು?

ಕಮೀಷನರ ಸಾಹೇಬರಿಗೆ ಮಾತ್ರ ಫುಲ್ ಆಶ್ಚರ್ಯ. ಯಾಕೆ ಈ ಮಹಿಳೆ ದೂರ ಓಡುತ್ತಿದ್ದಾಳೆ ಅಂತ. ಇವರೂ ಒಂದೆರಡು ಹೆಜ್ಜೆ ಮುಂದೆ ಹೋದರು. ಆ ಮಹಿಳೆ ಎಲ್ಲಿ ಸಾಹೇಬರು ತಮ್ಮ ಫುಲ್ ಪೋಲಿಸ್ ಶಕ್ತಿ ಉಪಯೋಗಿಸಿ ತಾಳಿ ಕಟ್ಟಿಯೇ ಬಿಡುತ್ತಾರೋ ಅಂತ ಬೆದರಿದ ಹುಲ್ಲೆ ತರಹ ಲುಕ್ ಕೊಡುತ್ತ, ಗಡಗಡ  ನಡುಗುತ್ತ, ವೇದಿಕೆಯ ತುದಿಗೆ ಬಂದು  ಸೀರೆ ಸೆರಗನ್ನು  ಮತ್ತೂ ಗಟ್ಟಿಯಾಗಿ ಸುತ್ತಿಕೊಳ್ಳುತ್ತಾ, ಭಗವಂತಾ ಕಾಪಾಡು ಅನ್ನುತ್ತ ನಿಂತೇ ಬಿಟ್ಟರು. ಇನ್ನೊಂದು ಹೆಜ್ಜೆ ಮುಂದಿಟ್ಟರೆ ವೇದಿಕೆಯಿಂದ ಕೆಳಗೆ ಕಾಲು ಮತ್ತೊಂದು ಮೇಲ್ಮಾಡಿಕೊಂಡು ಬಿದ್ದಿರುತ್ತಿದರೋ ಏನೋ....?........ಪಾಪ.

ಇನ್ನೂ ಸುಮ್ಮನಿದ್ದರೆ ದೊಡ್ಡ ಮಟ್ಟದ ಅನಾಹುತ ಆಗೇ ಬಿಡುತ್ತದೆ ಅಂತ ಗ್ರಹಿಸಿದ ಸುಮಾರು ದೊಡ್ಡ DCP ಮಟ್ಟದ ಅಧಿಕಾರಿಯೊಬ್ಬರು ಬಂದು ಸಾಹೇಬರ ಕಿವಿಯಲ್ಲಿ ಮೆಲ್ಲಗೆ ಉಸಿರಿದರು. ಸಾರ್, ಅದನ್ನ ಕೊರಳಿಗೆ ಹಾಕಲೇ ಬಾರದು ಸಾರ್. ಕೇವಲ ಆಕೆಯ ಗಂಡ ಮಾತ್ರ ಮಾಡಬಹುದಾದ ಕೆಲಸ ಅದು. ಸುಮ್ಮನೆ ಕೈಯಲ್ಲಿ ಕೊಟ್ಟುಬಿಡಿ ಸಾರ್ - ಅಂತ ಅಂದರು.

ಕಮೀಷನರ ಸಾಹೇಬರು - ಯಾಕೆ? ಏನು ಮಹಾ? ಕಟ್ಟಿದರೆ ಏನು ತಪ್ಪು?- ಅನ್ನುವ ಲುಕ್ ಕೊಟ್ಟರು. ಮಹಿಳೆಯ ಕಡೆ ನೋಡಿದರು. ಆಕೆ ಅಳುವದೊಂದೇ ಬಾಕಿ. ಹಾಳಾಗಿ ಹೋಗಲಿ ಅಂತ ಆಕೆಯ ಕೈಯಲ್ಲಿ ತುರುಕಿ ಗಡಬಿಡಾಯಸಿ ಹೋಗೇ  ಬಿಟ್ಟರು. ಬೇರೆ ಅಧಿಕಾರಿಗಳು ಉಳಿದ ಜನರಿಗೆ ಅವರವರ ಆಭರಣ ಮುಂತಾದವನ್ನು ಹಿಂತಿರುಗಿಸಿದರು.

"ಮಾಂಗಲ್ಯ ಒಂದು ತರಹದ ಕೊರಳಲ್ಲಿ ಹಾಕಿಕೊಳ್ಳೋ ಸರ ಅಂತ ಗೊತ್ತಿರುವದು ಜ್ಞಾನ. ಕಂಡಕಂಡವರಿಗೆ ಅದನ್ನು ಕೊರಳಲ್ಲಿ ಕಟ್ಟಬಾರದು / ಹಾಕಬಾರದು ಎಂದು ತಿಳಿದಿರುವದು ವಿವೇಕ."

ಯಾಕೋ ಆ ಟೊಮ್ಯಾಟೋ ಕೊಟೇಶನ್ ಓದುತ್ತಿದ್ದಾಗ ಈ  ಪೋಪಂ(ಪೋಲಿಸ ಪಂಗಾ) ನೆನಪಾಯಿತು.

ಆ ಕಾಲದದಲ್ಲಿ ಮರುದಿವಸ ಪತ್ರಿಕೆಗಳಲ್ಲಿ ಕಮೀಷನರ "ಮಾಂಗಲ್ಯ ಕಟ್ಟಲು ಹೋದ" ಸುದ್ದಿ ರುಚಿ ರುಚಿಯಾಗಿ ಪ್ರಕಟವಾಗಿತ್ತು. ಪತ್ರಕರ್ತರು ಚೆನ್ನಾಗಿಯೇ ಸಾಹೇಬರ ಕಾಲೆಳದಿದ್ದರು. ಕಿಚಾಯಿಸಿದ್ದರು.

ಅಯ್ಯೋ.....ಪಾಪ ಸಾಹೇಬರು......ಎಲ್ಲೋ ಉತ್ತರ ಪೂರ್ವ ರಾಜ್ಯದಿಂದ ಬಂದಿದ್ದಾರೆ. ಅದೂ ಗುಡ್ಡಗಾಡು ಜನಾಂಗದವರು. ಅವರಿಗೆ ನಮ್ಮ ರೀತಿ ನೀತಿ ಗೊತ್ತಿರಲಿಕ್ಕಿಲ್ಲ. ಅವರ ಜನರಲ್ಲಿ ಕರಿಮಣಿ ಮಾಂಗಲ್ಯ ಮತ್ತೊಂದು ಕಟ್ಟೋದಿಲ್ಲ. ಅದಕ್ಕೆ ಪಾಪ ಅವರಿಗೆ confuse ಆಯಿತು - ಅಂತ ಕೆಲವರು ಬೆನಿಫಿಟ್ ಆಫ್ ಡೌಟ್ ಕೊಟ್ಟರು.

ಆದ್ರೆ IPS ಆದಾಗಿಂದ ಕರ್ನಾಟಕದಲ್ಲೇ ಇದ್ದ ಅವರಿಗೆ ಮಾಂಗಲ್ಯದ ಬಗ್ಗೆ ಇರುವ ರೀತಿ ನೀತಿ, ಸಂಪ್ರದಾಯ, ಪದ್ಧತಿ  ಗೊತ್ತಿರಲಿಲ್ಲ ಅಂದ್ರೆ....? ಏನೋಪ್ಪಾ?

ಈ ಕಮೀಷನರ ಸಾಹೇಬರು ಮಾಂಗಲ್ಯ ಹಿಡಕೊಂಡು, ಅದನ್ನ ಕಟ್ಟೋ ಪೋಸಿಶನ್ ತಗೊಂಡು, ಆ ಯಮ್ಮನ ಹತ್ತಿರ ಹೋಗೋವಾಗ,  ಆ ಯಮ್ಮನ ಮುಖ ನೋಡಿದ್ರೆ - ಮಾಂಗಲ್ಯಂ ತಂತು ನಾನೇನಾ, ಮಮ ಜೀವನ "ಹೇತು" ನಾಂ - ಅನ್ನೋ ತರಹ  ಆಗಿತ್ತು ಸಾರ್ - ಅಂತ ಕಿಡಿಗೇಡಿ ಪೋಲಿಸ ಪೇದೆಯೊಬ್ಬ ಅಂಡು ಬಡಿದುಕೊಂಡು ನಕ್ಕನಂತೆ. ಕೇಳಿಸಿಕೊಂಡ ಟ್ಯಾಬ್ಲೋಯಿಡ್ ಪತ್ರಕರ್ತ ಮುಂದಿನ ವಾರ ಚೆನ್ನಾಗಿಯೇ ಕಿಚಾಯಿಸಿದ್ದ.

ಹೀಗೆ ಇನ್ನೊಂದು ಸಮಾರಂಭವೂ ಆಗಿತ್ತಂತೆ. ಅದೆಂದರೆ ರೌಡಿ ಲಿಸ್ಟಿನಿಂದ ಮಾಜಿ ರೌಡಿಗಳನ್ನು ತೆಗೆಯುವದು ಮತ್ತು ಅವರಿಗೆ ಮುಕ್ತಿ ಕೊಡುವದು. ಗಲಾಟೆ, ಗಿಲಾಟೆ ಆದ್ರೆ ರೌಡಿ ಲಿಸ್ಟಿನಲ್ಲಿ ಇರೋ ಜನರನ್ನೇ ಮೊದಲು ಎಳೆದುಕೊಂಡು ಹೋಗಿ ವಿಚಾರಣೆ ಮಾಡುತ್ತಾರೆ. 5-10 ವರ್ಷಕ್ಕೊಮ್ಮೆ ರೌಡಿ ಲಿಸ್ಟ್ ರಿವೈಸ್ ಮಾಡಿ, ರೌಡಿಸಂ ಬಿಟ್ಟವರನ್ನ ಕರೆದು ಒಂದು ಸಮಾರಂಭ ಮಾಡಿ - ನೀವು ಈಗ ಹಾಲಿ ರೌಡಿ ಅಲ್ಲ, ಓನ್ಲಿ ಮಾಜಿ, ಚೆನ್ನಾಗಿ ಇರಿ - ಅಂತ ಹೇಳಿ ಕಳಿಸುತ್ತಾರೆ.

ಉದ್ದೇಶ ತುಂಬಾ ಒಳ್ಳೆಯದೇ. ಆದ್ರೆ ಪೊಲೀಸರಿಗೆ ಅಲ್ಲೂ ದುಡ್ಡು ಗೆಬರಲು ಒಂದು ಅವಕಾಶ. ಡೀಲಿಗೆ  ಕೂತು ಬಿಡುತ್ತಾರೆ. ನೋಡ್ರೀ...ರೌಡಿ ಲಿಸ್ಟಿನಿಂದ ನಿಮ್ಮನ್ನ ತೆಗಿಬೇಕು ಅಂದ್ರೆ ಇಷ್ಟು ಕೊಡಬೇಕಾಗುತ್ತದೆ - ಅಂತ ಚೌಕಾಶಿ ಶುರು. ಇದ್ದವರು ಕೊಡುತ್ತಾರೆ. ಕೊಟ್ಟು ರೌಡಿ ಎಂಬ ಲೇಬಲ್ಲಿಂದ ಹೊರಬರುತ್ತಾರೆ. ಇಲ್ಲದವರು ಅಷ್ಟೇ. ರೌಡಿಸಂ ಬಿಟ್ಟಿದ್ದರೂ, ರೌಡಿ ಅನ್ನಿಸಿಕೊಳ್ಳುತ್ತ, ಆಗಾಗ ಪೋಲಿಸರಿಂದ ಬೆಂಡೆತ್ತಿಸಿಕೊಳ್ಳುತ್ತ ಇರುತ್ತಾರೆ.

ರೌಡಿ ಲಿಸ್ಟಿನಿಂದ ತೆಗೆಯುವ ಒಂದು ಸಮಾರಂಭ. ಮತ್ತೆ ಇದೇ ಕಮಿಷಿನರ್ ಸಾಹೇಬರು. ಸುಮಾರು ಮಂದಿಗೆ ರೌಡಿ ಲಿಸ್ಟಿನಿಂದ ತೆಗೆದ ಬಗ್ಗೆ ಖಾತ್ರಿ ಸರ್ಟಿಫಿಕೆಟ್ ಕೊಟ್ಟರು. 

ಮಧ್ಯೆ ಒಬ್ಬ ಸರ ಸರ ವೇದಿಕೆಯತ್ತ ಬಂದ. ತಡೆಯಲು ಯತ್ನಿಸಿದರೂ ಮುನ್ನುಗ್ಗಿದ. ಸಾಹೇಬರು - ಬರಲಿ ಬಿಡಿ - ಅಂದರು. ಏನಪ್ಪಾ....ಏನು ಬೇಕು? - ಅಂತ ಕೇಳಿದರು. ಆ ವ್ಯಕ್ತಿ - ಸಾರ್......ನನಗೆ ಅನ್ಯಾಯವಾಗಿದೆ.....ಅದನ್ನ ಹೇಳಿಕೊಳ್ಳಲು ಅವಕಾಶ ಕೊಡಿ.....ಪ್ಲೀಸ್.....- ಅಂತ ಅಂಗಾಲಾಚಿದ. ಆಯಿತು.....ಬಾರಪ್ಪ.... - ಅಂತ ಅವನನ್ನು ವೇದಿಕೆ ಮೇಲೆ ಕರೆದು ಕೈಗೆ ಮೈಕ್ ಕೊಡಿಸಿದರು ಸಾಹೇಬರು. ಒಳ್ಳೆ ಎತ್ತರಕ್ಕೆ ಉದ್ದುದ್ದ ಕೂದಲು ಬಿಟ್ಟುಗೊಂಡಿದ್ದ ಅವನನ್ನು ಒಂದು ತರಹ ನೋಡಿದರು ಸಾಹೇಬರು.

ವೇದಿಕೆ ಮೇಲೆ ಬಂದವನೇ ಆ ವ್ಯಕ್ತಿ, ಮೈಕ್ ಸಿಕ್ಕ ಕೂಡಲೇ, ತನ್ನ ದರ್ದ್ ಭರಿ ದುಃಖ ಭರಿತ ಕಹಾನಿ ಹೇಳಿಕೊಳ್ಳುತ್ತ ಗೊಳೋ ಅಂತ ಅತ್ತ. ಅವನು ಯಾರೋ ರೌಡಿ ಶೀಟರ್ ಅಂತೆ. ಈಗ ಸುಮಾರು ವರ್ಷದಿಂದ ರೌಡಿಸಂ ಫುಲ್ ಬಿಟ್ಟು ತನ್ನ ಪಾಡಿಗೆ ತಾನಿದ್ದಾನಂತೆ, ಆದರೂ ಏರಿಯಾ ಪೊಲೀಸರು ಸಿಕ್ಕಾಪಟ್ಟೆ ಅನವಶ್ಯಕ ತೊಂದರೆ ಕೊಡುತ್ತಾರಂತೆ, ಈ ಸಲ ರೌಡಿ ಲಿಸ್ಟಿನಿಂದ ತೆಗೆಯಲು ಸಿಕ್ಕಾಪಟ್ಟೆ ದುಡ್ಡು ಕೇಳಿದರಂತೆ, ಕಾಸಿಲ್ಲದಿರುವದಕ್ಕೆ ಮತ್ತೆ ಕಾಡಿದರಂತೆ. ಒಟ್ಟಿನಲ್ಲಿ ಜಿಂದಗಿನೇ ಹಾಳಾಗ್ ಬುಟ್ಟೈತೆ ಅಂತ ರೌಡಿ ಗೊಳೋ ಅಂತ ಅತ್ತ.

ಕಮೀಷನರ ಸಾಹೇಬರಿಗೆ ಅವನು ಹೇಳಿದ್ದರಲ್ಲಿ ಏನೂ ಅರ್ಥವಾದಂತೆ ಕಾಣಲಿಲ್ಲ. ಕೆಲವು vested interests ಇದ್ದ ಅಧಿಕಾರಿಗಳಿಗೆ ಈ ಮನುಷ್ಯ ವೇದಿಕೆ ಬಿಟ್ಟು ಹೋದರೆ ಸಾಕಾಗಿತ್ತು. ಇಲ್ಲಾಂದ್ರೆ ಯಾರ್ಯಾರದೋ ಹೆಸರು ಹೇಳಲು ಅವನು ಶುರು ಮಾಡಿ ಖಾಕಿ ರೌಡಿಗಳ ಹೂರಣ ಹೊರಗೆ ಬಂದರೆ ಕಷ್ಟ. ಹಾಗಾಗಿ ಅವರಲ್ಲೊಬ್ಬ ಬಂದು - ಸಾರ್.....ಎಲ್ಲೋ ಹುಚ್ಚು ಪಾರ್ಟಿ....ಏನೇನೋ ಹೇಳುತ್ತಿದ್ದಾನೆ....ಓಡ್ಸಿ ಸಾರ್ ಅವನ್ನಾ....ಇನ್ನೂ ತುಂಬಾ ಜನ ರೌಡಿಗಳಿಗೆ ಸರ್ಟಿಫಿಕೆಟ್ ಕೊಡೋದಿದೆ....ಬೇಗಾ ಓಡ್ಸಿ ಸಾರ್ - ಅಂತ ಕಮೀಷಿನರ್ ಕಿವಿಯಲ್ಲಿ ಊದಿದರು.

ಕಮೀಷನರು ಎದ್ದು ಮೈಕಿನಲ್ಲಿ ಗೊಳೋ ಅನ್ನುತ್ತಿದ್ದ ರೌಡಿಯ ಹತ್ತಿರ ಬಂದರು. ಏನಯ್ಯಾ.....ನಿನ್ನ ಹೆಸರು? - ಅಂತ ಗತ್ತಿನಿಂದ ಕೇಳಿದರು.

ಆ ವ್ಯಕ್ತಿ, ಅಯ್ಯೋ....ಸಾಹೇಬ್ರೆ ಬಂದವರೆ....ಹೆಸರು ಕೇಳ್ತಾವ್ರೆ ....ಅಂತ ತಗ್ಗಿ ಬಗ್ಗಿ.....ಸಾರ್ ನನ್ನೆಸ್ರು ರಮೇಶಾ ಸಾರ್....ಅಂತ ಮತ್ತೊಮ್ಮೆ ನಮಸ್ಕಾರ ಅಂದ.

ಸಾಹೇಬರು ಜೇಬಿಗೆ ಕೈ ಹಾಕಿದವರೇ ನೂರರ ಒಂದು ನೋಟು ತೆಗೆದರು. ತೆಗೆದು ರಮೇಶನ ಕೈಯಲ್ಲಿ ತುರುಕಿದರು.

ರಮೇಶಾ ....ಇದನ್ನು ತೊಗೋ....ಹೋಗಿ ಖಟಿಂಗು ಮಾಡಿಸು.....ಹೋಗು....ಹೋಗು....- ಅಂತ ಸಾಕಿನ್ನು ನಡೆ ನಡೆ ಅನ್ನೋ ರೀತಿಯಲ್ಲಿ ಹೇಳಿದರು.

ಪಾಪ ಪ್ಯೂರ್ ಕನ್ನಡಿಗ ರಮೇಶನಿಗೆ ಈ ಸಾಹೇಬರ ಗುಡ್ಡಗಾಡು ಕನ್ನಡ ತಿಳಿಯಲಿಲ್ಲ. ಅದರಲ್ಲೂ "ಖಟಿಂಗು" ಅಂದ್ರೆ ಏನು ಅಂತ ಅವರ ಮನೆದೇವರಾಣೆಗೂ ತಿಳಿಯಲಿಲ್ಲ. ಏನು ಸಾರ್....ಏನು ಸಾರ್.....- ಅಂತ ತೊದಲಿದ ರಮೇಶ.

ಸಾಹೇಬರು ತಮ್ಮ ಮಿಲಿಟರಿ ಕಟಿಂಗ್ ತಲೆ ಮೇಲೆ ಕೈಯಾಡಿಸುತ್ತಾ ಮತ್ತೆ ಮತ್ತೆ ಖಟಿಂಗು, ಖಟಿಂಗು.....ಮಾಡಿಸು....ಮಾಡಿಸು....ಹೋಗು...ಹೋಗು....ಅಂತ ಎರಡೆರಡು ಸರ ಹೇಳುತ್ತಾ ತಮ್ಮ ಇತರೆ ಜೂನಿಯರ್ ಅಧಿಕಾರಿಗಳ ಕಡೆ ನೋಡಿದರು. ಅವರು ಬಂದು - ಯೋ....ಸಾಹೇಬರು ಹೇಳಿದ್ದು ಕೇಳಲಿಲ್ಲವಾ? ಹೋಗಪ್ಪಾ.....ಹೋಗಿ ಕಟಿಂಗ್ ಮಾಡಿಸು....ಸಾಹೇಬರು ಅದಕ್ಕೆ ಅಂತ ಕಾಸ್ ಕೊಟ್ಟವ್ರೆ....ಹೋಗು....ಹೋಗು.... - ಅಂತ ಕಳಿಸೇ ಬಿಟ್ಟರು. ರಮೇಶನ ಏರಿಯಾದ ಇನ್ಸ್ಪೆಕ್ಟರ್ ಬಹುಶಃ ತಮ್ಮ ಡೈರಿಯಲ್ಲಿ ನೋಟಾಕಿಕೊಂಡಿರಬೇಕು - ಈ ನನ್ನ ಮಗನ್ನ ಎತ್ತಾಕಿಕೊಂಡು ಬಂದು, ಏರೋಪ್ಲೇನ್ ಹತ್ತಿಸಬೇಕು. ಸಾಹೇಬರ ಮುಂದೆ ನಮ್ಮ ಮಾನ ತೆಗೆದವನೇ ಹಲ್ಕಾ ಲೋಫರ್ ....- ಅಂತ ಹಲ್ಲು ಕಡಿದಿರಬೇಕು. ತನ್ನ ಕಷ್ಟ ಹೇಳಿಕೊಳ್ಳಲು ಬಂದಿದ್ದ ರಮೇಶ ಹೇರ್ ಕಟಿಂಗ್ ಮಾಡಿಸಿಕೊಳ್ಳಲು ಕಮೀಷನರ ಹತ್ತಿರ ಪುಗಸಟ್ಟೆ ಅಡ್ವೈಸ್ ಮತ್ತು ನೂರು ರುಪಾಯಿ ತೆಗೆದುಕೊಂಡು ಹೋಗಬೇಕಾಯಿತು.

ಯಾಕೋ....ಇವತ್ತು ವಿಸ್ಡಂ, ನಾಲೇಜ್ , ಟೊಮ್ಯಾಟೋ, ಫ್ರುಟ್ ಸಲಾಡ್ - ಅಂದ ಕೂಡಲೇ ನಮ್ಮ ಹಳೇ ಕಮೀಷನರ ಸಾಹೇಬರು ಮತ್ತು ಅವರ ಯಡವಟ್ಟುಗಳು ನೆನಪಾದವು.

ಸಾಹೇಬರು ಈಗ ರಿಟೈರ್ ಆಗಿ ಆರಾಮ್ ಇದ್ದಾರೆ.