Thursday, June 27, 2013

'ಗೋಪಿ' ಮಂಚೂರಿಯನ್....ಮಂಗೋಚಾರ್ಯ ಸ್ಪೆಷಲ್


ಗೋಬಿ ಮಂಚೂರಿಯನ್
'ಗೋಬಿ ಮಂಚೂರಿಯನ್' ತಿನ್ನಲು ಸಿಕ್ಕೀತೆಂದು ಹೋದರೆ ತಿನ್ನಲು ಬಾರದಂತಹ 'ಗೋಪಿ' ಮಂಚೂರಿಯನ್ ಸಿಗಬೇಕೆ?!

ಆವತ್ತು ಸಂಡೇ. ಸುಮಾರು ಮಧ್ಯಾನ್ಹ ಹನ್ನೊಂದುವರೀ ಪೌಣೆ ಹನ್ನೆರಡರ ಟೈಮ್. ನಾ ನಮ್ಮ ಖಾಯಂ ಅಡ್ಡಾ ಭೀಮ್ಯಾನ ಪಾನ್ ಅಂಗಡಿ ಮುಂದ 'ಡ್ರೈ ಮಾವಾ' ಮೆಲಕಾಡಿಸಿಕೋತ್ತ ನಿಂತಿದ್ದೆ. ನಮ್ಮ ದೋಸ್ತ ಚೀಪ್ಯಾ ಮನಿ ಕಡೆಯಿಂದ ಓಡಿ ಬರೋದು ಕಾಣಿಸ್ತು. ಗೊತ್ತಾತು. ರೂಪಾ ವೈನಿ ಏನೋ ಜಲ್ದೀ ಒಳಗ ತರಲಿಕ್ಕೆ ಓಡಿಸ್ಯಾರ. ಅದಕ್ಕss ಹೀಂಗ ಕುಂಡಿಗೆ ಕಾಲ್ ಹಚ್ಚಿ ಓಡಲಿಕತ್ತಾನ.

ವೈನಿ ಕಥಿ ಅಂದ್ರ, ಒಗ್ಗರಣಿಗೆ ರೆಡಿ ಮಾಡಿಕೊಂಡು ಮೆಣಶಿನಕಾಯಿ ಚಟಪಟ ಅನ್ನಲಿಕತ್ತಾಗ ಅವರಿಗೆ ಏಕದಂ ಸಾಸಿವಿ ಇಲ್ಲ ಅಂತ ಗೊತ್ತಾಗ್ತದ. ರೀ, ಭರಕ್ಕನ ಹೋಗಿ ಸಾಸವಿ ತೊಂಗೊಂಡು ಬರ್ರಿ, ಅಂತ ಚೀಪ್ಯಾನ್ನ 'ನರಸಿಂಹ ಕಿ ರಾಣಿ'  ಸ್ಟೋರ್ ಗೆ ಓಡಿಸ್ತಾರ. ರಾಣಿ ಸಾಹಿಬಾ ಕಡೆ ಬೈಸ್ಕೊಂಡ ಚೀಪ್ಯಾ ಕಿ'ರಾಣಿ' ಅಂಗಡಿಗೆ ಓಡ್ತಾನ. ಇವತ್ತು ಇವಾ ಓಡೋ ಪರಿ ನೋಡಿದ್ರ ಹಾಂಗೇ ಏನೋ ಆಗಿರಬೇಕು ಅಂತ ಅನ್ನಿಸ್ತು.

ಇಷ್ಟು ಅರ್ಜೆಂಟ್ ಒಳಗ ಓಡಲಿಕತ್ತಾನ ಅಂದ್ರ ಮುದ್ದಾಂ ನಿಲ್ಲಿಸಿ ಕೇಳಲೇ ಬೇಕು. ಟ್ರಾಫಿಕ್ ಜಾಸ್ತಿ ಇರಲಿಲ್ಲ. ಸೊಯ್ಯ ಅಂತ ಓಡಿ ರಸ್ತೆ ಕ್ರಾಸ್ ಮಾಡಿಬಿಟ್ಟೆ. ಮರುಕ್ಷಣದಾಗ ಚೀಪ್ಯಾನ ಆಟಕಾಯಿಸ್ಕೊಂಡೆ. ವಿಧಿ ಇಲ್ಲದೇ ನಿಂತಾ ಚೀಪ್ಯಾ.

ಏನಲೇ ಚೀಪ್ಯಾ? ಓಡೋದು ನೋಡಿದ್ರ ವಗ್ಗರಣಿಗೆ ಏನೋ ತರಲಿಕ್ಕೆ ಹೊಂಟಂಗ ಅದಲ್ಲ? ಏನು ತರಲಿಕ್ಕೆ ಎಲ್ಲಿ ಓಡಿಸ್ಯಾರ ವೈನಿ? ಹಾಂ? ಹಾಂ? - ಅಂತ ಕೇಳಿದೆ.

ಏ....ಬಿಡೋ ಮಾರಾಯಾ....ಭಾಳ ಅರ್ಜೆಂಟ್....ಆ ಮ್ಯಾಲೆ ಎಲ್ಲಾ ಹೇಳತೇನಿ....ನೀನೂ ಊಟಕ್ಕ ಬಂದು ಬಿಡು, ಅಂತ ಅತ್ಯುನ್ನತ ಆಮಿಷ, ಊಟದ ಆಮಿಷ, ತೋರಿಸಿ ಚೀಪ್ಯಾ ಕಳಚಿಕೊಳ್ಳಲಿಕ್ಕೆ ನೋಡಿದ.

ಊಟಕ್ಕ ಕರದಾನ. ಅದೂ ಬಿಟ್ಟಿ. ಇನ್ನೂ ಇವಂಗ ತ್ರಾಸ್ ಕೊಡಬಾರದು ಅಂತ ಬಿಡಲಿಕ್ಕೆ ತಯಾರ ಆದೆ.

ಏನ್ ತರಲಿಕ್ಕೆ ಹೊಂಟೀಲೇ ಚೀಪ್ಯಾ? ಇವತ್ತು ರವಿವಾರ. ಭಾಳ ಅಂಗಡಿ ಬಂದು ಇರ್ತಾವ. ಹೇಳು..ಹೇಳು, ಅಂತ ಕೇಳಿದೆ. ಈ ಯಬಡಾ ಗೊತ್ತಿಲ್ಲದೇ ತಾಸು ಗಟ್ಟಲೇ ಮಾರ್ಕೆಟ್ ಸುತ್ತಿಗೋತ್ತ ಇದ್ದಾನು, ನಂತರ ವೈನಿ ಕಡೆ ಮನಗಂಡ ಕಟಿಸಿಕೊಂಡ ಗಂಡ ಆದಾನು ಅಂತ ಕಾಳಜಿ ನಮಗ.

ಏ....ಬಿಡೋ ಮಾರಾಯಾ...ಈಗೆಲ್ಲಿ ನಿನ್ನ ಮುಂದ ಕಿರಾಣಾ ಲಿಸ್ಟ್ ಓದಿಕೋತ್ತ ಕೂಡಲಿ? ಜಲ್ದೀ ಹೋಗಬೇಕು. ಬಂದು ಬಿಡು ಊಟಕ್ಕ. ಇನ್ನು ಒಂದು ತಾಸು ಬಿಟ್ಟು, ಅಂತ ಹೇಳಿದ ಚೀಪ್ಯಾ ಹೊಂಟು ನಿಂತ. ನಿಂತ ಏನು ಬಂತು ಹೊಂಟೇ ಬಿಟ್ಟ.

ಏನ್ ತರಲಿಕ್ಕೆ ಅಷ್ಟು ಅರ್ಜಂಟಿಲೆ ಹೊಂಟಿ ಅಂತ ಹೇಳಿ ಹೋಗೋ ಪುಣ್ಯಾತ್ಮಾ, ಅಂತ ವದರಿದೆ.

ಅದ..ಅದು...ಗೋಬಿ.....ಚಂದಾ....ಮಂಚೂರಿಯನ್..... ಅಂತ ಚೀಪ್ಯಾ ಏನೇನೋ ಅಡ್ಡಂಬಡ್ಡ ಹೇಳಿ ಹೋಗಿ ಬಿಟ್ಟ.

ಹಾಂ!!! ಏನು ಇವರ ಮನಿಯಾಗ ಇವತ್ತು ಗೋಬಿ ಮಂಚೂರಿಯನ್ ಮಾಡ್ಯಾರ? ಚಂದಾ ಬಂದಾಳ? ಆಹಾ!! ಆಹಾ!! ಏನು ಸೌಭಾಗ್ಯ ನಮ್ಮದು ಇವತ್ತು. ಇಂತಹ ದಿನಾನ ನಮ್ಮನ್ನ ಊಟಕ್ಕ ಬ್ಯಾರೆ ಕರೆದು ಬಿಟ್ಟಾನ. ಏನು ನಮ್ಮ ನಸೀಬಾ!!! ಅಂತ ದೇವರಿಗೆ ಮನಸ್ಸಿನ್ಯಾಗ ಸಾವಿರ ನಮಸ್ಕಾರ ಹಾಕಿದೆ. ಗಡದ್ದ ಊಟ ಆದ ಮ್ಯಾಲೆ ಮೆಲ್ಲಲಿಕ್ಕೆ ಬೇಕು ಅಂತ ಒಂದು ಸ್ಪೆಷಲ್ ಜರ್ದಾ 420 ಪಾನ್ ಮಾಡಿಸಿ ಕಟ್ಟಿಸಿಬಿಟ್ಟೆ. 300 ರತ್ನಾ ಜರ್ದಾ ಮತ್ತ 120 ಬಾಬಾ ಜರ್ದಾ ಹಾಕಿ ಮಾಡಿದ್ದೇ 420 ಪಾನ್!

ಚಂದಾ ಅಂದ್ರ ಚಂದ್ರಕಲಾನೇ ಇರಬೇಕು. ಚೀಪ್ಯಾನ ನಾದನಿ. ರೂಪಾ ವೈನಿ ತಂಗಿ. ಏನೋ ಒಂದು ಟೈಪ್ ಚಂದ ಇದ್ದಾಳ. ಕಣ್ಣು ಮೂಗು ಎಲ್ಲಾ ತಿರಗಿಸೋ ವಯಸ್ಸು. ಗಿರಿ ಗಿರಿ ತಿರಿಗಿಸಿಕೋತ್ತ, ಏನೋ ಹುಚ್ಚುಚ್ಚರೆ ಮಾತಾಡಿಕೋತ್ತ, ಮಂಗ್ಯಾತನ ಮಾಡಿಕೋತ್ತ ಇರ್ತದ ಹುಡುಗಿ. ಊಟದ ಜೊತಿ ಕಂಪನಿಗೆ ಛೋಲೋನೇ ಆತು ತೊಗೊ, ಅಂತ ಅಂದುಕೊಂಡೆ.

ಗೋಬಿ ಮಂಚೂರಿಯನ್ ತಿನ್ನೋ ಭಾಗ್ಯ ನಮ್ಮದು ಇವತ್ತು. ಅದೂ ಮನಿಯೊಳಗ ಶುದ್ಧವಾಗಿ ಮಾಡಿದ್ದು. ಅವನೌನ್!ಸ್ಟೇಷನ್ ರೋಡ್ ಮ್ಯಾಲೆ ದೊಡ್ಡ ಗಟಾರದ ಮ್ಯಾಲೆ ಕಲ್ಲು ಹಾಕಿಕೊಂಡು, ಅದರ ಮ್ಯಾಲೆ ಗಾಡಿ ಇಟ್ಟುಕೊಂಡು, ಗೋಬಿ ಮಂಚೂರಿಯನ್ ಮತ್ತ ಎಗ್ ಫ್ರೈಡ್ ರೈಸ್ ಮಾಡಿ ಮಾರೋ ಮಂದಿ ಕಡೆ ಅವನ್ನು ತಿಂದು, ಬರಬಾರದ ರೀತಿಯೊಳಗ ಏನೇನೋ ಬ್ಯಾನಿ ಬಂದು, ಪಡಬಾರದ ಪಾಡು ಪಟ್ಟು, ಡಾಕ್ಟರ ಕುಂಡಿ ಮ್ಯಾಲೆ ಕೊಡಬಾರದ ರೀತಿಯೊಳಗ ಇಂಜೆಕ್ಷನ್ ಕೊಟ್ಟು, ಅದರ ಮ್ಯಾಲೆ ಒಂದಕ್ಕೆರಡು ಡಾಕ್ಟರ್ ಬಿಲ್ ಕೊಟ್ಟು ಸಾಕಾಗಿ ಬಿಟ್ಟದ. ರೂಪಾ ವೈನಿ ಸಹಿತ ಗೋಬಿ ಮಂಚೂರಿಯನ್ ಜೊತಿ ಎಗ್ ಫ್ರೈಡ್ ರೈಸ್ ಮಾಡಿರ್ತಾರೋ ಏನೋ? ಅಂತ ಮನಸ್ಸಿನ್ಯಾಗಾ ಮಂಡಿಗಿ ತಿಂದೆ. ಮನಸ್ಸಿನ್ಯಾಗ ಮಂಡಿಗಿ ತಿನ್ನೋದು ಅಂದ ಮ್ಯಾಲೆ ಜೊತಿಗೆ ಹಾಲು ತುಪ್ಪಾ ಸಹಿತ ಮಸ್ತ ಹಾಕಿಕೊಂಡ ತಿಂದುಬಿಟ್ಟೆ. ಫ್ರೀ ನೋಡ್ರೀ!

ಏಕದಂ ಫ್ಲಾಶ್ ಆತು. ಬ್ರಾಹ್ಮಣರ ಮನಿ. ವೈನಿ ಬ್ಯಾರೆ ಸ್ವಲ್ಪ ಕಟ್ಟರ್. ಎಗ್ ಗಿಗ್ಗ್ ಮನಿಯೊಳಗ ವರ್ಜ್ಯ. ಹಾಂಗಾಗಿ ಎಗ್ ಫ್ರೈಡ್ ರೈಸ್ ಏನೂ ಮಾಡಲಿಕ್ಕೆ ಇಲ್ಲ. ಕಲಸನ್ನನೋ, ವಾಂಗೀ ಭಾತೋ, ಮಸಾಲಿ ಭಾತೋ ಏನಾರಾ ಮಾಡೇ ಮಾಡಿರ್ತಾರ. ಬರೇ ಗೋಬಿ ಮಂಚೂರಿಯನ್ನು, ಅನ್ನಾ, ಸಾರು, ಪಲ್ಯಾ ಮಾಡಿ ಅರ್ಧಂ ಬರ್ಧಾ ಬಡಾ ಖಾನಾ ಮಾಡಲಿಕ್ಕೆ ರೂಪಾ ವೈನಿ ತಲಿ ಏನೂ ಕೆಟ್ಟಿರಲಿಕ್ಕೆ ಇಲ್ಲ. ಗೋಬಿ ಮಂಚೂರಿಯನ್ನು, ಚಿತ್ರಾನ್ನ ಉರ್ಫ್ ವಗ್ಗರಣಿ ಅನ್ನ ಮಾಡಬಹುದು ಅಂತ ಇಟ್ಟುಕೊಳ್ಳೋಣ. ಸ್ವೀಟ್ ಏನು ಮಾಡಬಹುದು? ಕಮ್ಮಿ ಕಮ್ಮಿ ಅಂದ್ರೂ ಶಾವಿಗಿ ಪಾಯಸಾ ಮಾಡ್ತಾರ ಅನ್ಕೊತ್ತೇನಿ. ಏನೂ ಇಲ್ಲಂದ್ರೂ ಹಳೆ ಪಳೆ ಬಾಳಿ ಹಣ್ಣು ಕತ್ತರಿಸಿ, ಅವನ್ನ ಹಾಲಾಗ ಒಗದು, ಒಂದೆರಡು ಯಾಲಕ್ಕಿ ಜಜ್ಜಿ ಹಾಕಿ ಪಂಚಾಮೃತದಂತಹ ಬಾಳಿ ಹಣ್ಣಿನ ಪಾಯಸಾ ಅಂತೂ ಮಾಡೇ ಮಾಡಿರ್ತಾರ. ಹಾಕ್ಕ! ಅವನೌನ್!!!

ಚೀಪ್ಯಾ ಮೂರ ಶಬ್ದ....ಗೋಬಿ....ಚಂದಾ....ಮಂಚೂರಿಯನ್...ಅಂತ ಹೇಳಿದಾ. ಅಥವಾ ನಾ ಹಾಂಗ ಕೇಳಿಸಿಕೊಂಡೆ. ಅದರ ಮ್ಯಾಲೆ ಏನೋ ಊಟಕ್ಕ ಬಾ ಅಂತ ಹೇಳಿ ಬಿಟ್ಟರ ನಾವು ಇಷ್ಟು ದೊಡ್ಡ ಮಂಡಿಗಿ ಮನಸ್ಸಿನ್ಯಾಗ ತಿಂದು ಬಿಟ್ಟಿವಿ. ಮನಸ್ಸಿನ್ಯಾಗ ಮಂಡಿಗಿ ತಿಂದ್ರ ಪುಣ್ಯಕ್ಕ ಹೊಟ್ಟಿ ತುಂಬೋದಿಲ್ಲ. ಇಲ್ಲಂದ್ರ ಹೋಗಿ ಗಡದ್ದ ಊಟಾ ಕಟೀಲಿಕ್ಕೆ ಆಗತಿರಲಿಲ್ಲ. ಟೈಮ್ ನೋಡಿಕೊಂಡೆ. ಹಾಂ!!!ಒಂದು ತಾಸ ಆಗಲಿಕ್ಕೆ ಬಂದೇ ಬಿಟ್ಟಿತ್ತು. ಲಗೂನ ಹೋಗಿ ಪಂಕ್ತಿ ಒಳಗ ಮೊದಲ ಕೂಡಬೇಕು. ಇಲ್ಲಂದ್ರ ಒಮ್ಮೊಮ್ಮೆ ಪಂಕ್ತಿ ತುದಿಗೆ ಬರೋ ತನಕಾ ಮಾಡಿದ ಅಡಿಗಿ ಖಾಲಿ ಆಗಿಬಿಡ್ತಾವ. ಮೊದಲೇ ಬ್ರಾಹ್ಮಣರು ಗೋಬಿ ಮಂಚೂರಿಯನ್ ಎಲ್ಲಾ ಮಾಡೋದು ಭಾಳ ಅಪರೂಪ. ಎಲ್ಲರೆ ರಾಯರ ಮಠದ ಆಚಾರ್ರು, ಗುಡಿ ಭಟ್ಟರು ಊಟಕ್ಕ ಬರ್ತಾರೋ ಏನೋ? ಅವರೆಲ್ಲಾ ಬಂದು ಪಂಕ್ತಿ ಒಳಗ ಫಸ್ಟ್ ಸೆಕೆಂಡ್ ಕೂತು ಬಿಟ್ಟರ ಮುಗೀತು ಅಷ್ಟ. ಅದಕ್ಕss ಲಗೂ ಹೋಗಿ ಹ್ಯಾಂಗರ ಮಾಡಿ ಪಂಕ್ತಿ ಒಳಗ ಮಸ್ತ ಜಗಾ ಹಿಡಿಬೇಕು ಅನಕೋತ್ತ ಚೀಪ್ಯಾನ ಮನಿ ಕಡೆ ಹೊಂಟು ಬಿಟ್ಟೆ.

ಚೀಪ್ಯಾನ ಮನಿ ಬಂದು ಮುಟ್ಟಿದೆ. ಯಾರನ್ನ ನಿರೀಕ್ಷೆ ಮಾಡಿದ್ದೆ ಅವರ್ಯಾರೂ ಇರಲಿಲ್ಲ. ಮಠದ ಆಚಾರ್ರು, ಗುಡಿಯ ಭಟ್ಟರು ಇರಲಿಲ್ಲ. ಒಳ್ಳೇದಾತು. ನಾವೇ ಮಸ್ತಾಗಿ ಗೋಬಿ ಮಂಚೂರಿಯನ್ ಮುಕ್ಕಬಹುದು. ಯಾರೂ ಪ್ರತಿಸ್ಪರ್ಧಿ ಇಲ್ಲ. ಗುಡ್! ಐ ಲೈಕ್ ಇಟ್! ರೂಪಾ ವೈನಿ ಯಬಡ ತಂಗಿ ಕನ್ಯಾಕುಮಾರಿ ಚಂದಾ ಸಹಿತ ಕಾಣಲಿಲ್ಲ. ಒಳ್ಳೇದೇ ಆತು. ಅಕಿ ಹಾಪರ ಗತೆ ಖೀ....ಖೀ....ಅಂತ ನಕ್ಕೋತ್ತ, ನನ್ನ ಕಾಡಿಸಿಕೋತ್ತ ಇರತಾಳ. ಶಾಂತಿಯಿಂದ ಊಟ ಮಾಡಬಹುದು.

ನಿರೀಕ್ಷೆ ಮಾಡಿದವರು ಅಂತೂ ಯಾರೂ ಇರಲಿಲ್ಲ. ಆದರೇ ಒಬ್ಬ ಅನಿರೀಕ್ಷಿತ ವ್ಯಕ್ತಿ ಮಾತ್ರ ಅಲ್ಲಿದ್ದ. ಅವನ್ನ ನೋಡಿ ಫುಲ್ ಘಾಬರಿ ಆದೆ. ಥಂಡಾ ಏನ್ ಬಂತು ಫುಲ್ ಐಸ್ ಕೋಲ್ಡ್ ಹೊಡದ ಬಿಟ್ಟೆ. ಹಾಂಗಿದ್ದ ಆ ವ್ಯಕ್ತಿ. ಅದೂ ಚೀಪ್ಯಾನ ಮನಿಯಾಗ ಸಿಕ್ಕು ಬಿಟ್ಟಾನ.

ಯಾರಿರಬಹುದು? ಅವನ್ನ ನೋಡಿ ನಾ ಯಾಕ ಅಷ್ಟು ಥಂಡಾ ಹೊಡದೆ?

ಚೀಪ್ಯಾನ ಮನಿಯೊಳಗ ಒಬ್ಬವ ಚಿಂಕಿ ಅಂದ್ರ ಚೈನಾ ಮಂಗೋಲಿಯಾ ಆ ಕಡೆ ಮನುಷ್ಯಾ ಬಂದು ಕೂತು ಬಿಟ್ಟಾನ! ಬರೆ ಚಿಂಕಿ ಅಂದ್ರ ಓಕೆ. ಈಗ ಎಲ್ಲಾ ಕಡೆ ವಿದೇಶೀ ಮಂದಿ ಬರ್ತಾರ, ಊರೂರು ತಿರಗತಾರ, ಎಲ್ಲೆಲೋ ಇರತಾರ, ಸಾಮಾನ್ಯ ಮಂದಿ ಜೊತಿ ಅವರೊಂದಿಗೇ ಇದ್ದು ಜೀವನಾ ಕಲಿತೇವಿ ಅದು ಇದು ಅಂತಾರ. ಅದೆಲ್ಲಾ ಓಕೆ. ಆದ್ರ ಈ ಚಿಂಕಿ ಮಾತ್ರ ಭಾರಿ ವಿಚಿತ್ರನೇ ಇದ್ದ.

ಮಸ್ತ ನಾಮಾ, ಮುದ್ರಿ, ಅದು, ಇದು ಅಂತ ಚೀಪ್ಯಾನ ಜಾತಿ ಮಂದಿ ಹಾಂಗ ಇದ್ದ. ಇವೆಲ್ಲಿ ಚಿಂಕಿ ಬ್ರಾಹ್ಮಣ ಬಂದಾ ಅಂತ ಆಶ್ಚರ್ಯ ಪಟ್ಟೆ! ಮಸ್ತ ಚಂಡಿಕಿ ಬ್ಯಾರೆ ಬಿಟ್ಟಾನ! ಹಾಂ! ಹಾಂ!

ಅಷ್ಟರಾಗ ಆ ಚಿಂಕಿನೇ ಜನಿವಾರ ಹೊಸಗೋತ್ತ, ಅದನ್ನ ಆಕಡೆಯಿಂದ ಈ ಕಡೆ, ಪಕ್ಕಾ ಆಚಾರ ಮಂದಿ ಹಾಂಗ, ಮಾಡಿಕೋತ್ತ, ಹಿಂದ ಧೋತ್ರಾ ಮತ್ತ ಮತ್ತ ಎತ್ತಿ ಸರಿ ಮಾಡಿ ಸಿಕ್ಕಿಸಿಕೋತ್ತ ಬಂದು, ಸ್ವಚ್ಚ ಕನ್ನಡ ಒಳಗ, ಅವನ ಚಿಂಕಿ ಆಕ್ಸೆಂಟ್ ಒಳಗ, ನಮಸ್ಕಾರ, ಅಂದು ಬಿಟ್ಟ!

ನಾ ಫುಲ್ ಫ್ಲಾಟ್!

ನಮಸ್ಕಾರ, ಅಂದೆ ನಾನೂ.

ಇನ್ನೂ ಚಿಂಕಿ ಆಚಾರಿ ನೋಡಿ ಆದ ಶಾಕಿನಿಂದ ಹೊರಗ ಬಂದಿದ್ದಿಲ್ಲ.

ನನ್ನ ಹೆಸರು ಗೋವರ್ಧನಾಚಾರ್ಯ, ಕ್ಯಾ ಕ್ಯೂ, ಅಂತ ಆ ಚಿಂಕಿನೇ ಮತ್ತ ಹೇಳಿದ.

ಕನ್ನಡ ಬಂದ್ರ ಏನಾತು? ಅವರ ಆಕ್ಸೆಂಟ್ ಹ್ಯಾಂಗ ಅಂದ್ರ ನಮಗ ಕೊನಿಗೆ ಕ್ಯಾ ಕ್ಯೂ ಅಂತ ಅವಾ ಮೂಗಿನೊಳಗ ಹೇಳಿದಂಗ ಕೇಳತದ.

ನಮಸ್ಕಾರ....ನಮಸ್ಕಾರ....ಗೋವರ್ಧನಾಚಾರ್ಯ ಅವರಿಗೆ. ಸಂತೋಷ. ಎಲ್ಲಿಂದ ಬಂದೀರಿ? - ಅಂತ ಕೇಳಿದೆ.

ನಾವು ಮಂಚೂರಿಯಾದಿಂದ ಬಂದಿದೇವೆ, ಅಂದ ಚಿಂಕಿ.

ಈಗ ಗೊತ್ತಾತು ನೋಡಲೇ!! ಮಂಚೂರಿಯಾದಿಂದ ಗೆಸ್ಟ್ ಬಂದಾರ ಅಂತ ಹೇಳಿಯೇ ಮನಿಯೊಳಗ ಗೋಬಿ ಮಂಚೂರಿಯನ್ ಮಾಡ್ಯಾರ ಅಂತಾತು. ಬೆಷ್ಟ ಆತು ತೊಗೋ!!

ಏನ್ ಗೋವರ್ಧನ ಆಚಾರ್..... ನಿಮಗ ಗೋಬಿ ಮಂಚೂರಿಯನ್ ಭಾಳ ಸೇರ್ತದ ಏನು? - ಅಂತ ಕೇಳಿದೆ.

ಅವಾ ಫುಲ್ confuse ಆಗಿ, ಕ್ಯಾ ಕ್ಯೂ, ಅಂತ ಮೂಗಿನೊಳಗ ಅಂದ. ಅವಂಗ ಅವರಪ್ಪನ ಆಣಿಗೂ ಗೋಬಿ ಮಂಚೂರಿಯನ್ ಅಂದ್ರ ಏನು ಅಂತ ತಿಳಿಲಿಲ್ಲ. ಇರಲಿ ಅವರ ಭಾಷಾ ಒಳಗ ಅದಕ್ಕ ಬ್ಯಾರೆನೇ ಏನೋ ಹೆಸರು ಇರಬೇಕು.  ಅದಕ್ಕ ಅಂತ ಬಿಟ್ಟೆ.

ಏನು ಗೋವರ್ಧನಾಚಾರ್ಯ ಈ ಕಡೆ ಬಂದೀರಿ? -ಅಂತ ಕೇಳಿದೆ.

ನಿಮ್ಮದು ದೇಶದಲ್ಲಿ ವೇದಾಂತ ಕಲೀಬೇಕು ಅಂತ ಬಂದು ಹದಿನೈದು ವರ್ಷದ ಮೇಲಾಗಿ ಹೋಯಿತು, ಅಂದ ಚಿಂಕಿ.

ವಾಹ್! ಭಾಪರೆ!! ನಮ್ಮ ಮಂದಿ ನಮ್ಮ ವೇದಾಂತ ಅದು ಇದು ಎಲ್ಲಾ ಬಿಟ್ಟು ಕೂತರ ಹೊರಗಿನ ಮಂದಿಗೆ ಭಾಳ ಆಸಕ್ತಿ. ಬಹಳ ಹೆಮ್ಮೆ ಅನ್ನಿಸ್ತು. ಚಿಂಕಿ ಬಗ್ಗೆ ಒಂದು ತರಹದ ಗೌರವ ಭಾವನೆ ಮೂಡಿತು.

ಧನ್ಯನಾದೆ ಮಂಗೋಚಾರ್ರ!!!!ಧನ್ಯನಾದೆ ಮಂಗೋಚಾರ್ರ, ಅಂತ ಉದ್ಗರಿಸಿದೆ.

ನಮಗೆ ಮಂಗಾ ಅಂತೀರಾ ನೀವು? ಕ್ಯಾ ಕ್ಯೂ, ಅಂತ ಸ್ವಲ್ಪ ಸಿಟ್ಟಿನಿಂದ ಕೇಳಿದ ಚಿಂಕಾಚಾರ್ಯಾ.

ಇಲ್ಲರೀಪಾ.....ಇಲ್ಲ.....ಮಂಚೂರಿಯನ್ ಗೋವರ್ಧನಾಚಾರ್ರ ಅನ್ನೋದು ಭಾಳ ಉದ್ದಾತು. ಅದಕ್ಕ ಶಾರ್ಟಾಗಿ ಮಂಗೋಚಾರ್ರ ಅಂದೇ ಅಷ್ಟ. ಎಲ್ಲಿ ಮಂಗ್ಯಾ? ನಾವೆಲ್ಲಾ ಮಂಗ್ಯಾಗಳು. ಅಷ್ಟು ದೂರದ ಚೀನಾ ದೇಶದಿಂದ ಪ್ರಾಚೀನ ಕಾಲದಾಗ ಹೂಯೇನ್ ತ್ಸಾಂಗ್ ಬಂದಾಂಗ ಬಂದು ಬಿಟ್ಟೀರಿ. ಅವನಗತೆ ಕುಂಡಿಗೆ ಖುರ್ಚಿ, ತಲಿಗೊಂದು ಛತ್ರಿನೂ ಕಟ್ಟಿಗೊಂಡು ಬಂದೀರೋ ಹ್ಯಾಂಗ? ಅಲ್ಲಾ ಮಾತಿಗೆ ಕೇಳಿದೆ. ವರ್ಷಗಟ್ಟಲೆ ಅಡ್ಡಾಡೋರು ಅದಕ್ಕ ಕೇಳಿದೆ, ಅಂತ ಚಿಂಕಾಚಾರ್ಯನ ಕೋಪ ಶಮನ ಮಾಡಿದೆ.

ಕುಂಡಿಗೆ ಖುರ್ಚಿ, ತಲಿಗೆ ಛತ್ರೀ ಕಟ್ಟಿಕೊಂಡು ಭಾರತಕ್ಕೆ ಬಂದಿದ್ದ ಆ ಕಾಲದ ಬ್ಯಾಕ್ ಪ್ಯಾಕರ್ ಹೂಯೇನ್ ತ್ಸಾಂಗ

ನಾವೆಲ್ಲ ಮಾಡರ್ನ್ ಹೂಯೇನ್ ತ್ಸಾಂಗ್. ನಮ್ಮ ಹತ್ತಿರ ಮಾಡರ್ನ್ ಬ್ಯಾಕ್ ಪ್ಯಾಕಿಂಗ್ ಎಲ್ಲಾ ಸಾಮಾನು ಇದೆ, ಅಂತ ಅವನ ಕಡೆ ಸ್ಲೀಪಿಂಗ್ ಬ್ಯಾಗ್, ಅದು, ಇದು ಅಂತ ಹೇಳಿದ.

ಓಹೋ!!! ಹಾಂಗ? ವೆರಿ ಗುಡ್, ವೆರಿ ಗುಡ್, ಅಂದು ಮುಂದೇನು ಈ ಚಿಂಕಾಚಾರ್ಯನ ಜೊತಿ ಮಾತಾಡಬೇಕು ಅನ್ನೋದ್ರಾಗ ರೂಪಾ ವೈನಿ, ಊಟಕ್ಕ ಬರ್ರಿ ಎಲ್ಲಾರೂ, ಅಂತ ಟಾಪ್ ವಾಯ್ಸ್ ಒಳಗ ಹೊಯ್ಕೊಂಡಿದ್ದು ಕೇಳಿಸ್ತು.

ಭರಕ್ಕನ ಹಾರಿ ಹೋಗಿ ಪಂಕ್ತಿ ಒಳಗ ಮೊದಲ ಸೀಟ್ ಹಿಡದ ಬಿಟ್ಟೆ. ಮಠದ ಆಚಾರ್ರು, ಗುಡಿ ಭಟ್ಟರು ಇರದಿದ್ದರ ಏನಾತು? ಈ ಚಿಂಕ್ಯಾ ಮಂಗೋಚಾರ್ಯ, ಚೀಪ್ಯಾ ಇಬ್ಬರೇ ಕೂಡಿ ಅಷ್ಟೂ ಗೋಬಿ ಮಂಚೂರಿಯನ್ ತಿಂದು ಸ್ವಾಹಾ ಮಾಡಿ ಮುಗಿಸಿ ಬಿಟ್ಟರೆ? ಹಾಂ? ಹಾಂ?!

ಆ ಪರಿ ರೇಸ್ ಹಚ್ಚಿ ಓಡಿ ಹೋಗಿ ಸೀಟ್ ಹಿಡಿಯೋದನ್ನ ನೋಡಿದ ರೂಪಾ ವೈನಿ, ಇದು ಎಂದೂ ಸುಧಾರಿಸೋ ಪೈಕಿ ಅಲ್ಲ, ಅಂತ ತಲಿ ಅಲ್ಲಾಡಿಸಿದರು. ಇಗ್ನೋರ್! ಜಸ್ಟ್ ಇಗ್ನೋರ್! ಅಂತ ಇಗ್ನೋರ್ ಮಾಡಿ ಎಲಿ ಮುಂದ ಕೂತು ಬಿಟ್ಟಿವಿ. ಗೋಬಿ ಮಂಚೂರಿಯನ್ ಯಾವಾಗ ಬರ್ತದೋ ಏನೋ?! ಆತುರಾ, ಕಾತುರಾ! ಟೈಮ್ ವೇಸ್ಟ್ ಮಾಡ ಬ್ಯಾಡ್ರೀ....ಲಗೂನ ಅನ್ನಾ, ತವ್ವಿ ಶಾಸ್ತ್ರ ಮುಗಿಸಿ, ಲಗೂನ ಗೋಬಿ ಮಂಚೂರಿಯನ್ ಹಾಕಿ ಬಿಡ್ರೀ, ಅಂತ ಹೊಯ್ಕೊಳ್ಳೋಣ ಅಂತ ಮಾಡಿದೆ. ಮಂದಿ ಮನಿ, ಅದೂ ಚಿಂಕಿ ಆಚಾರಿ ಬ್ಯಾರೆ ಬಂದಾನ ಅಂತ ಬಿಟ್ಟೆ.

ಚೀಪ್ಯಾ, ಮಂಚೂರಿಯನ್ ಗೋವರ್ಧನಾಚಾರಿ ಬಂದು ಸ್ಥಾಪಿತರಾದರು. ಭಾಳ ಶಾಸ್ತ್ರ ಸಮ್ಮತವಾಗಿ ಇಬ್ಬರೂ ಪತ್ರಾವಳಿ ಎಲಿ ಬಾಜೂಕ ಚಿತ್ರಾವಳಿ ಹಾಕಿ ಒಂದ್ನಾಕು ಅಗಳು ಅನ್ನಾ ದೇವರಿಗೆ ಇಟ್ಟು, ಏನೇನೋ ಮಂತ್ರಾ ಹೇಳಿ, ನೀರು ಮ್ಯಾಲೆ ನೀರು ಆಚಮನ ತೊಗೊಂಡು, ಅದೇನೋ ಶಾಸ್ತ್ರ ಇಬ್ಬರೂ ಮುಗಿಸಿ, ಊಟಕ್ಕ ರೆಡಿ ಅಂತ ಸಿಗ್ನಲ್ ಕೊಟ್ಟರು. ನನಗೂ ಮುಂಜ್ವಿ ಆದ ಹೊಸತರಲ್ಲಿ ಅದೆಲ್ಲಾ ಸ್ವಲ್ಪ ಸ್ವಲ್ಪ ಬರ್ತಿತ್ತು. ಈಗ ಜನಿವಾರನೇ ಇಲ್ಲ. ಈಗಾಗಲೇ ವಾರದಾಗ ಏಳು 'ವಾರ' ಅವ, ಜನಿ'ವಾರ' ಅಂತ ಇನ್ನೊಂದು ವಾರ ಹಾಕೋದು ಬ್ಯಾಡ ಅಂತ ಜನಿವಾರ ತ್ಯಜಿಸಿ ಭಾಳ ವರ್ಷದ ಮ್ಯಾಲೆ ಆತು. ಮತ್ತ ವೇದ ಉಪನಿಷತ್ತುಗಳ ಹೇಳಿ ಬಿಟ್ಟಾವ, ಬ್ರಹ್ಮಜ್ಞಾನ ಬಂದವರಿಗೆ ಜನಿವಾರ, ಉಡದಾರ, ಚಂಡ್ಕಿ ಮತ್ತೊಂದು ಎಲ್ಲಾ ಬ್ಯಾಡ ಅಂತ ಹೇಳಿ. ಬ್ರಹ್ಮಜ್ಞಾನ ಡ್ರಮ್ಮಜ್ಞಾನ ನಮಗೂ ಅದ ಅಂತ ಹೇಳಿ ನಾವೂ ಅವೆಲ್ಲಾ ಬಿಟ್ಟ ಬಿಟ್ಟೇವಿ. ಬಾಜೂಕ ಕೂತ ಇಬ್ಬರು ವಿಪ್ರೋತ್ತಮರು ಅವರ ಪದ್ಧತಿ ಅನುಸರಿಸೋವಾಗ ನಾವು ಕೋಸಂಬರಿ, ರಸಾ, ಉಪ್ಪಿನಕಾಯಿ ನೆಕ್ಕೋತ್ತ, ಚೀಪ್ಯಾನ ಕನ್ಯಾರತ್ನಗಳಾದ ಕುಂತಿ ನಿಂತಿ ಜೊತಿ ಮಂಗ್ಯಾನಾಟಾ ಮಾಡಿಕೋತ್ತ, ರೂಪಾ ವೈನಿ ಕಡೆ ಬೈಸಿಕೋತ್ತ, ಗೋಬಿ ಮಂಚೂರಿಯನ್ನಿಗೆ ಕಾದು  ಕೂತಿದ್ವಿ.

ಬಡಿಸಲಿಕ್ಕೆ ಶುರು ಮಾಡಿದ್ರು. ಒಂದಾದ ಮ್ಯಾಲೆ ಒಂದು ಬರೆ ಪಕ್ಕಾ ಬ್ರಾಹ್ಮಣರ ಅಡಿಗಿ. ಅದೇ ಅನ್ನಾ, ತೊವ್ವಿ, ಚಪಾತಿ,
ಸಾರು, ಹುಳಿ, ರಸಾ, ಅದರ ಮ್ಯಾಲೆ ಶ್ರಾದ್ಧದ ವಡಿ ಬ್ಯಾರೆ. ಯಾರ ಶ್ರಾದ್ಧನೋ ಏನೋ?ಶ್ರಾದ್ಧದ ಊಟ ಮಾಡಿದ್ರ ಸತ್ತವರ ಪಾಪ ನಮಗೂ ಹತ್ತದಂತ. ಯಾವ ಪಾಪಿ ಮುಂಡೆ ಗಂಡ ಗೊಟಕ್ಕ ಅಂದನೋ ಏನೋ! ಅವನ ಶ್ರಾದ್ಧಾ. ಹಾಳಾಗಿ ಹೋಗ್ಲೀ ಅಂತ ಹಾಕಿದ್ದೆಲ್ಲಾ ಮಸ್ತಾಗಿ ಗುಳುಂ ಗುಳುಂ ಮಾಡಿಕೋತ್ತ ಬರಬಹುದಾದ ಗೋಬಿ ಮಂಚೂರಿಯನ್ನಿಗೆ ಕಾದು ಕೂತಿದ್ದೆ. ಅದು ಬರೋ ಲಕ್ಷಣನ ಇಲ್ಲ!!!

THE END ಅನ್ನೋ ಹಾಂಗ ಮೊಸರು ಮಜ್ಜಿಗಿ ತಂದು ಬಿಟ್ಟರು. ಛೆ!!! ಇದಾದ ಮ್ಯಾಲೆ ಗೋಬಿ ಮಂಚೂರಿಯನ್ನು ಬರಲಿಕ್ಕೆ ಇಲ್ಲ. ಎಲ್ಲರ ರೂಪಾ ವೈನಿ ಗೋಬಿ ಮಂಚೂರಿಯನ್ನ ಮಾಡಿದ್ದನ್ನ ಮರತು ಬಿಟ್ಟಾರೋ ಏನೋ! ಅಂತ ಸಂಶಯ ಬಂತು. ಕೇಳೆ ಬಿಡಬೇಕು ಅಂತ ಕೇಳೇ ಬಿಟ್ಟೆ. ಹಾಳಾಗಿ ಹೋಗ್ಲೀ!!

ಏನ್ರೀ ವೈನಿ ಗೋಬಿ ಮಂಚೂರಿಯನ್ನ ಮಾಡಿಲ್ಲ ಏನು? ಮರತರೇನು ಬಡಿಸಲಿಕ್ಕೆ? ಹಾಂ? ಹಾಂ? - ಅಂತ ಕೇಳಿಬಿಟ್ಟೆ.

ಏನು?! ಏನು?! ಅನ್ನೋ ಸರ್ಪ್ರೈಸ್ ಲುಕ್ ಕೊಟ್ಟರು ವೈನಿ.

ಗೋಬಿ ಮಂಚೂರಿಯನ್ನ!!ಗೋಬಿ ಮಂಚೂರಿಯನ್ನ!!! ನೀವು ಉಳಿ ಬಸಪ್ಪನ ಗುಡಿ ಜಾತ್ರಿ ಒಳಗ ತಿಂದಿದ್ರಿ ನೋಡ್ರೀ. ಅದss. ಮಾಡೀರಿ ಏನು?  - ಅಂತ ಕೇಳಿದೆ.

ಅಯ್ಯೋ!!! ಶನಿ ಮುಂಡೆ ಗಂಡ. ಏನಂತ ಕೇಳ್ತಿಯೋ???!!! ಅಂದ್ರು ರೂಪಾ ವೈನಿ.

ಈ ಮಂಗೇಶಂಗ ಏನು ದೊಡ್ಡ ಬ್ಯಾನಿ ಬಂದದರೀ ಶ್ರೀಪಾದ ರಾವ್? ಶ್ರಾದ್ಧದ ಊಟ ಅಂತೂ ಬ್ರಾಹ್ಮಣರ ಪಂಕ್ತಿಯೊಳಗ ಕೂತು ಹೊಲೆಯಾರ ಗತೆ ಜನಿವಾರಿಲ್ಲದ, ಅಂಗಿ ಬಿಚ್ಚದ ಉಣ್ಣಲಿಕತ್ತನಾ. ಅದರ ಮ್ಯಾಲೆ ಉಳಿ ಬಸಪ್ಪನ ಗುಡಿ ಜಾತ್ರಿ ಒಳಗ ಗೋಬಿ ಮಂಚೂರಿಯನ್ನ ತಿಂದ ಸುದ್ದಿ ಬ್ಯಾರೆ ಹೇಳ್ತಾನ. ಏನ್ ಆಗ್ಯದರೀ ಇವಂಗ? - ಅಂತ ರೂಪಾ ವೈನಿ ಶಂಖಾ ಹೊಡೆದರು.

ಅಯ್ಯ ಇವರss!!! ಗೋಬಿ ಮಂಚೂರಿಯನ್ನ ಅಂದೆ ಇವರಿಗೆ ತಿಳಿಲಿಲ್ಲ. ಲಾಸ್ಟ್ ಟೈಮ್ ಉಳಿ ಬಸಪ್ಪನ ಗುಡಿ ಜಾತ್ರಿ ಒಳಗ ತಿಂದಿದ್ದರು. ಚೀಪ್ಯಾನss ಕೊಡಸಿದ್ದ. ಅದನ್ನ ನೆನಪು ಮಾಡಿ ಕೊಟ್ಟರ ಚಿಟ್ಟಂತ ಚೀರ್ಲಿಕತ್ತಾರ ವೈನಿ. ಯಾಕಂತ ತಿಳಿಲಿಲ್ಲ.

ಹಾಂ!!! ಈಗ ನೆನಪಾತು ವೈನಿ ಯಾಕ ಚೀರಿದರು ಅಂತ. ಅದೇನಾಗಿತ್ತು ಅಂದ್ರ ವೈನಿ ಉಳಿ ಬಸಪ್ಪನ ಗುಡಿ ಜಾತ್ರಿ ಒಳಗ ಗೋಬಿ ಮಂಚೂರಿಯನ್ನ ಮಸ್ತಾಗಿ ಮೇಯಕೋತ್ತ ಇರಬೇಕಾದರ ಯಾರೋ ಒಬ್ಬವ ಕಿಡಿಗೇಡಿ ಅವರ ಕುಂಡಿ ಚೂಟಿ ಬಿಟ್ಟಿದ್ದ. ಚೂಟಿದ ಅಬ್ಬರಕ್ಕ ವೈನಿ ರೈಸ್ ಆಗಿ, ಗೋಬಿ ಮಂಚೂರಿಯನ್ನ ಪ್ಲೇಟ್ ಮುಂದ ಒಗದು, ಅದು ಯಾರೋ ದೊಡ್ಡ ಮನುಷ್ಯಾರ ಹೊಸಾ ವಸ್ತ್ರದ ಮ್ಯಾಲೆ ಬಿದ್ದು, ದೊಡ್ಡ ರಾಮಾ ರಾಡಿ ಆಗಿ, ಏನೇನೋ ಆಗಿ, ಯಾರ್ಯಾರಿಗೋ ಕಡತ ಬಿದ್ದು, ಗೋಬಿ ಮಂಚೂರಿ ಅಂಗಡಿಯವ ಎಲ್ಲಾರಿಗೂ ಒಂದೊಂದು ಪ್ಲೇಟ್ ಫ್ರೀ ಕೊಟ್ಟು, ನನ್ನ ದಂಧಾ ಹಾಳು ಮಾಡ ಬ್ಯಾಡ್ರೀ, ಕೈ ಮುಗೀತೀನಿ, ಹೋಗ್ರೀ, ಅಂತ ಹೇಳಿ ಏನೇನೋ ಆಗಿತ್ತು.

ಯಾಕಲೇ ಮಂಗ್ಯಾ ಮಂಗೇಶ್???!!! ಏನು ತಲಿಹರಟಿ ಮಾತ ಹಚ್ಚಿ? ನಮ್ಮನ್ಯಾಗ ಇವತ್ತು ಗೋಬಿ ಮಂಚೂರಿಯನ್ನ ಮಾಡ್ಯಾರ ಅಂತ ನಾ ಹೇಳಿದ್ದೆ ಏನು? ಊಟಕ್ಕ ಬಾರಪಾ ಅಂತ ಬೇವರ್ಸೀ ಬ್ರಹ್ಮಚಾರಿ ಮುಂಡೆ ಗಂಡನ್ನ ಕರದರ, ಕಂಠ ಪೂರ್ತಿ ಶ್ರಾದ್ಧದ ಊಟ ಜಡದು, ಗೋಬಿ ಮಂಚೂರಿಯನ್ನ ಮಾಡಿಲ್ಲೇನು ಅಂತ ಕೇಳ್ತೀ ಏನೋ ಹಾಪಾ? - ಅಂತ ಚೀಪ್ಯಾ ಸಹಿತ ತನ್ನ ಇಲ್ಲದ ಪೌರುಷಾ ಹೆಂಡ್ತಿ ಮುಂದ ತೋರಿಸಿಕೊಂಡ. ಚಿಂಕಿ ಆಚಾರಿ ಮಾತ್ರ ಏನೂ ಸಂಬಂಧ ಇಲ್ಲದವಾರಂಗ ಸಾರು ಮಸ್ತ ಅದ ಮಸ್ತ ಅದ ಅನ್ನಕೋತ್ತ ಕೈ ವಾಸಿನಿ ಕುಡಕೋತ್ತ ಮತ್ತ ಮತ್ತ ಹಾಕಿಸಿಕೊಂಡು ಊಟ ಮಾಡ್ಲಿಕತ್ತಿದ್ದಾ.

ಅಲ್ಲಲೇ ಚೀಪ್ಯಾ! ಈಗ ಎರಡು ತಾಸಿನ ಹಿಂದ ಗೋಬಿ....ಚಂದಾ....ಮಂಚೂರಿಯನ್ನ ಅಂತ ಅನಕೋತ್ತ ಏನೋ ತರಲಿಕ್ಕೆ ಮಾರ್ಕೆಟ್ ಗೆ ಓಡಲಿಕತ್ತಿದ್ದಿ. ಅದರ ಮ್ಯಾಲೆ ಮನಿಗೆ ಬಂದು ನೋಡಿದ್ರ ಮಂಚೂರಿಯಾದ ಗೋವರ್ಧನಾಚಾರ್ರು ಬ್ಯಾರೆ ಬಂದು ಕೂತಾರ. ಹಾಂಗಾಗಿ ಮುದ್ದಾಂ ಗೋಬಿ ಮಂಚೂರಿಯನ್ ಮಾಡಿರಲಿಕ್ಕೇ ಬೇಕು ಅಂತ ಅನ್ನಿಸ್ತು ನೋಡಪಾ, ಅಂತ ಹೇಳಿದೆ.

ಹುಸ್ಸೋಳೆಮಗನ!!! ಹುಚ್ಚ ಮಂಗೇಶ!!! ಹುಚ್ಚ ಮಂಗೇಶ್!!! ನಾ ಆವಾಗ ಗಡಿಬಿಡಿ ಒಳಗ ಇದ್ದೆ ಮಾರಾಯಾ. ಅರ್ಜೆಂಟ್ ಇತ್ತು. ಏನು ತರಲಿಕ್ಕೆ ಹೊಂಟಿ? ಅಂತ ನಿಲ್ಲಿಸಿ ಕೇಳಿದಿ. ಮಂಚೂರಿಯಾದಿಂದ ಬಂದ ಆಚಾರ್ರು ನಮ್ಮ ಮನಿ ಒಳಗ ಒಂದೆರಡು ದಿನದ ಮಟ್ಟಿಗೆ ನಿಂತಾರ, ಅವರಪ್ಪನ ಶ್ರಾದ್ಧಾ ಮಾಡವರು ಇದ್ದಾರ, ಅವರು ಸಂಧ್ಯಾ ಮಾಡಲಿಕ್ಕೆ ಕೂಡಲಿಕ್ಕೆ ತಯಾರ ಆಗ್ಲಿಕತ್ತಾರ, ಅಷ್ಟರಾಗ ನೋಡಿದ್ರ ಗೋಪಿ ಚಂದನ ಖಾಲಿ ಆಗಿ ಬಿಟ್ಟದ, ಅದಿಲ್ಲ ಅಂದ್ರ ಹ್ಯಾಂಗ ಸಂಧ್ಯಾ? ಪೂಜಾ? ಅಂತ ಹೇಳಿ ಭರಕ್ಕನ ಗೋಪಿ ಚಂದನ ತರಲಿಕ್ಕೆ ಹೊಂಟಿದ್ದೆ ಮಾರಾಯಾ. ಅದನ್ನ ಶಾರ್ಟ್ ಆಗಿ ಹೇಳಿದರ ಮನಿಯೊಳಗ ಗೋಬಿ ಮಂಚೂರಿಯನ್ನ ಮಾಡ್ಯಾರ ಅಂತ ಬಂದು ಕೂತಿಯಲ್ಲೋ ಮಾರಾಯಾ. ಏನು ಅನ್ನೋಣ?- ಅಂತ ಚೀಪ್ಯಾ ಅಂಡು ತಟ್ಟಿಕೊಳ್ಳದೆ ನಕ್ಕ. ತಟ್ಟಿಕೊಂಡು ನಗತಿದ್ದನೋ ಏನೋ....ಆದ್ರ ಒಂದು ಕೈ ಎಂಜಾಲಾಗಿತ್ತು ನೋಡ್ರೀ ಅದಕ್ಕ ಬ್ಯಾಡ ಅಂತ ಬಿಟ್ಟಿರಬೇಕು. 

ಗೋಪೀ ಚಂದನ
ಹೋಗ್ಗೋ ಇವರೌರ್ರ!!! ಮಂಚೂರಿಯನ್ನ ಆಚಾರ್ರಿಗೆ ಗೋಪಿ ಚಂದನ ತರಲಿಕ್ಕೆ ಹೊಂಟೇನಿ ಅನ್ನೋದನ್ನ ನಾನು ಗೋಬಿ ಮಂಚೂರಿಯನ್ನ ಅಂತಾ ಊಹಾ ಮಾಡಿಕೊಂಡು ಬಂದು ಬಿಟ್ಟಿದ್ದೆ. ಬಾಜೂಕ ಕೂತ ಮಂಚೂರಿ ಆಚಾರಿದss ಮಂಚೂರಿಯನ್ನ ಮಾಡಿ ತಿನ್ನೋವಷ್ಟು ಸಿಟ್ಟು ಬಂದಿತ್ತು. ಅದು ಬ್ರಹ್ಮಹತ್ಯಾ ದೋಷಾ ಆದೀತು ಅಂತ ಬಿಟ್ಟೆ. ಸಾದಾ ಬ್ರಾಹ್ಮಣ ಅಲ್ಲ ಬ್ಯಾರೆ, ಚಿಂಕಿ ಬ್ರಾಹ್ಮಣ ನೋಡ್ರೀ! ಅಡಿಷನಲ್ ಪಾಪಾ ಬಂದೀತು!

ಏನು ಮಾಡೋದು? ಗೋಬಿ ಮಂಚೂರಿಯನ್ನ ತಿನ್ನೋ ತಲಬಂತೂ ಎಬ್ಬಿಸಿಬಿಟ್ಟಾನ ಮಂಗ್ಯಾ ಸೂಳೆಮಗ ಚೀಪ್ಯಾ. ಇನ್ನು ಸಂಜಿ ಮುಂದ ಗಟರ ಮ್ಯಾಲೆ ಗಾಡಿ ಹಾಕಿಕೊಂಡು ಮಾಡವಂದss ಗೋಬಿ ಮಂಚೂರಿ ಮತ್ತ ಎಗ್ ಫ್ರೈಡ್ ರೈಸ್ ತಿನ್ನಬೇಕಾತು. ಥತ್ !!!!!

ಊಟ ಹಾಕಿದ್ದಕ್ಕ ಒಂದು ದೊಡ್ಡ ಥ್ಯಾಂಕ್ಸ್ ಹೇಳಿ, ಸ್ಪೆಷಲ್ ಅಂತ ಮಾಡಿಸಿಕೊಂಡಿದ್ದ 420 ಜರ್ದಾ ಪಾನ್ ಹಾಕಿಕೊಂಡು ಮನಿ ಕಡೆ ಹೊಂಟೆ.

ಇವಾ ಚೀಪ್ಯಾ ಮಂಚೂರಿಯನ್ ಗೋವರ್ಧನ ಆಚಾರಿಗೆ ಗೋಪಿ ಚಂದನ ತರೋ ಅಬ್ಬರದಾಗ ನಮಗ ಗೋಬಿ ಮಂಚೂರಿಯನ್ನ ತಪ್ಪಿ ಹೊಗಿತ್ತು. ಅದಕ್ಕೇ ಗೋಪಿ ಮಂಚೂರಿಯನ್ನ. ಅದೂ ಮಂಗೋಚಾರ್ಯ ಉರ್ಫ್ ಮಂಚೂರಿಯನ್ ಗೋವರ್ಧನಾಚಾರ್ಯ ಸ್ಪೆಶಲ್.

Tuesday, June 25, 2013

ಪಟಾಕ್ಷಿ


ಸಾಬ್....ಒಂದು ಭಾಳ ದೊಡ್ಡ ಪ್ರಶ್ನೆ ಇದೆ ಸಾಬ್, ಅಂದ ಕರೀಂ.

ಇವಾ ಕರೀಂ ಹೀಂಗ ದೊಡ್ಡದು, ಉದ್ದಂದು ಹಾಂಗ ಹೀಂಗ ಅಂತ ಪೀಠಿಕೆ ಹಾಕ್ಕೋತ್ತ ಬಂದಾ ಅಂದ್ರ ಏನೋ ಕಾದದ ಅನ್ನೋ ಹಾಂಗ ನನ್ನ ಎಡಗಣ್ಣು ಪಟ್ ಪಟ್ ಅಂತ ಹೊಡಕೊಳ್ಳಲಿಕ್ಕೆ ಶುರು ಮಾಡಿಬಿಡ್ತದ.

ಏನೋ ಪುಣ್ಯಾತ್ಮಾ ನಿನ್ನ ಅಂತಹ ದೊಡ್ಡ ಪ್ರಶ್ನೆ? ಕೇಳುವಂತಹನಾಗು, ಅಂತ ಹೇಳಿದೆ.

'ಅಕ್ಷಿಪಕ್ಷಿ' ಅಂದ್ರೆ ಏನು ಸಾಬ್? - ಅಂತ ಕರೀಂ ಕೇಳಿದ.

ಅಕ್ಷಿಪಕ್ಷಿ!!!

ಹಾಂ!!

ಅಕ್ಷಿಪಕ್ಷಿ ಅಂತ ಒಂದೇ ಶಬ್ದ ಇಲ್ಲ. ಅಕ್ಷಿ ಅಂತ ಅದ, ಪಕ್ಷಿ ಅಂತ ಅದ. ಎರಡೂ ಬ್ಯಾರೆ ಬ್ಯಾರೆ. ಅದರ ಅರ್ಥ ಬೇಕೇನು ನಿನಗ? - ಅಂತ ಕೇಳಿದೆ.

ಓಹೋ...ಹಾಗೆ ಕ್ಯಾ? ಹೇಳಿ ಹೇಳಿ ಅರ್ಥ, ಅಂದ ಕರೀಂ.

ಪಕ್ಷಿ ಅಂದ್ರ ಹಕ್ಕಿ. ಅಕ್ಷಿ ಅಂದ್ರ ಕಣ್ಣು. ಸಾಕೋ? ಮತ್ತೇನರ ಜಾಸ್ತಿ ಮಾಹಿತಿ ಬೇಕೋ? - ಅಂತ ಕೇಳಿದೆ.

ಪಕ್ಷಿ ಅಂದ್ರೆ ಅಕ್ಕಿ ಕ್ಯಾ? ಮತ್ಲಬ್ ಚಾವಲ್. ಯಾವ ಚಾವಲ್? ದಿನಾ ಅನ್ನಾಗೆ ಮಾಡೋ ಚಾವಲ್ಲೋ ಅಥವಾ ಬಿರ್ಯಾನಿ ಮಾಡೋ ಸ್ಪೆಷಲ್ ಬಾಸ್ಮತಿ ಚಾವಲ್ಲೋ? - ಅಂತ ಕೇಳಿಬಿಟ್ಟ ಕರೀಂ.

ಯಪ್ಪಾ...!!!! ನಾ ಹೇಳಿದ್ದು ಹಕ್ಕಿ ಮಾರಾಯಾ. ಹಕ್ಕಿ ಅಂದ್ರ...ಅಂದ್ರ....ಪಂಛೀ...ಕಬೂತರ್, ಚಿಡಿಯಾ ಅಂತಹ ಹಕ್ಕಿ ಮಾರಾಯಾ. ಅಕ್ಕಿ ಅಲ್ಲ. ನೀವು ಅಕ್ಕಿ ಮತ್ತ ಹಕ್ಕಿ ಕೂಡಿಸಿಯೇ ಬಿರ್ಯಾನಿ ಮಾಡ್ತೀರೀ. ಹೌದಿಲ್ಲೋ? - ಅಂತ ಕೇಳಿದೆ.

ವೋ ಕೈಸಾ ಜೀ? ಹಕ್ಕಿಗೂ ಅಕ್ಕಿಗೂ ಮಿಲಾಕೆ ಕೈಸಾ ಬಿರ್ಯಾನಿ ಮಾಡ್ತಾರೆ ಸಾಬ್? - ಅಂತ ಕೇಳಿದ ಕರೀಂ.

ಚಿಕನ್ ಬಿರ್ಯಾನಿ! ನೆನಪಾತ? ಅದರಾಗ ಚಿಕನ್ ಅಂದ್ರ ಕೋಳಿ. ಅದೂ ಒಂದು ತರದ್ದು ಹಕ್ಕಿನೇ ಅಲ್ಲಾ? ಹಕ್ಕಿ ಅಕ್ಕಿ ಕೂಡಿಸಿ, ಮಸ್ತ ಗರಂ ಮಸಾಲಾ ಹಾಕಿ ಬಿರ್ಯಾನಿ ಮಾಡಿಬಿಟ್ಟಿ ಅಂದ್ರ ಅವನೌನ್ ನಾಕು ದಿನ ಇಡೀ ಓಣಿ ತುಂಬ ಅದ ವಾಸನೀ, ಅಂತ ಹಕ್ಕಿ ಬಿರ್ಯಾನಿ ನೆನಪು ಮಾಡಿಕೊಟ್ಟೆ.

ಓ ಐಸಾ ಬೋಲಾ ಕ್ಯಾ? ಅದು ರೈಟ್. ಅಕ್ಷಿ ಅಂದ್ರೆ ಕಣ್ಣು ಅಂತಾ ಆಯಿತು. ಈಗ ಇದು ಮೀನಾಕ್ಷಿ, ಕಮಲಾಕ್ಷಿ ಅಂತೆಲ್ಲ ಅಂತಾರೆ, ನಿಮ್ಮದು ಮಂದಿ ಒಳಗೆ ಹೆಸರು ಇಡ್ತಾರೆ. ಅವೆಲ್ಲ ಕ್ಯಾ? ಬತಾವೋ ಜೀ, ಅಂದ ಕರೀಂ.

ಕಮಲಾಕ್ಷಿ ಅಂದ್ರ ಕಮಲದಂತಹ ಕಣ್ಣು ಇರಾಕಿ. ಹರಿಣಾಕ್ಷಿ ಅಂದ್ರ ಚಿಗರಿ ಗತೆ ಕಣ್ಣು ಇರಾಕಿ. ವಿಶಾಲಾಕ್ಷಿ ಅಂದ್ರ ದೊಡ್ಡ ಕಣ್ಣು ಇರಾಕಿ. ವಿರೂಪಾಕ್ಷಿ ಅಂದ್ರ ಅಕರಾಳ ವಿಕರಾಳ ವಿರೂಪ  ಕಣ್ಣು ಇರಾಕಿ. ಮೀನಾಕ್ಷಿ ಅಂದ್ರ ಮೀನದಂತಹ ಕಣ್ಣು ಇರಾಕಿ. ಇದು ಬರೆ ಹುಡುಗ್ಯಾರಿಗೆ ಮಾತ್ರ ಅಲ್ಲ, ಹುಡುಗುರಿಗೂ ಇಡಬಹುದು. ಕಮಲಾಕ್ಷ, ವಿರೂಪಾಕ್ಷ ಅಂತೆಲ್ಲ. ಅದರೂ ಹುಡುಗ್ಯಾರಿಗೆ ಇಡೋದೇ ಜಾಸ್ತಿ ಏನಪಾ. ಮತ್ತೇನರ ಡೌಟ್? - ಅಂತ ಕೇಳಿದೆ.

ವಜನಾಕ್ಷಿ ಅಂದ್ರೆ? - ಅಂತ ಕೇಳಿದ ಕರೀಂ.

ಹಾಂ?! ವಜನಾಕ್ಷಿ?! ಅಂದ್ರೇನು? - ಅಂತ ಘಾಬ್ರಿಂದ ಕೇಳಿದೆ. ತಿಳಿಲಿಲ್ಲ ನನಗ.

ನಮಗೆ ಗೊತ್ತಿದ್ರೆ ನಿಮಗೆ ಕೇಳ್ತಿದ್ದಿವಿ ಕ್ಯಾ? ಆದರೂ ವಿಚಾರ ಕರ್ತಾ ಮೈ.ಟೈಮ್ ಪ್ಲೀಸ್. ವಜನ್ ಅಂದ್ರೆ ಮೈ weight ಜಾಸ್ತಿ ಆಗಿ, ಫಿಗರ್ ಫುಲ್ ಖರಾಬ್ ಆಗಿ, ಕಣ್ಣು ಮೇಲೆ ಕೆಳಗೆ ಆಗಾಕಿಗೆ ವಜನಾಕ್ಷಿ ಅನ್ನಬೋದು ಕ್ಯಾ? ಕ್ಯಾ ಬೋಲ್ತಾ ಆಪ್? - ಅಂತ ಕೇಳಿದ ಕರೀಂ.

ಹುಚ್ಚಗ ಗೊತ್ತಿಲ್ಲ ಗಿತ್ತಿಲ್ಲ. ಏನೋ ಛೋಡಲಿಕತ್ತಿಬಿಟ್ಟಾನ.

ಲೇ! ಅದು ವನಜಾಕ್ಷಿ ಇರಬೇಕು ನೋಡೋ ಮಾರಾಯ. ವಜನಾಕ್ಷಿ ಅಂತ ವಜನಾಕ್ಷಿ! - ಅಂತ ಹೇಳಿದೆ.

ಇರಲಿ....ಈಗ ವನಜಾಕ್ಷಿ ಅಂದ್ರೆ ಏನು? - ಅಂತ ಮತ್ತ ಕೇಳಿದ.

ವನೇ ಜಾಯತೆ ಇತಿ ವನಜಾ ಅಂತ ಇರಬಹುದು. ಅಂದ್ರ ಅಡವಿಯೊಳಗ ಹುಟ್ಟಿದ್ದು ಅಂತ. ಏನು? ಆದಿವಾಸಿ ಪೈಕಿ ಜನ ಇರಬಹುದು. ಅಂದ್ರ ಅಡವಿ ಹುಡುಗಿ. ಕಾಡು ಮನುಷ್ಯಾರಾಕಿ. ಅವರಂಗ ಕಣ್ಣು ಇರಾಕಿ ವನಜಾಕ್ಷಿ. ಇದರ ಬಗ್ಗೆ ನನಗೂ ಖಾತ್ರಿ ಇಲ್ಲ. ಯಾವದಾರ ಸಂಸ್ಕೃತ ಪಂಡಿತರ ಕಡೆ ಕೇಳಿ ಖಾತ್ರಿ ಮಾಡ್ಕೋ, ಅಂತ ಹೇಳಿದೆ.

ತೇಲಾಕ್ಷಿ ಅಂದ್ರೆ ಕ್ಯಾ? - ಅಂತ ಕೇಳಿದ.

ಇವತ್ತು ಏನೋ ಅಕ್ಷಿ ಪಕ್ಷಿ ಹುಚ್ಚು ಹಿಡದಂಗ ಕಾಣ್ತದ.

ಹೋಗಲೇ....ತೇಲಾಕ್ಷಿ ಮೇಲಾಕ್ಷಿ ಅಂತ ಏನೂ ಇಲ್ಲ, ಅಂತ ಹೇಳಿದೆ.

ಅಲ್ಲೇ ಇದೆ ನೋಡಿ ಸಾಬ್! ನೀವೇ ಹೇಳಿದ್ರೀ ನೋಡಿ. ತೇಲಗಣ್ಣು ಮೇಲಗಣ್ಣು ಮಾಡಿಕೊಂಡು ಎಚ್ಚರ ತಪ್ಪಿ ಬೀಳಾಕಿಗೆ ತೇಲಾಕ್ಷಿ ಮೇಲಾಕ್ಷಿ ಅನ್ನಬಹುದಲ್ಲಾ? ಕ್ಯಾ ಬೋಲ್ತಾ? - ಅಂತ ಪೀಜೆ ಹೊಡದಾ.

ಜೋಕ್!? ಇದು!? ಇದಕ್ಕ ನಗಬೇಕಾ? ಥತ್ ನಿನ್ನ. ನೀನು ಮಂಗ್ಯಾಕ್ಷ್. ಮಂಗ್ಯಾನ್ ಕಣ್ಣಿನವ. ಬರೇ ಇಂತಾದ್ದ ಕಣ್ಣಿಗೆ ಬೀಳ್ತಾವ ನಿನಗ - ಅಂತ ಝಾಡಿಸಿದೆ.

ಅದೆಲ್ಲಾ ಓಕೆ ಸಾಬ್. ಈಗ ಹೇಳಿ ಪಟಾಕ್ಷಿ ಅಂದ್ರೆ ಯಾವ ತರಹದ ಕಣ್ಣು ಇರಾಕಿ? ನಮಗೆ ಅದೇ ಡೌಟ್ ಈಗ, ಅಂತ ಹೇಳಿ ಒಂದು ಬಾಂಬ್ ಒಗದೇ ಬಿಟ್ಟ.

ಪಟಾಕ್ಷಿ!!!ಪಟಾಕ್ಷಿ!!!

ತಲಿ ಕೆರ್ಕೊಂಡೆ. ಏನೂ ಹೊಳಿಲಿಲ್ಲ. ಏನರ ಒಂದು ತಂದು ಇಡ್ತಾನ ಮಂಗ್ಯಾನ್ ಕೆ!

ಪಟಾಕ್ಷಿ ಅಂದ್ರ ಪಟಾಕ್ಷಿ ಮಾರಾಯಾ. ದೀಪಾವಳ್ಯಾಗ ಹೊಡೆಯೋ ಬಾಣ ಬಿರುಸು ಇತ್ಯಾದಿ. ಕನ್ನಡ ಶಬ್ದ ಖರೆ ಅಂದ್ರ ಪಟಾಕಿ. ಅದು ಯಾಕೋ ನಾವು ಧಾರವಾಡ ಮಂದಿ ಪಟಾಕಿ ತುದಿಗೊಂದು ಷೀ ಹಚ್ಚಿ ಪಟಾಕ್ಷಿ ಅಂತ ಮಾಡಿಕೊಂಡು ಬಿಟ್ಟೇವಿ. ಯಾಕೋ ಗೊತ್ತಿಲ್ಲ, ಅಂತ ಹೇಳಿದೆ.

ಪಟಾಕಿ ಪಟಾಕಿನೇ ಇರಲಿ ಬಿಡಿ ಸಾಬ್. ಈಗ ಪಟಾಕ್ಷಿ ಅಂತ ಹುಡುಗಿಗೆ ಹೆಸರು ಇಟ್ಟರೆ ಅದರ ಅರ್ಥ ಕ್ಯಾ? - ಮತ್ತ ಅದೇ ಕೇಳಿದ.

ಗೊತ್ತಿಲ್ಲೋ ಮಾರಾಯಾ. ನೀನss ಸಂಸ್ಕೃತ ದೀಡ ಪಂಡಿತ. ಏನೇನೋ ಸಮಾಸಾ ಬಿಡಸ್ತೀ. ನೀನ ಹೇಳಿಬಿಡು, ಅಂತ ಹೇಳಿದೆ.

ಪಟ್ ಪಟ್ ಅಂತ ಕಣ್ಣು ಹೊಡಿಯಾಕಿ ಅಂದ್ರ ಪಟಾಕ್ಷಿ ಅನ್ನಬಹುದು!! ಕ್ಯಾ ಬೋಲ್ತಾ ಆಪ್?- ಅಂತ ಒಗೆದಾ ಒಂದು ಬಾಂಬ್.

ವಾಹ್!!!ವಾಹ್!!! ಪಟ್ ಪಟ್ ಕಣ್ಣು ಹೊಡಿಯಾಕಿ ಪಟಾಕ್ಷಿ. ಮಸ್ತ ಅದ ಬಿಡ್ರೀ ಸಾಬ್ರಾ. ಆದರೂ ಪಟಾಕ್ಷ ಅಂತ ಹುಡುಗುರಿಗೆ ಅದ್ರಾಗೂ ನಿಮ್ಮಂತಹ ಮಂದಿಗೆ ಇಟ್ಟರ ಸರಿ ನೋಡ್ರೀ. ಕಣ್ಣು ಹೊಡಿಯವರು ನೀವು ಮಂದಿ. ಪಾಪ ಹುಡುಗ್ಯಾರಿಗೆ ಯಾಕ ಪಟಾಕ್ಷಿ ಮತ್ತೊಂದು ಅಂತ ಹೆಸರು ಇಡ್ತೀರಿ. ಹಾಂ? ಹಾಂ? - ಅಂತ ಕೇಳಿದೆ.

ಅದೂ ಸರಿ ಅನ್ನಿ. ಹುಡಿಗ್ಯಾರು ಕಣ್ಣು ಹೊಡೆಯೋದು ಕಮ್ಮಿ. ಆದ್ರೆ ಆಂಟಿ ಮಂದಿ ಭಾಳಾ ಜಾಬಾದ್. ಕ್ಯಾ ಬೋಲ್ತಾ? ಅವರೇ ಮಸ್ತ ಕಣ್ಣು ಹೊಡಿತಾರೆ. ಗೊತ್ತು ಕ್ಯಾ? ನಿಮಗೆ ಯಾರೂ ಹೊಡೆದಿಲ್ಲ ಕ್ಯಾ? ಮುಂಜಾನೆ ವಾಕಿಂಗ್ ಹೋಗಿ ಗೊತ್ತಾಗ್ತದೆ - ಅಂದ ಕರೀಂ.

ಹಾಂಗೇನು? ಮಹಾ ಡೇಂಜರ್. ಹುಷಾರಾಗಿ ಇರಬೇಕು. ಕಮಲಾಕ್ಷಿ, ಮೀನಾಕ್ಷಿ, ಹರಿಣಾಕ್ಷಿ ಇತ್ಯಾದಿ ಕನ್ಯಾಮಣಿಗಳೆಲ್ಲಾ ಆಂಟಿ ಆದ ಮ್ಯಾಲೆ ಪಟಾಕ್ಷಿ ಆಗಿ ಬಿಡ್ತಾರ ಅಂತ ನಿನ್ನ ಥಿಯರಿ. ಯಾರಿಗೆ ಗೊತ್ತು? ಶಿವನೇ ಶಂಭುಲಿಂಗ, ಅಂತ ಹೇಳಿದೆ.

ಕ್ಯಾ ಲಿಂಗಾ? ಬಂಬುಲಿಂಗಾ? ಕ್ಯಾ ಬೋಲ್ತಾ ಆಪ್? -ಅಂದೇ ಬಿಟ್ಟ ಕರೀಂ.

ಬಂಬುಲಿಂಗನೂ ಅಲ್ಲ ಲಂಬೂಲಿಂಗನೂ ಅಲ್ಲ. ಹೋಗಲೇ! ನಾ ನಿನ್ನ ಪಟಾಕ್ಷಿ ಥಿಯರಿ ಕೇಳಿ ಹೈರಾಣ ಆಗಿ ಶಿವನೇ ಶಂಭುಲಿಂಗ ಅಂದ್ರ ಬಂಬುಲಿಂಗ ಯಾರು? ಏನು? ಎತ್ತ? ಅಂತ ಹಾಪರ ಗತೆ ಕೇಳ್ತೀ.... ಅಂತ ಹೇಳಿ ಹೊಂಟೆ.

ಆಯ್ತು.... ಆಯ್ತು..... ಹೊಂಡೀ ನೀವು. ನಾವು ಶಾಮ್ ಕೀ ಪಟಾಕ್ಷಿ ಪಟಾಕಾ ಫಿಗರ್ ಕಾ ಇಂತಜಾರ್ ಕರ್ತಾ ಯಹಾನ್ ಪೆ, ಅಂತ ಅಂದ ಕರೀಂ ಅವನ ಸಂಜಿ ಮುಂದಿನ ಕಾರ್ಯಕ್ರಮ ಮುಂದುವರಿಸಿದ.

Wednesday, June 19, 2013

ಓಂ ನಮೋ ನಾರಾಯಣ

 

ಅವತ್ತು ಮುಂಜಾನೆ ನಾಷ್ಟಾ ಆಗಿರಲಿಲ್ಲ. ಟೈಮ್ ನೋಡಿದೆ. ಇನ್ನೂ ಒಂಬತ್ತೂವರಿ ಮಾತ್ರ ಆಗಿತ್ತು. ಈಗ ಲಗೂನ ನಮ್ಮ ದೋಸ್ತ್ ಚೀಪ್ಯಾನ ಮನಿಗೆ ಹೋದ್ರ ಅವಂದು ಮತ್ತ ಅವನ್ ಹೆಂಡ್ತಿ ರೂಪಾ ವೈನಿದು ತುಳಸಿ ಪೂಜಾ ನೆಡದಿರ್ತದ. ಕೊಬ್ಬರಿ ಚೂರಿನ ಪ್ರಸಾದ ಅದು ಇದು ಅಂತ ಸ್ವಲ್ಪ ನಾಷ್ಟಾ ಸಿಗ್ತದ. ಕಡ್ಕಿ ದಿನದಾಗ ಕೊಬ್ಬರಿ ಚೂರು ತಿಂದು ಒಂದು ಹಾಪ್ ಚಹಾ ಕುಡಿಯೋದ ಚೊಲೋದು ಅಂತ ಚೀಪ್ಯಾನ ಮನಿ ಕಡೆ ಹೊಂಟೆ.

ಚೀಪ್ಯಾನ ಪೂಜಾ ನೆಡದಿತ್ತು. ಇವತ್ತೇನು ಜೋರ್ ಪೂಜಾ! ಮಸ್ತ ಕೆಂಪ ಧೋತ್ರಾ ಬ್ಯಾರೆ ಉಟ್ಟು ಜಿಗದ್ ಜಿಗದ್ ಪೂಜಾ ಮಾಡ್ಲಿಕತ್ತಿಬಿಟ್ಟಾನ ಚೀಪ್ಯಾ!!! ಯಾವಾಗಲೂ ಇರೋ ಸಣ್ಣ ನಾಮ ಹಣಿ ಮ್ಯಾಲೆ ದೊಡ್ಡ ಆರ್ಭಟ ನಾಮ ಆಗಿತ್ತು. ರೂಪಾ ವೈನಿ ಬ್ಯಾರೆ ಹುರುಪಿಲೆ ಎಲ್ಲಾ ಸಂರಸಿ ಕೊಡ್ಲಿಕತ್ತಾರ. ಮಸ್ತ ಜಾಯಿಂಟ ಪೂಜಾ ಇಬ್ಬರದ್ದೂ.

ನಾಣಿ ಬಂದಾ ನಮ್ಮ ನಾಣಿ ಬಂದಾನೋ
ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಬಂದಾನೋ!

ಅಂತ ಚೀಪ್ಯಾ ಹಾಡಿದಂಗ ಕೇಳ್ತು.

ಏನಪಾ ವಿಚಿತ್ರ ಇದು? ಯಾವಾಗಲೂ ಭರಕ್ಕನ, 'ಜಯಮಂಗಳ ಜಯಮಂಗಳ ಜಯಮಂಗಳ ಮೂರ್ತೆ', ಅಂತ ಮರಾಠಿ ಮಿಶ್ರಿತ ಕನ್ನಡ ಒಳಗ ಸಣ್ಣ ಮಂತ್ರ ಹೇಳಿ ಪೂಜಾ ಮುಗಿಸೋ ಚೀಪ್ಯಾ ಇವತ್ತು ಏನೋ ಬ್ಯಾರೆನss ಮಂತ್ರ ಹೇಳಲಿಕತ್ತಾನಲ್ಲ! ಅಂತ ಅನ್ನಿಸ್ತು.

ಚೀಪ್ಯಾ ಮತ್ತ ಹೇಳಿದ ಅದss ಮಂತ್ರ....

ನಾಣಿ ಬಂದಾ ನಮ್ಮ ನಾಣಿ ಬಂದಾನೋ
ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಬಂದಾನೋ!

ಇದು ಎಲ್ಲೋ ಕೇಳಿದ ಹಾಡಿನ parody ಇದ್ದಂಗ ಅದ ಅಲ್ಲಾ!!!

ಹಾಂ!! ನೆನಪ ಆತು. ಪುರಂದರ  ದಾಸರ ಕೃತಿ. ದಾಸರ ಹಾಡಿನ್ಯಾಗ ಎಲ್ಲಿ ಮಾಣಿ ಎಲ್ಲಿ ನಾಣಿ ಎಲ್ಲಿ ಮಾಮಾ?!

ದಾಸರ ನಾಮ ಇದ್ದಿದ್ದು ಹೀಂಗ.............

ದೇವ ಬಂದಾ ನಮ್ಮ ಸ್ವಾಮೀ ಬಂದಾನೋ
ದೇವರ ದೇವ ಶಿಖಾಮಣಿ ಬಂದಾನೋ

ಈ ಹಾಡಿಗೆ ನಾಣಿ, ಮಾಣಿ ಅಂತ ಏನೇನೋ ಫಿಟ್ ಮಾಡಿ ಹಾಡ್ಲಿಕತ್ತಾನ ಚೀಪ್ಯಾ. ಹಾಪಾ!!!

ಏನಲೇ ಚೀಪ್ಯಾ? ಏನು ಮಂತ್ರ ಇದು? ಯಾರ ಪೂಜಾ ಮಾಡಲಿಕತ್ತಿ? ಯಾವ ಮಾಣಿ, ಯಾವ ನಾಣಿ, ಯಾವ ಮಾಮಾ? ಹಾಂ? ಹಾಂ? - ಅಂತ ಕೇಳಿದೆ.

ಪೂಜಾ ಮುಗಿಸಿ ಪೂಜಾದ ಪ್ರಸಾದ ಕೊಬ್ಬರಿ ಚೂರು ಕೊಟ್ಟ ಚೀಪ್ಯಾ.

ಇನ್ಫೋಸಿಸ್ (Infosys) ನೆತ್ತಿಗೆ ಮತ್ತ 'ನಾಮಾ' ಬಂತಲ್ಲೋ. ಅದss ಖುಷಿಯೊಳಗ ಇವತ್ತು ದೊಡ್ಡ ನಾಮಾ, ಪೂಜಾ ಎಲ್ಲಾ, ಅಂತ ಹೇಳಿ ಮತ್ತೂ ತಲಿ ಕೆಡಸಿ ಹಾಪ್ ಮಾಡಿ ಬಿಟ್ಟ.

ಹಾಂ!!!ಅಯ್ಯೋ!!! ಏನೂ????!!!! ಇನ್ಫೋಸಿಸ್ ಕಂಪನಿ ಸಹಿತ ಸತ್ಯಂ ಗತೆ ಕತ್ಯಂ ಆಗಿ ಖತಂ ಆತ? ಏನು ಭಾನಗಡಿ ಮಾಡಿಕೊಂಡ್ರೋ ಮಾರಾಯಾ ಇನ್ಫೋಸಿಸ್ ಮಂದಿ? - ಅಂತ ಘಾಬ್ರಿಲೆ ಕೇಳಿದೆ.

ಮುಂಜಾನೆ ಮುಂಜಾನೆ ಶುಭ ಶುಭ ಮಾತಾಡೋ ಅನಿಷ್ಟ ಮುಂಡೆ ಗಂಡ ಮಂಗೇಶ್, ಅಂತ ಅಲ್ಲೇ ಇದ್ದ ರೂಪಾ ವೈನಿ ಬೈದರು.

ಹಾಂ!? - ಅಂತ ಲುಕ್ ಕೊಟ್ಟೆ.

ಎಲ್ಲಾ ಛೋಲೋ ಆಗ್ಯದ. ಏನೂ ಭಾನಗಡಿ ಆಗಿಲ್ಲ ಇನ್ಫೋಸಿಸ್ ಒಳಗ, ಅಂದ ಚೀಪ್ಯಾ.

ಮತ್ತ ಇನ್ಫೋಸಿಸ್ ನೆತ್ತಿಗೆ ನಾಮಾ ಅಂದ್ಯಲ್ಲೋ? ಏನು ಹಾಂಗಂದ್ರ? ನಾಮಾ ಹಾಕೋದು ಅಂದ್ರ ಟೊಪ್ಪಿಗಿ ಹಾಕೋದು ಅಂತ ಅಲ್ಲೇನು? ಯಾರರ ಇನ್ಫೋಸಿಸ್ ನೆತ್ತಿಗೆ ನಾಮಾ ಹಾಕಿ ಕಂಪನಿ ಮುಳುಗಸಲಿಕ್ಕೆ ಹೊಂಟಾರೇನೋ ಅಂತ ಮಾಡಿದ್ದೆ. ನೆತ್ತಿಗೆ ನಾಮಾ ಹಾಕೋದು ಅಂದ್ರೇನು ಮತ್ತ? - ಅಂತ ಕೇಳಿದೆ. 

ಅವಾ ಸತ್ಯಂ ಕಂಪನಿ ಮಾಲೀಕ ರಾಮಲಿಂಗ ರಾಜು ದೊಡ್ಡ 'ನಾಮ'ಲಿಂಗ ರಾಜು ಆಗಿ, ಕಂಪನಿಗೆ, ಶೇರುದಾರರಿಗೆ ದೊಡ್ಡ ನಾಮಾ ಹಾಕಿ ಹೋಗಿದ್ದು ನೆನಪ ಇತ್ತು. ಈ ಸಾಫ್ಟ್ ವೇರ್ ಮಂದಿ ಅಂಡರ್ ವೇರ್ ಯಾವಾಗ ಹರಿತದ ಅನ್ನೋದನ್ನ ಹೇಳಲಿಕ್ಕೆ ಸಾಧ್ಯ ಇಲ್ಲ ನೋಡ್ರೀ!

ಲೇ....ಮಂಗ್ಯಾನ್ ಕೆ....ನಾಮದ ಬ್ರಾಹ್ಮಣ ನಾನು. ನೀನು ಹೇಳಿ ಕೇಳಿ ಭಸ್ಮದ (ವಿಭೂತಿ) ಬ್ರಾಹ್ಮಣ. ಆದರೂ ನನಕಿಂತ ಹೆಚ್ಚು ನಾಮದ ಬಗ್ಗೆ ಲಕ್ಷ ನಿನಗss ಇರ್ತದಲ್ಲ! ಯಾಕ ಅಂತೀನಿ? ಭಾಳ ಮಂದಿಗೆ ನಾಮಾ ಹಾಕಿ ಏನು? - ಅಂತ ಕೇಳಿದ ಚೀಪ್ಯಾ.

ಇಲ್ಲಪಾ....ಯಾರಿಗೂ ನಾಮಾ ಹಾಕಿಲ್ಲ. ಕೆಲೊ ಮಂದಿ ಅವರಾಗೇ ಬಂದು, ನೀವಾ ನಮಗ ಮುದ್ದಾಂ ನಾಮಾ ಹಾಕಬೇಕು ಅಂದವರಿಗೆ ಮಾತ್ರ ಬರೇ ನಾಮ ಒಂದss ಅಲ್ಲ, ಗೋಕರ್ಣ ಹಜಾಮತಿ ಸಹಿತ ಫ್ರೀ ಒಳಗ ಮಾಡಿ, ಉದ್ದಾಗಿ ನಾಮಾ ಹಾಕಿ, ಒಳ್ಳೆದಾಗಲಿ ಹೋಗಿ ಬರ್ರಿ ಅಂತ ಆಶೀರ್ವಾದ ಮಾಡಿ ಕಳಿಸಿ ಬಿಟ್ಟೇನಿ ನೋಡು. ಗೋಕರ್ಣ ಹಜಾಮತಿ ಯಾಕ ಮಾಡಿದೆ ಅಂದ್ರ ಉದ್ದಾಗಿ ನಾಮಾ ಹಾಕಲಿಕ್ಕೆ ಸ್ವಲ್ಪ ಜಾಸ್ತಿ ಜಗಾ ಸಿಗ್ತದ ನೋಡು ಅದಕ್ಕ......ಹಾ!!! ಹಾ!!! ಬರೆ ಜೋಕ್ ಮಾರಾಯಾ. ಯಾರಿಗೂ ನಾಮಾ ಮತ್ತೊಂದು ಹಾಕಿಲ್ಲ ನಾವು. ಈಗ ಹೇಳಪಾ ಇನ್ಫೋಸಿಸ್ ನೆತ್ತಿಗೆ ನಾಮಾ ಬಿತ್ತು ಅಂದ್ರ ಏನು ಅಂತ, ಅಂತ ನಕ್ಕೋತ್ತ ಹೇಳಿದೆ. ಕೇಳಿಕೊಂಡೆ.

ಲೇ....ನಮ್ಮ ನಾಣಿ ಮಾಮಾ ಉರ್ಫ್ ನಾಮಾ ಇನ್ಫೋಸಿಸ್ ಗೆ ವಾಪಸ್ ಬಂದಾರ. ಅದೂ ಏಕ್ದಂ ದೊಡ್ಡ ಲೆವಲ್ ನ್ಯಾಗ ಬಂದು ಕೂತಾರ. ಅದಕ್ಕ ಇನ್ಫೋಸಿಸ್ ನೆತ್ತಿಗೆ ಮತ್ತ ನಾಮಾ ಅಂತ ಹೇಳಿದೆ ಮಾರಾಯ, ಅಂತ ಚೀಪ್ಯಾ ವಿವರಿಸಿದ.

ಏನು? ನಿಮ್ಮ ಮಾಮಾ ಇನ್ಫೋಸಿಸ್ ಕಂಪನಿ ಒಳಗ ದೊಡ್ಡ ನೌಕರಿ ಹಿಡದ್ರ? ಯಾವ ನಾಣಿ ಮಾಮಾ? ಅವರss ನಾರಾಯಣ ಆಚಾರ್ರು ಏನು? ಅವರು ಅಲ್ಲೆಲ್ಲೋ ವಿಜಾಪುರ ಕಡೆ ಯಾವದೋ ರಾಯರ ಮಠದಾಗ ಆಚಾರ್ರು ಅಂತ ಇರಲಿಲ್ಲ? ಇನ್ಫೋಸಿಸ್ ಕಂಪನಿ ಈಗ ಆಚಾರ್ರು ಭಟ್ಟರು ಇತ್ಯಾದಿ ಮಂದಿ ಸಹಿತ ತೊಗೊಳ್ಳಿಕತ್ತುಬಿಟ್ಟದ ಏನು? ಅವರಿಗೂ ಎಲ್ಲಾ ಅಮೇರಿಕಾ ಯುರೋಪ್ ಒಳಗ ಡಿಮ್ಯಾಂಡ್ ಏನು? ಎಲ್ಲೆ ನಿಮ್ಮ ನಾಣಿ ಮಾಮಾ ಉರ್ಫ್ ನಾಮಾ ಅವರ ಪೋಸ್ಟಿಂಗ್? - ಅಂತ ಉದ್ದ ಕೇಳಿ ಬಿಟ್ಟೆ.

ಲೇ...ಊರ ಹಾಪಾ!!! ನಾಣಿ ಮಾಮಾ ಉರ್ಫ್ ನಾಮಾ ಅಂದ್ರ ನಮ್ಮ ಖರೆ ಮಾಮಾ ಮುದ್ದೇಬಿಹಾಳ ನಾರಾಣಾಚಾರ್ರು ಅಲ್ಲ. ಈಗ ಇನ್ಫೋಸಿಸ್ ನೆತ್ತಿಗೆ ಬಂದು ಕೂತವರು ಒರಿಜಿನಲ್ ನಾಣಿ ಮಾಮಾ ಅಂದ್ರ ಕಂಪನಿ ಫೌಂಡರ್ ನಾರಾಯಣ ಮೂರ್ತಿ ಅವರು. ಏನಲೇ??? ಬುದ್ಧಿ ಇಲ್ಲದವನ....ಪೇಪರ್ ಗೀಪರ್ ಓತ್ತಿಯೋ ಇಲ್ಲೋ? - ಅಂತ ಹೇಳಿದ.

ನಾರಾಯಣ ಮೂರ್ತಿ

ಈಗ ತಿಳೀತು. ರಿಟೈರ್ ಆಗಿ ಮನಿ ಸೇರಿಕೊಂಡು, ಮಕ್ಕಳು ಮಮ್ಮಕ್ಕಳು ಅಂತ ಆರಾಮಿದ್ದ ಇನ್ಫೋಸಿಸ್ ಕಂಪನಿ ಫೌಂಡರ್ ಮಾಮು (ಮಾಜಿ ಮುಖ್ಯಸ್ಥ) ನಾಮೂ (ನಾರಾಯಣ ಮೂರ್ತಿ) ಕಂಪನಿಗೆ ವಾಪಾಸ್ ಬಂದ ಸುದ್ದಿ. ಅದೇನೋ ಕಂಪನಿ ಪರಿಸ್ಥಿತಿ ಈಗ ೩-೪ ವರ್ಷದಿಂದ, ಅದೂ ಅವರು ಬಿಟ್ಟು ಹೋದಾಗಿಂದ, ಸರಿ ಇಲ್ಲಂತ. ಅದಕ್ಕ ಕಂಪನಿ ಶೇರುದಾರರು ನಾರಾಯಣ ಮೂರ್ತಿ ಅವರನ್ನು ವಾಪಾಸ್ ಕರ್ಕೊಂಡು ಬರ್ರಿ ಅಂತ ಸಿಕ್ಕಾಪಟ್ಟೆ ಒತ್ತಡ ಹಾಕಿ ಕರ್ಕೊಂಡು ಬಂದರಂತ. ಇದು ಸುದ್ದಿ.

ಅಲ್ಲಲೇ ಚೀಪ್ಯಾ.....ನಾರಾಯಣ ಮೂರ್ತಿ ಅವರಿಗೆ ಅಷ್ಟು ಸಲಿಗೀಲೆ ನಾಣಿ ಮಾಮಾ ನಾಣಿ ಮಾಮಾ ಅನ್ನಲಿಕತ್ತಿ. ಅದು ಹ್ಯಾಂಗ? ಅವರು ನಿಮ್ಮ ಬಳಗ ಏನು? - ಅಂತ ಕೇಳಿದೆ.

ಅಲ್ಲೋ ಮಂಗೇಶ್....ನಮ್ಮ ಹುಡುಗ್ಯಾರು ಕುಂತಿ ನಿಂತಿ ನಿನಗ ಮಂಗೇಶ್ ಮಾಮಾ ಮಂಗೇಶ್ ಮಾಮಾ ಅಂತಾರ. ಅಂತಾರೋ ಇಲ್ಲೋ? ಹಂಗಂತ ನೀನು ನಮ್ಮ ಬಳಗ ಏನು? ಹಾಂ? ಹಾಂ? - ಅಂತ ತಲಿಗೆ ಕಟ್ಟಿಕೊಂಡ ಬಿಳೆ ವಸ್ತ್ರದ ಟರ್ಬನ್ ಬಿಚ್ಚಿಗೋತ್ತ ಅಂದ್ರು ರೂಪಾ ವೈನಿ. ತಲಿಗೆ ಎರಕೊಂಡಿದ್ದರು ಅಂತ ಅನ್ನಸ್ತದ. ಎಷ್ಟು ದಿವಸದ ನಂತರವೋ? ದೇವರಿಗೇ ಗೊತ್ತು.

ಅದೂ ಖರೆ ಅನ್ರೀ ವೈನಿ. ಸಂಬಂಧಕ್ಕಿಂತ ಆತ್ಮೀಯತೆ ಮುಖ್ಯ. ಆತ್ಮೀಯತೆ ಇದ್ದರ ಸಂಬಂಧಗಳನ್ನು ಮಾಡಿಕೋಬಹದು. ನಾರಾಯಣ ಮೂರ್ತಿ ನಿಮಗ ಹ್ಯಾಂಗ ಅಷ್ಟು ಆತ್ಮೀಯರು? - ಅಂತ ಕೇಳಿದೆ.

ಅವರ ಹೆಂಡ್ತಿ ಸುಧಾ ಇಲ್ಲೇ ಹುಬ್ಬಳ್ಳಿ ಅವರು. ಸುಧಾ ಕುಲಕರ್ಣಿ. ಬಹಳ ಒಳ್ಳೆ ಮನುಷ್ಯಾರು. ಏನು ಮಸ್ತ ಮಂದಿ. ಅಷ್ಟು ದೊಡ್ಡ ಮಂದಿ ಆದರೂ ಒಂಚೂರೂ ದೊಡ್ಡಸ್ತನಿಕೆ ಬಿಂಕ ಬಿಗುಮಾನ ಒಂದೂ ಇಲ್ಲ. ಸಾವಿರಾರು ಕರೋಡ್ ರುಪಾಯಿ ಮಾಲಿಕರಾದ್ರೂ ಸಿಂಪಲ್ ಲಿವಿಂಗ್ ಅಂಡ್ ಹೈ ಥಿಂಕಿಂಗ್ ಅನ್ನೋ ಮಂದಿ. ದಾನಾ ಧರ್ಮಾ ಅಂತೂ ಬಿಡಪಾ. ಕೊಟ್ಟಿದ್ದಕ್ಕ ಲೆಕ್ಕ ಇಲ್ಲ. ಅವರೇನು ನಮಗ ಬಳಗ ಅಲ್ಲ. ಆದರೂ ಮೂಲತ ಹುಬ್ಬಳ್ಳಿ ಧಾರವಾಡ ಮಂದಿ. ಅಂತವರು ನಾರಾಯಣ ಮೂರ್ತಿ ಅವರ ಹೆಂಡ್ರು ಅಂದ್ರ ನಮಗ ಒಂದು ರೀತಿಯಿಂದ ಆತ್ಮೀಯರ ನೋಡು, ಅಂತ ಚೀಪ್ಯಾ ರೂಪಾ ವೈನಿ ಸರದಿ ಪ್ರಕಾರ ಸುಧಾ ಮೂರ್ತಿ ಅವರನ್ನು ಕೊಂಡಾಡಿದರು.

ಅದು ಸೋಲಾ ಆಣೆ ಖರೆ ಮಾತು ನೋಡ್ರೀ. ನಾರಾಯಣ ಮೂರ್ತಿ ಫ್ಯಾಮಿಲಿ ಅಂದ್ರ ಅದು ಏಕದಂ ಭಾರಿ ಫ್ಯಾಮಿಲಿ. ಮತ್ತೆನರ ಕಾರಣ ಅದ ಏನು ನಿಮಗ ಇಷ್ಟು ಆತ್ಮೀಯತೆ ಬರಲಿಕ್ಕೆ? - ಅಂತ ಕೇಳಿದೆ.

ಭಾಳ ಹಿಂದ ನಮ್ಮ ಅಪ್ಪಗ ಇನ್ಫೋಸಿಸ್ ಭಾಳ ರೊಕ್ಕಾ ಮಾಡಿ ಕೊಟ್ಟಿತ್ತೋ ಮಂಗೇಶ. ಅದss ರೊಕ್ಕದಾಗ ನಮ್ಮಪ್ಪಾ ನಿಮ್ಮ ದೋಸ್ತ ಶ್ರೀಪಾದ್ ರಾವ್ ಅವರ ಜೊತಿ ನನ್ನ ಮದ್ವಿ ಮಾಡಿ ಇವರ ಮಸಡಿ ಮ್ಯಾಲೆ ಮಸ್ತ ವರದಕ್ಷಿಣೆ ಬ್ಯಾರೆ ಒಗದಿದ್ದರು. ಬಂಗಾರದಂತ ಇನ್ಫೋಸಿಸ್ ಶೇರ್ ಮಾರೋದಂತು ಮಾರಿದಾ ನಮ್ಮಪ್ಪಾ. ಹೋಗಿ ಹೋಗಿ ನಿಮ್ಮ ಚೀಪ್ಯಾನಂತ ವರನ್ನ ಜೋತಿ ನನ್ನ ಲಗ್ನಾ ಮಾಡೋದಾ? ಅದೂ ಇನ್ಫೋಸಿಸ್ ಶೇರ್ ಮಾರಿ ಬಂದ ರೊಕ್ಕದಾಗ ವರದಕ್ಷಿಣಿ ಬ್ಯಾರೆ ಕೊಟ್ಟು. ಅದೂ ನಮ್ಮ ಚೀಪ್ಯಾರಿಗೆ ಕೊಟ್ಟು !ಹಾಂ! ಹಾಂ!! - ಅಂತ ಅಂದ ವೈನಿ ವಿಕಾರವಾಗಿ ನಕ್ಕರು.

ಚೀಪ್ಯಾನ ಮಾರಿ ಸಣ್ಣದಾತು. ಮಾತಿಗೊಮ್ಮೆ ನಮ್ಮ ಚೀಪ್ಯಾನ್ನ ಚ್ಯಾಸ್ಟಿ ಮಾಡಲಿಲ್ಲ, ಟಿಂಗಲ್ ಮಾಡಲಿಲ್ಲ ಅಂದ್ರ ರೂಪಾ ವೈನಿಗೆ ಸಮಾಧಾನ ಇಲ್ಲ.

ಯಾಕ್ರೀ ಶ್ರೀಪಾದ ರಾವ್? ಬ್ಯಾಸರಾ ಮಾಡಿಕೊಂಡ್ರೀ? ಸುಮ್ಮನಾ ಚ್ಯಾಸ್ಟಿರೀ. ಏಳೇಳು ಜನ್ಮಕ್ಕೂ ನೀವ ನನ್ನ ಧರ್ಮಪತಿ ಕರ್ಮಪತಿ ಎಲ್ಲಾ ಆಗ್ರೀಪಾ. ಅದಿಲ್ಲ ಅಂದ್ರ ನನ್ನ ಹಳೆ ಕೆಟ್ಟ ಕರ್ಮ ನಾ ಹ್ಯಾಂಗ ಕಳಕೊಳ್ಳಲಿ? ಏನು ಪುಣ್ಯಾ ಮಾಡಿ ಬಂದಿದ್ದನೋ ಏನೋ, ನಿಮ್ಮಂತ ಪತಿದೇವರು ನನಗ ಸಿಕ್ಕಿ ಬಿಟ್ಟಾರ. ಒಂದss ಜನ್ಮಕ್ಕ ಹ್ಯಾಂಗ ಸಾಕು ಅಂತ ಬಿಡಲೀ? ಹಾಂ? ಹಾಂ? - ಅಂತ ರೂಪಾ ವೈನಿ ಹೇಳಿದ್ರು. ಹೇಳಿದ್ರಾಗ ವ್ಯಂಗ್ಯ ಜಾಸ್ತಿ ಇತ್ತೋ ಅನುಕಂಪ ಜಾಸ್ತಿ ಇತ್ತೋ ಅಥವಾ ವೈನಿಯ ಖೋಟಾ ನಸೀಬದ ಮ್ಯಾಲೆ ಆವರಿಗೇ ಸಿಟ್ಟು ಜಾಸ್ತಿ ಇತ್ತೋ ಗೊತ್ತಾಗಲಿಲ್ಲ.

ಏ....ವೈನಿ..ತುಳಸಿ ಕಟ್ಟಿ ಮುಂದ ನಿಂತು ಏನಂತ ನಿಮ್ಮ ಪತಿದೇವರಿಗೆ ಅಂತೀರಿ? ನಮ್ಮ ಚೀಪ್ಯಾನಂತಹ ಗಂಡನ್ನ ಪಡಿಲಿಕ್ಕೆ ಏಳೇಳು ಜನ್ಮದ ಪುಣ್ಯಾ ಮಾಡಿರಬೇಕು ನೀವು. ಅಂತಾ ಮಸ್ತ ಆದ್ಮಿ ಇದ್ದಾನ ನಮ್ಮ ದೋಸ್ತ, ಅಂತ ಚೀಪ್ಯಾನ ಸ್ವಲ್ಪ ಡಿಫೆಂಡ್ ಮಾಡಿಕೊಂಡೆ.

ಹೌದ....ಹೌದ....ಬಂದು ಬಿಟ್ಟ ಗೆಳೆಯಾನ್ನ ಪರ ವಹಿಸ್ಕೊಂಡು. ಓತಿಕಾಟಕ್ಕ ಬೇಲಿ ಸಾಕ್ಷಿ. ಓತಿಕಾಟ ಬೇಲಿ ಇಬ್ಬರೂ ಬರ್ರಿ ಒಳಗ. ಚಹಾ ಮಾಡ್ತೆನಿ, ಅಂದು ವೈನಿ ಒಳಗ ಹೋದರು.

ಇಕಿನೌನ್....ಏಳು ಜನ್ಮ ಅಂತ ಏಳು ಜನ್ಮ!!!ಇಕಿ ಕಾಟಾ ಈ ಜನ್ಮದಾಗ ನನಗ ತಡಕೊಳ್ಳಲಿಕ್ಕೆ ಅಗವಲ್ಲತು. ಮುಂದಿನ ಜನ್ಮದಾಗ ಪಿಶಾಚಿ ಆಗಿ ಇಕ್ಕಿನ್ನ ಹೀಂಗ ಕಾಡವ ಇದ್ದೇನಿ ನೋಡು ದೋಸ್ತ! ಇಕೀನ್ನ ಕಾಡಲಿಕ್ಕೆ ಅಂತss ನಾ ಮುದ್ದಾಂ ಪಿಶಾಚಿ ಆಗಿ ಹುಟ್ಟಿ ಬರವ ಇದ್ದೇನಿ, ಅಂತ ಚೀಪ್ಯಾ ರೋಷ ಮಿಶ್ರಿತ ಏನೇನೋ ಫೀಲಿಂಗ್ಸ್ ಮಿಕ್ಸ್ ಮಾಡಿ ಹೇಳಿದ.

ಪಿಶಾಚಿ ಆಗಿ ಹುಟ್ಟಲಿಕ್ಕೆ ಬರಂಗಿಲ್ಲ. ಸುಯಿಸೈಡ್ ಮಾಡಿಕೊಂಡು ಸತ್ತರ ಪಿಶಾಚಿ ಫ್ರೀ ಒಳಗ ಆಗ್ತೀ ಅಂತ ಹೇಳೋಣ ಅಂತ ಮಾಡಿದೆ. ಟೈಮಿಂಗ್ ಸರಿ ಇಲ್ಲ ಅಂತ ಬಿಟ್ಟೆ.

ಹೋಗ್ಲೀ ಬಿಡಪಾ!! ಹೇಳಿ ಕೇಳಿ ರೂಪಾ ವೈನಿ. ಏನೋ ಒಂದು ಮಾತು ಅಂದ್ರ ಏನು ದೊಡ್ಡ ಮಾತು? ನೀನss ಹೊಂದಿಕೊಂಡು ಹೋಗಪಾ, ಅಂತ ಏನೋ ಬಿಟ್ಟಿ ಉಪದೇಶ ಕೊಟ್ಟೆ.

ಏ ಬ್ರಹ್ಮಚಾರಿ ಬಡ್ಡಿಮಗನ.....!!!ಉದ್ರಿ ಉಪದೇಶ ಕೊಡುದ್ರಾಗ ಏನೂ ಕಮ್ಮಿ ಇಲ್ಲ ನೋಡು. ಸುಮ್ಮ ಕೂಡಲೇ. ತಲಿ ಕೆಡಸಬ್ಯಾಡ. ನಡಿ ಚಹಾ ಮಾಡ್ತಾಳಂತ. ಕುಡದು ಜಗಾ ಖಾಲಿ ಮಾಡೋಣ. ಎಲ್ಲೆರೆ ಹೋಗಿ ಒಂದು ಖಡಕ್ಕ್ ಜರ್ದಾ ಪಾನ್ ಹಾಕಿ ಸ್ವಲ್ಪ ರಿಲಾಕ್ಸ್ ಮಾಡೋಣಂತ, ಅಂತ ಅನಕೋತ್ತ ಮನಿಯೊಳಗ ಕರ್ಕೊಂಡು ಹೋದ ಚೀಪ್ಯಾ.

ಅಲ್ಲ ಚೀಪ್ಯಾ....ನಾಣಿ, ನಾಣಿ ಮಾಮಾ ಅಂದ್ರ ಏನೋ ಒಂದು ಅರ್ಥ ಅದ. ಆದ್ರ, 'ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಬಂದಾನೋ!' ಅಂತ ಬ್ಯಾರೆ ಹೇಳಿಬಿಟ್ಟಿ. ಇನ್ಫೋಸಿಸ್ ಸಾಫ್ಟ್ ವೇರ್ ಕಂಪನಿ ಅಲ್ಲೇನೋ? ಅಲ್ಲೆಲ್ಲಿ ಉಡುಪಿ ಹೋಟೆಲ್ಲಿನಂಗ ಮಾಣಿಗಳು ಬಂದ್ರು? ಅಥವಾ ಇನ್ಫೋಸಿಸ್ ಹೋಟೆಲ್ ಬಿಸಿನೆಸ್ಸ್ ಶುರು ಮಾಡ್ಯಾರೋ? ಹಾಂ? ಹಾಂ? - ಅಂತ ಕೇಳಿದೆ.

ನೋಡಪಾ....ನಮಗೂ ಸರಿ ಗೊತ್ತಿಲ್ಲ. ಈಗ ನಾಣಿ ಮಾಮಾ ಬರೋಕಿಂತ ಮೊದಲು ಅವರು ಯಾರೋ ಕೆ.ವಿ. ಕಾಮತ್ ಅಂತ ಒಬ್ಬರು ಇನ್ಫೋಸಿಸ್ ಛೇರ್ಮನ್ ಆಗಿದ್ರಂತ. ಅವರು ಮೊದಲು ಬ್ಯಾಂಕಿಂಗ್ ಒಳಗ ದೊಡ್ಡ ನೌಕರಿ ಒಳಗ ಇದ್ದು ಬಂದವರು. ಸೀದಾ ಸಾಫ್ಟ್ ವೇರ್ ಕಂಪನಿ ಛೇರ್ಮನ್ ಆಗ್ರೀ ಅಂದು ಬಿಟ್ಟರ ಅವರೇನು ಮಾಡಬೇಕು? ಎಲ್ಲೋ ಪಾಪ ಅವರು  ಕಾಮತ್ ಮಂದಿ ಹೋಟೆಲ್ ನೆಡಸಿದಾಂಗ ನೆಡಸಿ ಎಲ್ಲಾ ಸಾಫ್ಟ್ ವೇರ್ ಮಂದಿಗೆ ಹೋಟೆಲ್ ಮಾಣಿ ಫೀಲಿಂಗ್ ಬಂದಿರಬೇಕು. ನನಗೂ ಖರೆ ಗೊತ್ತಿಲ್ಲ. ಕಾಮತ್ ಅವರ ದೇಖರೆಖೀ ಒಳಗ ಹೀಂಗ ಇರಬಹದು ಅಂತ ಮಾಣಿ, ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಅಂತ ಅಂದೇ ಏನಪಾ, ಅಂತ ಉದ್ದಾಗಿ ಛೋಡಿದಾ ಚೀಪ್ಯಾ.

ಲೇ ಮಗನss...ಅವರು ಕಾಮತ್ ಅವರು ಭಾಳ ಶಾಣ್ಯಾ ಮಾರಾಯಾ. ಅವರೇನು ನಿನ್ನ ಇನ್ಫೋಸಿಸ್ ಕಾಮತ್ ಹೋಟೆಲ್ ನೆಡಸಿದಾಂಗ ನೆಡಸಿರಲಿಕ್ಕೆ ಇಲ್ಲ ಬಿಡು. ಕಾಮತ್ ಅಂದ ಕೂಡಲೇ ಎಲ್ಲಾರಿಗೂ ಮಾಣಿ, ದೊಡ್ಡ ಮಾಣಿ ಅಂದು ಬಿಡೋದ? ಹಾಂ?- ಅಂತ ತಿಳಿಸಿದೆ.

ಅಂತೂ ಇಂತೂ ನಾಮೂ ಬಂದ್ರು ಅಂತ ಆತು. ಅಲ್ಲೆ ನ್ಯಾಷನಲ್ ಪಾಲಿಟಿಕ್ಸ್ ನ್ಯಾಗ ನಮೋ ಅಂದ್ರ ನರೇಂದ್ರ ಮೋದಿ ಮತ್ತ ಇಲ್ಲೆ ಬಿಸಿನೆಸ್ ಒಳಗಾ ನಾಮೂ ಅಂದ್ರ ನಾರಾಯಣ ಮೂರ್ತಿ. ಎರಡೂ ಕಡೆ ರಾಡಿ ಎದ್ದು ಹೊಲಗೇರಿ ಎದ್ದು ಬಿಟ್ಟದ. ಇವರಿಬ್ಬರೂ ಕೂಡಿ ಎರಡೂ ಕಡೆ ಆಗಿರೋ ರಾಡಿ ಸ್ವಚ್ಚ ಮಾಡಿದ್ರ ಸಾಕು ನೋಡಪಾ. ನರೇಂದ್ರ, ನಾರಾಯಣ ಇಬ್ಬರಿಗೂ ಒಳ್ಳೆದಾಗಲಿ, ಅಂತ ಹೇಳಿದೆ.

ನಾಣಿ ಮಾಮಾ ಬಂದ ಕೂಡಲೇ ಹೇಳೇ ಬಿಟ್ಟರು ನೋಡಪಾ. ಖಡಕ್ಕ್ ಮಾತು. ಏಕ್ ಮಾರ್ ದೋ ತುಕಡಾ ಹಾಂಗ, ಅಂತ ಹೇಳಿದ ಚೀಪ್ಯಾ.

ಏನು ಹೇಳಿದ್ರು ನಾರಾಯಣ ಮೂರ್ತಿಗಳು? - ಅಂತ ಕೇಳಿದೆ.

ಕಂಪನಿ ಒಳಗ ರಾಡಿ ಭಾಳ ಎದ್ದದ. ರಾಡಿ ಎಲ್ಲಾ ಸ್ವಚ್ಚ ಮಾಡಿ, ಇನ್ಫೋಸಿಸ್ ಹಳೆ ವೈಭವಕ್ಕ ತರಲಿಕ್ಕೆ ಕಮ್ಮಿ ಕಮ್ಮಿ ಅಂದ್ರೂ ಮೂರು ವರ್ಷ ಬೇಕಾಗ್ತದ, ಅಂತ ಹೇಳಿದರಂತ ಮೂರ್ತಿಗಳು.

ಹಾಂ!? ಮೂರು ವರ್ಷ ಬೇಕಂತ!? ಯಾಕ? - ಅಂತ ಕೇಳಿದೆ.

ಮತ್ತೇನಲೇ??? ಹಾಪಾ!!!ತಿಂಗಳೊಂದ್ರಾಗ ಬಸರ ಮಾಡಿ ವರ್ಷವೊಂದ್ರಾಗ ಕೂಸು ಮಾಡಿದಂಗ ಅಂತ ಮಾಡಿ ಏನು? ರಾಡಿ ಎದ್ದ ಕಂಪನಿ ಎಲ್ಲಾ ಸಾಫ್ ಮಾಡಿ ಮತ್ತ ಮಸ್ತ ಹಳೆ ಮುನಾಫಾ, ಹಳೆ ವೈಭವ ವಾಪಾಸ್ ತರೋದು ಅಂದ್ರ ಭಾಳ ಶ್ರಮ ಪಡಬೇಕಾಗ್ತದ. ಗೊತ್ತದ ಏನು? - ಅಂತ ನನಗ ರಿವರ್ಸ್ ಬಾರಿಸಿದ ಚೀಪ್ಯಾ.

ಬಸಿರು.... ಅನ್ನೋ ಶಬ್ದ ರೂಪಾ ವೈನಿ ಕಿವಿಗೆ ಬಿದ್ದಿದ್ದ ಬಿದ್ದಿದ್ದು. ಅಲ್ಲೋಲ ಕಲ್ಲೋಲ ಎಬ್ಬಿಸಿಬಿಟ್ಟರು ವೈನಿ.

ಯಾರು ಬಸರಾದ್ರೀ ಶ್ರೀಪಾದ ರಾವ್? ಯಾರರ ಕುಬಸಕ್ಕ ಕರೀಲಿಕ್ಕೆ ಬಂದಿದ್ದರೇನು? ಮತ್ತ ಕುಬಸಕ್ಕ ನೀವು ಹೋಗಿ ಕೂಡಬ್ಯಾಡ್ರೀ. ಅವೆಲ್ಲಾ ಹೆಂಗಸೂರ ಕಾರ್ಯಕ್ರಮ. ಕರೀಲಿಕ್ಕೆ ಬಂದರೂ ನನ್ನ ಕರೀಲಿಕ್ಕೆ ಬಂದಿರ್ತಾರ. ಕರಿಲಿಕ್ಕೆ ಬಂದಿದ್ದರು ಅಂತ ನನಗ ಹೇಳೂದು ಮಾತ್ರ ನಿಮ್ಮ ಕೆಲಸ. ಕುಬಸಕ್ಕ ಹೋಗಿ ಉಡಿ ಗಿಡಿ ತುಂಬಿ ಬರೋದು ನನ್ನ ಕೆಲಸ. ಎಲ್ಲರೆ ಕುಬಸಕ್ಕ ಹೊಂಟ್ರೀ ಅಂದ್ರ ನೋಡ್ಕೊರೀ ಮತ್ತ. ಕಾಲ ಮುರುದು ತಲಿಗೆ ಕಟ್ಟಿ ಬಿಡ್ತೇನಿ. ಹುಷಾರ್! - ಅಂತ ರೂಪಾ ವೈನಿ ಗಂಡಗ ವಾರ್ನಿಂಗ್ ಕೊಟ್ಟರು.

ಕಾಲ ಮುರದು ಕೈಯಾಗ ಕೊಡೋದು ಅಲ್ಲೇನ್ರೀ ವೈನಿ? ತಲಿಗೆ ಯಾಕ ಕಟ್ಟತೀರಿ? ಹಾಂ? ಹಾಂ? - ಅಂತ ಕೇಳಿದೆ.

ಏ....ಕೈ ಸಹಿತ ಮುರದು ಬಿಡ್ತೇನಿ ಇವರದ್ದು ಕುಬಸಕ್ಕ ಹೊಂಟರ. ಕೈ ಮುರಕೊಂಡವರ ಕೈಯಾಗ ಮುರದ ಕಾಲು ಹ್ಯಾಂಗ ಕೊಡಲಿ? ಹುಚ್ಚ ಮಂಗೇಶ್! ಅದಕ್ಕ ತಲಿಗೆ ಕಟ್ಟಿ ಬಿಡ್ತೇನಿ ಅಂತ ಹೇಳಿದೆ, ಅಂದ್ರು ರೂಪಾ ವೈನಿ.

ಅಲ್ರೀ ವೈನಿ.....ಹೆಂಗಸೂರ ಕುಬಸಕ್ಕ ಯಾಕ ನಮ್ಮ ಚೀಪ್ಯಾ ಹೋಗತಾನ? ಅವಂಗೇನು ಬ್ಯಾರೆ ಕೆಲಸ ಇಲ್ಲೇನು? ಸುಮ್ಮನ ಏನರ ಏನರ ಹೇಳಿ ಬೈತೀರಲ್ಲಾ ಅವನ್ನ? ಹಾಂ? ಪಾಪ ಚೀಪ್ಯಾ, ಅಂತ ಸ್ವಲ್ಪ ಚೀಪ್ಯಾನ ವಹಿಸಿ ಮಾತಾಡಿದೆ.

ಕೇಳು ಅವರನ್ನss ಕುಬಸಕ್ಕ ಹೋಗಿ ಕೂಡ್ತಾರೋ ಇಲ್ಲೋ ಅಂತ. ಹೇಳ್ರೀ ಶ್ರೀಪಾದ ರಾವ್ ಯಾಕ ಕುಬಸಕ್ಕ ಹೋಗ್ತೀರಿ ಅಂತ, ರೂಪಾ ವೈನಿ ಗಂಡಂಗ ಚುಚ್ಚಿದಳು.

ನೀ ಏನ್ ಪತಿಯಾಲಾದ ಮಹಾರಾಜ್ ಏನಲೇ ಚೀಪ್ಯಾ? ಹಾಂ? ಹಾಂ? ಕಂಡ ಕಂಡ ಹೆಂಗಸೂರ ಕುಬಸಕ್ಕ ಹೋಗಿ ಕೂಡಲಿಕ್ಕೆ? ಪತಿಯಾಲಾದ ಮಹಾರಾಜ ಅಂದ್ರ ಅವರ ರಾಜ್ಯದ ಎಲ್ಲಾ ಸಮಸ್ತ ಹೆಂಗಸೂರಿಗೂ ಪತಿ ಇದ್ದಂಗ. ಪತಿ all ಆ = ಪತಿಯಾಲಾ. ಅದಕ್ಕss ಹೋಗ್ತಿದ್ದರು. ನೀ ರೂಪಾ ವೈನಿಗೆ ಮಾತ್ರ ಪತಿ ಅಷ್ಟss. ನೀ ಯಾಕ ಹೋಗ್ತಿಯೋ ಮಾರಾಯಾ ಅಂತಾ ಹೆಂಗಸೂರ ಕಾರ್ಯಕ್ರಮಕ್ಕ. ಹಾಂ? ಹಾಂ? - ಅಂತ ಕೇಳಿದೆ.

ಚೀಪ್ಯಾ ಏನೋ ನೆನಸಿಕೊಂಡು ತುಟಿ ಮ್ಯಾಲೆ ನಾಲಿಗಿ ಸವರಿಕೊಂಡ. ಏನೋ ತಿಂಡಿ ಊಟದ ನೆನಪ ಆಗಿರಬೇಕು.

ಮಂಗೇಶ್....ನಾ ಹೇಳತೇನಿ ಕೇಳಿಲ್ಲೆ....ನಿಮ್ಮ ಚೀಪ್ಯಾ ಸಾಹೇಬರಿಗೆ ಕುಬಸದ ಗುಗ್ಗರೀ ಅಂದ್ರ ಮುಗೀತು ನೋಡಪಾ. ಒಂದು ಪೌಣಾ ಕೇಜಿ ಗುಗ್ಗರೀ ತಿಂದು ಕೂತರು ಅಂದ್ರ ಮುಗೀತು ನೋಡು ಕಥಿ. ಕುಬಸದಾಗ ಎಷ್ಟು ಬೇಕು ಅಷ್ಟು ಗುಗ್ಗರೀ ತಿನ್ನಲಿಕ್ಕೆ ಸಿಗ್ತದ ಅಂತ ಹೇಳಿ ಕಂಡ ಕಂಡ ಬಸುರಿ ಹೆಂಗಸೂರ ಕುಬಸಕ್ಕ ಹೋಗಲಿಕ್ಕೆ ಸಾಯ್ತಾರ ನಿಮ್ಮ ಚೀಪ್ಯಾ. ಅಲ್ಲೆ ಇವರು ಒಬ್ಬರ ಗಂಡಸರು ನೋಡಪಾ. ಬಸುರಿ ಹೆಂಗಸಿನ ಗಂಡ ಸಹ ಅಲ್ಲೆ ಇರಂಗಿಲ್ಲ. ಆದ್ರ ಇವರು ಮಾತ್ರ ಬಸುರಿ ಮುಂದನss ಕೂತು,  ಹೀ ಹೀ ಅಂತ ಹಲ್ಲು ಕಿರಕೋತ್ತ ಪೊಗದಸ್ತಾಗಿ ಗುಗ್ಗರೀ ಗುಳುಂ ಗುಳುಂ ಮಾಡ್ತಿರ್ತಾರ ನೋಡಪಾ. ಎಲ್ಲಾರೂ ನಗತಾರ. ನನಗಂತೂ ಘೋರ ಅಪಮಾನ. ಅದಕ್ಕss ಕುಬಸಕ್ಕ ಹೊಂಟರ ಕಾಲು ಮತ್ತೊಂದು ಮುರಿತೇನಿ ಅಂತ ಹೇಳಿದ್ದು, ಅಂತ ಹೇಳಿದರು ರೂಪಾ ವೈನಿ. ನನಗೂ ಗೊತ್ತಿರದಿದ್ದ ಒಂದು ಸಿಕ್ರೆಟ್ ಹೇಳಿ ಬಿಟ್ಟರು.

ಗುಗ್ಗರಿ ಅಂದ್ರ ನೆನಸಿದ ಕಡ್ಲಿ ಕಾಳಿಗೆ ಒಗ್ಗರಿಣಿ ಹಾಕಿದ್ದು ಹೌದಿಲ್ಲೋ? ಅದರಾಗ ಏನು ಅಂತಾ ಮಹಾ ರುಚಿ ಇರ್ತದಲೇ ಚೀಪ್ಯಾ? ಅದನ್ನ ತಿನ್ನಲಿಕ್ಕೆ ಅಷ್ಟ್ಯಾಕ ಸಾಯ್ತೀ? ಅಷ್ಟು ಬೇಕಂದ್ರ ಮನ್ಯಾಗ ಮಾಡಿಕೊಡಂಗಿಲ್ಲ ಅಂದಾರೇನು ರೂಪಾ ವೈನಿ? ಹಾಂ? ಹಾಂ? - ಅಂತ ಕೇಳಿದೆ.

ಗುಗ್ಗರೀ.....ಗುಗ್ಗರೀ....ಮಸ್ತ ರುಚಿ ರುಚಿ ಗುಗ್ಗರೀ.... ಅಂತ ಗುಗ್ಗರೀ  ನೆನಸಿಕೊಂಡು ಭಾಳ ಮಿಸ್ ಮಾಡಿಕೊಂಡು ಮುಲುಗಿದ ಚೀಪ್ಯಾ.

ಏ ಮಂಗೇಶ್!!!ಮನ್ಯಾಗ ಮಾತ್ರ ನಾ ಗುಗ್ಗರಿ ಮಾಡಂಗಿಲ್ಲ. ಏನಾರ ಸಾಮಾನ್ಯ ಮನುಷ್ಯಾರು ಪಲ್ಯಾ ತಿಂದಂಗ ಸ್ವಲ್ಪ ಸ್ವಲ್ಪ ತಿಂದ್ರ ಮಾತ ಬ್ಯಾರೆ. ಮಾಡಿದ್ರ ಅಷ್ಟೂ ಒಬ್ಬರss ಮುಕ್ಕತಾರ ನೋಡು. ಪೌಣೆ ಕೇಜಿ ಗುಗ್ಗರೀ ತಿನ್ನವರು ಇವರು, ಆ ಮ್ಯಾಲೆ ಸಂಕಟ ಪಡವರು ನಾವು. ಏನ್ ಬೇಕಾಗಿಲ್ಲ. ಸುಮ್ಮನ ಕೂಡು, ಅಂತ ಹೇಳಿ ರೂಪಾ ವೈನಿ ನನ್ನ ಬಾಯಿ ಮುಚ್ಚಿಸಿದರು.

ಹಶಿ ಕಾಬೂಲಿ ಕಡ್ಲಿ ಒಳಗ ಮಾಡಿದ ಗುಗ್ಗರೀ. ಈ ಮಂಗ್ಯಾ ಸೂಳೆಮಗ ಚೀಪ್ಯಾ ಕೇಜಿ ಗಟ್ಟಲೆ ತಿಂದು ಕೂತ್ರ ಸಂಕಟ ಪಡವರು ಮನಿ ಮಂದಿನss. ಅದೂ ಖರೆ. ಈಗ ತಿಳೀತು ನನಗ. ಭೋಪಾಲ್ ಗ್ಯಾಸ್ ಟ್ರಾಜಿಡಿ!!!!

ಅಯ್ಯೋ!!!! ಎಲ್ಲಿಂದಲೋ ಎಲ್ಲಿಗೋ ಬಂದು ಬಿಡ್ತು ನಮ್ಮ ಸುದ್ದಿ. ಇನ್ಫೋಸಿಸ್ ರಿಪೇರ್ ಮಾಡಲಿಕ್ಕೆ ಮೂರು ವರ್ಷ ಬೇಕಾಗ್ತದ ಅಂತ ಹೇಳ್ಯಾರ ಅಂತ ಆತು ನಾಣಿ ಮಾಮಾ. ಏನೇನು ಮಾಡವರು ಇದ್ದಾರಂತ? - ಅಂತ ಕೇಳಿದೆ.

ನೋಡೋ....ಒಂದು ಐದು ಸಾವಿರ ಮಂದಿ ಮನಿಗೆ ಕಳಸ್ತಾರಂತ. ಮತ್ತ ಬ್ಯಾಕ್ ಟು ಬೇಸಿಕ್ಸ್ ಅಂತ ಮೊದಲು ಮಾಡಿದಂಗ ಬಿಸಿನೆಸ್ ಮಾಡ್ತಾರಂತ. ಸಾಧ್ಯ ಆದ್ರ ನಾಣಿ ಮಾಮಾ ಬಿಟ್ಟು ಹೋದ ಮ್ಯಾಲೆ ಕಂಪನಿ ಬಿಟ್ಟು ಹೋದ ಕೆಲೊ ಮಂದಿನ ವಾಪಸ್ ಕರಕೊಂಡು ಬರ್ತಾರಂತ. ಒಂದು ಮೇಜರ್ ಸರ್ಜರಿ ಮಾಡ್ತೇನಿ. ಅದರದ್ದು ಜರೂರತ್ ಅದ ಅಂತ ಹೇಳೇ ಬಿಟ್ಟಾರ ನಾಣಿ ಮಾಮಾ!!!!, ಅಂತ ನಾಮೂ ಅವರ ಸ್ಟ್ರಾಟೆಜಿ ಹೇಳಿದ ಚೀಪ್ಯಾ.

ಅಲ್ಲಲೇ ಚೀಪ್ಯಾ....ಇನ್ಫೋಸಿಸ್ ಅಂದ್ರ ನಿನಗ್ಯಾಕ ಇಷ್ಟು ಇಂಟರೆಸ್ಟ್ ಮಾರಾಯಾ? ರೂಪಾ ವೈನಿ ಅಪ್ಪಾ ಯಾವಾಗಲೋ ಅದರ ಶೇರ್ ತೊಗೊಂಡು, ನಿಮ್ಮ ಲಗ್ನದ ಸಮಯದಾಗ ಮಸ್ತ ಲಾಭಕ್ಕ ಮಾರಿಕೊಂಡು, ಅದರಾಗ ರೂಪಾ ವೈನಿ ಲಗ್ನ, ನಿನ್ನ ವರದಕ್ಷಿಣಿ ಎಲ್ಲಾ ಕೊಟ್ಟರು ಅನ್ನೋದು ಹಳೇ ಮಾತು. ಈಗ್ಯಾಕ ನಿನಗ ಈ ಕಂಪನಿ ಮ್ಯಾಲೆ ಇಷ್ಟು ಇಂಟರೆಸ್ಟ್? ಏನರ ಆಗಲೀ....ಕಂಪನಿ ಉದ್ಧಾರರ ಆಗಲೀ ಇಲ್ಲಾ ಸತ್ಯಂ ಕತ್ಯಂ ಗತೆ ಹಾಳು ಬಿದ್ದು ಹೋಗಲೀ. ನಿನಗೇನು ಆಗಬೇಕಾಗ್ಯದ? ಹಾಂ? ಹಾಂ? - ಅಂತ ಕೇಳಿದೆ. ಯಾರೋ ಗೃಹಪ್ರವೇಶ ಮಾಡಿದ್ರ ಇವಾ ಯಾಕ ತಾನss ಮನಿ ಕಟ್ಟಿದವರಷ್ಟು ಖುಷ್ ಆಗಿಬಿಟ್ಟಾನ.....ತಿಳಿಲಿಲ್ಲ.

ಏ....ಮನಿಹಾಳ ಮಂಗ್ಯಾನ್ ಕೆ ಮಂಗೇಶ್..... ಅಂತ ಈ ಸರಿ ಶಂಖಾ ಹೊಡೆದವರು ರೂಪಾ ವೈನಿ.

ಯಾಕ್ರೀ ವೈನಿ? ಯಾಕ ಬೈತೀರಿ? ನಾ ಏನ್ ಮಾಡಿದೆ? - ಅಂತ ಇನ್ನೊಂಸೆಂಟ್ ಆಗಿ ಕೇಳಿದೆ.

ಏನ್ ಮಾಡಿದೆ ಅಂತ ಕೇಳ್ತಿಯಲ್ಲೋ!!! ಮನಿಹಾಳ!!! ಚಂದಾಗಿ ಗೋಕರ್ಣ ಹಜಾಮತಿ ಮಾಡಿ ಉದ್ದಾಗಿ ನಾಮಾ ಹಾಕಿ ಹೋಗಿದ್ದು, ಈಗ ಎರಡು ವರ್ಷದ ಹಿಂದ, ಮರ್ತು ಹೊತೇನು? ಏನೂ ಗೊತ್ತಿಲ್ಲದವರಾಂಗ ಹ್ಯಾಂಗ ಕೇಳ್ತಾನ ನೋಡು!!! - ಅಂತ ವೈನಿ ಝಾಡಿಸಿದರು.

ಎರಡು ವರ್ಷದ ಹಿಂದ ನಾ ಏನು ಇವರಿಗೆ ನಾಮಾ ಹಾಕಿದೆ ಅಂತ ತಲಿ ಕೆರಕೊಂಡೆ. ಏನೂ ನೆನಪ ಬರಲಿಲ್ಲ.

ನೆನಪ ಆಗಲಿಲ್ಲ? ನಾ ನೆನಪ ಮಾಡಿ ಕೊಡ್ತೇನಿ ತಡಿ. ಎರಡು ವರ್ಷದ ಹಿಂದ ನಿನ್ನ ಅವತಾರ ನೆನಪ ಮಾಡಿಕೋ. ಎಲ್ಲಾ ಕೆತ್ತೆಬಜೆ ಕಾರಬಾರ ಮುಗಿಸಿ ಶೇರ್ ಬ್ರೋಕರ್ ಅನ್ನೋ ಹೊಸಾ ಕೆಲಸಾ ಸುರು ಮಾಡಿದ್ದಿ. ನೆನಪಾತ? ಮನಿಗೆ ಬಂದು, ನಮಗ ಇಲ್ಲದ ಸಲ್ಲದ ಕಥಿ ಹೇಳಿದಿ. ಇನ್ಫೋಸಿಸ್ ಭಾರಿ ಛೋಲೋ ಕಂಪನಿ.  ಮಸ್ತ ಅವ ಶೇರು.  ಒಂದರೆಡು ಲಕ್ಷದ್ದು ತೊಗೊಂಡು ಬಿಡ್ರೀ. ಎರಡ ವರ್ಷದಾಗ ಡಬಲ್ ಡಬಲ್ ಆಗ್ತಾವ ಅಂತ ಹೇಳಿ ನಮಗ ನಾಮಾ ಹಾಕಿ ಹೋಗಿದ್ದು ನೆನಪ ಅದನೋ ಇಲ್ಲೋ ಮಂಗೇಶ್? ನೀ ಏನೋ ಶೇರ್ ಬ್ರೋಕರ್ಕಿ ಬಿಟ್ಟು ಈಗ ಮತ್ತೊಂದು ಗೋಕರ್ಣ ಹಜಾಮತಿ ಮಾಡೋದು ನಾಮಾ ಹಾಕೋದು ಕೆಲಸ ಶುರು ಮಾಡಿರ್ತೀ. ಆದ್ರ ನಿನ್ನ ಮಾತು ಕೇಳಿ ನನ್ನ ಕನ್ನಡಿ ಪೆಟ್ಟಿಗಿ, ಸಾಸವಿ ಡಬ್ಬಿ, ಖಾರಪುಡಿ ಡಬ್ಬಿ, ಎಲ್ಲಾ ಕಡೆ ಇಟ್ಟಿದ್ದ ಚೂರು ಪಾರು ರೊಕ್ಕ ಎಲ್ಲಾ ಕೂಡಿಸಿ ಎರಡು ಲಕ್ಷ ರೂಪಾಯಿದು ಇನ್ಫೋಸಿಸ್ ಶೇರ್ ತೊಗೊಂಡ್ರ ಏನು ಆಗಿರಬೇಕು ವಿಚಾರ ಮಾಡು, ಅಂತ ರೂಪಾ ವೈನಿ ನಮ್ಮ ಹಳೆ ಅವತಾರವಾದ ಶೇರ್ ಬ್ರೋಕರ್ಕೀ ಅವತಾರದ ನೆನಪು ಮಾಡಿಕೊಟ್ಟರು.

ನೆನಪಾತು. ಆಗ ಮಾತ್ರ ನಾವು ಹೊಸತಾಗಿ ಶೇರ್ ಬ್ರೋಕರ್ಕಿ ಶುರು ಮಾಡಿದ್ವಿ. ಚೀಪ್ಯಾಗ ಅದು ಇದು ಹೇಳಿ ಎರಡು ಲಕ್ಷ ರೂಪಾಯಿ ಇನ್ಫೋಸಿಸ್ ಶೇರ್ ಖರೀದಿ ಮಾಡಿಸಿ ಕೊಟ್ಟಿದ್ದೆ. ಮಸ್ತ ಕಮಿಷನ್ ಹೊಡದಿದ್ದೆ. ಆ ಮ್ಯಾಲೆ ನಾವಂತೂ ಆ ಕೆಲಸಾ ಬಿಟ್ಟು ಬಿಟ್ಟಿವಿ. ಚೀಪ್ಯಾನ ಇನ್ಫೋಸಿಸ್ ಶೇರು ಏನು ಆದವೋ ಏನೋ?

ಏನ್ ಆತ್ರಿ ವೈನಿ ಇನ್ಫೋಸಿಸ್ ಶೇರಿಗೆ? ಇನ್ನೂ ಇಟ್ಟಗೊಂಡು ಕೂತಿರೋ ಅಥವಾ ಮಾರಿದ್ರೋ? - ಅಂತ ಕೇಳಿದೆ.

ಕೇಳ್ತಾನ ನೋಡು....ಏನೂ ಗೊತ್ತಿಲ್ಲದ ಮಳ್ಳನಾಂಗ. ಎರಡ ಲಕ್ಷ ಡಬಲ್ ಆಗಿ ನಾಕು ಲಕ್ಷ ಆಗೋದು ಹೋಗ್ಲೀ, ಸೂಡ್ಲಿ, ಅರ್ಧಾ ಆಗಿ ಒಂದ ಲಕ್ಷ ಆಗಿ ಬಿಟ್ಟದ. ನಮ್ಮ ಒಂದು ಲಕ್ಷ ರುಪಾಯಿ ನುಕ್ಸಾನ್ ತುಂಬಿಸಿಕೊಡವರು ಯಾರು? ನೀ ಅಂತೂ ಹಿಂದಿಲ್ಲ ಮುಂದಿಲ್ಲದ ಬ್ರಹ್ಮಚಾರಿ. ನಿನ್ನ ಮಾರಿದ್ರೂ ಒಂದು ಹತ್ತು ಸಾವಿರ ರುಪಾಯಿ ಹುಟ್ಟೋದಿಲ್ಲ. ಹಂತಾದ್ರಾಗ ಒಂದ ಲಕ್ಷ ನುಕ್ಸಾನ್!!!! ಎಲ್ಲಿಂದ ತಂದು ಕೊಡ್ತಿಯೋ ಮನಿಹಾಳಾ??!! ನೆನಸಿಕೊಂಡ್ರ ನನ್ನ ಹೊಟ್ಟಿಯೊಳಗ ಸಂಕಟ ಆಗ್ತದ. ಕುಂತಿ ನಿಂತಿ ಲಗ್ನದ ಟೈಮ್ ನ್ಯಾಗ ರೊಕ್ಕ ಆದೀತು ಅಂತ ನಿನ್ನ ಮಾತು ಕೇಳಿ ಇನ್ಫೋಸಿಸ್ ಶೇರ್ ತೊಗೊಂಡ್ರ ಹಾಕಿದ್ಯಲ್ಲಪಾ ನಾಮಾ!!!! - ಅಂತ ರೂಪಾ ವೈನಿ ಅವರ ಹಾಕಿದ ಬಂಡವಾಳ ಅರ್ಧಾ ಆದ ಸಂಕಟದಿಂದ ಬೈದರು.

ಅದು ಹಾಂಗ ಆತೆನ್ರೀ ವೈನಿ? ನಾ ಶೇರ್ ಬ್ರೋಕರ್ಕೀ ಬಿಟ್ಟಾಗಿಂದ ಅವೆಲ್ಲಾ ಸುದ್ದಿ ನನಗ ಗೊತ್ತss ಇಲ್ಲ ಬಿಡ್ರೀ. ಆದರೂ ಏನಾತು ಈಗ? ನಾಣಿ ಮಾಮಾ ಮೂರ ವರ್ಷದಾಗ ಏನೇನೋ ಪವಾಡ ಮಾಡಿದ್ರ ಡಬಲ್ ಅಲ್ಲ ನಾಕು ಪಟ್ಟು ಎಂಟು ಪಟ್ಟು ಆದರೂ ಏನೂ ಆಶ್ಚರ್ಯ ಇಲ್ಲ ನೋಡ್ರೀ. ಶೇರ್ ಮಾರ್ಕೆಟ್ ಅಂದ್ರ ಹಾಂಗss ನೋಡ್ರೀ, ಅಂತ ಏನೇನೋ ಆಶ್ವಾಸನೆ ಕೊಟ್ಟೆ.

ಡಬಲ್ ಆಗೋದು ಬ್ಯಾಡ ಏನೂ ಬ್ಯಾಡ. ತೊಂಗೊಂಡ ರೇಟ್ ವಾಪಸ್ ಬಂದ್ರ ಸಾಕು. ಮಾರಿ ಕೈ ಮುಗಿತೇವಿ. ಮತ್ತ ಎಂದೂ ಶೇರು ಸ್ಟಾಕ್ ಮಾರ್ಕೆಟ್ ಅದು ಇದು ಅಂತ ಸುದ್ದಿಗೆ ಹೋಗುದಿಲ್ಲ, ಅಂತ ವೈನಿ ಹೇಳಿದರು. ಚೀಪ್ಯಾ ತಲಿ ಆಡಿಸಿಕೋತ್ತ ಕೂತಿದ್ದ.

ಓಹೋ! ಅದಕ್ಕ ಈಗ ತುಳಸಿ ಪೂಜಾದ್ದು ಮಂತ್ರ ಚೇಂಜ್ ಆಗಿ, ನಾಣಿ ಬಂದಾ ನಮ್ಮ ನಾಣಿ ಬಂದಾನೋ, ಮಾಣಿಗಳ ದೊಡ್ಡ ಮಾಣಿ ನಾಣಿ ಮಾಮಾ ಬಂದಾನೋ, ಅಂತ ಆಗ್ಯದ ಅಂತ ಆತು. ಎಲ್ಲಿ ತನಕಾ ಈ ಹೊಸಾ ಮಂತ್ರಾ? - ಅಂತ ಕೇಳಿದೆ.

ನಾಣಿ ಮಾಮಾಂಗ ಯಶಸ್ಸು ಸಿಕ್ಕಿ ಶೇರ್ ಪ್ರೈಸ್ ವಾಪಸ್ ಬರೋ ತನಕಾನೂ, ಅಂದ ಚೀಪ್ಯಾ.

ಒಳ್ಳೆದಾಗಲಿ... ಮಾಮು ಆಗಿದ್ದ ನಾಮೂ ಮತ್ತ ಮುಖ್ಯಸ್ಥ ಆಗ್ಯಾರ ಅಂದ್ರ ಇನ್ಫೋಸಿಸ್ ಲಗೂನ ಏಕದಂ ಜಗ್ ಮಗ್ ಅಂತ ಮ್ಯಾಲೆ ಎದ್ದು ಬಿಡ್ತದ. ಹಾಂಗ ಆಗಲೀ ಅನ್ನೋದss ನಮ್ಮ ಆಶಯ, ಅಂತ ಹೇಳಿದೆ.

ಆವಾಗ ನೀ ಬಾಕಿ ಕಾರಬಾರ ಎಲ್ಲ ಮುಗಿಸಿ ಮತ್ತ ಶೇರ್ ಬ್ರೋಕರ್ ಆಗಿರ್ತಿಯೇನೋ ಮಂಗೇಶ್? - ಅಂತ ಕುಹಕದಿಂದ ಕೇಳಿದರು ರೂಪಾ ವೈನಿ.

ಮತ್ತ????!!!! ಕೃಷ್ಣ ಪರಮಾತ್ಮ, ಸಂಭವಾಮಿ ಯುಗೇ ಯುಗೇ, ಅಂದಂಗ ನಿಮಗ ಹಾಕಿದ ನಾಮಾ ಅಳಿಸಲಿಕ್ಕೆ ನಾನss ಬರ್ತೇನಿ. ನಾನ ನಿಂತು ನಿಮ್ಮ ಶೇರ್ ಮಸ್ತ ಪ್ರಾಫಿಟ್ ಒಳಗ ಮಾರಿಸಿ ಕೊಡಲಿಲ್ಲ ಅಂದ್ರ ಹೇಳೀರಿ ಅಂತ. ಚಿಂತಿ ಮಾಡಬ್ಯಾಡ್ರೀ ವೈನಿ, ಅಂತ ಆಶ್ವಾಸನೆ ಕೊಟ್ಟು ಹೊಂಟು ಬಂದೆ.** ದೇವ ಬಂದಾ ನಮ್ಮ ಸ್ವಾಮೀ ಬಂದಾನೋ, ದೇವರ ದೇವ ಶಿಖಾಮಣಿ ಬಂದಾನೋ - ಪುರಂದರ ದಾಸರ ಕೃತಿ ಭೀಮಸೇನ್ ಜೋಷಿ ಅವರ ಧ್ವನಿಯಲ್ಲಿ.
 

Monday, June 10, 2013

ನಮಸ್ತೇ ಸದಾ ಒತ್ತಲೇ....ಕಾಶಿನಾಥ್ ಅವರ ಫೇಸ್ಬುಕ್ ಪ್ರಾರ್ಥನೆ

ಕಾಶಿನಾಥ

ಅವತ್ತೊಂದಿನ ನಮ್ಮ ಮಹಾ ಪೋಕ್ರೀ, ಪರಮ  ಪೋಲಿ ನಟ ನಿರ್ದೇಶಕ 'ಅನಂತನ ಆವಾಂತರ' ಖ್ಯಾತಿಯ ಕಾಶಿನಾಥ್ ಅವರನ್ನು ಭೆಟ್ಟಿಯಾಗುವ ಅನ್ನಿಸಿತು. 1978 ರಲ್ಲಿ ಅವರ suspense ಚಿತ್ರ 'ಅಪರಿಚಿತ' ನೋಡಿದಾಗಿಂದ ಅವರ ಅಭಿಮಾನಿ ನಾನು.

ಹೋದೆ ಅವರ ಮನೆಗೆ.

ಕಾಶಿನಾಥ್ ಕಂಪ್ಯೂಟರ್ ಮುಂದೆ ಕೂತು ಏನೋ ಕುಟ್ಟುತ್ತಿದ್ದರು.

ನಮಸ್ತೇ, ಕಾಶಿನಾಥ್ ಅವರಿಗೆ, ಅಂದೆ.

ಅವರು ನನ್ನ ಕಡೆ ತಿರುಗಿ ಕೂಡ ನೋಡಲಿಲ್ಲ.

ನಮಸ್ತೇ ಸದಾ ಒತ್ತಲೇ
ಲೈಕ್ ಒತ್ತಲೇ
ಕಾಮೆಂಟ್ ಹಾಕಲೇ
ಚಾಟಿಂಗ್ ಮಾಡಲೇ
ನಮಸ್ತೇ ಸದಾ ಒತ್ತಲೇ

ಅಂದು ಬಿಟ್ಟರು ಕಾಶಿನಾಥ್!!!!!

ಕಾಶಿನಾಥ್ ಹೇಳಿದ್ದನ್ನು ಎಲ್ಲೋ ಕೇಳಿದ ಹಾಗಿದೆಯಲ್ಲ ಅಂತ ತಲೆ ಕೆರಕೊಂಡೆ. ನೆನಪಾಯಿತು. ಇದು RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ನವರ ಪ್ರಾರ್ಥನೆ ಅಲ್ಲವಾ? ಹೌದು. ಇದನ್ನೇಕೆ ಕಾಶಿನಾಥ್ ಹೇಳಿದರು? ಎಲ್ಲಿ ನಮ್ಮ 'ಚಪಲ ಚೆನ್ನಿಗರಾಯ' ಕಾಶಿನಾಥ ಕೂಡ 'ಚಡ್ಡಿ' ಆಗಿ ಬಿಟ್ಟರೋ ಏನೋ ಅಂತ ಬಗ್ಗಿ ನೋಡಿದೆ. ಕಾಶಿನಾಥ್ ತಮ್ಮ ಟ್ರೇಡ್ ಮಾರ್ಕ್ ಟೈಟ್ ಪ್ಯಾಂಟ್ ನ್ನೇ ಹಾಕಿಕೊಂಡಿದ್ದರು. ಖಾಕಿ ಚಡ್ಡಿ ಇರಲಿಲ್ಲ. ಸೊ ಚಡ್ಡಿ ಆಗಿಲ್ಲ ಅಂತ ಖಾತ್ರಿ ಆಯಿತು.

ಏನೇ  ಇರಲಿ ನಾವೂ ಕೂಡ RSS ಪ್ರಾರ್ಥನೆಯ ಮೂಲಕವೇ ವಂದಿಸೋಣ ಅಂದುಕೊಂಡು ತಿರುಗಿ

ನಮಸ್ತೇ ಸದಾ ವತ್ಸಲೇ ಮಾತೃಭೂಮೇ
ತ್ವಯಾ ಹಿಂದುಭೂಮೇ ಸುಖಂ ವರ್ಧಿತೋಹಮ್
ಮಹಾಮಂಗಲೇ ಪುಣ್ಯಭೂಮೇ ತ್ವದರ್ಥೇ
ಪತತ್ವೇಷ ಕಾಯೋ ನಮಸ್ತೇ ನಮಸ್ತೇ

ಅಂತ RSS ಪ್ರಾರ್ಥನೆ ಮಾಡಿಬಿಟ್ಟೆ.

ನಿಲ್ಲಸ್ರೀ!!.....ಇದೇನು RSS ಶಾಖೆ ಅಂತ ತಿಳಿದಿದಿ ಏನೋ ಲೋಫರ್!? ನಾನು ಹೇಳಿದ್ದು ಅದಲ್ಲ. ನಾನು ಹೇಳಿದ್ದು 'ಮುಖ ಪುಸ್ತಕದ' ಪ್ರಾರ್ಥನೆ. ಮತ್ತೊಮ್ಮೆ ಹೇಳುತ್ತೇನೆ. ಸರಿಯಾಗಿ ಕೇಳಿಕೊಳ್ಳಿ ಅಂದವರೇ, ಮತ್ತೆ ಹೇಳಿದರು

ನಮಸ್ತೇ ಸದಾ ಒತ್ತಲೇ
ಲೈಕ್ ಒತ್ತಲೇ
ಕಾಮೆಂಟ್ ಹಾಕಲೇ
ಚಾಟಿಂಗ್ ಮಾಡಲೇ
ನಮಸ್ತೇ ಸದಾ ಒತ್ತಲೇ

ಅಯ್ಯೋ....ಡಬಲ್ ಮೀನಿಂಗ್ ಕಿಂಗ್ ಕಾಶಿನಾಥ್ ಅವರೇ!! ಏನ್ರೀ!? ಇನ್ನೂ ಡಬಲ್ ಮೀನಿಂಗ್ ಡೈಲಾಗ್ ಹೊಡೆಯೋದನ್ನ ಬಿಟ್ಟಿಲ್ಲವಾ ನೀವು? ಏನ್ರೀ? - ಅಂತ ಆಕ್ಷೇಪ ಮಾಡಿದೆ.

ಏನೋ ರಾಸ್ಕಲ್? ಎಲ್ಲೋ ಹೊಡದೇ ನಾನು ಡಬಲ್ ಮೀನಿಂಗ್? ನಾನು ಮುಖಪುಸ್ತಕ ಅಂದ್ರೆ ಫೇಸ್ಬುಕ್(Facebook) ಪ್ರಾರ್ಥನೆ ಹೇಳಿದರೆ ಡಬಲ್ ಮೀನಿಂಗ್ ಅಂತಾನೆ. ಭಡವಾ ರಾಸ್ಕಲ್! ರಾಸ್ಕಲ್, ಅಂತ ಕಾಶಿನಾಥ್ ಉರಿದುಕೊಂಡರು.

ಒತ್ತಲೇ, ಹಾಕಲೇ ಅಂತ ಏನೇನೋ ಅಂದ್ರೀ. ತಿಳಿಲಿಲ್ಲ. ತಿಳಿಸಿ ಹೇಳ್ರೀ ಸಾರ್, ಅಂತ ಕೇಳಿಕೊಂಡೆ.

ಒಳ್ಳೆ ಗಮಾರಾ ನೀನು. ಫೇಸ್ಬುಕ್ ನಲ್ಲಿ  ಲೈಕ್ ಒತ್ತಿ, ಕಾಮೆಂಟ್ ಹಾಕಿ, ಚಾಟ್ ಮಾಡಿ ಅಂತ ಚಿಕ್ಕದಾಗಿ ಚೊಕ್ಕದಾಗಿ ಫೇಸ್ಬುಕ್ ಪ್ರಾರ್ಥನೆ ಮಾಡಿದರೆ ಡಬಲ್ ಮೀನಿಂಗ್ ಅಂತೀರಲ್ಲರೀ! ರಾಸ್ಕಲ್! - ಅಂತ ಬೈದು ವಿವರಿಸಿದರು ಕಾಶಿನಾಥ್.

ಇವರಿಗೂ ಫೇಸ್ಬುಕ್ ಹುಚ್ಚು ಹತ್ತಿದೆ ಅಂತ ಆಯಿತು.

ಓಹೋ....ನೀವು ಫೇಸ್ಬುಕ್ ಫ್ಯಾನಾ ಸರ್? ಫೇಸ್ಬುಕ್ ಅಂದ್ರೆ ಏನು ಅಂತ ಎಲ್ಲರಿಗೂ ತಿಳಿಯೋ ಹಾಗೆ ಹೇಳಬೇಕು ಅಂದ್ರೆ ಹೇಗೆ ಹೇಳಬಹುದು ಸಾರ್? ಚಿಕ್ಕದಾಗಿ ಚೊಕ್ಕದಾಗಿ ಹೇಳಿ ನೋಡೋಣ, ಅಂತ ಸವಾಲ್ ಹಾಕಿದೆ.

ಸಿಂಪಲ್ ಕಣ್ರೀ....ಫೇಸ್ಬುಕ್ ಅಂದ್ರೆ ಮ್ಯಾಲೆ ಒತ್ತೋದು, ಕೆಳಗೆ ಹಾಕೋದು! ಅಷ್ಟೇ! ಅಂದು ಬಿಟ್ಟರು ಕಾಶಿನಾಥ್.

ಏನ್ ಸಾರ್ ಇದು ಒಳ್ಳೆ 'ಅನಂತನ ಆವಾಂತರ' ಸಿನೆಮಾದಲ್ಲಿ ನಿಮ್ಮ ಪರ್ಸನಲ್ ಸೆಕ್ರೆಟರಿ, ಸಾರ್! ಮೇಲೆ ಒತ್ತಿದಾಂಗೆ ಆಗೊತ್ತೆ ಸಾರ್.............ಅಯ್ಯೋ!!!ಅಯ್ಯೋ!!! ಮುಂದೆ ನಾ ಹೇಳಲಾರೆ ಆ ಡೈಲಾಗ್....ನಿಮಗೇ ಗೊತ್ತಲ್ಲ..... ಹಾಗೆ ಡಬಲ್ ಮೀನಿಂಗ್ ಹೊಡೆದು ಬಿಟ್ರೀ ಸಾರ್!!!!ಇಶ್ !!!ಇಶ್ !!! ಅಸಹ್ಯ!!!ಇದು ನಿಮ್ಮ ಪರ್ಸನಲ್ ಸೆಕ್ರೆಟರಿಗೆ ತಿಳಿಬಹುದು ಬೇರೆಯವರಿಗೆ ತಿಳಿಯೋದಿಲ್ಲ ಸಾರ್! - ಅಂತ ಹೇಳಿದೆ.

ಸ್ಟುಪಿಡ್ ರಾಸ್ಕಲ್....ಏನ್ರೀ ಬೆಳಿಗ್ಗೆ ಬೆಳಿಗ್ಗೆ ಬಂದು ತಲೆ ತಿಂತೀರಾ. ಫೇಸ್ಬುಕ್ ನಲ್ಲಿ ಮೇಲೆ ಲೈಕ್ ಒತ್ತೋದು ಕೆಳಗೆ ಕಾಮೆಂಟ್ ಹಾಕೋದು ಅಂತ. ಅದಕ್ಕೆ ಮತ್ತೆ ಅನಂತನ ಆವಾಂತರ ಸಿನೆಮಾದಲ್ಲಿ ಬಂದು ಡಬಲ್ ಮೀನಿಂಗ್ ಡೈಲಾಗ್ ಹೊಡೆದ ನಟಿಗೂ ಏನ್ರೀ ಸಂಬಂಧ? - ಅಂತ ಝಾಡಿಸಿ ಬಿಟ್ಟರು ಕಾಶಿನಾಥ್.

ಓಹೋ!! ಹಾಗಾ ಸರ್? ಫೇಸ್ಬುಕ್ ಅಂದ್ರೆ ಮ್ಯಾಲೆ ಲೈಕ್ ಒತ್ತೋದು ಕೆಳಗಡೆ ಕಾಮೆಂಟ್ ಹಾಕೋದು. ಚೆನ್ನಾಗಿದೆ ನಿಮ್ಮ ಫೇಸ್ಬುಕ್ one-liner. ಆದರೂ ಪೂರ್ತಿ ಹೇಳದೇ ಇದ್ದರೆ ಅಪಾರ್ಥ ಬರುತ್ತೆ ಸಾರ್. ಅಲ್ಲವಾ? - ಅಂತ ಕೇಳಿದೆ.

ತಲೆ ಸರಿ ಇದ್ದರೆ ಏನೂ ಅಪಾರ್ಥ ಮತ್ತೊಂದು ಬರೋದಿಲ್ಲ. ನಿಮ್ಮ ತಲೆಯಲ್ಲಿ ಮನಸ್ಸಿನಲ್ಲಿ ಏನು ಇರತ್ತೋ ಅದೇ ವಿಶ್ಲೇಷಣೆ ಆಗಿ ನಿಮಗೆ ಅರ್ಥ ಅಪಾರ್ಥ ಎಲ್ಲ ಬರೋದು. ಮನಸ್ಸನ್ನು ಸ್ವಚ್ಚ ಮಾಡಿಕೊಳ್ಳಿ. ಅದರ ಬದಲು ಕಾಶಿನಾಥ್ ಡಬಲ್ ಮೀನಿಂಗ್ ಹೊಡಿತಾರೆ ಅಂತ ಅಪಪ್ರಚಾರ ಮಾಡಬೇಡಿ. ತಿಳಿಯಿತಾ? - ಅಂತ ಝಾಡಿಸಿದರು ಕಾಶಿನಾಥ.

ಅದು ಹೌದು ಸಾರ್! ಇಡೀ ಜಗತ್ತೇ ನಮ್ಮ ಮನಸಲ್ಲಿ ಇದೆ ಅಂತಾರೆ ದೊಡ್ಡವರು. ಅದೂ ಸರಿಯೇ.ಆದರೂ ಕೆಲವೊಂದು ಶಬ್ದ ಹೀಗೆ ಡಬಲ್ ಮೀನಿಂಗ್ ಗೆ ಅಂತಾನೇ ಫಿಕ್ಸ್ ಆಗಿಬಿಟ್ಟಿದೆಯಲ್ಲ ಸಾರ್? - ಅಂತ ಹೇಳಿದೆ.

ಅದು ಕರ್ಮ...ಕರ್ಮ.... ಅಂತ ಏನೋ ಹೇಳಲು ಹೊರಟರು ಕಾಶಿನಾಥ. ಅಷ್ಟರಲ್ಲಿ ಅವರ ಫೇಸ್ಬುಕ್ ಮೇಲೆ ಏನೋ ನೋಟಿಫಿಕೆಶನ್ ಬಂತು. ಕಾಶಿ ಏಕ್ದಂ ರೈಸ್ ಆದರು.

ಆದ ನೋಡಲೇ ಲಿಂಗಪ್ಪ ನನ್ನ ಫೇಸ್ಬುಕ್ ಫ್ರೆಂಡ್! ನನ್ನ ಹಳೇ ಫ್ರೆಂಡ್ ಅವನು. ಈಗ ಫೇಸ್ಬುಕ್ ಮೇಲೆ ಸಿಕ್ಕಿದಾನೆ. ನಿನ್ನೆ ಮಾತ್ರ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. accept ಮಾಡಿದ್ದಾನೆ ಅನ್ನಿಸತ್ತೆ, ಅಂತ ಹೇಳುತ್ತ ಉತ್ಸುಕರಾದ  ಕಾಶಿನಾಥ ಫೇಸ್ಬುಕ್ ನೋಡಲು ಹೋದರು.

ಹಾಂ!!! ಅಂತ ಚೀತ್ಕರಿಸಿದರು ಕಾಶಿನಾಥ್.

ಏನಾಯ್ತು ಸಾರ್? - ಅಂತ ಕೇಳಿದೆ.

ನಾನು ಲಿಂಗಪ್ಪಂಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದರೆ ಯಾರೋ ಲಂಗಪ್ಪ ಅನ್ನೋವನು ಫ್ರೆಂಡ್ ಆಗಿದಾನಲ್ಲರೀ. ಇದು ಒಳ್ಳೆ ಕಥೆ ಆಯಿತು, ಅಂತ ಕಾಶಿ ಪೇಚಾಡಿಕೊಂಡರು.

ಮುಂದೇನು ಸಾರ್? ಲಂಗಪ್ಪನ್ನ ಫ್ರೆಂಡ್ ಅಂತಾ ಇಟ್ಟುಕೊಳ್ಳುತ್ತೀರಾ ಅಥವಾ unfriend ಮಾಡಿ ಬಿಡ್ತೀರಾ? - ಅಂತ ಕೇಳಿದೆ.

ಹೋಗ್ರೀ....ಹೋಗ್ರೀ....ನೀವು ಬಂದು ಕೂತಾಗಿಂದ ಇದೇ ಆಗೋಯ್ತು. ಮುಂದೆ ಹೋಗಿ ಬೇರೆ ಯಾರದ್ದಾದ್ರೂ ತಲೆ ತಿನ್ನಿ. ಲಿಂಗಪ್ಪನ್ನ ಲಂಗಪ್ಪನ್ನ ನಾನು ಸರಿ ಮಾಡಿಕೋತೀನಿ, ಅಂತ ಕಾಶಿನಾಥ್ ರೈಸ್ ಆಗಿ ನನ್ನ ಓಡಿಸಿಬಿಟ್ಟರು.

ಬರ್ತೀನಿ ಸಾರ್. ನಮಸ್ತೇ. ಕೇವಲ ನಮಸ್ತೇ ಮಾತ್ರ ಅಲ್ಲ....ನಮಸ್ತೇ ಸದಾ ಒತ್ತಲೇ, ಲೈಕ್ ಒತ್ತಲೇ, ಕಾಮೆಂಟ್ ಹಾಕಲೇ, ಚಾಟಿಂಗ್ ಮಾಡಲೇ, ನಮಸ್ತೇ ಸದಾ ಒತ್ತಲೇ, ಅಂತ ಫುಲ್ ಪ್ರಾರ್ಥನೆ ಮಾಡಿಯೇ ಬಿಟ್ಟೆ.

ಭೇಷ್!!!ಭೇಷ್!!! ಈಗ ಸರಿಯಾಗಿ ಕಲಿತಿರಿ ಫೇಸ್ಬುಕ್ ಪ್ರಾರ್ಥನೆ, ಅಂದ ಕಾಶಿ ಸ್ವಲ್ಪ ಕೂಲ್ ಆಗಿ ಬೀಳ್ಕೊಟ್ಟರು.

** ಇದೊಂದು ಮಂಡೆ ಕಲ್ಪಿತ ಕಹಾನಿ. ಅಂದ್ರೆ fictional. ಕಾಶಿನಾಥರನ್ನು ಭೇಟಿಯಾಗುವ ಸೌಭಾಗ್ಯ ಇನ್ನೂ ಬಂದಿಲ್ಲ. ಕಾಶಿನಾಥ್ ಅವರ ಕ್ಷಮೆ ಮೊದಲೇ ಕೇಳಿಬಿಡುತ್ತೇನೆ. ಕಾಶಿನಾಥ ಪೋಲಿ ನಟ ನಿರ್ದೇಶಕ ಅಂತ ಲೇಬಲ್ ಆದರೂ ಅವರೊಬ್ಬ ಅಪರೂಪದ ಪ್ರತಿಭಾವಂತ ಆಸಾಮಿ ಅನ್ನೋಕೆ 'ಅಪರಿಚಿತ' ಚಿತ್ರವೇ ಸಾಕು. ಕನ್ನಡದಲ್ಲಿ ಬಂದಂತಹ ಒಂದು ಅಪರೂಪದ suspense thriller ಮಾದರಿಯ ಚಿತ್ರ ಅದು. ಇವತ್ತಿನ ನಟ ನಿರ್ದೇಶಕ ಉಪೇಂದ್ರ, ಮನೋಹರ್ ಮುಂತಾದ ಪ್ರತಿಭೆಗಳೆಲ್ಲ ಕಾಶಿನಾಥ್ ಗರಡಿಯಲ್ಲೇ ತಯಾರಾದವರು. 'ಅಪರಿಚಿತ' ಚಿತ್ರವನ್ನು ಹಿಂದಿಯಲ್ಲೂ ಮಾಡಿದ ಕಾಶಿನಾಥ ಕಾಸು ಕಳೆದುಕೊಂಡು 'ಅನಂತನ ಆವಾಂತರ' ತರಹದ ಪೋಲಿ ಸಿನೆಮಾ ಮಾಡಿ ಸ್ವಲ್ಪ ಕಾಸು ಮಾಡಿಕೊಂಡಿರಬಹುದು. ಆದರೆ ಪ್ರತಿ ಚಿತ್ರದಲ್ಲೂ ತಮ್ಮದೇ ಆದ ಒಂದು ಛಾಪು ಮೂಡಿಸುವ ಅವರಿಗೆ ಮತ್ತು ಅವರ ಪ್ರತಿಭೆಗೆ ಒಂದು ನಮೋ ನಮಃ. 'ಶ್!!!' ಎಂಬ ಇನ್ನೊಂದು suspense thriller ಚಿತ್ರ, ಉಪೇಂದ್ರ ನಿರ್ದೇಶಿಸಿದ್ದು, ಅದರಲ್ಲಿ ಕಾಶಿನಾಥ ನಿರ್ಧೇಶಕನ ಪಾತ್ರ ಮಾಡಿದ್ದಾರೆ. ಅದರಲ್ಲಿ ಕೂಡ ಅವರಿಗೆ ಡಬಲ್ ಮೀನಿಂಗ್ ಅಂತಾನೆ ಬ್ರಾಂಡ್ ಮಾಡುತ್ತಾರೆ. ಅದರಲ್ಲಿ ಮಾತಿಗೊಮ್ಮೆ ಉರಿದು ಬೀಳುವ ನಿರ್ದೇಶಕನ ಪಾತ್ರ ಮಾಡಿದ ಕಾಶಿನಾಥ ಡೈಲಾಗ್ ಸ್ಟೈಲ್ ಈ ಬ್ಲಾಗ್ ಪೋಸ್ಟಿಗೆ ಸ್ಪೂರ್ತಿ. 'ಶ್!!!' ಕೂಡ ಒಂದು ಒಳ್ಳೆ suspense thriller ಚಿತ್ರ. ಗುರುವಿಗೆ ತಕ್ಕ ಶಿಷ್ಯ ಉಪೇಂದ್ರ. ಆ ಸನ್ನಿವೇಶದ ಒಂದು ಸಣ್ಣ ಕ್ಲಿಪ್ ಇಲ್ಲಿದೆ ನೋಡಿ. ಪೂರ್ತಿ ಚಿತ್ರ ಸಹ youtube ಮೇಲೆ ಲಭ್ಯ. ಒಂದು ಅತ್ಯಂತ ಕುತೂಹಲಕರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಶ್!'
** ಯಾರೋ ಪುಣ್ಯಾತ್ಮರು 'ಅಪರಿಚಿತ' ಪೂರ್ತಿ ಚಿತ್ರವನ್ನು youtube ಮೇಲೆ ಹಾಕಿದ್ದಾರೆ. ಅಪ್ಪಟ U ಸರ್ಟಿಫಿಕೇಟ್ ಚಿತ್ರ. ಇಲ್ಲಿ ನೋಡಬಹುದು - http://www.youtube.com/watch?v=vtlQ9K2zwws


** ಕಾಶಿನಾಥ - http://en.wikipedia.org/wiki/Kashinath_%28actor%29

ಕಾಶಿನಾಥ

Sunday, June 02, 2013

ಮಂಡೆ ಇಲ್ಲದ ಮಂಡೇಲಾರಿಗೆ ಮಂಡೆ ಕೂಡಾ ಮಂಡೆ ಬಿಸಿ ಇಲ್ಲವೇ?

ಸೋಮವಾರ ಮುಂಜಾನೆ ಮುಂಜಾನೆ ಬಂದ ಕರೀಂ. ನಾ ಏನ್ ಮಸ್ತ ಆರಾಮಾಗಿಯೇ ಇದ್ದೆ.

ಕ್ಯಾ ಸಾಬ್?! ನಿಮಗೆ ಮಂಡೆ ಬಿಸಿ ಇಲ್ಲ ಕ್ಯಾ? ಆರಾಮ ಕೂತೀರಿ? ಕಾಮ್ ಕಾಜ್ ಇಲ್ಲ ಕ್ಯಾ? ಹಾಂ? ಹಾಂ? - ಅಂದ ಕರೀಂ.

ಏನೋ ಮಾರಾಯಾ? ಕೆಲಸ ಅದ. ಮಾಡಿಕೋತ್ತ ಇರತೇನಿ. ಅದಕ್ಕ ಮಂಡೆ ಬಿಸಿ ಯಾಕ? ಅದನ್ಯಾಕ ಕೇಳಲಿಕತ್ತಿ ನೀನು? - ಅಂದೆ.

ವಾಹ್  ಸಾಬ್! ಸೋಮವಾರ ಮುಂಜಾನೆ ಅಂದ್ರೆ ಮಂಡೆ (Monday) ಮುಂಜಾನೇನೂ ನಿಮಗೆ ಮಂಡೆ ಬಿಸಿ ಇಲ್ಲ ಅಂದ್ರ ನೀವು ಮಂಡೇಲಾನೇ ಇರಬೇಕು. ನೀವೂ ಮಂಡೇಲಾ ಕ್ಯಾ? -ಅಂತ ಏನೋ ವಿಚಿತ್ರ ಕೇಳಿದ.

ಯಾವ ಮಂಡೇಲಾ? - ಅಂತ ಕೇಳಿದೆ.

ಅದೇ....ವಿಲ್ಸನ್ ಮಂಡೇಲಾ. ನಿಮಗೆ ಗೊತ್ತಿಲ್ಲ ಕ್ಯಾ? ಅಷ್ಟು ದೊಡ್ಡ ಮಂದಿ? - ಅಂದ ಕರೀಂ.

ನನಗ ಬೆಂಗಳೂರು ಬಗ್ಗೆ ಜಾಸ್ತಿ ಗೊತ್ತಿಲ್ಲ. ಅಲ್ಲಿ ವಿಲ್ಸನ್ ಗಾರ್ಡನ್ ಏರಿಯ ಒಳಗ ಇರೋ ಯಾವ ಮಂಡೇಲಾನೂ ಗೊತ್ತಿಲ್ಲ. ಸಂಡೇಲಾನೂ ಗೊತ್ತಿಲ್ಲ. ಇವತ್ತು ಮಂಡೆ (Monday) ಆದರೂ ನಂದು ಮಂಡೆಯಂತೂ ಬಿಸಿ ಆಗಿಲ್ಲ. ನೀನು ಹೀಂಗೆಲ್ಲಾ ಕೇಳಿ ನನ್ನ ಮಂಡೆ ಬೆಚ್ಚಗ ಅಂತು ಮಾಡಬ್ಯಾಡ, ಅಂತ ಹೇಳಿದೆ.

ಅಯ್ಯೋ.....ನಾವು ಹೇಳಿದ್ದು ಆಫ್ರೀಕಾದ ಮಂಡೇಲಾ ಬಗ್ಗೆ. ಅವರೂ ಈಗ ಬೆಂಗಳೂರಿಗೆ ಶಿಫ್ಟ್ ಆಗಿದಾರೆ ಕ್ಯಾ? ನೌಕರಿ ಇಲ್ಲ ಕ್ಯಾ ಅವರಿಗೆ? ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಜಾಯಿನ್ ಆಗಿದಾರೆ ಕ್ಯಾ? ವಿಲ್ಸನ್ ಗಾರ್ಡನ್ ಒಳಗೆ ರೂಂ ಮಾಡಿದಾರೆ ಕ್ಯಾ? ಹಾಂ? ಹಾಂ? - ಅಂತ ಏನೇನೋ ಕೇಳಿಬಿಟ್ಟ.

ಲೇ....ಹಾಪಾ.... ಅವರ ಹೆಸರು ನೆಲ್ಸನ್ ಮಂಡೇಲಾ ಅಂತ. ಮೊದಲು ವಿಲ್ಸನ್ ಮಂಡೇಲಾ ಅಂದವ ನೀ. ಅದಕ್ಕ ನಾ ವಿಲ್ಸನ್ ಗಾರ್ಡನ್ ಏರಿಯಾ ಏನು? ಅಂತ ಕೇಳಿದ್ರ, ನೆಲ್ಸನ್ ಮಂಡೇಲಾ ಬೆಂಗಳೂರಿಗೆ ಬಂದಾರೇನು? ಅಂತ ಕೇಳ್ತೀ. ಹಾಪಾ. ಎಲ್ಲೀದ ಹಚ್ಚಿ ಮಾರಾಯಾ ಮುಂಜಾನೆ ಮುಂಜಾನೆ? ಮಂಡೆ ಬಿಸಿ ಇರಲಿಲ್ಲ. ಈಗ ಮಂಡೆ ಬೆಚ್ಚಗಾಗಿ ಬಿಡ್ತು. ಮಂಡೆ lukewarm ಆಗಿ ಬಿಡ್ತು. ಏನಂತ ಹೇಳು, ಅಂದೆ.

ನೆಲ್ಸನ್ ಮಂಡೇಲಾ
ಅವರೇ....ಅವರೇ ಸಾಬ್....ಅವರೇ. 'ಜೀನಾ ಯಹಾ ಮರನಾ ಯಹಾ, ಇಸಕೇ ಸಿವಾ ಜಾನಾ ಕಹಾ' ಅಂತ ಇಪ್ಪತ್ತೇಳು ವರ್ಷ ಸೌತ್ ಆಫ್ರೀಕಾ ಜೇಲಿನಲ್ಲಿ ಕೂತಿದ್ದರು. ಅವರೇ ಅವರೇ. ಅವರಿಗೆ ಮಾತ್ರ ಮಂಡೆ ಮುಂಜಾನೆ ಮಂಡೆ ಬಿಸಿ ಇಲ್ಲ ನೋಡಿ ಸಾಬ್, ಅಂತ ವಿಚಿತ್ರವಾಗಿ ಹೇಳಿಬಿಟ್ಟ.

ಯಾಕಪಾ? ಸೌತ್ ಆಫ್ರಿಕಾ ಅಂತಹ ದೊಡ್ಡ ದೇಶಕ್ಕ ಪ್ರೆಸಿಡೆಂಟ್ ಇದ್ದವರು ಮಂಡೇಲಾ ಅವರು. ಅವರಿಗೆ ಯಾಕ ಮಂಡೆ ಮುಂಜಾನೆ ಮಂಡೆ ಬಿಸಿ ಇರಂಗಿಲ್ಲ? ಹಾಂಗ ನೋಡಿದ್ರ ಎಲ್ಲಾರಕಿಂತ ಒಂದು ಸ್ವಲ್ಪ ಜಾಸ್ತಿನss ಮಂಡೆ ಬಿಸಿ ಇರ್ತದ ಅವರಿಗೆ. ಗೊತ್ತಾತ? ಹಾಂ? - ಅಂತ ಕೇಳಿದೆ.

ಅಲ್ಲ ಸಾಬ್. ಅವರ ಹೆಸರು ನೋಡಿ. ಮಂಡೇಲಾ. ಸಂಧಿ ಸಮಸಾ ಬಿಡಿಸಿ. ಮಂಡೆ ಇಲ್ಲದವ ಮಂಡೇಲಾ. ಮಂಡೆನೇ ಇಲ್ಲ ಅಂದ ಮ್ಯಾಲೆ ಮಂಡೆ ಇರಲೀ ಸಂಡೆ ಇರಲಿ ಅವರಿಗೆ ಒಟ್ಟೇ ಮಂಡೆ ಬಿಸಿ ಇಲ್ಲ ನೋಡಿ. ನಿಮಗೂ ಮಂಡೆ ಇಲ್ಲ ಕ್ಯಾ? ಅದಕ್ಕೇ ಮಂಡೆ ಬಿಸಿ ಇಲ್ಲದೆ ಆರಾಮ ಕೂತೀರಿ? ಹಾಂ? ಹಾಂ? - ಅಂತ ಅಂದು ವಿಚಿತ್ರವಾಗಿ ನಕ್ಕ ಕರೀಂ.

ವಾಹ್!! ಏನ್ ಲಾಜಿಕ್ ಮಾರಾಯ ನಿನ್ನದು!! ಮಂಡೆ ಇಲ್ಲದವ ಮಂಡೇಲಾ. ಮತ್ತ ಮಂಡೆ ಇಲ್ಲಂದ್ರ ಮಂಡೆ ಬಿಸಿ ಇಲ್ಲ. ವಾಹ್! ವಾಹ್! ಹಾಂಗೆನರ ಆಗೋಹಾಂಗಿದ್ರ ಎಲ್ಲರೂ ಅವರ ಅವರ ಮಂಡೆ ದಾನ ಮಾಡಿ ಬಿಡ್ತಿದ್ದರು. ಮಂದಿ ತಮ್ಮ ಮಂಡೆ ದಾನಕ್ಕ ಕೊಟ್ಟರೂ ಯಾರೂ ತೊಗೊಳ್ಳೋದಿಲ್ಲ, ಆ ಮಾತ ಬ್ಯಾರೆ. ಆದರೂ ಯಾರಿಗೆ ಬೇಕು ಮಂಡೆ ಬಿಸಿ ಅಂತ ಎಲ್ಲರೂ ಮಂಡೆ ಇಲ್ಲದ ಮಂಡೇಲಾ ಆಗತಿದ್ದರು ಏನಪಾ. ಮುಂದ ಹೇಳು, ಅಂತ ಹೇಳಿದೆ.

ಮಂಡೇಲಾಗೆ ಮತ್ತ ಮಂಡಲ್ ವರದಿಗೆ ಏನಾರಾ ಸಂಬಂಧಾ ಐತೆ ಕ್ಯಾ ಸಾಬ್? ಆ ವರದಿ ಅವರೇ ಬರದಿದ್ದು ಕ್ಯಾ? - ಅಂತ ಕೇಳಿಬಿಟ್ಟ ಕರೀಂ.

ವಾಹ್! ಎಲ್ಲೆಲ್ಲಿಂದ ಲಿಂಕ್ ತರ್ತಿಯೋ ಮಾರಾಯಾ? ಡೈರೆಕ್ಟ್ ಸಂಬಂಧ ಇಲ್ಲ. ಆದರೂ ಒಂದು ನಮ್ಮನಿ ಸಂಬಂಧ ಅದ ಅಂತ ಹೇಳಬಹುದು ನೋಡಪಾ, ಅಂದೆ.

ಕೈಸಾ ರಿಷ್ತಾ ಮಂಡಲ್ ವರದಿ ಮತ್ತ ಮಂಡೇಲಾ ನಡುವೆ? ಹೇಳಿ, ಅಂದ ಕರೀಂ.

ನೋಡಪಾ ಅದು 1990 ರ ಮಾತು. ನಾವೆಲ್ಲಾ ಮಾತ್ರ PUC ಮುಗಿಸಿ ಡಿಗ್ರಿ ಚಾಲೂ ಮಾಡಿದ್ದಿವಿ ಏನಪಾ. ಆವಾಗ ಹುಚ್ಚ ಹಳೆ ರಾಜಾ ವೀಪಿ ಸಿಂಗ ಪ್ರಧಾನ ಮಂತ್ರಿ ಆಗಿದ್ದ. ಬೋಫೋರ್ಸ್ ಬೋಫೋರ್ಸ್ ಅಂತ ಪುಂಗಿ ಊದಿ, ಪಾಪ ರಾಜೀವ್ ಗಾಂಧಿ ಚೊಣ್ಣಾ ಇಳಿಸಿ, ಹ್ಯಾಂಗೋ ಮಾಡಿ ಏನೇನೋ ಮಾಡಿ ಪ್ರೈಮ್ ಮಿನಿಸ್ಟರ್ ಆಗಿ ಬಿಟ್ಟ. ವೋಟ್ ಬ್ಯಾಂಕ್ ಪಾಲಿಟಿಕ್ಸ್ ಹೊಲಸ್ ಗುಣಾ ಎಲ್ಲಿಂದ ಹೋಗಬೇಕು? ಅದಕ್ಕ ಮಂಡಲ್ ವರದಿ ಅನ್ನೋ ಯಾವದೋ ಒಂದು ಹಳೆ ವರದಿ, ಅದೂ ಧೂಳ ಹೊಡೆಸಿಕೋತ್ತ ಎಲ್ಲೋ ಮೂಲ್ಯಾಗ ಬಿದ್ದಿತ್ತು, ಅದನ್ನ ತಂದು ಜಾರಿ ಮಾಡಿ ಬಿಟ್ಟ ನೋಡು. ನೆನಪ ಅದನ? - ಅಂತ ಕೇಳಿದೆ.

ಹಾಂ!!ಹಾಂ!!! ನೆನಪ ಆಯಿತು. ಏನು ಸಾಬ! ಆ ಮಂಡಲ್ ಬಂಡಲ್ ವರದಿ ಮಾಡಿದ ಕಯಾಮತ್! ಹಾಂ! ಎಷ್ಟು ಮಂದಿ ಸ್ಟೂಡೆಂಟ್ಸ್ ಬೆಂಕಿ ಹಚ್ಚಿಗೊಂಡರು!? ಏನು ಕಥಿ? ಪೂರಾ ಅಕಾಡೆಮಿಕ್ ವರ್ಷಾ ಫುಲ್ ಬರ್ಬಾದ, ಅಂತ ಮಂಡಲ್ ವರದಿ ಮತ್ತ ಅದರ ನಂತರ ನೆಡದ ವಿದ್ಯಾರ್ಥಿ ಚಳವಳಿ ಎಲ್ಲಾ ನೆನಪ ಮಾಡಿಕೊಂಡ ಕರೀಂ.

ಮಂಡಲ್ ವರದಿ ವಿರುದ್ಧ ಬೆಂಕಿ ಹಚ್ಚಿಕೊಂಡು ಬದುಕುಳಿದ ಆ ಕಾಲದ ವಿದ್ಯಾರ್ಥಿ ಧುರೀಣ ರಾಜೀವ್ ಗೋಸ್ವಾಮಿ
ಕರೆಕ್ಟ್....ಹುಚ್ಚ ವೀಪಿ ಸಿಂಗ ಏನೋ ಮಾಡಿಕೊಂಡ. ಮಂದಿ ತಿರುಗಿ ಬಿದ್ದರು ನೋಡು! ವಿಪಿ ಸಿಂಗ್ ಹೋಗಿ ಪೀಪಿ ಸಿಂಗ್ ಆಗಿ ಚೊಣ್ಣ ಹರೀಲೀಕತ್ತು ಮಂಗ್ಯಾನ ಮಗಂದು. ಏನಾರಾ ಮಾಡಬೇಕಲ್ಲ ಅಂತ ತಲಿ ಕೆಡಿಸಿಕೊಂಡ. ಆವಾಗಾ ನೆನಪ ಆದವರ ನೆಲ್ಸನ್ ಮಂಡೇಲಾ. ಅವರಿಗೆ ಅವಾಗ ಮಾತ್ರ ಜೈಲಿಂದ ಬಿಟ್ಟಿದ್ದರು. ಪ್ರೆಸಿಡೆಂಟ್ ಸಹಿತ ಆಗಿದ್ದರು ಅನ್ನಸ್ತದ. ನಮ್ಮ ದೇಶಕ್ಕ ಬರುವರು ಇದ್ದರು. ಯಾರೋ ವಿಪಿ ಸಿಂಗಗ ಐಡಿಯಾ ಕೊಟ್ಟರು. ಮಂಡೇಲಾ ಸಾಹೇಬ್ರ ಕಡೆ ಮಂಡಲ್ ವರದಿ ಬಗ್ಗೆ ಸಪೋರ್ಟ್ ಮಾಡುವಂತಹ ಒಂದು ಸ್ಟೇಟ್ಮೆಂಟ್ ಕೊಡಿಸಿ ಒಗಿರಿ. ಮಂಡೇಲಾ ಹೇಳಿದರು ಅಂತ ಮಂದಿ ಸುಮ್ಮನಾದರೂ ಆಗಬಹುದು. ಟ್ರೈ ಮಾಡಲಿಕ್ಕೆ ಏನು ತೊಂದ್ರೀ? ಅಂತ ಯಾರೋ ಪುಣ್ಯಾತ್ಮಾ ವಿಪಿ ಸಿಂಗಗ ಐಡಿಯಾ ಕೊಟ್ಟ, ಅಂತ ಮಂಡಲ್ ವರದಿಗೆ ಮತ್ತ ಮಂಡೇಲಾಗ ಹ್ಯಾಂಗ ಕನೆಕ್ಷನ್ ಅದ ಅನ್ನೋದನ್ನ ವಿವರಿಸಿದೆ. 

ಹಾಗೆ ಕ್ಯಾ? ಮುಂದೆ ಕ್ಯಾ ಹುವಾ? ಮಂಡೇಲಾ ಮಂಡಲ್ ವರದಿ ಸಪೋರ್ಟ್ ಮಾಡಿದರು ಕ್ಯಾ? - ಅಂತ ಕರೀಂ ಕೇಳಿದ. 

ಮಂಡೇಲಾ ಬಂದ್ರು. ಅವರಿಗೆ ಯಾರು ಮಂಡಲ್ ವರದಿ ಬಗ್ಗೆ ಏನು ಹೇಳಿದರೋ ಗೊತ್ತಿಲ್ಲ.  ಅಥವಾ ಅವರ ಹೆಸರು ಮಂಡೇಲಾ. ರಿಪೋರ್ಟ್ ಹೆಸರು ಮಂಡಲ್ ರಿಪೋರ್ಟ್. ಏನು ತಿಳಕೊಂಡರೋ ಏನೋ? ತಮ್ಮ ಮ್ಯಾಲೆ ಯಾರೋ ಬರೆದ ವರದಿ ಇರಬೇಕು ಅಂತ ತಿಳಕೊಂಡಿರಬೇಕು. ಅದರ ಮ್ಯಾಲೆ 'ಭಾರತ ರತ್ನ' ಅನ್ನೋ ಅತಿ ದೊಡ್ಡ ಪ್ರಶಸ್ತಿ ಸಹಿತ ಕೊಟ್ಟು ಬಿಟ್ಟರಲ್ಲಪಾ ಪೀಪಿ ಸಿಂಗ. ಮಂಡೇಲಾ ಫುಲ್ ಖುಷ್. ಫುಲ್ ಖುಷ್ ಆದ ಮಂಡೇಲಾ, ಮಂಡಲ್ ವರದಿ ಭಾಳ ಚೊಲೊ ಅದ. ಅದನ್ನ ಇಂಪ್ಲಿಮೆಂಟ್ ಮಾಡಿದ ಪೀಪಿ ಸಿಂಗ್ ಭಾಳ ದೊಡ್ಡ ವ್ಯಕ್ತಿ. ನೀವು ಹುಚ್ಚ ಮಂದಿ ಸ್ಟ್ರೈಕ್ ಮಾಡಿ, ಗದ್ದಲಾ ಹಾಕಿ, ಪಾಪ ಸರ್ಕಾರಕ್ಕ ಯಾಕ ತ್ರಾಸ್ ಕೊಡ್ತೀರಿ? ಅಂತ ಹೇಳಿ ದೊಡ್ಡ ಸ್ಟೇಟ್ಮೆಂಟ್ ಕೊಟ್ಟು, ನಮ್ಮ ದೇಶದ ಮೆಹಮಾನ್ ನವಾಜಿ ಮಸ್ತ ಎಂಜಾಯ್ ಮಾಡಿ ವಾಪಸ್  ಹೋಗಿ ಬಿಟ್ಟರು, ಅಂತ ಮಂಡೇಲಾ ಹ್ಯಾಂಗ ಮಂಡಲ್ ವರದಿ ಬಗ್ಗೆ ಮಂಡೆ (ತಲಿ) ಇಲ್ಲದವರಾಂಗ ಏನೇನೋ ಹೇಳಿ ಇಂಡಿಯಾ ಮಂದಿಗೆ ಬೈದು ಹೋಗಿದ್ದನ್ನ ನೆನಪು ಮಾಡಿಕೊಂಡು ಕರೀಮಗ ಹೇಳಿದೆ. 

ಐಸಾ ಕ್ಯಾ? ಇಸ್ ಮಂಡೇಲಾ ಕೋ ಸಚ್ಚಿ ಮೇ ಮಂಡೆ ನಹಿ ಸಾಬ್. ಮಂಡೆ ಹೋಗಲಿ ಮಂಡೆ ಜಾಗದಲ್ಲಿ ಕುಂಡೆ ಇದ್ದ ಪೂರ್ತಿ ಡಫರ್ ಮಂದಿ ಸಹಿತ ಮಂಡಲ್ ವರದಿ ಸಪೋರ್ಟ್ ಮಾಡಾಕಿಲ್ಲ. ಅಂತಾದ್ರಲ್ಲಿ ಇಷ್ಟು ದೊಡ್ಡ ಮನುಷ್ಯಾ ಅಂತ ಕರೆಸಿಕೊಳ್ಳೋ ಮಂಡೇಲಾಗೆ ಏನು ಬಂದಿತ್ತು ಸಾಬ್ ದೊಡ್ಡ ರೋಗ? ಹಾಂ? ಹಾಂ? - ಅಂತ ಕರೀಂ ಕೇಳಿದ. 

ಯಾರಿಗೆ ಗೊತ್ತೋ? ಹೇಳಿದ್ನಲ್ಲಾ. ಮಂಡೇಲಾ ಮಂಡಲ್ ಎಲ್ಲಾ ಒಂದ ಅಂತ ತಿಳಕೊಂಡು ಏನೋ ಹೇಳಿರಬಹುದು. ಇಲ್ಲಾ ಭಾರತ ರತ್ನ ಪ್ರಶಸ್ತಿ ಆಶಾ ಇರಬಹುದು. ಅವರಿಗೆ ತಮ್ಮ ಜಾತಿ ನಿಗ್ರೋ ಮಂದಿಗೆ ಹ್ಯಾಂಗ ಸೌತ್ ಆಫ್ರಿಕಾ ಒಳಗ ಬಿಳಿ ಮಂದಿ ತ್ರಾಸು ಕೊಟ್ಟರು ಹಾಂಗ ಇಲ್ಲಿ ಹಿಂದುಳಿದ ಮಂದಿಗೆ ಮುಂದುವರಿದ ಮಂದಿ ತ್ರಾಸ್ ಕೊಡ್ತಾರ, ಮಂಡಲ್ ವರದಿ ಅದನ್ನ ಸರಿ ಮಾಡ್ತದ ಅಂತ ಅನ್ನಿಸಿಬಿಟ್ಟಿತ್ತು ಅಂತ ಅವರೇ ಹೇಳಿದ್ದರು. ಒಟ್ಟಿನ್ಯಾಗ ಭಾರತ ರತ್ನ ಕೊಟ್ಟು ಅವರ ಕಡೆ ಬೈಸಿಕೊಳ್ಳೋ ಕರ್ಮ ನಮ್ಮದಾಗಿತ್ತು ನೋಡಪಾ, ಅಂತ ಆ ಕಾಲದ ಪೇಪರ್ ಒಳಗ ಓದಿದ್ದು ಹೇಳಿದೆ. 

ಇದಕ್ಕೇ ನೋಡಿ ಆ ಮಂಡೇಲಾಗೆ ಮಂಡೆ ದಿವಸ ಮಂಡೆ ಬಿಸಿ ಇಲ್ಲ ಅಂತ ಹೇಳಿದ್ದು. ಖರೇನೇ ಮಂಡೆ ಇಲ್ಲದ ಮನುಷ್ಯಾ! - ಅಂತ ಕರೀಂ ಒಂದು ತರಹದ ಜಿಗುಪ್ಸೆಯಿಂದ ಹೇಳಿದ. 

ಹೋಗ್ಲಿ ಬಿಡಪಾ! ದೊಡ್ಡ ಮಂದಿ. ಒಮ್ಮೊಮ್ಮೆ ಸಣ್ಣ ಪುಟ್ಟ ತಪ್ಪು ಮಾಡ್ತಾರ. ಅವರಿಗೆ ಮಂಡಲ್ ವರದಿ ಸೇರಿರಬಹುದು. ಅದು ಅವರ ಅಭಿಪ್ರಾಯ. ಅದಕ್ಕ ನಾವ್ಯಾಕ ತಲಿ ಕೆಡಿಸ್ಕೋಬೇಕು? ಮಂಡೇಲಾ ಮಂಡಲ್ ವರದಿ ಸಪೋರ್ಟ್ ಮಾಡಿದರು ಅಂದ ಮಾತ್ರಕ್ಕ ಪೀಪಿ ಸಿಂಗನ ಪ್ರಾಬ್ಲಮ್ ಏನೂ ಬಗಿಹರಿಲಿಲ್ಲ. ಚಳುವಳಿ ಮತ್ತೂ ಜೋರ ಆತು. ಮುಂದ ಸ್ವಲ್ಪ ದಿವಸಕ್ಕ ಅವನೇ ಪೀಪಿ ಸಿಂಗ ಪೀಪಿ ಊದಿಕೋತ್ತ ರಾಜಿನಾಮೆ ಕೊಟ್ಟು ಹೋದ. ಅವನ ಹಿಂದ ಮಂಡಲ್ ವರದಿನೂ ಹೋತು. ಸಿಕ್ಕಾಪಟ್ಟೆ ಸ್ಟೂಡೆಂಟ್ಸ್ ತೊಂದ್ರಿ ಪಟ್ಟರು, ಸುಟ್ಟಕೊಂಡು ಸತ್ತರು, ಪೊಲೀಸರ ಕಡೆ ಸಿಕ್ಕಾಪಟ್ಟೆ ತಿಂದರು. ಎಲ್ಲಾ ಹುಚ್ಚ ಮಹಾರಾಜಾ ಪೀಪಿ ಸಿಂಗನ ಮಂಗ್ಯಾತನದಿಂದ, ಅಂತ ಮುಂದ ಆದ ಘಟನಾವಳಿಗಳನ್ನೂ ಹೇಳಿದೆ. 

ಐಸಾ ಕ್ಯಾ? ಒಳ್ಳೇದೇ ಆಯಿತು ಬಿಡಿ, ಅಂತ ಹೇಳಿ ಕರೀಂ ಹೊಂಟ. 

ಮಂಡೆ ಅಂದ್ರ ವಾರ ಶುರು ಆತು. ಏನೇನು ಮಂಡೆ ಬಿಸಿ ಕಾದದೋ ಏನೋ? ಮಂಡೆ ಹೋ ಯಾ ಸಂಡೆ ಖಾಲೋ ಏಕೇಕ್ ಅಂಡೆ ಅಂತ ಅಂಡಾ ಸ್ಲೋಗನ್ ನೆನಪ ಮಾಡಿಕೊಂಡು ಮಂಡೆ ಕೆಲಸ ಶುರು ಮಾಡಬೇಕು.