Friday, May 27, 2016

ಕಿತಾಪತಿ ಆಚಾರಿಯನ್ನು ಮಾಳಮಡ್ಡಿ ತುಂಬಾ ಅಟ್ಟಾಡಿಸಿ ಬಡಿದಳು (almost)

ಅಂತಹದೊಂದು ಮಾತನ್ನು ಅವರು ಆಡಬಾರದಿತ್ತು. ಆಡಲೇಬಾರದಿತ್ತು. ಅದರಲ್ಲೂ ಪೂಜ್ಯ ಕುಲಕರ್ಣಿ ಸರ್ ಅವರಂತಹ ತಿಳುವಳಿಕೆ ಇದ್ದ ಹಿರಿಯ ಗುರುಗಳ ಬಾಯಿಂದ ಬರುವಂತಹ ಮಾತೇ ಅಲ್ಲ ಅದು. ಒಂದು ಸಮುದಾಯವನ್ನೇ stereotype ಮಾಡಿಬಿಡುವಂತಹ ಕೆಲವು ಕೆಟ್ಟ ಮಾತುಗಳು ಇರುತ್ತವೆಯಲ್ಲ ಅವು ಮುಖದ ಮೇಲಿನ ಗಾಯ ಮಾದರೂ ಮಾಸದ ಗೆರೆಗಳಂತೆ. ಕಾಡುತ್ತಲೇ ಇರುತ್ತವೆ. ಅಂತಹದೊಂದು ಮಾತನ್ನು ಕುಲಕರ್ಣಿ ಗುರುಗಳು ಹವ್ಯಕರನ್ನು ಉದ್ದೇಶಿಸಿ ಹೇಳಿದ್ದರು.

'ನೀವು ಹವ್ಯಕರು. ಸಿರ್ಸಿ ಮಂದಿ. ರೊಕ್ಕಾ ಹೆಚ್ಚಾಗ್ಯದ ನಿಮಗೆಲ್ಲಾ. ಅಡಿಕೆಗೆ ಮಸ್ತ ರೇಟ್ ಬಂದದ. ಹಾಂಗಾಗಿ ಚೈನಿ ಹೊಡಿಲಿಕ್ಕೆ ಧಾರವಾಡಕ್ಕೆ ಬರ್ತೀರಿ. ವಿದ್ಯಾ ಕಲಿಲಿಕ್ಕಂತೂ ಖರೇ ಅಂದ್ರೂ ನೀವು ಬರೋದಿಲ್ಲಾ. ಅಲ್ಲೇನಪಾ ಹೆಗಡೆ??' ಅಂತ ತಮ್ಮ prejudiced ಮನಸ್ಥಿತಿಯನ್ನು ಕಾರಿಕೊಂಡವರು ಕುಲಕರ್ಣಿ ಸರ್. ೧೯೬೫ ರ ಮಾತಿರಬಹದು.

ಮಳ್ಳು ಮುಖ ಮಾಡಿಕೊಂಡು, ತಲೆ ತಗ್ಗಿಸಿ, ಮಂಗ್ಯಾನ ಹಾಂಗೆ 'ಮಂತ್ರ ಪುಷ್ಪಾರ್ಚನೆ' ಮಾಡಿಸಿಕೊಂಡವನು ಒಬ್ಬ ಸಿರ್ಸಿ ಕಡೆಯ ಹವ್ಯಕ ಮಾಣಿ. ಇನ್ನೂ ಎಂಟನೇ ತರಗತಿ. ಕೆಲವೇ ತಿಂಗಳುಗಳ ಹಿಂದೆ ಹೈಸ್ಕೂಲಿಗೆಂದೇ ಸಿರ್ಸಿ ಸಮೀಪದ ಕುಗ್ರಾಮದಿಂದ ಧಾರವಾಡಕ್ಕೆ ಬಂದಿದ್ದ. ಅಕ್ಕಂದಿರಿಬ್ಬರು ಧಾರವಾಡದಲ್ಲೇ ಹೈಸ್ಕೂಲಿಗೆ, ಕಾಲೇಜಿಗೆ ಹೋಗಿಕೊಂಡಿದ್ದರು. ಈಗ ಜೊತೆಗೆ ಇವನೊಬ್ಬ.

ಬಂದ ಹೊಸತರಲ್ಲಿಯೇ ದೊಡ್ಡ ಶಾಕ್ ಆಗಿಬಿಟ್ಟಿದೆ. 'ಲವ್ ಲೆಟರ್ ಬರೆದುಬಿಟ್ಟಿದ್ದಾನೆ!' ಅಂತ ಈ ಪಾಪದ ಮಾಣಿ ಮೇಲೆ ಆಪಾದನೆ ಬಂದುಬಿಟ್ಟಿದೆ. ಕ್ಲಾಸ್ಮೇಟ್ ಹುಡುಗಿಯೊಬ್ಬಳ ನೋಟ್ ಬುಕ್ಕಿನಲ್ಲಿ ಒಂದು ಲವ್ ಚೀಟಿ. ಅದೂ ಇವನ ಹೆಸರಿನೊಂದಿಗೆ. ಅಲ್ಲಿಗೆ ಮಾಣಿಯ ಎನ್ಕೌಂಟರಿಗೆ ಫುಲ್ ಸೆಟ್ಟಿಂಗ್ ಆಗಿಬಿಟ್ಟಿದೆ. ಲವ್ ಚೀಟಿ ನೋಡಿದ ಹುಡುಗಿ ಎಲ್ಲಿ ಕದ್ದು ಬಸುರಾಗಿಯೇಬಿಟ್ಟಳೋ ಎಂಬಂತೆ ಚಿಟಿಚಿಟಿ ಚೀರುತ್ತ ಹೆಡ್ ಮಾಸ್ಟರ್ ಹತ್ತಿರ ಓಡಿದ್ದಾಳೆ. ಮಾಣಿಯ ಪುಣ್ಯಕ್ಕೆ ಅಂದು ಹೆಡ್ ಮಾಸ್ಟರ್ ಇರಲಿಲ್ಲ. ಅಲ್ಲೇ ಸಿಕ್ಕ ಕುಲಕರ್ಣಿ ಮಾಸ್ತರ್ ಮುಂದೆ ಅಂಬೋ ಅಂದಿದ್ದಾಳೆ.

'ನಿನ್ನ ಪಾಟಿಚೀಲದಾಗ ಲವ್ ಲೆಟರ್ ಬಂತss?? ಹ್ಯಾಂ?? ಕೊಡು ಇಲ್ಲೆ,' ಅಂತ ಕುಲಕರ್ಣಿ ಸರ್ ಚೀಟಿ ಇಸಿದುಕೊಂಡು ನೋಡಿದ್ದಾರೆ. ಚೀಟಿಯ ಕೊನೆಯಲ್ಲಿ ಕೆಳಗೆ ನೀಟಾಗಿ ಸೂರ್ಯ ಹೆಗಡೆ ಅಂತ ಬರೆದಿದೆ. ಇಂತಹ ಕಾರ್ನಾಮೆ ಮಾಡಿದ(!) ಸೂರ್ಯ ಹೆಗಡೆಗೆ ಬುಲಾವಾ ಹೋಗಿದೆ. ಏನು ಎತ್ತ ಅಂತ ತಿಳಿಯದೇ ಬಂದು ನಿಂತ ಮಾಣಿಗೆ ಬರೋಬ್ಬರಿ ಪೂಜೆಯಾಗಿದೆ. ಪುಣ್ಯಕ್ಕೆ ಅವರು ಕುಲಕರ್ಣಿ ಸರ್. ಕೇವಲ ಬೈದಿದ್ದಾರೆ. ಅವರು ಹೊಡೆದು ಬಡಿದು ಮಾಡಿದವರೇ ಅಲ್ಲ. ಹೆಗಡೆ ಮಾಣಿಯ ನಸೀಬ್ ಚೆನ್ನಾಗಿತ್ತು. ಹೆಡ್ ಮಾಸ್ಟರ್ ಆಗಿದ್ದ ನಾಡ್ಗೀರ್ ಸರ್ ಇರಲಿಲ್ಲ. ಅವರೋ ಹಿಟ್ಲರ್ ಮಾದರಿಯ ಶಿಕ್ಷಕರು. ಅದು ಯಾವ ನಮ್ನಿ ಜಪ್ಪುತ್ತಿದ್ದರು ಅಂದರೆ ಮುಖ ತಿಕ ಎಲ್ಲಾ ಒಂದೇ ಶೇಪಿಗೆ ಬಂದುಬಿಡುತ್ತಿತ್ತು. ಒಳ್ಳೆ ಶಿಕ್ಷಕರು. ಅದರಲ್ಲಿ ದೂಸರಾ ಮಾತೇ ಇಲ್ಲ. ಆದರೆ ಹಾಕ್ಕೊಂಡು  ರುಬ್ಬುವದು ಮಾತ್ರ ವಿಪರೀತ. ಪೊಲೀಸರು ಸಹ ಆ ರೀತಿಯಲ್ಲಿ ರುಬ್ಬುತ್ತಿರಲಿಲ್ಲ.

ಸೂರ್ಯ ಹೆಗಡೆ ಮಾಣಿಗೆ ಅಸಲಿಗೆ ಏನಾಗಿದೆ ಅಂತ ಕೊನೆಗೂ ತಿಳಿದಿಲ್ಲ. ತನ್ನ ಹೆಸರಿನಲ್ಲಿ ಒಂದು ಲವ್ ಲೆಟರ್ ಹುಡುಗಿಯೂಬ್ಬಳ ಬ್ಯಾಗ್ ಸೇರಿ ನೋಟ್ ಪುಸ್ತಕವೊಂದರಲ್ಲಿ ಕಂಡುಬಂದಿದೆ ಅಂತ ಮಾತ್ರ ತಿಳಿದಿದೆ. ಥಂಡಾ ಹೊಡೆದಿದ್ದಾನೆ. ಧಾರವಾಡಕ್ಕೆ ಬಂದು ಒಂದೆರೆಡು ತಿಂಗಳಾಗಿರಬಹುದು ಅಷ್ಟೇ. ಇನ್ನೂ ಅಲ್ಲಿನ ಭಾಷೆ ಕೂಡ ಸರಿಯಾಗಿ ಬರುತ್ತಿದ್ದಿಲ್ಲ. ಆದರೂ ಧೈರ್ಯಮಾಡಿ ಹುಡುಗಿ ಹತ್ತಿರ ಹೋಗಿ, 'ಆನು ನಿಂಗೆ ಲವ್ ಚೀಟಿ ಬರದ್ನಿಲ್ಲೆ. ತೆಳತ್ತಾ? ಆತಾ?' ಅಂತ ಶುದ್ಧ ಹವ್ಯಕ ಭಾಷೆಯಲ್ಲಿಯೇ ಬ್ಲೇಡ್ ಹಾಕಿದ್ದಾನೆ. ಏನೋ ಒಂದು ರೀತಿಯ ಮಾಂಡವಲಿ ಮಾಡಲು ನೋಡಿದ್ದಾನೆ. ಅವಳೋ ಮಾಳಮಡ್ಡಿಯ ಶುದ್ಧ ಆಚಾರರ ಮಗಳು. ಅವಳ ಚಿಂತೆ ಅವಳಿಗೆ. ಲವ್ ಚೀಟಿ ಬಂದಾಗಿನಿಂದ ಫುಲ್ ಹಾಪ್ ಆಗಿಬಿಟ್ಟಿದ್ದಾಳೆ. ಸಿಕ್ಕಾಪಟ್ಟೆ tension. ಅದೂ ೧೯೬೦ ರ ದಶಕ. ಹುಡುಗಿಯರನ್ನು ಶಾಲೆಗೇ ಕಳಿಸುತ್ತಿದ್ದಿಲ್ಲ. ಇನ್ನು ಲವ್ ಚೀಟಿ ಇತ್ಯಾದಿ ಬರುತ್ತವೆ ಅಂತಾದರೆ ಶಾಲೆ ಬಿಡಿಸಿ ಮನೆಯಲ್ಲಿ ಕೂಡಿಸಿ, ಲಗೂನೆ ಒಂದು ಗಂಡುಪ್ರಾಣಿಯನ್ನು ನೋಡಿ, ಮದುವೆ ಮಾಡಿ, ಓಡಿಸಿಬಿಡುತ್ತಾರೆ. ತಪ್ಪು ಯಾರದೇ ಆದರೂ ತೊಂದರೆ ಅನುಭವಿಸುವವರು ಮಾತ್ರ ಅವರೇ. ಹೀಗೆ ಅವಳ ಚಿಂತೆ. ಈ ಸಿರ್ಸಿ ಮಾಣಿ ಹೋಗಿ ಏನೇ ವಿವರಣೆ ಕೊಟ್ಟರೂ ಆಕೆಗೆ ಅದರ ಬಗ್ಗೆ ಖಬರಿಲ್ಲ. ಅವಶ್ಯಕತೆಯೂ ಇಲ್ಲ. ಆದರೂ ಮಾಣಿ ತನ್ನ ಕರ್ತವ್ಯ ಮಾಡಿ ಬಂದಿದ್ದಾನೆ.

ಸಂಜೆಯ ಹೊತ್ತಿಗೆ ಮಾಮಲಾ ಎಲ್ಲಾ ಕ್ಲಿಯರ್ ಆಗಿದೆ. ಲವ್ ಚೀಟಿ ಬರೆದು, ಈ ಹೆಗಡೆಯ ಹೆಸರು ಹಾಕಿ, ಹುಡುಗಿಯ ನೋಟ್ ಪುಸ್ತಕದಲ್ಲಿ ತುರುಕಿದವನು ಬೇರೆಯವನು. ಅದೇ ಕ್ಲಾಸಿನ ಮತ್ತೊಬ್ಬ ಆಚಾರಿ. ಮಹಾ ಕಿಡಿಗೇಡಿ. ಅದಕ್ಕಾಗಿಯೇ ಅವನು ಫೇಮಸ್. ಕಿತಾಪತಿ ಮಾಡುವದು ಅವನ ಸ್ಪೆಷಾಲಿಟಿ. ಹಳ್ಳಿಯಿಂದ ಪಾಪದ ಹವ್ಯಕ ಮಾಣಿ ಬಂದಿದ್ದಾನೆ. ಏನೂ ತಿಳಿಯದವ. ಕಿತಾಪತಿ ಮಾಡಿ ಕಾಡಲು ಅಂತವರಿಗಿಂತ ಇನ್ನೂ ಒಳ್ಳೆಯ ಬಕರಾ ಎಲ್ಲಿ ಸಿಗಬೇಕು? ಹಾಗೆ ವಿಚಾರ ಮಾಡಿ ಕೆತ್ತೆಬಜೆ ಕಾರ್ಬಾರ್ ಮಾಡಿದ್ದಾನೆ. ಆ ಹುಡುಗಿಯ ಮೇಲೆ ಅವನಿಗೆ ಮನಸ್ಸಿತ್ತೋ ಏನೋ. ಯಾರಿಗೆ ಗೊತ್ತು. ಒಟ್ಟಿನಲ್ಲಿ ಒಂದು ಯಬಡ ಲವ್ ಚೀಟಿ ತಯಾರ್ ಮಾಡಿದ್ದಾನೆ. ಕೆಳಗೆ ಪಾಪದ ಹವ್ಯಕ ಮಾಣಿಯ ಹೆಸರು ಹಾಕಿದ್ದಾನೆ. ಯಾವಾಗಲೋ ಸಮಯ ನೋಡಿ ಹುಡುಗಿಯ ನೋಟ್ ಪುಸ್ತಕದಲ್ಲಿ ಸೇರಿಸಿದ್ದಾನೆ. ನಂತರ ಮಜಾ ತೆಗೆದುಕೊಳ್ಳುತ್ತಿದ್ದಾನೆ. ಆಗಿದ್ದು ಇಷ್ಟು.

ಸರಿ. ಮಾಣಿಯ ಅಕ್ಕ ಕೂಡ ಅದೇ ಶಾಲೆಯಲ್ಲಿ ಇದ್ದಳಲ್ಲ. ಮಾಣಿ ಎಂಟನೆಯ ಕ್ಲಾಸಾದರೆ ಮಾಣಿಯ ಅಕ್ಕ ಹತ್ತನೇ ಕ್ಲಾಸ್. ಅವಳಕ್ಕ ಉರ್ಫ್ ಎಲ್ಲರಿಗಿಂತ ಹಿರಿಯವಳು ಗೃಹಿಣಿ ಕಮ್ ಕಾಲೇಜ್ ಸ್ಟೂಡೆಂಟ್. ಎಲ್ಲಾ ಒಂದೇ ಮನೆಯಲ್ಲೇ ಇದ್ದವರು.

ಶಾಲೆಯಲ್ಲಿದ್ದ ಅಕ್ಕನಿಗೂ ಸುದ್ದಿ ಗೊತ್ತಾಗಿದೆ. ಶಾಲೆಯಲ್ಲಿಯೇ ತಮ್ಮನನ್ನು ವಿಚಾರಿಸಿಕೊಂಡಿದ್ದಾಳೆ. 'ನಾನು ಬರೆದಿಲ್ಲ. ಬೇರೆ ಯಾರೋ ಬರೆದು ಇಟ್ಟಿದ್ದಾರೆ. ಸುಖಾಸುಮ್ಮನೆ ನನಗೆ ಬೈದರು,' ಅಂತ ತಮ್ಮ ಗೊಳೋ ಅಂದಿದ್ದಾನೆ. ಮೇಲೆ ಹೇಳಿದಂತೆ ಸಂಜೆಯವರೆಗೆ ಎಲ್ಲ ವಿಷಯ ಎಲ್ಲರಿಗೂ ಗೊತ್ತಾಗಿದೆ. ಕಿಡಿಗೇಡಿ ಆಚಾರಿ foreground ಗೆ ಬಂದಿದ್ದಾನೆ. ಭಯಂಕರ ಗ್ರಹಚಾರ ಕಾದಿದೆ ಅಂತ ಅವನಿಗೆ ಗೊತ್ತಿಲ್ಲ.

ಶಾಲೆಯಲ್ಲಿ ಓದುತ್ತಿದ್ದ ಅಕ್ಕ, ತಮ್ಮ ಎಲ್ಲ ಕೂಡಿ ಸಂಜೆ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಮತ್ತೊಮ್ಮೆ ಚರ್ಚೆಯಾಗಿದೆ. ಎಲ್ಲ ವಿವರ ಗೊತ್ತಾಗಿದೆ. ಹೇಗೂ ಮಾಣಿಯ ಮೇಲೆ ಶಾಲೆ ಅಥವಾ ಶಿಕ್ಷಕರು ಯಾವದೇ ಕ್ರಮ ಕೈಗೊಂಡಿಲ್ಲ ಅಂತಾದ ಮೇಲೆ ಆ ವಿಷಯವನ್ನು ಅಷ್ಟಕ್ಕೇ ಬಿಟ್ಟರಾಯಿತು ಅಂತ ಹಿರಿಯಕ್ಕ ಮತ್ತು ಉಳಿದ ಹಿರಿಯರು ವಿಚಾರ ಮಾಡಿದ್ದಾರೆ. ಹೇಳಿ ಕೇಳಿ ಹೊರಗಿನವರು. ಸಿರ್ಸಿಯಿಂದ ಬಂದು ಇನ್ನೂ ಧಾರವಾಡದಲ್ಲಿ ಬಾಳು ಕಟ್ಟಿಕೊಳ್ಳುತ್ತಿರುವ ಪರದೇಶಿ ದರವೇಶಿಗಳು. ಕಿತಾಪತಿ ಮಾಡಿದವನು ಯಾರು ಅಂತ ಗೊತ್ತಾದರೂ ಯಾಕೆ ಸುಮ್ಮನೆ ಲಫಡಾ? ಸುಮ್ಮನಿದ್ದುಬಿಡೋಣ ಅನ್ನುವ ಮೃದು ಮನೋಭಾವ.

ಆದರೆ ಅವಳಿದ್ದಳಲ್ಲ? ಇನ್ನೊಬ್ಬಳು. ಮಾಣಿಯ ಅಕ್ಕ. ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದವಳು. ಅವಳೋ ಕಿತ್ತೂರ್ ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಇಂಡಿಯಾ ರಾಣಿ ಇಂದಿರಾ ಗಾಂಧಿ ಹೀಗೆ ಎಲ್ಲ ಗಟ್ಟಿಗಿತ್ತಿ ಮಹಿಳೆಯರ ಮಿಶ್ರಣದಂತಿದ್ದವಳು. dare devil ಮಾದರಿಯ ಹೆಣ್ಣುಮಗಳು. ಅಂತವಳು ಅದು ಹೇಗೆ ತಮ್ಮನ ಮೇಲೆ ಬಂದ ಇಂತಹ ಸುಳ್ಳು ಆರೋಪವನ್ನು ಸಹಿಸಿಯಾಳು? ಯಾರೋ ಏನೋ ಕಿತಬಿ ಮಾಡಿದರು ಅಂತ ಸುಮ್ಮನೆ ಕೂತು ಅನುಭವಿಸುವದು ಯಾವ ಜನ್ಮದ ಕರ್ಮ? ಹೀಗಂತ ಅಂದುಕೊಂಡವಳೇ ತಾನೇ ಮ್ಯಾಟರ್ ಕೈಗೆ ತೆಗೆದುಕೊಂಡಿದ್ದಾಳೆ. ಸೀದಾ ಮನೆ ಬಿಟ್ಟು ಹೊರಗೆ ಬಂದಿದ್ದಾಳೆ.

ಆಕೆ ಹೋಗಿ ನಿಂತಿದ್ದು ಆ ಕಿಡಿಗೇಡಿ ಆಚಾರಿಯ ಮನೆ ಮುಂದೆ. ಆಗಿನ ಕಾಲದ ಮಾಳಮಡ್ಡಿ ಬಡಾವಣೆ. ನಾಲ್ಕು ಹೆಜ್ಜೆ ಹಾಕಿದರೆ ಸಿಕ್ಕಿದೆ ಆಚಾರಿಯ ಮನೆ. ಇವಳು ಭುಸುಗುಡುತ್ತ ಹೋಗಿ ಬಾಗಿಲು ತಟ್ಟಿದ್ದಾಳೆ. ಯಾರೋ ಮಹಿಳೆ ಬಾಗಿಲು ತೆಗೆದಿದ್ದಾರೆ. ಏನು ಅಂತ ವಿಚಾರಿಸಿದ್ದಾರೆ. ಇವಳು ವಿಷಯ ಹೇಳಿದ್ದಾಳೆ. 'ನಿಮ್ಮ ಹುಡುಗನನ್ನು ಸ್ವಲ್ಪ ಹೊರಗೆ ಕಳಿಸಿ. ಮಾತಾಡುವದಿದೆ,' ಅಂದಿದ್ದಾಳೆ. ಬಾಗಿಲು ತೆಗೆದ ಮಹಿಳೆಗೆ ವಿಚಿತ್ರ ಅನ್ನಿಸಿದೆ. ೧೯೬೫ ರ ಸಮಯದಲ್ಲಿ ಕರ್ಮಠ ಬ್ರಾಹ್ಮಣರ ಅಗ್ರಹಾರದಂತಿದ್ದ ಧಾರವಾಡದ ಮಾಳಮಡ್ಡಿಯಲ್ಲಿ, ಪ್ರಾಯದ ಹುಡುಗಿಯೊಬ್ಬಳು, ಯಾರದ್ದೋ ಮನೆಗೆ ಹೋಗಿ ಆ ಮನೆಯ ಸುಮಾರು ಅದೇ ವಯಸ್ಸಿನ ಹುಡುಗನನ್ನು ಹೊರಗೆ ಕಳಿಸಿ, ಮಾತಾಡುವದಿದೆ  ಅನ್ನುತ್ತಾಳೆ ಅಂದರೆ ಅದು ಮಹಾ ದೊಡ್ಡ ವಿಚಿತ್ರ.

ಕಿಡಿಗೇಡಿ ಆಚಾರಿ ಒಳಗೆ ಸಂಧ್ಯಾವಂದನೆ ಮಾಡುತ್ತ ಮೂಗು ಹಿಡಿದು ಕುಳಿತಿದ್ದ. 'ನಿನ್ನ ಹುಡುಕಿಕೊಂಡು ಯಾರೋ ಒಬ್ಬಾಕಿ ಬಂದಾಳ ನೋಡು,' ಅಂತ ಮನೆ ಮಂದಿ ಹೇಳಿದ್ದಾರೆ. ಥಂಡಾ ಹೊಡೆಯುವ ಬಾರಿ ಈಗ ಅವನದು. ಗಡಿಬಿಡಿಯಲ್ಲಿ ಸಂಧ್ಯಾವಂದನೆ ಮುಗಿಸಿ, ನಾಮಗಳನ್ನು ಎತ್ತರ ಪತ್ತರ ಬಳಿದುಕೊಂಡು ಹೊರಗೆ ಬಂದರೆ ಈ ಮಹಾಕಾಳಿಯ ದರ್ಶನವಾಗಿಬಿಟ್ಟಿದೆ.

ಅವಳ ಆ ಸಿಟ್ಟು, ಆ ಆಕ್ರೋಶ, ಆ ದುಃಖ ಅದೆಲ್ಲಿ ತುಂಬಿಕೊಂಡಿತ್ತೋ ಏನೋ. ಲವ್ ಚೀಟಿ ಅವನು ಬರೆದು ಇವಳ ತಮ್ಮನನ್ನು ಸಿಕ್ಕಿಹಾಕಿಸಿದ ಕಿರಾತಕ ಆಚಾರಿಯನ್ನು ನೋಡಿದ್ದೇ ಜ್ವಾಲಾಮುಖಿ ಸ್ಪೋಟವಾಗಿಬಿಟ್ಟಿದೆ. ಮನದಲ್ಲೇ, 'ನಿನ್ನಜ್ಜಿ, ಯಾಂದಳ್ಳಿ!' ಅಂತ ಹಲ್ಲು ಮಸೆದವಳೇ ಆಚಾರಿಯ ಸಹಸ್ರನಾಮಾರ್ಚನೆ ಶುರುಮಾಡಿಬಿಟ್ಟಿದ್ದಾಳೆ. ಆಗ ಮಾತ್ರ ಸಂಧ್ಯಾವಂದನೆ ಮುಗಿಸಿ ನಾಮಧಾರಿಯಾಗಿ ಬಂದ ಆಚಾರಿಗೆ ಸಹಸ್ರನಾಮಾರ್ಚನೆಯ ಬೋನಸ್. ಅದೂ choicest expletives! ಕಿವಿಯಲ್ಲಿ ಕಾದ ಸೀಸ ಹೊಯ್ದಂತೆ. ಆ ರೀತಿಯಲ್ಲಿ ಬರೋಬ್ಬರಿ ಹಚ್ಚಿ ಕೈತೆಗೆದುಕೊಂಡಿದ್ದಾಳೆ. ಆಚಾರಿ ಮತ್ತು ಅವನ ಮನೆತನದ ಮಾನ ಫುಲ್ ಬೀದಿಪಾಲಾಗಿದೆ. ಶಿವಾಯ ನಮಃ!

ಮಹಾಕಾಳಿಯನ್ನು ಎದುರಿಸಲು ಆಗದ ಆಚಾರಿ ಫುಲ್ ಒಳಗೆ ಸೇರಿಕೊಂಡಿದ್ದಾನೆ. ಅವನು ಕಣ್ಮರೆಯಾದ ಅಂತ ಇವಳ ಸಿಟ್ಟು ಜಾಸ್ತಿಯಾಗಿ ಒದರುವ ವಾಲ್ಯೂಮ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಅವನ ಮನೆಯೊಳಗೇ ನುಗ್ಗುತ್ತಿದ್ದಳೋ ಏನೋ. ಬೇಡ ಅಂತ ಬಿಟ್ಟಿದ್ದಾಳೆ. ಹೊರಗೆ ನಿಂತೇ ಆಚಾರಿಯ ವಂಶ ಜಾಲಾಡುತ್ತಿದ್ದಾಳೆ. ಒಳಗೆ ಆಚಾರಿ ಪತರುಗುಟ್ಟುತ್ತ ಕೂತಿದ್ದಾನೆ. ಮನೆಯವರು ಯಾರೋ ಬಂದು ಹೊರಗೆ ನಿಂತು ಬೈಯ್ಯುತ್ತಿದ್ದ ಇವಳಿಗೆ ಏನೋ ಹೇಳಿದರೆ ಅವರಿಗೂ ದಬಾಯಸಿ ಕಳಿಸಿದ್ದಾಳೆ. ಸಾತ್ವಿಕ ಸಿಟ್ಟಿನ ಖದರ್ ಅಂದರೆ ಅದು. ತಪ್ಪೇ ಮಾಡಿಲ್ಲ ಅಂದ ಮೇಲೆ ಹೆದರಿಕೆ ಏಕೆ?

ಫುಲ್ ದೊಡ್ಡ ಸೀನ್ ಆಗಿಬಿಟ್ಟಿದೆ. ಹೊರಗೆ ಬಂದರೆ ಚಪ್ಪಲಿಯಲ್ಲಿಯೇ ಏಟು ಬೀಳುತ್ತವೆ ಅಂತ ಖಾತ್ರಿಯಾದ ಆಚಾರಿ ಒಳಗೇ ಕೂತಿದ್ದಾನೆ. ಅಕ್ಕಪಕ್ಕದವರು ಸಹ ಸೇರಿದ್ದಾರೆ. ವಿಷಯ ತಿಳಿದು ಅವರೂ ಒಂದಿಷ್ಟು ಒಗ್ಗರಣೆ ಹಾಕಿದ್ದಾರೆ. ಮಹಾಕಾಳಿಗೆ ಮತ್ತೂ ಹುರುಪು ಬಂದಿದೆ. ಒಂದು notch ಏರಿಸಿದ್ದಾಳೆ. Upped the ante.

'ಒಳಗ ಮನಿಯಾಗ ಏನು ಹೊಕ್ಕೊಂಡು ಕೂತೀಲೇ? ಹೆಣ್ಯಾ ಹೆದರುಪುಕ್ಕ! ದಮ್ ಇದ್ದರ ಹೊರಗ ಬಾರಲೇ!' ಅಂತ ಇವಳು ಚಾಲೆಂಜ್ ಒಗೆದರೂ ಆಚಾರಿ ಹೊರಗೆ ಬರಲೊಲ್ಲ.

'ಏ, ಹೋಗಿ, ಏನಂತ ಕೇಳಿ, ಆ ಹುಡುಗಿ ಕಳಿಸಿಬಾರೋ ಪುಣ್ಯಾತ್ಮಾ. ಮನಿ ಮುಂದ ನಿಂತು ಅಕಿ ಆಪರಿ ಒದರ್ಲಿಕತ್ತಾಳ. ಮನಿ ಮರ್ಯಾದಿ ಹೋಗ್ಲಿಕತ್ತದ. ಹೋಗಿ ಏನು ಅಂತ ಕೇಳಿ ಮುಗಿಸಿಬಾರೋ!' ಅಂತ ಮನೆ ಮಂದಿ ಕೂಡ ಅವನಿಗೆ ಹೇಳಿದ್ದಾರೆ. ಮರ್ಯಾದೆ ಕಳೆಯುವ ಕೆಲಸ ಮಾಡಿದವನು ಅವರ ಮನೆ ಮಗ. ಅವನು ಮನೆಯಲ್ಲೇ ಕೂತಿದ್ದಾನೆ. ಮಾಡಿದ ತಪ್ಪನ್ನು ತೋರಿಸಿ, ತಪ್ಪನ್ನು ಇನ್ನೊಬ್ಬರ ಮೇಲೆ ಏಕೆ ಹಾಕಿದೆ ಅಂತ ಘಟ್ಟಿಯಾಗಿ ಕೇಳುತ್ತಿರುವರು ಮರ್ಯಾದೆ ಕಳೆಯುತ್ತಿದ್ದಾರೆ! ಅಂತ ಅವರು ತಿಳಿದಿದ್ದಾರೆ. ಎಂತಹ ವಿಪರ್ಯಾಸ!

ಸುಮಾರು ಹೊತ್ತು ಈ ಮಹಾಕಾಳಿ ಮೇಡಂ ಆವಾಜ್ ಹಾಕಿದರೂ ಆಚಾರಿ ಹೊರಗೆ ಬಿದ್ದಿಲ್ಲ. ಇವಳೂ ಎಷ್ಟಂತ ಮನೆ ಮುಂದೆ ನಿಂತು ಕೂಗಿಯಾಳು? ಕೂಗಿ ಕೂಗಿ ಸಾಕಾಗಿ ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದಾಳೆ. ಆಗ ಲಫಡಾ ಆಗಿದೆ.

'ಆಪರಿ ಕೂಗುಮಾರಿಯಂತೆ ಕೂಗುತ್ತಿದ್ದವಳು ಈಗ ಕೂಗುತ್ತಿಲ್ಲ. ಅಂದ ಮೇಲೆ ಹೊರಟುಹೋಗಿರಬೇಕು. ಈಗ ಎಲ್ಲಾ ಸೇಫ್,' ಅಂದುಕೊಂಡಿದ್ದಾನೆ ಆಚಾರಿ. ಆಗ ಇನ್ನೂ ಮುಸ್ಸಂಜೆ ಹೊತ್ತು. ಅವನಾದರೂ ಎಷ್ಟಂತ ಮನೆಯಲ್ಲೇ ಕೂತಾನು? ಅವನಿಗೂ ಒಂದಿಷ್ಟು ಹೊತ್ತು ಹೊರಗೆ ಹೋಗಿ, ಸುತ್ತಾಡಿ ಬರಬೇಕು ಅನ್ನಿಸುವದಿಲ್ಲವೇ? ಹಾಗೇ ಅನ್ನಿಸಿದೆ. ಕಳ್ಳಬೆಕ್ಕಿನಂತೆ ಹೊರಗೆ ಕಾಲಿಟ್ಟಿದ್ದಾನೆ.

ಮಹಾಕಾಳಿ ಮನೆ ಕಡೆ ಹೊರಟಿದ್ದಳು. ಸುಮ್ಮನೆ ತಿರುಗಿ ನೋಡಿದ್ದಾಳೆ. ಕಳ್ಳಬೆಕ್ಕಿನಂತೆ ಎಸ್ಕೇಪ್ ಆಗುತ್ತಿರುವ ಆಚಾರಿ ಕಂಡಿದ್ದಾನೆ. ಒಂದು ತಾಸು ಮನೆ ಮುಂದೆ ನಿಂತು ಆವಾಜ್ ಹಾಕಿ, ಸಹಸ್ರನಾಮಾರ್ಚನೆ ಮಾಡಿದರೂ ಹೊರಗೆ ಬರದಿದ್ದವ ಈಗ ಬಂದಿದ್ದಾನೆ. ನೋಡಿ ರೋಷ ಉಕ್ಕಿ ಬಂದಿದೆ. ಉಟ್ಟಿದ್ದ ಪ್ಯಾರಾಚೂಟಿನಂತಹ ಪರಕಾರವನ್ನು ಎತ್ತಿ ಸೊಂಟಕ್ಕೆ ಸಿಗಿಸಿಕೊಂಡವಳೇ, 'ಏ, ಆಚಾರಿ! ನಿಂದ್ರಲೇ! ಏ!' ಅಂತ ರಣಕೇಕೆ ಹಾಕಿದ್ದಾಳೆ. ರಣಭೇರಿ ಬಾರಿಸಿಬಿಟ್ಟಿದ್ದಾಳೆ. ಆಚಾರಿ ಫುಲ್ ಗಡಗಡ.

'ಏ, ಆಚಾರಿ! ಭೋಕುಡ್ ಛಾಪ್! ನಿಂದ್ರಲೇ ಹೆಣ್ಯಾ!' ಅಂತ ಕಿತ್ತೂರ್ ಚೆನ್ನಮ್ಮನಂತೆ ಕೂಗಿದವಳೇ ಅಟ್ಟಿಸಿಕೊಂಡು ಬಂದಿದ್ದಾಳೆ.

ಈಗ ಮಾತ್ರ ಆಚಾರಿ ಫುಲ್ ಮಟಾಶ್. ಮನೆಯ ಕಾಂಪೌಂಡಿನಿಂದ ಹೊರಗೆ ಬಂದುಬಿಟ್ಟಿದ್ದಾನೆ. ಒಳಗೆ ಹೋಗುವ ಹಾಗಿಲ್ಲ. ಉಳಿದಿದ್ದು ಒಂದೇ ಮಾರ್ಗ. ಓಡಬೇಕು. ಮಾಳಮಡ್ಡಿಯ ಗಲ್ಲಿ ಬೀದಿಗಳಲ್ಲಿ ಬಿದ್ದಾಕಿ ಓಡಬೇಕು. ಇಲ್ಲವಾದರೆ ಚಪ್ಪಲಿಯಲ್ಲಿ ಅದೂ ಸಿರ್ಸಿಯ ಸ್ಪೆಷಾಲಿಟಿ ಆದ ಮಳೆಗಾಲದ ರಬ್ಬರ್ ಚಪ್ಪಲಿಯಲ್ಲಿ ಬಾರಿಸುತ್ತಾಳೆ. ಡೌಟೇ ಬೇಡ. ಅವಳ ಪ್ರೀತಿಯ ತಮ್ಮನ ಹೆಸರು ಹಾಕಿ ಲವ್ ಚೀಟಿ ಇಟ್ಟಿದ್ದು ಆಕೆಯನ್ನು ಸಿಕ್ಕಾಪಟ್ಟೆ ಕೆರಳಿಸಿಬಿಟ್ಟಿದೆ ಅಂತ ಅವನಿಗೆ ಗೊತ್ತಾಗಿದೆ. ಓಡಲು ಆರಂಭಿಸಿದ್ದಾನೆ.

ಅಂತಹದೊಂದು ಸೀನ್ ಮಾಳಮಡ್ಡಿ ಎಂದೂ ನೋಡಿರಲಿಕ್ಕಿಲ್ಲ ಬಿಡಿ. ಸತ್ತೆನೋ ಬಿದ್ದೆನೋ ಎಂಬಂತೆ ಓಡುತ್ತಿರುವ ಒಬ್ಬ ಹುಡುಗ. ಹಿಂದೆ ಅವನನ್ನು ಅಟ್ಟಿಸಿಕೊಂಡು ಬರುತ್ತಿರುವ ಒಬ್ಬಳು ಹುಡುಗಿ. What a scene it must have been!

ಅವನ ನಸೀಬ್ ಒಳ್ಳೆಯದಿತ್ತು ಅಂತ ಕಾಣುತ್ತದೆ. ಅದು ಹೇಗೋ ಬಚಾವ್ ಆಗಿದ್ದಾನೆ. ಅಂಗಿ ಚೊಣ್ಣ ತೊಟ್ಟಿದ್ದು ಒಳ್ಳೆಯದೇ ಆಗಿದೆ. ಓಡಲು ಅನುಕೂಲ. ಹಾಗಾಗಿ ಪರಕಾರದ ಪಾರ್ಟಿ ಹುಡುಗಿಯಿಂದ ಬಚಾವ್. ಯಾವದೋ ಪತಲಿ ಗಲಿಯಿಂದ ಓಡಿ ಎಸ್ಕೇಪ್ ಆಗಿದ್ದಾನೆ. ಇವಳು ಚಪ್ಪಲಿ ಕೈಯಲ್ಲಿ ಹಿಡಿದು ಅಲ್ಲಿ ಇಲ್ಲಿ ಹುಡುಕಿದರೆ ಸಿಕ್ಕಿಲ್ಲ. ಮಿಕ ತಪ್ಪಿಸಿಕೊಂಡಿತು ಅಂತ ದುಮುದುಮುಗುಟ್ಟುತ್ತ ಹುಡುಗಿ ವಾಪಸ್ ಬಂದಿದ್ದಾಳೆ. ಕತ್ತಲು ಬೇರೆ ಆಗುತ್ತಿತ್ತಲ್ಲ. ಅವಳಿಗೂ ಮನೆ ಸೇರಿಕೊಳ್ಳಬೇಕು.

ಮುಂದೆ ಸ್ವಲ್ಪ ದಿವಸ ಆಚಾರಿ ಫುಲ್ ಸಿಂಕಾಗಿದ್ದಾನೆ. ಎಲ್ಲಿ ಹೋಗಿದ್ದನೋ ಗೊತ್ತಿಲ್ಲ. ಶಾಲೆಯಲ್ಲಿಯೂ ಕಂಡಿಲ್ಲ. ಮಾಳಮಡ್ಡಿಯಲ್ಲೂ ಕಂಡಿಲ್ಲ.

ಹವಾ ಎಲ್ಲಾ ಫುಲ್ ತಣ್ಣಗಾದ ಮೇಲೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಆದರೆ ಚಪ್ಪಲಿ ಹಿಡಿದು ಅಟ್ಟಿಸಿಕೊಂಡು ಬಂದಿದ್ದ ಹುಡುಗಿ ಕಂಡರೆ ಮಾತ್ರ ಫುಲ್ ಎಸ್ಕೇಪ್. ಶಾಲೆಯಲ್ಲಿ ಫುಲ್ ಸೇಫ್. ಹೊರಗೆ ಬಿದ್ದರೆ ಎಲ್ಲಿ ಚಪ್ಪಲಿ ಸೇವೆಯಾಗುತ್ತದೋ ಅಂತ ಭಯ.

ಅಷ್ಟರಲ್ಲಿ ಹತ್ತನೇ ತರಗತಿಯ ಪರೀಕ್ಷೆ ಕೂಡ ಮುಗಿಯಿತು. ಹುಡುಗಿ ಶಾಲೆ ಬಿಟ್ಟು ಕಾಲೇಜ್ ಸೇರಿಕೊಂಡಳು. ಆಚಾರಿ ಹುಸ್ ಅಂತ ನಿಟ್ಟುಸಿರು ಬಿಟ್ಟ. ಆದರೂ ಮಾಳಮಡ್ಡಿಯಲ್ಲಿ ಎಲ್ಲೇ ಕಂಡರೂ ಫುಲ್ ಸಿಂಕಾಗಿಬಿಡುತ್ತಿದ್ದ. ಕಂಡಲ್ಲಿ ಸಿಂಕಾಗುತ್ತಿದ್ದ ಈ ಅಚಾರಿಯೆಂದರೆ ಹುಡುಗಿ ಮತ್ತು ಆಕೆಯ ಗೆಳತಿಯರಿಗೆ ಗೇಲಿಯ ಸರಕು.

ಹಾಂ! ಹೇಳೋದೇ ಮರೆತುಬಿಟ್ಟೆ. ಧಾರವಾಡದ ಮಾಳಮಡ್ಡಿ ತುಂಬಾ ಆ ಆಚಾರಿಯನ್ನು ಚೇಸ್ ಮಾಡಿದ ಮಹಾಕಾಳಿ ನಮ್ಮ ಚಿಕ್ಕಮ್ಮ. ಅಮ್ಮನ ತಂಗಿ. ಲವ್ ಚೀಟಿ ಬರೆದ ಅಪವಾದ ಹೊತ್ತವನು ನಮ್ಮ ಮಾಮಾ. ಅಮ್ಮನ ಕಿರೀ ತಮ್ಮ.

ವಿಪರ್ಯಾಸ ನೋಡಿ. ಕಿತಾಪತಿ ಆಚಾರಿ ನಂತರ ಅದೇ ಶಾಲೆಯಲ್ಲಿಯೇ ಮಾಸ್ತರಿಕೆ ಮಾಡಿಕೊಂಡಿದ್ದರು. ಎಲ್ಲಿಯೂ ಸಲ್ಲದವರು ಅಲ್ಲಿ ಸಲ್ಲಿಬಿಟ್ಟರು. ನಮಗೆ ಅವರು ಪಾಠ ಮಾಡಲಿಲ್ಲ. ಶಾಲೆಯ ಬೇರೆ ಬ್ರಾಂಚಿನಲ್ಲಿ ಇದ್ದರು. ಅವರನ್ನು ನೋಡಿದಾಗ ಸಿಕ್ಕಾಪಟ್ಟೆ ನಗು ಬರುತ್ತಿತ್ತು. ನಮ್ಮ ಚಿಕ್ಕಮ್ಮನಿಗೆ ಹೆದರಿ ಮಾಳಮಡ್ಡಿ ತುಂಬಾ ಓಡಿದ್ದನ್ನು ಊಹಿಸಿಕೊಂಡರೂ ಸಿಕ್ಕಾಪಟ್ಟೆ ನಗು. ಅವರೂ ಈಗ ಒಂದೆರೆಡು ವರ್ಷದ ಹಿಂದೆ ತೀರಿಹೋದರು. ನಮ್ಮ ಮಾಮಾ, ಚಿಕ್ಕಮ್ಮ ಎಲ್ಲ ಆರಾಮ್ ಇದ್ದಾರೆ. ಹಳೆಯ ಸುದ್ದಿಯ ಹರಟೆ ಶುರುವಾದಾಗ ಈ ಸುದ್ದಿ ಬಂದೇಬರುತ್ತದೆ. ಎಲ್ಲರೂ ಕೂಡಿ ಚಿಕ್ಕಮ್ಮನ ಕಾಲೆಳೆಯುತ್ತೇವೆ. ಮಜಾಕ್ ಮಾಡುತ್ತೇವೆ. ಅವಳಿಗೆ ಇವತ್ತಿಗೂ ಕೂಡ ಒಂದೇ ಬೇಜಾರು. ಆವತ್ತು ಮಾಳಮಡ್ಡಿ ತುಂಬಾ ಅಟ್ಟಾಡಿಸಿಕೊಂಡು ಓಡಿದರೂ ಆಚಾರಿ ಕೈಗೆ ಸಿಗಲಿಲ್ಲ. ಸಿಕ್ಕಿದವ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದ. 'ಸಿಕ್ಕಿದ್ದರೆ ಚಪ್ಪಲಿಯಲ್ಲಿ ನಿಜವಾಗಿಯೂ ನಾಲ್ಕು ಹಾಕುತ್ತಿದ್ದೆ. ಬಿಡ್ತಿರಲಿಲ್ಲ,' ಅನ್ನುತ್ತಾಳೆ ಚಿಕ್ಕಮ್ಮ. 'ಇರ್ಲಿ ಬಿಡು ಮಾರಾಯ್ತಿ. ಈಗ ಆ ಆಚಾರರೇ ಮೇಲೆ ಸ್ವರ್ಗಕ್ಕೆ ಹೋಗಿಬಿಟ್ಟಿದ್ದಾರೆ,' ಅಂದರೆ, 'ಅದೆಂಗ ಸತ್ತಾ ಅಂವಾ? ಅದೂ ನನ್ನ ಕಡೆ ಹೊಡೆತ ತಿನ್ನದೇ ಅದೆಂಗ ಸತ್ತಾ?? ಅವಂಗ ಮುಕ್ತಿ ಸಿಗೋದಿಲ್ಲ ತಗೋ' ಅಂದು ಪೆಕಪೆಕಾ ನಗುತ್ತಾಳೆ. ಕೆಲವರು ಹಾಗೆಯೇ. ಅದಕ್ಕೇ ಅವರಿಗೆ women of substance ಅನ್ನುವದು. ಅಲ್ಲವೇ?

Thursday, May 26, 2016

ನಂದ್ಯಾ ಮತ್ತು ಅವರಪ್ಪನನ್ನು ಕೂಡಿಯೇ ರ‍್ಯಾಗಿಂಗ್ ಮಾಡಿದರು!

'ನಂದ್ಯಾ ಓಡಿ ಬಂದಲೇ!'

ಅದೇ ದೊಡ್ಡ ಸುದ್ದಿ. ಆಗ ಮಾತ್ರ ಪಿಯುಸಿ ಮುಗಿಸಿ, ಅದು ಯಾವದೋ ಉತ್ತರ ಭಾರತದ ಪ್ರಖ್ಯಾತ ರೀಜನಲ್ ಇಂಜಿನಿಯರಿಂಗ್ ಕಾಲೇಜ್ (REC) ಸೇರಿದ್ದ ನಂದ್ಯಾ ಓಡಿಬಂದನೇ? ಯಾಕೆ?

'ಅಲ್ಲೆ ಅವಂಗ ಅವರ ಅಪ್ಪಗ ಕೂಡೇ ರ‍್ಯಾಗಿಂಗ್ ಮಾಡಿಬಿಟ್ಟರಂತ. ಹಾಕ್ಕೊಂಡು ರ‍್ಯಾಗಿಂಗ್ ಮಾಡಿಬಿಟ್ಟಾರ. ಮನಗಂಡ ರ‍್ಯಾಗಿಂಗ್ ಮಾಡಿಸಿಕೊಂಡು ಅಪ್ಪಾ ಮಗಾ ಇಬ್ಬರೂ ಕುಂಡಿಗೆ ಕಾಲು ಹಚ್ಚಿ ಓಡಿಬಂದಾರ. ಹೋಗ್ಗೋ!' ಅಂತ ಕೇಕೆ ಹಾಕಿ ನಕ್ಕವರು ಹಲವರು. ಇನ್ನೊಬ್ಬರಿಗೆ ಈ ರೀತಿ ತೊಂದರೆ ಬಂದಾಗ ಅದೇನು ವಿಕೃತ ಖುಷಿಯೋ ಈ ಬೇವರ್ಸಿಗಳಿಗೆ.

ಪಾಪ ನಂದ್ಯಾ. ಕಷ್ಟಪಟ್ಟು ಓದಿದ್ದ. ಕಾಡಿತ್ತು REC ಮಾಯೆ. ನಮ್ಮ ಕಾಲದಲ್ಲಿ REC ಗೆ ಹೋಗುವ ಶೌಕಿ ಬಹಳ ಮಂದಿ ವಿದ್ಯಾರ್ಥಿಗಳಿಗೆ ಇರುತ್ತಿತ್ತು ಬಿಡಿ. ಅವು ಒಳ್ಳೆ ಸರ್ಕಾರಿ ಕಾಲೇಜುಗಳು. ಬಹಳ ಕಮ್ಮಿ ಫೀಸ್. ಒಳ್ಳೆ ಗುಣಮಟ್ಟದ ಶಿಕ್ಷಣ. ನೌಕರಿ ಗ್ಯಾರಂಟಿ. ಮತ್ತೆ ಆಗ ಕರ್ನಾಟಕದಲ್ಲಿ ಇದ್ದವು ಒಂದೋ ಎರಡೋ ಸರ್ಕಾರಿ ಕಾಲೇಜುಗಳು. ಒಂದು ಐದಾರು aided ಕಾಲೇಜುಗಳು. ಅವು donation ಕಾಲೇಜುಗಳು ಅಂತಲೇ ಹೆಸರುವಾಸಿ. ಹೀಗಾಗಿ ಒಳ್ಳೆ ಗುಣಮಟ್ಟದ ಶಿಕ್ಷಣ ಅತಿ ಕಮ್ಮಿ ಖರ್ಚಿನಲ್ಲಿ ಬೇಕು ಅಂತಾದರೆ REC ಸೇರಲೇಬೇಕು. ಕರ್ನಾಟಕದ REC ಆದರೂ ಸರಿ ಅಥವಾ ಬೇರೆ ರಾಜ್ಯದ REC ಆದರೂ ಸರಿ. ಒಟ್ಟಿನಲ್ಲಿ REC ಸೇರಬೇಕು.

ಹೀಗೇ ವಿಚಾರ ಮಾಡಿ ದೂರದ REC ಗೆ ಹೋದ ನಂದ್ಯಾ ಒಂದೇ ವಾರದಲ್ಲಿ ಹಾಸಿಗೆ ಹೊದಿಕೆಯೊಂದಿಗೆ ವಾಪಸ್ ಬಂದವ ಸುಮಡಿಯಲ್ಲಿ ಲೋಕಲ್ ಕಾಲೇಜಿಗೆ ಅಡ್ಮಿಶನ್ ಮಾಡಿಸಿದ್ದ. ಯಾಕೆ ಅಂತ ನೋಡಿದರೆ ಲಫಡಾ ಆಗಿಬಿಟ್ಟಿದೆ. ದೂರದ ಉತ್ತರ ಭಾರತದ REC ಒಂದರಲ್ಲಿ ಅಡ್ಮಿಶನ್ ಮಾಡಿಸಿದ್ದಾರೆ. ಅಡ್ಮಿಶನ್ ಮಾಡಿಸಲು ಜೊತೆಗೆ ಅಪ್ಪನೂ ಹೋಗಿದ್ದಾರೆ. ಹಾಸ್ಟೆಲ್ಲಿನಲ್ಲಿ ರೂಂ ಕೊಟ್ಟಿದ್ದಾರೆ. ರಾತ್ರಿ 'ರೇಡಿಂಗ್' (raiding) ಆಗಿಬಿಟ್ಟಿದೆ. ರೇಡಿಂಗ್ ಅಂದರೆ ಸೀನಿಯರ್ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಲು ನುಗ್ಗುವ ದಾಳಿಯಂತೆ. ನಂದ್ಯಾನ ರೂಮಿಗೂ ನುಗ್ಗಿದ್ದಾರೆ. ರ‍್ಯಾಗಿಂಗ್ ಮಾಡಲು ನಂದ್ಯಾನನ್ನು ಎತ್ತಾಕಿಕೊಂಡು ಹೋಗಲು ರೆಡಿ ಆಗಿದ್ದಾರೆ. ಎಚ್ಚೆತ್ತ ನಂದ್ಯಾನ ಅಪ್ಪ ನಡುವೆ ಬಂದಿದ್ದಾನೆ. ಅದು ಯಾವ ತರಹದ ಸೀನಿಯರ್ ಹುಡುಗರೋ. ಯಾವ ಸ್ಥಿತಿಯಲ್ಲಿದ್ದರೋ. ಅದು ಏನು ಗಾಂಜಾ ಪೀಂಜಾ ಸೇದಿ, ಎಣ್ಣೆ ಗಿಣ್ಣೆ ಹೊಡೆದು ಬಂದಿದ್ದರೋ ಏನೋ ಗೊತ್ತಿಲ್ಲ. ತಮಗೆ ಅಡ್ಡ ಬಂದ ಅಂತ ಅಪ್ಪ  ಮತ್ತು ಮಗ ಇಬ್ಬರನ್ನೂ ಸರಿಯಾಗಿ ರುಬ್ಬಿದ್ದಾರೆ. ಅಲ್ಲಿಗೆ ಅಪ್ಪನ ರ‍್ಯಾಗಿಂಗ್ ಕೂಡ  ಆಗಿಹೋಗಿದೆ. ರಾತ್ರಿ ಪೂರ್ತಿ ಅಪ್ಪ ಮಗ ಇಬ್ಬರೂ ಜಾಯಿಂಟ್ ರ‍್ಯಾಗಿಂಗ್ ಮಾಡಿಸಿಕೊಂಡಿದ್ದಾರೆ. ಮರುದಿನ ಆ REC ಗೆ ದೊಡ್ಡ ನಮಸ್ಕಾರ ಹಾಕಿ, ಹಾಸಿಗೆ ಹೊದಿಕೆ ಸಮೇತ ಹೊರಟಿದ್ದಾರೆ. ರೈಲಿನಲ್ಲಿ reservation ಕೂಡ ಇಲ್ಲದೆ ಮೂರು ದಿನ ಪ್ರಯಾಣ ಮಾಡಿ ವಾಪಸ್ ಬಂದಿದ್ದಾರೆ. ಅಲ್ಲಿಗೆ ನಂದ್ಯಾನ REC ಸಾಹಸ ಮುಗಿದಿದೆ. ಅಪ್ಪ ಹುಸ್ ಅಂದಿದ್ದಾರೆ. 

ಸುಮಾರು ಮೂವತ್ತು ವರ್ಷಗಳ ಹಿಂದೆ ಈ ಸುದ್ದಿ ಕೇಳಿ, 'ರ‍್ಯಾಗಿಂಗ್ ಅಂದರೆ ಹೀಗೂ ಆಗುತ್ತದೆಯೇ!? ಹ್ಯಾಂ??' ಅಂತ ಅಚ್ಚರಿಪಟ್ಟಿದ್ದೆ. ಪೂರ್ತಿ ನಂಬಿಕೆ ಬಂದಿರಲಿಲ್ಲ. ಅವನು ನಮ್ಮ ಬ್ಯಾಚಿನ ಒಬ್ಬ ಕ್ಲಾಸ್ಮೇಟ್. ಅವನಿಗೆ ನಾವು ಇಟ್ಟಿದ್ದ nickname ಅಂದರೆ Side out Simmons. ಬಿಗಿಯಂದರೆ ಅಷ್ಟು ಬಿಗಿಯಾಗಿರುತ್ತಿದ್ದ ಟೈಟ್ ಪ್ಯಾಂಟ್ ಹಾಕುತ್ತಿದ್ದ. ಯಾವವು ಸೈಡಿಗೆ ಬಂದು ಹೇರಿ ಕೂಡಬಾರದೋ ಅವೇ 'ಎರಡು' ಅಸಹ್ಯವಾಗಿ ಒಂದೇ ಕಡೆ ಬಂದು ಕೂಡುತ್ತಿದ್ದವು. ಅದಕ್ಕೇ ಅವನಿಗೆ Side out Simmons ಅಂತ nickname. ಒಂದು ಟೈಪಿನ ಕಿರಿಕ್ ಗಿರಾಕಿ. ಅವನಿಗೂ REC ಹುಚ್ಚು. ಅವನ ಅಣ್ಣ ಬೇರೆ ಯಾವದೋ REC ಯಲ್ಲೇ ಓದಿ, ವಿದೇಶದಲ್ಲಿ ಉನ್ನತ ವ್ಯಾಸಂಗವನ್ನೋ ನೌಕರಿಯನ್ನೋ ಮಾಡುತ್ತಿದ್ದ. ಹಾಗಾಗಿ ಇವನಿಗೆ ಸ್ವಲ್ಪ ಜಾಸ್ತಿ ಹುಚ್ಚು. ಅಷ್ಟೇ ಅಣ್ಣನಿಗೆ ಸಿಕ್ಕ REC ಯಲ್ಲಿ ಸೀಟ್ ಸಿಗಲು ಬೇಕಾದಷ್ಟು ಮಾರ್ಕ್ಸ್ ಸಿಕ್ಕಿರಲಿಲ್ಲ. ಇವನೂ ಯಾವದೋ ಹೆಸರು ಕೇಳದ ಉತ್ತರ ಭಾರತದ REC ಸೇರಲು ಸಿದ್ಧನಾದ. ಒಟ್ಟಿನಲ್ಲಿ REC ಮುದ್ರೆ ಬಿದ್ದರೆ ಸಾಕು. 

ಸ್ವಲ್ಪೇ ದಿವಸಗಳಲ್ಲಿ ಸುದ್ದಿ ಬಂತು. 'ಲೇ, Side out Simmons ಓಡಿ ಬಂದಲೇ!' ಯಾಕೆ ಅಂತ ನೋಡಿದರೆ ಮತ್ತೆ ಅದೇ ರಗಳೆ. ದೂರದ ಊರಿನಲ್ಲಿ ಅಪ್ಪ ಮಗ ಇಬ್ಬರನ್ನೂ ಕೂಡಿಯೇ ಸಮಾ ರ‍್ಯಾಗಿಂಗ್ ಮಾಡಿಬಿಟ್ಟಿದ್ದಾರೆ. ಇವರು ಸ್ವಲ್ಪ ಗಟ್ಟಿಗರು. ಒಂದೇ ಪಟ್ಟಿಗೆ ಹಾಸಿಗೆ ಬಿಸ್ತರ್ ಎತ್ತಿಕೊಂಡು ಓಡಿಬಂದಿಲ್ಲ. ರ‍್ಯಾಗಿಂಗ್ ಮಾಡಿದಾಕ್ಷಣ ಓಡಲಿಲ್ಲ ಅಂತ ಸಿಟ್ಟಿಗೆದ್ದ ಸೀನಿಯರ್ ಹುಡುಗರು ದಬಾಯಿಸಿ ರ‍್ಯಾಗಿಂಗ್  ಮಾಡಿಬಿಟ್ಟಿದ್ದಾರೆ. ರಪ್ರಪಾ ಅಂತ ಆಳಿಗೊಂದರಂತೆ ಬಾರಿಸಿಬಿಟ್ಟಿದ್ದಾರೆ. ಯಾರೂ ಸಹಾಯಕ್ಕೆ ಕೂಡ ಬಂದಿಲ್ಲ. ಇವರು ಹರಕು ಮುರಕು ಹಿಂದಿಯಲ್ಲಿ ಮಾತಾಡಿದರೆ ಉರ್ದುವಿನಲ್ಲಿ ಬೈದಿದ್ದಾರೆ. ಅಷ್ಟಾದ ನಂತರವೂ ಇನ್ನೂ ಅಲ್ಲೇ ಇದ್ದರೆ ಜೀವಕ್ಕೆ ಆಪತ್ತು ಅಂತ ಇವರೂ ಓಡಿ ಬಂದಿದ್ದಾರೆ. ನಂತರ ಕರ್ನಾಟಕದ ಯಾವದೋ ಮೂಲೆಯ ಕಾಲೇಜಿನಲ್ಲಿ ಅಡ್ಮಿಶನ್ ಸಿಕ್ಕಿದೆ. ಅಲ್ಲಿ ಓದಿದ Side out Simmons ಈಗ ಆರಾಮ್ ಇದ್ದಾನೆ. ಅಷ್ಟೇ REC ಬ್ರಾಂಡ್ ಇಲ್ಲ ಅಂತ ಬೇಜಾರು. 

ಇನ್ನು ನನ್ನ ಕಸಿನ್ ಒಬ್ಬ ಇದ್ದ. ದಕ್ಷಿಣ ಭಾರತದ ಖ್ಯಾತ REC ಒಂದರಲ್ಲಿ ಓದಿದ್ದ. ಅದು ಎಷ್ಟು ಖ್ಯಾತವೋ ಅಷ್ಟೇ ಕುಖ್ಯಾತ REC ಕೂಡ. 'ರ‍್ಯಾಗಿಂಗ್ ಹೇಗಿತ್ತಯ್ಯಾ?' ಅಂತ ಕೇಳಿದರೆ ಅವನು ಇಂದಿಗೂ ಬೆಚ್ಚಿಬೀಳುತ್ತಾನೆ. ಆಪರಿ ರ‍್ಯಾಗಿಂಗ್ ಮಾಡಿದ್ದರಂತೆ. ಅದೂ ಅವನ ಪಿಯುಸಿ ಸೀನಿಯರ್ ಹುಡುಗನೇ ಆಪರಿ ರ‍್ಯಾಗಿಂಗ್ ಮಾಡಿಬಿಟ್ಟಿದ್ದ. ಆ ಸೀನಿಯರ್ ಹುಡುಗನ ಹೆಸರು ತಂಬಿ. ಆ ತಂಬಿ ನಮಗೂ ಗೊತ್ತಿದ್ದವನೇ. ಧಾರವಾಡದವನು ಅಂದ ಮೇಲೆ ಗೊತ್ತಿರಲೇಬೇಕಲ್ಲ? 'ಹ್ಯಾಂಗೂ ನಿನ್ನ ಸೀನಿಯರ್, ನಮ್ಮ ಧಾರವಾಡದವನೇ ಆದ, ತಂಬಿ ಇದ್ದಾನೆ. ಏನೂ ತೊಂದರೆ ಇಲ್ಲ. ಹೋಗಿ ಬಾ!' ಅಂತ ಬೆನ್ನು ತಟ್ಟಿ ಕಳಿಸಿದವರು ನಾವೇ. ಆ ಹಡಬಿಟ್ಟಿ ಸೀನಿಯರ್ ತಂಬಿಯನ್ನು ನಂಬಿ ಹೋದರೆ ಆಗಿದ್ದು ಭೀಕರ ರ‍್ಯಾಗಿಂಗ್. 'ಥೋ, ಮಾರಾಯಾ. ಆ ತಂಬಿ ಸುದ್ದಿ ಬ್ಯಾಡ ಮಾರಾಯಾ. ಅದು ಯಾವ ನಮ್ನಿ ರ‍್ಯಾಗಿಂಗ್ ಮಾಡಿಹಾಕ್ಬುಟಾ!' ಅಂತ ಶುದ್ಧ ಹವ್ಯಕ ಭಾಷೆಯಲ್ಲಿ ಅಲವತ್ತುಕೊಳ್ಳುತ್ತ ಬಂದಿದ್ದ ನಮ್ಮ ಬಡಪಾಯಿ ಕಸಿನ್. ತಂಬಿಯ ಕ್ರೌರ್ಯದ ಬಗ್ಗೆ ಜಾಸ್ತಿ ಕೇಳಲಿಲ್ಲ. 'ಎಲ್ಲರಂತೆ ಓಡಿ ಬರದೇ, ನಾಲ್ಕು ವರ್ಷ ಇದ್ದು, ಡಿಗ್ರಿ ಮುಗಿಸಿ, ಜಾಬ್ ಹಿಡಿದು ಬಂದೆಯಲ್ಲಾ? ಅದೇ ದೊಡ್ಡದು ಮಾರಾಯಾ. ತಂಬಿ, ಬಂಬಿ ಹಾಳಾಗಿ ಹೋಗಲಿಬಿಡು!' ಅಂತ ಸಮಾಧಾನ ಮಾಡಿದ್ದಾಯಿತು. ಇವತ್ತಿಗೂ ಧಾರವಾಡದ ತಂಬಿ ಅಂದರೆ ನಮ್ಮ ಕಸಿನ್ ಮುಖ ವಿವರ್ಣವಾಗಿಬಿಡುತ್ತದೆ. 

ಇನ್ನೊಬ್ಬ ಕಸಿನ್ ಇದ್ದ. ಅವನೂ ಅದೇ REC ಗೆ ಹೋದವನೇ. ಈ ಪುಣ್ಯಾತ್ಮ ವಾರಕ್ಕೊಮ್ಮೆ ಮನೆಗೆ ಓಡಿ ಬರುತ್ತಿದ್ದ. ಮನೆ ಕೂಡ ಜಾಸ್ತಿ ದೂರವಿರಲಿಲ್ಲ. ಎರಡು ಮೂರು ತಾಸಿನ ಹಾದಿ ಅಷ್ಟೇ. ಮತ್ತೇನು? ಅಲ್ಲಿ ರ‍್ಯಾಗಿಂಗ್ ಅಂತ ಬೆಂಡು ಎತ್ತಿಸಿಕೊಂಡಿದ್ದು ಸಾಕಾಯಿತು ಅಂದ ಕೂಡಲೇ ಅಬ್ಬೇಪಾರಿಯಂತೆ ರಸ್ತೆಗೆ ಬಂದು ನಿಲ್ಲುತ್ತಿದ್ದ. ಊರ ಕಡೆ ಬರುತ್ತಿದ್ದ ಬಸ್ಸೋ ಲಾರಿಯೋ ಸಿಗುತ್ತಿತ್ತು. ಹತ್ತಿದವನೇ ಮನೆಗೆ ಹಾಜರ್. ಬಂದು ಅಮ್ಮನ ಮಡಿಲಲ್ಲಿ ತಲೆಯಿಟ್ಟು ಗೊಳೋ ಅಂತ ಅಳು. ಪಾಪದ ಮಾಣಿಗೆ ಮಾಡಬಾರದ ರೀತಿಯಲ್ಲಿ ರ‍್ಯಾಗಿಂಗ್ ಮಾಡಿಬಿಟ್ಟಿದ್ದರಂತೆ. ಹಿಂದೆ ಮುಂದೆ ಎಲ್ಲಾ ಫುಲ್ ಲ್ಯಾಪ್ಸ್! ಹಾಗಂತ ಅವರಪ್ಪ, ಉರ್ಫ್ ನಮ್ಮ ಮಾವ, ಹೇಳಿದ್ದ. ಸರಿ. ಅವನಪ್ಪ ಇಲ್ಲದ ತಲೆ ಖರ್ಚು ಮಾಡಿ ಮಗನನ್ನು ಮತ್ತೆ ಹಾಸ್ಟೆಲ್ಲಿಗೆ ಬಿಟ್ಟು ಬರುತ್ತಿದ್ದ. ರ‍್ಯಾಗಿಂಗಿಗೆ ಹೆದರಿ ಓಡಿ ಹೋದವನು ಅಂತ ಮುಂದಿನ ಸಲ ಮತ್ತೂ ದಬಾಯಿಸಿ ರ‍್ಯಾಗಿಂಗ್ ಮಾಡುತ್ತಿದ್ದರು. ಮತ್ತೆ ಊರಿನತ್ತ ನಾಗಾಲೋಟ. ಮತ್ತೆ ಧೋತ್ರ ಉಟ್ಟು, ತಲೆಗೆ ಟೋಪಿ ಹಾಕಿದ ಅಪ್ಪ ಬಿಟ್ಟು ಬರುತ್ತಿದ್ದ. ಅಂತೂ ಡಿಗ್ರಿ ಮುಗಿಸಿದ. ರ‍್ಯಾಗಿಂಗ್ ಅಂತ ಹೇಳಿದರೂ ಸಾಕು ಕನಸಲ್ಲಿ ಅಲ್ಲ ನನಸಲ್ಲಿ ಕೂಡ ಬೆಚ್ಚಿಬೀಳುತ್ತಾನೆ ಈ ಪುಣ್ಯಾತ್ಮ. 

ನಿನ್ನೆ ಪಿಯುಸಿ ರಿಸಲ್ಟ್ ಬಂತು. ಯಾಕೋ ಹಳೆ ರ‍್ಯಾಗಿಂಗ್ ಕಹಾನಿಗಳು ನೆನಪಾದವು. ಪಿಯುಸಿ ಮುಗಿಸಿ ಎಲ್ಲೆಲ್ಲೋ ಹೋಗುತ್ತಿರುವ ಹುಡುಗರೇ ಹುಷಾರ್! ರ‍್ಯಾಗಿಂಗ್! ರ‍್ಯಾಗಿಂಗ್! ಖಾಖ್ ಹಾಕಿಸಿಕೊಂಡವರಂತೆ ಸೀನಿಯರ್ ಮಂದಿ ಕಾದಿರುತ್ತಾರೆ. ನಿಮಗೆ ತಂಬಿಯಂತಹ ಸೀನಿಯರ್ ಗಂಟುಬೀಳದಿರಲಿ! :)

Friday, May 20, 2016

ಮಂತ್ರ ಕಲಿತು ನೋಡು. ಮಾಟ ಮಾಡಿ ನೋಡು!

ಮಾಟಗಾರ (ಸಾಂದರ್ಭಿಕ ಚಿತ್ರ)

ಮಾಟ, ಮಂತ್ರ, ವಶೀಕರಣ, ಕಾಲಾ ಜಾದೂ, ತಂತ್ರ, ವಾಮಾಚಾರ ಇವೆಲ್ಲ ಸಿಕ್ಕಾಪಟ್ಟೆ ರೋಚಕ ವಿಷಯಗಳು. ಮೊದಲಿಂದಲೂ ಅವುಗಳ ಬಗ್ಗೆ ವಿಪರೀತ ಕುತೂಹಲ. ಮಂತ್ರ ಕಲಿಯದಿದ್ದರೂ ಮಾಟ ಕಲಿತುಬಿಡಬೇಕು ಅಂತ ಆಸೆ. ಜೊತೆಗೆ ಅವುಗಳ ಬಗ್ಗೆ ಸಿಕ್ಕಿದ್ದನ್ನೆಲ್ಲ ಓದಿ, ಅಲ್ಪ ಸ್ವಲ್ಪ ಗೊತ್ತಿದ್ದವರಿಂದ ಕೇಳಿ ಕೇಳಿ, ತಲೆ ತುಂಬಾ ಅವುಗಳದ್ದೇ ಗುಂಗು. ಮತ್ತೆ ಆವಾಗ ನಾವು ಓದುತ್ತಿದ್ದ ಪುಸ್ತಕಗಳಾದರೂ ಯಾವವು? ಅವೇ ಚಂದಮಾಮ, ಇಂದ್ರಜಾಲ ಕಾಮಿಕ್ಸ್, ಪುರಾಣದ ಕಥೆಗಳು. ಎಲ್ಲದರಲ್ಲೂ ಮಾಟ, ಮಂತ್ರ, ತಂತ್ರ, ಅವುಗಳನ್ನು ಮಾಡುತ್ತಿದ್ದ ಚಿತ್ರವಿಚಿತ್ರ ಮಾಂತ್ರಿಕರು ವಿಜೃಂಭಿಸುತ್ತಿದ್ದರು.

೧೯೮೦ ರ ದಶಕದಲ್ಲಿ ಚಂದಮಾಮ ಮಕ್ಕಳ ಮಾಸಪತ್ರಿಕೆಯಲ್ಲಿ ಪ್ರತಿ ತಿಂಗಳೂ ಪ್ರತ್ಯಕ್ಷನಾಗುತ್ತಿದ್ದ ಅದ್ಭುತವಾದ ಮಾಂತ್ರಿಕನೆಂದರೆ ಕರಡಿ ಕೆಂಗಣ್ಣ. ಎಂತಾ ಮಾಂತ್ರಿಕರೀ ಅವನು!? ನೋಡಿದರೇ ಫುಲ್ ಮಟಾಶ್. ಆ ರೀತಿಯಲ್ಲಿ ಖರಾಬಾಗಿದ್ದ. ಕರಡಿ ಚರ್ಮ ಸುತ್ತಿಕೊಂಡು, ಕೈಯಲ್ಲೊಂದು ಮಂತ್ರದಂಡ ಹಿಡಿದುಕೊಂಡು, ಬಣ್ಣಬಣ್ಣದ ಹಕ್ಕಿ ಪುಕ್ಕಗಳ ಟೊಪ್ಪಿಗೆ ಧರಿಸಿ ಪ್ರತಿ ತಿಂಗಳೂ ಪ್ರತ್ಯಕ್ಷನಾಗುತ್ತಿದ್ದ. ತಿಂಗಳಿಂದ ತಿಂಗಳಿಗೆ ಮುಂದುವರೆಯುತ್ತಿದ್ದ ಧಾರಾವಾಹಿ ಕಥೆ ಮತ್ತೊಂದು ರೋಚಕ ಲೋಕಕ್ಕೆ ತೆರೆದುಕೊಳ್ಳುತ್ತಿತ್ತು. ಅದಕ್ಕಿಂತ ಮೊದಲು 'ಧೂಮಕೇತು' ಎಂಬ ಖತರ್ನಾಕ್ ಧಾರಾವಾಹಿ ಕೂಡ ಬಂದಿತ್ತು. ಸುಮಾರು ಹತ್ತು ವರ್ಷಕ್ಕೂ ಹಳೆಯ ಚಂದಮಾಮಗಳೂ ಸಹ ನಮ್ಮ ಮನೆಯಲ್ಲಿದ್ದವು. ಯಾಕೆಂದರೆ ಪುಸ್ತಕಗಳನ್ನು, ಒಳ್ಳೊಳ್ಳೆ ಪತ್ರಿಕೆಗಳನ್ನು ರದ್ದಿ ಪೇಪರಿಗೆ ಹಾಕುವದು ಮಹಾಪರಾಧ ಅನ್ನುವಂತಹವರ 'ವಿಚಿತ್ರ' ಮನೆತನ ನಮ್ಮದು.

ಹೀಗೆ ಮಾಟ ಮಂತ್ರಗಳ ಹುಚ್ಚು ಬರೋಬ್ಬರಿ ತಲೆಗೆ ಏರಿದ್ದಾಗ ೧೯೮೪ ರಲ್ಲಿ ಮಿತ್ರನೊಬ್ಬ ಮಾಟ ಕಲಿಯಲು ದಾರಿಯೊಂದನ್ನು ತೋರಿಸಿಬಿಟ್ಟಿದ್ದ. ಆ ದಾರಿಯನ್ನು ಅರಸಿ ಹೊರಟರೆ ತೆರೆದುಕೊಂಡಿದ್ದು ಒಂದು ವಿಚಿತ್ರ ಅನುಭವ.

'ಮಹೇಶಾ, ಬಾ ಇಲ್ಲಿ. ಒಂದು ಮಾತು ಹೇಳೋದೈತಿ. ಭಾಳ confidential ಮತ್ತs!' ಅಂತ ಏನೋ ಮಹಾ ನಿಗೂಢವಾದದ್ದನ್ನು ಹೇಳುವವನು ಇದ್ದಾನೆ ಅನ್ನುವ ಮಾದರಿಯಲ್ಲಿ ಆವತ್ತು ಕರೆದವನು ಒಬ್ಬ ಖಾಸ್ ದೋಸ್ತ. ಇನ್ನೂ ಏಳನೇ ಕ್ಲಾಸಿನಲ್ಲಿದ್ದೆ ಆವಾಗ. ೧೯೮೪ - ೮೫ ರ ಮಾತು.

ಕೇಳೋಣ ಅಂತ ಹೋದೆ. ಕಿವಿ ಹತ್ತಿರ ತಂದರೂ ಮತ್ತೂ ಹತ್ತಿರಕ್ಕೆ ಕಿವಿ ಎಳೆದುಕೊಂಡು, ಕಿವಿಯಲ್ಲಿ ಗುಸುಪುಸು ಅಂತ ಏನೋ ಹೇಳಿ, 'ಹ್ಯಾಂಗೈತಿ??? ಮಾಡಿ ನೋಡವಾ??' ಅಂತ ಕೇಳಿ ಒಂದು ತರಹವಾಗಿ ನಕ್ಕ.

ನನ್ನದು ಮತ್ತು ಅವನದು ಒಂದು ವಿಚಿತ್ರ ರೀತಿಯ ಮನಸ್ಥಿತಿ. ಇಬ್ಬರ ತಲೆಗಳೂ ವಯಸ್ಸಿಗೆ ಮೀರಿ ಓಡುತ್ತಿದ್ದವು. ಏಳನೇ ಕ್ಲಾಸಿನ ಹುಡುಗರು ಬಿಡಿ ಪಿಯೂಸಿ ಹುಡುಗರೂ ಸಹ ಅವನ್ನೆಲ್ಲ ವಿಚಾರ ಮಾಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ನಾವು ಮಾಡುತ್ತಿದ್ದೆವು. ಪಾಠ, ಪುಸ್ತಕಗಳನ್ನು ಮೀರಿದ ವಿಷಯಗಳ ಬಗ್ಗೆ ಕುತೂಹಲ ಮತ್ತು ಆಸಕ್ತಿ ಸಿಕ್ಕಾಪಟ್ಟೆ ಇತ್ತು. ನಾವಿಬ್ಬರು ತಿಳಿದುಕೊಂಡಿದ್ದ ಕೆಲವು ವಿಷಯಗಳು, ಮಾತಾಡುತ್ತಿದ್ದ ಸುದ್ದಿಗಳ ಬಗ್ಗೆ ನಮ್ಮ ವಯಸ್ಸಿನ ಮಂದಿಗೆ ಗೊತ್ತೂ ಇರುತ್ತಿರಲಿಲ್ಲ. ಆಸಕ್ತಿಯೂ ಇರುತ್ತಿರಲಿಲ್ಲ. ಹಾಗಾಗಿಯೇ ನನ್ನ ಅವನ ದೋಸ್ತಿ ಗಟ್ಟಿಯಾಗುತ್ತ ಬಂದಿತ್ತು.

ಆವತ್ತು ಆ ದೋಸ್ತ ಕಿವಿಯಲ್ಲಿ ಮಾಟ ಅಂದರೆ ವಾಮಾಚಾರದ ಬಗ್ಗೆ ಏನೋ ಹೇಳಿಬಿಟ್ಟಿದ್ದ. ಸ್ವಲ್ಪ ವಿವರಣೆ ಕೊಟ್ಟಿದ್ದ. ಹೆಚ್ಚಿನ ಮಾಹಿತಿಯನ್ನು ಹೇಗೆ ಸಂಪಾದಿಸಬೇಕು ಅನ್ನುವದಕ್ಕೂ ದಾರಿ ತೋರಿಸಿದ್ದ. ಕೆಟ್ಟ ಕುತೂಹಲ ಹುಟ್ಟಿಸಿಬಿಟ್ಟಿದ್ದ. ಎಂತಹ ಕುತೂಹಲ ಎದ್ದುಬಿಟ್ಟಿತು ಅಂದರೆ ಬಿಟ್ಟುಕೊಳ್ಳಬಾರದ ಜಾಗದಲ್ಲಿ ಇರುವೆ ಬಿಟ್ಟುಕೊಂಡು ಪರದಾಡಿದಂತೆಯೇ ಸರಿ.

ಅದೇನೋ ಒಂದು ಮಾಟದ ಬಗ್ಗೆ ಹೇಳಿದ್ದ. ಅದೇನೋ ವಾಮಾಚಾರವಂತೆ. ಅದನ್ನು ಪದ್ಧತಿ ಪ್ರಕಾರ ಮಾಡಿ, ಹೇಳಬೇಕಾದ ಮಂತ್ರ ಹೇಳುತ್ತ, ಯಾರಿಗೆ ಅದು ತಾಗಬೇಕೋ ಅವರನ್ನು ನೆನಪಿಸಿಕೊಂಡರೆ ಆಯಿತು. ಮಾಟದ ಪರಿಣಾಮ ಆಗಿಬಿಡುತ್ತದೆ. ಪರಿಣಾಮ ಕಾಣಲಿಕ್ಕಿಲ್ಲ ಆಗುವದು ಮಾತ್ರ ಖಾತ್ರಿ. ಅದು ಯಾವ ಮಾಟ ಅಂದರೆ ಮಹಿಳೆಯ ಸೀರೆ ಎತ್ತಿಸಿಬಿಡುವ ಖತರ್ನಾಕ್ ಪ್ರಕ್ರಿಯೆ!

ಗೆಳಯ ಕೊಟ್ಟ ಸಂಕ್ಷಿಪ್ತ ವಿವರಣೆ ಇಷ್ಟಿತ್ತು. ಎರೆಹುಳ (earthworm) ತೆಗೆದುಕೊಳ್ಳಬೇಕು. ಒಂದು ದೀಪದ ಹಣತೆ ತೆಗೆದುಕೊಳ್ಳಬೇಕು. ಅದರಲ್ಲಿ ಎಣ್ಣೆ ತುಂಬಬೇಕು. ಹತ್ತಿಯ ಬತ್ತಿಯ ಬದಲು ಎರೆಹುಳವನ್ನು ಇಡಬೇಕು. ಆ ಎರೆಹುಳವನ್ನು ಬತ್ತಿಯಂತೆಯೇ ಬೆಂಕಿಯಿಂದ ಹೊತ್ತಿಸಿಬಿಡಬೇಕು. ನಂತರ ಒಂದು ಲೋಹದ ಬಳೆ ತೆಗೆದುಕೊಳ್ಳಬೇಕು. ಅದನ್ನು ಕೈಗೆ ಹಾಕಿಕೊಳ್ಳಬೇಕು. ನಂತರ ಯಾವದೋ ಮಂತ್ರ ಹೇಳುತ್ತ, ನಿಧಾನವಾಗಿ ಲೋಹದ ಬಳೆಯನ್ನು ನಿಮ್ಮ ಕೈ ಮೇಲೆ ಮೇಲೆ ಏರಿಸುತ್ತ ಹೋಗಬೇಕು. ಆ ಬಳೆ ಮುಂಗೈ ಬಿಟ್ಟು ಮೇಲೆ ಮೇಲೆ ಏರಿದಂತೆ ನೀವು ಯಾರಿಗೆ ಮಾಟ ಮಾಡಿರುತ್ತೀರೋ ಅವರ ಸೀರೆ ಕೂಡ ಮೇಲೆ ಮೇಲೆ ಏರುತ್ತ ಹೋಗುತ್ತದೆ. ಹ್ರಾಂ!ಹ್ರೀಂ! ಹ್ರೂಂ!

ಹೀಗೆ ಒಂದು ಖತರ್ನಾಕ್ ಮಾಟದ ವಿವರಣೆಯನ್ನು ಸಂಕ್ಷಿಪ್ತವಾಗಿ ಕೊಟ್ಟಿದ್ದ. ಅವನಿಗೂ ಪೂರ್ತಿ ವಿವರಣೆ ಗೊತ್ತಿರಲಿಲ್ಲ. ಇದರ ಬಗ್ಗೆ ಮಾಹಿತಿ ಎಲ್ಲಿ ಸಿಕ್ಕಿತು ಅಂತ ಕೇಳಿದೆ. ಯಾವದೋ ಒಂದು ಪುಸ್ತಕದಲ್ಲಿ ಸಿಕ್ಕಿತು ಅಂದ. ಪುಸ್ತಕ ಎಲ್ಲಿ ಸಿಕ್ಕಿತು ಅಂತ ಕೇಳಿದೆ. ಜಾಗ ಹೇಳಿದ. ಮುಂದಿನ ವಿವರ ಕೇಳುವ ಜರೂರತ್ತೇ ಇರಲಿಲ್ಲ. ಆ ಪುಸ್ತಕ ಸಿಗುವ ಜಾಗ ನನಗೂ ಗೊತ್ತಿತ್ತು. ಎಷ್ಟೋ ಸಲ ಆ ಪುಸ್ತಕವನ್ನು ನಾನೂ ಸಹ ನೋಡಿದ್ದೆ. ಆದರೆ ಕೊಳ್ಳುವ ಮನಸ್ಸು ಮಾಡಿರಲಿಲ್ಲ.

ನಮ್ಮ ಕಾಲದಲ್ಲಿ ರಸ್ತೆ ಮೇಲೆ ಪುಸ್ತಕ ವ್ಯಾಪಾರ ಜೋರಾಗಿ ನಡೆಯುತ್ತಿತ್ತು. ಪುಸ್ತಕದ ಅಂಗಡಿಗಳಲ್ಲಿ ಸಿಗದ ಪುಸ್ತಕಗಳು ರಸ್ತೆ ಮೇಲೆ ಸಿಗುತ್ತಿದ್ದವು. ಕೆಲವು ಪುಸ್ತಕಗಳು footpath ಗಳ ಮೇಲೆ ರಾಜಾರೋಷವಾಗಿ ಕಂಡರೆ ಕೆಲವು ನಿಷಿದ್ದ ಪುಸ್ತಕಗಳು ಅದೇ footpath ಮೇಲೆ ಹಾಸಿದ್ದ ಜಮಖಾನದ ಕೆಳಗೆ ಇರುತ್ತಿದ್ದವು. ಕೆಲವು ಖಾಸ್ ಗಿರಾಕಿಗಳಿಗೆ ಮಾತ್ರ ಅವು ಸಿಗುತ್ತಿದ್ದವು. ಈ ಮಾಟದ ಪುಸ್ತಕ ನಿಷೇಧಿತ ಪುಸ್ತಕ ಆಗಿರಲಿಲ್ಲ.

ಇನ್ನೂ ನೆನಪಿದೆ. ಅವರ್ಯಾರೋ ಗದಗಿನ ಮಹಾಂತೇಶ ಶಾಸ್ತ್ರಿ ಅಂತ ಇದ್ದರು ಅಂತ ನೆನಪು. ಅವರು ಸುಮಾರು ಇಂತಹ ಪುಸ್ತಕ ಬರೆದಿದ್ದರು. ವಶೀಕರಣ, ಜಾದೂ ತೋನಾ, ಬಂಗಾಲಿ ಕಾಲಾ ಜಾದೂ, ಸಮ್ಮೋಹಿನಿ ವಿದ್ಯೆ ಇತ್ಯಾದಿ, ಇತ್ಯಾದಿ. ಎಲ್ಲದರ ಮೇಲೂ ಪಂಡಿತ ಮಹಾಂತೇಶ ಶಾಸ್ತ್ರಿ, ಗದಗ ಅಂತ ಇರುತ್ತಿತ್ತು. ಜೊತೆಗೆ ಅವರಿಗೆ ಮತ್ತು ಅವರ ಪಾಂಡಿತ್ಯಕ್ಕೆ ಸಂದಿರುವ ಸಮ್ಮಾನಗಳು, ಬಿರುದುಗಳು, ಬಾವಲಿಗಳು, ಕಣ್ಕಪ್ಪಡಿಗಳು. ಅವರ ಫೋಟೋ ಸಹ ಇರುತ್ತಿತ್ತು. ಕೇವಲ ಮುಖ ದರ್ಶನ ಮಾತ್ರ. ಒಳ್ಳೆ ಖಡಕ್ ಕೇಸರಿ ರುಮಾಲು ಸುತ್ತಿದ ಮಹಾಂತೇಶ ಶಾಸ್ತ್ರಿಗಳು ಭರ್ಜರಿ ಕಾಣುತ್ತಿದ್ದರು. ಆಧುನಿಕ ಮಾಂತ್ರಿಕರು ಅವರ ಲುಕ್ ನಕಲು ಮಾಡಬಹುದು. ಅಷ್ಟು ಬೆಸ್ಟ್.

ಮಾಟ, ಮಂತ್ರ, ತಂತ್ರ, ವಾಮಾಚಾರ ಇತ್ಯಾದಿ ವಿಚಿತ್ರಗಳ ಮೇಲೆ ಮೊದಲಿಂದಲೂ ಸಿಕ್ಕಾಪಟ್ಟೆ ಆಸಕ್ತಿ. ಮತ್ತೆ ನಮ್ಮ ಮನೆತನದಲ್ಲೇ ಅಂತಹ ವಿದ್ಯೆಗಳನ್ನು ಶಾಸ್ತ್ರೋಕ್ತವಾಗಿ ಕಲಿತು ಆಚರಿಸಿಕೊಂಡಿದ್ದ ಜನರಿದ್ದರು. ಅದೂ ಒಂದು ಕಾರಣ. ಅಜ್ಜ (ತಂದೆಯವರ ತಂದೆ) ತಕ್ಕಮಟ್ಟಿಗೆ ಮಾಟ, ಮಂತ್ರ ಕಲಿತಿದ್ದರು. ಮಾಡುತ್ತಿರಲಿಲ್ಲ. ಆದರೆ ಮಾಟ ತೆಗೆಯುತ್ತಿದ್ದರು. ಭೂತ ಚೇಷ್ಟೆ, ಪ್ರೇತ ಬಾಧೆಗಳಿಂದ ಅನೇಕ ಜನರನ್ನು ಮುಕ್ತಿಗೊಳಿಸಿದ್ದರು. ವಾಮಾಚಾರದಿಂದ ಕಷ್ಟ ಅನುಭವಿಸುತ್ತಿದ್ದವರಿಗೆ ಪರಿಹಾರ ರೂಪದಲ್ಲಿ ದಿಗ್ಬಂಧನ ಹಾಕಿ, ಪ್ರಸಾದ ಕೊಟ್ಟು ಕಳಿಸುತ್ತಿದ್ದರು. ಹಾಗಂತ ಕೇಳಿದ್ದು. ನಾವು ಹುಟ್ಟುವ ತನಕ ಅವರಿಗೆ ಆಗಲೇ ಎಪ್ಪತ್ತರ ಮೇಲಾಗಿ ಸಾಕಷ್ಟು ಹಣ್ಣಾಗಿಬಿಟ್ಟಿದ್ದರು.

ಇನ್ನು ತಂದೆಯವರ ಚಿಕ್ಕಪ್ಪ (ಅಜ್ಜನ ತಮ್ಮ) ಓದಿ, ಡಬಲ್ ಗ್ರ್ಯಾಜುಯೆಟ್ ಆದರೂ ಸ್ವಂತ ಆಸಕ್ತಿಯಿಂದ ಸಮ್ಮೋಹಿನಿ ವಿದ್ಯೆ (Hypnotism) ಕಲಿತಿದ್ದರು. ಮೊದಲು ಹವ್ಯಾಸ ಅಂತಲೇ ಕಲಿತರು. ನಂತರ ಅನೇಕ ಜನರಿಗೆ ಅದರಿಂದ ಒಳ್ಳೆಯದನ್ನೂ ಮಾಡಿದರು. Obsessive compulsive disorder - OCD - ಅನ್ನುವದು ಒಂದು ತರಹದ ಮಾನಸಿಕ ಕಾಯಿಲೆ. ಉದಾಹರಣೆಗೆ  ಕೆಲವು ಜನ ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತಾರೆ. ಕೆಲವರಿಗೆ ಎಷ್ಟು ಸಲ ಕೈ ತೊಳೆದುಕೊಂಡರೂ ಸಮಾಧಾನವಿರುವದಿಲ್ಲ. ಕೆಲವರಿಗೆ ಒಮ್ಮೆ ಬೀಗ ಹಾಕಿದ ಮೇಲೆ ಎಷ್ಟು ಸಲ ಜಗ್ಗಿ ನೋಡಿದರೂ ಸಮಾಧಾನವಿರುವದಿಲ್ಲ. ಹೀಗೆ ಬೇರೆ ಬೇರೆ ರೀತಿ. ಇಂತಹ ಮಾನಸಿಕ ವಿಕೋಪಗಳಿಗೆ ಸಮ್ಮೋಹಿನಿ ಹೇಳಿ ಮಾಡಿಸಿದ್ದು. ನಮ್ಮ ಚಿಕ್ಕಜ್ಜ ತಮ್ಮ ಸಮ್ಮೋಹಿನಿ ವಿದ್ಯೆ ಉಪಯೋಗಿಸಿ ಅನೇಕರ OCD ದೂರ ಮಾಡಿದ್ದರು. ಇದನ್ನೂ ಕೇಳಿದ್ದೇ. ನೋಡಿರಲಿಲ್ಲ. ಅವರಿಗೂ ಸುಮಾರು ವಯಸ್ಸಾಗಿ ಹೋಗಿತ್ತು.

ಅಜ್ಜನ ಮತ್ತೊಬ್ಬ ತಮ್ಮ ಅಚಾನಕ್ ಆಗಿ ರಕ್ತ ಕಾರಿಕೊಂಡು ಸತ್ತುಹೋಗಿದ್ದನಂತೆ. ಯಾರೋ ಮಾಟ ಮಾಡಿದ್ದರೋ ಅಥವಾ ಅವನೇ ಏನೋ ಮಾಡಲು ಹೋಗಿ, ಲಫಡಾ ಮಾಡಿಕೊಂಡು, ಮಾಟ ಉಲ್ಟಾ ಹೊಡೆದು ಶಿವಾಯ ನಮಃ ಆಗಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಮನೆ ಜನ ಹಾಗೆ ಮಾತಾಡಿದ್ದನ್ನು ಕೇಳಿದ್ದೆ.

ನಮ್ಮ ತಂದೆಯವರೂ ತಕ್ಕಮಟ್ಟಿಗೆ ಮಾಟ, ಮಂತ್ರ, ತಂತ್ರ ಓದಿಕೊಂಡಿದ್ದರು. ಅಷ್ಟೇ ಆಚರಣೆ ಮಾಡಲು ಅವರಿಗೆ ಅನುಮತಿ ಅವರ ತಂದೆಯವರು ಕೊಡಲಿಲ್ಲ. 'ನಿನ್ನ ದೇಹ ಪ್ರಕೃತಿ ಬಹಳ ನಾಜೂಕಾಗಿದೆ. ಹಾಗಾಗಿ ನೀನು ಈ ಮಂತ್ರ, ತಂತ್ರ ಬಿಟ್ಟು ವೇದ, ಉಪನಿಷತ್ತು, ವೇದಾಂಗವಾದ ಜ್ಯೋತಿಷ್ಯ ಇತ್ಯಾದಿ ಸಾಧು ವಿಷಯಗಳ ಅಧ್ಯಯನದ ಬಗ್ಗೆ ಗಮನ ಕೊಡು,' ಅಂತ ನಮ್ಮ ಅಜ್ಜ ತಂದೆಯವರಿಗೆ ಆಜ್ಞೆ ಮಾಡಿದ್ದರ ಪ್ರಕಾರ ನಮ್ಮ ತಂದೆಯವರು ಅದನ್ನು ಪ್ರಾಕ್ಟೀಸ್ ಮಾಡಲಿಲ್ಲ. ಆದರೆ ಅವರೊಂದಿಗೆ ಮಾತಾಡುವಾಗ ಎಷ್ಟೆಷ್ಟೋ ಹೊಸ ಹೊಸ ವಿಷಯಗಳು ತಿಳಿದು ಈ esoteric ಅನ್ನಿಸುವ ಮಾಟ ಮಂತ್ರದ ಫೀಲ್ಡ್ ಬಗ್ಗೆ ಆಸಕ್ತಿ, ಕುತೂಹಲ ಹೆಚ್ಚುತ್ತಲೇ ಹೋಗುತ್ತಿತ್ತು. ಮೈಮೇಲೆ ದೆವ್ವ ಬಂದ ಯುವತಿಯೊಬ್ಬಳಿಗೆ ತಂದೆಯವರು ದಿಗ್ಬಂಧನ ಹಾಕಿ ಶಾಂತಗೊಳಿಸಿದ್ದನ್ನು ನಾನೇ ಖುದ್ ನೋಡಿದ್ದೇನೆ. ಅದೊಂದು ಮರೆಯಲಾಗದ ಅನುಭವ. ಹಿಂದೊಮ್ಮೆ ಅದರ ಬಗ್ಗೆ ಬರೆದಿದ್ದೆ ಕೂಡ. ಇಲ್ಲಿದೆ ನೋಡಿ - ಭೂತ, ಪಿಶಾಚಿ, ಪ್ರೇತಾತ್ಮ, ಕ್ಷುದ್ರಶಕ್ತಿಗಳು.

ಮನೆತನದಲ್ಲೇ ಹೀಗೆಲ್ಲ background, buildup ಇದ್ದಾಗ ಮಾಟದ ಬಗ್ಗೆ, ಅದರ ವಿವರಗಳಿರುವ ಪುಸ್ತಕವೊಂದರ ಬಗ್ಗೆ ಈ ದೋಸ್ತ ಹೇಳಿಬಿಟ್ಟಿದ್ದ. ಅದರಲ್ಲೂ ಸೀರೆ ಎತ್ತಿಸುವಂತಹ ಮಾಟದ ಬಗ್ಗೆ ಹೇಳಿಬಿಟ್ಟಿದ್ದ. ಅದೇನೂ ಅಷ್ಟು ಖಾಸ್ ಅನ್ನಿಸಿರಲಿಲ್ಲ. ಯಾರದ್ದೇ ಸೀರೆ ಎತ್ತಿಸುವಂತಹ ಕೆಟ್ಟ ಬುದ್ಧಿ, ಕೆಟ್ಟ ಸಂಸ್ಕಾರ ಇರಲಿಲ್ಲ. ಆಸಕ್ತಿಯೂ ಇರಲಿಲ್ಲ. ಯಾಕೆಂದರೆ ಆವಾಗ ನಾವು ಇನ್ನೂ ಚಿಣ್ಣ ಹುಡುಗರು. ಅದರೂ ಕೆಟ್ಟ ಕುತೂಹಲ ಅಷ್ಟೇ.

ಇಷ್ಟೆಲ್ಲ ತಿಳಿದ ಮೇಲೆ ಪುಸ್ತಕ ತರಲು ತಡವೇಕೆ? ಅದು ನಮಗೆ ಗೊತ್ತಿದ್ದ ಜಾಗವೇ. ಧಾರವಾಡ ಪೇಟೆಯಲ್ಲಿ ಅನೇಕ ಕಡೆ footpath ಮೇಲೆ ಪುಸ್ತಕಗಳನ್ನು ಹರವಿಕೊಂಡು ಮಾರಾಟ ಮಾಡುತ್ತಿದ್ದರು. ನಾನು ಸದಾ ಹೋಗುತ್ತಿದ್ದುದು ಆಝಾದ್ ಪಾರ್ಕ್ ಎದುರುಗಡೆ, ಸಂಜೆ ಹೊತ್ತಿನಲ್ಲಿ ಮಾತ್ರ ಇರುತ್ತಿದ್ದ ವ್ಯಾಪಾರಿಯ ಬಳಿ. ಅಲ್ಲಿಯೇ ಯಾಕೆ ಹೋಗುತ್ತಿದ್ದೆ ಅಂದರೆ ಅದಕ್ಕೊಂದು ಹಿನ್ನೆಲೆಯೂ ಇತ್ತು. ಅದೇ ಅಝಾದ್ ಪಾರ್ಕ್ ರಸ್ತೆಯಲ್ಲಿಯೇ, ಕೊಂಚ ಕೆಳಗೆ ನಮ್ಮ ಶೆಟ್ಟರ ಕೆನರಾ ಬಟ್ಟೆ ಅಂಗಡಿ ಇತ್ತು. ಈಗಲೂ ಇದೆ. ಶೆಟ್ಟರ ಕೆನರಾ ಬಟ್ಟೆ ಅಂಗಡಿ ನಮ್ಮ ಖಾಯಂ ಬಟ್ಟೆ ಅಂಗಡಿ. ನಮ್ಮ ತಂದೆ, ತಾಯಿ ೧೯೫೦ ರ ದಶಕದಲ್ಲಿ ಧಾರವಾಡಕ್ಕೆ ಬಂದಾಗಿನಿಂದ ಅಲ್ಲಿನ ಖಾಯಂ ಗಿರಾಕಿಗಳು. ಪಾಲಕರ ಜೊತೆ ಬಟ್ಟೆ ಅಂಗಡಿಗೆ ಹೋದಾಗ, ಪಾಲಕರು ಅಲ್ಲಿ ತಾಸುಗಟ್ಟಲೇ ಕೂತು, ಬಟ್ಟೆ ಖರೀದಿ ಮಾಡಿ, ಅದಕ್ಕಿಂತ ಹೆಚ್ಚಾಗಿ ಶೆಟ್ಟರ ಜೊತೆ ಮಾತಾಡುತ್ತ ಕೂಡುತ್ತಿದ್ದರು. ಅಣ್ಣ ಅಲ್ಲೇ ಮೇಲಿದ್ದ ಹಳೆ ಪುಸ್ತಕದ ಅಂಗಡಿಗೆ ಕಡೆ ಹೋಗುತ್ತಿದ್ದ. ಅವನ ಹಿಂದೆ ನಾನು. ಅದೇ ರೂಢಿಯಾಗಿತ್ತು. ಹಾಗಾಗಿ ನಂತರವೂ ಅಲ್ಲೇ ಹೋಗುತ್ತಿದ್ದೆ. ನಾನು ಮೊದಲೇ ದೊಡ್ಡ ಪುಸ್ತಕ ಪ್ರೇಮಿ. ಓದಲಿ ಬಿಡಲಿ ಆದರೆ ಕಂಡ ಪುಸ್ತಕಗಳನ್ನೆಲ್ಲ ಕೊಳ್ಳಬೇಕು. ಸಾಧ್ಯವಾಗದಿದ್ದರೆ at least ತೆಗೆದುನೋಡಿ, ಹೊಸ ಪುಸ್ತಕದ ಗಂಧವನ್ನು ಆಘ್ರಾಣಿಸಿ, ಅಷ್ಟಿಷ್ಟು ಓದಿ, ಮನಸ್ಸಿಲ್ಲದ ಮನಸ್ಸಿನಿಂದ ವಾಪಸ್ ಇಟ್ಟು ಬರಬೇಕು. ಅದು ಪದ್ಧತಿ.

ಆಗ already ಏಳನೇ ಕ್ಲಾಸ್. ಎಲ್ಲ ಕಡೆ ಒಬ್ಬನೇ ತಿರುಗಲಿಕ್ಕೆ ಅನುಮತಿಯೂ ಇತ್ತು ಮತ್ತು ತಿರುಗಲು ಹುಮ್ಮಸ್ಸೂ ಇತ್ತು. ವಾರಕ್ಕೆ ಒಮ್ಮೆಯಾದರೂ ಧಾರವಾಡ ಪೇಟೆ ಸುತ್ತಿ ಬರಲಿಕ್ಕೇಬೇಕು. ಖರೀದಿ ಮಾಡುವದೂ ಏನೂ ಇರುತ್ತಿರಲಿಲ್ಲ. ಮತ್ತೆ ಖರೀದಿ ಮಾಡಿಸಲು ಅಮ್ಮ, ಅಪ್ಪ ಯಾರಾದರೂ ಜೊತೆಗೆ ಬೇಕಾಗುತ್ತಿತ್ತು. ಯಾಕೆಂದರೆ ಬರೋಬ್ಬರಿ ಚೌಕಾಶಿ ಮಾಡಬೇಕಲ್ಲ. ನಮ್ಮದೇನಿದ್ದರೂ ಸುಮ್ಮನೆ ಪೇಟೆ ತಿರುಗಿ, ಅಲ್ಲಿಲ್ಲಿ ಪುಸ್ತಕ ನೋಡಿ, window shopping ಮಾಡಿ, ಏನೇನು ಕೊಳ್ಳಲು ಇಂಡೆಂಟ್ ಹಾಕಬೇಕು, ಮನೆಗೆ ಹೋಗಿ ಹಟ ಮಾಡಲು ಶುರುಮಾಡಬೇಕು ಅಂತ ಸ್ಕೆಚ್ ಹಾಕಲು ಪೇಟೆಗೆ ಹೋಗುತ್ತಿದ್ದುದು. ರೊಕ್ಕವೂ ಜಾಸ್ತಿ ಇರುತ್ತಿರಲಿಲ್ಲ. ಬಸ್ ಚಾರ್ಜ್ ಜೊತೆಗೆ ಎಲ್ಲೋ ಒಂದಿಷ್ಟು ಸಣ್ಣ ನಾಷ್ಟಾ ಮಾಡಿ ಒಂದು ಗ್ಲಾಸ್ ಕಬ್ಬಿನಹಾಲು ಕುಡಿಯಲು ಜುಗಾಡ್ ಆಗುವಷ್ಟು ರೊಕ್ಕ. ಪುಸ್ತಕ ಖರೀದಿಗೆ ಅಂತ ಮೊದಲೇ ಹೇಳಿಬಿಟ್ಟರೆ ಜಾಸ್ತಿ ರೊಕ್ಕ. ಅದೊಂದು ವಿಷಯದಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಫುಲ್ ಕರ್ಣನ ವಂಶದವರೇ. ಬಾಕಿ ಯಾವದಕ್ಕೆ ರೊಕ್ಕ ಖರ್ಚು ಮಾಡದಿದ್ದರೂ ಪುಸ್ತಕಗಳು, ಅದೂ ಮಕ್ಕಳಿಗೆ ಅಂದರೆ ಜೈ. ಯಾವ ಪುಸ್ತಕ ಅಂತಲೂ ಕೇಳುತ್ತಿರಲಿಲ್ಲ. ಅಷ್ಟು ನಂಬಿಕೆ ಮತ್ತು ಓದುತ್ತಾರೆ, ಓದಲಿ, ಮತ್ತೂ ಹೆಚ್ಚು ಓದಲಿ ಅಂತ ಆಶಯ ಮತ್ತು ಸಂತೋಷ. ನಾವೂ ಅಷ್ಟೇ. ಎಂದೂ ಅಸಭ್ಯ ಪೋಲಿ ಪುಸ್ತಕಗಳನ್ನು ಮನೆ ಮಂದಿಯ ರೊಕ್ಕದಲ್ಲಿ ಕೊಳ್ಳಲಿಲ್ಲ. ವಿಚಿತ್ರ ಅನ್ನಿಸುವಂತಹ ಪುಸ್ತಕಗಳನ್ನು, ಓದದೇ ಮೂಲೆಗೆಸೆದು ದುಂದುವೆಚ್ಚ ಮಾಡಿದ ಪುಸ್ತಕಗಳನ್ನು ಕೊಂಡಿರಬಹುದು. ಆದರೆ ಅಸಭ್ಯ, ನಿಷಿದ್ಧ ಪುಸ್ತಕಗಳು? no chance.

ಒಂದಿಷ್ಟು ರೊಕ್ಕ ಹೊಂದಿಸಿಕೊಂಡು ಒಂದು ಸಂಜೆ ಧಾರವಾಡ ಪೇಟೆಗೆ ಹೋದೆ. ಸಂಜೆಯೇ ಹೋಗಬೇಕು ಯಾಕೆಂದರೆ ಅಝಾದ್ ಪಾರ್ಕ್ ಮುಂದೆ ಪುಸ್ತಕ ಹರಡಿಕೊಂಡು ಕೂಡುವ ವ್ಯಾಪಾರಿ ಸಂಜೆ ಮಾತ್ರ ಬರುತ್ತಾನೆ. ಹೆಚ್ಚಾಗಿ ೧೯೮೪ ರ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿರಬೇಕು.

ಅಲ್ಲೇ ಅಝಾದ ಪಾರ್ಕ್ ಗೇಟಿನ ಪಕ್ಕದಲ್ಲಿ ತನ್ನ ಎಂದಿನ ಜಾಗದಲ್ಲಿ ಕೂತಿದ್ದ ಪುಸ್ತಕ ವ್ಯಾಪಾರಿ. ಅದೆಷ್ಟು ಬಾರಿ ಅಲ್ಲಿ ಹೋಗಿ, ಅವನ ಮುಂದೆ ಹರಡಿದ್ದ ಪುಸ್ತಕಗಳನ್ನು ಎತ್ತೆತ್ತಿ ನೋಡಿ, ಕೊಳ್ಳದೇ, ವಾಪಸ್ ಇಟ್ಟು ಬಂದಿದ್ದೆನೋ. ಅವನಿಗೇನೂ ನೆನಪಿರಲಿಕ್ಕಿಲ್ಲ. ನಮ್ಮಂತವರು ಅದೆಷ್ಟು ಸಾವಿರ ಜನ ಬಂದು, ಅದನ್ನೇ ಮಾಡಿ, ಬೋಣಿ ಕೂಡ ಮಾಡದೇ ಎದ್ದು ಹೋಗುತ್ತಾರೋ. ಆದರೆ ನಾನು, ಅಣ್ಣ ಕೂಡಿ ಕಮ್ಮಿಯೆಂದರೂ ಒಂದು ನಾಲ್ಕು ಬಾರಿ ಅಲ್ಲಿ ಹತ್ತಾರು ಪುಸ್ತಕಗಳ ವ್ಯಾಪಾರ ಮಾಡಿದ್ದು ನೆನಪಿತ್ತು ಬಿಡಿ.

ಅವನ ಪುಸ್ತಕದ ಕಂತೆ ಮುಂದೆ ತುದಿಗಾಲಲ್ಲಿ ಕೂತು ಕಣ್ಣಾಡಿಸತೊಡಗಿದೆ. ಅವನು ಒಂದು ಕಣ್ಣಿಟ್ಟ. ಇಡಲೇಬೇಕು. ಇಲ್ಲವಾದರೆ ಪುಸ್ತಕ ಕಳ್ಳರ ಸಂಖೆ ಬಹಳ. ಮೊದಲೇ ರಸ್ತೆ ಬದಿಯ ಬಡ ಪುಸ್ತಕ ವ್ಯಾಪಾರಿ. ಕಳ್ಳತನ ತಡೆಗಟ್ಟಲಿಲ್ಲ ಅಂದರೆ ಅಷ್ಟೇ ಮತ್ತೆ. ಶಿವಾಯ ನಮಃ! ಮತ್ತೆ ಕಳ್ಳರು ಸಣ್ಣ  ಮಕ್ಕಳನ್ನು ಬಿಟ್ಟು ಕಳ್ಳತನ ಮಾಡಿಸುವದೂ ವಾಡಿಕೆ ನೋಡಿ. ಹಾಗಾಗಿ ನನ್ನ ಮೇಲೆ ಒಂದು ಕಣ್ಣು ಜಾಸ್ತಿಯೇ ಮಡಗಿರಬೇಕು. ಹಾಗಂತ ನಮ್ಮ ವಿಚಿತ್ರ ಆಲೋಚನೆ.

ಪುಸ್ತಕದ ರಾಶಿಯಲ್ಲಿ ಜಾಸ್ತಿ ಹುಡುಕಾಡುವ, ಕಿತ್ತಾಡುವ ಜರೂರತ್ತೇ ಬರಲಿಲ್ಲ. ಸಿಕ್ಕಿತಲ್ಲ. ಎದುರಿಗೇ ಇತ್ತು ನನಗೆ ಬೇಕಾಗಿದ್ದ ಮಾಟದ ಪುಸ್ತಕ. ಪುಸ್ತಕದ ಟೈಟಲ್ ಏನಿತ್ತು? ಅದೇ ನೆನಪಿಲ್ಲ ನೋಡಿ. ವಶೀಕರಣ ಅಂತಿತ್ತೇ? ನೆನಪಿಲ್ಲ. ಬಂಗಾಲಿ ಕಾಲಾ ಜಾದೂ ಅಂತ ಮಾತ್ರ ಇರಲಿಲ್ಲ. ಯಾಕೆಂದರೆ ಆ ಪುಸ್ತಕ ಬರೋಬ್ಬರಿ ನೆನಪಿದೆ. ಆ ಪುಸ್ತಕ ಹಳದಿ ಬಣ್ಣದ ಚಕಮಕ ಕಾಗದದ ಕವರಿನಲ್ಲಿ ಇರುತ್ತಿತ್ತು. ಅದನ್ನು ಓದುವಂತೆ ಇರಲಿಲ್ಲ. ಬೇಕಾದರೆ ಮನೆಗೆ ತೆಗೆದುಕೊಂಡು ಹೋಗಿ ಓದಬೇಕು. ಅಷ್ಟು ರಹಸ್ಯ. ನಮಗೆ ಬೇಕಾಗಿದ್ದ ಮಾಟದ ಪುಸ್ತಕ ಸೀದಾ ಸಾದಾ ಇತ್ತು.

ಪುಸ್ತಕ ಸಿಕ್ಕಿತು. ಅದೇ ಹೌದು ಅಂತ ಖಾತ್ರಿ ಮಾಡಿಕೊಂಡೆ. ನಮ್ಮ ದೋಸ್ತ ಹೇಳಿದ 'ಸೀರೆ ಎತ್ತಿಸಿಬಿಡುವ' ಮಾಟದ ನೆನಪಿತ್ತು. ಆದರೆ ಅದು ಯಾವ ಪುಟದಲ್ಲಿದೆ ಅಂತ ಗೊತ್ತಿರಲಿಲ್ಲ. random ಆಗಿ ಪುಟ ತಿರುವಿದೆ. ಆದರೆ ಆ particular ಮಾಟ ಕಂಡುಬರಲಿಲ್ಲ. ಟೈಟಲ್ ಸರಿಯಿದೆ. ಬರೆದ ಲೇಖಕರ ಹೆಸರು ಸರಿಯಿದೆ. ಹಾಗಾಗಿ ಇದೇ ಪುಸ್ತಕ ಇರಬೇಕು. ರೊಕ್ಕ ಕೊಟ್ಟು ತೆಗೆದುಕೊಳ್ಳಲಿಕ್ಕೆ ಓಕೆ. ಮನೆಗೆ ಹೋಗಿ ಸಾದ್ಯಂತ ಓದಿದರೆ ತಿಳಿಯುತ್ತದೆ ಅಂತ ವಿಚಾರ ಮಾಡಿದೆ. ಪುಸ್ತಕ ಖರೀದಿ ಮಾಡಲು ಮುಂದಾದೆ.

ಧಾರವಾಡದಲ್ಲಿ ನೀವು ಏನೇ ಖರೀದಿ ಮಾಡಿದರೂ ಚೌಕಾಶಿ ಮಾಡಲೇಬೇಕು. ಇಲ್ಲವಾದರೆ ಫುಲ್ ಬೋಳಿಸಿಕೊಂಡು ಬರಬೇಕಾಗುತ್ತದೆ. ವ್ಯಾಪಾರಿಗಳಿಗೂ ಅದು ಗೊತ್ತಿರುತ್ತದೆ. ಹಾಗಾಗಿ ಅವರೂ ಯದ್ವಾತದ್ವಾ ಬೆಲೆ ಹೇಳುತ್ತಾರೆ. ಅಂತಹ ವ್ಯಾಪಾರಿಗಳು. ಇಂತಹ ಗಿರಾಕಿಗಳು. ಎಂತಹ ಡೆಡ್ಲಿ ಕಾಂಬಿನೇಶನ್ ತಂದೆ ಭೋಲೆ ಶಂಕರ!

ಬೆಲೆ ಕೇಳಿದರೆ 'ಮೂರು ರುಪಾಯಿ!' ಅಂದ ರಸ್ತೆ ಬದಿ ವ್ಯಾಪಾರಿ ಒಂದು ತರಹ ಅಸಡ್ಡೆಯಿಂದ ನೋಡಿದ. ಅಪರೂಪಕ್ಕೆ ಪೇಟೆಗೆ ಬರಲಿಕ್ಕೆಂದೇ ಪ್ಯಾಂಟ್ ಹಾಕಿದಂತಿರುವ ಚೋಟು ಹುಡುಗ ಉರ್ಫ್ ನಾನು ಪುಸ್ತಕದ ಬೆಲೆ ಕೇಳಿದರೆ ಸಿಕ್ಕ ಪ್ರತ್ಯುತ್ತರ ಅದು. ನಾನು ಎಲ್ಲೋ ಟೈಮ್ ವೇಸ್ಟ್ ಪಾರ್ಟಿ ಅಂತ ತಿಳಿದಿರಬೇಕು. ಅಂತವರನ್ನೇ ನೋಡಿ ನೋಡಿ ಅವನು ಹಾಗೆಂದುಕೊಂಡರೆ ತಪ್ಪು ಅವನದಲ್ಲ ಬಿಡಿ.

ತಡಿ ಇವನಿಗೆ ಮಾಡೋಣ ಅಂತ ಕಿಸೆಯೊಳಗೆ ಆಳಕ್ಕೆ ಕೈಬಿಟ್ಟು ಒಂದು ಐದು ರೂಪಾಯಿ ನೋಟು ತೆಗೆದೆ. ಇದ್ದಿದ್ದೇ ಅಷ್ಟು. ಅದರಲ್ಲಿ ಪುಸ್ತಕ, ನಂತರ ಒಂದು ಪಫ್ (ಬೇಕರಿ ಐಟಂ) ಪ್ಲಸ್ ರಿಟರ್ನ್ ಬಸ್ ಚಾರ್ಜ್ ಹೊಂದಬೇಕು. ಪಫ್ ಮತ್ತು ಬಸ್ ಚಾರ್ಜಿಗೆ ಎರಡು ರೂಪಾಯಿ ಸಾಕು. ಹಾಗಂತ ಆ ರಸ್ತೆ ವ್ಯಾಪಾರಿ ಕೇಳಿದ ಅಂತ ಉಳಿದ ಮೂರು ರೂಪಾಯಿ ಕೊಟ್ಟು ಮೂರು ನಾಮ ಹಾಕಿಸಿಕೊಳ್ಳಬೇಕೆ? ನೋ ಚಾನ್ಸ್. ಚೌಕಾಶಿ ಶುರು.

'ಒಂದೂವರಿ ರೂಪಾಯಿಗೆ ಕೊಡ್ರೀ,' ಅಂತ ಫಸ್ಟ್ ಆಫರ್ ಮಾಡಿದೆ. ಶೇಕಡಾ ಐವತ್ತು ಅಥವಾ ಅದಕ್ಕಿಂತ ಕಮ್ಮಿ ಬೆಲೆಗೆ ಕೇಳಬೇಕು. ಅದು ಪದ್ಧತಿ.

'ಏ, ಒಂದೂವರಿ ರೂಪೇಕ್ಕ ಬುಕ್ಕಿನ ಕವರ್ ಸುದಾ ಬರೋದಿಲ್ಲ. ಏನಂತ ಕೇಳ್ತೀರಿ!?' ಅಂತ ಡೈಲಾಗ್ ಬಾಜಿ ಹೊಡೆದ. ಅದೆಲ್ಲ ಸ್ಟ್ಯಾಂಡರ್ಡ್. ಗೊತ್ತಿದ್ದದ್ದೇ. ನನ್ನಂತಹ ಚಿಣ್ಣ ಮಾಣಿಗೆ 'ರೀ' ಅಂದು ಗೌರವ ಕೊಟ್ಟಿದ್ದೇ ಜಾಸ್ತಿ.

'ನಿಮಗೂ ನುಕ್ಸಾನ್ ಆಗೋದು ಬ್ಯಾಡ. ನಮಗೂ ತುಟ್ಟಿಯಾಗೋದು ಬ್ಯಾಡ. ಎರಡು ರುಪಾಯಿಗೆ ಕೊಡ್ರೀ' ಅಂದು ಕೌಂಟರ್ ಆಫರ್ ಮಾಡಿದೆ. ನುಕ್ಸಾನ್, ತುಟ್ಟಿ ಅಂತೆಲ್ಲ heavy duty ಶಬ್ದ ಉಪಯೋಗಿಸಿ ದೊಡ್ಡವರು ಹೇಗೆ ಚೌಕಾಶಿ ಮಾಡುತ್ತಿದ್ದರೋ ಅದೇ ರೀತಿ ಮಾಡಿದೆ.

'ಜಾಬಾದ್ (ಶಾಣ್ಯಾ) ಅದೀ ತಮ್ಮಾ!' ಅನ್ನುವ ಅಚ್ಚರಿಯ ಲುಕ್ ಕೊಟ್ಟ ವ್ಯಾಪಾರಿ ಮುಂದಿನ ಮಾತಾಡಲಿಲ್ಲ. ಮಾತಿಲ್ಲದೆ ಹಳೆಯ ರದ್ದಿ ಪೇಪರಿನಲ್ಲಿ ನನಗೆ ಬೇಕಾಗಿದ್ದ ಪುಸ್ತಕ ಸುತ್ತಿ ಪ್ಯಾಕ್ ಮಾಡತೊಡಗಿದೆ. ಗೊತ್ತಾಯಿತು ಸೌದಾ ಆಗಿದೆ ಅಂತ. ಸೌದಾ ಪಟಾಯಿಸಿ ಸೌದಾಗರ್ ಆದ ಖುಷಿಯಲ್ಲಿ ಮುಖವರಳಿತು. ಐದು ರುಪಾಯಿ ಕೊಟ್ಟೆ. ಚಿಲ್ಲರೆ ಮೂರು ರೂಪಾಯಿ ಮತ್ತು ಪುಸ್ತಕ ಕೈಯಲ್ಲಿಟ್ಟು, ಧಾರವಾಡ ಮಂದಿಯ ಟಿಪಿಕಲ್ ಹಾಪ್ ನಮಸ್ಕಾರ ಹೊಡೆದು, ಹೋಗಿ ಮತ್ತೆ ಬನ್ನಿ ಅನ್ನುವ ರೀತಿಯ ಲುಕ್ ಕೊಟ್ಟ.

ಪುಸ್ತಕ ಕೈಗೆ ಬಂದಿದ್ದೇ ಬಂದಿದ್ದು ಫುಲ್ ಥ್ರಿಲ್. ಅಲ್ಲೇ ಕುಳಿತು ಫುಲ್ ಓದಿಬಿಡಲೇ ಅನ್ನಿಸಿತ್ತು. ಆದರೆ ಆಗಲೇ ಎಂಟು ಘಂಟೆ ಸಮಯ. ಒಂಬತ್ತರೊಳಗೆ ಮನೆ ಮುಟ್ಟಿಕೊಳ್ಳಬೇಕು. ಅಂದರೆ ಎಂಟೂವರೆ ನವೋದಯನಗರ ಸಿಟಿ ಬಸ್ ಮಿಸ್ ಮಾಡಿಕೊಳ್ಳಬಾರದು. ಅಷ್ಟರಲ್ಲಿ ಒಂದು ಪಫ್ ತಿಂದು, ಮರುಧರ ಪ್ಯಾವೂನಲ್ಲಿ ನೀರು ಕುಡಿದು, ಅಷ್ಟಿಷ್ಟು ಪೇಟೆ ಸುತ್ತಾಡಿ, ಸಿಟಿ ಬಸ್ ಸ್ಟಾಂಡ್ ಮುಟ್ಟಿಕೊಳ್ಳಬೇಕು.

ಅವೆಲ್ಲವನ್ನೂ ಮಾಡಿ ಮುಗಿಸಿ ಅಂತೂ ಮನೆ ಮುಟ್ಟಿಕೊಂಡೆ. 'ಏನು ಮಾಡಿ ಬಂದಿ ಪ್ಯಾಟ್ಯಾಗ?' ಅಂತ ಅಮ್ಮನ ಪ್ರಶ್ನೆ. ಎಲ್ಲಿ ಹೋಗಿಬಂದರೂ ಅಡ್ಡಿಯಿಲ್ಲ. ಆದರೆ ಎಲ್ಲ ವರದಿ ಒಪ್ಪಿಸಬೇಕು ಅಷ್ಟೇ. ಅದು ಮನೆ ಪದ್ಧತಿ. ಮಾತಾಡಲಿಲ್ಲ. ಕೈಯಲ್ಲಿದ್ದ ರದ್ದಿ ಪೇಪರಿನಲ್ಲಿ ಸುತ್ತಿದ್ದ ಸಾಮಾನು ತೋರಿಸಿದೆ. ಅದೊಂದು ಪುಸ್ತಕ ಅಂತ ಗೊತ್ತಾಗಲು ಅಮ್ಮನಿಗೆ ಜಾಸ್ತಿ ಹೊತ್ತು ಬೇಕಾಗಲಿಲ್ಲ. ಎಲ್ಲರೂ ಪುಸ್ತಕ ಪ್ರೇಮಿಗಳೇ ಮನೆಯಲ್ಲಿ. 'ಯಾವ ಸೆಕೆಂಡ್ ಹ್ಯಾಂಡ್ ಪುಸ್ತಕ ತಂದುಕೊಂಡಿ?' ಅಂತ ಮುಂದಿನ ಪ್ರಶ್ನೆ. 'ಎಲ್ಲಿ ಸೆಕೆಂಡ್ ಹ್ಯಾಂಡ್? ಹೊಸಾದೇ. ವಶೀಕರಣ, ಜಾದೂ, ಮಂತ್ರ, ತಂತ್ರದ ಬಗೆಗಿನ ಪುಸ್ತಕ,' ಅಂದೆ. 'ನೀನೋ, ನಿನ್ನ ಹುಚ್ಚೋ! ಆ ಪತ್ತೇದಾರಿ ಕಾದಂಬರಿ ಓದೋ ಹುಚ್ಚು ಬಿಡ್ತು ಅನ್ನೋದ್ರಾಗ ಇದು ಮತ್ತೇನೋ ಹೊಸಾ ಹುಚ್ಚು ಶುರು ಆಗ್ಯದಲ್ಲೋ! ಹಾಂ!?' ಅಂತ ಸಣ್ಣಗೆ ಜಬರಿಸಿದ ಅಮ್ಮ, ಬಟ್ಟೆ ಚೇಂಜ್ ಮಾಡಿ, ಕೈಕಾಲ್ಮುಖ ತೊಳೆದು ಊಟಕ್ಕೆ ಬರಲು ಹೇಳಿದಳು. ಆಗೇ ನೆನಪಾಗಿದ್ದು - 'ಹೌದಲ್ಲ! ಪತ್ತೇದಾರಿ ಕಾದಂಬರಿ ಓದದೇ ಜಮಾನಾ ಆಗಿಹೋಗಿದೆ' ಅಂತ. ಅಷ್ಟೂ ಲೈಬ್ರರಿಗಳಲ್ಲಿದ್ದ ಅಷ್ಟೂ ಪತ್ತೇದಾರಿ ಕಾದಂಬರಿಗಳನ್ನು ಸ್ವಾಹಾ ಮಾಡಿಯಾಗಿತ್ತು. ಮತ್ತೆಲ್ಲಿಂದ ತರೋಣ? ಮತ್ತೆ ಕಾದಂಬರಿ ಇತ್ಯಾದಿಗಳನ್ನು ಬಿಟ್ಟಿ ಓದಿಯೇ ರೂಢಿ. ರೊಕ್ಕ ಕೊಟ್ಟು ತರುವದೇನಿದ್ದರೂ ಬೇರೆ ತರಹದ ಪುಸ್ತಕಗಳೇ. ಮಧ್ಯಮ ವರ್ಗದ ಮಂದಿಯಾದ ನಾವು ಎಲ್ಲಿಯಾದರೂ ಒಂದು ಕಡೆ ಗೆರೆ ಎಳೆಯಲೇಬೇಕು ನೋಡಿ. ಪುಸ್ತಕ ಪ್ರೇಮದಂತಹ discretionary ವೆಚ್ಚಗಳಿದ್ದರಂತೂ ಅಷ್ಟೇ ಮತ್ತೆ.

ಅಂದು ಊಟ ಸಿಕ್ಕಾಪಟ್ಟೆ ಗಡಿಬಿಡಿಯಲ್ಲಿ. ಯಾವಾಗ ನನ್ನ ಕೋಣೆ ಸೇರಿ ಪುಸ್ತಕ ತೆಗೆದೇನೋ ಅಂತ ಕಾತುರ. ಆ ಘಳಿಗೆ ಅಂತೂ ಬಂತು. ವಶೀಕರಣದ ಪುಸ್ತಕ ತೆಗೆದು ಕೂತೆ ನೋಡಿ. ಅಷ್ಟೇ. ಬೇರೆಯೇ ಲೋಕಕ್ಕೆ ಹೋಗಿಬಿಟ್ಟೆ.

ಅಬಬಬಬಾ.... ಏನು ಅಂತೀರಿ. ಎಂತೆಂತಹ ಜಾದು ತೋನಾಗಳ ಬಗ್ಗೆ ಬರೆದುಬಿಟ್ಟಿದ್ದಾರೆ ಗದಗಿನ ಮಹಾಂತೇಶ ಶಾಸ್ತ್ರಿಗಳು. ಮೊದಲು ಶುರುವಾಗಿದ್ದೇ, 'ಮಹಿಳೆಯನ್ನು ವಶಪಡಿಸಿಕೊಳ್ಳುವದು ಹೇಗೆ?' ಶಿವನೇ ಶಂಭುಲಿಂಗ! ನಾವಿನ್ನೂ ಅಗ ಏಳನೇ ಕ್ಲಾಸ್. ಆ ತರಹದ ವಿಚಾರ ಇನ್ನೂ ಬಂದಿರಲಿಲ್ಲ. ಹಾಗಾಗಿ ಪುಟ ತಿರುಗಿಸಿದೆ. ಮುಂದಿನದು, 'ಪುರುಷನನ್ನು ಹೇಗೆ ನಿಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುವದು?' ಅದಕ್ಕೂ ಒಂದು ಮಾಟ ಮಂತ್ರದ ಸಲಹೆ. ಬರೀ ಇದೇ ಆಯಿತು. ನಮಗೆ ಬೇಕಾಗಿದ್ದ ಮಾಟ ಮಂತ್ರ ಎಲ್ಲಿದೆಯೋ? ಸರ ಸರ ಅಂತ ಪುಟ ತಿರುಗಿಸುತ್ತ ಹೋದೆ. ಆಗ ಬಂತು ನೋಡಿ.

ಅಂತೂ ಸುಮಾರು ಹೊತ್ತು ಪುಟ ತಿರುವಿ ಹಾಕಿದ ನಂತರ ನಮಗೆ ಬೇಕಾಗಿದ್ದ ಮಾಟದ ವಿವರಣೆ ಬಂತು. ಅದಕ್ಕೊಂದು ಭಯಂಕರ ಫ್ಯಾನ್ಸಿ ಟೈಟಲ್ ಇತ್ತು ಮಾರಾಯರೇ. ಅದೇ ಮರೆತು ಹೋಗಿದೆ. ಪರಿಣಾಮ ಸೀರೆ ಮೇಲೆದ್ದು ಹಾರುವದೇ  ಆದರೂ ಅದಕ್ಕೊಂದು ಬರೋಬ್ಬರಿ ಟೈಟಲ್ ಬೇಕಲ್ಲ? ಸ್ತ್ರೀ ವಸ್ತ್ರಾರೋಹಣ? ಏನೋ ಒಂದು.

ಮಹಾಂತೇಶ ಶಾಸ್ತ್ರಿಗಳು ಭಾಳ ಶಿಸ್ತುಬದ್ಧವಾಗಿ ಬರೆದಿದ್ದರು. ಮೊದಲು ಆ ಮಾಟದ ಕ್ರಮದ ಬಗ್ಗೆ, ಅದರಿಂದಾಗುವ ಪರಿಣಾಮದ ಬಗ್ಗೆ ಒಂದು ಚಿಕ್ಕ ವಿವರಣೆ. ನಂತರ ಅದಕ್ಕೆ ಬೇಕಾಗುವ ಸಾಮಾನು, ಸಲಕರಣೆಗಳ ಪಟ್ಟಿ. ಬೇಕಾದರೆ ಹೆಚ್ಚಿನ ವಿವರಣೆ. ನಂತರ ಮಾಡುವ ಕ್ರಮ. ಅದೂ step by step. ಕೊನೆಯಲ್ಲಿ ವಿಶೇಷ ಸೂಚನೆ. ಮಾಡುತ್ತಿರುವದು ಖತರ್ನಾಕ ಮಾಟ ಮಂತ್ರವಾದ್ದರಿಂದ ಪ್ರತಿಯೊಂದಕ್ಕೂ ವಿಶೇಷ ಸೂಚನೆ ಇದ್ದೇ ಇರುತ್ತಿತ್ತು. ಒಂದು ವಿಶೇಷ ಅಂದರೆ ಅದು ಹೇಗೆ ಪತ್ರಿಯೊಂದನ್ನೂ ಒಂದೇ ಒಂದು ಪೇಜಿಗೆ ಸೀಮಿತಗೊಳಿಸಿದ್ದರು ಅಂತ. ಪ್ರಕಾಶಕರ ನಿರ್ದೇಶನ ಇರಬೇಕು. 'ಶಾಸ್ತ್ರಿಗಳೇ, ಒಂದು ಮಾಟದ ವಿವರಣೆ ಒಂದು ಪೇಜಿನ್ಯಾಗ ಫಿಟ್ ಆಗಬೇಕು ನೋಡ್ರಿ. ಪ್ರತಿ ಪೇಜಿಗೆ ಬ್ಯಾರೆ ಬ್ಯಾರೆ ಬರಬೇಕು. ಹಾಂಗ ಬರೆದುಕೊಡ್ರಿ!' ಅದರ ಪ್ರಕಾರ edit ಮಾಡಿ ಬರೆದಿದ್ದರೋ ಏನೋ.

ವಾಮಾಚಾರ ಪಂಡಿತ ಮಹಾಂತೇಶ ಶಾಸ್ತ್ರಿಗಳು ಬರೋಬ್ಬರಿ ವಿವರಣೆ ಕೊಟ್ಟಿದ್ದರು. ಒಂದು ಸಾರೆ quick scanning ಮಾಡಿದೆ. ವಿವರಣೆ ಎಲ್ಲ ಸುಮಾರು ನಮ್ಮ ದೋಸ್ತ ಹೇಳಿದ ಪ್ರಕಾರವೇ ಇತ್ತು. ಒಂದು ಲೋಹದ ಬಳೆ, ಅದನ್ನು ಕೈಗೆ ಹಾಕಿಕೊಂಡು ಕೈ ಮೇಲೆ ಏರಿಸುತ್ತ ಹೋಗಬೇಕು, ಅದು ಇದು. ಮಾಟ ಮಾಡಲು ಬೇಕಾದ ವಸ್ತುಗಳ ಪಟ್ಟಿ ನೋಡಿದೆ. ಅವಾಗ ಮಾತ್ರ ಶಾಕ್ ಆಯಿತು. ದೊಡ್ಡ ಪ್ರಮಾಣದ ಝಟಕಾ!

ಎಲ್ಲಿಂದ ತರೋಣ ಆ ಮಾಟದ ಪ್ರಕ್ರಿಯೆಗೆ ಬೇಕಾಗಿದ್ದ ವಸ್ತುಗಳನ್ನು? ಎರೆಹುಳವನ್ನು ಬತ್ತಿಯಾಗಿ ಎಣ್ಣೆಯಲ್ಲಿಟ್ಟು..... ಅಂದಾಗಲೇ ಅನ್ನಿಸಿತ್ತು ಏನೋ ವಿಚಿತ್ರ ಅಂತ. ಈಗ ನೋಡಿದರೆ ಅದು ಒಂದೇ ಅಲ್ಲ, ಮತ್ತೆ ಏನೇನೋ ಬೇಕು. ಬಾವಲಿಯ ತೊಗಲು, ಮತ್ಯಾವದೋ ಪ್ರಾಣಿಯ ರಕ್ತ, ಎಕ್ಕೆ ಹೂವು, ಯಾವದೋ ಲೋಹದ ಬಳೆ, ಯಾವದೋ ಪ್ರಾಣಿಯ ನೆಣದ ಕೊಬ್ಬಿನಿಂದ ತೆಗೆದ ಎಣ್ಣೆ, ಇತ್ಯಾದಿ ಇತ್ಯಾದಿ exotic ವಸ್ತುಗಳು ಬೇಕು. ನಂತರ ಅದ್ಯಾವದೋ ತಿಥಿ, ವಾರ, ಮುಹೂರ್ತ ನೋಡಿ, ಸ್ಮಶಾನದಲ್ಲಿ ಯಾವದೋ ದಿಕ್ಕಿನ ಮೂಲೆಯಲ್ಲಿ ಕುಳಿತು ಮಾಡಬೇಕಂತೆ. ಶಿವಾಯ ನಮಃ! ಆಗೋ ಹೋಗೋ ಮಾತೇ? ಏನೋ ಮನೆಯಲ್ಲೇ ಮಾಡಬಹುದು ಅಂತಿದ್ದರೆ, ಅದೂ ಮನೆಯಲ್ಲೇ ಸಿಗಬಹುದಾದ ಸಾಮಗ್ರಿಗಳನ್ನು ಉಪಯೋಗಿಸಿ ಮಾಡಬಹುದಾಗಿದ್ದರೆ ಅದೊಂದು ಮಾತು. ಈ ಚಿತ್ರವಿಚಿತ್ರ ಸಾಮಾನುಗಳೆಲ್ಲ ಎಲ್ಲಿ ಸಿಗುತ್ತವೋ ಏನೋ!? ಅವನ್ನೆಲ್ಲ ಸಂಪಾದಿಸಲಿಕ್ಕೆ ಸಾಧ್ಯವೇ ಇರಲಿಲ್ಲ. ನಂತರ ಸ್ಮಶಾನದಲ್ಲಿ ಕೂತು ಮಾಡಬೇಕು. ಅದೂ ರಾತ್ರಿ. ಈಗ ನಗು ಬರುತ್ತದೆ. ಆಗ ನಗು ಬಂದಿರಲಿಲ್ಲ. ಒಂದು ತರಹದ ಅಸಹಾಯಕತೆ. 'ಛೇ! ಇನ್ನೂ ಕೇವಲ ಹನ್ನೆರೆಡೇ ವರ್ಷ ನನಗೆ. ನಮಗೂ ಒಂದು ಇಪ್ಪತ್ತೈದು ವರ್ಷವಾಗಿ, ಫುಲ್ ಇಂಡಿಪೆಂಡೆಂಟ್ ಆಗಿ, ಯಾರ ಹಂಗೂ ಇರದೇ ಇದ್ದರೆ ಎಷ್ಟು ಬೆಸ್ಟ್ ಆಗುತ್ತಿತ್ತು ಶಿವಾ!? ಸೀದಾ ಸ್ಮಶಾನಕ್ಕೆ ಹೋಗಿ ಪದ್ಮಾಸನ ಹಾಕಿ ಕುಳಿತೇಬಿಡಬಹುದಿತ್ತು. ಈ ಮಾಟವನ್ನು ಮಾಡಿ ಒಂದು ಕೈ ನೋಡಬಹುದಿತ್ತು! ಈಗ ಅದು ಸಾಧ್ಯವಿಲ್ಲವಲ್ಲ!' ಅನ್ನುವ ಹತಾಶೆಯ ಫೀಲಿಂಗ್. ಏನು ಮಾಡಲಿಕ್ಕೆ ಬರುತ್ತದೆ? ಅಲ್ಲಿಗೆ ಆ ಐಡಿಯಾಕ್ಕೆ ಒಂದು ದೊಡ್ಡ ನಮಸ್ಕಾರ ಹೊಡೆದಿದ್ದಾಯಿತು.

ಇಂತಹ ಹುಚ್ಚು ವಿಚಾರಗಳು ತಲೆಯಲ್ಲಿ ಬಂದರೂ ಏನು ಮಾಡಬೇಕು, ಏನು ಮಾಡಬಾರದು ಅಂತ ಪರಾಮರ್ಶಿಸುವ ಸಣ್ಣ ಪ್ರಮಾಣದ ವಿವೇಕ ಇತ್ತು. ಹಾಗಾಗಿ ಈ ಮಾಟಕ್ಕೆ ನಮ್ಮದೇ ಆದ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ವಿಚಾರವಿತ್ತು. ಮೊದಲೇ ಹೇಳಿದಂತೆ ಸ್ತ್ರೀಯರ ಸೀರೆ ಎತ್ತಿಸಿಬಿಡುವ ಮಾಟ ಅಂತ ಕೇಳಿದಾಗಲೇ ಒಂದು ತರಹದ ಅಸಹ್ಯ ಬಂದಿತ್ತು. ಆ ಚಿಣ್ಣ ವಯಸ್ಸಿನಲ್ಲಿ ಅಂತಹದೊಂದನ್ನು ಮಾಡುವ ಸಾಧ್ಯತೆಯನ್ನು ಕೂಡ ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. Impossible! 'ಮಹಿಳೆಯರ ಸೀರೆ ಬೇಡ. ಹಾಗೆಲ್ಲಾ ಮಾಡಬಾರದು. ಅದು ತಪ್ಪು. ಆದರೆ ಯಾರದ್ದಾದರೂ ಲುಂಗಿ ಎತ್ತಿಸಿಬಿಟ್ಟರೆ? ಗಂಡಸರು ತಾನೇ? ಗಂಡಸರ ಲುಂಗಿ ಹೇಗೂ ಸ್ಥಾನಪಲ್ಲಟ ಆಗುತ್ತಲೇ ಇರುತ್ತದೆ. ನಾವು ಮಾಟ, ಮಂತ್ರ ಮಾಡಿದರೆ ಏನು ದೊಡ್ಡ ಮಾತು? ಗಂಡಸರಿಗೆ ಗೊತ್ತೂ ಆಗಲಿಕ್ಕಿಲ್ಲ,' ಅಂತ ಸೀರೆ ಧಾರಿ ಮಹಿಳೆಯರನ್ನು ಬಿಟ್ಟು ಯಾವದಾದರೂ ಲುಂಗಿ ಧಾರಿ ಗಂಡಸರ ಮೇಲೆ ಪ್ರಯೋಗ ಮಾಡೋಣ ಅಂತ ಒಂದು ಸಣ್ಣ ದುರಾಲೋಚನೆ ಬಂದಿತ್ತು. ಯಾರದಾದರೂ 'ಕೆಟ್ಟ' ಗಂಡಸರ ಮೇಲೆ ಪ್ರಯೋಗ ಮಾಡಿನೋಡೋಣ ಅಂತ ನಿರ್ಧಾರ ಮಾಡಿಯಾಗಿತ್ತು. ಸುಲಭವಾಗಿ ಸಿಗದ ಸಾಮಾನುಗಳ ಕಾರಣದಿಂದ ಮಾಡಲಾಗಲೇ ಇಲ್ಲ. 'ಕೆಟ್ಟ' ಗಂಡಸರ ನಸೀಬ್ ಬರೋಬ್ಬರಿ ಇತ್ತು. ಬಚಾವ್ ಆದರು. ಇಲ್ಲವಾದರೆ ಅಷ್ಟೇ ಮತ್ತೆ!

ಏನೇ ಇರಲಿ. ಪುಸ್ತಕ ಬರೆದಿದ್ದ ಪಂಡಿತ ಮಹಾಂತೇಶ ಶಾಸ್ತ್ರಿಗಳು ಮಾತ್ರ ಫುಲ್ impress ಮಾಡಿಬಿಟ್ಟಿದ್ದರು. ಅವರು ಬರೆದ ಇತರೆ ಪುಸ್ತಕಗಳನ್ನೂ ಸಹ ಕೊಂಡು ಓದಬೇಕು ಅಂತ ಅನ್ನಿಸಿಬಿಟ್ಟಿತು. 'ಮಾಟ ಮಂತ್ರವಂತೂ ಸಾಧ್ಯವಾಗಲಿಲ್ಲ. ಸಮ್ಮೋಹಿನಿ (hypnotism) ಕಲಿಯೋಣ,' ಅಂತ ತಲೆಗೆ ಬಂದುಬಿಟ್ಟಿತು. ಅದರ ಬಗ್ಗೆಯೂ ಒಂದು ಪುಸ್ತಕ ಬರೆದಿದ್ದರಲ್ಲ ಮಹಾಂತೇಶ ಶಾಸ್ತ್ರಿಗಳು. ಸರಿ ಮತ್ತೇನು. ಮತ್ತೊಂದು ಎರಡೋ ಮೂರೋ ರೂಪಾಯಿ ತೆತ್ತು ಮೊದಲು ತಂದಂತಹದ್ದೇ ಇನ್ನೊಂದು ಪುಸ್ತಕ ತಂದೆ. ಓದಲು ಕುಳಿತೆ. ಪುಸ್ತಕ ಓದಿ ಸಮ್ಮೋಹಿನಿ ವಿದ್ಯೆಯನ್ನು ಕಲಿತೇಬಿಡಬೇಕು. ನಂತರ ಸಮ್ಮೋಹಿನಿ ಮಾಡುತ್ತ ಮಜಾ ಮಾಡಿದರಾಯಿತು. ಸಮ್ಮೋಹಿನಿಗೆ ಒಳಗಾದವರಿಂದ ಏನು ಬೇಕಾದರೂ ಮಾಡಿಸಬಹುದಂತೆ! ನೋಡಬೇಕು!

'ಒಂದು ಬಿಳೆ ಹಾಳೆಯನ್ನು ತೆಗೆದುಕೊಳ್ಳಿ. ಅದರ ಮಧ್ಯೆ ಕಪ್ಪು ಶಾಯಿಯಿಂದ ಒಂದು ಬಿಂದುವನ್ನಿಡಿ. ಹಾಳೆಯನ್ನು ಗೋಡೆಗೆ ತೂಗುಹಾಕಿ ಅಥವಾ ಅಂಟಿಸಿ. ಹಾಳೆಗೆ ಎದುರಾಗಿ ಹತ್ತಡಿ ದೂರದಲ್ಲಿ ಕುಳಿತುಕೊಳ್ಳಿ. ಪದ್ಮಾಸನದಲ್ಲಿ ಕೂಡಬೇಕು. ಈಗ ಹಾಳೆಯ ಮಧ್ಯದಲ್ಲಿರುವ ಕಪ್ಪು ಬಿಂದುವನ್ನು ದಿಟ್ಟಿಸಿ ನೋಡಿ. ನೋಡುತ್ತಲೇ ಇರಿ. ಕಣ್ಣು ಪಿಳುಕಿಸಬಾರದು. ಹೀಗೆ ಮಾಡುವದರಿಂದ ಕಣ್ಣಿನ ಶಕ್ತಿ ಜಾಸ್ತಿಯಾಗುತ್ತದೆ. ಶಕ್ತಿಶಾಲಿಯಾದ ದೃಷ್ಟಿ ಸಮ್ಮೋಹಿನಿಗೆ ಬಹಳ ಮುಖ್ಯ,' ಅಂತ ಆರಂಭದಲ್ಲಿ ಬರೆದಿದ್ದರು. ಅದನ್ನು ಕೂಡ ಮಾಡಿದೆ. ಕಣ್ಣು ಉರಿದು ನೀರು ಬಂತು. ಹಾಗೆಯೇ ಆಗುತ್ತದೆ ಆದರೆ ಅಭ್ಯಾಸ ಮುಂದುವರೆಸಿ ಅಂತ ಕೂಡ ಹೇಳಿದ್ದರು. ಒಂದು ನಾಲ್ಕು ದಿನ ಮಾಡಿದ ಮೇಲೆ ಅದೂ ಬೋರಾಯಿತು. ಅಲ್ಲಿಗೆ ಸಮ್ಮೋಹಿನಿ ವಿದ್ಯೆ ಕಲಿಯುವ ಹುಚ್ಚಾಟ ಮುಗಿಯಿತು. ಮುಂದೆ ಕೆಲವೇ ತಿಂಗಳಲ್ಲಿ ಕನ್ನಡಕ ಬಂತು. ಅದೂ ದೊಡ್ಡ ನಂಬರಿನ ಸೋಡಾ ಗ್ಲಾಸ್. ಅದೂ ನಮ್ಮ ಕಾಲದ ಸೋಡಾ ಗ್ಲಾಸ್ ಅದೆಷ್ಟು ದಪ್ಪಗಿರುತ್ತಿತ್ತು ಮಾರಾಯರೇ. ಮೇಲಿಂದ ಅಸಡಾ ಬಸಡಾ ಪ್ಲಾಸ್ಟಿಕ್ ಫ್ರೇಮ್. ಅಂತಹ ಸೋಡಾ ಗ್ಲಾಸ್ ಹಾಕಿದ ನನ್ನ ಕಣ್ಣುಗಳನ್ನು ನೋಡಿದರೆ ಒಂದು ತರಹದ ಸಮ್ಮೋಹಿನಿ ಆಗುತ್ತಿದ್ದುದು ಮಾತ್ರ ನಿಜ. ಆ ತರಹದ ಸೋಡಾ ಗ್ಲಾಸ್ ಮಂದಿಯನ್ನು ನೋಡಿ ಬೇಕಾದರೆ. concentric circles ಅಂದರೆ ಒಂದರಲ್ಲಿ ಒಂದಿರುವ ಹಲವಾರು ವೃತ್ತಗಳು ಗೋಲ್ಗೋಲಾಗಿ ಕಂಡು ನಿಮಗೆ ತಲೆನೋವು ಬರದಿದ್ದರೆ ಹೇಳಿ! ಅದೂ ಒಂದು ತರಹದ ಸಮ್ಮೋಹಿನಿಯೇ!

ಈಗಲೂ ಅವೆಲ್ಲ ಪುಸ್ತಕಗಳು ಧಾರವಾಡದಲ್ಲಿ ಇವೆ. ಮನೆಯ ಯಾವ ಮೂಲೆಯಲ್ಲಿವೆಯೋ. ಎರಡು ಮೂರು ರೂಮುಗಳಲ್ಲಿ ಪುಸ್ತಕಗಳೇ ತುಂಬಿವೆ. ಹೋದಾಗ ಯಾವಾಗಲಾದರೂ ಹುಡುಕಿ ಮತ್ತೆ ಓದಬೇಕು. ಯಂತ್ರ, ತಂತ್ರ, ಯಕ್ಷಿಣಿ, ಪಕ್ಷಿಣಿ, ಸಮ್ಮೋಹಿನಿ, ಇತ್ಯಾದಿಗಳನ್ನು ಕಲಿಯಲು ಅಲ್ಲ. ಸುಮ್ಮನೆ ಓದಿ ಮಜಾ ಮಾಡಲು!

Thursday, May 19, 2016

Book review: The Labyrinth of Power: By The Former Director of the Mossad, Danny Yatom


Excellent memoir written by Danny Yatom, an ex-director of the Mossad, Israeli intelligence agency. Important for several reasons.

1) I do not know of any other ex-director of Mossad venturing to write his memoir. This is probably the first. It is such a secretive organization that till recently Israel had a policy of not disclosing the name of the current head of Mossad. (Correction 27 May 2016: Efraim Halevy, the man who replaced this very Danny Yatom also had written a book in 2006. I have read that also. Forgot about it completely. The name of the book is - Man in the Shadows: Inside the Middle East Crisis with a Man Who Led the Mossad. A very good book. )

2) He is the only director of Mossad to have resigned. That too because he took full responsibility for two failed covert operations which went drastically wrong and brought Israel a lot of disrepute and diplomatic embarrassment.

3) In this memoir, he dispassionately dissects what really went wrong with those two failed covert operations. One was to assassinate senior Hamas terrorist leader Khalid Meshal in Amman, Jordan and the second was surveillance against a Hezbollah operative gone wrong in Switzerland. Both operations were not safe and had too much risk. But the political leadership was in no mood to listen to the recommendations. As true professionals, the agents of Mossad tried to carry them out but failed. Then it became the responsibility of this man to clean up the mess and in the process write his own resignation letter. Good that he got an opportunity to tell his side of the story. Accepts some of his mistakes, shows what can be learned from them and moves on. Hallmark of a leader.


4) That one failure was not the end. Ehud Barak made him his senior aide and that gave him the opportunity to see the Israel & Palestine peace process from very close and be part of it. Majority of the book describes some of the major events such as peace talks with Syria, Jordan, Palestine. Excellent primer on conflict resolution and negotiation skills.


Not much in it if you are looking for the sensational covert operations and details. For that you better read some other books on Mossad. But if you want to read great memoir by a leader, read this!

Wednesday, May 18, 2016

Re: Sorry Bollywood, The Truth About Azhar Lies in His Own Confessions

This is about the news article - Sorry Bollywood, The Truth About Azhar Lies in His Own Confessions

May be. But if you can't prove it in the court of law, then he is as clean as new born baby's bottom! 

There is a reason why confessions don't matter except given on one's own volition before a judicial magistrate. Second thing, people talking all kind of things about Azhar were not under oath. What stopped the govt from prosecuting him and bring those very people to witness box and make them say all that they said under oath?? When it comes to talking under oath, same people shy away.

Me not a fan of Azhar or any cricketer. Have followed the match fixing cases including this from the very beginning. But just wanted to remind ourselves that as a society we chose not to prosecute him and now taking potshots based on immaterial confessions means nothing. Not going to change anything. On the contrary, whatever cases he has fought, he has won.

Not sure what's the status now but till very recently there were no laws in India to charge somebody with match fixing. Best you could do was to use cheating, income tax evasion so on and so forth. Look at what happened to IPL spot fixing case. Case did not even come to trial. Summarily thrown out.

The reason this is important is tomorrow similar thing can happen to YOU. Little differently though. Let's say, somebody accuses you falsely of some charge of rape, murder, assault, robbery etc. Under duress, you make all sorts of confessions just to escape the 'danda' / torture of police. But since you are innocent, most likely you will be acquitted in the court of law. How do you want the society to treat you? You want them to say, 'He is not guilty. Let's welcome him back.' or like this, 'Oh! he made all sorts of confessions but still got out free. He must be guilty yaar!' It is difficult for people to swallow something contrary to their version of truth (even if it is really true) but if we want fair treatment to ourselves under similar circumstances, we better start respecting the law of the land. Match fixing, underworld connections, starlets, scandalous affairs, honey trapping angle, so on and so forth, all good raunchy and sensational material to talk in private but that's where there place is. Period!

Now if Azhar sues these media people for defamation and slander, they will understand. It is one thing to say he made all those confessions as a matter of fact in an article but it's entirely different to cast aspersions on him in public.

Your logical take?

* Copied from my Facebook status.

Saturday, May 14, 2016

Jubilee v/s Jubilation

Many jubilee celebrations but very little real jubilation!

Jubilee celebration is for others to see. Jubilation is how you really feel.

This is the truth behind many silver, golden, platinum jubilee celebrations. Just because things, including relationships, age don't make them automatically better. Even wine which is said to get better with age does so only if preserved well!

Next time be sure to look for jubilation at jubilee functions. At least you should feel jubilation for having taken all the trouble to attend somebody's jubilee celebrations!

When people say they just celebrated silver, golden, platinum, titanium or aluminum jubilee of their marriage anniversary, look on my face is just like - jubilee fine but what about jubilation baba??!!

 *Copied from my facebook status

Thursday, May 12, 2016

ಸೀರೆ ಉಡಲಾಗದಷ್ಟು ನೋವು

''ಚಿಗವ್ವಾರ, ಭಾಳ ನೋಯ್ಸಾಕತ್ತೈತ್ರೀ. ಸೀರಿ ಉಡಾಕ ಸುದಾ ಆಗವಲ್ಲತ್ರೀ, ಚಿಗವ್ವಾರss. ಯವ್ವಾ ನೋಯ್ಸಾಕತ್ತೈತಿ!' ಅಂತ ಆ ಹುಡುಗಿ ಅಳಾಕತ್ತಿತ್ತು ನೋಡ್ರಿ,' ಅಂದವರು ನಮ್ಮ ಏರಿಯಾದ ಒಬ್ಬರು ಹಿರಿಯ ಆಂಟಿ.

ಹಾಂ!?? ಏನೋ ಖತರ್ನಾಕ್ ಸುದ್ದಿ ಇದ್ದ ಹಾಗಿದೆ ಅಂತ ಕಿವಿ ನಿಮಿರಿಬಿಟ್ಟವು.

ಆ ಆಂಟಿ ಮನೆಗೆ ಬಂದವರು ಅಮ್ಮನ ಜೊತೆ ಹರಟೆ ನಡೆಸಿದ್ದರು. ನಾನೂ ಅಲ್ಲೇ ಪಕ್ಕದ ರೂಮಿನಲ್ಲಿ ಓದುತ್ತಿದ್ದೆನಲ್ಲ. ಹಾಗಾಗಿ ಆಸಕ್ತಿ ಇಲ್ಲದಿದ್ದರೂ ಮಾತು ಕೇಳಿಬರುತ್ತಿತ್ತು. ಅದರಲ್ಲೂ 'ಸೀರೆ ಉಡಲಾಗದಷ್ಟು ನೋವು' ಅಂತ ಕೇಳಿದ ಮೇಲಂತೂ ಆಸಕ್ತಿ ಕೂಡ ಬಂದುಬಿಟ್ಟಿತು. ಅಲ್ಲಿಗೆ ಓದು ಶಿವಾಯ ನಮಃ!

ಸೀರೆ ಉಡಲಾಗದಷ್ಟು ನೋವು ಅಂದ ಮೇಲೆ ಏನೋ ದೊಡ್ಡ ಬೇನೆಯೇ ಇರಬೇಕು. ಹಾಗಂತ ನಮ್ಮ ಊಹೆ. ಆಮೇಲೆ ವಿಷಯ ತಿಳಿದರೆ ಅದೊಂದು ವಿಚಿತ್ರ ದುರಂತ ಕಥೆ.

ಸಂಕ್ಷಿಪ್ತವಾಗಿ ಹೇಳಬೇಕು ಅಂದರೆ ಆಗಿದ್ದು ಇಷ್ಟು. ನಮ್ಮ ಏರಿಯಾದವಳೇ ಆದ ಒಬ್ಬ ಹುಡುಗಿ. ಅಕ್ಕನಂತವಳು. ಈ ಆಂಟಿಯ ಪಕ್ಕದ ಮನೆಯವಳು. ತಿಂಗಳ ಹಿಂದೆ ಮದುವೆಯಾಯಿತು. ಅದರಲ್ಲೇನು ಮಹಾ? ಈ ಪುಣ್ಯಾತ್ಗಿತ್ತಿ ಹುಡುಗಿ ಮದುವೆಗೆ ನಾಲ್ಕೈದು ದಿನವಿರುವಾಗ ಆಮಂತ್ರಣ ಕೊಡಲು ಗೆಳತಿಯೊಬ್ಬಳ ಮನೆಗೆ ಹೋಗಿದ್ದಾಳೆ. ಇವಳ ನಸೀಬಕ್ಕೆ ಆ ಗೆಳತಿಯ ಮನೆಯ ಖರಾಬ್ ನಾಯಿ ಕಾಂಪೌಂಡಿನಲ್ಲಿ ಓಡಾಡಿಕೊಂಡಿದೆ. ಅದೂ ಮನುಷ್ಯರಿಗೆ ಕಚ್ಚುವ ದುರಭ್ಯಾಸವಿದ್ದ ಡೇಂಜರ್ ನಾಯಿ. ಮದುವೆಗೆ ಕರೆಯಲು ಹೋದವಳಿಗೆ ಏನಾಗುತ್ತಿದೆ ಅಂತ ಅರಿವಾಗುವದರಲ್ಲಿ ನಾಯಿ ಕಚ್ಚಿಬಿಟ್ಟಿದೆ. ಪುಣ್ಯಕ್ಕೆ ಗೆಳತಿ ಮತ್ತು ಆಕೆಯ ಮನೆಯವರು ಬಂದು ಪಾರು ಮಾಡಿದ್ದಾರೆ. ಕಚ್ಚಿದ ಗಾಯಕ್ಕೆ ಅರಿಶಿಣ ಪರಿಶಿಣ ಹಚ್ಚಿ, ಮದುವೆ ಇನ್ನೆರೆಡು ದಿವಸಗಳಿದ್ದಾಗ ಹೀಗಾಗಿಹೋಗಿದ್ದಕ್ಕೆ ವಿಷಾದ ವ್ಯಕ್ತಿಪಡಿಸಿ, ಚಹಾ ಪಾನಿ ಮಾಡಿಸಿ ಕಳಿಸಿದ್ದಾರೆ. ಮದುವೆಗೆ ಮೊದಲು ಮಾಡುವ ಹಳದಿ, ಮೆಹಂದಿ ಹಚ್ಚುವ ಶಾಸ್ತ್ರ ಹೀಗೆ ನಾಯಿ ಕಚ್ಚಿದಾಗ ಹಳದಿ ಹಚ್ಚಿಸಿಕೊಳ್ಳುವ ಮೂಲಕ ಆರಂಭವಾಗಿಬಿಟ್ಟಿದೆ. ಈ ರೀತಿಯಲ್ಲಿ ಹಳದಿ ಹಚ್ಚುವ ಶಾಸ್ತ್ರ ಮಾಡಿಸಿಕೊಂಡಾಕೆ ಇವಳೇ ಇರಬೇಕು ಬಿಡಿ. ಸ್ಪೆಷಲ್ ಕೇಸ್!

ಮದುವೆಯ ಇನ್ವಿಟೇಶನ್ ಕಾರ್ಡ್ ಕೊಟ್ಟು, ಖಾಲಿಪೀಲಿ ಬಿಟ್ಟಿಯಲ್ಲಿ ನಾಯಿಯಿಂದ ಕಚ್ಚಿಸಿಕೊಂಡು ಮನೆಗೆ ಮರಳಿದ್ದಾಳೆ ಮದುವಣಗಿತ್ತಿ. ಕಚ್ಚಿದ್ದು ನಾಯಿ. ಹುಚ್ಚು ನಾಯಿಯೋ ಪೆಚ್ಚು ನಾಯಿಯೋ ಏನೇ ಇರಲಿ. ನಾಯಿ ಕಚ್ಚಿತು ಅಂದ ಮೇಲೆ ಮುಗಿಯಿತು. ಖತರ್ನಾಕ್ ಚಿಕಿತ್ಸೆ ತೆಗೆದುಕೊಳ್ಳಲೇಬೇಕು. ಅದೇ ಅದೇ ಚಿಕಿತ್ಸೆ. ಹೊಟ್ಟೆ ಮೇಲೆ, ಹೊಕ್ಕುಳಿನ ಸುತ್ತ, ಹತ್ತೋ ಹದಿನಾಲ್ಕೋ ಇಂಜೆಕ್ಷನ್, ದಿನಕ್ಕೆ ಒಂದರಂತೆ. ಯಮಯಾತನೆ ಅಂದರೆ ಅದೇ ಅಂತ ನಾಯಿಯಿಂದ ಕಡಿಸಿಕೊಂಡು ನಂತರ ಆ ಇಂಜೆಕ್ಷನ್ ಯಾತನೆ ಅನುಭವಿಸಿದವರು ಹೇಳಿದ್ದು ಕೇಳಿ ಗೊತ್ತಿತ್ತು. ಆಗ ಸಿಂಗಲ್ ಇಂಜೆಕ್ಷನ್ ಚಿಕಿತ್ಸೆ ಬಂದಿರಲಿಲ್ಲ. ಸರಿ. ಈ ಮದುವೆ ಹುಡುಗಿಗೂ ಕೊಟ್ಟರು, ಅದೇ ಇಂಜೆಕ್ಷನ್, ಹೊಕ್ಕಳಿನ ಸುತ್ತ. ಟೋಟಲ್ ಶಿವಾಯ ನಮಃ!

ಹೊಕ್ಕುಳಿನ ಸುತ್ತ ಕೊಟ್ಟ ಇಂಜೆಕ್ಷನ್ ತಂದಿಟ್ಟ ತೊಂದರೆ ಅಂದರೆ ಸೀರೆ ಉಡಲು ಕಷ್ಟ. ವಿಪರೀತ ನೋವಾಗುತ್ತದೆ. ಸೀರೆ ಉಡದೇ ಮದುವೆಯಾಗುವದಿಲ್ಲ. ಬರ್ಮುಡಾ ಚಡ್ಡಿ ಹಾಕಿಕೊಂಡು, ಬಗಲಿಲ್ಲದ ಲಂಡ ಬನಿಯನ್ ಮಾದರಿಯ ಟೀ-ಶರ್ಟ್ ಹಾಕಿಕೊಂಡು ಯಾರೂ, ಅದರಲ್ಲೂ ಹುಡುಗಿಯರು, ಮದುವೆಯಾಗುವದಿಲ್ಲ. ನಮ್ಮ ಕಾಲದಲ್ಲಿ ಇರಲಿಲ್ಲ. ಈಗ ಇದ್ದರೂ ಇರಬಹುದು. ನಟಿ ಮನೀಷಾ ಕೋಯಿರಾಲಾ ಅಂತೂ ಆಕೆಯ ಎಷ್ಟನೇಯದೋ ಮದುವೆಯಲ್ಲಿ ತಲಬು ತಡೆಯಲಾಗದೇ ಲಗ್ನಮಂಟಪದಲ್ಲೇ ಸಿಗರೇಟ್ ಸೇದಿಬಿಟ್ಟಿದ್ದಳು. ಆ ಚಿತ್ರ ಕೂಡ ಬಂದಿತ್ತು ಪತ್ರಿಕೆಗಳಲ್ಲಿ. ಆದರೆ ಇದು ಧಾರವಾಡ ಹುಡುಗಿಯ ಮದುವೆ. ಅದೂ ಮೂವತ್ತು ವರ್ಷಗಳ ಹಿಂದೆ. ಸೀರೆ ಉಡಬೇಕು ಆದರೆ ಉಡಲಾಗುತ್ತಿಲ್ಲ. ಸಿಕ್ಕಾಪಟ್ಟೆ ನೋವು.

ಮದುವೆ ದಿನ ಬಂದಿದೆ. ಈ ಆಂಟಿ ಹೇಳಿಕೇಳಿ ಆ ಹುಡುಗಿಯ ಪಕ್ಕದ ಮನೆಯವರು. ಓಡಾಡಿಕೊಂಡಿದ್ದಾರೆ. ಕೆಲಸ ಕಾರ್ಯ ಸಂಬಾಳಿಸುತ್ತಿದ್ದಾರೆ. ಆಗ ಹುಡುಗಿ ಕರೆದಿದ್ದಾಳೆ. ಮೇಲಿನ ಡೈಲಾಗ್ ಹೊಡೆದಿದ್ದಾಳೆ, 'ಚಿಗವ್ವಾರ, ಭಾಳ ನೋಯ್ಸಾಕತ್ತೈತ್ರೀ. ಸೀರಿ ಉಡಾಕ ಸುದಾ ಆಗವಲ್ಲತ್ರೀ. ಚಿಗವ್ವಾರss.'

'ನಾನss ಖುದ್ ನಿಂತು ಸೀರಿ ಉಡಿಸಿದೆ. ಹೂನ್ರೀ. ಅಕಿ ಕಡೆ ಆಕಿದ್ದಿಲ್ಲ ಬಿಡ್ರಿ. ಭಾಳ ಅಳಾಕತ್ತಿತ್ತು ಆ ಹುಡುಗಿ. ಹೆಂಗೋ ಮಾಡಿ ಢೀಲಾ ಢೀಲಾ (ಸಡಿಲವಾಗಿ) ಸೀರಿ ಉಡಿಸಿಬಂದೆ ನೋಡ್ರಿ!' ಅಂತ ಹೆಮ್ಮೆಯಿಂದ ಹೇಳುತ್ತಿದ್ದರು ಆಂಟಿ. ಅದು ಅವರ ಜೀವನದ ದೊಡ್ಡ ಸಾಧನೆ ಬಿಡಿ. ನಿಜವಾಗಿಯೂ.

ಅಂದು ಈ ಕಥೆ ಕೇಳಿದಾಗ ಏನನ್ನಿಸಿತ್ತು ಅಂತ ನೆನಪಿಲ್ಲ. ಈಗ ನೆನಪಾದಾಗ ಅನ್ನಿಸಿದ್ದು, 'ಶಿವನೇ, ಎಂತೆಂತಾ ಡಿಸೈನರ್ ಡಿಸೈನರ್ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತೀಯಾ ಮಾರಾಯಾ!? ನಿನ್ನ ಮಹಿಮೆ ಅಪಾರ!'

When the liquor baron Vijay Mallya encouraged a Hindu priest to become a pilot!

Vijay Mallya was the reason a Hindu priest in California became a pilot. He worked as a priest in the Hindu temple at Livermore, California. Vijay Mallya maintains a residence in Sausalito, CA. Once this priest had gone to perform some puja at Mallya's residence here. There the priest shared his practical problem with Mallya. The problem was the priest was getting a lot of requests from devotees to come to their homes and perform rituals. Most of the devotees lived within 200-300 mile range and some even farther. So, the priest could handle only one or maximum two appointments daily if went around in his car. Mallya gave him a suggestion. "Why don't you become a pilot? Then you can rent a plane and fly it yourself. Many towns have airstrips. You fly in, perform rituals, take off, land again and repeat. If you plan well, you can probably cover 3-4 places in a day. It won't be that expensive either. Many devotees like me will reimburse you appropriately. Please think about it."

The enterprising priest took Mallya's advice seriously. He worked hard, completed the requisite training, passed the necessary exams and obtained his flying license. Since then he has been flying everywhere and has been very productive. I heard now he is the head priest at the Sacramento temple.

There was a documentary in Kannada called 'flying pujari' (or something like that) in which the priest shared his experiences and gave full credit to Vijay Mallya for changing his life forever and for better.

Remembered this when Mallya is getting battered for having defaulted on the loans taken from Indian banks and then escaping to the UK. Thumbs up to Mallya and bigger thumbs up to the enterprising and tenacious priest who achieved something that not many manage to achieve.

* Copied from my Facebook status.

Wednesday, May 04, 2016

ನಾಗಮಣಿ ಸ್ಪರ್ಶಿಸಿದಾಗ ಭುಸ್ ಅಂದ ನಾಗಪ್ಪ!

ಅಂದು ಟೀಚರ್ (ಮೇಡಂ) ಅವನನ್ನು ಬಗ್ಗಿಸಿ ಬಗ್ಗಿಸಿ ಬಡಿಯುತ್ತಿದ್ದರು. 'ಎಷ್ಟು ಸರೆ ಹೇಳೇನಿ? ನಾ ಹೇಳಿದ್ದನ್ನ ಎಲ್ಲೆ ಕೇಳಬೇಕು ನೀವು? ಗುಂಡಾ (ಗೋಲಿ) ಆಡಬ್ಯಾಡ್ರೀ ಅಂತ ಹೇಳೇನೋ ಇಲ್ಲೋ? ಆದರೂ ಆಡ್ತೀರಿ? ಆಡ್ತೀರಿ?' ಅಂತ ಅಬ್ಬರಿಸುತ್ತ ಆರನೇ ಕ್ಲಾಸಿನ ಒಬ್ಬ ಚಿಣ್ಣ ಹುಡುಗನನ್ನು ಬಾರಿಸುತ್ತಿದ್ದರು. ದೊಡ್ಡ ಹೊನಗ್ಯಾ ಸೈಜಿನ ಎತ್ತರವಾಗಿದ್ದ ಮಾಸ್ತರಿಣಿ. ಅಂತವರು ಎತ್ತೆತ್ತಿ, ಅಂದರೆ ಕೈ ಎತ್ತೆತ್ತಿ, ಧಡಂ ದುಡುಂ ಅಂತ 'ಕಂಡಲ್ಲಿ ಗುಂಡು' ಅನ್ನುವ ಮಾದರಿಯಲ್ಲಿ ಬಾರಿಸುತ್ತಿದ್ದರೆ ಇವನು ಹಾರಿ ಹಾರಿ ಬೀಳುತ್ತಿದ್ದ. ಜಿಗಿದು ದೂರ ಬಿದ್ದರೆ ಹತ್ತಿರ ಎಳೆದೆಳೆದು ಫಟ್ ಫಟ್ ಅಂತ ಬಾರಿಸುತ್ತಿದ್ದರು. ಒಂದು ಸಲ ಕಪಾಳಕ್ಕೆ ಬಿಗಿದರೆ ಮುಂದಿನ ಸಲ ಬಗ್ಗಿಸಿ ಬೆನ್ನಿಗೆ ಗುದ್ದುತ್ತಿದ್ದರು. ಅತ್ಲಾಗೆ ಇತ್ಲಾಗೆ ಸ್ಥಾನಪಲ್ಲಟವಾದರೆ ಎಳೆದೆಳೆದು ತಲೆಗೆ ಮೊಟಕುತ್ತಿದ್ದರು. ಪಾಪ! ಅವನು ಬರೋಬ್ಬರಿ ರುಬ್ಬಿಸಿಕೊಳ್ಳುತ್ತಿದ್ದ. 'ನಾದಮಯ, ಈ ಲೋಕವೇ ನಾದಮಯ' ಅನ್ನುವ ಮಾದರಿಯಲ್ಲಿ ಅವನನ್ನು ನಾದುತ್ತಿದ್ದರು ಆ ಮೇಡಂ.

'ಅಷ್ಟೂ ಗುಂಡಾ ಬೇಕು ನನಗ! ಅಷ್ಟೂ ಕೊಡು,' ಅನ್ನುತ್ತ ಒಂದು ಸಣ್ಣ ಬ್ರೇಕ್ ತೆಗೆದುಕೊಂಡರು. 'ಕೊಡು ಅಂದ್ರ ಕೊಡಬೇಕು. ಲಗೂನೆ ಅಷ್ಟೂ ಗುಂಡಾ ತೆಗೆದು ಕೊಡು. ಇಲ್ಲಂದ್ರ ನಾ ನಿನಗ ಮತ್ತೂ ಕೊಡತೇನಿ. ಏನು ಕೊಡತೇನಿ ಹೇಳು? ಕಡತಾ. ಈಗ ಕೊಟ್ಟಿದ್ದು ಸಾಕಾಗಲಿಲ್ಲ?' ಅಂತ ಡಿಮ್ಯಾಂಡ್ ಮಾಡುತ್ತಿದ್ದರು. ರುಬ್ಬುವ ಎರಡನೇ ಸೆಶನ್ ಶುರುಮಾಡಲು ಟೀಚರ್ ರೆಡಿ. ಆಗ ಇವನು ಕೊಂಯ್ ಅಂದ.

'ಟೀಚರ್, ನನ್ನ ಕಡೆ ಗುಂಡಾ ಇಲ್ಲರೀ. ನಾ ಆಡಿಲ್ಲರೀ. ಸುಮ್ಮ ನಿಂತು ನೋಡಾಕತ್ತಿದ್ನರೀ. ಟೀಚರ್!' ಅಂತ ಗೋಗರಿಯುತ್ತಿದ್ದ. ಕೇಳಿದರೆ ಗುಂಡಾ (ಗೋಲಿ) ಇಲ್ಲವೆನ್ನುತ್ತಿದ್ದಾನೆ ಅಂತ ಮತ್ತೂ ಸಿಟ್ಟಿಗೆದ್ದ ಟೀಚರ್ ಅವನನ್ನು ರಪ್ ರಪ್ ಅಂತ ಮತ್ತೂ ಬಡಿದರು. ಬಡಿಸಿಕೊಂಡ. ನಮ್ಮ ಕ್ಲಾಸಿನ ಹುತಾತ್ಮ ಆತ. ಉಳಿದ ಹುಡುಗರ ಮೇಲಿನ ರೋಷವನ್ನು ಸದಾ ಅವನ ಮೇಲೆಯೇ ತೀರಿಸಿಕೊಳ್ಳುತ್ತಿದ್ದರು. ಒಳ್ಳೆ ಕಗ್ಗಲ್ಲಿನಲ್ಲಿ ಕಡಿದ ಶಿಲ್ಪದಂತಿದ್ದ. ಸಣ್ಣಗೆ ಕತ್ತರಿಸಿದ ಗುಂಗುರು ಕೂದಲು. ಕಟ್ಟುಮಸ್ತಾದ ದೇಹ. ಒಳ್ಳೆ ಸಿದ್ದಿ ನಿಗ್ರೋ ಹಾಗಿದ್ದ. ನಮ್ಮ ಜಮಾನಾದ ಮಾಸ್ತರ್, ಟೀಚರ್ ಮಂದಿ ಬಡಿಯುತ್ತಿದ್ದ ರೀತಿಯೇ ಸಿಕ್ಕಾಪಟ್ಟೆ ಖರಾಬ್. ಅಂತಹ ಬಡಿತಕ್ಕೆ, ಹೊಡೆತಕ್ಕೆ tailor made ಇವನು.

ಇವನು ಗುಂಡಾ ಮುಚ್ಚಿಟ್ಟುಕೊಂಡಿದ್ದಾನೆ. ಕೊಡುತ್ತಿಲ್ಲ. ಇನ್ನು ತಾವೇ ಮುಂದುವರಿಯಬೇಕು ಅಂತ ಟೀಚರ್ ನಿರ್ಧಾರ ಮಾಡಿದರು. ಅವನನ್ನು ಹತ್ತಿರ ಕರೆದರು. ಇನ್ನೆಷ್ಟು ಬಾರಿಸುವವರು ಇದ್ದಾರೋ ಅಂತ ಅಳಕುತ್ತ ಹತ್ತಿರ ಬಂದ. ಅವನನ್ನು ತಿರುಗಿ ನಿಲ್ಲುವಂತೆ ಹೇಳಿದರು. ತಿರುಗಿಸಿ ನಿಲ್ಲಿಸಿ ಕುಂಡೆ ಮೇಲೆ ಎಲ್ಲಿ ಒದೆಯಲಿದ್ದಾರೋ ಅಂತ ಕಾಲು ಗಟ್ಟಿಯೂರಿ ನಿಂತ. ಒದೆ ತಿಂದು ರೂಢಿ ಇತ್ತು ನಮ್ಮ ಹುತಾತ್ಮ ದೋಸ್ತನಿಗೆ. ಸರಿಯಾಗಿ position ತೆಗೆದುಕೊಂಡು ನಿಲ್ಲಲಿಲ್ಲ ಅಂದರೆ ಹಿಂದೆ ಒದ್ದ ಅಬ್ಬರಕ್ಕೆ ಮುಂದೆ ಮುಕ್ಕರಿಸಿ ಬಿದ್ದು ಹಲ್ಲು ಮುರಿದುಕೊಳ್ಳುವ ರಿಸ್ಕ್. ಅದೆಲ್ಲ ಅವನಿಗೆ ಹೇಳಿಕೊಡಬೇಕೇ? ಆದರೆ ಮುಂದಾಗುವದನ್ನು ಅವನು ನಿರೀಕ್ಷೆ ಮಾಡಿರಲಿಲ್ಲ. ಯಾರೂ ನಿರೀಕ್ಷೆ ಮಾಡಿರಲಿಲ್ಲ.

ಮಿಂಚಿನವೇಗದಲ್ಲಿ ಟೀಚರ್ ತಮ್ಮ ಬಲಗೈ ತೆಗೆದುಕೊಂಡು ಹೋದವರೇ ಅವನ ಚೊಣ್ಣದ (nicker, shorts) ಕಿಸೆಯಲ್ಲಿ ನುಗ್ಗಿಸಿಬಿಟ್ಟರು. ಮರುಕ್ಷಣದಲ್ಲೇ ಒಂಥರಾ ಮುಖ ಮಾಡಿದರು. ಮತ್ತೂ ಹೆಚ್ಚಿನ ಮಿಂಚಿನವೇಗದಲ್ಲಿ ಚೊಣ್ಣದ ಕಿಸೆಯಲ್ಲಿ ಇಳಿಸಿದ್ದ ಕೈಯನ್ನು ಸಟಾಕ್ ಅಂತ ಹೊರತೆಗೆದರು. ಗುಂಡಾ ಅಂತೂ ಸಿಕ್ಕಿದ ಹಾಗಿರಲಿಲ್ಲ. ಆದರೆ ಅವರ ಮುಖದ ಮೇಲೆ ಒಂದು ತರಹದ ಜಿಗುಪ್ಸೆ, ಅಸಹ್ಯ. ಹಾವನ್ನೋ, ಹಲ್ಲಿಯನ್ನೋ, ಲೋಳೆಲೋಳೆಯಾಗಿರುವ ಶಂಖದಹುಳುವನ್ನು ಮುಟ್ಟಿಬಿಟ್ಟರೆ ಒಂದು ತರಹ ಅಸಹ್ಯವಾಗುತ್ತದೆ ನೋಡಿ. ಆ ಮಾದರಿಯ ಅಸಹ್ಯ ಮುಖದ ಮೇಲೆ. ಅದಕ್ಕೆ ಕಾರಣವಾದ ಹುತಾತ್ಮ ಹುಡುಗನ ತಲೆಗೆ ಮತ್ತೊಂದೆರೆಡು ಬಿಟ್ಟರು. 'ಯಾಂ!ಯಾಂ! ಟೀಚರ್! ಟೀಚರ್!' ಅಂತ ನೋವಿಂದ ವಿಚಿತ್ರ ದನಿಯಲ್ಲಿ ಮುಲುಗುತ್ತ ಜರ್ಕ್ ಹೊಡೆದ.

ಆ ಟೀಚರಿಗೆ ಹೇಗಾದರೂ ಮಾಡಿ ಗುಂಡಾ ಜಪ್ತಿ ಮಾಡುವ ಉಮೇದಿ. ಚೊಣ್ಣದ ಬಲ ಬದಿಯ ಕಿಸೆಯಲ್ಲಿ ಗುಂಡಾ ಸಿಗದಿದ್ದರೆ ಏನಾಯಿತು ಎಡ ಬದಿಯ ಕಿಸೆಯಲ್ಲಿ ಸಿಕ್ಕರೂ ಸಿಗಬಹುದು ಅಂತ ಎಡದ ಕಿಸೆಯಲ್ಲಿ ಉದ್ದಕೆ ಉಧೋ ಅಂತ ಕೈ ನುಗ್ಗಿಸಿಯೇಬಿಟ್ಟರು. ಇವನು ಸ್ವಲ್ಪ ಪಕ್ಕಕ್ಕೆ ಜಿಗಿದ. ಟೀಚರ್ ಮತ್ತೆ ಹಾವು ಮುಟ್ಟಿದರೋ ಎಂಬಂತೆ ಸರಕ್ ಅಂತ ಕೈ ಹಿಂದೆಳೆದುಕೊಂಡರು. ಮುಖದ ಮೇಲೆ ಮತ್ತೆ ಅದೇ ಅಸಹ್ಯದ ಲುಕ್. ಮುಟ್ಟಬಾರದ್ದನ್ನು ಮುಟ್ಟಿದಾಗ ಉಂಟಾಗುವ ಭಾವನೆ. ಹೇವರಿಕೆ. ಹೇಸಿಗೆ. repulsion.

ಗುಂಡಾ ಸಿಗಲಿಲ್ಲ. ಇಷ್ಟೆಲ್ಲಾ ಕಾರ್ಯಾಚರಣೆ ಮಾಡಿದರೂ ಗುಂಡಾ ಸಿಗಲಿಲ್ಲ ಅಂತ ಮೇಡಂ ಅವರಿಗೆ frustration ಬೇರೆ. ಇವನಿಗೆ ಮತ್ತೊಂದಿಷ್ಟು ಬಿತ್ತು. ಕಿಮಕ್ ಗಿಮಕ್ ಅನ್ನದೇ ತಿಂದ. 'ಹೂಂ, ಹೋಗಿ ಕೂಡು. ಸೂಟಿ ಒಳಗ ಗುಂಡಾ, ಕ್ರಿಕೆಟ್, ಗಿಲ್ಲಿ ದಾಂಡು, ಅದು ಇದು ಆಟ ಆಡಿದರೆ ನೋಡ್ರಿ ಮತ್ತ! ಹುಷಾರ್! ಒಬ್ಬಬ್ಬರಿಗೂ ಬರೋಬ್ಬರಿ ಬಡಿತೇನಿ. ಹಿಡಿಹಿಡಿದು ಬಡಿತೇನಿ,' ಅಂತ ಬೈದ ಟೀಚರ್ ಅಂದಿನ ಪಾಠಕ್ಕೆ ಶುರುವಿಟ್ಟುಕೊಂಡರು.

ಸೂಟಿ ಅಂದರೆ ಮಧ್ಯಾನದ ಊಟದ ವಿರಾಮದಲ್ಲಿ ಏನೂ ಆಟ ಆಡಬಾರದು. ಆಟ ಆಡಿದರೆ ತಡವಾಗಿ ಕ್ಲಾಸಿಗೆ ಬರುತ್ತಾರೆ. ಶೈಕ್ಷಣಿಕ ಅವಧಿಯ ವೇಳೆ ಖೋಟಿಯಾಗುತ್ತದೆ ಅಂತ ಕಾಳಜಿ ಟೀಚರ್ ಅವರದು. 'ನಿಮ್ಮ ಆಟ ಗೀಟ ಏನೇ ಇದ್ದರೂ ಶನಿವಾರ, ಆದಿತ್ಯವಾರ ಮಾತ್ರ. ಬಾಕಿ ದಿನಗಳಲ್ಲಿ ಎಲ್ಲಾ ಬಂದ್ ಮಾಡಬೇಕು!' ಅಂತ ಖಡಕ್ ಆಜ್ಞೆ ಮಾಡಿದ್ದರು. ನಾವು ಕೇಳಲಿಲ್ಲ. ಕ್ರಿಕೆಟ್ ಬ್ಯಾಟ್, ಬಾಲ್, ಸ್ಟಂಪ್, ಇತ್ಯಾದಿಗಳನ್ನು ಜಪ್ತಿ ಮಾಡಿ, ಕಪಾಟಿನಲ್ಲಿಟ್ಟು ಕೀಲಿ ಹಾಕಿಬಿಟ್ಟರು. ಹುಡುಗರಿಗೇನು? ಇದಲ್ಲದಿದ್ದರೆ ಮತ್ತೊಂದು ಆಟ. ಭರ್ಜರಿಯಾಗಿ ಗೋಲಿ, ಗುಂಡಾ, ಚಿನ್ನಿ ದಾಂಡು ಇತ್ಯಾದಿ ದೇಸಿ ಕ್ರೀಡೆಗಳು ಶುರುವಾದವು. ಊಟದ ವಿರಾಮದ ನಂತರ ಒಂದು ಹತ್ತು ನಿಮಿಷ ಜಾಸ್ತಿ ಆಟವಾಡಿಯೇ ಕ್ಲಾಸಿಗೆ ಬರುತ್ತಿದ್ದೆವು. ಪ್ರತಿ ದಿವಸ ಇದೇ ಟೀಚರ್ ಪಿರಿಯಡ್ ಇರುತ್ತಿತ್ತು. ಲೇಟಾಗಿ ಬಂದರು, ಆಟವಾಡಬೇಡಿ ಅಂದರೂ ಆಟವಾಡಿದರು ಅಂತ ಪ್ರತಿ ದಿವಸ ಯಾರಿಗಾದರೂ ಇದೇ ರೀತಿಯಲ್ಲಿ ವಿಶೇಷ ಪೂಜೆಯಾಗುತ್ತಿತ್ತು. ಆದರೆ ಗೋಲಿ ಗುಂಡಾ ಶೋಧಿಸಿ ಜಪ್ತ ಮಾಡುವ ಕೆಲಸ ಅಂದು ಪ್ರಥಮ ಬಾರಿಯಾಗಿತ್ತು.

ಆ ಪಿರಿಯಡ್ ಮುಗಿಯಿತು. ಮುಂದಿನ ಪಿರಿಯಡ್ಡಿನ ಶಿಕ್ಷಕರು ಬರುವ ಮೊದಲು ಮೊದಲು ಒಂದಿಷ್ಟು ಸಮಯವಿತ್ತು. ಸ್ವಲ್ಪ ಹೊತ್ತಿನ ಮೊದಲು ಟೀಚರ್ ಹತ್ತಿರ ಯಕ್ಕಾಮಕ್ಕಾ ತಿಂದಿದ್ದ ಈ ಪುಣ್ಯಾತ್ಮ ಮಾತ್ರ ಏನೂ ಆಗದವರಂತೆ ಓಡಾಡಿಕೊಂಡಿದ್ದ. ಮುಖದ ಮೇಲೆ ಕುಹಕ ಉಡಾಳ ನಗೆ ಬೇರೆ. ಶುದ್ಧ ಕಿತಾಪತಿ ನಗೆ. ವಿಕಟ ನಗೆ.

'ಏನಲೇ, ಸಿಕ್ಕಾಪಟ್ಟೆ ಹೊಡೆತ ಬಿದ್ದುವಲ್ಲೋ. ಯಾಕ ಅಷ್ಟು ಹೊಡೆತ ತಿನ್ನಲಿಕ್ಕೆ ಹೋದಿ? ಗುಂಡಾ ಕೇಳಿದ ಕೂಡಲೇ ತೆಗೆದು ಕೊಡಬಾರದೇನಲೇ?? ಟೀಚರ್ ಕಡೆ ಹಾಕ್ಕೊಂಡು ರುಬ್ಬಿಸಿಕೊಂಡಿ ನೋಡಲೇ,' ಅಂತ ನಮ್ಮ ಸಂತಾಪ. ಹುತಾತ್ಮ ಹುಡುಗ ನಕ್ಕ. ಎರ್ರಾಬಿರ್ರಿ ನಕ್ಕ. ಈಗ ಸ್ವಲ್ಪೇ ಹೊತ್ತಿನ ಮೊದಲು ಆ ರೀತಿಯಲ್ಲಿ ರುಬ್ಬಿಸಿಕೊಂಡವ ಇವನೇನಾ? ಅಂತ ನಮಗೆ ಆಶ್ಚರ್ಯ. ಅವನೋ ಸುಖ ಜೀವಿ. ಹಳೆಯದನ್ನು ಬಿಡಿ ಕೆಲವೇ ನಿಮಿಷಗಳ ಹಿಂದಿನ ಕಹಿ ಘಟನೆಯನ್ನೂ ಮರೆತು ಎಂದಿನಂತೆ ಆರಾಮಾಗಿ ನಗುತ್ತ ಕ್ಲಾಸ್ ಪೂರ್ತಿ ಅಡ್ಡಾಡುತ್ತಿದ್ದಾನೆ.

'ಎಲ್ಲಿಂದ ಗುಂಡಾ ಕೊಡಲೋ ಮಾರಾಯಾ? ನನ್ನ ಕಡೆ ಗುಂಡಾ ಇಲ್ಲರೀ ಅಂದೆ. ಟೀಚರ್ ನಂಬಲಿಲ್ಲ. ನಾ ಸುಳ್ಳ ಹೇಳಾಕತ್ತೇನಿ ಅಂತ ತಿಳಕೊಂಡು ಸೀದಾ ಚೊಣ್ಣದ ಕಿಸೆದಾಗ ಕೈ ಹಾಕಿಬಿಟ್ಟರು. ಆವಾಗ ಏನಾತು ಗೊತ್ತೈತಿ??' ಅಂದು ತುಂಟ ಲುಕ್ ಕೊಟ್ಟ.

'ಏನಾತಲೇ? ಟೀಚರ್ ನಿನ್ನ ಚೊಣ್ಣದ ಕಿಸೆದಾಗ ಕೈ ಇಳಿಸಿದರು. ಗುಂಡಾ ಸಿಗಲಿಲ್ಲ. ಎರಡೂ ಕಿಸೆದಾಗ ಕೈ ಇಳಿಸಿ ನೋಡಿದರು. ಏನೂ ಸಿಗಲಿಲ್ಲ. ನೀ ಗುಂಡಾ ಇಟ್ಟಿಲ್ಲ? ಅಥವಾ ಬ್ಯಾರೆ ಎಲ್ಲರೆ ಅಡಗಿಸಿ ಇಟ್ಟಿಯೋ?' ಅಂತ ನಾವೆಲ್ಲ ಕೇಳಿದೆವು. ಕೆಟ್ಟ ಕುತೂಹಲ.

'ಇಲ್ಲಪಾ, ಗುಂಡಾ ಖರೇ ಅಂದ್ರೂ ಇರಲಿಲ್ಲ. ಅದರೂ ಟೀಚರ್ ಕೈಗೆ ಗುಂಡಾ ಸಿಕ್ಕವು!' ಅಂದುಬಿಟ್ಟ.

ಕಿಸೆಯಲ್ಲಿ ಗುಂಡಾ ಇರಲಿಲ್ಲವಂತೆ ಅದರೂ ಟೀಚರ್ ಕೈಗೆ ಗುಂಡಾ ಸಿಕ್ಕವಂತೆ. ಏನೋ ನಿಗೂಢವಾಗಿದೆಯೆಲ್ಲ!?

'ಏನಲೇ ಹಾಂಗಂದ್ರ? ಕಿಸೆದಾಗ ಗುಂಡಾ ಇರಲಿಲ್ಲ ಅಂದ್ರ ಎಲ್ಲಿಂದ ಸಿಗಬೇಕಲೇ? ಸಿಕ್ಕಿದ್ದರ ಟೀಚರ್ ಕೈಯಾಗ ಗುಂಡಾ ಕಾಣಬೇಕಿತ್ತು. ಕಾಣಲಿಲ್ಲ. ಆದ್ರ ಅವರ ಮಾರಿ ಮ್ಯಾಲೆ ಕೆಟ್ಟ ಅಸಹ್ಯ ಲುಕ್ ಒಂದೇ ಕಂಡು ಬಂತು ನೋಡಲೇ,' ಅಂದೆವು.

'ಇಲ್ಲಿ ನೋಡಪಾ,' ಅಂದವನೇ ತನ್ನ ಚೊಣ್ಣದ ಎರಡು ಕಿಸೆಗಳಲ್ಲಿ ಎರಡೂ ಕೈ ಬಿಟ್ಟವನೇ ಫುಲ್ ಕೆಳತನಕ ಇಳಿಸಿಬಿಟ್ಟ. ಎರಡೂ ಹಸ್ತ ಚೊಣ್ಣದ ಎಲ್ಲೆಯನ್ನು ಮೀರಿ, ತೊಡೆ ಪಕ್ಕಕ್ಕೆ ಬಂದು ನಮಸ್ಕಾರ ಅಂದವು. ಮುಷ್ಠಿಯನ್ನು ಕಟ್ಟಿ ಬಿಚ್ಚಿ ಮಾಡಿದ. ವಿಚಿತ್ರವಾಗಿ ನಕ್ಕ. 'ಹಾಂ?!' ಅಂತ ನಾವೆಲ್ಲ ಅಚ್ಚರಿಪಟ್ಟರೆ ಇವನು ಬಿದ್ದುಬಿದ್ದು ನಕ್ಕ. ಸರಕ್ ಅಂತ ಕಿಸೆಗಳಿಂದ ಕೈಗಳನ್ನು ಹಿಂದೆ ಎಳೆದುಕೊಂಡ. ಕಿಸೆ ಹೊರಗೆ ಬಂತು. ನೋಡಿದರೆ ಎರಡೂ ಕಿಸೆಗಳು ಪೂರ್ತಿ ಹರಿದುಹೋಗಿವೆ.

'ಈಗರೆ ಗೊತ್ತಾತೋ ಇಲ್ಲೋ?? ಟೀಚರ್ ಕಿಸೆದಾಗ ಕೈ ಹಾಕಿದಾಗ ಯಾವ 'ಗುಂಡಾ' ಅವರ ಕೈಗೆ ಸಿಕ್ಕವು ಅಂತ. ಗೊತ್ತಾತ?' ಅಂದವನೇ ಪೆಕಪೆಕಾ ಅಂತ ನಕ್ಕ. ನಾವು ಉಳ್ಳಾಡಿ ಉಳ್ಳಾಡಿ ನಕ್ಕೆವು. ಅದಕ್ಕೆ ನಗುವದು ಅನ್ನುವದಿಲ್ಲ ಬಿಡಿ. ಅಟ್ಟಹಾಸ ಮಾಡುವದು ಅಂದರೆ ಸರಿಯಾದೀತು. ಮಾಹೋಲೇ ಹಾಗಿತ್ತು. ಗುಂಡಾ! ಗುಂಡಾ! ಯಪ್ಪಾ!

ಪಾಪದ ಟೀಚರ್. ಆಗ ಅವರದ್ದು ಇನ್ನೂ ಮದುವೆ ಕೂಡ ಆಗಿರಲಿಲ್ಲ. ೨೭-೨೮ ವರ್ಷದ ಶುದ್ಧ ಕನ್ಯಾಮಣಿ. ಅಂತವರು ಈ ಪುಣ್ಯಾತ್ಮನ ಚೊಣ್ಣದ ಕಿಸೆಯಲ್ಲಿ ಕೈ ಬಿಟ್ಟಿದ್ದಾರೆ. ಹರಿದ ಕಿಸೆಯ ಮೂಲಕ ನುಗ್ಗಿದ ಅವರ ಕೈಗೆ ಸಿಗಬಾರದ ಜಾತಿಯ ಗುಂಡಾ ಸಿಕ್ಕಿದೆ. ನಾಗಮಣಿ ತರಹದ್ದು. ನಾಗಮಣಿ ಸ್ಪರ್ಶವಾದ ಅಬ್ಬರಕ್ಕೆ ಪಕ್ಕದ ನಾಗಪ್ಪ  ಭುಸುಗುಟ್ಟಿದ್ದಾನೆ. ಟೀಚರ್ ಹಾವು ಮುಟ್ಟಿದವರಂತೆ ಕೆಟ್ಟ ಮುಖ ಮಾಡಿದ್ದು ಆ ಕಾರಣಕ್ಕೆ. ನಾಗಮಣಿ ಸ್ಪರ್ಶದಿಂದ ಕನ್ಯಾಮಣಿ ಪಾಠ ಕಲಿಯಲಿಲ್ಲವೋ ಅಥವಾ ಮತ್ತೊಂದು ಕಿಸೆಯಲ್ಲಿ ನಿಷೇಧಿತ ಮಾಲ್ ಆದ ಗುಂಡಾ ಇದ್ದರೂ ಇರಬಹದು ಎಂಬ ವಿಚಾರದಿಂದಲೋ ಎಡಗಡೆಯ ಕಿಸೆಯಲ್ಲಿ ಕೈ ಬಿಟ್ಟಿದ್ದಾರೆ. ಅದೂ ಪರಕ್ ಅಂತ ಹರಿದ ಕಿಸೆಯೇ. ಬೆಣ್ಣೆಯಲ್ಲಿ ನುಗ್ಗಿದ ಕತ್ತಿಯಂತಹ ಟೀಚರ್ ಕೈಗೆ ಮತ್ತೆ ನಾಗಮಣಿ ಸಿಕ್ಕಿದೆ. ಪಕ್ಕದಲ್ಲಿ ಮತ್ತದೇ ನಾಗಪ್ಪ. ಭುಸ್ ಅಂದಿದ್ದಾನೆ. ಹೋಗ್ಗೋ! ಬಿದ್ದೆನೋ ಕೆಟ್ಟೆನೋ ಅನ್ನುವಂತೆ ಹೇಸಿಗೆ ಪಡುತ್ತ ಕೈ ಹೊರಗೆಳೆದಿದ್ದಾರೆ. ಶುದ್ಧ ಕನ್ಯಾಮಣಿಯ ಕೈಗೆ ನಾಗಮಣಿಗಳ ಸ್ಪರ್ಶವನ್ನು ದಯಪಾಲಿಸಿದ ಅಂತ ಸಿಟ್ಟು ಮಾಡಿಕೊಂಡು ಈ ದಯಾಳುವನ್ನು ದನದಂತೆ ಬಾರಿಸಿದ್ದಾರೆ. ದರಿದ್ರವನ ಕಿಸೆಯಲ್ಲಿ ಗಾಜಿನ ಗುಂಡಾ ಹುಡುಕಲು ಹೋದರೆ ಸ್ಪೆಷಲ್ ಗುಂಡಾಗಳು ಸಿಕ್ಕಿಬಿಟ್ಟಿದ್ದವು. ಶಿವಶಿವಾ!

ಆವಾಗ ನಮ್ಮ ಕ್ಲಾಸಿನ ಹೆಚ್ಚಿನ ಮಂದಿಯ ಕಿಸೆಗಳು ಹಾಗೇ ಇರುತ್ತಿದ್ದವು. ವರ್ಷದ ಆರಂಭದಲ್ಲಿ ಕೊಡಿಸಿದ ಯುನಿಫಾರ್ಮ್ ಖಾಕಿ ಚೊಣ್ಣ ಒಂದು ತಿಂಗಳಲ್ಲಿ ಹಡಾಲೆದ್ದು ಹೋಗುತ್ತಿತ್ತು. ಆ ಚೊಣ್ಣದ ಕಿಸೆ ಅಂದರೆ ಅದು ಎಲ್ಲವನ್ನೂ ತುಂಬುವ ಬೊಕ್ಕಸ. ಹುಣಸೆಕಾಯಿ, ಪೇರಲಕಾಯಿ, ವಿಲಾಯತಿಕಾಯಿ, ಗುಂಡಾ, ಗೋಲಿ, ಗಿಲ್ಲಿ, ಕ್ರಿಕೆಟ್ ಬಾಲ್, ಪೆನ್, ಪೆನ್ಸಿಲ್, ಇತ್ಯಾದಿ. ಹೀಗೆ ಕೈಗೆ ಸಿಕ್ಕಿದ್ದನ್ನು ಅದರಲ್ಲಿ ತುರುಕಿದ್ದೇ ತುರುಕಿದ್ದು. ಆ ಮಟ್ಟದ ಅತ್ಯಾಚಾರ ಮಾಡಿದರೆ ಆ ಕಾಟನ್ ಚೊಣ್ಣದ ಕಿಸೆಗಳ ಗತಿಯೇನಾಗಬೇಕು? ಕಿಸೆ ಪರ್ ಪರ್ ಅಂತ ಹರಿದು ಶಿವಾಯ ನಮಃ ಆಗುತ್ತಿತ್ತು. ತಾಯಂದಿರು ಒಂದೋ ಎರಡೋ ಸಲ ಕೈಯಲ್ಲಿ ಹೊಲಿಗೆ ಹಾಕುತ್ತಿದ್ದರೋ ಏನೋ. ಅವರೂ ಎಷ್ಟು ಅಂತ ಹರಿದ ಚೊಣ್ಣಕ್ಕೆ ತೇಪೆ ಹಾಕಿಯಾರು? ನಂತರ ಅವರಿಗೂ ಸಾಕಾಗಿಹೋಗಿ, 'ಹಾಳಾಗಿ ಹೋಗ್ರಿ!' ಅಂತ ಬಿಡುತ್ತಿದ್ದರು. ಹುಡುಗರೋ? 'ಹರಿದ ಚೊಣ್ಣ ಜೊತೆಯಲಿರಲು ಬಾಳೇ ಸುಂದರ,' ಅಂತ ಹಾಡುತ್ತ ಹಾಯಾಗಿರುತ್ತಿದ್ದರು. ಮುಂದಿನ ವರ್ಷ ಮತ್ತೆ ಅದೇ ಕಥೆ.

Thanks to Facebook, ೨೦೧೨ ರಲ್ಲಿ ಶಾಲೆಯ ಹಳೆಯ ದೋಸ್ತರನ್ನು ತುಂಬಾ ವರ್ಷಗಳ ನಂತರ ಭೆಟ್ಟಿಯಾದೆ. ಊರ ಹೊರಗಿನ ಧಾಬಾ ಕಮ್ ರೆಸಾರ್ಟ್ ಒಂದರಲ್ಲಿ ಕೂತು 'ತೀರ್ಥ'ಯಾತ್ರೆ ಮಾಡುತ್ತಿದ್ದೆವು. ಯಾರೋ ಒಬ್ಬವ ಈ ಗುಂಡಾ ಘಟನೆಯನ್ನು ನೆನಪು ಮಾಡಿಕೊಂಡ. ಆವತ್ತು ಆ ಶುದ್ಧ ಕನ್ಯಾಮಣಿ ಟೀಚರ್ ಮೇಡಮ್ಮಿಗೆ ಗುಂಡಾ ಬದಲು ನಾಗಮಣಿ ಸ್ಪರ್ಶಭಾಗ್ಯ ಕರುಣಿಸಿದ್ದ ಪುಣ್ಯಾತ್ಮ ಕೂಡ ಅಲ್ಲೇ ಇದ್ದ. ಅವನ ವರ್ತನೆಯಲ್ಲಿ ಏನೂ ಬದಲಾವಣೆ ಇಲ್ಲ. ಹುಚ್ಚಾಪಟ್ಟೆ ನಗುತ್ತಲೇ ೧೯೮೩ ರಲ್ಲಿ ನಡೆದ ಅ ಘಟನೆಯನ್ನು ಮತ್ತೆ ಹೇಳಿದ. ಬಿದ್ದು ಬಿದ್ದು ನಕ್ಕಿದ್ದೆವು. ಹಾಕಿದ್ದ ಪ್ಯಾಂಟಿನ ಕಿಸೆ ಹೊರಗೆ ತೆಗೆದು ತೋರಿಸಿ, 'ನೋಡ ಅಣ್ಣಾ, ಈಗ ಕಿಸೆ ಹ್ಯಾಂಗೈತಿ? ಒಟ್ಟss ಹರಿದಿಲ್ಲ. ಟೀಚರ್ ಈಗ ಈ ಕಿಸೆದಾಗ ಕೈಬಿಡಬೇಕು,' ಅಂದು ಪೆಕಪೆಕಾ ಅಂತ ನಕ್ಕ. ಹಳೆ ಮಿತ್ರರು ದೇವರಾಣೆಗೂ ಬದಲಾಗುವದಿಲ್ಲ.

'ಲೇ, ಈ ಘಟನೆಗೆ ಒಂದು ಮಸ್ತ ಟೈಟಲ್ ಅದ ನೋಡ್ರಿಪಾ' ಅಂದೆ.

'ಏನಣ್ಣಾ? ಏನ ಟೈಟಲ್?' ಅಂದರು. ಫುಲ್ ಕೋರಸ್.

'ನಾಗಮಣಿ ಸ್ಪರ್ಶಿಸಿದಾಗ ಭುಸ್ ಅಂದ ನಾಗಪ್ಪ!' ಅಂದೆ.

ಸಾಂದರ್ಭಿಕ ಚಿತ್ರ

'ಅಣ್ಣಾ, ಎಂತಾ ಮಸ್ತ ಟೈಟಲ್ ಕೊಟ್ಟಿ ಅಣ್ಣಾ. ನಿನಗ hats off ಅಣ್ಣಾ,' ಅಂತ ಸಿಕ್ಕಾಪಟ್ಟೆ ಶಬಾಶಿ ಕೊಡುತ್ತ, ಎದ್ದು ನಿಂತು ಸಲ್ಯೂಟ್ ಮಾಡಲು ಹೋದ. ಕೂತು ಸಲ್ಯೂಟ್ ಮಾಡು ಮಾರಾಯಾ ಅಂತ ಕೂಡಿಸಿದ್ದಾಯಿತು.

ಅವರಿಗೆ ಅಷ್ಟೇ ಸಾಕಾಯಿತು. 'ಅಣ್ಣಾ, ಎಂತಾ ಮಸ್ತ ಟೈಟಲ್ ಐತಿ. ಇದೇ ಟೈಟಲ್ ಕೊಟ್ಟು, ನೀ ಇದನ್ನ ನಿನ್ನ ಅದು ಏನೋ ಐತಲ್ಲಾ? ಹಾಂ, ಅದೇ ಬ್ಲಾಗ್. ಅದರಾಗ ಬರೀಬೇಕು ನೋಡಪಾ,' ಅಂದುಬಿಟ್ಟರು. ಆಜ್ಞೆ ಮಾಡಿಬಿಟ್ಟರು. 'ಬಿಂದಾಸ್ ಬರಿ ಅಣ್ಣಾ. ಬೇಕಾದ್ರ ನಮ್ಮ ಹೆಸರು ಹಾಕೇ ಬರಿ. ಏನೂ ಚಿಂತಿ ಮಾಡಬ್ಯಾಡ. ಟೀಚರ್ ಹೆಸರು ಮುದ್ದಾಂ ಹಾಕಿ ಬರಿ. ಹ್ಯಾಂಗ ಹಾಕ್ಕೊಂಡು ಹೊಡಿತಿದ್ದರು ಮಾರಾಯಾ!' ಅಂದರು.

ಇವನ ಕಥೆ ಹೇಳಿ ಮುಗಿಯಿತು ಅನ್ನುವಷ್ಟರಲ್ಲಿ ಮತ್ತೊಬ್ಬ ಮಾತಾಡಿದ. 'ಅಷ್ಟಾದ್ರೂ ಆ ಟೀಚರ್ ಕಿಸೆ ಚೆಕ್ ಮಾಡೋದು ಬಿಡಲಿಲ್ಲ ನೋಡಲೇ. ನನ್ನ ಕಿಸೆದಾಗೂ ಕೈ ಹಾಕಿದ್ರಲೇ. ಗೊತ್ತದ ಏನು?' ಅಂತ ಮತ್ತೊಬ್ಬವ ಪಂಟು ಹೊಡೆದ. 

'ನಿನ್ನ ಕಿಸೆದಾಗ ಕೈ ಹಾಕಿದಾಗ ಗುಂಡಾ ಸಿಕ್ಕವು ಏನಲೇ?' ಅಂತ ಯಾರೋ ಕಿಚಾಯಿಸಿದರು.

'ಎಲ್ಲಿ ಗುಂಡಾ ಸಿಗಬೇಕು? ಹೋಗಲೇ. ಆವಾಗೂ ನಾಗಮಣಿನೇ ಸಿಕ್ಕವು ನೋಡಪಾ!' ಅಂತ ತಟ್ಟಿಕೊಂಡು ತಟ್ಟಿಕೊಂಡು ನಕ್ಕ. ಹೋಗ್ಗೋ! ಇವನೂ ಹರಿದುಹೋದ ಕಿಸೆ ಗಿರಾಕಿಯೇ.

ಈ ಘಟನೆ ನಡೆದಿದ್ದು ೧೯೮೩ ರಲ್ಲಿ. ನಾವು ಆವಾಗ ಆರನೇ ಕ್ಲಾಸ್. ನನಗಂತೂ ಈ ಘಟನೆ ಬಗ್ಗೆ ನೆನಪೇ ಇರಲಿಲ್ಲ. ಈ ಪುಣ್ಯಾತ್ಮರು ರಂಗುರಂಗಾಗಿ ಹಾವಭಾವದೊಂದಿಗೆ ಹೇಳಿದ ಮೇಲೆ ಏನೋ ನೆನಪಾಯಿತು. ಏನೋ ಆ ಹೊತ್ತಿಗೆ ಮನಸ್ಸಿಗೆ ಬಂದ ಒಂದು ಟೈಟಲ್ ಕೊಟ್ಟುಬಿಟ್ಟೆ. ಮುಂದೆ ಎಂದಾದರೂ ಇದರ ಮೇಲೊಂದು ಬ್ಲಾಗ್ ಲೇಖನ ಬರೆಯೋಣ ಅಂತಲೂ ಹೇಳಿಬಿಟ್ಟೆ. ನಂತರ ಬರೆಯಲಿಲ್ಲ. ಇವರು  ಬಿಡಬೇಕಲ್ಲ? ೨೦೧೨ ಭೆಟ್ಟಿಯಾದ ನಂತರ ಪ್ರತಿ ವರ್ಷವೂ ಧಾರವಾಡಕ್ಕೆ ಹೋದಾಗ ಭೆಟ್ಟಿಯಾದೆ. ಮತ್ತೆ ಇಂತವೇ ಹಳೆ ಕಥೆಗಳು. ಅವುಗಳನ್ನು ನೆನಪಿಸಿಕೊಳ್ಳುತ್ತ, ಪಾರ್ಟಿ ಮಾಡುತ್ತ, ಹುಚ್ಚರ ಹಾಗೆ ಅಟ್ಟಹಾಸ ಮಾಡುತ್ತ ಮಜಾ ಮಾಡುವದು. ಆದರೆ ಗೆಳೆಯರದ್ದು, ಅದರಲ್ಲೂ ಒಂದಿಬ್ಬರದ್ದು, ಒಂದೇ ವಾರಾತ, 'ಅಣ್ಣಾ, ನೀ ನಾಗಮಣಿ, ನಾಗಪ್ಪ, ಭುಸ್, ಅದು ಇದು ಅಂತ ಹೇಳಿ ನಮಗ ಶೇಂಡಿ ಹಾಕಿದಿಯಲ್ಲೋ ಅಣ್ಣಾ? ಬ್ಲಾಗ್ ಬರಿಯಲೇ ಇಲ್ಲ. ಏನಣ್ಣಾ ಇದು? ಬರಿಯಣ್ಣಾ ಪ್ಲೀಸ್!'

ಬರೆಯಲು ಇವತ್ತು ಮುಹೂರ್ತ ಬಂತು. ಪಾತ್ರಧಾರಿಗಳ ಹೆಸರು ಗಿಸರು ಹಾಕಿಲ್ಲ. ಅವಶ್ಯಕತೆ ಇಲ್ಲ. ನಾಗಮಣಿ ಖ್ಯಾತಿಯ ಟೀಚರ್ ಮಾತ್ರ ಇನ್ನೂ ಇದ್ದಾರೆ. ಅವರಿಗೂ ಸಾಕಷ್ಟು ವಯಸ್ಸಾಗಿದೆ. ಇನ್ನೂ ನೌಕರಿ ಮಾಡುತ್ತಿದ್ದಾರೆ. ಈಗಲೂ ಕಿಸೆಯಲ್ಲಿ ಕೈಬಿಡುತ್ತಾರೆಯೇ? ಕೇಳಲಿಲ್ಲ. ಅವರನ್ನು ನೋಡಿದಾಕ್ಷಣ ಸಿಕ್ಕಾಪಟ್ಟೆ ನಗು ಬಂದುಬಿಡುತ್ತದೆ. ಅವರ ಎದುರೇ ನಕ್ಕರೆ ಮತ್ತೆ ರುಬ್ಬಿಯಾರು ಅಂತ ಹೆದರಿ, 'ಟೀಚರ್, ಹೋಗಿಬರ್ತೇವರೀ,' ಅಂತ ಅವರ ಕಾಲಿಗೆ ಡೈವ್ ಹೊಡೆದು, ಆಶೀರ್ವಾದ ಪಡೆದು ಅಲ್ಲಿಂದ ಓಡುತ್ತೇವೆ. ಟೀಚರ್ ಕಿವಿಯ ರೇಂಜಿನಿಂದ ದೂರವಾಗಿದ್ದು ಖಾತ್ರಿಯಾದ ಕೂಡಲೇ, 'ನಾಗಮಣಿ ನಾಗಮಣಿ' ಅಂತ ಒಬ್ಬನು ವಿಕಾರವಾಗಿ ಹಾಡುತ್ತಾನೆ. ಮತ್ತೊಬ್ಬ 'ಭುಸ್! ಭುಸ್!' ಅಂತ ಹಾವಿನ ಹೆಡೆಯ ಹಾಗೆ ಕೈಮಾಡಿಕೊಂಡು ನೌಟಂಕಿ ಮಾಡುತ್ತಾನೆ. 'ನಡ್ರಿಲೇ, ನಕ್ಕಿದ್ದು ಭಾಳ ಆತು. ಬಾಯಿ ಆರೈತಿ. ಗಂಟಲಕ್ಕ ಏನರೆ ಬಿಟ್ಟುಕೊಳ್ಳೋಣ,' ಅಂತ ಮತ್ತೊಬ್ಬ ಅನ್ನುತ್ತಾನೆ. ಹಗಲಿನ ವೇಳೆಯಾಗಿರುತ್ತಾದ್ದರಿಂದ ತೀರ್ಥಯಾತ್ರೆಯ ಬದಲಾಗಿ ಹಾಪ್ (ಅರ್ಧ) ಚಹಾ ಕುಡಿಯಲು ಬಿಜಯಂಗೈಯ್ಯುತ್ತೇವೆ.