Thursday, May 30, 2013

ಸ್ನಾನ ಆತರೀ?......ಆಗಿಲ್ಲ ಅಂದ್ರ 'ಕೂಸ್ನಾಮಾ' ಟ್ರೈ ಮಾಡ್ರೀ!

ನಮ್ಮ ಕಡೆ ಮಾತುಕತಿ ಶುರು ಮಾಡಬೇಕು ಅಂದ್ರ ಚಹಾ ಆತ್ರೀ? ಅಥವಾ ಊಟ ಆತ್ರೀ? ಅಂತ ಶುರು ಮಾಡ್ತಾರ. ಮುಂಜಾನೆ 9 am ಕಿಂತ ಮೊದಲು ಸಿಕ್ಕವರಿಗೆ ಚಹಾ ಆತ್ರೀ? ಅಂತ ಕೇಳಬಹುದು. ಒಂಬತ್ತರ ಮ್ಯಾಲೆ ಮಧ್ಯಾನ್ಹ 3 pm ತನಕಾ ಊಟ ಆತ್ರೀ? ಅಂತ ಕೇಳಬಹುದು. ಮಧ್ಯಾನ್ಹ 3 pm ನಂತರ ಮತ್ತ ಚಹಾ ಆತ್ರೀ? ಅಂತ ಕೇಳಬಹುದು. ಮತ್ತ 7 pm ನಂತರ ಊಟ ಆತ್ರೀ? ಅಂತ ಕೇಳಬಹುದು. ಈ ಟೈಮ್ ಬಿಟ್ಟು ಯಾವದರ ಅಡ್ನಾಡಿ ಟೈಮ್ ನ್ಯಾಗ ಸಿಕ್ಕವರು ಚಹಾ ಊಟ ಎರಡೂ ಇಲ್ಲದ ಬರೇ 'ತೀರ್ಥ' ಮಾತ್ರ ತೊಗೊಂಡಿರೋ ಚಾನ್ಸ್ ಜಾಸ್ತಿ ಇರೋದ್ರಿಂದ ಅವರನ್ನ ಮಾತಾಡಿಸದೇ ಇರೋದss ಒಳ್ಳೇದು.

ಅದss ಈ ಬೆಂಗಳೂರು ಮಂದಿ ತಲಿ ತಿಂದು ಬಿಡ್ತಾರ. ಮೊದಲು ಕಾಫಿ ಆಯಿತಾ? ಅಂತಾರ. ಅವನೌನ್!! ನಾವು ಕಾಫಿ ಕುಡಿಯಂಗಿಲ್ಲ. ಅದಕ್ಕ ನಾವು ಸತ್ಯವಾಗಿ ಕಾಫಿ ಆಗಿಲ್ಲ ಅಂದ್ರ ಮುಂದಿನ ಪ್ರಶ್ನೆ ರೆಡಿ. ತಿಂಡಿ ಆಯಿತಾ? ಅಂತಾರ. ಹಾಕ್ಕ್! ನಮ್ಮ ಕಡೆ ತಿಂಡಿ ಬಿಡ್ತದ ಹೊರತು ಆಗಂಗಿಲ್ಲ. ಎಲ್ಲೂ ತಿಂಡಿ ಬಿಟ್ಟಿಲ್ಲರೀ, ಎಲ್ಲಾ ಆರಾಮ ಅದ ಅಂದ್ರ ಫುಲ್ ಹಾಪ್ ಆದ ಬೆಂಗಳೂರು ಮಂದಿ ಟಿಫಿನ್ ಆಯಿತಾ? ಅಂತ ಕೇಳ್ತಾರ. ಅಯ್ಯೋ!!! ಟಿಫಿನ್ ಕ್ಯಾರಿಯರ್ ಬಂದೊರ್ತೂ ಟಿಫಿನ್ ಗಿಫಿನ್ ಇಲ್ಲ ಹೋಗಲೇ ಮಳ್ಳ ಸೂಳೆಮಗನ, ಅಂತ ನಾವು ಧಾರವಾಡ ಸ್ಟೈಲ್ ನಲ್ಲಿ ಪ್ರೀತಿಯಿಂದ(?) ಬೈದ್ರ ಅದನ್ನss ತಲಿಗೆ ಹಚ್ಚಿಗೊಂಡು, ಏನ್ರೀ ಅವರು ಧಾರವಾಡ ಜನ ಮಾತಿಗೊಮ್ಮೆ ಸೂ... ಮಗ ಬೋ... ಮಗ ಅಂತಾರೆ, ಅಂತ ಬ್ಯಾಸರಾ ಮಾಡಿಕೊಂಡು ಹೋಗಿಬಿಡ್ತಾರ.

ಅದೆಲ್ಲ ಇರಲೀ. ಈಗ ನಮ್ಮ ಕಡೆ ಎಲ್ಲಾ ನೀರಿನ ಅಭಾವ ಇಷ್ಟು ಅದ ಅಂದ್ರ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ನೀರು. ಹೀಂಗಿದ್ದಾಗ ಚಹಾ ಊಟಕ್ಕಿಂತ ನೀರಿಗೇ ಹಾಹಾಕಾರ. ಊಟ, ಚಹಾ ಆತೇನು? ಅಂತ ಕೇಳೋದ್ರಕಿಂತ ಸ್ನಾನ ಆತ್ರೀ? ಅಂತ ಕೇಳೋದು ಭಾಳ ಸಮಂಜಸ ಅನ್ನಸ್ತದ. ಇದು ಒಂದು ಹೊಸಾ ಹೈಪೋಥೆಸಿಸ್. ಇದನ್ನ ಟೆಸ್ಟ್ ಮಾಡೋಣ ಅಂತ ಹೇಳಿ ಒಂದಿಷ್ಟು ಮಂದಿನ್ನ ಕೇಳೋಣ ಅಂತ ಹೊಂಟೆ. ಒಂದು ತರಹದ ಮಾರ್ಕೆಟ್ ಸರ್ವೇ ಮಾಡಿದಂಗ.

ಸ್ನಾನ ಆತ್ರೀ? ಇದು ಮುಖ್ಯ ಪ್ರಶ್ನೆ.


ನಮ್ಮ ಮೊದಲ ಕ್ಯಾಂಡಿಡೇಟ್ ಹೇ.ಶಿ.ಪಾಟೀಲ್. ಹೇಮಂತ ಶಿವರಾಂ ಪಾಟೀಲ್.

ನಮಸ್ಕಾರ ಪಾಟೀಲರss...ಸ್ನಾನ ಆತ್ರೀ?

ನಮಸ್ಕಾರ.... ನಮಸ್ಕಾರ.... ಸ್ನಾನ!? ಇವತ್ತ!? ಯಾಕ!? ಇವತ್ತೇನು ನಾನು ಕಷ್ಟಾ (ಹೇರ್ ಕಟಿಂಗ್) ಮಾಡಿಸಿಲ್ಲ. ಮತ್ಯಾಕ ಸ್ನಾನ? ಹಾಂ? ಹಾಂ? - ಅಂತ ಹೇಳಿ ಹೇ.ಶಿ. ಪಾಟೀಲ್ ಹೋಗಿ ಬಿಟ್ಟರು.

ಓಹೋ....ಇವರು ತಿಂಗಳಕ್ಕ ಒಮ್ಮೆ ಹೇರ್ ಕಟಿಂಗ್ ಮಾಡಿಸಿದ್ಯಾಗ ಮಾತ್ರ ಸ್ನಾನ ಮಾಡಿ ತಮ್ಮ ಹೇ.ಶಿ. ಅನ್ನುವ ಹೆಸರಿಗೆ ತಕ್ಕ ಹಾಗೆ ಇರುವ ಜನ. ಮಾಸಿಕ ಸ್ನಾನ ಮಾಡಿ ಬಾಕಿ ಮಂದೀನ ಮಾನಸಿಕ್ ಮಾಡೋ ಮಂದಿ. ಇವರಿಗೆ ನೀರಿನ ಅಭಾವದ ಪರಿಣಾಮ ಏನೂ ಆಗೋದಿಲ್ಲ ಅಂತ ಹೇಳಿ, ಮತ್ತೊಮ್ಮೆ ದೂರದಿಂದಲೇ ನಮಸ್ಕಾರ ಮಾಡಿ ಜಾಗಾ ಬಿಟ್ಟೆ.

ನಂತರ ನಮ್ಮ ಕಾಲದ ಬಾಂಬ್ ಸುಂದರಿ ಮಂದಿ ಉರ್ಫ್ ಮಂದಾಕಿನಿ ಸಿಕ್ಕಳು. ಅಕಿ ಪರಿಚಯ ಮೊದಲು ಇರಲಿಲ್ಲ. ಈಗ ಅಕಿನೂ ಪುರಾತನ ಸುಂದರಿ ಆಗಿ ನಾವೂ ಪುರಾತನ ಸುಂದರ್ ಬಂದರ್ ಆಗಿ ಎಲ್ಲಾ ಓಕೆ.

ನಮಸ್ಕಾರ ಮಂದೀ...... ಆರಾಮ್ ಏನ? ಸ್ನಾನ ಆತ? ಈಗೂ ಎಷ್ಟ ಚಂದ ಇದ್ದೀ, ಏನ್ ಕಥಿ? - ಅಂತ ಕೇಳಿದೆ.

ಹಾಪ್ ಮಂದಿ ಉರ್ಫ್ ಮಂದಾಕಿನಿ ಖುಶ್ ಆಗಿ ಬಿಟ್ಟಳು.

ಏ....ಏ....ಏ ಹೋಗೋ....ಖರೇನss ಅಷ್ಟು ಚಂದ ಇದ್ದೇನಾ? ಅಥವಾ ಸುಮ್ಮನss ಪಂಪ್ ಹೊಡಿಲಿಕತ್ತಿಯೋ? ಹಾಂ? ಹಾಂ? - ಅಂತ ನಾಚಿಕೋತ್ತನ, ನಖರಾ ಮಾಡಿಕೋತ್ತನ ಮೈಲ್ಡ್ ಆಗಿ ಝಾಡಿಸಿದಳು ಓಲ್ಡ್ ಸುಂದರಿ.

ಇಲ್ಲss...ಖರೇನss...ಈಗೂ ಮಸ್ತ ಮಸ್ತ. ಸ್ನಾನ ಆತ? ಹಾಂ? ಹಾಂ?- ಅಂತ ಮತ್ತ ನಮ್ಮ ಸರ್ವೇ ಪ್ರಶ್ನೆ ಕೇಳಿದೆ.

ಹೇಳಿ ಕೇಳಿ ಇಕಿ ಮಂದಿ. ಮಂದಾಕಿನಿ ಅಂದ್ರ 'ರಾಮ್ ತೇರಿ ಗಂಗಾ ಮೈಲಿ' ಖ್ಯಾತಿಯ ಹೀರೋಯಿನ್ ಹೆಸರು ಇಟ್ಟುಗೊಂಡು ಬಿಟ್ಟಾಳ. ಆ ಸಿನೆಮಾ ಬರೋಕಿಂತ ಮೊದಲೂ ಇಕಿ ಹೆಸರು ಮಂದಾಕಿನಿ ಅಂತನss ಇತ್ತು. ಆ ಸಿನೆಮಾ ಬಂದು ಪಿಚ್ಚರ್ ನೋಡಿದ ಮ್ಯಾಲೆ ನಮ್ಮ ಮಂದಿ ಅಕಿ ಗತೆ ಆಗಿ ಹೋದಳು.

ಏನ್ ಸ್ನಾನ ಆತೇನು, ಸ್ನಾನ ಆತೇನು, ಅಂತ ಹಚ್ಚಿಯೋ? ನಾವು ಮನಿಯಾಗೆಲ್ಲಾ ಸ್ನಾನಾ ಮಾಡಂಗಿಲ್ಲ. ಜಲಪಾತ ಅಂದ್ರ ನ್ಯಾಚುರಲ್ ವಾಟರ್ ಫಾಲ್ಸ್ ಇದ್ದರ ಮಾತ್ರ ಅಲ್ಲೇ ಹೋಗಿ ಸಿನಿಮಾ ಮಂದಾಕಿನಿ ಗತೆ ಹಾಡು ಹೇಳಿಕೋತ್ತ, ಡಾನ್ಸ್ ಮಾಡಿಕೋತ್ತ ಸ್ನಾನ ಮಾಡ್ತೇನಿ. ಮುಂದಿನ ವಾರ ದೂಧ ಸಾಗರ್ ಫಾಲ್ಸ್ ಒಳಗ ಸ್ನಾನಾ ಮಾಡಾಕಿ ಇದ್ದೇನಿ. ನಿನ್ನೆ ಮಾತ್ರ ನಿಮ್ಮ ಸಿರ್ಸಿ ಹತ್ತಿರದ ಬುರುಡೆ ಫಾಲ್ಸ್ ನ್ಯಾಗ ಮಾಡಿಬಂದೆ. ಸೇಮ್ ಟು ಸೇಮ್ ಸಿನೆಮಾ ಮಂದಾಕಿನಿ ಗತೆ. ಬೇಕಾದ್ರ ಬಂದು ನೋಡು. ಟಿಕೆಟ್ ಇಲ್ಲ. ಮೊದಲು ಟಿಕೆಟ್ ಇಡತಿದ್ದೆ. ಈಗ ಫ್ರೀ, ಅಂತ ಹೇಳಿ ಮಂದಾಕಿನಿ ಹೋಗಿ ಬಿಟ್ಟಳು.

ಮಂದಿ ಹೋಗೋವಾಗ ಅಕಿ ಸ್ನಾನದ ಪ್ರೊಗ್ರಾಮ್ ಇರೋ ಒಂದು ಹ್ಯಾಂಡ್ ಬಿಲ್ ಸಹಿತ ಕೊಟ್ಟು ಹೋದಳು. ಅಬ್ಬಬ್ಬಾ!!! ಒಂದು ದಿನ ದೂಧ ಸಾಗರ್ ಫಾಲ್ಸ್ ಕೆಳಗ, ಇನ್ನೊಂದು ದಿನ ಜೋಗ ಫಾಲ್ಸ್ ಕೆಳಗ, ಮತ್ತೊಂದು ದಿನ ನಮ್ಮ ಸಿರ್ಸಿ ಕಡೆ ಇರೋ ಮಾಗೋಡ್ ಫಾಲ್ಸ್, ಉಂಚಳ್ಳಿ ಫಾಲ್ಸ್ ಅಂತ ಫುಲ್ ಶೆಡ್ಯೂಲ್ ಹಾಕಿಕೊಂಡು ವಾಟರ್ ಫಾಲ್ಸ್ ಕೆಳಗss ಸ್ನಾನ ಮಾಡ್ತಾಳಂತ. ಮಾಡ್ಲಿ, ಮಾಡ್ಲಿ. ದೇವರು ಇದss ಬುದ್ಧಿ, ರೂಪ, ಸೌಂದರ್ಯ ಎಲ್ಲಾ ನಮ್ಮ ಮಂದಿಗೆ ಯಾವಾಗಲೂ ಕೊಡಲಿ.

ಎಲಾ ಇಕಿನ! ಮಂದಾಕಿನಿ ಅಂತ ಹೆಸರು ಇಟ್ಟುಗೊಂಡಿದ್ದು ಸಾರ್ಥಕ ಆತು. 25 ವರ್ಷ ಆಗಿ ಹೋತು 'ರಾಮ್ ತೇರಿ ಗಂಗಾ ಮೈಲಿ' ಸಿನೆಮಾ ಬಂದು ಹೋಗಿ. ಒರಿಜಿನಲ್ ಹೀರೋಯಿನ್ ಮಂದಾಕಿನಿನss ಬೋರ್ಡಿಗೂ ಅಡ್ರೆಸಗೂ ಇಲ್ಲದ ಹೋಗಿ ಬಿಟ್ಟಾಳ. ನಮ್ಮ ಲೋಕಲ್ ಸುಂದರಿ ಮಂದಿ ಮಾತ್ರ ಅದನ್ನss ನೆನಪು ಇಟ್ಟುಗೊಂಡು ಇನ್ನೂ ಕೇವಲ ಜಲಪಾತ ಅಂದ್ರ ವಾಟರ್ ಫಾಲ್ಸ್ ಕೆಳಗ ಮಾತ್ರss ಸ್ನಾನ ಮಾಡ್ತಾಳ ಅಂದ್ರ ಆ ಸಿನೆಮಾ ಇಕಿ ಮ್ಯಾಲೆ ಅದೆಷ್ಟು ಗಾಢವಾದ ಪರಿಣಾಮ ಮಾಡಿರಬೇಕು!

ಮಂದಾಕಿನಿಗೂ ವಾಟರ್ ಪ್ರಾಬ್ಲೆಮ್ ಇಲ್ಲ ಅಂತಾತು. ಮಳಿ ಗಿಳಿ ಕಮ್ಮಿ ಆಗಿ ಜಲಪಾತ ಬತ್ತಿದರ ಮಾತ್ರ ಇಕಿಗೆ ಪ್ರಾಬ್ಲೆಮ್. ಕೇಳೋಣ ಅಂತ ತಿರುಗಿ ನೋಡಿದ್ರ, ಮಂದಾಕಿನಿ, 'ರಾಮ ತೇರೀ ಗಂಗಾ ಮೈಲಿ ಹೋಗಯೀ.... ಪಾಪಿಯೋನ್ ಕೆ ಪಾಪ ಧೋತೆ ಧೋತೆ' ಅಂತ ಹಾಡಿಕೋತ್ತ ಧೋನೆವಾಲಾ ವಸ್ತ್ರ ಎಲ್ಲಾ ಕಟ್ಟಿಗೊಂಡು ದೂರ ಹೋಗಿ ಬಿಟ್ಟಿದ್ದಳು. ಮುಂದಿನ ವಾರ ದೂಧ ಸಾಗರ್ ಫಾಲ್ಸ್ ಒಳಗ ಭೆಟ್ಟಿ ಆದಾಗ ಕೇಳಿದ್ರ ಆತು ಅಂತ ಬಿಟ್ಟೆ.

ಮುಂದಿನ ವ್ಯಕ್ತಿ ನಮ್ಮ ಖಾಸಮ್ ಖಾಸ್ ದೋಸ್ತ ಕರೀಂ ಖಾನ್ ಪಠಾಣ್.  ಸಿಕ್ಕ ಅಲ್ಲೇ ನಮ್ಮ ಖಾಯಂ ಅಡ್ಡಾ ಒಳಗ. ಭೀಮ್ಯಾನ ಚುಟ್ಟಾ ಅಂಗಡಿ ಮುಂದ.

ಹತ್ತರ ಹೋದ್ರ ಘಮ್ಮ ಅಂತ ವಾಸನಿ ಹೊಡದ. ಅತ್ತರ್ ವಾಸನಿ  ಮತ್ತ ಬಾಯಾಗ ತುಂಬಿಕೊಂಡಿದ್ದ ಮಾಣಿಕಚಂದ ಗುಟ್ಕಾದ ಸುವಾಸಿನಿ. ಸ್ನಾನ ಆದ ಮ್ಯಾಲೆ ಆ ಪರಿ ಅತ್ತರ್ ಹಚ್ಚಿಗೊತ್ತಾನೋ, ಅತ್ತರದಾಗss ಸ್ನಾನಾ ಮಾಡ್ತಾನೋ ಗೊತ್ತಿಲ್ಲ. ವಾಸನಿಯಂತು ಮಸ್ತ ಹೊಡಿತಾನ. ದುಬೈ ಕಡೆಯಿಂದ ತುಟ್ಟಿ ಅತ್ತರ್ ತರಸ್ತಾನ ಅಂತ ಕಾಣಸ್ತದ.

ಸಲಾಂ ಸಾಬ್ರಾ.... ಸ್ನಾನ ಆತ? - ಅಂತ ಕೇಳಿದೆ.

ಕ್ಯಾ ಸಾಬ್? ಶಾನ್? ಅದು ಭಾಳ ಹಳೆ ಮೂವಿ ಅಲ್ಲಾ? ಟಕಳಾ ಶಾಕಾಲದು. ಅದು ಯಾಕೆ ಈಗ ನೆನಪು ಬಂತು? ಜೀತೇ ಹೈ ಶಾನ್ ಸೆ, ಮರತೇ ಹೈ ಶಾನ್ ಸೆ, ಅಂತ ಶಾನ್ ಮೂವಿ ಬಗ್ಗೆ ಮಾತಾಡಿಬಿಟ್ಟ.

ಲೇ....ಶಾನ್ ಅಲ್ಲೋ... ನಾ ಕೇಳಿದ್ದು ಸ್ನಾನದ ಬಗ್ಗೆ ಮಾರಾಯಾ. ನಹಾನಾ ಧೋನಾ ಬಗ್ಗೆ. ಸ್ನಾನ ಹೋಗಯಾ ಕ್ಯಾ? - ಅಂತ ಫುಲ್ ವಿವರಣೆ ಕೊಟ್ಟು ಕೇಳಿದೆ.

ಓಹೋ.....ಸ್ನಾನಾಗೆ ಕೇಳ್ತೀರಿ ಕ್ಯಾ? ಜೀತೇ ಹೈ ಶಾನ್  ಸೆ. ಸ್ನಾನ ಕರತೇ ಭೀ ಶಾನ್ ಸೆ, ಅಂತ ಶಾನ್ ದಾರ್  ಸ್ನಾನ ಮಾಡಿದ ಬಗ್ಗೆ ಖಚಿತ ಪಡಿಸಿದ.

ನಿಮಗ ನೀರಿನ ಪ್ರಾಬ್ಲೆಮ್ ಇಲ್ಲೇನ್ರೀ ಸಾಬ್ರಾ? - ಅಂತ ಕೇಳಿದೆ.

ಇಲ್ಲ ಸಾಬ್. ನಮಗೆ ಬಿಲ್ಕುಲ್ ನೀರಿನ ಪ್ರಾಬ್ಲೆಮ್ ಇಲ್ಲ. ಮನಿ ಹಿಂದೇನೇ ದೊಡ್ಡ ಭಾವಿ ಐತೆ. ಅದನ್ನ ಈಗ ನ್ಯಾಚುರಲ್ ಸ್ವಿಮ್ಮಿಂಗ್ ಪೂಲ್ ಬ್ಯಾರೆ ಮಾಡಿದೇವೆ. ಹಾಗಾಗಿ ಕೋಯಿ ಪ್ರಾಬ್ಲೆಮ್ ನಹಿ. ಕೋಯಿ ತಕಲೀಫ್ ನಹಿ. ನಿಮಗೆ ವಾಟರ್ ಪ್ರಾಬ್ಲಮ್ ಆದ್ರೆ ಬನ್ನಿ ನಮ್ಮ ಮನೆಗೆ, ಅಂದ ಕರೀಂ.

ಹೂನಪಾ. ಭಾಳ ಥ್ಯಾಂಕ್ಸ್, ಅಂತ ಹೇಳಿ ಮುಂದಿನ ಸರ್ವೇ ಕ್ಯಾಂಡಿಡೇಟ್ ಹುಡ್ಕಿಕೊಂಡು ಹೊಂಟೆ.

ಮುಂದಿನ ಕ್ಯಾಂಡಿಡೇಟ್ ಅಂದ್ರ ಚೀಪ್ಯಾ, ರೂಪಾ ವೈನಿ ಅಂಡ್ ಫ್ಯಾಮಿಲಿ.

ಚೀಪ್ಯಾನ ಮನಿ ಬಂದು ಮುಟ್ಟಿದೆ. ಅವನ ಇಬ್ಬರು ಕನ್ಯಾರತ್ನಗಳಾದ ಕುಂತಿ ಮತ್ತು ನಿಂತಿ ಬಾಗಲದಾಗ ದೊಡ್ಡ ಬ್ಯಾನರ್ ಹಿಡಕೊಂಡು ನಿಂತು, ನೀರು ಉಳಿಸಿ, ಕೂಡಿ ಸ್ನಾನ ಮಾಡಿ, ಅಂತ ಏನೋ ಕ್ಯಾಂಪೇನ್ ನೆಡಸಿದ್ದರು. ಕೈಯ್ಯಾಗ ದೊಡ್ಡ ದೊಡ್ಡ ಪೋಸ್ಟರ್ ಬ್ಯಾರೆ ಇದ್ದವು.


ಪೋಸ್ಟರ್ ನೋಡಿ ದಂಗು ಹೊಡದೆ!

ಹೈ ಕುಂತಿ! ಹೈ ನಿಂತಿ! ಕೈಸಾ ಹೈ ಬಚ್ಚಾ ಲೋಗ್? ಏನಿದು? ಎಲ್ಲಿಂದ ತೊಗೊಂಡು ಬಂದೀರಿ? explain please, ಅಂತ ಸಣ್ಣು ಹುಡುಗ್ಯಾರಿಗೆ ಕೇಳಿಕೊಂಡೆ.

ಮಂಗೇಶ್ ಮಾಮಾ!! ಮಂಗೇಶ ಮಾಮಾ!!! ನಮ್ಮ ಸಾಲಿಯೊಳಗ ಹೇಳಿಕೊಟ್ಟಾರ. ಏನಂದರ.... ಏನಂದರ.... ಕೂಡಿ ಸ್ನಾನ ಮಾಡಿದರ ನೀರು ಉಳಿತದಂತ. ಅದಕ್ಕss ನಾವು ರಸ್ತೆದಾಗ ನಿಂತು ಎಲ್ಲಾರಿಗೂ ಹಂಗಾ ಮಾಡ್ರೀ ಅಂತ ಹೇಳಲಿಕತ್ತೀವಿ. ನೀವು ನಮ್ಮ ಜೊತಿ ಕೂಡಿ ಸ್ನಾನ ಮಾಡ್ರೀ!!! ಪ್ಲೀಸ್!!!, ಅಂತ ಹೇಳಿದ್ದು ಕೇಳಿ ತಲಿಗೆ ಚಕ್ರನss ಬಂತು.

ಕೂಡಿ ಊಟ ಮಾಡೋಣ ಅಂತ ಕರೆದವರನ್ನ ಕೇಳಿದ್ದೆ. ಕೂಡಿ ಸ್ನಾನ ಮಾಡೋಣ ಬರ್ರೀ, ಅಂತ ಕರೆದವರು ಅದೂ ಇಷ್ಟು ಚಿಳ್ಳೆ ಪಿಳ್ಳೆ ಚಿಲ್ಲರ್ ಲೋಗ್. ಛೀ!! ಛೀ!! ಅಸಹ್ಯ. ಅವೇನೋ ಸಣ್ಣವು, ದೊಡ್ಡವರಿಗೆ ಬುದ್ಧಿ ಬ್ಯಾಡ? ಹೀಂಗೆಲ್ಲಾ ಹೇಳೋದ ಕೇಳಿಕೊಂಡು ಕೂಡಲಿಕ್ಕೆ.

ಅಷ್ಟರಾಗ ಚೀಪ್ಯಾ ಹಾಜರಾದ.

ಏನಲೇ ಚೀಪ್ಯಾ? ಏನು ಅವತಾರ? ನೀರಿಗೆ ಪ್ರಾಬ್ಲಮ್ ಅದ ಖರೆ. ಹಂಗಂತ ಹೇಳಿ 'ಕೂಡಿ ಸ್ನಾನ ಮಾಡ್ರೀ' ಅಂತ ನಿನ್ನ ಮಕ್ಕಳ ಕಡೆ ಆಂದೋಲನ ಮಾಡಿಸಲಿಕತ್ತಿ. ಅದು ಸರಿ ಅನ್ನಸ್ತದ ಏನು? ಏನ ಬೇಕಾದ್ರೂ ಯಾರ ಜೊತಿಗೂ ಕೂಡಿ ಮಾಡಬಹುದು. ಆದ್ರ ಸ್ನಾನ ಮತ್ತೊಂದು ಪರ್ಸನಲ್ ಕೆಲಸ ಮಂದಿ ಜೋಡಿ ಕೂಡಿ ಮಾಡು ಅನ್ನೋದು.... ಛೀ!! ಛೀ!! ಅಸಹ್ಯ. ಬಂದ್ ಮಾಡಿಸು ಈ ಹೊಲಸ ಆಂದೋಲನ, ಅಂತ ಹೇಳಿದೆ.

ಅಯ್ಯss ಇವನ!!! ಹೀಂಗ್ಯಾಕೋ? ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನೋದು ಹಳೆದಾತು. ಈಗ ಕೂಡಿ ಸ್ನಾನ ಮಾಡಿದರೆ ಇಲ್ಲೇ ಸ್ವರ್ಗ ಇಲ್ಲೇ ಸುಖ. ನೀರಿನ ಪ್ರಾಬ್ಲೆಮ್ ಭಾಳ ಮಾರಾಯ. ಮತ್ತ ನಾವೂ ಸ್ವಲ್ಪ environment conscious ಆಗಿ ನೀರು ಉಳಿಸಬೇಕು ನೋಡು. ಅದಕ್ಕss ನಾವು 'ಕೂಡಿ ಸ್ನಾನ ಮಾಡಿ' ಆಂದೋಲನ ಒಳಗ ಭಾಗವಹಿಸಲಿಕತ್ತೇವಿ ನೋಡು. ನಾನು, ನಿಮ್ಮ ರೂಪಾ ವೈನಿ, ಅಕಿ ತಂಗಿ, ಅಕಿ ಅಜ್ಜಿ, ಅಕಿ ಇಬ್ಬರು ತಮ್ಮಂದಿರು ಎಲ್ಲಾ ಕೂಡೆ ಸ್ನಾನ ಮಾಡ್ತೇವಿ ನೋಡಪಾ. ಈಗ ಒಂದು ತಿಂಗಳ ಮ್ಯಾಲಾತು. ನೀನೂ ಜಾಯಿನ್ ಆಗ್ತಿ ಏನು? ಜಗಾ ಅದ ಬೇಕಾದ್ರ, ಅಂದು ಬಿಟ್ಟ ಚೀಪ್ಯಾ!

ಹೋಗ್ಗೋ ನಿನ್ನ!! ಏನಪಾ ಇದು ಸಾಮೂಹಿಕ ಸ್ನಾನ. ಸಾಮೂಹಿಕ ವಿವಾಹ ಕೇಳಿದ್ದೆ. ಏನು ಒಂದು ಕೆರಿ ಅಂತಹ ದೊಡ್ಡ ಟಂಕಿ ಕಟ್ಟಿಸಿ ಏನಲೇ ಚೀಪ್ಯಾ? ಎಲ್ಲರೂ ಹೋಗಿ ಅದರಾಗ ಡೈವ್ ಹೊಡೆದು ಬಿಡ್ತೀರಿ ಏನು? ಅಥವಾ ಮಂತ್ರಾಲಯದಾಗ ತುಂಗಭದ್ರಾ ನದಿಯಾಗ ಫುಲ್ ವಸ್ತ್ರಾ ಹಾಕ್ಕೊಂಡss ಸ್ನಾನ ಮಾಡಿದಂಗ ಸ್ನಾನದ ಶಾಸ್ತ್ರಾ ಮುಗಿಸಿ ಬಿಡ್ತೀರೋ? ಹಾಂ? ಹಾಂ? ಏನ ಅನ್ನು ಇದು ಪದ್ಧತಿ ಅಲ್ಲ ಬಿಡಪಾ. ನೀನೂ ಹೇ.ಶಿ. ಪಾಟೀಲ್ ಆಗ್ಲಿಕತ್ತಿ ನೋಡು, ಹಾಪಾ! - ಅಂತ ಹೇಳಿದೆ.

ಛೆ!!ಛೆ!!! ಆ ಸಿಸ್ಟಮ್ ಅಲ್ಲಪಾ. ನಮ್ಮದು ಮಹಾಭಾರತದ ಟೈಮ್ ಒಳಗ ಕೌರವರು ಫಾಲೋ ಮಾಡಿದ ಪದ್ಧತಿ, ಅಂದು ಒಂದಿಷ್ಟು ಕಪ್ಪು ಅರವಿ ತುಂಡುಗಳನ್ನು ಝೇಂಡಾದ ಗತೆ ಮಾರಿ ಮುಂದ ಆಡಿಸಿದ ಚೀಪ್ಯಾ. ಕಿಡ್ನಾಪ್ ಮಾಡಿದವರು ಮಂದಿ ಕಣ್ಣಿಗೆ ಕಟ್ಟುವಂತಹ ಕಪ್ಪು ಬಟ್ಟಿ.

ಏನಲೇ ಇವು ಕಪ್ಪು ಕರವಸ್ತ್ರ? ಯಾರ ವಿರುದ್ಧ ಯಾಕಾಗಿ ಏನು ಪ್ರತಿಭಟನೆ ಮಾಡಲಿಕ್ಕೆ ಹೊಂಟೀರಿ? ಏನದು ಮಹಾಭಾರತ ಟೈಮ್ ಪದ್ಧತಿ? ಹಾಂ? ಹಾಂ? - ಅಂತ ಕೇಳಿದೆ.

ಆವಾ ಧೃತರಾಷ್ಟ್ರ ಕುಡ್ಡ. ಅವನ ಹೆಂಡ್ತಿ ಗಾಂಧಾರಿ. ಕುಡ್ಡಿ ಅಲ್ಲದಿದ್ದರೂ ಗಂಡ ಕುಡ್ಡ ಅಂತ ಹೇಳಿ ತಾನೂ ಕಣ್ಣಿಗೆ ವಸ್ತ್ರ ಕಟ್ಟಿಗೊಂಡು ಬಿಟ್ಟಿದ್ದಳು. ಮೊದಲು ಆ ಕುಡ್ಡ ಧೃತರಾಷ್ಟ್ರಗ ಸ್ನಾನ ಮಾಡಿಸುವಾಗ ಇಕಿನೂ ಅಲ್ಲೇ ಸ್ನಾನ ಮಾಡಿ ಬಂದು ಬಿಡ್ತಿದ್ದಳು. ಆವಾಗ ಸುರು ಆಗಿದ್ದು 'ಕೂಡಿ ಸ್ನಾನ ಮಾಡಿ' ಅನ್ನೋ ಕಾನ್ಸೆಪ್ಟ್. ಮುಂದ ನೂರು ಮಂದಿ ಕೌರವ ಮಕ್ಕಳು ಆದರು. ನೀರಿನ ಪ್ರಾಬ್ಲೆಮ್. ಅದಕ್ಕss ಅಕಿ ಗಾಂಧಾರಿ ಎಲ್ಲರಿಗೂ ಕಣ್ಣಿಗೆ ಒಂದೊಂದು ಕಪ್ಪು ವಸ್ತ್ರಾ ಕಟ್ಟಿಸಿ, ಒಂದು ದೊಡ್ಡ ಶವರ್ ಕೆಳಗ ನಿಲ್ಲಿಸಿಬಿಡತಿದ್ದಳಂತ. honor ಸಿಸ್ಟಮ್ ಏನಪಾ. ಯಾರೂ ಕಣ್ಣಿಗೆ ಕಟ್ಟಿಕೊಂಡ ಕಪ್ಪು ಬಟ್ಟಿ ಬಿಚ್ಚೋಹಾಂಗಿಲ್ಲ ಮತ್ತ ಕದ್ದು ನೋಡುಹಾಂಗಿಲ್ಲ. ಕಣ್ಣ ಕಟ್ಟಿಕೊಂಡು ಬರಬೇಕು, ಬಟ್ಟಿ ಗಿಟ್ಟಿ ಬಿಚ್ಚಿ ಗುಂಪಿನ್ಯಾಗ ಶವರ್ ಕೆಳಗ ನಿಲ್ಲಬೇಕು, ಸೀಟಿ ಹೊಡದ ಕೂಡಲೇ ಶವರ್ ನಿಂದ ಹೊರಗ ಬಂದು, ಮೈ ಮತ್ತೊಂದು ವರೆಸಿಕೊಂಡು, ಒಣ ವಸ್ತ್ರಾ ಹಾಕಿಕೊಂಡು, ಹೊರಗ ಬಂದ ಮ್ಯಾಲೇನss ಕಣ್ಣ ಮ್ಯಾಲಿನ ಕಪ್ಪು ಬಟ್ಟಿ ತೆಗೆಯೋದು. ಭಾರಿ ಶಿಸ್ತ ಪದ್ಧತಿ. ಮಸ್ತ ವರ್ಕ್ ಔಟ್ ಆಗ್ತದ. ಆದ್ರ honor ಸಿಸ್ಟಮ್ ಫಾಲೋ ಮಾಡಬೇಕು. ನಿನ್ನಂತ ಕಿಡಿಗೇಡಿ ಬಂದು ನಡು ನಡು ಕಣ್ಣಿಗೆ ಕಟ್ಟಿಕೊಂಡ ಬಟ್ಟಿ ಕೆಳಗ ಇಳಿಸಿ ಯಾರನ್ನಾರ ಪಿಕಿ ಪಿಕಿ ನೋಡಿದ್ರ ಉಳಿದ ಮಂದಿ ಕೊಂದss ಒಗಿತಾರ, ಅಂತ ಸಾಮೂಹಿಕ ಸ್ನಾನ ಹ್ಯಾಂಗ ನೆಡಿತದ ಅಂತ ಹೇಳಿದ ಚೀಪ್ಯಾ.

ವಾಹ್!ಚೀಪ್ಯಾ! ವಾಹ್! ನೀರು ಉಳಿಸಲಿಕ್ಕೆ ತ್ರೇತಾಯುಗದ ಮಹಾಭಾರತ ಕಾಲದ ಸ್ನಾನದ ಪದ್ಧತಿ. ಯಾರ ಐಡಿಯಾ ಇದು? ಕುಂತಿದೋ ಅಥವಾ ನಿಂತಿದೋ? ಕುಂತಿ ಅಂತ ಹೆಸರು ಇಟ್ಟಿದ್ದು ಸಾರ್ಥಕ ಆತು. ಅದು ಹ್ಯಾಂಗಲೇ ಕುಂತಿ, ನಿಂತಿ ಅಂತ ಹೆಸರು ಇಟ್ಟಿ ನಿನ್ನ ಇಬ್ಬರು ಕನ್ಯಾರತ್ನಗಳಿಗೆ? ಹಾಂ? ಹಾಂ? - ಅಂತ ಕೇಳಿದೆ.

ಲೇ....ಮಂಗ್ಯಾನ್ ಕೆ....ಅವರ ಹೆಸರು ಕುಂತಿ ಮತ್ತ ನಿಯತಿ ಅಂತಪಾ! ಕುಂತಾಕಿ ಕುಂತಿ ನಿಂತಾಕಿ ನಿಂತಿ ಅನ್ನೋ ಹಾಂಗ ಕುಂತಿ ನಿಂತಿ ಅಂತಿಯಲ್ಲಲೇ ಹಾಪಾ!- ಅಂತ ನನ್ನ ಕರೆಕ್ಟ್ ಮಾಡಿದಾ ಚೀಪ್ಯಾ.

ಅದು ನಿಯತಿ ಅಂತೇನು? ನಾ ಎಲ್ಲೋ ಒಬ್ಬಾಕಿಗೆ ಕುಂತಿ ಅಂತ ಇಟ್ಟಿ, ಪ್ರಾಸ ಹೊಂದಲಿ ಅಂತ ಇನ್ನೊಬ್ಬಾಕಿಗೆ ನಿಂತಿ ಅಂತ ಇಟ್ಟಿಯೋ ಅಂತ ವಿಚಾರ ಮಾಡಿದ್ದೆ, ಅಂದು ಡಿಫೆಂಡ್ ಮಾಡಿಕೊಂಡೆ.

ಹೌದ್ ನೋಡು!ಎಲ್ಲಾರೂ ನಿನ್ನ ಗತೆ ಸ್ವಚ್ಚ ಹಾಪ ಇರ್ತಾರ! - ಅಂತ ರಿವರ್ಸ್ ಬಾರಿಸಿದ.

ಅಷ್ಟರಾಗ ಮತ್ತ ಕುಂತಿ ಮತ್ತ ನಿಂತಿ ಅಲ್ಲಲ್ಲ ನಿಯತಿ ಬಂದು ಹಾಜರ್ ಆದರು.

ಮಂಗೇಶ್ ಮಾಮಾ!! ಮಂಗೇಶ್ ಮಾಮಾ!! ನೀನೂ ನಮ್ಮ ಜೊತಿ ಸ್ನಾನಕ್ಕ ಬರ್ತೀ? ಖರೇನ ಬರ್ತೀ?.....ಹೀ....ಹೀ...ಅಂತ ಯಬಡ ಕನ್ಯಾರತ್ನಗಳು ಹಲ್ಲು ಕಿಸಿದವು.

ಥತ್ ನಿಮ್ಮ.....ಹೇಶಿಗಳನ್ನ ತಂದು.... ಕುಂತಿ ನಿಂತಿ...ಹಾಕ್ತೇನಿ ನೋಡ್ರೀ ಇಬ್ಬರಿಗೂ ಎರಡೆರೆಡು. ಓಡ್ರೀ. ರೂಪಾ ವೈನಿಗೆ ಹೇಳಿ ಒಂದು ಕಪ್ ಚಹಾ ಮಾಡಿಸಿಕೊಂಡು ಬರ್ರಿ....ಹೋಗ್ರೀ....ಹೋಗ್ರೀ, ಅಂತ ಓಡಿಸಿದೆ.

ನಮ್ಮನ್ಯಾಗ ಈಗ ಸಾಮೂಹಿಕ ಸ್ನಾನಕ್ಕ ಒಪ್ಪವರಿಗೆ ಮಾತ್ರ ಚಹಾ ಪಹಾ ಎಲ್ಲಾ. ಸಾಮೂಹಿಕ ಸ್ನಾನ ಮಾಡದ ಮನಿ ಮಂದಿನss ಉಪವಾಸ ಕೆಡವೀನಿ. ಇನ್ನ ನಿನಗ ಚಹಾ ಕೊಡತೇನಿ ಏನು ಮಂಗೇಶ್? - ಅಂತ ಅನಕೋತ್ತ ರೂಪಾ ವೈನಿ ಇಡೀ ಭೂಮಂಡಲವನ್ನೇ ನಾಕು ಸುತ್ತು ಹಾಕುವಂತಿದ್ದ ಸರ್ಕಸ್ ಟೆಂಟ್ ಸೈಜಿನ ನೈಟಿ ಎತ್ತರ ಪತ್ತರ ಅಸಡ್ಡಾಳ ಅಡ್ಡಾಡಿಸಿಗೋತ್ತ ಬಂದ್ರು. ಏನು ಮಾಡಿ ಬರ್ಲಿಕತ್ತಿದ್ದರೋ ಏನೋ ಗೊತ್ತಿಲ್ಲ. ನೈಟಿಗೇ ಕರಾ ಪರಾ ಅಂತ ಕೈ ಬ್ಯಾರೆ ತಿಕ್ಕಿ ತಿಕ್ಕಿ ಒರಸಿಕೋತ್ತ ಬಂದು ಬಿಟ್ಟರು. ಇನ್ನು ಆ ನೈಟಿ ತೊಳಿಲಿಕ್ಕೆ ನೀರು ಎಲ್ಲಿಂದ ತರ್ತಾರೋ ಏನೋ?

ಹಾಂ!!!ಹಾಂ!!! ನಿಮ್ಮನ್ಯಾಗ ಚಹಾ ಕುಡಿಬೇಕಂದ್ರ ಸಾಮೂಹಿಕ ಸ್ನಾನ ಮಾಡಬೇಕಾ? ಬ್ಯಾಡ್ರೀ ವೈನಿ ಬ್ಯಾಡ್ರೀ, ಅಂತ ಹೇಳಿದೆ.

ಟ್ರೈ ಮಾಡೋ ಮಂಗೇಶ್....ಒಮ್ಮೆ ಕೂಡಿ ಸ್ನಾನ ಮಾಡಿ ನೋಡು.  ಆ ಮ್ಯಾಲೆ ಒಬ್ಬನ ಒಟ್ಟss ಸ್ನಾನ ಮಾಡಂಗಿಲ್ಲ. ಯಾವಾಗ ಬರ್ತೀ? ನಾಳೆ ಬರ್ತಿಯಾ? ನಮ್ಮ ಈಗ ಜಗಾ ಭಾಳ ಟೈಟ್ ಅದ. ನನ್ನ ಇಬ್ಬರು ತಮ್ಮಂದಿರನ್ನ ಬಾಜು ಮನಿಗೆ ಸಾಮೂಹಿಕ ಸ್ನಾನಕ್ಕ ಕಳಸ್ತೇನಿ. ನೀ ಡಬಲ್ ಸೀಟ್ ಮನುಷ್ಯಾಗ ಬೇಕಲಾ ಅಷ್ಟು ಜಾಗಾ? - ಅಂತ ವೈನಿ ಏನೇನೋ ಆಮಿಷ ತೋರಿಸಿದರು.

ಯಪ್ಪಾ....ಆವಾ ಊಸಾಮಾ ಬಿನ್ ಲಾಡೆನ್ ಹೋದ ಅಂತ ಹುಸ್ಸಪಾ ಅಂತ ಉಸುರು ಬಿಡೋದ್ರಾಗ ನೀವೆಲ್ಲಾ ಕೂಸ್ನಾಮಾ ಬಿನ್ ಲಾಡೆನ್ ಆಗಿ ವಕ್ಕರಸಿಕೊಂಡಿರಿ ನೋಡ್ರೀ ವೈನಿ, ಚೀಪ್ಯಾ, ಅಂತ ಅಂದೆ.

ಏ....ಮಂಗೇಶ್....ಏನು ಕೂಸ್ನಾಮಾ ಏನು ಊಸಾಮಾ? ನಮಗ ಅವಂಗ ಏನು ಸಂಬಂಧ ಹಚ್ಚಿ? ಹಾಂ? ಹಾಂ? - ಅಂತ ರೂಪಾ ವೈನಿ ಫುಲ್ ರೈಸ್ ಆಗಿ ಕೇಳಿದರು.

ಕೂಸ್ನಾಮಾ ಅಂದ್ರ 'ಕೂಡಿ ಸ್ನಾನ ಮಾಡವರು' ಅಂತ. ಅಂದ್ರ ನಿಮ್ಮಂತ ಮಂದಿ. ಅವಾ ಒಬ್ಬವಾ ಊಸಾಮಾ ಹೋದಾ. ಇಲ್ಲೆ ಪೂರ್ತಿ ಓಣಿ ಓಣಿನ ಕೂಸ್ನಾಮಾ ಬಿನ್ ಲಾಡೆನ್ ಗಳು ತಯಾರಾಗಿ ಬಿಟ್ಟೀರಿ. ಅವಂದು ಒಂದು ನಮೂನಿ ವೇಷಾ. ಈಗ ನಿಮ್ಮಗಳದ್ದು ಇನ್ನೊಂದು ನಮ್ಮನೀದು. ಹೀಂಗ ಆದ್ರ ನೀವೆಲ್ಲಾ ಕೂಸ್ನಾಮಾಗಳು ಹಾಕೋ ಸ್ಟಿಂಕ್ ಬಾಂಬಿಗೆ ಊರಿಗೆ ಊರ ನಾಶ ಆಗಿ ಹೋಗ್ತದ, ಅಂತ ಒಸಾಮಾ ಕೂಸ್ನಾಮಾ ಅಂದ್ರ ಏನಂತ ಹೇಳಿದೆ.

ಏ ಕುಂತಿ ಏ ನಿಂತಿ....ಕೇಳ್ರೀ ಇಲ್ಲೆ.... 'ಕೂಡಿ ಸ್ನಾನವ ಮಾಡಿ' ಆಂದೋಲನದ ಆಫೀಸ್ ಗೆ ಫೋನ್ ಹಚ್ಚಿ ನಾಕೈದ ಹೊನಗ್ಯಾ ಮಂದಿಗೆ ಕಳಿಸಿಕೊಡಲಿಕ್ಕೆ ಹೇಳ್ರೀ. ಈ ಹುಚ್ಚ ಮಂಗೇಶಂಗ ಒಂದು ಗತಿ ಕಾಣಿಸೇ ಬಿಡ್ತೇನಿ. ನಾವೆಲ್ಲಾ ಇಲ್ಲೆ ನೀರು ಉಳಿಸಲಿಕ್ಕೆ ಒದ್ದಾಡಲಿಕತ್ತರ ನಮಗ ಊಸಾಮಾ ಕೂಸ್ನಾಮಾ ಅದು ಇದು ಅಂತಾನ. ಹತ್ತಿತೇನಾ ಫೋನ್ ಕುಂತಿ ನಿಂತಿ? ಹಾಂ?ಹಾಂ? - ಅಂತ ರೂಪಾ ವೈನಿ ಸುಪಾರಿ ಕೊಟ್ಟುಬಿಟ್ಟರು.

ರೀ...ಕೂಸ್ನಾಮಾ ಆಫೀಸ್? ಮಂಗೇಶ್ ಮಾಮಾ ಮನಿಗೆ ಬಂದು ನಮಗ ಕೂಸ್ನಾಮಾ ಊಸಾಮಾ ಅದು ಇದು ಅನ್ನಲಿಕತ್ತಾನ. ಅವಂಗ ಹಿಡಿದು ಸಮೂಹ ಸ್ನಾನಾ ಮಾಡಿಸಬೇಕಾಗ್ಯದ. ಲಗೂನ ಮಂದಿ ಕಳಸರಿ, ಅಂತ ಯಬಡ ಹುಡುಗ್ಯಾರಾದ ಕುಂತಿ ನಿಂತಿ ಫೋನ್ ಮಾಡಿಕೋತ್ತ ಒದರಲಿಕತ್ತಿದ್ದವು. 

ಇನ್ನೂ ಇಲ್ಲೇ ಕೂತರ ನನಗ ಜಬರ್ದಸ್ತಿ ಸಾಮೂಹಿಕ ಸ್ನಾನಾ ಮಾಡಿಸೇ ಬಿಟ್ಟಾರು ಅಂತ ಹೆದರಿ, ಎಲ್ಲರಿಗೂ ಒಂದು ದೊಡ್ಡ ನಮಸ್ಕಾರ ಹಾಕಿ ಅಲ್ಲಿಂದ ಓಡಿಬಿಟ್ಟೆ.

ಮುಂದಿನ ಕ್ಯಾಂಡಿಡೇಟ್ ಯಾರು ಅಂತ ವಿಚಾರ ಮಾಡೋದ್ರಾಗ ಅವರss ಎದುರಿಗೆ ಬರ್ಲಿಕತ್ತಿದ್ದರು.

ಈಗ ಬರ್ಲಿಕತ್ತಾಕಿ ಆ ಕಾಲದ ಇನ್ನೊಬ್ಬ ಪುರಾತನ ಸುಂದರಿ. ತ್ರಿಪುರ ಸುಂದರಿ. ಇಕಿ ಬಾಲಿವುಡ್ ರೇಖಾ ಇದ್ದಂಗ. ಚಿರಸುಂದರಿ. ಸದಾ ಸುಂದರಿ.

ನಮಸ್ಕಾರ ಸುಂದರೀ...ಆರಾಮ ಏನು? ಬಾಲಿವುಡ್ ರೇಖಾ ಇದ್ದಂಗ ಇದ್ದಿ ನೋಡು. ಚಿರಸುಂದರಿ! ಆಹಾ! ಆಹಾ!- ಅಂತ ಹೊಗಳಿ ಕೇಳಿದೆ.

ಸ್ಟುಪಿಡ್! ಅಂತ ಬೈದಳು.

ಯಾಕssss? ಬೈತಿ? - ಅಂತ ಕೇಳಿದೆ.

ಛಿ! ಛಿ! ನನಗ ರೇಖಾ ಒಟ್ಟss ಸೇರಂಗಿಲ್ಲ. ಸ್ಟುಪಿಡ್! - ಅಂತ ಮತ್ತ ಬೈದಳು.

ರೇಖಾ ಸೇರಂಗಿಲ್ಲ ಅಂದ್ರ ಹೋಗ್ಲಿ ಬಿಡು. ನೀನೂ ಅಕಿ ಗತೆ ಯಾವಾಗಲೂ ಫ್ರೆಶ್, ಯಂಗ್, ಚಂದ ಕಾಣ್ತೀ ಅಂತ. ಅಷ್ಟss. ಯಾವಾಗಲೂ ASS, ಅಂದೆ.

ಈಗ ASS ಅಂದ್ರ ಏನು? ಸ್ಟುಪಿಡ್! ಜಲ್ದೀ ಹೇಳು. ನಾ ಕತ್ತಿ ಅಂತೇನು? ಬಡಿತೀನಿ ನೋಡು ಭಕ್ಕರಿ ಬಡದಾಂಗ. ಸ್ಟುಪಿಡ್, ಅಂತ ಮತ್ತ ಬೈದಳು.

ಛೆ !ಛೆ ! ಕತ್ತಿ ಅಲ್ಲ. ASS ಅಂದ್ರ 'Always Sweet Sixteen' ಅಥವಾ 'Always Sexy Seventeen' ಅಂತ. ಥೇಟ್ ನಿನ್ನ ಗತೆ, ಅಂತ ಹೊಗಳಿ ಹೇಳಿದೆ.

ಸ್ಟುಪಿಡ್! ಸಾಕು. ಭಾಳ ತಾರೀಫ್ ಮಾಡೋದು ಬ್ಯಾಡ. ಏನು ಕೆಲಸ ಅದನ್ನ ಹೇಳು? - ಅಂತ ಕೇಳಿದಳು.

ನಿನ್ನ ಕಡೆ ಒಂದು ಪ್ರಶ್ನೆ ಕೇಳೋದು ಇತ್ತು.  ಕೇಳಲಿ? - ಅಂದೆ.

ಸ್ಟುಪಿಡ್! ನೀ ಏನು ಕೇಳವಾ ಇದ್ದಿ ಅನ್ನೋದು ನನಗ ಗೊತ್ತದ. ನಂದು ಸ್ನಾನ ಇನ್ನೂ ಆಗಿಲ್ಲ. ಸ್ಟುಪಿಡ್, ಅಂತ ಮತ್ತ ಬೈದಳು.

ಹಾಂ!!ನಿನಗೆಂಗ ಗೊತ್ತಾತು ಸುಂದರೀ, ನಾ ಸ್ನಾನ ಆತ, ಅಂತ ಕೇಳವಾ ಇದ್ದೇನಿ ಅಂತ? - ಅಂತ ನಾ ಕೇಳಿದೆ.

ಗೊತ್ತಾತು. ಊರ ಮಂದಿ ಎಲ್ಲ ಫೋನ್ ಮಾಡಿ ಹೇಳಿದ್ರು. ಆ ಹುಚ್ಚ ಮಂಗೇಶ್ ಎಲ್ಲಾರ್ ಕಡೆ ನಿಮ್ಮದು ಸ್ನಾನ ಆತ? ಸ್ನಾನ ಆತ? ಅಂತ ಕೇಳಿಕೋತ್ತ ಅಡ್ಡಾಡ್ಲಿಕತ್ತಾನ. ನಿನಗೂ ಕೇಳ್ತಾನ ನೋಡು ಅಂತ. ಸ್ಟುಪಿಡ್! - ಅಂತ ನಾ ಕೇಳೋಕಿಂತ ಮೊದಲಾ ಉತ್ತರಾ ಹೇಳಿಬಿಟ್ಟಳು.

ಛೆ!!!ಛೆ!! ನಾ ಕೇಳೋಕಿಂತ ಮೊದಲ ಉತ್ತರ ಹೇಳಿಬಿಟ್ಟಳು. ಏನರ ಮಾಡಿ ಇನ್ನೊಂದು ನೀರಿಗೆ, ಸ್ನಾನಕ್ಕ ಸಂಬಂಧಿಸಿದ ಪ್ರಶ್ನೆ ಇಕಿಗೆ ಕೇಳಲೇಬೇಕು. ಏನು ಕೇಳಲಿ?

ಓಕೆ ಸುಂದರಾ ಬಾಯಿ...ಸ್ನಾನ ಆಗಿಲ್ಲ ಅಂದಿ ಓಕೆ. ಆದ್ರ ಎರಕೊಂಡಿರಬಹುದಲ್ಲ? ಎರಕೊಂಡಿ ಏನು? - ಅಂತ ಕೇಳಿದೆ.

ಸ್ಟುಪಿಡ್....ಎರಕೊಂಡರ ಸ್ನಾನ ಆದಂಗ ಅಲ್ಲಾ? ಸ್ನಾನ ಆಗದಾಂಗ ಹ್ಯಾಂಗ ಎರಕೋತ್ತಾರ?....ಸ್ಟುಪಿಡ್ - ಅಂತ ಮೈಲ್ಡ್ irritate ಆಗಿ ಸುಂದರಿ ಹೇಳಿದಳು.

ಅಲ್ಲss....ನೀವೆಲ್ಲಾ ತಲಿ ಕೂದಲಾ  ಒದ್ದಿ ಆಗಬಾರದು ಅಂತ ಶವರ್ ಕ್ಯಾಪ್ ಅಂತ ಪ್ಲಾಸ್ಟಿಕ್ ಟೊಪ್ಪಿಗಿ ಹಾಕ್ಕೊಂಡು ಬರೆ ಮೈ ಸ್ನಾನ ಮಾಡಿದಂಗ, ಪೂರ್ತಿ ಮೈಗೆ ಪ್ಲಾಸ್ಟಿಕ್ ಸುತ್ತಿಗೊಂಡು ಬರೆ ತಲಿಗೇ ಮಾತ್ರ ಯಾಕ ಎರಕೋಬಾರದು? ಹಾಂ? ಹಾಂ? ಪಾಯಿಂಟ್ ಅದನೋ ಇಲ್ಲೋ? - ಅಂತ ಲಾಜಿಕಲ್ ಪಾಯಿಂಟ್ ಹಾಕಿದೆ.

ಸ್ಟುಪಿಡ್....ಸೋsssss ಸ್ಟುಪಿಡ್....ನನಗ ಅಡಿಗಿ ಮಾಡಲಿಕ್ಕೆ ಹೋಗಬೇಕು ಅನಕೋತ್ತ ಚಿರಸುಂದರಿ ಹೋಗಿ ಬಿಟ್ಟಳು.

ಏ...ಎರಕೊಂಡಿಯೋ ಇಲ್ಲೋ ಅಂತ ಹೇಳಿ ಹೋಗ, ಅಂತ ಕೂಗಿದೆ.

ತಲಿನss ಇಲ್ಲ ಎಲ್ಲಿ ಎರಕೊಳ್ಳುದು ಹಚ್ಚಿ. ಸ್ಟುಪಿಡ್ ....ಸೋ ಸ್ಟುಪಿಡ್, ಅಂದು ಈ ಸರೆ ಖರೇನ ಹೋಗಿಬಿಟ್ಟಳು.

ಯಾರಿಗೆ ತಲಿ ಇಲ್ಲ ಅಂತ ಹೇಳಿದಳು? ಅಕಿಗೋ?ಅಥವಾ ನನಗೋ?................ಗೊತ್ತಿಲ್ಲ.

ನಮ್ಮ ಊರ ಕಡೆ ನೀರಿನ ಪ್ರಾಬ್ಲಮ್ ಜೋರ್ ಅದ. ಆದ್ರ ಬೇರೆ ಬೇರೆ ಮಂದಿ ಬೇರೆ ಬೇರೆ ರೀತಿಯೊಳಗ ಒಂದಲ್ಲ ಒಂದು ಪರಿಹಾರ ಕಂಡುಕೊಂಡಾರ.

ಹೀಂಗಾಗಿ, ಸ್ನಾನ ಆತರೀ? ಅಂತ ಕೇಳಿದರೂ ಏನೇನೋ ಸ್ವಾರಸ್ಯಕರ ಉತ್ತರನss ಬರ್ತಾವ.

=========================================================================
ಧಾರವಾಡ ಕನ್ನಡ ಪದಾರ್ಥ ಸೂಚಿ:

ತಿಂಡಿ = ಕೆರತ, ತುರಿಕೆ (ತಿಂಡಿ ಬಿಡೋದು)

ಎರಕೊಳ್ಳೋದು = ತಲೆ ಸ್ನಾನ ಮಾಡುವದು.

ಭಕ್ಕರಿ  = ಜೋಳದ ರೊಟ್ಟಿ

Monday, May 27, 2013

ಕಟ್ಟಿದವ ಕೋಡಂಗಿ, ಕಟ್ಟಿಸಿಕೊಂಡಾಕಿ ಬೋರಂಗಿ.

ಅವತ್ತೊಂದಿನ ನಮ್ಮ ತಳ ಕಳಚಿ ಬಿದ್ದು ಬಿಡ್ತು.

Bottom fell off, literally.

ಅಯ್ಯೋ!!! ಅಂದ್ರ ನಮ್ಮ ಕೊರಳಾಗ ಹಾಕಿಕೊಂಡ ಚೈನಿನ ರುದ್ರಾಕ್ಷಿ ಲಾಕೆಟ್ಟಿನ ತಳಾ ಕಳಚಿ ಬಿದ್ದು ಹೋತು ಅಂತ. ಅಷ್ಟss. ಪುಣ್ಯಕ್ಕ ಆ ಲಾಕೆಟ್ಟಿನ ತಳಾ, ಅದೂ ಬಂಗಾರದ್ದು, ಮನಿಯೊಳಗss ಬಿದ್ದಿತ್ತು. ಮತ್ತ ನಮಗss ಸಿಕ್ಕಿ ಬಿಡ್ತು. ನಮ್ಮ ನಸೀಬದಾಗ ಇರಬೇಕು. ಅದಕ್ಕss ಸಿಕ್ಕದ. ಇಲ್ಲಂದ್ರ ಅಷ್ಟು ಸಣ್ಣ ವಸ್ತು ಬಿದ್ದಿದ್ದು, ಮನಿಯೊಳಗ ಬಿದ್ದಿದ್ದರೂ, ಸಿಗೋದು ಅಂದ್ರ ಭಾಳ ದೊಡ್ಡ ಮಾತು. ರುದ್ರಾಕ್ಷಿ ಲಾಕೆಟ್ ತಳ. ಅದೂ ಮಹಾನ್ ಶಿವಭಕ್ತನ ಕೊರಳಾಗಿಂದು. ಬಿದ್ದದ. ಭಕ್ತಂಗss ವಾಪಸ್ ಸಿಕ್ಕ್ಯದ.

ಸಿಕ್ಕತು ಚೊಲೊ ಆತು. ಇದನ್ನ ಲಗೂನ ರಿಪೇರ್ ಮಾಡಿಸಿಬಿಡಬೇಕು ಅಂತ ನಮ್ಮ ಬಂಗಾರ್ ಶೇಡಜೀ ಕಂ ಸೋನಾರನ ಅಂಗಡಿಗೆ ಹೊಂಟೆ. ಲೈನ್ ಬಜಾರ್ ಒಳಗ. ಅಲ್ಲೇ ಎಲ್ಲಾ ಸೋನಾರ್ ಮಂದಿ ಇರೋದು. ನಮ್ಮವ ಕೂಡ ಅಲ್ಲೇ ಇದ್ದಾನ.

ಹೋದೆ. ಮಸ್ತ posh ಅಂಗಡಿ ಮಾಡಿಸಿಬಿಟ್ಟಾನ ಬಂಗಾರ್ ಶೇಡಜೀ. ಎಲ್ಲಾ ಕಡೆ ಮಸ್ತ ಮೆತ್ತಗಿನ ಕುಶನ್ ಸೀಟು, ಫುಲ್ ಏರ್ ಕಂಡೀಶನ್. ಮಸ್ತ. ಹೋಗಿ ಕೂತೆ. ತಣ್ಣನೆ ಲಿಮ್ಕಾ ಬಂತು. ಬಂಗಾರ ಕೆಲಸಾ ಮಾಡೋ ಕರ್ಮಚಾರಿ ಬರೋವ ಇದ್ದ ಇನ್ನೇನು. ಬಾಜೂಕ ಕಣ್ಣು ಹೋತು. ನೋಡಿದ್ರ ನಮ್ಮ ದೋಸ್ತ ಚೀಪ್ಯಾ ಕೂತಿದ್ದ. ಒಬ್ಬನ ಕೂತಿದ್ದ. ಜೊತಿಗೆ ಅವನ ಹೆಂಡ್ತಿ ರೂಪಾ ವೈನಿ ಇರಲಿಲ್ಲ.

ಏನಲೇ ಚೀಪ್ಯಾ? ಇಲ್ಲೇ? ಅದೂ ಒಬ್ಬನss ? - ಅಂತ ಕೇಳಿದೆ.

ಹಾಂ! ನೀನಾ? ನೀ ಹ್ಯಾಂಗ ಇಲ್ಲೇ? - ಅಂತ ಚೀಪ್ಯಾ ಘಾಬರಿ ಆಶ್ಚರ್ಯ ಮಿಶ್ರಿತ ದನಿ ಒಳಗ ಕೇಳಿದ.

ನಂದು ರುದ್ರಾಕ್ಷಿ ಲಾಕೆಟ್ಟಿನ ತಳಾ ಬಿದ್ದು ಹೋತು. ವಾಪಸ್ ಹಾಕಿಸಿಕೊಂಡು ಹೋಗೋಣ ಅಂತ ಬಂದೆ. ನೀ ಯಾಕ ಬಂದು ಕೂತಿ? - ಅಂತ ಕೇಳಿದೆ.

ಅದು.....ಅದು.....ಅಂತ ಚೀಪ್ಯಾ ಮಿಜಿ ಮಿಜಿ ಮಾಡಿದ.

ಹೇಳಲೇ ಸರೀತ್ನಾಗಿ! ಅನಧೀಕೃತ ಎರಡನೆ ಹೆಂಡತಿಗೆ ಕದ್ದು ಬಂಗಾರ ಖರೀದಿ ಮಾಡಲಿಕ್ಕೆ ಬಂದವರಾಂಗ ಮಿಜಿ ಮಿಜಿ ಮಾಡ್ಲಿಕತ್ತಿ. ಹೇಳ್ತಿಯೋ ಇಲ್ಲಾ ಅಧಿಕೃತ ಪತ್ನಿ ರೂಪಾ ವೈನಿಗೆ ಫೋನ್ ಹಚ್ಚಲೋ? - ಅಂತ ಮೊಬೈಲ್ ತೆಗೆದು ಅವಾಜ್ ಹಾಕಿದೆ.

ಏನೋ ಗುಸು ಪುಸು ಅಂದ. ನನಗ ಕೇಳಿದ್ದು....ರೂಪಾ ವೈನಿ, ಮಂಗನ ಸೂತ್ರ, ರಿಪೇರ್, ಅಂತ ಸೂತ್ರ ಸಂಬಂಧ ಇಲ್ಲದ ನಾಲ್ಕಾರು ಶಬ್ದಗಳು.

ಏನಲೇ ಚೀಪ್ಯಾ? ರೂಪಾ ವೈನಿ ಮಂಗ್ಯಾನ ಸಾಕ್ಯಾರ!? ಅದಕ್ಕ ಬಂಗಾರದ ಚೈನ್ ಅಂದ್ರ ಸೂತ್ರಾ ಮಾಡಿ ಹಾಕ್ಸ್ಯಾರಾ? ಅದಕ್ಕss ಮಂಗ್ಯಾನ ಸೂತ್ರಾ ಅಂದಿ? ಹಾಂ? ಹಾಂ? ಅದೆಂತಾ ಲಕ್ಕಿ ಮಂಗ್ಯಾ ಮಾರಾಯಾ? ಏನು ಮಂಗ್ಯಾ ಕಟ್ಟಿ ಹಾಕಿದಾಗ ಅಲ್ಲೇ ಇಲ್ಲೇ ಜಿಗಿದಾಡಿ ಮಂಗ್ಯಾನ ಸೂತ್ರ ಅಂದ್ರ ಮಂಗ್ಯಾನ ಕಟ್ಟಿ ಹಾಕೋ ಚೈನ್ ಕಟ್ ಆತೇನು? ಹರದು ಹೋತೆನು? ಅದರ ರಿಪೇರ್ ಮಾಡಸಲಿಕ್ಕೆ ಬಂದಿ? ಎಷ್ಟು ತೊಲಾದ್ದು ಅದ ಮಂಗ್ಯಾನ ಸೂತ್ರ? ತೊಲಾ ಎಲ್ಲಿದು, ಕೆಜಿ ಒಳಗಾ ಇರಬೇಕು. ಅಲ್ಲ? ಹಳೆ ಬಂಗಾರ ಎಲ್ಲಾ ಕರಗಿಸಿ ಒಂದು ಮಂಗ್ಯಾನ ಚೈನ್ ಮಾಡಿಸಿ ಬಿಟ್ಟರು  ಏನು ರೂಪಾ ವೈನಿ? ಲೇ... ಆ ಸಾಕಿದ ಮಂಗ್ಯಾ ಮಂಗ್ಯಾನ ಸೂತ್ರದ ಜೊತಿ ನಾಪತ್ತೆ ಆತು ಅಂದ್ರ ಅಷ್ಟೂ ಬಂಗಾರ ಗೋವಿಂದಾ ಗೋವಿಂದಾ. ನೋಡ್ಕೋ ಮತ್ತ. ಸುಮ್ಮನ ಒಂದು ರೋಲ್ ಗೋಲ್ಡ್ ಚೈನ್ ಮಾಡಿ ಅದರಾಗ ಮಂಗ್ಯಾನ ಕಟ್ಟು, ಅಂತ ಉದ್ದ ಉಪದೇಶ ಕೊಟ್ಟೆ.

ನಿನಗ ಅದ ಏನು? - ಅಂತ ಚೀಪ್ಯಾ ಒಂದss ಮಾತು ಕೇಳಿದ.

ಏನು? ಏನ ಅದ ಅಂತ ಕೇಳ್ತಿಯೋ ಮಾರಾಯಾ? ನಿನ್ನ ಮುಂದ ದೆವ್ವಾದಾಂಗ ಕೂತೇನಿ. ಏನು ಇರಬೇಕೋ? ಎರಡ ಕೈ ಬದಲಿ ಇನ್ನೊಂದು ನಾಕ ಕೈ ಇರಬೇಕಾ? ಹಾಂ? ಹಾಂ? - ಅಂತ ನಾನು ಜೋರಾಗಿ ಕೇಳಿದೆ.

ತಲಿ!!! ತಲಿ!!!! ಅದೊಂದು ಇಲ್ಲ ನೋಡು. ನಾ ಹೇಳಿದ್ದು ಸರಿಯಾಗಿ ಕೇಳಿಸಿಕೊಳ್ಳದ, ಏನೇನೋ ಹಾಪರ ಗತೆ ಸೂತ್ರ ಸಂಬಂಧ ಇಲ್ಲದಾಂಗ ಮಾತಾಡ್ತಿ ಅಲ್ಲಲೇ! ಬುದ್ಧಿ ಇಲ್ಲದವನ. ನಾನು ನಿಮ್ಮ ರೂಪಾ ವೈನಿ ಮಂಗ್ಯಾನ ಸೂತ್ರ ಅಲ್ಲಲ್ಲ ಮಂಗಳ ಸೂತ್ರ ತೊಗೊಂಡು ಬಂದೇನಿ. ಅದನ್ನ ಹೇಳಿದೆ. ಸರೀತ್ನಾಗಿ ಕೇಳಿಸಿಕೊಳ್ಳದ ಮಂಗ್ಯಾನ ಸೂತ್ರ, ಮಂಗ್ಯಾನ ಸಾಕಿರೇನು, ಮಂಗ್ಯಾನ ಬಂಗಾರದ ಚೈನ್ ಒಳಗ ಕಟ್ಟಿ ಹಾಕಿರೇನು? ಅದು ಇದು ಇದು ಅಂತ ಇಲ್ಲದ ಸುದ್ದಿ ಕೇಳತಿ. ಇದss  ಸುದ್ದಿ ಮಂದಿ ಮುಂದೂ ಹೇಳಿಕೊಂಡು ಅಡ್ಡಾಡಿ ಬಿಡು. ನಾ ಫುಲ್ ಗೋವಿಂದಾ ಆಗಿ ಬಿಡ್ತೇನಿ, ಅಂತ ಚೀಪ್ಯಾ ಫುಲ್ ವಿವರಣೆ ಕೊಟ್ಟ.

ಅಷ್ಟನss...ಹೆಂಡ್ತಿ ಮಂಗಳ ಸೂತ್ರ ತಂದಿಯಾ? ಯಾಕ ತಂದಿ? ಏನು ಸನ್ಯಾಸ ತೊಗೊಳ್ಳೋ ಪ್ಲಾನ್ ಅದ ಏನು? ರೂಪಾ ವೈನಿ ಪರ್ಮಿಷನ್ ಕೊಟ್ಟರಾ? ಹಾಂಗss ಮಂಗಳ ಸೂತ್ರನೂ ಬಿಚ್ಚಿ  ಕೊಟ್ಟು ಬಿಟ್ಟರಾ? ಅದನ್ನ ಮಾರಲಿಕ್ಕೆ ಬಂದು ಕೂತಿ ಏನು? ಮಾರಿಕೊಂಡು ಅದರಾಗ ಬಂದ ರೊಕ್ಕದಾಗ ಕಾವಿ ಅರಿವಿ, ಕಮಂಡಲ ಚಂಬು, ಕಟ್ಟಿಗಿ ಚಪ್ಪಲಿ ಎಲ್ಲ ಖರೀದಿ ಮಾಡಿ, ಸೀದಾ ಹಿಮಾಲಯಕ್ಕೆ ಹೋಗಿ ಬಿಡವಾ ಏನು? ಅಥವಾ ಯಾವದರ ಮಠದ ಸ್ವಾಮೀ ಆಗಿ ಬಿಡವನೋ? - ಅಂತ ಕೇಳಿದೆ.

ಮತ್ತ ಇಟ್ಟಿಯಲ್ಲೋ ಬತ್ತಿ!!! ನಾ ನಿನಗ ಏನು ಮಾಡಿನೋ? ಏನ್ ಪಾಪಾ ಮಾಡೇನಿ ಅಂತ ಹಿಂಗೆಲ್ಲಾ ಇಲ್ಲದ್ದು ಊಹಾ ಮಾಡಿಕೊಂಡು ಕೇಳತಿಯೋ ಪುಣ್ಯಾತ್ಮಾ? ಹೆಂಡ್ತಿ ಮಂಗಳ ಸೂತ್ರ ತಂದೆ ಅಂತ ಒಂದು ಮಾತು ಹೇಳಿದ್ರ ನನ್ನ ಸನ್ಯಾಸಿ ಮಾಡಲಿಕ್ಕೆ ಹೊಂಟಿಯಲ್ಲೋ!!! ದೀಕ್ಷಾನೂ ಕೊಟ್ಟು ಬಿಡು ನೀನss.  ಬಾಜೂಕ ಹೋಗಿ ತಲಿ ಬೋಳಿಸಿಕೊಂಡು ಸ್ನಾನಾ ಮಾಡಿ ಬಂದು ಕೂತು ಬಿಡ್ತೇನಿ. ಕೊಡ್ತಿ ಏನು ದೀಕ್ಷಾ? ಹಾಂ? ಹಾಂ? ಏನ್ ತಲಿ ಇಟ್ಟಿ ಮಾರಾಯಾ. ಒಂದು ಏನಾರಾ ಅರ್ಧಂ ಬರ್ಧಾ ಕೇಳಿಸಿಕೊಂಡು, ಇದ್ದಿದ್ದು ಇಲ್ಲದ್ದು ವಟಾ ವಟಾ ಅಂತಿ, ಅಂದ ಚೀಪ್ಯಾ.

ಫುಲ್ ಟೈಮ್ ಸಂಸಾರಿ ಚೀಪ್ಯಾಗ ಸನ್ಯಾಸಿ ಆಗಲಿಕ್ಕೆ ಹೊಂಟಿ ಏನಲೇ ಅಂತ ಕೇಳಿದ್ದು ಸೇರಲಿಲ್ಲ ಅಂತ ಅನ್ನಿಸ್ತದ.

ನಾ ನಿನಗ ದೀಕ್ಷಾ ಕೊಡಂಗಿಲ್ಲಪಾ. ನಮ್ಮ ಪದ್ಧತಿ ಒಳಗ ಕೇವಲ ಮೊದಲಿಂದ ಬ್ರಹ್ಮಚಾರಿ ಇದ್ದವರಿಗೆ ಮಾತ್ರ ಸನ್ಯಾಸ ದೀಕ್ಷಾ ಕೊಡ್ತಾರ. ಗೊತ್ತದ ಏನು? ನಿನ್ನ ಗತೆ ಸಂಸಾರದ  ಟ್ರಯಲ್ ನೋಡಿ ಬಂದು, ಸಂಸಾರ  ಸೇರಲಿಲ್ಲ ಅದಕ್ಕss  ಸನ್ಯಾಸ ತೋಗೋತ್ತೇವಿ, ದೀಕ್ಷಾ ಕೊಡ್ರೀ ಅಂದವರಿಗೆ ಬ್ಯಾರೆ ಪದ್ಧತಿ ಮಂದಿ ಅಡ್ರೆಸ್ ಕೊಟ್ಟು ಕಳಸ್ತಾರ.  ನಮ್ಮ ಪದ್ಧತಿ ಒಳಗ ಸನ್ಯಾಸ ತೊಗೊಂಡು ಸ್ವಾಮೀ ಆಗೋದು ಅದೇನು ಸಸಾರ ಅಂತ ಮಾಡಿ ಏನು? ಟೊಯೋಟಾ ಶೋರೂಮಿಗೆ ಬಂದು ಮಂಗ್ಯಾ ಕಾರ್ ಅಂದ್ರ ಮಾರುತಿ ಕಾರ್ ಕೇಳಿದಂಗ ಆತು ನೋಡು ನಿನ್ನ ಗತಿ. ಕೊಡಲೇನು ನಿನಗ ಮಾರುತಿ ಶೋರೂಂ ಅಡ್ರೆಸ್? ಅಲ್ಲೇ ಹೋಗಿ ಮಂಗ್ಯಾ ಗಾಡಿ ತೊಗೊ. ಅಂದ್ರ ಬ್ಯಾರೆ ಕಡೆ ಹೋಗಿ ದೀಕ್ಷಾ ತೊಗೋ, ಅಂತ ನಮ್ಮ ಸನ್ಯಾಸ ಪದ್ಧತಿ ಬಗ್ಗೆ ನಮಗೆ ತಿಳಿದಷ್ಟು(?) ಹೇಳಿದೆ. ಸರಿ ಇರಬಹುದು ಅನ್ನಿಸ್ತದ.

ಏನೋ ಮಾತಿಗೆ ದೀಕ್ಷಾ ಕೊಡ್ತಿ ಏನು ಅಂತ ಕೇಳಿದ್ರ, ಅದ್ರಾಗೂ ತಂದು ಇಟ್ಟಿಯಲ್ಲೋ!!! ಪಾಪಿ ಮುಂಡೆ ಗಂಡ!!! - ಅಂತ ಚೀಪ್ಯಾ ಬೈದಾ.

ಮತ್ತೆನಲೇ? ದೀಕ್ಷಾ ಕೊಡು ಅಂದಿ. ನಮಗ ದೀಕ್ಷಾ ಕೊಡಲಿಕ್ಕೆ ಆಗಲಿಕ್ಕೆ ಇಲ್ಲ.  ಆದ್ರ ನಮ್ಮ ಪದ್ಧತಿ ಒಳಗ ನಿನ್ನಂತ ಮಂದಿಗೆ ಸನ್ಯಾಸ ದೀಕ್ಷಾ ಸಿಗೋದಿಲ್ಲ ಅಂತ ಹೇಳಿದೆ ಅಷ್ಟ. ಬಾಕಿ ಮಂದಿ ಪದ್ಧತಿ ಒಳಗಾ ಈಗ ಸನ್ಯಾಸ ಅಂದ್ರ ಒಂದು ಬಿಸಿನೆಸ್ಸ್ ಆಗಿ ಬಿಟ್ಟದ. ಯಾರಿಗೆ ಬೇಕಾದ್ರೂ ಕೊಡ್ತಾರ. ತೊಗೊಂಡವರು ಸನ್ಯಾಸ ಸೇರಲಿಲ್ಲ ಅಂದ್ರ ಮತ್ತ ವಾಪಸ ಸಂಸಾರಕ್ಕೂ ಬರ್ತಾರ. ಮತ್ತ ಬ್ಯಾಸರ ಆತು ಅಂತ ಮತ್ತ ಸನ್ಯಾಸ ತೊಗೋತ್ತಾರ. ಅಂತಾದೆಲ್ಲಾ ಮಂಗ್ಯಾನಾಟ ಬ್ಯಾಡ ಅಂತ ಹೇಳಿಯೇ ನಮ್ಮ ಪದ್ಧತಿ ಒಳಗ ಮೊದಲಿಂದ ಆ ರೂಲ್ ಮಾಡಿ ಬಿಟ್ಟಾರ. ಟ್ರಯಲ್ ಬಾಲ್ ಪದ್ಧತಿ ಇಲ್ಲ ಇಲ್ಲ. ಮೊದಲ ಬಾಲss ಖರೆ ಬಾಲ್. ಔಟ್ ಆದ್ರ ಔಟ್ ಆದಂಗ. ಮೊದಲಿಂದ ಗುರುಕುಲದಾಗ ದೊಡ್ಡ ಸ್ವಾಮಿಗಳ ದೇಖರೇಖಿ ಒಳಗ ಖಡಕ್ಕ್ ಬ್ರಹ್ಮಚಾರಿ ಇದ್ದವರಿಗೇ ಮಾತ್ರ ಸನ್ಯಾಸ ದೀಕ್ಷಾ. ಉಳಿದವರಿಗೆ ಇಲ್ಲ. ತಿಳೀತ? - ಅಂತ ಹೇಳಿದೆ.

ನಿಮ್ಮ ಪದ್ಧತಿ ಹಾಂಗೇನು? ಗೊತ್ತss ಇರಲಿಲ್ಲ. ಆದರೂ ನಾ ನನ್ನ ಹೆಂಡ್ತಿ ಮಂಗಳ ಸೂತ್ರ ತಂದೇನಿ ಅಂತ ಒಂದು ಮಾತು ಹೇಳಿದ್ರ ನಿನ್ನ ಮಂಗ್ಯಾ ತಲಿಯೊಳಗ ನಾ ಸನ್ಯಾಸ ತೊಗೋಳ್ಳಿಕ್ಕೆ ಹೊಂಟೆ ಅಂತ ಹ್ಯಾಂಗ ಬಂತು? ಅದು ಯಾವ ಪರಿ ಓಡತದ ಮಾರಾಯಾ ನಿನ್ನ ತಲಿ, ಅಂದ ಚೀಪ್ಯಾ.

ನನಗೇನ ಗೊತ್ತಲೇ? ನಿಮ್ಮ ಪದ್ಧತಿ ಒಳಗ ಸಂಸಾರಿ ಸನ್ಯಾಸಿ ಆಗಬೇಕು ಅಂದ್ರ ಮನಿಯೊಳಗ ಎಲ್ಲಾರ ಪರ್ಮಿಷನ್ ಬೇಕು ಏನಪಾ. ಅಪ್ಪಾ, ಅವ್ವಾ ಹ್ಞೂ ಅನಬೇಕು. ಹೆಂಡ್ತಿ ಅಂತೂ ಮಂಗಳ ಸೂತ್ರ ತೆಗೆದು ಕೊಟ್ಟರss ಮಾತ್ರ ಪರ್ಮಿಷನ್ ಕೊಟ್ಟಂಗ. ಇಲ್ಲಂದ್ರ ಇಲ್ಲ. ಅದಕ್ಕss ಎಲ್ಲೇ ರೂಪಾ ವೈನಿ ಮಂಗಳ ಸೂತ್ರ ತೆಗೆದು ಕೊಟ್ಟು, ಹಾಳಾಗಿ ಹೋಗ್ರೀ ಅಂತ ಪರ್ಮಿಷನ್ ಕೊಟ್ಟರೋ ಅಂದುಕೊಂಡೆ. ಅವರss ಸ್ವಂತ ಮರ್ಜೀಲೆ ಬಿಚ್ಚಿ ಕೊಟ್ಟರೋ ಅಥವಾ ಅವರು ಸ್ನಾನಕ್ಕ ಹೋದಾಗ ಮಂಗಳ ಸೂತ್ರ ಕದ್ದು ಬಿಟ್ಟಿಯೋ? ಪಾಪ ಮುಂಡೆ ಗಂಡ. ಸನ್ಯಾಸಿ ಆಗೋ ಅರ್ಜೆಂಟ್ ಇದ್ದ ಕೆಲೊ ಮಂದಿ ಗಂಡಂದಿರು ಹಾಂಗss  ಮಾಡಿ ಬಿಡ್ತಾರ. ಹ್ಞೂ!! ಕತ್ತಲಾದಾಗ ಬಚ್ಚಲದಾಗ ಹೊಕ್ಕೊಂಡು ಕೂಡ್ತಾರ. ಹೆಂಡ್ತಿ ಬಂದು ಸ್ನಾನಕ್ಕ ನಿಂತ ಕೂಡಲೇ ಗಬಕ್ಕಂತ ಒಣಗಲಿಕ್ಕೆ ಹಾಕಿದ ಹಪ್ಪಳಾ ಕಾಗಿ ಹಾರಿಸಿಕೊಂಡು ಹೋದಂಗ ಹೆಂಡ್ತಿ ಕರಿಮಣಿ ಹಾರಿಸ್ಕೊಂಡು ಬಂದು, ನನ್ನ ಹೆಂಡ್ತಿ ಪರ್ಮಿಷನ್ ಕೊಟ್ಟಳೋ  ಅಂತ ಹೇಳಿಕೊಂಡು, ಹೆಂಡ್ತಿ ಸ್ನಾನ ಮುಗಿಸಿಕೊಂಡು ಬರೋದ್ರಾಗ ಗಡಬಿಡಿಯೊಳಗ ಸನ್ಯಾಸ ತೊಗೊಂಡು, ಬುದ್ಧಂ ಶರಣಂ ಗಚ್ಚಾಮಿ, ಬಾಕಿ ಎಲ್ಲ ಬಿಚ್ಚಾಮಿ ಅಂತ ಹೇಳಿ ಪ್ಯಾಂಟು ಶರ್ಟು ಎಲ್ಲಾ ಬಿಚ್ಚಿ ಹಾಕಿ, ಕಾವಿ ಹಾಕ್ಕೊಂಡು ಹೊಂಟು ಬಿಡ್ತಾರ. ಹೆಂಡ್ತಿ ಮಕ್ಕಳು ಹಿಂದಿಂದ ಲಬೋ ಲಬೋ ಅಂತ ಹೊಯ್ಕೋತ್ತ ಬಂದ್ರಾತು. ಗೊತ್ತದ ಏನು? ಹಾಂ? ಹಾಂ? ಅಂತಾ ಸ್ವಾಮಿಗಳ ಕಾಂಟಾಕ್ಟ್ ಬೇಕೇನು ನಿನಗ? ಅದ ನನ್ನ ಕಡೆ - ಅಂತ ಹ್ಯಾಂಗ ಸನ್ಯಾಸ ತೊಗೋಳ್ಳಿಕ್ಕೆ ಸ್ಕೀಮ್ ಹಾಕಬಹುದು ಅಂತ ಹೇಳಿ ಕೊಟ್ಟೆ.

ವಾಹ್!!! ವಾಹ್!!! ಏನೆಲ್ಲಾ ಮಾಹಿತಿ ಇಟ್ಟಿ ಮಾರಾಯಾ? ಇಡಿ ದಿವಸಾ ಓದ್ತಿ ಅಲ್ಲಾ, ಇಂಥಾವ ವಿಷಯ ಓದ್ತಿ ಏನು? ಏನು ಮಾಹಿತಿ ಮಾರಾಯಾ! ಅಂತ ಹೊಗಳಿದ.

ಹೋಗಲೇ.....ಇದೆಲ್ಲಾ ಮಂದಿ ಮಾಡಿದ್ದು ಮಾರಾಯಾ. ನಾವು ಕೇಳಿದ್ದು. ಅದನ್ನ ಯಾರೋ ಹೇಳಿದ್ದನ್ನ ನಾವು ನಮ್ಮ ತಲಿಯೊಳಗ ಎಲ್ಲೋ ಇಟ್ಟಿರತೇವಿ. ನಿನ್ನಂತ ಮಂದಿ ಯಾರರ ಕೇಳಿದ್ರ ಫಟ್ ಅಂತ ತೆಗೆದು ಕೊಟ್ಟು ಬಿಡ್ತೇವಿ. ಅಷ್ಟss. ನಾವು ಓದೋದು ಕೇವಲ ಸನಾತನ ಧರ್ಮದ ಜ್ಞಾನಕಾಂಡದ ಪುಸ್ತಕ ಮಾತ್ರ. ಕರ್ಮಕಾಂಡದ ಅವಶ್ಯಕತಾ ನಮಗಿಲ್ಲ. ಅದೆಲ್ಲಾ ಏನಿದ್ರೂ ಹೋಮ ಹವನ ಮಾಡಿಸೋ ಆಚಾರ್ರು, ಭಟ್ಟರು ಮಂದಿಗೆ ಮಾತ್ರ. ಸನ್ಯಾಸ ದೀಕ್ಷಾ ಕೊಡೋದು ಸಹಿತ ಕರ್ಮಕಾಂಡದಾಗ ಬರ್ತದ. ಅದಕ್ಕ ನಮಗ ಗೊತ್ತಿಲ್ಲ ಅದರ ಬಗ್ಗೆ, ಅಂತ ಹೇಳಿದೆ.

ಏನೋ ಕಾಂಡವೋ? ಏನು ಬೇರೋ? ಏನು ಗಿಡವೋ? ನಿಮ್ಮ ರೂಪಾ ವೈನಿ ಕಾಲದಾಗ ಸಾಕಾಗಿ ಹೋಗ್ಯದ ಮಾರಾಯಾ. ಕಟ್ಟಿದವ ನಾ ಕೋಡಂಗಿ ಆಗಿ ಕೂತೇನಿ. ಕಟ್ಟಿಸಿಕೊಂಡಾಕಿ ಅಕಿ ಬೋರಂಗಿ ಆಗಿ ಕೂತಾಳ. ಸಾಕಾಗಿ ಹೋಗ್ಯದ, ಅಂದ ಚೀಪ್ಯಾ ಉಸ್ ಅಂದ.

ಏನಲೇ ಇದು ಹೊಸಾ ಗಾದಿ ಮಾತು? ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ ಅನ್ನೋದನ್ನ ಕೇಳಿದ್ದೆ. ನೀ ಏನೋ ಹೊಸಾ ರಾಗಾ ಶುರು ಮಾಡಿಯೆಲ್ಲಾ? ಕಟ್ಟಿದವ ಕೋಡಂಗಿ, ಕಟ್ಟಿಸಿಕೊಂಡಾಕಿ ಬೋರಂಗಿ ಅಂತ. ಏನು ಹಾಂಗಂದ್ರ? ಹಾಂ? ಹಾಂ? - ಅಂತ ಕೇಳಿದೆ.

ಅಯ್ಯೋ!!! ಏನೋ ನನ್ನ ಕಷ್ಟದ ನೆನಪಿನೊಳಗ ಒಂದ ಮಾತ ಅಂದೇ ಅಷ್ಟss. ನಿಮ್ಮ ರೂಪಾ ವೈನಿ ಕೊಡೊ ಕಾಟಕ್ಕ ಹಾಂಗ ಅನ್ನಿಸಿದರ ಏನೂ ಆಶ್ಚರ್ಯ ಇಲ್ಲ ನೋಡು. ಅಕಿಗೆ ಮಂಗ್ಯಾನ ಸೂತ್ರ ಅಲ್ಲಲ್ಲ ಮಂಗಳ ಸೂತ್ರ ಕಟ್ಟಿ ನಾ ಕೋಡಂಗಿ ಆಗಿ ಕೂತೇನಿ. ಅಕಿ ಬೋರ್ ಹೊಡಿಯೋ ಬೋರಂಗಿ ಆಗಿ ಬೋರ್ ಹೊಡದು ಹೊಡದು ನನ್ನ ತಲಿ ಪೂರ್ತಿ ನೀರಿಲ್ಲದ ಬೋರ್ ವೆಲ್ ಆಗಿ ಬಿಟ್ಟದ. ಹೊರಗ ಎಷ್ಟss ಹ್ಯಾಂಡ್ ಪಂಪ್ ಹೊಡಿ ನೀರು ಮಾತ್ರ ಬರೂದss ಇಲ್ಲ. ನಾಸ್ತಿ. ಇಲ್ಲೇ!!! ಇಲ್ಲೇ!!! - ಅಂತ ಬಂಗಾರ್ ಶೆಟ್ಟಿ ಕೊಟ್ಟ ಬಿಟ್ಟಿ ಲಿಮ್ಕಾ ಸೊರ್ರ್ ಅಂತ ಕುಡದ ಚೀಪ್ಯಾ. ಕಲೇಜಾಕ್ಕ ಸ್ವಲ್ಪ ಥಂಡಕ್ ತಂದುಕೊಂಡ. 

ನನಗ ಅವಾ ಹೇಳಿದ್ದು ಪೂರ್ತಿ ತಲಿಗೆ ಹೋಗಿರಲೇ ಇಲ್ಲ. ಬೋರಂಗಿ ಅನ್ನೋದು ಮಾತ್ರ  ತಲಿಯೊಳಗ ಬೋರ್ ಹೊಡಿಲಿಕತ್ತಿ ಬಿಡ್ತು. ಅದರೊಳಗ ಬಾಕೀದು ಸರಿ ಕೇಳಿಸಿಕೊಳ್ಳಲೇ ಇಲ್ಲ.

ಬೋರಂಗಿ
ಹಾಂ!!!ಹಾಂ!!! ಏನು ರೂಪಾ ವೈನಿ ಬೋರಂಗಿ ಸಾಕ್ಯಾರ? ಅದು ಈ ವಯಸ್ಸಿನ್ಯಾಗ? ಎಲ್ಲಿಂದ ಹಿಡಕೊಂಡು ಬಂದ್ರು ಬೋರಂಗಿ? ಎಷ್ಟು ಬೋರಂಗಿ ಸಾಕ್ಯಾರ? ಅದಕ್ಕ ಜಾಲಿ ಗಿಡದ ತೊಪ್ಪಲಾ ಯಾರು ತಂದು ಕೊಡ್ತಾರ? ದೊಡ್ಡ ಕಡ್ಡಿ ಪೆಟ್ಟಿಗಿಯೊಳಗ ಇಟ್ಟಾರೋ ಇಲ್ಲ ಸಣ್ಣ ಕಡ್ಡಿ ಪೆಟ್ಟಿಗಿಯೊಳಗ ಇಟ್ಟಾರೋ? ದಿನಕ್ಕ ಎಷ್ಟು ಸರೆ ಕಡ್ಡಿ ಪೆಟ್ಟಿಗಿ ಹಿಂದ ಮುಂದ ಮಾಡಿ ಬೋರಂಗಿಗೆ ಉಸಿರಾಡಲಿಕ್ಕೆ ಬಿಡ್ತಾರ? ಕಡ್ಡಿ ಪೆಟ್ಟಿಗಿ ಮ್ಯಾಲೆ ತೂತ್ ಮಾಡ್ಯಾರೋ? ಇಲ್ಲ ಕೆಳಗ ತೂತ್ ಮಾಡ್ಯಾರೋ? ಯಾಕ ಕೇಳಿದೆ ಅಂದ್ರ ಮ್ಯಾಲೆ ತೂತ್ ಮಾಡಿ ಬಿಟ್ಟರ ಅದು ಲೇಬಲ್ ಚಿತ್ರದ ಮ್ಯಾಲೆ ತೂತ್ ಮಾಡಿದಂಗ ಆಗಿ ಕಡ್ಡಿ ಪೆಟ್ಟಿಗಿ ದೋಸ್ತರ ಜೊತಿ exchange ಮಾಡಿಕೊಳ್ಳಲಿಕ್ಕೆ ಆಗೋದಿಲ್ಲ ನೋಡು. ನಾ ಬರಲೀ ರೂಪಾ ವೈನಿ ಸಾಕಿದ ಬೋರಂಗಿ ನೋಡಲಿಕ್ಕೆ? ಹಾಂ? ಹಾಂ? - ಅಂತ ಕೇಳಿದೆ.

ಬೋರಂಗಿ ಅಂದ್ರ ನಾವು ಸಣ್ಣವರು ಇದ್ದಾಗ ಹಿಡದು, ಸಾಕಿ, ಕೊಂದ ಸುಮಾರು ಬೋರಂಗಿ ಹುಳುಗಳ  ನೆನಪಾತು. ಭಾಳ ವರ್ಷಾಗಿತ್ತು ಬೋರಂಗಿ ಬಗ್ಗೆ ತಲಿ ಕೆಡಸಿಕೊಳ್ಳದೇ. ಈಗ ಇವಾ ಚೀಪ್ಯಾ ಇವನ ಹೆಂಡ್ತಿ ಬೋರಂಗಿ ಸಾಕಿ ಬಿಟ್ಟಾಳ ಅಂತ ಹೇಳಿ ತಲಿಯೊಳಗ ಬೋರಂಗಿ ಹುಳಾ ಗುಂಗಿ ಹುಳದಾಂಗ ಬಿಟ್ಟು ಬಿಟ್ಟ. ತಲಿಯೊಳಗ ಗಿವ್ವ ಅನ್ನಲಿಕತ್ತುಬಿಡ್ತು. ಸೂಡ್ಲಿ.

ಅಯ್ಯೋ!!!! ಮಂಗ್ಯಾನ್ ಕೆ ಮಂಗೇಶ್. ನಿಮ್ಮ ರೂಪಾ ವೈನಿ  ಮಾತಿಗೊಮ್ಮೆ ನಿನಗ ಮಂಗೇಶ್ ಮಂಗೇಶ್ ಅನ್ನೋದು ಸರಿ ಅದ ನೋಡು. ನಿಮ್ಮ ರೂಪಾ ವೈನಿ ಸಿಕ್ಕಾಪಟ್ಟೆ ಬೋರ್ ಹೊಡಿತಾಳ ಅದಕ್ಕ ಬೋರಂಗಿ ಅಂತ ಏನೋ ಒಂದು ಮಾತಿಗೆ ಅಂದ್ರ ಅದರದ್ದss ಒಂದು ಕಥಿ ಮಾಡಿ ಹೇಳಿಬಿಟ್ಟಿಯಲ್ಲೋ ಪಾಪಿ! ಯಾರೂ ಬೋರಂಗಿ ಸಾಕಿಲ್ಲ. ನೀನss ಬೇಕಾದ್ರ ಒಂದಲ್ಲ ನಾಕು ಬೋರಂಗಿ, ಗುಂಗಿ ಹುಳ, ಕಡಜೀರಗಿ ಹುಳ ಎಲ್ಲ ಸಾಕಿ ಬಿಡು. ಆ ಮ್ಯಾಲೆ ಅವು ಕಡಿ ಬಾರದ ಜಾಗಾದಾಗ ಕಡೀಲಿ. ಆವಾಗ ಗೊತ್ತಾಗತದ ನನ್ನ ಕಷ್ಟ ಏನು ಅಂತ. ಹಾಳಾಗಿ ಹೋಗು, ಅಂತ ಚೀಪ್ಯಾ ಮೈಲ್ಡ್ ಡೋಸ್ ಕೊಟ್ಟ.

ಯಾಕಲೇ ಚೀಪ್ಯಾ? ಹೀಂಗೆಲ್ಲಾ ಬೈತಿ? ಅದೂ ನನಗ. ಏನೋ ಸಣ್ಣಾಗಿದ್ದಾಗ ಮಾಡಿದ ಬೋರಂಗಿ ಸಾಹಸಗಳು ನೆನಪಾಗಿ ಬಿಟ್ಟವು. ಅದಕ್ಕ ಕೇಳಿದೆ ಅಷ್ಟ. ಕಡಜೀರಗಿ ಹುಳ ಮಾತ್ರ ಸಾಕಂಗಿಲ್ಲಪಾ. ಅದು ಬ್ಯಾಡ. ಮನಸ್ಸು ಬಂದ್ರ ಬೋರಂಗಿ ಸಾಕಿದ್ರೂ ಸಾಕಿದ್ನಾ ನಾನು. ಮಸ್ತ ರಂಗೀನ್ ಹುಳ. ಜಾಲಿ ಸೊಪ್ಪು ತರೋಣ ಅಂದ್ರ ದೋಸ್ತ ಜಾಲಿಗಿಡದ ಪಾಪ ಸತ್ತು ಹೋದ ಅಂತ ಗೊತ್ತಾತು. ಈಗ ಅದ ಪ್ರಾಬ್ಲೆಮ್, ಅಂತ ಬೋರಂಗಿ ಸಾಕಾಣಿಕೆ ಬಗ್ಗೆ ತಲಿ ಕೆಡಿಸ್ಕೊಂಡೆ.

ಅದೆಲ್ಲಾ ಇರಲಿ. ನೀ ಯಾಕ ಬಂಗಾರ್ ಶೆಟ್ಟಿ ಅಂಗಡಿಗೆ ಬಂದು ಕೂತಿ? - ಅಂತ ಚೀಪ್ಯಾನ ಮೂಲಕ್ಕೇ ಕೈ ಹಾಕಿದೆ.

ಮಾಡಬಾರದ ರಾಮಾಯಣ ರಾಡಿ ರಂಪಾ ಮಾಡಿ, ಮಂಗ್ಯಾನ ಸೂತ್ರ, ಮಂಗ್ಯಾ ಸಾಕಿದ್ದು, ನನಗ ಸನ್ಯಾಸ ಕೊಟ್ಟಿದ್ದು, ನನ್ನ ಹೆಂಡ್ತಿ ಬೋರಂಗಿ ಸಾಕಿದ್ದು ಎಲ್ಲಾ ಮಾಡಿ ಆದ ಮ್ಯಾಲೆ ನಾ ಯಾಕ ಬಂದೇನಿ ಅಂತ ಕೇಳೋ ಸರಳ ಬುದ್ಧಿ ಹ್ಯಾಂಗ ಬಂತು ನಿನಗ? ಅದೇನು ತಲಿಯಾ?  ದುರ್ಗಾ ದೇವಿ ಗುಡಿ ಮುಂದಿನ ಪಾಳು ಬಿದ್ದ ಕ್ವಾಟಿ ಗ್ವಾಡಿ ಆಗ್ಯದ. ಯಾವ ಹೊತ್ತಿನಾಗ ಏನು ಕೇಳ್ತದೋ ಏನೋ? - ಅಂತ ಚೀಪ್ಯಾ ನಾ ಅವನ್ನ ಕಾಡಿದ್ದಕ್ಕ ಬೈದಾ.

ಇಲ್ಲೋ ಚೀಪ್ಯಾ. ಯಾಕ ಬಂದಿ ಅಂತ ಹೇಳೋ, ಅಂತ ರಿಕ್ವೆಸ್ಟ್ ಮಾಡಿಕೊಂಡೆ.

ನಿಮ್ಮ ರೂಪಾ ವೈನಿ ಮಂಗ್ಯಾನ ಸೂತ್ರ ಅಲ್ಲಲ್ಲ ಮಂಗಳ ಸೂತ್ರದ ಕುಂಡಾ ಕಿತ್ತು ಹೋಗಿ ಬಿಟ್ಟದ. ಅದಕ್ಕ ರಿಪೇರ್ ಮಾಡಿಸಿಕೊಂಡು ಹೋಗೋಣ ಅಂತ ಬಂದೆ, ಅಂತ ಹೇಳಿದ ಚೀಪ್ಯಾ.

ನೀ ಮಂಗ್ಯಾನ ಸೂತ್ರ ಅಂದು ಅಂದು ನನಗೂ ಅದss ಬಾಯಾಗ ಬರ್ಲಿಕತ್ತದ. ಸೂಡ್ಲಿ, ಅಂತ ನನಗ ಬೈದ ಸಹ.

ಚೀಪ್ಯಾ.....ಈಗ ಕುಂಡಾ ಅಂದಿ. ಯಾಕೋ ತಲಿ ಫುಲ್ confuse ಮಾಡಿಬಿಟ್ಟಿ. ಸಾಮಾನ್ಯವಾಗಿ ಮಂಗಳ ಸೂತ್ರ ಹಾಕಿಕೊಳ್ಳ ಬೇಕು ಅನ್ನವರು ಅದನ್ನ ಕೊರಳಾಗ ಹಾಕಿಕೊಳ್ಳತಾರ. ಆದ್ರಾ ನೀ ಕುಂಡಾ ಅಂದು ಬಿಟ್ಟಿ. ನಾ ನನ್ನ ಧಾಟಿಯೊಳಗ ವಿಚಾರ ಮಾಡಿದ್ರ ಮತ್ತ ಚಡಾ ಪಡಾ ಅಂತ ಬೈತಿ. ನೀನss ಹೇಳು ಮಂಗಳ ಸೂತ್ರದ ಕುಂಡಾ ಕಿತ್ತು ಹೋಗುದು ಅಂದ್ರ ಏನು ಅಂತ, ಅಂತ ನನ್ನ ತಲಿ ಓಡಿಸದ ಸುಮ್ಮನ ಕೇಳಿದೆ.

ಮಾರಾಯಾ....ಈ ಸರೆ ಸುಮ್ಮನ ಕೂತು ಏನು ಅಂತ ಕೇಳಿದಿ ಅಲ್ಲ. ದೊಡ್ಡ ಉಪಕಾರ ಮಾಡಿದಿ. ಕುಂಡಾ ಅಂದ್ರ ಕೊಂಡಿ ಮಾರಾಯಾ. ಹುಕ್ಕ್ ಹುಕ್ಕ್. ಹುಕ್ಕ್ ಮುರಿದು ಹೋಗ್ಯದ ನಿಮ್ಮ ರೂಪಾ ವೈನಿ ಮಂಗಳ ಸೂತ್ರದ್ದು. ಅದನ್ನ ರಿಪೇರ್ ಮಾಡಿಸಿಕೊಂಡು ಹೋಗಲಿಕ್ಕೆ ಬಂದೇನಿ ಮಾರಾಯಾ. ಇವತ್ತಿಗೆ ತಲಿ ತಿಂದಿದ್ದು ಸಾಕೋ ಮಾರಾಯಾ, ಅಂತ ಚೀಪ್ಯಾ ಕೈ ಜೋಡಿಸಿ ಕೇಳಿಕೊಂಡ.

ಮೊದಲss ರೂಪಾ ವೈನಿ ಅಂತಹ ಖತರ್ನಾಕ್ ಬೋರಂಗಿ ಕ್ವೀನ್ ಕಡೆ ಬೋರ್ ವೆಲ್ ಹೊಡೆಸಿಕೊಂಡು ನಿತ್ರಾಣ ಆಗಿ ಬಿಟ್ಟಾನ. ನಾ ಇನ್ನೂ ಇವನ ತಲಿ ತಿಂದ್ರ ಆ ಬೋರ್ ವೆಲ್ ಭಾಳ ಡೀಪ್ ಆಗಿ ನಾನ ಅದರಾಗ ಬಿದ್ದರ ಕಷ್ಟ ಅಂತ ಹೇಳಿ ಬಿಟ್ಟೆ.

ಕುಂಡಾ! ಹಾಂ! ಚೀಪ್ಯಾ ಈಗ ನೆನಪಾತು ನೋಡಲೇ. ಮೊನ್ನೆ ಮೊನ್ನೆ 'ಚಕ್ರವ್ಯೂಹ' ಸಿನೆಮಾದಾಗ ಒಂದು ಐಟಂ ನಂಬರ್ ಇತ್ತು. ಅದರಗಾಗ ಒಬ್ಬಾಕಿ, ಕುಂಡಾ ಖೋಲ್ ಕುಂಡಾ ಖೋಲ್ ಪಕೀರಾ ಕುಂಡಾ ಖೋಲ್, ಅಂತ ಹೊಯ್ಕೊಂಡು ಹೊಯ್ಕೊಂಡು ಡಾನ್ಸ್ ಮಾಡಿದ್ದಳು. ನೆನಪ ಅದನ? ಅಕಿದು ಯಾವ ಕುಂಡಾ ಏನಾಗಿತ್ತೋ ಏನೋ? ಪಾಪ ಅಕಿಗೆ ನಿನ್ನಂತ ಛೋಲೋ ಕುಂಡಾ ರಿಪೇರ್ ಮಾಡಿಸಿಕೊಡೋ ಕೋಡಂಗಿ ಪತಿ ಸಿಕ್ಕಿರಲಿಲ್ಲ ಅಂತ ಅನ್ನಿಸ್ತದ. ಅದಕ ಐಟಂ ನಂಬರ್ ಮಾಡಿ ಅದ್ರಗಾ ನನ್ನ ಮಂಗಳ ಸೂತ್ರಾ ರಿಪೇರ್ ಮಾಡಿಸಿ ಕೊಡ್ರೀ ಅನ್ನಲಿಕತ್ತಿದ್ದಳು ಅಂತ ಅನ್ನಿಸ್ತದ, ಅಂತ ಒಂದು ಫೇಮಸ್ ಐಟಂ ನಂಬರ್ ನೆನಪ ಮಾಡಿಕೊಂಡು ಮತ್ತ ಇದ್ದಿದ್ದು ಇಲ್ಲದ್ದು ಥಿಯರಿ ಹಾಕಿ ಕೇಳಿಬಿಟ್ಟೆ.

ಚೀಪ್ಯಾನ ಫೋನ್ ಇಸ್ಕೊಂಡು ಅವಂಗ ಕುಂಡಾ ಸಾಂಗ್ ಮತ್ತ ತೋರಿಸಿಬಿಟ್ಟೆ.


ಅಯ್ಯೋ!!!! ಬ್ರಾಹ್ಮಣರ ಮುತ್ತೈದಿ ಮಂಗಳ ಸೂತ್ರದ ಕುಂಡಾಕ್ಕೂ ಇಕಿ ಯಾರೋ ಐಟಂ ನಂಬರ್ ಕುಂಡಾ ಖೋಲ್ ಅನ್ನೋದಕ್ಕೂ ತಂದು ಇಟ್ಟಿಯಲ್ಲೋ ಪಾಪಿ. ಹಾಳಾಗಿ ಹೋಗು, ಅಂದ ಚೀಪ್ಯಾ. 

ಪಾಪಾ!!! ಇಕಿದು ಏನು ಕಷ್ಟನೋ ಏನೋ? ಕುಂಡಾ ಖೋಲ್ ಕುಂಡಾ ಖೋಲ್ ಅಂತ ಎಲ್ಲಾ ಹೋಗಿ ಫಕೀರನ್ನೂ  ಬಿಡದ ಕರೀಲಿಕ್ಕೆ ಹತ್ತಿ ಬಿಟ್ಟಾಳ.

ಬಗೆ ಹರಿಯುವ ವಿಷಯ ಅಲ್ಲ. ಅಲಿಗಢ ಹೋಗಿ locksmith ಕೆಲಸಾ ಕಲಿತು ಬಂದವರ ಕಡೆನಾ ಕೇಳಬೇಕು. ಏನು ಕುಂಡಾ? ಏನು ಹೊಂಡಾ? ಏನು ಎತ್ತ ಅಂತ.

ಅಷ್ಟರಾಗ ಚೀಪ್ಯಾನ ಹೆಂಡ್ತಿ ರೂಪಾ ವೈನಿ ಮಂಗ್ಯಾನ ಸೂತ್ರ ಅಲ್ಲ ಮಂಗಳ ಸೂತ್ರದ ಕುಂಡಾ ಮತ್ತೊಂದು ರಿಪೇರ್ ಆಗಿ ಬಿಡ್ತು. ನನ್ನ ರುದ್ರಾಕ್ಷಿ ಲಾಕೆಟ್ ಸಹಿತ ತಳಾ ಹಾಕಿಸ್ಕೊಂಡು ರಿಪೇರ್ ಆಲ್ಮೋಸ್ಟ್ ಆಗೇ ಬಿಟ್ಟಿತ್ತು. ಇಬ್ಬರೂ ಕೂಡೆ ಹೋಗೋಣ ಅಂತ ಚೀಪ್ಯಾಗ ಹೇಳಿದೆ. ಅರ್ಜೆಂಟ್ ಅದ ಅನಕೋತ್ತ ಓಡಿ ಹೋಗಿಬಿಟ್ಟ ಬೋರಂಗಿ ಪತ್ನಿಯ ಕೋಡಂಗಿ ಪತಿ ಚೀಪ್ಯಾ!

Saturday, May 25, 2013

ಚಂಡಿ ಹಿಡಿದ ಚಂಡೀಲಾನ ಚಡ್ಡಿ ಬಿಚ್ಚಿ ಚಂಡೆ ಬಾರಿಸಿದರಾ ಪೊಲೀಸರು?ಯಕ್ಷಗಾನದ ಚಂಡೆ & ಚಂಡೆ ಕೋಲು
ಮುಂಜಾನೆ ಮುಂಜಾನೆ ಫೋನ್ ಬಂತು. ಸೂಡ್ಲಿ.

ಎತ್ತಿ ಹಲೋ ಅಂದ್ರ ನಮ್ಮ ಕುಮಟಾ ಹೊನ್ನಾವರ ಕಡೆ ಮಂದಿ ಮಾತಾಡೋ ಧಾಟಿಯೊಳಗ ಹರಿದು ಬಂತು ದನಿ.

ಹೋಯ್....ಹೆಗಡೇರು....ನಮಸ್ಕಾರ ಒಡೆಯಾ.... ನಾನು ಚಂಡೆ ಭಂಡಾರಿ...ಯಕ್ಷಗಾನದ ಚಂಡೆ ಭಂಡಾರಿ. ಮನೇಲಿ ಇದ್ದರಾ? ಬರ್ಲಾ ಒಡೆಯಾ? - ಅಂತ ಆ ಕಡೆಯಿಂದ ನಮ್ಮ ಕಡೆ ಯಕ್ಷಗಾನದಲ್ಲಿ ಚಂಡೆ ಬಾರಿಸುವದರಲ್ಲಿ ಫೇಮಸ್ ಇರೋ ಚಂಡೆ ಭಂಡಾರಿಗಳ ಟ್ರೇಡ್ ಮಾರ್ಕ್ ದನಿ.

ಓಹೋ...ಭಂಡಾರಿಗಳು! ಎಲ್ಲಿಂದ? ಯಾವಾಗ್ ಬತ್ರೀ? ಬರ್ರೋ  ಮಾರಾಯರಾ! ಬಂದು ಇಲ್ಲೂ ಚಂಡೆ ಜಪ್ಪಿ. ನಾವೂ ಜಪ್ಪವಾ ಚಂಡೆ ಸ್ವಲ್ಪ. ಬಾರ್ಸದ್ದೆ ಅಂದ್ರೆ ಚಂಡೆ ಬಾರ್ಸದ್ದೆ ರಾಶಿ ದಿವಸಾಗೋತು. ಚಂಡೆ, ಕೋಲು ಎಲ್ಲ ತೆಕ ಬಂಜ್ರಾ? - ಅಂತ ಉದ್ದ ಕೇಳಿಬಿಟ್ಟೆ.

ಬಾರ್ಸೋದು, ಅಂದ್ರ ಚಂಡೆ ಬಾರ್ಸೋದು, ಅಂದ್ರ ಏನೋ ಖುಶಿ.

ಒಡೆಯಾ....ನಾನು ಇನ್ನು ಹತ್ತು ನಿಮಿಷದಲ್ಲಿ ಮನೆಗೆ ಬತ್ತೆ. ಇಲ್ಲೇ ಧಾರವಾಡ ರೈಲ್ವೆ ಸ್ಟೇಷನ್  ನಿಂದ ಮಾತಾಡ್ತಾ ಇದ್ದೆ. ಈಗ ಮಾತ್ರ ದಿಲ್ಲಿಯಿಂದ ಬಂದೆ ಹೆಗಡೇರೆ.  ಮುಂದೆ ಕುಮಟಾಕ್ಕೆ ಹೋಪಕಿಂತ ಮೊದಲು ಒಂದು ಸಲಿ ಬಂದು ಹೋಪ ಹೇಳಿ. ಆದ್ರೆ ಈ ಸಲ ಚಂಡೆ ಬಾರ್ಸುಲೆ ಆಗ್ತಿಲ್ಲೆ ಒಡೆಯಾ? - ಅಂತ ಅಂದ ಭಂಡಾರಿ ನಮ್ಮ ಬಾರಿಸೋ ಆಸೆಗೆ ನೀರು ಗೊಜ್ಜಿ ಬಿಟ್ಟರು.

ಎಂತಕ್ಕ್ರೋ!? ಚಂಡೆ ಇಲ್ಲ್ಯಾ? ಚಂಡೆ ಬಿಟ್ಟಿಕ್ಕೆ ತಿರಗ್ತಿ ಅಂದ್ರೆ ನಿಮಗೆ ಎಂತಾ ಆತ್ರೋ? ಚಂಡೆ ಭಂಡಾರಿ ಹತ್ರ ಚಂಡೆ, ಚಂಡೆ ಕೋಲು ಇಲ್ಲೆ ಅಂದ್ರೆ ಎಂತ ಮಾತ್ರಾ ಅದು? ಹಾಂ? ಹಾಂ? - ಅಂತ ಕೇಳಿದೆ.

ಚಂಡೆ ಇದ್ದರಾ ಒಡೆಯಾ. ಚಂಡೆ ಕೋಲು ಮಾತ್ರ ಇಲ್ಲೆ. ಅದಕ್ಕೇ ಈ ಸಲ ಚಂಡೆ ಬಾರ್ಸುಲೇ ಆಪ್ಪುದಿಲ್ಲೇ ಹೇಳಿದ್ದು. ತಿಳೀತಾ? - ಅಂತ ಹೇಳಿದ್ರು ಭಂಡಾರಿ.

ಚಂಡೆ ಇದ್ದು. ಚಂಡೆ ಕೋಲಿಲ್ಲ ಅಂದ್ರೆ ಎಂತದ್ರೋ? ಹಾಂ? ಹಾಂ? ಏನೋ ದೊಡ್ಡ ಸುದ್ದಿ ಇದ್ದಂಗೆ ಇದ್ದು. ಬನ್ನಿ ಮನೆಗೆ. ಆಸ್ರೀಗೆ ತಯಾರು ಇದ್ದು. ಬನ್ನಿ ಬನ್ನಿ, ಅಂತ ಹೇಳಿ ಫೋನ್ ಇಟ್ಟೆ.

ಹತ್ತು ನಿಮಿಷದ ನಂತರ ಚಂಡೆ ಭಂಡಾರಿ ಹಾಜರ್ ಆದರು. ಫ್ರೆಶ್ ಆಗಿ, ಆಸರೀ ಕುಡದು (ನಾಷ್ಟಾ ಮಾಡಿ), ಕವಳಾ (ಎಲೆ ಅಡಿಕೆ) ಹಾಕಿದ ಭಂಡಾರಿಗಳು ಸುದ್ದಿ ಶುರು ಮಾಡಿದ್ರು.

ಹೆಗಡೇರೆ....ದಿಲ್ಲಿಗೆ ಹೋಯ್ಕಂಡು ನಮ್ಮ ಪರಿಸ್ಥಿತಿ ಬ್ಯಾಡ ಮಾರ್ರೆ. ಅದೆಂತಾ ದಿಲ್ಲಿ ಪೊಲೀಸರು ಮಾರ್ರೆ. ನಮಗೇ ಹಿಡದು ಚಂಡೆ ಬಾರ್ಸೇ ಬಿಟ್ಟಿದ್ದರು. ಪುಣ್ಯಕ್ಕೆ ಯಾರೋ ಒಬ್ಬ ನಮ್ಮ ಬದಿ ಆಫೀಸರ್ ಇದ್ದಿದ್ದಕ್ಕೆ ಬಚಾವ. ಇಲ್ಲೇ ಅಂದ್ರೆ ನಿಮ್ಮ ಭಂಡಾರಿ ಹೆಣಾ ಬರೋದು ನೋಡಿ, ಅಂತ ಹೇಳಿ  ಭಂಡಾರಿ ಏನೋ ಒಂದು ದೊಡ್ಡ ಅಪಾಯದಿಂದ ಪಾರಾಗಿ ಬಂದರೋ ಅನ್ನೋ ರೀತಿಯಲ್ಲಿ ಹೇಳಿದರು.

ಎಂತಾ ಆಗಿತ್ರಾ? ಆ ನಮ್ಮನಿ ಡೇಂಜರ್? ಹಾಂ? ಹಾಂ? - ಅಂತ ಆತಂಕದಿಂದ ಕೇಳಿದೆ.

ದಿಲ್ಲಿ ಪೊಲೀಸರು ನಮ್ಮನ್ನ ಸ್ಪಾಟ್ ಫಿಕ್ಸಿಂಗ್ (IPL spot fixing) ನಲ್ಲಿ ಹಿಡಿದು ಬಿಟ್ಟಿದ್ದರು ಮಾರ್ರೆ, ಅಂದ್ರು ಭಂಡಾರಿ.

ಎಂತು!!?? ನೀವು IPL ಸ್ಪಾಟ್ ಫಿಕ್ಸಿಂಗ್ ಮಾಡ್ತ್ರಾ? ಎಂತದ್ರಾ ಇದು? ಯಕ್ಷಗಾನದಲ್ಲಿ ಚಂಡೆ ಬಾರಿಸುವಂತ ಮಾರ್ಯಾದೆ ಕೆಲಸ ಬಿಟ್ಟು ಆ ಹಾಳಾದ IPL ನಲ್ಲಿ ಸ್ಪಾಟ್ ಫಿಕ್ಸಿಂಗ್ ಅದು ಇದು ಮಾಡ್ತ್ರೀ ಅಂದ್ರೆ ಕಾಲ ಕೆಟ್ಟೋತ್ರಾ....ಛೇ...ಛೇ....ಅಲ್ಲಾ ಶತ ಶತಮಾನಗಳಿಂದ ಚಂಡೆ ಬಾರಿಸುವದನ್ನೇ ಕಾಯಕ ಮಾಡಿಕೊಂಡು, ಆ ಕಾಯಕವೇ ಕೈಲಾಸ ಅಂತ ನಂಬಿಕೊಂಡು ಬಂದಿರುವ ಭಂಡಾರಿ ವಂಶದವರಾಗಿ ನೀವು ಈ ಸ್ಪಾಟ್ ಫಿಕ್ಸಿಂಗ್ ಹಡಬೆ ಕೆಲಸ ಮಾಡೋದು ಸಾಕ್ಕು ಮಾರ್ರೆ, ಅಂತ ನನ್ನ ದುಃಖ ವ್ಯಕ್ತ ಪಡಿಸಿ ಅದು ಸರಿ ಅಲ್ಲ ಅಂತ ಹೇಳಿದೆ.

ಒಡೆಯಾ....ನಾ ಹೇಳೂದ ಸ್ವಲ್ಪ ಪೂರ್ತಿ ಕೇಳಿ ಮಾರ್ರೆ, ಅಂದ್ರು ಚಂಡೆ ಭಂಡಾರಿ.

ಹೇಳಿ....ಹೇಳಿ....ಸಣ್ಣಕಿದ್ದಾಗ ಚಂಡೆ ಬಾರ್ಸೋದಾ ಹೇಳಿ ಕೊಟ್ಟ್ರೀ. ಈಗ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಇತ್ಯಾದಿ ಹೇಳಿ ಕೊಡ್ತ್ರಾ ಎಂತದ ಏನ? - ಅಂತ ಹೇಳಿ ಭಂಡಾರಿ ಮಾತ ಫುಲ್ ಕೇಳೋಣ ಅಂತ ಕೂತೆ.

ಮಾರ್ರೆ.... ನಾವು ದೆಲ್ಲಿಗೆ ಹೋಗಿದ್ದು ಯಕ್ಷಗಾನ ಕುಣಿಯೋಕೆ. ಅವತ್ತು ಒಂದು ದಿವಸ ದಿಲ್ಲಿ ತಿರುಗುವಾ ಅಂತ ಒಬ್ಬನೇ ಹೋದೆ ಮಾರ್ರೆ... ಆವಾಗ ನಮ್ಮ ಕೆಂಪು ಮುಂಡಾಸ, ಕೇಸರೀ ಮುಂಡು (ಲುಂಗಿ) ನೋಡಿಯೋ ಏನೋ, ದಿಲ್ಲಿ ಪೋಲಿಸ್ ಒಬ್ಬ ನಮ್ಮ ಹಿಡಿದು ನಿಲ್ಲಿಸಿ, ಕೌನ್ ರೇ ತು? ಕಹಾನ್ ಸೆ ಆಯಾ ಹೈ? ಹಾಂ? ಹಾಂ? ಅಂತ ಜೋರ್ ಮಾಡುವದಾ, ಅಂತ ಹೇಳಿ ಕವಳಾ ಉಗಳಲಿಕ್ಕೆ ಒಂದು ಬ್ರೇಕ್ ತೆಗೆದು ಕೊಂಡರು ಭಂಡಾರಿ.

ಎಂತಾ ಹೇಳದ್ರೀ ನೀವು? - ಅಂತ ಕೇಳಿದೆ.

ಎಂತಾ ಹೇಳೋದು? ಹಮಾರಾ ನಾಮ್ ಭಂಡಾರಿ ಹೈ. ಕುಮಟಾ ಸೆ ಆಯಾ ಹೈ. ಹಮ್ ಯಕ್ಷಗಾನ ಮೇ ಚಂಡೆ ಬಜಾನೇ ವಾಲೆ ಹೈ. ಚಂಡೆವಾಲಾ, ಚಂಡೆವಾಲಾ. ಹಮಕೋ ಛೋಡೋಜೀ, ಅಂತ ಹೇಳಿದರಂತ ಭಂಡಾರಿ.

ಚಂಡೆವಾಲಾ!!! ಚಂಡೆವಾಲಾ!!!!

ಸ್ಪಾಟ್ ಫಿಕ್ಸಿಂಗ್ ಆರೋಪಿ ಅಜಿತ್ ಚಂಡೀಲಾ

ಅವತ್ತು ನಮ್ಮ ನಸೀಬ್ ಖೊಟ್ಟಿ ಮಾರ್ರೆ. ನಾವು ಚಂಡೆವಾಲಾ ಅಂದಿದ್ದು ಆ ಮಳ್ಳ ದಿಲ್ಲಿ ಪೋಲಿಸಂಗೆ ಎಂತ ಕೇಳ್ತಾ ಏನ ಒಡೆಯಾ? ಕ್ಯಾ ಚಂಡೀಲಾ ಕಾ ಆದ್ಮಿ ಹೈ? ಸ್ಪಾಟ್ ಫಿಕ್ಸಿಂಗ್ ಕರತಾ ಹೈ ಕ್ಯಾ? ಹಾಂ? ಚಲ್ ಅಭಿ ಠಾಣೆ, ಅಂತ ನನ್ನ ಪೋಲಿಸ್ ಸ್ಟೇಷನ್ ಗೆ ಎಳಕೊಂಡು ಹೋಗಿ ಬಿಟ್ಟ ಆ ಮಳ್ಳ ಪೋಲಿಸ್, ಅಂತ ಹೇಳಿದ ಭಂಡಾರಿ ಅದೊಂದು ಭಯಾನಕ ಸಪ್ನ ಅನ್ನುವಂತೆ ನೆನೆಸಿಕೊಂಡರು.

ಥೋ ನಿಮ್ಮ....ನೀವು ಪಾಪ ಚಂಡೆವಾಲಾ ಅಂದಿದ್ದು ಅವಂಗೆ ನೀವು ಚಂಡೀಲಾ ಹೇಳಿದಂಗೆ ಕೇಳಿ ಹೋಗಿಕ್ಕು. ಆವಾಗ ಮಾತ್ರ ಆ ಚಂಡೀಲಾ ಹೇಳುವ IPL ಪ್ಲೇಯರ್ ನ್ನು ಹಿಡದು ಹಾಕಿದಿದ ದಿಲ್ಲಿ ಪೋಲಿಸ್. ಕಡೀಗ ಎಂತಾತು ಹೇಳಿ - ಅಂತ ಕೇಳಿದೆ.

ಅದೇ ಒಡೆಯಾ....ಹಾಗೆ ಆಗಿದ್ದು. ಪೋಲಿಸ್ ಸ್ಟೇಷನ್ ಒಳಗೆ ನಮ್ಮ ಜೀವಾ ತೆಗೆದೇ ಬಿಡ್ತಿದ್ದ. ಪುಣ್ಯಕ್ಕೆ ಅಲ್ಲಿ ಒಬ್ಬರು ನಮ್ಮ ಕಡೆ ಪೋಲಿಸ್ ಸಾಹೇಬರು ಸಿಕ್ಕಿ ನಾವು ಬಚಾವ್ ಒಡೆಯಾ... ಇಲ್ಲದಿದ್ದರೆ ನಿಮ್ಮ ಮುಂದೆ ಕುತಗಂಡು ಸುದ್ದಿ ಹೇಳಲಿಕ್ಕೆ ಈ ಭಂಡಾರಿ ಇರ್ತಿದ್ದನಿಲ್ಲೆ ಹೆಗಡೇರೆ, ಅಂತ ಹೇಳಿದ ಚಂಡೆ ಭಂಡಾರಿ ದೇವರಿಗೆ ಸಾವಿರ ನಮಸ್ಕಾರ ಹಾಕಿದರು.

ಚಂಡೀಲಾ ಕಾ ಆದಮೀ ಹೈ ತು? ಹಾಂ? ಹಾಂ? ವೋ ಭೀ ದೂರ ಸೌತ್ ಮೇ ಭೀ ಸ್ಪಾಟ್ ಫಿಕ್ಸಿಂಗ್ ಕರತಾ ಹೈ? ಚಂಡೆ ನಾಮ ಕಾ ಡೋಲ್ ಬಜಾತಾ ಹೈ? ಹಮ್ ತೇರಾ ಬ್ಯಾಂಡ್ ಬಜಾತೇ ಹೈ. ದೇಖೋ ಅಭಿ - ಅಂತ ಬೈಯ್ಯುತ್ತಾ ದಿಲ್ಲಿ ಪೊಲೀಸರು ಭಂಡಾರಿಗಳಿಗೆ ಸರಿ ಮಾಡಿ ನಾಕು ಹೊಡೆತಾ ಹಾಕಿಬಿಟ್ಟರಂತ.

ಅಯ್ಯೋ.... ಅಯ್ಯೋ.... ಹಮ್ ಚಂಡೆವಾಲಾ ಗರೀಬ್ ಆದಮೀ. ಯಕ್ಷಗಾನ ನಾಚನೇಕೋ ಆಯಾ ಹೈ ಸಾಬ್. ಹಮಕೋ ಚೋಡೋ. ಕೌನ್ ಚಂಡೀಲಾ? ಕೌನ್ ಕುಂಡೀಲಾ? ಚಂಡೀಲಾ ಚಂಡೀಲಾ ಬೋಲ್ತೆ ಬೋಲ್ತೆ  ಆಪ್ ಹಮಾರಾ ಕುಂಡಿ ಕ್ಯೂ ಬಜಾತಾ ಸಾಬ್? ಗರೀಬ್ ಆದ್ಮಿ ಸಾಬ್. ಚೋಡೋ...ಚೋಡೋ, ಅಂತ ಭಂಡಾರಿ ತಮಗೆ ಬಂದ ಹರಕ ಮುರಕ ಹಿಂದಿಯೊಳಗ ಹೊಯ್ಯ್ಕೊಂಡರು ಅಂತ.

ಅಷ್ಟರಲ್ಲಿ ಒಬ್ಬ ಹಟ್ಟಾ ಕಟ್ಟಾ, ಭರ್ಜರೀ ಮೀಸೆ ಆಸಾಮಿ ಬಂದ ಒಡೆಯಾ. ಬಂದವನೇ ಹೊಡೆಯೋದು ಬಡಿಯೋದು ನಿಲ್ಲಿಸಿ ಅಂತ ಹೇಳಿ ನಮ್ಮ ಕುಂಡೆ ಮ್ಯಾಲೆ ಚಂಡೆ ಬಾರಿಸೋದನ್ನ ನಿಲ್ಲಿಸಿದ ಮಾರ್ರೆ. ಇಲ್ಲಾಂದ್ರೆ ಗುಡ್ಡೆಗೆ (ಸಂಡಾಸಿಗೆ) ಹೋಗೋಕೂ ಕಾಬಿಲ್ ಇರೂಕಿಲ್ಲ ನಮ್ಮ ಕುಂಡೆ, ಅಂತ ತಮ್ಮನ್ನು ರಕ್ಷಿಸಿದ ಪೋಲಿಸ್ ಸಾಹೇಬರ ಬಗ್ಗೆ ಹೇಳಿದರು ಭಂಡಾರಿ.

ಯಾರು ನೀನು? ಎಲ್ಲಾತು ನಿನಗೆ? ನಾನು ಕೂಡ ನಿಮ್ಮ ಕಡೆಯವನೇ. ಚಿಟ್ಟಾಣಿ ರಾಮಚಂದ್ರ ಹೆಗಡೆ ಗೊತ್ತಿದ್ದಾ? ಅವರು ನಮ್ಮ ದಾಯವಾದಿ. ನಮಗೂ ಹೊನ್ನಾವರದ ಹತ್ತಿರ ಹೊಸಾಕುಳಿ ಬೊಮ್ಮನಹೊಂಡ ಆಯಿತು. ನೀ ಯಕ್ಷಗಾನದಲ್ಲಿ ಚಂಡೆ ಬಾರ್ಸುಲೇ ಬಂದವಾ ಈ ಪೊಲೀಸರ ಕಡೆ ಹ್ಯಾಂಗೆ ಸಿಕ್ಕಂಡೆ? ನಿಜ ನಿಜ ಹೇಳವು. ಇಲ್ಲೇ ಅಂದ್ರೆ ನಾನು ನಿನಗೆ ಬಾರ್ಸಿ ಬಿಡ್ತೆ. ನಿನ್ನ ಚಂಡೆ ಕೋಲಲ್ಲೇ ಬಾರಸ್ತೆ ಮತ್ತೆ. ಚಂಡೆ ಕೋಲಲ್ಲಿ ಬಾರ್ಸದ್ದೆ ರಾಶಿ ದಿವಸ ಆಜು. ಹಾಂ? ಹಾಂ? - ಅಂತ ಆ ಹೆಗಡೆ  ಅನ್ನೋ ದಿಲ್ಲಿ ಪೋಲಿಸ್ ಸಾಹೇಬರು ಭಂಡಾರಿಗೆ ಆವಾಜ ಹಾಕಿದರಂತ.

ಅಯ್ಯೋ ಒಡೆಯಾ!!! ಗೊತ್ತು ಮಾರ್ರೆ. ಚಿಟ್ಟಾಣಿ ಹೆಗಡೇರಿಗೆ ಸಿಕ್ಕಾಪಟ್ಟೆ ಬಾರ್ಸಿದ್ದು ಅಂದ್ರೆ ಚಂಡೆ ಬಾರ್ಸಿದ್ದು ನಾವೇ ಒಡೆಯಾ. ನನ್ನ ಚಂಡೆ ಇಲ್ಲ ಅಂದ್ರೆ ಚಿಟ್ಟಾಣಿ ಹೆಗಡೇರು ಚಂಡಿ (ಹಟ) ಮಾಡ್ತ್ರು. ಗೊತ್ತಿದ್ದಾ? ಆ ಭಂಡಾರಿ ಬಂದ ಹೊರತು ಆ ಬಣ್ಣಾ ಹಚ್ಚವನೇ ಅಲ್ಲ ಹೇಳಿ ಕುಂತು ಬಿಡ್ತ್ರು ಚಿಟ್ಟಾಣಿ ಹೆಗಡೇರು. ಅಷ್ಟು ಕ್ಲೋಜ್ ನಮಗೆ ಅವರು. ಒಡೆಯಾ ನನ್ನ ನಂಬಿ ಮಾರ್ರೆ.  ನಿಮಗಂತೂ ಗೊತ್ತಾತಲ್ಲರಾ ನಾ ಯಾರು ಹೇಳಿ? ಆನು ಚಂಡೆ ಭಂಡಾರಿ. ಯನ್ನ ಬಿಟ್ಟು ಬಿಡಿ ಒಡೆಯಾ. ನಿಮ್ಮ ಹೆಸರಲ್ಲಿ ನಿಮ್ಮ ಕುಲದೇವರಾದ ಹೊಸಾಕುಳಿ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಒಂದು ದೇವರಾಟಾ ಮಾಡೇ ಬಿಡ್ತೇ. ನಿಜವಾಗಲೂ ಮಾಡಸ್ತೆ ಒಡೆಯಾ, ಅಂತ ಆ ಹೆಗಡೆ ಪೋಲಿಸ್ ಸಾಹೇಬನ ಮುಂದ ಚಂಡೆ ಭಂಡಾರಿ ಅಲವತ್ತು ಕೊಂಡರು.

ಸಾಬ್....ಯೇ ಅಜಿತ್ ಚಂಡೀಲಾ ಕುಚ್ ನಹಿ ಬೋಲ್ ರಹಾ ಹೈ ಸಾಬ್. ಏಕದಂ ಚುಪ್ ಚಾಪ್ ಬೈಟಾ ಹೈ. ಟಾರ್ಚರ್ ಚಾಲೂ ಕರೆ ಕ್ಯಾ ಸಾಬ್? - ಅಂತ ಪೋಲಿಸ್ ಕಾನ್ಸ್ಟೇಬಲ್ ಒಬ್ಬವ ಬಂದು ಹೆಗಡೆ ಅನ್ನೋ ದಿಲ್ಲಿ ಪೋಲಿಸ್ ಸಾಹೇಬರನ್ನ ಕೇಳಿದನಂತ. ಹೆಗಡೆ ಸಾಹೇಬರು ಭಂಡಾರಿಯ ಪೂರ್ವಾಪರ ವಿಚಾರಿಸಿಕೋತ್ತ ಇದ್ದರು.

ಕ್ಯಾ.... ಸಾಲಾ ಚಂಡೀಲಾ.....ನೋಡಿ ಭಂಡಾರಿ..... ಈ ನನ್ನ ಮಕ್ಕೋಕೆ ಒಳ್ಳೆ ಮಾತಿನಲ್ಲಿ ಕೇಳಿದರೆ ಉಪಯೋಗಿಲ್ಲೇ. ಆ ಹಡಬೆ ಚಂಡೀಲಾ.... ಅವನೇ IPL ಪ್ಲೇಯರ್ ಚಂಡೀಲಾ.  ಸ್ಪಾಟ್ ಫಿಕ್ಸಿಂಗ್ ಫುಲ್ ಡೀಟೇಲ್ಸ್ ಹೇಳು ಅಂದ್ರೆ ಚಂಡಿ (ಹಟ) ಮಾಡ್ತಾ ಇದ್ದನಡ. ಇನ್ನು ನಾನೇ ಹೋಗಿ ಆ ಚಂಡೀಲಾನ್ನ ಚಡ್ಡಿ ಬಿಚ್ಚಿಸಿ ಕುಂಡೆ ಮ್ಯಾಲೆ ಚಂಡೆ ಬಾರ್ಸವ ಎಂತದನ? ಹಾಂ.... ಒಂದು ಮಾತು.  ನೀವು ಚಂಡೆ ಮತ್ತು ಚಂಡೆ ಕೋಲು ತಗಂಡು ಬಂಜ್ರಾ ಹ್ಯಾಂಗೆ? - ಅಂತ ಹೇಳಿದರಂತ ಹೆಗಡೆ ಪೋಲಿಸ್ ಸಾಹೇಬರು.

ಒಡೆಯಾ.... ತಂದಿನ್ರೋ ಮಾರ್ರಾ! ಚಂಡೆ ಭಂಡಾರಿ ಚಂಡೆ ಮತ್ತೆ ಚಂಡೆ ಕೋಲು ಬಿಟ್ಟಿಕ್ಕೆ ಎಲ್ಲೂ ಹೋಗ್ತ್ನಿಲ್ಲೇ ಮಾರ್ರೆ.  ಓ ಅಲ್ಲಿ ಲಾಕಪ್ ಮೂಲೆಲ್ಲಿ ಇದ್ದು ನೋಡಿ. ಹೊಸಾ ಚರ್ಮಾ ಮೊನ್ನೆ ಮೊನ್ನೆ ಮಾತ್ರ ಶೀಗೆಹಳ್ಳಿ ಕೇಶವನ ಹತ್ರ ಹಾಕ್ಸ್ಯ ಬಂಜೆ. ಚಂಡೆ ಕೋಲು ಹೊಸ್ಸಾದ್ದು ಮಾರ್ರೆ, ಅಂತ ಹೇಳಿದನಂತ ಚಂಡೆ ಭಂಡಾರಿ.

ಅದನ್ನು ಕೇಳಿದ ಹೆಗಡೆ ಪೋಲಿಸ್ ಸಾಹೇಬ್ ಖುಷ್.

ಪ್ರಮ್...ಪ್ರಮ್..... ಪ್ರಮ್...ಪ್ರಮ್.....ಅಂತ ಚಂಡೆ ಬಾರ್ಸಿದ ಆಕ್ಷನ್ ಮತ್ತ ಸೌಂಡ ಮಾಡಿದನಂತ ಹೆಗಡೆ ಪೋಲಿಸ್ ಸಾಹೇಬ.

ಚಂಡೆ ಭಂಡಾರಿ.... ನೀವು ಹೊಂಡಿ ಇನ್ನು....ನಾ ಹೇಳ್ತೆ ಇವಕ್ಕೆ. ನಿಮಗೆ ಮತ್ತೆ ಚಂಡೀಲಾ ಗೆ ಏನೂ ಸಂಬಂಧ ಇಲ್ಲೇ ಹೇಳಿ. ಚಂಡೆ ಕೋಲು ಇಲ್ಲೇ ಬಿಟ್ಟಿಕ್ಕೆ ಹೊಪಲಾಗ್ತಾ ನಿಮಗೆ? ನಿಮ್ಮ ಆಟಾ ಹ್ಯಾಂಗೂ ನಾಳೆ ಅಲ್ಲದಾ? ಅಷ್ಟರಲ್ಲಿ ಚಂಡೆ ಕೋಲು ವಾಪಸ್ ಕಳಸ್ತೆ. ಆನೂ ಬಪ್ಪವ ಇದ್ದೆ ಆಟಕ್ಕೆ. ನಿಮ್ಮತ್ತ್ರೆ ಇನ್ನೊಂದು ಜೋಡಿ ಸ್ಪೇರ್ ಚಂಡೆ ಕೋಲು ಇದ್ದಿಕ್ಕು ಅಲ್ಲದಾ? ಯಂತಕ್ಕೆ ಅಂದ್ರೆ ಈ ಚಂಡಿ ಮಾಡ ಚಂಡೀಲಾಂಗೆ ಚಡ್ಡಿ ಬಿಚ್ಚಿ ಕುಂಡೆ ಮ್ಯಾಲೆ ಚಂಡೆ ಬಾರಿಸೋ ಅಬ್ಬರಕ್ಕೆ ಕೋಲು ಮುರಿದು ಹೋದ್ರೆ ಹೇಳಿ, ಅಂತ ಹೆಗಡೆ ಪೋಲಿಸ್ ಸಾಹೇಬ ಭಂಡಾರಿನ ಕೇಳಿದನಂತ.

ಇದ್ದು ಒಡೆಯಾ ಇದ್ದು.... ಒಂದಲ್ಲ ಮೂರ್ನಾಕ ಜೋಡಿ ಸ್ಪೇರ್ ಇದ್ದು. ಬೇಕಾದ್ರೆ ಕೊಡ್ತೆ. ಆನು ಕರ್ನಾಟಕ ಭವನದಲ್ಲೇ ಇದ್ದೆ. ಒಂದ್ ಮಾತ ಹೇಳಿ ಒಡೆಯಾ. ಆನೇ ತಂದು ಕೊಡ್ತೆ. ಆದ್ರೆ ಆ ಚಂಡೀಲಾನ ಕುಂಡೆ ಮ್ಯಾಲೆ ಚಂಡೆ ಬಾರ್ಸು ಅಂತ ಮಾತ್ರ ನನಗೆ ಹೇಳಡಿ ಒಡೆಯಾ, ಅಂತ ಭಂಡಾರಿ ಪೋಲಿಸ್ ಸಾಹೇಬರ ಕಡೆ ರಿಕ್ವೆಸ್ಟ್ ಮಾಡಿಕೊಂಡ ಅಂತ.

ಓಕೆ....ಓಕೆ.... ನಾ ಹೇಳಿದ್ದೆ ಅವಕ್ಕೆ. ನೀವು ಚಂಡೆ ಕೋಲು ಬಿಟ್ಟಿಕ್ಕೆ, ನಿಮ್ಮ ಚಂಡೆ ತೆಕಂಡು ಹೊಂಡಿ. ನಾಳೆ ಆಟ ಚೊಲೋ ಆಗಲೀ. ಬತ್ತೆ ನಾನು ನೋಡುಲೆ, ಅಂತ ಹೇಳಿ ಹೆಗಡೆ ಪೋಲಿಸ್ ಸಾಹೇಬ ಚಂಡೆ ಭಂಡಾರಿ ಬಿಟ್ಟು ಕಳಿಸಿದಾ ಅಂತ ಆತು.

ಏ....ಹರಮಿಂದರ್.... ಉಸ್ಸ್ ಚಂಡೀಲಾ ಕಾ ಚಡ್ಡಿ ಉತಾರ್ ಕೆ ಉಸಕೋ ನಂಗಾ ಕರೋರೆ. ಉಸಕೋ ಮೈ ಹಮಾರಾ ಗಾವ್ ಕಿ ಸ್ಟೈಲ್ ಮೇ ಬಜಾತಾ ಹೂ. ಅಭಿ ಅಭಿ ಮೇರೆ ಗಾವ್ ಕಾ ಆದ್ಮಿ ಏಕದಂ ಮಸ್ತ ಚಂಡೆ ಬಜಾನೆವಾಲಾ ಲಕಡಿ ದೇಕ್ಕೆ ಗಯಾ ಹೈ. ಉಸ್ಸೆ ಏಕ ಬಾರ್ ಬಜಾಯಾತೋ ಚಂಡೀಲಾ ಕ್ಯಾ ಉಸಕಾ ಬಾಪ್ ಭೀ ಸಬ್ ಡೀಟೇಲ್ಸ್ ಬೋಲೇಗಾ.... ತು ಜಾ..... ನಂಗಾ ಕರ್ ಉಸಕೋ, ಅಂತ ಆರ್ಡರ್ ಕೊಟ್ಟ ಹೆಗಡೆ ಸಾಬ್ ಭಂಡಾರಿ ನೋಡಿ, ತುಮ್ ಜಾವೋ, ಅಂತ ಸಿಗ್ನಲ್ ಕೊಟ್ಟರು ಅಂತ ಆತು.

ಭಂಡಾರಿಗಳೇ!!! ಭಂಡಾರಿಗಳೇ!!! ಭಾರಿ ಸುದ್ದಿ ಮಾರ್ರೆ ಇದು. ದಿಲ್ಲಿ ಪೊಲೀಸರಲ್ಲೂ ನಿಮಗೆ ಒಬ್ಬವ ನಮ್ಮ ಬದಿ ಆಫೀಸರ್ ಸಿಕ್ಕು, ಅಂತು ನೀವು ಬಚಾವ್ ಆದ್ರಿ ಹೇಳಿ ಆತು. ಒಳ್ಳೇದಾತು ಬಿಡಿ. ಇಲ್ಲೇ ಅಂದ್ರೆ ನಿಮ್ಮ ಗತಿ ಅಷ್ಟೆಯಾ ಮತ್ತೆ, ಅಂತ ಹೇಳಿದೆ.

ಹೌದು ಒಡೆಯಾ!!! ಹೌದು!!!! - ಅಂತ ತಲೆ ಅಲ್ಲಾಡಿಸಿ ಭಂಡಾರಿ ಮತ್ತೊಂದು ಕವಳಾ ಹಾಕಿಕೊಂಡರು. ದಿಲ್ಲಿ ಪೊಲೀಸರ ನೆನಪಿನಿಂದ ಭಯಭೀತರಾಗಿದ್ದ ಅವರು ಒಂದೆರಡು ಎಸಳು ತಂಬಾಕು ಜಾಸ್ತಿನೇ ಹಾಕಿಕೊಂಡರು.

ಭಂಡಾರಿಗಳೇ!!! ನಿಮ್ಮ ಚಂಡೆ ಕೋಲಿನ ಪ್ರಭಾವವೇ ಇರವು. ಮರುದಿವಸ ಆ ಚಂಡೀಲಾ ಒಬ್ಬವನೇ ಅಲ್ಲ ಎಲ್ಲ ಸ್ಪಾಟ್ ಫಿಕ್ಸಿಂಗ್ ಆರೋಪಿಗಳು ಫುಲ್ ಡೀಟೇಲ್ಸ್ ಕೊಟ್ಟಿಗಿದ್ವಡ. ಅದು ಯಾವ ನಮ್ಮನಿ ಚಂಡೆ ಕೋಲು ಇಟ್ಟಿದ್ದರಿ ಮಾರ್ರೆ ನೀವು? ನಿಮ್ಮ ಕೋಲಲ್ಲಿ ಆ ಹೆಗಡೆ ಆಫೀಸರ್ ಅದು ಯಾವ ನಮ್ನಿ ಚಂಡೆ ಬಾರ್ಸಿಕ್ಕು ಮಾರ್ರೆ? ಹಾಂ? ಹಾಂ? - ಅಂತ ಭಂಡಾರಿಗಳ ಚಂಡೆ ಕೋಲು ಹ್ಯಾಂಗೆ ದಿಲ್ಲಿ ಪೊಲೀಸರ ಉಪಯೋಗಕ್ಕೆ ಬಂತು ಅಂತ ಹೇಳಿದೆ.

ಸರಿ ನಿದ್ದೆ ಆಜಿಲ್ಲೆ, ಅಂದ ಭಂಡಾರಿ ನಿದ್ದೆ ಮಾಡಲು ಹೋದರು.

ಟೀವಿ ಹಚ್ಚಿದರೆ ಅದೇ ಸ್ಪಾಟ್ ಫಿಕ್ಸಿಂಗ್ ಸುದ್ದಿ. 

ಇದರಕಿಂತ ಚಂಡೆ ವಾದನ ಕೇಳೋದು ಚೊಲೊ. ಚಂಡೆ ವಾದನ ಮಸ್ತ ಇರ್ತು. ಪೋಲಿಸ್ ಲಾಕಪ್ ಒಳಗೆ ಕೇಳಿ ಬರುವ ಬೇರೆಲ್ಲೋ ಬಾರಿಸಿಕೊಂಡ ಚಂಡೆ ವಾದನದ ಸೌಂಡೇ ಬೇರೆ.ಚಂಡೆ - http://en.wikipedia.org/wiki/Chande

ಇದು ಯಾವ ನಮೂನಿ ಕನ್ನಡ ಎಂದುಕೊಂಡಿರಾ? ಇದು ಹವ್ಯಕ ಕನ್ನಡ ಪೂರ್ತಿ ಅಂತೂ ಅಲ್ಲ. ಹೊನ್ನಾವರ ಕುಮಟಾ ಸೀಮೆಯಲ್ಲಿ ಹವ್ಯಕರು ಮತ್ತೆ ಹವ್ಯಕೇತರರ ಮಧ್ಯೆ ಬಳಸಲ್ಪಡುವ ಒಂದು ನಮೂನಿ ಹೈಬ್ರಿಡ್ ಹವ್ಯಕ ಕನ್ನಡ ಇದು.

ಪದಾರ್ಥ ಸೂಚಿ:

ಚಂಡಿ ಹಿಡಿ, ಚಂಡಿ ಮಾಡು = ಹಟ ಮಾಡು 

ಕವಳ = ಎಲೆ, ಅಡಿಕೆ, ಸುಣ್ಣ, ತಂಬಾಕು 

ಮುಂಡಾಸು = ರುಮಾಲು

ಮುಂಡು = ಲುಂಗಿ 

ಭಂಡಾರಿ = ಯಕ್ಷಗಾನದಲ್ಲಿ ಚಂಡೆ ಮೃದಂಗ ಬಾರಿಸುವದನ್ನೇ ಕಾಯಕ ಮಾಡಿಕೊಂಡಿರುವ ಕೆಲ ಕುಟುಂಬದವರ ಮನೆತನದ ಹೆಸರು. ಹೊನ್ನಾವರ, ಕುಮಟಾ ಕಡೆ ಇದ್ದಾರೆ.

ಮಾರ್ರೆ = ಮಾರಾಯರೇ

ಜಪ್ಪು = ಬಾರಿಸು

ರಾಶಿ = ಬಹಳ

Saturday, May 18, 2013

ಓ ಬಾಮ್ಮಾ, ಓ ಬಾಮ್ಮಾ, ಅಂತ ಹುಡುಗಿ ಕರದ್ರ ಗಂಡು 'ಬರಾಕ್' ಹತ್ತಿದ್ದ!

ನಮ್ಮ ಕರೀಂ ಸಾಬ್ರು ಅಮೇರಿಕಾ ಟ್ರಿಪ್ ಮುಗಿಸಿಕೊಂಡು ಬಂದ ಸುದ್ದಿ ಬಂತು. ಹೋಗಿ ಭೆಟ್ಟಿ ಆಗಿ ಬರೋಣ ಅಂತ ಸಾಬ್ರ ವಾಡೆ ಕಡೆ ಹೋದೆ. ಸಾಬ್ರು ಸಿಕ್ಕರು. ಚಾ ನಾಷ್ಟಾ ಆದ ಮ್ಯಾಲೆ ಹರಟಿಗೆ ಕೂತ್ವಿ. ಅವರ ಯಬಡ ಬೇಗಂ ಮಗ ಜುಲ್ಫಿಕರನ್ನ ಕಟ್ಟಿಗೊಂಡು ತವರು ಮನಿಗೆ ಹೋಗಿದ್ದಳು. ಅದು ನಮಗ ಒಂದು ತರಹದ ಒಳ್ಳೇದss ಆತು. ಖುಲ್ಲಂ ಖುಲ್ಲಾ ಹರಟಿಗೆ.

ಹ್ಯಾಂಗ ಆತ್ರೀ ಸಾಬ್ರ ಟ್ರಿಪ್? ಟ್ರಿಪ್ ನ ಮುಖ್ಯಾಂಶಗಳು ಏನು? - ಅಂತ ಕೇಳಿದೆ.

ಸಾಬ್....ಟ್ರಿಪ್ ಮಸ್ತ ಆಯಿತು. ಟ್ರಿಪ್ಪಿಂದು ಹೈಲೈಟ್ ಅಂದ್ರೆ 'ದೋಭಿಘಾಟ್ ನಲ್ಲಿ ಹುಸೇನ್ ಸಾಹೇಬರು' ಸಿಕ್ಕಿದ್ದು. ಅವರನ್ನೇ ಡೈರೆಕ್ಟ್ ಆಗಿ ಭೆಟ್ಟಿ ಆಗಿ ಬಿಟ್ಟಿ ನಮಗೆ ಭಾಳ ಖುಷಿ ಆಯಿತು. ಅಲ್ಲಾ ಕಿ ಲಾಖ್ ಲಾಖ್ ಶುಕರ್! ಅಂತ ಹೇಳಿದ.

ಅಮೇರಿಕಾದ ದೋಭಿಘಾಟಿನ್ಯಾಗ ಗೌಂಡಿ ಹುಸೇನಿ ಸಿಕ್ಕಿದ್ದನss? ಹಾಂ? ಅವನೂ ಅಮೇರಿಕಾಕ್ಕೆ ಹೋಗಿ ಸೆಟಲ್ ಆಗ್ಯಾನಾ? ವಾಹ್!!!ವಾಹ್!!! ಗೌಂಡಿ ಕೆಲಸಾ ಬಿಟ್ಟು ಲಾಂಡ್ರೀ ದೋಭಿ  ಕೆಲಸ ಮಾಡ್ತಾನ? ಹಾಂ? ಹಾಂ? - ಅಂತ ಕೇಳಿದೆ.

ನಮಗ ಗೊತ್ತಿರೋ ಹುಸೇನಿ ಅಂದ್ರ ನಮ್ಮ ಮನೆ ಕಟ್ಟಿದ ಗೌಂಡಿ ಹುಸೇನಿ. ಮೇಸ್ತ್ರಿ ಯಲ್ಲಪ್ಪನ ಖಾಸ್ ಮನುಷ್ಯಾ.

ಕರೀಂ ತಲಿ ತಲಿ ಜಜ್ಜಿಕೊಂಡ. ನಾನು ಎಷ್ಟ ಯಬಡ ಇರಬಹುದು ಅನ್ನೋ ಹಾಂಗ ತಿರಸ್ಕಾರದ ಲುಕ್ ಕೊಟ್ಟ.

ಅಮೇರಿಕಾದ  ದೋಭಿಘಾಟ್ ಅಂದ್ರೆ ನಮಗೆ ದಿಲ್ಲಿ ಇಲ್ಲ ಕ್ಯಾ ಹಾಗೆ. ಅಲ್ಲಿ ಹುಸೇನ್ ಸಾಹೇಬರು ಸಿಕ್ಕಿದ್ದರು ಅಂದ್ರೆ ಗೌಂಡಿ ಹುಸೇನಿ ಸಿಕ್ಕಿದ್ದಾ ಅಂತ ಕೇಳ್ತೀರಿ ಅಲ್ಲ? ತಲಿ ಇಲ್ಲ ಕ್ಯಾ? ಕಾಮನ್ ಸೆನ್ಸ್ ಇಲ್ಲ ಕ್ಯಾ? - ಅಂದ ಕರೀಂ.

ಓಹೋ! ಅಮೇರಿಕಾದ ರಾಜಧಾನಿ ವಾಷಿಂಗ್ಟನ್ ನಿನಗ ನೆನಪ ಆಗಿಲ್ಲ. ಅದಕ್ಕ ದೋಭಿಘಾಟ್ (Washing Ton) ಅಂದು ಬಿಟ್ಟಿ. ಇರಲಿ. ಅಲ್ಲೆ ಯಾವ ಹುಸೇನಿ ಸಿಕ್ಕಿದ್ದ? ಅದನ್ನ ಹೇಳೋ, ಅಂತ ಕೇಳಿಕೊಂಡೆ.

ಆ ದೇಶದ ಪ್ರೆಸಿಡೆಂಟ್ ಬರಾಕ್ ಹುಸೇನ್ ಒಬಾಮಾ ಸಿಕ್ಕಿದ್ದರು ಸಾಬ್. ನಾವು ವಾಷಿಂಗ್ಟನ್ ಒಳಗೆ ವೈಟ್ ಹೌಸ್ ಟೂರ್ ಗೆ ಹೋದಾಗ ಸಿಕ್ಕಿ ಬಿಟ್ಟಿದ್ದರು. ಏಕದಂ ದಿಲದಾರ್ ಆದ್ಮಿ. ಇಂಡಿಯಾ ಮಂದಿ ಅಂದ್ರೆ ಭಾಳ ಪ್ರೀತಿ. ಗೊತ್ತು ಕ್ಯಾ? ಹಾಂ? ಹಾಂ? - ಅಂತ ಭಯಂಕರ ಸುದ್ದಿ ಹೇಳಿಬಿಟ್ಟ.

ಒಂದು ಕ್ಷಣ ಹಾಂ! ಅಂತ ಅವಾಕ್ಕ ಆದೆ.

ಸಾಬ್ರಾ!!! ಸುಳ್ಳು ಹೇಳಿದರೂ ಸ್ವಲ್ಪ ನಂಬು ಹಾಂಗ ಹೇಳಬೇಕು. ವಾಷಿಂಗ್ಟನ್  ಒಳಗ ವೈಟ್ ಹೌಸ್ ಟೂರ್ ಗೆ ಹೋದಾಗ ಪ್ರೆಸಿಡೆಂಟ್ ಒಬಾಮಾ ಸಿಕ್ಕಿದ್ದರು, ಅವರ ಹೆಂಡ್ತಿ ಮಿಷೆಲ್ ನಿಮಗ ಒಳಗ ಅಡಿಗಿ ಮನಿಯೊಳಗ ಕರೆದು, ಮಣಿ ಹಾಕಿ ಕೂಡಿಸಿ, ಹಚ್ಚಿದ ಅವಲಕ್ಕಿ, ಧಾರವಾಡ ಪೇಡೆ, ಚಾ ಕೊಟ್ಟರು, ಅವರ ಸಣ್ಣು ಸಣ್ಣು ಹುಡುಗ್ಯಾರು ನಿಮ್ಮ ಗಡ್ಡ ಪ್ರೀತಿಯಿಂದ ಎಳೆದು, ಕರೀಂ ಚಾಚಾ, ಕರೀಂ ಚಾಚಾ, ಅಂತ ಪ್ರೀತಿ ಮಾಡಿದ್ರು, ಹೀಂಗ ಹಾಂಗ ಅಂದ್ರ ನಂಬೋ ಮಾತೇನ್ರೀ? ಮಸ್ತ ಹಾಕಿ ಕುಟ್ಟಲಿಕ್ಕೆ ಶುರು ಮಾಡಿ ಬಿಟ್ಟಿರಿ ನೋಡ್ರೀ. ಕುಟ್ಟರೀ ಕುಟ್ಟರೀ.  ಅಮೇರಿಕಾದ  ಟ್ರೇನಿಂಗ ತೊಗೊಂಡು ಬಂದೀರಿ ಏನು? ಹ್ಯಾಂಗ ಸುಳ್ಳು ಹೇಳಬೇಕು ಅಂತ. ಹಾಂ? ಹಾಂ? - ಅಂತ ಹೇಳಿದೆ.

ಒಬಾಮಾ ಅವರ ನಡುವಿನ ಹೆಸರು ಹುಸೇನ್ ಹೌದು. ಅದಕ್ಕ ಹುಸೇನ್ ಸಾಹೇಬರು ಅನ್ನಲಿಕತ್ತಾನ ಕರೀಂ. ಇರಲಿ. ತೊಂದ್ರಿ ಇಲ್ಲ. ಒಬಾಮಾ ಅವರಿಗೇ ಖುದ್ದ ಅವರ ಮಿಡ್ಲ್ ನೇಮ್ ಹುಸೇನ್ ಅನ್ನೋದು ನೆನಪ ಅದನೋ ಇಲ್ಲೋ? ಯಾರಿಗೆ ಗೊತ್ತ?!

ನಮಗೆ ಗೊತ್ತಿತ್ತು ಸಾಬ್! ನೀವು ನಂಬೋ ಪೈಕಿ ಅಲ್ಲ ಅಂತ. ತಡೀರಿ ಹುಸೇನ್ ಸಾಹೇಬರ ಜೊತಿ ಇರೋ ನಮ್ಮ ಫೋಟೋ ನಿಮಗೆ ತೋರ್ಸೇ ಬಿಡ್ತೇವಿ. ಈ ಕರೀಂ ಖಾನ್ ಅಂದ್ರೆ  ಏನು ಅಂತಾ ತಿಳದೀರಿ? - ಅಂದವನ ಅವನ ಚೌಕಳಿ ಲುಂಗಿ ಮುಂದಿನ ಸೀಳಿನ್ಯಾಗ ಕೈ ಬಿಟ್ಟವನss, ಕೈ ಏಕದಂ ಸೈಡಿಗೆ ತೊಗೊಂಡು, ಪಟ್ಟಾ ಪಟ್ಟಿ ಅಂಡರ್ ವೇರ್ ಕಿಸೆದಾಗಿಂದ ಮಿಂಚಿನ ವೇಗದಲ್ಲಿ  ಸ್ಮಾರ್ಟ್ ಫೋನ್ ಸರಕ್ ಅಂತ ತೆಗೆದ ಕರೀಂ. ಪಟ ಪಟ ಬಟನ್ ಒತ್ತಿ, ಏನೋ ಮಾಡಿ, ಫೋನ್ ನನ್ನ ಮಸಡಿ ಮುಂದ ತಂದು ಹಿಡದು, ನೋಡ್ರೀ, ಅಂದ ಕರೀಂ.

ನೋಡಿದೆ. ನಮ್ಮ ಕರೀಂ ಮತ್ತ ಒಬಾಮಾ ಸಾಹೇಬರು ಖರೇನ ನಿಂತಾರ ಫೋಟೋದಾಗ. ಜೊತಿಗೆ ಹೋದ ಕರೀಮನ ನಾದನಿ ಶಬನಮ್, ಕರೀಮನ ಸಾಸ್ ಮೆಹಬೂಬಿ, ಅಕಿ ತಮ್ಮಾ ಕಲ್ಲೂ ಮಾಮಾ, ಅವನ ಹೆಂಡ್ತಿ ಕಲ್ಲೂ ಮಾಮಿ ಎಲ್ಲರೂ ಬತ್ತೀಸೂ ಹಲ್ಲು ಬಿಟ್ಟಗೊಂಡು ಒಬಾಮ ಸಾಹೇಬರ ಸುತ್ತ ನಿಂತಾರ. ಸುಳ್ಳು ಫೋಟೋ ಇರಲಿಕ್ಕೆ ಇಲ್ಲ ಅಂತ ಅನ್ನಿಸ್ತು. ಬರೇ ಕರೀಂ ಮತ್ತ ಪ್ರೆಸಿಡೆಂಟ್ ಸಾಹೇಬರು ಇದ್ದಿದ್ದರ ಮಾತ ಬ್ಯಾರೆ. ಇಷ್ಟೆಲ್ಲಾ ಮಂದಿ ಹಾಕ್ಕೊಂಡು ಸುಳ್ಳು ಫೋಟೋ ಮಾಡೋದು ಕಷ್ಟ. ಅದರ ಜರೂರತ್ತು ಕಾಬೀಲಿಯತ್ತು ನಮ್ಮ ಸಾಬರಿಗೆ ಇಲ್ಲ.

ವಾಹ್!!!ವಾಹ್!!! ಪುಣ್ಯಾ ಮಾಡೀರಿ. ವೈಟ್ ಹೌಸ್ ಗೆ ಜಸ್ಟ್ ಸಾಮಾನ್ಯ ವಿಸಿಟರ್ ಆಗಿ ಹೋದವರಿಗೂ ಒಬಾಮಾ ಸಾಹೇಬರ ದರ್ಶನ ಭಾಗ್ಯ ಅಂದ್ರ ಏನ್ರೀ ಸಾಬ್ರಾ?! ಹಾಂ? ಭಾರಿ ಆತ ಬಿಡ್ರೀ. ಗ್ರೇಟ್! ಎಲ್ಲರೂ ಎಷ್ಟು ಖುಷಿಂದ ನಿಂತೀರಿ, ಅಂದು ನಾನು ಅವನ ಜೋಡಿ ಖುಷಿ ಪಟ್ಟೆ.

ಹೌದು ಸಾಬ್! ಭಾಳ ಚೊಲೋ ಅನ್ನಿಸ್ತು.  ಹುಸೇನ್ ಸಾಹೇಬರು ಹಾಗೆಲ್ಲಾ ಎಲ್ಲರಿಗೂ ಸಿಗೋದಿಲ್ಲ. ಅದು ಏನೋ ನಮ್ಮ ನಸೀಬ್ ಚೊಲೊ ಇತ್ತು ಅವತ್ತು. ಸಿಕ್ಕು ಬಿಟ್ಟಿ, ತಾವಾಗೇ ಬಂದು ಬಿಟ್ಟಿ, ಮಾತಾಡಿಸಿ, ಫೋಟೋ  ತೆಗೆಸಿಕೊಂಡು ಹೋದರು ಸಾಬ್. ಇದಕ್ಕೆ ನಾವು ನಮ್ಮ ಸಾಲಿ (ನಾದಿನಿ) ಶಬನಮ್ ಗೆ ಮತ್ತೆ ನಮ್ಮ ಟೂರ್ ಗೈಡ್ ಮೈಸೂರ್ ಮಹಾದೇವ ಅವರಿಗೆ ಶುಕರ್ ಗುಜಾರ್. ಅವರಿಬ್ಬರು ಮಾಡಿದ ಒಂದು ಕೆಲಸದಿಂದಲೇ  ನಮಗೆ  ಒಬಾಮಾ ಸಾಹೇಬರು ಸಿಕ್ಕಿದ್ದು ಸಾಬ್, ಅಂತ ಹೇಳಿದ ಕರೀಂ.

ಕೆಟ್ಟ ಕುತೂಹಲ. ಏನು ಮಾಡಿದರೋ ಏನೋ ಶಬನಮ್ ಮತ್ತ ಟೂರ್ ಗೈಡ್ ಮೈಸೂರ್ ಮಹಾದೇವ? ತಿಳ್ಕೊಬೇಕು.

ಏನು ಮಾಡಿದರು ಅವರು? ಅದೂ ಒಬಾಮಾ ಸಾಹೇಬರು ಎಲ್ಲಾ ಕೆಲಸಾ ಬಿಟ್ಟು ನಿಮ್ಮನ್ನ ಬಂದು ಭೆಟ್ಟಿ ಆಗೋ ಹಾಂಗ? ಅಂತ ಕೇಳಿದೆ.

ನೋಡಿ ಸಾಬ್....ಅವತ್ತು ನಾವು ವೈಟ್ ಹೌಸ್ ಗೆ ಹೋದಾಗ ಭಾಳ ಬಿಸಿಲು ಇತ್ತು. ಮತ್ತೆ ಉದ್ದ ಲೈನ್ ಬ್ಯಾರೆ ಇತ್ತು. ಪಾಪ ಅಂತ ಹೇಳಿ ಆ ಒಳ್ಳೆ ಅಮೇರಿಕಾ ಮಂದಿ ಎಲ್ಲರಿಗೂ ಕುಡಿಯಾಕೆ ನೀರು ಮುಫತ್ ಆಗಿ ಕೊಡ್ತಾ ಇದ್ದರು. ಅದೂ ಬಿಸ್ಲೇರಿ ಹಾಗೆ ಬಾಟಲೀ ಮಿನರಲ್ ವಾಟರ್. ಎಷ್ಟು ಬೇಕೋ ಅಷ್ಟು. ನಾವು ದೇಸಿ ಮಂದಿಗೆ ಬಿಟ್ಟಿ ಸಿಗ್ತದೆ ಅಂದ್ರೆ ನನಗೆ ಒಂದು, ನಮ್ಮ ಅಪ್ಪಂಗೆ ಒಂದು, ಅಮ್ಮಂಗೆ ಒಂದು, ಮಾಮಾಗೆ ಒಂದು ಅಂತ ಹೇಳಿ ತೊಗೊಂಡು ತೊಗೊಂಡು ಬಿಡ್ತೀವಿ ಅಲ್ಲಾ? ಅದಕ್ಕೆ ನಮ್ಮ ಹಾಪ್ ಸಾಲಿ ಶಬನಮ್ ಒಂದರ ಮ್ಯಾಲೆ ಒಂದು ದೊಡ್ಡ ದೊಡ್ಡ ಬಾಟಲೀ ನೀರ ಕುಡಿತಾನೇ ಇದ್ದಳು - ಅಂತ ಮಾಣಿಕಚಂದ ಗುಟಕಾ ಪಿಚಕಾರಿ ಹಾರಿಸಲಿಕ್ಕೆ ಒಂದು ಬ್ರೇಕ್ ತೊಗೊಂಡ ಕರೀಂ.

ನಿಮ್ಮ ಶಬನಮ್ ನೀರ ಕುಡಿದರ, ಏನು ಪ್ರೆಸಿಡೆಂಟ್ ಒಬಾಮಾ ಬಂದು, ಯಾಕವಾ ಅಷ್ಟು ನೀರು ಕುಡದಿ? ಈಗ ಬಿಲ್ಲು ಕೊಡು ಅಂತ ಡಾಲರ್ ಒಳಗ ಬಿಲ್ಲು ಕೊಟ್ಟು ಹೋಗಲಿಕ್ಕೆ ಹೋಟೆಲ್ ಮಾಣಿ  ಗತೆ ಬಂದಿದ್ದರು ಏನು? - ಅಂತ ಕೇಳಿದೆ.

ಇಲ್ಲ ಸಾಬ್....ಅಷ್ಟು ನೀರು ಕುಡಿದ ಮ್ಯಾಲೆ ಏನು ಆಗ ಬೇಕೋ ಅದು ಆಗೇ ಬಿಡ್ತು. ವೈಟ್ ಹೌಸ್ ಒಳಗೆ ಹೋಗಿ ಅಲ್ಲಿ ಇಲ್ಲಿ ಓಡಾಡ್ತಾ ಇದ್ದಾಗ ಶಬನಮ್ ನಮಗೆ ಕರೆದಳು. ಏನು ಶಬ್ಬೋ? ಅಂತ ಕೇಳಿದೆ. ನನಗೆ ಸುಸೂ ಬಂದಿದೆ. ಭಾಳ ವತ್ರ ಆಗಿ ಬಿಟ್ಟಿದೆ. ಅರ್ಜೆಂಟ್ ನಲ್ಲಿ ಸುಸೂ ಮಾಡಲೇ ಬೇಕು. ಎಲ್ಲಿ ಮಾಡಲಿ? ಅಂತ ಕೇಳಿದಳು ನಮ್ಮ ಸಾಲಿ ಶಬನಮ್.

ನನಗೆ ಏನು ಗೊತ್ತು? ತಡಿ ಶಬ್ಬೋ, ನಮ್ಮ ಟೂರ್ ಗೈಡ್ ಮೈಸೂರ್ ಮಹಾದೇವ ಕಡೆ ಕೇಳಿ ಬರ್ತೇನಿ ಅಂತ ನಾನು ಆ ಕಡೆ ಹೋದೆ, ಅಂದ ಕರೀಂ.

ನಾನು ಮೈಸೂರ್ ಮಹಾದೇವ್ ಕಡೆ ಹೋಗಿ, ನೋಡಿ ಸಾಬ್, ಹೀಗೆ ನಮ್ಮ ಸಾಲಿ ಶಬ್ಬೋಗೆ ಅರ್ಜೆಂಟ್ ನಲ್ಲಿ ಸುಸೂ ಮಾಡಬೇಕಂತೆ. ಎಲ್ಲಿ ಕಳಿಸಲಿ? ಓ ಅಲ್ಲಿ ವೈಟ್ ಹೌಸ್ ಹೊರಗೆ ಕೆಂಪು ಕೆಂಪು ಗುಲಾಬಿ ಗಾರ್ಡನ್ ಕಾಣ್ತದೆ. ಭಾಳ ಜಾಡಿ ಪೌದಾ ಗಿಡಾ ಗಂಟಿ  ಎಲ್ಲಾ ಅದೆ. ಅದರ ಹಿಂದೆ ಹೋಗಿ ಮಾಡಿಬಿಟ್ಟಿ ಬಾ ಅಂತ ಹೇಳಲಾ? ಅಂತ ನಾನು ಮಹಾದೇವ್ ಗೆ ಕೇಳಿಬಿಟ್ಟೆ, ಅಂದ ಕರೀಂ.

ಏನಂದ್ರು ಮೈಸೂರ್ ಮಹಾದೇವ್? - ಅಂತ ಕೇಳಿದೆ.

ಅವರು ನನಗೆ ಬೈದು, ಅದು ಫೇಮಸ್ ವೈಟ್ ಹೌಸ್ ರೋಸ್ ಗಾರ್ಡೆನ್. ಅಲ್ಲೆಲ್ಲ ಉಚ್ಚಿ ಗಿಚ್ಚಿ ಹೊಯ್ಯಬಾರದು. ಅಲ್ಲೆಲ್ಲ ಮನುಷ್ಯಾರಿಗೆ ಉಚ್ಚಿ ಮತ್ತೊಂದು ಮಾಡೋಕೆ ಪರ್ಮಿಷನ್ ಇಲ್ಲ. ಕೇವಲ ಒಬಾಮಾ ಸಾಹೇಬರ ವೈಟ್ ಹೌಸ್ ನಾಯಿ ಮಾತ್ರ ಅಲ್ಲೆಲ್ಲಾ ಉಚ್ಚಿ ಹೊಯ್ಯಬಹುದು, ಅಂತ ಹೇಳಿದರು ಮೈಸೂರ್ ಮಹಾದೇವ, ಅಂತ ಹೇಳಿದ ಕರೀಂ.

ತಡೀರಿ ನೋಡೋಣ. ಇಲ್ಲೇ ಸುತ್ತ ಮುತ್ತ ಟಾಯ್ಲೆಟ್ ಇದ್ದೇ ಇರ್ತದೆ ಅಂತ ಈ ಕಡೆ ಅ ಕಡೆ ನೋಡಿದರು ಮಹಾದೇವ್ ಅವರು. ಅವರಿಗೆ ಟಾಯ್ಲೆಟ್ ಕಂಡೇ ಬಿಟ್ಟಿತು.

ಶಬನಂ ಕರೆದು ಟಾಯ್ಲೆಟ್ ತೋರ್ಸಿದೆ. ಲಗೂನೆ ಮುಗಿಸಿಕೊಂಡು ಚುಪ್ ಚಾಪ್ ಬಾ ಅಂತ ಹೇಳಿದೆ ಸಾಬ್, ಅಂದ ಕರೀಂ ಮತ್ತೊಂದು ಬ್ರೇಕ್ ತೊಗೊಂಡ.

ಇವರ ನಾದಿನಿ ಶಬನಮ್ ಬಿಟ್ಟಿ ಸಿಕ್ಕ ಮಿನರಲ್ ವಾಟರ್ ಆ ಪರಿ  ಕುಡದು, ಹೊಟ್ಟಿ ಉಬ್ಬುವಷ್ಟು ವತ್ರಾ ಬರಿಸ್ಕೊಂಡು, ಫೇಮಸ್ ರೋಸ್ ಗಾರ್ಡನ್ ಗುಲಾಬಿ ಗಿಡದ ಪೊದೆ ಹಿಂದ ಉಚ್ಚಿ ಹೊಯ್ಯಲಿಕ್ಕೆ ಹೋಗಿ, ಅದು ಪುಣ್ಯಕ್ಕ ತಪ್ಪಿ, ಟೈಮ್ ಗೆ ಸರಿಯಾಗಿ ಟಾಯ್ಲೆಟ್ ಸಿಗೂದಕ್ಕೂ ಪ್ರೆಸಿಡೆಂಟ್ ಒಬಾಮಾ ಸಾಹೇಬರು ಬರೋದಕ್ಕೂ ಏನು ಲಿಂಕ್ ಅಂತ ತಿಳಿಲಿಲ್ಲ.

ನಮ್ಮದು ಸಾಲಿ ಶಬನಮ್ ಟಾಯ್ಲೆಟ್ ಒಳಗೆ ಹೊಕ್ಕೊಂಡಾಕಿ ಹತ್ತು ನಿಮಿಷದ ಮ್ಯಾಲೆ ಆದರೂ ಹೊರಗೆ ಬರಲೇ ಇಲ್ಲ. ಟೂರ್ ಗೈಡ್ ಸಾಹೇಬರಿಗೆ ಟೆನ್ಶನ್ ಶುರು ಆಯಿತು. ನಾನು ಎಲ್ಲ ವೈಟ್ ಹೌಸ್ ನೋಡೋದ್ರೊಳಗೆ ಬಿಜಿ ಇದ್ದೆ. ಅದಕ್ಕೆ ಮೈಸೂರ್  ಮಹದೇವ್ ಅವರೇ ನಮ್ಮ ಸಾಲಿ ಶಬನಮ್ ಹುಡಕಲು ಟಾಯ್ಲೆಟ್ ಕಡೆ ಹೋದರು, ಅಂದ ಕರೀಂ.

ಹುಡುಕಿ ಕರ್ಕೊಂಡು ಬಂದರೇನು? ಮಸ್ತ ಬೈದಿರಬೇಕಲ್ಲ ಅಕಿಗೆ? ಲೇಟ್ ಮಾಡಿ ಹಾಕಿದಿ ಅಂತ, ಅಂತ ಕೇಳಿದೆ.

ಪಾಪ ಗಂಡು ಟೂರ್ ಗೈಡ್! ಲೇಡೀಸ್ ಟಾಯ್ಲೆಟ್ ಒಳಗೆ ಹೋಗೋ ಹಾಗೆ ಇಲ್ಲ. ಹೊರಗಿಂದನೇ, ಅಮ್ಮಾ ಶಬನಮ್!!! ಬಾಮ್ಮಾ!!! ಬಾಮ್ಮಾ!!!ಬೇಗ ಬಾಮ್ಮಾ!!! ಲೇಟ್ ಆಗ್ತಾ ಇದೆ, ಅಂತ ಒಂದು ೧೦ ನಿಮಿಷ ಶಂಖಾ ಹೊಡೆದಿದ್ದಾರೆ, ಅಂತ ಹೇಳಿದ ಕರೀಂ.

ಅವರು ಹೇಳಿ ಕೇಳಿ ಮೈಸೂರ್ ಕಡೆ ಮಂದಿ. ಅದಕ್ಕ ಹೆಣ್ಣಮಕ್ಕಳಿಗೆ ಬಾಮ್ಮಾ, ಹೋಗಮ್ಮಾ ಅಂತನ ಕರೀತಾರೆ  ಸಾಬ್, ಅಂದ ಕರೀಂ.

ಆ ಮ್ಯಾಲೆ ಏನಾತೋ? ಮೈಸೂರ್ ಮಹಾದೇವ್ ಲೇಡೀಸ್ ಟಾಯ್ಲೆಟ್ ಮುಂದ ವಾಚ್ ಮ್ಯಾನ್ ಗಿರಿ ಮಾಡಿಕೋತ್ತ ನಿಂತು ಮಂಗ್ಯಾ ಆದ ಅಂತ ಆತು. ಮುಂದ? - ಅಂತ ಕೇಳಿದೆ.

ಅಂತೂ ಇಂತೂ ಸುಮಾರ್ ಅರ್ಧಾ ಘಂಟಾ ಆದ ಮ್ಯಾಲೆ ನಮ್ಮ ಶಬನಮ್ ಬಂದಳು ಅಂತ ಆಯಿತು ಸಾಬ್. ಅವಳನ್ನ ನೋಡಿದ್ದೇ ನೋಡಿದ್ದು ಮೈಸೂರ್ ಮಹದೇವ್ ಅವರ ಸಿಟ್ಟು ಎಲ್ಲಿತ್ತೋ, ಬಂದೇ ಬಿಡ್ತು, ಅಂದ ಕರೀಂ ಮುಂದಿನ ಡ್ರಾಮಾಟಿಕ್ ಎಫೆಕ್ಟ್ ಬಗೆ ಹೇಳಲು ತಯಾರ್ ಆದ.

ಓ!! ಬಾಮ್ಮಾ!!! ಬಾ!!! ಓ!!! ಬಾಮ್ಮಾ!!! ಬಾ!!! ನೀನೇನು ಮೈಸೂರ್ ಮಹಾರಾಣಿ ಏನಮ್ಮಾ? ನಿನಗೆ ನಾವೆಲ್ಲಾ ಕಾಯಬೇಕಾ? ಹಾಂ? ಎಲ್ಲರಿಗೂ ಲೇಟ್ ಆಯಿತು ನಿನ್ನಿಂದ. ಓ!!ಬಾಮ್ಮಾ!!!ಬಾ!!!, ಅಂತ ಮೈಸೂರ್ ಮಹಾದೇವ sarcastic ಆಗಿ ಡೈಲಾಗ್ ಹೊಡದ, ಅಂತ ಹೇಳಿದ ಕರೀಂ.

ನಿಮಗೆ ಗೊತ್ತಲ್ಲ ಸಾಬ್? ನಮ್ಮ ಸಾಲಿ ಸಾಹೇಬಾ ಶಬನಮ್ ಖೋಪಡಿ ಎಷ್ಟು ಗರಂ ಅಂತ? ಸರಿಯಾಗಿ ತಿರುಗಿ ಬಿದ್ದಳು ನೋಡಿ, ಅಂದ ಕರೀಂ.

ಏನು ಮಾಡಿದಳು ಶಬನಮ್? - ಅಂತ ಕೇಳಿದೆ.

ಕ್ಯಾ ಬೆ ಹಲ್ಕಟ್ ಭಾಡಕೋವ್? ಕ್ಯಾ ಒಬಾಮಾ ಒಬಾಮಾ ಚಿಲ್ಲಾತಾ ಹೈ? ಶಾಂತೀ ಸೆ ಸುಸೂ ಭಿ ನಹಿ ಕರ್ನೆಕಾ ಕ್ಯಾ?
ವೈಟ್ ಹೌಸ್ ಟಾಯ್ಲೆಟ್ ಮೇ ಮೂತ್ನೆ ಕಾ ಚಾನ್ಸ್ ಸಬಕೋ ಮಿಲತಾ ನಹಿ. ಅದಕ್ಕೆ ನಾವು ಎರಡು ಮೂರು ಸರೆ ಉಚ್ಚಿ ಹೊಯ್ದುಬಿಟ್ಟಿ ಬರೋದ್ರಾಗೆ ಏನೋ ಆಧಾ ಘಂಟಾ ಲೇಟ್ ಆದ್ರೆ ಟಾಯ್ಲೆಟ್ ಬಾಗಿಲಲ್ಲಿ ನಿಂತ್ಗೋ ಬಿಟ್ಟಿ, ಒಬಾಮಾ ಒಬಾಮಾ, ಅಂತ ಕರೆಯೋದು ಕ್ಯಾ? ಭಾಡಕೋವ್ ಗೈಡ್, ಅಂತ ದೊಡ್ಡ ದನೀಲೆ ಬೈದಳಂತ ಶಬ್ಬೋ, ಅಂದ ಕರೀಂ.

ಈ ಮೈಸೂರ್ ಮಹಾದೇವ್, ಓ ಬಾಮ್ಮಾ, ಓ ಬಾಮ್ಮಾ ಅಂತ ಕರೆದಿದ್ದು ಈ ಯಬಡ ಶಬನಮ್ ಅದನ್ನ ಒಬಾಮಾ ಅಂತ ಕೇಳಿಸಿಕೊಂಡು ಮತ್ತ ಮತ್ತ ಒಬಾಮಾ ಒಬಾಮಾ ಅಂತ ತಿರುಗಿ ತಿರುಗಿ ಅಂದಿದ್ದು ಎಲ್ಲಾ ಕೂಡಿ ವೈಟ್ ಹೌಸ್ ತುಂಬಾ ಎಲ್ಲಾ ಕಡೆ ಒಬಾಮಾ ಒಬಾಮ ಅಂತ ಸೌಂಡ್ ಆಗಿ ಬಿಟ್ಟಿರಬೇಕು.

ಸಾಬ್.... ಅಷ್ಟರಲ್ಲಿ ಒಬ್ಬ ಆದ್ಮಿ ಬಂದುಬಿಟ್ಟ! ಬಂದವನೇ, Hello everybody! how you doing? what is going on? having fun? enjoy your whitehouse visit....ಅಂದಾ ಸಾಬ್, ಅಂದ ಕರೀಂ ಯಾರು ಬಂದಿದ್ದರು ಅನ್ನೋದನ್ನ ಮತ್ತ ಅವನ ಮೊಬೈಲ್ ಫೋನಿನ್ಯಾಗ ತೋರಿಸಿದ.

ಕುಂಇ ಬ್ಯಾರೀ ಉರ್ಫ್ ಬರಾಕ್ ಒಬಾಮ

ಸಾಬ್ರಾ,  ಯಾರೀ ಇವಾ? ನಮ್ಮ ಸಿರ್ಸಿ ಸಿದ್ದಾಪುರ ಕಡೆ ಬರಡ ಆಕಳ, ಬರಡ ಯಮ್ಮಿ, ಗಂಡು ಹೋರಿ ಕರ, ಕ್ವಾಣದ ಮಣಕ ಎಲ್ಲಾ ಖರೀದಿ ಮಾಡಿ ಕೇರಳಾಕ್ಕ ಸಾಗಿಸೋ ಮಲಬಾರಿ ಕುಂಇ ಬ್ಯಾರೀ ಗತೆ ಇದ್ದಾನ. ದನಾ ಕಡಿಯೋ ಬ್ಯಾರಿ ಅಲ್ಲ್ಯಾಕ ಬಂದಾ? - ಅಂತ ಕೇಳಿದೆ.

ಮುಂದೆ ಕೇಳಿ ಸಾಬ್. ಮಜಾ ಐತೆ, ಅಂದ ಕರೀಂ ಮುಂದುವರ್ಸಿದಾ.

ನಮಗೆ ಅವನ್ನ ನೋಡಿದ ಕೂಡಲೇ ಗೊತ್ತಾತು. ಇವನೂ ನಮ್ಮ ಪೈಕಿ ಇದ್ದಾನೆ. ನಮ್ಮದು ತರಾನೆ ಚೌಕಳೀ ಲುಂಗಿ ಬೇರೆ  ಉಟ್ಟಿದ್ದಾನೆ. ನೀವು ಹೇಳಿದ ಹಾಗೆ ಕೇರಳಾ ಕಡೆ ಬ್ಯಾರಿನೇ ಇರಬೇಕು ಅಂತ ಅಂದ್ಕೊಂಡು, ಸಲಾಂ ವಾಲೆಕುಂ, ಅಂತ ಸಲಾಂ ಮಾಡಿದೆ  ಸಾಬ್ ನಾನು, ಅಂತ ಕರೀಂ ಹೇಳಿದ.

Salaam, Salaam. You from India? Why are you all calling out for me here like Obama, Obama? That's why I came to see who is calling me. I am Obama. Having fun, eh? ಅಂದಾ ಸಾಬ್ ಆ ಲುಂಗಿ ಬ್ಯಾರಿ, ಅಂದ ಕರೀಂ.

ಕರೀಮಗ ಏನೂ ಪೂರ್ತಿ ತಿಳದಿಲ್ಲ. ಅವಾ ಬ್ಯಾರಿ ಗತೆ ಇದ್ದ ಆದ್ಮಿ ಒಬಾಮ ಅಂದಿದ್ದು ಕೇಳ್ಯದ. ಮತ್ತ ಇಂಗ್ಲಿಷ್ ಸ್ವಲ್ಪ ಸ್ವಲ್ಪ ತಿಳಿತದ. ಆದ್ರ ಮಾತಾಡಲಿಕ್ಕೆ ಬರೋದಿಲ್ಲ. ಮತ್ತ ಪರದೇಶ ಬ್ಯಾರೆ. ಟೆನ್ಶನ್ ಒಳಗ ಕರೀಂ ಆ ಬ್ಯಾರಿ ಜೊತಿ ಕನ್ನಡ, ಉರ್ದು ಮಿಕ್ಸ್ ಒಳಗ ಮಾತಾಡಿ ಬಿಟ್ಟಾನ್.

ಅಲ್ಲಪಾ ಬ್ಯಾರಿ ಸಾಬ್..... ನಮ್ಮ ಟೂರ್ ಗೈಡ್ ನಮ್ಮ ಹುಡುಗಿಗೆ ಓ  ಬಾಮ್ಮಾ ಓ  ಬಾಮ್ಮಾ ಅಂತ ಮೈಸೂರ್ ಕನ್ನಡ ಒಳಗ ಕರದ್ರ ನೀ ಯಾಕ್ ಬರಾಕ್ ಹತ್ತಿಯೋ ಮಾರಾಯಾ? ತುಮ್ ಗಂಡು ಆದ್ಮಿ. ಕರದಿದ್ದು ನಮ್ಮ ಶಬನಮ್ ಹುಡುಗಿಗೆ. ನೀ ಯಾಕ್ ಬರಾಕ್ ಹತ್ತಿಯೋ ಬ್ಯಾರಿ? ಕೇರಳಾ ಮೇ ಸಬ್ ಟೀಖ್ ಹೈ? ತುಮ್  ಭೀ USA ಟೂರ್ ಪೆ ಆಯಾ ಹೈ ಕ್ಯಾ? ಅಂತ ಕೇಳಿಬಿಟ್ಟಾ  ನಮ್ಮ ಕರೀಂ.

My first name is Barack. My last name is Obama. You all have been yelling Obama Obama. That's why I came to check out. What's that Indian language you speak? So sweet it sounds. I am a big fan of your Gandhi and his principles, ಅಂತ ಅಂದನಂತ ಆ ಬ್ಯಾರಿ.

ಆ ಬ್ಯಾರಿ ಇಂಗ್ಲಿಷ್ ಒಳಗ  ಮಾತಾಡೋದು ಕರೀಮಗ ಕುತ್ತಿಗ್ಗೆ ಬಂತು. ಏನೋ ನಡು ನಡು ತಿಳೀತು. ಸ್ವಲ್ಪ ಸ್ವಲ್ಪ.

ಬ್ಯಾರಿ ಸಾಬ್... ಯು ನೋ ಉರ್ದು? ಕನ್ನಡ? ಮಿ ನೋ ಇಂಗ್ಲಿಷ್. ಸಾರಿ ಸಾಬ್, ಅಂತ ಅಂದಾ ಕರೀಂ.

Sorry Sir. I can only speak English. I would love to learn Indian languages. Will you teach me? By the way, I am Barack Obama. Really nice to meet you. I like India and Indians very much, ಅಂದು ನಮ್ಮ ಕರೀಂ ಸಾಬರನ್ನ ಅವರ ಸ್ಟೈಲ್ ಒಳಗ ಅಪ್ಪಿಕೊಂಡು ಹ್ಯಾಂಡ್ ಶೇಕ್ ಮಾಡಿ ಬಿಟ್ಟನಂತ ಆ ಮಲಬಾರಿ ಬ್ಯಾರಿ.

ಏನ್ ಬ್ಯಾರಿ? ಏನೋ ಬರಾಕ್ ಅಂದಿ? ಮೈ ಕ್ಯಾ ಪೂಛಾ.....ನಾ ಕೇಳಿದ್ದು ನಮ್ಮ ಹುಡುಗಿಗೆ ಓ ಬಾಮ್ಮಾ ಬಾಮ್ಮಾ ಅಂತ ಆವಾ ಮೈಸೂರ್ ಮಹಾದೇವ ಕರದರ ನೀ ಯಾಕ್ ಬರಾಕ್ ಹತ್ತಿ ಅಂತ. ಅದಕ್ಕ ಉತ್ತರಾ ಕೋಡುದು ಬಿಟ್ಟು ಇಂಗ್ಲಿಷ್ ಒಳಗ ಏನೇನೋ ಅಂದಿ. ಬರಾಕ್ ಒಬಾಮಾ ಅವರ ಹೆಸರು ಸಹಿತ ತೊಗೊಂಡಿ. ಅವರ ಮನಿಯಾಗ ದನಾ ಕಡಿಲಿಕ್ಕೆ ಅಂತ ನಿನ್ನ ಇಟ್ಟುಗೊಂಡಾರ  ಏನು? ಕಸಾಯೀ ಕಾಂ ಕರತಾ ಕ್ಯಾ? ಪಗಾರ್ ಮಸ್ತ್ ದೇತಾ ಕ್ಯಾ ಯಹಾನ್? ಹಾಂ? ಹಾಂ? ಕೇರಳಾ ಮಲಬಾರಿ ಬ್ಯಾರಿ ಮಂದಿ ದನಾ ಹಲಾಲ್ ಮಾಡಿದಂಗ ಬ್ಯಾರೆ ಯಾರಿಗೂ ಮಾಡಲಿಕ್ಕೆ ಬರೋದಿಲ್ಲ ಬಿಡಿ. ದಿನಾ ಕಿತನಾ ಆಕಳಾ ಕಾಟ್ತಾ ಆಪ್? ಇತನಾ ಬಡಾ ವೈಟ್ ಹೌಸ್ ವಾಡೇಕ್ಕ್ ಕಮ್ಮಿ ಕಮ್ಮಿ ಅಂದ್ರೂ ಮೂರ್ನಾಕ್ ಆಕಳಾ ಬೇಕss ಬೇಕ. ಎಲ್ಲಿಂದ ತರಸ್ತಿ ಆಕಳಾ? ಅಭಿಭೀ ಸಿರ್ಸಿ ಕಡೆಯಿಂದನ ಸ್ಮಗಲ್ ಮಾಡಸ್ತಿ ಏನು? ಹಾಂ? ಹಾಂ? - ಅಂತ ಕೇಳಿ ಬಿಟ್ಟಾನ ಕರೀಂ. ಕನ್ನಡ, ಉರ್ದು ಎಲ್ಲಾ ಫುಲ್ ಮಿಕ್ಸ್. ಇದ್ದದ್ದ್ರಾಗ ಸ್ವಲ್ಪ ರಿಫೈನ್ ಆಗಿ ಮಾತಾಡ್ಯಾನ.

ಯಾವಾಗಲೂ ನೀಲಿ ಸೂಟಿನ್ಯಾಗ ಒಬಾಮಾ ಸಾಹೇಬರನ್ನು ನೋಡಿದ್ದ ಕರೀಮಂಗ ಅವರ ಪ್ರೆಸಿಡೆಂಟ್ ಅಂತ ಕಲ್ಪನಾ ಕೂಡ ಆಗಿಲ್ಲ.

ಹೀಂಗ ನಮ್ಮ ಕರೀಂ ಸಾಬರು ಮತ್ತ ಅಲ್ಲೆ ವೈಟ್ ಹೌಸ್ ಒಳಗ ಸಿಕ್ಕ ಮಲಬಾರಿ ದನಾ ಕಡಿಯೋ ಕುಂಇ ಬ್ಯಾರಿ ಹರಟಿ ನೆಡದಾಗ ಟೂರ್ ಗೈಡ್ ಮೈಸೂರ್ ಮಹಾದೇವಂದು ಶಬನಮ್ ಜಗಳಾ ಎಲ್ಲ ಮುಗದು ಕರೀಮನ್ನ ಹುಡಕಲಿಕ್ಕೆ ಬಂದಾನ ಮೈಸೂರ್ ಮಹಾದೇವ.

ನಮ್ಮ ಕರೀಂ ಯಾರ ಜೊತಿ ಮಾತಾಡಿಕೋತ್ತ ನಿಂತಾನ ಅನ್ನೋದನ್ನ ನೋಡಿದವನ, ಅಲ್ಲೇ ನೋಡಿ!!!!! ಅಮೇರಿಕಾದ ಪ್ರೆಸಿಡೆಂಟ್ ಒಬಾಮಾ!!!! ಅಂತ ಸಿಕ್ಕಾಪಟ್ಟೆ ಎಕ್ಸೈಟ್ ಆಗಿ ಚೀರಿಕೊಂಡ.

ಎಲ್ಲರೂ ಒಬಾಮಾ ಒಬಾಮಾ ಅನ್ಕೋತ್ತ ಕೇರಳಾ ಮಲಬಾರಿ ದನಾ ಕಡಿಯೋ ಬ್ಯಾರಿ ಗತೆ ಇದ್ದ ಆದ್ಮಿ ಸುತ್ತ ಗುಂಪ ಆಗಿ ನೋಡಿದ್ದ ನೋಡಿದ್ದು.

ನಮ್ಮ ಕರೀಂಗss ಅಂತೂ ಹುಸೇನ್ ಸಾಬ್ರು ಸಿಕ್ಕ ಖುಷಿ ಒಳಗ ಮಾತss  ಬರಲಿಲ್ಲ ಅಂತ. ಅಷ್ಟು ಖುಷಿ ಆಗಿ ಬಿಟ್ಟಿತ್ತು ಅಂತ.

ಹೀಂಗ ಒಟ್ಟಿನ್ಯಾಗ ಶಬನಮ್ ಸಿಕ್ಕಾಪಟ್ಟೆ ಬಿಟ್ಟಿ ಸಿಕ್ಕದ ಅಂತ ವೈಟ್ ಹೌಸ್ ಮಿನರಲ್ ವಾಟರ್ ಕುಡದು, ಒಂದಕ್ಕ ವತ್ರಾ ಮಾಡಿಕೊಂಡು, ವೈಟ್ ಹೌಸ್ ಟಾಯ್ಲೆಟ್ ಒಳಗ ತಾಸ್ ಗಟ್ಟಲೆ ಇದ್ದು, ಟೂರ್ ಗೈಡ್ ಮೈಸೂರ್ ಮಹಾದೇವ ಓ ಬಾಮ್ಮಾ ಓ ಬಾಮ್ಮಾ ಅಂತ ಒದರಿಕೊಂಡು, ಶಬನಮ್ ಅದನ್ನ ಒಬಾಮಾ ಅಂತ ಕೇಳಿಸಿಕೊಂಡು, ತಿರುಗಿ ಅಕಿ ಒಬಾಮಾ ಒಬಾಮಾ ಅಂತ ಚೀರಿಕೊಂಡು, ಅದು ಅವತ್ತು ಶನಿವಾರ ಫ್ರೀ ಇದ್ದ ಒಬಾಮಾ ಸಾಹೇಬರಿಗೆ ಕೇಳಿ, ಅವರು ಲುಂಗಿಯೊಳಗss ಬಂದು, ನಮ್ಮ ಕರೀಂ ಅವರನ್ನ ಯಾರೋ ಕೇರಳಾ ಕಡೆ ದನಾ ಕಡಿಯೋ ಕುಂಇ ಬ್ಯಾರಿ ಅಂತ ತಿಳಕೊಂಡು ಮಾತಾಡಿದ ಅಂತ ಆತು. ಇಷ್ಟು ಕಥಿ. ಆಗೋದೆಲ್ಲಾ ಒಳ್ಳೇದಕ್ಕ ಆಗ್ತದ ಅನ್ನೋದು ಸುಳ್ಳಲ್ಲ.

ಅಲ್ಲೋ ಕರೀಂ..... ಅವತ್ತು ಯಾಕ ಪ್ರೆಸಿಡೆಂಟ್ ಒಬಾಮಾ ಸಾಹೇಬರು ಲುಂಗಿ ಉಟ್ಟಗೋಂಡು ಮಲಬಾರಿ ಬ್ಯಾರಿ  ಮುಸ್ಲಿಂ ಗತೆ ಕಾಣಲಿಕತ್ತಿದ್ದರು? - ಅಂತ ಕೇಳಿದೆ.

ಸಾಬ್!!!ಅವರು ನಮ್ಮ ಮಂದಿ ಅಲ್ಲಾ? ಪಾಪ ಅವರಿಗೆ ನಮ್ಮ ಟ್ರೇಡ್ ಮಾರ್ಕ್ ಆದ ಚೌಕಳಿ ನೀಲಿ ಲುಂಗಿ ಸಿಕ್ಕಲ್ಲ ಅಂತ ಅನ್ನಿಸ್ತದೆ. ಸಿಕ್ಕಿದ್ದ ಬಿಳಿ ಚೌಕಳಿ ಲುಂಗಿನೇ ಉಟ್ಟುಗೋಂಡು ಬಂದಿದ್ದಾರೆ.  ಮತ್ತೆ ಅವತ್ತು ಸಿಕ್ಕಾ ಪಟ್ಟೆ ಸೆಕೆ ಬ್ಯಾರೆ ಇತ್ತು. ಒಳ್ಳೆದಾಗಿ ಗಾಳಿ ಆಡಲಿ ಅಂತ ಲುಂಗಿ ಹಾಕ್ಕೊಂಡಿದ್ದರು ಅಂತ ಅನ್ನಿಸ್ತದೆ, ಅಂದ ಕರೀಂ.

ಇರಬಹುದು. ಇರಬಹುದು. ಲುಂಗಿ ಭಾಳ ಆರಾಮ್ ಡ್ರೆಸ್. ಭಾಳ ಕೆಲಸಗಳಿಗೆ. ಎತ್ತಿದರೂ ಆರಾಮ. ಕೆಳಗ ಬಿಟ್ಟರೂ ಆರಾಮ. ಲುಂಗಿ. ಬಿಚ್ಚಿ ಒಗೆದು ಬಿಟ್ಟರಂತೂ ಆರಾಮೇ ಆರಾಮ್!

ಬರೇ ಬಿಳೆ ಲುಂಗಿ ಉಟ್ಟುಗೊಂಡ ಬಂದಿದ್ದ ಒಬಾಮಾ ಸಾಹೇಬರಿಗೆ ಕಲ್ಲೂ ಮಾಮಾ ಅಲ್ಲೇ ಒಂದು ಕ್ವಿಕ್ ಸತ್ಕಾರ ಮಾಡಿ ಬಿಟ್ಟನಂತ. ಮೈಸೂರ್ ಮಹಾದೇವ ಟಾಯ್ಲೆಟ್ ಒಳಗ ಇಟ್ಟಿದ್ದ ಬಿಳಿ ಟವೆಲ್ ಒಳಗss ಮೈಸೂರ್ ಪೇಟಾ ಮಾಡಿ ಹಾಕಿ ಬಿಟ್ಟನಂತ. ಆ ಫೋಟೋ ಸಹಿತ ತೋರ್ಸಿದ. ಹಿಂದೊಮ್ಮೆ ನಮ್ಮ ಕರೀಮನ  ಕಾಲು ಮುರದಿದ್ದ ಕಲ್ಲೂ ಮಾಮಾ ಇದ್ದಾನ ನೋಡ್ರೀ ಈ ಫೋಟೋದಾಗ. ಕರೇ ಹೊನಗ್ಯಾ ಕಲ್ಲೂ ಮಾಮಾ!ಸಾಬರು ಅವರ ಉಳಿದ USA ಟ್ರಿಪ್ಪಿನ ಕಥಿ ಹೇಳಿಕೋತ್ತ ಕೂತರು. ಕೇಳಿಕೋತ್ತ ಕೂತೆ. ಮಸ್ತ ಮಜಾ ಬಂತು.

**  ಓ ಬಾಮ್ಮಾ, ಓ ಬಾಮ್ಮಾ, ಅಂತ ಹುಡುಗಿ ಕರದ್ರ ಗಂಡು ಬರಾಕ್ ಹತ್ತಿದ್ದ! - ಅನ್ನುವ ಜೋಕ್ ಹೊಡೆದವರು ನಮ್ಮ ಅಣ್ಣ. ಅದು ಒಂದು ಲೈನ್ ಹಿಡಕೊಂಡು ಉದ್ದ ಬ್ಲಾಗ್ ನಾವು ಬರದಿದ್ದಾದರೂ ಐಡಿಯಾ ಕೊಟ್ಟ ಅವರಿಗೆ ಒಂದು ಸಲಾಂ!

Friday, May 17, 2013

ಬ್ರಹ್ಮನ್ ಗೂ ಅಮ್ಮನ್ ಗೂ ಅಕ್ಕನ್ ಗೂ ಎಲ್ಲಿಯ ಲಿಂಕ್ ಗುರುವೇ?!

ಸಾಬ್ ನಿಮ್ಮದೂಕಿ ಜಾತಿ ಬ್ರಾಮಂಡರು ಅಲ್ಲಾ? ಹೌದು ಅಲ್ಲಾ? - ಅಂತ ಕೇಳಿದ ಕರೀಂ.

ಇವತ್ತು ನನಗ ಮುಂದ ಏನೇನು ಕಾದದೋ ಏನೋ?! ಶಿವನೇ ಶಂಭುಲಿಂಗ!

ಮೊದಲನೇದಾಗಿ ಅದು ಬ್ರಾಹ್ಮಣರು. ಸರಿ ಮಾಡಿ ತಿಳ್ಕೋ. ಈಗ ಹತ್ತು ಸಾರೆ ಹೇಳು. ನೀನು ಅದನ್ನ ಶುದ್ಧವಾಗಿ ಹೇಳೋ ತನಕಾ ಏನೂ ಹೇಳಂಗಿಲ್ಲ, ಅಂತ ಹೇಳಿ ಕೂತಬಿಟ್ಟೆ.

ಆಯ್ತು ಸಾಬ್ ಆಯ್ತು. ಅದು ಬ್ರಾಹ್ಮಣರು ಕ್ಯಾ? ನಾವು ತಿಳ್ಕೊಂಡಿದ್ದು  ಏನು ಅಂದ್ರೆ, ನೋಡಿ ನಮ್ಮದು ಮಂದಿಗೆ ಮಸ್ಕಿರಿ ಮಾಡೋ ಮಂದಿ ಮಂಡ್ರು ಮಂಡ್ರು ಅನ್ನೋದಿಲ್ಲ ಕ್ಯಾ? ಹಾಗೇ ನಿಮಗೂ ಮಸ್ಕಿರಿ ಮಾಡೋ ಮಂದಿ ಟಿಂಗಲ್ ಮಾಡೋಕೆ ಎಲ್ಲಿ  ಬ್ರಾಮಂಡರು ಅಂತಾರೋ ಏನೋ ಅಂತ ತಿಳಿದಿದ್ದೆ ಸಾಬ್. ಎಲ್ಲಿ ನಮಗೆ ನಿಮಗೆ ಮೊದಲು ಎಲ್ಲೋ ಕನೆಕ್ಷನ್ ಇದ್ದು ಈಗ ಇಲ್ಲಾನೋ ಏನೋ ಅಂತ ತಿಳಿದಿದ್ದೆ ಸಾಬ್. ಬ್ರಾಮಂಡರು, ಮಂಡರು ಅಂತ ಅನ್ನೋದು ಕೇಳಿದ್ರೆ ಹಾಗೆ ಅನ್ನಿಸೋದಿಲ್ಲ ಕ್ಯಾ? ಕ್ಯಾ? - ಅಂತ ಇಲ್ಲದ ಜನರಲ್ ನಾಲೆಜ್ ತೋರ್ಸಿದ.

ಹಾಪಾ!!! ಸ್ವಚ್ಚ ಹಾಪಾ!!!

ಇಲ್ಲಿಲ್ಲ. ಅದಕ್ಕ ಇದಕ್ಕ ಏನೂ ಕನೆಕ್ಷನ್ ಇಲ್ಲ. ಹರ್ಗೀಸ್ ಇಲ್ಲ. ನಾಸ್ತಿ, ಅಂತ ಹೇಳಿ ಅ ಟಾಪಿಕ್ ಅಲ್ಲೇ ಬಂದು ಮಾಡ್ಸಿದೆ. ಅದನ್ನ ಹಾಂಗ ಬಿಟ್ಟರ ಈ ಹಾಪಾ ಏನೇನೋ ಮಂಡ ಮಾಡಿಸಿ ಏನೇನೋ ಚೂಪ್ ಮಾಡಿಸಿ ರಾಡಿ ಎಬ್ಬಿಸೋ ಪೈಕಿ.

ನೀವು ಬ್ರಾಮಂಡರು ಜಾತಿ ಅಲ್ಲಾ? ಅದು ಹೇಳಲೇ ಇಲ್ಲ ನೀವು? - ಅಂತ ಹಿಡಕೊಂಡ ಪಿಶಾಚಿಗತೆ ಮತ್ತ ಅದss ಟಾಪಿಕ್ ಗೆ ಬಂದ.

ಏನಪಾ ನೀನು? ನಾಯಿ ಜಾತಿ ಕೇಳಿದಂಗ ನನ್ನ ಜಾತಿ ಕೇಳಲಿಕತ್ತಿಯಲ್ಲ? ಪಮೆರಿಯನ್ನೋ? ಅಲ್ಸೆಶಿಯನ್ನೋ? ಹಾಂಗ ಕೇಳಿದಂಗ. ಅದ್ಯಾಕ ಈಗ ಬೇಕಾಗಿತ್ತು? ನೀ ಏನ್ ಜನ ಗಣತಿ ದನ ಗಣತಿ ಮಾಡ್ಲಿಕ್ಕೆ ಬಂದಿಯೇನೋ ಸಾಬಾ?- ಅಂತ ಕೇಳಿದೆ. 

ಊಹೂ!!ಹೂಹೂ!! ಹೇಳಿss  ಸಾಬ್! ಅಂದ ಕರೀಂ.

ಹೌದು. ನಾ ಬ್ರಾಹ್ಮಣ. ಸ್ಮಾರ್ತ ಬ್ರಾಹ್ಮಣ. ಖರೇ ಬ್ರಾಹ್ಮಣ. ಸಾಮವೇದ. ಭಾರದ್ವಾಜ ಗೋತ್ರ. ನಕ್ಷತ್ರ, ರಾಶಿ, ಮತ್ತೊಂದು ಎಲ್ಲ ಹೇಳಿ ಬಿಡಲಿ ಏನು? ಕುಂಡಲಿ ಹಾಕವ ಇದ್ದಿ ಏನು? - ಅಂತ ಹೇಳಿದೆ. ಕೇಳಿದೆ.

ನನ್ನ ಮ್ಯಾಲಿಂದ ಕೆಳಗಿನ ತನಕ ನೋಡಿದ ಕರೀಂ.

ನೀವು ಖರೆ ಬ್ರಾಹ್ಮಣ ಕ್ಯಾ? ಮತ್ತೆ ಇಷ್ಟು ಬೆಳ್ಳಗೆ ಚಿಕಣಾ ಇದ್ದೀರಿ. ಖರ್ರಗೆ ಇದ್ದರೆ ಖರೆ ಬ್ರಾಹ್ಮಣ ಅಂದ್ರೆ ಓಕೆ. ಹಾಂ? - ಅಂದು ಫುಲ್ confuse ಆದ ಲುಕ್ ಕೊಟ್ಟ.

ಖರೆ ಅಂದ್ರ ಸಚ್ಚಿ ಮೇ ಅಂದಂಗ. ನಿಜವಾಗಿಯೂ ಬ್ರಾಹ್ಮಣ ಅಂತ. ಕರೆ ಬಿಳೆ ಬಣ್ಣ ಅಲ್ಲೋ ಮಾರಾಯ, ಅಂದು ತಲಿ ಚಚ್ಚಿಕೊಂಡೆ.

ಮತ್ತೆ ಅದೇನೋ ಗೋತ್ರಾ ಅಂದ್ರೀ. ವೋ ಕ್ಯಾ? ಧೋತ್ರಾ ಕೆ ನೀಚೆ ಪೆಹೆನ್ನೆವಾಲಾ ಲಂಗೊಟ್ ಚಡ್ಡಿ ಕ್ಯಾ? ಅದಕ್ಕೆ ನೀವು ಗೊತ್ರಾ ಅಂತೀರಿ ಕ್ಯಾ? ನೀವು ಈಗ ಧೋತ್ರಾ ಉಟ್ಟಿಲ್ಲ. ಆದರೂ ಲಂಗೋಟಿ ಇರ್ತದೆ. ಅದಕ್ಕೆ ಅದೇನೋ ಭಾರತ್ ಝೇಂಡಾ ಗೋತ್ರಾ ಅಂದ್ರೀ. ಮೇಡ್ ಇನ್ ಇಂಡಿಯಾ ಚಡ್ಡಿ ಕ್ಯಾ? ಅದಕ್ಕೇ ಭಾರತ ಗೋತ್ರಾ ಕ್ಯಾ? ಇರಲೀ ಬಿಡಿ. ನಿಮಗೆ ದುಬೈಯಿಂದ ವಿದೇಶಿ ಚಡ್ಡಿ ತಂದು ಕೊಡಲಿ ಕ್ಯಾ? ಝೇಂಡಾ ಊಂಚಾ ರಹೇ ತುಮಾರಾ!!- ಅಂತ ಗೋತ್ರಕ್ಕೂ ಧೋತ್ರಕ್ಕೂ ಇಲ್ಲದ ಲಿಂಕ್ ಹಚ್ಚಿದ್ದೂ ಅಲ್ಲದ ದೇಸಿ ವಿದೇಶಿ ಚಡ್ಡಿಗಳ ಬಗ್ಗೆ ಬ್ಯಾರೆ ಡಿಸ್ಕಸ್ ಮಾಡ್ಲಿಕ್ಕೆ ಶುರು ಮಾಡಿದ.

ಏ!!! ಮಹಾ ಯಬಡೇಶಿ. ಧೋತ್ರಕ್ಕ, ಗೋತ್ರಕ್ಕ, ಚಡ್ಡಿಗೆ, ಲಂಗೋಟಿಗೆ ಮತ್ತೊಂದಕ್ಕ ಏನೂ ಸಂಬಂಧ ಇಲ್ಲ. ನಿನ್ನ ತಲಿ ನೋಡು! ಅದು ತಲಿಯ? ಕೊಳೆತ ಗೊಬ್ಬರಗುಂಡಿ ಆಗ್ಯದ. ಏನೇನೋ ವಿಚಾರ ಮಾಡ್ತದ! ಹೇಶಿ! - ಅಂತ ಮೈಲ್ಡ್ ಆಗಿ ಬೈದೆ.

ನಮಗೆ ಏನು ಗೊತ್ತು ಸಾಬ್? ಗೋತ್ರಾ ಅಂದ್ರಿ. ಧೋತ್ರಾ ನಮಗೆ ಗೊತ್ತು. ಅದಕ್ಕೆ ಸಂಬಂಧ ಪಟ್ಟಿದ್ದೋ ಏನೋ ಅಂತ ಕೇಳಿಬಿಟ್ಟರೆ ಬೈಯ್ಯೋದು ಕ್ಯಾ? - ಅಂದ ಕರೀಂ.

ಸಾಬ್, ಈಗ ನೋಡಿ. ಗೋತ್ರ + ಮೂತ್ರ = ಗೋಮೂತ್ರ. ಕರೆಕ್ಟ್ ಸಂಧಿ ಕ್ಯಾ? ಇದು ಯಾವ ಸಂಧಿ ಇರಬಹುದು? - ಅಂತ ಕೇಳಿದ.

ಮಸ್ಕಿರಿ ಮಾಡೋ ಮೂಡಿನ್ಯಾಗ ಇದ್ದ ಮಗಾ.

ಮೊದಲು ಗೋತ್ರಕ್ಕ ಧೋತ್ರಕ್ಕ ಲಿಂಕ್ ಕೊಟ್ಟಿ. ಅದನ್ನ ತಪ್ಪಿಸಿದರ ಈಗ ಗೋತ್ರಕ್ಕ ಮೂತ್ರಕ್ಕ ಲಿಂಕ್ ಕೊಟ್ಟು ಇಲ್ಲದ ಸಂಧಿ ಗೊಂದಿ ಮಾಡಿ, ಗೋತ್ರ + ಮೂತ್ರ = ಗೋಮೂತ್ರ ಅಂತ ಸಂಧಿ ಬ್ಯಾರೆ ಬಿಡಿಸಿ ಯಾವ ಸಂಧಿ ಅಂತ ಕೇಳ್ತಿಯಲ್ಲಲೇ ಊರ ಹಾಪಾ! ಕಾಡ ಪಾಪಾ! ಯಾವ ಸಂಧಿ ಅಂದ್ರ ಹೇಳತೆನಿ ನೋಡು. ಅಲ್ಲೇ ಮಟನ್ ಶಾಪ್ ಬಾಜೂಕ ಆವಾ ಮಟನ್ ಮೆಹಮೂದ ಸಂಧಿಯೊಳಗ ಹೋಗಿ, ಲುಂಗಿ ಎತ್ತಿ, ತುದಿಗಾಲ ಮ್ಯಾಲೆ ಕೂತು, ಉಚ್ಚಿ ಹೋಯ್ದು, ಒಂದು ಜುರಕಿ ಬೀಡಿ ಎಳದು, ಲುಂಗಿಗೆ ಕೈ ವರಿಸಿಕೋತ್ತ ಬಂದು, ಅದss ಕೈಯಾಗ ನಿನಗ ಮಟನ್ ಕಟ್ಟಿ ಕೊಟ್ಟು, ಖುದಾ ಹಾಫಿಜ್ ಅಂತಾನ ನೋಡು, ಅದ ಸಂಧಿನss ಇದು. ಸಂಧಿ ಅಂತ ಸಂಧಿ!!! ಕೇಳಿದವರಿಗೆ ಸಂಧಿವಾತ ಹಿಡಕೋ ಬೇಕು. ಹ್ಯಾಂಗ ಮಾತಾಡ್ತಾನ ನೋಡು! ಅಂತ ಝಾಡಿಸಿದೆ.

ಸಂಧಿ ಅಲ್ಲಾ ಅಂದ್ರೆ ಬಿಡಿ ಸಾಬ್. ಮಟನ್ ಮೆಹಮೂದಗೆ ಯಾಕೆ ಬೈತೀರಿ? ಅವನು ಅಂಗಡಿ ಬದಿ ಸಂಧಿ ಒಳಗೆ ಏನು ಮಾಡಿಕೊಂಡರೆ ನಮಗೆ ಕ್ಯಾ? ಮಟನ್ ಫ್ರೆಶ್ ಇದ್ದು ಬಿರ್ಯಾನಿ ಮಸ್ತ ಆದ್ರೆ ಸಾಕು. ತಿಂತೀರಿ ಕ್ಯಾ? ಮಾಡಿಸಿ ತರಲಿ ಕ್ಯಾ? - ಅಂತ ಕಾಡಿಸಿದ.

ಹಾಳಾಗಿ ಹೋಗು ಅನ್ನೋ ಲುಕ್ ಕೊಟ್ಟೆ.

ಗೋಮೂತ್ರ ಅಂದ್ರೆ ಕ್ಯಾ? ವೋ ತೋ ಬತಾವೋಜಿ, ಅಂದ ಕರೀಂ.

ಗೋಮೂತ್ರ ಅಂದ್ರ ಆಕಳ ಉಚ್ಚಿ ಮಾರಾಯ. ನಮ್ಮ ಮಂದಿಯೊಳಗ, ನಮ್ಮ ಧರ್ಮದೊಳಗ ಅದಕ್ಕ ಬಹಳ ಮಾಯಿನಾ ಅದ. ಅದರ ಭಾರಿ ಭಾರಿ ಚೊಲೊ ಚೊಲೊ ಗುಣಗಳನ್ನ ಈಗ ವಿಜ್ಞಾನಿ ಮಂದಿ ಕೂಡ ಕಂಡ ಹಿಡಿದಾರ. ಒಟ್ಟಿನ್ಯಾಗ ಆಕಳಾ ಅಂದ್ರ ನಮಗ ಪೂಜ್ಯ ಪ್ರಾಣಿ, ಅಂತ ಶಾರ್ಟ್ ಆಗಿ ಹೇಳಿದೆ.

ಹೌದು!!!ಹೌದು!!! ಆಕಳಾ ಒಳ್ಳೇದು ಪ್ರಾಣಿ. ಹಾಲು ಕೊಡ್ತದೆ. ಸಗಣಿಗೂ ಕೊಡ್ತದೆ. ಎಲ್ಲಾದೂ ಕೊಡ್ತದೆ. ಆದ್ರೆ ಸೆಕ್ಸ್ ಮಾತ್ರ ಕೊಡೋದಿಲ್ಲ. ಬಿಲ್ಕುಲ್ ಸೆಕ್ಸ್ ಕೊಡೋದಿಲ್ಲ. ಆದರೂ ಅದಕ್ಕೆ ನಿಮ್ಮದು ಮಂದಿ ಯಾಕೆ 'ಕಾಮ'ಧೇನು ಅಂತಾರೆ? ಆಕಳಕ್ಕೆ ಕಾಮಕ್ಕೆ ಕ್ಯಾ ಲಿಂಕ್? - ಅಂತ ಮಸ್ತ ಪಾಯಿಂಟ ಹಾಕಿ ಬಿಟ್ಟ ಬೆರಕಿ.

ಯಪ್ಪಾ!!! ಕಾಮಧೇನು ಶಬ್ದ ಒಳಗಾ ಬರೋ ಕಾಮ ಬ್ಯಾರೆ. ಕಾಮಸೂತ್ರ ಒಳಗ ಬರೋ ಕಾಮ ಬ್ಯಾರೆ ಮಾರಾಯ. ಕೇಳಿದ್ದೆಲ್ಲಾ (ಸೆಕ್ಸ್ ಒಂದು ಬಿಟ್ಟು) ಕೊಡೊ ಗುಣವಿರುವ ಪ್ರಾಣಿಯಾದ ಆಕಳಿಗೆ ಕಾಮಧೇನು ಅಂತಾರೋ!!! ಆಕಳಕ್ಕೂ ಸೆಕ್ಸಿಗೂ ತಂದು ಇಟ್ಟಿಯಲ್ಲೋ!!! ಉದ್ಧಾರ ಉದ್ಧಾರ!!! - ಅಂತ ನಾನು ಉದ್ಗರಿಸಿದೆ.

ನಾ ಉದ್ಧಾರ ಅಂದಿದ್ದು ಮಂಗ್ಯಾಗ ಹುದ್ದಾರ್ ಅಂತ ಕೇಳಿಬಿಟ್ಟದ. ಒಗದಾ ಇನ್ನೊಂದು ಬಾಂಬ್!

ಹುದ್ದಾರ ಅವರ ಕಡೆ ಆಕಳು ಐತೆ ಕ್ಯಾ? ನೋಡಿಲ್ಲಾ ಬಿಡಿ. ಜರ್ಸಿ ಆಕಳು ಕ್ಯಾ? - ಅಂತ ಕೇಳಿದ.

ಮಾರಾಯ ಪಾಪ ಅವರ ಸುದ್ದಿಗೆ ಹೋಗಬ್ಯಾಡ. ಹುದ್ದಾರ ಅವರು ಆರಾಮ ಇದ್ದಾರ. ಒಳ್ಳೆ ಮಂದಿ, ಅಂತ ಹೇಳಿ ಅದೊಂದ ಬಂದ್ ಮಾಡ್ಸಿದೆ.

ಈಗಾ ಹೇಳಿ ಸಾಬ್, ಬ್ರಾಹ್ಮಣರಿಗೆ ಬ್ರಾಹ್ಮಣರು ಅಂತ ಯಾರು ಹೆಸರು ಇಟ್ಟರು ಸಾಬ್? - ಅಂತ ಹೇಳಿ ನದಿ ಮೂಲಕ್ಕೆ ಕೈಯಿಟ್ಟ.

ಅದ್ಯಾಕ ತಲಿಯಾಗ ಬಂತು? - ಅಂತ more context ಕೇಳಿದೆ. ಯಾಕಂದ್ರ ಇವಾ ಮೊದಲಾ ಸರ್ಟಿಫೈಡ್ ಹಾಪಾ.

ಅದು ಹೊಲಸ್ ಬ್ರಾ ಯಾಕೆ ಅದರಲ್ಲಿ ಸೇರಿಸಿದರು? 'ಬ್ರಾ'ಹ್ಮಣ  ಯಾಕೆ?  ಅಷ್ಟು ವಸ್ತ್ರಾನೇ ಸೇರಿಸಿ ಜಾತಿ ಮಾಡಬೇಕು ಅಂತಾ ಇದ್ದರೆ, 'ಪೈಜಾಮ'ಣ, 'ಅಂಗಿ'ಯಣ, 'ಕಮೀಜ'ಣ, 'ಚೂಡಿದಾರ'ಣ, 'ಚೊಣ್ಣ'ಣ, 'ಹಾಪ್ಯಾಂಟ'ಣ ಅಂತ ಬ್ಯಾರೆ ಯಾವದಾದ್ರು ವಸ್ತ್ರಾ ಸೇರಿಸಿ ಜಾತಿ ಹೆಸರು ಮಾಡೋಕೆ ಬರ್ತಾ ಇರಲಿಲ್ಲ ಕ್ಯಾ? ಬೇಕಾದ್ರೆ 'ಧೋತ್ರ'ಣ, ಮತ್ತೂ ಬೇಕಾದ್ರೆ 'ಸಫಾರಿ ಸೂಟ'ಣ ಅಂತ ಬೇಕಾದರೂ ಜಾತಿ ಮಾಡಬಹುದಿತ್ತು. ವಸ್ತ್ರಾದು ಮುಂದೆ ಣ ಹಚ್ಚಬೇಕು ತಾನೇ? ಬ್ರಾ ಮುಂದೇನೇ ಯಾಕೆ ಹಚ್ಚಿದ್ರು ಸಾಬ್? ಬಹುತ್ ನಾ ಇನ್ಸಾಫಿ ಹೈ!!! ಅಂತ ಗಬ್ಬರ್ ಸಿಂಗನ ಹಾಂಗ ಅಬ್ಬರಿಸಿದ. ಬ್ರಾ ದ ಫುಲ್ ಪವರ್ ಆಫ್ ಅಟಾರ್ನಿ ಕೇವಲ ಬ್ರಾಹ್ಮಣರಿಗೆ ಸಿಕ್ಕದೋ ಏನೋ ಅನ್ನು ಹಾಂಗ.

ಶಿವನೇ!!!! ಶಂಭುಲಿಂಗ!!! ಅಂತ ಜೋರಾಗಿ ಹೇಳೋಣ ಅಂತ ಮಾಡಿದೆ. ಮತ್ತ ಈಗ ಮಾತ್ರ ಬ್ರಾ ಲಿಂಕ್ ಬ್ರಾಹ್ಮಣರಿಗೆ ಕೊಟ್ಟು ಬಿಟ್ಟಾ. ಶಂಭುಲಿಂಗ ಕೇಳಿ ಲಿಂಗಕ್ಕೂ ಲಂಗಕ್ಕೂ ಲಿಂಕ್ ಕೊಟ್ಟಾನು ಅಂತ ಹೆದರಿ, ಕೇವಲ ಶಿವನೇ ಅಂದು ಶಂಭುಲಿಂಗ ಬಿಟ್ಟೆ. ನನ್ನ ಶಂಭುಲಿಂಗ ಕೇಳಿಕೊಂಡು ಶಂಭುಲಿಂಗ ಅಂತ ಐತೆ. ಬಂಬುಲಿಂಗ ಅಂತ ಯಾಕಿಲ್ಲ? ಹೇಳಿ!ಹೇಳಿ! ಅಂತ ತಲಿ ತಿನ್ನೋ ಪೈಕಿ ಈ ಹಾಪಾ ಕರೀಂ!!!

ಯಪ್ಪಾ!! ಬ್ರಾಕ್ಕ ಮತ್ತ ನಮ್ಮ ಜಾತಿಗೆ ಏನೂ ಸಂಬಂದ ಇಲ್ಲೋ ಮಾರಾಯ. ಏನೇನೋ ತಪ್ಪ ತಪ್ಪ ಊಹಾ ಮಾಡಿಕೊಂಡು ಏನೇನರ ಹುಚ್ಚುಚ್ಚ ಬೊಗಳಬ್ಯಾಡೋ ಪುಣ್ಯಾತ್ಮಾ! ನನ್ನ ಮುಂದ ಅಂದಿ ಓಕೆ. ಬ್ಯಾರೆ ಯಾರರ ಕಟ್ಟರ್ ಬ್ರಾಹ್ಮಣರ ಮುಂದ ಹೀಂಗ ಅಂದ್ರ ಮರ್ಡರ್ ಆಗಿ ಹೋಗ್ತಿ. ಹುಷಾರ್! - ಅಂತ ವಾರ್ನಿಂಗ್ ಕೊಟ್ಟೆ.

ಆದರೂ ಬ್ರಾ ಯಾಕೆ ಬಂತು? ಅಂತ ಮತ್ತ ಗುಣು ಗುಣು ಅಂದ ಕರೀಂ.

ಮನಿಸ್ಸಿನೊಳಗ ಬ್ರಾ ಹುಳಾ ಹೊಕ್ಕಿ  ಗುಂಗಿ ಹುಳದ ಗತೆ ಗೊಂಯ್ಯ ಗೊಂಯ್ಯ ಅನ್ನಲಿಕತ್ತುಬಿಟ್ಟದ. ಆ ಗುಂಗಿ ಹುಳಾ ತಲಿಂದ ತೆಗೆದು ಹಾಕಿದ ಹೊರತೂ ಈ ಪುಣ್ಯಾತ್ಮಾ ನನ್ನ ಬಿಡೊ ಪೈಕಿ ಇಲ್ಲ ಅಂತ ಅನ್ನಿಸ್ತು.

ಸಾಬ್ರಾ!!!! ಬ್ರಹ್ಮನ್ ಅಂದ್ರ ವಿಶ್ವ ಚೈತನ್ಯ ಅಂದ್ರ consciousness ಅನ್ನೋದರ ಜ್ಞಾನ ಅಂದ್ರ ಬ್ರಹ್ಮಜ್ಞಾನ ಯಾರು ಪಡಿತಾರೋ ಅವರೇ ಬ್ರಾಹ್ಮಣ ಅಂತ ನಮ್ಮ ವೇದಗಳು ಉಪನಿಷತ್ತುಗಳು ಹೇಳ್ಯಾವ ನೋಡಪಾ. ಮೊದಲು ಹಾಂಗss ಇತ್ತು. ಆಮ್ಯಾಲೆ ಬರ್ತಾ ಬರ್ತಾ ಅದು ಒಂದು ಜಾತಿ ಆಗಿ ಬಿಡ್ತು. ಈಗ ಬ್ರಾಹ್ಮಣರೊಳಗೂ ಬ್ರಹ್ಮಜ್ಞಾನ ಮತ್ತೊಂದು ಇರೋ ಮಂದಿ ಭಾಳ ಕಮ್ಮಿ ಏನಪಾ, ಅಂತ ಹೇಳಿ ವಿವರಿಸಿದೆ.

ಬ್ರಹ್ಮನ್ (consciousness)

ಸಾಬ್!!!ಈ ಬ್ರಹ್ಮನ್ ಅಂದ್ರೆ ಕೆಟ್ಟ ಬೈಗಳಾ ಕ್ಯಾ? ಅದರದ್ದು ಜ್ಞಾನ ಇದ್ದವರಿಗೆ ಬ್ರಾಹ್ಮಣ ಅಂತಾರೆ ಕ್ಯಾ? - ಅಂತ ಹೊಸಾ ಆಂಗಲ್ ಒಳಗಾ ಹೊಂಟ ಕರೀಂ.

ಬ್ರಹ್ಮನ್ ಅಂದ್ರ ಯಾಕ ಕೆಟ್ಟ ಬೈಗುಳ ಇರಬಹದು ಅಂತ ನಿನ್ನ ಮಂಗ್ಯಾನ ತಲಿಯೊಳಗ ಬಂತು? ಹಾಂ? ಹಾಂ? - ಅಂತ ಕೇಳಿದೆ.

ನೋಡಿ ಸಾಬ್.... ನಾವು ತೇರಿ ಮಾ ಕಿ ಅಂದ್ರೆ ನಿಮ್ಮೌನ್ ಅಂತ ಅಂದ್ರೆ ಬೆಂಗಳೂರು ಮಂದಿ ಅಮ್ಮನ್, ನಿನ್ನ ಅಮ್ಮನ್ ಅಂತ ಬೈತಾರೆ. ನಾವು ತೇರಿ ಬಾಪ್ ಕಿ ಅಂದ್ರೆ  ನಿನ್ನಾಪನ ಅಂದ್ರೆ ಅವರು ಅಯ್ಯನ್, ನಿನ್ನ ಅಯ್ಯನ್ ಅಂತಾ ಬೈತಾರೆ. ನಾವು ತೆರಿ ಬ್ಯಾಣ್ (ಬೆಹೆನ್) ಕಿ ಅಂದ್ರೆ ಅವರು ಅಕ್ಕನ್, ನಿನ್ನಕ್ಕನ್ ಅಂತಾ ಬೈತಾರೆ. ಅಮ್ಮನ್, ಅಯ್ಯನ್, ಅಕ್ಕನ್ ಇದ್ದಾಗೆ ಇದೂ ಬ್ರಹ್ಮನ್ ಕೂಡ ಕ್ಯಾ? ಬ್ರಹ್ಮ ಅಂತ ನಿಮ್ಮದು ದೇವರು ಇಲ್ಲ ಕ್ಯಾ? ತೇರಿ ಬ್ರಹ್ಮಾ ಕಿ ಅಂದ್ರೆ ಬ್ರಹ್ಮನ್ ಅಂತ ಕ್ಯಾ? - ಅಂದು ಈ ಸಲ ಫುಲ್ ಆಟಂ ಬಾಂಬ್ ಒಗದ.

ನನ್ನ ತಲಿ ತಿರುಗಿ ಚಕ್ರ ಬಂದು ಬಿದ್ದು ಬಿಟ್ಟೆ. ಸ್ವಲ್ಪ ಹೊತ್ತಾದ ನಂತರ ಎಚ್ಚರಾತು. 

ನಾ ಬಿದ್ದಿದ್ದು ನೋಡಿ, ಪಾಪ ನೀರು ತಂದು ಕೊಟ್ಟ ಕರೀಂ. ಕುಡೀಲಿಕ್ಕೆ.

ನೀರು ನೋಡಿ ಮತ್ತ ಎಚ್ಚರ ತಪ್ಪಿ ಬಿದ್ದೆ. ಸಂಡಾಸ್ ಚಂಬು ಒಳಗ ಕುಡಿಲಿಕ್ಕೆ ನೀರು ತಂದು ಬಿಟ್ಟಿದ್ದ!

ಮತ್ತ ಎಚ್ಚರ ತಪ್ಪಿ ಬಿದ್ದಿದ್ದು ನೋಡಿ ಅದss ನೀರ ಮಸಡಿಗೆ ಗೊಜ್ಜಿ ಎಬ್ಬಿಸಿದೆ ಅಂತ ಹೇಳಿದ. ಪಾಯಖಾನಿ ನೀರಾಗ ಅಶುದ್ಧ ಮಾಡಿ ಹಾಕಿಬಿಟ್ಟ. ಆತು.... ಸಂಜೀಕ ಗೋಮೂತ್ರ ಕುಡದು ಶುದ್ಧ ಮಾಡಿಕೊಂಡರ ಆತು ಅಂತ ಬಿಟ್ಟೆ.

ಯಪ್ಪಾ!!!!ಕೊಲಬ್ಯಾಡೋ!!! ಬೆಂಗಳೂರು ಬೈಗಳ ಅಕ್ಕನ್, ಅಮ್ಮನ್, ಅಯ್ಯನ್ ಗೂ ಮತ್ತ ಬ್ರಹ್ಮನ್ ಗೂ ಯಾವದ ಸಂಬಂಧ ಇಲ್ಲ ಮಾರಾಯ. ನಿನ್ನ ಧಾರವಾಡ ಬೈಗುಳ ತೇರಿ ಅಮ್ಮಾ ಕಿ ಅಂದ್ರ ಬೆಂಗಳೂರು ಬೈಗಳ  ಅಮ್ಮನ್ ಆಗಬಹುದು. ಆದ್ರ ತೇರಿ ಬ್ರಹ್ಮಾಕಿ ಅಂತ ಬೈದರ ಅದು ಬ್ರಹ್ಮನ್ ಆಗೋದಿಲ್ಲ. ಇವತ್ತು ಬಿಡೋ ಮಾರಾಯ. ಇನ್ನೂ ಏನೇನು ಅನಾಹುತ ಮಾಡವ ಇದ್ದಿಯೋ ಪಾಪ್ ಮುಂಡೆ ಗಂಡಾ? - ಅಂತ ಚೀರಿಕೊಂಡೆ.

ಹಾಂಗೆ ಕ್ಯಾ? ಆದರೂ ಬಹುತ್ ನಾ ಇನ್ಸಾಫಿ ಹೈ. ಬ್ರಹ್ಮನ್ ಕೇಳಿದಾಕ್ಷಣ ಅಮ್ಮನ್, ಅಕ್ಕನ್, ಅಯ್ಯನ್ ಅಂತಾನೇ ನೆನಪು ಬಂದು ಬೈಯ್ಯೋ ಹಾಗೆ ಆಗ್ತದೆ. ಜಾತಿ ಗೆ ಮೊದಲು ಬ್ರಾ ಅಂತಾ ಲಿಂಕ್ ಕೊಟ್ಟರು. ಈಗ ಬ್ರಹ್ಮನ್ ಅಂದ್ರು. ಒಟ್ಟಿನಲ್ಲಿ ನಿಮ್ಮ ಧರ್ಮಾದು ಜಾತೀದು ಹೆಸರು ಅದು ಇದು ಇಟ್ಟ ಮನುಷ್ಯಾನಿಗೆ ಕಾಮನ್ ಸೆನ್ಸ್ ಇರಲಿಲ್ಲ ಬಿಡಿ ಸಾಬ್! ಇಂತಾ ಗಲತ್ ಗಲತ್ ಅರ್ಥ ಬರೋ ಹಾಗೆ ಹೆಸರು ಇಡೋದು ಕ್ಯಾ? ಹಾಂ? ಹಾಂ? - ಅಂತ ಮತ್ತ ಅದನ್ನ ಹೇಳಿದ.

ಬ್ರಾಹ್ಮಣ, ಬ್ರಹ್ಮಚಾರಿ, ಬ್ರಹ್ಮಾನಂದ, ಬ್ರಹ್ಮಾಂಡ ಎಲ್ಲದರಲ್ಲಿಯೂ ಬ್ರಾ ಬರ್ತದೆ. ಕೂತು ಡೀಟೇಲ್ ಆಗಿ ಡಿಸ್ಕಸ್ ಮಾಡೋಣ ಕ್ಯಾ? ಹೇಗೂ ಫುಲ್ ವೀಕ್ ಎಂಡ್ ಇದೆ.  ಕ್ಯಾ ಬೋಲ್ತಾ ? - ಅಂತ ಭಾಳ ಕೌತುಕ್ ಮಾಡಿದ.

ಬ್ಯಾಡಪ್ಪೋ!!!ಬ್ಯಾಡ!!!! ನೀನು ಅವನ್ನೆಲ್ಲ ಡಿಸ್ಕಸ್ ಮಾಡಿ, ತರತರಹವಾಗಿ ಸಮಾಸ ಸಂಧಿ ಮತ್ತೊಂದು ಬಿಡಿಸಿ, ಎಲ್ಲಾ ಫುಲ್ ಹದಗೆಡಿಸಿ, ಫುಲ್ ಮಲಯಾಳೀ A ಪಿಚ್ಚರ್ ಮಾಡಿ ಹಾಕವಾ!!! ಬ್ಯಾಡೋ.... ಬ್ಯಾಡೋ!!! ನಿನ್ನಿಂದ ಬಹಳ ಬ್ರಹ್ಮಜ್ಞಾನ ಪಡಕೊಂಡು ಧನ್ಯನಾದೆ.

ಅಯಮೇವ ಆತ್ಮ ಬ್ರಹ್ಮನ್
ಪ್ರಜ್ಞಾನಮ್ ಬ್ರಹ್ಮನ್
ಅಹಂ ಬ್ರಹ್ಮಾಸ್ಮಿ
ತತ್ವಮಸೀ

ಅಂತ ನಾಲ್ಕು ಮಹಾವಾಕ್ಯ ಹೇಳಿದೆ. ಮತ್ತ ಮತ್ತ ಹೇಳಿಕೊಂಡೆ. ಇವನ ಬ್ರಾ ಪುರಾಣ ಕೇಳಿ  ರಾಡಿ ಎದ್ದ ಮನನ್ಸು ಸ್ವಲ್ಪ ಸ್ವಚ್ಚ ಆತು.

ಕ್ಯಾ ಸಾಬ್? ಮೂರು ಸಲ ಬ್ರಹ್ಮನ್ ಬ್ರಹ್ಮನ್ ಅಂತಾ ಬೈದ್ಬಿಟ್ಟಿ  ನಾಲ್ಕನೇ ಸಲ ಎಲ್ಲಾ ತತ್ವಾಗೇ ಮಸಿ ಬಳಿದು ಬಿಡೋದು ಕ್ಯಾ? ಅಂತ ಅಂದು ಬಿಡಬೇಕ!!! ಹಾಪಾ!!!!

ಸಾಬ್ರಾ!!! ನಡಿರೀ ಇನ್ನು....ನಿಮ್ಮ ವಿವರಣೆ ಕೇಳಿಕೋತ್ತ ಕೂತರ ನಾ ಕಲಿತ ಅಲ್ಪ ಸ್ವಲ್ಪ ವೇದಾಂತ ಸಹ ಮರೆತು ಹೋಗ್ತದ. ಖುದಾ ಹಾಫಿಜ್, ಅಂತ ಸಾಗ ಹಾಕಿದೆ.

ಇಸ್ಕಿ ಬ್ರಹ್ಮಾ ಕಿ ಬ್ರಹ್ಮನ್ ಅನಕೋತ್ತ ಎದ್ದು ಹೋತು ಹಾಪ ಸಾಬಾ!!!

ಬ್ರಹ್ಮನ್ - http://en.wikipedia.org/wiki/Brahman

ಮಹಾವಾಕ್ಯಗಳು - http://en.wikipedia.org/wiki/Mah%C4%81v%C4%81kyas

Sunday, May 12, 2013

ಬಸುರಾದ ಮಹಾರಾಣಿ. ಕುಬಸಾ ಮಾಡಲು ಹೊಂಟ ಹಾವರಾಣಿ.

ಸಾಬ್, ನಿಮಗೆ ಮುಹೂರ್ತಾಗೆ ಇಡೋಕೆ ಬರ್ತೈತೆ ಕ್ಯಾ? - ಅಂತ ಕೇಳಿದ ಕರೀಂ.

ನಮಗ ಮುಹೂರ್ತ ನೋಡಲಿಕ್ಕೆ ಬರ್ತದ. ಇಡಲಿಕ್ಕೆ ಬರೋದಿಲ್ಲ. ಮುಹೂರ್ತ ಇಡಬೇಕು ಅಂದ್ರ ನೀ ಯಾರರ ಗೂಂಡಾ ಮಂದಿ ಭೆಟ್ಟಿ ಆಗು. ಅವರss ಸ್ಕೆಚ್ ಹಾಕೋದು, ಸುಪಾರಿ ತೊಗೊಳ್ಳೋದು, ತೊಗೊಂಡ ಸುಪಾರಿಗೆ ಕರೆಕ್ಟ್ ಆಗಿ ಗೇಮ್ ಬಾರ್ಸೋದು, ಗೇಮಿಗೆ ತಕ್ಕಂತೆ ಮುಹೂರ್ತ ಅವರು ಇಡ್ತಾರ, ಅಂತ ಹೇಳಿದೆ ನಾನು.

ಹಾಂ!!!ಹಾಂ!!!ಮಾಫ್ ಕರೋಜಿ. ಅದೇ ಅದೇ. ಮುಹೂರ್ತಾ ನೋಡಿ ಸ್ವಲ್ಪ, ಅಂದ ಕರೀಂ.

ತಡಿ ಹಾಂಗಿದ್ರ. ಒಳಗ ಹೋಗಿ ಪಂಚಾಂಗ ತಂದು ಬಿಡ್ತೇನಿ. ಕೂತು ಮುಹೂರ್ತ ನೋಡಿ ಬಿಡೋಣ, ಅಂತ ಹೇಳಿ ಒಳಗ ಪಂಚಾಂಗ ತರಲಿಕ್ಕೆ ಹೊಂಟೆ.

ಮೊದಲss ಗೊತ್ತಿತ್ತು ನನಗ. ಈ ಜೋಕ್ ಈ ಹುಸ್ಸೂಳೆಮಗ ಮಾಡೇ ಮಾಡ್ತಾನ ಅಂತ.

ಪಂಚಾಂಗ ತರೋಕೆ ಒಳಗೆ ಯಾಕೆ ಹೊಂಟ್ರೀ ಸಾಬ್? ಪಂಚೆಯಲ್ಲಿ ಇರುವ ಅಂಗ ಪಂಚಾಂಗ ಅಲ್ಲ ಕ್ಯಾ? ಹೀ..... ಹೀ.... ಖೀ....ಖಿ ಅಂತ ಬತ್ತೀಸೂ ತೋರ್ಸಿ ನಕ್ಕ ಕರೀಂ.

ಒಂದು ತರಹದ ಅಸಹ್ಯ ಆಗಿ ಮ್ಯಾಲೆ ಎತ್ತಿ ಕಟ್ಟಿದ್ದ ಪಂಚಾ ಸ್ವಲ್ಪ ಕೆಳಗ ಬಿಟ್ಟು, ಸೊಂಟದ ಗಂಟ ಸ್ವಲ್ಪ ಬಿಗಿ ಮಾಡಿಕೊಂಡೆ. ಇವಾ ಹೀಂಗ 'ಪಂಚೆಯಲ್ಲಿ ಇರುವ ಅಂಗ ಪಂಚಾಂಗ' ಅಂದಾಗೆಲ್ಲಾ ನನಗ ನಂಗಾಪನ್ ಮೆಹಸೂಜ್ ಆಗಿ ಬಿಡ್ತದ. ನಂಗಾಪನ್, ಮೆಹಸೂಜ್ ಎಲ್ಲ ನೆನಪ ಆಗೋದು  ಉರ್ದು ನಗ್ನತೆ ಫೀಲ್ ಆದಾಗ ಮಾತ್ರ. 

ಕರೀಮನ ನಗೋ ಅಬ್ಬರಕ್ಕ ಬಾಯಾಗ್ ಹಾಕ್ಕೊಂಡ ಮಾಣಿಕಚಂದ್ ಗುಟಕಾ ರಾಡಿ ಸ್ವಲ್ಪ ಸಿಡದು ನನ್ನ ಬೆಳ್ಳನೆ ಟೇಬಲ್ ಕ್ಲಾತ್ ಮ್ಯಾಲೆ ಒಂದೆರಡು ಕೆಂಪ ಚಿತ್ತಾರ ಮೂಡಿತು.

ಹೇಶಿ ಮಂಗ್ಯಾನ್ ಕೆ ಸಾಬಾ! ಆ ದರಿದ್ರ ಮಾಣಿಕಚಂದ್ ಬೈತುಂಬಾ ಹಾಕಿಕೊಂಡು ನನ್ನ ಹೊಟ್ಟಿ ಉರಸೂದಂತೂ ನೀ ಬಿಡಂಗಿಲ್ಲ. ಅದರ ಮ್ಯಾಲೆ ಎಲ್ಲೇ ಬೇಕಾದಲ್ಲೇ ಅದನ್ನ ಸಿಡಿಸಿ ರಾಡಿ ಎಬ್ಬಸ್ತಿ. ಈಗ ನೋಡು ನನ್ನ ಬೆಳ್ಳನೆ ಟೇಬಲ್ ಕ್ಲಾತ್ ಮ್ಯಾಲೆ ರಾಡಿ ಎತ್ತು. ಯಾರು ಅದನ್ನ ಒಗೆದು ಕಲಿ ಹೋಗೋ ಹಾಂಗ ಮಾಡಿ ಕೊಡವರು? ಹಾಂ?ಹಾಂ? - ಅಂತ ಕೇಳಿದೆ.

ಯಾಕೆ ಸಾಬ್? ಅರಬೀ ಒಗಿಯೋಕೆ ನಿಮ್ಮದೂ ಘರ ಮೇ ಬೂಬು ಬರೋದಿಲ್ಲ ಕ್ಯಾ ಸಾಬ್? - ಅಂತ ಕೇಳಿದ ಕರೀಂ.

ಇಲ್ಲೋ.... ನಾ ಒಬ್ಬನ ಅಂತ ಹೇಳಿ ಬೂಬುನ ಮತ್ತೊಬ್ಬಾಕಿನ ಇಟಗೊಂಡಿಲ್ಲ. ನಾವು ಗಾಂಧೀಜಿ ಹಾಂಗ. ನಮ್ಮ ಕೆಲಸ ನಾವ ಮಾಡಿಕೊಳ್ಳತೀವಿ. ನಮ್ಮ ಸಂಡಾಸ್ ನಾವ ತೊಳೆಯೋದ್ರಿಂದ ಹಿಡದು ನಮ್ಮ ಅರವೀ ನಾವ ಇಸ್ತ್ರಿ ಮಾಡಿಕೊಳ್ಳೋ ತನಕಾ. ಆದ್ರ ನಿನ್ನಂತ ಬೇರೆ ಮಂದಿ ಎಬ್ಬಿಸಿದ ರಾಡಿ ಸ್ವಚ್ಚ ಮಾಡೋ ಕೆಲಸ ಮಾಡೋದು ಅಂದ್ರ ಬ್ಯಾಸರ ನೋಡಪಾ - ಅಂತ ಅಂದೆ.

ಟೇಬಲ್ ಕ್ಲಾತ್ ಸಿಡದಿದ್ದ ಮಾಣಿಕಚಂದ್ ರಸಾ ಸಾವಕಾಶ ಹರಡಿ ಹರಡಿ ನಾಕಾಣೆ ಸೈಜಿಗೆ ಬಂತು. ಅದನ್ನ ನೋಡಿ ನನ್ನ ಮಸಡಿ ಅಳು ಮಸಡಿ ಆತು.

ಚಿಂತಾ ನಕ್ಕೋ ಕರೋಜಿ ಸಾಬ್! ಆ ಟೇಬಲ್ ಕ್ಲಾತ್ ನಮಗೆ ಕೊಡಿ.  ಫುಲ್ ಲಾಂಡ್ರಿ ಒಳಗೆ ಏನೇನೋ ಹಾಕ್ಸಿ ಬಿಟ್ಟಿ, ಕಲಿ ಎಲ್ಲಾ ತೆಗಿಸ್ಬಿಟ್ಟಿ ನಿಮಗೆ ತಂದು ಕೊಡ್ತೇವೆ ನಾವು. ಈಗಾ ನೀವು ಸ್ವಲ್ಪಾ ಮುಹೂರ್ತಾ ನೋಡೋಜೀ. ಜಲ್ದಿ ಹೈ - ಅಂದ ಕರೀಂ ಬಂದ ವಿಷಯ ಜ್ಞಾಪಿಸಿಕೊಟ್ಟ.

ಹ್ಞೂ....ಹ್ಞೂ..... ಯಾವದಕ್ಕ ಮುಹೂರ್ತ ನೋಡಬೇಕು? ಸೋಡಚೀಟಿ ಕೊಡಲಿಕ್ಕೋ ಅಥವಾ ಇನ್ನೊಂದು ಲಗ್ನಕ್ಕೋ?  ನೀ ಈ ಎರಡ ಕೆಲಸಾ ಬಿಟ್ಟರ ಮತ್ತೇನೂ ಮಾಡೋದಿಲ್ಲ. ಸೋಡಚೀಟಿ ಕೊಡಲಿಕ್ಕೆ ಮುಹೂರ್ತ ಬ್ಯಾಡ. ಒಂದು ಲಿಂಬು ಸೋಡಾ ಕುಡಿದು, ಡರ್ರ ಡರ್ರ ಅಂತ ಒಂದೆರಡು ತೇಗು ಬಿಟ್ಟು, ತಲಾಕ್ ತಲಾಕ್ ತಲಾಕ್ ಅಂತ ಮೂರ ಸಲ ಅಂದು ಬಿಟ್ಟರ ನಿಮ್ಮ ಮಂದಿ ಒಳಗ ಸೋಡಚೀಟಿ ಕೊಟ್ಟಂಗ ಅಂತ ಕೇಳೇನಿ. ಇನ್ನು ಲಗ್ನಕ್ಕ ಈಗ ಯಾವ ಮುಹೂರ್ತ ಇಲ್ಲ. ಆಷಾಡ ಮಾಸ. ಒಂದು ತಿಂಗಳಾದ ಮ್ಯಾಲೆ ಬಾ. ಈಗ ಮುಹೂರ್ತ ಇಲ್ಲ, ಅಂತ ಹೇಳಿ ಸಾಗ ಹಾಕಲು ನೋಡಿದೆ.

ಅಯ್ಯೋ!!! ಲಗ್ನಕ್ಕೆ ತಲಾಕಿಗೆ ಮುಹೂರ್ತ ಬ್ಯಾಡಾ ಸಾಬ್. ಕುಬಸಕ್ಕೆ ಮುಹೂರ್ತ ನೋಡಿ ಸಾಬ್! - ಅಂದ ಕರೀಂ.

ಕುಬಸಕ್ಕೆ ಮುಹೂರ್ತ? ಹಾಂ? ಹಾಂ?  ಮನ್ನಿ ಮನ್ನಿ ಮಾತ್ರ ಇವನ ಮಗಾ  ಜುಲ್ಫಿಕರ್ ಹುಟ್ಯಾನ. ಇಷ್ಟ ಲಗೂನ ಇನ್ನೊಂದು ಪ್ರೊಡಕ್ಷನ್ ಶುರು ಮಾಡೇ ಬಿಟ್ಟನಾ ಕರೀಂ? ಹೇಳಿ ಕೇಳಿ ಪಠಾಣ. ಆ ನಮೂನಿ ಬೀಜಾ ಎಲ್ಲಿಂದ ಪಡುಕೊಂಡು ಬಂದಿರ್ತಾರೋ? ಉತ್ತಿ ಬಿಟ್ಟರ ಫಲಾ ಬಂದss ಬಿಡ್ತದ, ಅಂತ ಸಾಬರ ಬೀಜದ ಬಗ್ಗೆ ನಾ ನನ್ನ ಭೇಜಾ ಕೆಡಿಸ್ಕೊಂಡೆ.

ಕಂಗ್ರಾಟ್ಸ್ ರೀ ಸಾಬ್ರಾ!!!! ಜುಲ್ಫಿಕರ್ ಗ  ತಮ್ಮನೋ ತಂಗಿನೋ ಬರೋ ಹಾಂಗ ಕಾಣ್ತದ. ಕೇಳಿದ್ರೆನು ಅವನ ಕಡೆ? ಬೇಟಾ ನಿನಗ ಏನು ಬೇಕಪಾ? ತಮ್ಮ ಬೇಕೋ? ತಂಗಿ ಬೇಕೋ? ಕೇಳಿದ್ರೆನ್ರೀ ಸಾಬ್ರಾ? - ಅಂತ ಕೇಳಿದೆ.

ಜುಲ್ಫಿಕರ್ ಕಡೆ ಕೇಳಿದ್ರ, ತಮ್ಮನೂ ಬ್ಯಾಡ, ತಂಗಿನೂ ಬ್ಯಾಡ, ಒಂದು ನಾಯಿಮರಿ  ತಂದು ಕೊಡ್ರೀ ಅಂದಾ. ಚುಪ್ ಬೈಟೋಜೀ. ಚುಪ್!! ಚುಪ್!! ಕುಬಸಕ್ಕೆ ಮುಹೂರ್ತ ಕೇಳಿದ್ರ ಅದು ನಮ್ಮ ಬೇಗಂ ಕುಬಸಕ್ಕೇ ಅಂತ ಹ್ಯಾಂಗ ತಿಳ್ಕೊಂಡರೀ? ಬ್ಯಾರೆ ಯಾರೂ ಹೆಂಗ್ಸೂರು  ಬಸ್ರು ಆಗೋದಿಲ್ಲ ಕ್ಯಾ? ಹಾಂ? ಹಾಂ? ನಮ್ಮ ಬೇಗಂ ಇಷ್ಟು ಬೇಗ ಇನ್ನೊಂದು ಬಚ್ಚಾ ಬ್ಯಾಡ ಅಂತ ಹೇಳಿಬಿಟ್ಟಿ, ನಮಗೆ ಟೋಪನ್ ಹಾಕಿಸ್ಬಿಟ್ಟಿದ್ದಾರೆ, ಅಂದ ಕರೀಂ ಅವನ ಹೆಂಡ್ತಿ ಅಂತು ಬಸರಿಲ್ಲ ಅನ್ನೋದನ್ನ ಖಚಿತ ಪಡಿಸಿಬಿಟ್ಟ.

ಟೋಪನ್!? ಅಲ್ಲರೀ ಸಾಬ್ರಾ ನೀವು ನಿಮ್ಮ ಬಕ್ಕ ತಲಿ ಮುಚ್ಚಗೊಳ್ಳಲಿಕ್ಕೆ ತಲಿ ಮ್ಯಾಲೆ ಟೋಪನ್ ಹಾಕ್ಕೋಳೋದಕ್ಕೂ ನಿಮ್ಮ ಫ್ಯಾಮಿಲಿ ಪ್ಲಾನಿಂಗ್ ಗೂ ಏನು ಕನೆಕ್ಷನ್ ಅಂತ ನಮಗ ಗೊತ್ತಾಗಲೇ ಇಲ್ಲ ನೋಡ್ರೀ. ನೀವು ಬಕ್ಕ ತಲಿ ಬಕ್ಕಾಸುರ. ತಲಿಗೆ ಟೋಪನ್ ಹಾಕ್ಕೊಂಡ್ರೀ ನಿಮ್ಮ ಬೇಗಂ ಹೇಳಿದಂಗ. ನಿಮಗ ಮಕ್ಕಳಾಗೋದಿಲ್ಲ. ಓಕೆ. ಅದು ಯಾಕೋ ಏನೋ? ಮಾತ ಒಪ್ಪೋಣ. ಆದ್ರ ಕೂದಲು ಇದ್ದ ಗಂಡಸರೂ ಸಹ ಮಕ್ಕಳಾಗಬಾರದು ಅಂತ ಟೋಪನ್ ಹಾಕ್ಕೋಬೇಕು ಅಂದ್ರ ಹ್ಯಾಂಗ್ರೀ? ಅವರೇನು ಮಾಡಬೇಕು? ಇದ್ದ ಚಂದ ಕೂದಲಾ ಹಜಾಮನ ಕಡೆ ರೇಜರ್ ಹಚ್ಚಿ ನುಣ್ಣಗ ಬೋಳಿಸಕೊಂಡ ಆರ್ಟಿಫಿಷಿಯಲ್ ಬಕ್ಕಾಸುರ ಆಗಬೇಕ? ಅದರ ಮ್ಯಾಲೆ ಟೋಪನ್ ಹಾಕಿಕೊಳ್ಳಬೇಕ? ಇದರಕಿಂತ ಸರಳ ಮಾರ್ಗ ಯಾವದೂ ಇಲ್ಲ ಏನು? ಹಾಂ? ಹಾಂ? ಫ್ಯಾಮಿಲಿ ಪ್ಲಾನಿಂಗ್ ಇಷ್ಟ ಕಷ್ಟದ್ದು ಅಂತ ಗೊತ್ತಿರಲಿಲ್ಲ ಬಿಡ್ರೀ ಸಾಬ್ರಾ, ಅಂದೆ.

ಕರೀಂ ನನ್ನ ಮಾರಿ ನೋಡಿದ. ತಲಿ ತಲಿ ಚಚ್ಚಿಕೊಂಡ.

ಯಾ ಅಲ್ಲಾ!!!ಯಾ ಖುದಾ!!! ಲಾ ಹೌಲ್ ವಿಲಾ ಖುವತ್!!! ನಿಮಗೆ ತಲಿ ಇಲ್ಲ ಕ್ಯಾ? ಹಾಂ? ಹಾಂ? ತಲಿಗೆ ಹಾಕ್ಕೊಳ್ಳೋ ಟೋಪನ್ ಅಲ್ಲಾ ಸಾಬ್. ಇದು ಬೇರೆ ಎಲ್ಲೋ ಹಾಕ್ಕೊಳ್ಳೋ ಟೋಪನ್. ಅದೆಲ್ಲಾ ವಿಷಯಾ ಛೋಡೋಜೀ. ಜಲ್ದೀ ಜಲ್ದೀ ಮುಹೂರ್ತಾ ನೋಡೋಜೀ, ಅಂತ ಗಡಿಬಿಡಿ ಮಾಡಿದ.

ಮಕ್ಕಳಾಗದೇ ಇರೋಹಾಂಗ ಗಂಡಸರು ಯಾವ ಟೋಪನ್ ಎಲ್ಲೇ ಹ್ಯಾಂಗ ಯಾವಾಗ ಯಾಕ ಹಾಕ್ಕೋತ್ತಾರ ಅನ್ನೋದಂತೂ ತಿಳಿಲಿಲ್ಲ. ಅದರ ಬದಲಿ ಉರ್ದು ಒಳಗ ಬೈಸಿಕೊಂಡಿದ್ದss ಬಂತು. ಸೂಡ್ಲಿ. ಅಂಗೈ ತೋರಿಸಿ ಅರಿಷ್ಟ ಅನಿಸಿಕೊಂಡ ಫೀಲಿಂಗ್ ಬಂದು ಬಿಡ್ತು. ಮತ್ತ ಯಾವಗಾರ ಸಾಬ್ರನ್ನು ಹಿಡದು ಕೇಳ್ತೆನಿ. ಈಗ ಬ್ಯಾಡ. ಗರಂ ಆಗಿ ಉರ್ದು ಒಳಗ ಬೈಲಿಕತ್ತಬಿಟ್ಟಾನ. ಆದರೂ ಯಾವ ಟೋಪನ್ನು ಅನ್ನೋದನ್ನ ತಿಳಿದುಕೊಳ್ಳಲಿಕ್ಕೇ ಬೇಕು.

ಮುಹೂರ್ತ..... ಅದೂ ಕುಬಸಕ್ಕ..... ಯಾರಿಗೆ ಅಂದ್ರೀ? ನಿಮ್ಮ ಬೇಗಂ ಅಂತು ಅಲ್ಲಾ ಅಂದ್ರೀ. ಮತ್ಯಾರು? ನಿಮ್ಮ ಆಪಾ ಜಾನ್ ಅಂದ್ರ ನಿಮ್ಮ ಅಕ್ಕಾ ಏನು? ಅಕಿ ಖಮರುನ್ನೀಸಾ ನಮಕಿಂತ ೩-೪ ವರ್ಷ ದೊಡ್ದಾಕಿ ಅಲ್ಲ? ಈ ವಯಸ್ಸಿನ್ಯಾಗ ಬಸುರಾಗಿ ಕೂತಾಳ? ಹಾಂ? ಹಾಂ? ವಯಸ್ಸಾದ್ರೇನು? ಕೆಲೊ ಮಂದಿ ಗಂಡ್ಸೂರು ಕೆಲೊ ಮಂದಿ ಹೆಂಗ್ಸೂರು ಹುಂಚಿ ಹಣ್ಣು ಇದ್ದಂಗ ನೋಡ್ರೀ. ಹಳೆತಾದಷ್ಟು ಹುಳಿ ಹೆಚ್ಚು. ಅದಕ್ಕss ಇರಬೇಕು, ಹುಣಸೆ ಮುಪ್ಪಾದರೆ ಹುಳಿ ಮುಪ್ಪೇ? ಅಂತ ಗಾದಿ ಮಾತು ಬಂದಿರಬೇಕು. ನಿಮ್ಮ ಅಕ್ಕನ ಹಾಲಿ ಗಂಡ ಯಾರು ಈಗ? ಅಕಿ ಹಳೆ ಮಾಜಿ ಗಂಡ ಸೌದಿ ಅರಬನ್ನಂತೂ ಹಿಡದು ಇಕಿ ತಿಕ್ಕಿ, ಹುರಿದು ಮುಕ್ಕಿ, ಜೀವಾ ತಿಂದು, ಅವನ ರೊಕ್ಕಾ ಅಷ್ಟು ಬೋಳಿಸಿ, ಆವಾ ಸೌದಿ ಅರೇಬಿಯಾದಾಗಿನ ಪೆಟ್ರೋಲ್ ಭಾವಿ ಎಲ್ಲ ಮಾರ್ಕೊಂಡು, ದಿವಾಳ ತೆಗೆದು, ಇಕಿಗಿ ಹ್ಯಾಂಗೋ ಮಾಡಿ ಸೋಡಚೀಟಿ ಕೊಟ್ಟು, ಮೈಮ್ಯಾಲೆ ಹಾಕ್ಕೊಂಡ ಬಟ್ಟಿ ಒಂದss ಉಳಿಸ್ಕೊಂಡು, ಗಡ್ಡಾ ನೀವಿಕೋತ್ತ ಸೀದಾ ಒಸಾಮಾ ಬಿನ್ ಲಾಡೆನ್ ಕಡೆ ಹೋಗಿ, ಅಲ್ ಕೈದಾ ಜಿಹಾದಿ ಆಗಿಬಿಟ್ಟ ಅಂತ ಕೇಳಿದ್ದೆ. ನಿಮ್ಮಕ್ಕನ ಕಾಟ ಸಾಕಾಗಿತ್ತು ಅಂತ ಕಾಣಸ್ತದ ಅವಂಗ. ಸೀದಾ ಹೋಗಿ ಜಿಹಾದಿ ಆಗಿಬಿಟ್ಟ ಅಂದ್ರ ಯಾ ಪರೀ ಕಾಡಿರಬೇಕು ಅಕಿ ಖತ್ರನಾಕ್ ಖಮರುನ್ನೀಸಾ! ಈಗ ಯಾರನ್ನ ಮದ್ವೀ ಮಾಡಿಕೊಂಡಾಳ ನಿಮ್ಮ ಅಕ್ಕಾ ಖಮರುನ್ನೀಸಾ? ಬಿನ್ ಲಾಡೆನ್ ಅಂತೂ ಇರಲಿಕ್ಕೆ ಇಲ್ಲ. ಅವಾ ಸತ್ತು ಹೋದ. ಹಾಂ? ಹಾಂ? - ಅಂತ ಕೇಳಿದೆ. 

ಇವರ ಬೇಗಂ ಬಸುರಿಲ್ಲ ಅಂದ್ರ ಪುರಾತನ ಸುಂದರಿ ಇವರ ಅಕ್ಕನss ಬಸುರಾಗಿರಬೇಕು ಅಂತ ನಮ್ಮ ಊಹಾ.

ಲಾ ಹೌಲ್ ವಿಲಾ ಖುವತ್!!! ಅಂತ ಕರೀಂ ಮತ್ತ ಉದ್ಗರಿಸಿದ.

ಯಾಕೋ ಇವತ್ತು ನಮಗ  ಉರ್ದು ಒಳಗಾ ಬೈಸಿಕೊಳ್ಳೋ ನಸೀಬ ಅಂತ ಕಾಣಿಸ್ತದ. ಇವಂಗ ಮುಹೂರ್ತ ನೋಡೋಕಿಂತ ಮೊದಲು ನಾನss ನನ್ನ ಕುಂಡಲಿ ನೋಡಿಕೊಂಡು ಯಾಕ ಇವತ್ತು ಇವಾ ನನಗ ಉರ್ದು ಒಳಗ ಮ್ಯಾಲಿಂದ ಮ್ಯಾಲೆ ಬೈಲಿಕತ್ತಾನ ಅಂತ ತಿಳ್ಕೊಬೇಕು.

ಅಯ್ಯೋ!!!!ಚುಪ್!!!ಚುಪ್!!!ನಮ್ಮ ಫ್ಯಾಮಿಲಿ ಒಳಗೆ ಯಾರೂ ಬಸರಾಗಿಲ್ಲ. ಬಸುರಾದವರು ಯಾರೋ ಬ್ಯಾರೆನೇ. ಒಟ್ಟಿನ್ಯಾಗ ಒಂದು ಮುಹೂರ್ತ ಜಲ್ದೀ ನೋಡ್ರೀ. ತಲಿ ತಿನ್ನಬ್ಯಾಡ್ರೀ. ಘರ್ ಮೇ ಬೇಗಂ ತಲಿ ತಿಂದು ತಿಂದು ಏನೂ ಉಳಿದಿಲ್ಲ. ನೋಡಿ, ನೋಡಿ ಅಂತ ತನ್ನ ಬಕ್ಕ ತಲಿ ಮ್ಯಾಲೆ ಹಾಕ್ಕೊಂಡಿದ್ದ ಟೋಪನ್ ಸರಕ್ಕನ ಕಿತ್ತಿದವನ ಮಾರಿ ಮುಂದ ಅವನ ಬಕ್ಕ ತಲಿ ತಂದು ಹಿಡಿದ.

ಮೂಗಿಗೆ ಹತ್ತರ ಬಂದಿತ್ತು ಟಕಳು ತಲಿ. ತಲಿಗೆ ಹಚ್ಚಿಕೊಂಡಿದ್ದ ಜಾಸ್ಮಿನ್ ಹೇರ್ ಆಯಿಲ್ ಘಮ್ಮ ಅಂತ ವಾಸನಿ ಬಂತು. ತಲಿ ಬೋಡ ಆಗಿ ಮ್ಯಾಲೆ ವಿಗ್ ಟೋಪನ್ ಹಾಕಿಕೊಳ್ಳತಾನ. ಹಾಂಗಿದ್ದಾಗ ಬಕ್ಕಿ ತಲಿಗೆ ಯಾಕ ಹೇರ್ ಆಯಿಲ್ ಹಚ್ಚಿಗೋತ್ತಾನ? ತಿಳಿಲಿಲ್ಲ. ಖರೇನss ತಿಳಿಲಿಲ್ಲ. ಕೇಳಿದರ ಮತ್ತ  "ಲಾ ಹೌಲ್ ವಿಲಾ ಖುವತ್" ಅಂತ ಉರ್ದು ಒಳಗ ಬೈದಾನು ಅಂತ ಗಪ್ ಆದೆ.

ಸಾಬ್ರಾ ಯಾರ ಬಸುರಾದ್ರು ಅಂತ ಹೇಳರೀಪಾ. ಅವರ ಕುಂಡಲಿ ತೋರಿಸರೀಪಾ. ಅದಿಲ್ಲದ ಬರೆ ಮುಹೂರ್ತ ನೋಡ್ರೀ ಮುಹೂರ್ತ ನೋಡ್ರೀ ಅಂದ್ರ ಯಾರಿಗೆ ಅಂತ ನೋಡೋಣ. ಅಲ್ಲೇ ನೋಡ್ರೀ. ನಮ್ಮ ಹೆಣ್ಣು ನಾಯಿ ಬಸುರಾಗಿ ಬಿಟ್ಟದ. ಅದರ ಕುಬಸಕ್ಕ ಮುಹೂರ್ತ ನೋಡಲಾ? ಹಾಳಾದ ಗಂಡು ನಾಯಿ ಕಾಂಪೌಂಡ್ ಗ್ವಾಡಿ, ಅದೂ ಎತ್ತರದ ಗ್ವಾಡಿ, ಮ್ಯಾಲೆ ಚೂಪ್  ಚೂಪ್ ಕಾಜ್ ಬ್ಯಾರೆ ಚುಚ್ಚಿದ್ದು, ಅದನ್ನ ಹಾರಿ ಬಂದು ನಮ್ಮ ವರ್ಜಿನ್ ಕನ್ಯಾ ನಾಯಿಗೆ ಬಸ್ರು ಮಾಡಿ ಹೋಗಿ ಬಿಟ್ಟಾವ. ನಾಯಿ ಮುಂಡೇವು. ಅದಕ್ಕ ಮುಹೂರ್ತ ನೋಡಲಾ? ಹಾಂ? ಹಾಂ? - ಅಂತ ಝಾಡಿಸಿದೆ.

ಕುಬಸದ ಮುಹೂರ್ತಕ್ಕೂ ಕುಂಡಿ ತೋರಿಸಬೇಕು ಅಂದ್ರೆ ಏನು ಸಾಬ್? ಈಗ ಏನು ಮಾಡೋದು? - ಅಂತ ಕರೀಂ ಪರೇಶಾನ ಆದ.

ಕುಂಡಲಿ! ಕುಂಡಲಿ! ಜನ್ಮ ಕುಂಡಲಿ ಅಂದ್ರ ಜಾತಕ ಅಂದ್ರ ಹೊರೋಸ್ಕೊಪ್. ತಪ್ಪು ತಪ್ಪು ಉಚ್ಚಾರ ಮಾಡಿದ್ರ ಕೆಲಸ ಕೆಡ್ತದ. ಯಾರದ್ದೂ ಕುಂಡಿ ತೋರ್ಸೋದು ಬ್ಯಾಡ. ಕುಂಡಲಿ ತೊಗೊಂಡು ಬಾ. ಆ ಮ್ಯಾಲೆ ಮುಂದಿನ ಮಾತು, ಅಂತ ಹೇಳಿ ತೆಗೆದಿದ್ದ ಪಂಚಾಂಗ ಕ್ಲೋಸ್ ಮಾಡಿದೆ.

ಸಾಬ್ ನಮ್ಮ ಹಾವರಾಣಿ ಮಹಾರಾಣಿಗೆ ಕುಬಸಾ ಮಾಡಲಿಕ್ಕೆ ಹೊಂಟಿದೆ, ಅಂತ ಒಂದು ಬಾಂಬ್ ಹಾಕಿದ ಕರೀಂ.

ಕೇಳಿ ತತ್ತರಿಸಿ ಹೋದೆ.

ಮಹಾರಾಣಿಗೆ ಕುಬಸ. ಹಾವರಾಣಿ ಮಾಡಾಕಿ!

ಏನಿದು ಹಾವರಾಣಿ, ಮಹಾರಾಣಿಯರ ಸಸ್ಪೆನ್ಸ್?

ಕಿಲ್ಲರ್ ಸಸ್ಪೆನ್ಸ್!

ಏನು ನೀವು ಹಾವರಾಣಿ ಸಾಕೀರಾ? ಎಲ್ಲರೂ ನಾಯಿ, ಬೆಕ್ಕು, ಆಕಳು, ಎಮ್ಮಿ ಮತ್ತೊಂದು ಮಗದೊಂದು ಸಾಕೋದನ್ನ ಕೇಳಿದ್ದೆ. ಆದ್ರ ಹಾವರಾಣಿ ಸಾಕವರನ್ನ ಇನ್ನೂ ತನಕ ಕೇಳಿರಲಿಲ್ಲ ನೋಡ್ರೀ. ನೀವ ಫಸ್ಟ್. ಅದೆಂತಾ ಹಾವರಾಣಿ ಮಾರಾಯ? ಯಾವದೋ ಮಹಾರಾಣಿ ಕುಬಸಾ ಮಾಡಲಿಕ್ಕೆ ಹೊಂಟದ ಅಂದ್ರ ನೀ ಸಾಕಿದ ನಿನ್ನ ಪೆಟ್ ಹಾವರಾಣಿ ಯಾವದೋ ಜನ್ಮದಾಗ ಮಹಾರಾಣಿ ಆಗಿತ್ತೋ ಏನೋ? ಯಾವದೋ ಋಷಿ ಮುಂದ ಕ್ಯಾಬರೆ ಡಾನ್ಸ್  ಮಾಡಲಿಕ್ಕೆ ಹೋಗಿದ್ದಳು ಅಂತ ಕಾಣಸ್ತದ. ಋಷಿ ತಪಸ್ಸು ಭಂಗ ಆತು ಅಂತ ಸಿಟ್ಟಿಗೆದ್ದು, ತನ್ನ ಕಮಂಡಲು ಒಳಗಿಂದ ಒಂದೋ ಎರಡೋ ಪೆಗ್ ನೀರ ಗೊಜ್ಜಿ, ಹಾವರಾಣಿ ಆಗಿ ಜನ್ಮ ತಾಳು, ಅಂತ ಶಾಪಾ ಕೊಟ್ಟು ಬಿಟ್ಟಿರಬೇಕು. ಪತಿಯಾಲಾ ಪೆಗ್ಗ ಗೊಜ್ಜಿರಬೇಕು. ಅದಕ್ಕಾ ಚಂದ ಹಾವರಾಣಿ ಆಗಿ ನಿಮ್ಮನಿ ಸೇರಿಕೊಂಡು ಬಿಟ್ಟದ. ಅದss  ಹಾವಾರಣಿನ ನೀವು ಪೆಟ್ ಅಂತ ಇಟಗೊಂಡೀರಿ ಅಂತ ಅನ್ನಸ್ತದ. ಜನ್ಮ ಹಾವರಾಣಿದು ಆದ್ರ ಏನಾತು? ಕರ್ಮಫಲ ಕೊಡss ಬೇಕು ನೋಡ್ರೀ. ಏನೋ ಎಂತೋ? ಈ ಹಾವರಾಣಿ ಪಾಪ ಆ ಬಸುರಾದ ಮಹಾರಾಣಿಗೆ ಕುಬಸಾ ಮಾಡಿದ್ರ ಶಾಪ ವಿಮೋಚನೆ ಆಗ್ತದ ಏನೋ? ಆದರೂ ಬಸುರಾದವರ ಕುಂಡಲಿ ಬೇಕಲ್ಲರೀ. ಅದಿಲ್ಲದ ಮುಹೂರ್ತ ನೋಡುದು ಹ್ಯಾಂಗ? ಯಾವ ಮಹಾರಾಣಿ ಕುಬಸಾ ಮಾಡಲಿಕ್ಕೆ ಹೊಂಟದ ನಿಮ್ಮ ಹಾವರಾಣಿ? ಹಾಂ? ಹಾಂ? - ಅಂತ ಉದ್ದಗ ಕೇಳಿಬಿಟ್ಟೆ.

ಲಾ ಹೌಲ್ ವಿಲಾ ಖುವತ್!!!ಲಾ ಹೌಲ್ ವಿಲಾ ಖುವತ್!!!ಲಾ ಹೌಲ್ ವಿಲಾ ಖುವತ್!!! - ಅಂತ ಮೂರ ಸರೆ ಬೈದ ಬಿಟ್ಟ ಕರೀಂ. ನನಗ ಬೇಜಾರ ಆತು.

ಯಾಕ್ರೀ ಸಾಬ್ರಾ? ಬೈತೀರಿ? ಏನು ತಪ್ಪು ಕೇಳಿದೆ? ಹಾವರಾಣಿ ಮಹಾರಾಣಿಗೆ ಕುಬಸಾ ಮಾಡಲಿಕ್ಕೆ ಹೊಂಟದ ಅಂದ್ರೀ. ಏನೋ ವಿಚಿತ್ರ ಅಂತ ಅನ್ನಿಸ್ತು. ಅದಕss ಒಂದು ಥಿಯರಿ ಹೇಳಿದೆ. ಅಲ್ಲ ಅಂದ್ರ ತಿಳಿಸಿ ಹೇಳ್ರೀಪಾ. ಉರ್ದು ಒಳಗ ಅಷ್ಟು ಚಂದಾಗಿ ಬೈಬ್ಯಾಡ್ರೀ, ಅಂದೆ.

ಹಾವರಾಣಿ ಅಂದ್ರೆ ಖರೆ ಹಾವರಾಣಿ ಅಲ್ಲ. ನಮ್ಮ ಹಾಪ್ ಬೇಗಂ. ಅಕಿಗೆ ಮಹಾರಾಣಿಗೆ ಕುಬಸಾ ಮಾಡುವ ಹುಚ್ಚು ಹತ್ತಿದೆ. ಅದಕ್ಕೇ ಮುಹೂರ್ತ ಕೇಳಿಕೊಂಡು ಬಾ ಅಂತ ಕಳಿಸಿದೆ. ತಿಳೀತು ಕ್ಯಾ? - ಅಂತ ಹೇಳಿದ.

ಈಗ ತಿಳೀತು.

ಓಹೋ!!!ಇದು ನಿಮ್ಮ ಹುಚ್ಚು ಬೇಗಂ ಅವರ ಹುಚ್ಚು ರೂಪ ಅಂತ. ನೋಡೋಣ ನೋಡೋಣ ಮುಹೂರ್ತ. ಯಾವ ಮಹಾರಾಣಿಗೆ ಕುಬಸಾ ಮಾಡಲಿಕ್ಕೆ ಹೊಂಟಾರ ನಿಮ್ಮ ಹಾವರಾಣಿ ಬೇಗಂ? - ಅಂತ ಕೇಳಿದೆ.

ಇಂಗ್ಲಂಡ ಮಹಾರಾಣಿಗೆ! ಅಂದು ಬಿಟ್ಟ ಕರೀಂ.

ಇಂಗ್ಲಂಡ ಮಹಾರಾಣಿ ಮತ್ತೊಮ್ಮೆ ಬಸುರಾಗಿ ಬಿಟ್ಟರಾ? ಅಕಟಕಟಾ!!!!

ಅಲ್ರೀ ಸಾಬ್ರಾ!!!!ಇಂಗ್ಲೆಂಡ್ ಮಹಾರಾಣಿಗೆ 80 ವರ್ಷದ ಮ್ಯಾಲೆ ಆಗಿ ಹೋತು. ಅಕಿ ಅಂದ್ರ ಡೇಟ್ ಬಾರ್ ಆದ ಗುಳಿಗಿ ಇದ್ದಂಗ ಅಲ್ಲೆನ್ರೀ? ಡೇಟ್ ಬಾರ್ ಆದ ಗುಳುಗಿ ತೊಗೊಂಡ್ರ ಏನ್ ಉಪಯೋಗಿಲ್ಲ. ಹಾಂಗss ಡೇಟ್ ಬಾರ್ ಆದ ಹೆಂಗ್ಸೂರು ಬಸರಾಗಂಗಿಲ್ಲ. ಸುಂದರೀ ಡಯಾನಾ ಇದ್ದಿದ್ದರ ಅಕಿಗೂ ಈಗ ೫೦ ರ ಮ್ಯಾಲೆ ವಯಸ್ಸಾಗಿ ಅಕಿನೂ ಡೇಟ್ ಬಾರ್ ಅದ ಗುಳುಗಿ ಆಗಲಿಕ್ಕೆ ಹತ್ತಿರ ಬರತಿದ್ದಳು. ಪಾಪ! ನಸೀಬ್ ಕೆಟ್ಟದಿತ್ತು. ಆಕ್ಸಿಡೆಂಟ್ ಆಗಿ ಸತ್ತು ಹೋಗಿ ಬಿಟ್ಟಳು. ಹೀಂಗಿದ್ದಾಗ ಯಾವ ಇಂಗ್ಲೆಂಡ್ ಮಹಾರಾಣಿ ಬಸುರಾದಳು? ಹಾಂ? ಹಾಂ? - ಅಂತ ಕೇಳಿದೆ.

ಸಾಬ್ ನಿಮಗೆ ಕಾಮನ್ ಸೆನ್ಸ್ ಇಲ್ಲ ಕ್ಯಾ? ನ್ಯೂಸ್ ಗೀಸ್ ನೋಡೋದಿಲ್ಲ ಕ್ಯಾ? ಅದು ಯಾರೋ ಕೇಟ್ ಅನ್ನೋ ಮಹಾರಾಣಿ ಬಸುರಾಗಿದ್ದು ಗೊತ್ತಿಲ್ಲ ಕ್ಯಾ? ಅಕಿಗೆ ಕುಬಸಾ ಮಾಡಲು ಹೊಂಟಿದೆ ನಮ್ಮ ಬೇಗಂ, ಅಂತ ಹೇಳಿದ ಕರೀಂ.

ಓಹೋ!!!ಇದು ರಾಜಕುಮಾರಿ ಕೇಟ್ ಪೆಂಡಲ್ಟನ್. ಈಗ ಗೊತ್ತಾತ ನೋಡ್ರೀ. ಅಕಿ ಬಸುರಾಗಿದ್ದು ಖರೆ. ಅಕಿಗೆ ಯಾಕ್ರೀ ನಿಮ್ಮ ಹಾಪ್ ಹಾವರಾಣಿ ಬೇಗಂ ಕುಬಸಾ ಮಾಡಿಲಿಕ್ಕೆ ಹೊಂಟಾರ? ಹಾಂ? ಹಾಂ? - ಅಂತ ಕೇಳಿದೆ.

ರಾಜಕುಮಾರಿ ಕೇಟ್ ಪೆಂಡಲ್ಟನ್

ಸಾಬ್..... ನಮಗೂ ಅದು ಸರಿ ಗೊತ್ತಿಲ್ಲ. ಅದು ಏನೋ ಹರಕೆ ಅಂತೆ. ಇಂಗ್ಲೆಂಡ್ ಮಹಾರಾಣಿಗೆ ಕುಬಸಾ ಮಾಡ್ತೇನಿ ಅಂತ ಹರಕಿ ಹೊತ್ತುಕೊಂಡಿದ್ದಳು ಅಂತೆ ನಮ್ಮ ಬೇಗಂ. ಈಗ ಅದನ್ನ ತೀರ್ಸಬೇಕು, ಅಂದ ಕರೀಂ.

ಅಂದ್ರ ನಿಮ್ಮ ಬೇಗಂ ಕುಬಸಾ ಮಾಡಲಿಕ್ಕೆ ಇಂಗ್ಲೆಂಡಿಗೆ ಹೊಂಟಾರ ಏನು? ವೀಸಾ ಗೀಸಾ ಎಲ್ಲಾ ಸಿಕ್ಕಿಬಿಡ್ತ? ಹಾಂ? ಹಾಂ? - ಅಂತ ಕೇಳಿದೆ.

ಇಲ್ಲ ಸಾಬ್.... ಅಕಿ ಇಂಗ್ಲೆಂಡ್ ಗೆ ಹೋಗ್ತಾ ಇಲ್ಲ. ಶುಕರ್ ಅಲ್ಲಾಹ್ ಕಿ!!!!ನಮ್ಮದು ಒಂದಿಷ್ಟು ರೊಕ್ಕ ಉಳೀತು. ಇಲ್ಲಿಂದಲೇ ಅಕಿ ಕುಬಸಾ ಮಾಡ್ತಾಳೆ ಅಂತೆ, ಅಂದ ಕರೀಂ.

ಹಾಂ!!!ರಿಮೋಟ್ ಕುಬಸಾ!!!ವಾಹ್!!!ವಾಹ್!!!

ಯಾಕ್ರೀ? ಯಾಕ ಇಂಗ್ಲೆಂಡಿಗೆ ಹೊಂಟಿಲ್ಲ ನಿಮ್ಮ ಬೇಗಂ? - ಅಂತ ಕೇಳಿದೆ.
 
ಸಾಬ್ ಅಕಿಗೆ ಇಂಗ್ಲೆಂಡ್ ವೀಸಾ ಸಿಗಲಿಲ್ಲ, ಅಂದ ಕರೀಂ. 

ಇಂಗ್ಲಂಡ ವೀಸಾ ಸಿಗಲಿಲ್ಲ, ಅಮೇರಿಕಾ ವೀಸಾ ಸಿಗಲಿಲ್ಲ ಅನ್ನಲಿಕ್ಕೆ ಅಕಿ ಏನು ನರೇಂದ್ರ ಮೋದಿ ಏನ್ರೀ? ಅಕಿ ಏನು ದಾವೂದ್ ಇಬ್ರಾಹಿಮ್ಮನ ತಂಗಿ ಏನು? ಅಥವಾ ಛೋಟಾ ಶಕೀಲನ ಛೋಟಾ ಚಿಗವ್ವನ ಮಗಳೋ? ಅಥವಾ ಬಿನ್ ಲಾಡೆನ್ನಿನ ಸೊಸಿಯೋ? ಯಾಕ ವೀಸಾ ಕೊಡಲಿಲ್ಲ ನಿಮ್ಮ ಬೇಗಂಗೆ?ಹಾಂ? ಹಾಂ? - ಅಂತ ಕೇಳಿದೆ.

ಸಾಬ್ ನಮ್ಮದು ಬೇಗಂಗೆ ಒಂದು ಪ್ರಾಬ್ಲೆ ಐತೆ ಸಾಬ್. ಎಲ್ಲಾ ಮಂದಿ ಅಕಿ ಒಸಮಾ ಬಿನ್ ಲಾಡೆನ್ನಿನ ಸ್ವಾದರ ಸೊಸಿ ಅಂತ ಎಲ್ಲರೂ ತಿಳಕೊಂಡು ಬಿಟ್ಟಿದ್ದಾರೆ. ಎಲ್ಲ ಕಡೆ ಅದೇ ಸುದ್ದಿ. ನಮ್ಮ ಬೇಗಂಗೆ ಮತ್ತೆ ಒಸಾಮಾ ಬಿನ್ ಲಾಡೆನ್ನಿಗೆ ಯಾವದೇ ಕನೆಕ್ಷನ್ ಇಲ್ಲ ಇಲ್ಲ ಅಂತ ಚೀರಿ ಚೀರಿ ಹೇಳಿದರೂ ಯಾರೂ ನಂಬ್ತಾ ಇಲ್ಲ. ವಕೀಲರ ಮೂಲಕ ನೋಟರೈಸ್ಡ್ ಆಫಿಡಾವಿಟ್ ಮಾಡಿಸಿ, ವೀಸಾ ಅಪ್ಲಿಕೇಶನ್ ಜೊತೆ ಇಟ್ಟರೂ ಇಂಗ್ಲಂಡ ಎಂಬೆಸಿ ವೀಸಾ ಕೊಡಲೇ ಇಲ್ಲ ಸಾಬ್! ಅಕಿ ಇನ್ನು ಅಫಗಾನಿಸ್ತಾನ ಬಿಟ್ಟರೆ ಬ್ಯಾರೆ ಎಲ್ಲೂ ಹೋಗೋ ಹಾಗೇ ಇಲ್ಲ, ಅಂತ ಅಂದ ಕರೀಂ.

ಹೋಗ್ಗೋ ಸಾಬ್ರಾ!!! ಒಸಮಾ ಬಿನ್ ಲಾಡೆನ್ ನಿಮ್ಮ ಹೆಂಡ್ತೀ ಸೋದರಮಾವನಾ? ಗೊತ್ತss ಇರಲಿಲ್ಲ ಅಲ್ಲರೀ..... ಛೆ!!!ಛೆ!!! ಮೊದಲ ಗೊತ್ತಿದ್ದರ ಅವರು ಸಾಯೋಕಿಂತ ಮೊದಲ ಒಮ್ಮೆ ಹೋಗಿ ಅವರನ್ನ ಭೆಟ್ಟಿ ಆಗಿ ಬರಬಹುದಿತ್ತು. ಒಸಾಮಾ ಬಿನ್ ಲಾಡೆನ್ ಸ್ವಾದರ ಸೊಸಿ ನಿಮ್ಮ ಬೇಗಂ ಅಂದ್ರ ಭಾರಿ ಆತ ಬಿಡ್ರೀ. ನಿಮ್ಮ ಹೆಂಡ್ತೀ ಅವ್ವಾ ಬಿನ್ ಲಾಡೆನ್ ಅಕ್ಕನೋ ತಂಗಿನೋ? - ಅಂತ ಕೇಳಿದೆ.

ಮತ್ತ ಬೈದಾ!!!

ಲಾ ಹೌಲ್ ವಿಲಾ ಖುವತ್!!!ಲಾ ಹೌಲ್ ವಿಲಾ ಖುವತ್!!!ಲಾ ಹೌಲ್ ವಿಲಾ ಖುವತ್!!!

ಶಿವನೇ!!!ಶಂಭುಲಿಂಗ!!!!

ಯಾಕ್ರೀ ಸಾಬ್ರಾ? ಮತ್ತ ಬೈತೀರಿ? ಹಾಂ? ಹಾಂ? - ಅಂತ ಕೇಳಿದೆ.

ನಮಗೆ, ನಮ್ಮ ಬೇಗಂಗೆ, ನಮ್ಮ ಇಡೀ ಖಾಂದಾನಿಗೇ ಒಸಾಮಾ ಬಿನ್ ಲಾಡೆನ್ ಜೊತೆ ಯಾವದೇ ತರಹದ ತಾಲ್ಲುಕ್ಕಾತ ಬಿಲ್ಕುಲ್ ಇಲ್ಲ. ಇಲ್ಲವೇ ಇಲ್ಲ. ಸುಮ್ಮನೆ ಏನೇನೋ ಹೇಳಬೇಡಿ. ಚುಪ್!!!ಚುಪ್!!! -ಅಂದ ಕರೀಂ.

ನೀವೇನೋ ಹಾಂಗ ಅಂತೀರಿ. ಇಂಗ್ಲಂಡ ಅಮೇರಿಕಾ ಮಂದಿ ಫೈಲ್ ಒಳಗ ಒಸಮಾ ಬಿನ್ ಲಾಡೆನ್ ನಿಮ್ಮ ಹೆಂಡ್ತಿ ಸೋದರಮಾವ ಅಂತ ಬಂದದ ಅಂದ್ರ ಅದಕ್ಕ ಏನೋ ಕಾರಣ ಇರಲೇ ಬೇಕು. ಏನು ಕಾರಣ? ಹಾಂ? ಹಾಂ? - ಅಂತ ಕೇಳಿದೆ.

ಕರೀಂ ಮಾತಾಡಲಿಲ್ಲ. ಸುಮ್ಮನ ತನ್ನ ಸ್ಮಾರ್ಟ್ ಫೋನ್ ಹೊರಗ ತೆಗೆದ. ನೋಡ್ರೀ ಅನ್ನೋಹಾಂಗ ಒಂದು ತೋರ್ಸೀದ.

ಯಾರೋ ಕುಣಿಲಿಕತ್ತಂಗ ಕಾಣ್ತು. ಭಾಳ ಚಂದ ಕುಣಿಲಿಕತ್ತಿತ್ತು ಒಂದು ಹಾಟ್ ಹುಡುಗಿ.


ಚಂದ ಹಾಟ್ ಹುಡುಗಿಯ ಸೆಕ್ಸಿ ಕುಣಿತ ನೋಡೊದ್ರಾಗ ಹಾಡಿನ ಲಿರಿಕ್ಸ್ ಕೇಳೋದss ಮರ್ತು ಹೋತು. 

ಯಾರ್ರೀ ಸಾಬ್ರಾ ಈ ಪಟಾಕಾ ರಾಪ್ಚಿಕ್ ಮಾಲು? ಹೊಸಾ ಡವ್ವ ಏನು? ಇದಕ್ಕೂ ಮತ್ತ ನಿಮ್ಮ ಬೇಗಮ್ಮಿಗೆ ವೀಸಾ ರಿಜೆಕ್ಟ್ ಆಗಿದ್ದಕ್ಕೂ ಏನು ಸಂಬಂಧ? ಹಾಂ? ಹಾಂ? - ಅಂತ ಕೇಳಿದೆ. 

ಮತ್ತ ಬೈದ ಕರೀಂ. 

ಲಾ ಹೌಲ್ ವಿಲಾ ಖುವತ್!!!ಲಾ ಹೌಲ್ ವಿಲಾ ಖುವತ್!!!ಲಾ ಹೌಲ್ ವಿಲಾ ಖುವತ್!!!

ಸರೀತ್ನಾಗಿ ಚಸ್ಮಾ ಏರಿಸ್ಕೊಂಡು ನೋಡಿ. ಯಾರು ಅಂತ, ಅಂದ ಕರೀಂ ಮತ್ತೊಮ್ಮೆ ವೀಡಿಯೊ ತೋರ್ಸೀದಾ. 

ಹೌದ ನೋಡ್ರೀ ಸಾಬ್ರಾ!!!! ನಿಮ್ಮ ಬೇಗಂ ಇಕಿ. ಎಷ್ಟು ಚಂದ ಡಾನ್ಸ್ ಮಾಡ್ಲಿಕತ್ತಾಳರೀ ಸಾಬ್ರಾ!!!!ಭಾಳ ಚಂದ ಅದ ಹುಡುಗಿ!!! ಜುಲ್ಫಿಕರ ಅಂತಾ ಹೊನಗ್ಯಾ ಮಗನ್ನ ಹಡದರೂ ಏನು ಮಸ್ತ ಫಿಗರ್ ಮೇನ್ಟೇನ್ ಮಾಡ್ಯಾಳ. ಏನು ಕಥಿ? ಹಾಂ? ಹಾಂ? ಇಕಿ ಜೀವನಪೂರ್ತಿ ಹೀಂಗ ಡಾನ್ಸ್ ಮಾಡಿಕೋತ್ತ ಇರಲೀರೀಪಾ. ಎಲ್ಲೇ ಮಾಡಿದ್ದಳು ಈ ಡಾನ್ಸ್? ಹಾಂ? ಹಾಂ? - ಅಂತ ಕೇಳಿದೆ.

ಸಾಬ್ರ ನಸೀಬ. ಮಸ್ತ ಬೇಗಂ ಸಿಕ್ಕು ಬಿಟ್ಟಾರ. 

ಹಾಡಿನ ಲಿರಿಕ್ಸ್ ಕೇಳಿದಿರಾ? ಅಥವಾ ಬರೆ ಡಾನ್ಸ್ ನೋಡಿದಿರಾ? ಅಂತ ಕೇಳಿದ ಕರೀಂ. 

ಹೌದ ನೋಡ!!!ಲಿರಿಕ್ಸ್ ಕೇಳಲೇ ಇಲ್ಲ. ಇನ್ನೊಮ್ಮೆ ಹಚ್ಚು. ವಾಲ್ಯೂಮ್ ಜೋರ್ ಮಾಡು. ಈ ಸಾರೆ ಕಣ್ಣು ಮುಚ್ಚಿಗೊಂಡು ಬರೆ ಲಿರಿಕ್ಸ್ ಕೇಳತೇನಿ. ಓಕೆ? - ಅಂತ ಹೇಳಿದೆ. 

ತಲಿ ಚಚ್ಚಿಕೋತ್ತ ಕರೀಂ ಮತ್ತ ಅದ ಹಾಡ ಪ್ಲೇ ಮಾಡಿದ. 

ಸಾಬ್ರಾ!!!! ಅಂತ ಚೀರಿದೆ. 

ಏನ್ರೀ ನಿಮ್ಮ ಬೇಗಂ? ಡಾನ್ಸ್ ಮಾಡೋವಾಗ ಮೈಮ್ಯಾಲೆ ಖಬರ ಇತ್ತೋ ಇಲ್ಲ ಅಕಿಗೆ? ಹಾಂ? ಹಾಂ? ಬಿನ್ ಲಾಡೆನ್ನು ನಮ್ಮ ಮಾವ. ಬಿಲ್ ಕ್ಲಿಂಟನ್ ನಮ್ಮ ಭಾವ ಅಂತ ಹೇಳಿ ಹೊಯ್ಕೊಂಡು ಹೊಯ್ಕೊಂಡು ಡಾನ್ಸ್ ಮಾಡಿ ಬಿಟ್ಟಾಳ. ಏನಿದು? ತಾನss, ಲಾಡೆನ್ ನಮ್ಮ ಮಾವ ನಮ್ಮ ಮಾವ ಅಂತ ಹೋಯ್ಕೊಂಡರ ಮತ್ತೇನು ಆಗಬೇಕು? ಆತ ಬಿಡ್ರೀ. ಇನ್ನ ಇಕಿ ಮ್ಯಾಲೆ ಧಾರವಾಡ ಪೋಲಿಸರೂ ಸಹ ಕಣ್ಣು ಇಡತಾರ, ಅಂತ ಹೇಳಿದೆ. 

ಹ್ಞೂ..... ಅಂತೂ ಬಿನ್ ಲಾಡೆನ್ ನಮ್ಮ ಮಾವಾ ಅಂತ ನಿಮ್ಮ ಬೇಗಂ ಜಿಂಗಿ ಚಕ್ಕಾ ಚಿಂಗಿ ಚಕ್ಕಾ ಅಂತ ಕುಣಿದು ಬಿಟ್ಟಾರ. ಅದಕ್ಕss ಇಂಗ್ಲೆಂಡ್ ವೀಸಾ ಕೊಡಲೇ ಇಲ್ಲ ಅಂತ ಆತು. ಅದಕ್ಕss ಇಲ್ಲೇ ದೂರ ಕೂತು ಇಂಗ್ಲಂಡ ಮಹಾರಾಣಿಗೆ  ಕುಬಸಾ ಮಾಡಲಿಕ್ಕೆ ಹೊಂಟಾಳ ಅಂತ ಆತು ನಿಮ್ಮ ಬೇಗಂ. ದೇವರು ಒಳ್ಳೇದು ಮಾಡ್ಲೀ, ಅಂತ ಹೇಳಿದೆ. 

ಸಾಬ್ರಾ, ಕೇಟ್ ಮಹಾರಾಣಿ ಕುಂಡಲಿ ತೊಗೊಂಡು ಬರ್ರಿ. ಮುಂದ ನೋಡೋಣ, ಅಂತ ಹೇಳಿ ಕರೀಮನ್ನ ಸಾಗ ಹಾಕಿದೆ. 

ಇಷ್ಟು ಚಂದ ಹೆಂಡ್ತಿ ಕುಣಿಯೋ ಸಾಂಗ್ ತೋರಿಸಿಬಿಟ್ಟ. ಅದನ್ನ ಮತ್ತ ಮತ್ತ ನೋಡಬೇಕು. ಅದರ ಬದಲಿ ಎಲ್ಲಿ ಇವನ ಮುಂದ ಪಂಚಾಂಗ ಬಿಚಗೊಂಡು ಮುಹೂರ್ತ ನೋಡಕೋತ್ತ ಕೂಡಲಿ? ವೇಸ್ಟ್ ಆಫ್ ಟೈಮ್ ಅದು. 

ಕರೀಂ ಹೋದ. ಒಂದು ಕಪ್ ಸ್ಟ್ರಾಂಗ್ ಚಾ ಮಾಡಿಕೊಂಡು ಬಂದೆ. ಮತ್ತ ವೀಡಿಯೊ ನೋಡಿದೆ. 

ಶುರು ಮಾಡಿದಳು ಬೇಗಂ ಡಾನ್ಸ್. 

ಲಾಡೆನ್ನು ನಮ್ಮ ಮಾವ!!!ಕ್ಲಿಂಟನ್ನು ನಮ್ಮ ಭಾವ!!!!