Tuesday, August 15, 2017

ಗಂಡಹೆಂಡತಿ ಖುಷಿಖುಷಿಯಾಗಿರೋದು ಅಂದರೆ...

'ಹ್ಯಾಂಗ ಇದ್ದೀರಿ ಗಂಡಹೆಂಡತಿ? ಹ್ಯಾಂಗ ನಡದದ ಸಂಸಾರ?' ಅಂತ ಮನಿಗೆ ಬಂದ ಪರಿಚಿತರು ಕೇಳಿದರು.

ಗಂಡ ಹೇಳಿದ, 'ಹೇ ಎಲ್ಲಾ ಮಸ್ತ. ಏಕ್ದಂ ಮಸ್ತ ನಡದದ. ಏನೂ ತೊಂದ್ರಿ ಇಲ್ಲ.'

'ಒಳ್ಳೇದು. ಗಂಡಹೆಂಡತಿ ಖುಷಿಖುಷಿಯಾಗಿ ಇದ್ದೀರಲ್ಲಾ?' ಅಂತ ಜಾಸ್ತಿ ಎನ್ಕ್ವೈರಿ.

'ಏಕ್ದಂ ಖುಷಿಖುಷಿಯಾಗಿ ಸಂತೋಷದಿಂದ ಇದ್ದೀವಿ,' ಅಂದ ಗಂಡ.

'ಏನೂ ತೊಂದ್ರಿ ಇಲ್ಲಲಾ??' ಅಂತ ಮತ್ತ ಕೇಳಿದ ಪರಿಚಿತ.

'ದೊಡ್ಡ ತೊಂದ್ರಿ ಏನೂ ಇಲ್ಲ. ಆದ್ರ ಸಿಟ್ಟು ಬಂದಾಗ ನನ್ನ ಹೆಂಡತಿ ಕೈಗೆ ಸಿಕ್ಕಿದ ಭಾಂಡೆ, ಪಾತ್ರೆ, ಕಪ್ಪು, ಬಸಿ ಹೀಂಗ ಏನು ಕೈಗೆ ಸಿಕ್ಕರೂ ತೊಗೊಂಡು ಮಾರಿ ಮಸಡಿ ನೋಡದೇ ರೊಂಯ್ ರೊಂಯ್ ಅಂತ ಒಗಿತಾಳ. ಅಷ್ಟು ಬಿಟ್ಟರೆ ಬ್ಯಾರೆ ಏನೂ ತೊಂದ್ರಿ ಇಲ್ಲ,' ಅಂತ ಹೆಚ್ಚಿನ ಮಾಹಿತಿ ಕೊಟ್ಟ ಗಂಡ.

'ಅವಯ್ಯಾ! ಹೀಂಗss? ಕೈಗೆ ಸಿಕ್ಕಿದ್ದನ್ನ ಮಾರಿ ಮಸಡಿಗೆ ಒಗಿತಾಳ ಅಂತಿ. ಮ್ಯಾಲಿಂದ ಇಬ್ಬರೂ ಖುಷಿಖುಷಿಯಾಗಿ ಸಹಿತ ಇದ್ದೀರಿ ಅಂತನೂ ಅಂತಿ. ಅದೆಂಗ ಸಾಧ್ಯ? How's it possible??' ಅಂದ ಪರಿಚಿತ. ಆಶ್ಚರ್ಯ ಆತು ಮನಿಗೆ ಬಂದವರಿಗೆ.

'ಅದು ನೋಡ್ರಿ... ಅಕಿ ಕೈಗೆ ಸಿಕ್ಕಿದ್ದು ಒಗೆದಾಗ ನಾ ಬಗ್ಗಿ, ಡೈವ್ ಹೊಡೆದು, ದೊಂಬರಾಟ ಮಾಡಿ ಮಿಸೈಲ್ ಗತೆ ಬರೋ ಭಾಂಡಿ, ಕಪ್ಪು ಬಸಿಂದ ತಪ್ಪಿಸಿಕೊಂಡೆ ಅಂದ್ರ ನಾ ಖುಷ್ ನೋಡ್ರಿ. ಎಲ್ಲರೆ ಅಕಿ ಒಗೆದ ಮಿಸೈಲ್ ಗುರಿ ತಪ್ಪದೆ ಬಂದು ನನಗ ಬಡಿ ಬಾರದ ಜಾಗಾದಾಗ ಬಡಿದು ಗುಮ್ಮಟಿ ಬಂತು ಅಂದ್ರ ಅಕಿ ಖುಷ್ ನೋಡ್ರಿ. ಒಟ್ಟಿನಾಗ ಒಮ್ಮೊಮ್ಮೆ ಅಕಿ ಖುಷ್. ಒಮ್ಮೊಮ್ಮೆ ನಾ ಖುಷ್. ಹೀಂಗ ಇಬ್ಬರೂ ಖುಷಿಖುಷಿಯಾಗಿ ಇದ್ದೀವಿ,' ಅಂತ ಖತರ್ನಾಕ್ ವಿವರಣೆ ಕೊಟ್ಟ ಗಂಡ.

ಅಷ್ಟರಾಗ ಏನೋ 'ರೊಂಯ್!!' ಅಂತ ಆವಾಜ್ ಬಂತು.

'ಅಯ್ಯೋ! ಲಗೂನೇ ಬಗ್ಗಿ ಕೂಡ್ರಿ! ಲಗೂ! ಅಡಿಗಿಮನಿ ಕಡೆಂದ ಮಿಸೈಲ್ ಬರ್ಲಿಕತ್ತದ,' ಎಂದು ಹೇಳಿದ ಗಂಡ ಸೊಂಯಕ್ ಅಂತ ಡೈವ್ ಹೊಡೆದು ಸೋಫಾ ಕೆಳಗ ಸೇರಿಕೊಂಡ.

ಮನಿಗೆ ಬಂದವರಿಗೆ ಏನು ಎತ್ತ ಅಂತೂ ತಿಳಿಲಿಲ್ಲ. ಅವರು ಯಬಡರ ಗತೆ 'ಏನು?? ಏನು?? ಏನಾತು??' ಅಂತ confuse ಆಗಿ ಅತ್ತಿತ್ತ ನೋಡೊದ್ರಾಗ ತಳಾ ಹಿಡಿದು ಖರ್ರ ಆದ ಹಿತ್ತಾಳೆ ಚರಿಗೆಯೊಂದು, ಅದೂ ಕಿಲುಬು ಹಿಡಿದಿದ್ದು, ಬಂದು ಅವರ ಬೋಡು ತಲೆಗೆ ಧೂಮಕೇತುವಿನಂತೆ ಅಪ್ಪಳಿಸಿಬಿಟ್ಟಿತು.

ಅವತ್ತು ಯಾರು ಖುಷ್ ಆದ್ರೋ ಗೊತ್ತಿಲ್ಲ.

ಮೂಲ: ಅನುಭವಾನಂದ ಸರಸ್ವತಿಯವರು ಹೇಳಿದ ಒಂದು ಚಿಕ್ಕ ಜೋಕ್.

Monday, August 14, 2017

ಸಿಟ್ಟನ್ನು ನಿಯಂತ್ರಿಸುವ ಒಂದು ವಿಧಾನ

ಗಂಡ: ನಾ ನಿನ್ನ ಮ್ಯಾಲೆ ಇಷ್ಟು ಒದರಾಡತೇನಿ. ಚೀರಾಡತೇನಿ. ಬೈತೀನಿ. ಸಿಡಿಮಿಡಿ ಮಾಡ್ತೇನಿ. ಜೀವಾ ತಿಂತೀನಿ. ಇಷ್ಟಾದ್ರೂ ನೀ ಹ್ಯಾಂಗ ನಿನ್ನ ಸಿಟ್ಟು ಕಂಟ್ರೋಲ್ ಮಾಡ್ಕೋತ್ತಿ ಡಾರ್ಲಿಂಗ್? ಹ್ಯಾಂಗ ಕಂಟ್ರೋಲ್ ಮಾಡ್ತೀ ನಿನ್ನ ಸಿಟ್ಟು?

ಹೆಂಡತಿ: ನಿಮ್ಮ ವರ್ತನೆ ನೋಡಿ ನಂಗೂ ಭಾಳ ಸಿಟ್ಟು ಬರ್ತದ. ಹ್ಯಾಂಗ ತಡ್ಕೋತ್ತೇನೋ ನನಗಷ್ಟೇ ಗೊತ್ತು.....

ಗಂಡ: ಹ್ಯಾಂಗ ಸಿಟ್ಟು ತಡಕೋತ್ತಿ ಹೇಳಲ್ಲಾ ಡಾರ್ಲಿಂಗ್?

ಹೆಂಡತಿ: ನಾ ಹೋಗಿ ತಿಕ್ಕಿ ತಿಕ್ಕಿ ಸಂಡಾಸ್ ತೊಳೆದು ಬರ್ತೇನಿ. ಸಂಡಾಸ್ ಫಳಾಫಳಾ ಸ್ವಚ್ಛ ಆಗೋವಷ್ಟರಾಗ ನಿಮ್ಮ ಮ್ಯಾಲಿನ ನನ್ನ ಸಿಟ್ಟು ಕಂಟ್ರೋಲಿಗೆ ಬಂದಿರ್ತದ.

ಗಂಡ: ಹ್ಯಾಂ!!?? ಸಿಟ್ಟು ಬಂದಾಗ ಹೋಗಿ ತಿಕ್ಕಿ ತಿಕ್ಕಿ ಸಂಡಾಸ್ ತೊಳೆದುಬಂದ್ರ ಸಿಟ್ಟು ಕಂಟ್ರೋಲಿಗೆ ಬರ್ತದ!? ಖರೇ!!??

ಹೆಂಡತಿ: ಖರೇಯಂದ್ರೂ ಖರೆ. ಶಂಬರ್ ಟಕಾ ಖರೆ.

ಗಂಡ: ಮುಂದಿನ ಸಲೆ ಸಿಟ್ಟು ಬಂದಾಗ ನಿನ್ನ ಮ್ಯಾಲೆ ಒದರಾಡೋದಿಲ್ಲ. ನಾನೂ ಹೋಗಿ ಸಂಡಾಸ್ ತಿಕ್ಕಿ ತಿಕ್ಕಿ ತೊಳೆದುಬರ್ತೇನಿ. ಓಕೆ?

ಹೆಂಡತಿ: ಒಂದು ಹೇಳೋದು ಮರ್ತಿದ್ದೆ.

ಗಂಡ: ಏನು??!!

ಹೆಂಡತಿ: ನಾ ನಿಮ್ಮ ಟೂತ್ ಬ್ರಷ್ ತೊಗೊಂಡು, ನಿಮಗ ಶಾಪಾ ಹೊಡ್ಕೋತ್ತ, ತಿಕ್ಕಿ ತಿಕ್ಕಿ ಸಂಡಾಸ್ ತೊಳೆದುಬರ್ತೇನಿ! ಆವಾಗ ಸಿಟ್ಟು ಇಳಿತದ.

ಗಂಡ: ಹ್ಯಾಂ!!!??

ಫುಲ್ ಬೇಹೋಶ್!!

ಅದೇ ಬ್ರಷ್ ನಲ್ಲಿ ಆಗಷ್ಟೇ ಹಲ್ಲು ತಿಕ್ಕಿ ಬಂದಿದ್ದ!

* ಎಲ್ಲೋ ಓದಿದ ಇಂಗ್ಲೀಷ್ ಜೋಕನ್ನು ಧಾರವಾಡ ಭಾಷೆಯಲ್ಲಿ ರೂಪಾಂತರಿಸಿದ್ದು.

Sunday, August 13, 2017

ವರ ಕೇಳುವ ಮುಂಚೆ ಎಚ್ಚರಿಕೆ!

ಮಾತಾ ಶೀತಲಾದೇವಿ

ಭಕ್ತನೊಬ್ಬ ಮಾತಾ ಶೀತಲಾದೇವಿಯನ್ನು ಕುರಿತು ಭಯಂಕರ ತಪಸ್ಸನ್ನು ಮಾಡಿದ. ಅವನ ಭಕ್ತಿಗೆ, ತಪಶ್ಚರ್ಯಕ್ಕೆ ಮೆಚ್ಚಿದ ಶೀತಲಾದೇವಿ ಪ್ರತ್ಯಕ್ಷಳಾದಳು.

ಶೀತಲಾದೇವಿ: ಭಕ್ತ, ಮೆಚ್ಚಿದೆ. ಏನು ವರ ಬೇಕೆಂದು ಕೇಳುವಂತವನಾಗು.

ಭಕ್ತ: ಅಡ್ಡಬಿದ್ದೆ ತಾಯಿ. ನನಗೆ ಒಂದೇ ಒಂದು ವರ ಬೇಕು ತಾಯಿ. ನನಗೊಂದು ಭರ್ಜರಿ ರೇಸ್ ಕುದುರೆಯನ್ನು ಕರುಣಿಸು. ಆ ಕುದುರೆ ಹೇಗಿರಬೇಕು ಅಂದರೆ ಕುದುರೆಜೂಜಿನ ಪ್ರತಿಯೊಂದು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗೆಲ್ಲುವಂತಹ ಕುದುರೆಯಾಗಿರಬೇಕು. ಅಂತಹ ಕುದುರೆಯನ್ನು ಕರುಣಿಸಿಬಿಡು ತಾಯೇ! ಮಹಾಮಾಯೇ! ಮತ್ತೇನೂ ಬೇಡ. ಕುದುರೆಬಾಲಕ್ಕೆ ರೊಕ್ಕ ಕಟ್ಟಿ ಕೊಂಚ ಹಣ ಮಾಡಿಕೊಳ್ಳಬೇಕಾಗಿದೆ ತಾಯಿ. ಮನೆ ಕಡೆ ತುಂಬಾ ಕಷ್ಟ.

ಹೀಗೆ ವರ ಕೇಳಿದ ಭಕ್ತ ಕೈಮುಗಿದು, ತಲೆ ತಗ್ಗಿಸಿ, ಕಣ್ಣು ಮುಚ್ಚಿದ. ದೇವಿ ವರ ಕೊಡುವದೊಂದೇ ಬಾಕಿ.

ದೇವಿ ಕೋಪದಿಂದ ಅಬ್ಬರಿಸಿದಳು, 'ಭಕ್ತ! ಕಣ್ಣು ತೆಗೆ!'

ಭಕ್ತ: ತಾಯೇ! ಇಷ್ಟು ಬೇಗ ವರವನ್ನು ಕರುಣಿಸಿಬಿಟ್ಟೆಯೇ! ನಿನ್ನ ಮಹಿಮೆ ಅಪಾರ ತಾಯಿ.

ದೇವಿ: ಅದಲ್ಲ. ಮುಖವನ್ನು ಎತ್ತಿ ಸ್ವಲ್ಪ ಈಕಡೆ ನೋಡು. ಹತ್ತಿರ ಬಾ.

ಭಯಭಕ್ತಿಯಿಂದ ದೇವಿಯ ಹತ್ತಿರ ಹೋದ ಭಕ್ತ ಆಸೆಯಿಂದ ತಲೆಯೆತ್ತಿ ನೋಡಿದ.

'ಛಟೀರ್!' ಅಂತ ಭಕ್ತನ ಕೆನ್ನೆಗೆ ಒಂದು ಬಿಟ್ಟಳು ಶೀತಲಾದೇವಿ.

ಏಟಿನ ಅಬ್ಬರಕ್ಕೆ ಭಕ್ತನ ಕಪಾಳಗೆಡ್ಡೆ ಚದುರಿಹೋಯಿತು. ನಂಬಿಕೆ ಬರದೇ ಮುಖ ಸವರಿಕೊಂಡ. ಇನ್ನೂ ಗರಮ್ಮಾಗಿ ಚುರುಚುರು ಅನ್ನುತ್ತಿತ್ತು.

ವರ ಕೇಳಿದರೆ ದೇವಿ ಕಪಾಳಕ್ಕೆ ಏಕೆ ಬಾರಿಸಿದಳು ಅಂತ ಬೆಚ್ಚಿಬಿದ್ದ ಭಕ್ತ ಸಖೇದಾಶ್ಚರ್ಯದಿಂದ, 'ಯಾಕೆ ತಾಯೀ? ಯಾಕೆ ಹೊಡೆದುಬಿಟ್ಟೆ?'

ದೇವಿ: ಹುಚ್ಚ ಮಂಗ್ಯಾನಮಗನೇ! ವರ ಕೇಳು ಅಂದರೆ ಏನಂತ ಕೇಳುವದು!? ನಿನಗೆ ಕುದುರೆಯನ್ನು ಕೊಡುವ ಶಕ್ತಿ ನನ್ನಲ್ಲಿದ್ದರೆ ನಾನು ಏಕೆ ಕತ್ತೆ ಮೇಲೆ ಸವಾರಿ ಮಾಡಿಕೊಂಡಿರುತ್ತಿದ್ದೆ ಮೂರ್ಖ! ಶತಮೂರ್ಖ!

ಅಂದವಳೇ ದೇವಿ ಭಕ್ತನ ಬುರುಡೆಗೆ ಮತ್ತೊಂದು 'ಫಟ್' ಅಂತ ಬಿಟ್ಟವಳೇ ತನ್ನ ವಾಹನವಾದ ಕತ್ತೆಗೂ ಒಂದು ಏಟು ಕೊಟ್ಟ ಅಬ್ಬರಕ್ಕೆ ಆಕೆಯ ಪ್ರೀತಿಯ ವಾಹನ ಕತ್ತೆ ಭೀಕರವಾಗಿ ಕೆನೆಯುತ್ತ, ಹಿಂಗಾಲನ್ನಷ್ಟೇ ಎತ್ತಿ ಭಕ್ತನತ್ತ ಕೆಕ್ಕರಿಸಿ ನೋಡಿತು. ದೇವಿ 'ಪ್ರಸಾದ' ಕೊಟ್ಟಾಯಿತು. ಈಗ ದೇವಿಯ ಕತ್ತೆ ತನ್ನ ಒದೆತದ ಪ್ರಸಾದ ಕೊಟ್ಟರೆ ಕಷ್ಟ ಅಂತ ಭಕ್ತ ಕೂಡ ಅಲ್ಲಿಂದ ಎಸ್ಕೇಪ್ ಆದ.

ನೀತಿ: ಲೌಕಿಕ ಸುಖಗಳಿಗಾಗಿ ದೇವರನ್ನು ಪ್ರಾರ್ಥಿಸುವದು ತಪ್ಪು. ಒಂದು ವೇಳೆ ಹಾಗೆ ಪ್ರಾರ್ಥಿಸಲೇಬೇಕು ಅಂತಾದರೆ ಸ್ವಲ್ಪ ಎಚ್ಚರ ಅಗತ್ಯ.

ಮುಂಬೈನ ಮಾಹಿಮ್ ಪ್ರದೇಶದಲ್ಲಿ ಮಾತಾ ಶೀತಲಾದೇವಿಯ ಮಂದಿರವಿದೆಯಂತೆ. ಹತ್ತಿರದಲ್ಲೇ ವಿಖ್ಯಾತ ಮಹಾಲಕ್ಷ್ಮಿ ರೇಸ್ ಕೋರ್ಸ್ ಇದೆ ಅಂತ ಕಾಣುತ್ತದೆ. ಹಾಗಾಗಿ ಕುದುರೆಜೂಜಿನ ಭಕ್ತ ಅಲ್ಲಿಗೆ ಹೋಗಿದ್ದಿರಬಹುದು! :)

****

ಶಕ್ತಿ & ಸಹನಶಕ್ತಿ

ಭಕ್ತ: ಸ್ವಾಮೀಜಿ, ಸ್ತ್ರೀಯನ್ನು ಶಕ್ತಿ ಅಂತ ಪೂಜಿಸುತ್ತಾರೆ. ಪುರುಷನನ್ನು ಏನಂತ ಪೂಜಿಸಬಹುದು.

ಸ್ವಾಮೀಜಿ: ಪುರುಷನನ್ನು ಏನಂತ ಪೂಜಿಸಬಹುದು ಅಂತ ಗೊತ್ತಿಲ್ಲ. ಆದರೆ ಒಂದು ಮಾತು....

ಭಕ್ತ: ಏನು??

ಸ್ವಾಮೀಜಿ: ವಿವಾಹವಾದ ಪುರುಷನನ್ನು ಮಾತ್ರ ಒಂದು ರೀತಿಯಲ್ಲಿ ಪೂಜಿಸಬಹುದು.

ಭಕ್ತ: ಏನದು?

ಸ್ವಾಮೀಜಿ: ಸಹನಶಕ್ತಿ! (patience, stamina, fortitude)


****

ಮೂಲ: ಸ್ವಾಮಿ ಅನುಭವಾನಂದಜೀ ಅವರ ಪ್ರವಚನಗಳು.