Sunday, January 15, 2017

'May I come in, Sir?' ಅಂತ ಕೇಳಿದರೆ ಬೈದುಬಿಡೋದೆ!?

ಹೊಸವರ್ಷ ೨೦೧೭ ಬಂದಿದೆ. ಅದು ವರ್ಷ. ಬಂದೇ ಬರುತ್ತದೆ. 'May I come in, Sir?' ಅಂತ ಅನುಮತಿ ಕೇಳುತ್ತ ಬಾಗಿಲಿನಲ್ಲಿ ನಿಲ್ಲುತ್ತದೆಯೇ? ಇಲ್ಲ. ಅದರ ಪಾಡಿದೆ ಅದು ಬಂದು ಹೋಗುತ್ತಿರುತ್ತದೆ. ಅದಕ್ಕೆ ಅಲ್ಲವೇ ಬೇಂದ್ರೆ ಅಜ್ಜಾವರು 'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ' ಎಂದು ಹಾಡು ಬರೆಯಲಿಲ್ಲವೇ?

ಬರುವದು, ಬರುವ ಮುನ್ನ ಅನುಮತಿ ಕೇಳುವದು ಅಂದ ಕೂಡಲೇ ನೆನಪಾಯಿತು. ನಾವು ೧೯೯೦ ರಲ್ಲಿ ಪಿಯೂಸಿ ಸೆಕೆಂಡ್ ಇಯರ್. ಸಂಸ್ಕೃತ non-detail ಪಾಠ ಮಾಡುತ್ತಿದ್ದವರು ನಾಯ್ಕರ್ ಸರ್. ನಾವು ಕ್ಲಾಸಿಗೆ ಹೋಗಿದ್ದೇ ಕಮ್ಮಿ. ಅದರಲ್ಲೂ ಭಾಷೆಗಳ ಕ್ಲಾಸಿಗೆ ಹೋಗಿದ್ದೇ ಇಲ್ಲ. ನಾಯ್ಕರ್ ಸರ್ ಹೇಗೆ 'ರಸವತ್ತಾಗಿ' ಪಾಠ ಮಾಡುತ್ತಾರೆ ಎನ್ನುವದರ ಬಗ್ಗೆ ಯಾರೋ ಮಿತ್ರರು colorful ಆಗಿ ವರ್ಣಿಸಿದ್ದರು. ರಸ ಸವಿಯೋಣ ಎಂದು ಹೋಗಿದ್ದೆನೋ ನೆನಪಿಲ್ಲ. ನಾನು ಹೋಗುವಷ್ಟರಲ್ಲಿ ನಾಯ್ಕರ್ ಸರ್ ಲೆಕ್ಚರ್ ಶುರುವಾಗಿತ್ತು. ಎಲ್ಲೋ ಬೆರಳಣಿಕೆಯಷ್ಟು ಜನ ಇದ್ದರು. ಧಾರವಾಡದ ಕರ್ನಾಟಕ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಜನ ಹೆಚ್ಚು. ಕ್ಲಾಸಿನಲ್ಲಿ ಕಮ್ಮಿ. ಮಜಾ ಮಾಡಲು ಹೇಳಿ ಮಾಡಿಸಿದಂತಹ ಅದ್ಭುತ ಕ್ಯಾಂಪಸ್ ಇರುವಾಗ ಕ್ಲಾಸಿನಲ್ಲಿ ಯಾವನು ಹೋಗಿ ಕೂಡ್ತಾನ್ರೀ!?

ಮಾಸ್ತರ್ ಕ್ಲಾಸಿನಲ್ಲಿದ್ದಾಗ ಅನುಮತಿ ಕೇಳಿ ಒಳಗೆ ಹೋಗುವದು ಪದ್ಧತಿ. ಒಳಗೆ ಹೋಗಿರಿ ಅಥವಾ ಹೊರಗೆ ಬನ್ನಿರಿ. ಮಾಸ್ತರ್ ಅಥವಾ ಮಾಸ್ತರಿಣಿ ಕಂಡರು ಅಂದರೆ ಅನುಮತಿ ಪಡೆದುಕೊಂಡೇ ಹೆಜ್ಜೆ ಎತ್ತಿಡಬೇಕು. ಇಲ್ಲವಾದರೆ ಅಪಚಾರ! ಅವರಿಗೆ ಮಾಡಿದ ಅವಮಾನ!

ಅನುಮತಿ ಇಲ್ಲದೇ ಕ್ಲಾಸಿನಲ್ಲಿ ಹೋಗಿ ಬಂದು ಮಾಡಕೂಡದು ಅಂತ ಬರೋಬ್ಬರಿ ಪಾಠ ಕಲಿಸಿದ್ದವರು ರೇವಣಕರ್ ಮೇಡಂ. ಹೈಸ್ಕೂಲಿನಲ್ಲಿ ಗಣಿತ, ವಿಜ್ಞಾನ ಪಾಠ ಮಾಡಿದ್ದರು. ಅದ್ಭುತ ಶಿಕ್ಷಕಿ. ಸದಾ ಜಾಲಿಯಾಗಿ ತಮಾಷೆ ಮಾಡಿಕೊಂಡು ಪಾಠ ಮಾಡುತ್ತಿದ್ದರು. ಒಂದಿನ ನನಗೆ ಮಧ್ಯಾನ್ಹ ಸ್ವಲ್ಪ ಬೇಗನೆ ಮನೆಗೆ ಓಡುವ ಅವಶ್ಯಕತೆ ಇತ್ತು. ಕ್ಲಾಸ್ ಟೀಚರಿಗೋ ಅಥವಾ ಬೇರೆ ಯಾರೋ ಮಾಸ್ತರಿಗೋ ಹೇಳಿ ಅನುಮತಿಯನ್ನು ಪಟಾಯಿಸಿಟ್ಟುಕೊಂಡಿದ್ದೆ. ಮಧ್ಯಾನ್ಹ ರೇವಣಕರ್ ಟೀಚರ್ ಪಿರಿಯಡ್ ಮುಗಿದಿದ್ದೆ ತಡ, ಟೀಚರ್ ಇನ್ನೂ ಕ್ಲಾಸಿನಲ್ಲಿದ್ದಾರೆ ಎನ್ನುವದನ್ನೂ ನಿರ್ಲಕ್ಷಿಸಿ ಹೊರಗೆ ಓಡಿದ್ದೆ. ಮರುದಿನ ಟೀಚರ್ ಕರೆದು ಸಣ್ಣಗೆ ಬೈದಿದ್ದರು. ಬೇರೆ ಯಾರೋ ಟೀಚರ್, ಮಾಸ್ತರ್ ಬೈದಿದ್ದರೆ 'ಕುದುರೆ ಜುಟ್ಟು. ಕತ್ತೆ ಬಾಲ,' ಅಂತ ಕಾಲರ್ ಮೇಲಿನ ಧೂಳು ಕೊಡವಿಕೊಂಡು ಬರುತ್ತಿದ್ದೆನೇನೋ. ಆದರೆ ರೇವಣಕರ್ ಟೀಚರ್ ಅಂದರೆ ಸಿಕ್ಕಾಪಟ್ಟೆ ಗೌರವ ಮತ್ತು ಲೈಕಿಂಗ್. ಅಂತವರು ಬೈದುಬಿಟ್ಟರು. ಅದೂ ತಮಗೊಂದು ಮಾತೂ ಹೇಳದೆ ಕ್ಲಾಸ್ ಬಿಟ್ಟು ಹೋದೆ ಅಂತ ಅವಮಾನಿತರಾಗಿ ನೊಂದುಕೊಂಡು ಬೈದರು ಎಂದು ಬೇಜಾರಾಗಿತ್ತು. ಮಂಗ್ಯಾ ಆದರೂ ಪಾಠ ಬರೋಬ್ಬರಿ ಕಲಿತಿದ್ದೆ. ಕ್ಲಾಸಿನಲ್ಲಿ ಮಾಸ್ತರ್ ಅಥವಾ ಮಾಸ್ತರಿಣಿ ಇದ್ದರೆ ಅವರ ಅನುಮತಿ ತೆಗೆದುಕೊಂಡೆ ಒಳಗೆ ಹೊರಗೆ ಹೋಗಿ ಬಂದು ಮಾಡುವದು ಎಂಬುದೇ ಮರೆಯಲಾರದ ಪಾಠ. 

ಈಗ ಇಲ್ಲಿ ನಾಯ್ಕರ್ ಮಾಸ್ತರರ ಕ್ಲಾಸ್ ನಡೆದಿತ್ತು. ಹಾಗಾಗಿ, ಬಾಗಿಲಲ್ಲೇ ನಿಂತು, 'May I come in, Sir?' ಅಂದೆ. ಇದ್ದ ಒಂದೂವರೆ ಡಜನ್ ವಿದ್ಯಾರ್ಥಿಗಳಿಗೆ ಭರ್ಜರಿ ಪಾಠ ಮಾಡುವಲ್ಲಿ ನಾಯ್ಕರ್ ಮಾಸ್ತರ್ ಮಗ್ನರಾಗಿದ್ದರು. ನಾನು ಹೇಳಿದ್ದು ಅವರಿಗೆ ಕೇಳಲಿಲ್ಲ ಅಂತ ಕಾಣುತ್ತದೆ. 'Come in,' ಅನ್ನಲಿಲ್ಲ. ಮತ್ತೆ ಕೇಳಿದೆ. ಆಗಲೂ ಉತ್ತರವಿಲ್ಲ. ಮತ್ತೊಂದು ನಾಲ್ಕು ಬಾರಿ ಕೇಳಿ, ಕೇಳಿ ಸುಸ್ತಾಗಿಬಿಟ್ಟೆ. ಒಳಗೆ ಬರಲೇನು ಅಂತ ಅನುಮತಿ ಕೇಳುವಾಗ ಆವಾಜ್ ಜಾಸ್ತಿ ಎತ್ತರಿಸುವಂತಿಲ್ಲ. ಏರು ದನಿಯಲ್ಲಿ ಯಾಕೆ ಪರ್ಮಿಷನ್ ಕೇಳಿದೆ ಅಂತ ನಂತರ ಬೈದರೆ ಕಷ್ಟ. ನಾನು ಬಾಗಿಲಲ್ಲಿ ನಿಂತು ಪರ್ಮಿಷನ್ ಕೇಳಿದ್ದು ನಾಯ್ಕರ್ ಮಾಸ್ತರಿಗೆ ಕೇಳಲಿಲ್ಲ. ಅತ್ಲಾಗೆ ಕಾಣಲೂ ಇಲ್ಲ. ಯಾಕೆಂದರೆ ಬಾಗಿಲಿಗೆ ಬೆನ್ನು ಹಾಕಿ ಕೊರೆಯುತ್ತ ನಿಂತಿದ್ದರಲ್ಲ. ಆದರೆ ನಾನು ಬಾಗಿಲಲ್ಲಿ, 'ದೀನ ನಾ ಬಂದಿರುವೆ. ಬಾಗಿಲಲ್ಲಿ ನಿಂತಿರುವೆ.......' ಅಂತ ಬೆಗ್ಗರ್ ಲುಕ್ಕಿನಲ್ಲಿ ನಿಂತಿದ್ದು ಬೇರೆ ವಿದ್ಯಾರ್ಥಿಗಳಿಗೆ ಕಂಡು ಅವರು ಕಿಸಿಕಿಸಿ ನಕ್ಕರು. ಪ್ರಾಕ್ಟಿಕಲ್ಸ್ ಒಂದು ಬಿಟ್ಟು ಎಂದೂ ಕಾಲೇಜಿಗೆ ಬರದವ ನಾನು ಅಂದು ಎಲ್ಲಾ ಬಿಟ್ಟು ಸಂಸ್ಕೃತ ನಾನ್-ಡೀಟೇಲ್ ಕ್ಲಾಸಿಗೆ ಬಂದಿದ್ದೇನೆ. ಬಂದು ಬಾಗಿಲಲ್ಲಿ ಬೆಗ್ಗರ್ ತರಹ ನಿಂತು 'ಅಮ್ಮಾ! ತಾಯಿ!' ಅಂತ ಭಜನೆ ಮಾಡುತ್ತಿದ್ದೇನೆ ಅಂತ ಒಂದಿಷ್ಟು ಜನರಿಗೆ ನಗೆ ಬಂದಿದ್ದರೆ ತಪ್ಪು ಅವರದಲ್ಲ ಬಿಡಿ.

ಆ ಯಬಡ ಸಹಪಾಠಿಗಳು ನಕ್ಕಿದ್ದು ನಾಯ್ಕರ್ ಮಾಸ್ತರರನ್ನು ಕೆರಳಿಸಿರಬೇಕು. ಕಾಳಿದಾಸನ ಅಭಿಜ್ಞಾನ ಶಾಕುಂತಲದ ಶೃಂಗಾರ ರಸವನ್ನು ಅವರದ್ದೇ ರಸವತ್ತಾದ ಶೈಲಿಯಲ್ಲಿ ಪಾಠ ಮಾಡುತ್ತಿದ್ದರು ಸರ್. ಹುಡುಗಿಯರು ತಲೆ ತಗ್ಗಿಸಿ ಮುಸಿಮುಸಿ ನಗುತ್ತಿದ್ದರೆ, ಹುಡುಗುರು ಖುಲ್ಲಂ ಖುಲ್ಲಾ ತೊಡೆತಟ್ಟಿ ನಕ್ಕು ಮಾಸ್ತರರಿಗೆ ಮತ್ತೂ ಹುರುಪು ತಂದುಕೊಡುತ್ತಿದ್ದರು. ಒಳ್ಳೆ ಮಲೆಯಾಳಿ ವಯಸ್ಕ ಸಿನೆಮಾದ screenplay ಮಾದರಿಯಲ್ಲಿ ನಾಯ್ಕರ್ ಮಾಸ್ತರರ ಶೃಂಗಾರ ರಸದ ವರ್ಣನೆ.

ಹೀಗೆ ಕ್ಲಾಸ್ ನಡೆಯುತ್ತಿದ್ದಾಗ ನಾನು ಶಿವಪೂಜೆಯಲ್ಲಿ ಕರಡಿ ಬಂದಂತೆ ಬಂದು 'ಅಮ್ಮಾ! ತಾಯಿ!' ಅನ್ನುತ್ತಿದ್ದೇನೆ. ಸರಕ್ ಅಂತ ಬಾಗಿಲ ಕಡೆಗೆ ತಿರುಗಿದವರೇ, 'Don't make your entry or exit a big scene. Come in.....' ಎಂದು ಅಸಹನೆಯಿಂದ ಗುಡುಗಬೇಕೇ ಸರ್!? ಶಿವಾಯ ನಮಃ! ವಿಧೇಯತೆಯಿಂದ ಅನುಮತಿ ಕೇಳಿದರೆ, 'ಸುಮ್ಮನೆ ಒಳಗೆ ಬಂದು ಕೂಡು. ನಿನ್ನ ಬರೋದು ಮತ್ತು ಹೋಗೋದನ್ನು ದೊಡ್ಡ ಸೀನ್ ಮಾಡಬೇಡ,' ಅಂದರು. ಅನುಮತಿ ಕೇಳದೇ ಕ್ಲಾಸಿನ ಒಳಗೆ ಹೋಗುವದನ್ನು ಆ  ಕಾಲದಲ್ಲಿ ಊಹಿಸಲೂ ಸಾಧ್ಯವಿರಲಿಲ್ಲ. ಹಾಗಿದ್ದಾಗ ಇವರೊಬ್ಬರು radical ಮಾಸ್ತರರು!

ಮಂಗ್ಯಾ ಆಗಿ, ಮಳ್ಳ ಮುಖ ಹೊತ್ತು ಒಳಗೆ ಹೋಗಿ ಕೂತೆ. ನಾಯ್ಕರ್ ಸರ್ ಅಮೋಘ ಪಾಠ ಮುಂದುವರೆಸಿದರು. ಸಂಸ್ಕೃತ ಕಾವ್ಯಗಳಲ್ಲಿನ ಶೃಂಗಾರ ವರ್ಣಿಸುವಾಗ ದೇಹದ ಹಾರ್ಮೋನುಗಳ ಬಗ್ಗೆ ಹೇಳಿ, ಹಾರ್ಮೋನುಗಳು ಹೇಗೆ ಹುಡುಗ ಹುಡುಗಿಯರನ್ನು ಶೃಂಗಾರದತ್ತ ತಳ್ಳುತ್ತವೆ ಅಂತ ತಮ್ಮದೇ ರೀತಿಯಲ್ಲಿ ವಿಚಿತ್ರವಾಗಿ ಪಾಠ ಮಾಡಿದ ಸಂಸ್ಕೃತ ಪಂಡಿತರು ಯಾರಾದರೂ ಇದ್ದರೆ ಅವರು ನಮ್ಮ ನಾಯ್ಕರ್ ಸರ್ ಅವರೇ ಇರಬೇಕು!

ನಾಯ್ಕರ್ ಸರ್ ನೋಡಲಿಕ್ಕೆ ಟಿಪಿಕಲ್ ಕಮ್ಯುನಿಸ್ಟ್ ಕ್ರಾಂತಿಕಾರಿಯಂತೆ ಇದ್ದರು. ತೆಳ್ಳಗೆ ನೀಳವಾಗಿದ್ದರು. ಕುರುಚಲು ಗಡ್ಡ. ಪ್ಯಾಂಟ್ ಮೇಲೆ ಜುಬ್ಬಾ ಹಾಕುತ್ತಿರಲಿಲ್ಲ. ರೆಗ್ಯುಲರ್ ಶರ್ಟ್ ಪ್ಯಾಂಟ್ ಹಾಕುತ್ತಿದ್ದರು. ಜುಬ್ಬಾ ಹಾಕಿ ಪ್ಯಾಂಟ್ ಹಾಕಿದ್ದರೆ ಥೇಟ್ ಕಮ್ಯುನಿಸ್ಟ್ ಕ್ರಾಂತಿಕಾರಿಯೇ. ಪಿಯೂಸಿ ಹುಡುಗರಿಗೆ, ಅದೂ ಸೈನ್ಸ್ ಹುಡುಗರಿಗೆ, ಸಂಸ್ಕೃತ ಪಾಠ ಮಾಡುವದು, ಅದೂ ಊಟವಾದ ಮೇಲೆ ಮಸ್ತ ನಿದ್ದೆ ಬರುವ ಹೊತ್ತಿಗೆ ನಿದ್ದೆ ಬರದಂತೆ ಪಾಠ ಮಾಡುವದು ಒಂದು ತರಹದ ಮಹಾನ್ ಕ್ರಾಂತಿಯೇ. ಹಾಗಾಗಿ ನಾಯ್ಕರ್ ಸರ್ ಕೂಡ ಕ್ರಾಂತಿಕಾರಿಯೇ.

ಇದಾದ ನಂತರ ಮತ್ತೆ ನಾಯ್ಕರ್ ಸರ್ ಕ್ಲಾಸಿಗೆ ಹೋಗಲೇಯಿಲ್ಲ. ಅವರ ಪೋಲಿ ರಸ ತುಂಬಿರುತ್ತಿದ್ದ ಪಾಠ ಕೇಳಲು ಹೋಗುತ್ತಿದ್ದ ದೋಸ್ತರು ನಾಯ್ಕರ್ ಸರ್ ಹೇಗೆ ಪಾಠ ಮಾಡಿದರು, ಹೇಗೆ ಹುಡುಗಿಯರು ತಲೆ ಎತ್ತದೇ ಕೂತರೂ ಒಳಗಿಂದೊಳಗೇ ಹೇಗೆಲ್ಲ ಎಂಜಾಯ್ ಮಾಡುತಿದ್ದರು ಅಂತೆಲ್ಲ ಕಥೆ ಹೊಡೆಯುತ್ತಿದ್ದರು. ಅದೆಲ್ಲ ಸೆಕೆಂಡ್ ಹ್ಯಾಂಡ್ ಮಾಹಿತಿಯಾದರೂ ಸಂಜೆಯ ಹರಟೆಗೆ ಸಖತ್ತಾಗಿರುತ್ತಿತ್ತು.

ಮುಂದೆ ಹಲವಾರು ವರ್ಷಗಳ ನಂತರ ಅಮೇರಿಕಾದ ಯೂನಿವರ್ಸಿಟಿಗಳಲ್ಲಿ ಓದಲು ಶುರುಮಾಡಿದಾಗ ಮತ್ತೆ ನಾಯ್ಕರ್ ಸರ್ ನೆನಪಾಗಿದ್ದರು. ಯಾಕೆಂದರೆ ಇಲ್ಲಿ ಯಾವ ವಿದ್ಯಾರ್ಥಿಯೂ ಕ್ಲಾಸಿನ ಒಳಗೆ ಬರಲು ಅಥವಾ ಹೊರಗೆ ಹೋಗಲು ಅನುಮತಿ ಕೇಳುವದಿಲ್ಲ. ಅದನ್ನೆಲ್ಲ ಶಿಕ್ಷಕರು ನಿರೀಕ್ಷೆ ಮಾಡುವದೂ ಇಲ್ಲ. ಶಿಕ್ಷಕರಿಗೆ ಯಾರೂ ಸರ್ ಗೀರ್ ಅನ್ನುವದೂ ಇಲ್ಲ. ಕೇವಲ ಹೆಸರು ಹೇಳಲು ಸಂಕೋಚ ಎನ್ನಿಸಿದರೆ ಅವರ ಹೆಸರಿನ ಹಿಂಬದಿಗೆ ಪ್ರೊಫೆಸರ್ ಅಂತ ಹೇಳಿದರೆ ದೊಡ್ಡ ಮಾತು. ಮತ್ತೆ ಮಾಸ್ತರ್ ಮಂದಿ ಕೂಡ ತುಂಬಾ informal ಆಗಿರುತ್ತಾರೆ. ಹಾಗಾಗಿ ಮಾಸ್ತರ್ ಜೊತೆ ತುಂಬಾ casual ಅನ್ನಿಸುವಂತಹ ಸಂಬಂಧ ಇರುತ್ತದೆ. ಆದರೂ  'ಗುರುಭ್ಯೋ ನಮಃ' ಎಂಬ ಸಂಸ್ಕೃತಿಯಿಂದ ಬಂದ ನಮ್ಮಂತವರಿಗೆ ಅದೆಲ್ಲ ವಿಚಿತ್ರ ಅನ್ನಿಸುತ್ತದೆ. ಅಮೇರಿಕಾದಲ್ಲಿ ಅದನ್ನೆಲ್ಲ ನೋಡಿದಾಗ ಅಂತಹ ಒಂದು ತರಹದ ಸಂಸ್ಕೃತಿಯನ್ನು ಇಪ್ಪತ್ತು ವರ್ಷ ಮೊದಲೇ ಧಾರವಾಡದಲ್ಲಿ ನಾಯ್ಕರ್ ಸರ್ ಹುಟ್ಟುಹಾಕಲು ಹೊರಟಿದ್ದರೇನೋ ಅನ್ನಿಸಿತ್ತು. Maybe our Naikar sir was ahead of our times!

೧೯೯೦ ರಲ್ಲಿ ಪಿಯೂಸಿ ಮುಗಿದ ನಂತರ ಮಾಜಿ ಕಾಲೇಜಿನ ಕಡೆ ಮುಂದೊಂದೆರೆಡು ವರ್ಷ 'ಪಕ್ಷಿವೀಕ್ಷಣೆಗೆ' ಹೋದಾಗಲೂ ಎಲ್ಲೂ ನಾಯ್ಕರ್ ಸರ್ ಕಂಡ ನೆನಪಿಲ್ಲ. ಮುಂದೆ ನಮ್ಮ ಕಲ್ಯಾಣನಗರ ಬಡಾವಣೆಯಲ್ಲಿಯೇ ಮನೆ ಕಟ್ಟಿ ಅಲ್ಲಿಗೆ ಶಿಫ್ಟಾಗಿದ್ದರು ಅಂತ ಕೇಳಿದ್ದೆ.

ಇರಲಿ. ಹೊಸವರ್ಷ 'May I come in?' ಅಂತ ಕೇಳಿ ಬರುವದಿಲ್ಲ ಅಂತ ಹೇಳಲು ಹೊರಟರೆ ನಾಯ್ಕರ್ ಸರ್ ನೆನಪಾದರು. ರೇವಣಕರ್ ಟೀಚರ್ ನೆನಪಾದರು. ಕಲಿಸಿದ ಗುರುಗಳು ಬೇರೆಬೇರೆ ಕಾರಣಗಳಿಗೆ ನೆನಪಾಗುತ್ತಲೇ ಇರುತ್ತಾರೆ. ಇವರು ಈ ಕಾರಣಕ್ಕೆ ನೆನಪಾದರು. ನಾಯ್ಕರ್ ಸರ್ ಆರಾಮ್ ಇರಲಿ. ಅವರೂ ನಿವೃತ್ತರಾಗಿ ದಶಕವೇ ಆಗಿರಬೇಕು. ಅವರ ನಿವೃತ್ತ ಜೀವನ ಸುಖಕರವಾಗಿರಲಿ. ಅದೇ ಕಾಲೇಜಿನಲ್ಲಿ ಪಾಠ ಮಾಡಿಕೊಂಡಿದ್ದ ದಂಡಾವತಿಮಠ ಮೇಡಂ ನಾಯ್ಕರ್ ಸರ್ ಪತ್ನಿ ಅಂತ ನೆನಪು. ಅವರೇನೂ ನಮಗೆ ಪಾಠ ಮಾಡಲಿಲ್ಲ. ಅವರು ಸಿನೆಮಾತಾರೆ ನಂದಿತಾ ದಾಸ್ ಮಾದರಿಯ ಲಕ್ಷಣವಂತ ಕೃಷ್ಣಸುಂದರಿ. ಅವರೂ ಆರಾಮಿರಲಿ. ಇನ್ನು ರೇವಣಕರ್ ಟೀಚರ್ ಬಗ್ಗೆ ಬರೆಯಲಿಕ್ಕೆ ಕೂತರೆ ಒಂದು ಪುಸ್ತಕ ಬರೆಯಬಹುದು. ಮುಂದೆ ಬರೆಯೋಣ. ಅವರೂ ಆರಾಮಿರಲಿ.

ನಿಮಗೆಲ್ಲ ೨೦೧೭ ರ ಶುಭಾಶಯಗಳು. Keep in touch!

Wednesday, November 23, 2016

ಕಾಡಿನಲ್ಲಿ ಕಳೆದುಹೋಗಿದ್ದ 'ದತ್ತಾತ್ರೇಯ'ನನ್ನು ಮನೆಮುಟ್ಟಿಸಿದ್ದು...

Thanksgiving - ಇಲ್ಲಿ ಉತ್ತರ ಅಮೇರಿಕಾದಲ್ಲಿ ದೊಡ್ಡ ಹಬ್ಬ. ಅಮೇರಿಕಾ ಖಂಡಕ್ಕೆ ಬಂದು ನೆಲೆಸಿದ ಯುರೋಪಿಯನ್ನರು ಶುರು ಮಾಡಿದ ಸಂಪ್ರದಾಯ. ವರ್ಷಕ್ಕೊಮ್ಮೆ ಕುಟುಂಬದವರೆಲ್ಲರೂ ಒಂದಾಗಿ, ಎಲ್ಲದಕ್ಕೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಬಡಾ ಖಾನಾ ಊಟ ಮಾಡಿ, ಮೋಜು ಮಸ್ತಿ ಮಾಡುವ ಸಮಯ.

ಹತ್ತು ವರ್ಷದ ಹಿಂದೆ, ೨೦೦೬ ರಲ್ಲಿ, ಕೂಡ Thanksgiving ಬಂದಿತ್ತು. ಪ್ರತಿವರ್ಷ ನವೆಂಬರ್ ತಿಂಗಳ ನಾಲ್ಕನೇಯ ಗುರುವಾರ ಬರುತ್ತದೆ Thanksgiving. ಮರುದಿನ ಶುಕ್ರವಾರವೂ ರಜೆ. ನಂತರ ವಾರಾಂತ್ಯ ಅಂತ ನಾಲ್ಕು ದಿನ ರಜೆ. ಹಿಂದೆ ಅಥವಾ ಮುಂದೆ ಮತ್ತೊಂದೆರೆಡು ದಿನ ರಜೆ ಹಾಕಿದರೆ ವಾರಪೂರ್ತಿ ರಜೆಯೋ ರಜೆ.

೨೦೦೬ ರಲ್ಲಿ ಅಮೇರಿಕಾದ ಪೂರ್ವ ಕರಾವಳಿಯ ಬಾಸ್ಟನ್ ನಗರದ ಆಸುಪಾಸಿನಲ್ಲಿದ್ದೆ. ಆ ವರ್ಷದ Thanksgiving ರಜೆಯಲ್ಲಿ Yogaville (ಯೋಗಾವಿಲ್) ಕಡೆ ಹೋಗುವ ಪ್ಲಾನ್ ಹಾಕಿದ್ದೆ. Yogaville - ವರ್ಜೀನಿಯಾ ರಾಜ್ಯದಲ್ಲಿರುವ ಒಂದು ಹಳ್ಳಿ. ಸ್ವಾಮಿ ಸಚ್ಚಿದಾನಂದ ಎಂಬ ಭಾರತೀಯ ಸನ್ಯಾಸಿಯೊಬ್ಬರು ಅಲ್ಲಿ ಆಶ್ರಮ ಸ್ಥಾಪಿಸಿಕೊಂಡಿದ್ದಾರೆ. ನಾನೇನು ಅವರ ಶಿಷ್ಯನಲ್ಲ. ಆದರೆ ಯೋಗಾವಿಲ್ ತುಂಬಾ ಸುಂದರವಾದ, ಪ್ರಶಾಂತವಾದ ಮತ್ತು  ನಿಸರ್ಗದ ಮಧ್ಯೆಯಿರುವ ಅದ್ಭುತ ಸ್ಥಳ ಅಂತ ಕೇಳಿದ್ದೆ. ಆಶ್ರಮದ website ನೋಡಿದ ಮೇಲಂತೂ ಫುಲ್ ಫಿದಾ. ದಟ್ಟ ಅರಣ್ಯದ ಮಧ್ಯೆ ಇರುವ ಒಂಟಿ ಆಶ್ರಮ. ಬಂದವರಿಗೆ ತಂಗಲು ಸುಂದರ ಸುಸಜ್ಜಿತ ಕುಟೀರಗಳು. ಕೊಂಚ ದೂರದಲ್ಲಿಯೇ ಸುಂದರ ಸರೋವರ ಮತ್ತು ಧ್ಯಾನಮಂದಿರ. ಇದೆಲ್ಲಾ  ನೋಡಿದ ಮೇಲೆ ಆ ವರ್ಷದ thanksgiving ರಜೆಯಲ್ಲಿ ಅಲ್ಲೇ ಹೋಗಿ ನಾಲ್ಕು ದಿನ ಇದ್ದು ಬರಲು ನಿಶ್ಚಯ ಮಾಡಿದೆ. ಫೋನ್ ಮಾಡಿ ಸ್ಥಳ ಕಾಯ್ದಿರಿಸಿದ್ದಾಯಿತು.

ಯೋಗಾವಿಲ್ ಸುಮಾರು ಆರುನೂರು ಮೈಲು ದೂರ. ಒಂದೇ ದಿನದಲ್ಲಿ ತಲುಪಬಹುದು. ನಮಗೇನು ಗಡಿಬಿಡಿ? ಮತ್ತೆ ಅಷ್ಟೆಲ್ಲ ಗಡಿಬಿಡಿ ಮಾಡಿ ದೌಡಾಯಿಸಿದರೆ ರಸ್ತೆ ಪ್ರಯಾಣ ಎಂಜಾಯ್ ಮಾಡುವದೆಲ್ಲಿ ಬಂತು? ಹಾಗಾಗಿ ಮೊದಲ ದಿನ ರಾತ್ರಿಗೆ ಆರಾಮವಾಗಿ ವಾಷಿಂಗ್ಟನ್ (ರಾಜಧಾನಿ) ಮುಟ್ಟಿಕೊಳ್ಳುವದು. ರಾತ್ರಿ ಅಲ್ಲಿಯೇ ವಸತಿ ಮಾಡಿ, ಮರುದಿನ interior ವರ್ಜಿನಿಯಾದ ಕಾಡಿನ ಮಧ್ಯದ ರಸ್ತೆಗಳ ಮೂಲಕ ಆರಾಮಾಗಿ ಡ್ರೈವ್ ಮಾಡ್ತುತ್ತ, ಸಂಜೆಗೂಡಿ ಯೋಗಾವಿಲ್ ಆಶ್ರಮ ಮುಟ್ಟಿಕೊಳ್ಳುವದು ಎಂದು ಯೋಚಿಸಿದೆ. ಅದೇ ಪ್ರಕಾರ ಬೆಳಿಗ್ಗೆ ಬಾಸ್ಟನ್ ಬಿಟ್ಟು ಸಂಜೆ ವಾಷಿಂಗ್ಟನ್ ಮುಟ್ಟಿ, ಅಲ್ಲಿನ ಹೋಟೆಲ್ಲವೊಂದರಲ್ಲಿ ತಂಗಿದೆ.

ಮರುದಿನ ಬೆಳಿಗ್ಗೆ ಹೊರಟೆ. ವರ್ಜೀನಿಯಾ ಬಹಳ ಸುಂದರ ರಾಜ್ಯ. ಪೂರ್ವ ಕರಾವಳಿಯ ರಾಜ್ಯಗಳೆಲ್ಲ ಸುಂದರವೇ ಅನ್ನಿ. ಒಂದು ಕಡೆ ಅಟ್ಲಾಂಟಿಕ್ ಸಾಗರ. ಎಲ್ಲಕಡೆ ಭರಪೂರ ಅರಣ್ಯ. ಬೆಟ್ಟಗುಡ್ಡ. ಎಲ್ಲಕಡೆ ಹಸಿರು. ನಡುನಡುವೆ ನದಿ, ತೊರೆ. ನೋಡಿದಲ್ಲಿ ಜಿಂಕೆಗಳು ಹಿಂಡು. ನಗರ ಪ್ರದೇಶ ಬಿಟ್ಟು ಸ್ವಲ್ಪ ಹೊರಗೆ ಬಂದುಬಿಟ್ಟರೆ ನಿಜವಾದ ಗ್ರಾಮೀಣ (rural) ಅಮೇರಿಕಾದ ಅಮೋಘ ಸೌಂದರ್ಯದರ್ಶನ. ಅಲ್ಲಿನ single lane ರಸ್ತೆಗಳಲ್ಲಿ ಸಂಗೀತ ಕೇಳುತ್ತ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತ, ನಿಧಾನವಾಗಿ ಡ್ರೈವ್ ಮಾಡುವದರಲ್ಲಿ ಇರುವ ಸುಖವನ್ನು ಅನುಭವಿಸಿಯೇ ತಿಳಿಯಬೇಕು. ಅಪರೂಪಕ್ಕೊಮ್ಮೆ ಛಂಗ ಅಂತ ರಸ್ತೆ ಹಾರಿಹೋಗುವ ಜಿಂಕೆಗಳಿಗೇನೂ ಕಮ್ಮಿಯಿಲ್ಲ. ಒಮ್ಮೆಲೇ ರಸ್ತೆ ಹಾರಿಹೋಗುವ ಜಿಂಕೆಗಳು ನೋಡಲು ರೋಚಕವಾದರೂ ಒಮ್ಮೊಮ್ಮೆ ದೊಡ್ಡ ಅಪಘಾತಗಳಿಗೆ ಕಾರಣವಾಗಿಬಿಡುತ್ತವೆ. ಹಾಗಾಗಿ ನಿರ್ಜನ ಪ್ರದೇಶ, ಟ್ರಾಫಿಕ್ ಕಮ್ಮಿ ಅಂತ ಮೈಮರೆತು ಡ್ರೈವ್ ಮಾಡುವಂತಿಲ್ಲ.

ದಾರಿ ಮಧ್ಯೆ ಶಾರ್ಲಟ್ಸ್ವಿಲ್ (Charollottesville) ಅನ್ನುವ ಪಟ್ಟಣ ಬಂತು. ಖ್ಯಾತ ಯೂನಿವರ್ಸಿಟಿ ಆಫ್ ವರ್ಜೀನಿಯಾ ಅಲ್ಲೇ ಇದೆ. ಅಣ್ಣ, ಅಣ್ಣನ ಧಾರವಾಡ ಸ್ನೇಹಿತ ಎಲ್ಲ ಅಲ್ಲೇ ಮಾಸ್ಟರ್ ಡಿಗ್ರಿ ಓದಿದ್ದರು. ಹಾಗಾಗಿ ಶಾರ್ಲಟ್ಸ್ವಿಲ್ ಪಟ್ಟಣವೆಂದರೆ ಮೊದಲಿಂದಲೂ ಏನೋ ಅಕ್ಕರೆ, ಆತ್ಮೀಯತೆ. ಆಧುನಿಕ ಅಮೇರಿಕಾದ ಸ್ಥಾಪಕರಲ್ಲೊಬ್ಬ ಮತ್ತು ಮೂರನೇಯ ಅಧ್ಯಕ್ಷನಾಗಿದ್ದ ಥಾಮಸ್ ಜೆಫರ್ಸನ್ ಕೂಡ ಅಲ್ಲಿಯವರೇ. ಅವರ ದೊಡ್ಡ ಎಸ್ಟೇಟ್ Monticello ಅಲ್ಲೇ ಇದೆ. ಅದನ್ನೆಲ್ಲ ಹಿಂದೊಮ್ಮೆ ೧೯೯೭ ರಲ್ಲಿ Charollottesville ಗೆ ಪ್ರವಾಸಕ್ಕೆಂದು ಭೇಟಿ ಕೊಟ್ಟಾಗ ನೋಡಿಯಾಗಿತ್ತು. ಹಾಗಾಗಿ ಈ ಸಲ ಅವೆಲ್ಲ ನೆನಪಾದವು. ಅಷ್ಟರಲ್ಲಿ ಪಟ್ಟಣಪ್ರದೇಶ ಮುಗಿದು ಮತ್ತೆ ವರ್ಜೀನಿಯಾದ ದಟ್ಟವಾದ ಅರಣ್ಯಪ್ರದೇಶ ಆರಂಭವಾಗಿತ್ತು. ಆಗ ಮಧ್ಯಾಹ್ನ ಸುಮಾರು ಮೂರು ಘಂಟೆ. ಚಳಿಗಾಲವಾಗಿದ್ದರಿಂದ ಬೇಗ ಕತ್ತಲಾಗುತ್ತದೆ. ದಟ್ಟಕಾಡುಗಳ ಪ್ರದೇಶದಲ್ಲಿ ಮತ್ತೂ ಬೇಗ. ಯೋಗಾವಿಲ್ ಆಶ್ರಮದಿಂದ ಹತ್ತಿಪ್ಪತ್ತು ಮೈಲಿ ದೂರವಿದ್ದೆ. ದಾರಿ ತೋರಿಸುತ್ತಿದ್ದ ಆ ಕಾಲದ ಡಬ್ಬಾ GPS ಆಗಾಗ ಉಪಗ್ರಹದ ಸಂಪರ್ಕ ಕಳೆದುಕೊಳ್ಳುತ್ತಿತ್ತು. ಕಾಡು ಕಮ್ಮಿಯಾಗಿ, line-of-sight ಸಿಕ್ಕು, ಸ್ಯಾಟಲೈಟ್ ಲಾಕ್ ಆದಾಗ ಮತ್ತೆ ದಾರಿ ತೋರಿಸುತ್ತಿತ್ತು. ಹಿಂದಿನ ಪಟ್ಟಣಪ್ರದೇಶದಿಂದ ಹೊರಬಿದ್ದಾಗ ಮೊಬೈಲ್ ಸಿಗ್ನಲ್ ಮಾಯವಾಗಿದ್ದು ಮತ್ತೆ ವಾಪಸ್ ಬಂದಿರಲಿಲ್ಲ. ಆ ದಟ್ಟಕಾಡಿನಲ್ಲಿ ಮೊಬೈಲ್ ಸಿಗ್ನಲ್ ಸಿಗುವ ಸಾಧ್ಯತೆಗಳೂ ಇರಲಿಲ್ಲ.

ಆಶ್ರಮ ತಲುಪಲು ಒಂದು ನಿರ್ದಿಷ್ಟ ಸ್ಥಳದಲ್ಲಿ ಮೇನ್ ರೋಡಿನಿಂದ ಎಡಕ್ಕೆ ತಿರುಗಿ ಕೊಂಚ ಕಚ್ಚಾ ರಸ್ತೆಯಲ್ಲಿ ಹೋಗಬೇಕಾಗಿತ್ತು. 'ಆ ಮುಖ್ಯ ತಿರುವನ್ನು ತಪ್ಪಿಸಿಕೊಳ್ಳಬೇಡಿ!' ಎಂದು ಆಶ್ರಮದ website ನಲ್ಲಿ ಹೇಳಿದ್ದರು. ಹಾಗಾಗಿ ಬಹಳ ಜಾಗರೂಕನಾಗಿದ್ದೆ.  ಆಗ ಒಮ್ಮೆಲೇ ಯಾವದೋ ಪ್ರಾಣಿ ರಸ್ತೆಯನ್ನು ಫಟಾಕ್! ಅಂತ ಕ್ರಾಸ್ ಮಾಡಿತು. ಜಿಂಕೆ ಅಲ್ಲ. ವೇಗ ಕಮ್ಮಿ ಇತ್ತು. ಕಣ್ಣರಳಿಸಿ ನೋಡಿದರೆ ನಾಯಿ. ಅರೇ ಇಸ್ಕಿ! ಈ ನಾಯಿ ಇಲ್ಲಿ ಹೆಂಗೆ? ಅದೂ ದಟ್ಟಕಾಡಿನ ಮಧ್ಯೆ??

ಮುಂದೆ ಎರಡೇ ಮಾರಿನಲ್ಲಿ ಆಶ್ರಮಕ್ಕೆ ಹೋಗುವ ಎಡತಿರುವು ಕಂಡಿತು. ತಿರುಗಿಸಿದರೆ ಸ್ವಲ್ಪ ಕಚ್ಚಾ ಅನ್ನಿಸುವಂತಹ ರಸ್ತೆ. ಡ್ರೈವ್ ಮಾಡಲು ತೊಂದರೆ ಇರಲಿಲ್ಲ. ಆಶ್ರಮ ಆರೇಳು ಮೈಲು ದೂರವಿತ್ತು.

ಗಾಡಿ ತಿರುಗಿಸಿ, ವೇಗ ಹೆಚ್ಚಿಸುವ ಮೊದಲು ಸಹಜವಾಗಿ ತಲೆ ಮೇಲಿರುವ rear-view ಕನ್ನಡಿ ನೋಡಿದರೆ ಏನು ಕಾಣಬೇಕು!? ಅದೇ ನಾಯಿ! ಸಣ್ಣ ಜಾತಿಯ Dachshund ನಾಯಿ. ಜೋರಾಗಿ ತೇಕುತ್ತ, ಏದುಸಿರು ಬಿಡುತ್ತ ಕಾರನ್ನು ಹಿಂಬಾಲಿಸುತ್ತಿದೆ. ಯಾಕೆ? ತಿಳಿಯಲಿಲ್ಲ. ರಸ್ತೆಯಲ್ಲಿ ಕಾಡಿನ ಮಧ್ಯೆ ಹಾಗೆಲ್ಲ ನಾಯಿ ಕಾಣುವದಿಲ್ಲ. ಕಂಡರೆ ಜಾಸ್ತಿ ಹೊತ್ತು ಬದುಕುವದೂ ಇಲ್ಲ. ಯಾವದಾದರೂ ವಾಹನಕ್ಕೆ ಸಿಕ್ಕಿ ಶಿವನ ಪಾದ ಸೇರುತ್ತದೆ. ಇಲ್ಲಿ ನೋಡಿದರೆ ನಾಯಿ ಕಂಡಿದ್ದೊಂದೇ ಅಲ್ಲ. ನಿಧಾನವಾಗಿ ಚಲಿಸುತ್ತಿರುವ ನನ್ನ ಕಾರನ್ನು ಹಿಂಬಾಲಿಸಿ ಬರುತ್ತಿದೆ. 'ಪ್ಲೀಸ್, ಕಾರ್ ನಿಲ್ಲಿಸು. ಪ್ಲೀಸ್!' ಅಂತ ಕೇಳಿಕೊಂಡಿತು ನಾಯಿ. ಅದರ ದೈನ್ಯ ಮುಖ ನೋಡಿ ಹಾಗಂತ ನನಗನ್ನಿಸಿಬಿಟ್ಟಿತು. ಬ್ರೇಕ್ ಹಾಕಿಯೇಬಿಟ್ಟೆ. ಅಲ್ಲೇ ರಸ್ತೆ ಬದಿಯಲ್ಲಿ ನಿಲ್ಲಿಸಿದೆ. ಏನೇ ಇರಲಿ ಹಿಂಬಾಲಿಸಿ ಬರುತ್ತಿರುವ ನಾಯಿ ಮಹಾತ್ಮೆ ನೋಡಿಯೇ ಮುಂದೆ ಹೋಗೋಣ ಎಂದು ವಿಚಾರ ಮಾಡಿದೆ.

ದಾರಿಯಲ್ಲಿ ಸಿಕ್ಕಿದ್ದ ನಾಯಿ ಸುಮಾರು ಹೀಗೇ ಇತ್ತು


ಕಾರ್ ನಿಂತಿತು ಅಂತ excite ಆದ ನಾಯಿ ದಬಾಯಿಸಿ ಓಡಿ ಬಂದಿತು. 'ಸದ್ಯ ನಿಂತಿರುವ ಕಾರ್ ಮತ್ತೆ ಹೋಗಿಬಿಟ್ಟರೆ ನಾನು ಕೆಟ್ಟೆ!' ಅನ್ನುವ ಮಾದರಿಯಲ್ಲಿ ಸಿಕ್ಕಾಪಟ್ಟೆ ತರಾತುರಿಯಲ್ಲಿ ಓಡಿ ಬಂತು. ಆ ಗಿಡ್ಡ ನಾಯಿ ಅಷ್ಟು ಫಾಸ್ಟಾಗಿ ಓಡಿದ್ದು ಅದೇ ಮೊದಲಿರಬೇಕು. ಸಿಕ್ಕಾಪಟ್ಟೆ ಸುಸ್ತಾಗಿತ್ತು ಅದಕ್ಕೆ.

ನಾನು ಕಾರ್ ಬಾಗಿಲು ತೆಗೆದು ಹೊರಗೆ ಬಂದೆ. ಮುಂದಾಗಿದ್ದು ಮಾತ್ರ ಟಿಪಿಕಲ್. ಟಿಪಿಕಲ್ ನಾಯಿ ಪ್ರೀತಿ. ಗಿಡ್ಡ ತಳಿಯ ನಾಯಿಯಾದರೂ ಎಗರಿ ಎಗರಿ, ಕಾಲು ನೆಕ್ಕಿ, ಬಾಲ ಮುರಿದುಹೋಗುವ ಹಾಗೆ ಬಾಲ ಅಲ್ಲಾಡಿಸಿ, ಕುಂಯ್ ಕುಂಯ್ ಅಂದು ಪ್ರೀತಿ ಮಾಡಿತು ಆ ನಾಯಿ. ನಾಯಿ ಪ್ರೀತಿ ಹೇಗಿರುತ್ತದೆ ಅನ್ನುವದು ಮಾಡಿಸಿಕೊಂಡವರಿಗೆ ಮಾತ್ರ ಗೊತ್ತು ಬಿಡಿ.

ನಾಯಿಗಳೇ ಹಾಗೆ. ಅವುಗಳಿಗೆ ಸದಾ ಮನುಷ್ಯ ಸಂಪರ್ಕ ಬೇಕು. ಅದರಲ್ಲೂ ಸಾಕಿದ ನಾಯಿಗಳು ಅಪರಿಚಿತ ಪ್ರದೇಶದಲ್ಲಿ ಕಳೆದುಹೋದಾಗ, ಜೊತೆಗೆ ಯಾರೂ ಇಲ್ಲದಾಗ ಪೂರ್ತಿ ಪರದೇಶಿಗಳಾಗಿ ಫುಲ್ ಕಂಗಾಲಾಗಿಬಿಡುತ್ತವೆ. ಅಂತಹ ಹೊತ್ತಿನಲ್ಲಿ ಯಾವ ಮನುಷ್ಯರು ಕಂಡರೂ ಓಕೆ. 'ಅಬ್ಬಾ! ಅಂತೂ ಒಬ್ಬ ಮನುಷ್ಯ ಸಿಕ್ಕ. ಇನ್ನು ಒಂದು ತರಹದ ನಿರುಮ್ಮಳ,' ಅನ್ನುವ ಭಾವನೆ ನಾಯಿಗಳಿಗೆ. ಮನುಷ್ಯ ಸಂಪರ್ಕ ಸಿಕ್ಕಿತು ಎಂದು ಸಿಕ್ಕಾಪಟ್ಟೆ ಖುಷಿ ಮತ್ತು ನೆಮ್ಮದಿ ಅವುಗಳಿಗೆ. ಅವನ್ನೆಲ್ಲ ಮಾತಾಡಿ ತೋರಿಸಲು ಅವು ಪಾಪ ಮೂಕಪ್ರಾಣಿ. ಹಾಗಂತ ಭಾವನೆಗಳನ್ನು ನಾಯಿಪ್ರೀತಿ ಮೂಲಕ ವ್ಯಕ್ತಪಡಿಸುವಲ್ಲಿ ನಾಯಿಗಳು expert.

ಆ ಅಪರಿಚಿತ ನಾಯಿಯ ಪ್ರೀತಿಯಿಂದ ನಾನೂ ಕರಗಿಹೋದೆ. ಅದು ಕರುಣಾಜನಕ ರೀತಿಯಲ್ಲಿ ಕಾರಿನ ಹಿಂದೆ ಏದುಸಿರು ಬಿಡುತ್ತ ಓಡಿ ಬರುತ್ತಿರುವಾಗಲೇ ಹೃದಯ ಮಿಡಿದಿತ್ತು. ಈಗ ಆ ಸಣ್ಣ ಸೈಜಿನ ನಾಯಿಯ ದೊಡ್ಡ ಸೈಜಿನ ಪ್ರೀತಿ ಹೃದಯವನ್ನು ಪೂರ್ತಿ ಕರಗಿಸಿಬಿಟ್ಟಿತು. ಬಗ್ಗಿ ಕೂತು ಆ ನಾಯಿಯನ್ನು ಒಂದಿಷ್ಟು ಮುದ್ದಾಡಿದಾಗ ನನಗೂ ಹಾಯೆನಿಸಿತು. ನಾವೂ ಸಹ ನಾಯಿಪ್ರಿಯರೇ ನೋಡಿ. ಮಳೆಯಲ್ಲೋ ಇಬ್ಬನಿಯಲ್ಲೋ ತೊಯ್ದ ನಾಯಿಯ ಮೈಯಿಂದ ಟಿಪಿಕಲ್ ವಾಸನೆ. ನಗು ಬಂತು.

ಸಾಕಿದ ನಾಯಿ ಬೆಕ್ಕುಗಳ ಕೊರಳಪಟ್ಟಿಗೆ ವಿಳಾಸವಿರುವ ಒಂದು ಲೋಹದ ಟ್ಯಾಗ್ ಇರುವದು ಸಹಜ ಇಲ್ಲಿ. ಈ ನಾಯಿಯ ಕೊರಳಲ್ಲೂ ಇತ್ತು. ಅದರ ಮೇಲೆ ವಿಳಾಸ ಮತ್ತು ಫೋನ್ ನಂಬರ್ ಎರಡೂ ಇತ್ತು. ನನ್ನ ಮೊಬೈಲ್ ಫೋನ್ ತೆಗೆದು ನೋಡಿದರೆ ಸಿಗ್ನಲ್ ಇಲ್ಲ. ಕಾಡಿನ ಮಧ್ಯೆ ಫೋನ್ ಬೂತ್ ಇರುವ ಚಾನ್ಸೇ ಇಲ್ಲ. ಹೇಗೆ ಸಂಪರ್ಕಿಸಲಿ ಈ ನಾಯಿಯ ಮಾಲೀಕರನ್ನು?

ಕತ್ತಲಾಗುತ್ತಿದೆ. ಜೊತೆಗೆ ಕಾಲಿಗೆ ಅಡರಿಕೊಂಡು, 'ಪ್ಲೀಸ್, ನನ್ನನ್ನು ಒಬ್ಬನೇ ಇಲ್ಲಿ ಬಿಟ್ಟು ಹೋಗದಿರು. ನೀ ಬಿಟ್ಟೆ ಅಂದರೆ ನಾ ಕೆಟ್ಟೆ,' ಅಂತ ಮೈಗೊರಗಿ ನಿಂತಂತಹ helpless ನಾಯಿ. ಮುಗ್ಧ ಮೂಕಪ್ರಾಣಿ. ಏನು ಮಾಡಲಿ? ನಾಯಿಯ ಮಾಲೀಕರಿಗೆ ಫೋನ್ ಮಾಡಲಿಕ್ಕೆ ಫೋನಿಲ್ಲ. ಪಾಪದ ನಾಯಿಯನ್ನು ಅಲ್ಲೇ ಬಿಟ್ಟು ಕಾರ್ ಎತ್ತಿಗೊಂಡು ಓಡಬಹದು. ಹಾಗೆ ಮಾಡಿದರೆ ದೇವರು ಕ್ಷಮಿಸಿದರೂ ಅಂತರಾತ್ಮ ಜೀವನವಿಡೀ ಕ್ಷಮಿಸುವದಿಲ್ಲ. ನಿಸ್ಸಹಾಯಕ ಆ ನಾಯಿಯನ್ನು ಅಲ್ಲೇ ಬಿಟ್ಟು ಬರುವದನ್ನು ಊಹೆ ಮಾಡಿಕೊಳ್ಳಲೂ ಅಸಾಧ್ಯ. ಆ ನಾಯಿಯ ಅದೃಷ್ಟ ಅಲ್ಲಿಯವರೆಗೆ ಏನೋ ಚೆನ್ನಾಗಿತ್ತು ಅಂತ ಬಚಾವಾಗಿದೆ. ಅದೆಷ್ಟು ವಾಹನಗಳ ಹಿಂದೆ ಓಡಿತ್ತೋ. ಅದ್ಯಾವ್ಯಾವ ವಾಹನಗಳನ್ನು ಯಾರಾದರೂ ಸಹಾಯ ಮಾಡಿಯಾರು ಅಂತ ಅಡ್ಡಹಾಕಿತ್ತೋ. ಅದರ ಪುಣ್ಯಕ್ಕೆ ಯಾವದೇ ವಾಹನ ಅದರ ಮೇಲೆಯೇ ಹರಿದುಹೋಗಿ ನಾಯಿ ಸತ್ತಿಲ್ಲ. ಘಂಟೆಗೆ ಐವತ್ತು ಅರವತ್ತು ಮೈಲಿ  ವೇಗದಲ್ಲಿ ಹೋಗುವ ವಾಹನ ಕೊಂಚ ಟಚ್ ಆದರೂ ಸಾಕು. ಮನುಷ್ಯರೇ ಶಿವಾಯ ನಮಃ ಆಗುತ್ತಾರೆ. ಇನ್ನು ಸಣ್ಣ ಸೈಜಿನ ನಾಯಿ ಅಷ್ಟೊತ್ತಿನ ತನಕ ಬಚಾವಾಗಿದ್ದೇ ದೊಡ್ಡ ಮಾತು. ಹೀಗೆ ಪರಿಸ್ಥಿತಿ ಖರಾಬ್ ಇರುವಾಗ ನಾನೂ ಸಹ ಆ ನಿಷ್ಪಾಪಿ ನಾಯಿಯನ್ನು ಅಲ್ಲೇ ಬಿಟ್ಟು, ಅದಕ್ಕೆ ಬೆನ್ನು ಹಾಕಿಹೋದರೆ ಇರುವ ಕೊಂಚ ಮನುಷ್ಯತ್ವಕ್ಕೂ ಬೆಲೆ ಇಲ್ಲದಂತಾಗುತ್ತದೆ.

ನಾಯಿಯ ಟ್ಯಾಗ್ ಮೇಲಿದ್ದ ವಿಳಾಸ ಅಸ್ಪಷ್ಟವಾಗಿತ್ತು. ಮತ್ತೆ ಎಷ್ಟು ದೂರವೋ ಏನೋ. ಆಶ್ರಮಕ್ಕೆ ಇನ್ನೂ ಐದಾರು ಮೈಲಿ. ನಾಯಿಯನ್ನು ಅಲ್ಲಿಗೇ ಕರೆದುಕೊಂಡು ಹೋಗಲೇ? ಅಲ್ಲಿಗೆ ಕರೆದುಕೊಂಡ ಹೋದ ಮೇಲೆ ಮುಂದೆ? ಅಲ್ಲಿ ನಾಯಿಯನ್ನು ಎಲ್ಲಿ ಇಟ್ಟುಕೊಳ್ಳೋಣ? ಆಶ್ರಮ ಅಂದ ಮೇಲೆ ಪ್ರಾಣಿಗಳ ಮೇಲೆ ನಿರ್ಬಂಧ ಇತ್ಯಾದಿ ಇರುವ ಸಾಧ್ಯತೆಗಳು ಹೆಚ್ಚು. ಆದರೂ ಅಲ್ಲಿ ಫೋನ್ ಅಂತೂ ಇರುತ್ತದೆ. ಅಲ್ಲಿಂದ ಫೋನ್ ಮಾಡಿದರೆ ನಾಯಿಯ ಮಾಲೀಕರು ಅಲ್ಲಿಗೆ ಬಂದು ನಾಯಿಯನ್ನು ಕರೆದುಕೊಂಡು ಹೋಗಬಹುದು. ಹೀಗೆ ಒಂದು ಐಡಿಯಾ ಬಂತು. ಆದರೂ ಆಶ್ರಮಕ್ಕೆ ನಾಯಿಯನ್ನು ಕರೆದುಕೊಂಡು ಹೋಗುವ ಐಡಿಯಾ ಯಾಕೋ intuition ಗೆ ಒಪ್ಪಿಗೆಯಾಗಲಿಲ್ಲ. ಕಠಿಣ ಸಂದರ್ಭಗಳಲ್ಲಿ gut instincts ಗಳಿಗೆ ಮಹತ್ವ ಕೊಡಬೇಕು. ಅವು ಸರಿಯಾದ ದಾರಿ ತೋರಿಸುತ್ತವೆ ಎಂದು ಎಲ್ಲೋ ಓದಿದ ನೆನಪು. ಹಾಗಾಗಿ ನಾಯಿಯನ್ನು ಆಶ್ರಮಕ್ಕೆ ಕರೆದೊಯ್ಯುವ ಐಡಿಯಾ ಕೈಬಿಟ್ಟೆ.

ಮತ್ತೊಂದು ಐಡಿಯಾ ಬಂತು. ಅದೇನೆಂದರೆ ಆ ಏರಿಯಾದಲ್ಲಿ ಇರಬಹುದಾದ ಯಾರದ್ದಾದರೂ ಮನೆಗೆ ಹೋಗಿ ನಾಯಿಯ ಮಾಲೀಕರಿಗೆ ಫೋನ್ ಮಾಡುವದು. ಮಾಲೀಕರು ಬರುವ ತನಕ ಅಲ್ಲೇ ಇದ್ದು, ಅವರು ಬಂದ ಮೇಲೆ ನಾಯಿಯನ್ನು ಒಪ್ಪಿಸಿ, ಆಶ್ರಮದ ಕಡೆ ಹೊರಡುವದು. ದಾರಿಯಲ್ಲಿ ಬರುವಾಗ ಅಲ್ಲಲ್ಲಿ ವಿರಳವಾಗಿ ಮನೆಗಳಿವೆ ಅನ್ನುವ ಸಂಗತಿ ತಿಳಿದಿತ್ತು. ರಸ್ತೆ ಮೇಲೆ ಫಲಕಗಳಿದ್ದವು. ರಸ್ತೆ ಪಕ್ಕದಲ್ಲಿ ಮನೆಗಳಿರಲಿಲ್ಲ. ರಸ್ತೆ ಬದಿಗಿನ ಒಳದಾರಿಗಳಲ್ಲಿ ಒಂದೆರೆಡು ಮೈಲಿ ಹೋದರೆ ಮನೆಗಳಿವೆ ಅಂತ ಬೋರ್ಡ್ ಹಾಕಿದ್ದರು.

ಡ್ರೈವರ್ ಪಕ್ಕದ ಸೀಟಿನ ಬಾಗಿಲು ತೆಗೆದೆ. ನಾಯಿ ಚಂಗನೆ ಕಾರೊಳಗೆ ಹಾರಿ ಪ್ಯಾಸೆಂಜರ್ ಸೀಟಿನ ಮೇಲೆ ಸ್ಥಾಪಿತವಾಯಿತು. ಅಮೇರಿಕಾದ ನಾಯಿಗಳಿಗೆ ಅದು reflex. ಕಾರಿನಲ್ಲಿ ಓಡಾಡಿ ರೂಢಿಯಾಗಿರುತ್ತದೆ. ಹಾಗಾಗಿ ಕಾರಿನ ಡೋರ್ ತೆಗೆದಾಕ್ಷಣ ಒಳಗೆ ಹತ್ತಿ ಕೂತುಬಿಡುತ್ತವೆ. ಅದರಲ್ಲೂ ಈ ನಾಯಿಯಂತೂ ಅದೆಷ್ಟು ಕ್ಯೂಟ್ ಆಗಿ ಸೀಟ್ ಹತ್ತಿ ಕೂತಿತು ಅಂದರೆ ಮತ್ತಿಷ್ಟು ಮುದ್ದು ಮಾಡಬೇಕು ಅನ್ನಿಸುವಂತೆ ಕೂತಿತ್ತು. ಅದರ ಮೈ ಮೇಲೆ ಕೈಯಾಡಿಸಿ ಈಕಡೆ ಬಂದು ಗಾಡಿ ಸ್ಟಾರ್ಟ್ ಮಾಡಿದೆ. ಮನೆ ಕಡೆ ಹೊರಟೆವು ಅಂತ ನಾಯಿ ಫುಲ್ ಖುಷ್. ಮೈ ಕೈ ನೆಕ್ಕಿ ಪ್ರೀತಿ ಮಾಡಲು ಬಂತು. 'ಸದ್ಯ ಸುಮ್ಮನೆ ಕೂಡು. ನಂತರ ನೋಡೋಣ,' ಅಂದೆ. ನಾಯಿ ಮಳ್ಳ ಮುಖ ಮಾಡಿ ಕೂತಿತು. ಗಾಡಿ ತಿರುಗಿಸಿ ಮತ್ತೆ ಮೇನ್ ರೋಡಿಗೆ ಬಂದೆ.

ಒಂದು ಅರ್ಧ ಮೈಲಿ ಬರುವಷ್ಟರಲ್ಲಿ ಮೊದಲನೇ ಫಲಕ ಕಂಡಿತು. ಅಲ್ಲಿ ಗಾಡಿ ತಿರುಗಿಸಿ ಕಚ್ಚಾ ರಸ್ತೆಯಲ್ಲಿ ಒಂದು-ಒಂದೂವರೆ ಮೈಲಿ ಹೋದರೆ ಕಂಡಿದ್ದು ಒಂದು ದೊಡ್ಡ ರಾಂಚ್ (ranch). ನಮ್ಮ ಸಿರ್ಸಿ ಕಡೆ ಕಾಡಿನ ಮಧ್ಯೆ ತೋಟ ಮತ್ತು ತೋಟದ ಮಧ್ಯೆ ಮನೆಯಿರುತ್ತದೆ ನೋಡಿ. ಆ ಮಾದರಿ. ಇಲ್ಲಿ ತೋಟವಿಲ್ಲ. ನೂರಾರು ಎಕರೆ ಇರುವ ರಾಂಚ್. ಜೊತೆಗೆ ಒಂದಿಷ್ಟು ದನ ಇತ್ಯಾದಿ.

ಅಷ್ಟೆಲ್ಲ ಇದ್ದರೂ ಅಲ್ಲೆಲ್ಲೂ ಮನುಷ್ಯರ ಸುಳಿವೇ ಇಲ್ಲ. ಎಲ್ಲಿ ಹೊಲದಕಡೆ ಹೋಗಿದ್ದಾರೋ ಏನೋ. ಅಮೇರಿಕಾದಲ್ಲಿ trespassing ಮಾಡುವದು ಬಹಳ ರಿಸ್ಕಿ. ತಮ್ಮ ಪ್ರಾಪರ್ಟಿ ಮೇಲೆ ಯಾರಾದರೂ ಅನಧೀಕೃತವಾಗಿ ಎಂಟ್ರಿ ಕೊಟ್ಟರೆ ಮಾಲೀಕರು ಗುಂಡು ಹಾರಿಸಿದರೂ ಆಶ್ಚರ್ಯವಿಲ್ಲ. ಮತ್ತೆ ಗ್ರಾಮೀಣ ಪ್ರದೇಶದಲ್ಲಿ, ಕಾಡಿರುವ ಪ್ರದೇಶದಲ್ಲಿ ಬಂದೂಕುಗಳು ಬಹಳ ಜಾಸ್ತಿ. trespassers ಮೇಲೆ ಗುಂಡು ಹಾರಿಸಿದರೆ ಅದು ಅಪರಾಧವವೂ ಅಲ್ಲ. ಹೇಳಿಕೇಳಿ ಬಂದೂಕಿನ ಮೇಲೆಯೇ ಕಟ್ಟಿದ ದೇಶ ಅಮೇರಿಕಾ. ಈ ನಾಯಿಯನ್ನು ಮನೆ ಮುಟ್ಟಿಸುವ ಉಮೇದಿಯಲ್ಲಿ ನಾವು ಯಾರ್ಯಾರದ್ದೋ ಮನೆಗೆ ಹೋಗುವದು. ಅವರು ನಾವು ಯಾರೋ ಕಳ್ಳರೋ ದರೋಡೆಕೋರರೋ ಅಂದುಕೊಂಡು ಗುಂಡು ಪಿಂಡು ಹಾರಿಸಿ ಒಂದಕ್ಕೆರೆಡು ಹಡಾಗತಿ ಆಗುವದು. ಅದೆಲ್ಲ ಲಫಡಾ ಯಾರಿಗೆ ಬೇಕು? ಹೀಗೆ ವಿಚಾರ ಮಾಡಿ ಮೊದಲು ಆ ನಿರ್ಜನ ranch ನಿಂದ ಜಾಗ ಖಾಲಿ ಮಾಡಿದೆ. ಗಾಡಿ ಎತ್ತಿ ಮತ್ತೆ ಮೇನ್ ರೋಡಿಗೆ ಬಂದಾಗಲೇ ಒಂದು ತರಹದ ನಿರುಮ್ಮಳ. ಗೊತ್ತಿಲ್ಲದೇ trespassing ಮಾಡಿ ಗುಂಡೇಟು ತಿಂದು ಜನರು ಶಿವಾಯ ನಮಃ ಆದ ಘಟನೆಗಳು ಬೇಕಾದಷ್ಟಿವೆ. ಹಾಗಾಗಿ ಕೇರ್ಫುಲ್ ಆಗಿರಬೇಕು.

ಮತ್ತೊಂದು ಕಚ್ಚಾ ರಸ್ತೆ ಹೊಕ್ಕೆ. ಒಳಗೆ ಒಂದೆರೆಡು ಮೈಲಿ ನಿಧಾನಕ್ಕೆ ಡ್ರೈವ್ ಮಾಡಿಕೊಂಡು ಹೋದ ಮೇಲೆ ಮತ್ತೊಂದು ಮನೆ ಕಂಡುಬಂತು. ತುಂಬಾ ದೊಡ್ಡ ಪ್ರಾಪರ್ಟಿ ಅಲ್ಲ. ಕಚ್ಚಾ ರಸ್ತೆಯ ಅಂತ್ಯದಲ್ಲೇ ಮನೆ ಬಾಗಿಲು. ಅದಕ್ಕೊಂದು ಕರೆಗಂಟೆ. ಹೀಗಾಗಿ ಬಟಾಬಯಲಿನಲ್ಲಿ, ಬಂದೂಕಿಗೆ ಟಾರ್ಗೆಟ್ ಆಗುವ ಭಯವಿಲ್ಲ. ಬೆಲ್ ಮಾಡಿ ನೋಡುವದು. ಯಾರಾದರೂ ಬಂದರೆ ಸರಿ. ಇಲ್ಲವಾದರೆ ಮತ್ತೊಂದು ಮನೆ ಹುಡುಕುವದು. ಹೀಗೆ ವಿಚಾರ ಮಾಡುತ್ತ ಆ ಮನೆಯ ಕರೆಗಂಟೆ ಒತ್ತಿದೆ.

ಮತ್ತೆ ಮತ್ತೆ ಕರೆಗಂಟೆ ಒತ್ತಿದ ನಂತರ ಯಾರೋ ಬಾಗಿಲಿಗೆ ಬಂದರು. 'ದೇವರೇ, ಇವರು ಬಂದೂಕು ಪಿಂದೂಕು ಹಿಡಿದುಕೊಂಡು ಬರದಿದ್ದರೆ ಅಷ್ಟೇ ಸಾಕು!' ಅಂದುಕೊಂಡೆ. ಬಂದು ಬಾಗಿಲು ತೆಗೆದಾಕೆ ಒಬ್ಬ ಮಧ್ಯವಯಸ್ಕ ಬಿಳಿಯ ಮಹಿಳೆ. ಹಾಗೆ ಕಾಡಿನ ಮಧ್ಯೆ ಇರುವ ಮಂದಿಗೆ ಅಪರಿಚಿತರ ಅದರಲ್ಲೂ ಬೇರೆ ಜನಾಂಗದವರ (race) ಸಂಪರ್ಕ ಕಮ್ಮಿ. ಅವರದ್ದೇನಿದ್ದರೂ ಬಿಳಿ ಜನರ ಜೊತೆ ಪಾರ್ಟಿ. ಕೆಲಸ ಮಾಡಲು ಕರಿ ಜನರು. ಗುಲಾಮಿ ಪದ್ಧತಿ ಇಲ್ಲದಿದ್ದರೂ ಕೆಲಸಕ್ಕೆ ಈಗಲೂ ಕರಿಯರೇ. ಹಾಗಿರುವಾಗ ನಾನು, ಕಂದುಬಣ್ಣದ ಆದ್ಮಿಯೊಬ್ಬ, ಮನೆ ಮುಂದೆ ಬಂದು ನಿಂತಿದ್ದು ಆಕೆಗೆ ಆಶ್ಚರ್ಯವೋ ಆಶ್ಚರ್ಯ.

ನನ್ನ ಶುದ್ಧ ಇಂಡಿಯನ್ accent ಇಂಗ್ಲೀಷಿನಲ್ಲಿ ವಿವರಿಸಿದೆ. ಅವಳಿಗೆ ನನ್ನ ಇಂಗ್ಲೀಷ್ ತಿಳಿಯಲು ಸ್ವಲ್ಪ ವೇಳೆ ಹಿಡಿಯಿತು. ಈ ಮೊದಲು ಹೇಳಿದಂತೆ ಅಂತಹ remote ಏರಿಯಾದಲ್ಲಿರುವವರಿಗೆ ಜನಸಂಪರ್ಕ ಕಮ್ಮಿ. ಹಾಗಾಗಿ ನಾನು ಏನು ಹೇಳುತ್ತಿದ್ದೇನೆ ಎಂದು ಆಕೆಗೆ ವಿಷಯ ಫುಲ್ ಕ್ಲಿಯರ್ ಆಗಲು ಕೊಂಚ ವೇಳೆ ಹಿಡಿಯಿತು. ಕಾರಿನಲ್ಲಿ ಕೂತಿದ್ದ ನಾಯಿಯನ್ನು ತೋರಿಸಿದ ಮೇಲೆ ಅವಳಿಗೆ ಎಲ್ಲ ತಿಳಿಯಿತು. ದೊಡ್ಡ ಗಲಗಲ ನಗೆ ನಕ್ಕು, Oh! ಅಂತ ಉದ್ಗರಿಸಿ, ಎರಡೂ ಕೈ ಮೇಲೆ ತೆಗೆದುಕೊಂಡು ಹೋಗಿ, ಪೂರ್ತಿ ದೇಹವನ್ನು ಕುಲಕಿಸುತ್ತ,  ಹಾ! ಹಾ! ಅಂತ ನಕ್ಕಳು. ನಾನು ಅಬ್ಬಾ! ಅಂತ ನಿಟ್ಟುಸಿರುಬಿಟ್ಟೆ. ಅಂತೂ ಇಂತೂ ಈಕೆಗೆ ವಿಷಯ ತಿಳಿಯಿತಲ್ಲ! ದೊಡ್ಡ ಮಾತು.

ಕಾರಿನ ಹತ್ತಿರ ಬಂದಳು. ನಾಯಿ ಕೂತಿದ್ದ ಕಡೆಯ ಬಾಗಿಲು ತೆಗೆದೆ. ನಾಯಿ ಜಿಗಿದು ಹೊರಗೆ ಬಂತು. ಹೊಸದಾಗಿ ಕಂಡ ಮೇಡಂ ಸಾಹೇಬರಿಗೂ ನಾಯಿ ತನ್ನ ದುವಾ ಸಲಾಮಿ ಮಾಡಿತು. ಹೇಳಿಕೇಳಿ ನಾಯಿ. ಕಂಡ ಮನುಷ್ಯರಿಗೆಲ್ಲ ಬಾಲ ಅಲ್ಲಾಡಿಸಿ, ಮೈಕೈ ನೆಕ್ಕಿ ಪ್ರೀತಿ ಮಾಡುತ್ತದೆ.

ಆಕೆ ನಾಯಿಯ ಮೈದಡವುತ್ತ ಅದರ ವಿಳಾಸದ ಲೋಹದ ಟ್ಯಾಗ್ ನೋಡಿದರು. ಗೊತ್ತೆಂಬಂತೆ ತಲೆಯಾಡಿಸಿದರು. ಒಳ್ಳೆ ಸೂಚನೆ. 'ಒಂದು ನಿಮಿಷ. ಇರು. ಬಂದೆ,' ಎಂದು ಹೇಳಿ ಒಳಗೆ ಹೋದರು. ಒಂದೆರೆಡು ನಿಮಿಷದ ನಂತರ ಬಂದರು.

'ಈ ನಾಯಿಯ ಮಾಲೀಕರು ನನಗೆ ಪರಿಚಯದವರು. ಇಲ್ಲೇ ಹತ್ತಿರದಲ್ಲಿ ಅವರ ಮನೆ ಇದೆ. ಈಗ ಫೋನಲ್ಲಿ ಮಾತಾಡಿದೆ. ಅವರೆಲ್ಲ ಕಾಡಿನಲ್ಲಿ ಎಲ್ಲೋ ಬೇಟೆಗೆ ಹೋಗಿದ್ದರಂತೆ. ಅವರ ಜೊತೆಗೆ ಹೋಗಿದ್ದ ಈ ನಾಯಿ ಎಲ್ಲೋ ತಪ್ಪಿಸಿಕೊಂಡಿತಂತೆ. ಅವರೂ ಹುಡುಕುತ್ತಿದ್ದಾರಂತೆ. ನಾನು ನಾಯಿ ಹೀಗೆ ಸಿಕ್ಕ ವಿಷಯ ತಿಳಿಸಿದೆ. ಕೇಳಿ ಅವರಿಗೆ ನೆಮ್ಮದಿ, ಸಂತೋಷವಾಯಿತು. ನಿನಗೆ ಥ್ಯಾಂಕ್ಸ್ ಹೇಳಿದ್ದಾರೆ. ನಾಯಿಯನ್ನು ಇಲ್ಲೇ ಬಿಡಬಹುದು. ಅವರು ನಂತರ ಬಂದು ಕರೆದುಕೊಂಡು ಹೋಗುತ್ತಾರಂತೆ. ನಾಯಿ ತಂದುಕೊಟ್ಟವರಿಗೆ, ಅಂದರೆ ನಿನಗೆ, ಬಹಳ ಕೃತಜ್ಞತೆ ಸಲ್ಲಿಸಿದ್ದಾರೆ,' ಎಂದು ಹೇಳಿದರು ಆ ಮನೆಯೊಡತಿ.

ಅಂತೂ ದೊಡ್ಡ ಭಾರವೊಂದು ಹೆಗಲ ಮೇಲಿಂದ ಇಳಿದ ಫೀಲಿಂಗ್. ನಾಯಿ ಫುಲ್ ಖುಷ್. ಅದು ಆರಾಮಾಗಿ ಅವರ ಕಂಪೌಂಡಿನಲ್ಲಿ ಸುತ್ತಾಡಿಕೊಂಡಿತ್ತು. ಅದಕ್ಕೊಂದು ಕೊನೆಯ goodbye ಹೇಳಿದೆ. ಮತ್ತೆ ನಾಯಿಪ್ರೀತಿ ತೋರಿಸಿತು. ಕೃತಜ್ಞತೆ ಅರ್ಪಿಸಿತು. ಅಥವಾ ಹಾಗಂತ ನನಗನ್ನಿಸಿತು. ಸಹಾಯ ಮಾಡಿದ ಆ ಮನೆಯ ಲೇಡಿಗೆ ಥ್ಯಾಂಕ್ಸ್ ಹೇಳಿದೆ. 'ಹೇ !ಹೇ! ನಿನಗೆ ದೊಡ್ಡ ಥ್ಯಾಂಕ್ಸ್ ಮಾರಾಯ. ರಸ್ತೆಯಲ್ಲಿ ಹೋಗುತ್ತಿರುವವರು ಯಾರು ನಾಯಿಯೊಂದಕ್ಕೆ ಇಷ್ಟೆಲ್ಲಾ ಮಾಡುತ್ತಾರೆ? ಗಾಡ್ ಬ್ಲೆಸ್ ಯು!' ಅಂದರು. ಖುಷಿಯಾಯಿತು.

ಆ ಜವಾಬ್ದಾರಿಯನ್ನು ನಿಭಾಯಿಸಿದ ಖುಷಿಯಲ್ಲಿ ವಾಪಸ್ ಮೇನ್ ರೋಡಿಗೆ ಬಂದೆ. ಮುಂದೆ ಹದಿನೈದು ಇಪ್ಪತ್ತು ನಿಮಿಷಗಳಲ್ಲಿ ಯೋಗಾವಿಲ್ ಆಶ್ರಮ ತಲುಪಿದೆ. ಅಲ್ಲಿನ ಅದ್ಭುತ ಪ್ರಕೃತಿ ಸೌಂದರ್ಯ, ಚಿಕ್ಕಚಿಕ್ಕ ಕುಟೀರಗಳು, ಧಾನ್ಯಮಂದಿರ, ಸರೋವರ, ಸ್ನೇಹಮಯಿ ಜನರು, ಎಲ್ಲ ಒಂದು ತರಹದ ಖುಷಿ ಕೊಟ್ಟವು. ಜೊತೆಗೆ ಪಾಪದ ನಾಯಿಯೊಂದನ್ನು ಮನೆ ಮುಟ್ಟಿಸಿ ಬಂದ ಖುಷಿಯೂ ಕೂಡಿ ಡಬಲ್ ಖುಷಿ.

ನಾಯಿಯೆಂದರೆ ಭಗವಾನ್ ದತ್ತಾತ್ರೇಯನ ಪ್ರೀತಿಯ ಪ್ರಾಣಿ, ದತ್ತಾತ್ರೇಯನ ಅವತಾರ ಅಂತೆಲ್ಲ ಪ್ರತೀತಿ ಇದೆ. ಪ್ರಪ್ರಥಮ ಬಾರಿಗೆ ಮನೆಗೆ ಸಾಕುನಾಯಿ ತಂದಾಗ ತಂದೆಯವರು ಹೇಳಿದ್ದೇ ಅದು - ನಾಯಿ ದತ್ತಾತ್ರೇಯನ ಅವತಾರ! ಹಾಗೆ ಹೇಳಿದ್ದಕ್ಕೋ ಏನೋ ಗೊತ್ತಿಲ್ಲ ನಾಯಿಗಳ ಮೇಲೆ ಪ್ರೀತಿಯ ಜೊತೆ ಒಂದು ತರಹದ ಭಕ್ತಿ, ಮಮತೆ ಪ್ಲಸ್ ಸಂಥಿಂಗ್ ಸಂಥಿಂಗ್. ಒಟ್ಟಿನಲ್ಲಿ ದತ್ತಾತ್ರೇಯನ ಅವತಾರಿ ಉರ್ಫ್ ಈ ನಾಯಿ ವರ್ಜಿನಿಯಾದ ಕಾಡಿನಲ್ಲಿ ದಾರಿಯನ್ನು ತಪ್ಪಿಸಿಕೊಂಡಿದ್ದ. ಅವನನ್ನು ಸೇಫಾಗಿ ಮನೆಮುಟ್ಟಿಸಿದ್ದೆ. ಹೀಗಾಗಿ ೨೦೦೬ ರ Thanksgiving ಹಬ್ಬಕ್ಕೆ ಒಂದು ಅರ್ಥ, ಸಾರ್ಥಕತೆ, ಧನ್ಯತೆ  ಮತ್ತು ಮಹತ್ವ ಬಂದಿತ್ತು. ಪಾಪದ ಮೂಕಪ್ರಾಣಿಯೊಂದನ್ನು ಕಾಪಾಡುವ ಅವಕಾಶವನ್ನು Thanksgiving ಹಬ್ಬದಂದೇ ಒದಗಿಸಿದ್ದಕ್ಕೆ ಭಗವಾನ್ ದತ್ತಾತ್ರೇಯನಿಗೆ ಒಂದು ದೊಡ್ಡ ಥ್ಯಾಂಕ್ಸ್ ಹೇಳಿದ್ದೆ.

ಭಗವಾನ್ ದತ್ತಾತ್ರೇಯ

ಅದಾದ ಕೆಲವೇ ದಿವಸಗಳಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೌಕರಿ ಸಿಕ್ಕಿತು. ಎರಡು ಮೂರು ತಿಂಗಳಿಂದ ಮೂರ್ನಾಲ್ಕು ಇಂಟರ್ವ್ಯೂ ಆಗಿತ್ತು. ಆದರೆ ಎಲ್ಲೂ confirm ಆಗಿರಲಿಲ್ಲ. ಬಾಸ್ಟನ್ ಏರಿಯಾದಲ್ಲಿ ಇದ್ದು ಹತ್ತು ವರ್ಷವಾಗಿತ್ತು. ಬೇರೆಕಡೆ, ಅದರಲ್ಲೂ ಕ್ಯಾಲಿಫೋರ್ನಿಯಾ ಕಡೆ, ಹೋಗುವಾಸೆ ನಮಗೆ. ಎಲ್ಲೂ ಕ್ಲಿಕ್ ಆಗಿರಲಿಲ್ಲ. ದಾರಿತಪ್ಪಿದ ದತ್ತಾತ್ರೇಯ ಸ್ವರೂಪಿ ನಾಯಿಯನ್ನು ಮನೆಗೆ ಮುಟ್ಟಿಸಿದ್ದಕ್ಕೆ ಆ ದೇವರು ಅದೇನು ಆಶೀರ್ವಾದ ಮಾಡಿದನೋ ಗೊತ್ತಿಲ್ಲ. ಎಲ್ಲಾ ಫಟಾಫಟ್ ವರ್ಕೌಟ್ ಆಗಿ, ಒಂದು ತಿಂಗಳಲ್ಲಿ ಕ್ಯಾಲಿಫೋರ್ನಿಯಾಗೆ ಬಂದಿಳಿದೆ. ಆ ಒಂದು ತಿಂಗಳಲ್ಲಿ ಅದೆಷ್ಟು busy, ಅವೆಷ್ಟು ಚಿಕ್ಕಪುಟ್ಟ ತೊಂದರೆಗಳು, ಅವೆಷ್ಟು tension ಗಳು. ಎಲ್ಲವೂ ಹೂವೆತ್ತಿಟ್ಟಂತೆ ಗಾಯಬ್. ಎಲ್ಲ ದತ್ತಾತ್ರೇಯನ ಮಹಿಮೆ ಅಂತ ನಮ್ಮ ನಂಬಿಕೆ.

ಆಗ ಇಷ್ಟೆಲ್ಲಾ ಆದರೂ ಆ ಸಣ್ಣ Dachshund ನಾಯಿಯ ಜೊತೆಗಿನ ಒಂದೇ ಒಂದು ಫೋಟೋ ಇಲ್ಲ. ಆಗ ನನ್ನ ಬಳಿ ನೋಕಿಯಾ-೬೬೦೦ ಅನ್ನುವ ಒಳ್ಳೆ ಫೋನ್ ಇತ್ತು. ಅದರಲ್ಲಿ ಭರ್ಜರಿ ಕ್ಯಾಮೆರಾ ಇತ್ತು. ಆದರೆ ಆಗಿನದು selfie ಯುಗವಾಗಿರಲಿಲ್ಲ ನೋಡಿ. ಮತ್ತೆ ದಾರಿತಪ್ಪಿಸಿಕೊಂಡಿದ್ದ ದತ್ತಾತ್ರೇಯನನ್ನು ತ್ವರಿತವಾಗಿ ಮನೆಗೆ ಮುಟ್ಟಿಸಬೇಕಿತ್ತು. ಹೀಗಾಗಿ ಆ ಕ್ಯೂಟ್ ನಾಯಿಯೊಂದಿಗೆ ಫೋಟೋ ತೆಗೆಯಬೇಕು ಅನ್ನುವದು ತಲೆಗೂ ಬಂದಿರಲಿಲ್ಲ. ಮತ್ತೆ 'Best moments are the ones that are not captured,' ಅಂತ ಮಾತು ಬೇರೆ ಇದೆಯಲ್ಲವೇ? ಆ ದಿವ್ಯಕ್ಷಣ ಕೂಡ ಆ ಟೈಪಿನ ಬೆಸ್ಟ್ ಮೊಮೆಂಟ್.

ಮುಂದೊಂದು ದಿನ ಮನೆಯವರೊಂದಿಗೆ ನಾಯಿ ರಕ್ಷಣೆ ಆಪರೇಷನ್ ವಿವರಗಳನ್ನು ಹಂಚಿಕೊಂಡಿದ್ದೆ. ಮನೆಯಲ್ಲಿ ಎಲ್ಲರೂ ಶ್ವಾನಪ್ರೇಮಿಗಳೇ. ನನಗಿಂತಲೂ ಹೆಚ್ಚಿನ ಖುಷಿ ಅವರಿಗೂ ಆಗಿತ್ತು.

ಒಂದು helpless ಮೂಕಪ್ರಾಣಿ ನಾಯಿ ಎಲ್ಲೋ ಕಾಡಿನ ಮಧ್ಯೆ ಸಿಕ್ಕಾಗ ಅದರ ನಿಷ್ಕಲ್ಮಶ unconditional ಪ್ರೀತಿಯನ್ನು ಸ್ವೀಕರಿಸಿ, ಆ ನಾಯಿಗೆ ನಮಗಾದ ರೀತಿಯಲ್ಲಿ reciprocate ಮಾಡಿ, ಸಹಾಯ ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಮತ್ತೆ ಅಂತಹ ಅವಕಾಶ ಸಿಕ್ಕಿಲ್ಲ. ಸಿಕ್ಕಿದ್ದ ಆ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಅನುವಾಗುವಂತೆ ಪರಿಸ್ಥಿತಿ ವರ್ಕೌಟ್ ಆಗಿದ್ದೂ ಕೂಡ ದೊಡ್ಡ ಮಾತೇ. ಈ ವರ್ಷ ಮತ್ತೆ Thanksgiving ಬಂದಾಗ ಇದೆಲ್ಲ ನೆನಪಾಯಿತು. ಮತ್ತೊಮ್ಮೆ ಆ ವರ್ಷದ ಒಳ್ಳೆ ನಸೀಬಕ್ಕೊಂದು ದೊಡ್ಡ ಥ್ಯಾಂಕ್ಸ್.

Grateful people are happy people. ಹಾಗಾಗಿ ಎಲ್ಲದಕ್ಕೂ, ಎಲ್ಲರಿಗೂ ಕೃತಜ್ಞರಾಗಿರೋಣ. ಸಂತೋಷದ ಚಿಲುಮೆಯ ಮೂಲ ಕೃತಜ್ಞತೆಯಲ್ಲಿದೆ ಎಂಬುದನ್ನು ನೆನಪಿಟ್ಟುಕೊಳ್ಳೋಣ.

24-Nov-2016, Happy Thanksgiving everyone! Have a great one!

Thursday, November 17, 2016

ಡ್ರಗ್ ದಂಧೆಯ ಕರಾಳಮುಖಗಳು....ಇತಿಹಾಸದ ಪುಟಗಳಿಂದ

೧೯೮೪ - ೮೫ ರ ಸುಮಾರಿನ ಮಾತು. ಸೆಂಟ್ರಲ್ ಅಮೇರಿಕಾದ ಪುಟ್ಟ ದೇಶವಾದ ನಿಕರಾಗುವಾದಲ್ಲಿ ಅಂತರ್ಯುದ್ಧ. civil war. ಸ್ಯಾಂಡಿನಿಸ್ಟಾ ಎನ್ನುವ ಎಡಪಂಥೀಯರು ಸೊಮೋಜಾ ಅನ್ನುವ ಸರ್ವಾಧಿಕಾರಿಯನ್ನು ಓಡಿಸಿ ಅಧಿಕಾರ ಹಿಡಿದಿದ್ದರು. ಅಮೇರಿಕಾ ಉರಿದುಕೊಂಡಿತು. ಏಕೆಂದರೆ ಸೊಮೋಜಾನನ್ನು ಗದ್ದುಗೆ ಮೇಲೆ ಕೂಡಿಸಿದ ನಂತರ ತನಗೆ ಬೇಕಾದಂತೆ ಆಡಿಸಿದ್ದು ಅಮೇರಿಕಾ. ಶುದ್ಧ ಬಂಡವಾಳಶಾಹಿ ಧೋರಣೆ. ನಿಕರಾಗುವಾ ದೇಶ ಒಂದೇ ಅಂತಲ್ಲ. ಸುಮಾರು ದೇಶಗಳಲ್ಲಿ ಅಮೇರಿಕಾ ಮಾಡಿದ್ದೇ ಅದು. ಇಂತಹ ಸರ್ವಾಧಿಕಾರಿಯನ್ನು ಓಡಿಸಿ, ಕಮ್ಯುನಿಸ್ಟ ಸೋವಿಯೆಟ್ ರಶಿಯಾದ ಬೆಂಬಲದಿಂದ ಏನೋ ಒಂದು ರೀತಿಯಲ್ಲಿ  ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಸ್ಯಾಂಡಿನಿಸ್ಟಾ ಮಂದಿಯ ಜನಪರ ಸರಕಾರವನ್ನು ಅಮೇರಿಕಾದ ಸರ್ಕಾರ, ಅದೂ ಮಹಾನ್ ಬಂಡವಾಳಶಾಹಿ ಅಂದಿನ ಪ್ರೆಸಿಡೆಂಟ್ ರೊನಾಲ್ಡ್ ರೀಗನ್ನರ ಅಮೇರಿಕಾದ ಸರ್ಕಾರ, ಹೇಗೆ ಸಹಿಸಿಕೊಂಡೀತು? ಸ್ಯಾಂಡಿನಿಸ್ಟಾ ಮಂದಿಯ ವಿರುದ್ಧವಾಗಿ ಕಾಂಟ್ರಾಸ್ ಅನ್ನುವ ಬಂಡುಕೋರರನ್ನು ಎತ್ತಿಕಟ್ಟಿತು ಅಮೇರಿಕಾ. ಸ್ಯಾಂಡಿನಿಸ್ಟಾ ಮತ್ತು ಕಾಂಟ್ರಾಸ್ ನಡುವೆ ಶುರುವಾದ ಅಂತರ್ಯುದ್ಧ  ಬಡದೇಶವಾದ ನಿಕರಾಗುವಾದ ಜನರ ರಕ್ತ ಹೀರತೊಡಗಿತು.

ಅಮೇರಿಕಾ ಎಷ್ಟೇ ಇಷ್ಟಪಟ್ಟರೂ ಕಾಂಟ್ರಾಸ್ ಬಂಡುಕೋರರಿಗೆ ಬೇಕಾಬಿಟ್ಟಿ ಸಹಾಯ ಮಾಡಲು ಸಾಧ್ಯವಿರಲಿಲ್ಲ. ಒಂದು ಹಂತ ಮೀರಿದ ಮೇಲೆ ಹಣಕಾಸಿನ, ಮದ್ದುಗುಂಡುಗಳ ಸಹಾಯ ಮಾಡಲು ಸರಕಾರ ಅಮೇರಿಕಾದ ಸಂಸತ್ತಿನ ಅನುಮತಿ ಪಡೆಯಬೇಕಾಗುತ್ತಿತ್ತು. ಅದು ಸಿಗುವದು ಖಾತ್ರಿಯಿರಲಿಲ್ಲ. ದೊಡ್ಡ ಮಟ್ಟದ ಸಹಾಯ ಸಿಗಲಿಲ್ಲ ಅಂದರೆ ಕಾಂಟ್ರಾಸ್ ನಿರ್ನಾಮವಾಗುತ್ತಿದ್ದರು. ಯಾಕೆಂದರೆ ಕಾಂಟ್ರಾಸ್ ವಿರೋಧಿಗಳಾದ ಸ್ಯಾಂಡಿನಿಸ್ಟಾ ಮಂದಿಗೆ ರಶಿಯಾ ಭರಪೂರ ಸಹಾಯ ಮಾಡುತ್ತಿತ್ತು. ಆವಾಗ ಶುರುವಾಗಿದ್ದೇ ಟೇಬಲ್ ಕೆಳಗಿನ ಸಹಾಯ. ಅಂದರೆ ಅಮೇರಿಕಾದ ಸಂಸತ್ತಿನ ಕಣ್ಣು ತಪ್ಪಿಸಿ ಸಹಾಯ ಮಾಡಲು ಆರಂಭಿಸಿದ್ದು. ಅಧ್ಯಕ್ಷ ರೀಗನ್, ಉಪಾಧ್ಯಕ್ಷ ಬುಶ್ (ಹಿರಿಯ) ಕಣ್ಣು ಮಿಟುಕಿಸಿ, ನೋಡಿಯೂ ನೋಡದವರಂತೆ ಇದ್ದರು. ಅವರ ಖಾಸ್ ಜನ ಕಳ್ಳ ರೀತಿಯಲ್ಲಿ ನಿಕರಾಗುವಾದ ಕಾಂಟ್ರಾಸ್ ಬಂಡುಕೋರರಿಗೆ ಹಲವಾರು ವಿಮಾನುಗಟ್ಟಲೆ ಮದ್ದುಗುಂಡು, ಮತ್ತಿತರ ಸಹಾಯ ಕೊಟ್ಟು ಬಂದರು.

ಎಲ್ಲವನ್ನೂ ಪೂರ್ತಿ ಬಿಟ್ಟಿಯಲ್ಲಿ ಕೊಡಲಾಗುತ್ತದಯೇ? ರೊಕ್ಕ ಚಾರ್ಜ್ ಮಾಡಲೇಬೇಕಲ್ಲ? ಇಲ್ಲವಾದರೆ ಶಸ್ತ್ರಾಸ್ತ್ರಗಳ ವ್ಯಾಪಾರಿಗಳು, ದಲ್ಲಾಳಿಗಳು ರೊಕ್ಕ ಮಾಡಿಕೊಳ್ಳುವದು ಹೇಗೆ? ಆದರೆ ಕಾಂಟ್ರಾಸ್ ಬಂಡುಕೋರರು ಎಲ್ಲಿಂದ ರೊಕ್ಕ ಕೊಟ್ಟಾರು? ಊಟಕ್ಕೂ ಗತಿಯಿಲ್ಲದ ಮಂದಿ ಅವರು. ಆದರೂ ರೊಕ್ಕ ವಸೂಲಿ ಮಾಡದೇ ಬಿಡುವಂತಿಲ್ಲ. ಎಲ್ಲ ಸರಿಯಿದ್ದ ಕಡೆಯೂ ಅಂತರ್ಯುದ್ಧ ಅದು ಇದು ಅಂತ ಬೆಂಕಿ ಹಚ್ಚಿ, ಆ ಬೆಂಕಿ ಆರದಂತೆ ನೋಡಿಕೊಂಡು, ಅವಕಾಶ ಸಿಕ್ಕರೆ ಎರಡೂ ಕಡೆ ಶಸ್ತ್ರಾಸ್ತ್ರ ಪೂರೈಸಿ, ರೊಕ್ಕ ಮಾಡಿಕೊಳ್ಳುವ ಪಾಕಡಾ ಹುನ್ನಾರ ಸರಕಾರದ ಜುಟ್ಟು ಹಿಡಿದಿರುವ ಪಟ್ಟಭದ್ರ ಹಿತಾಸಕ್ತಿಗಳದ್ದು. ಹೀಗಿರುವಾಗ ಬಿಟ್ಟಾರೆಯೇ?

ಶಸ್ತ್ರಾಸ್ತ್ರ ಕೊಟ್ಟು ರೊಕ್ಕ ಕೊಡಿ ಅಂದರೆ ಕಾಂಟ್ರಾಸ್, 'ಎಲ್ಲಿಂದ ಕೊಡೋಣ ರೊಕ್ಕ? ತಿನ್ನಲಿಕ್ಕೆ ಅನ್ನವಿಲ್ಲ. ಮೇಲಿಂದ ಯುದ್ಧ ಬೇರೆ ಮಾಡಬೇಕು. ಎಲ್ಲಿಂದ ಕೊಡೋಣ ರೊಕ್ಕ?' ಅಂತ ಅಂಬೋ ಅಂದರು. 'ನಿಮ್ಮ ಹತ್ತಿರ ರೊಕ್ಕವಿಲ್ಲ. ಅದೇ ಪ್ರಾಬ್ಲಮ್ ತಾನೇ? ಒಂದು ಕೆಲಸ ಮಾಡಿ. ಮಾಡ್ತಿರೇನು?' ಅಂತ ಕೇಳಿದರು ಅಮೇರಿಕಾದ ಕಳ್ಳ ಜನ. 'ಏನು ಮಾಡಬೇಕು? ಏನು ಮಾಡಿ ನಿಮಗೆ ರೊಕ್ಕ ಕೊಡಬೇಕು?' ಅಂತ ಕೇಳಿದರು ಕಾಂಟ್ರಾಸ್. 'ಡ್ರಗ್ಸ್ ಮಾರಿ ರೊಕ್ಕ ಗಳಿಸಿ. ಆ ರೊಕ್ಕ ನಮಗೆ ಕೊಡಿ,' ಅಂದುಬಿಟ್ಟರು ಅಮೇರಿಕಾದ ಪರವಾಗಿ ಕಾಂಟ್ರಾಸ್ ಜೊತೆ ಮಾತುಕತೆಗೆ ಕೂತಿದ್ದ ಕಳ್ಳಕೊರಮರು. 'ಹಾಂ!' ಅಂತ ಬೆಚ್ಚಿಬಿದ್ದವರು ಕಾಂಟ್ರಾಸ್. ಅವರು ಸಣ್ಣ ಪ್ರಮಾಣದಲ್ಲಿ ಡ್ರಗ್ ಸ್ಮಗ್ಲಿಂಗ್ ಮಾಡುತಿದ್ದರು. ಆದರೆ ಅದರಿಂದ ಅಂತರ್ಯುದ್ಧಕ್ಕೆ ರೊಕ್ಕ ಹೊಂಚುವಷ್ಟೆಲ್ಲ ಕಾಸು ಬರುತ್ತಿರಲಿಲ್ಲ. ಈಗ ನೋಡಿದರೆ ಅಮೇರಿಕಾದ ದೋಸ್ತರೇ ಡ್ರಗ್ ಮಾರಿ ರೊಕ್ಕ ಗಳಿಸಿ. ಆ ರೊಕ್ಕದಿಂದ ನಾವು ಕೊಟ್ಟ ಮದ್ದುಗುಂಡುಗಳ ಲೆಕ್ಕ ಚುಕ್ತಾ ಮಾಡಿ ಎನ್ನುತ್ತಿದ್ದಾರೆ. 'ಸರ್, ಎಲ್ಲಿ ಡ್ರಗ್ ಮಾರೋಣ? ಅಷ್ಟೊಂದು ದೊಡ್ಡ ಮಾರುಕಟ್ಟೆ ಎಲ್ಲಿದೆ?' ಎಂದು ಕೇಳಿದ ಕಾಂಟ್ರಾ ಮಂದಿಗೆ ಇವರು ಏನೆನ್ನಬೇಕು? 'ನಮ್ಮ ದೇಶಕ್ಕೇ (ಅಮೇರಿಕಾಗೇ) ಡ್ರಗ್ ಸ್ಮಗ್ಲಿಂಗ್ ಮಾಡಿಕೊಳ್ಳಿ!' ಅಂದುಬಿಟ್ಟರು.

ಇಷ್ಟು ಹೇಳಿದ್ದು ಸಾಕಾಯಿತು. ಮಾದಕವಸ್ತುಗಳ ದೊರೆಗಳಿಗೆ ಅಮೇರಿಕಾ ಮಾವನಮನೆ ಆಗಿಹೋಯಿತು. ದೊಡ್ಡ ಪ್ರಮಾಣದಲ್ಲಿ ಕೊಕೇನ್ ಹರಿದುಬಂತು. ಆಗ ಶುರುವಾಗಿದ್ದೇ ಕ್ರ್ಯಾಕ್ ಕೊಕೇನ್ ಎಂಬ ಮಾದಕವಸ್ತುವಿನ ಸಾಂಕ್ರಾಮಿಕ ವ್ಯಾಧಿ ಮಾದರಿಯ ಪಿಡುಗು (epidemic). ಕೆಲವೇ ಕೆಲವು ವರ್ಷಗಳಲ್ಲಿ ಕ್ರ್ಯಾಕ್ ಕೊಕೇನ್ ಇಡೀ ಅಮೇರಿಕಾವನ್ನು ಆವರಿಸಿಕೊಂಡು ಒಂದೆರೆಡು ತಲೆಮಾರುಗಳ ಯುವಜನಾಂಗಗಳನ್ನು ಪೂರ್ತಿ ಬರ್ಬಾದ್ ಮಾಡಿಹಾಕಿತು.

ಗ್ಯಾರಿ ವೆಬ್ ಎನ್ನುವ ಧೀರ ಪತ್ರಕರ್ತ ಈ ಭರ್ಜರಿ ಹಗರಣವನ್ನು ಹೊರಗೆಳೆದ. ಇರಾನ್ ಕಾಂಟ್ರಾ ಹಗರಣವೆಂದೇ ಇದು ಪ್ರಸಿದ್ಧವಾಯಿತು. ನಿಕರಾಗುವಾದ ಕಾಂಟ್ರಾಸ್ ಮಂದಿಗೆ ಕೊಟ್ಟ ರೊಕ್ಕದ ಮೂಲನಿಧಿ ಬಂದಿದ್ದು ಇರಾನಿಗೆ ಕಾನೂನುಬಾಹಿರವಾಗಿ ಶಸ್ತ್ರ ಮಾರಿದ ಲೆಕ್ಕದಿಂದ. ಅದಕ್ಕೇ ಇರಾನ್ ಕಾಂಟ್ರಾ ಹಗರಣ ಅಂತ ಹೆಸರು ಬಂದಿದ್ದು. ಇದೆಲ್ಲದರಿಂದ ಎದ್ದ ಮಹಾ ರಾಡಿಯಿಂದ ಪ್ರೆಸಿಡೆಂಟ್ ರೀಗನ್ ಸಾಹೇಬರು ತಮ್ಮ ನೌಕರಿಯನ್ನು almost ಕಳೆದುಕೊಂಡಿದ್ದರು. ಅವರ ಸಂಪುಟದ ಕೆಲವು ಹಿರಿತಲೆಗಳು ಜೇಲಿಗೆ ಹೋದರೇ ಹೊರತು ಬಾಯಿಬಿಟ್ಟು ಎಲ್ಲ ಹೇಳಿ ರೀಗನ್ ಸಾಹೇಬರನ್ನು ಸಿಕ್ಕಿಸಿಹಾಕಲಿಲ್ಲ. ಹಾಗಾಗಿ ರೀಗನ್ ಸಾಹೇಬರು ಮತ್ತು ಹಿರಿಯ ಬುಶ್ ಸಾಹೇಬರು ಬಚಾವಾದರು. ಆದರೆ ದೊಡ್ಡ ಮಂದಿಯಾದ ರಕ್ಷಣಾ ಸಲಹೆಗಾರ ಬಾಬ್ ಮ್ಯಾಕ್ಫಾರ್ಲಾನ್, ಪಾಯಿಂಟ್ಡೆಕ್ಸ್ಟರ್ , ಆಲಿವರ್ ನಾರ್ತ್ ಮುಂತಾದ ದೊಡ್ಡ ಮಂದಿಯನ್ನು ಅಮೇರಿಕಾದ ಸಂಸದರು ಬರೋಬ್ಬರಿ ವಿಚಾರಣೆ ಮಾಡಿ ಜೇಲಿಗೆ ಕಳಿಸಿದರು. ಮುಂದೆ ತಮ್ಮ ಅಧಿಕಾರಾವಧಿ ಮುಗಿಯುವ ಮೊದಲು ಅವರಿಗೆಲ್ಲ ಅಧ್ಯಕ್ಷೀಯ ಕ್ಷಮಾದಾನ ಮಾಡಿ ಅವರನ್ನು ಪಾರು ಮಾಡಿದವರು ಮತ್ತೆ ಇದೇ ರೇಗನ್ ಮತ್ತು ಬುಶ್ ಸಾಹೇಬರು. ಋಣ ಅಂತ ಒಂದಿರುತ್ತದೆ ನೋಡಿ. ತೀರಿಸಿದ್ದರು.

'ನಮ್ಮ ದೇಶದಲ್ಲಿ ಡ್ರಗ್ ಮಾರಿಕೊಳ್ಳಿ' ಅಂತ ಅಮೇರಿಕಾದ ಜನರೇ ನಿಕರಾಗುವಾದ ಕಾಂಟ್ರಾಗಳಿಗೆ ಹೇಳಿದ್ದರು ಅನ್ನುವ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದ ಧೀಮಂತ ಪತ್ರಕರ್ತ ಗ್ಯಾರಿ ವೆಬ್ಬನನ್ನು systematic ಆಗಿ ಹಣಿಯಲಾಯಿತು. ಗ್ಯಾರಿ ವೆಬ್ ಕೆಲಸ ಮಾಡುತ್ತಿದ್ದುದು relatively ಒಂದು ಸಣ್ಣ ಪತ್ರಿಕೆಗೆ. ದೊಡ್ಡ ದೊಡ್ಡ ಪತ್ರಿಕೆಗಳಿಗೆ ಬಕೆಟ್ ಹಿಡಿದ ಪಟ್ಟಭದ್ರ ಹಿತಾಸಕ್ತಿಗಳು ಗ್ಯಾರಿ ವೆಬ್ ಒಬ್ಬ creditable ಪತ್ರಕರ್ತನೇ ಅಲ್ಲ. ಅವನೊಬ್ಬ ಚಿಲ್ಲರೆ sensationalist ಮನುಷ್ಯ. ಪುರಾವೆಯಿಲ್ಲದೆ ಏನೇನೋ ಕಪೋಲಕಲ್ಪಿತ ರೋಚಕ ಸುದ್ದಿ ಬರೆದಿದ್ದಾನೆ ಅಂತ ಸುದ್ದಿ ಬರೆಸಿದವು. ಗ್ಯಾರಿ ವೆಬ್ ಬರೆದ ಸ್ಪೋಟಕ ವರದಿಗಳನ್ನು ತಮ್ಮ ಬುಲ್ ಡಾಗ್ ಪತ್ರಕರ್ತರನ್ನು ಬಿಟ್ಟು ಚಿಂದಿ ಚಿಂದಿ ಮಾಡಿಸಿದವು. ಗ್ಯಾರಿ ವೆಬ್ ಒಬ್ಬ ಹಳದಿ ಪತ್ರಕರ್ತ (yellow journalist) ಅನ್ನುವ ಭಾವನೆಯನ್ನು ಜನರಲ್ಲಿ ಮೂಡಿಸಿ ಆತನನ್ನು ಮತ್ತು ಆತನ ಪತ್ರಿಕಾಜೀವನನ್ನೇ ನಿರ್ನಾಮ ಮಾಡಿದವು. ಗ್ಯಾರಿ ವೆಬ್ ಕೆಲಸ ಮಾಡುತ್ತಿದ್ದ ಸಣ್ಣ ಪತ್ರಿಕೆ ಮೇಲೆ ಸಿಕ್ಕಾಪಟ್ಟೆ ಒತ್ತಡ ತಂದು ಗ್ಯಾರಿ ವೆಬ್ಬನ ಕೆಲಸ ಹೋಗುವಂತೆ ಮಾಡಿದವು. ಅಲ್ಲಿಗೆ ಎಲ್ಲ ತಿಪ್ಪೆ ಸಾರಿಸಿ ರಂಗೋಲಿ ಹಾಕಿದಂತಾಗಿತ್ತು. ಮತ್ತೆ ಇದನ್ನೆಲ್ಲಾ ಮಾಡಿದ ಅಮೇರಿಕಾದ ಕಳ್ಳಕೊರಮರು ಹೇಳಿಕೇಳಿ covert operators ಮಾದರಿಯ ಜನ. ಎಲ್ಲೂ ತಮ್ಮ ಹೆಜ್ಜೆಗುರುತು ಮೂಡದಂತೆ ಎಚ್ಚರಿಕೆ ವಹಿಸಿ, anonymous third parties ಉಪಯೋಗಿಸಿ ಕಾಂಟ್ರಾ ಹಗರಣವನ್ನೆಸೆಗಿದ್ದರು. ಹಾಗಾಗಿ ಪತ್ರಕರ್ತ ಗ್ಯಾರಿ ವೆಬ್ಬನ ಕೆಲವೊಂದು ನಿಜ ವರದಿಗಳನ್ನು ಪೂರ್ತಿ ಸುಳ್ಳು ಅಂತ ಸಾಬೀತುಪಡಿಸಲಾಗದಿದ್ದರೂ ಅವುಗಳ ಬಗ್ಗೆ ದೊಡ್ಡ ಮಟ್ಟದ ಸಂಶಯ ಮೂಡಿಸುವಲ್ಲಿ ಯಶಸ್ವಿಯಾದರು. ಅದಕ್ಕೆ ಫುಲ್ ಸಹಾಯ ಮಾಡಿದ್ದು ಅಂದಿನ paid media. ಎಂದಿನಂತೆ ರೊಕ್ಕಸ್ಥರು ಅದನ್ನು ಖರೀದಿಸಿದ್ದರು.

ಮುಂದೆ ಕೆಲವು ವರ್ಷಗಳ ನಂತರ ಪತ್ರಕರ್ತ ಗ್ಯಾರಿ ವೆಬ್ ಸಂಶಯಾಸ್ಪದ ರೀತಿಯಲ್ಲಿ ಸತ್ತ. ತನ್ನ ತಲೆಗೆ ತಾನೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅನ್ನುವದು ಅಧಿಕೃತ ವರದಿ. ಗ್ಯಾರಿ ವೆಬ್, ಆತನ ಸ್ಪೋಟಕ ವರದಿಗಳು, ಆತ ಎದುರಾಕಿಕೊಂಡಿದ್ದ ಬಲಶಾಲಿ ಪಟ್ಟಭದ್ರ  ಶಕ್ತಿಗಳು, ಅಂತರರಾಷ್ಟ್ರೀಯ ಡ್ರಗ್ ಮಾಫಿಯಾದ ಕೈವಾಡ ಇತ್ಯಾದಿಗಳನ್ನು ಬಲ್ಲ ಜನ, 'ಗ್ಯಾರಿ ವೆಬ್ಬನನ್ನು ಅವೇ ಶಕ್ತಿಗಳು ರಹಸ್ಯವಾಗಿ ಮುಗಿಸಿಹಾಕಿದವು!' ಅಂತ ಗುಸುಗುಸು ಮಾತಾಡಿಕೊಂಡರು. ತಮ್ಮ ರೊಕ್ಕ ಮಾಡುವ ಯೋಜನೆಗಳಿಗೆ ಸಹಕರಿಸಲಿಲ್ಲ ಅಂತ ೧೯೬೦ ರ ದಶಕದ ಅಮೇರಿಕಾದ ಪ್ರೆಸಿಡೆಂಟ್ ಕೆನಡಿ ಅವರನ್ನೇ ಮುಗಿಸಿದ ಮಂದಿಗೆ ಗ್ಯಾರಿ ವೆಬ್ಬನಂತಹ ಪತ್ರಕರ್ತನನ್ನು  ಮುಗಿಸುವದು ದೊಡ್ಡ ಮಾತೇ?

ಗ್ಯಾರಿ ವೆಬ್ ಬರೆದ ಪುಸ್ತಕ. ಇದೇ ಅವನ ಸಾವಿಗೆ ಮುಳುವಾಯಿತೇ?
ಅಮೇರಿಕಾದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ದೇಶದ ಜನರ ಮೇಲೆಯೇ ಚಿತ್ರವಿಚಿತ್ರ ಪ್ರಯೋಗಗಳನ್ನು ಮಾಡಿದ್ದು ಅದೇ ಮೊದಲನೇ ಸಲವೇನೂ ಆಗಿರಲಿಲ್ಲ. ೧೯೫೦ ರ ದಶಕದಲ್ಲಿ LSD ಅನ್ನುವ ಮಾದಕವಸ್ತುವಿನ ಮೇಲೆ ಅನೇಕ ರಹಸ್ಯ ಪ್ರಯೋಗಗಳು ನಡೆಯುತ್ತಿದ್ದವು. ಆಗಲೂ ಸಹ ಏನೂ ಗೊತ್ತಿಲ್ಲದ ಮುಗ್ಧ ಅಮೇರಿಕನ್ ಪ್ರಜೆಗಳ ಮೇಲೆ LSD ಪ್ರಯೋಗ ಮಾಡಿ, ಅವರ ವರ್ತನೆಯನ್ನು ಗಮನಿಸಲಾಗುತ್ತಿತ್ತು. ಎಲ್ಲ ಅಮೇರಿಕಾ ಮತ್ತು ರಶಿಯಾ ಮಧ್ಯೆ ನಡೆದಿದ್ದ ಶೀತಲಸಮರದ ಭಾಗ. ಶೀತಲಸಮರದಲ್ಲಿ LSD ಯನ್ನು ಹೇಗೆ ಬಳಸಬಹುದು, ಅದನ್ನು ಬಳಸಿ ಹೇಗೆ ಶತ್ರುದೇಶದ ಜನರನ್ನು ದೊಡ್ಡ ಪ್ರಮಾಣದಲ್ಲಿ ಮತಿಭ್ರಾಂತರನ್ನಾಗಿ ಮಾಡಬಹದು ಅಂತೆಲ್ಲ ರಹಸ್ಯ ಪ್ರಯೋಗ. ಬಲಿಪಶುಗಳಾದವರು ಏನೂ ತಿಳಿಯದ ಕಾಲೇಜ್ ವಿದ್ಯಾರ್ಥಿಗಳು, ಹೊಟ್ಟೆಪಾಡಿಗಾಗಿ ದಂಧೆ ಮಾಡಿಕೊಂಡಿದ್ದ ವೇಶ್ಯೆಯರು ಮತ್ತು ಅವರ ಗಿರಾಕಿಗಳು. ಮುಂದೊಂದು ದಿನ ಸರ್ಕಾರ ಅಧಿಕೃತವಾಗಿ ಆ ತಪ್ಪನ್ನು ಒಪ್ಪಿಕೊಂಡು ಏನೋ ಪರಿಹಾರ ಅದು ಇದು ಅಂತ ಕೊಟ್ಟಿತು. ಆದರೆ ೧೯೬೦ ರ ದಶಕದ ಯುವಜನಾಂಗ ದೊಡ್ಡ ರೀತಿಯಲ್ಲಿ LSD ಡ್ರಗ್ಗಿನ ಹೊಡೆತ ತಿಂದು ಖೋಕ್ಲಾ ಆಯಿತು. ಟೊಳ್ಳಾಗಿಹೋಯಿತು. ಅದರಿಂದಲೇ ಹಿಪ್ಪಿ ಎಂಬ ವಿಲಕ್ಷಣ ಸಂಸ್ಕೃತಿಯ ಉದಯವಾಯಿತು. ಇಡೀ ಒಂದು ತಲೆಮಾರಿನ ಯುವಜನಾಂಗವನ್ನು ಪೂರ್ತಿಯಾಗಿ ನಿಕಮ್ಮಾ ಮಾಡಿದ ದೊಡ್ಡ ಮಟ್ಟದ ನಷ್ಟವನ್ನು ತುಂಬಿಕೊಡಲು ಸಾಧ್ಯವೇ?

ರಹಸ್ಯ LSD ಪ್ರಯೋಗಗಳು ನಡೆದಾಗ ಅದರಲ್ಲಿ ಭಾಗಿಯಾಗಿದ್ದ ಫ್ರಾಂಕ್ ಓಲ್ಸನ್ ಎಂಬ ದೊಡ್ಡ ವಿಜ್ಞಾನಿಯೊಬ್ಬ ಬಹುಮಹಡಿ ಹೋಟೆಲ್ ಒಂದರ ಕಿಟಕಿಯಿಂದ ಜಿಗಿದು ಸತ್ತಿದ್ದ. LSD ಡೋಸ್ ಜಾಸ್ತಿಯಾಗಿ, ತಲೆಕೆಟ್ಟು ಅವನಾಗಿಯೇ ಜಿಗಿದು ಸತ್ತ ಅಂತ ತಿಪ್ಪೆ ಸಾರಿಸಿತ್ತು ಸರ್ಕಾರ. ಆದರೆ ಆ ವಿಜ್ಞಾನಿ ಕಾನೂನುಬಾಹಿರ LSD ಪ್ರಯೋಗಗಳ ರಹಸ್ಯಗಳನ್ನು ಬಯಲುಮಾಡುವನಿದ್ದ. ಅದಕ್ಕೇ ಅವನನ್ನು ಮುಗಿಸಲಾಯಿತು ಅಂತ ದೊಡ್ಡ ಗುಮಾನಿ ಇತ್ತು. ಎಷ್ಟೋ ವರ್ಷಗಳ ಹೋರಾಟದ ನಂತರ ಆ ವಿಜ್ಞಾನಿಯ ಕುಟುಂಬಕ್ಕೆ ಏನೋ ಒಂದು ತರಹದ ನ್ಯಾಯ ಸಿಕ್ಕಿದೆ. ಸರ್ಕಾರ ಏನೋ ಒಂದು ರೀತಿಯಲ್ಲಿ ಸಹಾನುಭೂತಿ ವ್ಯಕ್ತಪಡಿಸಿ, ಆ ವಿಜ್ಞಾನಿಯ ಮೇಲೆ ಅಂದಿನ ಕಾಲದಲ್ಲಿ ಮಾಡಿದ್ದ ಆರೋಪಗಳು ಸತ್ಯಕ್ಕೆ ದೂರವಾದವು ಅಂದಿದೆ. ಅವರ ಗೌರವವನ್ನು restore ಮಾಡಿದೆ. ಅದು ಆ ವಿಜ್ಞಾನಿಯ ಕುಟುಂಬದ ಅರ್ಧ ಶತಮಾನದ ಹೋರಾಟಕ್ಕೆ ಸಂದ ಜಯ.

ವಿಜ್ಞಾನಿ ಫ್ರಾಂಕ್ ಓಲ್ಸನ್ ಸಾವಿನ ರಹಸ್ಯ ಭೇದಿಸಿದ ಪುಸ್ತಕ

ಇದೆಲ್ಲ ಇಂದು ನೆನಪಾಗಲು ಒಂದು ಕಾರಣವಿದೆ. ಕಳೆದೆರೆಡು ವರ್ಷಗಳಲ್ಲಿ maximum ಜನರನ್ನು ಅಮೇರಿಕದಲ್ಲಿ ಕೊಂದಿದ್ದು ವಾಹನಾಪಘಾತಗಳೂ ಅಲ್ಲ, ಹೃದಯಸಂಬಂಧಿ ಕಾಯಿಲೆಗಳೂ ಅಲ್ಲ. ಸಾಂಪ್ರದಾಯಿಕ ಹಂತಕರಾದ ಅವೆರೆಡನ್ನೂ ಹಿಂದಿಕ್ಕಿ ಐವತ್ತುಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದ್ದು ಹೆರಾಯಿನ್ ಎಂಬ ಮಾದಕವಸ್ತು. ಹೆರಾಯಿನ್ overdose ಅಷ್ಟು ಜನರನ್ನು ಕೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಕಮ್ಮಿಯಾಗಿದ್ದ ಮಾದಕವಸ್ತುಗಳ ಪಿಡುಗು ಒಮ್ಮೆಲೇ ಹೇಗೆ ಇಷ್ಟೊಂದು ಹೆಚ್ಚಾಯಿತು ಅಂತ ಜನ ತಲೆಕೆಡಿಸಿಕೊಂಡಿದ್ದಾರೆ. ಇದರ ಹಿಂದೆಯೂ ಸಾಮಾನ್ಯ ಕಣ್ಣಿಗೆ ಕಾಣದಂತಹ ಷಡ್ಯಂತ್ರವೇನಾದರೂ ಇದೆಯೋ ಏನೋ. ಯಾರಿಗೆ ಗೊತ್ತು.

ಈ ಮಾದಕವಸ್ತುಗಳ ದಂಧೆ ಎಂತವರ ನಿಯತ್ತನ್ನಾದರೂ ಕೆಡಿಸಿ ಹಳ್ಳಹಿಡಿಸಲು ಕಾರಣವೆಂದರೆ ಆ ದಂಧೆಯಲ್ಲಿರುವ ಲಾಭಾಂಶ (profit margin). ಒಂದು ರೂಪಾಯಿ ಹಾಕಿದರೆ ಹನ್ನೊಂದು ರೂಪಾಯಿಗೂ ಹೆಚ್ಚಿನ ಬೆಲೆಗೆ ಫೈನಲ್ ಪ್ರಾಡಕ್ಟ್ ಬಿಕರಿಯಾಗುತ್ತದೆ. ಅಂದರೆ ೧೦೦೦% + ಪ್ರಾಫಿಟ್. ಯಾರಿಗಿದೆ ಯಾರಿಗಿಲ್ಲ. ಅಮೇರಿಕಾದಂತಹ ದೇಶದಲ್ಲೂ ಎಲ್ಲಿಯಾದರೂ corruption ಇದೆ ಅಂತಾದರೆ ಅದು ಡ್ರಗ್ ದಂಧೆಯಲ್ಲೇ. ಹತ್ತಿಪ್ಪತ್ತು ಡಾಲರಿಗೆ ಕೈಯೊಡ್ಡದ ಪೊಲೀಸರು ಡ್ರಗ್ ದಂಧೆಯ ಮಿಲಿಯನ್ ಡಾಲರುಗಳಿಗೆ ಯುನಿಫಾರ್ಮ್ ಮಾರಿಕೊಂಡು, ನಂತರ ಸಿಕ್ಕಾಕಿಕೊಂಡಿರುವ ಉದಾರಣೆಗಳು ಬೇಕಾದಷ್ಟಿವೆ. ೧೯೮೦ ರ ದಶಕದಲ್ಲಿ ಕ್ರ್ಯಾಕ್ ಕೊಕೇನ್ ಪಿಡುಗು ಉತ್ತುಂಗದಲ್ಲಿದ್ದಾಗ ದಕ್ಷಿಣ ಅಮೇರಿಕಾದಿಂದ ದೊಡ್ಡ ದೊಡ್ಡ ಡ್ರಗ್ ಮಾಫಿಯಾ ದೊರೆಗಳು ನ್ಯೂಯಾರ್ಕಿಗೆ ಬಂದರೆ ಪೊಲೀಸರು ಅವರನ್ನು  ತಮ್ಮ ಕಾರಿನಲ್ಲೇ ಕೂಡಿಸಿಕೊಂಡು ಊರೆಲ್ಲ ಅಡ್ಡಾಡಿಸಿದ್ದರು. ಹಡಬೆ ಡ್ರಗ್ ದಂಧೆಗೆ ಪೊಲೀಸರ ಟ್ಯಾಕ್ಸಿ ಸರ್ವೀಸ್, ಪೂರ್ತಿ ಸುರಕ್ಷತೆಯೊಂದಿಗೆ.

ಸರ್ಕಾರದಿಂದ ಅನುಮತಿಸಲ್ಪಟ್ಟ ರಹಸ್ಯ ಕಾರ್ಯಾಚರಣೆಗಳಿಗೆ ಅಥವಾ ಅನುಮತಿಯಿಲ್ಲದೆ ಸರ್ಕಾರದ rogue elements ಮಾಡುವ ಕಪ್ಪು ಕಾರ್ಯಾಚರಣೆಗಳಿಗೆ (black covert operations) ರೊಕ್ಕ ಕಮ್ಮಿ ಬಿದ್ದಾಗ ಅವರಿಗೆ ಸುಲಭವಾಗಿ ಕಾಣುವದೇ ಡ್ರಗ್ ದಂಧೆ. ಅದರಲ್ಲಿ ಸಿಕ್ಕ ರೊಕ್ಕವನ್ನು ವಿಶ್ವದ ಮೂಲೆಮೂಲೆಗೂ ಮುಟ್ಟಿಸಲು ಹವಾಲಾ ಮಾರ್ಗ. ಹಾಗಾಗಿಯೇ ಅವೆರಡನ್ನು ಮಟ್ಟ ಹಾಕುವದು ಕಷ್ಟ. ಡಾನ್ ದಾವೂದ್ ಇಬ್ರಾಹಿಂ ಸುರಕ್ಷಿತನಾಗಿರಲು ಅವನಿಗೆ ಅವೆರೆಡು ದಂಧೆಗಳ ಮೇಲಿರುವ ಹಿಡಿತ. ಅದರಿಂದಾಗಿ ದೊಡ್ಡ ಮಂದಿಯ ಛತ್ರಛಾಯೆಯಡಿ ದಾವೂದ್ ಸುರಕ್ಷಿತ. ಹಾಗಾಗಿ ಇಂಡಿಯಾ ಮತ್ತು ಪಾಕಿಸ್ತಾನ ಅದೆಷ್ಟೇ ಜಿಗಿದಾಡಿದರೂ big-D ಡಾನ್ ಫುಲ್ ಸೇಫ್.

ಮೊನ್ನೆ ಎಲ್ಲೋ ಓದಿದೆ. ಅಮೇರಿಕಾ 'war on drugs' ಅಂತ ದೊಡ್ಡ ಸ್ಲೋಗನ್ ಇಟ್ಟುಕೊಂಡು ಮಾದಕವಸ್ತುಗಳ ಮೇಲೆ ಸಮರ ಸಾರಿತು. ಡ್ರಗ್ ದಂಧೆ ಮತ್ತೂ ಜಾಸ್ತಿಯಾಯಿತು. 'war on terror' ಅಂತ ಬೋರ್ಡ್ ಹಾಕಿಕೊಂಡು ಕಂಡಲ್ಲಿ ಬಾಂಬ್ ಹಾಕಿ ಬಂತು. ಉಗ್ರವಾದ ಜಾಸ್ತಿಯೇ ಆಯಿತು.

ಎಲ್ಲವೂ ಮಾಯೆ. ಎಲ್ಲವೂ ಲೀಲೆ ಎನ್ನುವದರಲ್ಲಿ ನಂಬಿಕೆ ಬರುವದು ಇಂತಹ ಘಟನೆಗಳನ್ನು ಕೇಳಿದಾಗಲೇ!

Wednesday, November 16, 2016

ಹೀಗೊಂದು ಪ್ರಶಂಸೆ. ಜೊತೆಗೊಂದು ಸರ್ಟಿಫಿಕೇಟ್...

'ಕನ್ನಡ ಡಿಂಡಿಮ' ಅನ್ನುವಂತಹ ಉತ್ಸಾಹಿ ಜನರ ಗುಂಪೊಂದು ಕೆಳಗೆ ಹಾಕಿದ ಪತ್ರ ಮತ್ತು ಸರ್ಟಿಫಿಕೇಟ್ ಕಳಿಸಿದೆ. ಅವರಿಗೊಂದು ದೊಡ್ಡ ಧನ್ಯವಾದ!

ಒಂದು ವರ್ಷದ ಹಿಂದೆ ಮೆಸೇಜ್ ಮಾಡಿ, 'ನಾವು ಒಂದು Android App ಮಾಡಿದ್ದೇವೆ. ನಿಮ್ಮ ಬ್ಲಾಗ್ ಪೋಸ್ಟುಗಳನ್ನು ಅದರಲ್ಲಿ ಹಂಚಿಕೊಳ್ಳಬಹುದೇ?' ಎಂದು ಕೇಳಿದ್ದರು. 'ಮುದ್ದಾಂ ಹಂಚಿಕೊಳ್ಳಿ,' ಅಂತ ಖುಷಿಯಿಂದಲೇ ಹೇಳಿದ್ದೆ.

ಈಗ ಒಂದು ಪತ್ರ ಮತ್ತು ಸರ್ಟಿಫಿಕೇಟ್ ಕಳಿಸಿದ್ದಾರೆ. ದೊಡ್ಡ ಮಾತುಗಳನ್ನಾಡಿದ್ದಾರೆ. ಖುಷಿಯಾಯಿತು. ಏನೋ ನಮ್ಮ ಖುಷಿಗೆ ಅಂತ ಬ್ಲಾಗ್ ಮಾಡಿಕೊಂಡು ಏನೋ ಗೀಚುತ್ತಿರುವದು. ಹಾಗಿರುವಾಗ ಯಾರಾದರೂ ಹೀಗೆ ಗುರುತಿಸಿ ಒಂದು ಒಳ್ಳೆ ಮಾತು ಹೇಳಿದರೆ ಸಿಕ್ಕಾಪಟ್ಟೆ ಖುಷಿ.

ನಮ್ಮ ಖುಷಿ ನಿಮ್ಮೊಂದಿಗೆ ಹಂಚಿಕೊಂಡರೆ ಮತ್ತೂ ದೊಡ್ಡ ಖುಷಿ!Tuesday, November 15, 2016

ಅಮೇರಿಕಾದ ಚುನಾವಣೆಗಳ ಬಳಿಕ...

ಅಂತೂ ಡೊನಾಲ್ಡ್ ಟ್ರಂಪ್ ಸಾಹೇಬರು ಪ್ರೆಸಿಡೆಂಟ್ ಆಗಿಯೇ ಬಿಟ್ಟರು. ಇಲ್ಲಿನ ಆಮ್ ಆದ್ಮಿಗೆ ತುಂಬಾ ಹಿಡಿಸಿದರು ಅಂತ ಕಾಣುತ್ತದೆ. ಹಾಗಾಗಿ ಎಲ್ಲರೂ ಅವರಿಗೇ ದಬಾಯಿಸಿ ಓಟು ಒತ್ತಿಬಿಟ್ಟಿದ್ದಾರೆ.  ಹಿಂದಿನ ಚುನಾವಣೆಗಳಲ್ಲಿ ಓಟು ಹಾಕದೇ ಮುಸುಕೆಳೆದು ಮಲಗಿದ್ದವರೆಲ್ಲ ಈ ಬಾರಿ ಎದ್ದು ಬಂದು ಎಗಾದಿಗಾ ಓಟು ಹಾಕಿದ್ದಕ್ಕೆ ಪರಮ ವಿಚಿತ್ರ ಹಾವಭಾವದ ಟ್ರಂಪ್ ಸಾಹೇಬರು ಫುಲ್ ಜಿಂಗಿಚಿಕಾ! ಹಾಗಾಗಿ ಹಿಲರಿ ಕ್ಲಿಂಟನ್ ಶಿವಾಯ ನಮಃ ಆದಳು. ಎಲ್ಲ ಮುಗಿದು ಸಾರಿಸಿ ರಂಗೋಲಿ ಹಾಕಿದ ನಂತರ, 'ನನ್ನ ಮೇಲೆ FBI ನವರು ಸುಮ್ಮಸುಮ್ಮನೆ ವಿಚಾರಣೆ ಅದು ಇದು ಅಂತ ನಾಟಕ ಮಾಡಿದರು. ನನ್ನ ಮೇಲೆ ಸಂಶಯ ಬರುವಂತೆ ಮಾಡಿದರು. ಸುಖಾಸುಮ್ಮನೆ ನನ್ನ email ಗಳ ಬಗ್ಗೆ ತನಿಖೆ ಅದು ಇದು ಅಂದರು. ಇಲ್ಲಸಲ್ಲದ  ತನಿಖೆ FBI ಮಾಡಿದ್ದೇ ನನ್ನ ಸೋಲಿಗೆ ಕಾರಣ,' ಅಂತ ಹಿಲರಿ ಗೊಳೋ ಅಂದರು. ಅದು ಸೋತವರ ಸೊಳೆರಾಗ ಅಂತ ಯಾರೂ ಜಾಸ್ತಿ ಕ್ಯಾರೇ ಮಾಡಲಿಲ್ಲ. ಲಿಬಿಯಾದ ಬೆಂಗಾಜಿ ಲಫಡಾ, ರಹಸ್ಯ ಮಾಹಿತಿಗಳನ್ನು ತನ್ನ ವೈಯಕ್ತಿಕ email  ಮೂಲಕ ಕಳಿಸಿದ್ದು, (ಕಿತಾ)ಪತಿ ಬಿಲ್ ಕ್ಲಿಂಟನ್ ಅವಧಿಯ ಲಫಡಾಗಳು, ಮತ್ತು ಆಕೆಯಲ್ಲಿ ಇಲ್ಲದ ಮತ್ತು ಜನರಿಗೆ ಕಾಣದ genuine sincerity - ಇವೆಲ್ಲ ಕೂಡಿ ಹಿಲರಿಗೆ ಚಂಡೆ ಬಾರಿಸಿದವು. ಒಳ್ಳೆಯ ಕ್ಯಾಂಡಿಡೇಟ್ ಬರ್ನಿ ಸ್ಯಾಂಡರ್ಸ್ ಅಜ್ಜಾವರಿಗೆ ಡೆಮಾಕ್ರೆಟಿಕ್ ಪಕ್ಷ ಟಿಕೆಟ್ ಕೊಟ್ಟಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ. ಆ ಮನುಷ್ಯ ತುಂಬಾ ಒಳ್ಳೆಯ ಅಜ್ಜನ ಟೈಪಿನ ಪ್ರಬುದ್ಧ ವ್ಯಕ್ತಿಯಾಗಿದ್ದ. ಹಾಗಾಗಿ ಲೈಕ್ ಮಾಡಿದ್ದೆ. ಅವನಿಗೆ ಟಿಕೆಟ್ ತಪ್ಪಿದ ಮೇಲೆ ಹಿಲರಿ ಮತ್ತು ಟ್ರಂಪ್ ಇಬ್ಬರಲ್ಲಿ ಯಾರು ಬಂದರೂ ಅಷ್ಟೇ ಅನ್ನುವ ಭಾವನೆ ಅನೇಕರಿಗೆ ಬಂದಿತ್ತು. ಅಂತವರೂ ಕೂಡ, 'ನೋಡೋಣ. ಆಜ್ ಕುಛ್ ತೂಫಾನಿ ಕರೇಂಗೆ,' ಅಂತ ಟ್ರಂಪ್ ಗೆ ಮತ ಹಾಕಿ ಆತನ ಗೆಲುವಿಗೆ ಕಾರಣರಾದರು ಅಂತ ಕೆಲವರು ವಿಶ್ಲೇಷಿಸಿದ್ದಾರೆ. ಇರಬಹುದು. 

ಮತ್ತೆ ಇದೇ ಚುನಾವಣೆಯಲ್ಲಿ ಕೆಲವೊಂದು ರಾಜ್ಯಗಳಲ್ಲೂ ಖತರ್ನಾಕ್ ಕಾಯಿದೆಗಳನ್ನು ಮತದಾರರು ಅನುಮೋದಿಸಿದರು. ನಮ್ಮ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಗಾಂಜಾ (marijuana) ಈಗ ಕಾನೂನುಬದ್ಧ. ಅದು ಈಗ ನಿಷೇಧಿತ ಡ್ರಗ್ ಅಲ್ಲ. ಆಗಲೇ  ಏಳೆಂಟು ಬೇರೆ ರಾಜ್ಯಗಳಲ್ಲಿ ಗಾಂಜಾ recreational drug ಅಂತ ಕಾನೂನುಬದ್ಧವಾಗಿದೆ. ಇಲ್ಲೂ ಆಯಿತು. ವೈಯಕ್ತಿಕ ಸೇವನೆಗಾಗಿ ಗಾಂಜಾ ಬೆಳೆದುಕೊಳ್ಳಬಹುದು ಮತ್ತು ಕೊಂಡುಕೊಳ್ಳಬಹುದು. ಆದರೆ ಕಮರ್ಷಿಲ್ ಆಗಿ ಮಾರಲು ಹಲವಾರು ನಿಬಂಧನೆಗಳಿವೆ. ಆದರೂ ಗಾಂಜಾ ಹೊಡೆದು ರಿಲಾಕ್ಸ್ ಆಗೋಣ ಅನ್ನುವವರಿಗೆ ಎಲ್ಲಿಯಾದರೂ ಪೊಲೀಸರು ಹಿಡಿದು ಬೆಂಡೆತ್ತಿಯಾರು  ಎನ್ನುವ ಟೆನ್ಷನ್ ಇನ್ನು ಮುಂದೆ ಇಲ್ಲ. ದಂ ಮಾರೋ ದಂ! ಮಿಟ್ ಜಾಯೇ ಗಮ್! ಬೋಲೋ ಸುಭ ಶಾಮ್! ಹರೇ ಕೃಷ್ಣ ಹರೇ ರಾಮ! ಪುರಾಣಕಾಲದಿಂದಲೂ, ಋಷಿಮುನಿಗಳು ಕೂಡ ಉಪಯೋಗಿಸಿರುವ ನ್ಯಾಚುರಲ್ ಗಾಂಜಾ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವ ಜರೂರತ್ತಿಲ್ಲ. synthetic chemical ಡ್ರಗ್ಗುಗಳಾದ ಕೊಕೇನ್, ಹೆರಾಯಿನ್, ಬ್ರೌನ್ ಶುಗರ್, ಇತ್ಯಾದಿಗಳಿಗೆ ಹೋಲಿಸಿದರೆ ಗಾಂಜಾ ಫುಲ್ ಸೇಫ್. addiction (ವ್ಯಸನ) ಆಗುವದಿಲ್ಲ. ಮತ್ತೆ ಇಲ್ಲಿನ ಸಂಸ್ಕೃತಿಯಲ್ಲಿ ಗಾಂಜಾ ಹಾಸುಹೊಕ್ಕಾಗಿ ಹೋಗಿದೆ. ಬೇಕೆಂದಾಗ legal ಗಾಂಜಾ ಸಿಗದೇ, ಅದರ ಬದಲಾಗಿ ಹಾಳುವರಿ ಡ್ರಗ್ ತೆಗೆದುಕೊಂಡೋ, ವಿಪರೀತವಾಗಿ ಎಣ್ಣೆ ಹೊಡೆದೋ ಅಥವಾ ಏನೇನೋ ಕೆಮಿಕಲ್ ತೆಗೆದುಕೊಂಡೋ ಮಂದಿ ಬರ್ಬಾದಾಗುತ್ತಿದ್ದರು. ಅಂತವರಲ್ಲಿ ಒಂದಿಷ್ಟು ಪಾಲು ಜನ ಈಗ ನಿರುಪದ್ರವಿ ಸಸ್ಯವಾದ ಗಾಂಜಾ ಬೆಳೆದುಕೊಂಡು, ಅದರ ಪುಡಿ ಹೊಡೆದುಕೊಂಡು, ಚೆನ್ನಾಗಿ ಮಲಗಿ ನಿದ್ದೆ ಮಾಡಿದರೆ ಅಷ್ಟೇ ಗಲಾಟೆ ಕಮ್ಮಿ. ಗಾಂಜಾದಂತಹ relax ಮಾಡುವಂತಹ ವಸ್ತು ಸಿಗದೇ ಇರುವದು ಮತ್ತು ಅದರ ಮೇಲಿಂದ ಬಂದೂಕು ಸುಲಭವಾಗಿ ಸಿಗುವದು - ಇದು ಡೆಡ್ಲಿ ಕಾಂಬಿನೇಶನ್. ಮೊದಲೇ ಬೇರೆಬೇರೆ ಕಾರಣಗಳಿಗೆ ಇಲ್ಲಿನ ಮಂದಿಯ ತಲೆ ಕೆಟ್ಟಿರುತ್ತದೆ. ನಾಲ್ಕು ಜುರ್ಕಿ ಗಾಂಜಾ ಎಳೆದು ತಲೆ ಶಾಂತ ಮಾಡಿಕೊಳ್ಳೋಣ ಅಂದರೆ ಸಿಗುವದಿಲ್ಲ. ಎಣ್ಣೆ ಹೊಡೆದು ಮೇಲಿಂದ ಮಹಾದರಿದ್ರ ಡ್ರಗ್ ಕ್ರ್ಯಾಕ್ ಕೊಕೇನ್ ಹೊಡೆದರೆ ಮೆದುಳು ಸುಟ್ಟು ಬೂದಿಯಾಗುತ್ತದೆ. ಸಮಾಜದ ಮೇಲೆ ಮತ್ತೂ ಸಿಟ್ಟು ಬರುತ್ತದೆ. ಆಗ ಕೈಯಲ್ಲಿ ಬಂದೂಕೊಂದು ಸಿಕ್ಕುಬಿಟ್ಟರೆ ಸುತ್ತುಮುತ್ತಲಿನ ಒಂದಿಷ್ಟು ಮಂದಿ ವಿನಾಕಾರಣ ಶಿವಾಯ ನಮಃ. ಗಾಂಜಾ ಕಾನೂನಬದ್ಧವಾದ ಬೇರೆ ರಾಜ್ಯಗಳಲ್ಲಿ ಹಿಂಸಾತ್ಮಕ ಅಪರಾಧಗಳು ಅವೆಷ್ಟೋ ಕಮ್ಮಿಯಾಗಿವೆಯಂತೆ. ಮತ್ತೆ ಸರ್ಕಾರಕ್ಕೆ ಸಿಕ್ಕಾಪಟ್ಟೆ ತೆರಿಗೆ ಬೇರೆ. ಯಾರಿಗುಂಟು ಯಾರಿಗಿಲ್ಲ? ಜೈ ಗಾಂಜಾ! ಕಾನೂನುಬದ್ಧವಾಗಲು ಇನ್ನೇನು ಉಳಿದಿದೆ? ವೇಶ್ಯಾವೃತ್ತಿ. ಅದರ ಪಾಳಿ ಯಾವಾಗಲೋ?

ಮತ್ತೊಂದು ಹಾಟ್ ಸುದ್ದಿ. ಮುಂದೊಂದು ದಿನ ಕ್ಯಾಲಿಫೋರ್ನಿಯಾ ರಾಜ್ಯ USA ಒಕ್ಕೂಟ ಬಿಟ್ಟು ಹೋಗುತ್ತೇನೆ ಅಂತ ರಗಳೆ ತೆಗೆದರೂ ಆಶ್ಚರ್ಯವಿಲ್ಲ. ಈಗ ನಾಲ್ಕಾರು ವರ್ಷಗಳಿಂದಲೇ ಆ ಬಗ್ಗೆ ಸಣ್ಣ ಪ್ರಮಾಣದ ಆಂದೋಳನವೊಂದು ಶುರುವಾಗಿದೆಯಂತೆ. conservative ಮತ್ತು ಬಲಪಂಥೀಯರಾದ ಟ್ರಂಪ್ ಸಾಹೇಬರು ಬಂದಿದ್ದೇ ಬಂದಿದ್ದು ಕ್ಯಾಲಿಫೋರ್ನಿಯಾದ ಪರಮ ಲಿಬರಲ್ ಜನ ಮತ್ತು ಎಡಪಂಥೀಯರು ಉರಿದುಬಿದ್ದಿದ್ದಾರೆ. ೨೦೧೯ ರಲ್ಲಿ ನಡೆಯುವ ರಾಜ್ಯದ ಚುನಾವಣೆಯಲ್ಲಿ 'ಕ್ಯಾಲಿಫೋರ್ನಿಯಾ USA ಒಕ್ಕೂಟ ಬಿಡಬೇಕೇ?' ಎನ್ನುವ ಪ್ರಸ್ತಾವ ಕೂಡ ಓಟಿಗೆ ಬರಲಿದೆ ಅಂತ ಸುದ್ದಿ. ಅಂತಹ ಒಂದು ಪ್ರಸ್ತಾವ ಓಟಿಗೆ ಬರಲು ಸಾಕಷ್ಟು ಸಹಿ ಸಂಗ್ರಹಿಸಬೇಕಾಗುತ್ತದೆ. ಸಿಕ್ಕಾಪಟ್ಟೆ ಸಾರ್ವಜನಿಕ ಬೆಂಬಲವನ್ನು mobilize ಮಾಡಬೇಕಾಗುತ್ತದೆ. ಮತ್ತೆ ಹಿಂದೆಂದೂ ರಾಜ್ಯವೊಂದು USA ಒಕ್ಕೂಟ ಬಿಟ್ಟ ಉದಾಹರಣೆಯಿಲ್ಲ. ಆದರೆ ಅಮೇರಿಕಾದ ಸಂವಿಧಾನದಲ್ಲಿ ರಾಜ್ಯವೊಂದು ಒಕ್ಕೂಟ ಬಿಟ್ಟುಹೋಗಲು ಬೆಂಬಲವಿಲ್ಲದಿದ್ದರೂ ಅಂತಹ ಪ್ರಕ್ರಿಯೆಯನ್ನು ಪೂರ್ತಿಯಾಗಿ ನಿಷೇಧಿಸಿಯೂ ಇಲ್ಲ. ಬ್ರಿಟನ್ ಯುರೋಪಿಯನ್ ಯೂನಿಯನ್ ಬಿಟ್ಟು ಹೊರಬಂತು ತಾನೇ? ಅದೇ ಮಾದರಿಯಲ್ಲಿ ಕ್ಯಾಲಿಫೋರ್ನಿಯಾ USA ಬಿಟ್ಟು ಹೊರಬಲಿದೆಯೇ? ನೋಡಬೇಕು! ತಮ್ಮ ಪ್ರಾಣದ ಹಂಗು ತೊರೆದು ಬಿಡಿಬಿಡಿಯಾಗಿದ್ದ ರಾಜ್ಯಗಳನ್ನೆಲ್ಲವನ್ನೂ ಒಂದುಗೂಡಿಸಿ, ಅದಕ್ಕಾಗಿಯೇ ಪ್ರಾಣ ತೆತ್ತ ಅಬ್ರಹಾಂ ಲಿಂಕನ್ನರು ಗೋರಿಯಲ್ಲಿಯೇ ಹೊರಳಾಡಿ ನರಳಾಡಿರಬೇಕು ಒಕ್ಕೂಟ ಛಿದ್ರವಾಗುವ ಲಕ್ಷಣಗಳನ್ನು ನೋಡಿ. ಪಾಪ ಲಿಂಕನ್ ಸಾಹೇಬರು.

ಕಾಲಾಯ ತಸ್ಮೈ ನಮಃ!