Friday, May 12, 2017

ಕೇವಿಯಿಂದ ಕೋವಿಯವರೆಗೆ...

ಅದೇನೋ ಗೊತ್ತಿಲ್ಲ. ಅದ್ಯಾಕೋ ಗೊತ್ತಿಲ್ಲ. ಕೇವಿ (KV) ಅಂತೇನಾದರೂ initials ಇದ್ದರೆ ನಾನು ಕೋವಿ ಅಂತಲೇ ಓದಿಕೊಳ್ಳುತ್ತೇನೆ. ಹಾಗೆಯೇ ಹೇಳುತ್ತೇನೆ ಕೂಡ. ಕೇವಿಯನ್ನು ಕೋವಿಯನ್ನುವದರಲ್ಲಿ ಅದೇನೋ ಮಜಾ. ಅದೇನೋ ವಿಕಟ ಆನಂದ.

ಇಲ್ಲಿ ಆಫೀಸಿನಲ್ಲಿ ಕೇ.ವಿ (K.V) ಅನ್ನುವ initials ಇರುವ ಸಹೋದ್ಯೋಗಿಯಿದ್ದಾನೆ. ಅವನಿಗೆ ಎಲ್ಲರೂ ಕೇವಿ, ಕೇವಿ ಅಂತಲೇ ಕರೆಯುತ್ತಾರೆ. ಅದು ಅವನ ಅಣತಿ, ಇಚ್ಛೆ ಕೂಡ. ಆದರೆ ನಾನು ಮಾತ್ರ, 'ಏ, ಕೋವಿ,' ಅನ್ನುತ್ತೇನೆ.

'ಏನಯ್ಯಾ ಇದು!? ಎಲ್ಲರೂ ಕೇವಿ ಅಂದರೆ ನೀನೊಬ್ಬನು ಮಾತ್ರ ಕೋವಿ, ಕೋವಿ ಅನ್ನುತ್ತೀಯಾ. ಏನಿದರ ಅರ್ಥ?' ಅಂದ ನಮ್ಮ ಕೇವಿ ಉರ್ಫ್ ಕೋವಿ.

'ನಮ್ಮ ಕನ್ನಡ ಭಾಷೆಯಲ್ಲಿ ಕೋವಿಯಂದರೆ ಬಂದೂಕು. ಗನ್. ನೀನು son of a gun ಇದ್ದಂಗೆ ಇದ್ದೀಯಾ. ಅದಕ್ಕೇ ನಿನಗೆ ಕೋವಿ ಅಂತೀನಿ. ಕೇವಿಗಿಂತ ಕೋವಿಯನ್ನುವದೇ ನಿನಗೆ ಸೂಟ್ ಆಗುತ್ತದೆ ಮಾರಾಯಾ!' ಎಂದು ಅವನ ತಲೆಗೆ ಬೋಳೆಣ್ಣೆ ತಿಕ್ಕಿದೆ. ಹೊಗಳಿಕೆಯಿಂದ ಕೋವಿ ಖುಷ್!

'ಒಹೋ, ಕೋವಿಯಿಂದರೆ ಕನ್ನಡದಲ್ಲಿ ತುಪಾಗಿಯಾss??' ಎಂದು ಎಳೆದ ಕೋವಿ ಅಲ್ಲಲ್ಲ ಕೇವಿ.

'ಹೂಂ! ಕೋವಿ ಅಂದರೆ ತುಪಾಗಿಯೇ. ಸರಿಯಾಗಿ ಹೇಳಿದೆ,' ಅಂದೆ.

ಕೊಂಗನ ಅಂದರೆ ತಮಿಳನ ಬಾಯಿಯಲ್ಲಿ ತುಪಾಕಿ ಹೋಗಿ ತುಪಾಗಿ ಆಗುತ್ತದೆ. ಇರಲಿ.

ಈ ಕೇವಿ ಅನ್ನುವದು ಕೋವಿಯಾಗಿದ್ದೂ ಒಂದು ತಮಾಷೆಯ ಕಥೆ.

೧೯೯೦ ರ ಸಮಯ. ಆಗೆಲ್ಲಾ ಫೋನ್ ಇಷ್ಟು ಕಾಮನ್ ಆಗಿರಲಿಲ್ಲ. ಮೊಬೈಲ್ ಅಂತೂ ಇರಲೇ ಇಲ್ಲ. ಲ್ಯಾಂಡ್ ಲೈನ್ ಕೂಡ ತುಂಬಾ ವಿರಳ. ನಾವು ಫೋನ್ ತೆಗೆದುಕೊಂಡಿದ್ದೂ ೧೯೮೭ ರಲ್ಲಿ. ಅದು ಏನೋ OYT ಅಂತೇನೋ ಸ್ಕೀಮಿನಲ್ಲಿ ಹೆಚ್ಚಿನ ರೊಕ್ಕ ಕೊಟ್ಟು ತೆಗೆದುಕೊಂಡಿದ್ದಾಗಿತ್ತು.

ಆಗಿನ ಕಾಲದಲ್ಲಿ ಮನೆಯಲ್ಲಿ ಫೋನ್ ಬಂತು ಅಂದರೆ ಸಮಾಜಸೇವೆಗೆ ಒಂದು ಒಳ್ಳೆ ಮಾರ್ಗ ಸಿಕ್ಕಂತೆ. ಅದರಲ್ಲೂ ಸುತ್ತಮುತ್ತ ಯಾರ ಮನೆಯಲ್ಲೂ ಫೋನ್ ಇಲ್ಲ ಮತ್ತು ನೀವು ಸ್ವಲ್ಪ ಜನರನ್ನು ಪ್ರೀತಿಸುವ, ಹಚ್ಚಿಕೊಳ್ಳುವ ಸ್ನೇಹಪರ ಜನ ಅಂತಾದರಂತೂ  ಮುಗಿದೇಹೋಯಿತು. ಸುತ್ತಮುತ್ತಲಿನ ಜನ ನಿಮ್ಮ ಫೋನ್ ನಂಬರನ್ನು ತಮ್ಮ ಬಂಧುಮಿತ್ರರಿಗೆ ಕೊಡುತ್ತಾರೆ. ಅವರು ಫೋನ್ ಮಾಡಿದಾಗ ಸಂದೇಶ ತೆಗೆದುಕೊಂಡು ನಂತರ ಮುಟ್ಟಿಸುವುದು ಅಥವಾ ತುಂಬಾ ತುರ್ತಾಗಿದ್ದರೆ ಆಗಿಂದಾಗಲೇ ಹೋಗಿ ಕರೆದು ಬರುವ 'ಪುಣ್ಯಕಾರ್ಯಗಳನ್ನು' ಮಾಡುವ 'ಸೌಭಾಗ್ಯ'ವನ್ನು ಕರುಣಿಸುತ್ತಿತ್ತು ಆಗಿನ ಟೆಲಿಫೋನ್ ಎಂಬ ಯಂತ್ರ.

ನಮ್ಮ ಮನೆಯಲ್ಲೂ ಹಾಗೇ ಆಯಿತು. ನಮ್ಮ ಮನೆಗೆ ಫೋನ್ ಬರುವ ಮೊದಲು ಪಕ್ಕದ ರೋಡಿನಲ್ಲಿದ್ದ ಶ್ರೀ ಅಗರವಾಲಾ ಅವರ ಮನೆ ಫೋನನ್ನು ನಾವು ಉಪಯೋಗಿಸುತ್ತಿದ್ದೆವು. ಕಂಪನಿಯೊಂದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಅಗರವಾಲಾ ಮತ್ತು ಕುಟುಂಬದವರು ತುಂಬಾ ಒಳ್ಳೆ ಜನರು. ಅವರಿಗೆ ಕನ್ನಡ ಬರುತ್ತಿದ್ದಿಲ್ಲ. ಹಾಗಾಗಿ ಜನ ಸಂಪರ್ಕ ಕಮ್ಮಿ ಇತ್ತು. ಅದೇನು ಯೋಗಾಯೋಗವೋ, ನಮಗೆ ಮತ್ತು ಅವರಿಗೆ ತುಂಬಾ ಆತ್ಮೀಯ ದೋಸ್ತಿಯಾಗಿತ್ತು. 'ಬೇಕಾದಾಗ, ಭಿಡೆ ಬಿಟ್ಟು, ಫೋನ್ ಉಪಯೋಗಿಸಿಕೊಳ್ಳಿ,' ಎಂದು ತುಂಬಾ ಪ್ರೀತಿಯಿಂದ ಹೇಳಿದ್ದರು. ತಂದೆಯವರಿಗೆ ಯಾರದ್ದಾದರೂ ಫೋನ್ ಬಂದರೆ ಕೆಲಸದವರನ್ನು ಕಳಿಸುತ್ತಿದ್ದರು. ಕೆಲಸದವರು ಇರಲಿಲ್ಲ ಅಂದರೆ ತಮ್ಮ ಮಕ್ಕಳನ್ನೇ 'ಹೆಗಡೆ ಸಾಬ್ ಕೆ ಘರ್ ಜಾಕೆ ಬೋಲ್ ಕೆ ಆಜಾ' ಅಂತ ಕಳಿಸುತ್ತಿದ್ದರು. ದೊಡ್ಡ ಮನಸ್ಸು. ಬಹಳ ಆತ್ಮೀಯತೆ. ಅವರ ಉಪಕಾರ, ಸಹೃದಯತೆಗಳನ್ನು ಮರೆಯಲು ಸಾಧ್ಯವಿಲ್ಲ. ಧಾರವಾಡ ಬಿಟ್ಟು ಮುಂಬೈ ಸೇರಿಕೊಂಡಿದ್ದರೂ ಮೂವತ್ತು ವರ್ಷಗಳ ನಂತರವೂ ನಿರಂತರ ಸಂಪರ್ಕದಲ್ಲಿದ್ದಾರೆ.

ಉಪಕಾರ ಮಾಡಿದವರಿಗೇ ತಿರುಗಿ ಉಪಕಾರ ಮಾಡುತ್ತೇವೆ ಅಂದರೆ ಅದು ಬಹಳ ಸಂದರ್ಭಗಳಲ್ಲಿ ಅಸಾಧ್ಯ. ಅದಕ್ಕೇ ಇಂಗ್ಲೀಷಿನಲ್ಲಿ Pass on the goodwill ಅಂತ ಒಂದು ಮಾತಿದೆ. ಉಪಕಾರ ಮಾಡಿದವರಿಗೇ ಅದೇ ಉಪಕಾರ ಮಾಡಲು ಸಾಧ್ಯವಿಲ್ಲ ಅಥವಾ ಅವರಿಗೆ ಅದರ ಜರೂರತ್ತಿಲ್ಲ ಅಂತಾದರೆ ಅದೇ ಉಪಕಾರವನ್ನು ನೀವು ಬೇರೆಯವರಿಗೆ ಮಾಡಿ. ಅದು ಮೂಲ ಉಪಕಾರ ಮಾಡಿದವರ ಉಪಕಾರವನ್ನು ತೀರಿಸಿದ್ದಕ್ಕೆ ಸರಿಸಮ ಎಂದು ಅರ್ಥ. ಹಾಗೆಂದುಕೊಂಡು ನಾವು ನಮ್ಮ ಮನೆಗೆ ಫೋನ್ ಬಂದ ಮೇಲೆ ಅದನ್ನೇ ಪಾಲಿಸಿಗೊಂಡು ಬರುತ್ತಿದ್ದೆವು. ಮತ್ತೆ ನಮ್ಮ ನೆರೆಹೊರೆ ಜನರೂ ಸಹ ತುಂಬಾ ಒಳ್ಳೆಯವರೇ. ಯಾರೂ ನಮ್ಮನೆಯಲ್ಲಿರುವ ಫೋನಿನ ಅಥವಾ ಮನೆ ಜನರ ಒಳ್ಳೆತನದ ದುರುಪಯೋಗ ಮಾಡಿಕೊಳ್ಳಲಿಲ್ಲ. ಅಗತ್ಯವಿದ್ದಾಗ ಫೋನ್ ಬಳಸಿಕೊಂಡು, ಮರೆಯದೇ ಒಂದು ರೂಪಾಯಿ ಇಟ್ಟೇ ಹೋಗುತ್ತಿದ್ದರು. ಅದು ಅಂದಿನ ಲೋಕಲ್ ಕರೆಯ ಚಾರ್ಜ್. STD ತುಂಬಾ ದುಬಾರಿಯೆಂದು ಮೊದಲಿನ ಕೆಲವು ವರ್ಷ ಹಾಕಿಸಿರಲಿಲ್ಲ. ನಂತರ STD ಹಾಕಿಸಿದ ಮೇಲೆ ಬೇರೆ ಊರಿಗೆ ಕರೆ ಮಾಡಬೇಕಾದರೆ ಮೊದಲೇ ಹೇಳುತ್ತಿದ್ದರು. ಟೈಮರ್ ಹಿಡಿದು  ಕೂಡುತ್ತಿದ್ದರು ಮನೆ ಮಂದಿ. ಟೆಲಿಫೋನ್ ಇಲಾಖೆಯ ಅದೇನೋ ಕೋಷ್ಟಕ ಉಪಯೋಗಿಸಿ, ಅಷ್ಟು ಸಮಯಕ್ಕೆ ಎಷ್ಟಾಯಿತು ಎಂದು ಮೊತ್ತವನ್ನು ಲೆಕ್ಕ ಮಾಡಿ ಹೇಳಿದರೆ ಅಷ್ಟು ರೊಕ್ಕ ಕೊಟ್ಟು ಹೋಗುತ್ತಿದ್ದರು. ಯಾವಾಗಲೋ ಒಮ್ಮೆ ಯಾರೋ ಪೊರ್ಕಿ ಟೈಪಿನ ಜನ STD ಮಾಡಿ, ಹೇಳದೇ ಓಡಿಹೋಗಿದ್ದರು. ಆವಾಗ ಸ್ವಲ್ಪ ಜಾಸ್ತಿ ಬಿಲ್ ಬಂದಿತ್ತು. ಅದಾದ ನಂತರ STD ಲಾಕ್ ಹಾಕಿಸಿಯಾಗಿತ್ತು. ಆದರೆ ಅದೊಂದು isolated ಘಟನೆ. ಉಳಿದೆಲ್ಲ ಸಮಯದಲ್ಲಿ ಟೆಲಿಫೋನ್ ಆಪರೇಟರ್ ನೌಕರಿಯನ್ನು ತಂದೆಯವರು ಬಹಳ ಸೊಗಸಾಗಿ ಮಾಡಿ ಬಹಳ ಪುಣ್ಯ ಕಮಾಯಿಸಿದ್ದಾರೆ. ಜೊತೆಗೆ STD ಬಗ್ಗೆ, ISD ಬಗ್ಗೆ ಉದ್ರಿ ಉಪದೇಶ ಫ್ರೀ.

ಮತ್ತೊಂದು ತರಹದ ಟೆಲಿಫೋನ್ ಸಮಾಜಸೇವೆ ಎಂದರೆ ಸಂದೇಶ ತಲುಪಿಸುವದು ಮತ್ತು ಕರೆದುಬರುವದು. ಅದೆಲ್ಲ ಅಪ್ಪ, ಅಮ್ಮ ಮಾಡುತ್ತಿದ್ದರು. ಅಥವಾ ಅದೇ ವೇಳೆ ಮನೆಯಲ್ಲಿ ಯಾರಾದರೂ ಕೆಲಸದವರಿದ್ದರೆ ಅವರ ಹತ್ತಿರ ಹೇಳಿ ಕಳಿಸುತ್ತಿದ್ದರು. ಹೆಚ್ಚಿನದು ಮೆಸೇಜ್ ಸೇವೆ ಇರುತ್ತಿತ್ತು. ಫೋನ್ ಬಂದಾಗ ಮೆಸೇಜ್ ಬರೆದಿಟ್ಟುಕೊಂಡು ಸಂಜೆ ಅಮ್ಮ ವಾಕಿಂಗ್ ಹೋದಾಗ ಸಂದೇಶ ಮುಟ್ಟಿಸಿಬರುತ್ತಿದ್ದುದೇ ಜಾಸ್ತಿ. ನಾನಂತೂ ಅಂತಹ ಕೆಲಸ ಮಾಡಿದ್ದೇ ಇಲ್ಲ. ಮಾಡಬೇಕಾದ ಮನೆಯ ಕೆಲಸಗಳನ್ನೇ ಮಾಡದ ಆಲಸಿ ಮಹಾನುಭಾವ ನಾನು. ಇನ್ನು ಇಂತಹ 'ಉದ್ಯೋಗಿಲ್ಲದ ಉಸಾಬರಿ' ಕೆಲಸಗಳನ್ನು ಮಾಡುತ್ತೇನೆಯೇ? ನನ್ನ ಪ್ರೀತಿಯ ಸವದತ್ತಿ ಮಲ್ಲಣ್ಣನ ಮನೆಗೆ ಮೆಸೇಜ್ ಕೊಟ್ಟು ಬರುವದಿದ್ದರೆ ಮಾತ್ರ ಹೋಗುತ್ತಿದ್ದೆ ಬಿಟ್ಟರೆ ಬೇರೆ ಯಾರ ಮನೆಗೂ ಹೋದ ದಾಖಲೆಯಿಲ್ಲ. 'ಹೇಳಿದ ಒಂದೂ ಕೆಲಸ ಮಾಡೋದಿಲ್ಲ ನೋಡು ನೀ. ಬರೇ ಜೀವಾ ತಿಂತಿ,' ಅಂತ ಬಾಯಿಬಾಯಿ ಬಡಿದುಕೊಳ್ಳುತ್ತ ಖುದ್ದು ಅಮ್ಮನೇ ಹೋಗಿ ಕರೆದುಬರಬೇಕೇ ವಿನಃ ನಾವು ಅದನ್ನೆಲ್ಲ ಮಾಡುತ್ತಿದ್ದಿಲ್ಲ. ಇಂಜಿನಿಯರಿಂಗ್ ನಡೆಯುತ್ತಿತ್ತು. ಸೆಮಿಸ್ಟರ್ ಮುಗಿದ ಮೇಲೆ ಎರಡೋ ಮೂರೋ ವಾರದ ರಜೆಗೆಂದು ಫುಲ್ ಮಜಾ ಮಾಡಲು ಮನೆಗೆ ಬಂದರೆ ಇಲ್ಲಿ ಇವರ ಕಿರಿಕಿರಿ. 'ಇಂಥಾ ಉದ್ಯೋಗಿಲ್ಲದ ಉಸಾಬರಿ ಎಲ್ಲಾ ನೀವೇ ಮಾಡಿಕೊಳ್ಳಿರಿ. ನನಗ ಇವೆಲ್ಲಾ ಹಚ್ಚಬ್ಯಾಡ್ರೀ,' ಅಂತ ನಮ್ಮ ಮಾತು. ಅದಕ್ಕೆ ಅಮ್ಮನ ಬಯ್ಯುವಿಕೆ. 'ಅವನಿಗೆ ಹೇಳಿ ನೀ ಯಾಕ ಶ್ರಮಾ ತೊಗೋತ್ತಿ?? ಅದು ಬದಲಾಗೋ ಪೈಕಿ ಅಲ್ಲ!' ಅನ್ನುವಂತಹ ಸ್ಥಿತಪ್ರಜ್ಞರ ಟೈಪಿನ ಶಾಣ್ಯಾ ವರ್ತನೆ ತಂದೆಯವರಿಂದ.

೧೯೯೨ ಡಿಸೆಂಬರ್ ಇರಬೇಕು. ಐದನೇ ಸೆಮಿಸ್ಟರ್ ಮುಗಿದಿತ್ತು. ರಜೆಗೆ ಬಂದಿದ್ದೆ. ಒಂದಿನ ಫೋನ್ ರಿಂಗಾಯಿತು. ಪಕ್ಕದಲ್ಲೇ ಕೂತಿದ್ದೆ. ಎತ್ತಿದರೆ ಒಬ್ಬ ಹುಡುಗಿ ಧ್ವನಿ.

'ಹಲೋ' ಎಂದೆ.

'ಹೆಗಡೆ ಅವರ ಮನೀರಿ?' ಅಂತ ಕೇಳಿತು.

'ಹೌದ್. ಏನ್ಬೇಕಾಗಿತ್ತು?' ಎಂದು ಕೊಂಚ ಗಡುಸಾಗಿ ಕೇಳಿದೆ. ಆವತ್ತಿನ ಮಾತುಕತೆ ಎಲ್ಲ ಹಾಗೇ.

ಧ್ವನಿ ಕೇಳಿಯೇ ಗೊತ್ತಾಗಿತ್ತು ಯಾರೋ ಚಿಣ್ಣ ಹುಡುಗಿ ಅಂತ. ಹಾಗಾಗಿ 'ರೀ' ಅನ್ನಲಿಲ್ಲ. ಮತ್ತೆ 'ಸಮಾಜಸೇವೆ' ಕರೆಯೆಂದು ಖಾತ್ರಿಯಾಗಿ, ಫೋನ್ ಎತ್ತಿದ್ದಕ್ಕೆ ಅಸಮಾಧಾನವಾಗಿತ್ತು. ಅಂತಹ ಕರೆಯೆಂದು ಗೊತ್ತಾಗಿದ್ದರೆ ಫೋನ್ ಎತ್ತುತ್ತಲೇ ಇರಲಿಲ್ಲ. ಅಲ್ಲೇ ಕೂತಿದ್ದರೂ ಫೋನ್ ಎತ್ತದಿದ್ದಕ್ಕೆ ಅಮ್ಮ ಅಡಿಗೆಮನೆಯಿಂದ ಬೈಯುತ್ತಾ ಬಂದು ಅವರೇ ಫೋನ್ ಎತ್ತಲು ಬಿಡುತ್ತಿದ್ದೆ. ಆದರೆ ಈಗ ಪೊರಪಾಟಿನಲ್ಲಿ ಎತ್ತಿಬಿಟ್ಟಿದ್ದೇನೆ. ಹಾಗಾಗಿ ಮಾತಾಡಲೇಬೇಕು.

'ಸುಮಾನ್ನ ಕರೀರಿ ಸ್ವಲ್ಪ,' ಅಂದಳು.

ಯಾವ ಸುಮಾ ಅಂತ ನನಗೆ ಸಮಾ ಗೊತ್ತಾಗಲಿಲ್ಲ. ಸುತ್ತಮುತ್ತಲಿದ್ದ ನಾಲ್ಕಾರು ಮನೆಗಳಲ್ಲಿ ಯಾರದೋ ಮನೆಯ ಮಗಳಿರಬೇಕು.

'ಕರೀರಿ' ಅಂದರೆ ಸ್ಟ್ಯಾಂಡರ್ಡ್ ಡೈಲಾಗ್ ಇರುತ್ತಿತ್ತು. 'ಮೆಸೇಜ್ ಕೊಡಿ. ಅವರೇ ನಿಮಗೆ ನಂತರ ಕರೆ ಮಾಡುತ್ತಾರೆ. ಸದ್ಯಕ್ಕೆ ಕರೆದುಬರಲು ಯಾರೂ ಇಲ್ಲ.'

ಹಾಗೆ ಮಾಡಿ ಎಂದು  ನೆರೆಹೊರೆ ಜನರೇ ಹೇಳಿದ್ದರು. ಫೋನ್ ಬಂದಾಗೊಮ್ಮೆ ಬಂದು ಬಂದು ಕರೆದುಹೋಗುವದು ಕಷ್ಟ ಅಂತ ಅವರಿಗೂ ಗೊತ್ತು.

'ಮೆಸೇಜ್ ಕೊಡು. ಅವರಿಗೆ ಕೊಡ್ತೇವಿ. ಅವರು ನಂತರ ಫೋನ್ ಮಾಡ್ತಾರ,' ಅಂದೆ.

'ನಾನು ವಿಜೂ ಅಂತರೀ. ಸುಮಾನ ಫ್ರೆಂಡ್. ಕೇವಿ ರಾವ್ ಅವರ ಮಗಳು,' ಅಂದಳು.

'ಸರಿ. ಮೆಸೇಜ್ ಏನು?' ಅಂದೆ.

'ಸುಮಾಗ ತಿರುಗಿ ಫೋನ್ ಮಾಡ್ಲಿಕ್ಕೆ ಹೇಳ್ರಿ,' ಅಂತು ಆಕಡೆಯ ಧ್ವನಿ.

'ಸರಿ,' ಎಂದು ಫೋನ್ ಇಡಲು ಮುಂದಾದೆ.

'ರೀ, ನನ್ನ ಹೆಸರು ವಿಜೂ. ಬ್ಯಾಂಕ್ ಮ್ಯಾನೇಜರ್ ಕೇವಿ ರಾವ್ ಅವರ ಮಗಳು ಅಂತ ಹೇಳೋದನ್ನ ಮರಿಬ್ಯಾಡ್ರೀ' ಅಂತ ಮತ್ತೊಮ್ಮೆ ಹೇಳಿದಳು.

ಹೆಚ್ಚಾಗಿ ವಿಜೂ ಅಂತ ಎರಡು ಮೂರು ಜನ ಇರಬೇಕು. ಅದಕ್ಕೇ ಇವಳು ಯಾವ ವಿಜೂ ಎಂದು differentiate ಮಾಡಲು ಮತ್ತೆ ಮತ್ತೆ 'ಕೇವಿ ರಾವ್ ಅವರ ಮಗಳು' ಎಂದು ಹೇಳಿದ್ದಾಳೆ. ಎಲ್ಲಿ ಕೇವಿ ರಾವ್ ಕೂಡ multiple ಜನರು ಇದ್ದರೋ ಏನೋ. ಅದಕ್ಕೇ ಬ್ಯಾಂಕ್ ಮ್ಯಾನೇಜರ್ ಕೇವಿ ರಾವ್ ಅವರ ಮಗಳು ಅಂತ ಬೇರೆ ಹೇಳಿದ್ದಾಳೆ.

ಫೋನಿನ ಪಕ್ಕ ಇದ್ದ ಕಾಗದದ ತುಣುಕೊಂದರ ಮೇಲೆ ಬರೆದೆ. Message for Suma. From Viju, daughter of KV Rao, bank manager. Call back.

ಇನ್ನು ಅಮ್ಮನಿಗೆ ಇದನ್ನು ಹೇಳಬೇಕಲ್ಲ. ಮೆಸೇಜ್ ಮುಟ್ಟಿಸಿಬರಬೇಕಾದವರು ಅವರೇ ತಾನೇ? ನನ್ನಂತಹ ಆಲಸಿ ಮಹಾತ್ಮ ಫೋನ್ ಎತ್ತಿ, ಯಾರೋ ಚಿಣ್ಣ ಹುಡುಗಿಯೊಂದಿಗೆ ಅಷ್ಟಾದರೂ ಮಾತಾಡಿ, ಮೆಸೇಜ್ ಬರೆದುಕೊಂಡಿದ್ದೇ ದೊಡ್ಡ ಮಾತು.

'ಏ, ಯವ್ವಾ ಬೇ! ಇಲ್ಲಿ ಕೇಳ್ ಬೇ. ಸುಮಾ ಅಂದ್ರ ಯಾರ ಪೈಕಿ ಹುಡುಗಿ? ಅಕಿಗೆ ಯಾರೋ ವಿಜೂ ಅನ್ನಾಕಿ ಫೋನ್ ಮಾಡಿದ್ದಳು. ಯಾರೋ ಕೋವಿ ರಾವ್ ಅನ್ನವರ ಮಗಳಂತ. ಕೋವಿ ರಾವ್, ಬ್ಯಾಂಕ್ ಮ್ಯಾನೇಜರ್ ಮಗಳು. ಅಕಿ ಸುಮಾಗ ತಿರುಗಿ ಫೋನ್ ಮಾಡಲಿಕ್ಕೆ ಹೇಳು ಅಂದಾಳ. ಮೆಸೇಜ್ ಮುಟ್ಟಿಸು!' ಅಂತ ಕೂತಲ್ಲಿಂದಲೇ ಕೂಗಿದೆ.

'ಅಲ್ಲಿ ಕೂತು ಏನು ಒದರ್ತೀಯೋ!? ಸುಡುಗಾಡು. ಇಲ್ಲಿ ಬಂದು ಏನು ಅಂತ ಹೇಳಿಹೋಗು ಪುಣ್ಯಾತ್ಮ!' ಅಂತ ಅಮ್ಮ ಅಲ್ಲಿಂದಲೇ ಒದರಿದರು. ಒಟ್ಟಿನಲ್ಲಿ ಡಬಲ್ ಒದರಾಟ.

ಹೋಗಿ ಹೇಳಿದೆ.

'ಸುಮಾಗ? ವಿಜೂ ಫೋನ್ ಮಾಡಿದ್ದಳೇ? ಯಾರ ಮಗಳು? ಕೋವಿ ರಾವ್ ಮಗಳೇ? ಏನು ಹೇಳ್ತೀಯೋ??? ಅಕಿ ಯಾವ ರಾವ್ ಅಂದಳೋ, ನೀ ಏನು ಕೇಳಿಸಿಕೊಂಡಿಯೋ? ತಲಿ ಎತ್ಲಾಗ ಇರ್ತದ? ಕೋವಿ ರಾವ್ ಅಂತ ಕೋವಿ ರಾವ್. ಹುಚ್ಚಾ!' ಅಂತ ರೇಗಿದರು ಅಮ್ಮ.

ಅದ್ಯಾಕೋ ಗೊತ್ತಿಲ್ಲ. ಕೇವಿ ರಾವ್ ಅಂತಲೇ ಬರೆದುಕೊಂಡಿದ್ದರೂ ಹೇಳುವಾಗ ಮಾತ್ರ, ಎರಡೂ ಸಲ, ಕೋವಿ ರಾವ್ ಅಂತಲೇ ಹೇಳಿದ್ದೆ! Unintended slip of tongue but very interesting slip of tongue! ಕೇವಿ ರಾವ್ ಹೋಗಿ ಕೋವಿ ರಾವ್ ಆಗಿತ್ತು!

ಕೇವಿ ಬದಲಿ ಕೋವಿ ಅಂದೆ ಅನ್ನುವದು ತಿಳಿದ ಮೇಲೆ ನಕ್ಕಿದ್ದೇ ನಕ್ಕಿದ್ದು. ಈಗ ಕೋವಿ ರಾವ್ ಯಾರು? ಏನು ಮಾಡುತ್ತಾರೆ? ಕೋವಿ ರಾವ್ ಬ್ಯಾಂಕ್ ಮ್ಯಾನೇಜರ್ ಆಗಲು ಹೇಗೆ ಸಾಧ್ಯ? ಬ್ಯಾಂಕಿನ ಮುಂದೆ ಬಾಗಿಲಲ್ಲಿ ಕೋವಿ ಹಿಡಿದು ನಿಂತಿರುತ್ತಾನಲ್ಲ, ಒಬ್ಬ ಕಾವಲುಗಾರ, ಅವನೇ ಕೋವಿ ರಾವ್ ಇರಬಹುದು. ಅವನ ಮಗಳು ಫೋನ್ ಮಾಡಿದ್ದಳು. ಕೋವಿ ರಾವನ ಮಗಳು. ಹಾ!!ಹಾ!! ಹೀ!! ಹೀ!! ಹೀಗೆ ಏನೇನೋ ಹೇಳಿಕೊಂಡು ಬಿದ್ದು ಬಿದ್ದು ನಕ್ಕೆ. ಆಗಿನ ಜಮಾನಾದಲ್ಲಿ ಎಲ್ಲದೂ ತಮಾಷೆಯೇ. Good old carefree days.

'ಹೀಂಗ ಹುಚ್ಚುಚ್ಚರೆ ಅಡ್ನಾಡಿ ಮಾತಾಡಿ ನಗಲಿಕ್ಕೆ ಬರ್ತದ. ಆ ಸುಮಾನ ಮನಿಗೆ ಹೋಗಿ ಮೆಸೇಜ್ ಕೊಟ್ಟು ಬಾ ಅಲ್ಲಾ? ಪ್ಲೀಸ್' ಅಂತ ಅಮ್ಮ ಕೇಳಿಕೊಂಡರು.

ನಾನು hopeless ಕೇಸ್ ಅಂತ ಗೊತ್ತಿದ್ದರೂ ಅವರು ನಂಬಲಿಕ್ಕೆ ತಯಾರಿಲ್ಲ. hoping against the hope ಅನ್ನುವ ಮಾದರಿಯಲ್ಲಿ ವಿನಂತಿಸಿಕೊಂಡಿದ್ದರು. ಅವರೂ ಬದಲಾಗುವದಿಲ್ಲ. ನಾನಂತೂ ಬದಲಾಗುವ ಚಾನ್ಸೇ ಇಲ್ಲ.

'ಏ, ಎಲ್ಲಿದ್ ಹಚ್ಚಿ ಬೇ? ಉದ್ಯೋಗಿಲ್ಲದ ಉಸಾಬರಿ. ಇವೆಲ್ಲಾ ಸಮಾಜಸೇವಾ, ಮಸಾಜಸೇವಾ ನೀವೇ ಮಾಡಿಕೊಳ್ಳಿರಿ. ನನಗ ಬಿಲ್ಕುಲ್ ಹಚ್ಚಬ್ಯಾಡ್ರೀ. ನಾವು ಯಾವಾಗೋ ಒಂದೆರೆಡು ವಾರ ಮನಿಗೆ ಆರಾಮ್ ಮಾಡೋಣ ಅಂತ ಬಂದ್ರ ಬರೇ ಇದೇ ಆತಲ್ಲಾ??? ಸುಮಾ ಅಂತ. ವಿಜು ಅಂತ. ಕೋವಿ ರಾವ್ ಅಂತ. ಅದಂತ. ಇದಂತ. ಸುಡುಗಾಡು!' ಅಂತ ನಾನೂ ರೇಗಿ ಅಲ್ಲಿಂದ ರೈಟ್ ಅಂದೆ.

ಅಮ್ಮನೋ, ಕೆಲಸದವಳೋ ಯಾರೋ ಹೋಗಿ ಮೆಸೇಜ್ ಮುಟ್ಟಿಸಿದ್ದರು ಅಂತ ಕಾಣುತ್ತದೆ.

ಮರುದಿನ ಬೆಳಿಗ್ಗೆ ತಿಂಡಿ ತಿಂದು ನಮ್ಮ ಪ್ರೀತಿಯ ಸಂಕ (ಸಂಯುಕ್ತ ಕರ್ನಾಟಕ) ಪತ್ರಿಕೆ ಓದುತ್ತ, ಧಾರವಾಡದ ಯಾವ ಸಿನೆಮಾ ಥೇಟರಿನಲ್ಲಿ ಅಂದು ಸಂಜೆ ತಿಗಣೆ ಕಚ್ಚಿಸಿಕೊಂಡರೆ ಹಿತಕಾರಿ ಅಂತ ಸ್ಕೆಚ್ ಹಾಕುತ್ತಿದ್ದೆ.

ಆಗ ಸುಮಾ ಎಂಟ್ರಿ ಕೊಟ್ಟಳು. ನಮ್ಮನೆಯಿಂದ ಎರಡು ಮನೆ ಬಿಟ್ಟು ಇದ್ದ ಮನೆಯವರ ಮಗಳು. ಆ ಮನೆಯಲ್ಲಿ ಇದ್ದ ನಾಲ್ಕಾರು ಅಕ್ಕ ತಂಗಿಯರಲ್ಲಿ ಯಾರೋ ಒಬ್ಬಳು ಸುಮಾ ಅಂತ ಅಂದಾಜಿತ್ತು. ಆದರೆ ಅವರ್ಯಾರೂ ಅಷ್ಟಾಗಿ ಪರಿಚಯವಿಲ್ಲದ ಕಾರಣ ಇವಳೇ ಸುಮಾ ಅಂತ ಗೊತ್ತಿರಲಿಲ್ಲ.

'ಅಣ್ಣಾ, ಫೋನ್ ಮಾಡಬೇಕು. ಲೋಕಲ್ ಕಾಲ್.... ' ಅಂದಳು ಎಂಟ್ರಿ ಕೊಟ್ಟ ಸುಮಾ.

ಸಂಸ್ಕಾರವಂತ ಹುಡುಗಿ. ಅನುಮತಿ ಕೇಳಿದ್ದಾಳೆ.

ಪುಣ್ಯಕ್ಕೆ ಅಣ್ಣಾ ಅಂದಳು. ಅಂಕಲ್ ಅನ್ನಲಿಲ್ಲ. ನಮ್ಮ ಪುಣ್ಯ. ಆಗಲೇ ಆರಡಿ ಎತ್ತರ, ತೊಂಬತ್ತು ಕೇಜಿ with ಸದ್ದಾಂ ಹುಸೇನ್ ಮಾದರಿಯ ದೊಡ್ಡ ಮೀಸೆಯೊಂದಿಗೆ ರಾರಾಜಿಸುತ್ತಿದ್ದ ನಮ್ಮ ಬೃಹತ್ ಹೊನಗ್ಯಾಕಾರವನ್ನು ನೋಡಿ ಎರಡು ವರ್ಷ ಮೊದಲೇ SSLC ಹುಡುಗಿಯೊಬ್ಬಳು ಅಂಕಲ್ ಅಂದುಬಿಟ್ಟಿದ್ದಳು. ಹಾಗಾಗಿ ಅಂಕಲ್ ಅನ್ನಿಸಿಕೊಂಡಿದ್ದಕ್ಕೆ ಆಗಲೇ precedence ಇತ್ತು. ಹದಿನೆಂಟು ವರ್ಷಕ್ಕೇ ಅಂಕಲ್ ಅನ್ನಿಸಿಕೊಂಡವರು ಬಹಳ ಕಮ್ಮಿ ಜನ ಇರಬೇಕು.

ನಾನೋ ಆಗ ಅಸಹನೆಯ ಮೂರ್ತಿರೂಪ.

'ಹೂಂ, ಮಾಡ್ಕೋ,' ಅಂತ ಗದರುವ ಧ್ವನಿಯಲ್ಲಿ ಹೇಳಿದೆ.

ಗಡಸು ಧ್ವನಿಗೆ ಬೆದರಿದ ಸುಮಾ, 'ಅಣ್ಣಾನ ಮೂಡ್ ಸರಿ ಇದ್ದಂಗಿಲ್ಲ,' ಅಂದುಕೊಂಡಿರಬೇಕು. ಅಂದುಕೊಂಡಿದ್ದರೆ ಅದು ಅವಳ ಕರ್ಮ.

ಸುಮಾ ಫೋನ್ ಮಾಡಿದ್ದು ಅದೇ ಗೆಳತಿಗೆ. ಅವಳೇ..... ವಿಜೂ..... ಕೋವಿ ರಾವ್.... ಅಲ್ಲಲ್ಲ ಕೇವಿ ರಾವ್ ಮಗಳು. ಕೋವಿ ರಾವ್ ಬ್ಯಾಂಕ್ ಮ್ಯಾನೇಜರ್.

ಈ ಸುಮಾನೂ ಅಷ್ಟೇ. ಫೋನ್ ಮಾಡಿ, 'ಕೇವಿ ರಾವ್ ಅವರ ಮನಿ ಏನ್ರೀ?? ಸ್ವಲ್ಪ ವಿಜೂಗ ಕರೀರಿ....' ಅಂದಳು.

ಕೇವಿ ರಾವ್ ಅಂತ ಕೇಳಿದ್ದೇ ಕೇಳಿದ್ದು. ಅಷ್ಟೇ. ಆ ನಗು ಎಲ್ಲಿಂದ ಬಂತೋ ಏನೋ ಗೊತ್ತಿಲ್ಲ. ಅಲ್ಲೇ ಪೆಕಪೆಕಾ ಅಂತ ನಕ್ಕೆ. ರಕ್ಕಸ ನಗೆ. ಫೋನಿನಲ್ಲಿ ಮಾತಾಡುತ್ತಿದ್ದ ಸುಮಾ ಕೊಂಚ ಅಪ್ರತಿಭಳಾಗಿ ನನ್ನ ಕಡೆ ನೋಡಿದಳು. ಅವಳ ಬೆದರಿದ ಮುಖ ನೋಡಿ ಪಾಪ ಅನ್ನಿಸಿತು. ಅಣ್ಣ ಅಂತ ಬೇರೆ ಕರೆದಿದ್ದಾಳೆ. ಪಾಪದ ಹುಡುಗಿ. 'ಏನಿಲ್ಲಾ ಮಾರಾಯ್ತಿ. ನೀನು ಫೋನಿನಲ್ಲಿ ಮಾತಾಡಿಕೋ,' ಅನ್ನುವಂತೆ ಸಂಜ್ಞೆ ಮಾಡಿ, ನನ್ನ ರಕ್ಕಸ ನಗೆ ಮುಂದುವರೆಸಿದೆ.

ಸ್ವಲ್ಪ ಹೊತ್ತಿನ ನಂತರ ಸುಮಾ ತನ್ನ ಗೆಳತಿ ವಿಜೂ ಅಲಿಯಾಸ್ ಕೋವಿ ರಾವ್ ಮಗಳ ಜೊತೆ ಮಾತುಕತೆ ಮುಗಿಸಿದಳು. ಮರೆಯದೇ ಒಂದು ರೂಪಾಯಿ ಇಟ್ಟು ಹೊರಟಳು.

ನಮಗೋ ಕಿತಾಪತಿ ಮಾಡುವ ಹುಮ್ಮಸ್ಸು. ಅದರಲ್ಲೂ ಬೆಳಿಗ್ಗೆ ಬೆಳಿಗ್ಗೆ ಬಕರಾವೊಂದು ಅದಾಗೇ ಬಂದಿದೆ. ಸ್ವಲ್ಪ ಮಜಾ ತೆಗೆದುಕೊಳ್ಳೋಣ ಅಂತ ಸುಮಾನ ಜೊತೆ ಮಷ್ಕಿರಿ ಶುರುವಿಟ್ಟುಕೊಂಡೆ.

'ನಿನ್ನ ಹೆಸರು ಸುಮಾ ಏನೂ?' ಅಂದೆ.

'ಹೂಂ, ಅಣ್ಣಾ' ಅಂದಳು. 'ನಿನಗೆ ಇಲ್ಲಿ ತನಕ ಅದೂ ಗೊತ್ತಿರಲಿಲ್ಲವೇ?' ಅನ್ನುವ ಲುಕ್ ಅವಳ ಮುಖದ ಮೇಲೆ.

'ಅಕಿ ವಿಜೂ ನಿನ್ನ ಫ್ರೆಂಡ್ ಏನು?'

'ಹೌದ್ ಅಣ್ಣಾ. ನನ್ನ ಕ್ಲಾಸ್ಮೇಟ್.'

'ಹಾಂಗೇನು? ಹೂಂ' ಎಂದೆ.

'ಮತ್ತೇನು?' ಅನ್ನುವ ಲುಕ್ ಕೊಟ್ಟಳು.

'ಅಕಿ ವಿಜೂ ಕೋವಿ ರಾವ್ ಅವರ ಮಗಳೇನು?' ಅನ್ನುವಷ್ಟರಲ್ಲಿ ಸಿಕ್ಕಾಪಟ್ಟೆ ನಗು ಬರುತ್ತಿತ್ತು. ಆದರೂ ತಡೆದುಕೊಂಡು ಗಂಭೀರವಾಗಿಯೇ ಕೇಳಿದೆ.

'ಕೋವಿ ರಾವ್ ಅಲ್ಲ ಅಣ್ಣಾ. ಕೇವಿ ರಾವ್. ಕೇವಿ ರಾವ್ ಅಂತ ಅಕಿ ಡ್ಯಾಡಿ ಹೆಸರು. ಬ್ಯಾಂಕ್ ಒಳಗ ಕೆಲಸ ಮಾಡ್ತಾರ,' ಅಂದಳು ಸುಮಾ.

'ಏ! ಕೋವಿ ರಾವ್ ಅಂತ ಅದು. ಕೇವಿ ರಾವ್ ಅಲ್ಲ. ಕೋವಿ ರಾವ್ ಅಂತದು. ಗೊತ್ತಾತೇನು?? ಏನು ಹೇಳು??? ಕೋ ವಿ ರಾವ್. ಕೋ ವಿ ರಾವ್. ಹೇಳು ನೋಡೋಣ?' ಅಂತ ಫುಲ್ ಸೀರಿಯಸ್ ಆಗಿ ಹೇಳಿದೆ.

ಈಗ ಸುಮಾ ಫುಲ್ confuse. ಪಾಪದ ಚಿಣ್ಣ ಬಾಲೆ. ಎದುರಿಗೆ ಬಾಲವಿಲ್ಲದ ಮಂಗ್ಯಾ ನಾನು. ಇದೆಲ್ಲಾ ಆಕೆ expect ಕೂಡ ಮಾಡಿಲ್ಲ. ಫೋನ್ ಮಾಡಿ ಹೊರಟವಳನ್ನು ಅಟಕಾಯಿಸಿಕೊಂಡು ಭೇಜಾ ಫ್ರೈ ಮಾಡುತ್ತಿದ್ದೇನೆ. ಯಾರೂ confuse ಆಗಬಹದು. ಹಾಗಿರುವಾಗ ಈ ಚಿಣ್ಣ ಹುಡುಗಿ confuse ಆಗಿದ್ದೇನು ದೊಡ್ಡ ಮಾತು.

'ಕೋ.... ವೀ..... ರಾವ್. ಕೋವಿ ರಾವ್ ಅಂತೇನು ಅದು ಅಣ್ಣಾ?' ಎಂದಳು. ಅವಳಿಗೆ ಖಾತ್ರಿ ಮಾಡಿಕೊಳ್ಳಬೇಕು.

'ಹೂಂ. ಕೋವಿ ರಾವ್ ಅಂತನೇ. ನಿಮ್ಮ ಗೆಳತಿ ಡ್ಯಾಡಿ ಹೆಸರು ಕೋವಿ ರಾವ್. ಗೊತ್ತಾತ?' ಎಂದು ಫುಲ್ ಫೋರ್ಸ್ ಹಾಕಿ ಹೇಳಿದೆ.

ಗೊತ್ತಾಯಿತು ಅನ್ನುವಂತೆ ತಲೆಯಾಡಿಸಿದಳು. ಸಿಕ್ಕಾಪಟ್ಟೆ ನಗು ಬರುತ್ತಿತ್ತು. ಆದರೂ ಇನ್ನೂ ಫುಲ್ ಮಂಗ್ಯಾ ಮಾಡಿ ಮುಗಿದಿರಲಿಲ್ಲ.

'ಅವರಿಗೆ ಕೋವಿ ರಾವ್ ಅಂತ ಯಾಕ ಹೆಸರು ಬಂತು? ಗೊತ್ತದ ಏನು???' ಅಂತ ನಮ್ಮ ಮುಂದಿನ ಸವಾಲ್.

ಗೊತ್ತಿಲ್ಲ ಅನ್ನುವಂತೆ ತಲೆಯಾಡಿಸಿದಳು. ಅಲ್ಲಿಗೆ ಸುಮಾ ಫುಲ್ ಹೈರಾಣ. ಈಗ ನಾನು ಏನೇ ಹೇಳಿದರೂ ಆಕೆ ನಂಬಲು ತಯಾರ್ ಅಂತ ನಮಗೆ ಖಾತ್ರಿ.

'ಬ್ಯಾಂಕ್ ಮುಂದ ಒಬ್ಬವ watchman, ಕೈಯಾಗ ಒಂದು ಬಂದೂಕು ಅಂದ್ರ ಗನ್ ಹಿಡಕೊಂಡು ನಿಂತಿರ್ತಾನ ನೋಡು. ನೋಡಿರಬೇಕಲ್ಲಾ? ಅವನೇ ಕೋವಿ ರಾವ್. ಅವನೇ ನಿಮ್ಮ ಗೆಳತಿ ಡ್ಯಾಡಿ. ನಿನ್ನ ಗೆಳತಿ.... ಏನು ಅಕಿ ಹೆಸರು? ಹಾಂ... ವಿಜೂ. ಅಕಿ ಅದೇ ಕೋವಿ ರಾವ್ ಮಗಳು. ದೊಡ್ಡ ಮೀಸಿ ಬಿಟ್ಟುಕೊಂಡು, ಬಗಲಾಗ ಅಡ್ಡಡ್ಡ ಬಂದೂಕು ಹಾಕಿಕೊಂಡು, ಇಷ್ಟು ದೊಡ್ಡ ಹೊಟ್ಟಿ ಸುತ್ತಾ ಗಣಪ್ಪ ಹಾವು ಸುತ್ತಿಗೊಂಡ ಹಾಂಗ ಕಾರ್ತೂಸಿನ (bullet) ಮಾಲಿ ಸುತ್ತಿಕೊಂಡು, ಬೀಡಿ ಸೇದಿಕೋತ್ತ ನಿಂತಿರ್ತಾನ ನೋಡು. ಅವನೇ ಕೋವಿ ರಾವ್. ಬೇಕಾದ್ರ ನಿಮ್ಮ ಗೆಳತಿ ಕೇಳಿ ನೋಡು!' ಎಂದು ಫುಲ್ ಪಂಟು ಹೊಡೆದೆ.

ಆದರೂ ಸುಮಾ ಸ್ವಲ್ಪ ಜಾಬಾದ್ ಇದ್ದಳು. Smart girl.

'ಇಲ್ಲ ಅಣ್ಣಾ. ನಾ ಅಕಿ ಡ್ಯಾಡಿ ನೋಡೇನಿ. ಅವರು ಹಾಂಗ ಇಲ್ಲ. ಮತ್ತ ಅವರು ಬ್ಯಾಂಕ್ ಮ್ಯಾನೇಜರ್ ಇದ್ದಾರ. ಬಾಗಿಲದಾಗ ನಿಲ್ಲೋ watchman ಅಲ್ಲ. ನೀ ಬ್ಯಾರೆ ಯಾರೋ ಬಗ್ಗೆ ಹೇಳಲಿಕತ್ತಿ ಅಂತ ಕಾಣಿಸ್ತದ' ಅಂದುಬಿಟ್ಟಳು.

ಅಕಟಕಟಾ! ಇವಳ ತಲೆಯನ್ನು ಇನ್ನೂ ಸ್ವಲ್ಪ ಸರಿಯಾಗಿ ತಿಕ್ಕಿದ ಹೊರತು ಇವಳು ಫುಲ್ ಹಾಪ್ ಆಗುವದಿಲ್ಲ ಅಂದುಕೊಂಡೆ.

'ಏ, ನಿನ್ನ! ನಾ ಏನು ಸುಳ್ಳು ಹೇಳ್ತೇನಿ ಏನು??? ಆsss..... ಅವರೇ ಕೋವಿ ರಾವ್! ಕೋವಿ ರಾವ್ ! ಕೋವಿ ರಾವ್! ತಿಳಿತಿಲ್ಲೋ!?? ಏನು!? ಏನ್ ತಿಳೀತು??' ಎಂದು ಸ್ವಲ್ಪ ಧ್ವನಿ ಎತ್ತರಿಸಿ ಜಬರಿಸಿ ಹೇಳಿದೆ.

'ಆದರೂ ಅಣ್ಣಾ. ವಿಜೂನ ಡ್ಯಾಡಿ ಮನಿಯಾಗ ಹಾಂಗss ಸೀದಾ ಸಾದಾ ಇರ್ತಾರ. ನೀ ಹೇಳಿದಾಂಗ ಇದ್ದರ ಅದೆಂಗ ಬ್ಯಾಂಕ್ ಮುಂದ ಬಂದ ಕೂಡಲೇ ಅವರಿಗೆ ಒಮ್ಮೆಲೇ ದೊಡ್ಡ ಹೊಟ್ಟಿ, ದೊಡ್ಡ ಮೀಸಿ ಎಲ್ಲಾ ಬಂದು ಬಿಡ್ತಾವ? ಹಾಂ? ಹ್ಯಾಂಗ ಅಣ್ಣಾ???' ಎಂದಳು.

ಅಲಲಾ!!! ಚಿಣ್ಣ ಹುಡುಗಿಯಾದರೂ ದೊಡ್ಡ ತಲೆಯಿಟ್ಟಿದೆ. ಭಯಂಕರ ಲಾಜಿಕಲ್ ಪ್ರಶ್ನೆ ಕೇಳುತ್ತಿದೆ. ಇನ್ನೂ ಒಂದಿಷ್ಟು ಶಿಕಾಕಾಯಿ ಹಾಕಿ ತಲೆ ಉಜ್ಜಬೇಕು.

'ಮನಿಯಾಗ ಮೀಸಿ, ಹೊಟ್ಟಿ ಇಲ್ಲದೇ ಇರಬಹುದು. ಆದ್ರ ಬ್ಯಾಂಕ್ ಮುಂದ ಗನ್ ಹಿಡಕೊಂಡು ನಿಂತ ಮ್ಯಾಲೆ ನೋಡಿದ ಮಂದಿಗೆ ಅಂಜಿಕಿ ಬರಬೇಕು ನೋಡು. ಅದಕ್ಕೇ ಹಾಂಗ ಕೆಟ್ಟ ಖರಾಬ್ ಅವತಾರ ಮಾಡಿಕೊಂಡು ನಿಂತಿರ್ತಾನ. ಇಲ್ಲಂದ್ರ ಯಾರೂ ಹೆದರೋದೇ ಇಲ್ಲ. ಈಗ ನಿಮ್ಮ ಡ್ಯಾಡಿ ಕೈಯಾಗ ಬಂದೂಕು ಕೊಟ್ಟು ಬ್ಯಾಂಕ್ ಬಾಗಿಲದಾಗ ನಿಲ್ಲಿಸಿದರೆ ಯಾರರೆ ಹೆದರ್ತಾರೇನು? ಇಲ್ಲ. ಬರೇ ಗನ್ ಇದ್ದರೆ ಸಾಲೋದಿಲ್ಲ. ಪರ್ಸನಾಲಿಟಿ ಸಹಿತ ಬೇಕಾಗ್ತದ. ನಾಳೆ ನೀನೇ ಬ್ಯಾಂಕ್ ಬಾಗಿಲದಾಗ ನಿಲ್ಲಬೇಕು ಅಂತಾದರೂ ಅದೇ ಅವತಾರ ಮಾಡಿಕೊಂಡು ನಿಲ್ಲಬೇಕು ನೋಡವಾ. ನಿನ್ನ ಗೆಳತಿ ಡ್ಯಾಡಿ ಕೋವಿ ರಾವ್. ಯಾರು ಹೇಳು?? ಕೋವಿ ರಾವ್!' ಅಂದೆ.

ನಾನು ಹಾಗೆ ಒತ್ತಿ ಹೇಳಿದ್ದು ಅವಳಿಗೆ ಒಳ್ಳೆ hypnotic suggestion ಕೊಟ್ಟಂಗೆ ಆಗಿರಬೇಕು. ಸುಮಾಳ ಮುಖ ನೋಡಿದರೆ ಫುಲ್ ಸುಸ್ತಾಗಿ ಹೋಗಿದ್ದಳು. 'ಕೇವಿಯಾದರೂ ಸರಿ. ಕೋವಿಯಾದರೂ ಸರಿ. ನನ್ನ ಬಿಡು ಮಾರಾಯಾ. ಮನೆಗೆ ಹೋಗಬೇಕು,' ಅನ್ನುವ ದೀನ ಲುಕ್ ಕೊಟ್ಟಳು.

'ನೀ ನಿಮ್ಮ ಗೆಳತಿ ವಿಜೂನ ಕೇಳು ಬೇಕಾದ್ರ. ತಿರುಗಿ ಬಂದು ಹೇಳು ನನಗ. ನಿನ್ನ ಗೆಳತಿಗೆ ಖರೆ ಹೇಳು ಅಂತ ಪ್ರಾಮಿಸ್ ತೊಗೊಂಡು ಕೇಳು. ಅವರಪ್ಪನ ಹೆಸರು ಕೋವಿ ರಾವ್. ಬ್ಯಾಂಕ್ ಮುಂದ ಖರಾಬ್ ಅವತಾರ ಮಾಡಿಕೊಂಡು ಕೋವಿ ಹಿಡಕೊಂಡು ನಿಲ್ತಾರ. ಹಾಂಗಾಗೇ ಕೋವಿ ರಾವ್ ಅಂತ ಹೆಸರು ಬಂದದ ಅಂತ ಅಕಿನೇ ಒಪ್ಪಿಕೋತ್ತಾಳ ನೋಡು. ಕೋವಿ ರಾವ್ ಅನ್ನಲಿಕ್ಕೆ ನಾಚಿಗಿ ಬರ್ತಿರ್ಬೇಕು. ಅದಕ್ಕೇ ಕೇವಿ ರಾವ್ ಅಂತ ಹೇಳ್ತಿರಬೇಕು. ಇದು ಖರೇ ಅಂದ್ರೂ ಖರೆ! ಬೆಟ್ ಕಟ್ಟುತ್ತಿ ಏನು? ಹಾಂ???' ಅಂತ ಆಖ್ರೀ ಆವಾಜ್ ಹಾಕಿದೆ.

ಅಲ್ಲಿಗೆ ಸುಮಾನ brainwash ಮುಗಿದಿತ್ತು.

'ಹೂಂ ಅಣ್ಣಾ. ನೀ ಹೇಳಿದಾಂಗ ಅದು ಕೋವಿ ರಾವ್ ಅಂತನೇ ಇರಬೇಕು. ನನ್ನ ಫ್ರೆಂಡ್ ವಿಜೂ ಕಡೆ ಕೇಳ್ತೇನಿ. ಏನು ಹೇಳ್ತಾಳ ಅನ್ನೋದನ್ನ ಬಂದು ಹೇಳ್ತೇನಿ,' ಅಂದು ಎದ್ದು ಹೊರಟಳು.

'ಆಂಟಿss, ಹೋಗಿ ಬರ್ತೇನ್ರೀ. ಮೆಸೇಜ್ ಕೊಟ್ಟಿದ್ದಕ್ಕೆ ಟ್ಯಾಂಕ್ಸ್ ರೀ,' ಅಂತ ಟ್ಯಾಂಕ್ ತುಂಬಾ ಆಂಟಿಗೆ ಥ್ಯಾಂಕ್ಸ್ ಹೇಳಿದಳು.  ಅಂದರೆ ನಮ್ಮ ಮಾತಾಶ್ರೀ ಅವರಿಗೆ ಥ್ಯಾಂಕ್ಸ್ ಹೇಳಿ ಕಳಚಿಕೊಂಡಳು ಸುಮಾ. ಮೆಸೇಜ್ ಕೊಟ್ಟುಬಂದವರು ಅವರೇ ತಾನೇ. ಹಾಗಾಗಿ ಆಂಟಿಗೆ ಟ್ಯಾಂಕ್ಸ್! ಕಾನ್ವೆಂಟ್ ಹುಡುಗಿಯರ ಥ್ಯಾಂಕ್ಸ್ ಹೇಳೋ ಶೈಲಿ ನೋಡಿದರೆ ಸಾಕು!

'ಹೂಂ, ಹೋಗಿ ಬಾರವಾ. ಸಾಲಿಗೆ ಟೈಮ್ ಆತು. ಹೋಗು. ಬಸ್ ತಪ್ಪಿಹೋದೀತು,' ಅಂತ ಆಂಟಿಯ ಮಾತೃಸಹಜ ಕಳಕಳಿಯ ಮಾತು ಸುಮಾಳನ್ನು ಹಿಂಬಾಲಿಸಿ ಹೋಯಿತು.

ಸುಮಾ ಗೇಟ್ ದಾಟಿದ್ದೇ ಅಮ್ಮ ಅಡುಗೆಮನೆ ಬಿಟ್ಟು ಈ ಕಡೆ ಬಂದರು. ನಾನು ಭೂಪ ತುಂಟ ನಗೆ ಹೊತ್ತು ಅಲ್ಲೇ ಕೂತಿದ್ದೆ. ನನ್ನ ಮಷ್ಕಿರಿಯೆಲ್ಲವನ್ನೂ ಅಡುಗೆಮನೆಯಿಂದಲೇ ಕೇಳುತ್ತಿದ್ದರು ಅಂತ ಕಾಣುತ್ತದೆ. ಅವರಿಗೂ ನಗೆ ತಡೆಯಲಾಗಿಲ್ಲ. ಸಿಕ್ಕಾಪಟ್ಟೆ ನಕ್ಕರು.

ನಗುತ್ತಲೇ ಹೇಳಿದರು, 'ಏನೋ ನೀನು!? ಹಾಂ!? ಮುಂಜ್ಮುಂಜಾನೆ ಆ ಪಾಪದ ಹುಡುಗಿಯನ್ನು ಮಂಗ್ಯಾ ಮಾಡಿಕೋತ್ತ ಕೂತಿದ್ದಿ. ಏನದು? ಕೋವಿ ರಾವ್. ಬ್ಯಾಂಕ್ watchman.. ಅಕಿ ಗೆಳತಿ ಅಪ್ಪಾ. ವೇಷ ಹಾಕಿಕೊಂಡು ಬಂದು ನಿಂತಿರ್ತಾನ.... ಅದು ಇದು ಅನ್ಕೋತ್ತ. ನಾ ಒಳಗಿಂದಲೇ ಕೇಳ್ಕೋತ್ತ ಇದ್ದೆ. ಭಾಳ ನಗು ಬರ್ಲಿಕತ್ತಿತ್ತು. ಆಗೇ ಬಂದು ಪಾಪ ಅಕಿಗೆ ಹೇಳೋಣ ಅಂತ ಮಾಡಿದೆ. ನೀ ಎಲ್ಲರೆ ಸಿಟ್ಟಿಗೆದ್ದು ಇಬ್ಬರಿಗೂ ಕೂಡೇ ಬೈದೀ ಅಂತ ಬರಲಿಲ್ಲ. ಮೊದಲೇ ದೂರ್ವಾಸನ ಮೊಮ್ಮಗ ನೀನು. ಏನೇನೋ ಹೇಳಿ ಆ ಸುಮಾನ್ನ ಫುಲ್ ಮಂಗ್ಯಾ ಮಾಡಿ ಕಳಿಸಿದಿ ನೋಡು. ಅಕಿ ಖರೇ ಹೋಗಿ ಅಕಿ ಗೆಳತಿ ಕಡೆ ಕೇಳ್ತಾಳ ನೋಡು. 'ಏನಲೇ, ನಿಮ್ಮ ಡ್ಯಾಡಿ ಹೆಸರು ಕೋವಿ ರಾವ್ ಅಂತೇನು? ಬ್ಯಾಂಕ್ ಮುಂದ ಗನ್ ಹಿಡಿದು ನಿಂತಿರ್ತಾರ? ಅದರ ಸಲುವಾಗಿ ದೊಡ್ಡ ಮೀಸಿ, ಹೊಟ್ಟಿ ಎಲ್ಲಾ ವೇಷಾ ಹಾಕ್ತಾರ? ಹೌದ???' ಅಂತ ಕೇಳ್ತಾಳ ನೋಡು. ಪಾಪದ ಹುಡುಗಿನ ಫುಲ್ ಮಳ್ಳು ಮಾಡಿ ಕಳಿಸಿ ನೀನು. ಇನ್ನು ಅಕಿ ಗೆಳತಿ ಕಡೆ ಬೈಸಿಕೊಂಡು ಬಂದು ನಿನಗ ಮಂಗಳಾರತಿ ಮಾಡ್ತಾಳ ನೋಡು. ಮಾಡಿಸ್ಕೊಂಡಿ ಅಂತ. ಬರೇ ಇದೇ ಆತು. ನೀ ಬಂದಿ ಅಂದ್ರ ಮುಗೀತು ನೋಡು. ಮನಿ ಮಂದೀದು ಮುಗೀತು, ಈಗ ಬಾಜೂ ಮನಿ ಮಂದೀದೂ ಜೀವಾ ತಿನ್ನು!' ಎಂದು ಮೈಲ್ಡ್ ಆಗಿ ಬೆಂಡೆತ್ತಿದರು.

'ಅಕಿಗೆ ಹೀಂಗ ನಂಬುವ ಹಾಂಗ ಹೇಳಿದಿ ಅಂದ್ರ ಕೇಳಿದ ಗಿಡದ ಮ್ಯಾಲಿನ ಮಂಗ್ಯಾ ಕೂಡ ನಂಬಿ ಹಿಡಕೊಂಡ ಟೊಂಗಿ ಕೈ ಬಿಡಬೇಕು. ಹಾಂಗ ನಂಬಿಸಿ ಕಳಿಸಿದಿ ನೋಡು!' ಅನ್ನುತ್ತ ಅಮ್ಮ ಕಳಚಿಕೊಂಡರು.

'ಶಭಾಷ್! ವೆಲ್ ಡನ್' ಅಂತ ಬಾಯ್ಬಿಟ್ಟು ಹೇಳಲಿಲ್ಲ. ಅಮ್ಮಂದಿರು ಹಾಗೆಲ್ಲ ಖುಲ್ಲಂ ಖುಲ್ಲಾ ಹೊಗಳುವದಿಲ್ಲ.

ಸಿಕ್ಕಾಪಟ್ಟೆ ನಕ್ಕು ಮತ್ತೆ ಪೇಪರ್ ಓದುವದರಲ್ಲಿ ಮಗ್ನನಾದೆ. ಸುಮಾರು ಹೊತ್ತಿನ ನಂತರ ಹೊರಗೆ ಹೋಗಿ ಕಟ್ಟೆ ಮೇಲೆ ಕೂತೆ. ಆಗ ಮತ್ತೆ ಸುಮಾ ಕಂಡಳು. ರೆಡಿ ಆಗಿ, ಯುನಿಫಾರ್ಮ್ ಹಾಕಿಕೊಂಡು, ತಲೆ ಮೇಲೆ ಚಿಗರೆ ಕೊಂಬಿನ ಹಾಗೆ ಮೂಡಿದ್ದ ಎರಡು ಜುಟ್ಟುಗಳನ್ನು ಕುಣಿಸುತ್ತ, ಮಣಭಾರದ ಬ್ಯಾಗ್, ಟಿಫನ್ ಡಬ್ಬಿ, ವಾಟರ್ ಬಾಟಲಿ ಇತ್ಯಾದಿ ಪೇರಿಸಿಕೊಂಡು ಬಸ್ ಹಿಡಿಯಲು ಓಡುತ್ತಿದ್ದಳು. ಶಾಲೆಗೆ ಹೋಗುವ ಸಂಭ್ರಮ.

'ಏ, ಸುಮಾ!' ಎಂದು ಕೂಗಿ ಕರೆದು ಅಂತಹ ಗಡಿಬಿಡಿಯಲ್ಲಿದ್ದವಳನ್ನೂ ತಡೆದೆ.

ಪಾಪದ ಹುಡುಗಿ ಬಸ್ ಮಿಸ್ಸಾಗುತ್ತದೆ ಅಂತ ಪೀಟಿ ಉಷಾ, ಅಶ್ವಿನಿ ನಾಚಪ್ಪ ಮಾದರಿಯಲ್ಲಿ ಓಡುತ್ತಿತ್ತು. ಆದರೂ 'ಅಣ್ಣಾ' ಆದ ನಾನು ಕರೆದೆ ಅಂತ ಬ್ರೇಕ್ ಹಾಕಿ ಗಕ್ಕನೆ ನಿಂತಿತು. 'ಏನು??? ಬೇಗ ಹೇಳೋ!' ಅನ್ನುವ ಲುಕ್ ಅವಳ ಮುಖದ ಮೇಲೆ.

'ಏ, ನಿನ್ನ ಗೆಳತಿ ವಿಜೂನ ಕಡೆ ಕೋವಿ ರಾವ್ ಬಗ್ಗೆ ಕೇಳೋದನ್ನ ಮರಿಬ್ಯಾಡ ಮತ್ತ. ಮರೆಯದೇ ಕೇಳು ಮತ್ತ. ಓಕೆ?' ಅಂದು, 'ಈಗ ಬೇಕಾದ್ರ ಹೋಗು. ಪೋ,' ಅನ್ನುವಂತೆ ತಲೆಯಾಡಿಸಿ ಅನುಮತಿಸಿದೆ.

ಮುಕ್ತಿ ಸಿಕ್ಕ ಮಾದರಿಯಲ್ಲಿ, 'ಹೂಂ, ಕೇಳ್ತೇನಿ,' ಎನ್ನುತ್ತ ಓಡಿದಳು. ಅಷ್ಟರಲ್ಲಿ ಬಸ್ ಬಂತು. ಮತ್ತೂ ಜೋರಾಗಿ ಓಡಿ ಹೇಗೋ ಮಾಡಿ ಬಸ್ ಹಿಡಿಯುವಲ್ಲಿ ಯಶಸ್ವಿಯಾದಳು.

ಅಡುಗೆಮನೆಯಲ್ಲಿ ಸೊಪ್ಪು ತೊಳೆದ ನೀರನ್ನು ತುಳಸಿಗಿಡಕ್ಕೆ ಸುರಿಯಲು ಬಂದಿದ್ದ ಅಮ್ಮ ಅದನ್ನು ಗಮನಿಸಿದ್ದರು.

'ಆವಾಗ ಕಾಡಿಸಿದ್ದು ಸಾಕಾಗಲಿಲ್ಲ ಅಂತ ಈಗ ಮತ್ತ ಆ ಪಾಪದ ಹುಡುಗಿಯನ್ನು ಹಿಡಕೊಂಡು ಕೋವಿ ರಾವ್ ಅಂತ ಹಚ್ಚಿದ್ದಿ ಏನು? ಭಾಳಾತು ನೋಡು ಇದು!' ಅಂದರು.

ನಮಗೋ ಫುಲ್ ಮಸ್ತಿ. ಬಿದ್ದು ಬಿದ್ದು ನಕ್ಕೆ. 'ಇಕಿ ಸುಮಾ ಅಂತ. ಸಮಾ ಹಾಪ್ ಮಾಡಿದೆ. ಇಂತಾಕಿ ಗೆಳತಿ ವಿಜೂ ಅಂತ. ಅದೂ ಕೋವಿ ರಾವ್ ಮಗಳು. ಹಾ!!! ಹಾ!! ಹೀ!! ಹೀ!!' ಅಂತ ನಮ್ಮ ಕೇಕೆ.

'ಸಾಕು ಸಾಕು. ಇಂತಾದ್ರಾಗ ಭಾಳ ಶಾಣ್ಯಾ ಇದ್ದಿ. ಇನ್ನೇನೂ ಮಾಡೋದು ಬೇಕಾಗಿಲ್ಲ. ಅಕಿನ್ನ ಭಾಳ ಕಾಡಬ್ಯಾಡೋ!' ಅಂದರು ಅಮ್ಮ.

'ಯಾಕ????' ಅಂತ ನಮ್ಮ ಕೌಂಟರ್ ಪ್ರಶ್ನೆ. ಅದು ಇದ್ದಿದ್ದೇ. ಏನೇ ಹೇಳಿದರೂ ವಿವರಣೆ ಬೇಕೇ!

'ಅಕಿ ಈಗ ದೊಡ್ಡ ಹುಡುಗಿ ಆಗ್ಯಾಳ. ಹಾಂಗೆಲ್ಲಾ ಭಾಳ ಕಾಡಬಾರದು!' ಅಂತ ಮುಗುಮ್ಮಾಗಿ ಹೇಳಿ ಕಳಚಿಕೊಂಡರು.

'ಹ್ಯಾಂ? ದೊಡ್ಡ ಹುಡುಗಿಯಾದಳೇ? ಅಥವಾ ಹುಡುಗಿ ದೊಡ್ಡವಳಾದಳೇ???' ಅಂತ ಡೌಟ್ ಬಂತು. ನಂತರ ಒಳಾರ್ಥ ಅರ್ಥವಾಗಿ ಸುಮಾಳಿಗೆ 'ಪ್ರಮೋಷನ್' ಸಿಕ್ಕಿದೆ. ಇನ್ನು ಇಂತಹ ಮಂಗ್ಯಾತನವನ್ನು ಮಾಡಬಾರದು. 'ಭಾಳ' ಕಾಡಬಾರದು,' ಅಂತ ನೋಟ್ ಮಾಡಿಕೊಂಡೆ. ಸ್ವಲ್ಪ ಕಾಡಿದರೆ ಓಕೇನಾ? ಕಾಡಿ ನೋಡಬೇಕು. ಹೇಳಿಕೇಳಿ ಕಾಡು(ವ)ಪ್ರಾಣಿ ನಾನು.

ಅಂದಿಗೆ 'ದೊಡ್ಡ ಹುಡುಗಿಯಾಗಿದ್ದ' ಸುಮಾ ಆಕೆಯ ಗೆಳತಿ ವಿಜೂನ ಬಳಿ ಕೋವಿ ರಾವ್, ಕೋವಿ ರಾವ್ ಅಂತ ನಾನು ಬ್ಲೇಡ್ ಹಾಕಿದ ವಿಷಯದ ಬಗ್ಗೆ ಕೇಳಿದಳೋ ಇಲ್ಲವೋ ಗೊತ್ತಾಗಲಿಲ್ಲ. ಅಷ್ಟರಲ್ಲಿ ರಜೆ ಮುಗಿದು ಧಾರವಾಡದಿಂದ ನಾನೂ ವಾಪಸ್ ಕಳಚಿಕೊಂಡೆ. ನನಗಂತೂ ಮಂಗಳಾರತಿ ಮಾಡಲಿಲ್ಲ. ಮತ್ತೆ ಸುಮಾ ಆ ಟೈಪಿನ ಜೋರ್ ಹುಡುಗಿ ಅಲ್ಲ ಅಂತ ಕಾಣುತ್ತದೆ.

ಮುಂದೆ ಆಕೆ ಜಾಸ್ತಿ ಕಾಣಲೂ ಇಲ್ಲ.

ಆಗ 'ದೊಡ್ಡ ಹುಡುಗಿ' ಅಂತ ಪ್ರಮೋಷನ್ ಪಡೆದಾಕೆ ನಂತರ 'ಮುತ್ತೈದೆ' ಅಂತ ಮತ್ತೊಂದು ಪ್ರಮೋಷನ್ ಪಡೆದು ಎಲ್ಲೋ ಗಾಯಬ್ ಆಗಿದ್ದಾಳೆ. ಬಹಳ ವರ್ಷಗಳಾದವು ಕಂಡಿಲ್ಲ. ಮತ್ತೆ ಈಗ ಎಲ್ಲರ ಕಡೆ ಫೋನ್. ಅದೂ ಸ್ಮಾರ್ಟ್ ಫೋನ್! ಹೊಡೀರಿ ಹಲಗಿ! ಹಾಗಾಗಿ ಫೋನ್ ಮಾಡಲು ಮನೆಗೆ ಯಾರೂ ಬರುವದಿಲ್ಲ.

ಇದೇ 'ಕೇವಿಯಿಂದ ಕೋವಿಯವರೆಗೆ' ಅನ್ನುವ ಬದಲಾವಣೆಯ ಹಿಂದಿರುವ ಕಥೆ. ಇದಾದ ನಂತರ ನಾನು ಕೇವಿಗೆ ಕೇವಿ ಅಂದಿದ್ದೇ ಇಲ್ಲ. ಯಾವಾಗಲೂ ಕೋವಿ ಅಂದೇ ರೂಢಿ. ಸಕತ್ ಮಜಾ!

ಈಗ ಕೋವಿ ಅನ್ನಲು ಸಹೋದ್ಯೋಗಿ ಬೇರೆ ಇದ್ದಾನೆ. ಫುಲ್ ಮಜಾ!

** ಹೆಸರುಗಳನ್ನು ಬದಲಾಯಿಸಲಾಗಿದೆ. ಪೂರ್ಣ ವಾಸ್ತವಿಕತೆಯನ್ನು ಮರೆಮಾಚಲು ಕೊಂಚ ಮಸಾಲೆ ಸೇರಿಸಲಾಗಿದೆ.

2 comments:

sunaath said...

ಅಬ್ಬಾ! ಇಲ್ಲಿಯವರೆಗೆ ನಿಮ್ಮ ಲೇಖನಿ-ಕೋವಿಯಿಂದ ಎಷ್ಟೆಲ್ಲ ಅಮಾಯಕರನ್ನು ಢಮಾರ್ ಎನಿಸಿದ್ದೀರೊ! ‘ಕೋವಿರಾಯ’ ಎನ್ನುವ ಬಿರುದು ನಿಮಗೆ ಸಾರ್ಥಕವಾದೀತು, ಅಲ್ಲವೆ?

Mahesh Hegade said...

ಧನ್ಯವಾದಗಳು, ಸುನಾಥ್ ಸರ್.

‘ಕೋವಿರಾಯ’ ಎಂಬ ಬಿರುದು ಅತ್ಯುತ್ತಮವಾಗಿದೆ! :)