Sunday, October 14, 2018

ಒಂದು ಡೆಬಿಟ್ ಕಾರ್ಡ್ ಕಥೆ

ಭಾರತ ದೇಶ ತುಂಬಾ ವೇಗವಾಗಿ ಮುಂದುವರೆಯುತ್ತಿದೆ. ಇಪ್ಪತ್ತು ವರ್ಷಕ್ಕೂ ಹಿಂದೆ ದೇಶ ಬಿಟ್ಟು ಬಂದಂತಹ ನಮ್ಮಂತಹ ಬುಡ್ಡಾ NRI  ಮಂದಿ ಅಲ್ಲಿನ ವೇಗಕ್ಕೆ, ಬದಲಾವಣೆಗಳಿಗೆ ಕರೆಂಟ್ ಹೊಡೆದ ಕಬ್ಬೆಕ್ಕಿನಂತೆ ಕಂಗಾಲಾಗಿಬಿಡುತ್ತೇವೆ. ಅಲ್ಲೆಲ್ಲ ಈಗ ತುಂಬಾ ಫಾಸ್ಟ್ ಲೈಫ್. ಕೈಯಲ್ಲೊಂದು ಸ್ಮಾರ್ಟ್ ಫೋನ್, ಕಿಸೆಯಲ್ಲಿ ಡೆಬಿಟ್ ಕಾರ್ಡ್, online banking ಇರಲಿಲ್ಲ ಅಂದರೆ ಭಾರತದಲ್ಲಿ ಇಳಿದಾಕ್ಷಣ ನೀವು ಥೇಟ್ ಕರೆಂಟ್ ಹೊಡೆದ ಕಬ್ಬೇಕ್ಕೆ. ಖರೇ ಮಂಗ್ಯಾ.

ಡೆಬಿಟ್ ಕಾರ್ಡ್ ಮತ್ತು online banking ಅವಶ್ಯಕತೆ ಎರಡು ವರ್ಷಗಳ ಹಿಂದೆಯೇ ಕಂಡುಬಂದಿತ್ತು. ನಮ್ಮ ಅನೇಕ ಸ್ಥಳೀಯ, ಅಂದರೆ ಅಮೇರಿಕಾ ಮೂಲದ, ಕ್ರೆಡಿಟ್ ಕಾರ್ಡುಗಳು ಭಾರತದ ವ್ಯವಹಾರಗಳಿಗೆ ಪಾಸ್ ಆಗುತ್ತಲೇ ಇರಲಿಲ್ಲ. ಪಾಸಾದರೂ ಎಲ್ಲಿಯಾದರೋ fraud ವ್ಯವಹಾರ ಇರಬಹುದೇನೋ ಅಂತ ಇಲ್ಲಿನ ಬ್ಯಾಂಕುಗಳು ಕೊಕ್ಕೆ ಹಾಕಿಟ್ಟಿರುತ್ತಿದ್ದವು. ಇಲ್ಲಿನ ಬ್ಯಾಂಕುಗಳಿಗೆ ಫೋನ್ ಮಾಡಿ, 'ಸ್ವಾಮೀ, ಭಾರತದಲ್ಲಿ ಕೊಂಚ ಖರ್ಚಿದೆ. ನೀವು ಹಾಕಿಟ್ಟಿರುವ ಕೊಕ್ಕೆ ಕೊಂಚ ಸರಿಸಿ, ವ್ಯವಹಾರಕ್ಕೆ ಅನುವು ಮಾಡಿಕೊಟ್ಟರೆ ಆಭಾರಿ,' ಅಂದು ಕೊಕ್ಕೆ ತೆಗೆಸಿಕೊಳ್ಳಬೇಕು. ಇವರು ಇಲ್ಲಿ ಕೊಕ್ಕೆ ತೆಗಿಯುವ ತನಕ ಅಲ್ಲಿರುವ ಡೀಲ್ ಮುಗಿದಿರುತ್ತವೆ. ವಿಮಾನ ದರಗಳು ಏರಿರುತ್ತವೆ, ಬೇಕಾದ ಪುಸ್ತಕಗಳ ಸ್ಟಾಕ್ ಮುಗಿದಿರುತ್ತದೆ. ಇಷ್ಟಾದ ಮೇಲೂ ವಿದೇಶಿ ವಿನಿಮಯದ ದರ ಬ್ಯಾಂಕಿಗೆ ಅನುಕೂಲವಾಗಿರುವಂತೆ ನೋಡಿಕೊಂಡು ನಮಗೆ ಟೊಪ್ಪಿಗೆ ಹಾಕಿರುತ್ತಾರೆ. ಮೇಲಿಂದ ವಿದೇಶಿ ವ್ಯವಹಾರ ಎಂದು ಹೆಚ್ಚಿನ ಶುಲ್ಕ ಬೇರೆ. ಅದು ಈಗ ಎಷ್ಟೋ ಕಮ್ಮಿಯಾಗಿದೆ. ಎಷ್ಟೋ ವರ್ಷಗಳ ಕಾಲ ಇಲ್ಲಿಂದ ರೈಲ್ವೆ ಟಿಕೆಟ್ ಬುಕ್ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಭಾರತದ ಸಂಬಂಧಿಗಳನ್ನು ಹಿಡಿದು, ಅವರಿಗೆ ತ್ರಾಸು ಕೊಟ್ಟು ಬುಕ್ ಮಾಡಿಸಿಕೊಳ್ಳಬೇಕಾಗುತ್ತಿತ್ತು.

ಇದೆಲ್ಲಾ ಅನುಭವಿಸಿದ ಮೇಲೆ ಅನ್ನಿಸಿದ್ದು ನಾವೂ ಒಂದು ಭಾರತೀಯ ಡೆಬಿಟ್ ಕಾರ್ಡ್ ಮತ್ತು online banking ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು. ಸ್ಥಳೀಯ ಖರ್ಚುಗಳಿಗೆ ಅನುಕೂಲವಾಗುತ್ತದೆ ಎನ್ನುವ ವಿಚಾರ.

ಹಿಂದಿನ ವರ್ಷ ಡೆಬಿಟ್ ಕಾರ್ಡ್ ಮಾಡಿಸಿಕೊಂಡೆ. ನಾನು ಜೀವನದಲ್ಲಿ ಕಂಡ ಮೊತ್ತ ಮೊದಲ ಬ್ಯಾಂಕ್ ಅಂದರೆ ಧಾರವಾಡದ ಮಾಳಮಡ್ಡಿಯ ಕೆನರಾ ಬ್ಯಾಂಕ್. ಅಲ್ಲಿಯೇ ಹೋದೆ. ಜೊತೆಗೆ ತಂದೆಯವರೂ ಇದ್ದರು. ಅವರು ಆ ಬ್ಯಾಂಕಿನ ಶಾಖೆಯ ಅತಿ ಹಿರಿಯ ಗ್ರಾಹಕ ಇರಬಹುದೇನೋ. ಅವರಿಗೆ ಈಗ ೮೪ ವರ್ಷ. ಸರಿ ಸುಮಾರು ಅರವತ್ನಾಲ್ಕು ವರ್ಷಗಳಿಂದ ಧಾರವಾಡದಲ್ಲಿ ಇದ್ದಾರೆ. ಮಾಳಮಡ್ಡಿಯ ಕೆನರಾ ಬ್ಯಾಂಕ್ ತೆರದಾಗಿನಿಂದ ಅದರ ಖಾಯಂ ಗ್ರಾಹಕರು. ಮಾಳಮಡ್ಡಿಯ ಕೆನರಾ ಬ್ಯಾಂಕ್ ಮಂದಿ ಸಹ ಅವರನ್ನೂ ಅಷ್ಟೇ ಒಳ್ಳೆ ರೀತಿಯಲ್ಲಿ ನೋಡಿಕೊಂಡು preferred customer ಅನ್ನುವ ಹಾಗೆ ನಡೆಸಿಕೊಂಡಿದ್ದಾರೆ. ಹಾಗಾಗಿ ಮಾಳಮಡ್ಡಿ ಕೆನರಾ ಬ್ಯಾಂಕ್ ಜೊತೆ ಅದೇನೋ ಅವಿನಾಭಾವ ಸಂಬಂಧ.

ಹೋದೆ. ಮ್ಯಾನೇಜರ್ ಮೇಡಂ ಸೀದಾ ಚೇಂಬರಿನಲ್ಲೇ ಕೂಡಿಸಿಕೊಂಡು, ತಾವೇ ಎಲ್ಲ ಅರ್ಜಿ ತುಂಬಿ, ಸಹಿ ತೆಗೆದುಕೊಂಡು, ಟೇಬಲ್ ಮೇಲಿರುವ ಬೆಲ್ ಕಿರ್ರನೆ ಬಾರಿಸಿ, ಚಪರಾಸಿಯನ್ನು ಕರೆದು, 'ಡೆಬಿಟ್ ಕಾರ್ಡ್. ಹೆಗಡೆ ಸರ್ ಅಕೌಂಟಿಗೆ. ಅರ್ಜೆಂಟ್ ಮಾಡಲಿಕ್ಕೆ ಹೇಳು,' ಎಂದು ಹೇಳಿ, 'ಹೇಳಿ ಸರ್. ಮತ್ತೇನು ಮಾಡಿಕೊಡೋಣ?' ಅಂದಾಗ ತಂದೆಯವರು ನನ್ನ ಕಡೆ ನೋಡಿ, 'ಹೆಂಗೆ? ನೋಡು ಹೇಗಿದೆ ನಮಗೆ ಸಿಗುವ customer service??' ಎಂದು ಹೆಮ್ಮೆಯಿಂದ ಕೇಳಿದಂತಾಯಿತು. 'ಶಭಾಷ್!' ಅಂದುಕೊಂಡೆ. ನಾವು ಮ್ಯಾನೇಜರ್ ರೂಮಿನ ತಣ್ಣನೆ AC ಕೋಣೆಯಲ್ಲಿ ಕುಳಿತು ಮ್ಯಾನೇಜರ್ ಜೊತೆ ಮಾತಾಡುತ್ತ ಕುಳಿತಾಗ ನಮ್ಮ ಡೆಬಿಟ್ ಕಾರ್ಡ್ ತಯಾರಾಗುತ್ತಿತ್ತು. ಉಳಿದ ಎಷ್ಟೋ ಗ್ರಾಹಕರು ವಿವಿಧ ಸೇವೆಗಳಿಗಾಗಿ ಅತ್ತಿಂದಿತ್ತ ಓಡಾಡುತ್ತ, ಬೈಯುತ್ತ, ಬೈಸಿಕೊಳ್ಳುತ್ತ, ಬೆವರು ಸುರಿಸುತ್ತ ಹೈರಾಣಾಗುತ್ತಿದ್ದರು. ನಮ್ಮ ನಸೀಬ್ ಒಳ್ಳೆದಿತ್ತು.

ಡೆಬಿಟ್ ಕಾರ್ಡ್ ಬಂತು. online banking ಸಹ activate ಮಾಡಿದ್ದೇವೆ. ಮನೆಗೆ ಹೋಗಿ ಸೆಟಪ್ ಮಾಡಿಕೊಳ್ಳಿ ಅಂದರು. ಧನ್ಯವಾದ ಅರ್ಪಿಸಿ ಬಂದೆವು.

ರೈಲ್ವೆ ಸ್ಟೇಷನ್ ಮುಂದಿರುವ ಏಟಿಎಂ ನಲ್ಲಿ ರೊಕ್ಕ ತೆಗೆದು ಡೆಬಿಟ್ ಕಾರ್ಡಿನ ಶುಭಾರಂಭ ಮಾಡಿಯಾಯಿತು. ಆನ್ಲೈನ್ ಬ್ಯಾಂಕಿಂಗ್ ಕೂಡ ಕೆಲಸ ಮಾಡಿತು. ಆದರೆ transaction enable ಆಗಿರಲಿಲ್ಲ. ಎಷ್ಟು ರೊಕ್ಕ ಇದೆ ಎಂದು ತೋರಿಸುತ್ತಿತ್ತೇ ವಿನಃ ರೊಕ್ಕವನ್ನು transfer ಮಾಡಲಿಕ್ಕೆ ಆಗುತಿರಲಿಲ್ಲ. ಅರ್ಧಂಬರ್ಧ ಮಾಡಿದ್ದರು ಅಂತ ಕಾಣುತ್ತದೆ. ನಮ್ಮ ಧಾರವಾಡ ಗೋಕರ್ಣಕ್ಕೆ ಜಾಸ್ತಿ ದೂರವಿಲ್ಲ ನೋಡಿ. ಹಾಗಾಗಿ ಹೆಚ್ಚಿನ ಕೆಲಸಗಳೆಲ್ಲ ಗೋಕರ್ಣ ಹಜಾಮತಿ ತರಹದ ಕಾಮಗಾರಿಗಳೇ. ಮೊದಲನೇ ಸಲವೇ ಎಲ್ಲವೂ ಸುಸೂತ್ರವಾಗಿ ಕೆಲಸ ಮಾಡುವದು ಬಹಳ ಕಮ್ಮಿ.

ನಂತರ ಎಲ್ಲೂ ಡೆಬಿಟ್ ಕಾರ್ಡ್ ಉಪಯೋಗಿಸಲಿಲ್ಲ. ವಾಪಸ್ ಬಂದೆ. ಬಂದು ಎಷ್ಟೋ ತಿಂಗಳುಗಳ ಬಳಿಕ ಮತ್ತೆ ಭಾರತದ ಪ್ರವಾಸದ ತಯಾರಿ ಶುರುವಾಯಿತು. ಡೆಬಿಟ್ ಕಾರ್ಡ್ ಉಪಯೋಗಿಸೋಣ ಅಂತ ವಿಚಾರ ಮಾಡಿದೆ. ಆನ್ಲೈನ್ ಬ್ಯಾಂಕಿಂಗ್ ಅಂತೂ ವರ್ಕ್ ಮಾಡುತ್ತಿರಲಿಲ್ಲ. ಮತ್ತೆ ಬ್ಯಾಂಕಿಗೆ ಹೋಗಿ ಸರಿ ಮಾಡಿಸಿಕೊಂಡಿರಲಿಲ್ಲ. ಹೇಗೂ ಡೆಬಿಟ್ ಕಾರ್ಡ್ ಇದೆಯಲ್ಲ. ಸಾಕು. ಅದನ್ನೇ ಉಪಯೋಗಿಸಿಕೊಂಡಿರೋಣ ಅಂತ ಬಿಟ್ಟಿದ್ದೆ.

online shopping ಮಾಡುವದಿತ್ತು. ಡೆಬಿಟ್ ಕಾರ್ಡ್ ವಿವರ ತುಂಬಿ online ವ್ಯವಹಾರ ಮಾಡಿದೆ. OTP ಹಾಕಿ ಎಂದಿತು. OTP !!?? ಏನೂ?? one time password. ನೋಡಿದರೆ OTP ತಂದೆಯವರ ಮೊಬೈಲಿಗೆ ಹೋಗಿತ್ತು. ಅವರೇ ಫೋನ್ ಮಾಡುತ್ತಿದ್ದರೇನೋ. ನನಗೆ ಗಡಿಬಿಡಿ. ಫೋನ್ ಮಾಡಿ, 'OTP ಹೇಳ್ರಿ. ಲಗೂ ಹೇಳ್ರಿ!' ಎಂದು ಗಡಿಬಿಡಿ ಮಾಡಿದೆ. ನಾನೆಷ್ಟೇ ಆತುರಗೇಡಿ ತರಹ ವರ್ತಿಸಿದರೂ ಅವರು ತಣ್ಣಗೇ OTP ಹೇಳಿದರು. ಹಾಕಿದೆ. ಅಬ್ಬಾ! ವರ್ಕ್ ಆಯಿತು.

ಇದೊಳ್ಳೆ ಕಿರಿಕಿರಿ ಆಯಿತಲ್ಲ ಮಾರಾಯರೆ. ನಾನು ಅಮೇರಿಕಾದಲ್ಲಿ ಕುಳಿತು ಡೆಬಿಟ್ ಕಾರ್ಡ್ ಉಪಯೋಗಿಸಿದರೆ OTP ಭಾರತದಲ್ಲಿರುವ ತಂದೆಯವರ ಮೊಬೈಲಿಗೆ ಹೋಗುತ್ತದೆ. ಅದು ಸಹಜವಿತ್ತು ಬಿಡಿ. ಅದು ಜಂಟಿ ಖಾತೆ. ಅವರ ಖಾತೆಗೆ ನಾನು ತಗಲಾಕಿಕೊಂಡಿದ್ದೆ. ಹಾಗಾಗಿ ಮೊಬೈಲ್ ವಿವರ ಎಲ್ಲ ಅವರದ್ದೇ ಇತ್ತು.

'ರೀ, ಪಿತಾಜಿ, ಆ ಮಾಳಮಡ್ಡಿ ಬ್ಯಾಂಕಿಗೆ ಹೋಗಿ ಒಟಿಪಿ ನನ್ನ USA ನಂಬರಿಗೆ ಬರುವ ಹಾಗೆ ಮಾಡಿಸಿಕೊಂಡು ಬನ್ನಿ,' ಎಂದು ಒಂದು ರಿಕ್ವೆಸ್ಟ್ ಇಟ್ಟೆ. ರಿಕ್ವೆಸ್ಟ್ ಕಮ್ಮಿ ಆಜ್ಞೆ ಜಾಸ್ತಿ ಎನ್ನಿ.

ಮುಂದಿನ ಸಲ ಬ್ಯಾಂಕಿಗೆ ಹೋದಾಗ ಮ್ಯಾನೇಜರ್ ಹತ್ತಿರ ವಿನಂತಿ ಮಾಡಿದ್ದಾರೆ. ನನ್ನ USA ನಂಬರಿಗೆ OTP ಬರುವ ಹಾಗೆ ಮಾಡಿಕೊಡಲು ಕೇಳಿದ್ದಾರೆ.

ಅದಕ್ಕೊಂದು ತೊಡಕು. ಅದೇನು ಅಂದರೆ  ಅದು ಡೊಮೆಸ್ಟಿಕ್ ಖಾತೆ. ಭಾರತೀಯ ಪೌರರಿಗೆ ಮಾತ್ರ. ಹಾಗಾಗಿ ಕೇವಲ ಭಾರತದ ನಂಬರುಗಳಿಗೆ ಮಾತ್ರ OTP ಕಳಿಸಬಹುದಂತೆ. NRI ಖಾತೆ ಮಾಡಿಸಿಕೊಂಡರೆ ಮಾತ್ರ ಇಂಟರ್ನ್ಯಾಷನಲ್ ನಂಬರುಗಳಿಗೆ OTP ಕಳಿಸಬಹುದಂತೆ. ಭಾರಿ ಲಾಜಿಕ್. ಆದರೆ ಬರೋಬ್ಬರಿ ಲಾಜಿಕ್.

NRI ಗಳು ಭಾರತೀಯ ಪೌರತ್ವ ಹೊಂದಿರುವ ಜನರೊಂದಿಗೆ ಜಂಟಿಯಾಗಿ ಡೊಮೆಸ್ಟಿಕ್ ಖಾತೆ ಮಾಡಿಕೊಳ್ಳಬಹುದು. ಹಾಗಾಗಿಯೇ ನನಗೆ ತಂದೆಯವರೊಂದಿಗೆ ಜಂಟಿ ಖಾತೆ ಕೊಟ್ಟಿದ್ದು ಮತ್ತು ಡೆಬಿಟ್ ಕಾರ್ಡ್ ಕೊಟ್ಟಿದ್ದು. ಆದರೆ OTP ಮಾತ್ರ ನನ್ನ ನಂಬರಿಗೆ ಕಳಿಸಲಾಗುವದಿಲ್ಲ.

ವಿವರವಂತೂ ತಿಳಿಯಿತು. ಪರಿಹಾರ ಸಿಗಲಿಲ್ಲ.

ಮುಂದಿನ ಎಲ್ಲ ವ್ಯವಹಾರಗಳನ್ನು ಅದೇ ಮಾದರಿಯಲ್ಲಿ ಮಾಡಿದೆ. ಆ ಪ್ರವಾಸದ ಲೋಕಲ್ ವಿಮಾನಯಾನ, ನಾನು ಧಾರವಾಡ ತಲುಪುವ ಸಮಯಕ್ಕೆ ಸರಿಯಾಗಿ ಬಂದು ಬಿದ್ದಿರಬೇಕಾದ ಡಜನ್ ಪುಸ್ತಕಗಳು, ಪ್ಲೇನ್ ಹಾರದಿದ್ದರೆ ಬ್ಯಾಕಪ್ ಅಂತ ಟ್ರೈನ್ ಟಿಕೆಟ್ ಎಲ್ಲವನ್ನೂ ಡೆಬಿಟ್ ಕಾರ್ಡ್ ಉಪಯೋಗಿಸಿಯೇ ಬುಕ್ ಮಾಡಿದೆ. ಇಲ್ಲಿಂದ ಕಂಪ್ಯೂಟರ್ನಲ್ಲಿ ಹಾಕುವದು. ಭಾರತಕ್ಕೆ ಫೋನ್ ಮಾಡಿ, 'OTP ಬಂದಿರಬೇಕು ನೋಡಿ. ಬೇಗ ಹೇಳಿ,' ಎಂದು OTP ಪಡೆದು ಕೆಲಸ ಮುಗಿಸಿಕೊಂಡಿದ್ದು. ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಮಾದರಿಯಾದರೂ ಕೆಲಸವಾಯಿತು.

ಇಷ್ಟಕ್ಕೇ ಬ್ಯಾಂಕಿಂಗ್ ಕಥೆ ಮುಗಿಯಲಿಲ್ಲ. ಮುಂದೊಂದು ದಿವಸ ನನ್ನ USA ನಂಬರಿಗೇ  OTP ಬರುವ ಹಾಗೆ ಮಾಡಿಕೊಂಡೆ. ಅದೊಂದು ಮಹಾ ಸಂಗ್ರಾಮವೇ ಆಯಿತೆನ್ನಿ. ದೊಡ್ಡ comedy of errors. ಅದರ ಬಗ್ಗೆ ಮತ್ತೊಮ್ಮೆ ಬರೆಯೋಣ.

5 comments:

sunaath said...

ಮಹೇಶರೆ, ನಿಮ್ಮ ಲೇಖನಕ್ಕಾಗಿ ಚಡಪಡಿಸುತ್ತಲೇ ಕುಳಿತಿರುತ್ತೇನೆ.
ಇರಲಿ, ನಿಮ್ಮ debit card ಕಥೆ --ಇಲ್ಲಿಯ ದುರದೃಷ್ಟರಿಗೆ ಹೋಲಿಸಿದರೆ--- ಸಾಕಷ್ಟು ಆಶಾದಾಯಕವಾಗಿದೆ. ಏಕೆಂದರೆ, ನಾನು ಇಲ್ಲಿಯ ವಿಜಯಾ ಬ್ಯಾಂಕಿನ ಗ್ರಾಹಕನಾಗಿದ್ದು Net banking ಸವಲತ್ತು ಪಡೆದಿದ್ದೇನೆ, theorotically ಮಾತ್ರ. It has never worked!
ನಿಮ್ಮ ಮುಂದಿನ ಸಂಚಿಕೆಗಾಗಿ ಕಾಯುತ್ತಿರುತ್ತೇನೆ.

Mahesh Hegade said...

ಧನ್ಯವಾದಗಳು ಸುನಾಥ್ ಸರ್! :)

ramegowda said...

Dear Mahesh,
Nowadays there are not enough articles from you. What happened? Try to write atleastonce in a fortnight.
regards
Manjunath

Mahesh Hegade said...

Thank you very much,Manjunath for your kind comment. I have been very busy with other priorities. So, haven't been able to write much. Hopefully will start to blog again after a few months. Thanks and regards .

Kumar Hosbhav said...


Very interesting!

Siddapur Bank also gives good service.