Saturday, February 15, 2020

ಮಗನಿಗೆ ತುರ್ತಾಗಿ ಇಪ್ಪತ್ತೊಂದು ವರ್ಷವಾಗಬೇಕಿದೆ...

'ನನ್ನ ಮಗನಿಗೆ ಇಪ್ಪತ್ತೊಂದು ವರ್ಷವಾಗುವುದನ್ನೇ ಕಾಯುತ್ತಿದ್ದೇನೆ ಮಾರಾಯ,' ಅಂದ ಒಬ್ಬ ಪರಿಚಿತ.

'ಯಾಕೆ? ಮದುವೆ ಮಾಡೋಕಾ? ಅಷ್ಟು ಬೇಗ? ಅರ್ಜೆಂಟಾ? ಏನಾದರೂ ಲವ್ವು ಗಿವ್ವು ಅಂತ ಲಫಡಾ ಮಾಡಿಕೊಂಡು ಕೂತಿದ್ದಾನ?' ಎಂದು ನಾನು ಕೇಳಿದೆ. ನಮ್ಮ ತಲೆ ಓಡೋದೇ ಹಾಗೆ.

'ಹಾಗಲ್ಲ. ಅವನು ಇಪ್ಪತ್ತೊಂದು ವರ್ಷದವನಾಗಿಬಿಟ್ಟ ಅಂದರೆ ನನ್ನನ್ನು ಮತ್ತು ಅವರಮ್ಮನನ್ನು ಅಮೇರಿಕಾದ ಗ್ರೀನ್ ಕಾರ್ಡಿಗೆ ಸ್ಪಾನ್ಸರ್ ಮಾಡಬಹುದು. ಮಗಳೂ ಅಲ್ಲೇ ಹುಟ್ಟಿದ್ದಾಳೆ. ಆ ರೀತಿಯಲ್ಲಾದರೂ ಗ್ರೀನ್ ಕಾರ್ಡ್ ಒಂದು ಸಿಕ್ಕುಬಿಟ್ಟರೆ ಸಾಕು ಮಾರಾಯ. ವಾಪಸ್ ಬಂದು ಅಲ್ಲೇ ನೆಲೆಸಿಬಿಡೋಣ ಅಂದುಕೊಂಡಿದ್ದೇವೆ,' ಎಂದು ಉದ್ದಾಗಿ ಬಿಟ್ಟ. ಶ್ವಾಸವನ್ನು ಬಿಟ್ಟ. ಪುಣ್ಯಕ್ಕೆ ಅದೊಂದನ್ನೇ ಬಿಟ್ಟ.

ಇದು ಕಿರಿಕ್ ಪಾರ್ಟಿ ಕೇಸ್. ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷದ ಹಿಂದೆ ಅಮೇರಿಕಾಗೆ ಬಂದಿದ್ದ ಪಾರ್ಟಿ. ನಮ್ಮ ಸಮಕಾಲೀನರೇ. ಅದೇನೋ ಗೊತ್ತಿಲ್ಲ. ಒಂದು ಹತ್ತು ಹನ್ನೆರೆಡು ವರ್ಷ ಇಲ್ಲಿದ್ದರು. ಎರಡು ಮಕ್ಕಳೂ ಆದರು. ಆಗ ಆ ಕುಟುಂಬ ವಾಪಸ್ ಭಾರತಕ್ಕೆ ಹೊರಟು ನಿಂತಿತು.

ಕಾರಣ ಕೇಳಿದರೆ ಒಬ್ಬೊಬ್ಬರ ಬಳಿ ಒಂದೊಂದು ಕಾರಣ ಹೇಳಿದರು. ಒಂದೇ ಸಾಲಿಡ್ ಕಾರಣ ಇರಲಿಲ್ಲವಾದ್ದರಿಂದ ಒಬ್ಬೊಬ್ಬರ ಹತ್ತಿರ ಒಂದೊಂದು ರೀತಿಯಲ್ಲಿ ಪುಂಗಿದರು.

'ವಯಸ್ಸಾದ ತಂದೆತಾಯಿಗಳಿದ್ದಾರೆ ಧಾರವಾಡದಲ್ಲಿ. ನೋಡಿಕೊಳ್ಳಬೇಕು,' ಅಂದ. ಅದು ಶುದ್ಧ ಫೇಕ್ ಎಂದು ಕೇಳಿದಾಗಲೇ ಗೊತ್ತಾಗಿತ್ತು. ಅವನ ಅಪ್ಪ ಅಮ್ಮ ಧಾರವಾಡ ಬಿಟ್ಟು ಬೆಂಗಳೂರಿಗೆ ಬಂದು ಹೊಂದಿಕೊಳ್ಳುವ ಪೈಕಿಯವರೇ ಅಲ್ಲ. ಧಾರವಾಡದಲ್ಲೇ ಹೊಸೆಲ್ಲಾಪುರದ ಕರ್ಮಠ ಅಗ್ರಹಾರ ಬಿಟ್ಟು ಬೇರೆ ಕಡೆ ಹೋದರೆ ಅವರಿಗೆ ಸರಿಯಾಗೋದು ಡೌಟ್. ಅಂತದ್ದರಲ್ಲಿ ಈ ಪುಣ್ಯಾತ್ಮ ಹೋಗಿ ನೆಲೆಸುವ ಬೆಂಗಳೂರಿನ ಕಿಷ್ಕಿಂಧೆಯಂತಹ ಅಪಾರ್ಟ್ಮೆಂಟಿನಲ್ಲಿ ಬಂದು ಇದ್ದಾರೆಯೇ? ಸಾಧ್ಯವೇ ಇಲ್ಲ.

ಇನ್ನು ಅವನ ಪತ್ನಿ. ಅತ್ತೆ ಮಾವನನ್ನು ಜೀವಂತ ರುಬ್ಬುವ ಪೈಕಿ. ಅಮೇರಿಕಾಗೆ ಬಂದಾಗಲೇ ರುಬ್ಬಿ ಓಡಿಸಿದ್ದಾಳೆ. ಸೊಸೆ ಹತ್ತಿರ ರುಬ್ಬಿಸಿಕೊಂಡ ವೃದ್ಧ ಜೀವಗಳು ವೀಸಾ ಅವಧಿಗೆ ಮುಂಚೆಯೇ ಟಿಕೆಟ್ಟಿನ ದಿನ ಬದಲು ಮಾಡಿಸಿಕೊಂಡು ಪೋಯಾಚ್ ಆಗಿದ್ದರು. ನಂತರ ಧಾರವಾಡ ಕಡೆ ಹೋಗಿ ಮಗನನ್ನು ಮತ್ತು ಸೊಸೆಯನ್ನು ಬೇರೆ ಬೇರೆ ರೀತಿಯಲ್ಲಿ 'ಹೊಗಳಿ'ದ್ದರು. ಅರ್ಥವಾಯಿತಲ್ಲ ಸೊಸೆಗೆ ಅತ್ತೆ ಮಾವನ ಬಗ್ಗೆ ಇರುವ ಕಾಳಜಿ?

'ಹುಬ್ಬಳ್ಳಿ-ಧಾರವಾಡ ವ್ಯಾಪಕವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಟೆಕ್ ಪಾರ್ಕ್, ಸಾಫ್ಟ್ವೇರ್ ಪಾರ್ಕ್ ಎಲ್ಲ ಬಂದಿವೆ. ಹುಬ್ಬಳ್ಳಿಯಲ್ಲಿ ಒಂದು ಸಾಫ್ಟ್ವೇರ್ ಕಂಪನಿ ತೆಗೆಯೋಣ ಅಂತ ವಿಚಾರ. ಹೂಡಿಕೆದಾರರು ಇದ್ದಾರೆ. ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ ಪದವೀಧರರೂ ಸಿಗುತ್ತಾರೆ. ಒಂದಿಷ್ಟು ಜನರಿಗೆ ನೌಕರಿ ಕೊಟ್ಟ ಪುಣ್ಯವೂ ಸಿಕ್ಕಂತಾಯಿತು,' ಎಂದು ಬೇರೆಯೊಬ್ಬರ ಹತ್ತಿರ ಪುಂಗಿದ.

ಹುಬ್ಬಳ್ಳಿಯಲ್ಲಿ ತೆಗೆದ ಕಂಪನಿ ಬರಕತ್ತಾಗಲಿಲ್ಲ. ಹುಬ್ಬಳ್ಳಿಗೆ ಬಂದು ನೋಡಿದ ಹೂಡಿಕೆದಾರ ವಿಮಾನನಿಲ್ದಾಣದಿಂದಲೇ ಓಡಿಹೋದ.

'ಹುಬ್ಬಳ್ಳಿ ಸಾಕಷ್ಟು ಕಾಸ್ಮೊಪಾಲಿಟನ್ ಆಗಿಲ್ಲ. ಇಲ್ಲಿ ಬೇರೆ ಕಡೆಯಿಂದ ಜನರನ್ನು ಕರೆತರುವುದು ಕಷ್ಟ,' ಅಂದ ಬಂಗಾಳಿ ಹೂಡಿಕೆದಾರ.

'ಅಯ್ಯೋ, ನಾನಿದ್ದೇನೆ. ನನ್ನ ಸ್ಥಳೀಯ ಲೋಕಲ್ ಸ್ನೇಹಿತರು ಜಾಯಿನ್ ಆಗುತ್ತಾರೆ. ಬೇರೆಯವರು ಯಾಕೆ ಬೇಕು?'ಎಂದು ಇವನು ಕೇಳಿದ.

ಇವನ ಮುಖ ನೋಡಿ ಬೆಚ್ಚಿಬಿದ್ದ ಹೂಡಿಕೆದಾರ, 'Unbelievable, Incredible' ಎಂದೆಲ್ಲ ಹಲುಬಿ, ಬಡಬಡಿಸಿ, ಉಡದಾರಕ್ಕೆ ಕಟ್ಟಿಕೊಂಡು ಬಂದಿದ್ದ ರೊಕ್ಕದ ಚೀಲವಾದರೂ ಇದೆಯೋ ಅಥವಾ ಹುಬ್ಬಳ್ಳಿಯ ಪಾಕೆಟಮಾರುಗಳು ಅದನ್ನೂ ಲಪಟಾಯಿಸಿಬಿಟ್ಟಾರು ಎಂದು ಹೆದರಿ, ರಾತ್ರೋ ರಾತ್ರಿ ಹೋಟೆಲ್ ಖಾಲಿಮಾಡಿಕೊಂಡು, ಮರುದಿನದ ವಿಮಾನಕ್ಕೂ ಕಾಯದೆ, ಟ್ಯಾಕ್ಸಿ ಮಾಡಿಕೊಂಡು ಬೆಂಗಳೂರು ತಲುಪಿ ಅಲ್ಲಿಂದ ಗಾಯಬ್ ಆದವನು ಇವನಿಗೆ ಇನ್ನೂ ಸಿಕ್ಕಿಲ್ಲ. ಹೋಟೆಲ್ ಬಿಲ್ ಕೂಡ ಚುಕ್ತಾ ಮಾಡಿರಲಿಲ್ಲವಂತೆ. ಇವನೇ ಮಾಡಿ ಕೈತೊಳೆದುಕೊಳ್ಳಬೇಕಾಯಿತು.

ಆದರೂ ಹುಬ್ಬಳ್ಳಿಯಲ್ಲಿ ಸಾಫ್ಟ್ವೇರ್ ಕಂಪನಿ ತೆಗೆಯುವ ಉಮೇದಿ ಕಮ್ಮಿಯಾಗಲಿಲ್ಲ. ಹುಬ್ಬಳ್ಳಿಯಲ್ಲಿ ಬೇರೆ ಏನೋ ಬಿಸಿನೆಸ್ ಮಾಡಿಕೊಂಡಿದ್ದ ಭಾವ ಅಂದರೆ ಅಕ್ಕನ ಗಂಡನ ತಲೆ ಮೇಲೆ ಕೈಯಿಟ್ಟ. ಭಸ್ಮಾಸುರನ ಮಾದರಿಯಲ್ಲಿ. ಮುಗಿಯಿತು ಭಾವನ ಕಥೆ. ವ್ಯಾಪಾರಿ ಭಾವ ಒಂದು ಹತ್ತು ಹದಿನೈದು ಲಕ್ಷಕ್ಕೆ ಹಗುರವಾಗಿಹೋದ. ಅದನ್ನು ತೆಗೆದುಕೊಂಡು ಬಂದು ಟೆಕ್ ಪಾರ್ಕಿನಲ್ಲಿ ಪಾಯಿಖಾನೆ ಸೈಜಿನ ಆಫೀಸ್ ತೆಗೆದು ಕೂತ. ಅಲ್ಲೇ ಓತ್ಲಾ ಹೊಡೆದುಕೊಂಡು ಓಡಾಡಿಕೊಂಡಿದ್ದ ಉಂಡಾಡಿಗುಂಡನಂತಹ ಇಂಜಿನಿಯರಿಂಗ್ ಪದವೀಧರರು ಸಿಕ್ಕರು. ತುಂಬಾ ಚೀಪಾಗಿ ಸಿಕ್ಕರು ಎಂದು ಕರೆದುಕೊಂಡು ಬಂದ. ಅದೇನೋ ಅಂತಾರಲ್ಲ.... If you pay peanuts, you will only get monkeys. ಆ ಮಾದರಿಯ ಮಂದಿ ಸಿಕ್ಕರು. ಗಣಪತಿ ಮಾಡಿ ಅಂದರೆ ಗಣಪತಿಯ ಅಪ್ಪ, ದೊಡ್ಡಪ್ಪ, ಚಿಕ್ಕಪ್ಪನನ್ನು ಮಾಡಿ ಕೊಟ್ಟರು. ಅಲ್ಲಿಗೆ ಇವನನ್ನು ನಂಬಿ ಏನೋ ಚೂರುಪಾರು ಸಾಫ್ಟ್ವೇರ್ ಕೆಲಸವನ್ನು ಅಮೇರಿಕಾದಿಂದ ಕಳಿಸಿಕೊಟ್ಟಿದ್ದ ಹಳೆಯ ಕಂಪನಿ ಮಾಲೀಕ ಖಡಕ್ಕಾಗಿ ಹೇಳಿದ್ದು ಒಂದೇ ಮಾತು, 'ನೋಡು, ನೀನೇ ಖುದ್ದಾಗಿ ಕೂತು ನನ್ನ ಸಾಫ್ಟವೇರಿಗೆ ತ್ಯಾಪೆ ಹಚ್ಚಿ ಕೊಡುವದಾದರೆ ಓಕೆ. ಬೇರೆ ಯಾರಿಂದನೋ  ತ್ಯಾಪೆ ಹಚ್ಚಿಸಿ  ಕೊಡಿಸುತ್ತೇನೆ ಅಂದರೆ ಬೇಡವೇಬೇಡ. ಅವರು ಮಾಡಿಟ್ಟ ರಾಡಿಯನ್ನು ಸರಿ ಮಾಡಿಕೊಳ್ಳಲು ನಾನು ಇಲ್ಲಿ ಮತ್ತೆ ನಾಲ್ಕು ಜನರನ್ನು ಇಟ್ಟುಕೊಳ್ಳಬೇಕಾಗುತ್ತದೆ. ಏನಂತೀ??'

ಹುಬ್ಬಳ್ಳಿಯಲ್ಲಿ ಉಂಡಾಡಿಗುಂಡರನ್ನು ಇಟ್ಟುಕೊಂಡು ಕೂತರೆ ಕೆಲಸವಾದಂತೆಯೇ ಸರಿ ಎಂದು ನಿರ್ಧರಿಸಿ ಟೆಕ್ ಪಾರ್ಕಿನ ಪಾಯಿಖಾನೆ ಸೈಜಿನ ಆಫೀಸಿಗೆ ಬೀಗ ಜಡಿದು, VRL ನೈಟ್ ಬಸ್ ಹಿಡಿದು ಬೆಂಗಳೂರಿಗೆ ಬಂದು ಸೇರಿಕೊಂಡ. ಅತ್ತೆ ಮಾವನ ಜೊತೆ ಧಾರವಾಡದಲ್ಲಿ ಕಿತ್ತಾಡಿಕೊಂಡಿದ್ದ ಪತ್ನಿ ಮತ್ತು ಮಕ್ಕಳು ಕೂಡ ಸೇರಿಕೊಂಡರು.

ಇವನು ಮತ್ತೆ ತನ್ನ ಹಳೆ ಕಂಪನಿಯ ಓಬಿರಾಯನ ಕಾಲದ ಸಾಫ್ಟವೇರಿಗೆ ತ್ಯಾಪೆ ಹಚ್ಚುತ್ತಾ ಕೂತಿದ್ದಾನೆ. ಇವನನ್ನು ಬಿಟ್ಟರೆ ಬೇರೆ ಯಾರಿಗೂ ಆ ತಗಡು ಸಾಫ್ಟವೇರ್ ಅರ್ಥವಾಗದ ಕಾರಣ ಇವನ ಹಳೆಯ ಮಾಲೀಕನಿಗೂ ಬೇರೆ ಗತಿಯಿಲ್ಲ. ಇವನಿಗೆ ಒಂದು ರೀತಿಯ hostage ಆತ. ಇವನ ಜುಟ್ಟು ಅವನ ಕೈಯಲ್ಲಿ ಮತ್ತು ಅವನ ಜುಟ್ಟು ಇವನ ಕೈಯಲ್ಲಿ.

ಅಮೇರಿಕಾದಲ್ಲಿದಾಗ ಅಲ್ಲಿ ಹೋದವರೇ ಕೊಳ್ಳುಬಾಕ ಸಂಸ್ಕೃತಿಗೆ ಒಳಗಾಗಿ ರೊಕ್ಕವನ್ನಷ್ಟೂ ಖರ್ಚು ಮಾಡಿಕೊಂಡರು. ಅವಶ್ಯವಿಲ್ಲದಿದ್ದರೂ ಎರಡೆರೆಡು ದುಬಾರಿ ಕಾರ್ ಕೊಂಡರು. ಮೂರು ಐದು ವರ್ಷಕ್ಕೆ ಕಾರ್ ಬದಲಾಯಿಸಿದರು. ನೆರೆಹೊರೆಯವರ ಮುಂದೆ ತಾವೇ ದೊಡ್ಡ ಸ್ಥಿತಿವಂತರು ಎನ್ನುವಂತೆ ಪೋಸ್ ಕೊಟ್ಟರು. ಅರಮನೆಯಂತಹ ಮನೆ ಕೊಂಡರು. ಅಲ್ಲೂ ಒಂದಿಷ್ಟು ರೊಕ್ಕ ಬ್ಲಾಕ್ ಆಯಿತು. ಭಾರತಕ್ಕೆ ಬರುವಾಗ ಬಂದಷ್ಟಕ್ಕೆ ಮಾರಿ ಬಂದರು. ಅಲ್ಲೂ ಒಂದಿಷ್ಟು ಖೋತಾ. ಮಲಗಿಬಿಟ್ಟಿದ್ದ ಶೇರ್ ಮಾರ್ಕೆಟ್ ಉಳಿದ ಇದ್ದ ಬಿದ್ದ ರೊಕ್ಕವನ್ನು ನುಂಗಿ ನೀರು ಕುಡಿದಿತ್ತು.

ಭಾರತಕ್ಕೆ ಬಂದ ಕೂಡಲೇ ಅಲ್ಲಿ ರಿಯಲ್ ಎಸ್ಟೇಟ್ ಬೂಮ್ ಎನ್ನುವ ಹುಚ್ಚುಮುಂಡೆ ಮದುವೆ ನಡೆದಿತ್ತು. ಇದ್ದಬಿದ್ದ ರೊಕ್ಕವನ್ನೆಲ್ಲ ಕಂಡ ಕಂಡ ಸೈಟು, ಫ್ಲಾಟ್ ಖರೀದಿ ಮಾಡಲು ಬಳಸಿದರು. ಎರಡು ಮೂರು ವರ್ಷಕ್ಕೆ ಅವುಗಳ ಬೆಲೆ ಡಬಲ್ ಆಗಿದ್ದು ನೋಡಿ ಮನಸಿನಲ್ಲೇ ಮಂಡಿಗೆ ತಿಂದರು. ಬರೋಬ್ಬರಿ ತುಪ್ಪ ಹಾಲು ಸಕ್ಕರೆಪುಡಿ ಹಾಕಿಯೇ ತಿಂದರು.

ಮೋದಿ ಸಾಹೇಬರು ಬಂದು ಕೂತರು. ಮೊದಲು ನೋಟು ಅಮಾನ್ಯೀಕರಣ  ಮಾಡಿದರು. ಒಮ್ಮೆಲೇ ಹಣದ, ಅದರಲ್ಲೂ ಕಪ್ಪುಹಣದ ಮತ್ತು ನಕಲಿ ಹಣದ, ಹರಿವು ನಿಂತಿತು. ಹಡಬಿಟ್ಟಿ ಕಪ್ಪುಹಣದ ಕಾರಣದಿಂದ ಆಕಾಶಕ್ಕೆ ಏರಿದ್ದ ರಿಯಲ್ ಎಸ್ಟೇಟ್ ಭೂಮಿಗೆ ಧಡಕ್ ಎಂದು ಬಿದ್ದು, ಅಲ್ಲೇ ನಿಲ್ಲದೆ ಸೀದಾ ಪಾತಾಳಕ್ಕೆ ಹೋಗಿ ಮಕಾಡೆ ಮಲಗಿಬಿಟ್ಟಿತು. ಬಂದ ಬೆಲೆಗೆ ಮಾರೋಣ ಅಂದರೆ ಜನರ ಹತ್ತಿರ ರೊಕ್ಕವೇ ಇಲ್ಲ. ರಿಯಲ್ ಎಸ್ಟೇಟ್ ಫುಲ್ ಠುಸ್!!

ಮೋದಿ ಸಾಹೇಬರು ಇತರ ಮೂಲಭೂತ ಬದಲಾವಣೆಗಳನ್ನು ಮಾಡಲು ಹೊರಟರು. ಅದನ್ನು ವಿರೋಧಿಸಿ ದೇಶಾದ್ಯಂತ ಹೋರಾಟ. ಒಳಗಿನ ಹಿತಶತ್ರುಗಳಿಗೆ ಮೆಣಸಿನ ಹೊಗೆ ಹಾಕಿಸಿಕೊಂಡ ಹಾಗಾಗಿದೆ. ಮೊದಲಾಗಿದ್ದರೆ ಅಲ್ಲೊಂದು ಬಾಂಬ್ ಬ್ಲಾಸ್ಟ್, ಇಲ್ಲೊಂದು ಗಲಭೆ, ಮತ್ತೊಂದು ಕಡೆ ಒಂದು ರೇಪ್ ಅಂತ ಆಗಿ ಜನರ ಗಮನವೆಲ್ಲ ಬೇರೆಡೆ ಹೋಗುತ್ತಿತ್ತು. ನಕಲಿ ರೊಕ್ಕ, ಕಪ್ಪು ಹಣ ಯಥೇಚ್ಛವಾಗಿ ಹರಿದಾಡುತ್ತಿತ್ತು. ನಿಜವಾದ ಸಮಸ್ಯೆಗಳೆಲ್ಲವೂ ಚಾಪೆ ಕೆಳಗಿ ಗುಡಿಸಿಹೋಗುತಿದ್ದವು. ಕಸ ಕಣ್ಣಿಗೆ ಕಾಣದಿದ್ದರೂ ಎಲ್ಲ ಕಸ ಚಾಪೆ ಕೆಳಗೇ ಇರುತ್ತಿತ್ತು. ಈಗ ಮೋದಿಯವರು ಚಾಪೆ, ಗುಡಾರ ಎಲ್ಲ ಎತ್ತಿ ಎಲ್ಲವನ್ನೂ ಝಾಡಿಸಿ ಝಾಡಿಸಿ ಒಗೆಯುತ್ತಿದ್ದಾರೆ ಮತ್ತು ಖದೀಮರನ್ನು ಝಾಡಿಸಿ ಝಾಡಿಸಿ ಒದೆಯುತ್ತಿದ್ದಾರೆ. ಖದೀಮರ ಅರಚಾಟ ವಿವಿಧ ಪ್ರತಿಭಟನೆಗಳ ರೂಪ ಪಡೆದುಕೊಂಡು ಎಲ್ಲ ಕಡೆ ಒಂದು ತರಹದ ಅಶಾಂತಿ ಮತ್ತು ಗದ್ದಲ.

ಹಾಗಾಗಿ ಈಗ ಭಾರತ ಬೇಸರ. 'ಇಲ್ಲಿ ಬರೇ ಗದ್ದಲ ಮಾರಾಯ. ದಿನಾ ಒಂದೊಂದು ರೀತಿಯ ಪ್ರತಿಭಟನೆ. ಸಾಕಾಗಿ ಹೋಗಿದೆ. ಅದಕ್ಕೇ ಅಮೇರಿಕಾಗೆ ವಾಪಸ್ ಬರೋಣ ಅಂತ ಮಾಡಿದ್ದೇವೆ,' ಅಂತ ಹೊಸ ವರಸೆ ಶುರುವಾಗಿದೆ. ಉಲ್ಟಾ ವಲಸೆಯ ವರಸೆ.

ಅಮೇರಿಕಾದಲ್ಲಿ ಹುಟ್ಟಿರುವ ಕಾರಣ ಇಲ್ಲಿನ ಪೌರತ್ವ ಹೊಂದಿರುವ ಮಗ ಇಪ್ಪತ್ತೊಂದು ವರ್ಷಗಳಾದ ಬಳಿಕ ಅಪ್ಪಅಮ್ಮನನ್ನು ಗ್ರೀನ್ ಕಾರ್ಡಿಗಾಗಿ ಪ್ರಾಯೋಜಿಸಬಹುದು. ಒಮ್ಮೆ ಗ್ರೀನ್ ಕಾರ್ಡ್ ಸಿಕ್ಕರೆ ಶಾಶ್ವತವಾಗಿ ಬಂದು ನೆಲೆಸಬಹುದು. ವ್ಯಾಪಾರ ಉದ್ಯೋಗಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಮಾಡಬಹುದು.

ಹಾಗಾಗಿ ಇವನ ಮಗನಿಗೆ ತುರ್ತಾಗಿ ಇಪ್ಪತ್ತೊಂದು ವರ್ಷವಾಗಬೇಕಿದೆ.  ಐವತ್ತೂ ಚಿಲ್ಲರೆ ವಯಸ್ಸಿನಲ್ಲಿ ಉಲ್ಟಾ ವಲಸೆ ಬಂದು ಇಲ್ಲಿ ನೆಲೆಸುವುದೋ ಹೇಗೋ? ಇವನ ಪತ್ನಿಗೆ ಮುಂದೊಂದು ದಿನ ಮಗ ಸೊಸೆಯ ಚಿಕೆತ್ಸೆಯ ಡೋಸ್ ಇಲ್ಲಿ ಸಿಗಲಿದೆ. ತಾನು ತನ್ನ ಅತ್ತೆ ಮಾವಂದಿರಿಗೆ ಕೊಟ್ಟ ಔಷಧದ ಡೋಸಿಗಿಂತ ಸಣ್ಣ ಡೋಸ್ ಇರಲಿ ಮತ್ತು ಔಷಧಿ ಕೊಂಚ ಸಿಹಿ ಇರಲಿ ಅಂತಾದರೂ ಆಶಿಸುವ ಬುದ್ಧಿ ಆಕೆಗಿದೆಯೋ ಎಂದು ನೋಡಿದರೆ ಆಕೆ ಆಗಲೇ ಅಮೇರಿಕಾದಲ್ಲಿ ಮುಂದೆ ಕೊಳ್ಳಬೇಕಾದ ಕಾರುಗಳ ಬಗ್ಗೆ ಮತ್ತು ಮನೆಯ ಗುಂಗಿನಲ್ಲಿ ಕಳೆದುಹೋಗಿದ್ದಾಳೆ.

ಕಾಲಾಯ ತಸ್ಮೈ ನಮಃ

3 comments:

Narayan Bhat said...

ಅವರ ಆಸೆ ಬಹುಬೇಗ ಈಡೇರಲಿ .
ತುಂಬಾ ಚೆನ್ನಾಗಿ ಬರೆದಿದ್ದೀರಿ .

Mahesh Hegade said...

ಧನ್ಯವಾದಗಳು, ನಾರಾಯಣ ಭಟ್ಟರೇ.

sunaath said...

ಅವರ ದಾರಿ ಸುಗಮವಾಗಲಿ!