Saturday, February 11, 2023

ನಮ್ಮ ಬ್ಯಾಚಿನ "ಸೆಂಚುರಿ ಗೌಡ"

"ತಿಥಿ" ಕನ್ನಡ ಸಿನೆಮಾ ನೋಡಿದ್ದೀರಾ? ತುಂಬಾ ಚೆನ್ನಾಗಿದೆ. ಅದರಲ್ಲಿ "ಸೆಂಚುರಿ ಗೌಡ" ಎಂಬ ಪಾತ್ರವಿದೆ. ಆ ಪಾತ್ರದಾರಿ ಸಿಕ್ಕಾಪಟ್ಟೆ ಫೇಮಸ್ ಆಗಿಹೋದ.

"ಸೆಂಚುರಿ ಗೌಡ" ಎಂದು ಕೇಳಿದಾಗ ನನಗೆ ಮೊದಲು ನೆನಪಾಗಿದ್ದು ನಮ್ಮ ಮಿತ್ರ ವಿನೋದ್ ಕಲ್ಲನಗೌಡರ್. ವಿನೋದ್ ಕಲ್ಲನ"ಸೆಂಚುರಿ"ಗೌಡರ್ ಎಂದು ಬದಲಾಯಿಸಿ ಬಹಳ ನಕ್ಕೆ.

ನನಗೆ ಗೊತ್ತಿದ್ದಂತೆ ನಾವು ಶಾಲೆಯಲ್ಲಿ ಇದ್ದ ಆರು ವರ್ಷಗಳಲ್ಲಿ ಯಾರೂ ಕ್ರಿಕೆಟ್ ಪಂದ್ಯದಲ್ಲಿ ಸೆಂಚುರಿ ಹೊಡೆದಿರಲಿಲ್ಲ. ಹೀಗಿರುವಾಗ ಶಾಲೆಯ ಪಂದ್ಯವೊಂದರಲ್ಲಿ ಪಪ್ರಥಮ ಶತಕ ಬಾರಿಸಿದ ಕೀರ್ತಿ ವಿನೋದ್ ಕಲ್ಲನಗೌಡರ್ ಉರ್ಫ್ ಸೆಂಚುರಿಗೌಡರನಿಗೇ ಸಲ್ಲಬೇಕು.

ಎಂಟನೇ ಕ್ಲಾಸ್. ೧೯೮೫ -  ೮೬. C ಕ್ಲಾಸಿನ ಟೀಮಿನವರು ಬೇರೆ ಯಾವುದೋ ಕ್ಲಾಸ್ ವಿರುದ್ಧ ಮ್ಯಾಚ್ ಕೊಟ್ಟಿದ್ದರು. ನಮ್ಮ A ಕ್ಲಾಸಿನ ವಿರುದ್ಧವಂತೂ ಅಲ್ಲ. ಅದು ಖಾತ್ರಿಯಿದೆ. A ಕ್ಲಾಸಿನವರು ಆಗ ಬ್ಯಾಡ್ಮಿಂಟನ್ ಗುಂಗಿನಲ್ಲಿ ಇದ್ದರು. 

ಅಂತಹ ಮ್ಯಾಚಿನಲ್ಲಿ ನಾಲ್ಕಾರು ದಿವಸಗಳ ಅವಧಿಯಲ್ಲಿ ಶತಕ ಬಾರಿಸಿದ್ದು ಈ ವಿನೋದ್ ಕಲ್ಲನಗೌಡರ್  ಉರ್ಫ್ ಸೆಂಚುರಿಗೌಡರ್ .

ಶತಕ ಮುಟ್ಟಿದ ಸಂಭ್ರಮದ ಆಚರಣೆಗಾಗಿ ತಯಾರಿ ಭರ್ಜರಿಯಾಗಿತ್ತು. ನಾವೆಲ್ಲರೂ ನಮ್ಮ ನಮ್ಮ (ಕಪಿ)ಮುಷ್ಠಿಗಳಲ್ಲಿ ಸಿಕ್ಕಿದ ಮಣ್ಣು ಕಲ್ಲು ಹಿಡಿದುಕೊಂಡು ತಯಾರಾಗಿ ನಿಂತಿದ್ದೆವು. (ನಾವೆಲ್ಲರೂ ಆಗ ಕಪಿಮುಂಡೇವೇ ತಾನೇ? ಹಾಗಾಗಿ ಕಪಿಮುಷ್ಠಿ ಎಂದೆ.)

ಮಿತ್ರ ವಿನೋದ್ ಚೆಂಡನ್ನು ಪುಶ್ ಮಾಡಿ ಓಡಿದ. ಚೆಂಡು ನೋಡುತ್ತಾ ನಿಂತವರ ಮಧ್ಯೆ ನುಸುಳಿ ಹೋಗತೊಡಗಿತು. ಪಿಚ್ಚಿನ ಸುತ್ತ ಕಿಕ್ಕಿರಿದಿದ್ದ ಯಾವದಾದರೂ ಮಂಗ್ಯಾನಮಗನ ಕಾಲಿಗೋ ಬಾಲಕ್ಕೋ ಚೆಂಡು  ಬಡಿದು, ಅದು ಅಲ್ಲೇ ನಿಂತುಹೋಗಿ, ಶತಕಕ್ಕೆ ವಿಘ್ನ ಬಂದೀತು ಎನ್ನುವ ಎಚ್ಚರಿಕೆಯಲ್ಲಿ C ಕ್ಲಾಸಿನ ವಿಘ್ನನಿವಾರಕ ಪೈಲ್ವಾನ್ ಶ್ರೀಕಾಂತ್  ದೇಸಾಯಿ ಎಲ್ಲರನ್ನೂ 'ಪ್ರೀತಿಯಿಂದ' ವಾಚಾಮಗೋಚರವಾಗಿ ಬೈಯ್ಯುತ್ತಾ, 'ಎಲ್ಲಾರೂ ಬಾಜೂ ಸರೀರೋ ನಿಮ್ಮೌರ್. ಸೆಂಚುರಿ ಮಿಸ್ ಆತಂದ್ರ ಅಷ್ಟ ಮತ್ತ. ನೊಡ್ರಿಲ್ಲೇ. ಕೈಯಾಗ ಇರೋ ಕಾರ್ಕ್ ಬಾಲ್ ಸೀದಾ ಒಗೆದು ಒಬ್ಬಬರ ಡುಬ್ಬಾ ಮುರಿತೀನಿ' ಎಂದು ಖಡಕ್  ಆವಾಜ್ ಹಾಕಿದ ಅಬ್ಬರಕ್ಕೆ ಸಮುದ್ರ ಇಬ್ಭಾಗವಾಗಿ ಮೋಸೆಸ್ಸನಿಗೆ ದಾರಿ ಮಾಡಿಕೊಟ್ಟಂತೆ ಪ್ರೇಕ್ಷಕ ಮಂಗ್ಯಾನಮಕ್ಕಳೆಲ್ಲ ಆಕಡೆ ಈಕಡೆ ಸರಿದು, ಚೆಂಡಿಗೆ ದಾರಿ ಮಾಡಿಕೊಟ್ಟು, ಚೆಂಡು ದಾಟಿ  ಹೋಗಿ, ಅಂತೂ ಇಂತೂ ಒಂದೋ ಎರಡೂ ರನ್ ಬಂದು ಶತಕ ಪೂರೈಸಿತು. ಸೆಂಚುರಿ!!

ಎಲ್ಲರೂ ಕೈಯಲ್ಲಿದ್ದ ಮಣ್ಣು ಕಲ್ಲು ಎತ್ತರ ಪತ್ತರ ಮೇಲಕ್ಕೆ ತೂರಿ, ಚಿತ್ರವಿಚಿತ್ರವಾಗಿ ಕೇಕೆ (ಕ್ಯಾಕಿ) ಹೊಡೆದು ಶತಕವನ್ನು ಸಂಭ್ರಮಿಸಿದರು. ಅವೆಲ್ಲಾ ತಿರುಗಿ ನಮ್ಮ ತಲೆಯ ಮೇಲೆಯೇ ಅಕ್ಷತೆ ಮಾದರಿಯಲ್ಲಿ ಬಿದ್ದು ನಾವು ಮಂಗ್ಯಾ ಆದೆವು. ಈ ಐತಿಹಾಸಿಕ ಘಟನೆಗೆ ದೇವತೆಗಳು ಮೇಲಿಂದ ಪುಷ್ಪವೃಷ್ಟಿ ಮಾಡಲಿಲ್ಲ. ಹಾಗಾಗಿ ನಾವು ನಮ್ಮಷ್ಟಕ್ಕೆ ನಾವು ಮಣ್ಣು ಕಲ್ಲಿನ ವೃಷ್ಟಿಯನ್ನು, ನಮ್ಮ ಮೇಲೆಯೇ ಮಾಡಿಕೊಂಡು ಸಂಭ್ರಮಿಸಿದೆವು. ಅದರಲ್ಲಿ ಆ ಕ್ಲಾಸಿನವ ಈ ಕ್ಲಾಸಿನವ ಎನ್ನುವ ಭೇದ ಇರಲಿಲ್ಲ. ನಂತರ ವಿನೋದ್ ಸೆಂಚುರಿಗೌಡನನ್ನು ಮೆರವಣಿಗೆಯಲ್ಲಿ ಭುಜದ ಮೇಲೆ ಹೊತ್ತು ಕರೆದುಕೊಂಡು ಹೋದರೇ? ಅದು ನೆನಪಿಲ್ಲ. ಅಷ್ಟರಲ್ಲಿ ಪ್ಯೂನ್ ಹನುಮಂತ ಪೂಜಾರಿ ಬಾರಿಸಿದ್ದ. ಅಂದರೆ  ಢಣಢಣ ಗಂಟೆ ಬಾರಿಸಿದ್ದ. ಊಟದ ಸೂಟಿ ಮುಗಿದಿತ್ತು. ಕ್ಲಾಸಿಗೆ ವಾಪಸ್. ಊಟದ ಸೂಟಿಯ ನಂತರದ ಪೀರಿಯೆಡ್ಡುಗಳು ಶುದ್ಧ ಬೋರ್. 

ಮರುದಿವಸ ಪ್ರಾರ್ಥನೆಯ ನಂತರ ಪಟೇಲ್ ಸರ್  ಎಂದಿನಂತೆ ಮಾಡುತ್ತಿದ್ದ ಘೋಷಣೆಗಳ (Announcements) ಮಧ್ಯೆ ವಿನೋದನ ಶತಕದ ಬಗ್ಗೆಯೂ ಹೇಳಿ ಹಾರ್ದಿಕವಾಗಿ ಅಭಿನಂದಿಸಿದರು. ಹೇಳುವ ಭರದಲ್ಲಿ 'ಶತಕ ಬಾರಿಸಿದ ಬಾಲ!' ಎಂದುಬಿಟ್ಟರು. ಬಾಲಕ ಅಂದಿದ್ದರೆ ಛಲೋ ಇತ್ತು. ನಮಗೆ ಬಾಲ ಅಂದ್ರೆ ಬಾಲ. ಮಂಗ್ಯಾನ ಬಾಲ, ಕತ್ತೆ ಬಾಲ ಇತ್ಯಾದಿ.

ವಿನೋದ್ ಸೆಂಚುರಿಗೌಡರನಿಗೆ ಸೆಂಚುರಿ ಹೊಡೆದ ನಂತರ ಬಾಲ ಬಂದಿರಬಹುದೇ ಎನ್ನುವ ಜೋಕ್ ಚಾಲ್ತಿಯಲ್ಲಿತ್ತು. ಮಂಗನಿಂದ ಮಾನವನಾದ ಮೇಲೆ ಬಾಲ ಮಾಯವಾಗಿದ್ದರೂ ಸೆಂಚುರಿ ಹೊಡೆದ ಮೇಲೆ ಮತ್ತೆ ಬಂದುಬಿಟ್ಟಿದೆಯೇನೋ ಎನ್ನುವ ಜೋಕ್. ಎಲ್ಲದಕ್ಕೆ ಕಾರಣ ಪಟೇಲ್ ಸರ್ "ಬಾಲ" ಎಂದಿದ್ದು. ಮಾಸ್ತರ್ ಮಂದಿ ಏನೇ ಹೇಳಿದರೂ ಅದಕ್ಕೊಂದು ಅನರ್ಥ ಕಲ್ಪಿಸಿ ಇಡೀ ದಿನ ಅದನ್ನೇ ಮತ್ತೆ ಮತ್ತೆ ಹೇಳಿ ನಗುವುದಿದೆಯೆಲ್ಲಾ ಅದರಲ್ಲಿರುವ ಮಜಾ ಅನುಭವಿಸಿದವರಿಗೇ ಗೊತ್ತು. 

ಒಟ್ಟಿನಲ್ಲಿ ವಿನೋದ್ ಕಲ್ಲನಗೌಡರ್ ಎಂಬ 'ಬಾಲ' ಸೆಂಚುರಿ ಹೊಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಆ ದಾಖಲೆ ಇನ್ನೂ ಹಾಗೇ ಇರಬಹುದು. ಮಧ್ಯಾಹ್ನದ ಸೂಟಿಯಲ್ಲಿ ತಿಂಗಳುಗಟ್ಟಲೆ ನಡೆಯುತ್ತಿದ್ದ ಪಂದ್ಯಗಳಲ್ಲಿ ಮೊದಲ ಸೆಂಚುರಿ ದಾಖಲಿಸಿದ ಹೆಮ್ಮೆ ನಮ್ಮ ಬ್ಯಾಚಿಗಿದೆ.ಅದು ಸಾಧ್ಯವಾಗಿದ್ದು ನಮ್ಮ ಬಾಲ ದಾಂಡಿಗ  ವಿನೋದ್ ಸೆಂಚುರಿಗೌಡರ್ ಮೂಲಕ!

4 comments:

sunaath said...

ಸೆಂಚುರಿ ‘ಬಾಲ’ನಿಗೆ ನಮ್ಮಿಂದಲೂ ಹಾರ್ದಿಕ ಅಭಿನಂದನೆಗಳು. ಅದರಂತೆ, ಅವನನ್ನು ಹುರಿದುಂಬಿಸಿದ, ವಿಜೃಂಬಿಸಿದ ಎಲ್ಲ ಮಂಗ್ಯಾಗಳಿಗೂ ಧನ್ಯವಾದಗಳು. Keep it up, Sir!

Mahesh Hegade said...

ತಮ್ಮ ತಮಾಷೆಭರಿತ ಕಾಮೆಂಟಿಗೆ ಧನ್ಯವಾದಗಳು, ಸುನಾಥ್ ಸರ್!

Unknown said...

Baaala anda kudle....hinda yidda...baalana...munda hachchidda nenapa aatu...

Maruti

Mahesh Hegade said...

ಮಾರುತಿಯವರೇ, :) :)

ಬ್ಲಾಗಿಗೆ ಬಂದು ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದಗಳು!!

ನಿಮ್ಮ ಜೋಕ್ ಚಿರಸ್ಮರಣೀಯ! :)