Thursday, October 09, 2014

ವಿಚಿತ್ರ ಗುರುದಕ್ಷಿಣೆ ಕೇಳಿದ್ದ ಮಾಸ್ತರ್ರು!

ಪಾಠ ಮಾಡಿರುವ ಶಿಕ್ಷಕರಲ್ಲಿ ಅನೇಕರು ಬೇರೆ ಬೇರೆ ಕಾರಣಗಳಿಗೆ ನೆನಪಿನಲ್ಲಿರುತ್ತಾರೆ. ಅಂತಹವರಲ್ಲಿ ಒಬ್ಬರು ಡಾ. ದೇವಿ ಪ್ರಸಾದ. BITS, Pilani ಯಲ್ಲಿ ಇಂಜಿನಿಯರಿಂಗ್ ಮಾಡುತ್ತಿರುವಾಗ ನಮ್ಮ ಮಾಸ್ತರರು ಅವರು. ಗಣಿತ ವಿಭಾಗದವರು. ಒಳ್ಳೆ ಶಿಕ್ಷಕರು. ಶಾಂತವಾಗಿ ಬಂದು, ಪಾಠ ಮಾಡುವಷ್ಟು ಮಾಡಿ, ಆಗಾಗ ಒಂದಿಷ್ಟು ಪ್ರಾಕ್ಟಿಕಲ್ ಫಿಲಾಸಫಿ ತಮ್ಮ ಮಜೇದಾರ್ ಶೈಲಿಯಲ್ಲಿ ಝಾಡಿಸಿ, ಬೇಕಾದರೆ ತಮ್ಮನ್ನು ತಾವೇ ಒಂದಿಷ್ಟು ಗೇಲಿ ಮಾಡಿಕೊಂಡು, ಮಜವಾಗಿ ಪಾಠ ಮಾಡುತ್ತಿದ್ದರು ಡಾ. ದೇವಿ ಪ್ರಸಾದ.

ಒಳ್ಳೆ ಟಿಪಿಕಲ್ ಅಜ್ಜನ ಪರ್ಸನಾಲಿಟಿ ದೇವಿ ಪ್ರಸಾದರದ್ದು. ಚಳಿಗಾಲದಲ್ಲಿ ಓವರ್ ಕೋಟ್, ತಲೆ ಮೇಲೊಂದು ಕಾಶ್ಮೀರಿ ಜನರ ಟೊಪ್ಪಿ ಹಾಕಿಕೊಂಡು, ನಿಧಾನವಾಗಿ, absent minded ಆಗಿ, ಏನೋ ಯೋಚಿಸುತ್ತ ಬರುತ್ತಿದ್ದ ಅವರನ್ನು ನೋಡಿದರೇ ಒಂದು ತರಹ ಮಜಾ ಅನ್ನಿಸುತ್ತಿತ್ತು. ಬಂದವರೇ, ಕೈ ಕೈ ತಿಕ್ಕಿ, ಬಿಸಿ ಶಾಖ ಜನರೇಟ್ ಮಾಡಿ, ಬೆಚ್ಚಗೆ ಮಾಡಿಕೊಂಡು, ' ಕಿತ್ನಾ ಥಂಡ್ ಹೈ ಜೀ!' ಅಂತ ಚಳಿಗಾಲದ ಕೊರೆಯುವ ಚಳಿಯ ವರ್ಣನೆ ಮಾಡುತ್ತ, ಚಾಕ್ ಕೈಗೆತ್ತಿಕೊಂಡರೆಂದರೆ ಒಂದು ತಾಸು ಅಮೋಘ ಪಾಠ ಅವರದ್ದು. ಸಣ್ಣ ಅಕ್ಷರಗಳಲ್ಲಿ ಬರೆಯುತ್ತ, ಇಡೀ ದೊಡ್ಡ ಬೋರ್ಡ್ ತುಂಬಿಸುತ್ತಿದ್ದರು. ನಡು ನಡು ಮಜೇದಾರ ಫಿಲಾಸಫಿ.

೧೯೯೨, ಅಕ್ಟೋಬರ್. ಇಂಜಿನಿಯರಿಂಗ್ ಮೂರನೇ ವರ್ಷದ  ಮೊದಲನೇ ಸೆಮಿಸ್ಟರ್. ಅರ್ಧ ಮುಗಿದಿತ್ತು. Numerical Analysis ಅನ್ನುವ ಒಂದು ಕೋರ್ಸ್ ಇತ್ತು. ಎಲ್ಲರಿಗೂ ಕಾಮನ್ ಕೋರ್ಸ್ ಆದ್ದರಿಂದ ಸುಮಾರು ಜನ ಪ್ರೊಫೆಸರಗಳು ಅದನ್ನು ಕಲಿಸುತ್ತಿದ್ದರು. ನಾನಿದ್ದ ವಿಭಾಗಕ್ಕೆ (section) ಇದೇ ಪ್ರೊ. ದೇವಿ ಪ್ರಸಾದರು ಬಂದಿದ್ದರು.

ಒಂದು ದಿವಸ ಕ್ಲಾಸ್ ಮುಗಿಯಿತು. ಕ್ಲಾಸ್ ಮುಗಿದ ನಂತರ ಎಲ್ಲರೂ ಕ್ಲಾಸ್ ರೂಂ ಖಾಲಿ ಮಾಡುವವರೆಗೆ ಕ್ಲಾಸಿನಲ್ಲಿಯೇ ಕೂತಿದ್ದು, ಯಾರದ್ದಾದರೂ ಡೌಟ್ ಏನಾದರೂ ಇದ್ದರೆ ಅದನ್ನು ಬಗೆಹರಿಸಿ, ನಂತರ ನಿಧಾನಕ್ಕೆ ಎದ್ದು, ಅವರ ಪುಸ್ತಕ, ಇತ್ಯಾದಿ ಹೊಂದಿಸಿಕೊಂಡು ಹೋಗುವದು ಪ್ರೊ. ದೇವಿ ಪ್ರಸಾದರ ರೂಢಿ. ಅವತ್ತೂ ಹಾಗೇ ಆಯಿತು.

ನನಗೆ ಏನೋ ಒಂದು ಡೌಟ್ ಬಂತು. ನಾನು ನೋಟ್ಸ್ ಬರೆದುಕೊಳ್ಳುವಾಗ ತಪ್ಪಿದ್ದೆನೋ ಅಥವಾ ಅವರೇ ಒಂದು ಸ್ಟೆಪ್ ಹಾರಿಸಿದ್ದರೋ ಏನೋ. ಡೌಟ್ ಬಗೆಹರಿಸಿಕೊಳ್ಳೋಣ ಅಂತ ಹೋದೆ. ಡೌಟ್ ಅದು ಇದು ಎಂದು ಅದೇ ಮೊದಲ ಸಲ ಅವರನ್ನು ಭೆಟ್ಟಿಯಾಗಿದ್ದು.

ಹೋಗಿ ನಿಂತೆ. 'ಏನು? ಹೇಳಿ,' ಅನ್ನೋ ಲುಕ್ ಕೊಟ್ಟರು ದೇವಿ ಪ್ರಸಾದ್. ಅವರಿಗೆ ಯಾವದೇ ತರಹದ ಬಿಂಕ ಬಿಗುಮಾನ ಇಲ್ಲ. ತುಂಬ ಸುಲಭವಾಗಿ ಹೋಗಿ, ಮಾತಾಡಿಸಬಹುದಾದಂತಹ ವ್ಯಕ್ತಿತ್ವದವರು ಅವರು. Easily approachable.

ನನ್ನ ಡೌಟ್ ಹೇಳಿದೆ. ನನ್ನ ನೋಟ್ ಬುಕ್ ತೋರಿಸಿ, ಏನೋ ಕೇಳಿದೆ.

ನನ್ನ ನೋಟ್ಸ್ ನೋಡುತ್ತ, ಡೌಟ್ ಅರ್ಥ ಮಾಡಿಕೊಂಡ ದೇವಿ ಪ್ರಸಾದ್ ಡೌಟ್ ಕ್ಲಿಯರ್ ಮಾಡುವ ಮೊದಲು ಬೇರೆನೇ ಏನೋ ಮಾತುಕತೆ ಶುರು ಹಚ್ಚಿಕೊಂಡರು.

ಅವರು ಶುದ್ಧ ಹಿಂದಿ ಆಸಾಮಿ. ಕ್ಲಾಸಿನಲ್ಲಿ ಪಾಠ ಮಾಡುವದನ್ನು ಒಂದನ್ನು ಇಂಗ್ಲೀಷಿನಲ್ಲಿ ಬಿಟ್ಟರೆ, ಬಾಕಿ ಮಾತುಕತೆ, ಅವರ ಮಜವಾದ ಉಪದೇಶಗಳು ಎಲ್ಲ ಹಿಂದಿಯಲ್ಲಿಯೇ. ಹಾಗಾಗಿ ಹಿಂದಿಯಲ್ಲಿಯೇ ಶುರು ಹಚ್ಚಿಕೊಂಡರು.

ನನ್ನ ನೋಟ್ ಬುಕ್ ನೋಡುತ್ತ, 'ನೋಟ್ಸ್ ಬಹಳ ಚಂದಾಗಿ, ನೀಟಾಗಿ ಬರೆಯುತ್ತೀರಲ್ಲ? ಬಹಳ ಸಂತೋಷ,' ಅಂತ ಏನೋ ಒಂದು ಪೀಠಿಕೆ ಇಟ್ಟರು. ಮಾಸ್ತರ್ರು ನೋಟ್ಸ್ ಚನ್ನಾಗಿದೆ, ಕೈಬರಹ ಚನ್ನಾಗಿದೆ ಅಂದರೆ ಯಾರಿಗೆ ಖುಷಿಯಾಗುವದಿಲ್ಲ? 'ಹೇ, ಹೇ, ದೊಡ್ಡ ಮಾತು ಸರ್,' ಅನ್ನುವ ರೀತಿಯಲ್ಲಿ ದೇಶಾವರಿ ನಗೆ ನಕ್ಕು, ತರೇವಾರಿ ಬಾಡಿ ಬೆಂಡಿಂಗ್ ಮಾಡಿದೆ. ಯಾರಾದರೂ compliments ಕೊಟ್ಟರೆ, gracefully ಸ್ವೀಕರಿಸಲೂ ಬರದ ಕಾಲ ಅದು.

ಏನೋ ಒಂದು ಲೆವೆಲ್ಲಿಗೆ ಕೈಬರಹ ಚನ್ನಾಗಿತ್ತು ಅನ್ನಿ. ಸಣ್ಣಂದಿನಲ್ಲಿ ಮನೆಯಲ್ಲಿ, ಶಾಲೆಯಲ್ಲಿ ಕೈಬರಹಕ್ಕೆ ತುಂಬ ಪ್ರಾಮುಖ್ಯತೆ ಕೊಟ್ಟು, ವರ್ಷಾನುಗಟ್ಟಲೆ ಕಾಪಿ ತಿದ್ದಿಸಿ, 'ಇಂಕ್ ಪೆನ್ನಲ್ಲಿ ಮಾತ್ರ ಬರೆಯಿರಿ. ಬಾಲ್ ಪಾಯಿಂಟ್ ಪೆನ್ನಿನಲ್ಲಿ ಬರೆದರೆ ಹ್ಯಾಂಡ್ ರೈಟಿಂಗ್ ಹಾಳಾಗುತ್ತದೆ. ಹ್ಯಾಂಡ್ ರೈಟಿಂಗ್ ಚನ್ನಾಗಿದ್ದರೆ ಒಂದೈದು ಮಾರ್ಕ್ಸ್ ಜಾಸ್ತಿಯೇ ಬರುತ್ತದೆ,' ಅಂತೆಲ್ಲ ಹೇಳಿ, ಏನೇನೋ ಮಾಡಿ, ಏನೋ ಒಂದು ರೀತಿಯಲ್ಲಿ ಒಳ್ಳೆ ಹ್ಯಾಂಡ್ ರೈಟಿಂಗ್ ಗೆ ಒಳ್ಳೆ ಬುನಾದಿ ಹಾಕಿ ಕೊಟ್ಟಿದ್ದರು. ಇಂಜಿನಿಯರಿಂಗ್ ಗೆ ಹೋದ ಮೇಲೆ ಅದಕ್ಕೆ ಅಷ್ಟೊಂದು ಮಹತ್ವ ಇರದಿದ್ದರೂ, ಮೊದಲಿನಷ್ಟು ಸುಂದರವಲ್ಲದಿದ್ದರೂ, ತುಂಬ ನೀಟಾಗಿ ಅಂತೂ ಬರಹ ಇರುತ್ತಿತ್ತು. ಅದೇ ಈಗ ಪ್ರೊ. ದೇವಿ ಪ್ರಸಾದರನ್ನು ಇಂಪ್ರೆಸ್ ಮಾಡಿತ್ತು.

'ಅಲ್ಲಾ, ಒಂದು ಕೆಲಸ ಮಾಡ್ತೀಯಾ? ಸೆಮಿಸ್ಟರ್ ಮುಗಿದ ನಂತರ ನಿನ್ನ ನೋಟ್ ಬುಕ್ ನನಗೆ ಕೊಡುತ್ತೀಯಾ? ಪ್ಲೀಸ್,' ಅಂತ ಅಂದು ಬಿಟ್ಟರು ಪ್ರೊಫೆಸರ್ ಸಾಹೇಬರು. ಇವರು ಏನು ಹೇಳುತ್ತಿದ್ದಾರೆ, ಏನನ್ನು ಕೇಳುತ್ತಿದ್ದಾರೆ ಅಂತ ಅರ್ಥವಾಗುವ ಮೊದಲೇ ಮತ್ತೆ ಅವರೇ ಹೇಳಿದರು. 'ನನ್ನ ಕ್ಲಾಸ್ ನೋಟ್ಸ್ ನೋಡು. ತುಂಬ ಹಳೆಯದಾಗಿ ಹೋಗಿದೆ. ಎಲ್ಲ ಹಾಳೆಗಳು ಲಡ್ಡಾಗಿ ಹೋಗಿವೆ. ಅವಸ್ಥೆ ನೋಡಯ್ಯಾ! ಅದಕ್ಕೇ ಮಾರಾಯಾ ನಿನ್ನ ನೋಟ್ಸ್ ಕೊಟ್ಟು ಬಿಡಯ್ಯಾ,' ಅಂತ ಅಂದು ಬಿಡಬೇಕೇ!? ಅದು ದೇವಿ ಪ್ರಸಾದರ ಸರಳತೆ. ಭಿಡೆ ಗಿಡೆ ಇಲ್ಲ. 'ಏಕ್ ಮಾರ್ ದೋ ತುಕಡೆ,' ಶೈಲಿಯಲ್ಲಿ ಮಾತು.

ಏನು ಹೇಳೋಣ? ಮಾಸ್ತರರು ಕೇಳಿದರೆ ಇಲ್ಲ ಅನ್ನಲಿಕ್ಕೆ ಆಗುತ್ತದೆಯೇ? ಅದೂ ಅವರು ಕೇಳಿದ್ದು ಕೇವಲ ನೋಟ್ಸ್. ದ್ರೋಣಾಚಾರ್ಯರು ಏಕಲವ್ಯನನ್ನು ಕೇಳಿದಂತೆ ಬೆರಳನ್ನೇನೂ ಕೇಳಿಲ್ಲವಲ್ಲ?  ಅದೂ ಸೆಮಿಸ್ಟರ್ ಮುಗಿದ ನಂತರ ಕೊಡು ಅಂತ ಕೇಳುತ್ತಿದ್ದಾರೆ. ನನ್ನ ನೋಟ್ಸ್ ಹೆಚ್ಚಾಗಿ ರದ್ದಿಗೆ ಹೋಗುತ್ತಿತ್ತು. ಅದರ ಬದಲಿ ಇವರು ಕೇಳುತ್ತಿದ್ದಾರೆ. ಕೊಟ್ಟರಾಯಿತು ಅಂತ ವಿಚಾರ ಮಾಡಿ, 'ಆಯಿತು ಸಾರ್. ಸೆಮಿಸ್ಟರ್ ಮುಗಿದ ನಂತರ ತಂದು ಮುಟ್ಟಿಸ್ತೀನಿ,' ಅಂತ ಹೇಳಿದೆ.

ಅಷ್ಟಾದ ನಂತರವೇ ನಾನು ಕೇಳಿದ್ದ ಡೌಟ್ ಬಗೆಹರಿಸಲು ರೆಡಿ ಆದರು ಪ್ರೊಫೆಸರ್. ಹಾಕಿಕೊಂಡಿದ್ದ ಕೋಟ್ ಕಿಸೆಯಿಂದ ಕನ್ನಡಕ ತೆಗೆದು, ಮೂಗಿನ ಮೇಲೆ ಏರಿಸಿ, 'ನೋಡೋಣ ಏನು ನಿಮ್ಮ ಡೌಟ್ ಅಂತ. ತೋರಿಸಿ,' ಅನ್ನುತ್ತ ನಾನು ಬರೆದುಕೊಂಡಿದ್ದ ನೋಟ್ಸ್ ನೋಡುತ್ತ, 'ಹಾಂ! ಇಲ್ಲೊಂದು ಸ್ಟೆಪ್ ಮಿಸ್ ಮಾಡಿದ್ದಿರಿ ನೋಡಿ. ಇಲ್ಲಿ ಅದನ್ನು ಹಾಕಿ, ನಂತರ ಮತ್ತೊಂದು ಸ್ಟೆಪ್ ಹಾಕಿ, ಕೆಳಗೆ ತನ್ನಿ. ಅಷ್ಟೇ ಬೇಕಾಗಿದ್ದು, ' ಅಂತ ಅಲ್ಲೇ ಎಲ್ಲ ಬಗೆಹರಿಸಿ ಕೊಟ್ಟರು. ತಮ್ಮ ಪೆನ್ನಿನಿಂದಲೇ ತಿದ್ದಿ, 'ಎಲ್ಲ ಸರಿಯಾಯಿತು ತಾನೇ? any other doubt?' ಅನ್ನೋ ಲುಕ್ ಕೊಟ್ಟು, 'ನಿಮ್ಮಷ್ಟು ಸುಂದರ ಇಲ್ಲ ಬಿಡಿ ನನ್ನ ಬರವಣಿಗೆ,' ಅಂತ ಮತ್ತೆ ನಮ್ಮ ಹ್ಯಾಂಡ್ ರೈಟಿಂಗ್ ತಾರೀಫು ಬೇರೆ ಮಾಡಿದರು. ಹೈಸ್ಕೂಲ್ ಬಿಟ್ಟ ನಂತರ ಹ್ಯಾಂಡ್ ರೈಟಿಂಗ್ ಇಷ್ಟೆಲ್ಲ ಯಾರೂ ಹೊಗಳಿರಲಿಲ್ಲ ಬಿಡಿ.

ಡೌಟ್ ಕ್ಲೀರ್ ಆಯಿತು ಅನ್ನಿ. ಥ್ಯಾಂಕ್ಸ್ ಹೇಳಿ ಹೊರಡಲು ಮುಂದಾದೆ. ಮತ್ತೊಮ್ಮೆ ಸರ್ ನೆನಪಿಸಿದರು. 'ಸೆಮಿಸ್ಟರ್ ಮುಗಿದ ನಂತರ ನಿಮ್ಮ ನೋಟ್ಸ್ ತಂದು ಕೊಡ್ತೀರಿ ತಾನೇ? ಮರಿಬೇಡಿ,' ಅಂತ ಹೇಳಿದರು. 'ಆಯಿತು ಸರ್,' ಅಂತ ಹೇಳಿ ಬಂದೆ. ಅದರ ಬಗ್ಗೆ ಅಷ್ಟೇನೂ ಸೀರಿಯಸ್ ಆಗಿ ವಿಚಾರ ಮಾಡಿರಲಿಲ್ಲ ಬಿಡಿ.

ಡಿಸೆಂಬರ್ ಮಧ್ಯಕ್ಕೆ ಸೆಮಿಸ್ಟರ್ ಮುಗಿಯಿತು. ನಂತರ ಮೂರು ವಾರ ರಜೆ. ಧಾರವಾಡದಲ್ಲಿ ಫುಲ್ ಐಶ್! ಮತ್ತೆ ಜನೇವರಿ ಎರಡನೇ ವಾರದಿಂದ ಮುಂದಿನ ಸೆಮೆಸ್ಟರ್ ಶುರುವಾಗಿಯೇ ಬಿಟ್ಟಿತು. ಅದೆಲ್ಲ ಒಳ್ಳೆ ಒಳ್ಳೆ ಕ್ಲಾಕ್ ವರ್ಕ್ ಇದ್ದಂತೆ. ಸೆಮೆಸ್ಟರ್, ಕ್ಲಾಸುಗಳು, ಟೆಸ್ಟುಗಳು, ಮತ್ತೊಂದು, ಮಗದೊಂದು. ಅವಕ್ಕೆಲ್ಲ ಕೊನೆಯೇ ಇಲ್ಲ. ಇದೆಲ್ಲೆದರ ಮಧ್ಯೆ ಪ್ರೊ. ದೇವಿ ಪ್ರಸಾದರ ನೋಟ್ ಬುಕ್ ಕೋರಿಕೆಯನ್ನು ಮರೆತೇ ಬಿಟ್ಟೆ. ಎಲ್ಲಿಯಾದರೂ ಅವರನ್ನು ಎದುರಿಗೆ ಕಂಡಿದ್ದರೆ ನೆನಪಾಗುತ್ತಿತ್ತೋ ಏನೋ. ಅವರೂ ಕಾಣಲಿಲ್ಲ. ಅವರ ಗಣಿತ ವಿಭಾಗ, ಅದರಲ್ಲಿ ಅವರ ಸ್ಟಾಫ್ ರೂಂ ಎಲ್ಲ ಕ್ಯಾಂಪಸ್ಸಿನ ಒಂದು ಮೂಲೆಯಲ್ಲಿತ್ತು. ನಮಗೆ ಆಕಡೆ ಹೋಗುವ ಜರೂರತ್ತು ಮುಂದಿನ ಸೆಮೆಸ್ಟರ್ ನಲ್ಲಿ ಇರಲಿಲ್ಲ.

ಮುಂದೆ ಸ್ವಲ್ಪ ದಿವಸದ ನಂತರ ಒಬ್ಬ ದೋಸ್ತ ಭೆಟ್ಟಿಯಾಗಿದ್ದ. ಭೆಟ್ಟಿ ಸದಾ ಆಗುತ್ತಿದ್ದ. ಅದೇ ಹಾಸ್ಟೆಲ್ ಮೆಸ್ಸಿನಲ್ಲಿ. ಮುದ್ದಾಂ ನಿಲ್ಲಿಸಿ ಮಾತಾಡಿಸಿದ್ದು ಆವತ್ತಿನ ವಿಶೇಷ.

'ಏನು ಮಹೇಶ್, ದೇವಿಪೀಗೆ ಸಕತ್ ಟೋಪಿ ಹಾಕಿದ ಹಾಗಿದೆ!!??' ಅಂದು ಬಿಟ್ಟ. ಕಿಚಾಯಿಸೋ ಹಾಗೆ ಪೆಕಪೆಕಾ ನಕ್ಕ.

ದೇವಿಪೀ (Devi P) ಅಂದರೆ ದೇವಿ ಪ್ರಸಾದ್ ಅಂತ.

ಏನೋ TK ಜಾಸ್ತಿಯಾಗಿ ಸುಮ್ಮನೆ ಕಾಲೆಳೆಯುತ್ತಿರಬೇಕು ಅಂತ ಅಂದುಕೊಂಡು, ನಾನೂ ಸುಮ್ಮನೆ ನಕ್ಕು, ಅವನ ಬೆನ್ನಿಗೊಂದು ಲೈಟಾಗಿ ಗುದ್ದಿ ಹೊರಟೆ. ತಡೆದು ನಿಲ್ಲಿಸಿದ.

'ಏ, ಜೋಕ್ ಅಲ್ಲ ಮಾರಾಯಾ. ಇವತ್ತು ಕ್ಲಾಸ್ ಮುಗಿದ ನಂತರ ಪಾಪ ಅಳ್ತಾ ಇದ್ದಾ ದೇವಿಪೀ' ಅಂದ ದೋಸ್ತ್.

Numerical Analysis ಅನ್ನುವ ಕೋರ್ಸ್ ಎಲ್ಲರಿಗೂ ಕಾಮನ್ ಕೋರ್ಸ್ ಆಗಿತ್ತು. ಅರ್ಧ ಜನ ವಿದ್ಯಾರ್ಥಿಗಳು, ನಮ್ಮ ಹಾಗೆ, ಮೂರನೇ ವರ್ಷ ಮೊದಲ ಸೆಮಿಸ್ಟರ್ ನಲ್ಲಿ ಮಾಡಿದ್ದರೆ, ಉಳಿದರ್ಧ ಜನ ಎರಡನೇ ಸೆಮಿಸ್ಟರ್ ನಲ್ಲಿ ಮಾಡುತ್ತಿದ್ದರು. ಈಗ ಮಾತಾಡುತ್ತಿದ್ದ ದೋಸ್ತ್ ಎರಡನೇ ಸೆಮಿಸ್ಟರ್ ಒಳಗೆ ಮಾಡುತ್ತ ಇದ್ದ. ದೇವಿ ಪ್ರಸಾದ್ ಮತ್ತೆ ಅದೇ ಪಾಠ ಮಾಡುತ್ತಿದ್ದರು.

'ಏನಯ್ಯಾ ನಿನ್ನ ಗೋಳು? ದೇವಿಪೀ, ಟೋಪಿ ಅಂತ ಏನೇನೋ ಹೇಳ್ತೀಯಾ?' ಅಂತ ಝಾಡಿಸಿದೆ.

'ಏನು ಹೀರೋ ಸಾಹೇಬರು ದೇವಿಪೀಗೆ ಏನೋ ಕೊಡ್ತೀನಿ ಅಂತ ಹೇಳಿ ಬಂದು ಇನ್ನೂ ಕೊಟ್ಟೇ ಇಲ್ಲವಂತೆ? 'ಲಾಸ್ಟ್ ಸೆಮಿಸ್ಟರ್ ನ ಸ್ಟೂಡೆಂಟ್ ಒಬ್ಬ ನೋಟ್ಸ್ ಕೊಡ್ತೀನಿ ಅಂತ ಹೇಳಿದ್ದ. ಇನ್ನೂ ತಂದು ಕೊಟ್ಟೇ ಇಲ್ಲ,' ಅಂತ ಈಗ ಎರಡು ಕ್ಲಾಸ್ ಆಯಿತು ದೇವಿಪೀ ಬೊಂಬಡಾ ಹೊಡಿತಾ ಇದ್ದಾನೆ. ಹೀಗಾ ಮಾಡೋದು?ಹಾಂ!?' ಅಂತ ಮತ್ತೆ ಕಿಚಾಯಿಸಿದ ದೋಸ್ತ.

ಆವಾಗ ನೆನಪಾಯಿತು. ಕೆಲ ತಿಂಗಳ ಹಿಂದೆ ದೇವಿ ಪ್ರಸಾದ್ ಹತ್ತಿರ ಡೌಟ್ ಕೇಳೋಕೆ ಹೋಗಿದ್ದು, ನೋಟ್ಸ್ ನೋಡಿ, ಸಿಕ್ಕಾಪಟ್ಟೆ ತಾರೀಫ್ ಮಾಡಿ, ಸೆಮಿಸ್ಟರ್ ಮುಗಿದ ನಂತರ ಅವರಿಗೆ ಕೊಡುವಂತೆ ಕೇಳಿಕೊಂಡಿದ್ದು, ಆಯಿತು ಅಂತ ಹೇಳಿ ಬಂದಿದ್ದು. ಎಲ್ಲ ಫುಲ್ ನೆನಪಾಯಿತು.

'ಅಬೇ ಸಾಲೇ, ನಿನಗೆ ಹೇಗೆ ಗೊತ್ತಾಯಿತು ದೇವಿಪೀ ನನ್ನನ್ನೇ ಕುರಿತು ಮಾತಾಡುತ್ತಿದ್ದರು?' ಅಂತ ಕೇಳಿದೆ.

'ದೇವಿ ಪ್ರಸಾದ್ ಚಹರಾಪಟ್ಟಿ ಎಲ್ಲ ಹೇಳಿದ ಮಾರಾಯಾ. ಬರೋಬ್ಬರಿ ನಿನಗೇ ಫಿಟ್ ಆಗೋ ಚಹರಾಪಟ್ಟಿ ಹೇಳಿದ ನೋಡು.  'ಭಯಂಕರ ಸುಂದರ ಹ್ಯಾಂಡ್ ರೈಟಿಂಗ್, ಸಿಕ್ಕಾಪಟ್ಟೆ ನೀಟಾಗಿ ನೋಟ್ಸ್ ಬರೆದುಕೊಳ್ಳುತ್ತಿದ್ದ,' ಅಂತೆಲ್ಲ ಹೇಳಿ, ಒಂದು ಹತ್ತು ನಿಮಿಷ, ತನ್ನ ಹಳೆ, ಲಡ್ಡಾದ ನೋಟ್ಸ್ ತೋರಿಸುತ್ತ, 'ನೋಡಿ ನನ್ನ ನೋಟ್ಸ್ ಎಷ್ಟು ಲಡ್ಡಾಗಿ ಹೋಗಿವೆ. ಅವನ ನೋಟ್ಸ್ ಕೊಡ್ತೀನಿ ಅಂದಿದ್ದ. ಪತ್ತೇನೇ ಇಲ್ಲ. ಆ ಹುಡಗ ಎಲ್ಲಾದರೂ ಸಿಕ್ಕರೆ, ನೋಟ್ಸ್ ಸ್ವಲ್ಪ ತಂದು ಕೊಟ್ಟು ಹೋಗೋಕೆ ಹೇಳಿ. ನನ್ನ ಪ್ರಾರಬ್ಧ ಅಂದರೆ ಅವನ ಹೆಸರೂ ನೆನಪಿಲ್ಲ,' ಅಂತ ಅಲವತ್ತುಕೊಂಡ ದೇವಿಪೀ. ಹೋಗಿ ನೋಟ್ಸ್ ಕೊಟ್ಟು ಬಾರಯ್ಯ. ಎಷ್ಟೊಂದು ಮಿಸ್ ಮಾಡಿಕೊಳ್ತಾ ಇದಾರೆ ಅವರು. ಒಳ್ಳೆ ಗಿರಾಕಿ ನೀನು,' ಅಂತ ಫ್ರೆಂಡ್ ಮತ್ತೂ ಕಿಚಾಯಿಸಿದ.

ಈ ಫ್ರೆಂಡ್ ಸಹಿತ ಸುಮಾರು ಸಲ ನನ್ನ ನೋಟ್ಸ್ ಜೆರಾಕ್ಸ್ ಮಾಡಿಸಿದ್ದ. ಬೇರೆ ಬ್ರಾಂಚ್ ಆದರೂ ಒಳ್ಳೆ ಪರಿಚಯವಿತ್ತು. ದೇವಿಪೀ ಹೇಳಿದ ಚಹರಾಪಟ್ಟಿ, ಒಳ್ಳೆ ಹ್ಯಾಂಡ್ ರೈಟಿಂಗ್ ವರ್ಣನೆ ಇತ್ಯಾದಿ ಕೇಳಿ, ನಾನೇ ಇರಬೇಕು ಅಂತ ಒಂದು ಬಾಣ ಕತ್ತಲಲ್ಲಿ ಬಿಟ್ಟಿದ್ದ. ಅದು ನಿಜವೇ ಆಗಿತ್ತು.

ಮತ್ತೇನು? ಇನ್ನು ತಡ ಮಾಡಬಾರದು ಅಂತ ವಿಚಾರ ಮಾಡಿದೆ. ಮರುದಿವಸ ಕ್ಯಾಂಪಸ್ಸಿನ ಒಂದು ಮೂಲೆಯಲ್ಲಿದ್ದ ಗಣಿತ ವಿಭಾಗಕ್ಕೆ ಹೋಗಿ, ಅದರಲ್ಲಿ ಮೂಲೆಯಲ್ಲಿದ್ದ  ದೇವಿ ಪ್ರಸಾದರ ಆಫೀಸ್ ಹುಡುಕಿದೆ. ಸರ್ ಇಲ್ಲದಿದ್ದರೆ, ತಲೆ ಬಿಸಿಯಿಲ್ಲದೆ, ಬಾಗಿಲಿನ ಕೆಳಗಿನ ಸಂದಿಯಲ್ಲಿ ನೋಟ್ ಬುಕ್ ನೂಕಿ ಬಂದರಾಯಿತು ಅಂತ ಅಂದುಕೊಂಡಿದ್ದೆ. ದೇವಿ ಪ್ರಸಾದ್ ಸ್ಟಾಫ್ ರೂಮಿನಲ್ಲೇ ಇದ್ದರು. ನನ್ನ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿಬಿಟ್ಟರು. 'ಕಿದರ್ ಗಾಯಬ್ ಹೋ ಗಯೇ ಥೇ ಆಪ್? (ಎಲ್ಲಿ ಕಳೆದು ಹೋಗಿದ್ದಿರಿ ನೀವು?)' ಅನ್ನುತ್ತ ಚೇರ್ ಬಿಟ್ಟು, ಶೇಕ್ ಹ್ಯಾಂಡ್ ಮಾಡಲಿಕ್ಕೆ ಎದ್ದು ಬಂದೇ ಬಿಟ್ಟರು ಮಾಸ್ತರ್ರು. ಕೈಕುಲುಕಿ, ಬೆನ್ನು ತಟ್ಟಿದರು. ಮಸ್ತ್ ಅನ್ನಿಸಿತು. ಅವರು ಕೇಳುವ ಮೊದಲೇ ಹಳೆ ನೋಟ್ ಬುಕ್ ಸರ್ ಕೈಯಲ್ಲಿಟ್ಟೆ. 'ಒಪ್ಪಿಸಿಕೊಳ್ಳಿ ಸರ್!' ಅನ್ನೋ ಲುಕ್ ಕೊಟ್ಟೆ. ಸರ್ ಫುಲ್ ಖುಷ್. ಮತ್ತೊಮ್ಮೆ ತಮ್ಮ ಲಡ್ಡಾದ ನೋಟ್ಸ್ ಬಗ್ಗೆ ಕೊರೆದು, ಸಿಕ್ಕಾಪಟ್ಟೆ ಥ್ಯಾಂಕ್ಸ್ ಹೇಳಿ, ಒಳ್ಳೆದಾಗಲಿ ಅಂದರು. ಆ ಸೆಮಿಸ್ಟರ್ ಬಗ್ಗೆ ಕೇಳಿದರು. 'ಕ್ಯಾಂಪಸ್ ಇಂಟರ್ವ್ಯೂ ಆಯಿತಾ?' ಅಂದರು. 'ಸರ್, ನಾನು ಇನ್ನೂ ಥರ್ಡ್ ಇಯರ್. ಕ್ಯಾಂಪಸ್ ಇಂಟರ್ವ್ಯೂ ಎಲ್ಲ ಮುಂದಿನ ವರ್ಷ ಸರ್,' ಅಂತ ವಿವರಿಸಿದೆ. 'ಓಹೋಹೋ! ಸರಿ ಸರಿ,' ಅಂದರು ಸರ್. ಟಿಪಿಕಲ್ absent minded ಪ್ರೊಫೆಸರ್ ದೇವಿ ಪ್ರಸಾದ್. ಮತ್ತೊಮ್ಮೆ ನಮಸ್ಕಾರ ಹೇಳಿ ಬಂದೆ.

ಅದೇ ಕೊನೆಯಿರಬೇಕು. ಮತ್ತೆ ದೇವಿ ಪ್ರಸಾದರನ್ನು ಭೆಟ್ಟಿಯಾಗುವ ಸಂದರ್ಭ ಬರಲಿಲ್ಲ. ಮುಂದಿನ ಒಂದು ವರ್ಷದಲ್ಲಿ ಕ್ಯಾಂಪಸ್ಸಿನಲ್ಲಿ ಅಲ್ಲಿ ಇಲ್ಲಿ ಎಲ್ಲೋ ದೂರದಲ್ಲಿ ನೋಡಿರಬೇಕು ಅಷ್ಟೇ.

ಕಳೆದ ತಿಂಗಳ ಶಿಕ್ಷಕ ದಿನಾಚರಣೆ ದಿನ (ಸೆಪ್ಟೆಂಬರ್, ೫) ಎಲ್ಲರೂ ತಮ್ಮ ತಮ್ಮ ನೆಚ್ಚಿನ ಶಿಕ್ಷಕರಿಗೆ, ಗುರುಗಳಿಗೆ, ಫೇಸ್ ಬುಕ್ ಮೇಲೆ ಅಲ್ಲಿ ಇಲ್ಲಿ, ತಮ್ಮ ನಮನ, ಶುಭಾಶಯ ಎಲ್ಲ ಹೇಳುತ್ತಿದ್ದಾಗ ಇದೆಲ್ಲ ನೆನಪಾಯಿತು. ಬಾಲವಾಡಿಯಿಂದ ಹಿಡಿದು ಮಾಸ್ಟರ್ ಡಿಗ್ರಿ ಮುಗಿಯುವ ತನಕ ಅದೆಷ್ಟು ಜನ ಶಿಕ್ಷಕರು ಪಾಠ ಮಾಡಿದರೋ ಏನೋ. ಕಮ್ಮಿ ಕಮ್ಮಿ ಅಂದರೂ ಎರಡನೂರು ಚಿಲ್ಲರೆ ಮಾಸ್ತರ್ರು. ಆದರೆ 'ಹಳೆ ನೋಟ್ ಬುಕ್ ಕೊಡು,' ಅಂತ ವಿಚಿತ್ರ ಗುರು ದಕ್ಷಿಣೆ ಕೇಳಿದ್ದ ಪ್ರೊ. ದೇವಿ ಪ್ರಸಾದ್ ಆಗಾಗ ನೆನಪಾಗುತ್ತಲೇ ಇರುತ್ತಾರೆ. ಇನ್ನೂ ಆರೇಳು ಶಿಕ್ಷಕರು ಬೇರೆ ಬೇರೆ ಚಿತ್ರ ವಿಚಿತ್ರ ಕಾರಣಗಳಿಗೆ ನೆನಪಾಗುತ್ತಾರೆ. ಮತ್ತೆ ಬರೆಯೋಣ ಅವರುಗಳ ಬಗ್ಗೆ ಕೂಡ.

ಈಗ ಎಲ್ಲಿದ್ದಾರೋ ಏನೋ ದೇವಿ ಪ್ರಸಾದ್? ಆಗಲೇ ಅವರಿಗೆ ಅರವತ್ತರ ಹತ್ತಿತ್ತರಾಗಿತ್ತು. ಇನ್ನೂ ಇದ್ದರೆ ಆರಾಮ್ ಇರಲಿ. ಇಲ್ಲದಿದ್ದರೆ ಆತ್ಮಕ್ಕೆ ಚಿರಶಾಂತಿ ಸಿಗಲಿ. Belated teachers' day greetings, Sir!

ದೇವಿ ಪ್ರಸಾದರನ್ನು ಇಂಟರ್ನೆಟ್ ಮೇಲೆ ಹುಡುಕಿದಾಗ ಅವರು ಬರೆದ ಪುಸ್ತಕಗಳ ಲಿಂಕ್ ಸಿಕ್ಕಿತು. ಆವಾಗ ನೆನಪಾಯಿತು. ಆ Numerical Analysis ಕೋರ್ಸಿನ ಟೆಕ್ಸ್ಟ್ ಬುಕ್ ಅವರೇ ಬರೆದಿದ್ದರು. ಟೆಕ್ಸ್ಟ್ ಬುಕ್  ಬರೆದರೇನಾಯಿತು? Problems & Solutions  ತಾನೇ ಮುಖ್ಯವಾಗಿ ಬೇಕಾಗಿದ್ದು? ಅದೆಲ್ಲ ಅವರ ಹಳೇ ಲಡ್ಡಾಗಿ ಹೋಗಿದ್ದ ನೋಟ್ಸ್ ನಲ್ಲಿ ಇತ್ತು. ಅದರ replacement ಸಲುವಾಗಿ ನನ್ನ ನೋಟ್ ಬುಕ್ ಕೇಳಿದ್ದರು ಮಾಸ್ತರ್ರು.

ಇಲ್ಲಿವೆ ನೋಡಿ ಗಣಿತ ವಿಭಾಗದವರು ಪ್ರಕಟಿಸಿದ್ದ ಪುಸ್ತಕಗಳು. ಮೊದಲಿನೆರೆಡು ದೇವಿ ಪ್ರಸಾದ್ ಬರೆದಿದ್ದ ಪುಸ್ತಗಳು. ಪುಸ್ತಕಗಳ ಪಟ್ಟಿ ನೋಡುತ್ತ ಹೋದಂತೆ ಗಣಿತ ವಿಭಾಗದ ಅತಿರಥ ಮಹಾರಥರೆಲ್ಲ ನೆನಪಾದರು. ಅವರಲ್ಲಿ ಸುಮಾರು ಜನ ನಮಗೆ ಪಾಠ ಮಾಡಿಯೂ ಇದ್ದರು. ಈಗ ೨೫ ವರ್ಷಗಳ ನಂತರ ಯಾರೂ ಇರಲಿಕ್ಕಿಲ್ಲ ಬಿಡಿ. ಪುಸ್ತಕಗಳು ಮಾತ್ರ ಇರುತ್ತವೆ. ಎಲ್ಲರಿಗೂ ಒಂದು ನಮನ.

ದೇವಿ ಪ್ರಸಾದ್ ನನ್ನ ನೋಟ್ಸ್ ಅದ್ಯಾವ ಪರಿ ಲೈಕ್ ಮಾಡಿದ್ದರು ಅಂದರೆ ಅದನ್ನು Numerical Analysis ಪಾಠ ಮಾಡುವ ಅವರ ಜೂನಿಯರ್ ಕಲೀಗ್ ಯಾರಿಗಾದರೂ ಕೊಟ್ಟು ಹೋಗಿರಬಹುದೇ? ಅಂತ ಒಂದು ಡೌಟ್. ಚಿಕ್ಕ ಆಸೆ. ಹಾಗೇನಾದರೂ ಕೊಟ್ಟು ಹೋಗಿ, ಆ ನೋಟ್ಸ್ ಇನ್ನೂ ಚಲಾವಣೆಯಲ್ಲಿ ಇದ್ದಿದ್ದೇ ಆದರೆ ಕೈಬರಹವನ್ನು ಆಪರಿ ತಿದ್ದಿ, ತೀಡಿ, ಸುಂದರಗೊಳಿಸಿದ್ದ ಮೊದಲಿನ ಶಿಕ್ಷಕರಿಗೆಲ್ಲ ನಮೋ ನಮಃ!

ದೇವಿ ಪ್ರಸಾದ್ ಅಲ್ಲ! ಸ್ವಲ್ಪ ಹೀಗೇ ಇದ್ದರು. ಪೆದ್ಪೆದ್ದ ಲುಕ್! :)

7 comments:

Vimarshak Jaaldimmi said...


Excellent tribute!

Lohith Devadiga said...

Dear Mahesh,

Simply amazing and interesting, infact I was mesmerized and taken back to my School and College memories.

Offcourse, I cannot blog like you but certainly gave a feel of past memories.

Hats Off

Mahesh Hegade said...

Thank you very much, Lohith.

angadiindu said...

ಕೆಸಿಡಿಯೊಳಗ ಬೆನಕನಹಳ್ಳಿ ಸರ್ ಅಂತಾ ಗಣಿತದ ಲಕ್ಚರರ್ ಒಬ್ಬರಿದ್ದರು. ಅವರು ನೆನಪಾದರು. ಭಾಳಾ ಸಿಂಪಲ್ ಮಾಸ್ತರ್.ನೀವು ಕಲಿಯುವಾಗಲೂ ಇದ್ದರಾ ? ಅಥವಾ ರಿಟೈರ್ ಆಗಿದ್ರಾ ?

Mahesh Hegade said...

ಅಂಗಡಿಯವರೇ,

ಹೌದು. ಬೆನಕನಹಳ್ಳಿ ಹಳ್ಳಿ ಸರ್. ನಾವು ಕಲಿಯುವಾಗಲೂ ಇದ್ದರು. ನಮಗೆ ಸೆಕೆಂಡ್ ಪಿಯುಸಿ ನಲ್ಲಿ ಕಲಿಸಿದ್ದರು.

Anonymous said...

ತುಂಬಾ ಸುಂದರವಾದ ನಿರೂಪಣೆಯೊಂದಿಗೆ ನಿಮ್ಮ ನೆನಪುಗಳನ್ನು ಮೆಲುಕು ಹಾಕಿದ್ದೀರಿ..
(ಇವತ್ತಷ್ಟೇ ನಿಮ್ಮ ಬ್ಲಾಗ್ ಗೆ ಎಂಟ್ರಿ ಕೊಟ್ಟಿದ್ದೇನೆ.
ಈಗಾಗಲೇ 'ಗಾಗಿ ಮತ್ತು ಸೂಪರ್ ಮ್ಯಾನ್ (ಗುಲ್ಜಾರ್ ಹೇಳಿದ ಕಥೆ)' ಓದಿದೆ. ಅದೂ ತುಂಬ ಸುಂದರವಾಗಿತ್ತು. ಅದರ ನಂತರ ಇದೇ ಎರಡನೇದಾಗಿ ಓದ್ತಾ ಇದ್ದೇನೆ.
ಸಮಯ ಸಿಕ್ಕಾಗಲೆಲ್ಲಾ ಇನ್ನು ಬರುತ್ತಾ ಇರುತ್ತೇನೆ. )

-Ram

Mahesh Hegade said...

ತುಂಬಾ ಧನ್ಯವಾದ, ರಾಮ್ ಅವರೇ.