Sunday, May 03, 2015

ಮಹಿಳಾ ತಬಲೀಕರಣ, ಲಿಂಗ ಸಾಮಾನಂತೆ, ಗೌಡರ ಗದ್ದಲ

(ಮಹಿಳಾ ಸಬಲೀಕರಣ, ಲಿಂಗ ಸಮಾನತೆ ಮುಂತಾದ ಸಮಕಾಲೀನ ವಿಷಯಗಳನ್ನು ನಮ್ಮ ಪ್ರೀತಿಯ ಗೌಡರು ಅವರದ್ದೇ ಆದ ಜವಾರಿ ರೀತಿಯಲ್ಲಿ ವಿನೂತನವಾಗಿ ವಿಶ್ಲೇಷಿಸಿ, ಹೊಸ ಹೊಸ ವಿಚಾರಗಳನ್ನು ತಿಳಿಸಿದ್ದಾರೆ. ಗೌಡರ ಗದ್ದಲದ ಹೊಸ ಪ್ರಯೋಗ)

ಮೊನ್ನೆ ನಮ್ಮ ಗೌಡರನ್ನ ಭೆಟ್ಟಿಯಾಗಿ ಬಂದೆ. ಧಾರವಾಡ ಕಡೆ ಹೋದಾಗೆಲ್ಲ ಅವರನ್ನು ಭೆಟ್ಟಿ ಮಾಡೇ ಬರೋದು. ಅದು ಪದ್ಧತಿ. ಅಲ್ಲೇ ಸ್ವಲ್ಪ ದೂರದ ಹಳ್ಳಿಯೊಳಗ ಇರ್ತಾರ. ಬಸಲಿಂಗಗೌಡ ಪರ್ವತಗೌಡ ಪಾಟೀಲ ಅಂತ ಅವರ ಪೂರ್ತಿ ಹೆಸರು. ಊರಿಗೆ ಅವರೇ ದೊಡ್ಡ ಮಂದಿ. ನಮ್ಮ ಕುಟುಂಬಕ್ಕೆ ಭಾಳ ಆಪ್ತ.

ಅವರ ಊರಿಗೆ ಹೋದೆ. ಸೀದಾ ಅವರ ಮನಿಗೇ ಹೋದೆ. ಗೌಡರು ಜಳಕಾ ಗಿಳಕಾ ಮಾಡಿ, ಶಿಸ್ತಾಗಿ, ಗರಿಗರಿ ಅರವಿ ಹಾಕ್ಕೊಂಡು, ಮನಿ ಹೊರಗಿನ ದೊಡ್ಡ ಕಟ್ಟಿ ಮ್ಯಾಲೆ, ಮಸ್ತ ಖುರ್ಚಿ ಮ್ಯಾಲೆ ಒಳ್ಳೆ ಮಹಾರಾಜಾನ ಗತೆ ಕೂತಿದ್ದರು. ಅದು ಅವರ ಸ್ಟೈಲ್. ಏನು ಗತ್ತು! ಗಮ್ಮತ್ತು! ಅಬಬಬಾ! ಒಳ್ಳೆ ರಾಜರ ಠೀವಿ. ದೊಡ್ಡ ಹಳದಿ ರುಮಾಲು ಸುತ್ತಿಗೊಂಡು, ಗುಡುಗುಡಿ (ಹುಕ್ಕಾ) ಸೇದಿಕೋತ್ತ ಆರಾಮ ಕೂತಿದ್ದರು. ಸಣ್ಣ ಊರಿಗೆ ದೊಡ್ಡ ಗೌಡರು ಅಂದರೆ ಕೇಳಬೇಕೇ! ಮಸ್ತ ಲೈಫ್!

'ನಮಸ್ಕಾರೀ ಗೌಡ್ರ. ಆರಾಮ್ರೀ?' ಅಂದೆ.

'ಅಯ್ಯ! ನಮ್ಮ ಧಾರವಾಡದ ಮಂಗೇಶಪ್ಪ! ಬಾರಲೇ ತಮ್ಮಾ ಬಾರೋ. ಎಷ್ಟ ವರ್ಷಾತು ನಿನ್ನ ನೋಡಿ. ಹಾಂ? ಪ್ರತಿ ವರ್ಷ ಧಾರವಾಡಕ್ಕೆ ಬರ್ತೀಯಂತ. ಇಲ್ಲಿ ಮಟಾ ಬಂದು ಗೌಡರನ್ನು ಮಾತ್ರ ಭೆಟ್ಟಿಯಾಗೋದಿಲ್ಲ ನೋಡು ನೀ ಹುಡುಗಾ. ಒಬ್ಬನೇ ಬಂದೀ? ನಿಮ್ಮಪ್ಪಾ, ಆವಾ ನಮ್ಮ ಸಾಲಿ ದೋಸ್ತ, ಎಲ್ಲೆ? ಅಕ್ಕಾರು ಅಂದ್ರ ನಿಮ್ಮ ಅವ್ವಾರು?' ಅಂತ ಭಾರಿ ಪ್ರೀತಿಯಿಂದ ಕ್ಷೇಮ ಎಲ್ಲ ವಿಚಾರಿಸಿಕೊಂಡರು ಗೌಡರು. ಭಾಳ ಬೆಣ್ಣಿ ಮನಸ್ಸಿನ ಮಂದಿ. ಹೊರಗಿಂದ ಅಷ್ಟ ಭಾಳ ಖಡಕ್.

'ಇಲ್ಲರೀ ಗೌಡ್ರ. ಹಾಂಗೇನೂ ಇಲ್ಲರೀ. ನಾ ಒಬ್ಬನೇ ಬಂದೆ. ಅಪ್ಪಾರು, ಅವ್ವಾರು ಎಲ್ಲ ಏನೋ ಬ್ಯಾರೆ ಕೆಲಸದಾಗ ಇದ್ದರು. ಅವರೇನು, ಇಲ್ಲೇ ಧಾರವಾಡ ಒಳಗೇ ಇರ್ತಾರ ತೊಗೋರಿ. ಮತ್ತ ಯಾವಾಗರ ಬರ್ತಾರ. ಅಥವಾ ನೀವೇ ಆಕಡೆ ಹೋದಾಗ ಭೆಟ್ಟಿಯಾಗಿ ಬರ್ರಿ,' ಅಂತ ಹೇಳಿದೆ.

'ಹೂಂ! ಹೂಂ! ಹಾಂಗೇ ಮಾಡೋಣ,' ಅಂದ ಗೌಡ್ರು, 'ಏ! ಯಾರದೀರಿ ಅಲ್ಲೆ? ನಮ್ಮ ಹೆಗಡೆಯವರ ಹುಡುಗ ಬಂದೈತಿ. ಛಾ, ನಾಷ್ಟಾ ಅದು ಇದು ತರ್ರಿ. ಮತ್ತ ಆವಾ ಇಲ್ಲೆ ಎರಡು ದಿವಸ ಇದ್ದು ಹೋಗವಾ. ಎಲ್ಲಾ ತಯಾರಿ ಮಾಡ್ರಿ ಬೇ!' ಅಂತ ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೇಳಿದರು. ಹೋಗ್ಗೋ! ನಾ  ಹೀಂಗ ಬಂದು ಹಾಂಗ ಹೋಗೋಣ ಅನ್ನೋದ್ರಾಗ ಇವರದ್ದು ಎರಡು ದಿವಸ ಉಳಿಸಿಕೊಳ್ಳೋ ಮಟ್ಟದ ಆತಿಥ್ಯ. ಇದು ಭಾಳೇ ಆತು.

'ನಮಸ್ಕಾರೀ ಅಣ್ಣಾರ! ಎಲ್ಲ ಆರಾಮರೀ?' ಅನ್ನುತ್ತ ಒಂದಿಷ್ಟು ಮಂದಿ ಇಳಕಲ್ ಸೀರಿ ಉಟ್ಟಿದ್ದ ಲಲನೆಯರು ಬಂದು ಛಾ, ನಾಷ್ಟಾ, ನೀರು ಅದು ಇದು ಕೊಟ್ಟರು. ಎಲ್ಲರೂ ನಮಗಿಂತ ದೊಡ್ದವರೇ ಇರಬೇಕು. ಆದರೂ ನಾವು ಅಣ್ಣಾರು. ನಾವೂ ಅದಕ್ಕೇ, 'ನಮಸ್ಕಾರೀ ಅಕ್ಕಾರ. ನೀವ್ರೀ? ಆರಾಮ್ರೀ?' ಅಂತ ಕೇಳಿ ನಾಷ್ಟಾ, ಛಾ ಅದು ಇದು ಗುಳುಂ ಮಾಡೋದರ ಕಡೆ ಗಮನ ಹರಿಸಿದಿವಿ.

ನಾಷ್ಟಾ ಮುಗಿಸಿ ಕೂತರೆ ಗೌಡರದ್ದು ಬೇಜಾನ್ ಮಷ್ಕಿರಿ. 'ಏನ್ ಹುಡುಗಾ? ಗುಡುಗುಡಿ ಸೇದ್ತೀಯೇನೋ? ಹೊಡಿ ಒಂದು ದಮ್ ಬೇಕಾದ್ರ! ಅಥವಾ ಫ್ರೆಶ್ ಗಜೇಂದ್ರಗಡ ತಂಬಾಕೈತಿ. ಬೇಕಾದ್ರ ಒಂದು ಮನಗಂಡ ಎಲಿ ಅಡಿಕಿ, ನಿಮ್ಮ ಭಾಷಾದಾಗ ಕವಳ, ಹಾಕೋ! ಚೈನಿ ಮಾಡಲೇ ನಿಮ್ಮಾಪನ ಚೈನಿ ಮಾಡಲೇ. ಬರೇ ಕತ್ತಿ ಗತೆ ದುಡಕೋತ್ತ ಕುಂತ್ರ ಏನು ಉಪಯೋಗ?' ಅಂತ ಗೌಡರು ಆಗ್ರಹ ಮಾಡಿದರು. ಅವರು ಬಿಡ್ರೀ. ಭಾಳ ಚೈನಿ ಮಾಡುವ ಮಂದಿ. ಮಾಡಿ ದಕ್ಕಿಸಿಕೊಳ್ಳುವಂತಹ ಆರೋಗ್ಯ ಸಹಿತ ಇಟ್ಟಾರ. ಪುಣ್ಯಾ ಮಾಡಿದವರು. ನಮ್ಮ ಗತೆ ಅಲ್ಲ. ನಮಗ 'ತೀರ್ಥ ತೊಗೊಂಡ್ರ ಶೀತ, ಆರತಿ ತೊಗೊಂಡ್ರ ಉಷ್ಣ' ಅನ್ನೋ ಪರಿಸ್ಥಿತಿ. ಅದಕ್ಕೇ, 'ಏ! ಅವೆಲ್ಲಾ ನಮಗ ಒಗ್ಗೋದಿಲ್ಲರೀ ಗೌಡ್ರ. ಬರೇ ಛಾ, ನಾಷ್ಟಾ ಅಷ್ಟೇ ಸಾಕು,' ಅಂದು ಸುಮ್ಮ ಕೂತೆ. 'ಅವನೌನ್! ಇನ್ನೂ ಮುಂಜಾನೆ ಹತ್ತು ಮಾತ್ರ ಹೊಡೆಯಾಕತ್ತೈತಿ. ಇಷ್ಟು ಲಗೂ ಬಾಟಲಿ ಓಪನ್ ಮಾಡಾಕ ಆಗೋದಿಲ್ಲ ನೋಡಪಾ. ಸಂಜಿ ಆಗಲೀ ತಡಿ. ನಿನಗ ಒಂದೆರೆಡು ಪೆಗ್ ಹೊಡಸ್ತೇನಿ. ಟಣಾ ಟನ್ ಅಗಿಬಿಡ್ತಿ ನೋಡು!' ಅಂತ ಮತ್ತೂ ಮಷ್ಕಿರಿ ಮಾಡಿದರು ಗೌಡರು. ಭಲೇ ಬೆರಕಿ!

ಗೌಡರು ಹಳ್ಳಿಯೊಳಗೇ ಇರೋದಾದರೂ ಅವರಿಗೆ ಎಲ್ಲ ಗೊತ್ತಿರ್ತದ. ಮತ್ತ ಎಲ್ಲಾ ವಿಷಯ ಕೇಳಿ ಕೇಳಿ ತಿಳ್ಕೊಬೇಕು ಅಂತ ಆಶಾ ಅವರಿಗೆ. ಹಾಂಗಾಗಿ ನಾ ಹೋದಾಗೆಲ್ಲಾ ಏನೇನೋ ಕೇಳ್ತಾರ. ಒಮ್ಮೊಮ್ಮೆ ನಮಗ ಅವರು ಕೇಳುವ ವಿಷಯ ಗೊತ್ತೇ ಇರುವದಿಲ್ಲ. ಅವರಿಂದನೇ ಕೇಳಿ ತಿಳ್ಕೊಂಡು ಬರಬೇಕಾಗತದ. ಅದೇ ಧಾಟಿಯಲ್ಲಿ ಏನೇನೋ ಮಾತು ಶುರುವಾತು. ಅವರ ಮನೆಯಲ್ಲಿನ ಹೆಣ್ಣುಮಕ್ಕಳು ಮಾತ್ರ ಭಾರಿ ನಿಯತ್ತಿನಿಂದ ತಾಸಿಗೊಮ್ಮೆ ಖಡಕ್ ಛಾ ತಂದೂ ತಂದೂ ಕೊಟ್ಟೂ ಕೊಟ್ಟೂ ನಮ್ಮ ಹರಟಿಗೆ ಹೊಸ ರಂಗು ತಂದು ಕೊಟ್ಟರು. ಗೌಡರಿಗೆ ತಾಸಿಗೊಮ್ಮೆ ಛಾ ಬೇಕೇಬೇಕು.

'ಏ ತಮ್ಮಾ! ಒಂದು ಮಾತು ಹೇಳು,' ಅಂತ ಗೌಡರು ಪೀಠಿಕೆ ಹಾಕಿದರು.

'ಏನ್ರೀ ಗೌಡ್ರ? ಕೇಳ್ರೀ,' ಅಂತ ತಯಾರಾದೆ.

'ಏ ಇದು 'ತಬಲೀಕರಣ' ಅಂದ್ರ ಏನೋ? ಎಲ್ಲಾರೂ ಅದರ ಬಗ್ಗೆನೇ ಮಾತಾಡಾಕತ್ತಾರ? ಏನು ಅದು 'ತಬಲೀಕರಣ' ಅಂದ್ರ? ಹಾಂ?' ಅಂತ ಕೇಳಿಬಿಟ್ಟರು.

ತಬಲೀಕರಣ????? ಅಂದರೆ ಏನು ಅಂತ ನಮಗೆ ಖರೆ ಅಂದ್ರೂ ತಿಳಿಯಲಿಲ್ಲ. ಏನೂ ಹೊಳೆಯಲಿಲ್ಲ.

'ತಬಲೀಕರಣ ಅಂದ್ರ ತಬಲಾ ಮಾಡೋದೇನ್ರೀ? ಅಥವಾ ತಬಲಾ ಬಾರ್ಸೋದೇನ್ರೀ?' ಅಂತ ಕೇಳಿಬಿಟ್ಟೆ.

ಗೌಡರು ಬಿದ್ದು ಬಿದ್ದು ನಕ್ಕರು. 'ಏನ್ ಅದಿಯೋ ಮಾರಾಯಾ!? ಹಾಂ? ತಬಲೀಕರಣ ಅಂದರ ತಬಲಾ ಮಾಡೋದೇನು, ತಬಲಾ ಬಾರ್ಸೋದೇನು ಅಂತಿಯಲ್ಲೋ??? ಹಾಂ? ಎಲ್ಲೆ ಹೋದರೂ ಕೊನಿಗೆ ಬಾರಿಸೋದಕ್ಕೆ ಬಂದು ನಿಲ್ಲತೈತಿ ನೋಡು ನಿನ್ನ ಗಾಡಿ,' ಅಂತ ಹೇಳುತ್ತ ಭಾಳ ನಗಿ ಬಂತು ಅವರಿಗೆ.

'ಮತ್ತರೀ? ಏನ್ರೀ ಹಾಂಗಂದ್ರ? ತಬಲೀಕರಣ. ಕೇಳಿಲ್ಲ ಬಿಡ್ರೀ!' ಅಂದೆ.

'ಹಾಂ. ಅದು ಪೂರ್ತೆ ಹೇಳಬೇಕು ಅಂದ್ರ 'ಮಹಿಳಾ ತಬಲೀಕರಣ' ಅಂತ ನೋಡಪಾ. ಈಗ ಏನರೆ ತಿಳಿತೇನು????' ಅಂತ ಕೇಳಿದರು.

'ಮಹಿಳಾ ತಬಲೀಕರಣ' ಅಂದ ಕೂಡಲೇ ತಬಲಾ ಬಾರಿಸೋ ಮಹಿಳೆಯರು ನೆನಪಾದರು. ಒಂದೆರೆಡು ಸಂಗೀತ ಪ್ರೋಗ್ರಾಮ್ ಒಳಗ ಮಸ್ತ ಬಾರಿಸಿದ್ದರು. ಆದರೆ ಅದಕ್ಕೆ 'ಮಹಿಳಾ ತಬಲೀಕರಣ' ಅಂತ ಫಾರ್ಮಲ್ ಆಗಿ ಹೇಳ್ತಾರೇನು ಅಂತ ಗೊತ್ತಿರಲಿಲ್ಲ. 'ಮನಿಯಾಗ ಗಂಡನ್ನ ಹಿಡಿದು ಬಾರಿಸ್ತಾರ. ಹಾಂಗಾಗಿ ತಬಲಾ ಬಾರಿಸೋದು ಅವರಿಗೆ ಸಹಜ ಬರತೈತಿ,' ಅಂತ ಪಕ್ಕದಲ್ಲಿ ಕೂತ ಅಂಕಲ್ ಒಬ್ಬರು ಹೇಳಿದ್ದರು. ಹೇಳುತ್ತ ತಮ್ಮ ಬಾಂಡ್ಲೀ ಬೋಳು ತಲೆ ಮೇಲೆ ಕೈಯಾಡಿಸಿಕೊಂಡಿದ್ದರು. ಅವರ ತಲೆ ಮೇಲೆ ಅವರ ಮಿಸೆಸ್ ತಬಲಾ ಪ್ರಾಕ್ಟೀಸ್ ಮಾಡಿರುವದರ ಬಗ್ಗೆ ಯಾವದೇ ಸಂಶಯ ಇರಲಿಲ್ಲ.

ಮಹಿಳಾ ತಬಲೀಕರಣ???

'ಗೌಡ್ರ, ಹೆಂಗಸೂರು ತಬಲಾ ಬಾರಿಸೋದಕ್ಕ ಮಹಿಳಾ ತಬಲೀಕರಣ ಅಂತಾರೇನ್ರೀ? ನಿಮಗ್ಯಾಕ ಅದರಾಗ ಆಸಕ್ತಿ?' ಅಂತ ಕೇಳಿದೆ.

'ಹೋಗ್ಗೋ ನಿನ್ನ. ನಾ ಏನೋ ಅಂದ್ರ ನೀ ಏನೋ ತಿಳ್ಕೊಂಡಿ ಅಂತ ಕಾಣಿಸ್ತದ. ತಬಲೀಕರಣ ಲೇ! ತಬಲೀಕರಣ! ಮಹಿಳಾ ತಬಲೀಕರಣ. ಈಗರೆ ಗೊತ್ತಾತ????' ಅಂದರು ಗೌಡ್ರು. ಅವರು ಯಾವದೋ ಬ್ಯಾರೆನೇ ದಾರಿ ಹಿಡಿದು ಹೊಂಟಂಗ ಅದ. ನನಗ ತಿಳಿಲಿಲ್ಲ ಅಂತ ಅವರಿಗೆ ತಿಳೀತು.

ಮೃದಂಗವನ್ನು ಒಡೆದು ತಬಲಾ ಮಾಡಿದ ಮಹಿಳೆ. ಇದು ಮಹಿಳಾ ತಬಲೀಕರಣವೇ?

'ಆವಾ ಮಬ್ಬ ಸೂಳಿಮಗ ರಾಹುಲ್ ಗಾಂಧಿ, ಆ ನಾಯಿ ಗತೆ ಒದರೋ ಅರ್ನಬ್ ಗೋಸ್ವಾಮಿ ಮುಂದ ಕುಂತು ಹೆಂಗಸೂರ ಸಲುವಾಗಿ ಅದನ್ನ ಮಾಡ್ತೇನಿ, ಇದನ್ನ ಮಾಡ್ತೇನಿ ಅಂತ ಹೊಳ್ಳಾ ಮಳ್ಳಿ ಅಂದಿದ್ದ ನೋಡು. ಆವಾ ಗೋಸ್ವಾಮಿ ಏನೇ ಕೇಳಿದರೂ ಈ ಮಬ್ಬ ಮಂಗ್ಯಾನಿಕೆ ಮತ್ತ ಬಂದು ಹೆಂಗಸೂರು, ಅವರ ತಬಲೀಕರಣ ಅಂತ ಹೇಳಿದ್ದ ನೋಡು. ನೆನಪಾತ???' ಅಂದ ಗೌಡರು ಏನೋ ಇನ್ನೊಂದು ಹಿಂಟ್ ಕೊಟ್ಟು, 'ಏನು???ತಿಳೀತು???' ಅನ್ನೋ ಲುಕ್ ಕೊಟ್ಟರು.

ರಾಹುಲ್ ಗಾಂಧಿ, ಅರ್ನಬ್ ಗೋಸ್ವಾಮಿ, ಮಬ್ಬಾ ಅಂತೆಲ್ಲ ಹೇಳಿದ ಮ್ಯಾಲೆ ಏನೋ ಐಡಿಯಾ ಬಂತು. ಆವಾ ರಾಹುಲ್ ಬಾಬಾ ಆವತ್ತು ಎಲ್ಲದಕ್ಕೂ 'women empowerment' ಅಂತ ಹೇಳಿಕೋತ್ತ ಹೊಂಟಿದ್ದ. ಆವತ್ತು ಆ ಹುಚ್ಚು ಹತ್ತಿತ್ತು ಅಂತ ಕಾಣಿಸ್ತದ ಅವಂಗ. women empowerment ಅಂದ್ರ ಮಹಿಳಾ ಸಬಲೀಕರಣ ಅಂತ ಆಗ್ತದ. ಅದನ್ನು ಎಲ್ಲರೆ ಈ ಗೌಡ್ರು ಮಹಿಳಾ ತಬಲೀಕರಣ ಅಂತ ಹೇಳಿಕೋತ್ತ ಕೂತಾರೋ ಏನೋ!?? ಅಂತ ಸಂಶಯ ಬಂತು.

'ಗೌಡ್ರ, ಅದು ಮಹಿಳಾ ಸಬಲೀಕರಣ ಏನ್ರೀ???? ಹಾಂ????' ಅಂತ ಕೇಳಿದೆ.

'ಹೂಂ! ಅದೇ ಅದೇ. ಮಹಿಳಾ ಸಬಲೀಕರಣ. ಅದನೋ ಮಾರಾಯಾ. ಬರೋಬ್ಬರಿ ಹೇಳಿದಿ,' ಅಂದುಬಿಟ್ಟರು ಗೌಡರು. ಹೋಗ್ಗೋ!

ಹೋಗ್ಗೋ ಇವರ. ಇಲ್ಲಿ ತನಕಾ ತಬಲೀಕರಣ, ಮಹಿಳಾ ತಬಲೀಕರಣ ಅಂತ ಹೇಳಿ ನಾವು ಯಾವ ತಬಲಾ, ಯಾವ ಅಬಲಾ ಬಾರಿಸಲಿಕ್ಕೆ ಹತ್ಯಾಳ ಅಂತ ನೋಡಿದರೆ ಇವರು ಮಹಿಳಾ ಸಬಲೀಕರಣದ ಬಗ್ಗೆ ಕೇಳಲಿಕತ್ತಾರ. ಶಿವನೇ ಶಂಭುಲಿಂಗ!

'ಅಲ್ಲರೀ ಗೌಡ್ರ, ಮತ್ತ ತಬಲೀಕರಣ ತಬಲೀಕರಣ ಅಂತ ಹೇಳಿಕೋತ್ತ ಕೂತು, ನಮಗ ಫುಲ್ confuse ಮಾಡಿಬಿಟ್ಟರಲ್ಲರೀ. ಹಾಂ????' ಅಂತ ಹೇಳಿದೆ.

'ಹೋಗ್ಗೋ ನಿನ್ನ ಮಂಗೇಶಪ್ಪಾ! ಅದು ಸಬಲೀಕರಣ ಏನು? ನಮಗೇನು ಗೊತ್ತಪಾ? ನಮಗ ಬರೇ ಬಾರಿಸಿ ಗೊತ್ತು. ಅದು ಏನೋ ಅಂದ್ಯಲ್ಲಾ. ಸಬಲೀಕರಣ. ಅದನ್ನ ನಾವು ತಬಲೀಕರಣ ಅಂತ ಕೇಳಿಸಿಕೊಂಡು, ಹಾಂಗಂದ್ರ ಏನು ಅಂತ ತಿಳ್ಕೋಬೇಕು ಅಂತ ನಿನ್ನ ಕಡೆ ಕೇಳಿದರೆ ನೀನು ಏನೋ ತಬಲಾ ಬಾರ್ಸೋದು, ಹೆಂಗಸೂರು ತಬಲಾ ಬಾರ್ಸೋದು ಅಂತ ಹೇಳಿಕೋತ್ತ ಹೊಂಟಿದ್ದಿಯಲ್ಲೋ ಮಾರಾಯಾ. ನೀನೂ ಬರೋಬ್ಬರಿ ನಿಮ್ಮಪ್ಪನ ಗತೆ ತಯಾರಾಗಾಕತ್ತಿ ನೋಡಪಾ. ಅವನೂ ಹೀಂಗೇ. ಏನೇನೋ ಓದಿರ್ತಾನ. ಏನೋ ಕೇಳಿದರೆ ಏನೋ ಹೇಳ್ತಾನ. ಆದರೂ ಮಸ್ತ ಮಂದಿ ನೀವು,' ಅಂತ ಹೇಳಿದರು ಗೌಡರು. ಬೈದರೋ ಹೊಗಳಿದರೋ ಗೊತ್ತಾಗಲಿಲ್ಲ.

ಗೌಡರೇ ಮುಂದುವರೆದರು. 'ಅದೇನೋ ಪವರ್ ಪವರ್ ಅಂದ್ಯಲ್ಲಾ. ಮಹಿಳಾ ತಬಲೀಕರಣ ಅಲ್ಲಲ್ಲ ಸಬಲೀಕರಣದಾಗ ಪವರ್ ಎಲ್ಲಿಂದ ಬಂತೋ ಮಾರಾಯಾ???? ಪವರ್ ಬಂತು ಅಂದ್ರ ನಾನೂ ಮಹಿಳಾ ಸಬಲೀಕರಣ ಮಾಡಿಬಿಟ್ಟೇನಿ ನೋಡಪಾ,' ಅಂದುಬಿಟ್ಟರು ಗೌಡರು.

'ಅಯ್ಯೋ ಅದು ಪವರ್ ಅಲ್ಲರೀ. empowerment, women empowerment,' ಅಂತ ಹೇಳಿದೆ.

'ಏ ಗೊತ್ತೈತೋ. ಹೇಳೋದು ಕೇಳು. ಯಾರದ್ದರೆ ಹೆಂಗಸೂರ ಮನಿಗೆ, ಅಂಗಡಿಗೆ ಪವರ್ ಅಂದ್ರ ಕರೆಂಟ್ ಇರಲಿಲ್ಲ ಅಂದ್ರ ಕರೆಂಟ್ ಕೊಡಿಸಿಕೊಡೋದು ಹೌದಿಲ್ಲೋ? ಏ, ನಾ ಭಾಳ ಮಂದಿ ಹೆಂಗಸೂರಿಗೆ ಕರೆಂಟ್ ಕೊಡಿಸಿಬಿಟ್ಟೇನಿ ತೊಗೋ. ಹಾಂಗಾಗಿ ನಾನೂ, ಅದೇನೋ ಅಂದ್ಯಲ್ಲಾ, ಎಮ್ಮಿ ಪವರ್ ಮೆಂಟ್. ನಾನೂ ಅದನ್ನ ಮಾಡಿಬಿಟ್ಟೇನಿ. ಹ್ಯಾಂಗೈತಿ???' ಅಂತ ಹೇಳಿ ಅವರದ್ದೇ ಧಾಟಿಯಲ್ಲಿ, ಅವರದ್ದೇ ರೀತಿಯಲ್ಲಿ ಮಹಿಳಾ ಸಬಲೀಕರಣ ಮಾಡಿದ್ದಕ್ಕೆ ಹೆಮ್ಮೆಯಿಂದ ತಮ್ಮ ಮೀಸೆ ತಿರುವಿದರು ಗೌಡರು.

ಹೋಗ್ಗೋ! ನಾನು women empowerment ಅಂದ್ರ ಇವರು ತಮ್ಮದೇ ರೀತಿಯಲ್ಲಿ ಅರ್ಥ ಮಾಡಿಕೊಂಡು ಹೆಂಗಸೂರಿಗೆ ಪವರ್ ಕೊಡಿಸಿದೆ, ಕರೆಂಟ್ ಕೊಡಿಸಿದೆ ಅಂತ ಹೇಳಲಿಕ್ಕೆ ಶುರು ಮಾಡ್ಯಾರ. ಏನೋ ಮಜಾ ಹೇಳಲಿಕತ್ತಾರ. ಕೇಳೋಣ ಅಂತ ವಿಚಾರ ಮಾಡಿದೆ.

ಮತ್ತೆ ಗೌಡರೇ ಮಾತಾಡಿದರು. 'ಏ ಇವನೇ, ನಾ ಹೆಂಗಸೂರಿಗೆ ಪವರ್ ಅಂದ್ರ ಕರೆಂಟ್ ಕೊಡಿಸಿದ್ದಕ್ಕೆ ಅವರು ನನಗೇನು ಕೊಡಿಸಿದರು ಹೇಳು? ಹೇಳು ನೋಡೋಣ?' ಅಂತ ಸವಾಲ್ ಒಗೆದರು ಗೌಡ್ರು. ಮಷ್ಕಿರಿ. ನೋಡಿದರೆ ಎಂಬತ್ತು ವರ್ಷಾತು. ಹುಣಸೆ ಮುಪ್ಪಾದರೆ ಹುಳಿ ಮುಪ್ಪೇ ಅಂತ ಗಾದೆ ಇಂತವರನ್ನು ನೋಡಿಯೇ ಮಾಡಿರಬೇಕು.

'ಏನು ಕೊಟ್ಟರು ಹೆಂಗಸೂರು? ನೀವು ಪವರ್ ಕೊಡಿಸಿ ಸಬಲೀಕರಣ ಮಾಡಿದಿರಿ ಅಂತ ಪ್ರತಿಫಲವಾಗಿ ಏನು ಕೊಟ್ಟರು???' ಅಂತ ಕೇಳಿದೆ. ಏನೋ ಕಾಣಿಕೆ ಕೊಟ್ಟು ಸನ್ಮಾನ ಮಾಡಿರಬೇಕು ಅಂತ ಮಾಡಿದ್ದೆ.

'ನಾ ಹೆಂಗಸೂರಿಗೆ ಕರೆಂಟ್ ಕೊಟ್ಟೆ. ಅವರು ನನಗ ಶಾಕ್ ಕೊಟ್ಟರೋ! ಹಾ!! ಹಾ!! ಶಾಕ್ ಕೊಟ್ಟರೋ!!!' ಅಂತ ಗೌಡ್ರು ಉಳ್ಳಾಡಿ ಉಳ್ಳಾಡಿ ನಕ್ಕರು. ಅದು ಯಾವ ಕಾಲದಲ್ಲಿ, ಯಾವ ಹೆಂಗಸು, ಎಲ್ಲಿ, ಹ್ಯಾಂಗ ಕೊಟ್ಟ ಶಾಕ್ ನೆನಪಾತೋ ಏನೋ. ಒಟ್ಟಿನಲ್ಲಿ ಅಹಹಹಾ ಅಂತ ಮುಲುಗಿ, ಒಂದೆರೆಡು ಜುರ್ಕಿ ಜೋರಾಗಿ ಎಳೆದರು ತಮ್ಮ ಗುಡುಗುಡಿಯಿಂದ.

'ಯಾವ ಹೆಂಗಸಿನ ಸಬಲೀಕರಣ ಮಾಡಿದ್ದಿರಿ ಗೌಡ್ರ?' ಅಂತ ಕೇಳಿದೆ.

'ಮೊದಲು ನಮ್ಮ ಕಾಯಿಪಲ್ಲೆ ಹನುಮವ್ವಗ ಎಮ್ಮಿ ಪವರ್ ಮೆಂಟ್ ಮಾಡಿದೆ. ಒಮ್ಮೆ ಅಕಿ ಅಂಗಡ್ಯಾಗ ಕಾಯಿಪಲ್ಲೆ ಆರಿಸ್ಕೋತ್ತ ಮಷ್ಕಿರಿ ಮಾಡಿಕೋತ್ತ ನಿಂತಿದ್ದೆ. ಅಕಿ, 'ಗೌಡ್ರ, ಒಂದು ಸಹಾಯ ಮಾಡ್ರೀ,' ಅಂದಳು. 'ಏನವಾ?' ಅಂತ ಕೇಳಿದೆ. 'ಏನು ನಿನಗ ಹಾಕಿ ನಿಂದು ದೊಡ್ಡದು ಮಾಡಿ ಕೊಡಲೇ?' ಅಂತ ಕೇಳಿಬಿಟ್ಟೆ. ಅಕಿ ಮಹಾ ಮಷ್ಕಿರಿ ಹೆಣ್ಣುಮಗಳು. 'ಅಯ್ಯೋ ಗೌಡ್ರ, ಇನ್ನೂ ಏನು ಹಾಕಿ ಎಷ್ಟು ದೊಡ್ಡದು ಮಾಡವರು ಇದ್ದೀರಿ???ಹ್ಯಾಂ???' ಅಂತ ಕಣ್ಣು ಹೊಡೆದಳು. 'ಏ, ಇಲ್ಲ  ಬೇ ಹನುಮವ್ವಾ. ಬೇಕಾದ್ರ ಬಂಡವಾಳ ಹಾಕಿ ನಿನ್ನ ಅಂಗಡಿ ಇನ್ನೂ ಒಂದೀಟು ದೊಡ್ಡದು ಮಾಡಿಕೊಡತೇನಿ ಬೇಕಾದರೆ' ಅಂತ ಹೇಳಿದೆ. ಸುಮ್ಮನೆ ಹಲ್ಕಟ್ ಮಷ್ಕಿರಿ ಅಕಿ ಜೋಡಿ. ಅದಕ್ಕೆ ಅಕಿ, 'ಗೌಡ್ರ, ನನ್ನ ಅಂಗಡಿಗೆ ಕರೆಂಟ್ ಇಲ್ಲರೀ. ಸಂಜಿ ಮುಂದ ಬುಡ್ಡಿ ದೀಪದಾಗ ವ್ಯಾಪಾರ ಮಾಡುವಾಗ ಹಲ್ಕಟ್ ಮಂದಿ ಕಾಯಿಪಲ್ಲೆ ಕದಿಯೋದು, ರೊಕ್ಕಾ ಹೊಡೆಯೋದು ಎಲ್ಲ ಮಾಡ್ತಾರರೀ. ಹೆಂಗರ ಮಾಡಿ ನನಗ ಕರೆಂಟ್ ಕೊಡಿಸಿ ಉಪಕಾರ ಮಾಡ್ರೀ,' ಅಂದಳು. 'ಅಯ್ಯ ಇಷ್ಟೇ ಏನ ಬೇ?? ಚಿಂತಿ ಬಿಡು ನೀ. ಇನ್ನು ಒಂದು ವಾರದಾಗ ಮ್ಯಾಲಿಂದ ಬಿಟ್ಟು, ಅಂದ್ರ ಕರೆಂಟ್ ತಾರು (ವೈರ್ ) ಬಿಟ್ಟು, ನಿನಗ ಶಾಕ್ ಹೊಡಿಸೇಬಿಡ್ತೇನಿ,' ಅಂದೆ. ಅಕಿನೂ ಭಾರಿ ಜಾಬಾದ್. 'ಬರೇ ಮ್ಯಾಲಿಂದ ಮಾತ್ರ ಬಿಟ್ಟು ಶಾಕ್ ಹೊಡಸ್ತೀರಿ ಗೌಡ್ರ? ಕೆಳಗಿಂದ ಬಿಟ್ಟು ಶಾಕ್ ಹೊಡೆಸಂಗಿಲ್ಲರೀ????' ಅಂತ ಮಷ್ಕಿರಿ ಮಾಡಿದಳು. ಹರೆದಾಗ ನಮ್ಮ ಮಾಲು ನೋಡು ಅಕಿ. ಅದಕ್ಕೇ ಎಲ್ಲಾ ಮಾಫ್. ಅಕಿ ಬಾಜೂಕನೇ ಇನ್ನೊಂದು ಹುಡುಗಿ ಒಂದು ಸಣ್ಣ ಶೇಂಗಾ ಅಂಗಡಿ ಹಾಕ್ಕೊಂಡು ಕೂತಿತ್ತು. ಅಕಿನ್ನ ನೋಡಿ, 'ಇಕಿದು ಭಾಳ ಸಣ್ಣದಿದ್ದಾಂಗ ಕಾಣತೈತಿ. ಇಕಿಗೆ ಬರೋಬ್ಬರಿ ಹಾಕಿ ದೊಡ್ಡದು ಮಾಡಲೇನು ಹನುಮವ್ವಾ?' ಅಂತ ಕೇಳಿದೆ. 'ಅಂದ್ರ ಈ ಹುಡುಗಿ ಅಂಗಡಿಗೆ ಬಂಡವಾಳ ಹಾಕಿ ದೊಡ್ಡದು ಮಾಡಲೋ ಏನು ಅಂತ?' ಅಂತ ಹಾಂಗೇ ಸುಮ್ಮನೇ ಮಷ್ಕಿರಿ ಮಾಡಿದೆ. 'ಬ್ಯಾಡ್ರೀ ಗೌಡ್ರ, ನಿಮ್ಮ ಮಮ್ಮಗಳ ವಯಸ್ಸಿನ ಸಣ್ಣ ಹುಡುಗಿ. ಈಗ ಹರೇಕ್ಕ ಬಂದೈತಿ. ಅಕಿಗೇನೂ ಹಾಕೋದು, ದೊಡ್ಡದು  ಮಾಡೋದು ಬ್ಯಾಡ್ರೀ,' ಅಂತ ಅಕಿ ಕೇಳಿಕೊಂಡಳು. ಆ ಸಣ್ಣ ಹುಡುಗಿ ಅಂಗಡಿಗೆ ಒಂದಿಷ್ಟು ಬಂಡವಾಳ ಹಾಕೋಣ ಅಂತ ನೋಡಿದರೆ ಇಕಿ ಬ್ಯಾಡ ಅಂತಾಳ. ಎಲ್ಲಾ ಮಷ್ಕಿರಿ ನೋಡು. ಆಮ್ಯಾಲೆ ನಮ್ಮ ಇಂಜಿನಿಯರ್ ಬಸಣ್ಣಿಗೆ ಹೇಳಿ, ಅಲ್ಲೇ ಮ್ಯಾಗ ಹೋಗಿದ್ದ ಕರೆಂಟ್ ತಾರಿನಿಂದ ಒಂದು ತಾರು ಕೆಳಗ ಎಳೆಯಿಸಿ, ನಮ್ಮ ಕಾಯಿಪಲ್ಲೆ ಹನುಮ್ಮವನ ಅಂಗಡಿಗೆ ಕರೆಂಟ್ ಅಂದ್ರ ಪವರ್ ಕೊಡಿಸಿದೆ ನೋಡು. ಅದೂ ಫುಲ್ ಬಿಟ್ಟಿ, ಪುಕ್ಕಟ. ಕರೆಂಟ್ ಬಿಲ್ಲೂ ಇಲ್ಲ ಅವನೌನ್ ಬಾಣನೂ ಇಲ್ಲ. ಈಗ ಅಕಿ ಸಂಜಿಯಾತು ಅಂದ್ರ ಆರಾಮ ಸ್ವಿಚ್ ಒತ್ತಿ, ಬಲ್ಬ್ ಹಾಕ್ಕೊಂಡು ಹ್ಯಾಂಗ ಮಸ್ತ ವ್ಯಾಪಾರ ಮಾಡ್ತಾಳ ನೋಡು. ಒಟ್ಟಿನ್ಯಾಗ ಒಂದು ಹೆಂಗಸಿಗೆ ಪವರ್ ಕೊಡಿಸಿ ನಾನೂ ಎಮ್ಮಿ ಪವರ್ ಮೆಂಟ್ ಮಾಡಿದೆನೋ ಇಲ್ಲೋ? ನಾ ಮಹಿಳಾ ಸಬಲೀಕರಣ ಮಾಡಿದೆನೋ ಇಲ್ಲೋ???? ಹಾಂ?' ಅಂತ ಭಾರಿ ಉದ್ದಕ್ಕೆ ಹೇಳಿದರು ಗೌಡ್ರು. ಭಾರಿ ಇದ್ದಾರ. ಇರಲಿ, ಪಾಪ ಒಂದು ಬಡ ಹೆಂಗಸಿಗೆ ಪುಗಸಟ್ಟೆ ಕರೆಂಟ್ ಕೊಡಿಸಿಕೊಟ್ಟು ತಮ್ಮ ದೊಡ್ಡತನ ಮೆರೆದಾರ. ಊರಿಗೆ ಗೌಡರು ಆಗಿದ್ದು ಸಾರ್ಥಕ ಆತು. ಇವರು ಇದೇ ರೀತಿ ತಮ್ಮದೇ ರೀತಿಯ women empowerment ಮಾಡುತ್ತಲೇ ಇರಲಿ ಅಂತ ಹೇಳಿ ನಿಜವಾದ women empowerment ಅಥವಾ ಮಹಿಳಾ ಸಬಲೀಕರಣ ಅಂದ್ರ ಏನು ಅಂತ ವಿವರಿಸಲಿಕ್ಕೆ ಹೋಗಲಿಲ್ಲ.

'ಏ ತಮ್ಮಾ, ಇನ್ನೊಂದು ಮಾತ ಹೇಳಪಾ.... ' ಅಂದ್ರು ಗೌಡರು. ಏನೋ ಭಾರಿ ಕೇಳೋ ಹೇಳೋ ಮೂಡಿನ್ಯಾಗ ಇದ್ದಾರ ಗೌಡ್ರು.

'ಹೇಳ್ರೀ ಸರ್ರಾ,' ಅಂತ ಗೌರವದಿಂದ ಹೇಳಿದೆ.

'ಇದು ಲಿಂಗ ಸಾಮಾನಂತೆ ಅಂದ್ರ ಏನೋ ತಮ್ಮಾ??? ಹ್ಯಾಂ???' ಅಂತ ಕೇಳಿದ ಗೌಡರು ಹುಬ್ಬು ಕುಣಿಸಿದರು.

ಈಗ ನಾನೂ ಸ್ವಲ್ಪ ಗೌಡರ ಟ್ರ್ಯಾಕ್ ಹಿಡಿದಿದ್ದೆ. ಮಹಿಳಾ ತಬಲೀಕರಣ ಅನ್ನೋದನ್ನ ಕೇಳಿ, ಏನೇನೋ ವಿಚಾರ ಮಾಡಿ, ಮಂಗ್ಯಾ ಆಗಿದ್ದಕ್ಕೆ ಈಗ ಫಟಾಕ್ ಅಂತ ತಿಳೀತು. ಅದು ಲಿಂಗ ಸಮಾನತೆ ಇರೋದನ್ನ ಇವರು ಲಿಂಗ ಸಾಮಾನಂತೆ ಅಂತ ಅನ್ಕೋತ್ತ ಹೊಂಟಾರ. ಅದು ಧಾರವಾಡ ಕಡೆ ಒಂದು ತರಹದ ಲಿಂಗಕ್ಕೆ ಸಾಮಾನು ಸಾಮಾನು ಅಂದು ರೂಢಿ ನೋಡ್ರೀ. ಹಾಂಗಾಗಿ ಲಿಂಗ ಸಮಾನತೆ ಅನ್ನೋದು ಜವಾರಿ ಮಂದಿಗೆ ಲಿಂಗ ಸಾಮಾನಂತೆ ಅಂತ ಕೇಳಿ, ಅದು ಬರೋಬ್ಬರಿನೇ ಇರಬೇಕು ಅಂತ ಅನ್ನಿಸಿದರೆ ಏನೂ ಆಶ್ಚರ್ಯ ಅಥವಾ ತಪ್ಪು ಇಲ್ಲ ತೊಗೊರೀ. ಆದರೂ ಒಂದು ಮಾತು confirm ಮಾಡಿಕೋಬೇಕು ಅಂತ ಅನ್ನಿಸ್ತು.

'ಗೌಡ್ರ, ಯಾರು ಹೇಳಿದರು ನಿಮಗ ಇದರ ಬಗ್ಗೆ?' ಅಂತ ಕೇಳೋದ್ರಾಗ, ಏನೋ ಆಗಿ, ಜೋರಿನಿಂದ 'ಆಕ್ಷೀ! ಹ್ಯಾಂ! ಆಕ್ಷೀ' ಅಂತ ದೊಡ್ಡ ಸೀನು ಬಂತು.

'ಏನ್ ಟೈಮಿಂಗ್ ಲೇ ಮಗನೇ ನಿಂದು? ಇದೆಲ್ಲಾ ನಮ್ಮ ಮಮ್ಮಗಳು, ಅದೇ ನಮ್ಮ ವಿರೂಪಾಕ್ಷ ಗೌಡನ ಮಗಳು, ಮೀನಾಕ್ಷಿ ಹೇಳಿದಳು ಅಂತ ಹೇಳಬೇಕು ಅನ್ನೋದ್ರಾಗ ನೀನೇ ಆಕ್ಷೀ ಅಂತ ಸೀನೇ ಬಿಟ್ಟಿ ನೋಡು. ಆ ಹುಡುಗಿಗೆ ಏನು ಮೀನಾಕ್ಷಿ ಅಂತ ಹೆಸರಿಟ್ಟರೋ ಇಟ್ಟರು. ಅಕಿ ಹೆಸರಿನ್ಯಾಗೇ ಆಕ್ಷೀ ಅಂತ ಬಂದುಬಿಟ್ಟೈತಿ ನೋಡಪಾ. ಅಕಿ ಹೆಸರು ಹೇಳೋದೇ ಬ್ಯಾಡ. ನೆನಸಿಕೊಂಡರೂ ಸಾಕು ಆಕ್ಷೀ ಅಂತ ಮಂದಿ ಸೀನೇ ಬಿಡ್ತಾರು. ಈಗ ನೀ ಸೀನಿದಾಂಗ. ಅಕಿನೇ ಇದೆಲ್ಲ ಹೇಳಿ ಹೋಗ್ಯಾಳ ನೋಡು. ಅಲ್ಲೇ ಧಾರವಾಡದಾಗ ಹಾಸ್ಟೆಲ್ ಒಳಗ ಇದ್ದು, ಏನೋ ಕಾಲೇಜ್ ಕಲಿತಾಳ ನೋಡು. ನಿಮ್ಮ ಮನಿಗೂ ಆಗಾಗ ಹೊಕ್ಕಿರ್ತಾಳ. ನೀ ಇದ್ದಾಗ ಬಂದಿಲ್ಲೇನೋ ಅಕಿ? ಎತ್ತರಕ್ಕ, ಗುಂಡ ಗುಂಡಗ ಮಸ್ತ ಅದಾಳು ನೋಡು. ಅವರಪ್ಪನ ಹೊನಗ್ಯಾ ಮೈ, ಅವರವ್ವನ ಕೆಂಪ ಬಣ್ಣ, ರೂಪ ಬಂದೈತಿ ಅಕಿಗೆ. ಒಂದೇ ಅಂದ್ರ ಹೀಂಗ ಹುಚ್ಚುಚ್ಚರೆ ಮಹಿಳಾ ತಬಲೀಕರಣ, ಲಿಂಗ ಸಾಮಾನಂತೆ ಅದು ಇದು ಹೇಳಿ, ನನ್ನ ಕೂಡೆ ಜಗಳಾ ಮಾಡಿ, 'ಮುತ್ಯಾ, ನೀ ಭಾಳ ಹಳೆ ಜಮಾನಾದವ ಇದ್ದೀ. ಈಗೆಲ್ಲ  ಭಾಳ ಬದಲಾಗೈತಿ,' ಅಂತ ಹೇಳಿ ಹೊಕ್ಕಾಳು ನೋಡು. ಈಗ ಹೇಳಪಾ ನಮ್ಮ ಮೀನಾಕ್ಷಿ ಹೇಳಿದ ಲಿಂಗ ಸಾಮಾನಂತೆ ಅಂದ್ರ ಏನೋ ತಮ್ಮಾ????' ಅಂತ ಹೇಳಿದರು ಗೌಡ್ರು.

ಈಗ ಗೊತ್ತಾತು. ಮತ್ತ ಮಾಡರ್ನ್ ಮೊಮ್ಮಗಳು ಹೇಳ್ಯಾಳ ಅಂದ ಮ್ಯಾಲೆ ಇದು ಲಿಂಗ ಸಮಾನತೆಯೇ ಇರಬೇಕು ಅಂತ ಖಾತ್ರಿನೂ ಆತು.

'ಗೌಡ್ರ, ಅದು 'ಲಿಂಗ ಸಮಾನತೆ' ಅಂತ. ಲಿಂಗ ಸಾಮಾನಂತೆ ಅಲ್ಲ. ಅಂದ್ರ ಎಲ್ಲ ಲಿಂಗಗಳೂ ಸಮಾನ ಅಂತ. ಹಾಂಗೇ ಇರಬೇಕು. ಎಲ್ಲರೂ ಎಲ್ಲ ಲಿಂಗಗಳನ್ನೂ ಸಮಾನವಾಗಿ ನೋಡಬೇಕು ಅಂತ. ಅದೇ ಅರ್ಥ. ತಿಳೀತ್ರೀ??' ಅಂತ ಕೇಳಿದೆ.

'ಅಲೀ ಇವನೌನ್! ಅದೆಂಗ ಎಲ್ಲ ಲಿಂಗ ಒಂದೇ ಸಾಮಾನ ಅಲ್ಲಲ್ಲ ಒಂದೇ ಸಮಾನ ಆಕ್ಕಾವು? ಹಾಂ? ಈಗ ನೋಡು ನಾನು ಬಸಲಿಂಗ, ನನ್ನ ತಮ್ಮ ಮಾಲಿಂಗ, ಅವನ ತಳಗಿನವ ಶಿವಲಿಂಗ, ಅವನ ತಳಗಿನವ ಶಂಭುಲಿಂಗ, ಅವನ ಕೆಳಗಿನವ ಸಿದ್ದಲಿಂಗ. ಎಲ್ಲರ್ಕಿಂತ ಕೆಳಗಿನವ ಅಂದ್ರ ಸಿರ್ಸಿ ಕಡೆ ಇರೋ ನಮ್ಮ ಕಡೇ ತಮ್ಮ ಸಹಸ್ರಲಿಂಗ. ನಾವೆಲ್ಲರೂ ಲಿಂಗಗಳೇ. ಲಿಂಗ ಸಮಾನತೆ ಅಂದ್ರ ನಾವೆಲ್ಲರೂ ಒಂದೇ ಅಂತ ಅರ್ಥ ಏನೋ? ಅದೆಂಗ ಆಕ್ಕೈತಿ? ನಾವೆಲ್ಲಾ  ಬ್ಯಾರೆ ಬ್ಯಾರೆ ಅದೇವಿ. ನೋಡಾಕ, ಸ್ವಭಾವದಾಗ, ಉಳಿದ ಭಾಳ ವಿಷಯದಾಗ ಎಲ್ಲ  ಬ್ಯಾರೆ ಬ್ಯಾರೇನೇ ಅದೇವಿ. ಹೀಂಗಿದ್ದಾಗ ಲಿಂಗ ಸಮಾನತೆ ಅಂದ್ರ ಏನೋ?????' ಅಂದು ಬಿಟ್ಟರು ಗೌಡ್ರು. ಬಸಲಿಂಗ ಗೌಡ್ರು ಲಿಂಗ ಸಮಾನತೆಯನ್ನು ಬೇರೆಯೇ ದಿಕ್ಕಿಗೆ ತೊಗೊಂಡು ಹೋಗಿ ಬಿಟ್ಟರು. ಶಿವನೇ ಶಂಭುಲಿಂಗ.

'ಗೌಡ್ರ! ಗೌಡ್ರ! ಲಿಂಗ ಸಮಾನತೆ ಅಂದ್ರ ಅದಲ್ಲರೀಪಾ. ಹೋಗ್ಗೋ ನಿಮ್ಮ,' ಅಂತ ಭಾಳ ನಕ್ಕೆ. 'ಮಗನೇ, ನಗು, ನಗು. ಈ ನಿಮ್ಮ ಗೌಡಗ ಏನೂ ಗೊತ್ತಿಲ್ಲ ಅಂತ ಮಷ್ಕಿರಿ ಮಾಡಾಕತ್ತೀ??' ಅನ್ನೋ ಪ್ರೀತಿ ಭರಿತ ಜಬರಿಸೋ ಲುಕ್ ಕೊಟ್ಟರು ಗೌಡ್ರು.

'ಗೌಡ್ರ, ಲಿಂಗ ಸಮಾನತೆ ಬಗ್ಗೆ ನಾ ಎಲ್ಲಾ ನಿಮಗ ಹೇಳತೇನಿ. ಆದ್ರ ಒಂದು ಮಾತು ಹೇಳ್ರೀ. ಸಿರ್ಸಿ ಕಡೆ ಇರೋ ನಿಮ್ಮ ಕಡೀ ತಮ್ಮ ಸಹಸ್ರಲಿಂಗ ಯಾರ್ರೀ??? ನೀವು ಬಸಲಿಂಗ, ಮಾಲಿಂಗ, ಶಿವಲಿಂಗ, ಶಂಭುಲಿಂಗ, ಸಿದ್ದಲಿಂಗ ಎಲ್ಲ ಒಂದು ಟೈಪ್ ಇದ್ದರೆ ಈ ಸಹಸ್ರಲಿಂಗನೇ ಬ್ಯಾರೆ ಅನ್ನಿಸ್ತದಲ್ಲಾ? ಏನು ಹಕೀಕತ್ತು???? ಹಾಂ?' ಅಂತ ಕೇಳಿದೆ.

'ಏ, ಅದಾ? ಆವಾ ಸಣ್ಣವ ಸಹಸ್ರಲಿಂಗ ನಮ್ಮಪ್ಪನ ಸ್ಟೆಪ್ನಿ ಮಗ. ನಮ್ಮಪ್ಪಗ ಕಂಡಕಂಡಲ್ಲೆ ಸ್ಟೆಪ್ನಿ ಇಟ್ಟು ರೂಢಿ ನೋಡಪಾ. ಭಾಳ ಹಿಂದೆ ಸಿರ್ಸಿ ಕಡೆ ಅಡಿಕಿ ತ್ವಾಟಾ ನೋಡಿ ಬರ್ತೇನಿ, ಭತ್ತದ ಗದ್ದಿ ನೋಡಿ ಬರ್ತೇನಿ ಅಂತ ಹೇಳಿ ಹೋದ ನಮ್ಮಪ್ಪ ಒಂದು ವರ್ಷ ನಾಪತ್ತೆಯಾಗಿಬಿಟ್ಟ. ಆವಾಗ ಅಲ್ಲೆ ಯಾರೋ ಒಬ್ಬಾಕಿ ಮಾಂಕಾಳಿ ನಾಯ್ಕ ಅನ್ನಾಕಿ ಜೋಡಿ ಜಮ್ಮಚಕ್ಕ ಶುರುಮಾಡಿಕೊಂಡುಬಿಟ್ಟ. ಹೇಳಿ ಕೇಳಿ ದೊಡ್ಡ ಗೌಡ ನೋಡು. ಆವಾಗ ಇನ್ನೂ ಹೆಚ್ಚಿನ ಶ್ರೀಮಂತರು ನಾವು. ಹಾಂಗಾಗಿ ನಮ್ಮಪ್ಪ ಗಿಚ್ಚಾಗಿ ಅಕಿ ಮಾಂಕಾಳಿಗೆ ಪ್ಯಾರ್ ಮೊಹಬ್ಬತ್ ಮಾಡಿ ಒಂದು ಮಾಣಿ ಅಂದ್ರ ಹುಡುಗನ್ನ ತಯಾರ್ ಮಾಡೇಬಿಟ್ಟ. ಹಾಕ್ಕ ನೌನ್! ಮತ್ತ ಸಿರ್ಸಿ ಕಡೆನೇ ಅವರಿಗೆ ಒಂದು ಮನಿ ಮಾಡಿ ಇಟ್ಟ. ಆ ಹುಡುಗಗ ಹೆಸರು ಇಡಬೇಕು ಅಂದ್ರ ಅದು ನಮ್ಮೆಲ್ಲರ ಹಾಂಗ 'ಲಿಂಗ' ಅಂತನೇ ಇರಬೇಕು. ನಮ್ಮಪ್ಪಗ ಆ ಮಾಂಕಾಳಿ ಅನ್ನುವ ಮಾಲು ಸಹಸ್ರಲಿಂಗದಾಗ ಸಿಕ್ಕಿದ್ದಳು ಅಂತ. ಅಕಿ ಅಲ್ಲೆ ಜಳಕಾ ಮಾಡೋಣ ಅಂತ ಬಂದ್ರ ನಮ್ಮಪ್ಪ ಹೋಗಿ ಗಬಕ್ ಅಂತ ಅಕಿನ್ನ ಹಿಡಕೊಂಡು, ಅಲ್ಲೇ ಪಪ್ಪಿ ಗಿಪ್ಪಿ ಕೊಟ್ಟು ಅಂದರ್ ಮಾಡಿಕೊಂಡುಬಿಟ್ಟ ಅಂತ. ಹಾಂಗಾಗಿ ಆ ಸ್ಟೆಪ್ನಿ ಮಗನಿಗೆ ಹೋಗಿ ಹೋಗಿ ಸಹಸ್ರಲಿಂಗ ಅಂತ ಹೆಸರು ಇಟ್ಟುಬಿಟ್ಟ ನೋಡಪಾ. ಏ ಮಸ್ತ ಅದಾನ ಅವನೂ. ಅವಂಗ ಅಲ್ಲೇ ಸಿರ್ಸಿ ಕಡೆ ಮಸ್ತ ತ್ವಾಟಾ ಮಾಡಿಕೊಟ್ಟೇ ಸತ್ತ ನಮ್ಮಪ್ಪ. ಆಗಾಗ ಬರ್ತಿರ್ತಾನ ಈ ಕಡೆ ಆವಾ ಸಹಸ್ರಲಿಂಗ. ನಿಮ್ಮಪ್ಪಗ ಗೊತ್ತ. ಕೇಳಿ ನೋಡ,' ಅಂದರು ಗೌಡರು.

ಗೌಡರ ಅಪ್ಪನ ಚಿಣ್ಣ ವೀಟ್ಲು (ಸಣ್ಣ ಮನೆ) ಪರಿಣಾಮವೇ ಈ ಕೊನೆಯ ಲಿಂಗ ಅಂದ್ರ ಸಿರ್ಸಿ ಸಹಸ್ರಲಿಂಗ ಅಂತ ಗೊತ್ತಾತು. ಹಾಂಗೇ ಅವನ ಹೆಸರಿನ ಹಿಂದಿನ ಹಕೀಕತ್ತು ಸಹ ಗೊತ್ತಾತು.

'ಗೌಡ್ರ, ಲಿಂಗ ಸಮಾನತೆ ಅಂದ್ರ ನಿಮ್ಮ ಹೆಸರಾಗ ಇರೋ ಲಿಂಗಕ್ಕೆ ಸಂಬಂಧಿಸಿದ್ದಲ್ಲ. ಸ್ತ್ರೀಲಿಂಗ, ಪುಲ್ಲಿಂಗ ಅಂದ್ರ ಗಂಡಸರು, ಹೆಂಗಸರಿಗೆ ಸಂಬಂಧಿಸಿದ್ದು. ಲಿಂಗ ಸಮಾನತೆ ಅಂದ್ರ ಗಂಡಸೂರು, ಹೆಂಗಸೂರನ್ನ ಒಂದೇ ರೀತಿಯೊಳಗ ನೋಡಬೇಕು. ಯಾವದೇ ತರಹದ ಭೇದ ಭಾವ ಮಾಡಬಾರದು. ಗಂಡಸೂರು ಏನೇನು ಮಾಡ್ತಾರೋ ಅವನ್ನೆಲ್ಲ ಹೆಂಗಸರಿಗೂ ಮಾಡಲಿಕ್ಕೆ ಅವಕಾಶ ಮಾಡಿಕೊಡಬೇಕು. ಕೇವಲ ಹೆಂಗಸು ಅಂತ ಹೇಳಿ ಅವರನ್ನು ತಡೆಯಬಾರದು. ಲಿಂಗ ಸಮಾನತೆ ಅಂದ್ರ ಇಷ್ಟೇ ನೋಡ್ರೀ,' ಅಂತ ಹೇಳಿದೆ.

'ಹೀಂಗೇನ? ಭಾರಿ ಆತ ಬಿಡ. ಬರೋಬ್ಬರಿನೇ ಐತಿ. ಈಗೇನು ಹೆಣ್ಣಮಕ್ಕಳು ಎಲ್ಲ ಮಾಡತಾರು. ಗಂಡಸರಿಗಿಂತ ಛಲೋನೇ ಮಾಡ್ತಾರ. ಆದ್ರ ನನಗ ಮೂರರ ಬಗ್ಗೆ ಆಕ್ಷೇಪ ಐತಿ ನೋಡಪಾ ತಮ್ಮಾ!' ಅಂತ ಹೇಳಿದರು ಗೌಡ್ರು.

'ಯಾವ್ಯಾವದರ ಬಗ್ಗೆ ನಿಮಗ ಆಕ್ಷೇಪ ಅದರೀ ಗೌಡ್ರ???' ಅಂತ ಕೇಳಿದೆ.

'ಲಿಂಗ ಸಮಾನತೆ ಲಿಂಗ ಸಮಾನತೆ ಅಂತ ಹೇಳಿಕೋತ್ತ ಈ ಹೆಣ್ಣಮಕ್ಕಳು ನಮ್ಮ ಗಂಡಸೂರ ಕಡೆ ಬಸುರಾಗು, ಮಕ್ಕಳಾ ಹಡಿ ಅಂತ ಮಾತ್ರ ಹೇಳಬಾರದು ನೋಡಪಾ. ನಾವು ಹೆಂಗಸೂರಿಗಿಂತ ಕಡಿಮೆ ಅಂತ ಬೇಕಾದ್ರ ಬರೆದುಕೊಟ್ಟು ಒಪ್ಪಿಕೊಂಡುಬಿಡ್ತೇನಿ. ಆದ್ರ ಇವರು ಲಿಂಗ ಸಮಾನತೆ, ಒಂದು ಮಕ್ಕಳಾ ನಾವು ಹೆಂಗಸೂರು ಹಡಿತೇವಿ, ಇನ್ನೊಂದು ನೀವು ಹಡೀರಿ ಅಂದ್ರ ಕೆಲಸ ಕೆಡತೈತಿ ನೋಡಪಾ. ಅದು ಆಗೋ ಮಾತೇ ಅಲ್ಲ. ಅದಕ್ಕೆಲ್ಲ ಹೆಂಗಸೂರೇ ಬೆಷ್ಟ್. ಅವರಿಗೇ ಬರೋಬ್ಬರಿ ಬರತೈತಿ ಅದೆಲ್ಲ. ನಾವು ಗಂಡು ಗೂಳಿ ಸೂಳಿಮಕ್ಕಳಿಗೆ ಮಕ್ಕಳಾ ಮಾಡಾಕ ಒಂದೇ ಬರತೈತಿ. ಆದ್ರ ಮುಂದಿನದು, ಮಕ್ಕಳ ಜ್ವಾಪಾನ್ ಮಾಡೋದು, ಅವರು ಕುಂಡಿ ತೊಳಸೋದು ಮಾತ್ರ ಕೇಳಾಕ ಹೋಗಬ್ಯಾಡ ನೀ,' ಅಂತ ಹೇಳಿ ನಿಟ್ಟುಸಿರು ಬಿಟ್ಟರು ಗೌಡ್ರು.

ನಾ ಪೆಕಪೆಕಾ ಅಂತ ನಕ್ಕೆ. 'ಏ ಹೆಂಗಸೂರು ಹಾಂಗೆಲ್ಲ ಡಿಮ್ಯಾಂಡ್ ಮಾಡೇ ಇಲ್ಲ ಬಿಡ್ರೀ. ಅವರಿಗೂ ಅಷ್ಟು ತಲಿ ಇರತೈತಿ. ಗಂಡಸೂರ ಕಡೆ ಏನೂ ಕೆಲಸ ಹರಿಯೋದಿಲ್ಲ. ಮಕ್ಕಳು, ಮರಿ ಮಾಡಿ ಬೆಳಸೋದು ಎಲ್ಲ ತಾವೇ ಮಾಡಬೇಕು ಅಂತ ಅವರಿಗೆ ಬರೋಬ್ಬರಿ ಗೊತ್ತೈತ್ರೀ. ಅದಕ್ಕೇ ಲಿಂಗ ಸಮಾನತೆ ಒಳಗ ಅದನ್ನ ಆವರು ಕೇಳೋದೇ ಇಲ್ಲ. ಮುಂದಿನವು ಎರಡು ಯಾವದರ ಬಗ್ಗೆ ನಿಮಗ ಆಕ್ಷೇಪ ಅದ ಅನ್ನೋದರ ಬಗ್ಗೆ ಕೂಡ ಹೇಳ್ರೀ,' ಅಂತ ಹೇಳಿದೆ.

'ಇವರು ಸಮಾನತೆ ಸಮಾನತೆ ಅಂತ ಗಂಡಸೂರ ಗತೆ ಬನಿಯನ್ ಕಳೆದು ಬರೆ ಮೈಯಾಗ ಅಡ್ಯಾಡೋದು ಮಾತ್ರ ಸರಿ ಕಾಣಂಗಿಲ್ಲ ನೋಡಪಾ!' ಅಂದು ಬಿಟ್ಟರು ಗೌಡ್ರು. ಹೋಗ್ಗೋ!

'ಗೌಡ್ರ! ಗೌಡ್ರ! ನನಗೆ ತಿಳಿದ ಪ್ರಕಾರ ಲಿಂಗ ಸಮಾನತೆ ಬಗ್ಗೆ ಕೇಳುವವರ್ಯಾರೂ ಈ ತರಹದ ಡಿಮ್ಯಾಂಡ್ ಇಟ್ಟಿಲ್ಲ. ಅಲ್ಲೆ ಅಮೇರಿಕಾದಾಗ ಕೆಲವು ಮಂದಿ ಹೆಂಗಸೂರು, 'ನಾವ್ಯಾಕ ಟಾಪ್ ಲೆಸ್ ಅಡ್ಯಾಡಬಾರದು? ಗಂಡಸೂರು ಅಡ್ಯಾಡಿದ್ರೆ ಓಕೆ. ಆದ್ರ ಹೆಂಗಸೂರು ಮಾತ್ರ ಯಾಕ ಯಾವಾಗಲೂ ಟಾಪ್ ಅಂದ್ರ ಮೇಲ್ಭಾಗ ಮುಚ್ಚಿಕೊಂಡೇ ಇರಬೇಕು? ಇದು ದೊಡ್ಡ ಶೋಷಣೆ. ನಾವು ಇದನ್ನು ತೀವ್ರವಾಗಿ ಪ್ರತಿಭಟಿಸುತ್ತೇವೆ,' ಅಂತ ಹೇಳಿ ಯಾವಗರೆ ಒಮ್ಮೊಮ್ಮೆ ಟಾಪ್ ಲೆಸ್ ಚಳುವಳಿ ಮಾಡ್ತಾರ ನೋಡ್ರೀ. ನ್ಯೂಯಾರ್ಕ್ ಒಳಗ ವರ್ಷಕ್ಕೊಮ್ಮೆ ಯಾವಾಗಲೋ ಒಂದು ದಿವಸ ಕುದರಿ ಮ್ಯಾಲೆ ಟಾಪ್ ಲೆಸ್ ಆಗಿ ಬಂದು ಚಳುವಳಿ ಮಾಡ್ತಾರ ಅಂತ ಎಲ್ಲೋ ಕೇಳಿದ್ದೆ. ಅದು ಬಿಡ್ರೀ. ಅವರು ಯಾರೋ ತಲಿತಿರಕ ಮಂದಿ. ಲಿಂಗ ಸಮಾನತೆ ಬಗ್ಗೆ ಬರೋಬ್ಬರಿ ಅರಿವಿದ್ದ ಮಂದಿ ಅಂತಾ ಹುಚ್ಚುಚ್ಚ ಡಿಮ್ಯಾಂಡ್ ಮಾಡೋದಿಲ್ಲ. ಅವರು ಕೇಳುವಂತಹ ಸಮಾನತೆಗಳೇ ಬೇರೆ. ಮುಂದ ಯಾವ ವಿಷಯದ ಬಗ್ಗೆ ನಿಮಗ ತಕರಾರು ಅದ?' ಅಂತ ಕೇಳಿದೆ.

'ನನ್ನ ಮುಂದಿನ ತಕರಾರು ಇರೋದು ಅಂದ್ರ ಉಚ್ಚಿ ಹೊಯ್ಯೋದರ ಬಗ್ಗೆ ನೋಡು. ಗಂಡಸೂರು ಬೇಕುಬೇಕಾದ ಕಡೆ, ಹ್ಯಾಂಗ ಬೇಕಾದ್ರ ಹಾಂಗ ನಿಂತು ಉಚ್ಚಿ ಹೊಯ್ತಾರ. ನಾವೂ ಹಾಂಗೇ ನಿಂತೇ ಉಚ್ಚಿ ಹೊಯ್ತೇವಿ ಅಂತ ಹೇಳಿಕೋತ್ತ ಬಂದ್ರ ಏನು ಮಾಡೋದೋ ತಮ್ಮಾ? ಲಿಂಗ ಸಮಾನತೆ ಅಂತ ಹೇಳಿ ಹೆಂಗಸೂರೂ ನಿಂತು ಉಚ್ಚಿ ಹೊಯ್ತೇವಿ ಅಂದ್ರ ಏನು ಮಾಡೋದು? ದೊಡ್ಡ ಅನಾಹುತ ಆಗಿ ಹೊಕ್ಕೈತಿ. ಶಿವನೇ ಆ ಕಾಲ ಬರೋದ್ರಾಗ ಮ್ಯಾಲೆ ಎಳಕೋ ತಂದೆ,' ಅಂತ ಹೇಳಿ, ಆಕಾಶ ನೋಡಿ, ತಮ್ಮ ಗುಡುಗುಡಿಯಾಗ ಒಂದು ದೊಡ್ಡ ದಮ್ಮು ಎಳೆದರು ಗೌಡ್ರು.

'ಅಯ್ಯೋ ಗೌಡ್ರ! ಅಂತಾ ಡಿಮ್ಯಾಂಡ್ ಯಾರೂ ಮಾಡಿಲ್ಲರೀ. ನಾ ನಿಮಗ ಹೇಳಿಬಿಡ್ತೇನಿ. ಲಿಂಗ ಸಮಾನತೆ ಅಂತ ಕೇಳುವ ಮಂದಿ ಸಮಾನ ಅವಕಾಶಗಳಿಗೆ ಮಾತ್ರ ಡಿಮ್ಯಾಂಡ್ ಮಾಡ್ತಾರೆಯೇ ಹೊರತೂ ಇಂತಹ ಹುಚ್ಚುಚ್ಚ ವಿಷಯಗಳಿಗೆಲ್ಲ ತಲಿ ಕೆಡಿಸಿಕೊಳ್ಳೋದಿಲ್ಲ. ನೌಕರಿ ಒಳಗ, ವಿದ್ಯಾಭ್ಯಾಸ ಒಳಗ, ಬಾಕಿ ಕೆಲಸದೊಳಗ ಗಂಡಸು ಹೆಂಗಸು ಅಂತ ಭೇದ ಭಾವ ಮಾಡಬ್ಯಾಡ್ರೀ ಅಂತ ಲಿಂಗ ಸಮಾನತೆ ಅನ್ನೋದರ ಸಾರಾಂಶ. ಅಷ್ಟೇ. ಅದು ಬಿಟ್ಟು ನೀವು ಗಂಡಸೂರು ಬಸುರಾಗಿ ಮಕ್ಕಳಾ ಹಡಿಬೇಕು, ಹೆಂಗಸೂರು ಬನಿಯನ್ ಕಳೆದು ಬರಿ ಮೈಯಾಗ ಅಡ್ಯಾಡಿ ಮಂದಿ ತಲಿ ಕೆಡಸ್ತಾರ, ನಿಂತು ಉಚ್ಚಿ ಹೊಯ್ತೇವಿ ಅಂತ ಜಗಳಾ ಮಾಡ್ತಾರ ಅಂತೆಲ್ಲ ಏನೇನೋ ವಿಚಾರ ಮಾಡಿ ತಲಿ ಕೆಡಿಸ್ಕೋಬ್ಯಾಡ್ರೀ. ಲಿಂಗ ಸಮಾನತೆ ಬಗ್ಗೆ ಕೇಳುವ ಮಂದಿಗೆ ತಲಿ ಇರ್ತದ. ಅವರು ಬ್ಯಾರೆನೇ ಡಿಮ್ಯಾಂಡ್ ಮಾಡ್ತಾರ. ಅದು ಬರೋಬ್ಬರಿನೂ ಅದ ತೊಗೋರಿ,' ಅಂತ ಫುಲ್ ವಿವರಣೆ ಕೊಟ್ಟು, ಲಿಂಗ ಸಮಾನತೆಯ ಬಗ್ಗೆ ಗೌಡರ ಪೂರ್ವಾಗ್ರಹಗಳನ್ನು ದೂರ ಮಾಡಿದೆ.

'ನಿನಗ ಖರೆ ಹೇಳಬೇಕು ಅಂದ್ರ ಉಚ್ಚಿ ಹೊಯ್ಯೋದ್ರಾಗ ಲಿಂಗ ಸಮಾನತೆ ಇರಲೇಬೇಕು ಅಂತ ಹೇಳತೇನಿ ನೋಡಪಾ ನಾ!' ಅಂದು ಬಿಟ್ಟರು ಗೌಡ್ರು.

ಏಕ್ದಂ ಘಾಬ್ರಿನೇ ಆತು. ಯಾವ ದಿಕ್ಕಿನಾಗ ಹೊಂಟದ ಗೌಡರ ತಲಿ  ಅಂತ ತಿಳಿಲಿಲ್ಲ. 'ಏನ್ರೀ ಹಾಂಗಂದ್ರ? ಏನು ನೀವು ಹೇಳೋದು? ಹೆಂಗಸೂರು ಸಹಿತ ನಿಂತೇ ಉಚ್ಚಿ ಹೊಯ್ಯಬೇಕು ಅಂತೇನು????? ಹಾಂ???' ಅಂತ ಕೇಳಿದೆ.

'ಏ, ಮಬ್ಬಾ. ನಿನ್ನ ತಲಿ. ನಾ ಹೇಳಿದ್ದು ಅದಲ್ಲ..... ' ಅಂದ್ರು ಗೌಡ್ರು.

'ಮತ್ತರೀ??????' ಅಂತ ಭಾಳ ಆಶ್ಚರ್ಯದಿಂದ ಕೇಳಿದೆ.

'ಗಂಡಸೂರೂ ಸಹ ಕುಂತೇ ಉಚ್ಚಿ ಹೊಯ್ಯಬೇಕು ನೋಡಪಾ. ಹಾಂಗಂತ ಒಂದು ಕಾಯಿದೆ ಮಾಡಬೇಕು ನೋಡಲೇ ತಮ್ಮಾ,' ಅಂತ ಫರ್ಮಾನ್ ಹೊಡೆಸಿದರು ಗೌಡ್ರು.

'ಯಾಕ್ರೀ? ಏನಿದು ವಿಚಿತ್ರ ನೀವು ಹೇಳೋದು?' ಅಂತ ಕೇಳಿದೆ.

'ಮುಸಲರ ಮಂದಿ ನೋಡಲೇ. ಅವರನ್ನ ನೋಡಿ ಸ್ವಲ್ಪ ಕಲಿರೋ. ಅವರು ಯಾವಾಗಲೂ ಕುಂತೇ ಉಚ್ಚಿ ಹೊಯ್ಯೋದು. ನಮ್ಮಂತ ವಯಸ್ಸಾದ ತಲೆಮಾರಿನ ಮಂದಿ ನೋಡ್ರಿಲೇ. ನಾಚಿಗಿ ಬರಬೇಕು ನಿಂತು ಹೊಯ್ಯವರಿಗೆ. ಒಂದು ಮಾತು. ನನಗಂತೂ ನಿಂತು ಉಚ್ಚಿ ಹೊಯ್ಯವರನ್ನ ನೋಡಿದರೆ ಇಷ್ಟು ಖುನ್ನಸ್ (ಸಿಟ್ಟು) ಬರತೈತಿ ಅಂದ್ರ ಏನು ಹೇಳಲಿ. ಹೋಗಿ, ನಿಂತು ಉಚ್ಚಿ ಹೊಯ್ಕೋತ್ತ ನಿಂತ ಮಂದಿ ಕುಂಡಿಗೆ ಝಾಡಿಸಿ ಓದಿ ಬೇಕು ಅನ್ನುವಷ್ಟು ಸಿಟ್ಟು ಬರತೈತಿ ನೋಡಪಾ. ನೀವು ಬ್ರಾಹ್ಮಣರಂತೂ ಕೆಟ್ಟು ಕೆರಾ ಹಿಡಿದು ಹೋಗೀರಿ. ಉಚ್ಚಿ ಹೊಯ್ಯಾಕ ಹೋದಾಗ ನಿನ್ನ ಜನಿವಾರ ಕಿವಿಗೆ ಸುತ್ತತೀಯೋ ಇಲ್ಲೋ??? ಹಾಂ???' ಅಂತ ಹೂಂಕರಿಸಿದರು ಗೌಡ್ರು.

ಅಬ್ಬಾ! ಭಾರಿ ಜಬರ್ದಸ್ತ್ ಗೌಡ್ರು. ಇವರು ಇಷ್ಟು passionate ಆಗಿ ಅಸಡ್ಡಾಳ ನಿಂತು ಉಚ್ಚಿ ಹೊಯ್ಯೋದರ ಬಗ್ಗೆ ಫತ್ವಾ ಹೊರಡಿಸಲಿಕ್ಕೆ ಶುರು ಮಾಡ್ಯಾರ ಅಂದ ಮ್ಯಾಲೆ ಸುಮ್ಮನೆ ಕೂಡೋದೇ ಬೆಟರ್. ಮತ್ತ ನಮ್ಮ ಕಡೆ ಬ್ಯಾರೆ ಜನಿವಾರ ಇಲ್ಲೇ ಇಲ್ಲ. 'ಮಾಡೋದಷ್ಟೂ ಹೊಲಗೇರಿ. ಅದರ ಮ್ಯಾಲೆ ಜನಿವಾರ ಹಾಕ್ಕೊಂಡೇ ಮಾಡ್ತೀ. ತೆಗೆದಿಟ್ಟುಬಿಡು,' ಅಂತ ಮನಿ ಮಂದಿ ಬೈದರು ಅಂತ ಜನಿವಾರ ತೆಗೆದಿಟ್ಟುಬಿಟ್ಟವರು ನಾವು. ಎಲ್ಲರೆ ಗೌಡ್ರು, 'ನಿನ್ನ ಜನಿವಾರ ಎಲ್ಲೈತಿ????' ಅಂತ ಹೂಂಕರಿಸುತ್ತ ಬಂದರೆ ಕಷ್ಟ.

'ತಮ್ಮಾ, ಈ ಲಿಂಗ ಸಮಾನತೆ ಲಿಂಗ ಸಮಾನತೆ ಅಂತ ಆ ಪರಿ ಬಡಕೊಳ್ಳೋ ಹೆಂಗಸೂರು ಬಸ್ಸಿನ್ಯಾಗ ಹೆಂಗಸೂರಿಗೇ ಅಂತನೇ ಕಾದಿಟ್ಟ ಸೀಟು, ಬೇರೆ ಬೇರೆ ಕಡೆ ಅದೇ ರೀತಿ ಹೆಂಗಸೂರಿಗೆ ಅಂತ reservation ಬಗ್ಗೆ ಏನಂತಾರ? ಲಿಂಗ ಸಮಾನತೆ ಬೇಕು ಅಂದ ಮ್ಯಾಲೆ reservation ಯಾಕ ಕೇಳ್ತಾರ ಈ ಹೆಂಗಸೂರು???? ಹಾಂ???' ಅಂತ ಕೇಳಿದರು ಗೌಡ್ರು. ಭಾರಿ ಲಾಜಿಕ್ ಪಾಯಿಂಟ್ ಗೌಡರದ್ದು.

'ಗೌಡ್ರ, ನನಗ ತಿಳಿದಿರುವ ಪ್ರಕಾರ, ನಾನು ಮಾತಾಡಿರೋ feminist ಮಂದಿ ತಿಳಿಸಿದ ಪ್ರಕಾರ, ಹೆಂಗಸೂರು ಯಾವದೇ ತರಹದ reservation ಕೇಳಿಯೇ ಇಲ್ಲ. ಅವರು ಕೇಳಿದ್ದು ಸಮಾನತೆ, ಸಮಾನ ಅವಕಾಶಗಳು ಅಷ್ಟೇ. ಅವರು ತಮಗೆ ಬಸ್ಸಿನ್ಯಾಗ ಸೀಟು ಕೊಡ್ರೀ, ನೌಕರಿಯಾಗ ಸೀಟು ಕೊಡ್ರೀ ಅಂತ ಕೇಳಿಯೇ ಇಲ್ಲ. ಅವರು ಕೇಳಿದ್ದು ಅಂದ್ರ, ಹೆಂಗಸೂರಿಗೆ ಎಲ್ಲ ಅವಕಾಶ ಕೊಟ್ಟು, ಭೇದ ಭಾವದಿಂದ ಮುಕ್ತ ಮಾಡಿರಿ ಅಂತ. ಈ ಬಸ್ಸಿನ್ಯಾಗ ಸೀಟು ಕಾದಿಟ್ಟೆ, ನೌಕರಿಯಾಗ ಒಂದಿಷ್ಟು ನೌಕರಿ ಕಾದಿಟ್ಟು ಅವರಿಗೆ ಬಿಸ್ಕೀಟ್ ಹಾಕಿದೆ ಅನ್ನೋದು ಅವರಿಗೆ ಸೇರೋದಿಲ್ಲ. ನಮಗ ಯಾವದೇ reservation ಬ್ಯಾಡೇ ಬ್ಯಾಡ. ನಮ್ಮ ಕಾಬೀಲಿಯತ್ ಮ್ಯಾಲೆ ನಮಗ ಬರೋಬ್ಬರಿ ಅವಕಾಶ ಕೊಟ್ಟು ಬಿಟ್ಟರೆ ಆಷ್ಟೇ ಸಾಕು ಅಂತಾರ. ನನಗ ಅನ್ನಿಸೋ ಮಟ್ಟಿಗೆ ಬಸ್ಸಿನಾಗ ಸೀಟು ಇತ್ಯಾದಿ ಕಾದಿಡಬೇಕು ಅಂತ ಕಾಯಿದೆ ಮಾಡಿದವರು ಯಾರೋ ತಲಿ ಇಲ್ಲದ ಗಂಡಸರೇ ಇರಬೇಕು. ಹೆಂಗಸೂರ ವಿಷಯದ ಬಗ್ಗೆ ಗಂಡಸೂರು ತಲಿ ಕೆಡಿಸಿಕೊಂಡರೆ ಇಷ್ಟೇ ಆಗೋದು. ಹಾಂಗಾಗೇ ಇಂತಾ ಹುಚ್ಚುಚ್ಚ ಕಾಯಿದೆ ತರ್ತಾರ ನೋಡ್ರೀ. ಮಹಿಳಾ ಸಮಾನತೆ ಬಗ್ಗೆ ಮಹಿಳೆಯರು ಏನು ಹೇಳ್ತಾರ ಅಂತ ಕೇಳಬೇಕಾಗಿತ್ತು ಅವರು. ಮಹಿಳೆಯರ ಸಲಹೆ ಕೇಳಲೇ ಇಲ್ಲ. ಅಲ್ಲೇ ಲಿಂಗ ಅಸಮಾನತೆ ತೋರಿಸಿಬಿಟ್ಟರು,' ಅಂತ ಹೇಳಿದೆ. ಒಳ್ಳೆ ಫೆಮಿನಿಸ್ಟ್ ಮಂದಿ ಡಿಫೆಂಡ್ ಮಾಡಿಕೊಂಡೆ.

'ಏ ತಮ್ಮಾ, ಲಿಂಗ ಸಮಾನತೆ ಬಗ್ಗೆ ಕೇಳುವ, ಮಾತಾಡುವ ಹೆಂಗಸೂರಿಗೆ ಅದು ಏನೋ 'ಇಸ್ಟು' ಅಂತಾರ ಅಂದಿ. ಅವರೇನು ಒಸಾಮಾ ಬಿನ್ ಲಾಡೆನ್ ಪೈಕಿ ಏನು? ಭಾಳ ಡೇಂಜರ್ ಮಂದಿ ಏನು? ಹಾಂ??? '  ಅಂತ ಕೇಳಿಬಿಟ್ಟರು ಗೌಡರು.

'ಯಾರ್ರೀ ಗೌಡರ? ಯಾರು ಒಸಮಾ ಬಿನ್ ಲಾಡೆನ್ ಪೈಕಿ ಮಂದಿ? ಹಾಂ?' ಅಂತ ಭಾಳ ಘಾಬ್ರಿಯಿಂದ ಕೇಳಿದೆ.

'ಅದು ನೀನೇ ಈಗ ಹೇಳಿದ್ಯಲ್ಲೋ. ನೀನು ಯಾರೋ 'ಇಸ್ಟು' ಮಂದಿ ಜೋಡಿ ಮಾತಾಡಿದಿ ಅಂತ. ಅವರು ಯಾರೂ ಬಸ್ಸಿನಾಗ ಹೆಂಗಸೂರಿಗೆ ಸೀಟು ಅದು ಇದು ಬೇಕು ಅಂತ ಕೇಳೇ ಇಲ್ಲ ಅಂತ ಹೇಳಿದರು ಅಂತ ನೀನೇ ಹೇಳಿದ್ಯಲ್ಲೋ ತಮ್ಮಾ. ಅವರ ಬಗ್ಗೆ ಕೇಳಿದೆ,' ಅಂದ್ರು ಗೌಡರು.

ಈಗ ಫ್ಲಾಶ್ ಆತು. ನಾವು feminist ಅಂದಿದ್ದು ಗೌಡರಿಗೆ terrorist ಅಂತ ಕೇಳಿರಬೇಕು. ಅಥವಾ ಏನೋ ಕೇಳಿ ಏನೋ ಅರ್ಥ ಮಾಡಿಕೊಂಡಾರ. terrorist ಅಂದ ಕೂಡಲೇ ಅವರಿಗೆ ಏಕ್ದಂ ಒಸಮಾ ಬಿನ್ ಲಾಡೆನ್ ನೆನಪಾಗಿಬಿಟ್ಟಿರಬೇಕು. ಅದಕ್ಕೇ ಈ feminist ಮಂದಿ ಸಹ ಅವನ ಪೈಕಿ terrorist ಏನು ಅಂತ ಕೇಳಲಿಕತ್ತುಬಿಟ್ಟಾರ. ಹೋಗ್ಗೋ!

'ಹಾ!ಹಾ! ಗೌಡರ. ಭಾರಿ ಲಿಂಕ್ ಕೊಡ್ತೀರಿ ಬಿಡ್ರೀ. ಎಲ್ಲಿ feminist ಎಲ್ಲಿ terrorist. ಹಾ! ಹಾ! ಭಾಳ ನಗು ಬಂತು ನಿಮ್ಮ ಮಾತು ಕೇಳಿ. ಏ ಇಲ್ಲರೀಪಾ. feminist ಬ್ಯಾರೆ terrorist ಬ್ಯಾರೆ. feminist ಅಂದ್ರ ಮಹಿಳೆಯರ ಹಕ್ಕಿಗಾಗಿ, ಸಮಾನತೆಗಾಗಿ ಹೋರಾಡುವವರು. ಅವರು ಹೆಂಗಸರು ಅಥವಾ ಹೆಂಗರುಳಿನ ಗಂಡಸರೂ ಆಗಿರಬಹುದು. ಆದ್ರ ಟೆರರಿಸ್ಟ್ ಅಲ್ಲ. ಕೆಲವು ಮಂದಿ ಹುಚ್ಚು ನಾಯಿ ಕಡಿದ feminist ಮಂದಿ ಮಾತ್ರ ಯಾವ terrorist ಗಿಂತಲೂ ಕಮ್ಮಿ ಅಲ್ಲ ತೊಗೊರೀ. ಆದ್ರ ಅಂತವರು ಭಾಳ ಕಮ್ಮಿ. ಅಕಸ್ಮಾತ ಯಾರಾದರೂ ಲಿಂಗ ಸಮಾನತೆ ಹೆಸರಲ್ಲಿ, ನಾವೂ ಸಹ ಗಂಡಸರ ಹಾಗೆ ಟಾಪ್ ಲೆಸ್ ಓಡಾಡ್ತೇವಿ, ನಿಂತೇ ಉಚ್ಚಿ ಹೊಯ್ಯತೇವಿ ಅಂತೆಲ್ಲ ಹುಚ್ಚುಚ್ಚ ಮಾತಾಡಿಕೋತ್ತ, ಇಲ್ಲದ ಜಗಳ ಮಾಡಿಕೋತ್ತ ಬಂದರು ಅಂದ್ರ ಅವರು ಮಾತ್ರ ಫೆಮಿನಿಸ್ಟ್ ಎಂಬ ಟೆರರಿಸ್ಟ್ ಗಳೇ ಸರಿ. ಆದ್ರ ಒಳ್ಳೆ ಫೆಮಿನಿಸ್ಟ್ ಮಂದಿ ಯಾರೂ ಹಾಂಗ ಮಾತಾಡಿದ್ದನ್ನ ನಾ ಕೇಳಿಲ್ಲ,' ಅಂತ ಹೇಳಿದೆ.

'ತಮ್ಮಾ, ಒಂದು ಮಾತ ಹೇಳು. ಲಿಂಗ ಸಮಾನತೆ ಅಂದರೆ ಬರೆ ಹೆಂಗಸೂರು ಮತ್ತ ಗಂಡಸೂರು ಅಷ್ಟೇ ಏನು? ಪುಲ್ಲಿಂಗ, ಸ್ತ್ರೀಲಿಂಗ ಬಿಟ್ಟು ಇನ್ನೂ ಎರಡು ಲಿಂಗ ಅದಾವಲ್ಲೋ. ಅವರ ಬಗ್ಗೆ ಏನು? ಅವರಿಗೂ ಲಿಂಗ ಸಮಾನತೆ ಐತಿ ಏನು? ಹಾಂ?' ಅಂತ ಕೇಳಿಬಿಟ್ಟರು ಗೌಡ್ರು.

ಹಾಂ!!!??? ಪುಲ್ಲಿಂಗ, ಸ್ತ್ರೀಲಿಂಗ ಬಿಟ್ಟು ಇನ್ನೂ ಎರಡು ಲಿಂಗಗಳೇ???!!

'ಗೌಡರ, ಇನ್ನೂ ಒಂದೇ ಅಲ್ಲೇನ್ರೀ??? ಹಾಂ? ನಪುಂಸಕಲಿಂಗ. ಕಲ್ಲು, ಮಣ್ಣು, ಪ್ರಾಣಿ, ಪಕ್ಷಿ ಇತ್ಯಾದಿ. ಅವಕ್ಕೆಲ್ಲ ಲಿಂಗ ಸಮಾನತೆ ಹೊಂದೋದಿಲ್ಲ ಬಿಡ್ರೀ,' ಅಂತ ಹೇಳಿದೆ.

'ಏ, ಅದಲ್ಲೋ. ಮತ್ತೊಂದು ಲಿಂಗ ಅಂದ್ರ ಈ ಛಕ್ಕಾ ಮಂದಿಯೋ ಮಾರಾಯಾ. ಕಂಡ ಕಂಡಲ್ಲಿ ಆಟಕಾಯಿಸಿಕೊಂಡು, ಚಪ್ಪಾಳಿ ಹೊಡೆದು, ಸುತ್ತಲೂ ಡಾನ್ಸ್ ಮಾಡಿ, ಲಟಿಕಿ ಮುರಿದು, ದೃಷ್ಟಿ ತೆಗೆದು ರೊಕ್ಕಾ ಕೇಳುವ ಮಂದಿ. ಅವರೂ ಒಂದು ಲಿಂಗ ಅಲ್ಲೇನೋ? ಹಾಂ?'

'ಗೌಡ್ರ, ಬರೋಬ್ಬರಿ ಹೇಳಿದಿರಿ. ನಾ ಮರತೇ ಬಿಟ್ಟಿದ್ದೆ. ಈಗ ಅವರಿಗೆ ಛಕ್ಕಾ, ಹಿಜಡಾ ಅದು ಇದು ಅನ್ನುವ ಹಾಗಿಲ್ಲರೀ. ಕೋರ್ಟ್ ಹೇಳಿದ ಪ್ರಕಾರ ಅವರಿಗೆ ತೃತೀಯ ಲಿಂಗಿಗಳು ಅಂತ ಅನ್ನಬೇಕು. ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ, ತೃತೀಯ ಲಿಂಗ. ಪುಲ್ಲಿಂಗ, ಸ್ತ್ರೀಲಿಂಗ, ತೃತೀಯ ಲಿಂಗಗಳಿಗೆ ಸಮಾನತೆ ಅದ ನೋಡ್ರೀ,' ಅಂತ ಹೇಳಿದೆ.

'ಏನು! ಅವರಿಗೆ ತೃತೀಯ ಲಿಂಗಿ ಅನಬೇಕ? ಯಾಕ? ಅವರೇನು ಕೇವಲ ಅಕ್ಷಯ ತೃತೀಯಾ ಹೊತ್ತಿಗೆ ಮಾತ್ರ ಆಟಕಾಯಿಸಿಕೊಂಡು ರೊಕ್ಕ ಕೇಳ್ತಾರ ಏನು? ಅಕ್ಷಯ ತೃತೀಯಾ ಹಬ್ಬದ ಸುತ್ತ ಮುತ್ತ ಏನರೆ ಕಣ್ಣಿಗೆ ಬಿದ್ದು, ಕಾಡಿಸಿ ಪೀಡಿಸಿ ರೊಕ್ಕ ಕೇಳಬೇಕು. ಆವಾಗ ನೋಡು. ಅಷ್ಟೇ ನೋಡು. ಅಲ್ಲೇ ಅವರನ್ನ ಹಾಕ್ಕೊಂಡು ಬಡಿದು ಬಡಿದು ಕೊಂದು ಒಗೆದು ಬಿಡ್ತೇನಿ. ಆ ಹೊತ್ತಿಗೆ ನಮಗ ಬಸವ ಜಯಂತಿ ಸುದಾ ಬಂದಿರ್ತೈತಿ. ಅಂತಾದ್ರಾಗ ಈ ಹೊಲಸ್ ಛಕ್ಕಾ ಮಂದಿ ಕಂಡರು ಅಂದ್ರ ಅಷ್ಟೇ ಮತ್ತ. ಖೂನ್ ಮಾಡೇಬಿಡ್ತೇನಿ. ನಾ ಒಮ್ಮೆ ಅಂತಾ ತೃತೀಯ ಲಿಂಗಿಗೆ ಮಸ್ತಾಗಿ ಟೊಪಿಗಿ ಹಾಕಿದ್ದೆ. ಆಮ್ಯಾಲೆ ಆವಾ / ಅಕಿ ನನ್ನ ಕಡೆ ರೊಕ್ಕಾ ಕೇಳಿದರೆ ಕೇಳು. ಹಾಂಗ ಮಾಡಿದ್ದೆ ಅವರಿಗೆ,' ಅಂತ ಹೇಳಿದ ಗೌಡರು ತಮ್ಮ ಯಾವದೋ ಹಳೆಯ ವಿಜಯದ ನೆನಪು ಮಾಡಿಕೊಂಡರು. ಮುಖದ ಮೇಲೆ ಹೆಮ್ಮೆ ಮೂಡಿತು.

'ಏನಾಗಿತ್ತು? ಯಾವ ತೃತೀಯ ಲಿಂಗಿಗೆ ಏನು ಮಾಡಿ ಬಂದಿದ್ದಿರಿ? ಎಲ್ಲರೆ ಖೂನ್ ಗೀನ್ ಮಾಡಿಬಿಟ್ಟರೇನು ಮತ್ತ?' ಅಂತ ಕೇಳಿದೆ.

'ಏ, ಎಲ್ಲಿದ. ಖೂನ್ ಗೀನ್ ಮಾಡೇನಿ. ಅದ್ರ ನನ್ನ ಹಾಂಗೇ ದೊಡ್ಡ ಮೀಸಿ ಬಿಟ್ಟ ಗಂಡ ಮಂದಿದು ಮಾಡೇನಿ. ಇಲ್ಲೆ ಏನಾಗಿತ್ತು ಅಂದ್ರ.... ಒಮ್ಮೆ ಬೆಂಗಳೂರಿಗೆ ಹೋಗಿದ್ದೆ ಏನಪಾ ತಮ್ಮಾ. ಭಾಳ ಹಿಂದೆ. ಅಲ್ಲೆ ಈ ಛಕ್ಕಾ ಮಂದಿ ಭಾಳ ನೋಡು. ಕಂಡಕಂಡಲ್ಲೆ ಹಿಡಿಯೋದು, ಗಲ್ಲಾ ಸವರೋದು, ಚಪ್ಪಾಳಿ ಹೊಡೆಯೋದು, ಸುತ್ತಲೂ ಹುಚ್ಚರ ಗತೆ ಡಾನ್ಸ್ ಮಾಡೋದು. ಡಾನ್ಸ್ ಮಾಡಿ, 'ಏ ಮಾಮಾ, ಕಾಸು ಕೊಡೋ.... ' ಅಂತ ಕಾಡೋದು. ಭಿಕ್ಷಾದವರಿಗೆ ಕೊಡತೇನಿ. ಆದ್ರ ಈ ಧಾಂಡಗ್ಯಾ ಮಂದಿಗೆ ಕೊಡಂಗಿಲ್ಲ. ದುಡಿದು ತಿನ್ನಾಕ ಏನು ಧಾಡಿ?? ಹಾಂ? ಹಾಗಂತ ಹೇಳಿ, ತಡಿ ಇವರಿಗೆ ಬರೋಬ್ಬರಿ ಬತ್ತಿ ಇಡೋಣ ಅಂತ ಹೇಳಿ ಒಂದು ಉಪಾಯ ಮಾಡಿದೆ. ಮುಂದಿನ ಸಲೆ ಸಿಕ್ಕು, ಚಪ್ಪಾಳಿ ಹೊಡೆದು, ರೊಕ್ಕಾ ಕೇಳಿದಾಗ ನಾನೂ ಒಂದು ಖತರ್ನಾಕ್ ಕೆಲಸ ಮಾಡಿಬಿಟ್ಟೆ. ನಾನೂ ಅವನ ಹಾಂಗ ಚಪ್ಪಾಳಿ ಹೊಡೆದು, ಅವನ ಸುತ್ತನೇ ಡಾನ್ಸ್ ಮಾಡಿ, 'ಈಗ ನಾನೂ ಚಪ್ಪಾಳಿ ಹೊಡದೆ, ನಾನೂ ಡಾನ್ಸ್ ಮಾಡಿದೆ, ನನಗೂ ರೊಕ್ಕಾ ಕೊಡೋ. ಕೊಡೋ ನಿಮ್ಮೌನ್. ಕೊಡ ನೀ. ಕೊಡ್ತೀಯೋ ಇಲ್ಲೋ???' ಅಂತ ಜಗಳಾ ತೆಗೆದು ಕುಂತೆ ನೋಡು. ಅಕಿನೋ, ಅವನೋ. ಛಕ್ಕಾ ಮಂದಿಗೆ ಏನು ಅನ್ನಬೇಕೋ ಗೊತ್ತಿಲ್ಲ. ಫುಲ್ ಥಂಡಾ ಹೊಡೆದು, 'ಏನು ಹುಚ್ಚ ಅದಿಯೋ ಮಾರಾಯಾ. ನಿನ್ನ ಸಹವಾಸ ಬ್ಯಾಡ,' ಅಂತ ಹೇಳಿ ಓಡಿ ಹೋದ ನೋಡು. ಆಮ್ಯಾಲೆ ಬೆಂಗಳೂರಾಗ ಇದ್ದಷ್ಟು ದಿವಸ ಅವರ ಪೈಕಿ ಮಂದಿ ಯಾರೂ ನನ್ನ ಸುದ್ದಿಗೆ ಬರಲಿಲ್ಲ ನೋಡು. ಎಲ್ಲಾರಿಗೂ ಗೊತ್ತಾಗಿರಬೇಕು. ಈ ಗೌಡ ಭಾರಿ ಜಾಬಾದ್ ಅದಾನ ಅಂತ. ನಮ್ಮ ಬತ್ತಿ ನಮಗೇ ವಾಪಸ್ ಇಟ್ಟು ಕಳಸ್ತಾನ ಅಂತ,' ಅಂತ ಗೌಡರು ತೃತೀಯ ಲಿಂಗಿಯೊಬ್ಬನಿಗೆ ಹೇಗೆ ಮಂಗ್ಯಾ ಮಾಡಿದ್ದೆ ಅನ್ನುವದರ ಬಗ್ಗೆ ರಸವತ್ತಾಗಿ ಹೇಳಿದರು. ಅಬ್ಬಾ! ಖತರ್ನಾಕ್ ಗೌಡ್ರು! ಹೆಚ್ಚಾಗಿ ಈ ಸುದ್ದಿ ನಾನಾ ಪಾಟೇಕರ್ ತನಕಾ ಹೋಗಿ ಮುಟ್ಟಿರಬೇಕು. ಅವನೂ ಒಂದು ಸಿನೆಮಾದಾಗ ಅದನ್ನೇ ಮಾಡ್ಯಾನ. ನಮ್ಮ ಗೌಡರಿಗೆ ಅದರ ಕ್ರೆಡಿಟ್ ಸಲ್ಲಬೇಕು.'ಇನ್ನೂ ಎರಡು ಲಿಂಗ ಅವ ಅಂದ್ರಲ್ಲರೀ ಗೌಡ್ರ? ತೃತೀಯ ಲಿಂಗ ಆತು. ಇನ್ನೊಂದು ಯಾವದು?' ಅಂತ ಕೇಳಿದೆ.

'ಮುಂದಿನದು ಅಂದ್ರ ಗೇಹೂಂ ಲಿಂಗ. ಗೊತ್ತಾತ???' ಅಂತ ಕೇಳಿದರು. ಹೊಸ ಬಾಂಬ್ ಹಾಕೇಬಿಟ್ಟರು.

ಹ್ಯಾಂ?? ಗೇಹೂ ಲಿಂಗ!? ಏನಿದು?! ನಿಜವಾಗಿಯೂ ತಿಳಿಯಲಿಲ್ಲ. ಆದರೂ ಒಂದಕ್ಕೊಂದು ಏನೋ ಕನೆಕ್ಷನ್ ಕೊಟ್ಟು ಕೇಳೇ ಬಿಟ್ಟೆ.

'ಗೌಡ್ರ, ಗೇಹೂ ಅಂದ್ರ ಗೋಧಿ. ಗೋಧಿ ಬೆಳೆಯುವವರೇ ಒಂದು ಬ್ಯಾರೆ ಲಿಂಗ ಅಂತೇನು? ಹಾಂ? ಹಾಂಗಿದ್ರ  ನೀವು ಜೋಳ ಬೆಳೆಯವರು ಯಾವ ಲಿಂಗ? ಹಾಂ?' ಅಂತ ಕೇಳಿದೆ.

ಗೌಡರು ಬಿದ್ದು ಬಿದ್ದು ನಕ್ಕರು. ತಟ್ಟಿಕೊಂಡು ತಟ್ಟಿಕೊಂಡು ನಕ್ಕರು. ನಂದೂ ತಟ್ಟುತ್ತಿದ್ದರೋ ಏನೋ. ನಾ ಸ್ವಲ್ಪ ದೂರ ಕೂತಿದ್ದೆ. ಹಾಂಗಾಗಿ ಗೌಡರು ದೂರಿಂದಲೇ ತಟ್ಟಿದ ಹಾಂಗೆ ಮಾಡಿ ನಕ್ಕೇ ನಕ್ಕರು.

'ಹೋಗ್ಗೋ ನಿನ್ನ ಹುಚ್ಚ ಮಂಗ್ಯಾ. ಎಷ್ಟು ಕಲಿತರೆ ಏನು ಉಪಯೋಗ? ಎಲ್ಲಿದ್ದರೆ ಏನು ಉಪಯೋಗ? ಗೇಹೂಂ ಅಂದ್ರ ಗೊತ್ತಿಲ್ಲ? ಹಾಂ? ಅದೂ ಸಹ ಇಂಗ್ಲೀಷ್ ಶಬ್ದಲೇ. ಗೇಹೂಂ ಅಂದ್ರ ಹೋಮೋಗಳಲೇ. ಈಗರೆ ಗೊತ್ತಾತ??? ಹಾಂ?' ಅಂತ ಹೊಸ ಬಾಂಬ್ ಹಾಕಿಬಿಟ್ಟರು ಗೌಡ್ರು. ಬಾಂಬಿನ ಮೇಲೆ ಬಾಂಬ್.

ಹೋಮೋ ಅಂದ ಮ್ಯಾಲೆ ಗೊತ್ತಾಗದೇ ಇದ್ರ ಹ್ಯಾಂಗ? ಗೊತ್ತಾತು. ಸಲಿಂಗಿಗಳು. ಆದ್ರ ಅವರಿಗೆ ಗೌಡ್ರು ಗೇಹೂಂ ಅರ್ಥಾತ್ ಗೋಧಿ ಅಂತ ಯಾಕ ಅನ್ನಲಿಕತ್ತಾರ ಅಂತ ಮಾತ್ರ ತಿಳಿಲಿಲ್ಲ.

'ಗೌಡ್ರ ಗೌಡ್ರ! ಏನ್ ಮಾತ್ರೀ ಇದು?? ಸಲಿಂಗಿಗಳು ಅಂತ ಅನ್ನರೀಪಾ. ಅವರಿಗೆ ಹೋಮೋ ಅದು ಇದು ಅಂತ ಅನ್ನಬ್ಯಾಡ್ರೀ. ಅವರಿಗೆ ಬೇಜಾರ ಆಗ್ತದ. ಮತ್ತ ಅದೊಂದು ಬೇರೆ ಲಿಂಗ ಅಲ್ಲರೀಪಾ. ಗಂಡಸರಲ್ಲೂ ಸಲಿಂಗಿಗಳು ಇರ್ತಾರ. ಹೆಂಗಸರಲ್ಲೂ ಇರ್ತಾರ. ಅದು ಅವರ ಅವರ ಇಚ್ಛೆ ಅಷ್ಟೇ. ಅದರ ಬಗ್ಗೆ ಇನ್ನೊಬ್ಬರು ಏನೂ ಹೇಳುವ ಹಾಂಗೆ ಇಲ್ಲ ನೋಡ್ರೀ. ಕೆಲವು ಮಂದಿ ವೆಜಿಟೇರಿಯನ್ ಲೈಕ್ ಮಾಡ್ತಾರ. ಕೆಲವು ಮಂದಿ ನಾನ್ - ವೆಜಿಟೇರಿಯನ್ ಲೈಕ್ ಮಾಡ್ತಾರ. ಇನ್ನೂ ಕೆಲವು ಮಂದಿ ಎರಡೂ ಲೈಕ್ ಮಾಡ್ತಾರ. ಅವರಿಗೆ ಹೆಂಗಸರೂ ಓಕೆ. ಗಂಡಸರೂ ಓಕೆ. ಅವರಿಗೆ ಉಭಯಲಿಂಗಿಗಳು ಅಂತಾರ ನೋಡ್ರೀ ಗೌಡ್ರ!' ಅಂತ ಹೇಳಿದೆ.

ಗೌಡರು ಒಮ್ಮೆಲೇ, ಜೋರಾಗಿ, 'ಶಿವ ಶಿವಾ! ಕಾಪಾಡೋ ತಂದೆ. ಇನ್ನೂ ಹೊಲಸ್ ಹೊಲಸ್ ಸುದ್ದಿ ಕೇಳುವ ಮೊದಲೇ ನನ್ನ ಕೈಲಾಸಕ್ಕೆ ಎತ್ತಿಕೋ ನಮ್ಮಪ್ಪಾ,' ಅಂತ ಹೇಳಿಕೋತ್ತ ಕಿವಿ ಮುಚ್ಚಿಕೊಂಡ ಗೌಡರು, 'ಏನು ಹೊಲಸ್ ಹೊಲಸ್ ಮಂದಿ ಇರ್ತಾರೋ ಮಾರಾಯಾ. ನಾ ಬರೇ ಹೋಮೋಗಳ ಬಗ್ಗೆ ಕೇಳಿದ್ದೆ ಏನಪಾ. ನೀ ನೋಡಿದರೆ ಹೋಮೋಗಳ ಒಳಗೂ ಗಂಡಸೂರೂ ಇರ್ತಾರ. ಹೆಂಗಸೂರೂ ಇರ್ತಾರ. ಎರಡೂ ಅಡ್ಡಿಯಿಲ್ಲ ಅನ್ನೋ ಗಂಡಸರು ಹೆಂಗಸರು ಇಬ್ಬರೂ ಇರ್ತಾರ ಅಂತೀ ಅಲ್ಲೋ ಮಾರಾಯಾ. ಕಾಲ ಎಲ್ಲಿಗೆ ಬಂತೋ ಶಿವನೇ! ಇನ್ನೂ ಏನೇನು ಕೇಳೋದು, ನೋಡೋದು ಐತೋ? ಹ್ಮಂ....ಇರಲಿ. ಆದರೂ ಈ ಹೋಮೋಗಳು ಲಿಂಗ ಅಲ್ಲ ಅಂತಾತು. ಅಂದ್ರ ನಾಕೇ ನಾಕು ಲಿಂಗ. ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ, ತೃತೀಯ ಲಿಂಗ. ನಮಗ ಕನ್ನಡ ವ್ಯಾಕರಣ ಹೇಳಿದ ಭಟ್ ಮಾಸ್ತರ್ರು ಬರೇ ಮೂರೇ ಹೇಳಿದ್ದರು. ನಿಮ್ಮ ಅಪ್ಪಗ ಕೇಳು ಭಟ್ ಮಾಸ್ತರದ್ದು ನೆನಪ ಐತೇನು ಅಂತ. ನನ್ನ ಹಾಕ್ಕೊಂಡು ಕಟಿತಿದ್ದರು ಅವರು. ನಿಮ್ಮಪ್ಪ ಬ್ಯಾರೆ ಶ್ಯಾಣಾ ಸೂಳಿಮಗ. ಅವನ ದೋಸ್ತ ನಾ ಧಡ್ಡ ಸೂಳಿಮಗ. ಅದಕ್ಕೇ ಹಾಕ್ಕೊಂಡು ಕಟಿತಿದ್ದರು. ಆದರೂ ಭಾರಿ ಬೆಸ್ಟ್ ಮಾಸ್ತರ್ರು ಭಟ್ ಸರ್ ಅಂದ್ರ,' ಅಂತ ಹೇಳಿಕೋತ್ತ ಗೌಡರು ಭಾಳ ಹಿಂದಿನ ಫ್ಲಾಶ್ ಬ್ಯಾಕಿಗೆ ಹೋದರು.

'ಗೌಡ್ರ ಒಂದು ಮಾತು ಹೇಳ್ರೀ. ಈ ಹೋಮೋಗಳಿಗೆ ಗೇಹೂಂ ಅಂದ್ರಲ್ಲ. ಹಾಂಗದ್ರ ಏನು? ನೀವು ಅದನ್ನ ಎಲ್ಲಿಂದ ಕಲಿತು ಬಂದ್ರೀ? ಭಾಳ ಮಜಾ ಅದ ಶಬ್ದ,' ಅಂತ ಕೇಳಿದೆ. ನಮಗ ಕೆಟ್ಟ ಕುತೂಹಲ.

'ಏ ಮಾರಾಯಾ. ಆ ದರಿದ್ರ ಗೇಹೂಂ ಮಂದಿದು ನೆನಪ ಮಾಡಬ್ಯಾಡ ಮಾರಾಯಾ. ಅದು ದೊಡ್ಡ ಕಥಿ,' ಅಂದ ಗೌಡರು ಮುಂದುವರೆಸಿದರು. 'ಅದು ಏನಾಗಿತ್ತು ಇವನ ಅಂದ್ರ, ಭಾಳ ವರ್ಷದ ಹಿಂದೆ, ಅಂದ್ರ ನಾ ಇನ್ನೂ ಹರೆದಾಗಿದ್ದಾಗ ಒಮ್ಮೆ ಬೆಂಗಳೂರಿಗೆ ಹೋಗಿದ್ದೆ ಏನಪಾ. ಆವಾಗ ನಮ್ಮ ಚಿಗಪ್ಪ, ಅವರೇ ಫಕೀರಗೌಡ ಬಲವಂತಗೌಡ ಪಾಟೀಲ ಅಂತ ಇದ್ದರು ನೋಡು, ಅವರೇ ಆವಾಗ ಧಾರವಾಡ ರೂರಲ್ MLA ಇದ್ದರು. ಭಾಳ ದಿಲ್ದಾರ್ ಮನುಷ್ಯ. ಮತ್ತ ನನ್ನ ಕಂಡ್ರ ಭಾಳ ಪ್ರೀತಿ. ಒಮ್ಮೆ ನನ್ನ ಕರೆದು, 'ಏ ಬಸೂ, ಒಮ್ಮೆ ಬೆಂಗಳೂರಿಗೆ ಬಂದು ಹೋಗಲೇ. ಒಬ್ಬಾಕಿ ಸಿನಿಮಾ ಹೀರೋಯಿನ್ ಪಟಾಯಿಸಿ ಇಟ್ಟೇನಿ. ಗುತ್ತಿಗಿ ಹಿಡದೇನಿ ಅಂತೇ ತಿಳ್ಕೋ. ಬಂದು ಮಜಾ ಮಾಡಿ ಹೋಗಲೇ. ಇಲ್ಲೆ ಹಳ್ಯಾಗ ಹೋಗಿ ಕಾಯಿಪಲ್ಲೆ ಹನುಮವ್ವನ ಮ್ಯಾಲೆ ಬಿದ್ದೆ, ಭಾಂಡಿ ತಿಕ್ಕೋ ಭೀಮವ್ವನ ಮ್ಯಾಲೆ ಬಿದ್ದೆ ಅಂತ ಏನು ದರಿದ್ರ ಮಷ್ಕಿರಿ ಮಾಡ್ತಿಲೇ. ಬೆಂಗಳೂರಿಗೆ ಬಾರಲೇ. ಮಸ್ತ ಚೈನಿ ಮಾಡಿ ಹೋಗಿಯಂತ,' ಅಂತ ಹೇಳಿ ಭಾರಿ ಆಹ್ವಾನ ಕೊಟ್ಟರು ಏನಪಾ. ನಾವೂ ಗೌಡರು ಮಂದಿ ನೋಡು. ರಾಜಾ ಇದ್ದಂಗ. ಮಾಡದ ಚೈನಿ ಇಲ್ಲ. ಮಾಲು ಹುಡುಕಿಕೊಂಡು ಮುಂಬೈ, ಗೋವಾ ಎಲ್ಲ ಹೋಗಿಬಂದಾಗಿತ್ತು. ಈಗ ಬೆಂಗಳೂರಿಗೆ ಹೋಗಿ ಬರೋಣ ಅಂತ ಹೊಂಟೆ ನೋಡಪಾ,' ಅಂತ ಹೇಳಿದ ಗೌಡರು ಒಂದು ಚಿಕ್ಕ ಬ್ರೇಕ್ ತೆಗೆದುಕೊಂಡು ಮತ್ತೆ ಗುಡುಗುಡಿ ದಮ್ಮು ಎಳೆದರು. ಮುಂದುವರೆಸಿದರು.

'ಅಲೀ ಇವನ! ನಮ್ಮ ಕಾಕಾ ಮಸ್ತ ಮಾಲೇ ತಯಾರ ಮಾಡಿ ಇಟ್ಟಂಗೈತಿ. ಹೋಗಿ ಮನಗಂಡ ಮಜಾ ಮಾಡಿ ಬರೋಣ ಅಂತ ವಿಚಾರ ಮಾಡಿ ಬೆಂಗಳೂರಿಗೆ ಹೊಂಟೆ ಏನಪಾ. ಭಾಳ ವರ್ಷದ ಹಿಂದಿನ ಮಾತು. ನೀ ಇನ್ನೂ ಹುಟ್ಟಿರಾಕಿಲ್ಲ ಬಿಡು. ಧಾರವಾಡದಿಂದ ರಾತ್ರಿ ಡೆಕ್ಕನ್ ಎಕ್ಸಪ್ರೆಸ್ ಟ್ರೈನ್ ಹಿಡಿದು, ಮಸ್ತ ಫಸ್ಟ್ ಕ್ಲಾಸ್ ಒಳಗ ಹೋದೆ. ಗೌಡರ ಲೆವೆಲ್ಲಿಗೆ ಸರಿ ಇರಬೇಕು ನೋಡು. ಈಗಿನ ಚನ್ನಮ್ಮ ಎಕ್ಸಪ್ರೆಸ್ ಟ್ರೈನಿಗೆ ಆವಾಗ ಡೆಕ್ಕನ್ ಗಾಡಿ ಅಂತಿದ್ದರು ಏನಪಾ ತಮ್ಮಾ. ರಾತ್ರಿ ಇಲ್ಲಿ ಕುಂತೆ, ಮುಂಜಾನೆ ಅನ್ನೋದ್ರಾಗ ಬೆಂಗಳೂರು ಬಂತು. ಎದ್ದು ಮಸ್ತಾಗಿ ಮಾರಿ ಗೀರಿ ತೊಳಕೊಂಡು, ನಮ್ಮ ರುಮಾಲು ಗಿಮಾಲು ಎಲ್ಲ ಸರಿ ಮಾಡಿಕೊಂಡು, ಇಳಿದು, ನಮ್ಮ ಕಾಕಾರ MLA ಹಾಸ್ಟೆಲ್ಲಿಗೆ ಹೋಗೋಣ ಅಂತ ವಿಚಾರ ಮಾಡಿದೆ ಏನಪಾ,' ಅಂತ ಹೇಳಿದ ಗೌಡರಿಗೆ ಏಕ್ದಂ ಚಹಾದ ನೆನಪಾಗಿಬಿಡ್ತು. 'ಏ ತಂಗೀ! ಯಾರದೀರಿ? ಛಾ ತರ್ರಿ ಬೇ. ಮತ್ತಮತ್ತ ಹೇಳಬೇಕೆನು? ಹಾಂ? ತಾಸಿಗೊಂದು ಸರೆ ತಂದೇ ಬಿಡ್ರೀ,' ಅಂತ ಜೋರಾಗಿ ಆರ್ಡರ್ ಮಾಡಿದರು. ಚಹಾ ಬಂತು. ಗೌಡರು ಚಹಾವನ್ನು ಬಸಿಗೆ ಹಾಕಿಕೊಂಡು, ಸೊರ್ರ್ ಅಂತ ಎಳೆದು ಕುಡಿದರು. ಒಳ್ಳೆ ಚಂಡಮಾರುತ ಬಂದಂಗ ಆವಾಜ್ ಆತು. ಗೌಡರು ತಮ್ಮ ಬೆಂಗಳೂರ ಕಥನ ಮುಂದುವರೆಸಿದರು.

'ಬೆಂಗಳೂರು ಬಂತು. ಗಾಡಿ ನಿಂತಿತು. ನಾ ಇಳಿದು ಹೊರಗೆ ಬಂದೆ ಏನಪಾ. ರಸ್ತೆ ದಾಟಿ, ಆ ಕಡೆ ಮೆಜೆಸ್ಟಿಕ್ ಕಡೆ ಹೋಗಿ, ಹಾಂಗೇ ಆನಂದ ರಾವ್ ಸರ್ಕಲ್ ದಾಟಿ, MLA ಹಾಸ್ಟೆಲ್ಲಿಗೆ ಆರಾಮ ನಡಕೋಂತ ಹೋಗೋಣ ಅಂತ ಮಾಡಿದೆ. ಆವಾಗ ಬೆಂಗಳೂರ ಅಂದ್ರ ಭಾರಿ ಮಸ್ತ ಹವಾ. ಅದೂ ಮುಂಜಾನೆ ಮುಂಜಾನೆ ಮಸ್ತ ಅನಸ್ತಿತ್ತು ಅಡ್ಯಾಡಾಕ. ಈಗ ಪೂರ್ತಿ ಹದಗೆಟ್ಟು ಹೋಗೈತಿ. ಮೆಜೆಸ್ಟಿಕ್ ಬಸ್ ಸ್ಟಾಂಡ್ ದಾಟಿ ಈ ಕಡೆ ಬಂದು, ಯಾವ ದಾರಿ ಹಿಡಿಯೋಣ ಅಂತ ವಿಚಾರ ಮಾಡಿಕೋತ್ತ ನಿಂತೆ. ಯಾವನೋ ಬಂದು ಕುಂಡಿಗೆ ಫಟ್ ಅಂತ ಕೊಟ್ಟ. ತಿರುಗಿ ನೋಡಿದರೆ ಒಬ್ಬವ ಹಲ್ಲು ಕಿರಕೋಂತ ನಿಂತಿದ್ದ. ನಮ್ಮ ಕಡೆ ದೋಸ್ತರು ಒಬ್ಬರಿಗೊಬ್ಬರು ಡುಬ್ಬಾ ಚಪ್ಪರಿಸಿ ಮಾತಾಡೋದು ಗೊತ್ತಿತ್ತು. ಇವಾ ಯಾರೋ ಹುಚ್ಚ ಸೂಳಿಮಗ. ಗುರ್ತಿಲ್ಲ, ಪರಿಚಯ ಇಲ್ಲ. ಒಮ್ಮೆಗೆ ಬಂದು, ಕುಂಡಿಗೆ ಬಡಿದು, ಹಲ್ಲು ಬಿಟ್ಟುಗೊಂಡು ನಿಂತಾನ. ನನಗ ಏನು ಅಂತನೇ ತಿಳಿಲಿಲ್ಲ,' ಅಂತ ಒಬ್ಬ ನಿಗೂಢ ವ್ಯಕ್ತಿ ವಿಚಿತ್ರ ರೀತಿಯಲ್ಲಿ ಮಾತಾಡಿಸಿದ ಅಂತ ಹೇಳಿದ ಗೌಡರು ಮತ್ತೊಂದು ಸಲೆ ಚಹಾ ಬಸಿಗೆ ಬಸಿದುಕೊಂಡು ಸೊರ್ರ್ ಅಂತ ಎಳೆದು ಕುಡಿದು, ಪೂರ್ತಿ ಮುಗಿಸಿ, ಒಂದು ಎಲಿ ಅಡಿಕೆ ಬಾಯಿಗೆ ಹಾಕ್ಕೊಂಡು, ಹಲ್ಲು ತುದಿಗೆ ಒಂದು ಚೂರೇ ಚೂರು ಸುಣ್ಣ ಹಚ್ಚಿಕೊಂಡು, ಇನ್ನೊಂದಿಷ್ಟು ಸುಣ್ಣ ಎಡಗೈ ಅಂಗೈ ಮೇಲೆ ಹಾಕಿಕೊಂಡು, ಅದರ ಮೇಲೆ ಒಂದು ಚಿಟಿಕೆ ಗಜೇಂದ್ರಗಡ ತಂಬಾಕು ಸುರುವಿಕೊಂಡು, ತಿಕ್ಕುತ್ತ, ಕಥೆ ಮುಂದುವರೆಸಿದರು.

'ನಮಗೇನು ಗೊತ್ತಪಾ? ಹಳ್ಳಿ ಮಂದಿ ನಾವು. ಬೆಂಗಳೂರು ಬ್ಯಾರೆ ದೊಡ್ಡ ಶಹರ. ನಾವು ಹಳ್ಯಾಗ ದೋಸ್ತರ ಡುಬ್ಬಾ ಚಪ್ಪರಿಸಿ ಮಾತಾಡಿದಂಗ ಈ ಶಹರದ ಮಂದಿ ಕುಂಡಿ ಚಪ್ಪರಿಸಿ ಮಾತಾಡಿಸ್ತಾರೇನೋ ಅಂತ ಅಂದುಕೊಂಡೆ ಏನಪಾ ತಮ್ಮಾ. ಹಾಂಗ ವಿಚಾರ ಮಾಡಿ ನಾನೂ ಅವನ ಕುಂಡಿಗೆ ಬರೋಬ್ಬರಿ ಚಪ್ಪರಿಸಿದೆ. ಒಂದು ಕೊಟ್ಟೆ. ಮ್ಯಾಲಿಂದ, 'ನಮಸ್ಕಾರೀ ಅಣ್ಣಾರ,' ಅಂತ ಸಹಿತ ಹೇಳಿದೆ. ಆವಾ ಭಾರಿ ಖುಷ್ ಆಗಿಬಿಟ್ಟ. ನನ್ನ ಏಕ್ದಂ ಅಪ್ಪಿಕೊಂಡೇ ಬಿಟ್ಟ. ಕೆಟ್ಟ ಹೊಲಸ ವಾಸನಿ. ಆವಾ ಎಷ್ಟು ದಿವಸದಿಂದ ಜಳಕಾ ಮಾಡಿದ್ದಿಲ್ಲೋ ಏನೋ. ಹೊಲಸ್ ಆ ಹರ್ಕಾ ಪರ್ಕಾ ನೀಲಿ ಜೀನ್ಸ್ ಪ್ಯಾಂಟ್, ಒಂದು ಕಟ್ ಬನಿಯನ್ ಹಾಕಿಕೊಂಡು, ಹಿಪ್ಪಿ ಕೂದಲಾ ಬಿಟ್ಟುಗೊಂಡು ಬಂದಿದ್ದ ನೋಡು ಆ ಹೇಶಿ ಸೂಳಿಮಗ. ಆವಾ ನನ್ನ ನೋಡಿ, 'ಗೇ?? ಗೇ???' ಅಂತ ಕೇಳಿದ. ನನಗ ಏನು ಅಂತನೇ ತಿಳಿಲಿಲ್ಲೋ ಮಾರಾಯಾ. ಇವಾ ಯಾವ ಭಾಷಾ ಮಾತಾಡಾಕತ್ತಾನ ಅಂತಲೇ ತಿಳಿಲಿಲ್ಲ ನನಗ. ಏನೋ ಗೇ ಗೇ ಅನ್ನಾಕತ್ತಿದ್ದ. ಎಲ್ಲೆ ಮರಾಠಿ ಒಳಗ ಮಾತಾಡಾಕತ್ತಾನೋ ಅಂತ ಮಾಡಿದೆ. ನಾನೂ ನನಗ ಬಂದ ಹರಕು ಮುರುಕು ಮರಾಠಿ ಒಳಗ ಏನೋ ಅಂದೆ. ಆವಾಗ ಆ ಹಿಪ್ಪಿ ಮನುಷ್ಯಾಗ ಗೊತ್ತಾತು ಅಂತ ಕಾಣಿಸ್ತದ. ಗೇ ಗೇ  ಅಂತ ಅನ್ನೋದು ಬಿಟ್ಟ. ಕೆಟ್ಟ ಅನಾಹುತ ಮಾಡಿಬಿಟ್ಟ. ಏನು ಮಾಡಿದ ಗೊತ್ತೇನು? ನನ್ನ ಮುಂದ ಬಂದವನೇ, ಪ್ಯಾಂಟ್ ಕುಂಡಿ ಹಿಂದೆ ಸ್ವಲ್ಪ ಕೆಳಗ ಇಳಿಸಿ, ಬಗ್ಗಿ ನಿಂತು ಬಿಟ್ಟ. ಆಮ್ಯಾಲೆ ವಾಪಸ್ ತಿರುಗಿ, 'ಈಗರೆ ಗೊತ್ತಾತೇನು ಗೇ ಗೇ ಅಂದರೇನು??' ಅನ್ನೋ ಲುಕ್ ಕೊಟ್ಟ. ಮತ್ತ ಮತ್ತ 'ಮೈ ಗೇಹೂಂ ಯಾರ್. ಮೈ ಗೇಹೂಂ ಯಾರ್. ತುಮ್ ಭೀ ಗೇ?? ಗೇ???' ಅಂತ ಕೇಳಾಕತ್ತಿದ್ದ ಆ ಹಡಶೀಕೆ. ಅವನ ವಿಚಿತ್ರ ವೇಷ, ಅವತಾರ, ಪ್ಯಾಂಟ್ ಇಳಿಸಿದ ಹೊಲಸ್ ಕೆಲಸ ಎಲ್ಲ ನೋಡಿದ ಕೂಡಲೇ ನನಗ ಗೊತ್ತಾತು ನೋಡಪಾ. ಶಾಕ್ ಹೊಡಿತು! ಈ ಮಂಗ್ಯಾನಮಗ ಹಲ್ಕಟ್ ಹೋಮೋ ಅದಾನ. ಮುಂಜಾನೆ ಮುಂಜಾನೆ ಬ್ಯಾರೆ ಯಾರೂ ಸಿಕ್ಕಿಲ್ಲ. ನನ್ನ ನೋಡಿದ ಕೂಡಲೇ ಕ್ಯಾಚ್ ಹಾಕ್ಯಾನ. ಹಲ್ಕಟ್ ಸೂಳಿಮಗ ಹೋಮೋ. ಇವನನ್ನು ಹೀಂಗೆ ಬಿಡಬಾರದು. ಏನಂತ ತಿಳ್ಕೊಂಡಾನ? ಆಟಾ ಏನು? ಹಾಂ? ಅಂತ ವಿಚಾರ ಮಾಡಿ, ನನ್ನ ಸಾಮಾನು, ಅದು ಇದು ಎಲ್ಲ ಕೆಳಗ ಇಳಿಸಿ, ಇವನ್ನ ಬರೋಬ್ಬರಿ ವಿಚಾರಿಸಬೇಕು ಅಂತ ಡಿಸೈಡ್ ಮಾಡಿದೆ ನೋಡಪಾ,' ಅಂದ ಗೌಡರು ಅಷ್ಟೊತ್ತಿಗೆ ತಿಕ್ಕಿ ತಿಕ್ಕಿ ರೆಡಿ ಮಾಡಿಕೊಂಡಿದ್ದ ತಂಬಾಕಿನ ಸಣ್ಣ ಉಂಡೆಯನ್ನು ಬಾಯಿಗೆ ಎಸೆದುಕೊಂಡರು.

'ಹೋಗ್ಗೋ ಗೌಡ್ರ! ನೀವು ಬೆಂಗಳೂರಿಗೆ ಹೋದ್ರ ಅಲ್ಲೆ ಮುಂಜಾನೆ ಮುಂಜಾನೆ ನಿಮಗ ಹೋಮೋ ಗಂಟು ಬಿದ್ನ? ಏನು ನಶೀಬರೀ ನಿಮ್ಮದು??' ಅಂತ ಹೇಳಿ ನಕ್ಕೆ.

'ಎಲ್ಲಿ ನಶೀಬ! ಅವನೌನ್. ನನಗ ಹೀಂಗ ಸಿಟ್ಟು ಬಂತು ನೋಡು. ಅಲ್ಲೇ ಆ ಹಿಪ್ಪಿ ಹೋಮೋ ಸೂಳಿಮಗನ್ನ ಹಾಕ್ಕೊಂಡು ಬಡಿದೆ ನೋಡು. ಇಡೀ ಮೆಜೆಸ್ಟಿಕ್ ಓಡಾಡಿಸಿ ಓಡಾಡಿಸಿ ಹಾಕ್ಕೊಂಡು ಕಟದೆ ನೋಡು. ಕಾಲಾಗಿನ ಚಪ್ಪಲ್ ತೊಗೊಂಡು ಹಾಕಿದೆ ನೋಡು. ಆವತ್ತು ಒಂದು ಮರ್ಡರ್ ಆಗೇ ಬಿಡ್ತಿತ್ತು. 'ಏ, ನೀ ಗೇ ಅಲ್ಲ ಅಂದ್ರ ನನ್ನ ಬಿಡೋ ಮಾರಾಯಾ. ನೋಡಾಕ ಮಸ್ತ ಗಂಡಸು ಅದಿ. ಅದಕ್ಕ ಆಶಾ ಆತು. ಹೊಡಿಬ್ಯಾಡೋ, ಕೊಲ್ಲಬ್ಯಾಡೋ. ಮೈ ಗೇಹೂಂ ಯಾರ್. ಗೇಹೂಂ,' ಅಂತ ಚೀರಾಕತ್ತಿತ್ತು ನೋಡು ಆ ಹೋಮೋ ಸೂಳಿಮಗ. 'ನಿಮ್ಮೌನ್! ನೀ ಗೇಹೂಂ ಅಂದ್ರ ಗೋಧಿಯಾದರೂ ಇರು, ಜ್ವಾಳ ಆದರೂ ಇರು. ನಮಗೇನು? ಇನ್ನೊಮ್ಮೆ ಗಂಡಸೂರ ಮೈಮ್ಯಾಲೆ ಕೈ ಹಾಕಿದರೆ ಅಷ್ಟೇ ಮತ್ತ. ಖಬರ್ದಾರ್!' ಅಂತ ಹೇಳಿ ಹಾಕ್ಕೊಂಡು ಹಾಕ್ಕೊಂಡು ಬಡಿದೆ. ಅಷ್ಟರಾಗ ಪೊಲೀಸರು ಬಂದು, ಜಗಳಾ ಬಿಡಿಸಿ, ಇಬ್ಬರನ್ನೂ ಅಲ್ಲೇ ಉಪ್ಪಾರ ಪೇಟೆ ಪೋಲೀಸ್ ಸ್ಟೇಷನ್ ಗೆ ಕರಕೊಂಡು ಹೋದರು. ಆ ಹೋಮೋ ಹುಚ್ಚನ ಬಗ್ಗೆ ಪೊಲೀಸರಿಗೆ ಎಲ್ಲ ಗೊತ್ತಿತ್ತು. ಅವನ ಕಡಿಂದ ರೊಕ್ಕಾ ತಿಂತಿದ್ದರು ಅಂತ ಕಾಣಿಸ್ತದ. ಅದಕ್ಕೇ ನನ್ನ ಮ್ಯಾಲೆ ಒದರಾಕ ಬಂದ್ರು. ಯಾವಾಗ ನಮ್ಮ ಕಾಕಾರು MLA ಅಂತ ಗೊತ್ತಾತು ನೋಡು, ಮುಕಳ್ಯಾಗ ಬಾಲಾ ಹೆಟ್ಟಿಕೊಂಡು, ಅವರದ್ದೇ ಜೀಪಿನ್ಯಾಗ ನಮ್ಮ ಕಾಕಾರ MLA ಹಾಸ್ಟೆಲ್ ತನಕಾ ಬಿಟ್ಟು ಹೋದರು ನೋಡಪಾ,' ಅಂತ ಬೆಂಗಳೂರಿನಲ್ಲಿ ಸಲಿಂಗಿಯೊಬ್ಬ ಗೌಡರನ್ನ ಹೇಗೆ ಆಟಕಾಯಿಸ್ಕೊಂಡಿದ್ದ, ಗೌಡರು ಅವನಿಗೆ ಹೇಗೆ ಪಾಠ ಕಲಿಸಿ ಬಂದಿದ್ದರು ಅಂತ ಭಾಳ ಗತ್ತಿನಿಂದ ಹೇಳಿದರು ಗೌಡರು. ಕುಂತಲ್ಲಿಂದಲೇ ಪಿಚಕ್ ಅಂತ ಒಂದು ಪಿಚಕಾರಿ ಹಾರಿಸಿದರು ಗೌಡರು. ಪಿಚಕಾರಿ ಹೋಗಿ ಗ್ವಾಡಿಗೆ ಬಡಿದು ಮತ್ತೊಂದು ಕೆಂಪ ಬಣ್ಣದ ಕೋಟಿಂಗ ಆತು.

'ತಮ್ಮಾ, ಒಂದು ಮಾತು ಹೇಳು ನೀ. ಈ ಹೋಮೋ ಮಂದಿ ಅವರನ್ನು ಅವರು ಗೇಹೂಂ ಗೇಹೂಂ  ಅಂತ ಯಾಕ ಕರೆದುಕೊಳ್ಳತಾರೋ??? ಹಾಂ? ಗೇಹೂಂ ಅಂದ್ರ ಗೋಧಿ ಅಲ್ಲೇನೋ? ಹಾಂ?'  ಅಂತ ಕೇಳಿದರು.

'ಗೌಡ್ರ, ಅದು gay ಅಂತ್ರೀ. ಇಂಗ್ಲೀಷ್ ಒಳಗ ಗಂಡು ಸಲಿಂಗಿಗಳಿಗೆ gay ಅಂತಾರರೀ. ಆವಾ ತಿರುಬೋಕಿ ಸೂಳಿಮಗ ಹಿಂದಿ ಮಿಕ್ಸ್ ಮಾಡಿ 'ಮೈ ಗೇ ಹೂಂ' ಅಂದಿದ್ದು ನಿಮಗ ಗೇಹೂಂ ಅಂತ ಕೇಳಿರಬೇಕು ಅಷ್ಟೇ,' ಅಂತ ಹೇಳಿ ವಿವರಣೆ ಕೊಟ್ಟೆ. ಈ ವಿಷಯ ಗೌಡರು ಇಷ್ಟಕ್ಕೇ ಬಿಟ್ಟರೆ ಸಾಕು ಅನ್ನಿಸಿತು. ಗೌಡರು ಮತ್ತೇನೂ ಜಾಸ್ತಿ ಕೇಳಲಿಲ್ಲ. 'ಹಡಬಿಟ್ಟಿ ಹೋಮೋ ಮಂದಿ. ಮ್ಯಾಲಿಂದ ಇಂಗ್ಲೀಶ್ ಮಾತು ಬ್ಯಾರೆ. ಗೇಹೂಂ ಅಂತ ಗೇಹೂಂ. ಗೋಧಿ ಗತೆ ರುಬ್ಬಿ ರುಬ್ಬಿ ಹುಗ್ಗಿ ಮಾಡಿ ಒಗಿಬೇಕು,' ಅಂತ ಸಲಿಂಗಿಗಳ ಬಗ್ಗೆ ತಮ್ಮ ಆಕ್ರೋಶ ಮುಂದುವರೆಸಿದರು ಗೌಡರು.

ಅಷ್ಟೊತ್ತಿಗಾಗಲೇ ಮಧ್ಯಾನ ಒಂದೂವರೆ ಸಮಯ. ಒಳಗಿಂದ ಘಮ ಘಮ ಅಂತ ಅಡಿಗೆ ಸುವಾಸನೆ ಬರುತಿತ್ತು. 'ಊಟಕ್ಕೆ ತಯಾರ್ ಆಗೈತಿ. ಬರ್ರಿ,' ಅಂತ ಬುಲಾವಾ ಬಂತು ಹಿರಿಯ ಅಕ್ಕಾರಿಂದ. 'ನಡಿಯೋ ತಮ್ಮಾ. ನಡಿ ನಡಿ. ಊಟಕ್ಕೆ ಕುಂದ್ರೋಣಂತ,' ಅಂತ ಹೇಳಿ ಗೌಡರು ಊಟಕ್ಕೆ ಎಬ್ಬಿಸಿಕೊಂಡು ಹೊಂಟರು.

'ಗೌಡ್ರ, ನೀವು ಬೆಂಗಳೂರಿಗೆ ಹೋಗಿದ್ದು ಅದ್ಯಾರೋ ಸಿನಿಮಾ ನಟಿ ಭೆಟ್ಟಿಯಾಗಿ ಮಜಾ ಮಾಡಿ ಬರಲಿಕ್ಕೆ ಅಂತ ಹೇಳಿದ್ದಿರಿ. ಅದರ ಬಗ್ಗೆ ಏನೂ ಹೇಳಲೇ ಇಲ್ಲ,' ಅಂತ ಕೇಳಿದೆ.

'ಏ ತಮ್ಮಾ, ಅವೆಲ್ಲಾ ರಂಗೀನ್ ಕಹಾನಿ ಈಗ ಹೇಳಾಕ ಸರಿ ಆಗಂಗಿಲ್ಲ. ಸಂಜಿ ಮುಂದ ನಮ್ಮ ಫಾರ್ಮ್ ಹೌಸಿಗೆ ಹೋಗಿ ಕುಂದ್ರೋಣ. ಒಂದೆರೆಡು ಪೆಗ್ ಬಿದ್ದ ಮ್ಯಾಲೆ ನಮ್ಮ ಜವಾನಿ ಕಿ ಕಹಾನಿ ಹೇಳಾಕ ಮಜಾ ಬರತೈತಿ. ಆವಾಗ ಎಲ್ಲಾ ವಿಸ್ತಾರ ಮಾಡಿ ಹೇಳತೇನಿ. ಈಗ ಊಟಕ್ಕೆ ನಡಿ. ಬಾ, ಬಾ,' ಅಂತ ಹೇಳಿ ಗೌಡರು ಊಟಕ್ಕೆ ಗಡಿಬಿಡಿ ಮಾಡಿದರು. ಸರಿ ಅಂತ ಕೈಕಾಲ್ಮುಖ ತೊಳೆದು ಬರೋಣ ಅಂತ ಹೊಂಟೆ.

ಗೌಡರ ಜೋಡಿ ಹೊಡೆದ ಹರಟೆ ಮಹಿಳಾ ಸಬಲೀಕರಣ, ಲಿಂಗ ಸಮಾನತೆ ಇತ್ಯಾದಿಗಳ ಬಗ್ಗೆ ಒಂದು ವಿಭಿನ್ನ ಪರಿಭಾಷೆಯನ್ನೇ ಬರೆಯಿತು. ಇದು ನಮಗೆ ಗೊತ್ತಿರಲಿಲ್ಲ. ನಮ್ಮ ಗೌಡರು is great!

* ಖ್ಯಾತ ನಾಟಕಕಾರ ದಿವಂಗತ ಧೀರೇಂದ್ರ ಗೋಪಾಲ ಅನೇಕ ನಾಟಕಗಳಲ್ಲಿ ಈ ರೀತಿಯ ಗೌಡರ ಪಾತ್ರ ಮಾಡಿದ್ದಾರೆ. ಅವರು, ಅವರ ಸೂಪರ್ ಡೈಲಾಗುಗಳೇ ಸ್ಪೂರ್ತಿ. ಅವರ ಕೆಲವು ನಾಟಕದ ಸಂಭಾಷಣೆಗಳನ್ನು ಅಲ್ಲಲ್ಲಿ ಉಪಯೋಗಿಸಿದ್ದೇನೆ. 

7 comments:

Vimarshak Jaaldimmi said...


Very good!

Gowdra gudgudi sounds/tastes interesting!!

HARI said...

Super.:)

Mahesh Hegade said...

Thank you, Hari.

sunaath said...

ಖಡಕ್ ಗುಂಜೀಕರ ಸsರ ಭೆಟ್ಟಿ ಆಗಿದ್ದರು, ಒಂದು ಮದವೀ ಫಂಕ್ಷನ್‍ದಾಗ. ನೀವು ಅವರ ಬಗ್ಗೆ ಬರೆದದ್ದು ಹೇಳಿದೆ. ಭಾರೀ ಖುಶ್ ಆದರು!

Mahesh Hegade said...

ಭಾಳ ಥ್ಯಾಂಕ್ಸ್ ಸುನಾಥ್ ಸರ್. ನೀವು ಗುಂಜೀಕರ್ ಸರ್ ಅವರನ್ನು ಭೆಟ್ಟಿಯಾಗಿ, ನಾ ಬರೆದಿದ್ದನ್ನು ನೆನಪಿಟ್ಟು ಹೇಳಿ, ಅವರನ್ನು ಖುಷ್ ಮಾಡಿದ್ದು ಭಾಳ ದೊಡ್ಡ ಮಾತು. ಥ್ಯಾಂಕ್ಸ್ ಸರ್!

nanjappa C said...

funny story.

Mahesh Hegade said...

Thank you, Nanjappa C.