Monday, January 04, 2016

ನನಗಾಗಿ 'ಬೆಳ್ಳಿ' ಹೆಕ್ಕಿದ್ದ ಬಂಗಾರದಂತಹ ಮಿತ್ರ ನೆನಪಾದ

ಶಾಲೆಯ ತರಗತಿಯಲ್ಲಿ ತಾವು 'ಢಂ' ಅನ್ನಿಸಿದ್ದು ಸಾಕಾಗಲಿಲ್ಲ, ಹುಡುಗರು ಮನೆಯಲ್ಲೂ ಹೋಗಿ 'ಢಂ' ಅನ್ನಿಸಲಿ ಅಂತ ಬಡಿಗೇರ್ ಸರ್ ಅಂತಹ ಐಡಿಯಾ ಕೊಟ್ಟರೇ? ಗೊತ್ತಿಲ್ಲ. ಆದರೆ ಅವರು ಕೊಟ್ಟ ಐಡಿಯಾ ಮಾತ್ರ ಖತರ್ನಾಕ್ ಆಗಿತ್ತು. ಅದನ್ನು ಹೇಗಾದರೂ ಮಾಡಿ ಟ್ರೈ ಮಾಡಿ ನೋಡಲೇಬೇಕಿತ್ತು. ಅಷ್ಟೇ ಐಡಿಯಾ ವರ್ಕ್ ಔಟ್ ಮಾಡಲು ಕೆಲವು ಅಡೆತಡೆಗಳಿದ್ದವು. ಅವನ್ನು ಮೊದಲು ನಿಪಟಾಯಿಸಬೇಕಿತ್ತು.

ಮೊದಲು ಹೇಳಿಬಿಡುತ್ತೇನೆ, ಬಡಿಗೇರ್ ಸರ್ ಏನು, ಯಾವಾಗ, ಹೇಗೆ 'ಢಂ' ಅನ್ನಿಸಿದ್ದರು ಅಂತ. ಅದು ೧೯೮೩ ಆಗಸ್ಟ್, ಸೆಪ್ಟೆಂಬರ್ ಇರಬಹದು. ನಮ್ಮದು ಆಗ ಆರನೇ ಕ್ಲಾಸ್. ಆಗಿನ ಜಮಾನಾದಲ್ಲಿ ಓದಿದವರಿಗೆ ಒಂದು ವಿಷಯ ನೆನಪಿರಬಹುದು. ಅದೇನೆಂದರೆ ಆ ವರ್ಷ ವಿಜ್ಞಾನದಲ್ಲಿ ಸಿಕ್ಕಾಪಟ್ಟೆ ಜನಕರು ಬಂದುಬಿಟ್ಟಿದ್ದರು. ಅಲ್ಲಿಯವರೆಗೆ ಜನಕ ಅಂದ್ರೆ ಸೀತೆಯ, ಅದೇ ರಾಮಾಯಣದ ಸೀತೆಯ, ಪಿತಾಜಿ ಅಂತ ಮಾತ್ರ ಗೊತ್ತಿತ್ತು. ಈಗ ಆಮ್ಲಜನಕ, ಜಲಜನಕ, ಸಸಾರಜನಕ ಅಂತ ಏನೇನೋ ಜನಕಗಳು ಬಂದುಬಿಟ್ಟವು. ನೋಡಿದರೆ ಇವು ಆಕ್ಸಿಜನ್, ಹೈಡ್ರೋಜನ್, ನೈಟ್ರೋಜನ್ ಇತ್ಯಾದಿ ಅನಿಲಗಳಿಗೆ ಕನ್ನಡದ ಹೆಸರುಗಳಂತೆ. ಸೀತೆಯ ದೊಡ್ಡಪ್ಪ ಚಿಕ್ಕಪ್ಪರಂತೂ ಅಲ್ಲ ಅಂತ ಗೊತ್ತಾಯಿತು.

ಇನ್ನು ಪ್ರೀತಿಯ ಬಡಿಗೇರ್ ಸರ್. ನಮ್ಮ ವಿಜ್ಞಾನದ ಶಿಕ್ಷಕರು. ಸದಾ ನಗುಮುಖ. ಮೆದು ಮಾತು. ಹೊಡೆತ, ಬಡಿತ, ಬೈಗುಳ ಭಾಳ ಕಮ್ಮಿ. ಶ್ರದ್ಧೆಯಿಂದ ವಿಜ್ಞಾನ ಕಲಿಸುತ್ತಿದ್ದರು. ಡ್ರಾಯಿಂಗ್ ಅವರು ಕಲಿಸುತ್ತಿದ್ದ ಮತ್ತೊಂದು ವಿಷಯ.

ಹೀಗಿರುವಾಗ ಅಂದು ಬಡಿಗೇರ್ ಸರ್ ಜಲಜನಕದ ಬಗ್ಗೆ ಪಾಠ ಮಾಡಿ ಮುಗಿಸಿದ್ದರು. ಮುಂದಿನ ಕ್ಲಾಸಿನಲ್ಲಿ ಜಲಜನಕದ ತಯಾರಿಕೆಯ ಬಗ್ಗೆ ಪ್ರಾತ್ಯಕ್ಷಿಕೆ (demonstration) ಮಾಡಿ ತೋರಿಸುವದಾಗಿ ಹೇಳಿದ್ದರು. ಹಾಗಂತ ಹೇಳಿ, ಕೆಟ್ಟ ಕುತೂಹಲ ಹುಟ್ಟಿಸಿ, ಕ್ಲಾಸ್ ಮುಗಿಸಿ, ಪೋಯಾಚ್ ಆಗಿಬಿಟ್ಟಿದ್ದರು. ನಮಗೋ ಮುಂದಿನ ಕ್ಲಾಸ್ ಯಾವಾಗ ಬಂದೀತು, ಯಾವಾಗ ನಮ್ಮ ಕಣ್ಣು ಮುಂದೆಯೇ ಜಲಜನಕ ತಯಾರಾದೀತು ಅನ್ನುವದರ ಬಗ್ಗೆ ಸಿಕ್ಕಾಪಟ್ಟೆ ಕಾತುರ. ಅಲ್ಲಿ ತನಕ ಕ್ಲಾಸಿನಲ್ಲಿ ಯಾರೂ ಏನೂ ತಯಾರು ಮಾಡೇ ಇರಲಿಲ್ಲ. ಕೆಮಿಸ್ಟ್ರಿ ಪ್ರಾಕ್ಟಿಕಲ್ಸ್ ಗೆ ಇಂಟ್ರೋ ಇದು. ರಸಾಯನ ಶಾಸ್ತ್ರದ ಪ್ರಯೋಗಗಳಿಗೆ ನಮ್ಮ ಮೊದಲ ಅನುಭವ ವಾಯಾ ಬಡಿಗೇರ್ ಸರ್.

ಮುಂದಿನ ವಿಜ್ಞಾನದ ಪೀರಿಯಡ್ ಬಂದೇ ಬಿಟ್ಟಿತು. ಬಡಿಗೇರ್ ಸರ್ ಎಲ್ಲ ಸಾಮಾನು ಸಮೇತ ತರಗತಿಗೆ ಹಾಜರ್. ಬೇಕಾಗುವ ಎಲ್ಲ ಪರಿಕರ ಹೊಂದಿಸಿಕೊಂಡೇ ಬಂದರು. ಕೂಲಿ ಸಹಾಯಕ್ಕೆ ಯಾರೋ ಚಪರಾಸಿ ಕೂಡ ಬಂದಿದ್ದ.

ಸಾಂದರ್ಭಿಕ ಚಿತ್ರ ಅಷ್ಟೇ

ಕ್ಲಾಸಿನ ಮೇಜಿನ ಮೇಲೆ ಎಲ್ಲ ಸೆಟಪ್ ಮಾಡಿಕೊಂಡರು. ಪುಸ್ತಕದಲ್ಲಿ ಹೇಗೂ ಹೈಡ್ರೋಜನ್ ತಯಾರ್ ಮಾಡುವ ವಿಧಾನ ಇತ್ತಲ್ಲ. ಅದರ ಪ್ರಕಾರವೇ ಎಲ್ಲ ಸೆಟಪ್ ಮಾಡಿಕೊಂಡರು. ನೋಡನೋಡುತ್ತಿದ್ದಂತೆಯೇ ನಮ್ಮ ಕಣ್ಣೆದುರೇ ಎಲ್ಲ ರೆಡಿ. ಬುಡಕ್ಕೆ ಬೆಂಕಿ ಕೂಡ ಹಚ್ಚಿದರು. ಅಂದರೆ ಚಪ್ಪಟ ತಳದ (ಫ್ಲಾಟ್ ಬಾಟಮ್) ಫ್ಲಾಸ್ಕಿನ ಕೆಳಗೆ ಸ್ಪಿರಿಟ್ ದೀಪ ಹಚ್ಚಿದರು ಅಂತ. ಯಾವದೋ ಆಮ್ಲ (ಆಸಿಡ್) ಮತ್ತು ಏನೇನೋ ಕೆಮಿಕಲ್ ಹಾಕಿ, ಮಿಶ್ರಣವನ್ನು ಬಿಸಿ ಮಾಡಿದರೆ ಹೈಡ್ರೋಜನ್ ತಯಾರಾಗುತ್ತದೆ ಅಂತ ಏನೋ ಇತ್ತು. ಅದರ ಪ್ರಕಾರ ಮಾಡಿದರು. ಹೈಡ್ರೋಜನ್ ನಿಧಾನವಾಗಿ ತಯಾರಾಗುತ್ತಾ ಇತ್ತು. ಆಗುತ್ತಾ ಇತ್ತು. ಜೊತೆಗೆ ಮತ್ತೇನೋ ಸಹ ಆಗಲಿದೆ ಅಂತ ಮಾತ್ರ ಯಾರಿಗೂ ಗೊತ್ತಿರಲಿಲ್ಲ.

ಏನೋ ಪುಸುಪುಸು ಹೊಗೆ ಬಂದ ನೆನಪು. ಹಾಗೆ ಉತ್ಪತ್ತಿಯಾದ ಹೊಗೆ ಜಲಜನಕವೇ ಹೊರತೂ ಮತ್ಯಾವ ಜನಕವೂ ಅಲ್ಲ ಅಂತ ಹೇಗೆ ಖಾತ್ರಿ ಮಾಡಿಕೊಳ್ಳುವದು? ರಸಾಯನ ಶಾಸ್ತ್ರದಲ್ಲಿ ಎಲ್ಲದಕ್ಕೂ ಟೆಸ್ಟ್ ಇವೆ. ಲಿಟ್ಮಸ್ ಟೆಸ್ಟ್ ಇದ್ದಂತೆ. ಪುಸ್ತಕದಲ್ಲೇ ಕೊಟ್ಟಿದ್ದರು ಜಲಜನಕ ಅಂತ ಖಾತ್ರಿ ಮಾಡಿಕೊಳ್ಳಲು ಯಾವ್ಯಾವ ಟೆಸ್ಟ್ ಮಾಡಬೇಕು ಅಂತ. ಮೊದಲನೇಯದು ಭಾಳ ಸಿಂಪಲ್ ಟೆಸ್ಟ್ ರೀ. ಜಲಜನಕ ಬೆಂಕಿಯನ್ನು ಆರಿಸಿಬಿಡುತ್ತದೆ. Hydrogen does not support combustion. ಅದು ಒಂದು ಟೆಸ್ಟ್. ಅದಾದ ನಂತರ ಬೇರೆ ಬೇರೆ ಟೆಸ್ಟ್ ಮಾಡಬಹುದು.

ಬಡಿಗೇರ್ ಸರ್ ಮೊದಲ ಟೆಸ್ಟ್ ಮಾಡಲು ಹೊರಟರು. ಬೆಂಕಿಪೊಟ್ಟಣ ತೆಗೆದು ಒಂದು ಕಡ್ಡಿ ಗೀರಿದರು. ತಯಾರಾಗಿ ಭುಸ್ ಭುಸ್ ಅಂತ ಮೇಲೆ ಬರುತ್ತಿದ್ದ ಜಲಜನಕಕ್ಕೆ ಗೀರಿದ ಕಡ್ಡಿಯನ್ನು ಹಿಡಿದು, ಆ ಉರಿಯುತ್ತಿದ್ದ ಕಡ್ಡಿ ಹೇಗೆ ಒಮ್ಮೆಲೇ ಭಸ್ ಅಂತ ಆರಿಹೋಗುತ್ತದೆ ಅಂತ ತೋರಿಸಲು ಹೊರಟಿದ್ದರು. ಆಗ ಏನೋ ಲಫಡಾ ಆಗಿಬಿಟ್ಟಿತು. ಬೆಂಕಿಕಡ್ಡಿಯ ಕೆಂಡದ ಚೂರೊಂದು ಎಲ್ಲೋ ಫ್ಲಾಸ್ಕಿಗೆ ಬಿದ್ದುಬಿಟ್ಟಿತು ಅಂತ ಕಾಣುತ್ತದೆ. ಅದರಲ್ಲಿ ಇದ್ದಿದ್ದು ಯಾವದೋ ಆಸಿಡ್ ಇರಬೇಕು. ಬರೋಬ್ಬರಿ ಹೊತ್ತಿಕೊಂಡಿದೆ. ಆಗ ಆಯಿತು ನೋಡಿ ಪ್ರಮಾದ! ಸ್ಪೋಟ! ದೊಡ್ಡ ಸ್ಪೋಟ! ಭಯಾನಕ ಸ್ಪೋಟ! ಢಂ! ಗ್ಲಾಸಿನ ಫ್ಲಾಸ್ಕ್ ಫಳೀರ್ ಅಂತ ಒಡೆದು ಚೂರು ಚೂರು. ಸಿಡಿದ ಒಂದ್ನಾಲ್ಕು ಚೂರುಗಳು ಬಡಿಗೇರ್ ಸರ್ ಅವರಿಗೂ ಹೋಗಿ ತಾಕಿ, ಅವರಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾದವು. ಮುಂದಿನ ಬೆಂಚುಗಳಲ್ಲಿ ಆಸೀನರಾಗಿದ್ದ ಬಾಲವಿಲ್ಲದ ಬಾಲಕರಿಗೂ ತಾಗಿದ್ದವೇ? ಈಗ ನೆನಪಿಲ್ಲ. ಬಾಲವಿಲ್ಲದ ಬಾಲಕರು ಥೇಟ್ ಮಂಗ್ಯಾಗಳಂತೆ ಜಿಗಿದು ತಪ್ಪಿಸಿಕೊಂಡಿರಬೇಕು ಬಿಡಿ. ಅಲ್ಲಿಗೆ ಹೈಡ್ರೋಜನ್ ಪ್ರಯೋಗ ಟೋಟಲ್ಲಾಗಿ ಶಿವಾಯ ನಮಃ!

ನಮ್ಮ ಭಟ್ಟರ ಶಾಲೆಯಲ್ಲಿ ಬೇರೆ ಬೇರೆ ರೀತಿಯ ಢಂ ಢಾಂ ಢೂಸ್ ಅನ್ನುವ ನೈಸರ್ಗಿಕ ಆವಾಜುಗಳು ಕೇಳುತ್ತಿದ್ದವೇ ವಿನಾ ಈ ತರಹದ ರಾಸಾಯನಿಕ 'ಢಂ' ಆವಾಜು ಕೇಳಿದ್ದು ಅದೇ ಮೊದಲಿರಬೇಕು. ಸುತ್ತ ಮುತ್ತಿನ ಕ್ಲಾಸುಗಳಲ್ಲಿ ಕಲಿಸುತ್ತಿದ್ದ ಮಾಸ್ತರ್, ಮಾಸ್ತರಿಣಿ ಮಂದಿಯೆಲ್ಲ 'ಢಂ' ಅನ್ನುವ ಭಯಾನಕ ಆವಾಜು ಕೇಳಿ ಘಾಬರಿಯಿಂದ ಓಡಿ ಬಂದಿದ್ದರು. ಬಂದು ನೋಡಿದರೆ 6th A ಕ್ಲಾಸ್ ಫುಲ್ ಥಂಡಾ! ಥಂಡಾ ಹೊಡೆದ ಮಾಸ್ತರ್ರು, ಅದಕ್ಕಿಂತ ಹೆಚ್ಚಿನ ಥಂಡಾ ಹೊಡೆದ ವಿದ್ಯಾರ್ಥಿಗಳು. ಎದುರಿಗೆ 'ಉಜಡಾ ಹುವಾ ಗುಲಶನ್ ಹೈ, ರೋತಾ ಹುವಾ ಮಾಲಿ ಹೈ' ಮಾದರಿಯಲ್ಲಿ ಪೂರ್ತಿ ಕೆಟ್ಟು ನಪರೆದ್ದು ಹೋದ ಹೈಡ್ರೋಜನ್ ಮಾಡುವ ಪ್ರಯೋಗದ ಸೆಟಪ್, ಮಂಗ್ಯಾನ ಮಾರಿ ಮಾಡಿ ಕೂತಿರುವ ನಾವೆಲ್ಲ including ಬಡಿಗೇರ್ ಸರ್. ಫುಲ್ ಮಟಾಶ್! ನಾಮಾವಶೇಷ! ಆಗಿಹೋಗಿರುವ ಅವಗಢಕ್ಕೆ ಯಾವದೇ ವಿವರಣೆ ಬೇಕಿರಲಿಲ್ಲ.

ಪುಣ್ಯಕ್ಕೆ ಬಡಿಗೇರ್ ಸರ್ ಅವರಿಗಾಗಲೀ, ಯಾವದೇ ವಿದ್ಯಾರ್ಥಿಗಳಿಗಾಗಲೀ (ಜಾಸ್ತಿ) ಏನೂ ಆಗಿರಲಿಲ್ಲ. ಬಡಿಗೇರ್ ಸರ್ ಅವರ ಸಣ್ಣ ಪುಟ್ಟ ತರಚು ಗಾಯಗಳಿಗೆ ಡೆಟಾಲ್ ಹಚ್ಚಿದರು ಉಳಿದ ಮಾಸ್ತರ್ ಮಂದಿ. ನಡುವೆ ಬಡಿಗೇರ್ ಸರ್ ಅವರ ವಿವರಣೆ. ಐತಿಹಾಸಿಕವಾಗಿ ಢಂ ಅನ್ನಿಸಿದ್ದಕ್ಕೆ ಬರೋಬ್ಬರಿ ವಿವರಣೆ ಕೊಡಬೇಕಲ್ಲ. ಯಾರಿಗೆ ಅರ್ಥವಾಯಿತೋ ಬಿಟ್ಟಿತೋ ಗೊತ್ತಿಲ್ಲ. ಬಡಿಗೇರ್ ಸರ್ ಅಂತೂ ವಿವರಣೆ ಕೊಟ್ಟೇ ಕೊಟ್ಟರು. ಅಷ್ಟರಲ್ಲಿ ಕೆಲಸದ ಹನುಮಂತಪ್ಪ ಪೂಜಾರ್ ಬಂದು ಕ್ಲಾಸಿನ ಬಾಗಿಲಲ್ಲಿ ನಿಂತ. 'ಏನು?' ಅನ್ನುವಂತೆ ಬಡಿಗೇರ್ ಸರ್ ಹುಬ್ಬು ಎತ್ತಿ ಕೇಳಿದರು. ಅವನು ಕೈಯಲ್ಲಿದ್ದ ಕಸಬರಿಗೆಯನ್ನು ಎತ್ತಿ ಖಡ್ಗದಂತೆ ಝಳಪಿಸಿದ. ಗೊತ್ತಾಯಿತು. ಢಂ ಅಂದ ಪ್ರಯೋಗದ ಅವಶೇಷಗಳನ್ನು ಗುಡಿಸಿ, ಕ್ಲೀನ್ ಮಾಡಲು ಬಂದಿದ್ದಾನೆ ಅಂತ. ಅಲ್ಲಿಗೆ ಆವತ್ತಿನ ವಿಜ್ಞಾನದ ಪಿರಿಯಡ್ ಸಮಾಪ್ತಿ. ಎಲ್ಲರಿಗೂ ಕ್ಲಾಸ್ ಬಿಟ್ಟು ಹೊರಗೆ ಹೋಗಲು ಹೇಳಿದರು. ಯಾವದೋ ಯಬಡೇಶಿ ಹೊರಗೆ ಹೋಗಿ ಏನು ಮಾಡಬೇಕು ಅಂತ ಬೇರೆ ಕೇಳಿಬಿಟ್ಟ. 'ಪ್ರಯೋಗವಂತೂ ಹಾಳಾಗಿ ಎಕ್ಕುಟ್ಟಿ ಹೋಗಿದೆ. ನೀವೂ ಹಾಳಾಗಿ ಹೋಗ್ರಿ!' ಅನ್ನೋ ಲುಕ್ ಕೊಟ್ಟರು ಸರ್. ಹಾಗೆ ಕೇಳಿದ್ದಕ್ಕೆ ಅವನನ್ನು ಬಡಿಯದೇ ಬಿಟ್ಟಿದ್ದು ಅವರ ದೊಡ್ಡ ಗುಣ. ಪೂಜಾರ್ ಹನುಮಂತಪ್ಪ ಕ್ಲೀನ್ ಮಾಡಲು ಕಸಬರಿಗೆ ಎತ್ತಿದ. ನಾವೆಲ್ಲಾ ಕ್ಲಾಸಿಂದ ಬಾಹರ್.

ಸರಿ ಇಷ್ಟಕ್ಕೇ ಮುಗಿದುಬಿಟ್ಟಿದ್ದರೆ ಮುಂದೆ ಜಾಸ್ತಿ ವಿಶೇಷ ಇರಲಿಲ್ಲ. ಆದರೆ ಅದು ಹೈಡ್ರೋಜನ್. ಗಾಳಿಗಿಂತ ಹಗುರ. ಬಲೂನಿನಲ್ಲಿ ತುಂಬಿದರೆ ಬಲೂನ್ ಹಾರುತ್ತದೆ. ಹಾಗಾಗಿ ನಮಗೆ ವಿಶೇಷ ಆಸಕ್ತಿ. ಬಲೂನ್ ಅಂತೂ ಆಟದ ವಸ್ತು. ಆದರೆ ತೇಲಾಡುವ ಬಲೂನ್ ಸಿಗುತ್ತಿರಲಿಲ್ಲ. ಎಲ್ಲೋ ಒಮ್ಮೊಮ್ಮೆ ಪೇಟೆಯಲ್ಲಿ ಹೀಲಿಯಂ, ಹೈಡ್ರೋಜನ್ ತುಂಬಿದ ಬಲೂನುಗಳನ್ನು ಮಾರುತ್ತಿದ್ದರು. ಆವಾಗ ಯಾವಾಗಾದರೂ ಮನೆ ಮಂದಿಯನ್ನು ಕಾಡಿ ಬೇಡಿ, ರೊಕ್ಕ ಖರ್ಚು ಮಾಡಿಸಿ, ಕೊಡಿಸಿಕೊಂಡಿರಬಹುದು. ಅದು ಬಿಟ್ಟರೆ ಉಳಿದ ಸಮಯಗಳಲ್ಲಿ ಬೋರಿಂಗ್ ಪುಗ್ಗಾ ಬಲೂನ್ ಅಷ್ಟೇ. ಈಗ ಶಾಲೆಯಲ್ಲಿ ಹೈಡ್ರೋಜನ್ ತಯಾರಾಗುವದಿತ್ತು. ಎಲ್ಲ ಸರಿಯಾಗಿ ನಡೆದುಬಿಟ್ಟಿದ್ದರೆ ತರಗತಿಯಲ್ಲಿ ತಯಾರಾದ ಫ್ರೆಶ್ ಹೈಡ್ರೋಜನ್ ಅನಿಲವನ್ನು ಬಲೂನುಗಳಲ್ಲಿ ತುಂಬಿ ಹಾರಿಸುವ ಪ್ಲಾನ್ ಸಹಿತ ಬಡಿಗೇರ್ ಸರ್ ಹಾಕಿದ್ದರು ಅಂತ ನೆನಪು. ಕ್ಲಾಸಿನಲ್ಲಿ ಹೈಡ್ರೋಜನ್ ಬಲೂನ್ ಹಾರಿಸುವ ಕನಸು ಢಂ ಅಂದುಹೋಗಿತ್ತು. ಆದರೆ ನನಗೆ ಪುಗ್ಗಾದಲ್ಲಿ ಹೈಡ್ರೋಜನ್ ತುಂಬಿ ಹಾರಿಸುವ ಹುಚ್ಚು ಮಾತ್ರ ವಯಕ್ತಿಕ ನೆಲೆಯಲ್ಲಿ ಬಿಟ್ಟಿರಲಿಲ್ಲ. ನಮ್ಮ ಕೆಲವು ಹುಚ್ಚುಗಳೇ ಹಾಗೆ.

ಸರಿಯಾಗಿ ನೆನಪಿಲ್ಲ. ನಾವೇ ಯಾರೋ ಬಡಿಗೇರ್ ಸರ್ ಅವರನ್ನು ಕೇಳಿದೆವೋ ಅಥವಾ ಅವರಾಗೇ ಹೇಳಿದರೋ ಗೊತ್ತಿಲ್ಲ. ಆದರೆ ಬಡಿಗೇರ್ ಸರ್ ಒಂದು ಖತರ್ನಾಕ್ ಮಾಹಿತಿ ಕೊಟ್ಟುಬಿಟ್ಟರು. ಅದೇನೆಂದರೆ ಮನೆಯಲ್ಲಿ ಹೇಗೆ ಹೈಡ್ರೋಜನ್ ತಯಾರು ಮಾಡುವದು ಅಂತ.

ಅದೇನೋ ಬೆಳ್ಳಿ ತೆಗೆದುಕೊಳ್ಳಬೇಕಂತೆ. ಅದನ್ನು ಒಂದು ಬಾಟಲಿಯಲ್ಲಿ ಹಾಕಿ, ಅದರ ಮೇಲೆ ಸುಣ್ಣದ ನೀರು ಸುರಿಯಬೇಕಂತೆ. ಆ ಬಾಟಲಿಯ ಬಾಯಿಗೆ ಒಂದು ಬಲೂನ್ ಕಟ್ಟಬೇಕಂತೆ. ಬೆಳ್ಳಿ ಮತ್ತು ಸುಣ್ಣದ ಮಧ್ಯೆ ಏನೋ ಕೆಮಿಕಲ್ ರಿಯಾಕ್ಷನ್ ಆಗಿ ಹೈಡ್ರೋಜನ್ ತಯಾರಾಗುತ್ತದೆ ಅಂತ ಹೇಳಿಬಿಟ್ಟರು ಬಡಿಗೇರ್ ಸರ್. ಸುಣ್ಣ, ಬಾಟಲಿ, ಬಲೂನ್ ಎಲ್ಲ ಹೇಗಾದರೂ ಮಾಡಿ ಜೋಡಿಸಿಕೊಂಡೇವು ಆದರೆ ಬೆಳ್ಳಿ ಎಲ್ಲಿಂದ ತರೋಣ? ಕೆಲವರು ಸೊಂಟದ ತಮ್ಮ ಉಡದಾರ ಸವರಿಕೊಂಡರು. ಕೆಲವರು ಕತ್ತಿಗೆ ಹಾಕಿದ್ದ ಚೈನ್ ಸವರಿಕೊಂಡರು. ಹುಡುಗಿಯರು ಕಾಲಿನ ಗೆಜ್ಜೆ ಘಲ್ ಘಲ್ ಅನ್ನಿಸಿದರು. ಅವೆಲ್ಲ ಬೆಳ್ಳಿಯವೇ ನೋಡಿ. ಇದನ್ನು ನೋಡಿದ, ಗೆಜ್ಜೆಗಳ ಘಲ್ ಘಲ್ ನಾದ ಕೇಳಿದ ಬಡಿಗೇರ್ ಸರ್ ಸ್ವಲ್ಪ tension ನಲ್ಲಿ ಬಂದಿರಬೇಕು. ಮೊದಲೇ ನಾವೆಲ್ಲ ಬುದ್ಧಿಯಿಲ್ಲದ ಮಂಗ್ಯಾನ ಮಕ್ಕಳು. ಮೇಲಿಂದ ಹೈಡ್ರೋಜನ್ ಮಾಡಲು ಹೋಗಿ, ಎಲ್ಲಾದರೂ ಮೈಮೇಲೆ ಹಾಕಿಕೊಂಡ ಬೆಳ್ಳಿಯ ಆಭರಣಗಳನ್ನು ಸುಣ್ಣದ ನೀರಿನಲ್ಲಿಟ್ಟು, ರಾಡಿಯೆಬ್ಬಿಸಿ, ನಂತರ ಪಾಲಕರು ಬಂದು ತಮಗೆ ಬೈದಾರು, ಬುರುಡೆ ತಟ್ಟಿಯಾರು ಅಂತ ಕಾಳಜಿ ವಹಿಸಿದ ಬಡಿಗೇರ್ ಸರ್ ಬೆಳ್ಳಿಯನ್ನು ಎಲ್ಲಿಂದ ಸಂಪಾದಿಸಬಹುದು ಅಂತ ಕೂಡ ಹೇಳಿದರು. ಭಾರಿ ಜಾಬಾದ್ ಸರ್! ಎಲ್ಲ ಡೀಟೇಲ್ಸ್ ಫುಲ್ ವರ್ಕ್ ಔಟ್ ಮಾಡಿಕೊಂಡೇ ಬಂದಿದ್ದರು.

ಸಿಗರೇಟ್ ಪ್ಯಾಕುಗಳಲ್ಲಿ ಇರುತ್ತಿದ್ದ ಬ್ಯಾಗಡೆ / ಬೆಳ್ಳಿ ಕಾಗದ (glittering silvery paper) ನೆನಪಿದೆಯೇ? ಹಾಂ! ಅದೇ! ಅದರಲ್ಲೇನೋ ಬೆಳ್ಳಿಯ ಒಂದು ಪದರು ಇರುತ್ತದಂತೆ. ಅದನ್ನು ಸಾದಾ ಕಾಗದದ ಮೇಲೆ ಅಂಟಿಸಿ ಆ ಬ್ಯಾಗಡೆ ಕಾಗದ ತಯಾರು ಮಾಡಿರುತ್ತಾರಂತೆ. ನಾಜೂಕಿನಿಂದ ಬೆಳ್ಳಿಯ ಪದರನ್ನು ಪ್ರತ್ಯೇಕಿಸಿದರೆ ಬೆಳ್ಳಿ ಸಿಗುತ್ತದಂತೆ. ಹಾಗೆ ಸಂಪಾದಿಸಿದ ಬೆಳ್ಳಿಯನ್ನು ಉಪಯೋಗಿಸಿ, ಸುಣ್ಣದ ನೀರನ್ನು ಬಳಸಿ, ಹೈಡ್ರೋಜನ್ ತಯಾರು ಮಾಡಬಹುದು ಅಂತ ಬಡಿಗೇರ್ ಸರ್ ಫುಲ್ ವಿವರಣೆ ಕೊಟ್ಟರು. ಅದು ಮಾತ್ರ ಫುಲ್ ತಲೆಯಲ್ಲಿ ಸಿಂಕಾಗಿ ಬಿಟ್ಟಿತು. ಎಷ್ಟು ಸುಲಭ ಹೈಡ್ರೋಜನ್ ಮಾಡುವದು. ಇನ್ನೇನು? ಹೈಡ್ರೋಜನ್ ಮಾಡುವದು, ಬಲೂನುಗಳಲ್ಲಿ ತುಂಬಿಸುವದು, ಹಾರಿಸುವದು. ಪೇಟೆಯಲ್ಲಿ ಮನೆ ಮಂದಿ ಹತ್ತಿರ ಪ್ಯಾಂ ಪ್ಯಾಂ ಅಂತ ರಗಳೆ ಮಾಡಿ ಹೈಡ್ರೋಜನ್ ಬಲೂನ್ ಕೊಡಿಸಿಕೊಳ್ಳುವ ತೊಂದರೆಯೂ ಇಲ್ಲ. ಬಡಿಗೇರ್ ಸರ್ ಹೇಳಿದ್ದು ವರ್ಕ್ ಔಟ್ ಆಗಿಬಿಟ್ಟರೆ ಹೈಡ್ರೋಜನ್ ವಿಷಯದಲ್ಲಿ ನಾವು ಫುಲ್ ಸ್ವಾವಲಂಬಿಗಳಾಗಿಬಿಡುತ್ತೇವೆ. ಯಾರಿಗಿದೆ ಯಾರಿಗಿಲ್ಲ ಹೈಡ್ರೋಜನ್ ತಯಾರಕರಾಗುವ ಭಾಗ್ಯ, ಅದೂ ಮನೆಯಲ್ಲಿ! ಗೃಹ ಕೈಗಾರಿಕೆಗೆ ನಾವು ಫುಲ್ ರೆಡಿ!

ಅಂತಹ ಖತರ್ನಾಕ್ ಐಡಿಯಾ ಕೊಟ್ಟ ಬಡಿಗೇರ್ ಸರ್ ಅವರಿಗೆ ಸಹಸ್ರ ನಮಸ್ಕಾರಗಳನ್ನು ಮನದಲ್ಲೇ ಹೇಳಿಕೊಂಡೆ. ಇನ್ನು ಹೈಡ್ರೋಜನ್ ಕಾರ್ಯಾಚರಣೆಯನ್ನು ತುರಂತ್ ಶುರು ಮಾಡಲೇಬೇಕು. ಶುರು ಮಾಡಿದಾಗ ಗೊತ್ತಾಯಿತು ಅದೆಷ್ಟು ಕಷ್ಟ ಅಂತ.

ಬೆಳ್ಳಿ! ಬೆಳ್ಳಿ ಬೇಕಲ್ಲರೀ! ಸಿಗರೇಟ್ ಬ್ಯಾಗಡೆ ಕಾಗದ ಸಿಗುವದೇನು ಸುಲಭವೇ? ನಮಗೆ ಪರಿಚಯವಿದ್ದ ಎಲ್ಲ ಚುಟ್ಟಾ, ಪಾನ್ ಅಂಗಡಿಗಳನ್ನು ಅಲೆದಿದ್ದಾಯಿತು. ಅವರ ಹತ್ತಿರವಾದರೂ ಎಲ್ಲಿರಬೇಕು? ಇದ್ದ ಒಂದೆರೆಡು ಕೊಟ್ಟರು. ನಮಗೆ ಜಾಸ್ತಿ ಬೇಕು. ಇನ್ನೂ ಬೇಕು ಅಂದರೆ ಎಲ್ಲ ತಿಪ್ಪೆಗೆ ಒಗೆದಿದ್ದೇವೆ ಅಂತ ಹತ್ತಿರದಲ್ಲಿದ್ದ ತಿಪ್ಪೆ ತೋರಿಸಿದರು. ಇರಲಿ, ಹೋಗಿ ತಿಪ್ಪೆ ಕೆದರಿ, ತಿಪ್ಪೆ ಸುಲ್ತಾನರಾಗಿ, ತಿಪ್ಪೆಯಲ್ಲಿದ್ದ ಸಿಗರೇಟ್ ಬ್ಯಾಗಡೆ ಚಮಕ್ ಚಮಕ್ ಕಾಗದ ಹುಡುಕೋಣ ಅಂತ ತಿಪ್ಪೆ ಹತ್ತಿರ ಹೋದರೆ ಗಬ್ಬು ನಾತ. ಜೊತೆಗೆ ತಿಪ್ಪೆಯನ್ನು ಆಕ್ರಮಿಸಿಕೊಂಡು, 'ಖಬರ್ದಾರ್! ಹತ್ತಿರ ಬಂದ್ರೆ ಕಚ್ಚಿಬಿಡ್ತೇವಿ!' ಅಂತ ಲುಕ್ ಕೊಡುತ್ತ, ಡ್ರುಂಕ್ ಡ್ರುಂಕ್ ಅಂತ ಆವಾಜ್ ಹಾಕಿದ ಎಮ್ಮೆ ಸೈಜಿನ ಧಾರವಾಡದ ಫೇಮಸ್ ಹಂದಿಗಳು. ಎಲ್ಲಿಯಾದರೂ ತಿಪ್ಪೆಯಲ್ಲಿನ ವರಾಹಾವತಾರ ಆಟಕಾಯಿಸಿಕೊಂಡರೆ ಕಷ್ಟ ಅಂತ ಹೆದರಿ ತಿಪ್ಪೆ ಕೆದರಿ, ಸಿಗರೇಟ್ ಬೆಳ್ಳಿ wrapper ಕಾಗದ ಹುಡುಕುವ ಯಬಡತನದ ವಿಚಾರ ಬಿಟ್ಟಾಯಿತು. ಹೀಗೆ ನಮ್ಮ ಹೈಡ್ರೋಜನ್ ತಯಾರಿಕೆ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ ಬಂದುಬಿಡಬೇಕೇ? ಅದೂ ಬೀದಿ ವರಾಹಗಳಿಂದ!? ಛೇ! ಏನು ಮಾಡುವದು ಈಗ?

ಬೆಳ್ಳಿಯನ್ನು ಸಂಪಾದಿಸುವದು ಹೇಗೆ? ಗೆಳೆಯರ ಜೊತೆ ಸಮಾಲೋಚನೆ ಮಾಡಿದೆ. ಯಾರೂ ಏನೂ ಸರಿಯಾದ ಐಡಿಯಾ ಕೊಡಲಿಲ್ಲ. ಗೊತ್ತಿದ್ದ ಪಾನ್, ಚುಟ್ಟಾ ಅಂಗಡಿಯವರು ದಿನಕ್ಕೆ ಕೊಡಬಹುದಾದ ಒಂದು ಎರಡು ಶೀಟ್ ಬೆಳ್ಳಿ ಪೇಪರ್ ಲೆಕ್ಕದಲ್ಲಿ ಹೋದರೆ ಒಂದು ಬೆಳ್ಳಿಯ ಉಂಡೆ ತಯಾರಾಗುವದು ಯಾವ ಕಾಲಕ್ಕೋ!? ಹಾಗಾಗಿ ಏನಾದರೂ ಬೇರೆ ಜುಗಾಡ್ ಮಾಡಲೇಬೇಕು.

ಆಗ ನೆರವಿಗೆ ಬಂದವನು ಮೆಹಮ್ಯಾ ಉರ್ಫ್ ಮೆಹಮೂದ್. ಫುಲ್ ಹೆಸರು ಮೆಹಮೂದ್ ಇಸ್ಮಾಯಿಲ್ ಬಿಜಾಪುರ್ ಅಂತ. ಪುರಾತನ ದೋಸ್ತ. ಕ್ಲೋಸ್ ದೋಸ್ತ. ಅವನೇ ಹೇಳಿದ, 'ಏ, ನಾ ಸಿರಗೇಟ್ ಹಾಳಿ ತಂದು ಕೊಡತೇನಿ. ನೀ ಚಿಂತಿ ಮಾಡಬ್ಯಾಡ!' ಫುಲ್ ವಿಶ್ವಾಸದಿಂದ ಆಶ್ವಾಸನೆ ಕೊಟ್ಟುಬಿಟ್ಟ. ಸಿಗರೇಟ್ ಅನ್ನಲು ಸಿರಗೇಟ್ ಅನ್ನುವದು ಅವರ ಪದ್ಧತಿ. 'ಲೇ, ಮೆಹಮ್ಯಾ, ಭಾಳ ಬೇಕಲೇ. ಸ್ವಲ್ಪ ಸ್ವಲ್ಪ ಸಾಕಾಗಂಗಿಲ್ಲ. ಅದೂ ಸಿಗರೇಟ್ ಹಾಳಿಯಿಂದ ಬೆಳ್ಳಿ ಪದರ ಬಿಡಿಸಿ, ಬರೇ ಬೆಳ್ಳಿ ಅಷ್ಟೇ ತೆಗೆದು, ಉಂಡಿ ಮಾಡಬೇಕಲೇ. ಒಂದು ಹಾಳಿಯಿಂದ ಇಷ್ಟೇ ಸಣ್ಣ ಉಂಡಿ ಆಗ್ತದ. ದೊಡ್ಡ ಉಂಡಿ ಮಾಡಲಿಕ್ಕೆ ಭಾಳ ಸಿಗರೇಟ್ ಬೆಳ್ಳಿ ಹಾಳಿ ಬೇಕಾಗ್ತವಲೇ. ಎಲ್ಲಿಂದ ತರವ ನೀ?' ಅಂತ ಕೇಳಿದೆ. 'ನೀ, ಸುಮ್ಮ ಕುಂದರ್ಪಾ. ನಾ ಎಲ್ಲಾ ವ್ಯವಸ್ಥಾ ಮಾಡ್ತೇನಿ. ಇವತ್ತು ಸೋಮವಾರ. ಶನಿವಾರ ಮಧ್ಯಾನ ಅನ್ನೋದ್ರಾಗ ಒಂದು ದೊಡ್ಡ ಬೆಳ್ಳಿ ಉಂಡಿ ಮಾಡಿ ತಂದೇಬಿಡ್ತೇನಿ. ಸೀದಾ ನಿಮ್ಮ ಮನಿಗೇ ಬಂದುಬಿಡ್ತೇನಿ. ಹೈಡ್ರೋಜನ್ ತಯಾರ್ ಮಾಡೇಬಿಡೋಣ. ನೀ ಗಾಜಿನ ಬಾಟಲಿ, ಸುಣ್ಣ, ಪುಗ್ಗಾ ತಯಾರ್ ಮಾಡಿಟ್ಟುಕೋ!' ಅಂತ ಹೇಳಿದ ಮೆಹಮೂದ್, 'ಕೈಸಾ ಹೈ ಜೀ!?' ಅನ್ನುವ ಹತ್ತಿಕೊಳ್ಳದ ಟಿಪಿಕಲ್ confident ಲುಕ್ ಕೊಟ್ಟ. ನನಗೆ ನಂಬಿಕೆ ಫುಲ್ ಬರಲಿಲ್ಲ. ಆದರೆ ಹತ್ತಿಕೊಳ್ಳದ ಮಂದಿ ಕೆಲವೊಂದು ವಿಷಯಗಳಲ್ಲಿ ನಮಗಿಂತ ಹೆಚ್ಚಿಗೆ resourceful. ಅವರ ಲೋಕವೇ ಬೇರೆ. ಹಾಗಾಗಿ, 'ನೋಡೋಣ! ಎಷ್ಟು ಬೆಳ್ಳಿ ಕಾಗದ ಸಂಪಾದಿಸಿ, ಅದರಿಂದ ಬೆಳ್ಳಿ ಪ್ರತ್ಯೇಕಿಸಿ ತರುತ್ತಾನೋ ನೋಡೋಣ,' ಅಂತ ಸುಮ್ಮನಾದೆ. ಜಾಸ್ತಿಯೇನೂ ಭರವಸೆ ಬಂದಿರಲಿಲ್ಲ.

ಮೆಹಮೂದ್ ಬಿಜಾಪುರ್ (ಚಿತ್ರ ಕೃಪೆ: ಮಿತ್ರ ಗಿರೀಶ್ ಪಾಟೀಲ್)

ಇಷ್ಟಾದ ನಂತರ ಮರೆತುಬಿಟ್ಟಿದ್ದೆ. ಶನಿವಾರ ಬಂತು. ಆಗಲೂ ನೆನಪಾಗಲಿಲ್ಲ. ಎಂದಿನಂತೆ ಶನಿವಾರ ಅರ್ಧ ದಿನ ಶಾಲೆ. ಮಧ್ಯಾನ ಮನೆಗೆ ಬಂದು, ಊಟ ಗೀಟ ಮಾಡಿ, ಹೋಂ ವರ್ಕ್ ಇತ್ಯಾದಿ ಶುರು ಮಾಡೋಣ ಅನ್ನುವ ಹೊತ್ತಿಗೆ ಯಾರೋ, 'ಮಹೇಶಾ, ಮಹೇಶಾ,' ಅಂತ ಕರೆದರು. ಅಮ್ಮ ಹೋಗಿ ನೋಡಿದಳು. ಬಂದಾಕೆ ಹೇಳಿದ್ದು, 'ನಿನ್ನ ಗೆಳೆಯಾ. ಅವನೇ ಟಾಂಗಾ ಇಸ್ಮಾಯಿಲ್ ಸಾಬ್ರ ಮಗಾ. ಅವನೇ ಬಂದಾನ ನೋಡು.' ಟಾಂಗಾ ಇಸ್ಮಾಯಿಲ್ ಸಾಬ್ರ ಮಗ ಅಂದರೆ ಇದೇ ಮೆಹಮೂದ್. ಅವನ ತಂದೆ ಇಸ್ಮಾಯಿಲ್ ಸಾಹೇಬರ ಟಾಂಗಾ (ಕುದುರೆ ಗಾಡಿ) ನಮ್ಮ ತಂದೆ ತಾಯಿ ಧಾರವಾಡದಲ್ಲಿ ವಿದ್ಯಾರ್ಥಿಗಳಾಗಿದ್ದ (೧೯೫೦-೬೦) ಕಾಲದಲ್ಲಿ ತುಂಬಾ ಪ್ರಸಿದ್ಧ. ಇಸ್ಮಾಯಿಲ್ ಸಾಹೇಬರು ಅಂದಿನಿಂದಲೇ ಕುಟುಂಬಕ್ಕೆ ಪರಿಚಿತರು, ಆತ್ಮೀಯರು. ಅಂತವರ ಮಗ ಈ ನಮ್ಮ ದೋಸ್ತ ಮೆಹಮೂದ್. 'ಅರೇ ಇಸ್ಕೀ! ಇವತ್ತು ಹ್ಯಾಂಗ ಬಂದಾ ಈ ಮೆಹಮ್ಯಾ? ಶಾಲೆ ಬಿಡುವ ಮೊದಲೇನೂ ಹೇಳಿರಲಿಲ್ಲ. ಮತ್ತೆ ಇವತ್ತು ದೋಸ್ತರ ಜೊತೆ ಯಾವ ಪ್ಲಾನೂ ಇಲ್ಲ. ಹಾಗಾಗಿ ಯಾಕ ಬಂದಾ ಇವಾ?' ಅಂತ ವಿಚಾರ ಮಾಡುತ್ತ ಹೊರಗೆ ಬಂದೆ. ಕೆಲವು ದಿವಸಗಳ ಹಿಂದೆ ಮೆಹಮೂದ್ ಬೆಳ್ಳಿ ಸಂಗ್ರಹಿಸಿಕೊಂಡು ಬರುತ್ತೇನೆ ಅಂತ ಹೇಳಿದ್ದನ್ನು ನಾನು ಮರೆತಿದ್ದೆ. ಅವನು ಮರೆತಿರಲಿಲ್ಲ.

'ಬಾರಲೇ ಮೆಹಮ್ಯಾ. ಏನು?' ಅಂತ ಕೇಳಿದೆ.

ಮೆಹಮ್ಯಾ ಉರ್ಫ್ ಮೆಹಮೂದ್ ಮಾತಾಡಲಿಲ್ಲ. ತಾನು ಹಾಕಿದ ಚೊಣ್ಣದ ಕಿಸೆಯೊಳಗೆ ಕೈಯನ್ನು ಆಳವಾಗಿ ಬಿಟ್ಟು, ಒಂದೆರೆಡು ನಿಮಿಷ ಅಲ್ಲೇ ಆಕಡೆ ಈಕಡೆ ಅಲ್ಲಾಡಿಸಿ, ಏನೋ ಒಂದು ವಸ್ತುವನ್ನು ತೆಗೆದ. ತೆಗೆದು 'ತೊಗೋ' ಅನ್ನುವವನಂತೆ ನನ್ನ ಕೈಯಲ್ಲಿ ಇಟ್ಟ.

ಹ್ಯಾಂ!? What's this? ಸಡನ್ನಾಗಿ ಕಿಸೆಯಿಂದ ಏನೋ ತೆಗೆದು ಕೈಯಲ್ಲಿಡುತ್ತಿದ್ದಾನೆ. ಏನಿರಬಹುದು? ಅಂತ ಕೆಟ್ಟ ಕುತೂಹಲ.

ನೋಡಿದರೆ ಒಂದು ಉಂಡೆ. ಚಕಮಕ, ಲಕಲಕ ಹೊಳೆಯುವ ಲಡ್ಡು.

ಆವಾಗ ಫ್ಲಾಶ್ ಆಯಿತು ನಾಲ್ಕು ದಿವಸಗಳ ಹಿಂದೆ ಮಾತಾಡಿದ್ದು. ಇದೇ ಮೆಹಮೂದನೇ ಅಲ್ಲವೇ, 'ನೀ ಚಿಂತಿ ಮಾಡಬ್ಯಾಡಪಾ. ನಾ ಸಿರಗೇಟ್ ಬೆಳ್ಳಿ ಹಾಳಿ ತಂದು ಕೊಡ್ತೇನಿ. ನೀ ಬಾಕಿ ಎಲ್ಲ ತಯಾರಿ ಮಾಡಿ ಇಟ್ಟುಕೋ. ಹೈಡ್ರೋಜನ್ ಮಾಡೋಣ,' ಅಂತ ಹೇಳಿದವನು? ಕೊಟ್ಟ ಮಾತಿನಂತೆ ಬರೋಬ್ಬರಿ ಕೆಲಸ ಮಾಡಿದ್ದಾನೆ. 'ಮಸ್ತ ಕೆಲಸ ಮಾಡಿದಿ ನೋಡಲೇ ಮೆಹಮ್ಯಾ' ಅಂತ ಮನಸ್ಸಿನಲ್ಲೇ ಹೇಳಿಕೊಂಡೆ. ಅವನಿಗೇ ಹೇಳಿ, ಡುಬ್ಬ ಚಪ್ಪರಿಸಿ, 'Good job! Well done!' ಅಂತ ಪಬ್ಲಿಕ್ಕಾಗಿ ಪುಂಗಲು ಆಗಿನ್ನೂ ಈಗಿನಂತೆ ಮ್ಯಾನೇಜರ್ ಆಗಿರಲಿಲ್ಲ. ಗೆಳೆಯರು ಇರುವದೇ ಇಂತದ್ದನ್ನೆಲ್ಲ ಮಾಡಿ ಕೊಡಲು ಅನ್ನುವ ಮನೋಭಾವ. ಅವರದ್ದೂ ಹಾಗೆ ಇರುತ್ತಿತ್ತು. ದೊಡ್ಡಸ್ತನಿಕೆ ಸಣ್ಣಸ್ತನಿಕೆ ಮಾತಿಲ್ಲ. ಒಟ್ಟಿನಲ್ಲಿ ಜುಗಾಡ್ ಮಾಡಬೇಕು. ಮಜಾ ಮಾಡಬೇಕು. Everything to have some fun. ಯಾರು ಮಾಡಿದರು? ಏನು ಮಾಡಿದರು? ಎಷ್ಟು ಮಾಡಿದರು? ಒಬ್ಬವ ಕಮ್ಮಿ ಮಾಡಿದ. ಒಬ್ಬವ ಜಾಸ್ತಿ ಕೆಲಸ ಮಾಡಿದ. ಮಾಡಿದ ಕೆಲಸಕ್ಕಾಗಿ ಥ್ಯಾಂಕ್ಸ್ ಹೇಳುವದು. ಅದೆಲ್ಲ formalities ಕೇಳಬೇಡಿ. ಜಾಸ್ತಿ ತಾರೀಫ್ ಮಾಡಿದರೇ ಒಂದು ನಮೂನಿ ನೋಡುತ್ತಿದ್ದರು ನಮ್ಮ ಪುರಾತನ ದೋಸ್ತರು. ಇವತ್ತಿಗೂ ಅಷ್ಟೇ. ದೋಸ್ತರಿಂದ, ದೋಸ್ತರಿಗಾಗಿ, ದೋಸ್ತರದ್ದೇ ಆದ ಕಾರ್ಬಾರು ನಮ್ಮದು. 

ಹೈಡ್ರೋಜನ್ ತಯಾರಿಸಲು ಮುಖ್ಯವಾಗಿ ಬೇಕಾದ ಬೆಳ್ಳಿ ಅಂತೂ ಸಂಗ್ರಹವಾಗಿ ಬಂದಿದೆ. ಮೆಹಮೂದನ ಕೃಪೆ. ಇನ್ನು ಬಾಕಿ ಸಾಮಾನು, ಉಪಕರಣಗಳ ಜುಗಾಡ್ ಮಾಡಿಕೊಳ್ಳಬೇಕು. ಅದೇನು ದೊಡ್ಡ ಮಾತೇ? ಮನೆಯ ಮೋಡ್ಕಾದಲ್ಲಿ ಹುಡುಕಾಡಿ ಒಂದು ದೊಡ್ಡ ಬಾಟಲಿ ತಂದೆ. ಸುಣ್ಣವಂತೂ ಇದ್ದೇ ಇರುತ್ತಿತ್ತು. ನಮ್ಮ ಕಾಲದ ಮನೆ ಸುಣ್ಣವೆಂದರೆ ನೆನಪಿರಬಹುದು. ಗುಲಾಬಿ ಬಣ್ಣದ, ಸ್ವಲ್ಪ ಸುವಾಸನೆ ಬೆರೆಸಿದ ಸುಣ್ಣ. ಚಿಕ್ಕ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಬರುತ್ತಿತ್ತು. ಅದೇ ಸುಣ್ಣ ಮನೆಯಲ್ಲಿ ಇದ್ದಿದ್ದು. ಬಿಳಿ ಸುಣ್ಣ ಇರಲಿಲ್ಲ. ಸರಿ ಅದೇ ಸುಣ್ಣದ ಡಬ್ಬಿಯನ್ನೂ ಎತ್ತಾಕಿಕೊಂಡೆ. ಇನ್ನು ಬೇಕಾಗಿದ್ದು ಬಲೂನ್. ಅದರ ಸ್ಟಾಕ್ ಇರುತ್ತಿತ್ತು. ಮತ್ತೆ ಶ್ರಾವಣ ಮಾಸದ ಧಾರವಾಡದ ಉಳವಿ ಬಸಪ್ಪನ ಜಾತ್ರೆ ಮುಗಿದು ಜಾಸ್ತಿ ದಿವಸಗಳಾಗಿರಲಿಲ್ಲ. ಹಾಗಾಗಿ ಜಾತ್ರೆಗೆ ಹೋಗಿ ಬಂದ ಕುರುಹುಗಳಾಗಿ ಒಂದಿಷ್ಟು ಬಲೂನ್ ಇದ್ದವು. ಬೇಕಾಗಿದ್ದು ಒಂದೇ ತಾನೇ? ಸರಿ ಒಂದು ಒಳ್ಳೆ ದೊಡ್ಡ ಬಲೂನನ್ನೇ ತೆಗೆದುಕೊಂಡೆ.

ಮನೆ ಟೆರೇಸ್ ಮೇಲೆ ಹೋದೆವು. ಮನೆ ಟೆರೇಸ್ ನಮ್ಮ ಎಲ್ಲ ಕಾರ್ನಾಮೆಗಳಿಗೆ ಲ್ಯಾಬೋರೇಟರಿ. ಅಲ್ಲಿ ಬರೋಬ್ಬರಿ ಸೆಟಲ್ ಆಗಿ ಮೊದಲು ಸುಣ್ಣದ ಡಬ್ಬಿಯಿಂದ ಸುಣ್ಣ ಕೆಬರಿ ಕೆಬರಿ ಬಾಟಲಿಗೆ ಹಾಕಿದೆ. ಟೆರೇಸ್ ಮೇಲೆ ಪಕ್ಕದಲ್ಲೇ ಇದ್ದ ನೀರಿನ ಟಂಕಿಯಿಂದ ನೀರು ತುಂಬಿದೆ. ಸುಣ್ಣ ಘಟ್ಟಿಯಾಗಿ ಹೋಗಿತ್ತು. ನೀರು ಹಾಕಿ, ಎರ್ರಾ ಬಿರ್ರಿ ಕಲುಕಾಡಿಸಿ ಏನೋ ಒಂದು ಸೆಮಿ ಲಿಕ್ವಿಡ್ ರೂಪಕ್ಕೆ ತಂದೆ. ಮುಂದೆ ಅದರಲ್ಲಿ ಬೆಳ್ಳಿ ಹಾಕಬೇಕು.

ಮೆಹಮೂದ್ ಒಳ್ಳೆ ತಿರುಪತಿ ತಿಮ್ಮಪ್ಪನ ಪ್ರಸಾದದ ಲಡ್ಡು ಗಾತ್ರದ ಬೆಳ್ಳಿ ಲಡ್ಡು ಮಾಡಿಕೊಂಡು ಬಂದಿದ್ದ. ಇಡಿಯಾಗಿ ಅದನ್ನು ಬಾಟಲಿಯಲ್ಲಿ ತುರುಕುವದು ಸಾಧ್ಯವಿರಲಿಲ್ಲ. ಇಬ್ಬರೂ ಕೂಡಿ ದೊಡ್ಡ ಲಡ್ಡುವಿನಿಂದ ಹತ್ತಾರು ಸಣ್ಣ ಸಣ್ಣ ಉಂಡೆ ಮಾಡಿದೆವು. ಈಗ ಸೈಜ್ ಸರಿಯಾಯಿತು.

ಮುಂದೇನು? ಸಿಗರೇಟ್ ಬೆಳ್ಳಿ ಕಾಗದದ ಉಂಡೆಗಳನ್ನು ಬಾಟಲಿಗೆ ಹಾಕುವದು ಮತ್ತು ಅದರ ಬಾಯಿಗೆ ಬಲೂನ್ ಕಟ್ಟಿಬಿಡುವದು. ಅದಕ್ಕೆ ದಾರ ಬೇಕು. ನಾನು ತಂದಿರಲಿಲ್ಲ. ತರಲು ಕೆಳಗೆ ಹೊರಟರೆ ಮೆಹಮೂದ್ ತಡೆದ. ಅವನ ಹತ್ತಿರ ಎಲ್ಲ ಜುಗಾಡ್ ಇತ್ತು. ಕಿಸೆಯಿಂದ ಗಾಳಿಪಟ ಹಾರಿಸುವ ದಾರದ ಲಡಿ ತೆಗೆದು ಒಂದು ಚಿಕ್ಕ ಚೂರನ್ನು ಹರಿದು ಕೊಟ್ಟ. ಪರ್ಫೆಕ್ಟ್!

ಬಾಟಲಿಯ ಬಾಯಿಗೆ ಬಲೂನ್ ಕಟ್ಟಿ ಕಾದಿದ್ದೇ ಬಂತು. ಹೈಡ್ರೋಜನ್ ತಯಾರಾಗಿ ತುಂಬಲೇ ಇಲ್ಲ. What happened? ಹಾಂ? ಎಲ್ಲಿ ಸುಣ್ಣ ಮತ್ತು ಬೆಳ್ಳಿ ಬರೋಬ್ಬರಿ ಮಿಕ್ಸ್ ಆಗಲಿಲ್ಲವೋ ಅಂತ ವಿಚಾರ ಮಾಡಿ ಬಾಟಲಿಯನ್ನು ಮತ್ತೆ ಅಲ್ಲಾಡಿಸಿದೆ. ಒಳ್ಳೆ ಕರ್ಮ. ಬಡಿಗೇರ್ ಸರ್ ಹೇಳಿದಾಂಗೆ ಹೈಡ್ರೋಜನ್ ಆಗಿ, ತುಂಬಿ, ಬಲೂನ್ ಫುಲ್ ಆಗಿ ಹಾರಲು ತಯಾರಾಗುತ್ತದೆ ಅಂತ ಕಾತರಿಸಿ ಕೂತರೆ ಟೋಟಲ್ ಶಿವಾಯ ನಮಃ! ಮಾಸ್ತರರು ಕ್ಲಾಸಿನಲ್ಲಿ ಮಾಡಿದಾಗ at least ಢಂ ಅಂತ ಸ್ಪೋಟವಾದರೂ ಆಗಿತ್ತು. ಈಗ ಅದೂ ಇಲ್ಲ. ಕಾದು ಕಾದು ಸಾಕಾಗಿ, ಆ ಬಲೂನನ್ನು ತೆಗೆದು, ಸಾದಾ ಗಾಳಿ ತುಂಬಿ, ಕೈಯಿಂದಲೇ ಅದನ್ನು ಕುಟ್ಟಿ, ಢಂ ಅನ್ನಿಸಿ ಸಮಾಧಾನ ಮಾಡಿಕೊಂಡಿದ್ದಾಯಿತು. ಅನಾವಶ್ಯಕವಾಗಿ ಒಂದು ಬಲೂನು ಬಲಿಯಾಗಿ ಹೋಗಿತ್ತು. ಅದಕ್ಕೆ ಹೈಡ್ರೋಜನ್ ತುಂಬಿಸಿಕೊಂಡು ಹಾರುವ ನಸೀಬ ಇರಲಿಲ್ಲ. ಸಾದಾ ಗಾಳಿ ತುಂಬಿಸಿಕೊಂಡು ಕೈಯಲ್ಲಿ ಢಂ ಅಂದು ಪಡ್ಚ ಆಗುವ ನಸೀಬ ಇದ್ದರೆ ಏನು ಮಾಡಲಿಕ್ಕಾಗುತ್ತದೆ?

ಹೀಗೆ ಅದೆಷ್ಟೇ ಹೊತ್ತು ತಪಸ್ಸು ಮಾಡಿದರೂ ಹೈಡ್ರೋಜನ್ ತಯಾರಾಗಲೇ ಇಲ್ಲ. ಹಾಗಾಗಿ ಬಲೂನ್ ಹಾರಿಸುವ ಇಚ್ಛೆ ನೆರವೇರಲೇ ಇಲ್ಲ. ಹೀಗೇಕಾಯಿತು ಅಂತ ತಲೆ ಕೆಡಿಸಿಕೊಂಡರೆ ಏನೂ ಹೊಳೆಯಲಿಲ್ಲ. ಸಿಕ್ಕಾಪಟ್ಟೆ disappointment ಮಾತ್ರ ಆಯಿತು. ನಿಜವಾಗಿ ಕಷ್ಟಪಟ್ಟವ ಮೆಹಮೂದ್ ಆಗಿದ್ದ. ಅವನ ಮುಖ ನೋಡಿದರೆ ಅದೇ ಪ್ಯಾಲಿ ನಗೆ, ಅದೇ 'ಚಲ್ತಾ ಹೈ ಬಾ. ಕ್ಯಾ ಕರ್ನೇಕಾ? ಕಭಿ ಕಭಿ ಐಸಾ ಹೋತಾ ಹೈ. ಚಲ್, ಔರ್ ಕುಚ್ ಕರೇಂಗೇ,' ಅನ್ನುವ ನೋಟ. ಮುಂದೇನು? ಏನೂ ಹರಿಯಲಿಲ್ಲ ಅಂದಾಗ by default ಒಂದಿಷ್ಟು ಕ್ರಿಕೆಟ್ ದಬಾಯಿಸಿ ಆಡಿಬಿಟ್ಟರೆ ತಲೆಗೆ ಏರಿರುವ ತಿಮಿರೆಲ್ಲ ಇಳಿದು ಹಾಯ್ ಅನ್ನಿಸುತ್ತದೆ. ಸರಿ ಬರೋಬ್ಬರಿ ಒಂದಿಷ್ಟು ಕ್ರಿಕೆಟ್ ಆಡಿ ಸಮಾಧಾನ ಮಾಡಿಕೊಂಡೆವು.

ಈ ಪ್ರಯೋಗದ ಕಾರಣ ನಷ್ಟವಾಗಿದ್ದು ಒಂದಿಷ್ಟು ಸುಣ್ಣ. 'ಆವತ್ತು ಮಧ್ಯಾನ ಆಂವಾ ಟಾಂಗಾ ಇಸ್ಮಾಯಿಲ ಸಾಬ್ರ ಮಗಾ ಬಂದಾಗ ಅಟ್ಟದ ಮ್ಯಾಲೆ ಸುಣ್ಣಾ ತೊಗೊಂಡು ಓಡಿದ್ದಿ. ಏನು ಮಾಡಿದಿರಿ ಇಬ್ಬರೂ? ಸುಣ್ಣಾ ಮುಕ್ಕಿದಿರೇನು? ಅಷ್ಟೂ ಖಾಲಿ. ಒಂದು ಸುಣ್ಣದ ಡಬ್ಬಿ ತಂದ್ರ ಎಷ್ಟು ದಿನಾ ಬರ್ತಿತ್ತು. ನಿನ್ನ ಕಾಲದಾಗ ಒಂದೂ ಸಾಮಾನು ಬಾಳಿಕಿ ಬರೋದಿಲ್ಲ ನೋಡು,' ಅಂತ 'ಅರ್ಚನೆ' ಮಾಡುತ್ತ ಅಮ್ಮ ತಮ್ಮ ಕಿರಾಣಿ ಸಾಮಾನಿನ ಪಟ್ಟಿಯಲ್ಲಿ ಒಂದು ಸುಣ್ಣದ ಡಬ್ಬಿ ಅಂತ ನಮೂದಿಸಿದರು. ಮುಂದಿನ ಸಲ ತೊರಗಲ್ಲಮಠನ ಅಂಗಡಿಯಿಂದ ದಿನಸಿ ಬಂದಾಗ ಬಂದಿರುತ್ತದೆ.

ಇಷ್ಟೆಲ್ಲ ಆದರೂ ಬಡಿಗೇರ್ ಸರ್ ಹೇಳಿದಂತೆ ಹೈಡ್ರೋಜನ್ ತಯಾರಿಕೆಯ 'ಗೃಹ ಪ್ರಯೋಗ' ಯಾಕೆ ವರ್ಕ್ ಔಟ್ ಆಗಲಿಲ್ಲ ಅಂತ ಮಾತ್ರ ಬಗೆಹರಿಯಲಿಲ್ಲ. ನಾವು ಬಡಿಗೇರ್ ಸರ್ ಅವರನ್ನು ಕೇಳಲೂ ಇಲ್ಲ. ಯಾಕೆ ಕೇಳಲಿಲ್ಲ ಅಂದರೆ ಈಗ ನೆನಪಿಲ್ಲ. most likely short attention span. ಓದಲು, ಆಡಲೇ ಟೈಮ್ ಸಾಕಾಗುತ್ತಿರಲಿಲ್ಲ. ಇನ್ನು ತಗಡೆದ್ದು ಹೋದ ಹೈಡ್ರೋಜನ್ ಪ್ರಯೋಗದ ಬಗ್ಗೆ ಎಲ್ಲಿಂದ follow up ಮಾಡುತ್ತ ಕೂಡೋಣ. ಆಕಸ್ಮಾತ ಬಡಿಗೇರ್ ಸರ್ ಅವರೇ, 'ಯಾರಾದರೂ ಮನಿಯೊಳಗ, ನಾ ಹೇಳಿದ ಪ್ರಕಾರ, ಹೈಡ್ರೋಜನ್ ಮಾಡಿ ನೋಡಿದರೇನು?' ಅಂತ ಕೇಳಿದ್ದರೆ ವೈಫಲ್ಯದ ಬಗ್ಗೆ ಹೇಳುತ್ತಿದ್ದೆನೇನೋ. ಅವರಿಗೂ ಆ ಹೈಡ್ರೋಜನ್, ಅದನ್ನು ಕ್ಲಾಸಿನಲ್ಲಿ ಮಾಡಲು ಹೋಗಿ ಭಯಾನಕ ಸ್ಪೋಟ ಮಾಡಿದ್ದು ಎಲ್ಲ ನೆನಪಾಗಿ ಸಾಕು ಅನ್ನಿಸಿರಬೇಕು. ಅವರೂ ಕೇಳಲಿಲ್ಲ.

ಆದರೆ ಬಡಿಗೇರ್ ಸರ್ ಹೇಳಿದ ಫಾರ್ಮುಲಾ ಯಾಕೆ ವರ್ಕ್ ಔಟ್ ಆಗಲಿಲ್ಲ? ಒಂದು ಸಾಧ್ಯತೆ ಅಂದರೆ ಸುಣ್ಣ, ಬೆಳ್ಳಿ ಕೂಡಿದರೆ ಹೈಡ್ರೋಜನ್ ತಯಾರಿಸುವ ಕೆಮಿಕಲ್ ರಿಯಾಕ್ಷನ್ ಆಗುವದೇ ಇಲ್ಲ. ಅವರು ಕೊಟ್ಟ ಮಾಹಿತಿಯೇ ತಪ್ಪಿತ್ತು. ಇದನ್ನು ಯಾರಾದರೂ ಕೆಮಿಸ್ಟ್ರಿ ಪರಿಣಿತರು ಚೆಕ್ ಮಾಡಿ, ಖಾತ್ರಿ ಮಾಡಿಕೊಂಡು ತಿಳಿಸಬಹುದು. ಎರಡನೇ ಸಾಧ್ಯತೆ ಅಂದರೆ ಬಿಳಿಯ ಸುಣ್ಣ ಅಂದರೆ ಭಟ್ಟಿ ಸುಣ್ಣ ಬೇಕಾಗಿತ್ತೋ ಏನೋ. ಅದು ಸ್ಟ್ರಾಂಗ್ ಇರುತ್ತದೆ. ನಾವು ಹಾಕಿದ್ದು ಸುವಾಸನೆ ಅದು ಇದು ಮಿಕ್ಸ್ ಮಾಡಿದ ತಿನ್ನುವ ಮೈಲ್ಡ್ ಸುಣ್ಣ. ಎಲ್ಲಿ ಅದರಿಂದ ಲಫಡಾ ಆಗಿ ಹೈಡ್ರೋಜನ್ ತಯಾರಾಗಲಿಲ್ಲವೋ ಏನೋ. ಇನ್ನೊಂದು ಸಾಧ್ಯತೆ ಯಾರೋ ಹೇಳಿದ್ದರು. ಯಾರು ಅಂತ ನೆನಪಿಲ್ಲ. ನಮ್ಮ ಶಾಣ್ಯಾ ಕಸಿನ್ಸ್ ನಲ್ಲಿ ಯಾರೋ ಹೇಳಿರಬೇಕು. ಅದೇನೆಂದರೆ ಯಾವದೋ ಪುರಾತನ ಕಾಲದಲ್ಲಿ ಸಿಗರೇಟ್ ಬ್ಯಾಗಡೆ ಕಾಗದಕ್ಕೆ ಬೆಳ್ಳಿಯ ಲೇಪನ ಇರುತ್ತಿತಂತೆ. ಕಾಲಕ್ರಮೇಣ ಬೆಳ್ಳಿಯ ಲೇಪನ ಹಾಕಿ ಸಿಗರೇಟ್ ಕಾಗದ ಮಾಡುವದು ತುಂಬಾ ದುಬಾರಿ ಅಂತ ಅದರ ಬದಲಾಗಿ ಬೇರೆ ಏನೋ ಉಪಯೋಗಿಸಲು ಶುರು ಮಾಡಿದರಂತೆ. ಇದು ಹೌದಾಗಿದ್ದರಂತೂ ಮುಗಿದೇ ಹೋಯಿತು. ಬೆಳ್ಳಿಯೇ ಇಲ್ಲ ಅಂದ ಮೇಲೆ ಮತ್ತೇನು? ಬರೀ ಗೊರಟ ಅಷ್ಟೇ.

ಆವಾಗ ಹೈಡ್ರೋಜನ್ ತಯಾರಾಗಲಿಲ್ಲ ಅಂತ ಬೇಜಾರಾಯಿತೇ ವಿನಃ ಬೇರೆ ಯಾವದರ ಬಗ್ಗೆಯೂ ಲಕ್ಷ್ಯ ಹೋಗಿದ್ದು ನೆನಪಿಲ್ಲ. ಅದರಲ್ಲೂ ದೋಸ್ತ ಮೆಹಮೂದ್ ಅದೆಷ್ಟು ಕಷ್ಟ ಪಟ್ಟು, ಎಲ್ಲೆಲ್ಲೋ ಹಾದಿ ಬೀದಿ ಸುತ್ತಾಡಿ, ತಿಪ್ಪೆ ಅಡ್ಯಾಡಿ, ಬೆಳ್ಳಿ ಕಾಗದ ಸಂಗ್ರಹಿಸಿ, ಅದೆಷ್ಟು ವೇಳೆ ವ್ಯಯಿಸಿ ಅವುಗಳಿಂದ ನಾಜೂಕಾಗಿ ಬೆಳ್ಳಿಯ ಪದರುಗಳನ್ನು ಮಾತ್ರ ಬೇರ್ಪಡಿಸಿ, ಬೆಳ್ಳಿಯ ಅಷ್ಟು ದೊಡ್ಡ ಉಂಡೆ ಮಾಡಿಕೊಂಡು ಬಂದ ಅನ್ನುವದರ ಬಗ್ಗೆ ವಿಚಾರ ಮಾಡಿರಲೇ ಇಲ್ಲ. ಹೇಳಿ ಕೇಳಿ ಮಿತ್ರ. ತಾನಾಗೇ ಬೆಳ್ಳಿ ಕಾಗದ ಹುಡುಕಿ, ಎಲ್ಲ ತಯಾರಿ ಮಾಡಿಕೊಂಡು ಬರುತ್ತೇನೆ ಅಂತ ಹೇಳಿದ್ದಾನೆ. ಅದರ ಪ್ರಕಾರ ಮಾಡಿಕೊಂಡು ಬಂದಿದ್ದಾನೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾನೆ. ಮತ್ತೇನು? ಗೆಳೆಯರೆಂದರೆ ಹಾಗೇ ಇರಬೇಕು. ಅದಕ್ಕಾಗೇನು ದೊಡ್ಡದಾಗಿ ಥ್ಯಾಂಕ್ಸ್ ಹೇಳಲೇ? ಅಥವಾ, 'ಲೇ, ಮೆಹಮ್ಯಾ, ಲೇ, ಮೆಹಮ್ಯಾ. ಭಾಳ ಥ್ಯಾಂಕ್ಸ್ ಲೇ,' ಅಂತ ದೊಡ್ಡ ಮೆಹಮಾನ್ ನವಾಜಿ ಮಾಡಲೇ? ಅದು ಅಂದಿನ ಮನೋಭಾವ. ಅದು ತಪ್ಪು ಅಂತ ಅಲ್ಲ. ಮೊದಲು ಹೇಳಿದಂತೆ ದೋಸ್ತರ ನಡುವೆ ಫಾರ್ಮಾಲಿಟಿ ಇಲ್ಲವೇ ಇಲ್ಲ. ಕಾಲ ಹೇಗೆ ಬದಲಾಗುತ್ತದೆ ನೋಡಿ. ಆದರೆ ನಿಜವಾದ ದೋಸ್ತರು ಬದಲಾಗುವದಿಲ್ಲ. ಅದೇ ಈಗ ನೋಡಿ ಯಾರಾದರೂ ಹೊರಗಿನವರು ಏನಾದರೂ ಒಂದು ಸಣ್ಣ ಕೆಲಸ, ಅದೂ ರೊಕ್ಕ ತೊಗೊಂಡು, ಮಾಡಿಕೊಟ್ಟರೂ ಅದಕ್ಕೆ ಅದೆಷ್ಟು ಬಾರಿ ಥ್ಯಾಂಕ್ಸ್ ಹೇಳುತ್ತೇವೆಯೋ, ಅದೆಷ್ಟು ಸಾರೆ well done ಅಂತ ಡುಬ್ಬ ಗುದ್ದಿ ಚಪ್ಪರಿಸುತ್ತೇವೋ. ಇಲ್ಲವಾದರೆ ಕೆಲಸ ಮಾಡಿದವರು ಮುಂದಿನ ಸಲ ಹದಗೆಡಿಸಿಬಿಟ್ಟರೆ!? ದೋಸ್ತರು ಹಾಗಲ್ಲ ಬಿಡಿ. ಜಾಸ್ತಿ ಥ್ಯಾಂಕ್ಸ್ ಹೇಳಲು ಹೋದರೂ ಮುನಿಸಿಕೊಂಡುಬಿಡುತ್ತಾರೆ. ಅದರಲ್ಲೂ ಹಳೆಯ ದೋಸ್ತರಂತೂ ಬಿಡಿ. ಒಂದು ತರಹ ಬೇರೆಯೇ ಬ್ರೀಡಿನ ಪ್ರಾಣಿಗಳು ಅವರು. ಅಷ್ಟು ಒಳ್ಳೆಯವರು.

ಇದೆಲ್ಲ ಆಗಿದ್ದು ಮೂವತ್ತೂ ಚಿಲ್ಲರೆ ವರ್ಷಗಳ ಹಿಂದೆ. ಮೆಹಮೂದ್ ಮತ್ತು ಹಳೆಯದೆಲ್ಲ ಈಗ ನೆನಪಾಗಲು ಕಾರಣ ಆತ್ಮೀಯ ದೋಸ್ತ ಸಿಕ್ಕಾಪಟ್ಟೆ ಅನಾರೋಗ್ಯಕ್ಕೆ ಒಳಗಾಗಿಬಿಟ್ಟಿದ್ದಾನೆ. ದೊಡ್ಡ ಮಟ್ಟದ ಚಿಕಿತ್ಸೆಯ ನಂತರ ತಕ್ಕಮಟ್ಟಿಗೆ ಚೇತರಿಸಿಕೊಂಡಿದ್ದಾನೆ. ಆದರೆ, God willing, ಎಲ್ಲ ಸರಿಯಾಗಲು ಕಮ್ಮಿ ಕಮ್ಮಿ ಎಂದರೂ ಎರಡು ವರ್ಷ ಬೇಕು. ಹಣಕಾಸಿನ ತೀವ್ರ ತೊಂದರೆ. ಧಾರವಾಡದಲ್ಲಿ ಆಟೋ ಓಡಿಸಿಕೊಂಡು ನಿಯತ್ತಾಗಿ ಜೀವನ ಮಾಡಿಕೊಂಡಿದ್ದ. ನಾಲ್ಕು ಮಕ್ಕಳು ಮತ್ತು ಒಬ್ಬ ಪತ್ನಿ ಇರುವ ದೊಡ್ಡ ಸಂಸಾರ. ಈಗ ಇವನೇ ಫುಲ್ ಹಾಸಿಗೆ ಹಿಡಿದಿದ್ದಾನೆ. ಸಹಾಯ ಮಾಡಲು ಮನೆ ಕಡೆ ಯಾರೂ ಇಲ್ಲ. ದಿನನಿತ್ಯದ ಜೀವನೋಪಾಯಕ್ಕೂ ಕಷ್ಟ. ಸುದ್ದಿ ಕೇಳಿ ಮನಸ್ಸು ಫುಲ್ ಕೆಟ್ಟು ಹೋಯಿತು. ದೊಡ್ಡ ಕಷ್ಟ. ಮೆಹಮೂದನಿಗೆ ಬರಬಾರದಿತ್ತು. ಬಂದಿದೆ. ನಾವು ಕೆಲವು ಜನ ದೋಸ್ತರು ಕೈಯಲ್ಲಾದ ಚಿಕ್ಕ ಪುಟ್ಟ ಧನಸಹಾಯ ಮಾಡಿದ್ದೇವೆ. ಸ್ನೇಹಿತರಾಗಿ ಅದು ನಮ್ಮ ಕರ್ತವ್ಯ. ಇತರರೂ ಮಾಡಿದ್ದಾರೆ. ಆದರೆ ಇನ್ನೂ ಸಹಾಯದ ಜರೂರತ್ತಿದೆ. ಉಳಿದ ಮಿತ್ರರು, ಸಮಾಜದ ಮುಖಂಡರೂ ಕೂಡ ಸಹಾಯ ಮಾಡುತ್ತಾರೋ ಏನೋ ಅಂತ ಕಾದು ನೋಡಬೇಕು.

SSLC ನಂತರ ಮೆಹಮೂದನ ಜೊತೆ ಜಾಸ್ತಿ ಟಚ್ ಇರಲಿಲ್ಲ. ಮೊದಲೆಲ್ಲೋ ಅಂಜುಮನ್ ಕಾಲೇಜಿಗೆ ಹೋಗಿದ್ದ ಅಂತ ನೆನಪು. ನಂತರ ಫುಲ್ ಟೈಮ್ ಆಟೋ ಡ್ರೈವರ್ ಆಗಿಬಿಟ್ಟ. ಅದು ಅವರ ಮನೆತನದ ಬಿಸಿನೆಸ್ ಬಿಡಿ. ಮೊದಲು ಕುದರೆ ಗಾಡಿ ಓಡಿಸಿಕೊಂಡಿದ್ದರು. ಕುದುರೆ ಗಾಡಿಗಳು ಮಾಯವಾದ ನಂತರ ಸಹಜವಾಗಿ ಆಟೋ ದಂಧೆ ಶುರುಮಾಡಿಕೊಂಡರು. ತಕ್ಕಮಟ್ಟಿಗೆ ಎಲ್ಲ ಚೆನ್ನಾಗೇ ನಡೆದಿತ್ತು. ಈ ನಡುವೆ ತೀವ್ರ ಅನಾರೋಗ್ಯವೆಂಬ ಅವಗಢ ಸಂಭವಿಸಿ ಮೆಹಮೂದನ ಕುಟುಂಬಕ್ಕೆ ದೊಡ್ಡ ಆಘಾತ.

ಶಾಲೆ ಬಿಟ್ಟ ನಂತರವೂ ಮೆಹಮೂದ್ ನಮ್ಮಂತಹ ದೋಸ್ತರ ಜೊತೆ ಅದೆಷ್ಟು ಒಳ್ಳೆಯ ಮಿತ್ರತ್ವ, ಆತ್ಮೀಯತೆ ಇಟ್ಟುಕೊಂಡಿದ್ದ ಅಂತ ನೆನಪುಮಾಡಿಕೊಂದರೆ ಎರಡು ಘಟನೆಗಳು ನೆನಪಿಗೆ ಬರುತ್ತವೆ.

BITS, ಪಿಲಾನಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗ ನಮಗೆ ಪ್ರತಿ ಸೆಮಿಸ್ಟರಿಗೆ ದೆಹಲಿಗೆ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಬೇಕು. ಅದು ೧೯೯೦ ರ ಮಾತು. ಟಿಕೆಟ್ ಬುಕಿಂಗ್ ಮಾಡಿಸುವದು ಅಂದರೆ ದೊಡ್ಡ ಶ್ರಮದಾಯಕ ಕೆಲಸ. ಆಗ ಮಾತ್ರ ರೈಲಿನ ಟಿಕೆಟ್ ಬುಕಿಂಗ್ computerization ಆಗಿತ್ತು. ಆದರೂ ಫಾರ್ಮ್ ತುಂಬಲೇಬೇಕಿತ್ತು, ತಾಸುಗಟ್ಟಲೆ ಸರದಿಯಲ್ಲಿ ನಿಲ್ಲಲೇಬೇಕಿತ್ತು. ಮತ್ತೆ ನಮಗೆ ವಿದ್ಯಾರ್ಥಿ ರಿಯಾಯತಿ ಅಂತ ಬೇರೆ ಸಿಗುತ್ತಿತ್ತು. ಅದನ್ನು process ಮಾಡುವದು ಅಂದರೆ ರೈಲ್ವೆ ಜನರಿಗೆ ಅಸಡ್ಡೆ ಮತ್ತು ಕಿರಿಕಿರಿ. ಯಾಕೆಂದರೆ ಮೊದಲೇ ಅವರಿಗೆ ಕಂಪ್ಯೂಟರ್ ಉಪಯೋಗಿಸಲು ಬರುತ್ತಿದ್ದಿಲ್ಲ. ಜೊತೆಗೆ ನಮ್ಮಂತವರು ವಿದ್ಯಾರ್ಥಿ ರಿಯಾಯತಿ ಅದು ಇದು ಅಂತ ಹೇಳಿ ಅವರಿಗೆ ಮತ್ತೂ confuse ಆಗುತ್ತಿತ್ತು. ಹಾಗಂತ ರಿಯಾಯತಿ ಬಿಡಲಿಕ್ಕೆ ಆಗುತ್ತದೆಯೇ? ಶೇಕಡಾ ಐವತ್ತರಷ್ಟು ರಿಯಾಯತಿ ಇರುತ್ತಿತ್ತು. ಗುದ್ದಾಡಿಯಾದರೂ ರಿಯಾಯತಿಯೊಂದಿಗೇ ಬುಕ್ ಮಾಡಿಸುತ್ತಿದ್ದೆ. ಕೆಟ್ಟ ಬೋರಿಂಗ್ ಕೆಲಸ. ವಿಪರೀತ ಹೊತ್ತು ಸರದಿಯಲ್ಲಿ ಕಾಯಬೇಕಾಗುತ್ತಿತ್ತು. ಆವಾಗ ಎಷ್ಟೋ ಬಾರಿ ಆಪದ್ಬಾಂಧವನಂತೆ ಬಂದು ಕೆಲಸ ಮಾಡಿಕೊಟ್ಟವನು ಮತ್ತೆ ಇದೇ ಮೆಹಮೂದನೇ.

ನಾನು ರೈಲ್ವೆ ಸ್ಟೇಷನ್ನಿಗೆ ಹೋದ ಹೊತ್ತಿನಲ್ಲಿ ಮೆಹಮೂದ್ ರಿಕ್ಷಾ ಸ್ಟ್ಯಾಂಡಿನಲ್ಲಿ ಇದ್ದ ಅಂದರೆ ಎಲ್ಲ ಕೆಲಸ ಬಿಟ್ಟು ಓಡಿ ಬಂದುಬಿಡುತ್ತಿದ್ದ. ಮತ್ತೆ ಅದೇ ಹಳೆಯ ಆತ್ಮೀಯತೆ, ಪ್ಯಾಲಿ ನಗೆ, ಒಂದಿಷ್ಟು ಪ್ರೀತಿಯ ಮಾತು. 'ಏ ಮಹೇಶಾ, ನಿನ್ನ reservation ಫಾರ್ಮ್, ರೊಕ್ಕ ಎಲ್ಲ ನನ್ನ ಕಡೆ ಕೊಟ್ಟ ಹೋಗಪಾ. ಸಂಜಿ ಮುಂದ ಬಂದು ತೊಗೊಂಡು ಹೋಗು,' ಅಂದುಬಿಡುತ್ತಿದ್ದ. ಒಳಗಿನ ಟಿಕೆಟ್ ಬುಕಿಂಗ್ ಜನರ ಜೊತೆ ಅದೇನು contacts ಇಟ್ಟಿದ್ದನೋ ಗೊತ್ತಿಲ್ಲ. ಸಂಜೆ ಹೋದರೆ ಟಿಕೆಟ್, ಉಳಿದ ಚಿಲ್ಲರೆ ಬರೋಬ್ಬರಿ ರೆಡಿ. ಇಷ್ಟೆಲ್ಲಾ ಮಾಡಿದ ಮೆಹಮೂದ್ ವಾಪಸ್ ಏನೂ ಬಯಸುತ್ತಿರಲಿಲ್ಲ. ಎಲ್ಲ ಹಳೆಯ ಗೆಳೆಯನಿಗಾಗಿ, ಪುರಾನಾ ಜಮಾನಾದ ಗೆಳೆತನಕ್ಕಾಗಿ ಅಂತ ಮಾಡುತ್ತಿದ್ದ. ಆವಾಗಲೂ ಅಷ್ಟೇ. ಒಂದು ಥ್ಯಾಂಕ್ಸ್ ಹೇಳಿ ಅವನ ಬೆನ್ನು ಚಪ್ಪರಿಸಿ ಬಂದಿದ್ದು ಬಿಟ್ಟರೆ ನಾವೇನೂ ಜಾಸ್ತಿ ದುವಾ ಸಲಾಮಿ ಮಾಡಲಿಲ್ಲ. ಒಂದು ರೂಪಾಯಿ ಕಮಿಷನ್ ಅಂತ ಕೊಡಲಿಲ್ಲ. ಕೊಡಲು ಹೋಗಿದ್ದರೆ ಬೇಜಾರು ಮಾಡಿಕೊಳ್ಳುತ್ತಿದ್ದ. ದೋಸ್ತಿ ನಡುವೆ ರೊಕ್ಕ ತರುವದು ಹಳೆಯ ದೋಸ್ತರ ಪ್ರಕಾರ ಅಕ್ಷಮ್ಯ ಅಪರಾಧ. ಅವನಿಗೆ ಅಲ್ಲೇ ಮಥುರಾ ಭವನದಲ್ಲಿ ಒಂದು ಚಹಾ ಕೂಡ ಕುಡಿಸಲಿಲ್ಲ. ಚಹಾ ಕುಡಿದು, ಗುಟ್ಕಾ ಹಾಕಬಹುದಿತ್ತು. ಹಾಗಂತ ಈಗ ಅನ್ನಿಸಿತು. Too late for that now. ಮತ್ತೆ ಮೆಹಮೂದ್ ಕೂಡ ಅಷ್ಟೇ. ಯಾವದೇ ನಿರೀಕ್ಷೆ ಇಟ್ಟುಕೊಂಡು ಸಹಾಯ ಮಾಡುತ್ತಿರಲಿಲ್ಲ. ಒಂದು ಕಾಲದಲ್ಲಿ ನನ್ನ ಮೇಲಿನ ಯಾವ ಪ್ರೀತಿಯಿಂದ ಬೀದಿ ಸುತ್ತಾಡಿ, ಪಾನ್ ಚುಟ್ಟಾ ಅಂಗಡಿ ಅಲೆದಾಡಿ, ತಿಪ್ಪೆ ತಡಕಾಡಿ, ಏನೇನೋ ಕಷ್ಟ ಪಟ್ಟು, ಸಿಗರೇಟ್ ಕಾಗದದ ಬೆಳ್ಳಿ ಆರಿಸಿಕೊಂಡು ಬಂದಿದ್ದನೋ ಈಗಲೂ ಅದೇ ಮನೋಭಾವ. ಹೀಗೆ ಬದಲಾಗದೆ ಉಳಿಯುವವರೇ ಖರೇ ಮಿತ್ರರು. 'ಲೇ ಮೆಹಮ್ಯಾ, ಮನಿ ಕಡೆ ಬಾರಲೇ,' ಅನ್ನುವ ಆಹ್ವಾನ ಮಾತ್ರ ತಪ್ಪದೇ ಕೊಟ್ಟು ಬರುತ್ತಿದ್ದೆ. ಯಾಕೆಂದರೆ ನಮ್ಮ ಕುಟುಂಬ ಕೂಡ ಅವನಿಗೆ ಅಷ್ಟೇ ಆತ್ಮೀಯ. ಅದು ಅವರ ತಂದೆ ಟಾಂಗಾ ಇಸ್ಮಾಯಿಲ್ ಸಾಹೇಬರ ಕಾಲದಿಂದಲೂ ಬೆಳೆದು ಬಂದ ಆತ್ಮೀಯತೆ.

ಮುಂದೆ ೧೯೯೪ ರಲ್ಲಿ ಇಂಜಿನಿಯರಿಂಗ್ ಡಿಗ್ರಿ ಮುಗಿದ ನಂತರ ರೈಲ್ವೆ reservation ಮಾಡಿಸುವ ಸಂದರ್ಭ ಅಷ್ಟು ಬರಲಿಲ್ಲ. ಆದರೆ ವರ್ಷಕ್ಕೊಮ್ಮೆ ರೈಲ್ವೆ ಸ್ಟೇಷನ್ನಿಗೆ ಬಂದು ಇಳಿಯುತ್ತಿದ್ದೆ. ರಾತ್ರಿ ಬೆಂಗಳೂರಿಂದ ಕಿತ್ತೂರ್ ಚೆನ್ನಮ್ಮ ಹತ್ತಿದರೆ ಬೆಳಿಗ್ಗೆ ಧಾರವಾಡ. ಪಿಕಪ್ ಮಾಡಲು ಮನೆಯಿಂದ ತಂದೆಯವರು, ಡ್ರೈವರ್ ಯಾರಾದರೂ ಬಂದಿರುತ್ತಿದ್ದರು. ಆ ಹೊತ್ತಿನಲ್ಲಿ ಮೆಹಮೂದ್ ಹೆಚ್ಚಾಗಿ ಅಲ್ಲೇ ಇರುತ್ತಿದ್ದ. ರಿಕ್ಷಾ ಡ್ರೈವರ್ ಮಂದಿಗೂ ಅದು peak time. ಟ್ರೈನ್ ಬಂದು ನಿಂತ ಎರಡು ನಿಮಿಷದಲ್ಲಿ ಅಷ್ಟೂ ಆಟೋ ಫುಲ್ ಆಗಿಬಿಡುತ್ತಿದ್ದವು. ಹಾಗಿದ್ದಾಗಲೂ ಅಕಸ್ಮಾತ ನಾನು ಸ್ಟೇಷನ್ನಿಂದ ಹೊರಬರುವದನ್ನು ಕಂಡ ಅಂದರೆ ಮೆಹಮೂದ್ ಮುದ್ದಾಂ ಓಡಿ ಬರುತ್ತಿದ್ದ. ಗಾಡಿ ಸ್ಟಾರ್ಟ್ ಮಾಡಿಕೊಂಡು ಹೊರಟಿದ್ದರೂ, ಅದನ್ನು ನಿಲ್ಲಿಸಿ, ಹತ್ತಿರ ಬಂದು, ಮತ್ತೆ ಯಥಾ ಪ್ರಕಾರ ಹಳೆ ದೋಸ್ತಿಯ ದುವಾ ಸಲಾಮಿ ಮಾಡಿ, ಕೈ ಒತ್ತಿ, ವಾಪಸ್ ಭುಜ ತಟ್ಟಿಸಿಕೊಂಡೇ ಹೋಗುತ್ತಿದ್ದ. ಅದೆಷ್ಟು ಗಡಿಬಿಡಿಯಲ್ಲಿ ಇದ್ದರೂ ಸರಿ ಇಷ್ಟು ಮಾಡಿಯೇ ಆಟೋ ರಿಕ್ಷಾ ಎತ್ತುತ್ತಿದ್ದ. ನಾನು ಅಂತ ಅಲ್ಲ ಯಾವದೇ ದೋಸ್ತರು ಸ್ಟೇಷನ್ನಿಂದ ಹೊರಗೆ ಬಂದರೂ ಮೆಹಮೂದ್ ಇದೇ ರೀತಿಯಲ್ಲಿ ದೋಸ್ತಿ ನಿಭಾಯಿಸುತ್ತಿದ್ದ. ಹಾಗಂತ ಬೇರೆ ಬೇರೆ ದೋಸ್ತರು ಹೇಳಿದಾಗಲೇ ನನಗೆ ಗೊತ್ತಾಗಿದ್ದು. ಅಪರೂಪಕ್ಕೆ ಸಿಕ್ಕ ನಮ್ಮಂತಹ ದೋಸ್ತರನ್ನು ಗಡಿಬಿಡಿಯಲ್ಲಿ ಬಿಟ್ಟು ಹೋಗಬೇಕಲ್ಲ ಅಂತ ಅವನಿಗೇ ಬೇಜಾರಾಗುತ್ತಿತ್ತು.

೨೦೦೮ ರಿಂದ ಈಚೆ ಜಾಸ್ತಿ ಸಂಪರ್ಕವಿರಲಿಲ್ಲ. ನಾವೂ ರೈಲ್ವೆ ಸ್ಟೇಷನ್ ಕಡೆ ಹೋಗಲಿಲ್ಲ. ೨೦೧೨ ರಲ್ಲಿ ನಮ್ಮ SSLC ಬ್ಯಾಚಿನ ರಜತಮಹೋತ್ಸವ ಸಮಾರಂಭ ಆದಾಗ ಮತ್ತೊಬ್ಬ ಮಿತ್ರ ಬಾಬುಸಾಬನ ಮೂಲಕ ಮೆಹಮೂದನನ್ನು ಸಂಪರ್ಕಿಸಿ ಸಮಾರಂಭಕ್ಕೆ ಬರಲು ಹೇಳಿದ್ದೆ. ಅವನಿಗೆ ಬರಲಾಗಿರಲಿಲ್ಲ. ಬಾಕಿ ಮಿತ್ರರೆಲ್ಲ ಫೇಸ್ಬುಕ್ ಮೇಲೆ ಬಂದು ಅವರೆಲ್ಲರ ಜೊತೆ ಬಾಂಧವ್ಯ ಗಟ್ಟಿಯಾಯಿತು. ಮೆಹಮೂದ್ ಫೇಸ್ಬುಕ್ ಇತ್ಯಾದಿಗಳ ಮೇಲೆ ಬರಲಿಲ್ಲ. ನಾವೂ ಜಾಸ್ತಿ ಪ್ರಯತ್ನ ಮಾಡದಿದ್ದರಿಂದ ನೇರ ಸಂಪರ್ಕವಾಗಿರಲಿಲ್ಲ. ಆದರೆ ಇತರೆ ಮಿತ್ರರು ಅಷ್ಟಿಷ್ಟು ಸುದ್ದಿ ಹೇಳುತ್ತಿದ್ದರು.

ಮೆಹಮೂದ್ ಫುಲ್ ಹಾಸಿಗೆ ಹಿಡಿದುಬಿಟ್ಟಿದ್ದಾನೆ ಅಂತ ಈ ಸಲ ಧಾರವಾಡಕ್ಕೆ ಹೋದಾಗ ಮಿತ್ರರೇ ಹೇಳಿದರು. ಅವನ ಕಷ್ಟದ ಪರಿಸ್ಥಿಯ ಬಗ್ಗೆ ನಮ್ಮ ವರ್ಷದ ರಿಯೂನಿಯನ್ ಸಮಾರಂಭದಲ್ಲಿ ಚರ್ಚೆಯೂ ಆಯಿತು. ಅದರ ಪ್ರಕಾರ ಒಂದಿಷ್ಟು ಜನ ಸಹಾಯ ಮಾಡಿದ್ದೂ ಆಯಿತು. ಇನ್ನೂ ಹೆಚ್ಚಿನ ಸಹಾಯದ ಜರೂರತ್ತಿದೆ. ಮೆಹಮೂದನಿಗೆ ಬರೋಬ್ಬರಿ ಚಿಕಿತ್ಸೆ ಸಿಕ್ಕರೆ ಇನ್ನೆರೆಡು ವರ್ಷದಲ್ಲಿ ಎಲ್ಲ ಸರಿಯಾಗುತ್ತದೆ ಅಂತ ಡಾಕ್ಟರುಗಳ ಹೇಳಿಕೆ. ಅಷ್ಟೇ ಸರಿಯಾದ ಚಿಕಿತ್ಸೆಗೆ ರೊಕ್ಕದ ಜರೂರತ್ತು ಭಾಳ ಇದೆ. ಅದಕ್ಕೊಂದು ಜುಗಾಡ್ ಆಗಬೇಕಿದೆ.

ಈ ಬ್ಲಾಗ್ ಲೇಖನ ಓದಿದ ನಂತರ ನಮ್ಮ ಮಿತ್ರ ಮೆಹಮೂದನಿಗೆ ಸಹಾಯ ಮಾಡಬೇಕು ಅಂತ ನಿಮಗೆ ಅನ್ನಿಸಿದರೆ ನನಗೆ - maheshuh@gmail.com - ಇಮೇಲ್ ಮಾಡಿ. ಅವನ ಅಕೌಂಟ್ ವಿವರ ಕಳಿಸುತ್ತೇನೆ. ನಿಮ್ಮ ಧನಸಹಾಯವನ್ನು ಅಲ್ಲಿಗೆ ಕಳಿಸಬಹುದು. ಪಾಪ ಬಡವ. ನಿಯತ್ತಿನಿಂದ ಆಟೋ ಓಡಿಸಿಕೊಂಡು ಸಂಸಾರ ಮಾಡಿಕೊಂಡಿದ್ದ. ದೊಡ್ಡ ಆಘಾತ ಬಂದೊರಗಿ ಆರು ಜನರ ಸಂಸಾರದ ಜೀವನೋಪಾಯಕ್ಕೆ ಬಹಳ ತೊಂದರೆಯಾಗಿದೆ. ಇಲ್ಲಿಯವರೆಗೆ ಆಗಿರುವ ಚಿಕಿತ್ಸೆಗೇ ಲಕ್ಷಾಂತರ ರೂಪಾಯಿ ಖರ್ಚಾಗಿ ತಲೆ ಮೇಲೆ ಸಾಲವಿದೆ. ಅದರ ಮೇಲೆ ಮುಂದಿನ ಚಿಕಿತ್ಸೆಗೆ, ಜೀವನೋಪಾಯಕ್ಕೆ ಹಣಸಹಾಯ ಬೇಕಾಗಿದೆ. ಮಾಡುವ ಸಹಾಯದಲ್ಲಿ ದೊಡ್ಡದು, ಸಣ್ಣದು ಅಂತಿಲ್ಲ. ನಿಮ್ಮ ಯಾವ ಸಹಾಯವಾದರೂ ಸರಿ, ಅದು ಮೆಹಮೂದನಿಗೆ, ಅವನ ಕುಟುಂಬಕ್ಕೆ ತುಂಬಾ ಆಸರೆಯಾಗುತ್ತದೆ. ನಿಮಗೆ ಮೆಹಮೂದ್ ವಯಕ್ತಿಕವಾಗಿ ಗೊತ್ತಿರದಿದ್ದರೂ ದೊಡ್ಡ ಮನಸ್ಸು ಮಾಡಿ ಸಹಾಯ ಮಾಡಿದರೆ ನಿಮಗೆ ನಾನು ತುಂಬಾ ಋಣಿ. ಎಷ್ಟೋ ಸಲ ಪತ್ರಿಕೆಗಳಲ್ಲಿ ಇದೇ ರೀತಿಯ ಸಹಾಯವನ್ನು ಯಾಚಿಸಿ ಬಂದ ಪ್ರಕಟಣೆಗಳನ್ನು ನೋಡಿ, ಪರಿಚಯವಿಲ್ಲದಿದ್ದರೂ, ಮಾನವೀಯತೆಯ ನೆಲೆಗಟ್ಟಿನಲ್ಲಿ ಸಹಾಯ ಮಾಡಿರುತ್ತೇವೆ. ಇದೂ ಹಾಗೇ ಅಂತ ತಿಳಿದುಕೊಂಡು ಸಹಾಯ ಮಾಡಿದರೂ ಅಡ್ಡಿಯಿಲ್ಲ. ಒಬ್ಬ ಬಡಪಾಯಿ, ಒಳ್ಳೆಯ ಮನುಷ್ಯ ಮತ್ತು ಅವನ ಕುಟುಂಬ ಬದುಕಿಕೊಂಡೀತು. ನನಗಾಗಿ 'ಬೆಳ್ಳಿ' ಹೆಕ್ಕಿದ್ದ ಬಂಗಾರದಂತಹ ಮಿತ್ರನ ಪರವಾಗಿ ನಿಮಗೆ ಧನ್ಯವಾದ.

ವಿ. ಸೂ: ಮನವಿಗೆ ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು. ದೊಡ್ಡ ಮನಸ್ಸು, ಉದಾರ ಹೃದಯ ನಿಮ್ಮದು. ನಿಮಗೆ ಒಳ್ಳೆಯದಾಗಲಿ.

ಇಲ್ಲಿಯವರೆಗೆ ಸ್ಪಂದಿಸಿದವರ ಸಂಖೆ - 5

** ಮೇ ೯, ೨೦೧೬ ರಂದು ಮೆಹಮೂದ್ ನಿಧನನಾದ. ದುಃಖಕರ ಸಂಗತಿ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ದೋಸ್ತ್! (Updated on May 12, 2016)

3 comments:

sunaath said...

ಮಹೇಶ,
(೧) ಹೈಡ್ರೋಜನ್ ತುಂಬಿದ ಬಲೂನನ್ನು ಗಾಳಿಪಟಕ್ಕೆ ಕಟ್ಟಿದ ಮೇಲಾದರೂ, ನನ್ನ ಪಟ ನೆಲ ಬಿಟ್ಟು ಮೇಲೆ ಹಾರೀತೇನೋ ಅಂತ ಕನಸು ಕಾಣುತ್ತಿದ್ದೆ. ಈಗ ಗೊತ್ತಾಯಿತಲ್ಲ, ಇನ್ನು ಸಿಗರೇಟು ಪಾಕೀಟುಗಳನ್ನು ಆರಿಸುವ ಕೆಲಸವನ್ನು ಪ್ರಾರಂಭಿಸುತ್ತೇನೆ.
(೨) ನಿಮ್ಮ ಮೇಲ್‍ಗೆ ಖಾತೆ ತಿಳಿಸಲು ಬರೆಯುತ್ತಿದ್ದೇನೆ.

sunaath said...

ಪ್ರಿಯ ಮಹೇಶ,
ನೀವು ಕೊಟ್ಟ ವಿಳಾಸದಲ್ಲಿ (maheshuh@gmail. com) ಏನೋ ತಪ್ಪಿದೆ ಅಂತ ಕಾಣಿಸುತ್ತದೆ. ನನ್ನ ಸಂದೇಶವು ರವಾನೆಯಾಗಲಿಲ್ಲ. ನೀವೇ ದಯವಿಟ್ಟು sunaath@gmail.com ಕೊಂಡಿಗೆ ಖಾತೆ ಸಂಖ್ಯೆಯನ್ನು ಕಳಿಸುವಿರಾ?

Mahesh Hegade said...

ಧನ್ಯವಾದ ಸುನಾಥ್ ಸರ್. ಮಿತ್ರ ಮೆಹಮೂದನಿಗೆ ಸಹಾಯ ಮಾಡಲು ಇಚ್ಚಿಸಿದ್ದೀರಿ. ಅದಕ್ಕೊಂದು ದೊಡ್ಡ ಸಲಾಂ ಸರ್. ಮತ್ತೊಮ್ಮೆ ಥ್ಯಾಂಕ್ಸ್. ವಿವರಗಳನ್ನು ಕಳಿಸಿದ್ದೇನೆ.