Thursday, June 28, 2018

ಬಂಧ & ಸಂಬಂಧ

ಜಗತ್ತನ್ನು ಸೃಷ್ಟಿಸಿದ ಬ್ರಹ್ಮ ಸಕಲ ಜೀವಿಗಳಿಗೆ ಎಲ್ಲವನ್ನೂ ಕರುಣಿಸಿದ.

ಒಂದು ಜೀವಿಗೆ ಸ್ವಲ್ಪ ತೊಂದರೆಯಾಯಿತು. ಆ ಜೀವಿಯ ಹೆಸರು 'ಬಂಧ' (bond).

ಬಂಧನಿಗೆ ಎಲ್ಲೂ ಆಶ್ರಯ ಸಿಗಲಿಲ್ಲ. ಯಾರೂ ಅವನನ್ನು ಹತ್ತಿರ ಸೇರಿಸುತ್ತಲೇ ಇರಲಿಲ್ಲ. ಅವನ ಹೆಸರೇ ಬಂಧ. ಸಕಲ ಬಂಧನಗಳು (bondage) ಇವನಿಂದಲೇ ಉಂಟಾಗುತ್ತವೆ ಎಂದು ತಿಳಿದು ಅವನಿಗೆ ಯಾರೂ ಆಶ್ರಯ ಕೊಡುತ್ತಿರಲಿಲ್ಲ.

ಬಂಧ ವಾಪಸ್ ಬ್ರಹ್ಮದೇವನ ಬಳಿಗೆ ಬಂದು ತನ್ನ ಕಷ್ಟ ಹೇಳಿಕೊಂಡ.

ಸ್ವಲ್ಪ ವಿಚಾರ ಮಾಡಿದ ಬ್ರಹ್ಮ ಹೇಳಿದ, 'ವೇಷ ಬದಲಾಯಿಸಿಕೊಂಡು, ರೂಪಾಂತರ ಮಾಡಿಕೊಂಡು, ಬೇರೆ ಹೆಸರಿನಲ್ಲಿ ಹೋಗಿ ಆಶ್ರಯ ಕೇಳು.'

'ಏನಂತ ರೂಪಾಂತರ ಮಾಡಿಕೊಳ್ಳಲಿ? ಯಾವ ಹೊಸ ಹೆಸರಲ್ಲಿ ಹೋಗಲಿ?' ಎಂದು ಕೇಳಿದ ಬಂಧ.

'ಬಂಧ ಎಂದು ಪರಿಚಯ ಮಾಡಿಕೊಳ್ಳಬೇಡ. ಸಂಬಂಧ ಅಂತ ಹೇಳಿಕೊಂಡು ಹೋಗು. ಆಗ ನೋಡು ನಿನ್ನ ಅದೃಷ್ಟ ಹೇಗೆ ಖುಲಾಯಿಸುತ್ತದೆ ಎಂದು. ಹೋಗಿ ಬಾ. ಶುಭವಾಗಲಿ,' ಎಂದು ಹೇಳಿ ಕಳಿಸಿಕೊಟ್ಟ ಬ್ರಹ್ಮದೇವ.

ಸಂಪೂರ್ಣವಾಗಿ ಗೆಟಪ್ ಬದಲಾಯಿಸಿಕೊಂಡ ಬಂಧ ಮತ್ತೆ ಭೂಮಿಗೆ ಎಂಟ್ರಿ ಕೊಟ್ಟ. ಮನೆಯೊಂದರ ಬಾಗಿಲು ತಟ್ಟಿದ.

'ಯಾರು ನೀವು?' ಎಂದು ಕೇಳಿದ ಮನೆಯಾತ.

'ನಾನು ಸಂಬಂಧ,' ಎಂದು ನೈಸಾಗಿ ಉಲಿದ ಬಂಧ.

ಸಂಬಂಧ ಅಂತ ಕೇಳಿದ್ದೇ ತಡ ಉಪಚಾರ ಆರಂಭವಾಯಿತು.

'ಒಳಗೆ ಬನ್ನಿ. ಕುಳಿತುಕೊಳ್ಳಿ. ನೀವು ಹೇಗೆ ಸಂಬಂಧ ಎಂದು ಕೇಳಬಹುದೇ?' ಎಂದು ವಿನಯ ಗೌರವದಿಂದ ಕೇಳಿದ ಮನೆಯಾತ.

ಸಂಬಂಧಗಳೇನು ಒಂದೇ ಎರಡೇ? ಒಬ್ಬನಿಗೆ ಅಪ್ಪನೆಂದ, ಇನ್ನೊಬ್ಬನಿಗೆ ಚಿಕ್ಕಪ್ಪನೆಂದ. ವೇಷದೊಂದಿಗೆ ಲಿಂಗವೂ ಬದಲಾದಾಗ ಅಮ್ಮ, ಚಿಕ್ಕಮ್ಮ, ಹೆಂಡತಿ, ಉಪಹೆಂಡತಿ....ಹೀಗೆ ಬಂಧನೊಬ್ಬ ನಾಮ ಹಲವು ಮಾದರಿಯಲ್ಲಿ ಎಲ್ಲರನ್ನೂ ಬೇರೆ ಬೇರೆ ಸಂಬಂಧಗಳ ಪಾಶದಲ್ಲಿ ಆವರಿಸಿಕೊಂಡುಬಿಟ್ಟ.

ಮೊದಲು ಬಂದಿದ್ದ ಬಂಧನೆಂಬ ಖತರ್ನಾಕ್ ಜೀವಿಯೇ ಸಂಬಂಧದ ರೂಪದಲ್ಲಿ ಬಂದು ವಕ್ಕರಿಸಿಕೊಂಡಿದೆ ಎಂದು ಮನುಷ್ಯರಿಗೆ ತಿಳಿಯಲೇ ಇಲ್ಲ. ತಮಗೆ ಗೊತ್ತಿಲ್ಲದಂತೆಯೇ ಸಂಬಂಧಗಳ ರೂಪದಲ್ಲಿ ಬಂದ ಬಂಧನಿಂದ ಬೇರೆ ಬೇರೆ ಬಂಧನಗಳಲ್ಲಿ (bondage) ಸಿಲುಕಿಕೊಂಡರು. ವಿವಾಹಬಂಧನ, ವಾತ್ಸಲ್ಯಬಂಧನ, ಪ್ರೇಮಬಂಧನ, ಪುತ್ರಪಾಶ, ಪುತ್ರಿ ಪ್ರೀತಿ, ನಾಯಿ ಪ್ರೀತಿ, ಕೋತಿ ಪ್ರೀತಿ, ಗೋಪ್ರೀತಿ...ಬಂಧನಗಳು ಒಂದೇ ಎರಡೇ?

ಸಂಬಂಧ ಎಂದರೇ Some ಬಂಧ ಅಂತರ್ಥ.

ಸಂಬಂಧಗಳಿಂದ ಬಂಧನಗಳು (bondage) ಮತ್ತು ಆ ಬಂಧನಗಳಿಂದ ತರಹತರಹದ ಸುಖ(!) ಮತ್ತು  ದುಃಖಗಳು ಉಂಟಾಗುತ್ತವೆ ಅಂದ ಮಾತ್ರಕ್ಕೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ಜೀವಿಸಲು ಸಾಧ್ಯವೇ? ಅದರ ಅವಶ್ಯಕತೆ ಇಲ್ಲ. ಸಂಬಂಧಗಳು ಬಂಧಗಳು ಎಂದು ಅರಿವಿಗೆ ಬಂದರೆ ಸಾಕು. ಅವುಗಳ ಮೇಲಿನ selfish attachment ಮತ್ತು ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಬಂಧನಗಳು ಮತ್ತು ಅವುಗಳ ಪರಿಣಾಮಗಳು ಅಷ್ಟರಮಟ್ಟಿಗೆ ಕಮ್ಮಿಯಾದಂತೆಯೇ. ಆ ವಿವೇಕ ನಮಗೆ ಬರಬೇಕು ಅಷ್ಟೇ.

ಸ್ಪೂರ್ತಿ: ಯೋಗ ವಾಸಿಷ್ಠದ ಮೇಲೆ ಸ್ವಾಮಿ ತೇಜೋಮಯಾನಂದರು ಬರೆದ ಪುಸ್ತಕದಲ್ಲಿ ಸಿಕ್ಕ ಮಾಹಿತಿ. A Glimpse into Yogavasistha

3 comments:

sunaath said...

All love is self love ಎಂದು ಯಾವನೋ ಮನೋವಿಜ್ಞಾನಿಯೋ, ತತ್ವಜ್ಞಾನೊಯೋ ಹೇಳಿದ ಹಾಗಿದೆ. Bonds give my Self a frame of reference. ಅದುದರಿಂದ ಈ ಬಂಧನಗಳನ್ನು ಬಿಡುವುದು ನನಗೆ ತುಂಬ ಕಷ್ಟಕರವಾದದ್ದು. ಆದರೂ ಪ್ರಯತ್ನಿಸುತ್ತೇನೆ. ಧನ್ಯವಾದಗಳು, ಮಹೇಶ.

Mahesh Hegade said...

ಧನ್ಯವಾದಗಳು, ಸುನಾಥ್ ಸರ್.

Everyone is self-centered. It is only the radius that varies - ಎನ್ನುವ ಮಾತು ನೆನಪಾಯಿತು.

sunaath said...

ಅಹಾ! Only the radius varies! ತುಂಬ ಅರ್ಥಗರ್ಭಿತ ಮಾತು;ಧನ್ಯವಾದಗಳು.