Sunday, July 28, 2019

ಬಡ್ಡಿಮಕ್ಕಳ ದುನಿಯಾ

ಊರಿಗೆ ಒಂದು ದಾರಿಯಾದರೆ, ಪೋರನಿಗೊಂದು ದಾರಿ - ಹೀಗೆ ಒಂದು ಗಾದೆ ಮಾತಿದೆ. ವಿಶ್ವದ ಉಳಿದ ಎಲ್ಲ ದೇಶಗಳ ಆರ್ಥಿಕ ಸಮಸ್ಯೆಗಳೇ ಒಂದು ರೀತಿಯವು. ನಮ್ಮ ಅಮೆರಿಕಾದ ಆರ್ಥಿಕ ಸಮಸ್ಯೆಗಳೇ ಪೂರ್ತಿ ವಿಚಿತ್ರ ರೀತಿಯವು.

ಅಮೆರಿಕಾದ ಆರ್ಥಿಕ ತಜ್ಞರು ತಲೆಕೆಡಿಸಿಕೊಂಡು ಕೂತಿದ್ದಾರೆ. 'ಹಣದುಬ್ಬರ (inflation) ತುಂಬಾ ಕಮ್ಮಿಯಾಗಿಬಿಟ್ಟಿದೆ. ಕನಿಷ್ಠ ೨% ಹಣದುಬ್ಬರ ಇರಬೇಕೆಂದು ಆರ್ಥಿಕ ನೀತಿ ರೂಪಿಸಿದರೆ, ಹಣದುಬ್ಬರ ೧.೫% ಗೆ ಇಳಿದುಬಿಟ್ಟಿದೆ. ಹೀಗಾದ್ರೆ ಹೆಂಗೆ ಸಿವಾ!' ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಹಣದುಬ್ಬರ ಕಮ್ಮಿಯಾದರೆ ಒಳ್ಳೆಯದಲ್ಲವೇ? ಅಲ್ಲವಂತೆ. ಹಣದುಬ್ಬರ ಒಂದು ಮಟ್ಟಕ್ಕಿಂತ ಕಮ್ಮಿಯಾಗಿ ಹೋದರೆ ಆರ್ಥಿಕ ವಹಿವಾಟುಗಳು ಕಮ್ಮಿಯಾಗುತ್ತವೆ. ದೊಡ್ಡ ದೊಡ್ಡ ಟಿಕೆಟ್ ವಸ್ತುಗಳನ್ನು ಕೊಳ್ಳುವ ಇರಾದೆಯನ್ನು ಜನ ಮುಂದೂಡುತ್ತಾರೆ. ಅರೆ! ಇದು ವಿಚಿತ್ರವಾಗಿದೆಯೆಲ್ಲಾ!? ಅಂತ ಅಂದುಕೊಂಡರೆ ಇದೊಂದು ಅರ್ಥಶಾಸ್ತ್ರದ paradox. ಕಮ್ಮಿ ಹಣದುಬ್ಬರ ನಿತ್ಯಜೀವನಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳಲು ಸಹಾಯಕ. ಆದರೆ ಕಮ್ಮಿ ಹಣದುಬ್ಬರ ಹಾಗೇ ಇದ್ದುಬಿಟ್ಟರೆ ಜನ ದೊಡ್ಡ ಟಿಕೆಟ್ ವಸ್ತುಗಳ ಖರೀದಿಯನ್ನು ಮುಂದೂಡುತ್ತಲೇ ಹೋಗುತ್ತಾರೆ. ಬೆಲೆ ಮುಂದೆ ಇನ್ನೂ ಕಮ್ಮಿಯಾದೀತು ಅನ್ನುವ ದು(ದೂ)ರಾಸೆ. ಹಾಗಾಗಿ ವಾಣಿಜ್ಯವನ್ನು ಪ್ರಚೋದಿಸಲು 'ಆರೋಗ್ಯಕರ' ಹಣದುಬ್ಬರ ಇರಬೇಕಂತೆ! ಹೊಡೀರಿ ಹಲಗಿ!

ಈಗ ಇಲ್ಲಿನ ಆರ್ಥಿಕತಜ್ಞರ ಮುಂದಿರುವ ಪ್ರಶ್ನೆ - ಹಣದುಬ್ಬರ ಏರಿಸುವುದು ಹೇಗೆ? ಉತ್ತರ ಸರಳ. ಮತ್ತೆ ಹೇಗೆ? ಮತ್ತೇ ಅದನ್ನೇ ಮಾಡಬೇಕು. ಬಡ್ಡಿ ದರ ಇಳಿಸಬೇಕು. ಸದ್ಯದ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರ ೨.೫%. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಲ್ಲಿನ ಬಡ್ಡಿ ದರ ಅಷ್ಟೇ. ಮನೆ ಸಾಲದ ದರ ೩-೪%. ವಾಹನ ಸಾಲದ ದರ ೪. ೭೫ - ೫. ೫%. ನೀವು ಇಟ್ಟ ಠೇವಣಿಗಳ ಮೇಲೆ ೨. ೫% ಬಡ್ಡಿ ಸಿಕ್ಕರೆ ದೊಡ್ಡ ಮಾತು. ಹೀಗೆ ಒಟ್ಟಿನಲ್ಲಿ ಬಡ್ಡಿಮಕ್ಕಳ ದುನಿಯಾ!

ಅಧ್ಯಕ್ಷ ಟ್ರಂಪ್ ಸಾಹೇಬರು ಮಾತ್ರ ಕೂಗಾಡುತ್ತಲೇ ಇರುತ್ತಾರೆ, 'ನಾನು ಮೊದಲಿಂದ ಹೇಳುತ್ತಲೇ ಇದ್ದೇನೆ. ಬಡ್ಡಿ ದರ ಕಮ್ಮಿ ಮಾಡಿ, ಕಮ್ಮಿ ಮಾಡಿ ಎಂದು. ಈ ಫೆಡರಲ್ ರಿಸರ್ವ್ ಛೇರ್ಮನ್ ಕೇಳುತ್ತಲೇ ಇಲ್ಲ. ಇಡೀ ಎಕಾನಮಿ ಎಕ್ಕುಟ್ಟಿ ಹೋದರೆ ಅವನೇ ಜವಾಬ್ದಾರಿ' ಎಂದು ಟ್ವೀಟ್ ಮಾಡುತ್ತ ಪಾಪದ ಚೇರ್ಮನ್ನನ ಚೇರ್ ಅಲ್ಲಾಡಿಸುತ್ತಲೇ ಇರುತ್ತಾರೆ. ಟ್ರಂಪ್ ಸಾಹೇಬರು ಹೇಳಿಕೇಳಿ ಶುದ್ಧ ವ್ಯಾಪಾರಿ. ಪೂರ್ವಾಶ್ರಮದಲ್ಲಿ ಸಾಕಷ್ಟು ರೊಕ್ಕ ಮಾಡಿಕೊಂಡಿದ್ದಾರೆ. ಜೊತೆಗೆ ಮೂರೋ ನಾಲ್ಕೋ ಬಾರಿಯೋ ದಿವಾಳಿ ಕೂಡ ಆಗಿ ಅಂಬೋ ಎಂದು ಕೈಯೆತ್ತಿ ನಮಸ್ಕಾರ ಮಾಡಿ ಹೂಡಿಕೆದಾರರಿಗೆ, ಸಾಲಕೊಟ್ಟವರಿಗೆ, ಉದ್ಯೋಗಿಗಳಿಗೆ ಲಾಂಗಲ್ಲೊಂದು ನಾಮ ಎಳೆದು ಹೋಗಿಯೂ ಇದ್ದಾರೆ ಕೂಡ.

ವ್ಯಾಪಾರಿಗಳಿಗೆ ಕಮ್ಮಿ ರೇಟಿನಲ್ಲಿ ಸಾಲ ಸಿಕ್ಕರೆ ಅದೇ ಸೀರುಂಡೆ. ಅದನ್ನೇ ಟ್ರಂಪ್ ಸಾಹೇಬರು ಡಿಮ್ಯಾಂಡ್ ಮಾಡುತ್ತಿರುವುದು. ಏನೇನೋ ಅರ್ಥಶಾಸ್ತ್ರ ಓದಿಕೊಂಡ ದೊಡ್ಡ ಮಂದಿಯೆಲ್ಲ ಬಡ್ಡಿ ದರ ಇನ್ನೂ ಕಮ್ಮಿ ಮಾಡಿದರೆ ಹೆಂಗ್ರಿ?? ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ  ಅಷ್ಟೇ. ಅವರಿಗೂ ಈಗ ಬೇಗ ದಾರಿ ಉಳಿದಿಲ್ಲ. ಮತ್ತೆ ಬಡ್ಡಿದರ ಕಮ್ಮಿಯಾಗಲಿದೆ. ಬಡ್ಡಿಮಕ್ಕಳಿಗೆ ಜೈ!

ಬಡ್ಡಿ ದರ ಕಮ್ಮಿಯಾಗುತ್ತ ಹೋಗಿ ಹೋಗಿ ಶೂನ್ಯಕ್ಕೆ ಹೋಗಿ, ಮತ್ತೂ ಕೆಳಗಿಳಿದು ನೆಗೆಟಿವ್ ಆಗಿ, ಅಂದರೆ ಸಾಲ ತೆಗೆದುಕೊಂಡರೆ ನೀವು ಬಡ್ಡಿ ಕೊಡಬೇಕಿಲ್ಲ. ನಿಮಗೇ ಅವರು ಬಡ್ಡಿ ಕೊಡುತ್ತಾರೆ, ಅಂತಹ ಪರಿಸ್ಥಿತಿ ಬಂದರೆ ಏನೂ ಆಶ್ಚರ್ಯವಿಲ್ಲ. ಜಪಾನ್ ಮತ್ತಿತರ ಕೆಲವು ದೇಶಗಳಲ್ಲಿ ಹಾಗಾಗಿದೆ.

ಬಡ್ಡಿಮಗ ಅಂದರೆ ಯಾರು? ಬಡ್ಡಿಗೆ  ರೊಕ್ಕ ಕೊಡುವವನೇ? ಅಥವಾ, ಇಟ್ಟ ಠೇವಣಿ ಮೇಲೆ ಬರುವ ಬಡ್ಡಿಯಲ್ಲಿ ಹಾಯಾಗಿ ಜೀವನ ಮಾಡುವವನೇ?

ಎರಡೂ ಅಲ್ಲ. ಬಡ್ಡಿಮಗ ಅಂದರೆ ಮತ್ತೇನೂ ಅಲ್ಲ. ಮತ್ತದೇ ವೇಶ್ಯಾಪುತ್ರ. ಸೂ..ಮಗ.

ಆದರೂ ಬಡ್ಡಿಮಗ ಎನ್ನುವ 'ಒಳ್ಳೆಯ' ಬೈಗುಳ ಕೊಂಚ ಸಹ್ಯವಾಗಲು ಕಾರಣ ಮತ್ತೆ ಬಡ್ಡಿಯ ಮಹಿಮೆಯೇ ಇರಬಹುದೇನೋ!?

ಹುಡುಕಿದಾಗ ಕೆಳಗಿನ ಮಾಹಿತಿ ಸಿಕ್ಕಿತು. ಕನ್ನಡ ಪಂಡಿತರು ಅಭಿಪ್ರಾಯ ತಿಳಿಸಬಹುದು.

'ಬಡ್ಡಿಮಗ' ಎಂಬ ಒಂದು ಬೈಗುಳದ ಮಾತಿದೆ. ಇದಕ್ಕೂ ಬಡ್ಡಿಗೂ ಏನೇನೂ ಸಂಬಂಧವಿಲ್ಲ. ಈ ಸಮಾಸಪದದ ಮೊದಲ ಭಾಗವಾದ 'ಬಡ್ಡಿ' ಎಂಬುದು 'ಬೊಡ್ಡಿ' ಎಂಬುದರ ವ್ಯತ್ಯಸ್ತ ರೂಪ. ಅದು ಪೊಡ್ಡಿ< ಪೋಟಿ ಎಂಬ ಶಬ್ದದಿಂದ ಬಂದಿದೆ; ಈ ಶಬ್ದಕ್ಕೆ ಸೂಳೆ ಎಂಬರ್ಥವಿದೆ. (ತಮಿಳಿನಲ್ಲಿ ಪೊಟ್ಟಿ, ಮಲಯಾಳಂನಲ್ಲಿ ಪಟ್ಟಿ, ತುಳುವಿನಲ್ಲಿ ಪಡಪೆ, ಪಡಪ್ಪೆ ರೂಪಗಳಿವೆ). ಈಗ ಬೈಗುಳದ ಅರ್ಥ ಸ್ಪಷ್ಟವಾಗುತ್ತದಲ್ಲವೇ!

ಆಧಾರ: http://pvnarayana42.blogspot.com/2013/11/1_9.html


2 comments:

sunaath said...

ಅಹಾ, ಅಮೆರಿಕವೇ! ಎಷ್ಟಂದರೂ ಪಾತಾಳಲೋಕವಲ್ಲವೇ! ಆದುದರಿಂದ ಎಲ್ಲವೂ ಉಲ್ಟಾ-ಪಲ್ಟಾ. ಎಷ್ಟೋ ವರ್ಷಗಳ ಹಿಂದೆ, ಓರ್ವ ಅಮೇರಿಕನ್ ಅರ್ಥಶಾಸ್ತ್ರಿಯ ಹೇಳಿಕೆಯನ್ನು ನಾನು ಒಂದು quotationದಲ್ಲಿ ಓದಿದ್ದೆ: ‘ನಿರುದ್ಯೋಗವು ೭% ಇರುವುದು ದೇಶದ ಆರ್ಥಿಕತೆಗೆ ಒಳ್ಳೆಯದು’. ಇವರೆಲ್ಲರೂ ಮನುಷ್ಯರೋ ಏನು,robotಗಳೋ?

ಬಡ್ಡಿಯ ಅರ್ಥವನ್ನು ವಿವರಿಸಿದ್ದಕ್ಕಾಗಿ ಧನ್ಯವಾದಗಳು. ಆದರೆ ಇದು ನನ್ನಲ್ಲಿ ಮತ್ತೊಂದು ವಿಶ್ಲೇಷಣೆಯನ್ನು ಪ್ರೇರೇಪಿಸಿತು. ‘ಸೂಳ್ನುಡಿ’ ಎಂದರೆ ಚೆಂದವಾದ ನುಡಿ ಎನ್ನುವುದನ್ನು ನೀವು ಬಲ್ಲಿರಿ. ‘ಸೂಳೆ’ ಎಂದರೆ ಚೆಂದವಾಗಿರುವಳು ಎಂದು ಅರ್ಥವಾಗುತ್ತದೆಯೆ? ಈ ಪ್ರಶ್ನೆಯನ್ನು ನಾನು in earnest ಕೇಳುತ್ತಿದ್ದೇನೆ.

Mahesh Hegade said...

ಸೂಳ್ನುಡಿ ಮೊದಲನೇ ಬಾರಿಗೆ ಕೇಳಿದೆ. ಒಂದು ಹೊಸ ಪದವನ್ನು ತಿಳಿದೆ.

ಧನ್ಯವಾದಗಳು ಸುನಾಥ್ ಸರ್.