Wednesday, November 13, 2019

ನಿದ್ದೆ (ಬಾರದಂತೆ ಮಾಡುವ) ಗುಳಿಗೆ

೧೯೮೭, ೮೮ ರ ಮಾತು. SSLC ವರ್ಷದ ಭಯಾನಕ ದಿನಗಳು ಅವು!

'ಮಹೇಶಾss' ಎಂದು ಉದ್ದಕ್ಕೆ ಊದ್ದವಾಗಿ ಕರೆದವನು ನನ್ನ ಖಾಸ್ ದೋಸ್ತ.

ಆ ಪುಣ್ಯಾತ್ಮ ಆ ರೀತಿಯಲ್ಲಿ ಕರೆದ ಅಂದರೆ ಮುಗಿಯಿತು. ಏನೋ ಬ್ರೇಕಿಂಗ್ ನ್ಯೂಸ್ ಕೊಡುವವನು ಇದ್ದಾನೆ ಎಂದು ಗ್ಯಾರಂಟಿ. ಆ ಮನುಷ್ಯನೇ ಹಾಗೆ. ಅವನಿಗೆ ಗೊತ್ತಿಲ್ಲದ ಸುದ್ದಿಯಿಲ್ಲ. ಊರ ಮಂದಿಯೆಲ್ಲರೂ ಅವನ ದೋಸ್ತರೇ. ಅವರ ತಲೆಯೊಳಗೆಲ್ಲ ಕೈ ಹಾಕಿ, ಮಿದುಳನ್ನೆಲ್ಲ ತಿರುವ್ಯಾಡಿ, ಮಾಹಿತಿ ಹೆಕ್ಕಿ, ಭಟ್ಟಿ ಇಳಿಸಿಟ್ಟುಕೊಂಡಿರುತ್ತಿದ್ದ. ಸ್ವಾರಸ್ಯಕರ ಮಾಹಿತಿಯುಳ್ಳ ಅಂತಹ ಖಡಕ್ ಭಟ್ಟಿ ಸಾರಾಯಿಯನ್ನು ನಮಗೆ ಕುಡಿಸುತ್ತಿದ್ದ. ನಂತರ ಅದರದ್ದೇ ಗುಂಗು.

xyz ನಮ್ಮ ಒಬ್ಬ ಸಹಪಾಠಿ. ಹೆಸರು ಬೇಡ ಬಿಡಿ.

'xyz ಅವರ ಅಪ್ಪ ಅವಂಗ ಗುಳಿಗಿ ತಂದು ಕೊಟ್ಟಾನಂತ! ನಿದ್ದಿ ಬರದಾಂಗ ಮಾಡತೈತಿ. ಅಂತಾ ಗುಳಿಗಿ!' ಅಂದುಬಿಟ್ಟ.

'ಏನೂ!!??' ಎಂದು ಉದ್ಗರಿಸಿದೆ.

'ನಿದ್ದಿ ಬರ್ಬಾರ್ದು. ಮಗಾ ಕುಂತ ರಾತ್ರಿಯೆಲ್ಲಾ ಓದ್ಲಿ ಅಂತ ಎಲ್ಲಿಂದಲೋ ಹುಡುಕಿ ತಂದುಕೊಟ್ಟಾನಂತ!' ಅಂದ ನಮ್ಮ ದೋಸ್ತ.

ನಿದ್ದೆ ಬರುವಂತೆ ಮಾಡುವ ನಿದ್ದೆ ಮಾತ್ರೆ ಬಗ್ಗೆ ಕೇಳಿ ಗೊತ್ತಿತ್ತು. ಆಗಿನ ಕಾಲದಲ್ಲಿ ನಿದ್ರೆ ಮಾತ್ರೆ ತೆಗೆದುಕೊಳ್ಳುವವರು ಭಾಳ ಕಮ್ಮಿ ಜನ. ನಿದ್ರೆ ಮಾತ್ರೆ ತೆಗೆದುಕೊಂಡರು ಅಂದರೆ ಆತ್ಮಹತ್ಯೆ ಮಾಡಿಕೊಳ್ಳಲು ತೆಗೆದುಕೊಂಡರು ಎಂದೇ ಅರ್ಥ.

ಹೀಗಿರುವಾಗ ಈ ಪುಣ್ಯಾತ್ಮ ನಿದ್ದೆ ಬಾರದಂತೆ ಮಾಡುವ ಮಾತ್ರೆಗಳೂ ಇರುತ್ತವೆ ಮತ್ತು ನಮ್ಮ ಸಹಪಾಠಿಯ ತಂದೆಯೊಬ್ಬ ಅವನಿಗೆ ಅವನ್ನು ತಂದುಕೊಟ್ಟಿದ್ದಾನೆ ಎಂದು ಹೇಳಿಬಿಟ್ಟ. ದೊಡ್ಡ ಬ್ರೇಕಿಂಗ್ ನ್ಯೂಸ್.

ಅದೋ SSLC ಕಾಲ. ಕೆಟ್ಟ ಬೋರಿಂಗ್ ಸಮಯ. ಅದಕ್ಕಿಂತ ದೊಡ್ಡ ಬೋರಿಂಗ್ ಪರೀಕ್ಷೆ. ವರ್ಷದ ಕೊನೆಗೆ ಒಂದು ದೊಡ್ಡ ಪರೀಕ್ಷೆ. ಅದ್ಯಾವ ಬುದ್ಧಿಮತ್ತೆಯನ್ನು ಪರೀಕ್ಷೆ ಮಾಡುವ ಪರೀಕ್ಷೆಯೋ ಎಂದು ನೋಡಿದರೆ ಅದರ ಕರ್ಮಕ್ಕೆ ಅದೊಂದು ದೊಡ್ಡ ಶಿಕ್ಷೆ ಬಿಟ್ಟರೆ ಏನೂ ಅಲ್ಲ. ೮,೯,೧೦ ತರಗತಿಗಳ ಮೂರು ವರ್ಷಗಳಲ್ಲಿ ಬಾಯಿಪಾಠ ಹೊಡೆದದ್ದನ್ನು (ಕಲಿತದ್ದನ್ನು ಅಲ್ಲ!) ಮೂರು ಘಂಟೆಯ ಆರು ಪರೀಕ್ಷೆಗಳಲ್ಲಿ ಕಕ್ಕಿ ಬರಬೇಕು. ಶಿವನೇ ಶಂಭುಲಿಂಗ!

ಗಣಿತ ಒಂದು ಬಿಟ್ಟರೆ ಮತ್ತೆಲ್ಲ ಭಾಷೆ ಮತ್ತು ವಿಷಯಗಳಲ್ಲಿ ಕಂಠಪಾಠಕ್ಕೆ (rote learning) ಹೆಚ್ಚು ಮಹತ್ವ. ಯಾಕೆಂದರೆ ಕೇಳಿದ ಪ್ರಶ್ನೆಗಳಿಗೆ ಬರೋಬ್ಬರಿ, ಅವರು ನಿರೀಕ್ಷೆ ಮಾಡಿದಂತೆ, ಬರೆದು ಒಗಾಯಿಸಿ ಬರಬೇಕು. ಹಾಗೆ ಬರೆದಾದ ಮೇಲೂ ಒಳ್ಳೆ ಮಾರ್ಕ್ಸ್ ಬರುತ್ತವೆ ಅಂತ ಖಾತ್ರಿಯಿಲ್ಲ.

ಪಠ್ಯ ಬಾಯಿಪಾಠ ಹೊಡೆಯಬೇಕು. ಜೊತೆಗೆ ಮಾಸ್ತರ್ ಮಂದಿ ಕೊಟ್ಟ ನೋಟ್ಸ್ ಇತ್ಯಾದಿ ಕಂಠಪಾಠ ಮಾಡಬೇಕು. ಜೊತೆಗೆ ಆಕಾಲದ ಗೈಡ್ ನಮೂನಿ ಪುಸ್ತಕಗಳಾದ ಮ್ಯಾಗಜಿನ್, ಬಂಧು, ಹದ ಮತ್ತೊಂದು ಮಗದೊಂದು ಎಲ್ಲವನ್ನೂ ಭಟ್ಟಿ ಇಳಿಸಿ ಮೆದುಳಿಗೆ ಇಳಿಸಿಕೊಳ್ಳಬೇಕು. ಕೆಲವರು ಬಾಯಿಪಾಠ ಮಾಡುತ್ತಿದ್ದರು. ಕೆಲವರು ಮತ್ತೆ ಮತ್ತೆ ಬರೆದು ತೆಗೆದು ತೆಗೆದು ತೈದು ಹೈರಾಣಾಗಿ ಹೋಗುತ್ತಿದ್ದರು. ಒಟ್ಟಿನಲ್ಲಿ ಏನೇನೋ ಮಂಗ್ಯಾನಾಟಗಳು SSLC ಎಂಬ ಶೂಲದಿಂದ ಬಚಾವಾಗಲು.

SSLC ಕರ್ಮ ಯಾರಿಗೂ ಬೇಡ ಶಿವನೇ! ಅದಕ್ಕೆ ಹೋಲಿಸಿದರೆ PUC ಎಷ್ಟೋ ಬೆಟರ್. ವಿಜ್ಞಾನದ ವಿಷಯಗಳಲ್ಲಿ ಅಷ್ಟೊಂದು ಕಂಠಪಾಠ ಹೊಡೆಯುವ ಅವಶ್ಯಕತೆ ಬರುತ್ತಿರಲಿಲ್ಲ. ಮತ್ತೆ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ವಿಷಯವೂ ಇರುತ್ತಿತ್ತು. ಒಳ್ಳೊಳ್ಳೆ ಪುಸ್ತಕಗಳೂ ಸಿಗುತ್ತಿದ್ದವು.

SSLC ವಿಷಯ ಕೇಳಬೇಡಿ. ಯಾವ ಯುದ್ಧ ಯಾವಾಗ ಶುರುವಾಯಿತು? ಯಾವ ಪುಣ್ಯಾತ್ಮ ರಾಜ ಯಾವಾಗ ಗೊಟಕ್ ಅಂದ? ಬೋಳ್ಕಾಳು (ಕರಿಮೆಣಸು) ವ್ಯಾಪಾರಕ್ಕೆ ಬಂದ ಬ್ರಿಟಿಷರು ಹೇಗೆಲ್ಲ ಬೋಳು ಕೆತ್ತಿ ನಮ್ಮ ದೇಶದ ಸಂಪತ್ತನ್ನು ಮುಂಡಾಯಿಸಿಬಿಟ್ಟರು? ಇಂತಹ ಅಸಂಬದ್ಧ ವಿಷಯಗಳಿಗೆಲ್ಲ, ಏಕ್ದಂ ಪಠ್ಯದಲ್ಲಿದಂತೇ, ಬರೆದು ಕಕ್ಕಬೇಕು. ಕರ್ಮ!

ಹೋಗಲಿ ಹೇಗೋ ಮಾಡಿ ಓದೋಣ, ಬಾಯಿಪಾಠ ಹೊಡೆಯೋಣ ಅಂದರೆ ಟೈಮ್ ಎಲ್ಲಿದೆ ಸ್ವಾಮಿ!? ಟೈಮ್! ಶಾಲೆಯಲ್ಲಿಯೇ ಸುಮಾರು ಎಂಟು ತಾಸು ಮೊಳೆ ಹೊಡೆಯುತ್ತಿದ್ದರು. ನಂತರ BSC ಅಂದರೆ Bright Students' Class ಎನ್ನುವ ಮತ್ತೊಂದು ತಾಸಿನ ಹೆಚ್ಚಿನ ಸ್ಕ್ರೂ ಮೊಳೆ, ಅದೂ ದೊಡ್ಡ ಸೈಜಿನದು. ಯಾವ ದಿಕ್ಕಿನಿಂದ ನೋಡಿದರೂ ಆ ಕ್ಲಾಸಿನಿಂದ ಹೊರಬಂದವರಾರೂ ಬ್ರೈಟ್ ಆಗಿ ಕಾಣುತ್ತಿದ್ದಿಲ್ಲ. ಮುಸ್ಸಂಜೆ ಬೆಳಕಿನಲ್ಲಿ, ಕೆಟ್ಟ ಹಸಿವಿನಿಂದ ರಕ್ತದಲ್ಲಿ ಶುಗರ್ ಕಮ್ಮಿಯಾಗಿ ಜೋಲಿ ಹೊಡೆಯುತ್ತಿರುವ ಡಿಮ್ ಹೊಡೆದ ಮಂಗ್ಯಾಗಳಂತೆ ಕಾಣುತ್ತಿದ್ದರು. ನನ್ನ ಪರಿಸ್ಥಿತಿಯಂತೂ ಹಾಗೇ ಇರುತ್ತಿತ್ತು.

ಮುಂಜಾನೆ ಹತ್ತೂವರೇ ಹನ್ನೊಂದರ ಹೊತ್ತಿಗೆ ಶಾಲೆಗೆ ಹೋದರೆ ಸಂಜೆ ಮನೆಗೆ ಬರುವ ತನಕ ಸಂಜೆ ಏಳು ಘಂಟೆ ಮೇಲೆ. ಬಂದು ತಿಂಡಿ ತೀರ್ಥ ಮಾಡಿದ ಮರುಕ್ಷಣವೇ ಕಣ್ಣೆಳೆಯುತ್ತಿದ್ದವು. ನಿದ್ದೆ ಒತ್ತರಿಸಿ ಬರುತ್ತಿತ್ತು. ಹೇಗೋ ಮಾಡಿ ಊಟದ ತನಕ ಎಳೆಯುತ್ತಿದ್ದೆ. ರೇಡಿಯೋ "ವಿವಿಧ ಭಾರತಿ"ಯಲ್ಲಿ ಕನ್ನಡದ ಹಾಡುಗಳು ಬರುತ್ತಿದ್ದವಲ್ಲ. ಸಣ್ಣಗೆ ಹಚ್ಚಿಕೊಂಡು ಅಥವಾ earphone ಕಿವಿಯಲ್ಲಿ ಹೆಟ್ಟಿಕೊಂಡು ಅಂದಿನ homework ಮಾಡಲು ಪ್ರಯತ್ನಿಸುತ್ತಿದ್ದೆ. ಮತ್ತೇ ಅವೇ ಬೋರಿಂಗ್ ವಿಷಯಗಳು. Nylon ಹೆಸರು ಹೇಗೆ ಬಂತು? ಬೆಂಜೀನ್ ಹೇಗೆ ಕಂಡುಹಿಡಿದ? ಇತ್ಯಾದಿ. Nylon ಅಂದರೆ New York London ಎಂದು ಮಾಸ್ತರ್ ಹೇಳಿದ್ದರು. ಆವಾಗ ಕೇಳಿದ್ದನ್ನು ಮತ್ತೆ ಸಂಶೋಧನೆ ಮಾಡಲು ಹೋಗಿಲ್ಲ. ಒಂದನ್ನೊಂದು ಹಿಂಬರ್ಕಿಯಲ್ಲಿ ಭೋಗಿಸುತ್ತಿದ್ದ ಹಾವುಗಳ ಕನಸನ್ನು ಕಂಡ ವಿಜ್ಞಾನಿ ಬೆಂಜೀನಿನ (Benzene) ರಚನೆ ಕಂಡುಹಿಡಿದಿದ್ದನಂತೆ. ಅಷ್ಟು ಖರಾಬಾಗಿ ಮಾಸ್ತರ್ ಹೇಳಿರಲಿಲ್ಲ. ಆದರೆ ಉಡಾಳರು ಮಾತ್ರ, 'ಆ ಹುಚ್ಚ ಸೂಳೆಮಗ ವಿಜ್ಞಾನಿಗೆ ನಾಗಪ್ಪಗಳು (ಹಾವುಗಳು) ಮು*ಳಿ ಹಡು ಕನಸು ಹ್ಯಾಂಗ ಬಿತ್ತಲೇ!?? ಹೋಗ್ಗೋ!' ಎಂದು ಕೇಕೆ ಹೊಡೆಯುತ್ತಿದ್ದುದು ಮಾತ್ರ ಇನ್ನೂ ನಿನ್ನೆ ಮೊನ್ನೆಯಂತೆ ನೆನಪಿದೆ.

ರಾತ್ರಿ ಒಂಬತ್ತರ ಸುಮಾರಿಗೆ ಊಟ ಮುಗಿಸಿ ಮತ್ತೆ ಓದಲು ಕುಳಿತರೆ ಹತ್ತು-ಹತ್ತೂವರೆ ಘಂಟೆ ಹೊತ್ತಿಗೆ ನಿದ್ದೆ ಸಿಕ್ಕಾಪಟ್ಟೆ ಬರುತ್ತಿತ್ತು. ಅದೆಷ್ಟೇ ಕಷ್ಟಪಟ್ಟರೂ ತಲೆ ಹೋಗಿ ಪುಸ್ತಕದ ಮೇಲೆ ಶಿವಾಯ ನಮಃ ಮಾದರಿಯಲ್ಲಿ ಪವಡಿಸಿಬಿಡುತ್ತಿತ್ತು. ಅದರಲ್ಲೇ ಚಿಕ್ಕ ಕನಸು ಬೇರೆ. ಅದರಲ್ಲಿ ಮತ್ತೆ ಹಿಂಬರ್ಕಿ ಹಾವುಗಳು ಕಂಡು ಬಂದಾಗಲೇ ಬೆಚ್ಚಿಬಿದ್ದು ಎದ್ದು ಕೂತು ಓದು ಮುಂದುವರೆಸಬೇಕು. ಹೀಗೆ ನಡೆಯುತ್ತಿತ್ತು ರಾತ್ರಿ ಓದು.

ಚಹಾ, ಕಾಫಿ ಟ್ರೈ ಮಾಡಿ ನೋಡಿಯಾಯಿತು. ನಿದ್ರಾದೇವಿ ಮತ್ತೂ ಚೆನ್ನಾಗಿ ಆವರಿಸಿಕೊಂಡಳು. ಮೈಯೆಲ್ಲಾ ಹಗುರಾಗಿ ಮತ್ತೂ ಒಳ್ಳೆ ನಿದ್ದೆ ಬರುತ್ತಿತ್ತು.

ನಮ್ಮ ಊರ ಕಡೆ ಯಾರೋ ಹೇಳಿದರು, 'ಜರ್ದಾ ಪಾನ್ ಹಾಕಿದರೆ ನಿದ್ರೆ ಬರುವುದಿಲ್ಲ...' ಎಂದು. ನಮ್ಮ ಊರ ಕಡೆ ರಾತ್ರಿಯೆಲ್ಲ ಯಕ್ಷಗಾನ ನಡೆಯುತ್ತದೆ ನೋಡಿ. ಅಲ್ಲಿ ಎಲ್ಲರೂ ಜರ್ದಾ ತಂಬಾಕಿನ ಕವಳ (ಎಲೆಯಡಿಕೆ) ಜಡಿದುಕೊಂಡೇ ಯಕ್ಷಗಾನ ನೋಡುತ್ತಾರೆ. ಪಾತ್ರಧಾರಿಗಳೂ ಕೂಡ ಕವಳ ಜಗಿಯುತ್ತಲೇ ಇರುತ್ತಾರೆ. ರಂಗದ ಮೇಲೆ ಬರುವ ಮೊದಲು ಬಣ್ಣದ ಚೌಕಿ (greenroom) ಮೂಲೆಯಲ್ಲೋ ಕವಳದ ಪಿಚಕಾರಿ ಹಾರಿಸಿ ಬಂದಿರುತ್ತಾರೆ. ರಂಗ ಬಿಟ್ಟು ಇಳಿದುಹೋದವರೇ ಮತ್ತೆ ಚಹಾ ಕುಡಿದು ಕವಳ ಹಾಕುತ್ತಾರೆ. ಮುಂದಿನ ದೃಶ್ಯಕ್ಕೆ ತಯಾರಾಗುತ್ತಾರೆ.

ಸರಿ ಜರ್ದಾ ಕೂಡ ಟ್ರೈ ಮಾಡಿನೋಡಿದ್ದಾಯಿತು. ಪುರಾತನ ದೋಸ್ತ್ ಪಠಾಣನ ಚುಟ್ಟಾ ಅಂಗಡಿಯಿಂದ ಕೊಂಚವೇ ಜರ್ದಾ ತಂದಿಟ್ಟುಕೊಂಡೆ. ರಾತ್ರಿ ಹತ್ತರ ಹೊತ್ತಿಗೆ ಎಲೆಯಡಿಕೆ ಮಾಡಿಕೊಂಡು ಕೊಂಚ ಜರ್ದಾ ಮಿಕ್ಸ್ ಮಾಡಿಕೊಂಡು ಹಾಕಿನೋಡಿದೆ. ಅಷ್ಟೇನೂ ಮಜಾ ಬರಲಿಲ್ಲ. ಇನ್ನೂ ಜರ್ದಾಕ್ಕೆ ಅಂಟಿಕೊಳ್ಳುವ ವಯಸ್ಸಾಗಿರಲಿಲ್ಲ ಅದು ಅನ್ನಿಸುತ್ತದೆ. ರುಚಿ ತಕ್ಕಮಟ್ಟಿಗೆ ಬಂದರೂ ಕವಳವನ್ನು ಕಚಾಪಚಾ ಎಂದು ಅಗಿಯುತ್ತ ಓದಲಾಗುತ್ತಿರಲಿಲ್ಲ. ಅದರಲ್ಲೂ ಆಸಕ್ತಿಯಿಲ್ಲದ ವಿಷಯಗಳನ್ನಂತೂ ರಾತ್ರಿ ಓದಲೇ ಆಗುತ್ತಿರಲಿಲ್ಲ. ಗಣಿತವನ್ನು ಎಷ್ಟಂತ ಓದೋಣ, ಎಷ್ಟಂತ ಅವೇ ಸಮಸ್ಯೆಗಳನ್ನು ಮತ್ತೆ ಮತ್ತೆ ಬಿಡಿಸೋಣ?

ಏನೇ ಮಾಡಿದರೂ ರಾತ್ರಿ ಹನ್ನೊಂದರ ಮೇಲೆ ನಿದ್ದೆ ತಡೆದುಕೊಳ್ಳುವುದು ಸಾಧ್ಯವೇ ಆಗುತ್ತಿರಲಿಲ್ಲ. ಕೆಲವರು ಅಂದರು, 'ಶಾಲೆಯಿಂದ ಬಂದ ತಕ್ಷಣ ನಿದ್ದೆ ಮಾಡಿಬಿಡು. ರಾತ್ರೆ ಎಷ್ಟೋ ಹೊತ್ತಿಗೆ ಎಚ್ಚರವಾಗುತ್ತದೆ. ಆವಾಗ ಎದ್ದು ಬೆಳಗಿನ ತನಕ ಓದಬಹುದು. ಬೆಳಿಗ್ಗೆ ಒಂದು ಸಣ್ಣ ನಿದ್ದೆ ತೆಗೆದರೆ ಸಾಕು.'

ಸರಿ. ಅದನ್ನೂ ಮಾಡಿ ನೋಡಿಯಾಯಿತು. ಅದೂ ಸರಿಯಾಗಲಿಲ್ಲ. ಸಂಜೆ ಏಳಕ್ಕೆ ಮಲಗಿ, ರಾತ್ರಿ ಊಟವಿಲ್ಲದೆ ಹನ್ನೆರೆಡು ಒಂದು ಘಂಟೆಗೆ ಎಚ್ಚರವಾದಾಗ ಎದ್ದು ಬಂದು ಅಡಿಗೆಮನೆಯಲ್ಲಿ ಧಡಂ ಧುಡುಂ ಮಾಡಿ, ಕೈಗೆ ಸಿಕ್ಕಿದ್ದನ್ನು ಮುಕ್ಕಿ ನಂತರ ಓದಬೇಕು. ಯಾರಿಗೆ ಬೇಕ್ರಿ ಆ ಕರ್ಮ? ಮನೆ ಮಂದಿ ಜೊತೆ ಊಟ ಮಾಡಿದರೆ ರುಚಿಯೋ ಪಚಿಯೋ, at least, ಬಿಸಿಬಿಸಿಯಾಗಿಯಾದರೂ ಸಿಗುತ್ತಿತ್ತು. ಬಿಸಿ ಬಿಸಿ ಫುಡ್ ಮಾರಾಯರೇ! ಕಡತ ಅಲ್ಲ! ಬಿಸಿ ಬಿಸಿ ಕಡತ ಕೊಡುವ ಕಾಲ ಎಲ್ಲ ಮುಗಿದಿತ್ತು. ಆಗಲೇ ಆರಡಿ ಎಂಬತ್ತು ಕೇಜಿ ಇದ್ದ ದೈತ್ಯನನ್ನು ತಡವಿಕೊಳ್ಳುವ ಉಪದ್ವಾಪಿತನ ಯಾರೂ ಮಾಡುತ್ತಿರಲಿಲ್ಲ. ಅದೇ ದೊಡ್ಡ ಪುಣ್ಯ!

ಒಟ್ಟಿನಲ್ಲಿ ರಾತ್ರಿಯೆಲ್ಲ ಓದಬೇಕು ಎನ್ನುವ ಇಚ್ಛೆ ಫೇಲ್ ಆಗಿತ್ತು. ಅಷ್ಟೆಲ್ಲ ಓದುವುದು ಏನಿರುತ್ತಿತ್ತೋ ಎಂದುಕೊಂಡರೆ ಅದೂ ಸರಿಯೇ. ನಿಜವಾಗಿ ಏನೂ ಇರುತ್ತಿರಲಿಲ್ಲ. ಆದರೆ ಓದಿದ್ದೆಲ್ಲ ನೆನಪಿರಬೇಕಲ್ಲ. ನನಗೆ ಪಠ್ಯವನ್ನು ಬಿಟ್ಟು ಬೇರೆಲ್ಲಾ ವಿಷಯ ಸಕತ್ತಾಗಿ ನೆನಪಿರುತ್ತಿತ್ತು. ಹಾಗಾಗಿ ಪಠ್ಯವನ್ನು ಮತ್ತೆ ಮತ್ತೆ ಓದಿದ್ದನ್ನೇ ಓದಬೇಕು. ಮತ್ತೆ ಮತ್ತೆ ಅದನ್ನೇ ಬರೆದು ಬರೆದು ತೆಗೆಯಬೇಕು. ಮೆದುಳಿನಲ್ಲಿ ಜಾಗ ಇಲ್ಲದಿದ್ದರೂ ಹೇಗೋ ಮಾಡಿ ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಮತ್ತೊಂದು ಜೋಪಡಿಯನ್ನು ಫಿಟ್ ಮಾಡಿದಂತೆ ಪಠ್ಯದ ಮಾಹಿತಿಯನ್ನೂ ಫಿಟ್ ಮಾಡಬೇಕು. SSLC ಕರ್ಮಕಾಂಡ.

ಬೆಳಿಗ್ಗೆ ಬೇಗ ಎದ್ದು ಓದೋಣ ಅಂದರೆ ತುಂಬಾ ಬೇಗನೆ ಏಳಬೇಕು. ಅದನ್ನೂ ಮಾಡಿಯಾಯಿತು. ನಾಲ್ಕಕ್ಕೆ ಐದಕ್ಕೆ ಎಲ್ಲ ಎದ್ದು ನೋಡಿಯಾಯಿತು. ಸೊಳ್ಳೆ ಕಾಟ. ಅವನ್ನು ಓಡಿಸಲು ಹಚ್ಚಿದ ಖಚುವಾ ಚಾಪ್ ಸೊಳ್ಳೆಬತ್ತಿಯ ಘಾಟು. ಅದನ್ನೆಲ್ಲ ಕೇರೇ ಮಾಡದ ಧಾರವಾಡದ ಗುಂಗಾಡುಗಳು. ಕ್ಷಣಕ್ಕೊಮ್ಮೆ ಫಟ್ ಫಟ್ ಅಂತ ಸೊಳ್ಳೆ ಹೊಡೆಯುತ್ತ, ಸಾಯುವಾಗ ಅವು ಕಾರಿಕೊಳ್ಳುತ್ತಿದ್ದ  ರಕ್ತವನ್ನು ಕಂಡು ವಾಕರಿಕೆ ಬಂದು, ಅದರ ವಾಸನೆಯನ್ನು 'ಆಸ್ವಾದಿಸಿ' ಹೇಸಿಗೆ ಪಟ್ಟುಕೊಳ್ಳುತ್ತ ಓದುವಷ್ಟರಲ್ಲಿ ಅತ್ಲಾಗೆ ನಿದ್ದೆಯೂ ಇಲ್ಲ, ಇತ್ಲಾಗೆ ಓದೂ ಇಲ್ಲ. ಆರು ಘಂಟೆ ನಂತರ ಎದ್ದರೆ ಸೊಳ್ಳೆಗಳು ಗಾಯಬ್ ಆಗಿರುತ್ತಿದ್ದವು. ಆದರೆ ಬೆಳಗಿನ ಮತ್ತದೇ ನಾಷ್ಟಾ, ಸ್ನಾನ, ಸಂಧ್ಯಾವಂದನೆ (ನೆನಪಾದಾಗ ಅಥವಾ ಬ್ರಾಹ್ಮಣ್ಯ ಅಮ್ಮನ ತಲೆಗೇರಿ ಅಮ್ಮ ಬಾಯ್ಬಾಯಿ ಬಡಿದುಕೊಂಡಾಗ ಅಥವಾ ಜನಿವಾರ ಹರಿದುಹೋದಾಗ ಮಾತ್ರ) .... ಇವುಗಳಲ್ಲಿಯೇ ಟೈಮ್ ಹೋಗುತ್ತಿತ್ತು. ಹತ್ತೂವರೆ ಆಗಿಬಿಡುತ್ತಿತ್ತು. ಮತ್ತೆ ಶಾಲೆಗೆ ಹೋಗು. ಮತ್ತದೇ ಮೊಳೆ. ಮತ್ತದೇ ದೊಡ್ಡ ಮೊಳೆ.

ಹೀಗೆ ನಿದ್ದೆಯ ಕಾರಣದಿಂದ ಜೀವನವೇ ಬೇಸರವಾಗಿಬಿಟ್ಟಾಗ ನಿದ್ದೆ ಬರದಿರುವಂತೆ ಮಾಡುವ ಗುಳಿಗೆ ಇರುತ್ತದೆ ಮತ್ತೆ ಧಾರವಾಡದಲ್ಲೂ ಸಿಗುತ್ತದೆ ಎನ್ನುವ ವಿಷಯ ತಿಳಿದು ಹೊಸದೊಂದು ಆಶಾಕಿರಣ ಮೂಡಿತ್ತು. ಎಲ್ಲ ಮಾಡಿ ಮುಗಿಸಿದ್ದಾಗಿದೆ. ಇದನ್ನೂ ಮಾಡಿನೋಡಬೇಕು ಎಂದುಕೊಂಡೆ.

ಸಹಪಾಠಿಯೊಬ್ಬನ ಅಪ್ಪ ತಂದುಕೊಟ್ಟಿದ್ದ ಎಂದು ಕೇಳಿದ್ದೆ. ಬಹಳ ಜನ ಮಿತ್ರರೂ ಆ ಸುದ್ದಿ ಕೇಳಿರಬಹುದು. ಆದರೆ ಯಾರೂ ಆ ಆಸಾಮಿ ಬಳಿ ಹೋಗಿ, 'ನಿಮ್ಮ ಅಪ್ಪಾರು  ಅದೇನೋ ನಿದ್ದಿ ಬಾರದಂತಹ ಗುಳಿಗಿ ತಂದುಕೊಟ್ಟಾರಂತಲ್ಲಲೇ. ಹೌದೇನು? ಯಾವ ಗುಳಿಗಿ? ಸ್ವಲ್ಪ ಮಾಹಿತಿ ಕೊಡಲ್ಲಾ,' ಎಂದು ಕೇಳಿದ್ದು ಸುಳ್ಳು. ಅಂತಹ ಅಸಡ್ಡಾಳ manners ಇಲ್ಲದ ಮಿತ್ರತ್ವ ಯಾರ ಮಧ್ಯೆಯೂ ಇರಲಿಕ್ಕಿಲ್ಲ ಅಂತ ನನ್ನ ಭಾವನೆ. ಮಾತ್ರೆ ಗುಳಿಗೆ ಎಲ್ಲ ವೈದ್ಯ ಮತ್ತು ರೋಗಿ ನಡುವಿನ ಖಾಸಗಿ ವಿಷಯ.

ಸಹಪಾಠಿಯ ಬಳಿ ಅಂತಹ ವಿಷಯ ಕೇಳಲು ಸಾಧ್ಯವಿರಲಿಲ್ಲ. ಕೇಳಿ ಅವನಿಗೆ awkward ಅನ್ನಿಸಿದರೇ? ಅವನು ಫೀಲ್ ಮಾಡಿಕೊಂಡರೇ? ಅವನಿಗೆ ಬೇಜಾರಾದರೇ? ಹಾಗೆಂದು ಅನ್ನಿಸಿತ್ತು. ಒಮ್ಮೊಮ್ಮೆ ಏನೋ ಪ್ರಶ್ನೆ ಕೇಳಿಬಿಡುತ್ತೇವೆ. reply ಬರುವುದಿಲ್ಲ. reaction ಬರುತ್ತದೆ. ಗೆಳೆತನ ಢಂ ಅಂದುಬಿಟ್ಟರೂ ಆಶ್ಚರ್ಯವಿಲ್ಲ. ಯಾವನಿಗೆ ಬೇಕು ಅದೆಲ್ಲ ಲಫಡಾ!

ಆದರೂ ಆ ನಿದ್ದೆ ಬಾರದಂತೆ ಮಾಡುವ ಮಾತ್ರೆ ಬಗ್ಗೆ ಭಯಂಕರ ಕುತೂಹಲವಂತೂ ಇತ್ತು. ಅಂತಹ ಮಾತ್ರೆ ತೆಗೆದುಕೊಳ್ಳುತ್ತಾನೆ ಎಂದು ಆಪಾದಿಸಿಪಟ್ಟಿದ್ದ ಆ ಸಹಪಾಠಿಯನ್ನು ಗಮನಿಸಿದೆ. ಆತನ ವರ್ತನೆಯಲ್ಲಂತೂ ಏನೂ ದೊಡ್ಡ ಬದಲಾವಣೆ ಕಂಡುಬರಲಿಲ್ಲ. ಭಟ್ಟರ ಶಾಲೆಯ ನೂರಾರು ಹಾಪ್ ವಿದ್ಯಾರ್ಥಿಗಳಲ್ಲಿ ಅವನೂ ಒಬ್ಬ. ಶುದ್ಧ ಯಬಡನ ಹಾಗಿದ್ದ. ಮಾತ್ರೆ ತೆಗೆದುಕೊಂಡಾದ ಮೇಲೂ ಹಾಗೇ ಕಂಡ.

ತಂದೆಯವರ ಜೊತೆ ನಾನು ತುಂಬಾ ಫ್ರೀ. ಅವರೂ ಹಾಗೇ. ಅವರ ಜೊತೆ ಸಾಕಷ್ಟು ಮಾತು ಕತೆ ಎಲ್ಲ ನಡೆಯುತ್ತಿತ್ತು. ಅವರ ಹತ್ತಿರವೇ ಕೇಳಿದೆ. ಹೀಗೆ, ಅದೇನೋ ನಿದ್ದೆ ಬರದಿರುವ ಮಾತ್ರೆ ಇದೆಯಂತೆ. ನಿಮಗೆ ಗೊತ್ತೇ?

'ಹೌದು. ಅದು ನಮ್ಮ ಕಾಲದಲ್ಲೂ ಇತ್ತು. ಆವಾಗಲೇ ಅದನ್ನು ಬ್ಯಾನ್ ಮಾಡಿದ್ದರು ಅಂತ ನೆನಪು. ಅದನ್ನು ತೆಗೆದುಕೊಂಡರೆ ನಿದ್ದೆಯೇನೋ ತಾತ್ಕಾಲಿಕವಾಗಿ ದೂರವಾಗುತ್ತಿತ್ತು. ಆದರೆ ಅಧ್ಯಯನ ಮಾಡಲು ಬೇಕಾಗುವಂತಹ ಏಕಾಗ್ರತೆ ಮಾತ್ರ ಬರುತ್ತಿರಲಿಲ್ಲ. ಎಷ್ಟೋ ದಿನಗಳ ಕಾಲ ಒಂದು ರೀತಿಯ ಅಸಹಜ ಅನ್ನಿಸುತ್ತಿತ್ತು. ಒಮ್ಮೆ ತೆಗೆದುಕೊಂಡವರಾರೂ ಮತ್ತೊಮ್ಮೆ ತೆಗೆದುಕೊಂಡಿದ್ದು ಸುಳ್ಳು. ಗಂಭೀರವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗೊತ್ತಾಗಿಬಿಡುತ್ತಿತ್ತು ಇದು ಉಪಯೋಗವಿಲ್ಲದ ಮಾತ್ರೆ. ಉಪಯೋಗಕ್ಕಿಂತ ತೊಂದರೆಯೇ ಜಾಸ್ತಿಯೆಂದು. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಸೂರ್ಯೋದಯದಿಂದ ಸೂರ್ಯಾಸ್ತದ ಒಳಗಿನ ಅವಧಿ ಬೇಕಾದಷ್ಟಿದೆ. ಬೆಳಿಗ್ಗೆ ಆರರಿಂದ ರಾತ್ರಿ ಹತ್ತರ ನಡುವೆ ಎಷ್ಟಾಗುತ್ತದೋ ಅಷ್ಟು ಕೆಲಸವನ್ನು, ಯೋಜನಾಬದ್ಧವಾಗಿ, ಮಾಡಿಕೊಳ್ಳಬೇಕು. ಪ್ಲಾನಿಂಗ್ ಮುಖ್ಯ. ಏಕಾಗ್ರತೆ ಮುಖ್ಯ,' ಅಂದರು ತಂದೆಯವರು. ಅವರು ಹಾಗೆಯೇ ಇದ್ದರು. ಬೆಳಿಗ್ಗೆ ಸೂಯೋದಯಕ್ಕೆ ಮೊದಲೇ ಎದ್ದಿರುತ್ತಿದ್ದರು. ಸೂರ್ಯಾಸ್ತದ ನಂತರ ವಿನಾಕಾರಣ ಎಲ್ಲೂ ಹೋಗುತ್ತಿರಲಿಲ್ಲ. ತುಂಬಾ ಶಿಸ್ತಿನ ಜೀವನಶೈಲಿ ಅವರದ್ದು.

ಹೆಚ್ಚಿನ ವಿಷಯ ಗೊತ್ತಾಯಿತು. ತಂದೆಯವರ ಕಾಲದಲ್ಲೇ ಬ್ಯಾನ್ ಮಾಡಲಾಗಿದ್ದ ಮಾತ್ರೆಯಾಗಿದ್ದರೆ ಈಗ ಸಿಗುವ ಚಾನ್ಸ್ ಕಮ್ಮಿ. ಆದರೂ ಸಿಕ್ಕಾಪಟ್ಟೆ curiosity. ಒಮ್ಮೆ ಟ್ರೈ ಮಾಡಿ ನೋಡೇಬಿಡಬೇಕು. ಯಾರಿಗೆ ಗೊತ್ತು ನಮ್ಮ ದೇಹಪ್ರಕೃತಿಗೆ ಒಗ್ಗಿದರೂ ಒಗ್ಗೀತು. ಮಾತ್ರೆ ಸಿಕ್ಕು, ಒಗ್ಗಿಬಿಟ್ಟರೆ ರಾತ್ರಿಯೆಲ್ಲ ವಿದ್ಯಾಯಜ್ಞ ಮಾಡಿಬಿಡಬಹುದು. ವಿದ್ಯಾರ್ಜನೆಯನ್ನು ತಪಸ್ಸಿನಂತೆ ಮಾಡಬೇಕಂತೆ. ತಪಸ್ಸು ಮಾಡುವವರಿಗೆ ರಾತ್ರಿಯಾದರೇನು, ಹಗಲಾದರೇನು? ಅಲ್ಲವೇ?

ಆ ಕಾಲದಲ್ಲಿ ನಮಗೆ ಗೊತ್ತಿದ್ದ ಮೆಡಿಕಲ್ ಅಂಗಡಿಗಳೆಂದರೆ ಮಾಳಮಡ್ಡಿಯಲ್ಲಿದ್ದ 'ಸುಯೇಶ್ ಮೆಡಿಕಲ್ಸ್' ಮತ್ತು ಪೇಟೆಯಲ್ಲಿದ್ದ 'ಕರ್ನಾಟಕ ಫಾರ್ಮಸಿ' ಮತ್ತು 'ಹೆಗಡೆ ಮೆಡಿಕಲ್ಸ್'. ಪೇಟೆ ದೂರ. ಮಾಳಮಡ್ಡಿ ಹತ್ತಿರ.

ಒಂದು ದಿನ ಸಂಜೆ ಮಾಳಮಡ್ಡಿ ಕಡೆ ಹೋದೆ. ಸುಯೇಶ್ ಮೆಡಿಕಲ್ಸ್ ಮೆಟ್ಟಿಲು ಹತ್ತಿದೆ. ನಾಡಕರ್ಣಿ ಬಾಯಿ ಕಂಡರು. ಅವರಿಗೆ ನನ್ನ ಪರಿಚಯ ಸಿಕ್ಕಿರಲಿಕ್ಕಿಲ್ಲ ಎಂದುಕೊಂಡೆ. ಕುಟುಂಬಸ್ನೇಹಿತರೇ ಆದರೂ ಸಣ್ಣವರಿದ್ದಾಗ ನೋಡಿರಬಹುದು ಅಷ್ಟೇ. ಅವರನ್ನು ಮಾತ್ರ ನಾವು ನೋಡಿಕೊಂಡೇ ಬೆಳೆದವರು.

ಔಷಧಿ ಅಂಗಡಿ ನಾಡಕರ್ಣಿ ಬಾಯಿ 'ಏನು? prescription ಎಲ್ಲಿ? ಕೊಡಿ,' ಎನ್ನುವಂತೆ ತಲೆ ಕುಣಿಸಿದರು.

ಏನು ಹೇಳಬೇಕು? What a difficult situation! ಮಾತ್ರೆ ಹೆಸರೇ ಗೊತ್ತಿಲ್ಲ. prescription ಎಲ್ಲಿಂದ ತರೋಣ?

'ಅದು...ಅದು.... ಅದೇನೋ ನಿದ್ದಿ ಬರದಿರುವಂತಹ ಗುಳಿಗಿ ಇರ್ತದಂತಲ್ಲರೀ. ಅದು ಅದರೀ???' ಅನ್ನುವಷ್ಟರಲ್ಲಿ ಸಾಕಾಗಿ ಹೋಗಿತ್ತು. ದೇಹ ಎಂಬುದು ಎಲ್ಲೆಲ್ಲೋ ಹೇಗೇಗೋ ಬೆಂಡಾಗಿ ಹೋಗಿತ್ತು. Sheer embarrassment ಅಂದರೆ ಏನು ಅಂತ ಗೊತ್ತಾಗಿತ್ತು.

ನಾಡಕರ್ಣಿ ಬಾಯಿಗೆ ಏನು ಕೇಳುತ್ತಿದ್ದೇನೆ ಎಂದು ಮೊದಮೊದಲು ಅರ್ಥವಾಗಲೇ ಇಲ್ಲ. ಅಥವಾ ಮಜಾ ತೆಗೆದುಕೊಳ್ಳೋಣ ಅಂತ ಬೇಕಂತಲೇ ಮತ್ತೆ ಮತ್ತೆ 'ಏನು?? ಏನು??' ಎಂದು ಕೊಂಕಣಿ accent ಕನ್ನಡದಲ್ಲಿ ಉಲಿದರೋ ಗೊತ್ತಿಲ್ಲ.

ಅಕ್ಕಪಕ್ಕದಲ್ಲಿ ಜನರಿದ್ದಾರೆ. ಈ ಮೇಡಂ ಬೇರೆ ಮತ್ತೆ ಮತ್ತೆ ಕೇಳುತ್ತಿದ್ದಾರೆ. ನನಗೋ ಏನು ಕೇಳಬೇಕೆಂಬುದೇ ಗೊತ್ತಿಲ್ಲ. ಕರ್ಮ ಮಾರಾಯರೇ!

ಹೇಗೋ ಮಾಡಿ ಮತ್ತೆ ಹೇಳಿದೆ. ಒಂದು ಹಂತದ ನಂತರ ನಾಡಕರ್ಣಿ ಬಾಯಿಗೆ ಅದೆಷ್ಟು ತಿಳಿಯಿತೋ ಬಿಟ್ಟಿತೋ ನನಗೆ ಗೊತ್ತಿಲ್ಲ. ಈ ಅಡ್ನಾಡಿ ಗಿರಾಕಿಯನ್ನು ಸಾಗಹಾಕೋಣ ಅಂದುಕೊಂಡರೋ ಏನೋ ಗೊತ್ತಿಲ್ಲ. 'ಹೇ!!ಹೇ!!' ಎಂದು ಹುಚ್ಚಪ್ಯಾಕಡೂ ನಗೆ ನಕ್ಕು, 'ನಮ್ಮ ಕಡೆ ಅವೆಲ್ಲಾ ಇಲ್ಲ!!ಹೀ!!ಹೀ!!' ಎಂದು ನಕ್ಕರು.

ಅವರಲ್ಲಿ pharmacist ಎಂದು ಕೆಲಸ ಮಾಡಿಕೊಂಡಿದ್ದ ಹೊಂಬಳ ಆಚಾರರ ಕಡೆ ನೋಡಿದರು. ಅವರಿಬ್ಬರೂ ಖುಲ್ಲಾ ಮಾತಾಡಲಿಲ್ಲ ಆದರೂ ಏನೋ ಮಾತಾಡಿಕೊಂಡು ನನ್ನ ಮೇಲೆ ತಮಾಷೆ ಮಾಡಿಕೊಂಡು ನಕ್ಕಂತೆ ನನಗೆ ಅನ್ನಿಸಿತು. ಎಷ್ಟು ನಿಜವೋ ಸುಳ್ಳೋ. ಹೊಂಬಳ ಆಚಾರರೂ ಪರಿಚಯದವರೇ. ಅವರಿಗೂ ನನ್ನ ಗುರುತು ಸಿಕ್ಕಹಾಗಿರಲಿಲ್ಲ. ಗುರುತು ಸಿಕ್ಕು ಲಫಡಾ ಆಗುವ ಮುನ್ನವೇ ಕಳಚಿಕೊಂಡೆ.

ಮಾತ್ರೆ ಮಾತ್ರ ಸಿಗಲಿಲ್ಲ. ಹೋಗಿ ಹೋಗಿ ನಾಡಕರ್ಣಿ ಬಾಯಿಗೆ ಪುಕ್ಕಟೆಯಾಗಿ ತಮಾಷೆ ಮಾಡಿಕೊಂಡು ನಗಲು ಅವಕಾಶಮಾಡಿಕೊಟ್ಟು ಬಂದೆನಲ್ಲಾ ಎಂದು ಬೇಸರವಾಯಿತು. ರಾತ್ರಿ ಮನೆಗೆ ಹೋದ ನಾಡಕರ್ಣಿ ಬಾಯಿ ಕಿಟ್ಟೆಲ್ ಕಾಲೇಜಿನಲ್ಲಿ ಮಾಸ್ತರಿಕೆ ಮಾಡಿಕೊಂಡಿದ್ದ ಅವರ ಗಂಡನ ಎದುರು ಅದೆಷ್ಟು ತಮಾಷೆ ಮಾಡಿಕೊಂಡು ನಕ್ಕಿರಬಹುದು ಎಂದು ಊಹಿಸಿಕೊಂಡರೆ ಕೆಟ್ಟ ಮುಜುಗರ embarrassment. ಶಾಲೆ ಹತ್ತಿರವೇ ಇದ್ದ ಮೆಡಿಕಲ್ ಶಾಪ್. ಇಂತಹ ಯಬಡ ವಿದ್ಯಾರ್ಥಿಗಳು ಅದೆಷ್ಟು ಜನ ಇಂತಹ ಚಿತ್ರವಿಚಿತ್ರ ಮಾತ್ರೆ ಮಣ್ಣು ಮಸಿ ಕೇಳಿಕೊಂಡು ಬರುತ್ತಿದ್ದರೋ? ನಾಡಕರ್ಣಿ ಬಾಯಿಗೆ ಉಚಿತವಾಗಿ ಮನರಂಜನೆ ಕೊಟ್ಟು ಹೋಗುತ್ತಿದ್ದರೋ?

ಒಟ್ಟಿನಲ್ಲಿ ನಿದ್ದೆಯನ್ನು ದೂರಮಾಡುವಂತಹ ಗುಳಿಗೆ ಎಲ್ಲೂ ಸಿಗಲಿಲ್ಲ. ಸಹಪಾಠಿಯನ್ನು ಕೇಳುವ ಧೈರ್ಯವಾಗಲಿಲ್ಲ. ಧೈರ್ಯಕ್ಕಿಂತ ಆ ತರಹದ ಸಲಿಗೆ ಯಾರ ಜೊತೆಗೂ ಬಂದಿಲ್ಲ. ಎಂತಹ ಆಪ್ತ ಮಿತ್ರರೇ ಇರಲಿ ಕೆಲವೊಂದು ವಿಷಯಗಳನ್ನು ಕೇಳಲು ಸಾಧ್ಯವಿಲ್ಲ. ಕೇಳಲೂಬಾರದು. ಹಾಗಂತ ನನ್ನ ಭಾವನೆ. ಅಂತಹ ಇತಿಮಿತಿಗಳನ್ನು ಹಾಕಿಕೊಂಡಾಗ ಮಾತ್ರ ಗೆಳೆತನಗಳು ಬಾಳುತ್ತವೆ. ಕೆಲವು ಜನರನ್ನು ನೋಡಿದ್ದೇನೆ. ಕೊಂಚ ಸಲಿಗೆ ಕೊಟ್ಟರೆ ಸಾಕು ತಲೆ ಮೇಲೆ ಹತ್ತಿ ಕೂಡುತ್ತಾರೆ. ಏನೇನೋ ಕೇಳುತ್ತಾರೆ. ಏನು ಮಾತಾಡುತ್ತಿದ್ದಾರೆ, ಅದರ ಪ್ರಭಾವವೇನಾಗುತ್ತದೆ ಎನ್ನುವ ಖಬರೇ ಇರುವುದಿಲ್ಲ. ಅಂತಹ ಜನರಿಗೆ ಗೆಳೆತನದ ಬಗ್ಗೆ ನೈಜ ಕಾಳಜಿಯೂ ಇರುವುದಿಲ್ಲ. ಬಂದರೆ ಬೆಟ್ಟ ಹೋದರೆ ಜುಟ್ಟ ಮಾದರಿಯಲ್ಲಿ ಅವರ ವರ್ತನೆ. ಅಂತವರನ್ನು ನಿಮ್ಮ ಆಪ್ತವಲಯದಿಂದ ಒದ್ದು ಹೊರಗಾಕಿ. ನಾನಂತೂ ಮುಲಾಜಿಲ್ಲದೆ ಹೇಳಿಬಿಡುತ್ತೇನೆ. ಇಂತಹ ವರ್ತನೆ ಅಸಹ್ಯ. Unacceptable. ತಿದ್ದಿಕೊಂಡು ಇರುವುದಾದರೆ ಇರು. ಇಲ್ಲ ರೈಟ್ ಹೇಳ್ತಾ ಇರು. ನಿಮ್ಮಂತಹ ಮಿತ್ರರು ಬೇಕಿಲ್ಲ.

ಇಷ್ಟೆಲ್ಲಾ ಆದರೂ, ಈಗ ವಿಚಾರ ಮಾಡಿದರೆ, ಆ ಸಹಪಾಠಿ ನಿದ್ದೆ ಬಾರದಿರುವಂತಹ ಮಾತ್ರೆ ತೆಗೆದುಕೊಂಡಿದ್ದನೇ ಎಂಬುದಕ್ಕೆ ಖಚಿತ ಉತ್ತರವಿಲ್ಲ. ಹಾಗಂತ ಸುದ್ದಿ ಹೇಳಿದ್ದ ಮಿತ್ರ ಕೊಂಚ ಮಸಾಲೆ ಹಾಕಿ, ಅದೂ ಜಾಸ್ತಿಯೇ ಮಸಾಲೆ ಹಾಕಿ, ಸುದ್ದಿ ಹೇಳುತ್ತಿದ್ದ ಎಂದು ಆಗ ಗೊತ್ತಿರಲಿಲ್ಲ. ನಂತರ ಗೊತ್ತಾಯಿತು. ಹಾಗಾಗಿ ಆವಾಗಲೂ ಹಾಗೇ ಪಂಟು ಹೊಡೆದಿದ್ದನೇನೋ ಅಂತ ಡೌಟ್. ಕೇಳುವ ಹಾಗಿಲ್ಲ. ಮತ್ತದೇ ನಾವೇ ಹಾಕಿಕೊಂಡ ಲಕ್ಷ್ಮಣ ರೇಖೆ. ಅವನ ಹತ್ತಿರ 'ಲೇ, ನಿಮ್ಮಪ್ಪ ನಿನಗ ನಿದ್ದಿ ಬರದಾಂಗ ಮಾಡು ಗುಳಗಿ ತಂದುಕೊಟ್ಟಾ?' ಎಂದು ಕೇಳುವ ಹಾಗಿಲ್ಲ. ಸುದ್ದಿ ಕೊಟ್ಟವನ ಹತ್ತಿರ, 'ಲೇ, ನೀ ಖರೇ ಸುದ್ದಿ ಹೇಳಿದ್ಯೋ? ಅಥವಾ ಚೌಕ್ ಗುಳಿಗಿ ಉಳ್ಳಸ್ಲಿಕತ್ತಿಯೋ?' ಎಂದೂ ಕೇಳುವಂತಿಲ್ಲ. ನಮ್ಮ ಕಾಲದಲ್ಲಿ ಚೌಕ್ ಗುಳಿಗೆ ಉಳ್ಳಿಸುವುದು ಅಂದರೆ ರೈಲು ಬಿಡುವುದು ಅಂದರೆ ಬುರುಡೆ ಬಿಡುವ ಬುರುಡೆ ಬ್ರಹ್ಮಾಂಡ ಕೋವಿದರು ಬೇಕಾದಷ್ಟು ಜನರಿದ್ದರು. ಹಾಗಾಗಿ ಎಲ್ಲವನ್ನೂ ಸೀದಾ ನಂಬುವಂತಿಲ್ಲ.

ರಾತ್ರಿಯ ನಿದ್ದೆಗೆ ಪರಿಹಾರ ಕೊನೆಗೆ ದೊರೆಯಿತು ಅನ್ನಿ. ಇಷ್ಟವಾದ ವಿಷಯಗಳನ್ನು ಓದುತ್ತ ಕುಳಿತಾಗ ಅಥವಾ ಕಠಿಣವಾದ ಸಮಸ್ಯೆಯೊಂದನ್ನು ಹಿಡಿದು ಕುಳಿತಾಗ ವೇಳೆ ಹೋಗಿದ್ದು ಗೊತ್ತಾಗುತ್ತಲೇ ಇರುತ್ತಿರಲಿಲ್ಲ. ಎಷ್ಟೋ ಹೊತ್ತಿನ ನಂತರ ನೋಡಿದರೆ ಗಡಿಯಾರ ರಾತ್ರಿ ಎರಡು ಮೂರು ನಾಲ್ಕು ಘಂಟೆ ತೋರಿಸಿದ್ದೂ ಇದೆ. ಇಡೀ ರಾತ್ರಿ ಪ್ರಾಜೆಕ್ಟ್ ರಿಪೋರ್ಟ್, ಪೇಪರ್ ಬರೆದು ಮುಗಿಸಿ, ಮರುದಿವಸ ಕೆಲಸವನ್ನೂ ಮಾಡಿ, ಸಂಜೆ ಕ್ಲಾಸಿಗೂ ಹೋಗಿ, ಬಾಕಿ ಉಳಿದ ನಿದ್ದೆಯ ಸ್ಟಾಕನ್ನು ವಾರಾಂತ್ಯದಲ್ಲಿ ದಿನಪೂರ್ತಿ ನಿದ್ದೆ ಹೊಡೆದು ಪರಿಹಾರ ಮಾಡಿಕೊಂಡಿದ್ದೂ ಇದೆ. ಎಲ್ಲ ನಿಮ್ಮ ನಿಮ್ಮ ಇಷ್ಟದ ಮೇಲೆ ಹೋಗುತ್ತದೆ. ಕೆಲವರಿಗೆ ಗಣಿತದ ಪುಸ್ತಕ ಹಿಡಿದರೆ ನಿದ್ದೆ ಬರುತ್ತದೆ. ನಮಗೆ ಇತಿಹಾಸ, ಭೂಗೋಳ ತೆಗೆದೆರೆ ನಿದ್ರೆ ಬರುತ್ತದೆ. ಒಟ್ಟಿನಲ್ಲಿ ಇಷ್ಟವಾದ ವಿಷಯ ತೆಗೆದುಕೊಂಡು ಕೂತರೆ ಓದುವ ಸುಖವೇ ಸುಖ. ಆಗ ನಿದ್ದೆಗೆ ನಿದ್ದೆ ಬಂದಿರುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೂ ಆರೋಗ್ಯಕರ ಜೀವನಶೈಲಿ ಎಂದರೆ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ಮಧ್ಯದ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುವುದು. ಅದು ಎಲ್ಲಕ್ಕಿಂತ ಉತ್ತಮ.

ನಿದ್ದೆಯನ್ನು ಕಮ್ಮಿ ಮಾಡಿ ಜೀವಿಸುತ್ತೇನೆ. ಹಾಗೆ 'ಉಳಿಸಿದ' ಸಮಯವನ್ನು 'ಗಳಿಸಲು' ಬಳಸುತ್ತೇನೆ ಎನ್ನುವುದು ಮೂರ್ಖತನ. ದೇಹಕ್ಕೆ ಚೆನ್ನಾಗಿ ಗೊತ್ತು ಎಷ್ಟು ನಿದ್ದೆ ಬೇಕು ಮತ್ತು ಅದನ್ನು ಹೇಗೆ ತೆಗೆಯಬೇಕು ಎಂದು. ಯಾವಾಗಲೋ ಒಮ್ಮೆ, ಅನಿವಾರ್ಯ ಕಾರಣಗಳಿಗಾಗಿ, ನಿದ್ದೆಗೆ ಖೋತಾ ಮಾಡಿಕೊಂಡರೆ ಓಕೆ. ದೇಹ ಮಾಫ್ ಮಾಡಿ ಸಮಯ ಸಿಕ್ಕಾಗ ನಿದ್ದೆಯ ಕೊರತೆಯನ್ನು ನೀಗಿಸಿಕೊಳ್ಳುತ್ತದೆ. ಪದೇ ಪದೇ ನಿದ್ದೆಗೆ ಖೋತಾ ಮಾಡಿಕೊಂಡರೆ ಆರೋಗ್ಯ ಎಕ್ಕುಟ್ಟಿಹೋಗುವುದರಲ್ಲಿ ದೂಸರಾ ಮಾತೇ ಇಲ್ಲ. ನಿದ್ದೆ ನಿಜವಾಗಿಯೂ ಭಾಗ್ಯ. ಮಲಗಿದಾಕ್ಷಣ ನಿದ್ದೆ ಬಂದುಬಿಟ್ಟರೆ ಅದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ!

4 comments:

Nanjappa C said...

ತುಂಬಾ ಚೆನ್ನಾಗಿದೆ ನಿಮ್ಮ ಬರವಣಿಗೆ, ಹಾಸ್ಯಮಯ & ನನ್ನ ಬಾಲ್ಯದ ನೆನಪುಗಳು ಮೆಲುಕು ಹಾಕಿದಂಗಾಯಿತು.

Mahesh Hegade said...

@ನಂಜಪ್ಪ, ಧನ್ಯವಾದಗಳು ಸರ್!

sunaath said...

ಮಹೇಶರೆ,
ನಿದ್ದೆಯ ಗುಳಿಗಿಯು ನಿಮ್ಮ ಮೇಲೆ ಪರಿಣಾಮ ಮಾಡಿರಲಿಕ್ಕಿಲ್ಲ; ಆದರೆ ನಿಮ್ಮ ವಿನೋದದ ಗುಳಿಗೆಯು ನನ್ನನ್ನು ಹಾಸ್ಯರಸದಲ್ಲಿ ತೇಲಿಸಿತು; ಒಳ್ಳೆಯ ಸಾಹಿತ್ಯದ ಸುಖ ದೊರೆಯಿತು. ಹೀಗಾಗಿ ನನ್ನ ನಿದ್ದೆ ಹಾರಿ ಹೋಯಿತು; ಇದು ನಿಮ್ಮ ಗುಳಿಗೆಯ ಪಾರ್ಶ್ವಪರಿಣಾಮ!

Mahesh Hegade said...

ಧನ್ಯವಾದಗಳು, ಸುನಾಥ್ ಸರ್!