Wednesday, November 20, 2019

ಬಳ್ಳೊಳ್ಳಿ ಮಹಾತ್ಮೆ

ಬಳ್ಳೊಳ್ಳಿ !! ??

ಹಾಗೆಂದರೆ ಏನ್ರೀ!! ??

ಬಳ್ಳೊಳ್ಳಿ ಉರ್ಫ್ ಬೆಳ್ಳುಳ್ಳಿ.

ನಮ್ಮ ಧಾರವಾಡ ಕಡೆ ಬಳ್ಳೊಳ್ಳಿ ಅನ್ನುತ್ತಾರೆ. ಉಳಿದ ಕಡೆ ಬೆಳ್ಳುಳ್ಳಿ ಅನ್ನುತ್ತಾರೆ. ನಮ್ಮ ಕಡೆ ಉಳ್ಳಾಗಡ್ಡಿ ಎನ್ನುತ್ತಾರೆ. ಉಳಿದ ಕಡೆ ಉಳ್ಳಾಗಡ್ಡೆ, ಈರುಳ್ಳಿ, ನೀರುಳ್ಳಿ ಎನ್ನುತ್ತಾರೆ. ವಿವಿಧ ಪ್ರಾಂತಗಳಲ್ಲಿನ ಕನ್ನಡ ಭಾಷೆಯ ಸೊಬಗನ್ನು ಏನು ಹೇಳೋಣ! ನಾವೇ ಧನ್ಯರು!

ಧಾರವಾಡ ಕಡೆ ಬಳ್ಳೊಳ್ಳಿ ಅನ್ನುತ್ತಾರೆ. ಬಳ್ಳೊಳ್ಳಿ ಅಂತ ಅಡ್ಡಹೆಸರು (surname) ಇರುವವರೂ ಇದ್ದಾರೆ. ೧೯೯೦ ರ ದಶಕದಲ್ಲಿ ವಿಕ್ಕಿ ಬಳ್ಳೊಳ್ಳಿ ಅನ್ನುವ ಖತರ್ನಾಕ್ ಲೋಕಲ್ ಕ್ರಿಕೆಟರ್ ಇದ್ದ ಎಂದು ನೆನಪು. ಭಯಂಕರ ಸ್ಪಿನ್ನರ್. ಅದೆಂತಹ ಭಯಂಕರ ಸ್ಪಿನ್ನರ್ ಅಂದರೆ, 'ವಿಕ್ಕಿ ಬಳ್ಳೊಳ್ಳಿ ಮಾರಕ ಸ್ಪಿನ್ ತಿರುಗುಣಿ ಬೌಲಿಂಗಿಗೆ ಎದುರಾಳಿಗಳು ಧ್ವಂಸ' ಅನ್ನುವಂತಹ ಶೀರ್ಷಿಕೆ ಉಳ್ಳ ಲೇಖನ ನಮ್ಮ ಪ್ರೀತಿಯ ಲೋಕಲ್ ಪತ್ರಿಕೆ ಸಂಕದಲ್ಲಿ (ಸಂಯುಕ್ತ ಕರ್ನಾಟಕ) ಬರುತ್ತಿತ್ತು ಅಂದರೆ ನೀವು ನಂಬಬೇಕು. ಸುದ್ದಿಯ ಆಂತರ್ಯ ಗೊತ್ತಿಲ್ಲದವರು 'ಇದೇನಪ್ಪಾ, ಅಡಿಗೆಗೆ ಬಳಸುವ ಬಳ್ಳೊಳ್ಳಿ ಅದೆಂತಹ ಸ್ಪಿನ್ ಬೌಲಿಂಗ್ ಮಾಡುತ್ತದೆ? ಅದೆಂತಹ ತಿರುಗಣಿ ತಿರುಗಿಸುತ್ತದೆ?' ಎಂದು ಬೆರಗಾಗಬೇಕು. ವಿಕ್ಕಿ ಬಳ್ಳೊಳ್ಳಿ ಬೌಲಿಂಗ್ ವೀರನಾದರೆ ಉದಯ ಕೊಡ್ಲಿ ಅನ್ನುವ ನಾಮಧೇಯದ ಖತರ್ನಾಕ್ ಬ್ಯಾಟ್ಸಮನ್ ಕಮ್ ಕ್ಯಾಪ್ಟನ್ ಇದ್ದ. ಬಳ್ಳೊಳ್ಳಿ ಸ್ಪಿನ್ ಬೌಲಿಂಗ್ ತಿರುಗಣಿಯಿಂದ ಬ್ಯಾಟಿಂಗ್ ಧ್ವಂಸ ಮಾಡಿದರೆ ಉದಯ ಕೊಡ್ಲಿ ಬ್ಯಾಟನ್ನು ಪರಶುರಾಮನ ಕೊಡಲಿಯಂತೆ ಬೀಸಿ ಎದುರಾಳಿಗಳ ಚೆಂಡಿನ ರುಂಡ ಚೆಂಡಾಡಿ ದೊಡ್ಡ ಮೊತ್ತ ಪೇರಿಸಿಡುತ್ತಿದ್ದ. ಆ ಕಾಲದ ಕ್ರಿಕೆಟ್ ಮ್ಯಾಚುಗಳು ಬಹಳೇ ಮಜವಾಗಿರುತ್ತಿದ್ದವು. ಆಗ ಬೇರೇನೂ ಮನರಂಜನೆ ಇರಲಿಲ್ಲ. ಕೊಡ್ಲಿಯ ಬ್ಯಾಟಿಂಗ್ ಮತ್ತು ಬಳ್ಳೊಳ್ಳಿಯ ಬೌಲಿಂಗ್ ನೋಡುವುದೇ ನಮ್ಮಂತಹ ಚಿಣ್ಣರಿಗೆ ಇರುತ್ತಿದ್ದ ಟೈಮ್ ಪಾಸ್.

ನಮಗೆ ಬಳ್ಳೊಳ್ಳಿ ಎಂಬ ತರಕಾರಿಯಯ ರುಚಿ ಗೊತ್ತಾಗಿದ್ದೇ ತುಂಬಾ ತಡವಾಗಿ. ಮನೆಯಲ್ಲಿ ಬಳ್ಳೊಳ್ಳಿಯ ಉಪಯೋಗ ಇರಲಿಲ್ಲ. ಅದೇನೋ ಬ್ರಾಹ್ಮಣರ ಪದ್ಧತಿಯಂತೆ. ಮೂಲ ಮನೆಯಾದ ಹೊನ್ನಾವರ ಮತ್ತು ಸಿರಸಿ ಕಡೆ ಬಳ್ಳೊಳ್ಳಿ, ಉಳ್ಳಾಗಡ್ಡೆ ಪೂರ್ತಿ ನಿಷಿದ್ಧ. 'ಕೆಟ್ಟು ಪಟ್ಟಣ ಸೇರು...' ಮಾದರಿಯಲ್ಲಿ ಧಾರವಾಡ ಸೇರಿಕೊಂಡಿದ್ದ ತಂದೆತಾಯಿಗಳು ಭಾಡಿಗೆ ಮನೆ ಮಾಡಿದ್ದು ಕಟ್ಟರ್ (ವೈಷ್ಣವ) ಬ್ರಾಹ್ಮಣರ ಅಗ್ರಹಾರದಂತಿದ್ದ ಮಾಳಮಡ್ಡಿ ಬಡಾವಣೆಯಲ್ಲಿ. ಅಲ್ಲಿಯೂ ಬಳ್ಳೊಳ್ಳಿ ವರ್ಜ್ಯ.

ಆಗಿನ ಕಾಲದ ಮಾಳಮಡ್ಡಿಯ ಬ್ರಾಹ್ಮಣರು ಅದೆಷ್ಟು ಕರ್ಮಠರಾಗಿದ್ದರು ಅಂದರೆ ನಮ್ಮ ಪಾಲಕರಿಗೆ ಭಾಡಿಗೆಗೆ ಮನೆ ಸಿಗುವುದೇ ಕಷ್ಟವಾಗಿತ್ತಂತೆ.

'ನೀವು ಯಾರು? ಎಲ್ಲಿಯವರು??' ಮನೆ ಮಾಲೀಕರ ಪ್ರಶ್ನೆ.

'ನಾವು ಹೆಗಡೆ ಅಂತ. ಹೊನ್ನಾವರ ಸಿರ್ಸಿ ಕಡೆಯವರು. ನಾವೂ ಬ್ರಾಹ್ಮಣರೇ,' ಎಂದು ಪಾಲಕರ ಉತ್ತರ.

ಮಾಳಮಡ್ಡಿಯೆಂಬ ಅಗ್ರಹಾರದಲ್ಲಿ ಬ್ರಾಹ್ಮಣರನ್ನು ಬಿಟ್ಟು ಬೇರೆಯವರಿಗೆ ಮನೆ ಸಿಗುವುದಿಲ್ಲ ಅಂತ ಗೊತ್ತಿದ್ದ ಕಾರಣ 'ನಾವೂ ಬ್ರಾಹ್ಮಣರೇ. ನಿಮ್ಮವರೇ!' ಎಂದು explicit ಆಗಿ ಹೇಳಬೇಕಾಗಿತ್ತು. ಏಕೆಂದರೆ ನಮ್ಮ ತಂದೆತಾಯಿ ನಮ್ಮ ಮತದ ಸಂಕೇತಗಳಾದ ಭಸ್ಮ ವಿಭೂತಿಗಳನ್ನು ಢಾಳಾಗಿ ಬಳಿದುಕೊಂಡು, ಜನಿವಾರ ಉಡದಾರ ಹೊರಗೆ ಅಲ್ಲಾಡಿಸಿಕೊಂಡು ಹೋಗುತ್ತಿರಲಿಲ್ಲ. ಮಾಳಮಡ್ಡಿಯ ಮೂಲನಿವಾಸಿಗಳ ಹಾಗೆ ಕರಿ ಗೂಟದ ನಾಮ ಗಂಡಸರಿಗೆ, ಕಚ್ಛೆ ಸೀರೆ ಮತ್ತು ಕೆಂಪು ಗೂಟದ ನಾಮ ಹೆಂಗಸರಿಗೆ ಮಾದರಿಯಲ್ಲಿ ಮೇಕ್ಅಪ್ ಮಾಡಿಕೊಂಡು ಹೋಗೋಣ ಅಂದರೆ ನಮ್ಮ ಮತ ಬೇರೆ. ದ್ವೈತಿಗಳ ನಡುವೆ ಅದ್ವೈತಿಗಳು ನಾವು. ಹೀಗಾಗಿ 'ಬ್ರಾಹ್ಮಣ' ಎಂದು ಹೇಳಿಕೊಳ್ಳಬೇಕಾಗುತ್ತಿತ್ತು.

'ಹೊನ್ನಾವರ ಶಿರಸಿ ಅಂದರೆ ಕಾರವಾರ ಕಡೆಯವರೇ? ಕಾರವಾರಿ ಬ್ರಾಹ್ಮಣರೇನು?' ಅಂತ ಮುಂದಿನ ಪ್ರಶ್ನೆ.

'ಕಾರವಾರಿ ಬ್ರಾಹ್ಮಣರು!!' ಎನ್ನುವ ವಿಚಿತ್ರ ಶಬ್ದ ನಮ್ಮ ಪಾಲಕರು ಕೇಳಿದ್ದು ಅದೇ ಮೊದಲಿರಬೇಕು. ನಮ್ಮನ್ನು ಯಾರೂ ಕಾರವಾರಿ ಬ್ರಾಹ್ಮಣರು ಎಂದು ಗುರುತಿಸಿರಲಿಲ್ಲ. ನಮ್ಮ ಪಾಲಕರಿಗೆ ಅರ್ಥವಾಗಿದ್ದೂ ಅಷ್ಟರಲ್ಲೇ ಇರಬೇಕು ಅಂದುಕೊಳ್ಳಿ. ಏನೋ ಸಾಮಾನ್ಯಜ್ಞಾನ ಉಪಯೋಗಿಸಿ ಹೊನ್ನಾವರ ಸಿರ್ಸಿ ಎಲ್ಲ ಅಂದಿನ ಕಾರವಾರ ಜಿಲ್ಲೆಯೊಳಗೆ ಬರುತ್ತಿದ್ದ ಕಾರಣ,

'ಹೌದ್ರಿ. ನಾವು ಕಾರವಾರ ಬ್ರಾಹ್ಮಣರು. ಮನೆ ಭಾಡಿಗೆಗೆ ಬೇಕಾಗಿತ್ತು,' ಎಂದು ಕೇಳಿಕೊಂಡಿದ್ದಾರೆ.

'ಅಯ್ಯ! ಕಾರವಾರಿ ಬ್ರಾಹ್ಮಣರಾ?? ಇಲ್ಲಪ್ಪಾ, ಮನೆ ಕೊಡೋದಿಲ್ಲ! ಹರ್ಗೀಸ್ ಕೊಡೋದಿಲ್ಲ,' ಎಂದು ಹೇಳಿ ಧೋತ್ರ ಎತ್ತಿ ಪೀಛೆಮೂಡ್ ಮಾಡಿ ಹೊರಟರು ಮಾಲೀಕರು.

'ಯಾಕ್ರೀ??' ಎಂದು ಪಾಲಕರ ಆಕ್ಷೇಪ ಭರಿತ ಪ್ರಶ್ನೆ.

'ಕಾರವಾರಿ ಬ್ರಾಹ್ಮಣರು ಮೀನಾ ತಿಂತಾರ. ಅದಕ್ಕೇ ಕೊಡೋದಿಲ್ಲ!' ಅಂದುಬಿಡಬೇಕೇ ಮಾಲೀಕರು.

'ಅಯ್ಯೋ, ನಾವು ಮೀನಾ ಗೀನಾ ತಿನ್ನೋ ಆ ಕೊಂಕಣಿ ಬ್ರಾಹ್ಮಣರು ಅಲ್ಲರೀ. ಸುತಾರಾಂ ಅಲ್ಲರೀ. ನಾವು ಬ್ಯಾರೇನೇ. ನಾವು ಬ್ಯಾರೆ ಬ್ರಾಹ್ಮಣರು,' ಎಂದು ವಿವರಣೆ ಕೊಟ್ಟರು ಪಾಲಕರು.

'ಮೀನಾ ತಿನ್ನೋದಿಲ್ಲಾ?? ಖರೇನೇ ಮೀನಾ ತಿನ್ನೋದಿಲ್ಲಾ?' ಎಂದು ಉಲ್ಟಾ ಪ್ರಶ್ನೆ. ಕೇಳುವ ಪರಿ ಹೇಗಿರುತ್ತಿತ್ತು ಅಂದರೆ ಮೀನಾ ತಿನ್ನೋದಿಲ್ಲಾ ಅಂದ ಮೇಲೆ ಸಿಗಡಿ, ಆಮೆ, ಹಾವು, ಹರಣೆ, ಹಾವ್ರಾಣಿ ಮತ್ತಿತರ ಜಲಚರಗಳನ್ನು ಇತ್ಯಾದಿಗಳನ್ನು ಸ್ವಾಹಾ ಮಾಡುತ್ತೀರೋ ಎಂಬಂತೆ ಇರುತ್ತಿತ್ತು.

'ನಾವು ಹವ್ಯಕ ಬ್ರಾಹ್ಮಣರು. ಶುದ್ಧ ಬ್ರಾಹ್ಮಣರು. ಮೀನಾ ಮತ್ತೊಂದು ದೂರ ಉಳೀತು. ಉಳ್ಳಾಗಡ್ಡಿ ಬಳ್ಳೊಳ್ಳಿ ಸಹ ತಿನ್ನೋದಿಲ್ಲ. ಖರೇ!' ಎಂದು ಒಂದು ಟೈಪಿನ ಆಣೆ ಪ್ರಮಾಣ ಮಾಡಿದ ಮೇಲೆಯೇ ಏನೋ ಒಂದು ಟೈಪಿನ ನಂಬಿಕೆ ಬರುತ್ತಿತ್ತು ಮನೆಯ ಮಾಲೀಕರಿಗೆ. ಮತ್ತೆ ಮೊದಲು ಭಾಡಿಗೆಗೆ ಮನೆ ಕೊಟ್ಟಿದ್ದ ದೇಶಪಾಂಡೆ, ಪಾಟೀಲ ಇತ್ಯಾದಿ ಬ್ರಾಹ್ಮಣ ಮಹನೀಯರ ರೆಫರೆನ್ಸ್ ಕೊಟ್ಟ ಮೇಲೆ ಏನೋ ಒಂದು ರೀತಿಯ ನಂಬಿಗೆ ಬಂದು ಮನೆ ಭಾಡಿಗೆಗೆ ಕೊಟ್ಟರು ಅಂತ ಪಾಲಕರು ಕಥೆ ಹೇಳಿದ್ದರು.

ಇಷ್ಟಾದ ಮೇಲೂ ಮಾಲೀಕರ ಮನೆಯವರೆಲ್ಲ ನಮಗೆ ತುಂಬಾ ಚೆನ್ನಾಗಿ ಹೊಂದಿಕೊಂಡು, ನಾವೂ ಅವರಿಗೆ ಚೆನ್ನಾಗಿ ಹೊಂದಿಕೊಂಡು ಒಂದೇ ಮನೆಯವರ ತರಹ ಆಗಿಹೋದರೂ ಮಾಲೀಕರ ಮನೆಯ ಹಳೆ ಮುದುಕಿಯೊಬ್ಬರಿಗೆ ಮಾತ್ರ ಖಾತ್ರಿಯಾಗಿರಲಿಲ್ಲ. ಆಗಾಗ ಹೇಳುತ್ತಲೇ ಇರುತ್ತಿದ್ದರಂತೆ, 'ಭಾಡ್ಗಿಗೆ ಬಂದವರು ಮೀನಾ ತಿಂತಾರ ಅಂತ ಕಾಣಿಸ್ತದ. ಏನೋ ವಾಸನಿ ಬರ್ತದ!' ಆ ಮುದುಕಿಯ ನಾಸಿಕಕ್ಕೆ ಏನಾಗಿತ್ತೋ ದೇವರಿಗೇ ಗೊತ್ತು. ಪೂರ್ವಗ್ರಹ ಪೀಡಿತ ನಾಸಿಕ. Prejudiced mind ಇದ್ದ ಹಾಗೆ prejudiced nose!

ಹೀಗೆ ಮಾಳಮಡ್ಡಿಯೆಂಬ ಅಗ್ರಹಾರದಲ್ಲಿ ನೆಲೆಸಿದ ನಮಗೆ ಬಳ್ಳೊಳ್ಳಿ ಅಂದರೇನು ಅಂತ ಗೊತ್ತಾಗಲಿಕ್ಕೆ ಭಾಳ ಟೈಮ್ ಹಿಡಿಯಿತು.

ಕೆಲವೊಮ್ಮೆ ಕೆಲವು ಹೋಟೆಲುಗಳಿಗೆ ಹೋದಾಗ ಚಟ್ನಿ ಒಂದು ತರಹದ ಅಡ್ಡ ವಾಸನೆ ಹೊಡೆಯುತ್ತಿತ್ತು. ಕಾಮತ್, ಉಡುಪಿ ಹೋಟೆಲ್ಲುಗಳಲ್ಲಿ ಚಟ್ನಿಗೆ ಆ ಅಡ್ಡ ವಾಸನೆ ಇರುತ್ತಿರಲಿಲ್ಲ. ಖಾನಾವಳಿ ಟೈಪಿನ, ಚಹಾದಂಗಡಿ ಎಂದು ಕರೆಯಿಸಿಕೊಳ್ಳುತ್ತಿದ್ದ, ಅಡ್ಡೆಗಳಲ್ಲಿ ಮಾತ್ರ ಆ ವಾಸನೆ ಬರುತ್ತಿತ್ತು. of course ಭರಿಸಲಾರದಂತಹ ಅಡ್ಡವಾಸನೆಯೇನೂ ಅಲ್ಲ. ಆದರೆ ಇಡ್ಲಿ, ವಡಾ, ದೋಸೆ  ಜೊತೆ ಜಬರ್ದಸ್ತಾಗಿ ಜಡಿಯಬಹುದಾದ ಚಟ್ನಿಗೆ ಆ ವಾಸನೆ ಒಗ್ಗುತ್ತಿರಲಿಲ್ಲ ಅನ್ನಿಸಿತ್ತು. ಗರಂ ಮಸಾಲಾ ಹಾಕಿದ ಬಿರ್ಯಾನಿಗೆ ವೆನಿಲ್ಲಾ ವಾಸನೆ ಬಂದರೆ ಹೇಗೆ!? ಆ ಮಾದರಿಯ ಹೊಂದಾಣಿಕೆ ಆಗದ ಅಡ್ಡವಾಸನೆ!

ಅದು ಏನೆಂದು ವಿಚಾರ ಮಾಡಿದಾಗ ತಿಳಿದಿದ್ದು, ಕೆಲ ಹೊಟೇಲುಗಳಲ್ಲಿ ಚಟ್ನಿಗೆ ಬಳ್ಳೊಳ್ಳಿ ಹಾಕುತ್ತಾರೆ. ಅದೇ ಆ ಅಡ್ಡವಾಸನೆಗೆ ಕಾರಣ.

ಒಮ್ಮೆ ಆ ವಾಸನೆ ತಿಳಿದ ಮೇಲೆ ಎಲ್ಲಾ ಕಡೆ ಅದೇ ವಾಸನೆ ಬರತೊಡಗಿತು. ಅವಲಕ್ಕಿಯಲ್ಲಿ ಬಂತು. ಚುರುಮುರಿಯಲ್ಲಿ ಅಂದರೆ ಮಂಡಕ್ಕಿಯಲ್ಲಿ ಬಂತು. ಸರ್ವಂ ಬಳ್ಳೊಳ್ಳಿ ಮಯಂ.

ಮಾಳಮಡ್ಡಿಯಲ್ಲಿ ಇರುವ ತನಕ ನಮ್ಮ ಮನೆಯಲ್ಲಿ ಬಳ್ಳೊಳ್ಳಿ ವಾಸನೆ ಬಂದಿದ್ದು ನನಗಂತೂ ನೆನಪಿಲ್ಲ. ತತ್ತಿಯ ಆಮ್ಲೆಟ್ ಮಾಡಿಕೊಂಡು ತಿನ್ನುತ್ತಿದ್ದುದು ನೆನಪಿದೆ. ತಂದೆ ತಾಯಿ ಇಬ್ಬರೂ NCC ಗಿರಾಕಿಗಳು. ಹಲವಾರು ವರ್ಷಗಳ ಕಾಲ ಶಾಲೆ ಕಾಲೇಜುಗಳಲ್ಲಿ NCC ಮಾಡಿದ್ದರು. ಹತ್ತಾರು ಕಡೆ ಕ್ಯಾಂಪ್ ಇತ್ಯಾದಿ ಹೋಗಿದ್ದರು. NCC ಜನ ತತ್ತಿಯ ಮಹಾತ್ಮೆಯನ್ನು ಸರಿಯಾಗೇ ಬುರುಡೆಯಲ್ಲಿ ತುಂಬಿದ್ದರು ಎಂದು ಕಾಣುತ್ತದೆ. ಮತ್ತೆ NCC ಆಮ್ಲೆಟ್ ರುಚಿ ತಿಂದೇ ತಿಳಿಯಬೇಕು ಎಂದು ಹೇಳುತ್ತಿದ್ದರು. ನಮ್ಮ ಕಾಲದಲ್ಲಿ NCC ನಾಷ್ಟಾದಲ್ಲಿ ತತ್ತಿ ಪತ್ತಿ ಸಿಗುತ್ತಿರಲಿಲ್ಲ. ಶಾಲೆ ಹತ್ತಿರದ 'ಮಥುರಾ ಭವನ' ಹೋಟೇಲಿನ ತಗಡು ಅವಲಕ್ಕಿ ಪವಲಕ್ಕಿ ಸಿಕ್ಕರೆ ಅದೇ ದೊಡ್ಡ ಮಾತು. NCC ಕ್ಯಾಂಪುಗಳಲ್ಲಿ ಆಮ್ಲೆಟ್, ನಾನ್ವೆಜ್ ಎಲ್ಲ ಸಿಗುತ್ತಿತ್ತಂತೆ. ಕ್ಯಾಂಪಿಗೆ ಹೋದರೆ ಅಸಡ್ಡಾಳ ರೀತಿಯಲ್ಲಿ ಚಿಕ್ಕದಾಗಿ ಮಿಲಿಟರಿ ಹೇರ್ ಕಟಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ನಾವಂತೂ ಮಿಲಿಟರಿ ಕ್ಯಾಂಪಿಗೆ ಹೋಗಲೇ ಇಲ್ಲ. ಅಂತಹ ಅಸಡ್ಡಾಳ ಕಟಿಂಗ್ ಮಾಡಿಸಿಕೊಂಡು co-ed ಶಾಲೆಯಲ್ಲಿರಲು ಭಯಂಕರ ಮುಜುಗುರ ನಮಗೆ. ಹಾಗಾಗಿ NCC ಕ್ಯಾಂಪಿನ ಆಮ್ಲೆಟ್ಟಿನ ರುಚಿ ಸವಿಯಲಿಲ್ಲ ಬಿಡಿ.

ಮಾಳಮಡ್ಡಿಯಲ್ಲಿ ಮಾಲೀಕರ ಮನೆಯ ಮುದುಕಿ ರಾಯರ ಮಠದ ಕಡೆಯೋ  ಅಥವಾ ಬೇರೆ ಎಲ್ಲೋ ಹೋದಾಗ ಗಡಿಬಿಡಿಯಲ್ಲಿ ಆಮ್ಲೆಟ್ ಮಾಡಿಕೊಂಡು ಸ್ವಾಹಾ ಮಾಡಿದ್ದು ನೆನಪಿದೆ. ಅದೂ  ಎಲ್ಲೋ ತಿಂಗಳಿಗೆ ಒಂದು ಎರಡು  ಬಾರಿ ಮಾತ್ರ. ಆ ಆಮ್ಲೆಟ್ (ಸು)ವಾಸನೆಯನ್ನೇ ಪೊಲೀಸ್ ನಾಯಿಯಂತೆ ಮೂಸಿದ್ದ ಆ ಮುದುಕಿ ನಾವೆಲ್ಲೋ ಮೀನ ಮೊಸಳೆ ಹುರಿದು ಸ್ವಾಹಾ ಮಾಡಿದ್ದೇವೆ ಎಂದುಕೊಂಡಿತ್ತೋ ಏನೋ!? ಗೊತ್ತಿಲ್ಲ.

ಮುಂದೆ ಸ್ವಂತ ಮನೆ ಕಟ್ಟಿಕೊಂಡು ಊರ ಹೊರಗಿನ ಬಡಾವಣೆಗೆ ಬಂದ ಮೇಲೆ ಇವೆಲ್ಲ ಅಡೆತಡೆಗಳು ಇರಲಿಲ್ಲ. ಆದರೆ ಬಳ್ಳೊಳ್ಳಿ ಮಾತ್ರ ಎಂಟ್ರಿ  ಕೊಡಲಿಲ್ಲ. ಆದರೆ ಪ್ರೀತಿಯ ಆಮ್ಲೆಟ್ಟಿಗೆ ಮಾತ್ರ ಯಾವುದೇ ತೊಂದರೆ ಇರಲಿಲ್ಲ. ಶ್ರಾವಣ ಮಾಸದಲ್ಲಿ ಮತ್ತು ಊರ ಕಡೆಯ ಕಟ್ಟರ್ ಜನ ಬಂದಾಗ ಮಾತ್ರ ಮಾತಾಶ್ರೀ ಅವರು ಆಮ್ಲೆಟ್ ಮಾಡುತ್ತಿರಲಿಲ್ಲ. ಆಮ್ಲೆಟ್ ರುಚಿಗೆ ಫಿದಾ ಆಗಿದ್ದ ನಾನು ಎಲ್ಲ ನಿರ್ಬಂಧನೆಗಳನ್ನೂ ಧಿಕ್ಕರಿಸಿ ನಾನೇ ಸ್ವತಃ ಆಮ್ಲೆಟ್ ಮಾಡಿಕೊಂಡು ಸ್ವಾಹಾ ಮಾಡುತ್ತಿದ್ದೆ. ದಿನವೂ ಆಮ್ಲೆಟ್ ಬೇಕೇಬೇಕು! ಬೇಕೆಂದರೆ ಬೇಕೇಬೇಕು! ಶ್ರಾವಣವಾದರೂ ಇರಲಿ. ಆಷಾಢವಾದರೂ ಇರಲಿ. ನಾನು ಕಲಿತ ಮೊದಲ ಮತ್ತು ಪ್ರಾಯಶ ಕೊನೆಯ ಅಡಿಗೆ ಅಂದರೆ ಆಮ್ಲೆಟ್ ಮಾಡುವುದು. ಆಮ್ಲೆಟ್ ಬೇಜಾರಾದರೆ ಎಗ್ ಭುರ್ಜಿ. ಇಲ್ಲವಾದರೆ ಸಿಂಪಲ್ ಬೇಯಿಸಿದ ತತ್ತಿ. ತತ್ತಿಯೊಂದು ಇಷ್ಟವಾಗಿಬಿಟ್ಟರೆ ನಿಮಗೆ ಜೀವನದಲ್ಲಿ ಆಹಾರದ ಮತ್ತು ಪೋಷಕಾಂಶಗಳ ತೊಂದರೆ ಎಂದೂ ಬರುವುದಿಲ್ಲ. ಈ ಮಾತಿಗೆ ನಾವೇ ಸಾಕ್ಷಿ. ನಿಮ್ಮ ಕೊಲೆಸ್ಟ್ರಾಲ್ ಕೊಂಚ ಏರಬಹುದು. ಬಾಕಿ ಮಾಂಸಾಹಾರ ತ್ಯಜಿಸಿ, ದಿನಕ್ಕೆ ೧೫-೨೦ ನಿಮಿಷಗಳ ಸರಳ ವ್ಯಾಯಾಮ ರೂಢಿಸಿಕೊಂಡರೆ ಆ ಪ್ರಾಬ್ಲಮ್ ಸಹಿತ ಇರುವುದಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ತತ್ತಿಗಳನ್ನು ಸ್ವಾಹಾ ಮಾಡಿ. ನಿಮ್ಮ ಮನೆಯಲ್ಲಿ ಬೆಳೆಯುತ್ತಿರುವ ಮಕ್ಕಳಿದ್ದರೆ ಮುದ್ದಾಂ ತತ್ತಿ ಕೊಡಿ. ಬಿಂದಾಸ್ ಕೊಡಿ. ಹೇಗೆ ಮಸ್ತಾಗಿ ಮಕ್ಕಳು ಅರಳುತ್ತಾರೆ ನೀವೇ ನೋಡಿ. ಸಸ್ಯಾಹಾರಿಗಳ ಆಹಾರದಲ್ಲಿ ಪ್ರೋಟೀನ್ ಅಂಶ ಕಮ್ಮಿ. ಮೊಟ್ಟೆ ಆ ಕೊರತೆಯನ್ನು ನೀಗಿಸಲು ಬೆಸ್ಟ್!

ತತ್ತಿಗಳನ್ನು ತಿಂದರೆ ಭ್ರೂಣಹತ್ಯಾ ದೋಷ ಮತ್ತು ಪಾಪ ಬರುತ್ತದೆಯೇ? ಎನ್ನುವ ಜಿಜ್ಞಾಸೆ ನನ್ನನ್ನೂ ಕಾಡಿದೆ. ಅಂಗಡಿಗಳಲ್ಲಿ ಸಿಗುವ ಫಾರ್ಮ್ ತತ್ತಿಗಳು fertilize ಆಗಿರುವುದೇ ಇಲ್ಲ. ಗಂಡು ಕೋಳಿ ಉರ್ಫ್ ಹುಂಜದ ಸಂಪರ್ಕ ಸಿಕ್ಕರೆ ತಾನೇ fertilize ಆಗುವುದು? ಫಾರ್ಮ್ ಕೋಳಿಗಳು ಹಾಕುವ ತತ್ತಿಗಳು unfertilized. ಅದು ಭ್ರೂಣ ಅಲ್ಲ. ಕೇವಲ ಅಂಡ. ಎಲ್ಲಾದರೂ by chance fertilized ತತ್ತಿ ತಿಂದರೆ ಮಾತ್ರ ಭ್ರೂಣಹತ್ಯಾ ದೋಷ ಸುತ್ತಿಕೊಂಡೀತು. ಅದಕ್ಕೂ ಏನಾದರೂ  ಪರಿಹಾರ ಹುಡುಕೋಣ ಬಿಡಿ. ನಮ್ಮಲ್ಲಿ ಎಲ್ಲ ತಪ್ಪುಗಳನ್ನು ಮಾಡಲೂ ಅವಕಾಶವಿದೆ. ನಂತರ ಪರಿಹಾರ ಮಾಡಿಕೊಳ್ಳಲೂ ಅವಕಾಶವಿದೆ.

ಆದರೆ ಭ್ರೂಣಹತ್ಯೆ ಮಾತ್ರ ಘೋರ ಪಾಪ. ಹಾಗಂತ ಶಾಸ್ತ್ರಗಳು ಹೇಳುತ್ತವೆಯಂತೆ. ಕೋಳಿ ತತ್ತಿಯ ಮಾತು ಬಿಡಿ. ಎಷ್ಟೋ ಜನ ಹೆಂಗಸರು ಬೇರೆ ಬೇರೆ ಕಾರಣಗಳಿಗಾಗಿ ಬಸಿರು ಇಳಿಸಿಕೊಳ್ಳುತ್ತಾರಲ್ಲ, ಅಬಾರ್ಶನ್ ಮಾಡಿಸಿಕೊಳ್ಳುತ್ತಾರಲ್ಲ, ಅದು ಭ್ರೂಣಹತ್ಯಾ ಪಾಪವೆಂದು ಪರಿಗಣಿಸಲ್ಪಡುತ್ತದೆ. ಕೇವಲ ಮಹಿಳೆಯೊಬ್ಬಳಿಗೆ ಮಾತ್ರ ಅಲ್ಲ. ಬೇಡವಾದ ಬಸಿರಿಗೆ ಕಾರಣವಾಗಿರುವ ಬೇವಕೂಫ್ ಭಾಡ್ಕೋವ್ ಗಂಡಸಿಗೂ ಪಾಪ ತಟ್ಟುತ್ತದೆ. ಹೆಚ್ಚಿನ ಪಾಪ ಅವನಿಗೇ ತಟ್ಟಬೇಕು. ಪೇಟೆ ಒಳಗೆ ಪಟೇಲರನ್ನು ತೂರಿಸುವ ಮೊದಲು ಪಟೇಲರಿಗೆ ಪೇಟ ತೊಡಿಸುವ ವ್ಯವಧಾನವೂ ಇಲ್ಲದೆ ಅರ್ಥಾತ್ ಕಾಂಡೊಮ್ ಧರಿಸದೇ ಇನ್ನಿಲ್ಲದ ಗಡಿಬಿಡಿ ಮಾಡಿ ಬೇಡವಾದ ಬಸಿರಿಗೆ ಕಾರಣವಾಗಿಬಿಡುವ ಗಂಡುಮುಡೇಗಂಡರಿಗೆ ಹೆಚ್ಚಿನ ಪಾಪ ತಟ್ಟಬೇಕು. ಇನ್ನು ಕೆಲವು ಯಬಡ ಮಹಿಳೆಯರೂ ಇರುತ್ತಾರೆ. ಸಿನೆಮಾಗಳಲ್ಲಿ ಈ ಸೀನ್ ನೋಡಿರುತ್ತೀರಿ. ಕೆಂಡದಂತೆ ಕಾದಿರುವ ಮಹಿಳೆಯರಿಗೂ ಸಿಕ್ಕಾಪಟ್ಟೆ ಅವಸರ. 'ಅಯ್ಯೋ, ಏನು ಕಾಂಡೋಮ್ ಕಾಂಡೋಮ್ ಅಂತ ಬಡಿದುಕೊಳ್ಳುತ್ತಿ ಮಾರಾಯಾ!? ಎಷ್ಟಂತ ಹುಡುಕುತ್ತೀ? ಇನ್ನೆರೆಡು ದಿನಗಳಲ್ಲೇ ನನಗೆ ಪಿರಿಯಡ್(ಮುಟ್ಟು) ಬರಲಿದೆ. ಬಸಿರು ಗಿಸಿರು ಏನೂ ಆಗಲ್ಲ. ಜಲ್ದಿ ಜಡಾಯಿಸಿಬಿಡು! ಜಲ್ದೀ!' ಎಂದು ಆಹ್ವಾನ ಕೊಟ್ಟುಬಿಡುತ್ತಾರೆ. ಹಾಟ್ ಡೇಟಿಂಗ್ ಮುಗಿಸಿ ಕ್ಲಬ್ಬಿನಿಂದ ಸೀದಾ ಮನೆಗೆ ಆಗಮಿಸಿರುವ, ಮಸ್ತು ಎಣ್ಣೆಯ ಏಟಿನಲ್ಲಿರುವ ಸುಂದರಿಗೆ ಮುಟ್ಟಿನ ಗುಟ್ಟೇ ಮರೆತು ಹೋಗಿರುತ್ತದೆ. ಎರಡು ದಿವಸಗಳಲ್ಲಿ ಬರಲಿರುವುದು ಮುಟ್ಟಲ್ಲ ಬೇರೇನೋ ಡೇಟು ಎನ್ನುವುದು ನಂತರ ಮುಂದಿನ ತಿಂಗಳು ಮುಟ್ಟು ಬರದಿದ್ದಾಗಲೇ ಅರಿವಿಗೆ ಬರುತ್ತದೆ. ಅಷ್ಟರಲ್ಲಿ ಶಿವಾಯ ನಮಃ ಮಾದರಿಯ ಅನಾಹುತ ಆಗಿಹೋಗಿರುತ್ತದೆ. ನಿಮ್ಮವಳ ಮುಟ್ಟು ಮತ್ತು ನಿಮ್ಮ ಸಂಬಳ ತಿಂಗಳು ತಿಂಗಳಿಗೆ ನಿಯಮಿತವಾಗಿ ಬಂದರೇ ಸುಖ. ಇಲ್ಲವಾದರೆ  ಬರದೇ ಇದ್ದ ಎರಡೂ ಸಂದರ್ಭಗಳಲ್ಲಿ 'you are screwed!' ಅನ್ನುವುದು ಮಾತ್ರ ಖಾತ್ರಿ. ಹೀಗೆ ಯಡಬಿಡಂಗಿ ಲಫಡಾದಿಂದಾಗಿ ಬಸಿರು ಕಟ್ಟಿದಾಗ ಇಬ್ಬರೂ ಕೂಡಿ ಬ್ರೂಣಹತ್ಯೆಗೆ ತಯಾರಾಗುತ್ತಾರೆ. ಕಾಂಡೋಮ್ ಸಿಗದ ಮತ್ತು ಧರಿಸದ ಪೊರಪಾಟಿನಲ್ಲಿ ದೊಡ್ಡ ಪಾಪವೊಂದು ಘಟಿಸಿಹೋಗಿರುತ್ತದೆ. ಈಗ ಪಾಪ ಮಾಡದಿದ್ದರೆ ಮುಂದೆ ಪಾಪು ಹೊರಬರುತ್ತದೆ. ಅದು ಮತ್ತೂ ದೊಡ್ಡ ಗೋಳು!

ಅದೆಲ್ಲಾ ಇರಲಿ. ತತ್ತಿ ತಿಂದರೆ ಭ್ರೂಣ ಹತ್ಯಾ ದೋಷ ಬರುತ್ತದೆಯೇ ಎಂದು ತಲೆಯಲ್ಲಿ ವಿಚಾರ ಅಥವಾ ಸಂಶಯ ಬಂದರೆ ಎಂದು ಇಷ್ಟೆಲ್ಲಾ ವಿವರಣೆ ಕೊಡಬೇಕಾಯಿತು.

ಮತ್ತೆ ಬಳ್ಳೊಳ್ಳಿಗೆ ಬರೋಣ.  ಹೊಸ ಮನೆಗೆ ಬಂದ ಮೇಲೆ ಯಾವುದೇ ತರಹದ ಅಡಿಗೆ ಮಾಡಲು ತೊಂದರೆ ಇರಲಿಲ್ಲ. ಯಾವುದೇ ಅಡಿಗೆಯಿಂದ ಏನೇ ವಾಸನೆ ಬಂದರೂ ಅಡ್ಡಿಯಿರಲಿಲ್ಲ. ಅದನ್ನು ಆಸ್ವಾದಿಸಿ 'ಇವರು ಮೀನ ಹುರಿಯುತ್ತಿರಬಹುದೇ!?' ಎಂದು ವಿನಾಕಾರಣ ಮೂಗು ತೂರಿಸುವಂತಹ ಮಾಲೀಕರ ಮುದುಕಿ ಟೈಪಿನ ಜನರೂ ಇರಲಿಲ್ಲ.  ಊರ ಹೊರಗಿನ ಬಡಾವಣೆ. ಜನರೇ ಇರದ ಬಡಾವಣೆ. ಬೆಸ್ಟ್ ಆಯಿತು.

ಯಾವಾಗಲೋ ಒಮ್ಮೆ ಚಳಿಗಾದಲ್ಲಿ ಕೆಟ್ಟ ಚಳಿ ಬಿದ್ದಾಗ ರಾತ್ರಿಯೂಟಕ್ಕೆ ಬಳ್ಳೊಳ್ಳಿ ಒಗ್ಗರಣೆ ಹಾಕಿದ ಪೊಳೆದ್ಯೆ (ಪೋಳಜೆ, ಮಜ್ಜಿಗೆ ಹುಳಿ) ಮಾಡಿದ್ದು ನೆನಪಿದೆ. ನನಗಂತೂ ಹವ್ಯಕರ ಸಾಂಪ್ರದಾಯಿಕ ಅಡಿಗೆಗಳಾದ ಹಸಿ, ಪೊಳೆದ್ಯೆ ಅಂದರೆ ಅಷ್ಟಕಷ್ಟೇ. ನಾವು ಊಟದ ವಿಷಯದಲ್ಲಿ ಶುದ್ಧ ಧಾರವಾಡಿಗಳು. ರೊಟ್ಟಿ, ಚಪಾತಿ, ಪಲ್ಲ್ಯೆ, ಅನ್ನ, ಸಾರು ಮುಖ್ಯವಾಗಿ ಆಮ್ಲೆಟ್ ಇದ್ದರೆ ಸಾಕು. ಹವ್ಯಕರ ಸಾಂಪ್ರದಾಯಿಕ ಅಡಿಗೆಗಳು ಅವರಿಗೇ  ಮುಬಾರಕ್! ನಮಗೆ ಅಷ್ಟೇನೂ ಇಷ್ಟವಲ್ಲ.

ಎಂದೋ ಒಂದು ದಿವಸ ಮುಹೂರ್ತ ನೋಡಿ ಬಳ್ಳೊಳ್ಳಿ ಒಗ್ಗರಣೆ ಹಾಕಿದ ಪೊಳೆದ್ಯೆಯನ್ನು, ಅದೂ ರಾತ್ರಿ ಊಟಕ್ಕೆಂದು ಮಾಡಿದರೆ, ದೊಡ್ಡ ಪ್ರಮಾಣದ ಮಡಿವಂತರೊಬ್ಬರು ಅದೇ ಸಮಯಕ್ಕೆ ಬಂದು ವಕ್ಕರಿಸಬೇಕೇ!? ಶಿವನೇ ಶಂಭುಲಿಂಗ ಆಗಿದ್ದು ನಮ್ಮ ಪಾಲಕರ ಪರಿಸ್ಥಿತಿ.

ಆ ದಿನ ತಡರಾತ್ರಿ ಮನೆಗೆ ಆಗಮಿಸಿದವರು (ವಕ್ಕರಿಸಿದವರು ಅನ್ನಬಾರದು) ದಿವಂಗತ ಶ್ರೀಪಾದ ಶೆಟ್ಟರು. ಶ್ರೀಪಾದ ಶೆಟ್ಟರು ಅಂದರೆ ಮುಗಿಯಿತು. ಧಾರವಾಡದ ಮಟ್ಟಿಗೆ ದೊಡ್ಡ ದೇವರ ಭಕ್ತರು. ತಾವು ಶೆಟ್ಟರಾಗಿದ್ದರೂ ಬ್ರಾಹ್ಮಣರಗಿಂತಲೂ ಹೆಚ್ಚಾಗಿ ಪೂಜೆ ಪುನಸ್ಕಾರ ಮಾಡುವವರು. ಮೇಲಾಗಿ ಶೃಂಗೇರಿ ಮಠದ ದೊಡ್ಡ ಭಕ್ತರು. ಸ್ವಾಮಿಗಳಿಗೆ ತುಂಬಾ ಪ್ರಿಯರಾದವರು. ಅದೆಷ್ಟು ಪ್ರಿಯರು ಅಂದರೆ ಸ್ವಾಮಿಗಳು ಧಾರವಾಡಕ್ಕೆ ಬಂದಾಗ ಶ್ರೀಪಾದ ಶೆಟ್ಟರ ಮನೆಯಲ್ಲೇ ತಂಗುತ್ತಿದ್ದರು. of  course ಸ್ವಾಮಿಗಳು ಬಂದಾಗ ತಂಗಲೆಂದೇ ಬೇರೆ ಮನೆ ಕಟ್ಟಿಸಿಟ್ಟಿದ್ದರು ಶೆಟ್ಟರು. ವಿದ್ಯಾಗಿರಿಯಲ್ಲಿರುವ ಶಂಕರ ಮಠಕ್ಕೆ ಹತ್ತಾರು ಗುಂಟೆ ಜಾಗವನ್ನು ದಾನವಾಗಿ ಕೊಟ್ಟಿದ್ದರು. ಅಲ್ಲಿ ಶಂಕರ ಮಠ ಕಟ್ಟಿದವರು ಇನ್ನೊಬ್ಬ ಶೆಟ್ಟರಾದ ಆರ್. ಎನ್. ಶೆಟ್ಟರು. ಇಬ್ಬರೂ ಶೆಟ್ಟರಿಗೆ ನಮ್ಮ ತಂದೆಯವರು ಅಂದರೆ ತುಂಬಾ ನಂಬಿಕೆ ಮತ್ತು ಪ್ರೀತಿ. ತಂದೆಯವರೂ ಕೂಡ ಅಂತಹ ದೇವತಾ ಕಾರ್ಯಗಳಲ್ಲಿ ತುಂಬಾ ತೊಡಗಿಸಿಕೊಂಡಿದ್ದರು. ಶೆಟ್ಟರುಗಳ ದೇವತಾಕಾರ್ಯಗಳಲ್ಲಿ ತಮ್ಮ ಅಳಿಲುಸೇವೆ ಮಾಡುತ್ತಿದ್ದರು.

ಶಂಕರ ಮಠ ಕಟ್ಟುತ್ತಿರುವಾಗ ಶ್ರೀಪಾದ ಶೆಟ್ಟರು ಪದೇ ಪದೇ ಮನೆಗೆ ಬರುತ್ತಿದ್ದರು. ಒಂದು ರೀತಿಯಲ್ಲಿ ನಮ್ಮ ಮನೆಯವರೇ ಆಗಿಹೋಗಿದ್ದರಿಂದ ಅವರ ವ್ಯಾಪಾರ ವ್ಯವಹಾರ ಮುಗಿಸಿದ ನಂತರ ಸಮಯ ಸಿಕ್ಕಾಗೆಲ್ಲ ಬಂದು ಶಂಕರ ಮಠದ ಬಗ್ಗೆ ಚರ್ಚೆ ಇತ್ಯಾದಿ ಮಾಡುತ್ತಿದ್ದರು.

ಅಂತಹ ಧರ್ಮಭೀರು ಶ್ರೀಪಾದ ಶೆಟ್ಟರು ಮನೆಗೆ ಬಂದರೆ ನಮ್ಮ ಮನೆಯಲ್ಲಿ ಬಳ್ಳೊಳ್ಳಿ ಘಾಟು ಹೊಡೆಯುತ್ತಿರಬೇಕೇ!? ಶಿವಾಯ ನಮಃ!

ಶೆಟ್ಟರು ಏನಾದರೂ ತಪ್ಪು ತಿಳಿದುಕೊಂಡಾರು ಎಂದು ಯೋಚಿಸಿದ ನಮ್ಮ ಮಾತಾಶ್ರೀಯವರು ಅವರು ಆಸನದ ಮೇಲೆ ಕೂಡುವ ಮೊದಲೇ ಕ್ಷಮಾಪಣೆ ಕೇಳಿಕೊಂಡುಬಿಟ್ಟರು. ಸ್ಕೀಮ್ ಅಂದರೆ ಅದು. ತಪ್ಪು ಮಾಡಿದ್ದೀಯಾ ಎಂದು ಬೇರೊಬ್ಬರು ಹೇಳುವ ಮೊದಲೇ ಕ್ಷಮೆ ಕೇಳಿಬಿಡಬೇಕು.

ಶ್ರೀಪಾದ ಶೆಟ್ಟರು ಏನೂ ತಪ್ಪು ತಿಳಿಯಲಿಲ್ಲ. ಆ ರಾತ್ರಿ ಬಿದ್ದಿದ್ದ ಕೆಟ್ಟ ಚಳಿಯಿಂದ ಬಚಾವಾಗಲು ಬಡ ಬ್ರಾಹ್ಮಣರು ಏನೋ ಅಪರೂಪಕ್ಕೆ ಬಳ್ಳೊಳ್ಳಿ ಒಗ್ಗರಣೆ ಹಾಕಿ ಮನೆ ತುಂಬಾ ಘಾಟು ಎಬ್ಬಿಸಿಕೊಂಡುಬಿಟ್ಟಿದ್ದಾರೆ. ದೊಡ್ಡ ತಪ್ಪೇನಲ್ಲ ಎಂದುಕೊಂಡು ಮಾಫ್ ಮಾಡಿದ್ದಾರೆ. ಮತ್ತು ಅಡುಗೆಮನೆಯಿಂದ ದೂರವಿದ್ದ ತಂದೆಯವರ ಕೋಣೆಯಲ್ಲಿ ಸ್ಥಾಪಿತರಾಗಿದ್ದಾರೆ. ಬಳ್ಳೊಳ್ಳಿ ಘಾಟಿನಿಂದ ಬಚಾವಾಗಿದ್ದಾರೆ. ಶೆಟ್ಟರಿಗೆ ಬಳ್ಳೊಳ್ಳಿ ವಾಸನೆಯನ್ನು ಕುಡಿಸಿದ್ದಕ್ಕೆ ಪ್ರಾಯಶ್ಚಿತ ಎನ್ನುವ ಮಾದರಿಯಲ್ಲಿ ಅವರಿಗೆ ಬಿಸಿಬಿಸಿ ಕೇಸರಿ ಹಾಕಿದ ಹಾಲಿನ ಸಮರ್ಪಣೆ ಆಗಿದೆ. ಅಂದು ಎಂದಿಗಿಂತ ಹೆಚ್ಚಿನ ಕೇಸರಿ ಹಾಕಿದ್ದರಲ್ಲಿ ಯಾವುದೇ ಸಂಶಯವಿರಲಿಲ್ಲ. ಶೆಟ್ಟರೂ ಸಹಿತ ಎಂದಿನಂತೆ ಏನೂ ಮುಜುಗುರವಿಲ್ಲದೆ ಬಳ್ಳೊಳ್ಳಿ ಹುರಿದ ಅಡಿಗೆಮನೆಯಿಂದಲೇ ಬಂದಿದ್ದಾದರೂ ಸಾತ್ವಿಕ ಎಂದು ಪರಿಗಣಿಸಲ್ಪಡುವ ಕೇಸರಿ ಹಾಲನ್ನು ಸ್ವೀಕರಿಸಿ ನಮ್ಮನ್ನೆಲ್ಲ ಹರಿಸಿ ಹೋಗಿದ್ದಾರೆ.

ನನಗೆ ನೆನಪಿರುವ ಮಟ್ಟಿಗೆ ಮನೆಯಲ್ಲಿ ಬಳ್ಳೊಳ್ಳಿ ಹೊಗೆ ಹಾಕಿಸಿದ್ದು ಅದೇ ಕೊನೆ. of course ಅದಾದ ಕೆಲವೇ ತಿಂಗಳುಗಳಲ್ಲಿ ನಾನೂ ಸಹ ಇಂಜಿನಿಯರಿಂಗ್ ಮಾಡಲು ಮನೆ ಬಿಟ್ಟು ಕಳಚಿಕೊಂಡೆ. ಮನೆಯಲ್ಲಿ ಪಾಲಕರಿಬ್ಬರೇ. ಏನೇನು ಸಾಹಸಗಳನ್ನು ಮಾಡಿದವೋ ಅವರಿಗೇ ಗೊತ್ತು. ನಾನು ರಜೆಗೆ ಬಂದಾಗಂತೂ ಬಳ್ಳೊಳ್ಳಿಯ ಘಾಟು ಬರಲಿಲ್ಲ.

ಬಳ್ಳೊಳ್ಳಿ ಇರಲಿಲ್ಲ ಅಂದ ಮಾತ್ರಕ್ಕೆ ತಕ್ಕಮಟ್ಟಿನ ಉಳ್ಳಾಗಡ್ಡೆ ಉಪಯೋಗ ಇತ್ತು. ಆದರೆ ಆದೂ ಕಮ್ಮಿ. ಹಬ್ಬಹರಿದಿನಗಳಲ್ಲಿ, ಊರ ಕಡೆಯ ಕಟ್ಟರ್ ಜನ ಆಗಮಿಸಿದಾಗ ಇರುತ್ತಿರಲಿಲ್ಲ. ಈಗಿನ ಜನ ನೋಡಿದರೆ ಉಳ್ಳಾಗಡ್ಡೆ ಇಲ್ಲದೇ ಅಡಿಗೆ ಮಾಡಲಿಕ್ಕೇ ಬರುವದಿಲ್ಲ ಅನ್ನುವ ತರಹ ಆಡುತ್ತಾರೆ. ನೀವು ಗೋಕರ್ಣಕ್ಕೆ ಹೋಗಿ. ಅಥವಾ ಬೇರೆ ಯಾವುದೇ ಪುಣ್ಯಕ್ಷೇತ್ರಗಳಿಗೆ ಹೋಗಿ. ಅಲ್ಲಿನ ಅರ್ಚಕರ ಮನೆಯಲ್ಲಿ ತಂಗಿ. ಆವಾಗ ಗೊತ್ತಾಗುತ್ತದೆ ಉಳ್ಳಾಗಡ್ಡೆ, ಬಳ್ಳೊಳ್ಳಿ ಮತ್ತಿತರ ರಾಜಸಿಕ ತಾಮಸಿಕ ಪದಾರ್ಥಗಳಿಲ್ಲದೆಯೂ ಹೇಗೆ ರುಚಿಕರವಾದ ಅಡಿಗೆ ಮಾಡಬಹುದು ಎಂದು. ಕಳೆದ ವರ್ಷ ದಿವಂಗತರಾದ ಪೂಜ್ಯ ತಂದೆಯವರ ಅಪರಕ್ರಿಯೆಗಳನ್ನು ಮುಗಿಸಲು ಗೋಕರ್ಣದಲ್ಲಿ ವಾರಗಟ್ಟಲೆ ಉಳಿದಿದ್ದೆವು. ಪದ್ಧತಿ ಪ್ರಕಾರ ಊಟ ತಿಂಡಿಯೆಲ್ಲ ನಮ್ಮ ಮನೆತನದ ಪುರೋಹಿತರ ಮನೆಯಲ್ಲೇ. ಅಬ್ಬಾ! ಎಂತಹ ರುಚಿಕರ ಊಟ! of course ಉಪ್ಪು ಮಿಶ್ರಿತ ನೀರಲ್ಲಿ ಬೆಳೆಯುವ ಗೋಕರ್ಣದ ತರಕಾರಿಗೆ ಅದರದ್ದೇ ಆದ ಹೆಚ್ಚಿನ ರುಚಿಯಿದೆ ಬಿಡಿ. ಆದರೂ ಉಳ್ಳಾಗಡ್ಡೆ ಬಳ್ಳೊಳ್ಳಿ ಇಲ್ಲದೆ  ರುಚಿಕಟ್ಟಾದ ಅಡಿಗೆ ಮಾಡುವ ಕಲೆಯನ್ನು ಅಂತಹ ಭಟ್ಟರಿಂದಲೇ ಕಲಿಯಬೇಕು ಬಿಡಿ!

ಮನೆ ಬಿಟ್ಟು ಹೊರಬಂದ ಮೇಲೆ ಬೇರೆ ಬೇರೆ ರೀತಿಯ ತಿಂಡಿ ತೀರ್ಥ ಎಲ್ಲ ಮಾಡಿದ್ದಾಯಿತು. ಉತ್ತರಭಾರತದ ಖಾದ್ಯಪದಾರ್ಥಗಳಲ್ಲಿ ಅದರಲ್ಲೂ ಮೊಗಲಾಯ್ ಖಾದ್ಯಗಳಲ್ಲಿ ಒಂದು ರೀತಿಯ ವಿಶಿಷ್ಟ ವಾಸನೆ ಇರುತ್ತಿತ್ತು. ಮೊದಮೊದಲಿಗೆ ಏನು ಅಂತ ಗೊತ್ತಾಗುತ್ತಿರಲಿಲ್ಲ. ಆಮೇಲೆ ಯಾರೋ ಹೇಳಿದರು, 'ಉತ್ತರ ಭಾರತದ ಎಲ್ಲ ಐಟಮ್ಮುಗಳಲ್ಲಿ ಬಳ್ಳೊಳ್ಳಿ ಮತ್ತು ಶುಂಠಿಯ ಪೇಸ್ಟ್ (garlic ginger paste) ಹಾಕುತ್ತಾರೆ. ಅದಿಲ್ಲದೇ ನಾರ್ತ್ ಇಂಡಿಯನ್ ಐಟೆಮ್ಸ ತಯಾರಾಗುವುದೇ ಇಲ್ಲ. ಅದರದ್ದೇ distinct ವಾಸನೆ ಮತ್ತು ಟೇಸ್ಟ್.'

ಸರಿ. ನಮ್ಮಲ್ಲಿನ ಬಳ್ಳೊಳ್ಳಿ ಹಾಕಿದ ಚಟ್ನಿಯಂತೆ ಅಡ್ಡವಾಸನೆಯೇನೂ ಬರುತ್ತಿಲ್ಲವಲ್ಲ. ಅಲ್ಲಿಗೆ ಎಲ್ಲಾ ಓಕೆ. ಹಾಕಿ ಜಮಾಯಿಸು. ಬರೋಬ್ಬರಿ ಕಟಿ ಗಂಟಲು ಮಟ!

ಬಳ್ಳೊಳ್ಳಿ ಕಡೆ ಗಂಭೀರವಾಗಿ ನೋಡುವ ಸಂದರ್ಭ ಹೋದ ವರ್ಷ ಬಂದು ಒದಗಿತು. ಅದೂ ಒಂದು ವಿಶಿಷ್ಟ ರೀತಿಯಲ್ಲಿ.

ಸೋದರಸಂಬಂಧಿಯ ಪತ್ನಿ ಧಾರವಾಡಕ್ಕೆ ಬಂದಿದ್ದಳು. ನಮಗೆ ಹಿರಿಯಕ್ಕನಂತವಳು. ತುಂಬಾ ಸಲುಗೆ ಇದೆ. ಆಕೆ ಬೆಳಿಗ್ಗೆ ಎದ್ದಾಕ್ಷಣ ಹಸಿ ಬೆಳ್ಳುಳ್ಳಿಯ ಎರಡು ಎಸಳು ತಿನ್ನುತ್ತಿದ್ದಳು. ನೋಡಿ ದಂಗು ಹೊಡೆದವನು ನಾನು.

'ಇದೇನು ಮಾರಾಯ್ತೀ!? ಮೊದಲೇ ದೊಡ್ಡ ಭಟ್ಟರ ಮನೆಯ ಹಿರಿಯ ಸೊಸೆ ನೀನು. ಅಂತವಳು ಇಷ್ಟು ಢಾಳಾಗಿ ಬೆಳ್ಳುಳ್ಳಿ ತಿನ್ನುವುದೇ!? ಶಾಂತಂ!ಪಾಪಂ! ಮುಗಿಯಿತು ಕಥೆ. ಹೋಯಿತು ನಿಮ್ಮ ಭಟ್ಟರ ಧರ್ಮ! ಜಾತಿ ಕೆಟ್ಟುಹೋಯಿತಲ್ಲೇ ಅತ್ತಿಗೆ!' ಎಂದು ತಮಾಷೆ ಮಾಡಿದೆ.

'ಇಲ್ಲ ಮಾರಾಯ. ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕೇ ಎಲ್ಲ ಕಟ್ಟುಪಾಡುಗಳನ್ನು ಮೀರಿ ಬೆಳ್ಳಂಬೆಳಿಗ್ಗೆ ಹಸಿ ಬಳ್ಳೊಳ್ಳಿ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇವೆ,' ಎಂದಳು.

'ಹಾಂ!? ಆರೋಗ್ಯಕ್ಕೆ ತುಂಬಾ ಒಳ್ಳೆಯದೇ? ಹೇಗೆ??'  ಎಂದು ಚಕಿತನಾಗಿ ಕೇಳಿದೆ.

ಕಥೆ ಹೇಳಿದಳು. ನನ್ನ ಸೋದರಸಂಬಂಧಿ (ಆಕೆಯ ಪತಿ) ಕೊಂಚ ಶೀತ ಥಂಡಿ ಪ್ರಕೃತಿಯವನು. ಕರಾವಳಿಯ ಒಣ ಹವೆಯಲ್ಲಿ ಆರಾಮಾಗೇ ಇದ್ದ. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಶೀತ ಥಂಡಿ ಜಾಸ್ತಿ ತೊಂದರೆ ಕೊಡತೊಡಗಿತು. ಅದೂ ಈಗಿನ ಕೆಲವು ವರ್ಷಗಳಲ್ಲಿ ಪರಿಸರ ಮಾಲಿನ್ಯ ವಿಪರೀತವಾಗಿ, ಶೀತ ಥಂಡಿ ತೊಂದರೆ ತುಂಬಾ ಉಲ್ಬಣಗೊಂಡು, ಪದೇಪದೇ ಎದೆ ಕಟ್ಟಿ ಉಸಿರಾಟಕ್ಕೆ ತೊಂದರೆ. ವೈದ್ಯರ ಬಳಿ ಹೋದರೆ ಮತ್ತೆ ಅದೇ ಟ್ರೀಟ್ಮೆಂಟ್. inhaler ಉಪಯೋಗಿಸಿ. ಅದು ತಾತ್ಕಾಲಿಕ ಶಮನ. ಎದೆ ಕಟ್ಟಿದಾಗೊಮ್ಮೆ inhaler ಉಪಯೋಗಿಸಬೇಕು. ಮತ್ತೆ ಕೆಲ ಸಮಯದ ನಂತರ ಅದೇ ಪ್ರಾಬ್ಲಮ್. ರಾತ್ರಿ ಎದ್ದು inhaler ಹೆಟ್ಟಿಕೊಳ್ಳಬೇಕು. ಇಲ್ಲವಾದರೆ ನಿದ್ದೆ ಅಸಾಧ್ಯ. ಹೀಗೆ ತುಂಬಾ ಹೈರಾಣಾಗಿ ಹೋದ ನಮ್ಮ ಸೋದರಸಂಬಂಧಿ (cousin). ತಿಂಗಳಿಗೆ ಡಜನ್ ಗಟ್ಟಲೆ inhaler ಬೇಕಾಗತೊಡಗಿತು.

ಆಗ ಯಾರೋ ಬೆಳಿಗ್ಗೆ ಎದ್ದು ಹಸಿ ಬಳ್ಳೊಳ್ಳಿ ತಿನ್ನುವ ಸಲಹೆ ಕೊಟ್ಟರಂತೆ. ಸಲಹೆ ಪಾಲಿಸಲು ಹಿಂದೆ ಮುಂದೆ ನೋಡಿದ. ಮೊದಲೇ ದೊಡ್ಡ ಭಟ್ಟರ ಮನೆತನದವನು. ಇಂಜಿನಿಯರಿಂಗ್ ಮಾಡಿ ಸಾಫ್ಟ್ವೇರ್ ಕರ್ಮಚಾರಿಯಾದರೂ ಇನ್ನೂ ಪೂಜೆ ಪುನಸ್ಕಾರ ಎಲ್ಲ ಮಾಡುವವನು. ಅಧ್ಯಾತ್ಮದಲ್ಲಿ ಹೆಚ್ಚಿನ ಆಸಕ್ತಿ ಉಳ್ಳವನು. ವೇದಾಧ್ಯಯನಕ್ಕೆ ಅನುಕೂಲವಾಗಲಿ ಎಂದು ಬಾಹ್ಯವಾಗಿ ಸಂಸ್ಕೃತ ಪರೀಕ್ಷೆ ಕಟ್ಟಿ ಉನ್ನತ ಶ್ರೇಣಿಯಲ್ಲಿ ಸಂಸ್ಕೃತದಲ್ಲಿ MA ಡಿಗ್ರಿ ಮಾಡಿಕೊಂಡ ಪ್ರತಿಭಾವಂತ. ಪರಿಶುದ್ಧ ಸನ್ಯಾಸಿಯೊಬ್ಬರ ಶಿಷ್ಯನಾಗಿ ಶ್ರದ್ಧೆಯಿಂದ ವೇದೋಪನಿಷತ್ತುಗಳನ್ನು ಅಧ್ಯಯನ ಮಾಡುತ್ತಿರುವ ಸಾಧಕ ಮನುಷ್ಯ. ಹೀಗಾಗಿ ಮುಂಜಾನೆ ಎದ್ದ ಕೂಡಲೇ ಬಳ್ಳೊಳ್ಳಿ ತಿನ್ನಿ ಅನ್ನುವ ಸಲಹೆಯನ್ನು ಪಾಲಿಸಲು ಅವನಿಗೆ ತುಂಬಾ ಇರುಸುಮುರುಸಾಯಿತು.

ಆದರೆ ಆರೋಗ್ಯದ ಪರಿಸ್ಥಿತಿ ಬಹಳ ಖರಾಬಾಗಿತ್ತು. ಆರೋಗ್ಯದ ಮುಂದೆ ಎಲ್ಲ ಗೌಣ. ಹಾಗಾಗಿ ಹೇಗೋ ಮಾಡಿ ಬೆಳ್ಳುಳ್ಳಿ ಸೇವನೆ ಶುರುಮಾಡಿದ. ನಿಯಮಿತವಾಗಿ ಮಾಡಿದ.

ಪರಿಣಾಮ ಮಾತ್ರ ಬೆರಗಾಗುವಂತಿತ್ತು!

ಒಂದೇ ತಿಂಗಳು! ಶೀತ, ಥಂಡಿ, ಎದೆ ಕಟ್ಟುವಿಕೆ ಎಲ್ಲ ಮಾಯ! ಮಂಗಮಾಯ! ಯಾವುದೇ ಬೇರೆ ಔಷಧೋಪಚಾರ ಬೇಕೇ ಆಗಲಿಲ್ಲ. ತನ್ನ ಎಲ್ಲ ಸಮಸ್ಯೆಗಳಿಂದ ಮುಕ್ತ! ಮುಕ್ತ!

ಅವನು ಬೆಳ್ಳುಳ್ಳಿ ಚಿಕಿತ್ಸೆಗೆ ಪೂರ್ತಿ committed. ಆದರೆ ಅವನ ಗುರುಗಳು ಹೇಳಿದರಂತೆ, 'ಭಟ್ಟರೇ, ವೇದಾಧ್ಯಯನ ಮಾಡುವವರಿಗೆ ಬೆಳ್ಳುಳ್ಳಿ ನಿಷಿದ್ಧ. ನಿಮಗೆ ತಿಳಿಯದ ವಿಷಯವೇನೂ ಅಲ್ಲ. ಅದರ ಬಗ್ಗೆ ವಿಚಾರ ಮಾಡಿ. ನಿಮ್ಮ ಸಾಧನೆಗೆ ಆ ರಾಜಸಿಕ ತಾಮಸಿಕ ಪದಾರ್ಥ ಅಡ್ಡಿಯಾಗದಿರಲಿ ಎಂಬುದಿಷ್ಟೇ ನಮ್ಮ ಕಾಳಜಿ.'

ಗುರುಗಳಿಗೆ ಎಲ್ಲ ವಿಷಯವನ್ನೂ ಸಾದ್ಯಂತ ತಿಳಿಸಿದ ಮೇಲೆ ಅವರೂ ಒಪ್ಪಿಕೊಂಡರು. ರುಚಿಗಾಗಿ ಬೆಳ್ಳುಳ್ಳಿ ತಿಂದರೆ, ಅದೂ ಇತಿಮಿತಿ ಮೀರಿ ತಿಂದರೆ ಮಾತ್ರ, ಅದು ತಾಮಸಿಕ, ರಾಜಸಿಕ ಮತ್ತು ಸಾತ್ವಿಕ ಜೀವನಶೈಲಿಗೆ ವಿರುದ್ಧವಾದುದು. ಔಷಧಿಗಾಗಿ ಸೇವಿಸಿದರೆ ಎಲ್ಲ ಓಕೆ. ಬಾರಾ ಖೂನ್ ಮಾಫ್!

ಇದನ್ನು ಕೇಳಿ ನನ್ನ ತಲೆಯಲ್ಲಿ ಬಂದಿದ್ದು ಏನಪ್ಪಾ ಅಂದರೆ ಔಷಧಿ ಅದು ಇದು ಅಂತ ಸಮರ್ಥನೆ ಕೊಟ್ಟುಕೊಂಡು ನಾವೇನೋ ಬೆಳಿಗ್ಗೆ ಬೆಳಿಗ್ಗೆ ಹಸಿ ಬಳ್ಳೊಳ್ಳಿ ತಿಂದು ಬಿಸಿನೀರು ಕುಡಿದು ಕೂತುಬಿಡಬಹದು. ನಮ್ಮ ಸುತ್ತಮುತ್ತಲಿನ ಜನರ ಗತಿ ಏನು ಸ್ವಾಮೀ!? ಬಳ್ಳೊಳ್ಳಿಯ ಉಸಿರಿನ (ಸು)ವಾಸನೆಯನ್ನು ಭರಿಸಬೇಕಾದವರು ಅವರು ತಾನೇ!??

An apple a day keeps the doctor away. A garlic a day keeps everyone away. - ಎಂದು ತಮಾಷೆ ಮಾಡುತ್ತಾರೆ. ದಿನಕ್ಕೊಂದು ಸೇಬು ಸೇವಿಸಿದರೆ ಅದು ವೈದ್ಯರನ್ನು ದೂರವಿಡುತ್ತದೆ. ಹಾಗೆಯೇ ದಿನಕ್ಕೊಂದು ಬೆಳ್ಳುಳ್ಳಿಯನ್ನು ಸೇವಿಸಿದರೆ ಅದು ಎಲ್ಲರನ್ನೂ ದೂರವಿಡುತ್ತದೆ. ವೈದ್ಯರನ್ನೂ ಒಳಗೊಂಡು.

ಅತ್ಯುತ್ತಮ ಔಷಧೀಯ ಗುಣಗಳ ಖನಿಯಾಗಿರುವ ಇಂತಹ ಬಳ್ಳೊಳ್ಳಿಯನ್ನು ಇನ್ನೊಬ್ಬರಿಗೆ ಮುಜುಗುರವಾಗದಂತೆ ಸೇವಿಸುವುದು ಹೇಗೆ?

ಅನೇಕ ಬೆಳ್ಳುಳ್ಳಿಯ capsule, ಮಾತ್ರೆ ಬಂದಿವೆ. ಅವನ್ನು ತೆಗೆದುಕೊಳ್ಳಬಹುದು. ಆದರೆ ಖ್ಯಾತ ವೈದ್ಯ ಡಾ. ಬಿ. ಎಂ. ಹೆಗ್ಡೆ ಹೇಳುತ್ತಾರೆ, 'ಬೆಳ್ಳುಳ್ಳಿಯ ಮಾತ್ರೆ, ಕ್ಯಾಪ್ಸುಲ್ ಉಪಯೋಗಕಾರಿಯಲ್ಲ. ಏಕೆಂದರೆ ಬೆಳ್ಳುಳ್ಳಿಯ ಔಷಧೀಯ ಗುಣಗಳು ಬಿಡುಗಡೆಯಾಗುವುದು ಬೆಳ್ಳುಳ್ಳಿಯನ್ನು ಕಚ್ಚಿದಾಗ ಅದರಿಂದ ಸ್ರವಿಸುವ ರಸದಲ್ಲಿರುವ ರಾಸಾಯನಿಕದಿಂದ. ಮಾತ್ರೆ ಕ್ಯಾಪ್ಸುಲ್ ತೆಗೆದುಕೊಂಡರೆ ಆ ಬೆನಿಫಿಟ್ ಸಿಗುವುದಿಲ್ಲ. ಸುಮ್ಮನೆ ದುಡ್ಡು ದಂಡ. ಔಷಧಿಯ ರೂಪದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಲೇಬೇಕು ಅಂತಾದರೆ ಹಸಿ ಬೆಳ್ಳುಳ್ಳಿಯನ್ನು ಕಚ್ಚಿ ತಿನ್ನಲೇಬೇಕು. ಬೇರೆ ದಾರಿಯಿಲ್ಲ!'

ಶಿವಾಯ ನಮಃ!!

ಎರಡು ತೊಂದರೆಗಳು. ಒಂದು ಹಸಿ ಬೆಳ್ಳುಳ್ಳಿಯ ಕಮಟು ರುಚಿ ಮತ್ತು ಘಾಟು. ಎಲ್ಲರಿಗೂ ಭರಿಸಲು ಸಾಧ್ಯವಿಲ್ಲ. ಮತ್ತು ಎರಡನೆಯ ತೊಂದರೆಯಂತೂ obvious. ಬೆಳ್ಳುಳ್ಳಿ ಹಾಕಿದ ಪದಾರ್ಥ ಸೇವಿಸಿದ ಮೇಲೆ ಅದೆಷ್ಟೇ ಚೆನ್ನಾಗಿ ಬ್ರಷ್ ಮಾಡಿದ ಮೇಲೂ ಅದರ 'ಸುವಾಸನೆ' ನಿರ್ಮೂಲವಾದ ಬಗ್ಗೆ ಖಾತ್ರಿಯಿರುವದಿಲ್ಲ. 'ನನ್ನ ಬಾಯಿ ಬೆಳ್ಳುಳ್ಳಿ ವಾಸನೆ ಹೊಡೆಯುತ್ತಿಲ್ಲ ತಾನೇ??' ಎಂದು ಕೇಳಿ ಖಾತ್ರಿ ಮಾಡಿಕೊಂಡಾಗಲೇ ಸಮಾಧಾನ. ಬೆಳ್ಳುಳ್ಳಿ ಮತ್ತು ಉಳ್ಳಾಗಡ್ಡೆ ಸೀದಾ ರಕ್ತ ಸೇರಿಬಿಡುತ್ತವೆ. ಏನೇನೋ ಬ್ರಷ್ ಮಾಡಿ, ಯಾಲಕ್ಕಿ ತಿಂದು, ಪಾನ್ ಹಾಕಿ ಬಾಯಿ ವಾಸನೆ ನಿವಾರಿಸಿಕೊಂಡರೂ ಬೆವರಿನ 'ಸುಗಂಧ'ದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಎರಡು ಸಲ ಸ್ನಾನ ಮಾಡಿಬಿಡಿ. ಬರೋಬ್ಬರಿ ಡಿಯೋಡರೆಂಟ್ ತಿಕ್ಕಿಕೊಳ್ಳಿ. ಅಷ್ಟರಮಟ್ಟಿಗೆ ಸೇಫ್ ಎಂದುಕೊಂಡಿದ್ದೇನೆ.

ಈ ಸಮಸ್ಯೆಗಳಿಗೆ ಒಂದು ಸಮಾಧಾನ ಸಿಕ್ಕಿದೆ. ಅದೇನಪ್ಪಾ ಅಂದರೆ... ಹಸಿ ಬೆಳ್ಳುಳ್ಳಿಯ ಎಸಳುಗಳನ್ನು ಚಿಕ್ಕದಾಗಿ ಕತ್ತರಿಸುವುದು. ನಂತರ ಒಂದು ಗ್ಲಾಸ್ ನೀರಿನೊಂದಿಗೆ ಅದನ್ನು ಮಾತ್ರೆಯಂತೆ ನುಂಗಿಬಿಡುವುದು. ಬೆಳ್ಳುಳ್ಳಿಯ ಎಸಳನ್ನು ಕತ್ತರಿಸುವುದು ಹಲ್ಲಿಂದ ಅಗಿದಿದ್ದಕ್ಕೆ ಸುಮಾರು ಸಮಾನ. ರಸವಂತೂ ಬಿಡುತ್ತದೆ. ರಸದಲ್ಲಿನ ಔಷಧಿಯುಕ್ತ ರಾಸಾಯನಿಕದ ಬೆನಿಫಿಟ್ ಸಿಗುತ್ತದೆ. ಜಗಿಯುವ ಉಸಾಬರಿ ಇಲ್ಲ. ಹಾಗಾಗಿ ಹೋದಲ್ಲೆಲ್ಲಾ ಬಳ್ಳೊಳ್ಳಿಯ (ಸು)ವಾಸನೆ ಹರಡುತ್ತಾ ವಾಯು ಮಾಲಿನ್ಯ ಮಾಡುವ ರಿಸ್ಕೂ ಇಲ್ಲ. ನಂತರ ಬರೋಬ್ಬರಿ ಬ್ರಷ್ ಮಾಡಿ, mouthwash ಹಾಕಿ ಬಾಯಿ ಮುಕ್ಕಳಿಸಿ, ಸ್ನಾನ ಮಾಡಿ, ಡಿಯೋಡರೆಂಟ್ ಬರೋಬ್ಬರಿ ಹೊಡೆದುಕೊಂಡು ಹೋದರೆ ಸಾಮಾನ್ಯ ಸಂದರ್ಭಗಳಲ್ಲಿ ಅಂತೂ ರಿಸ್ಕ್ ಇಲ್ಲ. ನಿಮಗೆ ಇನ್ನೂ intimate ಸಂದರ್ಭಗಳಿವೆ ಅಂದರೆ  ಉದಾಹರಣೆಗೆ dating ಹೋಗಬೇಕು, ಮಾಲು ಪಟಾಯಿಸಬೇಕು, ಕಿಸ್ ಹೊಡೆಯಬೇಕು, ಪಲ್ಲಂಗಾರೋಹಣ ಅಂತೆಲ್ಲಾ ಇದ್ದ ದಿನಗಳಲ್ಲಿ ಬೆಳ್ಳುಳ್ಳಿ ಚಿಕಿತ್ಸೆ ಬಿಡಬೇಕಾಗಬಹುದು.

ಈಗ ಒಂದು ವರ್ಷದಿಂದ ನಾನೂ ಬೆಳ್ಳುಳ್ಳಿ ಚಿಕಿತ್ಸೆ ಆರಂಭಿಸಿದ್ದೇನೆ. ಬೆಳಿಗ್ಗೆ ಎದ್ದಾಕ್ಷಣ ಎರಡು ಅಥವಾ ಮೂರು ಎಸಳುಗಳನ್ನು ಚಿಕ್ಕದಾಗಿ ಕತ್ತರಿಸಿ ನೀರಿನ ಜೊತೆ ನುಂಗಿಬಿಡುವುದು.

ಏನಾದರೂ ಉಪಯೋಗವಾಗಿದೆಯೇ? ಗೊತ್ತಿಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅದೇನೋ ಬೆಳ್ಳುಳ್ಳಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಕೇಳಿದ ಕಾರಣ ಶುರು ಮಾಡಿದ್ದು. ದೇವರ ದಯವೋ ಅಥವಾ ಬೆಳ್ಳುಳ್ಳಿಯ ಮಹಾತ್ಮೆಯೋ ಗೊತ್ತಿಲ್ಲ. ವರ್ಷಕ್ಕೆ ಒಂದೆರೆಡು ಬಾರಿ ಆಗುತ್ತಿದ್ದ ಸಣ್ಣ ಪ್ರಮಾಣದ flu ಅಂದರೆ ಜ್ವರ, ಮೈಕೈ ನೋವು, ಗಂಟಲ ನೋವು ಇತ್ಯಾದಿ ಆಗಿಲ್ಲ. ಕೊಂಚ ಆದರೂ ಹಿಂದೆಲ್ಲಾ ಆಗುತ್ತಿದ್ದ ದೊಡ್ಡ ಪ್ರಮಾಣದಲ್ಲಿ ಕಳೆದ ಒಂದು ವರ್ಷದಲ್ಲಿ ಆಗಿಲ್ಲ. ಅದು ಬೆಳ್ಳುಳ್ಳಿ ಚಿಕಿತ್ಸೆ ಪರಿಣಾಮವೋ ಅಥವಾ ಅರಿಶಿಣ ಹಾಕಿದ ಹಾಲಿನ ಪರಿಣಾಮವೋ ಅಥವಾ ವರ್ಷವೂ ತೆಗೆದುಕೊಳ್ಳುವ flu ಚುಚ್ಚುಮದ್ದಿನ ಪರಿಣಾಮವೋ ಗೊತ್ತಿಲ್ಲ.

ಸದ್ಯಕ್ಕಂತೂ ಬೆಳ್ಳುಳ್ಳಿ ಚಿಕಿತ್ಸೆ ಜಾರಿಯಲ್ಲಿರುತ್ತದೆ. ನಾವಂತೂ ಯಾವಾಗಲೂ ಮನೆಯಿಂದಲೇ ಕೆಲಸ ಮಾಡುವವರು. ಜನ ಸಂಪರ್ಕವೇ ಇಲ್ಲ. ಹಾಗಾಗಿ, ಇಷ್ಟೆಲ್ಲಾ preventive ಕ್ರಮ ತೆಗೆದುಕೊಂಡ ಮೇಲೂ, ಎಲ್ಲಾದರೂ ಅಪ್ಪಿ ತಪ್ಪಿ ಬೆಳ್ಳುಳ್ಳಿ (ಸು)ವಾಸನೆ ಹರಡಿದರೆ ಅದರಿಂದ ಯಾರಿಗೂ ತೊಂದರೆಯಿಲ್ಲ. ಸಾಮಾಜಿಕವಾಗಿ ಮಿಳಿತಗೊಳ್ಳಬೇಕಾದ ಸಂದರ್ಭಗಳು ಇದ್ದಾಗ ಹೆಚ್ಚಿನ precautions ತೆಗೆದುಕೊಂಡರಾಯಿತು.

ಬಳ್ಳೊಳ್ಳಿ ಉರ್ಫ್ ಬೆಳ್ಳುಳ್ಳಿ ಮಹಾತ್ಮೆ ಇನ್ನೂ ಬಹಳವಿದೆ. ನೀವೂ ಟ್ರೈ ಮಾಡಿ. ನಿಮ್ಮ ಆರೋಗ್ಯ ವೃದ್ಧಿಸಿದರೆ ಸಾಕು. ಬೇರೆಯವರ ಚಿಂತೆ ನಿಮಗ್ಯಾಕೆ? ಅವರ ಮೂಗು. ಅವರ ಕರ್ಮ. ಮೂಗು ಮುಚ್ಚಿಕೊಂಡು ಹೋಗ್ತಾ ಇರಲಿ ಬಿಡಿ! :)

2 comments:

sunaath said...

ಧನ್ಯವಾದಗಳು, ವೈದ್ಯರೆ! ನಿಮ್ಮ prescription ಭಯಂಕರ ಪರಿಣಾಮಕಾರಿಯಾದದ್ದು!

Mahesh Hegade said...

ಧನ್ಯವಾದಗಳು, ಸುನಾಥ್ ಸರ್!