Saturday, July 24, 2021

ಹಿಂತಿರುಗಿ ನೋಡಿದಾಗ : ತ.ರಾ.ಸು ಜೀವನಕಥನ ಓದಿದಾಗ ನೆನಪಾಗಿದ್ದು...

ತ.ರಾ.ಸು - ಕಳೆದ ಶತಮಾನದ ಕನ್ನಡದ ವರಿಷ್ಠ ಮತ್ತು ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರು. ಕನ್ನಡದಲ್ಲಿ ಬರೆದೇ ಬದುಕಿದ ಕೆಲವೇ ಕೆಲವು ಸಾಹಿತಿಗಳಲ್ಲಿ ಒಬ್ಬರು. ಇವತ್ತಿನ ಜಮಾನಾದಲ್ಲಿ ಬರೆದೇ ಬದುಕುತ್ತೇನೆ ಎಂದು ಇರುವವರು ಬಹಳ ಕಮ್ಮಿ. ಭೈರಪ್ಪನವರು ಒಬ್ಬರು ತಮ್ಮ ಕಾದಂಬರಿಗಳಿಂದ ಒಂದಿಷ್ಟು ರೊಕ್ಕ ಗಳಿಸುತ್ತಿರಬಹುದು. ಬೇರೆ ಯಾರೂ ಇದ್ದಂತಿಲ್ಲ. ಏನೋ ಬರೆದು, ಅದಕ್ಕೆ ತಿಂಗಳ ಪಗಾರ ಪಡೆಯುವವರು ಈ ವರ್ಗದಲ್ಲಿ ಬರುವುದಿಲ್ಲ. ಆದರೆ ತರಾಸು ಕಾಲದಲ್ಲಿ ಹಾಗಿರಲಿಲ್ಲ. ಬರೆದು ಕೊಡಿ ಎಂದು ಮುಂಗಡ ಕೊಟ್ಟು ಹೋಗುತ್ತಿದ್ದರು. ಇಷ್ಟು ಪುಟ ಬರೆದುಕೊಟ್ಟ ನಂತರ ಮುಂದಿನ ಕಂತು ಸಿಗುತ್ತಿತ್ತು. ಅದರಲ್ಲೇ ಜೀವನ. ತರಾಸು ಅವರಂತಹ ಶ್ರೇಷ್ಠ ಬರಹಗಾರರು ಅದರಲ್ಲೇ ಸಾರ್ಥಕ ಜೀವನ ಮಾಡಿದರು. ಸಾಕಷ್ಟು ಕಷ್ಟ ನಷ್ಟ ಅನುಭವಿಸಿದರು. ಖ್ಯಾತಿಯ ಜೊತೆ ಹಣವೂ, ಅಪರೂಪಕ್ಕೆ, ಬಂದಾಗ ಎಲ್ಲೋ ಒಂದಿಷ್ಟು ಸುಖ ಪಟ್ಟರು. ಆದರೆ ನಿಯಮಿತ ಆದಾಯವಿಲ್ಲದೆ ಕಷ್ಟಗಳನ್ನು ಅನುಭವಿಸಿದ್ದೇ ಜಾಸ್ತಿ. ಅದೆಲ್ಲ ಅವರ ಜೀವನಚರಿತೆಯಲ್ಲಿ ವಿಸ್ತೃತವಾಗಿ ದಾಖಲಾಗಿದೆ. 

ಹಿಂತಿರುಗಿ ನೋಡಿದಾಗ - ಅವರ ಜೀವನಕಥನ. ಇದರ ವಿಶಿಷ್ಟತೆ ಏನೆಂದರೆ ಇದನ್ನು ಅರ್ಧ ಬರೆದಿಟ್ಟಾಗ ತರಾಸು ನಿಧನರಾದರು. ಉಳಿದಿದ್ದನ್ನು ಅವರ ಪತ್ನಿ ಅಂಬುಜಾ ತರಾಸು ಪೂರ್ಣಗೊಳಿಸಿದ್ದಾರೆ. ಪತಿ ಬರೆದಿದ್ದನ್ನು ಓದುವ ಹವ್ಯಾಸ ಹೊಂದಿದ್ದರು ಶ್ರೀಮತಿ ತರಾಸು. ಆದರೆ ಎಂದೂ ಬರೆದವರೇ ಅಲ್ಲ ಅವರು. ಪತಿಯ ನಿಧನಾನಂತರ, ತರಾಸು ಅವರ ಅಭಿಮಾನಿಗಳ ಕೋರಿಕೆಯಂತೆ, ಜೀವನಕಥನದ ಉಳಿದ ಭಾಗವನ್ನು ಯಶಸ್ವಿಯಾಗಿ ಬರೆದಿದ್ದಾರೆ. ತರಾಸು ಅವರ ಅಭಿಮಾನಿ ಮತ್ತು ಅವರ ಅಂತಿಮ ವರ್ಷಗಳಲ್ಲಿ ಅವರ ಬರವಣಿಗೆಗೆ ಸಹಾಯಕರಾಗಿದ್ದ ಪಾಂಡವಪುರದ ಸಾಹಿತಿ ನಾ. ಪ್ರಭಾಕರ ಸಹಾಯ ಮಾಡಿದ್ದಾರೆ. 

ತರಾಸು ಏನೇ ಬರೆದರೂ ಅದು ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ಅದರಲ್ಲಿ ದೂಸರಾ ಮಾತಿಲ್ಲ. ತುಂಬಾ ಸರಳವಾಗಿ, ನೇರವಾಗಿ, ಅನಗತ್ಯ ಕ್ಲೀಷೆಗಳ ಗೊಂದಲವಿಲ್ಲದೆ ಬರೆಯುತ್ತಾರೆ ತರಾಸು. ಶಕ್ತಿಯುತ ಭಾಷೆ. ಕಣ್ಣಿಗೆ ಕಟ್ಟಿದಂತೆ ಚಿತ್ರಿಸುವ ಕಲೆ ಸಿದ್ಧಿಸಿಕೊಂಡಿದ್ದರು. ಅವರ ಆತ್ಮಕಥೆ ಕೂಡ ಇದಕ್ಕೆ ಭಿನ್ನವಾಗಿಲ್ಲ. ಅಂಬುಜಾ ತರಾಸು ಕೂಡ ಅಷ್ಟೇ ಸೊಗಸಾಗಿ ಆತ್ಮಚರಿತ್ರೆಯನ್ನು ಪೂರ್ಣಗೊಳಿಸಲು ಕಾರಣ ಅವರ ಪತಿದೇವರ ಪ್ರೇರಣೆ ಮತ್ತು ಎಲ್ಲಿದ್ದಾರೋ ಅಲ್ಲಿಂದಲೇ ಮಾಡಿದ ಆಶೀರ್ವಾದ ಎಂದು ಹೇಳಲು ಅಡ್ಡಿಯಿಲ್ಲ. 

ತರಾಸು ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ. ಅವರು ಬರೆದಿದ್ದು ತುಂಬಾ ಇದೆಯಾದರೂ ನಾನು ಓದಿದ್ದು ತುಂಬಾ ಕಮ್ಮಿ. ತರಾಸು ಕಾದಂಬರಿಗಳನ್ನು ತಾಯಿಯವರು ಗ್ರಂಥಾಲಯದಿಂದ ತಂದು ಓದುತ್ತಿದ್ದನ್ನು ನೋಡಿದ್ದೆ. ಆಗ ತುಂಬಾ ಚಿಕ್ಕವನಾಗಿದ್ದ ಕಾರಣದಿಂದ ಕಾದಂಬರಿ ಓದುವ ಹವ್ಯಾಸ ಇನ್ನೂ ಬೆಳೆದಿರಲಿಲ್ಲ. 

ತರಾಸು ಬರೆದಿದ್ದನ್ನು ಓದಲು ಪ್ರೇರೇಪಿಸಿದ ಒಬ್ಬ ಐತಿಹಾಸಿಕ ಹೀರೋಗೆ ಧನ್ಯವಾದ ಹೇಳಲೇಬೇಕು. ಅವನು ಯಾರು ಅಂದರೆ ಚಿತ್ರದುರ್ಗದ ಗಂಡುಗಲಿ ಮದಕರಿ ನಾಯಕ. ಮದಕರಿ ನಾಯಕನ ಬಗ್ಗೆ, ಓಬ್ಬವ್ವನ ಬಗ್ಗೆ ಯಾರು ಕೇಳಿಲ್ಲ? ರೇಡಿಯೋ ಹಚ್ಚಿದಾಗೆಲ್ಲ 'ಕನ್ನಡ ನಾಡಿನ ವೀರ ರಮಣಿಯ...' ಎನ್ನುವ ಸಿನಿಮಾ ಗೀತೆ ಸದಾ ಮೊರೆಯುತ್ತಿತ್ತು. ಮಕ್ಕಳಿಗೆ ಕಥೆ ಹೇಳುವಾಗ ಓಬವ್ವನ ಕಥೆ ಮೊದಲಿನ ಒಂದೆರೆಡು ವರ್ಷಗಳಲ್ಲೇ ಕೇಳಿಯಾಗುತ್ತಿತ್ತು. ಆ ಕಥೆ ಎಲ್ಲ ಪಾಲಕರ ಬತ್ತಳಿಕೆಯಲ್ಲಿರುವ ಸಾಮಾನ್ಯ ಕಥೆ ಎಂದು ನನ್ನ ಭಾವನೆ. ಓಬ್ಬವ್ವನ ಕಥೆ ಕೇಳಿದಾಗ ಅಷ್ಟೇನೂ ಮಹಾ ಅನ್ನಿಸಿರಲಿಲ್ಲ. ಹೆಚ್ಚಾಗಿ ಅದರ ಮಹತ್ವ, ಗಂಭೀರತೆ ಅರ್ಥವಾಗಿರಲಿಲ್ಲ. ಆದರೆ ಮುಂದೆ ಒಂದಕ್ಕೊಂದು ಅಕ್ಷರ ಕೂಡಿಸಿ ಓದುವುದನ್ನು ಕಲಿತಾಗ ಮೊದಲು ಕೈಗೆ ಬಂದವೇ 'ಭಾರತ ಭಾರತಿ' ಪುಸ್ತಕಗಳ ಭಂಡಾರ. ರಾಷ್ಟ್ರೋತ್ಥಾನ ಪರಿಷತ್ತಿನವರು ದೇಶದ ಮಹಾನ್ ವ್ಯಕ್ತಿಗಳ ಬಗ್ಗೆ ಚಿಕ್ಕ ಚಿಕ್ಕ ಪುಸ್ತಕಗಳನ್ನು 'ಭಾರತಿ ಭಾರತಿ' ಸರಣಿಯಲ್ಲಿ ಪ್ರಕಟಿಸಿದ್ದರು. ಚಿಕ್ಕ ಡೈರಿ ಸೈಜಿನ ಪುಸ್ತಕಗಳು. ೩೦-೪೦ ಪುಟಗಳು ಅಷ್ಟೇ. ಸರಳ ಭಾಷೆ. ಅದರಲ್ಲಿ ಸುಲಭವಾಗಿ ಗುರುತಿಸಬಲ್ಲಂತಹ ನೀತಿ ಪಾಠಗಳು. ಬೇರೆಯೇ ಜಗತ್ತಿಗೆ ಕೊಂಡಯ್ಯುವಂತಿದ್ದ ವಿನೂತನ ರೇಖಾಚಿತ್ರಗಳು. ಎಲ್ಲ ಕೂಡಿ ೨೫೦೦ - ೩೦೦೦ ಪದಗಳಲ್ಲಿ ಒಬ್ಬ ವ್ಯಕ್ತಿಯ ಜೀವನಗಾಥೆಯನ್ನು ಯಶಸ್ವಿಯಾಗಿ ಕಟ್ಟಿಕೊಡುವ ಪ್ರಯತ್ನ. ಆ ದಿಸೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದ್ದವು ಆ 'ಭಾರತಿ ಭಾರತಿ'ಯೆಂಬ ಪುಸ್ತಕರತ್ನಗಳು. ಇವತ್ತಿಗೂ ಮಕ್ಕಳು ಹಾಳುವರಿ ಕಾಮಿಕ್ಸ್ ಅದು ಇದು ಓದುವ ಬದಲಿ 'ಭಾರತ ಭಾರತಿ' ಓದಿದರೆ ಅವರಿಗೆ ತುಂಬಾ ಸಹಾಯಕಾರಿ ಎಂದು ನನ್ನ ಖಡಕ್ ನಂಬಿಕೆ. 

ಇಂತಿಪ್ಪ 'ಭಾರತ ಭಾರತಿ' ಪುಸ್ತಕದಲ್ಲಿ ಕೈಗೆ ಸಿಕ್ಕವ ಚಿತ್ರದುರ್ಗದ ಮದಕರಿ ನಾಯಕ. ಓದಿ ಫುಲ್ ರೋಮಾಂಚನ. ಅಷ್ಟು thrilling ಆಗಿತ್ತು. ಅದನ್ನು ಬರೆದಿದ್ದ ಲೇಖಕರು ಯಾರು ಎಂದು ಮರೆತುಹೋಗಿದೆ. ಆದರೆ ಮದಕರಿ ನಾಯಕನ ವೀರಚರಿತ್ರೆಯನ್ನು ಅದೆಷ್ಟು ಚೆನ್ನಾಗಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದರು ಎಂದರೆ ಆ ಪುಸ್ತಕವನ್ನು ಅದೆಷ್ಟು ಬಾರಿ ಓದಿದೆನೋ ನನಗೇ ನೆನಪಿಲ್ಲ. ಆ ಕಾಲದ ದುರ್ಗದ ರಾಜರು, ಅವರ ಶೌರ್ಯ, ಪರಾಕ್ರಮ, palace intrigues, ಒಳೊಳಗಿನ ಕಪಟತನ, ತಮ್ಮವರಿಂದಲೇ ಮೋಸ ಹೋಗಿದ್ದು, ಚಿತ್ರದುರ್ಗದಲ್ಲಿ ಅವರು ಕಟ್ಟಿಕೊಂಡಿದ್ದ ಅಭೇದ್ಯ ಕೋಟೆ, ಚಿತ್ರದುರ್ಗದಂತಹ ಬಿಸಿಲಿನ ನಾಡಿನಲ್ಲಿ ಎಂದಿಗೂ ನೀರಿನ ಬರ ಬರದಂತೆ ಕೆರೆ ಕಟ್ಟೆಗಳ ಮೂಲಕ ಮಾಡಿಕೊಂಡಿದ್ದ ನೀರಾವರಿ ವ್ಯವಸ್ಥೆ, ಸುತ್ತಮುತ್ತಲಿನ ಎಲ್ಲ ಸಂಸ್ಥಾನಗಳ ಪಾಳೇಗಾರರು ನಾಯಕರೇ ಆಗಿದ್ದರೂ ಅವರವರ ಮಧ್ಯೆಯೇ ಅಹಂ(ego) ಕದನಗಳು. ಇವನ್ನೆಲ್ಲ ಸರಿಯಾಗಿ ಉಪಯೋಗಿಸಿಕೊಂಡ ಹೈದರ್, ಟಿಪ್ಪು ಇತ್ಯಾದಿ ಶತ್ರುಗಳು. ದುರ್ಗದ ಬೇಡರ ಸೇನೆ ಮತ್ತು ಅವರ ತಾಕತ್ತು. ಕಿತ್ತೂರು ಚೆನ್ನಮ್ಮನ ಬೆಂಗಾವಲಾಗಿ ಸಂಗೊಳ್ಳಿ ರಾಯಣ್ಣ ಇದ್ದಂತೆ ದುರ್ಗದ ನಾಯಕರ ಬೆಂಗಾವಲಾಗಿ ಅಪ್ರತಿಮ ವೀರ ಗುದಗುತ್ತಿ ಅನ್ನುವವನು ಇದ್ದ ಎಂದು ನೆನಪು. ಒಟ್ಟಿನಲ್ಲಿ ಕೈಗೆತ್ತಿಕೊಂಡಾಗೊಮ್ಮೆ ಹದಿನಾರನೇ ಶತಮಾನದ ದುರ್ಗದ ವೈಭವಕ್ಕೆ ಕರೆದೊಯ್ಯುತ್ತಿತ್ತು ಆ ಚಿಕ್ಕ ಪುಸ್ತಕ. 

ಅದನ್ನು ಓದಿದಾಗಿಂದ ಚಿತ್ರದುರ್ಗದ ಇತಿಹಾಸ ಎಂದರೆ ತುಂಬಾ ಆಸಕ್ತಿ ಮತ್ತು ಅಚ್ಚರಿ. ಚಿತ್ರದುರ್ಗದ ಬಗ್ಗೆ ತರಾಸು ೧೯೫೦ ರ ದಶಕದಲ್ಲೇ ವ್ಯಾಪಕವಾಗಿ ಬರೆದಿದ್ದಾರೆಂದು ಗೊತ್ತಾಗಲು ಸುಮಾರು ವರ್ಷಗಳೇ ಬೇಕಾಯಿತು. ಅದಕ್ಕಿಂತ ಮೊದಲು ದುರ್ಗದವರೇ ಆದ ಖ್ಯಾತ ಕಾದಂಬರಿಕಾರ ಬಿ. ಎಲ್. ವೇಣು ಬರೆದ ಒಂದು ಕಾದಂಬರಿ ಸಿಕ್ಕಿತ್ತು. ವೇಣು ನುರಿತ ಕಥೆಗಾರರು. ಅವರ ಹಲವು ಕಾದಂಬರಿಗಳು ಯಶಸ್ವಿ ಸಿನೆಮಾಗಳಾಗಿವೆ. ತುಂಬಾ ಸೊಗಸಾಗಿ ದುರ್ಗದ ಚರಿತ್ರೆಯನ್ನು ಕಾದಂಬರಿ ಮೂಲಕ ಕಟ್ಟಿಕೊಟ್ಟಿದ್ದರು. ಕೆಲವೊಂದು ಕಡೆ creative freedom ತೆಗೆದುಕೊಂಡಿದ್ದೇನೆ. ಕೆಲವು ಸನ್ನಿವೇಶಗಳನ್ನು glamorize ಮತ್ತು glorify ಮಾಡಿದ್ದೇನೆ ಎಂದು honest ಆಗಿ ಹೇಳಿಕೊಂಡಿದ್ದರು ಲೇಖಕ ವೇಣು.

ತರಾಸು ನಿಧನದ ಬಳಿಕ 'ತರಂಗ' ವಾರಪತ್ರಿಕೆ ಅವರ 'ದುರ್ಗಾಸ್ತಮಾನ' ಕಾದಂಬರಿಯನ್ನು ಪ್ರಕಟಿಸಿತು. ತರಾಸು ಅವರು ಚಿತ್ರದುರ್ಗದ ಬಗ್ಗೆ ಬರೆದ ಮೊದಲಿನ ಕಾದಂಬರಿಗಳ ತೂಕವೇ ಒಂದಾದರೆ ದುರ್ಗಾಸ್ತಮಾನದ ತೂಕವೇ ಒಂದು.  ದುರ್ಗಾಸ್ತಮಾನ ಅವರ magnum opus ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ. ದುರ್ಗದ ಜನರ ಅಭಿಮಾನವನ್ನು ಮನ್ನಿಸಿ, ಅವರ ಕೋರಿಕೆಯಂತೆ ಅದನ್ನು ಬರೆದಿದ್ದರಂತೆ ತರಾಸು. ಕೇವಲ ನಾಲ್ಕೇ ತಿಂಗಳಲ್ಲಿ ಬರೆದು ಮುಗಿಸಿದ ೬೦೦ ಪುಟಗಳ ಬೃಹತ್ ಕಾದಂಬರಿ. ಆಗ ಅವರ ಆರೋಗ್ಯ ಕೂಡ ತುಂಬಾ ಕೆಟ್ಟಿತ್ತು. ಆದರೆ ದುರ್ಗ ಎಂದರೆ ಅದೆಲ್ಲಿಂದ ಹುರುಪು ಉಕ್ಕಿ ಬರುತ್ತಿತ್ತೋ. ಚಿತ್ರದುರ್ಗದ ಅವಸಾನದ ಕೊನೆಯ ದಿನಗಳ ದುಃಖದ ಕಥೆಯನ್ನು ಸಾವಿರಾರು ಪುಟಗಳಲ್ಲಿ ಬರೆದಿದ್ದನ್ನು ೬೦೦ ಪುಟಗಳಿಗೆ ಇಳಿಸಬೇಕಾಗಿ ಬಂತಂತೆ. ದುರ್ಗದ ಬಗ್ಗೆ ಇರುವ ಎಲ್ಲ ಮಾಹಿತಿ ಅವರ ತಲೆಯಲ್ಲಿತ್ತು. ಬರೆಯಲು ಕುಳಿತರೆ ಓತಪ್ರೋತವಾಗಿ ಇಳಿದು ಬರುತ್ತಿತ್ತು. 

ದುರ್ಗಾಸ್ತಮಾನ ತರಂಗದಲ್ಲಿ ಪ್ರಕಟವಾದಾಗ ಅಲ್ಲಲ್ಲಿ ಬಿಡಿಬಿಡಿಯಾಗಿ ಓದಿದ್ದೆ. ತರಂಗ ನಾವು ತರಿಸುತ್ತಿದ್ದಿಲ್ಲ. ಅಲ್ಲಲ್ಲಿ ಕಂಡಾಗ ಪೂರ್ತಿಯಾಗಿ ಓದದೇ ಬಿಟ್ಟಿದ್ದಿಲ್ಲ. ಹಾಗಾಗಿ ದುರ್ಗಾಸ್ತಮಾನದ ರುಚಿ ನೋಡಿಯಾಗಿತ್ತು. ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟವಾದ ಎಷ್ಟೋ ವರ್ಷಗಳ ಮೇಲೆ ಪುಸ್ತಕ ರೂಪದಲ್ಲಿ ಪ್ರಕಟವಾಯಿತು ಎಂದು ನೆನಪು. ನಾನು ಕೆಲವು ವರ್ಷಗಳ ಹಿಂದೆಯಷ್ಟೇ ಅದನ್ನು ಕೊಂಡೆ. ಓದಿದೆ. ನಂತರ ಇಲ್ಲಿನ ಸಹೃದಯಿ ಪುಸ್ತಕಪ್ರೇಮಿಯೊಬ್ಬರಿಗೆ ಕೊಟ್ಟೆ. 

ಮಾಧ್ಯಮಿಕ ಶಾಲೆಗೆ ಬಂದ ನಂತರ ಪಠ್ಯೇತರ ಪುಸ್ತಕಗಳ ಓದು ಕೊಂಚ ಕಮ್ಮಿಯೇ ಆಯಿತು. ಪಿಯೂಸಿ ಮುಗಿಯುವವರೆಗೆ ಕನ್ನಡದ ಪುಸ್ತಕಗಳನ್ನು ಓದಿದ್ದು ಕಮ್ಮಿ. ಯಾವುದೇ ತರಹದ ಅಡೆತಡೆ, ಅನಿವಾರ್ಯತೆಗಳು ಇಲ್ಲದಿದ್ದರೆ ಕನ್ನಡದ ಕಾದಂಬರಿಗಳನ್ನು ಓದಿಕೊಂಡು, ಎಲ್ಲ ಸಿನೆಮಾಗಳನ್ನು ನೋಡಿಕೊಂಡು, ಮನಸ್ಸಾದಾಗ ಇಂಗ್ಲಿಷ್ ಪುಸ್ತಕಗಳನ್ನು ಓದಿಕೊಂಡು ಆರಾಮಾಗಿ ಇರುವುದು ಪರಮಸುಖ - utopia. ಆದರೆ ವಾಸ್ತವಿಕತೆಯನ್ನೂ ನೋಡಬೇಕಲ್ಲ. ಮನಸ್ಸಿರಲಿ ಇಲ್ಲದಿರಲಿ 'ಮಾರ್ಕ್ಸವಾದಿ'ಯಾಗಲೇಬೇಕು. ಒಂದಿಷ್ಟು ಒಳ್ಳೆ ಮಾರ್ಕ್ಸ್ ತೆಗೆಯಲೇಬೇಕು. ಹೊಟ್ಟೆತುಂಬಿಸುವಂತಹ ನೌಕರಿ ಕೊಡಬಹುದಾದ ಡಿಗ್ರಿಗಾಗಿ ಓದಲೇಬೇಕು. ಅದಕ್ಕಾಗಿ 'ಹೆಗ್ಗಣದ ಪಂದ್ಯ'ದಲ್ಲಿ (Rat race) ಓಡಿ ಗೆಲ್ಲಲೇಬೇಕು. ಹಾಗಾಗಿ ೧೯೮೫ ರ ನಂತರ ಕನ್ನಡ ಕಾದಂಬರಿ ಇತ್ಯಾದಿಗಳನ್ನು ತಾತ್ಕಾಲಿಕವಾಗಿ ಕಟ್ಟಿಡಬೇಕಾಯಿತು. 

ಮುಂದೆ ವೇಳೆ ಸಿಕ್ಕಾಗ ತರಾಸು ಚಿತ್ರದುರ್ಗದ ಬಗ್ಗೆ ಬರೆದ 'ಕಂಬನಿಯ ಕುಯಿಲು', 'ರಕ್ತರಾತ್ರಿ', ಇತ್ಯಾದಿಗಳನ್ನು ಓದಿದೆ. ಅವರ ಕೆಲವು ಸಾಮಾಜಿಕ ಕಾದಂಬರಿಗಳನ್ನೂ ಓದಿದೆ. ಅವರ ಕಾದಂಬರಿಯಾಧಾರಿತ 'ನಾಗರಹಾವು' ಇಂದಿಗೂ ನನ್ನ ಪ್ರೀತಿಯ ಚಿತ್ರ. ಆದರೆ ತರಾಸು ಆ ಚಿತ್ರದಿಂದ ಬೇಸರಗೊಂಡಿದ್ದರು. ನಿರ್ದೇಶಕ ಪುಟ್ಟಣ್ಣ ಕಣಗಾಲರು ತಮ್ಮ ಕಾದಂಬರಿಗೆ ನ್ಯಾಯ ಒದಗಿಸಲಿಲ್ಲ ಎಂದು ನೊಂದುಕೊಂಡು 'ಅದು ನಾಗರಹಾವಲ್ಲ. ಕೇರೆಹಾವು...' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. 

೧೯೬೦ ರ ದಶಕದಲ್ಲಿ ತರಾಸು ಬರೆಯುವದನ್ನು ಕೊಂಚ ಕಮ್ಮಿ ಮಾಡಿದರು. ಕರ್ನಾಟಕದ ಏಕೀಕರಣಕ್ಕೆ, ಕನ್ನಡ ಭಾಷೆಯ ಏಳ್ಗೆಗಾಗಿ ನಡೆದ ಚಳುವಳಿಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ನಾಯಕರಾದರು. ಆದರೂ ಪುಸ್ತಕಗಳ ಪ್ರಕಾಶಕರು ಅವರನ್ನು ಹಿಡಿದು ಬರೆಸದೇ ಬಿಡಲಿಲ್ಲ. ಇಡೀ ಕರ್ನಾಟಕವನ್ನು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸುತ್ತಿದರು. ಅದರಲ್ಲೇ ಬಿಡುವು ಮಾಡಿಕೊಂಡು ಸಾಕಷ್ಟು ಬರೆದರು. 

ಪತ್ನಿ ಅಂಬುಜಾ ತರಾಸು ಹೇಳುತ್ತಾರೆ... ತರಾಸು ಬರೆಯಲು ಕುಳಿತರು ಎಂದರೆ ಘಂಟೆಗಟ್ಟಲೆ ನಿರಂತರವಾಗಿ ಬರೆಯುತ್ತಲೇ ಕುಳಿತುಬಿಡುತ್ತಿದ್ದರು. ಕಾಫಿ ಸರಬರಾಜು ತಡೆಯಿಲ್ಲದೇ ನಡೆಯುತ್ತಿರಬೇಕು. ಸಿಗರೇಟಿನ ಪರಮಭಕ್ತರಾಗಿದ್ದರು. ಕಾಫಿ ಮತ್ತು ಸಿಗರೇಟು ಅವರ ಬರವಣಿಗೆ ಗಾಡಿಯ ಇಂಧನಗಳಾಗಿದ್ದವು. ಬರೆದು ಬರೆದು ಬೆರಳುಗಳು ಬಾತುಕೊಂಡರೆ ಪತ್ನಿ ಬಿಸಿನೀರು ಕಾಯಿಸಿ ಕೊಡುತ್ತಿದ್ದರು. ಅದರಲ್ಲಿ ಬೆರಳದ್ದಿಕೊಂಡು, ಸುಧಾರಿಸಿಕೊಂಡು ಬರವಣಿಗೆ ಮುಂದುವರೆಸುತ್ತಿದ್ದರೇ ವಿನಃ ನಿಲ್ಲಿಸುತ್ತಿದ್ದಿಲ್ಲ. ವಿಶ್ರಾಂತಿ ಪಡೆಯುತ್ತಿದ್ದಿಲ್ಲ. ಸೃಜನಶೀಲತೆ ಎಂದರೆ ಹಾಗೆಯೇ. ಸುಖಾಸುಮ್ಮನೆ ವೇಳಾಪಟ್ಟಿಗೆ ಅನುಗುಣವಾಗಿ ಒಸರುವುದಿಲ್ಲ. ಒರತೆ ಒಸರಿದಾಗ ಹಿಡಿದುಕೊಳ್ಳಬೇಕು. ಮನಸ್ಸಿನಲ್ಲಿ ಮೂಡಿದ್ದನ್ನು ಕಾಗದದ ಮೇಲೆ ಇಳಿಸಬೇಕು. ಬರಹಗಾರನ ಬದುಕೇನು ಸುಲಭವೇ?

ತರಾಸು ಜೀವನಚರಿತೆಯಲ್ಲಿ ತುಂಬಾ interesting ಅನ್ನಿಸುವಂತಹ ಜನ ಬಂದು ಹೋಗುತ್ತಾರೆ. ಮೈಸೂರಿನಲ್ಲಿ ನೆಲೆಸಿದ್ದಾಗ, ಆಗ ಮೆಡಿಕಲ್ ಓದುತ್ತಿದ್ದ ಲೇಖಕಿ ತ್ರಿವೇಣಿ ಅವರ ನೆರೆಹೊರೆಯವರು. ಮೆಡಿಕಲ್ ಓದುತ್ತಿರುವಾಗಲೇ ತ್ರಿವೇಣಿ ಬರೆಯುತ್ತಿದ್ದರು. ಆಗಲೇ ತ್ರಿವೇಣಿ ಸ್ತ್ರೀಸಮಾನತೆ, ಮಹಿಳಾ ಸಬಲೀಕರಣ ಮುಂತಾದ feminist ಪರಿಕಲ್ಪನೆಗಳ ಬಗ್ಗೆ ಖಡಕ್ ಅಭಿಪ್ರಾಯ ಹೊಂದಿದ್ದರು. ಟಿಪಿಕಲ್ ಸಂಪ್ರದಾಯಸ್ಥ ಗೃಹಿಣಿಯಂತೆ ಬಾಳುತ್ತಿದ್ದ ಅಂಬುಜಾ ತರಾಸು ಅವರನ್ನು ತ್ರಿವೇಣಿ ಕೇಳುತ್ತಿದ್ದರಂತೆ - 'ನೀವೇಕೆ ಅಷ್ಟೊಂದು ನಿಕೃಷ್ಟವಾಗಿ ಬಾಳುತ್ತೀರಿ? ಪತಿಯ ಎಲ್ಲ ಕಿರಿಕಿರಿ, ತೊಂದರೆ ಎಲ್ಲವನ್ನೂ ಏಕೆ ಬಾಯಿಮುಚ್ಚಿಕೊಂಡು ಸಹಿಸಿಕೊಳ್ಳುತ್ತೀರಿ? ಪ್ರತಿಭಟಿಸಬೇಕು ತಾನೇ?' ಅಂಬುಜಾ ತರಾಸು ನಕ್ಕು, 'ನೀನೇ ಬಂದು ನಮ್ಮ ಮನೆಯವರ ಹತ್ತಿರ ಮಾತಾಡಮ್ಮಾ' ಅಂದರೆ 'ಅವರ ಜೊತೆ ನಾನು ಮಾತಾಡುವುದೇ? ಅಷ್ಟು ದೊಡ್ಡ ಸಾಹಿತಿ ಜೊತೆ?' ಎಂದು ಭಯಮಿಶ್ರಿತ ಸಂಕೋಚ ವ್ಯಕ್ತಪಡಿಸುತ್ತಿದ್ದರಂತೆ ತ್ರಿವೇಣಿ. ಆದರೆ ತಾವು ಬರೆದ ಬರಹಗಳನ್ನು ತರಾಸು ಅವರಿಗೆ ಓದಲು ಕೊಡುತ್ತಿದ್ದರು. ಅವರ ಅಭಿಪ್ರಾಯ ಕೇಳುತ್ತಿದ್ದರು. ಅವೆಲ್ಲ ತಮ್ಮ ಬರವಣಿಗೆ ಅನುಕೂಲವಾಯಿತು ಎಂದು ತ್ರಿವೇಣಿ ಹೇಳಿಕೊಳ್ಳುತ್ತಿದ್ದರಂತೆ. 

ತರಾಸು ಅವರು ಮತ್ತೊಬ್ಬ ಕನ್ನಡದ ಕಟ್ಟಾಳು ಅನಕೃ ಅವರನ್ನು ತಮ್ಮ ಗುರು ಎಂದು ಭಾವಿಸಿದ್ದರು. ಇಬ್ಬರೂ ಕರ್ನಾಟಕದ ಏಕೀಕರಣಕ್ಕಾಗಿ, ಭಾಷೆಯ ಏಳಿಗೆಗಾಗಿ ಜೊತೆಯಾಗಿ ಹೋರಾಡಿದರು. ಜೊತೆಗೆ ಮ. ರಾಮಮೂರ್ತಿ ಕೂಡ ಇದ್ದರು. 

ತರಾಸು ಬರವಣಿಗೆ, ಚಳುವಳಿ ಎಂದೆಲ್ಲ ಬ್ಯುಸಿ ಆಗಿದ್ದರೆ ಮನೆ ಕಡೆ ಪೂರ್ತಿ ಜವಾಬ್ದಾರಿ ಅಂಬುಜಾ ಅವರದು. ತರಾಸು ಅವರಿಗೆ ಹಣದ ಬಗ್ಗೆ ಯಾವ ಕಾಳಜಿಯೂ ಇರಲಿಲ್ಲ. ಬರೆದಿದ್ದಕ್ಕೆ ಸಂಭಾವನೆ ತೆಗೆದುಕೊಳ್ಳದಿದ್ದರೆ ಜೀವನ ನಡೆಯುವದಿಲ್ಲ ಒಂದೇ ಕಾರಣಕ್ಕೆ ಸಂಭಾವನೆ ಬಗ್ಗೆ ಕೊಂಚ ಗಮನ ಕೊಡುತ್ತಿದ್ದರು. ಕೊಟ್ಟಷ್ಟು ತೆಗೆದುಕೊಳ್ಳುತ್ತಿದ್ದರು. ಲೆಕ್ಕ ಗಿಕ್ಕ ಇಟ್ಟು ಗೊತ್ತಿಲ್ಲ. ಹಾಗಾಗಿ ಎಷ್ಟೋ ಸಲ ಪೂರ್ತಿ ಸಂಭಾವನೆ ಬಂದಿದ್ದೇ ಇಲ್ಲ. ಅಂಬುಜಾ ಗಮನ ಕೊಡದಿದ್ದರೆ ಅಷ್ಟೂ ಬರುತ್ತಿರಲಿಲ್ಲ. 

ಕೈಯಲ್ಲಿ ಹಣ ಇದ್ದಾಗ ಶೋಕಿ ಮಾಡುವುದರಲ್ಲಿ ತರಾಸು ಕೊಂಚ ಮುಂದೆಯೇ. ಕೊಂಚ ಕಾಸು ಕೈಗೆ ಬಂದಾಗ ಒಂದು ಲಡಕಾಸಿ ಸೆಕೆಂಡ್ ಹ್ಯಾಂಡ್ ಕಾರ್ ಕೊಂಡರು. ಅದು ಲಡಕಾಸಿ ಅಂತ ನಂತರ ಗೊತ್ತಾಯಿತು. ಕಾರ್ ಕೊಂಡ ಸಂತಸದಲ್ಲಿ ಸಂಸಾರ ಸಮೇತ ಪ್ರವಾಸ ಕೈಗೊಂಡರು. ಬಳ್ಳಾರಿ ಕಡೆ ಇದ್ದಾಗ ಕಾರ್ ತಾಂತ್ರಿಕ ತೊಂದರೆಯಿಂದ ಕೆಟ್ಟು ನಿಂತಿತು. ಅಲ್ಲೇ ಯಾವುದೋ ಮೆಕ್ಯಾನಿಕ್ ಬಳಿ ರಿಪೇರಿಗೆ ಬಿಟ್ಟು, ರೈಲಿನಲ್ಲೋ ಬಸ್ಸಿನಲ್ಲೋ ಮನೆ ಮುಟ್ಟಿಕೊಂಡರು. ಎಷ್ಟೋ ದಿವಸಗಳ ನಂತರ ಮೆಕ್ಯಾನಿಕ್ ಪತ್ರ ಬರೆದ. ಕಾರನ್ನು ದುರಸ್ತಿ ಮಾಡಲು ಎಷ್ಟು ವೆಚ್ಚವಾಗುತ್ತದೆ ಎನ್ನುವುದರ ಬಗ್ಗೆ estimate ಕೊಟ್ಟಿದ್ದ. ಅಷ್ಟು ರೊಕ್ಕವಿಲ್ಲದ ತರಾಸು, 'ಕಾರ್ ಮಾರಿಬಿಡು ಮಾರಾಯಾ. ಮಾರಿ ಬಂದ ರೊಕ್ಕದಲ್ಲಿ ನಿನ್ನ ಖರ್ಚು ಇಟ್ಟುಕೊಂಡು, ಏನಾದರೂ ಉಳಿದಿದ್ದರೆ ನನಗೆ ಕಳಿಸು,' ಎಂದು ತಿರುಗಿ ಉತ್ತರ ಬರೆದು ಕಾರಿನ ಅಧ್ಯಾಯ ಬರಖಾಸ್ತು ಮಾಡಿದ್ದರು. ಇಂತಹ ವಿನೋದದ ಪ್ರಸಂಗಗಳೂ ಅವರ ಜೀವನಚರಿತ್ರೆಯಲ್ಲಿ ಕಂಡು ಬರುತ್ತವೆ. 

ತರಾಸು ೧೯೮೪ ರಲ್ಲಿ ತೀರಿಕೊಂಡಾಗ ಅವರಿಗೆ ಕೇವಲ ೬೪ ವರ್ಷ. ತುಂಬಾ ವರ್ಷ ಅನಾರೋಗ್ಯ ಕಾಡಿತ್ತು. ಅದು ಸ್ವಯಂಕೃತ ಅಪರಾಧ ಎಂದು ಮನೆಯವರ ಭಾವನೆ. ಎಲ್ಲದಕ್ಕೆ ಕಾರಣ ವಿಪರೀತವಾಗಿದ್ದ ಸಿಗರೇಟ್ ಸೇವನೆ ಮತ್ತು ಅಡ್ಡಾದಿಡ್ಡಿ ಜೀವನಶೈಲಿ. ಮಧ್ಯದಲ್ಲಿ ತೀವ್ರವಾಗಿ ಆರೋಗ್ಯ ಕೆಟ್ಟಾಗ ಒಮ್ಮೆ ಸಿಗರೇಟ್ ಬಿಟ್ಟಿದ್ದರು. ಅದರಿಂದ ಆರೋಗ್ಯ ಸಾಕಷ್ಟು ಸುಧಾರಿಸಿತ್ತು. ಆದರೆ ಮುಂದೊಮ್ಮೆ ಯಾರೋ ಹೇಳಿದರು 'ಆಗೀಗ ಸಿಗರೇಟ್ ಸೇವನೆ ಮಾಡಿದರೆ ತೊಂದರೆಯಿಲ್ಲ...' ಅಷ್ಟೇ ಸಾಕಾಯಿತು. ಆಗೀಗ ಸೇದೋಣ ಎಂದು ಮತ್ತೆ ಶುರುಮಾಡಿಕೊಂಡ ದುರಭ್ಯಾಸ ಆರೋಗ್ಯವನ್ನು ಕಸಿಯಿತು. ಮತ್ತೆ ಅವರು ಚೇತರಿಸಿಕೊಳ್ಳಲಿಲ್ಲ. ನಿಧನರಾಗುವ ಸಂದರ್ಭದಲ್ಲೂ ಅನೇಕ ಮಹತ್ವಾಕಾಂಕ್ಷೆಯ ಪುಸ್ತಕಗಳ ಮೇಲೆ ಕೆಲಸ ಮಾಡುತ್ತಿದ್ದರು. ಬೇಕಾಗುವ ಮಾಹಿತಿ ಸಂಗ್ರಹಿಸುತ್ತಿದ್ದರು. ಆದರೆ ಅವೆಲ್ಲಾ ಅಪೂರ್ಣವಾಗಿಯೇ ಉಳಿದವು. ಶೃಂಗೇರಿಯ ಬಗ್ಗೆ ಒಂದು ಅದ್ಭುತ ಗ್ರಂಥ ಬರೆಯಬೇಕು ಎಂದು ತುಂಬಾ ಆಸೆಪಟ್ಟಿದ್ದರು ತರಾಸು. ಆದರೆ ಅದು ಪೂರ್ಣಗೊಳ್ಳಲಿಲ್ಲ. 

ಕಳ್ಳಿ ನರಸಪ್ಪಯ್ಯ - ಚಿತ್ರದುರ್ಗದ ಇತಿಹಾಸದಲ್ಲಿ ಬರುವ ಒಬ್ಬ ಪ್ರಮುಖ ಆದರೆ ಅಷ್ಟೇ ವಿವಾದಾತ್ಮಕ ವ್ಯಕ್ತಿ. ಹೆಚ್ಚಿನ ಪುಸ್ತಕಗಳಲ್ಲಿ ಆತನನ್ನು ರಾಜದ್ರೋಹಿ ಎಂಬಂತೆ ಚಿತ್ರಿಸಲಾಗಿದೆ. ಆತ ಹೈದರ್, ಟಿಪ್ಪುವಿನೊಂದಿಗೆ ಒಳಸಂಧಾನ ಮಾಡಿಕೊಂಡು ಮದಕರಿ ನಾಯಕನ ಬೆನ್ನಿಗೆ ಚೂರಿ ಹಾಕಿದ. ಮೋಸ ಮಾಡಿದ ಎಂದು ಕಥೆ. ಮೀರ್ ಸಾದಿಕ್ ಮಾದರಿಯವನು ಎಂದುಕೊಳ್ಳಿ. ಆದರೆ ತರಾಸು ಮಾತ್ರ ಅವನನ್ನು ಒಬ್ಬ ತಪ್ಪಾಗಿ ಅರ್ಥೈಸಲ್ಪಟ್ಟ ಮೇಧಾವಿ ಎಂದು ಹೇಳುತ್ತಾರೆ. ಅವನು ಒಳ್ಳೆ ಸಲಹೆ ಕೊಡುತ್ತಿದ್ದ. ದುರಹಂಕಾರಿಯಾಗಿದ್ದ ಮದಕರಿಗೆ ಅವು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಅವರನ್ನು ನಿರ್ಲಕ್ಷ ಮಾಡಿದ. ಕಳ್ಳಿ ನರಸಪ್ಪಯ್ಯನನ್ನು ಅವಮಾನ ಮಾಡಿದ. ನೊಂದುಕೊಂಡ ಹಿರಿಜೀವ ಕಳ್ಳಿ ನರಸಪ್ಪ ದೂರವಾದ. ಸಂಸಾರದೊಂದಿಗೆ ದೇಶಾಂತರ ಹೋದ. ವಾಪಸ್ ಬರುವಷ್ಟರಲ್ಲಿ ಮದಕರಿ, ದುರ್ಗ ಎಲ್ಲ ನಿರ್ನಾಮವಾಗಿತ್ತು ಎಂದು ತರಾಸು ಅಭಿಪ್ರಾಯ. ಬಿ. ಎಲ್. ವೇಣು ಅದನ್ನು ಒಪ್ಪಲಿಲ್ಲ. ಇಬ್ಬರ ಮಧ್ಯೆ ಸಾಕಷ್ಟು ವಾದ ವಿವಾದಗಳು ಆದವು. ತರಾಸು ಅವರು ವೇಣು ಮೇಲೆ ಕೇಸ್ ಕೂಡ ಹಾಕಿದ್ದರಂತೆ. ಕೇಸ್ ನಿಲ್ಲಲಿಲ್ಲ. ಕಳ್ಳಿ ನರಸಪ್ಪ ಬ್ರಾಹ್ಮಣನಾಗಿದ್ದ ಎನ್ನುವ ಕಾರಣಕ್ಕೆ ಬ್ರಾಹ್ಮಣರೇ ಆಗಿದ್ದ ತರಾಸು ಆತನನ್ನು ಸುಭಗ ಎಂಬಂತೆ ಚಿತ್ರಿಸಲು ಪ್ರಯತ್ನಿಸಿ ವಿಫಲರಾದರು ಎಂದು ವೇಣು ಮೊನ್ನೆ ಕಲಾಮಾಧ್ಯಮಕ್ಕೆ ಕೊಟ್ಟ ಸಂದರ್ಶನವೊಂದರಲ್ಲಿ ಹೇಳಿದ್ದು ಕೇಳಿದ ನನಗೆ ಅದೊಂದು ಹೊಸ ವಿಷಯ.

ತರಾಸು ಅವರ ಜೀವನಚರಿತೆ ಮತ್ತು ಕೆಲವು ಕಾದಂಬರಿಗಳನ್ನು ಓದಲು ಬಯಸುವಿರಾದರೆ ಅವು ನಿಮಗೆ ಇಲ್ಲಿ ಸಿಗುತ್ತವೆ. ಓದುವ ಸುಖ ನಿಮ್ಮದಾಗಲಿ. https://manjunathtahir.blogspot.com/2014/11/kannada-novels-and-books-free-download.html. ಕೊಂಚ ಕೆಳವರೆಗೆ scroll ಮಾಡಿ. 

***

ಮತ್ತೆ ನಿಯಮಿತವಾಗಿ ಬ್ಲಾಗ್ ಬರೆಯಲು ಆರಂಭಿಸಿದ್ದೇನೆಯೇ? ಗೊತ್ತಿಲ್ಲ. ಅಪೂರ್ಣವಾಗಿರುವ ಇಂತಹ ತುಂಬಾ ಲೇಖನಗಳು ಇವೆ. ಅವನ್ನು ಪೂರ್ತಿಗೊಳಿಸುವ ಒಂದು ಪ್ರಯತ್ನ. ಅಷ್ಟು ಸುಲಭವಲ್ಲ. ಅಷ್ಟು ಚೆನ್ನಾಗಿಯೂ ಮೂಡಿ ಬರಲಿಕ್ಕಿಲ್ಲ. ಎಂದೋ ಯಾವುದೋ ಓಘದಲ್ಲಿ ಬರೆಯುತ್ತಿರುತ್ತೇವೆ. ಸಡನ್ನಾಗಿ ಬ್ರೇಕ್ ಹಾಕಿ ಅಪೂರ್ಣ ಲೇಖನವನ್ನು ಶೈತ್ಯಾಗಾರಕ್ಕೆ ನೂಕಿರುತ್ತೇವೆ. ಅದನ್ನು ಮುಂದೆಂದೋ ತೆಗೆದು, ತಿದ್ದಿ ತೀಡಿ ಪ್ರಕಟಿಸುತ್ತೇವೆ ಎಂದರೆ ಎಂದೋ ಸತ್ತ ಹೆಣಕ್ಕೆ ಎಂದೋ ಪೋಸ್ಟ್ ಮಾರ್ಟಮ್ ಮಾಡಿ ಮತ್ತೆಂದೋ ಶವಸಂಸ್ಕಾರ ಮಾಡಿದಂತೆಯೋ? ಗೊತ್ತಿಲ್ಲ. ಅಥವಾ ಅರ್ಧ ಸುಟ್ಟ ಹೆಣವನ್ನು ಗಂಗೆಯಲ್ಲಿ ತೇಲಿಬಿಟ್ಟಂತೆಯೋ? ಗೊತ್ತಿಲ್ಲ. ಹೊಟ್ಟೆಗೆ ಹಾಕಿಕೊಳ್ಳಿ. ಹೊಟ್ಟೆ ಕೆಟ್ಟರೆ ENO ಇದೆ ತಾನೇ? ಹೀ.... ಹೀ...ದರಿದ್ರ PJ :)

5 comments:

sunaath said...

ನನ್ನ ಬಾಲ್ಯದಲ್ಲಿ ನಾನೂ ಸಾಕಷ್ಟು ತರಾಸು ಅವರ ಕಾದಂಬರಿಗಳನ್ನು ಓದಿ ಖುಶಿ ಪಟ್ಟಿದ್ದೇನೆ. ಅವರ ಕಾದಂಬರಿಯ ಓಟವೆಂದರೆ ಕೆನೆಯುವ ಕುದುರೆಯ ಓಟದಂತೆ. ಭಾಶೆಯ ಬಗೆಗೆ ಅರಿಯಬೇಕಾದರೆ ತರಾಸು ಅವರ ಕಾದಂಬರಿಗಳನ್ನು ಓದಬೇಕು.

Mahesh Hegade said...

ತಮ್ಮ ಕಾಮೆಂಟಿಗೆ ಧನ್ಯವಾದಗಳು ಸುನಾಥ್ ಸರ್!

ತರಾಸು ಅವರ ಶೈಲಿಯ ವೇಗ ಮತ್ತು ಓಘದ ಬಗ್ಗೆ ತಮ್ಮ ಮಾತು ಸರಿಯಾಗಿದೆ ಸರ್.

ವಿ.ರಾ.ಹೆ. said...

ನಾನೂ ದುರ್ಗದ ಇತಿಹಾಸದ ಬಗ್ಗೆ ಓದಿ ರೋಮಾಂಚನಗೊಂಡಿದ್ದೇ ತರಾಸು ಕಾದಂಬರಿಗಳಿಂದ. ದುರ್ಗಾಸ್ತಮಾನ, ವಿಜಯೋತ್ಸವ ಮುಂತಾದವನ್ನು ಓದಿ ತಿಂಗಳುಗಟ್ಟಲೇ ಅದೇ ತಲೆಯಲ್ಲಿಟ್ಟುಕೊಂಡು ಹೋಗಿ ದುರ್ಗದ ಕೋಟೆ ಹತ್ತಿಬಂದದ್ದಿದೆ. ನೋ ಡೌಟ್, ಶ್ರೇಷ್ಟ ಕಾದಂಬರಿಕಾರರಲ್ಲೊಬ್ಬರು ನಮ್ಮ ತರಾಸು.

Mahesh Hegade said...

ವಿರಾಹೆ,

ಒಹೋ! ನೀನೂ ಚಿತ್ರದುರ್ಗದ aficionado ಹೇಳಿ ಆತು. ವೆರಿ ಗುಡ್!

Arathi said...

ದುರ್ಗಾಸ್ತಮಾನ‌ ಕಾದಂಬರಿಯನ್ನು ಓದುತ್ತಿದ್ದೇನೆ. ಎಂತಾ ರೋಚಕವಾದ ಕಥಾನಕ..ನಾಯಕ ಮದಕರಿನಾಯನ ಚರಿತ್ರೆ ,ದುರ್ಗದ ಇತಿಹಾಸ ಎಲ್ಲ ಕಣ್ಷಿಗೆ ಕಟ್ಟಿದಂತೆ ಮೂಡಿಸಿದ್ದಾರೆ ತರಾಸು ಅವರು.