Friday, July 30, 2021

ಭೂಗತಲೋಕದ ಕಥೆ ಹೇಳುವ ಕಿಂದರಜೋಗಿ ಬಲಜೀತ್ ಪರಮಾರ್...

ಕಳೆದ ಸುಮಾರು ಐದು ದಶಕಗಳಿಂದ ಅಪರಾಧಲೋಕದ ಬಗ್ಗೆ, ಅದರಲ್ಲೂ ಪ್ರಮುಖವಾಗಿ ಮುಂಬೈ ಭೂಗತಲೋಕದ ಬಗ್ಗೆ, ಖಡಕ್ಕಾಗಿ ನಿರ್ಭಿಡೆಯಿಂದ ನಿರ್ಭೀತಿಯಿಂದ ವರದಿ ಮಾಡಿಕೊಂಡು ಬರುತ್ತಿರುವ ಹಿರಿಯ ಪತ್ರಕರ್ತ, ಲೇಖಕ ಬಲಜೀತ್ ಪರಮಾರ್ YouTube ಮೇಲೆ ಚಾನೆಲ್ ಒಂದನ್ನು ಮಾಡಿಕೊಂಡ್ದಾರೆ. ಅದರ ಕೊಂಡಿ ಇಲ್ಲಿದೆ - Baljeet Parmar 4 U

ಭೂಗತಲೋಕದ ಕಥೆಗಳನ್ನು ರೋಚಕವಾಗಿ, ಆದರೆ ಅನಗತ್ಯವಾಗಿ ವೈಭವೀಕರಿಸದೆ, ಯಾವುದೇ ಡಾನ್ ಗಳಿಗೆ ಬಕೆಟ್ ಹಿಡಿಯದೆ, ಏಕ್-ಮಾರ್-ದೋ-ತುಕಡಾ ಮಾದರಿಯಲ್ಲಿ ವರದಿ ಮಾಡುವುದರಲ್ಲಿ ಬಲಜೀತ್ ಪರಮಾರ್ ನಿಸ್ಸೀಮರು. ಆ ವಿಷಯದಲ್ಲಿ ಅವರಿಗೆ ಅವರೇ ಸಾಟಿ. 

ಇಷ್ಟು ಓದಿದ ನಂತರ ಈ ಬ್ಲಾಗ್ ಪೋಸ್ಟನ್ನು ಜಾಸ್ತಿ ಜನ ಓದಲಿಕ್ಕಿಲ್ಲ. ಸೀದಾ YouTube ಗೆ ಹೋಗಿ ಬಲಜೀತ್ ಹೇಳುವ ಕಥೆಗಳಲ್ಲಿ ತಲ್ಲೀನರಾಗಿಬಿಟ್ಟಾರು. ಆದರೂ ಬಲಜೀತ್ ಪರಮಾರ್ ಬಗ್ಗೆ ಒಂದಿಷ್ಟು buildup ಕೊಡುತ್ತೇನೆ. 

೧೯೯೭ ರಲ್ಲಿ ಡಾನ್ ಛೋಟಾ ರಾಜನ್ ಇವರ ಮೇಲೆ ಗುಂಡಿನ ದಾಳಿ ಮಾಡಿಸಿದ್ದ. ಒಂಬತ್ತು ಜನ ಹಂತಕರು ಹಲವಾರು ಗುಂಡು ಹಾರಿಸಿದ್ದರು. ಮೂರ್ನಾಲ್ಕು ಇವರಿಗೂ ಬಿದ್ದಿತ್ತು. ಗುಂಡು ಹಾರುತ್ತಿರುವಾಗ ಪ್ರಾಣವನ್ನು ಕಾಪಾಡಿಕೊಳ್ಳಲು ಓಡುವುದನ್ನು ಬಿಟ್ಟು, ಬರಿಗೈಯಲ್ಲಿ ಹಂತಕರ ಮೇಲೆ ಬಿದ್ದಿದ್ದರು ಈ ಧೀರ ಪತ್ರಕರ್ತ. ದಾಳಿಕೋರರ ಮೋಟಾರ್ ಸೈಕಲ್ ಹ್ಯಾಂಡಲ್ ಹಿಡಿದುಕೊಂಡವರು ಅದನ್ನು ಬಿಡಲೇ ಇಲ್ಲ. ಹಂತಕರೇ ಬೈಕ್ ಬಿಟ್ಟು ಓಡಿಹೋಗಿದ್ದರು. ಅದೃಷ್ಟ ಚೆನ್ನಾಗಿತ್ತು. ಗುಂಡೇಟು ತಿಂದರೂ ಬಚಾವಾದರು. ಚೇತರಿಸಿಕೊಂಡು ವರದಿಗಾರಿಕೆಯನ್ನು ಮೊದಲಿನಂತೆಯೇ ಮುಂದುವರೆಸಿದರು. ದಾಳಿ ಮಾಡಿಸಿದ್ದ ಡಾನ್ ರಾಜನ್ ಮುಂದೊಂದು ದಿವಸ ಇದೇ ಪರಮಾರ್ ಸಾಹೇಬ್ರಿಗೆ ಫೋನ್ ಮಾಡಿ ತಪ್ಪು ಗ್ರಹಿಕೆಯ ಕಾರಣದಿಂದ ದಾಳಿ ಮಾಡಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದ. ಮುಂದೊಂದು ದಿನ ಡಾನ್ ರಾಜನ್ ಪತ್ನಿಯನ್ನು ಮುಂಬೈ ಪೊಲೀಸರು ಬಂಧಿಸಿ, ಆ ಮೂಲಕ ವಿದೇಶದಲ್ಲಿ ನೆಲೆಸಿದ್ದ ರಾಜನ್ ಮೇಲೆ ಒತ್ತಡ ಹಾಕಿದಾಗ ಇವರಿಗೇ ಫೋನ್ ಮಾಡಿ ಗೊಳೋ ಅಂದಿದ್ದ. ಸಹಾಯ ಮಾಡುವಂತೆ ಕೇಳಿಕೊಂಡಿದ್ದ. 

'ನಿಮ್ಮ ಮೇಲೆ ಅಂದು ದಾಳಿ ಮಾಡಿದ್ದ ಒಂಬತ್ತು ಜನ ರೌಡಿಗಳು ಏನಾದರು?' ಎಂದು ಕೇಳಿದರೆ, 'ಅವರಲ್ಲಿ ಐದು ಜನ ಗ್ಯಾಂಗ್ ಘರ್ಷಣೆಗಳಲ್ಲಿ ಪರಸ್ಪರ ಬಡಿದಾಡಿಕೊಂಡು ಸತ್ತರು. ಉಳಿದ ನಾಲ್ವರನ್ನು ಪೊಲೀಸರು ಎನ್ಕೌಂಟರುಗಳಲ್ಲಿ ಉಡಾಯಿಸಿಬಿಟ್ಟರು. ನಾನು ಮಾತ್ರ ಆರಾಮಾಗಿದ್ದೇನೆ,' ಎಂದು ನಿರುಮ್ಮಳವಾಗಿ ಹೇಳುತ್ತಾರೆ ಬಲಜೀತ್ ಪರಮಾರ್. 

ಭೂಗತಲೋಕದ ಬಗ್ಗೆ ವರದಿ ಮಾಡಲು ಹೋಗಿ, ಅಲ್ಲೇನೋ ಲಫಡಾ ಆಗಿ, ಯಾರದ್ದೋ ಕೆಂಗಣ್ಣಿಗೆ ಗುರಿಯಾಗಿ ದಾಳಿಗೆ ಒಳಗಾದವರು ಅಥವಾ ಗುಂಡೇಟು ತಿಂದು ಶಿವನ ಪಾದ ಸೇರಿದ ಪತ್ರಕರ್ತರು ಸುಮಾರು ಜನ ಇದ್ದಾರೆ. ಆದರೆ ಸಾಮಾಜಿಕ ಬದ್ಧತೆಯಿಂದ, ಯಾವುದೋ ಒಳ್ಳೆಯ ಕೆಲಸವನ್ನು ಬೆಂಬಲಿಸಲು ಹೋಗಿ, ಆ ಕಾರಣದಿಂದ ಭೂಗತರ ಕೆಂಗಣ್ಣಿಗೆ ಗುರಿಯಾಗಿ, ಆ ಕಾರಣಕ್ಕೆ ಗುಂಡೇಟು ತಿಂದ ಪತ್ರಕರ್ತರು ಇರಲಿಕ್ಕಿಲ್ಲ. ಆದರೆ ಬಲಜೀತ್ ಅಂತಹವರು. 

ಮುಂಬೈನ ಖ್ಯಾತ ಎನ್ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ದೊಡ್ಡ ತೊಂದರೆಗೆ ಸಿಕ್ಕಾಕಿಕೊಂಡಿದ್ದರು. ಭ್ರಷ್ಟಾಚಾರದ ಕೇಸಿನಲ್ಲಿ ಅಮಾನತ್ತಾಗಿದ್ದರು. ಆರು ವರ್ಷವಾದರೂ ಸರ್ಕಾರ ಅವರ ಬಗ್ಗೆ ಒಂದು ನಿರ್ಣಯ ಕೈಗೊಳ್ಳಲಿಲ್ಲ. ಅಮಾನತ್ತಿನ ತ್ರಿಶಂಕುಸ್ವರ್ಗದಲ್ಲಿ ದಯಾರನ್ನು ನೇತಾಕಿ ಮಾನಸಿಕ ಹಿಂಸೆ ನೀಡಿತು ಸರ್ಕಾರ. ಎಲ್ಲದಕ್ಕೆ ಕಾರಣ ಪೊಲೀಸ್ ಇಲಾಖೆಯಲ್ಲಿನ ರಾಜಕೀಯ ಮತ್ತು ಗುಂಪುಗಾರಿಕೆ. ದೊಡ್ಡ ತಲೆಗಳ ತಿಕ್ಕಾಟಕ್ಕೆ ದಯಾ ನಾಯಕರಂತಹ ಅಧಿಕಾರಿ ಬಲಿಯಾಗಿದ್ದರು ಎಂದು ಸುದ್ದಿ. ಆರು ವರ್ಷಗಳಾದರೂ ಒಂದು ತೀರ್ಮಾನ ಸಿಗದ ದಯಾ ತುಂಬಾ ಬೇಸರಗೊಂಡಿದ್ದರು. ಎಲ್ಲ ಪ್ರಯತ್ನ ಮಾಡಿದ್ದರು. ಏನೂ ಉಪಯೋಗವಾಗಿರಲಿಲ್ಲ. ಅದೇನೋ ಕಾರಣದಿಂದ ದಯಾ ನಾಯಕ್ ಮತ್ತು ಬಲಜೀತ್ ಪರಮಾರ್ ಭೇಟಿಯಾಗುವ ಸಂದರ್ಭ ಬಂತು. ದಯಾರ ಕಥೆ ಕೇಳಿದ ಬಲಜೀತ್ ಕರಗಿದರು. ಒಳ್ಳೆ ಮನುಷ್ಯನಿಗೆ ಅನ್ಯಾಯವಾಗಿದೆ ಅನ್ನಿಸಿತು. ತಮಗೆ ಪರಿಚಯವಿದ್ದ ಅಂದಿನ ಡಿಜಿಪಿ ವಿರ್ಕರನ್ನು ಕಂಡು ಅವರನ್ನು ಕೇಳಿಕೊಂಡಿದ್ದು ಇಷ್ಟೇ - 'ದಯಾ ನಾಯಕನಿಗೆ ಒಂದು ದಾರಿ ತೋರಿಸಿ. ಭ್ರಷ್ಟ ಎಂದು ಸಾಬೀತಾಗಿದೆಯೇ? ಆಗಿದ್ದರೆ ಮುಲಾಜಿಲ್ಲದೆ ವಜಾಗೊಳಿಸಿ ಮನೆಗೆ ಕಳಿಸಿ. ಇಲ್ಲವಾದರೆ ಇಲಾಖೆಗೆ ಮರಳಿ ತೆಗೆದುಕೊಂಡು ಒಂದು ಪೋಸ್ಟಿಂಗ್ ಕೊಡಿ. ಆ ಮನುಷ್ಯ ಖಿನ್ನತೆಯಿಂದ ಆತ್ಮಹತ್ಯೆಯ ವಿಚಾರ ಕೂಡ ಮಾಡುತ್ತಿದ್ದಾನೆ. ಹಾಗೇನಾದರೂ ಆದರೆ ದೊಡ್ಡ ದುರಂತವಾಗುತ್ತದೆ. ಪ್ಲೀಸ್ ಸರ್!' ಎಂದವರೇ ಡಿಜಿಪಿ ವಿರ್ಕ್ ಸಾಹೇಬರ ಮರುಮಾತಿಗೂ ಕಾಯದೆ ಎದ್ದು ಬಂದಿದ್ದರು. ವಿರ್ಕ್ ಸಾಹೇಬರು ಮುಂದಿನ ಕೆಲ ದಿವಸಗಳಲ್ಲೇ ದಯಾ ನಾಯಕರನ್ನು ಮರುನೇಮಕ ಮಾಡಿಕೊಂಡಿದ್ದರು. ಹೀಗೆ ಒಬ್ಬ ಒಳ್ಳೆ ಅಧಿಕಾರಿಗೆ ಸಹಾಯ ಮಾಡಿದ ಪುಣ್ಯ ಬಲಜೀತ್ ಪರಮಾರ್ ಸಂಪಾದಿಸಿದ್ದರು. 

ನಮಗೆಲ್ಲಾ ೧೯೮೦ ರ ದಶಕದಲ್ಲಿ ಮುಂಬೈ ಭೂಗತಜಗತ್ತು ಹೇಗಿರುತ್ತದೆ ಎಂಬುದನ್ನು ವರದಿಗಳ ಮೂಲಕ ತಿಳಿಸಿಕೊಟ್ಟವರು ಬಲಜೀತ್ ಪರಮಾರ್. ಆಗ 'ಮಿಡ್ ಡೇ' ಪತ್ರಿಕೆಯಲ್ಲಿ ಅವರ ವರದಿಗಳು ಸದಾ ಪ್ರಕಟವಾಗುತ್ತಿದ್ದವು. ಅವುಗಳನ್ನು ಕನ್ನಡದ ಪತ್ರಿಕೆಗಳು ಕನ್ನಡೀಕರಿಸಿ ಪ್ರಕಟಿಸುತ್ತಿದ್ದವು. 'ವಾರ ಪತ್ರಿಕೆ'ಯಲ್ಲಿ ಓದಿದ ನೆನಪು. ದಾವೂದ್ ಇಬ್ರಾಹಿಮ್ಮನ ಅಣ್ಣ ಸಬೀರ್ ಇಬ್ರಾಹಿಮ್ಮನ ಹತ್ಯೆಯ ವರದಿಯನ್ನು ಅದೆಷ್ಟು ಸೊಗಸಾಗಿ ಬರೆದಿದ್ದರು ಅಂದರೆ ಒಂದು ಥ್ರಿಲ್ಲರ್ ನೋಡಿದ ಹಾಗಿತ್ತು. ಅದರಲ್ಲಿ ಎಲ್ಲ ಸಹಜ ಮಸಾಲೆಯಿತ್ತು. ಪ್ರಳಯಾಂತಕ ರೌಡಿ ಸಬೀರ್ ಇಬ್ರಾಹಿಂ, ಅವನ ಜೊತೆ ಆ ಹೊತ್ತಿನ ಸಂತೋಷಕ್ಕಾಗಿ ಒಂದು ಪಟಾಕಾ ಮಾಲ್ ಹುಡುಗಿ, ಅವರ ರೋಮ್ಯಾನ್ಸ್, ಪೆಟ್ರೋಲ್ ಹಾಕಿಸಲು ನಿಂತಾಗ ಬಂದೆರಗುವ ಪಠಾಣ್ ಗ್ಯಾಂಗಿನ ಹಂತಕರ ಪಡೆ, ನಂತರ ಕೆಲಕಾಲ ನಿರಂತರವಾಗಿ ಮೊರೆಯುವ ಬಂದೂಕುಗಳು, ಮಾಯವಾದ ಹುಡುಗಿ, ಹೆಣವಾಗಿ ಬಿದ್ದ ಸಬೀರ್. 

ಮುಂದೇನಿದೆ? ಸಬೀರ್ ಇಬ್ರಾಹಿಮ್ಮನ ಹತ್ಯೆಯಾಗಿದ್ದೇ ಆಗಿದ್ದು ಕ್ರುದ್ಧಗೊಂಡ ದಾವೂದ್ ಇಬ್ರಾಹಿಮ್  ಪಠಾಣ್ ಗ್ಯಾಂಗಿನ ವಿರುದ್ಧ ಬಹಿರಂಗ ಸಮರ ಸಾರಿದ. ಮುಂಬೈನ ಗಲ್ಲಿಗಲ್ಲಿಗಳಲ್ಲಿ ರಕ್ತದ ಓಕುಳಿ. ಗ್ಯಾಂಗ್ ಯುದ್ಧವನ್ನು ಒಂದು ಹಂತಕ್ಕೆ ತಂದಾದ ಮೇಲೆಯೇ ದಾವೂದ್ ದುಬೈಗೆ ಉಡ್ಕಿ ಹಾರಿದ್ದು. ಅಲ್ಲಿಂದ ಭಾರತದ ಭೂಗತಲೋಕವನ್ನು ಆಳಿದ್ದು. ಅದು ೧೯೮೫ ರ ಸಮಯ. 

ಇವೆಲ್ಲಾ ಕಥೆಗಳನ್ನು ಬಲಜೀತ್ ರೋಚಕವಾಗಿ ಹೇಳುತ್ತಾರೆ. ಅವರಿಗೆ ಈಗ ಸುಮಾರು ೭೫-೮೦ ವರ್ಷವಾದರೂ ನೆನಪಿನ ಶಕ್ತಿ ತುಂಬಾ ಚೆನ್ನಾಗಿದೆ. 

ಚಿತ್ರನಟ ಸಂಜಯ್ ದತ್  ಮುಂಬೈ ಸ್ಫೋಟಗಳಲ್ಲಿ, ಪರೋಕ್ಷವಾಗಿ, ಭಾಗಿಯಾಗಿದ್ದಾನೆ ಎಂದು ಸುದ್ದಿಯನ್ನು ಬ್ರೇಕ್ ಮಾಡಿದವರೇ ಬಲಜೀತ್. ಆ ಸುದ್ದಿಯನ್ನು ಅವರು ಬೇಟೆಯಾಡಿದ್ದೇ ಒಂದು ರೋಚಕ ಕಥೆ. ಬೆರಳು ತೋರಿಸಿದರೆ ದೇಹವನ್ನೇ ನುಂಗಿಬಿಡುವ ಪ್ರಳಯಾಂತಕ ಈತ. ಆ ಸುದ್ದಿಯೊಂದು ಬ್ರೇಕ್ ಆಗದಿದ್ದರೆ ಸಂಜಯ್ ದತ್ ಬಚಾವಾಗಿದ್ದರೂ ಆಶ್ಚರ್ಯವಿರಲಿಲ್ಲ. ಏಕೆಂದರೆ ಆತನ ತಂದೆ ಸುನಿಲ್ ದತ್ ಪ್ರಭಾವಿ ರಾಜಕೀಯ ಮುಖಂಡರಾಗಿದ್ದರು. ಹಣಬಲವಿತ್ತು. ಜನಪ್ರಿಯತೆ ಇತ್ತು. ಆದರೆ ಥ್ಯಾಂಕ್ಸ್ ಟು ಬಲಜೀತರ ವರದಿಗಳು ಸಂಜಯ್ ದತ್ ಪೊಲೀಸರ ಮುಂದೆ ಎಲ್ಲ ಒಪ್ಪಿಕೊಂಡ. ಆತನನ್ನು ಮುಂದೆ ಕೂಡಿಸಿಕೊಂಡು ವಿಚಾರಣೆ ಮಾಡಿದ್ದ ಖಡಕ್ ಪೊಲೀಸ್ ಆಫೀಸರ್ ರಾಕೇಶ್ ಮಾರಿಯಾ ನಖರಾ ಮಾಡಿದ ಹೀರೊ ದತ್ತನ ಭುಜದವರೆಗೆ ಬೆಳೆಸಿಕೊಂಡಿದ್ದ ಜುಟ್ಟು ಹಿಡಿದು ಕಪಾಳಕ್ಕೆ ರಪ್ರಪಾ ರಪ್ರಪಾ ಎಂದು ಬಾರಿಸಿದ್ದೆ ಎಂದು ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ಅದೆಲ್ಲಾ ಆಗಿದ್ದು ಬಲಜೀತರ ವರದಿಗಳ ಫಲಶ್ರುತಿ. 

ಮತ್ತೊಬ್ಬ ಚಿತ್ರನಟ ಫರ್ದೀನ್ ಖಾನ್ ಎಂಬ ಎಡಬಿಡಂಗಿ ಕೊಕೇನ್ ಖರೀದಿಸಿ ಸಿಕ್ಕಾಕಿಕೊಂಡಿದ್ದೂ ಸಹ ಮುಚ್ಚಿಹೋಗುತ್ತಿತ್ತೋ ಏನೋ. ಅದನ್ನೂ ಬಲಜೀತ್ ಬಿಡಲಿಲ್ಲ. ವಿಸ್ತ್ರತವಾಗಿ ವರದಿ ಮಾಡಿದ್ದರು. ಅದೆಷ್ಟು ಚೆನ್ನಾಗಿ ವರದಿ ಮಾಡಿದ್ದರು ಅಂದರೆ ಮಾದಕದ್ರವ್ಯ ನಿಗ್ರಹ ದಳ (NCB), 'ನೀವೇ ನಮ್ಮ ಪರವಾಗಿ ಉಳಿದ ಮಾಧ್ಯಮದವರಿಗೆ ಒಂದು ಬ್ರೀಫಿಂಗ್ ಕೊಟ್ಟುಬಿಡಿ,' ಅಂದಿತ್ತು. ಅದೊಂದು ತಮಾಷೆಯ ಘಟನೆ. ನೀವದನ್ನು YouTube ಮೇಲೆ ನೋಡಿ, ಕಥೆಯನ್ನು ಅವರ ಬಾಯಲ್ಲೇ ಕೇಳಿ ಆನಂದಿಸಬೇಕು. 

ಡಾನ್ ದಾವೂದ್ ಇಬ್ರಾಹಿಂನ ಪರಮಾಪ್ತ, ಕುಖ್ಯಾತ ಮಾದಕವಸ್ತುಗಳ ಕಳ್ಳಸಾಗಾಣಿಕೆದಾರ ಇಕ್ಬಾಲ್ ಮಿರ್ಚಿಯನ್ನು ತಡವಿಕೊಳ್ಳಲೂ ಹಿಂದೆಮುಂದೆ ನೋಡಲಿಲ್ಲ ಬಲಜೀತ್. ಇವರು ಮಾಡಿದ ಖಡಕ್ ವರದಿಗಳಿಂದ ಇಕ್ಬಾಲ್ ಮಿರ್ಚಿಯ ಕುಖ್ಯಾತ ಕ್ಯಾಬರೆ ಅಡ್ಡೆಯೊಂದು ಶಾಶ್ವತವಾಗಿ ಬೀಗ ಜಡಿಸಿಕೊಂಡಿತು. 'ಏನು ಸಾಬ್ ಹೀಗೆ ಮಾಡಿಬಿಟ್ಟಿರಿ?' ಎಂದು ಲಂಡನ್ನಿನಲ್ಲಿ ನೆಲೆಸಿದ್ದ ಇಕ್ಬಾಲ್ ಮಿರ್ಚಿ ಫೋನ್ ಮಾಡಿ ಗೋಳಾಡಿಕೊಂಡರೆ, 'ಅಲ್ಲಪ್ಪಾ, ನೀನು ಕ್ಯಾಬರೆ ನಡೆಸು. ಆದರೆ ಕಾನೂನುಬದ್ಧವಾಗಿ ನಡೆಸು. ನಿನ್ನ ಕ್ಯಾಬರೆ ಅಡ್ಡೆಯಲ್ಲಿ ಏನೇನು ಅಕ್ರಮಗಳು ನಡೆಯುತ್ತವೆ ಎಂದು ನಿನಗೆ ಗೊತ್ತೇ? ಗೊತ್ತಿಲ್ಲದಿದ್ದರೆ ನನ್ನ ವರದಿಗಳನ್ನು ಓದು,' ಎಂದು ಹೇಳಿ ಫೋನ್ ಇಟ್ಟಿದ್ದರು. ಅರ್ಥಮಾಡಿಕೊಂಡ ಮಿರ್ಚಿ 'ಲಂಡನ್ನಿಗೆ ಬನ್ನಿ ಸಾಬ್!' ಅಂದಿದ್ದ. ಆಮಿಷಗಳಿಗೆ ಒಳಗಾಗುವ ಪಾರ್ಟಿ ಇದಲ್ಲ ಎಂದು ಗೊತ್ತಾದ ಮೇಲೆ ಇವರ ಒಳ್ಳೆ ಮಾಹಿತಿದಾರನಾಗಿದ್ದ. ಖತರ್ನಾಕ್ ಮಾಹಿತಿಗಳನ್ನು ಕೊಡುತ್ತಿದ್ದ. ಬಲಜೀತರ ಸ್ಪೋಟಕ ವರದಿಗಳಿಗೆ ಅಂತಹ ಮಾಹಿತಿಗಳೇ ಬೇಕು. 

ದಾವೂದ್ ಬಗ್ಗೆ ಪುಂಖಾನುಪುಂಖವಾಗಿ ಬರೆಯುವವರು ಬಹಳ ಜನ. ಎಲ್ಲ ಊಹಾಪೋಹ. ೧೯೯೩ ರ ಮುಂಬೈ ಸ್ಫೋಟಗಳ ನಂತರ ದಾವೂದ್ ಯಾರ ಕಣ್ಣಿಗೂ ಬಿದ್ದಿಲ್ಲ. ಯಾವ ವರದಿಗಾರರ ಜೊತೆಗೂ ಮಾತಾಡಿಲ್ಲ. ಬಲಜೀತ್ ಕೂಡ ಆತ ಅವರ ಜೊತೆ ಮಾತಾಡಿದ ಎಂದು ಎಲ್ಲೂ ಹೇಳಿಕೊಂಡಿಲ್ಲ. ಆದರೆ ೧೯೯೩ ರ ಮೊದಲೂ ಸಹ ದಾವೂದನನ್ನು ಭೇಟಿಯಾದವರು ಬಹಳ ಕಮ್ಮಿ. ಆದರೆ ಬಲಜೀತ್ ಹಲವಾರು ಬಾರಿ ದಾವೂದನನ್ನು ಭೇಟಿಯಾಗಿದ್ದಾರೆ. ಎಲ್ಲಿಯವರೆಗೆ ಅಂದರೆ ಒಮ್ಮೆ ದಾವೂದ್ ಮತ್ತು ಆತನ ಬೀಗರು, ಅಂದರೆ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಜಾವೇದ್ ಮಿಯಾಂದಾದ್, ಬಲಜೀತರನ್ನು ಲಂಡನ್ನಿನಲ್ಲಿ ಭೇಟಿಯಾಗಿದ್ದೊಂದೇ ಅಲ್ಲ ಕ್ಯಾಸಿನೊ ಅದು ಇದು ಎಂದು ಸುತ್ತಾಡಿಸಿದ್ದರಂತೆ. ಆ ಘಟನೆಯ ಬಗ್ಗೆ ಕೂಡ ಒಂದು ವಿವರವಾದ ವಿಡಿಯೋ ಮಾಡಿದ್ದಾರೆ ಬಲಜೀತ್. 

ಭೂಗತಲೋಕದ ಜೊತೆಗಿನ ತಮ್ಮ ಸಂಪರ್ಕಗಳನ್ನು ವೈಯಕ್ತಿಕ ಫಾಯಿದೆಗಳಿಗಾಗಿ ಬಳಸಿಕೊಂಡ ಅನೇಕ ಪೊಲೀಸ್ ಅಧಿಕಾರಿಗಳಿದ್ದಾರೆ. ಪತ್ರಕರ್ತರಿದ್ದಾರೆ. ರಾಜಕಾರಣಿಗಳೂ ಇದ್ದಾರೆ. ಒಮ್ಮೆ ಒಳ್ಳೆ ಸ್ನೇಹ ಸಂಬಂಧ ಬೆಳೆದ ನಂತರ ಭೂಗತರೂ ಇಂತವರ ಮಾತು ಕೇಳುತ್ತಾರೆ. ಸಹಾಯ ಕೇಳಿದರೆ ಸಾಧ್ಯವಾಗುವಂತಹ ಕೆಲಸವಾದರೆ ಮಾಡಿಯೂ ಕೊಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತಾವೇ ದೊಡ್ಡ ಡಾನ್ ಆಗಿ ಬಿಡುತ್ತಾರೆ. ವಸೂಲಿ, ಕಮಿಷನ್ ದಂಧೆಗೆ ನಿಂತುಬಿಡುತ್ತಾರೆ. ಆದರೆ ಬಲಜೀತ್ ಹಾಗಲ್ಲ. ಅವರಿಗೆ ಸಂಪೂರ್ಣವಾಗಿ ಅರಿವಿತ್ತು. ತಮ್ಮ ಸಂಪರ್ಕಗಳನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳಲಿಲ್ಲ. ಆದರೆ ಇನ್ನೊಬ್ಬರಿಗೆ ಸಹಾಯವಾಗುತ್ತದೆ ಎಂದರೆ ಮುದ್ದಾಂ ಉಪಯೋಗಿಸಿಕೊಂಡರು. ಉದಾಹರಣೆಗೆ ಡಿಜಿಪಿ ವಿರ್ಕ್ ಜೊತೆಗಿನ ಸಂಪರ್ಕವನ್ನು ಉಪಯೋಗಿಸಿಕೊಂಡು ದಯಾ ನಾಯಕರ ವೃತ್ತಿ ಜೀವನವನ್ನು ಮರಳಿ ಹಳಿ ಹತ್ತಿಸಿಕೊಟ್ಟರು. 

ಮತ್ತೊಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಬಲಜೀತ್. ೧೯೯೫ ರಲ್ಲಿ ಪ್ರದೀಪ್ ಜೈನ್ ಎಂಬ ರಿಯಲ್ ಎಸ್ಟೇಟ್ ಕುಳವನ್ನು ದಾವೂದ್ ಗ್ಯಾಂಗ್ ಉಡಾಯಿಸಿತು. ಆತ ವಸೂಲಿ ರೊಕ್ಕ ಕೊಡಲು ತಡಮಾಡಿದ್ದ. ದಾವೂದ್ ಪರವಾಗಿ ಅಬು ಸಲೇಂ ಫೋನ್ ಮಾಡಿ ಧಮ್ಕಿ ಹಾಕಿದ. ಪ್ರದೀಪ್ ಜೈನ್ ಅದ್ಯಾವ ಮೂಡಿನಲ್ಲಿದ್ದನೋ ಗೊತ್ತಿಲ್ಲ. ಅವನೂ ಕೊಂಚ ತಿರಸಟ್ಟನಂತೆ ಉದ್ಧಟತನದಿಂದ ಮಾತಾಡಿಬಿಟ್ಟ. ಮಹಾ ದುರಹಂಕಾರಿ ಅಬು ಸಲೇಂಗೆ ಅಷ್ಟೇ ಸಾಕಾಯಿತು. ಕೊಡುವ ರೊಕ್ಕವನ್ನೂ ಕೊಟ್ಟಿಲ್ಲ. ಮೇಲಿಂದ ರೋಪ್ ಹಾಕುತ್ತಾನೆ ಎಂದುಕೊಂಡವನೇ 'ಸಾಲೇ ಕೋ ಉಡಾ ಡಾಲೋ' ಎಂದು ಆಜ್ಞೆ ಮಾಡಿದ. 

'ನೀನು ಪ್ರದೀಪ್ ಜೈನ್ ತಾನೇ?' ಎಂದು ಖಾತ್ರಿ ಮಾಡಿಕೊಂಡೇ ಹಂತಕರು ಪ್ರದೀಪ್ ಜೈನನನ್ನು ಎತ್ತಿದ್ದರು. ಅಬು ಸಲೇಂ ಅದೆಷ್ಟು ದುಷ್ಟ ಮತ್ತು ಕ್ರೂರಿ ನೋಡಿ. ಪ್ರದೀಪ್ ಜೈನ್ ಸತ್ತ ಬರೋಬ್ಬರಿ ಹದಿಮೂರನೇ ದಿನಕ್ಕೆ ಅವನ ಮನೆಗೆ ಫೋನ್ ಮಾಡಿದ್ದ. ಸತ್ತ ಪತಿಯ ಹದಿಮೂರನೇ ದಿನದ ಕಾರ್ಯಗಳಲ್ಲಿ ಭಾಗಿಯಾಗಿದ್ದ ಪ್ರದೀಪ್ ಜೈನನ ವಿಧವೆಯನ್ನು ಎಬ್ಬಿಸಿ ಫೋನ್ ಮೇಲೆ ಕರೆಯಿಸಿಕೊಂಡಿದ್ದ. 'ಹೊಸದಾಗಿ ಬಂದಿರುವ ವಿಧವೆ ಪಟ್ಟ ಹೇಗಿದೆ?' ಎಂದು ಆ ಹತಭಾಗ್ಯ ಅಬಲೆಯನ್ನು ಲೇವಡಿ ಮಾಡಿ ಗಹಗಹಿಸಿ ರಕ್ಕಸ ನಗೆ ನಕ್ಕಿದ್ದ. ತನ್ನ ವಿಕೃತ ಮನಸ್ಥಿತಿಯನ್ನು ಜಗಜ್ಜಾಹೀರು ಮಾಡಿಕೊಂಡಿದ್ದ. ಮುಂದೆ ಅದೇ ಕೇಸಿನಲ್ಲಿ ಆತನಿಗೆ ಜೀವಾವಧಿ ಶಿಕ್ಷೆಯಾಗಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ. (ಮಾಹಿತಿ ಮೂಲ: My Name Is Abu Salem by S. Hussain Zaidi)

ಪ್ರದೀಪ್ ಜೈನ್ ಏನೋ ಸತ್ತು ಸ್ವರ್ಗ ಸೇರಿಕೊಂಡ. ಆದರೆ ದಾವೂದ್ ಇಬ್ರಾಹಿಂನ ಮೀಟರ್ ಮಾತ್ರ ನಿಲ್ಲಲಿಲ್ಲ. ಅದು ಓಡುತ್ತಲೇ ಇತ್ತು. ಈಗ ಪ್ರದೀಪ್ ಜೈನನ ತಮ್ಮ ಸುನೀಲ್ ಜೈನನನ್ನು ಅಟಕಾಯಿಸಿಕೊಂಡರು. 'ನಿನ್ನ ಅಣ್ಣ ಪ್ರದೀಪ್ ಮೂರು ಕೋಟಿ ಕೊಡಬೇಕಾಗಿತ್ತು. ಕೊಡದೇ ಸತ್ತ. ಈಗ ನೀನು ನಾಲ್ಕು ಕೋಟಿ ಕೊಡು. ಲೆಕ್ಕ ಚುಕ್ತಾ ಮಾಡು. ಬದುಕಿಕೊ. ಇಲ್ಲವಾದರೆ ನಿನ್ನನ್ನೂ ನಿನ್ನ ಅಣ್ಣನ ಬಳಿ ಸ್ವರ್ಗಕ್ಕೆ ಕಳಿಸಬೇಕಾಗುತ್ತದೆ. ಖಬರ್ದಾರ್,' ಎಂದು ಸುನೀಲ್ ಜೈನನಿಗೆ ಬೆದರಿಕೆಗಳ ಮೇಲೆ ಬೆದರಿಕೆ. 

'ಮೂರು ಕೋಟಿಗೆ ಮಾತಾಗಿತ್ತು. ಈಗ ನಾಲ್ಕು ಕೋಟಿಯೇಕೆ!?' ಎಂದು ಸುನೀಲ್ ಜೈನ್ ಅಲವತ್ತುಕೊಂಡರೆ, 'ಹೆಚ್ಚಿನ ಒಂದು ಕೋಟಿ ತಡವಾಗಿದ್ದಕ್ಕೆ. ಲೇಟ್ ಫೀ (late fee) ಇದ್ದಂಗೆ. ಜಲ್ದಿ ಮೊತ್ತ ರೆಡಿ ಮಾಡು,' ಎಂದು ಅಬ್ಬರಿಸಿ ಫೋನ್ ಕಟ್ ಮಾಡಿದವ ದಾವೂದನ ಬಲಗೈ ಬಂಟ ಛೋಟಾ ಶಕೀಲ್. 

ಸುನೀಲ್ ಜೈನ್ ಫುಲ್ ಹೈರಾಣಾಗಿ ಹೋದ. ಮೊದಲೇ ಭೂಗತಲೋಕದವರ ಕೆಂಗಣ್ಣಿಗೆ ಗುರಿಯಾದ ಬಿಲ್ಡರ್. ಇಂತಹವನ ಕಟ್ಟಡದಲ್ಲಿ ಡೆಪಾಸಿಟ್ ಕೊಟ್ಟು ಫ್ಲಾಟ್ ಬುಕ್ ಮಾಡಿದರೆ ಮುಂದೇನು ಕಾದಿದೆಯೋ ಎಂಬ ಹೆದರಿಕೆಯಿಂದ ಫ್ಲ್ಯಾಟುಗಳು ಬುಕ್ಕಾಗುತ್ತಿಲ್ಲ. ರೊಕ್ಕದ ಹರಿವಿಲ್ಲ. ನಾಲ್ಕು ಕೋಟಿ ಮೊತ್ತ ಕೂಡುತ್ತಿಲ್ಲ. ಭೂಗತರ ಬೆದರಿಕೆ ಕರೆಗಳು ಮಾತ್ರ ನಿರಂತರ. ಡಾನ್ ಕೊಟ್ಟ ವಾಯಿದೆ ದಿನ ಹತ್ತಿರಕ್ಕೆ ಬರುತ್ತಿತ್ತು. ವಾಯಿದೆಯನ್ನು ಯಾವುದೇ ಕಾರಣಕ್ಕೆ ಮುಂದೂಡುವುದಿಲ್ಲ. ಹೆಚ್ಚಿನ ಸಮಯ ನೀಡುವುದಿಲ್ಲ ಎಂದು ಛೋಟಾ ಶಕೀಲ್ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದ. ಸುನೀಲ್ ಜೈನನಿಗೆ ಊಟ ಸೇರುತ್ತಿಲ್ಲ. ನಿದ್ದೆ ಬರುತ್ತಿಲ್ಲ. ಸಾವಿನ ಭಯ. ಅವನೂ ಅಣ್ಣನನ್ನು ಸ್ವರ್ಗದಲ್ಲಿ ಸೇರಲು ರೆಡಿಯಾಗಿದ್ದ. 

ಸುನೀಲ್ ಜೈನ್ ಮಾಡುವ ಪ್ರಯತ್ನ ಎಲ್ಲ ಮಾಡಿದ. ಏನೇ ಮಾಡಿದರೂ ಭೂಗತರು ಒಪ್ಪಲಿಲ್ಲ. ಕೊನೆಯ ಪ್ರಯತ್ನ ಎಂಬಂತೆ ಆತನ ವಕೀಲರು ಆತನನ್ನು ಪತ್ರಕರ್ತ ಬಲಜೀತ್ ಪರಮಾರರ ಹತ್ತಿರ ಕರೆದುಕೊಂಡು ಬಂದರು. ವಿಷಯ ವಿವರಿಸಿದರು. ಭೂಗತಲೋಕದ ನಾಡಿಮಿಡಿತ ಬರೋಬ್ಬರಿ ಗೊತ್ತಿದ್ದ ಬಲಜೀತ್ ಪರಮಾರ್ ಎಲ್ಲ ವಿಷಯ ಅರಿತಿದ್ದರು. ಸುನೀಲ್ ಜೈನ್ ನಿಜವಾಗಿ ಕಷ್ಟದಲ್ಲಿದ್ದಾನೆ ಎಂದು ಅವರಿಗೆ ಅರಿವಾಯಿತು. 

ಮಹತ್ವದ ಫೋನ್ ನಂಬರುಗಳಿದ್ದ ತಮ್ಮ ಪುಸ್ತಕ ತೆಗೆದು ಛೋಟಾ ಶಕೀಲನ ದುಬೈ ನಂಬರಿಗೆ ಫೋನಾಯಿಸಿದರು. ಆತ ಜಗತ್ತಿನ ಯಾವ ಮೂಲೆಯಲ್ಲಿದ್ದನೋ ಗೊತ್ತಿಲ್ಲ. ಇವರ ಮೇಲಿನ ಗೌರವದಿಂದ ಫೋನ್ ಎತ್ತಿದ ಛೋಟಾ ಶಕೀಲ್, 'ಹೇಳಿ ಭಾಯೀಸಾಬ್, ಏನು ಸಮಾಚಾರ?' ಎಂದು ವಿಚಾರಿಸಿದ. ಬಲಜೀತ್ ಎಲ್ಲವನ್ನೂ ವಿವರಿಸಿದರು. ಎಲ್ಲವನ್ನೂ ಕೇಳಿಸಿಕೊಂಡ ಶಕೀಲ್ ನಕ್ಕ. 'ನಿಮ್ಮ ಹತ್ತಿರ ಈ ಗಿರಾಕಿ ಬರುತ್ತಾನೆ ಅನ್ನುವ ವಿಷಯ ಆಗಲೇ ತಿಳಿದುಬಂದಿತ್ತು. ಆದರೆ ಇಷ್ಟು ಬೇಗ ಬಂದು ನಿಮ್ಮ ಕಾಲು ಹಿಡಿಯುತ್ತಾನೆ ಎಂದುಕೊಂಡಿರಲಿಲ್ಲ...' ಎಂದು ಗಹಗಹಿಸಿದ. 

ಬಲಜೀತ್ ಕೊನೆಯದಾಗಿ ಹೇಳಿದ್ದು ಒಂದೇ ಖಡಕ್ ಮಾತು - 'ಶಕೀಲ್, ಇವನ ಹತ್ತಿರ ತುರ್ತಾಗಿ ನಿನಗೆ ಕೊಡಲು ಹಣ ನಿಜವಾಗಿಯೂ ಇಲ್ಲ. ಅದು ನನಗೆ ಮನದಟ್ಟಾಗಿದೆ. ನಿನ್ನ ಹತ್ತಿರ ಎಂದೂ ಏನೂ ಸಹಾಯ ಕೇಳಿಲ್ಲ. ಈಗ ಈ ಮನುಷ್ಯನಿಗೆ ಕೊಂಚ ಕಾಲಾವಕಾಶ ಕೊಟ್ಟು ನೋಡು ಎಂದು ಮಾತ್ರ ಕೇಳುತ್ತೇನೆ. ಅಷ್ಟೇ. ಉಳಿದದ್ದನ್ನು ನಿರ್ಧರಿಸುವ ವಿವೇಚನೆ ನಿನಗಿದೆ ಎಂದು ನಂಬುತ್ತೇನೆ,' ಎಂದು ಮಾತು ಮುಗಿಸಲು ಮುಂದಾದರು. 

'ಆಯಿತು ಭಾಯಿ ಸಾಬ್, ನೀವು ಹೇಳಿದಿರಿ ಎಂದರೆ ಮುಗಿಯಿತು. ಪ್ರದೀಪ್ ಜೈನನಿಗೆ ನಿಶ್ಚಿಂತೆಯಿಂದ ಇರಲು ಹೇಳಿ. ದುಬೈಗೆ ಬಂದು ನಮ್ಮವರನ್ನು ದಾವೂದ್ ಭಾಯಿಯ ಬಂಗಲೆ ವೈಟ್ ಹೌಸಿನಲ್ಲಿ ಕಾಣಲು ಹೇಳಿ. ಏನಾದರೂ ಡೀಲ್ ವರ್ಕ್ ಔಟ್ ಮಾಡಿಕೊಡೋಣ. ನಿಮಗಾಗಿ ಅಷ್ಟೂ ಮಾಡಲಿಲ್ಲ ಅಂದರೆ ಹೇಗೆ?' ಎಂದು ಹೇಳಿದ ಶಕೀಲ್. ಧನ್ಯವಾದ ಹೇಳಿದ ಬಲಜೀತ್ ಕರೆ ಮುಗಿಸಿದರು. 

ಎಲ್ಲವನ್ನೂ ಅಲ್ಲೇ ಕುಳಿತು ಸ್ಪೀಕರ್ ಫೋನ್ ಮೇಲೆ ಕೇಳಿಸಿಕೊಂಡ ಪ್ರದೀಪ್ ಜೈನ್ ಸೀದಾ ಬಲಜೀತರ ಕಾಲಿಗೆ ಡೈವ್ ಹೊಡೆದುಬಿಟ್ಟ. 

'ಮಂದಿರಕ್ಕೆ ಹೋದೆ. ಮಸೀದಿಗೆ ಹೋದೆ. ಮಂತ್ರಿಗಳನ್ನು ಕಂಡೆ. ಅವರ ಸಂತ್ರಿಗಳನ್ನು ಕಂಡೆ. ಪೊಲೀಸರನ್ನು ಕಂಡೆ. ಪೋದ್ದಾರರನ್ನು ಕಂಡೆ. ಯಾರೂ ಇಷ್ಟು ಸಹಾಯ ಮಾಡಲಿಲ್ಲ. 'ನಿನ್ನ ವಿಷಯ ಈ ಮಟ್ಟಕ್ಕೆ ಬಂದು ಮುಟ್ಟಿದೆ. ಶಕೀಲ್ ಸಿಟ್ಟಿಗೆದ್ದಿದ್ದಾನೆ ಅಂದರೆ ಸಾವಿನಿಂದ ನಿನ್ನನ್ನು ಯಾರೂ ಬಚಾವ್ ಮಾಡಲು ಸಾಧ್ಯವಿಲ್ಲ. ಹೋಗ್ಹೋಗು,' ಎಂದು ಕಳಿಸಿದ್ದರು. ಏನೆಲ್ಲಾ ಕೊಡುತ್ತೇನೆ ಎಂದರೂ ದೊಡ್ಡದೊಡ್ಡವರಿಂದ ಆಗದ ಕೆಲಸವನ್ನು ನೀವು ಮಾಡಿಕೊಟ್ಟಿರಿ. ನಿಮ್ಮ ಈ ಸಹಾಯ ಮರೆಯಲಾರೆ,' ಎಂದು ಕಾಲಿನ ಮೇಲೆ ಬಿದ್ದು ಉಳ್ಳಾಡಿದ. ಶಕೀಲನ ಬಂಟರು ತನ್ನ ಗೇಮ್ ಬಾರಿಸುವುದಿಲ್ಲ, ಕೊಲ್ಲುವುದಿಲ್ಲ ಎನ್ನುವುದನ್ನು ಮತ್ತೆ ಮತ್ತೆ ಖಾತ್ರಿ ಮಾಡಿಕೊಂಡ. 

'ನನಗೆ ಮಾತು ಕೊಟ್ಟಿದ್ದಾನೆ. ಏನೂ ಆಗುವುದಿಲ್ಲ. ಹೋಗಿ ಬಾ,' ಎಂದು ಬಲಜೀತ್ ಆತನನ್ನು ಮತ್ತು ಜೊತೆಗೆ ಬಂದಿದ್ದ ಆತನ ವಕೀಲನನ್ನು ಕಳಿಸಿಕೊಟ್ಟರು. ಅದೇ ಕೊನೆ. 

ಮುಂದೆ ಪ್ರದೀಪ್ ಜೈನ್ ದುಬೈಗೆ ಹೋದ. ಭೂಗತಲೋಕದದವರ ದುಬೈ ಮಹಲು ವೈಟ್ ಹೌಸಿನಲ್ಲಿ ಚೌಕಾಸಿ ಕುದುರಿಸಿದ. ವಾಪಸ್ ಬಂದ. ಇವತ್ತಿಗೂ ಚೆನ್ನಾಗಿದ್ದಾನೆ. ಆದರೆ ಇದಾದ ನಂತರ ಒಂದು ಬಾರಿಯೂ ನನ್ನನ್ನು ಬಂದು ಭೇಟಿಯಾಗಲಿಲ್ಲ. ಧನ್ಯವಾದ ಹೇಳುವುದು ದೂರದ ಮಾತು. ಅಂತಹದರ ಅಪೇಕ್ಷೆ ಇರಲಿಲ್ಲ ಬಿಡಿ. ಆದರೂ... ಎಂದು ಬಲಜೀತ್ ಆ ಕಥೆ ಮುಗಿಸುತ್ತಾರೆ. 

ಇಂತಹ ಹಲವಾರು, ಎಲ್ಲೂ ಸಿಗದ, ಹಿಂದೆಂದೂ ಯಾರೂ ವರದಿ ಮಾಡಿರದ ಪುರಾತನ ಕಥೆಗಳನ್ನು ತಮ್ಮದೇ ಸಾಟಿಯಿಲ್ಲದ ಶೈಲಿಯಲ್ಲಿ ವಾರಕ್ಕೆ ಒಂದು ಎರಡು ಬಾರಿ YouTube ಮೇಲೆ ಹೇಳುತ್ತಾರೆ ಬಲಜೀತ್. ಆಸಕ್ತರಿಗೆ ರಸದೌತಣ. ಎಲ್ಲೂ ಭೂಗತರ, ದುಷ್ಟರ ವೈಭವೀಕರಣವಿಲ್ಲ. ಅಪರಾಧ ಕೃತ್ಯಗಳ ವಿಜೃಂಭಣೆ ಇಲ್ಲ. just matter of fact ಶೈಲಿಯಲ್ಲಿ ಕಥೆ ಹೇಳುತ್ತಾರೆ ಬಲಜೀತ್.

ಇಷ್ಟೆಲ್ಲಾ ಮಾಹಿತಿ ಹೊಂದಿರುವ, ಪತ್ರಕರ್ತರೂ ಆಗಿದ್ದ ಬಲಜೀತ್ ಪುಸ್ತಕ ಬರೆದಿದ್ದು ಕಡಿಮೆ. ಕ್ರೈಂ ಪುಸ್ತಕಗಳನ್ನು ಬರೆಯಲೇ ಇಲ್ಲ. ಎಲ್ಲೋ ಹಿಂದಿ ಉರ್ದು ಕವಿತೆಗಳ ಒಂದು ಪುಸ್ತಕ ಬರೆದಿದ್ದು ಬಿಟ್ಟರೆ ಉಳಿದವೆಲ್ಲಾ ಕ್ರೈಂ ವರದಿಗಳು ಮಾತ್ರ. ಅದು ಪುಸ್ತಕ ಪ್ರಪಂಚಕ್ಕೆ, ಪುಸ್ತಕಪ್ರೇಮಿಗಳಿಗೆ ಆದ ನಷ್ಟ ಎಂದು ನನ್ನ ಭಾವನೆ. ಬಿಡಿಬಿಡಿಯಾಗಿ ಕಥೆಗಳನ್ನು ಕೇಳುವ ಸುಖ ಬೇರೆ. ಒಂದು ಪುಸ್ತಕ ಹಿಡಿದು ನಾಲ್ಕಾರು ತಾಸು ಅದರಲ್ಲೇ ಕಳೆದುಹೋಗುವ ಪರಮಸುಖವೇ ಬೇರೆ. ಈ ವಯಸ್ಸಿನಲ್ಲಿ ಬಲಜೀತ್ ತಾವೇ ಖುದ್ದಾಗಿ ಬರೆಯದಿದ್ದರೂ ಬೇರೆಯವರಿಂದ ಬರೆಸುವಂತಾದರೂ ಸಾಕು. ಮುಂದಿನ ಪೀಳಿಗೆಗಳಿಗೆ ಅಪರಾಧ ಜಗತ್ತಿನ ನಿಜ ರೂಪ ದಾಖಲೆಯಾಗಿ ಉಳಿಯುತ್ತದೆ. ಹಾಗಾಗಲಿ. ಅಲ್ಲಿಯ ತನಕ ಅವರು ಹೇಳುವ ಕಥೆಗಳನ್ನು YouTube ಮೇಲೆ ಕೇಳಿ ಆನಂದಪಡೋಣ.

2 comments:

sunaath said...

ಮಹೇಶ,
ಬಲಜೀತರು ಕಥೆಗಳನ್ನು ಬರೆಯದಿದ್ದರೂ ಸರಿ, ಅವರನ್ನು ನಾನು ಯೂ-ಟ್ಯೂಬಿನಲ್ಲಿ ಕೇಳದಿದ್ದರೂ ಸರಿ, ನನಗೆ ನಷ್ಟವಿಲ್ಲ. ನೀವು ಬರೆದ ಈ ಲೇಖನಗಳೇ ಸಾಕಷ್ಟು ರೋಮಾಂಚಕವಾಗಿವೆ. ಧನ್ಯವಾದಗಳು. ಸಾಧ್ಯವಾದರೆ, ಬಲಜೀತರ ಬಗ್ಗೆಗೆ ಇನ್ನಿಷ್ಟು ಲೇಖನಗಳನ್ನು ಕೊಡಿ. ದಯಾ ನಾಯಕರ ಪ್ರಕರಣವನ್ನು ಓದಿ ಕೆಡುಕೆನಿಸಿತು. ಇತ್ತೀಚೆಗೆ, ಮುಂಬಯಿಯ ಪೋಲಿಸ ಅಧಿಕಾರಿ ಪರಮವೀರರ ಬಗೆಗೂ ಇಂತಹದೇ ಕಥೆ ಹುಟ್ಟಿತ್ತಲ್ಲವೆ?

Mahesh Hegade said...

ಕಾಮೆಂಟಿಗೆ ಧನ್ಯವಾದಗಳು ಸರ್.

ಬರೆಯುವ ಪ್ರಯತ್ನ ಜರೂರ್ ಮಾಡುತ್ತೇನೆ.

ಪೊಲೀಸ್ ವ್ಯವಸ್ಥೆಯಲ್ಲಿನ ರಾಡಿಯ ಬಗ್ಗೆ ಹೇಳಿಮುಗಿಸುವುದು ಅಸಾಧ್ಯ. ಅವೂ ನಮ್ಮ ಸಮಾಜದ ವ್ಯವಸ್ಥೆಯ ಭಾಗವೇ ತಾನೇ? ಹಾಗಾಗಿ ನಮ್ಮಲ್ಲಿರುವುದು ಅಲ್ಲೂ ಇದೆ. ಸ್ವಲ್ಪ ಜಾಸ್ತಿ ಇದ್ದಂಗೆ ಕಾಣುತ್ತದೆ.