Thursday, April 06, 2023

ಹಜಾಮತ್ ಸೇ ಹಜಾಮತ್ ತಕ್...

ಕಯಾಮತ್ ಸೇ ಕಯಾಮತ್ ತಕ್...ಈ ಸಿನೆಮಾದ ಅಭೂತಪೂರ್ವ ಯಶಸ್ಸಿನ ನಂತರ ಅಮೀರ್ ಖಾನನಿಗೆ ಅಂತಹದೇ ಇನ್ನೊಂದು ಚಿತ್ರದ ಆಫರ್ ಬಂತು.

ಚಿತ್ರದ ಹೆಸರು... ಹಜಾಮತ್ ಸೇ ಹಜಾಮತ್ ತಕ್....

ಅನಾಹುತ ಹೆಸರು ಕೇಳಿಯೇ ವಿಚಲಿತನಾದ ಅಮೀರ್ ಖಾನ್, ಇರಲಿ ಚಿತ್ರಕಥೆ ಕೇಳೋಣ, ನಂತರ ನಿರ್ಧರಿಸೋಣ ಎಂದು ಚಿತ್ರಕಥೆ ಕೇಳಲು ಕುಳಿತ. 

ಕಟಿಂಗ್, ಶೇವಿಂಗ್ ಇಲ್ಲದೇ ನಾಡಿಗೆ ತಪ್ಪಿಸಿಕೊಂಡು ಬಂದಿರುವ ಕಾಡುಪ್ರಾಣಿ ಕರಡಿಯಂತೆ ಕಾಣುವ ಮನುಷ್ಯನೊಬ್ಬ ಹೇರ್ ಕಟಿಂಗ್ ಸಲೂನ್  ಹೊಕ್ಕಿ ಹೊರಬಂದಾಗ ಬೋಳು ಹೆರೆಸಿಕೊಂಡ ಮಂಗನಂತೆ ಕಾಣುವುದೇ ಚಿತ್ರದ ಕಥೆಯಂತೆ. 

What a splendid story! What a marvelous transformation! ಎಂದು ಉದ್ಗರಿಸಿದ ಅಮೀರ್ ಅಲ್ಲಿಂದ ಏಕಾಏಕಿ ಗಾಯಬ್ ಆದನಂತೆ. ಒಟ್ಟಿನಲ್ಲಿ ಹಜಾಮತ್ ಸೇ ಹಜಾಮತ್ ತಕ್... ಎಂಬ ಐತಿಹಾಸಿಕ ಚಿತ್ರಕ್ಕೆ ಕೈಯೆತ್ತಿಬಿಟ್ಟ.

ಸುತ್ತಿಕೊಂಡ ಕರ್ಮ ಬಿಡುವುದಿಲ್ಲ ನೋಡಿ. ಸರಿ ಸುಮಾರು ಮೂವತ್ತು ವರ್ಷಗಳ ನಂತರ ಹಾಲಿವುಡ್ ಸಿನೆಮಾ ಕದ್ದು ಅದೇನೋ 'ಲಾಲ್ ಸಿಂಗ್ ಚಡ್ಡಾ' ಎಂಬ ಸಿನೆಮಾ ಮಾಡಿದ ಅಮಿರ್ ಖಾನ್. ಇಷ್ಟೊತ್ತಿಗೆ ಭಾರತದಲ್ಲಿ ಅಸಹಿಷ್ಣುತೆ ಎಂದೆಲ್ಲಾ ಮಾತಾಡಿ ಹೆಸರು ಕೆಡಿಸಿಕೊಂಡಿದ್ದ. ಜನ 'ಲಾಲ್ ಸಿಂಗ್ ಚಡ್ಡಾ' ಸಿನೆಮಾದ ಚಡ್ಡಿ ಕಳೆದು ಬತ್ತಲೆ ಓಡಿಸಿದರು. ಅಭೂತಪೂರ್ವ ಅಪಯಶಸ್ಸು ಕಂಡ. ಆವಾಗ ಅಂದುಕೊಂಡಿರಬಹುದು…ಇದೂ ಒಂದು ರೀತಿಯಲ್ಲಿ ಕ್ಲೀನ್ ಹಜಾಮತ್ ಆಗಿಹೋಯಿತಲ್ಲ. ಚಡ್ಡಿ ಕಳೆದಿದ್ದು ಲಾಲ್ ಸಿಂಗ್ ಚಡ್ಡಾ ಸಿನೆಮಾದ್ದು. ಅಷ್ಟೂ ರೊಕ್ಕದ ಹಜಾಮತ್ ಆಗಿದ್ದು ಮಾತ್ರ ನನ್ನದು. ಒಟ್ಟಿನಲ್ಲಿ ಹಜಾಮತ್ ಸೇ ಹಜಾಮತ್ ತಕ್…

ಹಜಾಮತ್ ಸೇ ಹಜಾಮತ್ ತಕ್…ಚಿತ್ರದ ಬಗ್ಗೆ ಕೇಳಿದ ಧಾರವಾಡ ಮಂದಿ ಉವಾಚ…

ಇದ್ರಾಗ ಏನು ಮಹಾ ಅದ? ಶ್ರಾವಣ ಮಾಸ ಮುಗಿದ ಕೂಡಲೇ ಧಾರವಾಡದಾಗ ಕ್ಯಾಮೆರಾ ಇಟ್ಟಿದ್ದರ ಮೂವೀ ಆಗಿಹೋಗಿತ್ತು. ಊರು ಪೂರ್ತಿ  ಕಟಿಂಗ್, ದಾಡಿ ಇಲ್ಲದೇ ಅಡ್ಯಾಡೋ ಅಡ್ನಾಡಿ ಮಂದಿಯಿಂದ ತುಂಬಿಹೋಗಿರ್ತದ. ಶ್ರಾವಣ ಮುಗಿತಂದ್ರ ಎಲ್ಲರೂ ಒಮ್ಮೆಲೇ ಹುಯ್ಯ ಅಂತ ಸಲೂನಿಗೆ ನುಗ್ಗಿ ಬಿಡ್ತಾರ. ಕರಡಿ ಗತೆ ಇದ್ದವರು ಹೊರಗ ಬಂದಾಗ ಮಂಗ್ಯಾನಂತೆಯೇ ಕಾಣ್ತಾರ. 

ಶಬ್ದಾರ್ಥ ಸೂಚಿ:

ಬೋಳು ಹೆರೆಸಿಕೊಂಡ ಮಂಗ = ನಾಪಿತನ ಅಚಾತುರ್ಯದಿಂದ ಹೇರ್ ಕಟಿಂಗ್ ಎಡಬಿಡಂಗಿ ಆಗಿ, ತಲೆಗೆ ಟೊಪ್ಪಿಗೆ ಧರಿಸಿಕೊಂಡು ಓಡಾಡುವ ಅನಿವಾರ್ಯ ಪರಿಸ್ಥಿತಿಗೆ ಸಿಕ್ಕ ಮನುಷ್ಯ. 

2 comments:

sunaath said...

‘ಹಜಾಮತ್ ಸೆ ಹಜಾಮತ್ ತಕ್’ ಅಂದರೆ, ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಯವರೆಗೆ ಎಂದು ನಾನು ತಿಳಿದುಕೊಂಡಿದ್ದೆ! ಧಾರವಾಡಿಗರ ವಾಸ್ತವವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು!

Mahesh Hegade said...

ನಿಮ್ಮ ವಿವರಣೆ ವಾಸ್ತವಕ್ಕೆ ಹತ್ತಿರವಾಗಿದೆ ಸರ್! ನಮ್ಮದು ಏನಿದ್ದರೂ ಊಹೆ ಮಾತ್ರ!