Wednesday, April 24, 2024

ಕಳೆದುಹೋದ ಭೂಗತಜೀವಿಗಳ ಹುಡುಕಾಟದಲ್ಲಿ...ದುಬೈ ಅಶೋಕ್ ಶೆಟ್ಟಿ ಎಂಬ ಮಾಜಿ ಡಾನ್ ಎಲ್ಲಿ?

ಲೇಖನದ ಪ್ರಮುಖ ಉದ್ದೇಶ ಮೊದಲೇ ಹೇಳಿಬಿಡುತ್ತೇನೆ. ನಂತರ ಲೇಖನ ಓದಬೇಕು ಅನ್ನಿಸಿದರೆ ಓದಿ.

೧೯೯೦ ರ ದಶಕದಲ್ಲಿ ಮುಂಬೈ ಭೂಗತಲೋಕ ಬೆಂಗಳೂರಿಗೆ ಮುತ್ತಪ್ಪ ರೈ ಮೂಲಕ ಕಾಲಿಡಲು ಪ್ರಯತ್ನಿಸುತ್ತಿದ್ದಾಗ ಮುತ್ತಪ್ಪ ರೈಗೆ ಗಾಡ್ ಫಾದರ್ ನಂತೆ ಇದ್ದವರು ದುಬೈ ಅಶೋಕ್ ಶೆಟ್ಟಿ. ನಂತರ ಅವರ ಹೆಸರು ಅಷ್ಟಾಗಿ ಕೇಳಿಬರಲಿಲ್ಲ. ಅವರು ಮುಂದೆ ಎಲ್ಲಿ ಹೋದರು? ಏನಾದರು? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಬರೆದ ಲೇಖನ ಇದು. ಉತ್ತರ ಗೊತ್ತಿದ್ದವರು ಉತ್ತರಿಸಿ. ಆಸಕ್ತರು ಓದಿ.

***

೧೯೮೯ ರ ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಡಾನ್ ಜಯರಾಜನನ್ನು ಸಿನಿಮೀಯ ರೀತಿಯಲ್ಲಿ ಕೊಲ್ಲಲಾಯಿತು. ಮುಂದೆ ಕೆಲವೇ ದಿನಗಳಲ್ಲಿ ನಡೆಯಲಿದ್ದ ವಿಧಾನಸಭೆ ಚುನಾವಣೆಯಲ್ಲಿ ಆತ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ. ಅದೇ ಕಾರಣಕ್ಕೆ ಪೆರೋಲ್ ಮೇಲೆ ಜೈಲಿನಿಂದ ಹೊರಗೆ ಬಂದಿದ್ದ. ಪೆರೋಲ್ ನಿಯಮಗಳ ಪ್ರಕಾರ ದಿನವೂ ಹೋಗಿ ಪೊಲೀಸ್ ಠಾಣೆಯಲ್ಲಿ ಸಹಿ ಹಾಕಿ ಬರಬೇಕಿತ್ತು. ಅವತ್ತು ಬೆಳಿಗ್ಗೆ ಅದಕ್ಕೆಂದೇ ಹೋಗಿದ್ದ. ಸಹಿ ಹಾಕಿ ಹೊರಬಂದು ಮನೆಗೆ ಹಿಂತಿರುಗುತ್ತಿದ್ದ. ಹಂತಕರು ಕಾದಿದ್ದರು. ಜಯರಾಜನ ಕಾರಿಗೆ ಪಕ್ಕದಿಂದ ಬಂದ ಕಾರೊಂದು ಡಿಕ್ಕಿ ಹೊಡೆಯಿತು. ಜಯರಾಜನ ಕಾರ್ ಹತೋಟಿ ತಪ್ಪಿ ಲಾಲಬಾಗ್ ಉದ್ಯಾನವನದ ಗೋಡೆಗೆ ಹೋಗಿ ಡಿಕ್ಕಿ ಹೊಡೆದು ನಿಂತಿತು. ಕಾರಿನಿಂದ ಇಳಿದುಬಂದ ಹಂತಕರು ಜೈರಾಜ ಕಾರಿನ ಮೇಲೆ ಗುಂಡಿನ ಮಳೆಗರಿದರು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಂಗರಕ್ಷಕರು ತಮ್ಮ ಪ್ರಾಣರಕ್ಷಣೆ ಮಾಡಿಕೊಂಡರೆ ಸಾಕು ಎಂಬಂತೆ ಹೊರಗೆ ಹಾರಿ ಓಡಿಹೋದರು. ಕಾರಿನಲ್ಲಿ ಉಳಿದಿದ್ದು ಜಯರಾಜ್ ಮತ್ತು ಆತನ ವಕೀಲ. ಸಿಕ್ಕಷ್ಟು ರಕ್ಷಣೆ ಸಿಗಲಿ ಎನ್ನುವ ಯೋಚನೆಯಿಂದ ಜಯರಾಜ್ ಪಕ್ಕದಲ್ಲಿದ್ದ ತನ್ನ ವಕೀಲನನ್ನು ಅನಾಮತ್ತಾಗಿ ಎತ್ತಿದವನೇ ತೊಡೆ ಮೇಲೆ ಕೂಡಿಸಿಕೊಂಡು ತನ್ನ ದೇಹವನ್ನು ಕವರ್ ಮಾಡಿಕೊಳ್ಳಲು ನೋಡಿದ. ವಕೀಲ ಗುಂಡಿನ ಮಳೆಗೆ ಜರಡಿ ಜರಡಿಯಾದ. ಗುಂಡುಗಳ ನೇರ ಏಟಿನಿಂದ ಬಚಾವ್ ಆದೇನೇನೋ ಎಂದು ಜಯರಾಜ್ ಅಂದುಕೊಳ್ಳುತ್ತಿರಬೇಕು. ಆದರೆ ದೊಡ್ಡ ರೈಫಲ್ ಹಿಡಿದಿದ್ದ ಹಂತಕನೊಬ್ಬ ಹಿಂದಿನಿಂದ ಬಂದು ಆನೆ ಹೊಡೆಯುವ ಗಾತ್ರದ ಕಾಡತೂಸನ್ನು ನೇರವಾಗಿ ಜಯರಾಜ್ ತಲೆಯೊಳಗೆ ನುಗ್ಗಿಸಿಬಿಟ್ಟ. ತಲೆಬುರುಡೆ ಪಡ್ಚ್. ಸಿಡಿದ ಮೆದುಳು ಕಾರಿನ ಛಾವಣಿಗೆ ಹೋಗಿ ಅಂಟಿಕೊಂಡಿತು. ಏನಾಯಿತೆಂದು ಕೂಡ ಜಯರಾಜನಿಗೆ ತಿಳಿದಿರಲಿಕ್ಕಿಲ್ಲ. ಖಲಾಸ್!

ಆಗ ಮೊದಲ ಬಾರಿಗೆ ಗುಸುಗುಸು ಅಂತ ಕೇಳಿ ಬಂದ ಹೆಸರೇ ಮುತ್ತಪ್ಪ ರೈ. ಜಯರಾಜ್ ಹತ್ಯೆಯನ್ನು ಲೋಕಲ್ ರೌಡಿಗಳು ತಮ್ಮ ತಲೆ ಮೇಲೆ ಎಳೆದುಕೊಂಡರು. ಅದೆಲ್ಲ ಹಾಕಿದ್ದ ಸ್ಕೆಚ್ಚಿನ ಭಾಗವೇ ಆಗಿತ್ತು. ಜಯರಾಜನನ್ನು ಹತ್ಯೆ ಮಾಡಿದ್ದ ರೀತಿ, ಮಾಡಿದವರ ವೃತ್ತಿಪರತೆ ಎಲ್ಲ ನೋಡಿದರೆ ಗೊತ್ತಾಗುತ್ತಿತ್ತು ಅದು ನುರಿತ ಸುಪಾರಿ ಹಂತಕರ ಕೆಲಸ. ಮತ್ತು ಅವರು ಮುಂಬೈನಲ್ಲಿ (ಅಂದಿನ ಬಾಂಬೆ) ಪಳಗಿದ ಮಾಫಿಯಾ ಶಾರ್ಫ್ ಶೂಟರುಗಳು.

ಒಂದು ಕಾಲದಲ್ಲಿ ಬ್ಯಾಂಕಿನಲ್ಲಿ ನೌಕರಿ ಮಾಡುತ್ತಿದ್ದ ಮುತ್ತಪ್ಪ ರೈ ಮುಂಬೈನಲ್ಲೂ ಕೆಲಸ ಮಾಡಿದ್ದ. ಅವನಿಗೆ ಅಲ್ಲಿನ ಭೂಗತಲೋಕದ ಜನರ ಪರಿಚಯವಿತ್ತು. ದಕ್ಷಿಣ ಕನ್ನಡ ಮೂಲದ ಅನೇಕರು ಮುಂಬೈನಲ್ಲಿ ಎಲ್ಲ ತರಹದ ವ್ಯವಹಾರಗಳಲ್ಲಿ ಇದ್ದರು. ಕೆಲವರು ಮಾಫಿಯಾ ಲೋಕದಲ್ಲೂ ಇದ್ದರು. ಅಂತವರ ಸಂಪರ್ಕ ಹೊಂದಿದ್ದ ಮುತ್ತಪ್ಪ ರೈ ಬೆಂಗಳೂರಿನ ದೈತ್ಯ ಡಾನ್ ಜಯರಾಜನನ್ನು "ತೆಗೆಸಲು" ಮುಂಬೈ ಶೂಟರಗಳನ್ನು ಕರೆಸಿದ್ದ ಎನ್ನುವ ಸುದ್ದಿ ಹರಡಿತ್ತು. 

ಆಗ ಕೇಳಿಬಂದ ಎರಡು ಹೆಸರುಗಳೇ ಅಶೋಕ ಶೆಟ್ಟಿ ಮತ್ತು ಶರದ ಶೆಟ್ಟಿ. ಅವರಿಬ್ಬರೂ ಮುಂಬೈ ಮಾಫಿಯಾದಲ್ಲಿ ಪಳಗಿದವರು. ದುಬೈನಲ್ಲಿ ನೆಲೆಸಿದ್ದರು. ದಾವೂದ್ ಇಬ್ರಾಹಿಂನ ಪರಿಚಿತರು. ತುಂಬಾ ಮೊದಲಿಂದಲೂ ದಾವೂದ್ ಇಬ್ರಾಹಿಂ ಮತ್ತು ಇತರೆ ಮಾಫಿಯಾ ಜನರೊಂದಿಗೆ ಕೆಲಸ ಮಾಡಿದವರು. ಈಗ ದುಬೈಗೆ ಹೋಗಿ ನೆಲೆಸಿದ್ದಾರೆ. ಅಲ್ಲಿ ಕಾನೂನಬದ್ಧವಾದ ಹೋಟೆಲ್ ಮತ್ತು ಇತರೆ ವ್ಯವಹಾರ ಮಾಡುವ ದೊಡ್ಡ ಉದ್ಯಮಿಗಳಾಗಿದ್ದಾರೆ. ಜೊತೆಗೆ ಆಗಾಗ ಮುಂಬೈ ಭೂಗತಲೋಕದಲ್ಲೂ ಕೈಯಾಡಿಸುತ್ತಾರೆ. ಅಂತಹ ದೊಡ್ಡ ಭೂಗತ ದೊರೆಗಳು ಮುಂಬೈ ಮೇಲೆ ಪಾರುಪತ್ಯ ಸಾಧಿಸಿದ್ದಾಗಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಬೆಂಗಳೂರಿನಲ್ಲಿ ಹೆಜ್ಜೆ ಮೂಡಿಸಬೇಕು. ಬೇರೆ ಯಾರೋ ಬಂದು ಬೆಂಗಳೂರಿನಲ್ಲಿ ಮಾಫಿಯಾ ಸಾಮ್ರಾಜ್ಯ ಸ್ಥಾಪಿಸಲು ಅವಕಾಶ ಕೊಡಬಾರದು. ಹಾಗಾಗಿ ತಮ್ಮ ನಂಬಿಕಸ್ಥ, ಪರಿಚಿತ, ತಮ್ಮದೇ ಸಮುದಾಯದ ಮುತ್ತಪ್ಪ ರೈಗಿಂತ ಒಳ್ಳೆಯ ವ್ಯಕ್ತಿ ಇಲ್ಲ. ಹಾಗಾಗಿ ಮುತ್ತಪ್ಪ ರೈಗೆ ಎಲ್ಲ ರೀತಿಯ ಬೆಂಬಲ ಕೊಟ್ಟು, ಮಾಫಿಯಾ ಲೋಕದ ಆರಂಭಿಕ ಪಟ್ಟುಗಳನ್ನು ಕಲಿಸಿಕೊಟ್ಟು, ಆಶೀರ್ವರ್ದಿಸಿ ಬೆಂಗಳೂರಿಗೆ ಕಳಿಸಿಕೊಟ್ಟಿದ್ದರು. ಮುತ್ತಪ್ಪ ರೈ ಕೂಡ ಹೋಟೆಲ್ ಉದ್ಯಮದ ಮೂಲಕವೇ ಬೆಂಗಳೂರಿಗೆ ಆಗಮಿಸಿದ. ಹೋಟೆಲ್ ಉದ್ಯಮಕ್ಕೆ ಮತ್ತು ಬೆಂಗಳೂರಿನಲ್ಲಿದ್ದ ಬೇರೆ ಬೇರೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಬೇರೆ ಬೇರೆ ಕಾರಣಗಳಿಗೆ ಮಗ್ಗುಲಮುಳ್ಳಾಗಿದ್ದ ಜಯರಾಜನನ್ನು "ಪಕ್ಕಕ್ಕೆ ಸರಿಸುವ" ಅನಿವಾರ್ಯತೆ ಇತ್ತು. ಸ್ಥಳೀಯ ರೌಡಿಗಳು ಜಯರಾಜನನ್ನು ಮುಗಿಸುವಲ್ಲಿ ಅನೇಕ ಸಲ ವಿಫಲರಾಗಿದ್ದರು. ಪ್ರತಿಬಾರಿ ಜಯರಾಜ್ ಮೇಲಿನ ಹತ್ಯೆಯ ಯತ್ನ ವಿಫಲವಾದಾಗ ಜಯರಾಜ್ ಮತ್ತೂ ಬಲಿಷ್ಠನಾದ. ಹೆಚ್ಚು ವಿಶ್ವಾಸ ಬೆಳೆಸಿಕೊಂಡ. ಪುಂಡಾಟ ಜಾಸ್ತಿ ಮಾಡಿದ. ವಿಧಾನಸೌಧವನ್ನೇ ಪ್ರವೇಶಿಸಿಬಿಡಬೇಕು ಎಂದುಕೊಂಡ. ಆವಾಗ ಫೀಲ್ಡಿಗೆ ಇಳಿದವ ಮುತ್ತಪ್ಪ ರೈ. ಅವನಿಗೆ ಮುಂಬೈ ಪಾತಕಲೋಕದ ಬೆಂಬಲ ಕೊಡಿಸಿ ಹತ್ಯೆ ಯಶಸ್ವಿಯಾಗುವಂತೆ ನೋಡಿಕೊಂಡವರು ಇದೇ ಅಶೋಕ ಶೆಟ್ಟಿ ಮತ್ತು ಶರದ್ ಶೆಟ್ಟಿ. ಜಯರಾಜ್ ಹತ್ಯೆಗೆ ಬೇಕಾದ ಮುಂಬೈ ಹಂತಕರು ಮತ್ತೊಬ್ಬ ಮಂಗಳೂರು ಮೂಲದ ಡಾನ್ ದಿವಂಗತ ಅಮರ್ ಆಳ್ವನ ಮೂಲಕ ಬಂದು ಕೆಲಸ ಮಾಡಿಕೊಟ್ಟು ಹೋದರು  ಎನ್ನುತ್ತಾರಾದರೂ ಅತ್ಯಂತ ಮೇಲ್ಮಟ್ಟದ ಉಸ್ತುವಾರಿ ನೋಡಿಕೊಂಡವರು ದುಬೈನಲ್ಲಿ ಕುಳಿತಿದ್ದ ಅಶೋಕ್ ಮತ್ತು ಶರದ್ ಶೆಟ್ಟಿಯೇ.

ಸುಮಾರು ೧೯೯೫ ರ ವರೆಗೆ ಮುತ್ತಪ್ಪ ರೈ ಸುದ್ದಿ ಬಂದಾಗೆಲ್ಲಅವನ ಗಾಡ್ ಫಾದರ್ ದುಬೈ ಅಶೋಕ ಶೆಟ್ಟಿ ಎಂದು ಹೇಳದೇ ಇರುತ್ತಿರಲಿಲ್ಲ. ಟ್ಯಾಬ್ಲಾಯ್ಡ್ ಪತ್ರಿಕೆಗಳಲ್ಲಿ ಮುತ್ತಪ್ಪ ರೈ ಬಗ್ಗೆ ಲೇಖನಗಳು ಬಂದಾಗ ಮುತ್ತಪ್ಪ ರೈ ಕೂಡ ಸದಾ ಅಶೋಕಣ್ಣ, ಅಶೋಕಣ್ಣ ಎಂದು ಅವರನ್ನು ನೆನೆದಿರುತ್ತಿದ್ದ. 

ಜಯರಾಜ್ ಹತ್ಯೆಯ ನಂತರ ಅನೇಕ ಗಂಭೀರ ಘಟನೆಗಳು ನಡೆದವು. ಮಂಗಳೂರಿನಲ್ಲಿ ಅಮರ್ ಆಳ್ವ ಪ್ರಭಾವಿಯಾಗಿದ್ದ. ಆತ ಮೂಲತಃ ವಿದ್ಯಾರ್ಥಿ ನಾಯಕ. ಕರಾವಳಿಯ ಪ್ರತಿಷ್ಠಿತ ಮತ್ತು ಬಲಶಾಲಿ ಮನೆತನದ ಕುಡಿ. ರೌಡಿಯಲ್ಲ. ಆದರೆ ಅವನಿಗೆ ಮುಂಬೈ ಮಾಫಿಯಾದಲ್ಲಿ ಖ್ಯಾತರಾಗಿದ್ದ ಅವರ ಸಮುದಾಯದ ಎಲ್ಲರ ಪರಿಚಯವೂ ಇತ್ತು. ಅವನೇ ಜಯರಾಜ್ ಹತ್ಯೆಗೆ ಸುಪಾರಿ ಹಂತಕರನ್ನು ಸೆಟ್ ಮಾಡಿಕೊಟ್ಟವ. ಬೆಂಗಳೂರನ್ನು ಮುತ್ತಪ್ಪ ರೈ ಸಂಬಾಳಿಸುವುದು ಎಂದು ಮೇಲಿನ ಮಟ್ಟದಲ್ಲಿ ನಿರ್ಧಾರ ಆಗಿದ್ದರಿಂದ ಆತ ಮಂಗಳೂರಿಗೆ ಸೀಮಿತನಾಗಿದ್ದ. ದುಬೈನಲ್ಲಿದ್ದ ಅಶೋಕ್ ಶೆಟ್ಟಿ ಮಾಡುತ್ತಿದ್ದ ಎಂದು ಹೇಳಲಾದ ಚಿನ್ನ ಬೆಳ್ಳಿ ಕಳ್ಳಸಾಗಾಣಿಕೆ ವ್ಯವಹಾರಕ್ಕೆ ಕಡಲತೀರದಲ್ಲಿ ಬೇಕಾಗಿದ್ದ ಸಹಕಾರ ನೀಡುತ್ತಿದ್ದ. ಒಂದು ತರಹದಲ್ಲಿ ಅಶೋಕ್ ಶೆಟ್ಟಿಯ ನೀಲಿಕಣ್ಣಿನ ಹುಡುಗ. 

ದುಬೈನಿಂದ ಅಶೋಕ್ ಶೆಟ್ಟಿ ಕಳಿಸಿದ್ದ ಬೆಳ್ಳಿಯ ಒಂದು ದೊಡ್ಡ ಲೋಡ್ ಕಸ್ಟಮ್ಸ್ ಕೈಗೆ ಸಿಕ್ಕಿಬಿತ್ತು. ಕಡಲತೀರದಲ್ಲಿ ಅದನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿಸುವ ಹೊಣೆ ಹೊತ್ತವ ಅಮರ್ ಆಳ್ವ. ಈ ವಿಫಲತೆಯಿಂದ  ಅಶೋಕ್ ಶೆಟ್ಟಿ ಅಮರ್ ಬಗ್ಗೆ ಭ್ರಮನಿರಸನಗೊಂಡ. ಬೇರೆ ಕಾರಣಗಳಿಂದಲೂ ಇಬ್ಬರ ಮಧ್ಯೆ ಅಸಮಾಧಾನ ಮಡುಗಟ್ಟಿತ್ತು ಎಂದು ಕೂಡ ಹೇಳಲಾಗುತ್ತದೆ. ರಾಜಿ ಮಾತುಕತೆ ಕೂಡ ಆಯಿತು. ಆದರೆ ಸಂಬಂಧ ಸುಧಾರಿಸಲಿಲ್ಲ. ಆ ಕಾಲಕ್ಕೇ ಆರುಕೋಟಿ ನಷ್ಟವಾಗಿತ್ತು ಎಂದು ಕೆಲಮೂಲಗಳು ಹೇಳುತ್ತವೆ. ಮತ್ತೊಬ್ಬ ಡಾನ್ ಶರದ್ ಶೆಟ್ಟಿ ಇಬ್ಬರ ಮಧ್ಯೆ ಸಂಧಾನ ಮಾಡಿಸಲು ಯತ್ನಿಸಿದರೂ ಅದು ವಿಫಲವಾಯಿತು. ಅಶೋಕ್ ಶೆಟ್ಟಿಯೊಂದಿಗೆ ಸಂಧಾನ ಮಾಡಿಕೊಳ್ಳಲು ದುಬೈವರೆಗೆ ಹೋಗಿದ್ದ ಅಮರ್ ಆಳ್ವ ಬರಿಗೈಯಲ್ಲಿ ವಾಪಸ್ ಬಂದಿದ್ದ.

ಅದೇ ಸಮಯದಲ್ಲಿ ಮುಂಬೈನಿಂದ ದೊಡ್ಡ ಮಟ್ಟದ ಹವಾಲಾ ರೊಕ್ಕ ಹಿಡಿದುಕೊಂಡು ಬಂದ ಒಬ್ಬ ಹವಾಲಾದಾರನನ್ನು ಆಗಂತುಕರು ಮಂಗಳೂರಿನಲ್ಲಿ ದೋಚಿದರು. ದೊಡ್ಡ ಮೊತ್ತದ ಹಣ. ದಾವೂದ್ ಇಬ್ರಾಹಿಂನ ಸಾಮ್ರಾಜ್ಯಕ್ಕೆ ಸೇರಿದ್ದು. ಯಾರು ದೋಚಿದರು ಎಂದು ಪತ್ತೆ ಮಾಡಿ  ವಸೂಲಿ ಮಾಡುವ ಕಾಂಟ್ರಾಕ್ಟ್ ಹೋಗಿದ್ದು ಮತ್ತದೇ ಅಮರ್ ಆಳ್ವನಿಗೇ. ಅವನು ಮಂಗಳೂರಿನ ಪಾತಕಲೋಕದ ಬಗ್ಗೆ ವಿಸ್ತೃತ ಮಾಹಿತಿ ಹೊಂದಿದ್ದ. ಜೊತೆಗೆ ವಸೂಲಿ ಮಾಡಬಲ್ಲ ಬಾಹುಬಲಿಗಳೂ ಇದ್ದರು. 

ಹವಾಲಾ ಹಣ ದೋಚಿದವರು ಯಾರು ಎಂದು ಹುಡುಕುವ ಕಾರ್ಯಾಚರಣೆಗೆ ಇಳಿದ ಅಮರ್ ಆಳ್ವಾಗೆ ಬಹಳ ಬೇಗನೆ ಮಾಹಿತಿ ಗೊತ್ತಾಯಿತು. ಯತೀಶ್ ಶೆಟ್ಟಿ ಮತ್ತು ಆತನ ಸ್ನೇಹಿತರು ಆ ಕೆಲಸ ಮಾಡಿದ್ದರು. ಅಮರ್ ಯತೀಶನನ್ನು ಹುಡುಕಿಕೊಂಡು ಅವನ ಮನೆಗೆ ಹೋದ. ಅಮರ್ ತನ್ನನ್ನು ಹುಡುಕುತ್ತಿದ್ದಾನೆ ಎಂದು ತಿಳಿದಿದ್ದ ಯತೀಶ್ ಮನೆಯಲ್ಲಿ ಇರಲಿಲ್ಲ. ಅವನ ಮನೆಗೆ ಹೋದ ಅಮರ್ ಆಳ್ವ ತನ್ನ ತಂಡದೊಂದಿಗೆ ಭರ್ಜರಿ ಶೋ ಕೊಟ್ಟ. ಯತೀಶನ ತಾಯಿಗೆ ಆವಾಜ್ ಹಾಕಿ ಬಂದ. ಬೇಗನೆ ಬಂದು ಭೆಟ್ಟಿಯಾಗಿ, ದುಡ್ಡು ವಾಪಸ್ ಕೊಟ್ಟು, ಜೀವ ಉಳಿಸಿಕೊಳ್ಳುವಂತೆ ನಿಮ್ಮ ಮಗನಿಗೆ ಹೇಳಿ ಎನ್ನುವ  ಖಡಕ್ ಎಚ್ಚರಿಕೆ ಕೊಟ್ಟು ಬಂದ.

ಈ ಘಟನೆ ಬಗ್ಗೆ ತಿಳಿದ ಯತೀಶ್ ಮುಂಬೈಗೆ ಪರಾರಿಯಾದ. ಅಲ್ಲಿ ಪರಿಚಯದ ಜನರ ಹೋಟೆಲ್ ಒಂದರಲ್ಲಿ ತಂಗಿದ. ಮುಂಬೈ ಸ್ನೇಹಿತರ ಜೊತೆ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಅಮರ್ ಆಳ್ವಾನಿಂದ ಹೇಗೆ ಪಾರಾಗಬೇಕು ಎಂಬುದರ ಬಗ್ಗೆ ಸಲಹೆ ಸೂಚನೆ ಕೇಳಿದ. ಅದನ್ನೆಲ್ಲ ಕೇಳಿಸಿಕೊಂಡವರಲ್ಲಿ ಒಬ್ಬ ವ್ಯಕ್ತಿ ದುಬೈನಲ್ಲಿದ್ದ ಅಶೋಕ ಶೆಟ್ಟಿಯ ಆಪ್ತನಾಗಿದ್ದ. ಅಶೋಕ್ ಶೆಟ್ಟಿ ಮತ್ತು ಅಮರ್ ಆಳ್ವನ ನಡುವೆ ಸಂಬಂಧ ತುಂಬಾ ಹದಗೆಟ್ಟಿದ್ದು ಅವನಿಗೆ ಗೊತ್ತಿತ್ತು. ಈಗ ಅಮರನನ್ನು ಹಣಿಯಲು ಒಂದು ಆಯುಧ ಸಿಕ್ಕಿದೆ. ಬಳಸಿಕೊಳ್ಳಬಹುದೇ ಎಂದು ಸಮಾಲೋಚಿಸಲು ದುಬೈಗೆ ಫೋನ್ ಮಾಡಿದ.

ಅನಾಯಾಸವಾಗಿ ಸಿಕ್ಕ ಅವಕಾಶದಿಂದ ಅಶೋಕ್ ಶೆಟ್ಟಿ ಖುಷಿಯಾದ. ಅಮರ್ ಆಳ್ವ ಮತ್ತು ಅಶೋಕ್ ಶೆಟ್ಟಿ ನಡುವೆ ಫೋನಿನಲ್ಲಿ ತೀಕ್ಷ್ಣ ಮಾತುಗಳ ವಿನಿಮಯವಾದಾಗ 'ನಿನ್ನನ್ನು ತೆಗೆಸಿಬಿಡುತ್ತೇನೆ' ಎನ್ನುವ ಮಂಗಳೂರು ಭೂಗತಲೋಕದ ಟಿಪಿಕಲ್ ಬೆದರಿಕೆಯನ್ನು ಕೂಡ ಅಶೋಕ್ ಶೆಟ್ಟಿ ಹಾಕಿದ್ದ. ಅದನ್ನು ಕಾರ್ಯಗತಗೊಳಿಸಲು ಈಗ ಅವಕಾಶ ಒದಗಿ ಬಂದಿತ್ತು.

ದುಬೈನಲ್ಲಿ ಕುಳಿತೇ ತನ್ನ ಮುಂಬೈ ಸಂಪರ್ಕಗಳನ್ನು ಚಲಾಯಿಸಿದ ಅಶೋಕ್ ಶೆಟ್ಟಿ ಅಮರ್ ಆಳ್ವನ ಹತ್ಯೆಗೆ ಬೇಕಾದ ಆಯುಧ ಮತ್ತು ಹಣಕಾಸಿನ ವ್ಯವಸ್ಥೆ ಮಾಡಿದ. ಯತೀಶ್ ಶೆಟ್ಟಿಗೆ ಎಲ್ಲ ಸೂಚನೆಗಳನ್ನು ಕೊಟ್ಟ. ಅವನ ಮುಂಬೈ ಸಹಚರರು ಆಯುಧ, ಅದನ್ನು ಫೈರಿಂಗ್ ಮಾಡುವ ತರಬೇತಿ ಎಲ್ಲ ಕೊಟ್ಟರು. ಇದೆಲ್ಲಾ ಪಡೆದುಕೊಂಡ ಯತೀಶ್ ಮಂಗಳೂರಿನತ್ತ ಮರಳಿದ.

ಜುಲೈ ೧೪, ೧೯೯೨. ಅಮರ ಆಳ್ವನ ಮಗಳ ಜನ್ಮದಿನ ಬರಲಿತ್ತು. ಅದ್ದೂರಿಯಾಗಿ ಆಚರಿಸಲು ತಯಾರಿ ಮಾಡಿಕೊಂಡಿದ್ದ ಅಮರ್ ಆಳ್ವ ಮಂಗಳೂರಿನಲ್ಲಿ ಆಪ್ತರಿಗೆ ಆಹ್ವಾನ ಪತ್ರಿಕೆ ಕೊಟ್ಟು ಕರೆಯುವ ಕೆಲಸದಲ್ಲಿ ನಿರತನಾಗಿದ್ದ. ಈ ಸಂದರ್ಭದಲ್ಲಿ ಯತೀಶ್ ಶೆಟ್ಟಿ ಮತ್ತು ಸಂಗಡಿಗರು ಮುಂಬೈನಿಂದ ತಂದಿದ್ದ ಕಾರ್ಬೈನ್ ತುಪಾಕಿಯಿಂದ ಗುಂಡಿನ ಮಳೆಗರೆದು ಅಮರ್ ಆಳ್ವನ ಹತ್ಯೆ ಮಾಡಿದರು. ಪೊರಪಾಟಿನಲ್ಲಿ ಅವರಲ್ಲೇ ಒಬ್ಬನಿಗೆ ಗುಂಡು ಕೂಡ ಬಿತ್ತು. ಯತೀಶ್ ಮತ್ತು ಸಂಗಡಿಗರು ನುರಿತ ಹಂತಕರಲ್ಲ, ಗುರಿ ತಪ್ಪಿಯಾರು ಎನ್ನುವ ಬಗ್ಗೆ ಅನುಮಾನವಿದ್ದ ಕಾರಣ ಮುಂಬೈನ ನುರಿತ ಹಂತಕನೊಬ್ಬ ಕೂಡ ಈ ಹತ್ಯೆಗೆ ನಿಯೋಜಿತನಾಗಿದ್ದ. ಕರಾರುವಕ್ಕಾಗಿ ಗುಂಡಿಟ್ಟವನು ಅವನೇ ಎಂದು ಕೂಡ ಅರಿತವರು ಹೇಳುತ್ತಾರೆ. 

ಅಮರ್ ಆಳ್ವನ ಕೊಲೆಯಾಯಿತು ಎಂದ ಕೂಡಲೇ, ಒಳಗಿನ ಈ ಎಲ್ಲ ವಿವರಗಳು ಗೊತ್ತಿಲ್ಲದ, ಜನ ಇದು ಮುತ್ತಪ್ಪ ರೈ ಮಾಡಿಸಿದ ಕೊಲೆ ಇರಬಹುದೇ ಎಂದು ಸಂಶಯಪಟ್ಟರು. ಆ ಹೊತ್ತಿಗೆ ಜಯರಾಜ್ ಕೊಲೆಯಾಗಿ ಮೂರು ವರ್ಷಗಳ ಹತ್ತಿರಕ್ಕೆ ಬಂದಿತ್ತು. ಜಯರಾಜ್ ಹತ್ಯೆಯ ನಂತರ ತಾನೇ ಮುಂಬೈ ಮಾಫಿಯಾ ಉಪಯೋಗಿಸಿ ಜಯರಾಜನನ್ನು ಪಕ್ಕಕ್ಕೆ ಸರಿಸಿದೆ ಎಂದು ಕೊಚ್ಚಿಕೊಳ್ಳುತ್ತ ಬೆಂಗಳೂರಿನ ಚಾಣಾಕ್ಷ ಪಾತಕಿ ಬೂಟ್ ಹೌಸ್ ಕುಮಾರ್ ಬೆಂಗಳೂರಿನ ಭೂಗತಲೋಕದ ಸಿಂಹಾಸನದ ಮೇಲೆ ಅನಭಿಷಿಕ್ತ ದೊರೆಯಾಗಿ ಕುಳಿತ. ಕುಳಿತಿದ್ದರೆ ತೊಂದರೆ ಇರಲಿಲ್ಲ. ಅದಕ್ಕೆ ಕಾರಣೀಭೂತನಾಗಿದ್ದ ಮುತ್ತಪ್ಪ ರೈಯನ್ನೇ ಮರೆತು ಸೀದಾ ದುಬೈ ಶೆಟ್ಟಿಗಳು, ಮಂಗಳೂರಿನ ಅಮರ್ ಆಳ್ವ, ಮತ್ತಿತತರ ಪಂಟರುಗಳ ಜೊತೆ ನೇರ ವ್ಯವಹಾರಕ್ಕೆ ಕೈಹಾಕಿದ. ಇದು ಮುತ್ತಪ್ಪ ರೈಗೆ ಸಹ್ಯವಾಗಲಿಲ್ಲ. ಮುತ್ತಪ್ಪ ರೈ ತಮ್ಮ ಪರವಾಗಿ ಬೆಂಗಳೂರಿನ ಭೂಗತಲೋಕ ಸಂಬಾಳಿಸಲಿ ಎಂದು ಆಶಿಸಿದ್ದ ದುಬೈ ಅಶೋಕ್ ಶೆಟ್ಟಿಗಾಗಲೀ ಶರದ್ ಶೆಟ್ಟಿಗಾಗಲೀ ಕೂಡ ಇದು ಸಹ್ಯವಾಗಲಿಲ್ಲ. ಅವರು ಮುತ್ತಪ್ಪ ರೈಗೆ ಎಚ್ಚರಿಕೆ ಕೊಟ್ಟರು. ಮಿತಿ ಮೀರಿ ಬೆಳೆಯುತ್ತಿರುವ ಬೂಟ್ ಹೌಸ್ ಕುಮಾರನನ್ನು 'ತೆಗೆಸಿಬಿಟ್ಟರೆ ಒಳ್ಳೆಯದು,' ಎನ್ನುವ ಟಿಪಿಕಲ್ ಸಲಹೆ ಕಮ್ ಆಜ್ಞೆ ದುಬೈಯಿಂದ ಜಾರಿಯಾಯಿತು. ಪ್ಲಾನ್ ಕೂಡ ಅವರೇ ಹಾಕಿಕೊಟ್ಟರು. ದುಬೈನಿಂದ ಶೆಟ್ಟಿಯೊಬ್ಬ ಫೋನ್ ಮಾಡಿ ಬೂಟ್ ಹೌಸ್ ಕುಮಾರನಿಗೆ ರಹಸ್ಯ ಭೇಟಿಗೆ ಒಬ್ಬನೇ ಬರುವಂತೆ ಆಹ್ವಾನ ಕೊಟ್ಟ. ದುಬೈನಿಂದ ಬಂದಿರುವುದಾಗಿಯೂ, ಬೆಂಗಳೂರಿನ ಬಂಗಲೆಯೊಂದರಲ್ಲಿ ತಂಗಿರುವುದಾಗಿಯೂ ಹೇಳಿದ. ಅವನ ಬಂಟರಿಬ್ಬರು ಬಂದು ಬೂಟ್ ಹೌಸ್ ಕುಮಾರನನ್ನು ಕರೆದುಕೊಂಡು ಬರುತ್ತಾರೆ ಎಂದೂ ಹೇಳಿದ. ಕೆಲವರು ಈ ಟೆಲಿಫೋನ್ ಕರೆ ಮಾಡಿದ್ದು ದುಬೈ ಅಶೋಕ್ ಶೆಟ್ಟಿಯೆಂದರೆ ಇನ್ನು ಕೆಲವರು ಶರದ್ ಶೆಟ್ಟಿ ಮಾಡಿದ್ದ ಅನ್ನುತ್ತಾರೆ. ಅದರ ಬಗ್ಗೆ ಗೊಂದಲವಿದೆ. ದುಬೈ ಶೆಟ್ಟಿ ಮಾಫಿಯಾ ದೊರೆಗಳ ಜೊತೆ ನೇರ ಸಂಪರ್ಕ ಸಾಧಿಸಿ ಅವರ ಮೂಲಕ ದಾವೂದ್ ಇಬ್ರಾಹಿಂನ ಸಖ್ಯವನ್ನೂ ಬೆಳೆಸುವ ದೊಡ್ಡ ಗುರಿ ಹೊಂದಿದ್ದ ಬೂಟ್ ಹೌಸ್ ಕುಮಾರ್ ಆನಂದತುಂದಿಲನಾಗಿ ಕರೆದಲ್ಲಿಗೆ ಹೋದ. ಬಲಿಯ ಬಕರಾ ಆಗಿದ್ದೇನೆ ಎನ್ನುವ ಸುಳಿವೂ ಕೂಡ ಅವನಿಗೆ ಇರಲಿಲ್ಲ. ಕರೆದಲ್ಲಿ ಬಕರಾನಂತೆ ಹೋಗಿದ್ದಷ್ಟೇ ಬಂತು. ಅಲ್ಲಿ ಕಾದಿದ್ದ ಹಂತಕರು ಬೂಟ್ ಹೌಸ್ ಕುಮಾರನ್ನು ಬಕಬಕ ಇರಿದು ಕೊಂದಿದ್ದರು. ದುಬೈ ಅಣ್ಣಾಗಳು ಹಾಕಿಕೊಟ್ಟು ಬೆಂಗಳೂರಿನಲ್ಲಿ ಮುತ್ತಪ್ಪ ರೈ ಕಾರ್ಯಗತಗೊಳಿಸಿದ್ದ ಸ್ಕೆಚ್ ಯಶಸ್ವಿಯಾಗಿತ್ತು. ಜಯರಾಜನನ್ನು ತೆಗೆಸಿದ ಬಳಿಕ ಬೆಂಗಳೂರು ಭೂಗತಜಗತ್ತಿನ ಸಿಂಹಾಸನ ಏರಿದ್ದೇನೆ ಎಂದು ತಿಳಿದಿದ್ದ ಬೂಟ್ ಹೌಸ್ ಕುಮಾರ್ ಒಂದು ವರ್ಷವೂ ಬಾಳಲಿಲ್ಲ.

ಬೂಟ್ ಹೌಸ್ ಕುಮಾರ್ ಹೀಗೆ ಮಟಾಷ್ ಆಗಿದ್ದು ಯಾರ ಮೇಲೆ ಪ್ರಭಾವ ಬೀರಿತೋ ಇಲ್ಲವೋ ಗೊತ್ತಿಲ್ಲ ಆದರೆ ಕನಲಿ ಕೆಂಡವಾದವ ಮಾತ್ರ ಮಂಗಳೂರಿನ ಅಮರ್ ಆಳ್ವ. ಅವನ ಮತ್ತು ಬೂಟ್ ಹೌಸ್ ಕುಮಾರನ ಸ್ನೇಹ ತುಂಬಾ ಚೆನ್ನಾಗಿತ್ತು. ಅಮರ್ ಆಳ್ವ ಭೂಗತಲೋಕದ ಪರಿಧಿ (periphery) ಮೇಲೆ ಮಾತ್ರ ಇದ್ದವ. ಭೂಗತಲೋಕದಲ್ಲಾಗುತ್ತಿದ್ದ ಸಮೀಕರಣಗಳು ಮತ್ತು ಬದಲಾವಣೆಗಳ ಬಗ್ಗೆ ಅವನಿಗೆ ವಿವರವಾದ ಮಾಹಿತಿ ಇದ್ದಂತಿರಲಿಲ್ಲ. ಬೂಟ್ ಹೌಸ್ ಕುಮಾರನನ್ನು ತೆಗೆಸಿದ್ದು ಮುತ್ತಪ್ಪ ರೈ ಎಂದು ಸುದ್ದಿಯಾದ ಕೂಡಲೇ ಅಮರ್ ಕನಲಿದ. ಮುತ್ತಪ್ಪ ರೈ ಮೇಲೆ ಅಸಮಾಧಾನಗೊಂಡ. ಹಾಗಾಗಿ ಮುಂದೆ ಬೇರೆಯೇ ಕಾರಣಕ್ಕೆ ಅಶೋಕ ಶೆಟ್ಟಿಯ ಬೆಂಬಲದೊಂದಿಗೆ ಯತೀಶ್ ಶೆಟ್ಟಿ ಮುಂತಾದವರು ದಾಳಿ ಮಾಡಿ ಅಮರ್ ಆಳ್ವನನ್ನು ಕೊಲೆ ಮಾಡಿದಾಗ ಅದರಲ್ಲಿ ಮುತ್ತಪ್ಪ ರೈ ಹೆಸರೂ ಕೂಡ ತಳಕು ಹಾಕಿಕೊಂಡಿತ್ತು.

ಅಮರ್ ಆಳ್ವನ ಕೊಲೆ ಪ್ರಕರಣದಲ್ಲಿ ದುಬೈ ಅಶೋಕ ಶೆಟ್ಟಿ ಆಪಾದಿತನಾಗಿದ್ದ. ಮುಂದೆ ಎಲ್ಲರೂ ನಿರ್ದೋಷಿ ಎಂದು ಖುಲಾಸೆಯಾಗಿದ್ದಾರೆ. 

೧೯೯೨ ರಲ್ಲಿ ನಡೆದ ಅಮರ್ ಆಳ್ವನ ಕೊಲೆಯ ನಂತರ ದುಬೈ ಅಶೋಕ ಶೆಟ್ಟಿಯ ಹೆಸರು ಎಲ್ಲೂ ಕೇಳಿ ಬರಲಿಲ್ಲ. ಇದೇ ವಿಷಯ ನನ್ನನ್ನು ತುಂಬಾ ಕಾಡಿದೆ. ದುಬೈನಲ್ಲಿ ಇದ್ದವನು, ದಾವೂದ್ ಇಬ್ರಾಹಿಂನನ್ನು ಆತ ಗಲ್ಲಿ ರೌಡಿ ಆಗಿದ್ದ ದಿನಗಳಿಂದಲೂ ಬಲ್ಲವನು, ಮುಂಬೈ ಬೆಂಗಳೂರು ಮಂಗಳೂರು ಭೂಗತಲೋಕಗಳ ಮೇಲೆ ತನ್ನದೇ ಹಿಡಿತ ಹೊಂದಿದ್ದವನು, ಬೇರೆ ಬೇರೆ ವ್ಯವಹಾರಗಳನ್ನು ಮಾಡಿ ಸಾಕಷ್ಟು ಸ್ಥಿತಿವಂತನಾಗಿದ್ದವನು, ಮುತ್ತಪ್ಪ ರೈನ ಗಾಡ್ ಫಾದರ್ ಎಂದೇ ಖ್ಯಾತನಾಗಿದ್ದವನು, ಎಲ್ಲರಿಂದಲೂ ಅಶೋಕಣ್ಣ ಎಂದು ಮತ್ತು ಎತ್ತರವಾಗಿದ್ದ ಕಾರಣ ಲಂಬೂ ಅಶೋಕ ಶೆಟ್ಟಿಯೆಂದೂ ಕರೆಯಲ್ಪಡುತ್ತಿದ್ದ ಡಾನ್ ದುಬೈ ಅಶೋಕ್ ಶೆಟ್ಟಿ ಎಲ್ಲಿ, ಹೇಗೆ ಮತ್ತು ಏಕೆ ಕಣ್ಮರೆಯಾಗಿಹೋದ?? Missing piece of the puzzle. ಅಮರ್ ಆಳ್ವ ಕೊಲೆಯ ನಂತರ ದುಬೈ ಅಶೋಕ್ ಶೆಟ್ಟಿಯ ಹೆಸರು ಪತ್ರಿಕೆಗಳಲ್ಲಿ ಬಂದದ್ದು ಕಮ್ಮಿ. 

ಅಮರ್ ಆಳ್ವನ ಕೊಲೆಗೆ ಪ್ರತಿಕಾರವೆಂಬಂತೆ ಅಮರನ ಮಾಫಿಯಾ ಗೆಳೆಯರು ಮುತ್ತಪ್ಪ ರೈ ಮೇಲೆ ಬೆಂಗಳೂರಿನ ಕೋರ್ಟಿನ ಆವರಣದಲ್ಲೇ ಗುಂಡಿನ ದಾಳಿ ಮಾಡಿಸಿದರು. ತನ್ನ ಮೇಲೆ ಆದ ಹತ್ಯಾ ಯತ್ನದಲ್ಲಿ ತೀವ್ರವಾಗಿ ಗಾಯಗೊಂಡರೂ ಬದುಕುಳಿದ ಮುತ್ತಪ್ಪ ರೈ ಇಲ್ಲಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ದುಬೈಗೆ ಹಾರಿದ. ಮತ್ತೊಬ್ಬ ಡಾನ್ ಶರದ್ ಶೆಟ್ಟಿ ಅವನನ್ನು ಅಲ್ಲಿ ಸೆಟಲ್ ಮಾಡಿದ. ವ್ಯವಹಾರ ಚತುರನಾಗಿದ್ದ ಮುತ್ತಪ್ಪ ರೈ ಎಲ್ಲ ತರಹದ ವ್ಯವಹಾರವನ್ನು ದುಬೈ ಮತ್ತು ಕೊಲ್ಲಿಯ ಬೇರೆ ಬೇರೆ ಕಡೆ, ಆಫ್ರಿಕಾ, ಇತ್ಯಾದಿ ಕಡೆ ವ್ಯಾಪಕವಾಗಿ ಮಾಡಿ ಯಶಸ್ವಿ ಬಿಸಿನೆಸ್ ವ್ಯಕ್ತಿಯಾದ. ಬೆಂಗಳೂರಿನ ಭೂಗತಲೋಕವನ್ನೂ ಸಂಬಾಳಿಸಿದ. ಆಗಲೇ ದಾವೂದ್ ಇಬ್ರಾಹಿಂ, ಛೋಟಾ ರಾಜನ್, ಛೋಟಾ ಶಕೀಲ್, ಶರದ್ ಶೆಟ್ಟಿ, ಅಬು ಸಲೇಂ ಮುಂತಾದ ಡಾನುಗಳು ದೂರ ಕುಳಿತೇ ಭಾರತದ ಶಹರಗಳ ಭೂಗತಲೋಕಗಳನ್ನು ಸಂಬಾಳಿಸುವ ಕಲೆಯನ್ನು ಕಲಿತು ಅದರಲ್ಲಿ ಪ್ರಾವೀಣ್ಯತೆ ಗಳಿಸಿದ್ದರು. ಮುತ್ತಪ್ಪ ರೈ ಆ ಪಟ್ಟಿಗೆ  ಮತ್ತೊಬ್ಬ ರಿಮೋಟ್ ಕಂಟ್ರೋಲ್  ಡಾನ್ ಆಗಿ ಸೇರ್ಪಡೆಗೊಂಡ. 

೧೯೯೭-೯೮ ರ ಸುಮಾರಿಗೆ ದುಬೈನಲ್ಲಿ ನೆಲೆಸಿದ್ದ ಮುತ್ತಪ್ಪ ರೈನನ್ನು ಅಲ್ಲಿ ಹೋಗಿ ಅವನ ಅಡ್ಡೆಯಲ್ಲಿಯೇ ಸಂದರ್ಶಿಸಿದ್ದ ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗರೆ ಮುತ್ತಪ್ಪ ರೈನನ್ನು ಉಲ್ಲೇಖಿಸಿ ಮಂಗಳೂರು, ಬೆಂಗಳೂರು ಭೂಗತಲೋಕದ ಬಗ್ಗೆ ವ್ಯಾಪಕವಾಗಿ ಬರೆದರು. ಅಮರ್ ಆಳ್ವನ ಕಥೆ ಮತ್ತು ಅವಸಾನದ ಕಥೆ ಮತ್ತೊಮ್ಮೆ ವರ್ಣರಂಜಿತವಾಗಿ ಅವರ ವಾರಪತ್ರಿಕೆಯಲ್ಲಿ ಅನಾವರಣವಾಯಿತು. "ಹಂತಕರು ನಿಮ್ಮ ಹುಡುಗರಾಗಿದ್ದರೆ? ನೀವು ಮಾಡಿಸಿದಿರೇ?" ಎಂಬ ಪ್ರಶ್ನೆಗೆ ಮುತ್ತಪ್ಪ ರೈ, "ಮಾಡಿದವರು ಅಶೋಕಣ್ಣನ ಕಡೆಯ ಹುಡುಗರು," ಎಂದು ಹೇಳಿದ್ದೇ ಮುತ್ತಪ್ಪ ರೈ ಬಾಯಿಂದ ಕೂಡ ಅಶೋಕ ಶೆಟ್ಟಿ ಬಗ್ಗೆ ಕೊನೆಯ ಬಾರಿಗೆ ಕೇಳಿದ್ದು. 

ದುಬೈ ಅಶೋಕ್ ಶೆಟ್ಟಿ ಬಗ್ಗೆ ಅಂತರ್ಜಾಲದ ಮೇಲೆ ಸಿಕ್ಕ ಸಿಕ್ಕ ಮಾಹಿತಿಯನ್ನೆಲ್ಲ ಜಾಲಾಡಿದ್ದೇ ಜಾಲಾಡಿದ್ದು. ಎಲ್ಲೋ ಒಂದು ಕಡೆ ಮುಂಬೈನ ಬಾರೊಂದರ ಮಾಲೀಕ ಅಶೋಕ ಕೃಷ್ಣ ಶೆಟ್ಟಿ ಎಂಬಾತನನ್ನು ಛೋಟಾ ರಾಜನ್ ಬಂಟರು ೧೯೯೩ ರಲ್ಲಿ ಕೊಂದರು ಎನ್ನುವ ಸುದ್ದಿ ಸಿಕ್ಕಿತು. ಆದರೆ ಅವನು ಅದೇ ದುಬೈ ಅಶೋಕ ಶೆಟ್ಟಿಯೇ ಎಂಬುದು ಮಾತ್ರ ಖಾತ್ರಿಯಾಗಲಿಲ್ಲ. ದುಬೈ ಅಶೋಕ್ ಶೆಟ್ಟಿಗಿದ್ದ ಡಾನ್ ಇಮೇಜಿಗೂ ಬಾರ್ ಮಾಲೀಕ ಅಶೋಕ್ ಶೆಟ್ಟಿಯ ಇಮೇಜಿಗೂ ಹೊಂದಾಣಿಕೆ ಕಂಡು ಬರಲಿಲ್ಲ. ಹಾಗಾಗುವ ಸಾಧ್ಯತೆಗಳು ಕಮ್ಮಿ ಇದ್ದವು. ಗೂಗಲ್ ಬಾಬಾನನ್ನು ಉಪಯೋಗಿಸಿ  ಅಶೋಕ್ ಶೆಟ್ಟಿಯ ಹುಡುಕಾಟ ನಡೆದಿತ್ತು. 

ಅಮರ್ ಆಳ್ವನ ಕೊಲೆ ಕೇಸಿನಲ್ಲಿ ಯತೀಶ್ ಶೆಟ್ಟಿಯಾಗಿ ಎಲ್ಲರೂ ಕೆಳಗಿನ ನ್ಯಾಯಾಲಯದಲ್ಲೇ ಖುಲಾಸೆಗೊಂಡಿದ್ದರು. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅಶೋಕ ಶೆಟ್ಟಿ ಮೇಲೆ ಬೇರೆಯೇ ಕೇಸ್ ಸಂಖ್ಯೆಯಡಿ ಕೇಸ್ ನಡೆದಿತ್ತು. ಅಶೋಕ್ ಶೆಟ್ಟಿ ವಿದೇಶದಲ್ಲಿ ಕುಳಿತೇ ಹೈಕೋರ್ಟಿಗೆ  ಮೇಲ್ಮನವಿ ಸಲ್ಲಿಸಿದ. ಮನವಿ ಪುರಸ್ಕರಿಸಿದ ಹೈಕೋರ್ಟ್, ಬಾಕಿ ಎಲ್ಲ ಆರೋಪಿಗಳು ಖುಲಾಸೆಯಾಗಿರುವಾಗ ಅಶೋಕ್ ಶೆಟ್ಟಿ ಮೇಲಿನ ಕೇಸನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎನ್ನುವ ತೀರ್ಪು ಕೊಟ್ಟು ಅವನನ್ನೂ ಖುಲಾಸೆ ಮಾಡಿತು. ಈ ತೀರ್ಪು ಬಂದಿದ್ದು ೨೯ ನವೆಂಬರ್ ೨೦೧೭. ಕೊಲೆ ನಡೆದಿದ್ದು ೧೯೯೨ ರಲ್ಲಿ. ಉಳಿದವರು ಖುಲಾಸೆಯಾಗಿದ್ದು ೧೯೯೬ ರಲ್ಲಿ ಮತ್ತು ೨೦೦೩ ರಲ್ಲಿ. ಈ ತೀರ್ಪನ್ನು ಓದಿದ ಮೇಲೆ ೧೯೯೩ ರಲ್ಲಿ ಮುಂಬೈನಲ್ಲಿ ಛೋಟಾ ರಾಜನ್ ಬಂಟರ ಗುಂಡಿಗೆ ಬಲಿಯಾದ ಅಶೋಕ್ ಶೆಟ್ಟಿ ಬೇರೆ ಯಾರೋ ಎಂದು ಬಹುತೇಕ ಖಾತ್ರಿಯಾಯಿತು. ಅವನ ಹೆಸರಿನಲ್ಲಿ ಕೃಷ್ಣ ಇತ್ತು. ತಂದೆಯ ಹೆಸರಿರಬಹುದು. ದುಬೈ ಅಶೋಕ್ ಶೆಟ್ಟಿಯ ತಂದೆಯ ಹೆಸರು ಮುದ್ದಣ್ಣ ಶೆಟ್ಟಿ ಎಂದು ತೀರ್ಪಿನಲ್ಲಿ ದಾಖಲಾಗಿದೆ.

ಮುಂಬೈನಲ್ಲಿ ಅಶೋಕ್ ಬಾರ್ ನಡೆಸುತ್ತಿದ್ದ ಮೃತ ಅಶೋಕ್ ಶೆಟ್ಟಿ ಬೇರೆಯೇ ಎಂದು ಗೊತ್ತಾಯಿತೇ ಹೊರತು ಬೆಂಗಳೂರಿನ ಭೂಗತಲೋಕದ ಮೂಲ ಗಾಡ್ ಫಾದರ್ ಅಶೋಕ್ ಶೆಟ್ಟಿ ಎಲ್ಲಿ ಎನ್ನುವ ಮಾಹಿತಿ ಮಾತ್ರ ತಿಳಿಯಲಿಲ್ಲ. ಹುಡುಕಾಟ ಮಾತ್ರ ನಡದೇ ಇತ್ತು. ಗೂಗಲ್ ಮೇಲೆ ಸಿಕ್ಕಿದ ಯಾವ ಮಾಹಿತಿಯನ್ನೂ ಓದದೇ ಬಿಟ್ಟಿದ್ದಿಲ್ಲ. 

ಅಶೋಕ ಶೆಟ್ಟಿ ಎನ್ನುವ ಹೆಸರು ಮತ್ತೊಮ್ಮೆ ಕೇಳಿ ಬಂದಿದ್ದು ೨೦೦೦ ಸೆಪ್ಟೆಂಬರಿನಲ್ಲಿ. ೧೯೯೩ ರ ಮುಂಬೈ ಬಾಂಬ್ ಸ್ಫೋಟಗಳ ಬಳಿಕ ದಾವೂದ್ ಇಬ್ರಾಹಿಂನ ಬಲಗೈ ಬಂಟನಂತಿದ್ದ ಛೋಟಾ ರಾಜನ್ ಬೇರೆಯಾದ. ತನ್ನದೇ ಆದ ಪ್ರತ್ಯೇಕ ಗ್ಯಾಂಗ್ ಕಟ್ಟಿಕೊಂಡ. ದಾವೂದ್ ಮತ್ತು ರಾಜನ್ ಬಣಗಳ ನಡುವೆ ಭೀಕರ ಗ್ಯಾಂಗ್ ವಾರ್ ನಡೆಯಿತು. ಛೋಟಾ ರಾಜನ್ ವಿಶ್ವದ ಯಾವ ಮೂಲೆಯಲ್ಲಿದ್ದರೂ ಹುಡುಕಿ ಕೊಂದೇಬಿಡಬೇಕು ಎಂದು ರಕ್ತಕ್ಕಾಗಿ ಹಪಹಪಿಸುತ್ತಿದ್ದವನು ದಾವೂದನ ಮತ್ತೊಬ್ಬ ಬಂಟ ಛೋಟಾ ಶಕೀಲ್. ಅವನಿಗೆ ಮೊದಲಿನಿಂದಲೂ ಛೋಟಾ ರಾಜನ್ ಕಂಡರೆ ಅಷ್ಟಕಷ್ಟೇ. 

ದಾವೂದನಿಂದ ಬೇರೆಯಾದ ನಂತರ ಛೋಟಾ ರಾಜನ್ ಬೇರೆ ಬೇರೆ ದೇಶಗಳಲ್ಲಿ ಓಡಾಡಿಕೊಂಡಿದ್ದ. ಒಂದಿಷ್ಟು ಕಾಲವಂತೂ ಮಲೇಶಿಯಾ ದೇಶದ ಸಮುದ್ರ ತೀರದಲ್ಲಿ ಲಂಗರು ಹಾಕಿದ ಐಷಾರಾಮಿ ನೌಕೆಯಿಂದ ತನ್ನ ಕೆಲಸ ಸಂಬಾಳಿಸಿದ ಎಂದೂ ಹೇಳುತ್ತಾರೆ. ದಕ್ಷಿಣ ಏಷ್ಯಾದ ದೇಶಗಳಲ್ಲಿ ಸುತ್ತಾಡಿಕೊಂಡಿದ್ದ. ೨೦೦೦ ಸೆಪ್ಟೆಂಬರ್ ಸಮಯದಲ್ಲಿ ಛೋಟಾ ರಾಜನ್ ಥೈಲಾಂಡಿನ ರಾಜಧಾನಿ ಬ್ಯಾಂಕಾಕಿನಲ್ಲಿ ನೆಲೆಸಿದ್ದ. ಜೊತೆಗೆ ನೆಚ್ಚಿನ ಬಂಟ ರೋಹಿತ್ ವರ್ಮಾ ಮತ್ತು ಅವನ ಕುಟುಂಬ ಇತ್ತು. ಇತರೇ ಸಹಚರರಾದ ರವಿ ಪೂಜಾರಿ, ಗುರು ಸಾಟಮ್ ಮುಂತಾದವರು ಕೂಡ ಅಲ್ಲಿಯೇ ಇದ್ದರು.

ಛೋಟಾ ರಾಜನ್ನನ್ನು ಹುಡುಕುತ್ತಿದ್ದ ಛೋಟಾ ಶಕೀಲ್ ರಾಜನ್ ಬ್ಯಾಂಕಾಕಿನಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದ. ಮುಂಬೈನಲ್ಲಿ ಛೋಟಾ ಶಕೀಲ್ ಪರವಾಗಿ ಅನೇಕ ಸುಪಾರಿ ಹತ್ಯೆಗಳನ್ನು ಮಾಡಿದ್ದ ನುರಿತ ಹಂತಕರಾದ ಮುನ್ನಾ ಜಿಂಗಾಡಾ, ರಶೀದ್ ಮಲಬಾರಿ ಎಲ್ಲ ಪಾಕಿಸ್ತಾನದಲ್ಲೇ ಇದ್ದರು ಅಥವಾ ಅಲ್ಲಿಗೆ ತಲುಪಿಕೊಂಡರು. ಜೊತೆಗೆ ಇನ್ನೂ ಕೆಲವು ಹಂತಕರನ್ನು ಹಾಕಿ, ಒಂದು ಖತರ್ನಾಕ್ ತಂಡ ತಯಾರು ಮಾಡಿ, ಅವರಿಗೆಲ್ಲ ಪಾಕಿಸ್ತಾನಿ ಪಾಸಪೋರ್ಟ್ ಕೊಟ್ಟು ಬಾಂಕಾಕಿಗೆ ಕಳಿಸಿದ ಛೋಟಾ ಶಕೀಲ್. 

ಮುಹೂರ್ತವಿಟ್ಟ ದಿನದಂದು ರಾಜನ್ ನೆಲೆಸಿದ್ದ ಫ್ಲ್ಯಾಟಿಗೆ ತೆರಳಿತು ಹಂತಕರ ತಂಡ. ರಾಜನ್ನನಿಗೆ ಪರಿಚಿತನಾದ ಒಬ್ಬ ವ್ಯಕ್ತಿಯೇ ಬಾಗಿಲು ತಟ್ಟಿದ. ಆ ಪರಿಚಿತ ವ್ಯಕ್ತಿ ಆ ಹೊತ್ತಿಗೆ ಬರುತ್ತೇನೆ ಎಂದು ಮೊದಲೇ ತಿಳಿಸಿದ್ದ. ಬಾಗಿಲ ಕಿಂಡಿಯ ಮೂಲಕ ಯಾರು ಬಂದಿರಬಹುದು ಎಂದು ನೋಡಿದ ರಾಜನ್ ಬಂಟ ರೋಹಿತ್ ವರ್ಮಾ. ಪರಿಚಿತನೇ ಕಂಡ. ರೋಹಿತ್ ವರ್ಮಾ ಬಾಗಿಲು ತೆಗೆದ ಕೂಡಲೇ ಆ ಪರಿಚಿತ ಪಕ್ಕಕ್ಕೆ ಸರಿದುಬಿಟ್ಟ. ಹಿಂದೆಯೇ ಒಳನುಗ್ಗಿ ಬಂದವನು ಶಾರ್ಪ್ ಶೂಟರ್ ಮುನ್ನಾ  ಜಿಂಗಾಡಾ. ಕೈಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸುತ್ತಲೇ ಬಂದ. ಹಿಂದೆಯೇ ಇತರ ಹಂತಕರೂ ಗುಂಡು ಹಾರಿಸುತ್ತ ಬಂದರು. ಅನೇಕ ಗುಂಡೇಟು ತಿಂದ ರೋಹಿತ್ ವರ್ಮಾ ಅಲ್ಲೇ ನೆಲಕ್ಕುರುಳಿದ. ಅವನ ನೇಪಾಳಿ ಮೂಲದ ಪತ್ನಿಗೂ ಗುಂಡೇಟು ಬಿದ್ದವು. 

ಅಲ್ಲೆಲ್ಲೂ ಛೋಟಾ ರಾಜನ್ ಕಾಣಲಿಲ್ಲ. ಆತ ಬೇರೊಂದು ಕೋಣೆಯಲ್ಲಿದ್ದಾನೆ ಎಂದು ಹಂತಕರಿಗೆ ಅರಿವಾಗಿ ಕೋಣೆಯ ಬಾಗಿಲ ಮೂಲಕವೇ ಗುಂಡು ಹಾರಿಸುತ್ತ ಒಳಗೆ ನುಗ್ಗಿದರು. ರಾಜನ್ ಕಾಣಲಿಲ್ಲ. ಹೆಚ್ಚಿನ ಚೌಕಾಶಿ ಮಾಡಲು ಹಂತಕರ ಬಳಿ ಸಮಯ ಇರಲಿಲ್ಲ. ಹಾಗಾಗಿ ಮತ್ತೊಂದಿಷ್ಟು ಗುಂಡು ಹಾರಿಸಿ ಅಲ್ಲಿಂದ ಕಾಲ್ಕಿತ್ತರು. 

ಇತ್ತಕಡೆ ಸಮಯಪ್ರಜ್ಞೆಯನ್ನು ಉಪಯೋಗಿಸಿ ಕಿಟಕಿಯಿಂದ ಹೊರಗೆ ಹಾರಿದ್ದ ಛೋಟಾ ರಾಜನ್ ಕೆಲವು ಗುಂಡೇಟು ತಿಂದು ಗಾಯಗೊಂಡಿದ್ದ. ಅವನ ಅದೃಷ್ಟ ಚೆನ್ನಾಗಿತ್ತು. ಯಾರೋ ಆಸ್ಪತ್ರೆಗೆ ಸೇರಿಸಿದರು. ಅಲ್ಲಿ ಚೇತರಿಸಿಕೊಂಡ ರಾಜನ್ ಬೇರೆ ನೆಲೆಗೆ ವರ್ಗಾವಣೆಯಾದ. ಮೊದಲು ಪಕ್ಕದ ದೇಶ ಕಾಂಬೋಡಿಯಾ ತಲುಪಿಕೊಂಡು ನಂತರ ಇರಾನಿಗೆ ಹೋಗಿ ನೆಲೆಸಿದ ಎಂದು ವರದಿಯಾಗಿತ್ತು.

ಛೋಟಾ ರಾಜನ್ ಮನೆಗೆ ಹಂತಕರ ತಂಡವನ್ನು ಕರೆದುಕೊಂಡು ಬಂದು ಬಾಗಿಲು ತಟ್ಟಿದ ಆ ಪರಿಚಯಸ್ಥ ಯಾರಾಗಿದ್ದ ಎಂದು ಹುಡುಕುತ್ತ ಹೋದಾಗ ಮೊದಲು ಎಲ್ಲೂ ಸರಿಯಾದ ಮಾಹಿತಿ ಸಿಗಲಿಲ್ಲ. ಆಗ ಮತ್ತೆ ಕೇಳಿ ಬಂದಿದ್ದು, ಮತ್ತದೇ ಹೆಸರು...ಅಶೋಕ್ ಶೆಟ್ಟಿ.

ಈಗ ಮತ್ತೆ ತಲೆಕೆಡಿಸಿಕೊಂಡಿದ್ದು ನಮ್ಮಂತಹ ಮಾಫಿಯಾ ಸುದ್ದಿ ಸಂಶೋಧಕರು ಮತ್ತು ಸಂಗ್ರಹಕಾರರು. ೧೯೯೨ ರಲ್ಲಿ ಮಂಗಳೂರಿನಲ್ಲಿ ನಡೆದ ಅಮರ್ ಆಳ್ವ ಕೊಲೆಯಲ್ಲಿ ಆಪಾದಿತನಾಗಿದ್ದ ದುಬೈ ಅಶೋಕ್ ಶೆಟ್ಟಿ ಬಗ್ಗೆ ಮಾಹಿತಿ ಇರಲಿಲ್ಲ. ಅಂತಹ ಅಶೋಕ್ ಶೆಟ್ಟಿ ಈಗ ಛೋಟಾ ರಾಜನ್ ಗುಂಪು ಸೇರಿ ರಾಜನ್ನನಿಗೆ ವಿಶ್ವಾಸದ್ರೋಹ ಮಾಡಿದನೇ? ಆದರೆ ಆ ಸಾಧ್ಯತೆ ಕಮ್ಮಿ ಎನ್ನಿಸಿತು. ಏಕೆಂದರೆ ದುಬೈ ಅಶೋಕ್ ಶೆಟ್ಟಿ ಆಗಲೇ ಉನ್ನತ ಸ್ಥಾನದಲ್ಲಿದ್ದ ಯಶಸ್ವಿ ಬಿಸಿನೆಸ್ ಮನುಷ್ಯ. ತುಂಬಾ ವರ್ಷಗಳಿಂದ ಮುಂಬೈನಲ್ಲಿ ಇದ್ದ. ದಾವೂದನನ್ನು ಮೊದಲಿಂದಲೂ ಬಲ್ಲವನಾಗಿದ್ದ. ಬಹಳ ಮೊದಲೇ ದುಬೈಗೆ ಹೋಗಿ ಯಶಸ್ವಿ ಬಿಸಿನೆಸ್ ಮನುಷ್ಯನಾಗಿದ್ದ. ಅಂತಹ ಹಿರಿಯ ಮನುಷ್ಯ relatively ಕಿರಿಯನಾಗಿದ್ದ ಛೋಟಾ ರಾಜನ್ ಜೊತೆ ಸೇರಿಕೊಂಡನೇ?? ಹಾಗಾಗುವ ಸಾಧ್ಯತೆ ಯಾಕೋ ಕಮ್ಮಿ ಎನ್ನಿಸಿತು. ಆದರೆ ರಾಜನ್ ಬಗ್ಗೆ ಸುಳಿವು ಕೊಟ್ಟ ಅಶೋಕ್ ಶೆಟ್ಟಿ ಯಾರು ಎಂಬುದರ ಬಗ್ಗೆ ಮಾಹಿತಿ ಸಿಗಲಿಲ್ಲ.

ತನಿಖಾ ಪತ್ರಕರ್ತ ಅಂಬರ್ ಶರ್ಮಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮುಂಬೈ ಭೂಗತಜಗತ್ತಿನ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿದ್ದಾರೆ. ಛೋಟಾ ರಾಜನ್ ಹತ್ಯೆಯ ಪ್ರಯತ್ನದ ಬಗ್ಗೆ ತುಂಬಾ ತನಿಖೆ ಮಾಡಿ ಬಹಳ ಮಾಹಿತಿ ಸಂಗ್ರಹಿಸಿದ್ದರು. ಅದು Crime Lords Trail Bombay To Bangkok ಎಂಬ ಪುಸ್ತಕ ರೂಪದಲ್ಲಿ ಕೂಡ ಪ್ರಕಟವಾಯಿತು. ಹಿಂದೆಲ್ಲೂ ಪ್ರಕಟವಾಗದ ಹೊಸ ಮಾಹಿತಿಗಳು ಅದರಲ್ಲಿ ಇವೆ. ಅಪರೂಪದ ಚಿತ್ರಗಳಿವೆ. ತುಂಬಾ ಚೆನ್ನಾಗಿದೆ. ಪುಸ್ತಕದ ಕರಡನ್ನು ಇನ್ನೂ ಜಾಗ್ರತೆಯಿಂದ ತಿದ್ದಿ ಮರುಪ್ರಕಟಿಸಿ ಎನ್ನುವ ನನ್ನ ಸಲಹೆಗೆ ಲೇಖಕರು ಸಹಮತಿ ವ್ಯಕ್ತಪಡಿಸಿ ಧನ್ಯವಾದ ಹೇಳಿದ್ದಾರೆ. 

ಪತ್ರಕರ್ತ ಅಂಬರ್ ಶರ್ಮಾ ಹೇಳುವ ಪ್ರಕಾರ: ಹಂತಕರ ತಂಡದೊಂದಿಗೆ ರಾಜನ್ ಮನೆಯ ಬಾಗಿಲು ತಟ್ಟಿದ್ದ ಅಶೋಕ್ ಶೆಟ್ಟಿ ಛೋಟಾ ರಾಜನ್ನಿಗೆ ಆಸ್ಟ್ರೇಲಿಯಾದಲ್ಲಿ ಪರಿಚಿತನಾಗಿದ್ದನಂತೆ. ಅಲ್ಲಿ ಅಶೋಕ್ ಶೆಟ್ಟಿ ಟ್ಯಾಕ್ಸಿ ಓಡಿಸುತ್ತಿದ್ದ. ರಾಜನ್ ನ ವಿಶ್ವಾಸ ಗಳಿಸಿದ. ಅವನ ಸಹಾಯಕನಾದ. ಮುಂದೆ ರಾಜನ್ ಎಲ್ಲೆಲ್ಲಿ ಹೋದನೋ ಅಲ್ಲೆಲ್ಲ ಅಶೋಕ್ ಶೆಟ್ಟಿ ಕೂಡ ಹೋದ. ಬಾಂಕಾಕಿಗೂ ಬಂದ. ಅಲ್ಲಿ ರವಿ ಪೂಜಾರಿ, ಗುರು ಸಾಟಮ್ ಮುಂತಾದ ಇತರೆ ರಾಜನ್ ಬಂಟರೂ ಬಂದು ಸೇರಿದ್ದರು. ಎಲ್ಲ ಕೆಲಸ ಮಾಡಿಸಿಕೊಂಡರೂ ರಾಜನ್ ದುಡ್ಡು ಬಿಚ್ಚುವುದಿಲ್ಲ ಎಂಬುದರ ಬಗ್ಗೆ ರವಿ ಪೂಜಾರಿ ಮತ್ತು ಗುರು ಸಾಟಮ್ ಅಸಮಾಧಾನಗೊಂಡಿದ್ದರು. ಇದನ್ನು ಅರಿತ ಅಶೋಕ ಶೆಟ್ಟಿ ಅವರಿಗೊಂದು ಗೌಪ್ಯದ ಪ್ರಸ್ತಾವನೆ ಕೊಟ್ಟ. ನಿಮ್ಮಲ್ಲಿರುವ ರಾಜನ್ ಮಾಹಿತಿಯನ್ನು ದಾವೂದನಿಗೆ ಕೊಟ್ಟುಬಿಡಿ. ಸಾಕಷ್ಟು ದುಡ್ಡು ಬರುತ್ತದೆ. ಅಶೋಕ್ ಶೆಟ್ಟಿಯ ಮೂಲಕವೇ ಈ ಮಾಹಿತಿ ಛೋಟಾ ಶಕೀಲನಿಗೆ ತಲುಪಿತು. ಇದಕ್ಕೆ ಪ್ರತಿಯಾಗಿ ರವಿ ಪೂಜಾರಿ ಮತ್ತು ಗುರು ಸಾಟಮ್ ರಿಗೆ ದೊಡ್ಡ ಮೊತ್ತದ ಇಡಿಗಂಟು ಸಂದಾಯವಾಯಿತು. ಮಾಹಿತಿ ಲೀಕ್ ಮಾಡಿದ ಪೂಜಾರಿ ಮತ್ತು ಸಾಟಮ್ ಥೈಲ್ಯಾಂಡ್  ದೇಶ ಬಿಟ್ಟು ಹೋದರು. ಹಾಗಾಗಿ ಛೋಟಾ ಶಕೀಲ್ ಕಳಿಸಿದ್ದ ಹಂತಕರ ತಂಡವನ್ನು ಲೀಡ್ ಮಾಡುವ ಕೆಲಸ ಅಶೋಕ್ ಶೆಟ್ಟಿಯೇ ವಹಿಸಿಕೊಂಡ. ಪರಿಚಿತನಾಗಿದ್ದ ಅವನು ಹೋಗಿ ಬಾಗಿಲು ತಟ್ಟಿ ಬಾಗಿಲು ತೆಗೆಸುವುದಷ್ಟೇ ಅವನ ಕೆಲಸ. ಅಷ್ಟು ಮಾಡಿದ.

(ಬ್ಯಾಂಕಾಕಿನಲ್ಲಿದ್ದ ಛೋಟಾ ರಾಜನ್ ಮನೆಯ ಮಾಹಿತಿಯನ್ನು ಯಾರು ಲೀಕ್ ಮಾಡಿದರು ಮತ್ತು ಹೇಗೆ ಮಾಡಿದರು ಅನ್ನುವುದರ ಬಗ್ಗೆ ಸ್ವಲ್ಪ ಬೇರೆಯ ವಿವರಣೆ ಮುಂಬೈನ ತನಿಖಾ ಪತ್ರಕರ್ತೆ ಜ್ಯೋತಿ ಶೇಲಾರ್ ಬರೆದ Bhais of Bengaluru ಪುಸ್ತಕದಲ್ಲಿ ಇದೆ. ಆ ಪುಸ್ತಕದ ಪ್ರಕಾರ: ಛೋಟಾ ರಾಜನ್ ಸಹಚರರಾದ ರವಿ ಪೂಜಾರಿ ಮತ್ತು ಗುರು ಸಾಟಮ್ ದುಬೈಗೆ ಬಂದಿದ್ದರು. ಅಲ್ಲಿ ಮುತ್ತಪ್ಪ ರೈ ಒಡೆತತನಕ್ಕೆ ಸೇರಿದ್ದ ಹೋಟೆಲ್ ಒಂದರಲ್ಲಿ ಕುಳಿತು ಹರಟುತ್ತಿದ್ದರು. ಅವರು ಛೋಟಾ ರಾಜನ್ ಬಗ್ಗೆ ತುಚ್ಛವಾಗಿ ಮಾತಾಡುತ್ತಿದ್ದನ್ನು ಕೇಳಿಸಿಕೊಂಡ ವೇಟರ್ ಒಬ್ಬ ಮಾಲೀಕ ಮುತ್ತಪ್ಪ ರೈಗೆ ಮಾಹಿತಿ ಮುಟ್ಟಿಸಿದ. ಅಲ್ಲಿಗೆ ಬಂದ ಮುತ್ತಪ್ಪ ರೈ ರವಿ ಪೂಜಾರಿ ಮತ್ತು ಗುರು ಸಾಟಮ್ ರನ್ನು ವಿಚಾರಿಸಿಕೊಂಡ. ಐದು ಕೋಟಿ ಕೊಟ್ಟರೆ ಛೋಟಾ ರಾಜನ್ ನ ರಹಸ್ಯ ಅಡಗುತಾಣದ ಮಾಹಿತಿಯನ್ನು ಕೊಡುವುದಾಗಿ ರವಿ ಪೂಜಾರಿ ಮತ್ತು ಸಾಟಮ್ ಹೇಳಿದರು. ಅವರಿಗೆ ಒಂದಿಷ್ಟು ಮುಂಗಡ ಹಣ ಕೊಟ್ಟ. ದುಬೈನಲ್ಲಿ ಒಂದಿಷ್ಟು ಭರ್ಜರಿ ಶಾಪಿಂಗ್ ಮಾಡಿಸಿದ. ರಾಜನ್ ಅಡಗುತಾಣದ ಮಾಹಿತಿ ಪಡೆದುಕೊಂಡ. ಆ ಮಾಹಿತಿಯನ್ನು ರೈ ತನಗೆ ದುಬೈನಲ್ಲಿ ನೆಲೆಸಲು ಸಹಾಯ ಮಾಡಿದ್ದ ಡಾನ್ ಶರದ್ ಅಣ್ಣಾ ಶೆಟ್ಟಿಗೆ ತಲುಪಿಸಿದ. ದಾವೂದ್ ಇಬ್ರಾಹಿಂನ ಪರಮಮಿತ್ರನೂ ಮತ್ತು ಗ್ಯಾಂಗಿನ ಮುಖ್ಯ ಸದಸ್ಯನೂ ಆಗಿದ್ದ ಶರದ್ ಅಣ್ಣಾ ಶೆಟ್ಟಿ ಅದನ್ನು ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಜೊತೆ ಹಂಚಿಕೊಂಡ. ಛೋಟಾ ಶಕೀಲ್ ಆ ಮಾಹಿತಿಯನ್ನು ಉಪಯೋಗಿಸಿಕೊಂಡು ಛೋಟಾ ರಾಜನ್  ಹತ್ಯೆಯ ಸ್ಕೆಚ್ ಹಾಕಿದ.)

ಛೋಟಾ ರಾಜನ್ ಹತ್ಯೆಯ ಸಂಚಿನಲ್ಲಿ ಅತಿ ಮುಖ್ಯ ಪಾತ್ರ ವಹಿಸಿದ್ದ ಎಂದು ಹೇಳಲಾಗುವ ಆ ಅಶೋಕ್ ಶೆಟ್ಟಿ ಬಗ್ಗೆ ಕೂಡ ಆ ಘಟನೆ ನಂತರ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ತನಿಖಾ ಪತ್ರಕರ್ತ ಅಂಬರ್ ಶರ್ಮಾ ಪ್ರಕಾರ ಅಶೋಕ್ ಶೆಟ್ಟಿ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ. ಇನ್ನೊಬ್ಬ ವರಿಷ್ಠ ತನಿಖಾ ಪತ್ರಕರ್ತ ಬಲಜೀತ್ ಪರಮಾರ್  ತಮ್ಮ ಯೂಟ್ಯೂಬ್ ಚಾನೆಲ್ ಮೇಲೆ  ಹೇಳುವ ಹಾಗೆ ಆತ ಅಮೇರಿಕಾದಲ್ಲಿ ಸೆಟಲ್ ಆಗಿದ್ದಾನೆ. ಮತ್ತೇನೂ ಮಾಹಿತಿ ಇಲ್ಲ.

ಛೋಟಾ ರಾಜನ್ ಹತ್ಯೆಯ ಸಂಚಿನಲ್ಲಿ ಭಾಗಿಯಾದ ಅಶೋಕ್ ಶೆಟ್ಟಿ ಮತ್ತು ಬೆಂಗಳೂರಿಗೆ ಮುಂಬೈ ಭೂಗತಲೋಕದ ಸ್ಪರ್ಶ ಕೊಟ್ಟ ಗಾಡ್ ಫಾದರ್ ಡಾನ್ ದುಬೈ ಅಶೋಕ್ ಶೆಟ್ಟಿ ಒಬ್ಬನೇ ಇರಬಹುದೇ ಎನ್ನುವ ವಿಚಾರ ಬರುವುದು ಸಹಜ. ಮೇಲ್ನೋಟಕ್ಕೆ ಇರಲಿಕ್ಕಿಲ್ಲ ಅನ್ನಿಸುತ್ತದೆ. ಏಕೆಂದರೆ ೧೯೯೦ ರ ದಶಕದಲ್ಲೇ ದುಬೈ ಅಶೋಕ್ ಶೆಟ್ಟಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿ ಉದ್ಯಮಿ ಮತ್ತು ವ್ಯಾಪಾರಿ ಎಂದು ಖ್ಯಾತನಾದವ. ಅಂತಹ ವ್ಯಕ್ತಿ ೨೦೦೦ ರ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದ ಮತ್ತು ಛೋಟಾ ರಾಜನ್ನಿಗೆ ಪರಿಚಿತನಾಗಿ ಅವನ ವಿಶ್ವಾಸದ ವ್ಯಕ್ತಿಯಾದ ಎಂದರೆ ಮೇಲ್ನೋಟಕ್ಕೆ ತಾಳೆಯಾಗುವುದಿಲ್ಲ. ಖಚಿತ ಮಾಹಿತಿ ಗೊತ್ತಿಲ್ಲದ ಕಾರಣ ಒಬ್ಬನೇ ಆಗಿರುವ ಸಾಧ್ಯತೆಗಳನ್ನು ಸಂಪೂರ್ಣವಾಗಿ ಅಲ್ಲಗೆಳೆಯಲೂ ಆಗುವುದಿಲ್ಲ.

ಮೂಲ ಹುಡುಕಾಟ ಆರಂಭ ಮಾಡಿದ್ದು ಬೆಂಗಳೂರಿನ ಆಧುನಿಕ ಭೂಗತಲೋಕದ ಪಿತಾಮಹರಲ್ಲಿ  ಒಬ್ಬನಾದ ದುಬೈ ಅಶೋಕ್ ಶೆಟ್ಟಿ ೧೯೯೨ ರ ಅಮರ್ ಆಳ್ವನ ಕೊಲೆಯ ನಂತರ ಏನಾದ, ಏನು ಮಾಡಿಕೊಂಡಿದ್ದಾನೆ ಎಂಬುದರ ಕುರಿತಾಗಿ. ಹಾಗೆ ಹುಡುಕಾಟ ನಡೆಸಿದ್ದಾಗ ಛೋಟಾ ರಾಜನ್ ಮೇಲಿನ ಹತ್ಯಾ ಯತ್ನದಲ್ಲಿ ಇದ್ದ ಅಶೋಕ್ ಶೆಟ್ಟಿಯ ಬಗ್ಗೆ ತಿಳಿಯಿತು. ಹಾಗಾಗಿ ಅಶೋಕ್ ಶೆಟ್ಟಿ ಎನ್ನುವ ಹೆಸರಿನ ಇಬ್ಬರು ವ್ಯಕ್ತಿಗಳ ಬಗ್ಗೆ ಕುತೂಹಲ ಹುಟ್ಟಿದೆ. ಮಾಹಿತಿ ಮಾತ್ರ ಸಿಕ್ಕಿಲ್ಲ. ಮಾಹಿತಿ ಸಿಗದೇ ನಮ್ಮ ಮಾಹಿತಿ ಸಂಗ್ರಹ ಅಪೂರ್ಣ. Two important pieces missing in the puzzle. 

ದಕ್ಷಿಣ ಕನ್ನಡದ ಖ್ಯಾತ ಹಿರಿಯ ಪತ್ರಕರ್ತ ಮೋಹನ್ ಬೋಳಂಗಡಿ ಅವರು ಕರಾವಳಿ ಕ್ರೈಮ್ ಲೋಕದ ನಡೆದಾಡುವ ವಿಶ್ವಕೋಶ. ಅವರು ಯೂಟ್ಯೂಬ್ ಮೇಲೆ ಬೇರೆ ಬೇರೆ ಚಾನೆಲ್ಲುಗಳಲ್ಲಿ ಕರಾವಳಿ ಮೂಲದ ಭೂಗತದೊರೆಗಳ ಬಗ್ಗೆ ವ್ಯಾಪಕವಾಗಿ ಮಾತಾಡಿದ್ದಾರೆ. ಎಲ್ಲೋ ಒಂದು ಕಡೆ ನಾನು ಕಾಮೆಂಟ್ ಹಾಕಿದ್ದೆ ಮತ್ತು ಇದೇ ಪ್ರಶ್ನೆಯನ್ನು ಕೇಳಿದ್ದೆ. ೧೯೯೦ ರ ದಶಕದ ದುಬೈ ಅಶೋಕ್ ಶೆಟ್ಟಿ ಮತ್ತು ಛೋಟಾ ರಾಜನ್ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿದ್ದ ಅಶೋಕ್ ಶೆಟ್ಟಿ ಒಂದೇ ವ್ಯಕ್ತಿಯೇ? ಬೇರೊಬ್ಬ ವೀಕ್ಷಕರು ಅದಕ್ಕೆ ಅಲ್ಲಿಯೇ ಪ್ರತ್ಯುತ್ತರ ನೀಡಿ, "ಅಲ್ಲ. ಆ ಅಶೋಕ್ ಶೆಟ್ಟಿಯೇ ಬೇರೆ. ಅವರು ಮುತ್ತಪ್ಪ ರೈನ ಗಾಡ್ ಫಾದರ್. ಈಗ ಆಫ್ರಿಕಾದ ದೇಶಗಳಲ್ಲಿ ಗಣಿ ಮತ್ತು ಇತರೆ ವ್ಯವಹಾರ ಮಾಡಿಕೊಂಡಿದ್ದಾರೆ," ಎಂದು ಹೇಳಿದ್ದು ಬಿಟ್ಟರೆ ಬೇರೆ ಯಾವ ಹೊಸ ಮಾಹಿತಿಯೂ ಸಿಗಲಿಲ್ಲ. ಹಾಗೆ ಉತ್ತರ ಕೊಟ್ಟಿದ್ದ ವ್ಯಕ್ತಿ ಕೂಡ ಯಾವುದೋ ಕಾರಣಕ್ಕೆ ತಮ್ಮ ಕಾಮೆಂಟುಗಳನ್ನು ಡಿಲೀಟ್ ಮಾಡಿದರು. ಯಾಕೋ ಗೊತ್ತಿಲ್ಲ. 

ಈ ಇಬ್ಬರು ಅಶೋಕ್ ಶೆಟ್ಟಿ ಎಂಬ ಹೆಸರಿನ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ಕಾಮೆಂಟ್ ಹಾಕಿ ಹಂಚಿಕೊಳ್ಳಿ. ಭೂಗತಲೋಕದ ಮಾಹಿತಿ ಸಂಗ್ರಹಿಸುವ ನನ್ನಂತಹವರಿಗೆ ಅನುಕೂಲವಾಗುತ್ತದೆ.

ಕೊನೆಯಲ್ಲಿ ಒಂದು ವಿಷಯ ಮರೆಯದೇ ಹೇಳಬೇಕು. ಅಶೋಕ್ ಶೆಟ್ಟಿ, ಯತೀಶ್ ಶೆಟ್ಟಿ, ದಿವಂಗತ ಮುತ್ತಪ್ಪ ರೈ ಎಲ್ಲರೂ ತಮ್ಮ ಮೇಲಿದ್ದ ಎಲ್ಲ ಅಪಾದನೆಗಳಿಂದ ಮುಕ್ತರಾಗಿದ್ದಾರೆ. ಇದು ಮುಖ್ಯವಾದ ಸಂಗತಿ. ಅವರುಗಳು ಆಪಾದಿತರಾಗಿದ್ದ ಪ್ರಕರಣಗಳ ಬಗ್ಗೆ ಬಹಳ ಮಾಹಿತಿ ಇದೆ. ಅವು ಈಗಲೂ ಚರ್ಚೆಯಾಗುತ್ತವೆ. ಹಾಗಾಗಿ ಪೂರ್ತಿ ವಿವರಗಳು ಗೊತ್ತಿಲ್ಲದವರಿಗೆ ಅವರೇ ಅಪರಾಧಿಗಳೇನೋ ಅನ್ನಿಸಬಹುದು. ಕಾನೂನು ಅವರನ್ನು ಖುಲಾಸೆ ಮಾಡಿರುವುದರಿಂದ ಎಲ್ಲರೂ ತೀರ್ಪನ್ನು ಗೌರವಿಸಿ ಅವರಿಗೆ ಸಾಮಾನ್ಯ ನಾಗರಿಕರಿಗೆ ಸಲ್ಲುವ ಗೌರವವನ್ನು ನೀಡಬೇಕಾಗುತ್ತದೆ. ಇವರಲ್ಲಿ ಮುಖ್ಯವಾಗಿ ದಿವಂಗತ ಮುತ್ತಪ್ಪ ರೈ. ಅವರಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅವರ ಸೇವಾ ಸಂಘಟನೆಯಿದೆ. ಅವರ ಸಾಮಾಜಿಕ ಕಾರ್ಯಗಳನ್ನು, ದಾನ ಧರ್ಮಗಳನ್ನು, ದೇವತಾಕಾರ್ಯಗಳನ್ನು ಮೆಚ್ಚಲೇಬೇಕು. ಇಂಟರ್ನೆಟ್ ಮೇಲೆ, ಪುಸ್ತಕಗಳಲ್ಲಿ ಸಿಕ್ಕ ವಿಷಯಗಳನ್ನು ಮಾತ್ರ ಬರೆದಿದ್ದೇನೆ. ಹಾಗಾಗಿ ಅವರ ಅಭಿಮಾನಿಗಳಿಗೆ ಯಾವುದೇ ರೀತಿಯ ಆಕ್ಷೇಪಣೆ  ಇರಲಿಕ್ಕಿಲ್ಲಎಂದು ನನ್ನ ಭಾವನೆ. ಯಾವುದಕ್ಕೂ ಇರಲಿ ಎಂದು ಹೇಳಿದೆ. ಮೇಲೆ ಹೇಳಿದ ವ್ಯಕ್ತಿಗಳು ಮಾಡಿದ್ದರು ಎನ್ನುವ ಅಪರಾಧಗಳನ್ನು ವಿವರಿಸುವಾಗ ವಾಡಿಕೆಯಂತೆ ಏಕವಚನದಲ್ಲೇ ವಿವರಣೆ ಇದೆ. ಆದರೆ ಕಾನೂನು ಪ್ರಕ್ರಿಯೆ ನಡೆದು ಖುಲಾಸೆಯಾದ ಬಳಿಕ ಬರೆಯಬೇಕಾದರೆ ಬಹುವಚನ ಉಪಯೋಗಿಸಲಾಗಿದೆ. ಹಾಗಾಗಿ ಏಕವಚನ ಉಪಯೋಗದ ಬಗ್ಗೆಯೂ ಸ್ಪಷ್ಟೀಕರಣ ಕೊಟ್ಟಿದ್ದೇನೆ. 

೨೦೦೨ ರಲ್ಲಿ ದುಬೈನಿಂದ ಮರಳಿದ್ದ ಮುತ್ತಪ್ಪ ರೈ  ಒಂದೆರೆಡು ವರ್ಷ ಜೇಲಿನಲ್ಲಿದ್ದು ತಮ್ಮ ಮೇಲಿನ ಮೊಕದ್ದಮೆಗಳಲ್ಲಿ ನಿರ್ದೋಷಿಯಾಗಿ ಹೊರಬಂದರು. ಮುಂದೆ ತಮ್ಮ ವ್ಯಾಪಾರ ಮತ್ತು ಸಮಾಜಸೇವೆಯಲ್ಲಿ ನಿರತರಾಗಿದ್ದರು. ಕೆಲವು ವರ್ಷಗಳ ಹಿಂದೆ ನಿಧನರಾದರು. ಯತೀಶ್ ಶೆಟ್ಟಿ ದುಬೈನಲ್ಲಿ ಯಶಸ್ವಿ ಹೋಟೆಲ್ ಉದ್ಯಮಿಯಾಗಿದ್ದಾರೆ. ಅಶೋಕ್ ಶೆಟ್ಟಿ ಬಗ್ಗೆ ಗೊತ್ತಿಲ್ಲ. 

ದುಬೈ ಅಶೋಕ್ ಶೆಟ್ಟಿ ಬಗ್ಗೆ, ಬ್ಯಾಂಕಾಕ್ ಅಶೋಕ್ ಶೆಟ್ಟಿ ಬಗ್ಗೆ ನಿಖರ ಮಾಹಿತಿ ಇದ್ದವರು ಕಾಮೆಂಟಿನಲ್ಲಿ ಹಾಕಿ. ಯೂಟ್ಯೂಬ್ ಮೇಲೆ ಭೂಗತಲೋಕದ ಬಗ್ಗೆ ವಿವರವಾದ ಕಥೆ ಹೇಳುವ ಪತ್ರಕರ್ತರಾದ ಮೋಹನ್ ಬೋಳಂಗಡಿ, ಸುಧೀರ್ ಶೆಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಎಸ್. ಕೆ. ಉಮೇಶ್, ಮಾಜಿ ಭೂಗತಜೀವಿ ಬಚ್ಚನ್ ಉರ್ಫ್ ಅಮಾನುಲ್ಲಾ ಖಾನ್, ಬಲಜೀತ್ ಪರಮಾರ್ ಮುಂತಾದವರಲ್ಲಿ, ಅವರವರ ಯೂಟ್ಯೂಬ್ ಚಾನೆಲ್ಲುಗಳಲ್ಲಿ ಆಗಲೇ ಈ ಬಗ್ಗೆ ವಿನಂತಿ ಮಾಡಿಕೊಂಡಿದ್ದೆ. ಅವರಲ್ಲಿ ಯಾರಾದರೂ ನೋಡಿದರೆ ಮತ್ತೊಮ್ಮೆ ಈ ಬಗ್ಗೆ ಮಾಹಿತಿ ನೀಡಲು ವಿನಂತಿ.

2 comments:

sunaath said...

ನಿಮ್ಮ ಲೇಖನವನ್ನು ಓದುತ್ತಿದ್ದಂತೆ, ಮಾರಿಯೊ ಫುಝೋನ Godfather ಕಾದಂಬರಿ ನೆನಪಾಯಿತು. ನೀವು ದೊಡ್ಡ ಕಾದಂಬರಿಯ ವಸ್ತುವನ್ನು ಚಿಕ್ಕ nutshellನಲ್ಲಿ ಚೆನ್ನಾಗಿ ಕೊಟ್ಟಿದ್ದೀರಿ. ಇದರ ಬಗೆಗೆ ಸಾಕಷ್ಟು ಸಂಶೋಧನೆ ಮಾಡಿದ್ದೀರಿ. ಅಭಿನಂದನೆಗಳು. ಇದನ್ನೇ ಒಂದು ಕಾದಂಬರಿಯನ್ನಾಗಿ ಮಾಡಿ ಬರೆಯಿರಿ ಎಂದು ನಿಮಗೊಂದು ಸಲಹೆ ಹಾಗು ವಿನಂತಿಯನ್ನು ಮಾಡುತ್ತಿದ್ದೇನೆ.

ಮತ್ತೊಂದು ಮಾತು: ನಿಮ್ಮ ಲೇಖನ CIU ಅದೃಶ್ಯವಾಗಿದೆಯಲ್ಲ?!

Mahesh Hegade said...

ಸುನಾಥ್ ಸರ್.

ಕಾಮೆಂಟಿಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.

ಗಾಡ್ ಫಾದರ್...ಅದೊಂದು cult classic ಕಾದಂಬರಿ. ಮೂಲ ಕಾದಂಬರಿ ಓದುವ ಮೊದಲು ಕನ್ನಡದಲ್ಲಿ ಅದನ್ನು ಆಧಾರಿಸಿ ಅದೆಷ್ಟೋ ಕಾದಂಬರಿಗಳನ್ನು, ಲೇಖನಗಳನ್ನು ಓದಿ ಕೊನೆಯಲ್ಲಿ ಮೂಲ ಕಾದಂಬರಿಯನ್ನು ಓದಿದ ನಮ್ಮ ತರಹದ ಜನರ ಅದೃಷ್ಟದ ಬಗ್ಗೆ ಏನೆಂದುಕೊಳ್ಳಬೇಕೋ :) :)

ಕಾದಂಬರಿ ಬರೆಯುವ ಸಲಹೆ ಚೆನ್ನಾಗಿದೆ. ಅದಕ್ಕೆ ಬೇಕಾದ ಸಿದ್ಧತೆ, ಸಹನೆ, ಶಿಸ್ತನ್ನು ಇನ್ನೂ ರೂಢಿಸಿಕೊಳ್ಳಬೇಕೇನೋ...ನೋಡೋಣ.

CIU ಲೇಖನ ಪೂರ್ಣಗೊಳ್ಳುವ ಮೊದಲೇ ತಪ್ಪಿನಿಂದಾಗಿ ಪ್ರಕಟಿಸಿದ್ದೆ. ನಂತರ ಅರಿವಾಗಿ ಡಿಲೀಟ್ ಮಾಡಿದೆ. ಮುಂದೊಂದು ದಿನ ಬರೆಯಬೇಕು.

ನಮಸ್ಕಾರ.