Wednesday, April 03, 2024

ಮಂಜುನಾಥ ಅಕ್ಕಿ ಎಂಬ ಮಿತ್ರನೊಬ್ಬನ ನೆನಪಿನಲ್ಲಿ...

ದೇವರ ಆಟ, ಬಲ್ಲವರಾರೋ...ನೋಡಿ ಇವತ್ತು ಒಬ್ಬನ (ವಿನಯನ) ಜನ್ಮದಿನ. ಅವನ ಮೂಲ ಮಿತ್ರ ಮಂಜುನಾಥ ಅಕ್ಕಿಯ ಮರಣ ದಿನ ಕೂಡ. ಕಾಕತಾಳೀಯವೋ??? 

ಏಳನೇ ಕ್ಲಾಸಿಗೆ ಮಹಿಂದ್ರಕರನನ್ನು ಕೆಬೋಸಾಕ್ಕೆ ಕರೆದುಕೊಂಡು ಬಂದು, ಬೀ ಕ್ಲಾಸಿನಲ್ಲಿ ಕೂಡಿಸಿದವನೇ ಮಂಜುನಾಥ ಅಕ್ಕಿ. ಮಹಿಂದ್ರಕರ ಚಾಳಿನಲ್ಲಿ ಬಾಡಿಗೆಗೆ ಇದ್ದ ಎಂದು ಕಾಣುತ್ತದೆ ಅಕ್ಕಿ. "ಇದ್ಯಾವ ಅಮುಲ್ ಬೇಬಿ ಕರಕೊಂಡು ಬಂದೀಲೆ??" ಎಂದು ಬೆಳ್ಳಗೆ, ತೆಳ್ಳಗೆ ಬೇಬಿ ಹಾಗೆ ಇದ್ದ (ಈಗೂ ಇರುವ) ವಿನಯನನ್ನು ನೋಡಿ ಕೇಳಿದ್ದಿದೆ. ಅಕ್ಕಿಯೇ  ಅವನ ಇಂಟ್ರೋ ಕೊಟ್ಟಿದ್ದ. 

ಮುಂದೆ ಅಕ್ಕಿಯೂ ಎಂಟನೇ ಕ್ಲಾಸಿಗೆ ಕನ್ನಡ ಭಾಷೆ ತೆಗೆದುಕೊಂಡು, "ಕನ್ನಡವೇ ನಮ್ಮಮ್ಮ. ಬ್ಯಾಡ ಆಕಿ ಸಂಸ್ಕೃತ ದೊಡ್ಡಮ್ಮ" ಎನ್ನುತ್ತ ಜೋರಾಗಿ ಬಾರಿಸುತ್ತ, ಅದೇ ಕನ್ನಡ ಡಿಂಡಿಮ ಬಾರಿಸುತ್ತ, ಬಿ ಕ್ಲಾಸಿಗೆ ಹೋದ. ಅಲ್ಲಿಂದ ನಮ್ಮ ಪಥ ಬೇರೆಯಾಯಿತು.

ಮುಂದೆ ಕೆಸಿಡಿ ಯಲ್ಲೂ ಜೊತೆ ಇದ್ದ. ಅಲ್ಲೂ ಅವನ ಕನ್ನಡ ಪ್ರೇಮ ಮುಂದುವರೆದಂತಿತ್ತು. ಬಿ1, ಬಿ2, ಬಿ3 ಯಾವುದೋ ವಿಭಾಗದಲ್ಲಿ ಇದ್ದ. ಆಗಾಗ ಯಮಹಾ RX  -100 ಬೈಕ್ ಮೇಲೆ  ಆಗಮಿಸಿ ಖಡಕ್ ಶೋ ಕೊಡುತ್ತಿದ್ದ. ಆದರೆ ಅವನ ಮೃದು ಸ್ವಭಾವಕ್ಕೂ ಮತ್ತು ಗುಡುಗುಡು ಗುಡುವ ಆ ಗಡಸು ಗಾಡಿಗೂ ಏನೂ ಕೂಡಿ ಬರುತ್ತಿರಲಿಲ್ಲ. ಹಾಗಾಗಿ ಹೆಚ್ಚು ಚಮಕಾಯಿಸಲಿಲ್ಲ. 

ಪಿಯೂಸಿ ನಂತರ ಮಂಜುನಾಥ ಅಕ್ಕಿ ಏನು ಮಾಡಿದ ಗೊತ್ತಿಲ್ಲ. 2011 ಫೇಸ್ಬುಕ್ ಮೇಲೆ ಕಂಡ. ಸಕ್ರಿಯನಾದಂತೆ ಕಾಣಲಿಲ್ಲ. ಕಳಿಸಿದ ಸಂದೇಶಕ್ಕೆ ಯಾವುದೇ ರಿಪ್ಲೈ ಬರಲಿಲ್ಲ.

2012 ರ ನಮ್ಮ SSLC ಬ್ಯಾಚಿನ  ರೀಯೂನಿಯನ್ ನಲ್ಲಿ ಇದೇ ವಿನಯನ ಬಳಿ, "ಎಲ್ಲಪ್ಪಾ ನಿನ್ನ ಮಾಜಿ ಖಾಸ್ ದೋಸ್ತು ಅಕ್ಕಿ??" ಎಂದು ಕೇಳಿದರೆ ಅವನು BE ಮುಗಿಸಿ, ಬಾಗಲಕೋಟೆಯಲ್ಲೋ, ಹುಬ್ಬಳ್ಳಿಯಲ್ಲೋ ಎಂಜಿನಿಯರಿಂಗ್ ಮಾಸ್ತರಿಕೆ ಮಾಡಿಕೊಂಡು ಇದ್ದಾನೆ ಎಂದು ಹೇಳಿದ್ದ. ಅಕ್ಕಿ ರೂಢಿಸಿಕೊಂಡಿದ್ದ ಅನಾರೋಗ್ಯಕರ ಜೀವನಶೈಲಿಯ ಬೇರೆ ಕೆಲವು ಮಾತುಗಳೂ ಬಂದವು. ಈಗ ಅಕ್ಕಿಯ ಜೀವಾತ್ಮ ದೇಹ ಬಿಟ್ಟು ಪರಮಾತ್ಮನಲ್ಲಿ ಲೀನವಾಗಿರುವ ಕಾರಣ ಆ ಮಾತುಗಳೆಲ್ಲ ಈಗ ಅಪ್ರಸ್ತುತ.

ಮಂಜುನಾಥ ಅಕ್ಕಿ...ಏನೇ ಭಾವನೆಗಳಿರಲಿ, ಆ ಮನುಷ್ಯನ ಧ್ವನಿಯಲ್ಲಿ ಒಂದು ಸ್ವಲ್ಪವೂ ಏರಿಳಿತ ಇರುತ್ತಿರಲ್ಲ. ಸಣ್ಣ ದನಿಯ ತಣ್ಣನೆಯ ಮಾತು. ದನಿಯೇ ಹಾಗಿದ್ದದ್ದಕ್ಕೋ ಗೊತ್ತಿಲ್ಲ ತುಂಬಾ 
ಸೌಜನ್ಯಮೂರ್ತಿ, ಮೃದು ಸ್ವಭಾವದ ಎಂದು ಅನ್ನಿಸುತ್ತಿದ್ದ. ಹಾಗೇ ಇದ್ದ ಕೂಡ.

ಅಂತಹ ಅಕ್ಕಿ ತೀರಿಕೊಂಡ ಎಂದರೆ ದುಃಖದ ವಿಷಯ. ಅವನ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ.

ಹರಿ ಓಂ ತತ್ಸತ್ 🙏🙏🙏🙏🙏

No comments: