Tuesday, October 02, 2012

ರಾಗಿ, ಸುಪಾರಿ

ಸುಪಾರಿ


ಪುರಂದರದಾಸರ ದಾಸರ ನಾಮಗಳಲ್ಲಿ ಅತ್ಯಂತ ಹಿಡಿಸಿದ್ದು ಅಂದರೆ, 'ರಾಗಿ ತಂದೀರಾ, ಭಿಕ್ಷಕೆ ರಾಗಿ ತಂದೀರಾ'. ಮೊದಲೆಲ್ಲ ಜಾಸ್ತಿ ಲಕ್ಷ ಕೊಟ್ಟಿರಲಿಲ್ಲ. ನಾವು ಭಿಕ್ಷೆ ಕೇಳಿಕೊಂಡು ಬಂದವರಿಗೆ ಅಕ್ಕಿ, ಜ್ವಾಳ, ಅಡಿಕೆ ಮತ್ತೊಂದು ಕೊಟ್ಟ ಹಾಗೆ, ಮೈಸೂರ್ ಕಡೆ ರಾಗಿ ಬೆಳೆಯುವ ಮಂದಿ ರಾಗಿ ಭಿಕ್ಷೆ ಕೊಡುತ್ತಾರೆ. ಅದರ ಬಗ್ಗೆ ದಾಸರು ಹಾಡು ಬರೆದಿದ್ದಾರೆ. ಆಕಾಶವಾಣಿ ಧಾರವಾಡದಲ್ಲಿ ಯಾರೋ 'ಸ್ವಾಳೆ ರಾಗದಲ್ಲಿ' ಅದೂ ಮೂಗಿನಲ್ಲಿ ಹಾಡುತ್ತಾರೆ. ತಿಂಗಳಿಗೆ ಕಮ್ಮಿ ಕಮ್ಮಿ ಅಂದರೂ 2-3 ಸರಿ ಮುಂಜಾನೆ ಬರುತ್ತದೆ. ಅಷ್ಟೇ ಗೊತ್ತಿದ್ದದ್ದು. 

ಮೊನ್ನಿತ್ತಲಾಗೆ ಮತ್ತೊಮ್ಮೆ ಈ ಹಾಡು ಕೇಳೋಣ ಅನ್ನಿಸಿತ್ತು. ಗೂಗಲ್ ಮಾಡಿದೆ. ಮೊದಲಿನ ಒಂದೆರಡು ಲಿಂಕುಗಳಲ್ಲಿ ಬಂದ ದಾಸರ ನಾಮ  ಅಷ್ಟೇನೂ ಖಾಸ್ ಅನ್ನಿಸಲಿಲ್ಲ. ನಂತರ ಸಿಕ್ಕ ಲಿಂಕಿನಲ್ಲಿ ತಿರುಚಿಯ ರಾಜಗೋಪಾಲ್ ಭಾಗವತ್ ಮತ್ತು ಅವರ ಮಂಡಳಿ ಹಾಡಿದ ಲಿಂಕ್ ಸಿಕ್ಕಿತು ನೋಡಿ, ದಿಲ್ ಖುಷ್ ಹೋಗಯಾ. ಮಸ್ತ ಹಾಡಿದ್ದಾರೆ. ಕಿರುಕಿನ ಸ್ವಾಳೆ ರಾಗವಿಲ್ಲ. ಎಲ್ಲೋ ದೇವಸ್ಥಾನದಲ್ಲಿ, ಭಕ್ತಿ ಪರವಶರಾಗಿ ಹಾಡಿದ್ದಾರೆ ರಾಜಗೋಪಾಲ್ ಮತ್ತು ಅವರ ಗುಂಪು. ಅಂಗಿ ಪಂಗಿ ತೆಗೆದು ಹಾಡಿದ್ದು ದೇವಸ್ಥಾನದ ಮಾಹೋಲಿಗೆ ಮಸ್ತ ಹೊಂದಿ ಹಾಡು ಮತ್ತೂ ಸೂಪರ್ ಆಗಿ ಮೂಡಿ ಬಂದಿದೆ.

ಕೆಲವು ಹಾಡುಗಳೇ ಹಾಗೆ. ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತವೆ. ಈ ಹಾಡು ಹಾಗೇ ಆಯಿತು. 

ಮತ್ತೆ ಮತ್ತೆ ಕೇಳಿದರೆ ನಮ್ಮ ತಲೆಗೆ ಏನೇನೋ ಲಿರಿಕ್ಸ್ ಬಂದು ಬಿಟ್ಟವು. ಹಾಡು ಗುಣುಗುಣಿಸೋಣ ಅಂದ್ರೆ ನಮ್ಮದೇ ಲಿರಿಕ್ಸ್ ಬಂತು. ಬಂದಿದ್ದು ಮರೆತು ಹೋಗದಿರಲಿ ಅಂತ ಬರೆದುಬಿಟ್ವಿ.

ದಾಸರ ರಾಗಿ ಹೋಗಿ ನಮ್ಮ ಸುಪಾರಿ ಆಯಿತು. 

ಅದರ ಮೇಲೆ ಅಡಿಕೆ ಬೆಳೆವ ಮಂದಿ ನಾವು. ಅಡಿಕೆ, ಅಂಡರ್ವರ್ಲ್ಡ್, ಸುಪಾರಿ, ಎನ್ಕೌಂಟರ್ ಎಲ್ಲ ಕೂಡಿ ಮಾಡರ್ನ್ ದಾಸರ ನಾಮವೊಂದು ತಯಾರ್. ಅದೇ ಸುಪಾರಿ.

ಸುಪಾರಿ 
==================
ಸುಪಾರಿ ಕೊಟ್ಟಿರಾ ಎನ್ಕೌಂಟರಿಗೆ ಸುಪಾರಿ ಕೊಟ್ಟಿರಾ
ಕಚ್ಚಾ ಸುಪಾರಿ ಪಕ್ಕಾ ಸುಪಾರಿ
ಕವಳಕೆ ಬೇಕೇ ಬೇಕು ಸುಪಾರಿ......ನೀವು ||ಪಲ್ಲವಿ||

ಪೊಲೀಸರು ತೊಗೊಳ್ಳೋ ಸುಪಾರಿ
ಗ್ಯಾಂಗಸ್ಟರ್ ಕೂಡ ಬಿಡದ ಸುಪಾರಿ
ವೀಳ್ಯದೆಲೆ ಜೊತೆ ಭಟ್ರಿಗೆ ಕೊಡುವ ಸುಪಾರಿ
ಎನ್ಕೌಂಟರ್ ಗೆ ಖೋಕಾ ಕೇಳೋ ಸುಪಾರಿ ||ಸುಪಾರಿ||

ಘಟ್ಟದ ಕೆಳಗಿನ ನೀರ ಸುಪಾರಿ
ಘಟ್ಟದ ಮ್ಯಾಲಿನ ಕೆಂಪ ಸುಪಾರಿ
ಸಾಗರ ಕಡೆಯ ಚಾಲಿ ಸುಪಾರಿ
ಸುಪಾರಿ ಅಲ್ಲದ ಆಮ್ಲಾಸುಪಾರಿ ||ಸುಪಾರಿ||

ಗುರಿ ತಪ್ಪಿದರೆ ಹಾಪ್ ಮರ್ಡರ್ ಮಾಡೋ ಸುಪಾರಿ
ಕೆಟ್ಟರೆ ಕೆಲಸ ರಿವರ್ಸ್ ಹೊಡೆವ ಸುಪಾರಿ
ಬೇತಾಳದಂತೆ ಕಾಡೋ ಕಿಲ್ಲರ್ ಸುಪಾರಿ
ಉಡದಂತೆ ಕಚ್ಚೋ ಪೋಲಿಸ್ಸುಪಾರಿ ||ಸುಪಾರಿ||

ಅಂಡರ್ವರ್ಲ್ಡ್ ನಲ್ಲಿ ಸಚ್ಚಾ ಸುಪಾರಿ
ಇಂಟರ್ನೆಟ್ ಮೇಲೆ ಫೇಸ್ಬುಕ್ ಸುಪಾರಿ
ಪಾಟ್ ಶಾಟ್ ಹಾಕಲು ಶಾಟ್ಪುಟ್ ಸುಪಾರಿ  
ಬಿಟ್ಟೆನೆಂದರೂ ಬಿಡದೀ ಮಾಯೆ ಸುಪಾರಿ ||ಸುಪಾರಿ||

ಕಠಿಣ ಶಬ್ದಾರ್ಥ ಕೋಶ:

* ಆಮ್ಲಾಸುಪಾರಿ - ನೆಲ್ಲಿಕಾಯಿ ಅಡಿಕೆ. ಆವಳಾ ಸುಪಾರಿ ಅಂತ ಕೂಡ ಹೇಳುತ್ತಾರೆ.
* ಖೋಕಾ - ಅಂಡರ್ವರ್ಲ್ಡ್ ಭಾಷೆಯಲ್ಲಿ ಒಂದು ಕೋಟಿ ರೂಪಾಯಿ
* ಸುಪಾರಿ - ಕಾಸು ಅಥವಾ ಮತ್ತೊಂದು ತೆಗೆದುಕೊಂಡು ಕರಾರುವಕ್ಕಾಗಿ ಮಾಡುವ ಹತ್ಯೆ. contract killing.
* ಎನ್ಕೌಂಟರ್- ಎನ್ಕೌಂಟರ್ ಹತ್ಯೆ. ಪೋಲಿಸ್ ಸುಪಾರಿ.
* ಸ್ವಾಳೆ ರಾಗ - ಎಳೆದೆಳೆದು ಕೊಯ್ಯಾ ಕೊಯ್ಯಾ ರಾಗದಲ್ಲಿ ಹಾಡುವದು. ಯಕ್ಷಗಾನದಲ್ಲಿ ಈ ರಾಗ ಒಮ್ಮೊಮ್ಮೆ ಕೇಳಿ ಬರುತ್ತದೆ.
* ಕವಳ - ಎಲೆ, ಅಡಿಕೆ, ಸುಣ್ಣ, ತಂಬಾಕು ಇತ್ಯಾದಿಗಳ ಮಿಶ್ರಣ.
* ನೀರ ಸುಪಾರಿ - ನೀರಡಿಕೆ. ನೀರಲ್ಲಿ ನೆನಸಿಟ್ಟ ಅಡಿಕೆ. ಮೃದುವಾಗಿರುವದರಿಂದ ಹಲ್ಲಿಗೆ ಸಸಾರ. ಕಿಕ್ ಜಾಸ್ತಿ. ಹೊನ್ನಾವರ, ಕುಮಟಾ ಕಡೆ ಜಾಸ್ತಿ.
* ಪೋಲಿಸ್ಸುಪಾರಿ = ಪೋಲಿಸ + ಸುಪಾರಿ. ಪೊಲೀಸರು ಸುಪಾರಿ ತೆಗೆದುಕೊಂಡು ಸಿಸ್ಟೆಮ್ಯಾಟಿಕ್ ಆಗಿ ಎನ್ಕೌಂಟರ್ ಮಾಡಿ ಗೂಂಡಾಗಳನ್ನು ಮ್ಯಾಲೆ ಕಳಿಸಿದ್ದು ಬೇಕಾದಷ್ಟು ಮೂವಿಗಳಲ್ಲಿ ವೈಭವೀಕರಣಗೊಂಡಿದೆ. 'ಕಗಾರ್', 'ಅಬ್ ತಕ್ ಛಪ್ಪನ್', 'ಆನ್.....men at work', 'ಚಾಂದಿನಿ ಬಾರ್' ಮತ್ತು ತೀರ ಇತ್ತೀಚಿನ 'ಮ್ಯಾಕ್ಸಿಮಮ್ (Maximum)' ಎಂಬ ಚಿತ್ರಗಳಲ್ಲಿ ನೋಡಬಹುದು.

ಮೇಲಿನ ದಾಸರ ನಾಮವನ್ನು ಪುರಂದರದಾಸರ "ರಾಗಿ ತಂದೀರಾ" ಹಾಡಿನಂತೆ ಹಾಡಿಕೊಳ್ಳಬಹುದು. ತಿರುಚಿಯ ರಾಜಗೋಪಾಲ್ ಮತ್ತು ಟೋಳಿಯವರು ಅದ್ಭುತವಾಗಿ ಹಾಡಿದ್ದಾರೆ. ಲಿಂಕ್ ಕೆಳಗಿದೆ.


ಪುರಂದರದಾಸರ  ಒರಿಜಿನಲ್ ಸಹ ಕೆಳಗೆ ಇದೆ ನೋಡಿ. ಅಮೋಘ ದಾಸ  ಸಾಹಿತ್ಯ! ರಾಗಿ ಎಂಬ ಪದದಿಂದ ಶುರು ಮಾಡುವ ದಾಸರು ಎಷ್ಟು ಮಹತ್ವದ, ವಿವೇಕಭರಿತ ಜ್ಞಾನವನ್ನು ಎಷ್ಟು ಸಿಂಪಲ್ ಆಗಿ ತಿಳಿಸಿದ್ದಾರೆ. ಓದಿ ನೋಡಿ. ರಾಗಿ ಮುಂದೆ ಹೋಗಿ ರಾಗಿಯೇ ಆಗಿ ಉಳಿದರೂ 'ಹೀಗೆ ಆಗಿ', 'ಹಾಗೆ ಆಗಿ' ಅನ್ನುವ ಉಪದೇಶಾಮೃತವಾಗುತ್ತದೆ. ಸಿಂಪ್ಲಿ ಹ್ಯಾಟ್ಸ್ ಆಫ್!

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಭೋಗ್ಯ ರಾಗಿ ಯೋಗ್ಯ ರಾಗಿ
ಭಾಗ್ಯವಂತರಾಗಿ ನೀವು ||ಪ||

ಅನ್ನದಾನವ ಮಾಡುವರಾಗಿ
ಅನ್ನಛತ್ರವ ಇಟ್ಟವರಾಗಿ
ಅನ್ಯ ವಾರ್ತೆಗಳ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ ||ರಾಗಿ||

ಮಾತಾ ಪಿತರನು ಸೇವಿತರಾಗಿ
ಪಾಪ ಕಾರ್ಯವ ಬಿಟ್ಟವರಾಗಿ
ಖ್ಯಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ ||ರಾಗಿ||

ಗುರು ಕಾರುಣ್ಯವ ಪಡೆದವರಾಗಿ
ಗುರು ವಾಕ್ಯವನು ಪಾಲಿಪರಾಗಿ
ಗುರುವಿನ ಪಾದವ ಸಲಿಸುವರಾಗಿ
ಪರಮ ಪುಣ್ಯವ ಮಾಡುವರಾಗಿ  ||ರಾಗಿ||

ಕಾಮ ಕ್ರೋಧವ ಅಳಿದವರಾಗಿ
ನೇಮ ನಿಷ್ಟೆಗಳ ಮಾಡುವರಾಗಿ
ರಾಮನಾಮವ ಜಪಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ ||ರಾಗಿ||

ಶ್ರೀರಮಣನ ಸದಾ ಸ್ಮರಿಸುವರಾಗಿ
ಗುರುವಿಗೆ ಬಾಗುವಂತವರಾಗಿ
ಕರೆಕರೆ ಭಾವವ ನೀಗುವರಾಗಿ
ಪುರಂದರ ವಿಠಲನ ಸೇವಿತರಾಗಿ ||ರಾಗಿ||

ದಾಸರ ನಾಮ ಇಂಗ್ಲಿಶ್ ಲಿಪಿಯಲ್ಲಿ ಸಿಕ್ಕಿದ್ದು ಇಲ್ಲಿ. http://sahityam.net/wiki/RAgi_tandira

ಕನ್ನಡದಲ್ಲಿ ಬರೆದಿದ್ದು ನಾನು. ತಪ್ಪಿದ್ದರೆ ತಿಳಿಸಿ.

2 comments:

ಸುಬ್ರಹ್ಮಣ್ಯ ಭಾಗ್ವತ್ said...

ಹಾಹಾ ಮಹೇಶಣ್ಣ, ಸೂಪರ್ರು ಸುಪಾರಿ ಗಾನ :)

Mahesh Hegade said...

:) :) ಧನ್ಯವಾದ ಭಾಗೋತ್ರೆ!!!