Friday, November 01, 2013

ಜ್ಞಾನಯೋಗದ ಮಂಗ್ಯಾನಮರಿಯಾಗುವೆಯಾ? ಭಕ್ತಿಯೋಗದ ಬೆಕ್ಕಿನಮರಿಯಾಗುವೆಯಾ? ಕರ್ಮಯೋಗದ ಕರೀಮನಾಗುವೆಯಾ?

ಒಂದಿನ ನಾನು ಮತ್ತ ನಮ್ಮ ಖಾಸ್ ದೋಸ್ತ ಕರೀಮಾ ಅಲ್ಲೇ ನಿಂತಿದ್ದಿವಿ. ಅಲ್ಲೇ ಅಂದ್ರ ನಮ್ಮ ಖಾಯಂ ಅಡ್ಡಾ - ಭೀಮ್ಯಾನ ಚುಟ್ಟಾ ಅಂಗಡಿ. ಕರೀಮಾ ತನ್ನ ರೆಗ್ಯುಲರ್ 420 ಜರ್ದಾ ಪಾನ್ ಮೆಲ್ಲಲಿಕತ್ತಿದ್ದಾ.  ನಾನು ನನ್ನ ರೆಗ್ಯುಲರ್ ಮಾವಾ ಅಗಿಲಿಕತ್ತಿದ್ದೆ. ಅಷ್ಟರಾಗ ದೂರದಿಂದ ಬರ್ಲಿಕತ್ತಿದ್ದ ಚೀಪ್ಯಾ ಕಂಡ. ಬರೊ ರೀತಿ ನೋಡಿದರ ಆವಾ ಚೀಪ್ಯಾಗೂ ತಲಬು ಎದ್ದಂಗ ಕಾಣ್ತದ. ಪಾನಿಂದೋ ಸಿಗರೇಟಿಂದೋ ತಲಬು. ಊರಿಗೆ ಬಂದಾಕಿ ನೀರಿಗೆ ಬರಲೇ ಬೇಕು ಅಂದಂಗ ತಲಬು ಎದ್ದವರು ಭೀಮ್ಯಾನ ಚುಟ್ಟಾ ಅಂಗಡಿಗೆ ಬರಲೇ ಬೇಕು. ಹೀಂಗಾಗಿ ಚೀಪ್ಯಾ ಬಂದೇ  ಬರ್ತಾನ, ಹೆಚ್ಚಿಗಿ ಏನೂ ಪ್ರಯತ್ನ ಮಾಡಬೇಕಿಲ್ಲ, ಅಂತ ನಾನು ಕರೀಮಾ ಹಾಂಗೆ ಸುಮ್ಮನೆ ನಿಂತಿವೀ ಅಂತ ಆತು. ಬಂದಾ ಚೀಪ್ಯಾ.

ಏನಲೇ  ಚೀಪ್ಯಾ? ಎಲ್ಲೋ ತಿಥಿ ಊಟಕ್ಕ ಹೋಗಿ ಬಂದಂಗ ಕಾಣ್ತದ? ಏನು ಹೊಸಾ ಧೋತ್ರಾ, ಮ್ಯಾಲೆ ಹೊಸಾ ಅಂಗವಸ್ತ್ರಾ, ಫ್ರೆಶ್ ಆಗಿ ಹಾಕಿಕೊಂಡ ಬೇರೆ ಬೇರೆ ತರಹದ ನಾಮ, ಅಕ್ಷಂತಿ ಎಲ್ಲಾ ನೋಡಿದರೆ ಎಲ್ಲೋ ದೊಡ್ಡ ತಿಥಿ ಊಟ ಮಾಡಿ, ಗಡದ್ ನಿದ್ದಿ ಹೊಡದು, ಒಂದು ಹಾಪ್ ಚಹಾ ಸುದ್ದಾ ಕುಡದು, ಮತ್ತೊಂದು ರೌಂಡ್ ಎಲಿ ಅಡಕಿ ಹಾಕಿಕೊಂಡು ಬಂದಂಗ ಅದ ಶ್ರೀಪಾದ ಆಚಾರ್ ಡಕ್ಕನೆಕರ್ ಸಾಹೇಬರು. ಹಾಂ? - ಅಂತ ಕೇಳಿದೆ.

ಹುಚ್ಚ ಸೂಳಿಮಗನss - ಅಂತ ಚೀಪ್ಯಾ ರಾಗಾ ಎಳದ  ಅಂದ ಮ್ಯಾಲೆ ನನ್ನ ಊಹಾ  ತಪ್ಪು ಅಂತ ಅನ್ನಿಸ್ತು.

ತಿಥಿ ಊಟದಿಂದ ಬರ್ಲಿಕತ್ತಿಲ್ಲೊ! ಸ್ವಾಮಿಗಳ ಪ್ರವಚನ ಕೇಳಲಿಕ್ಕೆ ಹೋಗಿದ್ದೆ. ಮಠಕ್ಕ. ವಾಪಸ್ ಬರ್ಲಿಕತ್ತೇನಿ, ಅಂತ ಹೇಳಿದ ಚೀಪ್ಯಾ.

ಭೀಮು ಮಹಾರಾಜ! ನನಗ ಒಂದು ನೇವಿ  ಕಟ್ ಸಿಗರೇಟ್  ಕೊಡಪಾ. ಲೆಕ್ಕ ಬರೆದುಕೊಂಡು ಬಿಡು. ರೊಕ್ಕ ಇಲ್ಲ. ಇದ್ದ ಚಿಲ್ಲರೆ ಪಲ್ಲರೆ ಎಲ್ಲಾ ಮಠದ ಕಾಣಿಕಿ  ಡಬ್ಬಿ ಒಳಗಾ ಹಾಕಿಬಿಟ್ಟೆ ನೋಡು, ಅಂದ ಚೀಪ್ಯಾ ಚುಟ್ಟಾ ಅಂಗಡಿ ಭೀಮ್ಯಾಗ.

ತೊಗೊಳ್ಳಿ, ಈ ಸಿಗರೇಟ್ ನಮ್ಮ ಕಾಣಿಕೆ, ಅಂತ ಬಾಯಿ ಬಿಟ್ಟು ಹೇಳದೇ ಭೀಮು ಸಿಗರೇಟ್  ಕೊಟ್ಟ. ಮಾಳಮಡ್ಡಿ ಮುದ್ರಿ ಮಂದಿಗೆ ಉದ್ರಿ ಕೊಟ್ಟೇ ಭೀಮು ಉದ್ಧಾರ ಆಗಿ ಹೋಗ್ಯಾನ. ಒಂದು ಸಿಗರೇಟ್  ಉದ್ರಿ ಒಳಗ  ತೊಗೊಂಡ್ರ ಇವಾ ಬಡ್ಡಿಮಗ ಭೀಮು ಇನ್ನೊಂದು ಎರಡು ಜಾಸ್ತಿ ಅಂತ ಲೆಕ್ಕಾ ಬರೆದು, ತಿಂಗಳ ಕೊನಿಯೊಳಗ ಸರೀತ್ನಾಗಿ ಕೆತ್ತತಾನ. ಆವಾಗ ಯಾರಿಗೆ ನೆನಪು ಇರ್ತದ, ಎಲ್ಲೆ  ಒಂದು ತೊಗೊಂಡಿದ್ದೆವೋ  ಅಥವಾ ಎರಡೋ ಅಂತ?

ಚೀಪ್ಯಾ ಸಿಗರೇಟ್ ಹಚ್ಚಿ ಎರಡು ಜುರ್ಕೀ ಎಳದು ನನ್ನ ನೋಡಿಕೋತ್ತ ಕೇಳಿದಾ.

ಏನಲೇ  ಅದು? ಬರೆ ಡ್ರೈ ಮಾವಾ ತಿಂತಿ? ಮಾವಿಲ್ಲ ಅಂತ ಮಾವಾ ತಿಂದು ತಿಂದು ಇಲ್ಲದ ಮಾವಂಗ ಪರಿಹಾರ ತುಂಬಿಕೊತ್ತಿ  ಏನು? - ಅಂತ ಕೇಳಿದ ಚೀಪ್ಯಾ ನನ್ನ. ಕುಹಕ ಇತ್ತು.

ಏ!!! ಮಂಗ್ಯಾನಿಕೆ, ಅಂತ ಆವಾಜ್ ಹಾಕಿದೆ.

ಚೀಪ್ಯಾ ಪಿಕಿ ನೋಡಿದ. ಇದ್ದಿದ್ದು ಇದ್ದಂಗ ಹೇಳಿದರ ಈವ್ಯಾಕ ಎದ್ದು ಬಂದು ಎದಿಗೆ ಒದಿಲಿಕತ್ಯಾನ ಅನ್ನೋ ಲುಕ್ ಕೊಟ್ಟ ಚೀಪ್ಯಾ.

ನನಗ ಮಾವಿಲ್ಲ ಅಂತ ಯಾರ ಹೇಳ್ಯಾರಲೇ ನಿನಗ ಹಾಪ್ ಮಂಗ್ಯಾನಿಕೆ? ಇಬ್ಬರು ಮಾವಂದಿರು ಇದ್ದರು. ಒಬ್ಬರು ತೀರಿಕೊಂಡು ಈಗ ಇನ್ನೊಬ್ಬರೇ ಉಳದಾರ. ಮಾವಿಲ್ಲಂತ ನನಗ! ಅದಕ್ಕ ಮಾವಾ ಹಾಕ್ತೇನಂತ. ಏನಲೇ  ಅನ್ನೋದು ನೀನು? ಥತ್, ಅಂತ ನನ್ನ ಸಿಟ್ಟು ಮೈಲ್ಡ್ ಆಗಿ ತೋರ್ಸಿದೆ.

ಹಾಂ! - ಅಂದು ದಂಗು ಹೊಡೆದ ಚೀಪ್ಯಾ.

ಇಬ್ಬರು ಮಾವಂದಿರಾ  ನಿನಗ? ಅದೂ ನಿನ್ನಂತ ಬ್ರಹ್ಮಚಾರಿ ಬೇವರ್ಷಿಗೆ? ಎಲ್ಲಿಂದ ಎರಡು ಮಾವಂದಿರನ್ನ ಹಿಡಕೊಂಡು ಬಂದಿಲೇ? ಮಾವನ ಮಗಳುಗಳನ್ನ ಏನು ಮಾಡಿದಿ? ಕೊಂದು ಭ್ಯಾವ್ಯಾಗ ಒಗದಿ ಏನು? ಬಾಡಿನೂ ಸಿಕ್ಕಿಲ್ಲಲ್ಲೋ? ಹಾಂ? ಹಾಂ? - ಅಂತ ಚೀಪ್ಯಾ ಕೇಳಿದ.

ಕ್ಯಾ ಸಾಬ್!? ಭಾವಿಯೊಳಗೆ ಹೆಂಗಸು ಮಂದಿದು ಬಾಡಿ ಸಿಗ್ತು ಕ್ಯಾ? ಕೋನಸೀ ಬ್ರಾಂಡ್ ಕಾ ಸಾಬ್? ಯಾಕೆ ಅಂದ್ರೆ ನಮ್ಮದು ಬೇಗಂ ಅವರದ್ದು ವಿಲಾಯತಿ ಬಾಡಿ ಎಲ್ಲಾ ಕಳ್ಳತನ ಆಗಿ ಬಿಟ್ಟಿದೆ. ಕಳ್ಳಾ ಭಾವಿಯೊಳಗೆ ನಮ್ಮದು ಬೇಗಂ ಬಾಡಿ ಒಗೆದು ಹೋಗಿರಬಹುದಾ ಅಂತ ನಮಗೆ ವಿಚಾರ, ಅಂದುಬಿಟ್ಟ ಕರೀಮ.

ಹೋಗ್ಗೋ!!!

ಇಬ್ಬರು ಹುಚ್ಚರ ನಡುವೆ ನಾ ಸಿಕ್ಕೊಂಡೇನಿ. ಶಿವನೇ ಶಂಭುಲಿಂಗ.

ಲೇ ಹಾಪ್ ಸೂಳಿಮಕ್ಕಳ! ಗಪ್ಪ ಕೂಡ್ರೀಲೆ! ಕರೀಮಾ......ಆವಾ ಚೀಪ್ಯಾ ಭಾವಿಯೊಳಗ ಬಾಡಿ ಸಿಕ್ಕಿಲ್ಲ ಅಂದ್ರ ಭಾವಿಯೊಳಗ ಹೆಣಾ ಸಿಕ್ಕಿಲ್ಲ ಅಂದ್ರ ನೀ ನಿನ್ನ ಹೆಂಡ್ತೀ ಕಳುವಾದ ಹಾಕ್ಕೊಳ್ಳೋ  ಬಾಡಿ ಉರ್ಫ್ ಬ್ರಾ ಬಗ್ಗೆ ಮಾತಾಡ್ತೀ ಅಲ್ಲಪಾ. ಹಾಂ? ಏನ್ ಹಾಪ್ ಇದ್ದೀರಿಲೆ!? ಥತ್ ನಿಮ್ಮ, ಅಂತ ಬೈದು ಮಾವಾ ಉಗಳಿದೆ.

ಲೇ ಚೀಪ್ಯಾ! ಈಗ ತಿಳೀತು ನೀ ಏನು ಕೇಳಿದಿ ಅಂತ. ನಾ ಒಂದು ಮಿನಿಟ್ ನಮ್ಮ ಹವ್ಯಕ ಭಾಷಾ ಫ್ಲಾಶ್ ಬ್ಯಾಕ್ ಹೋಗಿಬಿಟ್ಟೆ ನೋಡಲೇ ಚೀಪ್ಯಾ. ಅದಕ್ಕೆ ಇಬ್ಬರು ಮಾವಂದಿರು ಇದ್ದರು ಅಂದೆ. ಅಂದ್ರ ಇಬ್ಬರು ಸ್ವಾದರಮಾವಂದಿರು ಇದ್ದರು ಅಂತ. ನಾವು ಮಾಮಾ ಗೀಮಾ ಅನ್ನಂಗಿಲ್ಲ. ಎಲ್ಲಾರಿಗೂ ಮಾವ ಅಂತನೇ ಅಂತೇವಿ. ನಾ ಸಣ್ಣವ ಇದ್ದಾಗ ನಿಮ್ಮ ಸ್ವರ್ಗವಾಸಿ ಅಪ್ಪಗೂ ಮಾವಾ ಅಂತಿದ್ದೆ ಮಾರಾಯಾ. ನೀವು ಹಾಪ್ ಬಯಲಸೀಮಿ  ಮಂದಿ ಸ್ವಾದರಮಾವಗ  ಮಾಮಾ ಅಂತೀರಿ. ಹೆಂಡ್ತಿ ಅಪ್ಪಗ ಮಾವಾ ಅಂತೀರಿ ಅಂತ ಕಾಣಸ್ತದ. ಹೋಗಿ ಹೋಗಿ ಅಕ್ಕನ ಗಂಡಗೂ  ಮಾಮಾ ಅಂತೀರಲ್ಲಲೇ ಹಾಪಾ! ಮಾಮಾಜಿ ಯಾರೋ ಭಾವಾಜಿ ಯಾರೋ ಅಂತ ಅಕ್ಕನ ಗಂಡಗ ಫುಲ್ confusion. ಅಪ್ಪಗ ಅಣ್ಣಾ ಅಂತೀರಿ. ಏನಲೇ  ಅವತಾರ ನಿಮ್ಮದು? ಮೊದಲು ನಿಂದು ನೋಡಿಕೋ.  ಆ ಮ್ಯಾಲೆ ನನ್ನ ಮಾವಾ, ಬಾಯಾಗ ಹಾಕ್ಕೊಂಡ ಡ್ರೈ ಮಾವಾ ಬಗ್ಗೆ ಮಾತಾಡಿಯಂತ. ಓಕೆ? - ಅಂತ ಝಾಡಿಸಿದೆ.

ಹಾಳಾಗಿ ಹೋಗು ! - ಅಂದ  ಚೀಪ್ಯಾ ಅಷ್ಟಕ್ಕ ಬಿಟ್ಟಾ.

ಚೀಪ್ಯಾ, ಅಲ್ಲೆಲ್ಲೋ ಮಠಕ್ಕ ಪ್ರವಚನಾ ಕೇಳಲಿಕ್ಕೆ ಹೋಗಿದ್ದಿ ಅಂದಿ. ಏನು ಪ್ರವಚನಾ ಕೇಳಿ ಬಂದಿ? ಸಂಕ್ಷಿಪ್ತವಾಗಿ ಹೇಳು. ನೋಡೋಣ - ಅಂತ ಕೇಳಿದೆ.

ಜ್ಞಾನಯೋಗ ಮಾಡಲಿಕ್ಕೆ ಹೋದ್ರ ಮಂಗ್ಯಾನ ಮರಿ ಆಗಿ ಹೋಗ್ತೀರಿ. ಭಕ್ತಿಯೋಗ ಮಾಡಲಿಕ್ಕೆ ಹೋದ್ರ ಬೆಕ್ಕಿನ ಮರಿ ಆಗ್ತೀರಿ. ಬೆಕ್ಕಿನ ಮರಿ ಆಗೋದು ಒಳ್ಳೇದು. ಅದಕ್ಕ ಎಲ್ಲರೂ ಭಕ್ತಿಯೋಗ ಮಾಡಿ ಮುಕ್ತಿ ಸಂಪಾದಿಸಿರಿ. ಸಿಕ್ಕೇ ಸಿಗ್ತದ. ಜ್ಞಾನಯೋಗ ಮಾಡಿದರೂ ಮುಕ್ತಿ ಸಿಗಬಹುದು. ಆದರ ಮಂಗ್ಯಾನ ಮರಿ ಆಗವರೇ ಜಾಸ್ತಿ. ಅದಕ್ಕ ಜ್ಞಾನಯೋಗ ಬ್ಯಾಡ್ರೀಪಾ. ಇದು ಸ್ವಾಮಿಗಳ ಪ್ರವಚನದ summary ನೋಡಪಾ, ಅಂದ ಚೀಪ್ಯಾ.

ಏನು!? ಜ್ಞಾನಯೋಗ ಮಾಡವರು ಮಂಗ್ಯಾನ ಮರಿ ಆಗ್ತಾರ?! ಭಕ್ತಿಯೋಗ ಮಾಡವರು ಬೆಕ್ಕಿನ ಮರಿ ಆಗ್ತಾರ?! ಏನಲೇ ಇದು ವಿಚಿತ್ರ ಅದ? ಹಾಂ? ಯಾವ ವೇದ, ಶಾಸ್ತ್ರ, ಉಪನಿಷತ್ತು ಇದನ್ನ ಹೇಳ್ತದ? ಹಾಂ? ಅದನ್ನ ಸ್ವಾಮಿಗಳು ಹೇಳಲಿಲ್ಲ ಏನು? - ಅಂತ

ಮರ್ಕಟ ಕಿಶೋರ ನ್ಯಾಯ, ಮಾರ್ಜಾಲ ಕಿಶೋರ ನ್ಯಾಯ! - ಅಂತ ಚೀಪ್ಯಾ ಏನೋ ಎರಡು ಸಂಸ್ಕೃತ ಬಾಂಬ್ ಒಗೆದು ಭೀಮ್ಯಾನ ಅಂಗಡಿ ಮುಂದ ಹೊಂಟಿದ್ದ ಆಂಟಿಗಳನ್ನ ಮತ್ತ ಅವರ ಸಣ್ಣ ಚಿಗರಿ ಮರಿಯಂತಹ ಹುಡಿಗ್ಯಾರನ್ನ ನೋಡಿಕೋತ್ತ ನಿಂತ. ಅಧ್ಯಾತ್ಮ ಪ್ರವಚನ ಕೇಳಿ ಬಂದವನ ಪರಿಸ್ಥಿತಿ ಇದು!

ಕ್ಯಾ!? ಮಾರ್ಕೆಟ್ ಕಿಶೋರ್? ಹಮಕೋ ಪತಾ ಹಾಯ್ ಸಾಬ್. ಅವನೇ ಅಲ್ಲಾ ಬ್ಲ್ಯಾಕಿನಲ್ಲಿ ಸಿನೆಮಾ ಟಿಕೆಟ್ ಮಾರ್ತಾನೆ. ಯಾವದು ಸಿನಿಮಾದ್ದು ಟಿಕೆಟ್ ಬೇಕು ಸಾಬ್? ಹೇಳಿ. ಆದ್ರೆ ನಿಮ್ಮದೂಕಿ ಸ್ವಾಮೀಜೀ ಯಾಕೆ ಮಾರ್ಕೆಟ್ ಕಿಶೋರ ಹೆಸರು ತೊಗೊಂಡ್ರು? ಅವರಿಗೂ ಸಿನೆಮಾ ನೋಡುದು ಅದೆ ಕ್ಯಾ? - ಅಂತ ಕೇಳಿಬಿಟ್ಟ ಕರೀಮ.

ಸುಮ್ಮ ಕೂಡಲೇ ಸಾಬ್!! ಮರ್ಕಟ ಕಿಶೋರ ಅಂದ್ರ ಮಾರ್ಕೆಟ್ ಕಿಶೋರ ಅಂತ! ನಮ್ಮ ಸ್ವಾಮಿಗಳು ಯಾಕ ಸಿನೆಮಾ ನೋಡ್ತಾರ? ಹಾಂ? ಏನರೆ ಕೇಳಿಸ್ಕೊಂಡು ಏನೇನೋ ಹಚ್ಚ್ಯಾನ. ಹಾಪಾ! - ಅಂತ ಬೈದ ಚೀಪ್ಯಾ ಕರೀಮಗ.

ಕರೀಮಾ ಸಪ್ಪ ಮಸಡಿ ಮಾಡಿದ.

ಮರ್ಕಟ ಕಿಶೋರ ಅಂದ್ರ ಮಂಗ್ಯಾನ ಮರಿ. ಮಾರ್ಜಾಲ ಕಿಶೋರ ಅಂದ್ರ ಬೆಕ್ಕಿನ ಮರಿ. ತಿಳೀತ? - ಅಂತ ಚೀಪ್ಯಾ ನಮ್ಮಿಬ್ಬರನ್ನು ನೋಡಿ ಹೇಳಿದ.

ಜ್ಞಾನಯೋಗ ಮಾಡೋದು ಅಂದ್ರ ಮಂಗ್ಯಾನ ಮರಿ ಆಗೋದು ಅಂತ. ಭಕ್ತಿಯೋಗ ಮಾಡೋದು ಅಂದ್ರ ಬೆಕ್ಕಿನ ಮರಿ ಆಗೋದು ಅಂತ. ಹ್ಯಾಂಗ ಏನು ಎತ್ತ ಅಂತ ನನ್ನ ಕೇಳಬ್ಯಾಡ. ಸ್ವಾಮಿಗಳು ಹೇಳಿದ್ದನ್ನ ಹೇಳಿಬಿಟ್ಟೆ. ಅಷ್ಟೇ - ಅಂತ ಚೀಪ್ಯಾ ಹೇಳಿದ.

ಹಾಂಗಿದ್ದರ ಚೀಪ್ಯಾ ನೀ ಯಾವ ಯೋಗಾ ಮಾಡ್ತೀಪಾ? - ಅಂತ ಕೇಳಿದೆ.

ಏ....ನಾ ದಿನಾ ಹಠಯೋಗ ಮಾಡ್ತಿನೋ. ಏನಂತ ತಿಳಕೊಂಡೀ? ಅದಕ್ಕ ಇಷ್ಟು ಸ್ಲಿಮ್ ಅಂಡ್ ಟ್ರಿಮ್ ಆಗಿ ಇದ್ದೇನಿ, ಅಂದಾ ಚೀಪ್ಯಾ.

ಹಾಂ! 'ಹಟ'ಯೋಗ ಮಾಡ್ತೀಯಾ? ಲೇ ಮಂಗ್ಯಾನಿಕೆ, ನಾಲವತ್ತು ವರ್ಷದ ಕ್ವಾಣ ಆಗಿ. ಇನ್ನೂ ಹಟ ಮಾಡೋದು ಬಿಟ್ಟಿಲ್ಲ? ಹಾಂ? ಯಾರ ಮುಂದ ಹಟಾ ಮಾಡ್ತೀ?ನಿನ್ನ ಹೆಂಡ್ತೀ ರೂಪಾ ವೈನಿ ಮುಂದ? ಏನಂತ ಹಟಾ ಮಾಡ್ತೀ? ಕೊಡ ಕೊಡ ಕೊಡ ಕೊಡ ಕೊಡ ಅಂತ ಒಂದೇ ಸವನ ಹಟಾ ಮಾಡ್ತೀ ಏನಲೇ? ಭಾಳ ಹಟಾ ಮಾಡಿದರ harassment ಅಂತ ರೂಪಾ ವೈನಿ ಕಂಪ್ಲೇಂಟ್ ಕೊಟ್ಟರು ಅಂದ್ರ ಜೈಲ್ ಸೇರಿಕೋತ್ತಿ ನೋಡ್ಕೋ ಮತ್ತ! - ಅಂತ ಹೇಳಿದೆ.

ಲೇ!!! ಹಾಪಾ!!! ನಾನು ಹಠಯೋಗ ಅಂದ್ರ ಆಸನ, ಪ್ರಾಣಾಯಾಮ ಅದು ಇದು ಅಂದ್ರ ಹಟಾ ಮಾಡೋ ಹಟ ಯೋಗ ಅಂತಿ ಅಲ್ಲಲೇ?! ತಲಿ ಇಲ್ಲದವನ! - ಅಂತ ಚೀಪ್ಯಾ ಬೈದಾ.

ಗೊತ್ತದಲೇ ಚೀಪ್ಯಾ. ಸುಮ್ಮನೇ ಚ್ಯಾಸ್ಟೀ ಅಷ್ಟೇ. ರೂಪಾ ವೈನಿ ಹಟಾ ಗಿಟಾ ಮಾಡಿದ್ರ ಜಗ್ಗೋ ಪೈಕಿ ಅಲ್ಲ ಅಂತ ನಮಗ ಗೊತ್ತದ ತೊಗೋ, ಅಂತ ಹೇಳಿದೆ.

ಇಲ್ಲಿ ತನಕಾ ಎಲ್ಲೋ ತಲಿ ಇಟ್ಟುಗೊಂಡು ಕೂತಿದ್ದ ಕರೀಮ ಒಮ್ಮೆಲೇ ಹಾಂ! ಅಂದ. ಏನಾತಪಾ ಅಂತ ನೋಡಿದಿವಿ.

ಏನು ಚೀಪ್ಯಾ ನೀವು ಹಾಥ್ ಯೋಗಾಗೆ ಮಾಡ್ತೀರಿ ಕ್ಯಾ? ಕ್ಯೂ? ಹಾಂ? ಹಾಥ್ ಯೋಗಾ ಯಾಕೆ? - ಅಂತ ಕೇಳಿಬಿಟ್ಟ ಕರೀಮ.

ಸುಮ್ಮ ಕೂಡಪಾ ಕರೀಮಾ. ಆವಾ ಮಾಡೋದು ಹಠ ಯೋಗ. ಹಾಥ್ ಯೋಗಾ ಅದು ಇದು ಮಾಡವರು ಅಲ್ಲೆಲ್ಲೋ ಜಗನ್ನಾಥ ಪುರಿ ಕಡೆ ಇದ್ದಾರಂತ ನೋಡು. ಅಲ್ಲೆ ಹೋಗಿ ಕೇಳು ಹಾಥ್ ಯೋಗಾ ಅಂದ್ರ ಏನು ಅಂತ. ಓಕೆ? - ಅಂತ ಈ ಹಾಪ್ ಕರೀಮನ್ನ ಅಷ್ಟಕ್ಕೇ ಬಂದ ಮಾಡ್ಸಿದೆ. ಇಲ್ಲಂದ್ರ......

ಯಾರು ಪುರಿ ಜಗನ್ನಾಥ ಅವರಾ ಸಾಬ್? ಫಿಲ್ಲಿಂ ಡೈರೆಕ್ಟರ್ ಕ್ಯಾ? ಅವರು ಪೂರಿ ಜಗನ್ನಾಥ ಹಾಥ್ ಯೋಗಾಗೆ ಮಾಡ್ತಾರೆ ಕ್ಯಾ? - ಅಂತ ಕೇಳಿಬಿಟ್ಟ ಸಾಬಾ.

ಹೋಗ್ಗೋ ಇವನ! ಪೂರಿ ಜಗನ್ನಾಥನೂ ಅಲ್ಲ, ಬಾಜೀ ಜಗನ್ನಾಥನೂ, ಬಾಸುಂದೀ ಜಗನ್ನಾಥನೂ ಅಲ್ಲ. ಪುರಿ ಜಗನ್ನಾಥ ಅಂದ್ರ ದೊಡ್ಡ ದೇವರಲೇ. ಸುಮ್ಮ ಕೂಡು, ಅಂತ ಸುಮ್ಮನಾಗಿಸಿದೆ.

ಸಾಬ್! ಈ ಚೀಪ್ಯಾ ಏನೋ ಕೇಳಿಕೊಂಡು ಬಂದು ಮಂಗ್ಯಾಂದು ಬಚ್ಚಾ, ಬಿಲ್ಲಿದು ಬಚ್ಚಾ ಅಂತ ಏನೇನೋ ಹೇಳ್ತಾ ಐತೆ.  ಏನು ಸಾಬ್ ಅರ್ಥಾ? - ಅಂತ ಕೇಳಿದ ಕರೀಮ.

ಅರ್ಥಾ ಹೇಳಲೇ, ಅನ್ನೋಹಾಂಗ ಚೀಪ್ಯಾನ ಕಡೆ ನೋಡಿದೆ. ನನಗೇನು ಗೊತ್ತು? ಅನ್ನವರ ಹಾಂಗ ಚೀಪ್ಯಾ ತಿರುಗಿ ನೋಡಿ ಹೇಳಿದ.

ಜ್ಞಾನಯೋಗ ಮಾಡೋದು ಅಂದ್ರ ಮರ್ಕಟ ಕಿಶೋರ ನ್ಯಾಯ ಅಂದ್ರ ಮಂಗ್ಯಾನ ಮರಿ ನ್ಯಾಯ. ಯಾಕಂದ್ರ ಜ್ಞಾನಯೋಗ ಮಾಡವರು ಒಂದು ತರಹದ abstract concept ಆದ ವಿಶ್ವಚೈತನ್ಯ 'ಬ್ರಹ್ಮನ್' ಮೇಲೆ ಧ್ಯಾನ ಮಾಡ್ತಾರ. ಓಂ ಓಂ ಅಂತ ಧ್ಯಾನ ಮಾಡ್ತಾರ. ಎಲ್ಲಾದರ ಹಿಂದ ಇರೋದು ಓಂ ಎಂಬ ಬ್ರಹ್ಮನ್ ಮಾತ್ರ ಅಂತ ಹೇಳಿ ಹೇಳಿ, ನನ್ನಲ್ಲಿರುವ ಆತ್ಮ  ಬ್ರಹ್ಮನ್, ಎಲ್ಲದರ ಪ್ರಜ್ಞಾಶಕ್ತಿ ಕೂಡ ಬ್ರಹ್ಮನ್, ನಾನು ಕೂಡ ಬ್ರಹ್ಮನ್, ನೀನು ಸಹಾ ಅದೇ ಬ್ರಹ್ಮನ್ - ಅಂತ ನಾಲ್ಕು ಮಹಾವಾಕ್ಯಗಳಲ್ಲಿ ಬ್ರಹ್ಮನ್ ಬ್ರಹ್ಮನ್ ಅಂತ ನಿರಾಕಾರ, ನಿರ್ಗುಣ, ನಿರ್ವಿಶೇಶ ಬ್ರಹ್ಮನ್ ಮೇಲೆ ಧ್ಯಾನ ಮಾಡಿ, ಜ್ಞಾನ ಪಡಕೊಂಡು, ಅಜ್ಞಾನ ದೂರ ಮಾಡಿಕೊಳ್ಳೋದು ಜ್ಞಾನಯೋಗಿಗಳ ಪ್ರಯತ್ನ. ಇದು ಒಂದು ತರಹದ ಮಂಗ್ಯಾನ ಮರಿ ಪ್ರಯತ್ನ ಇದ್ದಂಗ ನೋಡಪಾ. ಯಾಕಂದ್ರ....ತಾಯಿ ಮಂಗ್ಯಾವನ್ನು ಘಟ್ಟಿಯಾಗಿ ತಬ್ಬಿ ಹಿಡ್ಕೋಳ್ಳೋದು ಮಂಗ್ಯಾನ ಮರಿಯ ಜವಾಬ್ದಾರಿ. ತಾಯಿ ಮಂಗ್ಯಾ ಅಲ್ಲೆ ಇಲ್ಲೆ ಜಿಗಿಯುವಾಗ ಮರಿ ಎಲ್ಲರೆ ಕೈ ಬಿಡ್ತು ಅಂದ್ರ ಅಷ್ಟೇ. ಕೆಳಗ ಬಿದ್ದು ಸಾಯ್ತದ. ತಾಯಿ ಮಂಗ್ಯಾ ಏನೂ ಮಾಡೋದಿಲ್ಲ. ಮರಿ ಸತ್ತರ ಅತ್ತೀತೆ ಹೊರತು ಮತ್ತೇನಿಲ್ಲ. ಜ್ಞಾನಯೋಗ ಮಾಡೋದು ಅಂದ್ರ ಹಾಂಗೇ. ದೇವರಿಗೆ ಯಾವದೂ ರೂಪ ಇಲ್ಲ, ಆಕಾರ ಇಲ್ಲ, ಅದು ಕೇವಲ ಒಂದು ತರಹದ ಶಕ್ತಿ, ಚೈತನ್ಯ ಅಂತ abstract concept ಇಟ್ಟುಗೊಂಡು ಜ್ಞಾನಯೋಗ ಮಾಡಿದರ ಹಾಂಗೇ. ತಾಯಿ ಸಮಾನವಾದ ಬ್ರಹ್ಮನ್ ಜ್ಞಾನಯೋಗಿಗಳನ್ನ ಮಂಗ್ಯಾನಮರಿ ಹಾಂಗೆ ಇಲ್ಲಿಂದ ಅಲ್ಲಿಗೆ ಮುಟ್ಟಿಸ್ತದ. ಆದ್ರ ಏನೂ ಸಹಾಯ ಮಾಡೋದಿಲ್ಲ. ಎಲ್ಲಾ ಜವಾಬ್ದಾರಿಯನ್ನು ನಮ್ಮ ಮ್ಯಾಲೆ ಹಾಕಿ ಬಿಡ್ತದ. ಜ್ಞಾನಯೋಗ ಮಾಡವರು ಘಟ್ಟೆ ಹಿಡಕೊಂಡು, ಕೈ ಬಿಡದೆ, ಕೆಳಗ ಬೀಳದೆ ಮುಕ್ತಿ ಪಡಕೊಂಡರು ಓಕೆ. ಇಲ್ಲಂದ್ರ ಬಿದ್ದು ಸಾಯ್ತಾರ. ತಿಳಿತೇನ್ರೋ? - ಅಂತ ಕೇಳಿದೆ.ವಾಹ್!ಮಂಗೇಶ! ಮಸ್ತ ಜ್ಞಾನ ಇಟ್ಟಿ ಬಿಡಪಾ. ಮೊದಲಿಂದ ಮಂಗ್ಯಾನ ಮರಿ ಹಾಂಗ ಇದ್ದು ಈಗ ಹೊನಗ್ಯಾ ಗೊರಿಲ್ಲಾ ಆಗಿ. ನೀನೂ ಸಹ ಜ್ಞಾನಯೋಗ ಮಾಡವನೇ ಇರಬೇಕು ಬಿಡು, ಅಂತ ಅಂದಾ ಚೀಪ್ಯಾ.

ದೊಡ್ಡ ಮಾತು! ದೊಡ್ಡ ಮಾತು! ಜ್ಞಾನಯೋಗ ಅದು ಇದು ಎಲ್ಲ ನಮ್ಮ ಪರಮ ಗುರುಗಳಾದ ಆದಿ ಶಂಕರಾಚಾರ್ಯರಿಗೆ ಮಾತ್ರಪಾ. ನಮ್ಮಂತ ಹುಲು ಮಾನವರಿಗೆ ಅಲ್ಲ, ಅಂತ ಹೇಳಿದೆ.

ಕ್ಯಾ ಸಾಬ್? ರಾಸ್ತೇ ಮೇಲೆ ನಿಂತು ಹುಲ್ಲು ಮಾನವರು ಅಂತೀರಲ್ಲಾ?! ಹಾಂ? - ಅಂದಾ ಕರೀಮ.

ಹೋಗ್ಗೋ!! ಸಾಬ್ರಾ!!! ನಾನು ಅಂದಿದ್ದು ಹುಲು ಮಾನವ ಅಂತ. ಹುಲ್ಲು ಮಾನವ ಅಲ್ಲ. ಹುಲ್ಲಿನ ಮ್ಯಾಲೆ ನಿಂತಿಲ್ಲ. ಖರೆ. ಹುಲು ಮಾನವ ಅಂದ್ರ ಆಮ್ ಆದಮೀ ಅಂತ. ತಿಳಿತ? -ಅಂತ ಹೇಳಿದೆ.

ಆಮ್ ಆದಮೀ ಮತಲಬ್ ಅರವಿಂದ ಕ್ರೇಜೀವಾಲ್ ಕ್ಯಾ? ಅವರದ್ದು ಪಾರ್ಟಿ ಹೆಸರು ಆಮ್ ಆದಮೀ ಪಾರ್ಟಿ ಅಂತಾ ಅಲ್ಲಾ? ಆ ಕ್ರೇಜಿ ಅಂದ್ರೆ ಹುಚ್ಚ ಹಾಗೆ ಕಾಣೋ ಕ್ರೆಜೀವಾಲಗೆ ಮತ್ತೆ ಮಂಗ್ಯಾನ ಮರಿಗೆ ಮತ್ತೆ ಜ್ಞಾನದು ಯೋಗಾಗೆ ಏನು ಸಂಬಂಧ ಸಾಬ್? - ಅಂದ ಕರೀಂ.

ಸ್ವಚ್ಚ ಹಾಪ ಆಗಿ ಅಲ್ಲಲೇ ಸಾಬಾ!? ಹುಲು ಮಾನವ ಅಂದ್ರ ಆಮ್ ಆದಮೀ ಅಂದ್ರ ಶ್ರೀ ಸಾಮಾನ್ಯ ಅಂದ್ರ ಅದನ್ನ ಅರವಿಂದ ಕೆಜ್ರೀವಾಲನ ಆಮ್ ಆದಮೀ ಪಾರ್ಟಿಗೆ ತೊಗೊಂಡು ಹೋಗಿ ಲಿಂಕ್ ಮಾಡ್ತಿಯಲ್ಲೋ ಹಾಪಾ! - ಅಂತ ಬೈದೆ.

ಅವನ್ನ ಬಿಡಪಾ ನೀನು. ಈಗ ಭಕ್ತಿಯೋಗ ಮಾಡವರು ಬೆಕ್ಕಿನಮರಿ ಹ್ಯಾಂಗ ಅನ್ನೋದನ್ನ ಹೇಳು, ಅಂತ ಚೀಪ್ಯಾ ಕೇಳಿಕೊಂಡ.

ತಾಯಿ ಬೆಕ್ಕು ತನ್ನ ಮರಿ ಹ್ಯಾಂಗ ತೊಗೊಂಡು ಹೋಗ್ತದ ಅಂತ ನೋಡಿರೀ ಏನು? ಹಾಂ? ತಾಯಿ ಬೆಕ್ಕು ತನ್ನ ಮರೀನ ನಾಜೂಕಾಗಿ ಕುತ್ತಿಗಿ ಹಿಡದು ಎತ್ತಿ, ಬಾಯಿಯೊಳಗ ಮರಿಗೆ ಸ್ವಲ್ಪೂ ನೋವಾಗದ ಹಾಂಗ ಕಚ್ಚಿಕೊಂಡು ಆ ಕಡೆಯಿಂದ ಈ ಕಡೆ ಇಟ್ಟು ಬರ್ತದ. ಬೆಕ್ಕಿನ ಮರಿ ಮಾಡಬೇಕಾಗಿದ್ದು ಏನೂ ಇಲ್ಲ. ಕಣ್ಣು ಮುಚ್ಚಿ, ತಾಯಿ ಮೇಲೆ ಪೂರ್ತಿ ನಂಬಿಕೆ ಮತ್ತು ಭರೋಸಾ ಇಟ್ಟು, ಎಲ್ಲಾ ನಿನ್ನ ಮ್ಯಾಲೆ ಹಾಕಿ ಬಿಟ್ಟೇನಿ ಅವ್ವಾ, ನೀನೇ ನನ್ನ ಕಾಪಾಡಬೇಕು, ಅಂತ ಹೇಳಿ ಬೆಕ್ಕಿನಮರಿ ಏನೂ ಮಾಡದೇ ಇದ್ದು ಬಿಡ್ತದ. ತಾಯಿ ಬೆಕ್ಕು ಎಲ್ಲಾ  ಜವಾಬ್ದಾರಿ ತೊಗೊಂಡು, ಬೆಕ್ಕಿನ ಮರಿಯನ್ನ ಆ ಕಡೆಯಿಂದ ಈ ಕಡೆ ಮುಟ್ಟಿಸೋ ಕೆಲಸಾ ಮಾಡಿ ಮುಗಸ್ತದ. ಭಕ್ತಿಯೋಗ ಮಾಡೋ ಭಕ್ತರು ಅಂದ್ರ ಬೆಕ್ಕಿನಮರಿ ಇದ್ದಂಗ. ತಮಗೆ ಇಷ್ಟವಾದ ರೂಪದಲ್ಲಿ ದೇವರನ್ನ ಭಕ್ತಿಯಿಂದ ಪೂಜಿಸ್ತಾರ. ರಾಮ, ಕೃಷ್ಣ, ವಿಷ್ಣು, ಶಿವಾ, ದೇವಿ, ಹನುಮಂತ, ಗಣಪತಿ, ಶನಿ, ಆ ದೇವರು, ಈ ದೇವಿ, ಯಾವದು ಬೇಕಾದರೂ ಓಕೆ. ಭಕ್ತಿ ಇರಬೇಕು. ಪೂರ್ತಿ ಶ್ರದ್ಧೆ ಇರಬೇಕು. ಒಂದು ರೂಪವಿರುವ, ಒಂದು ಆಕಾರವಿರುವ, ಬೇರೆ ಬೇರೆ ತರಹದ ದೈವಿ ಶಕ್ತಿಗಳಿರುವ ದೇವರುಗಳನ್ನ ಪೂಜಾ ಮಾಡೋದು ಸಹ ಒಂದು ನಮೂನಿ ಸರಳ ನೋಡು. ಅದಕ್ಕೇ ಅಂತ ಬೇಕಾದಷ್ಟು ಮಂತ್ರ ಅವ, ಪೂಜಾ ಪದ್ಧತಿ ಅವ, ಎಲ್ಲಾ ಅವ. ಹೀಂಗ ಅಚಲ ಭಕ್ತಿಯಿಂದ ದೇವರನ್ನು ಪ್ರಾರ್ಥಿಸಿ ಮುಕ್ತಿ ಹೊಂದೋದು ಭಕ್ತಿಯೋಗ. ದೇವರು ಇಂತಹ ಭಕ್ತರನ್ನ ತಾಯಿ ಬೆಕ್ಕು ತನ್ನ ಮರಿಯ ಸಂಪೂರ್ಣ ಜವಾಬ್ದಾರಿ ತೊಗೊಂಡ ಹಾಂಗ ದೇವರು ಎಲ್ಲಾ ಜವಾಬ್ದಾರಿ ತೊಗೊಂಡು ಭಕ್ತಿಯೋಗ ಮಾಡುತ್ತಿರುವ ಸಾಧಕನನ್ನು ಈ ಲೋಕದಿಂದ ಆ ಲೋಕದ ತನಕ ನಾಜೂಕಾಗಿ ಹೋಗಿ ಮುಟ್ಟಿಸ್ತಾನ ಅಂತ ಹೇಳ್ತದ ಈ ಮಾರ್ಜಾಲ ಕಿಶೋರ ನ್ಯಾಯ. ಎಲ್ಲಾ ದೇವರ ಮ್ಯಾಲೆ ಹಾಕ್ರೀ. ಭಕ್ತಿಯೊಂದು ನೀವು ಮಾಡ್ರೀ ಅಂತ ಅರ್ಥ. ತಿಳೀತ? - ಅಂತ ಕೇಳಿದೆ.
 


ಓಹೋ! ಹೀಂಗ ಅನ್ನು. ಭಾರಿ ಅದ ಬಿಡಪಾ. ಜ್ಞಾನಯೋಗ ಅಂದ್ರ ಫುಲ್ self service. ಮತ್ತ ಭಕ್ತಿಯೋಗ ಅಂದ್ರ God assisted living ಇದ್ದಂಗ ಅನ್ನು. ಅದಕ್ಕೆ ಇರಬೇಕು, ಸ್ವಾಮಿಗಳು ಭಕ್ತಿಯೋಗ ಮಾಡ್ರೀ, ಭಕ್ತಿಯೋಗ ಮಾಡ್ರೀ ಅಂತ ಹೇಳಿದ್ದು, ಅಂದಾ ಚೀಪ್ಯಾ.

ಸಾಬ್! - ಅಂದ ಕರೀಮ ತಲಿ ಕೆರಕೊಂಡ. ಇವಾ ಹೀಂಗ ತಲಿ ಕೆರಕೊಂಡ ಅಂದ್ರ ಡೇಂಜರ್.

ಸಾಬ್....ನಮ್ಮದೂಕಿ ಧರ್ಮದ ಆದಮೀ ಒಬ್ಬರು ಸಿಕಂದರ್ ಭಕ್ತ ಅಂತಾ ಇದ್ದರು. ಅವರು ಯಾವದೇ ಯೋಗ ಮಾಡಿದರು ಅದು ಭಕ್ತಿ ಯೋಗ ಆಗ್ತದೆ ಕ್ಯಾ? ಅವರೇ ಹೆಸರೇ ಭಕ್ತ ಇದ್ದ ಮ್ಯಾಲೆ ಅವರು ಮಾಡೋ ಯೋಗ ಭಕ್ತಿಯೋಗ ಆಗಲಿಕ್ಕೇ ಬೇಕು ಅಲ್ಲಾ? ಕ್ಯಾ ಬೋಲ್ತಾ? ಈ ರಾಜಾದು ಮಂದಿ ಮಾಡೋ ಯೋಗಾ ರಾಜಯೋಗ ಆದ ಮ್ಯಾಲೆ ಸಿಕಂದ್ರ ಭಕ್ತ ಮಾಡೋದು ಭಕ್ತಿಯೋಗ ಆಗ್ತದೆ ಅಲ್ಲಾ? - ಅಂತ ಕರೀಮ ಇಲ್ಲದ ಕಿತಬಿ ಮಾಡಿದ.

ಲೇ!ಹಾಪಾ! ಅವರು ಸಿಕಂದರ ಭಕ್ತ ಬಿಜೆಪಿ ಒಳಗ ಇದ್ದ ಒಬ್ಬ ನಿಮ್ಮ ಧರ್ಮದ ನಾಯಕರು. ಈಗ ಏನು ಮಾಡಿಕೋತ್ತ ಇದ್ದಾರೋ ಯಾರಿಗೆ ಗೊತ್ತು? ಮತ್ತ ರಾಜಯೋಗ ಅಂದ್ರ ರಾಜರು ಮಾಡೋ ಯೋಗ ಅಲ್ಲ. ಧ್ಯಾನ, ಮೆಡಿಟೇಶನ್ ಮ್ಯಾಲೆ ಜಾಸ್ತಿ ಒತ್ತು ಕೊಟ್ಟಿರುವ ಅಧ್ಯಾತ್ಮಿಕ ಪದ್ಧತಿಗೆ ರಾಜಯೋಗ ಅಂತಾರ. ಏನೇನರೆ ಊಹಾ ಮಾಡಿಕೊಂಡು ಇಲ್ಲದ್ದು ಹೇಳಬ್ಯಾಡ. ತಿಳೀತ? - ಅಂತ ಹೇಳಿದೆ.

ಐಸಾ ಕ್ಯಾ? ಅಚ್ಚಾ ಜೀ - ಅಂತ ಸುಮ್ಮನಾದ ಕರೀಮ.

ಚೀಪ್ಯಾ...ಚೀಪ್ಯಾ.... ಏಕ ಬಾತ್ ಬತಾವೋ....ನಿಮ್ಮದೂಕಿ ಸ್ವಾಮಿಜೀ ಕರ್ಮಾದು ಯೋಗಾ ಬಗ್ಗೆ ಏನೂ ಹೇಳಲಿಲ್ಲ ಕ್ಯಾ? - ಅಂತ ಕೇಳಿದ.

ಏನ್ರೀ ಸಾಬ್ರಾ? ಭಾರಿ ಆತಲ್ಲ. ಕರ್ಮಯೋಗದ ಬಗ್ಗೆ ಸಹಿತ ತಿಳ್ಕೊಂಡು ಬಿಟ್ಟಿರೀ. ಕರ್ಮಯೋಗದ ಬಗ್ಗೆ ಮತ್ತ ಯಾವಗರೆ ಹೇಳತೇನಿ ಅಂತ ಹೇಳಿದರು ಸ್ವಾಮಿಗಳು. ಕರೀಮಾ, ನಿನಗ ಗೊತ್ತಿದ್ದರ ನೀನೇ ಹೇಳಿಬಿಡು ಕರ್ಮ ಯೋಗದ ಬಗ್ಗೆ, ಅಂತ ಚೀಪ್ಯಾ ಕರೀಮಗ ಹೇಳಿದ.

ಕ್ಯಾ ದೋಸ್ತ ಚೀಪ್ಯಾ.......ಏನು ಹೇಳ್ತಾ ಐತೆ ನೀವು? ನಮ್ಮದೂಕೆ ಹೆಸರೇ ಕರೀಂ ಐತೆ. ಕರೀಮಾದಾ ಯೋಗಾನೇ ಕರಮ್ ಯೋಗಾ. ಹಾ!ಹಾ! - ಅಂತ ಕರೀಮಾ ಜೋಕ್ ಹೊಡೆದ.

ನೋಡು ಚೀಪ್ಯಾ. ಕರ್ಮಾ ಯೋಗಾ ಭಾಳ ಸಿಂಪಲ್. ನಮಗೆ ನೋಡು. ನಾವು ಮುಜಾನೆ ಎದ್ದಾಗಿಂದ ರಾತ್ರಿ ಮಲಗೋ ತನಕಾ ಒಂದಾದ ಮೇಲೆ ಒಂದರಂತೆ ಕಾಮ್ ಮಾಡ್ತೇವೆ. ಕಾಮ್ ಅಂದ್ರೆ ಕೆಲಸ ಅಂದ್ರೆ ಕರ್ಮ. ಓಕೆ? ನಂತರ ರಾತ್ರಿ ಊಟ ಮಾಡ್ಬಿಟ್ಟಿ, ಬೀವಿ ಪಕ್ಕ ಹೋಗಿಬಿಟ್ಟಿ ಯೋಗಾ ಮಾಡ್ತೇವೆ. ಮುಂಜಾನೆಯಿಂದ ಸಂಜೆ ತನಕ ಕರ್ಮ ಅಂದ್ರೆ ಕೆಲಸ ಮಾಡೋದು. ರಾತ್ರಿ ಬೀವಿ ಪಕ್ಕ ಹೋಗಿ ಯೋಗಾ ಮಾಡೋದು. ಕರ್ಮ+ಯೋಗ = ಕರ್ಮಯೋಗ ಆಯಿತು. ಅಲ್ಲಾ? ಕ್ಯಾ ಬೋಲ್ತಾ? - ಅಂದು ಬಿಟ್ಟ ಕರೀಮ.

ಹೋಗ್ಗೋ ಇವನ! ಕರ್ಮ ಅಂದ್ರ ಕೆಲಸಾ ಮಾಡಿ ನಂತರ ಯೋಗಾ ಮಾಡಿಬಿಟ್ಟರ ಕರ್ಮ ಯೋಗ ಆತಂತ. ಭಾರಿ ಅರ್ಥ ಬರೋ ಹಾಂಗ ಹೇಳ್ತಾನ ನಮ್ಮ ಕರೀಮ.

ಲೇ ಹಾಪ್ ಕರೀಂ! ಹೆಂಡ್ತಿ ಬಾಜೂಕ ಹೋಗಿ ಏನು ಯೋಗಾ ಮಾಡ್ತೀಲೆ? ಅದೂ ರಾತ್ರಿ? ಅಂತಾ ಹೊಲಸ್ ಹೊಲಸ್ ಕೆಲಸಕ್ಕ ಯೋಗಾ ಅಂತ ಬ್ಯಾರೆ ಕರೀತಿಯಲ್ಲಲೇ ಹೇಶಿ ಮಂಗ್ಯಾನಿಕೆ! ಥೂ! - ಅಂತ ಚೀಪ್ಯಾ ಕರೀಮಗ ಬೈದಾ.

ಯಾಕೆ ಚೀಪ್ಯಾ ಬೈತೀ ನಮಗೆ? ನೀನೂ ಕೂಡ ರಾತ್ರಿ ಬೀವಿ ಮಗ್ಗುಲಾಗೆ ಯೋಗಾ ಮಾಡೋದಿಲ್ಲ ಕ್ಯಾ? ಮಾಡ್ತೀ ಮಾಡ್ತೀ - ಅಂದಾ ಕರೀಂ.

ನಾ ಏನ್ ಮಾಡ್ತೆನಲೇ? ಸುಮ್ಮನ ಹೋಗಿ ಬಾಜೂಕ ಮಲ್ಕೊತ್ತೇನಿ ಅಷ್ಟೇ. ಮತ್ತೇನು ಯೋಗಾ ಮಾಡ್ತೇನಿ? - ಅಂತ ಕೇಳಿದ ಚೀಪ್ಯಾ.

ಅದೇ ಚೀಪ್ಯಾ ಯೋಗಾ. ಮಲ್ಕೊಳ್ಳೋದು ಅಂದ್ರೆ ಯಾವ ಆಸನ ಹೇಳು? ಶವಾಸನ. ಅದೂ ಒಂದು ಆಸನ. ಗೊತ್ತೈತೆ ಕ್ಯಾ?
ಶವಾಸನ ಹಾಕಿದರೆ ಯೋಗ ಆಯ್ತು ಅಲ್ಲಾ? ದಿನಾ ಪೂರ್ತಿ ಕರ್ಮಾ ಅಂದ್ರೆ ಕೆಲಸಾಗೆ ಮಾಡ್ಬಿಟ್ಟಿ ರಾತ್ರಿ ಬೀವಿ ಬಾಜೂಕೆ ಶವಾಸನ ಹಾಕಿ ಬಿಟ್ಟರೆ ಕರ್ಮಾದು ಯೋಗ ಆಗಲಿಲ್ಲ ಕ್ಯಾ? ಕ್ಯಾ? - ಅಂತ ಕರೀಮ ಫುಲ್ ತಾನು ಕರೆಕ್ಟ್ ಇದ್ದೇನಿ ಅನ್ನವರಂಗ ಕೇಳಿದ.

ಹೋಗ್ಗೋ ಸಾಬಾ! ಭಾರಿ ಅದ ಬಿಡಪಾ ನಿನ್ನ ವಿವರಣೆ. ಹೆಂಡ್ತಿ ಬಾಜೂಕ ಶವಾಸನ ಹಾಕಿ ಸತ್ತ ಹೆಣದ ಹಾಂಗ ಬಿದ್ದುಕೊಳ್ಳೋದ ಭಾಳ ಮಂದಿ middle age ಗಂಡಸೂರ ಹಣೆಬರಹ ನೋಡಪಾ. ಹಾಂಗಾಗಿ ನಾನೂ ಸಹಿತ ನಿನ್ನ ಹಾಂಗ ಒಂದು ತರಹದ ಕರ್ಮಯೋಗಿನೇ ನೋಡಪಾ ಕರೀಮ - ಅಂತ ಚೀಪ್ಯಾ ಒಪ್ಪಿಕೊಂಡ.

so  ಚೀಪ್ಯಾ, ಕರೀಮಾ...ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮೂರೂ ತಿಳಕೊಂಡು ಬಿಟ್ಟಿರಿ. ಇನ್ನೂ ಮಂತ್ರಯೋಗ, ರಾಜಯೋಗ, ತಂತ್ರಯೋಗ, ಕುಂಡಲಿನಿಯೋಗ ಅಂತ ಮತ್ತೂ ಹಲವಾರು ತರಹದ ಯೋಗಗಳು ಅವ. ಅವುಗಳ ಬಗ್ಗೆನೂ ತಿಳಿದುಕೊಳ್ಳರೋ. ಯೋಗ ಅಂದ್ರ ಜೋಡಿಸು ಅಂತ ಅಷ್ಟೇ. ದೇವರ ಜೋಡಿ ನಮ್ಮನ್ನು ಜೋಡಿಸೋದು ಎಲ್ಲಾ ಯೋಗಗಳೇ. diffrent paths leading to the same destination! - ಅಂತ ಹೇಳಿದೆ.

ಓಕೆ! ಓಕೆ! ಸಾಕು ಈಗ. ರಾತ್ರಿ ಭಾಳ ಆತು. ಮನಿಗೆ ಹೋಗಿ ಶವಾಸನ ಹಾಕಿ ಬಿಡ್ತೇನಿ. ನನಕಿಂತ ಮೊದಲೇ ಸತ್ತ ಹೆಣಕ್ಕೂ ಹೆದರಿಕಿ ಬರೋ ಹಾಂಗ ಶವಾಸನ ಹಾಕಿ ನನ್ನ ಹೆಂಡ್ತಿ ಉರ್ಫ್ ನಿನ್ನ ರೂಪಾ ವೈನಿ ಮಲಗಿ ಬಿಟ್ಟಿರತಾಳ. ನಿದ್ದಿಗಣ್ಣಾಗೂ ಜಾಡಿಸಿ ಒದಿತಾಳ ಮಾರಾಯಾ ಅಕಿ. ಕೇಳಿದರ sleep walking ಇದ್ದಂಗ ಇದು sleep kicking ಅಂತ ಕಿಸಿ ಕಿಸಿ ನಗ್ತಾಳ ಮಾರಾಯಾ ನಿಮ್ಮ ರೂಪಾ ವೈನಿ. ಕೆಟ್ಟ ಬುದ್ಧಿ ಅಂದ್ರ, ಕೇಳಬ್ಯಾಡ ಅಕಿದು, ಅಂತ ಮಂಚ ಹತ್ತಿದ ಕೂಡಲೇ ಒದಿಕಿ ಬೀಳ್ತಾವ ಅಂತ ಚೀಪ್ಯಾ ಸೂಕ್ಷ್ಮವಾಗಿ ಹೇಳಿದ. ಪಾಪ ಅನ್ನಿಸ್ತು.

ಹೋಗಿ ಬರ್ರಿಲೆ ಹಾಂಗಿದ್ದರ. ಮತ್ತ ಸಿಗೋಣ. ಸಾಬ್ರಾ ಖುದಾ ಹಾಫಿಜ್ರೀಪಾ. ಬರೆ ಶವಾಸನ ಯಾಕ್ರೀ? ಒಂದು ದಿವಸ ಸಿದ್ಧಾಸನ ಹಾಕ್ರೀ, ಅಂತ ಕಣ್ಣು ಹೊಡೆದು ಚ್ಯಾಸ್ಟಿ ಮಾಡಿದೆ.

ಸಿದ್ಧಾಸನ ಮತ್ಲಬ್? ಕ್ಯಾ? ಅದನ್ನು ಕಲಿಲಿಕ್ಕೆ ಸಿದ್ಧಾರೂಢ ಮಠಕ್ಕೆ ಹೋಗಬೇಕು ಕ್ಯಾ? - ಅಂತ ಕೇಳಿ ಮತ್ತ ತಲಿ ತಿನ್ನಲಿಕ್ಕೆ ರೆಡಿ ಆದ ಕರೀಮಾ.

ಸುಮ್ಮನ ಹೋಗಪಾ. ಹೋಗಿ ಯಾವದಾರೆ ಆಸನ ಹಾಕ್ಕೊಂಡು ಬಿದ್ಕೋ. ತಲಿ ತಿನ್ನಬ್ಯಾಡ, ಅಂತ ಹೇಳಿ ನಾ ಓಡಿ ಬಂದೆ.

** ಮರ್ಕಟ ಕಿಶೋರ ನ್ಯಾಯ, ಮಾರ್ಜಾಲ ಕಿಶೋರ ನ್ಯಾಯ - ಸ್ವಾಮಿ ಮುಕುಂದಾನಂದರು ಬರೆದ ಭಗವದ್ಗೀತೆಯ ಮೇಲಿನ ಪುಸ್ತಕದಿಂದ ಎತ್ತಿದ್ದು. ಹನ್ನೆರಡನೆಯ ಅಧ್ಯಾಯ, ಭಕ್ತಿಯೋಗದ, ಐದನೇಯ ಶ್ಲೋಕದಲ್ಲಿ ಭಗವಾನ ಕೃಷ್ಣ ಅರ್ಜುನನಿಗೆ ಜ್ಞಾನಯೋಗ ಎಷ್ಟು ಕಷ್ಟವಾದದ್ದು ಎಂಬುದನ್ನು ವಿವರಿಸುತ್ತಾನೆ. ಅದನ್ನು ವಿವರಿಸಲು ಮುಕುಂದಾನಂದರು  ಮರ್ಕಟ ಕಿಶೋರ ನ್ಯಾಯ, ಮಾರ್ಜಾಲ ಕಿಶೋರ ನ್ಯಾಯ ಉದಾಹರಣೆ ಆಗಿ ಉಪಯೋಗಿಸುತ್ತಾರೆ. 

No comments: