Sunday, December 28, 2014

ನೀವು ಯಾವ ಸಬ್ಜೆಕ್ಟ್ ಕಲಿಸ್ತಿದ್ದಿರಿ ಸರ್!?

ಮೊನ್ನೆ ಯಾವದೋ ಸಮಾರಂಭಕ್ಕೆ ಹೋಗಿದ್ದೆ. ಮೊದಲು ಸ್ವಾಗತ ಗೀತೆ ಅಂದರು. ಯಾರಿಂದ ಅಂತನೂ ಹೇಳಿದರು. ಯಾರೋ ಸೀಮಾ ಕುಲಕರ್ಣಿ ಅಂತ. ಅದೂ ಧಾರವಾಡದವರು ಅಂದ ಕೂಡಲೇ ಕಿವಿ ನಾಯಿ ಕಿವಿ ಗತೆ ನಿಮಿರಿ ನಿಂತವು.

ಈ ಸೀಮಾ ಕುಲಕರ್ಣಿ ಎಲ್ಲೆರೆ ನಮ್ಮ ಹಳೆ ಕ್ಲಾಸ್ಮೇಟ್, ಗೆಳತಿ ಇದ್ದರೂ ಇರಬಹುದೇನೋ ಅಂತ ಅನ್ನಿಸ್ತು. ಅಕಿ ಎಲ್ಲೋ ಕಳೆದು ಹೋಗ್ಯಾಳ. ಕನ್ನಡ ಸಾಲಿ ಎರಡ್ನೇತ್ತಾ ಆದ ಮ್ಯಾಲೆ ಗಾಯಬ್. ಇನ್ನೂ ತನಕಾ ಪತ್ತೆ ಇಲ್ಲ.

ಯಾರೋ ಒಬ್ಬಾಕಿ ಬಂದು ಏನೋ ಹಾಡಿದಳು. ಸೀಮಾ ಕುಲಕರ್ಣಿ ಅಂತ ಹೆಸರು ಕೇಳಿದ ಮ್ಯಾಲೆ ನಾವು ಹಾಡು ಕೇಳಲಿಲ್ಲ. ಬರೇ ನೋಡಿದಿವಿ. ಹಾಡಾಕಿನ ನೋಡಿದಿವಿ. ಸೀಮಾ ಕುಲಕರ್ಣಿ ಅನ್ನೋ ಸಿಂಗರನ್ನ ನೋಡ್ಕೊತ್ತ ಫ್ಲಾಶ್ ಬ್ಯಾಕಿಗೆ ಹೋದ್ವೀ.

"ಹ್ಯಾಂ! ಇಕಿನ ಸೀಮಾ ಕುಲಕರ್ಣಿ!!!!? ಒಳ್ಳೆ ಅರವತ್ತರ ಮುದುಕಿ ಗತೆ ಇದ್ದಾಳ. ಇದೆಂಗ ಇಷ್ಟು ವಯಸ್ಸಾಗಿ ಬಿಡ್ತು ಇಕಿಗೆ? ನಮ್ಮ ಜೋಡಿಯಾಕಿ ಅಕಿ. ಹ್ಯಾಂ!?" ಅಂತ ಅನ್ನಿಸ್ತು ಅಕಿನ್ನ ನೋಡಿದರ. ಆದ್ರ ಅಕಿ ಮಾರಿ, ಫೇಸ್ ಕಟ್ ನೋಡಿದರೆ ನಮ್ಮ ಕ್ಲಾಸ್ಮೇಟ್ ಇದ್ದಂಗ ಇದ್ದಳು. ಅಕಿನ ಹೌದೋ ಅಲ್ಲೋ ಅಂತ ಭಾಳ confusion ಆಗಿ ಬಿಡ್ತು.

ಸಮಾರಂಭ ನಡಕೋತ್ತ ಹೊಂಟಿತ್ತು. ನಡು ಚಹಾಕ್ಕ ಅಂತ ಸೂಟಿ ಬಿಟ್ಟರು. ಎಲ್ಲಾರೂ ಚಹಾ, ನಾಷ್ಟಾ ಇಟ್ಟ ಕಡೆ ಭಂವ್ ಅಂತ ಹೋದರು. ಅದೇ ಇಂಪಾರ್ಟೆಂಟ್ ನೋಡ್ರೀ. ನಾನೂ ಹೋದೆ.

ಉಪ್ಪಿಟ್ಟು, ಚಹಾ ತೊಗೊಂಡು, ಈಕಡೆ ಬಂದು ಕೂಡೋಣ ಅಂತ ಬರ್ಲಿಕತ್ತಾಗ ಎದುರಿಗೆ ಯಾರ್ ಕಾಣಬೇಕು ಹೇಳ್ರೀ???? ಅಕಿನೇ ಸ್ವಾಗತ ಗೀತೆ ಹಾಡಿದ್ದ ಹುಡುಗಿ ಟೈಪಿನ ಅಜ್ಜಿ ಅಥವಾ ಅಜ್ಜಿ ಟೈಪಿನ ಹುಡುಗಿ - ಸೀಮಾ ಕುಲಕರ್ಣಿ.

ಏ! ಈಗೇ ಬೆಸ್ಟ್ ಚಾನ್ಸ್ ಸಿಕ್ಕದ. ಇಕಿನ್ನ ಹಿಡಿದು ಕೇಳೇ ಬಿಡಬೇಕು. ಕೇಳಿ, ಇಕಿ ನಮ್ಮ ಕ್ಲಾಸ್ಮೇಟ್ ಹೌದೋ ಅಲ್ಲೋ ಅಂತ confirm ಮಾಡಿಕೊಳ್ಳಲೇಬೇಕು, ಅಂತ ಡಿಸೈಡ್ ಮಾಡೇ ಬಿಟ್ಟೆ.

"ನಮಸ್ಕಾರ್ರೀ," ಅಂದೆ. ನಮಸ್ಕಾರ ಸಹ ಮಾಡಿದೆ. ಅದೂ ಫುಲ್ ನಮಸ್ಕಾರ. ಉಪ್ಪಿಟ್ಟ ಪ್ಲೇಟ್ ಬಾಜೂ ಇಟ್ಟು ಎಲ್ಲಾ ರೆಡಿ ಆಗಿದ್ದೆ ನಮಸ್ಕಾರ ಹೊಡಿಲಿಕ್ಕೆ.

ಅಕಿ ಏಕ್ದಂ ಒಂದು ತರಹ surprise ಲುಕ್ ಕೊಟ್ಟಳು. ಭಾಳ ದಿವಸದಿಂದ ಇಷ್ಟು ಚಂದಾಗಿ ಯಾರೂ ಅಕಿಗೆ ನಮಸ್ಕಾರ ಹೊಡೆದಿರಲಿಲ್ಲ ಅಂತ ಕಾಣಸ್ತದ. ಅದಕ್ಕೆ ಒಂದು ಟೈಪ್ deer in head light ಲುಕ್ ಕೊಟ್ಟು, ನಮ್ಮ ಫುಲ್ ನಮಸ್ಕಾರಕ್ಕೆ ಅಕಿ ಹಾಪೋ, ಕ್ವಾರ್ಟರೋ ಅನ್ನೋ ಹಾಂಗ ಏನೋ ಒಂದು ಟೈಪಿನ ನಮಸ್ಕಾರ ಮಾಡಿದಳು ಅನ್ನ್ರೀ.

"ರೀ, ನೀವು ಧಾರವಾಡದಾಗ ಕೆ ಬೋರ್ಡ್ ಸಾಲಿ ಸ್ಟೂಡೆಂಟ್ ಏನ್ರೀ?" ಅಂತ ಕೇಳಿದೆ.

ಅಕಿ ಭಾಳ surprise ಆಗಿ, "ಹೂಂ! ಹೂಂ! ಹೌದ್ರೀ. ನಾನು ಕಲಿತದ್ದು ಅಲ್ಲೇರೀ," ಅಂದಳು.

"ನಂದು ನೆನಪಿಲ್ಲೇನವಾ???? ನಾನು ಮಂಗೇಶ್. ಮಂಗೇಶ್ ಹೆಗಡೆ. ನೆನಪಾತೇನು?????" ಅಂತ ಕೇಳಿದೆ.

ನೋಡಲಿಕ್ಕೆ ಅಂತೂ ಫುಲ್ ಮುದುಕಿ ಗತೆ ಕಾಣ್ಲಿಕತ್ತಾಳ. ನೆನಪಿನ ಶಕ್ತಿ ಹ್ಯಾಂಗದನೋ ಏನೋ! ಯಾರಿಗೆ ಗೊತ್ತು. ಅದೂ ಢಂ ಅಂದದೋ ಏನೋ!

ಅಕಿ ತನ್ನ ಬಿಳೆಯಾಗಿರುವ ಕೂದಲಾ ಸ್ವಲ್ಪ ಕೆರಕೊಂಡಳು. ಕೆರಕೊಂಡ ಮ್ಯಾಲೆ ತಲ್ಯಾಗಿನ ಇಂಜಿನ್ ಸ್ಟಾರ್ಟ್ ಆತು ಅನ್ನಸ್ತದ.

"ನಾನು ೧೯೮೦ ಟೈಮ್ ಒಳಗ ಕೆ ಬೋರ್ಡ್ ಸಾಲಿ ಸ್ಟೂಡೆಂಟ್ ನೋಡ್ರೀ. ಆಮ್ಯಾಲೆ ನಮ್ಮಪ್ಪಗ ವರ್ಗಾತು. ಬ್ಯಾರೆ ಕಡೆ ಹೋದ್ವೀ," ಅಂತ ಹೇಳಿದಳು.

ಹಾಕ್ಕ! ಕರೆಕ್ಟ್! ನಾವು ಗೆಸ್ ಮಾಡಿದ್ದು ಏಕ್ದಂ ಬರೋಬ್ಬರಿ ಅದ. ಪರ್ಫೆಕ್ಟ್ ಮ್ಯಾಚ್ ಆಗ್ತದ. ಇಕಿನೇ ಅಕಿ. ಅಕಿನೇ ಇಕಿ. ಆವತ್ತು ಕಳೆದು ಹೋದಾಕಿ ಇಕಿನೇ ಅಂತ confirm ಆತು.

"ಬರೋಬ್ಬರಿ ಹೇಳಿದಿ ನೋಡವಾ. ನನಗೂ ಅದೇ ನೆನಪಿತ್ತು. ನೀ ಎಲ್ಲೆ ಹೋಗಿ ಬಿಟ್ಟಿ ಅಂತ ಒಟ್ಟೇ ಗೊತ್ತಿರಲಿಲ್ಲ ನೋಡು. ಈಗ ಸಿಕ್ಕಿ. ನಂದು ನೆನಪಾತ????" ಅಂತ ಮತ್ತ ಕೇಳಿದೆ.

ನಾನು ಅಕಿನ ಅಷ್ಟು ನೆನಪಿಟ್ಟು, ಎಷ್ಟೋ ವರ್ಷದ ನಂತರ ನೋಡಿ, ಬರೆ ಹೆಸರು ಕೇಳಿ, ಅಕಿ ಚಹರಾಪಟ್ಟಿ ಸಿಕ್ಕಾಪಟ್ಟೆ ಬದಲಾಗಿದ್ದರೂ, ಇಕಿನೇ ನಮ್ಮ ಕುಲಕರ್ಣಿ ಸೀಮಿ ಇರಬಹದು ಅಂತ ಗೆಸ್ ಮಾಡಿ ಕೇಳಿದ ಮ್ಯಾಲೆ ಅಕಿಗೂ ನಮ್ಮ ನೆನಪು ಇರಲಿಕ್ಕೇ ಬೇಕು. ಇರಲಿಲ್ಲ ಅಂದರೂ ನಾವು ನೆನಪು ಮಾಡಿಕೊಡಲೇ ಬೇಕು ಅಂತ ಹೇಳಿ ಅಕಿನ್ನ, ಅಕಿ memory ರಿಫ್ರೆಶ್ ಮಾಡೋ ಪ್ರಯತ್ನ ಮುಂದುವರಿಸಿದೆ. ಆದ್ರ ಅಕಿಗೆ ಒಟ್ಟ ನೆನಪಾಗವಲ್ಲತು. ಥತ್!

"ಏನಂದ್ರೀ ನಿಮ್ಮ ಹೆಸರು???" ಅಂತ ಮತ್ತ ಕೇಳಿದಳು.

ಶಿವನೇ! ಇನ್ನೂ ರೀ ಹಚ್ಚಿ ಮಾತಾಡ್ಲಿಕತ್ತಾಳ. ಅಂದ್ರ ಇಕಿಗೆ ನನ್ನ ಗುರ್ತು ಒಟ್ಟ ಹತ್ತವಲ್ತು. ಛೇ! ಏನು ತಗಡ ತಲಿ ಇಟ್ಟಾಳಪಾ ಇಕಿ, ಅಂತ ಅನ್ನಿಸ್ತು.

"ಮಂಗೇಶ್. ಮಂಗೇಶ್ ಹೆಗಡೆ ಅಂತ ನನ್ನ ಹೆಸರು. ಈಗರೆ ನೆನಪಾತೇನು?" ಅಂತ ಕೇಳಿದೆ.

ಸೀಮಾ ಕುಲಕರ್ಣಿ ಡೀಪ್ ಥಿಂಕಿಂಗ್ ಮೋಡಿಗೆ ಹೋದಳು. ಏಕ್ದಂ ದೆವ್ವಾ ಮೈಮ್ಯಾಲೆ ಬಂದವರಾಂಗ ಆಕಡೆ ಈಕಡೆ ಸ್ವಲ ಒಲಿದಾಡಿದಳು. ಸಾಲ್ಯಾಗಿದ್ದಾಗ ಹ್ಯಾಂಗ ಸ್ಲಿಮ್ ಅಂಡ್ ಟ್ರಿಮ್ ಆಗಿ ಕ್ಯೂಟ್ ಇದ್ದಳು. ಈಗ ನೋಡಿದರ. ಬ್ಯಾಡ ಬಿಡ್ರೀ. ನಮ್ಮ ಜೋಡಿಯಾಕಿನೇ. ವಯಸ್ಸು ಇನ್ನೂ ನಲವತ್ತರ ಮ್ಯಾಲೆ ಚಿಲ್ಲರೆ ಅಷ್ಟೇ. ಅಯ್ಯ ಇಕಿನ! ಈಗ ನೋಡಿದರೆ ಸಾಕು. ಅರವತ್ತರ ಅಜ್ಜಿ ಗತೆ ಆಗಿಬಿಟ್ಟಾಳ.

"ಹಾಂ! ಈಗ ನೆನಪಾತು ನೋಡ್ರೀ. ಏನಂದ್ರೀ ನಿಮ್ಮ ಹೆಸರು? ಹಾಂ ಹೆಗಡೆ. ಕರೆಕ್ಟ್. ಕರೆಕ್ಟ್. ಏ ಈಗ ಏಕದಂ ಫುಲ್ ನೆನಪಾತು," ಅಂದು ಬಿಟ್ಟಳು ಅಕಿ.

ಫುಲ್ ನೆನಪಾತು ಅಂತಾಳ. ಆದ್ರ ಮತ್ತೂ ಬಹುವಚನದಾಗ ಮಾತಾಡ್ಲಿಕತ್ತಾಳ. ಅಂದ್ರ ಏನರ್ಥ? ನಾ ಅಕಿ ಕ್ಲಾಸ್ಮೇಟ್, ಹಳೆ ಫ್ರೆಂಡ್ ಅಂತ ನೆನಪಾಗಿದ್ದರೆ ಏಕವಚನದಾಗ ಮಾತಡಿಸಬೇಕಾಗಿತ್ತಲ್ಲ? ಹಾಂ?

"ನೆನಪಾತ್ರೀ ಸರ್. ಆದ್ರ ನೀವು ಯಾವ subject ಕಲಿಸ್ತಿದ್ದಿರಿ ಅಂತ ಒಟ್ಟsss ನೆನಪಾಗವಲ್ಲತು ನೋಡ್ರೀ ಸರ್," ಅಂತ ಅಂದು ಬಿಡಬೇಕೇ!!!! ಸೂಡ್ಲೀ!!

ನನ್ನ ತಲಿಗೆ ಚಕ್ಕರನೇ ಬಂತು. ಅಲ್ಲೇ ಇದ್ದ ಖುರ್ಚಿ ಮ್ಯಾಲೆ ಕೂತೆ. ತಲಿ ಹಿಡಕೊಂಡೆ.

ಅಕಿಗೆ ಮಾತ್ರ ಖಬರೇ ಇಲ್ಲ. ಯಾವದೋ ಹಳೆ ಮಾಸ್ತರ್ ಸಿಕ್ಕಾರ ಅಂತ ಭಾಳ ಖುಷಿಯೊಳಗ ಇದ್ದಳು ಅಕಿ.

"ಹೆಗಡೆ ಸರ್, ಇನ್ನೂ ಕೆಲಸಾ ಮಾಡ್ಕೋತ್ತ ಇದ್ದೀರೋ ಅಥವಾ ರಿಟೈರ್ ಆಗಿರೋ?" ಅಂತ ಬ್ಯಾರೆ ಕೇಳಿ ಬಿಟ್ಟಳು.

ಅಷ್ಟರಾಗ ಮತ್ತ ಪ್ರೋಗ್ರಾಮ್ ಶುರು ಆತು. ಅಕಿ ಗಂಡಾ, ಮಕ್ಕಳು ಎಲ್ಲ ಅಕಿನ್ನ ಕರೆದರು.

"ಹೆಗಡೆ ಸರ್, ಪ್ರೊಗ್ರಾಮ್ ಮುಗಿದ ಮ್ಯಾಲೆ ಸ್ವಲ್ಪ ನಿಂದರ್ರಿ. ಆರಾಮ್ ಮಾತಾಡೋಣ. ಓಕೆರೀ ಸರ್?" ಅಂದಾಕಿನೇ ತನ್ನ ಪರಿವಾರದತ್ತ ಓಡಿದಳು.

ಈಕಡೆ ನಾ ವಿಚಾರ ಮಾಡಿದೆ. "ಶಿವನೇ! ಇಕಿ ಯಾಕೋ ಸ್ವಲ್ಪ ಲಗೂನೆ ಮುದುಕಿಯಾಗ್ಯಾಳ, ವಯಸ್ಸಿಗಿಂತ ಮೊದಲೇ ವಯೋವೃದ್ಧೆ ಗತೆ ಕಾಣ್ಲಿಕತ್ತಾಳ ಅಂತ ನಾ ವಿಚಾರ ಮಾಡಿದರ ಇಕಿಗೆ ನಾನೇ ಯಾವದೋ ಬುಡ್ಡಾ ಹಳೆ ಮಾಸ್ತರ್ ಗತೆ ಕಂಡು ಬಿಟ್ಟೆನೇ????"

ಅಕಟಕಟಾ!

(ಶುದ್ಧ ಕಾಲ್ಪನಿಕ (ತಲೆ) ಹರಟೆ)

(ಸ್ಪೂರ್ತಿ: ಶಿವರಾಂ ಶಾಸ್ತ್ರಿ ಅವರು ಬರೆದಿದ್ದ ಇದೇ ಮಾದರಿಯ ಜೋಕ್. ಅವರಿಗೆ ಬೇರೆ ಯಾವದೋ ಇಂಗ್ಲೀಷ್ ಜೋಕ್ ಸ್ಪೂರ್ತಿಯಂತೆ.)


No comments: