Friday, October 16, 2015

ನಾಡೋಜ ಪ್ರಶಸ್ತಿ ವಿಜೇತ ಶ್ರೀ. ಕೆ. ನಾರಾಯಣ್, ಐಪಿಎಸ್

ನಿವೃತ್ತ ಪೋಲಿಸ್ ಅಧಿಕಾರಿ ಶ್ರೀ ಕೆ. ನಾರಾಯಣ್ ಅವರಿಗೆ 'ನಾಡೋಜ' ಪ್ರಶಸ್ತಿ ಲಭಿಸಿದೆ. ಅಭಿನಂದನೆಗಳು.

ನಾರಾಯಣ್, ಐಪಿಎಸ್ ಅಂತ ಹೆಸರು ನೆನಪಿಗೆ ಬಂದ ಕೂಡಲೇ 'ಮರೆತೇನೆಂದರೂ ಮರೆಯಲಿ ಹ್ಯಾಂಗ?' ಅನ್ನುವಂತೆ ಮತ್ತೆ ಮತ್ತೆ ನೆನಪಿಗೆ ಬರುತ್ತವೆ ಎರಡು high profile ಮತ್ತು sensational ಕೊಲೆ ಪ್ರಕರಣಗಳು. ಒಂದು ಪತ್ರಕರ್ತ ಸಿದ್ದರಾಮೇಶ ಕೊಲೆ ಪ್ರಕರಣ. ಮತ್ತೊಂದು ವಕೀಲ ರಶೀದ್ ಕೊಲೆ ಪ್ರಕರಣ.

ವಿಧಿ ಒಡ್ಡಿದ ಎಲ್ಲ ಅಗ್ನಿಪರೀಕ್ಷೆಗಳಲ್ಲಿ ಪಾಸಾಗಿ ಬಂದ ನಾರಾಯಣ್ ಅವರಿಗೆ ನಾಡೋಜ ಪ್ರಶಸ್ತಿ ಬಂದಿದೆ.  ಅವರನ್ನು ಅಂತಹ ಕಠಿಣ ಅಗ್ನಿಪರೀಕ್ಷೆಗಳಿಗೆ ಗುರಿಮಾಡಿದ್ದ ರೋಚಕ ಪ್ರಕರಣಗಳ ಬಗ್ಗೆ ಒಂದು ಹಿನ್ನೋಟ.

****

ಈ ವರ್ಷದ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿ ವಿಜೇತರಲ್ಲಿ ಶ್ರೀ. ಕೆ. ನಾರಾಯಣ್ ಕೂಡ ಒಬ್ಬರು. ಅವರು ಮಾಜಿ ಐಪಿಎಸ್ ಪೋಲಿಸ್ ಅಧಿಕಾರಿ. ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠರಾಗಿದ್ದಾಗ ಬೆಳಗಾವಿಯಲ್ಲಿ ಭಾಷೆಗೆ ಸಂಬಂಧಿಸಿದಂತೆ ಪರಿಸ್ಥಿತಿ ಹದಗೆಟ್ಟಿತ್ತು. ವಿಕೋಪಕ್ಕೆ ಹೋಗಿತ್ತು. ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ನಾರಾಯಣ್ ಅವರು ಉತ್ತಮ ಮತ್ತು ಖಡಕ್ ಕ್ರಮ ಕೈಗೊಂಡರು. ಪರಿಸ್ಥಿತಿಯನ್ನು ಸುಧಾರಿಸಿದರು. ಅವನ್ನೆಲ್ಲ ಗಣನೆಗೆ ತೆಗೆದುಕೊಂಡು ನಾರಾಯಣ್ ಅವರಿಗೆ ನಾಡೋಜ ಪ್ರಶಸ್ತಿ ನೀಡಲಾಗಿದೆ. ಹಾಗಂತ ಪತ್ರಿಕಾ ಪ್ರಕಟಣೆಯಲ್ಲಿ ಬಂದಿದೆ.

ನಾರಾಯಣ್ ಹಿರಿಯ ಪೋಲಿಸ್ ಅಧಿಕಾರಿ. ಎರಡು ತುಂಬಾ high profile ಮತ್ತು ತುಂಬಾ sensational ಅನ್ನುವ ಕ್ರಿಮಿನಲ್ ಪ್ರಕರಣಗಳಲ್ಲಿ ಕಾಣಿಸಿಕೊಂಡವರು. ಪೋಲಿಸ್ ಅಧಿಕಾರಿಯಾದ ಮೇಲೆ high profile ಮತ್ತು ರೋಚಕ ಪ್ರಕರಣಗಳಲ್ಲಿ ಕಾಣಿಸಿಕೊಂಡರೆ ಏನು ವಿಶೇಷ ಅಂದುಕೊಂಡರೆ ಒಂದು ವಿಶೇಷ ಇದೆ. ಪೋಲಿಸ್ ಅಧಿಕಾರಿ ನಾರಾಯಣ್ ಆ ಎರಡು ಪ್ರಕರಣಗಳಲ್ಲಿ suspect, ಆರೋಪಿಯಾಗಿದ್ದರು. ಅದೇ ವಿಶೇಷ.

ಮೊದಲನೇ ಪ್ರಕರಣ ಗುಲ್ಬುರ್ಗಾದ ಪತ್ರಕರ್ತ ಸಿದ್ದರಾಮೇಶ ಕೊಲೆ ಪ್ರಕರಣ. ೧೯೮೪ ರಲ್ಲಿ ನಡೆದದ್ದು. ಆಗ ನಾರಾಯಣ್ ಗುಲ್ಬುರ್ಗಾ ಜಿಲ್ಲೆಯ ಪೋಲಿಸ್ ವರಿಷ್ಠರಾಗಿದ್ದರು. ಸಿದ್ದರಾಮೇಶ 'ಕ್ರಾಂತಿ' ಎಂಬ ಪತ್ರಿಕೆ ನಡೆಸುತ್ತಿದ್ದರು. ಒಂದು ದಿನ ಸಿದ್ದರಾಮೇಶ ಭೀಕರವಾಗಿ ಕೊಲೆಯಾಗಿ ಹೋದರು. ರಾತ್ರಿ ತಮ್ಮ ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಹಂತಕರು ಅವರ ಕಾರ್ ಮುಂದೆ ಸೈಕಲ್ ಎಸೆದಿದ್ದಾರೆ. ಗಾಡಿ ನಿಲ್ಲಿಸಿದ ಸಿದ್ದರಾಮೇಶರನ್ನು ಹೊರಗೆಳೆದು, ಚೂರಿಯಿಂದ ತಿವಿತಿವಿದು ಕೊಂದಿದ್ದಾರೆ. ಸರಿಯಾದ ಸಮಯಕ್ಕೆ ಸಹಾಯ ಸಿಗದ ಸಿದ್ದರಾಮೇಶ ಜೀವ ಬಿಟ್ಟಿದ್ದಾರೆ.

ಒಬ್ಬ ವೃತ್ತಿನಿರತ ಪತ್ರಕರ್ತನ ಕೊಲೆ ಅಂದರೆ ಸಣ್ಣ ಮಾತಲ್ಲ. ಇಡೀ ರಾಜ್ಯದ ತುಂಬಾ ಸಿಕ್ಕಾಪಟ್ಟೆ ಸಂಚಲನವನ್ನು ಎಬ್ಬಿಸಿಬಿಟ್ಟಿತು ಆ ಕೊಲೆ ಪ್ರಕರಣ. ಅದರಲ್ಲೂ ಸಿದ್ದರಾಮೇಶ ಕೊಲೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಅನ್ನುವ ಗುಸುಗುಸು ಸುದ್ದಿ ಹರಡಿ ಅಂದಿನ ರಾಮಕೃಷ್ಣ ಹೆಗಡೆ ಜನತಾ ಸರಕಾರದ ಬುಡಕ್ಕೆ ಬಿಸಿನೀರು ಕಾಯಿಸಲಾರಂಭಿಸಿತು. ಸಾಮಾನ್ಯ ಜನರು, ವಿರೋಧ ಪಕ್ಷಗಳು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದವು. ಅವರ ಒತ್ತಾಯಕ್ಕೆ ಮಣಿದ ರಾಜ್ಯ ಸರ್ಕಾರ ಸಿದ್ದರಾಮೇಶ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿತು.

ಬಂದ ಸಿಬಿಐ ತಂಡ ಗುಲ್ಬುರ್ಗಾ ಪೊಲೀಸರನ್ನೇ ತನಿಖೆ ಮಾಡಿತು. ಕೆಲವು ಪೋಲೀಸರನ್ನು ಹೆಸರಿಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಯಿತು. ಸಿದ್ದರಾಮೇಶ ಕೊಲೆ ಸಂದರ್ಭದಲ್ಲಿ ಪೋಲೀಸ್ SP ಆಗಿದ್ದ ಇದೇ ನಾರಾಯಣ್ ಅವರನ್ನು ಕೂಡ ಸಿಬಿಐ ತನಿಖೆಗೆ ಒಳಪಡಿಸಿತ್ತು. ಆದರೆ ಆರೋಪಪಟ್ಟಿ (charge sheet) ಸಲ್ಲಿಸುವಾಗ ಅವರನ್ನು ಆರೋಪಿ ಅಂತ ಹಾಕಿರಲಿಲ್ಲ. ಕೆಳಮಟ್ಟದ ಪೋಲೀಸರನ್ನು ಮಾತ್ರ ಆರೋಪಿ ಅಂತ ಹಾಕಿದ್ದರು. ಹಾಗಾಗಿ ಸಿದ್ದರಾಮೇಶ ಕೊಲೆ ಪ್ರಕರಣದಲ್ಲಿ ನಾರಾಯಣ್ ಅವರ ಹೆಸರು ವ್ಯಾಪಕವಾಗಿ ಕೇಳಿಬಂದರೂ ಕೋರ್ಟಿನ ಕಟಕಟೆಯಲ್ಲಿ ಆರೋಪಿಯ ಸ್ಥಾನದಲ್ಲಿ ನಿಲ್ಲುವ ಸಂದರ್ಭ ಬರಲಿಲ್ಲ. ಮುಂದೆ ಸುಮಾರು ಇಪ್ಪತ್ತು ವರ್ಷ ಕೇಸ್ ನಡೆಯಿತು. ಎಲ್ಲ ಹಂತದ ನ್ಯಾಯಾಲಯಗಳಲ್ಲಿಯೂ ಆರೋಪಿಯೆಂದು ಹೆಸರಿಸಿದ್ದ ಪೊಲೀಸರು ತಪ್ಪಿತಸ್ಥರು ಅಂತ ರುಜುವಾತಾಯಿತು. ಶಿಕ್ಷೆಯೂ ಆಯಿತು.

ಕೊಲೆಯಾಗಿದ್ದ ಸಿದ್ದರಾಮೇಶರ ಕುಟುಂಬಕ್ಕೆ ಪೂರ್ತಿ ಸಂತೃಪ್ತಿ ಸಿಕ್ಕಿರಲಿಲ್ಲ. ಅವರ ಮುಖ್ಯ ತಕರಾರು ಅಂದರೆ, 'ಪೋಲೀಸ್ ವರಿಷ್ಠ ನಾರಾಯಣರನ್ನು ಆರೋಪಿ ಎಂದು ಹೆಸರಿಸದೇ ಬಿಟ್ಟುಬಿಟ್ಟ ಸಿಬಿಐ ಲೋಪ ಮಾಡಿತು. ಅದನ್ನು ಸರಿಪಡಿಸಿ. ನಾರಾಯಣ್ ಅವರನ್ನು ಸಹ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ.' ಹೀಗೆ ಹೇಳಿಕೊಂಡು ಮೃತ ಸಿದ್ದರಾಮೇಶರ ಪತ್ನಿ ಅನ್ನಪೂರ್ಣಾ ಸುಪ್ರೀಂ ಕೋರ್ಟಿನಲ್ಲಿ ನಾರಾಯಣ್ ವಿರುದ್ಧ ತಮ್ಮ ವಯಕ್ತಿಕ ಮಟ್ಟದಲ್ಲಿ ಕೇಸ್ ಹಾಕಿಕೊಂಡಿದ್ದಾರೆ. ಅದರ ತೀರ್ಮಾನ ಏನಾಯಿತು ಅನ್ನುವದರ ಬಗ್ಗೆ ಮಾಹಿತಿ ಇಲ್ಲ. ೨೦೧೩ ರಲ್ಲಿ ಅದು ನ್ಯಾಯಾಧೀಶರ ಮುಂದೆ ಬಂದಿತ್ತು ಅಂತ ವರದಿಯಿತ್ತು. ಅದರಲ್ಲಿ ನಾರಾಯಣ್ ಅವರಿಗೆ ಮುಕ್ತಿ ಸಿಕ್ಕಿತೋ ಅನ್ನುವದರ ಬಗ್ಗೆ ಗೊತ್ತಿಲ್ಲ. (ಹೆಚ್ಚಿನ ಮಾಹಿತಿ ಗೊತ್ತಿದ್ದರೆ ಮಾಹಿತಿಯ ಮೂಲದೊಂದಿಗೆ ತಿಳಿಸಿ. ತಿದ್ದುಪಡಿ ಮಾಡುತ್ತೇನೆ.)

ಮುಂದಿನ high profile ಪ್ರಕರಣ ಕೇರಳದ ವಕೀಲ ರಶೀದ್ ಕೊಲೆ ಪ್ರಕರಣ. ೧೯೮೬ ರಲ್ಲಿ ಆಗಿದ್ದು. ರಶೀದ್ ಒಬ್ಬ ಕೇರಳದ ವಕೀಲ. ಬೆಂಗಳೂರಿಗೆ ಬಂದವರು ನಾಪತ್ತೆಯಾದರು. ನಂತರ ಅವರ ಶವ ತಮಿಳುನಾಡಿನ ಸೇಲಂ ಹತ್ತಿರ ರೈಲ್ವೆ ಹಳಿಗಳ ಮೇಲೆ ಸಿಕ್ಕಿತು. ರಶೀದ್ ಅವರನ್ನು ಬೆಂಗಳೂರಿನ ಪೊಲೀಸರು ಬಂಧಿಸಿ, ಲಾಕಪ್ಪಿನಲ್ಲಿ ಚಿತ್ರಹಿಂಸೆ ನೀಡಿ, ಲಾಕಪ್ ಡೆತ್ ಮಾಡಿ, ಮುಚ್ಚಿಹಾಕಲು ಹೆಣವನ್ನು ಸೇಲಂ ಹತ್ತಿರದಲ್ಲಿ ಎಸೆದು ಬಂದರು ಅನ್ನುವ ಆರೋಪ ಬಂತು. ಆಗ ಬೆಂಗಳೂರಿನ ಆ ವಲಯದ DCP ಆಗಿದ್ದವರು ಮತ್ತೆ ಇದೇ ನಾರಾಯಣ್. ರಶೀದ್ ಕೊಲೆ ಪ್ರಕರಣದಲ್ಲಿ ಆಗಿನ ಗೃಹಮಂತ್ರಿ ಜಾಲಪ್ಪನವರ ಹೆಸರೂ ಸಹ ಕೇಳಿಬಂತು. ಮತ್ತೊಮ್ಮೆ ಹೆಗಡೆ ಸರಕಾರಕ್ಕೆ ತೊಂದರೆ. ವಿರೋಧ ಪಕ್ಷಗಳಿಂದ ಸಿಬಿಐ ತನಿಖೆಗೆ ಆಗ್ರಹ. ಅದರಂತೆ ವಕೀಲ ರಶೀದ್ ಪ್ರಕರಣವನ್ನೂ ಕೂಡ ಸಿಬಿಐಗೆ ಒಪ್ಪಿಸಲಾಯಿತು.

ಈ ಬಾರಿ ಮತ್ತೆ ನಾರಾಯಣ್ ಮತ್ತು ಅವರ ಕೆಳಗಿನ ಪೋಲೀಸ್ ಅಧಿಕಾರಿಗಳು ಸಿಬಿಐ ತನಿಖೆಗೆ ಒಳಗಾದರು. ಎಲ್ಲರನ್ನೂ ಸಿಬಿಐ ಬಂಧಿಸಿತು. ಬಲಶಾಲಿ ಗೃಹಸಚಿವ ಜಾಲಪ್ಪ ಕೂಡ ಬಚಾವಾಗಲಿಲ್ಲ. ಎಲ್ಲರನ್ನೂ ಬಂಧಿಸಿ ಜೈಲಿಗೆ ಕಳಿಸಿತು ಸಿಬಿಐ. ಎಷ್ಟೋ ತಿಂಗಳುಗಳ ಕಾಲ ನಾರಾಯಣ್, ಜಾಲಪ್ಪ ಎಲ್ಲ ಜೇಲಿನಲ್ಲಿ ಇದ್ದರು. ನಂತರ ಜಾಮೀನ ಮೇಲೆ ಬಿಡುಗಡೆಯಾದರು. ಈ ಬಾರಿ ನಾರಾಯಣ್ ಅವರನ್ನು ಆರೋಪಿ ಅಂತ charge sheet ಹಾಕಿತ್ತು ಸಿಬಿಐ. ಜಾಲಪ್ಪ ಕೂಡ ಆರೋಪಿಯಾಗಿದ್ದರು.

ತಮಿಳುನಾಡಿನ ಸೇಲಮ್ಮಿನ ಸೆಷನ್ಸ್ ನ್ಯಾಯಾಲಯ ಎಲ್ಲರನ್ನೂ ತಪ್ಪಿತಸ್ಥರು ಅಂತ ತೀರ್ಪು ನೀಡಿತು. ನಾರಾಯಣ್, ಜಾಲಪ್ಪ ಎಲ್ಲರೂ ಹೈಕೋರ್ಟಿಗೆ ಅಪೀಲ್ ಹಾಕಿಕೊಂಡರು. ೨೦೦೨ ರಲ್ಲಿ ತೀರ್ಮಾನ ಬಂತು. ಹೈಕೋರ್ಟ್ ಎಲ್ಲರನ್ನೂ ನಿರಪರಾಧಿಗಳು ಅಂತ ಬಿಡುಗಡೆ ಮಾಡಿತು. ನಾರಾಯಣ್ ಮತ್ತೆ ಪೋಲೀಸ್ ಇಲಾಖೆಗೆ ವಾಪಸ್ ಬರಲು ಇದ್ದ ಎಲ್ಲ ವಿಘ್ನಗಳೂ ನಿವಾರಣೆಯಾಗಿದ್ದವು. ಆದರೆ ನಾರಾಯಣ್ ಮತ್ತೆ ಸೇವೆಗೆ ಬಂದಿದ್ದು ನನಗಂತೂ ನೆನಪಿಲ್ಲ. ೧೯೮೭ ರಿಂದ ಪೋಲೀಸ್ ಇಲಾಖೆಯಿಂದ ಹೊರಗಿದ್ದ ಅವರೇ ವಾಪಸ್ ಬರಲಿಲ್ಲವೋ ಅಥವಾ ಮತ್ತೇನಾಯಿತೋ ಅನ್ನುವದರ ಬಗ್ಗೆ ಗೊತ್ತಿಲ್ಲ. ನಿವೃತ್ತಿ ಸಮೀಪ ಬಂದಿದ್ದರು ಅನ್ನಿಸುತ್ತದೆ.

ನಾರಾಯಣ್ ಅವರಿಗೆ 'ನಾಡೋಜ' ಪ್ರಶಸ್ತಿ ಬಂದಿತು ಅಂದಾಗ ಇದೆಲ್ಲ ನೆನಪಾಯಿತು. ಒಂದು ವಿಷಯ ಮರೆಯಬಾರದು. ಅವರು ಆರೋಪಿ ಮಾತ್ರ ಆಗಿದ್ದರು. ಅವರು ನಿರಪರಾಧಿ ಅಂತ ನಾಡಿನ ಉನ್ನತ ನ್ಯಾಯಾಲಯಗಳೇ ಹೇಳಿವೆ. ಅದನ್ನು ಗಮದಲ್ಲಿಟ್ಟುಕೊಳ್ಳಬೇಕು. ಮತ್ತು ಗೌರವಿಸಬೇಕು. ಆರೋಪಿಯಾಗಿದ್ದರು ಅನ್ನುವದು ಒಂದು historical fact ಅಷ್ಟೇ. ಅದು ಅವರ ಯಾವದೇ ಸಾಧನೆಗಳಿಗೆ ಮತ್ತು ಅವುಗಳಿಗೆ ಸಿಗುವ ಮನ್ನಣೆಗಳಿಗೆ ಅಡ್ಡ ಬರಬಾರದು. ಅಪರಾಧಿ ಅಂತ ತೀರ್ಮಾನವಾಗಿದ್ದರೆ ಆ ಮಾತು ಬೇರೆ.

ಎಲ್ಲ ಅಗ್ನಿಪರೀಕ್ಷೆಗಳಿಗೆ ಒಡ್ಡಿಕೊಂಡು, ತಮ್ಮ ಮೇಲಿನ ಆರೋಪಗಳನ್ನು ಕ್ಲಿಯರ್ ಮಾಡಿಕೊಂಡ ನಾರಾಯಣ್ ಅವರಿಗೆ ನಾಡೋಜ ಪ್ರಶಸ್ತಿ ಲಭಿಸಿದೆ. ಅದಕ್ಕೆ ಅಭಿನಂದನೆ.

ವಿ. ಸೂ: ಒಬ್ಬ ವ್ಯಕ್ತಿಯ ಬಗ್ಗೆ ಬರೆಯುವಾಗ ಮಾಹಿತಿ ಸರಿಯಿರಬೇಕು. ನನ್ನ ಪ್ರಕಾರ ಬರೆದ ಮಾಹಿತಿ ಸರಿಯಿದೆ. ತಪ್ಪಿದ್ದರೆ ತಿಳಿಸಿ. ನಿಮ್ಮ ಮಾಹಿತಿಯ ಮೂಲವನ್ನೂ ಕೂಡ ತಿಳಿಸಿ. ತಪ್ಪಿದ್ದರೆ ತಿದ್ದಿಕೊಳ್ಳೋಣ. ವಯಕ್ತಿಕವಾಗಿ ನಾರಾಯಣ್ ನನಗೆ ಪರಿಚಿತರೂ ಅಲ್ಲ ಅವರ ಬಗ್ಗೆ ಜಾಸ್ತಿ ತಿಳಿದೂ ಇಲ್ಲ. ಆದರೆ ನಮ್ಮ ಜಮಾನಾದಲ್ಲಾದ ಎರಡು ತುಂಬಾ ರೋಚಕ ಪ್ರಕರಣಗಳಾದ ಸಿದ್ದರಾಮೇಶ ಕೊಲೆ ಮತ್ತು ವಕೀಲ ರಶೀದ್ ಕೊಲೆ ಪ್ರಕರಣಗಳನ್ನು ಮಾತ್ರ ಆಸಕ್ತಿಯಿಂದ ಗಮನಿಸಿದ್ದೇನೆ. ನಾರಾಯಣ್ ಅವರಿಗೆ ನಾಡೋಜ ಪ್ರಶಸ್ತಿ ಬಂತು ಅಂತ ತಿಳಿದಾಗ ನನಗೆ ನೆನಪಾದ ವಿಷಯಗಳನ್ನು objective ಆಗಿ ಬರೆದಿದ್ದೇನೆ. ಎಲ್ಲರ ಜೀವನಕ್ಕೂ ಒಂದು ಹಿಸ್ಟರಿ ಇರುತ್ತದೆ. ಕೆಲವರ ಜೀವನದ ಹಿಸ್ಟರಿಯಲ್ಲಿ ಕ್ರಿಮಿನಲ್ ಆರೋಪಗಳು ಕಂಡುಬರಬಹುದು. ಅಪರಾಧಿ ಅಂತಲೂ ಸಾಬೀತಾಗಬಹುದು. ಅವೆಲ್ಲವನ್ನೂ historical facts ಅಂತ ಮಾತ್ರ ನೋಡಬೇಕು. ಒಬ್ಬ ವ್ಯಕ್ತಿಯನ್ನು ಮತ್ತು ಅವನ ಸಾಧನೆಗಳನ್ನು judge ಮಾಡಲು ಕೇವಲ ಅವನ್ನು ಮಾತ್ರ ಉಪಯೋಗ ಮಾಡಿದರೆ ತಪ್ಪಾಗುತ್ತದೆ. ಈ ಮಾತುಗಳನ್ನು ಯಾಕೆ ಹೇಳಿದೆ ಅಂದರೆ ಈಗ ನಾರಾಯಣ್ ಅವರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಬಂದಿದೆ. ಇಂತಹ ಸಂದರ್ಭದಲ್ಲಿ ಅವರ ಅಭಿಮಾನಿಗಳು ಈ ಲೇಖನ ಓದಿದರೆ ತಪ್ಪು ತಿಳಿಯದಿರಲಿ ಅಂತ. ಮೊದಲೇ ತಿಳಿಸಿದಂತೆ ನನಗೆ ನೆನಪಾದ historical facts ಗಳನ್ನು ಹಂಚಿಕೊಳ್ಳಲು ಬರೆದ ಲೇಖನ ಇದು. ಶ್ರೀ ನಾರಾಯಣ್ ಅವರಿಗೆ, ಅವರ ಗೌರವಕ್ಕೆ ಯಾವದೇ ಚ್ಯುತಿ ಬರದಂತೆ, ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನು ಉಪಯೋಗಿಸಿಕೊಂಡು, ಯಾವದೇ ರೀತಿಯ judgmental, prejudiced ಮನಸ್ಥಿತಿ ಇಟ್ಟುಕೊಳ್ಳದೇ ಬರೆದಿದ್ದೇನೆ. ಆದರೂ ಯಾರಿಗಾದರೂ ಏನಾದರೂ ಆಕ್ಷೇಪಣೀಯ (objectionable) ಅಂತ ಅನ್ನಿಸಿದರೆ ಒಂದು ಮಾತು ತಿಳಿಸಿ. ಆಕ್ಷೇಪಣೆಯ ವಿವರಗಳನ್ನೂ ಕೊಡಿ. ಪರಾಮರ್ಶಿಸಿ, ತಪ್ಪಿದ್ದರೆ ತಿದ್ದುತ್ತೇನೆ. ತಿದ್ದಿಕೊಳ್ಳುತ್ತೇನೆ. 

2 comments:

sunaath said...

ನಾಡೋಜ ಪ್ರಶಸ್ತಿವಿಜೇತರೊಬ್ಬರ ಬಗೆಗೆ ಬರೆದ ಅತ್ಯುತ್ತಮ ವರದಿ ಇದು. ಅಂದ ಹಾಗೆ, ಈ ಪ್ರಶಸ್ತಿಯನ್ನು ಕೊಡುತ್ತಿರುವವರು ಯಾರು ಹಾಗು ಪ್ರಶಸ್ತಿಯ ಅರ್ಹತೆ ಏನು ಎನ್ನುವುದು ನನಗೆ ತಿಳಿದಿಲ್ಲ. ಕೆಲದಿನಗಳ ಹಿಂದೆ ನನ್ನ ತಮ್ಮನಿಗೆ ನಾನು ಒಂದು ಪ್ರೊಪೋಜಲ್ ಕೊಟ್ಟಿದ್ದೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಒಂದು ಸಮಾರಂಭವನ್ನು ಮಾಡಿ, ‘ನಾಡೋಜ ಪ್ರಶಸ್ತಿಯನ್ನು’ ಪರಸ್ಪರ ಕೊಟ್ಟುಕೊಳ್ಳೋಣ ಎಂದು! ದಯವಿಟ್ಟು ಕಾಯ್ದು ನೋಡಿ.

Mahesh Hegade said...

ಧನ್ಯವಾದ ಸರ್.

ನಾಡೋಜ ಪ್ರಶಸ್ತಿ ಬಗ್ಗೆ ತಾವು ಕೇಳಿದ ಪ್ರಶ್ನೆಯನ್ನು ಹೋಗಿ ಎಲ್ಲ ಬಲ್ಲ ಗೂಗಲ್ ಮುಂದಿಟ್ಟೆ. ಬಂತು ನೋಡಿ ಉತ್ತರ.

"ನಾಡೋಜ ಪ್ರಶಸ್ತಿಯು ಹಂಪೆ ಕನ್ನಡ ವಿಶ್ವವಿದ್ಯಾಲಯವು ಪ್ರತಿವರ್ಷ ನೀಡುವ ಪ್ರತಿಷ್ಠಿತ ಪ್ರಶಸ್ತಿ. ನಾಡೋಜ ಎಂಬ ಪದವು ಆದಿಕವಿ ಪಂಪನಿಗೆ ಸಂಬಂಧಿಸಿದ್ದಾಗಿದೆ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನದಲ್ಲಿ ನೀಡಲಾಗುತ್ತಿರುವ 'ದೇಶಿಕೋತ್ತಮ' ಪದವಿ ಪ್ರೇರಣೆಯಿಂದ ಕನ್ನಡ ವಿವಿ ನಾಡೋಜ ಪದವಿ ನೀಡುತ್ತಿದೆ. ನಾಡೋಜ ಗೌರವ ಪದವಿಯು ಶಾಲು, ಸರಸ್ವತಿ ವಿಗ್ರಹ, ಪ್ರಮಾಣ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ."

https://goo.gl/PnSkwA

ಅರ್ಹತೆ, ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ಇಲ್ಲ. ಅದನ್ನು ಹಂಪೆ ಕನ್ನಡ ವಿಶ್ವವಿದ್ಯಾಲಯದ ವೆಬ್ ಸೈಟಿನಲ್ಲಿ ಹುಡುಕಬೇಕಾದೀತು.