Friday, July 15, 2016

ಹೆಸರಾಗೇನೈತಿ? ಇರೋದೆಲ್ಲಾ ಅಡ್ಡಹೆಸರಿನಾಗೇ ಐತಿ....

ಇಂಗ್ಲಿಷ್ ನಾಟಕಕಾರ ವಿಲಿಯಂ ಶೇಕ್ಸಪಿಯರ್ ಉತ್ತರ ಕರ್ನಾಟಕದ ಕಡೆ, ನಮ್ಮ ಧಾರವಾಡ ಕಡೆ ಬಂದು ಹೋಗಿದ್ದ ಅಂತ ಕಾಣಸ್ತದ.

ಹಾಂಗಾಗೇ 'ಹೆಸರಲ್ಲೇನಿದೆ?' (What's in a name?) ಅಂತ ಕೇಳಿದನೇ ಹೊರತು 'ಅಡ್ಡಹೆಸರಿನಲ್ಲೇನಿದೆ?' (What's in a surname?) ಅಂತ ಕೇಳಲಿಲ್ಲ. ಹಾಂಗೆನಾದರೂ ಕೇಳಿದ್ದರ ಅಂವಾ ವಾಪಸ್ ಹೋಗೋದರ ಬಗ್ಗೆ ಖಾತ್ರಿ ಇರಲಿಲ್ಲ. ನಮ್ಮ ಊರ ಕಡೆ ಬಂದು 'ಸರ್ ನೇಮ್' ಬಗ್ಗೆ ಮಾತಾಡಿದರೆ ಸರ್ (ತಲೆ) ಉಳಿತದ ಏನ್ರೀ??!!

ಅವಂಗೂ ಗೊತ್ತು. ಶಾಣ್ಯಾ. ನಮ್ಮ ಕಡೆ ಇರೋದಷ್ಟೂ ಅಡ್ಡಹೆಸರಿನಲ್ಲಿಯೇ ಹೊರತೂ ಹೆಸರಿನಲ್ಲಿ ಅಲ್ಲ ಅಂತ. Everything is in surname only, Sir. ಸರ್ ನೇಮಿನಲ್ಲೇ ಸರ್ವವೂ ಇರೋದು.

ಆಹಾ! ಆಹಾ! ಎಂತೆಂತಾ ಕಲರ್ಫುಲ್, ರಂಗ್ರಂಗೀನ್, ಡಿಸೈನರ್ ಡಿಸೈನರ್ ಅಡ್ಡಹೆಸರುಗಳು ನಮ್ಮ ಕಡೆ! ಅತೀ ಸ್ವಾರಸ್ಯಕರ ಮತ್ತು ವಿಶಿಷ್ಟ.

ನಮ್ಮ ಕಡೆಯ ವಿಶಿಷ್ಟ ಅಡ್ಡಹೆಸರುಗಳನ್ನು ಕೇಳಿ, ಗೌರವಿಸಿ, ಆನಂದಿಸಿ. ಅಪಹಾಸ್ಯ, ಕುಹಕ, ವ್ಯಂಗ್ಯ ಬೇಡ. at least ಅಡ್ಡಹೆಸರುಗಳ ಬಗ್ಗೆ. 

ಅಪಹಾಸ್ಯ, ಕುಹಕ, ವ್ಯಂಗ್ಯ ಯಾಕ ಬ್ಯಾಡ ಅಂದೆ ಅಂದ್ರ ನಮ್ಮ ಕಡೆ ಹುಡುಗಿ ಒಬ್ಬಳು, 'ಅಡ್ನಾಡಿ ಅಡ್ಡಹೆಸರಿನ ವರಾ ತೋರಿಸಿದರ ನಾ ಲಗ್ನಾ ಮಾಡಿಕೊಂಬಾಕಿ ಅಲ್ಲ!' ಅಂತ ಕಂಡೀಷನ್ ಒಗೆದು ಕೂತುಬಿಟ್ಟಾಳ. 

ಆ ಪುಣ್ಯಾತ್ಮಿಗೆ ನಾನೇ ಹೇಳಿದೆ, 'ನೋಡವಾ, ಅಡ್ಡಹೆಸರು, ಹೆಸರು ಅಂತ ಹೇಳಿಕೋತ್ತ ಕೂಡಬ್ಯಾಡ. ಅಡ್ಡಹೆಸರು is just ಅಡ್ಡಹೆಸರು. ಬೀಜ ಗಣಿತದಾಗ ಬೀಜ ಇದ್ದಂಗ. ತಿಳಿತs?'

'ಬೀಜ ಗಣಿತದಾಗ ಬೀಜ?? ಏನು ಹಾಂಗಂದ್ರ ಮಾಮಾ? ಏನೇನರೇ ಹುಚ್ಚು ಹುಚ್ಚು ಮಾತಾಡಬ್ಯಾಡ. ನಮ್ಮವ್ವನ, 'ಲಗ್ನಾ ಮಾಡಿಕೋ, ಲಗ್ನಾ ಮಾಡಿಕೋ,' ಇದೇ ಉಪದೇಶ ಕೇಳಿ ನನ್ನ ತಲಿ ಮೊದಲs ಕೆಟ್ಟದ. ನೀ ನನ್ನ ಕೆಟ್ಟು ಮೊಸರ ಗಡಿಗಿ ಆದ ತಲಿ ಕಡೆದು ಲಸ್ಸಿ ಮಾಡಿ ಇಡಬ್ಯಾಡ ಮಾರಾಯಾ!' ಅಂತ ವಾರ್ನಿಂಗ್ ಕೊಟ್ಟಳು. 

'ಬೀಜ ಗಣಿತದಾಗ ಬೀಜ ಅಂದ್ರ ಮತ್ತೇನೂ ಅಲ್ಲವಾ. ಬೀಜ ಗಣಿತದಾಗ ಬೀಜ ಅಂದ್ರ x, y, z ಅಂತ ಸಮೀಕರಣದಾಗ ಹೆಸರು ಇಡೋದಿಲ್ಲೇನವಾ? ಹಾಂಗೇ ಇವು ಅಡ್ಡಹೆಸರು. x, y, z ಇದ್ದಂಗ. ಅದಕ್ಯಾಕ ಅಷ್ಟು ತಲಿ ಕೆಡಿಸಿಕೋತ್ತಿ ನಮ್ಮವ್ವಾ?' ಅಂದು convince ಮಾಡಲಿಕ್ಕೆ ನೋಡಿದೆ.

'ಈಗ ಸಮೀರಣ ಅಂದ್ರ ಯಾರು. ನೀನೂ ನನಗ ವರ ಹುಡುಕ್ಲಿಕತ್ತಿಯೇನು? ನಮ್ಮವ್ವಾ ಎಲ್ಲರಿಗೂ ಅದೇ ಕೆಲಸ ಹಚ್ಯಾಳ. ಎಲ್ಲಿ ತನಕಾ ಅಂದ್ರ ನಮ್ಮ ಬೂಬು ಸುದಾ ಭಾಂಡೆ ತಿಕ್ಕೋದು ಬಿಟ್ಟು ನನಗ ವರಾ ಹುಡ್ಕೋತ್ತ ಊರೂರು ಅಡ್ಯಾಡ್ಲಿಕತ್ತದ. ಏ ನಿನ್ನ! ಹೋಗೋ!' ಅಂದಳು. 

ಹಾಪ್ ಹುಡುಗಿ! ಸಮೀಕರಣ ಅಂದರೆ ಸಮೀರಣ ಅನ್ನುತ್ತದೆ. 'ಕನ್ನಡ ಮೀಡಿಯಂ ಸಾಲಿಗೆ ಹಾಕವಾ,' ಅಂತ ಅವರ ಅವ್ವಗ ಬಡಕೊಂಡೆ. ಎಲ್ಲಿ ಕೇಳಬೇಕು? ಈಗ ಇತ್ಲಾಗ ಕನ್ನಡವೂ ಸರಿ ಬರೋದಿಲ್ಲಾ ಅತ್ಲಾಗ ಇಂಗ್ಲೀಷ್ ಸಹಾ ಸರಿ ಬರೋದಿಲ್ಲಾ. ಎಲ್ಲಾ ಅಷ್ಟೇ ಈ ಟಸ್ ಪುಸ್ ಇಂಗ್ಲೀಷ್ ಮೀಡಿಯಂ ಮಂದಿದು.

'ಸಮೀರಣ ಅಲ್ಲವಾ. ಸಮೀಕರಣ. ಅಂದ್ರ equation. ಅಡ್ಡಹೆಸರು ಅಂದ್ರ equation ದಾಗ x, y, z ಇದ್ದಂಗ. ಅದನ್ನೇ ಹೇಳಿದೆ. x, y, z ಬದಲಿ a,b,c  ಅಂತ ಬರೆದುಕೊಂಡು ಫಾರ್ಮುಲಾ ಹಚ್ಚಿದರೂ ನಡಿತದ. ತಿಳಿತೇನವಾ? ಅಡ್ಡಹೆಸರು ಒಮ್ಮೊಮ್ಮೆ ಅಡ್ನಾಡಿ ಅನ್ನಿಸಬಹುದು. ಹೆಸರೇ ಅಡ್ಡಹೆಸರು ನೋಡು. ಉದ್ದಹೆಸರು ಅಲ್ಲ ನೋಡು. ಹಾಂಗಾಗಿ ಅಡ್ಡಹೆಸರು ಒಮ್ಮೊಮ್ಮೆ ಅಡ್ನಾಡಿ ಅನ್ನಿಸಬಹದು. ಅಸಡ್ಡಾಳ ಅನ್ನಿಸಬಹದು. ಏನವಾ?' ಅಂತ ವಿವರಿಸಿದೆ. 

'ಮಾಮಾ, ಅದು ಬ್ಯಾರೆ. ಇದು ಬ್ಯಾರೆ. ಅಡ್ಡಹೆಸರು ಒಮ್ಮೆ ಬಿತ್ತು ಅಂದ್ರ ನಂತ್ರ ಏನೂ ಮಾಡಲಿಕ್ಕೆ ಬರಂಗಿಲ್ಲ. x, y, z ಬದಲಿ a,b,c ಹಚ್ಚಿದಷ್ಟು ಸರಳ ಅಲ್ಲ ಅದು. ತಿಳಿತs??' ಅಂತ ರಿವರ್ಸ್ ಬಾರಿಸಿದಳು. 

ತಡಿ ಇಕಿ ತಲಿಗೆ ಬರೋಬ್ಬರಿ ಶಿಕಾಕಾಯಿ ಸೋಪ್ ಹಚ್ಚಿಯೇ ಬ್ರೈನ್ ವಾಷ್ ಮಾಡಬೇಕು ಅಂತ ಹೊಸಾ ಧಾಟಿಯೊಳಗ ಮಾತಾಡ್ಲಿಕ್ಕೆ ಶುರು ಮಾಡಿದೆ. 

'ವರನ್ನ ಅಡ್ಡಹೆಸರು ನಿನಗ ಸೇರಿ ಬರಲಿಲ್ಲ ಅಂದ್ರ ಒಂದು ಕೆಲಸ ಮಾಡಬಹದು ನೋಡವಾ.......' ಅಂದೆ. 

'ಏನದು???'

'ಹೆಸರು ಬದಲಿ ಮಾಡಿಕೊಂಡಂಗ ಅಡ್ಡಹೆಸರನ್ನು ಬದಲಿ ಮಾಡಿಕೊಳ್ಳೋದು. ಹೆಂಗೂ ಲಗ್ನಾದ ಮ್ಯಾಲೆ ಅತ್ತಿ ಮನಿಯವರು ನಿನ್ನ ಹೆಸರು ಬದ್ಲಿ ಮಾಡ್ತಾರ. ನೀ ಒಂದು ಕಂಡೀಷನ್  ಒಗಿ ಬೇಕಾದ್ರ. 'ನೀವು ನಿಮ್ಮ ಅಡ್ಡಹೆಸರು ಚೇಂಜ್ ಮಾಡಿಕೊಂಬೋದಾದ್ರ ಮಾತ್ರ ನಾನು ನನ್ನ ಹೆಸರು ಚೇಂಜ್ ಮಾಡಿಕೊಳ್ಳಲಿಕ್ಕೆ ಒಪ್ಪಾಕಿ. ಇಲ್ಲಂದ್ರ ಇಲ್ಲ,' ಅಂತ ಖಡಕ್ ಆಗಿ ಹೇಳಿಬಿಡು. ಲಗ್ನನಂತೂ ಆಗಿಹೋಗಿರ್ತದ. ಏನೂ ಮಾಡಲಿಕ್ಕೆ ಬರಂಗಿಲ್ಲ. ಒಪ್ಪಿಕೊಂಡರೂ ಒಪ್ಪಿಕೊಂಡ್ರು. ಯಾರಿಗೆ ಗೊತ್ತು? ಮತ್ತ ಒಪ್ಪಬೇಕಾದವರು ಯಾರು? ನಿನ್ನ ಗಂಡ. ಆಗೋ ಭವಿಷ್ಯದ ಗಂಡ. ಅಡ್ನಾಡಿ ಅಡ್ಡಹೆಸರಿನ ಯಬಡ. ಹೊಸದಾಗಿ ಮದ್ವಿಯಾದ ಗಂಡು ಮುಂಡೆಗಂಡರಂತೂ ಮತ್ತೂ ಯಬಡ ಆಗಿಬಿಟ್ಟಿರತಾವ. ಖಬರೇ ಇರಂಗಿಲ್ಲ. ಹನಿಮೂನಿನ್ಯಾಗ ಹೆಂಡ್ತಿ ಹೇಳಿದ್ದಕ್ಕೆಲ್ಲ ಹೂಂ ಹೂಂ ಅಂತ ನಾಗಪ್ಪಾ ಪುಂಗಿಗೆ ತಲಿ ಅಲ್ಲಾಡಿಸಿದ ಹಾಂಗ ಅಲ್ಲಾಡಿಸಿಕೋತ್ತ ಕೂತಿರ್ತಾವ. ಭುಸ್ ಅನ್ನೋದು ಮರ್ತೇ ಹೋಗಿರ್ತದ. ಹನಿಮೂನ್ ಗಾಡ್ ಪ್ರಾಮಿಸ್ ಅಂತ ಹೇಳಿ ಪ್ರಾಮಿಸ್ ತೊಗೊಂಡು ಬಿಡು. ಒಮ್ಮೆ ಪ್ರಾಮಿಸ್ ಕೊಟ್ಟಾ ಅಂದ ಮ್ಯಾಲೆ ಮುಗೀತು. ಅಷ್ಟೇ. ನಂತ್ರ ನೀ ಹೇಳಿದ ಅಡ್ಡಹೆಸರಿಗೆ ಚೇಂಜ್ ಮಾಡಿಸಿಬಿಡ್ತಾನ. ಸಾಕಲ್ಲಾ? ಮತ್ತೇನು ಬೇಕವಾ? ಒಂದೆರೆಡು ತಲೆಮಾರು ಮುಗಿದ ಮ್ಯಾಲೆ ಹಳೇ ಅಡ್ನಾಡಿ ಅಡ್ಡಹೆಸರು ಯಾರಿಗೂ ನೆನಪ ಇರೋದಿಲ್ಲಾ. ಗೊತ್ತಾತ?' ಅಂತ ಫಿಟ್ಟಿಂಗ್ ಇಟ್ಟೆ. ಸಂಯುಕ್ತ ಕರ್ನಾಟಕ ಪೇಪರಿನ್ಯಾಗ ಬರೇ 'ಹೆಸರನಲ್ಲಿ ಬದಲಾವಣೆ' ಅಂತ ಓದಿ ಓದಿ ಸಾಕಾಗಿಬಿಟ್ಟದ. ನಮ್ಮ ಹುಡುಗಿ ಕಾಲದಾಗಾದರೂ 'ಅಡ್ಡಹೆಸರಿನಲ್ಲಿ ಬದಲಾವಣೆ' ಅಂತ ಬಂದ್ರೂ ಬರಬಹುದು. ನಾನೇ ನಿಂತು ಮಾಡಿಸಿಕೊಡತೇನಿ ಬೇಕಾದ್ರ. 

ಈ ಫಿಟ್ಟಿಂಗ್ ಕೇಳಿ ನಮ್ಮ ಹುಡುಗಿ ಯಾವದೋ ವಿಚಿತ್ರ ಮೂಡಿಗೆ ಹೋತು. ಐಡಿಯಾ ಲೈಕ್ ಆತು ಅಂತ ಕಾಣಿಸ್ತದ. 

'ಮಾಮಾ, ನಿನ್ನ ಐಡಿಯಾ ಏನೋ ಒಂದು ತರಾ ಮಜಾ ಅದ. ಆದ್ರ workout ಆಗ್ತದ ಅಂತಿಯೇನು? ಅಕಸ್ಮಾತ workout ಆದ್ರೂ ಯಾವ ಅಡ್ಡಹೆಸರಿಗೆ ಬದಲಾಯಿಸೋದು???' ಅಂದಳು. 

ಇಷ್ಟು reciprocate ಮಾಡಿದಳು ಅಂದ್ರ ಕಬ್ಬಿಣ ಕಾದದ. ಈಗೇ ಹತೋಡಾ ಹೊಡಿಬೇಕು. ಶೋಲೆ ಸಿನೇಮಾದ ಸೀನ್ ನೆನಪಿಲ್ಲೇನ್ರೀ? ಠಾಕೂರ್ ಏನಂತಾನ? ಲೋಹಾ ಗರಮ್ ಹೈ. ಹತೋಡಾ ಮಾರ್ ದೋ. ಯಾವ ಲೋಹಾ ಗರಂ ಇತ್ತೋ? ಯಾರು ಹತೋಡಾ ಹೊಡೆದರೋ? ನಂತರ ನೋಡಿದ್ರ ಅರ್ಧಾ ಕುಂಡಿ ಕಾಣೋ ಹಾಂಗ ಡ್ರೆಸ್ ಹಾಕಿಕೊಂಡು ಬಂದ ಹೆಲೆನ್ ಮಾತ್ರ 'ಮೆಹಬೂಬಾ ಮೆಹಬೂಬಾ' ಅಂತ ಮಸ್ತ ಕ್ಯಾಬರೆ ಡ್ಯಾನ್ಸ್ ಹೊಡೆದಳು ನೋಡ್ರಿ. 

ನಾನೂ 'ಮೆಹಬೂಬಾ ಮೆಹಬೂಬಾ' ಅಂತ ಡ್ಯಾನ್ಸ್ ಹೊಡೆಯೋಣ.... ಛೀ... ಛೀ ಅಲ್ಲಲ್ಲ..... ಹತೋಡಾ ಹೊಡೆಯೋಣ ಅಂತ ವಿಚಾರ ಮಾಡಿದೆ. 

'ಹಾಂಗ ಕೇಳವಾ ಮಗಳs! ಕೇಳು ಹಾಂಗ! ನಿನಗ ಯಾವ ತರಹದ ಅಡ್ಡಹೆಸರು ಬೇಕು? ಡಿಸೈನರ್ ಡಿಸೈನರ್ ಅಡ್ಡಹೆಸರು suggest ಮಾಡ್ತೇನಿ,' ಅಂದೆ. 

'ನೀನೇ ಹೇಳ ಮಾಮಾ. ಎಲ್ಲಾ ನಿನಗ ಗೊತ್ತಿದ್ದಂಗ ಅದ,' ಅಂದಳು. ಆಲಸಿ ಪರಮಿ. ಈಗಲೇ ಇಷ್ಟು ಆಲಸಿ. ಅತ್ತಿಮನಿಗೆ ಹೋದ ಮ್ಯಾಲೆ ಮುಂದೇನೋ?? 

'ಸಿಂಪಲ್ಲಾಗಿ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಅಂತ ಯಾವದಾದರೊಂದು ಅಡ್ಡಹೆಸರು select ಮಾಡಿಬಿಡು. ಇವೆಲ್ಲಾ universal ಅಡ್ಡಹೆಸರು. ನಮ್ಮ ದೇಶದ ಎಲ್ಲಾ ಕಡೆ ಇರ್ತಾವ. ಯಾವದು ಸೇರ್ತು ನಿನಗ?' ಅಂದೆ. 

'ಅಯ್ಯೋ ಮಾಮಾ!' ಅಂತ ಬೋಂಗಾ ಹೊಡೆದಳು. ನನಗ ಘಾಬ್ರಿ ಆತು. 

'ಯಾಕವಾ? ಏನಾತು? ಯಾವದೂ ಅಡ್ಡಹೆಸರು ಸೇರಲಿಲ್ಲ? ಇರಲಿ ತೊಗೋ. ಬ್ಯಾರೆ ವಿಚಾರ ಮಾಡೋಣಂತ. ಶಂಖಾ ಯಾಕ ಹೊಡಿತಿ?' ಅಂತ ಕೇಳಿದೆ. 

'ಏ, ಸುಮ್ಮ ಕೂಡ ಮಾಮಾ. ಏನೋ ಹೇಳ್ತಾನ ಅಂದ್ರ ಮತ್ತ ಹೋಗಿ ಹೋಗಿ ಅವೇ ಹಳೆ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಅನ್ಕೋತ್ತ,' ಅಂತ ನನಗs ಝಾಡಿಸಿದಳು. 

'ಯಾಕ!?' ಅಂತ ಕೇಳಿದೆ. 

'ಈ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಇವೆಲ್ಲಾ ಇಷ್ಟು ಕಾಮನ್ ಆಗಿಹೋಗ್ಯಾವಲ್ಲಾ ಅಂದ್ರ ಅಷ್ಟು ಕಾಮನ್ ಆಗಿಹೋಗ್ಯಾವ. ಅಡ್ನಾಡಿ ಅಡ್ಡಹೆಸರನ್ನ ಶರ್ಮಾ, ಗಿರ್ಮಾ, ಅದು, ಇದು ಅಂತ ಬದಲಿ ಮಾಡಿಕೊಂಡ್ರ ನಂತ್ರ ಭಾಳ ತ್ರಾಸು ಪಡೋದಾಗ್ತಾದ. ಗೊತ್ತದ ಏನು? ಹಾಂ??' ಅಂತ ಕೇಳಿದಳು. 

'ಏನ? ಏನ ತ್ರಾಸು ಪಡೋದಾಗ್ತದ? ಹಾಂ?' ಅಂತ ನಾನೂ ಸ್ವಲ್ಪ rise ಆಗಿಯೇ ಕೇಳಿದೆ. ಇನ್ನೂ ಚೋಟುದ್ದದ ಹುಡುಗಿ ನನಗs ಉಪದೇಶ ಮಾಡ್ಲಿಕತ್ತದ. ಅದೂ ಉಪದೇಶ ಸಹಸ್ರಿ ಮಾಡ್ಲಿಕತ್ತದ. 

'ಈ ಶರ್ಮಾ, ಗಿರ್ಮಾ, ಪಂಡಿತ್, ಗಿಂಡಿತ್, ಶಾಸ್ತ್ರಿ, ಇಸ್ತ್ರಿ, ಅದು ಇದು ಅಂತ ಅಡ್ಡಹೆಸರು ಬದಲು ಮಾಡಿಕೊಂಡ್ರ ಅಮೇರಿಕಾದಾಗ ಹಿಡಿದು ಚಡ್ಡಿ ಕಳಿತಾರಂತ. ಗೊತ್ತೇನು? ಮತ್ತ ನಾನೂ ಆ ಕಡೆನೇ ಹೋಗಿ ಸೆಟಲ್ ಆಗಬೇಕು ಅಂತ ಮಾಡೇನಿ ನೋಡು. ಎಲ್ಲರೆ ಮುಂದ ಮಾಡಿಕೊಳ್ಳೋ ನನ್ನ ಯಬಡ ಗಂಡ ನನ್ನ ಮಾತು ಕೇಳಿ ತನ್ನ ಅಸಡ್ಡಾಳ ಅಡ್ಡಹೆಸರನ್ನು ಇಂತಾ ಕಾಮನ್ ಅಡ್ಡಹೆಸರಿಗೆ ಬದಲು ಮಾಡಿಕೊಂಡಾ ಅಂದ್ರ ಅಷ್ಟೇ ಮತ್ತ. ಅಮೇರಿಕಾದಾಗ ಹಿಡಿದು ಬೆಂಡ್ ಎತ್ತತಾರ ನಮಗ. ಏ, ಹೋಗ ಮಾಮಾ. ಏನಂತ ಐಡಿಯಾ ಕೊಡ್ತೀ?' ಅಂತ ಏನೋ ವಿಚಿತ್ರವಾಗಿ ಹೇಳಿದಳು. 

ಅಡ್ಡಹೆಸರು ಬದಲಿ ಮಾಡಿಕೊಂಡವರನ್ನ ಅಮೇರಿಕಾದಾಗ ಹಿಡಿದು ಚಡ್ಡಿ ಕಳಿತಾರ? ಯಾಕ? ಚಡ್ಡಿ ಕಳಿಯೋದು ಅಂದ್ರ ನಮ್ಮ ಧಾರವಾಡ ಭಾಷೆಯಲ್ಲಿ ಕಷ್ಟಕ್ಕೆ ಸಿಲುಕಿಸೋದು, red hand ಆಗಿ ಹಿಡಿಯೋದು ಅಂತ ಕೂಡ ಅರ್ಥ ಇದೆ. ಗೊತ್ತಾಯ್ತಾ? ನನ್ಮಗಂದ್! ಚಡ್ಡಿ ಕಳೆಯೋದು ಅಂದ್ರೆ ಚಡ್ಡಿ ಬಿಚ್ಚೋದು ಅಲ್ಲಾ ಅಂತ ಎಲ್ಲರಿಗೂ ಗೊತ್ತಾಗ್ಬೇಕ್! ಅಷ್ಟೇ! ಅಂತ ಹುಚ್ಚಾ ವೆಂಕಟ್ ಶೈಲಿಯಲ್ಲಿ ಡೈಲಾಗ್ ಒಂದು ಮೂಡಿ ಬಂತು.

'ಅಲಲಲಾ, ಏನು ಮಾತಾಡ್ತೀಯವ್ವಾ? ಅಡ್ಡಹೆಸರು ಬದಲಿ ಮಾಡಿಕೊಂಡ್ರ ಅಮೇರಿಕಾದಾಗ ಏನು ಮಾಡ್ತಾರ?'  ಅಂತ ಕೇಳಿದೆ. 

'ನೋಡ ಮಾಮಾ. ನಮ್ಮ ಕಡೆ ಇರೋ ಜವಾರಿ ಅಡ್ನಾಡಿ ಅಡ್ಡಹೆಸರಿನ ಹುಚ್ಚಡೂಗಳು ಶರ್ಮಾ, ಪಂಡಿತ್, ಅದು ಇದು ಅಂತ ಅಡ್ಡಹೆಸರು ಬದಲಿ ಮಾಡಿಕೊಂಡು ಅಲ್ಲಿ ಹೋಗ್ತಾರ? ಹೋಗ್ತಾರೋ ಇಲ್ಲೋ?'

'ಹೂಂ ಹೋಗ್ತಾರವಾ. ಮುಂದ? ಏನು ತೊಂದ್ರಿ ಬರ್ತದ ಅದನ್ನು ಹೇಳು ಮಾರಾಳ.'

'ಅಲ್ಲೆ green card ಮಾಡಿಸೋವಾಗ ಎಲ್ಲಾ ಡಾಕ್ಯುಮೆಂಟ್ಸ್ ತೆಕ್ಕೊಂಡು ಕೂಡ್ತಾರ. ಯಾರು ಹೇಳು?'

'ಯಾರು???'

'ಮತ್ತ ಯಾರು ಅಂತ ಕೇಳ್ತಿಯಲ್ಲಾ ಮಾಮಾ?? ಅವರೇ ಅಮೇರಿಕಾದ green card ಕೊಡೋ ಆಫೀಸರ್ ಮಂದಿ,' ಅಂದಳು ನಮ್ಮ ಹುಡುಗಿ. 

'ಮುಂದ??'

'ಎಲ್ಲಾ ಡಿಟೇಲ್ ಆಗಿ ಚೆಕ್ ಮಾಡ್ತಾರ. ನೀವು ಶರ್ಮಾ, ಚರ್ಮಾ ಅಂತ ಕಾಮನ್ ಅಡ್ಡಹೆಸರು ಹೆಸರು ಇಟ್ಟುಗೊಂಡು ಹೋದರಂತೂ ಮುಗಿದs ಹೋತು. ರವಗಾಜ್ (magnifying glass) ಹಾಕಿಕೊಂಡು ನೋಡ್ತಾರ. 'ನೀವು ಏನೇನೋ ಅಡ್ನಾಡಿ ಅಡ್ಡಹೆಸರು ಇದ್ದವರು ಅದೆಂಗ ಶರ್ಮಾ, ಚರ್ಮಾ, ಪಂಡಿತ್, ಗಿಂಡಿತ್, ಅದು ಇದು ಆದ್ರೀ?? ಹಾಂ??' ಅಂತ ಫುಲ್ ತನಿಖಾ ಮಾಡ್ತಾರ. ಗೊತ್ತದೇನು???' ಅಂತ ಫುಲ್ ವಿವರಣೆ ಕೊಟ್ಟಳು. 

'ಮಾಡ್ಲೆಲ್ಲಾ. ಅದಕ್ಕೇನು? 'ಅದು ಹೀಂಗ್ರೀ ಸರ್.... ನಮ್ಮ ಅಡ್ಡೆಸರು ಮೊದಲು ಬ್ಯಾರೆ ಇತ್ತು. ಈಗ ಬ್ಯಾರೆ ಆದ. ಎಲ್ಲಾ ಕಾನೂನು ಬದ್ಧ ಮಾಡಿಸೇವಿ. ನೀವ ನೋಡ್ರಿ. ನಮ್ಮ ಕಡೆ 'ಸಂಯುಕ್ತ ಕರ್ನಾಟಕ' ಪೇಪರ್ ಒಳಗ ಹಾಕಿಸಿದ ನೋಟಿಸ್ ಕಾಪಿ ಸುದಾ ಅದ.. ' ಅಂತ ಹೇಳೋದು. ವಿವರಣೆ ಕೊಡೋದು. ಅದಕ್ಕೇನು ತಕರಾರು ತೆಗಿತಾರ ಅವರು? ಹೆಸರು, ಅಡ್ಡಹೆಸರು ಬದಲು ಮಾಡಿಕೊಂಡವರು ಏನು ಖೂನಿ ಮಾಡಿರ್ತಾರೋ ಅಥವಾ ಹೊಡೆದಾಟ ಮಾಡಿರ್ತಾರೋ? ಒಳ್ಳೆ ಮಾತಾತವಾ ನಿಂದು.....' ಅಂದೆ. ನಮ್ಮ ಮಂದಿ ಅಡ್ಡಹೆಸರು ಚೇಂಜ್ ಮಾಡಿಕೊಂಡ್ರ ಅಮೇರಿಕಾ ಮಂದಿಗೇನು? ಅವರಿಗ್ಯಾಕ ಚಿಂತಿ?

'ಮಾಮಾ, ಅದು ಹಾಂಗಲ್ಲಾ. ಅವರೇನು ಹೇಳ್ತಾರ ಅಂದ್ರ, 'ನೀವು ಶರ್ಮಾ ಅಂತ ಅಡ್ಡಹೆಸರು ಇರಬೇಕು ಅಂದ್ರ ಅಷ್ಟೂ ಕಾಗದಾ ಪತ್ರಾ ಅದೇ ಹೆಸರಿನ್ಯಾಗ ಮಾಡಿಕೊಂಡು ಬರ್ರಿ. ಇಲ್ಲಾ ನಿಮ್ಮ ಮೂಲ ದಾಖಲೆಯೊಳಗ ಏನು ಅಡ್ಡಹೆಸರು ಅದನೋ ಅದೇ ಹೆಸರಾಗ green card ತೊಗೋರಿ. ಏನು ಮಾಡವರು ನೀವು?' ಅಂತ ಆಖ್ರೀ ಸವಾಲ್ ಒಗಿತಾರ ಅವರು. ತಿಳಿತಾ??' ಅಂದಳು ಹುಡುಗಿ. 

'ಹಾಂಗss????'  ಅಂತ ಊದ್ದಕ ಎಳೆದೆ. 

'ಮತ್ತ? ಈ ಅಡ್ನಾಡಿ ಅಡ್ಡಹೆಸರಿನ ಮಂದಿಯ ಹಳೆ ಕಾಗದಾ ಪತ್ರಾ ಎಲ್ಲಾ ಅಡ್ನಾಡಿ ಅಡ್ಡಹೆಸರಿನ್ಯಾಗೇ ಇರ್ತಾವ. ಯಾವಾಗೋ ತಲಿ ಬಂದಾಗ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಅಂತ ಏನೇನೋ ಮಾಡಿಕೊಂಡಿರ್ತಾರ. ಈಗ ಅಮೇರಿಕಾದ ಆಫೀಸರ್ ಮಂದಿ, 'ಹೋಗಿ ಎಲ್ಲಾ ಕಾಗದಾ ಪತ್ರಾ ತಿದ್ದಿಸಿಕೊಂಡು, ಎಲ್ಲಾದ್ರಾಗೂ ನಿಮ್ಮ ಹೊಸಾ ಅಡ್ಡಹೆಸರು ಹಾಕಿಸಿಕೊಂಡು, attest ಮಾಡಿಸಿಕೊಂಡು ಬರ್ರಿ,' ಅಂದಾಗ ಸುಸ್ತಾಗಿ ಮಕ್ಕೊಂಡು ಬಿಡ್ತಾರ. ಗೊತ್ತದಯೇನು? ಹಾಂ??' ಅಂತ ಎಲ್ಲ ಡಿಟೈಲ್ ಆಗಿ ಹೇಳಿದಳು. ಚೋಟುದ್ದದ ಹುಡುಗಿಗೆ ಎಲ್ಲಾ ಗೊತ್ತದ ನೋಡ್ರಿ. 

'ಹೀಂಗೆಲ್ಲಾ ಇರ್ತದ ಅಂತಾತು. ಅಡ್ಡಹೆಸರು ಬದಲಾಯಿಸಿಕೊಂಡರೂ ಸುಖಾ ಇಲ್ಲ ಅಂತಾತು. ಸುಡುಗಾಡು ಅಮೇರಿಕಾ ಬಿಡು. ಇಲ್ಲೇ ಮಸ್ತ ಹಾಂಗಿದ್ರ. ಅಲ್ಲಾ? ಒಂದು ಕಡೆ ಶರ್ಮಾ, ಮತ್ತೊಂದು ಕಡೆ ಅಡ್ನಾಡಿ ಅಡ್ಡಹೆಸರು, ಮತ್ತೊಂದು ಕಡೆ ಬರೇ initials ಎಲ್ಲಾ ನಡಿತದ. ಅಲ್ಲಾ? ಇರಲಿ. ಇದೆಲ್ಲಾ ನಿನಗ ಹ್ಯಾಂಗ ಗೊತ್ತಾತವಾ?' ಅಂತ ಕೇಳಿದೆ. 

'ನನ್ನ ಗೆಳತಿ ಒಬ್ಬಾಕಿ ಜವಾರಿ ಶರ್ಮಾ ಅನ್ನೋವನ್ನ ಲಗ್ನಾ ಮಾಡಿಕೊಂಡಳು. ಅಕಿಗೂ ಅಡ್ನಾಡಿ ಅಡ್ಡಹೆಸರಿನ ಗಂಡ ಹರ್ಗೀಸ್ ಬ್ಯಾಡ ಅಂತಿತ್ತು. ಶರ್ಮಾ ಅಂತ ಮಾಡಿಸಿದಳು. ಹನಿಮೂನ್ ಪ್ರಾಮಿಸ್ ಮಾಡಿಬಿಟ್ಟಿದ್ದ ಅಕಿ ಗಂಡಾ ದೂಸರಾ ಮಾತಾಡದೇ ಶರ್ಮಾ ಅಂತ ಅಡ್ಡಹೆಸರು ಬದಲು ಮಾಡಿಸಿಕೊಂಡ. ಎಲ್ಲಾರ ಕಡೆ ತನ್ನ ಹೊಸಾ ಅಡ್ಡಹೆಸರು ಶರ್ಮಾ ಅಂದ. ಮಂದಿ ಕುಂಡಿ ತಟ್ಟಿಕೊಂಡು ನಕ್ಕರು. ಇಬ್ಬರೂ ಅಮೇರಿಕಾಕ್ಕ ಹೋದರು. ಅಲ್ಲೆ ಹೋದಮ್ಯಾಲೆ ಹೀಂಗಾತು. green card ಕೊಡೋ ಮುಂದ ಹಾಕ್ಕೊಂಡು ಸತಾಯಿಸಿಬಿಟ್ಟರು. ಸಾಕಾಗಿ ಹೋತು. ಹಾಳಾಗಿ ಹೋಗಲಿ ಶರ್ಮಾ ಅಂತ ಹೇಳಿ ತಮ್ಮ ಮೊದಲಿನ ಅಡ್ಡಹೆಸರಿಗೇ ಬಂದಾರ . ಕೆಟ್ಟ ಅಸಹ್ಯ ಅಡ್ಡಹೆಸರು. ಕೇಳಿದ್ರ ನನಗ ವಾಕರಕಿ ಬರ್ತದ. ಅದೇ ಹೆಸರಾಗs ಫೇಸ್ಬುಕ್ ಮ್ಯಾಲೆ ಕಂಡಳು. ನನಗ ಘಾತ ಆತು. 'ಯಾಕಲೇ ಹೀಂಗಾತು? ವಾಪಸ್ ಅಡ್ನಾಡಿ ಅಡ್ಡಹೆಸರಿಗೇ ವಾಪಸ್ ಬಂದಾ ನಿನ್ನ ಗಂಡಾ?' ಅಂತ ಕೇಳಿದೆ ಅಕಿ ಕಡೆ. ಕಣ್ಣೀರು ಹಾಕ್ಕೋತ್ತ ಎಲ್ಲಾ ಹೇಳಿದಳು ಮಾಮಾ. ಆವಾಗ ಎಲ್ಲಾ ಗೊತ್ತಾತು ನೋಡು,' ಅಂದಳು ನಮ್ಮ ಹುಡುಗಿ. 

'ಭಾಳ ಶಾಣ್ಯಾ ಇದ್ದಿ ಬಿಡವಾ. ಎಲ್ಲಾ ಈಗೇ ಮಾಹಿತಿ ಇಟ್ಟಿ. ನಿನಗ ಒಳ್ಳೇ ಅಡ್ಡಹೆಸರಿನ ಗಂಡನೇ ಸಿಗಲಿ ಅಂತ ದೇವರ ಕಡೆ ಪ್ರಾರ್ಥನಾ ಮಾಡತೇನಿ. ಆತೇನವಾ?' ಅಂದೆ. 

'ಅಷ್ಟು ಮಾಡು ಸಾಕು ಮಾಮಾ. ಅದು ಬಿಟ್ಟು ನನಗ ವರಾ ಗಿರಾ ಅಂತ ಹುಡುಕಲಿಕ್ಕೆ ಶುರು ಮಾಡಿದಿ ಅಂದ್ರ ನೋಡ್ಕೋ ಮತ್ತ!' ಅಂತ ಬೆರಳು ಹೀಂಗ ಹೀಂಗ ಹಿಂದ ಮುಂದ ಮಾಡಿ ವಾರ್ನಿಂಗ್ ಕೊಟ್ಟಳು. 

ಅಕಟಕಟಾ!

3 comments:

sunaath said...

ಅಡ್ಡ ಹೆಸರು ಬದಲಾಯಿಸಿಕೊಳ್ಳೋದು ಇಷ್ಟು ಖತರನಾಕ ಅದs ಅಂತ ಗೊತ್ತಿರಲಿಲ್ಲ ಬಿಡರಿ. ಅಲ್ಲಾ, ಅಮೇರಿಕಾಕ್ಕ ಹೋದ ಮ್ಯಾಲ, ಅಲ್ಲೇ ಅಡ್ಡಹೆಸರು ಚೇಂಜ್ ಮಾಡಿಕೊಂಡರ ಹ್ಯಾಂಗ? ಕ್ಲಿಂಟನ್, ಬುಶ್‍ಮನ್ ಇತ್ಯಾದಿ?
ನಕ್ಕೂ ನಕ್ಕೂ ಸಾಕಾತು!

Mahesh Hegade said...

ಅದು ವಿಚಾರ ಮಾಡಬೇಕಾಗಿದ್ದು. ಇಲ್ಲೇ ಅಡ್ಡಹೆಸರು ಚೇಂಜ್ ಮಾಡಿಸಿಬಿಡೋದು.

ಬೀಚಿ ಯಾವದೋ ಪುಸ್ತಕದಾಗ ಬರೆದಿದ್ದರು, ಸ್ವಾತಂತ್ರ ಬಂದ ಹೊಸದರಲ್ಲಿ ನಮ್ಮ ಮಂದಿಗೆ ಆ ಹುಚ್ಚು ಇತ್ತಂತ. ಶಾಮಾಚಾರಿ ಮಗ Samson ಅಂತ ಬದಲು ಮಾಡಿಕೊಂಡನಂತ. ತಳವಾಳಕರ ಅಂತ ಇದ್ದವ T.A.Walker ಅಂತ ಮಾಡಿಕೊಂಡ ಅಂತ.

ಕಾಮೆಂಟಿಗೆ ಧನ್ಯವಾದ.

A.K. Undenam said...


My friend "Manitirpan" had become "Mi..itirpan!"