Thursday, September 12, 2019

ಬನವಾಸಿ

'ಎಂಥಾ ಹುಡುಗರಪ್ಪಾ!? ಹಾಂ!? ಜನರಲ್ ನಾಲೆಜ್, ಕಾಮನ್ ಸೆನ್ಸ್ ಕೇಳಬ್ಯಾಡ. ಸರಳ ವಿಷಯ ಸಹಿತ ಗೊತ್ತಿರೋದಿಲ್ಲಾ! ಯಬಡ ಹುಡುಗರು!' ಅನ್ನುತ್ತ ಅಮ್ಮ ಎಂಟ್ರಿ ಕೊಟ್ಟರು.

೧೯೯೦ ರ ಸಮಯ. ಆಗ ಕೆಲವು ವರ್ಷಗಳ ಕಾಲ ನಮ್ಮ ತಾಯಿಯವರು ಮಾಸ್ತರಣಿ ಅವತಾರ ತಾಳಿದ್ದರು. ನಾನೂ ಊರು ಬಿಟ್ಟಿದ್ದೆ. ಊರಲ್ಲಿ ಇರುವ ತನಕ ಎಲ್ಲರಿಗೂ ನನ್ನನ್ನು ಸಂಬಾಳಿಸುವುದರಲ್ಲಿಯೇ ಸಮಯ ಸಾಕಾಗುತ್ತಿರಲಿಲ್ಲ. ನಾನು ಊರು ಬಿಟ್ಟಿದ್ದೇ ಬಿಟ್ಟಿದ್ದು ಅಮ್ಮ ಫುಲ್ ಫ್ರೀ.  ಅವರಿಗೆ ಮೊದಲಿಂದಲೂ ಸಮಾಜಸೇವೆ ಬಗ್ಗೆ ಆಸಕ್ತಿ. ಮಾಸ್ತರಿಕೆ ಕೂಡ ಇಷ್ಟದ ವಿಷಯವೇ. ಈಗ ಅವೆಲ್ಲ ತಲುಬುಗಳನ್ನು ತೀರಿಸಿಕೊಳ್ಳಲು ಸದವಕಾಶ.

ಹೋಗಿ ಹೋಗಿ ಅಂಧ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮಾಸ್ತರಣಿ ಆದರು. ಅದ್ಯಾರೋ ಮಹನೀಯರು ಒಂದಿಬ್ಬರು ಅಂಧ ವಿದ್ಯಾರ್ಥಿಗಳನ್ನು ಪರಿಚಯ ಮಾಡಿ ಕೊಟ್ಟಿದ್ದರು. ಕಾಲೇಜು ಓದುವ ವಿದ್ಯಾರ್ಥಿಗಳು. ಅವರಿಗೆ ಪಾಠ ಓದಿ ಹೇಳಬೇಕು. ಆ ಪಾಪದ ವಿದ್ಯಾರ್ಥಿಗಳು ಇವರು ಓದಿದ್ದನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಅವನ್ನೇ ಮತ್ತೆ ಮತ್ತೆ ಕೇಳಿ ಕೇಳಿ ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಕೊನೆಗೆ ಪರೀಕ್ಷೆಯಲ್ಲಿ ಅವರ ಪರವಾಗಿ ಅವರ ಸಹಾಯಕರು ಉತ್ತರ ಬರೆದುಕೊಡುತ್ತಿದ್ದರು. ನಿವೃತ್ತ ಶಿಕ್ಷಿಕಿಯಾಗಿದ್ದ ನಮ್ಮ ನೆರೆಯವರಾದ ಉಪಾಧ್ಯೆ ಟೀಚರ್ ಮತ್ತು ಅಮ್ಮ ಕೂಡಿ ಜಂಟಿ ಮಾಸ್ತರಿಕೆ ಮಾಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದರು.

ಅವತ್ತು ಏನಾಗಿತ್ತು ಅಂದರೆ...ಆ ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಮಾಡಿಸುತ್ತಿದ್ದರು. 'ಬನವಾಸಿ ಎಲ್ಲಿದೆ?' ಎಂದು ಪ್ರಶ್ನೆ ಕೇಳಿದ್ದಾರೆ. ಉತ್ತರ ಹೇಳಲು ಅವರು ತಡವಡಿಸಿದ್ದಾರೆ. ತಪ್ಪು ಉತ್ತರ ಹೇಳಿದ್ದಾರೆ.

'ಎಂಥಾ ಹುಡುಗುರೋ ನೀವು?! ಬನವಾಸಿ ನಮ್ಮ ಉತ್ತರ ಕನ್ನಡ ಜಿಲ್ಲಾದೊಳಗ ಇಲ್ಲೇನರೋ? ಅಷ್ಟೂ ಗೊತ್ತಿಲ್ಲ? ಹಿಂಗಾದ್ರ ಹೆಂಗ? ಎಷ್ಟು ಸರೆ ಹೇಳಿಕೊಟ್ಟೇನಿ? ಹಾಸ್ಟೆಲ್ಲಿನಾಗ ಕೂತು ಟೇಪ್ ರೆಕಾರ್ಡರಿನಾಗ ಪಾಠ ಕೇಳ್ತೀರೋ ಅಥವಾ ಸಿನಿಮಾ ಹಾಡು ಕೇಳಿಕೊತ್ತ ಕೂಡ್ತೀರೋ? ಹಾಂ!' ಅಂತ ಬರೋಬ್ಬರಿ ಮಾಸ್ತರಣಿ ಸ್ಟೈಲಿನಲ್ಲಿ ಬೆಂಡ್ ಎತ್ತಿದ್ದಾರೆ.

ಪಾಪ ಆ ಅಂಧ ವಿದ್ಯಾರ್ಥಿಗಳು ಟೇಪ್ ರೆಕಾರ್ಡರನ್ನು ಹಂಚಿಕೊಳ್ಳುತ್ತಿದ್ದರು. ಅದೂ ಯಾವುದೋ ಜಮಾನಾದ ಡಬ್ಬಾ ಟೇಪ್ ರೆಕಾರ್ಡರ್. ಸಮಾಜಸೇವೆಯ ಜೊತೆ ಕೊಂಚ ದಾನ ಧರ್ಮವೂ ಇರಲಿ ಎಂದು ಮನೆಯಲ್ಲಿ ಧೂಳು ತಿನ್ನುತ್ತಾ ಕೂತಿದ್ದ ಎರಡು ವಾಕ್ಮನ್ (ಸಣ್ಣ ಟೇಪ್ ರೆಕಾರ್ಡರ್) ಗಳನ್ನು ಅವರಿಗೆ ಕೊಟ್ಟಿದ್ದರು. ಅದೂ ಹೆಡ್ ಫೋನ್ ಇದ್ದವು. ನನ್ನ ಕಡೆ ಮೂರ್ನಾಲ್ಕು ವಾಕ್ಮನ್ ಇದ್ದವಲ್ಲ? ಅದು ವಾಕ್ಮನ್ ಜಮಾನಾ. ಅಮೇರಿಕಾದಲ್ಲಿದ್ದ ಅಣ್ಣ ಒಂದಾದಮೇಲೊಂದರಂತೆ, 'ಇದು ನಿನಗೆ!' ಅಂತ ಪ್ರೀತಿಯಿಂದ ತಂದುಕೊಟ್ಟಿದ್ದ ಸೋನಿ ವಾಕ್ಮನ್ನುಗಳು. ನನಗೂ ಎಲ್ಲರಂತೇ ಎರಡೇ ಕಿವಿ. ಹಾಗಾಗಿ ಒಂದೇ ವಾಕ್ಮನ್ ಸಾಕಾಗಿತ್ತು. ಇದ್ದುದರಲ್ಲಿಯೇ ಆಗಿನ ಕಾಲದ ಅತ್ಯಾಧುನಿಕ ಮಾಡೆಲ್ ಒಂದೆರೆಡನ್ನು ಇಟ್ಟುಕೊಂಡು ಉಳಿದವನ್ನು ಅಂಧರಿಬ್ಬರಿಗೆ ದಾನ ಮಾಡಿದ್ದಾಗಿತ್ತು. ಹಾಗಂತ ನೆನಪು. ದಾನ ಮಾಡಿದ್ದೆವೋ ಅಥವಾ ಉಪಯೋಗಿಸಿ ವಾಪಸ್ ಕೊಡಿ ಅಂದಿದ್ದೆವೋ ನೆನಪಿಲ್ಲ.

ವಾರಗಟ್ಟಲೆ, ವಾರಕ್ಕೆ ಘಂಟೆಗಟ್ಟಲೆ ಪಾಠ ಮಾಡಿ, ಅವನ್ನು ರೆಕಾರ್ಡ್ ಮಾಡಿಸಿ, ಕೇಳಲು ವಾಕ್ಮನ್ ಕೊಟ್ಟು, ಪಾಠಕ್ಕೆ ಬಂದವರಿಗೆ, ಅದೂ ಪಾಪ ಅಂಧರು ಅಂತ, ಜಾಸ್ತೀನೇ ಜುಲುಮೆ ಮಾಡಿ ತಿಂಡಿ ತೀರ್ಥ ಮಾಡಿಸಿಯಾದ ಮೇಲೂ ಈ ಹುಡುಗರು ಓದುವ ಈ ಛಂದಕ್ಕೆ ಅಮ್ಮ disappoint ಆಗಿದ್ದರು. ಇಷ್ಟೆಲ್ಲಾ ಮಾಡಿದ ಮೇಲೂ ಸರಳವಾದ ಪ್ರಶ್ನೆ 'ಬನವಾಸಿ ಎಲ್ಲಿದೆ?' ಎಂದು ಕೇಳಿದರೆ ಬೆಬ್ಬೆ ಬೆಬ್ಬೆ ಅಂದಾಗ ಆದ ದೊಡ್ಡ ಪ್ರಮಾಣದ disappointment.

ಹೀಗೆ ಪಾಠ ಮುಗಿಸಿ, ಬನವಾಸಿ ವಿಷಯದಲ್ಲಿ ತಲೆ ಕೆಡಿಸಿಕೊಂಡು, ಯಬಡ ವಿದ್ಯಾರ್ಥಿಗಳ ನಾಮಾರ್ಚನೆ ಮಾಡುತ್ತಾ ಅಮ್ಮ ಮನೆಗೆ ಬಂದರೆ ಅಲ್ಲಿ ನಾನಿದ್ದೆ. ಮೂರು ವಾರಗಳ ಸೆಮಿಸ್ಟರ್ ರಜೆಗೆಂದು ಮನೆಗೆ ಬಂದು ಸ್ಥಾಪಿತನಾಗಿದ್ದೆ.

'ಬನವಾಸಿನೇ? ಎಲ್ಲದ ಅದು? ನಿನಗ ಗೊತ್ತದಯೇನು??' ಎಂದು ಅಮ್ಮನನ್ನೇ ರೈಸ್ ಮಾಡಿಸಿದೆ.

'ಏ, ಏನಂತ ಕೇಳ್ತೀ? ನನಗ ಗೊತ್ತಿಲ್ಲೇನು? ನಮ್ಮ ಜಿಲ್ಲಾ ಉತ್ತರ ಕನ್ನಡದಾಗ ಅದ. ನಮ್ಮ ಸಿರ್ಸಿ ತಾಲೂಕಿನಾಗೇ ಅದ,' ಅಂದರು ಅಮ್ಮ.

ಬನವಾಸಿ ಸಿರ್ಸಿ ಸೀಮೆಯ ಹೆಮ್ಮೆಯ ತಾಣ. ಅಮ್ಮನ ಸೋದರಮಾವನ ಹೆಂಡತಿಯ ತವರೂರು ಬೇರೆ. ಅಮ್ಮನೇ ಒಮ್ಮೆ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು. ೧೯೮೩ ರಲ್ಲಿ. ವರದಾ ನದಿಯ ದಂಡೆ ಮೇಲಿರುವ ಸುಂದರ ಊರು. ದೊಡ್ಡ ಹಳ್ಳಿ. Very beautiful place.

'ಇದಕ್ಕೇ ನೋಡು ನೀ ಅಮ್ಮ ಅಲ್ಲ ಮಳ್ಳಮ್ಮ ಅನ್ನೋದು! ಬನವಾಸಿ ಉತ್ತರ ಕನ್ನಡ ಜಿಲ್ಲಾದಾಗ ಅದನೇ? ಬಾ ಇಲ್ಲೆ ಸ್ವಲ್ಪ,' ಎಂದು ಮನೆಯ ಹಾಲಿನ ಗೋಡೆಯ ಮೇಲೆ ಎಷ್ಟೋ ವರ್ಷಗಳಿಂದ ರಾರಾಜಿಸುತ್ತಿದ್ದ ಕರ್ನಾಟಕ ರಾಜ್ಯದ ಭೂಪಟದ ಹತ್ತಿರ ಕರೆದೆ. ಪಕ್ಕದಲ್ಲಿ ಭಾರತ ದೇಶದ ಭೂಪಟ.

'ನೋಡಿಲ್ಲಿ. ಬರೋಬ್ಬರಿ ನೋಡಿಕೋ. ಎಲ್ಲದ ಬನವಾಸಿ? ಶಿವಮೊಗ್ಗ ಜಿಲ್ಲಾದಾಗ ಅದ. ನೋಡು! ತಿಳೀತಾ? ಉತ್ತರ ಕನ್ನಡ ಅಲ್ಲ. ಶಿವಮೊಗ್ಗ. ಸಿರ್ಸಿ ಹತ್ತಿರ ಅಂದಕೂಡಲೇ ಎಲ್ಲಾ ಉತ್ತರ ಕನ್ನಡ ಅಂದುಬಿಟ್ಟರೆ ಹ್ಯಾಂಗ? ಹಾಂ!?' ಅಂದೆ. ಮನೆ ಮಂದಿಯನ್ನು ಕಿಚಾಯಿಸಿದಾಗ ಸಿಗುವ ಸುಖಕ್ಕೆ ಹೋಲಿಕೆ ಇಲ್ಲ. ಅದಕ್ಕೆ ಅದೇ ಸಾಟಿ.

ಅಮ್ಮ ಫುಲ್ ಥಂಡಾ. ಅವರಿಗೆ ನಂಬಲೇ ಸಾಧ್ಯವಾಗಲಿಲ್ಲ. ಹುಟ್ಟಿದಾಗಿಂದ ಬನವಾಸಿ ಅಂದರೆ ಉತ್ತರ ಕನ್ನಡ ಜಿಲ್ಲೆ ಅಂದುಕೊಂಡರೆ ಭೂಪಟದಲ್ಲಿ ಅದನ್ನು ಶಿವಮೊಗ್ಗ ಜಿಲ್ಲೆಯಲ್ಲಿ ನಮೂದಿಸಿಬಿಟ್ಟಿದ್ದಾರೆ.

ಬುದ್ಧಿ ಬಂದಾಗಿನಿಂದ ಆ ಭೂಪಟಗಳನ್ನೇ ನೋಡುತ್ತಾ ಬೆಳೆದಿದ್ದ ನನಗೆ ಆ ಭೂಪಟಗಳು ಫುಲ್ ಕಂಠಪಾಠ. ಕರ್ನಾಟಕದ ಭೂಪಟ ಅದರ ಪಕ್ಕದಲ್ಲಿದ್ದ ಭಾರತದ ಭೂಪಟ ಜೊತೆಗೆ ಮತ್ತೂ ವಿವರವಾಗಿದ್ದ ಬ್ರಿಜಬಾಸಿ ಅಟ್ಲಾಸ್ ಎಲ್ಲ ಫುಲ್ ಕಂಠಪಾಠ. ಅವನ್ನು ಉಪಯೋಗಿಸಿಕೊಂಡೇ ವಾದ, ವಿವಾದ, ವಿತಂಡವಾದ ಎಲ್ಲ ಮಾಡಿದ್ದೆ. ಮೂರನೇ ಕ್ಲಾಸಿನಲ್ಲಿ ಇದ್ದಾಗ ತಾತ್ಕಾಲಿಕ ಹೆಡ್ಮಾಸ್ಟರ್ ಅಂತ ಬಂದಿದ್ದ ಕುಲಕರ್ಣಿ (ಅವರ ಹೆಸರು ಎಂದು ನೆನಪು) ಸರ್ ಅವರ ತಪ್ಪುಗಳನ್ನೇ ತಿದ್ದಿದ್ದೆ. ಆಸ್ಸಾಮಿನ ರಾಜಧಾನಿ ಗೌಹಾತಿ ಅಂದಿದ್ದರು. ತಪ್ಪು, ಅದು ದಿಸ್ಪುರ್ ಎಂದು ತೋರಿಸಿದ್ದೆ. ಪಾಕಿಸ್ತಾನದ ರಾಜಧಾನಿ ರಾವಲಪಿಂಡಿ ಎಂದು ಹಳೆಯ ಮಾಹಿತಿ ಕೊಟ್ಟಿದ್ದರು. ನಿಮ್ಮ ಪಿಂಡ ಎಂದು ಮನಸಿನಲ್ಲೇ ಅಂದುಕೊಂಡು ಪಾಕಿಸ್ತಾನದ ರಾಜಧಾನಿ ಯಾವ ಪಿಂಡ ಅಥವಾ ಪಿಂಡಿ ಅಲ್ಲ ಇಸ್ಲಾಮಾಬಾದ್ ಎಂದು ಹೇಳಿದ್ದೆ. ಕುಲಕರ್ಣಿ ಸರ್ ಅವರದ್ದು ದೊಡ್ಡ ಮನಸ್ಸು. ತಪ್ಪು ಒಪ್ಪಿಕೊಂಡಿದ್ದರು. ಪುಣ್ಯಕ್ಕೆ ಅಟ್ಲಾಸ್ ಕೇಳಿ ತೆಗೆದುಕೊಂಡು ಹೋಗಿ ಗಾಯಬ್ ಮಾಡಿರಲಿಲ್ಲ. ಆದರೆ ಬ್ಯಾಂಕ್ ನೌಕರಿ ಸಿಕ್ಕಿತು ಅಂತ ಮಾಸ್ತರಿಕೆ ಬಿಟ್ಟು ಗಾಯಬ್ ಆಗಿಬಿಟ್ಟರು.

ಮುಂದೊಮ್ಮೆ ಬೇರೆ ಮಾಸ್ತರರೊಬ್ಬರು ರೀಡರ್ಸ್ ಡೈಜೆಸ್ಟ್ ಸಂಚಿಕೆಯೊಂದನ್ನು ಮಾಯ ಮಾಡಿದ್ದರು. ಎಲ್ಲಾ ತಪ್ಪು ನನ್ನದೇ. ದೊಡ್ಡದಾಗಿ ಸ್ಕೋಪ್ ತೆಗೆದುಕೊಳ್ಳಲು ರೀಡರ್ಸ್ ಡೈಜೆಸ್ಟ್ ನಲ್ಲಿ ಬಂದಿದ್ದ ವಿಶೇಷ ಮಾಹಿತಿಯನ್ನು ಅವರಿಗೆ ತೋರಿಸಿದ್ದೆ. 'ಓದಿ ಕೊಡ್ತೇನಾ. ಓಕೆ??' ಅಂದು ತೆಗೆದುಕೊಂಡು ಹೋದವರು ತಾವೂ ಮಾಯವಾಗಿ ಪತ್ರಿಕೆಯನ್ನೂ ಮಾಯ ಮಾಡಿಬಿಟ್ಟರು. ರೀಡರ್ಸ್ ಡೈಜೆಸ್ಟ್ ಪತ್ರಿಕೆಯನ್ನು ಪ್ರಾಣಕ್ಕಿಂತಲೂ ಜತನವಾಗಿ ಕಾದಿಟ್ಟುಕೊಳ್ಳುತ್ತಿದ್ದ ತಂದೆಯವರು ಹುಡುಕಿ ಹುಡುಕಿ ಸುಸ್ತಾದರು. ನಾನು ಮುಗುಮ್ಮಾಗಿದ್ದೆ. ಕಳೆದುಹೋಗಲು ನಾನೇ ಕಾರಣ ಎಂದು ತಿಳಿದಿದ್ದರೆ ಬೈಯುತ್ತಿರಲಿಲ್ಲ ಆದರೆ ನನ್ನ ಬೇಜವಾಬ್ದಾರಿ ಬಗ್ಗೆ ಅವರಿಗೆ ಆಗಬಹುದಾಗಿದ್ದ ನೋವು ನನಗಾಗಬಹುದಾಗಿದ್ದಂತಹ ಯಾವುದೇ ನೋವಿಗಿಂತ ದೊಡ್ಡದಾಗಿತ್ತು. ಅದಕ್ಕೇ ಸುಮಡಿಯೊಳಗೆ ಕೂತು ಬಚಾವಾಗಿದ್ದೆ. ಆ ಒಂದು ಸಂಚಿಕೆ ಮಿಸ್ಸಾದ ಅಗಲಿಕೆಯ ನೋವು ಅವರನ್ನು ತುಂಬಾ ಕಾಡಿತ್ತು. ೧೯೫೫ ರಿಂದ ಹಿಡಿದು ಸತತವಾಗಿ ರೀಡರ್ಸ್ ಡೈಜೆಸ್ಟ್ ಚಂದಾದಾರರು ಅವರು. ಮತ್ತೆ ಎಲ್ಲವನ್ನೂ ಸಂಗ್ರಹಿಸಿ ಜತನದಿಂದ ಕಾಪಿಟ್ಟುಕೊಳ್ಳುವ ದೊಡ್ಡ ಪ್ರಮಾಣದ ಶಿಸ್ತಿನ ಮಂದಿ. Anyway...back to ಬನವಾಸಿ.

'ಹ್ಮ್! ಬನವಾಸಿ ಶಿವಮೊಗ್ಗಾ ಜಿಲ್ಲಾದಾಗ ಬರ್ತದ ಅಂತಾತು. ಗೊತ್ತೇ ಇರಲಿಲ್ಲ ನೋಡು. ಹೋಗಿ ಆ ಹುಡುಗುರಿಗೆ ಬರೋಬ್ಬರಿ ಹೇಳಬೇಕು. ಇಲ್ಲಂದ್ರ ನಾ ಈಗ ಉತ್ತರ ಕನ್ನಡ ಅಂತ ಹೇಳಿ ಬಂದೇನಿ. ಅದನ್ನೇ ಬರೆದು ಮಾರ್ಕ್ಸ್ ಕಳೆದುಕೊಂಡಾವು ಪಾಪ. ಮೊದಲೇ ಕುರುಡರು. ಮಾರ್ಕ್ಸ್ ಕಮ್ಮಿ ಬೀಳ್ತಾವ. ಉತ್ತರ ಬರೆಯುವವರು ಸರಿ ಬರೆಯೋದಿಲ್ಲರೀ ಅಂತ ಅಳ್ತಾವ. ಮುಂದಿನ ಕ್ಲಾಸಿನಾಗ ಬರೋಬ್ಬರಿ ಹೇಳಿ ಕಳಿಸ್ತೇನಿ,' ಅನ್ನುತ್ತ ಕಳಚಿಕೊಂಡರು ಅಮ್ಮ. ಸಾವಿರ ಕೆಲಸ ಅವರಿಗೆ. ನಾ ರಜೆಗೆ ಬಂದಾಗ ಕೆಲಸ ಜಾಸ್ತಿನೇ. ಯಾಕೆಂದ್ರೆ ನಾವು ಯಾವ ಕೆಲಸವನ್ನೂ ಮಾಡದೇ ಕೇವಲ ಮಸ್ತಿ ಮಾಡಲಿಕ್ಕೆ ರಜೆಗೆ ಬಂದವರು.

ನಮ್ಮ ಕೀರಿಟಕ್ಕೆ ಮತ್ತೊಂದು ಗರಿ. ಉಪಯೋಗಿಲ್ಲದ ಗರಿ. ಆಗಿನ ಕಾಲದಲ್ಲಿ ಜನರಲ್ ನಾಲೆಜ್ ಅನ್ನುವುದು ಒಂದು ತರಹದ ಹೆಮ್ಮೆ. ಉಳಿದವರಿಗೆ ಗೊತ್ತಿಲ್ಲದ ಏನಾದರೂ ಒಂದು ಸಣ್ಣ ವಿಷಯ ಗೊತ್ತಿದ್ದುಬಿಟ್ಟರೆ ಅದು ಜನರಲ್ ನಾಲೆಜ್ ಅನ್ನುವ ಭ್ರಮೆ. ತಪ್ಪು ಅಭಿಪ್ರಾಯ. ಆಗಿನ ಕಾಲದಲ್ಲಿ ಜನರಲ್ ನಾಲೇಜಿಗೆ ಸಿಕ್ಕಾಪಟ್ಟೆ ಒತ್ತು ಕೊಡುತ್ತಿದ್ದರು. ಅದಕ್ಕಾಗಿಯೇ ದಿನ ಪತ್ರಿಕೆ ಓದಲು ಹೇಳುತ್ತಿದ್ದರು. ಉಪಯುಕ್ತ ಮಾಹಿತಿಗಳನ್ನು ಶೇಖರಿಸಿಟ್ಟುಕೊಳ್ಳಲು ಹೇಳುತ್ತಿದ್ದರು. ಬೇಕಾದ ಮಾಹಿತಿ ಪಟ್ಟಂತ ಸಿಗಲು ಆಗ ಗೂಗಲ್, ಇಂಟರ್ನೆಟ್ ಇರಲಿಲ್ಲ ನೋಡಿ. ಅವೆಲ್ಲಾ ಹೋಗಲಿ. ಬೇಕಾದ ಪುಸ್ತಕಗಳೇ ಸಿಗುತ್ತಿರಲಿಲ್ಲ. ವಿದೇಶದಲ್ಲಿದ್ದ ಬಂಧುಗಳಿಂದ ಕಾಡಿ ಬೇಡಿ ಪುಸ್ತಕ ತರಿಸಿಕೊಂಡರೆ ಅವನ್ನು ದೇಸಿ ಪರಿಚಿತರಿಂದ ಕಾದಿಟ್ಟುಕೊಳ್ಳುವುದು ಕಷ್ಟ. ಒಮ್ಮೆ ಓದಲಿಕ್ಕೆಂದು ತೆಗೆದುಕೊಂಡು ಹೋಗಿ, ಅನೇಕ ಪುಸ್ತಕಗಳು ವಾಪಸ್ ಬರದೇ, ಕೊಟ್ಟು ಮಂಗ್ಯಾ ಆದ ತಂದೆಯವರ ಕಹಿ ಅನುಭವಗಳು ಸಾಕಷ್ಟಿದ್ದವು.

ಮುಂದೆ ಆ ಅಂಧ ವಿದ್ಯಾರ್ಥಿಗಳು ಏನಾದರೋ ಗೊತ್ತಿಲ್ಲ. ಅವರು ಹೋದ ಮೇಲೆ ಮುಂದಿನ ಬ್ಯಾಚ್ ಬಂತು. ಮತ್ತೇ ಅದೇ ರೀತಿಯ ಪಾಠ ಪ್ರವಚನ ಜೊತೆಗೆ ತಿಂಡಿ ತೀರ್ಥದ ಆತಿಥ್ಯ ಎಲ್ಲ ನಡೆದಿತ್ತು. ಸುಮಾರು ವರ್ಷ ಅಮ್ಮನ ಸಮಾಜಸೇವೆ ಹೀಗೆ ನಡೆದಿತ್ತು.

ಈಗ ಕೆಲವು ವರ್ಷಗಳ ಹಿಂದೆ ಏನೋ ನೋಡುತ್ತಿದ್ದಾಗ ಇಂಟರ್ನೆಟ್ ಮೇಲೆ ಬನವಾಸಿ ನೋಡಿದೆ. ಈಗ ಶಾಕ್ ಆಗುವ ಬಾರಿ ನನ್ನದು. ನೋಡಿದರೆ ಬನವಾಸಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಇದೆ! ಸಿರ್ಸಿ ತಾಲೂಕಿನಲ್ಲೇ ಇದೆ! ಅಕಟಕಟಾ! ಇದೇಗೆ ಹೀಗಾಯಿತು?

ನಂತರ ಹೊಳೆಯಿತು. ಭೂಪಟಗಳಿಗೆ ಇರುವ ಜಾಗದ ಇತಿಮಿತಿಗಳಲ್ಲಿ ಎಲ್ಲ ಮಾಹಿತಿ ತೋರಿಸುವುದು ಕಷ್ಟ. ಬನವಾಸಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಸರಹದ್ದಿನಲ್ಲಿಇದೆ. ಭೂಪಟದವರು ಅದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಮೂದಿಸಿದ್ದಾರೆ. ಹಾಗಾದರೂ ಸ್ಥಳವನ್ನು ಸೂಚಿಸುವ ಬಿಂದು ಉತ್ತರ ಕನ್ನಡದಲ್ಲಿ ಇರಬೇಕಿತ್ತು. ಹಾಗಾದರೂ ಸಾಕಿತ್ತು. confusion  ಆಗುತ್ತಿರಲಿಲ್ಲ. ಅದೇನಾಗಿತ್ತೋ ಗೊತ್ತಿಲ್ಲ. ಮೊದಲಿಂದಲೂ ಬನವಾಸಿ ಶಿವಮೊಗ್ಗ ಜಿಲ್ಲೆಯಲ್ಲಿದೆ ಅನ್ನುವ ತಪ್ಪು ಕಲ್ಪನೆ ನನ್ನ ತಲೆಯಲ್ಲಿ ಕೂತಿತ್ತು. ಅದು ಅಲ್ಲಿಂದ ಎಲ್ಲೆಲ್ಲೋ ಪಸರಿಸಿಬಿಟ್ಟಿತ್ತು.

ಆ ಅಂಧ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಬನವಾಸಿ ಎಲ್ಲಿದೆ ಎನ್ನುವ ಪ್ರಶ್ನೆ ಬಂದಿತ್ತೋ ಏನೋ? ಪಾಪದ ಅವು ಏನು ಉತ್ತರ ಬರೆದವೋ ಏನೋ? ಗೊತ್ತಿಲ್ಲ. ಶಿವಮೊಗ್ಗ ಅಂತ ಬರೆದು ಮಂಗ್ಯಾ ಆಗಿ ಮಾರ್ಕ್ಸ್ ಕಳೆದುಕೊಂಡರೆ ಆ ಪಾಪ ನಮಗೂ ಮುಟ್ಟುತ್ತದೆ. ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಹೇಗೆ? ಮತ್ತೆ ಹೇಗೆ? ಕೊಂಚ ದಾನ ಧರ್ಮ ಮಾಡಿ. ಮನೆ ಕಡೆಯಿಂದ ಅಂಧರ ಸಂಸ್ಥೆಗಳಿಗೆ ದಾನ ಧರ್ಮ ಸಂದಾಯವಾಗುತ್ತಿರುತ್ತದೆ. ಅದರಲ್ಲೇ ಎಲ್ಲ ಬಾರಾ ಖೂನ್ ಮಾಫ್ ಮಾಡಿ ಎಂದು ಬೇಡಿಕೊಳ್ಳಬೇಕು.

'ಅಂಕುಶವಿಟ್ಟರೂ ನನ್ನ ಮನಸ್ಸು ನೆನೆಯುವುದು ಬನವಾಸಿಯನ್ನೇ,' ಎಂದು ಆದಿಕವಿ ಪಂಪ ಹೇಳಿಕೊಂಡನಂತೆ. ನಮಗೂ ಆಗಾಗ ಬನವಾಸಿ ನೆನಪಾಗುತ್ತದೆ. ಅದರಲ್ಲೂ ಇಂಟರ್ನೆಟ್ ಮೇಲೆ ವಿಷಯ ಹುಡುಕುವಾಗ ಮುದ್ದಾಂ ನೆನಪಾಗುತ್ತದೆ. ಹಿಂದೆಂದೋ ಆಗಿಹೋದ ಈ ಜನರಲ್ ನಾಲೆಜ್ ಲಫಡಾ ನೆನಪಾಗುತ್ತದೆ.

ಬನವಾಸಿಯ ಮಹತ್ವ ಬಹಳ. ಕದಂಬರ ರಾಜ ಮಯೂರ ವರ್ಮ ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡ. ಯಜ್ಞಯಾಗಾದಿಗಳನ್ನು ಮಾಡಲು ಬ್ರಾಹ್ಮಣರು ಬೇಕೆಂದು ಉತ್ತರ ಭಾರತದಲ್ಲಿ ನೆಲೆಸಿದ್ದ ಬ್ರಾಹ್ಮಣರನ್ನು ಕರೆತಂದ. ಅಲ್ಲಿಂದ ಬಂದ ಬ್ರಾಹ್ಮಣರೇ ಇಂದಿನ ಹವ್ಯಕ ಬ್ರಾಹ್ಮಣರ, ಅಂದರೆ ನಮ್ಮ ಸಮುದಾಯದ, ಮೂಲ ವಂಶಜರು ಅಂತ ಐತಿಹ್ಯವಿದೆ. ಮಯೂರ ವರ್ಮ ಬನವಾಸಿಯಲ್ಲಿ ನೆಲೆಸದೇ ಹೋಗಿದ್ದರೆ, ಉತ್ತರದಿಂದ ಬ್ರಾಹ್ಮಣರನ್ನು ಆಮದು ಮಾಡಿಕೊಳ್ಳದೇ ಹೋಗಿದ್ದರೆ ನಾವೆಲ್ಲಾ ಇವತ್ತು ಎಲ್ಲಿರುತ್ತಿದ್ದೆವೋ? ದೇವರಿಗೇ ಗೊತ್ತು. ಹಾಗಾಗಿ ನಮ್ಮ ಕುಲಕ್ಕೂ ಮೂಲವಾದ ಬನವಾಸಿ ಆಗಾಗ ನೆನಪಾಗುತ್ತಲೇ ಇರುತ್ತದೆ.

2 comments:

sunaath said...

ಮಹೇಶರೇ, ತಿಳಿಯದೇ ಮಾಡಿದ ತಪ್ಪಿಗೆ ಕ್ಷಮೆ ಇದ್ದೇ ಇರುತ್ತದೆ. ನನ್ನಿಂದಾದ ಒಂದು ತಪ್ಪನ್ನು ಹಾಗು ನಮ್ಮ ಗುರುಗಳಿಂದಾದ ಒಂದು ತಪ್ಪನ್ನು ಇಲ್ಲಿ ಹೇಳುತ್ತೇನೆ. ದಯವಿಟ್ಟು ಕ್ಷಮಿಸಿ:
(೧) ನಾನು ಆರನೆಯ ಇಯತ್ತೆಯಲ್ಲಿದ್ದಾಗ, ಯಾವುದೋ ಒಂದು ಡಬ್ಬಾ ಅಂಗಡಿಯಲ್ಲಿದ್ದಾಗ ‘ಭಗವದ್ಗೀತೆ’ಯ pocket book ಕೊಂಡುಕೊಂಡೆ. ಅದರಲ್ಲಿ ‘ಯದಾಯದಾಯ ಧರ್ಮಸ್ಯ..’ ಎನ್ನುವುದು ‘ಯಥಾಯಥಾಯ ಧರ್ಮಸ್ಯ..’ ಎಂದು ಮುದ್ರಿತವಾಗಿತ್ತು. ನಾನು ತರಗತಿಗೆ ಹೋದಾಗ ನಮ್ಮ ಗುರುಗಳು ತಾವು ಬರೆಯುತ್ತಿದ್ದ ಒಂದು ಲೇಖನದಲ್ಲಿ ಗೀತೆಯ ಈ ವಾಕ್ಯವನ್ನು ಉದ್ಧರಿಸುತ್ತ ‘ಯದಾಯದಾಯ...’ ಎಂದು ಸರಿಯಾಗಿಯೇ ಬರೆದಿದ್ದರು. ನಾನು, ‘ಪಾಪ! ಗುರುಗಳು ತಪ್ಪಾಗಿ ಬರೆದಿದ್ದಾರೆ’ ಎಂದುಕೊಂಡು ಅದನ್ನು ‘ಯಥಾಯಥಾಯ..’ ಎಂದು ‘ತಿದ್ದಿದೆ’! ಗುರುಗಳು ಬಂದು ನೋಡಿ, ‘ಇದನ್ನು ತಿದ್ದಿದವರು ಯಾರ?’ ಎಂದು ಗರ್ಜಿಸಿದರು. ನಾನು, ತುಂಬಾ ಖುಶಿಯಿಂದ, ‘ನಾನು, ಗುರೂಜಿ’ ಎಂದು ಉದ್ಗರಿಸಿದೆ. ಗುರುಗಳು ನನಗೆ ಸರಿಯಾದ ವಾಕ್ಯವನ್ನು ಹಾಗು ಅದರ ಅರ್ಥವನ್ನು ತಿಳಿಸಿ ಹೇಳಿದರೇ ಹೊರತು, ನನ್ನನ್ನು ಬೈಯಲಿಲ್ಲ. ಅವರಿಗೆ ನನ್ನ ಅನಂತ ವಂದನೆಗಳು.
(೨) ಇವರಿಗೆ ವಿರುದ್ಧವಾದ ಗುರುಗಳೊಬ್ಬರು ನಮ್ಮ ೯ನೆಯ ತರಗತಿಯ ಭೂಗೋಲದ ಗುರುಗಳಾಗಿದ್ದರು. ಅವರು ಅಮೇರಿಕಾದ ಪಾಠ ಹೇಳುತ್ತ, ನ್ಯೂಯಾರ್ಕ ಇದು ಅಮೇರಿಕಾದ ರಾಜಧಾನಿ ಎಂದು ಹೇಳಿದರು. ನಾನು innocently, `ಗುರೂಜಿ, ವಾಶಿಂಗ್ಟನ್ ಅಲ್ಲೇನ್ರಿ?’ ಎಂದು ಎದ್ದು ನಿಂತುಕೊಂಡು ಕೇಳಿದೆ. ಸಿಟ್ಟಿಗೆದ್ದ ಗುರುಗಳು, ‘ವಾಶಿಂಗ್ಟನ್ ಇರಬಹುದು, ಆದರೆ ನ್ಯೂಯಾರ್ಕವೇ ರಾಜಧಾನಿಯಂತೆ ಇದೆ’ ಎಂದು ಬೈದು ಹೇಳಿದರು. ನಾನು ಮುಖ ಕೆಳಗೆ ಹಾಕಿಕೊಂಡು ಕುಳಿತುಕೊಂಡೆ.

ಈ ಇಬ್ಬರು ಗುರುಗಳ ನಡುವೆ ಎಂಥಾ ವ್ಯತ್ಯಾಸ!

Mahesh Hegade said...

ವಿವೇಕಭರಿತ ತಮ್ಮ ಕಾಮೆಂಟಿಗೆ ಧನ್ಯವಾದಗಳು ಸರ್!