Friday, September 13, 2019

ಡ್ರಗ್ ಮಾಫಿಯಾಕ್ಕೆ ಮರ್ಮಾಘಾತ ಕೊಟ್ಟ ಅಮೇರಿಕಾದ DEA

ಅಮೇರಿಕಾದ ಮಾದಕ ವಸ್ತು ನಿಗ್ರಹ ದಳ (DEA - Drug Enforcement Agency) ಖುಷಿಯಲ್ಲಿದೆ. ಕೀನ್ಯಾ ಮೂಲದ ಮಾದಕ ದ್ರವ್ಯಗಳ ಕುಖ್ಯಾತ ಖದೀಮರಿಗೆ ದೊಡ್ಡ ಪ್ರಮಾಣದ ಶಿಕ್ಷೆಯಾಗಿದೆ. ಖತರ್ನಾಕ್ ಆಕಾಶಾ ಸಹೋದರರು ಮೂವತ್ತಕ್ಕೂ ಹೆಚ್ಚು ವರ್ಷಗಳ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿದ್ದಾರೆ.

ಈಗ ಸುಮಾರು ನಾಲ್ಕೈದು ವರ್ಷಗಳ ಹಿಂದೆಯೇ ಕೀನ್ಯಾದಲ್ಲಿ ದೊಡ್ಡ ಮಟ್ಟದ ಸಂಘಟಿತ ದಾಳಿ ಮಾಡಿತ್ತು ಅಮೇರಿಕಾದ DEA ತಂಡ. ಆಗ ಆಕಾಶಾ ಸಹೋದರರ ಜೊತೆ ಒಂದು ಮಹಾ ಇಂಟೆರೆಸ್ಟಿಂಗ್ ಸ್ಟಾರ್ ಜೋಡಿ ಕೂಡ ಸಿಕ್ಕಿಬಿದ್ದಿತ್ತು. ಅದೇ ಬಾಲಿವುಡ್ಡಿನ 'ಮಾದಕ ನಟಿ' ಖ್ಯಾತಿಯ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ವಿಕಿ ಗೋಸ್ವಾಮಿ. ಹೆಸರಿಗೆ ತಕ್ಕಂತೆ 'ಮಾದಕ ನಟಿ' ಮಾದಕ ವಸ್ತುಗಳ ಲಫಡಾದಲ್ಲಿ ಸಿಕ್ಕಾಕಿಕೊಂಡುಬಿದ್ದಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ.

ಮಮತಾ ಕುಲಕರ್ಣಿಯನ್ನು ಏನು ಮಾಡಿದರೋ ಗೊತ್ತಿಲ್ಲ. ಆದರೆ ಆಕೆಯ ಪತಿ ಗೋಸ್ವಾಮಿಯನ್ನು ಮಾತ್ರ ಉಳಿದ ಆರೋಪಿಗಳೊಂದಿಗೆ ಅಮೇರಿಕಾಕ್ಕೆ ಎಳೆದುಕೊಂಡು ಹೋದರು.

ಮುಂದೆ ಸುಮಾರು ವರ್ಷ ಕೇಸ್ ನಡೆದಿದೆ. ಒಂದು ಕಾಲದಲ್ಲಿ ಆಕಾಶಾ ಸಹೋದರರ ನಿಕಟವರ್ತಿಯಾಗಿದ್ದ ಗೋಸ್ವಾಮಿ ತನ್ನ ಹಳೆಯ ದೋಸ್ತುಗಳಿಗೆ Go ಎಂದು ಕೈಯೆತ್ತಿ ಸಂಪೂರ್ಣವಾಗಿ ಸರ್ಕಾರಿ ಸ್ವಾಮಿಯಾಗಿಬಿಟ್ಟಿದ್ದಾನೆ. ಮಾಫಿ ಸಾಕ್ಷಿದಾರನಾಗಿ ಆಕಾಶಾ ಸಹೋದರರ ಪೂರ್ತಿ ಭಾಂಡಾ ಬಿಚ್ಚಿಟ್ಟುಬಿಟ್ಟಿದ್ದಾನೆ. ಪುಣ್ಯಾತ್ಮನ ಹೇಳಿಕೆಗಳಿಂದಾಗಿ ಅರಿಭಯಂಕರ ಆಕಾಶಾ ಸಹೋದರರು ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವಂತಾಗಿದ್ದಾರೆ.

ಮಾಫಿ ಸಾಕ್ಷಿದಾರ ವಿಕಿ ಗೋಸ್ವಾಮಿಯ ಗತಿಯೇನಾಗುತ್ತದೋ? ಅವನಿಗೆ ಯಾವ ತರಹದ ಶಿಕ್ಷೆ ವಿಧಿಸುತ್ತಾರೋ? ಗೊತ್ತಿಲ್ಲ. ಆ ಮನುಷ್ಯ ಹಿಂದೊಮ್ಮೆ ಐದಾರು ವರ್ಷಗಳ ಕಾಲ ದುಬೈ ಜೈಲಿನಲ್ಲಿ ಸರ್ವಿಸ್ ಮಾಡಿ ಬಂದಿದ್ದಾನೆ. ಮತ್ತದೇ ಮಾದಕ ವಸ್ತುಗಳ ಕೇಸಿನಲ್ಲೇ. ದಾವೂದ್ ಇಬ್ರಾಹಿಂನ ಅವಕೃಪೆಗೆ ತುತ್ತಾದ. ಅದಕ್ಕಾಗಿ ಕಾರಸ್ಥಾನ ಮಾಡಿ ಅವನನ್ನು ಜೈಲಿಗೆ ಕಳಿಸಲಾಯಿತು ಎಂದು ಒಂದು ಸಿದ್ಧಾಂತ ಇದೆ. ಡ್ರಗ್ ಕಳ್ಳಸಾಗಾಣಿಕೆದಾರರ ಮೇಲೆ ಹೆಸರಿಗಾದರೂ (ನಾಮ್ ಕೆ ವಾಸ್ತೆ) ಕ್ರಮ ಕೈಗೊಳ್ಳಬೇಕಾಗಿತ್ತು. ಹಿಂದೂ ಧರ್ಮೀಯನನ್ನು ಬಕ್ರಾ ಮಾಡಿ ಕೊಲ್ಲಿ ರಾಷ್ಟ್ರಗಳಲ್ಲಿ ಹಣಿಯುವುದು ಸುಲಭ ಎಂದು ಇವನಿಗಿಂತ ನೂರು ಪಟ್ಟು ದೊಡ್ಡ ಖದೀಮರೆಲ್ಲರನ್ನೂ ಬಿಟ್ಟು ಈ 'ಬಡಪಾಯಿ'ಯನ್ನು ಜೈಲಿಗೆ ಅಟ್ಟಿತು ದುಬೈ ಸರ್ಕಾರ ಅನ್ನುವವರೂ ಇದ್ದಾರೆ.

ದುಬೈನಲ್ಲಿ ಜೈಲಿಗೆ ಹೋದ ಗೋಸ್ವಾಮಿ. ಅದೇ ಸಮಯದಲ್ಲಿ ಮಮತಾ ಕುಲಕರ್ಣಿ ಹಿಮಾಲಯಕ್ಕೆ ಹೋದಳಂತೆ. ಆಕೆಯೇ ಹೇಳಿಕೊಂಡಂತೆ, ಅಲ್ಲಿ ಭಯಂಕರ ತಪಸ್ಸು ಮಾಡಿ, ಆತ್ಮದ ಸಾಕ್ಷಾತ್ಕಾರ ಮಾಡಿಕೊಂಡು ವಾಪಸ್ ಬರುವ ತನಕ ಈ ಕಡೆ ದುಬೈನಲ್ಲಿ ವಿಕಿ ಗೋಸ್ವಾಮಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಮುಸ್ಲಿಂ ಆದರೆ ದುಬೈನಲ್ಲಿ ಜೈಲು ಶಿಕ್ಷೆ ಕಮ್ಮಿಯಾಗುತ್ತದೆ ಎಂದು ತಿಳಿದಿದ್ದ ಆತ ಹಾಗೆ ಮಾಡಿದ್ದರಲ್ಲಿ ದೊಡ್ಡ ಆಶ್ಚರ್ಯವೇನಿಲ್ಲ.

ಜೈಲಿನಿಂದ ಬಿಡುಗಡೆ ಹೊಂದಿದ ಗೋಸ್ವಾಮಿ ಮತ್ತು ಇತ್ತಕಡೆ ಹಿಮಾಲಯದಿಂದ ಏಕ್ದಂ ಸಾಧ್ವಿಯ ರೂಪದಲ್ಲಿ ಹಿಂತಿರುಗಿದ ಮಮತಾ ಕುಲಕರ್ಣಿ ಏನೋ ಒಂದು ತರಹದ ಶಾದಿ ಭಾಗ್ಯ ಮಾಡಿಕೊಂಡು ಆಫ್ರಿಕಾದ ಕೀನ್ಯಾ ದೇಶಕ್ಕೆ ಬಂದು ನೆಲೆಸಿದರು.

ಅಲ್ಲಿ ಆಗಲೇ ಆಕಾಶಾ ಸಹೋದರರು ದೊಡ್ಡ ಮಟ್ಟದ ಕುಖ್ಯಾತಿ ಗಳಿಸಿದ್ದರು. ಅವರ ವಿರೋಧ ಕಟ್ಟಿಕೊಂಡರೆ ಕಷ್ಟ ಎಂದು ತಿಳಿದು ಅವರೊಂದಿಗೆ ಮಾಂಡವಳಿ ಸಂಧಾನ ಮಾಡಿಕೊಂಡ ಗೋಸ್ವಾಮಿ ಡ್ರಗ್ ದಂಧೆಯನ್ನು ಮುಂದುವರೆಸಿದ. ಅವರಿಗೆ ಹೊಸ ಹೊಸ ಸಂಪರ್ಕಗಳನ್ನು ಮಾಡಿಸಿಕೊಟ್ಟ. ಭಾರತದ ಔಷಧಿ ಕಂಪನಿಯಿಂದ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಆಮದು ಮಾಡಿಕೊಂಡ. ಪಕ್ಕದ ಉಗಾಂಡಾ ದೇಶದ ಅಧ್ಯಕ್ಷನ ತಂಗಿಗೆ ದೊಡ್ಡ ಪ್ರಮಾಣದ ತಾಂಬೂಲ ಬಾಗಿನ ಕೊಟ್ಟು ಆಕೆಯನ್ನೂ ಒಳಗೆ ಹಾಕಿಕೊಂಡ. ಭಾರತದ ದೇಶದಿಂದ ದೊಡ್ಡ ಪ್ರಮಾಣದ ಎಪಿಡ್ರಿನ್ ಎಂಬ ರಾಸಾಯನಿಕ ಟನ್ನುಗಟ್ಟಲೆ ಬಂದು ಉಗಾಂಡಾದಲ್ಲಿ ಇಳಿಯಿತು. ರಾಷ್ಟ್ರಾಧ್ಯಕ್ಷನ ತಂಗಿ ತಾಂಬೂಲ ಉಗುಳಿ, ಪಿಚಕಾರಿ ಹಾರಿಸಿ ಪೆಕಪೆಕನೆ ನಕ್ಕಳು. ಏನಾದರೂ ಮಾಡಿಕೊಳ್ಳಿ. ಟೈಮಿಗೆ ಸರಿಯಾಗಿ ನನ್ನ ಪಾಲಿನ ತಾಂಬೂಲ ತಪ್ಪಿಸಬೇಡಿ ಎಂದು ಹೇಳಿದ ಮೇಡಂ ತನ್ನ ಅಭಯಹಸ್ತ ತೋರಿಸಿದಳು. ಡ್ರಗ್ ಉತ್ಪಾದನೆಗೆ ಗ್ರೀನ್ ಸಿಗ್ನಲ್ ಕೊಟ್ಟಳು. ಖತರ್ನಾಕ್ ಡ್ರಗ್ ಆಗಿರುವ ಮ್ಯಾನ್ಡ್ರಾಕ್ಸ್ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ನಡೆಯಿತು. ವಿಶ್ವದ ತುಂಬೆಲ್ಲಾ ಗೋಸ್ವಾಮಿ ಮತ್ತು ಆಕಾಶಾ ಸಹೋದರರು ಎಬ್ಬಿಸಿದ ಮಾದಕ ದ್ರವ್ಯಗಳ ಘಾಟೋ ಘಾಟು.

ಆಗ ಮುರಿದುಕೊಂಡು ಬಿತ್ತು ನೋಡಿ ಅಮೇರಿಕಾದ DEA. ಸೀದಾ ಹೋದವರೇ ಕೀನ್ಯಾದ ಆಧಿಕಾರಶಾಹಿಯ ತಲೆಗೆ ಬಂದೂಕಿಟ್ಟರು. 'ನಿಮ್ಮ ದೇಶದಲ್ಲಿ ಇಂತಿಂತಹ ಕೇಡಿಗಳಿದ್ದಾರೆ. ಅವರು ನಮಗೆ ಬೇಕು. ಬೇಕೇಬೇಕು. ಸಹಕರಿಸಿದರೆ ಒಳ್ಳೆಯದು. ಇಲ್ಲವಾದರೆ ಗೊತ್ತಲ್ಲ? ನಾವು ಯಾರೆಂದು?? ನಾವು DEA. ಎಲ್ಲಿ ಹೇಗೆ ತಟ್ಟಿದರೆ ಏನು ಹೇಗೆ ಉದುರುತ್ತದೆ ಎಂದು ನಮಗೆ ಬರೋಬ್ಬರಿ ಗೊತ್ತಿದೆ!' ಎಂದು ಧಮ್ಕಿ ಹಾಕಿದರು. ಡ್ರಗ್ ಮಾಫಿಯಾದಿಂದ ಸಾಕಷ್ಟು ಸತ್ಯನಾರಾಯಣ ಪ್ರಸಾದ ಸ್ವೀಕರಿಸಿದ್ದರೂ ಕೀನ್ಯಾದ ಪೊಲೀಸರಿಗೆ ಸಹಕರಿಸುವುದನ್ನು ಬಿಟ್ಟು ಬೇರೆ ಗತಿಯಿರಲಿಲ್ಲ.

೨೦೧೫ ರಲ್ಲಿ ಆದ ದೊಡ್ಡ ಪ್ರಮಾಣದ ದಾಳಿಯಲ್ಲಿ ಆಕಾಶಾ ಸಹೋದರರನ್ನು ಮತ್ತು ಗೋಸ್ವಾಮಿಯನ್ನು ಎತ್ತಾಕಿಕೊಂಡ DEA, ಸ್ಪೆಷಲ್ ವಿಮಾನದಲ್ಲಿ, ಎಲ್ಲ ಖದೀಮರನ್ನು ಅಮೇರಿಕಾಗೆ ಸಾಗಿಸಿತ್ತು. ಈಗ ಕೇಸ್ ಮುಗಿದಿದೆ. ಬಕ್ತಾಶ್ ಮತ್ತು ಇಬ್ರಾಹಿಂ ಎನ್ನುವ ಆಕಾಶಾ ಸಹೋದರರು ಖಾಯಮ್ಮಾಗಿ ಅಮೇರಿಕಾದ ಜೈಲು ಸೇರಿದ್ದಾರೆ. ಗೋಸ್ವಾಮಿ ತನ್ನ ಗತಿಯೇನೋ ಎಂದು ಎದುರು ನೋಡುತ್ತಿದ್ದಾನೆ. ಮಾಫಿ ಸಾಕ್ಷಿದಾರನಾದ ಕಾರಣ ಕಮ್ಮಿ ಶಿಕ್ಷೆ ಕೊಡಬಹುದು. ಯಾರಿಗೆ ಗೊತ್ತು, ನಸೀಬ್ ಛಲೋ ಇದ್ದರೆ ಏನೂ ಶಿಕ್ಷೆ ಕೊಡದೆ ಬಿಟ್ಟು ಕಳಿಸಿದರೂ ಆಶ್ಚರ್ಯವಿಲ್ಲ.

ಈ ಮಧ್ಯೆ ಮಮತಾ ಕುಲಕರ್ಣಿ ಎಲ್ಲಿ? ಆಕೆಯ ಸುದ್ದಿಯೇ ಇಲ್ಲ. ಆಕೆ ಮುಂಬೈಗೆ ಬರುವಂತಿಲ್ಲ. ಅಲ್ಲಿ ಆಕೆಯ ಮೇಲೆ ವಾರಂಟ್ ಇದೆ. DEA ಕೊಟ್ಟ ಮಾಹಿತಿ ಪ್ರಕಾರ ಮಹಾರಾಷ್ಟ್ರ ದ ಸೊಲ್ಲಾಪುರ ಸಮೀಪದ ಔಷಧಿ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ ಮಹಾರಾಷ್ಟ್ರ ಪೊಲೀಸರು ಟನ್ನುಗಟ್ಟಲೆ ಅಪಾಯಕಾರಿ ರಾಸಾಯನಿಕಗಳನ್ನು ವಶಪಡಿಸಿಕೊಂಡು ಆ ಫ್ಯಾಕ್ಟರಿಗೆ ಬೀಗ ಜಡಿದರಲ್ಲ. ಆ ಕೇಸಿನಲ್ಲಿ ಗೋಸ್ವಾಮಿ ದಂಪತಿಯನ್ನೂ ಆರೋಪಿಗಳು ಎಂದು ತೋರಿಸಲಾಗಿತ್ತು. ಆಗ ಮಾಧ್ಯಮಕ್ಕೆ ಬಂದಿದ್ದ ಮಮತಾ ಕುಲಕರ್ಣಿ ಅದೆಲ್ಲ ತನ್ನ ವಿರುದ್ಧ ಮಾಡಿರುವ ಕಾರಸ್ಥಾನ, ಷಡ್ಯಂತ್ರ ಎಂದು ಹೇಳಿ ಬೊಬ್ಬೆ ಹೊಡೆದು ಹೋದಾಕೆ ನಂತರ ನಾಪತ್ತೆ. ಈಗ ಕೀನ್ಯಾದಲ್ಲಿದ್ದಾಳೋ, ಪೀಣ್ಯಾದಲ್ಲಿದ್ದಾಳೋ? ಯಾರಿಗೆ ಗೊತ್ತು!?

ಇದೇ ಕೇಸಿನಲ್ಲಿ DEA ಮತ್ತು ಕೀನ್ಯಾ ಪೊಲೀಸರಿಂದ ಬಚಾವಾಗಿ ಭಾರತಕ್ಕೆ ಓಡಿ ಬಂದು ಸದ್ಯಕ್ಕೆ ಮುಂಬೈ ಆಸ್ಫತ್ರೆಯಲ್ಲಿ ಮಲಗಿಬಿಟ್ಟಿರುವವನು ಅಲಿ ಪಂಜಾನಿ (ಪುಂಜಾನಿ). ಇವನೂ ಕೀನ್ಯಾ ದೇಶದವನೇ. ಭಾರತೀಯ ಮೂಲದವನು ಎಂದು ಕಾಣಿಸುತ್ತದೆ. ಆಕಾಶಾ ಸೋದರರ ಪಕ್ಕಾ ಪ್ರತಿಸ್ಪರ್ಧಿಯಾಗಿದ್ದವನು ಈ ಪಂಜಾನಿ. ಡ್ರಗ್ ಸಾಮ್ರಾಜ್ಯದ ಮೇಲೆ ಹತೋಟಿ ಸಾಧಿಸುವ ಪೈಪೋಟಿಯಲ್ಲಿ ಈ ಪಂಜಾನಿ ಮತ್ತು ಆಕಾಶಾ ಸಹೋದರರ ಮಧ್ಯೆ ಜಗಳಗಳಾಗಿದ್ದವು. ಒಮ್ಮೆಯಂತೂ ನೈಟ್ ಕ್ಲಬ್ ಒಂದರಲ್ಲಿ ಒಬ್ಬರಿಗೊಬ್ಬರು ಎದುರಾದಾಗ ಬಂದೂಕುಗಳು ಘರ್ಜಿಸಿದ್ದವು. ಗುಂಡುಗಳು ಹಾರಿದ್ದವು. ಪಂಜಾನಿಯ ಅಂಗರಕ್ಷಕ ಗಂಭೀರವಾಗಿ ಗಾಯಗೊಂಡಿದ್ದ.

ಹೀಗಾಗಿ DEA ಆಕಾಶಾ ಸಹೋದರರನ್ನು ಎತ್ತಾಕಿಕೊಂಡು ಹೋದಾಗ ಪಂಜಾನಿ ಸಕತ್ ಖುಷಿ ಪಟ್ಟಿರಬೇಕು. ತನಗಿನ್ನು ಪ್ರತಿಸ್ಪರ್ಧಿಗಳೇ ಇಲ್ಲ ಎಂದು ಮೆರೆಯಲು ಆರಂಭಿಸಿದ್ದಾನೆ. ಎರಡನೇ ಸುತ್ತಿನಲ್ಲಿ DEA ಪಂಜಾನಿಯ ಮೇಲೆಯೇ ಮುರ್ಕೊಂಡು ಬಿದ್ದಿದೆ. ಕೀನ್ಯಾದ ಆಡಳಿತ ವ್ಯವಸ್ಥೆಗೆ ಬರೋಬ್ಬರಿ ಬಿಸ್ಕೀಟ್ ಹಾಕಿದ್ದ ಕಾರಣಕ್ಕೆ ಈ ಮಾಹಿತಿ ಸರಿಯಾದ ಸಮಯಕ್ಕೆ ಪಂಜಾನಿಗೆ ಸಿಕ್ಕಿದೆ. ಪಂಜಾನಿ ಪಂಚೆ ಎತ್ತಿಕೊಂಡು ಕೀನ್ಯಾ ಬಿಟ್ಟು ಓಡಿಬಂದಿದ್ದಾನೆ. ಭಾರತದಲ್ಲಿ ಬಂದು ಮುಂಬೈನ  ಬಾಂದ್ರಾ ಪ್ರದೇಶದ ಆಸ್ಪತ್ರೆಯಲ್ಲಿ ಶಿವನೇ ಶಂಭುಲಿಂಗ ಮಾದರಿಯಲ್ಲಿ ಮಲಗಿಬಿಟ್ಟಿದ್ದಾನೆ. DEA ಮಾತ್ರ ಇಂಟರ್ಪೋಲ್ ನೋಟೀಸ್ ಹೊರಡಿಸಿದೆ. ಅದರ ಬಗ್ಗೆ ಮುಂಬೈ ಪೊಲೀಸರು ಹೆಚ್ಚಿನ ಗಮನ ಹರಿಸಿಲ್ಲವಂತೆ. ಕೇಳಿದರೆ ಪಂಜಾನಿ ಮೇಲೆ ಮುಂಬೈನಲ್ಲಿ ಏನೂ ಕೇಸುಗಳು ಇಲ್ಲ. ಹಾಗಾಗಿ ಏನೂ ಮಾಡುವಂತಿಲ್ಲ ಅಂದರಂತೆ. ಇನ್ನು ಯಾವತ್ತು ತಲೆಕೆಟ್ಟ DEA ಮುಂಬೈ ಪೊಲೀಸರಿಗೆ ತಪರಾಕಿ ಕೊಡುತ್ತದೋ ಗೊತ್ತಿಲ್ಲ. ದೊಡ್ಡ ಮಟ್ಟದಲ್ಲಿ ತಪರಾಕಿ ಬಿದ್ದ ದಿನ ಪಂಜಾನಿಯನ್ನು ಬಂಧಿಸಿ ಅಮೇರಿಕಾಕ್ಕೆ ಕಳಿಸಬಹುದು. ಯಾರಿಗೆ ಗೊತ್ತು, ಅಷ್ಟರಲ್ಲಿ ಈ ಕಳ್ಳ ಪರಮಾತ್ಮ ಭಾರತ ಬಿಟ್ಟು ಮತ್ತೆಲ್ಲಾದರೂ ಗಾಯಬ್ ಆದರೂ ಆದನೇ. ಆದರೆ ಒಮ್ಮೆ DEA ಹಿಂದೆ ಬಿತ್ತು ಅಂದರೆ ಬಚಾವಾಗುವುದು ಕಷ್ಟ.

ಈ ಮಾಫಿಯಾ ಮಂದಿಗೂ ಬಾಲಿವುಡ್ ನಟಿಯರಿಗೂ ಅದೇನು ಸಂಬಂಧವೋ, ಅದೇನು ಆಕರ್ಷಣೆಯೋ ದೇವರೇ ಬಲ್ಲ. ವಿಕಿ ಗೋಸ್ವಾಮಿ ಆಕಾಲದ ಹಾಟ್ ನಟಿ ಮಮತಾ ಕುಲಕರ್ಣಿಯನ್ನು ಮದುವೆಯಾದ. ತಾನೇನು ಕಮ್ಮಿ ಎಂಬಂತೆ ಈ ಅಲಿ ಪಂಜಾನಿ ಸಾಹೇಬರು ಕಿಮ್ ಶರ್ಮಾ ಎಂಬ ನಟಿಯನ್ನು ೨೦೧೦ ಮದುವೆಯಾಗಿ ಕೀನ್ಯಾಕ್ಕೆ ಕರೆದುಕೊಂಡು ಹೋಗಿದ್ದರಂತೆ. ಕಿಮ್ ಶರ್ಮಾ ೨೦೦೦ ರ ಕಾಲದಲ್ಲಿ ಸಾಕಷ್ಟು ದೊಡ್ಡ ನಟಿ. ಕ್ರಿಕೆಟಿಗ ಯುವರಾಜ್ ಸಿಂಗನ ಗೆಳತಿ ಎಂದು ಖ್ಯಾತಳಾಗಿದ್ದವಳು. ಅಲ್ಲಿ ವರ್ಕೌಟ್ ಆಗಲಿಲ್ಲ ಅಂತ ಕಾಣುತ್ತದೆ. ಸಿಕ್ಕ ಪಂಜಾನಿ ಸಾಹೇಬ್ರನ್ನು ವಿವಾಹವಾಗಿ ಕೀನ್ಯಾ ಸೇರಿಕೊಂಡಿದ್ದಳು.

ಆರು ವರ್ಷಗಳ  ಕಾಲ ಸಂಸಾರ ಮಾಡಿದ ನಂತರ ಪಂಜಾನಿ ಬೇರೆ ಯಾರನ್ನೋ ಹುಡುಕಿಕೊಂಡು ಹೋಗಿ ಹೊಸ ಹಕ್ಕಿಯ ಜೊತೆ ಸೆಟಲ್ ಆಗಿಬಿಟ್ಟನಂತೆ. ಹಾಗಾಗಿ ವಿವಾಹ ಸೋಡಾಚೀಟಿಯಲ್ಲಿ ಅಂತ್ಯವಾಗಿದೆ.

ಬರಿಗೈಯಲ್ಲಿ ಠಣ್ ಠಣ್ ಗೋಪಾಲ್ ಆಗಿ, ಕಾಸು ಆಸ್ತಿ ಏನೂ ಇಲ್ಲದೆ ಭಾರತಕ್ಕೆ ಮರಳಿರುವ ಕಿಮ್ ಶರ್ಮಾ ಮುಂಬೈನಲ್ಲಿ ಹೊಸ ಬಾಳನ್ನು ಹುಡುಕಿಕೊಳ್ಳುತ್ತಿದ್ದಾಳೆ. ಬಾಲಿವುಡ್ಡಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಲು ಉಚಿತವಾಗಿ ನಟಿಸಲೂ ರೆಡಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾಳೆ. ಯಾರೂ ಉದ್ಯೋಗ ಕೊಟ್ಟ ಹಾಗೆ ಕಾಣುವುದಿಲ್ಲ. ಜೊತೆಗೊಬ್ಬ ಗೆಣೆಕಾರ ಇರಲಿ ಎಂದು ಯಾರೋ ಹರ್ಷವರ್ಧನ್ ರಾಣೆ ಎನ್ನುವ, ತನಗಿಂತ ಐದು ವರ್ಷ ಚಿಕ್ಕವನಾದ, ಮಾಡೆಲ್ ಜೊತೆ ಡೇಟಿಂಗ್ ಶುರುವಿಟ್ಟುಕೊಂಡಿದ್ದಳು. ಅದೂ ಕೂಡ ಮೊನ್ನೆ ಮಕಾಡೆ ಮಲಗಿ ಅಂತ್ಯಗೊಂಡಿದೆ.

ಕಿಮ್ ಶರ್ಮಾ ಈಗ ಕಿಮಿ ಶರ್ಮಾ ಎನ್ನುವ ಹೆಸರಿನಲ್ಲಿ ಬಾಲಿವುಡ್ಡಿನಲ್ಲಿ ಚಲಾವಣೆಗೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಹೆಸರು ಬದಲಾಯಿಸಿಕೊಂಡ ತಕ್ಷಣ ಅದೃಷ್ಟ ಬದಲಾಯಿಸುತ್ತದೆಯೇ? ಕಾದು ನೋಡಬೇಕು.

ಪಂಜಾನಿ DEA ಮಂದಿಯ ಹದ್ದಿನ ದೃಷ್ಟಿಯಲ್ಲಿ ಬರುವ ಮೊದಲೇ ಆತನಿಂದ ದೂರವಾದ ಕಿಮ್ ಶರ್ಮಾ ಒಂದು ರೀತಿಯಲ್ಲಿ ಅದೃಷ್ಟವಂತಳೇ. ಪಂಜಾನಿಯಂತೂ ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವುದು ಗ್ಯಾರಂಟಿ. ಆತನಿಂದ ಮೊದಲೇ ದೂರವಾಗಿ ಆ ಕರ್ಮದಿಂದ ತಪ್ಪಿಸಿಕೊಂಡಿದ್ದಾಳೆ ಕಿಮ್ ಶರ್ಮಾ. ಅಷ್ಟರಮಟ್ಟಿಗೆ ಆಕೆ ಅದೃಷ್ಟವಂತೆ.

ಹೆಚ್ಚಿನ ಮಾಹಿತಿಗೆ:

ಅಲಿ ಪಂಜಾನಿ

ಕಿಮ್ ಶರ್ಮಾ

Mamta Kulkarni, Vicky Goswami complete saga summarized for the uninitiated

ಮಮತಾ ಕುಲಕರ್ಣಿಯ ಸಂದರ್ಶನ (ಪೋಸ್ಟಿನ ಕೊನೆಯಲ್ಲಿದೆ)

'ಕುಲಕರ್ಣಿ ಮಮ್ಮಿ' ಸನ್ಯಾಸ ತೊಗೋಂಡಳಾ?!.....ಅಕಟಕಟಾ!

2 comments:

sunaath said...

ಮಹೇಶರೆ, ನಿಮ್ಮ ಈ ಲೇಖನ ನನಗೆ ಅನೇಕ ಕಾರಣಗಳಿಗಾಗಿ ಖುಶಿ ಕೊಟ್ಟಿದೆ:
(೧) ಕೆನ್ಯಾದ ಡ್ರಗ್ ಮಾಫಿಯಾವನ್ನು ಅಮೆರಿಕಾದ DEA ದಳ ಕುಟ್ಟುತ್ತಿರುವ ರೀತಿಯನ್ನು ತಿಳಿದು ಖುಶಿಯಾಯಿತು.
(೨) ಇಂದು ಕೆನ್ಯಾದವರು ಸಿಕ್ಕಿದ್ದಾರೆ; ಭಾರತೀಯರಿಗೆ ಡ್ರಗ್ ತಿನ್ನಿಸುತ್ತಿರುವ ನೈಜೀರಿಯಾದವರು ನಾಳೆ ಸಿಗಲಾರರೆ?
(೩) ನೀವು ನಮಗೆ ವಿಕಿಪೀಡಿಯಾದಂತೆ ಇದ್ದಿರುವಿರಿ. ಆಕಾಶದಲ್ಲೆಲ್ಲ ಹರಡಿರುವ ಮಾಹಿತಿಯನ್ನೆಲ್ಲ ಹೆಕ್ಕಿ ನಮಗೆ ನೀಡುತ್ತೀರಿ.
(೪) ನಿಮ್ಮ ಬರಹದ ಶೈಲಿಯಿಂದ ಖುಶಿಯಾಗುತ್ತದೆ. ನಿಮ್ಮ ಲೇಖನದ ಕೆಲವೇ ಕೆಲವು ವಾಕ್ಯವೃಂದಗಳನ್ನು ಉದಾಹರಣೆಗಾಗಿ ಇಲ್ಲಿ ಉದ್ಧರಿಸಿ ತೋರಿಸುತ್ತೇನೆ:
(೧) ಹೆಸರಿಗೆ ತಕ್ಕಂತೆ 'ಮಾದಕ ನಟಿ' ಮಾದಕ ವಸ್ತುಗಳ ಲಫಡಾದಲ್ಲಿ ಸಿಕ್ಕಾಕಿಕೊಂಡುಬಿದ್ದಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ.
(೨) ಮಾಫಿ ಸಾಕ್ಷಿದಾರನಾಗಿ ಆಕಾಶಾ ಸಹೋದರರ ಪೂರ್ತಿ ಭಾಂಡಾ ಬಿಚ್ಚಿಟ್ಟುಬಿಟ್ಟಿದ್ದಾನೆ.
(೩) ಏನೋ ಒಂದು ತರಹದ ಶಾದಿ ಭಾಗ್ಯ ಮಾಡಿಕೊಂಡು.....
(೪) ಮಾಂಡವಳಿ ಸಂಧಾನ ಮಾಡಿಕೊಂಡ ಗೋಸ್ವಾಮಿ.....
(೫) ರಾಷ್ಟ್ರಾಧ್ಯಕ್ಷನ ತಂಗಿ ತಾಂಬೂಲ ಉಗುಳಿ, ಪಿಚಕಾರಿ ಹಾರಿಸಿ ಪೆಕಪೆಕನೆ ನಕ್ಕಳು.
(೬) ಡ್ರಗ್ ಮಾಫಿಯಾದಿಂದ ಸಾಕಷ್ಟು ಸತ್ಯನಾರಾಯಣ ಪ್ರಸಾದ ಸ್ವೀಕರಿಸಿದ್ದರೂ
(೭) ಈಗ ಕೀನ್ಯಾದಲ್ಲಿದ್ದಾಳೋ, ಪೀಣ್ಯಾದಲ್ಲಿದ್ದಾಳೋ?
(೮) ಬರಿಗೈಯಲ್ಲಿ ಠಣ್ ಠಣ್ ಗೋಪಾಲ್ ಆಗಿ, ಕಾಸು ಆಸ್ತಿ ಏನೂ ಇಲ್ಲದೆ....

ಆದರೆ ಒಂದು ವಿಷಯಕ್ಕೆ ನನಗೆ ದುಃಖವಾಗುತ್ತದೆ, ಮಹೇಶರೆ. ನಮ್ಮ Bollywood ಬೆಡಗಿಯರು ಮಾಫಿಯಾ ಜಾಲಕ್ಕೆ ಸಿಕ್ಕಿಹಾಕೊಕೊಳ್ಳುವ ಅನಿವಾರ್ಯತೆಗಾಗಿ. ಮಮತಾಕುಲಕರ್ಣಿಯೇ ಆಗಿರಲಿ, ಕಿಮಿ ಶರ್ಮಾಳೇ ಆಗಲಿ ಅಥವಾ ಮಂದಾಕಿನಿಯೇ ಆಗಿರಲಿ, ಅವರೆಲ್ಲ ತಮ್ಮ ಸ್ವಂತ ಇಚ್ಛೆಯಿಂದ ಕ್ರಿಮಿನಲ್ ಜಗತ್ತಿನೊಡನೆ ಸಂಬಂಧ ಬೆಳೆಸಿದವರಾಗಿರಲಿಕ್ಕಿಲ್ಲ. ಎಂತೆಂತಹ ಸಂಕಟಗಳಿಂದಾಗಿ, ಎಂತೆಂತಹ ಕ್ರೌರ್ಯದಿಂದಾಗಿ ಅವರು ಈ ಜಾಲದಲ್ಲಿ ಸಿಕ್ಕಿಬಿದ್ದರೊ ತಿಳಿಯದು.

ಇರಲಿ, ನಿಮ್ಮ ಈ ಲೇಖನಕ್ಕಾಗಿ ಧನ್ಯವಾದಗಳು.

Mahesh Hegade said...

ಸುನಾಥ್ ಸರ್, ಪ್ರೀತಿಯಿಂದ ಬರೆದ ವಿವರವಾದ ಕಾಮೆಂಟಿಗೆ ಧನ್ಯವಾದಗಳು. ಈ ಬ್ಲಾಗ್ ಪೋಸ್ಟ್ ನಿಮಗೆ ಇಷ್ಟವಾಗಿದ್ದು ತುಂಬಾ ಸಂತೋಷ.


ನಟಿಯರು ಮಾಫಿಯಾ ಜಾಲದಲ್ಲಿ ಏಕೆ ಸಿಕ್ಕಾಕಿಕೊಳ್ಳುತ್ತಾರೆ? ಅವರ ಅನಿವಾರ್ಯತೆಗಳೇನಿರಬಹುದು? ಎಂದು ಕೇಳಿದ್ದೀರಿ. ಗ್ಲಾಮರ್ ಜಗತ್ತು ಕೂಡ ವ್ಯವಸ್ಥೆಯ ಒಂದು ಭಾಗ. ವ್ಯವಸ್ಥೆಯ ಬೇರೆ ಬೇರೆ ಭಾಗಗಳು ವ್ಯವಸ್ಥೆಯೊಂದಿಗೆ ಬೇರೆ ಬೇರೆ ರೀತಿಯಲ್ಲಿ interface ಆಗುತ್ತವೆ ಮತ್ತು integrate ಆಗುತ್ತವೆ.

Exploitation ಖಂಡಿತವಾಗಿ ಇದೆ. ಮಹಿಳೆಯರಷ್ಟೇ ಅಲ್ಲ. ಎಲ್ಲ ಲಿಂಗಿಗಳೂ ಶೋಷಣೆಗೆ ಒಳಗಾಗುತ್ತಲೇ ಇರುತ್ತಾರೆ. ನಮಗೆ ಶೋಷಣೆಯಾಗಿ ಕಂಡುಬಂದರೆ ಹೆಚ್ಚಿನವರಿಗೆ ಅದು price of entry. ಆ ಫೀಲ್ಡಿಗೆ ಬರುವ ಜನರನ್ನು ಹಾಗಂತ brainwash ಅದೆಷ್ಟು ಚೆನ್ನಾಗಿ ಮಾಡಿರುತ್ತಾರೆ ಅಂದರೆ ನೀವು ಅದನ್ನು ನೋಡಿ ಅಥವಾ ಓದಿಯೇ ತಿಳಿಯಬೇಕು. ಬಹಳ ಹಿಂದೆ ಬ್ರಿಟಿಷ್ ಪತ್ರಕರ್ತನೊಬ್ಬ ಉದ್ಗರಿಸಿದ್ದ, 'ಸೌಂದರ್ಯ ಸ್ಪರ್ಧೆಗಳು ಮತ್ತೇನೂ ಅಲ್ಲ, ಬೆಲೆವೆಣ್ಣುಗಳನ್ನು ತಯಾರು ಮಾಡುವ ಕಾರ್ಖಾನೆಗಳು!' ಎಂದು.

ಮಾಫಿಯಾ, ಚಿತ್ರರಂಗ, ವ್ಯವಸ್ಥೆ ಇವುಗಳ ನಡುವಿನ ಬಂಧ ಅನುಬಂಧ ಸಂಬಂಧ ಎಲ್ಲ ತುಂಬಾ ಸಂಕೀರ್ಣವಾದುದು ಮತ್ತು ರೋಚಕವಾದದ್ದು.

ಕೆಳಗಿನ ಪುಸ್ತಕಗಳಲ್ಲಿ ಮತ್ತು ಸಿನೆಮಾಗಳಲ್ಲಿ ಅವುಗಳನ್ನು ತುಂಬಾ ಚೆನ್ನಾಗಿ ಬಿಚ್ಚಿಟ್ಟಿದ್ದಾರೆ. ಸಮಯವಿದ್ದಾಗ ಓದಿ ಮತ್ತು ನೋಡಿ.

ಪುಸ್ತಕಗಳು:

- Maximum City by Suketu Mehta

- Sacred Games by Vikram Chandra

ಹಿಂದಿ ಸಿನೆಮಾಗಳು:

- ಚಾಂದನಿ ಬಾರ್

- ಮಾರ್ಕೆಟ್

- ಡಿಪಾರ್ಟ್ಮೆಂಟ್

- ಮ್ಯಾಕ್ಸಿಮಮ್

- ಆನ್

ನನ್ನ ಕೆಲವು ಬ್ಲಾಗ್ ಲೇಖನಗಳು:

- ಬೋರ್ಡೆಸ್ ಎಂಬ ಬ್ಯೂಟಿ ಬುರುಡೇಲಿ ಏನಿತ್ತು ಶಿವಾ? (https://maheshuh.blogspot.com/2012/08/blog-post_3803.html)

- ತಾರಾ ವಿವಾಹಕ್ಕೆ ಮಾಫಿಯಾ ಪೌರೋಹಿತ್ಯ (https://maheshuh.blogspot.com/2014/07/blog-post_25.html)

- ಮಾಡಿ ಅಂಡರ್ವರ್ಲ್ಡ್ ಸಂಗ, ರೆಕ್ಕೆ ಸುಟ್ಟುಕೊಂಡ ಪತಂಗ (https://maheshuh.blogspot.com/2014/10/blog-post_13.html)