Sunday, September 08, 2019

ಅಂಧ ಪೈಲಟ್ಟುಗಳು ವಿಮಾನ ಹಾರಿಸಿದ್ದು!

ಅದೊಂದು ದೊಡ್ಡ ವಿಮಾನನಿಲ್ದಾಣ. ಒಂದು ವಿಮಾನ ಹಾರಲು ಸಜ್ಜಾಗಿ ನಿಂತಿತ್ತು. ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸಿ ಸಿದ್ಧರಾಗಿ ಕುಳಿತಿದ್ದರು. ವಿಮಾನ ಹಾರಿಸುವ ಪೈಲಟ್ಟುಗಳು ಮಾತ್ರ ನಾಪತ್ತೆ!

ಅಷ್ಟರಲ್ಲಿ ಹಿಂದಿಂದ ಇಬ್ಬರು ವ್ಯಕ್ತಿಗಳು ಬರುತ್ತಿರುವುದು ಕಂಡಿತು. ಇಬ್ಬರೂ ಕಪ್ಪು ಕನ್ನಡಕ ಧರಿಸಿದ್ದರು. ಒಬ್ಬ ಕೈಯಲ್ಲಿ ಬಿಳಿ ಕೋಲು ಹಿಡಿದಿದ್ದ. ಮತ್ತೊಬ್ಬ ಬಿಳಿ ಕೋಲಿನೊಂದಿಗೆ ಕುರುಡರಿಗೆ ಸಹಾಯ ಮಾಡುವ ನಾಯಿಯನ್ನೂ ತಂದಿದ್ದ.

ಈ ಕುರುಡರಿಬ್ಬರೂ ತಡಕಾಡುತ್ತ, ಅಕ್ಕಪಕ್ಕದವರಿಗೆ ಡಿಕ್ಕಿ ಹೊಡೆಯುತ್ತ,ಬಿಳಿ ಕೋಲು ಮತ್ತು ನಾಯಿಯ ಸಹಾಯದಿಂದ ವಿಮಾನದ cockpit ತಲುಪಿಕೊಂಡರು. ಹೇಗೋ ಮಾಡಿ ವಿಮಾನ ಹಾರಿಸುವ ಕುರ್ಚಿಗಳ ಮೇಲೆ ಆಸೀನರಾದರು. ತಡಕಾಡುತ್ತಲೇ ವಿಮಾನ ಹಾರಿಸುವ ಮೊದಲು ಮಾಡಬೇಕಾದ ಕೆಲಸಗಳನ್ನು ಏನೋ ಒಂದು ರೀತಿಯಲ್ಲಿ ಮಾಡತೊಡಗಿದರು. ಒಬ್ಬ ಪೆನ್ನು ಕೆಳಗೆ ಬೀಳಿಸಿದರೆ ಮತ್ತೊಬ್ಬ ಹೇಗೋ ಮಾಡಿ ಎತ್ತಿಕೊಡುತ್ತಿದ್ದ. ಒಬ್ಬ ತಪ್ಪಾಗಿ ಯಾವುದೋ ಸ್ವಿಚ್ ಹಾಕಿದರೆ ಮತ್ತೊಬ್ಬ ತಡಕಾಡುತ್ತ ಹೇಗೋ ಸರಿ ಮಾಡುತ್ತಿದ್ದ. ಒಟ್ಟಿನಲ್ಲಿ ರೂಢಿ ಮೇಲೆ ಏನೋ ಮಾಡುತ್ತಿದ್ದರು.

ಇದನ್ನು ನೋಡಿದ ಪ್ರಯಾಣಿಕರಿಗೆ ಆಶ್ಚರ್ಯ. ಇದೇನು ತಮಾಷೆ ಮಾಡುತ್ತಿದ್ದಾರೋ ಎಂದುಕೊಂಡರು. ಎಲ್ಲ ಅಂಗಾಂಗಳು ಸರಿಯಿರುವ ಮನುಷ್ಯರೂ ಸಹ, ತರಬೇತಿಯ ನಂತರವೂ, ಎಲ್ಲ ವಿಮಾನ ಹಾರಿಸಲಾರರು. ಇಲ್ಲಿ ನೋಡಿದರೆ ಇಬ್ಬರು ಅಂಧರು ವಿಮಾನ ಹಾರಿಸಲು ತಯಾರಾಗುತ್ತಿದ್ದಾರೆ. ಏನಾಗುತ್ತಿದೆ ಇಲ್ಲಿ ಎಂದು ಯಾತ್ರಿಕರು ಆತಂಕಗೊಂಡರು.

ಅಷ್ಟರಲ್ಲಿ ವಿಮಾನದ ಇಂಜೀನುಗಳು ಆರಂಭವಾಗಿ ಗುಡುಗತೊಡಗಿದವು. ಅಂಧ ಪೈಲಟ್ ಪ್ಲೇನ್ ಎತ್ತಿಯೇಬಿಟ್ಟ. ಅಂದಾಜಿನ ಮೇಲೆ ಅತ್ತಿತ್ತ ಓಲಾಡಿಸುತ್ತ ವಿಮಾನವನ್ನು runway ಮೇಲೆ ತಂದವನೇ ಫುಲ್ ವೇಗ ಕೊಟ್ಟ. ಎತ್ತರ ಪತ್ತರ ಓಲಾಡುತ್ತ, ಎಲ್ಲಿ runway ಬಿಟ್ಟು ಹೋಗಿ ಅಪಘಾತವಾಗಿಬಿಡುತ್ತದೋ ಮಾದರಿಯಲ್ಲಿ ವಿಮಾನ ವೇಗವಾಗಿ ಚಲಿಸತೊಡಗಿತು.

ಈಗ ಮಾತ್ರ ಪ್ರಯಾಣಿಕರಿಗೆ ಖಾತ್ರಿಯಾಯಿತು, ಇದು ತಮಾಷೆ ಅಲ್ಲ. ಖಂಡಿತ ತಮಾಷೆಯೆಲ್ಲ. ಜೀವ ಬಾಯಿಗೆ ಬಂತು. ಈ ಕುರುಡ ಪೈಲಟ್ಟುಗಳು ತಮ್ಮನ್ನು ಸ್ವರ್ಗಕ್ಕೋ ನರಕಕ್ಕೋ ಕಳಿಸುವದು ಖಾತ್ರಿಯೆಂದುಕೊಂಡು, ಪ್ರಾಣಭಯದಿಂದ ಜೋರಾಗಿ ಕೂಗಿಕೊಳ್ಳಲು ಆರಂಭಿಸಿದರು.

runway ಮೇಲೆ ಕೇವಲ ಇಪ್ಪತ್ತು ಅಡಿ ಮಾತ್ರ ಉಳಿದಿತ್ತು. ಮುಂದೆ ಕಂದಕ. ಅಷ್ಟರಲ್ಲಿ ವಿಮಾನ ಮೇಲೆ ಹಾರಬೇಕು. ಹಾರಿದರೆ ಬಚಾವು. ಇಲ್ಲವಾದರೆ ಗೋವಿಂದಾ ಗೋವಿಂದಾ!

ಪ್ರಯಾಣಿಕರ ಆರ್ತನಾದ ತಾರಕಕ್ಕೆ ಏರಿತು. ಹತ್ತಡಿ, ಐದಡಿ..... ಆರ್ತನಾದ ಈಗ ಉತ್ತುಂಗದ ಸ್ಥಿತಿಯಲ್ಲಿ. ಇನ್ನೇನು runway ಮುಗಿದೇಹೋಯಿತೇನೋ ಅನ್ನುವಷ್ಟರಲ್ಲಿ ವಿಮಾನ ಪವಾಡಸದೃಶವಾಗಿ ಮೇಲಕ್ಕೇರಿತು.

ನಿರುಮ್ಮಳರಾದ ಪ್ರಯಾಣಿಕರು ಬದುಕಿದೆಯಾ ಬಡಜೀವವೇ ಎಂಬಂತೆ ನಿಟ್ಟುಸಿರು ಬಿಟ್ಟು ಎಲ್ಲ ದೇವರಿಗೂ ದೊಡ್ಡ ನಮಸ್ಕಾರ ಹಾಕಿದರು.

ಆಗ ಪೈಲಟ್ಟುಗಳು ಮಾತಾಡಿಕೊಂಡರು, 'ಗುರೂ, ಒಂದು ದಿನ ಈ ಪ್ರಯಾಣಿಕರು ಕೂಗುವುದನ್ನು ನಿಲ್ಲಿಸುತ್ತಾರೆ. ಅಂದು ದೊಡ್ಡ ಅಪಘಾತವಾಗಲಿದೆ. ಎಲ್ಲರೂ ಸಾಯುತ್ತೇವೆ!!'

ಅರ್ಥವಾಯಿತು ತಾನೇ? ಪೈಲಟ್ಟುಗಳು ನಿಜವಾಗಿಯೂ ಕುರುಡರೇ ಆಗಿದ್ದರು. ಪುಣ್ಯಕ್ಕೆ ಕಿವುಡರಾಗಿರಲಿಲ್ಲ. ಪ್ರಯಾಣಿಕರ ಆರ್ತನಾದದ ಅಂದಾಜಿನ ಮೇಲೆ ವಿಮಾನ ಹಾರಿಸುತ್ತಿದ್ದರು. runway ಯಾವಾಗ ಮುಗಿಯುತ್ತದೆ ಅಂತ ಗೊತ್ತೂ ಆಗುತ್ತಿರಲಿಲ್ಲ. ಆದರೆ runway ಮುಗಿಯಲಿದೆ, ವಿಮಾನ ಮೇಲಕ್ಕೆ ಏರದಿದ್ದರೆ ಢಮ್ ಅನ್ನಲಿದೆ ಅನ್ನುವುದು ಪ್ರಯಾಣಿಕರಿಗೆ ಗೊತ್ತಾಗುತ್ತಿತ್ತು. ಅವರ ಆರ್ತನಾದ ತಾರಕಕ್ಕೆ ಏರುತ್ತಿತ್ತು. ಪ್ರಯಾಣಿಕರ ಆರ್ತನಾದ ಒಂದು ಲೆವೆಲ್ಲಿಗೆ ಬಂತು ಅಂದಾಗ ಪೈಲಟ್ಟುಗಳಿಗೆ ಗೊತ್ತಾಗುತ್ತಿತ್ತು, 'runway ಮುಗಿಯಲಿದೆ. ವಿಮಾನವನ್ನು ಎತ್ತಲು ಸರಿಯಾದ ಸಮಯ,' ಎಂದುಕೊಂಡು ಎತ್ತುತ್ತಿದ್ದರು.

ಪ್ರಜಾಪ್ರಭುತ್ವಕ್ಕೂ ಇದು ಅನ್ವಯವಾಗುತ್ತದೆ. ನಮ್ಮ ದೇಶದ ಚುಕ್ಕಾಣಿ ಹಿಡಿದ ನಾಯಕರೂ ಸಹ ಅಂಧರೇ. ನಾವು ಕೂಗುವುದನ್ನು, ಅಂದರೆ ಪ್ರತಿಭಟನೆ ಮಾಡುವುದನ್ನು, ನಿಲ್ಲಿಸಿದ ದಿನ ದೇಶವನ್ನು ಪ್ರಪಾತಕ್ಕೆ ತಳ್ಳುತ್ತಾರೆ. ಹಾಗಾಗಿ ಕೂಗುತ್ತಲೇ ಇರಬೇಕು. ಪ್ರತಿಭಟಿಸುತ್ತಲೇ ಇರಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿಭಟನೆ ಅವಶ್ಯ. ನಮ್ಮ ಆರ್ತನಾದದ ಮರ್ಮ ಅರಿತಿರುವ "ನಾಯಕರು" ಹೇಗೋ ಮಾಡಿ ದೇಶವನ್ನು ಏನೋ ಒಂದು ತರಹ ಮುನ್ನೆಡಿಸುತ್ತಾರೆ. ಹಾಗಂತ ಆಶಿಸಬಹುದು.

ನಿನ್ನೆ ನಿಧನರಾದ ಖ್ಯಾತ ವಕೀಲ ರಾಮ್ ಜೇಠಮಲಾನಿ ತಮ್ಮ ಪುಸ್ತಕದಲ್ಲಿ ಹೀಗೆ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ.

ಮಾಹಿತಿ ಆಧಾರ: Maverick Unchanged, Unrepentant by Ram Jethmalani

 

ರಾಮ್ ಜೇಠಮಲಾನಿ ಬಗ್ಗೆ ಹಿಂದೆ ಬರೆದಿದ್ದ ಲೇಖನಗಳು.

* ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ?

* ಯಾರದ್ದೋ ಔಷದಿ, ಇನ್ನ್ಯಾರೋ ತೊಗೊಂಡು, ತೊಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದು!

* ಕಿಸ್ಸಿಂಗ್ ಕಿಡಿಗೇಡಿ

4 comments:

sunaath said...

ರಾಮ ಜೇಠಮಲಾನಿಯವರು ತುಂಬ witty ವ್ಯಕ್ತಿ ಎನ್ನುವುದು ನಿಮ್ಮ ಲೇಖನದಿಂದ ತಿಳಿದು ಬಂದಿತು. ನೀವು ಹಿಂದೆ ಬರೆದ ಲೇಖನವನ್ನೋದಿ ಅವರು ರಸಿಕರಂಗ ಸಹ ಹೌದು ಎನ್ನುವುದು ಗೊತ್ತಾಯಿತು. ಅವರ ಬಗೆಗಿನ ಒಂದು ಘಟನೆ ನಿಮಗೆ ಗೊತ್ತಿರಲೂ ಬಹುದು. ಅದು ಹೀಗಿದೆ:

ರಾಮ ಜೇಠಮಲಾನಿ ಹಾಗು ಏ.ಕೆ.ಸುಬ್ಬಯ್ಯನವರು ಒಂದು ಸಂದರ್ಭದಲ್ಲಿ ಬೆಂಗಳೂರು ನ್ಯಾಯಾಲಯದಲ್ಲಿ ವಾದಿ ಹಾಗು ಪ್ರತಿವಾದಿಗಳ ವಕೀಲರಾಗಿ ಒಬ್ಬರನ್ನೊಬ್ಬರು ಎದುರಿಸಿದ್ದಾರೆ. ಜೇಠಮಲಾನಿಯವರು ‘ಸುಬ್ಬಯ್ಯ’ ಎಂದು ಹೇಳುವ ಬದಲು ‘ಸಬ್ಬಯ್ಯ’ ಎಂದು ಹೇಳಿದರಂತೆ. ಸುಬ್ಬಯ್ಯನವರು ‘ನಾನು ಸಬ್ಬಯ್ಯ ಅಲ್ಲ, ಸುಬ್ಬಯ್ಯ ಎಂದು ಜೇಠಮಲಾನಿಯವರನ್ನು ತಿದ್ದಿದರು. ಜೇಠಮಲಾನಿಯವರು ಮತ್ತೂ ಒಮ್ಮೆ ‘ಸಬ್ಬಯ್ಯ’ ಎಂದೇ ಕರೆದಾಗ, ಸುಬ್ಬಯ್ಯನವರು ‘ನೀವು ನನ್ನನ್ನು ಸಬ್ಬಯ್ಯ ಎಂದೇ ಕರೆಯುತ್ತಿದ್ದರೆ, ನಾನು ನಿಮಗೆ ಝೂಠಮಲಾನಿ ಎಂದು ಕರೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಒಳ್ಳೇ Tit for Tat!

ಏನೇ ಇರಲಿ, ಅವರ ಆತ್ಮಕ್ಕೆ (ಅತ್ಯಂತ ಅವಶ್ಯವಾಗಿರುವಂತಹ) ಶಾಂತಿ ಸಿಗಲಿ.

Mahesh Hegade said...

'ಸಬ್ಬಯ್ಯ' ಮತ್ತು 'ಝೂಠಮಲಾನಿ' ಬಗ್ಗೆ ಹಿಂದೆ ಓದಿದ್ದೆ. ಮತ್ತೊಮ್ಮೆ ಎಲ್ಲಾ ಕಡೆ ಅದು ಹರಿದಾಡಿದೆ. ಸುಬ್ಬಯ್ಯ ಕೂಡ ಇತ್ತೀಚಿಗೆ ನಿಧನರಾದರು. ಸ್ವರ್ಗದಲ್ಲಿ ಇಬ್ಬರೂ ವಾದವಿವಾದ ಮಾಡಿಕೊಂಡಿರಬಹುದು! :)

ಕಾಮೆಂಟಿಗೆ ಧನ್ಯವಾದಗಳು!

ಅವರ ರಸಿಕತೆ ಬಗ್ಗೆ ಬರೆದಿದ್ದ ಮತ್ತೊಂದು ಪೋಸ್ಟ್ ಮಿಸ್ಸಾಗಿತ್ತು. ಇಲ್ಲಿದೆ - https://maheshuh.blogspot.com/2015/02/blog-post_18.html.

ರೋಚಕ ಧಾರವಾಡ connection ಇದೆ. ;)

sunaath said...

ಬೆಲ್ಲ ಹೊಡೆದಷ್ಟು ಖುಶಿಯಾಯಿತು.( https://maheshuh.blogspot.com/2015/02/blog-post_18.html.

ರೋಚಕ ಧಾರವಾಡ connection ಇದೆ. ;)

Mahesh Hegade said...

ತಮ್ಮ ಕಾಮೆಂಟಿಗೆ ಧನ್ಯವಾದಗಳು ಸರ್ :)