Thursday, November 06, 2014

ಗಾಗಿ ಮತ್ತು ಸೂಪರ್ ಮ್ಯಾನ್ (ಗುಲ್ಜಾರ್ ಹೇಳಿದ ಕಥೆ)

ನಮ್ಮ ಮನೆಯಲ್ಲಿ ಎಲ್ಲೆಡೆ ಸೂಪರ್ ಮ್ಯಾನ್ ಕಾಮಿಕ್ ಪುಸ್ತಕಗಳು ಮತ್ತು ಸೂಪರ್ ಮ್ಯಾನ್ ವೀಡಿಯೊ ಕ್ಯಾಸೆಟ್ಟುಗಳು  ಬಂದು ತುಂಬ ತೊಡಗಿದ್ದವು. ಮೊದಲು ಮಕ್ಕಳ ಕೋಣೆಯಲ್ಲಿ ಮಾತ್ರ ಕಂಡು ಬರುತ್ತಿದ್ದವು. ಈಗ ಅಲ್ಲಿ ಜಾಗ ಸಾಲದೇ, ನಿಧಾನವಾಗಿ ಹೊರಬಿದ್ದು, ನನ್ನ ಪುಸ್ತಕದ ಶೆಲ್ಫ್ ಮೇಲೆ ಸಹಿತ ಜಾಗ ಆಕ್ರಮಿಸತೊಡಗಿದವು. ಇದು ಯಾವ ಮಟ್ಟಕ್ಕೆ ಹೋಯಿತು ಅಂದರೆ ನಾನು ಎಲ್ಲಾದರೂ ನನ್ನ ಒಂದು ಪುಸ್ತಕ ಈಚೆ ತೆಗೆಯಲು ಹೋದರೆ ನಾಲ್ಕಾರು ಸೂಪರ್ ಮ್ಯಾನ್ ಕಾಮಿಕ್ ಪುಸ್ತಕಗಳು, ವೀಡಿಯೊ ಕ್ಯಾಸೆಟ್ಟುಗಳು ಪುತಪುತನೆ ಉದುರಿ ಕೆಳಗೆ ಬೀಳತೊಡಗಿದವು. 'ಇವುಗಳನ್ನು ಏನು ಮಾಡಲಿ?' ಅಂತ ಒಂದು ಕ್ಷಣ ವಿಚಾರ ಬರುತ್ತಿತ್ತು. ಆದರೂ ಮರುಕ್ಷಣ ಬಿದ್ದವನ್ನು ಆರಿಸಿ, ನನ್ನ ಪುಸ್ತಕಗಳ ಮಧ್ಯೆಯೇ ತುರುಕಿ, ನನ್ನ ಕೆಲಸ ನೋಡಿಕೊಂಡು ಹೋಗುತ್ತಿದ್ದೆ.

'ಇವನ್ನು ಯಾಕೆ ರದ್ದಿ ಪೇಪರಿನವನಿಗೆ ಹಾಕಬಾರದು?'  ಅಂತ ಉಮಿಗೆ ಕೇಳಿಯೂ ಇದ್ದೆ.

'ಮಮ್ಮಿ!!!! ನೋ......! ನೋ!' ಅಂತ ಕೂಗುತ್ತ, ಎಲ್ಲಿಂದಲೋ ಹಾರಿ ಬಂದಳು ನನ್ನ ಚಿಕ್ಕ ಮಗಳು ಬುಚ್ಕಿ. ಅವಳ ಕೈಯಲ್ಲಿ ಆಗಲೂ ಒಂದು ಸೂಪರ್ ಮ್ಯಾನ್ ಕಾಮಿಕ್ ಪುಸ್ತಕ ಇತ್ತು. ನನ್ನನ್ನು ದಿಟ್ಟಿಸಿ ನೋಡಿದ ಆಕೆ ಹೇಳಿದಳು, 'ಪಪ್ಪಾ! ಅದು ಹೇಗೆ ಅವನ್ನು ರದ್ದಿಗೆ ಹಾಕುತ್ತೀಯಾ? ಸೂಪರ್ ಮ್ಯಾನ್ ಅಂದರೆ ಸೂಪರ್ ಮ್ಯಾನ್. ಬೇಕಾದರೆ ನಿನ್ನ ಪುಸ್ತಕಗಳನ್ನು ರದ್ದಿಗೆ ಹಾಕಿಕೋ! ಸೂಪರ್ ಮ್ಯಾನ್ ಗೂ ಸ್ವಲ್ಪ ಜಾಗ ಕೊಡಬೇಕಪ್ಪಾ. ಓss.........ಬಂದ್ಬಿಟ್ಟರು ದೊಡ್ಡ, ರದ್ದಿಗೆ ಹಾಕೋಕೆ.'

'ಇದು ಇನ್ನೂ ಶುರುವಾತು ಅಷ್ಟೇ. ಇನ್ನೂ ಒಂದಿಷ್ಟು ವೀಡಿಯೊ ಕ್ಯಾಸೆಟ್ಟುಗಳು ಬರುವದಿವೆ. ಅವಳ ರೂಮಂತೂ ಆಗಲೇ ತುಂಬಿ ತುಳುಕುತ್ತಿದೆ,' ಅಂದ ಉಮಿ ನಗುತ್ತ ಹೊರಟಳು.

'ಒಂದು ಮಾತು ಉಮಿ. ಎಲ್ಲಿಂದ ಬಂದವು ಇವೆಲ್ಲ? ಹಾಂ?' ಅಂತ ಕೇಳಿದೆ.

'ಗಾಗಿ! ಅವಳೇ. ಅವಳೇ ಇವೆಲ್ಲ ತಂದು ಕೊಡುವವಳು,' ಅಂದಳು ಉಮಿ.

ಗಾಗಿ. ನನ್ನ ಮಗಳ ವಯಸ್ಸಿನವಳೇ. ಒಂದೇ ತರಗತಿ ಕೂಡ. ಆದರೆ ಬೇರೆ ಶಾಲೆಗೆ ಹೋಗುತ್ತಿದ್ದಳು. ಸರಾಸರಿ ಅರ್ಧ ದಿವಸ ನಮ್ಮ ಮನೆಯಲ್ಲೇ ಕಳೆಯುತ್ತಿದ್ದಳು. ಉಳಿದರ್ಧ ಅವರ ಮನೆಯಲ್ಲಿ. ಮಿತ್ರರಾದ ಅರುಣಾ ರಾಜೆ ಪಾಟೀಲ ಮತ್ತು ವಿಕಾಸ್ ದೇಸಾಯಿ ದಂಪತಿಗಳ ಪುತ್ರಿ 'ಗಾಗಿ' ಅನ್ನುವ ಆ ಹುಡುಗಿ.

ಗಾಗಿ ಬದುಕಿದ್ದು ಕೇವಲ ಹನ್ನೊಂದೇ ವರ್ಷ.

ದಿನ ಪೂರ್ತಿ ಈ ಮಕ್ಕಳು ಸೂಪರ್ ಮ್ಯಾನ್ ವೀಡಿಯೊ ಕ್ಯಾಸೆಟ್ಟುಗಳನ್ನು ನೋಡುತ್ತಿದ್ದರು. ಇಲ್ಲ ಸೂಪರ್ ಮ್ಯಾನ್ ಕಾಮಿಕ್ಸ್ ಓದುತ್ತಿದ್ದರು. ನಾನೇನಾದರೂ ಆಕ್ಷೇಪಿಸಿದರೆ ತಮ್ಮ ತಮ್ಮ ಪ್ರೋಗ್ರೆಸ್ ಕಾರ್ಡ್ ರಪ್ ಅಂತ ಮುಖಕ್ಕೆ ಹಿಡಿಯುತ್ತಿದ್ದರು ಈ ಮಕ್ಕಳು. ಎಲ್ಲ ವಿಷಯಗಳಲ್ಲೂ ಯಾವಾಗಲೂ ಸೀದಾ A ಗ್ರೇಡನ್ನೇ ಪಡೆಯುತ್ತಿದ್ದ ಮಕ್ಕಳಿಗೆ ನಾವಾದರೂ ಏನಂತ ಹೇಳೋಣ? ಈ ಮಕ್ಕಳು ಓದುವದರಲ್ಲಿ ಮಾತ್ರವಲ್ಲ ಎಲ್ಲ ಚಟುವಟಿಕೆಗಳಲ್ಲೂ ಮುಂದಿದ್ದರು.

ಒಂದು ದಿನ ನನಗೆ ಈ ಮಕ್ಕಳು, ಅವರ ಸೂಪರ್ ಮ್ಯಾನ್ ಹುಚ್ಚಿನಿಂದ ಸಾಕಾಗಿ ಹೋಯಿತು. ಸಹನೆ ಕಳೆದುಕೊಂಡು ಸಿಕ್ಕಾಪಟ್ಟೆ ರೇಗಿ ಬಿಟ್ಟೆ.

'ಅಂಕಲ್! ಸೂಪರ್ ಮ್ಯಾನ್ ಅಂದರೆ ದೇವರು ಇದ್ದ ಹಾಗೆ. ಅವನು ಏನು ಬೇಕಾದರೂ ಮಾಡಬಲ್ಲ, ದೇವರ ಹಾಗೆ. ಗೊತ್ತೇನು!?' ಅಂದು, ರಪ್ ಅಂತ ತಿರುಗಿ ಉತ್ತರಿಸಿದ್ದ ಗಾಗಿ ನನ್ನ ಬಾಯಿ ಮುಚ್ಚಿಸಿದ್ದಳು. ಭಯಂಕರ ಚುರುಕು ಹುಡುಗಿ ಅವಳು.

ಗಾಗಿಗೆ ಕೇವಲ ಒಂಬತ್ತು ವರ್ಷ ವಯಸ್ಸಾಗಿತ್ತು. ಆಗ ಅವಳಿಗೆ ಕ್ಯಾನ್ಸರ್ ಅಂತ ಗೊತ್ತಾಯಿತು. ಮೂಳೆ ಕ್ಯಾನ್ಸರ್. ಅಂದಿನಿಂದ ಅವಳ ಗೆಳತಿಯರಾದ ಪುಗ್ಗಿ ಮತ್ತು ಬುಚ್ಕಿಯರ ಪರಿಸ್ಥಿತಿ ಪಾಪ. ಪುಗ್ಗಿ, ಅಂದರೆ ಬಸು ಭಟ್ಟಾಚಾರ್ಯನ ಮಗಳು. ನಾನು, ವಿಕಾಸ್, ಬಸು ಮೂವರೂ ಚಿತ್ರರಂಗದವರಾಗಿದ್ದರಿಂದ ನಮ್ಮ ಮಕ್ಕಳು ಸಹ ಫ್ರೆಂಡ್ಸ್. ನಮ್ಮ ಮೂವರಲ್ಲಿ ಒಬ್ಬರ ಮನೆಯಲ್ಲಿ ಮೂರೂ ಮಕ್ಕಳ ಠಿಕಾಣಿ. ಮತ್ತೆ ನಮ್ಮ ಮನೆ ಸ್ವಲ್ಪ ದೊಡ್ಡದಿದ್ದು, ಇಂಡಿಪೆಂಡೆಂಟ್ ಇದ್ದಿದ್ದರಿಂದ ನಮ್ಮ ಮನೆ ಆ ಮಕ್ಕಳಿಗೆ ಆಡುವ ಮೈದಾನವಾಗಿ ಬಿಟ್ಟಿತ್ತು.

ಒಮ್ಮೆ ನಾವೆಲ್ಲ ಕೂಡಿ ಬೆಂಗಳೂರಿಗೆ ಹೋಗಿದ್ದೆವು. ಗಾಗಿಯ ಅಪ್ಪ ವಿಕಾಸನಿಗೆ ಈಜು ಅಂದರೆ ತುಂಬ ಇಷ್ಟ. ಅವನು ತನ್ನ ಫ್ರೀ ಟೈಮ್ ಎಲ್ಲ ಈಜುಕೊಳದಲ್ಲಿಯೇ ಕಳೆಯುತ್ತಿದ್ದ. ಮಕ್ಕಳಿಗೂ ಈಜು ಕಲಿಸುತ್ತಿದ್ದ.

ವಿಕಾಸ್ ಸ್ವಲ್ಪ ಧಪ್ಪಗಿದ್ದ. 'ಪಪ್ಪಾ, ಇಷ್ಟು ಧಪ್ಪಗಿದ್ದೀಯ. ಅದು ಹೇಗೆ ನೀನು ನೀರಲ್ಲಿ ಮುಳುಗಿ ಹೊಗೋದಿಲ್ಲ? ಹಾಂ?' ಅಂತ ಗಾಗಿಯ ಪ್ರಶ್ನೆ.

'ನೀರು ತುಂಬ ಶಕ್ತಿಶಾಲಿಯಾಗಿದೆ, ಕಂದಾ. ದೊಡ್ಡ ದೊಡ್ಡ ಹಡಗುಗಳನ್ನೂ ಸಹ ಅದು ಎತ್ತಿ ಹಿಡಿಯಬಲ್ಲದು. ಗೊತ್ತಾ?' ಅಂತ ಅಪ್ಪ ವಿಕಾಸನ ವಿವರಣೆ.

'ಹಾಗಿದ್ರೆ ನೀರಲ್ಲಿ ಹಾಕಿದರೆ ನನ್ನ ರಿಸ್ಟ್ ವಾಚ್ ಯಾಕೆ ಮುಳುಗಿಹೋಗುತ್ತದೆ!?' ಅಂತ ಗಾಗಿಯ ಭಯಂಕರ ಮರುಪ್ರಶ್ನೆ.

ಇದಕ್ಕೆ ವಿಕಾಸನ ಹತ್ತಿರ ಉತ್ತರವಿರಲಿಲ್ಲ. ಅವನು ಪತ್ನಿ ಅರುಣಾಳತ್ತ ನೋಡಿದ. ಆಕೆ ಬಿದ್ದು ಬಿದ್ದು ನಕ್ಕು ಬಿಟ್ಟಳು. ಮಕ್ಕಳೆಲ್ಲರ ಮುಂದೆ ಅಪಮಾನವಾದಂತಾಗಿ ಮಳ್ಳ ಮುಖ ಮಾಡಿದ ವಿಕಾಸ್.

ಆವತ್ತು ಕಾಲು ನೋವು ಅಂತ ಗಾಗಿ ಯಾಕೋ ಸ್ವಲ್ಪ ಕುಂಟುತ್ತಿದ್ದಳು. ಮುಂದಾಗಲಿರುವ ಭಯಾನಕ ದುರಂತಕ್ಕೆ ಅದು ಸೂಚನೆಯಾಗಿತ್ತು.

ಮುಂದೆ ಗಾಗಿಗೆ ಓಡಾಡಲು ತುಂಬ ತೊಂದರೆಯಾಗತೊಡಗಿತು. ಚಿಕಿತ್ಸೆ ಆರಂಭವಾಯಿತು. ಬೇರೆ ಬೇರೆ ತರಹದ ವಿಶೇಷ ಪಾದರಕ್ಷೆಗಳನ್ನು ಮಾಡಿಸಿ, ಹಾಕಿಸಿ, ನೋಡಲಾಯಿತು. ಆದರೆ ಆಕೆಯ ಕಾಲುಗಳಲ್ಲಿಯ ನೋವು ಮಾತ್ರ ಏನೂ ಮಾಡಿದರೂ ಕಮ್ಮಿಯಾಗಲಿಲ್ಲ. ಅವಳಿಗೆ ಕಥಕ್ ನೃತ್ಯ ಕಲಿಯುವದೆಂದರೆ ತುಂಬ ಇಷ್ಟ. ಕಾಲು ನೋವಿಗೆ ಮೊದಲ ಬಲಿಯೇ ಕಥಕ್. ನೃತ್ಯ  ಮಾಡುವದನ್ನು ಬಿಟ್ಟರೂ ಗಾಗಿ ನೃತ್ಯದ ಸಂಗೀತವನ್ನು ಬಾಯಲ್ಲೇ ಸದಾ ಗುಣುಗುಣಿಸುತ್ತಲೇ ಇರುತ್ತಿದ್ದಳು. ಹೋದಲ್ಲಿ, ಬಂದಲ್ಲಿ, 'ಥಕ ಥೈ, ಥಕ ಥೈ'

ಗಾಗಿಯ ರಕ್ತದಲ್ಲಿ ಸಂಗೀತವಿತ್ತು. ಅವಳ ತಂದೆ ವಿಕಾಸ್ ದೇಸಾಯಿಯ ಚಿಕ್ಕಪ್ಪ ವಸಂತ್ ದೇಸಾಯಿ ಹಿಂದಿ ಚಿತ್ರರಂಗದ ದೊಡ್ಡ ಸಂಗೀತ ನಿರ್ದೇಶಕರರಾಗಿದ್ದರು. ಗಾಗಿಯ ಕಾಲುಗಳಲ್ಲಿ ನೋವು ಪದೇ ಪದೇ ನಿರಂತರವಾಗಿ ಬರತೊಡಗಿತು. ಶಾಲೆ ತಪ್ಪುವದು ಜಾಸ್ತಿಯಾಯಿತು. ಶಾಲೆಗಿಂತ ಆಕೆ ಹೆಚ್ಚಾಗಿ ಮಿಸ್ ಮಾಡಿಕೊಂಡಿದ್ದು ಆಕೆಯ ಕಥಕ್ ನೃತ್ಯದ ಕ್ಲಾಸುಗಳನ್ನು. ಆಕೆಯ ತಾಯಿ ಅರುಣಾ ಖಾಸಗಿಯಾಗಿ ಮನೆ ಪಾಠಕ್ಕೆ ಅಂತ ಕಥಕ್ ನೃತ್ಯ ಗುರುವೊಬ್ಬರನ್ನು ನೇಮಕ ಮಾಡಿದಳು. ಅದೇನೇ ಮಾಡಿದರೂ ಗಾಗಿ ನೃತ್ಯದ ಗೆಜ್ಜೆ ಕಟ್ಟಿಕೊಂಡು, ವೇಷ ಭೂಷಣ ಧರಿಸಿ, ಮನೆತುಂಬ ನಡೆದಾಡಲು ಮಾತ್ರ ಶಕ್ಯಳಾದಳು. ಕಾಲು ನೋವಿನ ಕಾರಣ ಮುಂದೆಂದೂ ಆಕೆ ನೃತ್ಯ ಮಾಡಲೇ ಇಲ್ಲ.  ಅದೇ ಆಕೆಯ ಕೊರಗು.

ಗಾಗಿಯನ್ನು ಗಮನಿಸುತ್ತಿದ್ದ ಡಾ. ಅಧಿಕಾರಿಗೆ ಬೇರೆ ಏನೋ ವಿಚಾರ ಬಂತು. ನೋವು ಕಾಲಲ್ಲಿದ್ದರೂ ಮೂಲ ಬೇರೆ ಎಲ್ಲೋ ಇರಬೇಕು ಅನ್ನಿಸಿತು. ಮೊಣಕಾಲಿನ ಕೆಳಗಿನ ಮೂಳೆಯ ನೆಣದಲ್ಲಿ ಏನಾದರೂ ಹೆಚ್ಚು ಕಮ್ಮಿಯಾಗಿ ನೋವು ಬರುತ್ತಿರಬಹುದೇ? ಅಂತ ಒಂದು ಊಹೆ ಅವರದು. ಎಕ್ಸ್-ರೇ ನಲ್ಲಿ ಏನೂ ನಿಖರವಾಗಿ ತಿಳಿದು ಬರಲಿಲ್ಲ. ಹಾಗಾಗಿ ಹೆಚ್ಚಿನ ಬೇರೆ ಬೇರೆ ಪರೀಕ್ಷೆ ಮಾಡಬೇಕಾಯಿತು. ಈಗ ವಿಕಾಸ್ ತನ್ನ ಮನೆ ಬಿಟ್ಟು, ಚಿಕ್ಕಪ್ಪ ವಸಂತ್ ದೇಸಾಯಿ ಅವರ ಮನೆಗೆ ಶಿಫ್ಟ್ ಮಾಡಿದ. ಅವರ ಮನೆ ಜಸಲೋಕ್ ಆಸ್ಪತ್ರೆಯ ಎದುರೇ ಇದ್ದಿದ್ದರಿಂದ ಅದು ಗಾಗಿಯ ವೈದ್ಯಕೀಯ ಅಗತ್ಯತೆಗಳಿಗೆ ಅನುಕೂಲಕರವಾಗಿತ್ತು.

ಡಾ. ಅಧಿಕಾರಿಗೆ ಗಾಗಿಯ ಪರಿಸ್ಥಿತಿ ಬಗ್ಗೆ ಒಂದು ಪಕ್ಕಾ ಐಡಿಯಾ ಬಂದು ಬಿಟ್ಟಿತ್ತು. ಆದರೂ ಇನ್ನೂ ಒಂದಿಷ್ಟು ಟೆಸ್ಟ್ ಮಾಡಿಬಿಡೋಣ ಅಂತ ಅಂದುಕೊಂಡರು. ತಾವು ಮಾಡಿದ diagnosis ತಪ್ಪೇ ಆಗಿರಲಿ ಅಂತ ಅವರೇ ಆಶಿಸುತ್ತಿದ್ದರು. ಆದರೆ ಒಂದು ದಿವಸ ಗಾಗಿಯ ಮೆಡಿಕಲ್ ರಿಪೋರ್ಟ್ ಗಳನ್ನು ಗಾಗಿಯ ಪಾಲಕರಾದ ಅರುಣಾ ಮತ್ತು ವಿಕಾಸರ ಮುಂದೆ ಇಡಲೇ ಬೇಕಾಯಿತು. ಇಟ್ಟರು. ಹೇಳಿದರು, ಕ್ಯಾನ್ಸರ್ ಇದೆ, ಅಂತ.

ಗಾಗಿ ಡಾಕ್ಟರ ಚೇಂಬರ್ ಹೊರಗೆ ಕೂತಿದ್ದಳು. ಒಳಗೆ ಹೋಗಿ, ವೈದ್ಯರು ಹೇಳಿದ್ದನ್ನು ಕೇಳಿದ ಅರುಣಾ, ವಿಕಾಸ್ ದೊಡ್ಡ ಶಾಕ್ ಆಗಿ, ದಂಗು ಹೊಡೆದು ಕೂತರು. ಈಗ ಯಾವದೇ ಸಂಶಯವಿರಲಿಲ್ಲ. ಗಾಗಿಗೆ ಕ್ಯಾನ್ಸರ್ ಇರುವದು ಪಕ್ಕಾ ಆಗಿಹೋಗಿತ್ತು. ಡಾಕ್ಟರ್ ಚೇಂಬರ್ ಬಿಡುವ ಮೊದಲು ದಂಪತಿ ಪರಸ್ಪರ ಆಣೆ ಹಾಕಿ, ಮಾತಾಡಿಕೊಂಡರು, 'ಗಾಗಿಯ ಮುಂದೆ ಮಾತ್ರ ಕ್ಯಾನ್ಸರ್ ಇರುವ ವಿಷಯ ಎಂದೂ ಹೇಳುವದಿಲ್ಲ,' ಅಂತ. ಬಹಳ ಧೈರ್ಯದಿಂದಲೇ ಅಂತಹ ದುಸ್ತರ ಪರಿಸ್ಥಿತಿಯನ್ನು ಎದುರಿಸಿದರು ಅವರು. ಗಾಗಿಯ ಮುಂದೆ, ಒಂದೇ ಒಂದು ಸಲ, ಒಂದೇ ಒಂದು ಹನಿ ಕಣ್ಣೀರು ಹಾಕಿದ್ದನ್ನು ನಾವ್ಯಾರೂ ನೋಡಿಲ್ಲ. ತಾವಿಬ್ಬರೇ ಗಂಡ ಹೆಂಡತಿ ಇದ್ದಾಗ ಅದೆಷ್ಟು ನೊಂದುಕೊಂಡರೋ, ಅದೆಷ್ಟು ರೋದಿಸಿದರೋ, ಪಾಪ ಆ ದಂಪತಿ.

ತರಹ ತರಹದ ಆಟಿಕೆಗಳು, ವೀಡಿಯೊ ಗೇಮ್ ಗಳು, ವೀಡಿಯೊ ಕ್ಯಾಸೆಟ್ಟುಗಳು, ಇತ್ಯಾದಿಗಳು ಬಂದು ಬಂದು ಗಾಗಿಯ ಕೋಣೆ ತುಂಬ ತೊಡಗಿದವು. ನೆಂಟರು, ಇಷ್ಟರು, ಹಳೇ ಗೆಳತಿಯರು ಸದಾ ಬಂದು ಗಾಗಿ ಜೊತೆ ಸಮಯ ಕಳೆಯತೊಡಗಿದರು. ಇದರಿಂದಾಗಿ ಕೆಲವೇ ದಿನಗಳಲ್ಲಿ ಗಾಗಿ ಅಂತಾಕ್ಷರಿ ಆಡುವದರಲ್ಲಿ ನಿಪುಣೆಯಾಗಿ ಬಿಟ್ಟಳು. ತನ್ನ ಕಾಯಿಲೆ ಬಗ್ಗೆ ತಲೆಕೆಡಿಸಿಕೊಂಡು ಕೂಡಲು ಗಾಗಿಯ ಬಳಿ ಒಂದು ಕ್ಷಣವಿರುತ್ತಿರಲಿಲ್ಲ. ಭರಿಸಲು ಅಸಾಧ್ಯ ಅನ್ನುವಂತಹ ಆಸ್ಪತ್ರೆಯ ವಾತಾವರಣವನ್ನು ಗಾಗಿಯ ಕೋಣೆಗೆ ಒಳಗೆ ಒಂದು ಸ್ವಲ್ಪವೂ ಬಿಟ್ಟುಕೊಂಡಿರಲಿಲ್ಲ ಗಾಗಿಯ ತಂದೆ ತಾಯಿ.

ಯಾವಾಗ ಔಷಧಗಳು ಕೆಲಸ ಮಾಡುವದನ್ನು ನಿಲ್ಲಿಸಿದವೋ ಆವಾಗ ಬೇರೆ ನಿರ್ವಾಹವಿಲ್ಲದೆ ಗಾಗಿಯ ಕಾಲನ್ನು ಕತ್ತರಿಸಿಬೇಕೆಂದು ವೈದ್ಯರು ಹೇಳಿದರು . ಆವಾಗ ಅರುಣಾ ಮತ್ತು ವಿಕಾಸ್ ಗಾಗಿಯನ್ನು ಅಮೇರಿಕಾಗೆ ಕರೆದುಕೊಂಡು ಹೋದರು. ಆವಾಗ ಗಾಗಿಗೂ ಗೊತ್ತಾಗಿ ಹೋಯಿತು, 'ತನಗೆ ಕ್ಯಾನ್ಸರ್ ಇದೆ,' ಅಂತ.

'ಆದರೆ ಕಾಲಿನಲ್ಲಿ ಯಾಕೆ ಕ್ಯಾನ್ಸರ್ ಪಪ್ಪಾ?' ಅಂತ ಗಾಗಿಯ ಪ್ರಶ್ನೆ.

'ಅದು ಮೂಳೆಯ ಕ್ಯಾನ್ಸರ್ ಕಂದಾ. ಕಾಲಿನ ಮೂಳೆಯಲ್ಲಿದೆ. ಇಲ್ಲಿನ ಅಮೇರಿಕಾ ಡಾಕ್ಟರಗಳು ಕಾಲ ಮೂಳೆಯನ್ನು ಆಪರೇಷನ್ ಮಾಡಿ, ಮೂಳೆಯನ್ನು ಕೆರೆದು, ಸ್ವಚ್ಛ ಮಾಡಿ, ಕ್ಯಾನ್ಸರ್ ಬೇರೆ ಕಡೆ ಹರಡದಂತೆ ಮಾಡುತ್ತಾರೆ,' ಅಂತ ಹೇಳಿದ ಅಪ್ಪ ವಿಕಾಸ್.

ಅಮೇರಿಕಾದಲ್ಲಿ ಗಾಗಿಯ ಚಿಕಿತ್ಸೆ ಸುಮಾರು ತಿಂಗಳುಗಳ ಕಾಲ ನಡೆಯಿತು. ಕೆಮೋಥೆರಪಿಯಿಂದಾಗಿ ಆಕೆಯ ತಲೆ ಮೇಲಿನ ಕೂದಲೆಲ್ಲ ಉದುರಿ ಹೋದವು. ಆಕೆಗೆ ತನ್ನ ಬೋಳು ತಲೆ ನೋಡುವದು, ಮುಟ್ಟಿಕೊಳ್ಳುವದು ಅಂದರೆ ಒಂದು ತರಹ ಆತಂಕ, ಹೆದರಿಕೆ. ಅರುಣಾ, ವಿಕಾಸ್ ಆಕೆಯ ಹೆದರಿಕೆಗಳನ್ನು, ಆತಂಕಗಳನ್ನು ನಕ್ಕು ಹಾರಿಸಿಬಿಡಲು ಯತ್ನ ಮಾಡಿದರು.

'ಏ, ಗಾಗಿ, ಬೋಡಿ ಸುಂದರಿ, ಏನೂ ಹೆದರಬೇಡ. ಇನ್ನು ಕೆಲವೇ ಕೆಲವು ತಿಂಗಳಲ್ಲಿ ನಿನ್ನ ಕೂದಲು ಮತ್ತೆ ಬರುತ್ತವೆ. ಚಿಂತೆ ಬೇಡ,' ಅಂತ ಏನೋ ಭರವಸೆ ಕೊಡುತ್ತಿದ್ದ ಪಾಲಕರು, 'ಮತ್ತೆ ನಮಗೆ ನಿನ್ನ ಇದೇ ಬೋಡಿ ಲುಕ್ ತುಂಬ ಇಷ್ಟ. ಈಗ ಇದೇ ಫ್ಯಾಷನ್. ಈಗೆಲ್ಲ ಇದೇ ಟ್ರೆಂಡ್. ಗೊತ್ತಿಲ್ಲವೇ ನಿನಗೆ ಪುಟ್ಟೀ?' ಅಂತ ಏನೇನೋ ಪೂಸಿ ಹೊಡೆಯುತ್ತಿದ್ದರು.

'ಹಾ! ಹಾ! ನಟ ಯೂಲ್ ಬ್ರೈನೆರ್ ತರಹಾನೇ? ಅವನೇ ತಾನೇ ಬೋಡಾ?' ಅಂತ ಗಾಗಿ ನಕ್ಕು ಕೇಳುತ್ತಿದ್ದಳು.

ನನಗನಿಸುವ ಹಾಗೆ ಗಾಗಿಗೆ ಆಕೆಯ ಪಾಲಕರಲ್ಲಿ ಪೂರ್ತಿ ವಿಶ್ವಾಸವಿತ್ತು. ಅವರು ಕೊಡುತ್ತಿದ್ದ ಅಶ್ವಾಸನೆಯಂತೆ ತಾನು ಬೇಗನೆ ಗುಣಮುಖಳಾಗುತ್ತೇನೆ ಅಂತ ತಿಳಿದುಕೊಂಡಿದ್ದಳು ಆಕೆ. ಮತ್ತೆ ಅಮೇರಿಕಾದಲ್ಲಿ ಡಾಕ್ಟರಗಳು ಆಪರೇಷನ್ ಮಾಡಿ, ಕಾಲು ಕತ್ತರಿಸದೇ, ಬ್ಯಾಂಡೇಜ್ ಕಟ್ಟಿ, ನಕ್ಕಾಗ ಆಕೆಯ ವಿಶ್ವಾಸ ದುಪ್ಪಟ್ಟಾಗಿತ್ತು.

ಆದರೆ ಅಮೇರಿಕಾದಿಂದ ಬಂದ ಕೆಲವೇ ದಿನಗಳಲ್ಲಿ ಆಕೆಯ ಕಾಲು ಕೊಳೆಯಲು ಆರಂಭಿಸಿ ಬಿಟ್ಟಿತು. ಸಿಕ್ಕಾಪಟ್ಟೆ ನೋವಿನಲ್ಲಿದ್ದಳು. ಈ ಸಲ ಮೊದಲಿನ ಡಾಕ್ಟರ್ ಬಿಟ್ಟು ಬೇರೆ ಯಾರೋ ಡಾಕ್ಟರನ್ನು ನೋಡಿದರು. ಹೊಸ ಡಾಕ್ಟರ್ ಆಕೆಯ ಕಾಲಿನ ಬ್ಯಾಂಡೇಜ್ ಕತ್ತರಿಸಿ, ತೆಗೆಸಿ ನೋಡಿದ. ಕಾಲು ಕೀವಿನಿಂದ ತುಂಬಿ ಹೋಗಿತ್ತು. ಯಾಕೋ ಈಗ ಹೊಸ ಡಾಕ್ಟರ ಮತ್ತು ತಂಡಕ್ಕೆ ಇದು ಕ್ಯಾನ್ಸರ್ ಇರಲಿಕ್ಕಿಲ್ಲ ಅನ್ನಿಸತೊಡಗಿತು. ಆದರೆ ಯಾವ ಟ್ರೀಟ್ಮೆಂಟಗಳೂ ಕೆಲಸ ಮಾಡುತ್ತಿರಲಿಲ್ಲ. ಡಾಕ್ಟರಗಳು, ಔಷದಗಳು ಬದಲಾಗುತ್ತವೇ ಹೋದವು. ಪರಿಣಾಮ ಮಾತ್ರ ನಾಸ್ತಿ. ಎಲ್ಲಾದರೂ ಇಡೀ ದೇಹಕ್ಕೇ ಸೋಂಕು ಹರಡಿ ಬಿಟ್ಟೀತು ಅಂತ ಹೆದರಿಕೆಯಲ್ಲಿ ಡಾಕ್ಟರಗಳು ಆಕೆಯ ಕಾಲು ಕತ್ತರಿಸಿದರು. ಕತ್ತರಿಸಿದ ಕಾಲನ್ನು ವಿದ್ಯುತ್ ಚಿತಾಗಾರದಲ್ಲಿ ಸುಟ್ಟು, ಮೃತರಿಗೆ ಮಾಡುವ ಸಂಸ್ಕಾರ ಎಲ್ಲವನ್ನೂ ಸರಿಯಾಗಿ ಮಾಡಲಾಯಿತು.

ಒಂದು ದಿನ ಮಲಗಿದ್ದಾಗ, ಛಾವಣಿ ನೋಡುತ್ತ, ತಣ್ಣನೆಯ ದನಿಯಲ್ಲಿ ಗಾಗಿ ಕೇಳಿದಳು, 'ಪಪ್ಪಾ, ದೇವರು ನನಗೇಕೆ ಹೀಗೆ ಶಿಕ್ಷೆ ಕೊಡುತ್ತಿದ್ದಾನೆ? ನಾನ್ಯಾವ ತಪ್ಪೂ ಮಾಡಿಲ್ಲ.'

ತಾಯಿ ಅರುಣಾ ಗಾಗಿಯ ಕೋಣೆಯಲ್ಲಿ ಕೃಷ್ಣನ ಒಂದು ಚಿಕ್ಕ ಮೂರ್ತಿ ತಂದಿಟ್ಟಿದ್ದಳು. ಮೂರ್ತಿಯ ಮುಂದೆ ಹಗಲೂ ರಾತ್ರಿ ನಿರಂತರವಾಗಿ ದೀಪ ಉರಿಯುತ್ತಿತ್ತು. ವ್ರತದ ರೀತಿಯಲ್ಲಿ ಅರುಣಾ, ವಿಕಾಸ್ ಮೀನು ಮಾಂಸ ತಿನ್ನುವದನ್ನು ಬಿಟ್ಟಿದ್ದರು. ಆದರೆ ಗಾಗಿ ಆಕೆಗೆ ತುಂಬ ಇಷ್ಟವಾಗುತ್ತಿದ್ದ ಕಬಾಬ್, ಟಿಕ್ಕಾ ಕೇಳಿದರೆ ಮಾತ್ರ ಎಂದೂ ಇಲ್ಲ ಎನ್ನುತ್ತಿರಲಿಲ್ಲ. ಇದಕ್ಕೆ ಡಾಕ್ಟರುಗಳ ಅನುಮತಿ ತೆಗೆದುಕೊಂಡಿದ್ದರು.

ಒಂದು ದಿನ ಗಾಗಿಯ ಕೋಣೆಗೆ ಮತ್ತೂ ಒಬ್ಬ ಹೊಸ ಡಾಕ್ಟರ್ ಎಂಟ್ರಿ ಕೊಟ್ಟ. ಅದೆಷ್ಟು ಡಾಕ್ಟರಗಳನ್ನು ನೋಡಿದ್ದಳೋ ಆಕೆ.

'ಪಪ್ಪಾ, ಮತ್ತೆ ಡಾಕ್ಟರ್ ಬದಲು ಮಾಡಿದೆಯಾ?' ಅಂತ ಕೇಳಿದಳು.

'ಹೌದು ಮಗೂ, ಮೊದಲಿನ ಡಾಕ್ಟರ್ ಬಳಿ ಏನೂ ಮಾಡಲಾಗಲಿಲ್ಲ,' ಅಂತ ವಿಷಾದದಿಂದ ಹೇಳಿದ ವಿಕಾಸ್.

ತನ್ನ ಕೋಣೆಯಲ್ಲಿದ್ದ ಕೃಷ್ಣನ ಮೂರ್ತಿಯನ್ನು ನೋಡುತ್ತ ಗಾಗಿ ಹೇಳಿದಳು, 'ಈ ದೇವರೂ ಅಷ್ಟೇ. ಏನೂ ಮಾಡಲಾರ. ಮತ್ತೊಂದು ಬೇರೆ ದೇವರಿಲ್ಲವೇ ಪಪ್ಪಾ?'

ಸಾಮಾನ್ಯವಾಗಿ ಅರುಣಾ ಎಂದೂ ಹೀಗೆ ಮಾತಾಡಿದವಳೇ ಅಲ್ಲ. ಅವತ್ಯಾಕೋ ಒಂದು ಮಾತು ಅಂದು ಬಿಟ್ಟಳು, 'ದೇವರು ಸಹಿತ ಸೂಪರ್ ಮ್ಯಾನ್ ಇದ್ದ ಹಾಗೆ ಕಂದಾ. ಪುಸ್ತಕದಲ್ಲಿ ಮಾತ್ರ ಅವನೂ ಸಹ ಏನು ಬೇಕಾದರೂ ಮಾಡಬಲ್ಲ.'

ಮುಂದೆ ಗಾಗಿ ಹೆಚ್ಚು ದಿನ ಬದುಕಲಿಲ್ಲ.

ಗಾಗಿಯನ್ನು ಉಳಿಸಿಕೊಳ್ಳಲಾಗದ ದುಃಖತಪ್ತ ಸೂಪರ್ ಮ್ಯಾನ್


* ಇದು ಗುಲ್ಜಾರರ ಅಠಣ್ಣಿ (ಎಂಟಾಣೆ) ಎಂಬ ಕಥಾಸಂಕಲನದಿಂದ ಆಯ್ದ ಕಥೆ. ಅದೇ ಕಥಾಸಂಕಲನದ ಇನ್ನೊಂದು ಕಥೆ LoC ಯ ಅನುವಾದ ಇಲ್ಲಿದೆ ನೋಡಿ.

* ಇದೊಂದು ನೈಜ ಘಟನೆಗಳ ಮೇಲೆ ಆಧಾರಿತ ಕಥೆ ಅಂತ ಹೇಳಲು ಯಾವದೇ ಸಂದೇಹ ಇಲ್ಲ. ಇದರಲ್ಲಿ ಬರುವ ಅರುಣಾ ರಾಜೆ ಪಾಟೀಲ್, ವಿಕಾಸ್ ದೇಸಾಯಿ, ಬಸು ಭಟ್ಟಾಚಾರ್ಯ ಎಲ್ಲ ಸಿನಿಮಾ ಬಗ್ಗೆ ತಿಳಿದ ಎಲ್ಲರಿಗೂ ಗೊತ್ತಿರುವವರೇ. ಗಾಗಿಯ ತಾಯಿ ಅರುಣಾ ರಾಜೆ ಪಾಟೀಲ ಅನ್ನುವವರು ಹುಲಕೋಟಿ ಹುಲಿ, ಮಾಜಿ ಮಂತ್ರಿ, ದಿವಂಗತ ಶ್ರೀ ಕೆ. ಎಚ್. ಪಾಟೀಲರ ಪುತ್ರಿ ಅಂತ ಎಲ್ಲೋ ಓದಿದ ನೆನಪು. ಆ ಮಾಹಿತಿ ಸರಿಯಿದ್ದರೆ ಅವರು ಇಂದಿನ ಮಂತ್ರಿ ಶ್ರೀ ಎಚ್. ಕೆ. ಪಾಟೀಲರ ಸಹೋದರಿ.

2 comments:

ಮನಸಿನಮನೆಯವನು said...

ತುಂಬಾ ಭಾವುಕ ಲೇಖನ

Mahesh Hegade said...

ಓದಿ ಕಾಮೆಂಟ್ ಹಾಕಿದ್ದಕ್ಕೆ ತುಂಬ ಧನ್ಯವಾದ.