Wednesday, April 08, 2015

ಸುಹಾನಾ ಸಫರ್ ಹೋಗಲು ಬೇಕು ಒಂದು, ಒಂದೇ, ಸಿಗರೇಟು

ಏನೋ ಸಮಾರಂಭ. ಶ್ರಾದ್ಧವೇ ಇರಬೇಕು. ಗೆಳತಿಯರಿಬ್ಬರು ಊಟ ಮುಗಿಸಿ, ಹೊರಗೆ ಬಂದು, ಎಲೆಯಡಿಕೆ ಹಾಕುತ್ತ ಮಾತಾಡುತ್ತಿದ್ದರು. ಬಹಳ ವರ್ಷಗಳ ನಂತರ ಭೆಟ್ಟಿಯಾಗಿದ್ದರು. ಅದಕ್ಕೇ ಭಾಳ ಇತ್ತು ಮಾತಾಡೋದು, ಕಥೆ ಹೇಳೋದು.

'ನಿನ್ನ ಗಂಡ ಎಲ್ಲೇ? ನೋಡೇ ಇಲ್ಲ. ಏನು ಮಾಡ್ತಾರ ಅವರು?' ಅಂತ ಕೇಳಿದಳು ಒಬ್ಬಳು.

'ಹಾಂ! ಅಲ್ಲೆ ಇದ್ದಾರ ನೋಡು. ಓ ಅಲ್ಲೇ. ಅವರೇ. ಅವರು ಏನು ಮಾಡ್ತಾರ ಅಂದ್ರ........' ಅಂತ ಏನು ಕೆಲಸ ಮಾಡುತ್ತಾರೆ ಅಂತ ಹೇಳಬೇಕು ಅನ್ನುವಷ್ಟರಲ್ಲಿ ಮೊದಲು ಪ್ರಶ್ನೆ ಕೇಳಿದ ಗೆಳತಿ ಅಡ್ಡಬಾಯಿ ಹಾಕಿದಳು. ಕಿಸಬಾಯಿ ದಾಸಿ ಇರಬೇಕು ಅಕಿ. ಅಡ್ಡಡ್ಡ ಮಾತಾಡಿಕೋತ್ತ.

'ಅವರೇ? ತಲಿ ಪೂರ ಬಾಲ್ಡಿ ಆದವರು ಒಬ್ಬರು ಹೊರಗ ಬಂದರು ನೋಡು. ಅವರೇ? ಹೊರಗ ಬಂದು ಅಲ್ಲೆ ಸ್ಟೈಲ್ ಆಗಿ ಸಿಗರೇಟ್ ಹಚ್ಚಿದರು. ಹಾಂ ಈಗ ಚೌಕಳಿ ಲುಂಗಿ ಮ್ಯಾಲೆ ಎತ್ತಿ ಕಟ್ಟಿಕೊಂಡರು. ಅವರೇ??? ಅವರ ನಿನ್ನ ಗಂಡ?' ಅಂತ ಕೇಳಿದಳು.

'ಹೂಂ. ಅವರೇ. ತಲಿ ನೀ ಹೇಳುವಷ್ಟು ಅಷ್ಟೆಲ್ಲ ಏನೂ ಬಾಲ್ಡಿ ಆಗಿಲ್ಲ ತೊಗೋವಾ. ಅವರ ಮಾರಿನೇ ಹಾಂಗ ಅದ. ಅವರ ಮನಿತನದಾದಾಗ ಎಲ್ಲರದ್ದೂ ಭಾಳ ದೊಡ್ಡ ಹಣಿ. ಅವರ ಅಜ್ಜನ ಹಣಿಯಂತೂ ಹಿಂದೆ ಕುತ್ತಿಗೆ ತನಕಾ ಹೋಗಿ ಬಿಟ್ಟಿತ್ತು. ಇವರದ್ದು ನಡು ತಲಿ ತನಕಾ ಹೋಗಿ ನಿಂತದೆ ಅಷ್ಟೇ. ಅದಕ್ಕೆ ನಮ್ಮ ಅಡ್ಡಹೆಸರು ಬ್ರಾದಾಣಿ. ಅಲ್ಲೆ ಪ್ಯಾಟ್ಯಾಗ ಮೆಸರ್ಸ್ ಬ್ರಾದಾಣಿ ಬ್ರದರ್ಸ್ ಅಂತ ಅಂಗಡಿ ಅದ ನೋಡು. ಅದು ಇವರ ಕಾಕಾಂದು,' ಅಂತ ಹೇಳಿ ದೊಡ್ಡ ಹಣೆ ವರ್ಸಸ್ ಬೋಳು ತಲೆ ಡಿಫೆಂಡ್ ಮಾಡಿಕೊಂಡಳು. ಅದು ಬೃಹತ್ ಹಣಿ, ಬೃಹದಾಣಿ ಆಗಿ ಮುಂದ ಯಾವದೋ ಕಾಲದಲ್ಲಿ ಬ್ರಾದಾಣಿ ಆಗಿ ಎಲ್ಲರೂ ಸಾಂಬ್ರಾಣಿ, ಗಿಂಬ್ರಾಣಿ ಇದ್ದಂಗ ಬ್ರಾದಾಣಿ ಸಹ ಒಂದು ಅಡ್ಡೆಸರು ಅಂತ ಮಾಡಿಕೊಂಡಾರ.

'ನಿನ್ನ ಗಂಡಾ ಸಿಗರೇಟ್ ಸೇದ್ತಾರ!? ಅವಯ್ಯಾ!' ಅಂತ ದೊಡ್ಡ ಬಾಯಿ ತೆಗೆದು ಆಶ್ಚರ್ಯ ವ್ಯಕ್ತಪಡಿಸಿದಳು ಮೊದಲು ಪ್ರಶ್ನೆ ಕೇಳಿದ ಗೆಳತಿ.

'ಯಾವಾಗಲೂ ಸೇದಂಗಿಲ್ಲ ಅವರು ಸಿಗರೇಟ್. ಆದ್ರ ಒಮ್ಮೆ ಮಾತ್ರ ಬೇಕೇ ಬೇಕು ನೋಡವಾ'

'ಯಾವಾಗ??????'

'ಸಂಡಾಸಕ್ಕೆ ಹೋಗೋವಾಗ. ಆವಾಗಂತೂ ಸಿಗರೇಟು ಬೇಕೇಬೇಕು'

'ಹಾಂಗೇನು?????'

'ಹೂಂ! ನಮ್ಮನಿಯವರು ಏನು ಮಾಡ್ತಾರ ಅಂತ ಕೇಳಿದಿ ನೀ. ನಾ ಹೇಳೋದ್ರಾಗ ಏನೇನೋ ಮಾತು ಬಂದು ಬಿಡ್ತು. ನಮ್ಮನಿಯವರು ಏನು ಮಾಡ್ತಾರ ಅಂದ್ರ......' ಅಂತ ಇಕಿ ಹೇಳಬೇಕು ಅನ್ನೋದ್ರಾಗ ಅಕಿ ದೀಡ ಪಂಡಿತ ಗೆಳತಿ ಮತ್ತ ಅಡ್ಡಬಾಯಿ ಹಾಕಿದಳು.

'ಗೊತ್ತಾತು ಬಿಡವಾ ನಿಮ್ಮನಿಯವರು ಏನು ಮಾಡ್ತಾರ ಅಂತ. ಸಂಡಾಸಕ್ಕೆ ಹೋಗೋವಾಗ ಮಾತ್ರ ಸಿಗರೇಟು ಹಚ್ಚತಾರ ಅಂತಿ. ಈಗ ಸಿಗರೇಟು ಹಚ್ಚ್ಯಾರ ಅಂದ್ರ ಏನು ಮಾಡ್ತಾರ ಅನ್ನೋದನ್ನ ನೀ ಬಿಡಿಸಿ ಹೇಳಬೇಕೇನು???? ಬ್ಯಾಡ ಬಿಡವಾ. ಗೊತ್ತಾತು ನನಗ. ನಾ ಬರ್ಲ್ಯಾ? ಇನ್ನೂ ಭಾಳ ಮಂದಿನ ಭೆಟ್ಟಿಯಾಗೋದು ಅದ,' ಅಂತ ಅನ್ಕೋತ್ತ ಆ ಗೆಳತಿ ಹೋಗಿಬಿಟ್ಟಳು.

'ಏ ನಮ್ಮನಿಯವರು ವೀಪಿ ವೀಪಿ ಅಂದ್ರ ವೈಸ್ ಪ್ರೆಸಿಡೆಂಟ್. ಅದೂ ದೊಡ್ಡ ಕಂಪನಿ ಒಳಗ' ಅಂತ ಇಕಿ ಕೂಗಿ ಕೂಗಿ ಹೇಳಿದಳು, 'ಮೊದಲಿನ ಗತೆ ಇನ್ನೂ ಹುಚ್ಚಿನೇ ಅದ. ಪೂರ್ತಿ ಹೇಳೋದನ್ನ ಕೇಳಿಸಿಕೊಳ್ಳೋದೇ ಇಲ್ಲ. ಆತುರಗೇಡಿ. ಬುದ್ಧಿಗೇಡಿ' ಅಂತ ಗೆಳತಿಯನ್ನು ಬೈದುಕೊಂಡಳು.

ಈ ಕಡೆ ಊಟದ ನಂತರ, ಸಿಗರೇಟು ಸೇದಿದಾಕ್ಷಣ, ಗಂಡ ಸಾಹೇಬರಿಗೆ ಬಸುರಿ ಹೊಟ್ಟೆಯೊಳಗೆ ಮಗು ಒದ್ದಂತಾಗಿ, ಪ್ರೆಷರ್ ಬಿಲ್ಡ್ ಅಪ್ ಆಗಿ, ಟಿನ್ ಡಬ್ಬಿಗೆ ನೀರು ತುಂಬಿಸ್ಕೊಂಡ ವೀಪಿ ಸಾಹೇಬರು ಪೀಪಿ ಹೊಡ್ಕೋತ್ತ, ಅಂದ್ರ ಬಾಯಗಿಂದ ಸೀಟಿ ಹೊಡ್ಕೋತ್ತ, ಗುಡ್ಡದ ಕಡೆ ಹೋಗಿ, ಯಾವದೋ ಪೊದೆ ಹಿಂದೆ ನಿರುಮ್ಮಳವಾಗಿ ಕೂತರು.

ಆಕಡೆಯಿಂದ ಮನೆಯಲ್ಲಿ ರೇಡಿಯೋದಲ್ಲಿ, ರೇಡಿಯೋ ಸಿಲೋನ್ ಸ್ಟೇಷನ್ ಸರಿಯಾಗಿ ಸಿಗದೇ, ಹಳೆ ಹಾಡೊಂದು ಅಪಭ್ರಂಶವಾಗಿ ಕೇಳಿಬಂತು.

'ಸುಹಾನಾ ಸಫರ್ ಔರ್ ಏ ಮೌಸಂ ಹಸೀ. ಸುಹಾನಾ ಸಫರ್ ಔರ್ ಏ ಮೌಸಂ ಹಸೀ.....' ವೀಪಿ ಸಾಹೇಬರು ಪೊದೆ ಹಿಂದೆ ಹೋಗಿ ಕೂತಿದ್ದನ್ನು ಗಮನಿಸಿದ್ದ ಕಿಡಿಗೇಡಿ ಗಿಂಡಿ ಮಾಣಿಯೊಬ್ಬ ಹಾಡನ್ನು ಮುಂದುವರೆಸಿದ, ಅವನದೇ ಕಿಡಿಗೇಡಿ ಶೈಲಿಯಲ್ಲಿ. 'ಏ ಕೌನ್ ಹಗತಾ ಹೈ ಝಾಡಿ ಮೇ ಚುಪ್ ಕರ್. ಬಾಹರ್ ಬೇಚೈನ್ ಹೈ ಕಿಸ್ಕಿ ಧುನ್ ಪರ. ಏ ಕೌನ್ ಹಗತಾ ಹೈ ಝಾಡಿ ಮೇ ಚುಪ್ ಕರ್. ಬಾಹರ್ ಬೇಚೈನ್ ಹೈ ಕಿಸಕಿ ಧುನ್ ಪರ.  ಕಭಿ ಪರ್ರ್ ಪರ್ರ್ ಕಭಿ ಟುರ್ರ್ ಟುರ್ರ್. ಸುಹಾನಾ ಸಫರ್ ಔರ್ ಏ ಮೌಸಂ ಹಸೀ. ಸುಹಾನಾ ಸಫರ್ ಔರ್ ಏ ಮೌಸಂ ಹಸೀ.....'

ಹಾಡು ಮುಗಿಯುವಷ್ಟರಲ್ಲಿ ಸಿಗರೇಟಿನಿಂದ ಆರಾಮವಾಗಿ ಸುಹಾನಾ ಸಫರ್ ಮುಗಿಸಿದ ವೀಪಿ ಬ್ರಾದಾಣಿ ಬಾಬು ಖಾಲಿ ಟಿನ್ ಡಬ್ಬಿಯನ್ನು ಲಯಾತ್ಮಕವಾಗಿ ತೂಗುತ್ತ, ಮತ್ತೆ ಶಾಸ್ತ್ರೀಯವಾಗಿ ಸಿಳ್ಳೆ ಹೊಡೆಯುತ್ತ, ಗುಡ್ಡ ಇಳಿದು ಬರುತ್ತಿತ್ತು. ಸುಹಾನಾ ಸಫರ್ ಮುಗಿಸಿಬಂದ ಹಸಿ (ಅಂದ್ರೆ ನಗೆ. ಕನ್ನಡ ಹಸಿ ಅಂದ್ರೆ ಒದ್ದೆ ಅಲ್ಲ ಮತ್ತೆ) ಬ್ರಾದಾಣಿ ಬಾಬುವಿನ ದೊಡ್ಡ ಹಣೆಯ ಸಣ್ಣ ಮುಖದಲ್ಲಿ ಮಿಸ್ ಮಾಡುವಂತೆಯೇ ಇರಲಿಲ್ಲ.

3 comments:

sunaath said...

ಹೆಣ್ಣು ಮಕ್ಕಳ ವರ್ತನೆಯನ್ನು ಭಾಳಾ ಚೆನ್ನಾಗಿ ಅಭ್ಯಾಸ ಮಾಡೀರಿ. ಛಲೋ ಹರಟಿ ಹೊಡೀತೀರಿ!

Mahesh Hegade said...

Thank you Sir. ಬ್ಲಾಗ್ ಒಳಗೇ ಹರಟಿ ಹೊಡೆಯೋದು ನೋಡ್ರೀ. ಹೊರಗ ಮಂದಿ ಸಿಗಂಗಿಲ್ಲ. ಸಿಕ್ಕರೂ ಏನು ಬೇಕಾಗಿದ್ದು ಅನಲಿಕ್ಕೂ ಆಗಂಗಿಲ್ಲ. :)

Mahesh Hegade said...

Thank you Sir. ಬ್ಲಾಗ್ ಒಳಗೇ ಹರಟಿ ಹೊಡೆಯೋದು ನೋಡ್ರೀ. ಹೊರಗ ಮಂದಿ ಸಿಗಂಗಿಲ್ಲ. ಸಿಕ್ಕರೂ ಏನು ಬೇಕಾಗಿದ್ದು ಅನಲಿಕ್ಕೂ ಆಗಂಗಿಲ್ಲ. :)