Wednesday, July 18, 2012

ಭಕ್ತವತ್ಸಲನಿಗೆ ಸಂಸಾರಿಗಳ ಮೇಲೆ ಎಕ್ಸಟ್ರಾ ದಯೆಯಂತೆ

ಮಹಾವಿಷ್ಣುವಿಗೆ ಒಂದು ದಿವಸ ಭೂಲೋಕದ ರೌಂಡ್ ಹೊಡೆದು ಬರುವ ಮನಸ್ಸಾಯಿತು. ಅವನ ವಾಹನವಾದ ಗರುಡ ಪಕ್ಷಿ ಒಡೆಯನ ಮನದಿಚ್ಛೆ ತಿಳಿದಂಗೆ ಬಂದು ನಿಂತು, ಕಿಕ್ಕಿಲ್ಲದೆ ಸ್ಟಾರ್ಟ್ ಆದ ಬೈಕ್ ನಂತೆ ಗುಡುಗುಡುತ್ತ ನಿಂತಿತು.

ಮಹಾವಿಷ್ಣು ತಯಾರಾಗಿ ಇನ್ನೇನು ಗರುಡನ್ನ ಹತ್ತಿ ರೈಟ್ ರೈಟ್ ಅನ್ನಬೇಕು ಅನ್ನುವದರಲ್ಲಿ ನಾರದ ಮಹರ್ಷಿಗಳು ಬರುತ್ತಿರುವದು ಕಂಡಿತು. ಕಂಪನಿಗೆ ಇರಲಿ, ಅವರೂ ಬರಲಿ ಅಂತ ವಿಷ್ಣು ಕಾಯತೊಡಗಿದ.

ನಾರದರು ಬಂದರು. ವಿಷ್ಣುವಿನ ಜೊತೆ ರೌಂಡ್ ಹೋಗಲು ಅವರಿಗೂ ಖುಷಿಯೇ.  ಗರುಡನ ಮೇಲೆ, ವಿಷ್ಣುವಿನ ಹಿಂದೆ, ತಂಬೂರಿ ಅಡ್ಡವಾಗಿ ಹಿಡಿದು ಕುಳಿತೇ ಬಿಟ್ಟರು ನಾರದರು. ವಿಷ್ಣು ರೈಟ್ ರೈಟ್ ಅಂದ ಕೂಡಲೇ ಗರುಡ ಟೇಕ್ ಆಫ್ ಆಗಿಯೇ ಬಿಟ್ಟಿತು.

ಭೂಲೋಕದ ರೌಂಡ್ ಶುರು ಆಯಿತು. ಏನೇನೂ ಚೇಂಜ್ ಆಗಿರಲಿಲ್ಲ. ಲಕ್ಷಾಂತರ ವರ್ಷಗಳೇ ಕಳೆದರೂ  ಹುಲುಮಾನವರು ಮಾಡಿದ್ದೇ ಮಾಡುತ್ತಾ, ದುಃಖ ಪಡುತ್ತ, ಯಾಕೆ ಯಾಕೆ ಅಂತ ಕೇಳುತ್ತಿದ್ದರೇ ವಿನಹ ದೇವರು ಕಲಿಸುತ್ತಿರುವ ಪಾಠ ಮಾತ್ರ ಕಲಿಯುತ್ತಿರಲಿಲ್ಲ. ವಿಷ್ಣು ಮಾತ್ರ ನಗು ನಗುತ್ತ ಎಲ್ಲವನ್ನೂ ಗಮನಿಸುತ್ತ ಭೂಲೋಕದ ವೀಕ್ಷಣೆ ಮಾಡುತ್ತಿದ್ದ.

ಯಾವನೋ ಗೃಹಸ್ಥ ಮುಂಜಾನೆ ಮುಂಜಾನೆ ಇಷ್ಟವಿಲ್ಲದ ಪತ್ನಿಗೆ ಸಹಸ್ರನಾಮಾರ್ಚನೆ ಮಾಡುತ್ತಲೇ ದೇವರಿಗೂ ಏನೋ ಒಂದು ತರಹದ ಪೂಜೆ, ಅರ್ಚನೆ ತರಹದ್ದು ಮಾಡುತ್ತಿದ್ದ. ಭಕ್ತಿಯಾಗಲಿ, ಏಕಾಗ್ರತೆಯಾಗಲಿ ಇದ್ದಂಗೆ ಕಾಣಲಿಲ್ಲ. ಆದರೂ ಶ್ರೀಮನ್ನಾರಾಯಣ ಸಂತೃಪ್ತನಾಗಿ ಅವನ ಮನದ ಬಯಕೆ ಪೂರ್ತಿಯಾಗಿ ಬೇಗನೇ ಆ ಪತ್ನಿಯಿಂದ ಡೈವೋರ್ಸ್ ಸಿಗಲಿ ಅಂತ ವರ ಕೊಟ್ಟ.

ಮುಂದೆ ಸ್ವಲ್ಪ ದೂರದಲ್ಲಿ ಬ್ರಹ್ಮಚಾರಿಯೊಬ್ಬ ನದಿಯಲ್ಲಿ ಅರ್ಘ್ಯ ಕೊಡುತ್ತ ಗಾಯತ್ರಿ ಮಂತ್ರ ಹೇಳುತ್ತಿದ್ದ. ಬಾಯಲ್ಲಿ ಹೇಳುತ್ತಿದ್ದುದು ಗಾಯತ್ರಿ ಮಂತ್ರ. ಮನಸ್ಸಿನಲ್ಲಿ ಬೇರೆನೇ ಗಾಯತ್ರಿ ಕುಣಿಯುತ್ತಿದ್ದಳು. ಹಿಂದಿನ ರಾತ್ರಿ ಮಾತ್ರ 'ಸ್ವದೇಶ್' ಸಿನಿಮಾ ನೋಡಿ ಬಂದಿದ್ದರಿಂದ ಗಾಯತ್ರಿ ಜೋಷಿ ಎಂಬ (ಪುರಾತನ) ಸುಂದರಿಯದೇ ಧ್ಯಾನ ಬ್ರಹ್ಮಚಾರಿಗೆ. ಆದರೂ ವಿಷ್ಣುವಿಗೆ ಮಾತ್ರ ಖುಷಿಯೋ ಖುಷಿ. ಬ್ರಾಹ್ಮಣರೆಲ್ಲ ಎಲ್ಲ ಬಿಟ್ಟಿರುವಾಗ ಇವನೊಬ್ಬನಾದರೂ ಸ್ವಲ್ಪ ಸಂಧ್ಯಾವಂದನೆ ಇತ್ಯಾದಿ ಮಾಡುತ್ತಿದ್ದಾನಲ್ಲ ಅಂತ ಸಂತೋಷವಾಯಿತು. ಆ ಮಾಣಿಗೆ- ಅಖಂಡ ಬ್ರಹ್ಮಚಾರಿಯಾಗು - ಎಂಬ ವರ(!!??) ಕೊಟ್ಟು ಮುಗುಳುನಕ್ಕ ನಾರಾಯಣ.

ಮುಂದೆ ಮುತ್ತೈದೆಯೊಬ್ಬಳು ತಲೆಗೆ ಸ್ನಾನ ಮಾಡಿ, ಮಡಿ ಬಿಳಿ ಒದ್ದೆ ಬಟ್ಟೆ ತಲೆಗೆ ಸುತ್ತಿಗೊಂಡು, ತುಳಸಿ ಪೂಜೆ ಮಾಡುವ ತರಾತುರಿಯಲ್ಲಿ ಇದ್ದಳು. ಅವಳಿಗೋ ಅರ್ಜೆಂಟ್ ನಲ್ಲಿ ತುಳಸಿ ಪೂಜೆ ಮುಗಿಸಿ ಬಾಯಲ್ಲಿ ತುಳಸಿ ಗುಟ್ಕಾ ಹಾಕಬೇಕು. ಗುಟ್ಕಾ ಪ್ರಿಯೆಯಾದ ಅವಳಿಗೆ ತುಳಸಿ ಗುಟ್ಕಾ ಸಿಗದೇ ತಲಬು ರೈಸ್ ಆಗಿ ತುಳಸಿ ಪೂಜೆ ಯಾವಾಗ ಮುಗಿದೀತೋ ಎಂಬ ಆತುರ. ಹೆಂಗೋ ತಲಬು ತರಬಿಕೊಂಡು ತುಳಸಿ ಪೂಜೆ ಮುಗಿಸಿ ಒಂದು ಕಪ್ ಚಾ ಕುಡದು ಗುಟ್ಕಾ ಹಾಕಿದಳು ನೋಡಿ, ಎಲ್ಲ ಬಯಕೆ ಪೂರ್ತಿಯಾದ ಭಾವ ಆ ಮುತ್ತೈದೆ ಮುಖದ ಮೇಲೆ. ವಿಷ್ಣು ನಕ್ಕ. ಅವಳಿಗೂ ವರ ಕೊಟ್ಟ. ಅವಳಿಗೆ ಎಂದೂ ಗುಟ್ಕಾ ಸಪ್ಲೈ  ಕಮ್ಮಿ ಆಗದೆ ಇರಲಿ ಅಂತ.

ನೋಡಿದ್ದು ಆಯಿತಲ್ಲ. ಭೂಲೋಕ ಜಾಸ್ತಿ ಏನೂ ಚೇಂಜ್ ಆಗೋದಿಲ್ಲ ಅಂತ ಹೇಳಿ ಒಂದು ಚಿಕ್ಕ ಬ್ರೇಕ್ ತೆಗೆದುಕೊಳ್ಳುವ ಅಂತ ವಿಷ್ಣು ಯೋಚಿಸಿ - ಹೋಪ್, ಹೋಪ್ -ಅಂದ. ಗರುಡ ಗಕ್ಕನೆ ನಿಂತೇ ಬಿಟ್ಟಿತು. ಹಿಂದೆ ಕುಳಿತ ನಾರದರು ಒಮ್ಮೆಲೆ ಗರುಡ ನಿಂತಿದ್ದರಿಂದ ಜೋಲಿ ಹೋಗಿ ಮುಂದೆ ಕುಳಿತಿದ್ದ ವಿಷ್ಣುವಿಗೆ ಮೈಲ್ಡ್ ಆಗಿ ಡಿಕ್ಕಿ ಕೊಟ್ಟರು.

ಇಬ್ಬರೂ ಇಳಿದರು. ಗರುಡನಿಗೆ ಚಾಯ್ ಪಾನಿ ಮಾಡಿಕೊಂಡು ಬಾ ಅಂತ ಕಳಿಸಿದ ವಿಷ್ಣು. ವಿಷ್ಣು ಮತ್ತು ನಾರದರು ಲೋಕಾಭಿರಾಮವಾಗಿ ಮಾತಾಡುತ್ತ ನಿಂತರು.

ಫ್ರೀ ಟೈಮ್ ಸಿಕ್ಕಾಗೆಲ್ಲ ವಿಷ್ಣುವನ್ನು ಅದು ಇದು ಕೇಳುವದು ನಾರದ ಮಹರ್ಷಿಗಳ ಜಾಯಮಾನ.

ಅವರೋ ಮಹರ್ಷಿಗಳು. ಇವತ್ತಿನ ಭೂಲೋಕದ ರೌಂಡ್ ಮತ್ತು ಕಾಟಾಚಾರಕ್ಕೆ ಪೂಜೆ, ಪುನಸ್ಕಾರ ಮಾಡುತ್ತಿರುವ ಮಾನವರನ್ನೂ ಸಹ ಮಹಾವಿಷ್ಣು ನಗು ನಗುತ್ತಲೇ ಆಶೀರ್ವದಿಸಿ ಅವರಿಗೆ ಅದು ಇದು ಅಂತ ಒಳ್ಳೆಯದಾಗುವಂತೆ ವರ ಕೊಟ್ಟಿದ್ದು ನಾರದರಿಗೆ ವಿಚಿತ್ರ ಎನಿಸಿತು. ಅಲ್ಲ.....ಈ ವಿಷ್ಣು ನಮ್ಮಂತಹ ಮಹಾ ಮಹಾ ಋಷಿ ಮುನಿಗಳ ತಪಸ್ಸಿಗೆ ಇಷ್ಟು ಬೇಗ ಏನೂ ಮಾಡುವದಿಲ್ಲ. ಆದ್ರೆ ಭೂಮಿ ಮೇಲೆ ಇರೊ ಮಾನವರು, ಅವರಿಗೆ ನೆನಪಾದಾಗ, ಅವರಿಗೆ ಸರಿ ಎನ್ನಿಸಿದ ರೀತಿಯಲ್ಲಿ ದೇವರ ಪೂಜೆ(?) ಅಂತಾದ್ದೇನೋ ಮಾಡಿದರೂ, ಈ ಯಪ್ಪಾ ಭಾಳ ಖುಷ್. ಇದೆಲ್ಲಿಯ ನ್ಯಾಯ? - ಅನ್ನಿಸಿತು ನಾರದರಿಗೆ.

ನಾರದರು ಕೇಳಿಯೇ ಬಿಟ್ಟರು.

ಭಗವಂತನೇ, ಈ ಭೂಲೋಕದ ಸಂಸಾರಿ ಮಾನವರ ಮೇಲೆ ನಿನಗೇಕಿಷ್ಟು ದಯೆ, ಕರುಣೆ ಮತ್ತು ಪ್ರೀತಿ? ಅವರೋ....ಒಂದು ಕ್ಷಣ ನಿನ್ನ ಸ್ಮರಿಸುತ್ತಾರೆ. ಒಳ್ಳೆಯವರು ಆಗುವ ನಿರ್ಧಾರ ಮಾಡುತ್ತಾರೆ. ಮರುಕ್ಷಣವೇ ಯಾವದೋ ಮಾಯೆಯ ಬಲೆಯಲ್ಲಿ ಸಿಕ್ಕಿ ದೇವರನ್ನೂ, ಮುಕ್ತಿಯ ಉನ್ನತ ಗುರಿಯನ್ನೂ ಮರತೇ ಬಿಡುತ್ತಾರೆ. ಹಾಗಿದ್ದಾಗಲೂ ನೀನು ಅವರನ್ನು ಯಾವಾಗಲೂ ಪ್ರೀತಿಯಿಂದ ಕಂಡು ಈ ಪರಿ ವರ ಮತ್ತೊಂದು ಕೊಟ್ಟು ಅವರನ್ನು ಮುಕ್ತಿಗೆ ಹತ್ತಿರ ಹತ್ತಿರ ತರುತ್ತಿಯಲ್ಲ. ಇದು ಸರಿಯೇ? ಅವರು ಮಾಡುವ ಪ್ರಯತ್ನ ಮತ್ತು ನೀನು ಅವರಿಗೇ ಕೊಡುವ ಪ್ರತಿಫಲದ ಅನುಪಾತ ಸರಿಯಿಲ್ಲ. ತುಂಬಾ ಜಾಸ್ತಿ ಆಯಿತು ಕೊಟ್ಟಿದ್ದು - ಅಂತ ಅಂದ ನಾರದರು ವಿಷ್ಣುವಿನ ಉತ್ತರಕ್ಕೆ ಕಾದರು.

ವಿಷ್ಣು ಭಗವಾನ್ ಉತ್ತರಿಸುವ  ರೀತಿಯೇ ಮಜಾ. ಒಂದು ಕ್ಷಣ ಯೋಚಿಸುವಂತೆ ಮುಖ ಮಾಡಿದರು.

ನಾರದರೆ,  ಇಲ್ಲಿ ನೋಡಿ. ಒಂದು ಕೆಲಸ ಮಾಡಿ. ಓ ಅಲ್ಲಿ ಒಂದು ದೇವಸ್ಥಾನ ಕಾಣುತ್ತಿದೆ ನೋಡಿ. ಅಲ್ಲಿ ಹೋಗಿ. ಹೋಗುವಾಗ ಈ ಹಣತೆ ದೀಪ ತೆಗೆದುಕೊಂಡು ಹೋಗಿ. ಈ ಹಣತೆ ಹಿಡಿದುಕೊಂಡು ಮೂರು ಸುತ್ತು ಪ್ರದಕ್ಷಿಣೆ ಹಾಕಿ ಬನ್ನಿ. ಆದರೆ ಯಾವದೇ ಕಾರಣಕ್ಕೆ ಹಣತೆಯ ದೀಪ ನಂದದಂತೆ ಕಾಳಜಿ ವಹಿಸಿ. ಅಷ್ಟು ಮಾಡಿ ಬನ್ನಿ. ನಿಮ್ಮ ಪ್ರಶ್ನೆಗೆ ಸಮಾಧಾನ ಹೇಳುವೆ - ಅಂದು ಸುಮ್ಮನಾದರು ವಿಷ್ಣು.

ನಾರದ ಹಚ್ಚಿದ ದೀಪದ ಹಣತೆ ಹಿಡಿದುಕೊಂಡು ಹೊರಟರು. ಇತ್ತ ಕಡೆ ವಿಷ್ಣು ತನ್ನ ಸಹಾಯಕನಾದ ವಾಯು ದೇವರನ್ನು ಕರೆದು - ಯೋ....ಜೋರಾಗಿ ಗಾಳಿ ಬೀಸೋ ಹಾಗೆ ಮಾಡಯ್ಯ.ಅಂತಹ  ಇಂತಹ ಗಾಳಿ ಅಲ್ಲ ಮತ್ತೆ. ಚಂಡ ಮಾರುತ, ಸುಂಟರಗಾಳಿ, ಝಾಂ ಝಾಂ ಮಾರುತ, ಹರಿಕೇನ್ ಎಲ್ಲ ಸೇರಿದ ಮಹಾ ಮಾರುತ ಬೀಸಿ ಬಿಡು - ಅಂತ ಆಜ್ಞೆ ಕೊಟ್ಟೇ ಬಿಟ್ಟರು.

ವಾಯುವಿಗೆ ಇಂತಹ ಆಜ್ಞೆ ಸಿಗುವದು ಅಪರೂಪ. ಸಿಕ್ಕಿದ್ದೇ ಚಾನ್ಸ್ ಅಂತ ಹೇಳಿ, ಗಾಳಿ ಬೀಸೋಕೆ ಶುರು ಮಾಡಿದ ನೋಡಿ, ಹಣತೆ ಹಿಡದು ಪ್ರದಕ್ಷಿಣೆ ಹಾಕಲು ಆಗ ಮಾತ್ರ ಶುರು ಮಾಡಿದ್ದ ನಾರದರಂತ ನಾರದರೇ ನಡುಗಿ ಹೋದರು. ಅವರೇನು ಕಡಿಮೆ ಶಕ್ತಿವಂತರಲ್ಲ. ಮಹರ್ಷಿಗಳು. ಸಕಲ ಸಿದ್ಧಿಗಳನ್ನೂ ಸಂಪಾದಿಸಿದವರು.

ನಾರದರು ತಮ್ಮೆಲ್ಲಾ ತೇಜಸ್ಸು, ಓಜಸ್ಸು, ಯೋಗಶಕ್ತಿ, ಆ ಸಿದ್ಧಿ, ಈ ಸಿದ್ಧಿ ಎಲ್ಲವನ್ನೂ ಒಗ್ಗೂಡಿಸಿದರು. ಹೆಂಗೋ ಮಾಡಿ ಆ ರೀತಿ ಗಾಳಿ ಬೀಸುತ್ತಿದ್ದಾಗಲೂ ಹರಸಾಹಸ ಮಾಡಿ ಹಣತೆ ಆರದಂತೆ ಕಾಪಾಡಿದರು. ಕಾಪಾಡಿದ್ದು ಒಂದೇ ಅಲ್ಲ. ಮೂರು ಸುತ್ತು ಹಣತೆ ದೀಪ ಹಿಡಿದುಕೊಂಡು ರೌಂಡ್ ಹೊಡದೇ ಬಿಟ್ಟರು. ಮತ್ತೆ ವಿಜಯದ ನಗೆ ಬೀರುತ್ತ ನಾರಾಯಣನ ಬಳಿಗೆ ಬಂದು - ಹೆಂಗೆ - ಅಂತ ಲುಕ್ ಕೊಟ್ಟರು.

ನಾರಾಯಣ ಮುಗುಳುನಕ್ಕ.

ನಾರದರೆ, ಅಮೋಘ ಸಾಹಸ ನಿಮ್ಮದು. ಅದೆಂತಹ ಮಾರುತ ಬೀಸುತ್ತಿತ್ತು, ಏನು ಕಥೆ? ಅಂತಾದ್ರಲ್ಲಿ ನೀವು ಹಣತೆ ಆರದಂತೆ ಕಾಪಾಡಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಬಂದೇ ಬಿಟ್ಟಿರಿ. ಭಲೇ!! ಭಲೇ.

ನಾರದರು ಸಂತುಷ್ಟರಾದದರು.

ನಾರದರೆ, ಹಣತೆ ಆರದಂತೇನೋ ಕಾಪಾಡಿದಿರಿ. ಒಪ್ಪಿದೆ. ಆದ್ರೆ ಹಣತೆಯನ್ನ ರಕ್ಷಿಸಿ, ಪ್ರದಕ್ಷಿಣೆ ಹಾಕುವಾಗ ನನ್ನನ್ನು ನೆನೆಸಿದಿರಾ? ಸದಾಕಾಲ ಹರಿನಾಮಸ್ಮರಣೆ ಮಾಡುವ ತಾವು, ಆವಾಗ ನನ್ನ ನಾಮಸ್ಮರಣೆ ಮಾಡುತ್ತಿದ್ದಿರಾ?

ದೇವನೆ, ಅದು.....ಇದು.....ಆ ಪರಿ ಸಿಕ್ಕಾಪಟ್ಟೆ ಗಾಳಿ....ಹಣತೆ ಆರಬಾರದು....ಸುತ್ತು ಬೇರೆ ಹಾಕಬೇಕು....ಅದು....ಇದು....ಏನಂದ್ರೆ...ಆ ಗುಂಗಿನಲ್ಲಿ ನಿಮ್ಮ ನಾಮಸ್ಮರಣೆ ಮಾಡುವದನ್ನ ನಾನು ಮರೆತದ್ದು ನಿಜ - ಅಂತ ನಾರದರು ಒಪ್ಪಿಕೊಂಡರು. ಒಂದು ತರಹ ತಪ್ಪು ಮಾಡಿ ಸಿಕ್ಕಿಬಿದ್ದ ಚಿಕ್ಕಮಕ್ಕಳ ಹಾಂಗೆ ಮುಖ ಮಾಡಿದರು.

ನೋಡಿ ನಾರದರೆ, ನೀವು ಕೇಳಿದಿರಿ. ನಮಗೇಕೆ ಭೂಲೋಕದ ಸಂಸಾರಿಗಳ ಮೇಲೆ ಅಷ್ಟು ದಯೆ, ಪ್ರೀತಿ, ಕರುಣೆ ಅಂತ. ಅದೂ ಅವರ ನೂನ್ಯತೆಗಳನ್ನು ಎಲ್ಲ ನಗಣ್ಯ ಮಾಡಿ ನಾವು ಯಾಕೆ ಅವರನ್ನು ಮೇಲೆಕ್ಕೆ ಎತ್ತುತ್ತೇವೆ ಅಂತ.ಉತ್ತರ ಇಷ್ಟೇ ನೋಡಿ. ಅವರಿಗೆ ನಮ್ಮ ನಿಮ್ಮ ಹಾಗೆ ಅನುಕೂಲಕರ ಪರಿಸ್ಥಿತಿ ಇಲ್ಲ. ಮಾಯೆಯೋ ಮಾಯೆ ಆ ಜಗದ ತುಂಬಾ.ಮಾಯೆಯ ಬಿರುಗಾಳಿಯಲ್ಲಿ ತರಗೆಲೆಗಳಂತೆ ಸಿಕ್ಕಿಕೊಂಡವರು ಅಲ್ಲಿನ ಸಂಸಾರಿಗಳು. ಅಂತಹ ಮಾಯೆಯ ಬಲೆಯಲ್ಲಿ ಸಿಕ್ಕಿಕೊಂಡರೂ, ನೆನಪಾದಾಗೊಮ್ಮೆ ನಮ್ಮನ್ನು ಪೂಜಿಸುವ, ಪ್ರಾರ್ಥಿಸುವ ಭಕ್ತ ಜನರ ಕಂಡರೆ ನಮಗೆ ತುಂಬಾ ಪ್ರೀತಿ. ಅವರು ಹಿಂದೇನು ಮಾಡಿದರು, ಮುಂದೇನು ಮಾಡುವರು ನಮಗೆ ಮುಖ್ಯ ಅಲ್ಲ. ಆದ್ರೆ ಒಂದು ಕ್ಷಣ ದೇವರ ನೆನಪು ಮಾಡಿಕೊಂಡರಲ್ಲ ಅದು ಭಾಳ ದೊಡ್ಡದು. ಮಾಯೆಯಲ್ಲಿ ಸಿಕ್ಕವರು ಅಷ್ಟು ಮಾಡುವದೇ ದೊಡ್ಡದು. ಅದಕ್ಕೇ ಭಕ್ತರು ಒಂದು ಹೆಜ್ಜೆ ನಮ್ಮ ಕಡೆ ಬಂದರೆ ನಾವು ಏಳು ಹೆಜ್ಜೆ ಭಕ್ತರ ಕಡೆ ನಡೆಯುತ್ತೇವೆ.

ಹೀಗೆ ಮಹಾವಿಷ್ಣು ತಮ್ಮ ಮಾತು ಮುಗಿಸಿದರು. ನಾರದರಿಗೆ ಅರ್ಥವಾಯಿತು.

ಈ ಲೇಖನ ಬರೆಯಲು ಪ್ರೇರಣೆ ಇವತ್ತು ಬೆಳಿಗ್ಗೆ ಇಬ್ಬರು ಆತ್ಮೀಯ ಮಿತ್ರರ ಜೊತೆ ಫೇಸ್ಬುಕ್ ಮೇಲೆ ಹೊಡೆದ ಚಿಕ್ಕ ಹರಟೆ.

ಅಯ್ಯೋ, ಸಂಸಾರಿಗಳು ನಾವು. ನಮಗೆ ಬೇಕು ಇನ್ನೊಂದು ನಾಲ್ಕು ಜನ್ಮ ಮುಕ್ತಿಗೆ - ಅಂತ ಜೋಕ್ ಮಾಡಿದ ಒಬ್ಬ.

ಸಂಸಾರಿಗಳ ಮೇಲೆ ದೇವರಿಗೆ ಜಾಸ್ತಿ ಪ್ರೀತಿ ಮಾರಾಯ - ಅಂತ ಹೇಳಿದೆ ನಾನು.

ಗುರುಗಳಾದ ಶ್ರೀ ಏಕನಾಥ್ ಈಶ್ವರನ್ ಅವರು ವಿಷ್ಣುಸಹಸ್ರನಾಮದ ಮೇಲೆ ಒಂದು ಪುಸ್ತಕ ಬರೆದಿದ್ದಾರೆ. The Constant Companion -  ಎಂದು ಅದರ ಹೆಸರು. ಮಹಾವಿಷ್ಣುವಿನ ಒಂದೊಂದೆ ಹೆಸರನ್ನು ತೆಗೆದುಕೊಂಡು ಇಂತಹ ಉದಾಹರಣೆಗಳಿಂದ ಚನ್ನಾಗಿ ಮನಮುಟ್ಟುವಂತೆ ವಿವರಿಸಿದ್ದಾರೆ.

ವಿಷ್ಣುವಿನ ಒಂದು ಹೆಸರು  ಭಕ್ತವತ್ಸಲ. ಭಕ್ತವತ್ಸಲ ಎಂಬುದನ್ನು ಗುರುಗಳು ಈ ಚಿಕ್ಕ ಕಥೆಯ ಮೂಲಕ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಇಂಗ್ಲಿಷ್ ಮೂಲದ ಲಿಂಕ್ ಗೆಳೆಯರಿಗೆ ಕೊಟ್ಟೆ. ಇಲ್ಲಿದೆ ನೋಡಿ ಲಿಂಕ್. ಪೂರ್ತಿ ಪುಸ್ತಕ ಗೂಗಲ್ ಬುಕ್ಸ್ ಮೇಲೆ ಇದೆ ಅಂತ ಕಾಣುತ್ತದೆ. ಓದಿ. ಅತ್ಯುತ್ತಮ ಪುಸ್ತಕ. ವಿಷ್ಣುಸಹಸ್ರನಾಮ ಜಪ ಮಾಡುವವರಿಗೆ ಇಂಗ್ಲಿಷ್ನಲ್ಲಿ ಅರ್ಥ ಬೇಕಾದ್ರೆ ಒಂದು ಒಳ್ಳೆಯ ರೆಫರನ್ಸ್ ಕೂಡ.

2 comments:

Unknown said...

Manavara multitasking Naradara single task...... multitasking is important!

Mahesh Hegade said...

Thank you for reading and for your comment. Appreciate it.