Wednesday, July 18, 2012

ಆ ಪಾಳೆಗಾರನಿಗೆ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕಾರ್ಕೋಟಕ ವಿಷ ಚುಚ್ಚಿದ್ದಳು

ಅವನೊಬ್ಬ ದೊಡ್ಡ ಜಮೀನ್ದಾರ. ಅಥವಾ ಸಣ್ಣ ಸಂಸ್ಥಾನವೊಂದರ ಪಾಳೆಗಾರ ಅಂದ್ರೂ ಅಡ್ಡಿಯಿಲ್ಲ. ಸಾವಿರಾರು ಎಕರೆ ಭೂಮಿ, ಸಂಪತ್ತು ಎಲ್ಲವೂ ಇದೆ.

ಇನ್ನೂ ಯುವಕ ಆ ಪಾಳೆಗಾರ. ಧನ, ದೌಲತ್ತು ಇದ್ದ ಮೇಲೆ ಮದ್ಯ, ಮಾನಿನಿಯರ ಸಂಗ ಮಾಡಿಸುವ ಜನರಿಗೆ ಏನೂ ಕಮ್ಮಿ ಇರುವದಿಲ್ಲ. ಅಲ್ಲವಾ? ಇವನಿಗೂ ಅಂಥದೇ ಜನ ಸಿಕ್ಕರು ಅಂತ ಕಾಣುತ್ತದೆ. ಮಾಡೋ ಕೆಲಸ ಎಲ್ಲ ಬಿಟ್ಟು ಬೇಟೆ, ಮದ್ಯ, ಮಾನಿನಿಯರ ಮಧ್ಯೆ ಕಳೆದು ಹೋದ ಅವನು.

ಮದುವೆ ಬೇರೆ ಆಗಿತ್ತು. ಆದ್ರೆ ಹೊಸ ಹೊಸ ಮಾಲ್ ಸಿಗುತ್ತಿರುವಾಗ ಯಾವಾಗಲೋ ವರ್ಷಗಳ ಹಿಂದೆ ಮದುವೆಯಾದ  ಹೆಂಡ್ತಿ ಯಾರಿಗೆ ಬೇಕ್ರಿ ಅಂತ ಆಕೆಗೆ ಗೋಲಿ ಹೋಡೀರಿ ಅಂತ ಅವಳನ್ನು ಫುಲ್ ನಿರ್ಲಕ್ಷ ಮಾಡಿದ್ದ.

ಈ ತರಹ ಕುಡಿದು ಕುಣಿದು ಕುಪ್ಪಳಿಸಿದರೆ ಆರೋಗ್ಯ ಢಂ ಅಂದ್ರೆ ಅದರಲ್ಲಿ ಏನು ಮಹಾ? ಇವನ ಆರೋಗ್ಯವೂ ಎಕ್ಕುಟ್ಟಿ ಹೋಯಿತು. ಆವಾಗ ಬಂದವನೇ ಒಬ್ಬ ಡಾಕ್ಟರ್. ಅದು ಏನು ಚಿಕಿತ್ಸೆ ಕೊಟ್ಟನೋ ಗೊತ್ತಿಲ್ಲ. ಪಾಳೆಗಾರನಿಗೆ ಏಕ್ದಂ ಆಪ್ತನಾಗಿಬಿಟ್ಟ.

ಅಷ್ಟೇ ಆಗಿದ್ದರೆ ದೊಡ್ಡ ಮಾತಿರಲಿಲ್ಲ. ಆದ್ರೆ  ಸುತ್ತ ಮುತ್ತ ಕಣ್ಣು ಹಾಕಿದ ಡಾಕ್ಟರ್, ಪಾಳೆಗಾರನ ಹೆಂಡತಿಗೆ ಕಾಳು ಹಾಕಲು ಶುರು ಮಾಡಿದ. ಅವಳಿಗೂ ಪಾಪ ಸಂಗಾತಿ ಇರಲಿಲ್ಲ. ಇದ್ದ ಗಂಡ ವ್ಯಸನಿ. ತನ್ನನ್ನು ಪೂರ್ತಿ ನಿರ್ಲಕ್ಷಿಸಿಬಿಟ್ಟಿದ್ದಾನೆ. ಹೀಗಿರುವಾಗ ಆ ಡಾಕ್ಟರ್ ಹಾಕಿದ ಕಾಳಿನಿಂದ ಖುಷ್ ಆದವಳು ಆ ಪಾಳೆಗಾರ್ ಆಂಟಿ. ತನ್ನ ವ್ಯಸನಗಳಲ್ಲಿ ಮುಳುಗಿ ಹೋಗಿದ್ದ ಪಾಳೆಗಾರನಿಗೆ ಇದ್ಯಾವದರ ಬಗ್ಗೆ ಖಬರ್ ಇರಲಿಲ್ಲ.

ಆರೋಗ್ಯ ಮತ್ತೂ ಹದಗೆಟ್ಟ ನಂತರ ಡಾಕ್ಟರ್ ಪಾಳೆಗಾರನಿಗೆ ಹವಾ ಪಾನಿ ಬದಲಿ ಮಾಡಿ ಅಂತ ಡಾರ್ಜಿಲಿಂಗಗೆ ಹೊರಡಿ ಅಂದ. ಪಾಳೆಗಾರ, ಡಾಕ್ಟರ್ ಮತ್ತು ಹೆಂಡತಿ ಡಾರ್ಜಿಲಿಂಗಗೆ ಹೋಗಿ ಮನೆ ಮಾಡಿದರು.

ಇಲ್ಲಿ ಶುರು ಆಯಿತು ನೋಡಿ ಡಾಕ್ಟರ್ ಮತ್ತು ಅವನ ಆಂಟಿ ಡವ್ವಿನ ಷಡ್ಯಂತ್ರ. ಹೇಗಾದರೂ ಮಾಡಿ ಈ ಪಾಳೆಗಾರನ್ನ ಈ ಭೂಮಿಯಿಂದ ಮೇಲೆ ಕಳಿಸಿ ಬಿಟ್ಟರೆ, ತಮ್ಮ ಸಂಬಂಧಕ್ಕೆ ಯಾವ ತೊಂದರೆಯೂ ಇರುವದಿಲ್ಲ. ಜೊತೆಗೆ ಧರ್ಮಪತ್ನಿ (?) ಆಗಿರುವದರಿಂದ ಸಾಕಷ್ಟು ಆಸ್ತಿಯೂ ಬರುತ್ತದೆ.

ಆದರೆ ಕೊಲ್ಲುವ ಬಗೆ ಹೇಗೆ? ಯಾರಿಗೂ ಸಂಶಯ ಬರದ ಹಾಗೆ ಸಹಜ ಸಾವಿನಂತೆ ಆಗಿಹೋಗಬೇಕು ಕೆಲಸ.

ಹೇಳಿ ಕೇಳಿ ಡಾಕ್ಟರ್ ಅವನು. ತುಂಬಾ ಬುದ್ಧಿವಂತ ಕೂಡ ಅಂತ ಕಾಣುತ್ತೆ. ಒಂದು ಖತರ್ನಾಕ್ ಯೋಜನೆ ಹಾಕಿ ಕಾರ್ಯರೂಪಕ್ಕೆ ತಂದೇ ಬಿಟ್ಟ.

ಆ ಯೋಜನೆ ಅಂದ್ರೆ ನಾಗರಹಾವಿನ ವಿಷವನ್ನ ಚಿಕ್ಕ ಪ್ರಮಾಣದಲ್ಲಿ ಇಂಜೆಕ್ಷನ್ ಮೂಲಕ ದಿನಾ ಚುಚ್ಚುವದು. ಸಣ್ಣ ಪ್ರಮಾಣದಲ್ಲಿ ಕೊಟ್ಟರೆ ಸಾಯುವದಿಲ್ಲ ಆದರೆ ನರಮಂಡಲ ನಿಧಾನವಾಗಿ ಬರ್ಬಾದ್ ಆಗುತ್ತಾ ಹೋಗಿ ಸುಮಾರು ದಿನ ಅಥವಾ ಸುಮಾರು ತಿಂಗಳಾದ ಮೇಲೆ ಒಂದು ತರಹ ಹಾರ್ಟ್ ಫೇಲ್ ಆದ ರೀತಿಯಲ್ಲೊ ಮತ್ತೊಂದು ರೀತಿಯಲ್ಲೊ ಅವನು ಹರೋಹರ ಆಗುತ್ತಾನೆ. ಪದ್ಧತಿ ಪ್ರಕಾರ ಸುಟ್ಟು ಸಂಸ್ಕಾರ ಮಾಡಿ ಬಿಟ್ಟರೆ ಎಲ್ಲವೂ ಖತಂ.

ಹೇಗೂ ಅಚ್ಚುಮೆಚ್ಚಿನ ಡಾಕ್ಟರ್ ಆಗಿದ್ದನಲ್ಲ. ಬಾಂಬೆ ಇಂದಲೋ ಎಲ್ಲಿಂದಲೋ ಒಂದಿಷ್ಟು ನಾಗರದ ಕಾರ್ಕೋಟಕ ವಿಷ ತಂದೇ ಬಿಟ್ಟ. ಚಿಕಿತ್ಸೆಯ ನೆಪದಲ್ಲಿ ದಿನಾ ವಿಷದ ಇಂಜೆಕ್ಷನ್ ಶುರು ಆಯಿತು.

ಸುಮಾರು ದಿನದ ಬಳಿಕ ಒಂದು ದಿವಸ ಪಾಳೆಗಾರ ಎಚ್ಚರ ತಪ್ಪಿ ಬಿದ್ದ. ಡಾಕ್ಟರ್ ಮತ್ತು ಅವನ ಪ್ರೇಯಸಿಗೆ ಖೇಲ್ ಖತಂ ಮಾಡುವ ಅವಸರ. ಹೇಗೂ ಎಚ್ಚರ ತಪ್ಪಿ ಬಿದ್ದಿದ್ದಾನೆ. ಇರುವದೂ ಊರಿಂದ ದೂರ. ತಾನೇ ಡಾಕ್ಟರ್. ಸತ್ತಿದ್ದಾನೆ ಅಂತ ಹೇಳಿದರೆ ಸಂಶಯ ಪಡುವವರು ಯಾರೂ ಇಲ್ಲ. ಈಗಲೇ ಸುಟ್ಟು ಹಾಕಿ ಬಿಟ್ಟರಾಯಿತು.ತೊಲಗಲಿ ಪೀಡೆ ಅಂತ ಬೆಹೋಶ್ ಆಗಿದ್ದವನ ಅಂತಿಮ ಸಂಸ್ಕಾರಕ್ಕೆ ಸ್ಕೆಚ್ ಹಾಕೇ ಬಿಟ್ಟರು.

ಹೆಂಡತಿ ಹೋಗಿ ಓಣಿ ತುಂಬಾ ಲಬೋ ಲಬೋ ಅಂತ ಹೊಯಕೊಂಡಳು. ಜನ ಸೇರಿದರು. ಡಾಕ್ಟರ್ ಡೆಡ್ ಅಂತ ಡಿಕ್ಲೇರ್ ಮಾಡಿಯೇ ಬಿಟ್ಟ. ಊರ ಮಂದಿ ಶವ ಸಂಸ್ಕಾರಕ್ಕೆ ರೆಡಿ ಆದರು. ನದಿ ತೀರದಲ್ಲಿ ಹೆಣ ಸುಡಲು ಕಟ್ಟಿಗೆ ಪೇರಿಸಿ ಎಲ್ಲ ತಯಾರಿ ಆಯಿತು.

ಕಟ್ಟಿಗೆಯ ರಾಶಿ ಮೇಲೆ ಹೆಣ ಇಟ್ಟು, ಇನ್ನೇನು ಬೆಂಕಿ ಹಚ್ಚಬೇಕು ಅನ್ನುವದರಲ್ಲಿ ಧಾರಾಕಾರ ಮಳೆ. ಮುಸಲಧಾರೆಯಂತೆ ಬಂತು ಮಳೆ. ಮಳೆ ನಿಂತ ಮೇಲೆ ಮಾಡಿದರಾಯಿತು ಅಂತ ಜನ ಎಲ್ಲ ಹೆಣ ಅಲ್ಲೇ ಬಿಟ್ಟು ಮಳೆಯಿಂದ ರಕ್ಷಣೆ ಪಡೆಯಲು ಸ್ವಲ್ಪ ದೂರ ಬಂದರು.

ಸಿಕ್ಕಾಪಟ್ಟೆ ಮಳೆ. ನದಿ ದಂಡೆ ಮೇಲೆ ಕಟ್ಟಿಗೆ ರಾಶಿ ಮೇಲೆ ಪ್ರಜ್ಞಾಶೂನ್ಯ ಪಾಳೆಗಾರನ ದೇಹ. ಮಳೆಯ ರಭಸಕ್ಕೋ, ಮತ್ತೇನೋ ಕಾರಣಕ್ಕೊ ಗೊತ್ತಿಲ್ಲ. ಆದರೆ ಕಟ್ಟಿಗೆ ರಾಶಿ ಚದುರಿ ದೇಹ ನದಿ ಪಾಲಾಯಿತು. ಮಳೆಯಿಂದ ಪ್ರವಾಹ ಬೇರೆ ಬಂದಿತ್ತು. ಅದರಲ್ಲಿ ದೇಹ ತೇಲಿ ಹೋಯಿತು. ಹೋಗೇ ಬಿಟ್ಟಿತು.

ಮಳೆ ನಿಂತ ನಂತರ ಎಲ್ಲರೂ ವಾಪಾಸ್ ಬಂದು ನೋಡಿದರೆ ಎಲ್ಲಿದೆ ಹೆಣ. ಗಾನ್. ಇಲ್ಲೆ. ಗಾಯಬ್. ಆದ್ರೆ ಎಲ್ಲರಿಗೂ ಗೊತ್ತಾಯಿತು ಹೆಣ ತೇಲಿ ಹೋಗಿ ಬಿಟ್ಟಿದೆ ಅಂತ. ಮತ್ತೇನು ಮಾಡುವದು. ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಾಸ್ ಬಂದರು.

ಡಾಕ್ಟರ್ ನಿಗೆ ಮತ್ತೆ ಅವನ ಪ್ರೇಯಸಿಗೆ ಜಾಸ್ತಿ ಏನೂ ಫರಕ್ ಆಗಲಿಲ್ಲ. ಸುಡಬೇಕು ಅಂತ ಮಾಡಿದ್ದರು. ಈಗ ನದಿ ಪಾಲಾಗಿದೆ. ಸತ್ತಂತು ಹೋಗುತ್ತಾನೆ. ಅಷ್ಟೇ ತಾನೇ ಬೇಕಾಗಿದ್ದು. Mission Accomplished.

ಡಾಕ್ಟರ್ ಮತ್ತು ಪಾಳೆಗಾರನ ಹೆಂಡತಿ ವಾಪಾಸ್ ಹೋದರು. ಅವರ ಜೀವನದಲ್ಲಿ ಮುಂದೆ ಏನಾಯಿತು ಅನ್ನೋದು ಗೊತ್ತಿಲ್ಲ. ಆದ್ರೆ ತುಂಬಾ ರೋಚಕ ಸಂಗತಿ ಬೇರೆಯ ಕಡೆ ಆಗುತ್ತಿತ್ತು.

ಚಟ್ಟದ ಸಮೇತ ನದಿಗೆ ಬಿದ್ದ ಹೆಣಕ್ಕೆ ಆ ಬಿದಿರಿನ ಚಟ್ಟ ಒಂದು ತರಹದ ತೆಪ್ಪದಂಗೆ ಆಗಿ ಅದು ತೇಲಿತು. ಮುಳುಗಲಿಲ್ಲ. ಮುಳುಗಿದ್ದರೆ ಕಥೆಯೇ ಬೇರೆ ಆಗುತ್ತಿತ್ತು. ಹೀಗೆ ನದಿಯಲ್ಲಿ ಚಟ್ಟ, ಅದರ ಮೇಲೆ ಪ್ರಜ್ಞಾಶೂನ್ಯ ಪಾಳೆಗಾರನ ದೇಹ.

ಆ ನದಿಯ ದಡದ ಮೇಲೆ ಸ್ವಲ್ಪ ದೂರದಲ್ಲಿ ಸ್ವಾಮಿ ಒಬ್ಬರು ತಮ್ಮ ಕೆಲ ಖಾಸ್ ಶಿಷ್ಯ ಸ್ವಾಮಿಗಳೊಂದಿಗೆ ಬಿಡಾರ ಹೂಡಿದ್ದರು. ಅವರಿಗೆ ತೇಲಿ ಬರುತ್ತಿರುವ ಶವ ಕಂಡಿತು. ತಮ್ಮ ಶಿಷ್ಯರಿಗೆ ಹೇಳಿ ಅದನ್ನ ದಡಕ್ಕೆ ತರಿಸಿದರು.

ಸ್ವಾಮಿಗಳಿಗೆ ತಿಳಿಯಿತು ಇವನು ಸತ್ತಿಲ್ಲ ಅಂತ. ಒಂದೆರಡು ತಾಸಿನ ನಂತರ ಆ ಪಾಳೆಗಾರನಿಗೆ ಪ್ರಜ್ಞೆ ಬಂತು. ಪ್ರಜ್ನೆಯೇನೋ ಬಂತು. ಆದರೆ ಮೊದಲಿಂದು ಎಲ್ಲವೂ ಮರೆತು ಹೋಗಿತ್ತು.

ಮತ್ತೇನು ಮಾಡುವದು ಅಂತ ಹೇಳಿ ಆ ಸ್ವಾಮಿಗಳ ಟೋಳಿ ಅವನನ್ನೂ ತಮ್ಮ ಸಂಗಡ ಇಟ್ಟುಗೊಂಡರು. ಅವರಿಂದ ಪ್ರಭಾವಿತನಾದ ಪಾಳೆಗಾರ ಸಾಧುಸಂತರಂತೆಯೇ ಆಗಿ ಹೋದ. ಸುಮಾರು ವರ್ಷದ ನಂತರ ಅವನಿಗೆ ಸನ್ಯಾಸ ದೀಕ್ಷೆಯನ್ನೂ ದೊಡ್ಡ ಸ್ವಾಮಿಗಳು ಕೊಟ್ಟರು. ಸುಮಾರು ಏಳು ವರ್ಷಗಳ ಕಾಲ ಅವರೊಂದಿಗೆ ಇದ್ದು ಸಾಕಷ್ಟು ಸಾಧನೆ ಮಾಡಿದ ಮೊದಲಿನ ಪಾಳೆಗಾರ ಈಗಿನ ಸ್ವಾಮಿ ತನ್ನ ದಾರಿ ಹಿಡಿದುಕೊಂಡು ತನ್ನ ಪಾಡಿಗೆ ಹೋದ. ಈ ಸ್ವಾಮಿಗಳ ಗುಂಪೂ ತಮ್ಮ ದಾರಿ ಹಿಡಿದು ಹೋದರು.

ಆದ್ರೆ ದೊಡ್ಡ ಸ್ವಾಮಿಗಳು ಒಂದು ಒಂದು ಮಾತನ್ನು ಅತ್ಯಂತ ಗಂಭೀರತೆಯಿಂದ ಹೇಳಿದ್ದರು. ಅವನು ಹೋಗಿದ್ದು ಒಳ್ಳೆಯದೇ ಆಯಿತು. ಮುಂದೆ ಅನೇಕ ಕುತೂಹಲಕಾರಿ ಘಟನೆಗಳು ನಡೆಯಲಿವೆ. ಅವುಗಳಲ್ಲಿ ಅವನ ಪಾತ್ರವಿರುತ್ತದೆ. ನಮಗೆ ಅದರಲ್ಲಿ ಅಷ್ಟು ಭಾಗಿಯಾಗುವದು ಬೇಕಿಲ್ಲ. - ಅಂತ ಮುಗುಮ್ಮಾಗಿ ಹೇಳಿದ್ದರು. ಅವರಲ್ಲದೆ ಬೇರೆ ಯಾರಿಗೂ ಅವರು ಏನು ಹೇಳಿದರು ಅಂತ ತಿಳಿಯಲಿಲ್ಲ.

ಮುಂದೊಂದು ದಿನ, ಸುಮಾರು ಕಾಲ ಗತಿಸಿದ ಮೇಲೆ, ಒಬ್ಬ ಸಾಧು ಕೋರ್ಟಿಗೆ ಹಾಜರ್ ಆಗಿ ಒಂದು ಸುದ್ದಿಯ ಬಾಂಬ್ ಹಾಕಿದ. ಅದು ಸುಮಾರು 1925-1930 ರ ಕಾಲ. ಅವ ಹಾಕಿದ ಬಾಂಬ್ ಇಡೀ ಬಂಗಾಳ್ ಪ್ರದೇಶವನ್ನೇ ಅಲುಗಾಡಿಸಿಬಿಟ್ಟಿತು.

ನಾನು ಈಗ ಸಾಧು. ಮೊದಲು ಇಂತಹ ಕಡೆ ಇಂತಹ ಹೆಸರಿನ ಪಾಳೆಗಾರನಾಗಿದ್ದೆ. ಹೀಗಿಗೆ ನನಗೆ ಆಯಿತು. ಇಷ್ಟು ವರ್ಷ ನನಗೆ ನನ್ನ ಪೂರ್ವದ ನೆನಪುಗಳೇ ಇರಲಿಲ್ಲ. ಈಗ ಬಂದಿವೆ. ನನ್ನ ಆಸ್ತಿ ಪರರ ಪಾಲಾಗಿದೆ. ವಾಪಸ್ ಕೊಡಿಸಿಕೊಡಿ - ಅಂತ ಕೋರ್ಟ್ನಲ್ಲಿ ಅಂಬೋ ಎಂದ ಸನ್ಯಾಸಿ.

ನ್ಯಾಯಾಂಗಕ್ಕೆ ತಲೆ ಕೆಟ್ಟು ಹೋಯಿತು. ಸತ್ತು ಹೋಗಿದ್ದಾನೆ ಅಂತ ಡಾಕ್ಟರೇ ಸರ್ಟಿಫಿಕೇಟ್ ಕೊಟ್ಟವನು ಎದ್ದು ಬಂದಿದ್ದಾನೆ. ಸುಮಾರು  ಎಲ್ಲ ಕರೆಕ್ಟ್ ಆಗಿ ಹೇಳುತ್ತಾನೆ. ಇವನನ್ನ ನಂಬಬಹುದಾ ಹೇಗೆ? ಏನು ಮಾಡುವದು?

ಸುಮಾರು ವರ್ಷ ಕೇಸ್ ನಡೆಯಿತು. ಪಾಳೆಗಾರನ ಕುಟುಂಬದ ಜನ ಎಲ್ಲಾ ಅವನು ಡೋಂಗಿ ಅಂದರು. ಅದರ ಸಲುವಾಗಿ ಕೆಲವೊಂದು ಪೂರಕ ಮಾಹಿತಿಗಳನ್ನೂ ಕೊಟ್ಟರು. ಆದ್ರೆ ಅವು ಯಾವೂ ಪೂರ್ತಿ ನಂಬುವ ಹಾಗೆ ಇರಲಿಲ್ಲ. ಡೋಂಗಿ ಅಂತ ಪ್ರೂವ್ ಆಗಲಿಲ್ಲ.

ಆ ಮೇಲೆ ಸನ್ಯಾಸಿ ಒಂದು ಟ್ರಂಪ್ ಕಾರ್ಡ್ ತೆಗೆದ. ನಮ್ಮ ಗುರುಗಳು ಹೀಗೆ ಅಂತ ಇದ್ದಾರೆ. ಅವರನ್ನ ಹುಡುಕಿಸಿ, ಕರೆಸಿ. ಅವರ ಸಾಕ್ಷ್ಯ ನಿಮ್ಮ ಎಲ್ಲಾ ಸಂದೇಹಗಳನ್ನು ದೂರ ಮಾಡುತ್ತದೆ. - ಅಂದುಬಿಟ್ಟ.

ಬ್ರಿಟೀಷರು ಅವನಿಗೆ ದೀಕ್ಷೆ ಕೊಟ್ಟ ಸ್ವಾಮಿಗಳನ್ನು ಹುಡುಕಿದರು. ದೊಡ್ಡ ಸ್ವಾಮಿಗಳಿಗೆ ಮೊದಲೇ ಗೊತ್ತಿತ್ತು ಇದು ಇಲ್ಲಿಗೆ ಬಂದು ಮುಟ್ಟುತ್ತದೆ ಅಂತ. ಹಿಮಾಲಯದಲ್ಲಿ ಸಾಧನೆಯಲ್ಲಿದ್ದ ಅವರಿಗೆ ಈ ಜಂಜಡಗಳಲ್ಲಿ ಭಾಗಿಯಾಗುವ ಯಾವದೇ ಆಸಕ್ತಿ, ಇರಾದೆ ಇರಲಿಲ್ಲ. ಆದರೂ ಬಂದ ಅಧಿಕಾರಿಗಳಿಗೆ ತಕ್ಕ ಮಟ್ಟಿಗೆ ಹಿಂದಿನ ಘಟನೆಗಳನ್ನು ವಿವರಿಸಿ ಸಾಗ ಹಾಕಿ - ಈಗ ತಿಳಿಯಿತಾ ನಾನು ಆವತ್ತು ಹೇಳಿದ್ದು....?ಈ ಪುಣ್ಯಾತ್ಮನಿಂದ ವಿಚಿತ್ರ ಘಟನೆಗಳು ನಡೆಯುತ್ತವೆ ಅಂತ ಹೇಳಿದ್ದು - ಎಂದು ತಮ್ಮ ಮೊದಲ ಹೇಳಿಕೆ ನೆನಪು ಮಾಡಿಕೊಟ್ಟರು. ಈಗ ಅವರ ಶಿಷ್ಯರಿಗೆ ಅರ್ಥವಾಯಿತು.

ತುಂಬಾ ದಿನ ಕೇಸ್ ನಡೆಯಿತು. ಅಂತ್ಯದಲ್ಲಿ ಪಾಳೆಗಾರ ಸ್ವಾಮಿಗೇ ಜಯವಾಯಿತು. ಅವನ ಸಂಸ್ಥಾನ, ಆಸ್ತಿ, ಪಾಸ್ತಿ ಎಲ್ಲ ಅವನಿಗೇ ವಾಪಸ್ ಬಂತು. ಆದ್ರೆ ಅದೇನೋ ಅಂತಾರಲ್ಲ ಅನ್ನುವ ಹಾಗೆ ....ಅನುಭವಿಸಲು ಅವನೇ ಜಾಸ್ತಿ ದಿನ ಬದುಕಿ ಉಳಿಯಲಿಲ್ಲ. ಈ ಸಲ ನಿಜವಾಗಿ ಸತ್ತು ಹೋದ.

ಅವನು ಡೋಂಗಿ ಆಗಿದ್ದ. ಅದಕ್ಕೇ ಸತ್ತು ಹೋದ. ತಕ್ಕ ಶಾಸ್ತಿ ಆಯಿತು ಬಿಡಿ - ಅಂತ ಪಾಳೆಗಾರನ ಕುಟುಂಬದವರು ಅಂದುಕೊಂಡರು.

ಸಂಸಾರ ಬಿಟ್ಟು ಅಮೂಲ್ಯ ಸನ್ಯಾಸ ದೀಕ್ಷೆ ತೆಗೆದುಕೊಂಡು ತಕ್ಕ ಮಟ್ಟಿಗೆ ಸಾಧನೆ ಸಹಿತ ಮಾಡಿಕೊಂಡಿದ್ದ. ಮತ್ತೆ ಸಂಸಾರದ ಮಾಯೆಯಲ್ಲಿ ಸಿಕ್ಕಿ ಮಾಯವೇ ಆದ - ಅಂತ ಸಾಧುಗಳು ಆಡಿಕೊಂಡರು.

ಇದೊಂದು ರೀತಿಯ ಪವಾಡ ತರಹದ ನಂಬಲು ಅಸಾಧ್ಯ ಸಂಗತಿ.

ಇದನ್ನ ಕಣ್ಣಿಂದ ಕಂಡವರು ಸ್ವಾಮಿ ರಾಮರು. ಆ ಪಾಳೆಗಾರನನ್ನು ರಕ್ಷಿಸಿ, ಸಲಹಿ, ದೀಕ್ಷೆ ಕೊಟ್ಟು ಕೊನೆಗೆ ಅವನ ಪರವಾಗಿ ಸಾಕ್ಷಿಯನ್ನೂ ಹೇಳಿದವರು ಅವರ ಪರಮ ಗುರುಗಳು. ಸ್ವಾಮಿ ರಾಮರು ತಮ್ಮ ಆತ್ಮ ಚರಿತೆ - Living with the Himalayan masters - ಎಂಬ ಪುಸ್ತಕದಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಈ ಘಟನೆ "ಭವಾಲ್ ಸನ್ಯಾಸಿ ಕೇಸ್" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಹಲವಾರು ಪುಸ್ತಕಗಳೂ, ಸಿನೆಮಾಗಳೂ ಬಂದಿವೆ. ಆದ್ರೆ ಒಂದರಿಂದ ಇನ್ನೊಂದಕ್ಕೆ  ವ್ಯತ್ಯಾಸವಿದೆ. ಆ ತರಹದ ಘಟನೆ ಆಗಿದ್ದು ಮಾತ್ರ ಖರೆ. ತುಂಬಾ ರೋಚಕ ಕಥೆಯಂತೂ ಹೌದು. ಸುಮಾರು 100 ವರ್ಷದ ಹಿಂದಿನ ಸುದ್ದಿ. ಹಾಂಗಾಗಿ ಬೇರೆ ಬೇರೆ ಮೂಲಗಳನ್ನು ನೋಡಿದಾಗ ಮಾಹಿತಿಯಲ್ಲಿ  ವ್ಯತ್ಯಾಸ ಕಂಡು ಬಂದರೆ, ಪರಾಮರ್ಶಿಸಿ ಸರಿ ತಪ್ಪು ತಿಳಿದುಕೊಳ್ಳಿ. 

No comments: