Tuesday, July 24, 2012

ಹೋಲ್ ಸೇಲಿನಲ್ಲಿ ಖರೀದಿಸಿದರೆ ಅಂಡರ್ವೇರ್ ಚೀಪೋ ಚೀಪು....ಅಂದಿದ್ದ ಆ ವಿಚಿತ್ರ ಉಗ್ರಗಾಮಿ

1970 ದಶಕದ ಅಂತ್ಯವೋ 1980 ದಶಕದ ಆದಿಯೋ ಇರಬೇಕು.

ಲೆಬನಾನಿನ ಬೆಕಾ ಕೊಳ್ಳ ಪ್ರದೇಶ ಅಂದರೆ ಪ್ಯಾಲೆಸ್ಟೈನ್ ಉಗ್ರಗಾಮಿಗಳ ಸ್ವರ್ಗ. ಬೇರೆ ಬೇರೆ ಬಣಗಳ ಸಾಕಷ್ಟು ಉಗ್ರವಾದಿಗಳು ಅಲ್ಲಿ ಬೀಡು ಬಿಟ್ಟಿದ್ದರು. ಅಲ್ಲೇ ಅವರ ವಸತಿ, ತರಬೇತಿ. ಮನಸ್ಸು ಬಂದಾಗ, ಅವಕಾಶ ಸಿಕ್ಕಾಗ, ಗಡಿ ದಾಟಿ ಇಸ್ರೇಲ್ ಒಳಗೆ ನುಗ್ಗಿ ವಿಧ್ವಂಸಕಾರಿ ಕೃತ್ಯ ಮಾಡಿ ವಾಪಸ್ ಓಡಿ ಬರುವದು ಅವರ ಗೆರಿಲ್ಲಾ ಯುದ್ಧ ನೀತಿ.

ರೀ.....ಬಜೆಟ್ ಡಿಟೇಲ್ಸ್ ಎಲ್ಲ ತಂದಿದೀರಿ ಏನ್ರಿ? - ಅಂತ ಏರಿದ ದನಿಯಲ್ಲಿ ಅಬ್ಬರಿಸುತ್ತಿದ್ದವನು ಯಾವದೇ ಕಂಪನಿಯ CEO ಅಲ್ಲ. ಒಂದು ಉಗ್ರಗಾಮಿ ಸಂಘಟನೆಯ ನಾಯಕ.

ಸಾರ್....ನೋಡಿ ಇಲ್ಲಿದೆ ಲಿಸ್ಟ್. ಫುಲ್ ಡಿಟೇಲ್ಸ್ ಒಟ್ಟಾಕಿ ತಂದಿದ್ದೇವೆ  - ಅಂತ ಬಜೆಟ್ ವಿವರ ಕೊಟ್ಟರು ಅವನ ಎರಡನೇ ಹಂತದ ಉಗ್ರಗಾಮಿ ನಾಯಕರು.

ನೋಡ್ರಯ್ಯ.....ನಾನು ANO ಉಗ್ರಗಾಮಿ ಸಂಘಟನೆಯ ನಾಯಕನೇ ಆಗಿರಬಹುದು. ಆದ್ರೆ ನಾನು ಕಂಪನಿ CEO ಇದ್ದಂಗೆ. ಒಂದು ಸರಿಯಾದ ಬಜೆಟ್ ಇಲ್ಲ ಅಂದ್ರೆ ಹ್ಯಾಗ್ರಯ್ಯ ನಾವು ಪ್ಲಾನ್ ಮಾಡೋದು? ಯಾವ ಅರಬ್ ಅಮೀರರನ್ನು ಹೆದರಿಸಿ ಎಷ್ಟು ದುಡ್ಡು ಅಂತ ಕೀಳುವದು? ಯಾರಿಗೆ ಎಷ್ಟು ಧಮಕಿ ಕೊಡುವದು? ಯಾವ ಏರ್ಲೈನ್ಸ್ ನ  ಎಷ್ಟು ಪ್ಲೇನ್ ಬಾಂಬಿಟ್ಟು ಉಡಾಯಿಸುವದು? ಎಷ್ಟು ಪ್ಲೇನ್ ಹೈಜಾಕ್ ಮಾಡುವದು? ಇದೆಲ್ಲ ನಿರ್ಧರಿಸಲು ವಿವರವಾಗಿ ಮಾಡಿದ ಕರಾರುವಾಕ್ ಖಡಕ್ ಬಜೆಟ್ ಬೇಕ್ರಯ್ಯ...ಅದಕ್ಕೆ ಎಲ್ಲ ಡಿಟೈಲ್ಸ್ ಕೇಳಿದ್ದು - ಅಂತ ಅಬ್ಬರಿಸಿದ ಆ ಉಗ್ರಗಾಮಿಗಳ ಪರಮ ನಾಯಕ.

ನಂತರ ತನ್ನ ಅನುಯಾಯಿಗಳು ಕೊಟ್ಟ ಬಜೆಟ್ ವಿವರ ಲೈನ್ ಬೈ ಲೈನ್ ನೋಡುತ್ತಾ ಹೊರಟ.

ನಡುವೆ ಒಮ್ಮೆ ಏಕದಂ ಎರ್ರಾ ಬಿರ್ರಿ ರೈಸ್ ಆಗಿ ಚೀರಿದ. ಕೂಗಿದ ದನಿಗೆ ಬೆಕಾ ಕೊಳ್ಳವೇ ಬೆಚ್ಚಿ ಬಿದ್ದಿರಬೇಕು.

ಏನ್ರಯ್ಯಾ ಇದು!!!!???? ಹೆಂಡ್ತೀರಿಗೆ, ಪ್ರೇಯಸಿಯರಿಗೆ ವರ್ಷಕ್ಕೆ ಎಷ್ಟು ಜೊತೆ ಕಾಚಾ (panties), ಬಾಡಿ (bra)  ಗೆ ಇಂಡೆಂಟ್ ಹಾಕಿದ್ದೀರಾ? ಅಯ್ಯಯ್ಯೋ!!!! ಇಷ್ಟು ದೊಡ್ಡ ಮೊತ್ತದ ದುಡ್ಡು ಕಾಚಾ, ಬಾಡಿಗಾ? ಇಷ್ಟು ದೊಡ್ಡ ಮೊತ್ತ ಖರ್ಚು ಮಾಡಿ ಅವರಿಗೆ ಒಳವಸ್ತ್ರ ಕೊಡ್ಸೋಕೆ ನಾವೇನು ಪ್ಯಾಲೆಸ್ತೇನಿ ಸ್ವಾತ್ರಂತ್ರ ಹೋರಾಟಗಾರರಾ ಅಥವಾ ಕೊಲ್ಲಿ ರಾಷ್ಟ್ರಗಳ ಸಿರಿವಂತರಾ? ಹಾಂ? ಹಾಂ? ನಾಚಿಗೆ ಬರಲ್ಲಾ ನಿಮಗೆಲ್ಲ? - ಅಂತ ಒಂದೇ ಉಸಿರಿನಲ್ಲಿ ಬೈದು ಅವರೆಲ್ಲರ ಉಸಿರು, ದನಿ, ಮತ್ತೊಂದು ಎಲ್ಲ ಅಡಗಿಸಿಬಿಟ್ಟ.

ಮುಂದುವರೆದು ಅವನೇ ಹೇಳಿದ.

ನೋಡ್ರಯ್ಯ....ನನಗೆ ಬಿರೂಟ್ (ಲೆಬನಾನಿನ ರಾಜಧಾನಿ) ನಲ್ಲಿ ಹೋಲ್ ಸೇಲ್ ನಲ್ಲಿ ಒಳಉಡುಪು ಸಪ್ಲೈ ಮಾಡೋ ಜನ ಗೊತ್ತು. ಅವರಿಗೆ ಬರೋಕೆ ಹೇಳ್ತೀನಿ. ಬಂದು ಅಳತೆ ತೊಗೊಂಡು ಹೋಗ್ತಾರೆ. ನಿಮ್ಮ ಹೆಂಡ್ರೀಗೆ, ಗೆಳತಿಯರಿಗೆ ಅಳತೆ ಕೊಡೋಕೆ ರೆಡಿ ಇರೋಕೆ ಹೇಳಿ. ಯವರೇಜ್(average) ಸೈಜ್ ನಲ್ಲಿ ಹೋಲ್ ಸೇಲ್ ನಲ್ಲಿ ತರ್ಸಿ ಬಿಟ್ಟರೆ ತುಂಬಾ ಉಳಿತಾಯ. ತಿಳಿತಾ? ಹಾಂ....ಹಾಂ.....- ಅಂತ ಮತ್ತೆ ಅಬ್ಬರಿಸಿದ.

ಸುತ್ತ ಕುಳಿತ ಜನ ಮುಖ ಮುಖ ನೋಡಿದರು. ಆ ಉಗ್ರಗಾಮಿ ನಾಯಕನಿಗೆ ಎದುರು ಮಾತು ಆಡುವ ಚಾನ್ಸೇ ಇಲ್ಲ. ಸುಖಾ ಸುಮ್ಮನೆ ತಲೆ ಕೆಟ್ಟಾಗೊಮ್ಮೆ, ಸಂಶಯ ಬಂದ ಮಾತ್ರಕ್ಕೆ, ತನ್ನದೇ ಜನರನ್ನು ನೂರು ಇನ್ನೂರರ  ಸಂಖ್ಯೆಯಲ್ಲಿ ಮಶೀನ್ ಗನ್ನ್ ಹಚ್ಚಿ ಕೊಂದು, ಸಾಮೂಹಿಕ ಗೋರಿಯಲ್ಲಿ ಮುಚ್ಚಿ, ಅದರ ಮೇಲೆ ಡೇರೆ ಹಾಕಿಕೊಂಡು ಮಲುಗಿದ ವಿಲಕ್ಷಣ ವ್ಯಕ್ತಿತ್ವದ ಮನುಷ್ಯ ಅವನು. ಅವನಿಗೇನು ಹೇಳುವದು? ಸಾಯಬೇಕಾಗಿದೆಯೇ?

ಒಂದೇ ಸೈಜಿನ ಒಳಉಡುಪು ಎಲ್ಲ ಹೆಂಗಳೆಯರಿಗೆ ಅನ್ನುವ ಸುದ್ದಿ ಉಗ್ರಗಾಮಿಗಳ ಶಿಬಿರದಲ್ಲಿ ಮಿಂಚಿನಂತೆ ಹರಡಿತು. ಮತ್ತೆ ಅಳತೆ ತೆಗೆದುಕೊಳ್ಳಲು ಪರಕೀಯರು ಬರುವ ವಿಚಾರ. ಮೊದಲೇ ಎಲ್ಲರೂ ಕಟ್ಟರ್ ಪರ್ದಾ ಹಾಕಿಕೊಂಡಿರುವ ಸಂಪ್ರದಾಯಸ್ತ ಮಹಿಳೆಯರು. ಯಾ ಅಲ್ಲಾ. ಯಾ ಖುದಾ  - ಅಂತ ಲಟಿಕೆ ಮುರಿದವರೇ ನಾಲಿಗೆ ಕೆಳಗೆ ಬೆರಳಿಟ್ಟು - ಳೋಳೋಳೋಳೋಳೋಳೋಳೋ - ಅಂತ ಅರಬ್ ಮಹಿಳೆಯರ ಟ್ರೇಡ್ಮಾರ್ಕ್ ವಿಚಿತ್ರ ಕೇಕೆ ಹೊಡೆದೇ  ಬಿಟ್ಟರು. ಅವರ ಕೇಕೆ ಬೆಕಾ ಕೊಳ್ಳದ ಸುತ್ತ ಮಾರ್ದನಿಸಿತು.

ತಮ್ಮ ಹೆಂಡಿರು, ಪ್ರೇಯಸಿಯರು ಆ ಪರಿ ದುಃಖಭರಿತ ಕೇಕೆ ಹೊಡೆದಿದ್ದು ನೋಡಿದ ಸಿಪಾಯಿ ಲೆವೆಲ್ ಉಗ್ರವಾದಿಗಳು ಒಂದು ಕೈಯಲ್ಲಿ ಲಬೋ ಲಬೋ ಬಾಯಿ ಬಡಿದುಕೊಳ್ಳುತ್ತ ಇನ್ನೊಂದು ಕೈಯಲ್ಲಿ ತಮ್ಮ AK -47 ಬಂದೂಕಿನ ಸುಮಾರು ಗುಂಡು ಗಾಳಿಯಲ್ಲಿ ಹಾರಿಸಿ ತಮ್ಮ ಆಕ್ರೋಶ ತೋರಿಸಿದರು. ಸಂತೋಷವಾಗಲಿ ದುಖವಾಗಲಿ ಗಾಳಿಯಲ್ಲಿ ಒಂದು ಕೈಯೆತ್ತಿ ಗುಂಡು ಹಾರಿಸುವದು ಅವರ ಸಂಪ್ರದಾಯ.

ಹೆಂಗಳೆಯರ ಕಾಚಾ, ಬಾಡಿ ವಿಷಯದಲ್ಲಿ ಆ ಉಗ್ರಗಾಮಿ ಸಂಘಟನೆಯಲ್ಲಿ ಮೊದಲ ಬಾರಿ ಒಳಬಂಡಾಯದ ಹೊಗೆ ಎದ್ದಿತ್ತು.

ಆ ಉಗ್ರಗಾಮಿ ನಾಯಕನಿಗೆ ಏನು ಅನ್ನಿಸಿತೋ ಏನೋ ಒಂದೇ ಸೈಜ್ ಹೋಲ್ಸೇಲ್  ಕಾಚಾ, ಬಾಡಿ ಯೋಚನೆ ಅಷ್ಟಕ್ಕೇ ಬಿಟ್ಟ.

ಆ ವಿಲಕ್ಷಣ ಪ್ಯಾಲೆಸ್ತೇನಿ ಉಗ್ರರ ನಾಯಕನೇ ಮಹಾನ್ ಖತರ್ನಾಕ್ ಅಬು ನಿದಾಲ್. ಅಬು ನಿದಾಲ್ ಆರ್ಗನೈಜೇಶನ್ (ANO) ಎಂಬ ಸಂಘಟನೆಯ ನಾಯಕ.

ಈ  ಒಸಾಮಾ ಬಿನ್ ಲಾಡೆನ್ ಬರುವ ಮೊದಲು ಆ ಪರಿಯ ಕುಖ್ಯಾತಿ ಪಡೆದವರು ಯಾರಾದರು ಇದ್ದರಾ ಅಂತ ನೋಡುತ್ತಾ ಹೋದರೆ ಸಿಗುವವನೇ ಅಬು ನಿದಾಲ್.

ಅಬು ನಿದಾಲ್
ಯಾವದೇ ತತ್ವ, ಸಿದ್ಧಾಂತ, ಜಿಹಾದ್, ಅದು, ಇದು ಅಂತ ಬೊಗಳೆ ಇಲ್ಲ ಅವನದು. ಕಾಸ್ ಕೊಡ್ತೀಯ? ನಿನ್ನ ಕೆಲಸ ಮಾಡಿ ಕೊಡ್ತೀನಿ. ತಿಳಿತಾ? - ಅಂತ ಅಂದು ಅವನ ಲೆವೆಲ್ ಗೆ ಕಾಸು ಬಿಚ್ಚಿದ ಜನರ ವಿಧ್ವಂಸಕ ಕೃತ್ಯಗಳನ್ನು 'ಪ್ಯಾಲೆಸ್ತೀನಿನ ಸ್ವಾತಂತ್ರ ಸಮರ' ಎಂಬ ಲೇಬೆಲ್ ಅಂಟಿಸಿ ಕರಾರುವಕ್ಕಾಗಿ ಮಾಡಿ ಕೊಟ್ಟವನು ಅಬು ನಿದಾಲ್.

ಒಂದು ಕಾಲದಲ್ಲಿ ಅರಬ್ ಕೊಲ್ಲಿಯ ಸುತ್ತ ಮುತ್ತ ಮೆರೆದ ಇರಾಕನ ಸದ್ದಾಮ್ ಹುಸೇನ್, ಲಿಬ್ಯಾದ ಗಡಾಫಿ ಗೆ ತೋಳ್ಬಲ ಬಂದಿದ್ದೇ ಅಬು ನಿದಾಲನಿಂದ.

ಸದ್ದಾಮ್, ಗಡಾಫಿ ಅಂದರೆ ಆ ಏರಿಯಾದ ಪುಂಡರ ತರಹ. ಸುತ್ತ ಮುತ್ತಲಿನ ದೇಶಕ್ಕೆ ತಲೆನೋವು. ಯಾರಾದರು ಸುತ್ತ ಮುತ್ತ ದೇಶದ ರಾಜರು, ಪ್ರಧಾನ ಮಂತ್ರಿಗಳು ಅಥವ ಮತ್ತಾರೋ ಉನ್ನತ ಮಂದಿ ನಿಮ್ಮ ಮಾತು ಕೇಳಲಿಲ್ಲವಾ? ಓಕೆ....ಅಬು ನಿದಾಲ್ ಕರೆದು ಸುಪಾರಿ ಕೊಟ್ಟರಾಯಿತು. ನೀವು ಹೇಳಿದಂತೆ ಕೆಲಸ ಮಾಡಿ ಕೊಡುತ್ತಾನೆ ಅಬು ನಿದಾಲ್. ಮೇಲೆ ಪ್ಯಾಲೆಸ್ತೇನ್ ಸಂಘರ್ಷ ಅಂತ ಲೇಬಲ್ ಹಚ್ಚಿ ಎಲ್ಲ ಸಾಫ್ ಶುದ್ಧ ಮಾಡಿ ಬಿಡ್ತಾನೆ.

ಏನು ನಿಮಗೆ ಆಗದ ದೇಶದ ರಾಜತಾಂತ್ರಿಕರ ಮೇಲೆ ಹೊರದೇಶದಲ್ಲಿ ಹಲ್ಲೆ ಮಾಡಿಸಬೇಕೆ? ಫುಲ್ ಮರ್ಡರಾ? ಅಥವಾ ಹಾಪ್ ಮರ್ಡರಾ? ಕಾರ್ ಬಾಂಬಿಟ್ಟು ಢಂ ಅನ್ನಿಸಬೇಕೆ? ನಿಮ್ಮ ಜನ ಸೆರೆಯಲ್ಲಿದ್ದರೆ ಪ್ಲೇನ್ ಹೈಜಾಕ್ ಮಾಡಿ ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡು ನಿಮ್ಮ ಜನರನ್ನು ಬಿಡಿಸಿಕೊಡಬೇಕೆ? ಅಥವಾ ಬಾಂಬ್ ಹಾಕಿ ವಿಮಾನವನ್ನೇ ಢಂ ಅನ್ನಿಸಿಬಿಡಬೇಕೆ? ಹೇಳಿ. ಎಲ್ಲದಕ್ಕೂ ರೆಡಿ ನಾವು. ಕಾಸ್ ರೆಡಿ ಮಾಡಿಕೊಳ್ಳಿ. ಫುಲ್ ವಿವರ ಕೊಡಿ - ಈ ಧಾಟಿಯಲ್ಲಿ ತನ್ನದೇ ರೀತಿಯಲ್ಲಿ ಪ್ಯಾಲೆಸ್ತೀನಿ ಸ್ವಾತಂತ್ರ ಸಂಘರ್ಷ ನಡೆಸಿದವನು ಅಬು ನಿದಾಲ್.

ಅವನ ಆಕರ್ಷಣೆ ಅಂದರೆ ತಣ್ಣನೆಯ ಕ್ರೌರ್ಯ. ಯಾರೂ ಕೇಳರಿಯದಂತ  ಕ್ರೌರ್ಯ. ಅದರ ಮೇಲೆ ವಿಪರೀತ ಸಂಶಯ ಪ್ರವೃತ್ತಿ. ವಿಲಕ್ಷಣ ಸ್ವಭಾವ. ತರಬೇತಿಗೆ ತುಂಬಾ ಪ್ರಾಮುಖ್ಯತೆ. ಹೈ ಪ್ರೊಫೈಲ್ ಅನ್ನುವಂತಹ ಘಟನೆ ಮಾಡಿ, ವಿಶ್ವಾದ್ಯಂತ ಗಮನ ಸೆಳೆದು, ತನ್ನ ಇಮೇಜ್ ಬೆಳೆಸಿಕೊಂಡು, ಎಲ್ಲ ಕಡೆ ಹವಾ ಎಬ್ಬಿಸಿ, ಅಬು ನಿದಾಲ್ ಅಂದ್ರೆ ಜನ ನಿದ್ದೆಯಲ್ಲೂ ಗಡಗಡ ನಡುಗಬೇಕು ನೋಡಿ ಆ ತರಹ ಮಾಡಿಟ್ಟುಕೊಂಡವನು ಅಬು ನಿದಾಲ್. ಅದೇ ಅವನ ಸೆಲ್ಲಿಂಗ್ ಪಾಯಿಂಟ. ಅದಕ್ಕೇ  ಜನ ಬಂದು ಅವನ ANO ಸೇರಲು ಸಾಲು ನಿಲ್ಲುತ್ತಿದ್ದರು. ಗೆದ್ದೆವೋ.....ಯಾವದೋ ಒಂದು ಹಿಂದೆಂದೂ ಆಗಿರದ ಬಾಂಬ್ ಸ್ಪೋಟವನ್ನೋ, ವಿಮಾನ ಅಪಹರಣವನ್ನೋ, ಅಥವಾ ಯಾವದೋ ಒಬ್ಬ ದೊಡ್ಡ ನಾಯಕನ ಹತ್ಯೆ ಮಾಡುವ ಅವಕಾಶ. ನಸೀಬ್ ಸರಿ ಇಲ್ಲವೋ....ಅಬು ನಿದಾಲ್ ನ ಸಂಶಯಕ್ಕೆ ಒಳಗಾಗಿ ಬೆಕಾ ಕೊಳ್ಳದ ಯಾವದೋ ಒಂದು ಪರಮ ಯಾತನಾಮಯ ಟಾರ್ಚರ್ ಚೇಂಬರ್ ನಲ್ಲಿ ವಿಲವಿಲ ಒದ್ದಾಡಿ ನಾಯಿ ಸಾವು.

ಒಂದು ಕಾಲಕ್ಕೆ ಪ್ಯಾಲೆಸ್ತೀನಿಯರ ಪರಮ ನಾಯಕ ಯಾಸೀರ್ ಅರಾಫತ್ ಅವರ ಜೊತೆಗಾರ ಅಬು ನಿದಾಲ್. ಮುಂದೆ ಅರಫಾತ್ ಮೃದು ಆದರು. ಸ್ವಲ್ಪ ಮಟ್ಟಿಗಾದರೂ ಹಿಂಸೆ ಬಿಟ್ಟು ಇಸ್ರೇಲ್ ಜೊತೆ ಮಾತುಕತೆಯಿಂದ ವಿವಾದ ಬಗೆಹರಿಸಿಕೊಳ್ಳೋಣ ಅಂತ ವಿಚಾರ ಮಾಡಿದರು. ಹಿಂಸೆಯೇ ಆದಿ, ಹಿಂಸೆಯೇ ದಾರಿ, ಹಿಂಸೆಯೇ ಅಂತ್ಯ ಅಂತ ಭಾವಿಸಿದ್ದ ಕೆಲವು ಜನರಿಗೆ ಅದು ಸೇರಲಿಲ್ಲ. ಅವರಲ್ಲಿ ಅಬು ನಿದಾಲ್ ಮುಖ್ಯ. ಅರಾಫತ್ ಅವರ ಫತಾ ಸಂಘಟನೆ ಒಡೆದ. ತನ್ನ ಒಂದಿಷ್ಟು ಜನರನ್ನು ಕರೆದುಕೊಂಡು ಹೋಗಿ, ದುಡ್ಡು ಕೊಟ್ಟ ಸದ್ದಾಮನ ಕೆಲಸವನ್ನೋ ಅಥವಾ ಗಡಾಫಿಯ ಕೆಲಸವನ್ನೋ ಮಾಡುತ್ತಾ ಮೂಲ ಗುರಿಯನ್ನು ಮರೆತೇಬಿಟ್ಟ. ಹಾಗಾಗಿದ್ದು ಅಂತಹ ಒಳ್ಳೆ CEO ಮನೋಭಾವವಿದ್ದ ನಾಯಕನ ದುರಂತ.

2005 ರಲ್ಲಿ ಸ್ಪೀಲಬರ್ಗ್ ಅವರ 'ಮ್ಯೂನಿಕ್' ಚಿತ್ರ ನೋಡಿದಾಗಿಂದ ಹತ್ತಿದ್ದು ಇಸ್ರೇಲ್-ಪ್ಯಾಲೆಸ್ತೀನ್ ಕಲಹದ ಬಗ್ಗೆ ತಿಳಿದುಕೊಳ್ಳುವ ಹುಚ್ಚು. ಸರಿ ಸುಮಾರು 70-80 ಪುಸ್ತಕ ಓದಿದ್ದೇನೆ. ಹಲವಾರು ಬಂಡುಕೋರರ ಬಗ್ಗೆ ಒಳ್ಳೆಯ ವಿವರಗಳಿವೆ. ಆದ್ರೆ ಅಬು ನಿದಾಲ್ ನಷ್ಟು ಕಾಡಿದವನು ಯಾರೂ ಇಲ್ಲ. ಹಾಗಂತ ಮಾತ್ರಕ್ಕೆ ಅವನ ಬಗ್ಗೆ ತುಂಬಾ ಪುಸ್ತಕ ಮಾಹಿತಿ ಲಭ್ಯವಿದೆ ಅಂದುಕೊಳ್ಳಬೇಡಿ. ಅವನ ಬಗ್ಗೆ ಇರುವದು ಎರಡೇ ಎರಡು ಸುಮಾರು ಹಳೇ ಪುಸ್ತಕಗಳು. ಆದರೆ ಬೇರೆ ಬೇರೆ ಪುಸ್ತಕಗಳಲ್ಲಿ, ವೆಬ್ ಸೈಟ್ಗಳಲ್ಲಿ ಅವನ ಬಗ್ಗೆ ಅಲ್ಲಿ ಇಲ್ಲಿ ಝಳಕ್ ಸಿಗುತ್ತದೆ. ಅವೆಲ್ಲವನ್ನು ಕೂಡಿಸಿದರೆ ಬೆಚ್ಚಿ ಬೀಳುವಂತ ಕ್ರೂರಿಯೊಬ್ಬನ ಚಿತ್ರಣ ಕಣ್ಣ ಮುಂದೆ ಬಂದು ಒಂದು ತರಹದ ಬೀಭತ್ಸ ಫೀಲಿಂಗ್. ಅದರ ಬಗ್ಗೆ ಮತ್ತೆ ಯಾವಾಗಲೋ ಬರೆದೇನು.

ಇಂತಹ ಕ್ರೂರಿ ಅಬು ನಿದಾಲ್ 2002 ರಲ್ಲಿ ಬಾಗ್ದಾದಿನಲ್ಲಿ ನಾಯಿಯಂತೆ ತಲೆಗೆ ನಾಕು ಗುಂಡು ತಿಂದು ಸತ್ತ. ಆವಾಗ ಇನ್ನೂ ಇದ್ದು, ತನ್ನ ಸಾಮ್ರಾಜ್ಯ ಉಳಿಸಿಕೊಳ್ಳಲು ತನ್ನ ಕಡೆಯ ಪ್ರಯತ್ನ ಮಾಡುತ್ತಿದ್ದ ಸದ್ದಾಮ್, ಅಬು ನಿದಾಲ್ ಆತ್ಮಹತ್ಯೆ ಮಾಡಿಕೊಂಡ ಅಂದ. ಉಳಿದವರು  ಅಬು ನಿದಾಲ್ ಗೆ ತುಂಬಾ ರಹಸ್ಯ ಗೊತ್ತಿತ್ತು, ತನ್ನ ಪ್ರಾಣ ಉಳಿಸಿಕೊಳ್ಳಲು ಅಮೇರಿಕನ್ನರಿಗೆ ಖಬರ್ ಕೊಟ್ಟಾನು ಅಂತ ಸಂಶಯಿಸಿದ ಸದ್ದಾಮನೇ ಅವನನ್ನು ಕೊಂದುಬಿಟ್ಟ ಅಂತ ಮಾತಾಡಿಕೊಂಡರು.

ಒಟ್ಟಿನಲ್ಲಿ ಒಬ್ಬ ವಿಲಕ್ಷಣ ಪಾತಕಿಯ ಅಂತ್ಯ ಹಾಗಾಗಿತ್ತು.


** ಹೋಲ್ ಸೇಲ್ ನಲ್ಲಿ ಅಂಡರ್ ವೇರ್ ಖರೀದಿಸುವ ಘಟನೆಯ ಬಗ್ಗೆ ವಿವರ ಸುಮಾರು ವೆಬ್ ಸೈಟ್, ಪುಸ್ತಕಗಳಲ್ಲಿ ಸ್ವಲ್ಪ ಸ್ವಲ್ಪ ಬೇರೆ ಬೇರೆ ತರಹ ಬಂದಿತ್ತು. ಕೆಲವು ಕಡೆ ಹಾಸ್ಯಕ್ಕೆ ಒತ್ತು ಇದ್ದರೆ ಇನ್ನು ಕೆಲವು ಕಡೆ ಅವನ ವಿಕ್ಷಿಪ್ತ ಮನೋಭಾವಕ್ಕೆ. ಕನ್ನಡೀಕರಿಸುವಾಗ ಎರಡನ್ನೂ ಸ್ವಲ್ಪ ಮಿಕ್ಸ್ ಮಾಡುವ ಪ್ರಯತ್ನ ಮಾಡಿದೆ.

** ಅಬು ನಿದಾಲ್, ಅಬು ನಿಡಾಲ್ - ಹೀಗೆ ಎರಡೂ ರೀತಿಯಲ್ಲಿ ಬರೆಯುವದನ್ನು ಮತ್ತು ಹೇಳುವದನ್ನು ನೋಡಿದ್ದೇನೆ. ನನಗೆ ಈ ಪುಣ್ಯಾತ್ಮನ ಹೆಸರು ಮೊದಲು ತಿಳಿದಿದ್ದು 1986 ರಲ್ಲಿ, ಸಂಯುಕ್ತ ಕರ್ನಾಟಕದಲ್ಲಿ. ಅದರಲ್ಲಿ ಅಬು ನಿದಾಲ್ ಅಂತ ಇತ್ತು. ಅದಕ್ಕೆ ಹಾಗೇ ಬರೆದೆ.

ಲಿಂಕ್ಸ್:
ಅಬು ನಿದಾಲ್ ಬಗ್ಗೆ ತುಂಬಾ ಹಿಂದೆ ಬರೆದ ಬೇರೆ ಬ್ಲಾಗ್ ಎಂಟ್ರೀ. ಬೇರೆ ಮತ್ತು ಹೆಚ್ಚಿನ ವಿವರಗಳಿವೆ. ಓದಿ. ಆಸಕ್ತಿ ಇದ್ದರೆ.

ಅಬು ನಿದಾಲ್

Abu Nidal : A Gun for Hire : The Secret Life of the World's Most Notorious Arab Terrorist  by Patrick Seale

ಮ್ಯೂನಿಕ್ ಚಿತ್ರ

ಬೆಕಾ ಕೊಳ್ಳ ಪ್ರದೇಶ

4 comments:

ಸತೀಶ ಆರ್ ಬೆಂಗಳೂರು said...

Neema baravanige tumba channagide sir

Satish R Bengalur

Mahesh Hegade said...

Dhanyavaada Satish avarae.

mandanna said...

Interesting story very nice.We are lucky becouse we all INDIANS..

Mahesh Hegade said...

Thank you very much, Mandanna.